ನಾಥಪಂಥದ ದಾರ್ಶನಿಕ ತತ್ವಗಳನ್ನು ಅರಿಯಲು, ಅಲ್ಲಿನ ಆಚರಣ ಲೋಕವನ್ನು ಅರಿಯುವ ಅಗತ್ಯವಿದೆ. ಈ ಆಚರಣೆಗಳಲ್ಲಿ ಕೆಲವು ನಾಥಪಂಥದಿಂದ, ಕೆಲವು ಬೇರೆ ಪಂಥಗಳಿಂದ, ಮತ್ತೆ ಕೆಲವು ಸ್ಥಳೀಯ ಪರಿಸರದಿಂದ ಬಂದಂತಹವು. ನಾಥರ ಮುಖ್ಯ ಆಚರಣೆಗಳನ್ನು ದೀಕ್ಷೆ, ಶೈಲಿಧಾರಣೆ, ಶವಸಂಸ್ಕಾರ, ಧುನಿ, ಝುಂಡಿಯಾತ್ರೆ, ಸಿದ್ಧಭುಕ್ತಿ, ರೋಟ್‌ಪೂಜೆ ಎಂದು ಗುರುತಿಸಬಹುದು.

ದೀಕ್ಷೆ

ದೀಕ್ಷೆ, ಗುರುಪಂಥಗಳ ಮಹತ್ವದ ಮತ್ತು ಮೊದಲನೆಯ ಆಚರಣೆ. ನಾಥ ದೀಕ್ಷೆಯನ್ನು  ಕಾಪಾಲಿದೀಕ್ಷೆ ಜೋಗಿದೀಕ್ಷೆ ಎಂದೂ  ಕರೆಯಲಾಗುತ್ತದೆ. ಇದೊಂದು ಬಗೆಯಲ್ಲಿ ಹೊಸಹುಟ್ಟು. ಶಿಷ್ಯರಾಗುವವರಿಗೆ ಕೂದಲು ಕತ್ತರಿಸಿ, ಮೈಕೊಳೆ ತೊಳೆದು, ಹೊಸ ಬಟ್ಟೆ ಹಾಕಿ, ದೈಹಿಕ ಹೊಸತನ ಕೊಡಲಾಗುತ್ತದೆ. ಗುರು ಶಿಷ್ಯನ ಹಳೆಯ ಹೆಸರು ತೆಗೆದು ಅವನಿಗೆ ಹೊಸ ಹೆಸರನ್ನು ಕೊಡುವ ಮೂಲಕ ಹೊಸ ಜೀವನಕ್ರಮ ಶುರುಮಾಡಿಸುತ್ತಾನೆ. ನಾಥದೀಕ್ಷೆ ೨ ಹಂತದಲ್ಲಿರುತ್ತದೆ. ೧. ಗೃಹಸ್ಥರಾಗಿದ್ದೇ  ನಾಥಾಚರಣೆ ಮಾಡುವವರು. ಇವರನ್ನು ಔಘಡ್ ಎನ್ನುತ್ತಾರೆ. ಹುಡುಗರಿಗೆ ೧೨ನೇ ವರ್ಷದಲ್ಲಿ ಅಥವಾ ಮದುವೆಗೆ ಮುಂಚೆ ದೀಕ್ಷೆ ಆಗುತ್ತದೆ. ಮಹಿಳೆಯರಿಗೆ ನಾಥದೀಕ್ಷೆಯಿಲ್ಲ. ಈ ಅರ್ಥದಲ್ಲಿ ನಾಥಪಂಥವು ಪುರುಷಪ್ರಧಾನ. ೨.ಸನ್ಯಾಸಿಯಾಗಿ ನಾಥಾಚರಣೆ ಮಾಡುವವರು. ಇವರನ್ನು ಯೋಗಿಗಳು ಎನ್ನುತ್ತಾರೆ. ಔಘಡರಿಗೂ ಯೋಗಿಗಳಿಗೂ ತಾರತಮ್ಯಗಳಿವೆ. ಗುರುಸ್ಥಾನ ಪಡೆಯುವ ಯೋಗಿಗಳು ಚಿಕ್ಕ ವಯಸ್ಸಿನ ವರಾದರೂ ಗೃಹಸ್ಥರನ್ನು ಅಧಿಕಾರದಿಂದ ಮಾತಾಡಿಸಬಲ್ಲರು. ಇಬ್ಬರಿಗೂ ಕೇಶಮುಂಡನ, ಮಂತ್ರೋಪದೇಶ, ಭಸ್ಮಧಾರಣೆ, ಶೈಲಿಧಾರಣೆ ತನಕದ ೪ ಹಂತಗಳು ಸಾಮಾನ್ಯ. ಆದರೆ ೫ನೇ ಹಂತವಾಗಿ ಕಿವಿಛೇದ ಮಾಡಿ ಕುಂಡಲ ಹಾಕಿದರೆ ಆತ ಯೋಗಿಯಾಗುತ್ತಾನೆ. ಔಘಡ್ ದೀಕ್ಷೆಕೊಟ್ಟ ೧೨ ರುಷದ ನಂತರ ಯೋಗಿದೀಕ್ಷೆ ಕೊಡಬೇಕೆಂಬ ನಿಯಮವಿದೆ.  ಹಿಂದೆ ಔಘಡನಾದವನು ಕಾನ್‌ಪಠ ದೀಕ್ಷೆ ಪಡೆಯಬೇಕಾದರೆ, ಒಂದು ನದಿಯ ಹುಟ್ಟಿನ ಜಾಗದಿಂದ ಹೊರಟು, ಒಂದು ದಡದ ಮೇಲೆ ನದಿಯು ಕಡಲನ್ನು ಕೂಡುವ ಜಾಗದವರೆಗೆ ಹೋಗಿ, ಅಲ್ಲಿಂದ ಇನ್ನೊಂದು ದಡದ ಮೇಲೆ ಪರಿಕ್ರಮ ಮಾಡಿಕೊಂಡು ಬರ ಬೇಕಿತ್ತು. ಬಹುಶಃ ಇದು ಹುಟ್ಟಿನಿಂದ ಸಾವಿನ ತನಕದ ಬಾಳನ್ನು ನದಿಯ  ರೂಪಕದಲ್ಲಿ ಅರಿಯುವ ಕ್ರಮವಿದ್ದೀತು. ಆದರೆ  ತ್ರ್ಯಂಬಕದಲ್ಲಿ ನಾನು ಕಂಡಂತೆ ಕುಂಡಲದೀಕ್ಷೆ ಆದವರಲ್ಲಿ ೧೨ ವರ್ಷದವರೂ ಇದ್ದರು. ಯೋಗಿದೀಕ್ಷೆ ಪಡೆಯುವಾಗ ‘‘ನಾನು ಮದುವೆಯಾಗುವುದಿಲ್ಲ. ಬ್ರಹ್ಮಚರ್ಯ ಪಾಲಿಸುತ್ತೇನೆ. ಲಾಭದಾಯಕವಾದ ವ್ಯಾಪಾರ ಮಾಡುವುದಿಲ್ಲ. ನೌಕರಿ ಸೇರುವುದಿಲ್ಲ. ಪ್ರಚೋದಿಸಿದರೂ ಸಿಟ್ಟಾಗುವುದಿಲ್ಲ. ಅಪಾಯಕಾರಿ ಆಯುಧ ಇರಿಸಿಕೊಳ್ಳು ವುದಿಲ್ಲ. ಅಹಿಂಸೆ ಆಚರಿಸುತ್ತೇನೆ’’ ಎಂದು ಪ್ರತಿಜ್ಞೆ ಮಾಡಬೇಕು. ಈ ನಿಷೇಧಗಳು ಬರಲು  ನಾಥಯೋಗಿಗಳು ಈ ಬಗೆಯ ಚಟುವಟಿಕೆಗಳಲ್ಲಿ ತೊಡಗುತ್ತಿದ್ದುದೇ ಕಾರಣ ಇರ ಬಹುದು. ವ್ಯಾಪಾರಿಗಳೂ  ಸರ್ಕಾರಿ ನೌಕರರೂ ಆದ ನಾಥರೂ ಹಿಂದೆ ಇದ್ದರು.

ಉತ್ತರ ಭಾರತದಲ್ಲಿ ನಾಥರನ್ನು ಸಾಮಾನ್ಯವಾಗಿ ‘ಕಾನ್‌ಪಠ’ ಎಂದು ಕರೆಯಲಾಗುತ್ತದೆ. ಶಂಬಾ ಇದನ್ನು ‘ಕಿವಿಹರುಕರು’ ಎಂದು ಅನುವಾದಿಸುತ್ತಾರೆ. ಈ ಪರಿಭಾಷೆಯು ಭಾಲ್ಕಿ ಮುಂತಾದ  ಮಹಾರಾಷ್ಟ್ರ ಗಡಿಭಾಗದಲ್ಲಿ ‘ಕಾನ್‌ಕಪಡೇರು’ ಎಂಬ ರೂಪದಲ್ಲಿ ಇದೆ. ಕಾನಪಠ ಶಬ್ದದಲ್ಲಿ ಒಂದು ಬಗೆಯ ಸಾಮಾಜಿಕ ತಿರಸ್ಕಾರದ ದನಿಯೂ ಇದೆ. ಆದರೆ ನಾಥರ ಪ್ರಕಾರ ಕಿವಿಛೇದದಿಂದ ನಾಡಿಯು ಶುದ್ಧವಾಗಿ ಯೋಗಸಮಾಧಿ ಪಡೆಯಲು ನೆರವಾಗುತ್ತದೆ. ನಿಜವಾದ ಯೋಗಿಗೆ ಕೇವಲ ಕಾನಫಠನಾ (ಕಿವಿಛೇದ) ಸಾಲದು. ಮನಪಠನಾ (ಚಿತ್ತಹರಿಯಬೇಕು) ಎಂದು ಒಬ್ಬ ಯೋಗಿ ಹೇಳಿದರು. ಗೃಹಸ್ಥರಿಗೆ ಕಿವಿಯಲ್ಲಿ ಸಣ್ಣರಿಂಗ್ ಹಾಕುವಷ್ಟು ಛೇದಿಸಲಾಗುತ್ತದೆ. ಯೋಗಿಯಾದವರಿಗೆ ಕಿವಿಯ ನಡುಭಾಗದ ತಗ್ಗಿನಲ್ಲಿ ಒಂದು ಬೆರಳು ತೂರಿಸುವಷ್ಟು ಛೇದಿಸಲಾಗುತ್ತದೆ. ಸನ್ಯಾಸಿಗಳು ಗಾಜಿನ ಇಲ್ಲವೇ ಚಿನ್ನದ ಕುಂಡಲವನ್ನು ಧರಿಸುತ್ತಾರೆ. ದುಂಡನೆಯ ರಿಂಗಿಗೆ ಕುಂಡಲವೆಂದೂ ಚಪ್ಪಟೆಯದನ್ನು ದರ್ಶಿನಿ ಎಂದೂ ಕರೆಯುವರು. ಕುಂಡಲಕ್ಕೆ ಹಿರಿಯೂರು ಸೀಮೆಯ ಕಾಪಾಲಿಕರು ‘ದೊಡ್ಡಮುದ್ರೆ’ ಎಂದೂ ಚಿತ್ರದುರ್ಗ ಸೀಮೆಯಲ್ಲಿ ‘ಮುರ’ವೆಂದೂ ಚುಂಚನಗಿರಿಯಲ್ಲಿ ‘ಕಾಮಾಕ್ಷಿ’ ಎಂದೂ ಕರೆಯುತ್ತಾರೆ. ನಾಥರಲ್ಲಿ ಇದು ಮುದ್ರಾಧಾರಣೆಯಾಗಿದೆ. ಗೃಹಸ್ಥರು ಚಿನ್ನಬೆಳ್ಳಿಯ ಸಣ್ಣಕುಂಡಲ ಧರಿಸುತ್ತಾರೆ. ಚುಂಚನಗಿರಿ ಭೈರವನ ಒಕ್ಕಲುಗಳಲ್ಲಿ ಇದನ್ನು ಸಾಮಾನ್ಯವಾಗಿ ಕಾಣಬಹುದು.

ಕುಂಡಲ ದೀಕ್ಷೆಯನ್ನು ನಾಥಯೋಗಿ ಇಲ್ಲವೆ ಕಾಪಾಲಿಕ ಸಮುದಾಯದ ಹಿರಿಯರು ಮಾಡುತ್ತಾರೆ; ಅವರಿಲ್ಲದ ಕಡೆ ಅವರಿಂದ ದೀಕ್ಷೆಪಡೆದ ಜೋಗಪ್ಪಗಳು ನೆರವೇರಿಸುತ್ತಾರೆ. ಇದಕ್ಕಾಗಿ ಜೋಗಪ್ಪಗಳು ಊರು ಅಥವಾ ಪ್ರದೇಶಗಳನ್ನು ಕ್ರಮವಾಗಿ ಹಂಚಿಕೊಂಡಿದ್ದಾರೆ. ಒಬ್ಬರ ಫಿರ್ಕಾ ಮತ್ತೊಬ್ಬರು ಅತಿಕ್ರಮಣ ಮಾಡುವುದಿಲ್ಲ.  ಜೋಗಪ್ಪಗಳು  ತಮ್ಮ ಗುರುಗಳಾದ  ಕಾಪಾಲಿಕರನ್ನು ಹೊರತು ಪಡಿಸಿ-ಉಳಿದವರಿಗೆ  ದೀಕ್ಷೆಕೊಡಬಹುದು.  ಸಾಗರದ ಕಿನ್ನರಿ ಕಲಾವಿದ ಗುಡ್ಡಪ್ಪಜೋಗಿ ಅವರ ಕಿವಿಯಲ್ಲಿ ಬಂಗಾರದ ಸಣ್ಣ ರಿಂಗುಗಳಿದ್ದವು. ನಿಮಗೆ ದೀಕ್ಷೆ ಯಾರು ಕೊಟ್ಟರು ಎಂದು ಕೇಳಲು, ಅವರು ಬಾಪಾಗುರು ದಾದಾಗುರು ಎಂದು ಉತ್ತರಿಸಿದರು. ಅಂದರೆ ನಾಥಯೋಗಿಗಳು ಸಿಗದಿದ್ದಾಗ, ಚಿಕ್ಕಪ್ಪ ಅಥವಾ ಅಣ್ಣ ಗುರುಸ್ಥಾನದಲ್ಲಿ ನಿಂತು ದೀಕ್ಷೆ ಕೊಡುತ್ತಾರೆ.

ಅವಧೂತ ಪಂಥವಾದ ನಾಥದ ಮುಖ್ಯ ಲಕ್ಷಣವೆಂದರೆ, ವರ್ಣಾಶ್ರಮಕ್ಕೆ ಅತೀತವಾಗಿ ಇರುವುದು. ಈಗಲೂ ಭಾರತದ ನಾಥಪಂಥದ ಸನ್ಯಾಸಿಗಳು ವಿವಿಧ ಜಾತಿಗಳಿಗೆ ಸೇರಿ ದವರು. ಲಿಂಗದೀಕ್ಷೆ ಪಡೆದವರೆಲ್ಲ ಶರಣರಾಗುವಂತೆ, ನಾಥದೀಕ್ಷೆ ಪಡೆದವರೆಲ್ಲ ಒಂದು ಸಮುದಾಯಕ್ಕೆ ಸೇರಿದವರಾಗುತ್ತಾರೆ.  ಬ್ರಿಗ್ಸನ ವರದಿಯಂತೆ ಗುರುವು ಶಿಷ್ಯನ ಜುಟ್ಟನ್ನು  ಕತ್ತರಿಸುವುದು (ಸೂಫಿ ದೀಕ್ಷೆಯಲ್ಲೂ ಕೂದಲು ಕತ್ತರಿಸುವಿಕೆಯಿದೆ.) ಜಾತಿಚಿಹ್ನೆಯಾದ ಶಿಖೆಯನ್ನು ನಿವಾರಿಸುವ ಕ್ರಮವಾಗಿದೆ. ನಾಥರಿಗೆ ಶಿಖೆಯಿರುವುದಿಲ್ಲ. ಜಟೆ ಇಲ್ಲವೆ ಮುಂಡನ. ಮಂಟೆಸ್ವಾಮಿ ಕಾವ್ಯದಲ್ಲಿ ಮಂಟೆಸ್ವಾಮಿಯು  ಕೆಂಪಾಚಾರಿಗೆ ದೀಕ್ಷೆ ಕೊಡುವ ಭಾಗವು ನಾಥ ದೀಕ್ಷೆಯನ್ನೇ ನೆನಪಿಸುತ್ತದೆ. ಅಲ್ಲಿ ಅವನ ಜಾತಿಚಿಹ್ನೆ ಜನಿವಾರವನ್ನೂ ಕುಟುಂಬದ ಚಿಹ್ನೆ ಉಡುದಾರವನ್ನೂ ಕೀಳಲಾಗುತ್ತದೆ; ಅವನಿಗೆ ಸಿದ್ಧಪ್ಪಾಜಿ ಎಂಬ ಹೊಸ ಹೆಸರು ಕೊಡಲಾಗುತ್ತದೆ. ಆಗ ಸಿದ್ಧಪ್ಪಾಜಿಯು ‘ಒಂದು ಜಾತಿಲಿ ಹುಟ್ಟಿ ಒಂದು ಜಾತಿಲಿ ಬೆಳೆದು ನಾನು ಯಾರುಗಪ್ಪ ಆನಲಿ ನಾನು ಯಾರುಗವ್ವ ಅನಲಿ’ ಎಂದು ಕೇಳುತ್ತಾನೆ. ಆಗ ಮಂಟೆಸ್ವಾಮಿಯು ‘ನಾನೇ ನಿನಗೆ ತಂದೆ ತಾಯಿ’ ಎನ್ನುತ್ತಾನೆ. ಶಿಷ್ಯನಿಗೆ ದೀಕ್ಷೆಕೊಟ್ಟ ಬಳಿಕ ಮಂಟೇಸ್ವಾಮಿಯು ಶಿಷ್ಯನನ್ನು ಅವನ ಜಾತಿ ಜನರ ವಿರುದ್ಧವೇ ಯುದ್ಧಕ್ಕೆ ಕಳಿಸುವುದು ಕೂಡ ಮಾರ್ಮಿಕವಾಗಿದೆ.

ಅವಧೂತ ಪರಂಪರೆಗಳು ಹೀಗೆ ತಮ್ಮ ದೀಕ್ಷೆಯ ಆಚರಣೆಗಳಲ್ಲಿ ಜಾತ್ಯತೀತವಾದರೂ, ನಾಥರಲ್ಲಿ   ದಲಿತರು, ಮುಸ್ಲಿಮರು ಹಾಗೂ ಕ್ರೈಸ್ತರು ಇಲ್ಲ.  ಈತನಕ ಒಬ್ಬನೇ ಒಬ್ಬ ದಲಿತ ಮಠಾಧಿಪತಿಯನ್ನು ಕಂಡಿರುವುದಾಗಿಯೂ, ಹಿಂದೆ  ಪಂಜಾಬಿನಲ್ಲಿ ಕೆಳಜಾತಿಯವರಿಗೆ  ದೀಕ್ಷೆಕೊಡುವ ಸಂಪ್ರದಾಯವಿದ್ದು, ಅದು ಈಗಿಲ್ಲವೆಂದೂ ಬ್ರಿಗ್ಸನು ಹೇಳುತ್ತಾನೆ.

[1] ಆದರೆ ಕರ್ನಾಟಕದಲ್ಲಿ ನಾಥಪಂಥಿ ಸಮುದಾಯವಾದ ಕಾಪಾಲಿಕರು,  ಒಕ್ಕಲಿಗರಿಗೆ ಬೆಸ್ತರಿಗೆ ಗಾಣಿಗ ಶೆಟ್ಟರಿಗೆ ಹಾಗೂ ದಲಿತರಿಗೆ ಜೋಗಿದೀಕ್ಷೆ ಕೊಟ್ಟಿದ್ದಾರೆ. ಇಷ್ಟಾಗಿ ಬ್ರಾಹ್ಮಣರು, ಲಿಂಗಾಯತರು ಹಾಗೂ ಮುಸ್ಲಿಮರು ಜೋಗಿ ದೀಕ್ಷೆ ತೆಗೆದುಕೊಂಡ ನಿದರ್ಶನಗಳಿಲ್ಲ. ಕರ್ನಾಟಕದ ನಾಥಪಂಥಿ ಸಮುದಾಯಗಳಲ್ಲಿ ದೀಕ್ಷೆ ಕೊಡುವ ವಿಧಾನಗಳು ವಿಶಿಷ್ಟವಾಗಿವೆ.

