ಕೊಲ್ಲಾಪುರದ ನಾಥಮಠದಲ್ಲಿದ್ದ ಯೋಗಿನಿ ಸೋಹನ್ ಭಾರತಿ ಅವರಿಗೆ  ‘ನೀವು ಭಾರತಿ ಪಂಥದಲ್ಲಿ ದೀಕ್ಷೆ ಪಡೆದವರು. ನಾಥಮಠದಲ್ಲಿದ್ದೀರಿ. ಹೇಗೆ?’ ಎಂದು ಕೇಳಿದೆ. ಅದಕ್ಕೆ ಆಕೆ ‘ಸಬ್ ಘರ್ ಭಟಕೆ, ನಾಥ್ ಮೆ ಅಟಕೆ’ (ಎಲ್ಲ ಮನೆ ಅಲೆದರು, ಕಡೆಗೆ ನಾಥರೊಳಗೆ ಸಿಲುಕಿದರು)  ಎಂದು ಉತ್ತರಿಸಿದರು. ಇದರ ದನಿ ಒಮ್ಮೆ ನಾಥದೀಕ್ಷೆ ಪಡೆದರೆ ಮತ್ತೆಬೇರೆ ಹುಡುಕಬೇಕು ಅನಿಸುವುದಿಲ್ಲ. ಯಾವುದೇ ನಾಥ ಯೋಗಿಯನ್ನು ಮಾತಾಡಿಸಿದರೆ, ಇಂತಹ  ಪ್ರಾಸಬದ್ಧವೂ ಕಾವ್ಯಾತ್ಮಕವೂ  ಸೂತ್ರರೂಪಿಯೂ ಆದ ಬೆಡಗಿನ ಹೇಳಿಕೆಗಳಲ್ಲಿ ಉತ್ತರಿಸುತ್ತಾರೆ.  ‘ಪಾನಿ ಪೀನಾ ಛಾನಕೆ, ಗುರು ಕರನಾ ಜಾನಕೆ’  (ನೀರನ್ನು ಸೋಸಿಕುಡಿ, ಗುರುವನ್ನು ತಿಳಿದು ಆರಿಸು);  ‘ಧೂನಾ ಪಾನಿ ಔರ್ ಸಿದ್ಧೋಂಕಿ  ಬಾನಿ’ (ಧುನಿಯ ಬೆಂಕಿ, ನೀರು ಹಾಗೂ ಸಿದ್ಧರ ವಚನ ಇಷ್ಟಿದ್ದರೆ ಸಾಕು) ಹೀಗೆ ಅಸಂಖ್ಯಾತ ಸೂಕ್ತಿಗಳು ಅವರ ಬಳಕೆಯಲ್ಲಿವೆ. ಇವನ್ನು ಓದುತ್ತಾ ಹೋದರೆ, ಶರಣರ ವಚನಗಳು ನೆನಪಾಗುತ್ತವೆ. ಇಲ್ಲಿರುವೊಕೊನೆಯ ಸೂಕ್ತಿಯು ‘ನಿಮ್ಮ ಶರಣರ ಸೂಳ್ನುಡಿಯ ಒಂದರಗಳಿಗೆ ಇತ್ತರೆ ಸಾಕು’ ಎಂಬ ಬಸವಣ್ಣನ ಮಾತಿಗೆ ಸಮೀಪವಿದೆ. ಈ ಉಕ್ತಿ ಸಾಮೀಪ್ಯವನ್ನು ಒಬ್ಬರು ಇನ್ನೊಬ್ಬರಿಗೆ ಕೊಟ್ಟರು ಎಂಬ ಋಣ ಪರಿಭಾಷೆಯಲ್ಲಿ ವಿಶ್ಲೇಷಿಸುವುದಕ್ಕೆ ಸಾಧ್ಯವಿಲ್ಲ. ಭಾರತದ ಯೋಗಪಂಥಗಳ ನಡುವೆ ನಮಗಿನ್ನೂ ಗೊತ್ತಾಗಬೇಕಾಗಿರುವ ಯಾವುದೊ ಒಂದು ಅನುಸಂಧಾನವಿತ್ತು. ಇವರು ಒಂದು ಸಮಾನ ಮೂಲದಿಂದ ತಮ್ಮ  ತತ್ವ, ಭಾಷೆ,  ರೂಪಕ, ಶೈಲಿಗಳನ್ನು ಪಡೆಯುತ್ತಿದ್ದರು. ಇದರ ಬಗ್ಗೆ ಪುಣೇಕರರು ಒಳ ನೋಟಗಳುಳ್ಳ ಚಿಂತನೆ ಮಾಡಿದ್ದಾರೆ.

[1]

ಎತ್ತರದ ದಾರ್ಶನಿಕ ಚಿಂತನೆಯನ್ನು ಜನರ ಆಡುಮಾತಿನಲ್ಲಿ ಕಟ್ಟಿಕೊಡುವ ಗೋರಖನ  ‘ಗೋರಖಬಾನಿ’ ಪಠ್ಯವು, ಇಂತಹ ಕಾವ್ಯಾತ್ಮಕ ಸೂಕ್ತಿಗಳಿಂದ ತುಂಬಿಹೋಗಿದೆ. ಕೊಲ್ಲಾಪುರದಲ್ಲಿ ಗೋರಖನಾಥ ಮಠದ ಗೋಡೆ ತುಂಬ ಇಂತಹ ಸೂಕ್ತಿಗಳನ್ನು ಬರೆಯಲಾಗಿದೆ. ಸ್ಮೃತಿಯ ಮೂಲಕ ತಿಳಿವಳಿಕೆ ಸಾಗಿಸುವ ಮತ್ತು ಜನರ ಮಟ್ಟದಲ್ಲಿ ಇಳಿದು ಬದುಕ ಬಯಸುವ  ಎಲ್ಲ ಪಂಥಗಳು, ಹರಳುಗಟ್ಟಿದ ಹೇಳಿಕೆಗಳಲ್ಲಿ ಸಾಹಿತ್ಯ ರಚಿಸುತ್ತವೆ ಎಂದು ತೋರುತ್ತದೆ. ಉನ್ನತ  ತಿಳಿವಳಿಕೆಯನ್ನೂ ಸೂಕ್ಷ್ಮವಾದ ತಾತ್ವಿಕ ಜಿಜ್ಞಾಸೆಯನ್ನೂ ಧಾರಣೆ ಮಾಡುವಾಗ, ಇಡೀ ಜನ ಭಾಷೆಗೆ ಒಂದು ಹೊಸಜನ್ಮ ಬರುತ್ತದೆ. ಆ ದರ್ಶನವು ಮೌಖಿಕಕ್ಕೆ ಇಳಿದು ಬೀದಿಗೆ ಬರುತ್ತದೆ. ಇದನ್ನು ದರ್ಶನದ ಜಾನಪದೀಕರಣ ಎನ್ನಬಹುದು. ಕರ್ನಾಟಕದಲ್ಲಿ ಇದನ್ನು ಶರಣರು ಮಾಡಿದರು. ಅವಧೂತರು ಮಾಡಿದರು.

ಹಾಗೆಕಂಡರೆ, ದಾರ್ಶನಿಕ ಚರ್ಚೆಗಳಿಗೆ ದೈನಿಕ ಜೀವನ ಲಯದಲ್ಲಿರುವ ಮಾತನ್ನು ಬಳಸುವ ಪರಂಪರೆ ಆರಂಭಿಸಿದವನು ಬುದ್ಧ. ನಂತರ ನಾಥರು, ಸೂಫಿಗಳು, ಆರೂಢರು. ಅರ್ಧ ಮಾಗಧಿ, ಬ್ರಜಭಾಷೆ, ಪಂಜಾಬಿ, ನೇಪಾಳಿ, ಬಂಗಾಲಿ, ಮರಾಠಿ ಮುಂತಾದ ಜನ ಭಾಷೆಗಳಲ್ಲಿ ನಾಥರ ಸಾಹಿತ್ಯವಿದೆ.  ಕಬೀರ, ನಾನಕ, ಜ್ಞಾನೇಶ್ವರ, ನಜೀರ್ ಅಕ್ಬರಾಬಾದಿ ಅವರನ್ನು ಇಲ್ಲಿ ನೆನೆಯಬಹುದು. ಗೋರಖ ರಚಿಸಿದ ಎನ್ನಲಾಗುವ ‘ಗೋರಖಬಾನಿ’ ಕೂಡ ಜನಭಾಷೆಯಲ್ಲಿದೆ. ನಾಥರ ದಾರ್ಶನಿಕ ಪಠ್ಯಗಳು ಸಂಸ್ಕೃತದಲ್ಲಿದ್ದರೂ ಅದು  ವ್ಯಾಕರಣ ಲೆಕ್ಕಿಸದ ಸರಳ ಸಂಸ್ಕೃತ. ಶಂಕರ ಮೊಕಾಶಿ ಪುಣೇಕರರು ಇದನ್ನು ‘ಫಾಲ್ಟಿ ಸಾನ್ಸ್‌ಕ್ರಿಟ್’ಎನ್ನುತ್ತಾರೆ.[2] ಈ ‘ಅಶುದ್ಧ’ ಭಾಷೆ ಕೂಡ ಸಮುದಾಯಕ್ಕೆ ಸಮೀಪ ವಾಗಲು ಮಾಡಿದ ಯತ್ನದೊಫಲ. ನಾಥರ ದೀಕ್ಷಾಮಂತ್ರಗಳು ಬಹುಮಟ್ಟಿಗೆ ಆಡುಭಾಷೆಯಲ್ಲಿವೆ. ಕಿನ್ನರಿ ಜೋಗಿಗಳ ಗುರುಕಲ್ಮದ (ದೀಕ್ಷಾಮಂತ್ರ) ಚರ್ಚೆಯಲ್ಲಿ ಇದನ್ನು ಗಮನಿಸಲಾಯಿತು. ದೀಕ್ಷೆ ಪಡೆದವರು ಅನುಸರಿಸಬೇಕಾದ ನಿಯಮಗಳನ್ನು ಒಳಗೊಂಡಿರುವ ಈ ಮಂತ್ರಗಳನ್ನು ಪ್ರಾಸಬದ್ಧ ಕವಿತೆಯಂತೆ ರಚಿಸಲಾಗಿದೆ. ನಾಥರಲ್ಲಿ ಸಾಹಿತ್ಯ ಮತ್ತು ದರ್ಶನ ಶಾಸ್ತ್ರಗಳ ನಡುವೆ ಬಹಳ ಭೇದವಿಲ್ಲ. ನಾಥಪಂಥದಲ್ಲಿ ಸಾಹಿತ್ಯ, ದಾರ್ಶನಿಕತೆ ಮತ್ತು ಆಚರಣೆಗಳು ಅನನ್ಯವಾಗಿ ಏಕೀಭವಿಸಿವೆ. ನಾಥದಶರ್ನ ಜನಪದೀಕರಣ ಪಡೆದ  ಪರಿಣಾಮ ಎಂದರೆ, ಎಷ್ಟೋ ಕೃತಿಗಳಿಗೆ ಕರ್ತೃವಿನ ಗುರುತು ಹೇಳಲಾಗದಂತೆ ಜನಪ್ರಿಯವಾದುದು.

ಕನ್ನಡ ಪಠ್ಯಗಳು

ಕನ್ನಡದಲ್ಲಿ ನೂರಾರು ಪಠ್ಯಗಳು ನಾಥರ ಪ್ರಸ್ತಾಪ ಮಾಡುತ್ತವೆ. ಅವುಗಳಲ್ಲಿ ಮುಖ್ಯವಾದವು, ಬಸವಣ್ಣ ಚೆನ್ನಬಸವಣ್ಣ ಅಲ್ಲಮಪ್ರಭು ಅವರ ವಚನಗಳು, ಹರಿಹರನ ‘ಪ್ರಭುದೇವರ ರಗಳೆ’ ಹಾಗೂ ‘ರೇವಣ ಸಿದ್ಧೇಶ್ವರನ ರಗಳೆ’, ರಾಘವಾಂಕನ  ‘ಸಿದ್ಧರಾಮ ಚಾರಿತ್ರ’, ಬ್ರಹ್ಮಶಿವನ ‘ಸಮಯ ಪರೀಕ್ಷೆ’ ಚಾಮರಸನ ‘ಪ್ರಭುಲಿಂಗಲೀಲೆ,’ ವಿರಕ್ತ ತೋಂಟದಾರ್ಯನ ‘ಸಿದ್ಧೇಶ್ವರ ಪುರಾಣ’, ಮಲ್ಲಕವಿಯ ‘ರೇವಣಸಿದ್ಧೇಶ್ವರ ಕಾವ್ಯ’, ದೇವರಾಜನ ‘ಮರುಳಸಿದ್ಧ ಕಾವ್ಯ’, ನಿಜಗುಣ ಶಿವಯೋಗಿಗಳ ‘ವಿವೇಕ ಚಿಂತಾಮಣಿ’, ವೀರಸಂಗಯ್ಯನೊ‘ನಂದಿಯಾಗಮ ಲೀಲೆ’,  ಭೀಮಕವಿಯ ‘ಬಸವನಪುರಾಣ’; ಮಹಾ ಲಿಂಗರಂಗನ ‘ಅನುಭವಾಮೃತ’, ಶಿವಗಣ ಪ್ರಸಾದಿಯ  ‘ಶೂನ್ಯಸಂಪಾದನೆ’, ಮಲ್ಲಿಕಾರ್ಜುನನ  ‘ಶಂಕರದಾಸಿಮಯ್ಯ ಪುರಾಣ’ ಶಾಂತಲಿಂಗ ದೇಶಿಕನ ‘ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ’, ವಿರೂಪಾಕ್ಷ ಪಂಡಿತನ ‘ಚೆನ್ನಬಸವ ಪುರಾಣ’, ಸಿದ್ಧನಂಜೇಶನ ‘ಗುರುರಾಜ ಚಾರಿತ್ರ’, ಲಕ್ಕಣ್ಣ ದಂಡೇಶನ ‘ಶಿವತತ್ವರತ್ನಾಕರ’, ಸಪ್ತಕಾವ್ಯದ ಗುರುಬಸವನ ‘ಅವಧೂತಗೀತೆ’ ಮುಂತಾದವು. ಇವೆಲ್ಲವು ಬೇರೆಬೇರೆ ಕಾಲಘಟ್ಟಕ್ಕೆ ಸೇರಿದ ಹಲವು ಪಂಥ ಅಥವಾ  ದರ್ಶನಗಳ ಹಿನ್ನೆಲೆಯ ಪಠ್ಯಗಳು. ಕೆಲವು ದಾರ್ಶನಿಕ ಗ್ರಂಥಗಳಾದರೆ ಕೆಲವು ಕಾವ್ಯಗಳು. ಇಲ್ಲಿ ಸಿಗುವ ನಾಥರ ಬಗೆಗಿನ ಚಿತ್ರಗಳು ಕವಿಗಳ  ಸಮಕಾಲೀನ ಅನುಭವದಿಂದ ಮೂಡಿದವೊ, ಹಿಂದಿನಿಂದ ಬಂದ ಗ್ರಹಿಕೆಗಳ ಪುನರುಕ್ತಿಯೊ ಹೇಳುವುದು ಕಷ್ಟ. ಸೈದ್ಧಾಂತಿಕ ವಾಗ್ವಾದ ಹಾಗೂ ದಾರ್ಶನಿಕ ವಿರೋಧಗಳಲ್ಲಿ, ಹಿಂದಿನಿಂದ ಬಂದ ಪೂರ್ವಗ್ರಹಗಳ ಕಾಮೋಡಗಳು ತುಂಬಿರುತ್ತವೆ. ಇವು ಪಂಥೀಯ ದ್ವೇಷದ ರೂಪದಲ್ಲಿರುತ್ತವೆ. ಆಧುನಿಕ ಕಾಲದಲ್ಲೂ ವಾಮಾಚಾರ ಹಾಗೂ ಚಾರ್ವಾಕರನ್ನು ಕುರಿತು ಹುಟ್ಟಿಸಲಾಗಿರುವ ವಿಕೃತ ಮಾಹಿತಿಗಳೇ ಹೆಚ್ಚು ಸಿಗುತ್ತವೆ. ಕನ್ನಡದ ಬಹುತೇಕ ಪಠ್ಯಗಳು ನಾಥರನ್ನು ತಮ್ಮ ಎದುರಾಳಿಗಳನ್ನಾಗಿ ಇಟ್ಟುಕೊಂಡು ಖಂಡಿಸುತ್ತವೆ. ಈ ಖಂಡನೆಯಲ್ಲಿ ನಾಥರ ದರ್ಶನದ ಜತೆಗಿನ ವಾಗ್ವಾದಕ್ಕಿಂತ ಹೆಚ್ಚಾಗಿ, ಅವರ ಆಚರಣೆಗಳನ್ನು ಕುರಿತ ಅಸಮ್ಮತಿಯ ಪ್ರಮಾಣವೇ ಹೆಚ್ಚು. ಕಾವ್ಯಗಳಾದರೆ ಕವಿಗಳು ತಂತಮ್ಮ ಕಥಾನಾಯಕರನ್ನು ಗೆಲ್ಲಿಸಲು ನಾಥರನ್ನು ಸೋಲಿಸುತ್ತಾರೆ. ಕನ್ನಡದ ಈ ಪಠ್ಯಗಳನ್ನು ನಾಥಜೋಗಿಯರ ಚಿತ್ರಣ, ನಿರ್ದಿಷ್ಟವಾಗಿ ಗೋರಖನಾಥನ ಚಿತ್ರಣ ಹಾಗೂ ಯೌಗಿಕ ಅನುಭವದ ಮಂಡನೆ -ಎಂಬ ೩ ನೆಲೆಗಳಲ್ಲಿ ಸಮೀಕ್ಷಿಸಬಹುದು.

