‘ಅಖಿಲ ಭಾರತ ವರ್ಷೀಯ ಭೇಖ್ ಬಾರಾಪಂಥ್ ಯೋಗಿ ಅವಧೂತ್ ಸಂಪ್ರದಾಯ ಮಹಾಸಭಾ, ಹರಿದ್ವಾರ’ ಎಂಬ ಬೋರ್ಡು ಸಾಮಾನ್ಯವಾಗಿ ಕರ್ನಾಟಕದ ನಾಥಮಠಗಳಲ್ಲಿ ಕಾಣಸಿಗುತ್ತದೆ. ಇಲ್ಲಿನ ಯಾವುದೇ ಮಠದಲ್ಲಿ ಸಮಸ್ಯೆಯಾದರೆ, ದೂರನ್ನು ಹರಿದ್ವಾರಕ್ಕೆ  ಕೊಡಬೇಕು. ಹರಿದ್ವಾರದ ಮಹಾಸಭೆಯ ಸುಪರ್ದಿನಲ್ಲಿರುವ ಕರ್ನಾಟಕದ ಮಠಗಳು ಒಟ್ಟು ಒಂಬತ್ತು. ಅವೆಂದರೆ ವಿಟ್ಲದ ಯೋಗೇಶ್ವರ ಮಠ(ಬಂಟವಾಳ),  ಕದ್ರಿಯ ಜೋಗಿಮಠ (ಮಂಗಳೂರು), ಹಲವರಿಯ ಕೋಡಶಾಹಿಮಠ (ಕುಂದಾಪುರ), ಚಂದ್ರಗುತ್ತಿಯ ಚಂದ್ರಮುಖಿ ಯೋಗಿಮಠ (ಸೊರಬ), ಕುಂಭಾರ್ಡೆಯ ಹಂಡಿಬಡಗನಾಥ ಮಠ, ಡೊಂಗರಗಾಂವದ ಶ್ರೀಮಚೇಂದ್ರನಾಥ ದಾದಾಕಾ ಮಠ ಹಾಗೂ ಕಿರವಳೆಯ ಗೋರಕ್ಷನಾಥ ಮಠ (ಖಾನಾಪುರ), ಲುಂಕೆಮಲೆಯ ಲೋಕಿಮಠ (ಮೊಳಕಾಲ್ಮೂರು);  ಇವುಗಳ ಜತೆಗೆ ಅಷ್ಟೇನು ಪ್ರಾಮುಖ್ಯವಿಲ್ಲದ ಎರಡು ಮಠಗಳೂ ಇವೆ. ಅವೆಂದರೆ ಕರ್ಜಗಿಯ(ಹಾವೇರಿ) ಮಠ ಹಾಗೂ ಸವದತ್ತಿಯ ಎಕ್ಕನಾಥ ಜೋಗನಾಥಮಠ.  ಹೆಚ್ಚಿನ ನಾಥಮಠಗಳು ಪಶ್ಚಿಮ ಘಟ್ಟದ ತ್ರ್ಯಂಬಕ-ಕದ್ರಿ ಪಥದಲ್ಲಿವೆ. ಮಧ್ಯಕರ್ನಾಟಕದಲ್ಲಿದ್ದು  ಹಿಂದೆ ನಾಥರಿಗೆ ಸೇರಿದ್ದ ಆದಿಚುಂಚನಗಿರಿ ಮಠವು ೧೯೨೬ರಲ್ಲಿ ಅವರ ಕೈಬಿಟ್ಟು ಹೋಯಿತು. 

. ಕದ್ರಿಯ ಜೋಗಿಮಠ

ನೇಪಾಳದಿಂದ ತ್ರ್ಯಂಬಕದ ತನಕ ವ್ಯಾಪಿಸಿರುವ ನಾಥಪಂಥದಲ್ಲಿ ಮಂಗಳೂರಿನೊ ‘ಕದಲಿಮಠ’ವು ಪ್ರಸಿದ್ಧವಾಗಿದೆ. ತ್ರ್ಯಂಬಕೇಶ್ವರದ ನಾಥರ ಮಹಾಸಭೆಯಲ್ಲಿ ನಾಥಪಂಥದ ಚರಿತ್ರೆ ಘೋಷಿಸುವ ಮಂತ್ರದಲ್ಲಿ ಬರುತ್ತಿದ್ದ ನಾಲ್ಕು ಪವಿತ್ರ ಸ್ಥಳಗಳೆಂದರೆ,  ಜ್ವಾಲಾಮಾಯಿ, ತ್ರ್ಯಂಬಕೇಶ್ವರ, ಗೋರಖಪುರ ಹಾಗು ಕದಲಿ. ಉತ್ತರ ಭಾರತದ ನಾಥರು ಜೀವಮಾನದಲ್ಲಿ ಒಮ್ಮೆಯಾದರೂ ಕದ್ರಿಗೆ ಭೇಟಿಕೊಡಬೇಕೆಂದು ಬಯಸುತ್ತಾರೆ. ಕದ್ರಿಯ ಝುಂಡಿಯಾತ್ರೆ ಮಾಡುವುದು ಒಂದು ಸಾಧನೆ ಎಂದು ಭಾವಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಕದ್ರಿಬೆಟ್ಟವಿದ್ದು, ಅದರ ಮೇಲೆ  ಜೋಗಿಮಠವಿದೆ. ಅದು ಕದ್ರಿಬೆಟ್ಟದ ಮೇಲಿರುವ ಕಾರಣ ಕದ್ರಿಮಠವೆಂದೇ ಹೆಸರಾಗಿದೆ. ಮಠದ ಪರಿಸರದಲ್ಲಿ ಕಾಶಿ ಕಾಲಭೈರವನ ಗುಡಿಯಿದೆ. ಗೋರಖ, ಮಚೇಂದ್ರ ಹಾಗೂ ಚೌರಂಗಿನಾಥರ ಮೂರ್ತಿಗಳಿವೆ; ಹಿಂದೆ ಕದ್ರಿಮಠದ ಅಧಿಪತಿಗಳಾಗಿದ್ದೊಯೋಗಿಗಳೊಸಮಾಧಿಗಳಿವೆ. ಪಾಂಡವರೊಗುಹೆ, ಪಾತಾಳ ಭೈರವನ ಗುಡಿ, ಪರಶುರಾಮನ ಅಗ್ನಿಕುಂಡ, ಬಾರಾಪಂಥಿ ಕಟ್ಟೆಗಳಿವೆ. ಬೆಟ್ಟದ ಕೆಳಗೆ ಪ್ರಸಿದ್ಧವಾದ ಕದ್ರಿಮಂಜುನಾಥ ಗುಡಿಯಿದೆ. ಈ ಗುಡಿಯ ಹೊರಗೋಡೆಯಲ್ಲಿ ಮಚೇಂದ್ರ, ಗೋರಖ, ಹಾಗೂ ಚೌರಂಗಿನಾಥರ ಮೂರ್ತಿಗಳಿವೆ. ಮಚೇಂದ್ರ ಚೌರಂಗಿಯರದು ಕುಳಿತ ಯೋಗಭಂಗಿಯಾದರೆ, ಗೋರಖನದು  ತಿರುಗಾಟಕ್ಕೆ ಹೊರಡಲು ಸಿದ್ಧನಾಗಿರುವ ಭಂಗಿ. ಗೋರಖನ ಕಾಲಬಳಿ ನಾಯಿ ಇದೆ. ಬಲಗೈಯಲ್ಲಿ ಜಪಸರವಿದೆ. ಎಡಗೈಯ ಹೆಬ್ಬೆರಳು ಹಾಗೂ ತೋರುಬೆರಳು ಸೇರಿಸಿ ವೃತ್ತ ರಚಿಸಿರುವ ಯೋಗಮುದ್ರೆಯಿದೆ. ಜೋಗಿಮಠದ ಮಚೇಂದ್ರನು ಮೀನಿನ ಮೇಲೆ ಕುಳಿತಿದ್ದರೆ, ಕದ್ರಿಗುಡಿಯ ಮಚ್ಚೇಂದ್ರನು ಪಶ್ಚಿಮಕ್ಕೆ ಸಮುದ್ರಮುಖಿಯಾಗಿ ಪದ್ಮಾಸನದಲ್ಲಿ ಕುಳಿತಿದ್ದಾನೆ. ಚೌರಂಗಿನಾಥನ ಮೂರ್ತಿಯು ಗುಡಿಯ ಪೂರ್ವಕ್ಕಿದೆ. ಗುಡಿಯ ಪಕ್ಕ ನವನಾಥರ  ಕೊಳಗಳಿವೆ. ಈ ಒಂಭತ್ತು ಕೊಳಗಳ ಮೇಲೆ  ಯೋಗಿಗಳು ಧುನಿ ಹಾಕಿಕೊಂಡು ವಸತಿ ಮಾಡಲು ಛತ್ರಗಳಿವೆ. ಹೀಗೆ ಇಡೀ ಕದ್ರಿ ಬೆಟ್ಟವೇ ನಾಥ ಕುರುಹುಗಳಿಂದ ತುಂಬಿದೆ.

ಕದ್ರಿಯೊ ಕದಳಿಯೊ?

ಕದ್ರಿ ಅಥವಾ ಕದಳಿ ಎಂದರೇನು? ಇವಕ್ಕೆ ಮೂರು ನಿಷ್ಪತ್ತಿಗಳಿವೆ. ೧. ಕದ್ರಿ ಎಂಬುದು ‘ಕದರ’ದಿಂದ ಬಂದುದು. ಕದರ (ಕಗ್ಗಲಿ) ಮರಗಳ  ಜಾಗವೇ ಕದ್ರಿ. ೨. ಕದರ್ ಎಂದರೆ ಬೆಟ್ಟ. ಕದರ್ ಎಂಬುದು ಕದರಿಯಾಗಿ, ನಂತರ ಕದ್ರಿಯಾಗಿದೆ. ೩. ಕದಲಿಯಿಂದ ಕದರಿ ಕದ್ರಿ ಬಂದಿವೆ.  ಮೂಲತಃ ಇದು ಕದಳಿಯ ವನ. ಇದಕ್ಕೆ ಸುವರ್ಣ ಎಂಬ ಶಬ್ದ ಸೇರಿ ಸುವರ್ಣ ಕದಳಿ ಎಂದಾಗಿದೆ. ಇದಕ್ಕೆ ಪೂರಕವಾಗಿ ‘ಕದಳಿ ಮಹಾತ್ಮ್ಯೆ’ ಎಂಬ ಗ್ರಂಥವೂ ಇದೆ. ಇವುಗಳಲೆಲ್ಲಾ ಮೂರನೇ ನಿಷ್ಪತ್ತಿಯು ನಾಥಪಂಥದ ದೃಷ್ಟಿಯಿಂದ ಮುಖ್ಯವಾಗಿದೆ.

ಕದಳಿವನ ಎಂದರೇನು? ತಟ್ಟನೆ ನೆನಪಿಗೆ ಬರುವುದು ಶ್ರೀಶೈಲದ ಕದಳೀವನ. ಎರಡೂ ಕದಳಿವನಗಳಲ್ಲಿ  ಸಾಮ್ಯಗಳಿವೆ. ಎರಡೂ ಬೆಟ್ಟಗಳು. ಎರಡೂ ಕಡೆ ನೈಸರ್ಗಿಕ ಗುಹೆಗಳು, ನೀರುಕ್ಕುವ ಚಿಲುಮೆಗಳಿವೆ. ಎರಡೂ ದೇಹತ್ಯಾಗದ ಸ್ಥಾನಗಳು. ಎರಡೂ ಕಡೆ ಕಾಪಾಲಿಕ ಮತ್ತು ವಜ್ರಯಾನ ಪಂಥಗಳು ಇದ್ದವು. ಕದಳಿವನಕ್ಕೆ ಇರುವ ಸಾಮಾನ್ಯ ಅರ್ಥ ಬಾಳೆಯ ತೋಟ. ಕದ್ರಿಯ ಆಸುಪಾಸಿನಲ್ಲಿ ಬಾಳೆಬೈಲು ಎಂಬ ಗ್ರಾಮವಿತ್ತು ಎಂದು ತಿಳಿಯುತ್ತದೆ. ಆದರೂ ಇದು ಬಾಳೆಫಲಕ್ಕೆ ಸಂಬಂಧಪಟ್ಟದ್ದಲ್ಲ. ಕದಳಿಯು ತಾತ್ವಿಕ ಅರ್ಥದಲ್ಲಿ ಶೂನ್ಯತತ್ವದ ಸಂಕೇತ. ಶರಣರು ಬಳಸುವ ಬಯಲು ಎಂಬುದು ಶೂನ್ಯ ಪರಿಕಲ್ಪನೆಯ ಕನ್ನಡ ರೂಪ. ಬಾಳೆಯ ದಿಂಡಿನ ಸಿಪ್ಪೆ ಸುಲಿಯುತ್ತ ಹೋದರೆ  ಕಡೆಗೆ  ಸಿಗುವ ಬೆಳ್ಳನೆಯ ಶಲಾಕೆ ಶೂನ್ಯತತ್ವದ ರೂಪಕವಾಗಿದ್ದಿರಬಹುದು. ಬಸವಣ್ಣ ಈ ಅರ್ಥದಲ್ಲೇ ಬಾಳೆಯ ಕಂಬದ ಹೋಲಿಕೆ ತರುತ್ತಾನೆ.

ಮಾಡುವ ಭಕ್ತನ ಕಾಯ ಬಾಳೆಯ ಕಂಬದಂತಿರಬೇಕು
ಮೆಲ್ಲಮೆಲ್ಲನೆ ಹೊರೆಯತ್ತಿ ನೋಡಿದಡೆ ಒಳಗೆ ಕೆಚ್ಚಿಲ್ಲದಿರಬೇಕು
ಮೇಲಾದ ಫಲವನು ನಮ್ಮವರು ಬೀಜಸಹಿತ ನುಂಗಿದರು
ಎನಗಿನ್ನಾವ ಭಯವಿಲ್ಲ ಕಾಣಾ ಕೂಡಲಸಂಗಮದೇವಾ

ಕೆಚ್ಚು, ಬೇರೆ ಮರಗಳ ಕಾಂಡವನ್ನು ಸುಲಿಯುತ್ತ ಹೋದರೆ ಸಿಗುತ್ತದೆ. ಅಂತಹ  ಕೆಚ್ಚು ಬಾಳೆದಿಂಡಿನಲ್ಲಿ  ಸಿಗುವುದಿಲ್ಲ.  ‘ಚರ್ಪಟನಾಥ ಶತಕ’ದಲ್ಲಿ ಸಂಸಾರವನ್ನು ‘ಕದಳಿಗರ್ಭ ವಿಚಾರಸಾರ’  ಎಂದು ವರ್ಣಿಸಲಾಗಿದೆ. ಕದಳಿಯ ಪ್ರಸ್ತಾಪ ‘ಶೂನ್ಯಸಂಪಾದನೆ’ಯಲ್ಲೂ ಬರುತ್ತದೆ. ‘ಕದಳಿಯ ಬನವ ಹೊಕ್ಕು ಹೊಲಬ ತಿಳಿಯದನ್ನಕ್ಕ, ಬಯಲ ಗಾಳಿಯ ಹಿಡಿದು ಗಟ್ಟಿ ಮಾಡದನ್ನಕ್ಕ, ಬರಿದೆ ಬಹುದೆ ಶಿವಜ್ಞಾನ’ ಎಂಬ ಅಲ್ಲಮನ ವಚನ ವೊಂದಿದೆ. ‘ಕಾಯವೆಂಬ ಮಹಾಕದಳಿಯ ಗೆಲ್ಲಬಲ್ಲವರಾರನೂ ಕಾಣೆ’ ಎಂದು ಶುರುವಾಗುವ ಇನ್ನೊಂದು ವಚನವಿದ್ದು, ಅದರಲ್ಲಿ ಸಂಸಾರವನ್ನು ಕೋಪ ಮದ ಮತ್ಸರ ಅಹಂಕಾರ  ವಿಷಯ ಮಾಯೆಗಳಿಂದ ತುಂಬಿದ್ದು ಎಂಬ ವರ್ಣನೆಯಿದೆ. ನಂತರ ಅದು,

ಇಂತಪ್ಪ ಕದಳಿಯ ಹೊಗಲರಿಯದೆ ದೇವದಾನವ ಮಾನವರೆಲ್ಲರೂ ಮತಿಗೆಟ್ಟು ಮರುಳಾಗಿ ತೆಗೆದೋಡಿದರು. ಅಂಗಾಲ ಕಣ್ಣು ಮೈಯೆಲ್ಲ ಕಣ್ಣವರು ತಲೆ ಬಾಲಗೆಟ್ಟರು. ನಾನೀ ಕದಳಿಯ ಹೊಕ್ಕು ಹೊಯಿದಾಡಿ ಮುಳ್ಳುಮಸೆ ಮುಟ್ಟದೆ ಕದಳಿವರಿದು ಗೆಲಿದುತ್ತರಿಸಿ ಗೋಗೇಶ್ವರನೆಂಬ ಲಿಂಗದ ನಿಜ ಸಮಾಧಿಯಲ್ಲಿ ನಿಂದು ಪರವಶನಾಗಿ ನಿರಾಳಕ್ಕೆ ನಿರಾಳನಾಗಿದ್ದೆನಯ್ಯ

ಎಂದು ಮುಗಿಯುತ್ತದೆ. ಕದಳಿಯನ್ನು ದಾರಿತಪ್ಪಿಸುವ ದುರ್ಗಮವಾದ ಕಾಡಿನ ರೂಪಕದಲ್ಲಿ ಚಿತ್ರಿಸಲಾಗುತ್ತಿದೆ. ಅಕ್ಕ ಕದಳಿಯನ್ನು ಘೋರಾರಣ್ಯ ಎನ್ನುತ್ತಾಳೆ.

ಕದಳಿ ಎಂಬುದು ತನು, ಕದಳಿ ಎಂಬುದು ಮನ
ಕದಳಿ ಎಂಬುದು ವಿಷಯಂಗಳು, ಕದಳಿ ಎಂಬುದು ಭವಘೋರಾರಣ್ಯ,
ಈ ಕದಳಿಯ ಗೆದ್ದು ತವೆ ಬದುಕಿ ಬಂದು ಕದಳಿಯ ಬನದಲ್ಲಿ ಭವಹರನ ಕಂಡೆನು
ಕರುಣದಿ ತೆಗೆದು ಬಿಗಿಯಪ್ಪಿದಡೆ ಚೆನ್ನಮಲ್ಲಿಕಾರ್ಜುನನ ಹೃದಯಕಮಲದಲ್ಲಿ ಅಡಗಿದೆನು

ತನುಮನವಿಷಯಗಳ ಹಾಗೂ ಲೌಕಿಕ ಸಂಸಾರದ ಸಂಕೇತವಾಗಿರುವ ಅರಣ್ಯವನ್ನು ದಾಟುವುದು ಒಂದು ಸವಾಲು. ‘ಕಾಯವೆಂಬ ಕದಳಿ’ಯನ್ನು ಗೆಲ್ಲುವ ಮಾತು ಶರಣರಲ್ಲಿ ಪುನಃಪುನಃ  ಬರುತ್ತದೆ. ಬಯಲು ಎಂಬುದಕ್ಕೆ ಯೋಗಿಯು ಸಾಧನೆಯ ಕೊನೆಯ ಹಂತದಲ್ಲಿ  ಶೂನ್ಯಸ್ಥಿತಿ  ತಲುಪುವುದು ಎಂಬರ್ಥವಿರುವ ಹಾಗೆಯೇ, ದೇಹತ್ಯಾಗವೆಂಬ ಅಥರ್ವೂ ಇದೆ. ಕೊಡೇಕಲ್ ಪರಂಪರೆಯ ಒಂದು ಕೃತಿಯಲ್ಲಿ ಬಸವಣ್ಣನ ಮಡದಿ ನೀಲಮ್ಮ, ಆಸನ ಹಾಕಿ ವಾಯು ನಿರ್ಬಂಧ ಮಾಡಿ, ಸಮಾಧಿ ಸ್ಥಿತಿಗೆ ಹೋಗಿ, ಅಲ್ಲಿಂದ ಮರಳದೆ ದೇಹತ್ಯಾಗ ಮಾಡುವ ವರ್ಣನೆಯಿದೆ. ಸಮಾಧಿಗೆ ಎರಡೂ ಅರ್ಥಗಳಿವೆ. ಅಲ್ಲಮ,  ದತ್ತಪಂಥದ ನರಸಿಂಹಯತಿ ಮುಂತಾದವರು ಶ್ರೀಶೈಲದ ಕದಳಿವನಕ್ಕೆ ದೇಹತ್ಯಾಗಕ್ಕಾಗಿ ಹೋಗುತ್ತಾರೆ. ಹೀಗಾಗಿ ಕದಳಿವನಗಳು ಯೋಗಸಾಧನೆಯ ನಿರ್ದಿಷ್ಟ ಹಂತವನ್ನೂ ದೇಹತ್ಯಾಗಕ್ಕಾಗಿ ಮಾಡುವ ಅಂತಿಮ ಪಯಣವನ್ನೂ ಸಂಕೇತಿಸುತ್ತವೆ.

