ದೆಹಲಿಯಲ್ಲಿ ಸಂಗೀತ ನಾಟಕ ಅಕಾಡೆಮಿಯ ಮ್ಯೂಸಿಯಮ್ಮಿದೆ. ಅದರ ತುಂಬ ಭಾರತಾದ್ಯಂತ ಬಳಕೆಯಲ್ಲಿರುವ ಸಂಗೀತ ವಾದ್ಯಗಳನ್ನು ಪ್ರದರ್ಶಿಸಲಾಗಿದೆ. ಅಲ್ಲಿದ್ದ ಬಹುಪಾಲು ತಂತಿವಾದ್ಯಗಳು ನಾಥಪಂಥವೇ ಮೊದಲಾದ ವಿವಿಧ ಪಂಥಕ್ಕೆ ಸಂಬಂಧಪಟ್ಟಿದ್ದವು. ನಾಥರು ಉತ್ಸವಗಳಲ್ಲಿ ನುಡಿಸುವ ಹಾವಿನ ಆಕಾರದಲ್ಲಿರುವ ನಾಗಫಣಿ ವಾದ್ಯವಿತ್ತು. ರಾಜಸ್ತಾನದ ಇದು ಕರ್ನಾಟಕದ ನಾಥಮಠಗಳಲ್ಲೂ ಇದೆ. ಅಲ್ಲಿ ಆಯುಧವೂ ಕೆಂಡ ತೆಗೆಯುವ ಇಕ್ಕಳವೂ  ಸಂಗೀತದ ವಾದ್ಯವೂ ಆಗಿರುವ ನಾಥರ ಚಿಮಟವಿತ್ತು. ಸಾರಂಗಿ ಯಿತ್ತು. ಸಾರಂಗಿಗಳಲ್ಲಿ ಹೆಚ್ಚಿನವು ಗುಜರಾತು ರಾಜಸ್ತಾನ ಕಾಶ್ಮೀರ ಉತ್ತರಪ್ರದೇಶದವು. ಉತ್ತರಪ್ರದೇಶ ಹಾಗೂ ರಾಜಸ್ಥಾನದ ಸಾರಂಗಿಗಳಿಗೆ ಜೋಗಿ ಸಾರಂಗಿ ಎಂತಲೇ ಹೆಸರು. ಒರಿಸ್ಸಾದ ಒಂದು ಸಾರಂಗಿಯ ಹೆಸರು ಜೋಗಿಕೆಂದ್ರ ಎಂದಿತ್ತು. ಈ ‘ಕೇಂದ್ರ’ವು ಕಿಂದರಿಯ ರೂಪವಿರಬೇಕು. ಕರ್ನಾಟಕದ ಜೋಗಿಗಳ ಕಿನ್ನರಿಯು ಏಕತಾರಿಯಾದರೆ, ಸಾರಂಗಿಯು ಬಹುತಾರಿ. ‘ಕುಕಾ’ ಎಂಬ ಏಕತಾರಿ ವಾದ್ಯ ಮಹಾರಾಷ್ಟ್ರದಲ್ಲಿ ಜೋಗಿಗಳು ಬಳಸುತ್ತಾರೆ. ಈ ವಾದ್ಯಗಳು ಜೋಗಿಗಳಿಗೂ ಸಂಗೀತಕ್ಕೂ ಇರುವ ಬಿಡಿಸಲಾರದ ನಂಟಿನ ಸಾಕ್ಷ್ಯಗಳಂತಿದ್ದವು. ನಾಥರು ಕೊರಳಲ್ಲಿ ಧರಿಸಿ ನಮಸ್ಕಾರ ಮಾಡುವಾಗ ಊದುವ ಸಿಂಗನಾದವು ಮೂಲತಃ ಸಂಗೀತದ ಸಾಧನ. ನಾಥಪಂಥಿ ಸಮುದಾಯಗಳಲ್ಲಿ  ಒಂದಾದ ಕಿನ್ನರಿಜೋಗಿಗಳು ತಮ್ಮ ಹೆಸರಲ್ಲೇ ವಾದ್ಯವುಳ್ಳವರು. ಪುರಾಣಗಳಲ್ಲಿ ಬರುವ ಕಿನ್ನರರ ಹಾಗೆ ಈ ಕಿನ್ನರಿ ಜೋಗಿಗಳು ಮೂಲತಃ ಕಲೆಗಾರರು.

ಕದ್ರಿಗೆ ಬರುವ ಝುಂಡಿ ಬೀಡುಬಿಟ್ಟ ಕಡೆಯಲ್ಲಿ ಕೊಳಲು, ತಂತೀವಾದ್ಯ, ಗುಮ್ಮಟೆ ಗಳನ್ನು ಬಳಸಿ ರಾಗವಾಗಿ ಹಾಡುತ್ತಿದ್ದ ನಾಥರ ಗುಂಪುಗಳಿದ್ದವು. ಅವರ ಹಾಡಿಕೆ ಆಫಘಾನಿಸ್ಥಾನ ಪಂಜಾಬುಗಳ ಲಯಗಾರಿಕೆಯನ್ನು ಹೋಲುತ್ತಿತ್ತು. ಧುನಿ ಪೂಜೆಯ ಹೊತ್ತಲ್ಲಿ ಢಮರುಗವನ್ನು ಬಾರಿಸುತ್ತ ಕೊಳಲನ್ನು ಅವರು ಊದುತ್ತಿದ್ದರು. ಕೆಲವರು ಕೋಣನ ಕೊಂಬನ್ನು ಊದಿದರು. ಕೊಂಬು ಕೂಡ ಸಿಂಗನಾದವೆ. ಬಾಬಾಬುಡನಗಿರಿಯಲ್ಲಿ ಬಂದಿದ್ದ ಖಲಂದರ್ ಫಕೀರರು ಕೊಂಬನ್ನು ಊದುತ್ತಾರೆ. ಅಂದರೆ ಉಸಿರಿನ (ಕೊಳಲು, ನಾಗಫಣಿ, ಸಿಂಗನಾದ) ತಂತಿಯ (ಸಾರಂಗಿ ಕಿನ್ನರಿ)  ಚರ್ಮದ (ಢಮರುಗ) ವಾದ್ಯಗಳಲ್ಲಿ ಅತಿ ಹೆಚ್ಚು ಪಾಲಿರುವುದು ತಂತಿವಾದ್ಯಗಳು. ವೀರ್ಯಸ್ಥಂಭನ ಮಾಡುವ ಯೋಗಿಗಳು ಮತ್ತು ತಮ್ಮನ್ನು ಮೋಹಿಸಿದ ಹೆಂಗಸರನ್ನು ಕರೆದೊಯ್ಯುವ ಜೋಗಿಗಳು; ಘ್ರಿಶೂಲದಂತಹ ಆಯುಧ ಮತ್ತು ಮಧುರನಾದ ಹೊರಡಿಸುವ ಕಿನ್ನರಿ; ನಿರ್ಜನ ಜಾಗಗಳಲ್ಲಿ ಕುಳಿತು ಸಮಾಧಿ ಸ್ಥಿತಿಗೆ ಹೋಗುವ ಮೌನ ಮತ್ತು ಕುಂಭಮೇಳಗಳ ಗೌಜಿನಲ್ಲಿ ಸೇರುವುದು- ಹೀಗೆ ಪರಸ್ಪರ ‘ವಿರುದ್ಧ’ ಎನಿಸುವ ಜಗತ್ತುಗಳು ನಾಥಪಂಥದಲ್ಲಿ ಒಗ್ಗೂಡಿವೆ. ಈ ವೈರುಧ್ಯಗಳ ಸಮಾಗಮವು ಬಹುತೇಕ ಅನುಭಾವಿ ಪಂಥಗಳಲ್ಲಿ ಕಾಣುತ್ತದೆ. ವುಂಟೆಸ್ವಾಮಿ ಪರಂಪರೆಯಲ್ಲೂ ಕಾವ್ಯ, ತಂಬೂರಿ, ಖಂಡಾಯ ಒಟ್ಟಿಗೆ ಇವೆ.

ವಿರಕ್ತಿ ಬ್ರಹ್ಮಚರ್ಯಗಳನ್ನು ಮೌಲ್ಯವಾಗಿ ಸ್ವೀಕರಿಸಿರುವ ಪಂಥದಲ್ಲಿ ರಾಗಭಾವಗಳನ್ನು ಉದ್ದೀಪಿಸುವ ಸಂಗೀತವು ಸೇರಿದ ಬಗೆ ಹೇಗೆ? ವಿರಕ್ತಿಯ ಶುಷ್ಕತೆಯನ್ನು ಕಳೆಯಲೆಂದೇ ಈ ಅನುರಕ್ತಿಯ ಸಂಗೀತ ಹಾಗೂ ಹಾಡುಗಾರಿಕೆಗಳು ಮೂಡಿರಬಹುದು. ಮನಸ್ಸಿನ ಹರಿದಾಟವನ್ನು ನಿಲ್ಲಿಸಿ ಆನುಭಾವಿಕ ಸಾಧನೆಗೆ ಬೇಕಾದ ತನ್ಮಯತೆಗೆ ಮತ್ತು ಸಮಾಧಿಯ ಟ್ರಾನ್ಸ್‌ಸ್ಥಿತಿಗೆ ಹೋಗಲು ಸಂಗೀತ ಪ್ರೇರಕವಾಗಬಹುದು. ಸೂಫಿಗಳಲ್ಲಿ ಸಂಗೀತವು ಸಾಧನೆಯ ಮುಖ್ಯ ಮಾಧ್ಯಮ.

[1] ಅದನ್ನು  ಅವರ ‘ಸಮಾ’  ಆಚರಣೆಯಲ್ಲಿ ನೋಡ ಬಹುದು. ತಾಂತ್ರಿಕ ಸಾಧಕರು ಸಂಗೀತವನ್ನು ತಮ್ಮ ಯೋಗಾನುಭವಗಳಿಗೆ ಜೋಡಿಸಿಕೊಳ್ಳುವ ಬಗ್ಗೆ ಕುತೂಹಲಕರ ಚರ್ಚೆ ನಡೆದಿದೆ. ಬಹಳ ಮುಖ್ಯವಾಗಿ ನಾಥದರ್ಶನದಲ್ಲಿ ಸಂಗೀತದ ಪ್ರಸ್ತಾಪವು ಮತ್ತೆಮತ್ತೆ ಬರುತ್ತದೆ. ಅದು ಸಾಧಕರು ಯೋಗದ ನಿರ್ದಿಷ್ಟ ಅವಸ್ಥೆಯನ್ನು ತಲುಪಿದಾಗ, ಅವರಿಗೆ ಚಿತ್ರವಿಚಿತ್ರ ಶಬ್ದಗಳು ಕೇಳಿಬರುತ್ತವೆ. ಅದನ್ನು ಅನಾಹತನಾದ ಎನ್ನಲಾಗುತ್ತದೆ. ಇವನ್ನು ಕೊಳಲು ಡೋಲು ಮದ್ದಲೆ ಭೇರಿ ಕಹಳೆ ಕಿನ್ನರಿ ಮುಂತಾದ ಸಂಗೀತ ವಾದ್ಯಗಳ ಪರಿಭಾಷೆಯಲ್ಲಿ ಗೋರಖನಾಥ ವಿವರಿಸುತ್ತಾನೆ.[2]

ಭಾಷೆಯಲ್ಲಿ ಹೇಳಲು ಕಷ್ಟವಾದ ಯೋಗಸಾಧನೆಯ ಅನುಭವವನ್ನು ಅರ್ಥದ ಹಂಗಿಲ್ಲದ ನಾದದ ರೂಪಕಗಳಲ್ಲಿ ವ್ಯಕ್ತಮಾಡಲಾಗುತ್ತದೆ. ಜತೆಗೆ ಅಮೂರ್ತ ದಾರ್ಶನಿಕ ಚಿಂತನೆಗಳು, ಮೂರ್ತವಾದ ಜನಸಮುದಾಯದ ನೆಲಕ್ಕಿಳಿದು ಬಂದರೆ, ಅವು ಕಲೆಯ ರೂಪಧಾರಣೆ ಮಾಡಲೇಬೇಕಾಗುತ್ತದೆ. ಮೀರಾ ಹಾಡುಗಳಲ್ಲಿರುವ ಜುಗಿಯೂ ಕಿನ್ನರಿ ಬಾರಿಸುವವನು. ಭಾರತದಲ್ಲಿ ಸಿಗುವ ನಾಥಯೋಗಿನಿಯರ ಚಿತ್ರಗಳಲ್ಲಿ ಸಾರಂಗಿ ಬಾರಿಸುವ ದೃಶ್ಯ ಸಾಮಾನ್ಯವಾಗಿದೆ. ವಾದ್ಯ ಹಾಗೂ ಸಂಗೀತವಿಲ್ಲದೆ ನಾಥಪಂಥದ ಚರ್ಚೆ ಕಷ್ಟವೆಂಬಂತೆ ಇವುಗಳ ಸಂಬಂಧ ಹೆಣೆದುಕೊಂಡಿದೆ. ಇದಕ್ಕೆ ಕರ್ನಾಟಕದ ನಾಥಪಂಥವೂ ಹೊರತಾಗಿಲ್ಲ.

