ಜಾನಪದದ ಗುಣ

ಜನಪದ ಸಾಹಿತ್ಯದಲ್ಲಿ ಸುಂದರರಾದ ಜೋಗಿಗಳನ್ನು ಮೋಹಿಸುವ ಮಹಿಳೆಯರ ನೂರಾರು ಕಥನಗಳಿವೆ. ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’ ಎಂದು ಆರಂಭವಾಗುವ ಕನ್ನಡದ ಜನಪ್ರಿಯ ಕೋಲಾಟದ ಪದವೂ ಇದರಲ್ಲಿ ಒಂದು. ಇದರಲ್ಲಿ ಜೋಗಪ್ಪನಿಗೆ ಮರುಳಾಗಿ ಅವನ ಬೆನ್ನುಬಿದ್ದು ಹೋದ ಹೆಣ್ಣು, ತನ್ನ ಮುಂದಿನ ಗುರಿಯನ್ನೂ ತಲುಪಲಾಗದೆ ಹಿಂದಕ್ಕೂ ಹೋಗಲಾಗದೆ ಕಂಗಾಲಾಗಿರುವ ವಿಚಿತ್ರ ಸನ್ನಿವೇಶವಿದೆ. ಆಕೆ ಜೋಗಿಗಾಗಿ ಉದ್ದಿನ ಹೊಲವನ್ನೂ ಮುದ್ದಾಡೊ  ಗಂಡನನ್ನೂ ಬಿಟ್ಟುಬಂದವಳು. ಈ ಬಗ್ಗೆ ಅವಳಿಗೆ ದುಗುಡವಿಲ್ಲ. ಆದರೆ ಎಷ್ಟು ಹಿಂಬಾಲಿಸಿದರೂ ಸಿಗದಿರುವ ಅವನ ಅರಮನೆಯ ಬಗ್ಗೆ ಆತಂಕವಿದೆ. ನಿಜದಲ್ಲಿ ಜೋಗಿಗೆ ಅರಮನೆ ಇರುವುದು ಸಾಧ್ಯವಿಲ್ಲ. ಹಾಗಾದರೆ ಈ ಅರಮನೆ ಯಾವುದು? ಯಾವುದೊ ಸತ್ಯದ ಹುಡುಕಾಟದಲ್ಲಿ ಬಿದ್ದಿರುವ ಸಾಧಕನ ಸ್ವಗತವೊ ಗುರುವನ್ನು ಹುಡುಕುವ ಶಿಷ್ಯನ ತೊಳಲಾಟವೊ ಇದು ಆಗಿರಬಹುದು. ಆಕೆ ನಾನು ಹೊಲ ಗಂಡ ಎಲ್ಲವನ್ನು ನಿನಗಾಗೆ ಬಿಟ್ಟೆ ಎಂದಾಗ, ಜೋಗಿ ‘ಎಲ್ಲಾನು ಬಿಟ್ಟಮೇಲೆ ನನ್ಯಾಕೆ ಬಿಡಲೊಲ್ಲೆ?’ಎಂದು ಕೇಳುತ್ತಾನೆ. ಆಗ ಆಕೆ ‘ನಿನ್ನ ಬಿಟ್ಟು ನಾನಿರಲಾರೆ’  ಎಂದು ಜವಾಬು ಕೊಡುತ್ತಾಳೆ. ಇದು ಜೋಗಿಗೆ ಮರುಳಾಗಿ ನಿಜವಾಗಿಯೂ ಮನೆಬಿಟ್ಟು ಬಂದಿರುವ ಹೆಣ್ಣಿನ ಅಳಲಾಗಿರಬಹುದು. ಹೀಗೆಎಲ್ಲ ಸ್ತರಗಳೂ ಅಡಗಿರು ವಂತೆ ಈ ಹಾಡಿನ ವಿನ್ಯಾಸವಿದೆ. ಅವಳೊಮ್ಮೆ ತನಗೆ  ಕಾಡುವ ಜೋಗಿಯನ್ನು ಬೈಯುತ್ತಾಳೆ. ಈ ವಿರುದ್ಧ ಭಾವಗಳ ಹಿನ್ನೆಲೆಯಲ್ಲಿ ಅಲ್ಲಮನ ಬೆಡಗಿನ ವಚನವನ್ನು ಓದಬೇಕು. ಅಷ್ಟೇಕೆ, ಕೋಗಿಲೆಯ ಗಾನಕ್ಕೆ ಮರುಳಾಗುವ ವ್ಯಕ್ತಿಯ ತೊಳಲಾಟವನ್ನು ವರ್ಣಿಸುವ ಬೇಂದ್ರೆಯವರ ಜೋಗಿ ಪದ್ಯಕೂಡ ಇಂತಹ ದ್ವಂದ್ವ ಭಾವಗಳಿಂದ ಕೂಡಿದೆ. ಚಿಕ್ಕಿ ಉಂಗುರಕ್ಕೆ ನಾರಿ ಮನಸೋತ ಈ ಜೋಗಿಹಾಡು, ಚುಂಚನಗಿರಿ ಪರಿಸರದ್ದು ಎಂಬುದು ಮಹತ್ವದ ಅಂಶ. ಈ ಹಾಡು ಅಕ್ಕಮಹಾದೇವಿಯು ಮಲ್ಲಿಕಾರ್ಜುನನ ಅಥವಾ ಮೀರಾಬಾಯಿಯು ಕೃಷ್ಣನ ಚೆಲುವನ್ನು ಲೈಂಗಿಕ ಪರಿಭಾಷೆಯಲ್ಲಿ ಬಣ್ಣಿಸುವ ರಚನೆಗಳ ಜನಪದ ರೂಪದಂತಿದೆ. ಅಕ್ಕ – ಮೀರಾ ಇಬ್ಬರೂ ತಾವೂ ಹುಡುಕುವ ಚೆಲುವನನ್ನು ಗೊರವ ಜೋಗಿ ಎಂದು ಕರೆಯುತ್ತಾರೆ ಎಂಬುದು ಮಾರ್ಮಿಕ.

ಜನಪದರ ಮಟ್ಟಕ್ಕೆ ಇಳಿದು ಬದುಕಿದ ಭಾರತೀಯ ದರ್ಶನಗಳಲ್ಲಿ ಯೋಗವೂ ಒಂದು. ದೇಶದಾದ್ಯಂತ ಇರುವ ಗುರುಪಂಥಗಳಲ್ಲಿ ಇದು ಅಸ್ತಿತ್ವದಲ್ಲಿದೆ. ಇದನ್ನು ದರ್ಶನದ ಸಮುದಾಯೀಕರಣ ಎನ್ನಬಹುದು. ತಾತ್ವಿಕ ದರ್ಶನಗಳು ಸಮುದಾಯಗಳ ಮೂರ್ತ ಬದುಕಿನ ಭಾಗವಾದಾಗ, ತಮ್ಮದೇ ಆದ ರೂಪಾಂತರ ಪಡೆಯುತ್ತವೆ.  ಕರ್ನಾಟಕದ ಜಾನಪದದಲ್ಲಿ ಯೋಗದರ್ಶನ, ಅನುಭಾವ, ಸಾಧನೆಯ ಅನುಭವ ಹಾಗೂ ನಾಥರನ್ನು ಕುರಿತ ಸಾಹಿತ್ಯ ಸೃಷ್ಟಿಯಾಗಿದೆ. ಅದು ಕನ್ನಡ, ಉರ್ದು, ತೆಲುಗು, ತುಳು ಹಾಗೂ ಮರಾಠಿ ಭಾಷೆಯಲ್ಲಿದೆ.  ಮಂಟೆಸ್ವಾಮಿಯಂತಹ ದೊಡ್ಡ ಕಾವ್ಯ, ಸವಾಲ್ ಜವಾಬು ಪದ, ಸೂಫೀ ರಚನೆ ಹಾಗೂ ತತ್ವಪದ ಭಜನೆಪದ ಎನ್ನಲಾಗುವ ಅನುಭಾವದ ಹಾಡುಗಳಲ್ಲಿ ಇದು ಅಡಗಿದೆ. ಜಾನಪದವು ನಾಥಪಂಥದ ಮಠ, ಯೋಗಿ ಹಾಗೂ ಆಚರಣೆಗಳನ್ನು ಕ್ಲಾಸಿಕಲ್ ಪಠ್ಯಗಳಿಗಿಂತ ಭಿನ್ನವಾಗಿ  ಪರಿಭಾವಿಸಿದೆ. ಜನಪದ ಸಾಹಿತ್ಯವು ನಾಥಪಂಥದ ಚರಿತ್ರೆಯ ದಾಖಲಾತಿ ಕೆಲಸ ಮಾಡುವುದಿಲ್ಲ. ಅದರ ತಾತ್ವಿಕ ವಾಗ್ವಾದಗಳನ್ನು ಹಿಡಿಯುವುದಿಲ್ಲ. ಬದಲಿಗೆ ನಾಥಪಂಥಕ್ಕೆ ಸಮುದಾಯಗಳು ತೋರುವ ಭಕ್ತಿ ಹಾಗೂ ಮಾಡುವ ಆಚರಣೆಗಳ ಲೋಕವನ್ನು ವರ್ಣಿಸುತ್ತದೆ. ಈ ವರ್ಣನೆಗಳಲ್ಲಿ ದುಡಿಮೆಗಾರ  ಸಮುದಾಯಗಳ ಕಲ್ಪನೆ ಮತ್ತು ಆಶೋತ್ತರಗಳು ಬೆರೆತಿವೆ. ಇದನ್ನು ನಾಥಪಂಥದ ಮೌಖಿಕ ಚರಿತ್ರೆ ಎನ್ನಬಹುದು. ಇಲ್ಲಿನ ಹೆಚ್ಚಿನ ಹಾಡುಗಳನ್ನು ಹಾಡುವವರು ಮಹಿಳೆಯರು ಎಂಬುದು ಗಮನಾರ್ಹ.

ಜಾನಪದಕ್ಕೆ ಅತ್ಯಂತ ಜಾಸ್ತಿ ಪ್ರಮಾಣದಲ್ಲಿ ಹೋಗಿರುವ ಮಠಗಳೆಂದರೆ ಕದ್ರಿ, ಚುಂಚನಗಿರಿ ಹಾಗೂ ಲುಂಕೆಮಲೆ. ಕದ್ರಿಯ ಸಾಹಿತ್ಯವು ತುಳುವಿನಲ್ಲಿದ್ದು, ಅದು ಕರಾವಳಿಯ  ಕೃಷಿಕ ಹಾಗೂ ಮೀನುಗಾರ ಸಂಸ್ಕೃತಿಯ ಆಚರಣೆಗಳನ್ನು ಒಳಗೊಂಡಿದೆ. ತುಳು ಸಂಸ್ಕೃತಿಯಲ್ಲಿರುವ ನಾಥಪಂಥವು ಪ್ರತ್ಯೇಕ ಅಧ್ಯಯನ ಮಾಡುವಷ್ಟು ವಿಸ್ತಾರವಾಗಿದೆ. ಉತ್ತರ ಭಾರತದಿಂದ ‘ಪರದೇಶಿ’ಯಾಗಿ ಬಂದ ನಾಥಪಂಥವು, ಕರ್ನಾಟಕದ ಬೇರೆಬೇರೆ ಪ್ರದೇಶಗಳಲ್ಲಿ ನೆಲೆನಿಂತು, ಅಲ್ಲಿನ ಜನಜೀವನದ ಭಾಗವಾಗಿ ಮರುಹುಟ್ಟನ್ನು ಪಡೆಯಿತು. ಅದನ್ನು ಈ ಜಾನಪದವು ಕನ್ನಡಿಯಿಟ್ಟು ತೋರಿಸುತ್ತದೆ. ಜನಪದರು ನಾಥಮಠವನ್ನು, ನಾಥಯೋಗಿಗಳನ್ನು, ನಾಥಪಂಥದ ದೈವವಾದ ಭೈರವನನ್ನು ಹಾಗೂ ಪಂಥದ ಜನಪ್ರತಿನಿಧಿಯಾದ ಜೋಗಪ್ಪನನ್ನು ಕುರಿತು ಮಾಡಿರುವ ಅಭಿವ್ಯಕ್ತಿಗಳನ್ನು ಇಲ್ಲಿ ಪರಿಶೀಲಿಸಬಹುದು.

ನಾಥಮಠದ ಚಿತ್ರಗಳು

ನಾಥಮಠಗಳನ್ನು ಬಾರಾಪಂಥದವರು ಗೋರಖನಾಥ ಮಚೇಂದ್ರನಾಥರ ಹೆಸರಲ್ಲಿ ಅಖಾಡ, ಮಠ, ಧುನಾ ಎಂದು ಕರೆಯುವರು.  ಆದರೆ ಪರಿಸರದ ಜನ ಕರೆಯುವುದು ಮಾತ್ರ ‘ಜೋಗಿಮಠ’ವೆಂದು. ಚುಂಚನಗಿರಿ ಸಾಹಿತ್ಯದಲ್ಲಿ ನಾಥಮಠದ ವರ್ಣನೆಗಳು ಹೆಚ್ಚು ಕಂಡು ಬರುತ್ತವೆ. ಇಲ್ಲಿ ಮಠವನ್ನು  ‘ಭೈರುವನ ಮಠಮನೆ’ ‘ಜೋಗಿಯ ಮಠ’ ‘ಸನ್ಯಾಸಿಮಠ’ ‘ಸಿದ್ಧರಮಠ’ ‘ಚಿತ್ತಾರದ ಮಠ’  ‘ಬೋರಯ್ನಮಟ’ ಎಂದೆಲ್ಲ ಕರೆಯಲಾಗಿದೆ.

