ಇಟಲಿಯ  ವ್ಯಾಪಾರಿ ಪ್ರವಾಸಿ ದೆಲ್ಲಾ ವಲ್ಲೆ (೧೬೨೨-೨೩) ಮಂಗಳೂರಿಗೆ ಬಂದಿದ್ದಾಗ ಕದ್ರಿಬೆಟ್ಟಕ್ಕೆ ಭೇಟಿ ಕೊಡುತ್ತಾನೆ. ಅಲ್ಲಿನ ಕದ್ರಿಮಠದ ಜೋಗಿಯ ಜತೆ ಮಾತಾಡುತ್ತಾನೆ. ಅವನ ಅನುಭವಗಳು ಸ್ವಾರಸ್ಯಕರವಾಗಿವೆ.  ಅವನ ವರದಿ ಪ್ರಕಾರ, ಕದ್ರಿಬೆಟ್ಟದ ಸುತ್ತಮುತ್ತ ಇದ್ದ ಗ್ರಾಮಗಳ ಭೂಮಿ ಜೋಗಿಮಠಕ್ಕೆ ಸೇರಿತ್ತು. ಜೋಗಿಮಠದ ನಾಥನು ತಾನೊಂದು ಸರಕಾರದಂತೆ ಆಳ್ವಿಕೆ ಮಾಡುತ್ತಿದ್ದನು. ಆತನ ಹೆಸರು ಬಲಿನಾಥ. ಬಲಿನಾಥನು ಸೊಂಟದ ಮೇಲೆ ನಗ್ನನಾಗಿದ್ದನು. ತಲೆಗೆ ಕೆಂಪಾದ ಉದ್ದನೆಯ ಟೋಪಿ ಧರಿಸಿದ್ದನು. ಉದ್ದನೆಯ ಬಿಳಿಗಡ್ಡ ಬಿಟ್ಟು ದೃಢಕಾಯನಾಗಿದ್ದನು. ಕಿವಿಯಲ್ಲಿ ಕುಂಡಲಗಳಿದ್ದವು; ಬಗಲಲ್ಲಿ ಬಣ್ಣಬಣ್ಣದ ವಜ್ರಾಕೃತಿಯಿಂದ ಮಾಡಿದ ಹತ್ತಿಬಟ್ಟೆ ಇರಿಸಿಕೊಂಡಿದ್ದನು; ಅತಿಯಾಸೆಯವನಾಗಿದ್ದ ಆತ ಗದ್ದೆಗಳಲ್ಲಿ ಸುತ್ತಾಡಿ ಕೆಲಸದ ಉಸ್ತುವಾರಿ ನೋಡುತ್ತಿದ್ದನು. ಮಠದ ಆದಾಯ ೪ರಿಂದ ೫ ಸಾವಿರ ಪಗೋಡಗಳಾಗಿತ್ತು. ಹಣವನ್ನು ಉತ್ಸವಗಳಿಗೆ, ಮಠದ ಸೇವೆ ಮಾಡುವವರಿಗೆ ಕೊಡಲಾಗುತ್ತಿತ್ತು.

[1]

ನಾಥಪಂಥದ ದಾರ್ಶನಿಕ ಗ್ರಂಥಗಳು ಒಳಗೊಂಡಿರುವ ಅಮೂತರ್ ಚಿಂತನೆ, ಅಲ್ಲಿನ ಯೋಗಿಗಳ ಬದುಕು, ಮಠಗಳ ಅಸ್ತಿತ್ವ, ಜನರ ಭಾವುಕ ಶ್ರದ್ಧೆಭಕ್ತಿ ಇವೆಲ್ಲವೂ ಸಮಾಜದ ಮೂರ್ತವಾದ ಆರ್ಥಿಕ ಚಟುವಟಿಕೆಗಳ ಜತೆ ಸಂಬಂಧ ಪಡೆದಿವೆ. ಕರಾವಳಿಯ ಮೊಗವೀರರು ಮಾಡುವ ಮಚೇಂದ್ರನ ಆರಾಧನೆ ಹಾಗೂ ಮೀನುಗಾರಿಕೆಯ ಕಸುಬು ಎರಡೂ ಬೆರೆತುಹೋಗುತ್ತವೆ. ಚುಂಚನಗಿರಿ ಜನಪದ ಸಾಹಿತ್ಯದಲ್ಲಿ ಭೈರವನಿಗೂ ನಾಥರಿಗೂ ಹಾಲು ತುಪ್ಪ ಜೇನು ಹೂವು ಹಣ್ಣುಗಳನ್ನು ಅರ್ಪಿಸುವ ವರ್ಣನೆಗಳು, ಸಮುದಾಯದ ಕೃಷಿ ಮತ್ತು ಜಾನುವಾರು ಸಂಸ್ಕೃತಿಗೆ ಸಂಬಂಧಪಟ್ಟವು. ಆದ್ದರಿಂದ ಜನರ ಭಕ್ತಿಶ್ರದ್ಧೆಗಳು ಒಂದು ಸತ್ಯವಾದರೆ, ಅವರ ದುಡಿಮೆಯ ಮೇಲೆ ನಾಥಮಠ, ಜೋಗಿಗಳು ಸಿದ್ಧರ ಅಸ್ತಿತ್ವ ನಿಂತಿದೆ ಎನ್ನುವುದು ಇನ್ನೊಂದು ಸತ್ಯ. ನಾಥಪಂಥವು ಕರ್ನಾಟಕದ ಬೇಸಾಯ, ನೇಕಾರಿಕೆ, ಮೀನುಗಾರಿಕೆ, ಪಶುಪಾಲನೆ, ವ್ಯಾಪಾರ ಮುಂತಾದ ಅನೇಕ ದುಡಿಮೆಯ ಕೆಲಸಗಳ ಜತೆಗೆ ಬೆಸೆದುಕೊಂಡಿದೆ.

ಬೇಸಾಯ ಸಂಸ್ಕೃತಿಯ ಜತೆ

ಕರ್ನಾಟಕದ ನಾಥಪಂಥವು ಅತ್ಯಂತ ಹೆಚ್ಚು ಸಂಬಂಧ ಪಡೆದಿರುವುದು ಭೂಮಿ ಹಾಗೂ ಕೃಷಿ ಸಂಸ್ಕೃತಿಯ ಜತೆ. ನಾಥಪಂಥದ ಬಗ್ಗೆ ಸಿಗುವ ಮೊದಲ ಶಾಸನವೇ ಕದ್ರಿಮಠದ ನಾಥಯೋಗಿ ಮಂಗಲನಾಥನಿಗೆ ನಾಲ್ಕು ಜನ ಅಧಿಕಾರಿಗಳು ಸೇರಿ ಭೂದಾನ ಮಾಡಿದ ಬಗ್ಗೆ ಇರುವುದು ಸಾಂಕೇತಿಕವಾಗಿದೆ. ಇದು ನಾಥರಿಗೂ ಕೃಷಿಗೂ ಇರುವ ಸಂಬಂಧವನ್ನು ಉದ್ಘಾಟಿಸುತ್ತದೆ. ಯೋಗಸಾಧನೆ ಮಾಡುವ ಸನ್ಯಾಸಿ ಮಠಗಳು ಮುಂದೆ ಜಮೀನುದಾರಿ ವ್ಯವಸ್ಥೆಯಾಗಿ ರೂಪುಗೊಳ್ಳುವ ಪ್ರಕ್ರಿಯೆ ಇಲ್ಲಿಂದಲೇ ಶುರುವಾಯಿತು. ಈ ಅವಸ್ಥೆಯು ಸೂಫಿಗಳನ್ನು ಒಳಗೊಂಡಂತೆ ಅನುಭಾವಿ ಪರಂಪರೆಯ ಅನೇಕರ ಮಠಗಳಿಗೆ ಮಧ್ಯಕಾಲದಲ್ಲಿ ಬಂದೊದಗಿತು.[2] ಈಗಲೂ ಭೂಮಿಯನ್ನು ಬಿಟ್ಟು ನಾಥಮಠಗಳನ್ನು ಕಲ್ಪಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಕದ್ರಿಯು ಒಂದು ಕಾಲಕ್ಕೆ ದೊಡ್ಡ ಜಮೀನುದಾರಿ ಮಠವಾಗಿತ್ತು ಎನ್ನುವುದು ದೆಲ್ಲಾನ ವರದಿಯಲ್ಲೂ ಗೊತ್ತಾಗುತ್ತದೆ. ಹಲವರಿ ಮಠಕ್ಕೂ  ದೊಡ್ಡ ಹಿಡುವಳಿಯಿತ್ತು. ಕುಂದಾಪುರ ಸೀಮೆಯಲ್ಲಿ ರವಳಗದ್ದೆಗಳಿದ್ದು ಅವು ರಾವೂಳರ ಗದ್ದೆಗಳಾಗಿರಬಹುದು. ಲುಂಕೆಮಲೆ ಮಠಕ್ಕೆ ಈಗಲೂ ಜಮೀನಿದೆ. ಜಮೀನು ಹಾಗೂ ಕೆರೆಗಳಿರುವ ಕಣಿವೆಯಲ್ಲಿ ಮಠವಿದೆ. ಲುಂಕೆಮಲೆಯ ಶಾಖೆಯಾಗಿದ್ದ ಹುಲಿಗೊಂದಿಯ ಸಣ್ಣಮಠಕ್ಕೆ ಕೂಡ ಭೂಮಿ ಯಿತ್ತು. ಆ ಹೊಲದಲ್ಲಿ ‘ಒಗಿನತನಕೇಥೀ’ (ಯೋಗಿನಾಥನ ಹೊಲ) ಎಂಬ ಬರೆಹವುಳ್ಳ ಶಾಸನವು (ಕ್ರಿಶ.೧೪) ಪತ್ತೆಯಾಗಿದ್ದು, ಇಲ್ಲಿ ಯೋಗಿನಾಥ ಎಂದರೆ ಹುಲಿಗೊಂದಿ ಭೈರವ ಇಲ್ಲವೇ ಮಠದಲ್ಲಿರುವ ಬಾವಾಜಿ ಯಾರೂ ಆಗಬಹುದು.  ಚುಂಚನಗಿರಿಯ ಮಠಾಧೀಶರಾಗಿದ್ದ ಚಂದ್ರಶೇಖರನಾಥರು ತೀರಿಕೊಂಡಾಗ, ಚುಂಚನಗಿರಿ ಮಠದ ಭೂಮಿ ಸಂಪತ್ತುಗಳನ್ನೆಲ್ಲ ಪಟ್ಟಿ ಮಾಡಲಾಯಿತು. ಅದರಲ್ಲಿ ಚುಂಚನಹಳ್ಳಿ ಮುಂತಾದ ಅನೇಕ ಕಡೆ ಜಮೀನು ಮಾತ್ರವಲ್ಲದೆ, ಅದರಲ್ಲಿರುವ ತಿಪ್ಪೆ ಹಾಗೂ ಕೊಟ್ಟಿಗೆಗಳ, ಆ ಜಮೀನಲ್ಲಿ ಬೆಳೆಯುತ್ತಿದ್ದ ರಾಗಿ ಹುರುಳಿ ಬೆಳೆಗಳ ಪ್ರಸ್ತಾಪವಿತ್ತು. ಈ ಮಾಹಿತಿಗಳು ಮಠವು ರೈತಾಪಿ ಜೀವನದ ಜತೆ ಸೇರಿಹೋಗಿದ್ದರ ಪುರಾವೆಯಾಗಿವೆ.

ಕರ್ನಾಟಕದಲ್ಲಿ ನಾಥ, ಸಿದ್ಧ, ಜೋಗಿ ಹಾಗೂ ಭೈರವನ ಹೆಸರಲ್ಲಿ ಅನೇಕ ಜಲತಾಣಗಳಿವೆ.[3] ಅದರಲ್ಲೂ ನಾಥರ ಪೂರ್ವಜ ಪಂಥವಾದ ವಜ್ರಯಾನ  ದೇವತೆ ತಾರಾಭಗವತಿಯ ಹೆಸರಲ್ಲಿ ಅತ್ಯಂತ ಹೆಚ್ಚು ಕೆರೆಕಟ್ಟೆಗಳಿವೆ. ಇವು  ಪರೋಕ್ಷವಾಗಿ ನಾಥಪಂಥವು ಕೃಷಿಚಟುವಟಿಕೆ ಜತೆ ಇಟ್ಟುಕೊಂಡಿದ್ದ ನಂಟನ್ನು ಸೂಚಿಸುತ್ತವೆ. ಕದ್ರಿಬೆಟ್ಟದಲ್ಲಿ ನವನಾಥರ ಹೆಸರಲ್ಲಿ ೯ ಕೆರೆಗಳಿದ್ದು, ಅವು ಈಗ ಸ್ನಾನದ ಕೊಳಗಳಾಗಿವೆ. ಸ್ನಾನಮಡಿ ನಾಥರಲ್ಲಿ ಬಹಳ ಮುಖ್ಯ ಆಚರಣೆಯಲ್ಲ. ಬೆಟ್ಟದಿಂದ ಉಕ್ಕುವ ನೀರಚಿಲುಮೆಗೆ ಅಡ್ಡಕಟ್ಟೆ ಹಾಕಿ ನಿರ್ಮಿಸಲಾಗಿರುವ ಈ ಕೆರೆಗಳು, ಕೆಳಗಿದ್ದ ಮಠದ ಗದ್ದೆಗಳಿಗೆ ನೀರುಣಿಸುವ ಕೆಲಸವನ್ನೂ ಬಹುಶಃ ಮಾಡುತ್ತಿದ್ದವು. ಬೆಂಗಳೂರು ತುಮಕೂರು ಕೋಲಾರ ಪರಿಸರದಲ್ಲಿ ನೂರಾರು ಭೈರಸಂದ್ರಗಳು  (ಭೈರವಸಮುದ್ರ)  ಇವೆ. ಕೆಲವು ಕಡೆ ಭೈರವನು ಕೆರೆಗಳ ರಕ್ಷಕ. ಕೆರೆಕೋಡಿಗಳಲ್ಲಿ ಅವನ ಗುಡಿಯಿರುತ್ತದೆ. ಅವನನ್ನು ಕೋಡಿ ಭೈರವನೆಂದೇ ಕರೆಯುತ್ತಾರೆ. ಸೀತಿಬೆಟ್ಟದಲ್ಲಿ ಭೈರವನ ಹೆಸರಲ್ಲಿ ಕೆರೆಯನ್ನು ಕಟ್ಟಿಸಲಾಗಿದ್ದು, ಅದರ ಶಾಸನದಲ್ಲಿ ಕೆರೆ ಒಡೆದರೆ ರಿಪೇರಿ ಮಾಡಿಕೊಡಬೇಕು ಎಂಬ ಕರಾರಿದೆ. ಇದು ಭೈರವ ದೇವಸ್ಥಾನದ ವತಿಯಿಂದ ಕಟ್ಟಿಸಲಾದ ಕೆರೆಯೆಂದೂ, ಇದು ಕೆರೆಕಟ್ಟಿಸಿದ ಕಂಟ್ರಾಕ್ಟರಿಗೆ ವಿಧಿಸಿದ ಕರಾರೆಂದೂ ವ್ಯಾಖ್ಯಾನಿಸಲಾಗಿದೆ.[4]

ನೇಪಾಳದಲ್ಲಿ ಮಚೇಂದ್ರನು ಬೇಸಾಯ ಸಂಸ್ಕೃತಿಯ ಪ್ರಮುಖ ದೇವತೆ. ಒಮ್ಮೆ ಭಿಕ್ಷೆಯೇ ಸಿಗದ ಗೋರಖನಾಥನು ಕನಲಿ, ಜನರಿಗೆ ಹಸಿವು ಎಂದರೇನೆಂದು ಮನವರಿಕೆ ಮಾಡಿಕೊಡುತ್ತೇನೆಂದು, ಮೋಡಗಳನ್ನೆಲ್ಲ ಹಾಸಿಗೆ ಮಾಡಿಕೊಂಡು ತಪಸ್ಸಿಗೆ ಕೂತುಬಿಡುತ್ತಾನೆ. ಅನಾವೃಷ್ಟಿಯಿಂದ ದೇಶದಲ್ಲಿ ಹಾಹಾಕಾರ ಏಳುತ್ತದೆ. ಆಗ ಮಚೇಂದ್ರನು  ಉಪಾಯದಿಂದ ಆ ಮೋಡಗಳನ್ನು ಬಿಡುಗಡೆ ಮಾಡಿ ಮಳೆಬರಿಸುವ ಕತೆಯಿದೆ. ಇವೆಲ್ಲವೂ ಮಚೇಂದ್ರನು ಅಲ್ಲಿ ಸುಗ್ಗಿಯ ದೇವರಾಗಲು ಕಾರಣವಾದವು. ಮಚೇಂದ್ರನ  ಮುಖವಾಡ ಕಟ್ಟಿ ತೇರು ಎಳೆಯುವ ಉತ್ಸವವು ನೇಪಾಳದ ನಾಡಹಬ್ಬವಾಗಿದೆ.