[1] ಹೀಗೆ ಸೂಕ್ಷ್ಮ ಹಾಗೂ ಸ್ಥೂಲ ಎರಡೂ ಅರ್ಥಗಳಲ್ಲಿ ಕದಳಿವನಕ್ಕೆ ಅರ್ಥವಿದೆ. ಕದ್ರಿಬೆಟ್ಟದ ಕದಳಿವನವೂ ಮೂಲತಃ ಸಿದ್ಧರ ದೇಹತ್ಯಾಗದ ಜಾಗ. ಭಾರತದ ಪ್ರಸಿದ್ಧ ದೇಹತ್ಯಾಗದ ಜಾಗವಾದ ಕಾಶಿಯ ಹೆಸರಿನಲ್ಲಿರುವ ಕಾಶಿಕಾಲಭೈರವನು ಇಲ್ಲಿರುವುದು ಇದಕ್ಕೆ ಪೂರಕವಾಗಿದೆ.

ಕದ್ರಿಮಠದ ಸುತ್ತಮುತ್ತಲೂ ನೂರಾರು ವರುಷಗಳ ಹಿಂದಿನ ಸಮಾಧಿಗಳಿವೆ.  ಕದ್ರಿಮಠದ ಹಿಂದಿನ ಅಧಿಪತಿಗಳಾದ ಕಾಶಿನಾಥ, ಸುಂದರನಾಥ, ಜ್ವಾಲಾನಾಥರು ಇಲ್ಲೇ ಸಮಾಧಿಯಾದರು. ಕದ್ರಿಮಠಕ್ಕೆ ಅಧಿಪತಿಯಾಗಿ ಬರುವವರು ಮರಳಿ ನರ್ಮದೆಯನ್ನು ದಾಟಬಾರದು. ಇಲ್ಲೇ ಸಮಾಧಿ ಹೊಂದಬೇಕೆಂಬ ನಿಯಮ ಹಿಂದೆ ಇತ್ತಂತೆ. ರಾಜಸ್ಥಾನದ ಗೋರಖಟಿಲ್ಲ ಬೆಟ್ಟದ ಮೇಲಿರುವ ನಾಥಗದ್ದುಗೆಗೆ ಏರಿದ ಯೋಗಿ ಬೆಟ್ಟಿವಿಳಿದು ಬರುವಂತಿರಲಿಲ್ಲ. ಅಲ್ಲೇ ಸಮಾಧಿಯಾಗಬೇಕಿತ್ತು. ಒಂದೊಮ್ಮೆ ಯೋಗಿಯು ಸಮಾಧಿ ಯಾಗಲು ಒಪ್ಪದಿದ್ದರೆ, ಅವನನ್ನು ಹಿಡಿದು ಬಲವಂತವಾಗಿ ಸಮಾಧಿ ಮಾಡಲಾಗುತ್ತಿತಂತೆ. ಹೀಗಾಗಿ ಕೆಲವು ನಾಥರು ತಮ್ಮ ಅಧಿಕಾರ ಅವಧಿಯ ಕೊನೆಯ ವರ್ಷೊಪಲಾಯನ ಮಾಡುತ್ತಿದ್ದರಂತೆ. ಕದ್ರಿಯ ಮಠಾಧಿಪತಿ ಜೀವಸಮಾಧಿ ಆಗುತ್ತಿದ್ದ ಆಚರಣೆಯ ಬಗ್ಗೆ, ತ್ರ್ಯಂಬಕದಲ್ಲಿ ನನ್ನೊಡನೆ ಚರ್ಚೆ ಮಾಡಿದ ಬಹುತೇಕ ನಾಥ ಯೋಗಿಗಳು ಒಪ್ಪಿಕೊಂಡರು. ಈಗ ಈ ಆಚರಣೆ ಸಾಂಕೇತಿಕವಾಗಿ ಉಳಿದಿದೆ. ಕದ್ರಿಮಠಕ್ಕೆ ಹೊಸಯೋಗಿ ಪಟ್ಟಕ್ಕೆ ಬಂದಾಗ, ನಿವೃತ್ತನಾಗುವ ನಾಥನು ತ್ರ್ಯಂಬಕದಿಂದ ೧೨ ವರ್ಷದ ಹಿಂದೆ ತಾನು ತಂದಿದ್ದ ಪಾತ್ರೆಯನ್ನು ಸಮುದ್ರದಲ್ಲಿ ವಿಸರ್ಜನೆ ಮಾಡಬೇಕು. ಅದರ ಜತೆ ತಾನೂ ಮುಳುಗುಹಾಕಿ, ಜಲಪ್ರವೇಶದ ಅಭಿನಯ ಮಾಡಬೇಕು. ಕದ್ರಿಯ ಅರಸುಪಟ್ಟದಿಂದ ಇಳಿದ ಮೋಹನ ನಾಥರೂ (೨೦೦೪)ಕಡಲಲ್ಲಿ ಈ ಸಾಂಕೇತಿಕ ಜಲಸಮಾಧಿ ನೆರವೇರಿಸಿದರು.[2]

ಕದ್ರಿಯ ನಾಥ ಪರಂಪರೆ

ಕದ್ರಿಮಠಕ್ಕೆ ಬಾರಾಪಂಥದಲ್ಲಿ ನಾಲ್ಕು ಶಾಖೆಗಳಿಗೆ  ಮಾತ್ರ ಪಟ್ಟವೇರುವ ಹಕ್ಕಿದೆ.  ಅವೆಂದರೆ ಕಪಲಾನಿ, ಗಂಗಾನಾಥಿ, ಬೈರಾಗಿ ಹಾಗೂ ದರಿಯಾನಾಥಿ. ೧೪ನೇ ಶತಮಾನದ ಮಂಗಲನಾಥನಿಂದ (ಕ್ರಿಶ.೧೩೯೭) ಕದ್ರಿಮಠದ ನಾಥರ ದಾಖಲೆ ಶುರುವಾಗುತ್ತದೆ. ಮುಂದೆ ೧೯ನೇ ಶತಮಾನದವರೆಗೆ ದಾಖಲೆ ಸಿಗುವುದಿಲ್ಲ. ಕಳೆದ ಸುಮಾರು ಒಂದೂವರೆ ಶತಮಾನದಲ್ಲಿ ಆಗಿಹೋದ ನಾಥರು ಇವರು: ಜ್ವಾಲಾನಾಥ ೧೮೫೮-೧೮೬೦; ಭವಾನಿ ನಾಥ ೧೮೬೦-೧೮೭೨; ಹೀರಾನಾಥ ೧೮೭೨ -೧೮೯೬; ಕಾಶಿನಾಥ ೧೮೯೬-೧೯೦೮; ಸುಂದರನಾಥ ೧೯೦೮-೧೯೨೧; ಟೆಹಲ್‌ನಾಥ ೧೯೨೧-೧೯೩೩; ಚಿಮನ್‌ನಾಥ ೧೯೩೩-೧೯೪೫; ಚಮೇಲಿನಾಥ ೧೯೪೫-೧೯೧೫೭; ಶಾಂತಿನಾಥ ೧೯೫೭-೧೯೬೯; ಸೋಮನಾಥ ೧೯೬೯-೧೯೮೧; ಸೋಮನಾಥ ೧೯೮೧-೧೯೯೨ ; ಮೋಹನನಾಥ ೧೯೯೨-೨೦೦೪; ಸಂಧ್ಯಾನಾಥ ೨೦೦೪- ಕದ್ರಿಮಠದ ನಾಥರಲ್ಲಿ ತುಂಬ ಪ್ರಸಿದ್ಧರಾದವರು  ಸುಂದರನಾಥ. ಅವರೊಬ್ಬ ನಿಜವಾದ ಯೋಗಿ ಎಂದು ಅವರನ್ನು ಕಂಡವರು ಹೇಳುತ್ತಿದ್ದರಂತೆ. ಸುಂದರನಾಥರು ಕೇರಳದಲ್ಲಿ ಹಿಂದುಳಿದ ವರ್ಗಗಳ ಚಳುವಳಿ ಆರಂಭಿಸಿದ ಈಳವ ಸಮುದಾಯದ ನಾರಾಯಣ ಗುರುವಿಗೆ ದೀಕ್ಷೆಕೊಟ್ಟವರು. ಕದ್ರಿ ಪೀಠದಲ್ಲಿ ಕೆಲವರು ೧೨ ವರ್ಷಕಾಲವನ್ನು ಪೂರೈಸಲಿಲ್ಲ. ಕದ್ರಿಮಠದ ಆಚರಣೆಗಳಿಗೆ ಅಲ್ಲಿನ ನಾಥ ಯೋಗಿಯು ಒಂದೊಮ್ಮೆ ಲಭ್ಯವಿಲ್ಲದಿದ್ದರೆ, ವಿಟ್ಲಮಠದ ನಾಥನನ್ನು ಕರೆಯಿಸಿ ಪೂರೈಸಲಾಗುತ್ತದೆ.

ಕದ್ರಿಮಠದ ಯೋಗಿಗಳಲ್ಲಿ ಸಿಗುವ ಅತ್ಯಂತ ಹಳೆಯ ಹೆಸರು ಮಂಗಲನಾಥನದು.   ಬಾರಕೂರಿನಿಂದ ಆಳುತ್ತಿದ್ದ ಅಳುಪ ವಂಶದ ವಿಟ್ಟರಸ ಒಡೆಯರು, ವೀರಪ್ರತಾಪ ಪ್ರವುಡ ವಿರೂಪಾಕ್ಷನು ಜೋಗಿಮಠದ ಮಂಗಲನಾಥನಿಗೆ ಕದ್ರಿಯ ಸುತ್ತಲಿನ ನಾಲ್ಕು ಸೀಮೆಗಳನ್ನು ಸೇರಿಸಿ ಭೂದಾನಮಾಡಿ ಹಾಕಿಸಿದ ಶಾಸನವು, ಮಠದ ಆವರಣದಲ್ಲಿದೆ. ಅಂದಿನಿಂದ ಕದ್ರಿಮಠದ ನಾಥರು ರಾಜರಾದರು.  ನಾಥಮಠಗಳ ಮುಖ್ಯಸ್ಥರಿಗೆ ಮಹಂತ್ ಅಥವಾ ಪೀರ್ ಎಂಬ ಬಿರುದಿದ್ದರೆ,  ಕದ್ರಿಮಠದ ನಾಥನಿಗೆ ರಾಜಾ ಎಂಬ ಬಿರುದಿದೆ. ಇದಕ್ಕೆ ಇನ್ನೆರಡು ಕಾರಣಗಳಿವೆ. ೧. ಕರ್ನಾಟಕದ ಉಳಿದ ನಾಥಮಠಗಳ ಉಸ್ತುವಾರಿ ಮಾಡುವ ಅಧಿಕಾರವು ಕದ್ರಿಮಠದ ನಾಥನಿಗಿರುವುದು. ೨. ಬೇರೆಲ್ಲ ಮಠಗಳ ಮುಖ್ಯಸ್ಥನನ್ನು ಝುಂಡಿ ಆರಿಸಿದರೆ, ಕದ್ರಿಮಠದ ನಾಥನ ಆಯ್ಕೆಯನ್ನು ತ್ರ್ಯಂಬಕೇಶ್ವರದಲ್ಲಿ ಸೇರುವ ನಾಥರ ಮಹಾಸಭೆ ಮಾಡುವುದು. ಕದ್ರಿಮಠದ ರಾಜನ ಪಟ್ಟಾಭಿಷೇಕದಲ್ಲಿ  ಪರ್ಯಾಯ ಅರಸುತನಕ್ಕೆ ಬೇಕಾದ  ಎಲ್ಲ ಆಚರಣೆಗಳೂ ಇವೆ. ಚಿನ್ನದ ಕಿರೀಟಕ್ಕೆ ಬದಲು ಜಟೆಯ ಮುಕುಟವಿದೆ. ಪಟ್ಟದ ಕುದುರೆಯಿದೆ. ತಂತ್ರಿಗಳು ಹೋಮಮಾಡಿ, ರಾಜನಿಗೆ ನದಿಜಲದ ಅಭಿಷೇಕ ಮಾಡುತ್ತಾರೆ. ನಿರ್ಗಮಿಸುವ ನಾಥನು ತನ್ನ ಉತ್ತರಾಧಿಕಾರಿಗೆ ತೂಗುಮಂಚದಲ್ಲಿ ಕೂರಿಸಿ ಪಟ್ಟದ ಕತ್ತಿಯನ್ನು ಕೊಡುವ ಮೂಲಕ ಅಧಿಕಾರ ಹಸ್ತಾಂತರ ಮಾಡುತ್ತಾನೆ.

ಕದ್ರಿ ಮಠದ ಅಧೀನದಲ್ಲಿ ಅನೇಕ ಉಪಮಠಗಳಿವೆ. ಮುಂಡಾಣಮಠ, ಮಣೇಲು ಮಠ, ಎಯ್ಯಡಿಮಠ (ಮಂಗಳೂರು) ವಿಟ್ಲಮಠ (ಬಂಟ್ವಾಳ), ಸೂಡಾಮಠ (ಕಾರ್ಕಳ), ಕೋಟ (ಕುಂದಾಪುರ) ಉದ್ಯಾವರಮಠ (ಮಂಜೇಶ್ವರ) ಬಳ್ಳೂರುಮಠ (ಕಾಸರಗೋಡು). ಈ ಮಠಗಳಿಗೆ ಕದ್ರಿಮಠದ ಅರಸನೇ ಅಧಿಕಾರಿ. ಈ ಶಾಖಾಮಠಗಳ ಆಡಳಿತ ಉಸ್ತುವಾರಿಗೂ, ತಮ್ಮ ಭಕ್ತರನ್ನು ನೋಡುವುದಕ್ಕೂ, ಮಠದ ಸಂಪತ್ತಿನ ದೇಖರೇಖೀ ಮಾಡುವುದಕ್ಕೂ, ಅರಸು ತಿರುಗಾಟ ಮಾಡಬೇಕಿತ್ತು. ಇದನ್ನು ‘ಸರ್ಕೀಟು’   ಎನ್ನುತ್ತಾರೆ. ಆಗ ಕದ್ರಿಮಠದ ಅರಸು  ಕುದುರೆಯ ಮೇಲೆ ಸರ್ಕೀಟು  ಹೊರಟಾಗ, ಮಠದ ಬಿರುದು ಬಾವಲಿಗಳ ಜತೆ, ಜೋಗಿ ಜನಾಂಗದ ನಾಯಕರು ಪರಿವಾರದವರಾಗಿ ಹೋಗುತ್ತಿದ್ದರಂತೆ. ಇದು ಆಂಗ್ಲ ಅಧಿಕಾರಿಗಳ ಸರ್ಕೀಟಿನ ಮಾದರಿ. ಈಗಲೂ ಮಠದ ಆವರಣದಲ್ಲಿ ಸರ್ಕಿಟು ಕುದುರೆ ಯನ್ನು ಸಾಂಕೇತಿಕವಾಗಿ ಸಾಕಲಾಗಿದೆ. ಅದು ಕರಾವಳಿ ಪರಿಸರಕ್ಕೆ ಅಪರಿಚಿತವಾಗಿ ಕಾಣುತ್ತದೆ.  ಹಿರಿಯರು ಹೇಳುವಂತೆ,  ಕದ್ರಿ ಅರಸರು ಎತ್ತಿನಗಾಡಿಯಲ್ಲೂ ಸರ್ಕೀಟು ಹೋಗುತ್ತಿದ್ದರು. ಹೋದ ಕಡೆ ವಸತಿ ಮಾಡಿ, ಜೋಗಿಗಳಿಗೆ ದೀಕ್ಷೆಕೊಡುವ,  ಕುಟುಂಬದ ಅಥವಾ ಊರಿನ ವ್ಯಾಜ್ಯ ಬಗೆಹರಿಸುವ ಕೆಲಸ ಮಾಡುತ್ತಿದ್ದರು. ಗುರು ಕಾಣಿಕೆಯಾಗಿ ದವಸ ಮತ್ತು ಹಣ ಸ್ವೀಕರಿಸುತ್ತಿದ್ದರು. ಮಂಗಳೂರು ಪೇಟೆಯಲ್ಲಿ ನಾಥರು ಕುದುರೆ ಸವಾರಿಮಾಡಿಕೊಂಡು ಸರ್ಕೀಟು ಮಾಡುತ್ತಿದ್ದುದನ್ನು ನೋಡಿದವರು ಇದ್ದಾರೆ. ಈಗಲೂ ಕದ್ರಿ ಮಂಜುನಾಥನ ರಥೋತ್ಸವದಲ್ಲಿ ಕದ್ರಿಯ ಅರಸನು ಅಶ್ವಾರೂಢನಾಗಿ  ಪ್ರದಕ್ಷಿಣೆ ಬರುವ ಪದ್ಧತಿ ಇದೆ.

ಮಂಜುನಾಥ ಸಂಬಂಧ

ಕದ್ರಿಯ ಜೋಗಿಮಠಕ್ಕೂ ಮಂಜುನಾಥ ಗುಡಿಗೂ ಪ್ರಾಚೀನ ಕಾಲದಿಂದಲೂ ಸಂಬಂಧಗಳಿವೆ. ಈ ಹಿಂದೆ ಚರ್ಚಿಸಿದಂತೆ, ಈ ಗುಡಿಯು ವಜ್ರಯಾನ ಪಂಥಕ್ಕೆ ಸೇರಿದ್ದು,  ನಂತರ ನಾಥಪಂಥದ ಕೇಂದ್ರವಾಯಿತಷ್ಟೆ; ಆದರೆ ಕದ್ರಿಯಲ್ಲಿ ಮಚೇಂದ್ರ ರೂಪಿಯಾದ ಅವಲೋಕಿತೇಶ್ವರನನ್ನು ಹೊರಹಾಕಿ ಶಿವಲಿಂಗವನ್ನು ಸ್ಥಾಪಿಸಿದ ಬಳಿಕ, ಯಾವುದೊ ಹಂತದಲ್ಲಿ ಅದರ ಅರ್ಚನೆ ಬ್ರಾಹ್ಮಣರಿಗೆ ಹೋಯಿತು. ಅಂದಿನಿಂದ ಅರ್ಚಕರಿಗೂ ನಾಥರಿಗೂ ಗುಡಿಯ ವಿಷಯದಲ್ಲಿ ಒಂದು ಬಗೆಯ ಸಂಘರ್ಷ ಶುರುವಾಯಿತು. ಕೋರ್ಟುಗಳಲ್ಲಿ ಮೊಕದ್ದಮೆ ಹೂಡಲಾಯಿತು. ಹೊಸ ಸ್ಥಳಪುರಾಣಗಳು ಹುಟ್ಟಿದವು. ಮಂಜುನಾಥ ಗುಡಿಯ ದಾಖಲೆಗಳಲ್ಲಿ ಇರುವ ಸ್ಥಳಪುರಾಣದಲ್ಲಿ (ಪೊಳಲಿಯ ಮಾಧವಭಟ್ಟರ ಹತ್ತಿರವಿರುವ ತುಳುಬರೆಹ) ಒಂದು ಕತೆ ಹೀಗಿದೆ:

ಹಿಂದೆ ಮಚಿಂದ್ರನಾಥ ಗೋರಕ್ಷನಾಥ ಎಂಬ ಗುರು ಶಿಷ್ಯರು ಇತರ ಅನೇಕ ಋಷಿಗಳೊಂದಿಗೆ ಈ ದೇವಸ್ಥಾನದ ಮೇಲೆ ಇರುವ ಮಠದಲ್ಲಿ ತಪಸ್ಸು ಮಾಡಿಕೊಂಡಿರಲು, ಮಚಿಂದ್ರನಾಥನು ಶಿವದೇವಸ್ಥಾನವನ್ನು ಕಟ್ಟಿಸುವರೆ, ಶಿವಲಿಂಗವನ್ನು ತರುವುದಕ್ಕಾಗಿ ತನ್ನ ಮುಖ್ಯ ಶಿಷ್ಯನಾದ ಗೋರಕ್ಷನಾಥನನ್ನು ಕಾಶಿಗೆ ಕಳುಹಿಸಿ ಹಾಗೂ ಕದಳೀವನದಲ್ಲಿ ತಪಸ್ಸಿಗೆ ಕುಳಿತನು…ಶಿವಲಿಂಗವನ್ನು ತರುವರೆ ಹೋದ ಗೋರಕ್ಷನಾಥನು ಅನೇಕ ಸಮಯ ಬಾರದಿರಲು ಮಚಿಂದ್ರನು ಬೇಸತ್ತು, ತಾನು ತನ್ನ ಇತರ ಶಿಷ್ಯರೊಂದಿಗೆ ಶಿವನನ್ನು ಒಂದೇ ಛಲದಿಂದ ಪ್ರಾರ್ಥಿಸಿಕೊಳ್ಳಲು, ಶಿವನು ಇವನ ತಪಸ್ಸಿಗೆ ಮೆಚ್ಚಿ ಬಾವಿಯೊಳಗಿಂದ ಅರ್ಧಲಿಂಗಾಕಾರವಾಗಿ ಪ್ರತ್ಯಕ್ಷನಾದನು. ಆಗ ಲಿಂಗವು ಮಂಜಿನಂತೆ ಕಾಣಲು ಮಚಿಂದ್ರನು ‘ಮೈಂಜ್‌ನಾಥ ಆಗಯ’ ಎಂದು ಹೇಳಲು, ಅದೇ ಮುಂದೆ ದೇವರಿಗೆ ‘ಮಂಜುನಾಥ’ ಎಂದು ಹೆಸರಾಯ್ತು. ನಂತರ ಗೋರಕ್ಷನಾಥನು ಶಿವಲಿಂಗವನ್ನು ತರಲು ಇಲ್ಲಿ ಲಿಂಗ ಮೊದಲೇ ಉದ್ಭವ ಆಗಿದ್ದರಿಂದ ಸದ್ರಿ ಶಿವಲಿಂಗವನ್ನು ಮೇಲೆ ತೀರ್ಥದಲ್ಲಿಡಲು ಮಚಿಂದ್ರನು ಆಜ್ಞಾಪಿಸಿದನು.