. ನಾಥಜೋಗಿಯರ ಚಿತ್ರಗಳು

ಭಾರತೀಯ ದರ್ಶನಗಳ ಚರಿತ್ರೆಯಲ್ಲಿ ಯೋಗ, ನ್ಯಾಯ, ಸಾಂಖ್ಯ, ವೈಶೇಷಿಕ,  ಪೂರ್ವ ಹಾಗೂ  ಉತ್ತರ ಮೀಮಾಂಸಾ ಎಂಬ ಷಟ್ದರ್ಶನಗಳ ಪರಿಕಲ್ಪನೆ ಪ್ರಸಿದ್ಧ ಆಗಿದೆಯಷ್ಟೆ. ಇದನ್ನು ಅನುಸರಿಸಿ ಷಡುದರುಶನ ಅಥವಾ ಷಣ್ಮತಗಳ ಕಲ್ಪನೆಯು ಕನ್ನಡದಲ್ಲೂ ಹುಟ್ಟಿದೆ. ಆದರೆ ಈ ಆರು ಯಾವೆಂಬ ಬಗ್ಗೆ ಸಹವುತವಿಲ್ಲ.  ಚನ್ನಬಸವಣ್ಣನು ಶೈವ, ಪಾಶುಪತ, ಕಾಳಾಮುಖ, ಮಹಾವ್ರತ, ಸನ್ಯಾಸಿ ಹಾಗೂ ಕೌಳಗಳನ್ನು, ಅವು ಭಕ್ತಿಸ್ಥಲಕ್ಕೆ ಸಲ್ಲವೆಂದು ಘೋಷಿಸುವ ವಚನದ ಚರ್ಚೆ ಹಿಂದೆ ಬಂತು. ಈ ಪಟ್ಟಿಯನ್ನು ಬಹುತೇಕರು ಪುನರುಕ್ತಿ ಮಾಡುತ್ತಾರೆ. ಈ ಷಣ್ಮತಗಳಲ್ಲಿ ನಾಥರ ಉಲ್ಲೇಖವಿಲ್ಲ. ಕಾರಣ, ೧೨ನೇ ಶತಮಾನದಲ್ಲಿ ಕಾಪಾಲಿಕರು ನಾಥರಾಗಿ ರೂಪಾಂತರ ಪಡೆಯುವುದು ಇನ್ನೂ ಪ್ರಕ್ರಿಯೆಯಲ್ಲಿತ್ತು ಮತ್ತು ನಾಥವನ್ನು ಕೆಲವರು ಒಂದು ದರ್ಶನವಾಗಿ ಗ್ರಹಿಸಿರದ ಸಾಧ್ಯತೆಯೂ ಇದೆ.   ಕೆಲವರು ಷಣ್ಮತಗಳ ಚರ್ಚೆಯಲ್ಲಿ ನಿರ್ದಿಷ್ಟವಾಗಿ ಜೋಗಿ ಎಂದೇ ಹೆಸರಿಸುತ್ತಾರೆ. ಯೋಗಿ ಜೋಗಿ ತಪಸಿ ಸನ್ಯಾಸಿ ನರಮೀಮಾಂಸಕ ನೀಲಪಟರೆಂಬ ಆರು ಪಂಥೀಯರನ್ನು ಸಕಲೇಶ ಮಾದರಸ ಉಲ್ಲೇಖಿಸುತ್ತ, ಇವರೆಲ್ಲ  ‘ಕ್ಷುಧೆಕಾರಣ’ದಿಂದ ಸುಳಿದಾಡುವವರು ಎಂದು ಟೀಕಿಸುತ್ತಾನೆ.  ಪುರಂದರದಾಸರು ಸಂನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿ ನಾನಾ ವೇಷಗಳೆಲ್ಲ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂದು ವಿಡಂಬಿಸುತ್ತಾರೆ. ಇಲ್ಲಿನ ಜೋಗಿಗಳು ಎಂದರೆ ನಾಥರೇ. ೧೯ನೇ ಶತಮಾನದಲ್ಲಿ ಮೈಸೂರು ಭಾಗದಲ್ಲಿದ್ದ ಫ್ರೆಂಚ್ ಪಾದ್ರಿ ಅಬ್ಬೆ ದುಬಾಯಿಯು  ಶೈವ, ಶಾಕ್ತ, ಚಾರ್ವಾಕ, ಕಾಪಾಲಿಕ, ವೈಷ್ಣವ, ಬೌದ್ಧ ಎಂದು ಷಡುದರ್ಶನಗಳ ಪಟ್ಟಿ ಮಾಡುತ್ತಾನೆ.[3] ಚುಂಚನಗಿರಿಯಲ್ಲಿ ಕಾಪಾಲಿಕವೇ ನಾಥವಾಗಿದ್ದ ಕಾರಣ, ನಾಥದ ಹೆಸರನ್ನು ಈತ ಪ್ರತ್ಯೇಕವಾಗಿ  ಹೇಳಲಿಲ್ಲ ಎಂದು ತೋರುತ್ತದೆ.

ಆರು ಪಂಥ ಅಥವಾ ದರ್ಶನಗಳ ಬಗ್ಗೆ ಎಷ್ಟೇ ಭಿನ್ನಮತವಿದ್ದರೂ, ಹೆಚ್ಚಿನ ಪಠ್ಯಗಳು ಜೋಗಿಗಳನ್ನು ಉಲ್ಲೇಖಿಸುತ್ತವೆ. ಪ್ರಶ್ನೆಯೆಂದರೆ ಜೋಗಿ ಮತ್ತು ಯೋಗಿಗಳು ಒಂದೆಯೊ ಬೇರೆಯೊ? ಬೇರೆಯಾದರೆ ಈೊಯೋಗಿ ಯಾರು? ಇವರು ನಾಥ ಕಾಪಾಲಿಕ ದೀಕ್ಷೆ ಪಡೆಯದ ಶಿವಯೋಗ ಸಾಧಕರೇ? ಕೊಡೇಕಲ್ ಬಸವಣ್ಣನು ‘ಯೋಗಿ ಸಿದ್ಧರಾಮಯ್ಯ, ಜೋಗಿ ಗೋರಕನಾಥ, ಶ್ರವಣ ಆದೇಶ್ವರನು, ನಿಗಮನು ಸನ್ಯಾಸಿ, ಕಾಳಾಮುಖಿ ಮಹಮ್ಮದ, ಪಶುಪತಿ ಬಸವೇಶ್ವರ’[4] ಎಂದು ವ್ಯಕ್ತಿಗಳನ್ನು ಹೆಸರಿಸುವ ಮೂಲಕ, ಇದನ್ನು ಕೊಂಚ ಸ್ಪಷ್ಟಗೊಳಿಸುತ್ತಾನೆ. ಸ್ವತಃ ಸಿದ್ಧರಾಮನೇ  ‘ಯೋಗಿಯಾದಡೆ ನನ್ನಂತಾಗಬೇಕು’ ಎಂದು ಹೇಳಿಕೊಳ್ಳುವುದುಂಟು. ಆದರೂ ನಾಥನಲ್ಲದ ಯೋಗಿಯ ಲಕ್ಷಣಗಳು ಸ್ಪಷ್ಟವಾಗುವುದಿಲ್ಲ.  ‘ಆದಿಚುಂಚನಗಿರಿ ಸ್ಥಳ ಮಾಹಾತ್ಮ್ಯ’ವು ದಾಸ ಯೋಗಿ ಜಂಗಮ ಶ್ರವಣ ಸನ್ಯಾಸಿ ಕಾಳಾಮುಖರೆಂಬ ಆರು ದರ್ಶನಗಳ ಪ್ರಸ್ತಾಪ ಮಾಡುತ್ತದೆ.  ಕಾಪಾಲಿಕ ಪರವಾದ ಈ ಕೃತಿಯು, ಕಾಪಾಲಿಕರನ್ನೇ ಬಿಟ್ಟುಕೊಟ್ಟಿರುವ ಕಾರಣವು ತಿಳಿಯುವುದಿಲ್ಲ. ಇಲ್ಲಿನ ಯೋಗಿಯೆ ಜೋಗಿ ಆಗಿರಬಹುದು. ವಿವಿಧ ಪಂಥ ಹಾಗೂ ದರ್ಶನಗಳ ಬಗೆಗಿನ ಈ ಗೊಂದಲ ಚರಿತ್ರೆಯುದ್ದಕ್ಕೂ ಇದೆ. ರಾಮಾನುಜರು  ಕಾಪಾಲಿಕರನ್ನೂ ಕಾಳಾಮುಖರನ್ನೂ ಒಂದೇ ಎಂಬಂತೆ ಪರಿಭಾವಿಸಿದ್ದರು. ಆಧುನಿಕ ವಿದ್ವಾಂಸರಲ್ಲೂ ಕಾಪಾಲಿಕ ಮತ್ತು ನಾಥ,  ಕಾಳಾಮುಖ ಮತ್ತು ಲಕುಲೀಶ ಪಾಶುಪತ ಒಂದೆಯೊ ಬೇರೆಯೊ ಎಂದು ವಾಗ್ವಾದ ಇನ್ನೂ ಮುಗಿದಿಲ್ಲ. ಈ ಗೊಂದಲಕ್ಕೆ ಕೆಲವು ಕಾರಣಗಳಿವೆ. ೧. ಬೇರೆಬೇರೆ ಪಂಥಗಳನ್ನು ಸ್ಪಷ್ಟವಾಗಿ  ಗುರುತಿಸುವ ನಮ್ಮ ವಿದ್ವತ್ತಿನಲ್ಲಿ ಇರುವ ತಿಳಿವಳಿಕೆಯ ಕೊರತೆ. ೨. ಒಂದರ ಜತೆಗೆ ಇನ್ನೊಂದು  ಸೇರಿಕೊಂಡು ಯಾವುದು ಎಲ್ಲಿದೆ ಎಂದು ಗುರುತಿಸಲಾಗದಂತೆ  ಸಂಕರ ರೂಪತಾಳುತ್ತಿದ್ದ ಪಂಥಗಳು.  ಬಾಬಾಬುಡನಗಿರಿ ಬಗ್ಗೆ ಹುಟ್ಟಿರುವ ವಿವಾದಕ್ಕೆ ಈ ಸಂಕರ ಸಂಸ್ಕೃತಿಯೂ ಒಂದು ಕಾರಣ. ಅಲ್ಲಮನು ಶರಣರ ಬಗ್ಗೆ ವ್ಯಾಖ್ಯಾನಿಸುತ್ತ  ‘ಹಠಯೋಗ ವಜ್ರ ಅಮರಿಯ ಕಲ್ಪವೆಂದು’ ಎಂಬ ವಚನದಲ್ಲಿ ಮಾಡುವ ಟೀಕೆ ನಿಜವಾಗಿ ಯಾರನ್ನು ಕುರಿತದ್ದು? ಮಲಮೂತ್ರ ಸೇವನೆ ಕೌಳರದು. ವಜ್ರ ಅಮರಿಕಲ್ಪ ವಜ್ರಯಾನದ್ದು. ನವನಾಥ ಸಿದ್ಧರಮತ ಎನ್ನುವುದು ನಾಥರದ್ದು. ಕಾಪಾಲಿಕಾಚಾರಣೆ ಕಾಪಾಲಿಕರದ್ದು ಎಂದು ವರ್ಗೀಕರಿಸಬಹುದು. ಆದರೆ ಇವೆಲ್ಲವೂ ಒಬ್ಬರಲ್ಲೇ ಇದ್ದ ಸಾಧ್ಯತೆಯೂ ಇತ್ತು.

ಕನ್ನಡದ ಕೃತಿಗಳು ನಾಥರು (ಜೋಗಿಗಳು) ಆರು ಸಿದ್ಧರ ಜತೆ ಎದುರು ಬದುರು ಆಗುವುದನ್ನು ಚಿತ್ರಿಸುತ್ತವೆ.  ೧. ಸೊನ್ನಲಿಗೆಯಲ್ಲಿ ಖರಪರ ಜೋಗಿ ಮತ್ತು ಸಿದ್ಧರಾಮ. ೨. ಕದಳಿವನದಲ್ಲಿ ಗೋರಖ ಹಾಗೂ ಅಲ್ಲಮ ೩. ಮಂಗಳವೇಡೆ ಹಾಗೂ ಕೊಲ್ಲಾಪುರಗಳಲ್ಲಿ ಗೋರಖ ಹಾಗೂ ರೇವಣಸಿದ್ಧ ೪. ಕೊಲ್ಲಾಪುರದಲ್ಲಿ ಜೋಗಿಗಳು ಹಾಗೂ ಮರುಳಸಿದ್ಧ. ೫. ಕಲ್ಯಾಣದಲ್ಲಿ ಬಸವಣ್ಣ ಹಾಗೂ ಜೋಗಿಗಳು ೬. ಎಡೆಯೂರಿನಲ್ಲಿ ಜೋಗಿಗಳು ಹಾಗೂ ತೋಂಟದ ಸಿದ್ಧಲಿಂಗ ೬.ನವಿಲೆಯ ದಾರಿಯಲ್ಲಿ ಜೋಗಿಗಳು ಹಾಗೂ ಶಂಕರದಾಸಿಮಯ್ಯ. ಈ ಪ್ರಸಂಗಗಳನ್ನು ಹೀಗೆ ಸಂಗ್ರಹಿಸಬಹುದು.

೧. ರಾಘವಾಂಕನ  ‘ಸಿದ್ಧರಾಮ ಚಾರಿತ್ರ’ದಲ್ಲಿ ಸಿದ್ಧರಾಮನು ಹೋಮ ಮಾಡುವಾಗ, ಒಬ್ಬ ಖರ್ಪರ (=ಕಪಾಲ) ಜೋಗಿಯೊಬ್ಬ ಬಂದು ಅಡ್ಡಿ ಮಾಡುತ್ತಾನೆ. ಆಗ ಸಿದ್ಧರಾಮನು ಜೋಗಿಯನ್ನು ಬೆನ್ನಟ್ಟುವಂತೆ ಬೆಂಕಿ ಸೃಷ್ಟಿಸುತ್ತಾನೆ. ಜೋಗಿಯೂ ಅವನ ಸಂಗಡಿಗರೂ ಶರಣಾಗಿ ಅಭಯ ಕೋರಲು, ಸಿದ್ಧರಾಮ ಅವರನ್ನು ಕ್ಷಮಿಸುತ್ತಾನೆ.  ಸಿದ್ಧರಾಮನ ವಚನ ಗಳಲ್ಲಿ ಜೋಗಿಗಳ ಟೀಕೆಯಿದೆ. ಮಾತ್ರವಲ್ಲ ಸಿದ್ಧಸಿದ್ಧಾಂತದ ಟೀಕೆಯೂ (‘ಸಿದ್ಧಸಿದ್ಧಾಂತವ ಶ್ರಮಬಟ್ಟಡೇನು, ಸಾಧಿಸಿ ಕೀರ್ತಿಯ ಪಡೆಯದನ್ನಕ್ಕ’) ಇದೆ. ಆದರೆ ಈ ಟೀಕೆ ಗೋರಖನ ‘ಸಿದ್ಧಸಿದ್ಧಾಂತ ಪದ್ಧತಿ’ಗೊ, ತಮಿಳುನಾಡಿನ ಸಿದ್ಧಾಂತಶೈವಕ್ಕೊ? ಕೆಲವು ವಿದ್ವಾಂಸರ ಪ್ರಕಾರ ಕಪಿಲಸಿದ್ಧ ಅಂಕಿತವುಳ್ಳ ಸಿದ್ಧರಾಮನು ಸ್ವತಃ ನಾಥಪಂಥೀಯನು. ಸಾಂಖ್ಯ ದರ್ಶನಕಾರ ಕಪಿಲಮುನಿಯ ಹೆಸರು ನಾಥರಿಗೆ ಪವಿತ್ರ. ಆದರೂ ಸಿದ್ಧರಾಮನ ಅಂಕಿತದಲ್ಲಿರುವ ಕಪಿಲಸಿದ್ಧವು ನಾಥ ಸಂಬಂಧಿಯಲ್ಲ. ಸಿದ್ಧರಾಮನು ನಾಥನೆಂದು ಅನಿಸುವುದಿಲ್ಲ. ಅವನು ನಾಥನಾಗಿದ್ದರೆ, ಜೋಗಿಯನ್ನು ಸೋಲಿಸುವ ಪ್ರಸಂಗ ಬರಲು ಕಾರಣವೇನು? ಇದು ಚಾರಿತ್ರ ಪುರಾಣ ರಚಿಸುವವರ ಕಲ್ಪನೆಯೊ? ನಾಥನಾಗಿದ್ದ ಸಿದ್ಧರಾಮನು  ಯೋಗತತ್ವಕ್ಕೆ ಸಲ್ಲದ ಹೋಮ ಮಾಡುವ ಕಾರಣ, ಅದನ್ನು ನಾಥರು  ವಿರೋಧಿಸಿರಬಹುದೇ ಎಂಬ ಊಹೆಯನ್ನೂ ಇಲ್ಲಿ ಮಾಡಬಹುದು.

