ಕದ್ರಿಯ ಜೋಗಿಮಠದ ಮುಖ್ಯಸ್ಥರಾಗಿದ್ದ ಮೋಹನನಾಥರು ಮಠದ ಜೀರ್ಣೋದ್ಧಾರಕ್ಕೆ ಬೇಕಾದ ಸಾರ್ವಜನಿಕ ಸಹಾಯ ಪಡೆಯಲು ಹಿಂದಿಯಲ್ಲಿ ಒಂದು ಕರಪತ್ರ ಹೊರಡಿಸಿದರು. ಅದರಲ್ಲಿ ಕದ್ರಿಮಠದ ಭವ್ಯಚರಿತ್ರೆಯ ವಿವರಣೆಯಿದೆ. ಅದರಲ್ಲಿ ಇರುವ ಒಂದು ವಾಕ್ಯವಿದು:  ‘‘ಇಲ್ಲಿ ವೈದಿಕ ಮಂತ್ರವಿಧಿಗಳ ಪ್ರಕಾರ ನಾಥನಿಗೆ ಪಟ್ಟಾಭಿಷೇಕ ಆಗುತ್ತದೆ’’;  ಇದು ನಿಜಕೂಡ. ತ್ರ್ಯಂಬಕದಿಂದ ಪಾದಯಾತ್ರೆ ಮಾಡಿಕೊಂಡು ಬರುವ  ಜೋಗಿಮಠದ ಅರಸನನ್ನು ಪಟ್ಟಾಭಿಷೇಕದ ಸಂದರ್ಭದಲ್ಲಿ ಕೂರಿಸಿ ಹೋಮ ಮಾಡುವ, ಪಟ್ಟದ ಕತ್ತಿಯನ್ನು ಕೊಡುವ, ಪಟ್ಟಾಭಿಷೇಕದ ಜಲವನ್ನು ಎರೆಯುವ ಕಾರ್ಯಗಳನ್ನು  ಪರಂಪರಾಗತವಾಗಿ ಬಂದಿರುವ  ದೇರೇಬೈಲಿನ ತಂತ್ರಿಗಳು ಮಾಡುತ್ತಾರೆ. ನಾಥಪಂಥಕ್ಕೆ ಮೊದಲಿಂದಲೂ ತಾಂತ್ರಿಕ ಪಂಥಗಳ ಜತೆ ಒಡನಾಟ ಇರುವ ಕಾರಣ, ಈ ತಾಂತ್ರಿಕ ಆಚರಣೆಗಳು ಬಂದಿರಬಹುದು. ಇಡೀ ಭಾರತದಲ್ಲಿ ಕದ್ರಿಮಠದ ಮುಖ್ಯಸ್ಥನಿಗೆ ಮಾತ್ರ ರಾಜಾ ಎಂಬ ಬಿರುದು ಇರುವ ಕಾರಣ, ರಾಜನಿಗೆ ಬೇಕಾಗಿ ಈ ಆಚರಣೆಗಳು ಹುಟ್ಟಿರಬಹುದು. ಸಮಸ್ಯೆಯೆಂದರೆ, ಮೇಲ್ಕಾಣಿಸಿದ ವಾಕ್ಯವನ್ನು ಯಾವ ಚಾರಿತ್ರಿಕ ವೈರುಧ್ಯವನ್ನೂ ಅನುಭವಿಸದೆ ನಾಥರು ಅಚ್ಚು ಮಾಡಿರುವುದು. ಇದೇ ಕದ್ರಿಯಲ್ಲಿದ್ದ ಭೂತೇಶ್ವರನಾಥರು ಪುತ್ತೂರಿನ ಕಡವ ಶಂಭುಶರ್ಮರ ಮೂಲಕೊಅನುವಾದಿಸಿ ಪ್ರಕಟಿಸಿರುವ ನಾಥಸಿದ್ಧಾಂತದ ಗ್ರಂಥಗಳಲ್ಲಿ,  ಇಂಥ ವೈದಿಕ ಮಂತ್ರವಿಧಿ ಆಚರಣೆಗಳ ಬಗ್ಗೆ ಬೇರೆಯೇ ವಿವರಣೆ ಇದೆ. ‘ಸಿದ್ಧಸಿದ್ಧಾಂತ ಪದ್ಧತಿ’ ‘ಅಮನಸ್ಕಯೋಗ’ ‘ಅಮರೌಘಶಾಸನ’ ‘ಚರ್ಪಟಿನಾಥ  ಶತಕ’  ಮುಂತಾದ ಗ್ರಂಥಗಳು, ಮೋಕ್ಷವು ವೇದಶಾಸ್ತ್ರಪುರಾಣ ತರ್ಕ ಗಳಲ್ಲಿ ಅಥವಾ ಯಾಗ ಪೂಜೆಗಳಲ್ಲಿ ಸಿಕ್ಕುವುದಿಲ್ಲ. ಗುರುವಿನ ಅಧೀನದಲ್ಲಿ ಯೋಗವಿದ್ಯೆ ಕಲಿತು, ಸಾಧನೆ ಮಾಡುವ ಅವಧೂತನಿಗೆ ಮಾತ್ರ ಅದು ಸಿಗುತ್ತದೆ ಎಂದು ಸ್ಪಷ್ಟವಾಗಿ ಹೇಳುತ್ತವೆ. ಬುದ್ಧನಿಂದ ಆರಂಭಿಸಿ ಚಾರ್ವಾಕರು ನಾಥರು ಶರಣರ ತನಕ, ಭಾರತದಲ್ಲಿ ವಿಭಿನ್ನ ಪಂಥ ದರ್ಶನ ಹಾಗೂ ಧರ್ಮಗಳು, ಯಾಕೆ ವೇದಪ್ರಮಾಣ, ವರ್ಣಪದ್ಧತಿ ಹಾಗೂ ಯಾಗಯಜ್ಞಗಳನ್ನು ಇಷ್ಟು ನಿಷ್ಠುರವಾಗಿ ನಿರಾಕರಿಸುವ ಸನ್ನಿವೇಶ ಬಂದಿತು ಎಂಬುದು ಮೂಲಭೂತ ಪ್ರಶ್ನೆಯಾಗಿದೆ. ಬಹುಶಃ ಗೋರಖನು ತನ್ನ ಕಾಲದ ವರ್ಣ ಪದ್ಧತಿಯು ಉಂಟುಮಾಡಿದ್ದ ಅಮಾನುಷತೆಗೆ  ತೀವ್ರವಾದ  ಪ್ರತಿರೋಧ ಒಡ್ಡಲೆಂದೇ ಅವಧೂತರು ಅತ್ಯಾಶ್ರಮಿಗಳು ಎಂದು ವಿಧಿಸಿರಬಹುದು.

[1] ಈ ಮೂಲಕ ಭಾರತದ ಬಹುತೇಕ ಕೆಳಸ್ತರದ ಸಮುದಾಯಗಳು ನಾಥಪಂಥದ ಜತೆಗೆ ಸಂಬಂಧ ಏರ್ಪಡಿಸಿಕೊಳ್ಳಲು, ಸಾಮಾಜಿಕವಾಗಿ ಕ್ರಾಂತಿಕಾರಕವಾದ ಈ ಲಕ್ಷಣಗಳು ಕಾರಣವಾಗಿರಬಹುದು. ಈ ಅರ್ಥದಲ್ಲಿ ನಾಥವು ಭಾರತದ ಅವಧೂತ ಚಳುವಳಿಗಳ ತಾಯಿ ಎನ್ನಬಹುದು.

ಆದರೆ ಭಾರತದ ದರ್ಶನ ಹಾಗೂ ಪಂಥಗಳ ಚರಿತ್ರೆಯಲ್ಲಿ ಇನ್ನೊಂದು ಪಲ್ಲಟ ಸಂಭವಿಸಿತು. ಅದೆಂದರೆ, ಈ ಅವೈದಿಕ, ಅನಾತ್ಮವಾದಿ, ಭೌತವಾದಿ ಎಂದು ಕರೆಯ ಬಹುದಾದ ದರ್ಶನ ಹಾಗೂ ಪಂಥಗಳು, ಆಸ್ತಿಕವಾದಿ ಕರ್ಮವಾದಿ ವೇದ ಪ್ರಮಾಣವಾದದ ಅಂಶಗಳನ್ನು ಒಳಗೊಳ್ಳತೊಡಗಿದ್ದು. ಸಾಂಖ್ಯ ಹಾಗೂ ಯೋಗದಂತಹ ದರ್ಶನಗಳಿಗೂ ಕಾಪಾಲಿಕ, ಕೌಳ ನಾಥ ಮುಂತಾದ ಪಂಥಗಳಿಗೂ ಈ ಗತಿ ಪ್ರಾಪ್ತವಾಯಿತು.[2] ಅಷ್ಟೇಕೆ ಬೌದ್ಧರ ಮಹಾಯಾನದಲ್ಲೂ ಈ ಸಂಗತಿಗಳು ಪ್ರವೇಶಿದವು. ನಾಥಪಂಥದಲ್ಲಿ ಕೂಡ ವರ್ಣಪದ್ಧತಿ, ಅಸ್ಪೃಶ್ಯತೆ, ಯಜ್ಞದ ಸಮರ್ಥನೆ, ಆಸ್ತಿಕವಾದ, ಪುನರ್ಜನ್ಮ, ಕರ್ಮ ನರಕಗಳ ಕಲ್ಪನೆಗಳು ಕಾಲಕ್ರಮೇಣ ಪ್ರವೇಶಿಸಿದವು. ‘ನವನಾಥಕಥಾ’ ‘ಗೋರಖ ಸಿದ್ಧಾಂತ ಸಂಗ್ರಹ’ ಮುಂತಾದ ಕೃತಿಗಳಲ್ಲಿ, ಗೋರಖನು ‘ಸಿದ್ಧಸಿದ್ಧಾಂತ ಪದ್ಧತಿ’ ಹಾಗೂ ‘ಗೋರಖಬಾನಿ’ಯಲ್ಲಿ ಹೇಳಿರುವುದಕ್ಕೆ ಪ್ರತಿಯಾದ ಸಂಗತಿಗಳಿವೆ.   ಯಾಗ ಮಾಡಿದರೆ ಮುಕ್ತಿ ಸಿಗುವುದಿಲ್ಲ ಎಂದು ‘ಸಿದ್ಧಸಿದ್ಧಾಂತ ಪದ್ಧತಿ’ ಹೇಳಿದರೆ, ಇಲ್ಲಿ ‘‘ಯಜ್ಞ ದಾನ ಉಪವಾಸ  ಜಪ ತಪ ಸದಾಚಾರ ಮುಂತಾದ ವೈದಿಕ ಕರ್ಮ ಮಾಡಬೇಕು. ವೇದವಿರೋಧಿ ಮತಗಳನ್ನು ತಿರಸ್ಕರಿಸಬೇಕು,  ಶೃತಿಸ್ಮೃತಿಗಳ ಜತೆ ಸಂವಾದ ಮಾಡಬೇಕು’ ಎಂಬ ವಿಚಾರಗಳು ಬರುತ್ತವೆ. ಇಲ್ಲಿ ಮಚೇಂದ್ರನ ಮೂಲಕ ವರ್ಣಾಶ್ರಮ ಧರ್ಮದ ಸಮರ್ಥನೆಯನ್ನೂ ದ್ವಿಜ ಪಾರಮ್ಯವನ್ನೂ ಮಾಡಿಸಲಾಗಿದೆ. ಯೋಗಿಯೊಬ್ಬ ಪಟ್ಟಕ್ಕೆ ಬರುವಾಗ  ಉತ್ತಮ ಜಾತಿಯವರಿಗೆ ಚಿನ್ನ ಗೋವು ಅನ್ನ ವಸ್ತ್ರಗಳ ದಾನಮಾಡುವ ಮಾತು ಬರುತ್ತದೆ.[3] ‘ಕದಲಿ ಮಂಜುನಾಥ ಮಹಾತ್ಮ್ಯೆ’ವೂ ಸಂಸ್ಕೃತೀಕರಣ ಪಡೆದ ಪಠ್ಯವಾಗಿದೆ.

