ಗೈರುಹಾಜರಿಗಳು

 

ಕರ್ನಾಟಕದ ಸಾಮಾಜಿಕ ಧಾರ್ಮಿಕ ರಾಜಕೀಯ ಬದುಕಿನಲ್ಲಿ ನಾಥ, ಕಾಳಾಮುಖ, ಶಾಕ್ತ,  ಸೂಫಿ,  ವಜ್ರಯಾನ, ಕಾಪಾಲಿಕ ಮುಂತಾದ ಪಂಥಗಳು ಆಳವಾದ ಪ್ರಭಾವ ಬೀರಿವೆ. ಆದರೆ ಈ ಪಂಥಗಳ ಮೇಲೆ ಕರ್ನಾಟಕದ ಅಧ್ಯಯನಗಳಲ್ಲಿ ಸಿಗುವ ತಿಳಿವಳಿಕೆ ಮಾತ್ರ ತೀರ ಸೀಮಿತ. ನಾಥರ ಬಗ್ಗೆ ಇನ್ನೂ ಕಡಿಮೆ. ಭಾರತದ ಪ್ರಾಚೀನ ಪಂಥಗಳಲ್ಲಿ ಒಂದಾಗಿರುವ ನಾಥವು, ನೇಪಾಳ ಟಿಬೇಟು ಆಫಘಾನಿಸ್ತಾನ ಪಾಕಿಸ್ತಾನ ಹೀಗೆ ಹಲವು ದೇಶಗಳಲ್ಲಿ ಹರಡಿದೆ. ನೇಪಾಳವಂತೂ ನಾಥಪಂಥದ ತೊಟ್ಟಿಲು. ಹೀಗೆ ದಕ್ಷಿಣ ಏಶಿಯಾ ತುಂಬ ಹರಡಿರುವ ಈ ಪಂಥವು ಸುಮಾರು ೧೦ ಶತಮಾನಗಳಿಂದ ಕರ್ನಾಟಕದಲ್ಲಿದೆ. ಇಲ್ಲಿರುವ  ಮಠಗಳು, ಕಾಪಾಲಿಕ ಹಾಗೂ ಜೋಗಿ ಸಮುದಾಯಗಳು,  ಜೋಗಿ ಸಿದ್ಧ ಭೈರವ ಹೆಸರಿನಲ್ಲಿ ನಾಡಿನಾದ್ಯಂತ ಇರುವ ಊರುಗಳು,  ಗವಿಬೆಟ್ಟಗಳು, ಕೊಳ್ಳಕಣಿವೆಗಳು, ಗುಡಿಗಳು, ಸಮಾಧಿಗಳು, ಶಿಲ್ಪ ಹಾಗೂ ಶಾಸನಗಳು, ಇದರ ಅಸ್ತಿತ್ವದ ಸಾಕ್ಷ್ಯಗಳಾಗಿವೆ. ನಾಥರು ನೆನೆಯುವ ಚೌರಾಸಿ ಸಿದ್ಧರಲ್ಲಿ ಮೂವರು -ಕಣ್ಹಪಾ, ಅಲ್ಲಮ ಹಾಗೂ ರೇವಣಸಿದ್ಧ-ಕನ್ನಡಿಗರು. ಕನ್ನಡದ ಪ್ರಾಚೀನ ಪಠ್ಯಗಳಲ್ಲಿ ಅಲ್ಲಮಪ್ರಭು, ರೇವಣಸಿದ್ಧ, ಮರುಳಸಿದ್ಧ,  ಶಂಕರ ದಾಸಿಮಯ್ಯ, ತೋಂಟದ ಸಿದ್ಧಲಿಂಗ ಮುಂತಾದವರು ನಾಥರನ್ನು  ಮುಖಾಮುಖಿ ಮಾಡುವ ಕಥನಗಳಿವೆ. ಆದರೂ ಆಧುನಿಕ ಕನ್ನಡದಲ್ಲಿ ನಾಥಪಂಥದ ಬಗ್ಗೆ ಸಿಗುವ ತಿಳಿವಳಿಕೆ ಚೂರುಪಾರು.

[1]

ನಾಥಪಂಥದ ಮೇಲೆ ಇಂಗ್ಲಿಷಿನಲ್ಲಿ ಜಾರ್ಜ್ ವೆಸ್ಟನ್ ಬ್ರಿಗ್ಸನು (೧೯೩೮)  ತನ್ನ ವ್ಯಾಪಕವಾದ ತಿರುಗಾಟ ಮತ್ತು ಪಾಂಡಿತ್ಯದಿಂದ ಮಾಡಿರುವ  ಅಧ್ಯಯನವು ಸದ್ಯಕ್ಕೆ ಪ್ರಮಾಣ ರೂಪದಲ್ಲಿದೆ. ಇದರಲ್ಲಿ ‘ಬೆಳಗಾವಿ ಭಾಗದಲ್ಲಿ ಕೆಲವು ನಾಥ ಯೋಗಿ ಯೋಗಿನಿಯರು ಕೈಯಲ್ಲಿ ಕಪ್ಪರ ಮತ್ತು ತ್ರಿಶೂಲ ಹಿಡಿದು ತಿರುಗಾಡುತ್ತಾರೆ’  ಎಂಬ ಒಂದು ಸಾಲನ್ನು ಬಿಟ್ಟರೆ, ಕರ್ನಾಟಕವು ಸಂಪೂರ್ಣವಾಗಿ ಗೈರುಹಾಜರು. ಭಾರತದ ನಾಥರಲ್ಲಿ  ಮಹತ್ವದ ಸ್ಥಾನವುಳ್ಳ ಕದ್ರಿಮಠದ ಉಲ್ಲೇಖವೂ ಇಲ್ಲಿಲ್ಲ. ಇದು ಅಖಿಲ ಭಾರತೀಯ ಅಧ್ಯಯನಗಳಲ್ಲಿ ಇರುವ ಸಾಮಾನ್ಯ ಸಮಸ್ಯೆ. ಇದಕ್ಕಾಗಿ ಬ್ರಿಗ್ಸನನ್ನು ದೂರಿ ಪ್ರಯೋಜನವಿಲ್ಲ. ಕಾರಣ,  ನಾಥವು ಉತ್ತರ ಭಾರತದಲ್ಲಿ ಕೇಂದ್ರೀಕೃತ ಆಗಿರುವ ಒಂದು ಪಂಥ. ಬ್ರಿಗ್ಸನಿಗೆ ಹೋಲಿಸಿದರೆ, ಮಹಾರಾಷ್ಟ್ರದ ನಾಥರ ಮೇಲೆ ಮರಾಠಿಯ ಸಂಶೋಧಕರಾದ ರಾ.ಚಿಂ. ಢೇರೆ  ಹಾಗೂ ಕಾಪಾಲಿಕರ ಮೇಲೆ ಡೇವಿಡ್ ಲೊರೆಂಜೈನ್ ಅವರು ಮಾಡಿರುವ ಅಧ್ಯಯನಗಳೇ ವಾಸಿ. ಅಲ್ಲಿ ಕರ್ನಾಟಕದ ಪ್ರಾಸಂಗಿಕ ಚರ್ಚೆಯಾದರೂ ಇದೆ.

ಸಂಯುಕ್ತ ಕಥನ

ಕರ್ನಾಟಕದ ಪಂಥಗಳ ಅಧ್ಯಯನಗಳಲ್ಲಿ ಎದುರಿಸಬೇಕಾದ ಕೆಲವು ಮುಖ್ಯ ಸಮಸ್ಯೆಗಳಿವೆ.   ಮೊದಲನೆಯದಾಗಿ, ಅಖಿಲ ಭಾರತೀಯ ವ್ಯಾಪ್ತಿಯುಳ್ಳ ನಾಥ ಇಲ್ಲವೆ ಸೂಫಿಗಳ ಬಗ್ಗೆ   ‘ಕರ್ನಾಟಕದ’ ಎನ್ನಲಾಗುವ ಪ್ರಾದೇಶಿಕ ಚಿತ್ರರಚನೆ ಮಾಡುವ ಸಮಸ್ಯೆ. ಹೇಗೆ ಮಾಡಿದರೂ ಇಲ್ಲಿ ಚರ್ಚೆ ಭಾರತದ ಉಪಖಂಡಕ್ಕೆ ಚೆಲ್ಲಿಕೊಳ್ಳುತ್ತದೆ.  ಕಠಮಂಡುವಿನಿಂದ ಕದ್ರಿಯ ತನಕ ನೂರಾರು ನಾಥರ ಮಠಗಳಿವೆ. ಅವರು ಸಂಚರಿಸುವ ಪಥಗಳಿವೆ. ನಾಥಪಂಥಿ ಸಮುದಾಯಗಳಿವೆ. ಆದರೂ ನಾಥಪಂಥಕ್ಕೆ, ದಕ್ಷಿಣ ಭಾರತದಲ್ಲಿ ಹೈದರಾಬಾದಿನ ಒಂದು ಮಠ ಬಿಟ್ಟರೆ, ಇಡೀ  ನೆಲೆ ಇರುವುದು ಕರ್ನಾಟಕದಲ್ಲೆ.  ಈ ಹಿನ್ನೆಲೆಯಲ್ಲಿ ದೇಶವ್ಯಾಪಿ ಪಂಥವೊಂದಕ್ಕೆ ತನ್ನಲ್ಲಿ ನೆಲೆಗೊಟ್ಟ ಕರ್ನಾಟಕ ಸಂಸ್ಕೃತಿಯು, ಅದರ ಜತೆ ಮಾಡಿದ ಅನುಸಂಧಾನದ ಸ್ವರೂಪ ಯಾವುದು ಎಂದು ಅರಿಯಬೇಕಿದೆ. ಈ ಅನುಸಂಧಾನವನ್ನು ನಾಥಕ್ಕೆ ಲಗತ್ತಾಗಿರುವ ಜೀವಂತ ಮನುಷ್ಯ ಲೋಕವನ್ನು ಹಾಗೂ ಅದು ತನ್ನ ನಿತ್ಯ ಬದುಕಿನ ಲಯದಲ್ಲಿ ಕಟ್ಟಿಕೊಂಡಿರುವ ಸಂಸ್ಕೃತಿಯನ್ನು ತಿಳಿಯುವ ಮೂಲಕವೇ ಮಾಡಬೇಕಿದೆ. ಇದು ಅಖಿಲ ಭಾರತೀಯತೆ ಮತ್ತು ಸ್ಥಳೀಯತೆಯನ್ನು, ಚರಿತ್ರೆ ಮತ್ತು ವರ್ತಮಾನವನ್ನು, ಏಕಕಾಲಕ್ಕೆ ಒಂದೇ ಬೊಗಸೆಯಲ್ಲಿ ಹಿಡಿದು ನೋಡುವ ಕ್ರಮ. ಭಾರತದಲ್ಲಿ ಕರ್ನಾಟಕವೂ ಇದೆಯಷ್ಟೆ. ಹನಿಯ ಮೂಲಕ ಕಡಲನ್ನು ನೋಡುವಾಗ, ಸಹಸ್ರಾರು ಹನಿಗಳಿಂದಲೇ ಕಡಲು ನಿರ್ಮಾಣವಾಗಿದೆ ಎಂಬುದನ್ನು ಮರೆಯಬೇಕಿಲ್ಲ. ದೇಶದ ಎಳೆಗಳನ್ನು ಬಿಡದೆ ಪ್ರದೇಶದ ಆಯಾಮಕ್ಕೆ ಆದ್ಯತೆ ಕೊಡುವ ಸಂಯುಕ್ತ ಕಥನ ಕಟ್ಟುವುದು ಯಾವಾಗಲೂ ಒಂದು ಸವಾಲು. ನಾಥಕ್ಕೆ ಸಂಬಂಧಪಟ್ಟಂತೆ ಕನ್ನಡ, ತಮಿಳು ಹಾಗೂ ಫಾರಸಿ ಶಾಸನಗಳಿವೆ.  ಫಾರಸಿ  ಹಾಗೂ ಮರಾಠಿ ಆಕರಗಳಲ್ಲಿ ನಾಥರ ಮಾಹಿತಿ ಯಿದೆ. ತುಳುವಿನಲ್ಲಿ ಜನಪದ ನಾಥಸಾಹಿತ್ಯವಿದೆ. ಮುಖ್ಯವಾಗಿ ನಾಥಪಂಥಿ ಸಮುದಾಯ ಗಳಿವೆ. ಹಲವು ಭಾಷೆ, ಪ್ರದೇಶ,  ಕಾಲ ಮತ್ತು ಆಕೃತಿಗಳಲ್ಲಿ ಇದಕ್ಕೆ ಬೇಕಾದ ತಿಳುವಳಿಕೆ ಚದುರಿಹೋಗಿದೆ. ಈ ಚದುರಿದ ತಿಳುವಳಿಕೆಯನ್ನು ಜೋಡಿಸಿ, ಕರ್ನಾಟಕ ನಾಥಪಂಥದ ಒಂದು ಬಹುರೂಪಿ ಕಥನವನ್ನು ಕಟ್ಟಲು ಇಲ್ಲಿ ಯತ್ನ ಮಾಡಿದೆ.

ಪರಿಭಾಷೆಯ ಸಮಸ್ಯೆ

ಧರ್ಮ ಹಾಗೂ ಪಂಥಗಳ ಅಧ್ಯಯನದಲ್ಲಿ ಪಂಥ, ದರ್ಶನ, ಮತ, ಸಮಯ, ಮಾರ್ಗ, ಸಂಪ್ರದಾಯ, ಶಾಸ್ತ್ರ, ಆರಾಧನೆ, ಧರ್ಮ, ನಂಬಿಕೆ ಮುಂತಾದ ಪರಿಭಾಷೆಗಳು  ಬಳಕೆಯಲ್ಲಿವೆ. ‘ಸಮಯ ಪರೀಕ್ಷೆ’ ಮಾಡುವ  ಬ್ರಹ್ಮಶಿವನ ಪ್ರಕಾರ, ನಾಥ ಕೌಳ ಕಾಪಾಲಿಕ ಮುಂತಾದವು  ‘ಸಮಯ’ಗಳು. ನಿಜಗುಣ ಶಿವಯೋಗಿಯ ಪ್ರಕಾರ ‘ಶಾಸ್ತ್ರ’ಗಳು. ಶರಣರು ಯೋಗಿ ಜೋಗಿ ಮಹಾವ್ರತ ಇತ್ಯಾದಿಗಳನ್ನು ‘ದರ್ಶನ’ಗಳು ಎನ್ನುತ್ತಾರೆ. ಆದಿಚುಂಚನಗಿರಿ ಸಾಹಿತ್ಯದಲ್ಲಿ ‘ಕಾಪಾಲಮತ’ ಎಂಬ ಪ್ರಯೋಗವಿದೆ. ಚಾಮರಸನ ‘ಪ್ರಭುಲಿಂಗಲೀಲೆ’ಯಲ್ಲಿ  ಗೋರಕ್ಷನು ತನ್ನದು  ‘ಕಾಪಾಲ ಮಾರ್ಗ’ವೆಂದು ಕರೆದುಕೊಳ್ಳುತ್ತಾನೆ. ನಾಥರ ಮೇಲೆ ಖಚಿತ ಚಿತ್ರಗಳನ್ನು ಕೊಡುವ ಮಲ್ಲಿಕಾರ್ಜುನ ಕವಿ, ನಾಥವನ್ನು  ‘ಮತ’ ಎನ್ನುತ್ತಾನೆ. ಕದ್ರಿಯ ಜೋಗಿಮಠದಲ್ಲಿ ನಾಥ ‘ಸಂಪ್ರದಾಯ’ ಪ್ರಚಾರ ಸಮಿತಿಯಿದೆ. ಕಪಟರಾಳರು ಕೂಡ ‘ನಾಥಸಂಪ್ರದಾಯ’ ಎಂದು ಬಳಸುತ್ತಾರೆ. ಕೆಲವರು  ‘ಗುಪ್ತಸಮಾಜಗಳು’ ಎಂಬ ಪರಿಭಾಷೆ ಬಳಸುವುದುಂಟು. ಇದರ ಜತೆಗೆ  ಪಶ್ಚಿಮ ಅಧ್ಯಯನಗಳಲ್ಲಿ ಇರುವ ಫಿಲಾಸಫಿ, ರಿಲಿಜನ್, ಕಲ್ಟ್, ಸೆಕ್ಟ್ ಪರಿಕಲ್ಪನೆಗಳೂ ಸೇರಿಕೊಂಡಿವೆ. ಅಧ್ಯಯನಗಳಲ್ಲಿ ಬಳಕೆಯಾಗುವ ಪರಿಭಾಷೆಗಳು ಅಧ್ಯಯನಕಾರರ ವೈಯಕ್ತಿಕ ದೃಷ್ಟಿಕೋನವನ್ನು ಪ್ರತಿನಿಧಿಸುತ್ತವೆ ಎನ್ನುವುದು ಒಂದು ಸತ್ಯ;  ಅವು ನಿರ್ದಿಷ್ಟ ಸಂಗತಿಗಳನ್ನು ಮುಖ್ಯ ಅಥವಾ ಅಮುಖ್ಯ ಎಂದು ಬಿಂಬಿಸುವ ರಾಜಕಾರಣ ಕೂಡ ಮಾಡುತ್ತವೆ ಎನ್ನುವುದು ಇನ್ನೊಂದು ಸತ್ಯ. ಎರಡನೆಯ ಸತ್ಯ ಗಂಭೀರವಾದುದು. ನಾಥಕ್ಕೆ ‘ಪಂಥ’  ಎಂದರೆ ಬರುವ ಅರ್ಥವೇ ಬೇರೆ. ‘ಧರ್ಮ’  ಅಥವಾ ‘ಜಾತಿ’  ಎಂದು ಪರಿಗಣಿಸಿದರೆ ಸಿಗುವ ಆಯಾಮವೇ ಬೇರೆ.

