ಜೋಗಿಯೊ ಕಾಪಾಲಿಕವೊ

 

‘ಚುಂಚನಗಿರಿ ಬ್ರಹ್ಮಕಪಾಲಿ ಪೀಠ. ನಮ್ಮದು  ಬ್ರಹ್ಮ ಕಾಪಾಲಿಕ ವಂಶ. ಈ ಏರಿಯಾದಲ್ಲಿ ನಮ್ಮನ್ನು ಐನೋರು ಅಂತಲೇ ಕರೆಯೋದು. ಈಗೇನೊ ಜೋಗಿಗಳು ಅಂತ ಕರೀಬೇಕು ಅಂತ ಮಾಡ್ತಿದ್ದಾರೆ.  ಜಾತಿಬಿಟ್ಟು ಇನ್ನೊಂದು ಜಾತಿಹೆಸರು ಹೇಳೋಕೆ ಆಗುತ್ತಾ?’ ಎಂದು ಗುಡುಗಿನಂತಹ ಪ್ರಶ್ನೆ ಹಾಕಿದವರು  ಕಾಳೇನಹಳ್ಳಿಯ ಲಿಂಗದೇವರಯ್ಯ. ೯೦ ವರ್ಷ ವಯಸ್ಸಿನ ಇವರು ಕಾಪಾಲಿಕ ಸಮುದಾಯದ ಹಿರಿಯರಲ್ಲಿ ಒಬ್ಬರು. ಮೊದಲು ಪೋಲಿಸರಾಗಿದ್ದು, ನಂತರ ಬೆಂಗಳೂರಿನ ರಾಜಾಮಿಲ್ಲು, ಮಿನರ್ವಾ ಮಿಲ್ಲುಗಳಲ್ಲಿ ಸ್ಪಿನ್ನಿಂಗ್ ಕೆಲಸ ಮಾಡಿ ನಿವೃತ್ತರಾದವರು. ಅವರು ನನಗೆ ಕೇಳಿದ ಮಾತಾದರೂ ವಾಸ್ತವದಲ್ಲಿ ಈ ಪ್ರಶ್ನೆ ಇದ್ದದ್ದು ಜೋಗಿ ಹೆಸರಲ್ಲಿ ಸಂಘಟನೆ ಮಾಡುತ್ತಿರುವ ನಾಯಕರಿಗೆ. ಲಿಂಗದೇವರಯ್ಯ ತುಂಬ ಸಿರಿವಂತರು. ಅವರು ಉದ್ಯಮಿ ಗುರುಟೀಕ್ ಗಂಗಾಧರ್ ಅವರ ತಂದೆ. ಆರ್ಥಿಕವಾಗಿ ಒಂದು ಮೆಟ್ಟಲು ಏರಿದವರಿಗೆ ಸಂಘಟನೆಯ ಮೂಲಕ ಸಿಗುವ ಸವಲತ್ತುಗಳಿಗಿಂತ  ಸಾಮಾಜಿಕ ಅಂತಸ್ತಿನ ಪ್ರಶ್ನೆ ಮುಖ್ಯವೆಂದು ತೋರುತ್ತದೆ.  

ವಾಸ್ತವದಲ್ಲಿ ಜೋಗಿ ಶಬ್ದವು ಜನಾಂಗ ವಾಚಕವಲ್ಲ. ಪಂಥವಾಚಕ. ಅವಧೂತ ಎಂಬರ್ಥವುಳ್ಳ ಯೋಗಿ ಶಬ್ದವು ಆಡುರೂಪದಲ್ಲಿ ಜೋಗಿಯಾಗಿದೆ. ಸಂಸ್ಕೃತದ ಯಕಾರ  ಕನ್ನಡಕ್ಕೆ ಬಂದಾಗ ಜಕಾರವಾಗುತ್ತದೆ. ಒಂದು ಅಕ್ಷರದ ಪಲ್ಲಟವು ಶಬ್ದವೊಂದರ ಮೂಲದಲ್ಲಿದ್ದ ಅರ್ಥಗೌರವವನ್ನು ಇಲ್ಲವಾಗಿಸಿ, ಇನ್ನೊಂದು ಭಾಷೆಯಲ್ಲಿ ಕೆಳಸ್ತರದ ಅರ್ಥಕ್ಕೆ ನಿಲ್ಲಿಸಿದೆ. ಈ ಅವಸ್ಥೆ ಜಾತ್ರೆ (ಯಾತ್ರೆ) ಶಬ್ದಕ್ಕೂ ಆಗಿದೆ. ಭಾಷೆಯೊಂದರಲ್ಲಿ ತದ್ಭವಗಳಿಗೆ ಯಾಕೆ ಈ ಪಾಡು ಬರುತ್ತದೆಯೊ? ಆದರೆ ಜೋಗಿ ಶಬ್ದವು ಜೀವಂತ ಮಾನವರನ್ನು ಉದ್ದೇಶಿಸಿರುವ ಕಾರಣ, ಅದರ ಶಾಬ್ದಿಕ ರೂಪಾಂತರವು ಅಪಮಾನ ಹಾಗೂ ವೇದನೆಗಳಿಗೂ ಕಾರಣವಾಗಿದೆ. ಹಿರಿಯ ತಲೆಮಾರಿನವರ ಹೆಸರಲ್ಲಿದ್ದ ಜೋಗಿ ಶಬ್ದವು, ಹೊಸ ತಲೆಮಾರಿನ ಹೆಸರುಗಳಲ್ಲಿ ಕಾಣೆಯಾಗುತ್ತಿರಲು ಇದು ಪ್ರಧಾನ ಕಾರಣ. ವಿಟ್ಲ ಹಾಗೂ ಕದ್ರಿಯಲ್ಲಿ ಜೋಗಿಮಠವನ್ನು ಯೋಗೇಶ್ವರ ಮಠವೆಂದು ಜೋಗಿಗಳು ಬದಲಿಸಿದರು. ಆದರೆ ಜನ ಬಳಕೆಯಲ್ಲಿದ್ದ ರೂಪಗಳು ಬದಲಾಗಲಿಲ್ಲ.

ಕರ್ನಾಟಕ ಸರ್ಕಾರ ನೇಮಿಸಿದ್ದ ಹಿಂದುಳಿದ ವರ್ಗಗಳ ವೆಂಕಟಸ್ವಾಮಿ ಆಯೋಗವು ಜೋಗಿ ಎಂಬ ಹೆಸರನ್ನು ಚರ್ಚಿಸುತ್ತ ‘ಈ ಹೆಸರು ಧಾರ್ಮಿಕ ತಿರುಪೆ ಬೇಡುವ ಕಾರಣದಿಂದ ಬಂದಿದೆ’ ಎಂದೂ, ಜೋಗಿಗಳು  ‘ಅಲೆಮಾರಿಯಾದ ಪುರೋಹಿತ ವರ್ಗ’ ಎಂದೂ ವ್ಯಾಖ್ಯಾನಿಸಿತು. ತಿರುಪೆಯವರು ಎನ್ನಲು ಕಿನ್ನರಿ ಜೋಗಿಗಳನ್ನೂ, ಪುರೋಹಿತವರ್ಗ ಎನ್ನಲು ಜೋಗಿದೀಕ್ಷೆ ಕೊಡುವ ಕಾಪಾಲಿಕರನ್ನೂ ಅದು ಆಧಾರವಾಗಿ ಬಳಸಿದಂತಿದೆ. ಭಿಕ್ಷೆ ಅಗೌರವ ಸೂಚಕ ವೃತ್ತಿಯಾದರೆ, ಪುರೋಹಿತಿಕೆ ಗೌರವಸೂಚಕ. ವೈಷ್ಣವರ ದಾಸಪ್ಪ, ಸೂಫಿಗಳ ಫಕೀರರು, ಲಿಂಗಾಯತರ ಜಂಗಮರು ಹಾಗೂ ಎಲ್ಲಮ್ಮ ಸಂಪ್ರದಾಯದ ಜೋಗಪ್ಪ  ಜೋಗತಿಯರು ಏಕಕಾಲಕ್ಕೆ ಧಾರ್ಮಿಕ ಗುರು ಪ್ರತಿನಿಧಿಗಳೂ ಹೌದು; ಭಿಕ್ಷೆ ಎತ್ತುವವರೂ ಹೌದು. ಇಂತಹ ಸಂಕೀರ್ಣ ಸಾಂಸ್ಕೃತಿಕ ಸಂಗತಿಯೊಂದು ಸಾಮಾಜಿಕ ರಾಜಕೀಯ ಸೌಲಭ್ಯ ಕೊಡುವ ಕಾಯ್ದೆಯಾಗುವಾಗ ವಿಚಿತ್ರವಾದ ವ್ಯಾಖ್ಯಾನಕ್ಕೆ ಒಳಗಾಗುತ್ತದೆ.

ಸಾಮಾಜಿಕ ಅಂತಸ್ತು ಹಾಗೂ ಸವಲತ್ತು ಎರಡೂ ಅಗತ್ಯ ಎಂದು ಭಾವಿಸುವವರು,  ಲಿಂಗದೇವರಯ್ಯ ಅವರಷ್ಟು ನಿರಾಳವಾಗಿ ಮಾತಾಡುವುದಿಲ್ಲ.  ಉಪನಾಯಕನ ಹಳ್ಳಿಯ ಕಾಪಾಲಿಕರ ಮುಖಂಡರಲ್ಲಿ ಒಬ್ಬರಾದ ಜಯಣ್ಣನವರ ಪ್ರಕಾರ,  ‘ಜನ  ನಮ್ಮನ್ನ ಮುಂದುಗಡೆ ಐನೋರೆ ಅಂತಾರೆ. ಹಿಂದೆ ಮಾತ್ರ ಜೋಗೇರು ಎಂತಲೇ ಕರೆಯೋದು. ನಾವು ಐನೋರಿಗಿಂತಲೂ ದೊಡ್ಡವರು. ಆದರೆ ಮಾಂಸ ತಿನ್ನೋದರಿಂದ ಹೀಗಾಯಿತು’; ಭಾರತದಲ್ಲಿ   ಸಮುದಾಯಗಳ ಸಾಮಾಜಿಕ ಅಂತಸ್ತನ್ನು ನಿರ್ಧರಿಸಲು ಅವರ ಆಹಾರ ಪದ್ಧತಿಯೂ ಒಂದು ಮುಖ್ಯ ಮಾನದಂಡವಾಗುತ್ತಲೇ ಬಂದಿದೆ. ಅದರಲ್ಲೂ ಕಾಪಾಲಿಕರ ಎರಡು ನಾಥಪಂಥೀಯ ಆಚರಣೆಯಾದ ಸಿದ್ಧಭುಕ್ತಿಯು ಮಾಂಸಾಹಾರಕ್ಕೆ ಸಂಬಂಧಪಟ್ಟಿದೆ.  ಅಂದರೆ ಜೋಗಿದೀಕ್ಷೆ ಪಡೆದ ವ್ಯಕ್ತಿ ತೀರಿಕೊಂಡರೆ, ದೀಕ್ಷೆಕೊಟ್ಟ ಗುರು ಮಾಡುವ ಆಚರಣೆಯಿದು. ಸತ್ತವನ ತಿಥಿಯ ದಿನ, ಅವನನ್ನು ಮಣ್ಣುಮಾಡಿದ ಜಾಗದಲ್ಲಿ, ಸಮಾಧಿಯ ೪ ಮೂಲೆಗೆ ನಾಲ್ಕು ಜನ, ಎದೆಯ ಮೇಲೆ ಇನ್ನೊಬ್ಬ ಕಾಪಾಲಿಕ ಕುಳಿತು ಮಾಂಸದೂಟ ಊಟಮಾಡಬೇಕು. ಕದ್ರಿಯ ಜೋಗಿಗಳಲ್ಲಿ ಗುರುಬೋಧೆ ತೆಗೆದುಕೊಂಡ ಜೋಗಿಯಲ್ಲದವರ ತಿಥಿಯಲ್ಲಿಯೂ ಸಿದ್ಧಭುಕ್ತಿಯಿದೆ. ಕಾಪಾಲಿಕರ ಮತ ಸುಧಾರಣೆಯ ಮಾಡಬಯಸಿದ್ದ ಸಿದ್ಧಪ್ಪನವರು’ ತಮ್ಮ ಜನಾಂಗವನ್ನು ಸಾಮಾಜಿಕವಾಗಿ ಕೀಳುಹಂತಕ್ಕೆ ತಳ್ಳಿರುವ  ‘ವಾಮಾಚಾರದ ಆಚರಣೆ’ ಎಂದಿದ್ದು ಇದನ್ನೇ. ಅವರ ಪ್ರಕಾರ ‘ಕಾಪಾಲಿಕರು ನಾಥಪಂಥೀಯರು ಅಥವಾ ಬ್ರಹ್ಮಕಪಾಲಿಗಳು;  ಉಳಿದವರಿಗೆ ದೀಕ್ಷೆ ಕೊಡುವ ಗುರುಸ್ಥಾನದಲ್ಲಿ ಇರುವವರು; ಭೈರವ ಹಾಗೂ ಶಕ್ತಿದೇವತೆಗಳನ್ನು ಪೂಜಿಸುವುದರಿಂದ ಪೂಜಾರರು. ಲುಂಕೆಮಲೆಯ ಬಾವಾಜಿಯಿಂದ ದೀಕ್ಷೆಪಡೆದು ಮಠದ ಪರವಾಗಿ ಸ್ಥಳೀಯವಾಗಿ ಆಡಳಿತ ನೋಡಿಕೊಳ್ಳುವುದರಿಂದ ಮಠಪತಿಗಳು ಕೂಡ. ಆದ್ದರಿಂದ ಕಾಪಾಲಿಕರು ತಮ್ಮನ್ನು ಜೋಗಿಗಳು ಎಂದು ಕರೆದುಕೊಳ್ಳಬಾರದು. ಈ ವಿಷಯದಲ್ಲಿ  ಸಮುದಾಯದ ಹೊಸ ತಲೆಮಾರಿನ ಅನೇಕರು ಸಿದ್ಧಪ್ಪನವರ ವಾದವನ್ನು ಒಪ್ಪುತ್ತಾರೆ.

ಜೋಗಿ ಸಮಾಜ ಸುಧಾರಕ ಸಂಘದವರು ‘ಎಲ್ಲ ನಾಥಪಂಥೀಯ ಪಂಗಡಗಳು  ಒಗ್ಗಟ್ಟಾಗಬೇಕು’ ಎಂದು ಹೇಳುವ ವಾದವು ಬಹುತೇಕ ಜನರ ಕಿವಿಗೆ ಬಿದ್ದಿದೆ. ಅನೇಕರು ಹುಬ್ಬಳ್ಳಿಯ ಜೋಗಿ ಸಮಾವೇಶಕ್ಕೆ ಕೂಡ ಹೋಗಿ ಬಂದಿದ್ದಾರೆ. ಅವರ ಮನೆಗಳಿಗೆ ತಮ್ಮನ್ನು ನಾಥಪಂಥೀಯರೆಂದು ಕರೆದುಕೊಳ್ಳಬೇಕು ಎಂದು ಹೇಳುವ ಕರಪತ್ರಗಳು ತಲುಪಿವೆ. ಈ ಬಗ್ಗೆ ಕೆಲವರಿಗೆ ಗೊಂದಲವಾಗಿದೆ. ತಮ್ಮನ್ನು ಜೋಗಿ ಎಂಬ ವಿಶಾಲ ಹೆಸರಲ್ಲಿ ಸಂಘಟಿಸುತ್ತಿರುವ ಬಗ್ಗೆ ಕಿನ್ನರಿ ಜೋಗಿಗಳಿಗೂ ಕದ್ರಿಯ ಸೀಮೆಯ ಜೋಗಿಗಳಿಗೂ ಸಮ್ಮತಿಯಿದೆ. ಆದರೆ ಲುಂಕೆಮಲೆ ಮತ್ತು ಚುಂಚನಗಿರಿ ಸೀಮೆಯ ಕಾಪಾಲಿಕರಲ್ಲಿ ಹಾಗೂ ಉತ್ತರ ಕರ್ನಾಟಕದ ರಾವುಳರಲ್ಲಿ ಕೆಲವರಿಗೆ ಈ ಬಗ್ಗೆ ತಕರಾರಿದೆ. ಯಾವ ಹೆಸರಿನ ಕುರುಹಿನಿಂದ ಬಿಡುಗಡೆ ಪಡೆಯಬೇಕು ಎಂದು ಯತ್ನಿಸಿದ್ದರೊ, ಅದು ಶಿವನ ಕೈಗಂಟಿದ ಕಪಾಲದಂತೆ, ಬೇರೆೊಂದು ರೂಪದಲ್ಲಿ ತಮ್ಮವರಿಂದಲೇ ಮತ್ತೊಮ್ಮೆ ಅಂಟಿಕೊಳ್ಳಲು ಬರುತ್ತಿರುವುದು ಅವರಿಗೆ ಆತಂಕವುಂಟು ಮಾಡಿದೆ.

ಪರಂಪರೆಯ ಹುಡುಕಾಟ

ಕದ್ರಿಮಠದಲ್ಲಿ ೧೨ ವರ್ಷಕ್ಕೊಮ್ಮೆ ನಡೆಯುವ ನಾಥನ ಪಟ್ಟಾಭಿಷೇಕ ಕಾರ್ಯಕ್ರಮ, ನಾಥಪಂಥದ ದೃಷ್ಟಿಯಿಂದ ಬಹಳ ದೊಡ್ಡ ಘಟನೆ. ಅಲ್ಲಿಗೆ ಕರಾವಳಿಯನ್ನು ಒಳಗೊಂಡಂತೆ, ಕರ್ನಾಟಕದ ನಾನಾ ಭಾಗದ ನಾಥಪಂಥಿ ಸಮುದಾಯದ ಜನ ಆಗಮಿಸಿದ್ದರು. ಹೆಚ್ಚಿನವರು ಮಧ್ಯಮವರ್ಗಕ್ಕೆ ಸೇರಿದವರು. ಇಲ್ಲಿಗೆ ಕರಾವಳಿಯ ಬಹುತೇಕ ಜೋಗಿಗಳು ಬಂದಿದ್ದರು. ಆದರೂ ಅನೇಕ ಜೋಗಿ ಜನರಿಗೆ ಇದು ಅಷ್ಟು ಮುಖ್ಯವಾದ ಘಟನೆ ಆಗಿರುವಂತೆ ಕಾಣಿಸಲಿಲ್ಲ. ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದಿರುವ ನಾಥ ಸಮುದಾಯದಲ್ಲಿ ಬಹಳ ಜನರಿಗೆ ತಾವು ನಾಥಪಂಥೀಯರು ಎನ್ನುವ ಅರಿವಾಗಲಿ, ಅದರ ಪರಂಪರೆಯನ್ನು ಪಡೆಯಬೇಕೆಂಬ ಇರಾದೆಯಾಗಲಿ ಬಹಳ ತೀವ್ರವಾಗಿಲ್ಲ. ಅವರು ತಮ್ಮ ಪರಿಸರದಲ್ಲಿರುವ ಬಲಿಷ್ಠ ಸಮುದಾಯದ ಸಾಂಸ್ಕೃತಿಕ ಪ್ರಭಾವವನ್ನು ಸ್ವೀಕರಿಸಿಕೊಂಡು ಬದುಕುತ್ತಿದ್ದಾರೆ. ಚುಂಚನಗಿರಿ ಸೀಮೆಯಲ್ಲಿ ಒಕ್ಕಲಿಗರು ಕೂಡ ನಾಥಪಂಥೀಯರೇ ಆಗಿದ್ದ ಕಾರಣ, ಅಲ್ಲಿನ ಕಾಪಾಲಿಕರಿಗೆ ದೊಡ್ಡ ವ್ಯತ್ಯಾಸ ಅನಿಸಲಿಲ್ಲ.

ಆದರೂ  ನಾಥಪಂಥಿ ಸಮುದಾಯಗಳಲ್ಲಿ ಒಂದು ಎಚ್ಚೆತ್ತ ವರ್ಗವು ತಮ್ಮ ಪರಂಪರೆಯನ್ನು ಹುಡುಕಿ, ಅದನ್ನು ಪಡೆದುಕೊಳ್ಳುವುದಕ್ಕೆ ಅನೇಕ ಬಗೆಯಲ್ಲಿ ಯತ್ನಿಸಿತು. ೨೦ನೇ ಶತಮಾನದಲ್ಲಿ ಅನೇಕ ಸಮುದಾಯಗಳು ಏಕಕಾಲಕ್ಕೆ ಸಾಮಾಜಿಕ ರಾಜಕೀಯ ಮುನ್ನಡೆಯನ್ನೂ ಹಾಗೂ ಧಾರ್ಮಿಕ ಸಾಂಸ್ಕೃತಿಕ ಚಹರೆಯನ್ನೂ ಹುಡುಕಿಕೊಳ್ಳುವ ಕಾರ್ಯ ಮಾಡಿದವು.  ಪಶ್ಚಿಮದಿಂದ ಬಂದ ವಸಾಹತುಶಾಹಿ ಆಧುನಿಕತೆಯ ಹವೆಯು ಬೀಸಲಾರಂಭಿಸಿದಾಗ, ಸಾಮಾಜಿಕ ಎಚ್ಚರ ಉಂಟಾಯಿತು. ಜತೆಗೆ ತಮ್ಮ ಧರ್ಮ ಸಂಪ್ರದಾಯಗಳು ಭಗ್ನವಾಗಿ  ಹೋಗುತ್ತಿವೆ. ನಾವು ಅದರಿಂದ ದೂರ ಸರಿಯುತ್ತಿದ್ದೇವೆ. ಅದನ್ನು ಮರಳಿ ಪಡೆಯಬೇಕು ಎಂಬ ಪುನರುಜ್ಜೀವನದ ಆತಂಕ ಮತ್ತು ಹಂಬಲಗಳೂ ಶುರುವಾದವು. ವಸಾಹತುಶಾಹಿಯು ಕಟ್ಟಿಕೊಟ್ಟ ಸಮುದಾಯ ಚಿತ್ರಗಳು ಕೂಡ ಇದಕ್ಕೆ ಕಾರಣವಾದವು. ಜನಗಣತಿ ಮತ್ತು ಜಾತಿಗಳ ಅಧ್ಯಯನವನ್ನು ಬ್ರಿಟಿಶರು ಆರಂಭಿಸಿದಾಗ, ಅವರಿಗೆ ಕೆಲವು ಸಮುದಾಯಗಳು ಜಾತಿಯೇ ಧರ್ಮವೇ ಪಂಥವೇ ಎಂಬ ಸಮಸ್ಯೆ ಎದುರಾಯಿತು. ಅವನ್ನು ‘ಹಿಂದು’ ಎಂಬ ದೊಡ್ಡ ಚೌಕಟ್ಟಿನ ಒಳಗೆ ತರುವುದಕ್ಕೂ ಹೊರಗೆ ಇಡುವುದಕ್ಕೂ  ಕಷ್ಟವಾಯಿತು. ಆಗ ಅನೇಕ ಸಮುದಾಯಗಳಿಗೆ ತಮ್ಮ ‘ಧರ್ಮ’  ಮತ್ತು ಸಾಂಸ್ಕೃತಿಕ ಅಸ್ಮಿತೆ ಯಾವುದು ಎಂಬ  ಪ್ರಶ್ನೆ ತೀವ್ರವಾಗಿ ಎದುರಾಯಿತು. ಜನಗಣತಿಯಲ್ಲಿ ಯಾವ ಧರ್ಮ ಎಂದು ಬರೆಸಬೇಕು ಎಂದು ಅವು ತಮ್ಮ ಜನರಿಗೆ ಕರೆಗೊಡುವ ಕರಪತ್ರಗಳು, ೨೦ನೇ ಶತಮಾನದಲ್ಲಿ ಬಹಳ ಪ್ರಕಟವಾದವು. ಸಮುದಾಯಗಳು ತಮ್ಮ ಸಾಮಾಜಿಕ ಚರಿತ್ರೆ ಮತ್ತು ಧಾರ್ಮಿಕ ಪರಂಪರೆಯನ್ನು ಹುಡುಕಲು ಹಾಗೂ ಪಡೆದುಕೊಳ್ಳಲು ಆರಂಭಿಸಿದವು.   ಫ.ಗು. ಹಳಕಟ್ಟಿ ಅವರು ಆಧುನಿಕ ಲಿಂಗಾಯತ ಸಮುದಾಯಕ್ಕೆ ವಚನಗಳನ್ನು ಸಂಪಾದಿಸಿ ‘ವಚನಶಾಸ್ತ್ರಸಾರ’(೧೯೨೩) ಪ್ರಕಟಿಸಿದ್ದು ಇಂತಹ ಗುರುತಿನ ಹುಡುಕಾಟದಲ್ಲೇ. ಇದಾದ ಮೂರು ವರ್ಷಗಳಲ್ಲಿ ಹನುಮಂತಯ್ಯನವರು  ‘ಕುರುಬರ ಚರಿತ್ರೆ’ (೧೯೨೬)  ಬರೆದು ಪ್ರಕಟಿಸಿದರು. ಸಾಮಾಜಿಕ ಚರಿತ್ರೆ ಮತ್ತು ಧಾರ್ಮಿಕ ಪರಂಪರೆಯನ್ನು ಲಿಖಿತರೂಪದಲ್ಲಿ ಕಟ್ಟಿಕೊಂಡದ್ದರ ಭಾಗವಾಗಿ ಸಾಮಾಜಿಕ ಸಂಘಟನೆ ಶುರುವಾಯಿತು. ಇದು ಆಧುನಿಕ ಶಿಕ್ಷಣ ಪಡೆಯುವುದಕ್ಕೂ,  ವಸಾಹತುಶಾಹಿ ಆಧುನಿಕತೆಯ ಫಲಗಳನ್ನು ಪಡೆಯುವುದಕ್ಕೂ, ರಾಜಕೀಯದಲ್ಲಿ ಪಾಲುದಾರಿಕೆಯನ್ನೂ ಪಡೆಯುವುದಕ್ಕೂ ಕಾರಣವಾಯಿತು. ಸಾಮಾಜಿಕ ಚರಿತ್ರೆ, ಧಾರ್ಮಿಕ ಪರಂಪರೆ, ಸಾಮಾಜಿಕ ಸಂಘಟನೆ, ಶಿಕ್ಷಣ, ನೌಕರಿ, ರಾಜಕೀಯ – ಇದೊಂದು ತರ್ಕದ ಸರಣಿ. ಬಲಿಷ್ಠ ಸಮುದಾಯಗಳು ತಮ್ಮ ಪ್ರಗತಿಗಾಗಿ ಅನುಸರಿಸಿದ ಈ ಮಾದರಿಯನ್ನು ನಾಥಪಂಥಿಯಂತಹ ಪುಟ್ಟ ಸಮುದಾಯಗಳು ಕೊಂಚ ತಡವಾಗಿ ಅನುಸರಿಸಿದವು. ಇದನ್ನು ಅವು ಕಟ್ಟಿದ ಸಂಘಗಳಲ್ಲಿ, ಹೊರಡಿಸಿದ ಕರಪತ್ರಗಳಲ್ಲಿ,  ಪ್ರಕಟಿಸಿದ ಪುಸ್ತಕಗಳಲ್ಲಿ ಹಾಗೂ ಮಾಡಿದ ಸಮ್ಮೇಳನಗಳಲ್ಲಿ  ಕಾಣಬಹುದು. ಆದರೆ ಅಲ್ಪಸಂಖ್ಯಾತವಾಗಿರುವ ಈ ಸಮುದಾಯಗಳು ಸಾಮಾಜಿಕ ಮೇಲ್ಚಲನೆ ಪಡೆಯಲು ಯತ್ನಿಸುವಾಗ, ಬಲಿಷ್ಠ ಸಮುದಾಯಗಳಿಗೆ ಇಲ್ಲದ  ಸಂವೇದನಶೀಲತೆ, ರಕ್ಷಣಾತ್ಮಕತೆ, ಗೊಂದಲ ಅನುಭವಿಸುತ್ತವೆ. ಈ ಪ್ರಕ್ರಿಯೆಯನ್ನು ಮೊದಲು ಆರಂಭಿಸಿದ್ದು ಕದ್ರಿಯ ಜೋಗಿಗಳು.  ನಂತರ ಬೆಳಗಾವಿ ಭಾಗದ ರಾವುಳರು. ನಂತರ  ಲುಂಕೆಮಲೆ ಭಾಗದ ಕಾಪಾಲಿಕರು ಹಾಗೂ ಕುಂದಾಪುರ ಭಾಗದ ಬಳೆಗಾರ ಜೋಗಿಗಳು. ಈ ಪ್ರಕ್ರಿಯೆಯನ್ನು ಕ್ರಮವಾಗಿ ಇಲ್ಲಿ ಪರಿಶೀಲಿಸಬಹುದು.