೨.‘ಬಸವಶಿಖಾಮಣಿ’(?)ಎಂಬ ಕೃತಿಯಲ್ಲಿ ಬಸವಣ್ಣನು ಶಿವಪೂಜೆಯಲ್ಲಿ ಇರುವಾಗ, ಕಾಲಮೇಘಜೋಗಿ ಚಂದ್ರಜೋಗಿ ಎಂಬುವರು ಕಲ್ಯಾಣ ಪಟ್ಟಣಕ್ಕೆ ಬಂದು ಬೆಂಕಿ ಹತ್ತಿಸುತ್ತಾರೆ. ಬಸವಣ್ಣನು ಬೆಂಕಿಗೆ ಸನ್ನೆಮಾಡಲು ಅದು ಜೋಗಿಗಳ  ಬೆನ್ನುಹತ್ತುತ್ತದೆ. ಕಡೆಗೆ ಜೋಗಿಗಳು ಬಸವಣ್ಣನಿಗೆ ಮೊರೆಹೋಗಿ ಪ್ರಾಣ ಉಳಿಸಿಕೊಳ್ಳುತ್ತಾರೆ.[5]

೩. ಹರಿಹರನ ‘ರೇವಣಸಿದ್ಧೇಶ್ವರನ ರಗಳೆ’ ಯಲ್ಲಿ ಒಬ್ಬ ಜೋಗಿ ಬರುತ್ತಾನೆ. ಈತನು ರೇವಣನು ಹೊಳೆಯೊಳಗೆ ಬಚ್ಚಿಟ್ಟ ಸುರಗಿಯನ್ನು ಹೊರತೆಗೆವ ಸವಾಲನ್ನು ಸ್ವೀಕರಿಸಿ ಮಂಗಳವೇಡೆಗೆ ಬಂದವನು. ಈತನನ್ನು ಕಾವ್ಯ ‘‘ಅತಿ ಕುಹಕಮಂ ಬಲ್ಲ ಖರ್ಪರನೆನಿಪ್ಪ ಬಹುಕೇತನದ ಜೋಗಿ’’ ಎಂದು ಬಣ್ಣಿಸುತ್ತದೆ. ಮಲ್ಲಣ್ಣ ಕವಿಯ (ಕ್ರಿಶ.೧೫)  ‘ರೇವಣಸಿದ್ಧೇಶ್ವರ ಕಾವ್ಯ’ದಲ್ಲಿ ಇದೇ  ಸುರಗಿಗಳ ಪ್ರಸಂಗವು ವಿಸ್ತಾರವಾಗಿ ಬರುತ್ತದೆ. ವಿಶೇಷವೆಂದರೆ, ಇಲ್ಲಿನ ಜೋಗಿಯ ಹೆಸರು ಗೋರಖನಾಥ. ಈತ ಸಾವಿರ ಕನ್ಯೆಯರ ಬಲಿ ಕೊಡಲು ಸಿದ್ಧತೆ ಮಾಡಿರುತ್ತಾನೆ. ಆಗ ರೇವಣನು ಬಂದು ಕನ್ಯಾಬಲಿ ಆಗದಂತೆ ನೋಡಿ ಕೊಳ್ಳುತ್ತಾನೆ. ಜತೆಗೆ ಸೆರೆಯಲ್ಲಿದ್ದ ೧೧ಸಾವಿರ ಜೋಗಿಗಳನ್ನು ಬಿಡುಗಡೆ ಮಾಡಿಸುತ್ತಾನೆ. ಸೆರೆಯಲ್ಲಿದ್ದ ಜೋಗಿಗಳು ಯಾರು, ಯಾಕಾಗಿ ಅವರು ಬಂಧನದಲ್ಲಿದ್ದರು – ಇವು ಯಾವುವೂ ಸ್ಪಷ್ಟವಾಗುವುದಿಲ್ಲ. ರೇವಣಸಿದ್ಧನು ಕೊಲ್ಲಾಪುರದಲ್ಲಿ ನಾಥಸಿದ್ಧರ ಜತೆ ಸಂಘರ್ಷ ಮಾಡಿದ ಮಿತ್‌ಗಳು ಕುರುಬರ ಪುರಾಣಗಳಲ್ಲಿ ಬಹಳ ಜನಪ್ರಿಯವಾದವು. ಈ ಮಿತ್ ಮುಂದೆ ಶಾಸನಗಳಲ್ಲೂ ಕಾಣಿಸಿತು. ತುರುವೇಕೆರೆಯಲ್ಲಿ ಲಭ್ಯವಾದ ತಾಮ್ರ ಶಾಸನದಲ್ಲಿ, ರೇವಣನು ತನ್ನ ಶಿಷ್ಯ ಸೋವಿಮುತ್ತನಿಗೆ ಕೊಲ್ಲಾಪುರಕ್ಕೆ ಭಿಕ್ಷಕ್ಕೆ ಕಳಿಸುತ್ತಾನೆ. ಸೋವಿಮುತ್ತನು ಕೇಳಿದವರಿಗೆ  ತಾನೊಬ್ಬ ಸಿದ್ಧ ಎನ್ನುತ್ತಿರುತ್ತಾನೆ.  ಆಗ ಅಲ್ಲಿದ್ದ ನಾಥಸಿದ್ಧರು ‘ತಾವೇ ಸಿದ್ಧರಲ್ಲದೆ ತಮಗೆ ಬೇರೆಯ ಸಿದ್ಧರುಂಟೆ’ ಎಂದು ಮುಳಿದು, ಕಾಳಕೂಟದ ವಿಷವನ್ನು ಭಿಕ್ಷೆಯಾಗಿ ನೀಡುತ್ತಾರೆ. ಆಗ ರೇವಣನು ಶಿಷ್ಯನ ಜತೆ ಬಂದು ಅದೇ ವಿಷದಿಂದ ಎರಡು ಕಾಳಸರ್ಪಗಳನ್ನು ಮಾಡಿ ಸಿದ್ಧರ ಮೇಲೆ ಬಿಡುತ್ತಾನೆ. ಅವು ‘‘ಅವರೊಳು ಮುಖ್ಯನಾದವಗೆ ಗೋರಕ್ಷನೆಂಬ ನಾಮನಂ ಕೊಂದು’’ ಬರುತ್ತವೆ.[6]

೪. ತುಂಬ ಪ್ರಸಿದ್ಧವಾದ ಪ್ರಸಂಗವೆಂದರೆ, ರೇವಣನು ಕೊಲ್ಲಾಪುರದಲ್ಲಿ ಗೋರಖನಿಂದ ಕಠಾರಿ ಭಿಕ್ಷೆ ಪಡೆಯುವುದು. ಹರಿಹರನ  ‘ರೇವಣಸಿದ್ಧೇಶ್ವರನ ರಗಳೆ’ಯಲ್ಲಿ ರೇವಣನು ಕೊಲ್ಲಾಪುರಕ್ಕೆ ಬಂದಾಗ, ಸ್ಥಳೀಯ ಜನ ಇಲ್ಲಿ ಗತಿಸ್ಥಂಭ ಮಾಡುವ ಸಿದ್ಧರಿದ್ದಾರೆ. ಯಾಕೆ ಸುಮ್ಮನೆ ಸಾಯುವೆ. ಹೊರಟುಹೋಗು ಎಂದು ಎಚ್ಚರಿಸುತ್ತಾರೆ. ಆಗ ರೇವಣನು ನನಗೆ ಆ ಕ್ಷುದ್ರವಿದ್ಯೆಗಳು ತಾಗುವುದಿಲ್ಲವೆಂದು ಗೋರಕ್ಷಕನ ನಿಳಯಕ್ಕೆ ಬಂದು  ಪಾಣಿಪಾತ್ರೆಯ ಭಿಕ್ಷೆ ಬೇಡುತ್ತಾನೆ. ಗೋರಖನು ಜಿದ್ದಿನಿಂದ ಕಠಾರಿಯ ದಾನ ಮಾಡುತ್ತಾನೆ. ಈ ಪ್ರಸಂಗವು ರಸವಿದ್ಯೆಯುಳ್ಳ ಇಬ್ಬರ ಸಿದ್ಧರ ನಡುವಣ ಸ್ಪರ್ಧೆಯನ್ನು ಸೂಚಿಸುತ್ತಿರಬಹುದು.

೫. ದೇವಕವಿಯ ‘ಮರುಳಸಿದ್ಧಕಾವ್ಯ’ದಲ್ಲಿ ಒಬ್ಬ ಭೈರವಾರಾಧಕನ ಕಥೆಯಿದೆ. ಅವನ ಹೆಸರು ಭೈರಗೊಂಡ.  ಅವನ ಸತಿ  ಲಿಂಗಮ್ಮ ಲಿಂಗಾರ್ಚಕಿ. ಭೈರವಗೊಂಡನು ೧೨ ವರ್ಷಕ್ಕೊಮ್ಮೆ ತ್ರಿಯಂಬಕದ ಕುಂಭಮೇಳದಲ್ಲಿ ಸೇರುವ  ಜೋಗಿಗಳ ಪೂಜೆ ಮಾಡಲು ಬಯಸುತ್ತಾನೆ. ಅವನು ಜೋಗಿಗಳಿಗೆ ‘ಪ್ರೀತಿಯೊಳು ಜೋಗಿಪಾತ್ರೆಯ ತುಂಬಿ’ ‘ಅವರಾಹಾರ’ ಕೊಡುತ್ತಾನೆ. ಈ ‘ಅವರಾಹಾರ’ ಯಾವುದೊ ಅಸ್ಪಷ್ಟವಾಗಿದೆ. ಬಹುಶಃ ಅದು ಸಿದ್ಧಭುಕ್ತಿ. ಆಗ ಲಿಂಗಮ್ಮ ‘ಆಗಮಾರ್ಥದೊಳಿಲ್ಲದಿಹ ಕಾರ್ಯವೆಸಗುತಿಹ’ ಗಂಡನ ಕಾರ್ಯವನ್ನು ಪ್ರತಿಭಟಿಸಿ,  ಜೋಗಿಗಳನ್ನು ನಿಂದಿಸುತ್ತಾಳೆ. ಭೈರಗೊಂಡನು ಪ್ರತಿಯಾಗಿ ‘ಸಿದ್ಧರಿಗೆ ಸಿದ್ಧ ನವನಾಥಸಿದ್ಧನವ ಬಲುಸಿದ್ಧನಾದೀ ಭೈರವನ ಪೂಜೆಯ ಮಾಡಲಲಸುವರೆ’’ ಎಂದು ಹೆಂಡತಿಗೆ ಬೈಯುತ್ತಾನೆ. ದೈವದ ಹೆಸರಲ್ಲಿ ಕುಟುಂಬಗಳು ವಿಭಜನೆಗೊಂಡ ನೂರಾರು ಚಿತ್ರಗಳು ಶರಣರ ವಚನಗಳಲ್ಲಿಯೂ ಜೈನಕೃತಿಗಳಲ್ಲಿಯೂ ಸಿಗುತ್ತವೆ. ದಂಪತಿಗಳ ಜಗಳ ನೋಡಲಾಗದೆ, ಶಿವನು ಬಂದು ‘ಜೋಗಿ ಜಂಗಮರ ಅತಿವಾದವನ್ನು ೧೨ ವತ್ಸರತನಕ’’ ಇಕ್ಕುತ್ತಾನೆ. ಈ ೧೨ ವತ್ಸರವು  ನಾಥರು ೧೨ ವರ್ಷಕ್ಕೊಮ್ಮೆ ತ್ರ್ಯಂಬಕೇಶ್ವರದಲ್ಲಿ ಸೇರುವ ಮಹಾಸಭೆಯನ್ನು ಸಂಕೇತಿಸುತ್ತಿದೆ. ಸಾಮಾನ್ಯವಾಗಿ ಸ್ಥಾವರ ಲಿಂಗ ಪೂಜಕರು ಇಷ್ಟಲಿಂಗದವರ ಮುಂದೆ, ಇಷ್ಟಲಿಂಗದವರು ಆತ್ಮಲಿಂಗವಾದಿಗಳ ಮುಂದೆ ಸೋಲುವ ಪ್ರಸಂಗಗಳಿವೆ. ಇಲ್ಲಿ, ಸ್ಥಾವರಲಿಂಗ ವಾದದ ಮುಂದೆ ಯೋಗವಾದಿ ನಾಥರು ಸೋಲುತ್ತಿದ್ದಾರೆ.

೬.ಇವುಗಳಲ್ಲೆಲ್ಲ ಮಲ್ಲಿಕಾರ್ಜುನನ ‘ಶಂಕರದಾಸಿಮಯ್ಯನ ಪುರಾಣ’ವು ಅನೇಕ ಕಾರಣದಿಂದ ವಿಶಿಷ್ಟವಾದುದು. ಇದು ನಾಥಜೋಗಿಗಳ ಹೆಸರು, ವೇಷ ಹಾಗೂ ಆಚರಣೆಗಳ ಬಗ್ಗೆ ವಿವರವಾದ ಚಿತ್ರ ನೀಡುತ್ತದೆ. ಊರ ಭೈರವಮಂದಿರದಲ್ಲಿ  ‘‘ವ್ಯಾಳ ಗೋರಖನಾಥ ಸುರಂಗಿ ಮಾಂಜವನಾಥ ಕೋರಾಂಟಕನು ನಾಥಾರಾಧ್ಯ ಮತ್ಸ್ಯೇಂದ್ರ ನಾಥಪಂಥೆನಿಸುವ ಮಹಾನವನಾಥ ಸಿದ್ಧರ ಸಾಂಪ್ರದಾಯ ವ್ರಾತ’’(೧೫.೩) ಬಂದು ಬೀಡು ಬಿಟ್ಟಿರುತ್ತದೆ. ಕಥಾನಾಯಕನಾದ ಶಂಕರದಾಸಿಮಯ್ಯನು ನವಿಲೆಗೆ ಹೋಗುವಾಗ, ಈ ನಾಥರು ನಮಗೆ ಅಂಜಿ ಹೇಗೆ ಮುಖಮರೆಸಿಕೊಂಡು ಹೋಗುತ್ತಿದ್ದಾನೆ ನೋಡಿ ಎಂದು ಗೇಲಿಮಾಡುತ್ತಾರೆ. ‘ಭೂತಳದ ಸಕಲ ಮತಗಳು ನಾಥಪಂಙ್ತಿಗೆ ಸರಿಯೆ’ ಎಂದು ಸವಾಲು ಹಾಕಿ ದಾಸಿಮಯ್ಯನನ್ನು ಕೆಣಕುತ್ತಾರೆ. ದಾಸಿಮಯ್ಯನಿಗೂ ಜೋಗಿಗಳಿಗೂ ತಾತ್ವಿಕ ವಾಗ್ವಾದ ನಡೆಯುತ್ತದೆ. ಶರಣರ ಯೋಗ ದೊಡ್ಡದೊ ಜೋಗಿಗಳ ಮಾರ್ಗ ದೊಡ್ಡದೊ ಎಂಬುದು ವಾದದ ವಿಷಯ. ವಾಗ್ವಾದ ನಿಂತು ಯುದ್ಧ ಆರಂಭವಾಗುತ್ತದೆ. ನಿರೀಕ್ಷೆಯಂತೆ ಯುದ್ಧದಲ್ಲಿ ಜೋಗಿಗಳು ಸೋತು ಕ್ಷಮೆಬೇಡುತ್ತಾರೆ. ದಾಸಿಮಯ್ಯ ಅವರನ್ನು ಕ್ಷಮಿಸುತ್ತಾನೆ.

ಈ ಕನ್ನಡ ಪಠ್ಯಗಳಲ್ಲಿ ರೇವಣಸಿದ್ಧ ಹಾಗೂ ಮರುಳಸಿದ್ಧರನ್ನು ಬಿಟ್ಟರೆ ಉಳಿದವರೆಲ್ಲ ಶರಣರು. ಈ ಮುಖಾಮುಖಿ ಪ್ರಸಂಗಗಳು ಆಯಾ ಕಥಾನಾಯಕರ ನಿಜಜೀವನದಲ್ಲಿ ಬಂದವು ಎನ್ನುವುದಕ್ಕಿಂತ, ಈ ಕಾವ್ಯ ರಚಿಸಿದ ಕವಿಗಳ ಕಾಲದವು ಎಂದೂ ವಾದಿಸಬಹುದು. ಆದರೆ ಇವುಗಳ ಉದ್ದೇಶ ಮಾತ್ರ ಒಂದೇ. ಜೋಗಿ ಅಥವಾ ನಾಥರ ವಿಮರ್ಶೆ ಮತ್ತು ದುಷ್ಟೀಕರಣ. ಇದನ್ನು ನೋಡಿದರೆ, ಕರ್ನಾಟಕದಲ್ಲಿ ನಾಥರು ಎದುರಿಸಿರಬಹುದಾದ ಪ್ರತಿರೋಧ ಬಹಳ ಕಟುವಾಗಿತ್ತು ಅನಿಸುತ್ತದೆ.

