ಶಕ್ತಿಯ ಮಹತ್ವ

 

ಬಹುಶಃ ದೇವತೆಗಳಲ್ಲೇ ತನ್ನ ಮಡದಿಯನ್ನು ಅತಿಹೆಚ್ಚು ಪ್ರೀತಿಸುವ, ಅಗಲುವ ಹಾಗೂ  ಹುಡುಕುವ ದೇವತೆಯೆಂದರೆ ಶಿವನು. ಆತ ಮಡದಿಯನ್ನು ಸಂಗಾತಿಯಾಗಿ ಭಾವಿಸಿ, ತನಗೆ ತಿಳಿದಿರುವ ರಹಸ್ಯ ವಿದ್ಯೆಗಳನ್ನು ಹಂಚಿಕೊಳ್ಳುವ ದೇವತೆ ಕೂಡ.  ಕೊನೆಗೆ ಈ ಅಗಲಿಕೆಯೇ ಬೇಡವೆಂದು ಆಕೆಯನ್ನುತನ್ನ ದೇಹದ ಎಡಭಾಗವನ್ನಾಗಿ ಮಾಡಿಕೊಂಡವನು. ಒಮ್ಮೆ ಸತ್ತ ಉಮೆಯ ಶವವನ್ನು ಹೆಗಲಮೇಲೆ ಹೊತ್ತುಕೊಂಡು ಶಿವ, ಇಡೀ ಲೋಕವನ್ನೆಲ್ಲ ಹುಚ್ಚನಂತೆ  ತಿರುಗುತ್ತಾನೆ. ಹುಚ್ಚು ಅಥವಾ ಮರುಳು ಶಿವನ ಮುಖ್ಯ ಲಕ್ಷಣ. ಆತ ಮರುಳುಶಂಕರ. ಅವನ ಹೆಸರಲ್ಲಿ ಸಿದ್ಧರಾಗುವವರೂ ಮರುಳುಸಿದ್ಧರೆ. ಶಿವನ ಈ ಹುಚ್ಚಾಟ ಕಂಡ ದೇವತೆಗಳು ವಿಷ್ಣುವಿಗೆ ಏನಾದರೂ ಮಾಡಬೇಕೆಂದು ಕೇಳಲು, ವಿಷ್ಣುವು ಉಮೆಯ ಶವವನ್ನು ಹಲವು ತುಂಡು ಮಾಡಿ ಭೂಮಿಯ ಮೇಲೆ ಚೆಲ್ಲುತ್ತಾನೆ. ಆಕೆಯ ಅಂಗಾಗಗಳು ಬಿದ್ದ ಜಾಗಗಳೆಲ್ಲ ಶಕ್ತಿಪೀಠಗಳಾಗುತ್ತವೆ. ಉಮೆಯ ಹಣೆ ಬಿದ್ದ ಜಾಗ ಬಲೂಚಿಸ್ತಾನದಲ್ಲಿ ಹಿಂಗ್ಲಜವಾಯಿತು. ಯೋನಿ ಬಿದ್ದಜಾಗ ಅಸ್ಸಾಮಿನ ಕಾಮಾಖ್ಯವಾಯಿತು (ಈಗಲೂ ಇಲ್ಲಿ ಯೋನಿಯಂತಿರುವ ಸೀಳುಬಂಡೆಯೇ ದೇವಿಯ ಆಕಾರ), ಅವಳ ಬೆರಳು ಬಿದ್ದ ಭಾಗ ನೇಪಾಳದ ಪಾಟನ್ ಆಯಿತು ಎಂದು ನಂಬಲಾಗು ತ್ತದೆ. ವಾಮಾಚಾರದ ಆಚರಣೆ ಹಾಗೂ ಬಲಿಪದ್ಧತಿ ಇರುವ  ಈ ಶಕ್ತಿಪೀಠಗಳೆಲ್ಲ ನಾಥರಿಗೆ ಪವಿತ್ರವಾದವು. ಹಿಂಗ್ಲಜಾದೇವಿ ಪೀಠವು ಮೂಲತಃ ಒಂದು ಗುಹೆ. ಅಲ್ಲಿಗೆ ಹೋದವರು ಯೋನಿಲಿಂಗದ ಮುದ್ರೆ ಧರಿಸಿಕೊಂಡು ಬರುತ್ತಿದ್ದರು ಎಂದು ಬ್ರಿಗ್ಸ್ ಬರೆಯುತ್ತಾನೆ.

ಈ ಅಗಲಿಕೆ ಮತ್ತು ಮಿಲನವು ತಾತ್ವಿಕವಾಗಿ ಅದ್ವೈತಿಯಾಗಿದೆ. ಈ ತತ್ವವನ್ನು ಹೇಳಲು ಪುರಾಣದಲ್ಲಿ ಬರುವ  ಶಿವಪಾರ್ವತಿಯರ ಪ್ರೇಮ ಕಥಾನಕಗಳು ಬಳಕೆಗೊಂಡವು. ಪುರುಷ ಪ್ರಕೃತಿಯರ ಅಥವಾ ಶಿವಶಕ್ತಿಯರ ಅವಿನಾ ಸಂಬಂಧವನ್ನು ಅಭಿನವಗುಪ್ತನು ವಾಗರ್ಥ ಗಳ ಭಾಷಾಶಾಸ್ತ್ರೀಯ ರೂಪಕದಲ್ಲಿ ವರ್ಣಿಸುತ್ತಾನೆ; ಗೋರಖನು ಇದನ್ನು ಚಂದ್ರ-ಚಂದ್ರಿಕೆ (‘ಶಿವಸ್ಯಾಭ್ಯಾಂತರೇ ಶಕ್ತಿಃ ಶಕ್ತೇರಭ್ಯಂತರೇ ಶಿವ: ಅಂತರಂ ನೈವ ಜಾನೀಯಾತ್ ಚಂದ್ರ ಚಂದ್ರಿಕಯೋರಿವ’- ಸಿದ್ಧಸಿದ್ಧಾಂತ ಪದ್ಧತಿ) ಹಾಗೂ ದೀಪ-ದೀಪಿಕೆಯ ರೂಪಕಗಳಲ್ಲಿ ಬಣ್ಣಿಸುತ್ತಾನೆ. ಕೌಳವು ಬೆಂಕಿ-ಹೊಗೆ  (ಅಗ್ನಿಧೂಮೌ) ಹಾಗೂ ಗಿಡ-ನೆರಳುಗಳ  (ಛಾಯಾ ಧ್ರುಮ) ರೂಪಕಗಳಲ್ಲಿ ಬಣ್ಣಿಸುತ್ತದೆ. ಈ ರೂಪಕಗಳು ಶಿವಶಕ್ತಿಯರ ಅಭಿನ್ನತೆಯನ್ನು ಹೇಳುತ್ತಿವೆ. ವ್ಯಂಗ್ಯವೆಂದರೆ ಮಹಾಪ್ರೇಮ ಹಾಗೂ ಮಹಾಮಿಲನದ ಈ ರೂಪಕಗಳಿಗೆ, ಒಂದು ಮೂಲ-ಮತ್ತೊಂದು ಅದರ  ಪರಿಣಾಮ ಎಂಬ ಭೇದಾರ್ಥವನ್ನು ತಪ್ಪಿಸಲು ಆಗಿಲ್ಲದಿರುವುದು. ಇದು ರೂಪಕಗಳ ಮಿತಿಯೊ ನಮ್ಮ ತತ್ವಗಳ ಮಿತಿಯೊ?

ಶಕ್ತಿ ಎಂದರೆ ಹೆಣ್ಣು. ಶಾಕ್ತ ಎಂದರೆ ಶಕ್ತಿಗೆ ಅಥವಾ ಪ್ರಕೃತಿಗೆ ಸಂಬಂಧಿಸಿದ್ದು. ಸ್ತ್ರೀಶಕ್ತಿಯು ಸೃಜನಶೀಲವಾದುದು ಮತ್ತು ಜಗತ್ತಿನ ಸರ್ವಚಲನೆಗಳ ಹಿಂದೆ ಇರುವಂತಹುದು ಎಂದು ಶಾಕ್ತರು ನಂಬುತ್ತಾರೆ. ಶಕ್ತಿಯ ದೈವಿಕರೂಪವೇ ಶಿವೆ. ಗೋರಖನ ಪ್ರಕಾರ, ಶಿವ ಅಥವಾ ಪುರುಷನು, ಶಕ್ತಿಯಿಲ್ಲದೆ ಅಪ್ರಯೋಜಕ (‘ಶಿವೋವಪಿ ಶಕ್ತಿರಹಿತಃ ಕರ್ತು ಶಕ್ತೋ ನ ಕಿಂಚನ’). ಶಕ್ತಿಯ ಸಂಕೋಚ ಹಾಗೂ ವಿಕಸನಗಳಿಂದ ಜಗತ್ತಿನ ಚಲನೆ ಆಗುತ್ತದೆ.  ಶಾಕ್ತದಂತೆ ಕೌಳವೂ ಸ್ತ್ರೀಕೇಂದ್ರಿತ ಪಂಥ. ಕುಲ ಎಂದರೆ ಹೆಣ್ಣು ಅಥವಾ ಶಕ್ತಿ.  ಶಕ್ತಿಯು ಕುಲ ಅಥವಾ ಸಂತಾನವನ್ನು ಸೃಷ್ಟಿಸುವವಳು. ಶಿವನು ಅಕುಲ. ಕುಲ ಅಕುಲಗಳ ಸಂಯೋಗವೇ ಮೋಕ್ಷ. ಶಾಕ್ತ ಕೌಳ ಎರಡೂ ಶೈವ ತಾಂತ್ರಿಕ ಪಂಥಗಳು. ನಾಥಪಂಥಕ್ಕೆ ಬುನಾದಿ ರೂಪದಲ್ಲಿರುವ ಯೋಗದರ್ಶನ ಕೂಡ, ದೇಹದಲ್ಲಿ ಸುಪ್ತರೂಪದಲ್ಲಿರುವ ಕುಂಡಲಿನಿ ಶಕ್ತಿಯು, ಸಹಸ್ರಾರದಲ್ಲಿರುವ ಶಿವನ ಜತೆ ಸೇರುವುದನ್ನೇ ಮೋಕ್ಷವೆನ್ನುತ್ತದೆ. ಎರಡು ತತ್ವ ಅಥವಾ ಚೈತನ್ಯಗಳ ಈ ಅಗಲಿಕೆ ಹಾಗೂ ಮಿಲನದ ಕತೆಗಳಿಗೆ, ದಾರ್ಶನಿಕ ಯೌಗಿಕ ಹಾಗೂ ಲೈಂಗಿಕ ಅರ್ಥ ಸ್ತರಗಳಿವೆ. ಮೂಲತಃ ವಿರಕ್ತವಾದಿಯಾದ ನಾಥಪಂಥವು ಗಂಡು ಹೆಣ್ಣು ಸಂಯೋಗದ ಪರಿಭಾಷೆಯನ್ನು ತಾತ್ವಿಕವಾಗಿ ಹಾಗೂ ಸಾಂಕೇತಿಕವಾಗಿ ಬಳಸುತ್ತದೆ. ಆದರೆ ಶಾಕ್ತರು ಹಾಗೂ ಕೌಳರು ಈ ತತ್ವವನ್ನು ವಾಸ್ತವಿಕ  ಲೈಂಗಿಕ ಕ್ರಿಯಾಚರಣೆಯಾಗಿ ಆಚರಿಸುತ್ತಾರೆ. ಶಕ್ತಿಯ ಸಹವಾಸವು ಎರಡು ಕಾರ್ಯ ಮಾಡುತ್ತದೆ. ೧. ದೈಹಿಕ ಮಿಲನದ ಹೊತ್ತಿನಲ್ಲಿ ತೃಪ್ತವಾಗುವ ಕಾಮನೆ, ಆಹಾರ, ಕುಡಿತಗಳನ್ನು ನಿಯಂತ್ರಿಸುವುದು. ೨. ಸಿದ್ದಿ ಪಡೆವ ಮತ್ತು ಶತ್ರು ನಿವಾರಣೆಯ  ಸಾಮರ್ಥ್ಯವನ್ನು ಕೊಡುವುದು.