ಮುದ್ದೀಯ ತಿಂಬಾರು, ಸಿದ್ದೀಯ ಮಾಡ್ಯಾರು ಎದ್ದೇ ಕಿನ್ನರಿಯ ನುಡಿಸ್ಯಾರು

ಅಯ್‌ದಾರೆ ಸ್ವಾಮಿ ಬೋರಯ್ನ ಮಟದಾಗೆ

ಮ್ಯಾಗೆ ಇರುವುದು ಜೋಗಿಯ ಮಠಕಾಣೆ, ಜೋಗಿ ಲಿಂಗೈಗೆ ಮಠಮನೆ ಒಳಗಿರುವ

ನಾಗರ ಹೆಡೆ ತ್ರಿಶೂಲ

ಹಾದೀಲಿ ಇರುವುದು ಜೋಗಿಯ ಮಠಕಾಣೆ, ಗಾಜಿಯ ಉಪ್ಪರಿಗೆಯ ಗರುಡೀಯ

ನಾಟಕಶಾಲೆ ಸ್ವಾಮಿ ಸನ್ಯಾಸಿ ಮಠಕಾಣೆ

ರುದ್ರಾಕ್ಷಿವನವು ಸಿದ್ಧಸಿಂಹಾಸನವು, ಮುದ್ದುಭೈರವನ ನೆಲೆವಾಸ ಮಠದಲ್ಲಿ

ಗುರು ಶಿಷ್ಯರೊಂದಾಗಿ ಇಹರಂತೆ

ಸಿದ್ದರಮಠದಲ್ಲಿ ಸಿದ್ಧಸಿಂಹಾಸನವು, ಬುದ್ಧ್ಯೋರು ಕೂತವರೆ ಗದುಗೇಲಿ ಪಾದಕ್ಕೆ

ಬಿಲ್ವಪತ್ರೆಯನಿಟ್ಟು ಶರಣೆನ್ನಿ

[1]

ಮೊದಲನೆಯದು ಲುಂಕೆಮಲೆಯದು. ಉಳಿದವು ಚುಂಚನಗಿರಿ ಮಠದವು. ಇಲ್ಲಿ ಮಠದ ಚಿತ್ತಾರಗಳ ಪ್ರಸ್ತಾಪವಿದೆ. ಮಠದೊಳಗಿರುವ  ಉರಿಗದ್ದುಗೆ ಅಥವಾ ಸಿದ್ಧಸಿಂಹಾಸನದ ಪ್ರಸ್ತಾಪವಿದೆ.  ಉಪ್ಪರಿಗೆಯ ಚಿತ್ರವಿದೆ. ನಾಥಮಠಗಳ ವಾಸ್ತುವಿನ ಒಂದು ಲಕ್ಷಣವೆಂದರೆ, ಉಪ್ಪರಿಗೆ. ಉಪ್ಪರಿಗೆಯ ಕಿರುಕೋಣೆಗಳು ಯೋಗಸಾಧನೆಗೆ ಏಕಾಂತ ಜಾಗಗಳಾಗಿ ಬಳಕೆ ಆಗುತ್ತವೆ. ಹಿಂದಿನ ಕದ್ರಿಮಠದ ಹೆಂಚಿನ ಕಟ್ಟಡದಲ್ಲಿ ಉಪ್ಪರಿಗೆಯಿತ್ತು. ಈಗಿನ ಚುಂಚನಗಿರಿ, ಹಂಡಿಬಡಗನಾಥ, ಲುಂಕೆಮಲೆ ಮಠಗಳಲ್ಲಿ  ಉಪ್ಪರಿಗೆಗಳಿವೆ. ನಾಥಮಠಗಳು ಸಾಮಾನ್ಯವಾಗಿ ಬೆಟ್ಟದ ಮೇಲಿರುತ್ತವೆ. ಈ ಉಪ್ಪರಿಗೆ ಮಠದ ಮೇಲಂತಸ್ತಿನಲ್ಲಿರುತ್ತದೆ. ಯೋಗ ಸಾಧನೆಯಲ್ಲಿ ಕೆಳಗಿನ ಕುಂಡಲಿನಿಯನ್ನು ಮೇಲ್ಮುಖವಾಗಿ  ಚಲಿಸುವಂತೆ ಮಾಡುವುದು ಮುಖ್ಯ. ಯೋಗಿಗಳನ್ನು ಊರ್ಧ್ವರೇತಸ್ಕರೆಂದು ಕರೆಯುತ್ತಾರೆ. ಈ ಹಿನ್ನೆಲೆಯಲ್ಲಿ ಉಪ್ಪರಿಗೆ ಗಳು ವಾಸ್ತು ಸಂಕೇತಗಳಾಗಿವೆ. ಇಲ್ಲಿನ ಹಾಡುಗಳಲ್ಲಿ ಮಠಗಳ ಬಗ್ಗೆ ಭಕ್ತಿಯಿದೆ. ಕೆಲವು ಹಾಡುಗಳಲ್ಲಿ ಮಠದ ಬಗ್ಗೆ ವ್ಯಂಗ್ಯಚಿತ್ರಗಳೂ ಸಿಗುತ್ತವೆ.

ಹರ‌್ಯಾಗ ಎದ್ದು ಹಾಲಮಾರೀಲೆ, ಬಾವಾನ ಮಠಕ ಹೋಗಬಾರದು. ಹೋದರ‌್ಯಾಕ  ಹೋಗವಲ್ಲರಿ ಮತ್ತೊಂದ ಹೇಳತೇನ, ಗಾಂಜಿ ತಂಬಾಕ ಸೇದಬಾರದು! ಹುಚ್ಚ ಆಗಬಾರದು

ಗುರುಬೋಧ ಪಡೆದಿದ್ದ ಬೆಳಗಾವಿ ಭಾಗದ ತಿಗಡೊಳ್ಳಿ ಮರಿಮಲ್ಲಪ್ಪ ಕವಿಯ ಪದವಿದು.[2] ಬಾವಾನ ಮಠದ ಬಗ್ಗೆ ಪರಿಸರದಲ್ಲಿ ಇರುವ ಜನಪ್ರಿಯ ಗ್ರಹಿಕೆಯೊಂದು ಇಲ್ಲಿದೆ. ಬೆಳಗಾವಿ, ಬೈಲಹೊಂಗಲ, ಅಥಣಿ, ನಿಪ್ಪಾಣಿ, ಖಾನಾಪುರ, ಗೋಕಾಕ, ಕಿತ್ತೂರು, ಇಲ್ಲೆಲ್ಲ ನಾಥ ಪರಿಸರವಿದೆ. ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಈ ಭಾಗವು ಮರಾಠಿ ನಾಥರೂಪಗಳಾದ ವಾರಕರಿ ಮಹಾನುಭಾವ ಪಂಥಗಳಿಗೆ ತೆರೆದುಕೊಂಡಿದೆ. ಇಲ್ಲಿನ ಪದದಲ್ಲಿ ಮಠಗಳು ಸೋಮಾರಿ ಹಾಗೂ ಗಾಂಜಾ ಸೇದುವ ವ್ಯಕ್ತಿಗಳ ತಾಣಗಳಾಗಿ ಜನರಿಂದ ತಿರಸ್ಕಾರಕ್ಕೆ ಒಳಗಾಗಿರುವುದನ್ನು ಸೂಚಿಸಲಾಗುತ್ತಿದೆ. ಸೂಕ್ಷ್ಮವಾಗಿ ನೋಡಿದರೆ, ಇಲ್ಲಿರುವುದು ಆರೋಪವಲ್ಲ. ಬೋಧಪಡೆದ ಸಂತೋಷ. ಹುಚ್ಚು ಬರುವುದು, ಹಾವುಚೇಳು ಕಚ್ಚಿ ವಿಷವೇರುವುದು, ಹಾದರಮಾಡುವುದು, ಶೀಲಕಳೆದುಕೊಳ್ಳುವುದು ಇವೆಲ್ಲ ಆರೂಢ ಸಾಹಿತ್ಯದಲ್ಲಿ ಯೋಗಾನುಭವದ ರೂಪಕಗಳು. ಗುರುವಸ್ತಾದಿ ಹೇಳತಾನ ಎಂದು ಪದ್ಯ ಶುರುವಾಗುವುದು ಗಮನಾರ್ಹ.

ಗೋರಖ ಮಚ್ಚೇಂದ್ರರ ಚಿತ್ರಗಳು

ಜನಪದ ಸಾಹಿತ್ಯದಲ್ಲಿ ಅತ್ಯಂತ ಹೆಚ್ಚು ಸ್ಮರಣೆಗೆ ಒಳಗಾಗುವ ಯೋಗಿಯೆಂದರೆ,  ಗೋರಖನಾಥ. ಜನಪದರಲ್ಲಿ ಗೋರಖ ಎನ್ನುವುದು ಸಾಮಾನ್ಯವಾಗಿ ಯಾವುದೇ ನಾಥಯೋಗಿಯನ್ನು ಗುರುತಿಸುವ ರೂಢನಾಮವಾಗುತ್ತದೆ.  ‘ಭೈರುವ ಭಕ್ತ ಗೋರಖನಾಥ’  ಎಂದರೆ, ಭೈರವನ ಭಕ್ತನಾಗಿರುವ ನಾಥ ಎಂದರ್ಥ.

ಆಗಹಾಕಿದ ಬಾಳೆ ಆಗಲೇ ಫಲಬಿಟ್ಟೊ, ಗೋರಖನಾಥಯ್ನ ಗುಡಿ ಮುಂದೆ ಬಿಟ್ಟಬಾಳೆ

ಹೊತ್ತಾರೆ ಪೂಜೆಗೆ ಹದವಾದೊ

ಬೆಟ್ಟಿನಲಿ ಸಿಂಗನಾಥ ಬೆರಳಲಿ ಗೋರುಖನಾಥ, ಮೇಗಾಲ ಗುಡಿಯಲ್ಲಿ ಹರಕೇಯ

ಕೇಳೋರು, ಅವರೆ ಕಾಣೆ ನಮ್ಮ ಮನೆಸ್ವಾಮಿ

ಬೆಟ್ಟಿನಲಿ ಸಿಂಗನಾಥ  ಎಂದರೆ ಜಿಂಕೆ ಕೊಂಬಿನ ವಾದ್ಯ. ಸಿಂಗನಾದ  ನುಡಿಸುವಾಗ ನಾಥರು ಬೆಟ್ಟಿನ ಸಂದಿಯಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ‘ಬೆರಳಲ್ಲಿ ಗೋರುಖನಾಥ’ ಎಂದರೇನು? ಗೋರಖನಾಥ ಎಂಬುದು ಯೋಗಮುದ್ರೆಯೂ ಅಥವಾ ಉಂಗುರವೊ? ಗೋರಖನನ್ನು ಕರ್ನಾಟಕದ ಶೈವ  ಪಠ್ಯಗಳು ಎದುರಾಳಿಯಾಗಿ ನೋಡಿದರೆ, ಜನಪದರು ಅವನನ್ನು ಸಾಂಸ್ಕೃತಿಕ ನಾಯಕನನ್ನಾಗಿ ಕಂಡರಿಸುತ್ತಾರೆ. ವಿಶೇಷವೆಂದರೆ, ಬಯಲು ಸೀಮೆಯ ನಾಥಮಠಗಳಲ್ಲಿ ಮಚೇಂದ್ರನ ಸುದ್ದಿ ಇಲ್ಲದಿರುವುದು. ಅವನ ನೆನಪು ಮೀನುಗಾರ ಸಮುದಾಯಗಳಲ್ಲಿ ಇರುವಂತೆ, ಕೃಷಿಕ ಸಮುದಾಯಗಳಲ್ಲಿ ಇಲ್ಲ. ಗೊಬ್ಬರದ ಗುಂಡಿಯಲ್ಲಿ ಹುಟ್ಟಿದ ಹಾಗೂ ಹಸುವಿನಂತಹ ಸಾಕುಪ್ರಾಣಿಯನ್ನುನೆನಪಿಸುವ ಗೋರಖನು ಬೇಸಾಯ ಸಂಸ್ಕೃತಿಯಲ್ಲಿ ಸೇರಿಹೋಗಿದ್ದಾನೆ. ಪಶುಪಾಲಕ ಸಮುದಾಯಗಳೂ ಗೋರಖನನ್ನು ನೆನೆಯುತ್ತವೆ. ಕುರುಬ ಸಮುದಾಯದ ಸಾಂಸ್ಕೃತಿಕ ನಾಯಕನಾದ ಮಾಳಿಂಗರಾಯನ ಕಥನಗಳಲ್ಲಿ ಗೋರಖ ಬರುತ್ತಾನೆ. ಮಾಳಿಂಗನ ಪೂರ್ವಜರಲ್ಲಿ ಒಬ್ಬನಾದ ಶಾಮರಾಯನು ಗೋರಖನ ‘ಸಿಸುಮಗ’ನು. ಕಷ್ಟ ಬಂದಾಗೆಲ್ಲ ಗೋರಖನನ್ನು ಅವನು ನೆನೆಯುತ್ತಾನೆ.

