ಗೋರಖ ಮಚೇಂದ್ರ

 

ನಾಥಪಂಥದಲ್ಲಿ ಜನಪ್ರಿಯವಾಗಿರುವ ಅನೇಕ ಐತಿಹ್ಯಗಳಿವೆ. ಕತೆಗಳಿವೆ. ಅವುಗಳಲ್ಲಿ ಪ್ರಸಿದ್ಧವಾದುದು ಮಚೇಂದ್ರನು ಸ್ತ್ರೀರಾಜ್ಯಕ್ಕೆ ಹೋಗಿದ್ದು. ಕದ್ರಿಯ ಸ್ಥಳ ಪುರಾಣಗಳ ಪ್ರಕಾರ, ಒಮ್ಮೆ ಸ್ತ್ರೀರಾಜ್ಯದ ರಾಣಿ ಪಿಂಗಳೆಗೆ ಒಬ್ಬ ಆರೋಗ್ಯಕಾಯದ  ಪುರುಷನನ್ನು ಕೂಡಿ, ಗಂಡುಸಂತಾನವನ್ನು ಪಡೆಯಬೇಕು ಎಂಬ ಉತ್ಕಟ ಆಸೆ ಮೊಳೆಯಿತು. ಅವಳು ಇದನ್ನು ಯೋಗಿಯೂ ಬ್ರಹ್ಮಚಾರಿಯೂ ಆದ ಹನುಮಂತನಲ್ಲಿ ಹೋಗಿ ಹೇಳಿಕೊಳ್ಳುತ್ತಾಳೆ. ಅವನು ಇದು ತನ್ನಿಂದಾಗದು. ಆದರೆ ಒಬ್ಬ ತೇಜಸ್ವಿ ಪುರುಷನನ್ನು ನಿನ್ನಲ್ಲಿಗೆ ಬರುವಂತೆ ಮಾಡುತ್ತೇನೆ ಎಂದು ಹೇಳಿ, ಮಚೇಂದ್ರನಾಥನು ಅಲ್ಲಿಗೆ ಹೋಗುವಂತೆ ಮಾಡುತ್ತಾನೆ. ಮಚೇಂದ್ರನು ಅಲ್ಲಿ ಹೋಗಿ ರಾಣಿಯ  ಪ್ರೇಮಪಾಶದಲ್ಲಿ ಸಿಲುಕಿ, ತನ್ನ ವಿದ್ಯೆ ಸಾಧನೆ ಶಿಷ್ಯರು ಎಲ್ಲವನ್ನು ಮರೆತುಬಿಡುತ್ತಾನೆ. ಎಷ್ಟು ವರ್ಷವಾದರೂ ಬರುವುದಿಲ್ಲ. ಇತರ ಪುರುಷರಿಗೆ ಪ್ರವೇಶವಿಲ್ಲದ ರಾಜ್ಯವದು. ಆಗ ತನ್ನ ಗುರುವನ್ನು ಈ ಅವಸ್ಥೆಯಿಂದ ಪಾರುಮಾಡಬೇಕು ಎಂದು ಗೋರಖನು ಮದ್ದಲೆ ಬಾರಿಸುವವನ ವೇಷದಲ್ಲಿ ಸ್ತ್ರೀರಾಜ್ಯಕ್ಕೆ ಬರುತ್ತಾನೆ. ಬಂದು  ‘ಚಲ್ ಮಚೇಂದ್ರ ಗೋರಖ ಆಯಾ’ ಎಂಬರ್ಥದ ಧ್ವನಿ ಹೊರಡುವಂತೆ ಮದ್ದಲೆ ಬಾರಿಸುತ್ತಾನೆ. ಮಚೇಂದ್ರನಿಗೆ ಎಚ್ಚರವಾಗುತ್ತದೆ. ಆತ ಅತಿಭೋಗದ ನಾರಿ ಸಾಧನೆಯಿಂದ ಎಚ್ಚೆತ್ತು, ಯೋಗಮಾರ್ಗಕ್ಕೆ ಮರಳುತ್ತಾನೆ.

ಶಿಷ್ಯ ತಪ್ಪುಮಾಡಿದಾಗ ಗುರು ಎಚ್ಚರಿಸುವುದು ಸಾಮಾನ್ಯ; ಆದರೆ ಗುರುವೇ ಪಥ ತಪ್ಪಿದಾಗ ಶಿಷ್ಯ ಬಂದು ಎಚ್ಚರಿಸುವುದು ವಿಶೇಷ ಎನಿಸುತ್ತದೆ. ಈ ಕಥೆ ಅನೇಕ ಅರ್ಥಗಳನ್ನು ಭರಿಸಿಕೊಂಡಿರುವಂತಿದೆ. ಉದಾ. ಗುರುಪಂಥಗಳಲ್ಲಿ ಅರಿವಿಂಗೆ ಹಿರಿದು ಕಿರಿದುಗಳಿಲ್ಲ. ಆದರೆ ಸದ್ಯದ ಚರ್ಚೆಗೆ ಮುಖ್ಯವಾದುದು, ನಾಥಪಂಥವನ್ನು ರೂಪಿಸುವಲ್ಲಿ ಕಲ್ಯಾಣದ ಚಳುವಳಿಗೆ ಅಲ್ಲಮ ಬಸವಣ್ಣರ ಜೋಡಿಯಂತೆ,   ಮಚೇಂದ್ರ ಹಾಗೂ ಗೋರಖರಿಬ್ಬರೂ ಕರ್ತೃಗಳಾದರೂ, ಪಂಥದ ತಾತ್ವಿಕ ನಿರ್ವಹಣೆಯಲ್ಲಿ ಗೋರಖನೇ ನಿರ್ಣಾಯಕ ಎಂಬುದು. ಇಬ್ಬರೂ ಮಹಾನ್ ದಾರ್ಶನಿಕರು ಹಾಗೂ ಯೋಗಿಗಳು. ಭಾರತದಲ್ಲಿ ಇವರ ಪ್ರಸ್ತಾಪವಿಲ್ಲದ ಪ್ರದೇಶವೇ ಇಲ್ಲವೆನ್ನಬಹುದು. ದೇಶದಾದ್ಯಂತ  ಬೇರೆಬೇರೆ ಪ್ರದೇಶಗಳಲ್ಲಿ ನವನಾಥರ ಪಟ್ಟಿ ಸಿಗುತ್ತದೆ. ಇದರಲ್ಲಿರುವ  ಹೆಸರುಗಳು ಏಕರೂಪತೆ ಇಲ್ಲ. ಆದರೆ ಎಲ್ಲ ಪಟ್ಟಿಗಳಲ್ಲಿ ಗೋರಖ ಮಚೇಂದ್ರರ ಹೆಸರು ಕಡ್ಡಾಯವಾಗಿ ಬರುತ್ತದೆ.  ಇಷ್ಟು ಖ್ಯಾತರಾದ ಇವರ ವೈಯಕ್ತಿಕ ಜೀವನದ ಬಗ್ಗೆ ಸ್ಪಷ್ಟವಾದ ವಿವರಗಳು ಸಿಗುವುದಿಲ್ಲ. ಗೋರಖ ಮಚೇಂದ್ರರು ಹುಟ್ಟಿದ ಸ್ಥಳ, ಕಾಲ ಹಾಗೂ ಪಂಥಗಳ ಬಗ್ಗೆ ಬಹಳ  ವಾದವಿವಾದಗಳಿವೆ.  ಇವರು ನಮ್ಮ ಸೀಮೆಯಲ್ಲಿ ಹುಟ್ಟಿದವರು, ನಮ್ಮ ನಾಡಿಗೆ ಬಂದಿದ್ದರು, ಎಂದು ಭಾರತದ ಹಲವಾರು ಪ್ರದೇಶಗಳು ಹಕ್ಕುಸಾಧಿಸುತ್ತವೆ. ಕರ್ನಾಟಕವೂ ಇದರಲ್ಲಿ ಹಿಂಬಿದ್ದಿಲ್ಲ. ಗೋರಖನು ಪಟ್ಟದಕಲ್ಲಿನಲ್ಲಿ ಹುಟ್ಟಿದವನು ಹಾಗೂ ರಾಜನೊಬ್ಬನ ಗೋವುಗಳನ್ನು ಕಾದುಕೊಂಡಿದ್ದವನು ಎಂಬ ಈ ವಾದವೊಂದಿದ್ದು, ಅದರಲ್ಲಿ ಯಾವ ತಾಳಿಕೆಯೂ ಇಲ್ಲ.

[1]

ಮಚೇಂದ್ರನು ಬಂಗಾಲದ ಚಂದ್ರಗಿರಿಯಲ್ಲಿಯೂ ಗೋರಖನು ನೇಪಾಳದಲ್ಲಿಯೂ ಹುಟ್ಟಿದವರು, ಇಬ್ಬರೂ ೧೦ನೇ ಶತಮಾನದಲ್ಲಿದ್ದವರು ಎಂದು ವ್ಯಾಪಕವಾಗಿ ನಂಬಲಾಗಿದೆ. ಬ್ರಿಗ್ಸನ ಪ್ರಕಾರ, ಗೋರಖ ಮಚೇಂದ್ರರು ಪಂಜಾಬು ಭಾಗದವರಾಗಿದ್ದು ನಂತರ ಬಂಗಾಲದ ಕಡೆಗೆ ಚಲಿಸಿದರು. ಗೋರಖನು ದಕ್ಷಿಣಾಪಥದ ವಡವ ದೇಶದಲ್ಲಿ ಅದರಲ್ಲೂ ಗೋದಾವರಿ ತೀರದ ಚಂದ್ರಗಿರಿಯಲ್ಲಿ ಹುಟ್ಟಿದವನೆಂದೂ ಕೆಲವು  ನಾಥಪಠ್ಯಗಳು ಹೇಳುತ್ತವೆ; ‘ಕವಿರಾಜಮಾರ್ಗ’ದ ಪ್ರಕಾರ ಕನ್ನಡನಾಡು ಗೋದಾವರಿವರೆಗೂ ಇತ್ತಾದ್ದರಿಂದ, ಗೋರಖನು ಕರ್ನಾಟಕದವನಿರಬಹುದು ಎಂದು ಊಹಿಸಲಾಗಿದೆ; ಈಗಲೂ ಗೋದಾವರಿ ತೀರದ ತ್ರ್ಯಂಬಕೇಶ್ವರದಲ್ಲಿ ಗೋರಖನಾಥನು ತಪವಿದ್ದ ಗುಹೆಯಿದೆ. ಗೋರಖನಾಥನ ಅಖಾಡವಿದೆ. ವಿಶೇಷವೆಂದರೆ, ಗೋರಖ ಮಚೇಂದ್ರರು ಮರಾಠಿ ಪರಂಪರೆಯಲ್ಲಿ ದತ್ತಾತ್ರೇಯನಿಂದ ಗುರುದೀಕ್ಷೆ ಪಡೆಯುತ್ತಾರೆ. ಈ ಆಧಾರದಲ್ಲಿ ಗೋರಖನು ನಮ್ಮವನೆಂದು ಮರಾಠಿ ಸಂಸ್ಕೃತಿ ಹಕ್ಕುಸಾಧಿಸುತ್ತದೆ. ಮಚೇಂದ್ರನು ಹೋಗಿ ನೆಲೆಸಿದ್ದ ಸ್ತ್ರೀರಾಜ್ಯವು ಯಾವುದು ಎನ್ನುವ ಬಗ್ಗೆ ವಿದ್ವಾಂಸರಲ್ಲಿ ಸಹಮತವಿಲ್ಲ. ಅದು  ಸಿಂಹಳದ್ವೀಪವೆಂದೂ, ಅಸ್ಸಾಮಿನ ಕಾಮಾಖ್ಯವೆಂದೂ  ಕೌಳಪಂಥದ ಯೋಗಿನಿಯರಿದ್ದ  ಶ್ರೀಶೈಲದ ಕದಳಿವನವೆಂದೂ ಕೇರಳವೆಂದೂ­-ಹೀಗೆ ೪  ವಾದಗಳಿವೆ. ಅದು ಶ್ರೀಶೈಲವೆಂಬ ವಾದ ಢೇರೆಯವರದು.[2] ಅವರ ವಾದಕ್ಕೆ ಪೂರಕವೆಂಬಂತೆ ಶ್ರೀಶೈಲ ಮಲ್ಲಿಕಾರ್ಜುನ ಗುಡಿಯ ಪ್ರಾಕಾರದಲ್ಲಿ,  ಮತ್ಸ್ಯಾರೂಢ ಮಚೇಂದ್ರನ ಶಿಲ್ಪಗಳಿವೆ. ಕರ್ನಾಟಕದ ಶ್ರೀಶೈಲ ಮಲ್ಲಿಕಾರ್ಜುನನ ಗುಡಿಗಳಲ್ಲೂ ಮಚೇಂದ್ರ ಶಿಲ್ಪಗಳಿವೆ. ಶೃಂಗೇರಿಯ ಮಲ್ಲಯ್ಯನ ಬೆಟ್ಟದಲ್ಲಿರುವ ಗುಡಿಯ ಪೂರ್ವದ ಗೋಡೆಯಲ್ಲಿ ಮೀನಿನ ಮೇಲೆ ಕುಳಿತ ಯೋಗಿಯ ಉಬ್ಬುಶಿಲ್ಪವಿದೆ. ಆದರೆ ಮಚೇಂದ್ರನಿದ್ದ ಸ್ತ್ರೀರಾಜ್ಯವು ಕೇರಳವೆಂದು ಕದ್ರಿಯ ಸ್ಥಳಪುರಾಣಗಳು ಭಾವಿಸುತ್ತವೆ. ಅಲ್ಲಿಂದ ಹೊರಟ ಮಚೇಂದ್ರನು ನೇರವಾಗಿ ನೇತ್ರಾವತಿ ನದಿಯನ್ನು ದಾಟಿ ಕದ್ರಿಯ ಕದಳಿವನಕ್ಕೆ ಬಂದನೆಂದೂ, ಅಲ್ಲಿ ತನ್ನ ಹೆಸರಲ್ಲಿ ಮಂಜುನಾಥ ದೇವರನ್ನು ಸ್ಥಾಪಿಸಿದನೆಂದೂ  ‘ಕದಲೀ ಮಂಜುನಾಥ ಮಹಾತ್ಮ್ಯೆ’ ಹೇಳುತ್ತದೆ. ಕದ್ರಿಯ ಪರಿಸರವು ಈಗಲೂ ಮಚೇಂದ್ರನ ಜತೆ ಗಾಢಸಂಬಂಧ ಪಡೆದಿದೆ. ಕರಾವಳಿ ಸೀಮೆಯಲ್ಲಿ ಮೀನಿನ ಮೇಲೆ ಕುಳಿತ ಮಚೇಂದ್ರನ ಹಲವಾರು ಮೂರ್ತಿಗಳು ಸಿಗುತ್ತವೆ. ಮಚೇಂದ್ರನೇ ಕದ್ರಿಯ ಮಂಜುನಾಥ ಎಂಬ ವಾದವಂತೂ ಬಲವಾಗಿದೆ. ಮಂಜುನಾಥ ಗುಡಿ ಕಟ್ಟಿಸಿದ ಅಳುಪ ರಾಜರ ರಾಜಚಿಹ್ನೆ ಮೀನು. ಬಹುಶಃ ಆರಂಭದಲ್ಲಿದ್ದ  ಮೀನುಗಾರರೇ ಮುಂದೆ ದೊರೆಗಳಾಗಿದ್ದು, ಮೀನ ವಾಹನನಾದ ಮಚೇಂದ್ರನ ಗುಡಿ ಭಕ್ತಿಯಿಂದ ಸ್ಥಾಪಿಸಿರುವ ಸಾಧ್ಯತೆಯೂ ಇದೆ. ಇದಕ್ಕೆ ಪೂರಕವಾಗಿ ಕರಾವಳಿಯಲ್ಲಿ  ಮೀನುಗಾರ ಸಮುದಾಯವಿದೆ.  ಈಗಲೂ ಮೊಗವೀರರು ಕಡಲಿಗೆ ಇಳಿಯುವ ವರ್ಷದ ಮೊದಲದಿನ, ಕದ್ರಿಯ ಜೋಗಿಮಠದ ನಾಥನಿಂದ ಸಮುದ್ರಪೂಜೆ ಮಾಡಿಸುತ್ತಾರೆ. ಅದು ಮಚೇಂದ್ರನ ಪೂಜೆ ಕೂಡ. ಕರಾವಳಿಯಲ್ಲಿ ಮಚೇಂದ್ರನ ಹೆಸರನ್ನು ಈಗಲೂ ಇಟ್ಟುಕೊಳ್ಳುವವರಿದ್ದಾರೆ. ಇಲ್ಲಿ ಬಿಟ್ಟರೆ, ಈ ಹೆಸರನ್ನು ಇರಿಸಿಕೊಳ್ಳುವ ಜನ ಗುಲಬರ್ಗ ಬೀದರ್ ಭಾಗದಲ್ಲಿ ಇದ್ದಾರೆ.