ಶಿವಶಕ್ತಿಯರ ಈ ಸಂಯೋಗ ತತ್ವವು, ವಜ್ರಯಾನದಲ್ಲಿ ಬೇರೊಂದು ರೂಪದಲ್ಲಿದೆ. ಅಲ್ಲಿ ಸ್ತ್ರೀ ಇಂದ್ರಿಯವು ಪದ್ಮವಾದರೆ ಪುಲ್ಲಿಂಗವು ವಜ್ರ. ಹೂವು ಮೃದುತ್ವಕ್ಕೂ ವಜ್ರವು  ಕಠಿಣತೆಗೂ ರೂಪಕ. ಇವು ಪರಸ್ಪರ ವಿರುದ್ಧ ಗುಣವುಳ್ಳವಾದರೂ ಜೀವಸೃಷ್ಟಿಗೆ ಇವುಗಳ ಮಿಲನ ಅನಿವಾರ್ಯ. ಪದ್ಮ ಮತ್ತು ವಜ್ರಗಳ ಮಿಲನವೇ ಮೋಕ್ಷ. (ಬೇಂದ್ರೆಯವರು ತಮ್ಮೊಂದು ಕವನದಲ್ಲಿ ‘ವಜ್ರಮುಖವ ಚಾಚಿ ಮುತ್ತುತಿತ್ತು ಹೂವಹೂವ’ ಎಂದು ದುಂಬಿಯನ್ನು ಬಣ್ಣಿಸುವಾಗ ಮಿಲನ ಹಾಗೂ ಸೃಷ್ಟಿಕ್ರಿಯೆಯಲ್ಲಿ ಸೇರುವ ಈ ವೈರುಧ್ಯ ಸಾಮರಸ್ಯ ತತ್ವವನ್ನೆ ಸೂಚಿಸುತ್ತಾರೆ.) ತಾಂತ್ರಿಕ ಪಂಥಗಳಲ್ಲಿ ಸಾಧನೆಗೆ ಹೆಣ್ಣು ಉಪಕರಣ ಮಾತ್ರವಲ್ಲ, ಸಾಧನೆಯ ಕೊನೆಗೆ ಸಿಗುವ ದೈವಿಕ ಅನುಭವ ಕೂಡ. ಇಂತಹ ಆಚರಣೆ ಮಾಡುತ್ತಿದ್ದ ಯೋಗಿನಿಯರು, ಶಾಕ್ತ ಕೌಳ ವಜ್ರಯಾನ ಪಂಥಗಳಲ್ಲಿದ್ದರು. ನಾಥಪಂಥವು ರೂಪುಗೊಳ್ಳುವಾಗ ಶಾಕ್ತ ಮತ್ತು ಕೌಳ ಯೋಗಿಗಳೂ ಇದ್ದರಷ್ಟೆ. ಸ್ತ್ರೀರಾಜ್ಯದಲ್ಲಿದ್ದು ಭೋಗಸಾಧನೆಯಲ್ಲಿ ಮೈಮರೆತಿದ್ದ ಮಚೇಂದ್ರನು ಕೌಳಮಾರ್ಗಿ ಆಗಿದ್ದನು. ಆದಯ್ಯನು ತನ್ನೊಂದು ವಚನದಲ್ಲಿ ‘ನವನಾಥ ಸಿದ್ಧರನಪಹರಿಸಿತ್ತು ಈ ಮಾಯೆ’ ಎಂದು ಹೇಳುವುದು ಈ ಪ್ರಸಂಗ ಉದ್ದೇಶಿಸಿಯೆ ಇದ್ದೀತು. ಕದ್ರಿಯ ಸ್ಥಳಪುರಾಣಗಳು ಮಾತ್ರ, ಈ ಸ್ತ್ರೀರಾಜ್ಯವು ಕೇರಳವೆಂದೂ, ಗೋರಖನು ಮಚೇಂದ್ರನನ್ನು ಅಲ್ಲಿಂದ ಬಿಡಿಸಿಕೊಂಡು ಬರುವಾಗ ಮಚೇಂದ್ರನ ಪ್ರೇಮದಲ್ಲಿ ಮರುಳಾಗಿದ್ದ ಶಿಷ್ಯೆಯಾಗಿದ್ದ ಪಿಂಗಳಾದೇವಿಯು ಹಿಂಬಾಲಿಸಿಕೊಂಡು  ಬಂದಳೆಂದೂ, ಅವಳೇ ಮಂಗಳಾದೇವಿ ಎಂದೂ, ಅವಳಿಂದಲೇ ಮಂಗಳೂರಿಗೆ ಹೆಸರು ಬಂತೆಂದೂ ಗಟ್ಟಿಯಾಗಿ ನಂಬಿವೆ.  ಮಾತೃಪ್ರಧಾನ ಕುಟುಂಬ ವ್ಯವಸ್ಥೆಯೂ ಭಗವತಿ ಆರಾಧನೆಯೂ ಇದ್ದ ಕೇರಳವು, ಶಾಕ್ತಪಂಥದ ಸಹಜ ತಾಣ ವಾಗಿತ್ತು. ಶಂಕರರು  ಶಾಕ್ತಪೀಠಗಳಲ್ಲಿ ಚಕ್ರಪೂಜೆಯಂಥ ತಾಂತ್ರಿಕ ಆಚರಣೆಗಳನ್ನು ಸ್ಥಾಪಿಸಿದ್ದು ಈ ಪ್ರಭಾವದಿಂದಲೇ. ಆದ್ದರಿಂದ ಕದ್ರಿಯ ಸ್ಥಳಪುರಾಣಗಳಲ್ಲಿ ಚಾರಿತ್ರಿಕ ತಥ್ಯವೂ ಇದೆ.

ಮಚೇಂದ್ರನ ‘‘ನಾರೀಸಾಧನೆ’’ ಪ್ರಕರಣವು ೨ ಸಂಗತಿಗಳನ್ನು ಹೇಳುತ್ತಿದೆ. ೧. ನಾಥಪಂಥದಲ್ಲಿ ಕೌಳಮಾರ್ಗಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದರು. ಅವರು ನಾಥರಾದ ಬಳಿಕವೂ ಕೌಳಮಾರ್ಗದ ಆಚರಣೆಗಳನ್ನು ಪೂರ್ಣಕೈಬಿಟ್ಟಿರಲಿಲ್ಲ; ನಾಥ ಹಿನ್ನೆಲೆಯುಳ್ಳ ಸಿಂದಗಿಯ ಭೀಮಾಶಂಕರನು ಒಬ್ಬ ಶಾಕ್ತಸಿದ್ಧನ ಜತೆ ಬನಶಂಕರಿಯಲ್ಲಿ ಸುರೆಯಿಟ್ಟು ‘‘ಮೂಳಶಕ್ತಿ ಕುಳಸ್ವಾಮಿನಿ’’ ಆದ ದೇವಿಯ ಉಪಾಸನೆ ಮಾಡುವ ಪ್ರಸಂಗವಿದೆ.

[1] ನಾಥಪಂಥದ ವಿದ್ವಾಂಸರಾದ ತಿಪ್ಪೂರಿನ ನೀಲಕಂಠ ಸ್ವಾಮಿಯವರೂ ಒಬ್ಬ ಶಾಕ್ತ ಸಾಧಕರು. ೨. ಯೋಗಿಗಳು ಯೋಗಿನಿಯರನ್ನು ಹುಡುಕಿಕೊಂಡು ಹೋಗುತ್ತಿದ್ದರು ಇಲ್ಲವೆ ಯೋಗಿಗಳನ್ನು ಯೋಗಿನಿಯರು ಹಿಂಬಾಲಿಸಿಕೊಂಡು ಬರುತ್ತಿದ್ದರು. ಈ ಯೋಗಿನಿಯರಿಗೆ ಭೈರವಿಯರು ಎಂಬ ಹೆಸರೂ ಇತ್ತು.

ಹರಿಹರನ ‘ರೇವಣಸಿದ್ಧೇಶ್ವರರ ರಗಳೆ’ಯಲ್ಲಿ ಒಬ್ಬ ಜೋಗಿಯ ಪ್ರಸಂಗವಿದೆ. ರೇವಣಸಿದ್ಧನು ಹೊಳೆಯಲ್ಲಿ ಅಡಗಿಸಿಟ್ಟಿರುವ ಕಬ್ಬಿಣದ ಸುರಗಿಯನ್ನು ತೆಗೆದುಕೊಡುವುದಾದರೆ, ಹೊನ್ನು ಕೊಡುವುದಾಗಿ ಮಂಗಳವಾಡೆಯ ದೊರೆ ಬಿಜ್ಜಳನು ಡಂಗುರ ಸಾರಿಸುತ್ತಾನೆ. ಅದನ್ನು ಕೇಳಿ ಒಬ್ಬ ಜೋಗಿ ಬರುತ್ತಾನೆ. ‘ಒಪ್ಪುವ ಸಹಸ್ರ ಯೋಗಿಣಿಯರ್ಗೆ ಪತಿ’ ಯಾಗಿದ್ದ ಆತ, ಹೊನ್ನಿನ ಬದಲಿಗೆ ಹನ್ನೆರಡು ಸಾವಿರ ಕನ್ಯೆಯರು ಕೊಡಬೇಕೆಂದು ಶರತ್ತು ಇಡುತ್ತಾನೆ. ರಾಘವಾಂಕನ ‘ಸಿದ್ಧರಾಮ ಚಾರಿತ್ರ’ದಲ್ಲಿ  ಖರ್ಪರ ಜೋಗಿಯೊಬ್ಬ ‘ಹದಿನೆಂಟು ಪೀಠದ ದಿವ್ಯ ಜೋಗಿಣಿಯ ವಿಸರವೆರೆಸಿ’ ಸಿದ್ಧರಾಮನನ್ನು ನೋಡಲು ಬರುವ (೬.೨೬) ಪ್ರಸಂಗವಿದೆ. ಈ  ಚಿತ್ರಗಳಲ್ಲಿ ಉತ್ಪ್ರೇಕ್ಷೆಯಿದೆ, ನಿಜ. ಆದರೆ ಇವು ಪರೋಕ್ಷ ವಾಗಿ ಜೋಗಿ ಜೋಗಿಣಿಯರ ಸಂಬಂಧದ ಬಗ್ಗೆ ಬೆಳಕನ್ನು ಚೆಲ್ಲುತ್ತಿವೆ.  ಈ ಸಂಬಂಧವು ಒಂದನ್ನೊಂದು ಬಿಟ್ಟಿರದ ಎರಡು ಸಂಗತಿಗಳನ್ನು ಸಂಕೇತಿಸುವ ಗಾದೆಯಾಗಿ, ತಂತ್ರ ಪಂಥಗಳನ್ನು ಟೀಕಿಸುವವರು ವ್ಯಂಗ್ಯವಾಗಿ ಬಳಸುವಂತೆ ಭಾಷೆಯಲ್ಲಿ ಸೇರಿಹೋಗಿತ್ತು.  ಅಕ್ಕಮಹಾದೇವಿಯು ‘ಬಿಟ್ಟೇನೆಂದೊಡೆ ಬಿಡದೀ ಮಾಯೆ’ ವಚನದಲ್ಲಿ ‘ಜೋಗಿಗಂ ಜೋಗಿಣಿಯದಾಯ್ತು ಮಾಯೆ’ ಎಂದು ಹೇಳುವಾಗಲೂ ಇದೇ ದನಿಯಿದೆ.  ಬ್ರಹ್ಮಶಿವನು ೬೪ ಭೈರವರನ್ನೂ ಅವರ ಜತೆಯಲ್ಲಿ ಇರುತ್ತಿದ್ದ ಯೋಗಿಣಿಯರನ್ನೂ ‘ಸಮಯಪರೀಕ್ಷೆ’ಯಲ್ಲಿ ಕಂಡರಿಸುತ್ತಾನೆ. ಕಿನ್ನರಿ ಗಾಯಕರು ಹಾಡುವ ‘ಅರ್ಜುನ ಜೋಗಿಹಾಡು’ಗಳಲ್ಲಿ ಒಂದೊಮ್ಮೆ ಅರ್ಜುನನು ಜೋಗಿಯಾಗಿ ಮಣಿಪುರಕ್ಕೆ ಹೊರಟಾಗ, ತಾನೂ ಜೋಗಿಣಿಯಾಗಿ ಬರುವೆ ಎಂದು ದ್ರೌಪದಿ ಹಠಹಿಡಿಯುತ್ತಾಳೆ.  ‘ಮಾರಮ್ಮನಿಗೆ ಗಂಡಿಲ್ಲ ಬೋರಪ್ಪನಿಗೆ ಹೆಂಡ್ರಿಲ್ಲ’ ಎಂಬ ಗಾದೆ ಲುಂಕೆಮಲೆ ಪರಿಸರದಲ್ಲಿದೆ. ಇವೆಲ್ಲವೂ ಎರಡು ದೈವಗಳ ಅವಸ್ಥೆ ಯನ್ನು ಮಾತ್ರವಲ್ಲ, ತಾಂತ್ರಿಕ ಪಂಥಗಳ ಯೋಗಿನಿಯರಿಗೂ ಕಾಪಾಲಿಕ ಜೋಗಿಗಳಿಗೂ ಇದ್ದ ಸಂಬಂಧವನ್ನು ಕಾಣಿಸುತ್ತವೆ..

ಚೌರಾಸಿ ಸಿದ್ಧರಲ್ಲಿ ಮಣಿಭದ್ರಾ ಮೇಖಲಿಪಾ ಕನಖಲಿಪಾ ಎಂಬ ೩ ಯೋಗಿನಿಯರು ಬರುತ್ತಾರೆ.  ಜ್ವಾಲಾಮುಖಿಯ (ಹಿಮಾಚಲ ಪ್ರದೇಶ) ಜ್ವಾಲಾಮಾಯಿ ನಾಥರ ಶಕ್ತಿ ದೇವತೆ. ರಾಜ್ಯತ್ವವನ್ನು ಬಿಟ್ಟು ನಾಥದೀಕ್ಷೆ ಪಡೆದ ಶೃಂಗಾರ ಶತಕದ ಕವಿ  ಭರ್ತೃಹರಿಯ ಜತೆಯಲ್ಲಿದ್ದ ಪಿಂಗಳಾದೇವಿ ಎಂಬ ಯೋಗಿನಿಯ ಪ್ರಸ್ತಾಪವೂ ಬರುತ್ತದೆ.  ಪಿಂಗಳಾ ಅಂದರೆ ಕೆಂಬಣ್ಣ. ಈ ಕೆಂಪು ರಕ್ತ ಹಾಗೂ ಬಲಿಪದ್ಧತಿಯ ಸಂಕೇತ. ಇದೇ ಹಿಂಗ್ಲಜೆ ಕದ್ರಿಮಠದ ಸ್ಥಳಪುರಾಣದಲ್ಲಿ ಪಿಂಗಳೆಯಾಗಿ ಬರುತ್ತಾಳೆ. ನಾಥರ ಬಾರಾಪಂಥಗಳಲ್ಲಿ ಒಂದಾದ ಆಯಿ(=ತಾಯಿ) ಪಂಥದ ಸ್ಥಾಪಕಿಯಾದ ಭಗವತಿ ವಿಮಲಾದೇವಿಯು, ಒಬ್ಬ ಯೋಗಿನಿ. ಗೋರಖನ ಶಿಷ್ಯೆಯಾದ ಈಕೆ ಬಂಗಾಳದವಳು. ಬಂಗಾಳವು ಶಾಕ್ತರ ಸೀಮೆ. ಈ ಸೀಮೆಗೆ ಹೊಂದಿಕೊಂಡಂತೆ ಶಕ್ತಿಪೀಠಗಳಾದ ಕಾಮಾಖ್ಯ ಹಾಗೂ ದೇವಿಪಾಠನ್‌ಗಳಿವೆ. ಇಡೀ ನೇಪಾಳವೆ ಕುಮಾರಿ ಪೂಜೆಯ ಸೀಮೆ. ಗೋರಖನ ಆಡುಂಬೊಲ ಆಗಿರುವ ನೇಪಾಳದ  ಮೃಗಸ್ಥಲಿ ಬೆಟ್ಟದ ಬಳಿ, ಪಶುಪತಿನಾಥನ ಮಡದಿ ಗುಹೇಶ್ವರಿಯ ಆರಾಧನೆ ಯಿದೆ. ಗುಹೇಶ್ವರಿ ಎಂದರೆ ಯೋನಿಶಿಲ್ಪದ ಪೂಜೆ. ಅದರ ಅರ್ಚಕರು ಅಸ್ಪೃಶ್ಯರು. ಇಂತಹ ಪರಿಸರದಲ್ಲಿ ಹುಟ್ಟಿದ ನಾಥಪಂಥವು ಯೋಗಿನಿಯರಿಂದ ಹೊರತಾಗುವುದು ಅಸಾಧ್ಯವಾಗಿತ್ತು.