೧.        ಹವುಳಾದ ಹರಗದ್ದುಗಿ ಮ್ಯಾಲ ಗುರುವ ಗೋರಖನಾಥ

ಪಂಚೇರಗಾಂಜಿ ಸೇದಿದ್ದ ಅಂಬರಾಗಿ ಕೂತಿದ್ದ…

ಗಾಡಿಕಾರನ ಗಂಡನೆ ಮೋಡಿಕಾರನ ಮಿಂಡನೆ,

ಬಂಗಾಲಿ ಬಾವನಾಗಿದ್ದ ಬಾವನ್ನವಿದ್ಯೆ ಕಲಿಸಿದ್ದ[3]

೨.        ಆ ಕಾಲಭೈರವನಾಥ ಏಳುತೆಲಿಗುರು, ಗೌಡ ಬಂಗಾಲಜೋಗಿ ಏನ್ ಮಾಡಿದ್ದ

ಕ್ಯಾವಿ ಕಂತೀ ತೊಟ್ಟಿದ್ದಾ, ಅದೇ ಬಣ್ಣದ ಜೋಳಗಿ ಹಾಕಿದ್ದಾ

ಬಂಗಾರ ಸಿಂಗನಾಥಗ ಜೋಳಗಿ ಒಳಗ ಇಟ್ಟಿದ್ದಾ, ರುಮ್ಮುಚೂರಿ ಬಗಲಾಗ ಹಿಡಿದಿದ್ದಾ, ಎಡಮುರಿ ಶಂಖಾ, ತ್ರಿಶೂಲಾ ಕಿನ್ನರಿಕಾಯಿ ತೊಗೊಂಡು

ಬಂಗಾಲ ದೇಶದ ಬಾವಾನ ರೂಪತೊಟ್ಟು, ಆ ತನ್ನ ಸೋನಾರಿ ಮಠವನ್ನು ಬಿಟ್ಟು..[4]

ಮೊದಲನೆಯ ಉಲ್ಲೇಖವು ಸೊಲ್ಲಾಪುರ ಸೀಮೆಯ ಜನಪದ ಹಾಲುಮತ ಕಾವ್ಯದ್ದು. ಎರಡನೆಯದು ಬೆಳಗಾವಿ ಭಾಗದ ಅಡಿವೆಪ್ಪ ಒಡೆಯರು ಹಾಡಿದ ಮಾಳಿಂಗರಾಯನ ಕಾವ್ಯದ್ದು. ಇವೆರಡರಲ್ಲೂ ಎದ್ದುಕಾಣುವ ಸಂಗತಿಯೆಂದರೆ, ಗೋರಖ ಅಥವಾ ಜೋಗಿಯು  ಬಂಗಾಲಿ ಬಾವನಾಗುವುದು. ರುಂಡಮಾಲೆ ಹಾಕಿರುವುದು. ಪ್ರಾಯಃ  ನಾಥರಾಗಿ ಬದಲಾದ ಕಾಪಾಲಿಕರ ಚಿತ್ರವಿದು. ಬಂಗಾಲಿಯ ವಿದ್ಯೆಯೆಂದರೆ ಮೋಡಿಮಾಟದ್ದು. ಜೋಗಿಗಳು ಮೋಡಿಕಾರರಾಗಿದ್ದರು ಎಂಬುದನ್ನು ಇದು ಸೂಚಿಸುತ್ತಿದೆಯೆ? ಗೋರಖನು ಶಿಷ್ಯನಿಗೆ ‘ಬಾವನ್ನ’(೫೨) ವಿದ್ಯೆಗಳನ್ನು ಕಲಿಸುತ್ತಾನೆ. ಅದರಲ್ಲೂ ಹಾಲಮತ ಕಾವ್ಯದಲ್ಲಿ ಬಿಲ್ವಿದ್ಯೆ  ಕಲಿಸುವ ಸುದೀರ್ಘ ವರ್ಣನೆಯಿದೆ. ವಿದ್ಯೆ ಕಲಿಸಿದ ಬಳಿಕ ಗೋರಖನು ಶಾಮರಾಯನನ್ನು  ಡಿಳ್ಳಿ ಸುಲ್ತಾನನ ಮೇಲೆ ಯುದ್ಧಕ್ಕೆ ಕಳಿಸುತ್ತಾನೆ. ಅಡಿವೆಪ್ಪ ಒಡೆಯರ  ಕಾವ್ಯದಲ್ಲಿ ಬಂಗಾಲ ಜೋಗಿಯ ಚಿತ್ರವು ಹೆಚ್ಚು ಖಚಿತ ವಿವರಗಳಿಂದ ಕೂಡಿದೆ.  ಬೆಳಗಾವಿ ಭಾಗದಲ್ಲಿ ನಾಲ್ಕು ನಾಥಮಠಗಳಿದ್ದು, ಕವಿಗೆ ಇದರ ನಿಕಟ ಪರಿಚಯ ಇರುವುದೂ ಒಂದು ಕಾರಣ ಇದ್ದೀತು. ಆದರೆ ರುಮ್ಮಚೂರಿ ಎಂದರೇನು? ಕಪಾಲವನ್ನು ಕಿನ್ನರಿಕಾಯಿ ಎನ್ನುವುದು ವಿಶೇಷವಾಗಿದೆ. ನಿಜವಾಗಿ ಆಸಕ್ತಿ ಕೆರಳಿಸುತ್ತಿರುವುದು ಸೋನಾರಿಮಠ ಎಂಬ ಉಲ್ಲೇಖ. ತ್ರ್ಯಂಬಕೇಶ್ವರದಲ್ಲಿ ಮೂರು ಮಠಗಳಿಗೆ ನಾಥರ ಮಹಾಸಭೆ ಹೊಸ ಅಧಿಪತಿಗಳನ್ನು ಆರಿಸುತ್ತದೆ. ಕದ್ರಿ, ಸುನೇರಿ ಹಾಗೂ ತ್ರ್ಯಂಬಕೇಶ್ವರ. ಸುನೇರಿ ಮಠವು ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯಲ್ಲಿದೆ. ಅದು ಸೊಲ್ಲಾಪುರಕ್ಕೆ ದೂರವಿಲ್ಲ. ಕನ್ನಡಿಗ ಪಶುಪಾಲಕ ಸಮುದಾಯಗಳು ತಮ್ಮ ಕುರಿಗಳೊಡನೆ ಶತಮಾನಗಳಿಂದ ಓಡಾಡಿಕೊಂಡಿರುವ ಭಾಗವಿದು. ಅವಕ್ಕೆ ಸುನೇರಿಯ ಸಂಪರ್ಕವಾಗಿದ್ದರೆ ಆಶ್ಚರ್ಯಕರವಲ್ಲ. ಇಷ್ಟೆ. ಕನ್ನಡ ಲಿಖಿತ ಕಾವ್ಯಗಳ ಹಾಗೆ ನಾಥ ಜೋಗಿಗಳ ದುಷ್ಟೀಕರಣವನ್ನು ಜನಪದ ಕಾವ್ಯಗಳು ಮಾಡುತ್ತಿಲ್ಲ.

ನಾಥಸಿದ್ಧರ ಚಿತ್ರಗಳು

ಜನಪದ ಸಾಹಿತ್ಯದಲ್ಲಿ ನಾಥರ ವೇಷಭೂಷಣ, ಪರಿವಾರದ ಜತೆ ಅವರು ಮಾಡುವ ತಿರುಗಾಟ ಹಾಗೂ ಅವರ ಊಟೋಪಚಾರಗಳ ಮೇಲೆ  ವರ್ಣನೆಗಳಿವೆ:

ಆದಿಕರ್ಮನಾಥ ವೇದಗೋಚರ ಮಹಿಮ, ವಾದದಲಿ ಗೆದ್ದ ಈ ಮಠವ ಕರ್ಮನಾಥ

ಉರಿವ ಗದ್ದುಗೇಲಿ ನೆಲಸವನೆ

ಉರಿವಗದ್ದುಗೆ ಒಳಗೆ ಇರುವ ಕರ್ಮನಾಥ, ವರವ ಕೊಡಯ್ಯ ನಮಗೊಂದ ಗುರುದೇವ ನಿಮ್ಮ ಚರಣಕೆ ನಮಿಸಿ ಶರಣೆಂದೊ

ಹಿಂದಕೆ ಕರ್ಮನಾಥ ಮುಂದಕೆ ಭಕ್ತನಾಥ, ಅರವತ್ತೆಂಟು ಪಟ್ಟ ಇಲ್ಲಿಗೆ ಆಳಿದ ಶರಣರಿಗೆ ಮಂಗಳಾರತಿಯ ಬೆಳಗುವೆ

ಜಾಜೀಯ ಹೂವಿನಲ್ಲಿ ಜೋತುರವ ನೇಯಿಸಿದೆ, ಒಲ್ಲನಲ್ಲೆ ಸ್ವಾಮಿ ಕುಲಗುರುವು

ಭಕ್ತನಾಥಸ್ವಾಮಿ ಪಲ್ಲಕ್ಕಿ ಬೇಡಿ ಮುನಿದಾರು

ಈಗಹಾಕಿದ ಬಾಳೆ ಆಗಲೇ ಫಲಬಿಟ್ಟೊ, ಚಂದ್ರನಾಥಯ್ನ ಗುಡಿ ಮುಂದೆ ಬಿಟ್ಟಬಾಳೆ

ಚಂಜಿ ಪೂಜೆಗೆ ಹದವಾದೊ

ಇಲ್ಲಿ ಕೆಲವು ವಿಶೇಷ ಸಂಗತಿಗಳಿವೆ. ೧. ಕರ್ಮನಾಥನು ಮೊದಲನೆಯ ಯೋಗಿ ಎಂಬ ಚಾರಿತ್ರಿಕ ಅರಿವಿರುವುದು. ‘ಹಿಂದಕೆ ಕರ್ಮನಾಥ ಮುಂದಕೆ ಭಕ್ತನಾಥ ಅರವತ್ತೆಂಟು ಪಟ್ಟ ಇಲ್ಲಿಗೆ’ ಎಂಬ ಲೆಕ್ಕಾಚಾರದಲ್ಲಿಯೂ ಇದು ಕಾಣುತ್ತದೆ. ೨. ಚಂದ್ರನಾಥನ ಹೆಸರು ಬರುವುದು.  ಈ ಚಂದ್ರನಾಥ ಯಾರು? ‘ಆದಿಚುಂಚನಗಿರಿ ಸ್ಥಳಮಾಹಾತ್ಮ್ಯ’ ಪಠ್ಯದಲ್ಲಿ ಒಬ್ಬ ಚಂದ್ರನಾಥನ ಪ್ರಸ್ತಾಪವಿದ್ದು ಅವನೇ ಈತ ಇರಬಹುದು. ಈತ ಜನಪ್ರಿಯನಾಗಿದ್ದ  ಯೋಗಿಯೇ ಆಗಿರಬೇಕು. ೩. ಒಕ್ಕಲಿಗರ ಕಡೆಯಿಂದ ಮೊದಲು ಗುರುವಾದ ಭಕ್ತನಾಥರ ಹೆಸರು ಇರುವುದು. ೪. ಇಲ್ಲಿ ಬಾಳೆಯ ಪ್ರಸ್ತಾಪವು ಕದಳಿವನಕ್ಕೆ ಸಂಬಂಧಿಸಿರಬಹುದು ಅಥವಾ ಸಹಜವಾಗಿ ಬಾಳೆಗಿಡದ ಉಲ್ಲೇಖವಿರಬಹುದು.

ಕೈಲಿ ಪಾತ್ರೆಯ ಕಂಡೆ, ಕಂಕುಳಲಿ ಜೋಳಿಗೆ ಕಂಡೆ, ನಾಕೊರಳಾಗೆ ಕಂಡೆ ಸಿಂಗನಾಥ

ಸ್ವಾಮಿಗಳ ಕರ್ಣದಲಿ ಕಂಡೆ ಕಾಮಾಕ್ಷಿ

ಕಣ್ಣ ಉಬ್ಬಿನ ನಡುವೆ ಸಣ್ಣ ವಿಭೂತಿಯು, ಸಣ್ಣಸಿಂಗನಾದ ಕೊರಳಾಗೆ ಸ್ವಾಮಿಗಳ

ಕರದಲಿ ಅಕ್ಷಯದ ಪಾತ್ರೆಯು

ಹಾಲು ಅನ್ನವು ಚಂದ, ಬಾಗಿಲು ಭೈರುವ ಚೆಂದ, ರುದ್ರಾಕ್ಷಿ ಚೆಂದ ಕೊರಳಿಗೆ

ಬುದ್ಯೋರ ಕರ್ಣಕೆ ಚೆಂದ ಕಾಮಾಕ್ಷಿ

ಗದ್ದುಗೆಯ ಮೇಲೆ ಕೂತರು ಜೋಗಿದೇವ, ಎದ್ದುಬಾರಮ್ಮ ಹೆಣ್ಣುಮಗಳೆ ಜೋಗಿದೇವರ

ಮುದ್ದುಪಾದವ ತೊಳೆಯಮ್ಮ

ಬಾಲಬಸವನ ಕಂಡೆ ಮೇಲೆ ಗುರುಗಳ ಕಂಡೆ, ಮುದಿಯ ಎತ್ತನು ಏರಿ ಮೈಗೆ

ಬೂದಿಯ ಬಳಿದು ವಾರದ ಜೋಗಿ ಊರಿಗೆ ಬಂದವನೆ

ಭಂಗಿಯ ಜೋಗಿ ಭೈರುವ ಬರುತಾನೆಂದು, ನಾ ಮಂಗಳಾರತಿ ಹಿಡಿದಿದ್ದೆ

ಇಂದು ನಮ್ಮನೆಯಲಿ ಜಂಗಮಾಗೆಡೆಯಾದೊ

ಭಂಗಿಯ ರೊಟ್ಟಿ ನೆಲಗಡಲೆ ಭೈರುವ, ನಾಳೆ ನಮ್ಮನೆಗೆ ಬಿಜಮಾಡಿ

ನಾಥಯೋಗಿಯನ್ನು ಸ್ವಾಮಿ, ಬುದ್ದಿ, ಜೋಗಿದೇವ, ಭೈರುವ, ಜೋಗಿ, ಜೋಗಿಸಿದ್ಧ, ಭಂಗಿಸಿದ್ಧ, ಗುರು,ಅರಸು, ಕುಲಸ್ವಾಮಿ, ಜಂಗಮ, ಸಿದ್ಧ, ಶಿವಯೋಗಿ, ಎಂದೆಲ್ಲ ಕರೆಯಲಾಗಿದೆ. ಇಲ್ಲಿ ನಾಥರ ಬಣ್ಣ ವೇಷಭೂಷಣ ಬಿರುದು, ಗುಣಸ್ವಭಾವಗಳ ವರ್ಣನೆಗಳಿವೆ. ಒಮ್ಮೆ ಬಿಳಿಯ ಜೋಗಿದೇವ ಎಂದಿದೆ. ಮತ್ತೊಮ್ಮೆ ಜೋಗಿಯದು ಗುಲಗಂಜಿ ಕೆಂಪುಬಣ್ಣ ಎಂದಿದೆ. ಅವನು ಕಾವಿಧಾರಣೆ ಮಾಡಿರುವನು; ವಿಭೂತಿ ಧರಿಸಿರುವವನು; ಕೈಯಲ್ಲಿ ನಾಗಬೆತ್ತ, ಅಕ್ಷಯಪಾತ್ರೆ, ನಾಗರಹೆಡೆ ತ್ರಿಶೂಲಗಳನ್ನು ಹಿಡಿದಿರುವವನು; ಕಂಕುಳಲ್ಲಿ ಜೋಳಿಗೆ, ಕರ್ಣದಲಿ ಕಾಮಾಕ್ಷಿ, ಕೊರಳಲ್ಲಿ ಸಿಂಗನಾದ ಧರಿಸಿದವನು. ಖಂಡುಗ ಕಿರುಜಡೆ ಬಿಟ್ಟವನು (ಒಂದೆಡೆ ಜಡೆಯನ್ನು ನುಗ್ಗೆಯ ಕಾಯಿಗೆ ಹೋಲಿಸಲಾಗಿದೆ!) ಅವನು  ಕುದುರೆ ಇಲ್ಲವೆ ಮುದಿ ಎತ್ತಿನ ಮೇಲೆ ಬರುವವನು; ಹಾಗೆ ಬಂದವನು ಗುಡಾರ ಹಾಕಿ ಉಳಿದುಕೊಳ್ಳುತ್ತಾನೆ. ಇದು ನಾಥರು ಸರ್ಕೀಟು ಹೊರಟಾಗ ಕಂದಾಯ ಅಧಿಕಾರಿಗಳಂತೆ ಬೀಡುಬಿಡುತ್ತಿದ್ದ ಪದ್ಧತಿಯನ್ನು ಸೂಚಿಸುವಂತಿರುತ್ತದೆ.   ವಿಶೇಷವೆಂದರೆ, ಜೋಗಿಯು ಮನೆಗೆ ಬಿನ್ನಹಕ್ಕೆಂದು ಬಂದಾಗ ಬಡಿಸುವ ಅಡುಗೆ ಭಂಗಿಯ ರೊಟ್ಟಿ ಹಾಗೂ ನೆಲಗಡಲೆ ಆಗಿರುವುದು. ಈ ವರ್ಣನೆಗಳು ಹೆಚ್ಚು ಉತ್ಪ್ರೇಕ್ಷೆಯಿಲ್ಲದೆ ವಾಸ್ತವಿಕ ಚಿತ್ರಗಳಾಗಿವೆ.

ಭೈರವನ ಪ್ರೇಮಕಥನಗಳು

ಜನಪದ ನಾಥ ಸಾಹಿತ್ಯದಲ್ಲಿ ಬಹಳ ವರ್ಣರಂಜಿತವಾದ ಭಾಗವೆಂದರೆ, ಭೈರವನ  ಪ್ರೇಮ ಕಥಾನಕಗಳದ್ದು. ಇಲ್ಲಿ ಭೈರವನು ದಕ್ಷನನ್ನು ಕೊಲ್ಲುವಂತಹ  ಉಗ್ರ ಸಾಹಸಿಯಲ್ಲ. ಬದಲಿಗೆ  ಸೌಂದರ್ಯಾರಾಧಕ. ‘ಬಾಳೆ ತ್ವಾಟ್ದಲ್ಲಿ ಬಾಗುವತರ ಕೊಳುದಲ್ಲಿ ಬಾಗಿ ಜೋತುರವ’ ಒಗೆಯುವವನು; ‘ಸಂಪಿಗೆ ಹೂವ ವನಮಾಲೆ’ ಮುಡಿದವನು; ‘ಹೂಕಂಡು ಜಡೆಯ ಮರೆ’ಯುವವನು; ಹೂವಿಗೆ ಆಕರ್ಷಿತನಾಗುವುದು ಎಂದರೆ ಹೆಣ್ಣಿಗೆ ಒಲಿಯುವುದು ಎಂಬರ್ಥವೂ ಹೌದು. ಅವನು ಹಾಲು ಬಾನುಣ್ಣುವನು;   ಬಾಲೆಯರಲ್ಲಿ ಬೆರಗು ಹುಟ್ಟಿಸುವವನು; ಮಡದಿಗೆ ಪರುಸೆಯಲ್ಲಿ ಅವಳು ಬಯಸಿದ್ದನ್ನು ಕೊಡಿಸುವವನು; ಅವಳ ಜತೆ ಸರಸವಾಡಿ ಬಳೆ ಒಡೆಯುವವನು; ವಿವಾಹಿತ ಮಹಿಳೆಯರನ್ನು ಒಲಿಸಿಕೊಳ್ಳುವವನು; ಒಟ್ಟಿನಲ್ಲಿ ಅವನೊಬ್ಬ ಚೆಲುವು ರಸಿಕತೆ ಪುರುಷತ್ವಗಳು ಮೇಳವಿಸಿದ ಒಬ್ಬ ಹಳ್ಳಿಯ ಯುವಕನಂತೆ. ‘ಕಿನ್ನುರಿಯ ಜಾಣ ನನ್ನ ಕೇರಿಗೆ ಬಾರೊ’ ಎಂದೊ ‘ಮೊಗ್ಗಾಗಿ ಬಾರೊ ತುರುಬೀಗೆ’ ಎಂದೊ ಅವನನ್ನು ಕರೆವ ತರುಣಿಯರಿದ್ದಾರೆ. ಜಾತ್ರೆಯಲ್ಲಿ  ‘ಅರಸು ಬರುತಾನೆ’ ಎಂಬ ಸಂಭ್ರಮದಲ್ಲಿ ತನ್ನ ಗಂಡನನ್ನು ಕಳೆದುಕೊಂಡ ಹೆಂಗಸರಿದ್ದಾರೆ. ಅವನ ಕುಣಿತಕ್ಕೆ ಬೆರಗಾಗಿ, ತನ್ನ ಕೂಸನ್ನೆ ತರಕಾರಿಯ ಜತೆ ಹೆಚ್ಚಿದ ತಾಯಿಯಿದ್ದಾಳೆ. ಭೈರವ ಅಥವಾ ಜೋಗಿಯು  ಸ್ತ್ರೀಯರ ಪಾಲಿಗೆ ಒಬ್ಬ ಮಾಯಕಾರನಾಗಿ ಕಾಡುತ್ತಾನೆ. ಅವನ ಪ್ರೇಮ ಕಥನಗಳಲ್ಲಿ ಎರಡು ಪ್ರಸಂಗಳು ಮುಖ್ಯವಾಗಿವೆ. ೧.ಲಕ್ಷ್ಮಿದೇವಿಯ ಪ್ರೇಮ ೨.ಕುರುಬರ ಮಾಳವ್ವನನ್ನು ಒಲಿಸಿಕೊಂಡಿದ್ದು.

ಬ್ರಹ್ಮಹತ್ಯಾ ದೋಷ ಕಳೆದುಕೊಳ್ಳಬೇಕು ಎಂದು ಭೈರವನು ಭೂಮಿಗೆ ಬಂದಾಗ, ಮೊದಲು ಕಂಡಿದ್ದು ಚುಂಚನಗಿರಿಯ ಬೆಟ್ಟ. ಅವನು ಉರಿಗದ್ದುಗೆಯ ಮೇಲೆ ಕೂತಾಗ, ಒಂಬತ್ತು  ಬೆವರಿನ ಹನಿಗಳು ಮೂಡಿ, ಅವುಗಳಿಂದ ೯ ಮೀನುಗಳು ಹುಟ್ಟಿ, ಅವರೇ ನವನಾಥರಾಗುತ್ತಾರೆ. ಭೈರವನು ಭಂಗಿ ಸೇದುತ್ತ ಕಿನ್ನರಿ ನುಡಿಸುತ್ತ ವಿಶ್ರಾಂತಿ ತೆಗೆದುಕೊಳ್ಳುತ್ತಾನೆ. ಅವನು ಬಿಟ್ಟ ಭಂಗಿಹೊಗೆ ಕಾರ್ಮೋಡದಂತೆ ಆಗಸವನ್ನು ತುಂಬಿಕೊಳ್ಳುತ್ತದೆ. ಆ  ಹೊತ್ತಿಗೆ ಆ ದಾರಿಯಲ್ಲಿ ಬಂದ ಲಕ್ಷ್ಮಿದೇವಿಗೆ  ಭಂಗಿ ಹೊಗೆ ಸೇವಿಸಿದ ಕಾರಣ ಗರ್ಭಧಾರಣೆಯಾಗುತ್ತದೆ.  ಅವಳು ಮನೆಗೆ ಬಂದು ಮದುಮಗಳಂತೆ ಸಿಂಗರಿಸಿಕೊಂಡು ತನ್ನನ್ನು ವರಿಸಬೇಕೆಂದು ಹೋಗಿ ಭೈರವನ್ನು ಕೇಳುತ್ತಾಳೆ. ಭೈರವ ನಿರಾಕರಿಸುತ್ತಾನೆ. ಆಗ ಆಕೆಯ ಸೋದರ ಚುಂಚನು ಸಾರಂಗದ ರೂಪದಲ್ಲಿ ಭೈರವನ ಮೇಲೆ ಏರಿಹೋಗುತ್ತಾನೆ. ಆದರೆ ಚುಂಚನು ಕೈಗಂಟಿದ ಕಪಾಲದಿಂದ ನೋವುಣ್ಣುತ್ತಿರುವ ಭೈರವನನ್ನು ಕಂಡು, ನಾಯಿಯಾಗಿ ನೆಕ್ಕಿ ಅದರಿಂದ ವಿಮೋಚನೆ ಮಾಡಿಸುತ್ತಾನೆ. ಭೈರವನು ಪ್ರಸನನ್ನಾದಾಗ ತನ್ನ ತಂಗಿಯನ್ನು ಲಗ್ನವಾಗಬೇಕೆಂದೂ ಚುಂಚನಗಿರಿಯಲ್ಲೆ ನೆಲೆಸಿ ತನ್ನನ್ನು ವಾಹನವಾಗಿ ಮಾಡಿಕೊಳ್ಳಬೇಕೆಂದೂ ಬೇಡುತ್ತಾನೆ. ಭೈರವ ಒಪ್ಪಿಕೊಂಡು ಲಕ್ಷ್ಮಿಯ ಜತೆ ಸಂಸಾರ ಆರಂಭಿಸುತ್ತಾನೆ. ಮುಂದೆ ಅವರಿಗೆ  ಮಂಟೇಸ್ವಾಮಿ, ಮಲೆ ಮಾದೇಶ್ವರ,  ಮುಂತಾದ ೫ ಮಕ್ಕಳು ಹುಟ್ಟುವರು.

ಎರಡನೆಯ ಘಟ್ಟದಲ್ಲಿ ಭೈರವನ ಪ್ರೇಮ ಸಾಹಸ ಹಾಗೂ ಸಾಂಸಾರಿಕ ಕಷ್ಟಗಳ ಕತೆ ಆರಂಭವಾಗುತ್ತದೆ. ಒಮ್ಮೆ ಭೈರವನು ಲಕ್ಷ್ಮಿಯ ಜತೆ ಸರಸದಲ್ಲಿರುವಾಗ, ಅವಳಕ್ಕ ಮಾಳಮ್ಮನ ಮಾತು ಬರುತ್ತದೆ. ತನ್ನಕ್ಕನನ್ನು  ಪಗಡೆಯಾಟದಲ್ಲಿ ಸೋಲಿಸುವವರೇ ಇಲ್ಲ ಎಂದು ಲಕ್ಷ್ಮಿ ಹೇಳುತ್ತಾಳೆ. ಭೈರವನು ಇದನ್ನು ಸವಾಲಾಗಿ ಸ್ವೀಕರಿಸಿ, ಅವಳನ್ನು ಗೆಲ್ಲಲು ಹೊರಡುತ್ತಾನೆ. ಮಾಳಮ್ಮನ ಮುಂದೆಬಂದು ಕಿನ್ನರಿ ನುಡಿಸುತ್ತಾನೆ. ಸಿಂಗನಾದ ನುಡಿಸು ತ್ತಾನೆ. ಚುಂಚನಗಿರಿ ತನಕ  ಸಂಪಿಗೆ ಹೂವು ಕಡೆಸುವ ಆಮಿಶ ಒಡ್ಡುತ್ತಾನೆ.  ಭೈರವನು ಹೆಣ್ಣನ್ನು ಒಲಿಸಲು ಮಾಡುವ ನಾನಾ ಬಗೆಯ ಯತ್ನಗಳನ್ನು ಕಾವ್ಯ ತನ್ಮಯ ವಾಗಿ ವರ್ಣಿಸುತ್ತದೆ. ತನ್ನ ಯತ್ನಗಳು ಫಲಕೊಡದಾಗ ಭೈರವನು  ಕೊನೆಗೆ ಭಂಗಿಹೊಗೆಯನ್ನು ಬಿಟ್ಟು ಅವಳ ಸ್ಮೃತಿತಪ್ಪಿಸಿ ಹೊತ್ತುಕೊಂಡು ಬರುತ್ತಾನೆ. ಮನೆಗೆ ಬಂದರೆ ಲಕ್ಷ್ಮಿದೇವಿ ಬಾಗಿಲು ತೆಗೆಯುವುದಿಲ್ಲ. ‘‘ಸೂಳೆ ಮಾಳಮ್ನ ಒಡಗೊಂಡು ಭೈರವ, ನೀನು ರಾಜ ಬೀದೀಲಿ ಬರಬಹುದೆ?’’ ಎಂದು ಪ್ರಶ್ನಿಸುತ್ತಾಳೆ. ಅಪಮಾನಿತಳಾದ ಮಾಳಮ್ಮ ಮುನಿಸಿ ಕೊಂಡು ಹೊರಡುತ್ತಾಳೆ. ಅವಳು ಹೋಗದಂತೆ ಭೈರವ ಶಾಪಕೊಟ್ಟು ಕಲ್ಲು ಮಾಡುತ್ತಾನೆ.