ಸದರಿ ಸ್ಥಳಪುರಾಣವು  ಗುಡಿಯು ಮೂಲತಃ ಶೈವವೆಂದೂ, ಇಲ್ಲಿನ ಲಿಂಗವು ಸ್ವಯಂ ಉದ್ಭವವಾದುದೆಂದೂ, ಗೋರಖನು ತಂದ ವಿಗ್ರಹವು ಗುಡಿಯಲ್ಲಿ ಸ್ಥಾಪನೆಯಾಗಲಿಲ್ಲವೆಂದೂ ಸೂಕ್ಷ್ಮವಾಗಿ ಪ್ರತಿಪಾದಿಸುತ್ತಿದೆ. ಗುಡಿಗೆ ಸಂಬಂಧಿಸಿ ‘ಕದಲೀ ಮಂಜುನಾಥ ಮಾಹಾತ್ಮ್ಯೆ’ ಎಂಬ ಸಂಸ್ಕೃತ  ಗ್ರಂಥವಿದ್ದು, ಇದು ಸಹ ಮಂಜುನಾಥ ಗುಡಿಯನ್ನು ನಾಥರಿಂದ ವಶಪಡಿಸಿಕೊಂಡ ಬಳಿಕ ಪುರೋಹಿತರು ನಿರ್ಮಿಸಿದ ಪಠ್ಯ. ಇದರಲ್ಲಿ ದ್ವಿಜಶ್ರೇಷ್ಠತೆ, ವರ್ಣಪದ್ಧತಿ ಪಾಲನೆ, ಮುಂತಾದ ವಿಚಾರಗಳಿವೆ. ಇದರಲ್ಲಿ ಪರಶುರಾಮನು ಸಮುದ್ರವನ್ನು ಹಿಂತಳ್ಳಿ ಭೂಮಿ ಪಡೆದ ಹಾಗೂ ಮಂಗಳಾದೇವಿ ಬಂದು ನೆಲೆಸಿದ ಕತೆಗಳೂ, ಮೀನನಾಥ ಚೌರಂಗಿನಾಥ ಗೋರಖನಾಥ ಮಂಜುನಾಥರ ಕಥೆಗಳೂ ಇವೆ.

ಆದರೂ ಮಂಜುನಾಥ ಗುಡಿಯನ್ನು ನಾಥ ಪರಂಪರೆಯಿಂದ ಬೇರ್ಪಡಿಸಲು ಆಗಲಿಲ್ಲ. ಇದಕ್ಕೆ ಕಾರಣ, ಗುಡಿಯಲ್ಲಿರುವ ನಾಥ ಮೂರ್ತಿಗಳು. ಗರ್ಭಗೃಹದಲ್ಲಿ ಆಗಮೋಕ್ತ ಪೂಜೆ ಪಡೆವ ಶಿವಲಿಂಗ, ಗರ್ಭಗುಡಿಯ ಹೊರಗೆ ಅವಲೋಕಿತೇಶ್ವರ, ಬುದ್ಧ, ಮಂಜುಶ್ರೀ ಘೋಷರ ಮೂರ್ತಿಗಳು ಹಾಗೂ ಗುಡಿಯ ಮೂರು ದಿಕ್ಕುಗಳಲ್ಲಿರುವ ಗೋರಖ, ಮಚೇಂದ್ರ, ಚೌರಂಗಿನಾಥರ  ಮೂರ್ತಿಗಳು. ಹೀಗೆ ಗುಡಿಯು ಬೌದ್ಧ, ನಾಥ ಹಾಗೂ ಆಗಮಶೈವದ ಮೂರೂ ಕುರುಹುಗಳನ್ನು ಇರಿಸಿಕೊಂಡಿದೆ.  ಸೂಕ್ಷ್ಮವಾಗಿ ಪರಿಶೀಲಿಸಿದರೆ, ಮಚೇಂದ್ರ ಹಾಗೂ ಚೌರಂಗಿಯರು ತಮಗಾಗೇ ಮಾಡಲಾದ ಗೂಡುಗಳಲ್ಲಿ ಸ್ಥಾಪಿತರಾಗಿದ್ದಾರೆ. ಆದರೆ ಉತ್ತರ ದಿಕ್ಕಿನ ಗೂಡು ಖಾಲಿಯಿದ್ದು,  ಅಲ್ಲಿದ್ದ ಯಾವುದೊ ನಾಥವಿಗ್ರಹ ಸ್ಥಳಾಂತರವಾಗಿದೆ. ಅದರ ಮುಂದೆ,  ಆ ಗೂಡಿಗೆ ಸಂಬಂಧ ಇಲ್ಲದಂತೆ ನಿಂತಿರುವ ಗೋರಖ ಮೂರ್ತಿಯಿದೆ. ಬಹುಶಃ ಮೊದಲ ಹಂತದಲ್ಲಿ ವಿಹಾರದಲ್ಲಿದ್ದ ಬೌದ್ಧವಿಗ್ರಹಗಳು ಹೊರಬಂದು ನಾಥವಿಗ್ರಹಗಳು ಒಳಗೆ ಹೋಗಿರಬಹುದು. ಎರಡನೆಯ ಹಂತದಲ್ಲಿ ಶಿವಲಿಂಗದ ಸ್ಥಾಪನೆಯಾಗಿ ನಾಥವಿಗ್ರಹಗಳು ಸ್ಥಾನಾಂತರ ಹೊಂದಿರಬಹುದು. ಸ್ಥಳಪುರಾಣಗಳು ಕೂಡ ಶಿವಲಿಂಗದ ಸ್ಥಳಾಂತರದ ಸೂಚನೆಯನ್ನು ಒಳಗೊಂಡಿವೆ. ಈ ಬಗೆಯ ಮೂರ್ತಿ ಪಲ್ಲಟಗಳು ಯಾಕಾಗಿ ಹೇಗೆ ನಡೆದವು ಎಂಬ ಚರಿತ್ರೆಯು ಅಸ್ಪಷ್ಟವಾಗಿದೆ. ಸದ್ಯಕ್ಕೆ ಕದ್ರಿಯ ಮಂಜುನಾಥ ಗುಡಿ ನಾಥರ ವಶದಲ್ಲಿಲ್ಲ. ಮಂಜುನಾಥ ಲಿಂಗಕ್ಕೆ ಬ್ರಾಹ್ಮಣ ಅರ್ಚಕರಿಂದ ಆಗಮೋಕ್ತ ಪೂಜೆಯೂ ತಂತ್ರಿಗಳಿಂದ ತಾಂತ್ರಿಕ ಪೂಜೆಯೂ ನಡೆಯುತ್ತಿದೆ. ಜೋಗಿಮಠದ ನಾಥನನ್ನು ಜಾತ್ರೆಯಲ್ಲಿ ಆಹ್ವಾನಿಸಿ ತೀರ್ಥಪ್ರಸಾದ ಕೊಡುವ ಪದ್ಧತಿ ಉಳಿದಿದೆ.  ಆದರೆ ನಾಥರು ಗುಡಿಯ ಮೇಲಿನ ತಮ್ಮ  ಹಕ್ಕು ಸ್ಥಾಪನೆಗೆ ಮಾಡಿದ ಹೋರಾಟವು ಕುತೂಹಲಕರವಾಗಿದೆ. ಈ ಹೋರಾಟಕ್ಕೆ ಒಂದು ಶತಮಾನದ ಚರಿತ್ರೆಯಿದೆ.

ಕದ್ರಿ ಮಂಜುನಾಥ ದೇಗುಲವು ೧೯೨೭ರಲ್ಲಿ ಧಾರ್ಮಿಕದತ್ತಿ ಇಲಾಖೆಗೆ ಸೇರಿದಾಗ,  ಇತರ ಮೊಕ್ತೇಸರರ ಜತೆ ಜೋಗಿಮಠದ  ನಾಥನೇ ದೇಗುಲದ ವಾರಸುದಾರ ಆಗಿದ್ದನು.   ೧೯೩೨ರಲ್ಲಿ ಜೋಗಿಮಠದ ಅಧಿಪತಿಯಾಗಿದ್ದ ಟೆಹಲನಾಥರು ಕಾವಿಧಾರಿಯಲ್ಲ ಎಂಬ ಕಾರಣಕ್ಕೆ ಗುಡಿ ಪ್ರವೇಶಕ್ಕೆ ಅರ್ಚಕರು ತಡೆಮಾಡಿದರು. ಜೋಗಿಮಠವು ಪ್ರಕರಣವನ್ನು ಕೋರ್ಟಿಗೆ ಒಯ್ದಿತು. ವ್ಯಾಜ್ಯ  ಪರಿಶೀಲಿಸಿದ ಸಿವಿಲ್ ಜಡ್ಜ್ ಮುಂಡಪ್ಪ ಬಂಗೇರ ಎನ್ನುವ ವರು,  ಖುದ್ದಾಗಿ ಕಂಡು ತೀರ್ಪು ನೀಡುವುದಾಗಿ ಹೇಳಿ, ಗುಡಿಗೆ ಬಂದರು; ಗುಡಿಯ ಮೂರೂ ಕಡೆಯಿದ್ದ ನಾಥರ ಮೂರ್ತಿಗಳನ್ನು ನೋಡಿ, ಮಂಜುನಾಥ ದೇವರ ಪೂಜಿಸಲು ನಾಥಸಾಧುಗಳಿಗೆ ಹಕ್ಕಿದೆಯೆಂದು ತೀರ್ಪಿತ್ತರು. ಆದರೂ ಟೆಹಲನಾಥರಿಗೆ  ಗುಡಿಯೊಳಗೆ ಪ್ರವೇಶ ಸಿಗಲಿಲ್ಲ. ಬದಲಿಗೆ, ಬಂಗೇರರು ಪ್ರವೇಶಿಸಿದ ಕಾರಣಕ್ಕಾಗಿ ಗುಡಿಯನ್ನು ಶುದ್ದೀಕರಿಸಿ ಬ್ರಹ್ಮಕಲಶೋತ್ಸವ ಮಾಡಲಾಯಿತು; ೧೯೪೫ರಲ್ಲಿ ಚಮೇಲಿನಾಥರು ಗುಡಿಗೆ   ಜೋಗಿಮಠದ ಅರಸನೇ ನಿಜವಾದ ಆಡಳಿತಗಾರನೆಂದೂ ಇತರ ಮೊಕ್ತೇಸರರ ಅಗತ್ಯವಿಲ್ಲ ವೆಂದೂ ದಾವೆ ಹೂಡಿದರು. ಆಗ ದತ್ತಿ ಇಲಾಖೆಯು ಅರಸನನ್ನು ಆನುವಂಶಿಕ ಮೊಕ್ತೇಸರನನ್ನಾಗಿಯೂ  ಇತರರನ್ನು ಆನುವಂಶಿಕರಲ್ಲದ ಮೊಕ್ತೇಸರರನ್ನಾಗಿಯೂ ನೇಮಿಸಿ ಆದೇಶ ಮಾಡಿತು. ಗುಡಿಯನ್ನು ಜೋಗಿಮಠದ ವಶಕ್ಕೆ ಪಡೆಯಲು ಚಮೇಲಿನಾಥರು ಮಾಡಿದ ಹೋರಾಟಗಳು, ೧೯೫೭ರಲ್ಲಿ ಬಂದ ಶಾಂತಿನಾಥರ ಕಾಲದಲ್ಲಿ ನಿಂತುಹೋದವು. ೧೯೫೮ರಲ್ಲಿ ನ್ಯಾಯಾಲಯವು ಮಠದ ಅರ್ಜಿಯನ್ನು ತಳ್ಳಿಹಾಕಿ, ಗುಡಿಯನ್ನು ಧಾರ್ಮಿಕ ದತ್ತಿ ಇಲಾಖೆಯ ವಶಕ್ಕೆ ಕೊಟ್ಟಿತು; ದೇವಸ್ಥಾನದ ಆಡಳಿತಕ್ಕೆ ಧರ್ಮದರ್ಶಿಯನ್ನು ಬಂಟರ ಸಮಾಜದಿಂದಲೂ ಇತರೆ ಮೊಕ್ತೇಸರರನ್ನು ಜೋಗಿಗಳೂ ಸೇರಿದಂತೆ ವಿವಿಧ ಜಾತಿಯ ವರಿಂದಲೂ ಆರಿಸಿ ರಚಿಸಿದ ಕಮಿಟಿ ನೋಡಿಕೊಳ್ಳುವಂತೆ ಕಾನೂನು ಮಾಡಿತು. ಈಗಲೂ ಈ ಕಮಿಟಿ ಗುಡಿಯ ಉಸ್ತುವಾರಿ ಮಾಡುತ್ತಿದೆ. ಈ ವ್ಯವಸ್ಥೆಗೆ ಜೋಗಿಮಠ ಒಪ್ಪಿಗೆ ಕೊಟ್ಟಿದೆ.

ಜೋಗಿ ಸಮಾಜದ ಮುಖಂಡರಾದ ಜೋಗಿ ಆನಂದನಾಥರ ಪ್ರಕಾರ, ಎರಡು ಸಂದರ್ಭಗಳಲ್ಲಿ ಗುಡಿಯ ಜತೆ ಮಠದ ಸಂಬಂಧ ದುರ್ಬಲವಾಯಿತು. ೧. ಜೋಗಿಮಠದ ನಾಥರೇ  ಮಂಜುನಾಥನ ಪೂಜೆ ಮಾಡುವ ಪದ್ಧತಿಯಿದ್ದು, ಮುಂದೆ ಬಂದ ಯಾರೋ ಯೋಗಿಯು, ಪೂಜೆಗೆ ಸ್ಥಳೀಕ ಬ್ರಾಹ್ಮಣರನ್ನು ನೇಮಿಸಿಕೊಂಡಿದ್ದು. ೨. ದೇವರ ಆಭರಣವಿರುವ ತಿಜೋರಿ ಕೀಲಿಕೈ ಜೋಗಿಮಠದ ಅರಸರಲ್ಲಿ ಇಡುವ ಪದ್ಧತಿಯಿದ್ದು, ಸೋಮನಾಥರ (೧೯೬೯-೧೯೮೧) ಕಾಲದಲ್ಲಿ  ಮೊಕ್ತೇಸರರಾಗಿದ್ದ  ವಾಸುದೇವ ಭಟ್ಟ ಎಂಬುವರು  ಕೀಲಿಕೈ ಪಡೆದು ಮರಳಿಸದೇ ಇದ್ದುದು. ಈಗಲೂ ಗುಡಿಯನ್ನು ಕಳೆದುಕೊಂಡ ಕೊರಗು ಜೋಗಿ ಸಮುದಾಯದಲ್ಲೂ ನಾಥರಲ್ಲೂ ಉಳಿದಿದೆ.

ಗುಡಿಯನ್ನು ಪಡೆಯಲು ಸಾಧ್ಯವಾಗದಿದ್ದರೂ ಅದರ ಜತೆಗಿನ ಸಂಬಂಧ ನಾಥರಿಗೆ ಕಡಿದುಹೋಗಲಿಲ್ಲ. ಗುಡಿಯ ಉತ್ಸವಗಳಿಗೆ ಸಾರ್ವಜನಿಕ ಕರೆಯೋಲೆ ನಾಥನ ಹೆಸರಲ್ಲೆ ಹೊರಡುತ್ತದೆ. ಕರೆಯೋಲೆಯ ತಲೆಯ ಮೇಲೆ ‘ಗೋರಕ್ಷನಾಥಾಯ ನಮಃ’ ಎಂದಿರುತ್ತದೆ. ಗುಡಿಯಲ್ಲಿ ಕಾಲಕಾಲಕ್ಕೆ ನಡೆವ ಉತ್ಸವಗಳಲ್ಲಿ ಜೋಗಿಮಠದ ಅರಸನು ಪಾಲುಗೊಳ್ಳುತ್ತಾನೆ. ಮುಖ್ಯವಾಗಿ ಮಕರ ಸಂಕ್ರಮಣದಲ್ಲಿ ನಡೆಯುವ ಮಂಜುನಾಥ ಜಾತ್ರೆಯಲ್ಲಿ, ಯಾವ ದಿನ ಯಾವ ಹೊತ್ತಿನಲ್ಲಿ ಜೋಗಿಮಠದ ಅರಸನು ತೀರ್ಥಸ್ನಾನ ಮಾಡಬೇಕು, ದೀಪದ ಬಲಿಗೂ ಕೊಡಿಬಲಿಗೂ ಬರಬೇಕು, ರಥ ಎಳೆಯಬೇಕು, ಕುದುರೆಯಲ್ಲಿ ಕೂತು ಸುತ್ತು ಬರಬೇಕು ಎಂಬೆಲ್ಲ ವಿವರಗಳನ್ನು ಗುಡಿಯ ದಾಖಲೆಗಳಲ್ಲಿ ಸ್ಪಷ್ಟವಾಗಿ ಬರೆದಿಡಲಾಗಿದೆ. ತೇರು ಎಳೆಯುವ ಮುನ್ನ ಜೋಗಿ ಅರಸನು ರಥಕ್ಕೆ ಒಂದು ಸುತ್ತುಹಾಕಿ, ಕಾಯಿ ಒಡೆದು, ಕುದುರೆ ಏರಿದ ನಂತರ ರಥ ಎಳೆಯಲಾಗುತ್ತದೆ.[3]  ಕದ್ರಿ ದೇವಸ್ಥಾನ ನಡೆಸುವ ಕಂಬಳದಲ್ಲಿಯೂ ಜೋಗಿ ಅರಸನು ಧುನಿಯ ಭಸ್ಮವನ್ನು ಗದ್ದೆಗೆ ಹಾಕಿ ಕಂಬಳಕ್ಕೆ ಅಪ್ಪಣೆ ಕೊಡುತ್ತಾನೆ.

ಆದರೂ ನಾಥರನ್ನು ಗರ್ಭಗುಡಿ ಪ್ರವೇಶಿಸದಂತೆ ಅನೇಕ ಉಪಾಯಗಳಿಂದ ನಿಯಂತ್ರಿಸ ಲಾಗಿದೆ. ಇದಕ್ಕೆ ಜಾತ್ರೆ ಮತ್ತು ಉತ್ಸವಗಳಲ್ಲಿ ನಾಥಯೋಗಿಯ ಪಾತ್ರವನ್ನು ವಿವರಿಸುವ ಒಂದು ದಾಖಲೆಯಲ್ಲಿ ಹೀಗಿದೆ: ‘‘೯ನೇ ದಿವಸ ಬೆಳಗ್ಯೆ ಅರಸನು ಬಂದ ನಂತರ ವಾದ್ಯಘೋಷದಿಂದ ತಂತ್ರಿಗಳು ದೇವರ ಬಾಗಿಲು ತೆಗೆದು ಅಭಿಷೇಕವಾಗಿ ಪೂಜೆ ಆದ ನಂತರ ಮಾಮೂಲು ಪ್ರಕಾರ ಪ್ರಸಾದ ಕೊಡಬೇಕು. ಈ ದಿನ ಅರಸನು ಕಲ್ಲುಚಪ್ಪರದವರೆಗೆ ಹೋಗಬಹುದು’’; ಗುಡಿ ಪ್ರವೇಶವಿಲ್ಲದ ಕಾರಣಕ್ಕಾಗಿ ಪರ್ಯಾಯ ದೇವಸ್ಥಾನ ಕಟ್ಟುವ ಚಳುವಳಿ ಆರಂಭಿಸಿದ ಗೋಪಾಲ ಗುರುವಿಗೆ ದೀಕ್ಷೆ ಕೊಟ್ಟ ಜೋಗಿಮಠದ ನಾಥರು, ತಮ್ಮ ಪಂಥಕ್ಕೆ ಸೇರಿದ್ದ ಗುಡಿಯ ಪ್ರವೇಶಕ್ಕಾಗಿ ಹೋರಾಟ ಮಾಡಿದ್ದು ಒಂದು ಚಾರಿತ್ರಿಕ ವ್ಯಂಗ್ಯ. ಆದರೆ ಜೋಗಿಗಳು ಕೂಡ ಗುಡಿಯ ಸಂಬಂಧ ಕಡಿದುಹೋಗದಂತೆ ಎಚ್ಚರ ವಹಿಸಿದ್ದಾರೆ. ಮಂಜುನಾಥ  ಗುಡಿಯಲ್ಲಿ ವಿವಿಧ ನಾಥಯೋಗಿಗಳ ದೊಡ್ಡದೊಡ್ಡ ಚಿತ್ರಪಟಗಳನ್ನು ಬರೆಯಿಸಿ ತೂಗುಹಾಕಿರುವುದು ಒಂದು ಸಾಕ್ಷಿ. ಒಮ್ಮೆಯಂತೂ ಜೋಗಿ ಮಠದ ನಾಥರಾಗಿದ್ದ ಸೋಮನಾಥರಿಗೆ (೧೯೬೯-೧೯೮೧)  ಆನಾರೋಗ್ಯ  ಇದ್ದಾಗಲೂ, ಪರಂಪರೆ ಮುರಿಯಬಾರದು ಎಂದು ಅವರನ್ನು ಎತ್ತಿಕೊಂಡು ಬಂದು ಕುದುರೆಯ ಮೇಲೆ ಕೂರಿಸಿ ರಥ ಎಳೆಯುವ ಆಚರಣೆ ಮುಗಿಸಲಾಗಿತ್ತು.