ಪಂಥ ಮತ್ತು ದರ್ಶನಗಳನ್ನು ಕುರಿತು ಆಧುನಿಕ ಕಾಲದಲ್ಲಿ ಸಿಗುವ ವ್ಯಾಖ್ಯಾನಗಳಲ್ಲೂ  ಸಂಸ್ಕೃತೀಕರಣದ ಸಮಸ್ಯೆಯಿದೆ. ಕಡವ ಶಂಭುಶರ್ಮರು ತಮ್ಮ ನಾಥ ಸಿದ್ಧಾಂತ ಗ್ರಂಥಗಳ ಅನುವಾದಕ್ಕಿಂತ ಅವುಗಳ ವ್ಯಾಖ್ಯಾನ ಮಾಡುವಾಗ, ಈ ಸಮಸ್ಯೆ ಕೆಲವು ಕಡೆ ಕಾಣಿಸುತ್ತದೆ.  ಗಾಂಧಿವಾದಿಯಾಗಿದ್ದ ಶರ್ಮರು (೧೮೯೫-೧೯೬೪) ಪುತ್ತೂರಿನಲ್ಲಿ  ಶಿಕ್ಷಕರೂ ಆಯುರ್ವೇದ ಪಂಡಿತರೂ ಆಗಿದ್ದರು. ಹವ್ಯಕರಾದ ಅವರು ಅದ್ವೈತ ಸಿದ್ಧಾಂತದಲ್ಲಿ ದೊಡ್ಡ ವಿದ್ವತ್ತು ಸಂಪಾದಿಸಿದ್ದರು. ಸೌದೆ ವ್ಯಾಪಾರವನ್ನೂ ಮಾಡುತ್ತಿದ್ದ ಶರ್ಮರು ಒಮ್ಮೆ ಲಾರಿ ಅಪಘಾತದಲ್ಲಿ ಕಾಲನ್ನು ಕಳೆದುಕೊಂಡರು. ಅಂಗವಿಕಲರಾದ ಬಳಿಕ ಅವರು ಹೆಚ್ಚು ಅಧ್ಯಯನ ಹಾಗೂ ಅಧ್ಯಾತ್ಮದತ್ತ ವಾಲಿದರು. ಆ ಹೊತ್ತಿಗೆ ನಾಥಪಂಥದ ಪ್ರಚಾರಕ್ಕೆಂದು ಬಂದಿದ್ದ ಭೂತೇಶ್ವರನಾಥರ ಸಂಪರ್ಕಕ್ಕೆ ಬಂದು, ನಾಥಪಂಥದ ದಾರ್ಶನಿಕ ಗ್ರಂಥಗಳನ್ನು   ಅನುವಾದಿಸಿದರು. ಇದೊಂದು ಬೆಲೆಕಟ್ಟಲಾಗದ ಅಪೂರ್ವ ಕೆಲಸವಾಗಿದೆ. ಆದರೆ ಶರ್ಮರು ನಾಥದರ್ಶನದಲ್ಲಿ ಇರುವ ದೃಷ್ಟಿಕೋನವನ್ನು  ಕೆಲವು  ಕಡೆ ಸರಿಯಾಗಿ ಗ್ರಹಿಸದೆ ಹೋದರೇನೂ ಎಂದು ಅನುಮಾನ ಬರುತ್ತದೆ. ಮತ್ತೆ ಕೆಲವುಕಡೆ  ನಾಥದರ್ಶನದ ಮೂಲ ಆಶಯಕ್ಕೆ ವ್ಯತಿರಿಕ್ತವಾದ ವ್ಯಾಖ್ಯಾನ ಮಾಡುತ್ತಾರೆ ಎಂದೂ ಅನಿಸುತ್ತದೆ.[4] ಇದಕ್ಕೆ ಕಾರಣ, ಅವರ ಅದ್ವೈತದ ಒಲವೊ ಅಥವಾ ಸಾಮಾಜಿಕ ದೃಷ್ಟಿಕೋನವೊ ತಿಳಿಯುವುದಿಲ್ಲ. ಈ ಸಮಸ್ಯೆಯು ಶರ್ಮರಲ್ಲಿ ಅಲ್ಲ, ಸ್ವತಃ ನಾಥರಲ್ಲೂ ಇದೆ. ಕದ್ರಿ ಝುಂಡಿಯ ನಾಯಕ ರಾಗಿದ್ದ ಸೂರಜನಾಥರು ಕದ್ರಿಬೆಟ್ಟದಲ್ಲಿ ಮಾಡಿದ ಪ್ರವಚನಗಳು, ಬ್ರಾಹ್ಮಣ ಪುರಾಣಗಳ ನೆಲೆಯಲ್ಲಿಯೇ ಇದ್ದವು. ಒರಿಸ್ಸಾದಿಂದ ಬಂದಿದ್ದ ವೈಚಾರಿಕ ಯೋಗಿ ಶಿವನಾಥರು ಇದನ್ನು ಕೇಳಿ ಪರಿತಾಪ ಪಟ್ಟರು.

ನಾಥಪಂಥವು ಪ್ರಧಾನವಾಗಿ ಶಿವ ಸಂಸ್ಕೃತಿಯ ಪಂಥ. ಗೋರಖನನ್ನು ಶಿವಗೋರಕ್ಷ ಎಂದೇ ಕರೆಯಲಾಗುತ್ತದೆ. ಶಿವನನ್ನು ನವನಾಥರಲ್ಲಿ ಮೊದಲನೆಯ ಆದಿನಾಥ ಎನ್ನಲಾಗುತ್ತದೆ. ಮಚೇಂದ್ರನು ಮೀನರೂಪದಲ್ಲಿ ಶಿವಪಾರ್ವತಿಯರ ಸಂವಾದವನ್ನು ಕದ್ದಾಲಿಸಿದ ಘಟನೆಯಿಂದ ಇದರ ಚರಿತ್ರೆ ಶುರುವಾಗುತ್ತದೆ. ನಾಥರು ಆರಾಧಿಸುವ ಶಕ್ತಿಯು ಶಿವನ ಮಡದಿ; ನಾಥರ ಆರಾಧ್ಯದೈವ ಭೈರವನೂ ಶಿವಸ್ವರೂಪಿ. ಭಾರತದ ಬಹುತೇಕ ತಂತ್ರ ಪಂಥಗಳು ಶಿವಕೇಂದ್ರಿತವಾದವು. ಮುಂದೆ ನಾಥಪಂಥದಲ್ಲಿ ವೈಷ್ಣವ ಪಂಥಗಳ ಪ್ರವೇಶವಾಯಿತು. ಇವುೊ ಕೆಲಮಟ್ಟಿಗೆ ನಾಥಪಂಥದ ಬ್ರಾಹ್ಮಣೀಕರಣಕ್ಕೆ ಜಾಗ ನಿರ್ಮಿಸಿ ಕೊಟ್ಟವು ಅನಿಸುತ್ತದೆ. ಕರ್ನಾಟಕಕ್ಕೆ ಹೋಲಿಸಿದರೆ, ಮರಾಠಿ ನಾಥಪಂಥವು ಹೆಚ್ಚು ಬ್ರಾಹ್ಮಣೀಕರಗೊಂಡಿತು. ಜಾತಿಯಿಂದ ಬಹಿಷ್ಕೃತರಾದರೂ ನಾಥಪಂಥದ ಜತೆ  ಅನುಸಂಧಾನ ಮಾಡಿದ ಜ್ಞಾನೇಶ್ವರ ಮುಂತಾದವರು ಉತ್ತಮ ಜಾತಿಯವರಾಗಿದ್ದರು. ಮರಾಠಿ ‘ನವನಾಥ ಕಥಾಸಾರ’ದಲ್ಲಿ ವಿಷ್ಣುವು ಜ್ಞಾನೇಶ್ವರನಾಗಿಯೂ ನವನಾರಾಯಣರು ನವನಾಥರಾಗಿಯೂ ಅವತಾರವೆತ್ತುವ ಕಥೆ ಸೇರಿತು. ಇಂದ್ರ ಮಾಡುವ ಯಾಗಕ್ಕೆ ನವನಾಥರು ಹಾಜರಾಗುವ ಪ್ರಸಂಗವೂ ಇದರಲ್ಲಿದೆ.  ಜ್ಞಾನೇಶ್ವರ ಮೂಲದಿಂದ ಬಂದ ಕರ್ನಾಟಕದ ಸಿಂದಗಿಯ ಸಿದ್ಧ ಸಂಪ್ರದಾಯ ಕೂಡ  ಬ್ರಾಹ್ಮಣೀಕರಣ ತಳೆಯಿತು. ಇದರಿಂದ ವೈಷ್ಣವೀಕರಣವು ಯಾವಾಗಲೂ ಸಂಸ್ಕೃತೀಕರಣಕ್ಕೆ ಹಾದಿ ಮಾಡಿಕೊಡುತ್ತದೆ ಎಂದು ಸಾಧಾರಣೀಕರಣ ಮಾಡಲಾಗುವುದಿಲ್ಲ. ಕಬೀರಪಂಥಿಗಳೂ ಬಂಗಾಲದ ಬಾವುಲರು ವೈಷ್ಣವೀಕರಣ ಪಡೆದರೂ ಸಂಸ್ಕೃತೀಕರಣ ಆಗಲಿಲ್ಲ.  ಅಲ್ಲಿ ಜಾತಿ ವ್ಯವಸ್ಥೆ, ಪುರೋಹಿತ ಶಾಹಿ, ವೇದಶಾಸ್ತ್ರಗಳ ಸ್ಪಷ್ಟ ನಿರಾಕರಣೆಯಿದೆ.

