ವಿರುದ್ಧ ಸೆಳೆತಗಳು

ಕರ್ನಾಟಕದ ನಾಥಪಂಥಿ ಸಮುದಾಯಗಳು ಹಲವಾರು ಪಂಗಡ, ವೃತ್ತಿ, ಭಾಷೆ, ಪ್ರದೇಶ ಮತ್ತು ವರ್ಗಗಳಲ್ಲಿ ಚೆದುರಿಕೊಂಡಿವೆ. ಸರ್ಕಾರಿ ನೌಕರರು,  ಕೃಷಿಕರು,  ನೇಕಾರು, ಗುಡಿಗಳಲ್ಲಿ ವಾದ್ಯ ನುಡಿಸುವವರು,  ಕಿನ್ನರಿಯವರಾಗಿ ಭಿಕ್ಷಾಟನೆ ಮಾಡುತ್ತಿರುವವರು, ಬಹುಸಂಖ್ಯೆಯಲ್ಲಿ ಕೂಲಿಯವರು, ಕೆಲಮಟ್ಟಿನ ಮಧ್ಯಮವರ್ಗ, ಬೆರಳೆಣಿಕೆಯ ಸಿರಿವಂತರು,  ಕಿನ್ನರಿಜೋಗಿ, ಡಬ್ಬಾಜೋಗಿ, ಮಣಿಗಾರ ಜೋಗಿ, ಕಾಪಾಲಿಕ ರಾವುಳ ಮುಂತಾದ ಒಳಪಂಗಡದವರು, ಕರಾವಳಿಯವರು, ಬಯಲು ಸೀಮೆಯವರು, ಉತ್ತರ ಕರ್ನಾಟಕದವರು, ಹೀಗೆ ಇದೊಂದು ಬಹುರೂಪೀ ಜಗತ್ತು. ಇವರೆಲ್ಲರನ್ನು ಗೋರಖನಾಥ ಅಥವಾ ನಾಥಪಂಥ ಎಂಬ ಒಂದು ಕೇಂದ್ರವು ಸಡಿಲವಾಗಿ ಜೋಡಿಸಿದೆ. ಆದರೆ ಪ್ರತಿ ವರ್ಗ ಮತ್ತು ಪಂಗಡದ ಕಷ್ಟಸುಖಗಳೂ ಹಂಬಲ ಕಾತರಗಳೂ ಸಹಜವಾಗಿ ಬೇರೆಬೇರೆ ಆಗಿವೆ. ನಾಥ ಸಮುದಾಯದಲ್ಲಿ ಮುಖ್ಯವಾಗಿ ೪ ದೃಷ್ಟಿಕೋನಗಳು ಕ್ರಿಯಾಶೀಲವಾಗಿವೆ ಎನ್ನಬಹುದು.

೧.  ತಮ್ಮ ಧಾರ್ಮಿಕ ಪರಂಪರೆ ಚಹರೆ ಯಾವುದು ಎಂಬ ಬಗ್ಗೆ ಬಹಳ ತಲೆಕೆಡಿಸಿಕೊಳ್ಳದೆ, ಬದುಕಲು ನಿಷ್ಠುರವಾದ ಹೋರಾಟದಲ್ಲಿ ತೊಡಗಿರುವವರು. ಇವರಿಗೆ  ಪಂಥದ ಪರಂಪರೆ ಕಳೆದುಹೋಗಿದೆ ಎಂಬ ದುಗುಡವಾಗಲಿ, ಅದನ್ನು ಮರಳಿ ಪಡೆಯುವ ಸಂಭ್ರಮವಾಗಲಿ ತುರ್ತಿನ ಸಂಗತಿಯಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಅಲ್ಪಸಂಖ್ಯಾತರಾಗಿ ಇರುವ ಇವರು,  ಬಹುಸಂಖ್ಯಾತವೂ ಭೂಮಾಲಿಕವೂ ಆದ ಬಲಿಷ್ಠ ಜಾತಿಯವರ ಎದುರು ತಗ್ಗಿಬಗ್ಗಿ ಇರುವವರು. ಪಾರಂಪರಿಕ ಭೂಹಿಡುವಳಿಯಲ್ಲದ ಇವರು ಸಣ್ಣರೈತರು.  ಜೋಗೇರಹಳ್ಳಿಯಲ್ಲಿ ಬಹುತೇಕ ಕಾಪಾಲಿಕರು ತಮ್ಮ ಭೂಮಿಯನ್ನೆಲ್ಲ ಪಕ್ಕದ ದೊಡ್ಡರೈತರಿಗೆ ಮಾರಿ ಕಳೆದುಕೊಂಡು, ಅವರ ಹೊಲಗಳಲ್ಲಿ ಕೂಲಿಕಾರರಾಗಿ ಕೆಲಸ ಮಾಡುತ್ತಿರುವುದು ಕಂಡುಬಂದಿತು. ಇದ್ದುದರಲ್ಲಿ ಮಂಗಳೂರು ಸೀಮೆಯ ಜೋಗಿಗಳೇ ವಾಸಿ. ಉಳಿದಂತೆ ಬನಹಟ್ಟಿ ರಬಕವಿಗಳಲ್ಲಿ ಕಂಡ ಹಣಿಗಿಯವರು, ವದ್ದಿಕೆರೆ ಜೋಗೇರಹಳ್ಳಿ ಚುಂಚನಹಳ್ಳಿ ಹೇಮಾವತಿಗಳ ಕಾಪಾಲಿಕರು, ಬಸರೂರಿನ ಬಳೆಗಾರ ಜೋಗಿಗಳು ತೀರಾ ಬಡವರು. ಬಿಷ್ಣುಹಳ್ಳಿಯವರನ್ನು ಹೊರತುಪಡಿಸಿದರೆ, ಹೆಚ್ಚಿನ ಕಿನ್ನರಿಯವರು ಬಡತನದ ರೇಖೆಗೆ ಕೆಳಗಿರುವವರು. ಬಲಿಷ್ಠ ಸಮುದಾಯದ ಜೀವನ ಪದ್ಧತಿಯನ್ನು ತಮ್ಮದನ್ನಾಗಿ ಮಾಡಿಕೊಂಡು ವಾಸಿಸುವ ಇವರಿಗೆ, ನಾಥಪಂಥದ ಪುನರುಜ್ಜೀನವದ ಚಳುವಳಿಯಲ್ಲಿ ಅಷ್ಟಾಗಿ ಆಸಕ್ತಿಯಿಲ್ಲ. ಆದರೆ ಜೋಗಿ ಸಂಘಟನೆಯಲ್ಲಿ ತಮ್ಮಮಕ್ಕಳಿಗೆ ಏನಾದರೂ ಲಾಭವಾಗುವುದಾದರೆ ಆಗಲಿ ಎಂಬ ಸಣ್ಣ ಆಸೆ ಮಾತ್ರ ಇದೆ.

೨. ಜೋಗಿ ಹೆಸರಿಗೆ ಅಂಟಿದ ಭಿಕ್ಷೆ ಬೇಡುವವರು ಎಂಬ ರೂಢಿಯನ್ನು ಸುಲಭಕ್ಕೆ ನಿವಾರಿಸುವುದು ಸಾಧ್ಯವಿಲ್ಲ. ಅದರ ಬದಲಿಗೆ ದಲಿತರು ಹೊಲೆಮಾದಿಗ ಎಂಬ ಕೀಳುಗೊಂಡ ಸಂಕೇತವನ್ನೇ ಇಟ್ಟುಕೊಂಡು, ಸಮಾಜದಲ್ಲಿ ತಮ್ಮ ಸಾಮಾಜಿಕ ಎಚ್ಚರವನ್ನು ಪಡೆದು ಹಕ್ಕುದಾರಿಕೆ ಮಂಡಿಸಿದಂತೆ,  ಜೋಗಿಯ ಗುರುತಿನ ಮೂಲಕವೇ ಸಂಘಟಿತವಾಗಿ, ಪ್ರಭುತ್ವಗಳ ಜತೆ ಚೌಕಾಸಿ ಮಾಡಬೇಕು; ಆರ್ಥಿಕ ರಾಜಕೀಯ ಸಾಮಾಜಿಕ ಮುನ್ನಡೆ ಸಾಧಿಸಬೇಕು – ಎಂದು ಚಿಂತಿಸುತ್ತಿರುವ ಸಮಾಜ ಸುಧಾರಣೆ ಹಾಗೂ ರಾಜಕೀಯ ಪ್ರಜ್ಞೆಯ ಜನರು ಇಲ್ಲಿದ್ದಾರೆ. ಶಿಕ್ಷಣಕ್ಕೆ ತೆರೆದುಕೊಂಡ ಕಾಪಾಲಿಕ- ಜೋಗಿ ತರುಣರು, ‘ನಾವು ಮೈನಾರಿಟೀಸ್’ ಎಂಬ ನುಡಿಗಟ್ಟನ್ನು ತಮ್ಮ ಮಾತಲ್ಲಿ ಬಳಸುತ್ತಿದ್ದರು. ಇದು ಅವರ ರಾಜಕೀಯ ಪ್ರಜ್ಞೆಯ ಹಾಗೂ ಸಂಘಟನೆಯ ಅಗತ್ಯ ಎಂದು ಭಾವಿಸಿದ್ದರ ದ್ಯೋತಕವಾಗಿತ್ತು. ಒಮ್ಮೆ ಕದ್ರಿಯ ಜೋಗಿ ಸಮಾಜದ ಮುಖಂಡರಲ್ಲಿ ಒಬ್ಬರು, ರಾಜಕೀಯ ನಿರ್ದಿಷ್ಟ ಪಕ್ಷದವರ ಬಳಿ ನಿಯೋಗ ಹೋಗಿ, ತಮ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯವಿಲ್ಲ, ಕೊಡಿ ಎಂದು ಕೇಳಿದಾಗ, ನಿಮ್ಮ ಜನಸಂಖ್ಯೆ ಎಷ್ಟು ಎಂದು ಆ ಮುಖಂಡರು ತಾತ್ಸಾರದಿಂದ ಪ್ರಶ್ನಿಸಿದರಂತೆ. ಈ  ಪ್ರಸಂಗವನ್ನು ಜೋಗಿ ಸಮಾಜ ಸುಧಾರಕ ಸಂಘದ ಸಭೆಯಲ್ಲಿ ಅವರು ನೋವಿನಿಂದ  ಹೇಳಿಕೊಂಡರು. ನಮ್ಮಲ್ಲಿ ಜಾರಿಯಲ್ಲಿರುವ ಪ್ರಜಾಪ್ರಭುತ್ವಕ್ಕೂ ಜಾತಿಗಳ ಸಂಖ್ಯಾಬಲಕ್ಕೂ ಇರುವ ಈ ಸಂಬಂಧವು ಒಂದು ಕಠೋರ ರಾಜಕೀಯ ವಾಸ್ತವ.  ಪ್ರಜ್ಞಾವಂತ ಜೋಗಿಗಳು ಸಂಘಟನೆಯ ದೃಷ್ಟಿಯಿಂದಲೂ ತಮ್ಮ ಆಧುನಿಕ ಮನಸ್ಸಿನ ಕಾರಣದಿಂದಲೂ ಒಳಪಂಗಡಗಳ ನಡುವಣ ಕೊಡುಕೊಳೆಯನ್ನು ಬಯಸುವವವರು. ಹೀಗಾಗಿ ಅವರಿಗೆ ಧಾರ್ಮಿಕ ಗುರುತುಗಳನ್ನು ಉಳಿಸಿಕೊಳ್ಳುವುದು ಎರಡನೆಯ ಆದ್ಯತೆಯ ವಿಷಯ.

೩. ಪಂಥದ ಸಾಂಸ್ಕೃತಿಕ ಅಸ್ಮಿತೆ ಹಾಗೂ ಜೋಗಿ ಸಮಾಜದ ಸಂಘಟನೆಯ ಮುಖೇನ ಆಧುನಿಕ ಶಿಕ್ಷಣ ಹಾಗೂ ಪ್ರಗತಿ ಎರಡನ್ನೂ ಒಟ್ಟಿಗೆ ಪಡೆಯಲು ಸಾಧ್ಯವೇ ಎಂದು ಚಿಂತಿಸುತ್ತಿರುವ ಸಮತೋಲನವಾದಿಗಳು. ಇವರ ಸಂಖ್ಯೆ ತುಂಬ ಕಡಿಮೆಯಿದೆ. ಆದರೆ ಇದೊಂದು ಬಗೆಯಲ್ಲಿ ಆಮೆಯಂತೆ. ಓಟ ತೀವ್ರವಾಗಿಲ್ಲ. ಆದರೆ ಗೆಲ್ಲುವ ಸಾಧ್ಯತೆ ಹೆಚ್ಚಿರುವ ಆಲೋಚನಕ್ರಮವಿದು.