ಭೈರವ ಹಾಗೂ ಮಾಳವ್ವನ ಈ ಪ್ರೇಮ ಪ್ರಕರಣವು ಶಿವ ಹಾಗೂ ಗಂಗೆಯ, ಮೈಲಾರ ಹಾಗೂ ಕುರುಬರ ಮಾಳವ್ವನ ಅಥವಾ ಕೃಷ್ಣ ಹಾಗೂ ಸತ್ಯಭಾಮೆಯರ ಪ್ರೇಮ ಪ್ರಸಂಗಗಳನ್ನು ನೆನಪಿಸುತ್ತದೆ. ಇವೆಲ್ಲವೂ ಇರುವ ಮಡದಿಯನ್ನು ಬಿಟ್ಟು ಮತ್ತೊಬ್ಬಳನ್ನು ಒಲಿಸಿಕೊಳ್ಳುವ ಪ್ರಸಂಗಗಳು. ದೈವಿಕ ಜಗತ್ತನ್ನು ಮಾನವೀಯ ಗುಣದೋಷಗಳ ಕಥನದಲ್ಲಿ ಜಾನಪದವು ಹಿಡಿದು ಅದನ್ನು ನೆಲಕ್ಕಿಳಿಸುತ್ತದೆ. ಬಯಲಾಟದಲ್ಲಿ ಇಂತಹ ಹಲವಾರು ಪ್ರೇಮ ಕಥೆಗಳನ್ನು ಕಂಡಿರುವ ಜನಪದರಿಗೆ, ಭೈರವ ಮಾಳವ್ವರ ಪ್ರೇಮಕಥೆ  ಕಟ್ಟುವುದು ಕಷ್ಟ ಆಗಿರಲಿಕ್ಕಿಲ್ಲ. ಆದರೆ ಈ ಕತೆಗಳ ಹಿಂದೆ ನಾಥ ಯೋಗಿನಿಯರ ಸಂಗದ ಆಯಾಮವೇನಾದರೂ ಇದೆಯೆ? ಸ್ಪಷ್ಟವಿಲ್ಲ. ಲುಂಕೆಮಲೆಯಲ್ಲೂ ಭೈರವನು ತುಪ್ಪದಮ್ಮನ ಜತೆ ಮಾಡುವ  ಸಂಘರ್ಷ ಮತ್ತು  ಸ್ನೇಹದ ಕಥೆಗಳಿವೆ. ಈ ಸ್ತ್ರೀಪುರುಷರ ಸಂಬಂಧಗಳು ಸಂಕೀರ್ಣ ವಾಗಿವೆ. ಭೈರವನಿಗೆ ಜನ ಕೊಟ್ಟಿರುವ ಈ ಮಾನವೀಕರಣ ಹಾಗೂ ಸೌಂದರ್ಯಾತ್ಮಕತೆ ನಾಥಪಂಥದ ದಾರ್ಶನಿಕತೆಗೆ ಲೌಕಿಕ ಸೇರಿಕೆಗಳಾಗಿವೆ.

ಲೈಂಗಿಕ ಪ್ರತಿಮೆಯ ಚಿತ್ರ

ಜನಪದ ನಾಥಸಾಹಿತ್ಯದಲ್ಲಿ ಭೈರವ ಅಥವಾ ಜೋಗಿಯು ಕಾಮ ಪ್ರೇಮಗಳ ಒಂದು ಪ್ರತಿಮೆ. ಅವನ ಚಟುವಟಿಕೆಗಳು ಕೃಷ್ಣನ ರಾಸಲೀಲೆಯನ್ನು  ಹೋಲುತ್ತವೆ. ಅದರಲ್ಲೂ ಪಶುಪಾಲಕ ಸಮುದಾಯಗಳಿರುವ ಪ್ರದೇಶದಲ್ಲಿ ಕೃಷ್ಣನ ಶೃಂಗಾರ ಕತೆಗಳು ಜೋಗಿಗೆ ಆರೋಪಿತವಾಗುವುದು ಸುಲಭ. ಲುಂಕೆಮಲೆ ಭಾಗದಲ್ಲಿ ಜೋಗಿಗೆ ಪಡಿ ಕೊಡುವ ಹೆಂಗಸರು ಕೊಳ್ಳಣ್ಣ ಜೋಗಿ ಎಂದರೆ, ಅಣ್ಣ ಅನ್ನದೀರೆ ಎಲೆಹೆಣ್ಣೆ ನಿಮ್ಮಣ್ಣನ ಭಾವಮೈದುನ ನಾನು ಎಂದು ಸರಸ ಆಡುತ್ತಾನೆ. ಜೋಗಿಯ ತೇಜಸ್ಸು, ಸೌಂದರ್ಯ ಹಾಗೂ ಪುರುಷತ್ವಗಳ ಮೇಲೂ, ಜೋಗಿಯನ್ನು ಹುಡುಕುತ್ತ ಅವನ ವಿರಹದಿಂದ ಪರಿತಪಿಸುವ, ಅವನನ್ನು ಕೂಡಲು ಹಾತೊರೆವ ಸ್ತ್ರೀಯರ ಬಗ್ಗೆಯೂ ಭಾರತದ ತುಂಬ ಹಾಡುಗಳು ಲಭ್ಯವಿವೆ.  ಕೆಲವೆಡೆ ಜೋಗಿಯನ್ನು ಕೂಡಲು ಮಹಿಳೆಯರು ಹಾತೊರೆದರೆ, ಮತ್ತೆ ಕೆಲವೆಡೆ ತಾನು ಬಯಸಿದ ಮಹಿಳೆಯರನ್ನು ಕೂಡಲು ಜೋಗಿಯೇ ಹಠ ಮಾಡುತ್ತಾನೆ.  ಮಾಳಮ್ಮನ ಪ್ರಸಂಗದಲ್ಲಿ ಭೈರವ ಹಠಮಾಡುತ್ತಾನೆ. ಅರ್ಜುನ ಜೋಗಿ ಹಾಡುಗಳಲ್ಲಿ ಜೋಗಿಯು  ಸುಭದ್ರೆಯನ್ನು ಕೂಡುವ ಬಯಕೆಯನ್ನು ಮಂಡಿಸುತ್ತಾನೆ. ಅವು ಉತ್ಕಟವಾದ ಲೈಂಗಿಕ ಮಿಲನದ ಪರಿಭಾಷೆಯಲ್ಲಿವೆ. ನಾಥಪಂಥವು ದಟ್ಟವಾಗಿರುವ ರಾಜಸ್ಥಾನ ಸೀಮೆಯ ಮೀರಾ,  ತನ್ನ ವಿರಹ ಗೀತೆಗಳಲ್ಲಿ ಕೃಷ್ಣನನ್ನು ಜುಗಿಯೆಂದು ಕರೆವುದು ಅಕಸ್ಮಿಕವಲ್ಲ. ನಂಜನಗೂಡು ವೀರಭದ್ರನು ರಚಿಸಿದ ‘ಪಾರ್ಥನ ಜೋಗೀ ಹಾಡಿ’ನಲ್ಲಿ ಜೋಗಿಯು  ‘ಕೋಟಿ ಮನ್ಮಥ ರೂಪಿ’. ಅವನು ಬೀದಿಯಲ್ಲಿ ಬಂದಾಗ ಅವನೊಡನೆ ಕೂಡಿ ರತಿಸುಖ ಅನುಭವಿಸಲು  ಹೆಂಗಳೆಯರು ಕಾತರಿಸುವ ವಿವರಗಳಿಂದ ಕಾವ್ಯ ತುಂಬಿ ಹೋಗಿದೆ. ಅದೊಂದು ಶೃಂಗಾರ ಕಾವ್ಯ.

ಇವನ ನೋಡಿದ ಕಂಗಳು ಬುವಿಯೊಳಿಹ ಯುವತಿಯರ ಬಗೆ ಸೋಲಲು

ಒಡಗೂಡದಿದ್ದರೆ ಅಡವಿಯೊಳು ಗಿಡವಾಗಿ ತಾವ್ ಜನಿಸೆ ಲೇಸೆಂದರು (೨.೧೬೭)

ಮೂಲಭೂತ ಪ್ರಶ್ನೆಯೆಂದರೆ, ಭಾರತದಾದ್ಯಂತ ಜನಪದ ಸಾಹಿತ್ಯದಲ್ಲಿ ಜೋಗಿಗಳು ಯಾಕೆ ಕಾಮ ಪ್ರೇಮದ ಪ್ರತೀಕವಾಗಿ ಮೂಡಿದ್ದಾರೆ?  ಬಹುಶಃ ಕಾರಣಗಳಿವು.೧. ತಾಂತ್ರಿಕ ಪಂಥಗಳಲ್ಲಿ ಲೌಕಿಕವಾದ ದೈಹಿಕವಾದ ಪ್ರೇಮ ಕಾಮಗಳೂ ದಾರ್ಶನಿಕವಾದ ಯೋಗಾನುಭವವೂ ಒಂದಾಗುತ್ತವೆ.  ಕಾಪಾಲಿಕ, ವಜ್ರಯಾನ, ಶಾಕ್ತ ಮುಂತಾದ ತಾಂತ್ರಿಕ ಪಂಥಗಳಲ್ಲಿ ಪಂಚಮಕಾರಗಳು ಎನ್ನಲಾಗುವ ಮೈಥುನ ಮುದ್ರಾ ಮತ್ಸ್ಯ ಮಾಂಸ ಮದ್ಯಗಳು ಸಾಮಾನ್ಯ. ಯೌಗಿಕ ಸಾಧನೆಯಂತೆ ದೇಹದ ಮೂಲಕವೇ ಇವನ್ನು ಪಡೆಯಬೇಕಾದ ಕಾರಣ, ದೇಹವು ಇಲ್ಲಿ ಮುಖ್ಯ ಮಾಧ್ಯಮ. ವಜ್ರಯಾನ ಕಾಪಾಲಿಕ ಶಾಕ್ತ ಹಾಗೂ ಕೌಳಗಳ ಸಂಗದಲ್ಲಿ  ಮೂಡಿಬಂದ ನಾಥಪಂಥದಲ್ಲಿ, ಈ ಆಚರಣೆಗಳು ತುಸುಮಟ್ಟಿಗೆ ಉಳಿದಿದ್ದವು. ಇವು ಬೇರೆಬೇರೆ ರೂಪದಲ್ಲಿ  ಸಮುದಾಯದ ಆಚರಣೆಗಳಲ್ಲೂ ಉಳಿದಿದ್ದವು. ನಾಥರಿಗೆ  ತಾಂತ್ರಿಕ ಪಂಥಗಳಲ್ಲಿದ್ದ ಪಂಚಮಕಾರದ ಆಚರಣೆಗಳು ಅಪರಿಚಿತ ವಾಗಿರಲಿಲ್ಲ. ಯೋಗಸಾಧನೆಗಳ ಮೂಲಕ ದೃಢಕಾಯವನ್ನು ಸಂಪಾದಿಸಿಕೊಂಡು, ಗುಡ್ಡಬೆಟ್ಟಗಳಲ್ಲಿದ್ದ ಕೆಲವು ಯೋಗಿಗಳು, ತಾಂತ್ರಿಕ ಆಚರಣೆಗಳ ಭಾಗವಾಗಿ ಸ್ತ್ರೀ ಸಂಬಂಧಗಳನ್ನು ಇರಿಸಿಕೊಂಡಿದ್ದರು.  ಇವು ಜೋಗಿ ಭೈರವರ ಲೈಂಗಿಕ ಕಥೆಗಳಾಗಿ ರೂಪುತಳೆದಿರಬಹುದು.  ೨. ಸ್ತ್ರೀಯನ್ನು  ಮಾಯೆಯೆಂದು ನಿರಾಕರಿಸುವ ನಾಥರ ವಿರಕ್ತ ಭಾವವೇ  ಶಾಕ್ತ ಮತ್ತು ಕೌಳ ಪಂಥದವರಿಗೆ ಒಂದು ಸವಾಲಾಗಿ, ತಮ್ಮನ್ನು ನಿರಾಕರಿಸು ವವರನ್ನು ಸೋಲಿಸಬೇಕು ಎಂಬ ಛಲ ಹುಟ್ಟಿಸುತ್ತದೆ. ದ್ವಾರಕೆಯಲ್ಲಿ ಚಾಂಗದೇವನ ವೀರ್ಯಸ್ಥಂಭನ ಹಾಗೂ ಊರ್ಧ್ವರೇತಸ್ಕ ಸಾಧನೆಯನ್ನು ಪರಿಶೀಲಿಸಲೆಂದೇ ಕಾಮಾಖ್ಯ ಪೀಠದಿಂದ ಒಬ್ಬ ಯೋಗಿನಿ ಬರುವ ಹಾಗೂ ಅವಳ ಕಾಟ ತಡೆಯದೆ, ಅವಳನ್ನು ಭೇಟಿ ಯಾಗುವ ಆತಂಕದಿಂದ ಚಾಂಗದೇವನು ಪ್ರಾಣತ್ಯಾಗ ಮಾಡುವ ಕಥೆಯಿದೆ. ಇದು ಈ ಮೈಥುನ ಸ್ಪರ್ಧೆಯ ಪ್ರತೀಕವಾಗಿದೆ. ೩. ತಾತ್ವಿಕ ಅರ್ಥದಲ್ಲಿ ಗಂಡು ಹೆಣ್ಣುಗಳ ವಿರಹ ಮತ್ತು ಮಿಲನದ  ಹಾಡುಗಳು, ತನಗೆ ದಕ್ಕದ ನಿಜತತ್ವವನ್ನು ಅರಸುವ ಸಾಧಕರ ಹುಡುಕಾಟದ ಭಾಗವೂ ಆಗಿವೆ. ಇಂತಹ ಹುಡುಕಾಟವನ್ನು ಸಾಂಕೇತಿಕ ಪ್ರೇಮಕಾವ್ಯಗಳ ಮೂಲಕ ಮಾಡುವ ಪರಂಪರೆಯು ಸೂಫಿಗಳನ್ನೂ ಒಳಗೊಂಡಂತೆ, ಉತ್ತರ ಭಾರತದಲ್ಲಿ ಜನಪ್ರಿಯವಾಗಿದೆ. ೪. ಹಾಡುವ ಕುಣಿಯುವ ಕಲಾವಿದರಾಗಿದ್ದ ಜೋಗಿಗಳು, ಶೃಂಗಾರ ಪ್ರಧಾನವಾದ ಪ್ರೇಮಕಥೆಗಳನ್ನು ಮಾಡುವಾಗ ತಮ್ಮ ಚೆಲುವು, ವೇಷಭೂಷಣ, ನಟನೆ ಹಾಡುಗಾರಿಕೆಗಳಿಗೆ ಪ್ರಸಿದ್ಧವಾಗಿದ್ದರು. ಅವರಿಗೆ  ಆಕರ್ಷಿತರಾಗಿ ಅನೇಕ ಮಹಿಳೆಯರು ನಿಜವಾಗಿಯೂ ಹಿಂಬಾಲಿಸಿ ಹೋಗುತ್ತಿದ್ದ ಪ್ರಕರಣಗಳಿವೆ. ಇವು ಸಹ ಜೋಗಿಗಳು ಮಹಿಳೆಯರ ಮೇಲೆ ಮಂಕುಬೂದಿ ಎರಚಿ ಕರೆದುಕೊಂಡು ಹೋಗುತ್ತಾರೆ, ಅವರನ್ನು ಕಂಡರೆ ಮಹಿಳೆಯರು ಮೋಹಕ್ಕೆ ಒಳಗಾಗುತ್ತಾರೆ ಎಂಬ ಕಥೆಗಳಿಗೆ ಕಾರಣವಾಗಿವೆ.[5]