ಜೋಗಿಯ ಕೈಲಿ ನಾಗಬೆತ್ತದ ಕೋಲು, ನಾಗಾರ ಹೆಡೆ ತ್ರಿಶೂಲ ಜೋಗಯ್ಯ

ಅವನು ನಾಟಕವಾಡಿ ಬರುತಾನೆ

ಒಕ್ಕಳ ಜಡೆಯ ಕತ್ತಲಿ ತಬ್ಬಿಕೊಂಡು, ಜೋಡಿ ಕಿನ್ನೂಡಿ ನುಡಿಸೂತ ಭೈರುವ

ಚಿತ್ತಾರದ ಮಠಕೆ ನಡೆದಾನು

ಕಣಕಾಲು ಕುಣಿದಾಡೂತ ಜೋಗಯ್ಯ ಮಣಿಪದ್ಮವನೀಡಾಡೂತ ಅಂಬ್ರದಲಿ

ತನ್ನ ಮಡದೀರೆದುರೀಗೆ ಬಗ್ಗಿ ನಾಟ್ಯವನಾಡಿದ (ಅರ್ಜುಣ ದ್ರೋಪದಿ)

ಚುಂಚನಗಿರಿ ಹಾಗೂ ಲುಂಕೆಮಲೆ ಜನಪದ ಸಾಹಿತ್ಯದಲ್ಲೂ ಅರ್ಜುನ ಜೋಗಿಯ ಹಾಡುಗಳಲ್ಲೂ, ಜೋಗಿ ಕಿನ್ನರಿ ನುಡಿಸುತ ನರ್ತನ ಮಾಡುವ ವರ್ಣನೆಗಳು ನೂರಾರಿವೆ.   ಕಿನ್ನರಿ ನುಡಿಸುವುದು ಜೋಗಿ ಅಥವಾ ಜೋಗಿವೇಷದ ಅರ್ಜುನ ಮಾತ್ರವಲ್ಲ. ಸ್ವತಃ  ಭೈರವ ಕೂಡ.  ೬೪ ರೂಪದ ಭೈರವರಲ್ಲಿ ಒಬ್ಬನು ಕಿನ್ನೂರಿ ತಂಬೂರಿ ಹಿಡಿದವನಿದ್ದಾನೆ. ಕೈಮರದ ನಿರ್ವಾಣಸ್ವಾಮಿ ಮಠದಲ್ಲಿ ಕಿನ್ನರಿ ನುಡಿಸುವ ಭೈರವ ಮೂರ್ತಿಯ ಪ್ರಸ್ತಾಪ ಹಿಂದೆ ಬಂತಷ್ಟೆ. ಕಿನ್ನರಿ, ಭೈರವ ಹಾಗೂ ಜೋಗಿಗಳ ಏಕೀಕರಣ ಹೇಗಿದೆಯೆಂದರೆ, ಜೋಗಿಗಳ ಕಿನ್ನರಿಯನ್ನು ಭೈರವಕಿನ್ನರಿ ಎಂದೂ ಜೋಗಿಗಳನ್ನು ಭೈರೇಜೋಗಿಗಳೆಂದೂ ಕರೆಯುಲಾಗುತ್ತದೆ. ವಾಸ್ತವದಲ್ಲಿ ಕಿನ್ನರಿಯು ಒಂದು ದೇಹದ ರೂಪಕ. ಅದರ ದಂಡವು ದೇಹ. ಸೋರೆಬುರುಡೆ ಶಿರ. ತಂತಿಗಳು ನರಗಳು. ಪಾರ್ಥನ ಜೋಗೀ ಹಾಡಿನಲ್ಲಿ ಅರ್ಜುನನಿಗೆ ಜೋಗಿದೀಕ್ಷೆ ಕೊಡುವ ಭೈರವ ಕಿನ್ನರಿ ಕೊಡುವುದಿಲ್ಲ. ಬದಲಿಗೆ ಒಬ್ಬ ಸ್ತ್ರೀಯನ್ನು ಕೊಂದು ಕಿನ್ನರಿ ಮಾಡಿಕೊ ಎನ್ನುತ್ತಾನೆ. ರೇವಣಸಿದ್ಧನ ಪುರಾಣಗಳಲ್ಲಿ ರೇವಣನು ಕೊಲ್ಲಾಪುರದ ಮಾಯಿಯ ದೇಹದ ಅಂಗಾಂಗಗಳಿಂದ ಕಿನ್ನರಿ ಮಾಡಿ ಬಾರಿಸುತ್ತಾನೆ. ಸಿದ್ಧಪಂಥಗಳಲ್ಲಿ ಕಿನ್ನರಿ ಮಾಡಲು ಸ್ತ್ರೀಕಾಯ ಬಳಕೆಯಾದರೆ, ಶಾಕ್ತಪಂಥ ಗಳಲ್ಲಿ ಪುರುಷನ ದೇಹ ಬಳಕೆಯಾಗುತ್ತದೆ. ಸವದತ್ತಿ ಎಲ್ಲಮ್ಮ ಗಂಡಸರ ದೇಹದಿಂದ ಚೌಡಿಕೆ ಮಾಡಿಕೊಳ್ಳುತ್ತಾಳೆ. ಕಿನ್ನರಿ ಬಾರಿಸುವಿಕೆಯು ರತಿಕ್ರೀಡೆಯ ಸಂಕೇತ ಕೂಡ. ಬಸವಣ್ಣನು ತನ್ನ ದೇಹದ ಅಂಗಾಂಗಗಳನ್ನೆ ಬಳಸಿ ತಂಬೂರಿ ರಚಿಸಲು ಹಾಗೂ ಬತ್ತೀಸರಾಗ ಹಾಡಲು ಕೂಡಲಸಂಗಮನಿಗೆ ವಿನಂತಿಸುವ ವಚನವು ಪ್ರಸಿದ್ಧವಾಗಿದೆಯಷ್ಟೆ.  ಆದ್ದರಿಂದ ಕಿನ್ನರಿ ಬರೀ ಕಿನ್ನರಿಯಲ್ಲ. ಯೋಗಸಾಧಕರು ದೇಹದಂಡದಲ್ಲಿ ಇರುವ ನರಗಳ ಮೂಲಕ ಕುಂಡಲಿನಿಯನ್ನು ಶಿರಕ್ಕೆ ಕಳಿಸಿ, ಅಲ್ಲಿ ಅನಾಹತ ನಾದ ಕೇಳುವುದಕ್ಕೂ ಈ ಕಿನ್ನರಿಯ ಆಕಾರಕ್ಕೂ ಆಂತರಿಕ ಸಂಬಂಧವಿದೆ.

ಜೋಗಿಗಳು ಕಿನ್ನರಿ ನುಡಿಸುವುದರ ಜತೆಗೆ ಹಾಡುತ್ತಾರೆ. ಹಿಮ್ಮೇಳದ ಜತೆ  ರಾತ್ರಿಯೆಲ್ಲ ಕತೆ ಮಾಡುತ್ತಾರೆ.  ಕಿನ್ನರಿ ಗಗ್ಗರ ಗೆಜ್ಜೆಗಳನ್ನು ಬಳಸಿ ಹಾಡುತ್ತ, ಕತೆಯನ್ನು ಹೇಳುತ್ತ ನಾಟಕೀಯ ದೃಶ್ಯವನ್ನು ನಿಂತಲ್ಲೆ ಸೃಷ್ಟಿಸುತ್ತಾರೆ. ಕತೆ, ಹಾಡು, ಕುಣಿತ, ನಾದ ಹಾಗೂ ತತ್ವದರ್ಶನ ಎಲ್ಲವೂ ಒಂದೆಡೆ ಸೇರುತ್ತದೆ. ಜನಪದ ಕಲಾವಿದರಲ್ಲಿ ಕಿನ್ನರಿ ಜೋಗಿಯ ವೇಷ ಹಾಗೂ ಕಿನ್ನರಿಯ ಅಲಂಕಾರವು ಪೂರ್ಣತೆಯನ್ನು ಮುಟ್ಟಿಬಿಟ್ಟಿವೆ. ಹೊಸೂರಿನ ಗುಡ್ಡಪ್ಪಜೋಗಿ ಹೀಗೆ ನಿಂತಲ್ಲೆ ರಂಗಭೂಮಿ ಸೃಷ್ಟಿಸುವ ಕಲಾವಿದ. ಹಾಡುವ, ಕಥೆಯನ್ನು ಹೇಳುವ ಹಾಗೂ ಗೆಜ್ಜೆ ಕಿನ್ನರಿ ಮುಂತಾದ ಸಂಗೀತ ಸಾಧನ ಬಳಸುವ ಜೋಗಿಗಳಿಗೆ ನಾಟಕಕ್ಕೆ ಹೊರಳಿಕೊಳ್ಳುವುದು ಸುಲಭ. ಆದರೆ ಈ ನಾಟಕಗಳು ಗೋರಖ ಮಚೇಂದ್ರರಿಗೆ ಸಂಬಂಧಿಸಿದವಲ್ಲ. ಅವು ಜೋಗಿಗಳ ಪಂಥೀಯ ನಿಷ್ಠೆಯನ್ನು ದಾಟಿಹೋಗಿವೆ. ಅರ್ಜುನು ಜೋಗಿಯಾಗುವ ಪುರಾಣವು ಅವರಿಗೆ ಮಹಾಭಾರತಕ್ಕೆ ನೆಗೆಯಲು ಸಹಾಯಕವಾಗಿದೆ. ಗುಡ್ಡಪ್ಪನವರು ಅರ್ಜುನಜೋಗಿ ಹಾಡಿಗಿಂತಲೂ ಮುಖ್ಯವಾಗಿ ನಾಥಪಂಥಕ್ಕೆ ಸಂಬಂಧ ಇರದ ಕಥೆಗಳಿಗಾಗಿಯೇ ಖ್ಯಾತರು. ಬಹುಶಃ ಕಲೆಯ ಗುಣವೇ ಇಂತಹದು. ಅದು ಹದ್ದನ್ನು ಮೀರಿಹೋಗಲು ಸದಾ ಪ್ರೇರಿಸುತ್ತದೆ.