ಚಂದ್ರಗುತ್ತಿಯ ಜಾತ್ರೆಯಲ್ಲಿ ಘಟಸ್ಥಾಪನೆಯ ಆಚರಣೆ ಅಲ್ಲಿನ ನಾಥಮಠದಲ್ಲಿ ಜರುಗುತ್ತದೆ. ಅದರ ಕ್ರಮ ಹೀಗಿದೆ. ನಾಥನು ಮೆರವಣಿಗೆಯಲ್ಲಿ ಹೋಗಿ, ಶೂಲದ ಬೀರಪ್ಪನ ಗುಡಿ ಎದುರಿರುವ ಹೊಂಡದಲ್ಲಿ ಗಂಗೆಪೂಜೆ ಮಾಡಿ, ಹೊಸ ಮಣ್ಣಿನ ಕುಂಭದಲ್ಲಿ ನೀರು ತಂದು, ಕಾಲಭೈರವನಿಗೆ ಪೂಜೆ ಸಲ್ಲಿಸಬೇಕು; ನಂತರ ಮೊಳಕೆ ಕಟ್ಟಿದ ನವಧಾನ್ಯಗಳನ್ನು ಗೊಬ್ಬರದ ಜತೆ ಕಲೆಸಿ ರಾಶಿಮಾಡಿ, ಅದರ ಮೇಲೆ ಆ ಕುಂಭವನ್ನು ಇಡಬೇಕು. ಇದೇ ಘಟಸ್ಥಾಪನೆ. ಈ ಘಟದ ಮೇಲೆ ತ್ರಿಶೂಲ ನೆಟ್ಟು, ಪಕ್ಕದಲ್ಲಿಯೆ ಧುನಿಯನ್ನು ಹಾಕಿ ೮ದಿನ ಕೂರಬೇಕು. ನವನಾಥರ ಸಂಕೇತವಾಗಿ ೯ನೇ ದಿನ ಬೆಳೆದ ಸಸಿಯನ್ನು ಕಟಾವು ಮಾಡಿ, ಪ್ರಸಾದ ರೂಪದಲ್ಲಿ ಊರಿನ ರೈತರಲ್ಲಿ ಹಂಚಬೇಕು.[5] ಇಲ್ಲಿನ ನೀರು, ಗೊಬ್ಬರ, ಬೀಜ, ಬೆಳೆ, ಕಟಾವು ಎಲ್ಲವೂ ಕೃಷಿ ಸಂಸ್ಕೃತಿಯವು. ಗೊಬ್ಬರದ ರಾಶಿಯ ಮೇಲೆ ತ್ರಿಶೂಲ ನೆಡುವ ಮೂಲಕ ಏಕಕಾಲಕ್ಕೆ ಭೈರವನಿಗೂ ಗೋರಖನಿಗೂ ಸಂಬಂಧ ಕಲ್ಪಿಸಲಾಗಿದೆ. ಗೊಬ್ಬರದ ರಾಶಿಯಲ್ಲಿ ಜನಿಸಿದ ಗೋರಖನು ಕರ್ನಾಟಕದ ಪಶುಪಾಲಕ ಹಾಗೂ ಕೃಷಿಸಂಸ್ಕೃತಿಯ ಜತೆ ಸೇರಿರುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ಕದ್ರಿಮಠದ ಘಟಸ್ಥಾಪನೆಯ ಆಚರಣೆಯಲ್ಲಿ ಕೆಲವು ಪ್ರಾದೇಶಿಕ ವ್ಯತ್ಯಾಸಗಳಿವೆ. ಅಲ್ಲಿ ಇದನ್ನು ಕದಿರು ತುಂಬುವ ಆಚರಣೆ ಎನ್ನಲಾಗುತ್ತದೆ. ನಾಥನು ಕದ್ರಿಬೆಟ್ಟದಲ್ಲಿರುವ ಪುದ್ದರ್ ಕಟ್ಟೆಯಲ್ಲಿ ಭತ್ತದ ಕದಿರುಗಳ  ಹೊರೆಯನ್ನು ಪೂಜಿಸಿ, ಅದನ್ನು ಭಕ್ತರಿಗೂ ಮಂಜುನಾಥ ಗುಡಿಗೂ ತನ್ನ ಪರಿವಾರದವರಿಗೂ ಕದ್ರಿ ಗ್ರಾಮಸ್ಥರಿಗೂ ಹಂಚುವನು.

ಲುಂಕೆಮಲೆ ಪರಿಸರದಲ್ಲಿ ಹೊಲಕ್ಕೆ ಹುಳಬಿದ್ದರೆ, ಲುಂಕಪ್ಪನ ತೀರ್ಥವನ್ನು ಚೆಲ್ಲುವ ಹಾಗೂ ಬಿತ್ತುವ ಬೀಜದಲ್ಲಿ ಹುಳಬೀಳದಂತೆ, ಲುಂಕೆಮಲೆಯ ನಾಥಮಠದ ಧುನಿಯ ಬೂದಿಪ್ರಸಾದವನ್ನು ಬೆರೆಸುವ ಪದ್ಧತಿಗಳಿವೆ. ಬೇರೆಲ್ಲಾ ಕಡೆಗಳಿಗಿಂತ ಚುಂಚನಗಿರಿಯ ಭೈರವನು ಕೃಷಿಸಂಸ್ಕೃತಿಯಲ್ಲಿ ಅತಿ ಹೆಚ್ಚು ಬೇರುತಳೆದವನು. ‘‘ಚುಂಚನಗಿರಿಯಾಗೆ ನಮಗಾರೆ ನೆಂಟರು, ಜೋಳ ಮೂಲಂಗಿ ಜವನಾವ ಬೆಳೆಯುವ ಭೈರುವ ನಮ್ಮ ಮನೆಸ್ವಾಮಿ’’ ಎಂಬ ಹಾಡನ್ನು ಗಮನಿಸಬೇಕು.  ಚುಂಚನಗಿರಿ ಭೈರವನ ಭಕ್ತರನ್ನು ಭೈರವನ ಒಕ್ಕಲು ಎನ್ನುವುದು ಸಾಂಕೇತಿಕವಾಗಿದೆ. ಒಕ್ಕಲು ಎಂಬುದೇ ಬೇಸಾಯದ ಪರಿಭಾಷೆ.  ಭೈರವನ ಭಕ್ತರಾದ ಒಕ್ಕಲಿಗರ ಈ ಹೆಸರು ಕೂಡ ಒಕ್ಕಲುತನದ ಕೆಲಸದಿಂದ ಬಂದಿರುವುದು ಸ್ಪಷ್ಟವಾಗಿದೆ. ಭೈರವನು ನಮ್ಮ ಗುಡಿಗಳಲ್ಲಿ ಕ್ಷೇತ್ರಪಾಲಕನು. ಕೆಲವು ಕಡೆ  ಕೇತಭೈರವ ಎಂಬ ಹೆಸರೂ ಅವನಿಗಿದೆ. ಕ್ಷೇತ್ರವೆಂದರೆ, ಹೊಲ ಎಂಬ ಅರ್ಥವೂ ಇದೆಯಷ್ಟೆ. ಮೂಡಿಗೆರೆಯ ದೇವರಮನೆ ಭೈರವನಿಗೆ ಸುತ್ತಲಿನ ರೈತರು ಸುಗ್ಗಿಯ ಕಾಲದಲ್ಲಿ ಧಾನ್ಯ ಸಮರ್ಪಣೆ ಮಾಡುವ ಪದ್ಧತಿಯಿದೆ. ಸಕಲೇಶಪುರದ ಕಡೆ ಬಾರಾಪಂಥದ ಸಂಕೇತವಾಗಿ ೧೨ ಕಂಬಗಳ ಚಪ್ಪರ ಹಾಕಿ, ಕೆಳಗೆ ಗೊಬ್ಬರ ತುಂಬಿದ ಹೆಡಿಗೆಯಲ್ಲಿ ಹಾಲು ಒಸರುವ ಗಿಡದ ಕೊನೆನಟ್ಟು ಪೂಜಿಸುವ ಪದ್ಧತಿಯಿದೆ. ಇದು ಗೋರಖನು ಗೊಬ್ಬರದ ಗುಂಡಿಯಲ್ಲಿ ಹುಟ್ಟಿದ್ದನ್ನು ಸಂಕೇತಿಸುತ್ತಿರಬಹುದು. ಇದು ಕೃಷಿಕ ಸಮುದಾಯಕ್ಕೆ ಪಶು ಮತ್ತು ಗೊಬ್ಬರ  ಜತೆಯಿರುವ ನಂಟನ್ನೂ ದೃಢ ಮಾಡುತ್ತಿರಬಹುದು. ಮದುವೆಯಾದ ಹೊಸತರಲ್ಲಿ ದಂಪತಿಗಳು ಗೊಬ್ಬರವನ್ನು ಹೊತ್ತುಹೋಗಿ ಗದ್ದೆಯಲ್ಲಿ ಹರಡಿ, ಭೈರವನಿಗೆ ಕೈಮುಗಿದು ಬರುವ ಆಚರಣೆಯು ಇದಕ್ಕೆ ಪೂರಕವಾಗಿದೆ. ಭೈರವನು ಇಲ್ಲಿ ಫಲವಂತಿಕೆಯ ದೈವ. ಸಕಲೇಶಪುರ ಭಾಗದ ಒಕ್ಕಲಿಗರಲ್ಲಿ ಕೆಂಚರಾಯನ ಸೇವೆ ಎಂಬ ಭೈರವಾರಾಧನೆ ಇದೆ. ಮಾಕೋನಹಳ್ಳಿ ದೊಡ್ಡಪ್ಪಗೌಡರು ವಿವರಿಸುವಂತೆ, ಇದು ರೈತಾಪಿಗಳ ಬಲಿ ಆಚರಣೆ. ನೆಲಸಾರಿಸಿ ರಂಗೋಲಿ ಬಿಟ್ಟು, ಅದರ ಮೇಲೆ ಬಾಳೆಯೆಲೆ ಹಾಸಿ, ಭತ್ತದರಾಶಿ ಮಾಡಿ, ಅದರ ಮೇಲೆ ತ್ರಿಶೂಲ ನೆಟ್ಟು ಸುತ್ತಲೂ ಕಳಸಗಳನ್ನು ಸ್ಥಾಪಿಸಿ ಲಕ್ಕಿಕೊನೆ ಹಾಗೂ ಖಡ್ಗವನ್ನು ಇಟ್ಟು ಪೂಜಿಸುತ್ತಾರೆ. ಹಸಿಕಡುಬುಗಳ ಎಡೆ ಮಾಡಿ ಅದಕ್ಕೆ ಕುರಿ ಅಥವಾ ಕೋಳಿ ಕತ್ತರಿಸಿ ರಕ್ತವನ್ನು ಹನಿಸುತ್ತಾರೆ. ಧೂಪಾರತಿ ಮಾಡಿ ತಮ್ಮ ಪೈರು ಹಾಗೂ ದನಕರುಗಳನ್ನು ರಕ್ಷಿಸು ಎಂದು ಬೇಡುತ್ತಾರೆ.[6] ಒಕ್ಕಲಿಗರು ಗೋರಖ ಹಾಗೂ ಬಾರಾ ಪಂಥವನ್ನು ಸಂಕೇತಿಸುವ ಆಚರಣೆಗಳನ್ನು ಮದುವೆಯ ಸಂದರ್ಭದಲ್ಲೂ ಮಾಡುವರು.