ಹಂಪಿಯ ವಿರೂಪಾಕ್ಷ ಗುಡಿಯಲ್ಲಿಯೂ ನದಿದಿಕ್ಕಿನ ಗೋಡೆಯಲ್ಲಿ  ಮೀನಾರೂಢನಾದ  ಮಚ್ಚೇಂದ್ರನಾಥನ ಶಿಲ್ಪವಿದೆ. ಹಂಪಿಯ ಮಂಟಪಗಳ  ಕಂಭಗಳಲ್ಲಿಯೂ ಈ ಮೀನಾ ರೂಢ ಯೋಗಿಯ ಶಿಲ್ಪಗಳು ಕಾಣಿಸುತ್ತವೆ. ನದಿತೀರದಲ್ಲಿರುವ ಹಂಪಿ ಪ್ರದೇಶದಲ್ಲಿ ಬೆಸ್ತರ ವಾಸವಿದ್ದು, ಮಚೇಂದ್ರನ ಆರಾಧನೆ ಇದ್ದಿರಬಹುದು.  ವಿಜಯನಗರದಲ್ಲಿದ್ದ ಮಾಧವಾಚಾರ್ಯನ ತಮ್ಮ ಭೋಗನಾಥನು ನಾಥಪಂಥದವನಾಗಿದ್ದನಂತೆ.[3] ಇದಕ್ಕೂ ಈ ಮೀನವಾಹನ ಯೋಗಿಯ ಶಿಲ್ಪಗಳಿಗೂ ಸಂಬಂಧ ಇದ್ದೀತು.   ಕೆಂಪೇಗೌಡನು ಅಲಸೂರಿನಲ್ಲಿ ಕಟ್ಟಿಸಿದ ಸೋಮೇಶ್ವರ ಗುಡಿಯಲ್ಲಿ ನವನಾಥರ ಶಿಲ್ಪಗಳಿದ್ದು, ಅದರಲ್ಲಿ ಗೋರಖ  ಮಚೇಂದ್ರರು ಇದ್ದಾರೆ. ಲುಂಕೆಮಲೆಯ ಭೈರವ ಗುಡಿಯ ಎದುರಿರುವ ಸಿಡಿಕಂಬದಲ್ಲಿ ಮೀನಿನ ಮೇಲೆ ಕುಳಿತ ಮಚ್ಚೇಂದ್ರನಾಥನ ಕೆತ್ತನೆಯಿದೆ.  ಅನಿಮಿಷ ಎಂದರೆ ಕಣ್ಣುರೆಪ್ಪೆಯಿಲ್ಲದ್ದು. ಅಂದರೆ ಮೀನು.  ಅಲ್ಲಮಪ್ರಭುವಿನ ಗುರು ಅನಿಮಿಷಯ್ಯನು ಮೂಲತಃ ಮಚೇಂದ್ರನೇ ಎಂಬ ವಾದಗಳು ಕನ್ನಡದಲ್ಲಿವೆ. ಈ ವಾದವನ್ನು ಮರಾಠಿ ಪರಂಪರೆಯನ್ನು ಅಧ್ಯಯನ ಮಾಡಿದ್ದ ಬೇಂದ್ರೆಯವರು ಸಹ  ಮಾಡುತ್ತಾರೆ.[4] ಗೋರಖನು ಮದ್ದಲೆಯವನಾಗಿ ಹೋಗಿ ಗುರು ಮಚೇಂದ್ರನನ್ನು ಬಿಡಿಸಿ ತರುವ ಕತೆಗೂ ಮದ್ದಲೆ ಬಾರಿಸುವ ನಟುವರ ಜಾತಿಯವನಾದ ಅಲ್ಲಮನ ಗುರು ಅನಿಮಿಷಯ್ಯ ಎಂಬುದಕ್ಕೂ ಇರುವ ಸಾಮ್ಯ ಆಶ್ಚರ್ಯಕರವಾಗಿದೆ.

ಕನ್ನಡ ಪಠ್ಯಗಳಲ್ಲಿ ಕಾಣಿಸಿಕೊಳ್ಳುವುದು  ಗೋರಖ. ಮಚೇಂದ್ರನಲ್ಲ. ಕನ್ನಡ ಕವಿಗಳು ತರುವ ಮುಖಾಮುಖಿಗಳಲ್ಲಿ  ಗೋರಖನು  ಅಲ್ಲಮನ ಜತೆ ಶ್ರೀಶೈಲದ ಕದಳಿವನದಲ್ಲಿ ವಾಗ್ವಾದ ಮಾಡುತ್ತಾನೆ. ರೇವಣಸಿದ್ಧನ ಜತೆ ಕೊಲ್ಲಾಪುರದಲ್ಲಿ ಪೈಪೋಟಿ ಮಾಡುತ್ತಾನೆ. ಮರುಳಸಿದ್ಧನ ಜತೆ ಯುದ್ಧ ಮಾಡುತ್ತಾನೆ. ಇದರ ಜತೆಗೆ  ಕನ್ನಡದಲ್ಲಿ ಗೋರಕ್ಷಪಾಲಪ್ರಭು ಎಂಬ ಅಂಕಿತವುಳ್ಳ ಗೋರಕ್ಷ ಎಂಬ ವಚನಕಾರನೂ ಇದ್ದಾನೆ! ಆದರೆ ಕನ್ನಡ ಪಠ್ಯಗಳಲ್ಲಿ ಕಾಣಿಸುವ  ಗೋರಖನು ದೊಡ್ಡ ಯೋಗಿಯಲ್ಲ. ಇನ್ನೂ ಸಾಧನೆಯ ಹಂತಗಳಲ್ಲಿರುವ  ಸಾಧಕ. ಕರ್ನಾಟಕದಲ್ಲಿ ಗೋರಖನ ಮೂರ್ತಿಗಳು ಕದ್ರಿಯ ಜೋಗಿಮಠದಲ್ಲಿಯೂ ಮಂಜುನಾಥ ಗುಡಿಯಲ್ಲಿಯೂ ಇವೆ. ವಿಶೇಷವೆಂದರೆ, ಬಸವಕಲ್ಯಾಣ ತಾಲೂಕಿನ ಗೋರಟಾ ಎಂಬ ಹಳ್ಳಿಯಲ್ಲಿ ಗೋರಖನಾಥನ ದೊಡ್ಡ ಮೂರ್ತಿಯಿರುವುದು.   ಕನ್ನಡಕ್ಕೆ ಹೋಲಿಸಿದರೆ ಭಾರತದ ಬೇರೆ ಭಾಷೆಗಳಲ್ಲಿ ಗೋರಖನಿಗೆ ದೊಡ್ಡ ಸ್ಥಾನವಿದೆ. ಮರಾಠಿ ಪರಂಪರೆಯಲ್ಲಿ ಆತ ಬೇರೆಬೇರೆ ಕಾಲಘಟ್ಟಗಳಿಗೆ ಸೇರಿದ ನಿವೃತ್ತಿನಾಥ, ಜ್ಞಾನೇಶ್ವರ ಮುಂತಾದವರ ಜತೆ ಸಂವಾದ ಮಾಡುತ್ತಾನೆ; ಉತ್ತರದಲ್ಲಿ ಗೋರಖನು ಕಬೀರನ ಜತೆ ಸಂವಾದ ಮಾಡುತ್ತಾನೆ; ಸಿಂಧ್ ಪ್ರಾಂತ್ಯದ ಗೋಪಿಚಂದನನ್ನು ಭೇಟಿಯಾಗುತ್ತಾನೆ; ಪಂಜಾಬಿನ ಗುರುನಾನಕನ ಜತೆ ಗೋಷ್ಠಿ ನಡೆಸುತ್ತಾನೆ; ಅಸಾಮಿನ ರಸಾಲುವಿನ ಸಮಕಾಲೀನನಾಗುತ್ತಾನೆ. ಇವರೆಲ್ಲ ಐದಾರು ಶತಮಾನಗಳ ಅಂತರದಲ್ಲಿ ಬಂದವರು. ಇಷ್ಟು ದೀರ್ಘಕಾಲದಲ್ಲಿ ಒಬ್ಬ ಸಂತ ಬದುಕಿ ಸಂವಾದ ಮಾಡಲು ಅಸಾಧ್ಯ. ಆದರೆ ಈ ಕಥನಗಳು ಗೋರಖನ  ಜನಪ್ರಿಯತೆಯನ್ನು ಖಂಡಿತವಾಗಿ ಸೂಚಿಸುತ್ತಿವೆ.  ಅವನ ಜತೆ ಭೇಟಿಯಾಗಿಸುವ ಮೂಲಕ ತಮ್ಮ ಸಂತನಿಗೆ ಘನತೆ ಮತ್ತು ಅಧಿಕೃತತೆಯನ್ನು ಸಮುದಾಯಗಳು ಒದಗಿಸಿಕೊಳ್ಳುತ್ತಿವೆ. ಒಬ್ಬ ಗುರುವಿನ ದಾರ್ಶನಿಕ ವ್ಯಕ್ತಿತ್ವವು ಸಾಂಸ್ಕೃತಿಕ ನಾಯಕತ್ವವನ್ನು ಪಡೆದುಕೊಂಡು ಹರಡುವ ಬಗೆಯಿದು.

ನೇಪಾಳದ ಸಾಂಸ್ಕೃತಿಕ ನಾಯಕರು

ಭಾರತದ ವಿಭಿನ್ನ ಪ್ರದೇಶಗಳು ನಮ್ಮವರೆಂದು ಎಷ್ಟೇ ಸಾಧಿಸಲಿ, ಚಾರಿತ್ರಿಕವಾಗಿ ಗೋರಖ ಮಚೇಂದ್ರರ ಮೂಲದ ಬಗ್ಗೆ ಯಾವುದೇ ಭಿನ್ನಮತಗಳಿರಲಿ, ಇವರಿಬ್ಬರು  ನೇಪಾಳದ ಧಾರ್ಮಿಕ ಸಾಂಸ್ಕೃತಿಕ ನಾಯಕರು ಎಂಬುದು ಮಾತ್ರ ಸ್ವಯಂ ಸಿದ್ಧವಾಗಿದೆ.    ನೇಪಾಳದ ಕಠಮಂಡುವಿನ ಪಶುಪತಿ ದೇವಸ್ಥಾನಕ್ಕೆ ಕೊಂಚ ದೂರದಲ್ಲಿ, ಮೃಗಸ್ಥಲಿ ಬೆಟ್ಟವಿದೆ. ‘‘ಮೃಗಸ್ಥಲೀ ಸ್ಥಲೀಪುಣ್ಯ ಭಾಲ ನೇಪಾಳ ಮಂಡಲೇ ಯತ್ರ ಶಿವಗೋರಕ್ಷನಾಥೇನ ಮೇಘಮಾಲಿಸಾನಿಕೃತ’’ ಎಂದು ಅದರ ವರ್ಣನೆ ಬರುತ್ತದೆ. ಮೃಗಸ್ಥಲಿಯೇಕೆ, ಬಹುತೇಕ ನಾಥಪಂಥದ ಜಾಗಗಳು ಮೋಡಗಳ ಮಾಲೆಯು ಆವರಿಸಿಕೊಳ್ಳುವ ಬೆಟ್ಟದ ಮೇಲೇ ಇರುತ್ತವೆ. ನೇಪಾಳಕ್ಕೆ  ಗೋರಖದೇಶವೆಂಬ ಹೆಸರಿದೆ. ಅಲ್ಲಿನ ಜನರನ್ನು ಗೋರಖರೆಂದು ಕರೆಯಲಾಗುತ್ತದೆ. ಭಾರತದಲ್ಲಿ ರಾತ್ರಿಕಾವಲು ಕೆಲಸ ಮಾಡುವ ನೇಪಾಳಿಗಳನ್ನು ಗೂರ್ಖರು ಎಂದೇ ಕರೆಯತ್ತಾರಷ್ಟೆ. ನೇಪಾಳದಲ್ಲಿ ಗೋರಖ ಜಿಲ್ಲೆಯಿದೆ. ನೇಪಾಳದ ನಾಣ್ಯಗಳ ಮೇಲೆ ಶಿವಗೋರಖನಾಥ ಎಂಬ ಲಾಂಛನವಿದೆ. ಕಠಮಂಡುವಿನ ಪಶುಪತಿನಾಥ ಮಂದಿರವು ಮೂಲತಃ ನಾಥರದ್ದಾಗಿತ್ತು. ಮಚೇಂದ್ರನ ಹೆಸರಲ್ಲಿ ನೇಪಾಳದಲ್ಲಿ ರಾಷ್ಟ್ರೀಯ ಹಬ್ಬ ಜರುಗುತ್ತದೆ. ಅಲ್ಲಿ ಅವನು ಫಲವಂತಿಕೆಯ ದೈವ. ಒಮ್ಮೆ ಗೋರಖನು ಮೋಡಗಳನ್ನೆಲ್ಲ ಹಾವುಗಳನ್ನಾಗಿ ಮಾಡಿ ಅವುಗಳ ಮೇಲೆ ಕೂತು ತಪಸ್ಸನ್ನು ಆಚರಿಸುವಾಗ, ದುಂಬಿಯಾಗಿ ಹೋಗಿ ಮಚೇಂದ್ರನು ಮೋಡಗಳನ್ನು ಬಿಡುಗಡೆ ಮಾಡಿ ಮಳೆತರಿಸಿದನಂತೆ. ಈಗಲೂ ಮಳೆಬಾರದಿದ್ದರೆ ಮಚೇಂದ್ರನನ್ನು ಪೂಜಿಸುವ ಪದ್ಧತಿ ನೇಪಾಳದಲ್ಲಿದೆ.