. ವಿಟ್ಲದ ಜೋಗಿಮಠ

ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳ ತಾಲೂಕಿನ ವಿಟ್ಲದಲ್ಲಿ ಯೋಗೇಶ್ವರ ಮಠವಿದೆ. ಜನರ ಬಾಯಲ್ಲಿ ಇದು ಜೋಗಿಮಠ. ವಿಟ್ಲಸೀಮೆಯನ್ನು ಆಳಿದ ಡೊಂಬ ಅರಸರು ಜೋಗಿಮಠಕ್ಕೆ ನೂರು ಎಕರೆ ಭೂಮಿಯನ್ನು ಉಂಬಳಿಯಾಗಿ ಬಿಟ್ಟರು. ಮಠದ ಅಧಿಪತಿಯನ್ನು ರಾಜಗುರುವಾಗಿ ಸ್ವೀಕರಿಸಿದರು. ಇದರಿಂದ ವಿಟ್ಲಮಠದ ನಾಥನಿಗೆ ರಾಜಗುರು ಬಿರುದಿದೆ. ಜೋಗಿಮಠವು ವಿಟ್ಲದ ಸುತ್ತಲಿನ ೧೬ ಗ್ರಾಮಗಳ ಜೋಗಿಸಮುದಾಯಕ್ಕೆ ಗುರುಪೀಠ. ಮೂಲತಃ ಯೋಗಿ ಮೆಹರನಾಥನು ಈ ಮಠವನ್ನು ಸ್ಥಾಪಿಸಿದನು. ಮೆಹರನಾಥನ ನಂತರ ೬ ನಾಥರು ಬಂದರು. ೧೭೦೦ರಲ್ಲಿ ಹರದ್ವಾರನಾಥನು ಪೀಠಕ್ಕೆ ಬಂದನು. ಈ ಆಧಾರದಲ್ಲಿ ೧೬ನೇ ಶತಮಾನದಿಂದಲೇ ಈ ಮಠವಿತ್ತೆಂದು ತಿಳಿಯುತ್ತದೆ. ನಂತರ ಹೀರಾನಾಥ, ಲಕ್ಷ್ಮೀನಾಥ, ಚಂದ್ರನಾಥ, ಈಶ್ವರನಾಥ, ಲಾಲಾನಾಥ ಅವರು ಅಧಿಪತಿಗಳಾಗಿ ಬಂದರು. ವಿಟ್ಲಮಠಕ್ಕೆ ಬಾರಾಪಂಥಿಗಳಲ್ಲಿ ಸತ್ಯನಾಥಿಗಳೇ ನೇಮಕವಾಗಬೇಕು.  ಬಾರಾಪಂಥದಿಂದ ಆಯ್ಕೆಯಾದ ಮೊದಲ ಅಧಿಪತಿ ಚಂದ್ರನಾಥ. ಕದ್ರಿಮಠದ ಅರಸನಿಗೆ ಪಟ್ಟ ಕಟ್ಟುವಾಗಲೇ, ವಿಟ್ಲಮಠದ ಅಧಿಪತಿಗೂ ಪಟ್ಟಕಟ್ಟಲಾಗುತ್ತದೆ.

ವಿಟ್ಲಮಠಕ್ಕೆ ಮುಖ್ಯಸ್ಥರಾಗಿದ್ದವರಲ್ಲಿ  ಇಬ್ಬರು ಕರ್ನಾಟಕದವರು. ಒಬ್ಬರು  ಲಕ್ಷ್ಮೀನಾಥ ಅರಸು. ಇನ್ನೊಬ್ಬರು ಈಶ್ವರನಾಥರು. ಲಕ್ಷ್ಮೀನಾಥರು  ವಿಟ್ಲ ತಾಲೂಕಿನ ಕೇಪು ಗ್ರಾಮ ದವರು. ಅವರು ದೀರ್ಘಕಾಲದವರೆಗೆ ಮಠಾಧಿಪತಿ ಆಗಿದ್ದರು. ಸ್ಥಳೀಯರೂ ಸಿರಿವಂತ ಕುಟುಂಬದಿಂದ ಬಂದವರೂ ಆಗಿದ್ದ ಅವರ ಕೀರ್ತಿ ಈಗಲೂ ವಿಟ್ಲ ಸೀಮೆಯಲ್ಲಿದೆ. ಮಠದಲ್ಲಿ ತೂಗು ಹಾಕಿರುವ  ಫೋಟೊ ಕೂಡ ಅವರ ವಿಶಿಷ್ಟ ವ್ಯಕ್ತಿತ್ವವನ್ನು ಹೇಳುತ್ತಿದೆ. ಜೇಬಿನಿಂದ ಚಿನ್ನದ ಸರಪಳಿ ಹೋಗಿರುವ ಕ್ಲೋಜ್ ಕಾಲರಿನ ಕೋಟನ್ನೂ ಮೈಸೂರು ರೇಷ್ಮೆಪೇಟವನ್ನೂ ಧರಿಸಿಕೊಂಡು ತೆಗೆಸಿರುವ ಈ ಫೋಟೊ, ರಾಜ ದರ್ಬಾರಿನ ಅಧಿಕಾರಿಯದಂತೆ ಕಾಣುತ್ತದೆ. ಕಿವಿಯ ಕುಂಡಲಗಳಿಂದಷ್ಟೆ ನಾಥಯೋಗಿ ಎಂದು ಹೇಳ ಬೇಕು. ಲಕ್ಷ್ಮೀನಾಥರು ಆಧುನಿಕ ಶಿಕ್ಷಣವನ್ನು ಮಕ್ಕಳಿಗೆ ಕೊಡಬೇಕೆಂದು ಶಾಲೆಗಳನ್ನು ಸ್ಥಾಪಿಸಿದವರು. ಇದಕ್ಕಾಗಿ ಬ್ರಿಟಿಶರಿಂದ ರಾವಸಾಹೇಬ್ ಬಿರುದನ್ನೂ ಪಡೆದವರು. ಚುಂಚನಗಿರಿ ಮಠವು ನಾಥರಿಂದ ಕೈಬಿಟ್ಟು ಹೋದಾಗ, ಕೋರ್ಟು ಹಾಗೂ ಸರಕಾರದ ಮಟ್ಟದಲ್ಲಿ ದೊಡ್ಡ ಹೋರಾಟ ಕೊಟ್ಟವರು.

೧೯೭೬ರ ಝುಂಡಿಯಿಂದ ನೇಮಕವಾದ ಈಶ್ವರನಾಥರು ಧಾರವಾಡದ ಲಿಂಗಾಯತ ಸಮುದಾಯದಿಂದ ಬಂದವರು. ಅವರು ಪಟ್ಟವೇರಿದಾಗ, ಪತ್ರಿಕೆಗಳು ‘‘ಕನ್ನಡಿಗರಾದ ಧಾರವಾಡದ ಈಶ್ವರನಾಥಜಿ ಅವರು ಪಟ್ಟಾಭಿಷೇಕ ಹೊಂದಿ ಅಧಿಕಾರ ಸ್ವೀಕರಿಸಿದರು’’ ಎಂದು ವರದಿ ಮಾಡಿದ್ದವು.  ಈಶ್ವರನಾಥರು ಚೆನ್ನಾಗಿ ಓದಿಕೊಂಡಿದ್ದವರು ಹಾಗೂ ಒಳ್ಳೆಯ ವಾಗ್ಮಿಯಾಗಿದ್ದವರು ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಆದರೆ ಅವರು ಬೇಗನೆ ಕುಡಿತ ಹಾಗೂ ಸ್ತ್ರೀಸಹವಾಸಕ್ಕೆ ಸಿಲುಕಿಕೊಂಡರು.  ಇದರ ವಿರುದ್ಧ ಸ್ಥಳೀಯರು  ಹರಿದ್ವಾರದಲ್ಲಿರುವ ಬಾರಾಪಂಥದ ಕಛೇರಿಗೆ ದೂರು ಕೊಟ್ಟರು. ಅವರು ಬಂದು ವಿಚಾರಣೆ ಮಾಡಿ ಪೀಠದಿಂದ ತೆಗೆದುಹಾಕಿದರು. ಅಜ್ಞಾತರಾಗಿ ವಾಸಿಸಿದ ಈಶ್ವರನಾಥರು, ಇದಾದ ಕೆಲವು ವರ್ಷಗಳಲ್ಲಿ ಎಲ್ಲೊ ತೀರಿಕೊಂಡರು. ಅವರ ಜಾಗಕ್ಕೆ ಚಂದ್ರಗುತ್ತಿ  ಮಠದಲ್ಲಿದ್ದ ಲಾಲಾನಾಥರನ್ನು ತಾತ್ಕಾಲಿಕವಾಗಿ ನೇಮಕ ಮಾಡಲಾಯಿತು. ೧೯೯೨ ಹಾಗೂ ೨೦೦೪ರ ಝುಂಡಿಯಲ್ಲಿ ಲಾಲಾನಾಥರು ಬಾರಾಪಂಥದಿಂದ ವಿಟ್ಲಮಠಕ್ಕೆ ಮರು ನೇಮಕ ಪಡೆದರು (ಈಚೆಗೆ ಲಾಲಾನಾಥರು ತೀರಿಕೊಂಡರು).

ಅಡಕೆ ತೆಂಗು ತೋಟದ ನಡುವೆ ಇರುವ ವಿಟ್ಲದ ಜೋಗಿಮಠವು ಜಮೀನುದಾರರ ಮನೆಯಂತೆ ತೋರುತ್ತದೆ. ಒಂದು ಕಾಲಕ್ಕೆ ನೂರಾರು ಎಕರೆ ತೋಟವಿದ್ದು, ಗೇಣಿ ಕಾಯಿದೆಯಲ್ಲಿ ಕೈಬಿಟ್ಟು ಹೋಗಿ, ಸದ್ಯಕ್ಕೆ ೧೨ ಎಕರೆ ಉಳಿದಿದೆ. ಲಾಲಾನಾಥರು ಈಶ್ವರನಾಥರ ಕಾಲದಲ್ಲಿ  ಅರಾಜಕವಾಗಿದ್ದ  ಮಠದ ಆಸ್ತಿಯನ್ನು ಚೆನ್ನಾಗಿ ರೂಢಿಸಿದ್ದರು; ಮಹಾರಾಷ್ಟ್ರ ಮೂಲದ ೭೫ ವರ್ಷದ ಲಾಲಾನಾಥರು ಕನ್ನಡ ತುಳು ಕಲಿತು ಸ್ಥಳೀಯ ಜನರ ಜತೆಗೆ ಸಂಬಂಧ ಸ್ಥಾಪಿಸಿಕೊಂಡಿದ್ದರು; ಮಠದ ಆವರಣದಲ್ಲಿ  ಮಂಜುನಾಥ ಹಾಗೂ ಕಾಶಿ ಕಾಲಭೈರವರ ಗುಡಿಗಳಿವೆ. ಸ್ಥಳೀಯ ದೈವಗಳಾದ ವ್ಯಾಘ್ರ ಚಾಮುಂಡಿ, ಕಲ್ಕುಡ ಕಲ್ಲುರ್ಟಿಗಳಿವೆ. ಇವು ಮಠವು ಸ್ಥಳೀಕರಣಗೊಂಡ ಕುರುಹುಗಳಂತಿವೆ.

. ಹಲವರಿ ಕೋಡಶಾಹಿ ಮಠ

ಹಲವರಿ ಮಠವು ಕುಂದಾಪುರ ತಾಲೂಕಿನಲ್ಲಿ ಕಮಲಶಿಲೆಯಲ್ಲಿದೆ. ಇದಕ್ಕೆ ಕೋಡಶಾಹಿ ಎಂಬ ಹೆಸರು ಯಾಕೆ ಬಂತೆಂದು ಇನ್ನೂ ತಿಳಿಯಬೇಕಿದೆ. ಗ್ವಾಲಿಯರ್ ಮೂಲದ ಪೀರ್ ಸೋಮನಾಥರು ಇದರ ಅಧಿಪತಿ. ಕಮಲಶಿಲೆಗೆ ಸ್ಥಳೀಯರು ಕಮ್ಮಾರಸಾಲೆ ಎನ್ನುವುದನ್ನು ನೋಡಿದರೆ, ಇದು ಕಮ್ಮಾರಿಕೆಯ ಜಾಗವೂ ಆಗಿರಬಹುದು. ಜತೆಗೆ ಇದು ಭಾಷೆಯ ಶಬ್ದಾರ್ಥಗಳ ಮೇಲೆ ಚಿಂತನೆ ಮಾಡಿರುವ ಪ್ರಾಚೀನ ಬೌದ್ಧ ಮೀಮಾಂಸಕನ ಹೆಸರೂ ಆಗಿದೆ. ಇದು ನಿಜವಿದ್ದರೆ, ಕರಾವಳಿಯಲ್ಲಿ ಬೌದ್ಧಧರ್ಮವು ವ್ಯಾಪಕವಾಗಿ ನೆಲೆಸಿದ್ದ ಕಾಲದಲ್ಲಿ ಈ ಹೆಸರು ಬಂದಂತಿದೆ. ಕದ್ರಿಯ ಬೌದ್ಧವಿಹಾರವು ನಾಥಕೇಂದ್ರವಾದಂತೆ ಕಮಲಶಿಲೆ ಕೂಡ ಬದಲಾಗಿರಬಹುದು. ಕಮಲಶಿಲೆಯು ತ್ರ್ಯಂಬಕೇಶ್ವರ-ಕದ್ರಿ ರೂಟಿನಲ್ಲಿ ಬರುತ್ತದೆ. ಇದು ಘಟ್ಟಪ್ರದೇಶದಿಂದ ಕರಾವಳಿಗೆ ಇಳಿಯುವ, ಅದರಲ್ಲೂ ಪ್ರಾಚೀನ ರೇವು ಪಟ್ಟಣವಾಗಿದ್ದ ಬಸರೂರಿಗೆ ಹೋಗುವ ದಾರಿಯಲ್ಲಿದೆ.  ಇದಕ್ಕೆ ಸೂಡಾದಲ್ಲಿ (ಕಾರ್ಕಳ) ಶಾಖಾಮಠವಿತ್ತು. ಬಸರೂರಿನ ಗುಪ್ಪೆಹಾಡಿಯಲ್ಲಿದ್ದ ಸದಾನಂದಮಠವು ಪ್ರಾಚೀನವಾದುದು. ಬಸರೂರು, ಬಾರಕೂರು, ಕೋಟ, ಕೋಟೇಶ್ವರ, ಉದ್ಯಾವರ, ಇವೆಲ್ಲವೂ ಹಲವರಿ ಮಠಕ್ಕೆ ಸಂಬಂಧ ಪಟ್ಟವು.

ಒಂದು ಕಾಲಕ್ಕೆ ಚೆನ್ನಾಗಿ ಬಾಳಿರುವ ಕುರುಹುಗಳಿರುವ ನಾಥಮಠವು, ನಾನು ಹೋದಾಗ (೨೦೦೨) ಪಾಳುಬಿದ್ದಿತ್ತು. ಮಠವು ಜನಸಂಪರ್ಕವಿಲ್ಲದ ದುರ್ಗಮ ಕಾಡಿನಲ್ಲಿದೆ. ಈಗಲೂ ಅಲ್ಲಿಗೆ ನಡೆದುಕೊಂಡೇ ಹೋಗಬೇಕು. ಇಂತಹವೇ ನಾನಾ ಕಾರಣಗಳಿಂದ ಮಠ ಬಡಕಲಾಗಿದೆ. ಮಠದ ಸುತ್ತಲೂ ನಾಥರ ಸಮಾಧಿಗಳಿವೆ. ಆಸುಪಾಸಿನಲ್ಲಿ ದೂರದೂರಕ್ಕೆ ಜೋಗಿಗಳ ಮನೆಗಳಿವೆ. ಗೇಣಿಕಾಯ್ದೆ ಬಂದು ಮಠದ ಜಮೀನು ಉಳುವವರಿಗೆ ದಕ್ಕಿದೆ. ಈ ಮಠಕ್ಕೆ ನಡೆದುಕೊಳ್ಳುವವರು ಬಾರಕೂರು ಬಸರೂರು ಕುಂದಾಪುರ ಭಾಗದ ಕನ್ನಡ ಮನೆಮಾತಿನ ಬಳೆಗಾರ ಜೋಗಿಗಳು. ಇವರು ಆರ್ಥಿಕವಾಗಿ ಮಂಗಳೂರು ಭಾಗದ ತುಳುವ ಜೋಗಿಗಳಷ್ಟು ಸ್ಥಿತಿವಂತರಲ್ಲ. ಆದರೆ ಈಗ ಸಂಘಟನೆಗೊಂಡು, ಹಲವರಿ ಮಠವನ್ನು ಮತ್ತೆ ಕಟ್ಟಿಸುತ್ತಿದ್ದಾರೆ.  ಮಠದ ಬಡತನ ಅಥವಾ ಸಿರಿತನಕ್ಕೂ ಅದಕ್ಕೆ ನಡೆದುಕೊಳ್ಳುವ ಭಕ್ತರ ಅರ್ಥಿಕ ರಾಜಕೀಯ ಮುನ್ನಡೆಗಳಿಗೂ ನೇರ ಸಂಬಂಧವಿದೆ. ಸೋಮನಾಥರನ್ನು ಝುಂಡಿಯು ಇನ್ನೊಂದು ಅವಧಿಗೆ ಮುಂದುವರೆಸಿದೆ.

೪. ಚಂದ್ರಮುಖಿ ಯೋಗಿಮಠ

ಶಿವಮೊಗ್ಗ ಜಿಲ್ಲೆಯ ಚಂದ್ರಗುತ್ತಿಯು ಪಲ್ಲವರ ಕಾಲದಿಂದಲೂ ರಾಜಕೀಯ ಆಳ್ವಿಕೆಯ ಆಡಳಿತ ಕೇಂದ್ರವಾಗಿತ್ತು. ಅದು ನಂತರ ಬೇರೆಬೇರೆ ರಾಜರ ಆಳ್ವಿಕೆಗೆ ಒಳಪಟ್ಟಿತು. ಇಲ್ಲಿ ಹಿಂದಿನಿಂದ ಕಟ್ಟಲಾದ ಕೋಟೆಕೊತ್ತಲಗಳು ಇವೆ. ಚಂದ್ರಗುತ್ತಿಯು  ಕಲ್ಲಿನ ಗುಡ್ಡದಲ್ಲಿರುವ ಒಂದು ದೊಡ್ಡ ನೈಸರ್ಗಿಕ ಗುಹೆ. ಹಿಂದೆ ಯೋಗಿಗಳು ಸಾಧಕರು ಇದನ್ನು ತಮ್ಮ ಸಾಧನೆಗೆ ಬಳಸುತ್ತಿದ್ದರು ಎಂದು ಊಹಿಸಬಹುದು. ನಂತರ ಗುಹೆಗೆ ವಿಸ್ತರಣೆಯಾಗಿ ಗುಡಿ ಕಟ್ಟಲಾಗಿದೆ. ಗುಹೆಯಲ್ಲಿ ಬೆತ್ತಲೆ ಸೇವೆ.ಯ ಆಚರಣೆಗಾಗಿ  ಖ್ಯಾತವಾಗಿರುವ  ಗುತ್ಯಮ್ಮದೇವಿ ಇದ್ದಾಳೆ. ಗುತ್ಯಮ್ಮನದು ಮೂರ್ತಿಯಲ್ಲ. ಹುಟ್ಟು ಬಂಡೆ. ಪರಶುರಾಮ ಕಡಿಯಲು ಓಡಿಸಿಕೊಂಡು ಬಂದಾಗ ನೆಲಕ್ಕೆ ಮುಖಕೆಳಗಾಗಿ ಬಿದ್ದಳೆಂದೂ, ಅವಳ ಹಿಂಭಾಗವೇ ಈ ಬಂಡೆಯೆಂದೂ ಹೇಳುತ್ತಾರೆ; ಗುತ್ಯವ್ವನ ಪಕ್ಕದಲ್ಲಿ ಮಾತಂಗಿಯಿದ್ದಾಳೆ. ಅವಳ ಪಕ್ಕದಲ್ಲಿ ರುಂಡಶಿಲ್ಪಗಳಿವೆ. ಎದುರುಗಡೆ ಬಲಿಫಲಕವಿದೆ. ಕೆಳಗೆ ಕಾಲಭೈರವನ ಗುಡಿ, ಇನ್ನೂ ಕೆಳಗೆ ನಾಥಪಂಥದ ಜೋಗಿಮಠ ಇವೆ. ಎದುರುಗಡೆ ಪರಶುರಾಮನ ವಿಗ್ರಹವಿದೆ. ಎಡಗಡೆ ಇಳಿಜಾರಿನಲ್ಲಿ ಶೂಲದ ಬೀರಪ್ಪನ ಗುಡಿಯಿದೆ. ಅದರ ತುಂಬ ತ್ರಿಶೂಲಗಳು.

