ಈ ಪುಸ್ತಕದ ಮುಖ್ಯ ಉದ್ದೇಶ ವಸಾಹತ್ತೋತರ ಕರ್ನಾಟಕದ ಪಂಚವಾರ್ಷಿಕ ಯೋಜನೆಗಳನ್ನು ಕನ್ನಡೀಕರಿಸುವುದು. ಭಾಷೆಯ ಕನ್ನಡೀಕರಣದ ಜತೆಗೆ ವಿಚಾರದ ಕನ್ನಡೀಕರಣವು ಸೇರಿದೆ. ಕರ್ನಾಟಕ ಹುಟ್ಟಿರುವುದೇ ಕನ್ನಡ ಮಾತಾಡುವವರೆಲ್ಲ ಒಂದೇ ಮತ್ತು ಕನ್ನಡೇತರರಿಗಿಂತ ಭಿನ್ನ ಎನ್ನುವ ನೆಲೆಯಲ್ಲಿ ನಮ್ಮ ಚರಿತ್ರೆ, ಬದುಕು, ನಂಬಿಕೆ, ಭಾಷೆ. ಆಚಾರ, ವಿಚಾರ ಇತ್ಯಾದಿಗಳೆಲ್ಲ ಭಾರತದ ಇತರರಿಗಿಂತ ಭಿನ್ನ ಇತರರ ಒಳ್ಳೆಯ ಬದುಕಿನ ಕಲ್ಪನೆಗೂ ನಮ್ಮ ಒಳ್ಳೆಯ ಬದುಕಿನ ಕಲ್ಪನೆಗೂ ವ್ಯತ್ಯಾಸ ಇದೆ. ಇತರರು ತಮ್ಮ ಆದರ್ಶ ಸಮಾಜವನ್ನು ಕಟ್ಟಿಕೊಳ್ಳಲು ಅನುಸರಿಸುವ ಮಾರ್ಗ ಮತ್ತು ನಾವು ನಮ್ಮ ಆದರ್ಶ ಸಮಾಜವನ್ನು ಕಟ್ಟಿಕೊಳ್ಳಲು ತುಳಿಯುವ ಮಾರ್ಗ ಒಂದೇ ಅಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಇತರರಿಗೆ ಏನು ಉತ್ತಮ ಅಥವಾ ಒಳ್ಳೆಯದೋ ಅದು ನಮಗೂ ಉತ್ತಮವಾಗುತ್ತದೆ ಎನ್ನುವ ಗ್ಯಾರಂಟಿ ಇಲ್ಲ. ಆದುದರಿಂದ ಇತರರೊಂದಿಗೆ ಒಂದಾಗಿ ನಮ್ಮ ಅಭಿವೃದ್ಧಿಯನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಬದುಕನ್ನು ಅವರ ಚರಿತ್ರೆ, ನಂಬಿಕೆ, ಭಾಷೆ, ಆಚಾರ, ವಿಚಾರ ಇತ್ಯಾದಿಗಳಿಗನುಸಾರ ಕಟ್ಟಿಕೊಳ್ಳಲು ಪ್ರತ್ಯೇಕ ರಾಜ್ಯ ಬೇಕೆಂದು ವಾದಿಸಲಾಗಿದೆ ಮತ್ತು ಪಡೆಯಲಾಗಿದೆ. ಹೀಗೆ ಪ್ರತ್ಯೇಕ ರಾಜ್ಯದೊಂದಿಗೆ ಭವಿಷ್ಯದ ಪ್ರತ್ಯೇಕ ಬದುಕಿನ ಹಲವಾರು ಸಾಧ್ಯತೆಗಳು ಜೋತುಕೊಂಡಿವೆ. ನಾವು ನಮ್ಮ ಜನರ ಆಶೋತ್ತರಗಳಿಗೆ ಅನುಗುಣವಾಗಿ ನಮ್ಮ ಬದುಕನ್ನು ಕಟ್ಟಿಕೊಳ್ಳಬಹುದು. ನಮ್ಮ ಜನರ ಬೇಕು ಬೇಡಗಳಿಗನುಸಾರ ನಮ್ಮ ಅರ್ಥ, ರಾಜಕೀಯ, ಸಾಮಾಜಿಕ ವ್ಯವಸ್ಥೆಗಳನ್ನು ರೂಪಿಸಿಕೊಳ್ಳಬಹುದು. ಕನ್ನಡ ಮಾತಾಡುವವರೆಲ್ಲ ಒಂದೇ ಆಗಿರುವುದರಿಂದ ಅವರೊಳಗಿನ ತಾರತಮ್ಯಗಳನ್ನು ಕಡಿಮೆ ಮಾಡುವ ರೀತಿಯಲ್ಲಿ ನಮ್ಮ ಅಭಿವೃದ್ಧಿಯನ್ನು ರೂಪಿಸಿಕೊಳ್ಳುವುದು ಇತ್ಯಾದಿಗಳು ಪ್ರತ್ಯೇಕ ರಾಜ್ಯದೊಂದಿಗೆ ಸೇರಿಕೊಂಡಿರುವ ಆಶಯಗಳನ್ನು ಕಾಪಾಡುವ ರೀತಿಯಲ್ಲಿ ಕರ್ನಾಟಕದ ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಲಾಗಿದೆಯೇ? ಒಂದು ವೇಳೆ ಈ ಪ್ರತ್ಯೇಕತೆಗಳನ್ನು ಉಳಿಸಿಕೊಳ್ಳುವ ರೀತಿಯಲ್ಲಿ ಯೋಜನೆಗಳನ್ನು ರೂಪಿಸಿಕೊಳ್ಳಲು ಸಾಧ್ಯವಾಗದಿದ್ದರೆ ಯಾಕೆ ಸಾಧ್ಯವಾಗಿಲ್ಲ? ಪ್ರತ್ಯೇಕತೆಯನ್ನು ಕಾಪಾಡುವ ಯೋಜನೆಗಳನ್ನು ರೂಪಿಸಿಕೊಳ್ಳದಿರುವುದರಿಂದ ಅಥವಾ ದೇಶ ಅಥವಾ ಇತರರು ಅನುಸರಿಸುವ ಮಾದರಿಯನ್ನು ಕರ್ನಾಟಕವು ಅನುಸರಿಸುವುದರಿಂದ ಆದ ಪರಿಣಾಮಗಳೇನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ಈ ಪುಸ್ತಕದಲ್ಲಿ ಪ್ರಯತ್ನಿಸಿದ್ದೇನೆ.

ಪಂಚವಾರ್ಷಿಕ ಯೋಜನೆಗಳೇ ಮಹತ್ವ ಕಳೆದುಕೊಂಡಿರುವ ಇಂದಿನ ದಿನಗಳಲ್ಲಿ ಈ ಎಲ್ಲ ಪ್ರಶ್ನೆಗಳನ್ನು ಯಾಕೆ ಕೇಳಬೇಕನ್ನುವ ಪ್ರಶ್ನೆ ಓದುಗರನ್ನು ಕಾಡಬಹುದು. ಮೂರು ಕಾರಣಗಳನ್ನು ಮುಂದಿಟ್ಟು ಪಂಚವಾರ್ಷಿಕ ಯೋಜನೆಗಳ ಮಹತ್ವವನ್ನು ಅಲ್ಲಗಳೆಯಲಾಗಿದೆ. ಆ ಮೂರು ಕಾರಣಗಳು ಕೂಡ ವಾಸ್ತವದಲ್ಲಿ ನಮ್ಮ ಅಭಿವೃದ್ಧಿಯ ಮೂಲಭೂತ ಸಮಸ್ಯೆಗಳಾಗಿರಲಿಲ್ಲ. ಅದಾಗ್ಯೂ ನಮ್ಮೆಲ್ಲ ಅಭಿವೃದ್ಧಿ ಸಮಸ್ಯೆಗಳಿಗೂ ಈ ಕಾರಣಗಳಿಗೂ ನೇರ ಸಂಬಂಧ ಇದೆಯೆಂದು ಪ್ರಚಾರಪಡಿಸಿ ಮುಕ್ತ ಮಾರುಕಟ್ಟೆ ಅಭಿವೃದ್ಧಿ ಮಾದರಿಯನ್ನು ಕಾರ್ಯರೂಪಕ್ಕೆ ತರಲಾಗಿದೆ. ಈ ಕಾರಣಗಳು ಮತ್ತು ಅವುಗಳನ್ನು ಮುಂದಿಟ್ಟು ತಮ್ಮ ಉದ್ದೇಶಗಳನ್ನು ಈಡೇರಿಸಿಕೊಂಡವರ (ಬಲಾಢ್ಯರ) ಆಸಕ್ತಿಗಳನ್ನು