೪. ನಾಥಪಂಥದ ಚಾರಿತ್ರಿಕ ಹಿರಿಮೆಯ ಅಂಶಗಳನ್ನು ಮಾತ್ರ ಉಳಿಸಿಕೊಂಡು ಅದರ ಮುಜುಗರ ತರುವ ಪದ್ಧತಿಗಳನ್ನು ತೆಗೆದು ಶುದ್ದೀಕರಿಸಿ, ನಾವೂ ಗುರುವರ್ಗದ ಜನಾಂಗ ಎಂದು ಸಮಾಜಕ್ಕೆ ಸಾಬೀತು ಪಡಿಸಬೇಕು ಎಂಬ ಪರಿಷ್ಕರಣವಾದಿಗಳು. ಇವರ ಸಂಖ್ಯೆ ಬಹಳ ಕಡಿಮೆಯಿದೆ. ಹೇಮಾವತಿ ಸಿದ್ಧಪ್ಪನವರು ಇಂತಹವರು. ತಮ್ಮವರು ಧಾರ್ಮಿಕ ನೆಲೆಯಲ್ಲಿ ಸಂಘಟಿತರಾಗಬೇಕು,  ಪರಂಪರೆಯ ತಿಳಿವಳಿಕೆ ಪಡೆಯಬೇಕು ಮತ್ತು ಆಧುನಿಕ ಶಿಕ್ಷಣ ಪಡೆದು ಅಭಿವೃದ್ದಿ ಹೊಂದಬೇಕು ಎಂದು ತವಕಿಸುವ ಇವರು, ಹಿಂದುಳಿದ ವರ್ಗಗಳ ರಾಜಕೀಯ  ಪರಿಭಾಷೆಯನ್ನೆ ಬಳಸುತ್ತಾರೆ. ಆದರೆ ತಮ್ಮವರು ಎಂಬ ಇವರ ಕಲ್ಪನೆಯಲ್ಲಿ ಕೇವಲ ರಾವುಳರು ಹಾಗೂ ಕಾಪಾಲಿಕರು ಮಾತ್ರ ಇದ್ದಾರೆ. ಕರಾವಳಿಯ ಜೋಗಿಗಳೂ ಕಿನ್ನರಿ ಜೋಗಿಗಳೂ ಇಲ್ಲ. ಕಿನ್ನರಿ ಜೋಗಿಯವರನ್ನು ಕುರಿತಂತೆ ಸಿದ್ದಪ್ಪನವರಲ್ಲಿ ಅಸ್ಪೃಶ್ಯ ಮನೋಭಾವವು ಎದ್ದು ಕಾಣುತ್ತದೆ. ಶುದ್ದೀಕರಣವಾದಿ ಮನೋಧರ್ಮವು ಯಾವಾಗಲೂ ಧರ್ಮದಲ್ಲಿ ಕಸಸೇರಿದೆ ಎಂದು ಆತಂಕ ಹುಟ್ಟಿಸಿ ಕೊಳ್ಳುತ್ತದೆ.  ನಂತರ ಅದನ್ನು ತೆಗೆದುಹಾಕಬೇಕು ಎಂದು ತೀವ್ರಗಾಮಿಯಾಗಿ ಕಾರ್ಯಾಚರಣೆ ಮಾಡುತ್ತದೆ.  ನಮ್ಮ ಪ್ರಾಚೀನ ಧರ್ಮ ಸಂಸ್ಕೃತಿ ಪರಂಪರೆಗಳನ್ನು ರಕ್ಷಣೆ ಮಾಡಿಕೊಂಡು, ನಮ್ಮನ್ನು ನಾವು ಉದ್ಧರಿಸಿಕೊಳ್ಳಬೇಕು ಎಂದು ಅಪೇಕ್ಷಿಸುವ  ಸಿದ್ದಪ್ಪನವರ ಪರಿಭಾಷೆ ಸಾಂಪ್ರದಾಯಕವಾದುದು. ತಮ್ಮ ಸಂಸ್ಕೃತಿ ರಕ್ಷಣೆಗಾಗಿ ಬಂಗಾಲಿಗಳು ಧಾರ್ಮಿಕ ಯುದ್ಧ ಮಾಡಿದರು ಎಂದು ಹೇಳುತ್ತ,  ಬಂಕಿಮಚಂದ್ರರ ‘ಆನಂದಮಠ’  ಕಾದಂಬರಿಯನ್ನು ಅವರು ಉಲ್ಲೇಖಿಸುತ್ತಾರೆ. ಅವರ ಪ್ರಕಾರ ನಾಥ ಪಂಥಿ ಜನರ ಹಿಂದುಳಿವಿಕೆಗೆ ಕಾರಣ ಬಡತನವಲ್ಲ. ಅವರು ಕೂಳಿಗೆ ಬಡವರಾದರೂ ಕುಲಕ್ಕೆ ಬಡವರಲ್ಲ. ಆದರೆ ಅವರಿಗೆ ತಾವೆಷ್ಟು ಶ್ರೇಷ್ಠ ಸಂಸ್ಕೃತಿಗೆ ಉತ್ತರಾಧಿಕಾರಿಗಳು ಎಂಬ ಅರಿವಿಲ್ಲದಿರುವುದು ದೊಡ್ಡ ಸಮಸ್ಯೆ. ಸಂಸ್ಕೃತಿಯ ಅರಿವಿದ್ದರೆ ಛಲವಿರುತ್ತದೆ. ಇದರಿಂದ ಬಡತನ ನೀಗಲು ಸಾಧ್ಯ ಎಂದು ಅವರು ನಂಬುತ್ತಾರೆ.

[1] ಅವರ ಪ್ರಕಾರ, ಬಡತನ ನೀಗಬಲ್ಲ ಮೀಸಲಾತಿ ಸಿಗುತ್ತದೆ ಎಂದು ಜೋಗಿ ಹೆಸರಿನ ಸಂಘಟನೆಗೆ ಹೋಗುವುದು ನೀರು ಸಿಗುತ್ತದೆ ಎಂದು ಕೆಸರಿಗೆ ಹೋದಂತೆ.

ಕಾಪಾಲಿಕರಾದ ನಮ್ಮ ಶ್ರೇಷ್ಠತೆಯ ರಕ್ಷಣೆ ಮತ್ತು ಸಾಮಾಜಿಕ ಗೌರವಗಳು, ಆರ್ಥಿಕ ಸೌಲಭ್ಯ ಹಾಗೂ ಸಾಮಾಜಿಕ ಪ್ರಗತಿಗಿಂತ ಮುಖ್ಯ ಎಂಬ ಈ ಹಾದಿಯಲ್ಲಿ, ಬಹಳ ಜನರು ಪಯಣಿಗರಾದಂತೆ ಕಾಣಲಿಲ್ಲ. ಅದರಲ್ಲೂ ಮೀಸಲಾತಿ ಮೂಲಕ ಶಿಕ್ಷಣ ಹಾಗೂ ನೌಕರಿ ಪಡೆದು ನಗರ ಜೀವನದತ್ತ ಚಲಿಸುವುದಕ್ಕೆ ಬಯಸುವವರ ತಲೆಗೆ ಈ ವಾದ ಹೋಗಲಿಲ್ಲ. ಸಿದ್ದಪ್ಪನವರ ಸ್ವಂತ ಊರಾದ ಹೇಮಾವತಿಯಲ್ಲಿ ಕೂಡ ಅವರ ವಾದ ಪ್ರಭಾವ ಬೀರಿದಂತೆ ಕಾಣಲಿಲ್ಲ. ಈ ಅಂಶವು ಮೂರ್ಕಣ್ಣಪ್ಪ (೮೦) ಅವರ ಜತೆ ಮಾತಾಡುವಾಗ (೨೦೦೩)  ಘ್ಛಿ‘:್ಜ‘. ಮೂರ್ಕಣ್ಣಪ್ಪ ಅವರ ಒಬ್ಬ ಮಗ ಸೈನ್ಯದಲ್ಲಿದ್ದಾನೆ. ಮೊಮ್ಮಗ ಎಸ್‌ಎಸ್ ಎಲ್‌ಸಿ ಪಾಸಾಗಿ ಐಟಿಐ ಸೇರಲು ತಯಾರಿ ಮಾಡುತ್ತಿದ್ದಾನೆ. ಸಿದ್ಧಪ್ಪನವರು   ನಾಥಪಂಥಿ ಎಂದೇ ಬರೆಸಬೇಕು, ನಾಥಪಂಥಿ ಹೆಸರನ್ನು ಮಕ್ಕಳಿಗೆ ಇಡಬೇಕು ಎಂದು ತಾಕೀತು ಮಾಡಿದ ಬಳಿಕ, ಹೇಮಾವತಿಯ ಜನ ಅದರಂತೆ ಮಾಡಿದರು. ಆದರೆ ನಾಥಪಂಥಿ ಹೆಸರಿನಲ್ಲಿ  ತಹಸಿಲ್ದಾರ ಕಛೇರಿಯವರು ಪ್ರಮಾಣ ಪತ್ರ ಕೊಡುತ್ತಿಲ್ಲ. ಐಟಿಐ ಓದುವ ಹುಡುಗನಿಗೆ ಸರ್ಟಿಫಿಕೇಟು ಅನಿವಾರ್ಯವಾಗಿ ಬೇಕಾಗಿದೆ. ಆಗ ನಾವು ನಾಥಪಂಥಿಯಲ್ಲ, ಜೋಗಿಗಳು ಎಂದು ಮತ್ತೆ ಬರೆಸಬೇಕಾಯಿತು. ‘ನಮ್ಮ ಜನ ಒಬ್ಬೊಬ್ಬರು ಒಂದೊಂದು ಜಾತಿ ಬರೆಸಿ ಈ ತೊಂದರೆ ಬಂತು. ಎಲ್ಲರೂ ಜೋಗಿ ಬರೆಸಿದ್ದರೆ ಕಷ್ಟ ಇರ್ತಿರಲಿಲ್ಲ’ ಎಂದು ಮೂರ್ಕಣ್ಣಪ್ಪ  ನುಡಿದರು.

ಆಧುನಿಕ ಶಿಕ್ಷಣಕ್ಕೂ ಸರಕಾರಿ ಉದ್ಯೋಗಗಳಿಗೂ ಅಷ್ಟಾಗಿ ತೆರೆದುಕೊಂಡಿರದ ಹಳ್ಳಿಗಾಡಿನ ಜನರಿಗೆ, ಸಾಮಾಜಿಕ ಪ್ರತಿಷ್ಠೆಗಿಂತ ಮುಖ್ಯವಾದುದು ಸಾಮಾಜಿಕ ಚಲನೆ. ಅದರಲ್ಲೂ ಕಿನ್ನರಿಯವರಿಗೆ  ಜೋಗಿ ಸಂಘಟನೆಗಳ ಬಗ್ಗೆ ಆಶಾವಾದವಿದೆ. ಸಂಘಟನೆ ಮಾಡುತ್ತಿರುವ ಮಧೂರಕರ್  ನಮ್ಮವರು  ಎಂಬ ಅಭಿಮಾನವೂ ಇದೆ. ಜೋಗಿ ಬದಲಿಗೆ ಹಂಡಿಜೋಗಿ ಎಂದು ಬರೆಯಿಸಿದರೆ, ಇನ್ನೂ ಒಳ್ಳೆಯದು ಎಂದು ಅವರು ಭಾವಿಸಿದ್ದಾರೆ. ಜೋಗಿ ಸಮುದಾಯಗಳನ್ನು ‘ಅಲೆಮಾರಿ’ ‘ಅರೆ ಅಲೆಮಾರಿ’ ಪಂಗಡ ಎಂದು ಸರಕಾರದ ದಾಖಲೆಗಳು ಕರೆದಿವೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲೆಂದು ನೇಮಕವಾದ ಹಾವನೂರ ವರದಿ ‘ಹಿಂದುಳಿದವರ್ಗ’ ಎಂದು ಪರಿಗಣಿಸಿ ಪ್ರವರ್ಗ ೧ ಕ್ಕೆ ಸೇರಿಸಿದೆ. ಇದರಿಂದ ಜೋಗಿಗಳು ಹಲವಾರು ಹಿಂದುಳಿದ ವರ್ಗಗಳ ಜತೆ ಸ್ಪರ್ಧಿಸಬೇಕಾಗಿದೆ. ತಾವು ಜೋಗಿಗಳೆಂದೂ ತಮ್ಮನ್ನು ಪರಿಶಿಷ್ಟವರ್ಗದಲ್ಲಿ (ಬಿಟಿ) ಸೇರಿಸಬೇಕೆಂದೂ ಅವರು ಮನವಿ ಸಲ್ಲಿಸುತ್ತ ಬಂದಿದ್ದಾರೆ. ಅದಿನ್ನೂ ಈಡೇರಿಲ್ಲ.

ಹೀಗೆ ತಾವು ಅಲ್ಪಸಂಖ್ಯಾತರು ಎಂಬ ಭಾವನೆ, ತಾವು ದೀಕ್ಷೆಕೊಡುವ ಅಧಿಕಾರವುಳ್ಳ ಗುರುವರ್ಗದವರು ಎಂಬ ಹೆಮ್ಮೆ, ಈಗ ಹೀಗಾದೆವು ಎಂಬ ನೋವು, ನಮಗೆ ನಮ್ಮ ಪರಂಪರೆಯ ಅರಿವಿಲ್ಲ ಎಂಬ ಕೊರಗು, ಅದನ್ನು ಪಡೆಯಬೇಕು ಎಂಬ ಚಲ, ಅದು ಅಷ್ಟು ಮುಖ್ಯವಲ್ಲ ಎಂಬ ನಿರ್ಲಿಪ್ತತೆ – ಹೀಗೆ ಹಲವಾರು ವಿರುದ್ಧ ಸೆಳೆತಗಳಲ್ಲಿ ನಾಥಪಂಥಿ ಜನವರ್ಗಗಳ ಸಾಮಾಜಿಕ ಮನಃಸ್ಥಿತಿ ಸಂಕೀರ್ಣವಾಗಿದೆ. ಎಂತಲೇ ಅವುಗಳ ಹರಿದಾಟಗಳೂ ಬಹುಮುಖಿಯಾಗಿವೆ. ಈ ಬಹುಮುಖತೆಯು ಭಾರತದ ಎಲ್ಲ ಜಾತಿ ಧಾರ್ಮಿಕ ಸಮುದಾಯಗಳಲ್ಲೂ ಇದೆ. ಆದರೆ ಒಗ್ಗೂಡಿದರೆ ಮಾತ್ರ ಹೊಸಬಾಳು ಎಂಬ ಪರಿಸ್ಥಿತಿ ಯಲ್ಲಿ ಈ ಧಾರ್ಮಿಕ ಸಾಮಾಜಿಕ ವೈವಿಧ್ಯವು ಸಮಸ್ಯೆಯನ್ನು ಉಂಟುಮಾಡಿದೆ.

ನಾಥರ ಜತೆ ಭಿನ್ನಮತ

ನಾಥಪಂಥಿ ಸಮುದಾಯಗಳ ಮುಂದೆ, ಬೇರೆ ಜಾತಿ ಸಮುದಾಯಗಳಿಗೆ ಹೋಲಿಸಿದರೆ, ಬಹಳ ಸಂಕೀರ್ಣವಾದ ಸವಾಲುಗಳಿವೆ. ಬೇರೆ ಬಲಿಷ್ಠ ಮತ್ತು ಸಣ್ಣಪುಟ್ಟ ಜಾತಿಗಳು  ತಮಗೊಬ್ಬ ಧಾರ್ಮಿಕ ಗುರುವನ್ನು ಆಯ್ಕೆ ಮಾಡಿಕೊಂಡು, ಅದರಡಿ ಸಮಾಜದ ಸಂಘಟನೆ ಮಾಡಿ, ಈ ಸಂಘಟನೆಯ ಬಲವನ್ನು ಕೆಲವು ರಾಜಕೀಯ ನಾಯಕತ್ವಕ್ಕೆ ಎರೆದು, ತಮ್ಮ ರಾಜಕೀಯ ಪಾಲನ್ನು ಪಡೆಯುವ ಪ್ರಕ್ರಿಯೆ, ೨೦ನೇ ಶತಮಾನದಲ್ಲಿ ಯಶಸ್ವಿಯಾಗಿ ಬಳಕೆಯಾಗಿರುವ ಪ್ರಗತಿಯ ಮಾದರಿಯಾಗಿದೆ.  ಧರ್ಮ ಅಥವಾ ಜಾತಿ, ಅದರ  ಗುರು, ಸಮುದಾಯ ಹಾಗೂ ರಾಜಕೀಯ ನಾಯಕತ್ವಗಳ  ನಡುವೆ ಪರಿಪೂರ್ಣ ಅಲ್ಲವಾದರೂ, ಒಂದು ಬಗೆಯ ತಾರ್ಕಿಕ ಸಂಬಂಧ ಇರುತ್ತದೆ. ಆದರೆ ನಾಥಪಂಥಿ ಸಮುದಾಯಗಳಿಗೆ,  ಅದರಲ್ಲೂ ಕದ್ರಿಯ ಜೋಗಿಗಳಿಗೆ ತಮ್ಮ ಗುರುವಿನ ವಿರುದ್ಧ ತಾವೇ ಧರ್ಮಯುದ್ಧ ಮಾಡಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ರಾಜಕೀಯ ಪ್ರಜ್ಞೆಯನ್ನೂ ಸಾಮಾಜಿಕ ಜಾಗೃತಿಯನ್ನೂ ಆಧುನಿಕ ಶಿಕ್ಷಣವನ್ನೂ ಬೇರೆಯವರಿಗೆ ಹೋಲಿಸಿದರೆ, ಹೆಚ್ಚು ಪಡೆದಿರುವ ಕರಾವಳಿಯ ಜೋಗಿಗಳು, ಆಧುನಿಕ ಆಲೋಚನೆ ಹಾಗೂ ಶಿಕ್ಷಣ ಇಲ್ಲದ ಸಾಂಪ್ರದಾಯಕ ಹಿನ್ನೆಲೆಯ ಜೋಗಿಮಠದ ನಾಥರ ಮುಂದೆ ಎದುರು ಬದುರಾಗಿರುವ ಚಿತ್ರವಿದೆ. ಅವರ ಈ ಸಂಘರ್ಷಕ್ಕೆ ಮುಖ್ಯವಾಗಿ ೩ ಕಾರಣಗಳಿವೆ.  ಅವೆಂದರೆ, ಸ್ಥಳೀಯ ಜನರ ಜತೆ ಬೆರೆಯದ ಉತ್ತರ ಭಾರತದ ನಾಥರ ವರ್ತನೆ, ಅವರ ಹಣಕಾಸಿನ ಅವ್ಯವಹಾರ ಹಾಗೂ ಕೆಲಮಟ್ಟಿಗೆ ಅವರ ಲೈಂಗಿಕ ಸಂಬಂಧಗಳು.

ಕದ್ರಿ ಸೀಮೆಯ ಜೋಗಿ ಸಮುದಾಯವು, ಮಠ ತಮ್ಮ ಆಶೋತ್ತರಗಳಿಗೆ ಸ್ಪಂದಿಸುವ ಧಾರ್ಮಿಕ ಸಾಮಾಜಿಕ ವೇದಿಕೆಯಾಗಬೇಕು ಎಂದು ಅಪೇಕ್ಷಿಸುತ್ತಿದೆ. ಆದರೆ ತಕ್ಕಂತೆ ಮಿಡಿಯುವುದು  ಬಾರಾಪಂಥಕ್ಕಾಗಲಿ, ಅದರಿಂದ ನೇಮಕವಾಗಿ ಬರುವ  ನಾಥರಿಗಾಗಲೀ ಸಾಧ್ಯವಾಗುತ್ತಿಲ್ಲ. ಮಠದ ಸಂಪತ್ತಿನ ಮೇಲಿನ ಅಧಿಕಾರ, ತಾವು ಸನ್ಯಾಸಿಗಳು ಇವರು ಗೃಹಸ್ಥರು ಎಂಬ ತಾರತಮ್ಯ ನಿಲುವು,  ಶಿಷ್ಯರಾದ ಜೋಗಿಗಳು ತಮಗೆ ನಿಷ್ಠರಾಗಿ ಇರಬೇಕು ಎಂಬ ಅಪೇಕ್ಷೆ, ನಾಥರಲ್ಲಿ ಅಧಿಕಾರಸ್ಥ ಧೋರಣೆ ಬೆಳೆಸಿವೆ.  ೧೨ ವರುಷದ ಅವಧಿಗೆಂದು ಬರುವ ಈ ನಾಥರು ಸ್ಥಳೀಯ ಜನರಿಗೆ ಹೊಣೆಗಾರರಾಗುವುದು ಕಷ್ಟ ಸಾಧ್ಯವೂ ಹೌದು. ಹೆಚ್ಚಿನ ನಾಥರು ಸ್ಥಳೀಯ ಭಾಷೆ ಕಲಿಯುವುದಿಲ್ಲವಾಗಿ, ಸ್ಥಳೀಯ ಪರಿಸರದಲ್ಲಿ ಅವರ ಬೆರೆಯುವಿಕೆಯೂ ಕಡಿಮೆ ಆಗುತ್ತದೆ.  ಕದ್ರಿಯ  ಜೋಗಿ ಸಮಾಜ ಸುಧಾರಕ ಸಂಘಕ್ಕೆ ಕದ್ರಿಮಠದ ನಾಥರು ಗೌರವಾಧ್ಯಕ್ಷರು. ಆದರೆ ಅದರಲ್ಲಿ ಅವರಿಗೆ ಆಸಕ್ತಿಯಿಲ್ಲ.  ಈ ಜೋಗಿಗಳು ತಮ್ಮ ತರಲೆಗಳನ್ನು ನಮ್ಮ ತಲೆಗೇಕೆ ಕಟ್ಟುತ್ತಿದ್ದಾರೆ ಎಂದು ಅವರು ಅಸಹನೆ ತೋರಿದರು. ಅದರಲ್ಲೂ ಚುಂಚನಗಿರಿ ಮಠವನ್ನು  ಒಕ್ಕಲಿಗರು ಪಡೆದುಕೊಂಡ ಬಳಿಕ, ಬಾರಾಪಂಥವು ಸ್ಥಳೀಯರು ಮಠದ ವಿಷಯದಲ್ಲಿ ಹಸ್ತಕ್ಷೇಪ ಮಾಡದಂತೆ ಎಚ್ಚರವಹಿಸುತ್ತ ಬಂದಿದೆ. ಹಿಂದಿನ ಅಧಿಪತಿಯಾಗಿದ್ದ ಚಮೇಲಿನಾಥರು, ಜೋಗಿ ಸಮುದಾಯದ ವ್ಯಾಜ್ಯಗಳನ್ನು  ಕದ್ರಿಮಠಕ್ಕೆ ತಂದು ನಾಥನ ಮುಂದಿಟ್ಟು ಪರಿಹರಿಸಿಕೊಳ್ಳುವ ಪದ್ಧತಿಯನ್ನು ನಿಲ್ಲಿಸಿದರು. ಮಾತ್ರವಲ್ಲದೆ, ‘ಜೋಗಿ ಜನರು ಕದ್ರಿಮಠವನ್ನು ಚುಂಚನಗಿರಿ ಮಾದರಿಯಲ್ಲಿ ವಶಪಡಿಸಿಕೊಳ್ಳುವ ಸಾಧ್ಯತೆಯಿದೆ. ಇದನ್ನು ಬಾರಾಪಂಥದ ಮಠವನ್ನಾಗಿಯೇ ಇರಿಸಿಕೊಳ್ಳಬೇಕಾದರೆ, ಜೋಗಿಗಳನ್ನು ಮಠದ ವ್ಯವಹಾರದಲ್ಲಿ ಆದಷ್ಟು ದೂರವಿಡಬೇಕು ಎಂದು ಅವರು ಹರಿದ್ವಾರಕ್ಕೆ ವರದಿ ಕಳಿಸಿದ್ದರಂತೆ. ನಂತರ ಬಂದ ಸೋಮನಾಥರು, ಜೋಗಿ ಶಬ್ದದ ಇರುವಿಕೆಯು ಸ್ಥಳೀಯರ ಹಕ್ಕುಸಾಧನೆಗೆ ಒಂದು ನೆಪವಾಗಬಾರದು ಎಂದು ಭಾವಿಸಿ, ಕದ್ರಿಜೋಗಿಮಠ ಎಂಬ ಬೋರ್ಡನ್ನು ತೆಗೆಸಿ ‘ಶ್ರೀಕದಲಿ ಸುವರ್ಣ ಕದಲಿಮಠ್’  ಎಂದು ಬರೆಸಿದರು.

ನಾಥರು ಮಠವನ್ನು ಹರಿದ್ವಾರ ಕೇಂದ್ರದ ಸ್ಥಳೀಯ ಶಾಖೆಯಾಗಿ ಉಳಿಸಿಕೊಳ್ಳಲು ಯತ್ನಿಸಿದರೆ, ಜೋಗಿಗಳು ಅದನ್ನು ಸ್ಥಳೀಯರ ಕಷ್ಟಸುಖಗಳ ವೇದಿಕೆಯಾಗಬೇಕು ಎಂದು ಯತ್ನಿಸಿದರು. ಇದು ನಾಥಪಂಥದ ಅಖಿಲ ಭಾರತೀಯತೆ ಹಾಗೂ ಅನುಯಾಯಿಗಳ ಪ್ರಾದೇಶೀಕತೆಗಳ ನಡುವಣ ಸಂಘರ್ಷ ಕೂಡ ಆಗಿದೆ. ಚುಂಚನಗಿರಿ ಮಠವು ಬಾರಾ ಪಂಥದಿಂದ ಪಡೆದ ಸ್ವಾತಂತ್ರ್ಯ ಅವರೆದುರು ಒಂದು ಸ್ವಪ್ನವಾಗಿ ಕಾಡುತ್ತಿದೆ. ಹೊಸಕಾಲದ ಬೇಡಿಕೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಅಸಮರ್ಥವಾಗಿರುವ ಸಾಂಪ್ರದಾಯಕ ಕದ್ರಿಮಠವನ್ನು, ಆಧುನಿಕ ಕಾಲದ ಚಟುವಟಿಕೆಗಳ ಕೇಂದ್ರವನ್ನಾಗಿ ಪರಿವರ್ತಿಸಲು ಜೋಗಿಗಳು ತಮ್ಮ ಪ್ರಯತ್ನವನ್ನು ಬಿಡಲಿಲ್ಲ. ಒಮ್ಮೆ ಅವರು ಕದ್ರಿಮಠವನ್ನು ‘ಮಂಗಳೂರಿನ ಪ್ರೇಕ್ಷಣೀಯ ಕೇಂದ್ರಬಿಂದು’ ಮಾಡಲುಯತ್ನಿಸಿದರು. ಇದಕ್ಕೆ ನೆರೆಯ ಧರ್ಮಸ್ಥಳ ಮಾದರಿಯೂ ಪ್ರೇರಣೆ ಕೊಟ್ಟಿರಬಹುದು. ‘ಶ್ರೀಕ್ಷೇತ್ರ ಕದಲಿ ಮಂಗಳೂರಿನ ಪ್ರೇಕ್ಷಣೀಯ ಪುರಾತನ ಕೇಂದ್ರಬಿಂದು ಆಗಬಹುದೇ?’ ಎಂಬ ಹೆಸರಿನಲ್ಲಿ ಜೋಗಿ ಆನಂದನಾಥರು ಒಂದು  ಕರಪತ್ರ ಹೊರಡಿಸಿದರು.  ಅದರಲ್ಲಿ ನಾಥಮಠದ ಪ್ರಾಚೀನ ವಾಸ್ತುಶಿಲ್ಪದ ಶಿಲಾಮಯ ಕಟ್ಟಡ ಕಟ್ಟುವ, ಅದರಲ್ಲಿ ಶಾಸನಗಳನ್ನು ಕಾಪಾಡುವ, ವೇದಪಾಠಶಾಲೆ ನಿರ್ಮಾಣ ಮಾಡುವ, ಪ್ರಾಣಿಪಕ್ಷಿಧಾಮ ನಿರ್ಮಿಸುವ, ಗಿಡಮೂಲಿಕೆ ಬೆಳೆಸುವ, ಯೋಗಕೇಂದ್ರ ಹಾಗೂ ಪುಸ್ತಕ ಭಂಡಾರ ತೆಗೆಯುವ ಉದ್ದೇಶಗಳನ್ನು ವ್ಯಕ್ತಪಡಿಸಲಾಗಿತ್ತು. ಪ್ರಾಚೀನತೆಯನ್ನೂ ಉಳಿಸಿಕೊಂಡೇ ಆಧುನಿಕ ಪ್ರವಾಸಿ ತಾಣವನ್ನಾಗಿ ಮಾಡುವ ಈ ಯೋಜನೆಯಲ್ಲಿ, ಕರಾವಳಿಯ ವ್ಯವಹಾರ ಕುಶಲತೆಯು ಕೆಲಸ ಮಾಡಿರುವುದು ಸ್ಪಷ್ಟವಾಗಿತ್ತು. ಆದರೆ  ಮೋಹನನಾಥರು ಇದನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಅವರು ಏಕಪಕ್ಷೀಯವಾಗಿ ಹಳೆಯ ನಾಥಮಠವನ್ನು ಕೆಡವಿ ಹೊಸ ಕಟ್ಟಡದ ಕಾಮಗಾರಿ ಮಾಡಿಸಿದರು. ಆಗ ಜೋಗಿ ಆನಂದನಾಥರು ಜಿಲ್ಲಾಧಿಕಾರಿಗಳಿಗೆ ಒಂದು ಮನವಿ ಕೊಟ್ಟರು.  ‘ಸಾವಿರಾರು ವರ್ಷಗಳ ಪೌರಾಣಿಕ ಹಿನ್ನೆಲೆಯ ಕದ್ರಿಕ್ಷೇತ್ರವು ತನ್ನ ಪುರಾತತ್ವದ ಶೈಲಿಯ ಕಟ್ಟಡಗಳನ್ನು ಕಳೆದುಕೊಂಡು ಆಧುನಿಕ ಶೈಲಿಯ ದಾಸ್ತಾನು ಕಟ್ಟಡದ ಶೈಲಿಯಲ್ಲಿ ಪರಿವರ್ತನೆಯಾಗುತ್ತಿದೆ. ಪೀಠಕ್ಕೆ ಬಂದಿರುವ ನಾಥರು ಇಲ್ಲಿಯ ಪರಂಪರೆ ತಿಳಿದುಕೊಳ್ಳದೆ  ಸ್ವೇಚ್ಛೆಯಾಗಿ  ಕಾಮಗಾರಿ ಮಾಡಿಸುತ್ತಿದ್ದಾರೆ. ಮಠದ ಆದಾಯವನ್ನು ಇಲ್ಲಿನ ಅಭಿವೃದ್ದಿಗೆ ಬಳಸದೆ, ಉತ್ತರ ಭಾರತದಲ್ಲಿರುವ ತಮ್ಮ ಮೂಲಮಠಗಳಿಗೆ ಸಾಗಿಸುತ್ತಿದ್ದಾರೆ.  ಈ ಪೌರಾಣಿಕ ಕ್ಷೇತ್ರದ ಪರಂಪರೆಗೆ ಧಕ್ಕೆ ಬಾರದಂತೆ ಪುರಾತತ್ವವನ್ನೂ ಧಾರ್ಮಿಕತೆಯನ್ನೂ ಉಳಿಸುವಂತಹ ಕ್ರಮವನ್ನು ಕೈಗೊಳ್ಳಬೇಕು’’ ಎಂದು  ಅದರಲ್ಲಿ ಕೋರಲಾಗಿತ್ತು. ಕದ್ರಿಮಠದ ಮುಖ್ಯಸ್ಥರು  ಮಠದ  ಹಣ ದುರ್ಬಳಕೆ ಮಾಡುತ್ತಿರುವ ಪ್ರಶ್ನೆಯು, ಮೋಹನನಾಥರ ಕಾಲದಲ್ಲಿ ದೊಡ್ಡದಾಗಿ ಮುಂದೆ ಬಂದಿತು. ಹಣದ ದುರುಪಯೋಗ ತಡೆಯಲು ಜೋಗಿ ಸಮಾಜ ಸುಧಾರಕ ಸಂಘದ ಮಹಾಧಿವೇಶನದಲ್ಲಿ ೩೪ನೇ ನಿಯಮವನ್ನು ತಿದ್ದುಪಡಿ ಮಾಡಲಾಯಿತು. ‘‘ಜೋಗಿಮಠದಲ್ಲಿ ಜರುಗುವ ವಿಶೇಷ ಹಬ್ಬ ಇತ್ಯಾದಿ ದೇವತಾ ಕಾರ್ಯಗಳಲ್ಲಿ, ಸಂಘವು ತನುಮನಧನಗಳಿಂದ ಸಹಕಾರ ನೀಡಬೇಕು’’ ಎಂದಿದ್ದ ಹಳೆಯ ನಿಯಮಕ್ಕೆ   ‘‘ಜೋಗಿಮಠದ ಸೊತ್ತುಗಳಿಗೆ ಯಾವುದೇ ಧಕ್ಕೆ ಬಂದಲ್ಲಿ ಯಾ ಅವ್ಯವಹಾರ ಇತ್ಯಾದಿ ನಡೆದಲ್ಲಿ, ಈ ಬಗ್ಗೆ ಸೂಕ್ತಕ್ರಮ ಕೈಗೊಳ್ಳುವುದು’’ ಎಂಬ ಶರಾ ಸೇರಿಸಲಾಯಿತು.  ಜೋಗಿಗಳು ಬಾರಾಪಂಥಕ್ಕೆ ನೇರವಾಗಿ ದೂರು ಕೊಟ್ಟು ಸಮಸ್ಯೆ ಬಗೆಹರಿಸಲು ಯತ್ನಿಸಿದರು.  ಮೋಹನನಾಥರು ಜಗ್ಗಲಿಲ್ಲ.   ‘ಮೈ ರಜಪೂತ್ ಹ್ಞೂಂ! ಕಿಸೀಕೊ ಡರತಾ ನಹಿ’’ ಎಂದು ಗುಟುರು ಹಾಕಿದರು.  ‘ಶಿಷ್ಯರಾದ ನೀವು ಇದನ್ನೆಲ್ಲ ಕೇಳಬಾರದು. ನಮ್ಮ ಸೇವೆ ಮಾಡುವುದಷ್ಟೇ ನಿಮ್ಮ ಕೆಲಸ. ಇದು ಜೋಗಿಮಠ ಅಲ್ಲ, ಸುವರ್ಣಕದಲಿ ಮಂದಿರ’ ಎಂದರು.