೧. ‘ಆದಿಚುಂಚನಗಿರಿ ಸ್ಥಲಮಾಹಾತ್ಮ್ಯ’ಯಲ್ಲಿ ಕಪಾಲದೀಕ್ಷೆಯ ವಿಧಾನವು ಹೀಗಿದೆ: ಸಗಣಿ ಸಾರಿಸಿದ ನೆಲದ ಮೇಲೆ ಯೋಗಿಯಾಗುವವನನ್ನು ಪೂರ್ವಾಭಿಮುಖಿಯಾಗಿ ಕೂರಿಸಬೇಕು. ಪಂಚಕಳಸ ಸ್ಥಾಪಿಸಿ, ಪೂಜಿಸಿ ಮಂತ್ರಗಳನ್ನು ಪಠಿಸಬೇಕು. ಶಿಷ್ಯನ ಕಿವಿಛೇದಿಸಿ ಕುಂಡಲಗಳನ್ನು ಇಡಬೇಕು. ಶಿಷ್ಯನಿಗೆ ಹೊಸಬಟ್ಟೆಯನ್ನು ಕಾಣಿಕೆಯನ್ನಾಗಿ ನೀಡಬೇಕು.[2] ಈಗಲೂ ಚುಂಚನಗಿರಿಯಲ್ಲಿ ಹೆಚ್ಚುಕಡಿಮೆ ಈ ವಿಧಾನ ಜಾರಿಯಲ್ಲಿದೆ. ಭೈರವನ ದಿನವಾದ ಭಾನುವಾರ ಜೋಗಿದೀಕ್ಷೆ ಇರುತ್ತದೆ. ಜೋಗಪ್ಪನು ಭೈರವನ ಸಂಕೇತವಾದ ತ್ರಿಶೂಲ ಹಾಗೂ ಕಲಶಗಳನ್ನು ಸ್ಥಾಪಿಸುತ್ತಾನೆ. ದೀಕ್ಷೆಪಡೆಯುವ ಹುಡುಗ ಉಪವಾಸ ಇರುತ್ತಾನೆ. ಅವನಿಗೆ ತಲೆಬೋಳಿಸಿ, ಅರಿಸಿಣ ಸೀಗೆಯ ಸ್ನಾನಮಾಡಿಸಿ, ವಿಭೂತಿ ಧಾರಣೆಮಾಡಿ, ಹೊಸಬಟ್ಟೆ ಉಡಿಸಿ ಮೂಡುದಿಕ್ಕಿಗೆ ಕೂರಿಸುತ್ತಾರೆ. ಕೈಗೆ ಕಂಕಣ ಕಟ್ಟಿ ಬಂಧುಗಳು  ಹಾಲೆರೆಯುತ್ತಾರೆ.[3] ಭೈರವ ಜಯಕಾರಗಳ  ನಡುವೆ ಜೋಗಪ್ಪನು ಶಸ್ತ್ರದಿಂದ ಅವನ ಕಿವಿಚುಚ್ಚಿ ಮೂರು ಹನಿರಕ್ತವನ್ನು ಸೋರೆಬುರುಡೆಗೆ ಬೀಳಿಸುತ್ತಾನೆ. ನಂತರ ಕಾಮಾಕ್ಷಿಯನ್ನು ಕಿವಿಗೆ ತೊಡಿಸಿ, ಕಿವಿಯಲ್ಲಿ ಭೈರವ ಮಂತ್ರ ಹೇಳಿ, ಸಿಂಗನಾದ ಊದುತ್ತಾನೆ. ತಲೆಮೇಲೆ ಅಕ್ಕಿಕಾಳು ಎರಚಿ, ಹೆಗಲಿಗೆ ಜೋಳಿಗೆ ಹಾಕುತ್ತಾನೆ. ತಂದೆತಾಯಿಗಳು  ‘ನೀನು ಇಂದಿನಿಂದ ನಮ್ಮ ಮಗನಲ್ಲ, ಭೈರವನ ಸಿಸುಮಗ’ ಎಂದು ಘೋಷಿಸುತ್ತಾರೆ. ಹೊಸಜೋಗಿಯು ಎದ್ದು  ನಾಲ್ಕು ಮನೆಯ ಭಿಕ್ಷಕ್ಕೆ ಹೊರಡುತ್ತಾನೆ. ಮೊದಲ ಭಿಕ್ಷೆ ಯನ್ನು ಹೆತ್ತವರೇ ಹಾಕಬೇಕು. ನಂತರ ಭಂಗಿಬೆರೆಸಿದ ಮಾಂಸದಡಿಗೆಯ ಸಹಭೋಜನ ಇರುತ್ತದೆ. ದೀಕ್ಷಾ ಸಮಾರಂಭದಲ್ಲಿ ಹೊತ್ತಲ್ಲಿ ಮಾಂಸ, ಭಂಗಿ, ರಾಮರಸ ಕಡ್ಡಾಯ. ಶಿಷ್ಯನು ಮೊದಲ ತುತ್ತಾಗಿ ಗುರುವಿನ ಎಂಜಲೂಟವನ್ನು ಸ್ವೀಕರಿಸುತ್ತಾನೆ(ಎಂಜಲು ಸೇವನೆಯು ಗುರುವಿಗೆ ಪಿತೃತ್ವ ಒಪ್ಪಿದ್ದರ ಸಂಕೇತ). ಇಲ್ಲಿಗೆ ದೀಕ್ಷೆ ಮುಗಿಯುತ್ತದೆ. ಹೊಸಜೋಗಪ್ಪನು ಮಠಕ್ಕೂ ಭಕ್ತರಿಗೂ ಮಧ್ಯವರ್ತಿಯಾಗಿ ಹೊಸ ಜೀವನ ಆರಂಭಿಸುತ್ತಾನೆ. ಗಮನಾರ್ಹವೆಂದರೆ, ನಾಥರಲ್ಲಿ ಯೋಗಿದೀಕ್ಷೆ ಪಡೆದವರು ಬ್ರಹ್ಮಚಾರಿ ಗಳಾದರೆ, ಇಲ್ಲಿ ಜೋಗಪ್ಪನು ಮದುವೆಯಾಗಬಹುದು.

೨. ಲುಂಕೆಮಲೆಯ ಕಾಪಾಲಿಕರ ನಾಥದೀಕ್ಷೆಯ ವಿವರಗಳೂ ಹೆಚ್ಚುಕಡಿಮೆ ಹೀಗೇ ಇವೆ. ಆದರೆ ಅಲ್ಲಿ ಭೈರವಮಂತ್ರದ ಬದಲು ಗಾಯತ್ರಿ ಮಂತ್ರ ಬರುತ್ತದೆ. ದೀಕ್ಷೆಯ ವಸ್ತುಗಳಲ್ಲಿ ಪಂಚಪಾತ್ರೆ, ಗಂಟೆ, ಕಳಸಕನ್ನಡಿ, ಕಂಬಳಿ (ಗದ್ದುಗೆ ಮಾಡಲು), ಅಕ್ಕಿ ಸೇರುತ್ತವೆ.[4] ಚುಂಚನಗಿರಿಯಲ್ಲಿ ಭೈರವ ಪ್ರತಿಷ್ಠಾಪನೆಯಲ್ಲಿ ಜೋಳಿಗೆ ಹಾಗೂ ನಾಗಬೆತ್ತ ಇರುತ್ತವೆ.

೩. ತುಳು ಜೋಗಿಗಳ ದೀಕ್ಷೆಯು ಕೊಂಚ  ಬ್ರಾಹ್ಮಣೀಕರಣಗೊಂಡಿದೆ. ಅವರಲ್ಲಿ ಇದನ್ನು ಉಪನಯನ ಎನ್ನುತ್ತಾರೆ. ಅಲ್ಲಿ ಜನೇವಾ ಇರುತ್ತದೆ. ಗಾಯತ್ರಿ ಮಂತ್ರ ಇರುತ್ತದೆ. ಉಳಿದಂತೆ ಮೇಲಿನ ವಿವರಗಳೇ ಇವೆ.

೪. ಕೋಲಾರದ ಸೀತಿಬೆಟ್ಟದಲ್ಲಿ ಈಗ  ನಾಥಪಂಥವಿಲ್ಲ. ಹಿಂದೆ ಕಾಪಾಲಿಕ ಆಚರಣೆ ಯಿತ್ತು. ಈಗಲೂ ಅಲ್ಲಿ ಮಕ್ಕಳಿಗೆ ಕಿವಿಚುಚ್ಚುವ ಆಚರಣೆಗಾಗಿ ಜನ ಬಂಡಿಕಟ್ಟಿಕೊಂಡು ಬರುವ ಸಂಪ್ರದಾಯವಿದೆ. ಇದನ್ನು ಬಂಡಿದೇವರು ಎನ್ನುತ್ತಾರೆ.

೫. ಉತ್ತರ ಕರ್ನಾಟಕದ ರಾವುಳ ಜೋಗಿಗಳಲ್ಲಿ ದೀಕ್ಷೆಯನ್ನು ಯೋಗಮುಂಜಿ ಎನ್ನುತ್ತಾರೆ.  ‘ರಾವುಳ ಮತಪ್ರಕಾಶಿಕೆ’ ಪ್ರಕಾರ ದೀಕ್ಷಾಕ್ರಮವಿದು: ಮನೆಯ ಅಂಗಳ ಸಾರಿಸಿ ರಂಗವಲ್ಲಿ ಹಾಕಬೇಕು. ಮನೆಯ ಮುಂದೆ ಭಗವಾಧ್ವಜ ಏರಿಸಬೇಕು. ಜಿಂಕೆ ಚರ್ಮ ಹಾಸಿ ಗುರುಪೀಠ ಮಾಡಿ, ಅದರ ಮುಂದೆ ಭೈರವಯಂತ್ರದ ರಂಗವಲ್ಲಿ ಬರೆಯಬೇಕು. ಯಂತ್ರದ ಮಧ್ಯದಲ್ಲಿ ಬಾಲಸುಂದರಿ ಜ್ಯೋತಿ ಎಂಬ ದೀಪ ಸ್ಥಾಪಿಸಿ ಅದರ ಸುತ್ತ ನವನಾಥರ ಪೀಠಗಳನ್ನು ಸ್ಥಾಪಿಸಬೇಕು. ನವಧಾನ್ಯ ತ್ರಿಶೂಲ ಕಪಾಲಗಳನ್ನು ಇಡಬೇಕು. ಕಲಶಸ್ಥಾಪನೆ ಮಾಡಬೇಕು. ೧೦ ವಯಸ್ಸಿನ ಒಳಗಿರುವ ಒಬ್ಬ ಕುಮಾರಿಯ ಪೂಜೆ ಮಾಡಬೇಕು. ಹೋಮ ಮಾಡಬೇಕು. ಸಜ್ಜಿಗದ ಹಿಟ್ಟಿನಿಂದ ಮಾಡಿದ ಸಿಂಹ ಹುಲಿ ಕುರಿಗಳ ಪ್ರತಿಮೆಗಳಿಗೆ, ಮಂತ್ರದಿಂದ ಪ್ರಾಣಪ್ರತಿಷ್ಠೆ ಮಾಡಿ, ಅವನ್ನು ಖಡ್ಗದಿಂದ ಬಲಿಕೊಡಬೇಕು. ವಟುವಿಗೆ ತಲೆಬೋಳಿಸಿ ಹೊಸಬಟ್ಟೆ ಉಡಿಸಿ, ಸುಗಂಧದ್ರವ್ಯ ಪೂಸಿದ ಹುಡುಗನಿಂದ ಭೈರವ ಪೂಜೆಯ ಮಾಡಿಸಬೇಕು. ದೀಕ್ಷೆ ಕೊಡುವ ಗುರುವು ತೆರೆಯ ಒಳಗೆ ಶಿಷ್ಯನ ಎಡಗಿವಿಯಲ್ಲಿ ಮಂತ್ರಬೋಧೆ ಮಾಡಬೇಕು. ನಂತರ ವಟುವು ಭಸ್ಮ, ಸಿಂಧೂರ, ಕಾವಿವಸ್ತ್ರ, ರುದ್ರಾಕ್ಷಿ, ಶೈಲಿ, ಶಿಂಗಿಗಳನ್ನು ಧರಿಸಿ, ಜೋಳಿಗೆ ಹಾಕಿಕೊಂಡು, ಕಪಾಲ ದಂಡ ತ್ರಿಶೂಲ ಚಿಮಟಿಗೆ ಯೋಗದಂಡಗಳನ್ನು  ಹಿಡಿದು ಭಿಕ್ಷಕ್ಕೆ ಹೋಗಬೇಕು. ಮೊದಲ ಭಿಕ್ಷೆಯನ್ನು ತಂದು ಗುರುವಿಗೆ ಅರ್ಪಿಸಿ ನಮಸ್ಕರಿಸಿ ಸಿಂಗನಾದ ಮಾಡಬೇಕು.[5] ಈ ವಿಧಾನವನ್ನು ಕಂಡರೆ, ರಾವುಳರಲ್ಲಿ ಕಾಪಾಲಿಕರ  ಪ್ರಾಚೀನ ಆಚರಣೆಗಳು ಉಳಿದುಕೊಂಡಿರುವ ಸೂಚನೆಗಳು ಸಿಗುತ್ತವೆ. ಇಲ್ಲಿನ ಕುಮಾರಿ ಪೂಜೆಯು ನೇಪಾಳದ ನಾಥರಲ್ಲಿ ಈಗಲೂ ಇದೆ. ಬಲಿಯು ಹಿಟ್ಟಿನ ಪ್ರಾಣಿಯ ವಧೆಯಂತಹ ಸಾಂಕೇತಿಕ ಮಟ್ಟಕ್ಕೆ ನಿಂತಿದೆ.  ಇದಕ್ಕೆ ಬೆಳಗಾವಿಯ ಲಿಂಗಾಯತ ಹಾಗೂ ಜೈನ ಸಮುದಾಯಗಳ ಪ್ರಭಾವ ಇರಬಹುದು.  ಈ ಭಾಗದ ರಾವುಳರ ಮೇಲೆ ಮರಾಠಿ  ನಾಥಪಂಥದ ಪ್ರಭಾವವೂ ಹೆಚ್ಚಾಗಿದೆ.

೬. ಲುಂಕೆಮಲೆ ಸೀಮೆಯ ಕಿನ್ನರಿ ಜೋಗಿಗಳಲ್ಲಿ ದೀಕ್ಷೆಯನ್ನು ‘ಗುರುಛಲೆ’ ಎನ್ನಲಾಗುತ್ತದೆ. ಇದನ್ನು  ನಾಥಮಠದಿಂದ ಅಧಿಕಾರ ಪಡೆದ ಜೋಗಪ್ಪ ಕೊಡುತ್ತಾನೆ. ಅವನಿಲ್ಲದಲ್ಲಿ ಹಿರಿಯ ಜೋಗಿಗಳೇ ಕೊಡುತ್ತಾರೆ. ದೀಕ್ಷೆಯ ಹೊತ್ತಲ್ಲಿ ಗುರುಮಂತ್ರ ಹೇಳಲಾಗುತ್ತದೆ.  ಬಿಷ್ಣುಹಳ್ಳಿಯ (ಕೂಡ್ಲಿಗಿ) ದಳವಾಯಿ ರಾಮಸಿದ್ಧಪ್ಪ ಜೋಗಿಯವರ ಪ್ರಕಾರ, ಗುರು ಹೇಳುವ ಮಂತ್ರಗಳಿವು:

೧. ಜಳಮಾಯ್ನಿ ಫಾಯದಾ ಹುಯೊ ಸುರಿ, ಮೇರೆ ಹಾತಮೆ ಹೈ ಮಿರಿ; ತೇರೆ ಕಾನಕೊ ಲಗಾತೊ ಸುರಿ, ಕರನಕೊ ಬೇಟಾ ಚೋರಿ; ಹಾತ್‌ಮೆ ದೇಂಗೆ ಕಂಬಲ್ ಕ ಕೋರಿ, ದಿಖಾಯೇಂಗೆ ಜಂಗಲ್ ಕಾ ದಾರಿ;ಹರ ಗೋರಖ್‌ನಾಥ್ ಬಾರಾಕಟ್ಲ ಬಂದೋಬಸ್ತ್

೨. ಅವಧೂತ್ ಆರಂತ್ ಬೋಲಂತ್ ಕಡ್ತಲ್ ಪಂತ್, ಜೆಬಾಂದ್ರ ಜೇಪಂತ್; ಜೋಗಿ ಜುಕ್ತರ್ ಹೈ ಸಮ್ಮಾಯೆ, ಓ ಜೋಗಿ ಶಿರಭದ್ರಕಮಾಯೆ, ಕಾಂಚ್ ಶಿಲಾಯೆ, ಬಾರಾಬರಸಕೊ ಮೂ ಬಡಾಯೆ, ಆದ್ ಪತ್ತರ್ ಮೆ ಅನ್ನೇಳ್ ಪಿಲಾಯೆ; ಕಾಡ್ಯಾ ಚಕ್ಕರ್ ಮಾರ‌್ಯಾ ಮಿರ್ಗ್, ನಾದ್ ಕಡಾಸನ್ ಬಕ್ಕೀಮಾಸ್, ಶಿವಾನಿ ಶಿವಿಲೋಕಿ ಗರ್ಜನ್, ಶಿದ್ಧುದಿಯಾ ಸಿಕ, ಈಶ್ವರ್ ಲಿಯಾ ಸೋನ್ನಾರೂಪ, ಕಿಂದರಿ ಕಾಟಿ ಝೋಳಿ ಪತ್ತರ್, ಶೈಲೇ ಶಿಂಗೀ ನಾದ್ ಮುದ್ರಾ, ನಗರಪೇಟ್ ಮೂಗುಭಿಕ್ಷಾ; ನಾಥಗುರು ಜಾತ್ ಪಾವನ್, ಬಾರಾಪಂಥ ಸಿದ್ಧಾಲ ಆದೇಶ್

ಮೊದಲನೆಯದು ದೀಕ್ಷೆಗೆ ಮೊದಲಿನ ಮಂತ್ರ. ಎರಡನೆಯದು ದೀಕ್ಷಾ ನಂತರದ್ದು. ಮೊದಲನೆಯದರ ಅರ್ಥ ಸ್ಥೂಲವಾಗಿ ಹೀಗಿದೆ: ‘ನನ್ನ ಕೈಯಲ್ಲಿ ಶಸ್ತ್ರವಿದೆ. ನಿನ್ನ ಕಿವಿಗೆ ಇದನ್ನು ಹಾಕುತ್ತಿದ್ದೇನೆ. ಮಗು ಕಳ್ಳತನ ಮಾಡಬೇಡ. ನಿನ್ನ ಕೈಗೆ ಕಂಬಳಿಕೋರಿ ಕೊಡುತ್ತೇನೆ. ಕಾಡಿನ ದಾರಿ ತೋರುತ್ತೇನೆ. ಗೋರಖನಾಥನ ಬಾರಾಪಂಥದ  ಕಟ್ಟಳೆಯಿದು’; ಇಲ್ಲಿ ಗೋರಖ ಹಾಗೂ ಬಾರಾಪಂಥದ ಹೆಸರು ಬಂದಿರುವುದು ವಿಶೇಷ. ಈ ಮಂತ್ರವು ದೀಕ್ಷೆಯ ಆಚರಣೆಯ ಜತೆಗೆ ಜೋಗಿಯಾದವನ ಲಕ್ಷಣಗಳನ್ನೂ ವಿವರಿಸುತ್ತಿದೆ. ಕಿನ್ನರಿಜೋಗಿಗಳು ಹಾಡುವ ಅರ್ಜುನ ಜೋಗಿಯ ಕಥನಗಳಲ್ಲಿ, ಅರ್ಜುನನು ಜೋಗಿ  ದೀಕ್ಷೆ ಪಡೆಯುವ ವರ್ಣನೆಗಳು ಹೀಗೇ ಇವೆ. ಮೇಲ್ಕಾಣಿಸಿದ ದೀಕ್ಷಾಮಂತ್ರದ  ಭಾಷೆ ಮರಾಠಿ ಮಿಶ್ರಿತವಾದ ಹಿಂದಿಯಂತೆ ತೋರುತ್ತದೆ. ಇದರಲ್ಲಿ ಕಟ್ಟಳೆ ದಾರಿ ಮುಂತಾದ ಕನ್ನಡ ಶಬ್ದಗಳೂ ಇವೆ. ಇಲ್ಲಿ ಕಿನ್ನರಿ ಜೋಳಿಗೆ ಮುಂತಾದ ಲಾಂಛನಗಳ ವಿವರಗಳಿವೆ.  ದೀಕ್ಷೆಯ ಬಳಿಕ ಉಪದೇಶಿಸುವ  ಗುರುಮಂತ್ರಕ್ಕೆ  ಕಿನ್ನರಿಗಳು ‘ಕಲ್ಮ’ಎನ್ನುವುದು ಕುತೂಹಲಕರ. ಕಲ್ಮವೆಂದರೆ ಇಸ್ಲಾಮಿನ  ದೀಕ್ಷೆ ಪಡೆಯುವ ಹೊತ್ತಲ್ಲಿ ಬಳಸುವಂತಹ ಕುರಾನಿನ ಮಂತ್ರ. ಬಾರಾಬರಸ್ ಕೊ ಮೂಬಡಾಯ ಎನ್ನುವುದು ತ್ರ್ಯಂಬಕದಿಂದ ಕದ್ರಿಗೆ ೧೨ ವರುಷಕ್ಕೊಮ್ಮೆ ಬರುವ ನಾಥರ ಯಾತ್ರೆಯನ್ನು, ಮಿರ್ಗಮಾರನಾ ಎಂಬುದು ಬಲಿಯನ್ನು ಹಾಗೂ ಶಿದ್ದುದಿಯಾ ಸಿಕ್ಕಾ ಎನ್ನುವುದು ಗುರುವು ಭಿಕ್ಷಾಟನೆಯ ಹಕ್ಕು ಸೂಚಕವಾದ ಮುದ್ರೆಯುಂಗುರವನ್ನು ಸೂಚಿಸುತ್ತಿರಬಹುದು. ಇದು ನಾಥರು ಸೂಫಿಗಳ ಸಂಗದಲ್ಲಿ ಪಡೆದ ಪರಿಭಾಷೆ ಇರಬೇಕು. ಸಾಮಾಜಿಕವಾಗಿ ಹಿಂದುಳಿದ ಹಾಗೂ ಹಳ್ಳಿಗಾಡುಗಳಲ್ಲಿರುವ ಕಿನ್ನರಿಯವರು, ಕದ್ರಿಯ ಜೋಗಿಗಳಷ್ಟು ಬ್ರಾಹ್ಮಣೀಕರಣ ಆಗಲಿಲ್ಲ.  ಇವರು ದೀಕ್ಷೆ ಪಡೆದಿದ್ದನ್ನು ಲುಂಕೆಮಲೆ ಮಠದಲ್ಲಿ ಕ್ರಮಬದ್ಧವಾಗಿ ದಾಖಲಿಸಲಾಗುತ್ತಿತ್ತು. ಅಂಥ ಎರಡು ದಾಖಲೆಗಳು ಹೀಗಿವೆ:

೧. ಮೊಳಕಾಲ್ಮೂರು ಹಾನಗಲ್ಲು ಗ್ರಾಮಕ್ಕೆ ಶೇರಿದಂತಾ ಶ್ರೀಮತ್ ಆದಿನುಂಕೇಮಲೆ ಕಾಲಭೈರವ ಶಿದ್ಧೇಶ್ವರ ಸಿದ್ಧಸಿಂಹಾಸನದ ೧೧೨ನೆಯ ಪಟ್ಟದ ಅಧ್ಯಕ್ಷ ರಾಜಗುರು ಯೋಗೇಶ್ವರ ಶ್ರೀಬಾಲಕನಾಥ್ ಬಾವಾಜಿ ಗುರುಮಹಾಸ್ವಾಮಿಯವರಿಂದ ದೀಕ್ಷೆ. ಮಡಕಶಿರಾ ತಾಲ್ಕೊ ಕಸಬಾ ಸಮ್ಮತು ಹೇಮಾವತಿ ಗ್ರಾಮದಾ ವಾಸಿಗಳಾದಂತಾ ಭ್ರಂಹ್ಮಾಕಾಪಾಲಿ ಮತ ಮಟಪತಿಗಳಾದಂತಾ ಭಿ.ಸಿದ್ಧಲಿಂಗಪ್ಪನ ಮಗ ಎಸ್ ಶಿದ್ದಪ್ಪನವರಿಗೆ ತಾರಿಕೂ ೧೮-೫-೧೯೮೯ನೆಯ ಶೆನಿವಾರ ಸಾಯಂಕಾಲಾ ೩ ಗಂಟೆ ಟೈಮೂನಲ್ಲಿ ಸಿಂಹ್ಮಾಸನದಲ್ಲಿ ಶ್ರೀಬಾಲ್ಕಾನಾಥ್ ಬಾವಾಜಿಯವಾರ ಅಮೃತಹಸ್ತದಿಂದ ದೀಕ್ಷೆ ಆಗಿರುತ್ತದೆ. ಎಸ್ ಸಿದ್ಧಪ್ಪ ಬಾಲಾನಾಥಜಿ ಶಿದ್ದಲಿಂಗಪ್ಪಬಿಕ್ಕಲಂ ಗುಮಸ್ತ ಮಲ್ಲನಾಯ್ಕ ದಿ. ೧೩-೫- ೧೯೮೯

೨. ೨೭-೪-೯೩ಸನ್ ೧೯೯೩ನೇ ಇಸ್ವಿ ಚೈತ್ರ ೨೭-೪-೯೩ನೇ ಮಂಗಳವಾರ ಶ್ರೀಲುಂಕೇಮಲೆ ಶಿದ್ದೇಶ್ವರಸ್ವಾಮಿಯ ದೇವಸ್ಥಾನದಲ್ಲಿ ಶ್ರೀ ಬಾಲಕನಾಥ ಬಾವಾಜಿಯವರ ಸಂನ್ನಿಧಿಯ ಹಸ್ತದಿಂದ, ಹಿರಿಯೂರು ತಾಲೂಕು ಮೇಗಳ ಸಮ್ಮಕ್ ಚಿತ್ರದುರ್ಗ ಜಿಲ್ಲಾಕ್ಕೆ ಶೇರಿದ ವದ್ದಿಕೆರೆ ಗ್ರಾಮದ ಕ್ಕಿಂದರೆ ಪಡಗಲಬಂಡೆ ಕಾಲಭೈರವ ಮಠಪತಿಗಳಾದ ಶ್ರೀ ಗುರುಶಿದ್ಧಪ್ಪನವರ ಮಗ ಭೈರಪ್ಪನ ಶೇಷ್ಠಪುತ್ರನು, ರವಿಕುಮಾರನೆಂಬರಿಗೆ ಗುರುದೀಕ್ಷೆಯನ್ನು ಪಡೆದಿರುತ್ತೇನೆ. ಬಾಲಕನಾಥಜಿ ಯವರ ಹಸ್ತದಿಂದ ದೀಕ್ಷೆ ಪಡೆದಿರುತ್ತೇನೆ. ಸಾಕ್ಷಿಗಳು ಪಗಡಲಬಂಡೆ ಜೋಗಿ ಮೂರುಕಂಣಯ್ಯಬಿಕ್ಕಲಂ ಪಗಡಲಬಂಡೆ ಜೋಗಿ ಮೂರುಕಂಣಯ್ಯ (ಹಿಂದಿಯಲ್ಲಿ ಸಹಿ) ಬಾಲಕನಾಥಜಿ

ಮೊದಲನೆಯದು ನಾಥಮಠದಲ್ಲಿ ನಾಥಗುರು ಕೊಟ್ಟ ದೀಕ್ಷೆ. ಎರಡನೆಯದು ನಾಥಗುರುವಿನ ಪ್ರತಿನಿಧಿಯಾದ ಜೋಗಪ್ಪನು ತನ್ನ ಅಧಿಕಾರ ವ್ಯಾಪ್ತಿಯುಳ್ಳ ಊರಲ್ಲಿ ಕೊಟ್ಟ ದೀಕ್ಷೆ. ಆದರೆ ಜೋಗಪ್ಪನು ದೀಕ್ಷೆ ಕೊಟ್ಟರೂ ಅದು ಅಂತಿಮವಾಗಿ ನಾಥಗುರುವಿನ ದೃಢೀಕರಣದಿಂದ ಊರ್ಜಿತವಾಗಬೇಕು. ಈ ದೀಕ್ಷಾ ಪತ್ರಗಳ ಭಾಷೆ ಮಾದರಿ,  ಅಧಿಕಾರ ವಿನ್ಯಾಸ ಎಲ್ಲವೂ ಜನರಿಗೆ ಪರಿಚಿತವಾದ ಕಂದಾಯ ಇಲಾಖೆಯ ಪ್ರಭಾವದಿಂದ ರೂಪುಗೊಂಡಿರುವುದು ಗಮನಾರ್ಹ.

ಶೈಲಿ ಹಾಗೂ ಸಿಂಗನಾದ

ನಾಥದೀಕ್ಷೆಯಲ್ಲಿ ಬರುವ ಎರಡು ಮಹತ್ವದ ವಸ್ತುಗಳೆಂದರೆ, ಶೈಲಿ ಹಾಗೂ ಸಿಂಗನಾದ. ನಾಥರು ಕೊರಳಲ್ಲಿ ಧರಿಸುವ (ಕುರಿಯ ತುಪ್ಪಟದಿಂದ ಮಾಡಿದ) ದಾರಕ್ಕೆ ಶೈಲಿ ಅಥವಾ ಜನೇವಾ ಎನ್ನುತ್ತಾರೆ. ಇದು ಜನಿವಾರದಂತೆ ಕಂಡರೂ ಅದಲ್ಲ.  ಇದರಲ್ಲಿ ನವನಾಥರನ್ನು ಸಂಕೇತಿಸುವ ೯ ಎಳೆಗಳಿರುತ್ತವೆ.  ಪ್ರಾಣಿಯ ಕೂದಲಿಂದ ಮಾಡಿದ ಕಾರಣ, ಜನೇವಾಕ್ಕೆ ಅಶುದ್ಧತೆ ಇಲ್ಲ. ಎಂತಲೇ ಅದನ್ನು ವರ್ಷಂಪ್ರತಿ ಬದಲಾಯಿಸುವುದಿಲ್ಲ.  ಗೋರಖನ ಪ್ರಕಾರ ಶೈಲಿಯು ಪರಾಜ್ಞಾನದ ಸಂಕೇತ. ಇದನ್ನು ಯೋಗಿಗಳಲ್ಲದೆ ನಾಥಪಂಥಿ ಗೃಹಸ್ಥರೂ ಧಾರಣೆ ಮಾಡಬಹುದು. ಶೈಲಿಧಾರಣೆಯು ತುಳುನಾಡಿನ ಜೋಗಿ ಸಮುದಾಯದಲ್ಲಿ ಹೆಚ್ಚು ಕಾಣಬರುತ್ತದೆ. ಲುಂಕೆಮಲೆ ಹಾಗೂೊಚುಂಚನಗಿರಿಯ ಕಾಪಾಲಿಕರಲ್ಲಿ  ಇದು ಅಷ್ಟಾಗಿ ಕಾಣುವುದಿಲ್ಲ. ವದ್ದಿಕೆರೆ ಹೇಮಾವತಿ ಸೀಮೆಗಳಲ್ಲಿ ಜೋಗಿಗಳು ಜನೇವಾವನ್ನು ‘ಕುರುಬದಾರ’ದಿಂದ ಮಾಡದೆ ಬಿಳಿನೂಲಿಗೆ ಸಿಂಗನಾದ ಕಟ್ಟಿ ನಾದಿಪವಿತ್ರಿ ಮಾಡಿಕೊಂಡಿದ್ದರು. ಕುರುಬರು ಮ್ಯಾಸನಾಯಕರು ಮುಂತಾದ ಪಶುಪಾಲಕರು ಇರುವ  ಹಾಗೂ ಕಂಬಳಿ ನೇಯ್ಗೆಗೆ ಪ್ರಸಿದ್ಧವಾಗಿರುವ ಈ ಪ್ರದೇಶದ ಶೈಲಿಗೆ, ಉಣ್ಣೆಯನ್ನು ಏಕೆ ಬಳಸಿಲ್ಲವೋ ತಿಳಿಯಲಿಲ್ಲ. ನಾಥಪಂಥಿ ಸಮುದಾಯದಲ್ಲಿ ಪೂಜಾರಿಕೆ  ಮಾಡುವವವರು ಶೈಲಿಯನ್ನು ಕಡ್ಡಾಯವಾಗಿ ಧರಿಸುತ್ತಾರೆ. ಶೈಲಿಯಲ್ಲಿ ೩ ವಸ್ತುಗಳಿರುತ್ತವೆ. ೧. ಮುದ್ರೆ ಉಂಗುರ ಅಥವಾ ಶಿಖೆ. ಶಿಖೆಯು ಫಾರಸಿಯ ಸಿಕ್ಕಾ ಶಬ್ದದಿಂದ ಬಂದಿದೆ. ಈ ಮುದ್ರೆಯನ್ನು ದೀಕ್ಷೆ ಪಡೆಯುವ ಶಿಷ್ಯರ ಪ್ರಮಾಣ ಪತ್ರಕ್ಕೆ ಒತ್ತಲು  ಹಾಗೂ ಚಾರಣದ ಲ್ಲಿದ್ದಾಗ ತಮ್ಮ ಗುರುತು ಹೇಳಲು ಬಳಸುತ್ತಿದ್ದರು.  ೨. ದರ್ಶಿನಿ ಎಂಬ ಉಂಗುರ. ಇದು ಆನೆದಂತ,  ಘೇಂಡಾಮೃಗ ಇಲ್ಲವೆ ಜಿಂಕೆಯ ಕೊಂಬಿನದು. ಈ ಉಂಗುರದ ಕಾರಣದಿಂದ ನಾಥರನ್ನು  ದರ್ಶಿನಿ ಸಾಧು ಎನ್ನಲಾಗುವುದು. ಇದು ಯೋಗಿಯನ್ನು ಸಮಸ್ತ ಮೈಲಿಗೆಯಿಂದ ಉಳಿಸುತ್ತದೆಂದು ನಂಬಿಕೆಯಿದೆ. ಈ ಕಾರಣ, ನಾಥಯೋಗಿಗೆ ಸ್ನಾನಮಡಿಯ ಹಂಗಿಲ್ಲ. ೩. ಸಿಂಗನಾದ. ಸಿಂಗವು (ಸಂಸ್ಕೃತದ ಶೃಂಗ) ನಾದಮಾಡುವ ಕಾರಣ ಸಿಂಗನಾದ (<ವಾಗಿದೆ). ಹಿಂದೆ ಕೃಷ್ಣಮೃಗದ ಕೊಂಬಿನ ಸಿಂಗನಾದವನ್ನು ಧರಿಸುತ್ತಿದ್ದರು. ಈಗ ಬೆಳ್ಳಿಯ ಅಥವಾ ಗಂಧದ ಮರದ ಸಿಂಗನಾದ ಮಾಡಿಸಿಕೊಳ್ಳುತ್ತಾರೆ. ‘ಸಿದ್ಧೇಶ್ವರ ಪುರಾಣ’ದ  ಪ್ರಕಾರ, ನಾಥರಿಗೆ ಈ ಶೃಂಗಬರಲು ಒಂದು ಪೌರಾಣಿಕ ಕತೆಯಿದೆ. ಮೃಗರೂಪ ಧರಿಸಿ ಓಡುತ್ತಿದ್ದ ವಿಷ್ಣುವನ್ನು ವೀರಭದ್ರನು ಶರಪ್ರಯೋಗಿಸಿ ಶಿರಚ್ಛೇದ ಮಾಡುತ್ತಾನೆ. ಆಗ ಅಲ್ಲಿದ್ದ  ಭೈರವನು ಅದರ ಕೊಂಬನ್ನು ಕಿತ್ತುಕೊಂಡು ಜಯದ ಸಂಕೇತವಾಗಿ ಬಾರಿಸುತ್ತಾನೆ.  ಭೈರವನ ಕಪಾಲಕ್ಕೆ ಇರುವಂತೆ ಸಿಂಗನಾದಕ್ಕೂ ವೈಷ್ಣವ ವಿರೋಧಿ ಐತಿಹ್ಯ ಇರುವುದು ಗಮನಾರ್ಹ. ಗುರುವಿಗೂ ಭೈರವನಿಗೂ ಧುನಿಗೂ ನಮಸ್ಕರಿಸಿದ ನಂತರ ನಾಥಯೋಗಿಗಳು ಹಾಗೂ ಗೃಹಸ್ಥರು ಸಿಂಗನಾದವನ್ನು ಮಾಡುವ ಪದ್ಧತಿಯಿದೆ. ಚುಂಚನಗಿರಿ ಮಠದಲ್ಲಿ ದೊಡ್ಡ ಶೃಂಗವನ್ನು ನುಡಿಸುತ್ತಿರುವ ಜೋಗಿಯ ಉಬ್ಬುಶಿಲ್ಪವಿದೆ. ಗೋರಟಾದಲ್ಲಿ (ಬಸವಕಕಲ್ಯಾಣ) ಕೈಯಲ್ಲಿ ಸಿಂಗನಾದ  ಹಿಡಿದಿರುವ ಗೋರಖ ಮೂರ್ತಿಯಿದೆ. ಅಲಸೂರಿನ (ಬೆಂಗಳೂರು) ಸೋಮೇಶ್ವರ ಗುಡಿಯಲ್ಲಿರುವ ನವನಾಥರ ಶಿಲ್ಪಗಳಲ್ಲಿ ಸಿಂಗನಾದ ಬಾರಿಸುವ ಭಂಗಿಯಿದೆ.  ಹೊಸಪೇಟೆ ತಾಲೂಕಿನಲ್ಲಿ ಸಿಂಗನಾಥನಹಳ್ಳಿಯಿದೆ. ಅದು ಸಿಂಗನಾದದಿಂದ ಬಂದಿತೇ ಇಲ್ಲವೇ ತಿಳಿಯದು. ಬಾಬಾಬುಡನಗಿರಿ ಉರುಸಿನಲ್ಲಿ ಖಲಂದರ್ ಫಕೀರರು ಕೋಣನ ಕೊಂಬಿನ ಸಿಂಗನಾದ ಬಾರಿಸುತ್ತಾರೆ. ಬ್ರಿಗ್ಸನ ಪ್ರಕಾರ ನಾಥರು ಶೈಲಿಯಲ್ಲಿ ಧರಿಸುವ ಉಂಗುರ ಹಾಗೂ ಸಿಂಗನಾದಗಳು ಯೋನಿ ಮತ್ತು ಲಿಂಗದ ಸಂಕೇತ. ಶಿವಶಕ್ತಿಯರ ಮಿಲನವೇ ಯೋಗದ ಕ್ರಿಯೆಯಾದ ಕಾರಣ, ಇವು ಒಂದೇ ದಾರದಲ್ಲಿ ಸೇರಿಕೊಂಡಿವೆ.[6]

ದೀಕ್ಷೆ ಕೊಟ್ಟಾಗ ಆರಂಭವಾಗುವ ಗುರುಶಿಷ್ಯರ ಸಂಬಂಧವು ಸಾವಿನ ತನಕ ಇರುತ್ತದೆ.  ದೀಕ್ಷೆಪಡೆದ ತಮ್ಮ ಶಿಷ್ಯರು ತೀರಿಕೊಂಡಾಗ, ಜೋಗಪ್ಪ ಅವರ ಮಣ್ಣಿಗೆ ಹೋಗಬೇಕು. ಮಣ್ಣು ಮಾಡುವ ಕ್ರಮವನ್ನು ಉಪನಾಯಕನಹಳ್ಳಿಯ ಜಯಣ್ಣನವರು ವಿವರಿಸಿದರು.  ಮೊದಲು ಸಮಾಧಿಯ ಭೂಮಿಯನ್ನು ಪೂಜಿಸಿ ನಂತರ ಅಗೆಯುತ್ತಾರೆ. ಸಮಾಧಿಯ ಒಳಭಾಗವನ್ನು ಗಂಜಳ ಹಾಕಿ ಶುದ್ಧಮಾಡುತ್ತಾರೆ. ಅದರ ಗೋಡೆಯ ಮೇಲೆ ತ್ರಿಶೂಲದ ಚಿತ್ರವನ್ನು ವಿಭೂತಿಯಿಂದ ಬರೆಯುತ್ತಾರೆ. ಶವದ ಕಿವಿಯಲ್ಲಿರುವ  ಕುಂಡಲಗಳನ್ನು ತೆಗೆದು ಸೋರೆಯ ಕುಂಡಲ ಹಾಕುತ್ತಾರೆ. ಶವವನ್ನು ಕೂರಿಸಿ ಅದರ ಬಲಹೆಗಲಿಗೆ ಜೋಳಿಗೆ ಕಟ್ಟಿ ಅದರಲ್ಲಿ ಬಿಲ್ಪತ್ರೆಯನ್ನೂ ಎಡದ ಜೋಳಿಗೆಗೆ ಬುತ್ತಿಯನ್ನೂ ಕಟ್ಟುತ್ತಾರೆ. ಚುಂಚನಗಿರಿ ಸೀಮೆಯಲ್ಲಿ ಈ ಬುತ್ತಿ ಕೋಳಿಮೊಟ್ಟೆ ಹಾಗೂೊಮೊಸರನ್ನದ್ದು. ೧೬ನೇ ದಿನದ ತಿಥಿಯಂದು ಸಮಾಧಿಯ ನಾಲ್ಕು ಮೂಲೆಗಳಲ್ಲಿ ಹಾಗೂ ಮೃತನ ಎದೆಭಾಗದಲ್ಲಿ ಕುಳಿತು ಸತ್ತವರ ಮಗನಿಂದ ಪಾದಪೂಜೆ ಮಾಡಿಸಿಕೊಳ್ಳುತ್ತಾರೆ. ಹೊಸಬಟ್ಟೆ, ಹೊಸಚಪ್ಪಲಿ, ಕಂಬಳಿ ಕಾಣಿಕೆ ಪಡೆಯುತ್ತಾರೆ. ಸಮಾಧಿ ಮೇಲಿದ್ದ ವಿಭೂತಿಯನ್ನು ಸಿದ್ಧಬೂದಿ ಎಂದು ಮನೆಗೆ ಒಯ್ಯುತ್ತಾರೆ. ಚುಂಚನಗಿರಿ ಕಾಪಾಲಿಕರಲ್ಲಿ ಈ ತಿಥಿಯನ್ನು ಸಿದ್ಧಗತಿ ಎನ್ನುತ್ತಾರೆ. ಯೋಗದ ಸಮಾಧಿಸ್ಥಿತಿಯ ಪರಿಕಲ್ಪನೆ ಇರುವ ಪಂಥಗಳಲ್ಲಿ ತಾತ್ವಿಕವಾಗಿ ಸಾವು ದುರಂತವಲ್ಲ. ಅದು ಮೋಕ್ಷ. ಹೀಗಾಗಿಯೋ ಏನೊ, ಎಷ್ಟೊ ಯೋಗಿಗಳು ಯೋಗದ ಸಮಾಧಿ ಹಂತದಲ್ಲಿ ಮರಣವನ್ನಪ್ಪಿರುವುದೂ ಇದೆ.

