ನಾಥರು ಹಾಗೂ ರಸಸಿದ್ಧರು

 

ಕದ್ರಿಯ ಸ್ಥಳಪುರಾಣದಲ್ಲಿ ಒಂದು ಕತೆಯಿದೆ. ಮಚೇಂದ್ರನು ಸ್ತ್ರೀರಾಜ್ಯದಿಂದ ಮರಳಿ ಬರುವಾಗ ಗೋರಖನ ಮೇಲೆ ಚಿನ್ನದ ಇಟ್ಟಿಗೆ ತುಂಬಿದ್ದ ಒಂದು ಚೀಲವನ್ನು ಹೊರಿಸಿದ್ದನಂತೆ. ಅದರ ಭಾರ ಹೊರಲಾರದೆ ಗೋರಖನು ಚೀಲವನ್ನು ಎಲ್ಲೊ ಬಿಸಾಡಿಬಿಟ್ಟನು. ಕದ್ರಿಬೆಟ್ಟ ಬಂದಾಗ ಮಚೇಂದ್ರನು ‘ಎಲ್ಲಿ, ನಾನು ಕೊಟ್ಟಿದ್ದ ಚೀಲ ಕೊಡು’ ಎಂದು ಕೇಳಿದ. ಗೋರಖನು ತಟ್ಟನೆ ಹೊರಗೆ ಹೋಗಿ ಬಂದು ಕದ್ರಿಯ ಕಲ್ಲುಮಣ್ಣುಗಳನೆಲ್ಲ ತುಂಬಿ, ಅವನ್ನು ಚಿನ್ನವಾಗಿಸಿ ಕೊಟ್ಟನಂತೆ. ಅಂದಿನಿಂದ ಕದ್ರಿಗೆ  ‘ಸುವರ್ಣ ಕದಲಿ’ ಎಂಬ ಹೆಸರು ಬಂತಂತೆ. ಈ ಕತೆಗೆ ತಕ್ಕಂತೆ, ಈಗಲೂ ಕದ್ರಿಬೆಟ್ಟದಲ್ಲಿ ರಸಕೂಪ ಎಂಬ ಬಾವಿಯಿದೆ. ‘ಮಂಜುಳಕ್ಷೇತ್ರ ಮಾಹಾತ್ಮ್ಯ’ಎಂಬ ಸ್ಥಳಪುರಾಣದಲ್ಲಿ ಕದ್ರಿಯ ಮಂಜುನಾಥ ದೇವರನ್ನು ‘ರಸ ಕೂಪೋದ್ಭವಂ’ ಎಂದು ಬಣ್ಣಿಸಿದೆ.

[1]  ನಾಥಪಂಥವು ದಟ್ಟವಾಗಿದ್ದ ಬಾರಕೂರಿನ ಹೊಸಾಳದಲ್ಲಿ ಸಿದ್ಧರಸದ ಭಾವಿಯಿತ್ತು, ಅದರ ನೀರಿನಿಂದ ಕಬ್ಬಿಣವನ್ನು ಚಿನ್ನವಾಗಿಸುತ್ತಿದ್ದರು ಎಂಬ ಕತೆಯನ್ನು ದಕ್ಷಿಣ ಕನ್ನಡದ ಹಳೆಯ ಭೂಗೋಳದ ಪಠ್ಯಗಳಲ್ಲಿ ಕಾಣಬಹುದು;[2] ಕದ್ರಿಯ ಜೋಗಿಮಠದ ಅಧಿಪತಿಯಾಗಿದ್ದ ಭವಾನಿನಾಥರು ರಸಸಿದ್ಧರಾಗಿದ್ದು, ತಾಮ್ರದ ಕಾಸನ್ನು ಚಿನ್ನವನ್ನಾಗಿಸಿ, ಅದರಲ್ಲಿ ಮಠದ ನಿತ್ಯಖರ್ಚನ್ನು ತೂಗಿಸುತ್ತಿದ್ದ ಕತೆಯಿದೆ. ಇಂತಹ ನೂರಾರು ಕತೆಗಳು ಸಿದ್ಧರ ಸ್ಥಾನ ಗಳಲ್ಲಿವೆ. ಶ್ರೀಶೈಲ ಪರ್ವತವನ್ನೇ ತನಗೆ ಗೊತ್ತಿರುವ ಮೂಲಿಕೆಗಳಿಂದ ಚಿನ್ನದ ಪರ್ವತ ವನ್ನಾಗಿ ಮಾಡಲು ನಾಗಾರ್ಜುನನು ಯತ್ನಿಸುವಾಗ, ವಿಷ್ಣು ತನ್ನ ಚಕ್ರದಿಂದ ಅವನ ತಲೆಕತ್ತರಿಸಿದ ಕತೆಯೂ ಇದರಲ್ಲಿ ಒಂದು. ಕದ್ರಿಗಿರುವ ‘ಸುವರ್ಣಕದಳಿ’ ಎಂಬ ಹೆಸರು ಶ್ರೀಶೈಲದ ಕದಳಿವನವನ್ನು ಹಾಗೂ ಅಲ್ಲಿದ್ದ  ರಸಸಿದ್ಧ ನಾಗಾರ್ಜುನನನ್ನು ನೆನಪಿಸುತ್ತದೆ. ಕದಳಿವನಗಳಿಗೂ ರಸಸಿದ್ದಿಗೂ ಯಾವುವೊ  ಸಂಯೋಗದ ಎಳೆಗಳಿವೆ. ಕೀಳುಲೋಹವನ್ನು ಚಿನ್ನವನ್ನಾಗಿ ಮಾಡುವ ಈ ವಿದ್ಯೆಯು ಭಾರತದ ರಸಸಿದ್ಧರ ಲೋಕದಲ್ಲಿ ಪವಾಡ ಕತೆಗಳಾಗಿ ಹಬ್ಬಿಕೊಂಡಿದೆ. ಇದರಲ್ಲಿ ನಾಥಸಿದ್ಧರು ಹೇಗೆ ತೊಡಕಿಕೊಂಡರು ಎಂಬ ಪ್ರಶ್ನೆಯನ್ನು ಬಿಡಿಸಬೇಕಿದೆ.

ಈ ಹಿಂದೆ ಚರ್ಚಿಸಿದಂತೆ, ನಾಥರು ಶಾಕ್ತರ, ಕಾಪಾಲಿಕರ ಹಾಗೂ ವಜ್ರಯಾನಿಗಳ ಜತೆ  ಮಾತ್ರವಲ್ಲದೆ ಭಾರತದ ಅನೇಕ ಪಂಥ, ಜ್ಞಾನವ್ಯವಸ್ಥೆ ಅಥವಾ ಸಿದ್ಧರ ಜತೆಗೂ ಒಡನಾಟ ಇಟ್ಟುಕೊಂಡಿದ್ದರು. ಅವರಲ್ಲಿ ರಸಸಿದ್ಧರು ಮುಖ್ಯರು. ಈ ರಸಸಿದ್ದಿಯ ಸ್ವರೂಪ ಏನು? ಭಾರತದ ದರ್ಶನಗಳಲ್ಲಿ ರಸೇಶ್ವರವಾದ ಎಂಬ ದರ್ಶನವೂ ಇದೆ. ಮಾಧವಾಚಾರ್ಯನ  ‘ಸರ್ವದರ್ಶನ ಸಂಗ್ರಹ’ವು ರಸವಾದವನ್ನು ಚರ್ಚಿಸುತ್ತದೆ. ಅದರ ಪ್ರಕಾರ, ಸಾಂಖ್ಯ ದರ್ಶನದ ಸ್ಥಾಪಕನಾದ ಕಪಿಲ ಮುನಿಯು ಒಬ್ಬ  ರಸೇಶ್ವರವಾದಿ. ಕಪಿಲ ಮುನಿಯು ನಾಥರ ಬಾರಾಪಂಥಗಳಲ್ಲಿ ಒಂದಾದ ಕಪಲಾನಿ ಪಂಥದ ಸ್ಥಾಪಕನು. ಕಪಿಲನ ಹೆಸರು ಕರ್ನಾಟಕದಲ್ಲಿ ಬಹಳ ಕಡೆಯಿದೆ. ಶರಣ ಸಿದ್ಧರಾಮನ ಅಂಕಿತ ಕಪಿಲಸಿದ್ಧ ಮಲ್ಲಿಕಾರ್ಜುನ. ಕರ್ನಾಟಕದ ಕಪಿಲಾ ನದಿ ಹಾಗೂ ತೀರ್ಥಗಳಿಗೂ ಕಪಿಲನಿಗೂ ಯಾವ್ಯಾವ ಸಂಬಂಧಗಳಿವೆಯೊ?

ರಸ ಎಂದರೆ ಪಾದರಸ. ದ್ರವವೂ ಘನವೂ ಅಲ್ಲದ ಪಾದರಸವು ಭಾರವಾದ ಲೋಹ.  ಪಾದರಸವು ಎಂಬ ಎರಡು ಬಗೆಯ ಸಿದ್ದಿಗಳಿಗೆ ಸಂಬಂಧಪಟ್ಟಿದೆ. ಮೊದಲನೆಯದು, ದೇಹಸಿದ್ದಿ. ಅಂದರೆ  ರೋಗ ಮುಪ್ಪು ಸಾವುಗಳನ್ನು ನಿವಾರಿಸುವ ಸಿದ್ದಿಗಳು. ದೇಹವನ್ನು ವಜ್ರದಂತೆ ದೃಢವಾಗಿಸಿಕೊಳ್ಳುವ, ಕಾಯಿಲೆ ಗುಣಪಡಿಸಬಲ್ಲ ಔಷಧ ಜ್ಞಾನವಾಗುವ ಹಾಗೂ ದೀರ್ಘಕಾಲ ಬದುಕಬಲ್ಲ ಸಾಮರ್ಥ್ಯಕ್ಕೆ ಸಂಬಂಧಿಸಿದ್ದು. ಪಾದರಸ ಸೇವನೆಯಿಂದ ಮುಪ್ಪು ಬರುವುದಿಲ್ಲ ಎಂದು ಭಾವಿಸಲಾಗಿತ್ತು. ರಸೇಶ್ವರವಾದದ ಪ್ರಕಾರ, ಪಾದರಸವು ಶಿವನ ವೀರ್ಯ. ಪಾರ (ವೀರ್ಯ) ಹಾಗೂ ರಜ(ಅಭ್ರಕ)ಗಳ ಸಂಯೋಗದಿಂದ ಸಾವನ್ನು ಗೆದ್ದು ಅಮರತ್ವ ಪಡೆಯಬಹುದು ಎಂದು ರಸಸಿದ್ಧರು ನಂಬಿದ್ದರು. ಮುಪ್ಪು  ರೋಗ ಸಾವುಗಳೆಂಬ ಸಾಗರವನ್ನು ಪಾರುಗಾಣಿಸುವ ಕಾರಣದಿಂದಲೇ ಅದನ್ನು ಪಾರಜ ಎನ್ನಲಾಗುತ್ತಿತ್ತು. ನಾಥರಲ್ಲಿ ರಸಸಿದ್ದಿಗೆ ಮಾನ್ಯತೆಯಿತ್ತು. ‘ವನಸ್ಪತಿ ಸ್ವರೂಪಿ ಚೌರಂಗಿನಾಥ ಚಂದ್ರಮಾ ಔಷಧೀಶ್ ಕೊ ಆದೇಶ್’ ಎಂಬ ಜಯಕಾರವನ್ನು ನಾಥರು ಹಾಕುತ್ತಾರೆ.    ನವನಾಥರಲ್ಲಿ ಒಬ್ಬನಾದ ಚರ್ಪಟಿನಾಥನು ಒಬ್ಬ ರಸಸಿದ್ಧನಾಗಿದ್ದನು. ಸವದತ್ತಿಯ ಎಲ್ಲಮ್ಮನಿಗೆ ಚರ್ಮರೋಗ ಬಂದಾಗ, ಅಲ್ಲಿದ್ದ ಏಕನಾಥ ಜೋಗನಾಥರು ಮದ್ದುಕೊಟ್ಟು ವಾಸಿ ಮಾಡಿದರು ಎಂಬ ಕತೆಯನ್ನು ಇಲ್ಲಿ ನೆನೆಯಬಹುದು. ಆದರೆ ಪಾದರಸ ಬಳಸಿ ದೇಹವನ್ನು ದೃಢವಾಗಿರಿಸುವ ರಸಸಿದ್ಧರನ್ನು ಘುಟಿಕಾ ಸಿದ್ಧರೆಂದೂ ಅವರು ಕಾಯವಾದಿಗಳೆಂದೂ ಶರಣರು ಖಂಡಿಸುತ್ತಾರೆ.