ಇದನ್ನೆಲ್ಲ ಕಂಡರೆ ಇದೊಂದು ಶಾಕ್ತ ಅಥವಾ ಕಾಪಾಲಿಕರ ತಾಂತ್ರಿಕ ಆಚರಣೆಯ ಸ್ಥಾನವಾಗಿತ್ತು ಎಂದು ಅನಿಸುತ್ತದೆ. ಇಲ್ಲಿರುವ ಮಾತಂಗಿಯ ಪೂಜೆಯನ್ನು ಈಗಲೂ ಮಹಿಳೆಯರೇ ಮಾಡುವುದು ಗಮನಾರ್ಹ. ಹಿಂದೆ ಬನವಾಸಿಯ ಈ ಭಾಗದಲ್ಲಿ ವಜ್ರಯಾನ ಪಂಥವು ಇದ್ದರಿಂದ ಇದು ತಾರಾಭಗವತಿಯ ತಾಣವೂ ಆಗಿದ್ದಿರಬಹುದು. ಗುಡಿಯ ದಾರಂದದಲ್ಲಿ ಇದ್ದ ಯಾವುದೋ ಮೂರ್ತಿಯನ್ನು ಅಳಿಸಲಾಗಿದೆ. ಅದು ಭೈರವನದೊ ಧ್ಯಾನಿಬುದ್ಧನದೊ ತಿಳಿಯದು. ವಿಶೇಷವೆಂದರೆ, ಇಲ್ಲಿ ಬೇರೆಬೇರೆ ದೈವಗಳನ್ನು ಬೇರೆಬೇರೆ ಸಮುದಾಯಗಳು ಪೂಜಿಸುವ ವ್ಯವಸ್ಥೆಯಿರುವುದು. ಗುತ್ಯಮ್ಮನ ಪೂಜೆ ಬ್ರಾಹ್ಮಣರದು; ಮಾತಂಗಿಯ ಪೂಜೆ ದೇವಾಂಗದವರದು; ಪರಶುರಾಮನ ಪೂಜೆ ಅಗಸರದು; ಶೂಲದ ಬೀರಪ್ಪನ ಪೂಜೆ ಕುರುಬರದು; ಕಾಲಭೈರವನ ಪೂಜೆ ನಾಥರದು. ದೈವಗಳ ಈ  ಹಂಚಿಕೆ ಏನನ್ನು ಸೂಚಿಸುತ್ತಿದೆಯೋ ತಿಳಿಯದು.  ಗುತ್ಯವ್ವನ ಪೂಜೆಯನ್ನು ಮೊದಲು ನಾಥರದಾಗಿತ್ತು ಎಂದು ಅಲ್ಲಿದ್ದ ನಾಥ ಹೇಳಿದರು.

ಚಂದ್ರಗುತ್ತಿಯ ಜೋಗಿಮಠವನ್ನು ನಾಥಪಂಥದ ಪುಸ್ತಕಗಳಲ್ಲಿ ಚಂದ್ರಮುಖಿ ಯೋಗಿಮಠ ಎನ್ನಲಾಗಿದೆ. ಸದ್ಯದ ಮಠದ ಅಧಿಪತಿ ಅನೇಕನಾಥಜಿ. ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ ಬಾಮಖೇಡದವರಾದ ಅನೇಕನಾಥರ  ಹಿನ್ನೆಲೆ ವಿಶಿಷ್ಟವಾಗಿದೆ. ಒಮ್ಮೆ ಪಂಡರಾಪುರಕ್ಕೆ ಹೋಗಿಬರುವಾಗ ಆತ ಬತ್ತೀಸ್‌ಶಿರಾಳದ ಜೋಗಿಮಠದಲ್ಲಿ ತಂಗಿದ್ದರಂತೆ. ಆಗ ಅಲ್ಲಿದ್ದ ನಾಥನು ‘ಮಠದ  ದನಕಾಯಲು ಯಾರೂ ಇಲ್ಲ.  ಕೆಲಸ ಮಾಡುವೆಯಾ’   ಎಂದು ಕೇಳಲು,  ತಂದೆತಾಯಿಗಳಿಲ್ಲದ ಈತ  ಒಪ್ಪಿ ದನಕಾಯುವ ಕೆಲಸಕ್ಕೆ ನಿಂತರಂತೆ.  ಮುಂದೆ ನಾಥದೀಕ್ಷೆ ಪಡೆದು ಕದ್ರಿಯ ಝುಂಡಿಯ ಜತೆ ಬಂದಾಗ,  ಚಂದ್ರಗುತ್ತಿಯ ಮಠವನ್ನು ನೋಡಿಕೊಳ್ಳಲು ನೇಮಕವಾಯಿತಂತೆ. ಅನೇಕನಾಥರಿಗೆ ನಾಥಪಂಥದ ಜ್ಞಾನ ಬಹಳ ಇರಲಿಲ್ಲ. ಮಠವನ್ನು ಊರ್ಜಿತಮಾಡುವ ವ್ಯವಹಾರ ಜ್ಞಾನವೂ ಇದ್ದಂತಿರಲಿಲ್ಲ. ನಾನು ಹೋದಾಗ (೨೦೦೨) ಮಠದ ಒಂದು ದನವನ್ನು ಮಾರಲು ಅನೇಕನಾಥರು ಗಿರಾಕಿಯ ಜತೆ ಚೌಕಾಸಿ ಮಾಡುತ್ತಿದ್ದರು. ಮರಾಠಿಮಯ ಕನ್ನಡದಲ್ಲಿ ಮಾತನಾಡುತ್ತಿದ್ದಅವರಿಗೆ ಸ್ಥಳೀಯ  ಸಂಬಂಧಗಳೂ ಇದ್ದಂತೆ  ಕಾಣಲಿಲ್ಲ. ಒಂದು ಬಗೆಯ ಪರಕೀಯ ಪ್ರಜ್ಞೆಯಲ್ಲಿ ಹುಟ್ಟುವ ಅಭದ್ರತೆ ಮುಖದಲ್ಲಿ ತೋರುತ್ತಿತ್ತು.

ಚಿಕ್ಕದಾಗಿರುವ ನಾಥಮಠದ ಆವರಣದಲ್ಲಿ ಹಿಂದಿನ ನಾಥರ ಸಮಾಧಿಗಳಿವೆ. ಅವುಗಳಲ್ಲಿ ಬೈದ್ಯನಾಥ, ಸೋಮವಾರನಾಥ ಸಂಪೂರ್ಣನಾಥ ಎಂಬುವರವು ಇವೆ.    ಸಂಪೂರ್ಣನಾಥರು ಕನ್ನಡಿಗನಾಗಿದ್ದರು. ಇವರ ಬಗ್ಗೆ ಸ್ಥಳೀಯರಾದ ನಾರಾಯಣ ಎಂಬುವರು ಹೇಳಿದ ಕಥೆಯು ಸ್ವಾರಸ್ಯಕರವಾಗಿದೆ. ಇವರ  ಮೂಲ ಹೆಸರು ಜಟ್ಯಪ್ಪ. ಕುಂದಾಪುರ ತಾಲೂಕು ಬೈಂದೂರು ಕಡೆಯ ದೇವಾಡಿಗ ಜಾತಿಗೆ ಸೇರಿದ ಜಟ್ಯಪ್ಪ, ಎಮ್ಮೆ ವ್ಯಾಪಾರಕ್ಕಾಗಿ ಸೊರಬ ಸೀಮೆಗೆ ಬರುತ್ತಿದ್ದನು. ಆತನಿಗೆ ಅಕ್ಕನ ಮಗಳನ್ನು ಕೊಟ್ಟು ಬಾಲ್ಯದಲ್ಲೆ ವಿವಾಹವಾಗಿತ್ತು. ಒಮ್ಮೆ ಹೆಂಡತಿ ಮೈನರೆದಳು ಎಂದು ಗೊತ್ತಾಗಿ, ನಿಷೇಕಕ್ಕೆ ಹೊಸಬಟ್ಟೆ ತೆಗೆದುಕೊಂಡು ಜಟ್ಯಪ್ಪ ಹೋದನು. ನೆರೆಮನೆಯವರು ಅವನನ್ನು ಬೀದಿಯಲ್ಲೆ ತಡೆದು, ‘ಅಯ್ಯ, ಅವಳಿಗೆ ಯಾರ ಜತೆಯಲ್ಲೊ ಸಂಬಂಧವಿದೆ. ಬಸುರಿ ಯಾಗಿದ್ದಳು. ಈಗ ಹಡೆದು ಮಲಗಿದ್ದಾಳೆ. ನೀನ್ಯಾಕೆ ಬಂದೆ?’ ಎಂದರಂತೆ. ಒಯ್ದ ಬಟ್ಟೆಗಂಟನ್ನು ಅಲ್ಲೇ ಬಿಸಾಡಿ ಜಟ್ಯಪ್ಪ ಚಂದ್ರಗುತ್ತಿಯ ನಾಥಮಠದಲ್ಲಿ ಬಂದು ನೆಲೆಸಿದ. ಗಡ್ಡಬಿಟ್ಟು ಸನ್ಯಾಸಿಯಾದ. ಅಲ್ಲಿಗೆ ಬಂದು ಹೋಗುತ್ತಿದ್ದ ನಾಥರು ಅವನಿಗೆ ದೀಕ್ಷೆಕೊಟ್ಟು ಸಂಪೂರ್ಣನಾಥನೆಂದು ಹೆಸರಿಟ್ಟರು. ಕದ್ರಿ  ಝುಂಡಿಯು ಬಂದಾಗ, ಸ್ಥಳೀಕನೆಂಬ ಕಾರಣಕ್ಕೆ ಮಠದ ಉಸ್ತುವಾರಿಗೆ ನೇಮಿಸಿತು. ಸಂಪೂರ್ಣನಾಥರು ಕೆಲವು ವರ್ಷಗಳ ಹಿಂದೆ ತೀರಿಕೊಂಡರು.

ಜೀವನದಲ್ಲಿ ನಿರಾಶನಾಗಿ ಸನ್ಯಾಸಿಯಾದ  ಸಂಪೂರ್ಣನಾಥರು, ಎಲ್ಲಿಂದಲೊ ಬಂದ  ದಿಕ್ಕಿಲ್ಲದ ಹುಡುಗ ನಾರಾಯಣನಿಗೆ ಸಾಕಿ, ಮದುವೆ ಮಾಡಿದರು. ಸಂಪೂರ್ಣನಾಥ, ಅನೇಕನಾಥ, ನಾರಾಯಣ ಎಲ್ಲರೂ ಅನಾಥರಾಗಿ ನಾಥಮಠಗಳಿಗೆ ಸೇರಿದವರು. ಒಂದು ನಮೂನೆಯಲ್ಲಿ ಇಡೀ ಚಂದ್ರಗುತ್ತಿಯ ನಾಥಮಠವೇ ಅನಾಥರ ನೆಲೆಮನೆಯಂತೆ ಭಾಸವಾಗುತ್ತದೆ. ದಿಕ್ಕಿಲ್ಲದವರು ಮಠಗಳಲ್ಲಿ ನೆಲೆ ಪಡೆದಿರುವುದನ್ನು ಅನೇಕ ಕಡೆ ನಾನು ಕಂಡೆ. ಬಹುಶಃ ಭಾರತದ ಅನೇಕ ಪಂಥಗಳಲ್ಲಿ ಇರುವ ಎಷ್ಟೋ ಮಂದಿ ವಿಘಟಿತ ಕುಟುಂಬಗಳಿಂದ ಬಂದವರು. ಇದು ನಮ್ಮ ಸನ್ಯಾಸ ಯೋಗ ಪಂಥಗಳ ಸುಪ್ತ ಸಾಮಾಜಿಕ ಮುಖ.

ಚಂದ್ರಗುತ್ತಿಗೆ ಬರುವ ಝುಂಡಿ ೩ ದಿನ ನಿಲ್ಲುತ್ತದೆ. ಊರವರು ಅದರ ಊಟೋಪ ಚಾರ ನೋಡಿಕೊಳ್ಳುತ್ತಾರೆ. ಸಂಪತ್ತಿನ ದೃಷ್ಟಿಯಿಂದ ಚಂದ್ರಗುತ್ತಿ ಮಠವು ತೀರ  ಬಡತನದಲ್ಲಿದೆ. ಮಠಕ್ಕಿದ್ದ ೯ ಎಕರೆ ಭೂಮಿ ಭೂಸುಧಾರಣೆ ಕಾಯ್ದೆಯಲ್ಲಿ  ಕೈಬಿಟ್ಟು, ಈಗ ೩ ಎಕರೆ ಉಳಿದಿದೆ.  ಇಲ್ಲಿರುವ ಕಾಲಭೈರವನ ಪೂಜೆಯಲ್ಲಿ ಸಿಗುವ ದಕ್ಷಿಣೆ ನಾಥನ  ಮುಖ್ಯ ಆದಾಯ. ಇದಕ್ಕೆ ನಡೆದುಕೊಳ್ಳುವ ಕಿನ್ನರಿ ಜೋಗಿಗಳು ಕೂಡ ಉಳ್ಳವರಲ್ಲ. ಅವರಿಗೂ  ನಾಥಮಠಕ್ಕೂ ಅಂತಹ ಗಟ್ಟಿ ಸಂಬಂಧ ಇದ್ದಂತೆ ತೋರಲಿಲ್ಲ. ಬದುಕಲು ಹೋರಾಟ ಮಾಡುವ ಜನರಿಂದ ಇದನ್ನು ನಿರೀಕ್ಷಿಸುವುದೂ ಸಾಧ್ಯವಿಲ್ಲ.

. ಹಂಡಿಬಡಗನಾಥ ಮಠ

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಶ್ರೀಸಿದ್ಧ ಹಂಡಿಬಡಗನಾಥ ಮಠವಿದೆ.  ಕುಂಬಾರ್ಡಾ ಹಳ್ಳಿಗೆ ಸಮೀಪ ಇರುವುದರಿಂದ ಇದನ್ನು ಕುಂಬಾರ್ಡಾ ಮಠವೆಂದೂ ಕರೆಯುತ್ತಾರೆ. ಮಠವು ಸಹ್ಯಾದ್ರಿ ಶ್ರೇಣೀಯ ಒಂದು ಸುಂದರವಾದ ಬೆಟ್ಟದ ಮೇಲಿದೆ. ಲುಂಕೆಮಲೆ ಬಿಟ್ಟರೆ ಅತ್ಯಂತ ದುರ್ಗಮ ಜಾಗದಲ್ಲಿರುವ ಮಠವಿದು.  ಮಠವು ಹಲವಾರು ಕೋಣೆಗಳಿಂದ ಕೂಡಿ, ದೊಡ್ಡ ವಾಡೆಯಂತಿದೆ. ಅದರ ಉಪ್ಪರಿಗೆಯಲ್ಲಿರುವ ಚಿಕ್ಕಚಿಕ್ಕ ಕೋಣೆಗಳು ಯೋಗಸಾಧಕರಿಗೆ ಮಾಡಿಸಿದಂತಿವೆ. ಅಲ್ಲಿ ಯಾವಾಗಲೂ ನಾನಾ  ಭಾಗದಿಂದ ಬಂದ ಸಂಚಾರಿ ನಾಥರು ಇರುತ್ತಾರೆ.

ಹಂಡಿಬಡಗನಾಥನು ಮೂಲತ: ಕಾಬೂಲಿನ ಒಬ್ಬ ದೊರೆ. ನಾಥದೀಕ್ಷೆಯ ನಂತರ ಮೃತಕನಾಥ ಎಂಬ ಹೆಸರನ್ನು ಪಡೆದ ಇವನು ದಕ್ಷಿಣ ಭಾರತಕ್ಕೆ ಬರಬೇಕಾಯಿತು. ಇದರ ಹಿನ್ನೆಲೆ ಸ್ವಾರಸ್ಯಕರವಾಗಿದೆ.  ಅವನೊಮ್ಮೆ ಗುರುವಿಗಾಗಿ ಮಾಡಿದ ಅಡುಗೆಯ ರುಚಿಯನ್ನು  ನೋಡಿದನಂತೆ.  ಈ ತಪ್ಪಿಗಾಗಿ ಗುರು ಅವನ ಕೊರಳಿಗೆ ಮಡಕೆಯನ್ನು ಕಟ್ಟಿ, ‘ಇದು ಎಲ್ಲಿ ಒಡೆಯುತ್ತದೆಯೊ ಅಲ್ಲಿ ನೆಲೆಸು’  ಎಂದು ಹೇಳಿ ಕಳಿಸಿದನಂತೆ. ಮೃತಕನಾಥನು ಕದ್ರಿಯ ದಿಕ್ಕಿನತ್ತ ಯಾತ್ರೆ ಮಾಡುವಾಗ ಈ ಬೆಟ್ಟದಲ್ಲಿ ಮಡಕೆ ಒಡೆಯಿತಂತೆ. ಹೀಗಾಗಿ ಅವನು ಇಲ್ಲಿಯೇ ನೆಲೆ ನಿಂತನಂತೆ. ಈ ಕಥೆಯ ರೂಪಕಾರ್ಥ ಏನೆಂದು ಸ್ಪಷ್ಟವಾಗುತ್ತಿಲ್ಲ. ಮಡಕೆ ಮೃಣ್ಮಯವಾದ ದೇಹದ ಸಂಕೇತವಾಗಿದ್ದು, ಅದರ ಒಡೆಯುವಿಕೆಯು  ಆತ ದೇಹಬಿಟ್ಟ  ಜಾಗ ಆಗಿರಬಹುದು. ಈಗಲೂ ಇಲ್ಲಿ ಮಣ್ಣಿನ ದೊಡ್ಡ ಹಂಡಿಪೂಜೆ ಇದೆ. ಗರ್ಭಗುಡಿಯಲ್ಲಿ ಕುದುರೆ ಮೇಲೆ ಕೂತಿರುವ ಮೂರ್ತಿಯನ್ನು ಮೃತಕನಾಥ ಎನ್ನುತ್ತಾರೆ. ಬಹುಶಃ ಮೂರ್ತಿಯ ಕೆಳಗಿನದು ಅವನ ಸಮಾಧಿ ಇರಬಹುದು. ಹಂಡಿಬಡಗ ನಾಥನು ದೊರೆಯಾಗಿದ್ದವನು ಹಾಗೂ ಕಾಬೂಲಿನಿಂದ ಬಂದವನು ಎಂಬುದಕ್ಕೂ ಈ ಕುದುರೆಗೂ ಎಂತಹುದೊ ಕೊಂಡಿಯಿದೆ. ಇಂತಹ ಅಶ್ವಾರೂಢ ಮೂರ್ತಿಯು ಕಾಲಕಾಲೇಶ್ವರ ಬೆಟ್ಟದಲ್ಲೂ ಇದೆ. ಭೈರವ ಸ್ಥಾನಗಳಲ್ಲಿ ಕಾಣಬರುವ ಕುದುರೆ ಸವಾರ ಮೂರ್ತಿಗಳು ಸ್ವತಂತ್ರವಾಗಿವೆ.   ಚುಂಚನಗಿರಿ ಹಾಗೂ ಲುಂಕೆಮಲೆಯ ಜನಪದ ಸಾಹಿತ್ಯದಲ್ಲಿ ಜೋಗಿ ಗಳು ಕುದುರೆ ಮೇಲೆ ಬರುತ್ತಿದ್ದುದರ ವರ್ಣನೆಯಿದೆ.[4] ಈಗಲೂ ಕದ್ರಿಯಲ್ಲಿ ನಾಥರ ಕುದುರೆ ಸವಾರಿಯಿದೆ.

ಹಂಡಿಬಡಗನಾಥ ಮಠದ ಸುತ್ತ ಹಿಂದಿನ ನಾಥರ ಸಮಾಧಿಗಳಿವೆ. ಅವುಗಳಲ್ಲಿ ಮುಖ್ಯವಾದವು  ಜ್ವಾಲಾನಾಥ, ದೋಣೀನಾಥ, ತ್ರಿವೇಣೀನಾಥ, ಶಂಭುನಾದ ಹಾಗೂ ಗ್ಯಾನನಾಥರವು. ಈ ಮಠದ ಎಲ್ಲ ನಾಥರ ಹೆಸರು ಪೀರ್ ಎಂದು ಶುರುವಾಗುತ್ತವೆ.. ಇಲ್ಲಿ ಆಕಾಶ್‌ಭೈರವ, ಭೂತನಾಥರ  ಮೂರ್ತಿಗಳಿವೆ. ಈಗಿರುವ ಮಠವನ್ನು ೧೯ನೇ ಶತಮಾನದಲ್ಲಿ ಜ್ವಾಲಾನಾಥನು ಕಟ್ಟಿಸಿದನು. ನಾನು ಮೊದಲ ಸಲ ಹೋದಾಗ (೨೦೦೦) ಮಠಾಧಿಪತಿ ಅಗಿದ್ದವರು ಪೀರ್ ಶೇರನಾಥ್.  ತೀರ ವೃದ್ಧರಾಗಿದ್ದ ಅವರು  ಮೂರು ಅವಧಿಗೆ, ಅಂದರೆ ೩೬ ವರ್ಷಕಾಲ ಮಠದ ಮಹಂತರಾಗಿದ್ದರು. ಶೇರನಾಥರು ೨೦೦೨ರಲ್ಲಿ ತೀರಿಕೊಂಡರು. ೨೦೦೩-೦೪ರ ಝುಂಡಿಯಲ್ಲಿ ಮಠದ ಪೂಜಾರಿಯಾಗಿದ್ದ ಪೀರ್ ಸಿಧನಾಥರನ್ನು ಮುಖ್ಯಸ್ಥರಾಗಿ ಆರಿಸಲಾಯಿತು. ಕನ್ನಡಿಗರಾಗಿರುವ ಸಿದ್ಧನಾಥ್  ಹತ್ತಿರದ ಕುಂಭಾರ್ಡೆಯವರು. ಇಷ್ಟು ದೊಡ್ಡಮಠದ ನಿರ್ವಹಣೆ  ಚಿಕ್ಕ ವಯಸ್ಸಿನ ಸಿದ್ಧನಾಥರಿಗೆ ಕಷ್ಟ ಎಂದು ಝುಂಡಿಯ ನಾಥರು ಚರ್ಚಿಸುತ್ತಿದ್ದರು.  ಹಂಡಿಬಡಗನಾಥ ಮಠಕ್ಕೆ ೭೦೦ ಎಕರೆ ಜಮೀನಿದೆ. ಧಾರವಾಡ ಬೆಳಗಾವಿ ಭಾಗದ ರಾವುಳ ಜೋಗಿಗಳು ಇದರ ಶಿಷ್ಯರು. ಜತೆಗೆ ಮರಾಠಿಗರೂ ಲಿಂಗಾಯತರೂ ನಡೆದುಕೊಳ್ಳುತ್ತಾರೆ. ಶಿವರಾತ್ರಿಯಂದು ದೊಡ್ಡ ಪ್ರಮಾಣದಲ್ಲಿ ಜನ ಸೇರುತ್ತಾರೆ.

