ಮೈಸೂರಿನ ಮಹಾರಾಜರ ಸರ್ಕಾರದ ದಿವಾನರಿಗೆ ಬಂದ ಹಲವಾರು ಅಹವಾಲುಗಳಲ್ಲಿ ಇದೊಂದು ವಿಶೇಷವೂ ಚಾರಿತ್ರಿಕ ಮಹತ್ವವೂ ಆದ ಅಹವಾಲು ಪತ್ರವಾಗಿತ್ತು. ಇದರ ವರ್ಷ ೧೯೨೫.

ಮೈಸೂರು ಸಂಸ್ಥಾನದ ದಿವಾನ್ ಸಾಹೇಬರವರ ಮಹಾಸನ್ನಿಧಾನಂಗಳಲ್ಲಿ, ನಾಗಮಂಗಲ ತಾಲೂಕು ಶ್ರೀ ಆದಿಚುಂಚನಗಿರಿ ಮಠದ ಶಿಷ್ಯರುಗಳಾದ ಈ ಕೆಳಗೆ ರುಜು ಮಾಡಿರುವ ಬಡರೈತರುಗಳ ವಿನಯಪೂರ್ವಕವಾದ ಅಹವಾಲ್ ಅರ್ಜಿ ಅದಾಗಿ-

ಮಹಾಸ್ವಾಮಿ, ಮೈಸೂರು ಡಿಸ್ಟ್ರಿಕ್ಟು ನಾಗಮಂಗಲ ತಾಲ್ಲೂಕು ನೆಲ್ಲಿಗೆರೆ ಹೋಬಳಿಯಲ್ಲಿರುವ ಶ್ರೀ ಆದಿಚುಂಚನಗಿರಿ ಪರ್ವತದ ಮೇಲೆ ಒಂದು ಕಾಪಾಲಿ ಮಠವಿರುತ್ತದೆ. ಈ ಪೀಠಕ್ಕೆ ಅನಾದಿಯಿಂದಲೂ ಕಾಪಾಲಿ ಮತಸ್ಥರೇ ಪಟ್ಟವನ್ನು ಆಳುತ್ತ ಬರುತ್ತಿದ್ದಾರೆ. ಈ ಕಾಪಾಲಿ ಗುರುಗಳಿಗೆ ಕಾಪಾಲಿಮತಸ್ಥರು, ಗಂಗಡಿಕಾರರು, ಒಕ್ಕಲಿಗರು, ಕುರುಬರು, ಕುಂಬಾರಶೆಟ್ಟರು, ಗಂಗಾಮತಸ್ಥರು, ನಾಯ್ಕರು, ಮಡಿವಾಳಶೆಟ್ಟರು, ದೇವಾಂಗದವರು, ಬಿಳೀಮಗ್ಗದವರು, ಭಾವಸಾರ ಕ್ಷತ್ರಿಯರು, ನಯನ ಕ್ಷತ್ರಿಯರು, ಗಾಣಿಗಶೆಟ್ಟರು, ಬಣಜಿಗ ಶೆಟ್ಟರು, ಅಕ್ಕಸಾಲಿಗರು, ಬುಡುಬುಡಿಕೆಯವರು, ಆದಿಕರ್ಣಾಟಕರು, ಬಡಗರು, ಮಾದಿಗರು ವಗೈರಿ ಇನ್ನೂ ಮುಂತಾದ ಮತಸ್ಥರು ಸಹಾ, ಮೈಸೂರು ಸಂಸ್ಥಾನದಲ್ಲಿಯೂ ನೀಲಗಿರಿ ಕೊಡಗು ಮುಂತಾದ ಅನೇಕ ಭಾಗಗಳಲ್ಲಿಯೂ ಸಹಾ, ಶಿಷ್ಯರುಗಳಾಗಿ ಪ್ರತಿಸಾಲಿನಲ್ಲಿಯೂ ಅವರವರ ಯೋಗ್ಯತಾನುಸಾರ ಕಪ್ಪಕಾಣಿಕೆಯನ್ನು ಕೊಟ್ಟು, ಮಠದ ಗುರುಗಳಿಂದ ತೀರ್ಥಪ್ರಸಾದ ಹೊಂದುತ್ತಿರುವುದು ಆರ್ಷೇಯದಿಂದಲೂ ನಡೆದು ಬಂದಿರುತ್ತೆ ಮಹಾಸ್ವಾಮಿ,

ಈಗ್ಗೆ ಎರಡು ವರ್ಷಗಳ ಕೆಳಗೆ ೬೭ನೇ ಪಟ್ಟಾಧಿಕಾರಿಗಳಾದ ಶ್ರೀ ತೇಜನಾಥ ಸ್ವಾಮಿಯವರು ಶಿವಾಧೀನ ಹೊಂದಿದರು. ಇವರಿಗೆ ಹಿಂದೆ ಪಟ್ಟವನ್ನು ಆಳುತ್ತಿದ್ದ ಗುರುಗಳೆಲ್ಲರು ತಮಿಗೆ ಸಮ್ಮಂಧಪಟ್ಟ ಬಾರಾಪಂತು ಮಠಗಳಿಂದ ಬಾಲಬ್ರಹ್ಮಚಾರಿಯಾದ ಶಿಷ್ಯನನ್ನು ತಮ್ಮ ಮಠಕ್ಕೆ ಕರಸಿಕೊಂಡು, ವಿದ್ಯಾಬುದ್ದಿಯನ್ನು ಕಲಿಸಿ, ತಮ್ಮ ಮತಶಾಸ್ತ್ರದ ಪ್ರಕಾರ ದೀಕ್ಷೆ ಉಪದೇಶವನ್ನು ಕೊಟ್ಟು ಶಿಷ್ಯನನ್ನಾಗಿ ಮಾಡಿಕೊಂಡು, ತಮ್ಮ ಮರಣಾನಂತರ ಪಟ್ಟವನ್ನು ಕಟ್ಟುವ ಅನುಜ್ಞೆಯನ್ನು ಕೊಡುವದು ಪ್ರತಿಗುರುಗಳಲ್ಲಿಯೂ ನಡದು ಬರುತ್ತಾ ಇತ್ತು. ನಿನ್ನೆ ಕಾಲವಾದ ಶ್ರೀ ತೇಜನಾಥಸ್ವಾಮಿವರು ಶಿಷ್ಯನನ್ನು ನೇಮಕ ಮಾಡಿಕೊಳ್ಳದೆ ಅಕಸ್ಮಾತ್ತಾಗಿ ಮೃತಿಯನ್ನು ಹೊಂದಿದರು…ಈ ಮಠದ ಶಿಷ್ಯರುಗಳ ಪೈಕಿ ಗಂಗಡಿಕಾರ ಒಕ್ಕಲಿಗರಲ್ಲಿ ಕೆಲವರು ತಮ್ಮ ಒಂದೇ ಮತಸ್ಥರಾದ ಮಠಕ್ಕೆ ಶಿಷ್ಯರಲ್ಲದ ಅನೇಕ ಜನಗಳಿಗೆ ಪ್ರೋಮಾಡಿ, ಅನೇಕ ತಮ್ಮ ಮತಸ್ಥರನ್ನು ನೆನ್ನೆ ಕಳೆದ ೨ನೇ ಮಹಾಶಿವರಾತ್ರಿ ದಿವಸ ಸೇರಿಸಿಕೊಂಡು ಮೀಟಿಂಗು ನಡೆಸಿ, ತಮ್ಮ ಮತಸ್ಥರನ್ನು ಗುರುಗಳನ್ನಾಗಿ ಮಾಡಿಕೊಳ್ಳುವಂತೆ ಅಭಿಪ್ರಾಯಪಟ್ಟು, ತಮ್ಮ ಮಠದ ದರಸಗುಪ್ಪೆ ಗುರುರಾಮಪ್ಪನವರಿಗೆ ಪಟ್ಟವನ್ನು ಕಟ್ಟುವದಾಗಿ ತಮ್ಮಲ್ಲಿ ತಾವೇ ಒಪ್ಪಿಗೆಯನ್ನು ತೆಗೆದುಕೊಂಡು, ಹಜರತ್ ಮುಜರೈ ಕಮೀಷನರ್ ಸಾಹೇಬರವರ ಕೋರ್ಟಿನಲ್ಲಿ ವಿವಾದ ನಡೆಸುತ್ತಲಿಧಾರೆ. ಇದು ಬಹಳ ಅನ್ಯಾಯವಾಗಿದೆ ಮಹಾಸ್ವಾಮೀ,

ಆರ್ಷೇಯದಿಂದಲೂ ಸದರಿ ಮಠಕ್ಕೆ ಕಾಪಾಲಿ ಮತದವರೆ ಗುರುಗಳಾಗಿ ಬಂದಿದ್ದಾರೆಯೆ ಹೊರ್ತು ಇತರ ಶಿಷ್ಯಮಂಡಲಿಗಳ ಮತಸ್ಥರಲ್ಲಿ ಗುರುಗಳಾಗಿ ಬಂದಿಲ್ಲಾ. ಸದ್ಯದಲ್ಲಿ ಗಂಗಡಿಕಾರ್ ಒಕ್ಕಲಿಗರು ತಮ್ಮ ಮತದ ಗುರು ನೇಮಿಸಿಕೊಳ್ಳುವ ವಿಚಾರದಲ್ಲಿ ದಯಾಳುವಾದ ತಾವು ಯೋಚಿಸತಕ್ಕ ಅಮಲ್ ಆಗಿರುತ್ತೆ ಮಹಾಸ್ವಾಮೀ. ಗಂಗಡಿಕಾರ್ ಒಕ್ಕಲಿಗರ ಮಂಡಲಿಯಲ್ಲಿ ಏನಾದರು ಈ ಮಠಕ್ಕೆ ಗುರುಗಳಾದರೆ, ಬಾಕಿ ಉಳಿದ ಎಲ್ಲಾ ಮತದ ಕೋಮಿನವರಿಗು ಈ ಮಠಕ್ಕೆ ಹೋಗುವದಕ್ಕೆ ಆಗಲಿ, ತೀರ್ಥಪ್ರಸಾದಕ್ಕೆ ಆಗಲಿ, ಪೂಜೆ ಪುನಸ್ಕಾರ ವಗೈರೆ ಬಿನ್ನೈಸುವ ಸೇವಾವೃತ್ತಿಗಳಿಗೆಲ್ಲಾ ಬಹಳ ತೊಂದರೆಗಳುಂಟಾಗಿ, ನಮ್ಮ ನೆಮ್ಮದಿಗೆ ಭಂಗಗಳುಂಟಾಗುತ್ತೆ ಮಹಾಸ್ವಾಮಿ,

ಈ ಮಠಪೀಠಕ್ಕೆ ಕಾಪಾಲಿ ದೀಕ್ಷಾಬದ್ಧರಾದ ಹಾಲಿ ವಿಠಲಮಠದಲ್ಲಿ ವಾಸವಾಗಿರುವ ರಾಜಾ ಲಕ್ಷ್ಮೀನಾಥಜೀಯವರು ಸಕಲ ಪಾಂಡಿತ್ಯ ವಿದ್ಯಾವಂತರಾಗಿಯೂ ಒಳ್ಳೇ ಆಚಾರ ವಿಚಾರವಂತರಾಗಿಯೂ ಇರುತ್ತಾರೆ. ಇವರನ್ನು ಈ ಪೀಠಕ್ಕೆ ಗುರುಗಳನ್ನಾಗಿ ಮಾಡುವದರಲ್ಲಿ ಯಾವ ವಿಧವಾದ ಅಭ್ಯಂತರವೂ ಇರುವುದಿಲ್ಲ. ಈ ವಿಚಾರವನ್ನು ಶ್ರಿಂಗೇರಿ ಜಗದ್ಗುರು ಮಹಾಸ್ವಾಮಿಗಳವರಿಂದಾಗಲಿ ಬಾರಾಪಂತು ಮಠಗಳಿಂದಾಗಲಿ ತಿಳಿದಲ್ಲಿ ತಮ್ಮ ದಿವ್ಯಚಿತ್ತಕ್ಕೆ ವೇದ್ಯವಾಗುತ್ತೆ ಮಹಾಸ್ವಾಮೀ.

[1]

ಈ ಅಹವಾಲಿನ ವಿಷಯ  ತನಗೆ ತಾನೇ ಸ್ಪಷ್ಟವಾಗಿದೆ. ಆದಿಚುಂಚನಗಿರಿ ಮಠವು ನಾಥರಿಂದ ಜಾರಿಹೋಗುವ ಸನ್ನಿವೇಶದಲ್ಲಿ ಬಾರಾ ಪಂಥದವರು ಮಾಡಿದ ಹೋರಾಟಗಳ ಭಾಗವಾಗಿ ಈ ಪತ್ರವಿದೆ. ಇಲ್ಲಿ ಗಮನಿಸಬೇಕಾದುದು ಪತ್ರದ ಭಾಷೆ. ಅದರ ಧಾಟಿ. ಅದರ ಹಿಂದಿರುವ ಅಸಹಾಯಕತೆ. ಚರಿತ್ರೆಯಲ್ಲಿ ಅದೆಷ್ಟೊ ಮಠಗಳು ನಾಥರ ಕೈಬಿಟ್ಟು ಹೋಗಿವೆ. ಆದರೆ ಪ್ರಾಚೀನವಾದ  ಹಾಗೂ ಬಹುಸಂಖ್ಯಾತರಾದ ಒಕ್ಕಲಿಗರು ಭಕ್ತರಾಗಿದ್ದ ಆದಿಚುಂಚನಗಿರಿ ಮಠ ಬಿಟ್ಟುಹೋಗಿದ್ದು, ನಾಥಪಂಥದ ಚರಿತ್ರೆಯಲ್ಲಿ ದೊಡ್ಡ ವಿದ್ಯಮಾನವಾಗಿತ್ತು. ಆಘಾತಕಾರಿ ಸಂಗತಿಯಾಗಿತ್ತು. ನಾಟಕೀಯ ಘಟನೆಗಳಿಂದ ಕೂಡಿರುವ ಈ ವಿದ್ಯಮಾನ ಆರಂಭವಾಗಿದ್ದು ಹೀಗೆ. ಮಠದ ಮಹಂತರಾದ ಯೋಗಿ ತೇಜನಾಥರು ಸರ್ಕೀಟಿನಲ್ಲಿ ಇದ್ದಾಗ (೧೯೨೪), ಕೆಆರ್‌ಪೇಟೆಯಲ್ಲಿ ಅನಿರೀಕ್ಷಿತವಾಗಿ ತೀರಿಕೊಂಡರು. ೧೨ ವರುಷಕ್ಕೊಮ್ಮೆ ಝುಂಡಿ ಬಂದು ಮಠಾಧಿಪತಿಯನ್ನು ನೇಮಕ ಮಾಡುತ್ತಿದ್ದ ಪದ್ಧತಿ ಚುಂಚನಗಿರಿಯಲ್ಲಿ ಇರಲಿಲ್ಲ. ಬದಲಾಗಿ ನಾಥದೀಕ್ಷೆ ಪಡೆದ ಕಿರಿವಯಸ್ಸಿನ ಶಿಷ್ಯನನ್ನು ಚುಂಚನಗಿರಿ ಮಠದ ಅಧಿಪತಿಯು ಬಾರಾಪಂಥದವರಿಂದ ಪಡೆದು, ಮಠದಲ್ಲಿಟ್ಟುಕೊಂಡು, ತಾನು ನಿರ್ಗಮಿಸುವ ದಿನಗಳಲ್ಲಿ ಪಟ್ಟ ವಹಿಸಿಕೊಡುವ ಪದ್ಧತಿಯಿತ್ತು. ಆದರೆ ತೇಜನಾಥರು ಉತ್ತರಾಧಿಕಾರಿಯನ್ನು ನೇಮಕ ಮಾಡಿಕೊಂಡಿರಲಿಲ್ಲ.  ಇಂತಹ ರಿಕ್ತ ಸನ್ನಿವೇಶದಲ್ಲಿ  ಮಠದ ಸಾಂಪ್ರದಾಯಕ ಭಕ್ತರಾಗಿದ್ದ ಒಕ್ಕಲಿಗ ನಾಯಕರು ಮಠವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ನಿರ್ಧರಿಸಿದರು.  ಇದಕ್ಕೆ ಸಾಕಷ್ಟು ಪ್ರತಿ ರೋಧಗಳು ಬಂದವು. ಈ ಪ್ರಕರಣದಲ್ಲಿ ಒಕ್ಕಲಿಗರಿಗೂ ಕಾಪಾಲಿಕರಿಗೂ ಬಾರಾ ಪಂಥದವರಿಗೂ ವ್ಯಾಜ್ಯವಾಗಿ, ಅದು ಸುಮಾರು ಅರ್ಧ ಶತಮಾನ ಕಾಲ ಕೋರ್ಟುಗಳಲ್ಲಿ ನಡೆಯಿತು.  ಕೊನೆಗೂ ಚುಂಚನಗಿರಿ ಮಠವು ನಾಥಪಂಥಕ್ಕೆ ಮರಳಿ ಸಿಗಲಿಲ್ಲ.

ಪ್ರಾಚೀನ ಕಾಪಾಲಿಕ ಪೀಠಗಳಲ್ಲಿ ಒಂದಾದ ಆದಿಚುಂಚನಗಿರಿಯು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿದೆ. ಇಲ್ಲಿನ ಬೆಟ್ಟದಲ್ಲಿ ಭೈರವನ ಗುಡಿಯೂ ಹಳೆಯ ನಾಥಮಠವೂ ಇದೆ. ಸದ್ಯಕ್ಕೆ ಮಠದ ಪರಿಸರದಲ್ಲಿ  ಹಿಂದಿನ ನಾಥರ ಸಮಾಧಿಗಳು ಗೋಚರಿಸುವುದಿಲ್ಲ. ಮಠವು ನಾಥಪಂಥದಿಂದ ಹೊರಹೋದ ನಂತರ ಪಟ್ಟವೇರಿದ ಮೂವರು ಮಠಾಧೀಶರ ಸಮಾಧಿಗಳಿವೆ. ಭೈರವನ ಗುಡಿ ಚಿಕ್ಕದಾಗಿದೆ. ಜೋಗಿಮಠವು ವಿಶಾಲವಾಗಿದೆ. ಯೋಗಸಾಧನೆ ಮುಖ್ಯವಾಗಿರುವ ಮಠಗಳಲ್ಲಿ ಯಾವಾಗಲೂ ಗುಡಿ ಪೂಜೆಗಳು ಮುಖ್ಯವಲ್ಲವಾದ ಕಾರಣ  ಈ ವ್ಯತ್ಯಾಸ ಇರುತ್ತದೆ. ಗುಡಿ ಚಿಕ್ಕದಾದರೂ ಭೈರವನು ಈ ಭಾಗದ ಜನಪ್ರಿಯ ದೈವವಾಗಿ, ಸಮುದಾಯಗಳಲ್ಲಿ ನೆಲೆನಿಂತಿದ್ದಾನೆ. ಗುಡಿಯ ಮುಂದೆ ಉರಿಗದ್ದುಗೆಯಿದೆ. ಧುನಿಯಿದ್ದ ನಾಗಚಾವಡಿಯಿದೆ. ಪಕ್ಕದಲ್ಲಿ ಮೇದರ ತಲೆಗಳು ಎನ್ನಲಾಗುವ ರುಂಡಶಿಲ್ಪಗಳಿವೆ. ಈಚೆಗೆ ಅವನ್ನು ಸ್ಥಳಾಂತರ ಮಾಡಿದೆ. ಬೆಟ್ಟದ ಮತ್ತೂಮೇಲೆ ಕತ್ತಲಸೋಮೇಶ್ವರ, ಗವಿಸಿದ್ಧೇಶ್ವರ, ಗಂಗಾಧರೇಶ್ವರ, ಮಲ್ಲೇಶ್ವರ, ಚಂದ್ರಮೌಳೇಶ್ವರ ಗುಡಿಗಳಿವೆ. ಇವುಗಳಲ್ಲಿ ಕತ್ತಲಸೋಮೇಶ್ವರ ಗವಿಗಂಗಾಧರೇಶ್ವರ ಗುಡಿಗಳು ಮೂಲತಃ ಗುಹೆಗಳು. ಬಹುಮಟ್ಟಿಗೆ ಯೋಗಿಗಳು ಸಾಧನೆಗಾಗಿ ಬಳಸುತ್ತಿದ್ದ ಜಾಗಗಳಿವು. ಇಡೀ ಚುಂಚನಗಿರಿ ಬೆಟ್ಟವೇ ಇಂತಹ ಗುಹೆಗಳಿಂದ ಕೂಡಿದೆ. ನಾಥಪಂಥ ಇರುವ ಕದ್ರಿ, ಚಂದ್ರಗುತ್ತಿ, ಲುಂಕೆಮಲೆ, ಹಂಡಿಬಡಗನಾಥ, ಸೀತಿಬೆಟ್ಟ, ಯಾಣ, ಎಲ್ಲವೂ  ಗುಹೆಯುಳ್ಳ ಬೆಟ್ಟಗಳಲ್ಲಿದ್ದು, ತಾಂತ್ರಿಕ ಆಚರಣೆಗಳಿಗೆ ಬೇಕಾದ ನಿರ್ಜನತೆ ಪಡೆದಿವೆ. ಆದರೆ ಹಿಂದೆ ಇದ್ದಿರಬಹುದಾದ ನಿರ್ಜನತೆ ಈಗಿಲ್ಲ. ಮೊದಲು ಕೇವಲ ಗವಿಗಳಿದ್ದು, ಮುಂದೆ ಗುಡಿಗಳು ನಿರ್ಮಾಣವಾದವು ಎಂದು ಊಹಿಸಬಹುದು. ಬೆಟ್ಟದ ಕೆಳಗೆ ಬಿಂದು ಸರೋವರವಿದೆ. ನಾದ ಮತ್ತು ಬಿಂದುಗಳು ಯೋಗದ ಪರಿಭಾಷೆಗಳು.

ಆದಿಚುಂಚನಗಿರಿಗೆ   ‘ಆದಿ’ ಎಂಬ ವಿಶೇಷಣವೂ   ‘ಚುಂಚ’ ಎಂಬ ಹೆಸರೂ ಯಾಕೆ ಬಂತು? ಚುಂಚ ಎಂದರೆ ಉದ್ದ ಮೂಗುಳ್ಳವನೆಂದೂ ಇದು ಭೈರವನ ಪರ್ಯಾಯ ನಾಮವೆಂದೂ ಒಂದು ವಾದವಿದೆ.[2] ನಾಥರ ದಾಖಲೆಗಳಲ್ಲಿ ಈ ಮಠವನ್ನು  ಆದಿಗುರುಕುಲ  ಎನ್ನಲಾಗಿದೆ. ಜತೆಗೆ ಈ ಮಠವನ್ನಾಳಿದ ನಾಥರ ಪರಂಪರೆಯು ಆದಿರುದ್ರನಿಂದ ಶುರುವಾಗುತ್ತದೆ. ಆದಿರುದ್ರ ಶಿವನ ಹೆಸರು ಇರಬಹುದು. ನಾಥರಲ್ಲಿ ಶಿವನ ಹೆಸರು ಆದಿನಾಥ.  ಆದಿರುದ್ರ ಭೈರವನ ಹೆಸರೂ ಇರಬಹುದು. ಭೈರವನು ಒಬ್ಬ ಸಿದ್ಧ ಹಾಗೂ ಸಿದ್ಧರಿಗೆ ಗುರು ತಾನೇ? ‘ಆದಿಚುಂಚನಗಿರಿ ಸ್ಥಲ ಮಾಹಾತ್ಮ್ಯ’  ಎಂಬ ಕ್ಷೇತ್ರಪುರಾಣದಲ್ಲಿ ಇರುವ ಕತೆ ಇದಕ್ಕೆ ಪೂರಕವಾಗಿದೆ. ಇದರಲ್ಲಿ ಒಮ್ಮೆ ಸೂತಮುನಿಯು  ‘ಸಿದ್ಧಚಾರಣರಿಂದ ಸೇವೆ ಪಡೆಯುವ ಕಪಾಲ ಶೃಂಗಧಾರಿ’ ಯಾದ ಆದಿರುದ್ರನಿಗೆ ಪ್ರಾರ್ಥಿಸುತ್ತಾನೆ.  ಇದರ ಫಲವಾಗಿ ಕಪಾಲ ಶೃಂಗ ತ್ರಿಶೂಲಗಳನ್ನು ಧರಿಸಿದ ಸಿದ್ಧನು ಉದ್ಭವಿಸುತ್ತಾನೆ. ಅವನಿಗೆ ರುದ್ರನು ‘ನೀನು ಕಪಾಲ ಯೋಗಿಗಳ ಅಧಿಪತಿಯಾಗಿ ನಾಥರಿಗೆ ಜ್ಞಾನವನ್ನು ನೀಡು’  ಎಂದು ಹರಸಿ ಕಳಿಸುತ್ತಾನೆ. ಆದ ಕಾರಣ, ಚುಂಚನಗಿರಿಯು ಕರ್ನಾಟಕದ ಕಾಪಾಲಿಕ ಮಠಗಳಿಗೆ ಆದಿಸ್ಥಾನದಲ್ಲಿತ್ತು ಎಂದು ಈ ಮಾಹಾತ್ಮ್ಯ ಹೇಳುತ್ತದೆ.

ಚುಂಚನಗಿರಿ ಎಂಬ ಹೆಸರು ಬರಲು ಶಿವನು ಚುಂಚ ಎಂಬ ರಾಕ್ಷಸನನ್ನು ಕೊಂದ  ಜನಪ್ರಿಯ ಪುರಾಣ ಕತೆಯಿದೆ. ಈ ಭಾಗದಲ್ಲಿ ಚುಂಚನಗಿರಿಯ ಹಾಗೆ ಚುಂಚನಕಟ್ಟೆ (ಕೆಆರ್‌ನಗರ) ಚುಂಚನಕುಪ್ಪೆ, ಚುಂಚಘಟ್ಟ  (ಬೆಂಗಳೂರು), ಚುಂಚಗಹಳ್ಳಿ (ಮದ್ದೂರು), ಚುಂಚನಹಳ್ಳಿ (ಕೊರಟಗೆರೆ) ಎಂಬ ಊರುಗಳಿವೆ. ಚುಂಚ ಎಂದರೆ ಕೆದರಿದ ಜಟೆಯುಳ್ಳವನು. ಭೈರವನು ಕೆದರಿದ ಜಟೆಯುವನು. ಆದ್ದರಿಂದ ಚುಂಚನಗಿರಿ ಎಂದರೆ ಭೈರವನಬೆಟ್ಟ ಎಂದೆಲ್ಲ ವ್ಯಾಖ್ಯಾನಿಸಲಾಗಿದೆ.[3]

ಚುಂಚನಕಟ್ಟೆಯಿಂದ ಎಂಟು ಘಂಟೆಗೆ ಬಂದ ಪಂಚಮುಖದ ಪರದೇಶೀ ಭೈರುವ ಚುಂಚನಗಿರಿಯಲ್ಲಿ ನೆಲೆಗೊಂಡ

ಈ ಹಾಡು ಭೈರವನು ವಲಸೆ ಬಂದುದನ್ನು ಹೇಳುತ್ತಿದೆ. ಹಾಗೆ ಬಂದ ಭೈರವನು  ಚುಂಚನಗಿರಿ ಹತ್ತಿ ಪರಿಶೀಲಿಸಿ ‘‘ಅಗ್ರಾರಕ್ಕಿಂತ ಇದು ಲೇಸು’’ ಎಂದು ನೆಲೆನಿಲ್ಲುತ್ತಾನೆ.  ಚುಂಚನಕಟ್ಟೆಯು ಭೈರವನ ಮೊದಲ ಜಾಗವಾಗಿದ್ದು, ಅಲ್ಲಿಗೆ ಬಂದ ರಾಮನು ಈ ಜಾಗ ಪಡೆಯಲು ಭೈರವನನ್ನು ಉಪಾಯ ಮಾಡಿ ಓಡಿಸಿದನು ಎಂಬ ಮಿತ್‌ಗಳಿವೆ. ಕಾವೇರಿ ತೀರದಲ್ಲಿರುವ ಚುಂಚನಕಟ್ಟೆಯು ವೈಷ್ಣವರಿಗೆ ಅಗತ್ಯ ಎನಿಸಿರಬಹುದು. ಹೊಯ್ಸಳರ ಕಾಲದಲ್ಲಿ ತಮಗೆ ಸಿಕ್ಕ ರಾಜಮನ್ನಣೆಯನ್ನು ಬಳಸಿ ವೈಷ್ಣವರು ಅದನ್ನು ಕಾಪಾಲಿಕರಿಂದ  ಸೆಳೆದುಕೊಂಡಿರಬಹುದು; ಚುಂಚನಗಿರಿ ಭೈರವನು ತಿರುಪತಿ ತಿಮ್ಮಪ್ಪನ ಚಿನ್ನದ ರಥವನ್ನು ಕದ್ದುತಂದನು. ಇದಕ್ಕಾಗಿ ಕದ್ದುಮುಚ್ಚಿ ರಾತ್ರಿ ಹೊತ್ತಲ್ಲಿ ತೇರು ಎಳೆಯಲಾಗುತ್ತದೆ ಎಂದೂ ಕಥೆಯಿದೆ. ಈಗಲೂ ಭೈರವನ ತೇರನ್ನು ನಡುರಾತ್ರಿ ಎಳೆಯಲಾಗುತ್ತದೆ. ಬಳ್ಳಾರಿ ಸೀಮೆಯ ಮೈಲಾರನೂ ತಿರುಪತಿಯ ತಿಮ್ಮಪ್ಪನಲ್ಲಿ ಸಾಲ ಮಾಡಿದವನು.  ಶೈವತಾಂತ್ರಿಕ ಪಂಥದ ದೈವಗಳು ವೈಷ್ಣವ ದೈವಗಳಲ್ಲಿ ಮಾಡುವ ಈ ಸಾಲ, ಕಳ್ಳತನ ಹಾಗೂ ಜಗಳಗಳು ಸ್ವಾರಸ್ಯಕರವಾಗಿವೆ. ವೈಷ್ಣವರ ಕೇಂದ್ರವಾಗಿದ್ದ ಮೇಲುಕೋಟೆಯು ಕಾಪಾಲಿಕ ಕೇಂದ್ರವಾಗಿದ್ದ ಚುಂಚನಗಿರಿಗೆ ತೀರ ಸಮೀಪದಲ್ಲೇ ಇದೆ. ರಾಮಾನುಜರು ಕಾಪಾಲಿಕರನ್ನು ಕುರಿತು ನೀಡುವ ಬೀಭತ್ಸ ನೋಟಗಳಿಗೆ ಚುಂಚನಗಿರಿಯೂ ಒಂದು ಪ್ರೇರಣೆ ಇರಬಹುದು. ಹೀಗಾಗಿ ಈ ಸಂಘರ್ಷ ಸೂಚಕ ಮಿತ್‌ಗಳು ಹುಟ್ಟಿದವು.