ನಿಜಗುಣ ಶಿವಯೋಗಿಯು ಯೋಗಶಾಸ್ತ್ರದ ಆಧಾರದ ಮೇಲೆ ತನ್ನ ಶಿವಯೋಗದ ಕಲ್ಪನೆಯನ್ನು ಚರ್ಚಿಸುವ ತತ್ವಜ್ಞಾನಿ; ಸ್ವತಃ ಯೋಗಿ. ಅವನ ‘ಕೈವಲ್ಯಪದ್ಧತಿ’ಯು ಯೋಗದ ಮಹತ್ವವನ್ನು ಹೇಳುತ್ತದೆ. ಅದಕ್ಕೂ ಗೋರಖನ ಯೋಗಪಠ್ಯಗಳಿಗೂ ಬಹಳ ಸಾಮ್ಯಗಳಿವೆ.  ಆದರೆ ನಿಜಗುಣನು ತನ್ನ  ‘ವಿವೇಕ ಚಿಂತಾಮಣಿ’ಯಲ್ಲಿ ನಾಥವನ್ನು ನಿಷಿದ್ಧ ಕರ್ಮಶಾಸ್ತ್ರ ಎಂದು ಖಂಡಿಸುತ್ತಾನೆ. ಕೌಳ ಯಾಮಳ ಶಾಸ್ತ್ರಗಳು ‘ಸತ್ಯನಾಥ ಸಂತೋಕನಾಥ ಆದಿನಾಥ ಆನಾದಿನಾಥ ಅಕುಳಿನಾಥ ಮತಂಗನಾಥ ಮತ್ಸ್ಯೇಂದ್ರನಾಥ, ಘಟಯಂತ್ರನಾಥ, ಗೋರಕ್ಷನಾಥ’ ಎಂಬ ನವನಾಥರಿಂದ ಕಲ್ಪಿತವಾದವು. ಇವು ಹಿಂಸೆ ಮೈಥುನ ಮುಂತಾದ ನಿಷಿದ್ಧ ಕರ್ಮ ಮಾಡಲು ಹೇಳುತ್ತವೆ. ಮರಣ ಮೋಹನ ಸ್ತಂಭನ ಉಚ್ಛಾಟನ ಆಕರ್ಷಣ ವಿದ್ವೇಷಣ ಎಂಬ ಷಟ್ಕರ್ಮ ಹೇಳುತ್ತವೆ. ರಾಜವಶ್ಯ ಜನವಶ್ಯ ಸ್ತ್ರೀವಶ್ಯ ಪಾದುಕಾಸಿದ್ದಿ ಅಂಜನಾಸಿದ್ಧ ಘುಟಿಕಾಸಿದ್ಧ ಮೂಲಿಕಾಸಿದ್ಧ ರಸರಸಾಯನ ಸಿದ್ದಿಗಳನ್ನು ಹೇಳುತ್ತವೆ. ಆದ್ದರಿಂದ ಇವು ಶಿವಯೋಗಕ್ಕೆ ಸಲ್ಲವು ಎಂದು ಅವನು ಹೇಳುತ್ತಾನೆ. ಭಾರತದಲ್ಲಿ ಯೋಗದರ್ಶನದಲ್ಲಿ ತಮ್ಮ ಮೂಲತತ್ವವನ್ನು ಪಡೆದುಕೊಂಡ ಪಂಥಗಳಲ್ಲೆ ಪರಸ್ಪರ ಒಪ್ಪಲಾಗದ ಜಗಳಗಳಿದ್ದವು ಎಂದು ಇದರಿಂದ ಗೊತ್ತಾಗುತ್ತದೆ. ಪ್ರಾಚೀನ ಸಾಹಿತ್ಯ ಕೃತಿಗಳಲ್ಲಿ ಜೋಗಿಗಳನ್ನು ಕುರಿತು ರಮ್ಯಾದ್ಭುತ ಚಿತ್ರವನ್ನು ಅಷ್ಟಾದಶ ವರ್ಣನೆಯಂತೆ ತರುವ ರೂಢಿಯಿತ್ತು. ಅಂತಹ ಸ್ವಾರಸ್ಯಕರವಾದ ಕೆಲವನ್ನು ಗಮನಿಸಬಹುದು:

೧. ಹಿಡಿದ ಚಕ್ರದ ಗುಜುಱುದಲೆಯ ಶಂಖದ ಮಣಿಯ ತೊಡಿಗೆಗಳ ತಿರಿವ ಸೋರೆಯ ಹೂಸಿದಿಟ್ಟಿಗೆಯ ಹುಡಿಯ ಕೆಂಗಣ್ಣ ನಿಡಿಯೊಡಲ ಬಾದಣಗಿವಿಯ ಪಂಚರನ್ನದ ಕಂಥೆಯ ಕುಡಿದ ಜೊಮ್ಮಿನ ಕೆಟ್ಟನುಡಿಯ(ಜೋಗಿ) (ಸಿದ್ಧರಾಮ ಚಾರಿತ್ರ ೬.೨೭)

೨. ಮಿಸುಗುವ ಜಟಾಮಕುಟ ಭಾಳತಳದೊಳು ಪೊಳೆವ ಭಸಿತ ರುದ್ರಾಕ್ಷಿಗಳ ಸರಗಳಂ ಕಾಷಾಯ ವಸನ ಕರ್ಣದ್ವಯಗಳೊಳು ನೇಲ್ವ ಫಣಿಕುಂಡಲಗಳ ಧರಿಸಿದ ಕಂಥೆಯ, ಕುಶಗ್ರಂಥಿಗಳು ತಿದ್ದಿ ರಾಜಿಸುವ ದಂಡ ಕರಮೆಸೆವ ಮುಂಗೈಯ ಜೋಳಿಗೆಯ ಖರ್ಪರದ ರಾಜಿಸುವ ಭಸ್ಮಾಧಾರ ತೀರ್ಥಜಲಪೂರಿತ ಕಮಂಡಲದ ಖಟ್ವಾಂಗದ(ಜೋಗಿ)  (ಗುರುರಾಜ ಚಾರಿತ್ರ ೩.೪೦)

೩. ಬತ್ತಿದಲೆಗಳ ಮೆಯ್ಯಬೂದಿಯವೊತ್ತಿ ಬಿಗಿದುಡಿದಾರ, ಕಚ್ಚುಟವಿತ್ತೆರದ ಕಾಮಾಕ್ಷಿ, ಕಂಠದ ಸಿಂಗಿನಾಥಗಳ, ತೆತ್ತಿಸಿದ ಶಂಖಸರ ತಲೆಯೊಳು. ಉರದೊಳಮರಿದ ಜಠರಬಂಧ ಕರದ ಲಾಕುಳ, ಶೂಲಮರ್ಚಾವರಣದುಡಿಗಳ ಕಿಂಕಿಣಿಯ ಮಾಲೆಗಳ ಗಂಟೆಗಳ ಸರಪಳೆಯ ಪೊಸ ಕಕ್ಷಪಾಳದ ಸುರೆಯ ತುಂಬಿದ ಲೋಹಪಾತ್ರೆಯ ಪರಿವಿಡಿಯೊಳಿಸೆದರಾ ಜೋಗಿಗಳದೇನೆಂಬೆ. (ಶಂಕರ ದಾಸಿಮಯ್ಯನ ಪುರಾಣ ೧೫. ೪,೫)

೪. ಗುಜುಱಿ ಮಂಡೆಯ ತಿರಿವ ಸೊರೆಗಳಿಟ್ಟಗೆಯ ಹಂಡಿಯಂ ಪೂಸಿದಂಗದುರುತರದ  ಸಂಕದ ಮಣಿಯ ತೊಡಿಗೆಗಳ ಕುಱಿಮೀಸೆಗಳ ಜೋಗವಟ್ಟಿಗೆಗಳ ಕರದ ಚಕ್ರದ ಸುರೆಗುಡಿದು ಜೊಮ್ಮುಹತ್ತಿ ಕಣ್ಣರೆಮುಚ್ಚಿ ಪಂಚರಂಗದ ಕಂತೆಯಂ ತೊಟ್ಟು ಸೊರಹುತ್ತೆ ಬಾಯ್ಗೆ ಬಂದಂತೆ ನಾನಾ ಪರಿಯ ಜೋಗಿಗಳ್ಸಂತಸದೊಳು ಹಿಂಡುಗೂಡುತ್ತೆಲ್ಲರುಗಳು ಬಾಯೊಳ್ಕಚ್ಚಿಕೊಂಡಾಗ ಸಿಂಗಿನಾದವನೂದುತ್ತೆ ಎಯ್ತರಲ್  (ಸಿದ್ಧೇಶ್ವರ ಪುರಾಣ ೩. ೨,೩)

ಖರ್ಪರ, ಹಂಡಿ, ಸೋರೆಬುರುಡೆ ಕಾಷಾಯವಸ್ತ್ರ, ಸಿಂಗಿನಾದ, ಜೋಳಿಗೆ ಈ ಲಾಂಛನಗಳ ಆಧಾರದಲ್ಲಿ ಇವರು ಕಾಪಾಲಿಕ ನಾಥರು ಎಂದು ಹೇಳಬಹುದು. ಕಾಪಾಲಿಕರು ನಾಥರಾಗಿ ರೂಪಾಂತರ ಪಡೆದ  ಬಳಿಕವೂ ಕಾಪಾಲಿಕ ಲಾಂಛನಗಳನ್ನು ಉಳಿಸಿಕೊಂಡಿದ್ದರೆಂದು ಇಲ್ಲಿ ಸ್ಪಷ್ಟವಾಗುತ್ತದೆ. ಸಮಸ್ಯೆಯೆಂದರೆ, ಈ ಚಿತ್ರಗಳಲ್ಲಿರುವ ಕ್ಲೀಷೆಯ ಗ್ರಹಿಕೆ, ಉತ್ಪ್ರೇಕ್ಷೆ ಮತ್ತು ವ್ಯಂಗ್ಯ. ರಾಘವಾಂಕನು ಕೊಡುವ ಮೊದಲನೆಯ ಚಿತ್ರವು ಕೊನೆಯ ಕವಿಯಾದ ವಿರಕ್ತ ತೋಂಟದಾರ್ಯನಲ್ಲೂ ಯಥಾವತ್ತು ಬರುತ್ತದೆ. ಒಂದು ಜನಾಂಗ ಅಥವಾ ಪಂಥವನ್ನು ದುಷ್ಟೀಕರಣ ಮಾಡುವ ಎಲ್ಲ ಚಿಂತನಾಕ್ರಮಗಳಲ್ಲೂ ಇಂತಹ ಪುನರುಕ್ತಿಗಳು ಇರುತ್ತವೆ. ಆಧುನಿಕ ಸಾಹಿತ್ಯದಲ್ಲಿ ಬರುವ ಜೋಗಿಯ ಚಿತ್ರಗಳಲ್ಲೂ ಈ ಉತ್ಪ್ರೇಕ್ಷೆಯಿದೆ. ಕುವೆಂಪು ಅವರ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ಕವನದ ಜೋಗಿಯದೂ ಅತಿರಂಜಿತ ಚಿತ್ರ. ಕುವೆಂಪು ಅವರ ಈ ಚಿತ್ರಕ್ಕೆ ತೀರ್ಥಹಳ್ಳಿ ಸೀಮೆಯಲ್ಲಿರುವ ಕಿನ್ನರಿ ಜೋಗಿಗಳಿಂದ ಪ್ರೇರಣೆ ಇದ್ದರೆ ಸೋಜಿಗವಿಲ್ಲ. ಜೋಗಿಯು ಕುಪಿತನಾಗಿ ಭೈರವನಂತಾದ ಎನ್ನುವುದು ಮಾರ್ಮಿಕ. ಕೈಲಿ ಕಿಂದರಿ ಹಿಡಿದ ನಾನಾ ಬಣ್ಣದ ಬಟ್ಟೆಯ ಜೋಗಿ ಅವನು. ಕಿನ್ನರಿಯವರು ಬಣ್ಣಬಣ್ಣದ ಬಟ್ಟೆಯುಡುವುದು ನಿಜ.  ಆದರೆ ಇಲ್ಲಿನದು ಕತೆಯ ಬೆಡಗಿಗೆ ಹುಟ್ಟಿಕೊಂಡ ಕಾಲ್ಪನಿಕಚಿತ್ರ ಹಾಗೂ ಅತಿಮಾನುಷ ಲೋಕ. ಯಾಕೆಂದರೆ ಇಲ್ಲಿನ ಜೋಗಿಗೆ ಕುದುರೆಯ ಗೊರಸಿದೆ. ಕಡವೆಯ ಕೊಂಬಿದೆ. ಜನಪದ ನಾಥ ಸಂಸ್ಕೃತಿಯಲ್ಲಿ ಜೋಗಿ ಮಹಿಳೆಯರಿಗೆ ಪ್ರೇಮವನ್ನೂ ಸಂತಾನವನ್ನೂ ಕೊಡುವವನಾದರೆ, ಇಲ್ಲಿ ಆತ ಮಕ್ಕಳನ್ನು ಅಗಲಿಸುವವನು. ಜೋಗಿ ಕಿನ್ನರಿ ಬಾರಿಸುತ್ತ ಮಕ್ಕಳ ಸಮೇತ ಗುಹೆಯೊಳಗೆ ಕಣ್ಮರೆಯಾಗುವ ಘಟನೆಗಳಿಂದ ಕವಿತೆಯು ಸನ್ನಿವೇಶವನ್ನು ನಿಗೂಢಗೊಳಿಸುತ್ತದೆ. ಜೋಗಿಗಳು ಬಂದಾಗ ಮಾಟ ಮಂತ್ರ ಇಂದ್ರಜಾಲದ ಪ್ರಸಂಗಗಳು ಬರುತ್ತವಷ್ಟೆ. ತಾಂತ್ರಿಕ ಪಂಥಗಳಿಗೆ ನಿಗೂಢತೆ ಲಗತ್ತಾಗಿರುವುದರ ಹಿನ್ನೆಲೆಯಲ್ಲಿ ಇಲ್ಲಿನ ಚಿತ್ರಣವನ್ನು ಗಮನಿಸಬೇಕು. ಸಾಹಿತ್ಯ ಕೃತಿಗಳಲ್ಲಿ ಜೋಗಿ ಪಾತ್ರ  ಬಂದಾಗ ಕೆಲವು ಅಂಶಗಳು ಕಡ್ಡಾಯವಾಗಿ ಇರುತ್ತವೆ. ೧. ಉತ್ಪ್ರೇಕ್ಷೆಯಿಂದ ಕೂಡಿದ ಜೋಗಿಯ ವರ್ಣನೆಗಳು. ೨ ಜೋಗಿಯ ಕಾರ್ಯಗಳ ಬಗ್ಗೆ ನಿಗೂಢತೆ. ೩. ಸೋಲು ಗೆಲುವುಗಳ ಸ್ಪರ್ಧೆ. ಪ್ರಾಚೀನರಿಂದ ಆಧುನಿಕರ ತನಕ, ಸಾಹಿತ್ಯಕ ಪರಂಪರೆಯಲ್ಲಿ ಸತತ ಹಿಂಬಾಲಿಸುವ ಸ್ಮೃತಿಕೋಶವೊಂದು ಲೇಖಕರಿಗೆ ಇರುತ್ತದೆಯೇನು?

. ಗೋರಖನಾಥನ ಚಿತ್ರಗಳು

ರಾಘವಾಂಕನು ‘ಸಿದ್ಧರಾಮ ಕಷ್ಟಕ್ಕೆ ಸಿಲುಕದ ಸಿದ್ಧ’ ಎಂದು ಹೇಳಲು ಇತರ ಸಿದ್ಧರು ಪಟ್ಟಕಷ್ಟಗಳ ಉಲ್ಲೇಖ ತರುತ್ತಾನೆ. ಅವರಲ್ಲಿ ಉರಿಯೊಳಳಿದ ವ್ಯಾಳಿ, ಕೆರೆವೊಕ್ಕ ಕೋರಾಂಟ, ಚಕ್ರಕ್ಕೆ ತಲೆಗೊಟ್ಟ ನಾಗಾರ್ಜುನ ಮತ್ತು  ಕೆಸರೊಳಗಿದ್ದ ರತ್ನಘೋಷರು ಇದ್ದಾರೆ. ಇವರೆಲ್ಲ ಚೌರಾಸಿ ಸಿದ್ಧಪರಂಪರೆಯಲ್ಲಿ ಬರುವವರು. ಆದರೆ ಇವರ ಜೀವನದಲ್ಲಿ ಸಂಭವಿಸಿದ ಈ ಘಟನೆಗಳ ಹಿನ್ನೆಲೆಯ ಕಥೆಗಳನ್ನು ಕಂಡರೆ, ಇವರು ಜನರಿಗೆ ಉಪಕರಿಸಲು ಹೋಗಿ ಮರಣ ಹೊಂದಿದವರು. ಆದರೆ ಬಸವಣ್ಣ ಉಲ್ಲೇಖಿಸುವ ‘ಒಲೆಯಡಿಹನುರುಹಿದೆಡೆ ಹೊಗೆ ಗೋಳಕನಾಥನ ಕೊರಳ ಸುತ್ತಿತು’’ ಎಂಬುದರ ಹಿನ್ನೆಲೆಯಲ್ಲಿರುವ ಮೂಲ ಕಥೆ ಮಾತ್ರ ತಿಳಿಯುವುದಿಲ್ಲ. ಕೊಡೆಕಲ್ಲಿನ ಬಸವಣ್ಣನು ‘ಭವಪಾಶ ಗೆಲ್ವೆನೆಂದು ಗೋರಕ್ಷ ರಸಮೂಲಿಕೆ ಒಳಗಡೆ ಮಣ್ಣುಮಸಿ ಆದ’ಎಂಬ ಉಲ್ಲೇಖವನ್ನು ತರುತ್ತಾನೆ.  ನಾಥಸಿದ್ಧರ ಮೇಲೆ ಬಹಳಷ್ಟು ಕತೆಗಳು ಮಧ್ಯಕಾಲದಲ್ಲಿ ಜನಜನಿತವಾಗಿ ಪ್ರಚಾರದಲ್ಲಿದ್ದವು ಎಂದು ಕಾಣುತ್ತದೆ. ಅವನ್ನು ನಮ್ಮ ಕವಿಗಳು ತಮ್ಮ ನಾಯಕರ ಕೀರ್ತಿಯನ್ನು ಮೆರೆಸಲು ಅಥವಾ ತಾವು ನಂಬಿದ ತತ್ವದ ಮಹತ್ವ ಹೇಳಲು ರೂಪಕಗಳ ಹಾಗೆ ಬಳಸುತ್ತಾ ಹೋಗುತ್ತಾರೆ. ದಾರ್ಶನಿಕ ಹಾಗೂ ಪಂಥೀಯ ವೈರತ್ವದಲ್ಲಿ ಬದಲಾಗದ ರೂಪಕಗಳು ಯುದ್ಧತಂತ್ರದ ಭಾಗವಾಗಿ ಬರುತ್ತವೆ.

ಅನೇಕ ಕೃತಿಗಳು ಗೋರಖನನ್ನು ಒಂದು ಪಾತ್ರವಾಗಿ ತರುತ್ತವೆ. ಮುಖ್ಯವಾಗಿ  ‘ರೇವಣಸಿದ್ದೇಶ್ವರ ರಗಳೆ’ ‘ಪ್ರಭುಲಿಂಗಲೀಲೆ’ ‘ಶೂನ್ಯಸಂಪಾದನೆ’ ‘ರೇವಣಸಿದ್ಧೇಶ್ವರ ಕಾವ್ಯ’ ಹಾಗೂ ‘ಮರುಳಸಿದ್ಧ ಕಾವ್ಯ’ಗಳು. ಇವು ತಮ್ಮ ಸಮಕಾಲೀನ ನಾಥರ ಜತೆ ಮಾಡುವ ವಾಗ್ವಾದಕ್ಕೆ, ಅವರ ಪ್ರತಿನಿಧಿಯಾಗಿ  ಗೋರಖನನ್ನಾಗಿ ಕಲ್ಪಿಸಿಕೊಳ್ಳುತ್ತವೆ. ಅಲ್ಲಮ ಮತ್ತು ಗೋರಖರು ಮಾಡುವ ತಾತ್ವಿಕ ವಾಗ್ವಾದದಲ್ಲಿ ಮುಖ್ಯ ಪ್ರಶ್ನೆಯೆಂದರೆ,  ಯೋಗಿಯು ಹಠಯೋಗದ ಮೂಲಕ ವಜ್ರಕಾಯ ಪಡೆಯುವುದು ಮುಖ್ಯವೊ, ಅರಿವು ಹಾಗೂ ಸಾಧನೆಗಳ ಮೂಲಕ ಶೂನ್ಯತತ್ವವನ್ನು ಸಾಧಿಸುವುದು ಮುಖ್ಯವೊ ಎಂಬುದು. ಈ ಕಥನದ ಪ್ರಕಾರ ಗೋರಖನು ವಜ್ರವಾದಿ. ಅಲ್ಲಮ ಶೂನ್ಯತತ್ವವಾದಿ. ಅಲ್ಲಮ ಹಾಗೂ ಗೋರಖರ ಮುಖಾಮುಖಿಯನ್ನು ಹರಿಹರ ಮೊದಲು ಕಲ್ಪಿಸಿದನು. ಪ್ರಭುದೇವರ ರಗಳೆಯಲ್ಲಿ ಅಲ್ಲಮ ಒಬ್ಬ ‘ಸಿದ್ಧ’. ಅವನು ಶ್ರೀಪರ್ವತದ ಕದಳಿಬನದ ದಾರಿಯಲ್ಲಿ ಬರುವಾಗ ಒಬ್ಬ ಭೈರವ ಕಾಣಿಸುತ್ತಾನೆ. ಆತ ‘ಪ್ರಭುಲಿಂಗಲೀಲೆ’ ಹಾಗೂ ‘ಶೂನ್ಯಸಂಪಾದನೆ’ಗಳಲ್ಲಿ ಬರುವಂತೆ ಗೋರಕ್ಷನಲ್ಲ.  ಭೈರವನಾಥರಿಗೆ ಭೈರವ ಎಂಬ ಹೆಸರೂ ಇತ್ತಷ್ಟೆ. ಇಲ್ಲಿ ಅಲ್ಲಮನಿಗೂ ಭೈರವನಿಗೂ ಸಂಭಾಷಣೆ ನಡೆಯುವುದಿಲ್ಲ. ‘ಕೈಮುಗಿದು, ಅಲ್ಲಮಂ ಕಾರಣಿಕನೆಂದು ಮನದೊಳಗರಿದು ತೋರಿದಂ ಶಿವನಲ್ಲಿಗೊಯ್ವ ಸೈವಟ್ಟೆಯಂ’ ಎಂದು ಹರಿಹರ ಮುಗಿಸಿಬಿಡುತ್ತಾನೆ. ಶಿವನಲ್ಲಿಗೆ ಒಯ್ಯುವ ಸೈವಟ್ಟೆ ತೋರುವ ಮಹತ್ವದ ಕಾರ್ಯವನ್ನು ಇಲ್ಲಿ ಭೈರವ ಮಾಡುತ್ತಾನೆ. ಇಲ್ಲಿ ಭೈರವನ ಘನತೆ ಕಳೆಯಲಾಗಿಲ್ಲ. ಸ್ಪರ್ಧೆಯಿಲ್ಲದ ಕಾರಣ,  ಸೋಲು ಗೆಲುವಿನ ಪ್ರಶ್ನೆಯೂ ಇಲ್ಲ. ಈ ಪ್ರಸಂಗ ‘ಶೂನ್ಯಸಂಪಾದನೆ’ಯಲ್ಲಿ ‘‘ಕಲ್ಯಾಣಮಂ ಪೊರಮಟ್ಟು, ಶ್ರೀಪರ್ವತಕ್ಕೆ ಬಿಜಯ್ಯಂಗೆಯ್ಯುತ್ತ ಇರಲಲ್ಲಿ, ಗೋರಕ್ಷನೆಂಬ ಸಿದ್ಧನಂ ಕಂಡು, ಸಂಭಾಷಣೆಯಂ ಮಾಡಿ, ಅವನ ವಜ್ರದೇಹಮಂ ಅಸಿತಾಳ ಪತ್ರದಿಂ ಕಡಿದು ನೋಡಿ, ಪರೀಕ್ಷೆಯಂ ಕೊಂಡು, ಆತಂಗೆ ಉಪದೇಶಮಂ ಮಾಡಿ ಕದಳಿಯಂ ಪೊಗುವಾಗಳು’’ ಎಂದು ಸಂಕ್ಷಿಪ್ತವಾಗಿ ಬರುತ್ತದೆ.

ಈ ಭೇಟಿ ಪ್ರಸಂಗವು  ನಾಟಕೀಯವಾಗಿಯೂ ವಿಸ್ತಾರವಾಗಿಯೂ ಬರುವುದು  ‘ಪ್ರಭುಲಿಂಗಲೀಲೆ’ಯಲ್ಲಿ. ಗೋರಕ್ಷನನ್ನು ಅದು ‘‘ಕಾಮಿತಾರ್ಥವ ಕಂಡೆನೆಂದುದ್ಧಾಮತೆಯ ಸಮಸ್ತಸಾಧಕ’’ ಎನ್ನುತ್ತದೆ. ಗೋರಖನ ಬಳಿಗೆ ಅಲ್ಲಮನು ಜೀವ ವಿಯೋಗವಾದ ತನುವಿನ ಬಳಿ ಮರುಜೇವಣಿಗೆ ಬಂದಂತೆ ಬರುತ್ತಾನೆ. ಆದರೆ ಗೋರಕ್ಷನು ಅಲ್ಲಮನ ಕಾಲಿಗೆರಗದೆ ಹಮ್ಮಿಂದ ಬರಿಯೆ ಕೈಮುಗಿದು ಸತ್ಕರಿಸುತ್ತಾನೆ. ಅಲ್ಲಮನು  ‘‘ಒಡಲಿನಾಸೆಗೆ ಕುದಿದು ಕೋಟಲೆಬಡುವವರ ಕಳವಳವ ಕಳಚಲು ನಡೆದು ಬಂದವರು’’ ಎಂದು ನೇರವಾಗಿ ನುಡಿಯುತ್ತಾನೆ. ಈ ಉತ್ತರ ಗೋರಕ್ಷನಲ್ಲಿ ಬಿರುಸುಂಟು ಮಾಡುತ್ತದೆ. ಒಳಗೆ ಜಿದ್ದಿಗೆ ಬೀಳುತ್ತ ಹೊರಗೆ ನಯವನ್ನು ನಟಿಸುತ್ತ ‘‘ನಿಧಾನಿಸಿ ತಿಳಿಯೆ ನಿನ್ನಂತಸ್ಥವೆಂಬುದು ನಿಲುಕದೆಮ್ಮಯ ಮತಿಗೆ ನಿನ್ನಯ ರೀತಿ ಹೊಸದಾಗಿ; ಹೊಲಬು ಹೊಗದು ಎಮ್ಮಿರವು. ಸಾಕು ನಿನ್ನಯ ನೆಲೆಯ ನೀನೆ ಬಲ್ಲೆ’’ಎನ್ನುತ್ತಾನೆ. ಯುದ್ಧಕ್ಕೆ ಪೂರ್ವಪೀಠಿಕೆ ಬೀಳುತ್ತದೆ. ‘‘ತನ್ನನರಿಯದ ಮಂದಮತಿಗಳಿಗಿನ್ನು ಪೆರರಂತಸ್ಥವೆಂಬುದು ಕಣ್ಣುಕಾಣದ ಕುರುಡ ಕನ್ನಡಿವಿಡಿದ ತೆರನಂತೆ. ನನ್ನ ನಿಜದ ನಿರಾಳವನು ಬಳಿಕಿನ್ನು ಬಲ್ಲವರಾರು ಮಾತಿನ ಬಿನ್ನಣಿಗರಿಗೆ’’ ಎಂದು ಅಲ್ಲಮನ ಮಾತು ಚೂಪಾಗುತ್ತದೆ. ನಾಥನು ತನ್ನದು ಕಾಪಾಲ ಮಾರ್ಗವೆಂದೂ ತನಗೆ ‘ತನ್ನ ತಾನರಿವುದು’ ತಿಳಿಯದೆಂದೂ ನುಡಿಯುತ್ತಾನೆ. ಅದಕ್ಕೆ ಅಲ್ಲಮನು ಕಾಯ ವಿಕಾರವನ್ನು ವರ್ಣಿಸಿ, ಇದು ‘ಸಲುವುದೇ ಕಾಪಾಲಮಾರ್ಗಕೆ’ ಎಂದು  ಕೇಳುತ್ತಾನೆ. ಗೋರಕ್ಷ ಹಠಕ್ಕೆ ಬಿದ್ದು ಕಾಪಾಲ ಮಾರ್ಗದ ಸಮರ್ಥನೆಗೆ ತೊಡಗುತ್ತಾನೆ. ಮಾನವ ದೇಹವು  ಮಾಡಲರಿದವಂಗೆ ಕೊಳಚೆಯ ಮಾಡ. ಮಾಡಬಲ್ಲವರಿಗೆ  ಇದೇ ರನ್ನ. ಮಾಯೆಗೀಯೆಯನ್ನು ತಿರಸ್ಕರಿಸಬೇಕು. ಸಾವನ್ನು ಹಾಸ್ಯಮಾಡಬೇಕು. ನಾವು ತನುಸಿದ್ಧರು ಎನ್ನುತ್ತಾನೆ. ಅಲ್ಲಮನು ‘ಮರುಳೆ, ಸಾವನ್ನು ಗೆದ್ದೆನೆಂದು ಬೀಗುತ್ತಿರುವೆ. ನಿನ್ನ ಈ ದೇಹವೇ ಸಾವಿನ ಮನೆ. ನೀನಿದನ್ನು ನಂಬಿದರೆ ನಿನಗೆ ಪ್ರಳಯ’ಎನ್ನುತ್ತಾನೆ.

ದಾರ್ಶನಿಕ ವಾಗ್ವಾದ ಮುಗಿದು ದೈಹಿಕ ಪರೀಕ್ಷೆ ಶುರುವಾಗುತ್ತದೆ. ಪರಸ್ಪರರ ದೇಹವನ್ನು ಕತ್ತಿಯಿಂದ ಹೊಡೆದು ನೋಡುವ ಯುದ್ಧವಿದು. ನನ್ನ ದೇಹ ಕೂದಲೆಳೆಯಷ್ಟು ಕೊಂಕಿದರೂ ನಾನು ಸಿದ್ಧನಲ್ಲ ಎಂದು ಗೋರಕ್ಷ ಸವಾಲು ಹಾಕುತ್ತಾನೆ.  ಅಲ್ಲಮ ಕತ್ತಿಯಿಂದ ಹೊಡೆದಾಗ ಗೋರಕ್ಷನ ವಜ್ರಕಾಯಕ್ಕೆ ಕಚ್ಚೂ ಬೀಳುವುದಿಲ್ಲ. ಈಗ ದೇಹಸಿದ್ದಿಗಿಂತ ದೊಡ್ಡದನ್ನು ತೋರಿಸುವ ಪಾಳಿ ಅಲ್ಲಮನದು.  ಅಲ್ಲಮನ ದೇಹಕ್ಕೆ  ಗೋರಖ ಖಡ್ಗ ಬೀಸುತ್ತಾನೆ. ಅದು ಬಯಲ ಗಾಳಿಯಲ್ಲಿ ಈಸಾಡಿ ಬಂದಂತೆ ಆಗುತ್ತದೆ.  ಗೋರಕ್ಷ ವಿನೀತನಾಗುತ್ತಾನೆ. ಅಲ್ಲಮನು ಒಸೆದು ಹಣೆವಿಡಿದೆತ್ತಿ ಕರುಣವ ಪಸರಿಸುತ ಮನ್ನಿಸುತ್ತ,  ‘ಬಿಸಿಯ ಹದನನು ತಿಳಿದು ಲೋಹವ ಬೆಸೆವವೊಲು’  ಉಪದೇಶಿಸುತ್ತಾನೆ.

ಕಾಯ ಬಲಿದಡೆ ಮಾಯೆ ಬಲಿವುದು ಮಾಯೆ ಬಲಿದಡೆ ಛಾಯೆ ಬಲಿವುದು,

ಕಾಯ ಮಾಯ ಛಾಯೆ ಬಲಿದಡೆ ಸಿದ್ಧನವನಲ್ಲಕಾಯ ಮಾಯಾ

ಛಾಯಾದಾಗಿನ ದಾಯವನು ನೆರೆ ಕಳೆದನಾದಡೆ ರಾಯನಾತನು ಸಿದ್ಧರಲಿ ಗೋರಕ್ಷ ಕೇಳೆಂದ

ಮುಂದೆ ಗೋರಕ್ಷನಿಗೆ ಅನುಪಮನಾಥ ಪದವಿಯನಿತ್ತು,  ಅವನಿಂದ ಗುರುಪೂಜೆಯನ್ನು ಕೈಗೊಂಡು, ಭೂತಳದ ಅಜ್ಞಾನಿಗಳನು ಸುಜ್ಞಾನಿಗಳನು ಮಾಡುವೆ ಎಂದು ಅಲ್ಲಮ ಮುನ್ನಡೆಯುತ್ತಾನೆ. ಇಲ್ಲಿ ಕೃತಿ ಗೋರಕ್ಷನನ್ನು ಕ್ಷುದ್ರವಾಗಿ ಚಿತ್ರಿಸುವುದಿಲ್ಲ. ಆದರೆ ಅಲ್ಲಮನನ್ನು ದೊಡ್ಡ ಗುರುವಾಗಿ ಬಿಂಬಿಸುವ ಉತ್ಸಾಹದಲ್ಲಿ,  ಗೋರಕ್ಷನನ್ನು ಕಲಿಕೆಯ ಹಂತದಲ್ಲಿರುವಾಗಲೆ ನಿರ್ದಿಷ್ಟ ಹಂತದಲ್ಲಿ ಸ್ಥಗಿತವಾಗಿ ಅಹಂ ಬೆಳೆಸಿಕೊಂಡಿರುವ, ಆದರೆ ತಕ್ಕ ಗುರು ಸಿಕ್ಕರೆ ಬೆಳೆಯುವ ಸಾಧ್ಯತೆ ಇರುವ  ಸಾಧಕನಾಗಿ ಕಾಣಿಸುತ್ತದೆ. ಅಲ್ಲಮನನ್ನು ಕುರಿತು ಬಂದಿರುವ ಎರಡು ರೂಪಕಗಳು ಇದಕ್ಕೆ ಪೂರಕವಾಗಿವೆ. ಜೀವವಿಲ್ಲದವನ ಮುಂದೆ ಸಂಜೀವಿನಿ ಬಂದಂತೆ ಎಂಬುದು ಔಷಧಿಸಿದ್ದಿಯ ರೂಪಕವಾದರೆ, ಲೋಹ ಬಿಸಿಯಾಗಿರು ವಾಗಲೇ  ಬಡಿದು ತಕ್ಕ ಶಿಲ್ಪ ಮಾಡುವ ರೂಪಕವು ಲೋಹಸಿದ್ದಿಯ ರೂಪಕವಾಗಿದೆ. ಇವೆರಡೂ ಸಿದ್ದಿಗಳು ಸಿದ್ಧರ ಜಗತ್ತಿನವು. ಚಾಮರಸ ಚಿತ್ರಿಸಿದ ಅಲ್ಲಮ-ಗೋರಕ್ಷರ ಈ ಮುಖಾಮುಖಿ ಪ್ರಕರಣ, ಮುಂದಿನ ಕವಿಗಳಿಗೆ ಪ್ರೇರಣೆ ಕೊಡುತ್ತಾ ಹೋಯಿತು. ಕೊಡೇಕಲ್ಲ ಬಸವಣ್ಣನು ತನ್ನ ವಚನಗಳಲ್ಲಿ ‘ಪಂಥವಿಡಿದ ಗೋರಕ್ಷಗೆ ಕಾಯಸಿದ್ದಿಯಾಯಿತ್ತು ಎಂದು ತಪ್ಪುಬಂತು’ಎಂದು ಉಲ್ಲೇಖಿಸುತ್ತಾನೆ. ಈ ಪ್ರಸಂಗವನ್ನು ತೋಂಟದ ವಿರಕ್ತಾರ್ಯನ ‘ಸಿದ್ಧೇಶ್ವರ ಪುರಾಣ’ವು ಪುನರುಕ್ತಿ ಮಾಡುತ್ತದೆ. ಗೂಳೂರ ಸಿದ್ಧಲಿಂಗನೂ ತನ್ನ ‘ಶೂನ್ಯಸಂಪಾದನೆ’ಯಲ್ಲಿ ಪುನರುಕ್ತಿ ಮಾಡುತ್ತಾನೆ. ಎಚ್. ತಿಪ್ಪೇರುದ್ರಸ್ವಾಮಿ ಅವರು ಅಲ್ಲಮನ ಮೇಲೆ ಬರೆದ ‘ಪರಿಪೂರ್ಣದೆಡೆಗೆ’ (೧೯೫೭) ಕಾದಂಬರಿಯಲ್ಲಿಯೂ ಇದು ಕಾಣಿಸುತ್ತದೆ. ಕಡೆಗೆ ಬೇಂದ್ರೆಯವರ ‘ಅಲ್ಲಮಪ್ರಭು’ ಕವನದಲ್ಲೂ ಇದು ಮುಖದೋರುತ್ತದೆ.

ಎಲ್ಲಿರುವೆ ರಸಸಿದ್ಧ

ಗೋರಕ್ಷನುಕ್ಕಿಲೆ ಹೊಯ್ದರೂ ಮುಕ್ಕು ತುಕ್ಕರಿಯದಿದ್ದ ವೆುಕವಚ ಕಳೆದಿಡುವಂತೆ

ಕೆಳಗಿರಿಸಿ,ಕದಳಿಯಲ್ಲಡಗಿ ಕಾಣದೆಹೋದ, ಲಿಂಗಲೀಲಾವಿಲಾಸದಲ್ಲಿ ನಟಿಸಿದ ಮೂರ್ತಿ

ಮರಾಠಿ ಸಂಸ್ಕೃತಿಯ ಸಂಗವಿದ್ದ ಬೇಂದ್ರೆಯವರಿಗೆ ಬಹುಶಃ ಗೋರಖನ ಮಹತ್ವ ಗೊತ್ತಿತ್ತು. ಎಂತಲೇ ಅವರು ಕನ್ನಡದ ಲೇಖಕರಂತೆ ಅವನನ್ನು ಕಚ್ಚಾ ಸಾಧಕನಂತೆ ಚಿತ್ರಿಸುವುದಿಲ್ಲ. ಬದಲಿಗೆ ಅಲ್ಲಮನ ಮಹತ್ವವನ್ನು ತೋರಲು ಬಳಸುತ್ತಾರೆ.  ಆದರೆ ಅಲ್ಲಮನ ಅಭಿಮಾನಿಗಳು ಗೋರಖನನ್ನು ಲಘುವಾಗಿ  ಚಿತ್ರಿಸುವ ಬಗ್ಗೆ ಆಧುನಿಕ ಕಾಲದ ಅನೇಕ ನಾಥ ವಿದ್ವಾಂಸರು ತೀವ್ರವಾದ ಅಸಮ್ಮತಿಯನ್ನು ವ್ಯಕ್ತಮಾಡುತ್ತಾರೆ.

೧. ‘ರಾವುಳ ಮತಪ್ರಕಾಶಿಕೆ’ಯ ಶಿವಯೋಗಿ ಅವರ ಅಸಮ್ಮಯಿದು:  ‘‘ಗೋರಖನಾಥನು ನವಕೋಟಿ ಶಿದ್ಧರಿಗೆ ಶ್ರೇಷ್ಠನಾದ ಗುರುಗಳೆಂದೆನಿಸಿಕೊಂಡು, ಕೊಲ್ಹಾಪೂರ ಗ್ರಾಮದಲ್ಲಿ ಮಾಯೆಯ ಸಂನಿಧಿಯಲ್ಲಿ ಗ್ರಹಸ್ಥಾಶ್ರಮಿಯಾಗಿದ್ದರೆಂದು ರೇವಣ ಶಿದ್ಧೇಶ್ವರ ಪುರಾಣದೊಳಗೆ ಒಂಬತ್ತನೇ ಅಧ್ಯಾಯದಲ್ಲಿ ಹೇಳಲ್ಪಟ್ಟಿದೆ. ಇದು ಅಲ್ಲದೆ ಬಹುಗ್ರಂಥಗಳನ್ನು ಶೋಧಿಸಿ ನೋಡಲು ಗೋರಖನಾಥನು ಬ್ರಹ್ಮಚಾರಿಯಾಗಿದ್ದನೆಂದು ಹೇಳಲ್ಪಡುತ್ತದೆ. ಒಂದಾನೊಂದು ದಿವಸ ರೇವಣಶಿದ್ಧೇಶ್ವರನು ಗೋರಖನಾಥನ ದ್ವಾರದಲ್ಲಿ ಬಂದು ಭಿಕ್ಷಾಂದೇಹಿ ಎಂದು ಕೈಮುಂದಕ್ಕೆ ಚಾಚಿ ಭಿಕ್ಷೆಯನ್ನು ಬೇಡಲು ಗೋರಖನಾಥನು ಭಿಕ್ಷೆಯ ವಾಕು ಕೇಳಿ ಬಂದು ತನ್ನ ಕೈಯಲ್ಲಿರುವ ಶೂಲವನ್ನು ರೇವಣಶಿದ್ಧೇಶ್ವರನ ಹಸ್ತದಲ್ಲಿ ಇಕ್ಕಲು, ಆ ಶೂಲವನ್ನು ರೇವಣ ಶಿದ್ಧೇಶ್ವರನು ಮೇಲಿಂದ ಮೇಲೆ ನಿಂದರಿಸಿ ಗೋರಖನಾಥನ ಎದೆಯಲ್ಲಿ ಇರದನೆಂದು ಹೇಳಿದ ವಾಕ್ಯ ಅಸತ್ಯ ತೋರುವುದು’’;[7]

೨. ಕೆಲವು ಸಂಶೋಧಕರು ಗೋರಖನ ಜೀವನ ಚರಿತ್ರೆ ರಚಿಸಿರುವ ಬಗ್ಗೆ ರಂಶಾ ಲೋಕಾಪುರ ವ್ಯಂಗ್ಯ ಮಾಡುತ್ತಾರೆ.  ‘ಇಂತಹ ಅನುಭಾವಿಯನ್ನು ಪಟ್ಟದಕಲ್ಲಿನಲ್ಲಿ ‘ಹುಟ್ಟಿಸಿ’ ಅವರಿಂದ ‘ದನಕಾಯಿಸಿ’, ಅಲ್ಲಮಪ್ರಭುವಿಗೆ ‘ಶರಣು’ಗೊಳಿಸಿ, ‘ವೀರಶೈವ ದೀಕ್ಷೆ ಕೊಡಿಸಿ’ ಕನ್ನಡ ವಚನಗಳನ್ನು ಬರೆಯಿಸಿಕೊಂಡ ಶ್ರೇಯಸ್ಸು ಕರ್ನಾಟಕಕ್ಕೆಯೇ ಸಲ್ಲಬೇಕು!’’;[8]

೩. ನೀಲಕಂಠಸ್ವಾಮಿ ಅವರ ಪ್ರಕಾರ ‘ಸಿದ್ಧಸಿದ್ಧಾಂತ ಪದ್ಧತಿ’ಯು ಗೋರಖನು ದೊಡ್ಡಜ್ಞಾನಿ ಎಂದು ತೋರುವ ಗ್ರಂಥ. ಕನ್ನಡದ ಕೃತಿಕಾರರಿಗೆ ನಾಥ ಸಿದ್ಧಾಂತದ ಪೂರ್ಣ ಪರಿಚಯವಿರಲಿಲ್ಲ. ಎಂತಲೇ ಅವರು ಸೈದ್ಧಾಂತಿಕ ಚರ್ಚೆ ಮಾಡದೆ, ಯೋಗಸಿದ್ದಿಗಳ ಪೈಪೋಟಿಯನ್ನು ಏರ್ಪಡಿಸಿ, ಗೋರಕ್ಷನನ್ನು ದೇಹದಂಡಿಸುವ ಕ್ಷುದ್ರಯೋಗಿ ಎಂದು ಚಿತ್ರಿಸಿದರು. ಆಧುನಿಕ ವಿದ್ವಾಂಸರೂ ಈ ಕಾಲ್ಪನಿಕ ಕತೆಗಳನ್ನು ನಂಬಿಬಿಟ್ಟರು. ಮತಾಭಿಮಾನಕ್ಕೆ ಒಳಗಾಗಿ, ಗೋರಕ್ಷ ಮತ್ತು ನಾಥಸಿದ್ಧಾಂತಕ್ಕೆ ಅಪಚಾರ ಮಾಡುವುದನ್ನು ಕನ್ನಡ ಸಾಹಿತಿಗಳು ನಿಲ್ಲಿಸಬೇಕು.[9]

ಇಲ್ಲಿನ ಪ್ರಶ್ನೆ, ದೊಡ್ಡ ದಾರ್ಶನಿಕನಾದ ಗೋರಖನನ್ನು ಕನ್ನಡದ ಸಿದ್ಧರು ಸೋಲಿಸುವ ಪ್ರಸಂಗಗಳ ಚಾರಿತ್ರಿಕ ಸತ್ಯಾಸತ್ಯತೆಯದಲ್ಲ. ಕೆಲವು ವಿದ್ವಾಂಸರು ಗೋರಖನನ್ನು ಕರ್ನಾಟಕ ದವನೆಂದು ಸಾಧಿಸುವ ಯತ್ನದ ಔಚಿತ್ಯವೂ ಅಲ್ಲ. ಬದಲಿಗೆ, ಇಷ್ಟೊಂದು ಪ್ರಮಾಣದಲ್ಲಿ ನಾಥಜೋಗಿಗಳನ್ನು ಎದುರಾಳಿಯನ್ನಾಗಿ ನಮ್ಮ ಕವಿಗಳು ಯಾಕೆ ಮಾಡಿಕೊಂಡರು, ಗೋರಖನ ಗರ್ವಭಂಗದ ಕಥನಗಳು ಯಾಕೆ ಸೃಷ್ಟಿಯಾದವು ಎಂಬುದು. ಇದು ಸಾಂಸ್ಕೃತಿಕ ವಿಶ್ಲೇಷಣೆ ಬೇಡುವ ಪ್ರಶ್ನೆ. ಮಹಾರಾಷ್ಟ್ರದಲ್ಲೂ ಗೋರಖನೇ ಆದಿಯಾಗಿ ನವನಾಥರು ದತ್ತಾತ್ರೇಯನಿಂದ ಬೋಧೆ ಪಡೆಯುವ ಐತಿಹ್ಯ ಹುಟ್ಟಿದೆ. ಭಾರತದ ಹತ್ತಾರು ಸ್ಥಳಗಳಲ್ಲಿ ಯೋಗಿಗಳು ಹಾಗೂ ಅವಧೂತರು ಕಲಿಕೆಗಾಗಿ ಗೋರಖನ ಭೇಟಿ ಮಾಡುವ ಕಥನಗಳು ಹುಟ್ಟಿವೆ. ಆದರೆ ಕನ್ನಡದಲ್ಲಿವಂತೆ ಗೋರಖನ ಗರ್ವಭಂಗ ಮಾಡುವ ಪ್ರಸಂಗಗಳು ಅಲ್ಲಿ ಕಡಿಮೆ.   ಅದರಲ್ಲೂ ೮೪ ಸಿದ್ಧರ ಪಟ್ಟಿಯಲ್ಲಿ ಬರುವ ರೇವಣ, ಅಲ್ಲಮ,  ಗೋರಖರು ಪರಸ್ಪರ  ಸಂಘರ್ಷ ಮಾಡುವ ಕಾರಣ ತಿಳಿಯುವುದಿಲ್ಲ. ಇವನ್ನು ಚಾರಿತ್ರಿಕ ವಿದ್ಯಮಾನದ ರೂಪಕಗಳು ಎಂದು ಊಹಿಸುವುದಾದರೆ, ಕರ್ನಾಟಕದಲ್ಲಿ ನಾಥರು ಬಹಳ ತೊಂದರೆ ಅನುಭವಿಸಿದರು ಎಂದು ಭಾವಿಸಬಹುದು. ಇವನ್ನು ವಿವಿಧ ಪಂಥಗಳು ತಮ್ಮ ಯಜಮಾನಿಕೆ ಸ್ಥಾಪಿಸಲು ಹುಟ್ಟಿಸಿಕೊಂಡ ಕಥೆಗಳು ಎಂದು ತಿಳಿಯುದಾದರೆ, ಸ್ಥಳೀಯ ಪಂಥಗಳು ತಂತಮ್ಮ ಸಾಂಸ್ಕೃತಿಕ ನಾಯಕರನ್ನು ದೊಡ್ಡ ಹೆಸರುಳ್ಳವರ ಜತೆ ಮುಖಾಬಿಲೆ ಮಾಡಿ ಗೆಲ್ಲಿಸುವ  ಸಾಂಸ್ಕೃತಿಕ ತಂತ್ರಗಾರಿಕೆ ಎಂದು ಹೇಳಬಹುದು. ಇಬ್ಬರು ಸಿದ್ಧರ ನಡುವೆ ಜರುಗಿರಬಹುದಾದ ದಾರ್ಶನಿಕ ವಾಗ್ವಾದವನ್ನು ಕಾಣಿಸುವ ಈ ಕಥನಗಳಲ್ಲಿ, ತಾವೊಪ್ಪದ  ಪಂಥದ ಮೇಲಿನ ತಮ್ಮ ಪೂರ್ವಗ್ರಹವನ್ನು ಕವಿಗಳು ವ್ಯಕ್ತಮಾಡುತ್ತಿರುವ ಸಾಧ್ಯತೆಯೂ ಇದೆ.  ನಾಥರ ಜತೆ ಶೈವರು ಹಾಗೂ ಶರಣರು ಮಾಡಿರಬಹುದಾದ ತಾತ್ವಿಕ ಚರ್ಚೆಯನ್ನು, ಇಬ್ಬರು ನಾಯಕರು ಕದನ ಮಾಡಿದರೆಂಬಂತೆ ಚಾರಿತ್ರಕಾರರು ಹಾಗೂ ಪುರಾಣಕರ್ತರು ಕಲ್ಪಿಸಿಕೊಳ್ಳುವ ಹಿಂದೆ ಪಂಥೀಯ ರಾಜಕಾರಣವೂ ಇದೆ.