ರೋಟ್ಪೂಜೆ ಹಾಗೂ ಸಿದ್ಧಭುಕ್ತಿ

ನಾಥರು ದೈವಕ್ಕೂ ಗುರುವಿಗೂ ಸಮರ್ಪಿಸುವ ಎಡೆಗಳಲ್ಲಿ ರೋಟ್‌ಪೂಜೆ  ಹಾಗೂ ಸಿದ್ಧಭುಕ್ತಿ ಮುಖ್ಯವಾದವು. ಇವು ಆಹಾರರೂಪಿ ಆಚರಣೆಗಳು. ನಾಥಮಠಗಳಲ್ಲಿ ಇರುವ ಭಂಡಾರದಲ್ಲಿ ರೋಟನ್ನು ಅದಕ್ಕಾಗಿ ನೇಮಕಗೊಂಡ ಭಂಡಾರಿಯೇ ಸಿದ್ಧಪಡಿಸುತ್ತಾನೆ. ರೋಟನ್ನು   ಗೋಧಿಹಿಟ್ಟು, ತುಪ್ಪ, ಗೋಡಂಬಿ, ಒಣದ್ರಾಕ್ಷಿ, ಬೆಲ್ಲ, ಯಾಲಕ್ಕಿ, ಹಾಲು ಹಾಗೂ ಸೋಪಿನ ಕಾಳನ್ನು ಬಳಸಿ ತಯಾರಿಸಲಾಗುತ್ತದೆ. ಇವೆಲ್ಲ ಹಾಕಿ ಮಾಡಿದ ರೊಟ್ಟಿಯನ್ನು  ಧುನಿಯ ಕೆಂಡದ ಅಡಿಯಲ್ಲಿಟ್ಟು ಬೇಯಿಸಲಾಗುತ್ತದೆ. ಕೆಂಡದಲ್ಲಿ ಬೆಂದ ಕಾರಣ ಇದು ಕೆಡದೆ ಬಹುಕಾಲ ಇರುತ್ತದೆ. ನಾಥರು ತಮ್ಮ ಚಾರಣಕಾಲದಲ್ಲಿ ಇದನ್ನು ಜೋಳಿಗೆಗಳಲ್ಲಿ ಇರಿಸಿಕೊಂಡು, ಹಸಿವಾದಾಗ ತಿಂದು ನೀರು ಕುಡಿಯುತ್ತಾರೆ. ರೋಟನ್ನು ಭೈರವನಿಗೆ ಪ್ರಸಾದವಾಗಿ ಇಡುತ್ತಾರೆ. ದರ್ಶನಕ್ಕೆ ಬಂದ ಭಕ್ತರಿಗೆ ಈ ರೋಟಿನ ಪುಡಿ ಯನ್ನು ಮಾಡಿ ಹಂಚುತ್ತಾರೆ.  ಇದು ಸೂಫಿದರ್ಗಾ ಆಚರಣೆಗಳಲ್ಲಿ ಇರುವ ಮಾಲದಿಯ ಇನ್ನೊಂದು ರೂಪ. ಎಲ್ಲ ಗುರುಪಂಥಗಳ ಗದ್ದುಗೆ ಪೂಜೆಯ ಆಚರಣೆಗಳಲ್ಲಿ ಈ ಪ್ರಸಾದವಿದೆ. ವಿಶೇಷವೆಂದರೆ ರೋಟು ಪ್ರಸಾದವಾಗುವುದು ಅದನ್ನು ಖಡ್ಗದಿಂದ ಕತ್ತರಿಸಿದಾಗ. ಇದಕ್ಕೆ  ರೋಟ್‌ಮುಕ್ತ್(?) ಎಂದು ಹೆಸರು. ಸಿಖ್ಖರಲ್ಲೂ ಈ ಪದ್ಧತಿಯಿದೆ. ತ್ರ್ಯಂಬಕೇಶ್ವರದಲ್ಲಿ ಅನುಪಾನಶಿಲಾ ಎಂಬ ದೊಡ್ಡ ಹಾಸುಬಂಡೆಯ ಮೇಲೆ ನಡೆದ ಆಚರಣೆಯಲ್ಲಿ, ರೋಟ್‌ಮುಕ್ತ್ ಮಾಡಲಾಯಿತು. ಆಗ ತುಪಾಕಿಯಿಂದ ಆಗಸಕ್ಕೆ ಗುಂಡನ್ನೂ ಹಾರಿಸಲಾಯಿತು. ಪೂಜೆಯಲ್ಲಿ ಖಡ್ಗ ಮತ್ತು ಕೋವಿಗಳ ಬಳಕೆ ಗಮನಾರ್ಹ. ಇದು ಬಲಿ ಆಚರಣೆಯ ಅವಶೇಷ ಇರಬಹುದು.

ಸಿದ್ಧಭುಕ್ತಿ ಮಾತ್ರ  ಮಾಂಸ ಭಂಗಿ ಹಾಗೂ ಮದಿರೆಗಳ ಸಮರ್ಪಣೆ. ಸಿದ್ಧಭುಕ್ತಿ ಆಚರಣೆಯನ್ನು ೩ ಸಂದರ್ಭದಲ್ಲಿ ಮಾಡಲಾಗುತ್ತದೆ. ೧.ನಾಥಪಂಥದವರು ಇಲ್ಲವೆ ಜೋಗಿದೀಕ್ಷೆ ಪಡೆದ ಇತರ ಜಾತಿಯವರು ತೀರಿಕೊಂಡಾಗ; ೯ನೇ ಅಥವಾ ೧೨ನೇ ದಿನ  ತಿಥಿಯಂದು. ಬಹಳ ಹಿಂದೆ ನಾಥಯೋಗಿಯ ತಿಥಿಯ ದಿನದಂದು ಮಾಂಸದಾನ ಮಾಡುವ ಪದ್ಧತಿಯೂ ಇತ್ತೆಂದು ತಿಳಿದುಬರುತ್ತದೆ. ೯ ಮತ್ತು ೧೨ ಸಂಖ್ಯೆಗಳು ನವನಾಥರನ್ನೂ ಬಾರಾಪಂಥವನ್ನೂ ನೆನಪಿಸುವುದು ಗಮನಾರ್ಹ. ೨. ಭೈರವನ ಜಾತ್ರೆಯ ಸಂದರ್ಭದಲ್ಲಿ; ೩. ಜೋಗಿಯನ್ನು ಮನೆಗೆ ಬಿನ್ನಹಕ್ಕೆ ಕರೆದಾಗ; ಕಾಪಾಲಿಕ ಮೂಲದಿಂದ ರೂಪಾಂತರವಾಗಿರುವ ಚುಂಚನಗಿರಿ ಲುಂಕೆಮಲೆ ಮಠಗಳ ಪರಿಸರದಲ್ಲಿ ಸಿದ್ಧಭುಕ್ತಿ ವಿಶೇಷವಾಗಿದೆ. ಚುಂಚನಗಿರಿ ಸೀಮೆಯಲ್ಲಿ ನಾಥರು ಹಾಗೂ ಜೋಗಪ್ಪಗಳು ಈ ಭುಕ್ತಿಸೇವನೆಗೆ  ಎತ್ತಿನಮೇಲೆ ಪ್ರಯಾಣ ಮಾಡಿಕೊಂಡು ಹೋಗುತ್ತಿದ್ದರಂತೆ. ಲುಂಕೆಮಲೆ ಭೈರವನ ಜಾತ್ರೆಯ ನಾಲ್ಕನೆಯ ದಿನ ಸಿದ್ಧಭುಕ್ತಿ ಜರುಗುತ್ತದೆ. ಇದನ್ನು ಜಾತ್ರೆಯ ಆಹ್ವಾನ ಪತ್ರಿಕೆಯಲ್ಲೇ ಪ್ರಕಟಿಸಲಾಗುತ್ತದೆ. ಕಾಪಾಲಿಕರು ಕಿನ್ನರಿಜೋಗಿಗಳು ಹಾಗೂ ಮ್ಯಾಸಬೇಡರು ಸಿದ್ಧಭುಕ್ತಿ ಆಚರಣೆಯನ್ನು ನಡೆಸಿಕೊಡುತ್ತಾರೆ. ವಿಶೇಷವೆಂದರೆ, ಇಲ್ಲಿ ಲಿಂಗಾಯತ ಭಕ್ತರೂ ಗುಪ್ತವಾಗಿ ಅಥವಾ ಸಾಂಕೇತಿಕವಾಗಿ ಸಿದ್ಧಭುಕ್ತಿ ಆಚರಣೆಯನ್ನು ನೆರವೇರಿಸುವುದು.  ಲುಂಕೆಮಲೆಗೆ ನಡೆದುಕೊಳ್ಳುವ ಲಿಂಗಾಯತರೇ ಇರುವ ಪೂಜಾರಹಟ್ಟಿಗೆ ಹೋದಾಗ  ‘ನೀವು ಸಿದ್ಧಭುಕ್ತಿ ಕೊಡುತ್ತೀರಾ?’ ಎಂದು ಕೇಳಲು, ಮೊದಲು ಇಲ್ಲವೆಂದರು. ನಂತರ ಒಬ್ಬ ಹಿರಿಯರು  ‘ನಾವೇನು ಮಾಡಲ್ಲ. ಆದರೆ ಸ್ವಾಮಾನ ಕೊಟ್ಟು ಮಾಡುಸ್ತೀವಿ’ ಎಂದರು. ‘ಸ್ವಾಮಾನ ಆಂದ್ರೆ?’ ಎಂದು ಕೇಳಲು. ‘ಒಂದು ಮರಿ(ಕುರಿ)ತೊಡೆ, ತಲೆ, ಒಂದು ತೊಲಭಂಗಿ, ಸೀಸೆ ಸಾರಾಯಿ’ ಎಂದು ವಿವರಣೆ ಕೊಟ್ಟರು. ಲಿಂಗಾಯತರು ಮೆಜಾರಿಟಿ ಯಲ್ಲಿರುವ ಸೊಂಡೆಕೊಳದ ಭೈರವದೇವರಿಗೆ  ಐದು ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಜಾತ್ರೆಯಲ್ಲಿ ಒಂದೇಬಣ್ಣದ ಪಟ್ಟದಕುರಿಯನ್ನು ಪೂಜಿಸಿ, ಸುತ್ತ ಕಂಬಳಿಯ ತೆರೆಕಟ್ಟಿ, ಜೋಗಪ್ಪ ಚೂರಿಹಾಕುತ್ತಾನೆ. ಜಾತ್ರೆಯ ದಿನ ಮಾಂಸದೂಟ ಇರುತ್ತದೆ. ಊಟಕ್ಕೆ ಮೊದಲು ಭಂಗಿಸೇವನೆ ಇರುತ್ತದೆ. ಇದುವೇ ಸಿದ್ಧಭುಕ್ತಿ. ಲಿಂಗಾಯತರು ಮಾಂಸಾಹಾರ ಮಾಡುವುದಿಲ್ಲ. ಆದರೆ ಬಲಿಪ್ರಾಣಿಯನ್ನು ಕೊಡಿಸಿ ಪರೋಕ್ಷವಾಗಿ ಸಿದ್ಧಭುಕ್ತಿಗೆ ನೆರವಾಗುತ್ತಾರೆ. ಹೇಮಾವತಿಯಲ್ಲಿ (ಮಡಕಶಿರಾ) ಹೆಂಜೇರು ಸಿದ್ದ ಎಂದು ಪ್ರಸಿದ್ಧನಾಗಿರುವ ಭೈರವನಿಗೆ ಮಾಡುವ ಆಚರಣೆಗಳಲ್ಲಿ ಸಿದ್ಧಭುಕ್ತಿಯಿದೆ. ಹಿಂದೆ ಇದು ಗುಡಿಯ ಪೌಳಿಯೊಳಗೆ  ಬಬ್ಬುರಸೆ ಎಂಬ ಮಂಟಪದಲ್ಲಿ ನಡೆಯುತ್ತಿತ್ತು.  ಭೈರವನ ಪೂಜೆಗೆ ಜಂಗಮರು ನೇಮಕವಾದ ಬಳಿಕ, ಈ ಆಚರಣೆ ನಿಂತು ಹೋಯಿತು. ಆದರೂ ಇದು ಗುಡಿಯ ಹೊರಗೆ ನಡೆಯುತ್ತದೆ ಎಂದು ಕೆಲವರು ಹೇಳಿದರು.

ಲುಂಕೆಮಲೆ ಭಾಗದಲ್ಲಿ ಸಿದ್ಧಭುಕ್ತಿ ಮಾಡುವ ಕ್ರಮ ಹೀಗಿದೆ: ಮನೆಯ ನೆಲಸಾರಿಸಿ, ಕರಿಕಂಬಳಿ, ಬಾಳೆಲೆ ಅಥವಾ ಹೊಸಬಟ್ಟೆ ಹಾಸಿ, ಅದರ ಮೇಲೆ ಅಕ್ಕಿಹರಡಿ, ಅದರ ಮೇಲೆ ಸೋರೆಯ ಅಥವಾ ಪಂಚಲೋಹದ ಕಪಾಲಪಾತ್ರೆ, ತ್ರಿಶೂಲ, ವಿಭೂತಿ, ಗಂಧ, ಗಂಟೆಗಳನ್ನು ಸ್ಥಾಪಿಸುತ್ತಾರೆ. ಭೈರವನ ಹೆಸರಲ್ಲಿ ಬಿಟ್ಟ ಕುರಿಯನ್ನು ಬಲಿಕೊಡುತ್ತಾರೆ.  ಪ್ರಾಣಿಯ ಮಣ್ಣೀರಿಯನ್ನು (ಲಿವರ್) ಭೈರವನಿಗೆ ಪ್ರಸಾದವಾಗಿ ಇಡುತ್ತಾರೆ. ಸೋರೆ ಬುರುಡೆಯ ಪಾತ್ರೆ ತುಂಬ ಮಾಂಸದಡಿಗೆ ತುಂಬುತ್ತಾರೆ. ಮಾಂಸ ಬೇಯುವಾಗಲೇ  ಅದಕ್ಕೆ ಭಂಗಿ ಹಾಕಲಾಗುತ್ತದೆ ಇಲ್ಲವೆ ಎಡೆಯಿಟ್ಟ ತಣಿಗೆಯ ಮೇಲೆ ಭಂಗಿಸೇದಿದ ಹೊಗೆಯನ್ನು ಹಾಯಿಸಲಾಗುತ್ತದೆ. ಧೂಪದಂತೆ ಭಂಗಿಸೊಪ್ಪನ್ನು ಬೆಂಕಿಗೆ ಹಾಕಿ ಹೊಗೆ ಎಬ್ಬಿಸುವುದು ಇಲ್ಲವೆ  ಭೈರವದೇವರ ಮುಂದೆ  ಭಂಗಿತುಂಬಿದ   ಚಿಲುಮೆಯನ್ನು ಹೊತ್ತಿಸಿಡುವುದು  ಸಹ ಉಂಟು.  ಜೋಗಪ್ಪ ಸಿಂಗನಾದ ಉದುತ್ತಾನೆ. ಮೊದಲು ಜೋಗಪ್ಪ ಅಥವಾ ನಾಥ ಯೋಗಿ ಊಟ ಮಾಡುತ್ತಾನೆ, ಬಳಿಕ ಮನೆಯವರು. ಲುಂಕೆಮಲೆ ಪುರಾಣದಲ್ಲಿ ಜೋಗಿ ವೇಷಧರಿಸಿದ ಭೈರವನಿಗೆ ಮಾಂಸದ ಸಾರನ್ನು ಬಡಿಸುವ ವರ್ಣನೆಗಳಿದ್ದು, ಇವು ಸಿದ್ಧಭುಕ್ತಿಯ ಭಾಗವಾಗಿವೆ. ಸಿದ್ಧಭುಕ್ತಿಯ ಆಚರಣೆಗಳು ಸೂಫಿ ದರ್ಗಾಗಳಲ್ಲಿ ನಡೆವ ಕಂದೂರಿಯನ್ನು ಹೋಲುತ್ತವೆ.

ಚಂದ್ರಗುತ್ತಿ ಭಾಗದ ಕಿನ್ನರಿ ಜೋಗಿಗಳಲ್ಲಿ ಸಿದ್ಧಭುಕ್ತಿಯನ್ನು ‘ಮಂತಿ’ ಎನ್ನಲಾಗುತ್ತದೆ. ಕೋಳಿಯ ರಕ್ತ, ಭಂಗಿ, ಅಕ್ಕಿಹಿಟ್ಟುಗಳು ಕಲಸಿ ಬಾಳೆಲೆಯಲ್ಲಿ ಸುತ್ತಿ ಕೆಂಡದಲ್ಲಿ ಬೇಯಿಸಲಾಗುತ್ತದೆ. ಮಂತಿಯ ಜತೆ ಬೆಲ್ಲ ಭಂಗಿ ಜೀರಿಗೆ ಹಣ್ಣು ಹಾಕಿಮಾಡಿದ  ರಾಮರಸದ ಮೊಗೆಯನ್ನು ಭೈರವನ ಎದುರು ಇಡಲಾಗುತ್ತದೆ. ಚುಂಚನಗಿರಿ ಸೀಮೆಯ ಮೋಕಳಿಯಲ್ಲಿ (ಅರಕಲಗೂಡು)ಸಿದ್ಧಭುಕ್ತಿಯನ್ನು ‘ಭುಕ್ತಿಸೇವೆ’ ಎನ್ನುತ್ತಾರೆ. ಚುಂಚನಗಿರಿ ಸಾಹಿತ್ಯದಲ್ಲಿ ‘ಭೂತನಸೇವೆ’ ಆಚರಣೆಯ ಪ್ರಸ್ತಾಪವಿದೆ. ಸಿದ್ಧರಸೇವೆ ಎನ್ನುವುದೇ ಭೂತನಸೇವೆ ಆಗಿರಬಹುದು. ಶಿವನು ತನಗೆ ಭಕ್ತರು ಕೊಟ್ಟ ಮಾಂಸವನ್ನು ಭೂತಗಣಗಳಿಗೆ ತಿನಿಸುವ ವರ್ಣನೆ ಪುರಾಣಗಳಲ್ಲಿ ಬರುತ್ತದೆ.

ಶಿಷ್ಟರಾಗಿರುವ ಕಾಪಾಲಿಕ ಸಮುದಾಯದ ಕೆಲವು ವ್ಯಕ್ತಿಗಳು  ಸಿದ್ಧಭುಕ್ತಿಯನ್ನು ‘‘ಅರ್ಥಹೀನ ಅಪವಿತ್ರ ಪೂಜಾ ಪದ್ಧತಿ’’ ಎಂದು ಟೀಕಿಸುತ್ತಾರೆ. ಅವರ ಪ್ರಕಾರ ‘ಸಿದ್ಧಭಕ್ತಿ’ಯು ತಪ್ಪಾಗಿ ಸಿದ್ಧಭುಕ್ತಿಯಾಗಿದೆ; ‘‘ಇದೊಂದು ಶ್ರೇಷ್ಠವಾದ ಸೇವಾಪದ್ಧತಿ ಆಗಿದ್ದರೂ ಈಗಿನ ಆಚರಣೆಯಲ್ಲಿ ಇದು ಬಹು ಕಳಂಕಪೂರ್ಣ, ಅವಹೇಳನ ಹಾಗೂ ಅವಿವೇಕದ ಧರ್ಮದೂರವಾದ ಸೇವಾ ಪದ್ಧತಿಯಾಗಿದ್ದು, ಈ ಧರ್ಮವು ಸುಧಾರಣೆ ಆಗುವುದಕ್ಕೆ ಮುಂಚಿನ ಅದರಲ್ಲೂ ವಾಮಾಚಾರಿಗಳ ಉಗ್ರ ತಾಂತ್ರಿಕ ಪೂಜಾವಾದಿಗಳಿಂದ ಬೆಳೆದು ಬಂದಿರಬಹುದಾದ ಅದರಲ್ಲೂ ಕೀಳುಮಟ್ಟದ ಪದ್ಧತಿಯಾಗಿದೆ’’.[7] ವೈರುಧ್ಯ  ಎಂದರೆ  ಸಸ್ಯಾಹಾರಿ ಜಾತಿಯ ಭೈರವ ಭಕ್ತರು ಕದ್ದುಮುಚ್ಚಿ ಸಿದ್ಧಭುಕ್ತಿ ಮಾಡುವುದು; ಆದರೆ ಸ್ವತಃ ಲಿಂಗಾಯತೀಕರಣಗೊಂಡ ಕಾಪಾಲಿಕರಲ್ಲಿ ಕೆಲವರು ಇದರಿಂದ ದೂರಸರಿಯುತ್ತಿರುವುದು.