ಮಚೇಂದ್ರನು ಮೂಲದಲ್ಲಿ ಬೌದ್ಧತಾಂತ್ರಿಕ ಪಂಥದವನೊ ಅಥವಾ ಕೌಳಪಂಥಿಯೊ ಎಂಬ ಬಗ್ಗೆ ಚರ್ಚೆಯಿದೆ. ಕೌಳಪಂಥದ ಆಧಾರಗ್ರಂಥವಾದ ‘ಕೌಲಜ್ಞಾನ ನಿರ್ಣಯ’ದ ಕರ್ತೃ ಮಚೇಂದ್ರನು. ಟಿಬೇಟು ನೇಪಾಳಗಳ ತಾಂತ್ರಿಕ ಬೌದ್ಧ ಪರಂಪರೆಯಲ್ಲಿ ಮಚೇಂದ್ರನು ಬೋಧಿಸತ್ವನ ನಾಲ್ಕನೇ ಅವತಾರವಾದ ಅವಲೋಕಿತೇಶ್ವರನು. ಆದರೂ ಬೌದ್ಧ ವಜ್ರಯಾನ ಪಂಥಕ್ಕೆ ಶೈವರೂಪ  ಕೊಟ್ಟ ಕೀರ್ತಿ ಗೋರಖನಿಗೆ ಕೊಡಲಾಗಿದೆ.  ನಾಥಪಂಥಕ್ಕೆ ಭದ್ರವಾದ ತಾತ್ವಿಕ ಬುನಾದಿ ಹಾಕಿ, ನಾಡಿನ ತುಂಬ ಹರಡುವ ಶಕ್ತಿಯನ್ನು ಒದಗಿಸಿದವನು ಮಾತ್ರ ಗೋರಖನೆ. ಪ್ರಭಾವ ಹಾಗೂ ಖ್ಯಾತಿಯ ದೃಷ್ಟಿಯಿಂದಲೂ ಗುರುವಿಗಿಂತ ಶಿಷ್ಯನೇ ಮುಂದು. ಎಂತಲೇ ನಾಥಪಂಥದ ಇನ್ನೊಂದು ಹೆಸರು  ಗೋರಖಪಂಥ. ನಾಥರ ಪರ್ಯಾಯ ಹೆಸರು ಗೋರಖನಾಥಿ.  ನಾಥರ ಆಚರಣೆಗಳಲ್ಲಿ ಹಾಕುವ ಜಯಕಾರದಲ್ಲೂ ಮೊದಲ ಹೆಸರು ಗೋರಖನದು. ನಂತರದ್ದು ಮಚೇಂದ್ರನದು. ಭಾರತದ ಬಹುತೇಕ ನಾಥಮಠಗಳು ಗೋರಖನ ಹೆಸರಲ್ಲಿವೆ. ಭಾರತದ ಅವಧೂತ ಪಂಥಗಳಲ್ಲಿ  ಗೋರಖನಾಥನಷ್ಟು ಜನಪ್ರಿಯ ಯೋಗಿ ಬೇರೆಯಿಲ್ಲ. ಭಾರತದ ವಾರಕರಿ, ಮಹಾನುಭಾವ, ಗುರುನಾನಕ, ಕಬೀರ, ದತ್ತ ಮುಂತಾದ ಪಂಥಗಳಲ್ಲಿ ಗೋರಖನು ದೊಡ್ಡ ಪಾತ್ರವಾಗಿ ಬರುತ್ತಾನೆ. ಉಜ್ಜಯಿನಿಯ ದೊರೆ ಭರ್ತೃಹರಿ ಮೊದಲಾದವರು ರಾಜ್ಯತ್ಯಾಗ ಮಾಡಿ ಅವನ ಶಿಷ್ಯರಾಗುತ್ತಾರೆ. ಆದರೆ ಕರ್ನಾಟಕದಲ್ಲಿ ಸಿಗುವ ಅವನ ಚಿತ್ರಗಳು ಯಕೋ ಗ್ರಹಣ ಹಿಡಿದಂತಿವೆ.

ರೂಪಕಗಳಾಗಿ ಪುರಾಣಕತೆಗಳು

ಗೋರಖ ಮಚೇಂದ್ರರು ಮಾಡಿದರು ಎನ್ನಲಾಗುವ ಪವಾಡ ಕಥೆಗಳನ್ನು ಗಮನಿಸಬೇಕು. ಅವೆಂದರೆ ಮಕ್ಕಳಿಲ್ಲದವರಿಗೆ ಸಂತಾನ ಕೊಡುವುದು, ಮಲೆತು ಎದುರಾದವರನ್ನು ಸೋಲಿಸುವುದು, ರೋಗ ಗುಣಪಡಿಸುವುದು, ಸತ್ತವರಿಗೆ ಜೀವದಾನ ಮಾಡುವುದು,  ಬಹಿಷ್ಕೃತರಾದ ಕೆಳಸ್ತರದ ಜನರಿಗೆ ಸಹಪಂಕ್ತಿ ಭೋಜನಕ್ಕೆ ಹಕ್ಕು ಕೊಡಿಸುವುದು ಇತ್ಯಾದಿ. ಇವು ನಾಥರ ಜತೆ ಜೋಡಣೆಗೊಂಡಿರುವ  ಸಾಮಾಜಿಕ ಆಯಾಮಗಳು; ಜನರೇ ಸಾಮಾಜಿಕ ತಾರತಮ್ಯಗಳ ವಿರುದ್ಧ ಹೋರಾಡುತ್ತ ಈ ಸಂತರ ಹೆಸರಲ್ಲಿ ಈ ರೂಪಕ ಕತೆಗಳನ್ನು ಕಟ್ಟಿರುವ ಸಾಧ್ಯತೆಯೂ ಇದೆ. ನಾಥರ ಹುಟ್ಟಿನ ಕತೆಗಳನ್ನು ಈ ದೃಷ್ಟಿಯಿಂದ ಗಮನಿಸಬೇಕು. ಶಿವನ ವೀರ್ಯವು ನೀರಿನಲ್ಲಿ ಬಿದ್ದಾಗ ಅದನ್ನು ಮೀನುನುಂಗಿ ಅದರ ಹೊಟ್ಟೆಯಲ್ಲಿ ಮಚೇಂದ್ರನು ಹುಟ್ಟಿದವನು. ಶಿವನು ಪಾರ್ವತಿಯನ್ನು ಜಲಮಧ್ಯದ ಏಕಾಂತಕ್ಕೆ ಕರೆದೊಯ್ದು ರಹಸ್ಯವಿದ್ಯೆ ಹೇಳಿಕೊಡುವಾಗ ಮೀನಿನ ಹೊಟ್ಟೆಯಲ್ಲಿ ಮಗುವಾಗಿದ್ದು ಕೇಳಿಸಿಕೊಂಡು ಜ್ಞಾನಿಯಾದವನು; ಬೆಸ್ತನಿಗೆ ಸಿಕ್ಕು ಅವನ ಮನೆಯಲ್ಲಿ ಬೆಳೆದವನು. ಒಮ್ಮೆ ಅವನು ದೇಶಸಂಚಾರ ಮಾಡುವಾಗ, ಒಮ್ಮೆ ಬಂಗಾಳ ದೇಶದಲ್ಲಿ ಕೆಳಜಾತಿಯ ಮಕ್ಕಳಿಲ್ಲದ ಹೆಂಗಸಿಗೆ, ವಿಭೂತಿ ಪ್ರಸಾದವನ್ನು ಕೊಡುತ್ತಾನೆ. ಅವಳು ನಂಬಿಕೆಯಿಲ್ಲದೆ ಅದನ್ನು ತಿಪ್ಪೆಗೆ ಎಸೆಯುತ್ತಾಳೆ. ೧೨ ವರುಷಗಳ ಬಳಿಕ ಮಚೇಂದ್ರ ಬಂದು ಕೇಳಲು ತಿಪ್ಪೆಯತ್ತ ಕೈತೋರಿಸುತ್ತಾಳೆ. ತಿಪ್ಪೆ ಅಗೆದಾಗ ಅಲ್ಲಿ ಗೋರಖ ಸಿಗುತ್ತಾನೆ.

ಈ ಮಿತ್‌ಗಳು ಯಾವೆಲ್ಲ ಸತ್ಯದ ರೂಪಕಗಳಾಗಿ ಮೂಡಿರಬಹುದು?  ರಹಸ್ಯವಿದ್ಯೆಯನ್ನು ಗುರುವಿನ ಮೂಲಕವೇ ಪಡೆಯಬೇಕಾದ ಕಾರಣದಿಂದ, ಮಚೇಂದ್ರನು ಅದನ್ನು ಕದ್ದುಕೇಳಿದ ಕತೆ ಹುಟ್ಟಿರಬಹುದು. ಮಚೇಂದ್ರನಾಥನು ಜನ್ಮತಃ ಬೆಸ್ತರವನಾಗಿದ್ದ ಕಾರಣ ಮೀನಿನ ಹೊಟ್ಟೆಯಲ್ಲಿ ಹುಟ್ಟಿದ ಕಥೆ ಹುಟ್ಟಿರಬಹುದು. ಬೌದ್ಧತಾಂತ್ರಿಕ ಪಂಥಗಳಿಂದ ಬಂದ ಮಚೇಂದ್ರನು  ತಾಂತ್ರಿಕ  ಪ್ರಜ್ಞೆಯ ಸಂಕೇತವಾದ ಮೀನಿಗೆ ಸಮೀಕರಣಗೊಂಡಿದ್ದು,  ಮುಂದೆ ಸಾಂಕೇತಿಕ ಅರ್ಥಗಳು ಹಿಂಜರಿದು ಮೀನಿನ ಹೊಟ್ಟೆಯಲ್ಲಿ ಹುಟ್ಟುವ ಕತೆ ಹುಟ್ಟಿರಬೇಕು ಎಂಬ ವ್ಯಾಖ್ಯಾನವೂ ಇದೆ. ನಾಥಪಂಥಕ್ಕೆ ದಾರ್ಶನಿಕವಾಗಿ ಗೋರಖ ಮುಖ್ಯನಾದರೆ,  ಕರ್ನಾಟಕದ ಬೆಸ್ತರಿಗೆ ಸಾಮಾಜಿಕ ಕಾರಣದಿಂದ ಮಚೇಂದ್ರನು ಮುಖ್ಯನಾಗಿದ್ದಾನೆ. ಮಚೇಂದ್ರನ ಕಾರಣದಿಂದ ನಾಥಪಂಥವು ಸಾಮಾಜಿಕವಾಗಿ ಕೆಳಸ್ತರದ ಸಮುದಾಯಗಳಲ್ಲಿ ಬೇರು ತಳೆದಿರಬಹುದು. ಇದಕ್ಕೆೊಕೆಳಜಾತಿಯ ಹೆಂಗಸಿಗೆ ಮಚೇಂದ್ರನು ಕೊಟ್ಟ ವಿಭೂತಿ ಪ್ರಸಾದದಿಂದ ಗೋರಖನು ತಿಪ್ಪೆಯಲ್ಲಿ ಹುಟ್ಟಿದವನು ಎಂಬ ಮಿತ್ ಪೂರಕವಾಗಿದೆ. ಶಂಕರ ಮೊಕಾಶಿ ಪುಣೇಕರರ ಪ್ರಕಾರ, ಮಚೇಂದ್ರನು ಬೆಸ್ತ ಹಾಗೂ ಗೋರಖನು ಗೋವಳ ಸಮುದಾಯದಿಂದಲೇ ಬಂದವರು.  ಉತ್ತರ ಕರ್ನಾಟಕದ ಕುರುಬರ ಹಾಲುಮತದ ಪುರಾಣಗಳಲ್ಲಿ ಗೋರಖನು ಕುರುಬರ ಸಾಂಸ್ಕೃತಿಕ ನಾಯಕರಿಗೆ ಗುರುವಾಗಿ ಬಂದು ಅನೇಕ ವಿದ್ಯೆಗಳನ್ನು ಕಲಿಸುತ್ತಾನೆ. ಈ ಅಸಹಜ ಹುಟ್ಟಿನ ಕತೆಗು ಕಾರಣಿಕ ಪುರುಷರು ಹುಟ್ಟಿದ ಸಮುದಾಯದ ಕಸುಬಿನ ಜತೆ ಸಂಬಂಧ ಉಂಟುಮಾಡುತ್ತವೆ. ಮರಾಠಿ ನಾಥ ಪರಂಪರೆಯಲ್ಲಿ ಗೋರಖನು ಆಡುವ ಮಕ್ಕಳಿಗೆ ಮಣ್ಣಗೊಂಬೆ ಮಾಡಿ ಜೀವಕೊಟ್ಟಾಗ ಗಹಿನಿನಾಥ ಹುಟ್ಟುವ ಕಥೆಯಿದ್ದು, ಅದು ಕುಂಬಾರ ಕುಲದ ಜತೆ ಸಂಬಂಧ ಬೆಸೆಯುವಂತಿದೆ. ಭಾರತದ ಬೇರೆಬೇರೆ ಭಾಗದಲ್ಲಿ ಬೆಸ್ತರು ಪಶುಪಾಲಕರು ಕುಂಬಾರರು ಹಾಗೂ ನೇಕಾರರು ಗೋರಖ ಮಚೇಂದ್ರರನ್ನು ತಮ್ಮ ಸಾಂಸ್ಕೃತಿಕ ನಾಯಕರನ್ನಾಗಿ ಮಾಡಿಕೊಂಡಿದ್ದಾರೆ. ಈ ಅನುಭಾವಿ ಅರ್ಥಶಾಸ್ತ್ರದ ಸ್ವರೂಪವೂ ನಮಗೆ ಇನ್ನೂ ಸ್ಪಷ್ಟವಾಗಬೇಕಿದೆ.