ಆದರೆ ಶರಣರು ನಾಥರಿಂದ ಪ್ರೇರಣೆ ಪಡೆದಿರುವ ಸಾಧ್ಯತೆಯನ್ನು ಆಧುನಿಕ ವಿದ್ವಾಂಸರು ದೃಢವಾಗಿ ನಂಬುತ್ತಾರೆ. ಶಂಬಾ ಪ್ರಕಾರ ‘‘ನಾಥ ಸಂಪ್ರದಾಯದಿಂದ ಸ್ಫೂರ್ತಿ ಪಡೆದ ಶ್ರೀಪ್ರಭುದೇವರು ಲಿಂಗವಂತ ಮತದ ಉದ್ಧಾರಕರಾಗಿರುವ ಸಂಭವವಿದೆ’’[10]; ಢೇರೆಯವರು ಶಿವಶರಣ ಮೇಲೆ ಆಗಿರುವ ನಾಥರ ಪ್ರಭಾವವನ್ನು ‘ನಾಥ-ಲಿಂಗಾಯತ’ ಎಂಬ ಪರಿಭಾಷೆಯ ಮೂಲಕ ವಿವರಿಸುತ್ತಾರೆ. ಅವರ ಪ್ರಕಾರ ನಾಥರು ಕಾಯಯೋಗಕ್ಕೆ ಬಹಳ ಮಹತ್ವ ಕೊಡುವ ಬಗ್ಗೆ ಅಲ್ಲಮನಿಗೆ ಸಮ್ಮತಿಯಿರಲಿಲ್ಲ. ಆದರೆ ‘‘ಕರ್ನಾಟಕವು ನಾಥಸಂಪ್ರದಾಯದ ಉದಯ ಭೂಮಿಗೆ ಸನಿಹದಲ್ಲಿದ್ದು, ಅದರ ಲೀಳಾಸ್ಥಳದಲ್ಲಿ ಬರುತ್ತಿರುವುದರಿಂದ, ಲಿಂಗಾಯತ ಪಂಥ ಪರಿವರ್ತನೆಯ ನಂತರವೂ ಸಹ ನಾಥಸಂಪ್ರದಾಯ ಮತ್ತು ಲಿಂಗಾಯತ ಸಂಬಂಧ ಬರುತ್ತಲೇ  ಹೋಗಿರಬೇಕು. ಲಿಂಗಾಯತ ವಚನಕಾರರ ವಚನದಲ್ಲಿಯ ಕ್ರಾಂತಿಕಾರಕ ಪ್ರಖರತೆಯ ವಾರಸಾ ನಾಥಸಂಪ್ರದಾಯದ್ದೇ ಆಗಿದೆ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಕೇವಲ ಬಸವೇಶ್ವರ ವಚನಗಳನ್ನು ಗಮನಿಸಿದರೂ ಅಲ್ಲಿ ಗೋರಕ್ಷ ವಾಣಿಯ ಧ್ವನಿಯೇ ಹೊಸರೂಪದಲ್ಲಿ ಮೂಡಿಬಂದಿದೆ ಎಂದೆನಿಸುತ್ತದೆ. ಈ ಗೋರಕ್ಷವಾಣಿಯ ಛಾಯೆ ಅಲ್ಲಮನಲ್ಲಂತೂ ಇದ್ದೇ ಇದೆ’’ ಎಂದು ಭಾವಿಸುತ್ತಾರೆ.[11] ಕೆ.ಜಿ. ನಾಗರಾಜಪ್ಪ ಹಾಗೂ ಶಂಕರ ಮೊಕಾಶಿ ಪುಣೇಕರ ಅವರು ಕೂಡ, ಶರಣರು ಪ್ರತಿಪಾದಿಸುವ ಅನೇಕ ಕ್ರಾಂತಿಕಾರಕ ಪರಿಕಲ್ಪನೆಗಳು, ನಾಥವೇ ಮೊದಲಾದ ತಾಂತ್ರಿಕ ಗುಪ್ತ ಪಂಥಗಳಿಂದ ಬಂದವು ಎಂದು ನಂಬಿ ಚರ್ಚಿಸುತ್ತಾರೆ.

ದಾರ್ಶನಿಕ ಪ್ರೇರಣೆಗಳನ್ನು ಶರಣರು ನಾಥರಿಂದ ಪಡೆದಿದ್ದರೆ, ಅದರಲ್ಲಿ ಅಚ್ಚರಿಗೊಳ್ಳುವಂತಹದು ಏನೂ ಇಲ್ಲ. ಹಾಗೆ ಭಾರತದ  ಯಾವ ತಾತ್ವಿಕ ಸಂಪ್ರದಾಯವೂ ಶೂನ್ಯದಲ್ಲಿ ಅವತರಿಸಲಿಲ್ಲ. ಅದರ ಎಲ್ಲ ದಾರ್ಶನಿಕ ಉಪಕರಣಗಳು ವರ್ತಮಾನದ ಜತೆಗಿನ ಅನುಸಂಧಾನದಿಂದಲೂ ಹುಟ್ಟುವುದಿಲ್ಲ. ಆದರೂ ಶರಣದಿಂದ ನಾಥಪಂಥ ಸಿಕ್ಕಿರಬಹುದಾದ ಪ್ರೇರಣೆಗಳ ಬಗ್ಗೆ ಗೆರೆಕೊರೆದು ಹೇಳುವುದು ಕಷ್ಟ. ನಾಥಪಂಥದ ಹಲವು ಆಚರಣೆಗಳ ಬಗ್ಗೆ ಶರಣರಿಗೆ ಭಿನ್ನಮತವಿತ್ತು ಎಂಬುದು ವಚನಗಳಿಂದ ಸ್ಪಷ್ಟವಾಗುತ್ತದೆ. ನಾಥ, ಕಾಪಾಲಿಕ ಹಾಗೂ ಕೌಳರಲ್ಲಿದ್ದ ಅನೇಕ ವಾಮಾಚಾರದ ಅತಿಮಾರ್ಗಿಕ ಆಚರಣೆಗಳ ಬಗ್ಗೆ ಶರಣರಿಗೆ ಆಗ್ರಹವಿದ್ದುದೂ ನಿಜ. ಆದರೆ ಶರಣರ ದೊಡ್ಡ ಬಲ ಇದ್ದುದು ತಾವು ಪಡೆದಿರಬಹುದಾದ  ತಾತ್ವಿಕ ಪ್ರಮೆಯಗಳನ್ನು, ತಮ್ಮ ಕಾಲದ ಧಾರ್ಮಿಕ ಸಾಮಾಜಿಕ ರಾಜಕೀಯ ಆರ್ಥಿಕ ಸನ್ನಿವೇಶಗಳಿಗೆ ಅನ್ವಯ ಮಾಡುತ್ತ ಪಡೆದ ಅನುಭವದಲ್ಲಿ; ಅವರಿಗೆ ತಮ್ಮ ತಾತ್ವಿಕ ಪ್ರಮೇಯಗಳಿಗೆ ಹೊಸಹುಟ್ಟನ್ನು ಕೊಡಲು ಸಾಧ್ಯವಾಗಿದ್ದು, ಅಧಿಕಾರಸ್ಥ ಶಕ್ತಿಗಳಾದ ದೇಗುಲವಾದಿಗಳು, ರಾಜಕೀಯ ಪ್ರಭುತ್ವ, ವರ್ಣಾಶ್ರಮವಾದಿಗಳ ಜತೆ ಮಾಡಿದ ಮುಖಾಮುಖಿಯಿಂದ. ಈ ಕಾರಣಕ್ಕೆ ಅವರು ಕೇವಲ ದಾರ್ಶನಿಕರಾಗಿರಲಿಲ್ಲ. ಕ್ರಿಯಾಶೀಲ ರಾಜಕೀಯ ಸಾಮಾಜಿಕ ಕಾರ್ಯಕರ್ತರೂ ಆಗಿದ್ದರು. ನಾಥರಿಗಿಂತ ಹೆಚ್ಚು ಸಾಮಾಜಿಕ ಜೀವಿಗಳಾಗಿದ್ದರು. ಕವಿಗಳಾಗಿದ್ದರು. ಹೀಗೆ ನಾಥರ ಜತೆ ಶರಣರದು ಭಿನ್ನಮತ, ಪ್ರೇರಣೆ ಪಡೆಯುವಿಕೆ ಹಾಗೂ  ಜಗಳ ಮಾಡುವಿಕೆ, ಈ ಎಲ್ಲ ಆಯಾಮಗಳೂ ಕೂಡಿದ ಸಂಕೀರ್ಣ ಸಂಬಂಧವಿತ್ತು. ಅವರು ‘ಪಿತೃಹತ್ಯೆ’ಯನ್ನು ಮಾಡಿ ಹೊಸ ಚಳುವಳಿಯನ್ನು ಕಟ್ಟಿದರು. ಬಸವಣ್ಣ ಅಲ್ಲಮ ಸಿದ್ಧರಾಮ ಇವರನ್ನು ಕಥಾನಾಯಕರನ್ನಾಗಿ ಮಾಡಿಕೊಂಡು ಚಾರಿತ್ರ ರಗಳೆ ಪುರಾಣ ಬರೆದ ಮುಂದಿನವರಿಗೆ, ಈ ಸೂಕ್ಷ್ಮಗಳನ್ನು ಹಿಡಿಯುವುದು ಆಗಲಿಲ್ಲ. ಇನ್ನು ಗೋರಖನ ಹೆಸರಲ್ಲಿ ಗೋರಕ್ಷ ಎಂಬ ಒಬ್ಬ ವಚನಕಾರನು ‘ಗೋರಕ್ಷಪಾಲಕ ಮಹಾಪ್ರಭು ಸಿದ್ಧ ಸೋಮನಾಥಲಿಂಗ’ ಎಂಬ ಅಂಕಿತದಲ್ಲಿ ವಚನಗಳನ್ನು ರಚಿಸಿರುವುದುಂಟು. ಆದರೆ ಅವನಿಗೂ ಗೋರಖನಿಗೂ ಯಾವ ಸಂಬಂಧವೂ ಇಲ್ಲ.

. ಯೌಗಿಕಾನುಭವದ ಚಿತ್ರಗಳು

ಕರ್ನಾಟಕದಲ್ಲಿ ನೂರಾರು ಅವಧೂತರು ಅಥವಾ ಆರೂಢರು ಇದ್ದಾರೆ. ದಾರ್ಶನಿಕವಾಗಿ ನಾಥರ ಬಂಧುಗಳಾದ ಇವರು ನಾಥರ ಸಂಪರ್ಕಕ್ಕೆ ಬಂದಿರಬಹುದು. ಬಾರದೆಯೂ ಇರಬಹುದು. ಸೀಮಿತ ಪ್ರದೇಶದ ಜನಸಮುದಾಯಗಳಲ್ಲಿ ನೆಲೆ ಪಡೆದ ಇವರನ್ನು ಸ್ಥಳೀಯ ಸಿದ್ಧರು ಎನ್ನಬಹುದು. ಇವರಿಗೆ ದೀಕ್ಷೆಕೊಟ್ಟ ಗುರುಗಳೂ ಸ್ಥಳೀಯರೇ. ಇವರನ್ನು ‘ತತ್ವಪದಕಾರರು’  ಎನ್ನುವ ಸೀಮಿತ ಸಾಹಿತ್ಯಕ ಪರಿಭಾಷೆಯಲ್ಲಿ ಗುರುತಿಸುವುದುಂಟು. ಇದು ಇವರ ಪಂಥೀಯ ಹಿನ್ನೆಲೆಯನ್ನು ಗೌಣಗೊಳಿಸುತ್ತದೆ ಹಾಗೂ ಇವರ ರಚನೆಗಳ ತಾತ್ವಿಕ ಚರ್ಚೆಗೆ ತೊಡಕೊಡ್ಡುತ್ತದೆ. ಇವರಲ್ಲಿ ಸಾಹಿತ್ಯ ರಚನೆ ಮಾಡಿದವರಿಗಿಂತ, ಕೇವಲ ಸಾಧನೆಗಳಲ್ಲಿ ತೊಡಗಿದ್ದವರ ಸಂಖ್ಯೆಯೇ ಹಿರಿದು.  ಇವರ ಪ್ರಭಾವ ಕೂಡ ದೊಡ್ಡದು. ಇವರಲ್ಲಿ ಹಲವಾರು ದಾರ್ಶನಿಕ ಅಥವಾ ಪಂಥೀಯ ಧಾರೆಗಳು ಬಂದು ಸೇರಿದ್ದು, ಅದರಲ್ಲಿ ಒಂದು ಧಾರೆ ನಾಥರದ್ದೂ ಇರಬಹುದು. ಇವರ ರಚನೆಗಳನ್ನು ವಿಶಾಲ ಅರ್ಥದಲ್ಲಿ ಜನಪ್ರಿಯ ಯೋಗಸಾಹಿತ್ಯ ಎನ್ನಬಹುದು.  ಗುರುವಿಗೆ ಮಹತ್ವ,   ತನ್ನ ತಾನರಿವ ತತ್ವ, ಕಾಯವಾದ ಇವರಲ್ಲಿದೆ. ಉಸಿರಾಟವನ್ನು ನಿಯಂತ್ರಿಸಿ ಕುಂಡಲಿನಿಯನ್ನು ಜಾಗೃತಗೊಳಿಸಿ ಷಟ್ಷಕ್ರಗಳನ್ನು ದಾಟಿಸಿ, ಅದು ಸಹಸ್ರಾರದಲ್ಲಿ ಸೇರುವ ಮತ್ತು ಸಮಾಧಿಸ್ಥಿತಿ ಪಡೆಯುವ, ಅನಾಹತ ನಾದವನ್ನಾಲಿಸುವ, ಶೂನ್ಯತೆಯನ್ನು ಅನುಭವಿಸುವ, ಅಗಾಧ ಬೆಳಕನ್ನು ಕಂಡು ಸೋಜಿಗ ಪಡುವ ಆನಂದದ ಅನುಭವಗಳು, ಇವರ ರಚನೆಗಳಲ್ಲಿ ಬರುತ್ತವೆ. ಇಲ್ಲಿ ಆನಂದವು ಮಹತ್ವದ ಪರಿಕಲ್ಪನೆ. ಚಿದಾನಂದ ನಿತ್ಯಾನಂದ ಯೋಗಾನಂದ, ಮುಂತಾದ ಹೆಸರುಗಳಲ್ಲಿ ಈ ಶಬ್ದವಿದೆಯಷ್ಟೆ. ಒಬ್ಬ ಅವಧೂತ ಹೇಗಿರಬೇಕು ಎಂದು ಗೋರಖನು ‘ಸಿದ್ಧಸಿದ್ಧಾಂತ ಪದ್ಧತಿ’ಯಲ್ಲಿ ಕೊಡುವ ಚಿತ್ರಕ್ಕೆ, ಎಷ್ಟೊ ಸಮಕಾಲೀನ ನಾಥರಿಗಿಂತ ಈ ಅವಧೂತರು ಹೆಚ್ಚು ನಿಕಟವಾಗಿದ್ದಾರೆ ಎಂದೆನಿಸುತ್ತದೆ.  ನಾಥರು ಯೋಗಸಾಧನೆಗೆ ಮಹತ್ವ ಕೊಡಬೇಕು ಎಂದು ಬಾರಾಪಂಥದ ನಿಯಮಗಳಲ್ಲಿದೆ. ಆದರೆ ಈಗಿರುವ ನಾಥ ಮಠಗಳಿಗೆ ಮಹಂತರಾಗುವ ನಾಥರು ಮಠದ ಆಸ್ತಿಯನ್ನು ಸಂಭಾಳಿಸುವ ಹಾಗೂ ಲೆಕ್ಕಪತ್ರ ಇಡುವ ಕೆಲಸವನ್ನೇ ಹೆಚ್ಚು ಮಾಡುತ್ತಿದ್ದಾರೆ. ಇಂತಹ ಲೌಕಿಕ ಹೊಣೆಗಾರಿಕೆ ಇಲ್ಲದ ಸ್ಥಳೀಯ ಅವಧೂತರು ಇವರಿಗಿಂತ ಹೆಚ್ಚು ಸ್ವತಂತ್ರರಾಗಿದ್ದರು. ಎಂತಲೇ ಅವರು ಯೋಗಸಾಧನೆಯಲ್ಲಿ  ಪ್ರಯೋಗಶೀಲರಾಗಿದ್ದರು.

ಯೋಗಾನುಭವಕ್ಕೆ ಬೇಕಾದ ಅರಿವನ್ನು ಕೊಡುವವವನು ಗುರು. ಆತ ಇಲ್ಲಿ ಬಹು ದೊಡ್ಡ ಸ್ಥಾನಕ್ಕೆ ಏರುತ್ತಾನೆ. ಗುರುವಿಗೆ ಪ್ರಶ್ನಾತೀತವಾಗಿ ಒಪ್ಪಿಸಿಕೊಳ್ಳುವುದು ಯೋಗಪಂಥಿ ಗಳಲ್ಲಿ ಜಲಚಿಹ್ನೆಯಂತಹ ಲಕ್ಷಣ. ಅವಧೂತ ಸಾಹಿತ್ಯವು ಸ್ವಾನುಭವವಾದಿ ಹಾಗೂ  ಗುರುಕೇಂದ್ರಿತ. ಅಲ್ಲಮನಂತಹ ದೊಡ್ಡ ಯೋಗಿಯೆ  ‘‘ತನ್ನ ಕರುಣಾಮೃತವೆಂಬ ಮರುಜವಣಿಯ ಹಿಂಡಿ ಆ ನಿದಾನವನೆನಗೆ ಕರತಳಾಮಲೌಕವ ಮಾಡಿಕೊಟ್ಟನಯ್ಯ ಗುಹೇಶ್ವರ, ನಿಮ್ಮ ಶರಣ ಅನಿಮಿಷನೆಂಬ ಶ್ರೀಗುರು’’ ಎಂಬ ಕೃತಜ್ಞಭಾವ ಪ್ರಕಟಿಸುತ್ತಾನೆ. ಯೌಗಿಕ ಸಾಧನೆಯಲ್ಲಿ ಪ್ರಾಪ್ತವಾಗುವ ಅನುಭವವನ್ನು ಲೋಕದ ಭಾಷೆಯಲ್ಲಿ ಹೇಳುವುದು ಕಷ್ಟ. ವಚನಕಾರ ಷಣ್ಮುಖಸ್ವಾಮಿ ಹೇಳುವಂತೆ, ಇದು   ‘ಇದು ಗುಹ್ಯಕ್ಕೆ ಗುಹ್ಯ. ಗೋಪ್ಯಕ್ಕೆ ಗೋಪ್ಯ. ರಹಸ್ಯಕ್ಕೆ ಅತಿರಹಸ್ಯ’; ಆದ್ದರಿಂದ ಯೌಗಿಕ ಇಲ್ಲವೇ ಬೆಡಗಿನ ರೂಪಕದ ನುಡಿಗಟ್ಟು ಅನಿವಾರ್ಯವಾಗುತ್ತದೆ.