ಪಶುಪಾಲಕ ಸಂಸ್ಕೃತಿಯ ಜತೆ

ನಾಥರು ಧರಿಸುವ ಶೈಲಿಯು ಕುರಿಯ ಉಣ್ಣೆಯಿಂದ ಮಾಡಿದ್ದು.  ಇದಕ್ಕೆ ಜೋಡಿಸುವ  ಸಿಂಗನಾದವು ಚಿಗರೆಯ ಕೊಂಬಿನದು. ಅವರು ಕಿವಿಗೆ ಧರಿಸುವ ಕುಂಡಲಗಳು ಖಡ್ಗಮೃಗದವು ಇಲ್ಲವೆ ಆನೆಯ ದಂತದವು. ಹೀಗೆ ನಾಥರು ಧರಿಸುವ ಚಿಹ್ನೆಗಳು ಪ್ರಾಣಿ ಸಂಬಂಧಿಯಾದವು. ನಾಥರಿಗೂ ಪಶುಪಾಲಕರಿಗೂ ಕೆಲವು ಸಮಾನ ಲಕ್ಷಣಗಳಿವೆ. ಅದರಲ್ಲಿ ತಿರುಗಾಟವೂ ಒಂದು.  ತಮ್ಮ ನೆಲೆಗೆ ತಕ್ಕ ಜಾಗ ಹುಡುಕುತ್ತ ಹಂಡಿಬಡಗನಾಥನಂತೆ ಯೋಗಿಗಳು ಚಾರಣ ಮಾಡುತ್ತಾರೆ. ಪ್ರಾಣಿಗಳಿಗೆ ಆಹಾರ ನೀರು ಇರುವಂತಹ ಜಾಗಗಳನ್ನು ಹುಡುಕಿಕೊಂಡು ಪಶುಪಾಲಕರು ಅಲೆಯುತ್ತಾರೆ. ತಮಗೆ ತಕ್ಕ ನೆಲೆ ಸಿಕ್ಕರೆ  ನೆಲೆನಿಲ್ಲುತ್ತಾರೆ. ತಕ್ಕ ಭೂಮಿ ಸಿಕ್ಕರೆ ಕೃಷಿಯನ್ನು ಮಾಡುತ್ತ ನೆಲೆನಿಲ್ಲುತ್ತಾರೆ. ಚಿತ್ರದುರ್ಗ ಜಿಲ್ಲೆಯ ಮ್ಯಾಸಬೇಡರು ಶ್ರೀಶೈಲದಿಂದ ವಲಸೆ ಬಂದು ಕೃಷಿಕರಾಗಿ ನೆಲೆನಿಂತವರು.  ಒಂದು ಸಣ್ಣ ವ್ಯತ್ಯಾಸವೆಂದರೆ,  ಖುದಾಪುರದ ಮ್ಯಾಸಬೇಡರು ಭೈರವನ ಒಕ್ಕಲಾಗಿರುವಷ್ಟು ಪ್ರಮಾಣದಲ್ಲಿ, ಲುಂಕೆಮಲೆ ಮಠದ  ಶಿಷ್ಯರಾಗಿಲ್ಲ. ಕುರುಬರು ಹಾಗೂ ವದ್ದಿಕೆರೆ ಉಪನಾಯಕನ ಹಳ್ಳಿಗಳ ಗೊಲ್ಲರು ನಾಥಪಂಥದ ಆಚರಣೆಗಳನ್ನು ಇಟ್ಟುಕೊಂಡಿದ್ದಾರೆ. ಸೊಲ್ಲಾಪುರ ಭಾಗದ ಕುರುಬರಲ್ಲಿ ಮರಾಠಿ ನಾಥಪಂಥದ ಪ್ರವೇಶವಾಗಿದೆ. ರಾಜಸ್ತಾನದಲ್ಲಿ ನಾಥಪಂಥವು ಪಶುಪಾಲಕರ ಧರ್ಮವಾಗಿದೆ. ಈಗ ಕದ್ರಿಮಠದ ಮುಖ್ಯಸ್ಥರಾಗಿರುವ ಸಂಧ್ಯಾನಾಥರು ರಾಜಸ್ಥಾನದ ಕುರುಬ ಸಮುದಾಯದವರೆಂಬ ಮಾತು ಹಿಂದೆ ಬಂದಿದೆ. ಗೋರಖನು ಸಗಣಿಯ ಗುಡ್ಡೆಯಲ್ಲಿ ಹುಟ್ಟಿದವನೆಂಬ ಕಾರಣಕ್ಕಾಗಿ ಹಸುವಿನ ಸಾಕಣೆಯನ್ನು ಸಾಂಕೇತಿಕವಾಗಿ ನಾಥರಮಠದಲ್ಲಿ ಮಾಡಲಾಗುತ್ತದೆ. ಆದರೆ ಹಸುವಿಗೂ ಗೋರಖನಿಗೂ ನೇರ ಸಂಬಂಧವಿಲ್ಲ. ಕರ್ನಾಟಕದ ಗೋವಳಿಗರು ನಾಥರಾಗಿಲ್ಲ. ಕರ್ನಾಟಕದ ಕುರುಬರಿಗೂ ಗೊಲ್ಲರಿಗೂ ರೇವಣಸಿದ್ಧ, ಕೃಷ್ಣ ಹಾಗೂ ಜುಂಜಪ್ಪ ಈಗಾಗಲೇ ಸಾಂಸ್ಕೃತಿಕ ನಾಯಕರಾಗಿ ಸ್ಥಾಪಿತವಾಗಿದ್ದಾರೆ. ಇದರಿಂದ ಗೋರಖ ಮಚೇಂದ್ರರು ಈ ಸಮುದಾಯದಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ ಎಂದು ಕಾಣುತ್ತದೆ.

ನೆೇಕಾರಿಕೆ ಜತೆ

ಕರಾವಳಿ ಹಾಗೂ ಬೀದರ್ ಭಾಗದಲ್ಲಿ ಮಚೇಂದ್ರನು ಬೆಸ್ತರ ಸಂಸ್ಕೃತಿಯಲ್ಲಿ ಸೇರಿಹೋದಂತೆ, ಬೆಳಗಾವಿ ಭಾಗದಲ್ಲಿ ನೇಕಾರರ ಸಂಸ್ಕೃತಿಯಲ್ಲಿ ಸೇರಿಹೋಗಿದ್ದಾನೆ.  ನಾಥರಲ್ಲಿ ನೇಕಾರಿಕೆಯ ಒಂದು ಸಾಧನವನ್ನು ಗೋರಖ ಧಂಧಾರಿ ಎನ್ನುತ್ತಾರೆ. ಅದು ದಾರವನ್ನು ಒಂದು ರಂಧ್ರದಲ್ಲಿ ಪೋಣಿಸಿ ಮತ್ತೆ ತೆಗೆಯುವ ಒಂದು ಕಟ್ಟಿಗೆಯ ಪಟ್ಟಿ. ದಾರವನ್ನು ಪೋಣಿಸಿ ತೊಡಕಾಗದಂತೆ ತೆಗೆಯುವುದು ಅವರ ಯೌಗಿಕ ಚಟುವಟಿಕೆಗಳಲ್ಲಿ ಒಂದಾಗಿತ್ತು. ಧಂಧೆಯಿಂದ ದಾರಬಿಡಿಸುವುದು ಎಂದರೆ, ಗೋರಖನು ಸಂಸಾರಚಕ್ರದಲ್ಲಿ ಸಿಲುಕಿದ ಪ್ರಾಣಿಗಳನ್ನು ಕಾಪಾಡುವದರ ಸಂಕೇತ ಎಂದು ಭಾವಿಸಲಾಗಿದೆ.[7] ಭಾರತದಲ್ಲಿ ಬಹಳಷ್ಟು ನೇಕಾರಿಕೆ ಸಮುದಾಯಗಳು ನಾಥಪಂಥದೊಳಕ್ಕೆ ಪ್ರವೇಶ ಪಡೆದಿವೆ.   ಪುಣೇಕರರ ಪ್ರಕಾರ ಸ್ವತಃ ಗೋರಖನು ನೇಕಾರಿಕೆ ಕುಟುಂಬದಿಂದ ಬಂದವನು.[8] ಝುಂಡಿಯಲ್ಲಿ ಬಂದಿದ್ದ ನಾಥರು ತಮ್ಮ ಬಿಡುವಿನ ವೇಳೆಯಲ್ಲಿ ಕುರಿಯ ತುಪ್ಪಟದಿಂದ ನೂಲು ತೆಗೆಯುವ ಕೆಲಸ ಮಾಡುವುದು ಕಾಣುತ್ತಿತ್ತು. ಅವರ ಜತೆ ಯಾವಾಗಲೂ ತಕಲಿ ಇರುತ್ತದೆ. ತ್ರ್ಯಂಬಕೇಶ್ವರದ ನಾಥಮಠಕ್ಕೆ  ಹೋದಾಗ ಚೇತನನಾಥರು ತಮ್ಮ ಕೋಣೆಯಲ್ಲಿ ಉಣ್ಣೆಯ ಚೀಲವನ್ನು ಹೆಣೆಯುತ್ತಿದ್ದರು. ನಾಥಪಂಥದಲ್ಲಿ ಕರಿ ಬಣ್ಣದ ಉಣ್ಣೆಗೆ ಬಹಳ ಮಹತ್ವವಿದೆ.  ಕುರಿ ಉಣ್ಣೆ ದಾರ ತಕಲಿಗಳು ಪರಸ್ಪರ ಸಂಬಂಧವುಳ್ಳವು. ಕದ್ರಿಮಠದ ನಾಥರು ಪಟ್ಟಾಭಿಷೇಕಕ್ಕೆ ಕುಳಿತಾಗ ಧರಿಸಿದ್ದ ಪೇಟವು ತುಪ್ಪಟದ ದಾರದಿಂದ ಮಾಡಲಾಗಿದ್ದರ ಬಗ್ಗೆ ಹಿಂದೆ ಪ್ರಸ್ತಾಪ ಬಂದಿತು. ಈ ಎಲ್ಲ ಹಿನ್ನೆಲೆಯಲ್ಲಿ ಬೆಳಗಾವಿ ಭಾಗದ ಹಣಿಗಿವರು ನಾಥಪಂಥದ ಅನುಯಾಯಿಗಳಾಗಿರುವುದು ಸಹಜವಾಗಿದೆ. ಆದರೆ ಕರ್ನಾಟಕದ ನೇಕಾರರಾದ ದೇವಾಂಗದವರು ಶಾಕ್ತರಾಗಿಯೇ ಉಳಿದಿದ್ದಾರೆ. ಕಲ್ಗುಂಡಿಯಲ್ಲಿ (ಅರಸೀಕೆರೆ) ಅವರು ಭೈರವಾರಾಧಕರು. ಉತ್ತರ ಭಾರತದಲ್ಲಿ ಜುಗಿ ಜನಾಂಗದವರು ನೇಕಾರರು. ಕಬೀರನು ಈ ಪಂಥದವನು. ಕಬೀರಪಂಥವು ನಾಥಪಂಥದ ನೆರಳಾಗಿದೆ. ಹೀಗೆ ಉಣ್ಣೆಯ ಕಾರಣದಿಂದ ನಾಥಪಂಥವು ಪಶುಪಾಲಕ ಸಮುದಾಯದ ಜತೆಗೂ ಸಂಬಂಧ ಇರಿಸಿಕೊಂಡಿದೆ. ಆದರೆ ಭಾರತದ ನೇಕಾರರು ಯೌಗಿಕ ಪಂಥಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಇನ್ನೂ ಗಹನವಾದ ಕಾರಣಗಳಿರಬಹುದು. ಅವನ್ನು ಹುಡುಕಿ ತೆಗೆಯಬೇಕಿದೆ.