. ದಕ್ಷಿಣ ಕನ್ನಡ ಜೋಗಿಜಾತಿ ಗೋರಕ್ಷ ವಿದ್ಯಾದಾಯಿನಿ ಸಂಘ

‘ದಕ್ಷಿಣ ಕನ್ನಡ ಜೋಗಿಜಾತಿ ಗೋರಕ್ಷ ವಿದ್ಯಾದಾಯಿನಿ ಸಂಘ’ ಎಂಬ ಸಂಘವು ೧೯೩೮ರಲ್ಲಿ ಟಿ.ಬಿ. ಜೋಗಿಯವರ ಅಧ್ಯಕ್ಷತೆಯಲ್ಲಿ ಸ್ಥಾಪನೆಯಾಯಿತು.  ೧೯೬೯ರಲ್ಲಿ ಇದೇ ಸಂಘವು  ‘ಜೋಗಿ ಸಮಾಜ ಸುಧಾರಕ ಸಂಘ’ವಾಯಿತು. ೧೯೭೮ರಲ್ಲಿ  ‘ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘ’ವಾಗಿ ವಿಸ್ತರಣೆ ಪಡೆಯಿತು. ಮುಂದೆ ಇದರೊಳಗಿಂದ  ‘ನಾಥ ಸಂಪ್ರದಾಯ ಪ್ರಚಾರ ಸಮಿತಿ’ ಹುಟ್ಟಿಕೊಂಡಿತು. ಈ ಅವಸ್ಥಾಂತರಗಳು ಮಾರ್ಮಿಕವಾಗಿವೆ. ಸಂಘಟನೆಯ ಹೆಸರಲ್ಲಿರುವ ಮೂರು ಶಬ್ದಗಳು ೧.ಜೋಗಿಜಾತಿ ೨.ಗೋರಕ್ಷ ೩. ವಿದ್ಯಾ. ‘ಜಾತಿ’ ಶಬ್ದವು ಸಾಮಾಜಿಕ ನೆಲೆಯನ್ನೂ ‘ಗೋರಕ್ಷ’ ಶಬ್ದವು ಸಾಂಸ್ಕೃತಿಕ ಅಥವಾ ಧಾರ್ಮಿಕ ನೆಲೆಯನ್ನೂ, ‘ವಿದ್ಯಾ’ ಎನ್ನುವುದು ಆಧುನಿಕತೆಯಲ್ಲಿ ಪಾಲುಪಡೆವ ಆಶಯವನ್ನೂ ಒಳಗೊಂಡಿವೆ. ಆಧುನಿಕ ಶಿಕ್ಷಣಕ್ಕೂ ಸಮಾಜ ಸುಧಾರಣೆಗೂ ಇರುವ ನೇರ ಸಂಬಂಧವನ್ನು ಜೋಗಿಗಳು ಅರಿತಿದ್ದರು. ಇದನ್ನು ಅವರ ಎರಡನೇ ಸಂಘದ ಹೆಸರು ಚೆನ್ನಾಗಿ ಪ್ರತಿನಿಧಿಸುತ್ತದೆ. ಮೂರನೆಯ ಸಂಘವು ಜಿಲ್ಲೆಯ ಸೀಮಿತ ಪ್ರದೇಶದಿಂದ  ರಾಜ್ಯಮಟ್ಟಕ್ಕೆ ವಿಸ್ತರಣೆ ಪಡೆಯುತ್ತಿದೆ. ಇದರಲ್ಲಿ ನಾಥಪಂಥಿ ಸಮುದಾಯಗಳಿಗೆ ನಾಯಕತ್ವ ಕೊಡುವ ಮಹತ್ವಾಕಾಂಕ್ಷೆ ಅಡಗಿದೆ. ನಾಲ್ಕನೆಯದಾದ ಸಮಿತಿಯು ಈ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಚಟುವಟಿಕೆಗಳಿಗೆ ಒಂದು ಧಾರ್ಮಿಕ ಸಾಂಸ್ಕೃತಿಕ ಚೌಕಟ್ಟನ್ನು ಒದಗಿಸಿಕೊಳ್ಳಲು ಬಯಸಿದೆ.

ಜೋಗಿ ಸಮಾಜ ಸುಧಾರಕ ಸಂಘವು ಘೋಷಿಸಿಕೊಂಡಂತೆ ಅದರ ಮುಖ್ಯ ಉದ್ದೇಶಗಳು ಹೀಗಿವೆ: ೧. ರಾಜ್ಯದಾದ್ಯಂತ ನೆಲೆಸಿರುವ ಬೇರೆಬೇರೆ ಉಪನಾಮಗಳಿಂದ ಕರೆಯಲ್ಪಡುವ ಸಮಸ್ತ ನಾಥಪಂಥಿ ಪಂಗಡಗಳನ್ನು ಸಂಘಟಿಸಿ, ಉಪಸಂಘಗಳನ್ನು ಸ್ಥಾಪಿಸುವ ಮೂಲಕ ಅವರನ್ನು ಒಗ್ಗೂಡಿಸಿ,  ಸಮಾಜದ ಉನ್ನತಿಯನ್ನು ಸಾಧಿಸುವುದು; ೨. ಸಮಾಜದ ಉನ್ನತಿಗಾಗಿ ಸಮಾಜ ಬಾಂಧವರನ್ನು ವಿದ್ಯಾವಂತರನ್ನಾಗಿ ಮಾಡಲು ಬೇಕಾಗಬಹುದಾದ ವ್ಯವಸ್ಥೆಯನ್ನು ಕಲ್ಪಿಸುವುದು; ೩. ಜೋಗಿ ಸಮಾಜಕ್ಕೆ ಸೇರಿದ ಕದ್ರಿ ಜೋಗಿಮಠದಲ್ಲಿ ಜರುಗುವ ವಿಶೇಷ ಹಬ್ಬ ಮತ್ತಿತರ ದೇವತಾ ಕಾರ್ಯಗಳಲ್ಲಿ  ಸಹಕರಿಸುವುದು. ಇವು ಕ್ರಮವಾಗಿ ಸಾಮಾಜಿಕ ಆರ್ಥಿಕ ಹಾಗೂ ಧಾರ್ಮಿಕವಾದ ಆಶಯಗಳಾಗಿದ್ದು, ಇಲ್ಲಿ ಒಟ್ಟು ಸೇರಿವೆ. ತಮ್ಮ ಜನರಿಗೆ  ಸರ್ಕಾರದಿಂದ ಯಾವೆಲ್ಲ ಸೌಲಭ್ಯ ಸಿಗುತ್ತದೆ ಎಂಬ ಮಾಹಿತಿಯನ್ನು ಸಂಘವು ಕಾಲಕಾಲಕ್ಕೆ ತಿಳಿಸಿಕೊಂಡು ಬಂದಿತು ಕೂಡ. ಬಹುಶಃ  ನಾಥಪಂಥಿ ಸಮುದಾಯಗಳಲ್ಲೇ ಕದ್ರಿಯ ಜೋಗಿಗಳಷ್ಟು ಸಂಘಟಿತ ರಾಗಿ ಕೆಲಸ ಮಾಡಿದವರು ಬೇರೆಯಿಲ್ಲ. ಇವರಿಗೆ ಹೋಲಿಸಿದರೆ ಬೆಂಗಳೂರಿಗೆ ಅರ್ಧಗಂಟೆ ಪ್ರಯಾಣ ದೂರದಲ್ಲಿರುವ ಜೋಗೇರಹಳ್ಳಿಯ ಕಾಪಾಲಿಕರು ಒಂದು ಶತಮಾನದಷ್ಟು ಹಿಂದಿದ್ದಾರೆ.

. ಭೂತೇಶ್ವರನಾಥರ ನಿಯೋಗ

ಕರ್ನಾಟಕದಲ್ಲಿ ನಾಥಪಂಥದ ಪ್ರಚಾರಕ್ಕಾಗಿ ೧೯೫೦ರ ಸುಮಾರಿಗೆ ಅವಧೂತ ಯೋಗಿ ಮಹಾಸಭೆಯು ಭೂತೇಶ್ವರನಾಥ ಎಂಬ ಯೋಗಿಯನ್ನು ನಿಯೋಜಿಸಿದ ಸಂಗತಿ ಹಿಂದೆ ಪ್ರಸ್ತಾಪವಾಯಿತಷ್ಟೆ. ಈ ನಿಯೋಜನೆಗೆ  ಕಾರಣ, ಕರ್ನಾಟಕದಲ್ಲಿ ಚುಂಚನಗಿರಿಯಂತಹ ದೊಡ್ಡಮಠವು ಕೈಬಿಟ್ಟು ಹೋಗಿದ್ದು. ಭೂತೇಶ್ವರನಾಥರು ಕದ್ರಿಯಲ್ಲಿ ಬೀಡುಬಿಟ್ಟು, ನಾಥಪಂಥಕ್ಕೆ ಸಂಬಂಧಿಸಿದ ಪ್ರಮುಖ ಗ್ರಂಥಗಳನ್ನು ಪುತ್ತೂರಿನ ಕಡವ ಶಂಭುಶರ್ಮರ ಮೂಲಕ ಕನ್ನಡಕ್ಕೆ ಅನುವಾದ ಮಾಡಿಸಿದರು. ಪ್ರಕಟಣೆಯ ಖರ್ಚಿಗೆ ದಾನಿಗಳನ್ನು ಹುಡುಕಿ ಒಪ್ಪಿಸಿ,  ‘ಸದ್ಗುರು ಗ್ರಂಥಮಾಲಾ’ ಎಂಬ ಹೆಸರಿನಲ್ಲಿ ೧೦ ಗ್ರಂಥಗಳನ್ನು ಪ್ರಕಟಿಸಿದರು; ಅವುಗಳಲ್ಲಿ  ಗೋರಖನಾಥನ  ‘ಸಿದ್ಧಸಿದ್ಧಾಂತ ಪದ್ಧತಿ’ಯೂ ಒಂದು. ಚತುರ ಸಂಘಟಕ ರಾಗಿದ್ದ ಭೂತೇಶ್ವರನಾಥರು, ಕ್ರೈಸ್ತ ಮಿಶನರಿಯಂತೆ  ಸಣ್ಣಪುಟ್ಟ ಊರುಗಳಿಗೂ ಹೋಗಿ ಜನರನ್ನು ಸಂಘಟಿಸಿದರು. ಮುಖ್ಯವಾಗಿ ಭಾವಸಾರ ಕ್ಷತ್ರಿಯ ಜನರನ್ನು ಸಂಗ್ರಹಿಸಿದರು. ಕರ್ಜಗಿಯಲ್ಲಿ (ಹಾವೇರಿ) ಹಿಂದಿದ್ದ ನಾಥಮಠವನ್ನು ಪುನರುಜ್ಜೀವನ ಮಾಡಿದರು. ೧೯೮೦ರ ಸುಮಾರಿಗೆ  ಸೋಮವಾರನಾಥ್ ಎಂಬ ನಾಥರು ಕರಾವಳಿ ಭಾಗಕ್ಕೆ ಬಂದು ಬೀಡುಬಿಟ್ಟು, ಜೋಗಿ ಸಮುದಾಯಕ್ಕೆ ನಾಥಪಂಥದ ಆಚರಣೆ ಹೇಳಿಕೊಡುವ ಕೆಲಸ ಮಾಡಿದರು. ಆದರೆ ಭೂತೇಶ್ವರನಾಥರ ಮಿಶನರಿ ಕೆಲಸವು ದೈತ್ಯ ಪ್ರಮಾಣದಲ್ಲಿತ್ತು. ಆದರೆ ಅವರಿಗೆ ತಮ್ಮ ಚಟುವಟಿಕೆಗಳ ಮೂಲಕ ಕರ್ನಾಟಕದ ಸಾಮಾಜಿಕ ರಚನೆಯಲ್ಲಿ ನಾಥಪಂಥಿ ಸಮುದಾಯಗಳ ಲೌಕಿಕ ಪ್ರಗತಿಪಥವನ್ನು ರೂಪಿಸುವ ಕಾಣ್ಕೆಯಾಗಲಿ ಉದ್ದೇಶವಾಗಲಿ ಇರಲಿಲ್ಲ. ಅವರು ಕರ್ನಾಟಕಕ್ಕೆ ಹೊರಗಿನವರು ಆಗಿದ್ದುದು ಇದಕ್ಕೆ ಒಂದು ಕಾರಣ.  ಆದರೆ ಅವರ ಕೆಲಸಗಳು ಬೇರೆ ತರಹದ ಪ್ರೇರಣೆಗಳನ್ನು ಹುಟ್ಟಿಸಿದವು. ಭೂತೇಶ್ವರನಾಥರ ಕೆಲಸಗಳನ್ನು ಎರಡು ದಶಕಗಳ ನಂತರ ಜೋಗಿಗಳು, ರಾವುಳರು ಹಾಗೂ ಕಾಪಾಲಿಕರು ಕೈಗೆತ್ತಿಕೊಂಡರು.

. ಕರ್ನಾಟಕ ಜೋಗಿ ಸಮಾಜ ಸಮಿತಿ

ಕುಂದಾಪುರದ ಬಳೆಗಾರ ಜೋಗಿಗಳು  ‘ಕರ್ಣಾಟಕ ಜೋಗಿ ಸಮಾಜ ಸಮಿತಿ’ ಮಾಡಿಕೊಂಡು  ‘ಘ್ರಿಯಂಬಕೇಶ್ವರದಿಂದ ಕದಲೀತನಕ’ ಪುಸ್ತಕ ಪ್ರಕಟಿಸಿದರು. ಇದರ ಲೇಖಕರಾದ ಬಳೆಗಾರರು ಮುನ್ನುಡಿಯಲ್ಲಿ ಭೂತೇಶ್ವರನಾಥರನ್ನು ನೆನೆಯುತ್ತಾ ‘‘ಪ್ರಾಚೀನ ಪರಂಪರೆಯನ್ನು ಉಳಿಸಿಕೊಂಡು ಬರುವುದು ಸಮಾಜದ ಕರ್ತವ್ಯ. ಈ ಅರಿವು ಉಂಟಾಗಬೇಕಾದರೆ ಸಮಾಜಕ್ಕೆ ಧಾರ್ಮಿಕ ಶಿಕ್ಷಣ ಅಗತ್ಯ. ಶಿಕ್ಷಣದ ಒಂದು ಅಂಗವೇ ಸಾಹಿತ್ಯ’’ ಎಂದು ಹೇಳುತ್ತಾರೆ.