. ಲುಂಕೆಮಲೆಮಠ

ನಾಥಪಂಥದ ದಾಖಲೆಗಳಲ್ಲಿ ಲುಂಕೆಮಲೆ ಮಠವನ್ನು ‘ಕಾಲಭೈರವಮಂದಿರ, ಲೋಕಿಮಠ’ ಎಂದು ಕರೆದಿದೆ. ಸ್ಥಳೀಯರಿಗೆ ಇದು ಲುಂಕೆಮಲೆ ಅಥವಾ ನುಂಕೆಮಲೆ. ಇಲ್ಲಿರುವ ಭೈರವನು ಲುಂಕಪ್ಪ ಅಥವಾ ನುಂಕಪ್ಪ.  ಲೋಕಿ ಅಥವಾ ಲುಂಕೆ ಶಬ್ದವು ಹೇಗೆ ಬಂದಿತು? ವಜ್ರಯಾನ ಪಂಥದ ಅವಲೋಕಿತನಿದ್ದ ಊರು ಲೊಕ್ಕಿಗುಂಡಿ ಆದಂತೆ, ಲೋಕಿಮಲೆ ಲೋಕಿಮಠ ಆಗ ಇರಬಹುದು. ಈ ಪರಿಸರದಲ್ಲಿ ಅಶೋಕನ ಶಾಸನವಿರುವ ಬ್ರಹ್ಮಗಿರಿ ಸಿದ್ಧಾಪುರಗಳಿವೆ. ಆದರೆ ಆಗಿದ್ದುದು ಹೀನಾಯಾನ.  ಕದ್ರಿಯು ವಜ್ರಯಾನದ ತಾಣವಾಗಿದ್ದು ನಾಥವಾಗಿ ಬದಲಾದಂತೆ, ಇಲ್ಲಿ ಆಗಿರುವುದಕ್ಕೆ ಸಾಕ್ಷಿಕುರುಹು ಕಾಣುವುದಿಲ್ಲ. ಆದರೆ ಪರಿಸರದಲ್ಲಿ ಲೋಕ ಲೋಕಿ ಹೆಸರಿಂದ ಆರಂಭವಾಗುವ ಊರುಗಳಿವೆ. ಆದರೆ  ಇವುಗಳ ಆಧಾರದಲ್ಲಿ ಏನನ್ನೂ ಹೇಳುವುದು ಕಷ್ಟ. ಪ್ರಾಚೀನ ದಾಖಲೆಗಳಲ್ಲಿ ಲುಂಕೆಮಲೆಯನ್ನು ದೇವರಬೆಟ್ಟವೆಂದೂ ತ್ರಿಕೂಟಾಚಲವೆಂದೂ ಹಿರಾರಬೆಟ್ಟವೆಂದೂ ಕರೆದಿದೆ. ‘ದೇವರು’ ಭೈರವನಿಂದ ಬಂದುದು.  ಭೌಗೋಳಿಕವಾಗಿ ಮೂರುಕಡೆ ದೊಡ್ಡ ದೊಡ್ಡ ಬೆಟ್ಟಗಳಿಂದ ಆವೃತವಾದ ಒಂದು ನಿರ್ಜನವಾದ ಕಣಿವೆಯಲ್ಲಿರುವ  ಕಾರಣ ಇದು ತ್ರಿಕೂಟಾಚಲ ಆಗಿದೆ.  ಶಾಸನಗಳಲ್ಲಿ ‘‘ದುರ್ಗಮಾಟವೀಂ ತ್ರಿಪರ್ವತಾನ್ತರ ಸಂಶ್ರಿತಾಂ’’ ಎಂದು ಇದರ ವರ್ಣನೆಯಿದೆ. ಈ ತ್ರಿಕೂಟವನ್ನು ಪ್ರವೇಶಿಸುವ ಮಾರ್ಗ ಕೂಡ ಇಕ್ಕಟ್ಟಿನ ಕಾಲುಹಾದಿಯದು. ಘ್ರಿಕೂಟವೆಂದರೆ, ಯೋಗದಲ್ಲಿ ಇಡಾ ಪಿಂಗಳ ನಾಡಿಗಳು ಸುಷುಮ್ನೆಯನ್ನು ಸೇರುವ ಸ್ಥಾನ ಕೂಡ. ಹಿರಾರಬೆಟ್ಟ ಎಂದೇಕೆ ಹೆಸರು? ಆರ್ಯಾ ತಾರಾಭಗವತಿಯ ಹೆಸರುಗಳಲ್ಲೊಂದು. ಆರ್ಯ್ಯಬೆಟ್ಟವೆ ಹಿರಾರಬೆಟ್ಟ ಆಗಿರಬಹುದೇ? ಎಲ್ಲವೂ ಊಹೆ.

ಶಾಸನಾಧಾರಗಳು ಸೂಚಿಸುವಂತೆ ಲುಂಕೆಮಲೆ ಪ್ರಾಚೀನ ಸ್ಥಳ. ಇದು ಮೊದಲಿಗೆ ಕದಂಬರ ಆಳ್ವಿಕೆಗೆ ಒಳಪಟ್ಟಿತ್ತು. ಶಿಕಾರಿಪುರ ಶಾಸನದೊಪ್ರಕಾರ, ಕದಂಬರು ಇಲ್ಲಿ ರಾಜಧಾನಿ ಸ್ಥಾಪಿಸಿದ್ದರು. ಅಜವರ್ಮನ ಶಾಸನದಲ್ಲಿ(ಕ್ರಿಶ.೯೮೬) ಅರಸನೂ ಅವನ ಮಡದಿ ಮಾಳಿಯಬ್ಬರಸಿಯೂ ಸೇರಿ ‘ಗಜಿಯಕಪ್ಪಡೆಯರ ಕಾಲಂ ಕರ್ಚಿ..ಳುಂಕೇಶ್ವರ ದೇವರ್ಗೆ’ ದತ್ತಿಬಿಟ್ಟ ಪ್ರಸ್ತಾಪವಿದೆ. ಲುಂಕೆಮಲೆಯ ಮಲ್ಲಿಕಾರ್ಜುನ ಗುಡಿಯ ಬಂಡೆಯ ಮೇಲಣ ಇನ್ನೊಂದು ಶಾಸನವು, ಕಲ್ಯಾಣ ಚಾಲುಕ್ಯರ ವಿಕ್ರಮಾದಿತ್ಯ ಹಾಕಿಸಿದ್ದು. ಇದರಲ್ಲಿ ಇಲ್ಲಿದ್ದ ಜ್ಞಾನಸತ್ತಿ ಸಬ್ಬೇಶ್ವರ ದೇವರಿಗೆ ದತ್ತಿ ಕೊಟ್ಟಿರುವ ಸಂಗತಿಯಿದೆ.

ಗಜಿಯಕಪ್ಪಡೆಯ ಹಾಗೂ ಸಬ್ಬೇಶ್ವರಪಂಡಿತ ಎಂಬ ಹೆಸರುಗಳು, ಕಾಳಾಮುಖ ಸಂಬಂಧವನ್ನೂ ಮಲ್ಲಿಕಾರ್ಜುನ ಗುಡಿಯು ಶ್ರೀಶೈಲ ಸಂಬಂಧವನ್ನೂ ಹೇಳುತ್ತಿವೆ. ಶ್ರೀಶೈಲದಲ್ಲಿ  ಕಾಳಾಮುಖ ಹಾಗೂ ಕಾಪಾಲಿಕ ಎರಡೂ ಪಂಥದ ಯತಿಗಳಿದ್ದರಷ್ಟೆ. ಆದರೂ ಕಾಳಾಮುಖ ಯತಿಗಳಿದ್ದ ಲುಂಕೆಮಲೆಯು ಕಾಪಾಲಿಕರ ಕೇಂದ್ರವಾಗಿ ಬದಲಾಗಿದ್ದು ಹೇಗೆಂದು ಸ್ಪಷ್ಟವಾಗುವುದಿಲ್ಲ. ಚಿತ್ರದುರ್ಗ ಬಳ್ಳಾರಿ ತುಮಕೂರು ಜಿಲ್ಲೆಗಳ ಕಾಪಾಲಿಕರು ಲುಂಕೆಮಲೆಗೆ  ಒಕ್ಕಲಾಗಿರುವರು. ಕದ್ರಿ ಚುಂಚನಗಿರಿಗಳಲ್ಲಿ ಇರುವಂತೆ ಲುಂಕೆಮಲೆಯಲ್ಲಿ ನಾಥಪಂಥದ ಪ್ರಸ್ತಾಪವುಳ್ಳ ಶಾಸನಗಳು ಸಿಗುವುದಿಲ್ಲ. ಭೈರವನ ಗುಡಿಯ ಮುಂದಿರುವ ಉಯ್ಯಲೆ ಕಂಬದ ಮೇಲೆ ಮಚೇಂದ್ರನ ಉಬ್ಬುಕೆತ್ತನೆಯಿದೆ.

ಲುಂಕೆಮಲೆಯಲ್ಲಿ ೩ ದೈವಗಳಿವೆ. ೧. ಸಿದ್ಧಪ್ಪನೆಂದು ಖ್ಯಾತನಾಗಿರುವ ಭೈರವನದು. ಇದು ಒಂದು ಗುಡಿಯಲ್ಲಿದೆ. ಇದನ್ನು ಲಿಂಗಾಯತರು ಪೂಜಿಸುತ್ತಾರೆ.  ೨. ಗುಡಿಯ ಪಕ್ಕದಲ್ಲಿರುವ ನಾಥಮಠದಲ್ಲಿ ಕಾಲಭೈರವನದು. ಕಾಲಭೈರವನೆಂದರೆ ಜಟಾಧಾರಿ ಯೋಗಿ ಗಳ ಶಿಲ್ಪವಿರುವ ಒಂದು ದೊಡ್ಡ ಚಚ್ಚೌಕದ ಪೀಠದ ಮೇಲೆ ನೆಟ್ಟಿರುವ ತ್ರಿಶೂಲ. ಇದನ್ನು ನಾಥರು ಪೂಜಿಸುತ್ತಾರೆ. ೩. ಕರ್ಪೂರದಮ್ಮ ತುಪ್ಪದಮ್ಮ ಹರಳಯ್ಯ ಇತ್ಯಾದಿ ದೈವ ಗಳದ್ದು. ಚಾರಿತ್ರಿಕ ಪುರುಷನೂ ಕಲ್ಯಾಣದ ಶರಣನಾದ ಹರಳಯ್ಯನು ಇಲ್ಲಿರುವುದು ಸೋಜಿಗ; ಅವನ ಸೇರ್ಪಡೆ ದಲಿತ ಪ್ರಾತಿನಿಧ್ಯದ ಸಂಕೇತವಾಗಿ ಬಂದಂತಿದೆ. ಸ್ಥಳೀಯ ಮಿತ್‌ಗಳು ಲುಂಕಪ್ಪ-ತುಪ್ಪದಮ್ಮರ ಸಂಬಂಧವನ್ನು ಅಕ್ಕತಮ್ಮರ ಪರಿಭಾಷೆಯಲ್ಲಿ ವಿವರಿಸುತ್ತವೆ. ಒಮ್ಮೆ ತುಪ್ಪದಮ್ಮ ತನ್ನ ಸೋದರ ಲುಂಕಪ್ಪನು ಮೈತೊಳೆವುದನ್ನು ಕಂಡು ನಾಚಿ ಭೂಮಿಯಲ್ಲಿ ಹೂತುಹೋದಳಂತೆ; ಅವಳ ತಲೆಯನ್ನು ಹಿಡಿದುಕೊಂಡ ಕಾರಣ,  ತಲೆಮಾತ್ರ ಉಳಿದಿದೆಯಂತೆ. ಚಂದ್ರಗುತ್ರಿಯಲ್ಲಿ ತಲೆಯು ಭೂಮಿಯನ್ನು ಹೊಕ್ಕು ಹಿಂಭಾಗ ಉಳಿದರೆ, ಇಲ್ಲಿ ದೇಹವೇ ಭೂಮಿಯನ್ನು ಹೊಕ್ಕು ತಲೆ ಉಳಿದಿದೆ. ಒಂದೆಡೆ ಮಗನ ಭಯ ಕಾರಣವಾದರೆ, ಇನ್ನೊಂದೆಡೆ ಸೋದರನ ಲಜ್ಜೆ. ‘ಲುಂಕೆಮಲೆ ಮಹಾತ್ಮ್ಯೆ’ ಪ್ರಕಾರ ನುಂಕಪ್ಪ ನುಂಕೆಮಲೆಯನ್ನು ಬಿಟ್ಟುಹೋಗಬೇಕು ಎಂದು ನಿರ್ಧರಿಸಿದಾಗ, ಅಕ್ಕ ತುಪ್ಪದಮ್ಮನು ಬೆತ್ತಲಾಗಿ ಅಡ್ಡ ನಿಲ್ಲುತ್ತಾಳೆ. ಆಗ ನಾಚಿದ ನುಂಕಪ್ಪನು ಅಲ್ಲೇ ಇರಲು ನಿರ್ಧರಿಸುತ್ತಾನೆ.  ಅಣ್ಣ ಸ್ನಾನಮಾಡುವಾಗ ಸೋದರಿ ಕಂಡು ನಾಚಿ ಭೂಮಿಯಲ್ಲಿ ಹೋಗುವ, ಸೋದರಿ ಬೆತ್ತಲೆಯಾಗಿ ನಿಂತಾಗ ಅಣ್ಣನು ನಾಚಿ ಮುಂದೆ ಹೋಗದಂತೆ ತಡೆಯುವ ಈ ಕಥನಗಳು ಏನನ್ನು ಸಂಕೇತಿಸುತ್ತಿವೆ? ಸಿದ್ಧರು ಹಾಗೂ  ಯೋಗಿನಿಯರ ವಾಮಾಚಾರದ ಆಚರಣೆಯನ್ನೇ? ಕದ್ರಿ ಸೀಮೆಯಲ್ಲಿರುವ ಜೋಗಿ ಪುರುಸೆರ್ ಕತೆಗಳಲ್ಲೂ ಅಣ್ಣತಂಗಿಯರ ಸಂಬಂಧದ ಸುಳಿವಿದೆ.

ಇಡೀ ಲುಂಕೆಮಲೆ ಪ್ರದೇಶವೇ ದುರ್ಗಮವಾಗಿದ್ದು, ಇದು ಕಾಪಾಲಿಕರ ಹಾಗೂ ಶಾಕ್ತರ ಸಾಧನೆಯ ಜಾಗವಾಗಿರಬಹುದು. ತ್ರಿಕೂಟ ಎಂಬಲ್ಲಿನ ‘ಕೂಟ’ ಶಬ್ದವು  ಈ ಹಿನ್ನೆಲೆಯಲ್ಲಿ ಭಿನ್ನದನಿ ಪಡೆಯುವುದು. ಮಲ್ಲಿಕಾರ್ಜುನ ಗುಡಿಯ ಬಳಿಯ ಬಂಡೆಯ ಮೇಲೆ, ಎರಡು ತ್ರಿಕೋನಗಳು ಕೂಡುವ ಚಕ್ರವನ್ನೂ ತ್ರಿಶೂಲಗಳನ್ನೂ ಕೆತ್ತಲಾಗಿದೆ. ಇವು ಕೌಳ ಹಾಗೂ ನಾಥರ ಸಹ ಅಸ್ತಿತ್ವದ ಸಂಕೇತಗಳು. ಈ ಭಾಗದ ಮ್ಯಾಸಬೇಡ, ಕಿನ್ನರಿ ಜೋಗಿ, ಲಿಂಗಾಯತ ಹಾಗೂ ದಲಿತರ ಜೀವನದಲ್ಲಿ ನಾಥಪಂಥದ ಜನಪ್ರಿಯ ರೂಪಗಳು ಅಪಾರವಾಗಿದ್ದು, ಇದು ಬೇರೆ ಅಧ್ಯಯನವನ್ನು ಬೇಡುತ್ತದೆ.

ಲುಂಕೆಮಲೆ ಸೀಮೆಯ ಕೂಡ್ಲಿಗಿ ಜಗಳೂರು ಚಿತ್ರದುರ್ಗ ಹಿರಿಯೂರು ಪ್ರದೇಶದಲ್ಲಿ ಕಿನ್ನರಿ ಜೋಗಿಗಳು ವಾಸವಾಗಿದ್ದಾರೆ; ಲುಂಕೆಮಲೆಯ ಆಸುಪಾಸಿನ ಸ್ಥಳನಾಮಗಳನ್ನು ಗಮನಿಸಬೇಕು. ಜೋಗಿಮಟ್ಟಿ (ಚಿತ್ರದುರ್ಗ) ಸಿದ್ಧಾಪುರ (ಮೊಳಕಾಲ್ಮೂರು, ಚಳ್ಳಕೆರೆ), ಸಿದ್ಧಯ್ಯನ ಕೋಟೆ (ಜಗಳೂರು, ಮೊಳಕಾಲ್ಮೂರು) ಸಿದ್ದೇಶ್ವರದುರ್ಗ (ಚಳ್ಳಕೆರೆ); ಭೈರಾಪುರ (ಮೊಳಕಾಲ್ಮೂರು) ಪುರಬೋರನಹಳ್ಳಿ (ಮೊಳಕಾಲ್ಮೂರು) ಭೈರನಾಯಕನಹಳ್ಳಿ (ಜಗಳೂರು) ಭೈರನಕಲ್ (ಚಿತ್ರದುರ್ಗ) ರಾಮಜೋಗಿಹಳ್ಳಿ (ಚಳ್ಳಕೆರೆ) ವಾರಿಜೋಗಿಹಳ್ಳಿ (ಚಳ್ಳಕೆರೆ) ಯರಪೋತ ಜೋಗಿಹಳ್ಳಿ (ಮೊಳಕಾಲ್ಮೂರು) ಜೋಗಿಹಳ್ಳಿ (ಜಗಳೂರು) ಮಠದ ಜೋಗಿಹಳ್ಳಿ (ಮೊಳಕಾಲ್ಮೂರು) ಜೋಗಿಹಟ್ಟಿ (ಚಳ್ಳಕೆರೆ) ಚಿಕ್ಕಜೋಗಿಹಳ್ಳಿ (ಕೂಡ್ಲಿಗಿ)-ಹೀಗೆ ಎಲ್ಲವೂ ಸಿದ್ಧ ಜೋಗಿ ಭೈರವಗಳ ಹೆಸರಿನಲ್ಲಿವೆ. ಇಲ್ಲಿನ ಮಚ್ಚಸಮುದ್ರವು (ಚಳ್ಳಕೆರೆ)  ಮಚೇಂದ್ರನ ಸಮುದ್ರವೇನು? ಲುಂಕೆಮಲೆ ಮಠದ ಎದುರಿನ ಕಂಬದಲ್ಲಿ ಮೀನಿನ ಮೇಲೆ ಕುಳಿತ ಮಚೇಂದ್ರನ ಶಿಲ್ಪವಂತೂ ಇದೆ.

ಲುಂಕೆಮಲೆ ಪೀಠವನ್ನು ಸಿದ್ಧಸಿಂಹಾಸನ ಎಂದು ಕರೆಯುತ್ತಾರೆ. ಕಾಲಭೈರವನ ಹಿಂದೆ ಕಂಬಳಿಹಾಸಿಗೆ, ಶಂಖು ಕತ್ತಿಗಳುಳ್ಳ ಉರಿಗದ್ದುಗೆಯಿದೆ. ಕಾಲಭೈರವ ಎನ್ನಲಾಗುವ ತ್ರಿಶೂಲವನ್ನು ಪೀಠದಲ್ಲಿದ ಯಾವುದೊ ಮೂರ್ತಿಯನ್ನು ತೆಗೆದು ನೆಟ್ಟಂತೆ ತೋರುತ್ತದೆ. ಇದು ನಿಜವಾಗಿದ್ದರೆ, ಅಲ್ಲಿದ್ದ ಮೂರ್ತಿ ಯಾವುದೆಂದು ಶೋಧಿಸಬೇಕು. ಲುಂಕೆಮಲೆಯ ನಾಥಮಠವು ಉಪ್ಪರಿಗೆಯ ಪ್ರಾಚೀನ ವಾಸ್ತುಶೈಲಿಯದು. ಗುಡಿಯ ಪರಿಸರದಲ್ಲಿ ನಾಥರ ಸಮಾಧಿಗಳಿವೆ. ಒಂದು ಕಲ್ಲಸಮಾಧಿಯಲ್ಲಿ ನಾಥರ ಮೃತ ದೇಹಗಳನ್ನು ಇಟ್ಟಂತೆ ತೋರುತ್ತದೆ.  ಇಲ್ಲಿಗೆ ಸಮೀಪದ ಕಾಡುಕುರುಬರ ಸಿದ್ಧಾಪುರದಲ್ಲಿ ಒಂದು ಗುಹೆಯೊಳಗೆ ಸಿದ್ಧಪ್ಪನ ಗದ್ದುಗೆಯಿದ್ದು, ಅದರ ಮುಂದೆ ದೊಡ್ಡ ಕಲ್ಲಿನ ತೊಟ್ಟಿಯಾಕಾರದ ಸಮಾಧಿಯಿದೆ. ಅದರೊಳಗೆ ಹಿಂದಿನ ಗುರುಗಳ  ಅಸ್ಥಿಗಳನ್ನು ಸಂಗ್ರಹಿಸಿ ಇಡಲಾಗಿದೆ. ಎಲ್ಲೂ ನಾಥರ ಸಮಾಧಿಗಳಿಗೆ ಪೂಜೆ ಮಾಡುವ ಪದ್ಧತಿಯಿಲ್ಲ.