ಪ್ರಸ್ತುತ ಅಧ್ಯಯನದ ಮಟ್ಟಿಗೆ ದರ್ಶನ- ಪಂಥ- ಧರ್ಮಗಳ ವ್ಯತ್ಯಾಸವನ್ನು ಸ್ಥೂಲವಾಗಿ ಹೀಗೆ ವಿವರಿಸಿಕೊಂಡಿದೆ. ಅಮೂರ್ತವಾದ ತಾತ್ವಿಕ ಪರಿಕಲ್ಪನೆಗಳ ರೂಪದಲ್ಲಿದ್ದು ತಕ್ಕಮಟ್ಟಿಗೆ ವ್ಯವಸ್ಥಿತವಾಗಿ ಮಂಡನೆಯಾಗಿರುವ ಚಿಂತನೆಯೆ ದರ್ಶನ.  ಸಾಂಖ್ಯ,ಯೋಗ, ಚಾರ್ವಾಕ, ಬೌದ್ಧ ಇವು ದರ್ಶನಗಳು; ಈ ದರ್ಶನವನ್ನು ದೀಕ್ಷೆಯ ಮೂಲಕ ಸದಸ್ಯರಾಗಿ ಸಂಘಟಿತವಾಗುವ ಗುಂಪುಗಳು ಮೂರ್ತರೂಪದಲ್ಲಿ ಆಚರಣೆ ಮಾಡುವುದು ಪಂಥ. ವಜ್ರಯಾನ, ಸೂಫಿ, ನಾಥ, ಕಾಳಾಮುಖ, ಕಾಪಾಲಿಕ, ಲಕುಲೀಶ, ದತ್ತ, ವಾರಕರಿ, ಮಹಾನುಭಾವ ಇವು ಪಂಥಗಳು. ಕೆಲವೊಮ್ಮೆ ದರ್ಶನ ಹಾಗೂ ಪಂಥಗಳು ವಿಸ್ತರಣೆಗೊಂಡು ಸಂಘಟಿತ ವ್ಯವಸ್ಥೆಯಲ್ಲಿ ಧರ್ಮವಾಗಬಹುದು. ಆಗ ಅವಕ್ಕೆ ವಿಸ್ತಾರವಾದ ಸಮುದಾಯಗಳು ಅನುಯಾಯಿಗಳಾಗುತ್ತವೆ. ಒಂದು ಧರ್ಮಶಾಸ್ತ್ರ ಸಿದ್ಧವಾಗುತ್ತದೆ. ಬೌದ್ಧ ಸಿಖ್ ಜೈನ ಲಿಂಗಾಯತ ಇವು ಧರ್ಮಗಳಾಗಿದ್ದು ಹೀಗೆ.  ಆದರೆ ಇವು ಧರ್ಮಗಳಾದರೂ ತಮ್ಮ ದಾರ್ಶನಿಕ ಹಾಗೂ ಪಂಥೀಯ ಗುಣಗಳನ್ನು ಬಿಟ್ಟಿಲ್ಲ. ಈ ರೂಪ ಪರಿವರ್ತನೆಯು ಇನ್ನೊಂದು ಹೆಜ್ಜೆ ಮುನ್ನಡೆದು ಧರ್ಮಗಳು ಜಾತಿ ಕೂಡ ಆಗಬಹುದು. ಹೀಗಾಗಿ ಕರ್ನಾಟಕದ ಶರಣ ಪಂಥಕ್ಕೆ  ಜಾತಿಯ ಆಯಾಮವೂ ಇದೆ. ಹೀಗೆ ದರ್ಶನ, ಪಂಥ, ಧರ್ಮ, ಜಾತಿಗಳು ಪರಸ್ಪರ ಬೆರೆತುಕೊಂಡಿರುವ ವಿಚಿತ್ರ ಸನ್ನಿವೇಶ ಭಾರತದಲ್ಲಿದೆ. ಈ ಹಿನ್ನೆಲೆಯಲ್ಲಿ ನಾಥವು ತನ್ನದೇ ಆದ ಬೆರಕೆ ದರ್ಶನ ಹೊಂದಿರುವ ಒಂದು ಪಂಥವಾಗಿದೆ. ಅದನ್ನು ಅನುಸರಿಸುತ್ತಿರುವ ಸಮುದಾಯಗಳ ಪಾಲಿಗೆ ಅದೊಂದು ಧರ್ಮವೂ ಆಗಿದೆ. ಈ ಸಮುದಾಯಗಳು ಜಾತಿಗಳೂ ಆಗಿವೆ. ಆದ್ದರಿಂದ ನಾಥಪಂಥವನ್ನು ತತ್ವಶಾಸ್ತ್ರೀಯವಾಗಿ ಸಾಮಾಜಿಕವಾಗಿ ಧಾರ್ಮಿಕವಾಗಿ ವಿಶ್ಲೇಷಿಸಬೇಕಾಗಿದೆ.

ಕನ್ನಡದಲ್ಲಿ ‘ಪ್ರಧಾನ’ ಧಾರೆಯಲ್ಲಿ ಬರುವ ದರ್ಶನ ಹಾಗೂ ಧರ್ಮಗಳ ಚರ್ಚೆಯಿದೆ. ಆದರೆ ನಾಥ ಕಾಪಾಲಿಕ ಸೂಫಿ ಇತ್ಯಾದಿ ಪಂಥಗಳ ವಿಷಯ ಬಂದಾಗ ಒಂದೊ ಅಲಕ್ಷಿಸಲಾಗುತ್ತದೆ. ಇಲ್ಲವೆ ಈ ಪಂಥಗಳನ್ನು ಸಾಂಪ್ರದಾಯಿಕ ಧರ್ಮಗಳ  ಬಿಡಿಭಾಗಗಳನ್ನಾಗಿ ನೋಡಲಾಗುತ್ತದೆ. ಉದಾ. ಸೂಫಿಪಂಥವನ್ನು ಇಸ್ಲಾಮಿನ, ವಜ್ರಯಾನವನ್ನು ಬೌದ್ಧಧರ್ಮದ, ನಾಥ ಕಾಪಾಲಿಕಗಳನ್ನು ಶೈವಧರ್ಮದ ಭಾಗವಾಗಿ ಪರಿಗಣಿಸಲಾಗುತ್ತದೆ. ಇದರಿಂದ ಈ ಪಂಥಗಳ ಸ್ವತಂತ್ರ ಅಸ್ತಿತ್ವವನ್ನು ಮನ್ನಿಸಿದಂತೆ ಆಗುವುದಿಲ್ಲ; ‘ಪ್ರಧಾನ’ ಎನ್ನಲಾಗುವ ಧರ್ಮಗಳ ಜತೆ ಇವು ಮಾಡುತ್ತಿರುವ ಸಂಘರ್ಷವನ್ನು ಗಮನಿಸಲೂ ಆಗುವುದಿಲ್ಲ. ಕಾಪಾಲಿಕ ಅಥವಾ ಮಹಾವ್ರತ, ಕಾಳಾಮುಖ, ಪಾಶುಪತ, ಕೌಳ,  ಶಾಕ್ತ, ನಾಥ, ವೀರಶೈವ, ಶರಣ ಇವನ್ನೆಲ್ಲ  ‘ವಿಶಾಲ ಶೈವ’ ಎಂದು ಪರಿಗಣಿಸುವುದಾದರೆ, ಇವುಗಳ ಒಳಗೆ ನಡೆದ ದಾಯಾದಿ ಕಲಹಗಳು ದಂಗುಬಡಿಸುವಂತಿವೆ. ೧೨ನೇ ಶತಮಾನದ ಶಿವಶರಣರು ಈ ವಿಶಾಲ ಶೈವದ ವಿಭಿನ್ನ ಪಂಥಗಳ ಬಗ್ಗೆ ತೋರುವ ವಿರೋಧ ಮತ್ತು ಭಿನ್ನಮತಗಳು ಅತ್ಯಂತ ಕಟುವಾಗಿವೆ. ಭಾರತದಲ್ಲಿ ದರ್ಶನ ಪಂಥ ಧರ್ಮಗಳ ನಡುವಣ ಪರಸ್ಪರ ಸಂಘರ್ಷ ಮತ್ತು ಹೊಂದಾಣಿಕೆಗಳು ಕುತೂಹಲಕರವಾಗಿವೆ.  ಕರ್ನಾಟಕ ನಾಥಪಂಥವನ್ನು ಈ ದಾರ್ಶನಿಕ ಹಾಗೂ ಪಂಥೀಯ ಕೋಲಾಹಲಗಳ ಒಳಗಿಟ್ಟು ಅಧ್ಯಯನ ಮಾಡುವುದು ಅನಿವಾರ್ಯವಾಗಿದೆ. ಆದರೆ ಈ ರಣಕೋಲಾಹಲಗಳ ಸ್ವರೂಪವನ್ನು ಅರ್ಥ ಮಾಡಿಕೊಳ್ಳುವುದು ಸುಲಭದ ಕೆಲಸವಲ್ಲ.