[1] ಇಲ್ಲಿ ಧಾರ್ಮಿಕ ಶಿಕ್ಷಣದ ಭಾಗವಾಗಿ ನಾಥಪಂಥದ ಪುನರುಜ್ಜೀವನ ನಡೆಯಿತು. ಇದಕ್ಕೆ ಪೂರಕವಾಗಿ ಅವರು ಬಹುಕಾಲ ಪಾಳು ಬಿದ್ದಿದ್ದ  ತಮ್ಮ ಮಠವನ್ನು ಪುನರ್ ನಿರ್ಮಿಸಲು ಆರಂಭಿಸಿದರು. ಈ ಸಂದರ್ಭದಲ್ಲಿ ಅವರು ಹೊರಡಿಸಿದ ಕರಪತ್ರವು ಅವರ ಸಾಮಾಜಿಕ ಚಲನೆಯ ನಕ್ಷೆಯನ್ನೂ ಒಳಗೊಂಡಿದೆ. ‘ಧರ್ಮೋ ರಕ್ಷತಿ ರಕ್ಷತಃ’ ಎಂದು ಶುರುವಾಗುವ ಈ ಕರಪತ್ರವು ‘ಶ್ರೀ ಸಿದ್ಧೇಶ್ವರ ಭೈರವನಾಥ್ ಜೋಗಿಮಠ ಜೀರ್ಣೋದ್ಧಾರ ಸಮಿತಿ ಹಲವರಿಗ್ರಾಮ, ಕಮಲಶಿಲೆ. ಅಧ್ಯಕ್ಷ ಕೆ. ನರಸಿಂಹಜೋಗಿ, ಕಂಡ್ಲೂರು’ ಅವರ ಹೆಸರಲ್ಲಿ ಪ್ರಕಟವಾಗಿದೆ.

ಮಲೆನಾಡ ಸೆರಗಲ್ಲಿ ಗಿರಿಕಂದರದ ಮಡಿಲೊಳಗೆ ‘ಹಲವರಿ’ ಎಂಬುದು ನಮಗೆಲ್ಲ ಒಂದು ಪವಿತ್ರ ಸ್ಥಳ. ಆದರೆ ಇಂದು ಅದು ಅನಾಥ ಸ್ಥಳವಾಗಿದೆ…ಈ ಹಿಂದೆ ಇಂತಹ ಮಠಗಳ ಏಳಿಗೆ ಹಾಗೂ ಅಭಿವೃದ್ದಿಗಾಗಿ ರಾಜವಂಶಗಳಿಂದ ಜಮೀನುಗಳು ಉಂಬಳಿ ದೊರಕಿದ್ದು, ಅದರ ಉತ್ಪಾದನೆಗಳ ಮೂಲಕ ಕಾರ್ಯ ನಿರ್ವಹಿಸುತ್ತಿದ್ದವು. ಇತ್ತೀಚಿನ ಸರಕಾರದ ಭೂಸುಧಾರಣೆ ಕಾಯಿದೆಯಿಂದ ಎಲ್ಲ ಜಮೀನು ಕಳೆದುಕೊಂಡಿದ್ದು, ಶಿಷ್ಯವರ್ಗ ಹಾಗೂ ಭಕ್ತರ ನಿರ್ಲಕ್ಷ್ಯದಿಂದಾಗಿ ಮಠಮಂದಿರಗಳೆಲ್ಲಾ ಜೀರ್ಣಾವಸ್ಥೆ ಹೊಂದಿರುವುದು ಶೋಚನೀಯ. ಇಂತಹ ಸ್ಥಿತಿ ನಮ್ಮ ಹಲವರಿ ಶ್ರೀ ಸಿದ್ಧೇಶ್ವರ ಭೈರವನಾಥ ಜೋಗಿಮಠಕ್ಕೆ ಬಂದೊದಗಿದೆ. ಹಿಂದೆ ಈ ಮಠಕ್ಕೆ ಸಂಬಂಧಿಸಿ ಹೇರಳವಾದ ಸ್ಥಿರಾಸ್ತಿ ಇದ್ದು, ಭೂಸುಧಾರಣಾ ಕಾಯ್ದೆಯಿಂದಾಗಿ ಅದು ಕೈತಪ್ಪಿ ಪರಾಧೀನವಾಗಿದೆ. ಈಗಿರುವ ಶ್ರೀ ಭೈರವನಾಥ ಗುಡಿಯ ಜಾಗವೊಂದುಳಿದು ಬೇರೆ ಸ್ಥಳವಾಗಲಿ ಶಿಷ್ಯವರ್ಗದವರ ಸಹಾಯವಾಗಲಿ ಇಲ್ಲದೆ, ಸ್ವಾಮೀಜಿಯವರಿಗೆ ಒಂದು ಹೊತ್ತಿನ ಊಟಕ್ಕೂ ತೊಂದರೆ ಇರುವುದು ದುಃಖದ ಸಂಗತಿ. ಹೀಗಿರುವಾಗ ನಾವು ನಂಬಿಬಂದ ದೇವರು, ಮಠಮಂದಿರಗಳು, ಗುರು ಪರಂಪರೆಯನ್ನು ಉಳಿಸಿ ಬರುವಲ್ಲಿ ನಾವೆಲ್ಲರೂ ಸಂಘಟಿತರಾಗಬೇಕಿದೆ. ನಮಗಾಗಿ ಮತ್ತು ನಮ್ಮ ಮುಂದಿನ ಜನಾಂಗದ ಒಳಿತಿಗಾಗಿ ನಾವೆಲ್ಲರೂ ಒಟ್ಟಾಗಿ ಹೊಣೆಗಾರಿಕೆಯನ್ನು ವಹಿಸಬೇಕಾದ ಕಾಲ ಬಂದಿದೆ.

ಇಲ್ಲಿ ಮಠದ ಪುನರ್ ನಿರ್ಮಾಣದ ಜತೆಯಲ್ಲಿ ಆಧುನಿಕ ಶಿಕ್ಷಣ ಪಡೆಯುವ ಅಥವಾ ಸಮುದಾಯದ ಚಲನೆಗೆ ಬೇಕಾದ ಕಾರ್ಯಕ್ರಮಗಳು ಜೋಡಣೆಯಾಗಿಲ್ಲ.  ಕದ್ರಿಯ ಜೋಗಿಗಳಿಗೆ ಹೋಲಿಸಿದರೆ, ಶೈಕ್ಷಣಿಕವಾಗಿ ಸಾಮಾಜಿಕವಾಗಿ ಹಿಂದುಳಿದಿರುವ ಬಳೆಗಾರರಿಗೆ, ಆಧುನಿಕ ಶಿಕ್ಷಣ ಪಡೆಯುವುದಕ್ಕಿಂತ ತಾವು ತಮ್ಮ ಪಂಥಕ್ಕೆ ಮಾಡಬೇಕಾದ್ದನ್ನು ಮಾಡಲಿಲ್ಲ ಎಂಬ ಪರಿತಾಪವೇ ಹೆಚ್ಚಾಗಿದೆ.

. ಚಿತ್ರದುರ್ಗದ ಜಿಲ್ಲಾ ನಾಥಪಂಥ ಸಮಾಜ

ಲುಂಕೆಮಲೆ ಸೀಮೆಯ ಕಾಪಾಲಿಕ ಸಮುದಾಯಕ್ಕೆ ಸೇರಿದ, ವೃತ್ತಿಯಿಂದ ಶಿಕ್ಷಕರಾಗಿದ್ದ ಹೇಮಾವತಿ ಸಿದ್ಧಪ್ಪನವರು ನಾಥಪಂಥದ ಧಾರ್ಮಿಕ ಪರಂಪರೆಯನ್ನೂ ಕಾಪಾಲಿಕರ ಸಾಮಾಜಿಕ ಶ್ರೇಷ್ಠತೆಯನ್ನೂ ತಮ್ಮ ಜನರಿಗೆ ಮನಗಾಣಿಸಲು ಏಕಾಂಗಿಯಾಗಿ ಶ್ರಮಿಸಿದ ವ್ಯಕ್ತಿಗಳಲ್ಲಿ ಒಬ್ಬರು. ಅವರು ಶಿಕ್ಷಕರಾಗಿ ನಿವೃತ್ತರಾಗಿದ್ದರು. ಚಿತ್ರದುರ್ಗ ಜಿಲ್ಲಾ ನಾಥಪಂಥ ಸಮಾಜದ ಅಧ್ಯಕ್ಷರಾಗಿದ್ದ ಅವರು, ಹೊರಡಿಸಿದ ಕರಪತ್ರವು ಅವರ ಆತಂಕ, ಆಶಯ, ಗುಣಗಳನ್ನು ಚೆನ್ನಾಗಿ ಪ್ರತಿಫಲಿಸುತ್ತಿದೆ.

ಕರ್ನಾಟಕದ ದಕ್ಷಿಣ ಒಳನಾಡಿನ ನಾಥಪಂಥ ಶೈವ ಅರ್ಥಾತ್ ಬ್ರಹ್ಮಕಾಪಾಲಿ, ಕಪಾಲಿ ಹಾಗೂ ರಾವುಳ್ ಧರ್ಮೀಯ ಬಂಧುಗಳಲ್ಲಿ ಕಳಕಳಿಯ ಬಿನ್ನಹಗಳು.

ಆತ್ಮೀಯ ಬಂಧುಗಳೇ! ಸುಮಾರು ವರ್ಷಗಳ ಹಿಂದೆ ನಾವೆಲ್ಲ ಮೇಲೆ ಸೂಚಿಸಿರುವಂತೆ ಕಾಪಾಲಿ, ಬ್ರಹ್ಮಕಾಪಾಲಿ, ಶೈವಕಾಪಾಲಿ, ಮಠಪತಿ ಮತ್ತು ರಾವುಳ್ ಮುಂತಾದ ಜಾತಿಗಳನ್ನು ಹೇಳಿಕೊಳ್ಳುತ್ತಿದ್ದೆವು. ಜನರು ನಮ್ಮನ್ನು ಗುರುಗಳು (ಐನೋರು) ಎಂದು ಗೌರವಿಸುತ್ತಿದ್ದರು. ನಾವೆಲ್ಲ ನಮ್ಮ ನಮ್ಮ ಗೋತ್ರಗಳ ಆಧಾರದ ಮೇಲೆ ಬಂಧು ಬಳಗಗಳನ್ನು ಗುರ್ತಿಸಿಕೊಂಡು ಬಾಂಧವ್ಯಗಳನ್ನು ಕಲ್ಪಿಸಿಕೊಳ್ಳುತ್ತಿದ್ದೆವು. ಈ ಗೋತ್ರಗಳೇ ನಾಥಪಂಥ ಶೈವಧರ್ಮದ ‘ಬಾರಾಪಂತ್’ಗಳು…ಯಾರು ಈ ೧೨ ಗೋತ್ರಗಳವರಿರುವರೊ ಅವರೆಲ್ಲಾ ನಾಥಪಂಥದವರು ಅಥವಾ ನಾಥಪಂಥೀಯರು ಎಂಬುದು ನಿತ್ಯಸತ್ಯ. ಆದರೆ ಇಂದು ನಮ್ಮಲ್ಲಿ ಬಹುತೇಕ ಜನರು ಬರಬರುತ್ತಾ ಮೂಲಧರ್ಮವನ್ನೇ ಮರೆತು ಅಮಾಯಕತನದಿಂದ ಅಥವಾ ತಿಳಿದೂ ತಿಳಿಯದ ಅವಿಚಾರವಂತರ ತಪ್ಪು ಮಾರ್ಗದರ್ಶನದಿಂದ, ನಮಗೆ ಸಂಬಂಧವೇ ಇಲ್ಲದ ಜೋಗಿ, ಜೋಗೇರು ಎಂಬ ಹೆಸರನ್ನು, ಒಬ್ಬನನ್ನು ನೋಡಿ ಮತ್ತೊಬ್ಬ ದಿನಕಳೆದಂತೆ ಅನೇಕರು ಬರೆಯಿಸುತ್ತಾ ಬಂದಿದ್ದಾರೆ. ಇದು ಒಂದು ರೀತಿಯಲ್ಲಿ ‘ಯಾಗ ಇಟ್ಟ, ಮೂಗ ಉಂಡ’   ಎಂಬ ನಾಣ್ಣುಡಿಯಂತಾಗಿದೆ. ಈ ‘ಜೋಗಿ’   ಎಂಬ ಒಂದು ಹೆಸರು ನಮಗೆ ತಟ್ಟಲು ಕಾರಣಗಳೆಂದರೆ-೧. ಸರ್ಕಾರದ ಇತ್ತೀಚಿನ ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ ಆ ಹಿಂದೆ ಇದ್ದ ಮಠಪತಿ, ಕಾಪಾಲಿ, ರಾವುಳ್ ಮತ್ತು ಬ್ರಹ್ಮಕಾಪಾಲಿ ಎಂಬ ಹೆಸರುಗಳು ಕೈಬಿಟ್ಟು ಹೋಗಿರುವುದು. ಹಾಗೆ ಕೈಬಿಡಲು ಕಾರಣ ಹಿಂದುಳಿದ ಆಯೋಗಗಳು ರಚನೆಯಾದಾಗ ನಾವು ನಮ್ಮ ಧರ್ಮ(ಜಾತಿ)ಗಳನ್ನು ಅವರ ಗಮನಕ್ಕೆ ತರದೇ ಇದ್ದುದು; ೨. ನಾವು ನಾಥಪಂಥೀಯರೆಂಬ ಅರಿವೇ ನಮಗಿಲ್ಲದಿದ್ದುದು; ೩.ಜೋಗೇರು ಎಂದು ಬರೆಯಿಸಿದರೆ, ಸರಕಾರದ ಮೀಸಲಾತಿ ಸೌಲಭ್ಯ ದೊರೆಯುತ್ತದೆಂಬ ಆತ್ಮಾಭಿಮಾನವಿಲ್ಲದ ಅವಿವೇಕದ ಮಾರ್ಗದರ್ಶನ; ೪.ಉದರ ಪೋಷಣೆಯ ಗುರಿಯನ್ನೇ ಹೊಂದಿ ಕೊಡುತ್ತ ಬಂದಿರುವ ಅರ್ಥವಿಲ್ಲದ ಜೋಗಿ ದೀಕ್ಷಾಪದ್ಧತಿ (ಬೇರೆಬೇರೆ ಜಾತಿಗಳವರಿಗೆ), ಈ ಕಾರಣಗಳಿಂದ ಬೆಳೆದು ಬಂದಿರುವ ಜೋಗೇರು ಎಂಬ ಅವಿವೇಕದ ಅಂಧಾನುಕರಣೆ.