ವ್ಯಾಪಾರಿ ಚಟುವಟಿಕೆ ಜತೆ

ನಾಥಪಂಥಕ್ಕೆ ವ್ಯಾಪಾರ ವರ್ಗದ ಸಮುದಾಯಗಳೂ ಶಿಷ್ಯರಾಗಿವೆ. ನಾಥದಂತೆಯೆ ವಿರಕ್ತವಾದಿಯೂ ಅವೈದಿಕವೂ ಆದ ಬೌದ್ಧಧರ್ಮವು ವ್ಯಾಪಾರಿ ಮಾರ್ಗಗಳು ಇರುವ ಕಡೆಯಲ್ಲೆಲ್ಲ ಹರಡುತ್ತ ಹೋಯಿತು. ಆದರೆ  ಬೌದ್ಧ ಜೈನ ಲಿಂಗಾಯತಗಳಲ್ಲಿ ಇರುವಂತೆ ವ್ಯಾಪಾರ ವರ್ಗಗಳು ನಾಥಕ್ಕೆ ಬೆಂಬಲಿಸಿದ್ದು ಕಡಿಮೆ. ಇದಕ್ಕೆ ಒಂದು ಕಾರಣ, ವ್ಯಾಪಾರಿ ಚಟುವಟಿಕೆ ಇರುವ ಪಟ್ಟಣಗಳಲ್ಲಿ ನಾಥರು ಇರದೆ, ಗುಹೆ ಕಂದರಗಳಲ್ಲಿ ಕಾಡುಮೇಡುಗಳಲ್ಲಿ ಇರುವುದು. ದಾನದ ಮೂಲಕ ಸಾಮಾನ್ಯ ಜನರಿಗೆ ಮೋಕ್ಷಕ್ಕೆ ಹಾದಿ ತೋರಿಸುವ ಮತಗಳು ವ್ಯಾಪಾರಿ ವರ್ಗವನ್ನು ಆಕರ್ಷಿಸುತ್ತವೆ. ವೈಯಕ್ತಿಕ ಸಾಧನೆಯ ಮೂಲಕ ಬಿಡುಗಡೆ ಆಗಬೇಕು ಎಂದು ಹೇಳುವ ಪಂಥಗಳಿಗೆ ಈ ಗುಣ ಕಡಿಮೆ ಎಂದು ಕಾಣುತ್ತದೆ.  ಮುಂದೆ ಪಟ್ಟಣದ ಸಂಪರ್ಕಕ್ಕೆ ಬಂದ ನಾಥಮಠಗಳು, ವ್ಯಾಪಾರಿ ವರ್ಗವನ್ನು ಸೆಳೆದವು. ರಾಜಸ್ಥಾನದ ವ್ಯಾಪಾರಿಗಳು ಭೈರವಾರಾಧನೆಯ ಮೂಲಕ ಪರೋಕ್ಷವಾಗಿ ಇವುಗಳ ಅನುಯಾಯಿಗಳಾದರು. ರಾಜಸ್ಥಾನಿಯರ ಅಂಗಡಿಗಳಲ್ಲಿ ರಾಜಸ್ಥಾನದ ನಾಕೋಡ ಭೈರವನಾಥನ ಫೋಟೊ ಇದಕ್ಕೆ ಸಾಕ್ಷ್ಯವಾಗಿದೆ.

ವ್ಯಾಪಾರಿ ಸಂಸ್ಕೃತಿಯ ಕರಾವಳಿ ಪ್ರದೇಶದಲ್ಲಿ ನಾಥಪಂಥವು ಬೇರೂರಲು ಇಲ್ಲಿನ ವ್ಯಾಪಾರಿ ವರ್ಗದ ಬೆಂಬಲ ಸಿಕ್ಕಿತು. ರೇವು ಪಟ್ಟಣವಾದ ಬಸರೂರಿನಲ್ಲಿ  ವ್ಯಾಪಾರಿಗಳು ನಾಥರಿಗೆ ಸಾಕಷ್ಟು ದಾನಗಳನ್ನು ಮಾಡಿದರು. ಮುಂದೆ ಕದ್ರಿಮಠವು ಮಂಗಳೂರಿನ ಅನೇಕ ವ್ಯಾಪಾರಿಗಳನ್ನು  ಶಿಷ್ಯರಾಗಿ ಪಡೆಯಿತು. ಇವರಲ್ಲಿ ಜವಳಿ ವ್ಯಾಪಾರದ ಗೋಕುಲದಾಸ್ ಹಾಗೂ  ಬೀಡಿಉದ್ಯಮಿ ಪುತ್ತು ವೈಕುಂಠ ಶೇಠ್ ಮುಖ್ಯರು. ಗೋಕುಲದಾಸರು  ‘ಕದಲಿ ಮಂಜುನಾಥ ಮಹಾತ್ಮ್ಯೆ’ ಗ್ರಂಥವನ್ನು ಭೂತೇಶ್ವರನಾಥರ ಕೋರಿಕೆಯಂತೆ ಪ್ರಕಟಿಸಿಕೊಟ್ಟರು. ವೈಕುಂಠ ಶೇಠರು ಕದ್ರಿಮಠದ ಅರಸಾಗಿದ್ದ ಸುಂದರನಾಥರ ಭಕ್ತರಾಗಿದ್ದರು. ಒಮ್ಮೆ ನಾಥರು  ಸ್ನಾನ ಮಾಡುವಾಗ ಜಲಧಾರೆಯಲ್ಲಿ ತೇಲಿಬಂದ ಒಂದು ಎಲೆಯನ್ನು ಕೊಟ್ಟು ಇದರಲ್ಲಿ ಬೀಡಿಮಾಡಿ ಬದುಕು ಎಂದು ಹೇಳಿದರಂತೆ. ಅದರಂತೆ ಕಾಡುತಿರುಗುವ ರಮ್ಯತೆ ಯೋಗಿಗಳಿಂದ ಆ ಎಲೆ ಸಿಗುವ ಜಾಗವನ್ನು ತಿಳಿದು ಶೇಠರು ಬೀಡಿ ಉದ್ಯಮ ಶುರುಮಾಡಿದರಂತೆ. ಇದು ಇರುವ ಐತಿಹ್ಯ. ಬೀಡಿ ಉದ್ಯಮದಲ್ಲಿ ದೊಡ್ಡ ಯಶಸ್ಸನ್ನು ಪಡೆದ ಶೇಠರು ಕದ್ರಿಬೆಟ್ಟದಲ್ಲಿರುವ ನವನಾಥ ಕೆರೆಗಳ ದಂಡೆಯಲ್ಲಿ ನಾಥರ  ತಂಗುವಿಕೆಗೆ  ಛತ್ರ ಕಟ್ಟಿಸಿದರು. ಈಗಲೂ ಕದ್ರಿಮಠಕ್ಕೆ ಅವರ ಸೇವೆಗಳು ಸಲ್ಲುತ್ತಿವೆ. ಅವರ  ಬಂಗಲೆಯ ಉದ್ಯಾನದಲ್ಲಿ ಸುಂದರನಾಥರ ಅಮೃತಶಿಲೆಯ ಪ್ರತಿಮೆಯಿದೆ.