ಕರಾವಳಿಯಲ್ಲಿ ನಾಥಪಂಥಕ್ಕೆ ಸಂಬಂಧವುಳ್ಳ ಎರಡು ಜನಪದ ಕುಣಿತಗಳಿವೆ. ಅವು ಕಿನ್ನರಿ ಜೋಗಿಯರ ಹಾಡುಕುಣಿತದ ಹಾಗೆ ಒಂದು ಕಲಾಪ್ರಕಾರವನ್ನು ಕಟ್ಟಿಕೊಂಡಿಲ್ಲ. ಆದರೆ ಅವು ಅಲ್ಲಿನ ಕೃಷಿ ಸಂಸ್ಕೃತಿಯ ಭಾಗವಾಗಿ ಅಸ್ತಿತ್ವದಲ್ಲಿವೆ. ಅವೆಂದರೆ ವಿಟ್ಲ ಕಾಸರಗೋಡು ಕಡೆಯ ಸೋಣದ ಜೋಗಿ ಕುಣಿತ ಹಾಗೂ  ಸುಳ್ಯ ಸೀಮೆಯ ಸಿದ್ಧರ ಕುಣಿತ ಅಥವಾ ಪುರುಷ ಮಕ್ಕಳ ಕುಣಿತ. ಎರಡೂ ಕುಣಿತಗಳಲ್ಲಿ ಹಾಡುವ ಪದಗಳಲ್ಲಿ ಕಾಶಿಯಿಂದ ಬರುವ ಪ್ರಸ್ತಾಪ ಬರುತ್ತದೆ. ತುಳುವಿನ ಜೋಗಿಪುರುಸೆರ್ ಕತೆಯಲ್ಲಿಯೂ ಜೋಗಿಯು ಕಾಶಿಗೆ ಹೋಗಿಬರುತ್ತಾನೆ. ಕದ್ರಿಮಠದಲ್ಲಿ ಇರುವ ಕಾಶಿ ಕಾಲಭೈರವನಿಗೂ ಇದಕ್ಕೂ ನೇರ ಸಂಬಂಧವಿದೆ. ಪುರುಷ ಮಕ್ಕಳ ಕುಣಿತದ ಹಾಡುಗಳಲ್ಲಿ ಕದಿರೆಯ ಹಾಗೂ ವಿಟ್ಟೇಲ ಮಠಕ್ಕಾಗಿ ಬಂದವರು ಎಂದು ಹಾಡುತ್ತಾರೆ. ನೃತ್ಯದ ಕೊನೆಗೆ ತಂಡದವರು ಸೇರಿ ಮಾಡುವ ಪುರುಷರ ಪೂಜೆಯಲ್ಲಿ ಮದ್ಯ ಮಾಂಸದ ಊಟವಿರುತ್ತದೆ.[3]

ಕರ್ನಾಟಕದ ನಾಥಪಂಥವು ಸಂಗೀತ ಹಾಡುವಿಕೆ ಕಥನಗಳಿಗೆ ಮಾತ್ರವಲ್ಲದೆ, ಈ ಮೂರೂ ಸಂಘಟನೆಗೊಳ್ಳುವ ರಂಗಭೂಮಿಗೂ ಕಾರಣವಾಗಿದೆ. ಕರ್ನಾಟಕದ ೪ ಭಾಗಗಳಲ್ಲಿ ಗೋರಖ ಮಚ್ಚೇಂದ್ರರ ಮೇಲೆ ರಂಗ ಪ್ರಯೋಗಗಳು ಹುಟ್ಟಿವೆ. ಅವೆಂದರೆ- ೧. ಹೈದರಾಬಾದು ಕರ್ನಾಟಕದಲ್ಲಿ ಗೋರಖ ಮಚ್ಚೇಂದ್ರ ಡಪ್ಪಿನಾಟ ೨. ಮುಂಬೈ ಕರ್ನಾಟಕದಲ್ಲಿ  ‘ಮಾಯಾಮಚ್ಚೇಂದ್ರ’ ಆಟ. ೩. ಮಧ್ಯ ಕರ್ನಾಟಕದಲ್ಲಿ  ‘ಲುಂಕೇಮಲೇ ಸ್ವಾಮಿ ಮಹಾತ್ಮೆ’ ದೊಡ್ಡಾಟ ೪. ಕರಾವಳಿಯಲ್ಲಿ  ‘ಕದ್ರಿ ಕ್ಷೇತ್ರ ಮಹಾತ್ಮ್ಯೆ’  ‘ಶ್ರೀಮಂಗಳಾದೇವಿ ಚರಿತ್ರೆ’  ‘ಶ್ರೀ ಅಮೃತೇಶ್ವರಿ ಮಹಾತ್ಮ್ಯೆ’ ‘ಮೈಮೆದ ಜೋಗಿಲು’ ಮುಂತಾದ ಯಕ್ಷಗಾನಗಳು. ಮೊದಲನೆಯದು ಬೀದರ ಗುಲಬರ್ಗಾ ಸೀಮೆಯಲ್ಲಿದೆ. ಎರಡನೆಯದು ಬೆಳಗಾವಿ ಭಾಗದಲ್ಲಿದೆ. ಇದು ಬಹುಶಃ ಮರಾಠಿ ರಂಗಭೂಮಿಯಿಂದ ಬಂದಂತಿದೆ. ಮೂರನೆಯದು ಭೈರವನ ಭಕ್ತರಾದ  ಪೂಜಾರಹಟ್ಟಿ ಲಿಂಗಾಯತರು ಪ್ರತಿವರುಷ ಲುಂಕೆಮಲೆಯ ಜಾತ್ರೆಯಲ್ಲಿ ಆಡುವ ಹರಕೆಯಾಟ. ನಾಲ್ಕನೆಯವು,  ನಾಥಪಂಥದ ಜತೆಗೆ ಸಂಬಂಧವುಳ್ಳ ಕದ್ರಿ ಮಂಜುನಾಥ, ಮಂಗಳಾದೇವಿ ಹಾಗೂ ಕೋಟದ (ಕುಂದಾಪುರ) ಅಮೃತೇಶ್ವರಿ ದೇವಳದ ಯಕ್ಷಗಾನ ತಂಡಗಳು ಆಡುವ ಆಟಗಳು. ಈ ಎಲ್ಲ ಆಟಗಳಲ್ಲಿ ಗೋರಖ ಮಚೇಂದ್ರರು ಪಾತ್ರಗಳಾಗಿ ಬರುತ್ತಾರೆ. ಮೊದಲ ಎರಡು ಪ್ರಸಂಗಗಳಲ್ಲಿ ಗೋರಖ ಮಚೇಂದ್ರರು ಮುಖ್ಯಪಾತ್ರಗಳು. ಲುಂಕೆಮಲೆ ಹಾಗೂ  ಕರಾವಳಿಯ ಆಟಗಳಲ್ಲಿ ಸ್ಥಳೀಯ ದೇವತೆಗಳಾದ ಲುಂಕೆಮಲೆ ಭೈರವ, ಮಂಗಳಾದೇವಿ, ಅಮೃತೇಶ್ವರಿಯರು ಮುಖ್ಯರು. ಮೊದಲ ಎರಡು ಆಟಗಳು ನೋಡಲು ಈಗ ದುರ್ಲಭವಾಗಿವೆ. ಅವುಗಳ ಹಸ್ತಪ್ರತಿಗಳೂ ಸಿಗುತ್ತಿಲ್ಲ. ಆದರೆ ಉಳಿದ ಆಟಗಳು ಪ್ರತಿವರ್ಷ ಪ್ರದರ್ಶನ ಆಗುತ್ತಿವೆ. ಲುಂಕೆಮಲೆ ಆಟದ ಹಸ್ತಪ್ರತಿ ಕೂಡ ಲಭ್ಯವಿದೆ.

ಶ್ರೀ ಅಮೃತೇಶ್ವರಿ ಮಹಾತ್ಮ್ಯೆ

‘ಮಚ್ಚೇಂದ್ರನಾಥ ಗೋರಖನಾಥ ಕಥಾಂತರ್ಗತ ಶ್ರೀ ಅಮೃತೇಶ್ವರಿ ಮಹಾತ್ಮ್ಯೆ’ ಯಕ್ಷಗಾನವನ್ನು ಕೋಟದ ಅಮೃತೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿಯವರು ೨೦-೪-೦೨ರಂದು ಆಡಿದರು. ಇದು ಮೂಲತಃ ಕೋಟ ಸೀಮೆಯ ಸ್ಥಳೀಯ ದೇವತೆ ಅಮೃತೇಶ್ವರಿಯ ಮಹಾತ್ಮ್ಯೆ ಹೇಳುವ ಪ್ರಸಂಗ. ಇದಕ್ಕೆ ಗೋರಖ ಮಚ್ಚೇಂದ್ರರ ಕಥೆಯನ್ನು ಸೇರಿಸಿ ಹೊಸ ಪ್ರಸಂಗವನ್ನು ಯಡ್ತರೆ ಚಂದ್ರಶೇಖರಶೆಟ್ಟಿ ರಚಿಸಿದ್ದಾರೆ. ಅಮೃತೇಶ್ವರಿಯು ಮೂಲದಲ್ಲಿ ವಜ್ರಯಾನದ ತಾರಾಭಗವತಿ ಆಗಿದ್ದು, ನಂತರ ನಾಥಪಂಥದ ಶಕ್ತಿದೇವತೆಯಾಗಿ ಬದಲಾದವಳು. ಈಗಲೂ ಈಕೆಯನ್ನು ಜೋಗಿಗಳೇ ಅರ್ಚಿಸುತ್ತಾರೆ. ಈಕೆಗೆ  ‘ಹಲವು ಮಕ್ಕಳತಾಯಿ’ ಎಂಬ ಹೆಸರಿದ್ದು, ಸಂತಾನಕ್ಕಾಗಿ ಹರಸಿಕೊಂಡವರು, ಹರಕೆ ತೀರಿಸಲು ಈ ಆಟ ಆಡಿಸುತ್ತಾರೆ. ಕದ್ರಿಯ ಜೋಗಿ ಸಮುದಾಯದ ಒಬ್ಬರು, ತನಗೆ ಗಂಡುಮಗುವಾದರೆ ಸೇವೆಯಾಟ ಆಡಿಸುತ್ತೇನೆ ಎಂದು ಹರಸಿಕೊಂಡು, ಕದ್ರಿ ದೇವಸ್ಥಾನದಲ್ಲಿ ಇದನ್ನು ಆಡಿಸಿದರು.

ಪುರುಷರನ್ನೂ ರಾಜ್ಯದೊಳಗೆ ಬಿಟ್ಟುಕೊಳ್ಳದಂತೆ ಆಳ್ವಿಕೆ ಮಾಡುತ್ತಿದ್ದ ಸ್ತ್ರೀರಾಜ್ಯದ ಪಿಂಗಳೆಯ ಅರಮನೆಗೆ, ಮಚೇಂದ್ರನು ಪ್ರವೇಶ ಮಾಡುವ ಮೂಲಕ, ಆಟಕ್ಕೆ ನಾಥ ಸಂಬಂಧ ಶುರುವಾಗುತ್ತದೆ. ಅತ್ಯಂತ ಸುಂದರನೂ ಶಕ್ತನೂ ಆದ ಪುರುಷನ ಸಂಗಮಾಡಿ ಗಂಡುಮಗುವನ್ನು ಪಡೆಯಬೇಕೆಂಬ ಪಿಂಗಳೆಯ ಅಪೇಕ್ಷೆಗೆ ಅನುಸಾರವಾಗಿ  ಮಚೇಂದ್ರ ಬರುತ್ತಾನೆ. ಆತ ಪಿಂಗಳೆಯನ್ನು ಸೋಲಿಸಿ, ವರಿಸಿ, ಅವಳ ಜತೆ ಸಂಸಾರ ಮಾಡುತ್ತಾನೆ. ಒಂದು ದಿನ ಅವನು ಸ್ತ್ರೀರಾಜ್ಯವನ್ನು ಬಿಟ್ಟು ಬಾಲಕ ಗೋರಖನ ಜತೆ ಹೊರಟಾಗ, ಪಿಂಗಳೆಯು ತಾನೂ ಬರುವುದಾಗಿ ಹಿಂಬಾಲಿಸುತ್ತಾಳೆ. ಮೂವರೂ ನೇತ್ರಾವತಿ ನದಿಯನ್ನು ದಾಟುತ್ತಾರೆ. ಪಿಂಗಳೆ ಅಂದರೆ ಮಂಗಳಾದೇವಿ ತಾನು ಇಲ್ಲೆ ನೆಲೆಸುವುದಾಗಿ ಹೇಳಿದಾಗ, ಅವಳನ್ನು ಅಲ್ಲಿ ಇರಿಸಿ, ಮಚೇಂದ್ರನು ಗೋರಖನ ಜತೆ ಕದ್ರಿಬೆಟ್ಟಕ್ಕೆ ಬರುತ್ತಾನೆ. ಇದು ಕಥೆಯ ಒಂದು ಘಟ್ಟ. ಎರಡನೆಯ ಘಟ್ಟ ಕರಾವಳಿಯ ಇಬ್ಬರು ರಾಜರ ನಡುವೆ ಜಗಳದ್ದು. ಅವರಲ್ಲಿ ಒಬ್ಬನಿಗೆ ಮಚ್ಚೇಂದ್ರನು ಅಮೃತೇಶ್ವರಿಗೆ ಹರಕೆ ಕಟ್ಟಲು ಸಲಹೆ ಕೊಟ್ಟ ಪ್ರಕಾರ, ಅವನು ಹರಕೆ ಕಟ್ಟಿ ಅಮೃತೇಶ್ವರಿಯ ಕೃಪೆಯಿಂದ ಯುದ್ಧ ಗೆಲ್ಲುತ್ತಾನೆ.  ಅಮೃತೇಶ್ವರಿಯ ಮಹಿಮೆಯೊಂದಿಗೆ ಪ್ರಸಂಗ ಮುಗಿಯುತ್ತದೆ.