ಚುಂಚನಗಿರಿಯು ಲಾಗಾಯ್ತಿನಿಂದಲೂ ಕಾಪಾಲಿಕವಾಗಿದ್ದು, ಯಾವುದೊ ಒಂದು ಕಾಲಘಟ್ಟದಿಂದ ನಾಥರ ಕೇಂದ್ರವಾಯಿತು. ಇದು ನಾಥವೊ ಕಾಪಾಲಿಕವೊ ಎಂಬ ಬಗ್ಗೆ ವಿದ್ವಾಂಸರಲ್ಲಿ ಗೊಂದಲವಿತ್ತು. ಚುಂಚನಗಿರಿಯ ೧೦೨೯ರ ಶಾಸನದ ಪ್ರಕಾರ ಛಾಯಾ ಪರಮೇಶ್ವರ ಮಗ ಸ್ಥಂಭನಾಥ, ಅವನ ಮಗ ದ್ವೀಪನಾಥ, ಅವನ ಶಿಷ್ಯ ಮೌನಿನಾಥ, ಅವನ ಶಿಷ್ಯ ರೂಪನಾಥ.  ಚಿದಾನಂದ ಮೂರ್ತಿಯವರು  ‘ನಾಥ ಸಂಪ್ರದಾಯವು ಕರ್ಣಾಟಕದಲ್ಲಿತ್ತು ಎಂಬುದಕ್ಕೆ ಶಾಸನಾಧಾರಗಳಿಲ್ಲ’ ಎಂದು ಆರಂಭದಲ್ಲಿ  ಭಾವಿಸಿದ್ದರು. ಮೇಲ್ಕಾಣಿಸಿದ ಶಾಸನ ಸಿಕ್ಕಬಳಿಕ  ‘ಇವರು ನಾಥ ಸಂಪ್ರದಾಯದವರೆಂದು ಕರೆಯಲು ಆಧಾರಗಳಿಲ್ಲ’ ಎಂದರು. ಕೊನೆಗೆ ಚುಂಚನಗಿರಿಯಲ್ಲಿ ನಾಥಪಂಥ ಇತ್ತೆನಲು ಈ ಶಾಸನ  ಸ್ಪಷ್ಟಾಧಾರ ಎಂದು ಒಪ್ಪಿಕೊಂಡರು.[4] ಕನ್ನಡದಲ್ಲಿ ಕಾಪಾಲಿಕರಿಗೂ ನಾಥರಿಗೂ ನಡುವೆ ಬಹಳ ಸಾಮ್ಯಗಳಿರುವ ಕಾರಣ, ಇಂತಹ ಗೊಂದಲಗಳು ಸಹಜ. ಚುಂಚನಗಿರಿಯಲ್ಲಿ ಇದ್ದದು ಕಾಪಾಲಿಕ ರೂಪದ ನಾಥ. ಕದ್ರಿಯಲ್ಲಿ ಇದ್ದುದು ವಜ್ರಯಾನ ರೂಪದ ನಾಥ. ಚುಂಚನಗಿರಿಯಲ್ಲಿ ನಾಥಪಂಥ ಇದ್ದುದಕ್ಕೆ ಶಾಸನಗಳಲ್ಲದೆ ಇತರೆ ಆಧಾರಗಳೂ ಇವೆ. ಉದಾ.ಮಠದ ಗೋಡೆಯಲ್ಲಿ ಕೆತ್ತಲಾಗಿರುವ ಧ್ಯಾನಭಂಗಿಯ ನಾಥಯೋಗಿಗಳ ಶಿಲ್ಪಗಳು, ಸಿದ್ಧಸಿಂಹಾಸನ, ಜ್ವಾಲಾಪೀಠಗಳು, ಬೆಟ್ಟದಲ್ಲಿರುವ ಗುಹೆಗಳು, ನಾಗಚಾವಡಿಯೆಂಬ ಧುನಿಯ ಜಾಗ, ದೇವನಾಗರಿ ಲಿಪಿಯಲ್ಲಿ ಹಿಂದಿ ಭಾಷೆಯಲ್ಲಿರುವ ನಾಥರ ಸಮಾಧಿ ಶಾಸನಗಳು, ಬಾರಾಪಂಥದ ಪ್ರಸ್ತಾಪ ಹಾಗೂ ಜೋಗಿಗಳಿಗೆ ಜನಪದ ಸಾಹಿತ್ಯದಲ್ಲಿ ‘ಪರದೇಸಿ’ಯೆಂದೂ ‘ತುರುಕಾಣ್ಯ’ದವನೆಂದೂ ಕರೆಯುವುದು ಇತ್ಯಾದಿ.

ಚುಂಚನಗಿರಿಯ ಭೈರವಗುಡಿ, ರುಂಡಶಿಲ್ಪಗಳು, ಕಂಬಗಳ ಮೇಲಿರುವ ರುಂಡಮಾಲಾಧಾರಿ  ದ್ವಾರಪಾಲಕರು, ಬೆಟ್ಟದ ಕೆಳಗಿನ ಹಳ್ಳಿಗಳಲ್ಲಿರುವ ಕಾಪಾಲಿಕ ಸಮುದಾಯ-ಇವು ಕಾಪಾಲಿಕ ಪಂಥದ ಲಕ್ಷಣಗಳನ್ನು ಸೂಚಿಸುತ್ತವೆ. ರುಂಡಶಿಲ್ಪಗಳು ನರಬಲಿಗೆ ಸಂಬಂಧಿಸಿದವು.  ಬಹುಶಃ ಬಲಿ ಹೋದವರವು. ಇವನ್ನು ಮುಖದಲ್ಲಿ ವೀರತನ ಇರುವಂತೆ ಕಡೆಯಲಾಗಿದೆ. ಇಂತಹ ರುಂಡಗಳು ಲುಂಕೆಮಲೆ ಮೈಲಾರ ಒಳಗೊಂಡಂತೆ ಕರ್ನಾಟಕದ ಅನೇಕ ಭೈರವಕ್ಷೇತ್ರಗಳಲ್ಲಿ ಹಾಗೂ ಕಾಪಾಲಿಕದಿಂದ ನಾಥವಾಗಿ ರೂಪಾಂತರಗೊಂಡ ಮಠಗಳಲ್ಲಿ ಕಾಣುತ್ತವೆ. ಚುಂಚನಗಿರಿಯಲ್ಲಿರುವ ರುಂಡಶಿಲ್ಪಗಳು ಭೈರವನನ್ನು ಕಡಿದು ಗಾಯಮಾಡಿದ ತಪ್ಪಿಗೆ ಸತ್ತ ಮೇದರ ತಲೆಗಳು ಎಂಬ ಮಿತ್ ಸಹ ನರಬಲಿಯನ್ನೇ ಸೂಚಿಸುತ್ತದೆ.  ಇಲ್ಲಿನ ‘ಮೇದರ’ ಎಂಬುದು ಮಾದರ ಆಗಿರಬಹುದೆ ಎಂಬ ಸಣ್ಣ ಅನುಮಾನವಿದೆ. ಸಾಮಾನ್ಯ ವಾಗಿ ದಲಿತರು ನರಬಲಿ ಆಗಿರುವ ಪ್ರಸಂಗಗಳೇ ಹೆಚ್ಚು. ಈ ಕಾಪಾಲಿಕ ಮಠವು ಚರಿತ್ರೆಯ ಯಾವ ಕಾಲಘಟ್ಟದಲ್ಲಿ ನಾಥಪಂಥವನ್ನು ಒಳಗೊಂಡಿತು ಎಂಬುದು ಖಚಿತ ವಾಗಿ ತಿಳಿಯದು. ಆದರೆ ಕಾಪಾಲಿಕರೂ ನಾಥರೂ ಇಲ್ಲಿ ಒಟ್ಟಿಗೆ ಇದ್ದರು. ಚುಂಚನಗಿರಿಯ (೧೦೨೯) ದೇವನಾಗರಿ ಶಾಸನದಲ್ಲಿ ರೂಪಶಿವನ ಹೆಸರಿದೆ. ಈ ಲೆಕ್ಕದಲ್ಲಿ ೧೦ನೇ ಶತಮಾನದಿಂದಲೇ ಇಲ್ಲಿ ಕಾಪಾಲಿಕ-ನಾಥಪಂಥ ನೆಲೆಸಿತ್ತು ಎಂದಾಗುತ್ತದೆ. ‘ಆದಿಚುಂಚನಗಿರಿ ಸ್ಥಲಮಾಹಾತ್ಮ್ಯ’ ಪ್ರಕಾರ ಚುಂಚನಗಿರಿಯಲ್ಲಿ ಈತನಕ ೬೮ ಯೋಗಿಗಳು ಆಗಿ ಹೋಗಿದ್ದಾರೆ. ಅವರೆಂದರೆ:

ಆದಿರುದ್ರ, ಕರ್ಮನಾಥ್, ಸಿದ್ಧಯೋಗ್ಯವತಾರ, ಶಿವನಾಥ್, ಹರಿನಾಥ್, ಬ್ರಹ್ಮನಾಥ್, ಗಿರಿಜಾನಾಥ್, ಲಕ್ಷ್ಮೀನಾಥ್, ವಾಣಿನಾಥ್, ಸೋಮನಾಥ್ (ಚಾಮನಾಥ್), ಸೌಮ್ಯನಾಥ್, ಗುರುನಾಥ್, ಭಾರ್ಗವನಾಥ್, ಮಂದನಾಥ್, ತಮೋನಾಥ್, ಕೇತುನಾಥ್, ವಜ್ರನಾಥ್, ಅಜ್ಞೇಯನಾಥ್, ಕೌಲನಾಥ್ (ಕಾಲನಾಥ್), ನಿರುತನಾಥ್, ಸಿಂಧೂನಾಥ್, ಪವನನಾಥ್, ಕುಬೇರನಾಥ್, ಈಶನಾಥ್, ಧರಣಿನಾಥ್, ಮೇಘನಾಥ್, ಕೈಲಾಸನಾಥ್, ಕ್ಷೀರಾಬ್ಧಿನಾಥ್, ಸತ್ಯಲೋಕನಾಥ್, ವಿಶ್ವನಾಥ್, ಕಾಶೀನಾಥ್, ಗಂಗಾನಾಥ್,  ಕಲ್ಯಾಣನಾಥ್, ಶಂಕರನಾಥ್, ಪ್ರೇಮನಾಥ್, ಪಂಪಾನಾಥ್, ವಿರೂಪಾಕ್ಷನಾಥ್, ಹರಿನಾಥ್, ರಾಮನಾಥ್, ರಂಗನಾಥ್, ಗುರೂಜಿನಾಥ್, ಸಿದ್ಧನಾಥ್, ಭಜನನಾಥ್, ಶಾಂತಿನಾಥ್, ಸೋಮನಾಥ್, ಶಿವನಾಥ್, ವಸಂತನಾಥ್, ಮೆಹರನಾಥ್, ಗಣೇಶನಾಥ್, ಪಾರ್ಶ್ವನಾಥ್, ಧರ್ಮನಾಥ್, ಭೈರವನಾಥ್, ನಾದಿನಾಥ್(ವಾದಿನಾಥ್), ಸಂಪನ್ನಾಥ್, ಠೀಕರನಾಥ್(ಟೀಕಾನಾಥ್), ಗಂಗಾನಾಥ್, ಸ್ಥಾವರನಾಥ್, ಶಿವನಾಥ್, ಕುರುಕ್ಷೇತ್ರನಾಥ್,  ವಾಸವನಾಥ್(ಬಸವನಾಥ್), ಸಾಯರನಾಥ್, ಪ್ರೇಮನಾಥ್, ಧೀರಜನಾಥ್, ಸುಂದರನಾಥ್,  ಆದಿತ್ಯನಾಥ್, ತೇಜನಾಥ್

ಈ ಪಟ್ಟಿಯ ಆಧಾರದಲ್ಲಿ ಚುಂಚನಗಿರಿಗೆ ಸುಮಾರು ೮೦೦ ವರುಷಗಳ  ನಾಥ ಪರಂಪರೆಯಿದೆ ಎಂದು ಗೊತ್ತಾಗುತ್ತದೆ. ಇಲ್ಲಿನ ಕೆಲವು ಹೆಸರುಗಳು ಊಹೆಯನ್ನು ಕೆರಳಿಸುತ್ತವೆ. ವಜ್ರನಾಥ ಹಾಗೂ ಕೌಲನಾಥ ಇವು ನಾಥರ ಜತೆ ವಜ್ರಯಾನ ಮತ್ತು ಕೌಳಪಂಥದ ಸಂಗವನ್ನು ಹೇಳುತ್ತಿವೆ. ಪಂಪಾನಾಥ ವಿರೂಪಾಕ್ಷನಾಥ, ಬಸವನಾಥರ ಹೆಸರುಗಳು, ಹಂಪಿಯ ಪಂಪಾಪತಿ, ವಿರೂಪಾಕ್ಷ ಹಾಗೂ ಕಲ್ಯಾಣದ ಬಸವಣ್ಣನವರನ್ನು ನೆನಪಿಸುತ್ತಿವೆ. ಇವರಲ್ಲಿ ಯಾರು ಕನ್ನಡಿಗರಿದ್ದರೋ ಹೆಸರ ಆಧಾರದಲ್ಲಿ ಊಹಿಸಲಾಗದು. ತೇಜನಾಥರು ಮಾತ್ರ ಬಾರಾಪಂಥದ ಕೊನೆಯ ಅಧಿಪತಿಯಾಗಿದ್ದರು.

ಉತ್ತರಾಧಿಕಾರಿ ಹುಡುಕಾಟ

ತೇಜನಾಥರು ತೀರಿಕೊಂಡ ಕೂಡಲೇ ಉತ್ತರಾಧಿಕಾರಿ ಹುಡುಕುವ ಕೆಲಸ ಶುರುವಾಯಿತು. ಒಕ್ಕಲಿಗರಿಗೆ ಇದು ಮಠವನ್ನು ಉತ್ತರ ಭಾರತದ ನಾಥಪಂಥೀಯರ ಹಿಡಿತದಿಂದ ತಪ್ಪಿಸಲು ಸಿಕ್ಕ ಚಾರಿತ್ರಿಕ ಅವಕಾಶವಾಗಿತ್ತು.   ೨೦ನೇ ಶತಮಾನದ ಮೊದಲ ಭಾಗದಲ್ಲಿ ಮೈಸೂರು ರಾಜ್ಯದಲ್ಲಿ ಶೂದ್ರ ಚಳುವಳಿ ನಡೆದು,  ಭೂಮಿಯುಳ್ಳ ಗಂಗಡಿಕಾರ ಒಕ್ಕಲಿಗರು ಅಧುನಿಕ ಶಿಕ್ಷಣವನ್ನೂ ತಕ್ಕಮಟ್ಟಿಗೆ  ಸರ್ಕಾರಿ ನೌಕರಿಗಳನ್ನೂ ಪಡೆದವರಾಗಿದ್ದ ಕಾರಣ, ಅವರಲ್ಲಿ ಸಾಕಷ್ಟು ರಾಜಕೀಯ ಜಾಗೃತಿ ಮೂಡಿತ್ತು. ರಾಜಕೀಯ ಅಧಿಕಾರದಲ್ಲಿ ಹೆಚ್ಚಿನ ಹಿಡಿತ ಸಾಧಿಸಲು ಸಮುದಾಯದ  ಸಂಘಟನೆ ಮಾಡುವುದರ ಅಗತ್ಯ ಅವರಿಗೆ ಮನವರಿಕೆಯಾಗಿತ್ತು. ಆದರೆ ಇಂತಹ ಸಂಘಟನೆಗೆ ಬೇಕಾಗಿ ಲಿಂಗಾಯತರಲ್ಲಿ ಇರುವಂತಹ ಸಾಂಪ್ರದಾಯಕ ಮಠವ್ಯವಸ್ಥೆ ಅವರಲ್ಲಿ ಇರಲಿಲ್ಲ.  ನಾಥರು ಮುಖ್ಯಸ್ಥರಾಗಿದ್ದ ಚುಂಚನಗಿರಿ ಮಠಕ್ಕೆ ಅವರು ಭಕ್ತರಾಗಿದ್ದವರು. ಈಗ ಮಠವನ್ನು ಪಡೆದು ಸಮುದಾಯದ ಸಾಮಾಜಿಕ ರಾಜಕೀಯ ಚಲನೆಗೆ ಬೇಕಾದ ಧಾರ್ಮಿಕ ಕೇಂದ್ರವನ್ನಾಗಿ ಮಾಡಲು ಅವರು ಯೋಜಿಸಿದರು.