ಗುರುಪಂಥಗಳ ಶೋಧ

ಯೋಗಸಾಧನೆಯು ಪ್ರಧಾನ ಚಟುವಟಿಕೆಯಾಗಿರುವ ನಾಥವು ಮೂಲತಃ ಒಂದು ಗುರುಪಂಥ. ಯೋಗ ಎಂದರೇನೇ ಮಿಲನ ಎಂದರ್ಥ. ಗುರುಪಂಥಗಳಲ್ಲಿ ಗುರು ಶಿಷ್ಯರ ಮಿಲನವಾಗುವಾಗ, ಜಾತಿಕಟ್ಟು ಸಾಮಾನ್ಯವಾಗಿ ಇರುವುದಿಲ್ಲ. ವಚನಕಾರ ಚಂದಿಮರಸ ಎಂಬ ವಚನಕಾರನು ಗುರುವನ್ನು ಕನ್ನಡಿ ರೂಪಕದಲ್ಲಿ ವಿವರಿಸುತ್ತಾನೆ. ಕನ್ನಡಿ ತನ್ನದಾದರೇನು ಅನ್ಯರದಾದರೇನು, ತನ್ನನ್ನು ಅದು ಅರುಹಿಸಿದರೆ ಸಾಕು ಎಂಬ ಅವನ ವಿವರಣೆ, ಪರೋಕ್ಷವಾಗಿ ಗುರುವಿನ ಜಾತ್ಯತೀತ ಸ್ವರೂಪವನ್ನೆ ಹೇಳುತ್ತಿದೆ. ಗುರುಪಂಥಗಳಲ್ಲಿ ಶಿಷ್ಯನನ್ನು ಹುಡುಕುವುದು, ಅವನಿಗೆ ದೀಕ್ಷೆಕೊಟ್ಟು ಹೊಸ ನಾಮಕರಣ ಮಾಡುವುದು, ಪರೀಕ್ಷೆಗೆ ಒಡ್ಡುವುದು ಮತ್ತು ಸಾಧನೆ ಮಾಡಿಸುವುದು ಸಾಮಾನ್ಯ. ಹೆತ್ತವರು  ಗುರುವಿಗೆ ಮಗನನ್ನು ಒಪ್ಪಿಸುವಾಗ ‘ಇಂದಿನಿಂದ ನೀನು ನನ್ನ ಮಗನಲ್ಲ’ ಎಂದು ಸಾಂಕೇತಿಕವಾಗಿ ಸಂಬಂಧ ಕಡಿದುಕೊಳ್ಳುತ್ತಾರೆ. ದೀಕ್ಷೆಕೊಡುವ ಗುರು ‘ಇವತ್ತಿನಿಂದ ನೀನು ನನ್ನ ಸಿಸುಮಗ’ ಎಂದು ಹೊಸ ಪಿತೃತ್ವದ ಸಂಬಂಧ ಸ್ಥಾಪಿಸುತ್ತಾನೆ. ನಾಥರಿಗೆ ‘ಬಾವಾಜಿ’ ಎಂಬ ಹೆಸರು ಕರ್ನಾಟಕದ ತುಂಬ ಕಾಣಬರುತ್ತದೆ. ಬಾವಾಜಿ ಎಂದರೆ ಅಪ್ಪ ಎಂದರ್ಥ. ಮಂಟೆಸ್ವಾಮಿ ಕಾವ್ಯದಲ್ಲಿ ಗುರುವಿಗೆ ‘ಅಪ್ಪಾಜಿ’ ಎಂದೇ ಕರೆಯಲಾಗಿದೆ. ಇಡೀ ಕಾವ್ಯವು ಅಪ್ಪ ಎಂಬ ಆಪ್ತಕರೆಗಳಿಂದ  ತುಂಬಿಹೋಗುತ್ತದೆ. ಗುರುಪಂಥಗಳಲ್ಲಿ ಶಿಷ್ಯ ‘ಸಿಸುಮಗ’ನಾಗುತ್ತಾನೆ. ಇದೊಂದು ತಂದೆಮಕ್ಕಳ ಪರಿಭಾಷೆ.  ಗುರುದೀಕ್ಷೆಯು ಶಿಷ್ಯನಿಗೆ ಒಂದು ಹೊಸಹುಟ್ಟು. ಜಾತಿಮತಗಳ ಚೌಕಟ್ಟಿನಿಂದ ಹೊರಬರುವ ದೀಕ್ಷಾ ಕ್ರಿಯೆಗೆ ಸಾಮಾಜಿಕವಾಗಿ ಮಹತ್ವವಿದೆ. ಗೋರಖನು ಅವಧೂತರ ಲಕ್ಷಣವನ್ನು ಹೇಳುವಾಗ ಅವರು ‘ಅತ್ಯಾಶ್ರಮಿ’ಗಳು ಎನ್ನುತ್ತಾನೆ. ವರ್ಣಧರ್ಮವನ್ನು ಉಲ್ಲಂಘಿಸುವುದೇ ಅವಧೂತನಾಗಲು ಇರುವ ಪ್ರಥಮ ಅರ್ಹತೆ. ಇಂತಹ ಗುರುಶಿಷ್ಯರು ಒಂದು ವಿಶಾಲ ಚೌಕಟ್ಟಿನಲ್ಲಿ ಸೇರಿ, ಗುರುಪಂಥಗಳು ರೂಪುಗೊಳ್ಳುತ್ತವೆ. ಗುರುವಿನ ನವಪಿತೃತ್ವಕ್ಕೆ ಪಂಥಗಳಲ್ಲಿ ತುಂಬ ಅಧಿಕಾರವಿದೆ. ಈಗಲೂ ನಾಥ ಯೋಗಿಗಳು ತಮ್ಮನ್ನು ಗುರುವಿನ ಹೆಸರ ಸಮೇತ ಪರಿಚಯಿಸಿಕೊಳ್ಳುವ ಪದ್ಧತಿಯಿದೆ. ಮೌಖಿಕವಾಗಿ ವಿದ್ಯೆಯು ಗುಪ್ತವಾಗಿ  ವ್ಯಕ್ತಿಯಿಂದ ವ್ಯಕ್ತಿಗೆ ದಾಟುವುದರಿಂದ ಗುರುಪಂಥಗಳಲ್ಲಿ ಪುಸ್ತಕೀ ವಿದ್ಯೆಗೆ ಮಹತ್ವವಿಲ್ಲ. ವೇದಶಾಸ್ತ್ರ ಪುರಾಣಗಳನ್ನು ಅರಸುವ ಯೋಗಿಗಳಿಗೆ ಮುಕ್ತಿ ಸಿಗುವುದಿಲ್ಲ ಎಂದು ಗೋರಖನು ಮತ್ತೆಮತ್ತೆ ಹೇಳುತ್ತಾನೆ. ಇದೇ ಮಾತನ್ನು ನಮ್ಮ ಶರಣರೂ ಆಡುತ್ತಾರಷ್ಟೆ. ಗುರುವೇ ಪರ್ಯಾಯ ದೇವರಾಗುವ ಕಾರಣ, ಗುರುಪಂಥಗಳು ದೇವರ ಬಗ್ಗೆ ಚರ್ಚೆಯನ್ನೇ ಮಾಡುವುದಿಲ್ಲ. ಅವಧೂತರ ಮತ್ತೆರಡು ಗುಣಗಳೆಂದರೆ, ತನ್ನತನದ ಅಂದರೆ ಸ್ವಸ್ವರೂಪದ ಅರಿವನ್ನು ಪಡೆಯುವುದು ಹಾಗೂೊಲೋಕದ ಸಮಸ್ತವನ್ನು ಯಾವುದೇ ತಾರತಮ್ಯ ಇಲ್ಲದೆ ನೋಡುವುದು. ಗುರುಪಂಥಗಳ ಈ ಚಿಂತನೆಯು ಬಹುಶಃ ಭಾರತೀಯ ದರ್ಶನ ಸಮಾಜ ಹಾಗೂ ಧರ್ಮಗಳಲ್ಲಿ ಕ್ರಾಂತಿ ಕಾರಿಯಾದ ಪಲ್ಲಟಗಳನ್ನು  ತಂದಿತು. ಸಾಮಾಜಿಕವಾಗಿ ಕೆಳಸ್ತರದ ಜನತೆಗೆ ಆಧ್ಯಾತ್ಮಿಕ ವಾದ ಪರ್ಯಾಯ ಒದಗಿಸಿತು. ಭಾರತದ ಬಹುತೇಕ ಗುರುಪಂಥಗಳ ಬೆನ್ನಹಿಂದೆ ಗೋರಖ ನಾಥ ಇದ್ದಾನೆ. ಇಂತಹ ಗುರುಪಂಥಗಳ ಭಾಗವಾಗಿರುವ ನಾಥಪಂಥವು ಕರ್ನಾಟಕದಲ್ಲಿ ಸಾಮಾಜಿಕವಾಗಿ ಧಾರ್ಮಿಕವಾಗಿ ಯಾವೆಲ್ಲ ಚಲನಶೀಲತೆ ಕೊಟ್ಟಿತು ಅಥವಾ ಕೊಡಲಿಲ್ಲ ಎಂಬುದನ್ನು ಅರಿಯಬೇಕಿದೆ.

ಜ್ಞಾತಿಸಂಬಂಧದ ಶೋಧ

ನಾಥಪಂಥವು ಸಾಂಖ್ಯ, ಯೋಗ, ರಸೇಶ್ವರ ಮುಂತಾದ ದರ್ಶನಗಳ ಜತೆಯಲ್ಲೂ, ವಜ್ರಯಾನ, ಕಾಪಾಲಿಕ, ಸೂಫಿ, ಕೌಳ, ಶಾಕ್ತ, ದತ್ತ, ವಾರಕರಿ, ಮಹಾನುಭಾವ ಪಂಥಗಳ ಜತೆಯಲ್ಲೂ ಅನುಸಂಧಾನ ಮಾಡಿದೆ. ಈ ಕಾರಣಕ್ಕೆ ಇದು ಭಾರತದ ಸಂಕರಶೀಲ ಪಂಥಗಳಲ್ಲಿ ಒಂದು.  ಭಾರತದ ಅನುಭಾವಿ ಪಂಥಗಳು ಧಾರ್ಮಿಕ, ಪ್ರಾದೇಶಿಕ, ಸಾಮಾಜಿಕ ಹಾಗೂ ಭಾಷಿಕ ಗಡಿಗಳನ್ನು ದಾಟಿಕೊಂಡು, ಯಾವುದೊ ಒಂದು ಸಮಾನ ಸಂಗತಿಗಾಗಿ ಬೆರೆಯುತ್ತಲೇ ಬಂದಿವೆ. ಕರ್ನಾಟಕದ ನಾಥವನ್ನು ಕಾಪಾಲಿಕ, ಸೂಫಿ, ಶರಣ, ಶಾಕ್ತ, ಆರೂಢ, ವಜ್ರಯಾನಗಳ ನೆರವಿಲ್ಲದೆ ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಇವುಗಳ ಒಳಗೆ ಒಂದು ದಾರ್ಶನಿಕ ನೆಂಟಸ್ತಿಕೆಯಿದೆ.  ಬಾಬಾಬುಡನಗಿರಿಯ ವಿವಾದಕ್ಕೆ ಭಾರತದಲ್ಲಿ ಕಳೆದ ಶತಮಾನದ ಕೊನೆಯಿಂದ ತಲೆಯೆತ್ತುತ್ತಿರುವ ಮತೀಯ ರಾಜಕಾರಣದ ಹೂಟ ಇರುವುದರ ಜತೆಗೆ,  ಪಂಥಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ನಮ್ಮ ಜ್ಞಾನ ವ್ಯವಸ್ಥೆಯಲ್ಲಿ ಇರುವ ಕಷ್ಟಗಳು ಕೆಲಮಟ್ಟಿಗೆ ಕಾರಣ ಅನಿಸುತ್ತದೆ. ಬಾಬಾಬುಡನಗಿರಿ ಪ್ರಕರಣದಲ್ಲಿ ಇತಿಹಾಸಕಾರರೂ ಸಾಂಸ್ಕೃತಿಕ ಅಧ್ಯಯನಕಾರರೂ ತೋರಿದ ಪ್ರತಿಕ್ರಿಯೆಗಳು ಪಂಥಗಳ ಬಗ್ಗೆ ನಮ್ಮಲ್ಲಿರುವ ಶೈಕ್ಷಣಿಕ, ತಾತ್ವಿಕ, ಸೈದ್ಧಾಂತಿಕ ಪರಿಮಿತಿಗಳನ್ನು ಹೊರಗೆಡವಿದವು. ಬಾಬಾಬುಡನಗಿರಿಯು ಸೂಫಿಯೂ ನಾಥಪಂಥದಿಂದ ಮೂಡಿದ ದತ್ತಪಂಥವೂ  ಚರಿತ್ರೆಯ ಯಾವುದೊ ಘಟ್ಟದಲ್ಲಿ ಹೇಗೊ ಮಿಲನ ಪಡೆದಿರುವ ಅಪೂರ್ವ ಜಾಗ. ಹಲವಾರು ಪಂಥಗಳು ಬೇರೆಬೇರೆ ಕಾಲಘಟ್ಟಗಳಲ್ಲಿ ಹಾಗೂ ಚಾರಿತ್ರಿಕ ಒತ್ತಡ ಗಳಲ್ಲಿ ಸಂಘರ್ಷ ಮಾಡಿ, ಮಿಲನಗೊಂಡು, ಪದರುಗಳ ರೂಪದಲ್ಲಿ ಒಂದೇ ಕಡೆ ಸೇರಿರುವ ತಾಣಗಳು ಇಡೀ ಭಾರತದಲ್ಲಿ ಇವೆ. ಶುದ್ಧರಕ್ತದ ಕಲ್ಪನೆಯಂತೆ ಶುದ್ಧಧರ್ಮ, ಶುದ್ಧಪಂಥಗಳ ಕಲ್ಪನೆಯು ನಮ್ಮ ಸಮಾಜದಲ್ಲಿ ಯಾವಾಗಲೂ ಅಸಂಗತ. ವಿವಿಧ ಧರ್ಮ ಪಂಥ ದರ್ಶನಗಳು ಏಕೀಭವಿಸಿ ಮೂಡುವ ಮೂಡುವ ಸಂಕರಶೀಲತೆಯೆ ನಮ್ಮ ಸಂಸ್ಕೃತಿಯ ನಿಜಕುರುಹಾಗಿದೆ. ಇದಕ್ಕೆ ಮಂಡ್ಯ ಸೀಮೆಯ ದಾಸಪ್ಪ ಜೋಗಪ್ಪ ಸಂಪ್ರದಾಯವು ಒಳ್ಳೆಯ ನಿದರ್ಶನ. ಮೇಲುಕೋಟೆಯಲ್ಲಿದ್ದ ರಾಮಾನುಜರು ಕಾಪಾಲಿಕರನ್ನು ಕಟುವಾಗಿ ಟೀಕಿಸುತ್ತಾರೆ. ಪುರಾಣಗಳ ಪ್ರಕಾರ, ವಿಷ್ಣು ನರಸಿಂಹನಾಗಿ ಶಿವಭಕ್ತನನ್ನು ಕೊಂದವನು. ಶಿವನು ಜಿಂಕೆರೂಪದಲ್ಲಿದ್ದ ವಿಷ್ಣುವಿನ ಶಿರಹರಿದು ಬಿದ್ದಾಗ, ಅದರಲ್ಲಿದ್ದ ಕೊಂಬನ್ನು ತನ್ನ ಸಿಂಗನಾದಿ ಮಾಡಿಕೊಂಡವನು. ಆದರೆ ಕಾಪಾಲಿಕ ಹಾಗೂ ನಾಥರ ಕೇಂದ್ರವಾಗಿದ್ದ ಇದೇ ಚುಂಚನಗಿರಿ ಜೋಗಪ್ಪನು, ರಾಮಾನುಜ ಸಂಪ್ರದಾಯದ ದಾಸಪ್ಪನ ಜತೆ ಬೆರೆತು ಹೋಗುತ್ತಾನೆ.  ಒಂದೇ ಆಚರಣೆಯಲ್ಲಿ ದಾಸಪ್ಪಜೋಗಪ್ಪ ಇಬ್ಬರೂ ಭಾಗವಹಿಸುತ್ತಾರೆ. ಚುಂಚನಗಿರಿ ಭೈರವನ ಮೇಲೆ ಹಾಡುವ ಗಾಯಕರೇ ನರಸಿಂಹನ ಮೇಲೂ ಹಾಡುತ್ತಾರೆ. ಇದು ಸರಳವಾದ ಸಮನ್ವಯವಲ್ಲ. ಇದರೊಳಗೆ ಸಂಘರ್ಷದ ಸ್ಮೃತಿಗಳೂ ಅಡಗಿವೆ. ಇಂತಹ ಚಾರಿತ್ರಿಕ ಸಂಘರ್ಷದ ಕಂಪನಗಳು ಇನ್ನೂ ನಿಂತಿರದ ಜಾಗವೆಂದರೆ ಕದ್ರಿಬೆಟ್ಟ. ಕದ್ರಿಯ ಮಂಜುನಾಥ ಗುಡಿಯಲ್ಲಿ ವಜ್ರಯಾನದ ಅವಲೋಕಿತೇಶ್ವರ ಹಾಗೂ ಧ್ಯಾನಿಬುದ್ಧರಿದ್ದಾರೆ. ಮಚೇಂದ್ರನಾಥ ಗೋರಖನಾಥ ಚೌರಂಗಿನಾಥರಿದ್ದಾರೆ. ಆಗಮೋಕ್ತ ಪೂಜೆ ಪಡೆಯುತ್ತಿರುವ ಶಿವಲಿಂಗವೂ ಇದೆ. ಕರಾವಳಿಗೆ ವಿಶಿಷ್ಟವಾದ ಭೂತಗಳೂ ಇವೆ. ಎಲ್ಲ ಪದರಗಳೂ ಒಂದೇ ಕಡೆ ಸಾಮರಸ್ಯದಲ್ಲಿವೆ. ಆದರೆ ಅವುಗಳ ಒಳಗಿನ ಸೆಳೆದಾಟಗಳು ನಿಂತಿಲ್ಲ. ಆದ್ದರಿಂದ ಪಂಥಗಳನ್ನು ಅಧ್ಯಯನ ಮಾಡುವುದು ಎಂದರೆ ಕರ್ನಾಟಕ ಸಂಸ್ಕೃತಿಯ ಸಂಕರಶೀಲ ಹಾಗೂ ಸಂಘರ್ಷಶೀಲ ಎರಡೂ ಗುಣಗಳನ್ನು ಅರಿಯುವ ಜವಾಬ್ದಾರಿ; ಧಾರ್ಮಿಕ, ಸಾಹಿತ್ಯಕ, ಸಾಮಾಜಿಕ ಬದುಕಿನ ಮೇಲೆ ಈ ಪಂಥಗಳ ಕೊಡುಕೊಳೆಗಳು ಸೃಷ್ಟಿಸಿರುವ ಹೊಸರೂಪಗಳನ್ನು ಗುರುತಿಸುವ ಕೆಲಸ. ಈ ಬಗೆಯ ಅಧ್ಯಯನಗಳು ನಮ್ಮ ರಾಜಕೀಯ ಉಪಕ್ರಮಗಳಲ್ಲಿ ಹೇಗೆ ಬಳಕೆಯಾಗುತ್ತವೆ ಎನ್ನುವುದು ಮಾತ್ರ ಊಹಾತೀತ.