ಮೂಲ ಅಮೃತೇಶ್ವರಿ ಕಥೆಗೆ ಗೋರಖ ಮಚ್ಚೇಂದ್ರ ಪ್ರಕರಣವನ್ನು ಜೋಗಿ ಆನಂದನಾಥರ ಅಪೇಕ್ಷೆಯ ಮೇರೆಗೆ  ಅಂತರ್ಗತ ಮಾಡಿ ಈ ಪ್ರಸಂಗ ರಚಿಸಲಾಗಿತ್ತು. ಯಕ್ಷಗಾನದ ಸಡಿಲ ರಚನಾ ವಿನ್ಯಾಸದಲ್ಲಿ ಬೇಕಾದ ಪ್ರಸಂಗಗಳನ್ನು ಸೇರಿಸುವ ಅವಕಾಶವಿದೆ. ಈ ಸಡಿಲಿಕೆ ಹಾಗೂ ಅಂತರ್ಗತಗೊಳಿಸುವಿಕೆಗೆ ಹಿಂದೂಧರ್ಮದ ಬಹುರೂಪಿಯಾದ ದೇವತಾಲೋಕವೂ ಪೂರಕವಾಗಿದೆ. ಇದೊಂದು ದೈವಿಕ ಲೋಕದ ಡೆಮಾಕ್ರಟಿಕ್ ಹೊಂದಾಣಿಕೆ.  ಈ ಹಿನ್ನೆಲೆಯಲ್ಲಿ ಪ್ರಸಿದ್ಧ ಕತೆಯಲ್ಲಿ ಸೇರಿಕೊಂಡು, ನಾಥಪುರಾಣವು  ರಂಗಪ್ರವೇಶ ಮಾಡಲು ಯತ್ನಿಸಿತು. ಆದರೆ ಇಡೀ ಪ್ರಸಂಗವು ಸಂಬಂಧ ಇರದ ತುಂಡುಗಳನ್ನು ಸೇರಿಸಿ ಹೊಲಿದಂತಿದ್ದು, ಶಿಥಿಲವಾಗಿತ್ತು. ಹೆೊಸಕಥೆಗೆ ಪಾತ್ರಧಾರಿಗಳು ಇನ್ನೂ ಹೊಂದಿಕೊಂಡಿರಲಿಲ್ಲ. ಮಹಾಭಾರತ ಅಥವಾ ಸ್ಥಳೀಯ ದೈವಗಳ ಕತೆಗಳಷ್ಟು ಗೋರಖ ಮಚ್ಚೇಂದ್ರರ ಪುರಾಣ ಕಥೆಯು, ಪಾತ್ರಧಾರಿಗಳಿಗೆ ಸುಪರಿಚಿತವಾಗಿರಲಿಲ್ಲ. ಕರಾವಳಿಯಲ್ಲಿ ದೇವಸ್ಥಾನದ ತಂಡಗಳು ತಂತಮ್ಮ ದೇವರನ್ನು ಜನಪ್ರಿಯಗೊಳಿಸಲು ರೂಢಿಸಿಕೊಂಡಿರುವ ಆಟಗಳಲ್ಲಿ ಏನನ್ನು ಹೊಸದಾಗಿ ಸೇರಿಸಿದರೂ ವಿಜೃಂಭಿಸುವುದು ಮೂಲ ಕಥೆಯೆ. ಅಂತರ್ಗತ ಕಥೆಯಲ್ಲ. ಇಲ್ಲೂ ಹಾಗೆಯೇ ಆಯಿತು. ಪ್ರಸಂಗದಲ್ಲಿ ನಾಥಪಂಥಕ್ಕಾಗಲಿ ಗೋರಖನಾಥನಿಗಾಗಲಿ ಫೋಕಸ್ಸಿರಲಿಲ್ಲ.  ದೇವಿಯ ಮಹಾತ್ಮ್ಯೆಗೆ ಪೂರಕವಾಗಿ  ಮಚೇಂದ್ರನು  ದೇವಿಗೆ ಭೂಲೋಕದಲ್ಲಿ ನೆಲೆಸುವಂತೆ ಬೇಡುವ, ಅವಳಿ ಗೊಂದು ಗುಡಿಕಟ್ಟುವಂತೆ ರಾಜನಿಗೆ ಆದೇಶ ಮಾಡುವ, ತನ್ನ ಶಿಷ್ಯರಾದ ಜೋಗಿ ಗಳೇ  ದೇವಿಯನ್ನು ಅರ್ಚಿಸಬೇಕು ಎಂದು ವಿಧಿಸುವುದೇ ಮುಂತಾದ ಕೆಲಸಗಳನ್ನು ಮಾಡುತ್ತಾನೆ. ಗೋರಖನ ಪಾತ್ರವನ್ನು ಚಿಕ್ಕಪ್ರಾಯದ ಅನನುಭವಿ ನಟನಿಗೆ ಕೊಟ್ಟಿದ್ದರಿಂದ ಅವನಿಗೆ ಹೆಚ್ಚು ಮಾತಿನ ಅವಕಾಶವೇ ಇರಲಿಲ್ಲ. ಮಚೇಂದ್ರನು  ‘ಶಿಷ್ಯಾ, ಹೀಗೆ ಬಾ ಹೋಗೋಣ’ ಎಂದಾಗ ಹಿಂದೆ ಹೋಗುವದಷ್ಟೇ ಅವನ ಕೆಲಸವಾಗಿತ್ತು. ಮಚ್ಚೇಂದ್ರನ ಪಾತ್ರ ಮಾಡಿದ್ದ ಮುದ್ರಾಡಿ ಕೇಶವ ಶೆಟ್ಟಿಗಾರ (೭೦) ಅವರು,  ಈ ಪ್ರಸಂಗದ ಕರ್ತರೂ ಆಗಿದ್ದರು. ಅವರು ತಮ್ಮ ಪ್ರತಿಭೆಯಿಂದ ಆಯಾ ಸನ್ನಿವೇಶದಲ್ಲೇ ಮಾತುಗಾರಿಕೆ ಹುಟ್ಟಿಸುತ್ತಿದ್ದರು.

ಒಂದೆಡೆ ಮಚೇಂದ್ರ ಪಾತ್ರಧಾರಿಯು ಲೋಕ ಕೆಟ್ಟಿದೆ ಎಂದು ಹೇಳುತ್ತಾ, ಅವರಿವರು ಇರಲಿ, ಸನ್ಯಾಸಿಗಳೇ ಕೆಟ್ಟುಹೋಗಿದ್ದಾರೆ, ಅವರನ್ನು ಪಟ್ಟದಿಂದ ಕೆಳಗಿಳಿಸಬೇಕು ಎಂದು ಮಾರ್ಮಿಕವಾಗಿ ಹೇಳಿದನು. ಕದ್ರಿಮಠದಲ್ಲಿ ಜೋಗಿ ಸಮುದಾಯಕ್ಕೂ ಅರಸನಾಗಿರುವ ನಾಥರಿಗೂ ಇರುವ ವಿರಸ ಸಂಬಂಧ ಬಲ್ಲವರಿಗೆ ಇದರ ಧ್ವನಿಪೂರ್ಣತೆ ಗೊತ್ತಾಗುತ್ತಿತ್ತು. ಬಹಳ ಮುಖ್ಯವಾಗಿ  ಕದ್ರಿ ಮಂಜುನಾಥ ಗುಡಿಯ ರಾಜಾಂಗಣದಲ್ಲಿ ಆಡಲಾದ ಈ ಪ್ರಸಂಗವು, ಗುಡಿಯು ನಾಥರಿಗೆ ಸೇರಿದ್ದು ಎಂಬ ಸಂದೇಶವನ್ನು ಪರೋಕ್ಷವಾಗಿ ಕೊಡುತ್ತಿತ್ತು. ಹೀಗೆ ಹರಕೆಯಾಟವು ಆಟವಾಡಿಸುವ ಯಜಮಾನರ ವೈಯಕ್ತಿಕ ಭಕ್ತಿಯ ಜತೆ, ಜೋಗಿ ಸಮುದಾಯವು ಕದ್ರಿ ದೇವಳದ ಮೇಲೆ ತನ್ನ ಹಕ್ಕುಸ್ಥಾಪನೆಯ ಆಶೋತ್ತರದ ಭಾಗವಾಗಿದ್ದಂತೆ ಇತ್ತು. ಸಮಕಾಲೀನ ರಾಜಕೀಯ ವಿದ್ಯಮಾನಗಳ ಮೇಲೆ ವಿಡಂಬನೆಯನ್ನು ಪುರಾಣ ಪಾತ್ರಗಳ ಮೂಲಕ ಮಾಡುವ ಕುಶಲತೆಯನ್ನು ಕರಾವಳಿಯ ಆಟಗಳು ವಿಶೇಷವಾಗಿ ಪಡೆದುಕೊಂಡಿವೆ. ಇದರಿಂದ ಆಟ ಆಡಿಸುವವರ ಆಶಯಗಳನ್ನು ಪ್ರಸಂಗದಲ್ಲಿ ಬಿಂಬಿಸುವುದು ಕಷ್ಟವಲ್ಲ. ಆದರೆ ಪ್ರಸಂಗಕರ್ತರಿಗೂ ಪಾತ್ರಧಾರಿಗಳಿಗೂ ನಾಥ ಸಂಪ್ರದಾಯದ ತಾತ್ವಿಕ ಚಾರಿತ್ರಿಕ ತಿಳಿವು  ಕಡಿಮೆಯಿದ್ದ ಕಾರಣ, ನಾಥಪಂಥದ ಜೋಡಣೆಯು ದೇವಿಕಥೆಗೆ ತೇಪೆಹಾಕಿದಂತೆ ಇತ್ತು. ಆದರೆ ಜೋಗಿ ಸಮುದಾಯಕ್ಕೆ ಒಟ್ಟು ಪ್ರಸಂಗವು ಕೇವಲ ಕಲೆು ಪ್ರಶ್ನೆಯಲ್ಲ. ಅದಕ್ಕೆ ಗೋರಖ ಮಚೇಂದ್ರ ಪುರಾಣವು ಪ್ರಿಯವಾಗುವಂತೆ, ಪ್ರಸಂಗವನ್ನು ನೋಡುವವರಿಗೆ ಆಯಿತೆಂದು ಹೇಳುವುದು ಕಷ್ಟ. ನಾಥಪಂಥದ ಪುರಾಣವನ್ನು ನೋಡುಗರಿಗೆ ತುಂಬ ಪರಿಚಿತವಾಗಿರುವ ಪ್ರಸಂಗಗಳ ಜತೆ ‘ಅಂತರ್ಗತ’ ಮಾಡಿ ಆಡಿಸುವುದರ ಹಿಂದೆ, ಅಲ್ಪಸಂಖ್ಯಾತ ಸಮುದಾಯವು ಬಹುಸಂಖ್ಯಾತರ ಪರಿಭಾಷೆಯಲ್ಲಿ ತಮ್ಮನ್ನು ಮಂಡಿಸಿಕೊಳ್ಳುವ ತಂತ್ರವೂ ಅಲ್ಲಿತ್ತು.