೧. ಆಧಾರಚಕ್ರ ಪೃಥ್ವಿ ಸಂಬಂಧ, ಅಲ್ಲಿ ಬ್ರಹ್ಮನಧಿದೇವತೆ, ಆಚಾರ ಲಿಂಗವ ಪಿಡಿದು ಯೋಗಿಯಾಗಿ ಸುಳಿದ, ಸ್ವಾಧಿಷ್ಠಾನಚಕ್ರ ಅಪ್ಪುವಿನ ಸಂಬಂಧ, ಅಲ್ಲಿ ವಿಷ್ಣು ಅಧಿದೇವತೆ, ಗುರುಲಿಂಗವ ಪಿಡಿದು ಜೋಗಿಯಾಗಿ ಸುಳಿದ.

೨. ಚಂದ್ರಸೂರ್ಯರಿಬ್ಬರ ತಾಳವ ಮಾಡಿ ಆಡುವಡೆ, ಜಡೆಯ ಮೇಲಣ ಗಂಗೆ ನೀನು ಕೇಳಾ, ತೊಡೆಯ ಮೇಲಣ ಗೌರಿ ನೀನು ಕೇಳಾ, ಗುಹೇಶ್ವರನೆಂಬ ಲಿಂಗವು ಎನ್ನ ಕೈಯಲ್ಲಿ ಸತ್ತಡೆ, ರಂಡೆಗೂಳುಂಬುದು ನಿಮಗೆ ಲೇಸೇ?

ಅಲ್ಲಮನ ಈ ಎರಡು ವಚನಗಳಲ್ಲಿ ಮೊದಲನೆಯದು ತಾಂತ್ರಿಕ ಪರಿಭಾಷೆಯಲ್ಲಿದೆ. ಎರಡನೆಯದು ರೂಪಕ ಪರಿಭಾಷೆಯಲ್ಲಿದೆ. ಸೂರ್ಯ ಚಂದ್ರರು ಇಡಾ ಪಿಂಗಳ ನಾಡಿಗಳು. ಗುಹೇಶ್ವರ ಲಿಂಗವು ಸಾಯವುದು ಎಂದರೆ ಸಾಧಕನು ತಾನೇ ಶಿವನಾಗುವುದು ಹಾಗೂ  ಶೂನ್ಯಸ್ಥಿತಿಯನ್ನು ಮುಟ್ಟುವುದು. ಶರಣರನ್ನು ನಿರ್ದಿಷ್ಟ ಮತದ ಸ್ಥಾಪಕರಾಗಿ, ದೈವವೊಂದಕ್ಕೆ ಭಕ್ತರಾಗಿ ಅಥವಾ ಸಾಮಾಜಿಕ ಕ್ರಾಂತ್ರಿಕಾರಿಗಳಾಗಿ ನೋಡುವ ಕ್ರಮದಿಂದ, ಅವರ ರಚನೆಗಳಲ್ಲಿ ಇರುವ ಯೌಗಿಕ ಆಯಾಮವನ್ನು ನೋಡುವುದಕ್ಕೆ ತೊಡಕಾಯಿತು. ಶರಣ ಸಮೂಹದಲ್ಲಿ ಅಲ್ಲಮ, ಆದಯ್ಯ, ದಾಸಿಮಯ್ಯ ಮುಂತಾಗಿ ಅನೇಕರು ಯೋಗಿಗಳಾಗಿದ್ದರು. ತಮ್ಮ ವಚನಗಳಲ್ಲಿ ಯೌಗಿಕ ಚಟುವಟಿಕೆಯ ಚರ್ಚೆಯನ್ನು ಅವರು ಮತ್ತೆಮತ್ತೆ ಮಾಡುತ್ತಾರೆ. ಯೋಗದಲ್ಲಿ ಹಲವಾರು ಬಗೆಯಿವೆ.  ಸಹಜಯೋಗ, ಆಸನ ಯೋಗ, ಪ್ರಾಣಾಯಾಮ ಯೋಗ, ಧ್ಯಾನಯೋಗ, ಹಠಯೋಗ, ರಾಜಯೋಗ, ಲಂಬಿಕಾಯೋಗ, ಆತ್ಮಯೋಗ, ಸಿದ್ಧಯೋಗ, ಪಿಶಾಚಯೋಗ, ಧಾರಣ ಯೋಗ, ಸಮಾಧಿಯೋಗ, ಯಮಯೋಗ, ನಿಯಮಯೋಗ, ಮಂತ್ರಯೋಗ, ತಾರಕಯೋಗ ಇತ್ಯಾದಿ. ಅಲ್ಲಮನಿಗೂ ಗೋರಖನಿಗೂ ವಾಗ್ವಾದ ಆಗಿದ್ದು ಇವುಗಳಲ್ಲಿ ಯಾವ ಯೋಗ ಶ್ರೇಷ್ಠವೆಂದು. ಆದಯ್ಯನು ೧೪ ಯೋಗಗಳ ಲಕ್ಷಣಗಳನ್ನು ವಿವರಿಸುತ್ತಾ, ಕಾಯವಿದ್ದಂತೆಯೇ ಬಯಲಾಗುವ ಶರಣರ ನಿಜಯೋಗದ ವಿಶಿಷ್ಟತೆಯನ್ನು ಹೇತ್ತಾನೆ. ಅದರಲ್ಲಿ ನಾಥರದು ಸಿದ್ಧಯೋಗವೆಂದು ಹೇಳಿ ಅದರ ವ್ಯಾಖ್ಯಾನವನ್ನು ಹೀಗೆ ಮಾಡುತ್ತಾನೆ:

ಅಂಜನಾಸಿದ್ದಿ, ಘುಟಿಕಾಸಿದ್ದಿ, ಶರೀರಸಿದ್ದಿ, ಪರಕಾಯ ಪ್ರವೇಶ, ತ್ರಿಕಾಲಜ್ಞಾನ ದೂರಶ್ರವಣ ದೂರದೃಷ್ಟಿಯೊಳಗಾದ ಅಷ್ಟಮಹಾಸಿದ್ದಿಯಂ ಪಡೆದು, ರಸಸಿದ್ದಿ, ಪಾಷಾಣಸಿದ್ದಿ, ಲೋಹಸಿದ್ದಿ, ವಯಸ್ತಂಭ, ಸ್ವರವಂಚನೆ, ಕಾಯವಂಚನೆ, ವೇದಶಾಸ್ತ್ರಸಿದ್ದಿ, ಭರತಸಿದ್ದಿ, ಗಾಂಧರ್ವಸಿದ್ದಿ, ಕಿನ್ನರಸಿದ್ದಿ, ವಾಚಾಸಿದ್ದಿ, ಖೇಚರತ್ವ, ಮಹೇಂದ್ರ ಜಾಲದೊಳಗಾದ ಚೌಷಷ್ಟಿ ಸಿದ್ದಿ, ಅಣಿಮಾದಿ ಮಹಿಮಾದಿ ಈಶಿತ್ವ ವಶಿತ್ವ ಪ್ರಾಪ್ತಿ, ಪ್ರಾಕಾಮ್ಯವೆಂಬ ಅಷ್ಟೈಶ್ವರ್ಯ ಸಿದ್ದಿ, ವ್ಯಾಳಿ ಚರ್ಪಟಿ ಕೋರಾಂಟ ರತ್ನಘೋಷ ಭೂತನಾಥ ನಾಗಾರ್ಜುನ ಮಚ್ಚೇಂದ್ರ ಗೋರಕ್ಷ ಮಂಜಿನಾಥ ನವನಾಥ ಸಿದ್ಧರೊಳಗಾದ ಸಮಸ್ತ ಸಿದ್ದಿಬುದ್ದಿಗಳಿಂದ ಲಿಂಗವನರಸಿ ಅಟ್ಟಿಮುಟ್ಟಿ ಹಿಡಿದೆಹೆನೆಂಬುದು ಸಿದ್ಧಯೋಗ.

ಇಲ್ಲಿ ನಾಥರು ಅನುಸರಿಸುವ ಯೋಗವಿಧಾನವನ್ನು ಆದಯ್ಯ ವಿವರಿಸುತ್ತಿದ್ದಾನೆ.  ವಚನದ ವಿನ್ಯಾಸವು ತಿಳಿಯದವರಿಗೆ ಮಾಹಿತಿ ಒದಗಿಸುವಂತಿದೆ. ಜತೆಗೆ ಶರಣರ ಯೋಗಕ್ರಮವು ಇದಕ್ಕೆ ಭಿನ್ನಎಂದು ಹೇಳಲು ಇದು ಪೀಠಿಕೆಯೂ ಆಗಿದೆ. ನಾಥರ ಯೋಗ ಕ್ರಮವು ಶರಣರಿಗೆ ಸಮ್ಮತವಲ್ಲ ಎಂಬ ದನಿಯೂ ಇಲ್ಲಿ ಅಡಗಿದೆ. ಗಮನಾರ್ಹವೆಂದರೆ, ಇಲ್ಲಿ ಮಂಜಿನಾಥನು ಬಂದಿರುವುದು. ಇದು ಶರಣರ ಕಾಲದಲ್ಲಿದ್ದ ನಾಥರ ವಾಸ್ತವಿಕ ಚಿತ್ರವಿರಬಹುದು. ಆದರೆ ಇದೇ ನಾಥಮಾರ್ಗವಲ್ಲ ಎಂಬುದು ಗೋರಖನ ‘ಸಿದ್ಧಸಿದ್ಧಾಂತ ಪದ್ಧತಿ’ ನೋಡುವಾಗ ತಿಳಿಯುತ್ತದೆ. ಕನ್ನಡದ ಕವಿಗಳು ಹಾಗೂ ವಚನಕಾರರು, ನಾಥರ ಮೂಲ ದಾರ್ಶನಿಕ ಗ್ರಂಥಗಳ ಜತೆ ವಾಗ್ವಾದ ಮಾಡುವ ಬದಲು, ತಮ್ಮ ಕಣ್ಣೆದುರು ಇದ್ದ ನಾಥರ ಆಚರಣೆಗಳ ಮೂಲಕ ಭಿನ್ನಮತ ವ್ಯಕ್ತಮಾಡುವ ಕ್ರಮ ಅನುಸರಿಸುವುದರಿಂದ ಹೀಗಾಗಿದೆ.

ಕರ್ನಾಟಕದ ಯೋಗವಾದಿಗಳಲ್ಲೇ ಬೇರೆಬೇರೆ ಧಾರೆಗಳು, ಎಡಪಂಥೀಯರಲ್ಲಿ ಇರುವ ಭಿನ್ನಬಣಗಳಂತೆ, ಇದ್ದವು. ಅವರಲ್ಲಿ ಶರಣರದೊಂದು ಧಾರೆ. ನಾಥರದೊಂದು ಧಾರೆ. ಶಾಕ್ತರದೊಂದು ಧಾರೆ. ಆರೂಢರದೊಂದು ಧಾರೆ. ಜೈನರದೊಂದು ಧಾರೆ. ಇವುಗಳ ನಡುವೆ ಕೊಡುಕೊಳೆ ಮತ್ತು ಸಂಘರ್ಷ ಎರಡೂ ಇದ್ದವು. ತನ್ನನ್ನು ಸಿದ್ಧ ಎಂದು ಕರೆದುಕೊಂಡಿದ್ದ ಮೂಡಬಿದರೆಯ ರತ್ನಾಕರನು, ನಾಥರಿಂದ ಪ್ರಭಾವಿತನಾಗಿದ್ದನೊ ಇಲ್ಲವೊ, ಆದರೆ  ತನ್ನ ಕಥಾನಾಯಕ ಭರತನನ್ನು ಅವನು ಒಬ್ಬ ಸಿದ್ಧನಂತೆಯೇ ಚಿತ್ರಿಸುತ್ತಾನೆ:

ವಿದಿತ ಸಿದ್ಧಾಸನದಲ್ಲಿ ಕುಳಿತನು ಚಿನ್ನದಬೊಂಬೆ ಕುಳಿತುದೆಂಬಂತೆ, ಗಾಳಿಯ ಬ್ರಹ್ಮರಂಧ್ರಕೆ ನಡೆಸಿದನು, ಕೂಡಾಲಿಯ ಮುಚ್ಚಿ, ಚಿತ್ತವನು ಏಳಲೀಸದೆ ಹಂಸನೊಳು ಕೂಡಿ ನೋಡಿದ ಢಾಳಿಸಿತೊಳಗೆ ಪ್ರಕಾಶ (ಭರತೇಶವೈಭವ, ೭೨: ೩೮,೩೯)

ಆಧುನಿಕ ಕಾಲದ ಯೋಗಿಗಳು ಸಹ ಇದೇ ಪರಿಭಾಷೆಯಲ್ಲಿ ಮಾತಾಡುತ್ತಾರೆ.[12]  ಗೋರಖನಾಥನೂ, ಅಲ್ಲಮನೂ, ರತ್ನಾಕರನೂ, ನಿಜಗುಣ ಶಿವಯೋಗಿಯೂ, ಹಂಪಿಯ  ಸದಾಶಿವಯೋಗಿಯೂ ವಿಶಾಲ ನೆಲೆಯಲ್ಲಿ ಒಂದೇ ಯೋಗತತ್ವದ ಪರಿಭಾಷೆಯಲ್ಲಿ ನುಡಿಯುತ್ತಾರೆ. ಈ ಯೋಗತತ್ವವು  ಕರ್ನಾಟಕದ ಜನಜೀವನದ ಪದರಗಳಲ್ಲಿ ಜಿನುಗಿ ಹೋಗಿದೆ. ಅದರ ಮೂಲ ನಾಥವೂ ಇರಬಹುದು. ಅಲ್ಲಮನೂ ಇರಬಹುದು. ಇನ್ನೂ ಹಿಂದೆ ಹೋದರೆ ಬೌದ್ಧವೂ ಇರಬಹುದು. ಈ ಶೋಧಕ್ಕೆ  ಹಾಗೂ ವಿಶ್ಲೇಷಣೆಗೆ ಬೇಕಾದ ಭಾಷೆ ಹಾಗೂ ತಾತ್ವಿಕ ಸಿದ್ಧತೆಯನ್ನು ಕನ್ನಡ ಚಿಂತನೆ ಮತ್ತಷ್ಟು ಪಡೆದುಕೊಳ್ಳಬೇಕು ಅಷ್ಟೆ.

* * *[1]      ‘ಬಸವಣ್ಣನವರ ವಚನಗಳ ಶಿಲ್ಪವಿಧಾನ’, ಬಸವಣ್ಣನವರ ವಚನಗಳು ಸಾಂಸ್ಕೃತಿಕ ಮುಖಾಮುಖಿ,  ಪು.೧೬೬-೨೧೩

[2]      ಪುಣೇಕರ ಅವರ ಸಂದರ್ಶನ, ಕನ್ನಡ ಅಧ್ಯಯನ, ಸಂ..ಸಂ., ೧೯೯೮, ಪು.೧೦೯

[3]      Hindu Customs and Manners, Pp. 405

[4]      ಕೊಡೇಕಲ್ಲ ಬಸವಣ್ಣ, ವಚನ ಸ್ವರವಚನ, ಪು. ೩೩೬

[5]      ರಾವುಳ ಮತಪ್ರಕಾಶಿಕೆ, ಪು.೧೭-೧೮

[6]      ತಗರ ಪುರಾಣ, ಅನುಬಂಧ

[7]      ರಾವುಳ ಮತಪ್ರಕಾಶಿಕೆ, ಪು.೧೬

[8]      ‘ನಾಥಪಂಥ ಹಾಗೂ ಜ್ಞಾನೇಶ್ವರರ ಪಂಥರಾಜ’, ಅಂತರಂಗದ ರತ್ನ, ಪು.೨೪೦

[9]      ನೀಲಕಂಠಸ್ವಾಮಿ, ‘ಅಲ್ಲಮಪ್ರಭು ಹಾಗೂ ಗೋರಖನಾಥ’, ನಾಥಸಂದೇಶ, ಡಿಸೆಂಬರ್,೧೯೯೧

[10]     ಶಂಬಾ ಜೋಶಿ, ಎಡೆಗಳು ಹೇಳುವ ಕಂನಾಡ ಕಥೆ, ಶಂಬಾ ಕೃತಿ ಸಂಪುಟ. , ಪು ೨೨೭

[11]     ನಾಥಸಂಪ್ರದಾಯದ ಇತಿಹಾಸ, ಪು. ೨೦೦-೨೦೧

[12]     ನೋಡಿ: ಹಂಪಿಯ ಸದಾಶಿವಯೋಗಿಯವರ  ಶೈವತತ್ವ (ಶಿವಯೋಗ ಸೂತ್ರ) ಕೃತಿ