ಪಂಥಗಳ ದುಷ್ಟೀಕರಣ

ಭಾರತದ ದಾರ್ಶನಿಕ ಚರ್ಚೆಗಳಲ್ಲಿ ಒಂದು ದರ್ಶನವು ಇನ್ನೊಂದರ ಬಗ್ಗೆ ತಾತ್ವಿಕ ಭಿನ್ನಮತ ಸೂಚಿಸುವುದು ಸಾಮಾನ್ಯ. ಈ ಭಿನ್ನಮತಗಳು ಕೆಲವೊಮ್ಮೆ ಯುದ್ಧರೂಪಿಯಾಗಿ ಇರುತ್ತವೆ. ತಾತ್ವಿಕ ಭಿನ್ನಮತವು ತಾನಾಗಿಯೆ ಒಂದು ದೊಡ್ಡ ಸಮಸ್ಯೆಯಲ್ಲ. ಆದರೆ ತಾನು ಒಪ್ಪದ ಯಾವ ವಿಚಾರಧಾರೆಯೂ ಇರಬಾರದು ಎಂಬ ಹಗೆತನದಲ್ಲಿ ಮತ್ತೊಂದನ್ನು  ದುಷ್ಟೀಕರಿಸುವುದು ಸಮಸ್ಯೆ. ಆಧುನಿಕ ರಾಜಕಾರಣದಲ್ಲಿ  ಸೈದ್ಧಾಂತಿಕ ಗುಂಪುಗಳು ಹಗೆಗಳಾಗಿ ಕಾದಾಟ ಮಾಡುವಂತೆ, ಚರಿತ್ರೆಯಲ್ಲಿ ಪಂಥಗಳು ಪರಸ್ಪರ ಸಂಘರ್ಷ ಮಾಡಿವೆ.  ಭಾರತದ ‘ಅವೈದಿಕ’ ಎನ್ನಲಾಗುವ ದಾರ್ಶನಿಕ ಧಾರೆ ಹಾಗೂ ಪಂಥಗಳು ಏಕಕಾಲಕ್ಕೆ ವಿಶಾಲ ಸಮುದಾಯಗಳಿಂದ ಸ್ವೀಕಾರವನ್ನೂ ಸ್ಥಾಪಿತ ವರ್ಗಗಳಿಂದ ವಿರೋಧವನ್ನೂ ಪಡೆದಿದ್ದವು.  ವೈದಿಕ ಪುರಾಣಗಳು ತಮ್ಮ ವಿರೋಧಿಗಳನ್ನು ರಾಕ್ಷಸರಾಗಿ ಚಿತ್ರಿಸುವಂತೆ, ವೈದಿಕ ದಾರ್ಶನಿಕರು ಕೂಡ  ‘ಅವೈದಿಕ’  ಭೌತವಾದಿ ದರ್ಶನ ಹಾಗೂ ಪಂಥಗಳನ್ನು ವಿಕೃತವಾಗಿ ಚಿತ್ರಿಸಿದರು. ಇದನ್ನು ದಾರ್ಶನಿಕ ಅಮಾನುಷೀಕರಣ ಎನ್ನಬಹುದು.  ಇದಕ್ಕಿದ್ದ ಒಂದು ಕಾರಣಗಳಿವೆಂದರೆ, ನಾಥ ಕಾಪಾಲಿಕ ಶಾಕ್ತ ಕೌಳ ಮುಂತಾದ ಯೌಗಿಕ ಹಾಗೂ ತಾಂತ್ರಿಕ ಪಂಥಗಳು ವೇದ ಮತ್ತು ಸ್ಮೃತಿಗಳನ್ನು;   ಹುಟ್ಟಿನ ನೆಲೆಯಿಂದ ಶ್ರೇಷ್ಠ ಕನಿಷ್ಟ ಎಂದು ಜನರನ್ನು ವಿಂಗಡಿಸುವ ವರ್ಣಾಶ್ರಮವನ್ನು; ದೇವರು, ಆತ್ಮ, ಪುನರ್ಜನ್ಮ ನರಕಗಳ ಅಸ್ತಿತ್ವವನ್ನು ತಾತ್ವಿಕ ನೆಲೆಯಲ್ಲಿ ಒಪ್ಪದಿರುವುದು. ಇವುಗಳ ಈ ನಿಲುವು ವ್ಯವಸ್ಥೆಯಲ್ಲಿ ಯಾವ್ಯಾವ ಬಗೆಯ ಗಲಿಬಿಲಿ ಹುಟ್ಟಿಸಿತೊ, ಪರಿಣಾಮವಾಗಿ ಇವುಗಳ  ಅಮಾನುಷೀಕರಣ ಆಯಿತು.  ಕಷ್ಟವೆಂದರೆ, ದರ್ಶನ ಹಾಗೂ ಪಂಥಗಳನ್ನು ರಾಕ್ಷಸೀಕರಿ ಸುವ ಪ್ರಾಚೀನರ ಮನೋಧರ್ಮವು ಕೆಲವು ಆಧುನಿಕ ವಿದ್ವಾಂಸರಲ್ಲೂ ಮುಂದುವರೆದಿದ್ದು. ಆಧುನಿಕ  ತತ್ವಶಾಸ್ತ್ರದ ಬಹುತೇಕ ಚರಿತ್ರಕಾರರು ಭಾರತದ ದೊಡ್ಡ ದಾರ್ಶನಿಕರಲ್ಲಿ ಒಬ್ಬನಾದ ಗೋರಖನನ್ನು ಚರ್ಚಿಸುವುದಿಲ್ಲ. ಮಾಧವಾಚಾರ್ಯನು ತನ್ನ ‘ಸರ್ವದರ್ಶನ ಸಂಗ್ರಹ’ದಲ್ಲಿ ಕಾಪಾಲಿಕ ನಾಥ ಇವನ್ನು ದರ್ಶನಗಳೆಂದೇ ಪರಿಗಣಿಸುವುದಿಲ್ಲ. ಭಾರತದ ಪಂಥಗಳ ಬಗ್ಗೆ ಕೆಲಸ ಮಾಡಿದ ಭಂಡಾರ್ಕರ್ ‘ಅದರ್ ಮೈನರ್ ರಿಲಿಜಿಯಸ್ ಸಿಸ್ಟಮ್ಸ್’ ಎಂಬ ಪದ ಬಳಸುತ್ತಾರೆ. ಕೆಲವನ್ನು ಮುಖ್ಯವೆಂದೂ ಉಳಿದವನ್ನು ‘ಅದರ್’ ಎಂದೂ ಕರೆಯುವುದೇ ಒಂದು ರಾಜಕಾರಣ. ತಮ್ಮ ಕೃತಿಯಲ್ಲಿ ವೈಷ್ಣವ ಪಂಥಗಳ ಮೇಲೆ ವಿಸ್ತಾರವಾಗಿ ಬರೆಯುವ ಭಂಡಾರ್ಕರ್, ಕಾಪಾಲಿಕರ ಮೇಲೆ ತೀರ ಸಂಕ್ಷಿಪ್ತವಾಗಿ ಬರೆಯುತ್ತಾರೆ. ಅದರಲ್ಲೂ ಕಾಪಾಲಿಕ ವಿರೋಧಿಗಳು ಕೊಡುವ ನೇತ್ಯಾತ್ಮಕ ಚಿತ್ರಗಳನ್ನು ಪುನರುಕ್ತಿ ಮಾಡುತ್ತಾರೆ. ಚರ್ಚೆಯ  ಕೊನೆಗೆ ಈ ಪಂಥವು ಎಷ್ಟೊಂದು ಭಯಾನಕ ಹಾಗೂ ರಾಕ್ಷಸೀಯವಾಗಿತ್ತು ಎಂದು ಉದ್ಗಾರ ತೆಗೆಯುತ್ತಾರೆ.[2]

ಕನ್ನಡದ ಮಧ್ಯಕಾಲೀನ ಪಠ್ಯಗಳಲ್ಲಿರುವ  ನಾಥರ ಮೇಲಿನ ಬಹುತೇಕ ಉಲ್ಲೇಖಗಳು  ರಾಕ್ಷಸೀಕರಣದ ಭಾವದಿಂದ ಕೂಡಿವೆ. ಅವರ ಪ್ರಕಾರ ಕಾಪಾಲಿಕರು ಕೌಳರು ನಾಥರು ಅತಿಮಾರ್ಗಿಗಳು. ಭಾರತದಾದ್ಯಂತ ತನ್ನ ದಾರ್ಶನಿಕ ಎತ್ತರಕ್ಕಾಗಿ ಆದರಿಸಲ್ಪಡುವ ಗೋರಖನು, ಕನ್ನಡ ಪಠ್ಯಗಳಲ್ಲಿ ಕರ್ನಾಟಕದ ಸಿದ್ಧರ ಎದುರಾಳಿಯಾಗುತ್ತಾನೆ.  ಪಂಥಗಳ ಮೇಲಿನ ಚಿತ್ರವನ್ನು  ಯಾರು ಮತ್ತು ಯಾಕಾಗಿ  ಕಟ್ಟಿಕೊಡುತ್ತಿದ್ದಾರೆ ಎಂದು ಕೇಳಿಕೊಳ್ಳದೆ, ಅದನ್ನು ವಾಸ್ತವವೆಂದು ಒಪ್ಪಲು ಸಾಧ್ಯವಿಲ್ಲ. ಕನ್ನಡದ ಕೆಲವು ವಿದ್ವಾಂಸರು ನಾಥ ಕೌಳ ಕಾಪಾಲಿಕರ ಬಗ್ಗೆ ಅವರ ವಿರೋಧಿಗಳು ಬರೆದ ವೀರಶೈವ ಜೈನ ಪಠ್ಯಗಳನ್ನೇ ಆಧರಿಸು ತ್ತಾರೆ ಹಾಗೂ ತಮ್ಮ ವಿಶ್ಲೇಷಣೆಯಲ್ಲಿ ಒರಟಾದ, ಹೀನಾಚಾರ, ಬೀಭತ್ಸ, ಅಸಹ್ಯ, ‘ಕ್ಷುದ್ರ ದೇವತೆ, ಮುಂತಾದ ಪದಗಳನ್ನು ಸಲೀಸಾಗಿ ಬಳಸುತ್ತಾರೆ. ಇದು ಆಧುನಿಕ ರಾಜಕಾರಣದಲ್ಲಿ ಸೈದ್ಧಾಂತಿಕ ಎದುರಾಳಿಗಳನ್ನು  ‘ಸಮಾಜಘಾತುಕರು’  ‘ಹಾವಳಿ’ ‘ಉಪಟಳ’ ಎಂಬ ಪರಿಭಾಷೆಯಲ್ಲಿ ವಿವರಿಸುವುದನ್ನು ನೆನಪಿಸುತ್ತದೆ. ಪ್ರಭುತ್ವಗಳು ಮಾಡುವ ರಾಕ್ಷಸೀಕರಣದ ತರ್ಕವು ಅಂತಿಮವಾಗಿ ಒಪ್ಪದವರನ್ನು ನಾಶಮಾಡುವಲ್ಲಿ ಕೊನೆಗೊಳ್ಳುತ್ತದೆ. ಭಾರತದಲ್ಲಿ  ಬಹುತೇಕ ತಾಂತ್ರಿಕ ಪಂಥಗಳನ್ನು ದುಷ್ಟೀಕರಿಸಲಾಗಿದೆ ಮತ್ತು ನಾಶಪಡಿಸಲಾಗಿದೆ. ನಾಥದ ಬಗೆಗಿನ  ನಿರ್ಲಕ್ಷ್ಯ ಮತ್ತು ನೇತ್ಯಾತ್ಮಕ ಬರೆಹಗಳಂತೆ, ಅದನ್ನು ವಿಮರ್ಶೆಯಿಲ್ಲದೆ ನೋಡುವ ಪಂಥಾಭಿಮಾನಿ ಬರಹಗಳೂ ಇವೆ. ದುಷ್ಟೀಕರಿಸುವ ಹಾಗೂ ವೈಭವೀಕರಿಸುವ ಆಕರಗಳಿಂದ ತಪ್ಪಿಸಿಕೊಳ್ಳುವುದು ಒಂದು ಸಮಸ್ಯೆಯಾಗಿದೆ.

ಸಂಸ್ಕೃತೀಕರಣ

ಸಾಮಾಜಿಕ ಶ್ರೇಣೀಕರಣದ ಹಿನ್ನೆಲೆಯಲ್ಲಿ ಹುಟ್ಟುವ ಕೆಲವು ಪಂಥಗಳು, ಸಮಾನತೆಯ ಆಶಯವನ್ನು ಇಟ್ಟುಕೊಂಡಿರುತ್ತವೆ. ನಾಥಪಂಥದ ದಾರ್ಶನಿಕ ಪಠ್ಯಗಳಲ್ಲಿ ವರ್ಣಭೇದವನ್ನು ಕಟುವಾಗಿ ನಿರಾಕರಿಸುವ ಹೇಳಿಕೆಗಳು ಮತ್ತೆ ಮತ್ತೆ ಕಾಣಿಸುವುದು, ಅವು ರೂಪುಗೊಂಡ ಕಾಲಮಾನದ ಒತ್ತಡಗಳನ್ನು ಬಿಂಬಿಸುತ್ತವೆ ಎಂದೇ ಅನಿಸುತ್ತದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಆರೂಢ ಪಂಥಗಳಲ್ಲಿ ಸಮಾಜದ ಬಹುತೇಕ ಕೆಳಜಾತಿಗಳು  ಹಾಗೂ ಕಸುಬುದಾರ ಸಮುದಾಯಗಳು ತಮ್ಮ ಅಸ್ಮಿತೆಯನ್ನು ಕಂಡುಕೊಂಡವು. ಇದಕ್ಕೆ ಈ ಪಂಥಗಳು  ಕೊಟ್ಟ  ಆಧ್ಯಾತ್ಮಿಕ ಹಕ್ಕುದಾರಿಕೆಯು ಒಂದು ಕಾರಣ. ಆದರೆ ಈ ಪಂಥಗಳ ಆಕರ್ಷಣೆಗೆ ಇನ್ನೂ ಸಂಕೀರ್ಣವಾದ ಕಾರಣಗಳಿದ್ದವು. ಅವನ್ನು ಹುಡುಕಿ  ತೆಗೆಯಬೇಕಿದೆ. ವೈರುಧ್ಯವೆಂದರೆ, ತಾತ್ವಿಕವಾಗಿ ಒಂದು ಬಗೆಯ ಸಮದರ್ಶನ ಎನ್ನಬಹುದಾದ ನೆಲೆಯಿಂದ ಶುರುವಾಗುವ ಈ ಪಂಥಗಳು, ಚರಿತ್ರೆಯ ಒತ್ತಡಗಳಲ್ಲಿ ತಮ್ಮ ಈ ಗುಣವನ್ನು ಕಳೆದುಕೊಂಡು ತಾರತಮ್ಯ ವಾದವನ್ನು ಒಳಗೊಂಡಿದ್ದು; ವೈದಿಕೀಕರಣದ ಸೆಳೆತಕ್ಕೆ ಒಳಗಾಗಿದ್ದು. ಅವುಗಳ ಒಳಗೆ ಆಸ್ತಿಕವಾದವೂ ಆತ್ಮವಾದವೂ ನುಸುಳಿದ್ದು; ಪಂಥಗಳ ಈ ಬಗೆಯ  ದಾರ್ಶನಿಕ ಪಲ್ಲಟ ಅಥವಾ ಭ್ರಷ್ಟತೆಯು ಅವುಗಳಲ್ಲಿದ್ದ ಸಮದರ್ಶನವಾದಿ ಚಿಂತನೆ ಮತ್ತು ಆಚರಣೆಗಳನ್ನು  ಸಂಕೇತ  ಮಾತ್ರವಾಗಿ ಉಳಿಸಿದವು. ಸಂಪತ್ತು, ಪ್ರಭುತ್ವ, ಅಧಿಕಾರ, ಸಾಮಾಜಿಕ ಅಂತಸ್ತು, ಲಿಂಗಭೇದ, ದೈಹಿಕ ದುಡಿಮೆ, ಊಳಿಗಮಾನ್ಯ ವ್ಯವಸ್ಥೆ ಕುರಿತ ನಿಲುವುಗಳು ಯಾವುದೇ ದರ್ಶನ ಅಥವಾ ಪಂಥದ ಅಂತಿಮ ಅಗ್ನಿಪರೀಕ್ಷೆ. ನಾಥವನ್ನೂ ಒಳಗೊಂಡಂತೆ ಅನೇಕ ಪಂಥಗಳಲ್ಲಿ ಈ ಬಗೆಯ ಚಾರಿತ್ರಿಕ ಸಂಕೋಚ ಹಾಗೂ ವಿಸ್ತರಣೆಗಳು ಯಾಕಾಗಿ ಸಂಭವಿಸಿದವು, ಇದರ ಪರಿಣಾಮ ಏನಾಯಿತು ಎಂಬುದು ಇನ್ನೂ ಒಗಟಿನಂತೆ ಉಳಿದಿದೆ.

ಸಮುದಾಯ ಸಂಸ್ಕೃತಿಯ ಶೋಧ

ನಾಥ ದರ್ಶನವು ಒಂದು ಬಗೆಯಲ್ಲಿ ಭೌತವಾದಿ ಎನ್ನಬಹುದಾದುದು. ಗೋರಖನು ದೇಹವು ಪವಿತ್ರವೆಂದೂ ಅದರ ಮೂಲಕವೇ ಸಮಸ್ತ ಅರಿವನ್ನು ಸಾಧನೆ ಮಾಡಿ ಪಡೆಯಬೇಕೆಂದೂ ಹೇಳುತ್ತಾನೆ.  ಒಂದರ್ಥದಲ್ಲಿ ನಾಥರ ಯೋಗ ದರ್ಶನವು ದೇಹ ಮತ್ತು ಮನಸ್ಸುಗಳ ಸಮನ್ವಯ ಸಿದ್ಧಾಂತ. ಇದರ ಆಳದಲ್ಲಿ ಬೌದ್ಧರ ಅನಾತ್ಮವಾದವೂ ಶೂನ್ಯವಾದವೂ ಇದೆ. ಇದರ ದರ್ಶನವು ಒಂದು ಪ್ರಬಲ ಲೋಕದೃಷ್ಟಿಯಾಗಿ, ದುಡಿವ ಕೆಳಸ್ತರದ ಜನಸಮುದಾಯದ ಜೀವನದ ಜತೆ ಗಾಢ ಸಂಬಂಧ ಪಡೆದುಕೊಂಡಿತು. ದಾರ್ಶನಿಕ ಚಿಂತನೆಗಳು ಜನರ ಬದುಕಿಗೆ ಅನುವಾದಗೊಂಡು ಇಳಿಯುವಾಗ ಅನೇಕ ಮಾರ್ಪಾಟು ಪಡೆಯುತ್ತವೆ. ಕಾಪಾಲಿಕ ಕೌಳ ನಾಥ ಶಾಕ್ತ ಮೊದಲಾದ ಪಂಥಗಳು ಜಾತಿಕಟ್ಟುಗಳಾಚೆ ದೀಕ್ಷೆ ಕೊಡುತ್ತವೆ. ಶಾಕ್ತರ ಪ್ರಕಾರ, ಶಾಕ್ತ ದೀಕ್ಷೆಯು ಬ್ರಾಹ್ಮಣನನ್ನು ಬ್ರಾಹ್ಮಣಿಕೆಯಿಂದಲೂ ಚಾಂಡಾಲನನ್ನು ಅವನ ಚಾಂಡಾಲತನದಿಂದಲೂ ಏಕಕಾಲಕ್ಕೆ ಬಿಡುಗಡೆ ಮಾಡುತ್ತದೆ. ತಾಂತ್ರಿಕ ಪಂಥಗಳಲ್ಲಿ ಸ್ತ್ರೀಗೆ ಸಾಧನೆ ಮಾಡುವ ಅವಕಾಶಗಳಿದ್ದವು. ಆದರೂ  ಸ್ತ್ರೀಯು ಪುರುಷ ಸಾಧಕರ ಉಪಕರಣವಾಗಿ ಉಳಿದಿರುವ ಸಾಧ್ಯತೆ ಬಹಳ ಇದೆ.  ವಜ್ರಯಾನ,  ಕಾಪಾಲಿಕ ಹಾಗೂ ನಾಥಪಂಥಗಳ ದೈವಗಳಾದ ತಾರಾ ಭಗವತಿ ಹಾಗೂ ಭೈರವನ ಹೆಸರಲ್ಲಿ ಕರ್ನಾಟಕದಲ್ಲಿ ನೂರಾರು ಕೆರೆಕಟ್ಟೆಗಳಿವೆ. ಇವು ಉಳ್ಳವರು ತಮ್ಮಭಕ್ತಿಯ ಸರಲ್ಲಿ ಮಾಡಿದ ದಾನದ ಭಾಗಗಳೊ, ಈ ದೈವಗಳು ರೈತಾಪಿ ಸಂಸ್ಕೃತಿಯ ಜತೆ ಹೊಂದಿದ್ದ ಸಂಬಂಧದ ಭಾಗಗಳೊ ಅಥವಾ ಏಕಕಾಲಕ್ಕೆ ಈ  ಎರಡೂ ಆಯಾಮಗಳು ಅವಕ್ಕಿದ್ದವೊ ಎಂಬ ಪ್ರಶ್ನೆಗಳು ಎದುರಾಗುತ್ತವೆ. ಕರ್ನಾಟಕದ  ನಾಥರ ಆಚರಣೆಗಳು ಕೃಷಿ, ನೇಕಾರಿಕೆ, ಪಶುಪಾಲನೆ ಮುಂತಾದ ದುಡಿಮೆಯ ಲೋಕದ ಜತೆ ಸಂಬಂಧ ಹೊಂದಿರುವುದಂತೂ ನಿಜ. ಯೌಗಿಕ ತಾಂತ್ರಿಕ ರಹಸ್ಯ ನಿಗೂಢ ಎನ್ನಲಾಗುವ ಪಂಥಗಳು, ಸಮುದಾಯ ಬದುಕಿನ  ಅನೇಕ ಸ್ತರದ ಚಟುವಟಿಕೆಗಳಲ್ಲಿ  ಅನೇಕ ವೇಷಗಳಲ್ಲಿ ಅಡಗಿ ದ್ದವು. ಈಗಲೂ ಅಡಗಿವೆ. ಇವನ್ನು ಶೋಧಿಸುವುದಕ್ಕೆ ಕನ್ನಡದಲ್ಲಿ ಸಮೆದ ಮಾರ್ಗಗಳು ಹೆಚ್ಚಾಗಿಲ್ಲ. ಆದರೆ ದರ್ಶನ ಹಾಗೂ ಪಂಥಗಳನ್ನು ಗತಕಾಲದ ಚರಿತ್ರೆ ಯಲ್ಲಿಟ್ಟು ನೋಡುವ ವಿಷಯದಲ್ಲಿ ಮಹಾಮಾರ್ಗಗಳು ಸಾಕಷ್ಟಿವೆ. ಬ್ರಿಗ್ಸ್ ಮಾಡಿದ ನಾಥರ ಅಧ್ಯಯನದಲ್ಲಿ ಇಂತಹ ಮಹಾಮಾರ್ಗಿ ಗುಣವಿದೆಯಾದರೂ, ಬ್ರಿಟಿಶ್ ಆಡಳಿತದ ಭಾಗವಾಗಿದ್ದ ಅವನಿಗೆ ವರ್ತಮಾನದ ಚಲನೆಗಳ ಬಗ್ಗೆ ತೀವ್ರ ಆಸಕ್ತಿಯಿತ್ತು. ಉಳಿದಂತೆ ಧರ್ಮ ದರ್ಶನ ಪಂಥಗಳನ್ನು ಚಾರಿತ್ರಿಕವಾದ ನಿಶ್ಚಲ ಗತದಲ್ಲಿಟ್ಟು ಮಾಡುವ ಮಾದರಿಗಳೆ ವಿಪುಲ. ಲೊರೆಂಜೈನರ ಕಾಪಾಲಿಕರ ಮೇಲಿನ ಕೃತಿಯ ಶೀರ್ಷಿಕೆಗೆ ಲಗತ್ತಾಗಿರುವ ವಿಶೇಷಣ ಗಮನಿಸಿ- ‘ಲಾಸ್ಟ್ ಶೈವೇಟ್ ಸೆಕ್ಟ್ಸ್’ (ಕಳೆದು ಹೋದ ಶೈವ ಪಂಥಗಳು);   ಆದರೆ ಪ್ರಾಚೀನ ಪಂಥಗಳು ಹಾಗೆ ಚರಿತ್ರೆಯಿಂದ  ಸರಳವಾಗಿ ಕಳೆದುಹೋಗುವುದಿಲ್ಲ. ಅವು ಅನಂತ ರೂಪಗಳಲ್ಲಿ ಬದುಕಿರುತ್ತವೆ. ಇದಕ್ಕೆ ಸಾಕ್ಷಿ, ಈಗಲೂ ಕರ್ನಾಟಕದ ಸುಮಾರು ೫೦ ಹಳ್ಳಿಗಳಲ್ಲಿ ಕಾಪಾಲಿಕ ಸಮುದಾಯವು ವಾಸವಾಗಿರುವುದು;  ಕಾಪಾಲಿಕ ಪಂಥದ ಮುಖ್ಯ ಕುರುಹುಗಳಾದ ಸಿದ್ಧಭುಕ್ತಿ ಹಾಗೂ ಭೈರವಾರಾಧನೆಗಳು ಉಳಿದಿರುವುದು. ಸಮುದಾಯಗಳನ್ನು  ಮಾನವಶಾಸ್ತ್ರೀಯವಾಗಿ  ನೋಡುವವರು, ಅವುಗಳ ವರ್ತಮಾನ ಜೀವನದ ಮೇಲ್ನೋಟದ ವಿವರಗಳಲ್ಲಿ ಮುಳುಗಿ, ಅವು  ಪರಂಪರೆಯಲ್ಲಿ ತಳೆದ ಬೇರನ್ನು ತಡಕಲು ಮರೆಯುತ್ತಾರೆ. ಮತಪಂಥಗಳನ್ನು ಚಾರಿತ್ರಿಕವಾಗಿ ಅಧ್ಯಯನ ಮಾಡುವವರು, ಗತಕ್ಕೆ ಗಂಟುಬಿದ್ದು ವರ್ತಮಾನವನ್ನು ಬಿಟ್ಟುಕೊಡುತ್ತಾರೆ.  ಚರಿತ್ರೆ ಮತ್ತು ವರ್ತಮಾನ, ದಾಖಲೆ ಹಾಗೂ ಮನುಷ್ಯರು ಅಲಾಯದವಾಗಿ ನಿಂತುಬಿಡುತ್ತವೆ.  ಪಂಥಗಳ ಅಧ್ಯಯನದಲ್ಲಿ ಎದುರಿಸಬೇಕಾದ ಗಂಡಾಂತರವಿದು.

ಚಳುವಳಿಗಳಿಗೆ ಅರಿವು

ಚರಿತ್ರೆಯ ವಿಭಿನ್ನ ಸನ್ನಿವೇಶಗಳಲ್ಲಿ ನಾಥ ಶಾಕ್ತ ಕಾಪಾಲಿಕ ಸೂಫಿ ಮುಂತಾದ ಪಂಥಗಳು, ದಮನಿತ ಸಮುದಾಯಗಳಿಗೆ ದನಿಕೊಡುವ ಕೆಲಸವನ್ನು ಮಾಡಿದವು ಎಂಬ ಪ್ರಮೇಯವಾದರೂ ಪೂರಾ ನಿಜವಲ್ಲ. ಆದರೆ ಈ ಕೆಲಸವನ್ನು ತಮ್ಮದೇ ಮಿತಿಯಲ್ಲಿ ಮತ್ತು ವಿಧಾನದಲ್ಲಿ ಅವು ಮಾಡಿದವು ಎಂಬುದಕ್ಕೆ ಪುರಾವೆಗಳಿವೆ.. ವರ್ತಮಾನದ ಬದುಕಿನ ಬಗೆಗೆ ಈ ಪಂಥಗಳು ತಾಳುವ ನಿಲುವು, ಅವುಗಳ ಲೋಕದೃಷ್ಟಿಯ ಸ್ವರೂಪವನ್ನು ನಿರ್ಣಯಿಸುತ್ತದೆ. ಕರ್ನಾಟಕದಲ್ಲಿ ನಾಥರು ಕಾಪಾಲಿಕರು ಭೈರವಾರಾಧಕರು ಶಾಕ್ತರು ಕೌಳರು, ಯಾವ್ಯಾವ ಕಾರಣಕ್ಕೆ ಸ್ಥಾಪಿತ ವ್ಯವಸ್ಥೆಯ ಆಗ್ರಹಕ್ಕೆ ಗುರಿಯಾದರೊ ಸ್ಫುಟವಾಗಿ ತಿಳಿಯುತ್ತಿಲ್ಲ. ಆದರೆ ಅವರನ್ನು ಕುರಿತು ಸ್ಥಾಪಿತ ಮತ ಪಂಥ ಹಾಗೂ ದಾರ್ಶನಿಕ ಧಾರೆಯ  ಪಠ್ಯಗಳು ಕಾರುವ  ಆಕ್ರೋಶಗಳು ಮಾತ್ರ ಅಸಾಧಾರಣವಾಗಿವೆ. ಇಷ್ಟೆ. ಸ್ಥಾಪಿತ ಧಾರೆಗಳ ಪ್ರಹಾರಗಳನ್ನು ತಾಳಿಯೂ ಈ ಪಂಥಗಳು ಹಾಗೂ ದರ್ಶನಗಳು ಚರಿತ್ರೆಯಿಂದ ನಿರ್ಗಮಿ ಸಲಿಲ್ಲ. ಅವನ್ನು ನಾಶವಾಗದಂತೆ ಉಳಿಸಿದ ಜೀವಚೈತನ್ಯ  ಯಾವುದು ಎಂಬ ಗುಟ್ಟು  ನಮಗಿನ್ನೂ ಸರಿಯಾಗಿ ದಕ್ಕಿಲ್ಲ. ಬದುಕುಳಿವ ಉಪಾಯಗಳು ಮಾತ್ರವಲ್ಲದೆ  ಸ್ಥಾಪಿತ ವ್ಯವಸ್ಥೆಯನ್ನು ಕಂಗೆಡಿಸುವ ಎಷ್ಟೊ ಯುದ್ಧತಂತ್ರಗಳು ಈ ಪಂಥಗಳಲ್ಲಿ ಇದ್ದವು ಎಂಬುದು ಖಚಿತ. ಶ್ರೀಶೈಲದಲ್ಲಿ ಶಂಕರರಿಗೂ ಉನ್ಮತ್ತ ಭೈರವನಿಗೂ ನಡೆಯು ಮುಖಾಮುಖಿ ಇದಕ್ಕೆ ಸಾಕ್ಷಿ; ಬಸವಣ್ಣ ಕಟ್ಟಿದೊಕಲ್ಯಾಣದ ಪರೀಕ್ಷೆ ಮಾಡಲು ಹೋಗುವಾಗ, ಕೊಳೆತ ಅಂಗಾಂಗಗಳಿಂದ ಕೂಡಿ, ಹೆಂಡದ ಗಡಿಗೆ ಹಿಡಿದು, ಭಂಗಿಸೇವನೆ ಮಾಡುತ್ತ, ಸತ್ತಕರುವನ್ನು ಹೊತ್ತುಕೊಂಡಿರುವ ಮಂಟೆಸ್ವಾಮಿಯ ಚಿತ್ರವೂ ಇದಕ್ಕೆ ಸಾಕ್ಷಿ. ಕರ್ನಾಟಕ ಸಂಸ್ಕೃತಿಯಲ್ಲಿ ಪ್ರತಿಷ್ಠಿತ ವ್ಯವಸ್ಥೆಯನ್ನು ಮುಜುಗರಕ್ಕೀಡು ಮಾಡುವ ಇಂತಹ ಪ್ರತಿಮೆ ಮತ್ತು ಆಚರಣೆಗಳು ಯಾವ್ಯಾವ ಕಾರಣಕ್ಕಾಗಿ ರೂಪುಗೊಂಡವೊ ಇನ್ನೂ ಅರಿಯಬೇಕಿದೆ.