ಸಮಸ್ಯೀಕರಿಸುವ ದೃಷ್ಟಿಯಿಂದ ಮೇಲಿನ ಪ್ರಶ್ನೆಗಳು ಇಂದು ಕೂಡ ಪ್ರಸ್ತುತವಾಗಿದೆ. ಕಾರಣ ಒಂದು, ಯೋಜಿತ ಅಭಿವೃದ್ಧಿ ಮತ್ತು ಕಮ್ಯುನಿಸಂ ನಡುವೆ ನೇರ ಸಂಬಂಧ ಕಲ್ಪಿಸಲಾಗಿತ್ತು ಎರಡು ಬೆಳವಣಿಗೆಗಳಿಂದಾಗಿ ಈ ಸಂಬಂಧ ನಿಜವೆಂದು ಬಹುತೇಕರು ನಂಬುವಂತಾಯಿತು. ರಶ್ಯಾದ ಕಮ್ಯುನಿಸ್ಟರಿಂದ ಪ್ರಭಾವಿತಗೊಂಡು ಯೋಜಿತ ಅಭಿವೃದ್ಧಿ ನಮ್ಮಲ್ಲಿ-ನೆಲೆಕಂಡಿರುವುದು ಮೊದಲನೇಯ ಬೆಳವಣಿಗೆಯಾದರೆ 1977ರಲ್ಲಿ ಸಂವಿಧಾನ ತಿದ್ದುಪಡಿ ಮಾಡಿ ಭಾರತವನ್ನು ಸೋಶಿಯಲಿಸ್ಟ್ ಡೆಮಾಕ್ರಸಿ ಎಂದು ಘೋಷಣೆ ಮಾಡಿದ್ದು ಎರಡನೇ ಬೆಳವಣಿಗೆ. ಯೋಜಿತ ಅಭಿವೃದ್ಧಿ ಮತ್ತು ಸೋಶಿಯಲಿಸ್ಟ್ ಡೆಮಾಕ್ರಸಿ ಎನ್ನುವ ಎರಡು ಪರಿಭಾಷೆಗಳು ಹೊರಪ್ರಪಂಚಕ್ಕೆ ಹಲವಾರು ಸಂದೇಶಗಳನ್ನು ರವಾನೆ ಮಾಡಿವೆ. ಭೂಸುಧಾರಣೆ ತಂದು ಭೂಸಂಬಂಧಗಳನ್ನು ಮೂಲಭೂತವಾಗಿ ಪರಿವರ್ತಿಸುವುದು, ಎಲ್ಲರೂ ಸಮ ಪ್ರಮಾಣದ ಭೂಮಿ ಹೊಂದುವುದು ಅಥವಾ ಖಾಸಗಿ ಆಸ್ತಿಯ ಕಲ್ಪನೆಯನ್ನೇ ರದ್ದುಗೊಳಿಸುವುದು, ಖಾಸಗಿ ಬಂಡವಾಳದ ಬದಲು ಸಾರ್ವಜನಿಕ ಬಂಡವಾಳ ಎಲ್ಲ ಕ್ಷೇತ್ರಗಳಲ್ಲೂ ಕಾರುಬಾರು ಮಾಡುವುದು ಇತ್ಯಾದಿ ಹುರುಳಿಲ್ಲದ ಸಂದೇಶಗಳನ್ನು ಕಮ್ಯುನಿಸಂ ಮತ್ತು ಸೋಶಿಯಲಿಸ್ಟ್ ಡೆಮಾಕ್ರಸಿ ರವಾನಿಸಿದೆ. ಕಾರಣ ಎರಡು, ಯೋಜಿತ ಅಭಿವೃದ್ಧಿ ಮತ್ತು ಕುಂಠಿತ ಸರಕು ಸೇವೆಗಳ ಪೂರೈಕೆ ನಡುವೆ ಸಂಬಂಧ ಕಲ್ಪಿಸಲಾಗಿತ್ತು. ಎಲ್ಲ ಕ್ಷೇತ್ರಗಳಲ್ಲೂ ಸರಕಾರ ಮೂಗು ತೂರಿಸುವುದರಿಂದಲೇ ನಮ್ಮಲ್ಲಿ ಅಭಿವೃದ್ಧಿ ಅಗಲಿಲ್ಲ. ಸರಕಾರದ ಹತೋಟಿ ಅತಿಯಾಗಿರುವುದರಿಂದಲೇ ನಮ್ಮಲ್ಲಿ ಕೆಲವೇ ಬ್ರಾಂಡ್‌ಗಳ ಕಾರುಗಳು. ಟಿವಿಗಳು, ಬೈಕ್‌ಗಳು, ಫ್ರಿಜ್‌ಗಳು ದೊರೆಯುವಂತಾಯಿತು. ಸರಕಾರ ಆಸ್ವತ್ರೆ. ಸರಕಾರಿ ವಿಶ್ವವಿದ್ಯಾಲಯ, ಸರಕಾರಿ ನೀರು ಪೂರೈಕೆ ಹೀಗೆ ಎಲ್ಲವೂ ಸರಕಾರಿಮಯವಾಗಿತ್ತು. ಸರಕಾರ ತನ್ನ ಹಿಡಿತವನ್ನು ಸಡಿಲಗೊಳಿಸಿದ ನಂತರವೇ ನಮ್ಮಲ್ಲಿ ಹಲವು ಬಗೆಯ ಕಾರುಗಳು ಮತ್ತು ಇತರ ಅನುಭೋಗ ಸರಕುಗಳು ಮತ್ತು ಸೇವೆಗಳು ಧಾರಾಳವಾಗಿ ದೊರಕುವಂತಾಯಿತು. ಆದುದರಿಂದ ಎಲ್ಲ ಕ್ಷೇತ್ರಗಳಲ್ಲೂ (ಆರೋಗ್ಯ ಶಿಕ್ಷಣ, ಕುಡಿಯುವ ನೀರು ಇತ್ಯಾದಿಗಳನ್ನು ಸೇರಿಸಿಕೊಂಡು) ಖಾಸಗಿ ನೇತೃತ್ವದಲ್ಲಿ ವ್ಯವಹಾರ ನಡೆದಾಗ ಮಾತ್ರ ನಮ್ಮ ಸಮಾಜ ಉದ್ದಾರವಾಗಬಹುದು.

ಕಾರಣ ಮೂರು, ಬಡವರ ಉದ್ದಾರ, ಶ್ರಮಿಕರ ಉದ್ದಾರವೆಂದು ಸರಕಾರ ಪುಕ್ಸಟ್ಟೆಯಾಗಿ ಹಲವಾರು ಸವಲತ್ತುಗಳನ್ನು ಸಮಾಜದ ತಳಸ್ತರದ ಜನರಿಗೆ ಕೊಡುತ್ತಿತ್ತು. ಇಂತಹ ಬಡತನ ನಿವಾರಣ ಕಾರ್ಯಕ್ರಮಗಳಿಂದ ಸಾರ್ವಜನಿಕ ಸಂಪನ್ಮೂಲ ನಷ್ಟವಾಯಿತೇ ಹೊರತು ಬಡವರು ಉದ್ದಾರವಾಗಿಲ್ಲ. ಆದುದರಿಂದ ಪುಕ್ಸಟ್ಟೆಯಾಗಿ ಯಾರಿಗೂ (ಬಡವರು, ಊಟಕ್ಕಿಲ್ಲದವರು, ಸೂರಿಲ್ಲದವರು ಮುಂತಾದವರಿಗೆ) ಏನನ್ನೂ ಕೊಡಬಾರದು. ಪ್ರತಿಯೊಬ್ಬರೂ ತಾವು ಪಡೆಯುವ ಸೇವೆಯ ಸ್ವಲ್ಟಾಂಶವನ್ನಾದರೂ ಸಂದಾಯ ಮಾಡಿಯೇ ಪಡೆಯಬೇಕು. ಹಾಗಿದ್ದರೆ ಮಾತ್ರ ಸೇವೆ ಪಡೆಯುವವರಿಗೆ ತಾವು ಪಡೆಯುವ ಸೇವೆಯ ಮೌಲ್ಯದ ಅರಿವು ಸಾಧ್ಯ ಇತ್ಯಾದಿ ವಾದಗಳನ್ನು ಮುಂದಿಟ್ಟು ಕುಡಿಯುವ ನೀರಿನಿಂದ ಹಿಡಿದು ಶಿಕ್ಷಣ, ಆರೋಗ್ಯ ಎಲ್ಲವನ್ನು ಖಾಸಗೀಕರಣಗೊಳಿಸಲಾಗಿದೆ. ಶ್ರಮಿಕರ ಆಸಕ್ತಿಗಳನ್ನು ರಕ್ಷಿಸಲು ಹಲವಾರು ಕಾನೂನುಗಳನ್ನು ಜಾರಿಗೆ ತರಲಾಯಿತು. ಈ ಕಾನೂನುಗಳಿಂದಾಗಿ ಸರಕು ಸೇವೆಗಳಿಗೆ ಬೇಡಿಕೆ ಇದ್ದಾಗ ಕೆಲಸಗಾರರನ್ನು ತೆಗೆದುಕೊಂಡು ಬೇಡಿಕೆ ಕಡಿಮೆ ಆದಾಗ ತೆಗೆದುಹಾಕುವ ಸ್ವಾತಂತ್ರ್ಯವೇ ಖಾಸಗಿ ಬಂಡವಾಳಕ್ಕೆ ಇಲ್ಲದಾಯಿತು. ಕೆಲಸಗಾರರು ಸಂಘಟನೆ ಮಾಡಿಕೊಂಡು ತಮ್ಮ ಯೋಗ್ಯತೆಗೆ ಮೀರಿದ ಮಜೂರಿ ಕೇಳಲು ಆರಂಭಿಸಿದರು. ಕೆಲಸಗಾರರು ಕೇಳಿದ ಸಂಬಳ ಕೊಡಲು ಸಾಧ್ಯವಾಗದ ಉದ್ದಿಮೆದಾರರು ತಮ್ಮ ಉದ್ದಿಮೆಗಳನ್ನು ಮುಚ್ಚಬೇಕಾಯಿತು. ಮಿತಿಮೀರಿದ ಕಾರ್ಮಿಕ ಚಳವಳಿಗಳಿಂದಾಗಿ ಸರಕು ಮತ್ತು ಸೇವೆಗಳ ಉತ್ಪಾದನೆಯಲ್ಲಿ ವಿನಿಯೋಜಿಸಲು ಖಾಸಗಿ ಬಂಡವಾಳ ಉತ್ಪಾದನೇ ತೋರಿಸಲಿಲ್ಲ. ಈ ಎಲ್ಲ ಕಾರಣಗಳನ್ನು ಮುಂದಿಟ್ಟು ಯೋಜಿತ ಅಭಿವೃದ್ಧಿಯನ್ನು ಪ್ರಶ್ನಿಸಲಾಯಿತು. ಯೋಜಿತ ಅಭಿವೃದ್ಧಿ ಸಮಾಜದ ತಳಸ್ತರದ ಜನರ ಅಭಿವೃದ್ಧಿಗೆ ಅತೀ ಹೆಚ್ಚಿನ ಒತ್ತು ನೀಡಿರುವುದೇ ನಮ್ಮ ಸರ್ವಾಂಗೀಣ ಅಭಿವೃದ್ಧಿಗೆ ದೊಡ್ಡ ತೊಡಕಾಗಿತ್ತು ಎನ್ನುವ ಸಂದೇಶವನ್ನು ಈ ಎಲ್ಲ ಚಿತ್ರಣಗಳು ನೀಡುತ್ತಿವೆ. ಭೂಮಿ ಬಂಡವಾಳ ಇದ್ದವರು ಯೋಜಿತ ಅಭಿವೃದ್ಧಿಯಿಂದ ದೊಡ್ಡ ಮಟ್ಟಿನ ಹೊಡೆತ ತಿಂದಿದ್ದಾರೆ. ಇಂತವರಿಗೆ ಮಣೆ ಹಾಕದಿದ್ದರೆ ದೇಶ ಅಥವಾ ರಾಜ್ಯ ಉದ್ದಾರವಾಗುವುದಿಲ್ಲ ಆದುದರಿಂದ ಮುಕ್ತ ಮಾರುಕಟ್ಟೆ ಅಭಿವೃದ್ಧಿ ಮಾದರಿಯನ್ನು ಕಾರ್ಯರೂಪಕ್ಕೆ ತರಬೇಕೆಂದು ವಾದಿಸಲಾಯಿತು. ಯೋಜಿತ ಅಭಿವೃದ್ಧಿಯಿಂದ ಭೂಮಿ ಬಂಡವಾಳ ಇದ್ದವರು ನಿಜವಾಗಿಯೂ ಅನುಭವಿಸಿದ್ದಾರೆಯೇ? ಸಮಾಜದ ತಳಸ್ತರದ ಜನರು ಯೋಜಿತ ಅಭಿವೃದ್ಧಿಯಿಂದ ಹೆಚ್ಚಿನ ಲಾಭ ಪಡೆದಿದ್ದಾರೆಯೇ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ನಮ್ಮ ಅರ್ಥ ವ್ಯವಸ್ಥೆಯನ್ನು ಎಲ್ಲರಿಗೂ ಸಮಪಾಲು ಇರುವ ರೀತಿಯಲ್ಲಿ ಪುನರ್ ಸಂಘಟಿಸಲು ಅನಿವಾರ್ಯ. ಕರ್ನಾಟಕದ ಪಂಚವಾರ್ಷಿಕ ಯೋಜನೆಗಳನ್ನು ಅಧ್ಯಯನ ಮಾಡುವ ಮೂಲಕ ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿದ್ದೇನೆ.