ಎರಡನೆಯದು ಲೋಹಸಿದ್ದಿ.  ‘ಕೀಳುಲೋಹ’ಗಳನ್ನು ಚಿನ್ನವನ್ನಾಗಿ ಪರಿವರ್ತಿಸುವ ಒಂದು ತಿಳಿವಳಿಕೆ ಸಿದ್ಧರಲ್ಲಿತ್ತು ಎಂಬ ನಂಬಿಕೆ. ಪರುಷಮಣಿಯ ಕಲ್ಪನೆ ಇದರಿಂದಲೇ ಬಂದಿದ್ದು. ಇಂಥ ರಸಸಿದ್ದಿ ಪಡೆದವರು ನಾಥವನ್ನೂ ಒಳಗೊಂಡಂತೆ ಅನೇಕ ತಾಂತ್ರಿಕ ಪಂಥಗಳಲ್ಲಿ ಇದ್ದರು. ರಸಸಿದ್ಧರ ಕತೆಗಳಲ್ಲಿ ಚಿನ್ನ ಮಾಡುತ್ತಿದ್ದ ಪ್ರಕರಣಗಳು ಹೆಚ್ಚು ಜನಪ್ರಿಯವಾಗಿವೆ. ಅವು ಹೇಗೋ ಶ್ರೀಶೈಲದ ದಿಕ್ಕಿನತ್ತ ಚಲಿಸುವುದು ಒಂದು ವಿಶೇಷ. ಶ್ರೀಶೈಲವು ಅನೇಕ ಪಂಥದ ಸಿದ್ಧರು ಕೂಡುತ್ತಿದ್ದ ಜಾಗವಾಗಿದ್ದು ಅಲ್ಲಿ ಸಹಜವಾಗಿ ನಾಥರೂ ಇದ್ದರು. ರಾಚಿಂ ಢೇರೆಯವರು ಮಹಮ್ಮದ್ ಸೈದನು ರಚಿಸಿದ  ‘ಕಲ್ಪಸಮೂಹ’ ಕೃತಿಯನ್ನು ಚರ್ಚಿಸುತ್ತಾರೆ. ಇದು  ಶ್ರೀಶೈಲವು ನಾಥಸಂಪ್ರದಾಯದಲ್ಲಿ ಅಂತರ್ಗತವಾದ ರಸವಿದ್ಯೆಯ ಕೇಂದ್ರವಾಗಿತ್ತೆಂದು ಬಣ್ಣಿಸುವ ಕೃತಿ. ಸೈದನು ಆದಿನಾಥ ಚೌರಂಗಿನಾಥರನ್ನು ಅದರಲ್ಲಿ ಸ್ಮರಿಸುತ್ತಾನೆ.[3] ಕರ್ನಾಟಕದಲ್ಲಿ ಹೇಮ, ಕನಕ, ಸುವರ್ಣ, ಬಂಗಾರ ಸಂಬಂಧಿ ಯಾದ ಬೆಟ್ಟಗಳಿವೆ. ಇವುಗಳಲ್ಲಿ ಕನಕಗಿರಿ (ಗಂಗಾವತಿ, ಚಾಮರಾಜನಗರ)  ಹೇಮಗಿರಿಗಳು (ಕುಣಿಗಲ್ಲು, ಕಡೂರು, ಕೆಆರ್‌ನಗರ) ಮುಖ್ಯವಾಗಿವೆ. ಹೀಗೆ ಶ್ರೀಶೈಲ, ನಾಗಾರ್ಜುನ, ರಸಸಿದ್ದಿ, ಚಿನ್ನ ಹಾಗೂ ನಾಥರ ನಡುವಣ ಜೋಡಣೆಗಳು ನಿಗೂಢವಾಗಿವೆ..

ಕುಣಿಗಲ್ ಹೇಮಗಿರಿಯು ಭೈರವಾರಾಧನೆಯ ಸ್ಥಳವಾಗಿದ್ದು, ಬೆಟ್ಟದ ಕೆಳಗೆ  ಕಾಪಾಲಿಕರು ವಾಸಿಸುವ ಹಳ್ಳಿಯಿದೆ. ಅದರ ಹೆಸರು ಹೊನ್ನಾಯಕನಹಳ್ಳಿ. ಅಲ್ಲಿರುವ ಮಿತ್ ಪ್ರಕಾರ, ಸಿದ್ಧರು ವಾಸವಾಗಿರುವ ಜಾಗಕ್ಕೆ ಒಬ್ಬ ಹಳ್ಳಿಗ ಹೋದನಂತೆ. ಆಗ ಸಿದ್ಧರು ಅವನಿಗೆ ಹೊರುವಷ್ಟು ಬಂಗಾರಬೆಳ್ಳಿಯನ್ನು ಕೊಟ್ಟು, ಯಾರಿಗೂ ಹೇಳಬೇಡ ಎಂದು ಎಚ್ಚರಿಸಿ ಕಳಿಸಿದರಂತೆ. ಅವನು ಹೆಂಡತಿ ಕಾಟ ತಡೆಯಲಾಗದೆ ಗುಟ್ಟನ್ನು ಹೇಳಿದಾಗ, ಅವನ ತಲೆ ಸಿಡಿಯಿತಂತೆ. ಹೇಮಗಿರಿ, ಸಿದ್ಧರು, ಚಿನ್ನ, ಹೊನ್ನನಾಯಕನ ಹಳ್ಳಿ ಹಾಗೂ ಕಾಪಾಲಿಕರು ಇವುಗಳ ನಡುವೆ ಯಾವ ತರ್ಕ ಹುದುಗಿದೆ? ಲುಂಕೆಮಲೆಯ ‘ಸಿದ್ಧೇಶ್ವರನ ಪುರಾಣ’ದಲ್ಲಿ ರಸಸಿದ್ಧರನ್ನು ವಿಷವನ್ನು ಕುಡಿವ ರಾಕ್ಷಸರೆಂದು ಚಿತ್ರಿಸಲಾಗಿದೆ. ಈ ರಸಸಿದ್ಧರ ಮೇಲೆ ಭೈರವನು ಯುದ್ಧಹೂಡಿ ಕೊಲ್ಲುತ್ತಾನೆ. ಬಾಬಾಬುಡನಗಿರಿ ಬೆಟ್ಟಗಳಲ್ಲಿ ಶ್ರೀಶೈಲದ ಸೂರ್ಯಸಿಂಹಾಸನ ಮಠಕ್ಕೆ ಸಂಬಂಧಪಟ್ಟ ಮುತ್ತಿನಪುರದ ಘಾಳಿಪೂಜೆ ಮಠವಿದೆ. ಅದರದೊಂದು ಶಾಸನದಲ್ಲಿ(೧೭೦೭) ಚಂದ್ರದ್ರೋಣವನ್ನು ‘‘ಸಂಜೀವನ ಸಿಧರಸ ಸುವರ್ನಮಯವಾದ ಚಂದ್ರದ್ರೋಣಿ ವೇದಪರ್ವತ’’ ಎಂದು ವರ್ಣಿಸಲಾಗಿದೆ. ಇದರಲ್ಲಿ ನವನಾಥಸಿದ್ಧರ ಪ್ರಸ್ತಾಪವೂ ಇದೆ. ೧೯ನೇ ಶತಮಾನದ ದೇವಚಂದ್ರನು ಚಂದ್ರದ್ರೋಣ ಪರ್ವತವನ್ನು ರಸಸಿದ್ಧರ ಸ್ಥಾನವೆಂದು ಬಣ್ಣಿಸುತ್ತ, ಅಲ್ಲಿ ಪ್ರಚಲಿತವಿದ್ದ ಒಂದು ಕತೆಯನ್ನು ಸಂಗ್ರಹಿಸಿ ಕೊಡುತ್ತಾನೆ.

ಆ ಕಾಲದೊಳರ್ವ ಬ್ರಹ್ಮಚಾರಿ ದ್ವಿಜಂ ಚಂದ್ರದ್ರೋಣ ಪರ್ವತದೊಳ್ ಪಾರ್ಶ್ವಕಲ್ಪ ನಾಗಾರ್ಜುನ ಕಲ್ಪ ಸಾಧನೆಯಂ ಮಾಡಿ ಒಂದು ಮಾಸಂಬರಂ ತಪೋಯುಕ್ತನಾಗಿರ್ಪುದುಂ ಸಿದ್ಧರಸಂ ಸಾಧ್ಯಮಾಗಲ್, ಅದನೊಂದು ಬುರುಡೆಯೊಳಿಟ್ಟು ನೆಲವೀಡಿಂಗೆ ಬಂದೊರ್ವ ಅಜ್ಜಿಯ ಮನೆಗೆಯ್ದಿ ಬಹಳ ಕ್ಷುತ್ತಾಗಿದೆ ಗ್ರಾಸಮನಿಕ್ಕೆಂದು ಪ್ರಾರ್ಥಿಸೆ, ಸ್ನಾನಾದ್ಯನುಷ್ಠಾನಮಂ ಮಾಡಿ ಬಪ್ಪುದೆನಲೊಂದು ಗೂಢಪ್ರದೇಶದೊಳಾ ಬುರುಡೆಯಂ ನೇಲ್ದುಪೋಪುದುಮಾ ಅಜ್ಜಿ ನೋಳ್ಪೆನೆಂದು ತೆಗೆಯಲೊಂದು ಬಿಂದು ದೋಸೆಯ ಕಾವಲಿಯಂ ಸೋಂಕಿದಾಕ್ಷಣವೆ ಸುವರ್ಣಮಾಗೆ (ರಾಜಾವಳಿಕಥೆ ೯.೧೬೯)

ರಸಸಿದ್ದಿಯು ಚಿನ್ನದ ತಯಾರಿಕೆಗೆ ಲಗತ್ತಾಗಿರುವ ನೂರಾರು ಜನಪ್ರಿಯ ಕತೆಗಳಿವೆ. ಹೆಚ್ಚುಕಡಿಮೆ ಕರ್ನಾಟಕದ ಸಿದ್ಧರಬೆಟ್ಟಗಳು ರಸಸಿದ್ಧರ ಬೆಟ್ಟಗಳೂ ಆಗಿವೆ.  ನಾಗಾರ್ಜುನ ಗುಹೆಯಿರುವ ಕನಕಗಿರಿ (ಚಾಮರಾಜನಗರ)  ಇಂತಹ ಒಂದು ಬೆಟ್ಟ. ಸಿದ್ದರಬೆಟ್ಟಕ್ಕೆ (ಕೊರಟಗೆರೆ) ಸುವರ್ಣಗಿರಿ ಎಂಬ ಹೆಸರಿದೆ. ನಿಜಗಲ್ಲಿನಲ್ಲೂ (ನೆಲಮಂಗಲ) ರಸಸಿದ್ಧರ ಬೆಟ್ಟವಿದೆ. ರಾಮನಗರ ಸಮೀಪದ ರೇವಣಸಿದ್ಧೇಶ್ವರ ಬೆಟ್ಟವನ್ನು  ರಸಸಿದ್ಧರ ಬೆಟ್ಟವೆನ್ನಲಾಗುತ್ತದೆ.  ಚಿತ್ರದುರ್ಗದ ಪಾಳೆಯಗಾರ ತಿಮ್ಮಣ್ಣನಾಯಕನಿಗೆ (ಕ್ರಿಶ.೧೬) ಚಿತ್ರದುರ್ಗ ಬೆಟ್ಟಗಳಲ್ಲಿರುವ ಸಿದ್ಧೇಶ್ವರ ಗವಿಯಲ್ಲಿ ರಸಸಿದ್ಧರ ದರ್ಶನವಾದ ಐತಿಹ್ಯವಿದೆ.   ಈ ಭಾಗದ ಬಹುತೇಕ ನಾಥಸ್ಥಾನಗಳು ರಸಸಿದ್ಧರ ಜಾಗಗಳು.[4] ಇಲ್ಲಿಗೆ ಸಮೀಪವೇ ಇಂಗಳದಾಳು ತಾಮ್ರದ ಗಣಿಯಿದೆ. ರಸಸಿದ್ಧರ ಬೆಟ್ಟಗಳ ಪರಿಸರದಲ್ಲಿ ಸಾಮಾನ್ಯವಾಗಿ ಲೋಹದ ಗಣಿಗಾರಿಕೆ ಅಥವಾ ಲೋಹ ಕರಗಿಸುವ ಕಸುಬಿನ  ಕುರುಹುಗಳೂ ಇವೆ. ಕುಂದಾಪುರದ ನಾಥಪರಿಸರದಲ್ಲಿರುವ ಕಮಲಶಿಲೆಯ ಸ್ಥಳೀಯ ಹೆಸರು ಕಮ್ಮಾರ ಶಾಲೆಯಾ ಗಿದ್ದು, ಇದೂ ಲೋಹಸಂಬಂಧಿಯಾಗಿರುವುದು. ಮಲೆನಾಡಿನಲ್ಲಿರುವ ಕೊಡಚಾದ್ರಿ ಬೆಟ್ಟವು ಕಬ್ಬಿಣದ ಅದಿರಿನ ಜಾಗವಾಗಿದ್ದು, ಅಲ್ಲಿನ  ಭೈರವಗುಡಿ  ಮುಂದೆ ನಾಡ ಕಬ್ಬಿಣದ  ಭಾರಿ ತ್ರಿಶೂಲವಿದೆ. ಈ ಪ್ರಾಂತದಲ್ಲಿ ಭೈರೇದೇವರು, ಜೋಗಿತೋಟ, ಸಿದ್ಧರಮಠ ಮುಂತಾದ ಊರುಗಳಿವೆ. ಇದಕ್ಕೆ ಪೂರಕವಾಗಿ ಇಲ್ಲಿ  ಕಬ್ಬಿಣದ ಗೌಡ್ಲು ಎಂಬ ಬುಡಕಟ್ಟೂ ಇದೆ. ಚುಂಚನಗಿರಿ ಸಾಹಿತ್ಯದಲ್ಲಿ ಕಬ್ಬಿಣ ಮಾಡುವ ವರ್ಣನೆಯಿದ್ದು, ‘‘ಕಾಯವು ಕಬ್ಬಿಣ ಬೇಯವು ಇದ್ದಲು ಗವಿಸಿದ್ಧಯ್ನ ಮಠದಲ್ಲಿ ಮಾಡ್ಯಾರು ಸ್ವಾಮಿಟ್ಟರೇನ ತಿರುಶೂಲ’’ ಎಂದು ಬರುತ್ತದೆ. ಕೊಡಚಾದ್ರಿಯ ತ್ರಿಶೂಲದಂತೆ ಬಿಸಗ್ನಿಸಿದ್ಧೇಶ್ವರ ಮಠದಲ್ಲಿ (ಚಿಕ್ಕಮಗಳೂರು) ಕೂಡ ನಾಡ ಕಬ್ಬಿಣದ ಪ್ರಾಚೀನ ತ್ರಿಶೂಲಗಳಿವೆ. ಕನಕಪುರ ಮಳವಳ್ಳಿ ಭಾಗದಲ್ಲಿ ರಸಸಿದ್ಧರ ಬೆಟ್ಟವಿದೆ. ಕಬ್ಬಿಣದ ಗಟ್ಟಿಗಳನ್ನು ಪೂಜೆಮಾಡುವೊಮಂಟೆಸ್ವಾಮಿ ಪರಂಪರೆಗೆ ಸೇರಿದ ಹಲಗೂರಿದೆ. ಮಂಟೆಸ್ವಾಮಿಯ ಶಿಷ್ಯನಾದ ಸಿದ್ಧಪ್ಪಾಜಿಯು ಮೂಲತಃ ಕಮ್ಮಾರರ ಮನೆಯವನು. ಮಂಟೆಸ್ವಾಮಿ ಪರಂಪರೆಯಲ್ಲಿ ಈಗಲೂ ಕಬ್ಬಿಣದ ಖಂಡಾಯಕ್ಕೆ ಪೂಜೆ ಸಲ್ಲುತ್ತದೆ. ಕಮ್ಮಾರ ಕುಲದಿಂದ ಬಂದ ತಿಂತಿಣಿಯ ಸುರಪುರ ಮೋನಪ್ಪನೂ ಒಬ್ಬ ರಸಸಿದ್ಧನಾಗಿದ್ದನು. ಅವನು ವಿಸರ್ಜಿಸಿದ ಮಲವು ಬಂಗಾರವಾಗುತ್ತಿದ್ದ ಕಥೆಗಳಿವೆ. ಈಗಲೂ ಮೋನಪ್ಪನ ಸಂಕೇತವಾಗಿ ಕಬ್ಬಿಣದ ಚಪಗೊಡಲಿಯನ್ನು ಪೂಜಿಸುತ್ತಾರೆ.

