ಹಿಂದಿನ ಮೂರು ವರ್ಷಗಳಿಂದ ವಸಾಹತ್ತೋತರ ಕರ್ನಾಟಕದ ಅಭಿವೃದ್ಧಿ ರಾಜಕಾರಣ ಎನ್ನುವ ಸಂಶೋಧನೆಯ ಕೆಲಸ ನಡೆದಿದೆ. ಡಿಸೆಂಬರ್ 2೦1೦ಕ್ಕೆ ಯೋಜನೆಯ ಅಂತಿಮ ವರದಿ ಸಿದ್ಧಗೊಳ್ಳಬೇಕಿತ್ತು. ನಿರ್ಧರಿತ ವೇಳೆಗೆ ಯೋಜನೆಯ ವರದಿ ಸಿದ್ಧಗೊಂಡರು ಅದನ್ನು ಪುಸ್ತಕವಾಗಿ ಪರಿವರ್ತಿಸಲು ಮತ್ತೆ ಕೆಲವು ತಿಂಗಳ ಕಾಲಾವಕಾಶಬೇಕೆಂದು ಮಾನ್ಯ ಕುಲಪತಿಗಳನ್ನು ವಿನಂತಿಸಿಕೊಂಡೆ. “ಡಿಸೆಂಬರ್ ಅಲ್ಲ, ನವೆಂಬರ್ ೩೦ರೊಳಗೆ ನನಗೆ ಯೋಜನೆ ಪುಸ್ತಕರೂಪದಲ್ಲಿ ಸಿಗಬೇಕೆಂದು” ಕುಲಪತಿಗಳು ಒತ್ತಾಯಿಸಿದರು. ಇಡೀ ಯೋಜನೆಯನ್ನು ಡಿಸೆಂಬರ್ 2೦1೦ರೊಳಗೆ ಪುಸ್ತಕ ರೂಪದಲ್ಲಿ ತರುವುದು ಕಷ್ಟ. ಯೋಜನೆಯ ಅಧ್ಯಾಯಗಳನ್ನು ಮೂರು ಭಾಗ ಮಾಡಿ ಪ್ರತಿ ಭಾಗವನ್ನು ಪ್ರತ್ಯೇಕ ಪುಸ್ತಕ ಮಾಡಿದರೆ ನವೆಂಬರ್ 3೦ರೊಳಗೆ ಎರಡು ಪುಸ್ತಕಗಳನ್ನು ಬರೆದು ಮುಗಿಸಬಹುದು. ಯೋಜನೆಯ ಕೆಲಸದಲ್ಲಿ ಈ ಪರಿವರ್ತನೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಕುಲಪತಿಗಳನ್ನು ಕೋರಿದೆ. ನನ್ನ ಮನವಿಯನ್ನು ಪರಿಗಣಿಸಿ ಕುಲಪತಿಗಳು ಒಪ್ಪಿಗೆ ನೀಡಿದುದರ ಫಲವಾಗಿ ವಸಾಹತ್ತೋತರ ಕರ್ನಾಟಕದ ಅರ್ಥ ವ್ಯವಸ್ಥೆಯ ಅಧ್ಯಯನ “ಕರ್ನಾಟಕದ ಪಂಚವಾರ್ಷಿಕ ಯೋಜನೆಗಳು” ಎನ್ನುವ ಪುಸ್ತಕ ಹೊರಬಂದಿದೆ. ಡಾ. ಮಂಜುನಾಥ ಬೇವಿನಕಟ್ಟಿ ಕುಲಸಚಿವರು, ಯೋಜನೆಯ ಕೆಲಸ ಕಾರ್ಯಗಳಿಗೆ ಬೇಕಾದ ರಜೆ ಹಾಗೂ ಹಣಕಾಸಿನ ನೆರವು ನೀಡಿ ಯೋಜನೆಯ ಕೆಲಸವನ್ನು ಅಡೆತಡೆ ಇಲ್ಲದೆ ಮುಂದುವರಿಸಲು ಸಹಕರಿಸಿದ್ದಾರೆ. ಸಹದ್ಯೋಗಿ ಶ್ರೀ ಜನಾರ್ದನ ಅವರು ಪುಸ್ತಕದ ಕರಡು ಪ್ರತಿಯನ್ನು ತಿದ್ದಿದ್ದಾರೆ. ಯೋಜನೆಗೆ ಸಂಬಂಧಿಸಿದ ಮಾಹಿತಿಯನ್ನು ದೊಡ್ಡ ಪ್ರಮಾಣದಲ್ಲಿ ಕರ್ನಾಟಕ ಮತ್ತು ಗುಲ್ಬರ್ಗಾ ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಿಂದ ಸಂಗ್ರಹಿಸಿದ್ದೇನೆ. ಈ ಎರಡೂ ವಿಶ್ವವಿದ್ಯಾಲಯಗಳ ಗ್ರಂಥಪಾಲಕರು ಹಾಗೂ ಸಿಬ್ಬಂದಿಗಳು ಮಾಹಿತಿ ಸಂಗ್ರಹ ಕೆಲಸಕ್ಕೆ ಆತ್ಮೀಯವಾಗಿ ಸಹಕರಿಸಿದ್ದಾರೆ. ಪ್ರಸಾರಾಂಗದ ನಿರ್ದೇಶಕರಾದ ಡಾ.ಮಂಜುನಾಥ ಬೇವಿನಕಟ್ಟಿ ಹಾಗೂ ಹಿಂದಿನ ನಿರ್ದೇಶಕರಾದ ಡಾ.ಮೋಹನ್ ಕುಂಟಾರ್, ಶ್ರೀ.ಬಿ. ಸುಜ್ಞಾನಮೂರ್ತಿ. ಶ್ರೀ ಕೆ.ಕೆ. ಮಕಾಳಿ ಮತ್ತು ಅಕ್ಷರ ಸಂಯೋಜಿಸಿದ ಶ್ರೀ ಸಾವಳಗಿ ಶಿವಲಿಂಗೇಶ್ವರ ಗ್ರಾಫಿಕ್ಸ್ನ ಶ್ರೀಮತಿ ರಶ್ಮಿಕೃಪಾಶಂಕರ್ ಅವರಿಗೆ ಹಾಗೂ ಮುದ್ರಕರಿಗೆ ಕೃತಜ್ಞತೆಗಳು.

ಎಂ. ಚಂದ್ರ ಪೂಜಾರಿ