ಕರಾವಳಿಯಲ್ಲಿ ಬ್ರಾಹ್ಮಣ ಮೌಲ್ಯಗಳು ಕೆಳಜಾತಿಗಳನ್ನು ಸಂಸ್ಕೃತೀಕರಣ ಪ್ರಕ್ರಿಯೆಗೆ ಒಳಪಡಿಸಿರುವ ಕಾರಣ, ಕೆಲವೊಮ್ಮೆ ಆಟವು ನಾಥಪಂಥದ ದರ್ಶನಕ್ಕೆ ವಿರುದ್ಧವಾದ  ಎಳೆಗಳನ್ನು ಹೊಂದಿತ್ತು. ಮಚೇಂದ್ರನ ಪಾತ್ರವು ನಾಥಸಂಪ್ರದಾಯದ ದಾರ್ಶನಿಕ ಆಶಯಗಳಿಗಿಂತ, ಸಾಂಪ್ರದಾಯಕ ಋಷಿಗಳು ಆಳುವರ್ಗದ ಹಿತಕ್ಕೆ ಅನುಸಾರವಾಗಿ ವರ್ತಿಸುವಂತಿತ್ತು. ಮಚೇಂದ್ರನು  ರಾಜನಿಗೆ ಗೋಬ್ರಾಹ್ಮಣರನ್ನು ರಕ್ಷಿಸು ಎಂದು ನೀತಿ ಹೇಳುತ್ತಾನೆ. ಪಿಂಗಳೆ ರಾಜ್ಯವಾಳುವಾಗ, ಯಾರ‌್ಯಾರು ಏನೇನು ಮಾಡಬೇಕು ಅದನ್ನೇ ಮಾಡಬೇಕು ಎಂದು ವ್ಯಂಗ್ಯ ಮಾಡುತ್ತಾನೆ. ಪಿಂಗಳೆಯು ರಾಜ್ಯಬಿಟ್ಟು ತನ್ನ ಜತೆ ಬಂದಾಗ, ಪತಿಯನ್ನು ಹಿಂಬಾಲಿಸುವುದು ಶ್ರೇಷ್ಠ  ಸ್ತ್ರೀಯ ಲಕ್ಷಣ ಎನ್ನುತ್ತಾನೆ. ಸ್ತ್ರೀಪ್ರಧಾನವಾದ ಕೌಳಪಂಥದಿಂದ ಬಂದ ಮಚೇಂದ್ರನು ಸ್ತ್ರೀಸಮಾನತೆಯಲ್ಲದ  ಮಾತುಗಳನ್ನು ಆಡುತ್ತಿದ್ದುದು ಒಂದು ವ್ಯಂಗ್ಯವಾಗಿತ್ತು.

ನೇತ್ರಾವತಿ ನದಿಯನ್ನು ದಾಟಿ ಕೇರಳದ ಕಡೆಯಿಂದ ಕದ್ರಿಗೆ ಗೋರಖ ಮಚೇಂದ್ರರು ಬಂದುದನ್ನು ಸ್ಥಾಪಿಸುವುದು ಚಾರಿತ್ರಿಕವಾಗಿ ಕಷ್ಟ. ಪೌರಾಣಿಕ ಕಥೆಗಳ ಮೂಲಕ  ಸುಲಭ. ಯಕ್ಷಗಾನಗಳು ಮಿತ್‌ಗಳ ಮೂಲಕ ಆಲೋಚಿಸುವ ಮನೋಧರ‌್ಮವನ್ನು ನಿರ್ಮಿಸಿವೆ.  ಹೀಗಾಗಿ ಚರಿತ್ರೆಯ ಪ್ರಶ್ನೆ ಇಲ್ಲಿ ಅಮುಖ್ಯ. ಇಲ್ಲಿನ ದೇವಾಲಯ, ಮಠಗಳ ಕುರಿತು ಚಾರಿತ್ರಿಕ ಸಂಶೋಧನೆಗಿಂತ ದಟ್ಟವಾಗಿರುವುದು ಸ್ಥಳಪುರಾಣ. ಹೀಗಾಗಿ ಗೋವಿಂದ ಪೈಯವರು ಕದ್ರಿಯ ಮೇಲೆ ಮಾಡಿರುವ ಸಂಶೋಧನೆಗಳಿಗಿಂತ  ‘ಕದಲಿ ಮಂಜುನಾಥ ಮಹಾತ್ಮ್ಯ’ದಂತಹ  ಪೌರಾಣಿಕ ನುಡಿಗಟ್ಟಿನ ಸ್ಥಳಪುರಾಣಗಳು ಇಲ್ಲಿ ಜನಪ್ರಿಯವಾಗಿವೆ.  ಬಾರಾಪಂಥದ ಭೂತೇಶ್ವರನಾಥರು ಕಡವ ಶಂಭುಶರ್ಮರ ಮೂಲಕ ಅನುವಾದಿಸಿ ಪ್ರಕಟಿಸಿದ  ‘ಸಿದ್ಧಸಿದ್ಧಾಂತ ಪದ್ಧತಿ’ಯಂತಹ ದಾರ್ಶನಿಕ ಕೃತಿಗಿಂತಲೂ, ಪುರಾಣ ಕಥೆ ಗಳಿಂದ ತುಂಬಿರುವ ಕದಳಿ ಮಹಾತ್ಯ್ಮವೆ ಹೆಚ್ಚು ಜನಪ್ರಿಯವಾಗಿದೆ. ಅತಿಹೆಚ್ಚು ಅಕ್ಷರಸ್ಥರು ಇರುವ, ವ್ಯವಹಾರ ಜಗತ್ತಿನಲ್ಲಿ ದೊಡ್ಡ ಸಾಧನೆ ಮಾಡಿರುವ ಕರಾವಳಿಯಲ್ಲಿ, ಕಲ್ಪನಾ ಪ್ರಧಾನವಾದ ಪುರಾಣಪ್ರಜ್ಞೆಯು ದಟ್ಟವಾಗಿ ಯಾಕಿದೆ ಎಂದು ಅರ್ಥವಾಗುತ್ತಿಲ್ಲ.  ವ್ಯವಹಾರ ಲೋಕದ ಅತಿವಾಸ್ತವಿಕತೆಯನ್ನು ಸರಿದೂಗಿಸಲೆಂದೇ ಈ ಕಲ್ಪನಾತ್ಮಕ ವಾಸ್ತವಾತೀತ ಲೋಕವು ಬದುಕಿದೆಯೊ ಏನೊ. ಇಲ್ಲಿ ಪ್ರಶ್ನೆಕೇಳುವುದು, ಹರಕೆ ಹೊರುವುದು, ಕೋಲಸೇವೆ, ಬ್ರಹ್ಮಕಲಶೋತ್ಸವ ಮುಂತಾದ ಚಟುವಟಿಕೆಗಳು, ಕರ್ನಾಟಕದ ಯಾವ ಭಾಗದಲ್ಲೂ ಇರದಷ್ಟು ಇವೆ. ಚರಿತ್ರೆಯನ್ನು ಪುರಾಣಗಳ ಮೂಲಕ ನೋಡುವ ಮನೋಭಾವವನ್ನು ಯಕ್ಷಗಾನಗಳೂ ಪೋಷಿಸಿವೆ. ಎಂತಲೇ ಕದ್ರಿಯ ಜೋಗಿ ಸಮುದಾಯಕ್ಕೆ ತಮ್ಮ ಸಾಂಸ್ಕೃತಿಕ ಅಸ್ಮಿತೆಯನ್ನು ಪಡೆಯಲು ಚರಿತ್ರೆಗಿಂತ ಪುರಾಣವೇ ಹೆಚ್ಚು ಉಪಯುಕ್ತವೆನಿಸಿದೆ. ಹರಕೆಯಾಟವು ಈ ಪುರಾಣಪ್ರಜ್ಞೆಯ ಭಾಗವಾಗಿತ್ತು.

ಒಂದು ಪುರಾಣದಲ್ಲಿ ಮತ್ತೊಂದನ್ನು ಸೇರಿಸಿ ಹೇಳುವ ಈ ಸಡಿಲತೆ, ಕಲ್ಪನಾ ಸ್ವಾತಂತ್ರ್ಯ ಹಾಗೂ ಉದಾರವಾದಿ ಬಹುತ್ವಗಳಿಗೆ ಇನ್ನೊಂದು ಸಾಮಾಜಿಕ ಆಯಾಮವಿದೆ. ಅದು ವಿಭಿನ್ನ ಸಮುದಾಯಗಳು ತಮ್ಮ ಅಸ್ತಿತ್ವ ಮತ್ತು ಯಜಮಾನಿಕೆಗಾಗಿ ನಡೆಸುತ್ತಿರುವ ಪ್ರಯತ್ನಗಳಿಗೆ ಸಂಬಂಧಿಸಿದೆ. ಪುರಾಣವನ್ನು ತಮಗೆ ಬೇಕಾದ ಅರ್ಥದಲ್ಲಿ ವ್ಯಾಖ್ಯಾನಿಸುವ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವ ಯಕ್ಷಗಾನ ತಾಳಮದ್ದಳೆಗಳು, ಮಂಡಿಸುವುದು ಕೇವಲ ಕಲೆ ಅಥವಾ ಭಕ್ತಿಯನ್ನಲ್ಲ. ತಮ್ಮ ಸಾಮಾಜಿಕ ರಾಜಕೀಯ ಹಿತಾಸಕ್ತಿಗಳನ್ನು ಸಹ. ಅದರಲ್ಲೂ ಮಾತು ಮತ್ತು ತರ್ಕದಲ್ಲಿ ಪರಿಣಿತರಾದ ಕಲಾವಿದರು, ರಾತ್ರಿಹೊತ್ತಲ್ಲಿ ನಿರಾಳ ಮನಸ್ಥಿತಿಯಲ್ಲಿರುವ ಪ್ರೇಕ್ಷಕರಿಗೆ ತಮ್ಮ ಸಾಮಾಜಿಕ ರಾಜಕೀಯ ನಿಲುವುಗಳನ್ನು ಪರಿಣಾಮಕಾರಿಯಾಗಿ ಒಪ್ಪಿಸುವ ಕೆಲಸ ಮಾಡುತ್ತಾರೆ. ಯಕ್ಷಗಾನದಲ್ಲಿ ಹೊಸ ಪ್ರಸಂಗಗಳನ್ನು ಸೇರಿಸುವುದು ಇದಕ್ಕೆ ಪೂರಕವಾಗಿದೆ. ಇದು ಚರಿತ್ರೆಯನ್ನು ತಿದ್ದಲು ಹಾಗೂ  ಹೊಸಚರಿತ್ರೆ ಹುಟ್ಟಿಸಲು ಅವಕಾಶ ನಿರ್ಮಿಸುತ್ತದೆ.  ಈ ಹಿನ್ನೆಲೆಯಲ್ಲಿ ಹರಕೆಯಾಟದ ಮೂಲಕ ಜೋಗಿ ಸಮುದಾಯವು ತನ್ನ ಆಶೋತ್ತರವನ್ನು ಬಿಂಬಿಸಲು ಯತ್ನಿಸಿದಂತೆ ಕಂಡಿತು.