ಆದರೆ ದಕ್ಷಿಣದ ನಾಥಪಂಥದಲ್ಲಿ ದೊಡ್ಡಸಂಖ್ಯೆಯ ಯೋಗಿನಿಯರು ಕಾಣುವುದಿಲ್ಲ.  ಮಹಾರಾಷ್ಟ್ರದ ನವನಾಥರಲ್ಲಿ ಗೌರಾಯಿ ಗಂಗಾದೇವಿ ಮುಕ್ತಾಯಿಯರು ಬರುತ್ತಾರೆ. ನಾಥರ ಪವಿತ್ರ ಕ್ಷೇತ್ರವಾದ ತ್ರ್ಯಂಬಕೇಶ್ವರ ಇರುವುದೇ ಕೌಳಗಿರಿಯ ಬುಡದಲ್ಲಿ.  ಹೆಸರೇ ನುಡಿಯುವಂತೆ ಕೌಳಗಿರಿಯು ಕೌಳಯೋಗಿನಿಯರ ತಾಣ. ಇದು ನಾಥ ಹಾಗೂ ಕೌಳರ ಅವಿನಾ ಸಂಬಂಧದ ಇನ್ನೊಂದು ಪುರಾವೆ. ಮಚೇಂದ್ರನು ಸ್ತ್ರೀಸಂಗದಲ್ಲಿದ್ದ ಎನ್ನಲಾಗುವ ಕದಳಿವನವು,  ಶ್ರೀಶೈಲದ ಕದಳಿವನವೇ ಎಂದು ಮರಾಠಿ ಸಂಶೋಧಕ ರಾಚಿಂ ಢೇರೆ ವಾದಿಸುತ್ತಾರೆ. ಇದು ನಿಜವಾದಲ್ಲಿ,  ಶ್ರೀಶೈಲದ ಕದಳಿವನವು ಕೇವಲ ಅಲ್ಲಮನಂತಹ ಸಿದ್ಧನ ಹಾಗೂ ಅಕ್ಕನಂತಹ ಯೋಗಿನಿಯ ದೇಹತ್ಯಾಗದ ಜಾಗ ಮಾತ್ರವಲ್ಲ. ಅದು ವಿಭಿನ್ನ ಯೋಗಿ-ಯೋಗಿನಿಯರು ಭೇಟಿಯಾಗುತ್ತಿದ್ದ ತಾಣವೂ ಆಗಿತ್ತು. ಬಹುಶಃ ಅಲ್ಲಿ ಏಕಕಾಲಕ್ಕೆ ವಜ್ರಯಾನ, ಶಾಕ್ತ, ಕೌಳ ಮುಂತಾದ ಪಂಥಗಳಿಗೆ ಸೇರಿದ ಯೋಗಿನಿಯರು ಇದ್ದರು. ಮರಾಠಿ ನಾಥಸಂಪ್ರದಾಯದಲ್ಲಿ ಗೋರಖನು ಮುಕ್ತಾಬಾಯಿಯನ್ನು ಕರೆದುಕೊಂಡು ಶ್ರೀಶೈಲಕ್ಕೆ ಹೋಗುತ್ತಾನೆ. ಮುಕ್ತಾಬಾಯಿ  ಅಲ್ಲಿನ ಕದಳಿವನದಲ್ಲಿ  ಚಕ್ರಧರನನ್ನು ಭೇಟಿಯಾಗುತ್ತಾಳೆ. ಇದು ಗಮನಾರ್ಹ.

ಕರ್ನಾಟಕ-ಆಂಧ್ರಗಳಲ್ಲಿದ್ದ ಯೋಗಿನಿಯರ ಬಗ್ಗೆ, ದಖನಿ ಚಿತ್ರಕಲೆಯನ್ನು ಇಟ್ಟುಕೊಂಡು ಕೆ.ಎಲ್. ನಿಗಂ ಬರೆದ ಒಂದು ಅಪೂರ್ವ ಲೇಖನವಿದೆ. ಅದರಲ್ಲಿ ಮುಡಿಯನ್ನು ಕಟ್ಟಿ, ಕೈಯಲ್ಲಿ ನವಿಲುಗರಿ ಏಕತಾರಿ ತ್ರಿಶೂಲ ಹಿಡಿದ ಯೋಗಿನಿಯರ ಚಿತ್ರಗಳಿವೆ.  ಇವರು ನಾಥವನ್ನೂ ಒಳಗೊಂಡಂತೆ ವಿಭಿನ್ನ ಶೈವಪಂಥಗಳಲ್ಲಿ ಇದ್ದವರು.   ತಮ್ಮಕಾಲದ ಸಾರ್ವಜನಿಕ ಬದುಕಿನಲ್ಲಿ ಮಹತ್ವದ ಸ್ಥಾನ ಪಡೆದಿದ್ದವರು ಎಂದು ನಿಗಂ ವಿಶ್ಲೇಷಿಸುತ್ತಾರೆ. ಯೋಗಿನಿಯರು ಕಾಡಿನಲ್ಲಿದ್ದು ಹುಕ್ಕಾಸೇದುವ ಚಿತ್ರಗಳಿವೆ. ಅವರನ್ನು ನೋಡಲು ಪಲ್ಲಕ್ಕಿಯಲ್ಲಿ ರಾಜಮನೆತನದ ಮಹಿಳೆಯರು ಬಂದಿರುವ ಚಿತ್ರವಿದೆ.  ಒಂದರಲ್ಲಿ ಒಬ್ಬ ಯೋಗಿನಿಗೆ ಸಿಂಹವು ನಮಸ್ಕರಿಸುತ್ತಿದೆ. ಇದು ಅವರು ಅತೀಂದ್ರಿಯ ಶಕ್ತಿ ಪಡೆದಿದ್ದರ ಸಂಕೇತ. ಕರ್ನಾಟಕದಲ್ಲಿ ದೊಡ್ಡ  ಪ್ರಮಾಣದ ಯೋಗಿನಿಯರು ಇದ್ದರೆಂದೂ ಅವರಲ್ಲಿ ಸೂಫಿ ಪಂಥದವರೂ ಇದ್ದರೆಂದೂ ನಿಗಂ ವಾದಿಸುತ್ತಾರೆ.[2] ಶಿಕಾರಿಪುರ ಶಾಸನವು(೧೦೬೫) ಬಳ್ಳಿಗಾವೆಯಲ್ಲಿ ರೂಪಭಟ್ಟಯ್ಯನು ಜಯಂತಿಪ್ರಭ ಬೌದ್ಧವಿಹಾರವನ್ನು ಕಟ್ಟಿಸಿ, ತಾರಾಭಗವತಿಯ ಅರ್ಚನೆಗೂ ಯೋಗಿನಿಯರ ಆಹಾರ ಧಾನ್ಯಕ್ಕೂ ದತ್ತಿಬಿಟ್ಟದ್ದನ್ನು  ದಾಖಲಿಸಿದೆ. ಈ ಯೋಗಿನಿಯರು ವಜ್ರಯಾನ ಪಂಥದವರು.  ಇವರ ಜತೆ ಇತರ ಪಂಥಗಳ ಯೋಗಿನಿಯರೂ ಇದ್ದಿರುವ ಸಾಧ್ಯತೆಯಿದೆ. ಕರ್ನಾಟಕದಲ್ಲಿದ್ದ ಎಲ್ಲ  ತಾಂತ್ರಿಕ ಪಂಥಗಳಲ್ಲಿ ಯೋಗಿನಿಯರು ಇದ್ದರು. ಶ್ರೀಶೈಲ, ಸಿದ್ಧನಕೊಳ್ಳ(ಹುನಗುಂದ) ಹುಲಿಗಿ  (ಕೊಪ್ಪಳ) ಎಲ್ಲಮ್ಮನಗುಡ್ಡ(ಸವದತ್ತಿ) ಶಿರಸಂಗಿ(ರಾಮದುರ್ಗ) ಇವು ಶಾಕ್ತಪಂಥದ ಜಾಗಗಳಾಗಿದ್ದವು.

ತಾಂತ್ರಿಕ ಪಂಥಗಳ ಮುಖ್ಯ ಲಕ್ಷಣವೆಂದರೆ, ಸಾಧನೆಯಲ್ಲಿ ‘ಪಂಚಮಕಾರ’ಗಳಾದ  ಮಾಂಸ ಮದ್ಯ ಮತ್ಸ್ಯ ಮುದ್ರಾ ಮೈಥುನಗಳನ್ನು ಬಳಸುವುದು.  ಕೌಳರು ಈ ವಿಷಯದಲ್ಲಿ ಮತ್ತಷ್ಟು ಮುಂದೆ ಹೋಗುವುದುಂಟು. ಇದರ ವಿವರಗಳು ಕೌಳರ ದಾರ್ಶನಿಕ ಗ್ರಂಥ ‘ಕೌಲಜ್ಞಾನ ನಿರ್ಣಯ’ದಲ್ಲಿವೆ. ಆಹಾರದಲ್ಲಿ ಯಾವುದೇ ಭೇದವನ್ನು ಎಣಿಸಬಾರದು ಎಂಬ ಕೌಳರ ತತ್ವವು, ಮಾನವರಲ್ಲಿ ಜಾತಿಭೇದವನ್ನು ಎಣಿಸಬಾರದು ಎಂಬುದರ ವಿಸ್ತರಣೆಯಾಗಿದೆ.  ಕೌಳರ  ಸಾಧನೆಗೆ ಬಳಕೆಯಾಗುವ ಹೆಣ್ಣು ಪರಸತಿಯೂ ಆಗಬಹುದು. ಇಂತಹ ಅತಿಮಾರ್ಗಿ ಆಚರಣೆಗಳು ಸಮಕಾಲೀನರಾದ ಶರಣರಿಗೆ ಒಪ್ಪಿಗೆಯಾಗಲಿಲ್ಲ.  ಬಸವಣ್ಣನು ‘ಅಂಗದಿಚ್ಛೆಗೆ ಮದ್ಯಮಾಂಸವ ತಿಂಬರು, ಕಂಗಳಿಚ್ಛೆಗೆ ಪರವಧುವ ನೆರೆವರು, ಲಿಂಗ ಲಾಂಛನಧಾರಿಯಾದಲ್ಲಿ ಫಲವೇನು? ಲಿಂಗಪಥವ ತಪ್ಪಿ ನಡೆವವರು’  ಎಂದು ಟೀಕಿಸಿದ್ದು, ಇವರನ್ನೇ ಕುರಿತು ಎಂದು ತೋರುತ್ತದೆ.

ಶಾಕ್ತರ ತಂತ್ರಸಾಧನೆಗಳಲ್ಲಿ ಎರಡು ಆಮ್ನಾಯ ಅಥವಾ ಆಚಾರಗಳಿವೆ. ದಕ್ಷಿಣಾಚಾರದಲ್ಲಿ ಆಸನ, ಜಪ, ತಪ ಮುಂತಾದ ಸಾತ್ವಿಕ ಆಚಾರಗಳಿವೆ. ವಾಮಾಚಾರದಲ್ಲಿ ಪಂಚಮಕಾರಗಳಿವೆ. ಸ್ತ್ರೀಸಂಭೋಗವಿದೆ. ಸ್ತ್ರೀಯ ಪ್ರತಿ ಅಂಗವೂ ಒಂದು ಶಕ್ತಿಪೀಠವೆಂದು  ಭಾವಿಸಲಾಗುತ್ತದೆ. ಇಲ್ಲಿರುವ ಚಕ್ರಪೂಜೆಯು ಯೋನಿಪೂಜೆಗೆ ಸಂಬಂಧಪಟ್ಟಿದ್ದು. ಹಿಂಗ್ಲಜಾದೇವಿಯಿರುವ ಕರ್ಜಗಿಯ(ಹಾವೇರಿ) ನಾಥಮಠದಲ್ಲಿ ಈಗಲೂ ಚಕ್ರಪೂಜೆಯಿದೆ. ಒಬ್ಬ ಯೋಗಿನಿಯ ಸಮಾಧಿಯೂ ಇದೆ. ನಾಥರು ಭೈರವಚಕ್ರ ಎಂಬ ಚಕ್ರಪೂಜೆ ಮಾಡುತ್ತಿದ್ದರು.  ಚಕ್ರಸಾಧನೆಯಲ್ಲಿ ಜಾತಿಭೇದವಿಲ್ಲ. ಗಂಡು ಹೆಣ್ಣುಗಳ ಭೇದವೂ ಇಲ್ಲ. ಇದರಲ್ಲಿ ೮ ಅಥವಾ ೧೦ ಗಂಡುಹೆಣ್ಣುಗಳ ಜೋಡಿ ಭಾಗವಹಿಸಬಹುದು. ಚಕ್ರಪೂಜೆಯಲ್ಲಿ ಗಂಡು ಹೆಣ್ಣುಗಳು ಭೈರವ ಭೈರವಿಯರಾಗುತ್ತಾರೆ. ಭೈರವಿಯ ಪೂಜೆಯ ನಂತರ ಭೈರವ ತನ್ನನ್ನು ತಾನೇ ಪೂಜಿಸಿಕೊಳ್ಳುತ್ತಾನೆ. ಮದ್ಯ, ಮತ್ಸ್ಯ, ಮಾಂಸ ಮುಂತಾದ ವಸ್ತುಗಳ ಸೇವನೆಯಾಗು ತ್ತದೆ. ನಂತರ  ಭೈರವನು ಭೈರವಿಗೆ ನಮಸ್ಕರಿಸಿ, ತಾಯಿ, ಬ್ರಹ್ಮಾನಂದಕ್ಕೆ ಅವಕಾಶ ಮಾಡಿಕೊಡು ಎಂದು ಪ್ರಾರ್ಥಿಸುತ್ತಾನೆ. ಅನಂತರ ೯ ಬಗೆಯ ರತಿಕ್ರೀಡೆಗಳು ನಡೆಯುತ್ತವೆ. ಬ್ರಹ್ಮಶಿವನು ‘‘ಘಿಂಬ ಕುಡಿವ ಬಸನಮೆ ಗಡ ಕೌಳರ ದೀಕ್ಷಿತಂಗೆ’’ಎಂದು ಟೀಕಿಸುವುದು ಈ ಆಚರಣೆಗಳನ್ನೆ.  ಜನಪದರಲ್ಲಿ ಈಗಲೂ ಈ ಚಕ್ರಪೂಜೆಯ ಉಳಿಕೆ ರೂಪಗಳಿವೆ.[3]