ವಿಶೇಷವೆಂದರೆ, ಕುರುಬರ ಸಾಂಸ್ಕೃತಿಕ ನಾಯಕನಾದ ರೇವಣ ಸಿದ್ಧೇಶ್ವರನ ಹೆಸರಿಗೆ ಕಬ್ಬಿಣ ಕರಗಿಸುವ ಎರಡು ಪ್ರಕರಣಗಳು ಲಗತ್ತಾಗಿರುವುದು. ಈ ಎರಡರಲ್ಲೂ ನಾಥರು ಬರುತ್ತಾರೆ. ಹರಿಹರನ ‘ರೇವಣಸಿದ್ಧೇಶ್ವರ ರಗಳೆ’ಯಲ್ಲಿ ಈ ಪ್ರಸಂಗಗಳು ಬರುತ್ತವೆ. ೧. ಒಮ್ಮೆ ರೇವಣನು ಮಾಸನೂರಿಗೆ ಬಂದು ಊರಹೊರಗಿನ ಪಾಳು  ಶಿವಾಲಯದಲ್ಲಿ ಬಿಡಾರ ಮಾಡುತ್ತಾನೆ. ಅಲ್ಲಿ ತಂಗಿದವರನ್ನು ಮರದ ಮೇಲೆ ವಾಸವಾಗಿದ್ದ  ಎರಡು ತಿಗಣೆಗಳು ರಾತ್ರಿ ಬಂದು ಕೊಲ್ಲುತ್ತಿರುತ್ತವೆ. ರೇವಣನು ತಿಗಣೆಗಳನ್ನು ತನ್ನ  ನೊಸಲುಗಣ್ಣಿನ ಬೆಂಕಿಯಿಂದ ಸುಟ್ಟುಹಾಕುತ್ತಾನೆ. ಅವು ‘‘ಕಾಹೇರಿ ಕರಗಿ ಕುದಿದುಕ್ಕಿ ತಕ್ಕಳಿಯ ಮುಕ್ಕುರಿಕ್ಕಿ ಕೆಡೆದುಕ್ಕಿನ ಗುಂಡು’’ಗಳಾಗುತ್ತವೆ. ರೇವಣನು ಅವುಗಳನ್ನು ಬಳಸಿ,  ಕಠಾರಿಯನ್ನೂ ಸುರಗಿಯನ್ನೂ ಮಾಡಿಸುತ್ತಾನೆ. ಕಠಾರಿಯನ್ನು ಮಾಸನೂರಿನ ದೊರೆಗೆ ಬಳುವಳಿಯಾಗಿ ನೀಡುತ್ತಾನೆ. ಸುರಗಿಯನ್ನು ಮಾಸನೂರಿನ ನದಿಯಲ್ಲಿ ಬಚ್ಚಿಡುತ್ತಾನೆ. ಈ ಸುರಗಿಯನ್ನು ತೆಗೆಯಲು ಒಬ್ಬ ನಾಥಜೋಗಿ ಯತ್ನಿಸುತ್ತಾನೆ. ಇಲ್ಲಿರುವ ಉಕ್ಕಿನಗುಂಡು ಸುರಗಿ ಕಠಾರಿ ಎಲ್ಲವೂ ರಸವಿದ್ಯೆಗೆ ಸಂಬಂಧಪಟ್ಟವು. ೨. ರೇವಣನು  ಕೊಲ್ಲಾಪುರದ ‘ಗೋರಖ ನಿಳಯ’ಕ್ಕೆ ಬಂದು ಭಿಕ್ಷೆ ಬೇಡುತ್ತಾನೆ. ಆಗ ಗೋರಖನು ತನ್ನ ಕಿರಿಯ ಮಡದಿ ಚಿಕ್ಕಲಕ್ಕಾದೇವಿಯಿಂದ ಹೊಸಕಠಾರಿಯ  ಭಿಕ್ಷವನ್ನು ನೀಡಿಸುತ್ತಾನೆ. ರೇವಣನು ಅದನ್ನು ಬಿಸುಗಣ್ಣಿಂದ ದಿಟ್ಟಿಸಿ ಕರಗಿಸಿ ರಸವನ್ನಾಗಿ ಮಾಡಿ ಕುಡಿದುಬಿಡುತ್ತಾನೆ. ಕೂಡಲೇ ‘‘ಮೂಡಿತ್ತು ತಾನೊಡನೆ ಗೋರಕನ ವಕ್ಷಮಂ ಕುಳ್ಳಿರ್ದನುದೊಳಗೆ ಮೂಡಿದ ಕಠಾರಿಯಂ’’; ಆಗ ಗೋರಖನ ಹಿರಿಮಡದಿ ಹಿರಿಯ ಲಕ್ಕಾದೇವಿ ಓಡಿಹೋಗಿ ಮಹಾಲಕ್ಷ್ಮಿಗೆ ವರದಿ ಮಾಡುತ್ತಾಳೆ. ಆಗ ಮಾಯಿ ಬಂದು ರೇವಣನೊಡನೆ ಬೇಡಿಕೊಳ್ಳಲು, ರೇವಣನು ಮನಕರಗಿ, ಲೋಹರಸವನ್ನು ಉಗುಳಿ ಗೋರಖನನ್ನು ಕಠಾರಿಯ ವೇದನೆಯಿಂದ ಪಾರುಮಾಡುತ್ತಾನೆ.  ರೇವಣನು ನೊಸಲಗಣ್ಣಿನ ಬೆಂಕಿಯಿಂದ ಲೋಹ ಕರಗಿಸಿ ರಸಮಾಡುವುದು ರಸಸಿದ್ದಿಯ ರೂಪಕವಾಗಿದೆ. ಆದರೆ ಈ ಕತೆಯಲ್ಲಿ ಬರುವ ಗೋರಖನು ಯಾರೆಂದು ತಿಳಿಯುವುದಿಲ್ಲ. ಈಗಲೂ ಕೊಲ್ಲಾಪುರದಲ್ಲಿ ಗೋರಖ ನಾಥ ಮಠವಿದೆ. ಹೀಗೆ ರಸವಿದ್ಯೆಗೂ ಕರ್ನಾಟಕದ ಸಿದ್ಧರಿಗೂ ಬಳ್ಳಿಯಂತೆ ಎಳೆಗಳು ಸುತ್ತಿಕೊಂಡಿವೆ. ಅದರಲ್ಲೂ ಚಿನ್ನದ ವಿಷಯದಲ್ಲಿ ಜನರಿಗಿರುವ ಆಕರ್ಷಣೆಯು, ವಿಚಿತ್ರ ಕತೆಗಳ ಹುಟ್ಟಿಗೆ ಕಾರಣವಾಗಿದೆ. ಈ ಕತೆಗಳ ಹಿಂದೆ ಇರುವ ರಸವಿಜ್ಞಾನದ ಸ್ವರೂಪವನ್ನು ಅರಿಯುವುದು ಒಂದು ಸವಾಲಾಗಿದೆ. ಈ ಕತೆಗಳಲ್ಲಿ ನಾಥರು ಹೇಗೊ ತಳುಕು ಹಾಕಿಕೊಂಡಿರುವುದನ್ನು ಮಾತ್ರ ಸದ್ಯಕ್ಕೆ ಗಮನಿಸಬಹುದು.

ಶರಣರ ಜತೆ

ಶರಣ ಚಳುವಳಿಯು ರೂಪುಗೊಳ್ಳುವಾಗ, ತನ್ನ ಹಿಂದಿನ ಹಾಗೂ ಸಮಕಾಲೀನವಾದ ಅನೇಕ ದರ್ಶನ ಹಾಗೂ ಪಂಥಗಳ ಜತೆ, ಸ್ವೀಕಾರ ಹಾಗೂ ಪ್ರತಿರೋಧಗಳ  ದ್ವಂದಾತ್ಮಕ ಸಂಬಂಧ ಏರ್ಪಡಿಸಿಕೊಂಡಿತ್ತು. ಈ ಸ್ವೀಕಾರ ಹಾಗೂ ವಿರೋಧಗಳು ನಿರ್ದಿಷ್ಟ ಪಂಥಕ್ಕೆ  ಇಡಿಯಾಗಿ ಇದ್ದವು. ಕೆಲವೊಮ್ಮೆ ಆ ಪಂಥದ ನಿರ್ದಿಷ್ಟ ಅಂಶದ ಮಟ್ಟಿಗೆ ಇದ್ದವು. ಉದಾ. ಶರಣರ ತಕರಾರು ನಾಥರ ಯೋಗಸಾಧನೆಗಳ ಬಗ್ಗೆ ಇರಲಿಲ್ಲ. ಆ ಸಾಧನೆಯನ್ನು ಕಾಯಕ್ಕೆ ಸೀಮಿತ ಮಾಡುವುದರ ಬಗ್ಗೆ ಇತ್ತು. ಮದವೇರಿದ ಮಹಾವ್ರತಿಗಳನ್ನು ಚೆನ್ನಬಸವಣ್ಣ ಟೀಕಿಸಿದರೆ, ಅಲ್ಲಮನೊಂದು ಕಡೆ ನಿಮ್ಮ ಮಹಾವ್ರತಿಗಳನು ಅಗಲಿ ಇರಲಾರೆ ಎಂದು ಹೇಳುತ್ತಾನೆ. ಅಂದರೆ ಕಾಪಾಲಿಕರಲ್ಲಿ ಅವರು ಅತಿಮಾರ್ಗಿಗಳನ್ನು ಖಂಡಿಸಿದರು ಎಂದು ಭಾವಿಸಬಹುದು. ಶರಣರು ಮಾತ್ರ ನಾಥರನ್ನು ಜೋಗಿಗಳು ಎಂದೇ ಕರೆಯುತ್ತಿದ್ದರು.