ಈ ಕೆಳಗಿನ ಪೂರ್ವ ತೀರ್ಮಾನಗಳನ್ನು ಈ ಪುಸ್ತಕ ಹೊಂದಿದೆ. ಒಂದು, ಭಾಷೆ, ಸಂಸ್ಕೃತಿ, ಚರಿತ್ರೆ ಇತ್ಯಾದಿಗಳ ನೆಲೆಯಲ್ಲಿ ತನ್ನ ಪ್ರತ್ಯೇಕತೆಯನ್ನು ಸಾಧಿಸಿ ಪ್ರತ್ಯೇಕ ರಾಜ್ಯ ಪಡೆದ ಕರ್ನಾಟಕ ಪಂಚವಾರ್ಷಿಕ ಯೋಜನೆಗಳಲ್ಲಿ ತನ್ನ ಪ್ರತ್ಯೇಕತೆಯನ್ನು ಉಳಿಸಿಕೊಂಡಿಲ್ಲ. ಕೇಂದ್ರ ಸರಕಾರ ಮುಂಚೂಣಿಗೆ ತಂದ ಅಭಿವೃದ್ಧಿ ಮಾದರಿ ಹಾಗು ಯೋಜನೆಗಳನ್ನು ಯಥಾರೂಪದಲ್ಲಿ ಅಥವಾ ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಕರ್ನಾಟಕ ಅನುಸರಿಸಿದೆ. ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸುವುದಕ್ಕೆ ಈ ಮಾದರಿ ಹೆಚ್ಚಿನ ಒತ್ತು ನೀಡುತ್ತದೆ. ಉತ್ಪಾದನೆಯ ಸಂಬಂಧಗಳನ್ನು ಸುಧಾರಿಸುವುದಕ್ಕೆ ಅಥವಾ ಉತ್ಪಾದನ ಪರಿಕರಗಳನ್ನು ಸಮಾಜೀಕರಣಗೊಳಿಸುವುದಕ್ಕೆ ಈ ಮಾದರಿಯಲ್ಲಿ ವಿಶೇಷ ಅವಕಾಶವಿಲ್ಲ. ಎರಡು, ಹಲವಾರು ಕಾರಣಗಳಿಂದಾಗಿ ಪ್ರತ್ಯೇಕ ಯೋಜನೆಗಳನ್ನು ರೂಪಿಸಿಕೊಳ್ಳಲು ಕರ್ನಾಟಕಕ್ಕೆ ಸಾಧ್ಯವಾಗಲಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿ ಇದ್ದುದು, ಆ ಪಕ್ಷದ ನಾಯಕತ್ವ ಭೂಮಾಲಿಕ ವರ್ಗದ ಹಿಡಿತದಲ್ಲಿ ಇದ್ದುದು, ಪ್ರಗತಿಪರ ಚಳವಳಿಗಳ ಇತಿಹಾಸದ ಕೊರತೆ, ಪ್ರತ್ಯೇಕತೆಯನ್ನು ಸಾಂಸ್ಕೃತಿಕವಾಗಿ ಕಟ್ಟಿಕೊಂಡಿರುವುದು ಇತ್ಯಾದಿಗಳು ಪ್ರತ್ಯೇಕ ಯೋಜನೆಗಳನ್ನು ರೂಪಿಸಿಕೊಳ್ಳುವಲ್ಲಿ ಪ್ರಮುಖ ತಡೆಗಳಾದವು. ಮೂರು, ಕೇಂದ್ರ ಅನುಸರಿಸಿದ ಅಭಿವೃದ್ಧಿ ಮಾದರಿಯಲ್ಲಿ ಭೂಮಿ, ಬಂಡವಾಳ ಮತ್ತು ಆಧುನಿಕ ಸ್ಕಿಲ್ ಪ್ರಮುಖ ಪಾತ್ರ ವಹಿಸುತ್ತದೆ. ಅಂದರೆ ಭೂಮಿ, ಬಂಡವಾಳ ಮತ್ತು ಆಧುನಿಕ ಸ್ಕಿಲ್ ಇದ್ದವರು ಮಾತ್ರ ಕೇಂದ್ರ ಅನುಸರಿಸಿದ ಅಭಿವೃದ್ಧಿ ಮಾದರಿಯ ಹೆಚ್ಚಿನ ಲಾಭ ಪಡೆಯಲು ಸಾಧ್ಯ. ಈ ಮೂರರಲ್ಲಿ (ಭೂಮಿ / ಬಂಡವಾಳ / ಸ್ಕಿಲ್) ಒಂದೂ ಇಲ್ಲದಿದ್ದರೆ ಇಂತಹ ಅಭಿವೃದ್ಧಿ ಮಾದರಿಯಿಂದ ಹೊರಗುಳಿಯಬೇಕಾಗುತ್ತದೆ. ಇದೇ ಮಾದರಿಯನ್ನು ಯಥಾರೂಪದಲ್ಲಿ ಕಾರ್ಯಗತಗೊಳಿಸಲು ಕರ್ನಾಟಕದ ತನ್ನ ಪಂಚವಾರ್ಷಿಕ ಯೋಜನೆಗಳಲ್ಲಿ ವಿನಿಯೋಜನೆ ಮಾಡಿದೆ. ಇದರಿಂದ ಕರ್ನಾಟಕದಲ್ಲೂ ಭೂಮಿ / ಬಂಡವಾಳ / ಆಧುನಿಕ ಸ್ಕಿಲ್ ಇದ್ದವರು ಯೋಜನೆಗಳ ಹೆಚ್ಚಿನ ಲಾಭ ಪಡೆದರು. ಇತರರು ಯೋಜನೆಗಳಿಂದ ವಿಶೇಷ ಲಾಭ ಪಡೆಯದೆ ಪ್ರತ್ಯೇಕ ಕರ್ನಾಟಕದ ಮೂಲೆಯಲ್ಲಿ ಮೂರು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ವಾದಿಸಿದ್ದೇನೆ.

ಈ ಪುಸ್ತಕದಲ್ಲಿ ಬಳಸಿದ ಬಹುತೇಕ ಅಂಕಿ ಅಂಶಗಳನ್ನು ಕರ್ನಾಟಕದ ಸರಕಾರ ಪ್ರಕಟಿಸಿದ ನಾಲ್ಕು ವರದಿಗಳಿಂದ ಪಡೆಯಲಾಗಿದೆ. ಪಂಚವಾರ್ಷಿಕ ಯೋಜನೆಯ ವರದಿಗಳು, ಮಾನವ ಅಭಿವೃದ್ಧಿ ವರದಿ -1999, ಮಾನವ ಅಭಿವೃದ್ಧಿ ವರದಿ -2೦೦5 ಮತ್ತು ಹೈಪವರ್ ಕಮಿಟಿ ಫಾರ್ ರಿಡ್ರೆಸಲ್ ಆಫ್ ರೀಜನಲ್ ಇಂಬೇಲನ್ಸ್ಸ್ ವರದಿ ಇವೇ ಆ ನಾಲ್ಕು ವರದಿಗಳು. ಭೂಮಾಲಿಕರು, ಬಂಡವಾಳಿಗರು ಮತ್ತು ಸಮಾಜದ ತಳಸ್ತರ ಪಂಚವಾರ್ಷಿಕ ಯೋಜನೆಗಳಿಂದ ಪಡೆದ ಲಾಭವನ್ನು ಈ ಕೆಳಗಿನಂತೆ ಲೆಕ್ಕಹಾಕಲಾಗಿದೆ. ಕೃಷಿ, ನೀರಾವರಿ, ವಿದ್ಯುತ್ ಮತ್ತು ಕೈಗಾರಿಕ ಕ್ಷೇತ್ರದ ಮೇಲಿನ ವಿನಿಯೋಜನೆಯ ಶೇಕಡಾ ತೊಂಬತ್ತನ್ನು ಭೂಮಾಲಿಕರು ಮತ್ತು ಬಂಡವಾಳಿಗರ ಪಾಲೆಂದು ವಿಂಗಡಿಸಲಾಗಿದೆ. ಮೇಲಿನ ಕ್ಷೇತ್ರಗಳ ಶೇಕಡಾ ಹತ್ತು ಆರ್ಥಿಕ ಮೂಲಸೌಕರ್ಯಗಳ ಶೇಕಡಾ ಇಪ್ಪತ್ತು ಸಾಮಾಜಿಕ ಮೂಲಸೌಕರ್ಯಗಳ ಶೇಕಡಾ ಮೂವತ್ತು ಮತ್ತು ಅಭಿವೃದ್ಧಿ ಆಡಳಿತ ಸೌಕರ್ಯದ ಶೇಕಡಾ ನಲ್ವತ್ತನ್ನು ಬಡವರ, ದೀನ ದಲಿತರ ಪಾಲೆಂದು ವಿಂಗಡಿಸಲಾಗಿದೆ. ಕರ್ನಾಟಕದ ಪಂಚವಾರ್ಷಿಕ ಯೋಜನೆಗಳನ್ನು ಅಭಿವೃದ್ಧಿ ರಾಜಕಾರಣದ ದೃಷ್ಟಿಯಿಂದ ವಿಶ್ಲೇಷಣೆ ಮಾಡಿದ ಅಧ್ಯಯನಗಳ ತೀರ್ಮಾನಗಳು ಇಲ್ಲದಿರುವುದು ಈ ಪುಸ್ತಕದ ದೊಡ್ಡ ಮಿತಿಯಾಗಿದೆ. ಪ್ರಸ್ತಾಪನೆ ಮತ್ತು ಸಾರಾಂಶಗಳನ್ನು ಹೊರತುಪಡಿಸಿ ಪುಸ್ತಕದಲ್ಲಿ ಒಟ್ಟು ಮೂರು ಅಧ್ಯಾಯನಗಳಿವೆ. ಮೊದಲ ಅಧ್ಯಾಯದಲ್ಲಿ ಕರ್ನಾಟಕದಲ್ಲಿ ಪಂಚ ವಾರ್ಷಿಕ ಯೋಜನೆಗಳನ್ನು ಪರಿಚಯಿಸಲಾಗುವುದು. ಕೇಂದ್ರದ ಯೋಜನೆಗಳಿಗಿಂತ ಕರ್ನಾಟಕದ ಪಂಚವಾರ್ಷಿಕ ಯೋಜನೆಗಳು ಭಿನ್ನವಾಗಿಲ್ಲ ಎನ್ನುವ ವಿವರಗಳು ಕೂಡ ಇದೇ ಅಧ್ಯಾಯದಲ್ಲಿದೆ. ಯಾಕೆ ಯೋಜನೆಗಳಲ್ಲಿ ಕರ್ನಾಟಕದ ತನ್ನ ಪ್ರತ್ಯೇಕತೆಯನ್ನು ಉಳಿಸಿಕೊಳ್ಳಲಿಲ್ಲ ಎನ್ನುವ ಪ್ರಶ್ನೆಗೆ ಎರಡನೇ ಅಧ್ಯಾಯದಲ್ಲಿ ಉತ್ತರಿಸಿದ್ದೇನೆ. ಕೇಂದ್ರ ಅಥವಾ ಬಂಡವಾಳ ಕೇಂದ್ರೀತ ಮಾದರಿಯನ್ನು ಕರ್ನಾಟಕ ಅನುಸರಿಸುವುದರಿಂದ ಆದ ಪರಿಣಾಮಗಳನ್ನು ಪುಸ್ತಕದ ಮೂರನೇ ಅಧ್ಯಾಯದಲ್ಲಿ ಚರ್ಚಿಸಿದ್ದೇನೆ.