ದೊಡ್ಡ ಆದಾಯವುಳ್ಳ  ಗುಡಿಗಳನ್ನು ತಮ್ಮ ಹಿಡಿತದಲ್ಲಿ ಇರಿಸಿಕೊಳ್ಳಲು ವಿವಿಧ ವರ್ಗಗಳು ಯತ್ನಿಸುವುದಕ್ಕೂ ಸ್ಥಳಪುರಾಣಗಳಿಗೂ ನೇರ ಸಂಬಂಧವಿದೆ. ‘ಕದಲಿ ಮಂಜುನಾಥ ಮಾಹಾತ್ಮ್ಯ’ವು ಮಂಜುನಾಥ ಗುಡಿಗೂ ನಾಥರಿಗೂ ಇರುವ ಸಂಬಂಧವನ್ನು ಗೊಂದಲಗೊಳಿಸುತ್ತದೆ. ನಾಥರ ಸ್ಥಳಪುರಾಣಗಳ ಪ್ರಕಾರ ಮಂಗಳಾದೇವಿಯನ್ನು ನೆಲೆಗೊಳಿಸಿದ್ದು ಮಚೇಂದ್ರ. ‘ಮಂಗಳಾದೇವಿ ಮಾಹಾತ್ಮ್ಯ’ದ ಪ್ರಕಾರ ಪರಶುರಾಮ. ಪರಶುರಾಮನು ದೇವಿಯನ್ನು ಪ್ರತಿಷ್ಠಾಪಿಸುತ್ತಿರುವ ಚಿತ್ರಪಟವನ್ನು ಬರೆಸಿ ಮಂಗಳಾದೇವಿ ಗುಡಿಯಲ್ಲಿ ಹಾಕಲಾಗಿದೆ.  ಕದ್ರಿಯ ಮಂಜುನಾಥ ಗುಡಿಯನ್ನು ದೊರೆ ಕುಂದವರ್ಮನು ಗೋರಖ ಮಚ್ಚೇಂದ್ರರ ಪ್ರೇರಣೆಯಿಂದ ಕಟ್ಟಿಸುತ್ತಿರುವ ಚಿತ್ರಪಟವೂ ಅಲ್ಲಿದೆ. ಈ ಚಿತ್ರಪಟಗಳನ್ನು ಕದ್ರಿಯ ಜೋಗಿಮಠದ ನಾಥನಿಂದಲೇ ಉದ್ಘಾಟನೆ ಮಾಡಿಸಿ, ಅದಕ್ಕೆ ಅಧಿಕೃತತೆಯನ್ನು ಪಡೆಯಲಾಗಿದೆ. ಮೊದಲ ಚಿತ್ರಕ್ಕೆ ಮಂಗಳಾದೇವಿ ಗುಡಿಗಿರುವ ನಾಥ  ಹಿನ್ನೆಲೆಯನ್ನು ರದ್ದುಮಾಡುವ ಮೂಲಕ, ಗುಡಿಯ ಮೇಲೆ ಜೋಗಿಗಳು ಹಕ್ಕು ಸ್ಥಾಪಿಸದಂತೆ ಮಾಡುವ  ಉದ್ದೇಶ ಇರಬಹುದು. ಹೀಗಾಗಿ ಅಲ್ಲಿ ವಿಷ್ಣು ಅವತಾರಿಯಾದ ಪರಶುರಾಮನಿಗೆ ಸ್ಥಾನ ಕಲ್ಪಿಸುವುದು ಉದ್ದೇಶಪೂರ್ವಕವಾಗಿದೆ. ಈ ರಾಜಕಾರಣದ ಸೂಕ್ಷ್ಮವು ಕದ್ರಿಮಠದ  ‘ಪರದೇಶೀ’ ನಾಥರಿಗೆ ಗೊತ್ತಾಗುವುದಿಲ್ಲ. ಆದರೆ ಸ್ಥಳೀಯ ಜೋಗಿ ಸಮುದಾಯಕ್ಕೆ ಬೇಗನೆ ಗೊತ್ತಾಗುತ್ತದೆ. ಆನಂದನಾಥರು ಈ ಚಿತ್ರಗಳ ಮೇಲೆ ಅಸಮಾಧಾನ ವ್ಯಕ್ತ ಮಾಡಿದರು. ಇಂತಹ ಘಟನೆಗಳಿಗೆ ಪರೋಕ್ಷ ಉತ್ತರವೆಂಬಂತೆ ಅಮೃತೇಶ್ವರಿ ದೇವಿಯ ಕಥಾಂತರ್ಗತ ಗೋರಖ ಮಚ್ಚೇಂದ್ರರ ಪ್ರಸಂಗವಿತ್ತು. ಪ್ರಸಂಗ ಮುಗಿದ ಬಳಿಕ, ಬೇರೊಂದು ಕಥೆಯಲ್ಲಿ ಗೋರಖ ಮಚೇಂದ್ರರನ್ನು ಅಂತರ್ಗತ ಮಾಡಿದರೆ, ಪರಿಣಾಮಕಾರಿ ಆಗುವುದಿಲ್ಲ. ನಾಥಪಂಥದ ದೃಷ್ಟಿಯಿಂದ ಸ್ವತಂತ್ರ ಪ್ರಸಂಗವನ್ನೆ ಬರೆಸಬೇಕು ಎಂದು ಕಡೆಯಲ್ಲಿ ಆನಂದನಾಥರು ಹೇಳಿದರು. ಇದಾದ ಒಂದು ವರ್ಷದಲ್ಲಿ ‘ಮೈಮೆದ ಜೋಗಿಲು’  ಎಂಬ ಪೌರಾಣಿಕ ತುಳುನಾಟಕವನ್ನು  ಬರೆಯಿಸಿ ಆಡಿಸಿದರು (೨.೨೮.೨೦೦೬)  ಕೂಡ. ಕದ್ರಿಯ ನವನೀತ ಶೆಟ್ಟಿಯವರು ರಚಿಸಿದ ಈ ನಾಟಕವನ್ನು ನಿರಂಜನ ಸಾಲಿಯಾನರು ನಿರ್ದೇಶಿಸಿದರು. ಇದರ ಮೊದಲ ಪ್ರದರ್ಶನದಲ್ಲಿ ಕದ್ರಿಮಠದ ಸಂಧ್ಯಾನಾಥರೂ ಭಾಗವಹಿಸಿದ್ದರು. ಈ ಎಲ್ಲ ಕಲಾಜಗತ್ತಿನ ಪ್ರಸಂಗಗಳು ಕದ್ರಿಯ ಜೋಗಿಗಳು ತಮ್ಮ ಸಾಂಸ್ಕೃತಿಕ ಅಸ್ಮಿತೆಯನ್ನು  ಮರಳಿ ಪಡೆದುಕೊಳ್ಳುತ್ತಿರುವ ಹಾಗೂ ತಮ್ಮ ಕೈಬಿಟ್ಟು ಹೋಗಿರುವ ಗುಡಿಗಳ ಮೇಲೆ ಹಕ್ಕು ಸಾಧಿಸುವ ಯತ್ನದ ಭಾಗದಂತೆ ತೋರಿದವು.[4]

ಲುಂಕೆಮಲೆ ಮಹಾತ್ಮೆ

ಲುಂಕೆಮಲೆಯಲ್ಲಿ ಸಿದ್ಧೇಶ್ವರ ಯಾನೆ ಭೈರವನ ಜಾತ್ರೆಯಲ್ಲಿ ನಡೆಯುವ ದೊಡ್ಡಾಟವೇ    ‘ಲುಂಕೇಮಲೆ ಮಹಾತ್ಮೆ’; ಇದರ ಮೂಲ ಕರ್ತೃ ಯಾರೆಂದು ತಿಳಿಯದು. ಇದಕ್ಕೆ ಪೂರಕವಾಗಿ ‘ಶ್ರೀನುಂಕೇಮಲೆ ಸಿದ್ಧೇಶ್ವರನ ಪುರಾಣ’ ಎಂಬ ದೊಡ್ಡಾಟದ ಹಸ್ತಪ್ರತಿಯು ಈ ಭಾಗದಲ್ಲಿ ಸಿಗುತ್ತದೆ. ನನಗೆ ಸಿಕ್ಕ ಹಸ್ತಪ್ರತಿಯು ಪಾಲಪ್ಪನಾಯ್ಕ ಎಂಬುವರು ರಚಿಸಿದ್ದು. ಇದು ಹಾಡಲು ಬೇಕಾದ ರಾಗಬದ್ಧವಾದ ರಚನೆಗಳಿರುವ ಒಂದು ಗೀತನಾಟಕ. ಇದರ ಕಥೆ ಹೀಗಿದೆ: ನಂಜೇರಿ ಗ್ರಾಮಸ್ಥರು ಬರಗಾಲ ಬಿದ್ದಾಗ, ಶಿವನಿಗೆ ಮೊರೆ ಹೋಗುತ್ತಾರೆ. ಆಗ ಭೈರವನು ಪ್ರತ್ಯಕ್ಷವಾಗಿ ತಂಗಿ ತುಪ್ಪದಮ್ಮನೊಡನೆ ಲುಂಕೆಮಲೆಗೆ ಬರುತ್ತಾನೆ. ಆಗ ಸ್ಥಳಿಯ ಜನ ಅಲ್ಲಿದ್ದ ರಾಕ್ಷಸಿಯ ಭಯವನ್ನು ಹೇಳಿಕೊಳ್ಳುತ್ತಾರೆ. ಆಗ ಭೈರವನು ಅವಳನ್ನು ಕೊಲ್ಲುವ ಪ್ರತಿಜ್ಞೆಗೈದು ಜೋಗಿವೇಷದಲ್ಲಿ  ಅರಮನೆಗೆ ಹೋಗುತ್ತಾನೆ. ಚುಂಚನಗಿರಿ ಸಾಹಿತ್ಯದಲ್ಲಿ ಭೈರವನೂ ಜೋಗಿಯೂ ಏಕವಾಗುವಂತೆ ಇಲ್ಲೂ ಆಗುತ್ತದೆ.