ಬಹುಶಃ ವ್ಯವಸ್ಥೆಗೆತಟ್ಟನೆ ಅರಿವಾಗದ, ಆದರೆ ಅನುಯಾಯಿಗಳಿಗೆ ಮಾತ್ರ ಅರಿವಾಗುವ ಸಾಂಕೇತಿಕ ಭಾಷೆಯನ್ನು ಪಂಥಗಳು ರೂಪಿಸಿಕೊಳ್ಳುತ್ತವೆ. ಈ ಗೂಢ ಭಾಷೆ  ಆತ್ಮರಕ್ಷಣೆಗೆ ಮಾತ್ರವಲ್ಲದೆ, ಅವುಗಳ ತಾತ್ವಿಕ ಅನನ್ಯತೆಯನ್ನು ರಕ್ಷಿಸಿಕೊಳ್ಳಲೂ ನೆರವಾಗುತ್ತದೆ. ಅಧುನಿಕ ಕಾಲದಲ್ಲಿ ಹುಟ್ಟಿರುವ ಚಳುವಳಿ ಹಾಗೂ ಕಲ್ಟುಗಳನ್ನು ಗಮನಿಸಿದರೂ ಈ ಸಂಗತಿ ಸ್ಪಷ್ಟವಾಗುತ್ತದೆ. ಆದರೆ  ಪ್ರಭುತ್ವಗಳು ತಮಗೆ ಅರಿವಾಗದ ಭಾಷೆ ಆಚರಣೆ ಕಾರ್ಯಕ್ರಮ ಇರುವ ಎಲ್ಲ ಪಂಥಗಳನ್ನು ಗುಮಾನಿ ಮತ್ತು ಆತಂಕದಿಂದ ನೋಡುತ್ತವೆ.  ಸಾಧ್ಯವಾದರೆ ಅವನ್ನು ಅಳಿಸಿೊಹಾಕುತ್ತವೆ. ಭಾರತದಲ್ಲಿ ಬ್ರಿಟಿಶರು ಅನೇಕ ಪಂಥೀಯ ಆಚರಣೆಗಳನ್ನು ನಿಷೇಧಿಸಿದರು. ಸಿದ್ಧಾಂತ ನಿಷ್ಠೆಗಾಗಿ ಯಾವ ಹಂತಕ್ಕೂ ಹೋಗಬಲ್ಲ ಗುಣವು,  ರಾಜಕೀಯ ಭೂಗತ ಚಳುವಳಿಗಳಲ್ಲಿ ಇರುವಂತೆ ಕೆಲವು ಪಂಥಗಳಲ್ಲೂ ಇರು ತ್ತದೆ. ಆಧುನಿಕ ಕಾಲದ ಕೆಲವು ಪಂಥಗಳು ಸಾಮಾಜಿಕ ರಾಜಕೀಯ ಆರ್ಥಿಕ ಹತಾಶೆ ಮತ್ತು ಬಿಡುಗಡೆಯ ಕಲ್ಪನೆಯಲ್ಲಿ ಹುಟ್ಟಿಕೊಂಡಂತಹವು. ನಾಥರ ಪಠ್ಯಗಳನ್ನು ನೋಡಿದರೆ, ಅವುಗಳ ದರ್ಶನವು ಯೋಗಸಾಧನೆಯ ವ್ಯಕ್ತಿವಾದಿ ಚಟುವಟಿಕೆಗೆ ಸೀಮಿತ ಅನಿಸುತ್ತದೆ. ನಾಥಪಂಥವನ್ನು ಅದು ರೂಢಿಸಿಕೊಂಡಿರುವ ಆಚರಣ ಲೋಕದ ಮೂಲಕ ನೋಡಿದರೆ, ಅದು ಅನೇಕ ಸಾಮಾಜಿಕ ನಿಯೋಗಗಳನ್ನು ನಿರ್ವಹಿಸಿರುವುದು ಗೊತ್ತಾಗುತ್ತದೆ.

ಪಠ್ಯಗಳ ಹೊಸ ಅನುಸಂಧಾನ

ಪ್ರಾಚೀನ ಕನ್ನಡ ಸಾಹಿತ್ಯದ ಪಠ್ಯಗಳಲ್ಲಿ ವಿಭಿನ್ನ ದರ್ಶನ ಮತ್ತು ಪಂಥಗಳ ಪ್ರತಿನಿಧಿಗಳು ಮುಖಾಮುಖಿಯಾಗುವ ಸನ್ನಿವೇಶಗಳಿವೆ. ಪಂಪನ ‘ಆದಿಪುರಾಣ’ದಲ್ಲಿ ಆದಿನಾಥನ ಆಸ್ಥಾನದಲ್ಲಿ ಐಹಿಕವಾದಿಗಳಾದ ಚಾರ್ವಾಕರೂ ಶೂನ್ಯವಾದಿಗಳಾದ ಬೌದ್ಧರೂ ಆತ್ಮವಾದಿಗಳಾದ ಜೈನರೂ ವಾಗ್ವಾದ ಮಾಡುವ ಪ್ರಕರಣವಿದೆ.  ಬ್ರಹ್ಮಶಿವನ ‘ಸಮಯ ಪರೀಕ್ಷೆ’ಯು ಇಂತಹ ಮುಖಾಮುಖಿಗಳಿಗಾಗಿಯೇ ಹುಟ್ಟಿದ ಕೃತಿ.  ‘ಸಮಯ ಪರೀಕ್ಷೆ’ ಮಾಡಿದ ಈ ಕೆಲಸವನ್ನು ಶೈವರು, ಶರಣರು, ಜೈನರು ತೀವ್ರವಾಗಿ ಮಾಡಿದರು. ಈ ಪರೀಕ್ಷೆಯ  ಕಟಕಟೆಯಲ್ಲಿ ನಿಂತು ವಿಚಾರಣೆಗೆ ಒಳಗಾಗುವ ಪಂಥ ಹಾಗೂ ದರ್ಶನಗಳೆಂದರೆ-ಜೋಗಿ ಅಥವಾ ನಾಥ, ಸನ್ಯಾಸಿ,  ಬೌದ್ಧ, ಚಾರ್ವಾಕ, ಕಾಳಾಮುಖ, ಕಾಪಾಲಿಕ,  ಕೌಳ, ಶಾಕ್ತ ಮುಂತಾದುವು. ಶೈವ ಪಂಥವಾದ ನಾಥವನ್ನು ಜೈನರಿಗಿಂತ ಹೆಚ್ಚು ಕಟುವಾಗಿ ಶರಣರು ಹಾಗೂ ವೀರಶೈವರು ವಿಮರ್ಶಿಸುವುದು ಒಂದು ವಿಶೇಷ. ಈ ದಾರ್ಶನಿಕ ಅಥವಾ ಪಂಥೀಯ ಯುದ್ಧದ ಹಿಂದೆ ಮೂರ್ತವಾದ ಹಲವಾರು ಆರ್ಥಿಕ ರಾಜಕೀಯ ಸಾಮಾಜಿಕ ಕಾರಣಗಳಿವೆ. ಈ ವಾಗ್ವಾದಗಳನ್ನು ‘ಶುಷ್ಕ’ ಅಸಾಹಿತ್ಯಕ ಎಂದು ಭಾವಿಸಿ, ನಮ್ಮ  ಕಾವ್ಯಗಳ ಸಂಗ್ರಹಗಳಿಂದ ತೆಗೆದುಹಾಕಲಾಯಿತು.  ಅಥವಾ ಇವನ್ನು ತೆಗೆದುಹಾಕಲೆಂದೇ ಕಾವ್ಯಸಂಗ್ರಹಗಳ ಪದ್ಧತಿ ಶುರುವಾಯಿತು. ಇದಕ್ಕೆ ಸಾಹಿತ್ಯವನ್ನು ಶಿಕ್ಷಣದಲ್ಲಿ ಪಠ್ಯವಾಗಿಸುವ ಒತ್ತಡವೂ ಒಂದು ಕಾರಣ. ಆದರೆ ಈಗ ಈ ದಾರ್ಶನಿಕ ಮುಖಾಮುಖಿ  ಪ್ರಸಂಗಗಳನ್ನು  ಬೇರೆತರಹದ ಸಾಂಸ್ಕೃತಿಕ ಅನುಸಂಧಾನಕ್ಕೆ ಒಳಗು ಮಾಡಬೇಕಿದೆ. ಭಾರತದ ಪಂಥಗಳು ಅಮೂರ್ತ ತಾತ್ವಿಕ ದರ್ಶನಗಳ ಜತೆ ಮಾತ್ರವಲ್ಲ, ಮೂರ್ತವೂ ಜನೋಪಯೋಗಿಯೂ ಆದ ಜ್ಞಾನ ಮತ್ತು ಕುಶಲತೆಗಳ ಜತೆಗೂ ಸಂಬಂಧ ಇರಿಸಿಕೊಂಡಿದ್ದವು. ಬಹಮನಿಯ ನಿಜಾಂಶಾಹನ ಆಸ್ಥಾನದಲ್ಲಿದ್ದ ಕವಿ ನಿಜಾಮಿಯ ‘ಕದಂ ರಾವ್-ವ-ಪದಂರಾವ್’ ಮಸ್ನವಿಯಲ್ಲಿ, ಅಖ್ಖರನಾಥ ಎಂಬ ಯೋಗಿಯ ಪ್ರಸಂಗವಿದೆ. ಆತ ದೊರೆಯ ಬಳಿ ಬಂದು, ತಾನು ಕಬ್ಬಿಣವನ್ನು ಚಿನ್ನವನ್ನಾಗಿ ಮಾಡುವೆನೆಂದೂ ಸತ್ತ ಹೆಣಕ್ಕೆ ಜೀವಕೊಡುವೆನೆಂದೂ ಆಸ್ಥಾನದಲ್ಲಿ ಸವಾಲು ಹಾಕುತ್ತಾನೆ. ಇವೆರಡೂ ವೈದ್ಯ ಹಾಗೂ ಲೋಹಶಾಸ್ತ್ರಗಳಿಗೆ ಸಂಬಂಧಿಸಿದ ಸಂಗತಿಗಳು. ಈ ಪಂಥಗಳಲ್ಲಿ ಅನೇಕ ವಿದ್ಯೆಗಳಿಗೆ ಸಂಬಂಧಪಟ್ಟ ಪ್ರಾಯೋಗಿಕವಾದ ಜ್ಞಾನವಿತ್ತು. ಯೋಗ ಸಾಧನೆಯು ದೇಹರಚನೆ ಮತ್ತು ನರವಿಜ್ಞಾನಕ್ಕೂ ಲಗತ್ತಾಗಿರುವಂತಹುದು. ಈಗಲೂ ಹಲವಾರು ಪಂಥಗಳ ಒಳಗಿದ್ದ ಪಾರಂಪರಿಕ ಜ್ಞಾನವಿಜ್ಞಾನಗಳ ತಿಳಿವಳಿಕೆಯನ್ನು ತಿಳಿಯಲು ಆಧುನಿಕ ಅಧ್ಯಯನಗಳಿಗೆ ಸಾಧ್ಯವಾಗಿಲ್ಲ. ಆದ್ದರಿಂದ ಪಂಥ ಹಾಗೂ ದರ್ಶನಗಳನ್ನು ಕುರಿತ ಚಾರಿತ್ರಿಕ ನೋಟ ಪಡೆಯುವುದಕ್ಕಾಗಿ, ಸಾಹಿತ್ಯಕ ಪಠ್ಯಗಳನ್ನು ನೋಡುವ ವಿಧಾನವನ್ನು ಮತ್ತಷ್ಟು ಸೂಕ್ಷ್ಮವಾಗಿ ರೂಪಿಸಬೇಕಿದೆ. ಚರಿತ್ರೆಯ ನೋಟವನ್ನು ಪಡೆಯುವಾಗ ಆಯಾ ಪಠ್ಯಗಳ ಭಾಷೆ ಮತ್ತು ರೂಪವನ್ನು ಕುರಿತ ವಿಶ್ಲೇಷಣೆಯೂ ಒಳಗೊಳ್ಳಲು ಸಾಧ್ಯವಾಗಬೇಕಿದೆ.  ಆದರೆ ಪಠ್ಯಗಳು ಕೇವಲ ದಾಖಲೆಗಳಾಗಿ ಬಳಕೆಯಾಗುವ ಸಾಧ್ಯತೆಯು ಇಂತಹ ಅಧ್ಯಯನಗಳಲ್ಲಿ ಒಂದು ಸಾಮಾನ್ಯ ಸಮಸ್ಯೆಯಾಗಿದೆ.