ಈ ಬೆಳವಣಿಗೆಯು ಜೋಗಿಗಳಿಗೆ ಬಾರಾಪಂಥಿನವರ ಮೇಲಿದ್ದ ವಿಶ್ವಾಸವನ್ನು ಕಡಿಮೆ ಮಾಡಿತು. ಕದ್ರಿಮಠಕ್ಕೆ ಬರುವ ಉತ್ತರ ಭಾರತದ ನಾಥರನ್ನು ಸ್ವಾಗತ ಮಾಡಿ, ಒಂದು ತಿಂಗಳು ಕಾಲ ಊಟೋಪಚಾರ ಮಾಡಿ, ಪಟ್ಟಕಟ್ಟಿ ಕೂರಿಸಿ ೧೨ ವರ್ಷದ ತನಕ ಕಾಪಾಡುವವರು ನಾವು. ಆದರೆ  ಮಠದ ಮೇಲೆ ನಮ್ಮ ಹಕ್ಕುಗಳಿಲ್ಲ. ನಮ್ಮವರಿಂದಲೆ ಮಠಕ್ಕೆ ಗುರು ಬರುವುದಾದರೆ, ಈ ಸಮಸ್ಯೆ  ಇರುತ್ತಿತ್ತೇ ಎಂಬ ಆಲೋಚನೆಯೂ ಅವರಲ್ಲಿ ಸುಳಿದಿದೆ. ‘ನಿಮ್ಮ ಗುರುಗಳ ವಿರುದ್ಧ ನೀವೇ ದನಿಯೆತ್ತುವುದು ಸರಿಯೇ’? ಎಂದು ಯಾರಾದರೂ ಕೇಳಿದರೆ, ‘ನಮ್ಮ ಹೋರಾಟ ಕದ್ರಿಪೀಠದ ವಿರುದ್ಧವಲ್ಲ. ಅದರ ಅಧಿಪತಿಯ ಮೇಲೆ.  ಪೀಠದ ಘನತೆಗೆ ತಕ್ಕಂತೆ ಇವರು ನಡೆದುಕೊಳ್ಳುತ್ತಿಲ್ಲ. ಕದ್ರಿಮಠದ ಅರಸರನ್ನು ತ್ರ್ಯಂಬಕದಲ್ಲಿ ೧೨ ವರ್ಷಕ್ಕೊಮ್ಮೆ ಆಯ್ಕೆಮಾಡಿ ಪಾದಯಾತ್ರೆಯಲ್ಲಿ ತಂದು  ಇಲ್ಲಿ ಪಟ್ಟಾಭಿಷೇಕ ಮಾಡುವ ನೂರಾರು ವರ್ಷದ ಪರಂಪರೆಯನ್ನು ನಾವೇನು ಪ್ರಶ್ನಿಸುತ್ತಿಲ್ಲ. ಆದರೆ ಮಠದ ಆಗುಹೋಗುಗಳಲ್ಲಿ ನಮ್ಮನ್ನು ಕೇಳದೆ ಹೊರಗಿಡುವುದು ಮಾತ್ರ ಸರಿಯಲ್ಲ. ಯಾರೋ ನೇಮಕ ಮಾಡಿಹೋಗುವ ಗುರುವಿಗೆ ಬರೀ ಊಳಿಗ ಮಾಡುವುದೇ ನಮ್ಮ ಕೆಲಸವೇನು?’ ಎಂದು ಅವರು ಪ್ರತಿಪ್ರಶ್ನೆ ಮಾಡುತ್ತಾರೆ. ಜೋಗಿ ಆನಂದನಾಥರು ನಾಥರಿಗೆ ತಾವು ಶಿಷ್ಯರು ಎಂಬುವುದನ್ನೇ ಒಪ್ಪುವುದಿಲ್ಲ. ನಾಥರಲ್ಲಿ ಗೃಹಸ್ಥಾಶ್ರಮ ಸ್ವೀಕರಿಸುವ ಒಂದು ಪದ್ಧತಿಯಿತ್ತು. ಕರಾವಳಿಯ ಜೋಗಿ ಸಮುದಾಯವು ನಾನಾ ಕಾರಣದಿಂದ ಸಂಸಾರಿಗಳಾದ ನಾಥಯೋಗಿಗಳ ಮಕ್ಕಳು. ನಾವು ಅವರ ಆನುವಂಶಿಕರು. ಆದ್ದರಿಂದ ನಮಗೆ ಮಠದ ಮೇಲೆ ಹಕ್ಕಿದೆ ಎನ್ನುವುದು ಅವರ ವಾದ.

ಮೋಹನನಾಥರ ನಿರ್ಗಮನದ ಕೊನೆಯ ದಿನಗಳಲ್ಲಿ, ಗುರುಶಿಷ್ಯರ ಈ ಜಗ್ಗಾಟವು  ತಾರಕಕ್ಕೆ ಏರಿತು. ಜೋಗಿಗಳು ಕದ್ರಿಮಠದ ಅರಸನ ವಿರುದ್ಧ ಮಾಡುವ  ಯುದ್ಧಗಳಲ್ಲಿ ಕೆಲವೊಮ್ಮೆ ಕದ್ರಿ ವಿಟ್ಲಗಳಿಗೆ ಚಾರಣ ಮಾಡಿಕೊಂಡು ಬರುವ ಇತರೆ ನಾಥರೂ ಸೇರಿಕೊಳ್ಳುವುದುಂಟು. ಇದಕ್ಕೆ ಬಾರಾಪಂಥಗಳಲ್ಲಿ ಇರುವ ಶಾಖೆಗಳ ಒಳವಿರಸಗಳೂ ಕೊಂಚ ಕಾರಣ. ಹೀಗೆ ಚಾರಣ ಬಂದ ಸಾಧುಗಳು ನಿಷ್ಠುರ ಸ್ವಭಾವದವರಿದ್ದರೆ,  ಕದ್ರಿಮಠದ ಮುಖ್ಯಸ್ಥರು ಅವರನ್ನು ಹೆಚ್ಚುಕಾಲ ಇರಗೊಡುವುದಿಲ್ಲ. ವಿಟ್ಲಮಠದಲ್ಲಿ ಕುಳಿತಿದ್ದ ರಮತೆಸಾಧು ಸೋಮವಾರನಾಥರು(೭೫), ನನ್ನೊಡನೆ ಇದ್ದ ಜೋಗಿ ಆನಂದ ನಾಥರ ಜತೆ ಮಾತಾಡುತ್ತ,  ‘‘ಕೈಸಾ ಹೈ ತುಮಾರ ರಾಜಾ? ಉನಸೆ ಕಹೋ ಸಾಧು ವೋಂಕೋ ತಂಗ್ ಮತಕರನಾ’’ (ಹೇಗಿದ್ದಾನೆ ನಿಮ್ಮ ಅರಸು? ಯೋಗಿಗಳಿಗೆ ಕಷ್ಟ ಕೊಡದಿರಲು ಅವರಿಗೆ ಹೇಳಿ) ಎಂದು ತೀಕ್ಷ್ಣವಾಗಿ ಹೇಳಿದರು. ಕದ್ರಿಮಠದ ಅಧಿಪತಿಗಳು ಮಠದಿಂದ ಹೊರಹಾಕುತ್ತಿದ್ದ  ಸಂಚಾರಿ ನಾಥರನ್ನು, ಕದ್ರಿಯ ಜೋಗಿಗಳು ಆಶ್ರಯ ಕೊಟ್ಟು ಇಟ್ಟುಕೊಳ್ಳುವ ಇತಿಹಾಸವಿದೆ. ನಾಥಪಂಥದ ಪ್ರಸಾರಕ್ಕೆ ಬಂದಿದ್ದ ಭೂತೇಶ್ವರನಾಥರಿಗೆ ಕದ್ರಿಮಠದಲ್ಲಿ ಉಳಿಯಲು ಅವಕಾಶ ಕೊಟ್ಟಿರಲಿಲ್ಲ. ಆಗ ಅವರು ಜೋಗಿ ಆನಂದನಾಥರ ಮನೆಯಲ್ಲಿ ವಸತಿ ಮಾಡಿದ್ದರು.

ಕರಾವಳಿಯ ಜೋಗಿಗಳು ಹಾಗೂ ನಾಥರ ನಡುವೆ ವಿರಸವಾಗಲು ಎರಡನೆಯ ಕಾರಣ, ನಾಥರ ಭಂಗಿಸೇವನೆಯ ಅಭ್ಯಾಸ. ಭಾರತದ ಎಲ್ಲ ಗುರುಪಂಥಗಳಲ್ಲಿ  ಭಂಗಿಯ ಸೇವನೆ ಸಾಮಾನ್ಯ. ಹಳೆಯ ದಾಖಲೆಗಳ ಪ್ರಕಾರ, ವಿಶೇಷ ಉತ್ಸವಗಳಲ್ಲಿ ಸ್ವತಃ ನಾಥಮಠಗಳೆ ಭಕ್ತರಿಗೆ ಗಾಂಜಾವನ್ನು  ಒದಗಿಸಬೇಕಾಗಿತ್ತು. ಆದರೆ ಈ ಮಾದಕ ವಸ್ತುವಿನ ಸೇವನೆ,  ಕೆಲವೊಮ್ಮೆ ಅತಿಗೆ ಹೋಗುವುದುಂಟು. ಬಾರಾಪಂಥವು ತನ್ನ ಬೈಲಾದಲ್ಲಿ ಭಂಗಿ, ಅಫೀಮು, ಮದ್ಯಪಾನಗಳು ಯೋಗಿಗಳಿಗೆ ನಿಷಿದ್ಧ ಎಂದು ನಿಷೇಧಿಸಿಕೊಂಡಿದೆ. ಆದರೆ ಅವನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ತ್ರ್ಯಂಬಕೇಶ್ವರದಲ್ಲಿ ಪಂಥದ ಪ್ರಧಾನ ಆಚರಣೆಗಳು ನಡೆಯುವಾಗ ಅಥವಾ  ಕದ್ರಿಯಲ್ಲಿ ನಾಥನಿಗೆ ರಾಜಪಟ್ಟ ಕಟ್ಟುವಾಗ,  ಬಹುತೇಕ ನಾಥರು ತಮಗೂ ಅದಕ್ಕೂ ಸಂಬಂಧ ಇಲ್ಲವೆಂಬಂತೆ, ಚಿಲುಮೆ ಸಿಗರೇಟನ್ನು ಸೇದುತ್ತ ಕುಳಿತಿದ್ದರು.  ಈ ಆಚರಣೆಗಳು ಯೋಗಿಗಳಿಗೆ ಮುಖ್ಯವಲ್ಲ ಎಂಬುದು ಇದರ ಅರ್ಥವೊ ಅಥವಾ ಅವರು ಸ್ವಭಾವತಃ ನಿರಂಕುಶಮತಿಗಳೊ ತಿಳಿಯಲಿಲ್ಲ. ಆದರೆ ನಾನು ಚರ್ಚಿಸಿದ ಅನೇಕ ನಾಥರಲ್ಲಿ ಪಂಥದ ದಾರ್ಶನಿಕ ತಿಳಿವಳಿಕೆ ಏನೂ ಇರಲಿಲ್ಲ. ಒರಿಸ್ಸಾದದಿಂದ ಬಂದಿದ್ದ ಶಿವನಾಥ ರಂತಹ ವಿದ್ವತ್ತುಳ್ಳವರು ಝುಂಡಿಯಲ್ಲಿ ಬಹಳ ಕಡಿಮೆಯಿದ್ದರು. ರಾಜಸ್ಥಾನದ ಕಡೆಯಿಂದ ಉದ್ದನೆಯ ಜಟೆಯನ್ನು ಬಿಟ್ಟಿದ್ದ ದರಬಾರನಾ ಎಂಬ ತರುಣ ಯೋಗಿಯು ಝುಂಡಿ ಯಲ್ಲಿದ್ದನು. ಆತ ತನಗೆ ಭೇಟಿಯಾದವರಿಗೆಲ್ಲ ವಿಸಿಟಿಂಗ್ ಕಾರ್ಡು ಕೊಡುತ್ತ, ಮೊಬೈಲಿನಲ್ಲಿ ಫೋನುಮಾಡುತ್ತ ಪ್ರವಾಸಕ್ಕೆ ಬಂದಂತೆ ಸಂತೋಷವಾಗಿದ್ದನು. ನಾಥರೆಂದರೆ ಯಾರಿಗೂ ಗೊತ್ತಾಗದ ಜಾಗದಲ್ಲಿ ಗೂಢವಾದ ಆಚರಣೆ ಮಾಡಿಕೊಂಡಿರುವ, ಆಧುನಿಕ ಜಗತ್ತಿನ ವಿದ್ಯಮಾನಕ್ಕೆ ಸಂಬಂಧವಿಲ್ಲದಂತೆ ಬದುಕುವವರು ಎಂಬ ಜನಪ್ರಿಯ ಗ್ರಹಿಕೆ ಸಾಮಾನ್ಯವಾಗಿದೆ. ನಗ್ನರಾಗಿರುವ ನಾಗಾಸಾಧುಗಳ, ನಡುರಾತ್ರಿ ಮಸಣಗಳಲ್ಲಿ ತಾಂತ್ರಿಕ ಆಚರಣೆ ಮಾಡುವ ಅಘೋರಿಗಳ ಬಗ್ಗೆ ಬಂದಿರುವ ವರದಿಗಳು ಕೂಡ ಈ ಅಭಿಪ್ರಾಯಕ್ಕೆ ಕಾರಣವಾಗಿವೆ. ಆದರೆ ವಸ್ತುಸ್ಥಿತಿ ಹಾಗಿಲ್ಲ. ಇಲ್ಲಿ ವಿದ್ವಾಂಸರೂ ಇದ್ದಾರೆ. ಚಿಂತಕರೂ  ಇದ್ದಾರೆ. ಚಟಗಳಿಗೆ ಅಡಿಯಾಳಾಗಿ ಇರುವವರೂ ಇದ್ದಾರೆ.

ಕದ್ರಿಯಲ್ಲಿ ಝುಂಡಿಯು ಬಿಡಾರ ಮಾಡಿದ್ದ ಕಾಲದಲ್ಲಿ, ಒಬ್ಬ ತರುಣ ನಾಥನನ್ನು ಝುಂಡಿಯ ಮಹಂತರಾದ ಸೂರಜನಾಥರು ವಿಚಾರಣೆ ಮಾಡುತ್ತಿದ್ದರು. ಅವನು ಕಳೆದ ರಾತ್ರಿ ಕೊಂಚೊಜಾಸ್ತಿ ಕುಡಿದು ಗಲಾಟೆ ಮಾಡಿದ್ದನು. ಶರಣರು  ‘ಮದ್ಯವನುಂಡು ಮದವೆದ್ದ ಜೋಗಿಯಂತೆ ನುಡಿವರು’  ಎಂದು ಟೀಕಿಸಿದ್ದು ಇಂತಹವರನ್ನು ಉದ್ದೇಶಿಸಿಯೇ ಎಂದು ಕಾಣುತ್ತದೆ. ಕೆಲವೊಮ್ಮೆ ನಾಥರಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳವರು ಸೇರಿಕೊಂಡು ಇರುವುದುಂಟಂತೆ. ೧೯೮೧ರಲ್ಲಿ ನಾಥರ ಝುಂಡಿಯು ಪುರಪ್ರವೇಶ ಮಾಡುವಾಗ ಬಂದೋಬಸ್ತಿಗೆ  ಪೋಲಿಸರನ್ನು ನಿಯೋಜಿಸಲಾಗಿತ್ತು. ಇದಕ್ಕೆ ಕೆಲವು ನಾಥರು ಸ್ಥಳೀಯ ಸಂಘಟಕರನ್ನು ಕರೆದು, ಅವರನ್ನೇಕೆ ಬರಿಸಿದಿರಿ ಎಂದು ತರಾಟೆಗೆ ತೆಗೆದುಕೊಂಡರಂತೆ. ಪೋಲಿಸರ ಪ್ರಕಾರ ಕೆಲವು ಸನ್ಯಾಸಿಗಳು ಅಫೀಮು ಮಾರುವ ದಂಧೆ ಮಾಡುತ್ತಾರೆ. ಇಂತಹವರ ಬಗ್ಗೆ ಅನೇಕ ಹಿರಿಯ ನಾಥರಿಗೆ  ಖೇದವಿದೆ. ಬತ್ತೀಸ್ ಶಿರಾಳದ ಶಿವನಾಥರು ಚಿಲುಮೆ ಸೇದಿಕೊಂಡು  ಕುಳಿತಿದ್ದ ಕೆಲವು ನಾಥರನ್ನು   ‘ನೋಡಿ, ಇವರು ಗೋರಖನ ಹೆಸರು ತೆಗೆಯುವುದಿಲ್ಲ. ಸತ್ಸಂಗ ಮಾಡುವುದಿಲ್ಲ. ಇಂಥವರಿಂದ ಪಂಥ ಅವನತಿಗೆ  ಹೋಗುತ್ತಿದೆ’ ಎಂದು ನುಡಿದರು.

ಕದ್ರಿಮಠದ ಸೇವೆಯಲ್ಲಿರುವ ಜೋಗಿ ಉಮೇಶನಾಥರು, ನಾಥಯೋಗಿಗಳ ಜತೆ  ಬಹುಕಾಲ ಒಡನಾಡಿದವರು. ಅವರ ಪ್ರಕಾರ, ದೀಕ್ಷೆ ಕೊಡುವ ಮುಂಚೆ ವ್ಯಕ್ತಿಯ ಪೂರ್ವಾಪರ ಸರಿಯಾಗಿ ಪರೀಕ್ಷಿಸದೆ ಇರುವುದರಿಂದ, ಈ ಸ್ವಚ್ಛಂದ  ಸಾಧುಗಳು ಸೇರಿಕೊಂಡಿದ್ದಾರೆ. ಮುಂಬೈನ ನಲ್ಲಾಸಫರ್ ಎಂಬಲ್ಲಿ ಅನೇಕ ನಾಥರು  ಸಂಸಾರ ಮಾಡಿಕೊಂಡಿದ್ದಾರೆ. ಅಂಥಹವರಿಗೆ ಹಣ, ಮದ್ಯದ ಬಾಟಲು, ಭಂಗಿಸೊಪ್ಪು ಕೊಟ್ಟರೆ ಸಾಕು. ಖುಶಿಯಾಗುತ್ತೆ. ಕೆಲವರು ಭಕ್ತರ ಮನೆಗೆ ಹೋದಾಗ ‘ಕೋಳಿ ಕೊಯಿಸು, ಸಾರಾಯಿ ತರಿಸು ಎಂದು ಹುಕುಂ ಮಾಡುತ್ತಾರೆ’   ಎಂದರು. ಅವರಿಗೆ ನಾಥಪಂಥದ ಬಗ್ಗೆ ಗೌರವವಿತ್ತು. ಇಂಥ ನಾಥರ ಬಗ್ಗೆ ಬೇಸರವಿತ್ತು.

ಶಾಕ್ತ ಹಿನ್ನೆಲೆಯಿಂದ ಬಂದ ನಾಥರಲ್ಲಿ ಸ್ತ್ರೀಸಂಗವು ನಿಷಿದ್ಧವಲ್ಲ.[2] ಬ್ರಹ್ಮಚರ್ಯ ಕಡ್ಡಾಯವಲ್ಲ. ಇವರನ್ನು ಸಂಯೋಗಿ ನಾಥರು ಎಂದು ಕರೆಯುತ್ತಾರೆ. ಬ್ರಿಗ್ಸನು ನಾಥರಾಗಿರುವ ತಂದೆ ಮಕ್ಕಳ ಪೋಟೊವನ್ನು ತನ್ನ ಕೃತಿಯಲ್ಲಿ ಕೊಟ್ಟದ್ದಾನೆ. ಆದರೆ ಬಾರಾಪಂಥವು ತನ್ನ ಬೈಲಾದ ೧೦ನೇ ನಿಯಮದಲ್ಲಿ ಗೃಹಸ್ಥರಾಗುವ ಅಥವಾ ಆಗಲು ಯತ್ನಿಸುವ ಸಾಧು ಅಥವಾ ಮಹಂತರನ್ನು ತೆಗೆದು ಹಾಕಲಾಗುವುದು ಎಂದು ಎಚ್ಚರಿಸುತ್ತದೆ.[3] ಈ ನಿಷೇಧವು ನಾಥರಲ್ಲಿ ಗೃಹಸ್ಥರಾಗುವ ಪ್ರಕರಣಗಳು ನಡೆಯುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಿದೆ. ಈ ನಿಯಮದ ಉಲ್ಲಂಘನೆಯನ್ನು ತಡೆಯಲು ಬಾರಾಪಂಥಕ್ಕೆ ಸಾಧ್ಯವಾಗಲಿಲ್ಲ. ತ್ರ್ಯಂಬಕೇಶ್ವರದ ಕೌಲಗಢ ಬೆಟ್ಟದಲ್ಲಿ ನಾನು ಕಂಡ ವೃದ್ದಿನಾಥ್ ಎಂಬ ನಾಥನೊಬ್ಬನ ಆ್ರಮವು, ಸಂಸಾರಸ್ಥರ ಮನೆಯಂತೆಯೇ ಇತ್ತು. ಒಬ್ಬ ಹೆಂಗಸು ಒಳಗೆ ಅಡುಗೆ ಮಾಡುತ್ತಿದ್ದಳು. ಆಕೆ ನನ್ನ ಭಕ್ತೆ ಎಂದು ಯೋಗಿಯು ವಿವರಣೆ ಕೊಟ್ಟನು. ಆತ ಅಲ್ಲಿ ನೆರೆದಿದ್ದ ಬಾರಾಪಂಥದ ನಾಥರ ಜತೆ ಸೇರಿರಲಿಲ್ಲ. ಬಹುಶಃ ಬಾರಾಪಂಥವು ಹೊರಹಾಕಿದ ನಾಥನಿರಬಹುದು. ಕರ್ನಾಟಕದ ನಾಥಮಠಗಳಲ್ಲಿ ಸ್ತ್ರೀಸಂಗದ ಕಾರಣದಿಂದ ಅನೇಕರು ತಮ್ಮ ಸ್ಥಾನ ಕಳೆದುಕೊಳ್ಳಬೇಕಾಯಿತು. ಹಿಂದೆ ಲುಂಕೆಮಲೆ ಮಠದಲ್ಲಿದ್ದ ಗಂಗಾನಾಥರು ಕಣಿವೆಗೆ ಆಡುಕಾಯಲು ಬರುತ್ತಿದ್ದ ಒಬ್ಬ ಹೆಣ್ಣನ್ನು ಪ್ರೀತಿಸಿದರು. ಅವರನ್ನು ಮಠದಿಂದ ಹೊರಹಾಕಲಾಯಿತು. ಬಳಿಕ ಗಂಗಾನಾಥರು ಲುಂಕೆಮಲೆ ಪಕ್ಕದ ಹಾನಗಲ್ಲಿನಲ್ಲಿ ಮಡದಿಯ ಜತೆ ಸಂಸಾರ ಹೂಡಿದರು. ಇಬ್ಬರು ಮಕ್ಕಳ ತಂದೆಯಾದ ಗಂಗಾನಾಥರು ಈಚೆಗೆ ತೀರಿಕೊಂಡರು. ಇಂತಹುದೇ ಪ್ರಕರಣ ವಿಟ್ಲಮಠದಲ್ಲಿಯೂ ನಡೆಯಿತು. ಈಶ್ವರನಾಥರು ಮಠದಲ್ಲಿ ಕೆಲಸಕ್ಕಿದ್ದ ಒಬ್ಬ ಹೆಣ್ಣಿನ ಜತೆ ಸಂಬಂಧ ಇರಿಸಿಕೊಂಡರು. ಈ ಬಗ್ಗೆ ಜೋಗಿಗಳು ಬಾರಾಪಂಥಕ್ಕೆ ದೂರುಕೊಟ್ಟರು. ಅಲ್ಲಿಂದ ಒಂದು ಸಮಿತಿ ಬಂದು ವಿಚಾರಣೆ ಮಾಡಿ, ಈಶ್ವರನಾಥರನ್ನು ತೆಗೆದು ಲಾಲಾನಾಥರನ್ನು ಕೂರಿಸಿತು. ಇದಕ್ಕೂ ಹಿಂದೆ ವಿಟ್ಲದ ಅಧಿಪತಿಯಾಗಿದ್ದ ರಾವಬಹಾದ್ದೂರ್ ಲಕ್ಷ್ಮೀನಾಥರ ವಿಷಯದಲ್ಲೂ ಇದೇ ಬಗೆಯ ಆಪಾದನೆಯಿತ್ತು. ಸ್ಥಳೀಕರೂ ಪ್ರಭಾವಶಾಲಿಗಳೂ ಆಗಿದ್ದ ಅವರು ಇದೊಂದು ದೊಡ್ಡಸವುಸ್ಯೆ ಆಗದಂತೆ ಜಯಿಸಿಕೊಂಡರು ಎಂದು ಸ್ಥಳೀಕರು ಹೇಳುತ್ತಾರೆ. ‘ಶ್ರೀಪೀಠಕ್ಕೆ ಪಟ್ಟಾಧಿಕಾರಿಗಳಾಗಿ ಬಂದ ಹಲವರು ಸ್ವಾಮಿಗಳವರ ನಡತೆಗಳ ವಿಚಾರದಲ್ಲಿ ಭಕ್ತರನೇಕರಿಗೆ ಅಸಮಾಧಾನಗಳಿದ್ದ’   ಮಾತು ಚುಂಚನಗಿರಿ ದಾಖಲೆಗಳಲ್ಲಿ ಬಂತಷ್ಟೆ. ಈ ಅಸಮಾಧಾನಗಳ ಸ್ವರೂಪ ಬಹುಶಃ ಇದೇ ಸ್ವರೂಪದ್ದಾಗಿರಬಹುದು.

. ಪರಿಸರದ ಸಮುದಾಯಗಳ ಜತೆ ಸಂಘರ್ಷ

ನಾಥಪಂಥಿ  ಸಮುದಾಯಗಳು ತಮ್ಮ ಅಸ್ಮಿತೆಗಾಗಿ ಪರಂಪರೆಯ ಪ್ರಜ್ಞೆಯನ್ನು ಪಡೆದುಕೊಳ್ಳುವ ಕೆಲಸ ಮಾಡುತ್ತಿರುವ ಹಾಗೆಯೇ, ತಮ್ಮ ಪರಿಸರದ ಬಲಿಷ್ಠ ಸಮುದಾಯಗಳ ಜತೆ ಸಂಘರ್ಷಗಳಲ್ಲಿಯೂ ತೊಡಗಿವೆ. ಈ ಸಂಘರ್ಷಗಳಿಗೆ ಮಠ ಗುಡಿಗಳ ಸಂಪತ್ತಿನ ಮೇಲೆ ಹಕ್ಕುಸಾಧಿಸುವುದೂ ಒಂದು ಕಾರಣ. ಈ ಸಂಘರ್ಷಗಳು ನಾಥಪಂಥ ಹಾಗೂ ಕಾಪಾಲಿಕ ಜೋಗಿಗಳನ್ನು ಕುರಿತಂತೆ ಒಟ್ಟಾರೆ ಸಮಾಜದ ದೃಷ್ಟಿಕೋನವನ್ನು ತಿಳಿಸುತ್ತವೆ. ಇವನ್ನು ಮುಖ್ಯವಾಗಿ ಕದ್ರಿ, ಲುಂಕೆಮಲೆ ಹಾಗೂ ಚುಂಚನಗಿರಿಯಲ್ಲಿ ಗಮನಿಸಬಹುದು.

೧೯೨೬ರ ಸುಮಾರಿನಲ್ಲಿ ತಮ್ಮ ಅಸ್ಮಿತೆಯಾಗಿ ಬಂದಿದ್ದ ಚುಂಚನಗಿರಿ ಮಠವು ಕೈಬಿಟ್ಟು ಹೋದ ಬಳಿಕ, ಈ ಸೀಮೆಯ ಕಾಪಾಲಿಕರಿಗೆ ಒಕ್ಕಲಿಗರ ಜತೆ ಮುಸುಕಿನ ಜಗಳ  ಶುರುವಾಯಿತು. ಲುಂಕೆಮಲೆಯ ಅನೇಕ ಶಾಖಾಮಠಗಳು ಈ ಭಾಗದ ಗೊಲ್ಲರ ಹಾಗೂ  ಮ್ಯಾಸಬೇಡರ ವಶದಲ್ಲಿವೆ. ಲುಂಕೆಮಲೆ ಭೈರವನ ಪೂಜೆ ಲಿಂಗಾಯತರದು. ಇದು ಕಾಪಾಲಿಕರಲ್ಲಿ ಒಂದು ಬಗೆಯ ಅಸಮಾಧಾನ ಉಂಟುಮಾಡಿದೆ. ನಮಗೆ ನಮ್ಮಪಂಥದ ಮಠ ಗುಡಿಗಳಲ್ಲೆ ಜಾಗವಿಲ್ಲ ಎಂಬ ಕೊರಗನ್ನು ಹುಟ್ಟಿಸಿದೆ. ವದ್ದಿಕೆರೆಯಲ್ಲಿ ಸಿದ್ಧಪ್ಪನ ಗುಡಿಯ ಹಕ್ಕಿನ ವಿಷಯದಲ್ಲಿ ಕುಂಚಿಟಿಗರು ಹಾಗೂ ಗೊಲ್ಲರ ನಡುವೆ ಇದ್ದ ಪೈಪೋಟಿಯಲ್ಲಿ, ನಾವು ನಿಜವಾದ ಹಕ್ಕುದಾರರು ಎಂದು ಕಾಪಾಲಿಕರು ತಕರಾರು ಅರ್ಜಿ ಹಾಕಿದರು. ಪರಿಣಾಮವಾಗಿ ಸರಕಾರ ಗುಡಿಯನ್ನು ತನ್ನ ವಶಕ್ಕೆ ತೆಗೆದುಕೊಂಡು (೧೯೭೪) ಹೊರಗಿನಿಂದ ಬ್ರಾಹ್ಮಣ ಅರ್ಚಕರನ್ನು ತಂದು ನೇಮಿಸಿತು. ನಾಥಮಠಗಳಿಗೆ ಪ್ರಾಚೀನ ಪರಂಪರೆ ಇರುವಂತೆ ಕೋರ್ಟುಕಛೇರಿಗಳ ಚರಿತ್ರೆಯೂ ಇದೆ. ೧೯೩೫ರಲ್ಲಿ ಲುಂಕೆಮಲೆ ಮಠವನ್ನು ಚಿತ್ರದುರ್ಗದ ಕಲೆಕ್ಟರನು ಸರ್ಕಾರಕ್ಕೆ ವಶಪಡಿಸಿಕೊಳ್ಳುವ ಆಜ್ಞೆಮಾಡಿದ್ದನು. ಆಗ ಕಾಪಾಲಿಕರು ದೊಡ್ಡ ಹೋರಾಟ ಮಾಡಿ ಬಿಡಿಸಿಕೊಂಡಿದ್ದರು. ಮಠದ ಜಮೀನು ಸಾಗುವಳಿ ಮಾಡುವ ರೈತರು ಕೊಟ್ಟ ಅರ್ಜಿಯ ಆಧಾರದಲ್ಲಿ ಮಠವನ್ನು ೧೯೯೬(?)ರಲ್ಲಿ ಮತ್ತೆ ಸರ್ಕಾರ ವಶಪಡಿಸಿಕೊಳ್ಳುವ ಯತ್ನ ಮಾಡಿತು. ಆಗಲೂ ಕಾಪಾಲಿಕರು ಉಳಿಸಿಕೊಂಡರು.

ಕಾಪಾಲಿಕರೇ ೯೦ ಭಾಗ ಇರುವ ಉಪನಾಯಕನಹಳ್ಳಿಯ ಕಾಪಾಲಿಕರ ಕೇರಿಯಲ್ಲಿ ಹನುಮಂತನ ಗುಡಿಯಿದೆ. ಅದರ ಪೂಜೆ ಗೊಲ್ಲರದು. ಪರೀಕ್ಷಿಸಿದಾಗ ಅದು ಭೈರವ ಗುಡಿಯಾಗಿದ್ದಕ್ಕೆ ಪುರಾವೆ ಸಿಗತೊಡಗಿದವು. ಗುಡಿಯ ಎದುರಿನ ಕಂಬದಲ್ಲಿ ಗರುಡನ ಬದಲು ಯೋಗಭಂಗಿಯಲ್ಲಿರುವ ಉಬ್ಬುಕೆತ್ತನೆಯಿತ್ತು. ಚೌಕಟ್ಟಿನಲ್ಲಿ ನಾಥಸಂಪ್ರದಾಯದಂತೆ ಸೂರ್ಯ ಚಂದ್ರರಿದ್ದರು. ಬಾಗಿಲ ಚೌಕಟ್ಟಿನಲ್ಲಿದ್ದ ತ್ರಿಶೂಲಧಾರಿ ದ್ವಾರಪಾಲಕರನ್ನು ಬಹುಶಃ ಕೆತ್ತಿ ತೆಗೆಯಲಾಗಿದೆ. ಯಾವಾಗಲೊ ಒಳಗೆ ಹನುಮಂತನ ಪ್ರವೇಶವಾಗಿದೆ. ಆದರೆ ಹನುಮಂತನಿಗೆ ಭೈರವನನ್ನು ಹೊರಹಾಕಲು ಸಾಧ್ಯವಾಗಿಲ್ಲ. ಅವನ ಪಾದದ ಹತ್ತಿರ ಭೈರವನ ಪುಟ್ಟವಿಗ್ರಹ ಇತ್ತು. ಎರಡಕ್ಕೂ ಪೂಜೆಯಿದೆ. ಈ ಶೈವ ಮತ್ತು ವೈಷ್ಣವ ದೈವಗಳ ಸ್ಥಾನಪಲ್ಲಟವು ಸಾಮರಸ್ಯದ ಸಂಕೇತ ಮಾತ್ರ ಆಗಿರಲಿಲ್ಲ. ಆ ಊರಲ್ಲಿ ಗೊಲ್ಲರಿಗೂ ಜೋಗಿಗಳಿಗೂ ಇರುವ ಪೈಪೋಟಿಯ ಸಂಕೇತವೂ ಆಗಿತ್ತು.  ಗೊಲ್ಲರ ಅಭ್ಯರ್ಥಿಯನ್ನು ಸೋಲಿಸಿ ತಾಲೂಕು ಪಂಚಾಯಿತಿ ಸದಸ್ಯರಾಗಿದ್ದ ಕಾಪಾಲಿಕರ ಜಯಣ್ಣ, ತಮ್ಮ ಸಾಧನೆಗಳನ್ನು ಹೆಮ್ಮೆಯಿಂದ ಹೇಳಿಕೊಳ್ಳುವಾಗ ಇದನ್ನು ಗಮನಿಸಬಹುದಿತ್ತು.

ಇದೇ ಬಗೆಯ ಶೀತಲಯುದ್ಧ ಕದ್ರಿಯಲ್ಲಿ ಜೋಗಿಗಳಿಗೂ ಮಂಜುನಾಥ ಗುಡಿಯ  ಅರ್ಚಕರಿಗೂ ೨೦ನೇ ಶತಮಾನವಿಡೀ ನಡೆಯಿತು. ಅದಿನ್ನೂ ಮುಗಿದಿಲ್ಲ.ಕದ್ರಿ ಮಂಜುನಾಥ ದೇವಳದಲ್ಲಿರುವ ನಾಥರ ವಿಗ್ರಹಗಳನ್ನು ಸರಳುಗಳ ಹಿಂದಿನಿಂದಲೇ ಇಂದಿಗೂ ನೋಡಬೇಕು. ಇದು ಕದ್ರಿಯ ಜೋಗಿ ಸಮುದಾಯ ಸಿಲುಕಿಕೊಂಡಿರುವ ಸಾಂಸ್ಕೃತಿಕ ಪಂಜರದ ರೂಪಕದಂತೆ ಕಾಣುತ್ತದೆ. ಜೋಗಿಗಳು ತಮ್ಮ ಹಕ್ಕು ಪ್ರಜ್ಞೆಯನ್ನು ತೋರತೊಡಗಿದ ಬಳಿಕ, ಅವುಗಳ ಕೆಳಗೆ ಈಗ ದೀಪ ಹಚ್ಚಿ ಇಡಲಾಗುತ್ತಿದೆ. ನಾಥ ಕುರುಹುಗಳನ್ನು ಮರೆಮಾಚುವ ಹಾಗೂ ಅದರ ಜತೆ ಸಂಬಂಧ ತುಂಡಾಗದಂತೆ ಕುರುಹುಗಳನ್ನು ಸ್ಥಾಪಿಸುವ ಯತ್ನಗಳು, ಎರಡೂ ಪಕ್ಷಗಳಿಂದ ನಡೆದಿವೆ. ಕದ್ರಿಯಲ್ಲಿ ಜೋಗಿಗಳ ಹಾಗೂ ಅರ್ಚಕರ ನಡುವೆ ನಡೆದ ಸಂಘರ್ಷದ ಕೆಲವು ಕತೆಗಳು ಸ್ವಾರಸ್ಯಕರವಾಗಿವೆ. ಒಮ್ಮೆ ಗುಡಿಯ ಅರ್ಚಕರಾದ ನೀಲೇಶ್ವರದ ತಂತ್ರಿಗಳು ಜೋಗಿ ಅರಸರಿಲ್ಲದೆ ರಥೋತ್ಸವ ಮಾಡಲು ಹೋದರಂತೆ. ರಥ ಚಲಿಸಲಿಲ್ಲ. ಆಗ ಅರಸನಿಗೆ ಕ್ಷಮೆಕೇಳಿ ಕರೆದುಕೊಂಡು ಬರಲಾಯಿತು. ಅರಸನು ರಥದ ಮುಂದೆ ನಿಂತು ಆವೋಬೇಟಾ ಎಂದು ಎಳೆದಾಗ ರಥ ಚಲಿಸಿತು. ಆಗ ತಂತ್ರಿಗಳು ಅಪಮಾನದಿಂದ ಕೈಯಲ್ಲಿದ್ದ ಬೆಳ್ಳಿಯ ಕೈಬಟ್ಟಲು ಎತ್ತಿಹಾಕಿ ಹೋದವರು ತಿರುಗಿ ಬರಲಿಲ್ಲವಂತೆ. ಈ ಪ್ರಸಂಗವನ್ನು ಅನೇಕ ಜೋಗಿಗಳು ಅಭಿಮಾನದಿಂದ ಹೇಳಿದರು. ಇದು ಜೋಗಿಗಳು ಮಂಜುನಾಥ ಗುಡಿಗೆ ನಾಥಪಂಥದ ಕರುಳಬಳ್ಳಿ ಕಡಿಯದಂತೆ ಮಾಡಿದ ಸೆಣಸಾಟದ ಭಾಗ. ಈ ಸೆಣಸಾಟ ಈಗಲೂ ಸೂಕ್ಷ್ಮವಾಗಿ ನಡೆದೇ ಇದೆ. ಈಚೆಗೆ ಗುಡಿಯ ಆವರಣದಲ್ಲಿ ಜೋಗಿಯವರು ಗೋರಖ ಮಚೇಂದ್ರ ಯಕ್ಷಗಾನವನ್ನು ಆಡಿಸಿದ್ದು ಇದರ ಒಂದು ಭಾಗವಾಗಿದೆ. ಯಕ್ಷಗಾನದಲ್ಲಿ ಮಂಜುನಾಥ ಗುಡಿಯು ನಾಥರಿಗೆ ಸೇರಿದ್ದು ಎಂಬ ದನಿಯುಳ್ಳ ಮಾತುಗಳು ಇದ್ದವು. ಕದ್ರಿ ಮಂಜುನಾಥ ದೇಗುಲದ ಬಿಡುಗಡೆಯು, ಜೋಗಿಗಳಿಗೆ ಕರಾವಳಿಯ ಸಮಾಜದಲ್ಲಿ ತಮ್ಮನ್ನು ಸ್ಥಾಪಿಸಿಕೊಳ್ಳುವ ಯತ್ನವೂ ಆಗಿದೆ.