ಮಠವನ್ನು ಪಡೆದುಕೊಳ್ಳುವ ಯೋಜನೆಯಲ್ಲಿ ಮುಖ್ಯವಾಗಿ ಕೆಲಸ ಮಾಡಿದವರು ಆಗ ವಕೀಲರಾಗಿದ್ದ ಎಂ.ಸಿ. ಲಿಂಗೇಗೌಡರು. ಮೊದಲಿಗೆ ಒಕ್ಕಲಿಗರ ಪತ್ರಿಕೆಯಲ್ಲಿ ಪೀಠಾಧಿಕಾರಿಯ ನೇಮಕದ ಬಗ್ಗೆ ಸಲಹೆ ಕೊಡಬೇಕೆಂದು ಪ್ರಕಟಣೆ ಕೊಡಲಾಯಿತು; ಜಾತ್ರೆ ಮತ್ತು ಸಂತೆಗಳಲ್ಲಿ ಕರಪತ್ರ ಹಂಚಲಾಯಿತು; ಗ್ರಾಮಗಳಲ್ಲಿ ಭಕ್ತರ ಸಭೆಸೇರಿಸಿ ಜನರ ಅಭಿಪ್ರಾಯ ಸಂಗ್ರಹಿಸಲಾಯಿತು; ಇದರ ಆಧಾರದಲ್ಲಿ ವರ್ಕಿಂಗ್ ಕಮಿಟಿಯು ಒಂದು ವರದಿಯನ್ನು  ಸಿದ್ಧಪಡಿಸಿತು. ನಂತರ ಭಕ್ತರ ಸಭೆಯನ್ನು ಶಿವರಾತ್ರಿಯಂದು ಚುಂಚನಗಿರಿಯಲ್ಲಿ ಕರೆಯಲಾಯಿತು. ಜನವರಿ ೧೯೨೫ರಲ್ಲಿ ಹೊರಡಿಸಿದ ‘ಪ್ರಸಿದ್ಧ ಪತ್ರಿಕೆ’ ಎಂಬ ಕರಪತ್ರದಲ್ಲಿ ‘‘ಮಠದ ಪಟ್ಟಾಧಿಕಾರಿ ಸ್ಥಾನಕ್ಕೆ ಭಕ್ತಕೋಟಿಗೆ ಸೇರಿದವರ ಪೈಕಿಯಲ್ಲಿಯೇ ಯಾರಾದರೂ ಒಬ್ಬರಿಗೆ ಅನೂಚೂನವಾಗಿ ಪ್ರಸಿದ್ಧವಾಗಿರುವ ವೇದೋಕ್ತ ವಿಧಿಯಂತೆ ಸನ್ಯಾಸದೀಕ್ಷೆ ಕೊಡಿಸಿ ಪಟ್ಟಕ್ಕೆ ತರುವ ವಿಷಯ’’ವು ಪ್ರಸ್ತಾಪಿತವಾಯಿತು. ಮಠಾಧಿಪತಿಯು ಭಕ್ತಕೋಟಿಗೆ ಸೇರಿದವರ ಪೈಕಿಯಾಗಿರಬೇಕು ಎಂಬುದಕ್ಕೆ, ಆತ ಉತ್ತರ ಭಾರತದ ಯೋಗಿಯಲ್ಲ ಎಂಬ ದನಿಯಿರುವುದು ಸ್ಪಷ್ಟವಾಗಿದೆ. ಈ ದನಿ ವರ್ಕಿಂಗ್ ಕಮಿಟಿಯ ವರದಿಯಲ್ಲಿ ಮತ್ತಷ್ಟು ಸ್ಪಷ್ಟವಾಗುತ್ತದೆ: ‘‘ಶ್ರೀ ಪೀಠಕ್ಕೆ ಪಟ್ಟಾಧಿಕಾರಿಗಳಾಗಿ ಬಂದ ಶ್ರೀ ಸುಂದರನಾಥಜೀಯವರು ಮತ್ತು ಅವರ ತರುವಾಯ ಬಂದ ಹಲವರು ಸ್ವಾಮಿಗಳವರ ನಡತೆಗಳ ವಿಚಾರದಲ್ಲಿ ಭಕ್ತರನೇಕರಿಗೆ ಅಸಮಾಧಾನಗಳು ಬೆಳೆಯುತ್ತಲೇ ಬಂದು, ಕಡೆಯವರಾದ ಶ್ರೀ ತೇಜನಾಥ ಸ್ವಾಮೀಜಿಯವರ ಕಾಲದಲ್ಲಿ ಭಕ್ತರ ಅಂತಕ್ಲೇಶವು ಪರಾಕಾಷ್ಠತೆಗೆ ಬಂದು, ಆಗಲೇ ಶ್ರೀ ತೇಜನಾಥ ಸ್ವಾಮಿಗಳನ್ನು ತೆಗೆದು ಬೇರೆಯವರನ್ನು ಗೊತ್ತುಮಾಡಲು ಉದ್ಯುಕ್ತ ಪಟ್ಟಿದ್ದು, ಕಾರಣಾಂತರಗಳಿಂದ ನಿಂತುಹೋಗಿ, ಪುನಃ ಪ್ರಾರಂಭವಾಗುವ ವೇಳೆಗೆ ಶ್ರೀಗಳವರೇ ಪರಂಧಾಮವನ್ನೈದುದರಿಂದ ಎಲ್ಲವೂ ಶಾಂತವಾಗಿ ಪರಿಣಮಿಸಿತು’’; ಭಕ್ತರಿಗೆ ಅಸಮಾಧಾನವಾಗಿದ್ದ ಸ್ವಾಮಿಗಳ ನಡತೆ ಯಾವುದು ಎಂಬುದಕ್ಕೆ ವಿವರಣೆ ಸಿಕ್ಕುವುದಿಲ್ಲ. ಆದರೆ ಹಿಂದಿನ ಯೋಗಿಗಳು ಸ್ಥಳೀಯ ಸಮುದಾಯದ ಆಶೋತ್ತರಗಳಿಗೆ ಸ್ಪಂದಿಸುತ್ತಿರಲಿಲ್ಲ ಎಂಬ ಅಸಮಾಧಾನ ಇದ್ದದ್ದು ಸ್ಪಷ್ಟ(ಈ ಅಸಮಾಧಾನವು ಕದ್ರಿಮಠದ ಜೋಗಿ ಸಮುದಾಯದಲ್ಲಿ ಈಗ ಮೊಳೆತಿದೆ). ಚುಂಚನಗಿರಿಯಲ್ಲಿ ೨೧.೨.೨೫ರ ಶಿವರಾತ್ರಿಯಂದು ಸೇರಿದ ಭಕ್ತರ ಮಹಾಸಭೆಯಲ್ಲಿ ವರ್ಕಿಂಗ್ ಕಮಿಟಿಯ ವರದಿ ಮಂಡನೆಯಾಯಿತು.

೧.‘‘ಮಠದ ಆಜೂಬಾಜುವಿನಲ್ಲಿ ನೆಲೆಸಿರತಕ್ಕ ಭಕ್ತಮಂಡಲಿಯಲ್ಲಿ ಕೆಲವರು ಕಾರಣಾಂತರಗಳ ಮೇಲೆ ಬಿಟ್ಟು ಶ್ರೀ ಶಿವನಾಥ ಎಂಬುವರನ್ನು ಪಟ್ಟಕ್ಕೆ ತರಬೇಕೆಂತಲೂ, ಮತ್ತೆ ಕೆಲವರು ಜಡಿಯನಮಠದ ಗಂಗಾನಾಥ ಎಂಬುವರನ್ನು ತರಬೇಕೆಂತಲೂ’’ ಯತ್ನಿಸುತ್ತಿರುವುದನ್ನು ವರದಿ ಹೇಳುತ್ತದೆ. ೨. ‘‘ಜೋಗಿನ (ಕಾಪಾಲಿಕ)ಮನೆತನಕ್ಕೆ ಸೇರಿದ ಅದರಲ್ಲೂ ಜೋಗಿಯಾಗಬೇಕಾದ ಜ್ಯೇಷ್ಠನಾದ ಒಬ್ಬ ವಟುವು ಲಾಯಃಕಾದವರು ಯಾರೊಬ್ಬರು ಸಿಕ್ಕದೆ ವಟುಗಳನ್ನು ಪೀಠಕ್ಕೆ ಚುನಾಯಿಸುವುದಾದರೆ ನಾನೊಬ್ಬನು ಉಮೇದುವಾರನಾಗಿರುತ್ತೇನೆ’’ ಎಂದು ಅರ್ಜಿ ಬರೆದುಕೊಂಡಿರುವುದನ್ನೂ, ಆತನು ಇಂಗ್ಲಿಷ್ ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಭ್ಯಾಸ ಮಾಡುತ್ತಿರುವವನೂ ಎಂದೂ ವರದಿ ದಾಖಲಿಸಿತು. ೩. ‘‘ಮಠಕ್ಕೆ ಶೇರಿದ ಭಕ್ತಮಂಡಲಿಯಲ್ಲಿ ಮಠದ ಏಳಿಗೆಗೂ ಐಶ್ವರ್ಯಕ್ಕೂ ಗೌರವಕ್ಕೂ ಮೂಲ ಕಾರಣರಾದ ಒಕ್ಕಲಿಗ ಮಂಡಲಿಯವರಲ್ಲಿಯೇ ಯಾರಾದರು ಒಬ್ಬರು ಸಾತ್ವಿಕರನ್ನು ಪಟ್ಟಕ್ಕೆ ತರಬೇಕು’’ ಎಂದು ಸಭೆ ಭಾವಿಸಿತು. ಮಠಕ್ಕೆ ಪಟ್ಟಕ್ಕೆ ಅಧಿಕಾರಿಗಳಾಗಲು ಗುರುರಾಮಪ್ಪ, ಅಂದಾನಿಸಿದ್ಧ, ಶಿವನಾಥ ಹಾಗೂ ಗಂಗಾನಾಥರು ಅಪೇಕ್ಷೆಯುಳ್ಳವರಾಗಿದ್ದಾರೆ ಎಂದು ಹೇಳಿ, ಇವರ ಪೈಕಿ ‘‘ಭಕ್ತ ಮಹಾಜನರಿಗೆ ಸೂಕ್ತ ಕಂಡುಬರುವವರನ್ನು’’ ಚುನಾಯಿಸಲು ಕೇಳಿಕೊಂಡಿತು. ೪. ಮಠದ ಆಡಳಿತಕ್ಕಾಗಿ ಹಿಂದಿನಂತೆ ನಾಲ್ಕಾರು ಧರ್ಮದರ್ಶಿಗಳು ಇರುವ ಬದಲು, ೬೦ ಜನರಿಗೆ ಕಡಿಮೆಯಿಲ್ಲದ ಒಂದು ಕಮಿಟಿ ಇರಬೇಕೆಂದೂ, ಹೊಸಸ್ವಾಮಿಯು ಯಾವುದೇ ಕೆಲಸವನ್ನು ಈ ಕಮಿಟಿಯ ಸಲಹೆಯ ಮೇರೆಗೆ ಮಾಡತಕ್ಕದ್ದು ಎಂದೂ ವರದಿ ಸಲಹೆ ಕೊಟ್ಟಿತು. ೫. ಕಮಿಟಿಯು ಎಲ್ಲ ಲೆಕ್ಕಪತ್ರಗಳನ್ನು ಸರಿಯಾದ ಜಮಾ ಖರ್ಚಿನ ಸಮೇತ ಪ್ರತಿವರ್ಷದ ಮಹಾಸಭೆಯಲ್ಲಿ ಮಂಡಿಸಬೇಕು; ಹೊಸ ಪೀಠಾಧಿಪತಿಯನ್ನು ಆಯ್ಕೆ ಮಾಡುವ ಪ್ರಸಂಗ ಬಂದಾಗ, ಹಿಂದಿನಂತೆ ನಿರ್ಗಮಿಸುವ ಸ್ವಾಮಿಯ ವೈಯಕ್ತಿಕ ಆಯ್ಕೆಗೆ ಬಿಡದೆ, ‘ಮಹಾವಿರಾಟ್ ಭಕ್ತಸಭೆ’ಯನ್ನು ಕರೆದು ಅಲ್ಲಿ ಚರ್ಚಿಸಿ ಸಮ್ಮತಿಯನ್ನು ಪಡೆಯಬೇಕು. ಅದಕ್ಕೆ ಅಂತಿಮ ವಾಗಿ ಸರಕಾರದ ಮಂಜೂರಾತಿ ಪಡೆಯಬೇಕು ಎಂದು ಸಭೆ ತೀರ್ಮಾನಿಸಿತು.

ಇಡೀ ಯೋಜನೆ ಕಾನೂನು ಬದ್ಧವಾಗಿಯೂ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿಯೂ ಇತ್ತು. ಆದರೆ ಮಠವನ್ನು ನಾಥರ ಹಿಡಿತದಿಂದ ತಪ್ಪಿಸುವ ಸುಪ್ತ ಉದ್ದೇಶವನ್ನೂ ಇದು ಒಳಗೊಂಡಿತ್ತು. ಇದಕ್ಕಾಗಿ ಯೋಜನಾ ಬದ್ಧವಾಗಿ ಕಾರ್ಯಚರಣೆ ಮಾಡಲಾಯಿತು. ಆರಂಭಕ್ಕೆ ಮಠದ ಸ್ವಾಮಿಯಾಗಿ ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆಯ ರಾಮಯ್ಯ ಅವರನ್ನು ಆರಿಸಲಾಯಿತು. ಮಡದಿ ತೀರಿದ ಬಳಿಕ ಜೀವನದಲ್ಲಿ ವಿರಕ್ತಿ ಹೊಂದಿ, ಶಂಕರಾನಂದ ಭಾರತಿಯವರ ಶಿಷ್ಯರಾಗಿದ್ದ ರಾಮಯ್ಯನವರನ್ನು ಜನ ಗುರುರಾಮಯ್ಯ ಎನ್ನುತ್ತಿದ್ದರು. ಗುರುರಾಮಯ್ಯ ಮೇಲುಕೋಟೆಯಲ್ಲಿ ನೆಲೆಸಿದ್ದರು.

ದೀಕ್ಷಾಸಮಸ್ಯೆ

ಸಮಸ್ಯೆ ಎಂದರೆ, ಚುಂಚನಗಿರಿ ಪೀಠಕ್ಕೆ ಕುಂಡಲ ದೀಕ್ಷೆಯಾದ ಯೋಗಿ ಮಾತ್ರ ಏರಬೇಕು. ಈ  ದೀಕ್ಷೆಯನ್ನು ನಾಥಗುರುವೇ ಕೊಡಬೇಕು. ಗುರುರಾಮಯ್ಯ ಅವರಿಗೆ ನಾಥದೀಕ್ಷೆ ಆಗಿಲ್ಲ.  ಆಗ ಕದ್ರಿಯಲ್ಲಿ ಟೆಹಲ್‌ನಾಥ (೧೯೨೧-೧೯೩೩) ಪೀಠದಲ್ಲಿದ್ದರು. ಆದರೆ ದೀಕ್ಷೆಗಾಗಿ ಒಕ್ಕಲಿಗ ಮುಖಂಡರು ಕದ್ರಿಯನ್ನು ಸಂಪರ್ಕಿಸಲಿಲ್ಲ. ಬದಲಿಗೆ ಮಹಾರಾಷ್ಟ್ರದ ತ್ರ್ಯಂಬಕೇಶ್ವರ ಮಠಕ್ಕೆ ಹೋದರು.  ನಾಥದೀಕ್ಷೆಯಿಲ್ಲದೆ ಗುರುರಾಮಯ್ಯ ಅವರನ್ನು ಪೀಠಕ್ಕೆ ತರುವ ಸುದ್ದಿ ತಿಳಿಯುತ್ತಿದ್ದಂತೆ,  ಸ್ಥಳೀಯ ಕಾಪಾಲಿಕರು ವಿರೋಧಿಸಿ, ಸಂಸ್ಥಾನದ ದಿವಾನರಿಗೆ ೧೯೨೫ರಲ್ಲಿ ತಕರಾರು ಅರ್ಜಿ ಸಲ್ಲಿಸಿದರು. ಇದರ ಹಿಂದೆ  ವಿಟ್ಲದ ಲಕ್ಷ್ಮೀನಾಥರಿದ್ದರು.