ಆದರೆ ಸಾಮಾಜಿಕವಾಗಿ ಕೆಳಜಾತಿಯವರು ಮೇಲುಜಾತಿಯ ಕೆಲವು ಆಚಾರಗಳನ್ನು ಅನುಕರಿಸುವ ಕಾರಣ, ಸಂಸ್ಕೃತೀಕರಣವು ಭಾರತದಾದ್ಯಂತ ಕಾಣಸಿಗುವ ಒಂದು ಸಾಮಾನ್ಯ ವಿದ್ಯಮಾನವಾಗಿದೆ. ನಾಥರು ಕೊರಳಿಗೆ ಹಾಕುವ ಕುರುಬುದಾರದ ಶೈಲಿಯನ್ನು ‘ಜನೇವಾ’ ಎಂದು ಕರೆಯಲಾಗುತ್ತಿದೆ. ನಾಥರ ಜನೇವಾ ದೀಕ್ಷೆಯಲ್ಲಿ ಕೆಲವು ಕಡೆ ಗಾಯತ್ರಿ ಮಂತ್ರ ಪಠಿಸಲಾಗುತ್ತಿದೆ. ಕರ್ನಾಟಕದ ಅನೇಕ ಭೈರವಸ್ಥಾನಗಳು ಹಾಗೂ ಸಿದ್ಧರಮಠಗಳು ಸಂಸ್ಕೃತೀಕರಣ ಪಡೆದಿವೆ. ಗುಡಿಯ ಸಂಪತ್ತು ಹಾಗೂ  ಪೂಜೆಯ ಹಕ್ಕುಗಳು ಎಲ್ಲ ಬಗ್ಗೆಯ ಪಂಥೀಯ ದೈವಿಕ ಬೇಲಿಗಳನ್ನು ಮುರಿದು ಹೊಸ ಸಂಗತಿಗಳನ್ನು ಒಳನುಗ್ಗಿಸಿ ಬಿಡುತ್ತಿವೆ.  ಕರ್ನಾಟಕದ ಮೂರು ನಾಥಸ್ಥಾನದಲ್ಲಿ ಇರುವ ಸಂಸ್ಕೃತೀಕರಣದ ಸ್ವರೂಪ ವನ್ನು ಇಲ್ಲಿ ಗಮನಿಸಬಹುದು.

೧. ಕದ್ರಿ ಮತ್ತು ವಿಟ್ಲ ಮಠಗಳು, ಚುಂಚನಗಿರಿ ಲುಂಕೆಮಲೆ ಹಂಡಿಬಡಗನಾಥ ಮಠಗಳಿಗೆ ಹೋಲಿಸಿದರೆ ಹೆಚ್ಚು ಸಂಸ್ಕೃತೀಕರಣ ಪಡೆದವು. ಇದಕ್ಕೆ ಕಾರಣ, ಕರಾವಳಿಯಲ್ಲಿ ಕೆಳಸ್ತರದ ಜಾತಿಗಳ ಮೇಲಿರುವ ಉಚ್ಚಜಾತಿಯವರ ಜೀವನ ಪದ್ಧತಿಯ  ಒತ್ತಡಗಳು.  ಕದ್ರಿ ಪರಿಸರದ ಜೋಗಿ ಸಮದಾಯದವರು ತಮಗೆ ಗುರುಗಳಾದ ನಾಥಜೋಗಿಗಳನ್ನು, ಕರಾವಳಿಯ ಬ್ರಾಹ್ಮಣ ಮಠಗಳ ಸ್ವಾಮಿಗಳ ಜತೆ ತುಲನೆ ಮಾಡಿ ನೋಡುವ ಒಂದು ಅಭ್ಯಾಸ ರೂಢಿಸಿಕೊಂಡಿರುವುದು ಸಾಮಾನ್ಯವಾಗಿ ಕಾಣುತ್ತದೆ.   ಕದ್ರಿಮಠದ ನಾಥನ ಆಯ್ಕೆ ನಡೆಯುವ ನಾಸಿಕ್ ತ್ರ್ಯಂಬಕೇಶ್ವರಕ್ಕೆ ಬಂದಿದ್ದ ಕದ್ರಿಯ ಜೋಗಿ ಸಮುದಾಯದ ಅನೇಕರು, ಗೋರಖನಾಥನ ಅಖಾಡದಲ್ಲಿ ಸೇರಿದ್ದ ನಾಥರು ಸ್ನಾನ ಮಾಡದಿರುವುದು, ಗುಡಿಗೆ ಹೋಗದಿರುವುದು, ಸಿಗರೇಟು ಅಥವಾ ಚಿಲುಮೆ ಸೇದುತ್ತ ಓಡಾಡುವುದು ಇವನ್ನೆಲ್ಲ ಕಸಿವಿಸಿಯಿಂದ ಗಮನಿಸುತ್ತಿದ್ದರು. ಕದ್ರಿಮಠದಲ್ಲಿ ಪೂಜಾರಿಯಾಗಿ ಕೆಲಸ ಮಾಡುವ, ನಾಥರ ಜತೆ ಬಹುಕಾಲ ಒಡನಾಟ ಮಾಡಿರುವ ಅನುಭವವುಳ್ಳ ಉಮೇಶನಾಥ ಜೋಗಿಯವರ ಜತೆ ಮಾಡಿದ ಚರ್ಚೆಯಲ್ಲಿ, ಈ ಶಿಷ್ಟ ದೃಷ್ಟಿಕೋನವು ನಿಚ್ಚಳವಾಗಿ ತೋರಿಬಂದಿತು. ಉಮೇಶನಾಥರ ಪ್ರಕಾರ ಹೆಚ್ಚಿನ ನಾಥಯೋಗಿಗಳು  ಗರ್ವಿಷ್ಟರು. ಒರಟರು. ಶಿಸ್ತಿಲ್ಲ. ಕೊಳಕರು. ಬೆಳಿಗ್ಗೆ ಎದ್ದೊಡನೆ ಸ್ನಾನಮಾಡದೆ ಗಾಂಜಾ ಸೇದುತ್ತಾರೆ. ನಾನಾ ಜಾತಿಗಳಿಂದ ನಾಥಪಂಥಕ್ಕೆ ಜನ ಬಂದು ಸೇರುವುದು ಹಾಗೂ ಅವರ ಪೂರ್ವಾಪರ ನೋಡದೆ ದೀಕ್ಷೆ ಕೊಡುವುದು ಈ ಅಶಿಸ್ತಿಗೆ ಕಾರಣ. ಬಹುಶಃ ಸ್ನಾನದಂತಹ ದೇಹ  ಶುದ್ಧತೆಯ  ಕಲ್ಪನೆಯು ದಟ್ಟವಾಗಿರುವ ಕರಾವಳಿ ಪರಿಸರದಲ್ಲಿ ಬೆಳೆದಿರುವ ಹಾಗೂ ತಮ್ಮ ಮದುವೆಗಳಿಗೆ ಬ್ರಾಹ್ಮಣ ಪುರೋಹಿತರನ್ನು  ಕರೆಸುವ ಸಂಪ್ರದಾಯ ಇರುವ ಜೋಗಿಗಳಿಗೆ, ಹೀಗೆ ಅನಿಸುವುದು ಸಹಜವಾಗಿದೆ. ಆದರೆ ಗೋರಖನು ಹೇಳುವಂತೆ ಅವಧೂತರು ಹಾಕುವ ಬಟ್ಟೆ, ಮಲಗುವ ತಾಣ, ಉಣ್ಣುವ ಊಟದ ಬಗೆಗಿನ ಕಲ್ಪನೆಗಳೇ ಬೇರೆಯಿವೆ.. ಯೌಗಿಕ ಪಂಥಗಳು ದೈಹಿಕ ಶುದ್ಧತೆಯನ್ನು ಒಂದು ಮೌಲ್ಯವಾಗಿ ಒಪ್ಪುವುದಿಲ್ಲ.

ಕದ್ರಿಯ ನವನಾಥ ಕೆರೆಗಳ ಮೇಲಿರುವ ಛತ್ರದ ಗೋಡೆಯಲ್ಲಿ, ನವನಾಥರು ಧುನಿ ಹಾಕಿಕೊಂಡು ಭಂಗಿ ಸೇದುತ್ತಿರುವ ಚಿತ್ರಗಳಿವೆ. ಒಮ್ಮೆ ಅದರಲ್ಲಿ ವೈದಿಕರು ಹೋಮ ಮಾಡುತ್ತಿದ್ದರು. ಎರಡೂ ಬೆಂಕಿಯ ಕ್ರಿಯೆಗಳೇ. ಆದರೆ ಆಶಯದಲ್ಲಿ ಸಂಪೂರ್ಣ ಭಿನ್ನ. ವಜ್ರಯಾನದಿಂದ ಶೈವ ನಾಥಪಂಥಕ್ಕೆ ಹೊರಳಿದ ಕದ್ರಿಯು ಈಗ ವೈದಿಕೀರಣದತ್ತ ಹೊರಳುತ್ತಿದೆ. ಕದ್ರಿಮಠಕ್ಕೆ ಲಗತ್ತಾಗಿರುವ ಪರಶುರಾಮನ ಸಂಬಂಧವು ಸಂಸ್ಕೃತೀಕರಣಕ್ಕೆ  ಒಂದು ನೆಪವಾಗಿದೆ. ಶಿವನನ್ನೂ ಅರ್ಚಿಸುವ ಸ್ಮಾರ್ತ ಅರ್ಚಕರ ಪ್ರವೇಶದಿಂದ ನಾಥರ ಗುಡಿಗಳಲ್ಲಿ ಈಗಾಗಲೆ ಒಂದು ಬಗೆಯ ಸಂಸ್ಕೃತಿಕರಣದ ವಾತಾವರಣವಿದೆ.  ಕದ್ರಿಯ ಜೋಗಿ ಸಮುದಾಯಕ್ಕೆ  ಮಂಜುನಾಥ ಗುಡಿಯ ವಿಷಯದಲ್ಲಿ ಪುರೋಹಿತರ ಜತೆ ಅನೇಕ ಕಹಿ ಅನುಭವಗಳಾಗಿವೆ. ಕದ್ರಿಮಠದ ನಾಥರನ್ನು ಗರ್ಭಗುಡಿಯಲ್ಲಿ ಬಿಟ್ಟುಕೊಳ್ಳಲು ಮಾಡಲಾದ ಅಡ್ಡಿಯ ಪ್ರಸಂಗಗಳು ಅವರ ಸ್ಮೃತಿಯಲ್ಲಿವೆ. ಆದರೆ ಸಾಮಾಜಿಕ ಜೀವನದಲ್ಲಿ  ಬ್ರಾಹ್ಮಣೀಕರಣದ ಮಾದರಿ ಒಪ್ಪಿಕೊಂಡಿರುವ ಕಾರಣದಿಂದ, ಈ ಕುರಿತು ಅವರಲ್ಲಿ ಒಂದು ಬಗೆಯ ದ್ವಂದ್ವ ಏರ್ಪಟ್ಟಿದೆ.