ಭಂಗಿಸೇವೆ

ಯಾವುದೇ ಗುರುಬೋಧ ಪದ್ಧತಿಯುಳ್ಳ  ಸಿದ್ಧ ಮತ್ತು ಆರೂಢ  ಸಂಪ್ರದಾಯಗಳನ್ನು ಭಂಗಿಯಿಲ್ಲದೆ ಕಲ್ಪಿಸಿಕೊಳ್ಳುವುದು ಕಷ್ಟ. ಮದ್ಯ ಹಾಗೂ ಭಂಗಿಗಳು ಸಾಧಕರಿಗೆ ಮಾನಸಿಕವಾದ ಉನ್ಮತ್ತ ಅವಸ್ಥೆಯನ್ನು ಪಡೆಯಲು ಪ್ರಚೋದಕಗಳಾಗಿ ಕೆಲಸ ಮಾಡುತ್ತವೆ. ಯೋಗಸಾಧನೆಯಲ್ಲಿ ಮೊದಲ ಹಂತದ ಟ್ರಾನ್ಸ್ ಸ್ಥಿತಿಗೆ ಹೋಗಲು ನೆರವಾಗಲಿ ಎಂದು ಇವುಗಳ ಸೇವನೆ ಆರಂಭವಾಗಿರಬಹುದು. ಆದರೆ ಇದು ಯೌಗಿಕ ಚಟುವಟಿಕೆ ಇಲ್ಲದೆ, ಕೇವಲ ಚಟವಾಗಿ ಹೋದ ನಿದರ್ಶನಗಳೇ ಹೆಚ್ಚು. ಬಾರಾಪಂಥದವರು ತಮ್ಮ ನಿಯಮವಾಳಿಯಲ್ಲಿ (ನಂ.೩) ‘ಪ್ರಾಹಿಬಿಶನ್ ಆಫ್ ಗಾಂಜಾ, ಭಾಂಗ್, ಟೊಬಾಕೊ ಅಂಡ್ ಲಿಕ್ಕರ್’ ಎಂದು ಛಾಪಿಸಿಕೊಂಡಿದ್ದಾರೆ. ಆದರೆ ಇವನ್ನು ನಿಲ್ಲಿಸಲಾಗಿಲ್ಲ. ಇದಕ್ಕೆ ಕಾರಣವೆಂದರೆ, ನಾಥರ ಆಚರಣೆಗಳಲ್ಲಿ ಭಂಗಿಯು ಮಹತ್ವದ ಸ್ಥಾನವನ್ನು ಮೊದಲಿಂದಲೂ ಪಡೆದಿದೆ. ಭಂಗಿ ಹಾಕಿ ಮಾಡಿದ ರೊಟ್ಟಿಯನ್ನು ನಾಥಯೋಗಿಗಳಿಗೆ ಹಾಗೂ ಭೈರವನಿಗೆ ಎಡೆಕೊಡುವ ಪದ್ಧತಿ ಚುಂಚನಗಿರಿಯಲ್ಲಿತ್ತು. ಮಂಟೆಸ್ವಾಮಿ ಪರಂಪರೆಯಲ್ಲಿ ಭಂಗಿಸೇವೆಯಿದೆ.  ಈಗಲೂ ಸಿದ್ದರ ಮಠಕ್ಕೆ ಹೋದಾಗ ಭಕ್ತರು ತಾವು ಬೆಳೆದ ಇಲ್ಲವೆ ಕೊಂಡುತಂದ ಭಂಗಿಯನ್ನು ಕಾಣಿಕೆಯಾಗಿ ಅರ್ಪಿಸುವ ಪದ್ಧತಿಯಿದೆ.

ವದ್ದೀಕೆರೀಲಿಂದಾ ಸಿದ್ಧರು ಬಂದೈದಾರೆ, ಹೆಜ್ಜೆಜ್ಜಿಗೆ ಬಂಗಿ ಕಿಡೀ ಬಂಗೀ ಕುಡುವೋರೆ
ಸಿದ್ಧಾರೆಂಬೋರು ಇವರೇನೇ!ಸೋಬಾನವೇ!
ಹೇಮಾವತೀಲಿಂದ ಜೋಗ್ಯಾರು ಬಂದೈದಾರೆ, ಜಾವಾಜಾವಕ್ಕೆ ಕಿಡೀ ಬಂಗಿ ಕುಡುವೋರೆ
ಜೋಗ್ಯಾರೆಂಬೋರು ಇವರೇನೇ!ಸೋಬಾನವೇ! (ಬೋರೇದೇವರ ಕಾವ್ಯ)

ಇಲ್ಲಿರುವ ವದ್ದಿಕೇರಿ ಹಾಗೂ ಹೇಮಾವತಿಗಳು ಲುಂಕೆಮಲೆಯ ಉಪಮಠದ ಊರುಗಳು. ಇಲ್ಲಿ ಭಂಗಿ ಸೇದುವ ಸಿದ್ಧರ ಬಗ್ಗೆ ಸೋಜಿಗವಿದೆಯೇ ಹೊರತು ತಿರಸ್ಕಾರವಿಲ್ಲ. ಆದರೆ ವೀರಶೈವ ಕಾವ್ಯಗಳು ಜೋಗಿಗಳ ಭಂಗಿಸೇವನೆಯನ್ನು ವ್ಯಂಗ್ಯವಾಗಿ ಚಿತ್ರಿಸುತ್ತವೆ. ‘ಶಂಕರದಾಸಿಮಯ್ಯನ ಪುರಾಣ’ದ ಪ್ರಕಾರ ‘‘ಪರ್ಣವ ಮೆಲುತೆ, ಭಂಗಿಯ ಮುಕ್ಕಿ, ಕಳ್ಳಂ ಗಳಗಳನೆ ಕುಡಿದಾಗ, ಢರ‌್ರನೆ ತೇಗಿ..ಜೋಲುತೆ ನಿಲುತೆ ಥರಥರಿಸುತ್ತೆ ಪಾಡುತೆ ನಲಿದು ಕುಣಿದಾಡುತ್ತಲಿರ್ದುದು ಜೋಗಿಗಳ ತಂಡಂ’’; ಕನ್ನಡದಲ್ಲಿ ಎರಡು ಧಾರೆಯ ಪಠ್ಯಗಳು ನಮ್ಮ ಆನುಭಾವಿಕ ಪಂಥಗಳ ಬಗ್ಗೆ ತಾಳುವ ವಿಭಿನ್ನ ನಿಲುವುಗಳಲ್ಲಿ ಇರುವ ವ್ಯತ್ಯಾಸವು ಅಧ್ಯಯನ ಯೋಗ್ಯವಾಗಿದೆ. ನಾಥರಲ್ಲಿ ಭಂಗಿಯನ್ನು ಆದರದಿಂದ ‘ಸಿದ್ಧಪತ್ರೆ’ ಎನ್ನಲಾಗುತ್ತದೆ. ಸಿದ್ಧಭುಕ್ತಿ ಆಚರಣೆಯಲ್ಲಿ ಭಂಗಿ ಕಡ್ಡಾಯ. ಲುಂಕೆಮಲೆ ಮಠದಲ್ಲಿ ಭಂಗಿಯನ್ನು ಬೆಳೆಯಲಾಗಿತ್ತು. ಕಾಪಾಲಿಕರ ಹಾಗೂ ಜೋಗಿಗಳ  ಹಿತ್ತಲುಗಳಲ್ಲಿ ಭಂಗಿ ಗಿಡಗಳಿದ್ದವು. ವದ್ದಿಕೆರೆಯಲ್ಲಿ ಭಂಗಿಸಿದ್ಧಪ್ಪ ಎಂಬ ಕಾಪಾಲಿಕ ವ್ಯಕ್ತಿಯ ಹಿತ್ತಲಲ್ಲಿ ಪೊದೆಯಂತಹ ಭಂಗಿಗಿಡವಿತ್ತು.  ಲುಂಕೆಮಲೆಯ  ಯೋಗಿ ಮಂಗಲನಾಥನು ತನ್ನ ಮಂಚದಡಿ ಡಬ್ಬದ ತುಂಬ ಭಂಗಿ ಇಟ್ಟುಕೊಂಡಿದ್ದನು. ನಾನು ಕಂಡಂತೆ ಲುಂಕೆಮಲೆಯ ಮಂಗಲನಾಥನು ಅತಿಹೆಚ್ಚು  ಭಂಗಿಸೇವನೆ ಮಾಡಿದ ನಾಥನು. ಅವನು ಸೂಚಿಸಿದಾಗೆಲ್ಲ ಸುತ್ತಲಿದ್ದ ಶಿಷ್ಯರು ಚಿಲುಮೆ ಸಿದ್ಧಮಾಡಿ ಕೊಡುತ್ತಿದ್ದರು ಹಾಗೂ ಗುರುವಿನ ಜತೆ ತಾವೂ ಸಾಮೂಹಿಕ ಭಂಗಿಸೇವನೆ ಮಾಡುತ್ತಿದ್ದರು.

ಧುನಿ

ನಾಥಮಠಗಳ ಮುಖ್ಯ ಕುರುಹು ಧುನಿ. ದುನಿ ಎಂದರೆ ಬೆಂಕಿಕೊಂಡ. ಈ ಬೆಂಕಿಯು ತುಪ್ಪ ಹಾಕಿ ವೈದಿಕರು ಆವಾಹಿಸುವ ಅಗ್ನಿದೇವತೆಯಲ್ಲ. ಇದು ವಿರಕ್ತ ಪಂಥದಲ್ಲಿರುವ ಕಾಮದಹನದ ಸಂಕೇತ ಇರಬಹುದು; ನಾಥಪಂಥವು  ಸ್ಮಶಾನ ಸಂಸ್ಕೃತಿಯ ಕಾಪಾಲಿಕ ಮುಂತಾದ ಶೈವತಾಂತ್ರಿಕ ಪಂಥಗಳ ಸಂಗ ಮಾಡಿದ್ದರಿಂದ ಇದು ಬಂದಿರಬಹುದು.  ಭಸ್ಮಸ್ನಾನಕ್ಕೆ ಬೇಕಾದ ಬೂದಿಗಾಗಿ ಧುನಿ ಅಗತ್ಯ. ಈಗಲೂ ಭಸ್ಮಸ್ನಾನ ಮಾಡುವ ನಾಥರು ಇದ್ದಾರೆ. ಕನ್ನಡದ ಜೋಗಿಹಾಡುಗಳಲ್ಲಿ ಸಿದ್ಧರು ಅರ್ಜುನನಿಗೆ ಭಸ್ಮದ ಜಳಕ ಮಾಡಿಸುವ ಪ್ರಸಂಗವಿದೆ.  ಸಿದ್ಧಪಂಥದ ಆಚರಣೆಗಳಲ್ಲಿ ಚಂದ್ರಮಂಡಲದ ದಹನವೂ ಒಂದು. ಚುಂಚನಗಿರಿ ಭೈರವನ ಹಾಗೂ ಮಂಟೆಸ್ವಾಮಿ ಪರಂಪರೆಯ ಸಿದ್ಧಪ್ಪಾಜಿಯ ಜಾತ್ರೆಯಲ್ಲಿ ಚಂದ್ರಮಂಡಲದ ಆಚರಣೆಗಳಿವೆ. ಆದರೆ ಇವು ಅಗ್ನಿಯ ಆರಾಧನೆಗಳಲ್ಲ. ಧೂನಾಪಾನಿ (ಬೆಂಕಿ ನೀರು) ಇರುವ ಕಡೆ ನಾಥರು ಇರುತ್ತಾರೆ ಎಂಬ ಗಾದೆಯಿದೆ. ಬೆಂಕಿಯು  ನಾಥರ ಅಗತ್ಯ ವಸ್ತುವಾಗಿದೆ. ಅದರಲ್ಲೂ ಜನದೂರವೂ ದಟ್ಟವೂ ಆದ ಕಾಡುಗುಹೆ ಕೊಳ್ಳಗಳಲ್ಲಿ ಇರುವಾಗ,  ಅದನ್ನು ಆರದಂತೆ ಇರಿಸಿಕೊಳ್ಳಬೇಕಾಗುತ್ತದೆ. ಬಳಕೆಯ ವಸ್ತು ಅಮೂಲ್ಯವಾದಾಗಲೂ ಪವಿತ್ರೀಕರಣ ಪಡೆಯುತ್ತದೆ.

ನಾಥರಲ್ಲಿ ಎರಡು ಬಗೆಯ ಧುನಿಗಳಿವೆ. ಒಂದು ಮಠದ ಧುನಿ. ಯಾವಾಗಲೂ ನಾಥ ಮಠಗಳಲ್ಲಿರುವ ಧುನಿಯಲ್ಲಿ ತ್ರಿಶೂಲ ಚಿಮುಟಗಳನ್ನು ಸಿಕ್ಕಿಸಿರುತ್ತಾರೆ. ಅದರ ಬೂದಿ ಯನ್ನು ಪ್ರಸಾದವಾಗಿ ಕೊಡುತ್ತಾರೆ. ಎರಡನೆಯದು ಬಯಲಧುನಿ. ನೂರಾರು ನಾಥರು ಸೇರಿದಾಗ ಬಯಲಿನಲ್ಲಿ ಧುನಿ ಮಾಡುತ್ತಾರೆ. ಇದು ಮೊಹರಮ್ಮಿನ ಅಲಾವಿಯಂತೆ, ವೀರಭದ್ರದೇವರ ಕೊಂಡದಂತೆ ಇರುತ್ತದೆ. ಬೆಳಿಗ್ಗೆ ಹಾಗೂ ಸಂಜೆ ಧುನಿಯನ್ನು ಹೊತ್ತಿಸಿ ಅದಕ್ಕೆ ನಮಸ್ಕಾರ ಮಾಡುವುದು ನಾಥರಿಗೆ ಕಡ್ಡಾಯ. ಸೂಫಿಗಳು ಸಹ ಧುನಿ ಉರಿಸುವ ಪ್ರಸ್ತಾಪ ಹಿಂದಿನ ಅಧ್ಯಾಯದಲ್ಲಿ ಬಂದಿತು. ಕದ್ರಿಯ ಬೆಟ್ಟದಲ್ಲಿ ನವನಾಥ ಕೆರೆಗಳ ಮೇಲೆ ಇರುವ ಬಾಗಿಲಿಲ್ಲದ ಪಡಸಾಲೆಗಳಲ್ಲಿ ನಾಥಯತಿಗಳು ಧುನಿ ಹಾಕಿಕೊಂಡು ಕುಳಿತಿರುವ ಒಂದು ಭಿತ್ತಿಚಿತ್ರವಿದೆ. ಚಿತ್ರದುರ್ಗದ ಬೆಟ್ಟಗಳಲ್ಲಿರುವ ಗುಹೆಗಳಲ್ಲಿ ಬೂದಿಯ ಗುಡ್ಡಗಳಿವೆ. ಇವು ಕಾಪಾಲಿಕರು ಬೂದಿಧಾರಣೆ ಮಾಡುವ ಕಾರಣದಿಂದ ಬಂದಿರಬಹುದು ಎಂಬ ಬಿ.ರಾಜಶೇಖರಪ್ಪನವರ ಊಹೆ ಸರಿಯಾಗಿದೆ.[8] ಆದರೆ ಈ ಬೂದಿಗುಡ್ಡೆಗಳು ನಾಥರ ಧುನಿಯ ಕಾರಣದಿಂದಲೂ ಬಂದಿರಬಹುದು.

ಝುಂಡಿಯಾತ್ರೆ

ಸದಾ ಧ್ಯಾನಭಂಗಿಯಲ್ಲಿ ಕೂರುವ ನಾಥರು, ಕಾಲ್ನಡಿಗೆಗೆ ಬಹಳ ಆದ್ಯತೆ ಕೊಟ್ಟಿದ್ದಾರೆ. ನಾಥಮಠಗಳು ದೇಶದ ತುಂಬ ಇರುವುದರಿಂದಲೂ, ಅವು ವಾಹನ ಹೋಗದ ಬೆಟ್ಟಕಣಿವೆಗಳಲ್ಲಿ ಇರುವುದರಿಂದಲೂ ನಡಿಗೆ ಸಂಸ್ಕೃತಿ ಅವರಲ್ಲಿದೆ. ಗುರು ಮುಖೇನ ವಿದ್ಯೆ ಪಡೆಯುವ ಪಂಥಗಳಲ್ಲಿ’ ಈ ನಡಿಗೆ ಮತ್ತು ಹುಟುಕಾಟ ಅನಿವಾರ್ಯವೆಂದು ಕಾಣುತ್ತದೆ. ಕೆಲವು ನಾಥಯೋಗಿಗಳೂ ಸದಾ ತಿರುಗುತ್ತಲೇ ಇರುತ್ತಾರೆ. ಅವರನ್ನು ರಮತೆ ಸಾಧು ಎನ್ನುತ್ತಾರೆ. ಒಬ್ಬ ನಾಥನು ಇಡೀ ಏಶಿಯಾ ಖಂಡವನ್ನು ಕಾಲ್ನಡಿಗೆಯಲ್ಲಿ ಸುತ್ತಹಾಕಿದ ಪ್ರಕರಣವನ್ನು ಬ್ರಿಗ್ಸನು ಉಲ್ಲೇಖಿಸುತ್ತಾನೆ. ನಾಥರು ದೊಡ್ಡ ಸಂಖ್ಯೆಯಲ್ಲಿ ಕೂಡಿಕೊಂಡು ಸಾಮೂಹಿಕ ಚಾರಣ ಮಾಡುವ ಆಚರಣೆಯಿದೆ. ಇದನ್ನು ‘ಝುಂಡಿ’ ಎನ್ನುತ್ತಾರೆ; ಝುಂಡಿ ಎಂದರೆ ಯಾತ್ರೆ. ಭಕ್ತರು ತಮ್ಮ ದೈವವಿರುವ ಜಾಗಕ್ಕೆ ಗುಂಪಾಗಿ ನಡೆದು ಹೋಗುವ ಆಚರಣೆಯನ್ನು ಮರಾಠಿಯಲ್ಲಿ ದಿಂಡಿ ಎನ್ನುತ್ತಾರೆ. ಪಂಢರಾಪುರಕ್ಕೆ ಹೋಗುವ ವಾರ(ಯಾತ್ರೆ)ಕರಿ  ಕೂಡ  ದಿಂಡಿಯೆ. ಆದರೆ ನಾಥರ ಝುಂಡಿಗೆ ಬೇರೆಬೇರೆ ಉದ್ದೇಶಗಳಿವೆ. ಅವುಗಳಲ್ಲಿ ನಾಥಮಠಗಳ ಆಡಳಿತೆಯನ್ನು ಬದಲಾಯಿಸುವುದೂ ಒಂದು.

ಭಾರತದಲ್ಲಿ ನಾಥರ ಮೂರು ಮುಖ್ಯ ಝುಂಡಿಗಳಿವೆ. ೧. ನೇಪಾಲದ ರತನಪುರ ಮಠದಿಂದ ಹೊರಡುವ ಝುಂಡಿ. ಇದು ಹಿಂದೆ ಕಾಬೂಲು ಕಂದಹಾರಗಳ ಮೂಲಕ ಮಕ್ಕಾತನಕ ಹೋಗುತ್ತಿತ್ತಂತೆ; ಇದು ನಾಥರ ಹಾಗೂ ಸೂಫಿಗಳ ಸಂಬಂಧವನ್ನು ಸೂಚಿಸುತ್ತಿದೆ. ೨. ಮೃಗಸ್ಥಲಿಯಿಂದ ಕಠಮಂಡು, ನೀಲಕಂಠ, ದೇವಿಪಾಟನ್ ಮೂಲಕ ಹಾದು ಹೋಗುವ ಝಂಡಿ. ಇದು ಹಿಂದೆ ಟಿಬೆಟ್ ತನಕ ಹೋಗುತ್ತಿತ್ತಂತೆ; ಇದು ನಾಥ ಹಾಗೂ ಬೌದ್ಧರ ಬಾಂಧವ್ಯವನ್ನು ಸೂಚಿಸುತ್ತಿದೆ. ೩. ತ್ರ್ಯಂಬಕೇಶ್ವರ-ಕದ್ರಿ ಝುಂಡಿ.  ಮೊದಲ ಎರಡೂ ಝುಂಡಿಗಳು ಈಗ ಮಹತ್ವ ಕಳೆದುಕೊಂಡಿವೆ ಅಥವಾ ಸಾಂಕೇತಿಕವಾಗಿ ಉಳಿದಿವೆ. ಆದರೆ ಕದ್ರಿ ಝುಂಡಿಯು ಶತಮಾನಗಳಿಂದ ನಿರಂತರವಾಗಿ ನಡೆಯುತ್ತ ಬಂದಿದೆ. ನಾಥರು ಇದನ್ನು ಕದಲಿಯಾತ್ರಾ ಎನ್ನುತ್ತಾರೆ. ಈ ಝುಂಡಿಯನ್ನು, ತ್ರ್ಯಂಬಕೇಶ್ವರದ ಗೋರಖನಾಥ ಮಠದಲ್ಲಿ ಕದ್ರಿಯ ಜೋಗಿಮಠಕ್ಕೆ ಅಧಿಪತಿಯಾಗಿ ಆಯ್ಕೆಯಾಗುವ ನಾಥನೇ  ಮುನ್ನಡೆಸಬೇಕು. ಕದ್ರಿ ಝುಂಡಿಗೆ ಪರಶುರಾಮ ಝುಂಡಿ ಎಂದೂ ಹೆಸರಿದೆ. ತಾಯಿಕೊಂದ ಪಾಪವನ್ನು ಕಳೆದುಕೊಳ್ಳಲು ಪರುಶುರಾಮನಿಗೆ  ಗೋರಖನು ದಕ್ಷಿಣದಿಕ್ಕಿನಲ್ಲಿರುವ ಕದಲಿಗೆ ಕಳಿಸಿದನು ಎಂದು ಕತೆಯಿದೆ. ವರ್ಣದ್ವೇಷದಿಂದ ಕ್ಷತ್ರಿಯರನ್ನು ಹುಡುಕಾಡಿ ಕೊಂದ ಪರಶುರಾಮನು, ವರ್ಣಪದ್ಧತಿಯನ್ನು ಒಪ್ಪದ ನಾಥಪಂಥದಲ್ಲಿ ಸೇರಿರುವುದು ಆಶ್ಚರ್ಯ. ಬಹುಶಃ ಸ್ತ್ರೀಹತ್ಯೆ ಮಾಡಿದ ವ್ಯಕ್ತಿಗೆ ಪ್ರಾಯಶ್ಚಿತ್ತ ವಿಧಿಸಿದ ವಿಧಾನವಾಗಿ ಕೂಡ ಇದನ್ನು ನೋಡಬಹುದು. ಮಾತೃಹತ್ಯೆ ಮಾಡಿದ ಪಾಪಕ್ಕೆ ಪರಿಹಾರ ತೋರಬೇಕೆಂದು,  ಗೋರಖನಿಗಾಗಿ ಪ್ರಾರ್ಥಿಸುತ್ತ ಅವನ ಗುಹೆಯ ಮುಂದೆ ಪರಶುರಾಮ ಕಾಯುವ ಕಥೆ ತ್ರ್ಯಂಬಕದಲ್ಲಿದೆ.

ಝುಂಡಿಯ ಕೇಂದ್ರಬಿಂದು ಕದ್ರಿಮಠದ ನಿಯೋಜಿತ ನಾಥನು ಹಿಡಿದುಕೊಳ್ಳುವ ಒಂದು ಪಾತ್ರೆ. ಇದನ್ನು  ಪಾತ್ರದೇವತೆ ಎನ್ನುತ್ತಾರೆ. ಮಣ್ಣಿನ ಮಡಕೆಯಲ್ಲಿ ನಾಥರು ಧರಿಸುವ ಲಾಂಚನಗಳಾದ ಜನೇವಾ, ದರ್ಶಿನಿ ಉಂಗುರ, ಸಿಂಗನಾದ, ಕರ್ಣಕುಂಡಲಗಳನ್ನು ಹಾಕಿ, ಮೇಲೆ ಕೆಂಪುಬಟ್ಟೆ ಸುತ್ತಿ ಕುರಿಯ ದಾರದಿಂದ ಕಟ್ಟಿ ಇದನ್ನು ಸಿದ್ಧಪಡಿಸಲಾಗುತ್ತದೆ.  ಹಂಡಿಬಡಗನಾಥ ಮಠದ ಹಂಡಿಬಂಡಗನ  ಕಥೆಯಲ್ಲೂ ಅವನ ಗುರು ಹಂಡಿಯನ್ನು ಕೊಟ್ಟು ಕಳಿಸುವ ಪ್ರಸಂಗ ಬರುತ್ತದೆ. ಕರ್ನಾಟಕದ ಅನೇಕ ಕಡೆ ಹಂಡಿಭಿಕ್ಷದ ಕಲ್ಪನೆಯಿದೆ. ಈ ಹಂಡಿಯಾತ್ರೆಯು ಬಹುಶಃ ಶಿವನು ಕಪಾಲ ಹಿಡಿದು ಭಿಕ್ಷಾಟನೆ ಮಾಡಿದ ಪ್ರಸಂಗದ ಅಭಿನಯ ಕೂಡ ಇರಬಹುದು.

ಭಾರತದ ಪ್ರಯಾಗ, ಉಜ್ಜಯನಿ, ಹರಿದ್ವಾರ ಹಾಗೂ ತ್ರ್ಯಂಬಕೇಶ್ವರಗಳಲ್ಲಿ ಮೂರು ವರುಷಕ್ಕೆ ಒಂದು ಸ್ಥಳದಂತೆ,  ಕುಂಭಮೇಳ ಜರುಗುತ್ತದೆ. ಈ ಲೆಕ್ಕದಲ್ಲಿ ೧೨ ವರುಷಕ್ಕೊಮ್ಮೆ ನಾಸಿಕದ ಕುಂಭ ನಡೆಯುತ್ತದೆ. ಆಗ ನಾಸಿಕದ ಸಮೀಪವಿರುವ ತ್ರ್ಯಂಬಕೇಶ್ವರದಲ್ಲಿ ‘ಅಖಿಲ ಭಾರತ ಯೋಗಿ ಮಹಾಸಭೆ’ಯು  ಸೇರುತ್ತದೆ. ಈ ಮಹಾಸಭೆಯ ಅಧ್ಯಕ್ಷತೆಯನ್ನು ಸಭಾಪತಿ ಎನ್ನಲಾಗುವ ಗೋರಖಪುರದ ನಾಥಮಠದ ಮಹಂತನು ವಹಿಸುತ್ತಾನೆ. ಇಲ್ಲಿ ಕದ್ರಿ ತ್ರ್ಯಂಬಕೇಶ್ವರ ಮುಂತಾದ ಪ್ರಮುಖ ಮಠಗಳ ಅಧಿಪತಿಗಳ ಆಯ್ಕೆ ನಡೆಯುತ್ತದೆ. ೧೨ ವರ್ಷಕ್ಕೊಮ್ಮೆ ನಡೆಯುವ ಈ ಆಯ್ಕೆಗೂ ನಾಥರ ಬಾರಾಪಂಥದ ೧೨ರ ಸಂಖ್ಯೆಗೂ ಸಂಬಂಧವಿದೆ. ೨೦೦೩ರ ಝುಂಡಿಗೆ ಆಯ್ಕೆಯಾದವರು ಈಗ ಕದ್ರಿಮಠದಲ್ಲಿರುವ ಸಂಧ್ಯಾನಾಥರು. ಅನಂತರ ಝುಂಡಿಯಲ್ಲಿ ತೆರಳಬೇಕಾದ ಮಹಂತ, ಕೊಠಾರಿ, ಕಾರಭಾರಿ, ಭಂಡಾರಿ, ಪೂಜಾರಿ, ಪಂಖಾಪೀರ್ ಎಂಬ ವಿವಿಧ ಹೊಣೆ ನಿಭಾಯಿಸುವ ಅಧಿಕಾರಿಗಳನ್ನು, ಬಾರಾಪಂಥದ ವಿವಿಧ ಶಾಖೆಗಳಿಂದ ಆರಿಸಲಾಗುತ್ತದೆ.  ೨೦೦೩ರ ಕದ್ರಿ ಝುಂಡಿಗೆ ಆಯ್ಕೆಯಾದವರು ಹೀಗಿದ್ದರು: ಮಹಂತನಾಗಿ ಸೂರಜನಾಥ. ಆಯಿಪಂಥಕ್ಕೆ ಸೇರಿದ ಇವರು ಹಿಮಾಚಲ ಪ್ರದೇಶದ ಸೂರಜಗಢದಲ್ಲಿರುವ ಸಪ್ತದೇವಿ ಸಿದ್ಧಪೀಠದ ಅಧಿಪತಿ; ಕಾರಭಾರಿಯಾಗಿ ಸಂತೋಷನಾಥ್. ಧರ್ಮನಾಥಿಯಾದ ಇವರು  ಗೋರಖಪುರದ ಮಠದವರು;  ಕದ್ರಿ ಪೀಠದ ಅಧಿಪತಿಯಾಗಿ ಸಂಧ್ಯಾನಾಥರು; ಇವರು  ಕಳೆದ ಮೂರು ಝುಂಡಿಯಲ್ಲಿ ಬಂದ ಅನುಭವದವರು.  ಸೂರಜನಾಥರಿಗೆ ಇದು ನಾಲ್ಕನೆಯ ಸಲ. ಕದ್ರಿ ಝುಂಡಿಯಲ್ಲಿ ಭಾಗವಹಿಸುವುದು ನಾಥರಲ್ಲಿ ಒಂದು ದೊಡ್ಡ ಅರ್ಹತೆಯಾಗಿದೆ.

ಮುಖ್ಯ ಆಚರಣೆಯಲ್ಲಿ ಕದ್ರಿ ತ್ರ್ಯಂಬಕೇಶ್ವರ ಹಾಗೂ ಸುನೇರಿ ಮಠಗಳ ಪಾತ್ರೆಗಳನ್ನು ಮೂರು ಪೀಠಗಳ ಮೇಲೆ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಅವುಗಳ  ಮುಂದೆ ಆಯಾ ಮಠಕ್ಕೆ ಆರಿಸಲಾದ ನಾಥರು  ಕರಿಉಣ್ಣೆಯ ನೂಲುಸುತ್ತಿದ ಪೇಟಗಳನ್ನು ಧರಿಸಿ ಕೂರುತ್ತಾರೆ. ಪಾತ್ರೆಗೆ ಆರತಿ ಬೆಳಗಲಾಗುತ್ತದೆ. ಶಂಖ, ಡಮರುಗ, ನಾಗಕಹಳೆ, ಗಂಟೆ, ಜಾಗಟೆಗಳನ್ನು ನಿರಂತರ ನುಡಿಸಲಾಗುತ್ತದೆ. ಆ ಹೊತ್ತಿನಲ್ಲಿ ನಾಥರು ತಮ್ಮ ಕೊರಳ ಶೈಲಿಯಲ್ಲಿರುವ ಸಿಂಗನಾದವನ್ನು ಕೈಯಲ್ಲಿ ಹಿಡಿದುಕೊಂಡಿರುತ್ತಾರೆ. ಆರತಿ ಮುಗಿದ ಬಳಿಕ ಎಲ್ಲರೂ ಒಂದೇ ಸಲ ಕುಕ್ಕುರಗಾಲಲ್ಲಿ ಕುಳಿತು, ೩ ಸಲ ಸಿಂಗನಾದ ಮಾಡಿ, ತಮ್ಮ ಹೆಬ್ಬೆರಳನ್ನು ಪಾದುಕೆ ಆಕಾರದಲ್ಲಿ ನೆಲಕ್ಕೆ ಜೋಡಿಸಿ ಬಾಗಿ ನಮಸ್ಕಾರ ಮಾಡುತ್ತಾರೆ. ನಂತರ ತಮಗೆ ದೀಕ್ಷೆಕೊಟ್ಟ ಗುರುವಿಗೆ ನಮಸ್ಕರಿಸುತ್ತಾರೆ. ಗೋರಖನಾಥ ಮಚೇಂದ್ರನಾಥರನ್ನು ನೆನೆಯುವ ಹಾಗೂ ಬೇಖ್ ಬಾರಾಪಂಥಕ್ಕೆ ಜಯಕಾರವುಳ್ಳ ಘೋಷಗಳನ್ನು ಸಾರಲಾಗುತ್ತದೆ. ನಂತರ ಬಹುದೀರ್ಘವಾದ ನಾಥರ ಮಂತ್ರಗಳನ್ನು ಪಂಖಾಪೀರನು ಪಠಿಸುತ್ತಾನೆ.  ಪಂಖಾಪೀರ್ ಎಂದರೆ ಕೇಸರಿ ಧ್ವಜ ಕಟ್ಟಿದ ಬೆಳ್ಳಿಯ ದಂಡವನ್ನು ಹಿಡಿದು ಪಾತ್ರ ದೇವತೆಗಳ ಮುಂದೆ ನಿಲ್ಲುವ ಚಾಮರಧಾರಿ ಹಾಗೂ ದಂಡಧಾರಿ.  ಬೇರೆಬೇರೆ ಮಠದ ಮಹಂತರು ಪಾತ್ರದೇವತೆಗಳಿಗೆ ಕಾಣಿಕೆ ಅರ್ಪಿಸುತ್ತಾರೆ. ಪಂಖಾಪೀರನು ಈ ಕಾಣಿಕೆ ಕೊಟ್ಟ ನಾಥನ ಹಾಗೂ ಮಠದ ಹೆಸರು ಹಾಗೂ ಬಿರುದಾವಳಿಗಳನ್ನು  ಘೋಷಿಸುತ್ತಾನೆ. ನಂತರ ಕಾಣಿಕೆ ಅರ್ಪಣೆ. ಮೊದಲು ಕದ್ರಿಮಠಕ್ಕೆ ಆಯ್ಕೆಯಾದ ನಾಥನಿಂದ. ನಂತರ ಉಳಿದವರಿಂದ.

ಕದ್ರಿ ಝುಂಡಿಯು ತ್ರ್ಯಂಬಕದಿಂದ ನಾಗಪಂಚಮಿಯ ದಿನ (೨.೪.೨೦೦೩) ಬೆಳಗಿನ ಜಾವ ಹೊರಟಿತು. ಅದರ ಬ್ಯಾನರಿನಲ್ಲಿ ‘ನಾಸಿಕಸೆ ಕದಲಿಮಠ ಮಂಗಳೂರು  ಕರ್ನಾಟಕ ತಕ್, ನವನಾಥ್ ಝುಂಡಿ ಪದಯಾತ್ರಿ ಪರಂಪರಾಗತ ನೌಲಾಖ್ ವರ್ಷಸೆ. ದರ್ ಬಾರಾಸಾಲ್’’(೯ ಲಕ್ಷ ವರ್ಷಗಳಿಂದ ೧೨ ವರ್ಷಕ್ಕೊಮ್ಮೆ ನಾಸಿಕದಿಂದ ಕದ್ರಿಮಠಕ್ಕೆ ನಡೆಯುತ್ತ ಬಂದಿರುವ ಯಾತ್ರೆ)ಎಂದು ಬರೆದಿತ್ತು.  ಝುಂಡಿಯ ಎದುರು ಪಂಖಾಪೀರನು ಕಾವಿಯ ಧ್ವಜಸುತ್ತಿದ ಬೆಳ್ಳಿಯ ದಂಡವನ್ನು ಹಿಡಿದು ನಡೆಯುತ್ತಾನೆ. ಈ ದಂಡವು ಕುಂಡಲಿನಿ ಶಕ್ತಿಯನ್ನು ಊರ್ಧ್ವಮುಖಿಯಾಗಿ ನಡೆಸುವ ಊರ್ಧ್ವರೇತಸ್ಸಿನ ಸಂಕೇತ ಎಂದು ಝಂಡಿಯ ಮಹಂತ ಸೂರಜನಾಥ ಹೇಳಿದರು. (ಕನ್ನಡದಲ್ಲಿ ಬೆಳ್ಳಿಚುಕ್ಕೆ ಅನಿಸಿಕೊಳ್ಳುವ ಶುಕ್ರಕ್ಕೆ ವೀರ್ಯದ ಅರ್ಥವೂ ಇದೆಯಷ್ಟೆ.)  ಇವನ ಹಿಂದೆ ಪಾತ್ರದೇವತೆ ಹಿಡಿದ ಕದ್ರಿಮಠದ ನಿಯೋಜಿತ ಯೋಗಿ ಹಾಗೂ ಝುಂಡಿಯ ಮಹಂತ. ಸಾವಿರಾರು ಮೈಲಿ ನಡೆಯಬೇಕಾದ ಕಾರಣ, ಕದ್ರಿಮಠಕ್ಕೆ ಸಾಮಾನ್ಯವಾಗಿ ದೃಢಕಾಯರನ್ನೆ ಅರಸನನ್ನಾಗಿ ನೇಮಿಸುತ್ತಾರೆ. ನಾಥರು ಗೋರಖ ಸ್ಮರಣೆಯ ಮಂತ್ರಗಳನ್ನು  ಏಕಕಂಠದಲ್ಲಿ ಗುನುಗುತ್ತ ಬರಿಗಾಲಲ್ಲಿ ವೇಗವಾಗಿ ನಡೆಯುತ್ತಾರೆ. ಕೈಯಲ್ಲಿ  ಒನಕೆಯಂತಹ ದಂಡ, ಕಮಂಡಲು, ಚಿಮಟಾ, ತ್ರಿಶೂಲ ಮುಂತಾದವನ್ನು  ಹಿಡಿದಿರುತ್ತಾರೆ. ಬಿಡಾರ ಹೂಡುವಲ್ಲಿ ನಾಥರಿಗೆ ಪೂರ್ವಭಾವಿಯಾಗಿ ಊಟ ವಸತಿ ವಿಶ್ರಾಂತಿಗಾಗಿ ವ್ಯವಸ್ಥೆ ಮಾಡಲಾಗಿರುತ್ತದೆ.

೧೩೦೦ ಕಿಮಿ ದೂರದ ಕದ್ರಿಯಾತ್ರೆಗೆ ಒಟ್ಟು ೮೦ ಮೊಕ್ಕಾಮುಗಳಿವೆ. ಝುಂಡಿಯ ಮೊದಲ ವಸ್ತಿ ನಾಸಿಕ್. ನಂತರ ಜುನ್ಹಾರ್, ಪೂನಾ, ಬತ್ತೀಸ್‌ಶಿರಾಳ, ಸತಾರ, ಕೊಲ್ಹಾಪುರದ ಮೂಲಕ ಝಂಡಿ ಕರ್ನಾಟಕವನ್ನು ಪ್ರವೇಶಿಸುತ್ತದೆ. ಕಾಗಲಾ ಮಹಾರಾಷ್ಟ್ರದ ಕೊನೆಯ ವಸ್ತಿಯಾದರೆ,  ಕರ್ನಾಟಕದಲ್ಲಿ ನಿಪ್ಪಾಣಿ ಮೊದಲ ವಸ್ತಿ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಸಂಕೇಶ್ವರ, ನರಸಿಂಹಪುರ, ಬೆಳಗಾವಿ ಕ್ಯಾಂಪ್, ಜತ್ತಿಮಠ, ಬೆಳಗಾವಿ, ಖಾನಾಪುರ, ದಾದಾಕಮಠ, ಕಿರವಳೆ, ಬಾಲವಾಡಿ, ಲೋಂಡಾ, ಹಂಡಿಬಡಗನಾಥ, ನಾಗರಗಾಳಿ, ಗೋದಗಿರಿ; ಉತ್ತರ ಕನ್ನಡದ ಮಂಗಲವಾಡ, ಹಳಿಯಾಳ, ಕರಲಕಟ್ಟೆ, ಸಾಮ್ರಾಣಿ, ಯಲ್ಲಾಪುರ, ಮಂಚಿಕೇರಿ, ಸಿರಸಿ; ಶಿವಮೊಗ್ಗ ಜಿಲ್ಲೆಯ ಚಂದ್ರಗುತ್ತಿ, ಸೊರಬ, ಸಾಗರ, ಹೊಸ ನಗರ, ನಗರ; ಉಡುಪಿ ಜಿಲ್ಲೆಯ ಹಲವರಿ, ಹಾಲಾಡಿ, ಬಾರಕೂರು, ಉಡುಪಿ; ದಕ್ಷಿಣ ಕನ್ನಡದ ಮುಲ್ಕಿ ಪಣಂಬೂರು -ಹೀಗೆ  ಕರ್ನಾಟಕದಲ್ಲಿ ೩೨ ಮುಕ್ಕಾಮು ಮಾಡಿ ಶಿವರಾತ್ರಿಯ ಹೊತ್ತಿಗೆ ಝಂಡಿ ಕದ್ರಿಮಠ ತಲುಪುತ್ತದೆ. ಝಂಡಿಯು ದಾರಿಯಲ್ಲಿ ಸಿಗುವ  ನಾಥಮಠಗಳ ಆಡಳಿತ ಬದಲಾವಣೆ ಮಾಡುತ್ತ ಹೋಗುತ್ತದೆ. ಮಠದಲ್ಲಿ ಯಾವುದಾದರೂ ಅವ್ಯವಹಾರಗಳು ನಡೆದಿದ್ದರೆ ಅದರ ವಿಚಾರಣೆ ನಡೆಸುವ ಹಾಗೂ ಶಿಕ್ಷೆವಿಧಿಸುವ ಕೆಲಸವೂ ನಡೆಯುತ್ತದೆ. ಕರ್ನಾಟಕದಲ್ಲಿ ಕಿರವಳೆ, ಡೊಂಗರಗಾಂವ್, ಹಂಡಿಬಡಗನಾಥ, ಚಂದ್ರಗುತ್ತಿ, ಹಲವರಿ, ವಿಟ್ಲ ಹಾಗೂ ಲುಂಕೆಮಲೆ – ಹೀಗೆ ಒಟ್ಟು ೭ ಮಠಗಳ ಮುಖ್ಯಸ್ಥರನ್ನು ಬದಲಾಯಿಸಲಾಗುತ್ತದೆ. ೨೦೦೩ರ ಝುಂಡಿಯು ಹಂಡಿಬಡಗನಾಥ ಮಠಕ್ಕೆ ಪೀರ್ ಸಿದ್ಧನಾಥ್, ಚಂದ್ರಗುತ್ತಿಗೆ ಪೀರ್ ಲಕ್ಷ್ಮಣನಾಥ್,  ಹಲವರಿಗೆ ಪೀರ್ ಸೋಮನಾಥ್, ವಿಟ್ಲಕ್ಕೆ ಯೋಗಿನಾಥ್, ಲುಂಕೆಮಲೆಗೆ ಮಂಗಲನಾಥರನ್ನು ಆರಿಸಿತು. ಕದ್ರಿಮಠಕ್ಕೆ ತ್ರ್ಯಂಬಕದಲ್ಲಿಯೆ ಆಯ್ಕೆ ನಡೆದಿರುವ ಕಾರಣ, ಕದ್ರಿಯಲ್ಲಿ ಪಟ್ಟಾಭಿಷೇಕ ಮಾತ್ರ ನಡೆಯುತ್ತದೆ. ಝುಂಡಿಯು ಮಂಗಳೂರಿನ ಕೊಟ್ಟಾರದ ಬಳಿ ಇರುವ ಜೋಗಿಕಟ್ಟೆಗೆ ಬಂದಾಗ ಕದ್ರಿಯ ಜೋಗಿ ಸಮಾಜದ ಜನರು ಸ್ವಾಗತಿಸಿ ಪುರಪ್ರವೇಶ ಮಾಡಿಸುತ್ತಾರೆ.