ಈ ಬಗೆಯ ಆಚರಣೆಗಳು ಸಾಮಾನ್ಯವಾಗಿ ರಹಸ್ಯವಾಗಿ ನಡೆಯುತ್ತವೆ. ನಾನು ಕಂಡ ಒಂದು ಆಚರಣೆ, ತರೀಕೆರೆ ತಾಲೂಕಿನ ಒಂದು ಹಳ್ಳಿಯಲ್ಲಿ ನಡೆಯಿತು. ಈ ಆಚರಣೆಯನ್ನು  ‘ಕಾರ್ಯ’ ಎಂದು ಕರೆಯುತ್ತಾರೆ.  ‘ಕಾರ್ಯ’ಕ್ಕೆ ಸೇರುವ ಸದಸ್ಯರು ತಮ್ಮಲ್ಲೆ ಒಂದು ಸಂಘಟನೆ ಮಾಡಿಕೊಂಡಿದ್ದಾರೆ.  ಅದರಲ್ಲಿ ದಲಿತರು ಲಿಂಗಾಯತರು ದೇವಾಂಗದವರು ಕುರುಬರು ಇದ್ದಾರೆ. ಹೆಚ್ಚಿನವರು  ಸಣ್ಣರೈತರು ಹಾಗೂ ಸಂತೆ ವ್ಯಾಪಾರಿಗಳು.  ಇವರಲ್ಲಿ ಮಹಿಳೆಯರೂ ಇದ್ದಾರೆ. ಊರುಮಲಗುವ ನಡುರಾತ್ರಿ ತನಕ ಭಜನೆ ಹಾಡುಗಳನ್ನು ಹಾಡಲಾಗುತ್ತದೆ. ಭಜನೆಯಲ್ಲಿ ಕೀರ್ತನೆ, ಶರೀಫರ ಪದ, ಪಾಂಡುರಂಗನ ಹಾಡುಗಳಿದ್ದವು. ಕಾರ್ಯವನ್ನು ಏರ್ಪಡಿಸಿದ ಮನೆಯ ಯಜಮಾನನಿಗೆ ಬಂದವರೆಲ್ಲ ನಮಸ್ಕರಿಸಿ ದುಂಡಗೆ ಕೂರುತ್ತಾರೆ. ಎಲ್ಲರಿಗೂ ಮದ್ಯದ ಲೋಟಗಳನ್ನು ಹಂಚುತ್ತಾರೆ.  ಕುರಿ ಕೋಳಿಯ ಅಡುಗೆಯಾಗಿರುತ್ತದೆ. ಆದಿನ ಒಬ್ಬ ದೇವಾಂಗದ ವ್ಯಕ್ತಿಯನ್ನು ಗುರುವನ್ನಾಗಿ ಮಾಡಿದ್ದರು. ಎಲ್ಲರೂ ತಂತಮ್ಮ ಎಲೆಯಲ್ಲಿದ್ದ ಮಾಂಸದ ಚೂರನ್ನು ಪಕ್ಕದವರಿಗೆ ತಿನ್ನಿಸಿದರು. ಎಲ್ಲರೂ ಗುರುವಿನ ಎಲೆಗೆ ಹೋಗಿ ಅವನ ಎಲೆಯಿಂದ ಒಂದು ತುತ್ತು ತೆಗೆದು ಗುರುವಿಗೆ ತಿನ್ನಿಸಿದರು. ಗುರುವಿನ ಕೈಯಿಂದ ತಾವೂ ಒಂದು ತುತ್ತು ತಿಂದು ಬಂದರು. ನಂತರ ಅವರು ಮೈಥುನದಲ್ಲಿ ತೊಡಗುತ್ತಾರೆ ಎಂದು ಗೆಳೆಯ ರಾಜಪ್ಪ ದಳವಾಯಿ ಹೇಳಿದರು. ಈ ‘ಕಾರ್ಯ’ವು ಕಾಪಾಲಿಕ ಶಾಕ್ತಪಂಥಗಳ ತಾಂತ್ರಿಕ ಆಚರಣೆಗಳ ಯಾವುದೊ ಉಳಿಕೆ ರೂಪದಂತಿದೆ.

ಶ್ರೀಶೈಲದ ಗುಡಿಯ ಗೋಡೆಗಳಲ್ಲಿ ನಗ್ನಯತಿಗಳ ಹಾಗೂ  ತೆರೆದ ಯೋನಿಯ ಹೆಣ್ಣಿನ ಅಕ್ಕಪಕ್ಕದಲ್ಲಿ ಉದ್ರಿಕ್ತ ಶಿಶ್ನವುಳ್ಳ ಪುರುಷರ ಶಿಲ್ಪಗಳು ಇವೆ.   ಬಹುಶಃ ಇವು ಕೌಳ ಆಚರಣೆಯುಳ್ಳ ಯೋಗಿನಿ ಪಂಥದ ಕುರುಹುಗಳು.  ಶ್ರೀಶೈಲವು ಭಾರತದ ಪ್ರಸಿದ್ಧ ತಂತ್ರಪೀಠವಾಗಿ ಹೆಸರಾಗಿತ್ತು. ಮಲಪ್ರಭೆ ಹಾಗೂ ಕೃಷ್ಣಾ ನದಿಗಳು ಕೂಡುವ ಕೂಡಲ ಸಂಗಮವು, ಬಸವನು ಐಕ್ಯವಾದ ಸ್ಥಳವಾಗಿ ಖ್ಯಾತವಾಗಿದೆ. ಇದರ ಹೆಸರಲ್ಲಿರುವ ಕೂಡಲಸಂಗಮ ಎಂಬ ಶಬ್ದವು, ತಾಂತ್ರಿಕ ಪಂಥಗಳ ಆಚರಣೆಗಳನ್ನು ಕೂಡ ಸಂಕೇತಿಸುತ್ತಿರ ಬಹುದು. ಇಲ್ಲಿನ ಸಂಗಮನಾಥನ ಗುಡಿಯಲ್ಲಿ ನರ್ತಿಸುವ ಯೋಗಿಗಳ ಚಿತ್ರವಿದೆ.  ಗುಡಿಯ ಗೋಡೆಗಳಲ್ಲಿ ಒಂದು ಕಡೆ ನಗ್ನರಾದ ಭೈರವ-ಭೈರವಿಯರ ಕೆತ್ತನೆಯಿದೆ. ಇನ್ನೊಂದೆಡೆ ಸಂಭೋಗದಲ್ಲಿ ಗಂಡನ್ನು ಕೆಳಗೆ ಹಾಕಿರುವ ತಾನು ಮೇಲಿರುವ ಹೆಣ್ಣಿನ ಶಿಲ್ಪವಿದೆ. ನಗ್ನಭೈರವಿಯೊಬ್ಬಳ ಮೊಳಕಾಲಿಗೆ ಸರ್ಪಬಂಧವಿದೆ. ಅವಳ ಯೋನಿ ಎದ್ದು ಕಾಣುವಂತೆ ಕೆತ್ತಿದೆ. ಪ್ರವೇಶದ್ವಾರದ ಕಟಾಂಜನದಲ್ಲಿ ಕೆಳಗೆ ಮಲಗಿ ಉದ್ರಿಕ್ತ ಶಿಶ್ನವುಳ್ಳ ಪುರುಷನ ಮೇಲೆ ಕೂತಿರುವ ತೆರೆದ ಯೋನಿಯ ಹೆಣ್ಣಿನ ಶಿಲ್ಪವಿದೆ. ಇಲ್ಲಿ ಸುತ್ತಮುತ್ತ ಯೋಗಿಗಳ ಸಮಾಧಿಗಳೂ ಈ ಗುಡಿಯು ತಾಂತ್ರಿಕ ಪಂಥವೊಂದರ ಕೇಂದ್ರವಾಗಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತವೆ. ಎಂ. ಎಂ. ಕಲಬುರ್ಗಿಯವರೂ ಇದನ್ನು ಚರ್ಚಿಸುತ್ತಾರೆ.[4]  ಸಂಗಮದ ಜತೆ ಸಂಬಂಧ ಪಡೆದ ಬಸವಣ್ಣ ಸಹಜವಾಗಿ ಇವುಗಳನ್ನು ವಿಮರ್ಶಿಸಿದನು. ಪಂಚಮಕಾರವಾದಿಗಳಾದ ಕೌಳರನ್ನು ಚೆನ್ನಬಸವಣ್ಣ, ನಿಜಗುಣ ಶಿವಯೋಗಿ ಮೊದಲಾದವರು ಮುಂದೆ ನಿಂದಿಸಿದರು.

ಶ್ರೀಶೈಲವು ಕೌಳರ ಪ್ರಖ್ಯಾತ ಕೇಂದ್ರವಾಗಿತ್ತು. ಕೌಳಮಾರ್ಗದಲ್ಲಿ ಪೂರ್ವಕೌಳರು ಯೋನಿಯ ಚಿತ್ರ ಅಥವಾ ಶಿಲ್ಪವನ್ನು ಪೂಜಿಸುತ್ತಾರೆ. ಉತ್ತರ ಕೌಳರು ಸದೇಹ ಯೋನಿಯ ಪೂಜಕರು. ವಾಮಾಚಾರಿಗಳು. ವಿದ್ವಾಂಸರ ಪ್ರಕಾರ ಕರ್ನಾಟಕದಲ್ಲಿ ಇದ್ದವರು ಉತ್ತರ ಕೌಳರು.[5]  ಇದು ನಿಜವಾದರೆ, ಕರ್ನಾಟಕದಲ್ಲಿ ಇಷ್ಟೊಂದು  ಲಜ್ಜಾಗೌರಿಯರ ವಿಗ್ರಹಗಳು ಯಾಕೆ ಸಿಗುತ್ತವೆ ಮತ್ತು ಅವು ಯಾವ ಕೌಳರಿಗೆ ಸೇರಿದವು ಎಂಬುದು ಪ್ರಶ್ನೆಯಾಗಿಯೆ ಉಳಿಯುತ್ತದೆ. ಭೈರವಿ ಎನ್ನುವುದು ಯೋಗಿನಿಯರ ಇನ್ನೊಂದು ಹೆಸರಾಗಿತ್ತಷ್ಟೆ. ಐಹೊಳೆ ಬಳಿಯ ಸಿದ್ಧನಕೊಳ್ಳ ಹಾಗೂ ಹುಲಿಗೆಮ್ಮನ ಕೊಳ್ಳಗಳಲ್ಲಿ ಲಜ್ಜಾಗೌರಿ ಹಾಗೂ ಭೈರವಿ ಯರ ವಿಗ್ರಹಗಳಿವೆ. ಈಗಲೂ ದುರ್ಗಮವಾಗಿರುವ ಈ ಕೊಳ್ಳಗಳು ಇಂತಹ ಪಂಥಗಳ ರಹಸ್ಯ ಆಚರಣೆಯ ತಾಣಗಳಾಗಿ ಇದ್ದಿರಬಹುದು. ಇಲ್ಲಿಗೆ ತುಸು ದೂರದಲ್ಲಿ ಎಲ್ಲಮ್ಮನ ಕೊಳ್ಳವೂ ಇದೆ. ಕರ್ನಾಟಕದ ಅಪೂರ್ವವಾದ ಲಜ್ಜಾಗೌರಿಯ ವಿಗ್ರಹವು ಬದಾಮಿಯಲ್ಲಿದೆ. ಬದಾಮಿ, ಬನಶಂಕರಿ, ಐಹೊಳೆ, ಪಟ್ಟದಕಲ್ಲು, ಹೂಲಿ, ರಾಮದುರ್ಗ, ಸವದತ್ತಿ ಮುಂತಾದ ಭಾಗದಲ್ಲಿರುವ ಬೆಟ್ಟ ಕೊಳ್ಳ ಗುಹೆಗಳನ್ನು ತಾಂತ್ರಿಕ ಪಂಥಗಳ ನೆಲೆಯಿಂದ ಶೋಧಿಸಿ ತಿಳಿಯುವ ಕೆಲಸವನ್ನು ಮಾಡಬೇಕಿದೆ. ಬನಶಂಕರಿ, ಸಿದ್ಧನಕೊಳ್ಳ, ಎಲ್ಲಮ್ಮನಕೊಳ್ಳ, ಹುಲಿಗೆಮ್ಮನಕೊಳ್ಳ, ಸೂರವ್ವನ ಕೊಳ್ಳಗಳ ಸಾಲಿನಲ್ಲಿ ಮಹಾಕೂಟ ಬರುತ್ತದೆ. ಮಹಾ ಕೂಟವು ತಂತ್ರಪಂಥಗಳಲ್ಲಿ ಒಂದು ಪರಿಭಾಷೆ ಕೂಡ. ನಾಥಮಠವಿರುವ ಚಂದ್ರಗುತ್ತಿಯೂ ಒಂದು ಕೊಳ್ಳವಾಗಿದೆ. ಇಲ್ಲಿರುವ ಶೂಲದ ಬೀರಪ್ಪನು ಸಿಕ್ಕಸಿಕ್ಕ ಮಹಿಳೆಯರನ್ನು ಪೀಡಿಸುತ್ತಿದ್ದ ಅತಿಕಾಮಿ. ಇದಕ್ಕಾಗಿಯೇ ಅವನನ್ನು ಶೂಲಕ್ಕೆ ಏರಿಸಲಾಯಿತು ಎಂಬ ಕತೆಯಿದೆ. ಈ ಕಥೆಯನ್ನು ಇಲ್ಲಿರುವ ಬೆತ್ತಲೆಸೇವೆಯ ಆಚರಣೆಯ ಜತೆಯಿಟ್ಟು ನೋಡಬೇಕು. ಇವು ತಾಂತ್ರಿಕ ಪಂಥವೊಂದು ಇದ್ದ ಕುರುಹುಗಳಿರಬಹುದು. ಈಗಲೂ ಚಂದ್ರಗುತ್ತೆಮ್ಮನದು ಎಂದು ಒಂದು ಮೂರ್ತಿಯಿಲ್ಲ. ಕಾಮಾಖ್ಯದಂತೆ ಇಲ್ಲೂ ಹುಟ್ಟು ಬಂಡೆಯ ಸೀಳು. ಅದಕ್ಕೇ ಪೂಜೆ.