ರೋಚಕತೆಯ ಸಮಸ್ಯೆ

ಪಂಥಗಳ ಅಧ್ಯಯನದಲ್ಲಿ ಇರುವ ತೊಡಕುಗಳಲ್ಲಿ ರೋಚಕತೆಯೂ ಒಂದು.  ಭಾರತೀಯ ಅಧ್ಯಯನಗಳನ್ನು ಮಾಡಿದ ಹೆಚ್ಚಿನ ಪಾಶ್ಚಿಮಾತ್ಯ ವಿದ್ವಾಂಸರು,  ತಮಗೆ ಅರ್ಥವಾಗದ ಆಚರಣ ಲೋಕಗಳನ್ನು ನಿಗೂಢೀಕರಿಸಿಬಿಡುತ್ತಾರೆ. ಕೆಲವು ಪಂಥಗಳನ್ನು ‘ನಿಗೂಢ’ ‘ಅಬ್‌ಸ್ಕೂರ್’ (ರಹಸ್ಯ) ಎಂದೂ ಬಲಿಯ ದೇವತೆಗಳನ್ನು ‘ಕ್ರಿಮಿನಲ್ ಗಾಡ್ಸ್’ ಎಂದೂ ಕರೆಯುತ್ತಾರೆ. ಬ್ರಿಗ್ಸನು ವಾಮಾಚಾರದವರ ಚಕ್ರಪೂಜೆಯನ್ನು ವಿವರಿಸುತ್ತಾ ‘‘ಹಾರಿಬಲ್ ಅಂಡ್ ಅಬ್ಸೀನ್ ರೈಟ್ಸ್ ಹಾವ್ ಬೀನ್ ಪ್ರಾಕ್ಟೀಸಡ್’’ ಎನ್ನುತ್ತಾನೆ;[3] ಈ ಪರಿಭಾಷೆ ಹಾಗೂ ದೃಷ್ಟಿಕೋನವು  ಏಶಿಯಾ ಆಫ್ರಿಕಾ ಖಂಡಗಳ ಬಗ್ಗೆ ಸೆಮಿಟಿಕ್ ಧರ್ಮಗಳು ಕೊಟ್ಟ  ಲೋಕದೃಷ್ಟಿ ಹಾಗೂ ಯೂರೋಪಿಯನ್ ಗ್ರಹಿಕೆಗಳ  ಪರಿಣಾಮ ವಾಗಿದೆ. ಈ ದೃಷ್ಟಿಕೋನಕ್ಕೆ ಅನೇಕ ದೇಶಿಯ ವಿದ್ವಾಂಸರೂ ಬಲಿಯಾದರು. ಅವರೂ ನಮ್ಮ ತಾಂತ್ರಿಕ ಪಂಥಗಳನ್ನು ನಿಗೂಢ ಜಗತ್ತಿನ ವಿದ್ಯಮಾನವೆಂದು ದಾಖಲೆ ಮಾಡ ತೊಡಗಿದರು. ಈ ಪಂಥಗಳ ಆಚರಣೆಗಳನ್ನು ವಿವರಿಸುವಾಗ  ‘ವಿಚಿತ್ರ’ ‘ಅಸಹ್ಯ’  ‘ಭಯಾನಕ’ ‘ಅಮಾನುಷ’ ‘ಅಶ್ಲೀಲ’ ‘ಬೀಭತ್ಸ’ ಮುಂತಾದ ವಿಶೇಷಣಗಳನ್ನು ಸರಾಗವಾಗಿ  ಬಳಸತೊಡಗಿದರು. ಭಾರತದ ಜಾತಿ ಬುಡಕಟ್ಟುಗಳ ಮೇಲೆ ದಾಖಲಾತಿ ಮಾಡುವ ಭಾರತದ ವಿದ್ವಾಂಸರು ಜೋಗಿಗಳ ಬಗ್ಗೆ ಬರೆಯುತ್ತಾ ‘ಅವರಲ್ಲಿ ಲೈಂಗಿಕ ನೈತಿಕೆಯು ಸಾಮಾನ್ಯವಾಗಿ ಸಡಿಲ’  ಎಂದು ವ್ಯಾಖ್ಯಾನಿಸುತ್ತಾರೆ.[4]   ಈ ಪರಿಭಾಷೆ ಮತ್ತು ಹೇಳಿಕೆಗಳ  ಹಿಂದಿನ ಮನೋಧರ್ಮ ಯಾವುದು? ಪಂಥಗಳ ಹಿಂದಿನ ಸಾಂಸ್ಕೃತಿಕ ಜಗತ್ತಿನ ಅರಿವಿಲ್ಲದ್ದೊ ಅಥವಾ ತಾವು ನಾಗರಿಕರು ಎಂದುಕೊಂಡವರ ತಿರಸ್ಕಾರದ್ದೊ? ಯೌಗಿಕ ತಾಂತ್ರಿಕ ಪಂಥಗಳಲ್ಲಿ ಗುಪ್ತತೆಯು ಒಂದು ಸಹಜ ಲಕ್ಷಣ.  ಶಿವನು ಶಿವೆಗೆ ಏಕಾಂತದಲ್ಲಿ ಯೋಗರಹಸ್ಯವನ್ನು ಹೇಳಬೇಕೆಂದು ಜಲಮಧ್ಯಕ್ಕೆ ಕರೆದುಕೊಂಡು ಹೋಗುವ ಮಿತ್ ಹೀಗಾಗಿಯೇ ಹುಟ್ಟಿತು. ‘ಗುಹ್ಯಸಮಾಜ ತಂತ್ರ’ ‘ರಾಜಗುಹ್ಯ’ ಹೀಗೆ ನಾಥಪಂಥದ ಪಠ್ಯ ಗಳ ಹೆಸರಲ್ಲಿ ‘ರಹಸ್ಯ’ ‘ಗುಹ್ಯ’ ಪದಗಳಿವೆ. ಗುರು ಮುಖೇನ ಕಲಿತು ಶಿಷ್ಯ ಮುಖೇನ ವಿದ್ಯೆ ದಾಟಿಸುವ ಯೋಗಪಂಥಗಳಲ್ಲಿ ರಹಸ್ಯದ ಅಂಶವು ಇದ್ದೇಯಿದೆ.  ಇದು ಸೂಫಿಗಳಲ್ಲಿ ‘ರಾಝ್’ ಅನಿಸಿಕೊಳ್ಳುತ್ತದೆ. ಇದಕ್ಕೆ ಬೇಕಾಗಿ ಸಾಂಕೇತಿವಾದ ಚಿತ್ರ, ಮಂಡಲ, ಲಿಪಿ, ಭಾಷೆ ಹುಟ್ಟಿಕೊಂಡವು. ಕೊಡೇಕಲ್ಲಿನ ಅಮರಗನ್ನಡ ಲಿಪಿ, ಶರಣರ ಬೆಡಗು, ನಾಥರ ಉಲಟ ಭಾಂಸಿ-ಇವೆಲ್ಲ ಅಂಥವು. ಅದರಲ್ಲೂ ಮೈಥುನ ಸಾಧನೆ ಇರುವ  ತಂತ್ರಪಂಥಗಳಲ್ಲಿ ಆಚರಣೆಗಳು ಗುಟ್ಟಾಗಿ ಜರುಗುತ್ತವೆ. ಈ ಸಾಂಕೇತಿಕ ಭಾಷೆಯಾಗಲಿ ಗುಪ್ತತೆಯಾಗಲಿ,  ಅವುಗಳ ತಾತ್ವಿಕತೆ ಮತ್ತು ಆಚರಣೆಯ ಆಂತರಿಕ ಅಗತ್ಯಗಳೇ ಹೊರತು ರೋಚಕತೆಯವಲ್ಲ. ಭಾರತೀಯ ತಾಂತ್ರಿಕ ಪಂಥಗಳನ್ನು ಕುರಿತು ಕೆಲವು ಯೂರೋಪಿ ವಿದ್ವಾಂಸರು ರಚಿಸಿರುವ ಪಾಂಡಿತ್ಯಪೂರ್ಣ ಗ್ರಂಥಗಳು,  ಮಾಹಿತಿ ಮತ್ತು ವಿಶ್ಲೇಷಣೆಯ ದೃಷ್ಟಿಯಿಂದ ಮುಖ್ಯ ವಾಗಿವೆ. ಆದರೆ ಸಾಂಸ್ಕೃತಿಕ  ದೃಷ್ಟಿಕೋನದ ಕಾರಣದಿಂದ ಸಮಸ್ಯಾತ್ಮಕವಾಗಿವೆ. ಪಂಥೀಯ ಅಚರಣೆಗಳನ್ನು ತಾವೇ ನಿಗೂಢೀಕರಿಸುವುದು, ನಂತರ ಅವನ್ನು ತಾವೇ ಭೇದಿಸುವ ಸಾಹಸ ಮಾಡಿ ನಾಗರಿಕ ಜಗತ್ತಿಗೆ ಪ್ರಕಟಪಡಿಸುವುದು, ಈ ರೋಚಕತೆ ಮತ್ತು ಸಾಹಸಪ್ರಿಯಗಳ ಒಂದು ಭಾಗ. ಪಂಥಗಳ ಅಧ್ಯಯನಗಳಲ್ಲಿ ಬಳಕೆಯಾಗುವ ‘ಮಧ್ಯಕಾಲೀನ’ ಎಂಬ ಪರಿಭಾಷೆಯಲ್ಲೇ ಒಂದು ರೀತಿಯ ಅಮಾನುಷ ದನಿಯಿದೆ.  ಇದು ಪಶ್ಚಿಮದ ಧಾರ್ಮಿಕ ಚರಿತ್ರೆಯಲ್ಲಿ ಕ್ರೂರದಮನದ ಸ್ಮೃತಿಗಳನ್ನು ಹೊತ್ತುಕೊಂಡಿರುವ ನೇತ್ಯಾತ್ಮಕ ಪರಿಭಾಷೆ. ಒಂದು ಪಂಥವನ್ನು ‘ಮಧ್ಯಕಾಲೀನ’ ಎಂದು ತಿಳಿಯುವುದು, ಅದು ನಮ್ಮ ಕಾಲದ್ದಲ್ಲಿಲ್ಲ ಎಂಬ ದೂರೀಕರಣದ ಭಾವವನ್ನೂ ಉಂಟು ಮಾಡುತ್ತದೆ. ನಮ್ಮ ಆಸುಪಾಸಿನ ಬದುಕಿನಲ್ಲಿ ಅದು ವೇಷ ಬದಲಿಸಿಕೊಂಡು ಇರಬಹುದು ಎಂಬುದನ್ನು ಅಲ್ಲಗಳೆಸುತ್ತದೆ. ಮನಸ್ಸಿನಲ್ಲಿ ಭೀತಿತುಂಬಿದ ಶಿಷ್ಟ ಕುತೂಹಲವನ್ನು ಕೆರಳಿಸುತ್ತದೆ. ಈ ಮನೋಧರ್ಮವು ದೃಶ್ಯಮಾಧ್ಯಮಗಳು  ಬಂದ ಬಳಿಕ ಮತ್ತಷ್ಟು ಜಾಸ್ತಿಯಾಗಿದೆ. ಲುಂಕೇಮಲೆಯ ನಾಥಮಠದ ಮೇಲೆ ಖಾಸಗಿ ಟಿವಿ ಚಾನೆಲ್ಲೊಂದು ಬಿತ್ತರಿಸಿದ ಕ್ರೈಮ್ ಧಾರಾವಾಹಿ ಇದಕ್ಕೆ ನಿದರ್ಶನ. ಆವಾಹಿಸಿಕೊಂಡ ರೋಚಕತೆಯು ಸಾಂಸ್ಕೃತಿಕ ಅಸೂಕ್ಷ್ಮತೆ ಯನ್ನು  ಬೆಳೆಸುತ್ತದೆ. ಪಂಥಗಳನ್ನು ನಿಗೂಢೀಕರಣ ನಿಲುವಿನಿಂದ ಬಿಡಿಸಿಕೊಂಡು ಅಧ್ಯಯನ ಮಾಡುವುದು ಒಂದು ಕಷ್ಟವಾಗಿದೆ.

ವೈರುಧ್ಯಗಳನ್ನು ಒಳಗೊಳ್ಳುವುದು

ನಾಥಪಂಥದ ಕಥನವನ್ನು ಅದರೊಳಗೆ ಜರುಗುತ್ತಿರುವ ಹೊಯ್ದಟ ಬಿಟ್ಟುಕೊಟ್ಟು ಕಟ್ಟಲು ಸಾಧ್ಯವೇ ಇಲ್ಲ. ಅಸ್ತಿತ್ವಕ್ಕಾಗಿ ನಡೆಯುವ ಸಂಘರ್ಷಗಳು ತುಂಬ ಜಟಿಲವಾಗಿರುತ್ತವೆ. ನಾಥಪಂಥಿ ಸಮುದಾಯಗಳಲ್ಲಿ ತರುಣ ತಲೆಮಾರು, ಜೋಗಿ ಕಾಪಾಲಿಕ ಎಂಬ ಹೆಸರಿನ ಜತೆಗಿರುವ ಸಾಮಾಜಿಕ ಮುಜುಗರಗಳಿಂದ ಹೊರಬರಲು ಹವಣಿಸುತ್ತಿದೆ. ಹಿರಿಯ ತಲೆಮಾರು ನಾಥಪಂಥದ ಪರಂಪರೆಯನ್ನು ಮರಳಿ ಪಡೆದುಕೊಂಡು ವರ್ತಮಾನಕ್ಕೆ ಜೋಡಿಸಿಕೊಳ್ಳಲು ಬೇಕಾದ ಸಾಂಸ್ಕೃತಿಕ ಕೊಂಡಿಗಳನ್ನು ಅರಸುತ್ತಿದೆ. ಈ ಇಬ್ಬದಿ ಸೆಳೆತಗಳ ನಡುವೆ ನಿಂತು ಪಕ್ಷಪಾತ ವಹಿಸದೆ ಅಧ್ಯಯನ ಮಾಡುವುದು ಹೇಗೆ? ನಮ್ಮ ಸಾಂಸ್ಕೃತಿಕ ಅಧ್ಯಯನಗಳು ನಿರ್ದಿಷ್ಟ ಸ್ತರದ ಅಭಿಪ್ರಾಯಗಳನ್ನು ಕೇಳಿಸಿಕೊಳ್ಳುವುದಿಲ್ಲ.  ಉದಾ. ಕ್ಷೇತ್ರಕಾರ್ಯದಲ್ಲಿ ಸಾಮಾನ್ಯವಾಗಿ ವಯಸ್ಸಿನಲ್ಲಿ ಹಿರಿಯರಾದವರ, ಗಂಡಸರ ಹಾಗೂ ಆಯಾ ಮತಪಂಥಕ್ಕೆ ಸೇರಿದವರ  ಮೂಲಕ ಮಾಹಿತಿ ಪಡೆಯಲಾಗುತ್ತದೆ. ಇದರ ಹಿಂದೆ ಇರುವ ಗ್ರಹಿಕೆಗಳು ಯಾವುವು? ಹಿರಿಯರಲ್ಲಿರುವ ಅನುಭವ ಮಾಹಿತಿ ಅಧಿಕೃತ;  ಮಾಹಿತಿ ಸಂಗ್ರಹಿಸುವುದೇ ಸಂಶೋಧನೆ; ಆಧುನಿಕ ಶಿಕ್ಷಣ ಹಾಗೂ ಜೀವನಕ್ರಮಕ್ಕೆ ಹೊರತಾಗಿರುವವರ ಅನುಭವ ಮತ್ತು ಚಿಂತನೆ ಹೆಚ್ಚು ಮುಖ್ಯ; ಆಧುನಿಕತೆಗೆ ತೆರೆದುಕೊಂಡ ಹೊಸ ತಲೆಮಾರಿನ ಅನುಭವ ತುಯ್ತಗಳು ಭಿನ್ನಮತಗಳು ಅಷ್ಟು ಮುಖ್ಯವಲ್ಲ;  ಮನೆಗೆಲಸಗಳಲ್ಲೆ ಜೀವನ ಸವೆಸುವ ಹೆಂಗಸರ ಭಾವಾವೇಶದ ತಿಳಿವಳಿಕೆಗಿಂತ ಸಾರ್ವಜನಿಕ ಬದುಕಿನಲ್ಲಿ ಹೆಚ್ಚು ಓಡಾಡುವ ಗಂಡಸರ ನಿರ್ಲಿಪ್ತ ತಿಳಿವಳಿಕೆ ಹೆಚ್ಚು ಸತ್ಯ; ಆಯಾ  ಧರ್ಮ ಅಥವಾ ಪಂಥದ ಅನುಯಾಯಿಗಳಲ್ಲದ ‘ಅನ್ಯರು’ ವ್ಯಕ್ತಮಾಡುವ ಅಭಿಪ್ರಾಯಗಳು ಅಷ್ಟು ಮುಖ್ಯವಲ್ಲ- ಇವೇ ತಾನೇ? ಇವನ್ನು ಕ್ಷೇತ್ರಕಾರ್ಯದ ಪೂರ್ವಗ್ರಹಗಳು ಎಂದು ಕರೆಯಬಹುದು.