ಝುಂಡಿ ಬಿಡಾರ ಬಿಟ್ಟ ಹೊತ್ತಲ್ಲಿ ನಾಥರು ಕುರಿಯ ತುಪ್ಪಟವನ್ನು ಹಿಂಜಿ ನೂಲುಮಾಡುವುದು, ನೂಲಿನಿಂದ ಜನೇವಾ ತಯಾರಿಸುವುದು ಇತ್ಯಾದಿ ಚಟುವಟಿಕೆ ಮಾಡುತ್ತಾರೆ. ಇದಕ್ಕಾಗಿ ತಕಲಿ ತಿರುಗಿಸುವ, ಬಿಲ್ಲಿನಂತಹ ಒಂದು ದೊಡ್ಡಕೋಲಿಗೆ ಉಣ್ಣೆಯನ್ನು ಸುತ್ತಿರುವ, ನೂಲುಸುತ್ತುವ ಚರಕದಂತಹ ಚಕ್ರಕ್ಕೆಉಣ್ಣೆನೂಲು ಸುತ್ತಿರುವ, ಡಮರುಗ ಆಕಾರದ ಮರದ ಸಾಧನಕ್ಕೆ ನೂಲುಸುತ್ತಿ ದಾರವನ್ನು ಹೆಣೆಯುವ – ಹೀಗೆ ಬಗೆಬಗೆಯ ಉಪಕರಣಗಳನ್ನು ಜತೆಯಲ್ಲಿ ಹೊತ್ತುಕೊಂಡು ಹೋಗುತ್ತಾರೆ. ಈ ಜನೇವಾಗಳನ್ನು ನಾಥಪಂಥಿಯ ಸಮುದಾಯಕ್ಕೆ ಮಾರಿ ಕೈಖರ್ಚಿಗೆ ಹಣ ಮಾಡಿಕೊಳ್ಳುತ್ತಾರೆ. ಈ ಸಲದ ಝುಂಡಿಯಲ್ಲಿ  ನೂಲುವ ನಾಥರು ಹೆಚ್ಚಿದ್ದರು. ಇದಕ್ಕೆ ಕಾರಣ, ಕದ್ರಿಮಠಕ್ಕೆ ಅಧಿಪತಿಯಾದ ಸಂಧ್ಯಾನಾಥರು ರಾಜಸ್ಥಾನದ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದುದು.   ಕೆಲವು ನಾಥರು ಝುಂಡಿಯಲ್ಲಿ ಸಿಗುವ ಪಟ್ಟಣಗಳಲ್ಲಿದ್ದ ತಮ್ಮ ಕಡೆಯ  ಜನರನ್ನು ಭೇಟಿ ಮಾಡುತ್ತಿದ್ದರು. ಆದರೆ ಝುಂಡಿಯಲ್ಲಿದ್ದ ಏಕೈಕ ಕನ್ನಡಿಗರಾದ ಚಿದಂಬರನಾಥರು ಯಾರ ಜತೆಯೂ ಗುರುತಿಸಿಕೊಳ್ಳಲು ಬಯಸದೆ ಏಕಾಂಗಿಯಾಗಿ ಇರುತ್ತಿದ್ದರು.

ಪ್ರತಿ ನಾಥಮಠದಲ್ಲಿ ಝುಂಡಿ ತಂಗುವ ಕಡೆ ದಲೀಚಾ ಎನ್ನಲಾಗುವ ಸಭೆ ನಡೆಯುತ್ತದೆ. ಪಂಖಾಪೀರನು ಬಿಡಾರದ ತುಂಬ ಓಡಾಡಿ ‘ದಲೀಚಾ ಸೇರುತ್ತಿದೆ. ಯೋಗಿಗಳು ಬರಬೇಕು’ ಎಂದು ಸಾರು ಹಾಕುತ್ತಾನೆ. ಈ ಸಭೆಯಲ್ಲಿ ನಾಥರಲ್ಲದವರನ್ನು  ನಿಷ್ಠುರವಾಗಿ ಹೊರಕಳಿಸಲಾಗುತ್ತದೆ. ಸಭೆಯಲ್ಲಿ ಮಠದ ಅಧಿಪತಿಯನ್ನು ಆರಿಸಲಾಗುತ್ತದೆ.  ನಂತರ ಮಠದ ೧೨ ವರ್ಷದ ಆಡಳಿತಕ್ಕೆ ಸಂಬಂಧಿಸಿದ ಲೆಕ್ಕಪತ್ರ ತಪಾಸಣೆ ನಡೆಯುತ್ತದೆ.  ಸಮಸ್ಯೆ ಇದ್ದರೆ ಚರ್ಚೆಗೆ ಇಡಲಾಗುತ್ತದೆ. ಸಭೆಯ ಕಾರ್ಯಕಲಾಪ ಪ್ರಜಾಪ್ರಭುತ್ವೀಯ ಮಾದರಿಯಲ್ಲಿ ಇರುತ್ತದೆ.  ಚರ್ಚೆಯಲ್ಲಿ ಪರ ವಿರೋಧ ಅಭಿಪ್ರಾಯಗಳ ಮಂಡನೆ ಇರುತ್ತದೆ. ಕೊನೆಗೆ ನಿರ್ಣಯ ಮಾಡುವಾಗ ಯಾರಿಗಾದರೂ ಭಿನ್ನಮತ ಇಲ್ಲವೆ ಸಲಹೆ ಇದ್ದರೆ ಹೇಳಬೇಕು (‘ಕಿಸಿಕೋ ಕೋಯಿ ಎಹತರಾಜ್ ಹೈ ತೊ, ಶಿಕಾಯತ್ ವ ಸುಜಾವತ್ ಹೈತೋ, ಖಡೇ ಹೋಕರ್ ಬೋಲ್ ಸಕತೆ ಹೈ’) ಎಂದು ಕೇಳಲಾಗುತ್ತದೆ. ಕದ್ರಿಮಠದಲ್ಲಿ ನಡೆದ ದಲೀಚಾದಲ್ಲಿ ವಿಟ್ಲ ಮಠಕ್ಕೆ ಹಿಂದಿನ ಅಧಿಪತಿಯಾದ ಲಾಲಾನಾಥರನ್ನು ಮುಂದುವರೆಸುವ ಪ್ರಸ್ತಾಪ ಬಂದಾಗ, ಒಬ್ಬ ನಾಥನು ಅವರು ವೃದ್ಧರಾಗಿರುವುದರಿಂದ ಮುಂದಿನ ೧೨ ವರುಷ ನಡೆಸಲು ಕಷ್ಟವಾಗಬಹುದು ಎಂಬ ಆಕ್ಷೇಪ ಎತ್ತಿದನು.  ಇದರ ಬಗ್ಗೆ ಚರ್ಚೆ ನಡೆಯಿತು. ಚರ್ಚೆಯ ಕೊನೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ನಿರ್ಣಯ ಕೈಗೊಂಡ ಬಳಿಕ ‘ದಲೀಚೇಕೊ ಮನಜೂರ್ ಹೈ?’ ಎಂದು ಕೇಳಲಾಗುತ್ತದೆ. ಸಭೆ ‘ಮನಜೂರ್ ಹೈ’ ಎಂದು ಘೋಷಿಸುತ್ತದೆ.

೨೦೦೩ರ ಕದ್ರಿಯ ದಲಿಚಾದಲ್ಲಿ ಎರಡು ನಿರ್ಣಯ ಕೈಗೊಳ್ಳಲಾಯಿತು. ಮೊದಲನೆಯದು ವಿಟ್ಲಮಠದ ಅಧಿಪತಿಯ ಚುನಾವಣೆ. ಎರಡನೆಯದು, ಕದ್ರಿಮಠದ ನಿರ್ಗಮಿಸುತ್ತಿರುವ ಅಧಿಪತಿಯಾದ ಮೋಹನನಾಥರ ವಿಚಾರಣೆ. ಈ ವಿಚಾರಣೆ  ೭ ಗಂಟೆಗಳ ಕಾಲ ತೀವ್ರವಾಗಿ ನಡೆಯಿತು. ಕದ್ರಿಮಠದ ಭೂಮಿಯನ್ನು ಪರಭಾರೆ ಮಾಡುವಲ್ಲಿ ಮೋಹನನಾಥರು ಅವ್ಯವಹಾರ ಮಾಡಿದ್ದಾರೆ, ಮಠದ ಸಂಪತ್ತನ್ನು ತಮ್ಮ ರಾಜಸ್ತಾನದ ಮಠಕ್ಕೆ ಸಾಗಿಸಿದ್ದಾರೆ, ಕಾಲಭೈರವನ ಗುಡಿಯನ್ನು ತಮ್ಮ ಮನಸ್ಸಿಗೆ ಬಂದಂತೆ ಕಟ್ಟಿಸಿದ್ದಾರೆ, ಸ್ಥಳೀಯ ಜೋಗಿ ಸಮಾಜದ ಜತೆ ಯಾವುದೇ ಚರ್ಚೆಯನ್ನು ಮಾಡಿಲ್ಲ- ಇವು ಅವರ ಮೇಲಿದ್ದ ಆಪಾದನೆಗಳಾಗಿದ್ದವು. ಝುಂಡಿಯು ಕದ್ರಿಬೆಟ್ಟಕ್ಕೆ ಬರುವ ಮುನ್ನವೇ ಕದ್ರಿಯ ಜೋಗಿ ಸಮುದಾಯದ  ಮುಖಂಡರು  ಹಂಡಿಬಡಗದಲ್ಲಿ ಸೂರಜನಾಥರನ್ನು ಭೇಟಿಯಾಗಿ, ಎಲ್ಲ  ವಿದ್ಯಮಾನದ ವರದಿ ಮಾಡಿದ್ದರು. ಹರಿದ್ವಾರಕ್ಕೆ ಪತ್ರಗಳ ಮೂಲಕವೂ ಫಿರ್ಯಾದು ಸಲ್ಲಿಸಿದ್ದರು. ಹೀಗಾಗಿ ವಿಚಾರಣೆಗೆ ಬಿಸಿ ಬಂದಿತ್ತು.  ದೇಹವನ್ನು ಹಿಡಿ ಮಾಡಿಕೊಂಡಿದ್ದ ಮೋಹನನಾಥರನ್ನು ಹಲವಾರು ಗಂಟೆ ಕಾಲ ಕಟಕಟೆಯಲ್ಲಿ ಇಟ್ಟಂತೆ  ಝುಂಡಿಯ ಮಹಂತನ ಮುಂದೆ ನಿಲ್ಲಿಸಲಾಗಿತ್ತು. ‘ನಮ್ಮ ನಿರ್ಲಕ್ಷ್ಯದಿಂದ  ನಾಸಿಕದ  ಕಾಲಾರಾಮನ ಗುಡಿ ಕಳೆದುಕೊಂಡೆವು. ಆದಿಚುಂಚನಗಿರಿ ಕಳೆದುಹೋಯಿತು. ಕದ್ರಿಯ ಮಂಜುನಾಥನ ಗುಡಿ ಕೈಬಿಟ್ಟಿತು. ಹೀಗೆಯೇ ಮಾಡಿದರೆ ಮುಂದಿನ ಝುಂಡಿಯ ಹೊತ್ತಿಗೆ ಕದ್ರಿಮಠವೂ ಇಲ್ಲವಾಗುತ್ತದೆ’ ಎಂದು ಕೆಲವು ಹಿರಿಯ ನಾಥರು ಆಕ್ರೋಶ ವ್ಯಕ್ತಮಾಡಿದರು. ಮೋಹನನಾಥರು ಅಧಿಕಾರ ದುರುಪಯೋಗ ಮಾಡಿದ್ದಾರೆ. ಅವರಿಗೆ ಶಿಕ್ಷೆಯಾಗಬೇಕು ಎಂಬುದು ಬಹುಜನರ ಅಭಿಪ್ರಾಯವಾಗಿತ್ತು.  ಈ ಬಗ್ಗೆ ಭಿನ್ನಾಭಿಪ್ರಾಯ ಇದ್ದರೆ ಹೇಳಬೇಕು ಎಂದಾಗ ಯಾರೂ ಹೇಳಲಿಲ್ಲ.  ದಲೀಚಾದ ಅಧ್ಯಕ್ಷರಾದ ಸೂರಜನಾಥರು ತುಂಬ ಕಠಿಣರಾಗಿದ್ದು, ಮೋಹನನಾಥರಿಗೆ ೧ಕೋಟಿ ೫ಲಕ್ಷ ರೂಪಾಯಿಗಳ ದಂಡ ವಿಧಿಸಿದರು.  ದಂಡವನ್ನು ಎರಡು ವರುಷಗಳಲ್ಲಿ ಕೊಡದಿದ್ದರೆ, ಅವರು ರಾಜಸ್ಥಾನದಲ್ಲಿ ಕಟ್ಟಿಕೊಂಡಿರುವ ಸ್ವಂತ ಮಠವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ನಿರ್ಣಯಿಸಿತು.

ಬಳಿಕ ಕದ್ರಿಮಠಕ್ಕೆ ಅಧಿಪತಿಯಾದ ಸಂಧ್ಯಾನಾಥರಿಗೆ ಪಟ್ಟಾಭಿಷೇಕ ಮಾಡಲಾಯಿತು. ನಂತರ ಝುಂಡಿಯು ವಿಟ್ಲಕ್ಕೂ ಲುಂಕೆಮಲೆಗೂ ಅಲ್ಲಲ್ಲಿನ ಮಠಾಧಿಶರನ್ನು ಪ್ರತಿಷ್ಠಾಪಿಸಲು ತೆರಳಿತು. ತೆರಳುವ ಮುಂಚೆ ಝುಂಡಿಯಲ್ಲಿ ಸಂಗ್ರಹವಾದ ಹಣವನ್ನು ಎಲ್ಲ ನಾಥರಿಗೆ ಹಂಚಲಾಯಿತು. ಪ್ರತಿ ಸಾಧುವಿಗೂ ಕೊನೆಯ ದಿನ ಎಂಟು ಹತ್ತು ಸಾವಿರ ಹಣ ಸಿಕ್ಕಿತು.

ಝುಂಡಿಯ ಮಹಂತನಿಗೆ  ನಾಥಮಠಗಳ ಆಡಳಿತ ಬದಲಾವಣೆ ಮಾಡುವಲ್ಲಿ  ಪರಮಾಧಿಕಾರವಿತ್ತು. ಮಹಂತನ ನಿರ್ಣಯವನ್ನು ಯಾರೂ ವಿರೋಧಿಸುತ್ತಿರಲಿಲ್ಲ. ಎಂತಲೇ ಝುಂಡಿ ಬರುತ್ತದೆ ಎಂದರೆ, ದೊಡ್ಡ ಅಧಿಕಾರಿಯು ಸರ್ಕೀಟು ಬರುವಾಗ ಅಧೀನ ಕಛೇರಿಗಳಲ್ಲಿ ಕಾಣುವ ತಳಮಳ ಕಾಣುತ್ತಿತ್ತು. ಝುಂಡಿಯ ಅಧಿಕಾರದ ಬಗ್ಗೆ ನಾನು ಭೇಟಿಮಾಡಿದ ಎಲ್ಲ ನಾಥರು ಭಯಭಕ್ತಿಯಿಂದ ಹೇಳುತ್ತಿದ್ದ ಕತೆಗಳು, ಅಕ್ಷರಶಃ ನಿಜವಾಗಿದ್ದವು.  ಭಾರತದ ತುಂಬ ಸಾವಿರಾರು ಮಠಗಳ ಜಾಲವಿರುವ ಯೋಗಿ ಮಹಾ ಸಭೆಯು ಸುಸಂಘಟಿತವಾಗಿದ್ದು, ಅಧಿಕಾರ ಶ್ರೇಣೀಕರಣವನ್ನು ಹೊಂದಿದೆ.  ನಾಥಮಠದ ಅಧಿಪತಿಗೆ ಸಹಾಯಕರನ್ನಾಗಿ ಕಾರಭಾರಿ (ಕಾರ್ಯದರ್ಶಿ) ಭಂಡಾರಿ (ಅಡುಗೆಯವ) ಕೊಠಾರಿ(ಗುಮಾಸ್ತ) ಹಾಗೂ ಪೂಜಾರಿ (ಅರ್ಚಕ)ಯನ್ನು ನೇಮಿಸಲಾಗುತ್ತದೆ.ಪೋಲಿಸು ಇಲಾಖೆಯಲ್ಲಿ ಇರುವಂತೆ, ಖಚಿತಪಡಿಸಿದ  ಶ್ರೇಣೀಕೃತ ಅಧಿಕಾರ ವ್ಯವಸ್ಥೆ ನಾಥರಲ್ಲಿದೆ. ಮೇಲಧಿಕಾರವುಳ್ಳ ಯೋಗಿಗಳಿಗೆ ಕೆಳಗಿನವರು ತಕ್ಕ ಗೌರವ ಕೊಡಬೇಕು. ನಿರಂಕುಶಮತಿಗಳೂ ಭಂಗಿ ಸೇವನೆಯಿಂದ ಮತ್ತರೂ ಆದ ಕೆಲವು ನಾಥರನ್ನು ಶಿಸ್ತಿಗೆ ಒಳಪಡಿಸುವಲ್ಲಿ ಈ ಕಠಿಣ ಅಧಿಕಾರ ವ್ಯವಸ್ಥೆ ಅಗತ್ಯವೂ ಇದ್ದೀತು. ಇದರಲ್ಲಿ ಈ ಅಧಿಕಾರ ವ್ಯವಸ್ಥೆ ಯಶಸ್ಸು ಕೂಡ ಪಡೆದಿದೆ. ಆದರೂ ಇದರ ವ್ಯವಸ್ಥೆಗೆ ಒಳಪಡದೆ ಸ್ವಚ್ಛಂದವಾಗಿದ್ದ ಕೆಲವು ನಾಥರು ತಿರುಗಾಡಿಕೊಂಡು ಇದ್ದರು.

ಪ್ರಮುಖ ನಾಥಕ್ಷೇತ್ರಗಳು

ನಾಥಪಂಥಕ್ಕೆ ಅಖಿಲ ಭಾರತ ಮಟ್ಟದಲ್ಲಿ ಕೆಲವು ಮಹತ್ವದ ಜಾಗಗಳಿವೆ. ಮೃಗಸ್ಥಲಿ (ನೇಪಾಲ), ಹರಿದ್ವಾರ (ಉತ್ತರಾಂಚಲ) ಕಾಶಿ, ಗೋರಖಪುರ (ಉತ್ತರಪ್ರದೇಶ) ಪಾಯಧುನಿ (ಮುಂಬೈ) ಧಿನೋಧರ್ (ಗುಜರಾತು) ಗೋರಖಟಿಲ್ಲಾ (ಪಂಜಾಬು) ತ್ರ್ಯಂಬಕೇಶ್ವರ (ಮಹಾರಾಷ್ಟ್ರ) ಮುಂತಾದವು. ಇವುಗಳಲ್ಲಿ ಕರ್ನಾಟಕದ ಕದ್ರಿಯೂ ಒಂದು. ಹೈದರಾಬಾದಿನ ಒಂದು ಮಠ ಬಿಟ್ಟರೆ, ಇಡೀ ದಕ್ಷಿಣ ಭಾರತದಲ್ಲಿ ನಾಥಮಠಗಳು ಇರುವುದು ಕರ್ನಾಟಕದಲ್ಲೇ. ಒಂದು ಬಗೆಯಲ್ಲಿ ನಾಥಪಂಥವು ಔತ್ತರೇಯವಾದುದು.