ನಾಗಭೂಷಣ ಸುತನು ಯೋಗಿಗಳ ವಂದಿತನು ಜೋಗಿಯಾದನು ಅಖಿಳ ಆಗಮವು ಪೊಗಳೆ|

ಗುರುವು ಘೋರಕನನ್ನು ಸ್ಮರಿಸುತಲಿ ಮನದಲ್ಲಿ ಧರಿಸಿದನು ವರವೇಷ|

ಅರಿಯಲಾರಳವು ಕೊರಳಲ್ಲಿ ರುದ್ರಾಕ್ಷಿ ಸರಮಾಲೆ ಹಾಕಿದನು|

ಶಿರದ ಮೇಲೆ ಪಾಗುಯಿರಿಸಿದನು ಮನದಿ ಕಾಷಾಯ ವಸ್ತ್ರಗಳ ಬೇಸರವಿಲ್ಲದೆ ಧರಿಸಿದನು

ಬಗೆಬಗೆಯ ವಸ್ತ್ರಗಳ ಹೆಗಲ ಮೇಲಕೆ ಹಾಕಿ|ನಗುಮುಖದಿ ತಾನಿಂತು| ಸೊಗಸು ಮಾಡಿದನೊ|

ಒಂದು ಕೈಯಲಿ ಕಿನ್ನರಿ ಒಂದು ಕೈಯಲಿ ಸಿಂಗಿಚಂದದಲಿ ಹಿಡಿಯು ನಿಂದ ಭೈರವನೊ|

ಇದು ಜಂಪೆ ತಾಳದಲ್ಲಿ ಇರುವ ಒಂದು ಪದ್ಯ. ಗೋರಖನ ಸ್ಮರಣೆ ಮಾಡಿಕೊಂಡು ಭೈರವನು ಜೋಗಿಯ ವೇಷ ಧರಿಸುವುದು ಗಮನಾರ್ಹ. ಈ ವೇಷವು ಹೆಚ್ಚು ಕಡಿಮೆ ಇಲ್ಲಿಯ ಕಿನ್ನರಿಜೋಗಿಗಳದ್ದು. ಯರಮಲೆ ನಾಡಿನ ಅಧಿಪತಿಯು ಭೈರವ ಜೋಗಿಯನ್ನು ಸತ್ಕರಿಸುತ್ತಾನೆ. ‘ಶ್ರೀಲುಂಕೇಮಲೆ ಸಿದ್ಧೇಶ್ವರನ ಪುರಾಣ’ ಅವನು ಭೈರವ ಜೋಗಿಗೆ ಮನೆಗೆ ಕರೆತಂದು ಬಿದರಕ್ಕಿ ಅನ್ನವನ್ನೂ ಕುದಿವ ಮಾಂಸದ ಸಾರನ್ನೂ ಬಡಿಸುತ್ತಾನೆ. ಅದನ್ನು ತ್ರಿಶೂಲದ ಮೂಲಕ ಭೈರವ ಜೋಗಿಯು ಗೋರಖನಿಗೆ ಅರ್ಪಿಸುತ್ತಾನೆ.  ಸಿದ್ಧಭುಕ್ತಿಯ ಆಚರಣೆ ಈ ನಾಟಕದಲ್ಲಿ ಸಹಜವಾಗಿ ಬಂದಿದೆ. ಇದು ‘ಕದರಿ ಮಂಜುನಾಥ ಮಹಾತ್ಮ್ಯೆ’ಯಲ್ಲಾಗಲಿ ‘ಆದಿಚುಂಚನಗಿರಿ ಸ್ಥಲಮಾಹಾತ್ಮ್ಯ’ಯಲ್ಲಾಗಲಿ ಇಲ್ಲ. ‘ಶ್ರೀನುಂಕೇಮಲೆ ಸಿದ್ಧೇಶ್ವರನ ಪುರಾಣ’ದ ವಿಶಿಷ್ಟತೆ ಎಂದರೆ, ಇದು ಮ್ಯಾಸಬೇಡರ ಜನಾಂಗದ ಚರಿತ್ರೆಯನ್ನೂ ಒಳಗೊಂಡಿರುವುದು. ಯರಮಲೆ ಕಾಟಣ್ಣನನ್ನು ಭಕ್ತನಾಗಿ ಮಾಡಿಕೊಂಡ ಭೈರವಜೋಗಿಯು, ಅವನನ್ನು ಶ್ರೀಶೈಲದ ನಲ್ಲಮಲೆಗೆ ಕರೆದೊಯ್ಯುತ್ತಾನೆ. ಅಲ್ಲಿನ ಬೇಡರಿಗೆ ಯರಮಲೆಯ ಬೇಡರ ಮೇಲಿದ್ದ ಮನಸ್ತಾಪ ನಿವಾರಿಸಿ ಅವರನ್ನು ಕೂಡಿಸುತ್ತಾನೆ. ಮುಂದೆ ಕಾಟಣ್ಣನನ್ನು ಗಾದ್ರಿಮಲೆಯ ರಾಜನಾಗಿ ಸ್ಥಾಪಿಸುತ್ತಾನೆ. ಇಲ್ಲಿ ರಾಕ್ಷಸರನ್ನೂ ರಸಸಿದ್ಧರನ್ನೂ ನಾಶ ಮಾಡಿದ ಬಳಿಕ ತನ್ನಗುರು ಗೋರಖನನ್ನು ಪ್ರಾರ್ಥಿಸುತ್ತಾನೆ. ಗೋರಖನು ಮೈದೋರಿ ಹೀಗೆನ್ನುತ್ತಾನೆ:

ಮೆಚ್ಚಿದೆನು ಭೈರವನೆ ನಿನ್ನಯ ನಿಶ್ಚಲದ ಭಕ್ತಿಯನು ನೆನೆಯುತ|ಬಿಚ್ಚಿಹೇಳುವೆನೊಂದು ಮಾತನು ನಿಶ್ಚಯದಿ ಕೇಳು|೧|ನಾನು ಬೇರೆಯೋ ನೀನು ಬೇರೆಯೋ ಜ್ಞಾನಿ ನೀನಿದು ತಿಳಿದು ಇರುವೆ. ನೀನು ಇಲ್ಲಿಯೇ ನೆಲಸು ನಿನ್ನೊಳು ನಾನು ಇರುವೆ|೨|ಕಾಲಭೈರವನೆಂಬ ನಾಮದಿ ಶೂಲರೂಪವ ತಾಳಿಯಿರು. ಕಾಲಕಾಲದಿ ಸ್ಮರಿಸುತೀಶನ ಲೀಲೆಯಿಂದ |೩|ದೇವ ಈಶನ ದಯದಿ ಇಲ್ಲೆಯ ಬಾವಾಜಿಯ ಮಠವೊಂದು ಆಗ್ವುದು. ಈನಾಮವ ಪಡೆದು ಯಿರುವುದು ಠೀವಿಯಿಂದ ನನ್ನ ಪೀಠದ ಶಿಷ್ಯರಿಲ್ಲಿಯೆ ಉನ್ನತರದ ಅಧಿಕಾರಿ ಎನಿಸುತ| ಇನ್ನು ಧರೆಯೊಳು ನಡೆಯುತಿರುವುದು ಸನ್ನುತದಿ ಪಟ್ಟ|

ಇಲ್ಲಿ ಬಾವಾಜಿ ಮಠ ಸ್ಥಾಪನೆಯಾಗುವ ಮತ್ತು ಅದಕ್ಕೆ ಗೋರಖನ ಶಿಷ್ಯರು ಅಧಿಕಾರಿಗಳಾಗುವ ಆಶಯ ಮುಖ್ಯವಾಗಿದೆ. ಆದರೆ ಲುಂಕೆಮಲೆಯಲ್ಲಿ ಪ್ರದರ್ಶನಗೊಂಡ ಆಟವು ಇದಲ್ಲ. ಅದು ಯರೇನಳ್ಳಿ ಅಜ್ಜಮುನಿ ಎಂಬವವರು ರಚಿಸಿದ್ದು. ನಾಟಕದ ಭಾಗವತರಾಗಿದ್ದ ಯರೇನಹಳ್ಳಿ ಮಾರಯ್ಯ(೫೦) ಇವರ ತಮ್ಮನ ಮಗ. ನಾಟಕವನ್ನು ಪೂಜಾರಹಟ್ಟಿಯ ಲಿಂಗಾಯತರು ತಾವೇ ಕಲಾವಿದರಾಗಿ ಸ್ವಂತ ಖರ್ಚಿನಲ್ಲಿ ಆಡುತ್ತಾರೆ. ೩ ತಿಂಗಳು ಕಾಲ ನಾಟಕ ಕಲಿಸಿದ್ದಕ್ಕೆ  ಮಾರಯ್ಯನವರಿಗೆ ರೂ.೫೦೦ ಸಂಭಾವನೆ ಕೊಡಲಾಗಿತ್ತು. ಲುಂಕೆಮಲೆ ಸಿದ್ಧಪ್ಪನ ಪೂಜೆ ಲಿಂಗಾಯತರಾದ ಕಾರಣ, ಕಲಾವಿದರಲ್ಲಿ ಭಕ್ತಿಯ ಜತೆ ಒಂದು ಬಗೆಯ ಹಕ್ಕುಪ್ರಜ್ಞೆಯೂ ಇತ್ತು. ಜಾತ್ರೆಯು ಹಲವು ಸಮುದಾಯ ಗಳನ್ನು ಕೂಡಿಸಿಕೊಂಡು ನಡೆದರೆ, ನಾಟಕವು ಒಂದು ಸಮುದಾಯದ ಕಲಾವಿದರಿಗೆ ಮೀಸಲಾಗಿತ್ತು. ಈ ಮೀಸಲಾತಿಯ ಕಾರಣ, ನಾಟಕದಲ್ಲಿ ಸಹಜ ಕಲಾವಿದರಾದ ಕಿನ್ನರಿ ಜೋಗಿಗಳ ಗಾಯನೊಮತ್ತು ನಾಟಕೀಯ ಪ್ರತಿಭೆಗಳು ಭಾಗವಹಿಸಲು ಅವಕಾಶವಾಗಿರಲಿಲ್ಲ. ಈ ಆಟವನ್ನು ಜಾತ್ರೆ ಮುಗಿದ ಬಳಿಕ ಪೂಜಾರಹಟ್ಟಿ ಒಳಗೊಂಡಂತೆ, ರಾಯದುರ್ಗ, ಚಳ್ಳಕೆರೆ ಮೊಣಕಾಲ್ಮೂರು ಜಗಳೂರು- ಹೀಗೆ ಲುಂಕೆಮಲೆ ಭಕ್ತರಿರುವ ೨೦-೩೦ ಹಳ್ಳಿಗಳಲ್ಲಿ ಆಡಲಾಗುತ್ತದೆ ಎಂದು ಮಾರಯ್ಯ ಹೇಳಿದರು. ಈ ನಾಟಕದ ಪ್ರದರ್ಶನವು ನಡೆಯುವ ಕೆಲವು ಹಳ್ಳಿಗಳಲ್ಲಿ, ಭೈರವನ ಪೂಜೆಯಿಂದ ನಾಟಕ ಶುರುವಾಗುತ್ತದೆ ಹಾಗೂ ನಾಟಕದ ನಡುವೆ ಪ್ರೇಕ್ಷಕರು ಎದ್ದುಹೋಗಬಾರದು ಎಂಬ ನಿಯಮವೂ ಇದೆಯೆಂದು ತಿಳಿದುಬರುತ್ತದೆ.

‘ಲುಂಕೇಮಲೆ ಮಹಾತ್ಮೆ’  ಆಟದ ಪ್ರಯೋಗದಲ್ಲಿ ಕೆಲವು ಸ್ವಾರಸ್ಯಕರ ಸಂಗತಿಗಳಿದ್ದವು. ಪ್ರಾಸಂಗಿಕವಾಗಿ ಗೋರಖನ ಹೆಸರು ಬರುತ್ತಿದ್ದುದು ಬಿಟ್ಟರೆ, ಇಡೀ ನಾಟಕವು ಕಲ್ಪನೆಗಳಿಂದ ಕೂಡಿದ್ದು ಲುಂಕೆಮಲೆ ಸ್ಥಳಪುರಾಣವನ್ನು ಆಧರಿಸಿತ್ತು. ಹರಕೆಯ ಭಾಗವಾಗಿ ಆಟವನ್ನು  ಭಕ್ತಿಯಿಂದ ಆಡಲಾಗುತ್ತಿತ್ತು.  ಅದರಲ್ಲಿ ಕತೆಗಾಗಲಿ ಕಲಾತ್ಮಕತೆಗಾಗಲಿ ಯಾವ ಜಾಗವೂ ಇರಲಿಲ್ಲ. ಸೀನರಿ ವೇಷಭೂಷಣ ಸಂಭಾಷಣೆ ಎಲ್ಲದರಲ್ಲೂ ಒಂದು ಬಗೆಯ ಸ್ವಚ್ಛಂದತೆಯಿತ್ತು. ಜಾತ್ರೆಯಲ್ಲಿ ನಡೆಯುವ ನಾಟಕಗಳಲ್ಲಿ ಅಸಾಧ್ಯ ಗಲಾಟೆಯಿದ್ದು, ಸಂಭಾಷಣೆ ಸರಿಯಾಗಿ ಕೇಳಿಸುತ್ತಿರಲಿಲ್ಲ. ಕೆಲವು ಪ್ರೇಕ್ಷಕರು ರಂಗಕ್ಕೇ ನುಗ್ಗಿ ಕಲಾವಿದರನ್ನು ಬಾಯಿಗೆ ಬಂದಂತೆ ಟೀಕಿಸುತ್ತಿದ್ದರು. ಕರ್ಪೂರದಮ್ಮನ ಪಾತ್ರಧಾರಿಯು ತನ್ನ ಅಭಿನಯ ನಿಲ್ಲಿಸಿ, ನಾಟಕದ ನಾಯಕನಾದ ಲುಂಕಪ್ಪನ ಪಾತ್ರಧಾರಿಗೇ  ಬೈದನು.  ಒಬ್ಬ ಪ್ರೇಕ್ಷಕನು ಭಾಗವತನಿಗೂ ಬೈದನು. ಕಲಾವಿದರು ನಾಟಕದ ಭಾಗವತನನ್ನು ಲಘುವಾಗಿ ನಡೆಸಿಕೊಳ್ಳುವುದು ಎದ್ದು ಕಾಣುತ್ತಿತ್ತು. ನಾಟಕದ ಮನರಂಜನೆಯು ಅದರ ಕಲಾತ್ಮಕತೆಗಿಂತ ಹೆಚ್ಚಾಗಿ ಅದರ ಅರಾಜಕತೆಯಿಂದಲೇ ಹುಟ್ಟುತ್ತಿತ್ತು. ಪ್ರೇಕ್ಷಕರ ಗದ್ದಲವನ್ನು ಅಡಗಿಸಲು ಭಾಗವತನು ಆಗಾಗ್ಗೆ ಈ ಆಟವನ್ನ ಭಕ್ತಿಯಿಂದ ನೋಡಬೇಕೆಂದೂ ಇದರ ಮಹತ್ವವನ್ನು ವಿವರಿಸುತ್ತಿದ್ದನು. ಆದರೆ ಅವನದು ತುಂಟ ಹುಡುಗರ ತರಗತಿಯನ್ನು ಸಂಭಾಳಿಸಲಾಗದ ಅಸಹಾಯಕ ಮೇಷ್ಟರ ಸ್ಥಿತಿಯಾಗಿತ್ತು.

ಜೋಗಿ ಸಮುದಾಯದಲ್ಲಿ ಒಂದು ಕಾಲದಲ್ಲಿದ್ದ ಹಾಡುವ ಕುಣಿಯುವ ನಾಟಕ ಮಾಡುವ ಕಲೆಯು, ಈಗ ನಾನಾ ಕಾರಣಕ್ಕೆ ಬಿಕ್ಕಟ್ಟಿಗೆ ಸಿಲುಕಿದೆ. ಜೋಗಿಗಳಲ್ಲೇ ಆಧುನಿಕ ರಾದವರು ಹಾಗೂ ಶಿಕ್ಷಿತರು, ತಮ್ಮ ಜನ ಕಿನ್ನರಿ ಬಾರಿಸುತ್ತ ಭಿಕ್ಷಾಟನೆ ಮಾಡುವುದನ್ನು ಒಪ್ಪುವುದಿಲ್ಲ. ಕಲಾವಿದರಾಗುವುದಕ್ಕೂ ಇಷ್ಟಪಡುವುದಿಲ್ಲ. ‘ಸ್ವಾಮಿ, ನೀವು ಕಲಾವಿದರು ಅಂತ ಗೌರವ ಕೊಡ್ತೀರಿ. ಆದರೆ ನಮ್ಮ ಸಮಾಜದಲ್ಲಿ ಇದಕ್ಕೆ ಗೌರವ ಇಲ್ಲ’ ಎಂದು ಗುಡ್ಡಪ್ಪಜೋಗಿ ನಿಷ್ಠುರ ಸತ್ಯ ನುಡಿದರು. ಗುಡ್ಡಪ್ಪ ಭಿಕ್ಷಾಟನೆಗೆ ಹೋಗುವುದಿಲ್ಲ. ಕಲಾವಿದನಾಗಿ ಆಹ್ವಾನ ಬಂದರೆ ಮಾತ್ರ ಹೋಗಿ ಕಾರ್ಯಕ್ರಮ ಕೊಡುವ ಮಟ್ಟಕ್ಕೆ ಬೆಳೆದಿದ್ದಾರೆ. ಆದರೆ ಉಳಿದ ಕಿನ್ನರಿಯವರಿಗೆ ಈ ಆದರ ಇಲ್ಲ. ಅವರು ಕೂಡ  ‘ಕೂಲಿನಾಲಿ ಮಾಡ್ಕೊಂಡು ಬದುಕ್ತೀವಿ. ಈ ಭಿಕ್ಷಕ್ಕೆ ಮಾತ್ರ ಹೋಗಲ್ಲ’ ಎಂದು  ಸ್ಪಷ್ಟವಾಗಿ ನುಡಿದರು. ಜೋಗಿ ಕಲಾವಿದರನ್ನು ಭೇಟಿ ಮಾಡಿರುವ ಅನೇಕ ವಿದ್ವಾಂಸರು, ಕಲಾವಿದರ ಕಲೆ,  ಸಾಮಾಜಿಕ ಅಂತಸ್ತು ಹಾಗೂ ಆರ್ಥಿಕ  ಬಿಕ್ಕಟ್ಟನ್ನು ದಾಖಲಿಸಿದ್ದಾರೆ. ‘‘ಹಿಂದೆ ಮನೆಯ ಮುಂದೆ ಕೂಡಿಸಿ ಅವನಿಂದ ಗಂಟೆಗಟ್ಟಲೆ ಹಾಡಿಸಿ ಕೇಳುತ್ತಿದ್ದ ಜನರೇ ಇಂದು ನಮ್ಮ ಮನೆ ರೇಡಿಯೊ ತಿರುಗಿಸಿದರೆ, ಸೊಗಸಾದ ಹಾಡು ಬರುತ್ತದೆ. ಅಯ್ಯೋ ಜೋಗಪ್ಪ ನಿನ್ನ ಹಾಡು ಯಾರಿಗೆ ಬೇಕು ಎನ್ನುತ್ತಿದ್ದಾರೆ. ನಾನು ಭೈರಜೋಗಿ ರಾಮಚಂದ್ರಪ್ಪನವರನ್ನು ಭೇಟಿಯಾದಾಗ, ಅವರು ಕಣ್ಣಲ್ಲಿ ನೀರುತಂದು,  ‘ಸ್ವಾಮಿ ಬದುಕು ಬಾರಿ ಕಷ್ಟ ಆತು. ಜನ ನಮ್ಮ ಕೈಬಿಟ್ರು. ನಮ್ಮನ್ನು ಹಿಂದುಳಿದವರ ಪಂಗಡ ದಲ್ಲೂ ಸೇರಿಸಿಲ್ಲ. ಸರ್ಕಾರಕ್ಕೆ ಹೇಳಿ ಎಲ್ಲಾದ್ರೂ ಒಂದಿಷ್ಟು ಭೂಮಿ ಕೊಡಿಸಿದ್ರೆ ಬೆಳಕೊಂಡು ಬದುಕೇವು. ನಮ್ಮ ಕಿನ್ನರಿವೇಷ ಎಲ್ಲ ಅಟ್ಟ ಸೇರಿದ್ವು. ಧೂಳೂ ಹತ್ತಿ ನುಸಿ ಹಿಡಿದ್ವು’ಎಂದರು’’[5] ಕಿನ್ನರಿ ಜೋಗಿಗಳಿರುವ ಬಿಷ್ಣುಹಳ್ಳಿಯು ಒಂದು ರಂಗಕಲಾವಿದರ ಊರು. ಅವರ ಮನೆಯ ಅಟ್ಟ ಸೂರುಗಳಲ್ಲಿ ಮದ್ದಲೆ ಗೆಜ್ಜೆಗಳನ್ನು ಕಟ್ಟಿಡಲಾಗಿದೆ.  ಅಲ್ಲಿನ ಹಿರಿಯ ಜೋಗಿಗಳ ಜತೆ ಚರ್ಚಿಸುವಾಗ, ಅವರು ನಾಟಕ ತಂಡ ಕಟ್ಟಿ ಆಡಿದ ನೆನಪುಗಳನ್ನು ಹಂಚಿಕೊಂಡರು. ತಮ್ಮೊಹಾಡುವ ಕುಣಿಯುವ ಸೃಜನಶೀಲತೆಯಿಂದ ಆಕರ್ಷಣೆ ಹುಟ್ಟಿಸುವ ಕಿನ್ನರಿ ಜೋಗಿಗಳ ನಾಟ್ಯ ಪ್ರತಿಭೆಯು, ಅದರ ಸಾಮಾಜಿಕ ಚಲನಶೀಲತೆಯನ್ನು ತಡೆ ಹಿಡಿದ ಅಪರಾಧಿಯೂ ಆಗಿದೆ ಅನಿಸುತ್ತಿತ್ತು.  ಈ ಬಿಕ್ಕಟ್ಟು ಯಾಕಾಗಿ ಸಂಭವಿಸಿದೆ ಎಂದು ಅರ್ಥ ಮಾಡಿಕೊಳ್ಳಬಹುದು. ಆದರೆ ಕಲೆಯ ಉಳಿವಿಗಾಗಿ ಜೋಗಿಗಳು ಗೆಜ್ಜೆಕಟ್ಟಿ ಕಿನ್ನರಿ ಹಿಡಿದು ಬೀದಿ ಸುತ್ತಬೇಕು ಎಂದು ಬಯಸುವುದಕ್ಕೆ ಮಾತ್ರ ಸಾಧ್ಯವಿಲ್ಲ. ಹಾಡಿಕೊಂಡು ಊರಾಡುವ ಕಾಯಕ ಬಿಟ್ಟಿರುವ ಬಿಷ್ಣುಹಳ್ಳಿಯ ಕಿನ್ನರಿಯವರು, ಬೇಸಾಯ ಮಾಡುತ್ತ, ಶಿಕ್ಷಣ ಪಡೆದು, ನೌಕರಿ ಗಳಿಸಿ ಮಾಡಿರುವ ಪ್ರಗತಿಯು, ತಾನೇ ಒಂದು ಕಲೆಯಾಗಿ ಎದ್ದು ಕಾಣುತ್ತದೆ. ಮೂಸಿಯಮ್ಮುಗಳಿಗೆ ವಾದ್ಯಗಳು ಪ್ರದರ್ಶನದ ವಸ್ತುಗಳಾಗಿ ರವಾನೆಯಾಗುವುದು, ನಾಗರಿಕ ಲೋಕದ ನೋಟಕ್ಕಾಗಿ ಮಾತ್ರ ಅಲ್ಲ; ಅವು ಬದಲಾದ ಜನ ಬದುಕಿನ ಪರಿಣಾಮವಾಗಿ ಕೂಡ.

* * *[1]      ‘ಗೋರಕ್ಷಸಿದ್ಧಾಂತ ಸಂಗ್ರಹ’ ‘ಸಿದ್ಧಸಿದ್ಧಾಂತ ಪದ್ಧತಿ’ಗಳಲ್ಲಿ ಇದರ ಚರ್ಚೆ, ಪು.೧೭೩; ‘ಗುರುವೇ  ನೀನೇಕೆ ಮೂಕನಾದೆ’, ನಾಥಸಂದೇಶ, ಮೇ, ೧ರ್ರ್೧

[2]      ಕಡವ ಶಂಭುಶರ್ಮ ಕೃತಿಸಂಚಯ, ಪು.೧೯೩ ಹಾಗೂ ೩೮೧

[3]      ಪುರುಷೋತ್ತಮ ಬಿಳಿಮಲೆಯವರ ‘ಸಿದ್ಧರವೇಷ: ಪ್ರತಿಭಟನೆ ಮತ್ತು ನಿರಸನ’ ಹಾಗೂ ರಾಜಕುಮಾರ್ ದಡ್ಡಂಗಡಿಯವರ ತುಳುನಾಡಿನ ‘ಸೋಣದ ಸಂಭ್ರಮ ಜೋಗಿ ಕುಣಿತ’

[4]      ಈಚೆಗೆ ಜೋಗಿಪುರುಸೆರ್ ಪಾಡ್ದನದ ಕಥೆಯನ್ನು ಆಧರಿಸಿ ‘ಮೈಮೆದ ಜೋಗಿಲು’ ಎಂಬ ತುಳು ಯಕ್ಷಗಾನ ಪ್ರಸಂಗವು ವಿಟ್ಲದಲ್ಲಿ ಪ್ರದಶರ್ನಗೊಂಡ ವರದಿ ಬಂದಿದೆ.  ಅದನ್ನು ನೋಡಲು ನನಗೆ  ಸಾಧ್ಯವಾಗಲಿಲ್ಲ.

[5]       ಬಿ. ಕೃಷ್ಣಪ್ಪ ಬಿ., ಕೃಷ್ಣಪ್ಪ ಚಿಂತನೆಗಳು ಮತ್ತು ಬರಹಗಳು, ಪು. ೧೨೨