ಈ ಪೂರ್ವಗ್ರಹಗಳಿಂದ  ತಲೆಮಾರುಗಳ ನಡುವಣ ಭಿನ್ನಮತಗಳ ಸ್ವರೂಪವೇನು, ಪರಂಪರೆ ಎನ್ನಲಾಗುವ ಸಂಗತಿಗೆ ಹೊರತಾಗಿರುವ ವಿದ್ಯಮಾನಗಳು ಯಾಕೆ ಘಟಿಸುತ್ತಿವೆ, ಯಾವ ಹೊಸ ಚಹರೆಯ ಹುಡುಕಾಟದಲ್ಲಿ ಹೊಸ ತಲೆಮಾರು ತವಕಿಸುತ್ತಿದೆ, ಮಹಿಳೆಯರು ಪುರುಷರಿಗಿಂತ ಬೇರೆಯಾದ ಅನುಭವ ಮತ್ತು ಚಿಂತನೆ ಉಳ್ಳವರಾಗಿದ್ದಾರೆಯೆ, ಆಗಿದ್ದರೆ ಯಾಕೆ,  ಸಾಮಾಜಿಕ ಪ್ರತಿಷ್ಠೆಗಾಗಿ ಸತ್ಯ ಅಡಗಿಸುವ ಸಾಧ್ಯತೆ ಕಡಿಮೆ ಇರುವ ಮಹಿಳೆಯರು ಹೇಳುವ ಸತ್ಯಗಳು ಯಾವುವು, ಹೋದವರಿಗೆ ತಿಳಿವಳಿಕೆ ಕೊಡುವ ಅಧಿಕಾರವನ್ನು ಗಂಡಸರೇ ಯಾಕೆ ಚಲಾಯಿಸುತ್ತಾರೆ, ಹಲವು ವರ್ಗಗಳು ಜಾತಿಗಳು ಧರ್ಮಗಳು ಕೂಡಿ ಬದುಕುವ ಸಮಾಜದಲ್ಲಿ ನಿರ್ದಿಷ್ಟ ಪಂಥ ಅಥವಾ ಸಮುದಾಯದ ಬಗ್ಗೆ  ‘ಹೊರಗಿನವರು’ ಏನು ಹೇಳುತ್ತಾರೆ  ಎನ್ನುವುದು ಕೂಡ ಮುಖ್ಯವಲ್ಲವೆ- ಎಂಬ ಪ್ರಶ್ನೆಗಳು ಇಲ್ಲಿ ಕಾಡು ವುದಿಲ್ಲ. ಹಾಗೆ ಕಾಡದೆ ಹೋದರೆ, ಅಧ್ಯಯನಕ್ಕೆ ಸಮಕಾಲೀನತೆಯ ತುರ್ತು ಹಾಗೂ ಬಹುಮುಖತೆ ದೊರೆಕೊಳ್ಳುವುದಿಲ್ಲ. ಹೀಗೆ ವಯಸ್ಸಿನ, ಲಿಂಗಭೇದದ ಹಾಗೂ ಹೊರಗಿ ನವರು ಒಳಗಿನವರು ಎಂಬ ಪೂರ್ವನಿಶ್ಚಯಗಳ ಒಳಗೆ ವಿಷಯ ತಿಳಿಯುವುದು ಮತ್ತು ವಿಶ್ಲೇಷಣೆಗೆ ಒಳಪಡಿಸುವುದು ಮತ್ತೊಂದು  ಸವಾಲಾಗಿದೆ.

ಚರಿತ್ರೆಯನ್ನು ಗತಕಾಲದ ಸ್ಥಗಿತ ಚಿತ್ರಗಳ ಶೋಧಕ್ಕಾಗಿ ಅಧ್ಯಯನ ಮಾಡುವುದು ಸುಲಭ. ಅದು ವಿಭಿನ್ನ ಕಾಲಘಟ್ಟಗಳಲ್ಲಿ ಹೇಗೆ ಪರಸ್ಪರ ವಿರುದ್ಧ ಸಂಗತಿಗಳನ್ನು ಒಳಗೊಂಡಿತು ಎಂದು ವಿಶ್ಲೇಷಿಸುವುದು ಕಷ್ಟ. ಚರಿತ್ರೆ ಪುನರಾವರ್ತನೆ ಆಗದೆ, ಊಹಾತೀತ  ಪರಿಣಾಮಗಳತ್ತ ಚಲಿಸಿಬಿಟ್ಟಿರುತ್ತದೆ. ನಾಥಪಂಥದಲ್ಲಿ ಕಾಲಕಾಲಕ್ಕೆ ಯಾವ್ಯಾವ ಪರಿವರ್ತನೆಗಳಾದವು, ಯಾಕಾದವು, ಇದರ ಪರಿಣಾಮ ಏನಾಯಿತು ಎಂದು ಶೋಧಿಸುತ್ತ ಹೋದರೆ, ಅದು ವಿರುದ್ಧವಾದ ತಿರುವುಗಳಲ್ಲೂ  ಹರಿದ ನದಿಯೆಂದು ಗೊತ್ತಾಗುತ್ತದೆ.  ನಾಥ ಪಠ್ಯಗಳಲ್ಲಿರುವ ದಾರ್ಶನಿಕ ವಿಚಾರಗಳಿಗೂ ನಂತರ ನಾಥಪಂಥವು ಬೆಳೆದು ಬಂದು ಈಗ ಪಡೆದಿರುವ ರೂಪಕ್ಕೂ ನಡುವೆ ಚೌರಾಸಿ ವೈರುಧ್ಯಗಳು ಏರ್ಪಟ್ಟಿವೆ.  ಗೋರಖನೇನೊ ಅವಧೂತ ಪಂಥದ ಲಕ್ಷಣಗಳನ್ನು ಕ್ರಾಂತಿಕಾರಕ ಎನ್ನುವಂತೆ ವಿಧಿಸುತ್ತಾನೆ. ಅವಧೂತನು ವೇದ ಶಾಸ್ತ್ರ ಸ್ಮೃತಿಗಳ ಕಾಡಲ್ಲಿ ಅಲೆಯಬಾರದು. ಪೂಜೆ ಧ್ಯಾನಗಳಲ್ಲಿ ತೊಡಗಬಾರದು. ವರ್ಣಾಶ್ರಮದಲ್ಲಿ  ನಂಬಿಕೆ ಇಡಬಾರದು ಎಂದು ಹೇಳುತ್ತಾನೆ.  ಆದರೆ ನಾಥಪಂಥವು ಹೋಮ, ಹವನ, ಮೂರ್ತಿಪೂಜೆಗಳನ್ನು ಒಳಗೊಳ್ಳುತ್ತ ಹೋಯಿತು. ಅಷ್ಟೇಕೆ ಒಂದು ನಾಥಪಠ್ಯದಲ್ಲೇ ಸ್ವವಿರೋಧಗಳಿವೆ. ‘ಗೋರಖಸಿದ್ಧಾಂತ ಸಂಗ್ರಹ’ ಈ ವೈರುಧ್ಯಗಳಿಗೆ ಒಳ್ಳೆಯ ನಿದರ್ಶನ. ಗತ ಮತ್ತು ವರ್ತಮಾನ, ಪಠ್ಯಸ್ಥ ದರ್ಶನ ಮತ್ತು ಆಚರಣೆ, ಆದರ್ಶ ಮತ್ತು ವಾಸ್ತವಗಳ ನಡುವಣ ಈ ಕಂದಕಗಳನ್ನು ಅರ್ಥಮಾಡಿಕೊಳ್ಳುವುದು ಕಠಿಣ ಕೆಲಸ.  ಅದರಲ್ಲೂ ಪ್ರಾಯೋಗಿಕ ಸಾಧನೆಯಲ್ಲಿ ಸಿಗುವ ಸ್ವಾನುಭವವನ್ನೆ ಪ್ರಮಾಣ ಎಂದು ಭಾವಿಸುವ ಗುರುಪಂಥಗಳು,  ತಮ್ಮ ನಿರಂತರ ಪ್ರಯೋಗಶೀಲತೆಯಲ್ಲಿ ಹಾಗೂ ವಿಭಿನ್ನ ಚಾರಿತ್ರಿಕ ಒತ್ತಡಗಳಲ್ಲಿ, ತಮ್ಮದೇ ದಾರ್ಶನಿಕ ಪಠ್ಯಗಳಿಗೆ ಅತೀತವಾಗಿ ಚಲಿಸುತ್ತವೆ. ಈ ಮೂಲಕ ಪರ್ಯಾಯ ದಾರ್ಶನಿಕ ರಚನೆಗಳನ್ನು ಸೃಷ್ಟಿಸಿಬಿಡುತ್ತವೆ. ಇಲ್ಲಿ ತತ್ವ ಮತ್ತು ಆಚರಣೆಗಳ ದ್ವಂದ್ವವಲ್ಲದೆ, ಮೌಖಿಕತೆ ಮತ್ತು ಬರೆಹ, ಸ್ವಾನುಭವ ಮತ್ತು ತಿಳಿವಳಿಕೆಗಳ ನಡುವೆ ನಡೆದಿರಬಹುದಾದ ಕರ್ಷಣೆಯನ್ನು ಅರ್ಥ ಮಾಡಿಕೊಳ್ಳುವ ಎಚ್ಚರವನ್ನೂ ತೋರಬೇಕಾಗಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ನಾಥಪಂಥವು ಶತಮಾನಗಳ ತನ್ನ ಬಾಳುವೆಯಲ್ಲಿ ಹಲವಾರು ಅವಸ್ಥೆಗಳನ್ನು ಹಾದು, ಅಸಂಖ್ಯ ಆಕೃತಿಗಳನ್ನು ಹಡೆದಿದೆ. ಇವು ಜೋಗಪ್ಪ ಸಂಪ್ರದಾಯವಾಗಿ, ಅರ್ಜುನ ಜೆೋಗಿಯ ಹಾಡಾಗಿ, ಲುಂಕೆಮಲೆ ಜಾತ್ರೆಯಾಗಿ, ಭೈರವನ ಪ್ರೇಮಕಥನವಾಗಿ, ಸಿದ್ಧಭುಕ್ತಿ ಆಚರಣೆಯಾಗಿ, ಸಿದ್ಧರಮಠಗಳಾಗಿ, ಯಕ್ಷಗಾನ ಬಯಲಾಟಗಳಾಗಿ, ಉತ್ತರ ಭಾರತದ ನಾಥರ ಜತೆ ಸ್ಥಳೀಯ ಸಮುದಾಯಗಳ ಸಂಘರ್ಷವಾಗಿ ಇವೆ. ನಾಥರಲ್ಲಿ ಆಧುನೀಕರಣ ಹಾಗೂ ಪುನರುಜ್ಜೀವನ ಯತ್ನಗಳು ನಡೆದಿವೆ. ಪಂಥವು ಬ್ರಾಹ್ಮಣೀಕರಣವನ್ನೂ  ಮತೀಕರಣವನ್ನೂ ಪಡೆಯುತ್ತಿದೆ. ಅದನ್ನು ಜಾತ್ಯತೀತ ಚೌಕಟ್ಟಿನಲ್ಲಿ ಇರಿಸುವ ಮರುಯತ್ನವೂ ನಡೆದಿದೆ. ಹೀಗೆ ಈ ಲೋಕದೊಳಗೆ  ಜರುಗುತ್ತಿರುವ ಪಲ್ಲಟಗಳು ಬಹುಮುಖಿಯಾಗಿವೆ. ಸಂಕೀರ್ಣವಾಗಿವೆ. ಇವನ್ನು ಪ್ರಗತಿ ಅಥವಾ ಪತನದ, ವಿಷಾದ ಅಥವಾ ಉತ್ಸಾಹಗಳ ಪರಿಭಾಷೆ ಬಳಸದೆ ವಿಶ್ಲೇಷಿಸುವುದು ಹೇಗೆ ಎನ್ನುವ ಪ್ರಶ್ನೆಯಿದೆ. ಆಧುನಿಕ ಕಾಲದ ಒತ್ತಡಗಳಲ್ಲಿ, ಸಮಾಜ ಧರ್ಮ ರಾಜಕಾರಣ ಆರ್ಥಿಕ ವ್ಯವಸ್ಥೆಗಳಲ್ಲಿ ಆಗುತ್ತಿರುವ ಪರಿವರ್ತನೆಗಳ ವಿಶಾಲ ಭಿತ್ತಿಯಲ್ಲಿ, ಪ್ರಾಚೀನ ಕಾಲದಿಂದ ಬಂದಿರುವ ಪಂಥಗಳನ್ನಿಟ್ಟು ಅಧ್ಯಯನ ಮಾಡುವುದಕ್ಕಾಗಿ, ಹೊಸತೇ ಆದ ತಾತ್ವಿಕ ಚೌಕಟ್ಟನ್ನು ಕಂಡುಕೊಳ್ಳಬೇಕಿದೆ.

ಈತನಕ ಹೇಳಿಕೊಂಡ ಈ ಸವಾಲು ಹಾಗೂ ಸಮಸ್ಯೆಗಳನ್ನು, ಪ್ರಸ್ತುತ ಅಧ್ಯಯನದಲ್ಲೇನೂ ದಾಟಿಲ್ಲ. ಆದರೆ ಇವುಗಳ ಖಬರು ಲೇಖಕನಿಗಿದೆ. ತಿರುಗಾಟ, ಮಾತುಕತೆ, ಓದು, ಅರಿವುಳ್ಳವರ ಜತೆಗಿನ ಚರ್ಚೆ-ಈ ನಾಲ್ಕು ಮೂಲದಿಂದ ಪಡೆದ ಅನುಭವ, ಮಾಹಿತಿ, ಜ್ಞಾನ ಇಟ್ಟುಕೊಂಡು, ವಿಶ್ಲೇಷಣೆ ಚಿಂತನೆ ಬೆರೆಸಿ ಒಂದು ಕಥನವನ್ನು ಇಲ್ಲಿ ಕಟ್ಟಲಾಗಿದೆ. ಇದನ್ನು ತಾಂತ್ರಿಕವಾಗಿ ಬಹುಶಿಸ್ತೀಯ ಅಧ್ಯಯನ ಎಂದು ಕರೆಯಬಹುದು. ಆದರೆ ಇಂತಹ ಶೈಕ್ಷಣಿಕ ಶಿಸ್ತನ್ನು ಅಧ್ಯಯನದ ಕ್ಷೇತ್ರವೇ ಅನಿವಾರ್ಯ ಮಾಡಿದೆ ಕೂಡ. ನನ್ನ ಮಟ್ಟಿಗೆ ಈ ಅಧ್ಯಯನವು ನಮ್ಮ ಸಮಾಜದ ಚಲನಶೀಲತೆಯನ್ನು ನೋಡುವ ಅರಿಯುವ ಚಿಂತಿಸುವ ಒಂದು ಅಪೂರ್ವ ಅವಕಾಶ ಮಾತ್ರ.

* * *[1]       ಕಡವ ಶಂಭುಶರ್ಮ, ಕಪಟರಾಳ್ ಕೃಷ್ಣರಾವ್, ಶಂಬಾ ಜೋಶಿ, ಎಂ. ಚಿದಾನಂದಮೂರ್ತಿ, ಎಂ. ಎಂ. ಕಲಬುರ್ಗಿ ಹಾಗೂ ಮ.ಸು.ಕೃಷ್ಣಮೂರ್ತಿ ಅವರ ಕೆಲಸವನ್ನು ಇಲ್ಲಿ ನೆನೆಯಬೇಕು.

[2]       Vishnavism, Shivism and other Minor Religious Systems, Pp.183

[3]       Gorakhnath and the Kanphata Yogis, Pp.172

[4]       Nanjundayya, Cast and Tribes of Mysore, Pp.494