೨. ಚುಂಚನಗಿರಿ ಮಠವು ೧೯೨೬ರಲ್ಲಿ ನಾಥಸಂಪ್ರದಾಯದ ಸಂಬಂಧವನ್ನು ಕಳೆದುಕೊಂಡ ಬಳಿಕ, ಒಂದು ಬಗೆಯಲ್ಲಿ ಶೂದ್ರೀಕರಣಕ್ಕೆ ಒಳಗಾಯಿತು. ಈ ಸೀಮೆಯ ಭೈರವಾರಾಧಕರು ಹಾಗೂ ಕಾಪಾಲಿಕರು, ಹಿಂದಿನ ಶೈವಕಾಪಾಲಿಕ ಆಚರಣೆಗಳನ್ನೇ ಮುಂದುವರಿಸಿದರು. ಚುಂಚನಗಿರಿ ಜೋಗಪ್ಪ ಸಂಪ್ರದಾಯದ ಜತೆಗೆ ಅಲ್ಲಿನ ಶ್ರೀವೈಷ್ಣವರ ದಾಸಪ್ಪ ಸಂಪ್ರದಾಯವು ಸೇರಿಕೊಂಡರೂ, ದಾಸಪ್ಪಗಳು ದಲಿತ ಸಂಸ್ಕೃತಿಯನ್ನು ಪ್ರತಿನಿಧಿಸುವ ಕಾರಣ, ಸಂಸ್ಕೃತೀಕರಣಕ್ಕೆ ಅವಕಾಶ ಆಗಲಿಲ್ಲ. ಜತೆಗೆ ಒಕ್ಕಲಿಗರನ್ನು ಹಾಗೂ ಕಾಪಾಲಿಕರನ್ನು ಪ್ರಭಾವಿಸುವ ಮೇಲುಜಾತಿಯ ಸಾಮಾಜಿಕ ಯಜಮಾನಿಕೆಯು, ಇಲ್ಲಿನ ಗ್ರಾಮೀಣ ಭಾಗದಲ್ಲಿ ಇಲ್ಲದಿರುವುದು ಇನ್ನೊಂದು ಕಾರಣವಾಗಿತ್ತು. ಆದರೆ ಚುಂಚನಗಿರಿ ಮಠವು ೨೦ನೇ ಶತಮಾನದ ಕೊನೆಯ ದಶಕದಲ್ಲಿ ವೈದಿಕ ಸ್ಪರ್ಶ ಪಡೆಯತೊಡಗಿತು. ಇದಕ್ಕೆ ೨ ಕಾರಣಗಳಿದ್ದಂತೆ ತೋರುತ್ತದೆ. ೧. ಮೊದಲ ಒಕ್ಕಲಿಗ ಸಮುದಾಯದ ಸ್ವಾಮಿಯಾದ ಭಕ್ತನಾಥರ ನಂತರ ಬಂದವರು ನಾಥದೀಕ್ಷೆಯಿಲ್ಲದವರು.  ರಾಮಕೃಷ್ಣ ಆಶ್ರಮದ ಹಿನ್ನೆಲೆಯಿಂದೊಬಂದ ಇವರು, ಶಿಷ್ಟ ಆಚರಣೆಗಳನ್ನು ಆರಂಭಿಸಿದರು. ‘ಪ್ರಸ್ತುತದಲ್ಲಿ ಹಿಂದಿನ ಸಂಪ್ರದಾಯಗಳನ್ನು ಪರಿಷ್ಕರಿಸಿ ಜೋಗಪ್ಪ ಚೂರದಾರ ಹಾಗೂ ಸುಬೇದಾರರನ್ನು ತರಪೇತುಗೊಳಿಸಲು ಶೈವಾಗಮ ಮತ್ತು ವೇದಪಾಠಗಳನ್ನು ಶ್ರೀಕ್ಷೇತ್ರದ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಸೂಕ್ತ ವ್ಯವಸ್ಥೆ ಆಗಿದೆ’  ಎಂಬ ಮಠದ ಹೇಳಿಕೆಯನ್ನು ಗಮನಿಸಬೇಕು.[5] ಇಲ್ಲಿ ಪರಿಷ್ಕಾರ ಎಂದರೆ ವೈದಿಕೀಕರಣವೇ. ಬಹುಶಃ ಶೂದ್ರಮಠದ  ಸ್ವಾಮಿಯಾದವರಿಗೆ ಉಚ್ಚಜಾತಿ ಸಮುದಾಯಗಳ ಸ್ವಾಮಿಗಳ ಜತೆ  ಸಮಾನಸ್ಕಂಧರಾಗಿ ವ್ಯವಹರಿಸಲು, ಸಂಸ್ಕೃತದ ಬುನಾದಿ ಅಗತ್ಯ ಅನಿಸಿರಬಹುದು. ೨.ಆಧುನಿಕ ಶಿಕ್ಷಣ ಹಾಗೂ ಸರಕಾರಿ ನೌಕರಿ ಪಡೆದು ಪಟ್ಟಣಸೇರಿ ಮಧ್ಯಮ ವರ್ಗಕ್ಕೆ ಏರಿದ ಒಕ್ಕಲಿಗರಲ್ಲಿ, ಸತ್ಯನಾರಾಯಣ ಪೂಜೆ ಇತ್ಯಾದಿ ಬ್ರಾಹ್ಮಣೀಕರಣದ ಆಚರಣೆಗಳು ನೆಲೆಯೂರಿದ್ದವು. ಇದರಿಂದಾಗಿ ಮಠದ ಸಂಸ್ಕೃತೀಕರಣವು ಒಂದು ದೊಡ್ಡ ಸಮಸ್ಯೆ ಎಂದು ಅವರಿಗೆ ಅನಿಸಲಿಲ್ಲ

ಚುಂಚನಗಿರಿಯ ಸಂಸ್ಕೃತ ಶಾಲೆಯಲ್ಲಿ ವೇದ ನ್ಯಾಯಗಳನ್ನು ಕಲಿಸಲು ಕರಾವಳಿಯಿಂದ ಬಂದ ಅಧ್ಯಾಪಕರಿದ್ದಾರೆ.  ರೈತಾಪಿ ಶೂದ್ರ ಭಕ್ತರು ಬರುವ, ಬಲಿ ಮಾಂಸಾಹಾರದ ಆಚರಣೆ ಮಾಡುವ, ಅವೈದಿಕ ದೇವರಾದ ಭೈರವನ ಕ್ಷೇತ್ರದಲ್ಲಿ ಇವರು ಪರಕೀಯರಂತೆ ಕಾಣುತ್ತಾರೆ. ಇವರು ಈ ಪರಿಸರದೊಂದಿಗೆ ಅನಿವಾರ್ಯವಾಗಿ ಹೊಂದಾಣಿಕೆ ಮಾಡಿಕೊಂಡು ಬದುಕಿದಂತೆ ಕಾಣುತ್ತಿತ್ತು. ಈ ಅರ್ಥದಲ್ಲಿ ಇಲ್ಲಿ ನಾಥಪಂಥದ ಸಂಸ್ಕೃತೀಕರಣ ಜತೆಜತೆಗೆ ಸಂಸ್ಕೃತ ಹಾಗೂ ಉಚ್ಚಜಾತಿಯವರ ಶೂದ್ರೀಕರಣವೂ ನಡೆದಿದೆ ಎನ್ನಬಹುದು. ಈ ಅಧ್ಯಾಪಕರು ಚುಂಚನಗಿರಿ ಸ್ವಾಮಿಯವರು ಭೈರವನ ಪೂಜೆ ಮಾಡುವ ಹೊತ್ತಲ್ಲಿ, ತಮ್ಮ ಶೂದ್ರ ಶಿಷ್ಯರ ಜತೆಗೂಡಿ  ವೇದಮಂತ್ರಗಳನ್ನು ಘೋಷಿಸಿದರು. ಅವೈದಿಕ  ಭೈರವನಿಗೂ ವೇದವಿದ್ಯೆಗೂ ಎಂತಹ  ಸಂಬಂಧ ಎಂದು ಅಧ್ಯಾಪಕರಿಗೆ ಕೇಳಿದೆ. ಅವರಲ್ಲಿ ಒಬ್ಬರಾದ ಗೋವಿಂದಭಟ್ಟರು(೩೫) ‘ಹಾಗೇನಿಲ್ಲ. ಈ ಭಾಗದ ಬ್ರಾಹ್ಮಣರು ಭೈರವನ ಆರಾಧನೆಯನ್ನು ಮಾಡುತ್ತಿದ್ದರು. ಈ ಭಾಗದ ದೊಡ್ಡ ಲೇಖಕರಾದ ಎಸ್.ಎಲ್.ಭೈರಪ್ಪನವರ ಮೊದಲ ಹೆಸರು ಕಾಳಭೈರವಶರ್ಮ ಎಂದಿತ್ತು.  ಶೂದ್ರರೂ ಹಿಂದುಗಳು ತಾನೆ? ಅವರ ಜತೆಯಿದ್ದು ಸಂಸ್ಕೃತ ವೇದ ನ್ಯಾಯ ನಿರುಕ್ತ ಕಲಿಸುವುದಕ್ಕೆ ನಮಗೆ ಸಮಸ್ಯೆಯೇನಿಲ್ಲ’ ಎಂದು ಹೇಳಿದರು.  ಚುಂಚನಗಿರಿಗೆ ಬರುವ ಬಹುತೇಕ ಭೈರವನ ಭಕ್ತರಿಗೂ ಇಲ್ಲಿನ ವೇದಪಾಠಶಾಲೆಗೂ ಆಪ್ತ ಸಂಬಂಧ ಬೆಳೆದಂತೆ ಕಾಣಲಿಲ್ಲ. ಶಾಲೆಯು ತಾನೊಂದು ದ್ವೀಪವಾಗಿ ಇದೆ. ಆದರೆ ಚುಂಚನಗಿರಿ ಮಠವು ನಡೆಸುವ ಜನಪದ ಕಲಾವಿದರ ಮೇಳಗಳಲ್ಲಿ ಭಕ್ತರಿಗೂ ಮೇಳಕ್ಕೂ ಇಂತಹ ಬಿರುಕು ಕಾಣುವುದಿಲ್ಲ.