ಈ ಅರ್ಜಿ ಅಹವಾಲುಗಳಿಗೆ ಪೂರಕವಾಗಿ ಮಠಕ್ಕೆ ‘‘ಕೋಮುವಾರು ಭಕ್ತಾದಿಗಳ ತಪ್ಸೀಲು ಪಟ್ಟಿ’’  ಕೂಡ ಲಗತ್ತಿಸಲಾಗಿತ್ತು. ಅದರಲ್ಲಿ ಮಠದ  ಭಕ್ತಾದಿಗಳ ಪಟ್ಟಿಯಲ್ಲಿ ಗಂಗಡಿಗಾರ ಒಕ್ಕಲಿಗರಿಗಿಂತ ಉಳಿದ ಎಂಟು ಕೋಮುಗಳ ಸಂಖ್ಯೆ ಹೆಚ್ಚಾಗಿರುವುದನ್ನು ತೋರಿಸಲಾಗಿತ್ತು. ಈ ಪತ್ರದ ಆಧಾರದಲ್ಲಿ ಮುಜರಾಯಿ ಕಮೀಶನರು  ಗುರುರಾಮಯ್ಯನವರು, ಒಂದು ತಿಂಗಳ ಒಳಗೆ ಮಠದ ಪರಂಪರೆಗೆ ಅನುಸಾರವಾಗಿ ‘ಕಾಪಾಲಿ ದೀಕ್ಷೆ’ ಪಡೆದಲ್ಲಿ, ಅವರ ಆಯ್ಕೆಯನ್ನು ಸರಕಾರವು ಊರ್ಜಿತಗೊಳಿಸುತ್ತದೆ (೨೮.೧೧.೨೭ರ ಪತ್ರ) ಎಂದು ಶರತ್ತು ವಿಧಿಸಿದರು. ಆಗ ದಕ್ಷಿಣ ಭಾರತದ ಮಠಗಳಿಗೆಲ್ಲ ಆಡಳಿತ ಕೇಂದ್ರವಾಗಿದ್ದ ತ್ರ್ಯಂಬಕೇಶ್ವರದ ಗೋರಖನಾಥ ಮಠಕ್ಕೆ ಹೋಗಿ ಬರುವ ಯೋಜನೆ ಮಾಡಲಾಯಿತು. ಗುರುರಾಮಯ್ಯ ಅವರನ್ನು ತ್ರ್ಯಂಬಕಕ್ಕೆ ಕರೆದುಕೊಂಡು ಹೋಗಿ ದೀಕ್ಷೆ ಕೊಡಿಸುವ  ಹೊಣೆಯನ್ನು ಲಿಂಗೇಗೌಡರಿಗೆ ವಹಿಸಲಾಯಿತು. ವಕೀಲರಾಗಿದ್ದ ಲಿಂಗೇಗೌಡರು ನಾಸಿಕಕ್ಕೆ ಬಂದೊಡನೆ, ಅಲ್ಲಿದ್ದ ಪ್ರಧಾನ್ ಎಂಬ ಸರಕಾರಿ ವಕೀಲರ ಜತೆ ಚರ್ಚಿಸಿದರು. ಆಗ ಗೋರಖನಾಥ ಮಠಕ್ಕೆ ನೇಮಕವಾಗಿದ್ದ  ಪೀಠಾಧಿಪತಿ  ತೀರಿಕೊಂಡಿದ್ದ ಕಾರಣ, ಮಠಕ್ಕೆ ತಾತ್ಕಾಲಿಕ ಅಧಿಕಾರಿಯಾಗಿ, ನರ್ಮದಾನಾಥ ಎಂಬ ಯೋಗಿಯಿದ್ದನು.[5] ಲಿಂಗೇಗೌಡರು ನರ್ಮದಾನಾಥನಿಂದ ಗುರುರಾಮಯ್ಯ ಅವರಿಗೆ ಕಿವಿಛೇದಿಸಿ ನೀಡುವ ಕುಂಡಲದೀಕ್ಷೆ ಕೊಡಿಸಿ, ಭಕ್ತನಾಥನೆಂಬ ಹೆಸರು ದೊರಕಿಸಿ, ಕರೆದುಕೊಂಡು ಬಂದರು; ದೀಕ್ಷೆಕೊಟ್ಟ ಬಗ್ಗೆ ನರ್ಮದಾನಾಥನ ಪತ್ರವನ್ನೂ ಫೋಟೋವನ್ನೂ ಮುಜರಾಯಿ ಕಮಿಶನರ ಮುಂದೆ ಹಾಜರು ಪಡಿಸಿದರು. ಸರಕಾರವು ‘‘ಭಕ್ತನಾಥಸ್ವಾಮಿಗಳೆಂಬ ದೀಕ್ಷಾನಾಮದಿಂದೊಪ್ಪುವ ಶ್ರೀಗುರುರಾಮಯ್ಯ’’ ಅವರನ್ನು ಮಠದ ಉತ್ತರಾಧಿಕಾರಿ ಎಂದು  ಮಾನ್ಯಮಾಡಿತು.

ಈ ನಡುವೆ ಪಟ್ಟಾಭಿಷೇಕ ಕಾರ್ಯಕ್ರಮ ನಿಲ್ಲಿಸಲು ಮಂಡ್ಯದ ಮುನಸೀಫ್ ಕೋರ್ಟಿನಿಂದ ತಡೆಯಾಜ್ಞೆಗಾಗಿ ಶಿವನಾಥ ಎನ್ನುವವರು ಯತ್ನಿಸಿದರು. ಅವರ ತಕರಾರು ಅರ್ಜಿ ವಜಾ ಆಯಿತು.  ೨೩.೨.೨೮ರಂದು ಪಟ್ಟಾಭಿಷೇಕ ನಡೆಯಿತು. ಪಟ್ಟಾಭಿಷೇಕ ಮಹೋತ್ಸವದ ಆಹ್ವಾನ ಪತ್ರದಲ್ಲಿ ‘‘ಶ್ರೀ ಸಿದ್ಧಯೋಗಿಯಿಂದ ಸ್ಥಾಪಿತವಾದ ಈ ಜಗತ್ಪೂಜ್ಯವಾದ ಧರ್ಮಪೀಠಕ್ಕೆ ಪರಮಪೂಜ್ಯರಾದ ದರಸಗುಪ್ಪೆಯ ಶ್ರೀ ಗುರುರಾಮಯ್ಯ ನವರು ಉತ್ತರಾಧಿಕಾರವನ್ನು ವಹಿಸಲು ತಕ್ಕವರೆಂದು ಭಕ್ತಮಂಡಲಿಯಿಂದ ಚುನಾವಣೆಯಾಗಲು ಸಾಕ್ಷಾದ್ಧರ್ಮಮೂರ್ತಿ, ಆಳುವ ಮಹಸ್ವಾಮಿಯವರಾದ ನಮ್ಮ ಶ್ರೀಮನ್ಮಹಾರಾಜ ಶ್ರೀ ಕೃಷ್ಣರಾಜ ಒಡೆಯರ್ ಬಹದ್ದೂರು ಜಿ.ಸಿ.ಎಸ್.ಐ., ಬಿ.ಬಿ.ಇ.ಯವರೂ ಅವರ ಘನವಾದ ಸರಕಾರದವರೂ ಮಂಗಳಕರವಾದ ಒಪ್ಪಿಗೆಯನ್ನು ದಯೆಪಾಲಿಸಿರುವರು’’ ಎಂಬ ಅಂಶವನ್ನು ಮುದ್ದಾಮಾಗಿ ಕಾಣಿಸಲಾಗಿತ್ತು. ಶತಮಾನಗಳ ಕಾಲದಿಂದ ಬಂದ ಮಠದ  ರಿವಾಜು ಮೊದಲಬಾರಿಗೆ ಮುರಿಯುತ್ತಿರುವ ಕಾರಣ,  ತಮ್ಮ ಕಾರ್ಯಕ್ಕೆ ಪ್ರಭುತ್ವದ ಸಮ್ಮತಿಯಿದೆ ಎಂದು ತೋರಿಸುವುದು ಸಂಘಟಕರಿಗೆ ಅಗತ್ಯವಾಗಿತ್ತು. ಪ್ರಕರಣದಲ್ಲಿರುವ ವಿವಾದದ ಮಹತ್ವವನ್ನು ಮನಗಂಡು, ಕಾರ್ಯಕ್ರಮಕ್ಕೆ ಸ್ವತಃ ಮುಜರಾಯಿ ಕಮಿಶನರೂ ಡೆಪ್ಯುಟಿ ಕಮಿಶನರೂ ಬಂದಿದ್ದರು. ಸರ್ಕಾರಕ್ಕೆ ಮಠದ ಪರಂಪರೆ ಪಾಲಿಸುವುದಕ್ಕಿಂತ ಬಲಿಷ್ಠ ಜನಾಂಗವನ್ನು ಎದುರು ಹಾಕಿಕೊಳ್ಳುವ ಪ್ರಶ್ನೆ ಮುಖ್ಯವಾಯಿತು ಎಂದು ಕಾಣುತ್ತದೆ. ಗುರುರಾಮಯ್ಯ ಅವರು ಸ್ಥಳೀಯರು ಆಗಿದ್ದುದೂ ಇದಕ್ಕೆ ಕಾರಣವಾಗಿತ್ತು. ಇದು ಬಾರಾಪಂಥದ ಎದುರು ಒಕ್ಕಲಿಗರು ಪಡೆದ ಮೊದಲ ಚಾರಿತ್ರಿಕ ಜಯವಾಗಿತ್ತು.

ಈ ಸೋಲನ್ನು ಬಹುಶಃ ಕಾಪಾಲಿಕರೂ ಬಾರಾಪಂಥದವರೂ ನಿರೀಕ್ಷಿಸಿರಲಿಲ್ಲ. ಅವರ ಸಂಖ್ಯಾಬಲವೂ ಸೋಲಿಗೆ ಕಾರಣವಾಗಿದ್ದು ಸ್ಪಷ್ಟವಾಗಿತ್ತು. ಮೊದಲ ಹಂತದಲ್ಲಿ ಮಠದ ಪರಂಪರೆ ಹೀಗೆ ಉಲ್ಲಂಘನೆ ಆಗುವುದನ್ನು  ಒಕ್ಕಲಿಗರಲ್ಲೇ ಕೆಲವರು ಒಪ್ಪಲಿಲ್ಲ. ಭಕ್ತನಾಥರ ಕಡೆಯಿಂದ ಹೊರಟ ಒಂದು ಕರಪತ್ರದಲ್ಲಿ ಮಠದ ತೆಂಕಸೀಮೆಯ (ಹಾಸನ ಚಿಕ್ಕಮಗಳೂರು ಜಿಲ್ಲೆಗಳ) ಮಠದ ಸುಬೇದಾರರು ಪಟ್ಟಾಭಿಷೇಕಕ್ಕೆ ಬಾರದೆ, ಕಾಣಿಕೆ ಕೊಡದೆ ಇರುವುದರ ಹಾಗೂ ಕಾಣಿಕೆ ವಸೂಲು ಮಾಡಲು ಹೊಸ ದಳವಾಯಿಯನ್ನು ನೇಮಕ ಮಾಡಿರುವುದರ ಪ್ರಸ್ತಾಪವಿದೆ. ಇದು ಹೊಸಗುರುವಿಗೆ ಬಂದ ವಿರೋಧವನ್ನು ಸೂಚಿಸುತ್ತದೆ. ತಮ್ಮಿಂದ ದೀಕ್ಷೆ ಪಡೆಯುವ ಶಿಷ್ಯವರ್ಗದವರೇ  ಗುರುಪೀಠಕ್ಕೆ ಏರಿದ್ದು ಕಾಪಾಲಿಕರಿಗೂ  ನಾಥಮಠಗಳಿಗೂ ಆಘಾತಕಾರಿ ವಿದ್ಯಮಾನವಾಗಿತ್ತು. ಇಡೀ ಪ್ರಕರಣದ ವ್ಯಂಗ್ಯವೆಂದರೆ, ನಾಥಪಂಥದ ಹಿಡಿತದಿಂದ ಮಠವೊಂದು ಕೈಜಾರಲು ಮತ್ತೊಂದು ನಾಥಮಠದ ಯೋಗಿಯು  (ನರ್ಮದಾನಾಥನು) ಪರೋಕ್ಷವಾಗಿ ಸಹಾಯ ಮಾಡಿದ್ದು.

ಈ ನಡುವೆ ನಾಲ್ಕು ವರ್ಷಗಳು ಗತಿಸಿದವು. ೧೯೩೨ರ ಕುಂಭಮೇಳ ಬಂದಿತು. ಅದರಲ್ಲಿ ಕದ್ರಿಮಠಕ್ಕೆ ಮುಖ್ಯಸ್ಥರಾಗಿ ಚಿಮನ್‌ನಾಥರ (೧೯೩೩-೧೯೪೫) ಆಯ್ಕೆಯಾಯಿತು. ಝುಂಡಿಯು ಕದ್ರಿಗೆ ಬಂದಿತು. ಝುಂಡಿಯ ಜತೆ ಬಂದಿದ್ದ ಬಾರಾಪಂಥವು  ಚುಂಚನಗಿರಿ ಮಠವನ್ನು ಮರಳಿ ಪಡೆಯಲು ಎರಡನೆಯ ಹಂತದ ಹೋರಾಟ ಆರಂಭಿಸಿತು. ಇದಕ್ಕಾಗಿ ಅದು ಭಕ್ತನಾಥರ ದೀಕ್ಷಾ ಪ್ರಕರಣದಲ್ಲಿದ್ದ ತಾಂತ್ರಿಕ ದೋಷಗಳನ್ನು ಆಧಾರವಾಗಿ ಇಟ್ಟುಕೊಂಡಿತು.  ‘ಭಕ್ತನಾಥರ ಕಾಪಾಲಿದೀಕ್ಷೆಯ ಮರ್ಮ’ ಎಂಬ ಪುಸ್ತಕ ಪ್ರಕಟಿಸಿ ಸಾರ್ವಜನಿಕ ವಿತರಣೆ ಮಾಡಿತು. ಅದರಲ್ಲಿ ನರ್ಮದಾನಾಥನ ತಪ್ಪೊಪ್ಪಿಗೆ ಹೇಳಿಕೆಯೂ ಸೇರಿತ್ತು:

ನಾಸಿಕ್ (ಬೊಂಬಾಯಿ ಆಧಿಪತ್ಯ) ಕೋರ್ಟಿನ ಸರ್ಕಾರಿ ವಕೀಲ್ ಮಿಸ್ಟರ್ ಜಿ.ವಿ. ಪ್ರಧಾನ್ ಬಿ.ಎ. ಎಲ್.ಎಲ್.ಬಿಯವರು, ಸನ್ ೧೯೨೭ನೇ ಇಸವಿ ಡಿಸೆಂಬರ್ ತಿಂಗಳು ಒಂದು ದಿನ ನನ್ನನ್ನು ಕರೆಸಿದರು. ನಾನು ಮಾರನೇ ಬೆಳಿಗ್ಗೆ ೧೦ ಘಂಟೆಗೆ ಅವರ ಹತ್ತರಕ್ಕೆ ಹೋದೆ.   ಯಾವ ಜಾತಿಯವರಿಗೆ ದೀಕ್ಷೆ ಕೊಡುತ್ತೀರಾ ಎಂಬುದಾಗಿ ವಕೀಲರು ನನ್ನನ್ನು ಕೇಳಿದರು. ನಾನು   ಬ್ರಾಹ್ಮಣ ಕ್ಷತ್ರಿಯ ಮತ್ತು ವೈಶ್ಯರಿಗೆ ಮಾತ್ರ ದೀಕ್ಷೆ ಕೊಡುತ್ತೇನೆ ಎಂದು ಹೇಳಿದೆ. ವಕೀಲರು   ನಮ್ಮ ಹತ್ತಿರ ಒಬ್ಬರು ಇದ್ದಾರೆ. ಅವರಿಗೆ ದೀಕ್ಷೆ ಕೊಡಿ ಎಂದು ಹೇಳಿದರು. ಮಾರನೇ ದಿವಸ ನನ್ನ ಜೊತೆಯಲ್ಲಿ ಮೂರು ಜನಗಳು ತ್ರಿಯಂಬಕಕ್ಕೆ ಬಂದರು.  ನೀವು ಯಾವ ಊರಿನವರು ತಮ್ಮ ಹೆಸರೇನು ಎಂದು ಮೂರು ಜನಗಳನ್ನು ಕೇಳಿದೆ. ಅದರಲ್ಲಿ ಒಬ್ಬ   ‘ನನ್ನ ಹೆಸರು ಕಾಡಪ್ಪನ ಮಗ ಚನ್ನಪ್ಪ. ಊರು ಬೆಂಗಳೂರು ಡಿಸ್ಟ್ರಿಕಟ್ಟು ಚನ್ನಪಟ್ಟಣ ತಾಲ್ಕು ಅವ್ವೇರಹಳ್ಳಿ ಎಂದೂ, ಮತ್ತೊಬ್ಬ ಮೈಸೂರು ಲೆಜಸ್ಲೇಟಿವ್ ಕೌನ್ಸಿಲ್ ಮೆಂಬರು ಲಿಂಗಪ್ಪನೆಂದೂ ಮತ್ತು ಮತ್ತೊಬ್ಬ ತನ್ನ ಹೆಸರು ಗುರುರಾಮಪ್ಪ ಊರು ಮೈಸೂರು ಡಿಸ್ಟ್ರಿಕ್ಟ್ ಶ್ರೀರಂಗಪಟ್ಟಣ ತಾಲ್ಕು ದರಸುಗುಪ್ಪೆ ಎಂದೂ ಹೇಳಿದರು. ಚನ್ನಪ್ಪ ಮತ್ತು ಲಿಂಗಪ್ಪ ಖಾದಿಯ ಉಡುಪನ್ನು ಧರಿಸಿದ್ದರು ಮತ್ತು ಗುರುರಾಮಯ್ಯವರು ಸನ್ಯಾಸಿ ವೇಷದಲ್ಲಿದ್ದರು. ಮೂರು ದಿವಸ ಊಟ ಉಪಚಾರ ಮಾಡಿಕೊಂಡು ಮಠದಲ್ಲಿದ್ದರು. ಯಾವ ಜಾತಿಗೆ ಸೇರಿದವರು ಎಂದು ಕೇಳಿದೆ. ನಾವು ವೈಶ್ಯಜಾತಿಗೆ ಸೇರಿದವರು ಎಂದು ಅವರು ಹೇಳಿದರು. ನಾಥದೀಕ್ಷೆಯನ್ನು ಯಾತಕ್ಕೆ ತೆಗೆದುಕೊಳ್ಳುತ್ತೀಯಾ ಎಂಬುದಾಗಿ ಗುರುರಾಮಯ್ಯನನ್ನು ಕೇಳಿದೆ. ನನ್ನ ಹೆಂಡತಿ ಮಕ್ಕಳು ಮರಿಗಳೆಲ್ಲ ಸತ್ತು ಹೋದರು. ನಾನು ಒಬ್ಬನೇ ಇದ್ದೇನೆ ಎಂದು ಹೇಳಿದರು. ವಕೀಲರ ಕಡೆ ಯಾತಕ್ಕೆ ಹೋಗಿದ್ದೆ ಎಂದು ಕೇಳಿದೆ. ನನ್ನ ಸ್ನೇಹಿತ ಲೆಜೆಸ್ಲೇಟಿವ್ ಕೌನ್ಸಿಲ್ ಮೆಂಬರ್ ಲಿಂಗಪ್ಪನೂ ವಕೀಲರೂ ಸ್ನೇಹಿತರು. ಅವರ ಜೊತೆಯಲ್ಲಿ ವಕೀಲರ ಮನೆಗೆ ಹೋಗಿದ್ದೆ ಎಂದು ಗುರುರಾಮಪ್ಪನು ಹೇಳಿದ ನಂತರ   ‘ಅವಗಡದೀಕ್ಷೆ’ ಕೊಟ್ಟೆ. ೫ ದಿವಸದ ಮೇಲೆ ಕಿವಿಯನ್ನು ಕೂಯಿದೆನು. ಕಿವಿ ಕುಯ್ಯುವುದಕ್ಕಿಂತ ಮುಂಚೆ ಎರಡು ದಿವಸ ಲಿಂಗಪ್ಪ ಕಾಶಿಗೆ ಹೊರಟುಹೋಗಿದ್ದ. ೧೫ ದಿವಸದ ಮೇಲೆ ಲಿಂಗಪ್ಪ ಗುರುರಾಮಯ್ಯನನ್ನು ವಾಪಸ್ಸು ಕರೆದುಕೊಂಡು ಹೋಗುವುದಕ್ಕೆ ಬಂದರು. ಅವಗಡ ದೀಕ್ಷೆ ಕೊಡುವ ಕಾಲದಲ್ಲಿ ಗುರುರಾಮಯ್ಯನಿಗೆ ಭಕ್ತನಾಥನೆಂದು ಹೆಸರಿಟ್ಟೆ. ತಾ|| ೧೫ ಜನವರಿ ೧೯೨೮ ಭಕ್ತನಾಥ ಗುರು ನರ್ಮದಾನಾಥಜಿ ಜೋಗಿ ಬಾರಪಂತಕ ಪೇಡಾ ಎಂದು ಕನ್ನಡ ಭಾಷೆಯಲ್ಲಿ ಸ್ವಂತ ಗುರುರಾಮಪ್ಪ ಸೈನು ಮಾಡಿದ್ದಾರೆ. ಅನಂತರ ನನ್ನನ್ನು ಫೋಟೋ ತೆಗೆಯುವುದಕ್ಕೆ ನಾಸಿಕಕ್ಕೆ ಕರೆದುಕೊಂಡು ಹೋದರು ಮತ್ತು ತಮ್ಮ ಫೋಟೋ ತಮ್ಮ ಸ್ಮರಣಾರ್ಥ ನನಗೆ ಬೇಕೆಂದು ಹೇಳಿದರು. ನಾವು ನಾಸಿಕಕ್ಕೆ ಹೋದೆವು. ವಕೀಲರ ಮಗ, ಗುರುರಾಮಪ್ಪ, ಲಿಂಗಪ್ಪ ಮತ್ತು ಚನ್ನಪ್ಪ ಇವರುಗಳ ಫೋಟೊ ತೆಗೆಯಿತು. ಈ ರೀತಿ ದೀಕ್ಷೆ ಸಂಬಂಧವಾದ ತಪಶೀಲ್ ಇರುತ್ತದೆ…ನಾನು ತ್ರಿಯಂಬಕ ಮಠದ ಗುರುವಲ್ಲ. ಕಾರಭಾರಿ…ಈಗ ಖಾಲಿ ಇರುವ ತ್ರಿಯಂಬಕ ಮಠದ ಪೀಠದ ಮೇಲೆ ಕುಳಿತುಕೊಳ್ಳುವ ಅಧಿಕಾರ ನನಗೆ ಇಲ್ಲ. ಮೈಸೂರು ಸಂಸ್ಥಾನದಲ್ಲಿರುವ ಚುಂಚನಗಿರಿ ಮಠ ನನಗೆ ಗೊತ್ತು ಇದೆ. ಈ ಮಠವು ಗೋರಖಪುರದ ಮಠದ ಶಾಖೆ ಆಗಿದೆ ಮತ್ತು ಈ ಮಠಗಳು ಧರ್ಮನಾಥ ಪಂತಿಗೆ ಸೇರಿವೆ.೭

ಬಾರಾಪಂಥಿನವರು ವ್ಯಾಜ್ಯ ಗೆಲ್ಲಲು ನರ್ಮದಾನಾಥನಿಗೆ ಒತ್ತಡ ಹಾಕಿ ಕೊಡಿಸಿದ ಹೇಳಿಕೆಯಿದು ಎಂಬುದು ಸ್ಪಷ್ಟವಾಗಿದೆ.  ಗುರುರಾಮಯ್ಯ ಮಠದ ಕಾರಭಾರಿಯಿಂದ ದೀಕ್ಷೆ ಪಡೆದರು. ಚುಂಚನಗಿರಿ ಪೀಠವು  ಬಾರಾಪಂಥಗಳಲ್ಲಿ ಧರ್ಮನಾಥಿಗಳಿಗೆ ಸೇರಿದ್ದು,  ಗುರುರಾಮಯ್ಯ ದೀಕ್ಷೆ ಪಡೆದಿದ್ದು ಸತ್ಯನಾಥಿ ಪಂಥದ ನರ್ಮದಾನಾಥನಿಂದ. ದೀಕ್ಷೆ ಪಡೆಯುವಾಗ ಗುರುರಾಮಯ್ಯ ಜಾತಿಯ ವಿಷಯದಲ್ಲಿ ಸುಳ್ಳು ಹೇಳಿದರು. ನಾಥದೀಕ್ಷೆಯನ್ನು ಬ್ರಹ್ಮಚಾರಿಗೆ ಕೊಡಬೇಕು. ಆದರೆ ಗುರುರಾಮಯ್ಯ ದೀಕ್ಷೆ ಪಡೆಯುವಾಗ ವಿಧುರರಾಗಿದ್ದರು.  ಔಘಡ ದೀಕ್ಷೆಯನ್ನು ಕೊಟ್ಟ ಐದು ದಿನಗಳ ಬಳಿಕ ಕುಂಡಲವನ್ನು ಹಾಕುವ ದೀಕ್ಷೆ ಕೊಡುವಂತಿಲ್ಲ. ಈ  ಕಾರಣಗಳಿಂದ ಇಡೀ ದೀಕ್ಷೆಯೆ ಊರ್ಜಿತವಾಗುವುದಿಲ್ಲ ಎಂಬ ತಾಂತ್ರಿಕ ದೋಷಗಳನ್ನು ಮುಂದಿಟ್ಟು, ಬಾರಾಪಂಥದವರು ವಿಟ್ಲಮಠದ ಲಕ್ಷ್ಮೀನಾಥರ ಮೂಲಕ ತಕರಾರು ಅರ್ಜಿ ಹಾಕಿಸಿದರು. ಬಾರಾಪಂಥದವರ ವಾದದಲ್ಲಿ  ಸರ್ಕಾರವು ತಾನೇ ಮಾಡಿದ ನಿಯಮವನ್ನು ಪಾಲಿಸಲಿಲ್ಲ ಎಂಬ ಸೂಕ್ಷ್ಮವಾದ ಆಕ್ಷೇಪವಿತ್ತು. ಅದರಲ್ಲಿ ಮುಖ್ಯವಾಗಿ ಸರ್ಕಾರವೇ ಹಾಕಿದ ಕರಾರಿನ ಪ್ರಕಾರ, ಒಂದು ತಿಂಗಳ ಒಳಗಾಗಿ ದೀಕ್ಷೆ ಪಡೆಯಲು ಗುರುರಾಮಯ್ಯನವರಿಗೆ ಸಾಧ್ಯವಾಗದೆ ಇದ್ದುದನ್ನು ಕಾಣಿಸಲಾಗಿದೆ.

ಪೀಠಾಧಿಕಾರಿಯಾದ ಗುರುರಾಮಯ್ಯನವರು ಸರಿಯಾದ ದೀಕ್ಷೆ ತೆಗೆದುಕೊಂಡು ಬಂದಿವಲ್ಲವೆಂದು ಭಕ್ತರಿಗೆ ತಿಳಿದಮೇಲೆ, ಸರ್ಕಾರದಲ್ಲಿ ಯಂ.ಸಿ.ಲಿಂಗೇಗೌಡರು ಹಾಜರ್ಮಾಡಿದ ದೀಕ್ಷಾ ಸರ್ಟಿಫಿಕೇಟ್ ಕಾಪಿಯನ್ನು ತೆಗೆದುಕೊಂಡು ವಿಚಾರ ಮಾಡಿದ್ದರಲ್ಲಿ, ಸರಿಯಾದ ದೀಕ್ಷೆ ಅಲ್ಲವೆಂದು ಬಾರಾಪಂತಿನ ಪುಸ್ತಕಗಳ ಆಧಾರದಲ್ಲಿ ತಿಳಿಯಿತು. ಅದರೆ ಮೇಲೆ ಶ್ರೀಮನ್ ಮಹಾರಾಜರವರಿಗೂ ಮತ್ತು ಅವರ ಸರ್ಕಾರಕ್ಕೂ ಭಕ್ತರು ಅರ್ಜಿ ಮೂಲಕ ಅರಿಕೆ ಮಾಡಿಕೊಂಡಿದ್ದಾರೆ. ದೀಕ್ಷೆ ಸರ್ಟಿಫಿಕೇಟ್ ಕೊಟ್ಟ ನರ್ಮದಾನಾಥನು ಪೀಠಾಧಿಕಾರಿಯಲ್ಲ. ತ್ರಿಯಂಬಕ ಮಠದ ಪೀಠಾಧಿಕಾರಿಯು ಶಿಷ್ಯನನ್ನು ನೇಮಕ ಮಾಡದೆ ತೇಜನಾಥನು ಸತ್ತಂತೆ, ೧೯೨೩ರಲ್ಲಿ ಸತ್ತುಹೋದನು. ಪೀಠಾಧಿಕಾರಿಯು ದೀಕ್ಷೆ ಕೊಟ್ಟಂತೆ ನರ್ಮದಾನಾಥನು ದೀಕ್ಷೆ ಸರ್ಟಿಫಿಕೇಟನ್ನು ಕೊಟ್ಟಿದ್ದಾನೆ. ನರ್ಮದಾನಾಥನೇ ಗುರುವಲ್ಲ. ಗುರುಮಂತ್ರವನ್ನು ಕೊಟ್ಟನೆಂದು ಹೇಳುತ್ತಾನೆ. ಇದು ಸಮಂಜಸವಲ್ಲ.೮

ಆದರೆ ಈ ತಕರಾರು ಬಹಳ ತಡವಾಗಿತ್ತು. ನಾಥ ಪಂಥಕ್ಕೆ ಮರಳಿ ಮಠವನ್ನು ಪಡೆಯುವುದಾಗಲಿಲ್ಲ. ಪತ್ರವು ನಾಥಪಂಥದ ಅಸಹಾಯಕತೆ ಮತ್ತು ಸೋಲಿನ ದನಿಯನ್ನು ಒಳಗೊಂಡಿದೆ. ಭಕ್ತನಾಥರು ೪೦ ವರುಷ ಕಾಲ ಅಧಿಪತಿಯಾಗಿದ್ದರು. ಅಷ್ಟು ಹೊತ್ತಿಗೆ ಬ್ರಿಟಿಶರ ಆಳ್ವಿಕೆ ಮುಗಿದು ಸ್ವತಂತ್ರ ಸರಕಾರ ಬಂದಿತ್ತು. ಒಕ್ಕಲಿಗ ಸಮುದಾಯದಿಂದ ಬಂದ  ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿ ಆಗಿದ್ದರು. ಮಠವು ಒಕ್ಕಲಿಗ ಸಮುದಾಯದ ಸಾಮಾಜಿಕ ರಾಜಕೀಯ ಬಲವಾಗಿ ಮೂಡಿ ನಿಂತಿತು. ಭಕ್ತನಾಥರು ತೀರಿಕೊಂಡ ಬಳಿಕ ಮತ್ತೆ ಉತ್ತರಾಧಿಕಾರಿಯ ಸಮಸ್ಯೆ ಎದುರಾಯಿತು. ಕಡೆಗೆ ಭಕ್ತನಾಥರ ಶಿಷ್ಯರಾದ ಚಂದ್ರಶೇಖರನಾಥರನ್ನು ಆರಿಸಲಾಯಿತು. ಇವರ ಪೂರ್ವಾಶ್ರಮದ ಹೆಸರು ಅಲಸೂರು ಮುನಿಸ್ವಾಮಪ್ಪ. ಇವರು ಭಕ್ತನಾಥರಂತೆ   ನಾಥದೀಕ್ಷೆ ಪಡೆಯದೆ ಪೀಠಕ್ಕೆ ಬಂದರು. ಇಲ್ಲಿಂದ ಮುಂದೆ ಚುಂಚನಗಿರಿ ಮಠದ ಸ್ವಾಮಿಗಳು ನಾಥದೀಕ್ಷೆ ಮಾಡಿಸಿ ಕೊಳ್ಳುವ ಪದ್ಧತಿ ನಿಂತುಹೋಯಿತು. ಆದರೆ ಹೆಸರಲ್ಲಿ ಮಾತ್ರ ನಾಥ ಶಬ್ದವು ಸಾಂಕೇತಿಕ ವಾಗಿ ಉಳಿಯಿತು.  ಭಕ್ತನಾಥರ ವಿರುದ್ಧ ಎಷ್ಟೇ ಹೋರಾಟ ಮಾಡಿದರೂ ನಾಥಪಂಥದ ವರಿಗೆ ಇವರು ನಾಥದೀಕ್ಷೆ ಪಡೆದವರು ಎಂಬ ಸಮಾಧಾನವಿತ್ತು. ಈಗ ಅದೂ ಇಲ್ಲ ವಾಯಿತು. ಆಧುನಿಕ ವಿದ್ಯಾಭ್ಯಾಸ ಪಡೆದಿದ್ದ ಚಂದ್ರಶೇಖರನಾಥರು, ಆಧ್ಯಾತ್ಮಿಕ  ಲೇಖಕರಾಗಿದ್ದವರು. ಜ್ಞಾನಾರ್ಜನೆಗೆ ಒತ್ತುಕೊಟ್ಟವರು. ಸ್ವತಃ ಚುಂಚನಗಿರಿಯ ಜನಪದ ಹಾಡುಗಳನ್ನು ಸಂಗ್ರಹಿಸಿ ಪ್ರಕಟಿಸಿದವರು. ಅವರ ಕಾಲದಲ್ಲಿ ಚುಂಚನಗಿರಿ ಮಠದಲ್ಲಿ ಒಂದು ಗ್ರಂಥಭಂಡಾರ ಏರ್ಪಟ್ಟಿತು.  ಆದರೆ ವೃದ್ಧರಾಗಿದ್ದ ಚಂದ್ರಶೇಖರನಾಥರು ಪೀಠಕ್ಕೆ ಬಂದ ಒಂದು ವರ್ಷದಲ್ಲೇ(೧೯೬೭) ತೀರಿಕೊಂಡರು.