ಆದರೆ ಈ ಅಸಹಜ ಹುಟ್ಟಿನ ಕಥೆಗಳಿಗೆ ಇನ್ನೊಂದು ಆಯಾಮವೂ ಇದೆ. ಅದೆಂದರೆ ಇವು  ಯೋನಿಜರಾಗಿ ಹುಟ್ಟುವುದನ್ನು ನಿರಾಕರಿಸುವ ಪುರುಷ ಅಹಂಕಾರದಿಂದ ಮೂಡಿರು ವುದು. ಹೆಣ್ಣನ್ನು ಮಾಯೆಯೆಂದು ಭಾವಿಸುವ ವಿರಕ್ತ ಪರಂಪರೆಯು ಮಹಿಳೆ ಸಂಸಾರ ಭೋಗ ಇವುಗಳ ಬಗ್ಗೆ ತೋರಿದ ಆತಂಕ ತಿರಸ್ಕಾರಗಳ ಪರಿಣಾಮವೆಂದು ಅನಿಸುತ್ತದೆ. ಕರ್ಣನ ಅಥವಾ ಮರಾಠಿ ಸಂತ ಜ್ಞಾನೇಶ್ವರನ ಹುಟ್ಟಿನಂತೆ, ಇವರ ಹುಟ್ಟು ಸಾಂಪ್ರದಾಯಕ ಸಮಾಜವು ಮನ್ನಿಸಲಾಗದ ಸಂಬಂಧಗಳಲ್ಲಿ ಸಂಭವಿಸಿರಬಹುದು. ಮಹಾಭಾರತದ ಕರ್ಣನ ಕತೆ ನೆನಪಿಸುವಂತೆ, ಗೋರಖನು  ಗೊಬ್ಬರದ ರಾಶಿಯಲ್ಲಿ ಸೂರ್ಯನ ವೀರ್ಯಕಿರಣಗಳ ಸಂಯೋಗದಿಂದ ಹುಟ್ಟಿ ಬೆಳೆಯುವ ಇನ್ನೊಂದು ಕತೆಯೂ ಇದೆ. ಗಂಡುಹೆಣ್ಣಿನ ಸಂಕೇತಗಳಾಗಿ ಮಣ್ಣು ಗೊಬ್ಬರ ಬೆಳಕು ಮುಂತಾದ ದ್ಯಾವಾ ಪೃಥಿವಿಯ ಅಂಶಗಳು ಹುಟ್ಟಿನ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಮಾರ್ಮಿಕವಾಗಿದೆ. ಇಂತಹ ಕಥನವನ್ನು ರೈತಾಪಿ ಸಮುದಾಯವೇ ಹುಟ್ಟಿಸಿರಬೇಕು. ಈ ಹಿನ್ನೆಲೆಯಲ್ಲಿ ನಾಯಕನಹಟ್ಟಿ ತಿಪ್ಪೇಸ್ವಾಮಿಯ ಹೆಸರಲ್ಲಿರುವ ತಿಪ್ಪೆಯೂ ಕೆಣಕುತ್ತಿದೆ.  ಕಲ್ಯಾಣದಲ್ಲಿ ಜಂಗಮರು ಪ್ರವೇಶ ನಿರಾಕರಿಸಿದ ಮಂಟೆಸ್ವಾಮಿಯು ತಿಪ್ಪೆಯಲ್ಲೇ ಇರುತ್ತಾನೆ. ಬೇಡವಾದ ಕಸ ಚೆಲ್ಲುವ ಜಾಗವಾದ ತಿಪ್ಪೆಯು ನಮ್ಮ ಯೌಗಿಕಲೋಕದ  ಹೀರೋಗಳನ್ನು ಹಡೆಯುವ ಕ್ರಿಯೆಯು ಅಪೂರ್ವವಾಗಿದೆ. ಮಂಸ್ವಾಮಿಯ ಕಥನವು ಜ್ಯೋತಿಯ ವರ್ಣನೆಯ ಮೂಲಕ ಆರಂಭವಾಗುತ್ತದೆ. ಆ ಜ್ಯೋತಿ ಎಂತಹದ್ದೆಂದರೆ, ತಿಪ್ಪೆ ಮೇಲೆ ಹತ್ತಿಸಿ ಇಟ್ಟರೂ ಉರಿಯುತ್ತದೆ. ಗೋರಖನು ಸೂಕ್ಷ್ಮರೂಪಕಗಳಲ್ಲಿ ಕನ್ನಡ ದೇಶೀ ಸಿದ್ಧರ ಲೋಕದಲ್ಲಿ ಪ್ರವೇಶಿಸಿದ್ದಾನೆ.

ದಾರ್ಶನಿಕತೆ

ನಾಥಪಂಥಕ್ಕೆ ಕಪಾಲಮತ, ಸಿದ್ಧಮತ, ಸಿದ್ಧಮಾರ್ಗ, ಯೋಗಮಾರ್ಗ, ಅವಧೂತಮತ, ಅವಧೂತ ಸಂಪ್ರದಾಯ, ಗೋರಖಪಂಥ ಎಂಬೆಲ್ಲ ಹೆಸರುಗಳಿವೆ. ಮಚೇಂದ್ರ-ಗೋರಖರ ಸಂವಾದ ರೂಪದ ಕೃತಿಗಳಲ್ಲಿ ಗುರುವು ಶಿಷ್ಯನಿಗೆ ‘ಅವಧೂ’ ‘ಯೋಗಿ’ ಎಂದು ಕರೆಯುತ್ತಾನೆ. ‘ನಾಥ’ ಎಂದರೆ ಒಡೆಯ ಹಸು ಇಂದ್ರಿಯ ಇತ್ಯಾದಿ ಅರ್ಥಗಳಿವೆ.  ಕದ್ರಿಮಠದ ನಾಥರಿಗೆ ಶಾಸನಗಳಲ್ಲಿ ಒಡೆಯ (ಮಂಗಲನಾಥ ಒಡೆಯ)   ಕರೆದಿದೆ. ಒಡೆಯ, ಪ್ರಭು (ಅಲ್ಲಮಪ್ರಭು) ಎಂಬರ್ಥದಲ್ಲಿ ‘ಮಚೇಂದ್ರನಾಥ’ನು ‘ಮಚ್ಚಿಂದಪ್ರಭು’  ಕೂಡ ಆಗುತ್ತಾನೆ. ಪ್ರಶ್ನೆಯೆಂದರೆ, ಈ ಒಡೆತನ ಅಥವಾ  ಪ್ರಭುತ್ವ ಯಾರ ಮೇಲೆ ಯಾರು ಸ್ಥಾಪಿಸುವುದು? ಯೋಗ ಪರಿಭಾಷೆಯಲ್ಲಿ ನಾಥನೆಂದರೆ, ತನ್ನ ಇಂದ್ರಿಯಗಳನ್ನು ನಿಯಂತ್ರಿಸಿಕೊಂಡು ಅವುಗಳ ಮೇಲೆ ಪ್ರಭುತ್ವ ಸಾಧಿಸಿದವನು. ಯೋಗ ಸಾಧನೆಯ ಮೂಲಕ ವಾಯವನ್ನು ಮೇಲ್ಮುಖಿಯಾಗಿ ಕಳಿಸಿ, ಮನಸ್ಸನ್ನು ನಿಶ್ಚಲಗೊಳಿಸಿ ಅದರ ಮೇಲೆ ಹಿಡಿತ ಸಾಧಿಸಿದವನು. ವೀರ್ಯಬಿಂದುವನ್ನು ಅಧಃಪತನಕ್ಕೆ ಈಡುಮಾಡದೆ ಸಂಯಮ ಸಾಧಿಸಿದವನು. ನಾಥಪಂಥದ ದಾರ್ಶನಿಕ ಗ್ರಂಥಗಳೆಂದರೆ  ‘ಸಿದ್ಧಸಿದ್ಧಾಂತ ಪದ್ಧತಿ’ ‘ಅಮನಸ್ಕಯೋಗ’ ‘ಅಮರೌಘಶಾಸನ’ ‘ಅವಧೂತಗೀತಾ’  ‘ಹಠಯೋಗ ಪ್ರದೀಪಿಕಾ’ ‘ಗೋರಕ್ಷ ಸಂಹಿತಾ’ ‘ಗೋರಕ್ಷ ಪದ್ಧತಿ’ ಮುಂತಾದವು. ಸಂಸ್ಕೃತದಲ್ಲಿರುವ ಇವು ಗೋರಖನ ಹೆಸರಲ್ಲಿವೆ. ಗೋರಖನ ದಾರ್ಶನಿಕ ತತ್ವಗಳನ್ನು ದೇಶೀಭಾಷೆಯಲ್ಲಿ ಹಿಡಿದಿಟ್ಟಿರುವ ಜನಪ್ರಿಯ ಕೃತಿಯೆಂದರೆ ‘ಗೋರಖಬಾನಿ’. ಗೋರಖನು ತಿಪ್ಪೆಯಲ್ಲಿ ಹುಟ್ಟುವುದಕ್ಕೂ ಅವನ ಚಿಂತನೆ ಜನಭಾಷೆಯಲ್ಲಿ  ಇಳಿದಿರುವುದಕ್ಕೂ  ಸಂಬಂಧವಿದೆ. ನಾಥರ ದರ್ಶನದ ಮುಖ್ಯ ಅಂಶಗಳನ್ನು ಹೀಗೆ ಸಂಗ್ರಹಿಸಬಹುದು:

ಬ್ರಹ್ಮಾಂಡದ ಪ್ರತಿರೂಪವಾಗಿ ಪಿಂಡ ಅಥವಾ ಮನುಷ್ಯ ಶರೀರವಿದೆ. ಆದ್ದರಿಂದ ಮಾನವರೆಲ್ಲರೂ ವಿಶ್ವರೂಪಿಗಳೇ. ಪರತತ್ವದಲ್ಲಿರುವ ಚೈತನ್ಯವು ಮಾನವರಲ್ಲಿ ಇದೆ. ಆದ್ದರಿಂದ ನಾಥವು ಅದ್ವೈತವಲ್ಲ. ದ್ವೈತವೂ ಅಲ್ಲ. ಅದು ದ್ವೈತಾದ್ವೈತಗಳಿಗೆ ಅತೀತವಾದುದು.  ಇದನ್ನು ಗೋರಖ ‘ದ್ವೈತಾದ್ವೈತ ವಿವರ್ಜಿತ’ ಎನ್ನುತ್ತಾನೆ;  ಇದನ್ನು ಅದ್ವಯ ಎಂದೂ ಕರೆಯಬಹುದು. ದ್ವೈತವು ಎರಡರ ಭಿನ್ನತೆಯನ್ನು ಹೇಳಿದರೆ, ಅದ್ವೈತವು ಭಿನ್ನವಾದ ಎರಡು ಸಂಗತಿ ಮತ್ತೆ ಸೇರುವುದನ್ನು ಹೇಳುತ್ತದೆ. ಅದ್ವಯವು ವ್ಯಕ್ತಿ ಮತ್ತು ಚೈತನ್ಯ ಎರಡೂ ಬೇರೆಯೆಂದು ತಿಳಿಯುವುದೇ ಇಲ್ಲ. ಯೋಗಸಾಧನೆಯ ತುದಿಗೆ ಸಿಗುವ ಆನಂದಕ್ಕೆ ಭೋಗಿ ಭೋಗ್ಯ ಎಂಬ ದ್ವೈತವಿಲ್ಲ.  ಈ ದಾರ್ಶನಿಕತೆ ದೈವ ಮಾನವರ ಕಲ್ಪನೆಗಳನ್ನು ಕ್ರಾಂತಿಕಾರಕವಾಗಿ ಬದಲಿಸಿದಂತಿದೆ. ಇದಕ್ಕೆ ನಾಥಪಂಥದ ಬುನಾದಿಯಾಗಿರುವ  ಯೋಗದರ್ಶನವೂ ನೆರವಾಗಿದೆ. ದೈಹಿಕ ಪರಿಭಾಷೆಯುಳ್ಳ ಯೋಗಸಾಧನೆಯು ದೇಹದ ಮೂಲಕವೇ ಉನ್ನತ ಜ್ಞಾನವನ್ನೂ ಮಹಾನಂದವನ್ನೂ ಪರತತ್ವವನ್ನೂೊಪಡೆಯಬೇಕು ಎನ್ನುತ್ತದೆ. ಆದ್ದರಿಂದ ದೇಹ ಮುಖ್ಯ ಮಾತ್ರವಲ್ಲ, ಅದು ಎಲ್ಲ ತಿಳಿವಳಿಕೆಯ ಮೂಲ. ಅಂತಹ ಕಾಯ ದೃಢವಾಗಿರಬೇಕು. ನಿರೋಗಿಯಾಗಿರಬೇಕು.  ಒಂದು ಬಗೆಯಲ್ಲಿ ನಾಥವು ಕಾಯವಾದಿ. ಆದರೆ ಕೆಲವು ಯೋಗಿಗಳು ದೇಹವನ್ನು ವಜ್ರಕಾಯವಾಗಿ ಇರಿಸಿಕೊಳ್ಳಬೇಕು ಎಂದು ರಸವಿದ್ಯೆ ಹಾಗೂ ಔಷಧ ಜ್ಞಾನ ಪಡೆದು, ಅದನ್ನೇ ಒಂದು ಗುರಿಯಾಗಿಸಿಕೊಂಡರು. ಗೋರಖನು ಅದು ತಪ್ಪೆಂದು ವಿಮರ್ಶಿಸುತ್ತಾನೆ. ಬಸವಣ್ಣನ ಕಾಯವೇ ಕೈಲಾಸ, ದೇಹವೇ ದೇಗುಲ ಎಂಬ ಕಲ್ಪನೆಗಳಿಗೆ ಈ ದರ್ಶನದ ಪ್ರೇರಣೆ ಇರಬಹುದು. ನಾಥವು ಆತ್ಮ ವಾದಿಗಳಂತೆ ಆತ್ಮ ಅವಿನಾಶಿ, ದೇಹ ಅಥವಾ ಲೋಕವು ನಶ್ವರ ಎಂದು ಒಪ್ಪುವುದಿಲ್ಲ. ಈ ಕಾರಣದಿಂದ ಅದು ಭೌತವಾದಿಯೂ  ಹೌದು.

ಯೋಗವು ಶರೀರ ಪ್ರಧಾನವಾಗಿ ಕಂಡರೂ ಕೇವಲ ದೈಹಿಕವಲ್ಲ.  ದೈಹಿಕ ಕ್ರಿಯೆ ಮತ್ತು ಉಸಿರಿನ ನಿಯಂತ್ರಣದ ಮೂಲಕ ಮನಸ್ಸಿನ ಹತೋಟಿ ಪಡೆಯಲು ಅದು ಕಲಿಸುತ್ತದೆ. ‘ಯೋಗಸೂತ್ರ’ದ ಪ್ರಕಾರೊಚಿತ್ತವೃತ್ತಿಯನ್ನುನಿರೋಧ ಮಾಡುವುದೇ ಯೋಗ. ಮನಸ್ಸನ್ನು ನಿಯಂತ್ರಿಸಬೇಕಾದರೆ, ಉಸಿರಾಟವನ್ನು ನಿಯಂತ್ರಿಸಬೇಕು. ಪ್ರಾಣ (ಉಸಿರು) ಚಿತ್ತ ಹಾಗೂ ಬಿಂದು (ವೀರ್ಯ) ಇವು ಯಾವಾಗಲೂ ಚಂಚಲ. ಇವುಗಳ ಮೇಲೆ ಹತೋಟಿ ಸಾಧಿಸುವುದೇ ಸಾವನ್ನು ಗೆಲ್ಲುವ ವಿಧಾನ. ಎಲ್ಲಿಯವರೆಗೆ ಉಸಿರನ್ನು ನಿಯಂತ್ರಣ ಮಾಡಲು ಸಾಧ್ಯವಾಗದೊ ಅಲ್ಲಿತನಕ ದೇಹ ಮತ್ತು ಇಂದ್ರಿಯಗಳ ಚಂಚಲತೆ ಇರುತ್ತದೆ. ಚಂಚಲತೆ ಇರುವ ತನಕ ಏಕಾಗ್ರತೆ ಅಸಾಧ್ಯ. ಏಕಾಗ್ರತೆ ಸಿಗದೆ ಪರತತ್ವದ ಜತೆ ವಿಲೀನ ಸಾಧ್ಯವಿಲ್ಲ. ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧಾರಣ ಧ್ಯಾನ ಮತ್ತು ಸಮಾಧಿ ಸಾಧನೆಗಳ ಮೂಲಕ ಉಸಿರಾಟದ ನಿಯಂತ್ರಣ ಸಾಧ್ಯಮಾಡಬೇಕು. ಆಗ ಚಂಚಲತೆ ಹೋಗಿ ಮನಸ್ಸು ಸ್ಥಿರವಾಗುತ್ತದೆ. ಯೋಗ ಎಂದರೆ ಎರಡು ಸಂಗತಿಗಳ ಕೂಡಿರುವಿಕೆ. ಬ್ರಹ್ಮಾಂಡದಲ್ಲಿ ಹರಡಿಕೊಂಡಿರುವ ಚೈತನ್ಯ ಶಕ್ತಿಯು ಮಾನವ ದೇಹದ ಬೆನ್ನುಹುರಿಯ ಕೊನೆಯಲ್ಲಿ ಕುಂಡಲಿನಿ ರೂಪದಲ್ಲಿ ಸುಪ್ತವಾಗಿದೆ. ಅದನ್ನು ಧ್ಯಾನದ ಮೂಲಕ ಎಚ್ಚರಿಸಬೇಕು. ಆಸನವನ್ನು ಹಾಕಿ ಪ್ರಾಣಾಯಾಮದಿಂದ ವಾಯುವಿನ ನಿರ್ಬಂಧ ಮಾಡಬೇಕು. ಆಗ ಸುಷುಮ್ನಾ ಎಂಬ ನಾಡಿಯು ತೆರೆದುಕೊಳ್ಳುತ್ತದೆ. ಅದರ ಮೂಲಕ ಕುಂಡಲಿನಿಯನ್ನು ಮೂಲಾಧಾರ ಸ್ವಾಧಿಷ್ಠಾನ ಮಣಿಪೂರ ಅನಾಹತ ವಿಶುದ್ದಿ ಮತ್ತು ಆಜ್ಞಾ ಎಂಬ ಆರು ಚಕ್ರಗಳನ್ನು ಭೇದಿಸಿಕೊಂಡು ಮೇಲಕ್ಕೆ ಏರುವಂತೆ ಮಾಡಬೇಕು. ಏರಿ ಅದು  ಸಹಸ್ರಾರಕ್ಕೆ ಸೇರುವಂತೆ ಮಾಡಬೇಕು. ಸಹಸ್ರಾರದಲ್ಲಿ ಶಿವನಿದ್ದಾನೆ. ಈ ಶಕ್ತಿಯನ್ನು ಅಲ್ಲಿರುವ   ಶಿವನಲ್ಲಿ ಸಮರಸಗೊಳಿಸಬೇಕು. ಇದೇ  ಮೋಕ್ಷ. ಪಾದರಸವು ಶಿವನ ವೀರ್ಯವಾಗಿದ್ದು, ಅಭ್ರಕವು ಪಾರ್ವತಿಯ ರಜ. ಇವೆರಡು ಮಿಲನಗೊಂಡರೆ ಅಮರತ್ವ ರಸಸಿದ್ಧರ ವಾದವೂ ಇದೇ ಪರಿಭಾಷೆಯನ್ನು ಬಳಸುತ್ತದೆ. ಇಲ್ಲಿ ಬಳಕೆಯಾಗುವ ಶಿವ ಶಿವೆಯರ ಮಿಲನದ ರೂಪಕವು ದೈಹಿಕ ಮಿಲನದ ಅರ್ಥದ ಜತೆಗೆ ಆಧ್ಯಾತ್ಮಿಕ ಅರ್ಥವನ್ನೂ ಪಡೆಯುತ್ತದೆ. ಶಿವಶಿವೆಯರ ಮಿಲನವು ಚಂದ್ರ ಮತ್ತು ಚಂದ್ರಿಕೆಯರಂತೆ ಅಭಿನ್ನವಾದುದು ಎಂದು ನಾಥವು ಭಾವಿಸುತ್ತದೆ.

ನಾಸಿಕಾಗ್ರದಲ್ಲಿ ದಿಟ್ಟಿಯಿಟ್ಟು ಬೆಳಕನ್ನು ಧ್ಯಾನಿಸುತ್ತ ತಾನೇ ಜ್ಯೋತಿಸ್ವರೂಪಿ ಆಗುವಂತೆ ಧ್ಯಾನಿಸಬೇಕು. ಆಗ ಸ್ವಸ್ವರೂಪ ಜ್ಞಾನವು ಪ್ರಕಾಶಿತವಾಗುತ್ತದೆ. ಇದೇ ಸಮಾಧಿಸ್ಥಿತಿ. ಸಿದ್ಧಾವಸ್ಥೆ. ಈ ಹಂತದಲ್ಲಿ ಸಾಧಕನಿಗೆ ಬಗೆಬಗೆಯ ನಾದಗಳು ಕೇಳಿಸುತ್ತವೆ. ನಂತರ ಶಬ್ದನಿಂತು ಹೋಗುತ್ತದೆ. ಬಾಹ್ಯಜ್ಞಾನವೂ ಹೊರಟು ಹೋಗುತ್ತದೆ. ಇದನ್ನು ಅಮನಸ್ಕತೆ ಎನ್ನುತ್ತಾರೆ. ಅಂದರೆ ಚಿತ್ತವು ಯಾವುದೇ ವಿಷಯವನ್ನು ಕುರಿತು ಚಿಂತನೆ ನಡೆಸದೆ ಶೂನ್ಯಸ್ಥಿತಿಯಲ್ಲಿರುವುದು. ಇದನ್ನೇ ಬ್ರಹ್ಮಾನುಭವ ಎನ್ನುತ್ತಾರೆ.  ಇಲ್ಲಿಯೇ ಪಿಂಡವು ಬ್ರಹ್ಮಾಂಡದಲ್ಲಿ ಸಮರಸವಾಗುತ್ತದೆ. ಈ ಅನುಭವವನ್ನು ಮೀನು ಕೊಕ್ಕರೆ ನುಂಗುವ, ಶೃಂಗಿಯೇ ಜೋಗಿಯನ್ನು ಊದುವ ಪ್ರತಿಮೆಗಳ ಮೂಲಕ ವಿವರಿಸಲಾಗುತ್ತದೆ. ಈ ಅವಸ್ಥೆಯ ಅನುಭವನ್ನು ಪ್ರಕಟಿಸಲು ವಚನಕಾರರು ಬೆಡಗಿನ ಭಾಷೆ ಬಳಸುವುದು ನಮಗೆ ಗೊತ್ತಿದೆ. ಯೋಗಪಂಥಗಳು ಕಾವ್ಯಜಗತ್ತಿಗೆ ಪ್ರವೇಶ ಪಡೆಯುವ ಹೆದ್ದಾರಿಗಳು ತೆರೆದುಕೊಂಡಿದ್ದು ಇಲ್ಲಿಂದ.

ಯೋಗಸಾಧನೆಯ ತುತ್ತತುದಿಯ ಅವಸ್ಥೆಯಲ್ಲಿ ಸಾಧಕರು ತಾವೇ ಶಿವರಾಗುವ ಕಾರಣ, ಬೇರೆ ದೇವರ ಕಲ್ಪನೆ ನಾಥರಲ್ಲಿಲ್ಲ. ನಮ್ಮ ಶರೀರದ ಒಳಗೇ ಸ್ವಂಯಂಭೂ ದೇವನಾಗಿ ಗುರುವಿದ್ದಾನೆ. ಆತ್ಮನೇ ಉತ್ತಮದೇವನು. ಯಾವಯಾವುದೊ ದೇವರನ್ನು ಪೂಜಿಸಿ ಯಾಕೆ ಸಾಯುವಿರಿ? (ಗುರುದೇವ ಸ್ವಯಂಭೂದೇವ ಸರೀರ ಭೀತರಿಯೇ|ಆತ್ಮ ಉತ್ತಿಮದೇವ ತಾಹಿಕೀನ ಜಾಂಣಾಂಸೇವ ಆಂನ ದೇವ ಪೂಜಿಪೂಜಿ ಕಾಹಿ ಮರಿಯೆ|) ಎಂದು ನಾಥ ದರ್ಶನ ಕೇಳುತ್ತದೆ. ಈ ಅಥರ್ದಲ್ಲಿ ನಾಥವು ನಾಸ್ತಿಕವಾದಿ ಎನ್ನಬಹುದು. ಭಾರತದ ಬಹುತೇಕ ಸಿದ್ಧಪಂಥಗಳು ನಾಸ್ತಿಕವಾದಿಗಳೆ. ಯೋಗಸಾಧನೆಯನ್ನು ಒಪ್ಪುವ ಬೌದ್ಧ ಜೈನಗಳಲ್ಲೂ  ಸಿದ್ದರಿದ್ದಾರೆ. ದೇವರಿಲ್ಲ.  ದೇವರಿಲ್ಲದ ಮೇಲೆ ಗುಡಿಯ ಪ್ರಶ್ನೆಯೂ ಇಲ್ಲ.[5] ‘ಗೋರಖ ಮಚೇಂದ್ರ ಸಂವಾದ’ ಒಂದರಲ್ಲಿ ಶಿಷ್ಯ ‘ಯಾವುದು ಮಂದಿರ?’ ಎಂದು ಕೇಳುತ್ತಾನೆ. ಅದಕ್ಕೆ ಗುರು ‘ಯಾರ ಮನಸ್ಸಿನಲ್ಲಿ ಜ್ಯೋತಿ ಉರಿಯುತ್ತದೆಯೊ ಅದೇ ಗುಡಿ’ ಎಂದು ಉತ್ತರಿಸುತ್ತಾನೆ; ‘ಮುಂಡನಂ ಚೋಪವಾಸಂ ಚ ತೀರ್ಥಯಾತ್ರಾಂ ತಥೈವ ಚ ಅಗ್ನಿಹೋತ್ರಂ ಚ ಸನ್ಯಾಸಂ ನಾಥಪಂಥೇ ವಿವರ್ಜಯೇತ್’; ನಾಥವು ಮೂರ್ತಿಪೂಜೆಯನ್ನು ಪುರೋಹಿತಶಾಹಿಯನ್ನು, ಗುಡಿಸಂಸ್ಕೃತಿಯನ್ನು, ಕರ್ಮಫಲ, ಸ್ವರ್ಗ ನರಕಗಳ ಕಲ್ಪನೆಯನ್ನು, ತೀರ್ಥಯಾತ್ರೆ, ಯಜ್ಞ ಮುಂತಾದ ಆಚರಣೆಗಳನ್ನು ಕೊಡವಿಕೊಂಡಿದ್ದು ಹೀಗೆ.  ‘ಘಟಹೀ ಭೀತರ ಅಠಸಠ ತೀರಥ, ಕಹಾಂ ಭ್ರಮೈರೇ ಭಾಈ’[6](ದೇಹದಲ್ಲೇ ೬೮ ತೀರ್ಥಗಳಿರುವಾಗ, ತಮ್ಮಾಯಾಕೆ ಅಲೆದಾಡುವೆ?) ಎನ್ನುತ್ತಾನೆ ಗೋರಖ.

ಯೋಗಿಗಳು ಲೋಕದ ಎಲ್ಲವನ್ನು ಭೇದವಿಲ್ಲದೆ ಗ್ರಹಿಸಬೇಕು ಎನ್ನುವ ನಾಥದರ್ಶನವು ಒಂದು ಬಗೆಯಲ್ಲಿ ಸಮದರ್ಶನವಾದಿ. ಯೋಗದ ಉನ್ನತ ಸ್ಥಿತಿಯಲ್ಲಿ ಯೋಗಿಯು ಬೆಂಕಿ ಮತ್ತು ನೀರಿನಿಂದ ಕಬ್ಬಿಣ ಶುದ್ಧವಾಗುವಂತೆ, ಸಾಧನೆಗಳಿಂದ ಶುದ್ಧನಾಗುತ್ತಾನೆ. ಅನಂತರ ರಾಜ ಮತ್ತು ಪ್ರಜೆಯನ್ನು ಸಮಾನದೃಷ್ಟಿಯಿಂದ ನೋಡುತ್ತಾನೆ ಎಂದು ಅದು ಹೇಳುತ್ತದೆ. ಒಬ್ಬ ನಾಥ ಮತ್ತೊಬ್ಬನಾಥನನ್ನು ಕಂಡರೆ ‘ಆದೇಶ್’ ಎಂದು ನಮಸ್ಕಾರ ಮಾಡುವ ಪದ್ಧತಿಯಿದೆ. ಇದರ ಅರ್ಥ ಶಿವ ಜೀವ ಎರಡೂ ಸಮಾನ. ಪ್ರಕೃತಿ ಮತ್ತು ಪುರುಷರ ಜೀವ ಮತ್ತು ಶಿವಗಳ ಮಿಲನವಾಗುತ್ತವೆ ಎಂದು ಒಬ್ಬ ನಾಥಯೋಗಿ ವಿವರಿಸಿದರು.

ಸಾಧಕನು ಸ್ವಾನುಭವದಿಂದಲೆ ಪರತತ್ವ ಪಡೆಯಬೇಕು. ಇದಕ್ಕೆ ಗುರುವಿನ ಮಾರ್ಗ ದರ್ಶನ ಬೇಕು. ಗುರುಮುಖೇನ ವಿದ್ಯೆ ಪಡೆಯುವ ಎಲ್ಲ  ಪಂಥಗಳು ಹುಟ್ಟಿನಿಂದ ಬರುವ ಶ್ರೇಷ್ಠ ಕನಿಷ್ಠಗಳನ್ನು ಒಪ್ಪುವುದಿಲ್ಲ. ಗ್ರಂಥಸ್ಥ ಜ್ಞಾನವನ್ನು ದೊಡ್ಡದು ಎಂದು ತಿಳಿಯುವುದಿಲ್ಲ. ಈ ತರ್ಕವೇ ನಾಥವು ವೇದಶಾಸ್ತ್ರಗಳನ್ನು ಪ್ರಮಾಣವೆಂದು ಒಪ್ಪದಿರಲು ಕಾರಣವಾಯಿತು. ‘ಯೋಗಮಾರ್ಗಾತ್ ಪರೋ ಮಾರ್ಗೊ, ನಾಸ್ತಿನಾಸ್ತಿ ಶ್ರುತೌಸ್ಮೃತೌ’ (ಗೋರಕ್ಷ ಸಿದ್ಧಾಂತ ಸಂಗ್ರಹ) ಎಂಬುದು ಬಹುದೊಡ್ಡ ನಿರಾಕರಣೆಯಾಗಿದೆ.  ದೇವತೆಗಳಿಗೆ ಹವಿಸ್ಸು ಅರ್ಪಿಸುವ ಅಗ್ನಿಹೋತ್ರಿ ಕಾರ್ಯವನ್ನು ಗೇಲಿ ಮಾಡುವ ಗೋರಖನು, ವರ್ಣಾಶ್ರಮದ ಪಾಲಕರನ್ನು ಶ್ರುತಿಕಿಂಕರರು ಎನ್ನುತ್ತಾನೆ.  ಯೋಗಿಯಾದವರು ತಮ್ಮ ತತ್ವವೇ ಹೆಚ್ಚೆಂದು ಪಂಡಿತರಂತೆ ತರ್ಕ ವಾದವಿವಾದ ಮಾಡಬಾರದು ಎಂದು ಹೇಳುತ್ತಾನೆ. ವೇದ, ಸ್ಮೃತಿ, ಶಾಸ್ತ್ರ ಹಾಗೂ ಯಾಗಗಳನ್ನು ನಿರಾಕರಿಸುವ ವಿಷಯದಲ್ಲಿ ನಾಥವೂ ಭಾರತದ ಅನೇಕ ಅನುಭಾವಿ ಪಂಥಗಳೂ ಸಮಾನಮನಸ್ಕವಾಗಿವೆ. ಶರಣರು ಕೂಡ  ವೇದಕ್ಕೆ ಒರೆಯ ಕಟ್ಟುವ ಶಾಸ್ತ್ರಕ್ಕೆ ನಿಗಳವನಿಕ್ಕುವ ಮಾತನ್ನಾಡುತ್ತಾರೆ. ತರ್ಕವನ್ನು ತಗರ ಹೋರಟೆ ಎಂದು ಜರಿಯುತ್ತಾರೆ. ನಾಥರಿಗೆ ಈ ನಿಲುವುಗಳು ಮೂಲತಃ ಬೌದ್ಧರಿಂದ ಹರಿದು ಬಂದವು. ನಾಥರಿಂದ ಮುಂದೆ  ದತ್ತ, ನಾನಕ, ಕಬೀರಪಂಥಗಳಿಗೆ ಇವು ಹರಿದವು. ಕನ್ನಡದ ಶರಣರಿಗೂ ಹರಿದಿರಬಹುದು. ಒಬ್ಬರು ಮತ್ತೊಬ್ಬರಿಗೆ ಕೊಟ್ಟರು ಎಂಬ ಪರಿಭಾಷೆಯೇ ಬಹುಶಃ ಇಲ್ಲಿ ಉಚಿತವಲ್ಲ. ಭಾರತದ ಎಲ್ಲ ಅನುಭಾವಿ ಪಂಥಗಳು ನಾಡಿನುದ್ದಕ್ಕೂ ಹರಿದ ಒಂದು ನದಿಯ ನೀರನ್ನು ತಂತಮ್ಮ ಊರದಡದಲ್ಲಿ ಕುಡಿದವು. ಆದರೆ  ಈ ದಾರ್ಶನಿಕ ನಿಲುವು ಸಾಮಾಜಿಕ ರಾಜಕೀಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಕಾರಣ, ಸಹಜವಾಗಿ ನಾಥರೂ ಒಳಗೊಂಡಂತೆ ಬಹುತೇಕ ಯೌಗಿಕ ಪಂಥಗಳು  ಸನಾತನವಾದಿಗಳ ದ್ವೇಷವನ್ನು ಕಟ್ಟಿಕೊಳ್ಳಬೇಕಾಯಿತು.

ನಾಥವು ಒಂದು ಬಗೆಯಲ್ಲಿ ವಿರಕ್ತಪಂಥ. ಹಳೆಯ ಚಿಂದಿಯಿಂದ ಮಾಡಿದ ಕಂಥೆಯಿಂದ ದೇಹ ಮುಚ್ಚಿಕೊಂಡು, (ಕುತ್ಸಿತ ಕಂಥಾಚ್ಛಾದಿತ ದೇಹಃ) ಹಾಳುದೇಗುಲಗಳಲ್ಲಿ ಗಿರಿಕಂದರಗಳಲ್ಲಿ ವಾಸಮಾಡಿಕೊಂಡು (ಶೂನ್ಯಸುರಾಲಯ ಕಂದರಗೇಹಃ) ಇರುವ ಅವಧೂತನು, ಗುರುಪಾದವನ್ನು ಪೂಜಿಸಿಕೊಂಡು ಸುಖವಾಗಿರುತ್ತಾನೆ ಎಂದು ಚರ್ಪಟನಾಥ ಹೇಳುತ್ತಾನೆ. ಅಕ್ಕಮಹಾದೇವಿಯು ಹಸಿವಾದೊಡೆ ಭಿಕ್ಷಾನ್ನಗಳುಂಟು, ಶಯನಕ್ಕೆ ಹಾಳುದೇಗುಲವುಂಟು ಎಂದು ಹೇಳುವುದು ಇದಕ್ಕೆ ಸಮೀಪವಾಗಿದೆ. ಮನೆ ಸಂಸಾರಗಳ ಹಂಗಿಲ್ಲದೆ ಚಾರಣ ಮಾಡುವುದು, ಲೌಕಿಕ ಸುಖಗಳಿಗಾಗಿ ಹಂಬಲಿಸದಿರುವುದು ಯೋಗಿಗಳ ಲಕ್ಷಣ. ಈ ವಿರಕ್ತಿಗೆ ಇನ್ನೊಂದು ಆಯಾಮವಿದೆ. ಅದು ಹೆಣ್ಣು ಸಂಸಾರ ಕುಟುಂಬದ ಜತೆಗಿನ ವಿಮುಖತೆ. ನಾಥರಲ್ಲಿ ಬಿಂದು ಅಂದರೆ ವೀರ್ಯನಾಶ ತಡೆವುದು ದೊಡ್ಡ ಸಾಧನೆ.  ಬಿಂದು ಸದಾ ಅಧೋಮುಖಿಯಾಗಿ ಹರಿಯಲು ಹಾತೊರೆಯುತ್ತದೆ. ಅದನ್ನು ತಡೆದು  ಊರ್ಧ್ವಮುಖಿ ಆಗುವಂತೆ ಮಾಡಬೇಕು. ಇದನ್ನು ಊರ್ಧ್ವರೇತಸ್ಕ ಸಾಧನೆ ಎನ್ನುತ್ತಾರೆ. ‘‘ಕರುವನ್ನು ಕಟ್ಟು, ಹಾಲನ್ನು ಕುಡಿ’’ ಎಂಬ ಸೂಚನೆ ಸಿದ್ಧಸಾಹಿತ್ಯದಲ್ಲಿ ಬರುತ್ತದೆ. ಇದರರ್ಥ ಕುಂಡಲಿನಿ ಮಲಗಿರುವಾಗ ಮೂಲಾಧಾರ ಚಕ್ರದಲ್ಲಿರುವ ಅಮತೃವೆಲ್ಲ ಚಂಚಲವಾದ ಮನಸ್ಸು ಹೀರುತ್ತಿದೆ. ಜಾಗೃತಗೊಂಡ  ಕುಂಡಲಿನಿಯು ಅಮೃತಪ್ರಾಶನ ಮಾಡುವಂತಾಗಬೇಕು. ಇದುವೇ ಯೋಗಿ ಪಡೆಯುವ ಮಹದಾನಂದ. ಬಿಂದುನಾಶವನ್ನು ದೊಡ್ಡ ನಷ್ಟ ಎನ್ನುವ ನಾಥವು ಬ್ರಹ್ಮಚರ್ಯ ಹಾಗೂ ಸನ್ಯಾಸದ ಪರ. ಈ ತರ್ಕದ ಇನ್ನೊಂದು ತುದಿ,  ಸ್ತ್ರೀಯ ಬಗ್ಗೆ ಅನುಮಾನ ಮತ್ತು ಭಯ. ಹೆಣ್ಣಿನ ಮೋಹದಿಂದ  ಅಮೃತಸ್ಖಲನ ಆಗುತ್ತದೆ. ನಾರಿಯರು ಪುರುಷರ ಅಮೃತಸರೋವರವನ್ನು ಹೀರುವವರು. ಇದು ಗೊತ್ತಿದ್ದೂ ಸ್ತ್ರೀಸಂಗ ಮಾಡಿದರೆ ಮನೆಯಲ್ಲಿ ಹೆಣ್ಣು ಹುಲಿ ಸಾಕಿದಂತೆ.  ನದಿ ತೀರದ ಮರ, ನಾರಿ ಸಂಗದಲ್ಲಿರುವ ಪುರುಷ, ಎರಡೂ ನಾಶವಾಗುವ ಸಾಧ್ಯತೆ ಹೆಚ್ಚು. ಮನಸಿನಲ್ಲಿ ಕಾಮ ಹುಟ್ಟಿದ ಕೂಡಲೆ ಮೇರುದಂಡ ಕುಸಿಯುತ್ತದೆ ಮತ್ತು  ಶರೀರನಾಶಕ್ಕೆ ಕಾರಣವಾಗುತ್ತದೆ ಎಂಬ ಎಚ್ಚರದ ಮಾತುಗಳು ಇಲ್ಲಿವೆ. ಇಡೀ ಯೋಗಸಾಧನೆಯ ಕ್ರಿಯೆ ಮತ್ತು ತತ್ವಗಳು ಪುರುಷರನ್ನು ಉದ್ದೇಶಿಸಿ ಹುಟ್ಟಿದವು. ಬ್ರಹ್ಮಚರ್ಯಕ್ಕೆ ಕೊಡುವ ಒತ್ತು, ಹೆಣ್ಣು ಕಾಮ ಸಂಸಾರಗಳನ್ನು ಎದುರಾಳಿಯಾಗಿ ಪರಿಭಾವಿಸುತ್ತದೆ. ಹುಲಿಯ ಬಾಯಿಗೆ ಸಿಲುಕುವ ರೂಪಕಗಳಲ್ಲಿರುವ ಆತಂಕವನ್ನು ಗಮನಿಸಬೇಕು. ಈ ತಾತ್ವಿಕ ಚಿಂತನೆಯು ನಾಥರಲ್ಲಿ ಯಾವ ಸಾಧ್ಯತೆಗಳನ್ನು ಮೊಳೆಸಿದವು ಹಾಗೂ ಯಾವೆಲ್ಲ ಮಿತಿಗೆ ತಳ್ಳಿದವು ಎಂಬುದನ್ನು ಶೋಧಿಸಬೇಕಿದೆ.  ಶರಣರು, ಆರೂಢರು  ಸೂಫಿಗಳು  ಗುರುಪಂಥಿಗಳಾದರೂ ಸಂಸಾರಿಗಳು. ಸಂಸಾರಿಗಳಾದರೂ  ಸಂಸಾರವಿರೋಧಿ ನೆಲೆಯುಳ್ಳವರು. ಗುರುಪಂಥಗಳಲ್ಲಿ ಸಂಸಾರ, ಹೆಣ್ಣು, ಲೌಕಿಕತೆಗಳ ಬಗ್ಗೆ ಅನುಮಾನ ದ್ವಂದ್ವಗಳು ಕಡೆಗೂ ಉಳಿದುಬಿಡುತ್ತವೆ..

‘ದರ್ಶನ’ ಎಂದರೆ ನೋಡುವುದು ಅಥವಾ ಮುಂಗಾಣ್ಕೆ. ಸಾಮಾಜಿಕವಾಗಿ ದರ್ಶನವು, ಯಾವುದೇ ಪಂಥ ಅಥವಾ ಧರ್ಮವು, ಮನುಷ್ಯರ, ಜೀವನದ, ಸಮಾಜದ ಹಾಗೂ ಲೋಕದ ಬಗ್ಗೆ ಇರಿಸಿಕೊಂಡಿರುವ ಲೋಕದೃಷ್ಟಿಯನ್ನು ಒಳಗೊಂಡಿರುತ್ತದೆ. ಹೀಗಾಗಿ ಒಂದು ಪಂಥದ ದಾರ್ಶನಿಕತೆ ಎಂದರೆ ಅಂತಿಮವಾಗಿ ವ್ಯಕ್ತಿ, ಜಗತ್ತು, ಸಮಾಜಗಳನ್ನು ಕುರಿತ ಅದರ ದೃಷ್ಟಿಕೋನವೇ ಆಗಿದೆ. ಆದರೆ ತಾತ್ವಿಕವಾಗಿ ಒಂದು ಪಂಥದ ಲೋಕದೃಷ್ಟಿಗೂ ಅದು ವಾಸ್ತವದಲ್ಲಿ ಅದನ್ನು  ಆಚರಣೆ ಮಾಡುತ್ತಿರುವುದಕ್ಕೂ ವ್ಯತ್ಯಾಸ ಇರಬಹುದು. ಎಲ್ಲ ಧರ್ಮ ಹಾಗೂ ಪಂಥಗಳಲ್ಲೂ ತತ್ವ ಹಾಗೂ ಆಚರಣೆಗಳ ನಡುವೆ ಬಿರುಕು ಇದ್ದೇ ಇರುತ್ತದೆ. ಇದಕ್ಕೆ ಕಾರಣ, ಮೂಲದರ್ಶನಕ್ಕೆ  ಬೇರೆಬೇರೆ ಕಾಲಘಟ್ಟ ಗಳಲ್ಲಿ ಉಂಟಾಗುವ ಸೇರ್ಪಡೆಗಳು. ಹೊಸ ಚಾರಿತ್ರಿಕ ಸನ್ನಿವೇಶಗಳು ಮೂಲ ದರ್ಶನವನ್ನು ವರ್ತಮಾನದ ಅಗತ್ಯಕ್ಕೆ ತಕ್ಕಂತೆ ಬದಲಾಗಲುಒತ್ತಡ ಹಾಕುತ್ತವೆ. ಹೀಗೆ ಸೇರಿಸುವಿಕೆ ಮತ್ತು ಬದಲಿಸುವಿಕೆಗಳು ನಿರಂತರ ನಡೆಯುತ್ತ ಪಂಥವೊಂದರ ದರ್ಶನವು ಪರಿವರ್ತನೆ ಪಡೆಯುತ್ತ ಹೋಗುತ್ತದೆ. ಹೀಗಾಗಿ ನಾಥದರ್ಶನ ಎಂಬುದು ಒಂದಲ್ಲ. ಅದು ಅನೇಕ ಧಾರೆಗಳ ಗುಚ್ಚ. ಇದಕ್ಕೆ ಕಾರಣ, ಅದರ ದರ್ಶನವನ್ನು ರೂಪಿಸಿದವರು ಬೇರೆಬೇರೆ ಪಂಥಗಳ ದರ್ಶನಗಳ ಸಮಾಜದ ಹಾಗೂ ಕಾಲದ ಹಿನ್ನೆಲೆಯವರು. ಹೀಗಾಗಿಯೇ ನಾಥದರ್ಶನದಲ್ಲಿ ಶಕ್ತಿ ಮತ್ತು ಶಿವರ ಮಿಲನದ ಪರಿಭಾಷೆಯೂ ಇದೆ. ಸ್ತ್ರೀಸಂಗದ ಬಗೆಗೆ ತಿರಸ್ಕಾರದ ವಿಚಾರಗಳೂ ಇವೆ. ಸಮದರ್ಶನದಲ್ಲಿ ನಿಷ್ಕ್ರಿಯತೆಯೂ ಇದೆ.