ಚುಂಚನಗಿರಿ ಭೈರವನಿಗೆ ಬೆಟ್ಟದ ಮೇಲೆ ಬಲಿಕೊಡುದನ್ನೂ ಹಾಗೂ ಮಾಂಸಾಹಾರ ಮಾಡುವುದನ್ನೂ ನಿಷೇಧ ಮಾಡಲಾಗಿದೆ. ಹೀಗಾಗಿ ಬೇಟೆಯ ಭಕ್ತರು ಬೆಟ್ಟದ ಮೇಲೆ ಹೋಗುವುದು ಕಡಿಮೆ. ಅವರು ಗಾಡಿಯಲ್ಲೊ ಟ್ಯಾಕ್ಟರಲ್ಲೊ ಬಂದು,  ಬೀಡುಬಿಟ್ಟಕಡೆಯಲ್ಲೆ ಭೈರವನ ಸ್ಥಾಪನೆ ಮಾಡಿ, ಹರಕೆ ಪೂರೈಸುತ್ತಾರೆ. ಭೈರವನ ಸ್ಥಾಪನೆ ವಿಧಾನವೂ ಸುಲಭ. ಅಡಿಗೆ ಮಾಡಿದ ಕಡೆಯಲ್ಲೇ ಒಂದಷ್ಟು ಜಾಗವನ್ನು ಚೊಕ್ಕಮಾಡಿ, ಜೋಗಪ್ಪನು ಭೈರವನ ಸಂಕೇತವಾದ ಜೋಳಿಗೆ, ನಾಗಬೆತ್ತ, ತ್ರಿಶೂಲ, ಕಪಾಲ (ಸೋರೆಬುರುಡೆ), ಸಿಂಗನಾದ, ವಿಭೂತಿಗಳನ್ನು ಜೋಡಿಸುತ್ತಾನೆ. ಜೋಗಪ್ಪಗಳು ಸಾಮಾನ್ಯವಾಗಿ ಕಾಪಾಲಿಕ ಇಲ್ಲವೆ ಹಿಂದುಳಿದ ಜಾತಿಯವರಾಗಿರುತ್ತಾರೆ. ಜೋಗಪ್ಪನು ಕುರಿಯನ್ನು ಬೆಟ್ಟದ ಕಡೆ ಮುಖಮಾಡಿ ನಿಲ್ಲಿಸಿ, ಮೈಮೇಲೆ ನೀರು ಸಿಂಪಡಿಸುತ್ತಾನೆ. ಅದು ಮೈಕೊಡವಿದಾಗ ಭೈರವ ಅಪ್ಪಣೆ ಕೊಟ್ಟ ಎಂದು ಹೇಳಿ, ಅದರ ಬಲಿಕೊಡುತ್ತಾನೆ. ಅಡುಗೆಯಾದ ಬಳಿಕ, ಅನ್ನವನ್ನು ಸೋರೆಬರುಡೆಯ ಕಪಾಲದಲ್ಲಿ ತುಂಬಿ, ಮೇಲೆ ಸಾರು ಹೊಯ್ದು, ಮಾಂಸದ ತುಂಡು ಜೋಡಿಸಿ ಇಡಲಾಗುತ್ತದೆ. ಜೋಗಪ್ಪ ಪೂಜೆಮಾಡಿ ಸಿಂಗನಾದ ಊದುತ್ತಾನೆ. ಅವನ ಮೀಸಲು ಊಟದ ನಂತರ ಉಳಿದವರ ಊಟ ಶುರುವಾಗುತ್ತದೆ. ಇಲ್ಲಿಮುಖ್ಯವಾದುದು, ಬಲಿ ಹರಕೆ ಮಾಡಿಕೊಂಡವರು ತಾವು ಬೀಡುಬಿಟ್ಟಲ್ಲೆ ಪರ್ಯಾಯ ಭೈರವ ಸ್ಥಾಪನೆ ಮಾಡಿಕೊಳ್ಳುವುದು. ಇದಕ್ಕೆ ತಕ್ಕಂತೆ ಭೈರವನ ಸಂಚಾರಿ ಪೂಜಾರಿಯಾದ ಜೋಗಪ್ಪನೂ ಇದ್ದಾನೆ. ಸ್ಥಾವರ ಗುಡಿಗೆ ಸ್ಥಾವರ ಅರ್ಚಕನಾದರೆ, ಸಂಚಾರಿ ದೇವರಿಗೆ ಸಂಚಾರಿ ಪೂಜಾರಿ.

೩. ಲುಂಕೆಮಲೆ ಮಠದ ಶಿಷ್ಯರಾದ ಸಿದ್ಧಪ್ಪನವರು ಬರೆದಿರುವ ಕೃತಿಯಲ್ಲಿ ‘‘ಎಲ್ಲಿ ಪರಮ ಸಾತ್ವಿಕರಾದ ಕದಂಬರಾಜರ ರಾಜಧಾನಿಯಿದ್ದಿತೊ, ಅಲ್ಲಿಯೇ ಅದೇ ಸಿದ್ಧಭುಕ್ತಿಯ ಆಚರಣೆಯನ್ನು ಹಿಂಸಾಪೂರ್ವಕವಾದ ವಾಮಮಾರ್ಗಕ್ಕೆ ಈಚಿನ ಕೆಲವರು ತಿರುಗಿಸಿರುವರೆಂದೇ ತಿಳಿಯುವುದು. ಇದಕ್ಕಾಗಿ ಬಹುಬಹು ವಿಷಾದಿಸಬೇಕಾಗುವುದು’’ ಎಂಬ ಎಚ್ಚರಿಕೆಯ ಮಾತೊಂದಿದೆ.[6] ನಾಥಮಠಗಳು ಎಷ್ಟೇ ಬೆಟ್ಟಗುಡ್ಡಗಳ ಸಂದಿನಲ್ಲಿರಲಿ, ಅವಕ್ಕೆ ಸಂಸ್ಕೃತೀಕರಣದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ವಾಸ್ತವಿಕ ಸತ್ಯವನ್ನು ಈ ಮಾತು ಹೇಳುವಂತಿದೆ. ಲುಂಕೆಮಲೆಯ ಪರಿಸರವು ಚುಂಚನಗಿರಿಯಷ್ಟು ಬ್ರಾಹ್ಮಣೀಕರಣಕ್ಕೆ ಒಳಗಾಗಲಿಲ್ಲ. ಇದಕ್ಕೆ ಒಂದು ಕಾರಣ, ಈ ಭಾಗದಲ್ಲಿ ಮ್ಯಾಸನಾಯಕರು, ಗೊಲ್ಲರು ಹಾಗೂ ಲಿಂಗಾಯತರು ಪ್ರಬಲವಾಗಿರುವುದು. ಲುಂಕೆಮಲೆಯಲ್ಲಿ ಲಿಂಗಾಯತೀಕರಣ ಪ್ರಕ್ರಿಯೆ ನಡೆದಿದೆ. ಭೈರವಾರಾಧನೆ ಶೈವವಾದ ಕಾರಣ, ಲಿಂಗಾಯತೀಕರಣವು  ಬೇರೆಯೆಂದು ಗೊತ್ತೂ ಆಗುವುದಿಲ್ಲ. ಆದರೆ ನಿಧಾನವಾಗಿ ಬಲಿ ಹಾಗೂ ಮಾಂಸದೆಡೆ ಆಚರಣೆಗಳು ನಿಲ್ಲುತ್ತಿವೆ ಅಥವಾ ದೂರ ಸರಿಯುತ್ತಿವೆ. ಹೇಮಾವತಿಯಲ್ಲಿ ಕೂಡ ಹೆಂಜೇರು ಸಿದ್ಧಪ್ಪನ ಪೂಜೆಯ ಹಕ್ಕು ಲಿಂಗಾಯತರಿಗೆ ಹೋದ ಬಳಿಕ, ಸಿದ್ಧಭುಕ್ತಿಯನ್ನು ಪೌಳಿಯೊಳಗೆ ನಿಷೇಧಿಸಲಾಗಿದೆ.   ಲುಂಕೆಮಲೆಯ ಕಾಪಾಲಿಕರಲ್ಲಿ ಧಾರ್ಮಿಕ ಸುಧಾರಕನ ಪಾತ್ರವಹಿಸಿದ  ಸಿದ್ಧಪ್ಪನವರ ಪ್ರಯತ್ನಗಳು, ಬ್ರಾಹ್ಮಣೀಕರಣ ಅಥವಾ ಲಿಂಗಾಯತೀಕರಣಕ್ಕೆ ಪೂರಕವಾಗಿದ್ದವು. ಇದಕ್ಕೆ ತಕ್ಕಂತೆ ಕಾಪಾಲಿಕರಿಗೆ ಸೇರಿದ ಭೈರವನ ಗುಡಿಗಳು ಅವರ ಕೈಬಿಟ್ಟುಹೋದವು. ವದ್ದಿಕೆರೆಯಲ್ಲಿ ಕಾಪಾಲಿಕರಿಗೂ ಗೊಲ್ಲರಿಗೂ ಭೈರವ ಗುಡಿಯ ಪೂಜಾಹಕ್ಕಿಗಾಗಿ ತಕರಾರು ಬಂದಾಗ, ಸರ್ಕಾರವು ಬ್ರಾಹ್ಮಣರನ್ನು ನೇಮಿಸಿತು. ವದ್ದಿಕೆರೆಯ ಲೋಕನಾಥ್ ‘ನಮ್ಮ ಭೈರವನ ದೇವಸ್ಥಾನದಲ್ಲಿ ನಾವೇ ಹೊರಗ್ನೋರ ತರಹ ನಿಲ್ಲ ಬೇಕಾಗಿದೆ’ ಎಂದು ಹೇಳಿದರು.

ನಾಥರ ಮತೀಕರಣ

ಮತೀಯ ರಾಜಕಾರಣವು ಜನರ ಆಲೋಚನ ಕ್ರಮದಲ್ಲಿ ಸಾಕಷ್ಟು ಅಳವಾಗಿ ಹೋಗಿದೆ. ಎಷ್ಟೆಂದರೆ, ನಾಥಪಂಥಕ್ಕೆ ಒಂದು ಕಾಲದ ತಮ್ಮ ಸೋದರ ಪಂಥವಾದ ಸೂಫಿ ಜತೆಗಿನ ಸ್ಮೃತಿಗಳು ಕ್ಷೀಣವಾಗಿವೆ. ಸೂಫಿಗಳ ಒಡನಾಟದ ಕಾರಣದಿಂದ, ಪಂಜಾಬು, ರಾಜಸ್ಥಾನ, ಲಾಹೋರ, ಕಾಬೂಲು, ಕಾಶ್ಮೀರ ಮುಂತಾದ ಕಡೆ ಮುಸ್ಲಿಂ ಸಮುದಾಯದ ಜತೆ ನಾಥಪಂಥಕ್ಕೆ ಒಂದು ಬಗೆಯ ಸಂಬಂಧ ಏರ್ಪಟ್ಟಿತ್ತು. ಅದರ ಹಿಂಜರಿಕೆಯು ವಸಾಹತುಶಾಹಿ ಕಾಲಘಟ್ಟದಲ್ಲೆ ಆರಂಭವಾಯಿತು ಎಂದು ತೋರುತ್ತದೆ. ೨೦ನೇ ಶತಮಾನದ ಮೊದಲ ಭಾಗದಲ್ಲಿಯೇ ಜೋಗಿ ರಾವುಳರ ಜತೆ ನಾಥಜೋಗಿಗಳು ಆಹಾರ ಸೇವನೆ ಮಾಡದ ಬಗ್ಗೆ ವರದಿಗಳಿವೆ. ೧೯೪೭ರ ದೇಶವಿಭಜನೆಯ ಬಳಿಕ ನಡೆದ ಮತೀಯ ಕಂದರವು, ನಾಥರು ಹಾಗೂ ಸೂಫಿಗಳ ಸಂಬಂಧವನ್ನು ಮತ್ತಷ್ಟು ದೂರ ಮಾಡಿತು. ೧೯೯೨ರಲ್ಲಿ ಅಯೋಧ್ಯೆ ಪ್ರಕರಣ ನಡೆದ ಬಳಿಕ, ಕೆಲವು ನಾಥರಲ್ಲಿ ಮುಸ್ಲಿಮರನ್ನು ಕುರಿತು ಮತ್ತಷ್ಟು ದೂರೀಕರಣದ ಭಾವ ಆವರಿಸಿತು. ಇದಕ್ಕೆ ಇನ್ನೊಂದು ಕಾರಣ, ಗೋರಖಪುರ ನಾಥಮಠದ ಮಹಂತರೂ ಬಾರಾಪಂಥದ ಮಹಾಸಭೆಯ ಅಧ್ಯಕ್ಷರೂ ಆದ ಅವೈದ್ಯನಾಥರು, ರಾಮಜನ್ಮಭೂಮಿ ಚಳುವಳಿಯಲ್ಲಿ ನೇತಾರರಾಗಿದ್ದು.   ಉತ್ತರ ಭಾರತದ ಬಹುತೇಕ ನಾಥ ಸಾಧುಗಳ ಮೇಲೆ ಅಯೋಧ್ಯೆಯ ಘಟನೆಗಳು ಪ್ರಭಾವ ಬೀರಿವೆ. ಹಿಮಾಚಲ ಪ್ರದೇಶದ ಮಣಿಕರ್ಣಿಕಾದಲ್ಲಿ ನಾನು ಕಂಡ ಒಬ್ಬ ನಾಥನು, ಭಜರಂಗದಳ ಹಂಚುವ ತ್ರಿಶೂಲವನ್ನು ಹಿಡಿದುಕೊಂಡು ಓಡಾಡುತ್ತಿದ್ದನು. ಅವೈದ್ಯನಾಥರು ವಿಎಚ್‌ಪಿಯ ಕಾರ್ಯಕ್ರಮಗಳಲ್ಲಿ ತಪ್ಪದೆ ಭಾಗವಹಿಸುತ್ತಾರೆ. ಅವರು ಮೊದಲು ಹಿಂದೂ ಮಹಾಸಭಾದ ಟಿಕೆಟ್ಟಿನಿಂದ ಗೋರಖಪುರದ ಶಾಸಕರಾಗಿ, ನಂತರ ಎಂಪಿಯಾಗಿ ಆರಿಸಿಬಂದರು. ಈಗ ಅವರ ಶಿಷ್ಯ ಆದಿತ್ಯನಾಥ್ ಗೋರಖಪುರದ ಸಂಸತ್ ಸದಸ್ಯರು. ರಾಮನಿಗೂ ನಾಥಪಂಥಕ್ಕೂ ಪೌರಾಣಿಕವಾದ ಒಂದು ಸಂಬಂಧವಿತ್ತು.  ಬಾರಾಪಂಥಗಳಲ್ಲಿ ರಾಮನಾಥಿ ದರಿಯಾನಾಥೀ ಧ್ವಜಾಪಂಥಿ ಎಂಬ ಪಂಥಗಳಿದ್ದು ಅವನ್ನು ಆರಂಭಿಸಿದವರು ರಾಮ, ಲಕ್ಷ್ಮಣ ಹಾಗೂ ಹನುಮಂತರು.  ರಾಮನಾಥಿ ಪಂಥದ ಉಗಮ ಸ್ಥಳವು ಗೋರಖಪುರ. ಆದರೆ ೧೯೯೨ರ ನಂತರ ಬಂದ ನಾಥರಲ್ಲಿ ಪ್ರವೇಶಿಸಿದ ರಾಮನು ಹಿಂದುತ್ವದ ಪ್ರತೀಕವಾಗಿದ್ದನು. ೨೦೦೩-೦೪ರ ಝುಂಡಿಯಲ್ಲಿ ನಾಥರು ಊಟ ಬಡಿಸುವಾಗ, ಪಾನಿರಾಂ ರೋಟಿರಾಂ ಎಂದು ಕೇಳುತ್ತ ಹೋಗುತ್ತಿದ್ದರು.  ಗೋರಖ ಮಚೇಂದ್ರರಿಗೆ ಹಾಕುವ   ಜಯಕಾರದ ಜತೆ ‘ಸನಾತನ ಧರ್ಮಕ್ಕೆ ಜಯವಾಗಲಿ’ ಎಂದೂ  ಘೋಷಣೆ ಹಾಕುತ್ತಿದ್ದರು.  ತ್ರ್ಯಂಬಕದ ನಾಥಮಠದಲ್ಲಿ  ಗೋರಖನಾಥನ  ಮೂರ್ತಿಯನ್ನು ೧೯೯೧ರ ಕುಂಭಮೇಳದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಅದರ ಫಲಕದಲ್ಲಿ ‘‘ಅಖಿಲ ಭಾರತ ಅವಧೂತ ಸಮಾಜದ ಸಭಾಪತಿಯೂ ಲೋಕಸಭಾ ಸದಸ್ಯರೂ ರಾಮಜನ್ಮಭೂಮಿ ಚಳುವಳಿಯ ನೇತಾರರೂ ಆದ ಮಹಂತ ಅವೈದ್ಯನಾಥರು ಭೇಖ್ ಬಾರಾಪಂಥಿಯರ ಸಮ್ಮುಖದಲ್ಲಿ ಇದರ ಪ್ರತಿಷ್ಠಾಪನೆ ಮಾಡಿದರು’’ ಎಂದು ಕೊರೆಯಲಾಗಿದೆ. ಆವೈದ್ಯನಾಥರ ಬಗ್ಗೆ ಭಾರತದ ನಾಥರಲ್ಲಿ ತುಂಬ ಗೌರವವಿದ್ದು, ಅವರ ಚಟುವಟಿಕೆಗಳು ಮಾನ್ಯವಾಗಿವೆ.  ಅನೇಕ ನಾಥರು ಅವೈದ್ಯನಾಥರು ರಾಮಜನ್ಮಭೂಮಿ ಚಳುವಳಿ ಹಾಗೂ ಸಕ್ರಿಯ ರಾಜಕಾರಣದಲ್ಲಿ ಭಾಗವಹಿಸಿದ್ದನ್ನು ಸಮರ್ಥಿಸಿದರು. ನಾಗರಿಕ ಸಂಪರ್ಕ ಕಡಿಮೆ ಇರುವ ಬೆಟ್ಟಗುಹೆಗಳಲ್ಲಿ ಇರುವ ನಾಥರಲ್ಲೂ ಮತೀಯ ಪೂರ್ವಗ್ರಹಿಕೆಗಳು ಇದ್ದವು. ತ್ರ್ಯಂಬಕದ ಕೌಳ ಪರ್ವತದಲ್ಲಿ ಆಶ್ರಮ ಕಟ್ಟಿಕೊಂಡಿರುವ ಒಬ್ಬ ನಾಥನು ‘ನಮ್ಮ ಅವೈದ್ಯನಾಥರು ರಾಮಜನ್ಮಭೂಮಿ ಚಳುವಳಿ ಆರಂಭಿಸದಿದ್ದರೆ, ಈ ಹೊತ್ತಿಗೆ ತ್ಯಂಬಕೇಶ್ವರ ಗುಡಿಯಲ್ಲೂ ಅಲ್ಲಾಹು ಅಕಬರ್ ಮೊಳಗುತ್ತಿತ್ತು’ ಎಂದನು. ಕೆಲವರು ಮಾತ್ರ ನಾಥರ ರಾಜಕೀಯ ಪ್ರವೇಶವು ತಪ್ಪೆಂದು ಹೇಳಿದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವವರಿಗೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ನುಡಿದರು.[7]

ನಾಥಪಂಥದ ಮತೀಕರಣವನ್ನು ಸರ್ಮರ್ಥಿಸಿದವರಲ್ಲಿ ಬತ್ತೀಸ್‌ಶಿರಾಳದ ಶಿವನಾಥರೂ ಒಬ್ಬರು. ಅವರಿಗೆ ಚಾರಿತ್ರಿಕವಾಗಿ ನಾಥಪಂಥದಲ್ಲಿ ಸೂಫಿಗಳು ಹಾಗೂ ಮುಸ್ಲಿಮರಿದ್ದುದು, ಹಂಡಿಬಡಂಗನಾಥನು ಮುಸ್ಲಿಮನಾಗಿ ಇದ್ದುದು, ಗೋರಖನು ಮಹಮ್ಮದ್ ಪೈಗಂಬರ ಜತೆ ಸಂವಾದ ಮಾಡಿ, ಕಾಫಿರಬೋಧ ಎಂಬ ಕೃತಿ ರಚಿಸಿರುವುದು, ಪೀರ್ ಶಬ್ದವು ಅಲ್ಲಿಂದ ಬಂದಿದ್ದು ಎಲ್ಲವೂ ಗೊತ್ತಿತ್ತು. ಆದರೂ ಅವರಲ್ಲಿ ಕೆಲವು ಆಗ್ರಹಗಳಿದ್ದವು.    ಅವರ ಕೋಣೆಯಲ್ಲಿ ರಾಮನ ಚಿತ್ರವಿತ್ತು. ಅವರ ಪ್ರಕಾರ ರಾಮಜನ್ಮಭೂಮಿ ಚಳುವಳಿಯು ಹಿಂದುಗಳ ಅಸ್ಮಿತೆಯ ಪ್ರಶ್ನೆ. ‘‘ನೋಡಿ. ಇಷ್ಟೊಂದು ಜನ ಹಿಂದುಗಳಿರುವ ದೇಶದಲ್ಲಿ ಒಬ್ಬ ಮುಸ್ಲಿಂ ರಾಷ್ಟ್ರಪತಿ ಆಗಬೇಕಾಯಿತು. ಈಚೆಗೆ ಬಿಜೆಪಿಯವರೂ ಮುಸ್ಲಿಮರನ್ನು ಓಲೈಸಲು ಶುರು ಮಾಡಿದ್ದಾರೆ’’ ಎಂದರು. ಪಾಕಿಸ್ತಾನದಲ್ಲಿ ನಾಥರ ಕ್ಷೇತ್ರಗಳಿವೆ. ನಮಗೆ ಕಾಲಿಡಲು ಕೊಡುವುದಿಲ್ಲ. ಬಾಬರ್ ಅಕಬರ್ ದೊರೆಗಳಾಗಿದ್ದ ಕಾಲದಲ್ಲಿ ಗುಡಿಗಳನ್ನು ಕೆಡವಲಿಲ್ಲ. ಔರಂಗಜೇಬನ ಕಾಲದಲ್ಲಿ ನಮ್ಮ ಗುಡಿಗಳು ಮಠಗಳು ನಾಶವಾದವು ಎಂದು ಹೇಳಿದರು. ನೇಪಾಳದ ದೇವೀಪಾಟನದಲ್ಲಿ ಔರಂಗಜೇಬನ ಸೇನಾಪತಿಯು ಬಲವಂತವಾಗಿ ಅಲ್ಲಿದ್ದ ಗುಹೆಯನ್ನು ನೋಡಲು ಹಠಮಾಡಿದ ಕಾರಣ, ಅವನಿಗೆ ಹೆಜ್ಜೇನು ಕಚ್ಚಿ ಸತ್ತಿದ್ದು, ಅವನಿಗೆ ಈಗಲೂ ಶಿಕ್ಷೆಯ ರೂಪದಲ್ಲಿ ಸಮಾಧಿಯ ಮೇಲೆ ಹಂದಿಯ ರಕ್ತಹಾಕುವ ಪದ್ಧತಿ ಇರುವುದನ್ನು ಹೇಳಿದರು.  ‘ಯೋಗಿಗಳು ರಾಜಕೀಯ ಸೇರುವುದು ಸರಿಯೆ?’ ಎಂದು ಕೇಳಲು ‘ಅವರು ಅಭ್ಯರ್ಥಿಯಾಗಿ ನಿಲ್ಲುತ್ತಾರೆ. ಗೆಲ್ಲುತ್ತಾರೆ. ಆದರೆ ಯಾವ ಪಕ್ಷದ ನಿಯಮವನ್ನೂ ಪಾಲಿಸುವುದಿಲ್ಲ’ ಎಂದರು. ಈ ಬಗ್ಗೆ ತ್ರ್ಯಂಬಕದ ಗೋರಖಮಠದ ಮುಖ್ಯಸ್ಥ ಚೇತನನಾಥರ ಅಭಿಪ್ರಾಯ ಕೇಳಿದಾಗ  ‘‘ರಾಜಕಾರಣಕ್ಕೆ ನಾಥರು ಇದಿಳಿದ್ದು ಇದೇ ಮೊದಲಲ್ಲ. ಅವೈದ್ಯನಾಥರ ಗುರುವಾದ ದಿಗ್ವಿಜಯನಾಥರೂ ನೆಹರೂ ಕಾಲದಲ್ಲೇ ರಾಜಕಾರಣಕ್ಕೆ ಇಳಿದಿದ್ದರು. ಗೋರಖಪುರದಲ್ಲಿ ಯಾವಾಗಲೂ ನಾಥಮಠದ ಪ್ರಭಾವ ಬಹಳ. ಅಲ್ಲಿ ರಾಜಕೀಯಕ್ಕೆ ನಾಥರು ಇಳಿಯದಿದ್ದರೆ ಮಠವು ಇಷ್ಟು ಅಭಿವೃದ್ದಿ ಹೊಂದುತ್ತಿರಲಿಲ್ಲ’ ಎಂದರು.

ಅವೈದ್ಯನಾಥರು ಸಂಸತ್ ಸದಸ್ಯರೂ ರಾಮಜನ್ಮ ಮುಕ್ತಿ ಯಜ್ಞಸಮಿತಿಯ ಅಧ್ಯಕ್ಷರೂ ಆಗಿರುವುದಕ್ಕೆ ಚಿತ್ರದುರ್ಗ ಜಿಲ್ಲಾ ನಾಥಪಂಥ ಶೈವಸಮಾಜದ ಅಧ್ಯ್ಷಕರಾದ ಹೇಮಾವತಿ ಸಿದ್ದಪ್ಪನವರು ಅಭಿಮಾನ ಪಡುತ್ತಾರೆ.[8]  ಕುಂದಾಪುರ ಭಾಗದ ಬಳೆಗಾರ ಜೋಗಿಯ ನಾಯಕರಾದ ಬಳೆಗಾರ ಅವರು, ತಮ್ಮದೊಂದು ಕೃತಿಯಲ್ಲಿ ಹೀಗೆ ಬರೆಯುತ್ತಾರೆ. ‘‘ಬರಬರುತ್ತ ಮಠಮಂದಿರಗಳ ಪಾರುಪತ್ಯಗಾರರ ಲೋಭ ಅಸಡ್ಡೆಯಿಂದಲೂ, ಬದಲಾದ ಸರಕಾರೀ ಧೋರಣೆಯಿಂದಲೂ, ಮಠದ ಆಸ್ತಿಯೆಲ್ಲ ಕೈತಪ್ಪಿಹೋದ ಉದಾಹರಣೆಗಳೆಷ್ಟೊ ಇವೆ. ಅನೇಕ ಮಂದಿರಗಳೇ ಇತರರ ಪಾಲಾದದ್ದುಂಟು! ಇನ್ನಾದರೂ ನಾವು ಎಚ್ಚರಗೊಳ್ಳದೆ ಇದ್ದರೆ ಭೈರವನಾಥ ಮಂದಿರವು ಜುಮ್ಮಾಮಸೀದಿ ಆಗಬಹುದು! ಜೋಗಿಮಠವು ಬಟ್ಟೆಯ ಗಿರಣಿಯಾಗಬಹುದು!’’[9] ;‘ಮಂದಿರವು ಮಸೀದಿ ಆಗಬಹುದು’ ಎಂಬ ಆತಂಕಕ್ಕೂ ಇದು ಪ್ರಕಟವಾಗಿರುವ ವರ್ಷಕ್ಕೂ (೧೯೯೨) ಸಂಬಂಧವಿದೆ. ಆ ಹೊತ್ತಲ್ಲಿ ಮಸೀದಿ ಮಂದಿರ ವಿಷಯದಲ್ಲಿ ದೇಶದಲ್ಲಿ ದೊಡ್ಡ ಪ್ರಮಾಣದ ಗಲಭೆಗಳಾಗುತ್ತಿದ್ದವು. ಈ ಪ್ರಕ್ಷುಬ್ಧತೆಯಲ್ಲಿ  ಸೂಫಿ ಹಾಗೂ  ನಾಥರ   ಒಡನಾಟದ ಚರಿತ್ರೆಯಾಗಲಿ, ಗೋರಖನ ದರ್ಶನವು ಮತೀಯವಾದಿ ಚಿಂತನೆಗೆ ಹೊಂದಾಣಿಕೆ ಆಗುವುದಿಲ್ಲ ಎಂಬ ಚಿಂತನೆಯಾಗಲಿ ನೆನಪಾಗುವುದು ಸಾಧ್ಯವೇ ಇಲ್ಲ. ಚಾರಿತ್ರಿಕ ನೆನಪುಗಳಿಗೆ ಅನೇಕ ಮುಖಗಳಿವೆ. ಆಯಾ ವರ್ತಮಾನದ ಒತ್ತಡಕ್ಕೆ ತಕ್ಕಂತೆ ಅವುಗಳಲ್ಲಿ ಕೆಲವು ಮುಖ್ಯವಾಗುತ್ತವೆ. ಕೆಲವು ಮರೆವೆಗೆ ಸರಿಯುತ್ತವೆ. ಚರಿತ್ರೆಯು ಯಾವಾಗಲೂ ವರ್ತಮಾನದ ಅಡಿಯಾಳಾಗಿಯೇ ಜೀವ ಹೊರೆಯುತ್ತಾ ಬಂದಿದೆ.