ಕೊಲ್ಲೂರು(ಕುಂದಾಪುರ), ಕೋಲಾರ, ಕೊಲ್ಲಾಪುರ ಮುಂತಾದ ಶಕ್ತಿದೇವತೆಗಳ ಜಾಗ ಗಳಿಗೂ ಕೌಳಪಂಥಕ್ಕೂ ಸಂಬಂಧವಿದೆ. ಶಂಕರರು ಕೊಲ್ಲೂರಿನಲ್ಲಿ ಚಕ್ರಪೂಜೆ ಆರಂಭಿಸಿದರು ಎನ್ನಲಾಗುತ್ತದೆ.  ಕೊಲ್ಲೂರಿಗೆ ಸಮೀಪದಲ್ಲಿ ಚಕ್ರಾ ಎಂಬ ನದಿಯಿದೆ.  ನಾಥರ ಕದ್ರಿ-ತ್ರ್ಯಂಬಕ ಪಥದಲ್ಲಿ ಬರುವ ಕೊಡಚಾದ್ರಿಯಿದೆ. ಕೊಡಚಾದ್ರಿಯು ಪ್ರಾಚೀನ ಭೈರವಾರಾಧನೆಯೊಜಾಗ. ಈ ವಿವರಗಳ ಜಾಡು ಹಿಡಿದು ಹೋದರೆ, ಕೌಳ, ಭೈರವಾರಾಧನೆ ಹಾಗೂ ನಾಥಪಂಥಗಳ ಒಳನಂಟಿನ ಸುಳಿವು ಸಿಗುತ್ತದೆ. ಕೋಲಾರದ ಕೋಲಾರದಮ್ಮನ ಗುಡಿಯಲ್ಲೂ ಅಪರೂಪದ ಭೈರವ ವಿಗ್ರಹವಿದೆ. ಇಲ್ಲಿಗೆ ಸಮೀಪದ ಸೀತಿಬೆಟ್ಟವು ಕಾಪಾಲಿಕ ನಾಥರ  ಕೇಂದ್ರ. ಕನ್ನಡ ಪಠ್ಯಗಳ ಪ್ರಕಾರ ಕೊಲ್ಲಾಪುರವು ಗೋರಖನಾಥನಿದ್ದ ಊರು ಕೂಡ. ಇಲ್ಲಿ ಗೋರಖನಾಥ ಮಠವಿದೆ. ನಾಥರ ಶಾಕ್ತರ ಅಥವಾ ಕೌಳರಮೂಲ ಗಳಿಗೆ ಕುರುಹೆಂದರೆ, ಅವರ ಮಠಗಳಲ್ಲಿರುವ ಶಕ್ತಿದೇವತೆಗಳು. ಚುಂಚನಗಿರಿಯಲ್ಲಿ ಕಂಬದಮ್ಮ. ಲುಂಕೆಮಲೆಯಲ್ಲಿ ತುಪ್ಪದಮ್ಮ. ಚಂದ್ರಗುತ್ತಿಯಲ್ಲಿ ಗುತ್ತೆಮ್ಮ. ಕದ್ರಿಯಲ್ಲಿ ಮರುಳು ಧೂಮಾವತಿ. ಸವದತ್ತಿಯ ಏಕನಾಥ ಜೋಗನಾಥರ ಆವರಣದಲ್ಲಿರುವ ಎಲ್ಲಮ್ಮ. ಎಲ್ಲಮ್ಮನ ಪಂಥದಲ್ಲಿ ಜೋಗಪ್ಪಗಳು, ಜೋಗ ಹೇಳುವುದು, ಜೋಗಕ್ಕೆ ಹೋಗುವುದು, ಜೋಗುಳದ ಬಾವಿ, ಇವು ಯೌಗಿಕ ಪರಿಭಾಷೆಯಲ್ಲಿವೆ. ನಾಥಪಂಥೀಯ ಜೋಗಿಗಳೇ ಜೋಗಪ್ಪಗಳಾಗಿ ರೂಪಾಂತರ ಪಡೆದಿರಬಹುದು ಎಂಬ ಶಂಕೆಯಿದೆ. ನಾಥ ಪಂಥದ ಲಾಂಛನವಾದ ತ್ರಿಶೂಲವು ಶಕ್ತಿಯ ಸಂಕೇತ. ಈಗಲೂ ಕರ್ನಾಟಕದಲ್ಲಿ ಕಾಪಾಲಿಕರು ಏಕಕಾಲದಲ್ಲಿ ಭೈರವ ಹಾಗೂ ಶಕ್ತಿದೇವತೆಗಳ ಆರಾಧಕು. ಕೋಟದ ಅಮೃತೇಶ್ವರಿ ದೇಗುಲದ ಅರ್ಚಕರು ಜೋಗಿಗಳು. ಚಂದ್ರಗುತ್ತಿಯ ಕಿನ್ನರಿ ಜೋಗಿಗಳು ಗುತ್ತೆಮ್ಮನನ್ನೂ ಭೈರವನನ್ನೂ ಒಟ್ಟಿಗೆ ಬೆತ್ತದ ಪುಟ್ಟಿಯಲ್ಲಿಟ್ಟು ಪೂಜಿಸುತ್ತಾರೆ. ಮೋಕಳಿಯ(ಅರಕಲಗೂಡು) ಕಾಪಾಲಿಕರು ಕೂಡ ಭೈರವನ ಜತೆಗೆ ಪೆಟ್ಟಿಗೆಯಲ್ಲಿ ಲಕ್ಷ್ಮಿದೇವಿಯನ್ನು ಪೂಜಿಸುತ್ತಾರೆ. ಹಿರಿಯೂರು, ಹುಳಿಯಾರು, ಶಿರಾ ಹಾಗೂ ಬೆಂಗಳೂರಿನ ಕಬ್ಬನ್‌ಪೇಟೆಯಲ್ಲಿ, ಈಗಲೂ   ಕಾಪಾಲಿಕರು ದುರ್ಗಮ್ಮನ ಅರ್ಚಕರು.  ಕದ್ರಿಯ ಜೋಗಿ  ಆನಂದನಾಥರು ರಕ್ತೇಶ್ವರಿ ಪೂಜಿಸುವ ಕುಟುಂಬದವರು. ಇವೆಲ್ಲ ಶಕ್ತಿ ಹಾಗೂ ಭೈರವರ ಏಕೀಕರಣದ ಸಂಕೇತಗಳಾಗಿವೆ.

ಕರ್ನಾಟಕದ ನಾಥಪಂಥೀಯ ಶಕ್ತಿದೇವತೆಗಳ ಜೀವನಕ್ಕೆ ಸಂಬಂಧಿಸಿದ ಮಿತ್‌ಗಳಿಗೂ ಯೋಗಿನಿಯರ ಸಾಮಾಜಿಕ ಹಿನ್ನೆಲೆಗೂ ಸಂಬಂಧ ಇದ್ದಂತಿದೆ. ಮಂಗಳಾದೇವಿಯು ಮಚೇಂದ್ರನ ಮೋಹಕ್ಕೆ ಒಳಗಾಗಿ ದೇಶಮನೆ ಬಿಟ್ಟು ಬಂದವಳು. ಭಾರತದಾದ್ಯಂತ ಇರುವ ಜೋಗಿಯ ಹಾಡುಗಳಲ್ಲಿ ಮನೆ ಗಂಡ ಹಾಗೂ ಮಕ್ಕಳನ್ನು ಬಿಟ್ಟು ಜೋಗಿಯನ್ನು ಹಿಂಬಾಲಿಸಿದ ಹೆಣ್ಣಿನ ಚಿತ್ರಗಳಿವೆ. ರೇಣುಕೆ ಎಲ್ಲಮ್ಮ, ಪರಪುರುಷನನ್ನು ಮೋಹಿಸಿದ ಕಾರಣಕ್ಕಾಗಿ ಜಮದಗ್ನಿಯಿಂದ ಬಹಿಷ್ಕೃತೆಯಾದವಳು. ಮಾತ್ರವಲ್ಲ, ಮಗನಿಂದ ಈ ಕಾರಣಕ್ಕಾಗಿ ಕೊಲ್ಲಲ್ಪಟ್ಟವಳು. ಚಂದ್ರಗುತ್ತಿಯ ಗುತ್ಯಮ್ಮನು ತನ್ನನ್ನು ಅಟ್ಟಿಸಿಕೊಂಡು ಬಂದ ಮಗನಿಂದ ಅಡಗಿಕೊಳ್ಳಲು ಓಡಿಬಂದು ಗುಹೆ ಹೊಕ್ಕವಳು. ಈ ಕಥೆಗಳು ಮಧ್ಯಕಾಲೀನ ಕರ್ನಾಟಕದ ಯೋಗಿನಿಯರ ಕಥನಗಳೂ ಆಗಿವೆಯೇನು? ಯೋಗಿನಿ ಆಗುತ್ತಿದ್ದವರಲ್ಲಿ ಬಹಳ ಜನ ಹೀಗೆ ಕುಟುಂಬಗಳಿಂದ ಹೊರಹಾಕಲ್ಪಟ್ಟವರು. ಜೀವನ ದಲ್ಲಿ ನಿರಾಶೆಗೊಂಡವರು. ಕೆಲವೊಮ್ಮೆ ವಿಧವೆಯರು. ವಿಧವೆಗೆ ವಿಯೋಗಿನಿ ಎಂದೇ ಕರೆಯಲಾಗುತ್ತದೆ ಎಂಬುದು ಮಾರ್ಮಿಕವಾಗಿದೆ. ಬ್ರಿಟಿಶರು ಮಾಡುತ್ತಿದ್ದ ಜನಗಣತಿಯಲ್ಲಿ ಬಹಳಷ್ಟು ಯೋಗಿನಿಯರು ವಿಧವೆಯರು.[6] ನಾಥ ಹೆಂಗಸರು ವಿಧವೆಯರಿದ್ದ ಜೋಗಿಣಿಯರ ಮಠವೊಂದು ಚುಂಚನಗಿರಿ ಬೆಟ್ಟದ ಹಿಂದೆ ಇತ್ತೆಂದೂ, ಅವರು ಬೆಳಿಗ್ಗೆ ಮಠಕ್ಕೆ ಬಂದು ಸಂಜೆಯ ತನಕ ಅಡಿಗೆಗೆ ಬೇಕಾದ ದವಸಧಾನ್ಯ ಚೊಕ್ಕಮಾಡಿ ಕೊಡುವ ಕೆಲಸ ಮಾಡಿ ಹೋಗುತ್ತಿದ್ದರೆಂದೂ ಮಾಹಿತಿಗಳಿವೆ.[7] ಆಧುನಿಕ ಕಾಲದ ಯೋಗಿನಿ ಪಂಥವಾಗಿರುವ ಬ್ರಹ್ಮಕುಮಾರಿಯನ್ನು ಈ ದೃಷ್ಟಿಯಿಂದ ಅರ್ಥ ಮಾಡಿಕೊಳ್ಳಬೇಕಾಗಿದೆ. ನಮ್ಮ ಎಷ್ಟೊ ಪಂಥಗಳ ಬೇರುಗಳನ್ನು ದಾರ್ಶನಿಕ ಪಠ್ಯಗಳಲ್ಲಿ ಮಾತ್ರವಲ್ಲ,  ನಮ್ಮ ಸಾಮಾಜಿಕ ವಿಘಟನೆಯಲ್ಲಿ ಹುಡುಕಬೇಕು ಅನಿಸುತ್ತದೆ.