ಆರ್ಥಿಕ ಬಿಕ್ಕಟ್ಟು ಹಾಗೂ ಅವ್ಯವಹಾರ

ತ್ರ್ಯಂಬಕೇಶ್ವರದ ಗೋರಖನಾಥ ಮಠದ ಚೇತನನಾಥರು ಒಂದು ಸ್ವಾರಸ್ಯಕರ ಕಥೆ ಹೇಳಿದರು. ಮಹಾರಾಷ್ಟ್ರದ  ಖಂಡಾಲಾ ಕಣಿವೆಯಲ್ಲಿರುವ ಒಂದು ನಾಥಮಠದಲ್ಲಿ  ಸಂತೋಷನಾಥನು ತನ್ನ ಬಗ್ಗೆ ಪ್ರಚಾರ ಮಾಡಿಕೊಂಡು ಪ್ರಸಿದ್ದಿಗೆ ಬಂದು, ಮುಂಬೈನ ಉದ್ಯಮಿ ಧೀರೂಭಾಯಿ ಅಂಬಾನಿಯ ಮೇಲೆ ಪ್ರಭಾವ ಬೀರಿದನು. ತಾನು ತ್ರ್ಯಂಬಕದ ಕುಂಭಮೇಳಕ್ಕೆ (೧೯೯೧) ಬಂದಾಗ ಅಂಬಾನಿಯು ಹೆಲಿಕ್ಯಾಪ್ಟರಿನಿಂದ ಹೂಮಳೆ ಸುರಿಸುವ ವ್ಯವಸ್ಥೆ ಈತ ಮಾಡಿಕೊಂಡಿದ್ದನು. ಇದಾದ ಕೂಡಲೆ ಬಾರಾಪಂಥದವರು ಸಭೆಸೇರಿ, ಸಂತೋಷನಾಥನ ವಿಚಾರಣೆ ಮಾಡಿ, ಇವೆಲ್ಲ ನಾಥಪರಂಪರೆಗೆ ಸಲ್ಲದು ಎಂದು ದಂಡ ವಿಧಿಸಿದರು. ಈಗಲೂ ಅನೇಕ ನಾಥರು ದೊಡ್ಡ ಉದ್ಯಮಿಗಳನ್ನು ತಮ್ಮ ಶಿಷ್ಯರಾಗಿ ಮಾಡಿಕೊಂಡಿರುವುದುಂಟು. ಕದ್ರಿಯ ನಾಥರು ಮುಗ್ಗಟ್ಟಿಗೆ ಸಿಲುಕಿದಾಗ ಮಣೇಲು ಮಠದ ಜಮೀನನ್ನು  ಬಂಟರ ಉಳಿಪಾಡಿ ಗುತ್ತಿನವರ ಕುಟುಂಬಕ್ಕೆ ಅಡಮಾನವಿಟ್ಟ ದಾಖಲೆಯಿದೆ. ಶಾಂತಿನಾಥರು ಮುಖ್ಯಸ್ಥರಾಗಿದ್ದಾಗ ಮಠದ ಜಮೀನುಗಳಿಂದ ಮೂಲಗೇಣಿ ಚಾಲಗೇಣಿಗಳು ಸರಿಯಾಗಿ ವಸೂಲಿ ಆಗದೆ, ಬಹಳ ಕಷ್ಟ ಬಂತಂತೆ. ಆಗ ಸರ್ಕಾರವು ಮಠದ ಜಮೀನನ್ನು ಸ್ವಾಧೀನ ಮಾಡಿಕೊಂಡು ಏಳೂವರೆ ಲಕ್ಷ ಹಣನೀಡಿತು. ಆ ಹಣವನ್ನು ಠೇವಣಿಯಿಟ್ಟು ಅದರಿಂದ ನಿರಂತರ ಬಡ್ಡಿ ಬರುವಂತೆ ವ್ಯವಸ್ಥೆ ಮಾಡಿಕೊಳ್ಳಲಾಯಿತು. ನಾನು ತ್ರ್ಯಂಬಕದ ಗೋರಖನಾಥ ಮಠದ ಚೇತನನಾಥರ ಜತೆ ಮಾತಾಡುವಾಗ ಒಬ್ಬ ಮುದುಕ ಬಾಗಿಲಲ್ಲಿ ಕಾಣಿಸಿಕೊಂಡು ಕೈಮುಗಿದನು. ಆಗ ಚೇತನನಾಥರು ಮರಾಠಿಯಲ್ಲಿ ‘ಪಾವತಿ ಕೊಡುವುದಿದ್ದರೆ ಒಳಗೆ ಬಾ, ಇಲ್ಲದಿದ್ದರೆ ನಡೆ’ ಎಂದು ನಿಷ್ಠುರವಾಗಿ ನುಡಿದರು. ಬಿಕ್ಕಟ್ಟಿನಲ್ಲಿರುವ ಮಠಗಳಲ್ಲಿ ಮಠದ ಆಸ್ತಿಯನ್ನು ಊರ್ಜಿತಗೊಳಿಸುವುದೇ ನಾಥರ ಮುಖ್ಯ ಕೆಲಸವಾಗಿರುವುದುಂಟು. ವಿಟ್ಲಮಠಕ್ಕೆ  ಹೋದ ಸಂದರ್ಭದಲ್ಲಿ ಅಲ್ಲಿನ ನಾಥರು ಮಠದ ಮುಂದಿನ ತೋಟತುಡಿಕೆ ತೋರಿಸುತ್ತ ಹಿಂದೆ ಈಶ್ವರನಾಥರ ಕಾಲದಲ್ಲಿ ಇದೆಲ್ಲ ಹಾಳುಬಿದ್ದಿತ್ತು. ತಾವು ಬಂದಮೇಲೆ ಈ ಸ್ಥಿತಿಗೆ ಬಂದಿದೆ ಎಂದು ವಿವರಿಸಿದರು. ಇದಕ್ಕೆ ತಕ್ಕಂತೆ ಬಾರಾಪಂಥದ ನಿಯಮಾವಳಿ ಸಂಖ್ಯೆ ೧೧ರಲ್ಲಿ  ನಾಥಪಂಥದ ಮಠಗಳ ಸೊತ್ತನ್ನು ಜತನ ಮಾಡುವ ಹಾಗೂ ಅದು ದುರುಪಯೋಗವಾದಲ್ಲಿ ಅದರ ವಿಚಾರಣೆ ಮಾಡುವ ಉದ್ದೇಶವನ್ನು ಇಟ್ಟುಕೊಂಡಿದೆ.