ಲುಂಕೆಮಲೆ ಮಠದ ನಾಥರನ್ನು ಸ್ಥಳೀಕರು ಪರದೇಸಿ ಇಲ್ಲವೆ ಬಾವಾಜಿಗಳು ಎಂದು ಕರೆಯುತ್ತಾರೆ.[5] ಲುಂಕೆಮಲೆ ಮಠದ ಅಧಿಪತಿಗಳಾಗಿದ್ದ ಬಾವಾಜಿಗಳ ಹೆಸರುಗಳು ಹೀಗಿವೆ: ಆದಿರುದ್ರನಾಥ, ಸಿದ್ದಿಯೋಗನಾಥ, ಹರೇಪ್ರನಾಥ, ಹರಿನಾಥ, ಬ್ರಹ್ಮನಾಥ, ಗಿರಿಜಾನಾಥ, ಲಕ್ಷ್ಮೀನಾಥ, ವಾಣಿನಾಥ, ಸೋಮನಾಥ, ಚೌಮನಾಥ, ಸೋಮ್ಯನಾಥ, ಗುರುನಾಥ, ಭಾರ್ಗವನಾಥ, ಮಂದನಾಥ, ತಮೋನಾಥ, ಕೇತನಾಥ, ವಜ್ರನಾಥ, ಅಜ್ಞೇಯನಾಥ, ಕಾಲನಾಥ, ನಿಯತಿನಾಥ,  ಸಿಂಧುನಾಥ, ಪರಸನಾಥ, ಕುಬೇರನಾಥ, ಈಶ್ವರನಾಥ, ಗ್ಯಾಣನಾಥ, ಮಹೇಂದ್ರನಾಥ, ಗಂಗಾನಾಥ. ಈ ಹಿಂದೆ ಬಾಲಕನಾಥ  ಎನ್ನುವವರು ಅಧಿಪತಿಯಾಗಿದ್ದರು. ಸ್ತ್ರೀಸಂಬಂಧ ಮಾಡಿದರೆಂದು ಅವರನ್ನು ಬಾರಾಪಂಥವು  ವಜಾಮಾಡಿ, ಈಗಿರುವ ಮಂಗಲನಾಥರನ್ನು ನೇಮಿಸಿತು. ೨೦೦೩-೦೪ರ ಝುಂಡಿಯಲ್ಲಿ ಮಂಗಲನಾಥರಿಗೆ ೧೧೪ನೇ ಅಧಿಪತಿಯಾಗಿ ಮರುನೇಮಕ ಆಯಿತು.

ಲುಂಕೆಮಲೆ ಮಠಕ್ಕೆ ಬಳ್ಳಾರಿ, ಚಿತ್ರದುರ್ಗ, ತುಮಕೂರು, ಅನಂತಪುರ ಜಿಲ್ಲೆಗಳಲ್ಲಿ ೧೨ ಶಾಖಾಮಠಗಳು ಇದ್ದವು. ಅವೆಂದರೆ- ಹೇಮಾವತಿ (ಮಡಕಶಿರಾ), ಚದುರಗೊಳ (ರಾಯದುರ್ಗ), ವೇಣುಕಲ್ಲುಗುಡ್ಡ,  ಕಾತಿರಿಹಳ್ಳಿ, ವದ್ದಿಕೆರೆ (ಹಿರಿಯೂರು), ಹೊಳಲ್ಕೆರೆ, ಹುಲಿಗೊಂದಿ(ಚಿತ್ರದುರ್ಗ), ಕಪ್ಪಗೆರೆ,  ಬಾಗೂರು(ಹೊಸದುರ್ಗ), ಕಣಕುಪ್ಪೆ (ಜಗಳೂರು), ಕುಮ್ತಿ (ಕೂಡ್ಲಿಗಿ), ಪಗಡಲಬಂಡೆ (ಚಳ್ಳಕೆರೆ);  ಲುಂಕೆಮಲೆ ಮಠದ ಮುಖ್ಯ ಕೆಲಸಗಳೆಂದರೆ, ಶಿಷ್ಯರಾದ ಕಾಪಾಲಿಕರು ಮ್ಯಾಸಬೇಡರು ಹಾಗೂ ಕಿನ್ನರಿ ಜೋಗಿಗಳಿಗೆ ದೀಕ್ಷೆ ಕೊಡುವುದು, ಶಾಖಾಮಠಗಳಿಗೆ ಸ್ಥಳಿಯ ಮುಖಂಡರನ್ನು ನೇಮಿಸುವುದು,  ಭಕ್ತರಿರುವ ಹಳ್ಳಿಗಳಲ್ಲಿ ಸರ್ಕೀಟು ಮಾಡುವುದು ಹಾಗೂ ಕಿನ್ನರಿಯವರಿಗೆ ಭಿಕ್ಷಾಟನೆಯ ಏರಿಯಾ ನಿಗದಿ ಮಾಡುವುದು. ಕಿನ್ನರಿಯವರಿಗೆ ಬಾವಾಜಿಗಳು ಕೊಡುತ್ತಿದ್ದ ಪ್ರಮಾಣ ಪತ್ರದ ಮಾದರಿಯಿದು:

ಶ್ರೀಸಿದ್ದೇಶ್ವರ ಪ್ರಸನ್ನ

ಮೊಳಕಾಲ್ಮೂರು ತಾಲೂಕು ಹಾನಗಲ್ ಮುಜುರ ಶ್ರೀ ಆದಿಲುಂಕೇಮಲೆ ಕಾಲುಬೈರವೊಸಿದ್ಧೇಶ್ವರ ಮಠದ ಸಿದ್ಧಸಿಂಹಾಸನದ ….(ಬಾವಾಜಿಯ ಹೆಸರು)… ಇವರುಗಳ ಸನ್ನಿಧಾನದಿಂದ ಸಮಸ್ತ ಜನಗಳಿಗೆ ಸೂಚನ ಪತ್ರಿಕಾ ಯೇನೆಂದರೆ! ಸದರಿ ಮಠವು ಶ್ರೀ ಸುವರ್ಣ ಕದಳಿಯೋಗೇಶ್ವರ ಮಠ, ಮಂಗಳೂರು ಮಠಕ್ಕೆ ಒಳಪಟ್ಟಿರುತ್ತೆ. ಸದರಿ ನುಂಕೆಮಲೆ ಸಿದ್ಧೇಶ್ವರ ಮಠಕ್ಕೆ ಕಿನ್ನಿರಿ ಜೋಗಿಗಳು ಯಾವತ್ತು ಭಿಕ್ಷಾಟನೆಗಾಗಿ ಹಳ್ಳಿಗಳ ಮೇಲೆ ಮತ್ತು ಪಟ್ಟಣಗಳ ಮೇಲೆ ಬರುವರು. ಈ ಕಿನ್ನರಿ ಜೋಗಿಯವರು ಯಾವತ್ತು ಪ್ರತಿವರ್ಷವು ನಮ್ಮ ಲುಂಕೇಮಠ ಗುರುಕಾಣಿಕೆಯನ್ನು ಒಪ್ಪಿಸುವರು ಮತ್ತು ಇವರುಗಳು ಯಾವ ಮಠದವರುಗಳು ಆಗಲಿ, ಹಳ್ಳಿಗಳಲ್ಲಿ ಹಾರು ತಂಟೆ ತಕರಾರು ಮಾಡದಂತೆ ಶಕ್ತಾನುಸಾರ ಬಿಕ್ಷಾ ವಗೈರೆ ಕೊಟ್ಟು ಕಳುಹಿಸಿತಕ್ಕದ್ದು.

ತಾರೀಕು                                                                                 ಇಂತಿ ಆಶೀರ್ವಾದ
ಮೊಕ್ಕಾಂ                                                                       (ಸಹಿ) ಮಠಾಧಿಪತಿ ಹೆಸರು

ಜೋಗಿಯ ಹೆಸರು

ಇದು ಪಂಥದ ವ್ಯವಹಾರ ಹಾಗೂ ಮಠದ ಆದಾಯಕ್ಕೂ ಲಗತ್ತಾದ ವಿಷಯವಾದ ಕಾರಣ, ಇಲ್ಲಿ ಕಂದಾಯ ಕಚೇರಿಯ ಪತ್ರವ್ಯವಹಾರದ ನಮೂನೆಯನ್ನು ಅನುಸರಿಸಲಾಗಿದೆ. ಲುಂಕೆಮಲೆಯ ವಿಶೇಷವೆಂದರೆ, ಮಠದ ಆಡಳಿತ ವ್ಯವಹಾರಗಳನ್ನು ಕನ್ನಡದಲ್ಲಿ ಬರೆದಿಡುವ ಪದ್ಧತಿಯಿರುವುದು. ಇವತ್ತಿಗೂ ಮಠಕ್ಕೆ ಅಧಿಪತಿಯಾಗುವವರು, ತಹಸೀಲ್ದಾರ್ ಕಛೇರಿಯಲ್ಲಿ ಕ್ರಮಬದ್ಧವಾದ ನೋಂದಣಿ ಮಾಡಿಕೊಂಡು ಕಾಯಿದೆಬದ್ಧ ಅಧಿಕಾರ ಪಡೆಯುತ್ತಾರೆ. ಇದಕ್ಕೆ ಕಾರಣ ಎರಡು. ೧. ಈ ಮಠದ ಆಸ್ತಿ. ನಾಥಮಠಗಳಿಗೆ ಸಾಮಾನ್ಯವಾಗಿ ಭೂಮಿಯಿದ್ದು, ಅದನ್ನು ಮಠದ ಹಾಗೂ ಭೈರವಗುಡಿಯ ಕೆಲಸ ಮಾಡುವವರ ಉಪಭೋಗಕ್ಕೆ ಕೊಡಬೇಕಿತ್ತು. ಕೆಲವೊಮ್ಮೆ ಉಳುವವರು ಜಮೀನನ್ನು ತಮ್ಮದು ಎಂದು ಹಕ್ಕು ಸಾಧಿಸಿದಾಗ, ಮಠವು ದಾವೆಹಾಕಿ ಉಳಿಸಿಕೊಳ್ಳುತ್ತಿತ್ತು. (ಕದ್ರಿಮಠದಲ್ಲೂ ಭೂಮಿಸಂಬಂಧ ಕೇಸುಗಳು ಕೋರ್ಟಲ್ಲಿ ನಡೆದಿವೆ.) ೨. ಮಠಕ್ಕೆ ಅಧಿಪತಿಯಾಗಿ ಬರುವ ನಾಥನು ಬೇರೆ ರಾಜ್ಯಕ್ಕೆ ಸಂಬಂಧಪಟ್ಟವನಾದ ಕಾರಣ, ಅವನಿಗೆ ಸ್ಥಳೀಯ ಜನರ ಶಾಖಾಮಠಗಳ ವ್ಯವಹಾರಗಳು ಗೊತ್ತಾಗುತ್ತಿರಲಿಲ್ಲ. ಮಠದ ಆಸ್ತಿಯನ್ನು ದುರುಪಯೋಗ ಮಾಡಿಕೊಳ್ಳದಂತೆ ನಿಯಂತ್ರಿಸಲು ಈ ಲಿಖಿತ ವ್ಯವಸ್ಥೆ ಜಾರಿಮಾಡಿರಬೇಕು.

ಲುಂಕೆಮಲೆ ಮಠಕ್ಕೆ ಆಡಳಿತಾತ್ಮಕವಾಗಿ ಮೂರು ಸ್ತರಗಳಿವೆ. ೧. ಮಠದ ಮುಖ್ಯಸ್ಥನ ನೇಮಕಾತಿ ಮಾಡುವ ಹರಿದ್ವಾರದ ಯೋಗಿ ಮಹಾಸಭಾ, ಅರ್ಥಾತ್ ಅದರ ಪ್ರತಿನಿಧಿಯಾದ  ಝುಂಡಿ. ೨. ಕದ್ರಿಯ ಜೋಗಿಮಠದ ನಾಥಯೋಗಿ.  ಲುಂಕೆಮಲೆಯ ಎಲ್ಲ ಆಡಳಿತಾತ್ಮಕ ಪತ್ರವ್ಯವಹಾರಗಳಲ್ಲಿ ‘‘ಸದರಿ ಮಠವು ಶ್ರೀ ಸುವರ್ಣ ಕದಳಿಯೋಗೇಶ್ವರ ಮಠ, ಮಂಗಳೂರು ಮಠಕ್ಕೆ ಒಳಪಟ್ಟಿರುತ್ತೆ’’ ಎಂಬ ವಾಕ್ಯ ಇದೆ. ಪದ್ಧತಿಯಂತೆ,  ಕದ್ರಿಗೆ   ಲುಂಕೆಮಲೆಯು ತನ್ನ ಆದಾಯದ ಒಂದು ಪಾಲನ್ನು ಕಪ್ಪದಂತೆ ಸಲ್ಲಿಸಬೇಕು. ಆದರೆ ಈ ನಿಯಮ ಕಡ್ಡಾಯವಾಗಿಲ್ಲ. ಕದ್ರಿಯ ದೂರವೂ ಇದಕ್ಕೆ ಕಾರಣ. ಲುಂಕೆಮಲೆಯ ಕರಪತ್ರದಲ್ಲಿ   (೨೦೦೨)   ಜಾತ್ರೆಯನ್ನು ಕದ್ರಿಮಠದ ಅರಸು ಆರಂಭಿಸುತ್ತಾರೆ ಎಂದಿತ್ತು. ಆದರೆ ಕದ್ರಿಯ ಅರಸು  ಜಾತ್ರೆಗೆ ಬಂದಿರಲಿಲ್ಲ. ಇದನ್ನು ಮೋಹನನಾಥರ ಗಮನಕ್ಕೆ ತಂದಾಗ,   ‘ನಮ್ಮ ಅನುಮತಿ ಕೂಡ ಪಡೆಯದೆ ಸುಮ್ಮನೆ ಹೆಸರು ಹಾಕಿಕೊಳ್ಳುತ್ತಾರೆ’ ಎಂದರು. ‘ಲುಂಕೆಮಲೆಯ ಪರಮಾರ್ಥ’ (೧೯೩೫) ಎಂಬ ಕೃತಿಯಲ್ಲಿ ‘‘ಈಚೆಗೆ ೧೨ ಮಠಗಳ ಅಧಿಪತಿಗಳೂ ಮಂಗಳೂರಿನ ಕದಳಿ ಸಿಂಹಾಸನಾಧ್ಯಕ್ಷರೂ ಆದ ಶ್ರೀ ರಾಜಾ ಚಿಮನನಾಥರವರು ಇಲ್ಲಿಗೆ ದಯಮಾಡಿಸಿ, ಈ ಪ್ರೇಮನಾಥರ ಜತೆಗೆ ಇವರ ಗುರುಗಳಾದ ಶ್ರೀ ಅಮರನಾಥರೆಂಬುವರನ್ನೂ ಪಟ್ಟಕ್ಕೆ ಸೇರಿಸಿದರು’’ ಎಂಬ ವಿವರಣೆಯಿದೆ.[6] ಇದರರ್ಥ ಹಿಂದೆ ಕದ್ರಿಮಠದ ಅರಸೇ ಬಂದು ಇಲ್ಲಿನ ಅಧಿಕಾರ ಬದಲಾವಣೆ ಮಾಡುತ್ತಿದ್ದನು. ಒಮ್ಮೆ ಇಲ್ಲಿಗೆ ಹೊರಗಿನಿಂದ  ಬಂದ ಯೋಗಿಗಳನ್ನು ಲುಂಕೆಮಲೆ ಮಠದ ನಾಥನು ಸರಿಯಾಗಿ ಉಪಚರಿಸದ ಕಾರಣ,  ಕದ್ರಿಮಠದ ನಾಥನು, ಅವನನ್ನು ವಜಾ ಮಾಡಿದ ಕತೆಯನ್ನು ಜನ ಹೇಳಿದರು. ೩. ಮಠದ ಪ್ರತಿನಿಧಿಗಳಾಗಿರುವ ಶಾಖಾಮಠಗಳ ಮಠಪತಿಗಳು. ಇವರು ಹಳ್ಳಿಗಳಲ್ಲಿದ್ದು ಭಕ್ತರನ್ನು ಮಠದ ಜತೆ ಬೆಸೆಯುವವರು.

ಲುಂಕೆಮಲೆ ಮಠಕ್ಕೆ ಸುತ್ತ ೩೨ ಹಳ್ಳಿಯ ಜನರ ಸಂಬಂಧವಿದೆ. ಇದರಲ್ಲಿ ಆಂಧ್ರದ ಕಲ್ಯಾಣದುರ್ಗ ರಾಯದುರ್ಗ ಮಡಕಶಿರಾ ತಾಲೂಕಿನವರೂ ಇದ್ದಾರೆ.  ಈ ಜನ ಮ್ಯಾಸ ಬೇಡ, ಕಿನ್ನರಿಜೋಗಿ, ಲಿಂಗಾಯತ, ಕುರುಬ, ಗೊಲ್ಲ ಹಾಗೂ  ದಲಿತ ಸಮುದಾಯಕ್ಕೆ ಸೇರಿದವರು. ಈ ಜಾತಿ ಸಮುದಾಯಗಳು ತಂತಮ್ಮ ಕುಲ ಹಾಗೂ ಮನೆ ದೈವಗಳನ್ನೂ ಆಹಾರ ಪದ್ಧತಿಯನ್ನೂ ಬಿಟ್ಟುಕೊಡದೆ ಲುಂಕೆಮಲೆಗೆ ನಡೆದುಕೊಳ್ಳುತ್ತವೆ. ಲುಂಕೆಮಲೆ ಜಾತ್ರೆ ಇವರೆಲ್ಲರನ್ನು ಒಟ್ಟು ಸೇರಿಸುತ್ತದೆ. ಹಿಂದೆ ಲುಂಕೆಮಲೆ ಬಾವಾಜಿ ಬಂದಾಗ, ೩೨ ಹಳ್ಳಿಯ ಜನ ಗಾಡಿ ಹೂಡಿಕೊಂಡು ಹೋಗಿ, ಊರಹೊರಗೆ ಸೇರಿ, ಪಂಚಕಳಸದ ಮೂಲಕ ಸ್ವಾಗತಿಸುತ್ತಿದ್ದರಂತೆ. ಪಂಚಕಳಸಗಳ ಕಲ್ಪನೆಯು   ಜೋಗಿಗಳ ಆಚರಣೆಗಳಲ್ಲಿ ಸಾಮಾನ್ಯ. ಇವು ಕಾಶಿ, ಗೋರಖಪುರ, ಕದ್ರಿ,  ಲುಂಕೆಮಲೆ ಹಾಗೂ ಊರಿನ ಭೈರವನ ಹೆಸರಲ್ಲಿ ಇರುವ ಕಳಸಗಳು. ಸ್ಥಳೀಯ ಜನರೇ ಸೇರಿ ಕದ್ರಿಯಲ್ಲಿ ಆಯ್ಕೆಯಾಗಿ ಬಂದ ಬಾವಾಜಿಗೆ ಪಟ್ಟವನ್ನು ಕಟ್ಟುತ್ತಿದ್ದರು. ಇದನ್ನು ಲುಂಕೆಮಲೆಯ ಒಕ್ಕಲುಗಳಿರುವ ಪೂಜಾರಹಟ್ಟಿಯ ಜನ ಹೇಳಿದರು. ‘ಈಸಲ ಅವರವರೇ ಪಟ್ಟ ಕಟ್ಟಿಕೊಂಡರು. ನಮ್ಮನ್ನ ಕೇಳಲಿಲ್ಲ’ ಎಂದು ಕೆಲವರು ಹೇಳಿದರು.