ಅಂಗಜಂಗುಳಿಗಳೆಲ್ಲಾ ಅಶನಕ್ಕೆ ನೆರೆದರು, ಲಿಂಗದ ಹವಣನಿವರೆತ್ತ ಬಲ್ಲರು?
ಕಾಯಜೀವಿಗಳು ಕಳವಳಧಾರಿಗಳು, ದೇವರ ಸುದ್ದಿಯನಿವರೆತ್ತ ಬಲ್ಲರು?
ಮದ್ಯ ಉಂಡು ಮದವೆದ್ದ ಜೋಗಿಯಂತೆ ನುಡಿವರು,
ಗುಹೇಶ್ವರ, ನಿಮ್ಮ ಶರಣರನಿವರೆತ್ತ ಬಲ್ಲರು?

ವಾಸ್ತವಾಗಿ ಈ ವಚನವು ಅಂಗಜಂಗುಳಿಗಳನ್ನು ಟೀಕಿಸಲು ಜೋಗಿಗಳ ಉಪಮೆ ಬಳಸುತ್ತಿದೆ. ಆದರೆ ಇದು ನೇರವಾಗಿ ಜೋಗಿಗಳ ಟೀಕೆಯಲ್ಲ. ‘ಕೊಂಕಣ ದ್ವೀಪದಲ್ಲೊಂದು ಕಪಿಹುಟ್ಟಿತ್ತು, ತಪವ ಮಾಡಿ ಸಪ್ತ ಋಷಿಯರ ನುಂಗಿತ್ತು, ನವನಾಥ ಸಿದ್ಧರ ತೊತ್ತಳ ದುಳಿಯಿತ್ತು’  ಎಂಬ ಅಲ್ಲಮನ ವಚನದಲ್ಲಿ  ನವನಾಥರ ಉಲ್ಲೇಖವಿದೆ. ಬಸವಣ್ಣ ತನ್ನದೊಂದು ವಚನದಲ್ಲಿ  ‘ಒಲೆಯಡಿಯನು ಉರುಹಿದೆಡೆ ಹೊಗೆ ಗೋಳಕನಾಥನ ಕೊರಳ ಸುತ್ತಿತ್ತು’  ಎಂಬ ಉಲ್ಲೇಖ ತರುತ್ತಾನೆ. ಇವರಿಬ್ಬರು ಯಾವ ಪ್ರಸಂಗಗಳನ್ನು ಉಲ್ಲೇಖಿಸಿ ಮಾತಾಡುತ್ತಿದ್ದಾರೆ ಎಂಬುದು ಖಚಿತವಾಗುವುದಿಲ್ಲ. ಬೆಡಗಿನ ಭಾಷೆಯಲ್ಲಿರುವ ಈ ಸಾಲುಗಳನ್ನು ನಾಥರ ಟೀಕೆ ಎಂದು ವಾಚ್ಯವಾಗಿ ಹೇಳುವುದು ಕಷ್ಟ. ಈ ವಚನಗಳಲ್ಲಿ  ನಾಥರ ಬಗೆಗಿನ ನಿಲುವು ಖಚಿತವಾಗದಿದ್ದರೂ,  ಜೋಗಿಗಳ ಪ್ರಸ್ತಾಪ ಬಂದಾಗಲೆಲ್ಲ ಮೆಚ್ಚುದನಿ ಕಾಣದು. ಮದವೇಳುವ, ತೊತ್ತಳ ತುಳಿಸಿಕೊಳ್ಳುವ, ಕೊರಳ ಸುತ್ತುವ ಕ್ರಿಯೆಗಳು ನೇತ್ಯಾತ್ಮಕ ದನಿಯನ್ನೆ ಪಡೆದಿವೆ. ಬಹುಶ: ಕರ್ನಾಟಕದಲ್ಲಿ ನಾಥರೂ ಕಾಪಾಲಿಕರೂ ವಿಲೀನಗೊಂಡ ಬಳಿಕ, ಅನೇಕ ಕಾಪಾಲಿಕ ಆಚರಣೆಗಳು ಮುಂದುವರೆದವು. ಅವು ಶರಣರಿಗೆ ಸಮ್ಮತವಾಗಿರಲಿಲ್ಲ. ವೈದಿಕ ವಿರೋಧಿಯಾದ ಶರಣರು, ನಾಥರ ಮತ್ತು ಕಾಪಾಲಿಕರ ವಿಷಯ ಬಂದಾಗ ವೈದಿಕ ನಿಲುವನ್ನೇ ತಳೆಯುತ್ತಾರೆ.  ಉದಾ. ಅವರು ನಾಯಿಯನ್ನು ಅಪಾವಿತ್ರ್ಯದ ಸಂಕೇತವಾಗಿಸಿದರು. ಭೈರವಾರಾಧನೆಯಲ್ಲಿ ಬಲಿ, ಮಾಂಸಾಹಾರ, ಮದ್ಯಪಾನಗಳನ್ನು ತಿರಸ್ಕರಿಸಿದರು.  ಶರಣರು ಗೋರಖನನ್ನು ಸೋಲಿಸುವ ಕಥನಗಳು ಹುಟ್ಟಿದ್ದನ್ನು ಈ ಹಿನ್ನೆಲೆಯಲ್ಲೇ ಗಮನಿಸಬೇಕು. ವ್ಯಂಗ್ಯವೆಂದರೆ, ನಾಥರು ಚೌರಾಸಿ ಸಿದ್ಧನನ್ನಾಗಿ ಆದರದಿಂದ ನೆನೆಯುವ ಅಲ್ಲಮನೆ ಈ ಕಥನಗಳಲ್ಲಿ ನಾಥರ ಮೇಲಿನ ದಾಳಿಯ ದಂಡನಾಯಕ ಆಗಿರುವುದು. ‘ಸಿದ್ಧಸಿದ್ಧಾಂತ ಪದ್ಧತಿ’  ಬರೆದ ಗೋರಖನು ಒಬ್ಬ ದೊಡ್ಡಜ್ಞಾನಿ ಹಾಗೂ ಯೋಗಿ; ಕಾಲದ ದೃಷ್ಟಿಯಿಂದ ಅಲ್ಲಮನಿಗಿಂತ ಹಿರಿಯ; ಭಾರತದಾದ್ಯಂತ ಆದರ ಪಡೆದವನು. ಈ  ಗೋರಖನೂ  ಅಲ್ಲಮನೂ ಚಾರಿತ್ರಿಕವಾಗಿ ಮುಖಾಮುಖಿ ಆಗಿರುವ ಸಂಭವ ಕಡಿಮೆ. ಕನ್ನಡ ಕಥನಗಳಲ್ಲಿ ಅಲ್ಲಮನು ಕದಳಿವನದಲ್ಲಿ ಭೇಟಿಮಾಡುವ ಗೋರಖನು ಯಾವುದೊ ಕಾಯವಾದಿ ಸಾಧನೆಗೆ ಸೀಮಿತನಾಗಿದ್ದ ನಾಥಯೋಗಿ. ಬಹುಶಃ  ನಾಥರ ಬಗ್ಗೆ ಅಲ್ಲಮನ ವಚನಗಳಲ್ಲಿದ್ದ ಟೀಕೆಗಳೇ,  ಅಲ್ಲಮನ ಚಾರಿತ್ರ ಬರೆದ ಕವಿಗಳಿಗೆ ರೋಚಕ ಮುಖಾಮುಖಿ ಪ್ರಸಂಗಗಳನ್ನುಸೃಷ್ಟಿಸಲು ಪ್ರಚೋದನೆ ನೀಡಿರಬಹುದು.  ಶ್ರೀಶೈಲವು ಅನೇಕ ಪಂಥಗಳ ಸಿದ್ಧರು ಭೇಟಿಯಾಗುತ್ತಿದ್ದ ಸಾಮಾನ್ಯ ಸ್ಥಳವಾಗಿದ್ದು, ಅವರ ನಡುವೆ ನಡೆದಿರಬಹುದಾದ ತಾತ್ವಿಕ ವಾಗ್ವಾದ ಕೂಡ ಈ ಕವಿಗಳಿಗೆ   ತಮ್ಮ ಕಥಾನಾಯಕನನ್ನು ವೈಭವೀಕರಿಸು ಕಥನವಾಗಿ ಪ್ರೇರಣೆ ಕೊಟ್ಟಿರ ಬಹುದು.

ಇದರ ಜತೆಗೆ ನಾಥ ಮತ್ತು ಕಾಪಾಲಿಕ ಪಂಥಗಳಿಂದ ಅನೇಕರು ಶರಣ ಸಮೂಹವನ್ನು ಪ್ರವೇಶಿಸಿರುವ ಸಾಧ್ಯತೆಯಿದೆ. ಶರಣರಲ್ಲಿ ಇರುವ ಯೋಗಸಾಧಕರ ಸಂಖ್ಯೆ ಬಹಳ ದೊಡ್ಡದಾಗಿದೆ. ಜಗಳೂರಿನ ಒಂದು ಶಾಸನಾಧಾರದಿಂದ ಕಪಟರಾಳರು ‘ಬಸವೇಶ್ವರನು ನಾಥ ಸಿದ್ಧಪಂಥದ ಅನುಯಾಯಿ’  ಎಂದು ವಾದಿಸುತ್ತಾರೆ.[5] ಆದರೆ ಈ ವಾದ ಒಪ್ಪುವಷ್ಟು ಬಲವಾಗಿಲ್ಲ. ಸಿದ್ಧರಾಮನ ಹೆಸರಲ್ಲಿರುವ ಸಿದ್ಧ, ಅವನ ಅಂಕಿತದಲ್ಲಿರುವ ಕಪಿಲಸಿದ್ಧ, ಇವನ್ನು ಆಧರಿಸಿ ಅವನೊಬ್ಬ ನಾಥಸಿದ್ಧ ಎಂದು ಕಲಬುರ್ಗಿಯವರು ಪ್ರತಿಪಾದಿಸುತ್ತಾರೆ.[6] ಈ ಸಂಗತಿ ಕೂಡ ಒಪ್ಪಲು ಕಷ್ಟವಾಗಿದೆ. ಆದರೆ ಶರಣರಲ್ಲಿದ್ದ ಅನೇಕ ಪ್ರಗತಿಪರ  ಚಿಂತನೆಗಳು, ಕಾಪಾಲಿಕ ನಾಥ ಶಾಕ್ತ ಕೌಳ ಮುಂತಾದ ತಂತ್ರ ಪಂಥಗಳಿಂದ ಬಂದವು ಎಂಬ ಬಗ್ಗೆ ಕೆಲವು ವಿದ್ವಾಂಸರು ಶೋಧಿಸಿದ್ದಾರೆ. ಅವರಲ್ಲಿ ಪುಣೇಕರ್, ಕಪಟರಾಳ ಹಾಗೂ ಕೆ ಜಿ ನಾಗರಾಜಪ್ಪನವರು ಮುಖ್ಯರು. ಕೆ.ಜಿ.ನಾಗರಾಜಪ್ಪನವರ ಪ್ರಕಾರ, ವಿವಿಧ ತಾಂತ್ರಿಕ ಪಂಥಗಳು ಜನರ ಗುಪ್ತಸಾಧನೆಯಲ್ಲಿದ್ದವು. ಹಲವು  ಜಾತಿ ಮತ ಪಂಥಗಳಿಂದ ವೀರಶೈವ ಧರ್ಮಕ್ಕೆ ಮತಾಂತರಗೊಂಡ ಶರಣರು, ಅಂಥ ಗುಪ್ತಸಮಾಜದ ದೀಕ್ಷಾಬದ್ಧ ಸದಸ್ಯರಾಗಿದ್ದರು. ಶರಣರಲ್ಲಿರುವ ವೇದವಿರೋಧ,ಗುರುವಿನ ಮಹತ್ವ, ಜಾತ್ಯತೀತ ಧಾರ್ಮಿಕ ಆಚರಣೆ, ತತ್ವಕ್ಕಿಂತ ಸಾಧನೆಗೆ ಮಹತ್ವ, ಮಾತೃಭಾಷೆಯ ಬಳಕೆ, ಹೆಣ್ಣಿಗೆ ಧಾರ್ಮಿಕ ಸ್ವಾತಂತ್ರ್ಯ ಮುಂತಾದ ಅನೇಕ ಪ್ರಗತಿಪರ ಚಿಂತನೆಗಳು ಈ ಗುಪ್ತಸಮಾಜದಿಂದ ಬಂದವು.[7]

೧೨ನೇ ಶತಮಾನದ ಬಳಿಕ ನಾಥರು ಮತ್ತು ಕಾಪಾಲಿಕರು ಅಲ್ಲಲ್ಲಿ ಸುಳಿಯುತ್ತಾರೆ.  ತೋಂಟದ ಸಿದ್ದಲಿಂಗ ಪರಂಪರೆಯ ಒಬ್ಬ ವಚನಕಾರ ಗೋರಖನನ್ನು ನೆನೆಯುತ್ತಾನೆ. ಅಷ್ಟೇಕೆ ಗೋರಖನಾಥ ಎಂಬ ಹೆಸರಿನ ಒಬ್ಬ ವಚನಕಾರನೂ ಇದ್ದಾನೆ. ಆದರೂ ನಾಥಪಂಥವು ಮಹಾರಾಷ್ಟ್ರದಲ್ಲಿರುವಂತೆ ಕರ್ನಾಟಕದಲ್ಲಿ ಬೆಳೆಯಲಿಲ್ಲ. ಇದಕ್ಕೆ ಕಾರಣ ೧. ಸಮುದಾಯಗಳ ಸಾಮಾಜಿಕ ಆರ್ಥಿಕ ಆಧ್ಯಾತ್ಮಿಕ ಸಮಾನತೆಯನ್ನು ಪ್ರತಿಪಾದಿಸುವ ಶರಣ ಚಳುವಳಿಯು ಒಂದು ಪರ್ಯಾಯವಾಗಿ ಮೂಡಿ ಜನಪ್ರಿಯತೆ ಪಡೆದಿದ್ದು. ೨. ನಾಥರು ಗುಹೆ ಕಾಡು ಕಣಿವೆಗಳಲ್ಲಿ ವಾಸಿಸುತ್ತ, ಸಾರ್ವಜನಿಕ ಬದುಕಿಗೆ ದೂರವಾಗಿ ಉಳಿದುದು. ೩. ನಾಥರ  ಅಖಿಲ ಭಾರತೀಯ ವ್ಯಾಪ್ತಿಯು ಶರಣರಂತೆ, ಸ್ಥಳೀಯ ಪರಿಸರದ ಭಾಗ ವಾಗಲು ಅಸಾಧ್ಯವಾದುದು. ೪. ನಾಥವು  ದಾರ್ಶನಿಕವಾಗಿ ಪ್ರಗತಿಪರ ಆಗಿದ್ದರೂ ಅದರ ಯೋಗ ಮಾರ್ಗದ ವ್ಯಕ್ತಿವಾದಿ ಆಯಾಮವು, ವಿಶಾಲ ಸಮುದಾಯಗಳ ಆಶೋತ್ತರ ಗಳನ್ನು ಒಳಗೊಳ್ಳಲು ಆಗದೆ ಹೋದುದು. ಕರ್ನಾಟಕಕ್ಕೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ನಾಥಪಂಥವು ಮಹಾನುಭಾವ ವಾರಕರಿ  ದತ್ತ ಮೊದಲಾದ ಜನಪ್ರಿಯ ಪಂಥಗಳ ಹುಟ್ಟಿಗೆ ಕಾರಣವಾಯಿತು ಹಾಗೂ ವಿಶಾಲ ಸಮುದಾಯಗಳ ಭಾಗವಾಯಿತು.  ಮರಾಠಿಯ  ‘ನವನಾಥ ಚರಿತ್ರೆ’  ಹಾಗೂ ‘ಅವಧೂತಗೀತ’ಗಳ ಪ್ರಕಾರ, ದತ್ತಾತ್ರೇಯನು ಗೋರಖ ಮಚೇಂದ್ರ ರನ್ನು ಒಳಗೊಂಡಂತೆ, ನವನಾಥರಿಗೆ ದೀಕ್ಷಾ ಗುರುವಾಗುತ್ತಾನೆ. ‘ದತ್ತಗೋರಕ್ಷ ಗೋಷ್ಠಿ’ ಎಂಬ ಗ್ರಂಥವು ಅಲ್ಲಿ ಹುಟ್ಟಿಕೊಂಡಿತು. ವಾರಕರಿ ಹಾಗೂ ಮಹಾನುಭಾವಗಳು ನಾಥಪಂಥದ ಯೋಗ ಹಾಗೂ ಗುರುತತ್ವವನ್ನು ಸ್ವೀಕರಿಸಿದರೂ, ಜತೆಗೆ ಭಕ್ತಿತತ್ವವನ್ನೂ ಅಳವಡಿಸಿಕೊಂಡವು. ಜ್ಞಾನೇಶ್ವರನು ನಾಥಪಂಥದಿಂದ ಪ್ರಭಾವಿತನಾಗಿದ್ದ ಜನಪ್ರಿಯ ಸಂತನು. ನಾನೊಬ್ಬ ನಾಥಪಂಥದ ನಮ್ರ ಅನುಯಾಯಿಯಾಗಿ (‘ಅಮ್ಹಿ ಏಕದೀನ ಜಾಣ ನಾಥಪಂಥಿ’) ಎಂದು ಆತ ತನ್ನನ್ನು ಅಭಂಗಗಳಲ್ಲಿ ಬಣ್ಣಿಸಿಕೊಳ್ಳುತ್ತಾನೆ. ಕರ್ನಾಟಕದ ನಾಥರಲ್ಲಿ ಈ ಪರಿಯ ಜನಪ್ರಿಯ ಸಂತರು ಬರಲಿಲ್ಲ. ಇಲ್ಲಿ ನಾಥವು ಕೆಲವು ಮಠ, ಸಮುದಾಯ ಹಾಗೂ ಪ್ರದೇಶಗಳಿಗೆ ಸೀಮಿತಗೊಂಡಿತು. ಇದ್ದುದರಲ್ಲಿ ಕರ್ನಾಟಕದ ಆರೂಢರು ನಾಥರ ರೂಪಾಂತರ ಎನ್ನಬಹುದು. ಆದರೂ ಅವರು ಗೋರಖನಿಗಿಂತ ಅಲ್ಲಮನನ್ನು ಹೆಚ್ಚು ನೆನೆಯುತ್ತಾರೆ. ಹಾಗೆಂದು ಶರಣರಂತೆ ಇವರು ನಾಥರನ್ನು ವಿರೋಧಿಸುವುದಿಲ್ಲ.  ಗ್ರಾಮೀಣ ಪ್ರದೇಶದ ಸಣ್ಣಪುಟ್ಟ ಮಠಗಳಲ್ಲಿದ್ದ ಇವರು ತಮ್ಮ ಭಾಗದ ನಾಥರ ಜತೆ ಸಹಬಾಳುವೆ ಮಾಡಿದಂತೆ  ತೋರುತ್ತದೆ.

ಶರಣರ ವಿರೋಧದಿಂದ ನಾಥರು ಮತ್ತು ಕಾಪಾಲಿಕರು ಕೊಂಚ ಹಿನ್ನಡೆ ಕಂಡರು.  ಶರಣ ಧರ್ಮದ ಪ್ರವೇಶವಿಲ್ಲದ ಕಣಿವೆ ಕಂದರಗಳ ಜಾಗಗಳಿಗೆ ಅವರು ತಮ್ಮನ್ನು ಸೀಮಿತಗೊಳಿಸಿಕೊಂಡರು. ಕದ್ರಿ, ಚುಂಚನಗಿರಿ, ಲುಂಕೆಮಲೆ, ಚಂದ್ರಗುತ್ತಿ, ಹಲವೇರಿ ಮುಂತಾದ ಮಠಗಳು ಲಿಂಗಾಯತ ಪ್ರಾಬಲ್ಯವಿಲ್ಲದ ಜಾಗಗಳಲ್ಲಿವೆ ಎಂಬುದು ಗಮನಿಸ ಬೇಕು. ಬಹುಶಃ ಎಲ್ಲ ಗುಪ್ತಪಂಥಗಳಲ್ಲೂ ಹೇಗೂ ಬದುಕುಳಿಯವ ಗುಟ್ಟುಗಳಿರುತ್ತವೆ. ಇಲ್ಲದಿದ್ದರೆ ೨೦ನೇ ಶತಮಾನದವರೆಗೆ ನಾಥರು ಉಳಿಯಲು ಸಾಧ್ಯವಾಗುತ್ತಿರಲಿಲ್ಲ. ಮಾತ್ರವಲ್ಲ,  ಲಿಂಗದೀಕ್ಷೆ  ಪಡೆದ ಬಳಿಕವೂ  ಗುಪ್ತವಾಗಿ ಕಾಪಾಲಿಕ ಆರಾಧನೆಗಳನ್ನು ಮುಂದುವರೆಸಿಕೊಂಡು ಅನೇಕ ಸಮುದಾಯಗಳು ಉಳಿದವು. ಅವುಗಳಲ್ಲಿ ಈಗಲೂ ಭೈರವರಾಧನೆಗೆ ಉಳಿದಿದೆ. ಲುಂಕೆಮಲೆ, ಮಣಕತ್ತೂರು,  ಸೊಂಡೆಕೊಪ್ಪಗಳಲ್ಲಿ ಇದನ್ನು ಕಾಣಬಹುದು. ಮಣಕತ್ತೂರಿನ ಭೈರವ ಮೂರ್ತಿಯು ಕಪಾಲ ಮಾಲೆಯ ಬದಲು ಲಿಂಗಗಳ ಮಾಲೆಯನ್ನು ತೊಟ್ಟಿದೆ. ಸೊಂಡೆಕೊಪ್ಪದ ಭೈರವನಿಗೆ  ಲಿಂಗದ ಕರಡಿಗೆ ಕಟ್ಟಿದೆ. ಸಮುದಾಯಗಳ ಬದುಕಿನಲ್ಲಿ ಬೇರುಬಿಟ್ಟ ಪಂಥೀಯ ಆಚರಣೆ ಹಾಗೂ ಚಿಂತನೆಗಳು ಪ್ರಬಲವಾದ ವಿರೋಧ ಬಂದಾಗ, ಕಣ್ಮರೆಯಾದಂತೆ ನಟಿಸುತ್ತವೆ. ಆದರೆ ಅವಕಾಶ ಸಿಕ್ಕೊಡನೆ ಪುಟಿದು ಮೇಲೆ ಬಂದು ಬದುಕುತ್ತವೆ.

. ಸೂಫಿಗಳ ಜತೆ

ನಾಥಪಂಥಕ್ಕೂ ಸೂಫಿಪಂಥಕ್ಕೂ ಗಾಢವಾದ ತಾತ್ವಿಕ ಸಂಬಂಧ ಇತ್ತು. ಇದು ಸದ್ಯದ  ಮತೀಯವಾದದ ಮಂಜು ಮುಸುಕಿರುವ ಸನ್ನಿವೇಶದಲ್ಲಿ ನಂಬಲಾಗದ ಸಂಗತಿಯಾಗಿ ತೋರಬಹುದು.  ಈಗಲೂ ನಾಥ ಸೂಫಿಗಳಲ್ಲಿ ದೀರ್ಘಕಾಲದ ಅನುಸಂಧಾನದ ಕುರುಹು ಗಳು ಅಳಿದಿಲ್ಲ. ಸಾಂಕೇತಿಕವಾಗಿಯಾದರೂ ಇವೆ. ಮೂಲತಃ ಎರಡೂ ಗುರುಪಂಥಗಳು. ಅನುಭಾವಿಗಳು. ಎರಡರ ದಾರ್ಶನಿಕ ಪ್ರೇರಣೆಗಳು ಬಹಳಷ್ಟು ಸಮಾನವಾಗಿವೆ. ನಾಥರ ‘ಅಲಖ್ ನಿರಂಜನ್’ ಘೋಷಣೆಯು ಸೂಫಿಗಳ ‘ಅಲ್‌ಹಖ್’ನಿಂದ ಬಂದುದು. ತಾತ್ವಿಕವಾಗಿ ‘ಅಲಖ್’ ಕೂಡ  ತನ್ನ ತಾನರಿಯುವುದನ್ನು ಹೇಳುತ್ತದೆ. ಸಾಧಕರು ತಮ್ಮೊಳಗಿನ ಬೆಳಕನ್ನು ಕಂಡುಕೊಂಡು ತಾವೇ ಪರತತ್ವವಾಗುವುದು. ನಾಥಯೋಗಿಗಳನ್ನು ‘ಪೀರ್’ (ಗುರು) ಎಂದು ಕರೆಯಲಾಗುತ್ತದೆ; ಅವರ ಘೋಷಣೆಗಳಲ್ಲಿ ‘ಗುರು ಪೀರೋಂಕಾ ಜಯಕಾರ್’ ಎಂಬ ಸಾಲು ಬರುತ್ತದೆ. ನವನಾಥರಲ್ಲಿ ಜಾಲಂಧರನಿಗೆ ಜಾನ್‌ಪೀರ್ ಎಂದೂ ಗಹಿನಿನಾಥನಿಗೆ ಗಹಿರಿಪೀರ್ ಎಂದೂ ಖನೀಫನಾಥನಿಗೆ ಖಾನಪೀರ್ ಎಂದೂ ಕರೆಯಲಾಗುತ್ತದೆ. ಕದ್ರಿಯ ನಾಥಮಠಕ್ಕೆ ಅರಸರಾಗಿದ್ದ ಟೆಹಲ್‌ನಾಥರು ಸೂಫಿ ಕುಲಾವಿ ಧರಿಸುತ್ತಿದ್ದರು. ಈಗಿನ  ಹಂಡಿಬಡಗ ಮಠದ ಮಹಂತನ ಹೆಸರು ಪೀರ್ ಸಿಧನಾಥ್; ಹಲವರಿ ಮಠದ ಗುರುವಿನ ಹೆಸರು ಪೀರ್ ಸೋಮನಾಥ್.

