ಕರ್ನಾಟಕದ ಪಂಚವಾರ್ಷಿಕ ಯೋಜನೆಗಳ ಆದ್ಯತೆಗಳನ್ನು ಈ ಅಧ್ಯಾಯದಲ್ಲಿ ಪರಿಚಯಿಸಲಾಗುವುದು. ರಾಜ್ಯ ಅಥವಾ ರಾಷ್ಟ್ರವೊಂದು ತನ್ನ ಅರ್ಥ ಅಥವಾ ರಾಜಕೀಯ ವ್ಯವಸ್ಥೆಯ ಆಧ್ಯತೆಗಳನ್ನು ರೂಪಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಎರಡು ದೃಷ್ಟಿಕೋನಗಳಿವೆ. ಒಂದು ದೃಷ್ಟಿಕೋನ ಪ್ರಕಾರ ರಾಜ್ಯ ಅಥವಾ ರಾಷ್ಟ್ರವೊಂದು ತನ್ನ ಅರ್ಥ ಅಥವಾ ರಾಜಕೀಯ ವ್ಯವಸ್ಥೆಯನ್ನು ತನ್ನ ಬೇಕುಬೇಡಗಳಿಗೆ ಅನುಸಾರ ರೂಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ನಿಲುವು. ಯಾಕೆಂದರೆ ಪ್ರತಿ ರಾಷ್ಟ್ರ ಕೂಡ ಹಲವಾರು ರಾಷ್ಟ್ರಗಳ ಸಮುದಾಯಗಳಲ್ಲಿ ಒಂದು ರಾಷ್ಟ್ರ. ಹೇಗೆ ಒಂದು ಹಳ್ಳಿಯಲ್ಲಿ ಕುಟುಂಬವೊಂದು ತನ್ನ ಅರ್ಥವ್ಯವಸ್ಥೆಯನ್ನು ಹಳ್ಳಿಯ ಇತರರ ಅರ್ಥ ವ್ಯವಸ್ಥೆಗಿಂತ ಸಂಪೂರ್ಣ ