ಒಂದರೊಳಗಿಂದ ಮತ್ತೊಂದು

ಮಹಾಯಾನ ಬೌದ್ಧದಲ್ಲಿ ಒಂದು ಕತೆಯಿದೆ. ಬುದ್ಧನ ಬೋಧಿಸತ್ವ ಅವತಾರವಾದ ಅವಲೋಕಿತೇಶ್ವರನು, ಒಂದು ದಿನ ಸುಮೇರು ಪರ್ವತದ ತುದಿಯಲ್ಲಿ ಕುಳಿತು, ಮಹಾನಿರ್ವಾಣ ಪಡೆದು ಶೂನ್ಯದಲ್ಲಿ ಕರಗಿಹೋಗಬೇಕು ಎಂದು ಸಿದ್ಧನಾಗಿರುತ್ತಾನೆ. ಆಗ, ಮಾನವ ಲೋಕದಿಂದ ಒಂದು ಗೋಳಿನ ದನಿ ಬಂದು ಕಿವಿಗೆ ತಾಕುತ್ತದೆ. ಆಗ ಅವನು ‘ಓಹೋ, ಯಾವ  ಜನರ ದುಃಖವನ್ನು ಪರಿಹರಿಸಲು ನಾನು ಈತನಕ ಯತ್ನ ಮಾಡಿದೆನೊ, ಅದಿನ್ನೂ ಪೂರಾ ಶಮನವಾಗಿಲ್ಲ. ಹಾಗಾಗಿ ನಾನೊಬ್ಬನೇ ಮೋಕ್ಷವನ್ನು ಪಡೆಯುವುದು ಸಲ್ಲದು. ಲೋಕದ ಪ್ರತಿಯೊಂದು ಜೀವಿಯೂ ದುಃಖದಿಂದ ಬಿಡುಗಡೆ ಆಗುವವರೆಗೆ ನನಗೂ ಮೋಕ್ಷಬೇಡ’ ಎಂದವನೆ ಮರಳಿ ಲೋಕಕ್ಕೆ ಬರುತ್ತಾನೆ. ಇದನ್ನು ಬುದ್ಧನ ಮಹಾಕರುಣೆ ಎಂದು ಬಣ್ಣಿಸಲಾಗಿದೆ.ಇಂತಹ ‘ಕರುಣೆ’ಯ ಹಿನ್ನೆಲೆಯುಳ್ಳ ಮಹಾಯಾನದ  ಕುಡಿಗಳಲ್ಲಿ ಒಂದಾದ ವಜ್ರಯಾನದ ಸಹವಾಸದಲ್ಲಿ ನಾಥಪಂಥವು ಮೂಡುತ್ತದೆ ಮತ್ತು ಅವಲೋಕಿತೇಶ್ವರನ ಜತೆ ನಾಥಪಂಥದ ಮಚೇಂದ್ರನಾಥನು ಏಕೀಭವಿಸುತ್ತಾನೆ.

ನಾಥಪಂಥವು ಅನೇಕ ದರ್ಶನ ಹಾಗೂ ಪಂಥಗಳ ಸಂಸರ್ಗದಿಂದ ಹುಟ್ಟುವುದು ಮಾತ್ರವಲ್ಲ, ಹುಟ್ಟಿದ ಬಳಿಕವೂ ಅನೇಕ ದರ್ಶನ ಹಾಗೂ ಪಂಥಗಳ ಜತೆ ಅನುಸಂಧಾನ ಮಾಡುತ್ತಾ ಬೆಳೆಯಿತು. ಅವುಗಳಲ್ಲಿ ಮುಖ್ಯವಾದವು ಕಾಪಾಲಿಕ, ಶಾಕ್ತ, ರಸಸಿದ್ಧ, ಶರಣ, ಸೂಫಿ, ದತ್ತ, ವಾರಕರಿ, ಮಹಾನುಭಾವ, ನಾನಕ, ಕಬೀರ ಪಂಥಗಳು. ಕೊನೆಯ ೫ ಪಂಥಗಳು ನಾಥದ ಗರ್ಭದಿಂದಲೆ ಹುಟ್ಟಿದವು. ಒಂದು ಪಂಥ ಮತ್ತೊಂದರ ಜತೆಗೆ ಸೇರುವುದು, ಒಂದರ ಹೊಟ್ಟೆಯೊಳಗೆ ಇನ್ನೊಂದು ಹುಟ್ಟುವುದು, ಒಂದು ಇನ್ನೊಂದಾಗಿ ರೂಪಾಂತರ ಆಗುವುದು, ಭಾರತದ ಪಂಥಗಳ ಚರಿತ್ರೆಯಲ್ಲಿ ನಿರಂತರ ಸಾಗಿ ಬಂದಿದೆ. ನಾಥಪಂಥಕ್ಕೆ  ಜಲಂಧರನಾಥನು ಕಾಪಾಲಿಕ ಮೂಲದಿಂದ ಬಂದರೆ,  ಮಚೇಂದ್ರನು ಕೌಳ ಇಲ್ಲವೆ ವಜ್ರಯಾನ ಪಂಥದಿಂದ ಬರುತ್ತಾನೆ. ಕಣ್ಹಪಾದನು ಸಹಜಯಾನದಿಂದ ಬಂದವನು. ನಾಥವನ್ನೂ ಸೇರಿಸಿಕೊಂಡು ಹೆಚ್ಚಿನವು ತಾಂತ್ರಿಕ ಯೌಗಿಕ ಪಂಥಗಳು. ಗುರುಕೇಂದ್ರಿತ ಪಂಥಗಳು. ವೇದ, ಶಾಸ್ತ್ರ, ಸ್ಮೃತಿ, ಯಾಗ, ವರ್ಣಪದ್ಧತಿಗಳನ್ನು ಮಾನ್ಯ ಮಾಡದವು.  ಅನಾತ್ಮವಾದಿ ಅಥವಾ ನಾಸ್ತಿಕವಾದಿ ಆದವು. ಕಾಯಪ್ರಧಾನವಾದವು. ವೈಯಕ್ತಿಕ ಸಾಧನೆಯ ಅನುಭವದಿಂದ ಪಡೆಯುವ  ಅರಿವು ಸಾಂಪ್ರದಾಯಕ ಜ್ಞಾನಕ್ಕಿಂತ ಮುಖ್ಯ ಎಂದು ನಂಬಿದವು. ಈ ಪಂಥಗಳಲ್ಲಿ ಇಷ್ಟೆಲ್ಲ ಮಾನ ಗುಣಗಳಿದ್ದರೂ ಅವುಗಳ ಒಳಗೆ ತಾತ್ವಿಕ ಸಂಘರ್ಷಗಳಿದ್ದವು. ಉದಾ. ಸಿದ್ಧರು ಮತ್ತು ಯೋಗಿನಿಯರ ನಡುವೆ ನಡೆಯುವ ಸ್ಪರ್ಧೆಗಳು. ಕಾಪಾಲಿಕರನ್ನು ನಾಥರನ್ನು ಕೌಳರನ್ನು ಶರಣರು ಟೀಕಿಸುವ ಪ್ರಕರಣಗಳು. ಹೀಗೆ ಪಂಥಗಳ ಅನುಸಂಧಾನದಲ್ಲಿ ಸಹಅಸ್ತಿತ್ವ, ಭಿನ್ನಮತ, ಕೊಡುಕೊಳೆ, ಸಂಘರ್ಷ ಎಲ್ಲ ಮುಖಗಳೂ ಇವೆ.  ಈ ಸಂಘರ್ಷ ಮತ್ತು ಸ್ನೇಹಕರ ಮುಖಾಮುಖಿಯು  ದಾರ್ಶನಿಕ ಪಂಥಗಳ ರೋಚಕ ಅಧ್ಯಾಯ. ನಾಥಪಂಥವು ಮುಖ್ಯವಾಗಿ ಮೂರು ಪಂಥಗಳ ಸಂಸರ್ಗದಲ್ಲಿ ಮೂಡಿತು. ೧. ವಜ್ರಯಾನ. ೨. ಶಾಕ್ತ ೩.ಕಾಪಾಲಿಕ. ಮೊದಲನೆಯದು ಬೌದ್ಧ. ಕೊನೆಯ ಎರಡು ಶೈವಪಂಥಗಳು.

ವಜ್ರಯಾನ ಹಾಗೂ ನಾಥಪಂಥ

ಬೌದ್ಧ ತಂತ್ರಪಂಥವಾದ ವಜ್ರಯಾನಕ್ಕೂ ಶೈವಪಂಥವಾದ ನಾಥಕ್ಕೂ ಎತ್ತಣಿಂದೆತ್ತ ಸಂಬಂಧ ಎನಿಸಬಹುದು. ಆದರೆ ಇದು ಸಂಭವಿಸಿದ್ದು ಮಾತ್ರ ನಿಜ. ಈ ಸಂಭವದ ಬಗ್ಗೆ ಎರಡು ವಾದಗಳಿವೆ. ೧.ಮಚೇಂದ್ರ ಗೋರಖರು ಮೂಲತಃ ವಜ್ರಯಾನದವರಾಗಿದ್ದು,  ಶೈವ ನಾಥಪಂಥಕ್ಕೆ ಕಾರಣವಾದರು ಎಂಬುದು.  ಈಗಲೂ ಬಂಗಾಲದ ಬೌದ್ಧಪರಂಪರೆಯಲ್ಲಿ ಗೋರಖನ ಹೆಸರು ರಮಣವಜ್ರ. ನೇಪಾಲದಲ್ಲಿ ಮಚೇಂದ್ರನನ್ನು ಅವಲೋಕಿತೇಶ್ವರ ಎಂದೂ ಕರೆಯುತ್ತಾರೆ; ೨. ಮೂಲತಃ ಶೈವತಾಂತ್ರಿಕ ಪಂಥಗಳಿಗೆ ಸೇರಿದ ಗೋರಖ ಮಚೇಂದ್ರರು, ವಜ್ರಯಾನದ ಸಂಯೋಗದಿಂದ ನಾಥಪಂಥವನ್ನು ರೂಪಿಸಿದರು ಎಂಬುದು. ವಾದ ಹೇಗೂ ಇರಲಿ, ವಜ್ರಯಾನದ ಪ್ರಸ್ತಾಪವಿಲ್ಲದೆ ನಾಥಪಂಥದ ಚರಿತ್ರೆ ಪೂರ್ಣಗೊಳ್ಳುವುದಿಲ್ಲ. ಪಂಥಗಳ ಈ ರೂಪಾಂತರ ಪ್ರಕ್ರಿಯೆ ಆರಂಭವಾಗಿದ್ದು ಬಂಗಾಲ ನೇಪಾಳ ಟಿಬೇಟುಗಳಲ್ಲಿ. ಇದರ ಪರಿಣಾಮವು ಕಾಬೂಲು ಬಲೂಚಿಸ್ಥಾನದಿಂದ  ಕರ್ನಾಟಕದ ಕದ್ರಿಯ ತನಕ ಹರಡಿತು.

ಸರಳ ಮಾಡಿ ಹೇಳುವುದಾದರೆ, ಬೌದ್ಧಧರ್ಮದಲ್ಲಿ ಹೀನಯಾನ ಮಹಾಯಾನಗಳೆಂಬ ಎರಡು ವಿಭಜನೆಗಳಾದವಷ್ಟೆ. ಹೀನಯಾನವು ಪಾಲಿ ಭಾಷೆಯಲ್ಲಿರುವ ಬುದ್ಧನ ಮೂಲ ತತ್ವಗಳಿಗೆ ನಿಷ್ಠವಾಗುಳಿಯಿತು. ನಾಸ್ತಿಕವಾದಿಯೂ ಅನಾತ್ಮವಾದಿಯೂ ವಿರಕ್ತವಾದಿಯೂ ಆದ ಅದು, ವಕ್ತಿಗತ ನಿರ್ವಾಣಕ್ಕೆ ಪ್ರಾಮುಖ್ಯ ಕೊಡುತ್ತದೆ. ಕರ್ನಾಟಕದಲ್ಲಿ ಅಶೋಕನು ಶಾಸನ ಹಾಕಿಸಿದ ಕಾಲದಲ್ಲಿ ಇದ್ದುದು ಈ ಬೌದ್ಧಶಾಖೆ. ಈಗಿನ ಶ್ರೀಲಂಕಾ, ಬರ್ಮಾ ಇಂಡೋನೇಶಿಯಾಗಳಲ್ಲಿ ಅದರ ರೂಪಗಳಿವೆ. ಆದರೆ ಮಹಾಯಾನದ್ದು ಇದಕ್ಕಿಂತ ಕೊಂಚ ಭಿನ್ನ ಹಾದಿ. ಅದು ಸುಮೇರು ಪರ್ವತದ ಅವಲೋಕಿತನ ಕಥೆ ಸೂಚಿಸುವಂತೆ, ಸಾಮೂಹಿಕ ಬಿಡುಗಡೆಯ ಕಲ್ಪನೆ ಹೊಂದಿತ್ತು. ಇದರ ಮುಖ್ಯ ಲಕ್ಷಣವೆಂದರೆ ಬೋಧಿಸತ್ವರ ಕಲ್ಪನೆ. ಬೋಧಿಸತ್ವರೆಂದರೆ ಮುಂದೆ ಬುದ್ಧನಾಗಲಿರುವವರು. ಬುದ್ದಿ ಮತ್ತು ಮನಸ್ಸಿನ ಉತ್ಕರ್ಷಕ್ಕೆ ಯತ್ನಿಸುವ ಸಾಧಕರು. ಇದು ಅವಲೋಕಿತೇಶ್ವರ, ಮಂಜುಶ್ರೀ, ವಜ್ರಪಾಣಿ ಮುಂತಾದ ಅವತಾರ ಕಲ್ಪನೆಗೆ ಕಾರಣವಾಯಿತು. ಇಲ್ಲಿ ಬುದ್ಧನು ದೈವವಾಗಿ ಬೌದ್ಧಮೂರ್ತಿಗಳ ಪೂಜೆ ಆರಂಭವಾಯಿತು.  ಯೋಗಸಾಧನೆಗೂ ತಾಂತ್ರಿಕ ಆಚರಣೆಗಳಿಗೂ ಆಸ್ಪದವಿದ್ದ ಇಲ್ಲಿ, ಗಂಡು ಹೆಣ್ಣುಗಳ ಮಿಲನದ ಅನೇಕ ಗುಪ್ತ ಆಚರಣೆಗಳು ಇದ್ದವು. ನೇಪಾಳ ಜಪಾನು ಚೀನಾ ಟಿಬೇಟುಗಳಲ್ಲಿ ಹರಡಿದ ಮಹಾಯಾನವು, ಕರ್ನಾಟಕಕ್ಕೆ  ಶಾತವಾಹನರ ಕಾಲದಲ್ಲಿ (ಕ್ರಿಶ೧-೨)  ಆಗಮಿಸಿತು. ಇಲ್ಲಿನ ಸನ್ನತಿ (ಚಿತಾಪುರ) ಮುಂತಾದ ಬೌದ್ಧಕೇಂದ್ರಗಳು ಆಗ ರೂಪುಗೊಂಡವು. ಚೀನೀ ಯಾತ್ರಿಕ ಹ್ಯೂಯನ್ ತ್ಸಾಂಗನು ಬನವಾಸಿಗೆ ಬಂದು ನೂರಾರು ವಿಹಾರಗಳನ್ನೂ ಸಾವಿರಾರು ಭಿಕ್ಷುಗಳನ್ನೂ ಕಂಡ ಬಗ್ಗೆ ವರದಿ ಮಾಡುತ್ತಾನಷ್ಟೆ. ಬಹುಶಃ ಅಲ್ಲಿದ್ದುದು ಮಹಾಯಾನ. ಮೂರನೆಯ ಘಟ್ಟವೆಂದರೆ, ಮಹಾಯಾನದ ಒಂದು ಟಿಸಿಲೂ ನಾಥಪಂಥದ ದೃಷ್ಟಿಯಿಂದ ಮುಖ್ಯವೂ ಆದ ವಜ್ರಯಾನದ್ದು. ೮ನೇ  ಶತಮಾನದ  ಬಳಿಕ ಕರ್ನಾಟಕವನ್ನು ಪ್ರವೇಶಿಸಿದಂತಿರುವ ವಜ್ರಯಾನವು ೧೫ನೇ ಶತಮಾನದವರೆಗೂ ಇತ್ತು.  ವಜ್ರಯಾನ ಕ್ಷೇತ್ರಗಳಾದ ಬನವಾಸಿ, ಶ್ರೀಶೈಲ, ಡಂಬಳ, ಕೋಳಿವಾಡ ಹಾಗೂ ಕದ್ರಿಗಳಲ್ಲಿ ಅವಲೋಕಿತೇಶ್ವರ, ತಾರಾಭಗವತಿ ಹಾಗೂ ಮಂಜುಶ್ರೀ ದೇವತೆಗಳಿಗೆ ವಿಹಾರ, ಹಾಗೂ ಗುಡಿಗಳು ಆಗ ನಿರ್ಮಾಣಗೊಂಡವು. ಅವಲೋಕಿತನು ಕರುಣೆಯ ದೇವತೆ. ತಾರಾ ಅವನ ಸ್ತ್ರೀಸಂಗಾತಿ. ಆಕೆಯ ಇನ್ನೊಂದು ಹೆಸರು ಪ್ರಜ್ಞಾ. ಎಂದರೆ ವಿವೇಕವನ್ನು ಪ್ರತಿನಿಧಿಸುವಳು. ಮಂಜುಶ್ರೀ ಜ್ಞಾನದ ದೇವತೆ. ‘ಗುಹ್ಯಸಮಾಜ ತಂತ್ರ’ ‘ಮಂಜುಶ್ರೀಕಲ್ಪ’ ಇವು  ವಜ್ರಯಾನದ ದಾರ್ಶನಿಕ ಕೃತಿಗಳು. ವಜ್ರಯಾನದಲ್ಲಿ ಬರುವ ‘ವಜ್ರ’ ಶಬ್ದಕ್ಕೆ ದಾರ್ಶನಿಕವಾದ ವಿಭಿನ್ನ ಅರ್ಥಗಳಿವೆ.

೧. ದೇಹವನ್ನು ಎಲ್ಲ ಅನುಭವಕ್ಕೂ ಕೇಂದ್ರವೆಂದು ಭಾವಿಸಿ, ಅದನ್ನು ವಜ್ರದಂತೆ ದೃಢವಾಗಿಸಿ, ಅದರ ಮೂಲಕ ಸಾಧನೆ ಮಾಡುವುದು. ಮೆಲ್ಲಮೆಲ್ಲನೆ ಆದೆಹೆನೆಂಬನ್ನಬರ ನಾನು ವಜ್ರದೇಹಿಯೆ?ನಾನೇನು ಅಮೃತವ ಸೇವಿಸಿದೆನೆ?ಆನು ಮರುಜವಣಿಯ ಕೊಂಡೆನೆ?ನುಡಿದ ನುಡಿಯೊಳಗೆ ಷಡುಸ್ಥಲ ಬಂದು ಎನ್ನ ಮನವನಿಂಬು ಗೊಳ್ಳದಿದ್ದಡೆ, ಸುಡುವೆನೀ ತನುವ ಕೂಡಲ ಸಂಗಮದೇವಾ ಈ ಬಸವಣ್ಣನ ವಚನದಲ್ಲಿ  ವಜ್ರಕಾಯ ಸಾಧನೆಗಳ ಬಗೆಗೆ ವ್ಯಕ್ತವಾಗಿರುವ ಭಿನ್ನಮತವು ಬಹುಶಃ ವಜ್ರಯಾನಿಗಳನ್ನು ಕುರಿತದ್ದಾಗಿರಬಹುದು.

೨. ಸಾಧಕರು ಯೋನಿ ಯಲ್ಲಿ ವಿಸರ್ಜಿಸಿದ ವೀರ್ಯವನ್ನು ಮತ್ತೆ ಹೀರಿಕೊಂಡು ಊರ್ಧ್ವರೇತಸ್ಕರಾಗುವುದನ್ನು ವಜ್ರೋಲಿ ವಿದ್ಯೆ ಎನ್ನಲಾಗುತ್ತದೆ. ಮನಸ್ಸು ವೀರ್ಯಬಿಂದು ಹಾಗೂ ಉಸಿರು ಎಂಬ ಮೂರು ವಜ್ರಗಳ ಮೇಲೆ ನಿಯಂತ್ರಣ ಸಾಧಿಸುವುದೇ ಯೋಗ ಎಂದು ಕೂಡ ಹೇಳಲಾಗುತ್ತದೆ.

೩. ವಿಜ್ಞಾನ (ವ್ಯಕ್ತಿಗತ ಮನಸ್ಸು) ಶೂನ್ಯ ಮತ್ತು ಮಹಾಸುಖಗಳೆಂಬ ಮೂರು ಪರಿಕಲ್ಪನೆಗಳ ಗುಚ್ಛ. ವಿಜ್ಞಾನವು ಶೂನ್ಯಕ್ಕೆ ಮುಟ್ಟಿದಾಗ ಮಹಾಸುಖ ಸಿಗುತ್ತದೆ. ೪. ಸುಷುಮ್ನಾ ನಾಡಿಯ ಒಳಗೆ ಅಡಗಿರುವ ಒಂದು ನರ. ಸಾಧಕರಿಗೆ ಮಹಾಸುಖ ಕೊಡುವ  ಯೋಗ, ಮುದ್ರೆ, ಸಮಾಧಿ ಮಂತ್ರ ಮುಂತಾದ ತಂತ್ರದ ಅಂಶಗಳು, ವಜ್ರಯಾನದಲ್ಲಿ ಬೇರೆ ರೂಪಾಂತರ ಪಡೆದು ಕೊಂಡವು. ಮಹಾಸುಖವು ಶೂನ್ಯತೆಯನ್ನು ಅನುಭವಿಸುವ ಯೋಗದ ಅಂತಿಮ ಅವಸ್ಥೆಯಲ್ಲಿದೆ ಎಂದು ಮೂಲ ಬೌದ್ಧಧರ್ಮ ಹೇಳಿದರೆ, ವಜ್ರ ಯಾನವು ಅದು ಮುದ್ರೆಯಲ್ಲಿ ಅಂದರೆ ಹೆಣ್ಣಿನ ಜತೆಗಿನ ಸಂಯೋಗದಲ್ಲಿ ಇದೆ ಎಂದಿತು.

ಇಲ್ಲಿ ಬುದ್ಧನು ಬೋಧಿಸತ್ವ ಅವತಾರಗಳಾಗಿ ದೈವೀಕರಣ ಪಡೆದುದು ಮಾತ್ರವಲ್ಲ,  ಪ್ರತಿ ಬೋಧಿಸತ್ವರಿಗೂ ಬೇರೆಬೇರೆ ಶಕ್ತಿದೇವತೆಗಳು ಸೃಷ್ಟಿಯಾದರು. ಶಕ್ತಿದೇವತೆಗಳ  ಆರಾಧನೆಯ ಜತೆ ವಜ್ರಯಾನಕ್ಕೆ ಯೋಗಿನಿಯರ ಪ್ರವೇಶವಾಯಿತು.  ಬೋಧಿಸತ್ವ ಹಾಗೂ ಶಕ್ತಿದೇವತೆಗಳ ಮೂರ್ತಿಗಳು ರೂಪುಗೊಂಡವು. ಅವುಗಳ ಪೂಜೆಗೆ  ತಾಂತ್ರಿಕ ಆಚರಣೆಗಳು ಆರಂಭವಾದವು. ಇದರೊಂದಿಗೆ ದೇಹ ಸ್ತ್ರೀ ಮೈಥುನ ಮಾಟ ಮಂತ್ರ ಸಿದ್ದಿಗಳ ದೊಡ್ಡ ಜಗತ್ತು ಈ ತಾಂತ್ರಿಕ ಪಂಥದಲ್ಲಿ ಮೈದಳೆಯಿತು. ತಂತ್ರವೆಂದರೆ ಹೆಣ್ಣಿನ ಅರ್ಥಾತ್ ಶಕ್ತಿಯ ಆರಾಧನೆ. ವಜ್ರಯಾನದಲ್ಲಿ ಮಹಾಮುದ್ರಾ ಎಂದರೆ ಹೆಣ್ಣು. ಮಹಾಮುದ್ರೆಯಿಲ್ಲದೆ ಮಹಾಸುಖವಿಲ್ಲ. ಮಹಾಸುಖವಿಲ್ಲದೆ ಮೋಕ್ಷವಿಲ್ಲ.  ವಜ್ರಯಾನವು ಹೆಣ್ಣನ್ನು ಪ್ರಜ್ಞಾ ಎಂದೂ  ಗಂಡನ್ನು ಉಪಾಯವೆಂದೂ ಕರೆಯುತ್ತದೆ. ಪ್ರಜ್ಞೆ ಮತ್ತು ಉಪಾಯಗಳ ಮಿಲನವೇ ಮಹಾಸುಖ ಅಥವಾ ನಿರ್ವಾಣ. ಇದು ನಾಥರು ಪ್ರತಿಪಾದಿಸುವ ಕುಂಡಲಿನಿ ಶಕ್ತಿಯು ಸಹಸ್ರಾರದಲ್ಲಿರುವ ಶಿವನ ಜತೆ ಮಿಲನವಾಗುವ ಕಲ್ಪನೆಗೆ ಹತ್ತಿರವಾದುದು.  ಹೀಗೆ ಅವಲೋಕಿತೇಶ್ವರನ ಜಾಗದಲ್ಲಿ  ಶಿವನೂ ತಾರೆಯ ಜಾಗದಲ್ಲಿ ಶಕ್ತಿಯೂ ಬರಲು, ವಜ್ರಯಾನವು  ಶೈವೀಕರಣಗೊಂಡು ನಾಥಪಂಥದ ರೂಪಧಾರಣೆ ಮಾಡಲು ಸುಲಭವಾಯಿತು. ಆದರೆ ಈ ರೂಪಾಂತರವು ಕದ್ರಿಯಲ್ಲಿ ಆದಂತೆ  ಕೋಳಿವಾಡ ಡಂಬಳಗಳಲ್ಲಿ ಯಾಕೆ ಸಾಧ್ಯವಾಗಲಿಲ್ಲವೊ ತಿಳಿಯಬೇಕಿದೆ.

ಯೌಗಿಕ ಚಟುವಟಿಕೆ ಮತ್ತು ತಂತ್ರಾಚರಣೆಗಳು, ವಜ್ರಯಾನವು ನಾಥವಾಗಿ ರೂಪಾಂತರವಾಗಲು ಮುಖ್ಯ ಭೂಮಿಕೆಯಾದವು. ನಾಥಪಂಥದಲ್ಲಿ ಗಂಡುಹೆಣ್ಣಿನ ಮಿಲನದ ಪರಿಭಾಷೆ ಸೇರಿದ್ದೇ ತಂತ್ರಪಂಥಗಳಿಂದ. ನಾಥರಲ್ಲಿ  ‘ವಜ್ರಯೋಗಿನಿ ಸಾಧನಾ’ ಎಂಬ ಗ್ರಂಥವಿದೆ. ಕೆಲವು ನಾಥರು ಬೌದ್ಧ ಪರಂಪರೆಯಲ್ಲೂ ಕೆಲವು ಬೌದ್ಧಯತಿಗಳು ನಾಥಪರಂಪರೆಯಲ್ಲೂ ಅದಲು ಬದಲಾಗಿ ಕಾಣಿಸಿಕೊಳ್ಳುತ್ತಾರೆ. ವಜ್ರಯಾನದ ಸರಹಪಾ, ಸಹಜಯಾನದ ಕಣ್ಹಪಾ, ನಾಥರ ಚೌರಾಸಿ ಸಿದ್ಧರಲ್ಲಿ ಕಾಣಿಸುತ್ತಾರೆ. ಸರಹಪಾನ ಶಿಷ್ಯನಾದ ಶ್ರೀಶೈಲದ ನಾಗಾರ್ಜುನನು ನಾಥರಲ್ಲೂ ಕಾಣಿಸಿಕೊಳ್ಳತೊಡಗಿದನು. ನೇಪಾಲ ಹಾಗೂ ಟಿಬೇಟುಗಳಲ್ಲಿ ನಾಥಪಂಥದ  ಮಚೇಂದ್ರನು ಅವಲೋಕಿತನ ಅವತಾರಿಯೂ ಆದಾಗ, ಎರಡೂ ಪಂಥಗಳ ನಡುವೆ ಗಾಢಬೆಸುಗೆ ಏರ್ಪಟ್ಟಿತು. ಸ್ವತಃ ಶಿವನು ಅವಲೋಕಿತನಿಗೆ ಯೋಗರಹಸ್ಯ ತಿಳಿಸಿದನು ಎಂದು ಅಲ್ಲಿ ನಂಬಿಕೆಯಿದೆ. ಬುದ್ಧ ಹುಟ್ಟಿದ ನೇಪಾಳದಲ್ಲಿ ವರ್ಷಕ್ಕೊಮ್ಮೆ ನಡೆಯುವ ಮಚೇಂದ್ರನ ಉತ್ಸವವು ಬೌದ್ಧರ ದೊಡ್ಡಹಬ್ಬ.  ಬಂಗಾಳದ ಪರಂಪರೆಯಲ್ಲಿಯೂ ಗೋರಖ ಮಚೇಂದ್ರರು ಬೌದ್ಧಸಿದ್ಧರು. ವಜ್ರಯಾನದಲ್ಲಿ ಗೋರಖನ ಹೆಸರು ‘ಅನಂಗವಜ್ರ’ ‘ರಮಣವಜ್ರ’; ತಾಂತ್ರಿಕ ಆಚರಣೆಗಳಿಂದ ಕೂಡಿದ ಬೌದ್ಧಪಂಥದೊಳಗಿಂದ ೧೦ನೇ ಶತಮಾನದ ಹೊತ್ತಿಗೆ ಗೋರಖ ಮಚ್ಚೇಂದ್ರರು ಶೈವ ನಾಥಪಂಥವನ್ನು ರೂಪಿಸಿದರು ಎಂದು ಹೆಚ್ಚಿನ ವಿದ್ವಾಂಸರು ಭಾವಿಸುತ್ತಾರೆ. ನಾಥಪಂಥವು ವಜ್ರಯಾನ ಕಾಪಾಲಿಕ ಪಂಥಗಳು ಸಂಕರಗೊಂಡು  ಹುಟ್ಟಿತೊ ಅಥವಾ ವಜ್ರಯಾನವನ್ನು ನಾಶಮಾಡಿ ಹುಟ್ಟಿತೊ ಹೇಳುವುದು ಕಷ್ಟ.  ಬಹುಶಃ ಏಕಕಾಲಕ್ಕೆ ಸಂಕರ ನಾಶ ರೂಪಾಂತರ ದಂತಹ ಹಲವು ಬಗೆಯ ಪ್ರಕ್ರಿಯೆಗಳು  ನಡೆದಿರಬಹುದು. ಶೈವ ಹಾಗೂ ಬೌದ್ಧ ಎಂದು ವಿಂಗಡಿಸಿ ಹೇಳಲಾಗದಂತಹ ಒಂದು ಸಂಕರ ಸನ್ನಿವೇಶ ರೂಪುಗೊಂಡಿರಬಹುದು. ಭೌಗೋಳಿಕವಾಗಿ ತಾಂತ್ರಿಕ ಬೌದ್ಧರ ಟಿಬೆಟ್ ಹಾಗೂ ಶೈವಾರಾಧನೆಯ ಭಾರತಗಳ ನಡುವೆ ಇರುವ ನೇಪಾಳವು, ಕಾಪಾಲಿಕ ವಜ್ರಯಾನ ಪಂಥಗಳ ಮಿಲನದ ವೇದಿಕೆಯಾಗಿದ್ದು ಸಹಜವಾಗಿದೆ. ನೇಪಾಳದಲ್ಲಿ ನಾಥರ ಭೈರವಾರಾಧನೆ ಹಾಗೂ ಬೌದ್ಧರ ಅವಲೋಕಿತನ ಆರಾಧನೆಗಳು ಹೇಗೆ ಬೆರೆತವೆಂದರೆ,  ಅಲ್ಲಿನ ಭೈರವ ಮೂರ್ತಿಗಳೂ  ಬೌದ್ಧ ಮೂರ್ತಿ ಗಳಂತೆ ರೂಪಾಂತರ ಪಡೆದವು.

[1]

ನೇಪಾಲದಲ್ಲಿ ಉಂಟಾದ ಪಂಥಗಳ ಸಂಕರ ಹಾಗೂ ರೂಪಾಂತರಗಳು, ನಂತರದ ಘಟ್ಟದಲ್ಲಿ ಭಾರತದ ಇತರೆಡೆಗೆ ಹರಡಿರಬಹುದು ಅಥವಾ ಈ ಪ್ರಕ್ರಿಯೆ ಕಠಮಂಡುವಿನಿಂದ ಕದ್ರಿಯ ತನಕ ಏಕಕಾಲಕ್ಕೆ ನಡೆದಿರಬಹುದು. ಬೌದ್ಧ ತಾಂತ್ರಿಕಪಂಥಗಳೂ  ಶೈವ ತಾಂತ್ರಿಕ ಪಂಥಗಳೂ ಬೆರೆಯಲು ಅವುಗಳ ನಡುವೆ, ಯೋಗಾಚರಣೆ, ಶೂನ್ಯತತ್ವ ಪ್ರತಿಪಾದನೆ, ಕಾಯ ಪ್ರಧಾನ ಚಿಂತನೆ, ಆನಾತ್ಮವಾದ, ವೇದ ಪ್ರಮಾಣ ಒಪ್ಪದಿರುವಿಕೆ,  ವರ್ಣಾಶ್ರಮ ವಿರೋಧಿ ನಿಲುವು, ಮುಂತಾದ ಸಮಾನ ಕಾರಣಗಳಿದ್ದವು. ಇದರಿಂದ ಸಂಕರಕ್ಕಾಗಲಿ ರೂಪಾಂತರಕ್ಕಾಗಲಿ ಕಷ್ಟವಾಗಲಿಲ್ಲ. ಈ ಲಕ್ಷಣಗಳು ರೂಪಾಂತರ ಪ್ರಕ್ರಿಯೆ ಮುಗಿದ ಬಳಿಕವೂ ಉಳಿದವು. ಇದೇ ಪ್ರಕ್ರಿಯೆಯಲ್ಲಿ ಕರ್ನಾಟಕದಲ್ಲಿದ್ದ ವಜ್ರಯಾನ ಪಂಥವು ರೂಪಾಂತರಗೊಂಡು ಕಾಪಾಲಿಕ ಪಂಥದ ಜತೆ ಸೇರಿ ನಾಥಪಂಥ ರೂಪುಗೊಂಡಿತು. ಈ ಸೇರುವಿಕೆ ಹಾಗೂ ರೂಪಾಂತರ ಪ್ರಕ್ರಿಯೆಯನ್ನು ಅಲ್ಲಮನ ‘ವಜ್ರ ಅಮರಿಯ ಕಲ್ಪ’ ಎಂದು ಆರಂಭವಾಗುವ ವಚನ ಚೆನ್ನಾಗಿ ಪ್ರತಿನಿಧಿಸುತ್ತದೆ. ಇಲ್ಲಿ  ವಜ್ರಅಮರಿಯ ಕಲ್ಪ, ನವನಾಥರ ಹೆಸರು, ಕಾಪಾಲಿಕ ಆಚರಣೆ ಮೂರೂ ಇವೆ. ದೇವರ ದಾಸಿಮಯ್ಯನ ವಚನದಲ್ಲಿ ಬರುವ ನವನಾಥರ ಪಟ್ಟಿಯಲ್ಲಿ ಮಂಜುನಾಥ ನಾಗಾರ್ಜುನರೂ ಸೇರಿದ್ದಾರೆ. ಇದಕ್ಕೆ ತಕ್ಕಂತೆ ಕರ್ನಾಟಕದ ಕದ್ರಿ, ಲುಂಕೆಮಲೆ, ಹುಲಿಗೊಂದಿ, ಚಂದ್ರಗುತ್ತಿ ಮುಂತಾದ ನಾಥಮಠಗಳು ಬೌದ್ಧ ವಜ್ರಯಾನದ ಪರಿಸರದಲ್ಲಿಯೇ ಇವೆ. ಚುಂಚನಗಿರಿ ಮಠಕ್ಕೆ ಅಧಿಪತಿಯಾಗಿದ್ದ ನಾಥರಲ್ಲಿ ಒಬ್ಬನ ಹೆಸರು ವಜ್ರನಾಥ ಎಂದಿತ್ತು.

ಕರ್ನಾಟಕದಲ್ಲಿ ಬೌದ್ಧಧರ್ಮದ ಇರುವಿಕೆಯನ್ನು ಕೆಲವು ವಿಶಿಷ್ಟ ಕುರುಹುಗಳ ಮೂಲಕ ಗುರುತಿಸಬಹುದು. ಅವೆಂದರೆ , ಧರ್ಮ, ಹೇಮ, ವಜ್ರ, ಮಂಜು, ಅವಲೋಕಿತ, ತಾರಾ, ಚಂದ್ರ, ಕದಳಿ. ಇವೆಲ್ಲ ಕುರುಹುಗಳು ಒಂದೇಕಡೆ ಇರುವುದೂ ಉಂಟು. ಬನವಾಸಿ ಪರಿಸರದಲ್ಲಿ ವಜ್ರ, ಮಂಜು, ಲೋಕ, ತಾರೆ, ಭಗವತಿ, ಜೋಗ, ಚಂದ್ರ ಎಂಬ ಹೆಸರಿ ನಿಂದ ಶುರುವಾಗುವ ಸ್ಥಳಗಳು ಕಿಕ್ಕಿರಿದಿವೆ. ಖಾನಾಪುರದ ಬಳಿ ಹರಿಯುವ ಮಹದಾಯಿ ನದಿಯ ಒಂದು ಜಲಪಾತಕ್ಕೆ ವಜ್ರಪೂಹ ಎಂಬ ಹೆಸರಿದೆ. ಇದೇ  ಪರಿಸರದಲ್ಲಿ ಚಂದ್ರಗುತ್ತಿಯ ನಾಥ ಮಠವೂ ಬರುತ್ತದೆ. ಕರ್ನಾಟಕದಲ್ಲಿ ವಜ್ರಮಟ್ಟಿ (ಮುಧೋಳ) ವಜ್ರಳ್ಳಿ (ಯಲ್ಲಾಪುರ) ವಜ್ರ(ಹೊಸದುರ್ಗ) ವಜ್ರಹೊಸಹಳ್ಳಿ (ದೊಡ್ಡಬಳ್ಳಾಪುರ) ವಜ್ರದಹಳ್ಳಿ(ಮಧುಗಿರಿ)  ವಜ್ರಹಳ್ಳಿ(ನೆಲಮಂಗಲ)  ವಜ್ಜನಕುರ್ಕೆ(ಕೊರಟಗೆರೆ.) ಮುಂತಾದ ಸ್ಥಳಗಳಿವೆ. ಕರಾವಳಿ ನಾಡಿನಲ್ಲಿ ಬಜ್ರೆ(ಬೆಳ್ತಂಗಡಿ) ಇದೆ. ಕೊನೆಯ ಸ್ಥಳಕ್ಕೂ ಕದ್ರಿಯಲ್ಲಿದ್ದ ವಜ್ರಯಾನ ಪಂಥಕ್ಕೂ ಯಾವ ಸಂಬಂಧವಿತ್ತೊ ಸ್ಪಷ್ಟವಾಗುವುದಿಲ್ಲ. ಭಾರತಾದ್ಯಂತ ಬಹುತೇಕ ವಜ್ರಯಾನ ಕೇಂದ್ರಗಳು, ನಂತರ ಕಾಪಾಲಿಕ ಹಾಗೂ ನಾಥಪಂಥದ ಕ್ಷೇತ್ರ ಗಳಾದವು. ಮಹಾರಾಷ್ಟ್ರದ ವಜ್ರೇಶ್ವರಿಯೂ ಇದರಲ್ಲಿ ಒಂದು. ಆದರೆ ವಜ್ರಪರ್ವತ ಎಂಬ ಹೆಸರಿದ್ದ, ನಾಗಾರ್ಜುನನ ನೆಲೆಮನೆಯಾಗಿದ್ದ ಶ್ರೀಶೈಲವು ನಾಥರ ಜಾಗವಾಗದೆ ಹೋದುದು ಮಾತ್ರ ಅರ್ಥವಾಗುವುದಿಲ್ಲ.

ಮಂಜುಸಂಬಂಧ

ಕರ್ನಾಟಕದಲ್ಲಿ ಬೌದ್ಧ ಮತ್ತು ನಾಥಸಂಬಂಧವನ್ನು ಬೆಸೆಯುವ ಹೆಸರುಗಳಲ್ಲಿ  ಮಂಜು ಮುಖ್ಯವಾದುದು. ಮಹಾಯಾನದಲ್ಲಿ ಮಂಜು (ಟಿಬೆಟ್ಟಿನ ಭಾಷೆಯಲ್ಲಿ ‘ಮಾಂಚು’) ಎಂಬುದು ಬುದ್ಧನ ಹೆಸರು. ಇದಕ್ಕೆ ನಂತರ ನಾಥ ಎಂಬ ಶಿವಸೂಚಕ ಶಬ್ದ ಸೇರಿಕೊಂಡಿತು. ಬೌದ್ಧತಾಂತ್ರಿಕ ಪಂಥದಲ್ಲಿ ‘ಮಂಜುಶ್ರೀಕಲ್ಪ’ ಎಂಬ ಗ್ರಂಥವಿರುವ ಉಲ್ಲೇಖ ಹಿಂದೆ ಬಂದಿತು. ಕರ್ನಾಟಕದಲ್ಲಿರುವ ಮಂಜುನಾಥ ಗುಡಿಗಳು ಕದ್ರಿಬೆಟ್ಟ, ಧರ್ಮಸ್ಥಳಗಳಲ್ಲಿ ಇವೆ; ಕರ್ನಾಟಕದಲ್ಲಿ ಮಂಜೇಶ್ವರ (ಕಾಸರಗೋಡು) ಕಿರುಮಂಜೇಶ್ವರ (ಮಂಗಳೂರು) ಮಂಜೇನಹಳ್ಳಿ (ಕಡೂರು) ಮಂಜಲಾಪುರ (ಸುರಪುರ) ಮಂಜನಹಾಳು(ಸಿರಗುಪ್ಪ) ಮಂಜನಾಡಿ (ಮಂಗಳೂರು) ಮಂಜುಗುಳಿಕೆರೆ (ಕೋಲಾರ) ಕೋಳಿಮಂಜುಣಿ (ಕುಮಟಾ) ಮಂಜಗುಣಿ (ಅಂಕೋಲಾ) ಹೊಸಮಂಜು (ಸಿದ್ಧಾಪುರ) ಮುಂತಾದ ಊರುಗಳಿವೆ.

ವಜ್ರಯಾನವು ಶೈವನಾಥಕ್ಕೆ ರೂಪಾಂತರಗೊಂಡ ಅತ್ಯುತ್ತಮ ನಿದರ್ಶನವೆಂದರೆ, ಕದ್ರಿಯ ಮಂಜುನಾಥ ಗುಡಿ. ಕದ್ರಿಯ ಶಾಸನಗಳಲ್ಲಿ ಕದ್ರಿಯ ಮಂಜುನಾಥನನ್ನು ಮಂಜಿನಾಥ, ಮಂಜೇಶ್ವರ ದೇವರು ಎಂದು ಕರೆಯಲಾಗಿದೆ.  ಇಲ್ಲಿನ ಬೌದ್ಧ ಮತ್ತು ನಾಥಪಂಥದ ಕುರುಹುಗಳನ್ನು ಮರೆಮಾಚಲು ಮತ್ತು ಕಳೆಯಲು ಎಷ್ಟೊ ಯತ್ನ ನಡೆಯಿತು. ಆದರೆ ಸಾಧ್ಯವಾಗಲಿಲ್ಲ.  ಕದ್ರಿ ಮಂಜುನಾಥ ಗುಡಿಯಲ್ಲಿ ಇರುವ ಮುಖ್ಯ ಬೌದ್ಧ ಕುರುಹುಗಳೆಂದರೆ, ಮಂಜುನಾಥನೆಂಬ ಹೆಸರು. ಶಾಸ್ತಾವು ದೇವರು (ಬುದ್ಧನಿಗೆ ಧರ್ಮಶಾಸ್ತಾವು ಎಂಬ ಹೆಸರಿದೆ). ನಾಲ್ಕೂ ಬದಿ ಬುದ್ಧರಿರುವ ಆಯಕ ಸ್ಥಂಭ[2], ಬುದ್ಧನ ಎರಡು ಮೂರ್ತಿಗಳು ಹಾಗೂ  ಪ್ರಸಿದ್ಧವಾದ ಅವಲೋಕಿತೇಶ್ವರನ  ಮೂರ್ತಿ. ಪದ್ಮಾಸನದಲ್ಲಿರುವ ಈ ಮೂರ್ತಿಯ  ಬುಡದಲ್ಲಿ ಸಂಸ್ಕೃತ ಶಾಸನವಿದ್ದು ಅದರ ಕೊನೆಯ ಚರಣಗಳು ಹೀಗಿವೆ:

ಲೋಕೇಶ್ವರಸ್ಯ ದೇವಸ್ಯ ಪ್ರತಿಷ್ಠಾಮಕರೋತ್ ಪ್ರಭುಃ

ಶ್ರೀಮತ್ ಕದರಿಕಾ ನಾಮ್ನಿ ವಿಹಾರೇ ಸುಮನೋಹರೇ

ಅಳುಪದೊರೆ ಕುಂದವರ್ಮನು (ಕ್ರಿಶ.೯೬೮) ಕದರಿಕಾ ವಿಹಾರ ಕಟ್ಟಿಸಿದ ದಾಖಲೆಯಿದು. ವಿಹಾರವೆಂದರೆ ಬೌದ್ಧ ಸನ್ಯಾಸಿಗಳು ಇರುತ್ತಿದ್ದ ಮಠ. (ಚೈತ್ಯಾಲಯ ಎಂದರೆ ಬೌದ್ಧಮೂರ್ತಿ ಇರುವ ಗುಡಿ. ಸ್ಥೂಪವೆಂದರೆ ಅಸ್ಥಿಸಂಚಯದ ಸಮಾಧಿ.) ಗೋವಿಂದ ಪೈಗಳ ಪ್ರಕಾರ, ಶಿವನಿಗೇ ಏಕೆ, ಸನಾತನ ಧರ್ಮದ ಯಾವ ದೇವತೆಗೂ ಮಂಜುನಾಥ ಎಂದು ಹೆಸರಿಲ್ಲ. ಇದು ಸ್ಪಷ್ಟವಾಗಿ ಬೋಧಿಸತ್ವರಲ್ಲಿ ಒಬ್ಬನಾದ ಅವಲೋಕಿತೇಶ್ವರನ ಹೆಸರು. ಆದರೆ ಈ ಅವಲೋಕಿತನು ಮಚೇಂದ್ರನ ಜತೆ   ಸಮೀಕರಣಗೊಂಡವನು. ಹೀಗಾಗಿ ನಂತರದ ಕಾಲದಲ್ಲಿ ಮಂಜುನಾಥನ ಗುಡಿಯು ನಾಥಪಂಥಕ್ಕೆ ರೂಪಾಂತರವಾಯಿತು.[3] ಕೆಲವು ವಿದ್ವಾಂಸರು ಅವಲೋಕಿತೇಶ್ವರನ ಜಟೆಯಲ್ಲಿ ಶಿವಲಿಂಗದ ಕುರುಹುಗಳಿರುವುದನ್ನು ಗಮನಿಸಿ, ಇದು  ಶಿವನ ವಿಗ್ರಹವೆಂದೂ, ಬಹಳವೆಂದರೆ ಬೌದ್ಧಪ್ರಭಾವ ಪಡೆದ ಶಿವನ ಮೂರ್ತಿಯೆಂದೂ, ಭಾವಿಸಿದರು.  ಹಲವು ಕಡೆ ಶಿವನಿಗೆ ಲೋಕೇಶ್ವರನೆಂಬ ಹೆಸರು ಇರುವ ಕಾರಣ, ಇದು ಮೂಲತಃ ಶೈವಗುಡಿ. ಶೈವಧರ್ಮೀಯನಾದ ಕುಂದವರ್ಮನು ವಿಹಾರ ಕಟ್ಟಿಸಲು ಸಾಧ್ಯವಿಲ್ಲವೆಂದೂ ವಾದಿಸಿದರು.[4] ಒಂದೊಮ್ಮೆ ಇದು ಶಿವನ ಮೂರ್ತಿ ಯಾಗಿದ್ದಲ್ಲಿ,  ಗರ್ಭಗುಡಿಯಿಂದ ಯಾಕೆ ಹೊರಹಾಕಲ್ಪಟ್ಟಿತು ಎಂಬುದಕ್ಕೆ ವಿವರಣೆ ಸಿಗುವುದಿಲ್ಲ. ಇದರ ಜತೆಗೆ ಇನ್ನೂ ಕೆಲವು ಪ್ರಶ್ನೆಗಳು ಏಳುತ್ತವೆ.  ಶೈವಧರ್ಮೀಯನಾದ ಕುಂದವರ್ಮನು ಹೇಗೆ ಬೌದ್ಧವಿಹಾರ ಕಟ್ಟಿಸಿದನು? ಬೌದ್ಧವಿಹಾರವು ನಾಥಪಂಥದ ಕೇಂದ್ರವಾಗಿ ಹೇಗೆ ಬದಲಾಯಿತು?  ಬೌದ್ಧವಿಹಾರವು ಶೈವಪಂಥವಾದ ನಾಥಕ್ಕೆ ಬದಲಾದ ಬಳಿಕವೂ ಯಾಕೆ ಮಂಜುನಾಥ ಎಂಬ ಹೆಸರನ್ನು ಬದಲಿಸಲಿಲ್ಲ?

ಗೋವಿಂದ ಪೈ ಹಾಗೂ ಸಾಲೆತ್ತೂರು ಮುಂತಾದ ವಿದ್ವಾಂಸರು, ಈ ಪ್ರಶ್ನೆಗಳನ್ನು ಬಿಡಿಸಿದರು.  ೧. ಬನವಾಸಿ ಬಳ್ಳಿಗಾವೆಗಳಲ್ಲಿ ವಿಹಾರಗಳನ್ನು ಕಟ್ಟಿಸಿದ ಸಾತಕರ್ಣಿ ಹಾಗೂ ಕಲ್ಯಾಣ ಚಾಲುಕ್ಯರೂ ಶೈವರೇ ಆಗಿದ್ದರು. ೧೦ನೇ ಶತಮಾನದ ಹೊತ್ತಿಗಾಗಲೇ ಬೌದ್ಧಧರ್ಮವು ಶೈವೀಕರಣ ಆರಂಭಿಸಿತ್ತು. ಆದ್ದರಿಂದ ಕುಂದವರ್ಮ ವಿಹಾರ ಕಟ್ಟಿಸಿದ್ದರಲ್ಲಿ ವಿಶೇಷವೇನಿಲ್ಲ.[5] ೨. ಅವಲೋಕಿತನ ವಿಗ್ರಹವು ಬೌದ್ಧರ ಲೋಕೇಶ್ವರನೊಡನೆ ಸಮೀಕೃತಗೊಂಡು ದೇವೀಭೂತನಾದ (deified) ಮಚೇಂದ್ರನದು. ಇವನ ಜಡೆಯಲ್ಲಿರುವ ಧ್ಯಾನಮೂರ್ತಿಗಳು ಧ್ಯಾನಿಬುದ್ಧರವು. ಈ ಧ್ಯಾನಮೂರ್ತಿಗಳು ಮಚೇಂದ್ರನಿಗೆ ಅವನು ಮತ್ಸ್ಯರೂಪದಲ್ಲಿದ್ದಾಗ ಯೋಗರಹಸ್ಯ ಹೇಳಿದ ಶಿವನವು. ಆದ್ದರಿಂದ ಶೈವನಾದ ಕುಂದವರ್ಮನಿಗೆ ಅವಲೋಕಿತೇಶ್ವರನ ಜತೆ ಸಮೀಕರಣಗೊಂಡ ಹಾಗೂ ಶಿವನ ಶಿಷ್ಯನಾದ ಮಚೇಂದ್ರನಾಥನ ಮೂರ್ತಿಸ್ಥಾಪನೆ ಮಾಡುವುದು ದೊಡ್ಡ ಸಮಸ್ಯೆ ಆಗಲಿಲ್ಲ. ‘‘ಲೋಕೇಶ್ವರನ ಬೌದ್ಧವಿಗ್ರಹವೂ ಅದನ್ನು ಪ್ರತಿಷ್ಠಿಸಿದ ವಿಹಾರ ಎಂಬ ಬೌದ್ಧ ನಾಮಧೇಯ ಉಳ್ಳ ಮಂದಿರವೂ, ಬೌದ್ಧಧರ್ಮದ ಪ್ರಭಾವಕ್ಕೆ ಶಾನೆ ಈಡಾದ ಉತ್ತರ ಭಾರತದ ಬೇರಾವುದೊಂದು ಬೌದ್ಧೇತರ ಪಂಥದಿಂದ ಅತಏವ ಹಿಂದೂಧರ್ಮದ ಪಂಥದಿಂದ ನಿರ್ಮಿಸಲ್ಪಟ್ಟವಾಗಿರಬೇಕು. ಆ ಪಂಥವೆಂದರೆ, ಈಗಲೂ ಕದಿರೆಯ ಗುಡ್ಡ ದಲ್ಲಿ ಮಠಮಾಡಿಕೊಂಡಿರುವ ಜೋಗಿಗಳೆಂಬವರ ಶೈವಧರ್ಮದ ನಾಥಸಂಪ್ರದಾಯವಲ್ಲದೆ  ಬೇರೆಯಲ್ಲ’’[6]

ವಜ್ರಯಾನ ಪಂಥವು ಶೈವೀಕರಣಗೊಳ್ಳುತ್ತಿದ್ದ ಸಂಕ್ರಮಣ ಸನ್ನಿವೇಶದಲ್ಲಿ ಈ ಮೂರ್ತಿಯು ಮೂಡಿದ್ದು, ಕದ್ರಿಯು ಒಂದು  ಬೌದ್ಧೋಶೈವ ತಾಣವಾಗಿದೆ. ಕದರಿಕಾ ವಿಹಾರವು ಶೈವಗುಡಿಯಾದೊಡನೆ ಮಂಜುಶ್ರೀ ಬುದ್ಧನು ಮಂಜುನಾಥ ಲಿಂಗವಾದನು.  ಮಂಜು ಶಬ್ದದಿಂದ ಘೋಷ ತೆಗೆದು ನಾಥ ಹಾಗೂ ಈಶ್ವರ ಎಂಬ ಹೆಸರುಗಳು ಸೇರಿಸಲ್ಪಟ್ಟವು. ಒಂದು ಗುಡಿಯಲ್ಲಿ ಬೇರೊಂದು ದೈವವು ಬಂದಾಗ, ಸಾಮಾನ್ಯವಾಗಿ ಹಳೆಯ ಹೆಸರನ್ನೇ ಪಡೆಯುತ್ತದೆ. ಉಡುಪಿಯ ಚಂದ್ರನಾಥ ಬಸದಿಯಲ್ಲಿ ಚಂದ್ರಮೌಳೇಶ್ವರ ಸ್ಥಾಪನೆಯಾದಂತೆ, ಅನಂತನಾಥ ಬಸದಿಯಲ್ಲಿ ಅನಂತೇಶ್ವರ ಸ್ಥಾಪನೆಯಾದಂತೆ, ಮಂಜುನಾಥನ ವಿಹಾರವು ಮಂಜುನಾಥನ ಗುಡಿಯಾಯಿತು.[7]

ಒಂದು ಕಾಲಕ್ಕೆ ಕರಾವಳಿಯಲ್ಲಿ ಬೌದ್ಧಧರ್ಮವು ಪ್ರಬಲವಾಗಿತ್ತು ಎಂದು ಈಗಲೂ ಉಳಿದಿರುವ ಕುರುಹುಗಳು ಸಾರುತ್ತವೆ. ಕುಂದಾಪುರ ತಾಲೂಕಿನ ಕಮಲಶಿಲೆಯಲ್ಲಿ ನಾಥಮಠವಿದೆ. ಕಮಲಶಿಲೆಯು ಬೌದ್ಧ ದಾರ್ಶನಿಕನೊಬ್ಬನ ಹೆಸರು. ಇದೇ ಪರಿಸರದ ಕೋಟ, ಮೆಕ್ಕೆಕಟ್ಟೆ, ಕಾಪು, ಉದ್ಯಾವರ, ಬಸರೂರು ಬಾರಕೂರುಗಳಲ್ಲಿ ನಾಥಪಂಥವಿತ್ತು. ಇಲ್ಲಿರುವ ಮಂಗಳಪಾದೆಯಲ್ಲಿ ಬೌದ್ಧವಿಹಾರವಿತ್ತು. ಕಾಪು ಮೂಳೂರು ಪುತ್ತಿಗೆಗಳಲ್ಲಿ ಬೋಧಿಸತ್ವನ ವಿಗ್ರಹಗಳು ಸಿಕ್ಕಿವೆ. ಧರ್ಮಸ್ಥಳ ಅಥವಾ ಕುಡುಮವು ಬೌದ್ಧರ ಸ್ಥಾನ ವಾಗಿತ್ತು. ಧರ್ಮ ಎಂಬುದು ಬುದ್ಧನ ಹೆಸರು. ಇಲ್ಲಿರುವ ಮಂಜುನಾಥ ಕೂಡ ಬೌದ್ಧ ಮೂಲದ ಹೆಸರು. ಅಣ್ಣಪ್ಪದೈವವು ಕದ್ರಿಯಿಂದ ತಂದು ಸ್ಥಾಪಿಸಿದ ದೇವರೇ ಇಲ್ಲಿನ ಮಂಜುನಾಥ ಎಂಬ ಐತಿಹ್ಯವು ಇಲ್ಲಿದ್ದು, ಅದೂ ಸಹ  ಕದ್ರಿಗೆ ಸಂಬಂಧವನ್ನು ಹತ್ತಿಸುತ್ತದೆ. ಈ ಹಿನ್ನೆಲೆಯಲ್ಲಿ  ಧರ್ಮಸ್ಥಳದಲ್ಲಿರುವ ಮಂಜುನಾಥನು ಕೂಡ ಮಚೇಂದ್ರನಾಥನೇ. ಮಚೇಂದ್ರನಾಥವು ಮಛಿಂದ್ರನಾಥ ಮಂಚಿನಾಥ ಮಂಜಿನಾಥ ಎಂಬ ರೂಪಾಂತರಗಳನ್ನು ಪಡೆದಿದೆ. ಇನ್ನು ಕೆಲವು ವಿದ್ವಾಂಸರ ಪ್ರಕಾರ, ತುಳುನಾಡಿನ ಚಂದ್ರನಾಥ ಬಸದಿಗಳು ಚಂದ್ರಗಿರಿಯಲ್ಲಿ ಹುಟ್ಟಿದ ಮಚೇಂದ್ರನಾಥನ ಪ್ರಭಾವದಿಂದ ಬಂದವು. ಇಲ್ಲಿನ ಧರ್ಮನಾಥನ ಬಸದಿಗಳು ಧರ್ಮನ ಅಂದರೆ ಬುದ್ದನ ವಿಹಾರಗಳಾಗಿದ್ದವು. ಮಂಜುನಾಥನಲ್ಲಿ ಶೈವ ಕಳೆಯಿದ್ದರೆ, ಚಂದ್ರನಾಥನಲ್ಲಿ ಜೈನಕಳೆ. ಎರಡರ ಸತ್ವವೂ  ನಾಥಪಂಥದ್ದು’[8]

ಚಾರಿತ್ರಿಕ ಮೂಲವನ್ನು ಹುಡುಕುವುದು ಯಾವಾಗಲೂ ಪ್ರಯಾಸದ ಕೆಲಸ. ಮೂಲವೇನೇ ಇರಲಿ, ಯಾವುದೊ ಒಂದು ಕಾಲಘಟ್ಟದಲ್ಲಿ ಕುಂದವರ್ಮ ಸ್ಥಾಪಿಸಿದ ಅವಲೋಕಿತನನ್ನು ಗರ್ಭಗುಡಿಯಿಂದ ಹೊರಹಾಕಲಾಯಿತು. ನಂತರ ಅವಲೋಕಿತೇಶ್ವರನಿಗೆ ತ್ರಿಲೋಕೇಶ್ವರನೆಂದೂ ಮಂಜುಶ್ರೀಗೆ ವಿಷ್ಣುಮೂರ್ತಿಯೆಂದೂ, ಬುದ್ಧನಿಗೆ ವ್ಯಾಸಮುನಿ ಎಂದೂ, ಧರ್ಮಶಾಸ್ತಾವಿಗೆ ಅಯ್ಯಪ್ಪಸ್ವಾಮಿ ಎಂದೂ ಮರುನಾಮಕರಣ ಮಾಡಲಾಯಿತು. ಇತಿಹಾಸಕಾರರಾದ ಗುರುರಾಜಭಟ್ಟರು ಕದ್ರಿಗುಡಿಗೆ ಬರೆದು ಕೊಟ್ಟಿರುವ ಇತಿಹಾಸ ಪುಸ್ತಕದಲ್ಲೂ ಈ ನಾಮಕರಣಗೊಂಡ ಹೆಸರುಗಳು ಇರುವುದು ಸೋಜಿಗ. ಸದ್ಯಕ್ಕೆ   ಅವಲೋಕಿತೇಶ್ವರ ಮೂರ್ತಿಯನ್ನು ಮಂಜುನಾಥ ಗುಡಿಯ ಬಲಗಡೆಯಿರುವ ಪ್ರದಕ್ಷಿಣಾ ಪಥದಲ್ಲಿಯೂ,  ಮಂಜುಶ್ರೀ ಹಾಗೂ ಬುದ್ಧನ ಮೂರ್ತಿಗಳನ್ನು ಎಡಭಾಗದ ಪ್ರದಕ್ಷಿಣಾ ಪಥದಲ್ಲಿಯೂ, ಎಣ್ಣೆಡಬ್ಬ ತೆಂಗಿನಕಾಯಿಗಳ ನಡುವೆ ಇಡಲಾಗಿದೆ. ಕದ್ರಿಯ ಮಂಜುನಾಥ ಗುಡಿಯು ವಜ್ರಯಾನದಿಂದ ನಾಥಪಂಥದ ಮಚೇಂದ್ರನಾಥನ ಗುಡಿಯಾಯಿತು. ಅಲ್ಲಿ ಗೋರಖನಾಥ ಮಚೇಂದ್ರನಾಥರ ಮೂರ್ತಿಗಳೂ ಸ್ಥಾಪನೆಯಾದವು. ಮುಂದೆ ಗುಡಿಯು ನಾಥರಿಂದ ಕೈಬಿಟ್ಟುಹೋಯಿತು. ಆದರೂ ಮಂಜು ಹೆಸರಿನ ನಾಥರಿದ್ದ ಬಗ್ಗೆ ತಿಳಿಯುತ್ತದೆ. ಮಲ್ಲಿಕಾರ್ಜುನ ಕವಿಯು (ಶಂಕರದಾಸಿಮಯ್ಯ ಪುರಾಣ ೧೫.೩.) ಕೊಡುವ ನಾಥರ ಪಟ್ಟಿಯಲ್ಲಿ ‘ಮಾಂಜವನಾಥ’  ಎಂಬವನು ಇದ್ದಾನೆ. ವಚನಕಾರನಾದ ಆದಯ್ಯ ಹೆಸರಿಸುವ ನವನಾಥರಲ್ಲಿ ‘ಮಂಜಿನಾಥ’ ಇದ್ದಾ.

ಅವಲೋಕಿತೇಶ್ವರ ಸಂಬಂಧ

ಅವಲೋಕಿತೇಶ್ವರ ಹೆಸರಿನ ಸವೆರೂಪಗಳಾದ ಲೋಕ, ಲಕ್ಯ, ಲಕ್ಕ ಹೆಸರಿನ ಹಲವಾರು ಊರುಗಳು ಕರ್ನಾಟಕದಲ್ಲಿವೆ; ಲೋಕಿಕೆರೆ (ಕೂಡ್ಲಿಗಿ, ದಾವಣಗೆರೆ, ತರೀಕೆರೆ) ಲಕ್ಕುಂಡಿ  (ಗದಗ) ಲೋಕಾಪುರ (ಮುಧೋಳ) ಲಕ್ಕವಳ್ಳಿ(ತರೀಕೆರೆ) ಲೋಕವಳ್ಳಿ (ಮೂಡಿಗೆರೆ) ಲಕ್ಯ ಅಥವಾ ಲೊಕ್ಕಿ (ಚಿಕ್ಕಮಗಳೂರು) ಲಕ್ಕನಹಾಳು, ಲೋಕದೊಳಲು (ಹೊಳಲ್ಕೆರೆ) ಲಕ್ಕೆಗುಳಿ (ಅಂಕೊಲಾ) ಲಕ್ಕೊಳ್ಳಿ (ಮುಂಡಗೋಡ) ಲುಕ್ಕೇರಿ (ಕುಮಟಾ) ಲೋಕನಾಥಪುರ (ಹೊಸಪೇಟೆ, ಕೊಪ್ಪಳ) -ಮುಂತಾದವು.   ಇವೆಲ್ಲವೂ ಅವಲೋಕಿತ ಸಂಬಂಧಿಯಾದವು ಎಂದು ವಾದಿಸಲು ಸಾಧ್ಯವಿಲ್ಲ. ಆದರೆ ತಾರಾಭಗವತಿ ಆರಾಧನೆಯಿದ್ದ ಪರಿಸರದಲ್ಲಿರುವ ‘ಲೋಕ’  ಸ್ಥಳನಾಮ ಗಳು ಅವಲೋಕಿತ ಸಂಬಂಧಿಯಾದವು ಎಂದು ಊಹಿಸಬಹುದು. ಲುಂಕೆಮಲೆಯ ನಾಥಮಠವನ್ನು ಲೊಕ್ಕಿಮಠ ಲೋಕಿಮಠ ಎಂದು ಕರೆಯಲಾಗುತ್ತದೆ. ಬೌದ್ಧಧರ್ಮದ ಮಹತ್ವ ಸಾರುವ ಅಶೋಕ ಶಾಸನಗಳಿರುವ ಬ್ರಹ್ಮಗಿರಿ ಸಿದ್ಧಾಪುರಗಳ ಪರಿಸರದಲ್ಲಿ ಲುಂಕೆಮಲೆ ಇದೆ. ಆದರೆ ಲುಂಕೆಮಲೆ ಪರಿಸರದಲ್ಲಿ ಕದ್ರಿಯಲ್ಲಿದ್ದಂತೆ ಅವಲೋಕಿತನ ಆರಾಧನೆಯಿದ್ದ ದಾಖಲೆಗಳು ಸಿಗುವುದಿಲ್ಲ. ರೋಣದಲ್ಲಿ ಲೋಕನಾಥನ ಗುಡಿಯಿದೆ.  ಆದರೆ ಕದ್ರಿಯಲ್ಲಾದಂತೆ ಎಲ್ಲ ಅವಲೋಕಿತನ ಜಾಗಗಳು ನಾಥವಾಗಿ ರೂಪಾಂತರ ಪಡೆಯಲಿಲ್ಲ.

ತಾರಾಸಂಬಂಧ

ಅವಲೋಕಿತೇಶ್ವರನ ಸಂಗಾತಿ ದೇವತೆಯಾದ ತಾರಾದೇವಿಯ ಉಪಾಸನೆ ಕರ್ನಾಟಕದಲ್ಲಿ ವ್ಯಾಪಕವಾಗಿತ್ತು. ತಾರಾಭಗವತಿ, ಲೋಕ ಎಂಬ ಹೆಸರಿನ ಸ್ಥಳನಾಮಗಳು ಕರ್ನಾಟಕದಲ್ಲಿ ಬಹಳ ಕಡೆ ಒಟ್ಟಿಗೆ ಸಿಗುತ್ತವೆ. ತಾರಾಭಗವತಿಯ ಹೆಸರಿನಿಂದ ಹುಟ್ಟಿದ ತರೀಕೆರೆಯ ಸಮೀಪ ಭಗವತಿಕಟ್ಟೆಯೂ  ಲಕ್ಕವಳ್ಳಿಯೂ ಇವೆ. ತಾರೆಯ ಆರಾಧನೆಯು ತಂತ್ರಪಂಥ ಗಳಲ್ಲಿ ಸ್ತ್ರೀಯರ ಭಾಗವಹಿಸುವಿಕೆಯ ಪರಿಣಾಮ ಇರಬಹುದು. ಡಂಬಳದ ಶಾಸನದಲ್ಲಿ (ಕ್ರಿಶ.೧೧) ತಾರೆಯ ವರ್ಣನೆ ಮಾಡುತ್ತಾ, ಅವಳನ್ನು ಅರಿವಿನ ಸಾಗರ ಕಡೆಯಲು ಹುಟ್ಟಿದವಳೆಂದೂ ಬುದ್ಧನಿಗೆ ವಿಭೂತಿ ಕೊಟ್ಟವಳೆಂದೂ ಕರೆಯಲಾಗಿದೆ.

ತಾಂತ್ರಿಕ ಪಂಥಗಳ ದೇಶವಾದ ನೇಪಾಳದಲ್ಲಿ ಕುಮಾರಿಪೂಜೆಯಿದೆ. ಈ ಕುಮಾರಿಯೇ ತಾರಾದೇವಿ. ವಜ್ರಯಾನದ ಅಸ್ಮಿತೆಯಂತಿರುವ ತಾರಾಭಗವತಿಯ ಆರಾಧನೆಯು ನೇಪಾಳ ಹಾಗೂ ಟಿಬೇಟಿನ ತಾಂತ್ರಿಕ ಬೌದ್ಧರಿಂದ ಭಾರತದ ದಕ್ಷಿಣಕ್ಕೆ ಯಾವಾಗ ಬಂದಿತು? ಹೇಗೆ ಬಂದಿತು? ಈ ಚರಿತ್ರೆಯ ಚಿತ್ರ ಇನ್ನೂ  ಅಸ್ಪಷ್ಟ. ಉತ್ತರ ಕರ್ನಾಟಕದ ರಾವುಳರಲ್ಲಿ ಕುಮಾರಿ ಪೂಜೆಯಿತ್ತು. ಕುಮಾರಿಯನ್ನು ನೇಪಾಳದಲ್ಲಿ ಶಾಕ್ಯರ ಬಜ್ರಯಾನಿ  (<ವಜ್ರಯಾನ) ಜಾತಿಯಿಂದಲೆ ಆರಿಸಲಾಗುತ್ತದೆ. ಬಜ್ರಯಾನಿ ಪುರೋಹಿತರೆ ಆಕೆಯನ್ನು ಪೂಜಿಸುವವರು. ಅದೇ ಹೊತ್ತಲ್ಲಿ ಕಾಲಭೈರವನ ಗುಡಿಯಲ್ಲಿ ಲಿಂಗದ ಕಂಭವನ್ನು ನಿಲ್ಲಿಸಲಾಗುತ್ತದೆ. ಭೈರವಬಲಿಯನ್ನು ಕೊಡಲಾಗುತ್ತದೆ. ಭೈರವ ಹಾಗೂ ಕುಮಾರಿಯರ ರಥಗಳನ್ನು ಜತೆಯಲ್ಲಿ ಎಳೆಯಲಾಗುತ್ತದೆ. ಮದ್ಯವನ್ನು ಪ್ರಸಾದವಾಗಿ ಸ್ವೀಕರಿಸಲಾಗುತ್ತದೆ. ಇವೆಲ್ಲವೂ ಶೈವ ತಾಂತ್ರಿಕ ಪಂಥದ ಕುರುಹುಗಳು. ಇವು ವಜ್ರಯಾನವು ನಾಥವಾಗಿ ರೂಪಾಂತರ ಪಡೆದದ್ದನ್ನೂ ಪಡೆದ ಬಳಿಕವೂ ಎರಡೂ ಒಟ್ಟಿಗೆ ಇದ್ದುದನ್ನೂ ಅರುಹುತ್ತಿವೆ.  ಯೋಗಿ ಗಳಾದ ಶಿವ ಮತ್ತು ಬುದ್ಧರ, ಶಕ್ತಿದೇವತೆಗಳಾದ ತಾರೆ ಮತ್ತು ಶಿವೆಯ ಸಮೀಕರಣವು ಭಾರತದಾದ್ಯಂತ ಶುರುವಾಗಿತ್ತು. ವಜ್ರಯಾನ ಪಂಥವು ಶೈವ ನಾಥಪಂಥವಾಗಿ ರೂಪಾಂತರ ಗೊಂಡ ಮಹಾಪಲ್ಲಟದಲ್ಲಿ ಇದು ನಿರ್ಣಾಯಕವಾದ ಪಾತ್ರವಹಿಸಿತು.

ಐಹೊಳೆಯ ದುರ್ಗಾಗುಡಿಯ ವಾಸ್ತು ಬೌದ್ಧ ಚೈತ್ಯಾಲಯದ ಮಾದರಿಯದು ಎಂದು ವಾಸ್ತುಶಿಲ್ಪದ ಪರಿಣತರು ಗುರುತಿಸುತ್ತಾರೆ. ಈ ದುರ್ಗಾದೇವಿಯು ತಾರಾಭಗವತಿ ಇರಬಹುದು. ಈ ಭಾಗದಲ್ಲಿ ತಾರೆಯ ಇನ್ನೊಂದು ಹೆಸರಾದ ಮಂಗಳೆಯ ಹೆಸರಲ್ಲಿ ೨  ಮಂಗಳೂರುಗಳಿವೆ  (ಬದಾಮಿ ಹಾಗೂ ಯಲಬುರ್ಗಾ). ಇವು ತಾರೆಯ ಶಾಸನ, ಗುಡಿ ಹಾಗೂ ವಿಗ್ರಹಗಳು ಸಿಗುವ ಲಕ್ಕುಂಡಿ, ಡಂಬಳ, ಕೋಳಿವಾಡಕ್ಕೆ  ಸಮೀಪದಲ್ಲಿವೆ. ಕರಾವಳಿಯ ಮಂಗಳೂರು ಭಗವತೀ ಆರಾಧನೆಗೆ ಹೆಸರಾದುದು. ಕೇರಳದಲ್ಲಿ ದಟ್ಟವಾಗಿದ್ದ ಭಗವತಿ ಆರಾಧನೆ ಇಲ್ಲಿಗೆ ಬಂದಿತು ಎಂದು ಊಹಿಸಲು ಅನುವಾಗುವಂತೆ,  ಮಂಗಳೂರಿನ ಮಂಗಳಾದೇವಿಯು ಮಚೇಂದ್ರನ ಶಿಷ್ಯೆಯಾಗಿ ಕೇರಳದಿಂದ ಬಂದವಳು ಎಂಬ ಕತೆಯಿದೆ. ಮಚೇಂದ್ರನು ಅವಲೋಕಿತೇಶ್ವರನ ಅವತಾರವಾದರೆ, ತಾರೆ ಮಂಗಳೆಯಾದಳು.  ಅವಲೋಕಿತನಿಗಾಗಿ ಕದ್ರಿಯಲ್ಲಿ ವಿಹಾರ ನಿರ್ಮಾಣವಾದಂತೆ, ಮಂಗಳಾದೇವಿಗೆ ಮಂಗಳೂರಲ್ಲಿ ಗುಡಿಯನ್ನೂ ಕಟ್ಟಿಸಲಾಯಿತು. ತಾರಾಭಗವತಿಗೆ ಮಂಗಳಾದೇವಿಯ ಹಾಗೆಯೇ ಆರ್ಯಾ, ಪ್ರಮೀಳೆ, ಪಿಂಗಳೆ,  ಹಿಂಗುಳಾಂಬೆ ಎಂಬ ಹೆಸರುಗಳಿವೆ. ಕರಾವಳಿ ಹಾಗೂ ಅಂಚಿನ ಘಟ್ಟಗಳಲ್ಲಿ ಮಂಗಳಾದೇವಿ, ರಾಜರಾಜೇಶ್ವರಿ, ಅಮೃತೇಶ್ವರಿ, ಮೂಕಾಂಬಿಕೆ, ದುರ್ಗಾ ಭಗವತಿ, ಮುಂತಾದ ಶಕ್ತಿದೇವತೆಯ ಜಾಗಗಳಿವೆ. ಇವು  ವಜ್ರಯಾನದ ಶಕ್ತಿದೇವತೆಗಳ ಸ್ಥಳೀಕ ರೂಪಗಳು. ಕೊಲ್ಲೂರಿನ ಮೂಕಾಂಬಿಕೆಯಂತೂ ತಾರಾಭಗವತಿಯೆ. ಕೊಲ್ಲೂರು  ಕಾಡಿಗೆ ಈಗಲೂ ಭಗವತಿಕಾಡು ಎಂಬ ಹೆಸರಿದೆ.  ಗೌಡಪಾದರ ಶಿಷ್ಯರಾಗಿ ಪ್ರಚ್ಛನ್ನ ಬೌದ್ಧರೆಂಬ ಹೆಸರಿದ್ದ ಶಂಕರಾಚಾರ್ಯರು ಕೇರಳದಿಂದ ಉತ್ತರ ಭಾರತಕ್ಕೆ ಹೋಗುವ ಹಾದಿಯಲ್ಲಿ,   ಕೊಲ್ಲೂರು ಹಾಗೂ ಶೃಂಗೇರಿಗಳಿಗೆ ಬಂದು ಅಲ್ಲಿ ಶ್ರೀಚಕ್ರದ ಆರಾಧನೆ ಯನ್ನು ಪ್ರತಿಷ್ಠಾಪಿಸಿದರು ಎಂಬ ಐತಿಹ್ಯವಿದೆ. ಶಂಕರರು ಭಗವತಿ ಆರಾಧನೆ ದಟ್ಟವಾಗಿರುವ ಕೇರಳದವರು. ಈಗಲೂ ಕೊಲ್ಲೂರಿಗೆ ಕೇರಳೀಯರೇ ದೊಡ್ಡ ಭಕ್ತರು. ಶಂಕರ ಬೌದ್ಧಧರ್ಮದ ವಿರುದ್ಧ ಮಾಡಿದ ಹೋರಾಟದ ಕಥನಗಳಿಗೂ, ಬೌದ್ಧರ ಭಗವತಿ ಗುಡಿಗಳನ್ನು ಪರಿವರ್ತಿಸುತ್ತ ಹೋದದ್ದಕ್ಕೂ ವೈರುಧ್ಯವೇನಿಲ್ಲ.

ವಿಚಿತ್ರವೆಂದರೆ, ತಾರೆಯ ಮೂರ್ತಿಗಳು ಕರಾವಳಿಯಲ್ಲಿ  ಸಿಗುವುದಿಲ್ಲ. ಅವು ಬಳ್ಳಿಗಾವೆ, ಕೋಳಿವಾಡ, ಬನವಾಸಿ ಹಾಗೂ ಡಂಬಳಗಳಲ್ಲಿ ಸಿಗುತ್ತವೆ. ತಾರೆಯ ಚಹರೆ ಬಹಳ ಸುಂದರ. ‘‘ದುಂಡು ಕೋಲುಮುಖ, ಚಿಕ್ಕಕಣ್ಣು, ಪ್ರಧಾನವಾದ ಮೂಗು, ಕಿರಿ ಬಾಯಿ, ನಗುಮುಖಭಾವ, ದುಪ್ಪ ಕುಚದ್ವಯ’’[9]; ಅವಳ ಕಿರೀಟದಲ್ಲಿ ಧ್ಯಾನಿಬುದ್ಧನಿದ್ದಾನೆ.  ಶಾಸನಗಳ ಪ್ರಕಾರ, ಕರ್ನಾಟಕದಲ್ಲಿ ಮೂರು ತಾರಾ ವಿಹಾರಗಳಿದ್ದವು. ಒಂದು ಲಕ್ಕುಂಡಿಯಲ್ಲಿ. ಎರಡು ಬಳ್ಳಿಗಾವೆಯಲ್ಲಿ. ಬಳ್ಳಿಗಾವೆಯ ೧೦೬೪ರ ಶಾಸನವು ರೂಪಯ್ಯ ಭಟ್ಟನು ತಾರಾಭಗವತಿ ಹಾಗೂ ಲೋಕೇಶ್ವರದೇವರಿಗೆ ಜಯಂತಿಪ್ರಭ ಎಂಬ ವಿಹಾರ ಕಟ್ಟಿಸಿ, ಅಲ್ಲಿದ್ದ ಯೋಗಿನಿಯರ ಆಹಾರವ್ಯವಸ್ಥೆಗೆ ಭೂದಾನ ಕೊಟ್ಟದ್ದನ್ನು ಹೇಳುತ್ತದೆ. ೧೦೬೭ರ ಶಾಸನವು ನಾಗಿಯಕ್ಕಳು ತಾರೆಯ ವಿಹಾರ ಕಟ್ಟಿಸಿದ ಬಗ್ಗೆಯಿದೆ. ಬಳ್ಳಿಗಾವೆಯವನೇ ಆದ ಕವಿ ಶಾಂತಿನಾಥನು (ಕ್ರಿಶ ೧೧) ತನ್ನ ‘ಸುಕುಮಾರ ಚರಿತೆ’ಯಲ್ಲಿ  ಒಬ್ಬ ಜೋಯಿಸನ ವರ್ಣನೆ ಮಾಡುತ್ತ, ‘ತಥಾಗತ ಮತೋಪಾಸಕನಂತೆ ತಾರಾಪಥಕ್ಕೆರಗಿ’ ಎಂಬ ಉಪಮೆಯನ್ನು ಬಳಸುತ್ತಾನೆ. ಸಂಶೋಧಕರ ಪ್ರಕಾರ ಈ ತಥಾಗತ ಮತೋಪಾಸಕನು ಬೌದ್ಧ ವಜ್ರಯಾನ ಪಂಥದ ತಾಂತ್ರಿಕ ಸಾಧಕನು.[10] ಡಂಬಳದ ೧೦೯೫ರ ಶಾಸನವು ಲೊಕ್ಕಿಗುಂಡಿಯ ಸಂಗಮಯ್ಯಸೆಟ್ಟಿ ‘ಶ್ರೀಭಗವತಿ ಆರ್ಯ ತಾರಾದೇವಿಯ ವಿಹಾರ’ ಕಟ್ಟಿಸಿದ್ದನ್ನು ಹೇಳುತ್ತದೆ.

ಕೇರಳದಲ್ಲಿ ತಾರಾಭಗವತಿಯ ಆರಾಧನೆಯ ಸ್ಥಾನಗಳಲಿದ್ದ ಬೌದ್ಧ ಯೋಗಿನಿಯರನ್ನು ಹೊರಗೆ ಬಲಾತ್ಕಾರದಿಂದ ಹೊರಹಾಕಲಾದ ಪ್ರಸಂಗಗಳು ದಾಖಲಾಗಿವೆ.[11] ಕರ್ನಾಟಕದ ಮಟ್ಟಿಗೆ  ತಾರೆಯ ವಿಗ್ರಹಗಳು ಭಗ್ನವಾಗಿಯಾದರೂ ಸಿಗುತ್ತವೆ. ಆದರೆ ಗುಡಿಗಳು ಮಾತ್ರ ಸಂಪೂರ್ಣ ನಾಶವಾಗಿವೆ ಇಲ್ಲವೆ ರೂಪಾಂತರವಾಗಿವೆ. ತಾರೆಯ ಹೆಸರಲ್ಲಿ ಕೆರೆ ಕಾಡು ಹಳ್ಳಿಗಳು ಮಾತ್ರ ವಿಪುಲವಾಗಿವೆ. ಭಗವತಿಕಾಡುಗಳು (ಬೆಳ್ತಂಗಡಿ ಹಾಗೂ ಹೊಸನಗರ); ಭಗವತಿಕಟ್ಟೆ (ತರೀಕೆರೆ) ಭಗವತಿಕೆರೆಗಳು (ಭದ್ರಾವತಿ ಮತ್ತು ಹಿರಿಯೂರು); ತಾವರೆಕೆರೆಗಳು (ತರೀಕೆರೆ ಬೆಂಗಳೂರು ಉತ್ತರ ಮತ್ತು ದಕ್ಷಿಣ, ಮಂಡ್ಯ,  ನಾಗಮಂಗಲ,  ಮಾಗಡಿ, ಚೆನ್ನಗಿರಿ, ಶಿರಾ, ತುರುವೇಕೆರೆ, ನೆಲಮಂಗಲ, ತುಮಕೂರು, ಅರಸೀಕೆರೆ);  ತಾರೀಕೆರೆ (ಹೊಸದುರ್ಗ, ಹೊಳಲ್ಕೆರೆ) ತರೀಕೆರೆಗಳು (ಕುಣಿಗಲ್ಲು, ಮದ್ದೂರು, ತರೀಕೆರೆ);  ತಾರೆಹಳ್ಳಿ(ಜಗಳೂರು)  ತಾರಹುಣಸೆ(ದೇವನಹಳ್ಳಿ)  ತಾವರೆಹಳ್ಳಿ  (ಹೊಸಕೋಟೆ)ಗಳಿವೆ.

ತಾರಾಭಗವತಿ ವಿಗ್ರಹ ಸಿಕ್ಕಿರುವ ಬಳ್ಳಿಗಾವೆಯ ಕೆರೆಯ ಹೆಸರು ತಾವರೆಯ ಕೆರೆ. ತಾರೆಯಕೆರೆಗಳ ಪಕ್ಕದಲ್ಲಿ ಊರುಗಳು ಬೆಳೆದಿರಬಹುದು. ಊರಿದ್ದಲ್ಲಿ ತಾರೆಯಕೆರೆಗಳು ನಿರ್ಮಾಣವಾಗಿರಬಹುದು. ತಾರೆಯ ಹೆಸರಿನಲ್ಲಿ ತಾರೀಹಳ್ಳಿ(ಹೊಸಪೇಟೆ) ತಾರೆಹಳ್ಳಿ (ಜಗಳೂರು) ತಾವರಗೇರಾ (ಕುಷ್ಟಗಿ) ತಾವರೆಕೊಪ್ಪ (ಶಿವಮೊಗ್ಗ) ತಾವರಗೊಪ್ಪ (ಹಾನಗಲ್ಲು) ತಾರೀಹಾಳು (ಹುಬ್ಬಳ್ಳಿ) ತಾವರಗಿ (ಹಿರೇಕೆರೂರ) ತಾರಾಪುರ (ಟಿ.ನರಸೀಪುರ);  ತಾರದಗಾಲ (ಚಾಮರಾಜನಗರ) ತಾವರೆಹಳ್ಳಿ ಮುಂತಾದ ಊರುಗಳಿವೆ. ತಾರಾಭಗವತಿ ಆರಾಧನೆಯು ಬನವಾಸಿ ಸೀಮೆಯಲ್ಲಿ ವ್ಯಾಪಕವಾಗಿತ್ತು ಎನಿಸುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ತಾರೇಸರ, ತಾರೆಹಳ್ಳಿ, ತಾರಗೋಡು, ತಾರಾಗಾರ, ತಾರಖಂಡ, ಭಗವತಿ -ಹೀಗೆ ತಾರೆಯ ಹೆಸರಲ್ಲಿ ಊರುಗಳ ಗುಚ್ಛವೇ ಇದೆ.[12]

ತಾರೆಯ ಹೆಸರಿನಲ್ಲಿ ಈ ಪ್ರಮಾಣದಲ್ಲಿ ಜಲತಾಣಗಳು ಯಾಕೆ ನಿರ್ಮಾಣವಾದವು? ತಾರೆಗೆ ಕೆರೆಕಟ್ಟಿಸುವ ಹರಕೆಯ ಆಚರಣೆಯಿತ್ತೇ ಸ್ಪಷ್ಟವಾಗುವುದಿಲ್ಲ. ಡಂಬಳದಲ್ಲಿ ಈಗಲೂ ಕೆರೆಯಿದೆ. ಇಲ್ಲಿನ ಶಾಸನವು (೧೦೯೫) ತಾರೆಯನ್ನು ‘ಜಳಾರ್ಣವ ಪಿಶಾಚಭಯ ಶಮನೀ’ ಎಂದು ವರ್ಣಿಸುತ್ತದೆ. ಹಾಗೆಂದರೇನು? ನಾಥಪಂಥದ ದೃಷ್ಟಿಯಿಂದ ಗಮನಿಸುವುದಾದರೆ, ಹಿಂದೆ ವಜ್ರಯಾನ ಪಂಥವಿದ್ದು ಈಗ ನಾಥಪಂಥವಿರುವ ಕದ್ರಿ ಬೆಟ್ಟದಲ್ಲಿ ಒಂದು ತಾವರೆಕೆರೆಯಿದೆ. ನಾಥಪಂಥವಿದ್ದ ಚುಂಚನಗಿರಿ ಬೆಟ್ಟದ ಕೆಳಗೆ ಒಂದು ತಾವರೆಕೆರೆ ಇದೆ. ಇನ್ನೊಂದು ತಾವರೆಕೆರೆಯ (ಬೆಂಗಳೂರು ದಕ್ಷಿಣ) ಪಕ್ಕವೇ ನಾಥಪಂಥಿ ಕಾಪಾಲಿಕರ ಜೋಗೇರಹಳ್ಳಿ ಇದೆ.

ಮಾಗಡಿ ತಾಲೂಕಿನ ಕಲ್ಯವು ಮೂಲತಃ ಕಲಾವತಿ ಎಂಬ ಪ್ರಾಚೀನ ಬೌದ್ಧಕೇಂದ್ರ ಎಂದು ವಿದ್ವಾಂಸರು ಹೇಳುತ್ತಾರೆ.  ಕಲ್ಯದ ಬಳಿ ಭೈರವಾದ್ರಿಯಿದೆ. ಬೆಟ್ಟದ ಮೇಲೆ ಭೈರವದುರ್ಗ ಕೋಟೆಯಿದೆ. ಪಕ್ಕದಲ್ಲಿ ಭೈರಾಪುರ ಹಾಗೂ  ತಾವರೆಕೆರೆಯಿವೆ. ಇಲ್ಲಿಗೆ ಸಮೀಪವಿರುವ ಒಂದು ಬೆಟ್ಟವನ್ನು ತಾರಕಾಚಲವೆಂದು ಕರೆಯಲಾಗುತ್ತದೆ. ತಾರೆಯ ಹೆಸರಿನ ಕೆರೆ ಮತ್ತು ಬೆಟ್ಟ, ಭೈರವಾರಾಧನೆಯ ಭೈರವಾದ್ರಿ, ಬಹುಶಃ ಕಾಪಾಲಿಕರಿದ್ದ ಭೈರಾಪುರ ಈ ನಾಲ್ಕೂ ಪರಸ್ಪರ ಸಂಬಂಧವುಳ್ಳವು. ಇವೆಲ್ಲವೂ ಚುಂಚನಗಿರಿ ಪರಿಸರದಲ್ಲಿ ರುವುದು ಗಮನಾರ್ಹ. ಕಲ್ಯದ ತಾಮ್ರಪಟದಲ್ಲಿ ಇಲ್ಲಿದ್ದ ಗುರುಗಳನ್ನು ಬೌದ್ಧರೆಂದು ಕರೆಯಲಾಗಿದೆ. ಆದರೆ ಈ ಬೌದ್ಧರು ‘ಶೈವಧರ್ಮದ ಪ್ರಭಾವಕ್ಕೊಳಗಾಗಿ ಕ್ರಮೇಣ ನಾಥಪಂಥವಾಗುವ ಸಂಕ್ರಮಣ ಅವಸ್ಥೆಯಲ್ಲಿದ್ದ ಶೈವೋ-ಬೌದ್ಧಧರ್ಮದ ಅಂದರೆ ನಾಥಪಂಥದ ಗುರುಗಳು ಇರಬಹುದೆ?’ ಎಂಬ ಪ್ರಶ್ನೆಯನ್ನು ವಿದ್ವಾಂಸರು ಎತ್ತುತ್ತಾರೆ.[13]

ಹೇಮಕನಕ ಸಂಬಂಧ

ಕರ್ನಾಟಕದಲ್ಲಿ ಹೇಮ, ಕನಕ, ಸುವರ್ಣ,ಬಂಗಾರ, ಕಸವರ ಸಂಬಂಧಿಯಾದ ಅನೇಕ ಜಾಗಗಳಿವೆ.  ಸಾಮಾನ್ಯವಾಗಿ ಬೆಟ್ಟಗಳಾಗಿರುವ ಇವು ಶ್ರೀಶೈಲಕ್ಕೂ ನಾಗಾರ್ಜುನನಿಗೂ ಸಂಬಂಧ ಕಲ್ಪಿಸಿಕೊಂಡಿವೆ. ಹೇಮಗಿರಿಯಲ್ಲಿ (ಕುಣಿಗಲ್ಲು) ಮಲ್ಲಿಕಾರ್ಜುನ ಗುಡಿಯಿದೆ. ಕನಕಗಿರಿ-ಮಲೆಯೂರಲ್ಲಿ(ಚಾಮರಾಜನಗರ) ನಾಗಾರ್ಜುನನ ಗುಹೆಯಿದೆ. ಸುವರ್ಣ ಕದಲಿಯು (ಮಂಗಳೂರು) ಶ್ರೀಶೈಲದ ಕದಳಿವನವನ್ನು ನೆನಪಿಸುತ್ತದೆ. ಸುವರ್ಣ ಚಂದ್ರದ್ರೋಣ  ಎಂಬ ಪ್ರಸ್ತಾಪ ಇರುವ ಶಾಸನವುಳ್ಳ ಬಾಬಾಬುಡನಗಿರಿ ಪರಿಸರದಲ್ಲಿರುವ  ಫಲಾಹಾರಮಠವು ಶ್ರೀಶೈಲಕ್ಕೆ ಸೇರಿದೆ. ಅದರಲ್ಲಿ ನವನಾಥರ ಪ್ರಸ್ತಾಪವೂ ಇದೆ.  ಹೀಗೆ  ಕರ್ನಾಟಕದ ಹೇಮ ಕನಕ ಸುವರ್ಣ ಗಿರಿಗಳು ಶ್ರೀಶೈಲ, ರಸಸಿದ್ಧರು ಹಾಗೂ ಬೌದ್ಧರ ನಾಗಾರ್ಜುನರ ನಡುವೆ ಯಾವುದೊ ಬಗೆಯ  ಸಂಬಂಧವನ್ನು ಸೂಚಿಸುತ್ತಿವೆ. ಇವುಗಳಲ್ಲೆಲ್ಲ ನಾಥಪಂಥದ ಒಂದು ಸಣ್ಣಎಳೆ ಹೇಗೊ ತೊಡಕಿಕೊಂಡಿದೆ.

ಚಂದ್ರ ಸಂಬಂಧ

ಚಂದ್ರನು ಬೌದ್ಧ ಮತ್ತು ನಾಥಪಂಥ ಎರಡರಲ್ಲೂ ಕಾಣಿಸುವ ಹೆಸರು. ಯೋಗಶಾಸ್ತ್ರದ   ಪ್ರಕಾರ, ಪ್ರಾಣ ಅಥವಾ ಉಸಿರನ್ನು ನಿಯಂತ್ರಿಸುವುದು ಯೋಗದಲ್ಲಿ ಮುಖ್ಯ ಕ್ರಿಯೆ. ಇಲ್ಲಿ  ಪ್ರಾಣವಾಯುವನ್ನು ಸೂರ್ಯನೆಂದೂ  ಅಪಾನವಾಯುವನ್ನು ಚಂದ್ರನೆಂದೂ ಕರೆಯಲಾಗುತ್ತದೆ.  ಇವೆರಡನ್ನು ಪ್ರಾಣಾಯಾಮದಿಂದ  ನಿಗ್ರಹಿಸುವುದೇ ಯೋಗ. ಮೂಲಾಧಾರದಲ್ಲಿ ಇರುವ ಸೂರ್ಯ, ಸಹಸ್ರಾರದಲ್ಲಿ ಇರುವ ಚಂದ್ರನ ಜತೆ ಕೂಡುವುದನ್ನು ಮೋಕ್ಷ ಎನ್ನಲಾಗುತ್ತದೆ. ಎರಡನೆಯದಾಗಿ ಇಡಾ ಮತ್ತು ಪಿಂಗಳ ನಾಡಿಗಳನ್ನು ಸೂರ್ಯ ಚಂದ್ರರ ಮೂಲಕ ಸಂಕೇತಿಸುವರು. ಹಠಯೋಗದ ಪರಿಭಾಷೆಯಲ್ಲಿ ಹ ಎಂದರೆ ಸೂರ್ಯ, ಠ ಎಂದರೆ ಚಂದ್ರ.  ಚಂದ್ರಮಂಡಲವೆಂದರೆ ಯೋಗದಲ್ಲಿ ಬ್ರಹ್ಮರಂಧ್ರದ ಬಳಿ ಇರುವ ಜಾಗ. ಅಲ್ಲಿಂದ ಅಮೃತದ ಸ್ರವಿಸುವಿಕೆ ಆಗುತ್ತದೆ ಎಂದು ಯೋಗ ದರ್ಶನ ವಿವರಿಸುತ್ತದೆ. ಹೀಗೆ ಚಂದ್ರ  ಸೂರ್ಯರು, ಚಂದ್ರ ಹಾಗೂ ಚಂದ್ರಿಕೆಗಳು ಯೋಗದರ್ಶನದಲ್ಲಿ ದಾರ್ಶನಿಕ ರೂಪಕಗಳು. ಇದಕ್ಕೆ ತಕ್ಕಂತೆ ಯೋಗ ವಿಚಾರದ ಕೃತಿಗಳು ‘ಸುಧಾಕರ’ ‘ಚಂದ್ರಿಕಾ’ ಎಂಬ ಹೆಸರನ್ನುಳ್ಳವು. ನಾಥಪಂಥದ ಕಟ್ಟಡಗಳಲ್ಲಿ ದ್ವಾರಗಳಲ್ಲಿ ಶಾಸನಗಳಲ್ಲಿ ಸೂರ್ಯಚಂದ್ರರ ಕೆತ್ತನೆ ಕಡ್ಡಾಯವಾಗಿ ಇರುತ್ತದೆ. ಚಂದ್ರವಳ್ಳಿಯ ಅಂಕಲಿಮಠದೊಳಗೆ ಸೂರ್ಯಚಂದ್ರರು ಇದ್ದಾರೆ. ಶಾಸನಗಳಲ್ಲಿ ಕೊಟ್ಟ ದಾನವು ಆಚಂದ್ರಾರ್ಕವಾಗಿ ಇರಬೇಕು ಎಂಬುದರ ಸಂಕೇತವಾಗಿ  ಸೂರ್ಯಚಂದ್ರರನ್ನು ಕೆತ್ತಿರಲೂಬಹುದು. ಆದರೆ ಈ ಆಕಾಶಕಾಯಗಳು ನಾಥರಲ್ಲಿ ಯೌಗಿಕ ಅರ್ಥದಲ್ಲಿ ಬರುತ್ತವೆ. ನಾಥರಲ್ಲಿ ಚಂದ್ರನಾಥ ಎಂಬ ಹೆಸರು ಸಾಮಾನ್ಯ. ಚುಂಚನಗಿರಿಯಲ್ಲಿ ಚಂದ್ರನಾಥನೆಂಬ ಪ್ರಸಿದ್ಧ ನಾಥಯೋಗಿಯಿದ್ದನು. ಮಚೇಂದ್ರನಾಥನು ಹುಟ್ಟಿದ್ದು ಚಂದ್ರಗಿರಿಯಲ್ಲಿ. ಹೀಗೆ ಹಲವು ಬಗೆಯಲ್ಲಿ ಚಂದ್ರನಿಗೂ ನಾಥರಿಗೂ ಸಂಬಂಧವಿದೆ. ಚಂದ್ರನಿಗೂ ಬೌದ್ಧರಿಗೂ ಇರುವ ಸಂಬಂಧವಂತೂ ಲೋಕಪ್ರಸಿದ್ಧವಾಗಿದೆ. ಬೌದ್ಧರಲ್ಲಿ  ಚಂದ್ರನು ಅಹಿಂಸೆ ಮತ್ತು ಶಾಂತಿಯ ಸಂಕೇತ. ಬುದ್ಧ ಜನಿಸಿದ್ದು ಹುಣ್ಣಿಮೆಯಲ್ಲಿ. ಅವನಿಗೆ  ಬೋಧವಾದ ದಿನವೂ ವೈಶಾಖ ಪೂರ್ಣಿಮೆ.

ಈ ಹಿನ್ನೆಲೆಯಲ್ಲಿ ಕರ್ನಾಟಕದ ಚಂದ್ರ ಸಂಬಂಧಿಯಾದ ಸ್ಥಳಗಳು ಏಕಕಾಲಕ್ಕೆ ಬೌದ್ಧ ಹಾಗೂ ನಾಥರ ಜಾಗಗಳಾಗಿರುವ ಸಾಧ್ಯತೆಗಳಿವೆ. ಇವುಗಳಲ್ಲಿ ಚಂದ್ರಗುತ್ತಿ (ಸೊರಬ) ಹಾಗೂ ಚಂದ್ರವಳ್ಳಿ (ಚಿತ್ರದುರ್ಗ)ಮುಖ್ಯವಾದವು. ಚಂದ್ರಗುತ್ತಿಯ ಚಂದ್ರಲಾಂಬಾ ದೇವಿ ಮೂಲತಃ ತಾರಾಭಗವತಿ ಇರಬಹುದು. ಯಾಕೆಂದರೆ ಬೌದ್ಧಸ್ಥಾನವಾಗಿದ್ದ ಸನ್ನತಿಯಲ್ಲಿರುವ  (ಚಿತಾಪುರ) ತಾರಾದೇವಿಯು, ನಂತರ ಚಂದ್ರಲಾಂಬೆಯಾಗಿ ಬದಲಾಗುತ್ತಾಳೆ.  ನಾಥಮಠ ವಿರುವ ಚಂದ್ರಗುತ್ತಿಯು ಬೌದ್ಧವಿಹಾರಗಳಿಗೂ ತಾರೆಯ ಚೈತ್ಯಾಲಯಕ್ಕೂ ಪ್ರಸಿದ್ಧವಾಗಿದ್ದ ಬನವಾಸಿ ಹಾಗೂ ಬಳ್ಳಿಗಾವೆಗಳ ನಡುವೆ ಇರುವುದು ಗಮನಾರ್ಹ. ಬೌದ್ಧಕೇಂದ್ರವಾಗಿದ್ದ ಚಂದ್ರವಳ್ಳಿಯಲ್ಲಿ ನಾಥರ ಹುಲಿಗೊಂದಿ ಮಠವಿದೆ. ಇದಕ್ಕೆ ಲಗತ್ತಾಗಿ ಜೋಗಿಮಟ್ಟಿಯೂ ಸಿದ್ಧಯ್ಯನ ಬೆಟ್ಟವೂ ಸಿದ್ಧೇಶ್ವರ ಗುಡಿ ಗವಿಗಳೂ ನಾಥಪಂಥಿಗಳಾದ ಕಾಪಾಲಿಕರು ವಾಸವಾಗಿರುವ ಊರುಗಳೂ ಇವೆ. ಲುಂಕೆಮಲೆಯ ನಾಥಮಠದ ಮತ್ತೊಂದು ಶಾಖೆಯು ಚಂದ್ರಗೊಳದಲ್ಲಿದೆ.[14]

ನಾಥಮಠವಿದ್ದ ಚುಂಚನಗಿರಿಯ ಹಾಗೂ ಸಿದ್ಧಪರಂಪರೆಯ ಮಂಟೆಸ್ವಾಮಿಯ ಜಾತ್ರೆ ಗಳಲ್ಲಿ ಚಂದ್ರಮಂಡಲ ಎಂಬ ಆಚರಣೆಗಳಿವೆ. ಇಂತಹ ಆಚರಣೆಗಳು ಬೌದ್ಧರಲ್ಲಿಯೂ ಇವೆಯೆಂದು ತಿಳಿಯುತ್ತವೆ.. ಈ ಆಚರಣೆಗಳು ಯೋಗದ ಅರ್ಥದಲ್ಲಿ ಹುಟ್ಟಿದವೊ, ಬೌದ್ಧರ ಪ್ರಭಾವದಿಂದ ಬಂದವೊ ತಿಳಿಯದು. ಚಂದ್ರ ಹೆಸರಿನ ಎಲ್ಲ ಜಾಗಗಳು ಬೌದ್ಧಧರ್ಮ ಹಾಗೂ ನಾಥಪಂಥದ ಜತೆ ಸಂಬಂಧಪಡೆದಿವೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ಕರ್ನಾಟಕದ ಚಂದ್ರ ಹೆಸರಿನ ಊರು, ಗಿರಿ, ಕೊಳ್ಳಗಳನ್ನು ಬೌದ್ಧ ಹಾಗೂ ನಾಥರ ದೃಷ್ಟಿಯಿಂದ ಪರಿಶೀಲಿಸಿದರೆ ಹೊಸ ಸತ್ಯಗಳು ಹೊರಬರಬಹುದು.

ಧರ್ಮಸಂಬಂಧ

ಬುದ್ಧನ ಇನ್ನೊಂದು ಹೆಸರು ಧರ್ಮ. ಅವನ ಚಿಂತನೆಗಳು ‘ಧಮ್ಮಪದ’ದಲ್ಲಿವೆ.  ಧರ್ಮನ ಹೆಸರಲ್ಲಿ ಅನೇಕ ಊರುಗಳಿವೆ. ಧರ್ಮಸಾಗರ (ಹೊಸಪೇಟೆ) ಧರ್ಮಾಪುರ (ಸಂಡೂರು, ಅರಕಲಗೂಡು) ಧರ್ಮಪುರ (ಹಿರಿಯೂರು, ದೇವನಹಳ್ಳಿ,) ಧರ್ಮಸ್ಥಳ (ಬಂಟವಾಳ) ಇತ್ಯಾದಿ. ತಾರಾಭಗವತಿಗೂ ಬುದ್ಧನಿಗೂ ವಿಹಾರಗಳಿದ್ದ ಡಂಬಳದ ಪ್ರಾಚೀನ ಹೆಸರು ‘ಧಮ್ಮವೊಳಲ್’. ಈಗಲೂ ಡಂಬಳದ ದೊಡ್ಡಬಸಪ್ಪನ ಗುಡಿಯಲ್ಲಿ ಧ್ಯಾನಿಬುದ್ಧನ ರುಂಡವು ನೋಡಲು ಸಿಗುತ್ತದೆ. ತುಳುನಾಡಿನಲ್ಲಿ  ಧರ್ಮಶಾಸ್ತಾವು ಎಂಬ ದೈವಸ್ಥಾನಗಳಿದ್ದು, ಇವು  ಮೂಲತಃ ಬೌದ್ಧ ಚೈತ್ಯಾಲಯಗಳು.  ಕದ್ರಿಯ ಮಂಜುನಾಥ ಗುಡಿಯ ಆವರಣದಲ್ಲಿರುವ ಧರ್ಮಶಾಸ್ತಾವು ಗುಡಿಯ ಉಲ್ಲೇಖ ಹಿಂದೆ ಬಂತಷ್ಟೆ. ನಾಥಪಂಥದಲ್ಲಿ ಧರ್ಮನಾಥಿ ಎಂಬ ಶಾಖೆಯಿದೆ. ಅದನ್ನು ಮಹಾಭಾರತದ ಧರ್ಮರಾಜ ಸ್ಥಾಪಿಸಿದನು ಎನ್ನಲಾಗುತ್ತದೆ. ಆದರೆ ಇದು ಧರ್ಮನಾದ ಬುದ್ಧನ ಹೆಸರಲ್ಲಿರುವ ಪಂಥ ಎಂದು ಅನಿಸುತ್ತದೆ.

ನಾಥರ ಬೌದ್ಧವಿರೋಧ

ಹೀಗೆ ನಾಥಪಂಥಕ್ಕೆ ಬೌದ್ಧ ಧರ್ಮದ ಚಾರಿತ್ರಿಕವೂ ದಾರ್ಶನಿಕವೂ ಆದ ದಟ್ಟ ಹಿನ್ನೆಲೆಯಿದೆ. ಆದರೆ ವರ್ತಮಾನದ ನಾಥಪಂಥದಲ್ಲಿ ಇದು ವಿಸ್ಮೃತಿಗೆ ಒಳಗಾಗಿದೆ. ಲುಂಕೆಮಲೆಯ ಕಾಪಾಲಿಕರು ಹಾಗೂ ಬೆಳಗಾವಿ ನಾಥಪಂಥದ ರಾವುಳರು ಕಾಪಾಲಿಕ ಮೂಲದಿಂದ ನಾಥಪಂಥಕ್ಕೆ ಬಂದವರು. ಆದರೆ ಕದ್ರಿಯ ಜೋಗಿಗಳು ಕರಾವಳಿಯಲ್ಲಿದ್ದ  ವಜ್ರಯಾನ ಪಂಥಕ್ಕೆ ಸೇರಿದ ಬೌದ್ಧರಾಗಿದ್ದು,  ವಜ್ರಯಾನವು ನಾಥಪಂಥವಾಗಿ ರೂಪಾಂತರಗೊಂಡ ಬಳಿಕ ನಾಥರಾದವರು. ಈ ಬಗ್ಗೆ ಅವರಲ್ಲಿ ಅರಿವು ಹಾಗೂ ಆಸಕ್ತಿ ಕಡಿಮೆಯಿದೆ. ನಾಥಪಂಥದ ಬಗ್ಗೆ ಅಪಾರ ಜ್ಞಾನವಿರುವ ಕದ್ರಿಯ ಜೋಗಿ ಆನಂದನಾಥ ಅವರು, ಜೋಗಿಮಠದ ಬಗ್ಗೆ ಬರೆದ ಕೃತಿಯಲ್ಲೂ ಅದರ ಬೌದ್ಧಹಿನ್ನೆಲೆಯನ್ನು ಗೌಣವಾಗಿಸಲಾಗಿದೆ. ನಾಥಪಂಥದ ಬಗ್ಗೆ ಕಾಪಾಲಿಕ ಸಮುದಾಯಕ್ಕೆ ತಿಳಿವಳಿಕೆ ಕೊಡು ವುದಕ್ಕಾಗಿ ಕೃತಿ ರಚಿಸಿದ ಸಿದ್ಧಪ್ಪನವರು, ನಾಥರ ಬೌದ್ಧಮೂಲ ವಾದವನ್ನು ನಿರಾಕರಿಸು ತ್ತಾರೆ. ಅವರ ಪ್ರಕಾರ ‘‘ನಾಥರು ಬೌದ್ಧ ಸಂಪ್ರದಾಯದಿಂದ ಬೆಳೆದು ಬಂದವರಾಗಿದ್ದರೆ, ಶೈವಸಾಹಿತ್ಯ ಮತ್ತು ಸಂಪ್ರದಾಯಗಳಲ್ಲಿ ಬುದ್ಧಂ ಶರಣಂ ಗಚ್ಛಾಮಿ ಸಂಘಂ ಶರಣಂ ಗಚ್ಛಾಮಿ ಎಂಬೀ ಶರಣಾಂಗಗಳು ಎಲ್ಲಿಯಾದರೂ ಕಂಡು ಬರಬೇಕಾಗಿತ್ತು…ಬೌದ್ಧಧರ್ಮದ ಸಂಕೇತ ಅಥವಾ ಆ ಮೂಲಕ ಬೆಳೆದು ಬಂದದ್ದು ಕೇವಲ ಕುಹಕವಾಗುತ್ತದೆ, ಅಲ್ಲದೆ ಈ ಧರ್ಮದ ಶ್ರೇಷ್ಠತೆಯನ್ನು ಅರಿಯದೆ ಹಾಗೂ ಸಹಿಸಲಾರದವರ ಹೊಟ್ಟೆಕಿಚ್ಚಿನ ಕುಯುಕ್ತಿಯ ಮಾತಾಗುತ್ತದೆ’’[15]

ಬೌದ್ಧ ಪರಂಪರೆಯಲ್ಲಿ ಗುರುತಿಸಿಕೊಳ್ಳಲು ಯಾಕೆ ಈ ಹಿಂಜರಿಕೆ ಮತ್ತು ನಿರಾಕರಣೆ? ಬಹುಶಃ ಕೆಲವು  ಕಾರಣಗಳಿವೆ. ೧. ನಾಥರ ಮೇಲಿನ ಭಕ್ತಿಯೇ ಮುಖ್ಯವಾಗಿರುವ ನಾಥ ಪಂಥಿ ಸಮುದಾಯಗಳಿಗೆ ಅದರ ಚಾರಿತ್ರಿಕ ಹಿನ್ನೆಲೆಗಳು ಅಷ್ಟು ಮುಖ್ಯವಾಗಿಲ್ಲ. ೨. ಕದ್ರಿಯ ಮಂಜುನಾಥನು ಬೌದ್ಧರ ಅವಲೋಕಿತೇಶ್ವರ ಎಂಬ ವಾದವನ್ನು ಒಪ್ಪಿದರೆ,  ಕದ್ರಿಯ ಮಂಜುನಾಥ ದೇವಾಲಯವನ್ನು ವೈದಿಕರ ಕಬಜಾದಿಂದ ಮರಳಿ ಪಡೆಯುವ ವಾದ ದುರ್ಬಲವಾಗುವುದು ಎಂಬ ಅನುಮಾನ ಇರಬಹುದು. ೩.ಬೌದ್ಧವಿರೋಧಿಯಾದ ವೈದಿಕ ಸಂಸ್ಕೃತಿಯ ಪ್ರಭಾವದ ಕಾರಣದಿಂದ ನಾಥರು, ಸಹಜವಾಗಿ  ಬೌದ್ಧ ಧರ್ಮದ ಬಗ್ಗೆ ಪೂರ್ವಗ್ರಹ ಬೆಳೆಸಿಕೊಂಡಿರಬಹುದು.  ಇದಕ್ಕೆ ಪೂರಕವಾಗಿ ನಾಥರಲ್ಲಿ ಒಂದು ಕತೆಯಿದೆ. ಅದನ್ನು  ಕದ್ರಿ ಝುಂಡಿಯಲ್ಲಿ (೨೦೦೪)  ಬಂದಿದ್ದ ಸೂರಜನಾಥರು ಹೇಳಿದರು. ನೇಪಾಳವನ್ನು ಆಳುತ್ತಿದ್ದ  ಮಲ್ಲವಂಶದ ರಾಜರು ಬೌದ್ಧರಾಗಿದ್ದರು. ಸನಾತನಧರ್ಮದ ವಿರೋಧಿಯಾಗಿದ್ದರು. ಅವರಿಗೆ ಗೋರಖನು ನಾಥದೀಕ್ಷೆ ಕೊಟ್ಟ ಬಳಿಕ, ನಾಥಪಂಥವು ನೇಪಾಳದ ರಾಷ್ಟ್ರೀಯ ಧರ್ಮವಾಯಿತು ಅವರು ವಿವರಿಸಿದರು. ಬೌದ್ಧಧರ್ಮದ ಹಿನ್ನೆಲೆಯಿಂದ ಹುಟ್ಟಿದ ನಾಥಪಂಥದಲ್ಲಿ  ಬೌದ್ಧವಿರೋಧಿ ಚಿಂತನೆಗಳು ಸೇರಿಕೊಂಡಿವೆ! ಬಹುಶಃ ಪಂಥಗಳು ವೈದಿಕೀಕರಣ ಪಡೆದ ಕೂಡಲೆ, ಬೌದ್ಧವಿರೋಧಿ ನಿಲುವನ್ನು ತಳೆಯುತ್ತವೆ ಎಂದು ಕಾಣುತ್ತದೆ. ಬೌದ್ಧಧರ್ಮದ ಪ್ರಸಾರವನ್ನು ತಡೆಯಲೆಂದೇ ನಾಥಪಂಥವು ಹುಟ್ಟಿತು ಎಂಬ ವಾದವೂ ಇದೆ. ಇದಕ್ಕೆ ನಾಥಪಂಥಿ ಕಾಪಾಲಿಕರ ನಾಯಕರಲ್ಲಿ ಒಬ್ಬರಾದ ಹಿರಿಯೂರಿನ ನಾಗರಾಜ್ ಅವರು ಹೇಳಿದ ಅನುಭವವು ಪೂರಕವಾಗಿದೆ. ಒಮ್ಮೆ ನಾಗರಾಜ್ ಶೃಂಗೇರಿಗೆ ಹೋಗಿದ್ದಾಗ, ಅಲ್ಲಿನ ಗುರುಗಳಿಗೆ ನಾಥಪಂಥದ ಸಂಪ್ರದಾಯದ ಪ್ರಕಾರ ಸಿಂಗನಾದ ಊದಿ ಆದೇಶ್(ನಮಸ್ಕಾರ) ಮಾಡಿದರಂತೆ. ಕುತೂಹಲಗೊಂಡ ಗುರುಗಳು,  ನಾಗರಾಜರ ಹಿನ್ನೆಲೆ ಕೇಳಿದರಂತೆ. ನಾಗರಾಜ್ ತಾವು ನಾಥಪಂಥಿ ಎಂದಾಗ, ಸಂತೋಷಪಟ್ಟು, ಅಗ್ರತೀರ್ಥ ಕೊಟ್ಟು  ‘ನಿಮ್ಮ ಗೋರಖನಾಥ ಬೌದ್ಧಧರ್ಮವನ್ನು ಹಿಮಾಲಯದ ಆಚೆ ಅಟ್ಟಿ ಹಿಂದೂ ಧರ್ಮವನ್ನು ಉಳಿಸಿದವನಪ್ಪಾ’ ಎಂದು ನುಡಿದರಂತೆ.

ನಾಥಪಂಥವು ಬೌದ್ಧಮತವನ್ನು ನಾಶಮಾಡಿ ಅದರ ಅವಶೇಷಗಳಿಂದ ಹುಟ್ಟಿಬಂದಿದ್ದೆ ಅಲ್ಲವೆ ಎಂಬುದು  ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಅದು ಬೌದ್ಧ ವಜ್ರಯಾನದ ಗರ್ಭದಲ್ಲಿ ಮೂಡಿತು ಎನ್ನುವುದರಲ್ಲಿ ಅನುಮಾನವಿಲ್ಲ. ಅಂಥ ನಾಥಪಂಥಕ್ಕೆ  ಬೌದ್ಧಧರ್ಮವನ್ನು ಗಡಿಪಾರು ಮಾಡಿದ ಕೀರ್ತಿ ಸಲ್ಲುತ್ತಿರುವುದು  ಮಾತ್ರ ಚಾರಿತ್ರಿಕ ವ್ಯಂಗ್ಯವಾಗಿದೆ. ಸ್ವತಃ ಶಂಕರರಿಗೂ ಪ್ರಚ್ಛನ್ನ ಬೌದ್ಧರೆಂಬ ಹೆಸರಿತ್ತಷ್ಟೆ. ತಮ್ಮ ಪಂಥವು  ಸ್ವತಂತ್ರವಾದುದು, ಪ್ರಾಚೀನವಾದುದು ಎಂಬ ಅಭಿಮಾನಕ್ಕೆ, ಅದು ಇನ್ನೊಂದು ಧರ್ಮದ ರೂಪಾಂತರ ಎಂಬ ಚಾರಿತ್ರಿಕ ಸತ್ಯವನ್ನು ಒಪ್ಪುವುದು ಕಷ್ಟವಾಗುತ್ತದೆ. ಶಿವನಿಂದಲೇ ನಾಥಪಂಥವು ಮೂಡಿತು ಎಂದು ನಂಬುವ ನಾಥಪಂಥೀಯ ಸಮುದಾಯಗಳು, ನಾಥವನ್ನು  ‘ಶುದ್ಧ ಶೈವಧರ್ಮ’ವಾಗಿ ನೋಡಲು ಬಯಸುತ್ತವೆ. ಆದರೆ ಜಗತ್ತಿನ ಅನೇಕ ದೊಡ್ಡ ಧರ್ಮಗಳು ಒಂದರ ವಿರುದ್ಧ ಇನ್ನೊಂದು  ಭಿನ್ನಮತದಿಂದಲೊ ಬಂಡಾಯ ಮಾಡಿಯೊ ಒಟ್ಟಿನಲ್ಲಿ  ‘ಪಿತೃಹತ್ಯೆ’ಗೈದೇ ಹುಟ್ಟಿವೆ. ಕದ್ರಿಯ ಗುಡಿಯಲ್ಲಿ ನಾಥಪಂಥದ ಕುರುಹುಗಳನ್ನು ವೈದಿಕರು ನಾಶಮಾಡದಂತೆ ಅದರ ಉತ್ತರಾಧಿಕಾರಿಗಳಾದ ಜೋಗಿ ಸಮುದಾಯದ ಕಣ್ಗಾವಲಿದೆ. ಆದರೆ ಹೀಗೆ ಯಾವುದೇ ಜೀವಂತ ಉತ್ತರಾಧಿಕಾರಿ ಸಮುದಾಯವಿಲ್ಲದ ಕಾರಣಕ್ಕೊ ಏನೊ, ವಜ್ರಯಾನಕ್ಕೆ ಅದರ ಕುರುಹುಗಳ ನಾಶವನ್ನು ಕೇಳುವವರಿಲ್ಲ ಎಂಬಂತಾಗಿದೆ. ಈಗಲೂ ಮನೆಯಿಂದ ಹೊರಹಾಕಲ್ಪಟ್ಟ ಮಗುವಿನಂತೆ ಕಾಣವ ಅವಲೋಕಿತೇಶ್ವರನ ಮೂರ್ತಿಯು, ಕದ್ರಿಯ ಮಂಜುನಾಥ ಗುಡಿಯಲ್ಲಿದೆ. ಲೋಕದ ದುಃಖಕ್ಕೆ ತನ್ನ ನಿರ್ವಾಣವನ್ನೆ ತ್ಯಾಗಮಾಡಿದ ಅವಲೋಕಿತನ ಕತೆಗೆ, ಚರಿತ್ರೆ ಕೊಟ್ಟಿರುವ ಈ ಉಪಸಂಹಾರ ಮಾತ್ರ ವಿಚಿತ್ರವಾಗಿದೆ.

* * *

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)[1]       ಚಿದಾನಂದಮೂರ್ತಿ ಎಂ., ಕರ್ನಾಟಕ ನೇಪಾಳ ಸಾಂಸ್ಕೃತಿಕ ಸಂಬಂಧ, ಪು.೪೩-೪೪

[2]       ಗೋವಿಂದ ಪೈಯವರು ಇವು ಬುದ್ಧನ ಮೂರ್ತಿಗಳು ಎನ್ನುತ್ತಾರೆ. ಆದರೆ ಇವು ಒಂಟಿಕಾಲಿನಲ್ಲಿ ನಿಂತಿವೆ. ಬೌದ್ಧ ಯೋಗಿಗಳು ಹಾಗೆ ನಿಂತಿರುವ ಶಿಲ್ಪಗಳು ಕಡಿಮೆ.

[3]       ‘ಕದ್ರಿಯಲ್ಲಿರುವ ಅಲೂಪರದೊಂದು ಲೇಖ’ (೧೯೨೭) ‘ಕದಿರೆಯ ಮಂಜುನಾಥ’ (೧೯೪೭) ‘ಧರ್ಮಸ್ಥಳದ ಶಿವಲಿಂಗಕ್ಕೆ ಮಂಜುನಾಥ ಎಂಬ ಹೆಸರು ಹೇಗೆ ಬಂತು?’(೧೯೫೦)

[4]       ಗುರುರಾಜಭಟ್ ಪಿ, ಕದ್ರಿಶ್ರೀ ಮಂಜುನಾಥ ದೇವಾಲಯ ಕ್ಷೇತ್ರ ಮಹಾತ್ಮ್ಯೆ ಮತ್ತು ಇತಿಹಾಸ, ಕದ್ರಿ ಮಂಜುನಾಥ ದೇವಸ್ಥಾನ, ಪು.೪೩-೪೪

[5]       ತಾಳ್ತಜೆ ವಸಂತ ಕುಮಾರ, ಬೌದ್ಧಾಯನ, ಪು.೨೦೭

[6]       ‘ಕದಿರೆಯ ಮಂಜುನಾಥ’, ಗೋವಿಂದಪೈ ಸಂಶೋಧನ ಸಂಪುಟ, ಪು. ೬೬೧

[7]       ‘ಧರ್ಮಸ್ಥಳದ ಶಿವಲಿಂಗಕ್ಕೆ ಮಂಜುನಾಥ ಎಂಬ ಹೆಸರು ಹೇಗೆ ಬಂತು?’, ಅದೇ ಪು. ೬೬೫-೬೭೨

[8]       ರಾಮಚಂದ್ರರಾವ್ ಎಸ್.ಕೆ., ಅಣ್ಣಪ್ಪದೈವ, ಪು.೧೧೪-೧೧೫

[9]       ರಘುನಾಥಭಟ್ಟ ಎಚ್.ಆರ್., ಬನವಾಸಿಯ ಬೌದ್ಧಾವಶೇಷಗಳು : ಒಂದು ಸಮೀಕ್ಷೆ, ಪು.೬೬

[10]      ‘ಬಳ್ಳಿಗಾವೆಯ ತಾರಾಭಗವತಿ ವಿಗ್ರಹ ಮತ್ತು ‘ಸುಕುಮಾರ ಚರಿತೆ’ಯ ರಚನಾಕಾಲ’, ಹೊಸತು ಹೊಸತು, ಪು. ೨೫೬

[11]      ಅಮೃತ ಸೋಮೇಶ್ವರ, ಭಗವತೀ ಆರಾಧನೆ, ಪು.೬೮

[12]      ಭದ್ರಾವತಿ ತಾಲೂಕಿನಲ್ಲಿ ಹೊಲತಿಹಾಳು ಎಂಬ ಊರಿದೆ. ಅದರ ಅಗಸೆಬಾಗಿಲ ಬಳಿ ನೆಟ್ಟಕಲ್ಲಿನಲ್ಲಿ ತಾಂತ್ರಿಕ ಪಂಥಕ್ಕೆ ಸೇರಿರಬಹುದಾದ ನಕ್ಷೆಗಳಿವೆ. ಎರಡು ಕಡೆ ತ್ರಿಶೂಲಗಳನ್ನು ನಡುವೆ ಎರಡು ಚೌಕಗಳು ಬರುವಂತೆ ಜೋಡಿಸಿ ಮಾಡಿರುವ ಮಂಡಲದ ಗುರುತಿದೆ.  ಸಮೀಪದಲ್ಲಿ ಭಗವತಿಕೆರೆ  ಊರಿದೆ. ಇದು ಭಗವತಿಯ ಆರಾಧನೆಗೆ ಸಂಬಂಧಪಟ್ಟಿದ್ದೇನು?

[13]      ಚಿದಾನಂದಮೂರ್ತಿ ಎಂ., ಬೌದ್ಧಕೇಂದ್ರ ‘‘ಕಲಾವತಿ’’ನಗರ ಅಭಿಜ್ಞೆ-ಈಗಿನ ‘‘ಕಲ್ಯ’’, ಹೊಸತು ಹೊಸತು, ಪು. ೨೬೧

[14]      ನೋಡಿ: ಹುಲ್ಲೂರು ಶ್ರೀನಿವಾಸ ಜೋಯಿಸರ ‘ಚಿತ್ರದುರ್ಗ ಜಿಲ್ಲೆಯ ಬೌದ್ಧಧರ್ಮದ ಕುರುಹುಗಳು’ ಎಂಬ ಲೇಖನ, ಶತಮಾನದ ಸಂಶೋಧನೆ, ಪು.೧೯೨

[15]      ಸಿದ್ಧಪ್ಪ ಬಿ., ನಾಥಪಂಥ ಶೈವಧರ್ಮ ಮತ್ತು ಕರ್ನಾಟಕ ನಾಥಪಂಥ ಶೈವ ಸಮಾಜದ ಸಂಕ್ಷಿಪ್ತ ಪರಿಚಯ, ಪು.೧೨