ಇಷ್ಟಾಗಿಯೂ ಗೋರಖನು ಯಾಕೆ ಬ್ರಹ್ಮಚರ್ಯ ಸನ್ಯಾಸ ವಿರಕ್ತಿಗಳನ್ನು ಅಷ್ಟು ಏರುದನಿಯಲ್ಲಿ ಮಂಡಿಸಬೇಕಾಯಿತು ಎಂಬ ಪ್ರಶ್ನೆಯು ಹಾಗೆ ಉಳಿಯುತ್ತದೆ. ಇದಕ್ಕೆ ವಿಶ್ಲೇಷಣೆ ಕೊಡುವವರು,  ಕೌಳಪಂಥದಿಂದ ಬಂದು ಸಾಧಕರು  ಕೆಳಜಾತಿಯ ಹೆಣ್ಣನ್ನು ಮುದ್ರೆಯನ್ನಾಗಿ ಮಾಡಿಕೊಂಡು ಸಾಧನೆಯ ಹೆಸರಲ್ಲಿ ಭೋಗಲೋಲುಪರಾಗಿದ್ದರು; ಪಂಚಮಕಾರಗಳಲ್ಲಿ ಮುಳುಗಿ ನೈತಿಕ ಅಧಃಪತನಕ್ಕೆ ಕಾರಣರಾಗಿದ್ದರು. ಹೀನಾಯಾನದ ಅತಿವಿರಕ್ತಿಯನ್ನು ನಿವಾರಿಸಲು ತಾಂತ್ರಿಕಪಂಥವಾಗಿ ಸ್ತ್ರೀಯನ್ನು ಒಳಗೆ ಬಿಟ್ಟುಕೊಂಡ ವಜ್ರಯಾನ ಕೂಡ ಇದೇ ಹಾದಿಯಲ್ಲಿತ್ತು. ಆಗ ಗೋರಖನು ಕಠಿಣವಾಗಿ ಭೋಗ, ಸ್ತ್ರೀ ಮತ್ತು ಬಿಂದುನಾಶಗಳು ಹಾನಿಕರವೆಂದು ಹೇಳಬೇಕಾಯಿತು. ಅದರಲ್ಲೂ ಕೌಳ, ಕಾಪಾಲಿಕ ವಜ್ರಯಾನ  ಪಂಥಗಳಿಂದ ಬಂದವರನ್ನು ಯೋಗಮಾರ್ಗಕ್ಕೆ ತರಲು ಪ್ರಯಾಸ ಪಡಬೇಕಾಯಿತು ಎಂದು ಹೇಳುತ್ತಾರೆ. ಇದೇ ಕಾರಣಕ್ಕೆ ನಾಥದರ್ಶನವು ಏಕರೂಪಿಯಲ್ಲ. ಅನೇಕ ದರ್ಶನಗಳಿಂದ ಕಾಲಕಾಲಕ್ಕೆ ಸ್ವೀಕಾರ ಮಾಡಿಪಡೆದ ಸಂಕರರೂಪಿ. ಷಡ್‌ದರ್ಶನಗಳಲ್ಲಿ ಒಂದಾದ ಯೋಗವು ಅದರ ತಾತ್ವಿಕ ಬುನಾದಿಯಾದರೆ, ವಜ್ರಯಾನ ಶಾಕ್ತ, ಕೌಳ, ಕಾಪಾಲಿಕ ದರ್ಶನ ಹಾಗೂ ಆಚರಣೆಗಳು ಅದರ ಕಟ್ಟಡವಾದವು. ಹಲವು ದಿಕ್ಕುಗಳಿಂದ ಬಂದು ಸೇರಿಕೊಂಡ ದರ್ಶನ ಹಾಗೂ ಪಂಥಗಳು ಇದರೊಳಗೆ ಬೆರೆತವು ಮಾತ್ರವಲ್ಲ,  ತಂತಮ್ಮ ಕುರುಹುಗಳನ್ನು ಪ್ರತ್ಯೇಕವಾಗಿಯೂ ಉಳಿಸಿಕೊಂಡವು. ಭೈರವನು ನಾಥಪಂಥದ  ಆರಾಧ್ಯದೈವವಾಗಿ ಉಳಿದಿರುವುದು ಕಾಪಾಲಿಕರ ಕುರುಹು; ಘ್ರಿಶೂಲ ಹಾಗೂ ಶಕ್ತಿದೇವತೆಯ ಆರಾಧನೆಯು  ಶಾಕ್ತ ಕುರುಹು. ದೇಹ, ವಜ್ರದ ಪ್ರಸ್ತಾಪ ಬರುವುದು ವಜ್ರಯಾನದ ಸಂಕೇತ. ಆದರೆ ಈ ಎಲ್ಲ ಪಂಥಗಳ ಒಳಗಿದ್ದ ಅತಿರೇಕಗಳನ್ನು ವಿಸರ್ಜಿಸಿ, ಅವುಗಳಲ್ಲಿ ತನಗೆ ಬೇಕಾದ ಅಂಶಗಳನ್ನು ಇರಿಸಿಕೊಂಡು ಗೋರಖನಾಥನು ನಾಥಪಂಥವನ್ನು ರೂಪಿಸಿದನು. ಗೋರಖನು ನಾಥಪಂಥವನ್ನು ಸಂಘಟಿಸುವಾಗ ತನ್ನ ಕಾಲದ ಅನೇಕ ಪಂಥಗಳ ಜತೆ ಸ್ನೇಹ-ಸಂಘರ್ಷ ಎರಡನ್ನೂ ಮಾಡಬೇಕಾಯಿತು ಎಂಬುದು ಮಾತ್ರ ನಿಜ. ಇಂತಹ ಬಹುಮುಖಿಯಾದ ಅನುಸಂಧಾನ ಮಾಡಿದ ಕಾರಣದಿಂದಲೇ ಗೋರಖನ ಹೆಸರು ವಜ್ರಯಾನ, ಕೌಲ, ಕಾಪಾಲಿಕ, ಸಿದ್ಧ, ರಸೇಶ್ವರ ಮುಂತಾದ ಅನೇಕ ಶೈವ ದರ್ಶನಗಳ ಒಳಗೆ ನುಸುಳಿತು.  ಭಾರತದ ಯಾವುದೇ ಪಂಥವು ಹಾಗೆ ಸ್ವತಂತ್ರವಾಗಿ ಹುಟ್ಟಿಯೇ ಇಲ್ಲ. ಈ ಮಾತು ನಮ್ಮ ಶರಣ ಚಳುವಳಿಗೂ ಅನ್ವಯವಾಗುತ್ತದೆ. ಪಂಥಗಳು ಒಂದು ಬಗೆಯಲ್ಲಿ ಅಳಿದ ಅಸ್ಥಿಗಳ ಮೇಲೆ ಹುಟ್ಟುವ ನವಭಾರತ ಲೀಲೆಗಳು.

ನಾಥಪಂಥದಲ್ಲಿ ೧೨ ಶಾಖೆಗಳಿವೆ.  ಇವನ್ನು ಬಾರಾಪಂಥ ಎನ್ನಲಾಗುತ್ತದೆ. ಇವು ನಾಥಪಂಥದ ಬಹುರೂಪಿ ಲಕ್ಷಣವನ್ನು ಮಾತ್ರವಲ್ಲ, ಅದರ ಬಹುಮೂಲವನ್ನು ಸಹ ಸಂಕೇತಿಸುತ್ತಿವೆ. ನಾಥಪಂಥವು ಮೂಲತಃ ಶೈವಪಂಥ. ಆದ್ದರಿಂದ ಶೈವಸಂಸ್ಕೃತಿಯ ಭಾಗವಾಗಿರುವ ಶಾಕ್ತಪಂಥವು ಅದರೊಳಗೆ ಸಹಜವಾಗಿ ಸೇರಿತು. ಆದರೆ ರಾಮಾಯಣದ ರಾಮ ಹನುಮಾನ ಮುಂತಾದ ವೈಷ್ಣವ ದೈವಗಳು, ಮಹಾಭಾರತದ ಕೃಷ್ಣ ಯುಧಿಷ್ಠಿರ ಭೀಷ್ಮರು ಕೂಡ ಇದರಲ್ಲಿ ಸೇರಿಹೋದರು. ನಾಥರ ಬೇರೆಬೇರೆ ಶಾಖೆಗಳನ್ನು ಈ ಪುರಾಣ ಪುರುಷರು ಸ್ಥಾಪಿಸುವ ಮಿತ್‌ಗಳಿವೆ. ಮಹಾರಾಷ್ಟ್ರ ಹಾಗೂ ಬಂಗಾಲಗಳಲ್ಲಿ ನಾಥಪಂಥವು ವೈಷ್ಣವೀಕರಣಗೊಂಡರೆ,  ಕರ್ನಾಟಕದ ಮಟ್ಟಿಗದು ಶೈವರೂಪಿಯಾಗಿಯೇ ಉಳಿಯಿತು. ಈ ಬಾರಾಪಂಥಗಳ ವಿಭಜನೆ ಗೋರಖನ ನಂತರ ಆಯಿತು. ಬಾರಾಪಂಥಗಳಾಗಿ ವಿಂಗಡಣೆಗೊಂಡ ನಾಥರ ಶಾಖೆಗಳು, ೨೦ನೇ ಶತಮಾನದಲ್ಲಿ ಅಖಿಲ ಭಾರತ ಅವಧೂತ ಯೋಗಿ ಮಹಾಸಭಾ ಎಂಬ ಸಂಘಟನೆಯಲ್ಲಿ ಮತ್ತೆ ಒಗ್ಗೂಡಿದವು.  ಒಗ್ಗೂಡಿ ಭಾರತದ  ಬೇರೆಬೇರೆ ನಾಥಮಠಗಳ ಮೇಲೆ ಅಧಿಕಾರವನ್ನು ಹಂಚಿಕೊಂಡವು. ಆದರೂ ಒಳಪಂಥಗಳ ದಾಯಾದಿ ಕಲಹಗಳು ನಿಂತಿಲ್ಲ. ಇದು ನಾಥರ ಸಭೆಗಳಲ್ಲಿ ಕಾಣಸಿಗುತ್ತಿತ್ತು. ಬಹುದಾರ್ಶನಿಕತೆ ಬಹುಪಂಥೀಯತೆಗಳು ಕೂಡಿ ಹುಟ್ಟಿದ ಎಲ್ಲ ಪಂಥಗಳಲ್ಲಿ, ವೈರುಧ್ಯಗಳು ಸುಪ್ತವಾಗಿ ಇರುತ್ತವೆ ಮತ್ತು ಸಮಯ ಬಂದಾಗ ಹೊರಗೆ ಕಾಣಿಸಿಕೊಳ್ಳುತ್ತವೆ.

ನಾಥಪಂಥದಲ್ಲಿ ಬೇರೆಬೇರೆ ಪಂಥ ಹಾಗೂ ತಾತ್ವಿಕ ಮೂಲದಿಂದ ಬಂದು ಸೇರಿ ಕೊಂಡವರು  ತಮ್ಮ ಹಿಂದಿನ  ಆಚರಣೆಗಳನ್ನು ಕೈಬಿಡಲಿಲ್ಲ. ಹೀಗಾಗಿ  ಗೋರಖನು  ಕೆಲವು ನಾಥರ  ವರ್ತನೆಗಳನ್ನು ಟೀಕಿಸುವ ಪ್ರಸಂಗ ಬಂದಿತು.  ಲಿಂಗದೀಕ್ಷೆಯಾದ ಬಳಿಕವೂ ಹಿಂದಿನ ಆಚರಣೆ ಬಿಡದವರನ್ನು ಶರಣರೂ ಟೀಕೆ ಮಾಡುತ್ತಾರಷ್ಟೆ. ಇದು ಎಲ್ಲ ದಾರ್ಶನಿಕರೂ ತಂತಮ್ಮ ಕಾಲದ ವಿದ್ಯಮಾನಗಳಿಗೆ ಪ್ರತಿಕ್ರಿಯೆಯಾಗಿ ಚಿಂತನೆ ಮಂಡಿಸಿ ದರು ಹಾಗೂ ಆಚರಿಸಿದರು. ಆಚರಣೆಯಲ್ಲಿ ಹುಟ್ಟುವ ವೈರುಧ್ಯಗಳಿಗೆ ವಿಮರ್ಶೆಯನ್ನು ಮಾಡಿಕೊಂಡರು. ಇದೊಂದು ಪ್ರಕ್ರಿಯೆ. ಇದಕ್ಕೆ ಗೋರಖನೂ ಅಲ್ಲಮನೂ ಹೊರತಲ್ಲ.

ಮಚೇಂದ್ರನಾಥನು ಸ್ತ್ರೀರಾಜ್ಯಕ್ಕೆ ಹೋಗಿ ತಾಂತ್ರಿಕ ಸಾಧನೆಗಳಲ್ಲಿ ಮುಳುಗುವ ಮತ್ತು ಗೋರಖನು ಅವನನ್ನು ಅಲ್ಲಿಂದ ಹೊರತರುವ ಕಥೆಯು, ಪರಸ್ಪರ ವಿರುದ್ಧ ಧಾರೆಗಳ ಜಗ್ಗಾಟವನ್ನೇ ಸೂಚಿಸುತ್ತದೆ.  ‘ಸಿದ್ಧಸಿದ್ಧಾಂತ ಪದ್ಧತಿ’ಯ ಕೊನೆಯ ಭಾಗವು ಯೋಗಿಗಳು ಮಾಡುವ ಅತಿರೇಕಗಳನ್ನು ಕುರಿತ  ಟೀಕೆಗಳಿಂದ ತುಂಬಿದೆ. ಗೋರಖನು ಮದ್ಯ ಮಾಂಸ ಭಂಗಿ ಸೇವನೆಗಳನ್ನು ವಿರೋಧಿಸುತ್ತಾನೆ.  ರಾಜದ್ವಾರದಲ್ಲಿ ಕಾಲಿಡಬೇಡ ಎನ್ನುತ್ತಾನೆ. ವಿರಕ್ತಿ ಅತಿಯಾದಾಗ ಅಯ್ಯ ಇಷ್ಟೊಂದು ಗಂಭೀರರಾದರೆ ಹೇಗೆ. ಕೊಂಚ  ನಗಾಡಿರಿ  (‘ಹಸೀಬಾ ಖೇಲಿಬಾ ರಹೀಬಾ ರಂಗ್ ಕಾಮಕ್ರೋಧ ನಕರಿಬಾ ಸಂಗ್| ಹಸೀಬಾ ಖೇಲಿಬಾ ಗಾಯಿಬಾ ಗೀತ್ ಧಿಡ ಕರೀಬಾ ಅಪನಾ ಚೀತ್’) ಎಂದು ನಿರಾಳ ಮಾಡುತ್ತಾನೆ; ಅನಗತ್ಯವಾಗಿ ದೇಹದಂಡನೆ ಮಾಡುವುದು, ಸುಖವನ್ನು ಕಠೋರವಾಗಿ ನಿರಾಕರಿಸುವುದು, ಸುಖಲೋಲುಪನಾಗುವುದು, ಸಾಧನೆಗಳ ಬಗ್ಗೆ ಅಹಂಕಾರ ಪಡುವುದು, ದೀರ್ಘಕಾಲ ಬದುಕಲು ಮೂಲಿಕೆ ಯಂತ್ರ ಮಂತ್ರಗಳ ಮೊರೆಹೋಗುವುದು, ಮೋಹನ ಸ್ಥಂಭನ ವಶೀಕರಣ ಮಾಡುವುದು, ಭಂಗಿ ಮಾಂಸ ಮದ್ಯ ಸೇವಿಸುವುದು ತಪ್ಪೆಂದು ವಿಧಿಸುತ್ತಾನೆ. ವಿಶೇಷವೆಂದರೆ, ಅಲ್ಲಮನು ತಾಂತ್ರಿಕ ಪಂಥಗಳನ್ನು ಯಾವ ಕಾರಣಗಳಿಗೆ ವಿಡಂಬಿಸುತ್ತಾನೆಯೊ ಅದೇ ಕಾರಣದಿಂದ ಗೋರಖನು ಕೆಲವು ನಾಥರನ್ನು ಟೀಕಿಸುತ್ತಾನೆ.