. ಒಳಪಂಗಡಗಳ ಜತೆ ಸಂಘರ್ಷ

ನಾಥಪಂಥಿ ಸಮುದಾಯಗಳು ತುಳು, ಕನ್ನಡ, ಮರಾಠಿ ಭಾಷೆಗಳಲ್ಲಿ, ಕರಾವಳಿ  ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕಗಳಲ್ಲಿ ವಿಭಜಿತರಾಗಿದ್ದಾರೆ. ಆದರೂ ಜೋಗಿ ಹೆಸರಲ್ಲಿ  ಒಂದಾಗಬೇಕು ಎಂಬ ವಾದವು ವ್ಯಾಪಕವಾಗಿ ಸಮ್ಮತಿ ಪಡೆದಿದೆ.  ಆದರೆ ಒಳಪಂಗಡಗಳಲ್ಲಿ ಇರುವ ತಾರತಮ್ಯ ಮಾತ್ರ ಇದಕ್ಕೆ ತೊಡಕಾಗಿದೆ. ಅದರಲ್ಲೂ ರಾವುಳರು ಹಾಗೂ ಕಾಪಾಲಿಕರು,  ಕಿನ್ನರಿಜೋಗಿಗಳ ವಿಷಯದಲ್ಲಿ ತೋರುವ ವರ್ತನೆಯು ಸಮಸ್ಯೆ ಯಾಗಿದೆ. ಹೇಮಾವತಿ ಸಿದ್ಧಪ್ಪನವರ ಪ್ರಕಾರ ಜೋಗಿಗಳು ಕಾಪಾಲಿಕರ ಶಿಷ್ಯರು.  ಬಾರಾಪಂಥಿ ಶೈವರು ಯಾವ ಕಾರಣದಿಂದಲೂ ಜೋಗಿ ಅಥವಾ ಜೋಗೇರು ಆಗಲು ಸಾಧ್ಯವಿಲ್ಲ. ನಾಥಪಂಥಿ ಜನರು ಮೀಸಲಾತಿ ಸಿಗುತ್ತದೆ ಎಂದು ತಮ್ಮ ಧರ್ಮವನ್ನು ಜೋಗಿ ಎಂದು ಜನಗಣತಿಯಲ್ಲಿ ಬರೆಸುತ್ತಿದ್ದಾರೆ. ಇದು,  ‘‘ರಾಡಿಯಾದ ನೀರಿನಲ್ಲಿ ಬಿದ್ದವನು, ನೀವೂ ಬನ್ನಿ ರೊಟ್ಟಿ ಸಿಗುತ್ತದೆ ಎಂದು ಹೇಳಿದಂತೆ’’;  ‘‘ಸ್ವಧರ್ಮವನ್ನು ತೊರೆದ ಪಾಪ’’ ಮಾಡಿದಂತೆ; ಈ ಪಾಪದಿಂದ ಪಾರಾಗಲು ಅವರು ಕೊಡುವ ಎರಡು ಸಲಹೆ ಎಂದರೆ, ೧.ಕಾಪಾಲಿಕರಲ್ಲಿ ಇರುವ ಮಾಂಸಾಹಾರವೇ ಮೊದಲಾದ ವಾಮಾಚಾರದ ಆಚರಣೆಗಳನ್ನು ಬಿಡಿಸುವುದು ೨. ರಾಜಕೀಯ ಲಾಭಕ್ಕಾಗಿ ಕಿನ್ನರಿ ಜೋಗಿಗಳ ಜತೆ ಸೇರದಂತೆ ತಡೆಯುವುದು.

ಈ ಪಂಗಡ ಭೇದವು ಜೋಗಿ ಮತ್ತು ಕಾಪಾಲಿಕರಲ್ಲಿ ಮಾತ್ರವಲ್ಲದೆ, ಜೋಗಿಗಳಲ್ಲೇ ಇರುವ ಉಪಪಂಗಡಗಳ ಸ್ತರದಲ್ಲೂ ಮುಂದುವರೆದಿದೆ. ಹೊಸೂರಿನ ಗುಡ್ಡಪ್ಪ ಜೋಗಿ ಕಿನ್ನರಿ ಕಲಾವಿದರಾಗಿ ವಿದೇಶಗಳಿಗೆ ಹೋಗಿ ಹೆಸರು ಮಾಡಿದವರು. ಅವರಿರುವ ಸಾಗರ ಭಾಗದಲ್ಲಿ ಕುಂದಾಪುರ ಕಡೆಯ ಬಳೆಗಾರ ಜೋಗಿಗಳೂ ಇದ್ದು, ಪರಸ್ಪರ ಸಂಬಂಧ ಸಾಧ್ಯವಾಗಿಲ್ಲ.  ‘ನನ್ನಳಿಯ ಪೋಲಿಸಾಗಿದ್ದಾನೆ. ನಮ್ಮ ಜನ ಡಾಕ್ಟರು ಇಂಜಿನಿಯರಾಗಿದಾರೆ.  ಲೆಕ್ಚರರಾಗಿದಾರೆ. ಆದರೂ ನಂಬಗ್ಗೆ  ಬಳೆಗಾರಿಗೆ ತಾತ್ಸಾರ. ಅವರು ಉಪಾಸ ಇದ್ರೂ ಉಂಡಿದೇನೆ ಅಂತಾರೆ. ನಮ್ಮ ಜನ ಉಂಡಿದ್ದರೂ ಉಂಡಿಲ್ಲ ಅಂತಾರೆ. ಭಿಕ್ಷಾಟನೆ ಬುದ್ದಿ ಹೋಗಿಲ್ಲ. ಇದಕ್ಕೆ ಕಾರಣ ಬಡತನ. ನಾವು ಡಬ್ಬ ಛತ್ರಿ ರಿಪೇರಿ ಮಾಡುವ ಮಾಲ್ಡೇಕರರನ್ನ ಕೀಳಾಗಿ ನೋಡ್ತೀವಿ. ಬಳೆಗಾರರು ನಮ್ಮನ್ನ ಕೀಳಾಗಿ ನೋಡ್ತಿದಾರೆ. ಇಲ್ಲ ಸ್ವಾಮಿ, ನಮ್ಮಜನ ಗೋರಖನಾಥನೇ ಬಂದರೂ ಒಟ್ಟಾಗುವುದಿಲ್ಲ’ ಎಂದು ಹತಾಶೆಯಿಂದ ನುಡಿದರು. ಈಗೀಗ ಕಿನ್ನರಿ ಜೋಗಿಗಳಿಗೂ ಬಳೆಗಾರರಿಗೂ ಸಣ್ಣಗೆ ಕೊಡುಕೊಳು ಶುರುವಾಗಿದೆ.

ಹುಬ್ಬಳ್ಳಿಯ ಉದ್ಯಮಿ ವೈ.ಡಿ. ಮಧೂರಕರ್‌ ಡಬ್ಬಾಜೋಗಿ ಸಮುದಾಯಕ್ಕೆ ಸೇರಿದ ವರು. ನಾಯಕರಾಗಿ ಬೆಳೆದಿರುವ ಅವರು ಕರ್ನಾಟಕದ ಸಮಸ್ತ ನಾಥ ಸಮುದಾಯಗಳನ್ನು ಸಂಘಟಿಸಿ, ಅವರ ಸಾಮಾಜಿಕ ರಾಜಕೀಯ ಚಲನೆಗೆ ಕೆಲಸ ಮಾಡಿದವವರು. ನಾಥಪಂಥದ ಪುನರುತ್ಥಾನ ಚಟುವಟಿಕೆಗಳಿಗೆ ಆರ್ಥಿಕ ಬಲ ಒದಗಿಸಿದವರು.  ಅವರ ಈ ಕಾರ್ಯದ ಬಗ್ಗೆ ಕಾಪಾಲಿಕರಿಗೂ  ರಾವುಳರಿಗೂ ಗೌರವವಿದೆ. ಆದರೆ ಅವರ ಬಗ್ಗೆ ಇರುವ ಸಾಮಾಜಿಕ ಭೇದ ಭಾವನೆ ಮಾತ್ರ ಹೋಗಿಲ್ಲ.  ಈ ವಿಷಯದಲ್ಲಿ ಕದ್ರಿಯ ಜೋಗಿಗಳು ಹೆಚ್ಚು ಉದಾರಿಗಳು. ಅವರು ಮಧೂರಕರ್ ಕುಟುಂಬದ ಜತೆ ನಂಟಸ್ತನ ಮಾಡಿದ್ದಾರೆ.  ಸಂಘಟನೆ ಕೆಲಸಗಳಲ್ಲಿ ಅವರ ಹಿಂದೆ ನಿಂತಿದ್ದಾರೆ.  ರಾವೂಳರು ಈ ವಿಷಯದಲ್ಲಿ ಬಹಳ ಕಠಿಣರು.  ‘ಅವರು ಡಬ್ಬಾಜೋಗಿ. ಒರಿಜಿನಲ್ ನಾಥಪಂಥಿ ಅಲ್ಲ. ಹಣವಂತರು ಅಂತ ಕದ್ರಿಯವರು ಸಂಬಂಧ ಬೆಳೆಸಿದ್ದಾರೆ’ ಎಂದು ಕೆಲವು ರಾವುಳರು ಟೀಕಿಸಿದರು. ಒಂದೇ ಜಿಲ್ಲೆಯಲ್ಲಿರುವ ಕುಂದಾಪುರದ ಕನ್ನಡ ಜೋಗಿಗಳಿಗೂ ಕದ್ರಿಯ ತುಳು ಜೋಗಿಗಳಿಗೂ ಕೂಡ ಪರಸ್ಪರ ಸೌಹಾರ್ದ ಸಂಬಂಧ ಇದ್ದಹಾಗೆ ಕಾಣಲಿಲ್ಲ. ಕದ್ರಿಬೆಟ್ಟದಲ್ಲಿ  ನಡೆದ  ‘ಜೋಗಿ ಸಮಾಜ ಸುಧಾರಕ ಮಹಾಮಂಡಳ’ದ ವುಹಾಸಭೆಯಲ್ಲಿ (೨೦೦೪) ಕೂಡ ಭಿನ್ನಮತಗಳು ಪ್ರಕಟವಾದವು. ಆ ಸಭೆಗೆ ಹುಬ್ಬಳ್ಳಿಯ ರಾವುಳ ಸಂಘಟನೆಯ ಕೆಲವರು  ಕದ್ರಿಯಲ್ಲಿದ್ದರೂ ಹಾಜರಾಗಿರಲಿಲ್ಲ. ಬಹುಶಃ ಅವರಿಗೆ ಜೋಗಿ ಪಂಗಡದ ಮಧೂರಕರ ನಾಯಕತ್ವದಲ್ಲಿ ಸೇರುವುದಕ್ಕೆ ಮನಸ್ಸಿಲ್ಲ.