ಅವರ ಉತ್ತರಾಧಿಕಾರಿಯ ಆಯ್ಕೆ ಆಗಿರದ ಕಾರಣ, ಮೂರನೆಯ ಸಲ ಒಕ್ಕಲಿಗ ಸಮುದಾಯದ ಗಣ್ಯರು ಮಠಾಧಿಕಾರಿಯ ತಲಾಶನ್ನು ಆರಂಭಿಸಿದರು. ಈ ಸನ್ನಿವೇಶದಲ್ಲಿ  ಬಾರಾಪಂಥವು  ಮಠವನ್ನು ಹಿಡಿತಕ್ಕೆ ಪಡೆಯಲು ಮೂರನೆಯ ಯತ್ನ ಮಾಡಿತು. ನಾಥದೀಕ್ಷೆಯಿಲ್ಲದೆ ಸಿದ್ಧಪೀಠ ಏರಿದ ಕಾರಣದಿಂದಲೇ ಚಂದ್ರಶೇಖರನಾಥರು ಅಕಾಲ ಮೃತ್ಯುವಿಗೆ ಈಡಾಗಬೇಕಾಯಿತು ಎಂದು ಅದು ವ್ಯಾಖ್ಯಾನಿಸಿತು. ಚುಂಚನಗಿರಿ ಮಠಕ್ಕೆ ಅಧಿಪತಿಯಾಗುವವರು ಒಕ್ಕಲಿಗ ಸಮುದಾಯದಿಂದಲೇ ಬರಲಿ, ಕೊನೆಯ ಪಕ್ಷ  ನಾಥದೀಕ್ಷೆ ಪಡೆಯಲಿ ಎಂಬ ರಾಜಿ ಬೇಡಿಕೆ ಇಟ್ಟು ಸರಕಾರಕ್ಕೆ ಅರ್ಜಿ ಸಲ್ಲಿಸಿತು. ಜತೆಗೆ   ಕದ್ರಿಯಲ್ಲಿ ಸೇರಿದ್ದ ನಾಥಯೋಗಿಗಳ ಮೂಲಕ ನೈತಿಕ ಭಯ ಹುಟ್ಟಿಸುವ ಎಚ್ಚರಿಕೆ ಪತ್ರವನ್ನೂ ಹೊರಡಿಸಿತು. ಆ ಪತ್ರ ಹೀಗಿದೆ:

ಓಂ ಶಿವಗೋರಕ್ಷ! ಸಾವಧಾನ ಪತ್ರ

ಆದಿಗುರುಕುಲ ಆದಿಚುಂಚನಗಿರಿ ಮಠದ ಮರ್ಯಾದೆ ಮಠಾಧೀಶ ಭಕ್ತನಾಥ ಯೋಗೀ ಪರ್ಯಂತ ಕಳೆದ ವರ್ಷದವರೆಗೆ ತೊಂದರೆಯಿಲ್ಲದೆ ಇತ್ತು. ಹತ್ತು ತಿಂಗಳಿಂದ ಈಚೆ ದರ್ಶನೀ ಸಿದ್ಧಪೀಠದ ಮೇಲೆ ಅವಘಡ ಚಂದ್ರನಾಥರು ಕುಳಿತುಕೊಳ್ಳಲು ವಿಘ್ನವಾಯಿತು. ಇದೇ ಕಾರಣದಿಂದಾಗಿ ಒಂಭತ್ತು ಮುಕ್ಕಾಲು ತಿಂಗಳಲ್ಲಿಯೇ ಸಂಶಯದ ಅಕಾಲ ಮೃತ್ಯು ಕೂಡ ಆಗಿಹೋಯಿತು. ಈಗ ಭಕ್ತನಾಥ ಸ್ವಾಮಿಯ ಹಾಗೆ ತ್ರ್ಯಂಬಕ ಮಠದ ಶಿವಗೋರಕ್ಷ ದೀಕ್ಷಾ ತೆಕ್ಕೊಂಡು ದರ್ಶನೀ ಯೋಗಿಯೇ ಆ ಸಿದ್ಧಸಿಂಹಾಸನದ ಮೇಲೆ ಕುಳಿತುಕೊಳ್ಳುವರು. ಮೈಸೂರ ಅರಸರು ಅಖಿಲ ಭಾರತ ವರ್ಷದ ಯೋಗಿಗಳ ಸಮ್ಮತಿ ಸಹಯೋಗಗಳಿಂದಲೇ ಕುಳಿತುಕೊಳ್ಳುವರು. ಯಾರಿಗೂ ಸೂಚನೆ ಕೊಡದೆ ಯಾರದೇ ಸಹಯೋಗ ತೆಕ್ಕೊಳ್ಳದೆ ಒಂದು ವರ್ಗದ ಏಕಾಂಗಿ ಅನುಚಿತ ಅವೈಧಾನಿಕ ಕೆಲಸವನ್ನು ಯಾರಾದರೂ ಮಾಡಿದರೆ ಮಾನ್ಯತೆ ಇಲ್ಲದಾಗುವುದು. ಮತ್ತು ಪರಿಣಾಮ ಕೂಡ ಒಳ್ಳೆಯದಾಗಲಾರದು. ಯಾರಿಗೂ ಎಂದಿಗೂ ಕೂಡ ಇಂಥಾ ದುಸ್ಸಾಹಸ ಮಾಡಬಾರದು.[6]

ಬಾರಾಪಂಥವು ಮೈಸೂರು ಸರಕಾರಕ್ಕೆ ಕೊಟ್ಟ ಮನವಿ ಪತ್ರ ಹೀಗಿದೆ:

||ಓಂ ಶಿವಗೋರಕ್ಷ||

ಎಂಡೋಮೆಂಟ್ ಮೈಸೂರು ಸರಕಾರ್ ಸನ್ನಿಧಿಯಲ್ಲಿ, ಆದಿ ಚುನ್‌ಚುನ್‌ಗಿರಿ ಮಠದ ಸಂಬಂಧ ಸಮಿತಿ ಸಹಿತ ಎಲ್ಲ ಜನಸ್ತೋಮಕ್ಕೆ ಅಖಿಲ ಭಾರತವರ್ಷ ಬಾರಪಂಥ್ ನಾಥ್ ಯೋಗಿ ಸಂಪ್ರದಾಯ ಗೋದಾವರಿ ತ್ರಿಯಂಭಕ್ ಗೋರಕ್ಷನಾಥ್ ಮಠ, ಕದ್ರಿಮಠ್, ವಿಠಲ್ ಮಠ್, ಮೃಗಸ್ತಳೀ ಮಠ್ ಅದಿದ್ದು, ಸ್ವಸ್ತ ವಿವೇಕ ಏವಂ ಸಹಯೋಗಾರ್ಥ ಅನುರೋಧಾ. ಆದಿ ಚುನ್‌ಚುನ್ ಗಿರಿ ಮಠದಲ್ಲಿ ಆದಿರುದ್ರ ಆದಿನಾಥ ಸಿದ್ಧಯೋಗಿ ಕರ್ಮನಾಥರಿಂದ ಹಿಡಿದು ಭಕ್ತನಾಥರಿರುವ ತನಕ, ಕಪಾಲಿ ಕರ್ಣಕುಂಡಲ ದೀಕ್ಷಾಪ್ರಕಾರ ಬಂದಂತಾ ಯೋಗಿಗಳೇ ಅಖಂಡರೂ ಪೇಣಾ ೬೮ ಮಠಾಧೀಶರುಗಳು ಆಗುತ್ತಾ ಬಂದಿರುತ್ತಾರೆ…ಬಾರಾಪಂಥಿನ ಪ್ರತಿನಿಧಿ ವಿಠಲ್ ಯೋಗಿ ಮಠದ ರಾವರಾಜ ಲಕ್ಷ್ಮೀನಾಥ್ ಯೋಗಿಯವರು ಗುರುರಾಮಪ್ಪ ಭಕ್ತನಾಥ್ ಕಾ ಚುನಾವಾ ಮಾಡಿರುವರು. ಮತ್ತು ಬಾರಪಂಥ್ ದಲೀಚ ತ್ರಿಯಂಬಕ್ ಗೋರಕ್ಷನಾಥ ಮಠದ ಮಠಾಧೀಶ ನರ್ಮದಾನಾಥ್ ಯೋಗಿಗಳು ಅವಘಡ ದೀಕ್ಷಾ ಕರ್ಣಛೇಧ ದೀಕ್ಷಾ ಆದಿ ಕಪಾಲಿ ದೀಕ್ಷಾ ಕೊಟ್ಟು ಗುರುರಾಮಪ್ಪನನ್ನು ಭಕ್ತನಾಥ್ ಎಂದು ಮಾಡಿಸಿ, ಆದಿ ಚುನ್‌ಚುನ್‌ಗಿರಿ ಮಠದಲ್ಲಿ ಪಟ್ಟಾಭಿಷೇಕ ಮಾಡಿರುವರು. ಆದುದರಿಂದ ಇದರ ಪ್ರಕಾರ ಮೈಸೂರು ಸರಕಾರ ಕರ್ಣಕುಂಡಲಧಾರಿಯಾಗಿಯೇ ಸಿದ್ಧಸಿಂಹಾಸನ ಪೀಠದಲ್ಲಿ ಕುಳಿತುಕೊಳ್ಳುವಂತಾ ಹುಕುಂ ಕೊಟ್ಟಿರುತ್ತದೆ. ಇದರ ಎ್ಲಾ ಹಕ್ಕು ಬಾಧ್ಯತೆಗಳು ನಮ್ಮಲ್ಲಿರುತ್ತದೆ. ಈವಾಗ ಚುನ್‌ಚುನ್ ಗಿರಿ ಪೀಠವು ಖಾಲಿಯಾಗಿರುತ್ತದೆ. ಆದುದರಿಂದ ಬಾರಪಂಥಿನಿಂದ ಚುನಾಯಿಸಲ್ಪಟ್ಟ ಕರ್ಣಕುಂಡಲ ಧಾರಿಯಾಗಿರುವ ನಾಥ್‌ಯೋಗಿಗೆ ಈ ಮೈಸೂರು ಸರಕಾರದ ಎಂಡೊಮೆಂಟ್ ತಥಾ ಕೇಂದ್ರಿಯ ಸರಕಾರವು ಪೀಠಾರೂಢರಾಗುವಂತೆ ಮಾಡುವಿರೆಂದು ಸಮರ್ಥಿಸುತ್ತೇವೆ. ಆದುದರಿಂದ ಚುನ್ ಚುನ್ ಗಿರಿ ಮಠದ ಶಿಷ್ಯವರ್ಗ ಸೇವಕವರ್ಗ, ಸಮಿತಿ ಸಮೇತ ಎಲ್ಲಾ ಜನರು ಭಿನ್ನವಿಸಿಕೊಳ್ಳುತ್ತಾರೆ. ಸಿದ್ಧಪೀಠದ ಧಾರ್ಮಿಕ ಆದಿ ಮರ್ಯಾದೆ ರಕ್ಷಣೆ ನಮ್ಮೆಲ್ಲರಿಂದ ನಮ್ಮ ಎಲ್ಲರಿಗೂ ಸಹಾಯಾರ್ಥ ವಿನಮ್ರ ಅನುರೋಧವಾಗಿರುತ್ತದೆ. ಅನುರೋಧಕ್- ಅಖಿಲ ಭಾರತೀಯ ವರ್ಷೀಯ ಬಾರಪಂಥ್ ನಾಥ್ ಯೋಗೀಶ್ವರ್ ಸಭಾ ಕದ್ರಿ (ಶಕೇ ೧೮೮೯ ಸಂಬತ್, ೨೦೨೪, ಸನ್ ೧೯೬೮ ಜನವರಿ ೧೩)[7]

ಬಾರಾಪಂಥವು ಚುಂಚನಗಿರಿ ಮಠವನ್ನು ಪಡೆಯಲು ಮಾಡಿದ ಈ ಕೊನೆಯ ಯತ್ನವೂ ನಿಷ್ಫಲಗೊಂಡಿತು. ನಾಥದೀಕ್ಷೆಯಂತಹ  ಸಾಂಕೇತಿಕ ಸಂಬಂಧವಾದರೂ ಇದ್ದರೆ ಸಾಕು ಎಂಬ ದನಿ ಕರಪತ್ರದ ಭಾಷೆ ಮತ್ತು ಧಾಟಿಯಲ್ಲಿ ವ್ಯಕ್ತವಾಗುತ್ತಿದೆ. ಆದರೆ ಆ ಹೊತ್ತಿಗೆ ಮಠವು ಪೂರ್ಣವಾಗಿ ಒಕ್ಕಲಿಗ ಸಮುದಾಯದ ಗುರುತಾಗಿ ಬೇರುಬಿಟ್ಟಿತ್ತು. ಒಕ್ಕಲಿಗ ನಾಯಕರು ಕರ್ನಾಟಕದ ರಾಜಕಾರಣದಲ್ಲಿ ಶಕ್ತಿಯುತವಾಗಿ ಬೆಳೆದಿದ್ದರು. ಮಠದ ಹಕ್ಕುಸಂಬಂಧವಾಗಿ ಬಾರಾಪಂಥದವರು ಹೂಡಿದ್ದ ವ್ಯಾಜ್ಯಗಳು ಚಮೇಲಿನಾಥರ (೧೯೪೫-೧೯೧೫೭) ಕಾಲದವರೆಗೆ ಮುಂದುವರೆದವು. ಈ ನಡುವೆ ಶೃಂಗೇರಿ ಸ್ವಾಮಿಗಳು ಈ ವಿವಾದದಲ್ಲಿ ಮಧ್ಯಪ್ರವೇಶಿಸಿ ರಾಜಿ ಮಾಡಿಸಬೇಕೆಂದು  ಬಾರಾಪಂಥವು ಕೇಳಿಕೊಂಡಿತು. ಮೈಸೂರು ದೊರೆಗಳು ಮಂಗಳೂರಿಗೆ ಬಂದಾಗಲೆಲ್ಲ ಕದ್ರಿಮಠಕ್ಕೆ ಭೇಟಿ ಕೊಡುತ್ತಿದ್ದ ಕಾರಣ, ಚಮೇಲಿನಾಥರು ಮಠವನ್ನು ದೊರಕಿಸಿಕೊಡಲು ಮಹಾರಾಜರಿಗೆ ಅಹವಾಲು ಕೊಟ್ಟಿತು. ಪ್ರಯೋಜನ ಆಗಲಿಲ್ಲ. ಬಹುಶಃ  ಪ್ರಭುತ್ವವು ಬಲಿಷ್ಠ ಸಮುದಾಯವನ್ನು ಎದುರು ಹಾಕಿಕೊಳ್ಳಲು ಸಹಜವಾಗಿಯೆ ಬಯಸಲಿಲ್ಲ. ಈ ವಿಷಯದಲ್ಲಿ ಕೊನೆತನಕ ಹೋರಾಟ ಮಾಡಿದವರು ವಿಟ್ಲದ ಲಕ್ಷ್ಮೀನಾಥರೊಬ್ಬರೆ. ನಂತರ ಕದ್ರಿಪೀಠಕ್ಕೆ ಬಂದ ನಾಥರು ಚುಂಚನಗಿರಿ ಖಟ್ಲೆಗಳನ್ನು ಮುಂದುವರೆಸಲಿಲ್ಲ. ಉತ್ತರ ಭಾರತದಿಂದ ನಿರ್ದಿಷ್ಟ ಅವಧಿಗಾಗಿ ಬರುತ್ತಿದ್ದ ಅವರಿಗೆ ಇದರಲ್ಲಿ ಆಸಕ್ತಿಯೂ ಇರಲಿಲ್ಲ. ಶಾಂತಿನಾಥರು (೧೯೫೭-೬೯) ನ್ಯಾಯಾಲಯದ ಹಿಯರಿಂಗಿಗೆ ಮಠದ ವಕೀಲರನ್ನು ಕಳಿಸಲಿಲ್ಲ. ೧೯೫೮ರಲ್ಲಿ ನ್ಯಾಯಾಲಯವು ಕದ್ರಿಮಠದ ಅರ್ಜಿಯನ್ನು ತಳ್ಳಿಹಾಕಿ ಚುಂಚನಗಿರಿ ಪರವಾಗಿ ಅಂತಿಮ ತೀರ್ಪು ನೀಡಿತು. ತೇಜನಾಥರ ನಿಧನದಿಂದ ೧೯೨೪ರಲ್ಲಿ ಆರಂಭವಾದ ಉತ್ತರಾಧಿಕಾರತ್ವ ಪ್ರಕರಣವು ಮೂರು ದಶಕಗಳ ನಂತರ ಹೀಗೆ ಕೊನೆಗೊಂಡಿತು.