ಇತ್ತೀಚಿನ ನಮ್ಮ ಕೆಲ ಯುವ ಪೀಳಿಗೆ, ನಮಗೆ ಸಂಬಂಧವೇ ಇಲ್ಲದ ಜೋಗಿ ಸಮಾಜ ಸುಧಾರಕ ಸಂಘಗಳಲ್ಲಿ ಸದಸ್ಯತ್ವ ಪಡೆಯುತ್ತಿರುವುದನ್ನು ನೋಡಿದರೆ, ವಿಸ್ಮಯ ಅತಿ ವಿಷಾದ ಪಡುವಂಥ ಸಂಗತಿಯಾಗಿದ್ದು, ಭವಿಷ್ಯದಲ್ಲಿ ನಮ್ಮ ಪೀಳಿಗೆ ಮನನೊಂದು ನಮ್ಮನ್ನೆಲ್ಲಾ ಶಪಿಸುವಂತಾಗುವುದಲ್ಲದೆ, ಕರ್ನಾಟಕದಲ್ಲಿ ನಾಥಪಂಥ ಶೈವಧರ್ಮದ ನಾಮಾವಶೇಷಕ್ಕೆ ನಾವೇ ಕಾರಣರಾಗುತ್ತಿದ್ದೇವೆ. ನಮ್ಮೀ ಕಾರ್ಯ ಕುರುಡ-ಕುರುಡನಿಗೆ ದಾರಿ ತೋರಿಸಿದ ಎಂಬಂತಾಗಿ, ನಮ್ಮ ಸಮಾಜದ ಅಧಃಪತನದ ಗೋರಿಯನ್ನು ನಾವೇ ನಿರ್ಮಿಸಿ ಕೊಂಡಂತಾಗುವುದರಲ್ಲಿ ಯಾವ ಅನುಮಾನವೂ ಇಲ್ಲ. ಏಳಿ-ಎದ್ದೇಳಿ-ಎಚ್ಚರಗೊಳ್ಳಿ. ನಾವೇ ನಮ್ಮ ಸಮಾಜದ ಉಳಿವಿಗೆ ಪ್ರಯತ್ನಿಸದಿದ್ದಲ್ಲಿ ನಮ್ಮನ್ನು ಉಳಿಸುವವರಾದರೂ ಯಾರು? ಜಡತ್ವ ಮೂಢತನ ತೊಲಗಿಸಿ, ತಾತ್ಸಾರದ ವಿಡಂಬನಾತ್ಮ ಜೀವನವನ್ನು ತಿದ್ದಿಕೊಳ್ಳಿ. ನಮ್ಮ ಈ ಸುಸಂಸ್ಕೃತ ಸಮಾಜವನ್ನು ಉಳಿಸಿ ಬೆಳೆಸಲು ಸರಿಯಾದ ಮಾರ್ಗದರ್ಶನದ ಹರಿಕಾರರಾಗಿ. ನಮಗೆ ಪುರಾತನ ಶ್ರೇಷ್ಠ ಸಂಸ್ಕೃತಿಯ ಪುರಾವೆಗಳಿವೆ. ಭಾರತದ ಉದ್ದಗಲಕ್ಕೂ ಮಠಮಾನ್ಯ ಗುಡಿ ಗೋಪುರ ಗಳಿವೆ…ಈ ಧರ್ಮಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಗ್ರಂಥಗಳಿವೆ. ನೀವು ಜೋಗಿ-ಜೋಗೇರು ಎಂಬುದಕ್ಕೆ ಯಾವ ಆಧಾರವಿದೆ?..ಜೋಗೇರು ಎಂದು ಮತ್ತೆ ವಂಚಿತರಾಗಬೇಡಿ. ‘ಘ್ಛಿ‘;್ಠ ಸತ್ತ ಅರಿಯದೆ ಹೊತ್ತ’ ಎಂಬಂತಾಗಲು ಅವಕಾಶ ನೀಡಬೇಡಿ, ನಮ್ಮ ಮುಗ್ಧ ಅಮಾಯಕ ಜನರಿಗೆ ಒಳ್ಳೆಯ ಮಾರ್ಗದರ್ಶನ ನೀಡುವುದರೊಂದಿಗೆ, ನಮ್ಮ ಮುಂದಿನ ಪೀಳಿಗೆ ಇತರ ಮುಂದುವರೆದ ಸುಸಂಸ್ಕೃತ ಸಮಾಜಗಳ ಮಕ್ಕಳೊಂದಿಗೆ ತಲೆ ಎತ್ತಿ ಬದುಕಲು ಸಹಕರಿಸುವುದರ ಮೂಲಕ, ಇಂದಿನ ವಿದ್ಯಾವಂತ ಯುವಕರು ಆತ್ಮೋದ್ಧಾರ ಮಾಡಿಕೊಳ್ಳಿರೆಂದು ಈ ಮೂಲಕ ಆ ನವನಾಥರನ್ನು ಭಕ್ತಿಪೂರ್ವಕವಾಗಿ ಬೇಡಿಕೊಳ್ಳುತ್ತಿದ್ದೇನೆ.

ಇಂತೀ ತಮ್ಮ ಓರ್ವ ಆತ್ಮೀಯ ಬಂಧು, ಬಿ. ಸಿದ್ಧಪ್ಪ

ಇಲ್ಲಿನ ಏಳಿಎದ್ದೇಳಿ ಎಂದು ಎಚ್ಚರಿಸುವ ಧಾಟಿಯಲ್ಲಿ ತಿದ್ದಿಸರಿಪಡಿಸುವ ಶಿಕ್ಷಕ ಗುಣವಿದೆ. ಜತೆಗೆ ಸ್ವಾಮಿ ವಿವೇಕಾನಂದ ಮಾದರಿಯ ಧಾರ್ಮಿಕ ಜಾಗೃತಿಯ ನೇತಾರನ ಗುಣವೂ ಇದೆ. ಈ  ಕರಪತ್ರದ ಚಿಂತನೆಯನ್ನು ಕೊಂಚ ವಿಸ್ತರಿಸಿ ಸಿದ್ಧಪ್ಪನವರು ‘ನಾಥಪಂಥ ಶೈವಧರ್ಮ ಮತ್ತು ಕರ್ನಾಟಕ ನಾಥಪಂಥ ಶೈವ ಸಮಾಜದ ಸಂಕ್ಷಿಪ್ತ ಪರಿಚಯ’ ಎಂಬ ಪುಸ್ತಿಕೆಯನ್ನೂ ಪ್ರಕಟಿಸಿದರು. ಅವರ ವಾದದಲ್ಲಿ ೨ ಅಂಶಗಳಿವೆ. ೧. ಕಾಪಾಲಿಕ ಅಥವಾ ನಾಥ ಎಂಬ ಪುರಾತನವಾದ ಶೈವಧರ್ಮವಿದೆ. ತಾವು ಅದಕ್ಕೆ ಸಂಬಂಧಪಟ್ಟವರು. ಆದರೆ  ಕಾಪಾಲಿಕ ಎನ್ನಲಾಗುವ ಸಮಾಧಿ ಊಟ, ಸಿದ್ಧಭುಕ್ತಿ, ಮುಂತಾದ ಮೂಢಭಕ್ತಿಗಳಿಂದ ಕಾಪಾಲಿಕರು ಹೊರಬರಬೇಕು. ೨.ಜೋಗಿ ಎಂಬ ಸಾಮಾಜಿಕ ಅಪಮಾನಿತ ಗುರುತಿನಿಂದ ಹೊರಬರಲು, ಅದರಿಂದ ಸಿಗಬಹುದಾದ ರಾಜಕೀಯ ಆರ್ಥಿಕ ಸೌಲಭ್ಯವನ್ನು ಹಾಗೂ ಮಾಂಸಾಹಾರವನ್ನು ಸಹ ಬಿಟ್ಟುಕೊಡಬೇಕು.[2] ಸಿದ್ಧಪ್ಪನವರು ಸಾಮಾಜಿಕ ಘನತೆಯನ್ನು ಗುರಿಯಾಗಿ ಇಟ್ಟುಕೊಂಡು ಪಂಥ ಸುಧಾರಣೆ ಮಾಡುವ ಸಾಂಪ್ರದಾಯಕ ಒಬ್ಬ ಸುಧಾರಣವಾದಿ. ಶಿಕ್ಷಕರಾದ ಸಿದ್ಧಪ್ಪನವರು ಸಹಜವಾಗಿ ಕಾಪಾಲಿಕರು ಅಭಿವೃದ್ದಿಗೆ ಆಧುನಿಕ ಶಿಕ್ಷಣವೇ ದಾರಿಯೆಂದು  ಭಾವಿಸಿದ್ದರು. ಚಿತ್ರದುರ್ಗ ಸೀಮೆಯ ಕಾಪಾಲಿಕರು ಇಡೀ ಕರ್ನಾಟಕದಲ್ಲೆ ಅತ್ಯಂತ ಹೆಚ್ಚು ವಿದ್ಯಾವಂತರು. ಅವರ ಆಧುನಿಕ ವಿದ್ಯಾಭ್ಯಾಸದಿಂದ ಈ ಗುಣ ಬಂದಿತೊ, ತಮ್ಮನ್ನು ಜೋಗಿ ಶಬ್ದದಿಂದ ಬಿಡುಗಡೆ ಹೊಂದಲು ಆಧುನಿಕ ವಿದ್ಯಾಭ್ಯಾಸಕ್ಕೆ ಹೋದರೊ ಸ್ಪಷ್ಟವಿಲ್ಲ. ಆದರೆ ಸಿದ್ಧಪ್ಪನವರ ವಿಚಾರಗಳು  ಉತ್ತರ ಕರ್ನಾಟಕದ  ರಾವೂಳರಲ್ಲಿ ಬಹಳ ಪರಿಣಾಮ ಬೀರಿದವು. ನಾಥಪಂಥೀಯ ಸಮುದಾಯಗಳಲ್ಲಿ ಹೀಗೆ ಸಾಮಾಜಿಕವಾಗಿ ಎಚ್ಚೆತ್ತ ಒಂದು ವರ್ಗವು ಒಡ ಮೂಡಿದೆ. ಅದು ತನ್ನ ಪಂಥೀಯ ಅಸ್ಮಿತೆಗಳನ್ನು ಪರಿಷ್ಕರಿಸಿ ಪಡೆಯುವ ಯತ್ನ ಮಾಡುತ್ತಿದೆ.

. ಕದ್ರಿಯ ನಾಥಪಂಥ ಪ್ರಚಾರ ಸಮಿತಿ

ಭೂತನಾಥರ ಚಟುವಟಿಕೆಗಳನ್ನು ಕದ್ರಿಯ ‘ನಾಥಪಂಥ ಪ್ರಚಾರ ಸಮಿತಿ’ ಮುಂದುವರೆಸಿತು. ಇದರಲ್ಲಿ ಕದ್ರಿಯ ಜೋಗಿ ಆನಂದನಾಥ್, ಡಾ. ಕೇಶವನಾಥ, ರಾಮಚಂದ್ರ, ಉಮೇಶನಾಥ, ಸದಾನಂದ ಜೋಗಿ ಮೊದಲಾದವರು ನೇತೃತ್ವ ವಹಿಸಿದರು. ನಾಥಪಂಥ ಪ್ರಚಾರ ಸಮಿತಿಯು, ನಾಥ ಪೂಜಾ ವಿಧಾನವನ್ನು ಹೇಳಿಕೊಡುವ ಪುಸ್ತಕವನ್ನೂ ಗೋರಖನಾಥನ ಕ್ಯಾಲೆಂಡರನ್ನೂ  ಪ್ರಕಟಿಸಿತು. ಅವನ್ನು ನಾಥಪಂಥಿ ಜನರು ಇರುವಲ್ಲಿ ಹೋಗಿ ಮಾರಾಟ ಮಾಡಿತು. ಈಗಲೂ ಈ ಚಿತ್ರಪಟಗಳು ಕೆಲವರ ಮನೆಗಳಲ್ಲಿವೆ. ಕನಕದಾಸ, ಬಸವಣ್ಣರ ಚಿತ್ರಪಟಗಳು ಕುರುಬರಲ್ಲಿ ಹಾಗೂ ಲಿಂಗಾಯತರಲ್ಲಿ ಸಾಮಾಜಿಕ ಸಂಘಟನೆಯ ಸಂಕೇತಗಳಾಗಿ ಸ್ಥಾನ ಪಡೆದಂತೆ, ನೇಪಾಳದ ಮೃಗಸ್ಥಲಿಯಲ್ಲಿ  ಧ್ಯಾನಸ್ಥನಾಗಿರುವ ಗೋರಖನ ಚಿತ್ರಪಟವು ಜೋಗಿಗಳಲ್ಲಿ ಪ್ರಸಾರವಾಯಿತು. ಸಮಿತಿಗೆ ನಾಥಪಂಥದ ಪುರಾಣ ಕತೆಗಳನ್ನು ಆಧರಿಸಿ ಮಕ್ಕಳಿಗೆ ಕಾರ್ಟೂನ್ ಪುಸ್ತಕ ಪ್ರಕಟಿಸುವ, ಟಿವಿ ಸೀರಿಯಲ್ ತಯಾರಿಸುವ, ಯಕ್ಷಗಾನ ಬರೆಯಿಸುವ ಉದ್ದೇಶಗಳೂ ಇವೆ. ಜೋಗಿ ತರುಣರಿಗೆ ನಾಥದೀಕ್ಷೆ ಕೊಡುವ ಹಾಗೂ ನಾಥ ಸಂಪ್ರದಾಯದ ಪ್ರಕಾರ ಪೂಜೆ ಇತ್ಯಾದಿ ಆಚರಣೆಗಳನ್ನು ಕಲಿಸುವ ಕೆಲಸವನ್ನು ಇದು ಮಾಡಿತು. ಪ್ರತಿವರ್ಷ ಜೋಗಿ ಬಾಲಕರಿಗೆ  ದೀಕ್ಷೆ ಕೊಡುವ ಕಾರ್ಯವನ್ನು ಅದು ಮಾಡಿಕೊಂಡು ಬಂದಿದೆ. ಸಮಿತಿಯು ಹುಬ್ಬಳ್ಳಿಯಲ್ಲಿ ನಡೆದ ನಾಥಪಂಥಿ ಜೋಗಿ ಸಮುದಾಯಗಳ ಮಹಾ ಸಮಾವೇಶದಲ್ಲಿ ಮುಖ್ಯ ಪಾತ್ರ ವಹಿಸಿತು. ಜೋಗಿ ಆನಂದನಾಥರಿಂದ ರಚಿತವಾದ ‘ನಾಥಪಂಥಕ್ಷೇತ್ರ ಜೋಗಿಮಠ’ (೨೦೦೩) ಪುಸ್ತಕವನ್ನು ಪ್ರಕಟಿಸಿತು. ಅದು ೨೦೦೩ರಲ್ಲಿ ಹೊರಡಿಸಿದ  ‘ಜೋಗಿಜನಾಂಗದ ಜನಜಾಗೃತಿ ಅಭಿಯಾನ’  ಎಂಬ ಕರಪತ್ರವು ಹಲವು ಕಾರಣದಿಂದ ಮುಖ್ಯವಾಗಿದೆ. ‘ಜೋಗಿ ಜನಾಂಗಕ್ಕೆ ಪವಿತ್ರವಾದ ಹಿನ್ನೆಲೆಯಿದೆ, ಇದನ್ನು ಅರಿವತರೆಷ್ಟೋ ನಾವರಿಯವು. ಅರಿಯದವರಿಗೆ ಒಂದಿಷ್ಟು ಹಿನ್ನಲೆಯನ್ನು ಪರಿಚಯಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ’ ಎಂದು ಕರಪತ್ರ ಆರಂಭವಾಗುತ್ತದೆ.

ನಮ್ಮ ಪೂರ್ವಜರಲ್ಲಿ ಧಾರ್ಮಿಕ ಚಿಂತನೆ ಬಹಳವಾಗಿತ್ತು. ಆರ್ಥಿಕ ಮತ್ತು ಶೈಕ್ಷಣಿಕ ರಂಗದಲ್ಲಿ ಇವರ ಚಿಂತನೆ ಕಡಿಮೆಯಾಗಿದ್ದುದರಿಂದಲೇ ನಾವೂ ಈಗ ಸಮಾಜದಲ್ಲಿ ಬಹಳ ಹಿಂದುಳಿದ್ದೇವೆ. ಇದನ್ನು ಸರಿದೂಗಿಸಿಕೊಂಡು ಆರ್ಥಿಕ ಮತ್ತು ಶೈಕ್ಷಣಿಕ ರಂಗದಲ್ಲಿ ಮುಂದೆ ಬರಬೇಕು. ಆದರೆ ಈ ವೃತ್ತಿಬದುಕುಗಳ ಜಂಜಾಟದಲ್ಲಿ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ಮರೆಯುವುದು ಸಮಂಜಸವಲ್ಲ… ಅನೇಕರು ಜೋಗಿ ಎಂಬ ಪದವನ್ನು ಬೇಡುವವ ಎಂದು ಪರಿಗಣಿಸುತ್ತಾರೆ. ಬೇಡು ಎಂಬ ಪದಕ್ಕೆ ಬೇಡಿಕೆ, ಪ್ರಾರ್ಥನೆ, ಇತ್ಯಾದಿ ಪದಗಳು ಅನ್ವಯವಾಗುತ್ತವೆ. ಆದುದರಿಂದ ಬೇಡುವವರನ್ನೆಲ್ಲಾ ಬೇಡುವ ಜನಾಂಗದವರೆಂದು ಹೆಸರಿಸಿಲ್ಲ. ಅದೇ ತೆರನಲ್ಲಿ ಬೇಡುವವರೆಲ್ಲ ಜೋಗಿ ಜನಾಂಗದವರಲ್ಲ. ಶ್ರೀಮತ್ಸ್ಯೇಂದ್ರನಾಥರು, ಶ್ರೀಗೋರಕ್ಷನಾಥರು ಹಾಗೂ ನಾಥಸಿದ್ಧ ಯೋಗಿಗಳು ಯೋಗೋಪದೇಶ ಮಾಡುತ್ತಲೇ ದೇಶವನ್ನು ಸುತ್ತಿದರೇ ವಿನಹ, ಹೊಟ್ಟೆಗಾಗಿ ಭಿಕ್ಷಾಟನೆ ಮಾಡಲಿಲ್ಲ. ಯೋಗ ಮಾರ್ಗದರ್ಶನವನ್ನು ಒಬ್ಬ ಗುರುವಿನಿಂದ ಪಡೆದು ಇತರರಿಗೆ  ಪ್ರಚುರಪಡಿಸುವುದೇ ಜೋಗಿ ಜನಾಂಗದ ಕರ್ತವ್ಯ. ಈ ನಿಟ್ಟಿನಲ್ಲಿ ನಾವು ಕರ್ತವ್ಯಶೀಲರಾಗಬೇಕು. ನಮ್ಮ ಉಪನಾಮಗಳನ್ನೆಲ್ಲಾ ಬದಿಗಿಟ್ಟು ಜೋಗಿ ಎಂಬ ಪದನಾಮದಿಂದ ಸಮಾಜದಲ್ಲಿ ಗುರುತಿಸುವಂತಾಗಬೇಕು… ಜೋಗಿ ಜನಾಂಗವು ಗುರುಸ್ಥಾನದಲ್ಲಿರುವ ಜನಾಂಗ. ಆದುದರಿಂದ ನಾವೆಲ್ಲರೂ ಜೋಗಿಗಳೆಂದು ಹೆಮ್ಮೆಯಿಂದ ಹೇಳುವವರಾಗಬೇಕು.

ಹೇಮಾವತಿ ಸಿದ್ಧಪ್ಪನವರ ಏಕಪಕ್ಷೀಯವಾದ ಪರಿಷ್ಕರಣವಾದಿ ಚಿಂತನೆಗೆ ಹೋಲಿಸಿದರೆ, ಇಲ್ಲಿ ಎಲ್ಲರನ್ನೂ ಸೇರಿಸಿ ಸಂಘಟನೆ ಮಾಡುವ ವಿಶಾಲ ಉದ್ದೇಶವಿದೆ.  ಸಾಂಸ್ಕೃತಿಕ ಗುರುತನ್ನು ಉಳಿಸಿಕೊಳ್ಳುವ ಹಾಗೂ ಲೌಕಿಕ ಬದುಕಿನಲ್ಲಿ ಪ್ರಗತಿ ಪಡೆಯುವ ಎರಡೂ ಕಾರ್ಯಗಳನ್ನು ಒಟ್ಟಿಗೆ ತೂಗಿಸಿಕೊಂಡು ಹೋಗುವ ಸಮತೋಲನ ವಿವೇಕವಿದೆ. ತಮಗೆ ಅಂಟಿದ ಬೇಡುವವರು ಎಂಬ ಮುಜುಗರವನ್ನು, ಬೇರೆ ಘನತೆಯ ಅರ್ಥದಲ್ಲಿ ವಿಶ್ಲೇಷಿಸಿ, ಆತ್ಮವಿಶ್ವಾಸ ಕೆಡದಂತೆ ನೋಡಿಕೊಳ್ಳುವ ಹೊಣೆಗಾರಿಕೆಯಿದೆ.

. ನಾಥಪಂಥಿ ರಾವುಳಧರ್ಮ ಪ್ರಚಾರ ಸಮಿತಿ

ಕರ್ನಾಟಕದ ಧಾರವಾಡ ಬಾಗಲಕೋಟ ಬೆಳಗಾವಿ ಜಿಲ್ಲೆಗಳಲ್ಲಿ ಇರುವ ರಾವುಳ ಜೋಗಿಗಳು, ಕರ್ನಾಟಕ ನಾಥಪಂಥಿ ರಾವುಳ ಸಮಾಜ ಸುಧಾರಕ ಸಂಘವನ್ನು ಹುಬ್ಬಳ್ಳಿ ಯಲ್ಲಿ ಸ್ಥಾಪಿಸಿಕೊಂಡರು. ಈ ಸಂಘವು ರಾವುಳ ಸಮಾಜವನ್ನು ಕೇಂದ್ರವಾಗಿಟ್ಟುಕೊಂಡು, ತನ್ನ ಚಟುವಟಿಕೆ ಆರಂಭಿಸಿತು. ಮುಂದೆ ಇದು ನಾಥಪಂಥಿ ರಾವುಳ ಧರ್ಮಪ್ರಚಾರ ಸಮಿತಿಯನ್ನು ರೂಪಿಸಿಕೊಂಡು, ಅದರ ಮೂಲಕ ಬಾಬಾಜಿ ರಾವುಳ ಶಟ್‌ದರ್ಶಿನಿ ಅವರು ೧೯೩೨ರಲ್ಲಿ ಪ್ರಕಟಿಸಿದ ‘ರಾವುಳ ಮತ ಪ್ರಕಾಶ’ ಎಂಬ ಕೃತಿಯನ್ನು ಪ್ರಕಟಿಸಿತು. ಈ ಕೃತಿಯ ರಚನೆಗೆ ಒದಗಿದ ಪ್ರೇರಣೆ ಸ್ವಾರಸ್ಯಕರವಾಗಿದೆ.  ಒಮ್ಮೆ ಮಾಣಿಕನಾಥ ಎನ್ನುವ ಯೋಗಿಯು ದೇಶಾಟನ ಮಾಡುವಾಗ, ಅವರ ಶಿಷ್ಯರು ‘ತಮ್ಮಧರ್ಮ’ದ ಬಗ್ಗೆ ತಿಳಿಸಬೇಕೆಂದು ವಿನಂತಿಸಿದರು. ಆಗ ಅವರು ಬಾಬಾಜಿ ರಾವುಳಜೋಗಿ ಷಟ್‌ದರ್ಶಿನಿ ಅವರಿಗೆ ಸೂಚಿಸಲು, ಅವರು ರಾವುಳ ಮತದ ನಿಯಮ ನಡಾವಳಿ ಮಹಿಮೆಗಳನ್ನು ಬರೆದರು. ತಮ್ಮ ಜನಾಂಗದವರಿಗೆ ಜನಗಣತಿಯವರು ಬಂದಾಗ ಏನೆಂದು ಹೇಳಬೇಕು ಎಂದು ಸ್ಪಷ್ಟ ಸೂಚನೆಗಳನ್ನು ಅದರಲ್ಲಿ ಕೊಡಲಾಗಿದೆ.

ವಿರಾಟಮೂರ್ತಿ ರಾವುಳ ಶಿವಜೋಗಿ ಪಂಥ ಆದಿನಾಥ ಸಂಪ್ರದಾಯದ ವಂಶುರುಳಿಯೆಂದು ಗುರುಗಳ ನಾಮವನ್ನು ಹೇಳಬೇಕು. ನಮ್ಮ ಜಾತಿಧರ್ಮ ಶಿವಮತ (ಶಿವಯೋಗಿ) ಎಂದು ಹೇಳಬೇಕು. ನಮ್ಮ ಧರ್ಮ ಭಿಕ್ಷೆ ಮಾಡುವದು. ಇದರಂತೆ ಖಾನೆಸುಮಾರದಲ್ಲಿ ಮೇಲೆ ಹೇಳಿದ ಪ್ರಕಾರ ಬರೆದು ಕೊಡಬೇಕು. ನಮ್ಮ ಕುಲದವರು ಗುರುನಾಥ ಬಾಲಾಸುಂದರಿ ಎಂದು ಹೇಳ ಬೇಕು. ಮತಕ್ಕೆ ಕಾಪಾಲಿಮತವೆಂದು ಹೇಳಬೇಕು. ವಿರಾಟ-ರಾವುಳ ಯಂತು ಶಾಂತಿ ಪಂಚೀಕರಣದಲ್ಲಿ ಬರೆದಿರುತ್ತದೆ. ಯಲ್ಲಪ್ಪ ಬಸಾಪ್ಪಾ, ಮಲ್ಲಪ್ಪಾ, ಕಲ್ಲಪ್ಪಾ ಎಂದು ಇನ್ನಮೇಲೆ ಹುಟ್ಟಿದ ಬಾಲಕರಿಗೆ ಹೆಸರು ಇಡದೆ, ಶಿವನಾಥ ಗುರುನಾಥ ವಿಶ್ವನಾಥ ಬಸವನಾಥ ಎಂದು ಇಡಬೇಕು.

‘ಪದ್ಮಪುರಾಣ’ ‘ಸಪ್ತಶತೀ ದೇವಿಭಾಗವತ’ ‘ಹಿಂಗಳಜಾ ಮಹಾತ್ಮ್ಯ’ ‘ನವನಾಥ ಭಕ್ತಿಸಾರ’ ‘ಭಕ್ತಿವಿಜಯ’ ‘ಸಂಸ್ಕೃತ ಪುರಾಣ’ ‘ಅಮನಸ್ಕಯೋಗ’ ಇತ್ಯಾದಿ ಗ್ರಂಥಗಳಲ್ಲಿರುವ  ಮಾಹಿತಿಗಳ ಆಧರಿಸಿ ‘ರಾವುಳ ಮತ ಪ್ರಕಾಶಿನಿ’ ಕೃತಿ ರಚಿತವಾಗಿದೆ. ಇದರ ವಿನ್ಯಾಸವು  ಶಿವಪಾರ್ವತಿಯರ ಸಂಭಾಷಣೆಯ ರೂಪದಲ್ಲಿದೆ. ಇಲ್ಲಿ ಮತದ ನಿಯಮಗಳನ್ನು ದೈವೀಕರಣಗೊಳಿಸಿ,  ಅಧಿಕೃತತೆ ತರುವ ಉದ್ದೇಶವಿದ್ದಂತಿದೆ. ೭ನೇ ಅಧ್ಯಾಯದಲ್ಲಿ ಪಾರ್ವತಿಯು ಈಶ್ವರನನ್ನು ರಾವುಳ ಜೋಗಿ ಮತಸ್ಥರು ನಿತ್ಯಕರ್ಮಗಳನ್ನು ಹೇಗೆ ಮಾಡಬೇಕೆಂದು ಕೇಳಿದಾಗ, ಶಿವನು ಪ್ರಾತಃಕಾಲದ ಮಲಮೂತ್ರ ವಿಸರ್ಜನೆಯಿಂದ ಆರಂಭಿಸಿ ಮದುವೆಯಾಗುವ ತನಕದ ಆಚರಣೆಗಳನ್ನು ವಿವರಿಸುತ್ತಾನೆ. ರಾವುಳ ಜೋಗಿಗಳು ಭಿಕ್ಷಕ್ಕೆ ಹೋಗುವ ವಿಧಾನದ ವರ್ಣನೆಯಿದು:

ಸ್ನಾನವನ್ನು ಮಾಡಿ ಶುಚಿರ್ಭೂತನಾಗಿ ಸರ್ವಾಂಗಕ್ಕೆ ನಿರ್ಮಲವಾದ ಅಖಂಡ ಭಸ್ಮವನ್ನು ಧರಿಸಿ, ಕ್ಯಾವಿ ಕಪನಿಯನ್ನು ಹಾಕಿಕೊಂಡು, ರುದ್ರಾಕ್ಷಿ ಮಾಲೆಗಳನ್ನು ಧರಿಸಿ ಶೈಲಿ ಶಿಂಗಿಗಳನ್ನಾದರೂ ಧರಿಸಿಕೊಂಡು, ನಾಗಸೂತ್ರವನ್ನು ಎದೆಯಿಂದ ಹೊಂಕಳವರೆಗೆ ಮಲಿಕಿನಿಂದ ಕಟ್ಟಿಕೊಂಡು, ಶಿದ್ಧನಾಗಿ ಜೆಡೆಗಳಲ್ಲಿಯೂ ಕೊರಳಲ್ಲಿಯೂ ಆದಿಭೈರವನ ಯಂತ್ರಗಳನ್ನು ಹೂಮಾಲೆಗಳನ್ನು ಧರಿಸಿಕೊಂಡು, ನೊಸಲಿಗೆ ಅಂದರೆ ಹಣಿಗೆ ಶಿಂಧುರವನ್ನು ಧರಿಸಿ ಕಣ್ಣಿಗೆ ಸುರಮವನ್ನು ಹಚ್ಚಿಕೊಂಡು, ಭೈರವನ ವೇಷವನ್ನು ಶಿದ್ಧಮಾಡಿಕೊಳ್ಳಬೇಕು…ವೇಷವನ್ನು ಧರಿಸಿಕೊಂಡು ಜೋಳಿಗೆ, ತ್ರಿಶೂಲ, ಬ್ರಹ್ಮಕಪಾಲೆ, ಚಿಮಟಿಗೆ, ಯೋಗದಂಡ ಮುಂತಾದವುಗಳನ್ನು ತೆಗೆದುಕೊಂಡು ಶಿದ್ಧನಾಗಿ ಗುರುದೇವರಿಗೆ ಆದೇಶಿಸಿ ಶಿಂಗಿಯನ್ನು ಊದಿ ಧುಣಿ ಎಂಬ ಅಗ್ನಿಕುಂಡಕ್ಕೆ ನವಧಾನ್ಯವನ್ನು ಅರ್ಪಿಸಿ ಅಲಕ್ಷ್ಯವೆಂಬ ಪರಬ್ರಹ್ಮ ಸ್ವರೂಪಿಯಾದ ರಾವುಳನನ್ನು ಸ್ಮರಿಸುತ್ತ ಹೊರಗೆ ಹೊರಟುಬಂದು ಪೂರ್ವಾಭಿಮುಖಿವಾಗಿ ನಡೆಯಬೇಕು. ಅಂದರೆ ಭಿಕ್ಷಕ್ಕೆ ಹೋಗಬೇಕು.[3]

ಇಲ್ಲಿನ ಜೋಗಿ ಅಥವಾ ಭೈರವ ವೇಷಧಾರಣೆಯ ವಿವರಗಳು ಕೂತೂಹಲಕರವಾಗಿವೆ. ಈ ವೇಷಧಾರಣೆಯವರು ನನ್ನ ಕ್ಷೇತ್ರಕಾರ್ಯದಲ್ಲಿ ಎಲ್ಲೂ ಕಾಣಸಿಗಲಿಲ್ಲ.