ಕರ್ನಾಟಕದ ನಾಥಪಂಥದ ಜತೆ ಸಂಬಂಧವುಳ್ಳ ಭಾರತದ ಕೆಲವು ಕ್ಷೇತ್ರಗಳನ್ನು ಇಲ್ಲಿ ಗಮನಿಸಬಹುದು.

ಮೃಗಸ್ಥಲಿಯು ನೇಪಾಳದಲ್ಲಿದೆ; ಕಠಮಂಡುವಿನ ಪಶುಪತಿನಾಥ ಗುಡಿಗೆ ಸಮೀಪದಲ್ಲಿ, ಭಾಗಮತಿ ನದಿಯ ಆಚೆ ದಡದಲ್ಲಿ ಇದು ಇದೆ. ನೇಪಾಳಿ ಬ್ರಾಹ್ಮಣರಲ್ಲಿ ಜೋಗ್ಯ ಎಂಬ ಸಮುದಾಯವಿದ್ದು, ಆ ಸಮುದಾಯಕ್ಕೆ ಸೇರಿದ ‘ಜುಗೀ’ ಇಲ್ಲವೆ ಕಪಲಿ ಎಂಬ ಹೆಸರಿನ  ಭಿಕ್ಷುಕರು ತ್ರಿಶೂಲ ಢಮರುಗ ಹಿಡಿದು ಭಿಕ್ಷೆ ಬೇಡುತ್ತಾರೆ. ಅವರು ಭವಿಷ್ಯ ಹೇಳುವವರು ಮತ್ತು ಅಸ್ಪೃಶ್ಯರು ಕೂಡ ಆಗಿದ್ದಾರೆ.[9] ಜೋಗ್ಯ ಜುಗಿ ಇವು ಜೋಗಿಯ ಪರ‌್ಯಾಯ ರೂಪಗಳು. ಹಿಂದೆ ಕದ್ರಿಗೆ ಬರುತ್ತಿದ್ದ ಝುಂಡಿಯಲ್ಲಿ ನೇಪಾಳದ ನಾಥರೂ ಇರುತ್ತಿದ್ದರು.  ನೇಪಾಲದಲ್ಲಿ ಗೋರಖ ಎಂಬ ಊರಿದೆ. ಅಲ್ಲಿನ ಬೆಟ್ಟದ ಮೇಲೆ ಒಂದು ಗುಹೆಯಿದ್ದು ಅಲ್ಲಿ ತ್ರಿಶೂಲಗಳನ್ನು ನೆಡಲಾಗಿದೆ. ಕಠಮಂಡುವಿನ ಪ್ರಸಿದ್ಧ ಪಶುಪತಿನಾಥನು ಮೂಲತಃ  ನಾಥರಿಗೆ ಸಂಬಂಧಪಟ್ಟವನು.  ಈ ಗುಡಿಯ ಅರ್ಚಕರನ್ನು ರಾವಳ್ ಎನ್ನುತ್ತಾರೆ. ರಾವುಳರು ನಾಥಪಂಥೀಯ ಸಮುದಾಯಗಳಲ್ಲಿ ಒಬ್ಬರು. ಆದರೆ ಪಶುಪತಿನಾಥನ ಆರ್ಚಕ ರಾದ ರಾವುಳರುೊಮೂಲದಲ್ಲಿ ಕರ್ನಾಟಕದ ಕರಾವಳಿ ಭಾಗದವರಾಗಿದ್ದರು. ಬಹುಶಃ ಕದ್ರಿಯ ನಾಥಪಂಥೀಯ ಆಚರಣೆಗಳಲ್ಲಿ ಭಾಗವಹಿಸುವ ಕರಾವಳಿಯ ತಂತ್ರಿಗಳೇ ಈ ರಾವೂಳರಾಗಿರಬಹುದು.

ನಾಥಪಂಥದ ಎಲ್ಲ ಮಠಗಳನ್ನು ನಿಯಂತ್ರಿಸುವ ಬಾರಾಪಂಥದ ಕೇಂದ್ರ ಕಛೇರಿಯು ಹರಿದ್ವಾರದಲ್ಲಿದೆ. ಇಲ್ಲಿಂದ ನಾಥರ ಒಂದು ಗುಂಪು ಬಂದು ಮಠಗಳ ಸಮಸ್ಯೆಯನ್ನು ಬಗೆಹರಿಸುತ್ತದೆ. ಆಡಳಿತಾತ್ಮಕವಾಗಿ ಬಾರಾಪಂಥದ ಕಛೇರಿಯು ಹರಿದ್ವಾರದಲ್ಲಿ ಇದ್ದರೂ, ನಾಥರಿಗೆ ಗೋರಖಪುರವು ಪವಿತ್ರ. ಯಾಕೆಂದರೆ ಇಲ್ಲಿನ ಮಠವನ್ನು ಗೋರಖ ಸ್ಥಾಪಿಸಿದನೆಂಬ ನಂಬಿಕೆಯಿದೆ. ಇಲ್ಲಿ ಗೋರಖನ ಶಿಷ್ಯ ಭರ್ತೃಹರಿ ತಪಸ್ಸು ಮಾಡಿದ ಗುಹೆಯಿದೆ. ಗೋರಖಪುರದಂತೆ ಕದಳಿ, ಲುಂಕೆಮಲೆ, ಹುಲಿಗೊಂದಿ ಇವು ಮೊದಲು ಗುಹೆಗಳೇ ಆಗಿದ್ದು, ನಂತರ ಅಲ್ಲಿ ಮಠ ಹಾಗೂ ಗುಡಿಗಳು ಬಂದಿವೆ. ಗೋರಖಪುರದ ಮಹಂತ ಅವೈದ್ಯನಾಥರು ಬಾರಾಪಂಥದ ಅಧ್ಯಕ್ಷರು. ಅವರು ಕದ್ರಿಮಠದ ಅಧಿಪತಿಯ ಪಟ್ಟಾಭಿಷೇಕದಲ್ಲಿ ಭಾಗವಹಿಸುವೊಸಂಪ್ರದಾಯವಿದೆ. ಆದರೆ ಈ ಸಲ ಅವರು ಅನಾರೋಗ್ಯದ ನಿಮಿತ್ತ ಬಂದಿರಲಿಲ್ಲ.

ದಕ್ಷಿಣ ಭಾರತದ ನಾಥಮಠಗಳಿಗೆ ನಾಸಿಕ್ ಜಿಲ್ಲೆಯ ತ್ರ್ಯಂಬಕೇಶ್ವರವು  ಕೇಂದ್ರವಿದ್ದಂತೆ.   ಗೋದಾವರಿ ನದಿ ಹುಟ್ಟುವುದು ಇಲ್ಲೆ. ಕೌಳಬೆಟ್ಟದ ಮೇಲೆ ಗೋರಖನ ಗುಹೆ ಇದೆ. ೧೨ ವರ್ಷಕ್ಕೆ ಒಮ್ಮೆ ನಾಸಿಕದಲ್ಲಿ ಕುಂಭಮೇಳ ಸೇರುತ್ತದೆ. ಕುಂಭಮೇಳದ ಮುಖ್ಯ ಆಚರಣೆ ನಾಸಿಕದಲ್ಲಿರುವ ಗೋದಾವರಿ ಘಾಟಿನಲ್ಲಿ ಮಾಡುವ ಪವಿತ್ರ ಸ್ನಾನ. ಆದರೆ ನಾಥರಿಗೆ ಕುಂಭದ ಸ್ನಾನವು ಮುಖ್ಯವಲ್ಲ. ತ್ರ್ಯಂಬಕದಲ್ಲಿ ಸಭೆ ಸೇರುವುದು ಮುಖ್ಯ. ೨೦೦೩ರ ಕುಂಭದಲ್ಲಿ ೧೦೦೦ಕ್ಕಿಂತ ಹೆಚ್ಚು ನಾಥರು ಸೇರಿದ್ದರು.  ಇಲ್ಲಿರುವ ಗೋರಖ ನಾಥನ ಅಖಾಡದಿಂದ ಕದ್ರಿಯಾತ್ರೆ ಆರಂಭವಾಗುತ್ತದೆ.

ಕಾಶಿಯು ಕಾಲಭೈರವನ ಕಾರಣಕ್ಕಾಗಿ ನಾಥರಿಗೆ ಮುಖ್ಯ ಸ್ಥಳವಾಗಿದೆ. ಹಿಂದೆ ಕಾಲಭೈರವ ಮಂದಿರವು ನಾಥರ ಆಳ್ವಿಕೆಗೆ ಸಂಬಂಧಪಟ್ಟಿತ್ತು. ಶಿವನ ಕೈಗೆ ಅಂಟಿದ್ದ ಬ್ರಹ್ಮಕಪಾಲವು ಇಲ್ಲಿ ವಿಸರ್ಜನೆಯಾಯಿತು. ದೇಹತ್ಯಾಗ ಮತ್ತು ಮೃತರ ಅಸ್ತಿ ವಿಸರ್ಜನೆಯ ಜಾಗವಾಗಿರುವ ಕಾಶಿಯಲ್ಲಿ, ತ್ರಿಶೂಲ ಕಪಾಲಮಾಲೆ ನಾಯಿಗಳಿಂದ ಕೂಡಿದ ನಗ್ನಮೂರ್ತಿ ಭೈರವನಿದ್ದಾನೆ. ನಾಥಮಠಗಳಿರುವ ಕದಲಿವನಗಳು ಕೂಡ ದೇಹತ್ಯಾಗದ ಜಾಗಗಳೇ. ಕರ್ನಾಟಕದ ಕಾಲಭೈರವಮೂರ್ತಿಗಳು ಒಂದೋ ಉಜ್ಜಯಿನಿ  ಇಲ್ಲವೇ ಕಾಶಿ ಮೂಲದವು. ಕದ್ರಿಯ ಜೋಗಿಮಠದ ಭೈರವನು ಕಾಶಿ ಕಾಲಭೈರವನು.

ಭಾರತದ ತಂತ್ರ ಪಂಥಗಳ ಕೇಂದ್ರದಂತಿದ್ದ ಶ್ರೀಶೈಲಕ್ಕೆ ಕಲಿಯಲು, ವಾಗ್ವಾದ ಮಾಡಲು ಹಾಗೂೊಗೆಲ್ಲಲು ಅನೇಕ ದಾರ್ಶನಿಕರೂ ಯೋಗಿಗಳೂ ಸಾಧಕರೂ ಬರುತ್ತಿದ್ದರು. ಅಲ್ಲಿ ಮಹಾಯಾನದ  ನಾಗಾರ್ಜುನ ಇದ್ದ. ಕಾಪಾಲಿಕರಿದ್ದರು. ಕೌಳರಿದ್ದರು. ನಾಥರೂ ಇದ್ದರು. ಇಲ್ಲಿ ಶಂಕರರು ಕಾಪಾಲಿಕ ಉನ್ಮತ್ತ ಭೈರವನ ಜತೆ ವಾಗ್ವಾದ ಮಾಡುತ್ತಾರೆ.  ಅಲ್ಲಮನು ಗೋರಖನ ಜತೆ ವಾಗ್ವಾದ ಮಾಡುತ್ತಾನೆ. ಆದರೂ ಅಲ್ಲಿದ್ದ ಪಂಥಗಳು ಹಾಗೂ ಅವುಗಳ ನಡುವಣ ಸಂಬಂಧ ಸ್ಪಷ್ಟವಾಗಿ ತಿಳಿಯುವುದಿಲ್ಲ. ಗಮನಿಸಬೇಕಾದ ಅಂಶವೆಂದರೆ, ಅಲ್ಲಮನಾಗಲಿ ಅಕ್ಕನಾಗಲಿ ಹೋಗುವುದು ಶ್ರೀಶೈಲದ ಕದಳಿವನಕ್ಕೆ ವಿನಾ ಮಲ್ಲಿಕಾರ್ಜುನನ ಗುಡಿಗಲ್ಲ. ಅಲ್ಲಮನಾದರೂ ಗೋರಖನನ್ನು ಭೇಟಿಯಾಗುವುದು  ಕದಳಿಯ ದಾರಿಯಲ್ಲಿ; ಕದಳಿವನಗಳಿಗೂ ನಾಥಪಂಥಕ್ಕೂ ಸಂಬಂಧವಿದೆಯಷ್ಟೆ. ‘ಕದಳಿಯ ಬನವ ಹೊಕ್ಕು ಹೊಲಬ ತಿಳಿಯದನ್ನಕ್ಕ, ಬಯಲಗಾಳಿಯ ಹಿಡಿದು ಗಟ್ಟಿ ಮಾಡದನ್ನಕ್ಕ, ಬರಿದೆ ಬಹುದೆ ಶಿವಜ್ಞಾನ?’ ಎಂದು ಅಲ್ಲಮ ಪ್ರಶ್ನೆ ಕೇಳುತ್ತಾನೆ. ಕದಳಿಯ ಬನವ ಹೊಕ್ಕು ಹೊಲಬು ತಿಳಿಯುವುದು ಎಂದರೇನು? ಬಹುಶಃ ಇದು ಶೂನ್ಯತತ್ವದ ಹುಡುಕಾಟ ಇದ್ದೀತು.

ಶ್ರೀಶೈಲವು ಯೋಗಿಗಳೂ ಸಿದ್ಧರೂ ದೇಹತ್ಯಾಗ ಮಾಡುವ ಜಾಗಗಳಲ್ಲಿ ಒಂದಾಗಿತ್ತು. ಕನ್ನಡ ಪಠ್ಯಗಳ ಪ್ರಕಾರ  ಅಲ್ಲಮನು  ಕದಳಿವನದಲ್ಲಿ  ‘ಸಾವಿಲ್ಲದಿರ್ಪ ಸಿದ್ಧರ ಚೆಲುವು ಮೂರ್ತಿ’ಗಳನ್ನು ನೋಡುತ್ತಾನೆ. ಶ್ರೀಶೈಲವು ಸಾವು ಮುಂದೂಡಲು ಬೇಕಾದ ಯೋಗಸಿದ್ದಿ  ಪಡೆಯುವ ಹಾಗೂ ನಿರ್ವಾಣಕ್ಕೆ ಹೋಗುವ ತಾಣವೂ ಆಗಿತ್ತು. ಶಿವನಿರುವ ಬೆಟ್ಟಗಳು ಕೈಲಾಸವಾಗುವುದು, ಇಲ್ಲವೆ ಕೈಲಾಸಕ್ಕೆ ತೆರಳುವ ಹಾದಿಯಾಗುವುದು, ಶೈವ ಸಂಪ್ರದಾಯಗಳ ವಿಶಿಷ್ಟತೆ. ಕದಳಿಯ ಗುಹೆಯಲ್ಲಿ ಈಗಲೂ ಯಾವುದೇ ಕಟ್ಟೆ ಅಥವಾ ಮೂರ್ತಿಯಿಲ್ಲ.  ನಿರ್ಜನತೆ, ಮೌನ ಹಾಗೂೊಏಕಾಂತಗಳಿಂದ ಕೂಡಿದ ಈ ನೈಸರ್ಗಿಕ ಗುಹೆಯು ಶೂನ್ಯ ತತ್ವದ ಸಾಕಾರ ರೂಪದಂತಿದೆ. ಅಲ್ಲಮನು ಕದಳಿಯನ್ನು ಒಂದು ರೂಪಕವಾಗಿ ಬಳಸು ವುದು, ದೇಹತ್ಯಾಗಕ್ಕೆ ಕದಳಿಬನಕ್ಕೆ ಬರುವುದು, ಅವನ ಅಂಕಿತವು ಗುಹೇಶ್ವರ ಆಗಿರುವುದು, ಅವನು ಬಯಲತತ್ವವನ್ನು ಹೇಳುವುದು ಇವೆಲ್ಲವೂ ಪರಸ್ಪರ ಸಂಬಂಧವುಳ್ಳವಾಗಿವೆ. ಮಲ್ಲಿಕಾರ್ಜುನ ಗುಡಿಗಾಗಿ ಪರ್ವತ ಹತ್ತಿವವರಿಗೆ ಅಲ್ಲಮ  ‘ಕರ್ಮಕಾಂಡಿಗಳು’ ಎನ್ನು ತ್ತಾನೆ. ಕದಳಿವನಕ್ಕೆ ಹೋಗುವ ಯೋಗಿಗಳ ಹಾಗೂ ಶ್ರೀಶೈಲ ಪರ್ವತದಲ್ಲಿದ್ದ ಯೋಗಿಗಳ ಮಧ್ಯೆ ಬೇಕಾದಷ್ಟು ತಾತ್ವಿಕ ಭಿನ್ನಮತ ಹಾಗೂ ವಾಗ್ವಾದಗಳು ಇದ್ದವು  ಅನಿಸುತ್ತದೆ.

ಸಂಶೋಧಕ ಢೇರೆಯವರು, ಮಚ್ಚೇಂದ್ರನು ಸಿಲುಕಿಕೊಂಡಿದ್ದ ಸ್ತ್ರೀರಾಜ್ಯವು ಯೋಗಿನಿಯರುಗಳಿಂದ ಕೂಡಿದ್ದ ಶ್ರೀಶೈಲದ ಕದಳಿವನವೇ ಎಂದು ಹೇಳುತ್ತಾರೆ.[10] ತೆಲುಗಿನ ಗೋರನ ಕವಿಯು ತನ್ನ ‘ನವನಾಥ ಚರಿತ್ರಮು’ ಕೃತಿಯನ್ನು ಶ್ರೀಶೈಲದ ಮಲ್ಲಿಕಾರ್ಜುನನಿಗೆ ಅರ್ಪಿಸಿರುವುದನ್ನು ಆಧರಿಸಿ, ಇದು ನಾಥಪಂಥದ ಜಾಗವೆಂದು ಹೇಳಲಾಗುತ್ತದೆ. ಆದರೆ ಶ್ರೀಶೈಲದಲ್ಲಿ ಯಾವುದೇ ನಾಥಮಠವಿಲ್ಲ. ಈಗಿನ ನಾಥರಲ್ಲೂ ಶ್ರೀಶೈಲಕ್ಕೆ ಯಾವುದೇ ಮಹತ್ವದ ಸ್ಥಾನವಿಲ್ಲ.

* * *[1]      Briggs G.W., Gorakhnath and the Kanphata Yogis, Pp.26

[2]      ಆದಿಚುಂಚನಗಿರಿ ಸ್ಥಲ ಮಾಹಾತ್ಮ್ಯ, ಪು.೫೬

[3]      ಚುಂಚನಗಿರಿ ಸೀಮೆಯ ಹೊನ್ನಾಯಕನಹಳ್ಳಿಯ (ಕುಣಿಗಲ್ಲು) ಜೋಗೇರ ಸುಬ್ಬಣ್ಣ ಹೇಳಿದ ಪ್ರಕಾರ ‘ಧಾರೆ ಒಂದು ಬಿಟ್ಟರೆ ಉಳಿದಂಗೆ ಮದುವೆ ಮಾಡ್ದಂಗೆ ಇರ್ತದೆ. ಒಂದು ವೇಳೆ ಮದುವೆ ಸೆಟ್ಟಾಗಿದ್ದರೆ ಇದೇ ಟೈಮಲ್ಲಿ ಧಾರೇನೂ ಎರೀಬಹುದು’.

[4]      ಸಿದ್ಧಪ್ಪ ಬಿ, ನಾಥಪಂಥ ಶೈವಧರ್ಮ ಮತ್ತು ಕರ್ನಾಟಕ ನಾಥಪಂಥ ಶೈವ ಸಮಾಜದ ಸಂಕ್ಷಿಪ್ತ ಪರಿಚಯ, ಪು.೨೩

[5]      ರಾವುಳ ಮತಪ್ರಕಾಶಿಕೆ, ಪು.೫೮-೬೦

[6]       Briggs G.W., Gorakhanath and Kanapathas, Pp.17

[7]      ಸಿದ್ಧಪ್ಪ ಬಿ, ನಾಥಪಂಥ ಶೈವಧರ್ಮ ಮತ್ತು ಕರ್ನಾಟಕ ನಾಥಪಂಥ ಶೈವ ಸಮಾಜದ ಸಂಕ್ಷಿಪ್ತ ಪರಿಚಯ, ಪು.೨೩

[8]      ಬಿ.ರಾಜಶೇಖರಪ್ಪ, ಇತಿಹಾಸ ದರ್ಶನ, ಪು.೬೪

[9]      ಕರ್ನಾಟಕ ನೇಪಾಳ ಸಾಂಸ್ಕೃತಿಕ ಸಂಬಂಧ, ಪು.೮೬

[10]     ನಾಥಸಂಪ್ರದಾಯದ ಇತಿಹಾಸ. ಪು.೯