ನಾಥರಿಗೆ  ‘ಪೀರ್’ ಎಂದು ಯಾಕೆ ಕರೆಯುತ್ತಾರೆ ಎಂದು ವಿಟ್ಲದ ಜೋಗಿಮಠದಲ್ಲಿ ಭೇಟಿಯಾದ ಸೋಮವಾರ ನಾಥರಿಗೆ  ಕೇಳಿದೆ. ಅವರು  ‘ಹಿಂದೂಕಾ ಗುರು. ಮುಸಲ್ಮಾನಕೆ ಪೀರ್. ಜೋ ನ ಮಾನೆ ವೋ ಹೋಗಾ ಕಾಫಿರ್’ (ಹಿಂದುವಿನ ಗುರು, ಮುಸಲ್ಮಾನರಿಗೆ ಪೀರ್. ಇದನ್ನು ಒಪ್ಪದಿರುವವರೆಲ್ಲ ಕಾಫಿರರು) ಎಂದು ಉತ್ತರಿಸಿದರು. ಇದೇ ಪ್ರಶ್ನೆಯನ್ನು ಬತ್ತೀಸಶಿರಾಳದ ನಾಥಮಠದಲ್ಲಿ ಶಿವನಾಥರಿಗೆ ಕೇಳಿದೆ. ಅದಕ್ಕವರು ‘ನಾಥಪಂಥದಲ್ಲಿ ಜಾತಿಭೇದವಿಲ್ಲ. ಕರ್ಮವನ್ನು ನೋಡಲಾಗುತ್ತದೆ. ಕಬ್ಬಿಣವನ್ನು ಚಿನ್ನವಾಗಿಸುವ ಪರುಷಮಣಿಗೆ ಏನೂ ಭಾಧೆ ಆಗುವುದಿಲ್ಲ. ಹಾಗೇ ಗುರುವಿಗೆ ಕೂಡ’ ಎಂದರು. ಆದರೂ ಮುಸ್ಲಿಮರ ಬಗ್ಗೆ ಆಳದಲ್ಲಿ ಅವರಲ್ಲಿ ಪೂರ್ವಗ್ರಹ ಕಾಣುತ್ತಿತ್ತು. ಮರಾಠಿಯ ‘ನವನಾಥ ಕಥಾಸಾರ’ದ ಪ್ರಕಾರ, ನಾಥರಿಗೆ ಪೀರ್ ಎಂಬುದು  ‘‘ಯವನರೇ ಬದಲಿಸಿ ಇಟ್ಟ ಹೆಸರು’’; ಸಿಂದಗಿಯ ಜಕ್ಕಪ್ಪಯ್ಯನಿಗೆ ಔರಂಗಜೇಬನು ಹಾಕಿಕೊಟ್ಟ ಫಾರಸಿ ಸನದಿನಲ್ಲಿ  ‘ಬ್ರಾಹ್ಮಣ ಫಕೀರ’ ಎಂದು ಕರೆದಿದೆ. ನಾಥರನ್ನು ಕರೆಯಲು ಮುಸ್ಲಿಮರಿಗೆ ಸುಲಭಕ್ಕೆ ಸಿಗುತ್ತಿದ್ದ ಪರಿಭಾಷೆ ಸೂಫಿಗಳದ್ದೇ ಆಗಿತ್ತು.

ಕೆಲವು ನಾಥರ ಅಭಿಪ್ರಾಯದಂತೆ, ನಾಥಪಂಥಕ್ಕೆ ದೊಡ್ಡ ಪ್ರಮಾಣದಲ್ಲಿ ಸೂಫಿಗಳು ಸೇರಿಕೊಂಡರು. ಅವರೇ ಮುಂದೆ ಪೀರರಾದರು. ನಿಜವೇನೆಂದರೆ, ತಾತ್ವಿಕವಾಗಿ ಆಚರಣೆ ಹಾಗೂ ಸಾಧನೆಗಳಲ್ಲಿ ಸೂಫಿಗಳಿಗೂ ನಾಥರಿಗೂ ನೂರಾರು ವರ್ಷ ಕೊಡುಕೊಳೆ ನಡೆಯಿತು. ಈ  ಅನುಸಂಧಾನದಿಂದ ಎರಡು ಮುಖ್ಯ ಪರಿಣಾಮಗಳಾದವು. ೧. ನಾಥರ ಮತ್ತು ಸೂಫಿಗಳ ಪಠ್ಯಗಳು ದಾರ್ಶನಿಕ ವಿನಿಮಯ ಮಾಡಿಕೊಂಡವು.  ‘ಹೌಜ್ ಉಲ್ ಹಯಾತ್’(ಜ್ಞಾನದ ಬಾವಿ) ಎಂಬ ಸೂಫಿಪಠ್ಯವು ಯೋಗಸಾಧನೆಯನ್ನು ವಿವರಿಸುತ್ತದೆ. ಇದು ನಿಸ್ಸಂಶಯವಾಗಿ ಇಸ್ಲಾಮಿನ ಮೇಲೆ ಯೋಗದ ಪ್ರಭಾವ ಎಂದು ಬ್ರಿಗ್ಸನು ಹೇಳುತ್ತಾನೆ. ವಾಸ್ತವದಲ್ಲಿ ಇದು  ಸೂಫಿಪಂಥದ ಮೇಲಾದ ಪ್ರಭಾವ. ಮುಂದೆ ಸೂಫಿಮತ ವನ್ನು ಭಾರತದ ಷಡು ದರುಶನಗಳಲ್ಲಿ ಸೇರಿಸಲಾಯಿತು.[8] ೨.ಸಾಮಾಜಿಕವಾಗಿ ಉತ್ತರ ಭಾರತದಲ್ಲಿ ಮುಸ್ಲಿಂಜೋಗಿ ಎಂಬ ಸಮುದಾಯವೇ ಸೃಷ್ಟಿಯಾಯಿತು. ಇಸ್ಮಾಯಿಲ್ ಜೋಗಿ ಎಂಬ ಸಮುದಾಯವೂ ಇದೆ. ಹಿಂದಿಯ  ಸೂಫಿಕವಿ ಮಲಿಕ್ ಮಹಮ್ಮದ್ ಜಾಯಸಿಯು ನಾಥಪಂಥದಿಂದ ಪ್ರಭಾವಿತನಾಗಿದ್ದನು. ಅವನ ‘ಪದ್ಮಾವತ್’ ಕಾವ್ಯದಲ್ಲಿ ಗೋರಖನ ಸ್ಮರಣೆಯಿದೆ. ನಾಥರು ಪಠಿಸುವ  ‘ಶಾಬರ ಮಂತ್ರ’ ಗಳನ್ನು ಗಮನಿಸಬೇಕು.  ನಾಥಪಂಥದ ಜನಪ್ರಿಯ ಸಾಹಿತ್ಯ ಎನ್ನಬಹುದಾದ ಇಲ್ಲಿ ಕೆಲವು ಮಂತ್ರಗಳು ಸೂಫಿಗಳ ಹೆಸರಿನಲ್ಲಿವೆ. ಒಂದು ಮಂತ್ರವು ಪಂಜಾಬಿನ ಸೂಫಿ ಬಾಬಾ ಫರೀದನ ಹೆಸರಲ್ಲಿದೆ. ಇನ್ನೊಂದು  ಮಹಮ್ಮದ್ ಹೆಸರಲ್ಲಿವೆ. ಕೆಲವು ಇಸ್ಮಾಯಿಲ್ ಹೆಸರಲ್ಲಿವೆ. ಸೂಫಿಗಳಲ್ಲಿ ಇಸ್ಲಾಮಿನ ಸಾಮಾಜಿಕ ಕಟ್ಟಳೆಗಳಾದ ಶರಿಯತ್ತನ್ನು ಪಾಲಿಸದೊಖಲಂದರಿಯಾ ರಫಾಯಿಯಾ ಮುಂತಾದ ಬಂಡುಕೋರ ಶಾಖೆಗಳಿವೆ. ಇವುಗಳಿಗೂ ನಾಥರಿಗೂ ಸಮಾನ ಅಂಶಗಳೆಂದರೆ, ಶಸ್ತ್ರಧಾರಣೆ, ದೇಹದಂಡನೆ,  ಸನ್ಯಾಸ, ತಿರುಗಾಟ. ಸಮಾನ ಆಸಕ್ತಿ ಹಾಗೂ ಕಾರ್ಯಗಳು ಪಂಥಾತೀತ ಗೆಳೆತನಕ್ಕೆ ಕಾರಣವಾಗುತ್ತವೆ.

ಭಾರತದ ಅನೇಕ ಕಡೆ ಸೂಫಿಗಳ ದರ್ಗಾ ಹಾಗೂ ನಾಥರ ಮಠಗಳು ಒಟ್ಟಿಗೆ ಇವೆ.  ಚಿಸ್ತಿಸೂಫಿಗಳ ಕೇಂದ್ರವಾದ ಅಜ್ಮೀರದಲ್ಲಿ ನಾಥಪಂಥದ ಭೈರಾಗ್ ಶಾಖೆಯನ್ನು ಭರ್ತೃಹರಿ ಸ್ಥಾಪಿಸುತ್ತಾನೆ. ಗೋರಖನಾಥ ಮಠವಿರುವ ತ್ರ್ಯಂಬಕೇಶ್ವರದಲ್ಲಿ ಗುಲಾಬಶಾ ವಲಿ ಹಾಗೂ ಕರೀಮಶಾವಲಿಯರ  ದರ್ಗಾಗಳಿವೆ. ಈ  ದರ್ಗಾಗಳಲ್ಲಿರುವ ಗುಹೆಗಳು ಸೂಫಿಗಳೂ ಯೋಗಸಾಧಕರು ಎಂಬುದರ ಕುರುಹಾಗಿವೆ.. ಹಿಂದೆ ಕದ್ರಿಬೆಟ್ಟದಲ್ಲಿ ಒಬ್ಬ ಮುಸ್ಲಿಂ ನಾಥಯೋಗಿ ವಾಸವಾಗಿದ್ದನು. ಅವನು ದೇಹಬಿಟ್ಟ ಬಳಿಕ ನಾಥ ಸಂಪ್ರದಾಯದ ಪ್ರಕಾರ ಸಮಾಧಿ ಮಾಡಲಾಯಿತು. ಆ ಸಮಾಧಿ ಈಗಲೂ ಕದ್ರಿಬೆಟ್ಟದಲ್ಲಿದೆ. ಸಿದ್ಧಾಪುರದ (ಬೀಳಗಿ) ದಿಗಂಬರೇಶ್ವರ ಮಠದ ಆವರಣದಲ್ಲಿ ಸಿದ್ಧರ ಗದ್ದುಗೆಗಳಿವೆ. ಅವುಗಳಲ್ಲಿ ಒಂದು ಸೂಫಿಶೈಲಿಯ ಗೋರಿಯಿದೆ. ಬೀಳಗಿ ಡೋಂಗ್ರಿಸಾಬನ ದರ್ಗಾದಲ್ಲಿ ಅವನ ‘ಹಿಂದೂ’ ಶಿಷ್ಯರ ಸಮಾಧಿಗಳಿವೆ. ಇವೆಲ್ಲ ನಾಥರ ಸಿದ್ಧರ ಸೂಫಿಗಳ ಸಂಗವನ್ನು ಸೂಚಿಸುತ್ತಿವೆ.