ನಾಥಮಠಗಳಲ್ಲಿ ಯೋಗಿನಿಯರಿಲ್ಲ. ಕದ್ರಿಬೆಟ್ಟದಲ್ಲಿ ಒಬ್ಬ ಯೋಗಿನಿಯ ಸಮಾಧಿಯಿದ್ದು, ಆಕೆಯ ಬಗ್ಗೆ ಮಾಹಿತಿ ಇಲ್ಲವಾಗಿದೆ.  ನಾಥ ವಿದ್ವಾಂಸನಾದ ಬ್ರಿಗ್ಸನು ಸರಸ್ವತಿ(೬೦) ಎಂಬ ಒಬ್ಬ ಯೋಗಿನಿಯ ಚಿತ್ರವನ್ನು ಕೊಡುತ್ತಾ, ಅವರ ಸಂಖ್ಯೆ ಕ್ಷೀಣಿಸುತ್ತಿತ್ತು ಎಂದೂ ಟಿಪ್ಪಣಿ ಮಾಡುತ್ತಾನೆ. ಮುಕುಂದೂರು ಸ್ವಾಮಿಯ ಜತೆಯಲ್ಲಿದ್ದು ಬಾಗೂರಿನಲ್ಲಿ ದೇಹತ್ಯಾಗ ಮಾಡಿದ ಕಣ್ಣಮ್ಮ ಎಂಬ ಯೋಗಿನಿಯ ಬಗ್ಗೆ ಬೆಳಗೆರೆ ಕೃಷ್ಣಶಾಸ್ತ್ರಿಯವರು ಬರೆಯುತ್ತಾರೆ.  ನಾನು ಕಂಡ ಯೋಗಿನಿಯರು ನಾಲ್ವರು. ೧. ನಾಸಿಕದ ಕಾಲಾರಾಮ ಮಂದಿರದಲ್ಲಿ ಬಿಡಾರ ಮಾಡಿದ್ದ ನಾಥರ ಜತೆ ಇದ್ದ (೨೦೦೩) ಒಬ್ಬಾಕೆ. ೨.  ಕುಣಿಗಲ್ಲು ಹೇಮಗಿರಿ ಬೆಟ್ಟದಲ್ಲಿದ್ದ ಕೆಂಪಮ್ಮಾಜಿ  ೩. ತುರುವನಹಳ್ಳಿಯ (ಕಡೂರು)  ಭೈರವಸ್ಥಾನದಲ್ಲಿ ಇದ್ದ  ಕಮಲಾನಂದೆ ಹಾಗೂ  ೪. ಕೊಲ್ಹಾಪುರದ ಗೋರಖನಾಥ ಮಠದಲ್ಲಿದ್ದ ಸೋಹನ್ ಭಾರತಿ(೩೦). ‘ನನ್ನ  ಗುರುಗಳಾದ ಲೆಹರನಾಥರು ಕೆಲಕಾಲ ನೋಡಿ ನನಗೆ ಕಾನ್‌ಫಟಾ ದೀಕ್ಷೆ ಕೊಡುವವರಿದ್ದಾರೆ’  ಎಂದು ಸೋಹನ್ ಭಾರತಿ ತಿಳಿಸಿದರು.

ಸಿದ್ಧ ಶಕ್ತಿಯರ ಸಂಘರ್ಷಗಳು

ಕುತೂಹಲಕರವೆಂದರೆ, ಶಕ್ತಿಯಿಲ್ಲದೆ ಶಿವನಿಲ್ಲ, ಅವನು ಶಕ್ತಿಯ ಅಧೀನದಲ್ಲಿದ್ದಾನೆ ಎಂಬ ತತ್ವವನ್ನು ಶಾಕ್ತಪಂಥಗಳು ಹೇಳುತ್ತವೆ. ಶಿವನು ಪಾರ್ವತಿಗೆ ಯೋಗರಹಸ್ಯವನ್ನು ಕಡಲಿನ ಮಧ್ಯೆ ಏಕಾಂತದಲ್ಲಿ ಕರೆದುಕೊಂಡು ಹೋಗಿ ಹೇಳುವಲ್ಲಿ, ಯೋಗವಿದ್ಯೆಗೆ ಸ್ತ್ರೀಯರೂ ಅರ್ಹರು ಎಂಬ ಅರ್ಥವಿರಬಹುದು. ಆದರೂ ಈ ರಹಸ್ಯವಿದ್ಯೆಯನ್ನು ಪುರುಷನಾದ ಶಿವ ಹೇಳುತ್ತಾನೆ ಎನ್ನುವುದು ನಾಥಪಂಥದ ಲಿಂಗ(ಜೆಂಡರ್) ಆಯಾಮವನ್ನು ತೋರುತ್ತದೆ. ನಾಥಪಂಥದಲ್ಲಿ ಇಂದಿಗೂ ಮಹಿಳೆಯರಿಲ್ಲ. ಇದ್ದರೂ ಅವರಿಗೆ ಮಹತ್ವದ ಪಾತ್ರವಿಲ್ಲ. ಯೋಗಕ್ರಿಯೆಯಾದರೂ ಮೂಲತಃ ಪುರುಷರಿಗೆ ಉದ್ದೇಶಿಸಿ ರಚನೆಯಾದ ಮನೋದೈಹಿಕ ಶಾಸ್ತ್ರ. ಎಷ್ಟೇ ಶಾಕ್ತ ಸಂಬಂಧವಿದ್ದರೂ ನಾಥರು ವಿರಕ್ತರು. ಸನ್ಯಾಸಿಗಳು. ಈಗಲೂ ನಾಥದೀಕ್ಷೆ ಗಂಡುಮಕ್ಕಳಿಗೆ ಮಾತ್ರವಷ್ಟೆ. ಈ ಹಿನ್ನೆಲೆಯಲ್ಲಿ ಜೋಗಿಯನ್ನು ಪುರುಷ ಎನ್ನುವುದು ಅರ್ಥಪೂರ್ಣವಾಗಿದೆ.  ತಾಂತ್ರಿಕ ಪಂಥಗಳಲ್ಲಿ ಯೋನಿಪೂಜೆ ಇದ್ದರೂ ಅವಳ ಪಾತ್ರವು ಪುರುಷ ಸಾಧಕರ ಉಪಕರಣವಾಗಿರುವುದೇ ಹೆಚ್ಚು. ತಂತ್ರಪಂಥಗಳಲ್ಲಿ ಸಾಧನೆಗೆ  ಸಾಧ್ಯವಾದಷ್ಟೂ ಕೆಳಜಾತಿಯ ಮಹಿಳೆಯರನ್ನು ಬಳಸಬೇಕು ಎಂಬ ಮಾತಿದೆ.  (‘ಚಾಂಡಾಲ ಕುಲಸಂಭೂತಾಂ ಡೊಂಬಿಕಾಂ ವಾ ವಿಶೇಷತಃ ಜುಗುಪ್ಸಿತ ಕುಲೋತ್ಪಾನ್ನಾಂ ಸೇವಯನ್ ಸಿದ್ಧಮಾಪ್ನುಯಾತ್’-ಗುಹ್ಯಸಮಾಜ ತಂತ್ರ) ಹಠಯೋಗದ ನಾಡಿಗಳಿಗೆ ವಜ್ರಯಾನದಲ್ಲಿ ಡೊಂಬಿನಿ ರಜಕಿ ಚಾಂಡಾಲಿ ಎಂಬ ಹೆಸರುಗಳಿದ್ದು,  ಇವು ಕೂಡ ಜಾತಿ ಸೂಚಕಗಳಾಗಿವೆ. ತಾಂತ್ರಿಕ ಪಂಥಗಳು ಎಷ್ಟೇ ಜಾತ್ಯತೀತ ಎಂದರೂ ಮಹಿಳೆಯ ಮಟ್ಟಿಗೆ ತಾರತಮ್ಯ ಬಿಡಲಿಲ್ಲ. ಸ್ತ್ರೀಯು ದಾರ್ಶನಿಕ ಚರ್ಚೆಯಲ್ಲಿ ಪ್ರಧಾನಳಾದರೂ, ಆಚರಣೆಯಲ್ಲಿ ಪುರುಷಾಧೀನೆ. ಸಿದ್ಧಸಾಧಕರು ಬಿಂದು ಅಥವಾ ವೀರ್ಯವು ಅಧಃಪತನವಾಗದಂತೆ, ಊರ್ಧ್ವಮುಖಿಯಾಗಿ ಏರಿಸುವುದರಿಂದ ಸಿಗುವ ಸಹಜಾನಂದವನ್ನು ಪಡೆಯುವ ಸಾಧನೆಯಿದೆಯಷ್ಟೆ. ಇದರಲ್ಲಿ ಇನ್ನೊಂದಿದೆ. ಅದು ಯೋನಿದ್ರವವನ್ನು ಹೀರಿಕೊಳ್ಳುವ ಸಾಧನೆ. ಈ ಸಾಧನೆಗಳು ಹೆಣ್ಣನ್ನು  ಮಾಧ್ಯಮ ಇಲ್ಲವೆ ಎದುರಾಳಿಯನ್ನಾಗಿ ಅಲ್ಲದೆ ಮತ್ತೇನು ಭಾವಿಸುತ್ತವೆ?

ಲೌಕಿಕವಾಗಿ ಸಂಸಾರವನ್ನೂ ಮಹಿಳೆಯನ್ನೂ ಅನುಮಾನದಿಂದ ನೋಡುವ ವಿರಕ್ತಪಂಥಗಳ ಎಲ್ಲ ಲಕ್ಷಣಗಳು ನಾಥಪಂಥದಲ್ಲಿವೆ. ಆದರದು ದಾರ್ಶನಿಕವಾಗಿ ಶಕ್ತಿಯ ಅಸ್ತಿತ್ವವನ್ನು ನಂಬುತ್ತದೆ ಮತ್ತು ಆಚರಣೆಯಲ್ಲಿ ಅದನ್ನು ಆರಾಧಿಸುತ್ತದೆ. ಇದೊಂದು ವೈರುಧ್ಯ. ಮಂಟೆಸ್ವಾಮಿಯನ್ನೂ ಒಳಗೊಂಡಂತೆ, ಕರ್ನಾಟಕದ ಅನೇಕ ಸಿದ್ಧರ ಕಥನಗಳಲ್ಲಿ ಈ ವೈರುಧ್ಯವಿದೆ. ಹೆಣ್ಣಿನ ಹೊಟ್ಟೆಯಲ್ಲಿ ಹುಟ್ಟುವ ಗಂಡುಮಗು ಶಿಷ್ಯನಾಗಿ ಬೇಕು. ಆದರೆ ಹೆಣ್ಣಿನ ಸಹವಾಸ ಬೇಡ. ಸಂಸಾರವಾದಕ್ಕೂ ವಿರಕ್ತವಾದಕ್ಕೂ ಪರಸ್ಪರ ಆಕರ್ಷಣೆಯೂ ವಿರೋಧವೂ ಮೊದಲಿಂದಲೂ ಇದೆ. ಬಹುಶಃ ವಿರಕ್ತ ಪಂಥಗಳಿಗೆ ತಮ್ಮ ಮಕ್ಕಳನ್ನು ಕೊಡಲು ಲೌಕಿಕರು ತೋರುತ್ತಿದ್ದ ಹಿಂಜರಿಕೆ ಮತ್ತು ವಿರೋಧಗಳು, ವಿಚಿತ್ರವಾದ ಸಂಘರ್ಷಗಳನ್ನು  ಹುಟ್ಟಿಸಿವೆ. ಕೊನೆಗೆ ಜೋಗಿದೀಕ್ಷೆಯನ್ನು ಮನೆಯ ಹಿರಿಮಗ ಪಡೆದರೆ ಸಾಕು, ದೀಕ್ಷೆಯ ನಂತರ ಮದುವೆಯಾಗಬಹುದು ಎಂಬ ಸಂಧಾನಗಳು ಏರ್ಪಟ್ಟವು.

ಕರ್ನಾಟಕದಲ್ಲಿ ಶಾಕ್ತದೈವಗಳಿರುವ ಕಡೆಯಲ್ಲೆಲ್ಲ ಕಡ್ಡಾಯವಾಗಿ ಸಿದ್ಧರ ಜತೆ ಸಂಘರ್ಷಗೈದ ಕಥನಗಳಿವೆ. ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯು ವಡ್ನಳ್ಳಿ ಮಾರಮ್ಮನ ಗುಡಿಯಲ್ಲಿ  ತನ್ನ ಬೆತ್ತ ಜೋಳಿಗೆಗಳನ್ನಿಟ್ಟು ಅವಳಿಗೆ  ಜಾಗವಿಲ್ಲದಂತೆ ಮಾಡುತ್ತಾನೆ. ಮಂಟೆಸ್ವಾಮಿಯು ಯೋಗಸಮಾಧಿಯಲ್ಲಿರುವ  ಶಿಷ್ಯನಾದ ಸಿದ್ದಪ್ಪಾಜಿಗೆ ಏಳುನೂರ ಜನ ಮಾರೀರಿಗೆ ನಿನ್ನ ಗಂಡನಾಗಿ ಮಾಡತೀನಿ ಎಂದು ಕರೆಯುತ್ತಾನೆ. ಮುಂದೆ ಅವನನ್ನು ಕಳಿಸಿ ಹುಲಗೂರಿನ ಮಾರಿಯರನ್ನು ಶಿಕ್ಷಿಸುತ್ತಾನೆ. ಇವನ್ನು ಹೇಗೆ ಅರ್ಥಮಾಡಿಕೊಳ್ಳುವುದು? ಯೋಗಿನಿ- ಸಿದ್ಧರ ಸಂಘರ್ಷಗಳ ಹಿಂದೆ ಹೆಣ್ಣಿನ ಬಗೆಗಿನ ಪುರುಷರ ಆತಂಕವೂ  ಇದೆಯೇನು?