ಈ ನಿಯಮವು ನಾಥವುಠಗಳ ಸಂಪತ್ತು ಉಂಟು ಮಾಡಿರುವ ಸಮಸ್ಯೆಗಳತ್ತ ಗಮನ ಸೆಳೆಯುತ್ತದೆ. ಕರ್ನಾಟಕದ ನಾಥಮಠಗಳಲ್ಲಿ ಕದ್ರಿಗೆ ಬಹಳ ಪ್ರಾಚೀನತೆಯಿದೆ. ಭಾರತದ ತುಂಬ ಒಂದು ಪ್ರತಿಷ್ಠೆಯಿದೆ. ಜತೆಗೆ ಅದಕ್ಕೆ ಸಾಕಷ್ಟು ಸಂಪತ್ತೂ ಇದೆ. ಭಾರತದ ಯಾವ ನಾಥಮಠದ ಅಧಿಪತಿಗೂ ಇಲ್ಲದ ರಾಜಾ ಎಂಬ ಪದವಿ ಇಲ್ಲಿನ ಅಧಿಪತಿಗಿದೆ. ಇದು ಕದ್ರಿಮಠಕ್ಕೆ ಅಧಿಕಾರ ಪಡೆಯಲು ಹಕ್ಕಿರುವ ಬಾರಾಪಂಥದ ೪ ಶಾಖೆಗಳಲ್ಲಿ, ಒಂದು ಬಗೆಯ ಸ್ಪರ್ಧೆಯನ್ನು ಉಂಟುಮಾಡಿದೆ. ಇದರ ಫಲವಾಗಿ ಅಲ್ಲಿ ಹಣಕಾಸಿನ ಅವ್ಯವಹಾರದ ಅಂಶವೂ ಸೇರಿಬಿಟ್ಟಿದೆ. ಕದ್ರಿಮಠಕ್ಕೆ ಒಂದು ಕಾಲಕ್ಕೆ ಸುಮಾರು ೧೩೬ ಎಕರೆ ಜಮೀನು ಬೆಟ್ಟದ  ಆಸುಪಾಸಿನಲ್ಲಿತ್ತು.  ಈಗ ಉಳಿದಿರುವುದು ಏಳೂವರೆ ಎಕರೆ. ಆದರೆ ಈ ಹಿಂದೆ ಕದ್ರಿಮಠದ ಜಮೀನು ಕೊಂಡವರು, ಅದನ್ನು ಪರಭಾರೆ ಮಾಡುವ ಸನ್ನಿವೇಶ ಬಂದಾಗ,  ಮೂಲಿಕಿ ಹಕ್ಕಿನವರು ನಮ್ಮ ಅಭ್ಯಂತರವಿಲ್ಲ ಎಂದು ಸರ್ಟಿಫಿಕೇಟು ಕೊಡುವ ಒಂದು ನಿಯಮವಿದೆ. ಈ ನಿಯಮದಿಂದ ಕದ್ರಿಮಠಕ್ಕೆ  ಪ್ರತಿಸೆಂಟಿಗೆ ರೂ. ೧೦೦೦ ಕಮಿಶನ್ ಸಿಗುತ್ತಿದೆ. ಈ ಹಿಂದಿನ ಅವಧಿಗಿದ್ದ ಮೋಹನನಾಥರು ಈ ಹಣವನ್ನು ದುರುಪಯೋಗ ಮಾಡಿಕೊಂಡರು. ಕದ್ರಿಮಠದ ಅಭಿವೃದ್ದಿಗೆ  ಈ ವಿಷಯದಲ್ಲಿ ಸ್ಥಳೀಯ ರಾದ ನಮ್ಮನ್ನು ಲೆಕ್ಕಕ್ಕೆ ಇಟ್ಟಿಲ್ಲ ಎಂಬುದು ಜೋಗಿ ಸಮುದಾಯದ ಆಕ್ಷೇಪ. ನಾವು ಆಯ್ಕೆಯಾಗಿರುವುದು ಬಾರಾಪಂಥದಿಂದ. ಅವರು ಕೇಳಿದರೆ  ಜವಾಬು ಕೊಡುತ್ತೇವೆ. ನಿಮಗೆಲ್ಲ ಕೊಡುವುದಿಲ್ಲ ಎಂಬುದು ಮೋಹನನಾಥರ ನಿಲುವು. ಈ ವಿಷಯದಲ್ಲಿ ಸಮುದಾಯಕ್ಕೂ ಕದ್ರಿಮಠದ ಗುರುವಿಗೂ ಭಿನ್ನಮತ ಹುಟ್ಟಿ ನಂತರ ಸಂಘರ್ಷ ಶುರುವಾಯಿತು. ನಾಥಮಠಗಳಿಗೆ ಎಷ್ಟೇ ಪ್ರಾಚೀನ ಪರಂಪರೆ ಇದ್ದರೂ, ನಾಥನ  ಆಯ್ಕೆ ಪಟ್ಟಾಭಿಷೇಕ ಇವೆಲ್ಲವೂ ಪಂಥೀಯ ಚೌಕಟ್ಟಿನಲ್ಲಿ ಜರುಗಿದರೂ, ಮಠಗಳು ಆಯಾ ಪ್ರದೇಶದ ಸರ್ಕಾರದ ಕಾನೂನಿನ ಚೌಕಟ್ಟಿನಲ್ಲಿ ತಮ್ಮ ದೈನಿಕ ಆಡಳಿತ ಮತ್ತು ಆರ್ಥಿಕ ಚಟುವಟಿಕೆಗಳನ್ನು ನಿರ್ವಹಿಸುತ್ತವೆ. ಅವು  ಎಂಡೋನ್‌ಮೆಂಟಿಗೆ ಸೇರಿರುವ ಕಾರಣ, ಲೆಕ್ಕಪತ್ರಗಳನ್ನು ಧಾರ್ಮಿಕ ದತ್ತಿಇಲಾಖೆ ಆಡಿಟ್ ಮಾಡುತ್ತದೆ. ಕದ್ರಿಯ ಮಠಾಧೀಶರು ಕಾನೂನು ಬಾಹಿರವಾಗಿ ನಡೆದುಕೊಂಡಿದ್ದಾರೆ ಎಂದು ಒಮ್ಮೆ ಆಡಿಟ್ಟಿನವರು ಆಕ್ಷೇಪ ಎತ್ತಿ ಕಾರಣ ಕೇಳಿದ್ದರು. ನಿಜವಾಗಿಯೂ ಮೋಹನನಾಥರು ತಮ್ಮ ಅಧಿಕಾರದ ಕೊನೆಯ ವರ್ಷಗಳಲ್ಲಿ, ಸ್ಥಳೀಯ ಜೋಗಿ ಸಮುದಾಯದ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದರು. ಇದರ ಫಲವಾಗಿ ಅವರು ಝುಂಡಿ ಬಂದಾಗ ವಿಚಾರಣೆ ಎದುರಿಸಬೇಕಾಯಿತು. ಮಠಗಳ ಮೂಲಕ ಸಮುದಾಯಗಳ ಪ್ರಗತಿ ಸಾಧಿಸಲು ಪ್ರಯತ್ನ ಮಾಡುತ್ತಿರುವ ಜೋಗಿಗಳಿಗೆ, ಈಗ ಮಠಗಳನ್ನು ಅವ್ಯವಹಾರ ಮತ್ತು ಅಶಿಸ್ತುಗಳಿಂದ ರಕ್ಷಿಸುವ ಕೆಲಸವನ್ನೂ ಮಾಡಬೇಕಾಗಿದೆ.

ಮಠಗಳ ಮೂಲಕ ಪ್ರಗತಿ

ವದ್ದಿಕೆರೆ ಸಿದ್ಧಪ್ಪನವರು ತಮ್ಮ ಸಮುದಾಯವನ್ನು ಎಚ್ಚರಿಸಲು ಪ್ರಕಟಿಸಿದ ಪುಸ್ತಕದಲ್ಲಿ ನಾಥಪಂಥದ ಮಠಗಳ ಹಾಗೂ ಸಮುದಾಯಗಳ ಅವನತಿಯ ಚಿತ್ರವನ್ನು ವಿಷಾದದಿಂದ ಕೊಡುತ್ತಾರೆ. ಕೊನೆಯಲ್ಲಿ ಇದರಿಂದ ಹೊರಬರಲು ಅವರು ಸೂಚಿಸುವ ಎರಡು ಮಾದರಿಗಳೆಂದರೆ ೧.ವೀರಶೈವ ಮಠಗಳದ್ದು. ೨.ಚುಂಚನಗಿರಿ ಮಠದ್ದು.

ಇತರೆ ಸಮಾಜಗಳ ಮಠಗಳು ಮಠಾಧೀಶರುಗಳು ಹೇಗೆ ಬೆಳಗುತ್ತಿವೆ, ಅಭಿವೃದ್ದಿ ಹೊಂದಿ ಶ್ರೇಷ್ಠತೆಯನ್ನು ಪಡೆದಿವೆ ಹೇಗೆ? ಏಕೆ? (ಉದಾ: ಸೋದರ ವೀರಶೈವ ಮಠಗಳು) ಎಂಬುದರ ಪರಿವೆಯೇ ನಮಗಿಲ್ಲ. ನಮ್ಮವರಿಗಿಲ್ಲ. ಮಠಕ್ಕೆ ಸೇರಿದ ಭಕ್ತರು ಅಥವಾ ಶಿಷ್ಯವೃಂದ-ಮಠಪತಿಗಳು ಮಠಾಧ್ಯಕ್ಷರು ಈ ಮೂವರಿಂದ ಇವರುಗಳ ಸರಿಯಾದ ಕರ್ತವ್ಯಗಳಿಂದ ಮಾತ್ರ ಮಠಗಳು ಬೆಳಗಿ ಬಾಳಲು ಸಾಧ್ಯ…ಚುಂಚನಗಿರಿ ಪೀಠವು ಮಾತ್ರ ಅಲ್ಲಿಯ ಮಠಪತಿಗಳು ತಮ್ಮ ಕರ್ತವ್ಯ ಮರೆತರೂ ಈ ಸಿಂಹಾಸನಕ್ಕೆ ಸೇರಿದ ಭಕ್ತರು ಬಹಳ ರೀತಿಯಲ್ಲಿ ಎಚ್ಚೆತ್ತು ಪೀಠಾಧಿಪತಿಗಳಿಗೆ ಎಲ್ಲ ರೀತಿಯ ಸಹಾಯ ಸಹಕಾರಗಳನ್ನು ಕೊಟ್ಟು ಮಠದ ಕೀರ್ತಿ ಪತಾಕೆಗಳನ್ನು ಸಮೃದ್ಧವಾಗಿ ಬೆಳಗಿಸಿದ್ದಾರೆ.[9]

ಚುಂಚನಗಿರಿ ಮಠವು ನಾಥಪಂಥದಿಂದ ದೂರ ಸರಿಯಿತು, ಒಕ್ಕಲಿಗರು ನಮ್ಮ ಮಠ ಕಿತ್ತುಕೊಂಡರು ಎಂದು ಯಾರು ವ್ಯಥೆ ಪಟ್ಟಿದ್ದರೊ,  ಅದನ್ನು ಮರಳಿ ಪಡೆಯಲು ಕೋರ್ಟು ಕಛೇರಿಗಳಲ್ಲಿ ಯಾರು ಹೋರಾಡಿದ್ದರೊ, ಅವರೇ ಈಗ ಸದರಿ ಮಠವನ್ನು ಮಾದರಿಯನ್ನಾಗಿ ಮಾಡಿಕೊಳ್ಳುತ್ತಿರುವುದು ಇಲ್ಲಿನ ವಿಶೇಷ. ‘ಚುಂಚನಗಿರಿ ಮಠವು ಬಾರಾಪಂಥದಲ್ಲಿ ಮುಂದುವರೆದಿದ್ದರೆ, ಕದ್ರಿಮಠದ ಹಾಗೆಯೆ ಉಳಿದಿರುತ್ತಿತ್ತು. ಅದು ಹೊರ ಹೋಗಿದ್ದರಿಂದಲೆ ಸ್ವತಂತ್ರ ಮಠವಾಗಿ ಒಕ್ಕಲಿಗರ ಪ್ರಗತಿ ಸಾಧಿಸುವ ಸಂಸ್ಥೆಯಾಗಿ ಬೆಳೆಯಿತು. ಅದರಿಂದ ಒಕ್ಕಲಿಗರು ರಾಜಕೀಯವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಮುಂದುವರೆಯಲು ಸಾಧ್ಯವಾಯಿತು. ಆ ಸಮುದಾಯದಿಂದ ಅಷ್ಟೊಂದು ಜನ ಮುಖ್ಯಮಂತ್ರಿಗಳು ಪ್ರಧಾನಮಂತ್ರಿಗಳು ಬರಲು ಸಾಧ್ಯವಾಯಿತು. ನಾವು ಬಾರಾಪಂಥದ ಒಳಗೆ ಇರಲು ನಿರ್ಧರಿಸಿ ತಪ್ಪು ಮಾಡಿದೆವು.  ಉತ್ತರ ಭಾರತದಿಂದ ೧೨ ವರುಷದ  ಮಟ್ಟಿಗೆ ಇದ್ದು ಹೋಗಲು ಬರುವ ನಾಥರಿಗೆ ನಮ್ಮ ಕಷ್ಟ ಗೊತ್ತಾಗುವುದಿಲ್ಲ. ನಮ್ಮೊಳಗಿನಿಂದಲೇ ಹುಟ್ಟಿ ಬರುವ ಧಾರ್ಮಿಕಗುರುಗಳು ಮಾತ್ರ ನಮ್ಮ ಸಮಾಜವನ್ನು ಒಗ್ಗೂಡಿಸಿ ರಾಜಕೀಯ ಆರ್ಥಿಕ ಸುಧಾರಣೆ ಮಾಡಬಲ್ಲರು. ನಾವು ಹೊಸಮಠವನ್ನೂ ಕಟ್ಟಲಿಲ್ಲ. ನಮ್ಮ ಜನರ  ಏಳಿಗೆಯನ್ನೂ ಮಾಡಲಿಲ್ಲ. ಈಗಲಾದರೂ ಚುಂಚನಗಿರಿ ಮಠಕ್ಕೆ ಸಿಕ್ಕಂತಹ ಬಿಡುಗಡೆ ನಮಗೂ ಬೇಕು’ ಎಂದು ಅನೇಕ ಜೋಗಿ ಮುಖಂಡರು ಸ್ಪಷ್ಟವಾಗಿ ಹೇಳಿದರು. ಅವರ ಮಾತುಗಳಲ್ಲಿರುವ ದೃಢತೆ  ಕಂಡರೆ, ಕದ್ರಿಮಠವು ಬಾರಾಪಂಥದ ವಶದಲ್ಲಿ ಎಷ್ಟುಕಾಲ ಇರುತ್ತದೆಯೊ ಹೇಳಬರುವುದಿಲ್ಲ.

ಚಿಕ್ಕಪುಟ್ಟ ಜಾತಿಗಳು ಸಹ  ತಮಗೊಂದು ಮಠ ಕಟ್ಟಿಕೊಂಡು, ಅದಕ್ಕೆ ಗುರುವನ್ನು ನೇಮಿಸಿಕೊಂಡು, ಸಾಮಾಜಿಕ ಸಂಘಟನೆ ಮಾಡಿ, ಅದನ್ನು ಆಧುನಿಕ ರಾಜಕಾರಣದೊಂದಿಗೆ ಸಮೀಕರಿಸಿ, ಲೌಕಿಕ ಪ್ರಯೋಜನ ಪಡೆಯುತ್ತಿರುವ ದೃಶ್ಯವು ಜೋಗಿಗಳ ಕಣ್ಣೆದುರಿಗೆ ಇದೆ. ಕದ್ರಿಯ ಜೋಗಿಗಳು ಸಮೀಪದ ಮಾಧ್ವಮಠಕ್ಕಿಂತ ಬಯಲು ಸೀಮೆಯ  ಲಿಂಗಾಯತ ಮತ್ತು ಚುಂಚನಗಿರಿ ಮಠಗಳನ್ನು ಪರ್ಯಾಯವೆಂಬಂತೆ ಚಿಂತಿಸುತ್ತಿರುವುದು ಗಮನಿಸಬೇಕಾದ ಸಂಗತಿ. ಅವರಿಗೆ ಮಠಗಳಿಂದ ಧಾರ್ಮಿಕವಾದ ಪರಂಪರೆ ಅಸ್ಮಿತೆ ಸಿಗುವುದಕ್ಕಿಂತಲೂ ಮುಖ್ಯವಾಗಿ ಲೌಕಿಕವಾಗಿ ತಮ್ಮ ಜನರನ್ನು ಬೆಳೆಸುವ ಸಂಸ್ಥೆಗಳ ಜರೂರಿದ್ದಂತೆ ಭಾಸವಾಗುತ್ತದೆ. ಆದರೆ ಒಕ್ಕಲಿಗ ಮತ್ತು ಲಿಂಗಾಯತ ಮಠಗಳು ಅಷ್ಟು ಉನ್ನತಿಗೆ ಬರಲು ಅವುಗಳ ಸಾಮುದಾಯಕ ಸಂಖ್ಯಾಬಲ, ಜಮೀನು ಇತ್ಯಾದಿ ಸಂಪಲ್ಮೂನಗಳ ಮೇಲಿನ ಪಾರಂಪರಿಕ ಒಡೆತನಗಳು ಕಾರಣ ಎಂಬುದನ್ನು ಗಮನಕ್ಕೆ ತಂದುಕೊಂಡಿಲ್ಲ. ಮಠಗಳ ಮೂಲಕ ಪ್ರಗತಿ ಪಡೆಯಲು ಜನ ಯೋಚಿಸುತ್ತಿರುವುದು,  ದಮನಿತ ಸಮುದಾಯಗಳನ್ನು ಅವುಗಳ ನ್ಯಾಯಬದ್ಧ ಹಕ್ಕುಗಳನ್ನು ಕೊಡಲು ನಮ್ಮ ೬೦ ವರ್ಷಗಳ ಸ್ವಾತಂತ್ರ್ಯವೂ ಪ್ರಜಾಪ್ರಭುತ್ವ ವ್ಯವಸ್ಥೆಯೂ ಸೋಲನ್ನು ಹೇಳುತ್ತಿದೆ ಅನಿಸುತ್ತದೆ.

* * *[1]      Vasantha Madhava, Religions in Costal Karnataka, Pp.55

[2]      ಮಠಕ್ಕೆ ದಾನಗೈದ ಜಮೀನನ್ನು ಇತರರು ಆಕ್ರಮಿಸಿಕೊಳ್ಳುವ ಪ್ರಕರಣಗಳು ನಂತರ ನಡೆದಂತೆ ಕಾಣುತ್ತದೆ. ಅದನ್ನು ತಡೆಯಲು ಹೊಲದ ಬದುವಿನಲ್ಲಿ ಶಾಪಾಶಯ ಕಲ್ಲುಗಳನ್ನು ನೆಡಲಾಯಿತು. ಮನುಷ್ಯರಿಗೆ ಪ್ರಾಣಿಗಳು ಭೋಗಿಸುತ್ತಿರುವ ಶಿಲ್ಪದ ಕಲ್ಲುಗಳು  ಬತ್ತೀಸ್‌ಶಿರಾಳದ ನಾಥಮಠದ ಆವರಣದಲ್ಲೂ ಮಣಕತ್ತೂರಿನ ಭೈರವ ಗುಡಿಯ ಹಿಂಭಾಗದಲ್ಲೂ ಕಂಡುಬಂದವು.

[3]      ಭೈರಸಂಧ್ರಗಳು (ದೊಡ್ಡಬಳ್ಳಾಪುರ, ಶಿಡ್ಲಘಟ್ಟ, ಮುಳಬಾಗಿಲು, ತುಮಕೂರು, ನೆಲಮಂಗಲ, ಬೆಂಗಳೂರು, ಮಾಗಡಿ, ಕುಣಿಗಲ್ಲು, ಕೋಲಾರ, ಶಿರಾ); ಭೈರಾಂಬುಧಿ(ಅರಸೀಕೆರೆ); ಬೈರಟಿಕೆರೆ(ಕಡೂರು); ಭೈರವತೀಥ೯ (ಸಂಡೂರು); ಸಿದ್ದಪ್ಪನಕುಂಟೆ (ಪಾವಗಡ); ಸಿದ್ದನಕಟ್ಟೆ (ಚಿಕ್ಕನಾಯಕನಹಳ್ಳಿ); ಸಿದ್ದನಬಾವಿ (ಬೆಳಗಾವಿ ಮತ್ತು ಕಲಘಟಗಿ); ಸಿದ್ದಸಮುದ್ರ (ಬೈಲಹೊಂಗಲ); ಸಿದ್ಧಗಂಗೆ (ತುಮಕೂರು); ಸಿದ್ದರದೊಣೆ(ನೆಲಮಂಗಲ);  ಮಚ್ಚಸಮುದ್ರ (ಚಳ್ಳಕೆರೆ); ಬೋರನಕುಂಟೆ (ಹಿರಿಯೂರು)

[4]      ಶ್ರೀಭೈರವ ಕ್ಷೇತ್ರದ ಸೀತಿಬೆಟ್ಟ, ಪು.೪೨

[5]      ಚಂದ್ರಗುತ್ತಿ ರೇಣುಕಾಂಬೆ ಜಾತ್ರೆ, ಪು. ೩೫-೩೬

[6]      ಪಾಶುಪತ ಶೈವರು ಮತ್ತು ಗೌಡಸಮಾಜ, ಪು. ೭೧-೭೨

[7]      ನಾಥಸಂಪ್ರದಾಯದ ಇತಿಹಾಸ, ಪು. ೩೪

[8]      Harijan Contribution to Medieval Indian  Thought, Pp.86-89

[9]      ನಾಥಪಂಥ ಶೈವಧರ್ಮ ಮತ್ತು ಕರ್ನಾಟಕ ನಾಥಪಂಥ ಶೈವ ಸಮಾಜದ ಸಂಕ್ಷಿಪ್ತ ಪರಿಚಯ, ಪು.೧೭-೧೮