ಸೂಫಿ ಹಾಗೂ ನಾಥರ ಕೊಡಕೊಳೆಯ ದೃಷ್ಟಿಯಿಂದ ಬಾಬಾಬುಡನಗಿರಿ ಒಂದು ಮಹತ್ವದ ತಾಣ. ಇದು ಖಲಂದರ್ ಶಾಖೆಯ ಪ್ರಸಿದ್ಧ ಕೇಂದ್ರ. ಬಾಬಾಬುಡನಗಿರಿಯನ್ನು ದಾದಾಕ ಪಹಾಡ್(ಅಜ್ಜನಬೆಟ್ಟ) ಎಂದೂ ಇಲ್ಲಿದ್ದ ಸೂಫಿಗೆ ದಾದಾಹಯಾತ್ ಎಂದೂ ಕರೆಯತ್ತಾರೆ. ನಾಥರು ಮಚ್ಚೇಂದ್ರನಿಗೆ ದಾದಾ ಎಂದೂ ಮುಸ್ಲಿಮರು ‘ಯಾದ್ ಖಲಂದರ್’  ಎಂದೂ ಕರೆಯುತ್ತಾರೆ. ಡೊಂಗರಗಾಂವಿನ (ಖಾನಾಪುರ) ಮಚೇಂದ್ರನಾಥನ ಮಠವನ್ನು ದಾದಾಕಾ ಮಠ್ ಎಂದೇ ಕರೆಯಲಾಗುತ್ತದೆ. ಬಾಬಾಬುಡನಗಿರಿಗೆ ಬರುವ ಫಕೀರರಿಗೂ ನಾಥರಿಗೂ ಬಹಳ ಸಾಮ್ಯಗಳಿವೆ. ಬಾಬಾಬುಡನಗಿರಿಯ ಸೂಫಿಗುರು ತಿಳಿಕಾವಿ ಧರಿಸುತ್ತಾರೆ. ಇಲ್ಲಿ ನಾಥಪಂಥದ ಧುನಿಯಂತಹ ಧುನಿಯಿದೆ. ಅದರಲ್ಲಿ ದಸ್‌ಪನಾ (ಶಸ್ತ್ರ) ಹಾಗೂ ಚಿಮುಟಾ ಇಡಲಾಗಿದೆ. ಬಾಲ್ಯದಲ್ಲಿ ನಾನು ಕಂಡಂತೆ ಅದರಲ್ಲಿ ಸದಾ ಬೆಂಕಿಯಿರುತ್ತಿತ್ತು. ಇಲ್ಲಿಗೆ ಬಂದ ಯೋಗಿಗಳಿಗೆ ದರ್ಗಾದ ವತಿಯಿಂದ ಭಂಗಿ ಕೊಡುವ ವ್ಯವಸ್ಥೆಯಿತ್ತು ಎಂದು ಬ್ರಿಟಿಶ್ ದಾಖಲೆಗಳು (೧೯ನೇ ಶತ.) ಹೇಳುತ್ತವೆ.  ಹರಿದ್ವಾರ ಸಮೀಪದ ಕುಲ್ಯಾರ್ ಶರೀಫದ ದರ್ಗಾದಲ್ಲೂ ಧುನಿಯಿದೆ ಎಂದು ಉತ್ತರ ಭಾರತದಿಂದ ಬಂದಿದ್ದ ಫಕೀರರು ಹೇಳಿದರು. ಗಿರಿಕಂದರಗಳಲ್ಲಿ ಇರುವ ದರ್ಗಾ ಹಾಗೂ ನಾಥಮಠಗಳಲ್ಲಿ ಚಳಿಕಾಯಿಸಲು, ಅಡಿಗೆಗೆ, ಭಂಗಿಸೇದುವ ಕೆಂಡಕ್ಕಾಗಿ, ಕಾಡು ಪ್ರಾಣಿಗಳಿಂದ ರಕ್ಷಣೆಗಾಗಿ- ಧುನಿ ಬೇಕಾಗುತ್ತದೆ. ಬಾಬಾಬುಡನಗಿರಿ ಉರುಸಿಗೆ ಬಂದ ಫಕೀರರು ತಂತಮ್ಮ ಬಿಡಾರಗಳಲ್ಲಿ ಧುನಿ ಹಾಕಿಕೊಂಡು(೨೦೦೪) ಖವಾಲಿ ಹಾಡಿದರು.

ಬಾಬಾಬುಡನಗಿರಿಯ ಉರುಸಿನಲ್ಲಿ ಫಕೀರರ ಮಹಾಸಭೆ ನಡೆಯುತ್ತದೆ. ಇದನ್ನು ಫುಕ್ರಾ ಅಥವಾ ಚೌಕ್ ಎನ್ನಲಾಗುತ್ತದೆ. ಇದು ನಾಥರ ಮಹಾಸಭೆಯಾದ ದಲೀಚಾವನ್ನು ಹೋಲುತ್ತದೆ. ಇದರಲ್ಲಿ ದರ್ಗಾದ ಪ್ರಧಾನ ಗುರುವಿನಿಂದ ದೀಕ್ಷೆಪಡೆದು ನೇಮಕವಾದ ಸಮಸ್ತ ಮುರ್ಶಿದರು ಹಾಗೂ ಫಕೀರರು, ದೇಶಾಟನೆ ಮಾಡುತ್ತ ಎಲ್ಲಿದ್ದರೂ ಬಂದು ಸೇರುತ್ತಾರೆ. ನಾಥರ  ಝುಂಡಿಯಲ್ಲೂ ಮಹಂತ, ಪಂಚರು, ಕಾರಭಾರಿ ಎಂಬ ಸ್ತರಗಳಿವೆ. ಸಭೆಯ ಅಧ್ಯಕ್ಷತೆ ಸಜ್ಜಾದರದು. ನಾಥರ ದಲೀಚಾದಲ್ಲಿ ಅಧ್ಯಕ್ಷತೆ ಮಹಂತರದು. ಸಜ್ಜಾದರ ಅಕ್ಕಪಕ್ಕ ರಾಜಸಭೆಯಲ್ಲಿ ನಿಲ್ಲುವಂತೆ ದಂಡಧಾರಿಗಳು ನಿಲ್ಲುತ್ತಾರೆ. ಅವರು ಸಭಾ ಗದ್ದಲವನ್ನು ನಿಲ್ಲಿಸುವ ಹಾಗೂ ಸಭಿಕರಿಗೆ ನಿಂತು ಮಾತಾಡಲು ಆಜ್ಞೆಮಾಡುವ ಕೆಲಸ ಮಾಡುತ್ತಾರೆ. ನಾಥರ ದಲೀಚಾದಲ್ಲಿ ಇದನ್ನು ಪಂಖಾಪೀರನು ಮಾಡುತ್ತಾನೆ. ಆತ ಸಭಾಧ್ಯಕ್ಷರ ತೀರ್ಮಾನಗಳನ್ನು  ಪ್ರಕಟಿಸುವ ಹಾಗೂ ಸದ್ದು ಹೆಚ್ಚಾದಾಗ ‘ಸಿದ್ಧೋ ಶಾಂತಿರಖೆ’ ಎಂದು ಎಚ್ಚರಿಸುವ ಕೆಲಸ ಮಾಡುತ್ತಾನೆ. ನಾಥರಲ್ಲಿ ಬಾರಾಪಂಥದ ಒಳಪಂಗಡಗಳು ಇರುವಂತೆ ಇಲ್ಲಿ ಜಲಾಲಿ, ಬಾನ್ವಾ, ರಫಾಯಿಯಾ ಎಂಬ ಪಂಗಡಗಳಿವೆ. ಜಲಾಲಿಗಳು ಕಪ್ಪುಬಟ್ಟೆ ಹಾಗೂ ಆಯುಧವನ್ನು ಧರಿಸುತ್ತಾರೆ. ಕಪ್ಪು ನಿಲುವಂಗಿಯನ್ನು ನಾಥರಲ್ಲಿ ನಿರ್ದಿಷ್ಟ ಪಂಥದವರು ಧರಿಸುತ್ತಾರೆ. ಉಳಿದಂತೆ ಫಕೀರರಲ್ಲೂ ಚಿಮಟ, ಕೊಡಲಿ, ಕಾವಿಧಾರಣೆ, ಮುಂಡಾಸು ನಾಥರಲ್ಲಿ ಇರುವಂತೆ ಇದ್ದವು. ಈ ವೇಷ ಮತ್ತು ಆಚರಣೆಗಳನ್ನು ಈ ಎರಡೂ ಪಂಥಗಳು ಬಹುಕಾಲದ ಬಾಂಧ್ಯವ್ಯದಿಂದ ಪರಸ್ಪರ ಪಡೆದುಕೊಂಡಿವೆ ಎಂದು ಯಾರೂ  ಊಹಿಸಬಹುದು.

ಸೂಫಿಗಳು ನಾಥಪಂಥದೊಳಗೆ ಬಂದಂತೆ ನಾಥರೂ ಸೂಫಿಪಂಥದಲ್ಲಿ ಪ್ರವೇಶಿಸಿದರು. ಗೋರಖ ಮಚೇಂದ್ರರು ಸೂಫಿ ಪರಂಪರೆಯಲ್ಲಿ ದೊಡ್ಡ ಗುರುಗಳಾದರು. ಗೋರಖನ ಹೆಸರು ರತನಹಾಜಿಯೆಂದೂ, ಜಾಮಿಲ್‌ಶಾ ಎಂದೂ, ಈತನು  ಪ್ರವಾದಿಗೆ ಗುರುವೆಂದೂ ಭಾವಿಸುವ ಕಥನಗಳಿವೆ. ಇದರ ಪರಿಣಾಮವಾಗಿ ನಾಥ ಮತ್ತು ಸೂಫಿಗಳ ಸಂಕರ ಸಮುದಾಯಗಳು ಸೃಷ್ಟಿಯಾದವು. ೧೯೨೧ರ ಜನಗಣತಿಯ ಪ್ರಕಾರ, ಭಾರತದಲ್ಲಿ ೬೩೦೦೦  ಹಿಂದೂ ಜೋಗಿಗಳು, ೩೧೦೦೦ ಮುಸ್ಲಿಂ ಜೋಗಿಗಳು, ೧೪೧೦೦ ಹಿಂದೂ ಫಕೀರರು ಇದ್ದರು. ರಾವಳ್ ಪಂಥಿ, ನಾಗನಾಥಿ ಹಾಗೂ ಧರ್ಮನಾಥಿಗಳಲ್ಲಿ ಹೆಚ್ಚಾಗಿ ಮುಸ್ಲಿಂ ಜೋಗಿಗಳಿದ್ದರು. ಕಬೀರನು ಇದೇ ‘ಜುಗಿ’ ಸಮುದಾಯದಲ್ಲಿ ಹುಟ್ಟಿದವನು. ಪೇಶಾವರದ ಹಾಜಿ ರತನನಾಥನು ಗೋರಖನ ಶಿಷ್ಯರಲ್ಲಿ ಒಬ್ಬನು. ರತನನಾಥನಿಗೆ ಕಾಬೂಲು ಜಲಾಲಾಬಾದು ಭಾಗದ ಮುಸ್ಲಿಂ ಯೋಗಿಗಳಲ್ಲಿ ಬಹಳ ಗೌರವವಿತ್ತು. ಅವನು ನಾಥಸಂಪ್ರದಾಯವನ್ನು ಕಾಬೂಲಿನ ಕಡೆ ಪ್ರಸಾರ ಮಾಡಿದವನು. ಆಫಘಾನಿಸ್ಥಾನದ ಬಲಖ್ ಬೊಖಾರಾದಿಂದ ಬಂದ ಕರ್ನಾಟಕದ ಹಂಡಿಬಡಂಗನಾಥ ಮಠದ ಹಂಡಿಬಡಂಗನು ಬಹುಶಃ ಈ ಪರಿಸರದಲ್ಲಿ ಬೆಳೆದವನು. ಈತ ತನ್ನ ಪೂರ್ವಾಶ್ರಮದಲ್ಲಿ ಮುಸ್ಲಿಮನೂ ದೊರೆಯೂ ಆಗಿದ್ದವನು. ಆದರೂ ಭಾರತದಲ್ಲಿ ೨೦ನೇ ಶತಮಾನದಲ್ಲಿ ನಡೆದ ಅನೇಕ ರಾಜಕೀಯ ಸಾಮಾಜಿಕ ವಿದ್ಯಮಾನಗಳ ಕಾರಣದಿಂದ ನಾಥಪಂಥದಲ್ಲಿ ಮುಸ್ಲಿಮರ ಪ್ರವೇಶವು ಕ್ಷೀಣವಾಗುತ್ತ ಹೋಯಿತು.

ದತ್ತ ಹಾಗೂ ಮಹಾನುಭಾವ ಪಂಥಗಳ ಜತೆ

ಮಹಾರಾಷ್ಟ್ರದ ಗುರುಪಂಥಗಳಲ್ಲಿ ವಾರಕರಿ, ಮಹಾನುಭಾವ ಹಾಗು ದತ್ತಪಂಥಗಳು ಮುಖ್ಯವಾದವು. ಇವುಗಳ ಜತೆ ನಾಥಪಂಥವು ಅನುಸಂಧಾನ ಮಾಡಿತು. ಇವನ್ನು ನಾಥಪಂಥದ ಸಹವಾಸದಿಂದ ಮೂಡಿದ ಪ್ರಾದೇಶಿಕ ಪಂಥಗಳು ಎನ್ನಬಹುದು. ಸ್ಥಳೀಯ ಒತ್ತಡಗಳು ಶಕ್ತಿಶಾಲಿಯಾಗಿದ್ದಾಗೆಲ್ಲ ಅಖಿಲ ಭಾರತೀಯ ಪಂಥಗಳು ರೂಪಾಂತರ ಪಡೆಯುತ್ತವೆ. ಈ ಹಿನ್ನೆಲೆಯಲ್ಲಿ ನಾಥಪಂಥದ ಮಹಾನುಭಾವೀಕರಣ ಹಾಗೂ ದತ್ತೀಕರಣ ನಡೆಯಿತು. ಇದರ ಪರಿಣಾಮವಾಗಿ ಇಲ್ಲಿ ಗೋರಖನಾಥನು ದತ್ತಾತ್ರೇಯನ ಶಿಷ್ಯನಾಗುತ್ತಾನೆ. ಸನಾತನ ಬ್ರಾಹ್ಮಣವಾದದ ಕಠೋರತೆಯ ಒಳಗೆ ಉಸಿರುಗಟ್ಟಿಕೊಂಡು ಬದುಕುತ್ತಿದ್ದ ಮರಾಠಿಗರಿಗೆ, ವರ್ಣಾಶ್ರಮ ವಿರೋಧಿಯಾದ ನಾಥಪಂಥದಿಂದ ಬಹುದೊಡ್ಡ ಪ್ರೇರಣೆ ಸಿಕ್ಕಿತು. ನಿವೃತ್ತಿನಾಥ, ಜ್ಞಾನೇಶ್ವರ, ತುಕಾರಾಮ, ಏಕನಾಥ, ಖನೀಫನಾಥ ಮುಂತಾದ ಮರಾಠಿ ಸಂತರೆಲ್ಲ ನಾಥಪ್ರಭಾವದಲ್ಲಿ ಬೆಳೆದವರು. ಜ್ಞಾನೇಶ್ವರನ ಅಣ್ಣನೂ ಗುರುವೂ ಆದ ನಿವೃತ್ತಿನಾಥನ ಸಮಾಧಿಯು, ನಾಥರ ಕೇಂದ್ರವಾದ ತ್ರ್ಯಂಬಕೇಶ್ವರದಲ್ಲಿದೆ. ಜ್ಞಾನೇಶ್ವರನ ಸಮಾಧಿ ಇರುವ ಆಳಂದಿಯು ತ್ರ್ಯಂಬಕ-ಕದ್ರಿ ನಾಥಪಥದಲ್ಲಿ ಬರುತ್ತದೆ. ಇಲ್ಲಿ ಕದ್ರಿಯ ಝುಂಡಿ ಒಂದುದಿನ ತಂಗುತ್ತದೆ.