ಆದರೆ ನಾಥರು ರಾಜಕಾರಣಕ್ಕೆ ಧುಮುಕುವಂತಹ ಚಾರಿತ್ರಿಕ ಒತ್ತಡಗಳು ದಕ್ಷಿಣ ಭಾರತದಲ್ಲಿ ನಿರ್ಮಾಣ ಆಗಲಿಲ್ಲ. ಇಲ್ಲಿನ ನಾಥಪಂಥಿ ಸಮುದಾಯಗಳು ಸಹ ನಾಥರು ಆಧ್ಯಾತ್ಮಿಕ ನಾಯಕರಾಗಿ ಇರಬೇಕೆಂದು ಅಪೇಕ್ಷಿಸಿದಂತೆ ಕಾಣುತ್ತದೆ. ಕದ್ರಿಯ ಜೋಗಿ ಸಮುದಾಯದ ಅನೇಕರು,  ನಾಥಯೋಗಿಗಳು ಚುನಾವಣಾ ರಾಜಕಾರಣಕ್ಕೆ ಇಳಿದಿರುವುದನ್ನು ಒಪ್ಪಲಿಲ್ಲ. ರಾಜಕಾರಣಕ್ಕೆ ಇಳಿದಾಗ ಅನೇಕ ತಂತ್ರ ಮತ್ತು ರಾಜಿಗಳನ್ನು  ಮಾಡಬೇಕಾಗುತ್ತದೆ. ಇದರಿಂದ ಪಂಥದ ಪಾವಿತ್ರ್ಯ ಹೊರಟು ಹೋಗಬಹುದು ಎಂದರು. ಧಾರ್ಮಿಕ ನಾಯಕರಾಗಿದ್ದೇ ರಾಜಕಾರಣವನ್ನು ಪ್ರಭಾವಿಸಿ, ತಮ್ಮ ಸಮುದಾಯಕ್ಕೆ ಬೇಕುಬೇಡಗಳನ್ನು ಮಾಡಬಲ್ಲ ಚುಂಚನಗಿರಿ ಸ್ವಾಮಿಯವರ ಮಾದರಿಯನ್ನು ಅವರು ಹೆಚ್ಚು ಅನುಮೋದಿಸಿದರು. ಹೀಗಾಗಿ ದಕ್ಷಿಣ ಭಾರತದ ನಾಥಪಂಥಕ್ಕೆ ಮತೀಯವಾದಿ ರಾಜಕಾರಣದ ಆಯಾಮ ಕಡಿಮೆಯೆನ್ನಬಹುದು. ಸಂಸ್ಕೃತ ವೇದಪಾಠಶಾಲೆ ಚುಂಚನಗಿರಿಯ ಮೇಲೆ ಬರುವುದಕ್ಕೂ ಚುಂಚನಗಿರಿ ಮಠದ ಮುಖ್ಯಸ್ಥರು ವಿಎಚ್‌ಪಿ ಉಪಾಧ್ಯಕ್ಷರಾಗುವುದಕ್ಕೂ ಸಂಬಂಧ ಇದೆ ಎನ್ನುವುದು ನಿಜವಾದರೆ, ಈಗ ನಡೆದಿರುವ ಸಂಸ್ಕೃತೀಕರಣವು ಮುಂದೆ ಮತೀಯವಾದದ ಪ್ರವೇಶಕ್ಕೆ ಜಾಗ ಮಾಡಿಕೊಡುತ್ತದೆ ಎಂದು ಅನಿಸುತ್ತದೆ.

ಆಧುನಿಕ ಜೀವನ ಕ್ರಮಕ್ಕೆ ಹೊರಳುವ ಕೆಳಜಾತಿಯ ಸಮುದಾಯಗಳು ಸಂಸ್ಕೃತೀಕರಣಕ್ಕೆ ಒಳಗಾಗುವುದು ಭಾರತದಾದ್ಯಂತ ನಡೆದಿರುವ ಸಾಮಾಜಿಕ ಚಲನೆ.  ಕದ್ರಿಮಠದಲ್ಲಿ ಸಂಸ್ಕೃತೀಕರಣವು ಕೆಲಮಟ್ಟಿಗೆ ಇಣುಕಿದೆ. ಆದರೆ ಆವರಿಸಿಕೊಂಡಿಲ್ಲ. ಮತೀಯವಾದದ ಹುನ್ನಾರಗಳನ್ನು ಅರಿವ ಮತ್ತು ತಡೆವ ಸೈದ್ಧಾಂತಿಕ ಎಚ್ಚರವು, ಆಧುನಿಕ ಸಮಾಜದ ಚಲನೆಗಳ ಜತೆ ಸಂಬಂಧ ಕಡಿದುಕೊಂಡಂತಿರುವ ನಾಥರಲ್ಲಿ ಕೊಂಚ ಕಡಿಮೆ ಕೂಡ. ಸಾಮಾನ್ಯವಾಗಿ ಮಠಗಳು ತಮ್ಮ ಪಂಥದ ಮೂಲ ಆಶಯಕ್ಕೆ ಇದು ಸರಿಯೆ ತಪ್ಪೆ ಎಂದು ಯೋಚಿಸುವುದಕ್ಕಿಂತ ಹೆಚ್ಚಾಗಿ ಸ್ಥಳೀಯ ಒತ್ತಡಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಬಾಬಾಬುಡನಗಿರಿಯು ನಾಥಪಂಥಕ್ಕೆ ಸೇರಿದ ಜಾಗವೆಂದು ಹೇಳಿ ಒಮ್ಮೆ ಸಂಘಪರಿವಾರವು, ಕದ್ರಿಮಠದ ಮೋಹನನಾಥರನ್ನು ತನ್ನ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿತ್ತು. ಮೋಹನನಾಥರಿಗೆ ಈ  ಸಂಘಟನೆಗಳ ಸಿದ್ಧಾಂತದ ಬಗ್ಗೆ ಯಾವ ಅಭಿಪ್ರಾಯವಿತ್ತೊ ಗೊತ್ತಿಲ್ಲ. ಆದರೆ ಮಠದ ಆಡಳಿತದಲ್ಲಿ ನಾಥವಲ್ಲದ ಸಂಘಟನೆಗಳನ್ನು ಬಿಟ್ಟುಕೊಳ್ಳುವ ವಿಷಯದಲ್ಲಿ ಅವರು ಕಠೋರವಾಗಿದ್ದರು. ವಿಟ್ಲದ ಜೋಗಿಮಠದಲ್ಲಿ ಈ ನಿಷ್ಠುರತೆ ಇದ್ದಂತಿರಲಿಲ್ಲ. ಅಲ್ಲಿ ಮಠದ ಗೋಡೆ ಗಡಿಯಾರದ ಮೇಲೆ ‘ಗರ್ವಸೆ ಕಹೋ ಮೈಹಿಂದೂ ಹೂಂ’’ ಎಂಬ ಸ್ಟಿಕರನ್ನು ಹಚ್ಚಲಾಗಿತ್ತು.  ಅದನ್ನು ಗಡಿಯಾರದ ಮುಳ್ಳುಗನ್ನು ಗುರುತಿಸಲು ತೊಂದರೆ ಆಗುತ್ತದೆ ಎಂದು ಯಾರೊ ಕಿತ್ತುಹಾಕಲು ಯತ್ನಿಸಿದ್ದರು. ಅದು ಅರ್ಧಂಬರ್ಧ ಕಿತ್ತಿತ್ತು. ಆದರೆ ಅದರ ಸಂದೇಶ ಓದಬಹುದಾಗಿತ್ತು.

ಕೃಷಿಕ ಲಿಂಗಾಯತ ಪರಿಸರದಲ್ಲಿ ಇರುವ ಉತ್ತರ ಕರ್ನಾಟಕದ ರಾವುಳ ಜೋಗಿಗಳು ಕದ್ರಿ ಜೋಗಿಗಳಷ್ಟು ಸಂಸ್ಕೃತೀಕರಣ ಪಡೆಯಲಿಲ್ಲ. ಆದರೂ ‘ರಾವುಳ ಮತಪ್ರಕಾಶಿಕೆ’ ಕೃತಿಯನ್ನು ನೋಡುವಾಗ, ರಾವುಳರು ಮದುವೆ ಮುಂಜಿಗಳಲ್ಲಿ ಹೋಮ ಮೊದಲಾಗಿ ವೈದಿಕ ಆಚರಣೆಗಳನ್ನು ಅಳವಡಿಸಿಕೊಂಡಿದ್ದು ತಿಳಿಯುತ್ತದೆ. ಈಚೆಗೆ ಬೆಳಗಾವಿ ಭಾಗದ ರಾವುಳರು ಮತೀಯ ಸಂಘಟನೆಗಳ ಸಂಪರ್ಕಕ್ಕೆ ಬಂದಿದ್ದಾರೆ. ಇದಕ್ಕೆ ಕಾರಣ ೧. ಮರಾಠಿ ಸಂಸ್ಕೃತಿಯ ಪ್ರಭಾವ. ೨. ಪರಿಸರದಲ್ಲಿರುವ ಲಿಂಗಾಯತರು ಈಚಿನ ಚುನಾವಣಾ ರಾಜಕೀಯದಲ್ಲಿ ಬಲಪಂಥೀಯ ಪಕ್ಷದತ್ತ ವಾಲಿರುವುದು. ೩. ರಾವೂಳರ ಆರ್ಥಿಕ ದುಃಸ್ಥಿತಿ ಮತ್ತು ಸಾಮಾಜಿಕ ಅಸ್ಮಿತೆಯ ಹುಡುಕಾಟ. ಒಂದು ಪಂಥ ಅಥವಾ ಸಮುದಾಯ ಮತೀಯವೋ ಜಾತ್ಯತೀತವೋ ಆಗುವುದಕ್ಕೆ ತೀರ ವೈಯಕ್ತಿಕವಾದ ಕಾರಣಗಳು ಯಾವತ್ತೂ ಇರುವುದಿಲ್ಲ.

* * *[1]      Avadhutha=Leberated. Gorakhanath is often so designated. The word is a general term for `non-Brahman’ ascetics who were freed from all ties, perticularly of caste, and who accepted Yoya or yoga and bhakti. Gorakhnath and the Kanphata Yogis, P.354

[2]      ಚರ್ಚೆಗೆ ನೋಡಿ. ದೇವೀಪ್ರಸಾದ ಚಟ್ಟೋಪಾಧ್ಯಾಯ, ಭಾರತೀಯ ದರ್ಶನಗಳು, ಪು.೧೫೨

[3]      ನವನಾಥಕಥಾ, ಕಡವ ಶಂಭಶರ್ಮ ಕೃತಿಸಂಚಯ- ಪು. ೫೬, ೬೮ ಹಾಗೂ ೭೩

[4]      ಸಿದ್ಧಸಿದ್ಧಾಂತ ಪದ್ಧತಿ, ಕಡವ ಶಂಭಶರ್ಮ ಕೃತಿಸಂಚಯ- ಪು.೪೩೫-೪೩೬

[5]      ಶ್ರೀ ಆದಿಚುಂಚನಗಿರಿ ಕ್ಷೇತ್ರಮಹಿಮೆ, ಪು.೪೮

[6]      ಶ್ರೀನುಂಕೇಮಲೆಯ ಪರಮಾರ್ಥ, ಪು. ೩೬೯

[7]      ‘ಸೊರಬದ ಗುರುಮಂದಿರದಲ್ಲಿ ೩೫೦ ಸಾಧುಸಂತರ ತಂಡ’, (ವರದಿ)  ನಮ್ಮನಾಡು ಪತ್ರಿಕೆ, ೨೮.೧.೨೦೦೪

[8]      ಸಿದ್ದಪ್ಪ ಬಿ.,  ನಾಥಪಂಥ ಶೈವಧರ್ಮ ಮತ್ತು ಕರ್ನಾಟಕ ನಾಥಪಂಥ ಶೈವ ಸಮಾಜದ ಸಂಕ್ಷಿಪ್ತ ಪರಿಚಯ, ಪು. ೧೧

[9]      ಬಳೆಗಾರ ಕೆ., ತ್ರಿಯಂಬಕೇಶ್ವರದಿಂದ ಕದಲೀತನಕ, ಮುನ್ನುಡಿ