ಸ್ವಾಮಿ ವಿಮಲಾನಂದ ಎಂಬ ಯೋಗಿಯ ಜೀವನಾಧರಿತ ಪುಸ್ತಕದಲ್ಲಿ ಒಂದು ಕುತೂಹಲಕರ ಸಂಗತಿಯಿದೆ. ಪಾದರಸವನ್ನು ಹಾಲಿನಲ್ಲಿ ಹಾಕಿ ಕುಡಿಯುವುದರಿಂದ ಮುಪ್ಪು ಬರುವುದಿಲ್ಲ,  ಅಪಾರವಾದ ಲೈಂಗಿಕ ಶಕ್ತಿ ಬರುತ್ತದೆ ಎಂದು ಪ್ರತಿಪಾದಿಸುವ  ಒಬ್ಬ ಭೈರವನು, ಭೈರವಿ ಇರುವ ಜಾಗಕ್ಕೆ ಹೋಗಲು ನಿರಾಕರಿಸುತ್ತಾನೆ. ಇದಕ್ಕೆ ಅವನು ಕೊಡುವ ಕಾರಣ, ಆಕೆ  ಹಾಲಿನಲ್ಲಿ ಪಾದರಸ ಹಾಕಿ, ಯೌವನವನ್ನು ಮರುಕೊಳಿಸಿ, ಎಂದೂ ಸ್ಖಲನವಾಗದಂತಹ ಲಿಂಗವನ್ನಾಗಿ ಮಾಡಿ, ನಿರಂತರ ಸಂಭೋಗದಲ್ಲಿ ಸಿಲುಕಿಸಿ ಬಿಡುತ್ತಾಳೆ ಎಂಬುದು.[8] ಮಹಾರಾಷ್ಟ್ರದ ಪ್ರಸಿದ್ಧ ಹಠಯೋಗಿ ಚಾಂಗದೇವನು ತನಗೆ ಸವಾಲು ಹಾಕಿದ ಯೋಗಿನಿಯನ್ನು ಭೇಟಿಮಾಡಲು ಬೆದರಿ ದೇಹತ್ಯಾಗ ಮಾಡಿದ ಕತೆಯೂ ಈ ಭಯ ಮತ್ತು ಸಂಘರ್ಷವನ್ನೆ ಸೂಚಿಸುತ್ತದೆ. ಕೊಲ್ಲಾಪುರದ ಮಹಾಲಕ್ಷ್ಮಿ ಅಥವಾ ಮಾಯಿಯ ಜತೆ ಸಂಘರ್ಷ ಮಾಡುವ ಎಲ್ಲ ಸಿದ್ಧರ ಕಥನಗಳಲ್ಲೂ ಈ ಸವಾಲು ಎದುರಾಗುತ್ತದೆ.  ‘ತಗರ ಪವಾಡ’ದಲ್ಲಿ ಮಾಯಿಯು ರೂಪುಲಾವಣ್ಯ ವಿಭ್ರಮಗಳುಳ್ಳವಳು;  ‘ಜಡೆಮಕುಟವು ಕಂತೆ ದೃಢಚಿತ್ತದೊಳಗಿಹ ಕಡುಗಲಿ ಸಿದ್ಧಯತಿಗಳು ಬಿಡದೆ ಕೂಡಬೇಕು’ ಎಂದು ಹಿಡಿದು ವಿಷ ಕುಡಿಸುವವಳು (೧-೧೭);  ವಿಷಕುಡಿದು ಕೂಡಿದರೆ ಸರಿ. ಇಲ್ಲದಿದ್ದರೆ ಮೂಗಿಗೆ ಕವಡೆಕಟ್ಟಿ ಜೀತ ಗೇಯಿಸಿಕೊಳ್ಳುವಳು; ಹೀಗೆಮಾಡಿ ನವಕೋಟಿ ಯೋಗಸಿದ್ಧರನ್ನು ಜೀತಕ್ಕಿಟ್ಟು ಕೊಂಡವಳು. ತೋಂಟದ ಸಿದ್ಧಲಿಂಗಯತಿಯ ಕಥೆಯಾದ ‘ಗುರುರಾಜ ಚಾರಿತ್ರ’ವು ಮಾಯಿಯನ್ನು ‘‘ಸಕಲ ಸಿದ್ಧರಂ ಸೆರೆವಿಡಿದು ಕವಡೆಗಳ ಪೋಣಿಸುತ್ತವಂ ತೇಜವಹ ಮೂಗಿ ನೊಳು ಕಟ್ಟಿ ಸೇವೆಯ ಕೊಂಬವಳು’’(೨-೧೩) ಎಂದು ವರ್ಣಿಸುತ್ತದೆ. ‘ಮರುಳಸಿದ್ಧಕಾವ್ಯ’ದ ಪ್ರಕಾರ  ಒಮ್ಮೆ ಮಾಯಿ ‘ಸಿದ್ಧರ ಗಂಡ’ನಾದ ಮರುಳಸಿದ್ಧನಿಗೆ ವಿಷವನ್ನು ಊಡುತ್ತಾಳೆ. ಆದರೆ ಅವನು ಅದನುಂಡು ತೇಗಿ ಆಕೆಗೆ ಶಿಕ್ಷಿಸುತ್ತಾನೆ. ಆ ಶಿಕ್ಷೆ ಕ್ರೂರವಾಗಿದೆ. ‘‘ದಿಂಡುಗೆಡೆವಂದೊದೆದು ಮೆಟ್ಟಿಯೆದೆಯಂ ಮಾಯ ಮುಂದಲೆಯ ಪಿಡಿದು ಸೆಳೆಯೆ, ಗಂಡುಗೊಡಲಿಯೊಳು ಮೂಗಂ ಮೊಲೆಯಂ ಕೊಯ್ದು ಮೇಣ್ ದಂಡಸಿಂದೆಸೆವ ಪಲ್ಗಳ ನುಚ್ಚುಬಡೆದೆಲುವ ಖಂಡಿಸುತ ನರವ ತೆಗೆದು’’  ಅವಳ ದೇಹವನ್ನು ಕಿನ್ನರವೀಣೆ ಮಾಡಿ ಬಾರಿಸುತ್ತಾನೆ (೨-೧೫); ‘ತಗರ ಪವಾಡ’ದಲ್ಲಿ ರೇವಣಸಿದ್ಧನು ಪಂಥವನ್ನು ಗೆದ್ದಬಳಿಕ ಶರಣಾದ ಮಾಯಿಗೆ ‘‘ಖಂಡೆಯವನು ಕಿತ್ತು ನಾಸಿಕವನು ಕೊಯ್ದು ರಂಡೆಪೋಗೆಂದು’’ ಓಡಿಸುತ್ತಾನೆ. ರೇವಣಸಿದ್ಧ ಮತ್ತು ಕೊಲ್ಲಾಪುರದ ಮಾಯಿಯರ ಸಂಘರ್ಷವು ಬಹಳ ಪಠ್ಯಗಳಲ್ಲಿ ಕಾಣಬರುತ್ತದೆ. ಬಬಲಾದಿ (ಬೀಳಗಿ) ಸಿದ್ಧರ ಪರಾಕುಗಳಲ್ಲಿ ಸಿದ್ಧನು, ಮಾಯಿ ಕೊಟ್ಟ ವಿಷವನ್ನು ಕುಡಿದು ಗೆದ್ದು ಬಂದವನು ಎಂಬ ವರ್ಣನೆಗಳಿವೆ. ಕಾಡಸಿದ್ಧನ ಮಿತ್‌ಗಳಲ್ಲಿ ಕೊಲ್ಲಾಪುರದ ಮಾಯಿಯು ಸಿದ್ಧರಿಗೆಲ್ಲ ಪಾದರಸ ಸೀಸದರಸ ಕುಡಿಯುವ ಪಂಥವನ್ನು ಒಡ್ಡುತ್ತಿದ್ದಳು. ಕಾಡಸಿದ್ಧನು ಅದನ್ನು ಕುಡಿದು ಮೆಚ್ಚಿಸಿದ ಕಾರಣ, ಮಾಯಿ ಆತನಿಗೆ ಮಠ ಕಟ್ಟಿಸಿಕೊಡುವ ಕಥೆಯಿದೆ. ಮಾಯಿಯು ಕೊಲ್ಹಾಪುರಕ್ಕೆ ಬರುತ್ತಿದ್ದ ಸಿದ್ಧರಿಗೆ ಕೊಡುತ್ತಿದ್ದ ವಿಷವು ವಿಮಲಾನಂದ ಹೇಳುವ ಪಾದರಸವೇನು?

ಶಾಕ್ತಕಥನಗಳಲ್ಲಿ ಈ ಸಂಘರ್ಷದ ಪರಿ ಬೇರೆಯಿದೆ. ಕೊಲ್ಲಾಪುರ ಲಕ್ಷ್ಮಿಗುಡಿಯ ಸುತ್ತಮುತ್ತ ಭೈರವಗುಡಿಗಳಿವೆ. ಅದರಲ್ಲಿ ಪ್ರಸಿದ್ಧನಾದ ರಣಕಾಳ ಭೈರವನಾಥನನ್ನು ಮಾಯಿಯು ಶತ್ರು ನಾಶ ಮಾಡಲು ಯುದ್ಧಕ್ಕೆ ಕಳಿಸಿದ್ದಳು ಎಂದು ಕತೆಯಿದೆ. ಲಕ್ಷ್ಮಿಯ ಗುಡ್ಡರಾದ ಗೊಂದಲಿಗರು ಹಾಡುವ ಕಥನಗಳಲ್ಲಿ, ಮಾಯಿಯು ಸಿದ್ಧರ ವಿರುದ್ಧದ  ಸಂಘರ್ಷದಲ್ಲಿ ಗೆಲ್ಲುತ್ತಾಳೆ.  ಸವದತ್ತಿ ಎಲ್ಲಮ್ಮ ತನ್ನನ್ನು ಭಂಗಿ ಕುಟ್ಟುವ ಜೀತಕ್ಕೆ ಇರಿಸಿ ಕೊಂಡಿದ್ದ ಸಿದ್ಧರನ್ನು, ಅವರು ಭಂಗಿಯೊನಶೆಯಲ್ಲಿದ್ದಾಗ ಗುಹೆಗೆ ದೂಡಿ ಬಂಧಿಸುತ್ತಾಳೆ. ಎಲ್ಲಮ್ಮನ ಸಂಘರ್ಷಗಳಲ್ಲಿ ನಾಥರಾದ ಎಕ್ಕಯ್ಯ ಜೋಗಯ್ಯರ ಪಾತ್ರವಿದೆ. ಉಚ್ಚಂಗಿದುರ್ಗದ (ದಾವಣಗೆರೆ) ಉಚ್ಚಂಗೆಮ್ಮ ತನ್ನ ಜತೆ ಗುದ್ದಾಟಕ್ಕೆ ಬರುವ ಭೈರಿಸಿದ್ಧ ಬದನೆಸಿದ್ಧ ಬಾಳೆಸಿದ್ಧರನ್ನು ಉಪಾಯವಾಗಿ ಭಂಗಿಅಡಿಗೆ ಬಡಿಸಿ  ದಿಕ್ಕುತಪ್ಪಿಸುತ್ತಾಳೆ. ತನ್ನನ್ನು ಮೋಹಿಸಲು ಬಂದ ಸಿದ್ಧರನ್ನು, ಮೂತ್ರದ ರಭಸದಿಂದಲೇ  (ಇದರಿಂದ ಅವಳಿಗೆ ಉಚ್ಚಂಗೆಮ್ಮ ಎಂಬ ಹೆಸರು ಬಂತಂತೆ.) ಕೆಳಕ್ಕೆ ಬೀಳುವಂತೆ ಮಾಡುತ್ತಾಳೆ.

ಸಿದ್ಧರಿಗೂ ದೇವಿಯರಿಗೂ ನಡೆದ ಈ ಸಂಘರ್ಷದ ಕಥನಗಳು ಏನನ್ನು ಹೇಳುತ್ತಿವೆ? ಬಹುಶಃ ಇವು ಶಾಕ್ತ ಹಾಗೂ ಸಿದ್ಧಪಂಥಗಳ ದಾರ್ಶನಿಕ ಕದನದ ರೂಪಕಗಳಿರಬಹುದು.   ನಾಥಪಂಥದಲ್ಲಿ ಕೌಳಮಾರ್ಗಿಗಳು ಸೇರಿದ ಬಳಿಕ, ಅವರಿಗೂ ವಿರಕ್ತವಾದಿಗಳಿಗೂ ಇಂತಹ ಕದನಗಳು ನಡೆದಿರಬಹುದು.  ಕೌಳರು ಅದರಲ್ಲೂ ಯೋಗಿನಿಯರು  ಸಾಧನೆಯಲ್ಲಿ ತಾವೊಂದು ಉಪಕರಣವಾಗಿ ಬಳಕೆಯಾಗುವುದಕ್ಕೆ ವಿರೋಧಿಸುವ, ತಮ್ಮ ಆಧ್ಯಾತ್ಮಿಕ ಹಕ್ಕು ಗಳನ್ನು ಮಂಡಿಸುವ ಕಾರಣಕ್ಕಾಗಿ ಈ ಬಗೆಯ ಸಂಘರ್ಷಗಳು ಜರುಗಿರಬಹುದು. ಕನ್ನಡದ ‘ಹರದೇಶಿ ನಾಗೇಶಿ’ ಹಾಡು ಸಂಪ್ರದಾಯದಲ್ಲೂ, ಸವಾಲು ಜವಾಬು ಪದಗಳಲ್ಲೂ ಈ ನಾಟಕೀಯ ಮುಖಾಮುಖಿ ಇನ್ನೂ ಮುಂದುವರೆದಿದೆ. ಮಾತೃ ಸಮಾಜವು ತನ್ನ ಅಧಿಕಾರ ಕಳೆದುಕೊಳ್ಳುವಾಗ ಮಾಡಿದ ಪ್ರತಿರೋಧದ ಅಥವಾ  ವಾಮಾಚಾರದ ಕೇಂದ್ರಗಳಲ್ಲಿ ಸಿದ್ಧರು ಶಾಕ್ತಸಾಧನೆಯಲ್ಲಿ ತೊಡಗಿ ಅನುಭವಿಸುತ್ತಿದ್ದ ಇವು ಸೋಲು ಗೆಲುವುಗಳ ರೂಪಕಗಳಾಗಿ ತೋರುತ್ತವೆ.