ಲುಂಕೆಮಲೆ ಮಠದ ಆದಾಯದ ಮೂಲಗಳಿವು. ೧. ಜಮೀನು. ಮಠಕ್ಕೆ ೧೫ ಎಕರೆ ಬಾಗಾಯ್ತು, ಒಂದು ಕೆರೆ, ೭೦ ಎಕರೆ ಬೆದ್ಲು ಇದೆ. ೨. ಜಮೀನಿನಲ್ಲಿರುವ ಮಾವಿನಮರ ಹಾಗೂ ಹುಣಿಸೆಮರಗಳ ಚೇಣಿ ೩. ಜನ ಸಲ್ಲಿಸುವ ಹರಕೆ ಕಾಣಿಕೆಗಳು. ಶಾಖಾಮಠಗಳು ಈ ಕಾಣಿಕೆಯನ್ನು ಸಂಗ್ರಹಿಸಿ ಕೊಡುತ್ತವೆ. ೧೯೩೫ರಲ್ಲಿ ರಾಯದುರ್ಗ ಶಾಖೆಯಿಂದ ವರ್ಷಕ್ಕೆ ೧೨ ರೂಪಾಯಿ ಕಾಣಿಕೆ ಸಲ್ಲುತ್ತಿತ್ತು. ಲುಂಕೆಮಲೆ ಮಠವು ತನಗೆ ಬಂದ ಆದಾಯದಲ್ಲಿ ಇಂತಿಷ್ಟನ್ನು ಕದ್ರಿಮಠಕ್ಕೆ ಕಟ್ಟಬೇಕಿತ್ತು. ದೀಕ್ಷೆಪಡೆದ ಕಿನ್ನರಿ ಜೋಗಿಗಳು ವರ್ಷಕ್ಕೆ ಒಂದು ಜೋಳಿಗೆಗೆ ಒಂದೂವರೆ ರೂಪಾಯಿಯಂತೆ ಕಾಣಿಕೆ ಕಟ್ಟಬೇಕು. ಇದರೊಂದಿಗೆ ಸಿದ್ಧಭುಕ್ತಿ ಕಾಣಿಕೆ, ದೀಕ್ಷೆಕಾಣಿಕೆ, ಮದುವೆ ಕಾಣಿಕೆ, ದನಗಾಣಿಕೆಗಳಿವೆ. ‘‘ಪಟ್ಟದ ಪದ್ಧತಿ ಅನುಸಾರವಾಗಿ ಸಿದ್ಧಭುಕ್ತಿ ಮಾಡಿ ೧-೦-೧ರೂ ಗುರುಕಾಣಿಕೆ, ತಲೆ, ಚರ್ಮ, ಪಾತ್ರೆಯನ್ನು ತುಂಬಿಸಿ ಗುರುಸೇವಾ ಮಾಡಿ ಆಶೀರ್ವಾದ ಪಡೆದಿರುತ್ತೇವೆ. ದರ್ಬಾರ ಖರ್ಚು ೨೫ರೂ ಕೊಟ್ಟಿರುತ್ತೇವೆ’’ ಎಂಬ ಬರೆಹಗಳು ಮಠದ ಕಿರ್ದಿ ಪುಸ್ತಕದಲ್ಲಿವೆ. ಪ್ರತಿಪತ್ರಕ್ಕೂ ಬಿಕ್ಕಲಂ ಮಾಡಿದವರ ಹೆಸರು ಹಾಗೂ ಸಾಕ್ಷಿಗಳ ಸಹಿ ಇರುತ್ತವೆ. ಕೊನೆಗೆ  ಹಿಂದಿಯಲ್ಲಿ ಬಾವಾಜಿಯ ಸಹಿಯಿರುತ್ತದೆ.

ಲುಂಕೆವುಲೆಯು ನಾಥಪಂಥವು ತನ್ನ ಔತ್ತರೇಯ ರಿವಾಜುಗಳನ್ನು ಬಿಟ್ಟುಕೊಟ್ಟು, ಸ್ಥಳೀಕರಣ ಹೊಂದುವ ಪರಿಯನ್ನು ಜಾತ್ರೆಯಲ್ಲಿ ನೋಡಬಹುದು. ಲುಂಕೆಮಲೆ ಸಿದ್ಧಪ್ಪನ ಜಾತ್ರೆಯು ಈ ಭಾಗದಲ್ಲಿ ಪ್ರಸಿದ್ಧವಾಗಿದೆ. ಮೊದಲನೇ ದಿನ ಲುಂಕಪ್ಪನ ತೇರು. ಎರಡನೇ ದಿನ ತುಪ್ಪದಮ್ಮನ ಸಿಡಿ. ಮೂರನೆಯ ದಿನ ಸಿದ್ಧಭುಕ್ತಿ. ಜಾತ್ರೆಯಲ್ಲಿ ನಾಥಪಂಥದ ಪ್ರತಿನಿಧಿಯಾದ ಬಾವಾಜಿಗೆ ಸಾಂಕೇತಿಕವಾದ ಗೌರವವಿದೆ. ತೇರು ಎಳೆಯುವಾಗ ಮುಂದೆ ಹೂವಿನ ಹಾರ ಹಾಕಿ ಬಾವಾಜಿಯನ್ನು ಮೆರೆಸುತ್ತಾರೆ. ತುಪ್ಪದಮ್ಮನಿಗೆ ಸಿಡಿ ನಡೆಯುವಾಗ, ಜಾತ್ರೆಯ ಕೇಂದ್ರಬಿಂದುವಾದ ಭೈರವನೇ ಅಂಚಿಗೆ ಸರಿಯುತ್ತಾನೆ. ಜಾತ್ರೆಯಲ್ಲಿ ಭೈರವನ  ಪೂಜೆಯು  ಪೂಜಾರಹಟ್ಟಿಯ ಲಿಂಗಾಯತರಿಗೆ ಸೇರಿದೆ.  ಲಿಂಗಾಯತರು ನಡೆದುಕೊಳ್ಳುವ ಕಾರಣ ಗುಡಿಯಲ್ಲಿರುವ ಸಿದ್ಧಪ್ಪನಿಗೆ ಸಿದ್ಧಭುಕ್ತಿಯಿಲ್ಲ. ಆದರೆ ನಾಥಮಠದ ಆವರಣದಲ್ಲಿರುವ ತ್ರಿಶೂಲರೂಪಿ ಕಾಲಭೈರವನಿಗೆ ಸಿದ್ಧಭುಕ್ತಿಯಿದೆ.  ಒಂದೇ ದೈವವು ಭೈರವ-ಕಾಲಭೈರವ ಎಂದು ವಿಂಗಡಣೆಯಾಗಲು, ಸಮುದಾಯಗಳಲ್ಲಿರುವ ಸಾಮಾಜಿಕ ತಾರತಮ್ಯವೊ ಆಹಾರ ಪದ್ಧತಿಯೊ ಕಾರಣವಾಗಿದೆ. ದೇವರನ್ನು ಹಂಚಿಕೊಳ್ಳಲು ಸಮುದಾಯಗಳು ಸಂಘರ್ಷವನ್ನೂ ರಾಜಿಯನ್ನೂ ಮಾಡಿಕೊಂಡಿರುವ ಸಾಧ್ಯತೆಯಿದೆ. ಸೀತಿಬೆಟ್ಟದಲ್ಲೂ ಮೇಲೆ  ಗುಡಿಯಲ್ಲಿರುವ ಮೂರ್ತಿರೂಪಿ ಭೈರವನಿಗೆ ಪ್ರವೇಶವಿಲ್ಲದ ದಲಿತರು, ಬೆಟ್ಟದ ಕೆಳಗೆ ಮೆಟ್ಟಿಲಬಳಿ ತ್ರಿಶೂಲ ಭೈರವನ ಗುಡಿಯನ್ನು ಕಟ್ಟಿಕೊಂಡಿದ್ದಾರೆ. ಮೂರ್ತಿ ಬರುತ್ತಿದ್ದಂತೆ, ಅದಕ್ಕೆ ಗುಡಿ ಮತ್ತು ಪೂಜೆ ಬರುತ್ತವೆ. ಕೆಲವು ಸಮುದಾಯಗಳು ಆಗೊದೂರ ಉಳಿದುಬಿಡುತ್ತವೆ. ಚುಂಚನಗಿರಿಯ ಸಂಚಾರಿ ಗುರುಗಳಾದ ದಲಿತ ಜೋಗಪ್ಪಂದಿರು ತಮ್ಮ ಜೋಳಿಗೆಯಲ್ಲಿರುವ ತ್ರಿಶೂಲವನ್ನು ಎಲ್ಲೆಂದರಲ್ಲಿ ಸ್ಥಾಪಿಸಿ ಭೈರವನನ್ನು ಆವಾಹಿಸಿಬಿಡುತ್ತಾರೆ. ತ್ರಿಶೂಲ, ಗುಡಿಗೆ ಹೋಗದವರು ಪರ್ಯಾಯ ದೇವರ ಸೃಷ್ಟಿ ಮಾಡಿಕೊಳ್ಳಲು ಕಾರಣವಾಗಿರುವುದು ಮಾರ್ಮಿಕವಾಗಿದೆ.

ಲುಂಕೆಮಲೆ ಮಠಕ್ಕೆ ಅದರ ಶಾಖಾಮಠಗಳ ಹಾಗೂ ಶಿಷ್ಯರಾದ ಕಾಪಾಲಿಕರ ಸಂಬಂಧವು ತೀರಾೊಶಿಥಿಲವಾಗಿದೆ. ಕಾಪಾಲಿಕರು ಲುಂಕೆಮಲೆಗೆ ಬಾರದೆ ತಮ್ಮೂರಲ್ಲೆ ಅಗತ್ಯ ಆಚರಣೆ ಮುಗಿಸಿಕೊಳ್ಳುತ್ತಾರೆ. ಶಾಖಾ ಮಠಗಳಲ್ಲೆಲ್ಲ ಹುಲಿಗೊಂದಿ ಮಠವು ಪ್ರಭಾವ ಶಾಲಿಯಾಗಿ ಬೆಳೆದಿತ್ತು. ಇದು ಚಿತ್ರದುರ್ಗ ಕೋಟೆಯಿರುವ ಬೆಟ್ಟಗಳ ಕಣಿವೆಯಲ್ಲಿದೆ.  ಹುಲಿಗೊಂದಿ ಸಿದ್ಧೇಶ್ವರ (ಭೈರವ) ಈ ಭಾಗದ ಕಾಪಾಲಿಕರ ಮನೆದೈವ. ಕಾಪಾಲಿಕರು ಹುಲಿಗೊಂದೆಪ್ಪ ಎಂಬ ಹೆಸರನ್ನು ಇಟ್ಟುಕೊಳ್ಳುತ್ತಾರೆ. ಹುಲಿಗೊಂದಿ ಮಠವು  ಸಿದ್ದೇಶ್ವರ ಗುಡಿಯ ಪಕ್ಕದಲ್ಲಿತ್ತು. ಈಗದು  ನಾಶವಾಗಿದೆ. ಈ ಬಗ್ಗೆ ವ್ಯಾಪಕವಾದ ಶೋಧ ಮಾಡಿರುವ ರಾಜಶೇಖರಪ್ಪನವರ ಪ್ರಕಾರ,  ಹುಲಿಗೊಂದಿಯು ಮೊದಲು ಕಾಪಾಲಿಕರ ನಂತರ ನಾಥರ ಕೇಂದ್ರವಾಗಿತ್ತು. ಹುಲಿಗೊಂದಿ ಪರಿಸರವು ಬೆಟ್ಟ ಗುಹೆಗಳಿಂದ ಕೂಡಿದ್ದು ಕಾಪಾಲಿಕರ ಭೈರವಾರಾಧನೆಗೂ ನಾಥರ ಯೌಗಿಕ ಚಟುವಟಿಕೆಗಳಿಗೂ ಸೂಕ್ತವಾಗಿದೆ. ಇಲ್ಲಿನ ಗುಹೆಗಳಲ್ಲಿ ಬೂದಿಗುಡ್ಡೆಗಳೂ  ಭಂಗಿಸೇದುವ ಚಿಲುಮೆಗಳ ಅವಶೇಷಗಳೂ ಕಂಡುಬಂದಿವೆ.[7] ಇಲ್ಲಿನ ಚಂದ್ರವಳ್ಳಿಯಲ್ಲಿ  ಪರದೇಶಪ್ಪನ ಮಠ ಎಂದು ಕರೆಯಲಾಗುವ ಅಂಕಲಿಮಠದ ಗುಹೆಯಿದೆ. ಪರದೇಶಿ ಎಂದರೆ ಸ್ಥಳಿಯರ ಪರಿಭಾಷೆಯಲ್ಲಿ ಉತ್ತರದಿಂದ ಬರುತ್ತಿದ್ದ ನಾಥರು. ಬೆಟ್ಟದ ಹಿಂದೆ ಕಾಪಾಲಿಕರ ಊರು ಉಪನಾಯಕನ ಹಳ್ಳಿಯಿದೆ. ಇದರ ಪಕ್ಕ ನಾಥಜೋಗಿಯ ಸಮಾಧಿಯಿರುವ ಜೋಗಿಮಟ್ಟಿಯಿದೆ. ಭೈರನಕಲ್ ಬೆಟ್ಟವಿದೆ. ಬೆಟ್ಟದ ಮಧ್ಯದಲ್ಲಿ ಸಂಪಿಗೆಸಿದ್ಧೇಶ್ವರನ ಗುಡಿಯಿದೆ. ಇದು ಮೂಲತಃ ಗುಹೆಯಾಗಿದ್ದು, ಅದರ ಸುತ್ತಲೂ ಇರುವ ಕೋಣೆಗಳು ಅದು ಒಂದು ಕಾಲದಲ್ಲಿ ನಾಥ ಅಥವಾ ಸಿದ್ಧಮಠ ವಾಗಿತ್ತು ಎಂದು ಹೇಳುವಂತಿವೆ. ಸಿದ್ಧೇಶ್ವರ ಎಂದರೆ ಭೈರವನೆ. ಸಂಪಿಗೆ ಸಿದ್ಧೇಶ್ವರನ ಗುಡಿಯಲ್ಲಿ ಧುನಿಯ ಕುರುಹುಗಳಿವೆ. ‘ಶ್ರೀಗುರೂಭ್ಯನಮ:’ ಎಂದು ಶುರುವಾಗುವ ಸಂಪಿಗೆ ಸಿದ್ದೇಶ್ವರನ ಶಾಸನವು, ಇಲ್ಲಿದ್ದ ಸಿದ್ಧರನ್ನು ನೆನೆಯುತ್ತಿದೆ. ಚಿತ್ರದುರ್ಗವನ್ನು ಆಳಿದ ಪಾಳೇಗಾರರು  ಇಲ್ಲಿನ ನಾಥ ಕಾಪಾಲಿಕ ಮಠಕ್ಕೂ ಆಶ್ರಯ ಕೊಟ್ಟಿದ್ದರು ಎಂಬುದಕ್ಕೆ ದಾಖಲೆಗಳಿವೆ. ಸಿದ್ಧೇಶ್ವರಗುಡಿಯ ಕೆಳಗೆ ಏಕನಾಥೇಶ್ವರಿ ಗುಡಿಯಿದೆ. ಭೈರವನು ಇರುವ ಕಡೆಯಲ್ಲೆಲ್ಲ  ಶಕ್ತಿದೇವತೆ ಇರುವುದು ಸಾಮಾನ್ಯ.

ಇತರೆ ನಾಥಮಠಗಳು

ಖಾನಾಪುರ ತಾಲೂಕಿನ ಡೊಂಗರಗಾಂವಿನಲ್ಲಿ ಸಿದ್ಧ ಮಚ್ಚೇಂದ್ರನಾಥ ದಾದಾಕಾ ಮಠವಿದೆ;  ಕಿರವಳೆಯಲ್ಲಿ ಶ್ರೀಗುರುಗೋರಕ್ಷನಾಥ ಮಠವಿದೆ. ಈ ಎರಡೂ ಮಠಗಳಲ್ಲಿ ಕದ್ರಿಯ ಝುಂಡಿ ತಂಗುತ್ತದೆ. ಈ ಮಠಗಳು ದಟ್ಟ ಕಾಡುಗಳಲ್ಲಿರುವ ಕಾರಣದಿಂದಲೊ ಏನೊ, ಕದ್ರಿ-ಹಂಡಿಬಡಗನಾಥ ಮಠಗಳಂತೆ ಜನಬಳಕೆಗೆ ಸಿಕ್ಕಿಲ್ಲ. ಸವದತ್ತಿಯ ಎಲ್ಲಮ್ಮನಗುಡ್ಡದಲ್ಲಿ ಜೋಗಿನಾಥ ಮಠವಿದೆ. ಜನ ಅದನ್ನು ಎಕ್ಕಯ್ಯ ಜೋಗಯ್ಯಮಠ ಇದೆ. ಅಲ್ಲಿ ನಾಥಯೋಗಿಗಳು ಇರುತ್ತಾರೆ. ಹಿಂದೆ ಕಿತ್ತೂರಿನಲ್ಲಿ ಒಂದು ನಾಥಮಠವಿತ್ತು.  ಹಾವೇರಿ ತಾಲೂಕಿನ ಕರಜಗಿಯಲ್ಲಿ ಒಂದು  ನಾಥಮಠವಿದೆ. ಇದನ್ನು ಸ್ಥಾಪಿಸಿದವರು ನಾಥಪಂಥ ಪ್ರಚಾರಕ್ಕೆಂದು ಕರ್ನಾಟಕಕ್ಕೆ ಬಂದಿದ್ದ ಭೂತೇಶ್ವರನಾಥರು. ಹಂಡಿಬಡಗನಾಥ ಮಠಕ್ಕೆ ಝುಂಡಿ ಬಂದಾಗ, ಹುಬ್ಬಳ್ಳಿಯ ರಾವುಳ ಸಮಾಜದವರು,  ಈ ಮಠವನ್ನು ತಮಗೆ ಒಪ್ಪಿಸುವಂತೆ ಅಹವಾಲು ಸಲ್ಲಿಸಿದರು. ಹುಬ್ಬಳ್ಳಿಯಲ್ಲಿ ರಾವುಳ ಜೋಗಿಗಳು ಭೈರವಗುಡಿ ಕಟ್ಟಿಸಿಕೊಂಡಿದ್ದಾರೆ. ಇದನ್ನು ಹಣಗಿಮಠ ಎನ್ನಲಾಗುತ್ತದೆ. ಆದರೆ ಇಲ್ಲಿ ಕದ್ರಿಯಲ್ಲಿರುವಂತೆ ನಾಥಯೋಗಿಗಳು ಇರುವುದಿಲ್ಲ.

* * *[1]      ಪ್ರಾಚೀನ್ ಭರ್ತೃಹರಿ ಗುಹಾಮಹಾತ್ಮ್ಯ, ಪು.೫೧; ಕಡವ ಶಂಭುಶರ್ಮ ಕೃತಿಸಂಚಯ ಪು. ೭೨೪

[2]      ಆಂಧ್ರದಲ್ಲಿ ಒಂದು ಕದ್ರಿಯಿದೆ. ಚಿಕ್ಕಮಗಳೂರು ಸಮೀಪ ಕದ್ರಿಮಿದ್ರಿ ಹಾಗೂ ಕಾರವಾರದ ಸಮೀಪ ಕದ್ರಾ ಎಂಬ ಊರುಗಳಿವೆ. ಇವೂ ಕದಳಿವನಗಳಿದ್ದ ಜಾಗಗಳಾಗಿ ಇದ್ದಿರಬಹುದು.ಚ

[3]      ಬಸವಣ್ಣ ಹಾಗೂ ನೀಲಮ್ಮ ಅವರು ದೇಹತ್ಯಾಗಕ್ಕೆ ಕೂಡಲಸಂಗಮಕ್ಕೆ ಬರುತ್ತಾರೆ. ಸಂಗಮದ ಮತ್ತೊಂದು ಹೆಸರು ಕಪ್ಪಡಿಸಂಗಮ. ಕದಳಿವನಗಳಂತೆ ಕಪ್ಪಡಿ ಸಂಗಮಗಳು ಸಹ ದೇಹತ್ಯಾಗದ ಜಾಗಗಳೆೇನು? ಸಂಗಮದಲ್ಲಿ ಯೋಗಿಗಳು ದೇಹತ್ಯಾಗಗೈದ ಕುರುಹುಗಳಾಗಿ ಚರಣ ಶಿಲ್ಪಗಳಿವೆ.

[4]      ನಾಥರು ಕುದುರೆ ಸವಾರಿ ಮಾಡುತ್ತಿದ್ದ ಬಗ್ಗೆ ಜನಪದ ಸಾಹಿತ್ಯದಲ್ಲಿ ಅನೇಕ ಉಲ್ಲೇಖಗಳು ಬರುತ್ತವೆ. ಕೆಂದನಗುದರಿ ಏರಿಬಂದನು ಬೋರೂವಯ್ಯ ಕೆಂಗೂರಿ ಕಣ್ಣು ತಿರಾವೂತ|ಕೆಂಗಾಲಾಗಿಳದಾ ಕೂದಾರೀಯಾ, ಕೆಂದಕುದುರೆಯ ಮೇಲೆ, ಕೆಂಜೆಡೆ ಬೆನ್ನ ಒಲೆಯುತ| ನನಗುರುವು ಕೆಂಬೆಟ್ಟ ಇಳಿದಾ ಕುದುರೇಯ|

[5]      ನಾಥರಿಗೆ ‘ಬಾವಾಜಿ’ ಎಂಬ ಹೆಸರು ಕರ್ನಾಟಕದ ತುಂಬ ಕೇಳಲು ಸಿಗುತ್ತದೆ. ಸೊಲ್ಲಾಪುರ ಸೀಮೆಯ ಜನಪದ ಹಾಲುಮತ ಮಹಾಕಾವ್ಯದಲ್ಲಿ ಗೋರಖನಿಗೂ, ಮೈಸೂರು ಸೀಮೆಯ  ‘ಪಾರ್ಥನ ಜೋಗೀಹಾಡಿ’ನಲ್ಲಿ ಜೋಗಿಗೂ ಬಾವಾಜಿ ಎನ್ನಲಾಗಿದೆ.

[6]      ಲುಂಕೆಮಲೆ ಪರಮಾರ್ಥ, ಪು. ೨೮೪

[7]      ಬಿ ರಾಜಶೇಖರಪ್ಪ,  ‘ಚಿತ್ರದುರ್ಗದ ರಸಸಿದ್ಧರು’, ಇತಿಹಾಸ ಕಥನ, ಪು.೫೧-೬೭