ಮುಂದೆ ಚಂದ್ರಶೇಖರನಾಥರ ಉತ್ತರಾಧಿಕಾರಿ ತಲಾಶು ಸಮಿತಿಯಲ್ಲಿ ಭಕ್ತನಾಥರ ಆಯ್ಕೆ ಸಮಿತಿಯಲ್ಲಿ ಮುಖ್ಯಪಾತ್ರ ವಹಿಸಿದ್ದ ಲಿಂಗೆಗೌಡರೂ ಇದ್ದರು. ಅವರ ಜತೆಗೆ ರಾಜಕೀಯ ನಾಯಕರಾದ ಎಚ್.ಕೆ. ವೀರಣ್ಣಗೌಡರೂ ಯಶೋಧರಮ್ಮ ದಾಸಪ್ಪನವರೂ ಇದ್ದರು. ಮೇಲುಕೋಟೆಯ ಚುಂಚನಗಿರಿ ಮಠದ ಛತ್ರವನ್ನು ನೋಡಿಕೊಳ್ಳುತ್ತಿದ್ದ ರಾಮಾನಂದನಾಥರನ್ನು ಪೀಠಾಧಿಪತಿಯಾಗಿ ಆರಿಸಲಾಯಿತು. ಮೂಲತಃ ನಾಗಮಂಗಲ ತಾಲೂಕಿನ ಪಡುವಲ ಪಟ್ಟಣದಲ್ಲಿ  ಶಿಕ್ಷಕರಾಗಿದ್ದ ನರಸಪ್ಪನವರು, ಭಕ್ತನಾಥರಿಂದ ದೀಕ್ಷೆ ಪಡೆದು ರಾಮಾನಂದ ನಾಥ ಆಗಿದ್ದರು. ಇವರ ಕಾಲದಲ್ಲಿ ಚುಂಚನಗಿರಿಯಲ್ಲಿ ಕಾಲಭೈರವೇಶ್ವರ ಸಂಸ್ಕೃತ ಪಾಠಶಾಲೆ ಆರಂಭವಾಯಿತು. ವೃದ್ಧರಾಗಿದ್ದ ರಾಮಾನಂದನಾಥರು ಸಹ ಬಹಳ ಕಾಲ ಇರಲಿಲ್ಲ. ೧೯೭೪ರಲ್ಲಿ ತೀರಿಕೊಂಡರು. ಅವರ ಉತ್ತರಾಧಿಕಾರಿಯಾಗಿ ಬಂದವರು(೧೯೭೪) ಈಗಿರುವ ಪೀಠಾಧಿಪತಿ ಬಾಲಗಂಗಾಧರ ನಾಥರು. ಪೂರ್ವಾಶ್ರಮದಲ್ಲಿ ಬಾನಂದೂರಿನ (ರಾಮನಗರ) ಚಿಕ್ಕಲಿಂಗಪ್ಪನವರ ಮಗನಾದ ಗಂಗಾಧರಯ್ಯ ಇವರು,  ರಾಮಾನಂದನಾಥರಿಂದ ದೀಕ್ಷೆ ತೆಗೆದುಕೊಂಡಿದ್ದರು.

ಹೊರಗುಳಿದ ಕಾಪಾಲಿಕರು

ಚುಂಚನಗಿರಿಯಲ್ಲಿ  ಮಠಾಧೀಶ, ಸುಬೇದಾರ, ಚೂರದಾರ, ಪುರುಷಯ್ಯ, ಜೋಗಪ್ಪ, ಕೊಟವಾಳಿ-ಈ ಕ್ರಮದಲ್ಲಿ ಧಾರ್ಮಿಕ ಆಡಳಿತದ ಶ್ರೇಣೀಕರಣ ವ್ಯವಸ್ಥೆಯಿದೆ. ಇದು ನಾಥಪಂಥದಲ್ಲಿ ಇರುವ ಶ್ರೇಣಿಕೃತ ಆಡಳಿತ ವ್ಯವಸ್ಥೆಯ ಉಳಿಕೆ. ಮಠಾಧಿಪತಿಯು ಇಡೀ ಸೀಮೆಗೆ, ಸುಬೇದಾರನು ಜಿಲ್ಲೆಗೆ, ಚೂರಿದಾರನು ತಾಲೂಕಿಗೆ, ಪುರುಷಯ್ಯ ಹೋಬಳಿಗೆ, ಜೋಗಯ್ಯ ಹಳ್ಳಿಗೆ ಸಂಬಂಧಿಸಿ ಅಧಿಕಾರ ವ್ಯಾಪ್ತಿಯುಳ್ಳವರಾಗಿರುತ್ತಾರೆ. ಸಾಮಾನ್ಯವಾಗಿ ದಲಿತ ಸಮುದಾಯಕ್ಕೆ ಸೇರಿದ ಕೊಟವಾಳಿಯು ಸುದ್ದಿ ಕೊಡುವ ಕೆಲಸ ಮಾಡುತ್ತಾನೆ. ಈ ವ್ಯವಸ್ಥೆಯಲ್ಲಿ ಚುಂಚನಗಿರಿ ಸೀಮೆಯ ಕಾಪಾಲಿಕರು ಭೈರವನ ಭಕ್ತರಿಗೆ  ಕಿವಿ ಚುಚ್ಚಿ ಚಿಕ್ಕಮುದ್ರೆ ಹಾಕುವ ಹಾಗೂ ದೀಕ್ಷೆ ಕೊಡುವ ಕೆಲಸವನ್ನು ಮಾಡುತ್ತಿದ್ದಾರೆ. ದೊಡ್ಡ ಭೂಹಿಡುವಳಿ ಇಲ್ಲದಿದ್ದರೂ, ಕಾಪಾಲಿಕರು ಒಕ್ಕಲಿಗರಿಗೆ ದೀಕ್ಷೆ ಕೊಡುವ ಗುರುಗಳಾಗಿ ಸಾಮಾಜಿಕ ಪ್ರತಿಷ್ಠೆ ಅನುಭವಿಸಿಕೊಂಡಿದ್ದರು. ಈ ಗುರುಸ್ಥಾನದಿಂದ ಅವರಿಗೆ ಕೆಲಮಟ್ಟಿನ ಆದಾಯವೂ ಇತ್ತು. ಮಠದ ಆಡಳಿತದಲ್ಲಿ ಬದಲಾವಣೆಯಾದ ಬಳಿಕ ಅವರ ಆದಾಯ ದಲ್ಲಿ ವ್ಯತ್ಯಾಸ ಆಯಿತು. ಜತೆಗೆ ಅವರ ಸಾಮಾಜಿಕ ಸ್ಥಾನವೂ  ಕೊಂಚ ಕಡಿಮೆಯಾಯಿತು.

ಮಠ ಕೈಬಿಟ್ಟಿದ್ದು ಚುಂಚನಗಿರಿ ಪರಿಸರದ ಕಾಪಾಲಿಕರಿಗೆ  ಅನಾಥ ಪ್ರಜ್ಞೆ ಮೂಡಿಸಿತು.

ಅದು ಕೊರಗಾಗಿ ಅವರಿಗೆ ಈಗಲೂ ಬಾಧಿಸುತ್ತಿದೆ. ಚುಂಚನಕಟ್ಟೆಯ ಹಿರಿಯರಲ್ಲಿ ಒಬ್ಬರಾದ ಕೆಂಚಪ್ಪನವರು(೮೦) ಚುಂಚನಗಿರಿಯ ಕಳೆದ ಅರ್ಧಶತಮಾನದ ವಿದ್ಯಮಾನಗಳನ್ನು ಕಂಡವರು; ಮಠವನ್ನು ತಿರುಗಿ ಪಡೆವ ಹೋರಾಟದಲ್ಲಿ ಪಾಲುಗೊಂಡವರು. ಅವರನ್ನು ಮಾತಾಡಿಸಿದಾಗ,  ‘‘ಮೋಸ ಮಾಡಿಬಿಟ್ಟರು ಸ್ವಾಮಿ, ಗುರುರಾಮಯ್ಯ ಕಾಪಾಲಿಕ ಅಂತ ಹೇಳಿ, ದೊಡ್ಡಮುದ್ರೆ ಹಾಕಿಸ್ಕೊಂಡು ಬಂದುಬಿಟ್ಟರು.  ಒಕ್ಕಲಿಗರ ಮೆಜಾರಿಟಿ ಬ್ಯಾರೆ  ಇತ್ತಲ್ಲ. ಮಠ ಬಿಟ್ಟೋಯ್ತು’’  ಎಂದು ಅವಲತ್ತುಕೊಂಡರು. ಕಾಳೇನಹಳ್ಳಿಯ ಲಿಂಗದೇವರಯ್ಯ ನವರು(೯೦), ಚುಂಚನಗಿರಿ ಮಠದ ಕೊನೇ ನಾಥಪಂಥಿ ಗುರು ತೇಜನಾಥರನ್ನು ಕಂಡವರು. ಭಕ್ತನಾಥರಿಗೆ ಪಟ್ಟಕಟ್ಟುವಾಗ ಬೆಳ್ಳೂರು ರಸ್ತೆಯಲ್ಲಿ ಮರ ಕಡಿದು ಕದ್ರಿಯಿಂದ ನಾಥ ಗುರುಗಳು ಬರದಂತೆ ತಡೆದರು ಎಂದು ಹೇಳಿದರು. ಭಕ್ತನಾಥರನ್ನು ವಯಸ್ಸಾದ ಕಾಪಾಲಿಕರು ಗುರುರಾಮಯ್ಯ ಎಂದೇ ಕರೆಯುವುದು ವಿಶೇಷವಾಗಿ ಕಂಡಿತು. ಇದು ಅವರು  ಮಠಾಧಿಪತಿಯ ಬದಲಾವಣೆಯನ್ನು ಇನ್ನೂ ಒಪ್ಪದಿರುವ ಸಂಕೇತವೊ ಸಮಕಾಲೀನರ ಜತೆಗಿನ ಸಲಿಗೆಯೊ ಹೇಳುವುದು ಕಷ್ಟ. ಮಠ ಕಳೆದುಕೊಂಡ  ಅವರ ಬೇಸರ, ಈಗಿನ ಅದರ ಸಂಪತ್ತು ಕಾಣುವಾಗ ಮತ್ತಷ್ಟು ತೀವ್ರವಾಗಿದೆ. ನಾಥರು ತಮ್ಮ ಮಠಗಳನ್ನು ಕಳೆದುಕೊಳ್ಳಲು ಎರಡು ಕಾರಣಗಳಿವೆ. ೧. ಉತ್ತರ ಭಾರತದಲ್ಲಿರುವ ಅದರ ಕೇಂದ್ರಗಳಿಗೆ  ದಕ್ಷಿಣದಲ್ಲಿ  ಆಗುತ್ತಿದ್ದ ವಿದ್ಯಮಾನ  ಬೇಗ ಮುಟ್ಟುತ್ತಿರಲಿಲ್ಲ. ಅದರ ಕೇಂದ್ರೀಕೃತ ಆಡಳಿತ ವ್ಯವಸ್ಥೆಯು ಶಿಸ್ತಿಗೆ  ಕಾರಣ ಆಗಿರುವಂತೆ, ಅದೊಂದು ದೌರ್ಬಲ್ಯವೂ ಆಗಿತ್ತು. ಅರಾಜಕವಾದ ಪ್ರಾಂತ್ಯದಲ್ಲಿ ಆಡಳಿತ ಸರಿಮಾಡಲು ದೂರದ ರಾಜಧಾನಿಯಿಂದ ರಾಜ ಜನರನ್ನು ಕಳಿಸುವ ತನಕ, ಪ್ರಾಂತ್ಯ ಸ್ವತಂತ್ರ ರಾಜ್ಯವಾಗಿರುತ್ತಿತ್ತು. ೨.ಸನ್ಯಾಸಿಗಳ ಸಂಘಟನೆಯಾದ ಬಾರಾಪಂಥಕ್ಕೆ ಅನೇಕ ಸಲ ಲೌಕಿಕವಾದ ಸಮಸ್ಯೆಗಳು, ಸ್ಥಳೀಯ ಸಮುದಾಯಗಳ ಆಸೆ ಅತೃಪ್ತಿಗಳು ಸರಿಯಾಗಿ ಅರ್ಥವಾಗುತ್ತಿರಲಿಲ್ಲ. ಸಂಕೀರ್ಣ ವ್ಯಾಜ್ಯಗಳನ್ನು ನಿಭಾಯಿಸಲು ಅದಕ್ಕೆ ಕಷ್ಟವಾಗುತ್ತಿತ್ತು.

ಚುಂಚನಗಿರಿ ಮಠವು ಒಕ್ಕಲಿಗರನ್ನು ಒಗ್ಗೂಡಿಸುವ, ತನ್ನ ರಾಜಕೀಯ ನಾಯಕತ್ವಕ್ಕೆ ಸಮುದಾಯದ ಬೆಂಬಲ ಕೂಡಿಸಿ ಕೊಡುವ ಹಾಗೂ ಅದನ್ನು ನಿಯಂತ್ರಿಸುವ ಕೆಲಸವನ್ನು ಸಮರ್ಥವಾಗಿ ಮಾಡಿತು. ಈ ಪ್ರಕ್ರಿಯೆಯಲ್ಲಿ ಅಲ್ಪಸಂಖ್ಯಾತರಾದ ಕಾಪಾಲಿಕರು ಹೊರಗುಳಿದರು. ಮಠವು ಸಂಸ್ಕೃತ ಶಾಲೆ ಹಾಗೂ ವೇದಮಂತ್ರಗಳ ಆಯಾಮ ಪಡೆದಂತೆ ಸಾಂಸ್ಕೃತಿಕವಾಗಿಯೂ ಹೊರಗುಳಿದರು. ಮಠ ಬೆಳೆದರೆ ಹೀಗೆ ಬೆಳೆಯಬೇಕು ಎಂದುಕೊಳ್ಳುವ ಕಾಪಾಲಿಕರಿಗೆ ಅದೊಂದು ಮಾದರಿಯಾಗಿ ಕಾಡುತ್ತಿದೆ. ೮೦ ವರ್ಷಗಳ ಹಿಂದೆ ದಿವಾನರಿಗೆ ಬರೆದ ಪತ್ರದಲ್ಲಿ ನಮಗೆ ಅನ್ಯಾಯವಾಗಿದೆ ಎಂದು ದೂರಿದವರ ನಿದ್ದೆಯಲ್ಲಿ ಈಗ ಬೀಳುತ್ತಿರುವ ಸ್ವಪ್ನಗಳೇ ಬೇರೆಯಾಗಿವೆ.

* * *

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)[1]      ಭಕ್ತನಾಥರ ಕಾಪಾಲಿ ದೀಕ್ಷೆಯ ಮರ್ಮ, ಪು. ೧೧-೧೨

[2]      ಕಲಬುರ್ಗಿ ಎಂ.ಎಂ., ‘ಭೈರವ-ಜುಂಜಪ್ಪ-ಮೈಲಾರ’, ಮಾರ್ಗ-೪

[3]      ರಾಜೇಶ್ವರಿಗೌಡ ಕೆ., ಆದಿಚುಂಚನಗಿರಿ ಒಂದು ಸಾಂಸ್ಕೃತಿಕ ಅಧ್ಯಯನ, ಪು.೧೫

[4]      ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಪು.೧೫೪

[5]      ಭಕ್ತನಾಥರ ಕಾಪಾಲಿ ದೀಕ್ಷೆಯ ಮರ್ಮ, ಪು.೧-೩

[6]      ಆದಿಚುಂಚುನ್‌ಗಿರಿ ಮಠದ ಸಮಸ್ಯೆ, ಪು.೧

[7]       ಅದೇ, ಪು.೮