೨೦ ವರುಷಗಳ ಹಿಂದೆ ಬನಹಟ್ಟಿ ಪರಿಸರದ ರಾವೂಳರು ತಮ್ಮ ಜನಗಣತಿಯನ್ನು ತಾವೇ ಮಾಡಿಕೊಂಡಿದ್ದರು.  ‘ಶ್ರೀಗೋರಖನಾಥ ನಾಥಪಂಥಿ (ರಾವೂಳ) ಸಮಾಜಸೇವಾ ಸಂಘ’ ಎಂಬ ಸಂಘದ ಹೆಸರಲ್ಲಿ. ಅದಕ್ಕೆ ಈಗ ತವನಪ್ಪ ರಾವೂಳ ಅಧ್ಯಕ್ಷರು. ಲಕ್ಷ್ಮಣ ರಾವೂಳ ಕಾರ್ಯದರ್ಶಿ. ರಾವೂಳರು ಈಗೀಗ ನಾಥಪಂಥದ ಹೆಸರುಗಳನ್ನು ತಮ್ಮ ಮಕ್ಕಳಿಗೆ ಇಡಲು ಶುರುಮಾಡಿದ್ದಾರೆ. ರಾವೂಳ ಜನರ ಸಮಾವೇಶ ಮಾಡುತ್ತ ನಾಥಪಂಥದ ಅಸ್ಮಿತೆಯನ್ನು ಮರಳಿ ಪಡೆಯಲು ಆರಂಭಿಸಿದ್ದಾರೆ. ಇದಕ್ಕೆ ಸಾಕ್ಷ್ಯವೆಂಬಂತೆ ನನಗೆ ಬನಹಟ್ಟಿಯ ರಾವುಳರ ಕೆೇರಿಯಲ್ಲಿ  ಮಚೇಂದ್ರನಾಥ ಗೋರಖನಾಥ ಹೆಸರಿನವರು ಸಿಕ್ಕರು.

. ಕರ್ನಾಟಕ ನಾಥಪಂಥಿ ಜೋಗಿ ಜನಾಂಗದ ರಾಜ್ಯ ಸಮ್ಮೇಳನ

೨೦ನೇ ಶತಮಾನದ ಆರಂಭದಿಂದಲೂ ನಾಥಪಂಥಿ ಸಮುದಾಯದ ವಿವಿಧ ವ್ಯಕ್ತಿಗಳು ಹಾಗೂ ಪಂಗಡಗಳು, ಬೇರೆಬೇರೆ ಪ್ರದೇಶಗಳಲ್ಲಿ ತಮ್ಮ ಪಂಥೀಯ ಅಸ್ಮಿತೆಯನ್ನು ಕಂಡುಕೊಳ್ಳಲು ಅನೇಕ ಯತ್ನ ಮಾಡಿರುವುದುಂಟು. ಈ ಯತ್ನಗಳು, ಶತಮಾನದ ಕೊನೆಯಲ್ಲಿ, ನಾಥ ಸಮುದಾಯಗಳನ್ನು  ಒಂದು ವೇದಿಕೆಯಲ್ಲಿ ತರಲು ಯಶಸ್ವಿಯಾದವು. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ೯.೫.೧೯೯ರಂದು ನಡೆದ ಸಮಾವೇಶವು ಚಾರಿತ್ರಿಕ ಮಹತ್ವದ್ದಾಗಿತ್ತು. ಸಮ್ಮೇಳನದ ಕರಪತ್ರವು ಕಾಲಭೈರವ, ಗೋರಕ್ಷನಾಥ ಮಚ್ಚೇಂದ್ರನಾಥರ ಹೆಸರಲ್ಲಿ ಆರಂಭವಾಗುತ್ತದೆ. ಒಂದು ಕಾಲಕ್ಕೆ ಹೇಗೆ ಜೋಗಿ ಜನಾಂಗವು ಹೇಗೆ ಪುರಾಣ ಪ್ರಸಿದ್ಧವೂ ಚಾರಿತ್ರಿಕವಾಗಿ ಮಹತ್ವದ್ದೂ ಆಗಿತ್ತು ಎಂದು ಹೇಳಿಕೊಂಡು ತಟ್ಟನೆ ವರ್ತಮಾನದ ಅವನತಿ ಸ್ಥಿತಿಯ ಚಿತ್ರಕ್ಕೆ ಅದು ಹೊರಳುತ್ತದೆ.

ರಾವಳಜೋಗಿ, ಬಿಲ್, ರಾವಲ್ ಬಿಲ್, ಬಿಲ್‌ಜೋಗಿ, ಹಣಗಿ, ಕಪಾಲಿ, ಬ್ರಹ್ಮಕಪಾಲಿ, ಬ್ರಹ್ಮಕಪಾಲಿ ಕ್ಷತ್ರಿಯ, ಕಪಾಲಿ ಕ್ಷತ್ರಿಯ, ಶಿವಜೋಗಿ, ಬಳೆಗಾರಜೋಗಿ, ನೇಕಾರಜೋಗಿ ಮತ್ತು ಮರಾಠಿಜೋಗಿ ಹೀಗೆ ಹತ್ತು ಹಲವಾರು ಆಗಿ, ಸಾಮಾಜಿಕವಾಗಿ ಅತ್ಯಂತ ಕೆಳಸ್ತರದ ಬಡತನದಿಂದ ಕೂಡಿದ್ದು, ಅನೇಕ ಸ್ಥಳೀಯ ಕಸುಬು (ವೃತ್ತಿ)ಗಳನ್ನು ಕಲಿತು ಜೀವನವನ್ನು ಸಾಗಿಸುತ್ತಿದೆ.ಇನ್ನು ಕೆಲವರು ಭಿಕ್ಷಾಟನೆ (ಸನ್ಯಾಸಿಗಳಂತೆ) ಮಾಡುತ್ತಾ, ಇನ್ನೂ ಕೆಲವರು ಗುಡಿ-ಗುಂಡಾರಗಳನ್ನು ಸಹ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕರ್ನಾಟಕದಲ್ಲಿ ಸುಮಾರು ೨ಲಕ್ಷ ಜನಸಂಖ್ಯೆಯಿಂದ ಕೂಡಿದ ಈ ಜನಾಂಗ, ಬಹುತೇಕ ಗುಡ್ಡ-ಕಾಡುಗಳು, ನಗರ, ಪಟ್ಟಣ, ಹಳ್ಳಿಗಳ ಸೆರಗಿನಲ್ಲಿ ಅಲೆಮಾರಿಗಳಂತೆ ಜೀವನ ಸಾಗಿಸುತ್ತಾ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಬುಡಕಟ್ಟು ಜನಾಂಗವಾಗಿದೆ. ಸರ್ಕಾರದ ದಾಖಲೆಗಳ ಪ್ರಕಾರ ಈ ಜನಾಂಗ ೦.೦೧ರಷ್ಟು ಶೈಕ್ಷಣಿಕವಾಗಿದೆ.

ಹೆಮ್ಮೆಪಡುವಂತಹ ಭವ್ಯವಾದ ಗತ. ಆದರೆ ದಯನೀಯವಾದ ವರ್ತಮಾನ.  ಇವೆರಡರ ನಡುವಿನ ಕಂದರವನ್ನು ಕಲ್ಪಿಸಿಕೊಂಡು ವೇದನೆಯನ್ನು ಹುಟ್ಟಿಸಿಕೊಳ್ಳುವುದು, ಇದನ್ನು ಬಳಸಿ ಸಂಘಟನೆಯನ್ನು ಮಾಡುವುದು ಮತ್ತು ಮುನ್ನಡೆಯಲು ಬೇಕಾದ  ಸಾಮಾಜಿಕ ರಾಜಕೀಯ ಕಾರ್ಯಕ್ರಮಗಳನ್ನು ರೂಪಿಸುವುದು – ಇದು ೨೦ನೇ ಶತಮಾನದಲ್ಲಿ ಅನೇಕ ಸಮುದಾಯ ಸಂಘಟನೆಗಳು ಅನುಸರಿಸಿದ ಸಾಮಾಜಿಕ ಯುದ್ಧತಂತ್ರವಾಗಿದೆ.  ಆ ಮಾದರಿಯನ್ನು ಈ ಕರಪತ್ರದಲ್ಲೂ ಕಾಣಬಹುದು. ಸಾಮಾಜಿಕ ವಾಗಿ ಯಾವ ಜಾತಿ ಹೆಸರಿನಿಂದ ಮುಜುಗರವಾಗುತ್ತಿತ್ತೊ, ಅದರ  ಮೂಲಕವೇ ಒಗ್ಗೂಡುವುದು, ಅದಕ್ಕೆ ಅಂಟಿರುವ ಕೀಳರಿಮೆಯನ್ನು ಹೋರಾಟ ಪ್ರಜ್ಞೆಯಿಂದ ತೊಡೆಯುವುದು, ಅದನ್ನೇ ಸಾಮಾಜಿಕ ಎಚ್ಚರಕ್ಕಾಗಿ ಬಳಸಿ ಅದಕ್ಕೆ  ಘನತೆ ಒದಗಿಸುವುದು ಹಾಗೂ ಅ ಮೂಲಕ ಸಾಮಾಜಿಕ ರಾಜಕೀಯ ಮುನ್ನಡೆ ಸಾಧಿಸುವುದು ಇಲ್ಲಿನ ವಿಧಾನವಾಗಿದೆ. ಇದು ದಲಿತರೂ ಸೇರಿದಂತೆ ೨೦ನೇ ಶತಮಾನದಲ್ಲಿ ಕರ್ನಾಟಕದ ಅನೇಕ  ಹಿಂದುಳಿದ ಜಾತಿಗಳು ಮಾಡಿದ ಪ್ರಯೋಗವೇ ಆಗಿದೆ. ದಲಿತರು ತಮ್ಮ ಜಾತಿ ಅಪಮಾನವನ್ನು ಘನತೆಯನ್ನಾಗಿ ಬದಲಿಸಲು ಬೇಕಾದ ಹೋರಾಟ ಪ್ರಜ್ಞೆಯನ್ನು ಅಂಬೇಡ್ಕರ್ ಮೊದಲಾದ ರಾಜಕೀಯ ಚಿಂತಕರಿಂದ ಪಡೆದುಕೊಂಡರು. ಆದರೆ ಜೋಗಿಗಳು ಇದಕ್ಕೆ ಬೇಕಾದ ತಾತ್ವಿಕ ಪ್ರೇರಣೆಯನ್ನು ಸಗಣಿ ಕುಪ್ಪೆಯಲ್ಲಿ ಹುಟ್ಟಿ ಯೋಗಿಯಾಗಿ ಬೆಳೆದ ಗೋರಖನಿಂದ ಹೇಗೆ ಪಡೆದರೊ ತಿಳಿಯುವುದಿಲ್ಲ. ಬಹುಶಃ ಅವರು  ತಮ್ಮ ಸಮಕಾಲೀನ ಸಮುದಾಯಗಳು ಹಿಡಿದ ಹಾದಿಯನ್ನೇ ಆರಿಸಿಕೊಂಡಂತೆ ಕಾಣುತ್ತದೆ. ಆದರೆ ಸಮ್ಮೇಳನದಲ್ಲಿ ತಮಗೆ ಸರಿಯಾದ ಸ್ಥಾನ ಸಿಗಲಿಲ್ಲ ಎಂದು ಕುಂದಾಪುರ ಭಾಗದ ಬಳೆಗಾರ ಜೋಗಿಗಳು ನಡುವೆಯೆ ನಿರ್ಗಮಿಸಿದರು. ಬಹುಶಃ ಪಂಡಗಳ ನಡುವಣ ಪಾರಂಪರಿಕ ಭಿನ್ನತೆಗಳನ್ನು ಸಾಮಾಜಿಕ ರಾಜಕೀಯ ಕಾರ್ಯಕ್ರಮಗಳು ಅಷ್ಟು ಬೇಗನೆ ಬಗೆಹರಿಸಲಾರವು.