ನಾಥಪಂಥೀಕರಣ ಪಡೆದ ಮರಾಠಿ ಪಂಥಗಳು, ನಂತರದ ಘಟ್ಟದಲ್ಲಿ ಕರ್ನಾಟಕದ  ಭಾಲ್ಕಿಯಿಂದ ಹಿಡಿದು ಆಳಂದ, ಬಿಜಾಪುರ, ಇಂಡಿ, ಜಮಖಂಡಿ, ಅಕ್ಕಲಕೋಟೆ, ಸೊಲ್ಲಾಪುರ, ಅಥಣಿ, ಚಿಕ್ಕೋಡಿ, ಬೆಳಗಾವಿ, ಖಾನಾಪುರದ ತನಕ, ಉತ್ತರದ ಅಂಚಿನುದ್ದಕ್ಕೂ ಪ್ರವೇಶಿಸಿದವು. ಮಟಕಿಯಲ್ಲಿ (ಆಳಂದ)  ಜಲಂಧರನಾಥನ ಗುಡಿಯಿದೆ. ನಾಥದ ರೂಪಾಂತರವಾದ ದತ್ತಪಂಥ ಒಳನಾಡಿಗೆ ಬಾಬಾಬುಡನಗಿರಿಯ ತನಕ   ಬಂದಿತು. ಇಲ್ಲಿನ ಪರಿಸರದಲ್ಲಿರುವ  ಮುತ್ತಿನಪುರದ ಫಳಾರಮಠದ  ಶಿಷ್ಯವರ್ಗಗಳಲ್ಲಿ ಮರಾಠಿಗ ಆರ‌್ಯೇರು  ಮುಖ್ಯರು ಎಂಬುದು ಇದಕ್ಕೆ ಪೂರಕವಾಗಿದೆ. ಈಗ್ಗೂ ಕರ್ನಾಟಕದ ಅನೇಕ ನಾಥಮಠಗಳಿಗೆ ಅಧಿಪತಿಗಳು ಮರಾಠಿಯವರು.  ನಾಥಪಂಥದ ಪ್ರಚಾರಕ್ಕೆ ೫೦ರ ದಶಕದಲ್ಲಿ ಬಂದಿದ್ದ ಭೂತೇಶ್ವರನಾಥರು, ಭಾವಸಾರ ಕ್ಷತ್ರಿಯರನ್ನು ಸಂಘಟಿಸಿದರು. ಅವರಿಗಾಗಿ ಕಜರಗಿಯಲ್ಲಿ(ಹಾವೇರಿ)ಒಂದು ಮಠವನ್ನು ರೂಪಿಸಿದರು. ಆದರೆ ನಾಥಪಂಥದ ತೆಕ್ಕೆಯಲ್ಲಿ ಆರ‌್ಯೇರು ಬಹುಕಾಲ ಇದ್ದಂತೆ ತೋರುವುದಿಲ್ಲ. ಆದರೂ ನಾಥಪಂಥದ ಮರಾಠಿ  ಆವೃತ್ತಿಗಳಾದ ಮಹಾನುಭಾವರು ಹಾಗೂ ವಾರಕರಿಗಳು ಕರ್ನಾಟಕ ಹಾಗೂ ಮಹಾರಾಷ್ಟ್ರದ ಸಾಂಸ್ಕೃತಿಕ ಕೊಂಡಿಗಳಾಗಿ ಬೆಸೆಯಲು ನಾಥಪಂಥವು ವಹಿಸಿದ ಪಾತ್ರವು ಹಿರಿದಾಗಿದೆ.

ಬಹುಪಂಥೀಯತೆ ಹಾಗೂ ಬಹುದೇವತೆ

ಪಂಥಗಳು ಹೊರನೋಟಕ್ಕೆ ತಮ್ಮದೇ ಆದ  ತತ್ವದರ್ಶನ, ದೈವ, ಆಚರಣೆಗಳಿಗೆ ಬದ್ಧವಾಗಿರುತ್ತವೆ. ಆದರೆ ಅವುಗಳ ಮೂಲದಲ್ಲಿ ಬಹುಪಂಥೀಯ ವೈವಿಧ್ಯ ಹಾಗೂ ಸಡಿಲಿಕೆ ಇದ್ದೇ ಇರುತ್ತದೆ. ನಾಥಪಂಥದ ದಾರ್ಶನಿಕ ಬೇರುಗಳು ಯೋಗದರ್ಶನದಲ್ಲಿವೆ. ಶೈವರಾದ ಅವರ ದೇವತೆಗಳು ಭೈರವ ಹಾಗೂ ಶಕ್ತಿ. ಆದರೂ ನಾಥಪಂಥವು ಅನೇಕ ದರ್ಶನ ಮತ್ತು ದೈವಗಳನ್ನು ತನ್ನೊಳಗೆ ಬಿಟ್ಟುಕೊಂಡಿತು. ನಾಥರ  ಬಾರಾಪಂಥಗಳಲ್ಲಿ ರಾಮನಾಥಿ ದರಿಯಾಪಂಥಿ ಧ್ವಜಾಪಂಥಿಗಳ ಕಾರಣದಿಂದ ಅವುಗಳ ಸ್ಥಾಪಕರಾದ ರಾಮನೂ ಲಕ್ಷ್ಮಣನೂ ಹನುಮಾನನೂ ಒಳಬಂದರು.   ನಾಥ ಹಿನ್ನೆಲೆಯಿಂದ ಹುಟ್ಟಿದ ವಾರಕರಿ ಹಾಗೂ ಮಹಾನುಭಾವಗಳು ವೈಷ್ಣವ ಪಂಥಗಳು.  ಈ ಮೂಲಕ ರಾಮ ಕೃಷ್ಣ ವಿಠಲ ಮುಂತಾದ ದೈವಗಳೂ ಜ್ಞಾನದೇವ ಚಾಂಗದೇವ ಸಮರ್ಥ ರಾಮದಾಸ ಏಕನಾಥ ಮುಂತಾದ ಹಲವು ಪಂಥಗಳ ಸಂತರೂ ನಾಥದೊಳಗೆ ಪ್ರವೇಶಿಸಿದರು. ಕರ್ನಾಟಕದಲ್ಲಿ ನಾಥಪಂಥದ ಪುನರುತ್ಥಾನ ಚಳುವಳಿಯ ಮುಖಂಡರಾದ ಹುಬ್ಬಳ್ಳಿಯ ಶ್ರೀ ಮಧೂರಕರರು  ಪಾಂಡರಂಗ ಹಾಗೂ ಯಲ್ಲಮ್ಮನ ಭಕ್ತರು. ಈ ಸಂಗತಿಗಳು ಗತಕಾಲದಲ್ಲಿ ನಾಥವು ಯಾವೆಲ್ಲ ಚಾರಿತ್ರಿಕ ಒತ್ತಡಗಳಲ್ಲಿ ಹಾದು ಬಂದಿದೆ ಎಂಬುದನ್ನು ಸೂಚಿಸುತ್ತವೆ; ವರ್ತಮಾನದಲ್ಲಿ ಯಾವೆಲ್ಲ ಬಹುತ್ವದಲ್ಲಿ ಬದುಕಿದೆ ಎಂಬುದನ್ನೂ ಹೇಳುತ್ತವೆ.  ಭಾರತದಲ್ಲಿ ಯಾವುದೇ ಪಂಥವು ತನ್ನ ಘೋಷಿತ ಪ್ರಣಾಳಿಕೆಯಂತೆ ಬದುಕಲಾಗದು.  ನಾಥಪಂಥವು ಹುಟ್ಟಿದ್ದೇ  ಬಹುಪಂಥಗಳ ಒಡಲಲ್ಲಿ. ಈ ಪಾಡು ಅದಕ್ಕೆ ಇಂದೂ ತಪ್ಪಿಲ್ಲ.  ತುಳುನಾಡಿಗೆ ಬಂದಾಗ ಅದು ಅಲ್ಲಿನ ಭೂತಾರಾಧನೆಯ ಜತೆ ರಾಜಿ ಮಾಡಿಕೊಳ್ಳಬೇಕಾಯಿತು. ಕರಾವಳಿಯ ನಾಥಮಠಗಳಲ್ಲಿರುವ ಉಯ್ಯಲೆಯಲ್ಲಿ ಭೂತಗಳು ಈಗಲೂ  ತೂಗುತ್ತಿವೆ. ನಿನ್ನನ್ನು ಮುಟ್ಟಿ ಚಿನ್ನವನ್ನಾಗಿಸುತ್ತೇನೆ ಎಂದು ಬರುವ ಪರುಷಮಣಿ, ಕೆಲವೊಮ್ಮೆ ತಾನೇ ಲೋಹವಾಗಿ ಬದಲಾಗುವ ಸಾಧ್ಯತೆಯು ಪಂಥಗಳ ಚರಿತ್ರೆಯಲ್ಲಿ ಸಂಭವಿಸಿದೆ.

* * *[1]      ಗೋವಿಂದಪೈ, ‘ಮಂಜೀಶ್ವರ ದೇವಸ್ಥಾನದ ಪ್ರಾಚೀನತೆ’, ಗೋವಿಂದ ಪೈ ಸಂಶೋಧನ ಸಂಪುಟ, ಪು.೬೯೩-೭೦೩

[2]      ಸಚಿತ್ರ ಚರಿತ್ರೆ ಮತ್ತು ಕಥೆಗಳು, ಪು. ೧೬

[3]      ಮಲ್ಲಿಕಾರ್ಜುನ ಮತ್ತು ಮಹಾರಾಷ್ಟ್ರ, ಪು.೧೪

[4]      ಬಿ. ರಾಜಶೇಖರಪ್ಪನವರ  ‘ಚಿತ್ರದುರ್ಗದ ರಸಸಿದ್ಧರು’, ಇತಿಹಾಸ ಕಥನ, ಪು.೫೧-೬೭

[5]      ಕಪಟರಾಳ ಕೃಷ್ಣ, ಕರ್ನಾಟಕ ಸಂಸ್ಕೃತಿಯ ಸಂಶೋಧನೆ, ಪು.೧೩೪-೧೩೭

[6]      ಕಲಬುರ್ಗಿ ಎಂ.ಎಂ., ‘ಸಿದ್ಧರಾಮ ಮತ್ತು ನಾಥಸಂಪ್ರದಾಯ’ ಮಾರ್ಗ

[7]      ‘ವೀರಶೈವ ಧರ್ಮ ಮತ್ತು ಕನ್ನಡ ಸಾಹಿತ್ಯ’, ಮರುಚಿಂತನೆ, ಪು.೩೩-೬೪; ಇದರ ಜತೆಗೆ   ಪುಣೇಕರರ ‘ಬಸವಣ್ಣನವರ ವಚನಗಳ ಶಿಲ್ಪವಿಧಾನ’ ಹಾಗೂ ಕಪಟರಾಳರ ‘ಅಲ್ಲಮಪ್ರಭು ಮತ್ತು ನಾಥಸಂಪ್ರದಾಯ’ ಲೇಖನಗಳನ್ನು ಗಮನಿಸಬಹುದು.

[8]      ಕಾಪಾಲಿಕಶ್ಚ ಜೈನಶ್ಚ ಜಂಗಮೋ ಬ್ರಾಹ್ಮಣಸ್ತಥಾ: ಸನ್ಯಾಶೀಚ ತಥಾಸೋಫಿ ಷಡ್ದರ್ಶನ ದರಾ ಸುಮೃತಾ:(ಪದ್ಮಪುರಾಣ)