ಎಲ್ಲಮ್ಮ ಸಂಪ್ರದಾಯದಲ್ಲಿ ಸಂಘರ್ಷದಲ್ಲಿ ಸೋತ ಜೋಗಪ್ಪನು, ಕರಾರಿನ ಪ್ರಕಾರ ಅಮ್ಮನ ಗುಣಗಾನ ಮಾಡಿಕೊಂಡು ತಿರುಗುತ್ತಾನೆ. ಯಾವ ಬಗೆಯಲ್ಲಿ ರೇವಣಸಿದ್ಧನು ಮಾಯಿಯ ದೇಹದಿಂದ ಕಿನ್ನರಿ ಮಾಡುತ್ತಾನೊ, ಅದೇ ರೀತಿಯಲ್ಲಿ ಎಲ್ಲಮ್ಮ ಪುರುಷನ ದೇಹ ಮುರಿದು ಚೌಡಿಕೆ ಮಾಡುತ್ತಾಳೆ. ಶಕ್ತಿಯು ಪುರುಷನನ್ನು ಸೋಲಿಸುವ ಕಥನಗಳು ಭಾರತದ ತುಂಬ ಇವೆ. ಇವುಗಳಲ್ಲಿ ಜಮ್ಮುನಲ್ಲಿರುವ ಪ್ರಸಿದ್ಧ ಶಕ್ತಿದೇವತೆ ವೈಷ್ಣೋದೇವಿ ಭೈರವನನ್ನು ದಮನಿಸಿದ ಕತೆಯು ಸ್ವಾರಸ್ಯಕರವಾಗಿದೆ.  ಒಮ್ಮೆ ದೇವಿಯ ಭಕ್ತನೊಬ್ಬ ಊರಿಗೆಲ್ಲ ಔತಣಕ್ಕೆ ಕರೆಯುತ್ತಾನೆ. ಊರಿಗೆ ಬಂದಿದ್ದ ಯೋಗಿಯನ್ನೂ ಅವನ ೩೬೦ ಅನುಯಾಯಿಗಳನ್ನೂ ಕರೆಯುತ್ತಾನೆ.  ನನ್ನ ಶಿಷ್ಯನಾದ ಭೈರವನಿಗೆ ನೀನು ತೃಪ್ತಿಪಡಿಸಲಾರೆ ಎಂದು ಯೋಗಿಗಳ ನಾಯಕ ಸವಾಲು ಹಾಕುತ್ತಾನೆ. ಎಲ್ಲರಿಗೂ ಊಟಕ್ಕೆ ಕೂರಿಸಿದಾಗ, ವೈಷ್ಣೋದೇವಿಯು ಕುಮಾರಿಯಾಗಿ ಬಡಿಸುತ್ತಾ ಬರುತ್ತಾಳೆ. ಭೈರವ ತನಗೆ ಈ ಸಸ್ಯಾಹಾರ ಬೇಡವೆಂದೂ ಮಾಂಸ ಮದ್ಯ ಕೊಡಬೇಕೆಂದೂ ಹಠ ಹಿಡಿಯುತ್ತಾನೆ. ಇದು ಬ್ರಾಹ್ಮಣರ ಮನೆ ಎಂದರೂ ಕೇಳದೆ ಅವಳನ್ನು ಕಾಮುಕನಾಗಿ ಹಿಡಿಯುತ್ತಾನೆ. ಅವಳು ಅದೃಶ್ಯಳಾಗುತ್ತಾಳೆ. ಭೈರವ ಹಿಂಬಾಲಿಸುತ್ತಾ  ಹತ್ತಾರು ಕಡೆ ತುಡುಕುತ್ತಾನೆ. ಕಡೆಗೆ ಆಕೆ ಒಂದು ಗವಿಯಲ್ಲಿ ಅಡಗಿ ತನ್ನನು ಹಿಡಿಯಲು ಬಂದ ಭೈರವನ ಶಿರಚ್ಛೇದ ಮಾಡುತ್ತಾಳೆ. ತಲೆಯನ್ನು ಕಣಿವೆಗೂ ದೇಹವನ್ನು ಗುಹೆಯ ಹೊರಗೂ ಎಸೆಯುತ್ತಾಳೆ. ಈಗಲೂ ಅಲ್ಲಿನ ಒಂದು ಬಂಡೆಯನ್ನು ಭೈರವನ ದೇಹವೆಂದು ಹೇಳಲಾಗುತ್ತದೆ. ಈ ಕತೆಗೆ ಚಂದ್ರಗುತ್ತಿಯ ಕಾಮುಕ ಶೂಲಭೈರನ ಕಥೆಯ ಜತೆ ಆಶ್ಚರ್ಯಕರ ಸಾದೃಶ್ಯವಿದೆ.

ಬಿಟ್ಟೆನೆಂದೊಡೆ ಬಿಡದೀ ಮಾಯೆ

ಈ ಸಂಘರ್ಷಗಳಿಗೆ ಇನ್ನೊಂದು ಮುಖವಿದೆ. ಅದೆಂದರೆ ಸಿದ್ಧರು ಯೋಗಿಗಳು ಸ್ತ್ರೀಯ ಹೊಟ್ಟೆಯಲ್ಲಿ ಹುಟ್ಟಲು ನಿರಾಕರಿಸುವುದು. ವಿಷ್ಣು  ಮೋಹಿನಿ ಅವತಾರದಲ್ಲಿದ್ದಾಗ ಮೋಹಿತನಾದ ಶಿವನ ವೀರ್ಯ ನೀರಿಗೆ ಬಿದ್ದು, ಅದನ್ನು ಮೀನು ನುಂಗಲು ನವನಾಥರು ಹುಟ್ಟಿದರು ಎಂಬ ಕಥೆಯನ್ನು ಗಮನಿಸಬೇಕು. ಇಲ್ಲಿ  ಹುಟ್ಟಿಗೆ ಸ್ತ್ರೀಯ ದೇಹ ಮಾಧ್ಯಮ ವನ್ನೇ ಒಪ್ಪುತ್ತಿಲ್ಲ; ಗೋರಖನು ಗೊಬ್ಬರದ ಗುಂಡಿಯಲ್ಲಿ ಹುಟ್ಟಿದ ಮಿತ್ ಕೂಡ ಹೆಣ್ಣಿನ ಗರ್ಭದ ಹಂಗನ್ನು ನಿರಾಕರಿಸುವಂತಹದು. ಬಹುತೇಕ ಯೋಗಿಗಳು ಅಯೋನಿಜರು.  ಇದು ಸ್ತ್ರೀ ಜತೆಗೆ ಅಥವಾ ಸ್ತ್ರೀಪಂಥಗಳ  ಕುರಿತು ಇರುವ ಭಯ ಮತ್ತು ದ್ವೇಷವನ್ನು ಸೂಚಿ ಸುತ್ತಿರಬಹುದೇ? ತಾಯಿ ಹೊಟ್ಟೆಯಲ್ಲಿ ಹುಟ್ಟಲು ನಿರಾಕರಿಸುವ ಕರ್ನಾಟಕದ ಸಿದ್ಧರಲ್ಲಿ ಮಲೆಮಾದೇಶ್ವರ, ಪರಶುರಾಮ, ಜುಂಜಪ್ಪ, ಚೆನ್ನಬಸವಣ್ಣ ಮುಂತಾದವರು ಇದ್ದಾರೆ. ಕೆಲವರು  ತಾಯ ಹೊಟ್ಟೆಯಲ್ಲಿ ಹುಟ್ಟಿದರೂ ಎದೆಹಾಲನ್ನು ಕುಡಿಯಲು ಮೊಗ ತಿರುವವರು.  ಮಂಟೆಸ್ವಾಮಿ ಶಿಷ್ಯನಾದ ಸಿದ್ಧಪ್ಪಾಜಿ ಇಂತಹವನು. ಈ ಬಗೆಯ ಕಥನಗಳು ಭಾರತದಾದ್ಯಂತ ಇವೆ.

ಸಿದ್ಧ ಮತ್ತು ನಾಥ ದರ್ಶನಗಳು, ಬ್ರಹ್ಮಚರ್ಯ ಸನ್ಯಾಸಗಳ ಮಹತ್ವವನ್ನು ಹೇಳು ತ್ತವೆ. ಆದರೆ ಸಿದ್ಧರ ಜೀವನದ ತುಂಬ ಸ್ತ್ರೀಯರ ಜತೆಗಿನ ಪ್ರೀತಿ ಸಂಘರ್ಷಗಳೇ ತುಂಬಿವೆ. ಇದೊಂದು ವೈರುಧ್ಯ. ನಾಥರು ತಮ್ಮ ಶೈಲಿಯಲ್ಲಿ ಧರಿಸುವ ಉಂಗುರ ಹಾಗೂ ಸಿಂಗನಾದಿಗಳು ಮೂಲತಃ ಯೋನಿ ಲಿಂಗಗಳ ಸಂಕೇತಗಳು. ಅವರು ಶಾಕ್ತಪೀಠಗಳಿಗೆ ನಡೆದುಕೊಳ್ಳುತ್ತಾರೆ. ಮಚೇಂದ್ರ ಕೊಟ್ಟ ಸಂತಾನಶಕ್ತಿಯುಳ್ಳ ವಿಭೂತಿಯನ್ನು ಧರಿಸಲು ನಿರಾಕರಿಸುವ ಮಹಿಳೆ; ಯೋಗಿಯನ್ನು ಹೊರಬಿಡದಂತೆ ತನ್ನ ವಶದಲ್ಲಿ ಇರಿಸಿಕೊಳ್ಳುವ ಸ್ತ್ರೀರಾಜ್ಯದ ಪಿಂಗಳೆ; ಯೋಗಿಗೆ ಸವಾಲು ಹಾಕುವ ಕೊಲ್ಲಾಪುರದ ಮಾಯಿ; ಮಚೇಂದ್ರನನ್ನು ಹಿಂಬಾಲಿಸಿ ಬರುವ ಮಂಗಳಾದೇವಿ. ಮರಾಠಿಯ ‘ನವನಾಥ ಕಥಾಸಾರ’ ವಂತೂ ಯೋಗಿ ಯೋಗಿನಿಯರ  ಕಥನಗಳಿಂದ ತುಂಬಿ ಹೋಗಿದೆ. ‘ರೇವಣಸಿದ್ಧೇಶ್ವರ ಪುರಾಣ’ದಲ್ಲಿ ಗೋರಖನಿಗೆ ಇಬ್ಬರು ಹೆಂಡಿರು! ನಾಥರು ವೀರ್ಯಪಾತ ಮಾಡದೆ, ವಿರಕ್ತಿಯ ಸಂಕೇತವಾಗಿ ಭಗವಾ (ಕಾವಿ) ಧರಿಸುತ್ತಾರೆ. ಆದರೆ ಈ ಕಾವಿಯ ಮೂಲವೇ ಸ್ತ್ರೀಯ ರಕ್ತದಲ್ಲಿದೆ. ಭಗವಾದಲ್ಲಿನ ಭಗ ಶಬ್ದವನ್ನು ಗಮನಿಸಬೇಕು. ಪಾರ್ವತಿ ತನ್ನ ಮುಟ್ಟಿನ ರಕ್ತದಲ್ಲಿ ಬಟ್ಟೆಯನ್ನು ಅದ್ದಿ, ಶಿವನ ಕಂಥೆಯನ್ನು ಸಿದ್ಧಪಡಿಸುತ್ತಾಳೆ. ಇದನ್ನು ಆಕೆ ಗೋರಖನಿಗೆ ನೀಡಿದಳೆಂಬ ಕತೆಯೂ ಇದೆ. ಈ ಪ್ರಸಂಗ ಮಂಟೇಸ್ವಾಮಿ ಕಾವ್ಯದಲ್ಲಿ ಇನ್ನೂ ಅದ್ಭುತವಾಗಿದೆ. ಮಂಟೇಸ್ವಾಮಿ ಒಮ್ಮೆ ಚಾರಣ ಮಾಡುವಾಗ, ಉತ್ರಾಜಮ್ಮ ಎಂಬ ಶಿಷ್ಯೆಗೆ ಮುಟ್ಟಾಗುತ್ತದೆ. ಆಕೆಯ ಮುಟ್ಟಿನ ರಕ್ತದ ಬಟ್ಟೆಯನ್ನೇ ಮಂಟೆಸ್ವಾಮಿ ತನ್ನ ಕಾವಿಯನ್ನಾಗಿ ಮಾಡಿಕೊಳ್ಳುತ್ತಾನೆ.  ಶಿವನು ಉಮೆಯನ್ನು ಹುಡುಕುತ್ತ ಹೋದರೆ, ಅವನ ಹೆಸರಿನ ಪಂಥಗಳು ಶಕ್ತಿಯಿಂದ ಮಹಿಳೆ ಸಂಸಾರ ಭೋಗ ಇವುಗಳಿಂದ ದೂರ ಓಡುತ್ತವೆ. ಆದರೆ ಎಷ್ಟು ದೂರ ಓಡಿದರೂ ಅವಕ್ಕೆ ಸ್ತ್ರೀಋಣದಿಂದ ಬಿಡುಗಡೆ ಮಾತ್ರ ಸಿಗುವುದಿಲ್ಲ.

* * *[1]      ಸಿಂದಗಿಯ ಬಿಂದಗಿ, ಪು. ೩೮

[2]      ‘ದಖನಿ ಕಲಾಕೃತಿಗಳಲ್ಲಿ ಯೋಗಿನಿಯರು’, ಕನ್ನಡ ಅಧ್ಯಯನ, ಜುಲೈ ಸೆಪ್ಟಂಬರ್, ೧೯೯೮

[3]      ನಾಗರಾಜಪ್ಪ ಕೆ.ಜಿ, ‘ಗುಪ್ತ ಸಮಾಜಗಳು’, ಇಕ್ಕಟ್ಟು ಬಿಕ್ಕಟ್ಟು, ಪು.೧೫೩-೧೫೪

[4]      ಕಲಬುರ್ಗಿ ಎಂ.ಎಂ, ‘ಕಪ್ಪಡಿ-ನಾಥಸಂಪ್ರದಾಯ- ಕಪಿಲಷಷ್ಠಿ’, ಅಮೃತಗಂಗಾ, ಪು.೧೧೪-೧೪೬

[5]      ಚಿದಾನಂದಮೂರ್ತಿ ಎಂ., ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಪು.೧೫೩

[6]      Gorakhnath and the Kanphata Yogis, Pp.4

[7]      ರಾಜೇಶ್ವರಿಗೌಡ ಕೆ., ಆದಿಚುಂಚನಗಿರಿ : ಒಂದು ಸಾಂಸ್ಕೃತಿಕ ಅಧ್ಯಯನ, ಪು.೯೧

[8]       Robert E. Svaboda. Aghora at the Lefthand God, Pp. 29, 40