ಎಂಥವನೊ ಜೋಗಿ ಗಾನವಾಡುತ ಬಂದ, ಮಾಳಿಗೆ ಮೇಲೆ ಮಲಗಿರುವ ಹೆಣ್ಣೀಗೆ

ಮಂತ್ರದ ವಿಭೂತಿ ಬಳಿದಾನು

ಎಂಥವನೊ ಜೋಗಿ ಪಂಥನಾಡುತ ಬಂದ, ಉಪ್ಪರಿಗೆ ಮೇಲೆ ಮಲಗಿರುವ ಹೆಣ್ಣೀಗೆ

ಮಂಕೀನ ವಿಭೂತಿ ತೊಳೆದಾನೆ

ಕನಸಿನಲ್ಲಿ ಕಂಡೆ ಮನಸಿಗೆ ದೊಡ್ಡೋನ, ತೊಳಸಿಯ ಮಾಲೆ ಒಳದಂಡೆ ಚುಂಚನಗಿರಿ

ಭೈರುವ ಸ್ವಾಮಿ ಬಾನನ್ನ ಸೊಪುನಾಕೆ

ಅಟ್ಟ ಗುಡ್ಸಿವ್ನಿ ಪುಟ್ರಂಗೋಲೆ ಬುಟ್ಟಿವ್ನಿ, ಅಟ್ಟಿಗೆ ಬೋರಯ್ಯ ಬರ್ನಿಲ್ಲ ಅಂತೇಳಿ

ಸಿಳ್ಳೊಡ್ದು ಅವ್ಳ ಕರ್ದಾಳು

ಭೈರವನಂತಹ ಉಗ್ರದೈವಕ್ಕೆ ಇಷ್ಟೊಂದು ರಸಿಕತೆ ಶೃಂಗಾರಗಳ ಆಯಾಮಗಳಾದರೂ ಹೇಗೆ ಜೋಡಣೆಯಾದವು? ವಿರಕ್ತಿ ಬ್ರಹ್ಮಚರ್ಯಗಳ ಅತಿಯನ್ನು ಬ್ಯಾಲನ್ಸ್ ಮಾಡಲೆಂದೇ ಈ ಶೃಂಗಾರದ ಜಗತ್ತು ಆವಿರ್ಭಸಿತೊ? ಇದೊಂದು ಸಾಂಸ್ಕೃತಿಕ ಒಗಟು. ಮೇಲೆ ಉಲ್ಲೇಖಿಸಿದ ಪದಗಳಲ್ಲಿ ಜೋಗಿ ಅಥವಾ ಭೈರವನನ್ನು ದೂರಲಾಗುತ್ತಿದೆ- ಆದರೆ ದೂರಿನಲ್ಲಿ ಸಂಭ್ರಮವಿದೆ. ಕನಸಿನಲ್ಲಿ ಬರಲು  ಆಹ್ವಾನ ನೀಡುವುದಂತೂ ಇನ್ನೂ ರೋಚಕ. ಕೊನೆಯ ಪದದಲ್ಲಿ ಇರುವ ಹೆಣ್ಣು ಕೊಂಚ ಕಿಲಾಡಿ. ಪ್ರೇಮಕ್ಕಾಗಿ ಆಕೆ ಲಜ್ಜೆಯನ್ನೂ ಬಿಟ್ಟವಳು. ಲಜ್ಜೆಗೆಡುವ ಮಾತು ಅಕ್ಕನಲ್ಲಿ ಮತ್ತೆಮತ್ತೆ ಬರುತ್ತದೆ. ಆದ್ದರಿಂದ ವಿಶಾಲ ಚೌಕಟ್ಟಿನಲ್ಲಿ ಅಕ್ಕನ ವಚನಗಳು, ಅರ್ಜುನ ಜೋಗಿಹಾಡುಗಳು, ಭೈರವನ ಪ್ರೇಮ ಪ್ರಸಂಗಗಳು ಹಾಗೂ ನಾರೀಸಾಧನೆಯುಳ್ಳ ತಾಂತ್ರಿಕ ಪಂಥದ ಆಚರಣೆಗಳು ಪರಸ್ಪರ ಒಳ ಸಂಬಂಧದಲ್ಲಿವೆ. ಹಾಗಲ್ಲದೆ ಹೋದರೂ,  ಜೋಗಿ ಅಥವಾ ಭೈರವನಿಗೆ ಇಂತಹ  ಕಾಮಪ್ರೇಮದ ಕಥಾನಕಗಳನ್ನು ಹೆಣೆದು ಸೇರಿಸುವ ಮೂಲಕ, ಸಮುದಾಯಗಳು ಸನ್ಯಾಸ ಬ್ರಹ್ಮಚರ್ಯಗಳನ್ನು ದೊಡ್ಡ ಮೌಲ್ಯ ಮಾಡಿಕೊಂಡಿರುವ ಯೋಗಪಂಥಕ್ಕೆ, ಪ್ರೇಮದೀಕ್ಷೆಯನ್ನಂತೂ ಕೊಟ್ಟಿವೆ ಎಂದು ತಿಳಿಯಲು ಅಡ್ಡಿಯಿಲ್ಲ.

ಫಲವಂತಿಕೆಯ ಚಿತ್ರಗಳು

ಜೋಗಿಯ ಜತೆಗಿನ ಪ್ರೇಮವು ಕೇವಲ ಗಂಡುಹೆಣ್ಣಿನ ದೈಹಿಕ ಕಾಮನೆಗಳಿಗೆ  ನಿಲ್ಲುವುದಿಲ್ಲ. ಅದು ಹೊಸ ಸಂತಾನವನ್ನು ಪಡೆದುಕೊಳ್ಳುವ ಕಾರ್ಯಕ್ಕೆ ಮುಂದುವರೆಯುತ್ತದೆ. ಹೊಸಸಂತಾನವು ವಂಶ ಮುಂದುವರಿಸುವ ಲೌಕಿಕರಿಗೂ ಬೇಕು. ಶಿಷ್ಯರ ಮೂಲಕ ತನ್ನಪಂಥ ಮುಂದುವರೆಸಲು  ಯೋಗಪಂಥಕ್ಕೂ ಬೇಕು.  ತುಳುನಾಡಿನಲ್ಲಿ ಇರುವ ‘ಜೋಗಿಪುರುಸೆರ್’ ಕತೆ ಇದಕ್ಕೆ ಪೂರಕವಾಗಿದೆ. ಅದು ಜೋಗಿಗಳಿಗೆ ಸಂತಾನ ಉಳಿಸುವ ಹೊಣೆಗಾರಿಗೆ ನಿಭಾಯಿಸುವ ಕತೆ.  ಕೀಚಕನ ಸಮಸ್ತ ಸಂತಾನವನ್ನು ನಾಶಮಾಡಲು ಭೀಮನು ಪಣ ತೊಟ್ಟಾಗ, ಪ್ರಾಣ ಉಳಿಸಿಕೊಳ್ಳಲು ಹರಿದಾಡುತ್ತಿದ್ದ ಎರಡು ಮಕ್ಕಳನ್ನು ಜೋಗಿಪುರುಷನು ತನ್ನ ಜೋಳಿಗೆಯಲ್ಲಿ ಬಚ್ಚಿಟ್ಟು ಕಾಪಾಡುತ್ತಾನೆ. ಮುಂದೆ ಅವಕ್ಕೆ ಮದುವೆ ಮಾಡಿಸಿ, ಸಂಸಾರ ನೆಲೆಗೊಳಿಸಿ ಕಾಶಿಗೆ ಹೋಗಿ ಬರುತ್ತಾನೆ. ಸನ್ಯಾಸ ಪಂಥವೊಂದು ಜನರ ಕಲ್ಪನೆಯಲ್ಲಿ ಸಂತಾನ ರಕ್ಷಕವಾಗುತ್ತದೆ.  ಜನಪದರಲ್ಲಿ ಜೋಗಿ ಅಥವಾ ಭೈರವನು ‘ಹುಟ್ಟು ಬಂಜರಿಗೆಲ್ಲ ಶಿಶುಫಲವ ಕೊಡುವಂಥ’ ದೈವ. ಉತ್ತರ ಭಾರತದಲ್ಲಿ ಕನ್ಯೆಯರು ಭೈರವನಿಗೆ ಸಾಂಕೇತಿಕವಾಗಿ ಮದುವೆಯಾಗುವ ಆಚರಣೆಗಳಿವೆ. ಮಕ್ಕಳಾಗದ ಹೆಂಗಸರು ಅವನಿಗೆ ಸಂತಾನ ಕೊಡಲು ಬೇಡುವ ಹಾಡುಗಳು ಚುಂಚನಗಿರಿ ಹಾಗೂ ಲುಂಕೆಮಲೆ ಎರಡೂ ಪ್ರದೇಶಗಳಲ್ಲಿ ಇವೆ.

ಬಾಗಲಲ್ಲಿರುವ ಬಲಗಡೆಯ ಬೋರಯ್ಯ, ಬಾಲೇರ ಮಾತ ಗೆಲ್ಸಿದರೆ ಬೋರಯ್ಯ

ಬಾಗಲ್ಗೆ ಮುತ್ತ ಬಿಗಿಸೂನಿ

ಬಾಳೆಅಣ್ಣು ತಂದಿ ಬಾಕ್ಲಿಗೆ ವಸ್ತ್ರ ತಂದಿ, ಬಾಲಾನ ಕೊಡೊ ನನ ಗುರುವೆ ಬೋರಯ್ಯ

ಬಾಕಾಲ ರಜವ ಒಡವೂನಿ

ಹಾಲು ಹರವಿಯ ಕೊಡೊ ವಾಲೆಭಾಗ್ಯವ ಕೊಡೊ, ಬಾಲಾರ ಕೊಡೊ ಮನೆತುಂಬ

ಭೈರುವಸ್ವಾಮಿ ನಿನ್ನ ಹೆಸರ ಕರದೇನು

ತುಪ್ಪದ ಹರವಿಯ ಕೊಡೊ ಕೊಪ್ಪು ಭಾಗ್ಯವ ಕೊಡೊ, ಪುತ್ರಾರ ಕೊಡೊ ಮನೆತುಂಬ

ನಿನ ಹೊಸಲಿಗೊಜ್ಜುರವ ಬಿಗಿಸೇವು

ವಿಶೇಷವೆಂದರೆ, ಇವು ಗಂಡು ಸಂತಾನಕ್ಕಾಗಿ ಮಾಡಿದ ಹರಕೆಗಳು. ಮಗ ಹುಟ್ಟಿದರೆ ತ್ರಿಶೂಲ ಕೊಡುವುದಾಗಿಯೂ ಮಗುವನ್ನು ತಂದು ಹೆಸರಿಟ್ಟುಕೊಂಡು ಹೋಗುವುದಾಗಿಯೂ ಜನ ಹರಸಿಕೊಳ್ಳುತ್ತಾರೆ. ಬೆಳೆದ ಮಗನ ಜತೆಗೆ ಜಾತ್ರೆಗೆ ಬಂದು ಹರಕೆ ಒಪ್ಪಿಸುವ ವರ್ಣನೆಗಳು ಬಗೆಬಗೆಯಾಗಿ ಬರುತ್ತವೆ. ಆದರೆ ಹೆಂಗೂಸಿಗಾಗಿ ಹರಸಿಕೊಳ್ಳುವ ಒಂದೇ ನಿದರ್ಶನವಿಲ್ಲ. ಗಂಡಸರಿಗೆ ಮಾತ್ರ ಜೋಗಿದೀಕ್ಷೆ ಕೊಡುವ ನಾಥಪಂಥವು ಒಂದರ್ಥದಲ್ಲಿ ಪುರುಷ ಪ್ರಧಾನ. ಇದು ನಮ್ಮಲ್ಲಿರುವ ಗಂಡುಕೇಂದ್ರಿತ ಮನೋಧರ್ಮಕ್ಕೆ ಪೂರಕ ಕೂಡ. ಜೋಗಿಯ ಚೆಲುವಿಗೆ ಮರುಳಾಗಿ ತನ್ನ ಕೂಸನ್ನು ಕೊಲ್ಲುವ ತಾಯಿಯ ಕಥೆಯ ಉತ್ತರಾರ್ಧ ಗಮನಿಸಿ. ಮಗುವಿನ ಶವವನ್ನು ಹೊತ್ತುಕೊಂಡು ಹೋಗಿ ಆಕೆ ಇದಕ್ಕೆ ಜೀವಕೊಡು ಎಂದು ಕಾಡುತ್ತಾಳೆ. ಜೀವಬರಿಸಿದ ಮೇಲೆ ತನಗೆ ಬಿಡಬೇಕೆಂದು ಜೋಗಿ ಶರತ್ತು ಹಾಕುತ್ತಾನೆ. ಬಳಿಕ ಆ ಮಗುವಿಗೆ ಜೋಗಿದೀಕ್ಷೆ ಕೊಟ್ಟು, ಚುಂಚನಗಿರಿಯ ಬಿರುದಾವಳಿ ಸಾರಿಕೊಂಡಿರುವ ಕೆಲಸ ವಹಿಸುತ್ತಾನೆ. ಇನ್ನೂ ಹುಟ್ಟಲಿರುವ,  ಕಾಯಿಲೆ ಬಿದ್ದಿರುವ ಹಾಗೂ ಸತ್ತ ಮಕ್ಕಳನ್ನು ಶರತ್ತು ವಿಧಿಸಿ ಪಡೆಯುವ ಕಥನಗಳು ಸಿದ್ಧ ಮತ್ತು ಸೂಫಿಗಳಲ್ಲಿ ಸಾಮಾನ್ಯ. ಆದರೆ ಹಾಗೆ ಪಡೆವ ಶಿಶು ಮಾತ್ರ ಕಡ್ಡಾಯವಾಗಿ ಗಂಡಾಗಿರುತ್ತದೆ.