೧. ಹಠಯೋಗ ಲಂಬಿಕೆಯೆಂದು ಅಕುಂಚನವೆಂದು ವಜ್ರಿ ಅಮರಿಯ ಕಲ್ಪವೆಂದು  ಮಲ ಮೂತ್ರಂಗಳಂ ಸೇವಿಸುತ, ಇದು ಪೂರ್ವನವನಾಥ ಸಿದ್ಧರ ಮತೋಕ್ತವೆಂದು  ಕಾಪಾಲಿ ಕಾಚರಣೆಯನಾಚರಿಸುವರಲ್ಲ ಶರಣರು-ಅಲ್ಲಮಪ್ರಭು

೨. ತಾಲ ಓಷ್ಠ ನಾಸಾರಸಂ ಮುಂತಾದವನ್ನು, ಕಪಾಲಪಟಾನ, ಅಮರೀಪಾನ, ಖರ್ಪಧಾರಣ, ಸ್ವಕೀಯ ವೀರ್ಯವನ್ನು ತಾನೇ ದ್ರವೀಕರಿಸಿ ಪಾನ ಮಾಡುವುದು, ಲೇಪಮಾಡುವುದು, ಮುಂತಾದ ಅಬದ್ಧ ಕಾರ್ಯ ಮಾಡುವವರಿಗೆ ಸಿದ್ಧಾಂತದಲ್ಲಿ ಹೇಳಿದ ಫಲ ದೊರೆಯುವುದಿಲ್ಲ-ಗೋರಖನಾಥ (ಸಿದ್ಧಸಿದ್ಧಾಂತ ಪದ್ಧತಿ ೬.೮೯)

ಅಲ್ಲಮನು ನಾಥರನ್ನು ಕುರಿತು ಮಾಡುವ ಟೀಕೆಯು, ಇಡೀ ಪಂಥಕ್ಕೊ ನಿರ್ದಿಷ್ಟ  ನಾಥರ  ವರ್ತನೆಗೊ ಎಂಬ ಪ್ರಶ್ನೆಯಿದೆ. ‘ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ’ ಎಂಬರ್ಥದ ಮಾತುಗಳು ಗೋರಖಬಾನಿಯಲ್ಲಿ  ಬಹಳ ಇವೆ. ನಾಥ ದರ್ಶನವು ಮಧ್ಯಮ ಮಾರ್ಗಿ. ಅದು ಊಟದ ವಿರೋಧಿಯಲ್ಲ. ಅದು ಲೋಲುಪತೆಯ ಪರವಲ್ಲ. ದೇಹ ದಂಡನೆಯ ವಿರೋಧಿಯಲ್ಲ. ಆದರೆ ಅವುಗಳ ಅತಿಯ ವಿರೋಧಿ. ದೇಹವಾದಿಯಾದ ಅದು ಆರೋಗ್ಯದ ಕಾಳಜಿ ಮಾಡುತ್ತದೆ. ಔಷಧಿ ಬಳಸುತ್ತದೆ. ದೀರ್ಘಾಯುಷ್ಯ ಬೇಡುತ್ತದೆ. ಆದರೆ ಅದಕ್ಕಾಗಿಯೆ ಹರಿದಾಡುವವರನ್ನೂ ವಿಡಂಬಿಸುತ್ತದೆ. ಗಿಡಮೂಲಿಕೆ ಹಿಂದೆ ಓಡಬೇಡಿ.  ವೈದ್ಯನ ಹೆಂಡತಿಯೇ ಮೊದಲು ವಿಧವೆಯಾಗುವುದು. ಗಿಡಮೂಲಿಕೆ ಸಾವನ್ನು ತಡೆಯುವುದಾಗಿದ್ದರೆ, ಧನ್ವಂತರಿ ಯಾಕೆ ಸಾಯುತ್ತಿದ್ದ ಎಂದು ಗೋರಖ ವಿಡಂಬಡಿಸುತ್ತಾನೆ.

ಗೋರಖನು ನಾಥಪಂಥವನ್ನು ತನ್ನ ಕಾಲದ ಪಂಥಗಳನೆಲ್ಲ ಸಂಕರಗೊಳಿಸಿ ರೂಪಿಸಿ ದನೊ ಅಥವಾ ದುರ್ಬಲಗೊಂಡಿದ್ದ ಅವನ್ನು ನಾಶಮಾಡಿ ಹೊಸತಾಗಿ ಹುಟ್ಟಿಸಿದನೊ ಸ್ಪಷ್ಟವಿಲ್ಲ. ಆದರೆ ಅನೇಕ ಪ್ರಬಲ ಜನಪ್ರಿಯ ಪಂಥಗಳ ಶಕ್ತಿಯನ್ನೂ  ಆಗಲೇ ದುರ್ಬಲ ವಾಗಿದ್ದ ಪಂಥಗಳ ದುರ್ಬಲತೆಯನ್ನೂ ಬಳಸಿಕೊಂಡು ರೂಪಿಸಿದನು ಎಂದು ಊಹಿಸಬಹುದು.   ಅವನೊಬ್ಬ ಚತುರ ಸಂಘಟಕನೂ  ದೂರದರ್ಶಿಯೂ ಪ್ರಖರ ಚಿಂತಕನೂ ಆಗಿದ್ದನು. ಪುಣೇಕರರ್ ಸ್ವಲ್ಪ ಉತ್ಪ್ರೇಕ್ಷೆಯಿಂದ ಹೇಳುವಂತೆ, ಅವನೊಬ್ಬ ಭಾರತ ಕಂಡ ದೊಡ್ಡ ದಾರ್ಶನಿಕ.[7] ಎಂತಲೇ ನಾಥಪಂಥವು ಬಹಳ ಬೇಗನೆ ಭರತ ಖಂಡದ ತುಂಬ ಪಸರಿಸಿತು. ಗೋರಖನ ನಂತರ  ಅನೇಕ  ಪಂಥಗಳಿಗೆ ಜನ್ಮಕೊಡುವ ಹಾಗೂ ಅವುಗಳಿಂದ ಪಡೆದು ಕೊಳ್ಳುವ ಕೆಲಸವನ್ನೂ ಅದು ಮಾಡಿತು.  ನಾಥವು ಆಫಘಾನಿಸ್ಥಾನ ಕಾಶ್ಮೀರ ಬಂಗಾಲ ಸಿಂಧ್ ಪಂಜಾಬುಗಳಲ್ಲಿದ್ದ ಸೂಫಿಪಂಥದಿಂದ  ಸಾಕಷ್ಟು ಪಡೆದುಕೊಂಡಿತು. ಒಂದು ಕಾಲಕ್ಕೆ ನಾಥರ ಝುಂಡಿಯು ನೇಪಾಳದಿಂದ ಮೆಕ್ಕಾದವರೆಗೆ ಹೋಗುತ್ತಿತ್ತು ಎಂಬ ಉಲ್ಲೇಖವನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕು.

ಪ್ರಶ್ನೆ ಎಂದರೆ, ಹೀಗೆ ಹಲವು ಪಂಥಗಳ ಸಂಯೋಗದಲ್ಲಿ ಹುಟ್ಟಿದ ನಾಥಪಂಥದ ದಾರ್ಶನಿಕತೆಯು  ಪಠ್ಯಗಳಲ್ಲಿ ಬಂದ ಹಾಗೆ ನಾಥರಲ್ಲಿ ಆಚರಣೆ ಪಡೆಯಿತೇ? ಪಠ್ಯಸ್ಥ ಚಿಂತನೆಗೂ ಅನುಪಾಲನೆಗೂ  ಅಂತರ ಬಂದಿತೆ? ಬಂದರೆ ಯಾಕೆ ಬಂದಿತು? ತತ್ವಗಳು ಮೂರ್ತ ಸಮಾಜದಲ್ಲಿ ಹೇಗೆ ಅನ್ವಯಗೊಂಡವು? ಅನ್ವಯ ಕ್ರಮದಲ್ಲಿ ಮೂಲತತ್ವವನ್ನು ಎಷ್ಟು ಪಾಲಿಸಿದವು ಇಲ್ಲವೆ  ಉಲ್ಲಂಘಿಸಿದವು? ಹಾಗೆ ಒಂದು ಮೂಲತತ್ವ ಎಂಬುದು ಇರುತ್ತದೆಯೇ? ನಾಥಪಂಥವು ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಯಾವ ರೂಪಗಳಲ್ಲಿ ನೆಲೆಸಿತು? ಈಗ ಅದರೊಳಗೆ ಸಂಭವಿಸುತ್ತಿರುವ ಪಲ್ಲಟಗಳು ಯಾವುವು? ಇವನ್ನೆಲ್ಲ ತಪಶೀಲಾಗಿ ತಿಳಿಯಬೇಕಿದೆ. ದಾರ್ಶನಿಕ ಮೂಲ ಮಾತೃಕೆಗೆ ಅನುಸಾರವಾಗಿ ಪಂಥ ಅಥವಾ ಧರ್ಮವು ಬದುಕಿತು ಎಂದು ನೋಡುವ ವಿಧಾನವೊಂದು ಧರ್ಮಗಳ ಅಧ್ಯಯನಗಳಲ್ಲಿ ಬಳಕೆಯಲ್ಲಿದೆ. ಅದು ತತ್ವ ಮತ್ತು ಆಚರಣೆಗಳ ನಡುವೆ, ವಿಚಾರ ಮತ್ತು ಆಚಾರಗಳ ನಡುವೆ ಸಂಭವಿಸಿರುವ ಕಂದಕಗಳನ್ನು ಬೈಪಾಸ್ ಮಾಡುತ್ತದೆ. ಪಂಥದ ತತ್ವದರ್ಶನದ  ಮೂಲವನ್ನು ಅರಿಯುವುದು ಒಂದು ಕ್ರಮವಾದರೆ,  ಅದರೊಳಗೆ ನಾನಾ ಚಾರಿತ್ರಿಕ ಒತ್ತಡಗಳ ಕಾರಣದಿಂದ ಸಂಭವಿಸಿದ ಪರಿವರ್ತನೆಯನ್ನು ಅರಿಯುವುದು ಇನ್ನೊಂದು ಕ್ರಮ. ಇವೆರಡನ್ನೂ ಒಟ್ಟಾಗಿಸಿ ಮುಖಾಮುಖಿ ಮಾಡುವಾಗ, ತತ್ವದರ್ಶನಗಳ ಸಾಮಾಜಿಕ ವಿಶ್ಲೇಷಣೆ ಮಾಡುವುದು ಅನಿವಾರ್ಯವಾಗುತ್ತದೆ.  ಯೋಗದಂತಹ ವ್ಯಕ್ತಿವಾದಿ ಸಾಧನೆ ಮುಖ್ಯವಾಗಿರುವ ನಾಥಪಂಥವು ಭಾರತದಲ್ಲಿ ಕೆಳಸ್ತರದ ದುಡಿವ  ವಿಶಾಲ ಸಮುದಾಯಗಳಲ್ಲಿ ಹೇಗೆ ಜನಪ್ರಿಯವಾಯಿತು, ಅದು ಯಾವ ಸಮುದಾಯ ಮತ್ತು ವರ್ಗಗಳ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಿತು. ಅದು ಅವುಗಳ ಆರ್ಥಿಕ ಸಾಮಾಜಿಕ ಬದುಕಿಗೆ ಹೇಗೆ ಸಂಬಂಧಪಟ್ಟಿತ್ತು, ಸಮುದಾಯಗಳು ನಾಥ ದರ್ಶನವನ್ನು ಹೇಗೆ ತಮ್ಮ ಅಗತ್ಯಕ್ಕೆ ತಕ್ಕಂತೆ ರೂಪಾಂತರ ಮಾಡಿಕೊಂಡವು, ನಾಥಪಂಥದ ಪ್ರಗತಿಪರ ದರ್ಶನದೊಳಗೆ ಯಾವಾಗ ಇತರೆ ಪ್ರತಿಗಾಮಿ ತತ್ವ ಮತ್ತು ಆಚರಣೆಗಳು ಸೇರಿಕೊಂಡು ಅದನ್ನು ಸಂಕೋಚಗೊಳಿಸಿದವು-ಇದನ್ನೆಲ್ಲ  ಶೋಧಿಸಬೇಕಿದೆ. ಇಲ್ಲದಿದ್ದರೆ ದರ್ಶನ ಜಿಜ್ಞಾಸೆಯ ಅಮೂರ್ತ ವಾಯು ಯಾನವು ನೆಲಕ್ಕಿಳಿಯದೆ ಹೋಗುತ್ತದೆ.

* * *[1]       ಪಾಂಡುರಂಗ ದೇಸಾಯಿ, ಕರ್ನಾಟಕದಲ್ಲಿ ನಾಥಸಿದ್ಧರು, ಶಿವಾನುಭವ ಪತ್ರಿಕೆ, ೧೬.೪, ಜನವರಿ, ೧೯೪೨

[2]       ನಾಥಸಂಪ್ರದಾಯದ ಇತಿಹಾಸ, ಪು.೬೦

[3]       ಧಾರವಾಡದ ಶ್ರೀ ನೀಲಗಂಗಯ್ಯ ಪೂಜಾರ ಅವರ ಜತೆ ಚರ್ಚೆ ಮಾಡುವಾಗ ಅವರು ಇದನ್ನು ತಿಳಿಸಿದರು.

[4]       ಜ್ಞಾನೇಶ್ವರ ಪೂರ್ವಕಾಲೀನ ಕನ್ನಡ ವಾಙ್ಮಯ ಎಂಬ ಮರಾಠಿ ಲೇಖನ. ಉಲ್ಲೇಖ: ರಾಚಿಂ ಢೇರೆ, ‘ಅಲ್ಲಮಪ್ರಭು ಮತ್ತು ಗೋರಕ್ಷನಾಥ’, ಕನ್ನಡ ಅಧ್ಯಯನ, ೯.೨,(೨೦೦೩),ಪು.೭೪

[5]       ‘ದೇವರಿಗೆ ಹೋಗಬೇಕು ದಾರಿಬಿಡು ಪೂಜಾರಿ, ದೇವರಿಗೂ ನನಗೂ ಒಳಮಾತು|ಭೈರವನ ಠಾವಿಗೆ ಹೋಗಿ ಕೈಯ ಮುಗಿದೇನು’ ಎಂಬ ಜನಪದ ಪದವಿದೆ. ಪೂಜಾರಿಯ  ಮಧ್ಯಸ್ಥಿಕೆಯಿಲ್ಲದೆ ದೇವರ ಜತೆ ನೇರವಾಗಿ ಸಂವಾದ ಮಾಡುವ ಇಲ್ಲಿನ ದನಿಯು ಧ್ಯಾನ ಮತ್ತು ಯೋಗದ ಮೂಲಕ ತನ್ನೊಳಗಿನ ಶಕ್ತಿಯನ್ನು ತಾನೇ ಕಂಡುಕೊಳ್ಳುವಿಕೆಯಾಗಿದೆಯೆಂದು ಅನಿಸುತ್ತದೆ. ‘ಒಳಮಾತು’  ಎನ್ನುವುದು ಅವಧೂತ ದರ್ಶನದ ತನ್ನತಾನರಿವ ತತ್ವವೆನಿಸುತ್ತದೆ. ಇಲ್ಲಿ ನಾಥ ಅಥವಾ ಅವಧೂತ ದಾರ್ಶನಿಕತೆಯು ಜನಪದ ಸಾಹಿತ್ಯದಲ್ಲಿ ಜಿನುಗಿ ಬಂದಂತಿದೆ.

[6]       ಕುಂಭಮೇಳದ ಕೇಂದ್ರ ಘಟನೆಯಾದ ಪರಬಣಿ ಸ್ನಾನ ಹಾಗೂ ಶಾಹಿಸ್ನಾನಗಳು ಜರುಗುವ  ಮುನ್ನವೆ ನಾಥರ ಝುಂಡಿ ನಾಸಿಕವನ್ನು ಬಿಟ್ಟು ಕದ್ರಿಯತ್ತ ಹೊರಟುಬಿಡುತ್ತದೆ. ಕದ್ರಿಯ ಪ್ರಸ್ಥಾನವು ಪರಬಣಿಯ ಸ್ನಾನಕ್ಕಿಂತಲೂ ಮುಖ್ಯ ಎಂದು ಒಬ್ಬ ನಾಥಯೋಗಿ ಹೇಳಿದನು.

[7]       ‘Siddha-Siddhanta Paddhati’ is the greatest single contribution of a Harijan to India, stylistically, philosophically and sociologically. Harijan Contribution to Medieval Indian Thought, Pp.89