ಕದ್ರಿಮಠದ ನಾಥನ ಪಟ್ಟಾಭಿಷೇಕವಾದ ಮಾರನೇ ದಿನ ಜರುಗಿದ  ‘ಜೋಗಿ ಸಮಾಜ ಸುಧಾರಕ ಮಹಾಮಂಡಳ’ದ ವುಹಾಸಭೆಯಲ್ಲಿ ಕೆಲವು ಸ್ವಾರಸ್ಯಕರ ಸಂಗತಿಗಳಿದ್ದವು.  ಶಿವನೂ ಪಾರ್ವತಿಯೂ ಕಡಲಮೇಲೆ ಏಕಾಂತದಲ್ಲಿ ರಹಸ್ಯವಿದ್ಯೆಯ ಚರ್ಚೆ ಮಾಡಿದ ಕತೆಯಿಂದ ನಾಥಪಂಥದ ಪೌರಾಣಿಕ ಚರಿತ್ರೆ ಆರಂಭವಾಗುತ್ತದೆ. ನಾಥಪಂಥದ ಗ್ರಂಥಗಳಲ್ಲಿ ಯೋಗ, ಸಮಾಧಿ, ಶೂನ್ಯ ಇತ್ಯಾದಿಯಾಗಿ ಅಮೂರ್ತ ದಾರ್ಶನಿಕ ಚರ್ಚೆಯಿದೆ. ಇಂತಹ  ನಾಥಪಂಥದ ಹಿನ್ನೆಲೆಯಿಂದ ಬಂದ ಜನರು, ತಮ್ಮ ನಿತ್ಯ ಬದುಕಿನ ಕಷ್ಟ ನೋವು ಆಕಾಂಕ್ಷೆ ಹಾಗೂ ಭವಿಷ್ಯದ ಆಸೆಯ ಬಗ್ಗೆ ಮಾತಾಡುತ್ತಿದ್ದರು. ಸಂಘಟನೆಯ ಕಷ್ಟ, ನಾಯಕತ್ವದ ಪ್ರಶ್ನೆ, ಗುಂಪುಗಾರಿಕೆ, ಜೋಗಿಗಳ ಬಡತನ, ಅಪಮಾನ, ನೌಕರಿ ಅವಕಾಶ, ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸುವುದು, ಮೀಸಲಾತಿ, ಇತ್ಯಾದಿ ವರ್ತಮಾನದ ಕಷ್ಟಸುಖಗಳ  ಚರ್ಚೆಯಿತ್ತು. ಇಡೀ ಚರ್ಚೆಯು ಮೂರ್ತ ಸಾಮಾಜಿಕ ರಾಜಕೀಯ ಆರ್ಥಿಕ ಸಮಸ್ಯೆಗಳ ಆಯಾಮವನ್ನು ಪಡೆದಿತ್ತು. ಸನ್ಯಾಸಿಗಳು ಧಾರ್ಮಿಕ ನಾಯಕರಾಗಿರುವ ನಾಥಪಂಥದ ಇಡೀ ಅಸ್ತಿತ್ವ ನಿಂತಿರುವುದು, ಜನರ  ದುಡಿಮೆ, ಭಕ್ತಿ, ಕಾಣಿಕೆಗಳಿಂದ. ಆದರೆ ಈ ಜನ ತಮ್ಮ  ಅಸ್ತಿತ್ವಕ್ಕಾಗಿ ಸೆಣಸಾಟ ಮಾಡುತ್ತಿದ್ದಾರೆ. ಮತ್ತೊಂದು ಬೃಹತ್ ಸಮ್ಮೇಳನ ನಡೆಸಿ ಸರ್ಕಾರಕ್ಕೆ ತಮ್ಮ ಬಲಪ್ರದರ್ಶನ ಮಾಡದೆ ಹೋದರೆ, ಮೀಸಲಾತಿ ಸಿಗುವುದಿಲ್ಲ ಎಂಬ ಪ್ರಸ್ತಾಪ ಸಭೆಯಲ್ಲಿ ಬಂತು. ಆಗ ಜೋಗಿಗಳಲ್ಲಿರುವ ಒಳಪಂಗಡ  ಪ್ರಶ್ನೆ ಬಂದಿತು.  ಅಲ್ಲಿದ್ದ ರಾವುಳರು ಹಾಗೂ ಬೆಂಗಳೂರು ಕಡೆಯ ಕಾಪಾಲಿರು ಜೋಗಿ ಚಿಹ್ನೆಯಡಿ ಸಂಘಟನೆ ಮಾಡುವ ಬಗ್ಗೆ  ವಿರೋಧ ವ್ಯಕ್ತಮಾಡಿದರು.  ತಮ್ಮ ರಾಜಕೀಯ ನಾಯಕತ್ವ ಬೆಳೆಸಿಕೊಳ್ಳಲು ಜೋಗಿಗಳ ಸಂಘಟನೆ ಮಾಡುತ್ತಿದ್ದಾರೆ ಎಂಬ ಆರೋಪವೂ ಬಂತು. ಆಗ ಮಧೂರಕರ್ ನೊಂದುಕೊಂಡಂತೆ ತೋರಿತು. ‘ನೋಡಿ,  ಜನ ತಾವಾಗಿ ಬಂದು ರಿಕ್ವೆಸ್ಟ್ ಮಾಡಿದರೆ ಮಾತ್ರ ಸಂಘಟನೆ ಕೆಲಸಕ್ಕೆ ಇಳಿಯುತ್ತೇನೆ. ಇಲ್ಲದಿದ್ದರೆ ಇಲ್ಲ. ನನಗೆ ನನ್ನ ಕೆಲಸಗಳು ಬಹಳಿವೆ’ ಎಂದು ಅವರು ನುಡಿದರು. ಜೋಗಿಗಳ ಸಂಘಟನೆಯಲ್ಲಿ  ಮಧೂರಕರ್ ಅವರಿಗೆ ಹೆಗಲು ಕೊಟ್ಟು ಕೆಲಸ ಮಾಡಿರುವ ಹಿರಿಯೂರಿನ ಲಾಯರ್ ನಾಗರಾಜ್, ಕದ್ರಿಯ ಉಮೇಶನಾಥ, ಡಾ.ಕೇಶವನಾಥ, ಜೋಗಿ ಆನಂದನಾಥ ಮುಂತಾದವರ ಜತೆ ಮಾತಾಡುವಾಗ ಕೂಡ, ಇದೇ ದಣಿವು ಮತ್ತು ಹತಾಶೆ ಹೊಮ್ಮುತ್ತಿತ್ತು. ಉಮೇಶನಾಥ ಹೇಳಿದರು: ‘ಒಂದು ಅಕ್ಕಿ ಹಾಕಿ ಅನ್ನ ಮಾಡೋಕೆ ಆಗುತ್ತಾ?’

ಮುಗಿಯದ ಕದನ

ದೊಡ್ಡ ಸವಾಲು ಇರುವುದು,  ಶಿಕ್ಷಣದ ಮೂಲಕ ಆಧುನಿಕತೆಯನ್ನೂ ಜೋಗಿ ಗುರುತಿನ ಮೂಲಕ ಸಾಮಾಜಿಕ ರಾಜಕೀಯ ಎಚ್ಚರವನ್ನು ಪಡೆಯಬೇಕು. ಇದಕ್ಕಾಗಿ  ಪಂಥದ ಸಾಂಸ್ಕೃತಿಕ ಗುರುತನ್ನು ಹಿನ್ನೆಲೆಯಾಗಿ ಉಳಿಸಿಕೊಳ್ಳಬೇಕು. ತುಂಬ ಮುಜುಗರಕ್ಕೆ ಕಾರಣವಾಗಿರುವ ಪದ್ಧತಿಗಳನ್ನು ಕೈಬಿಡಬೇಕು. ಹಾಗೆ ಮಾಡುವಾಗ ಪಂಥೀಯ ಎಳೆಗಳು ಹರಿದುಹೋಗದಂತೆ ಎಚ್ಚರ ವಹಿಸಬೇಕು. ಪಂಥದ ಹೆಗ್ಗುರುತಾಗಿರುವ ನಾಥಮಠಗಳನ್ನು  ಸಮುದಾಯದ ಪ್ರಗತಿಯಲ್ಲಿ ಒಂದು ಮಾಧ್ಯಮವಾಗಿ ಮಾಡಿಕೊಳ್ಳಬೇಕು. ಇದಕ್ಕೆ ಅವು ಸಹಕರಿಸದಿದ್ದರೆ ಬಾರಾಪಂಥಕ್ಕೆ ತಮ್ಮ ಪ್ರತಿರೋಧ ತಿಳಿಸಬೇಕು. ಕೊನೆಗೆ ಏನೂ ಸುಧಾರಣೆಯ ಆಗದಿದ್ದರೆ, ನಮ್ಮವರೇ ನಾಥದೀಕ್ಷೆ ಪಡೆದು ಗುರುವಾಗಿರುವ ಮಠವನ್ನು ಸ್ಥಾಪಿಸಬೇಕು. ಆದರೆ ಹಾಗೆ ಮಾಡಿದರೆ ನಮ್ಮ ಪರಂಪರೆ ತುಂಡುಗಡಿಯಬಹುದು-ಹೀಗೆ ಬಹುಮುಖಿಯಾದ ಹೊಯ್ದಟಗಳಲ್ಲಿ ನಾಥಪಂಥಿ ಜನರು, ಅದರಲ್ಲೂ ಪ್ರಜ್ಞಾವಂತರು ಆಲೋಚಿಸುತ್ತಿದ್ದಾರೆ. ಇದು ಕಡಲ ಕುದಿತದಂತಹ ಹೊಯ್ದಟವನ್ನು ಎಬ್ಬಿಸಿದೆ.

ಈ ಹೊಯ್ದಟ ಕೊನೆಗೂ ಏನನ್ನು ಸೂಚಿಸುತ್ತಿದೆ?  ನಾಥ ಅಥವಾ ಯಾವುದೇ ಪಂಥವನ್ನು ಅದರ ಪ್ರಾಚೀನ ಶಾಸನ ಗುಡಿ ಗ್ರಂಥ ಆಚರಣೆಗಳ ಮೂಲಕ ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ; ಅದರ ಧಾರ್ಮಿಕ ಎನ್ನುವ ವಿದ್ಯಮಾನಗಳು  ಕೇವಲ ಧಾರ್ಮಿಕ ಆಗಿರುವುದಿಲ್ಲ; ದಮನಿತ ಸಮುದಾಯಗಳು ತಮ್ಮ ಸಾಂಸ್ಕೃತಿಕ ಅಸ್ಮಿತೆ ಪಡೆದುಕೊಳ್ಳಲು ಮಾಡುವ ಯತ್ನಗಳು ಯಾವಾಗಲೂ ಜನರ ರಾಜಕೀಯ ಸಾಮಾಜಿಕ ಆಶೋತ್ತರಗಳ ಭಾಗವಾಗಿರುತ್ತವೆ; ಜನ ತಮ್ಮ ಅಸ್ತಿತ್ವಕ್ಕಾಗಿ, ಘನತೆಯಿಂದ ಬದುಕುವ ಹಕ್ಕಿಗಾಗಿ ಮಾಡುವ ಸೆಣಸಾಟಗಳ ಮೂಲಕವೇ ಧರ್ಮ ಪಂಥ ಸಂಸ್ಕೃತಿಗಳನ್ನು ನೋಡಬೇಕು ಎಂದು ತಾನೇ? ಯಾವುದೇ  ಪಂಥ ಅಥವಾ ಧರ್ಮವನ್ನು ತಮ್ಮ ಬದುಕಿನಲ್ಲಿ ಆಚರಿಸುವ ಮೂಲಕವೇ ಅಸ್ತಿತ್ವದಲ್ಲಿ ಇಟ್ಟಿರುವವರು ಆಸೆ ನಿರಾಸೆ ಛಲ ಆತಂಕ ಸೋಲು ಕನಸುಗಳು ತುಂಬಿದ  ಜೀವಂತ ಮಾನವರು. ಹಾಗೆಂದು  ಜನರ ಸಮಕಾಲೀನ ರಾಜಕೀಯ ಸಾಮಾಜಿಕ ಹೋರಾಟಗಳನ್ನು ಕೇವಲ ಲೌಕಿಕ ನೆಲೆಯಲ್ಲಿ, ಸಮುದಾಯಗಳ ಬದುಕಿನ ಒಳಗೆ ಬೇರುತಳೆದಿರುವ ಚರಿತ್ರೆ ಪುರಾಣ ಸಂಸ್ಕೃತಿ ಆಚರಣೆ ಇವನ್ನೆಲ್ಲ ಹೊರಗಿಟ್ಟು ಕೂಡ ಚರ್ಚಿಸಲು ಸಾಧ್ಯವಿಲ್ಲ. ಅನೇಕ ಸ್ತರ ಮತ್ತುೊಹಿತಾಸಕ್ತಿಗಳ ಜನರ ಗುಂಪುಗಳು  ಎದುರಿ ಸುವ ಇಕ್ಕಟ್ಟು,  ಮಾಡುವ ಹುಡುಕಾಟ, ಹಿಡಿಯುವ ಹಾದಿ, ಸೃಷ್ಟಿಸುವ ಪರ್ಯಾಯ ಇವು, ಅವರ ಹಾಗೂ ಅವರ ಪಂಥದ ಭವಿಷ್ಯವನ್ನು ತೀರ್ಮಾನ ಮಾಡುತ್ತವೆ.

ಕದ್ರಿಮಠದ ಜತೆ ೭೦ ವರ್ಷಗಳ ಒಡನಾಟವುಳ್ಳ, ಜೋಗಿ ಆನಂದನಾಥರು ಸಿಕ್ಕಾಗ  ಕದ್ರಿಮಠದ  ಹೊಸರಾಜರು ಹೇಗಿದ್ದಾರೆ ಎಂದು ಕೇಳಿದೆ. ಅವರು ಸಂಧ್ಯಾನಾಥರು ಸೃಷ್ಟಿಸಿರುವ ಸಮಸ್ಯೆಗಳನ್ನೂ, ಕದ್ರಿಯ ಜೋಗಿಯವರನ್ನು ಕಡೆಗಣಿಸಿರುವುದನ್ನೂ ಹೇಳತೊಡಗಿದರು. ಮೊನ್ನೆಮೊನ್ನೆ ಓಡಾಡಿ ಪಟ್ಟವನ್ನು ಕಟ್ಟಿದವರೇ ಹೀಗೆ ಹತಾಶೆಯಿಂದ ಮಾತಾಡುತ್ತಿರುವುದು  ಕಂಡು ಸೋಜಿಗವಾಯಿತು. ಎಲ್ಲ ಕೇಂದ್ರಸ್ಥ ರಚನೆಗಳು ಹೀಗೆಯೆ. ಅವು ತಮ್ಮನ್ನು ಹೊತ್ತು ನಿಂತಿರುವ ಜನರನ್ನು ಕಡೆಗಣಿಸಿ ಸಂಘರ್ಷವನ್ನು ಆಹ್ವಾನಿಸುತ್ತವೆ. ಕದ್ರಿಯ ಜೋಗಿಗಳ ಕದನವಿನ್ನೂ ಮುಗಿದಿಲ್ಲ, ಈಗಷ್ಟೆ ಶುರುವಾಗಿದೆ ಅನಿಸಿತು.

* * *[1]      ನಾಥಪಂಥ ಶೈವಧರ್ಮ ಮತ್ತು ಕರ್ನಾಟಕ ನಾಥಪಂಥ ಶೈವ ಸಮಾಜದ ಸಂಕ್ಷಿಪ್ತ ಪರಿಚಯ, ಪು.೨೦

[2]      ನೇಪಾಳದ ನಾಥಪಂಥದ ಮೇಲೆ ಸಂಶೋಧನೆ ಮಾಡಿರುವ ವೆರೋನಿಕಾ ಪ್ರಕಾರ, ನೇಪಾಳದಲ್ಲಿ ಸನ್ಯಾಸಿ ಎಂಬ ನಾಥಪಂಥಿ ಪಂಗಡದವರು ಗೃಹಸ್ಥರು.

[3]       Rules and Regulations of the Akhil Bharathvarshiya Avadhoot Bhesh Barapanth Yogimahasabha, Haridwar, Pp.5