ಕಿನ್ನರಿ ಜೋಗಿಯರ ಚಿತ್ರಗಳು

ನಾಥಮಠದ ಪ್ರತಿನಿಧಿಯಾಗಿರುವ ಜೋಗಿಗಳ ಚಿತ್ರಗಳು ಬೇರೆಬೇರೆ ಜನಪದ ಕಾವ್ಯಗಳಲ್ಲಿ ಕಂಡುಬರುತ್ತವೆ. ಲುಂಕೆಮಲೆ ಭಾಗದಲ್ಲಿ ಸಿಗುವ ‘ಜಾನಪದ ಮಹಾಭಾರತ’ದಲ್ಲಿ  ಅರ್ಜುನನ ವೇಷವು ಜೋಗಿಯದೇ ಆಗಿದೆ. ಕೈಮರದಲ್ಲಿ ಸಿಗುವ ಒಂದು ಭೈರವ ಶಿಲ್ಪದಲ್ಲಿ ಆತ ಕಿನ್ನರಿ ಹಿಡಿದು ಕುಣಿಯುತ್ತ ಹಾಡುವ ಚಿತ್ರವನ್ನು ಇಲ್ಲೂ ನೆನೆಯಬಹುದು. ಇಲ್ಲಿ ಭೈರವ, ನಾಥಯೋಗಿ, ಕಿನ್ನರಿಜೋಗಿ ಮೂವರೂ ಒಬ್ಬರೊಳಗೊಬ್ಬರು ಬೆರೆಯುವವರು. ಆದರೆ ನಾಥರ ಹಾಗೂ ಕಿನ್ನರಿ ಜೋಗಿಯರ ನಡುವೆ ಕೆಲವು ಸೂಕ್ಷ್ಮ ಫರಕುಗಳಿವೆ. ಉದಾ.  ಕಿನ್ನರಿಜೋಗಿಯು  ಭಿಕ್ಷೆಬೇಡುತ್ತ, ಕಿನ್ನರಿ ಬಾರಿಸುತ್ತ, ಹಾಡುತ್ತ ಕುಣಿಯುತ್ತ, ಊರು ಸುತ್ತುತ್ತಾನೆ.  ನಾಥರು ಇದನ್ನು ಮಾಡುವುದಿಲ್ಲ. ಜೋಗಿಯ ಚಿತ್ರಗಳಲ್ಲಿ ಭಕ್ತಿಗಿಂತ ಹೆಚ್ಚು ಆಪ್ತತೆ, ತಮಾಶೆ ಪ್ರಕಟವಾಗುತ್ತದೆ. ಅವನು ಮುನಿಸಿಕೊಂಡ ಮಗುವಿನಂತೆ ಹಠ ಮಾಡುತ್ತಾನೆ. ಸ್ತ್ರೀಯರು ಅವನನ್ನು ರಮಿಸುತ್ತಾರೆ.

ಸುಣ್ಣಾದ ಗ್ವಾಡೀಗೆ ಬಂದು ನಿಂತಿರುವೋರೆ, ಕಿನ್ನೂರಿ ನಾಗಾ ಸರದೋರು

ಬೋರೂವಯ್ಯ ಸಿನ್ನಾಟ ಬ್ಯಾಡ ಹಿಡೀಜೋಗಿ  (ಬೋರೇದೇವರ ಕಾವ್ಯ)

ದೊಡ್ಡದೊಡ್ಡ ಜೋಗಿ ದೊಡ್ಡ ಪಾತುರೆ ಜೋಗಿ ದೊಡ್ಡ ಮೊರದಲ್ಲಿ ಅಕ್ಕಿಪಡಿ ತಂದಿವಿನಿ,

ಜಿದ್ದು ಮಾಡಬೇಡ ಹಿಡಿಜೋಗಿ  (ಶ್ರೀಆದಿಚುಂಚನಗಿರಿ ಜನಪದ ಗೀತೆಗಳು)

ಇಲ್ಲಿ ಸಿನ್ನಾಟ, ಜಿದ್ದು ಶಬ್ದಗಳನ್ನು ಗಮನಿಸಿ. ಇವು ಜನರ ಜತೆ ಆಪ್ತ ಸಂಬಂಧವಿಲ್ಲದಿದ್ದರೆ ಹುಟ್ಟುತ್ತಿರಲಿಲ್ಲ. ಕನ್ನಡದ ಕೆಲವು ಕಾವ್ಯಗಳಲ್ಲಿ ವೇಷಧಾರಿ ಕಿನ್ನರಿ ಜೋಗಿಗಳು ಬರುತ್ತಾರೆ. ‘ಹಾಲುಮತ ಮಹಾಕಾವ್ಯ’ದಲ್ಲಿ ಗೋರಖನ ಶಿಷ್ಯನಾದ ಶಾಮರಾಯನು ಡಿಳ್ಳಿಗೆ ಹೋದಾಗ ಧರಿಸುವುದು ಬಂಗಾಳೀ ಬಾವಾಜಿಯ ವೇಷ. ನಿಜರೂಪ ಬಚ್ಚಿಟ್ಟು ಹೋಗುವ ಸಂದರ್ಭ ಬಂದಾಗಲೆಲ್ಲ ಜೋಗಿವೇಷವೆ ಯಾಕೆ ಬರುತ್ತದೆ?  ಜೋಗಿಗಳು ದೇಶಾಟನೆ ಮಾಡುವರಾದ ಕಾರಣ, ಅವರಿಗೆ ನಿರ್ಬಂಧಗಳು ಕಡಿಮೆ ಎಂದೇನು?  ನಾಥರ ಸಾಂಕೇತಿಕ ವೇಷವು  ರಾಜಕೀಯ ಕಥನಗಳಲ್ಲಿ ಪ್ರವೇಶ ಪಡೆದ ಬಳಿಕ, ತಂತ್ರಗಾರಿಕೆಯ ಭಾಗವಾಗುವುದು ಒಂದು ವಿಶೇಷ. ಶಾಮರಾಯನು ಧರಿಸುವ ಬಾವಾಜಿ ವೇಷವು ಹೀಗಿದೆ:

ಬಂಗಾಲಿ  ಬಾವಾನವುತಾರ ಮುಂಗೈಗ ಜೋಳಿಗ ಹಾಕ್ಯಾನ

ಕ್ಯಾವಿ ಭಗವಾ ಹಾಕ್ಯಾನ ರುಂಡಮಾಳಾ ಹಾಕ್ಯಾನ

ಗುಂಡಮಣಿಯಾ ಹಾಕ್ಯಾನ ತಾವೊಂದು ತಯ್ಯರಾದನ

ಕೈಯಾಗ ತ್ರಿಸೂಲ ಹಿಡದಿದ್ದ ಬಾವಾನವುತಾರ ಆಗ್ಯಾನ

ಸೊಲ್ಲಾಪುರ ಸೀಮೆಯ ಹಾಲುಮತ ಕಾವ್ಯವನ್ನು ಹಾಡುವ ಗಾಯಕರಿಗೆ, ಮರಾಠಿ ನಾಥ ಸಂಪ್ರದಾಯದ ಪರಿಚಯವಿದೆ. ವಿಶೇಷವೆಂದರೆ, ಇಲ್ಲಿ ಬಾವಾಜಿಯು ಭೈರವನಂತೆ ರುಂಡಮಾಲೆ ಧರಿಸಿರುವುದು; ಡಿಳ್ಳಿಯ ಬಜಾರುಗಳಲ್ಲಿ ತ್ರಿಶೂಲ ಬಿಡುತ್ತ ಕಿನ್ನೂರಿ ರಾಗವ ನುಡಿಸುತ್ತ ಥೈಗುಟ್ಟಿ ಕುಣಿಯುವುದು. ವೇಷಧಾರಿ ಅರ್ಜುನನು ನಾಯಕನಾಗಿರುವ ಕನ್ನಡದ ‘ಅರ್ಜುನ ಜೋಗಿಹಾಡುಗಳ’ಲ್ಲಿ ಕೂಡ ಜೋಗಿ ವೇಷವು ಊರುಬಿಟ್ಟು ಮತ್ತೊಂದೂರಿಗೆ ಹೋಗುವ ಸನ್ನಿವೇಶದಲ್ಲಿಯೇ ಬರುತ್ತದೆ. ಅರ್ಜುನ ಜೋಗಿಯ ಕಥೆಯನ್ನು ಲುಂಕೆಮಲೆ ಹಾಗೂ ಚಂದ್ರಗುತ್ತಿಯ ಕಿನ್ನರಿಜೋಗಿಗಳು ಮಾತ್ರವಲ್ಲ, ಚುಂಚನಗಿರಿ ಪರಿಸರದ ಇತರ ಕಲಾವಿದರೂ ಹಾಡುತ್ತಾರೆ. ಈವರೆಗೆ ಮೌಖಿಕ ಪರಂಪರೆಯ ಹಲವು ಪಠ್ಯಗಳು ಸಂಗ್ರಹವಾಗಿವೆ. ಅವುಗಳಲ್ಲಿ ಮಳವಳ್ಳಿ ಗುರಬಸವಯ್ಯ ಹಾಡಿದ ಜೀಶಂಪ ಸಂಪಾದನೆಯ ‘ಜೋಗಿಹಾಡು’; ಗದ್ದಗೀಮಠ ಅವರ ‘ಕನ್ನಡ ಜಾನಪದ ಗೀತೆಗಳು’ ಕೃತಿಯಲ್ಲಿರುವ ‘ಅರ್ಜುನ ಜೋಗಿ ಹಾಡುಗಬ್ಬ’; ಹಿರಿಯಣ್ಣ ಸಂಪಾದಿಸಿದ ಕಿನ್ನರಿ ಸಂಪ್ರದಾಯದ ‘ಜೋಗಿಹಾಡು’; ಲುಂಕೆಮಲೆ ಭಾಗದಲ್ಲಿ ಕರಾಕೃ ಸಂಗ್ರಹಿಸಿದ ಜನಪದ ಮಹಾಭಾರತ ಹಾಗೂ ಕೃಷ್ಣಮೂರ್ತಿ ಹನೂರು ಸಂಪಾದಿಸಿದ ಸಿರಿಯಜ್ಜಿ ಹಾಡಿದ ‘ಅರ್ಜುಣದ್ರೋಪದಿ’ ಮುಖ್ಯವಾಗಿವೆ. ಲಿಖಿತ ಪರಂಪರೆಗೆ ಹೋಗಿರುವ  ‘ಅರ್ಜುನ ಜೋಗಿಹಾಡಿ’ನ ಆರು ಪಠ್ಯಗಳಿದ್ದು, ಇವನ್ನು ಯಕ್ಷಗಾನ ಕವಿಗಳು ರಚಿಸಿದ್ದಾರೆ. ಇವು ಜನಪದ ಕಥಾನಕಗಳ ಶಿಷ್ಟರೂಪಗಳಂತೆ ತೋರುತ್ತವೆ.[6] ನಂಜನಗೂಡು ವೀರಭದ್ರನ ಕವಿಯ  ‘ಪಾರ್ಥನ ಜೋಗೀಹಾಡು’ ಇವುಗಳಲ್ಲಿ ದೀರ್ಘವಾಗಿದ್ದು ಅದನ್ನು ಚರ್ಚಿಸಬಹುದು.

ಜೋಗಿವೇಷಧಾರಿ ಅರ್ಜುನ ಈ ಕಾವ್ಯದ ನಾಯಕ. ಅವನಿಗೆ ಜೋಗಿದೇವರು, ಜೋಗಿಸಿದ್ಧ ಎಂದೆಲ್ಲ ಕರೆಯಲಾಗಿದೆ. ದೇವರು ಎನ್ನುವುದು ಭೈರವನ ಹಾಗೂ ಸಿದ್ಧ ಎನ್ನುವುದು ನಾಥರ ಸಂಕೇತವಾಗಿದೆ. ಅರ್ಜುನನು ಜೋಗಿಯಾಗುವುದು ಮತ್ತು ತಿರುಗಾಟ ಮಾಡುವುದು ಇಲ್ಲಿ ಪ್ರಧಾನ ಕ್ರಿಯೆಯಾಗಿದೆ. ಕಥೆಯ ಹಿನ್ನೆಲೆ ಹೀಗಿದೆ: ಅರ್ಜುನನು ಹಿಂದೆ ತೀರ್ಥಯಾತ್ರೆಗೆ ಹೋದಾಗ ಮಣಿಪುರದ ಉಲೂಪಿ ಚಿತ್ರಾಂಗದೆಯರನ್ನು ಪ್ರೀತಿಸಿ ಕೂಡಿರುತ್ತಾನೆ. ಆದರೆ ಹಸ್ತಿನಾವತಿಗೆ ಮರಳಿದ ಮೇಲೆ, ದ್ರೌಪದಿಯ ಜತೆ ಬದುಕುತ್ತ ಅವರನ್ನು ಮರೆತೆಬಿಡುತ್ತಾನೆ.  ಅವರ ವಿರಹದ ಬೇಗೆ ಶಿವಪಾರ್ವತಿಯರಿಗೆ ಮುಟ್ಟುತ್ತದೆ.  ಅಗಲಿದ ಪ್ರೇಮಿಗಳ ಕಷ್ಟವನ್ನು ಅವರು ಎರಡು ಗಿಳಿಗಳ ಮೂಲಕ ದ್ರೌಪದಿಗೆ ತಲುಪಿಸುತ್ತಾರೆ. ದ್ರೌಪದಿ ಅರ್ಜುನನ ಜತೆ ಪಗಡೆಯಾಟಕ್ಕೆ ಕೂತಾಗ, ಬಾಯಿತಪ್ಪಿ ‘ನಾಗವೇಣಿಯರಮನೆಗೆ ಮಹರಾಯ ಪೋಗಬೇಕಾದರಾಗೆ ಜೋಗಿ ವೇಷದಿ ತಪಸಿಯಾಗಿ ತಿರಿದುಂಬುತ್ತೊಪೋಗುವುದೆ ಲೇಸು’ ಎಂದು ಬಿಡುತ್ತಾಳೆ. ಕೂಡಲೆ ಅರ್ಜುನನು, ಹಾಗೇ ಆಗಲೆಂದು ಜೋಗಿವೇಷ ಧರಿಸಿ ಹೊರಟು ನಿಲ್ಲುತ್ತಾನೆ. ಅರ್ಜುನ ಜೋಗಿವೇಷದಲ್ಲಿ ತನ್ನ ಮಡದಿಯರನ್ನು ಕಂಡು, ಕೂಡುತ್ತಾನೆ. ಕೆಲವು ಜೋಗಿ ಕಾವ್ಯಗಳಲ್ಲಿ ೧೨ ವರ್ಷ ದೇಶಾಂತರ ಹೋಗಿದ್ದ ಅರ್ಜುನನು ತಾಯಿಯನ್ನೂ ಮಡದಿ ಸುಭದ್ರೆಯನ್ನೂ ನೋಡಲು ಜೋಗಿವೇಷ ಧರಿಸಿ ಅರಮನೆಗೆ ಬರುತ್ತಾನೆ. ಜೋಗಿ ಕಾವ್ಯಗಳಲ್ಲಿ ‘ಬಾರಾಹನ್ನೆರಡು’ ಎಂಬ ಪದ ಮತ್ತೆಮತ್ತೆ ಬರುತ್ತದೆ. ಇದು ಪಾಂಡವರ ವನವಾಸದ ವರ್ಷಗಳನ್ನು ಮಾತ್ರವಲ್ಲದೆ ನಾಥರ  ಬಾರಾಪಂಥಗಳನ್ನು ಸಹ ಸಂಕೇತಿಸುತ್ತದೆ.

ಅರ್ಜುನ ಜೋಗಿ ಕಾವ್ಯಗಳು, ಅರ್ಜುನನು ಜೋಗಿವೇಷ ಅಥವಾ ‘ಸಿದ್ಧವೇಷ’ ಧರಿಸುವುದನ್ನು ಹಾಗೂ ಧರಿಸಿದ ಬಳಿಕ ಬೀದಿಯಲ್ಲಿ ಹಾಡಿ ನರ್ತಿಸುವುದನ್ನು ದೀರ್ಘವಾಗಿ ವರ್ಣಿಸುತ್ತವೆ.  ‘ಪಾರ್ಥನ ಜೋಗೀ ಹಾಡಿ’ನಲ್ಲಿ ಅರ್ಜುನನು ರನ್ನದ ಕಾಮಾಕ್ಷಿ,  ಚಿನ್ನದ ಪಾತ್ರೆ,  ಚಿನ್ನದ ಸಿಂಗನಾಥವನ್ನು ಧರಿಸುತ್ತಾನೆ. ರಾಜಕುವರನಾದ ಕಾರಣ ಅವನ ಜೋಗಿವೇಷದಲ್ಲಿ ಈ ಆಡಂಬರ. ವಿಶೇಷವೆಂದರೆ, ಕಿನ್ನರಿಯ ಮೇಲೆ ಜೋಡಿಸಲಾಗಿರುವ ಪಂಚವರ್ಣದ ಗಿಳಿಗಳನ್ನೂ ಕುಣಿವ ಬೊಂಬೆಗಳನ್ನೂ ಕವಿ ವರ್ಣಿಸುವುದು. ಮೀರಾಳಲ್ಲಿ ವಿಷ್ಣುವಿನ ಅವತಾರಿಯಾದ ಕೃಷ್ಣನು ಜೋಗಿಯಾದರೆ, ಇಲ್ಲಿ ಅವನ ಶಿಷ್ಯ ಅರ್ಜುನ ಜೋಗಿಯಾಗುತ್ತಾನೆ. ವೈದಿಕ ಮಹಾಕಾವ್ಯದ ಕಥೆಯು ಶೈವಪಂಥವೊಂದರ ಪ್ರಸಾರಕ್ಕೆ ರೂಪಕವಾಗಿ ಬಳಕೆಯಾಗಿರುವುದು ಒಂದುದೊಡ್ಡ ಪಲ್ಲಟವಾಗಿದೆ. ಅರ್ಜುನನ ಪ್ರೇಮಕತೆಗಳು  ಈ ಹಿಂದೆ ಭೈರವನ ವಿಷಯದಲ್ಲಿ ಚರ್ಚಿಸಿದಂತೆ, ಅಳದಲ್ಲಿ ಸಾಂಕೇತಿಕವಾದ ಆನುಭಾವಿಕ ಅರ್ಥವನ್ನು ಒಳಗೊಂಡಿವೆ. ಜೋಗಿಗಳು ಪರಸ್ತ್ರೀಯರನ್ನು ಸೆಳೆಯುವ ಹಾಡುಗಳಿಗೆ ಪ್ರತಿಯಾಗಿ, ಇಲ್ಲಿ ಅರ್ಜುನ ಜೋಗಿಯು ಮರಳಿ ಕೂಡುವುದು ತನ್ನ ಮಡದಿಯರನ್ನೆ. ಸೂಫಿ ಹಾಗೂ ನಾಥ ಪಂಥದ ಅನೇಕ ಕಥೆಗಳು ಇಂತಹ ವಿರಹ ಪ್ರೇಮದ ಕಥಾನಕಗಳು. ನೇಮಿಚಂದ್ರನ ‘ಲೀಲಾವತಿಕಾವ್ಯ’ ಅಥವಾಮಲಿಕ್ ಮಹಮದ್ ಜಾಯಸಿಯ ‘ಪದ್ಮಾವತ್’ ಕಾವ್ಯ ಇಂತಹವು. ತತ್ವಪದಗಳಲ್ಲೂ ಪ್ರೇಮ ವಿರಹ ಮತ್ತೆ ಮಿಲನದ ವಿನ್ಯಾಸವಿದೆಯಷ್ಟೆ. ಕಾಶ್ಮೀರ ಶೈವದರ್ಶನದ ರೂಪಕಾತ್ಮಕ ಪಠ್ಯ ಎನ್ನಲಾಗುವ ಕಾಳಿದಾಸನ ‘ಅಭಿಜ್ಞಾನ ಶಾಕುಂತಲ’ದಲ್ಲಿ, ದುಷ್ಯಂತನ ಮರೆವು ಮತ್ತು ಅರಿವುಗಳು ಮುಖ್ಯ ಘಟನೆಗಳು. ಮಚೇಂದ್ರನ ಪುರಾಣದಲ್ಲಿಯೂ ಅವನು ಸ್ತ್ರೀರಾಜ್ಯದಲ್ಲಿ ಹೋಗಿ ಮರೆತು ಬಿಡುವ ಹಾಗೂ ಶಿಷ್ಯನಾದ ಗೋರಖನು ಎಚ್ಚರಿಸಿ ಕರೆತರುವ ಪ್ರಸಂಗವಿದೆ; ‘ಹಾಲುಮತ ಮಹಾಕಾವ್ಯ’ದಲ್ಲಿಯೂ  ಗೋರಖನು ಡಿಳ್ಳಿ ಯುದ್ಧವನ್ನು ಗೆದ್ದಬಳಿಕ,  ರಾಜಗದ್ದುಗೆಯಲ್ಲಿ ಕುಳಿತು ಗುರುವನ್ನು ಮರೆತುಬಿಡುತ್ತಾನೆ. ಆಗ ಗೋರಖನು ಶಿಷ್ಯನನ್ನು ಎಚ್ಚರಿಸಿ ಮರಳಿ ಊರಿಗೆ ತರುತ್ತಾನೆ. ‘ಅರ್ಜುನ ಜೋಗೀಹಾಡಿ’ನಲ್ಲಿ ಅರ್ಜುನನು ಹಿಂದೆ ತಾನು ಪ್ರೀತಿಸಿ ಲಗ್ನವಾಗಿದ್ದ ಉಲೂಪಿ ಚಿತ್ರಾಂಗದೆಯರನ್ನು ಮರೆತು ಬಿಟ್ಟಾಗ, ಶಿವಪಾರ್ವತಿಯರು ಉಲೂಪಿ ಚಿತ್ರಾಂಗದೆಯರ ನೆನಪನ್ನು ಉಂಟುಮಾಡಲು, ಎರಡು ಗಿಳಿಗಳ ನೆರವಿನಿಂದ ಅರ್ಜುನನ ಸ್ಮೃತಿಗೆ ತರುವ ಕೆಲಸ ಮಾಡುತ್ತಾರೆ. ಒಂದೆಡೆ ಗುರುವು ವಿಸ್ಮೃತಿಗೊಳಗಾದ ಕೆಲಸವನ್ನು ಶಿಷ್ಯನಾದ ಗೋರಖ ಮಾಡುತ್ತಾನೆ. ಇನ್ನೊಂದೆಡೆ  ಶಿಷ್ಯನು ಮರೆವಿಗೆ ಒಳಗಾದಾಗ ಗುರುವಾದ ಗೋರಖನು ಎಚ್ಚರಿಸುತ್ತಾನೆ. ಮತ್ತೊಂದೆಡೆ ವಿಸ್ಮೃತಿಗೊಳಗಾದ ಪ್ರೇಮಿಗೆ ಸ್ವತಃ ದೇವತೆಗಳೇ ಮರೆವು ಹೋಗಲಾಡಿಸುವುದು. ಮೂರನೆಯ ನಿದರ್ಶನದಲ್ಲಿ ಎಚ್ಚರ ತಂದುಕೊಡುವ ಕೆಲಸವನ್ನು ಸ್ವತಃ ದೇವತೆಗಳೇ ಮಾಡುವುದು. ಅಪರಿಚಿತ ದೇಶದಲ್ಲಿ ಹೆಣ್ಣನ್ನು ಪ್ರೇಮಿಸಿ ಹೊಸ ಸಂಬಂಧ ಸ್ಥಾಪನೆ, ನಂತರ ಮರೆವು, ನೆನಪಾದಾಗ ಪರಿತಾಪ ಮತ್ತು ವಿರಹ, ಮತ್ತೆ ಅಗಲಿದವರು ಮಿಲನವಾಗುವುದು -ಇದು ಬಹುತೇಕ  ಕಥೆಗಳ ವಿನ್ಯಾಸವಾಗಿದೆ. ಸ್ಮೃತಿವಿಸ್ಮೃತಿ, ಅಗಲಿಕೆ ಮಿಲನ, ಮರೆವು ಅರಿವುಗಳ ಈ ದ್ವಂದ್ವಗಳು ಗುರುಪಂಥಗಳಲ್ಲಿ ಬೇರೆಯೇ ದಾರ್ಶನಿಕ ಅರ್ಥವನ್ನು ಪಡೆದಿವೆ. ಈ ಅಧ್ಯಾಯದ ಆರಂಭದಲ್ಲಿ ಬಂದ ಜೋಗಿ ಹಾಡಿನಲ್ಲಿ ಬರುವ ಹೆಣ್ಣಿನ ತೊಳಲಾಟಗಳನ್ನು ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ನೋಡಬೇಕು. ಇಲ್ಲಿನ ಪ್ರೇಮಕಥೆಗಳು ಸರಳವಾದ ರಚನೆಗಳಲ್ಲ. ಅವು ಆನುಭಾವಿಕ ರೂಪಕಗಳು.

* * *[1]      ಈ ಅಧ್ಯಾಯದಲ್ಲಿ ಉಲ್ಲೇಖಿಸಲಾಗಿರುವ ಚುಂಚನಗಿರಿ ಸಂಬಂಧಿತ ತ್ರಿಪದಿಗಳನ್ನು  ಕರಾಕೃ ಸಂಪಾದಿಸಿದ ಹಾಡು ಚೆಲ್ಲಾವೆ ನಾಡಿಗೆ ಸಂಗ್ರಹದಿಂದಲೂ ಚಂದ್ರಶೇಖರನಾಥರು ಸಂಪಾದಿಸಿದ ಶ್ರೀ ಆದಿಚುಂಚನಗಿರಿ ಜನಪದ ಗೀತೆಗಳು’, ಸಂಗ್ರಹಗಳಿಂದಲೂ ತೆಗೆದುಕೊಂಡಿದೆ. ಲುಂಕೆಮಲೆ ಸಂಬಂಧಿತ ಪದಗಳನ್ನು ಎ.ಎಸ್.ಪ್ರಭಾಕರ ಸಂಪಾದಿಸಿದ ಮ್ಯಾಸಬೇಡರ ಕಥನಗಳು ಕೃತಿಯಿಂದ ಆರಿಸಿಕೊಂಡಿದೆ.

[2]      ಮರಿಕಲ್ಲ ಕವಿಯ ಗೀಗೀಪದಗಳು ಪು.೧೨೨

[3]      ಜನಪದ ಹಾಲುಮತ ಮಹಾಕಾವ್ಯ, ಪು.೩೭೨-೩೮೦

[4]      ಅಡಿವೆಪ್ಪ ಹಾಡಿದ ಮಾಳಿಂಗರಾಯನ ಕಾವ್ಯ, ಪು.೫೦

[5]      ಬಿ. ಕೃಷ್ಣಪ್ಪ, ಬಿ. ಕೃಷ್ಣಪ್ಪ ಚಿಂತನೆಗಳು ಮತ್ತು ಬರಹಗಳು, ಪು. ೧೨೦

[6]      ೧೮-೧೯ನೇ ಶತಮಾನದಲ್ಲಿ ರಚನೆಯಾಗಿರುವ ಅರ್ಜುನ ಜೋಗಿ ಹಾಡುಗಳು ‘ಅರ್ಜುನ ಜೋಗಿಹಾಡು’ ‘ಗಿಳಿಹಾಡು’ ‘ಜೋಗಿಹಾಡು’ ಇತ್ಯಾದಿ ಹೆಸರಲ್ಲಿದ್ದು, ೬ ಲಿಖಿತ ಹಸ್ತಪ್ರತಿಗಳು ಲಭ್ಯವಿವೆ. ಅವುಗಳಲ್ಲಿ ವೀರಭದ್ರ ಕವಿಯ ಪಾರ್ಥನ ಜೋಗೀಹಾಡು ೧೮೯೦ರಲ್ಲಿ ಪ್ರಕಟವಾಯಿತು.  ಕನ್ನಡ ವೃತ್ತಿಗಾಯಕ ಕಾವ್ಯಗಳು, ಪ್ರಸ್ತಾವನೆ, ಪು. Ixxxvii