ಸಾಮಾಜಿಕ ಚಲನೆಗಳು

ನಾಥಪಂಥಿ ಸಮುದಾಯಗಳು ತಮ್ಮ ಒಳಪಂಗಡಗಳಲ್ಲಿ ಇರುವ ತಾರತಮ್ಯವನ್ನು ಕಳೆದು ಒಂದಾಗಲು ಯತ್ನ ಮಾಡುತ್ತಿರುವುದರ ಜತೆಯಲ್ಲೆ, ಇನ್ನೊಂದು ಬೆಳವಣಿಗೆಯೂ ಅವರ ಬದುಕಲ್ಲಿ ಆಗುತ್ತಿದೆ. ಅದೆಂದರೆ, ಸ್ವತಃ ದಮನಿತ ಪಂಗಡಗಳಾಗಿರುವ ಜೋಗಿ-ಕಾಪಾಲಿಕ-ರಾವುಳರು, ಅಸ್ಪೃಶ್ಯತೆಯನ್ನು ಆಚರಿಸುವುದು ಹಾಗೂ ನಾಥಪಂಥಿಯಲ್ಲದ ಜಾತಿ ಧರ್ಮಗಳಿಂದ ಹೊಸ ಸದಸ್ಯರು ಅವರ ಕುಟುಂಬವನ್ನು ಪ್ರವೇಶ ಮಾಡುತ್ತಿರುವುದು. ಹಾಗೆ ಕಂಡರೆ ನಾಥಪಂಥವೇ ಜಾತಿಯ ಮಿಶ್ರಣವುಳ್ಳದ್ದು. ಕರ್ನಾಟಕದ ಮಠಗಳಲ್ಲಿರುವ ನಾಥರ ಸಾಮಾಜಿಕ ಹಿನ್ನೆಲೆ ಕಂಡರೆ ಇದು ಗೊತ್ತಾಗುತ್ತದೆ. ಹಂಡಿಬಡಗನಾಥ ಮಠದಲ್ಲಿ ಇದ್ದ ಪೀರ್ ಶೇರನಾಥರು ಕೇರಳದ ನಾಯರ್ ಮೂಲದಿಂದ ಬಂದವರು. ಕದ್ರಿಯಲ್ಲಿದ್ದ ಮೋಹನನಾಥರು ರಜಪೂತ ಜಾತಿಯಿಂದ ಬಂದವರಾಗಿದ್ದರು. ಈಗ ಕದ್ರಿಗೆ ಬಂದಿರುವ ಸಂಧ್ಯಾನಾಥ್ ಕುರುಬರು. ವಿಟ್ಲಮಠಕ್ಕಿದ್ದ ಈಶ್ವರನಾಥರು ಲಿಂಗಾಯತರಾಗಿದ್ದರು.  ಸಮಾಜದ ಬಹುಜಾತಿಗಳಿಗೆ ಸೇರಿದವರು ಒಂದೇ ಪಂಥದಲ್ಲಿ ಗುರುಗಳಾಗಿರುವುದು ನಾಥಪಂಥದ ಅಪೂರ್ವ ಲಕ್ಷಣ. ಇದೇ ಬಹುರೂಪತೆಯು ನಾಥರಿಗೆ ನಡೆದುಕೊಳ್ಳುವ ಸಮುದಾಯಗಳಲ್ಲೂ ಇದೆ. ಚುಂಚನಗಿರಿಯಲ್ಲಿ ದಲಿತರೂ ಸೇರಿದಂತೆ ಎಲ್ಲ ಕೆಳಜಾತಿಯವರೂ ಜೋಗಪ್ಪಗಳಾಗುತ್ತಾರೆ. ಸೊಂಡೆಕೊಳದಲ್ಲಿ ಜೋಗಿದೀಕ್ಷೆಯನ್ನು ಮಾದಿಗರಿಗೆ ಕೊಡಲಾಗಿದೆ. ಶಿಷ್ಯರು ಯಾವುದೇ ಜಾತಿಗೆ ಸೇರಿರಲಿ, ಅವರು ಸತ್ತಾಗ ದೀಕ್ಷೆಕೊಟ್ಟ ಗುರು ಹೋಗಿ ಸಂಸ್ಕಾರ ಮಾಡಬೇಕು. ಇವೆಲ್ಲವೂ ನಾಥಪಂಥದಲ್ಲಿ ಉಳಿದಿರುವ ಕೆಲವು ಜಾತ್ಯತೀತ ಎನ್ನಬಹುದಾದ ಆಚರಣೆಗಳು.

ಇಷ್ಟಾದರೂ ನಾಥಪಂಥಕ್ಕೆ ಜಾತಿಯನ್ನು ಸಂಪೂರ್ಣವಾಗಿ ನಿಷೇಧಿಸಿಕೊಳ್ಳಲು ಆಗಲಿಲ್ಲ. ಅಲ್ಲಿ ದಲಿತರ ಬಗ್ಗೆ ಅಸ್ಪೃಶ್ಯತೆಯ ಆಚರಣೆಯಿದೆ.  ‘ರಾವುಳ ಮತಪ್ರಕಾಶಿಕೆ’ಯು ಬೇರೆಬೇರೆ ಜಾತಿಗಳು ಹೇಗೆ ಹುಟ್ಟಿದವು ಎಂಬ ಸುದೀರ್ಘ ವರ್ಣನೆ ಮಾಡುತ್ತದೆ. ಭಾರತದ ನಾಥರಲ್ಲಿ  ಬ್ರಾಹ್ಮಣರು ಕ್ಷತ್ರಿಯರು ರಜಪೂತರು ಜಾಟರು ಹೀಗೆ ಮೇಲುಜಾತಿಯವರೇ ಹೆಚ್ಚಿದ್ದಾರೆ. ಕೆಳಜಾತಿಯವರು ಕಡಿಮೆ. ರಾಜಸ್ತಾನದಲ್ಲಿ ಚಮ್ಮಾರರನ್ನು ಒಳಗೊಂಡಂತೆ ಕೆಳಜಾತಿಯವರಿಗೆ ಜೋಗಿದೀಕ್ಷೆ ಕೊಡುವ ಪದ್ಧತಿಯಿದ್ದು, ಅದು ಮುಂದೆ ನಿಂತುಹೋಯಿತು. ಉತ್ತರ ಭಾರತದಲ್ಲಿ ನಾಥರು ದೀಕ್ಷೆ ಕೊಡುವಾಗ ಜಾತಿ ಪದ್ಧತಿ ಅನುಸರಿಸುತ್ತಾರೆ. ಮಠಕ್ಕೆ ಬರುವ ಭಕ್ತರಿಗೆ ಹೇಗೆ ಪಂಕ್ತಿಭೇದ ಮಾಡಲಾಗುತ್ತದೆ ಎಂಬುದನ್ನು ಬ್ರಿಗ್ಸನು ದಾಖಲಿಸುತ್ತಾನೆ. ಕದ್ರಿಗೆ ಬಂದಿದ್ದ ಒಬ್ಬ ನಾಥ ಯೋಗಿಯಲ್ಲಿ ಈ ಬಗ್ಗೆ ಕೇಳಿದಾಗ, ದಲಿತರಿಗೆ ಯೋಗಿದೀಕ್ಷೆ ಕೊಡಲು ಸಾಧ್ಯವಿಲ್ಲ ಎಂದು ಖಂಡಿತವಾಗಿ ನುಡಿದನು.

ಈಗ್ಗೂ ಕರ್ನಾಟಕದ ನಾಥಪಂಥದ ಮಠ ಹಾಗೂ ಗುಡಿಗಳಲ್ಲಿ ದಲಿತರಿಗೆ ಸರಾಗವಾದ ಪ್ರವೇಶವಿಲ್ಲ. ಕರ್ನಾಟಕದ ದಲಿತರು ಬಹುಮಟ್ಟಿಗೆ ಶೈವರು ಹಾಗೂ ಶಾಕ್ತ ದೇವತೆಗಳಿಗೆ ನಡೆದುಕೊಳ್ಳುವವರು. ಕೆಲವು ವಿದ್ವಾಂಸರ ಪ್ರಕಾರ ದಲಿತರಲ್ಲೇ ತಂತ್ರಪಂಥದ ಆಚರಣೆಗಳು ದಟ್ಟವಾಗಿ ಉಳಿದುಕೊಂಡಿವೆ. ನಾಥಪಂಥದ ಗುಡಿಗಳು ಶೈವಸಂಸ್ಕೃತಿಯವು. ಆದರೂ ಅಲ್ಲಿ ದಲಿತರ ವಿಷಯದಲ್ಲಿ ತೊಡಕುಗಳಿವೆ. ಲುಂಕೆಮಲೆ ಸಿದ್ಧಪ್ಪನ ಗುಡಿಯೊಳಗೆ ದಲಿತರು ಬರುವಂತಿಲ್ಲ.  ಸೀತಿಬೆಟ್ಟದ ಕೆಳಗೆ ತ್ರಿಶೂಲ ಭೈರವ ಗುಡಿಯಿದ್ದು, ಸ್ಥಳೀಯ ದಲಿತರು ಅಲ್ಲಿಯೇ ಪೂಜೆ ನೆರವೇರಿಸುತ್ತಾರೆ. ಬೆಟ್ಟದ ಮೇಲೆ ಇರುವ ಭೈರವನ ಗುಡಿಗೆ ಅವರಿಗೆ ಪ್ರವೇಶವಿಲ್ಲ. ಕರ್ನಾಟಕದ ಅನೇಕ ಸಿದ್ಧ ಮತ್ತು ಸಂತರ ಗದ್ದುಗೆಗಳಲ್ಲಿ ಈಗಲೂ ದಲಿತರಿಗೆ ಪ್ರವೇಶವಿಲ್ಲ. ಈ ನಿಷೇಧ ಅಧಿಕೃತವಾಗಿಲ್ಲ. ಆದರೆ ಅಘೋಷಿತವಾಗಿದೆ. ಇದು ನಾಥಪಂಥಿ ಸಮುದಾಯಗಳಿಗೆ ಕಾಡುವ ಸಂಗತಿಯೇನಾಗಿಲ್ಲ. ಸ್ವತಃ ಅವೇ ತಮ್ಮ ಪರಿಸರದ ಉಚ್ಚಜಾತಿಯವರ ಜತೆ ತಾರತಮ್ಯ ಅನುಭವಿಸುವುದುಂಟು. ಲುಂಕೆಮಲೆಯಲ್ಲಿ ಕಾಪಾಲಿಕರನ್ನು ಲಿಂಗಾಯತರೂ, ಕದ್ರಿಯಲ್ಲಿ ಜೋಗಿಗಳನ್ನು ಬ್ರಾಹ್ಮಣರೂ ಸಮಾನವಾಗಿ ಪರಿಗಣಿಸುವುದಿಲ್ಲ. ಮಾತ್ರವಲ್ಲದೆ,  ನಾಥ ಸಮುದಾಯದ ಒಳಪಂಗಡಗಳಲ್ಲೂ ಸಾಮಾಜಿಕ ತಾರತಮ್ಯಗಳಿವೆ. ಕಿನ್ನರಿ ಜೋಗಿಗಳನ್ನು ಕಾಪಾಲಿಕರು ಹಾಗೂ ರಾವುಳರು ಕೆಳಸ್ಥಾನದಲ್ಲಿ ಇಟ್ಟಿದ್ದಾರೆ. ಕಿನ್ನರಿಯವರ ಜತೆ ಉಳಿದ ನಾಥಪಂಗಡಗಳು ಕೊಡುಕೊಳು ಮಾಡಿದ ನಿದರ್ಶನಗಳೇ ಸಿಗುವುದಿಲ್ಲ. ಕಿನ್ನರಿಯವರನ್ನು ಬಿಟ್ಟು ಉಳಿದ ಪಂಗಡಗಳ ನಡುವೆ ಈಗೀಗ ಕೊಡುಕೊಳು ಶುರುವಾಗಿದೆ. ಕೆಲವು ಕಡೆ ಕಾಪಾಲಿಕರ ತರುಣ ತರುಣಿಯರು ಬೇರೆ ಜಾತಿ ಮತ್ತು ಧರ್ಮದವರ ಜತೆ ಸಂಬಂಧಗಳನ್ನು ಬೆಳೆಸಿದ್ದಾರೆ. ಚಿತ್ರದುರ್ಗ ಭಾಗದಲ್ಲಿ ಕಾಪಾಲಿಕ ಹುಡುಗನೊಬ್ಬ ಮುಸ್ಲಿಮ್ ಹುಡುಗಿಯನ್ನೂ, ವದ್ದಿಗೆರೆಯಲ್ಲಿ ಗೊಲ್ಲರ ಹುಡುಗರು ಕಾಪಾಲಿಕರ ಹುಡುಗಿಯನ್ನೂ, ಚುಂಚನಕಟ್ಟೆ ಸೀಮೆಯಲ್ಲಿ ಕಾಪಾಲಿಕ ಹುಡುಗಿಯರು ಒಕ್ಕಲಿಗರ ಹುಡುಗರನ್ನೂ, ಮಂಗಳೂರಿನಲ್ಲಿ ಜೋಗಿ ತರುಣರು ಒಕ್ಕಲಿಗರ ಹುಡುಗಿಯನ್ನೂ  ಲಗ್ನವಾಗಿರುವ ವರದಿಗಳಿವೆ. ಈ ಲಗ್ನಗಳು ಬಹುಮಟ್ಟಿಗೆ ಪ್ರೇಮದ ಕಾರಣದಿಂದ ನಡೆದವು. ನಂತರ ಕಾಪಾಲಿಕರು ಜೋಗಿಯವರೂ ಇವನ್ನು ಒಪ್ಪಿಕೊಂಡಿದ್ದಾರೆ. ಕಿನ್ನರಿಯವರಲ್ಲಿ ಜಾತಿಯ ಹೊರಗೆ ಮದುವೆಯಾದರೆ, ಶುದ್ದೀಕರಣ ಮಾಡಿ ತಪ್ಪುದಂಡ ಹಾಕಿ ಒಳಗೆ ಕರೆದುಕೊಳ್ಳಲಾಗುವುದು.  ಆ ಮಟ್ಟಿಗೆ ಜಾತಿಯ ಬಗ್ಗೆ ಸಡಿಲತೆ ಇದೆ. ಇದಕ್ಕೆ ಜನಸಂಖ್ಯೆ ಕಡಿಮೆ ಇರುವುದೂ ಕಾರಣ ಇರಬಹುದು. ಹೀಗೆ ತಮ್ಮ ಅಸ್ಮಿತೆಯನ್ನು ಪಡೆದುಕೊಳ್ಳಲು ನಾಥಪಂಥಿಗಳು ಮಾಡುತ್ತಿರುವ ಸೆಣಸಾಟಗಳು ಅವರು ನಿರೀಕ್ಷಿಸದೇ ಇದ್ದ ಕೆಲವು ದಿಕ್ಕುಗಳಿಗೂ ಕರೆದುಕೊಂಡು ಹೋಗುತ್ತಿರುವಂತೆ ಕಾಣುತ್ತಿದೆ.

* * *[1]      ಪ್ರಸ್ತಾವನೆ, ತ್ರಿಯಂಬಕೇಶ್ವರದಿಂದ ಕದಲೀತನಕ

[2]      ನಾಥಪಂಥ ಶೈವಧರ್ಮ ಮತ್ತು ಕರ್ನಾಟಕ ನಾಥಪಂಥ ಶೈವ ಸಮಾಜದ ಸಂಕ್ಷಿಪ್ತ ಪರಿಚಯ, ಪು.೨೨

[3]      ಅದೇ, ಪು.೫೩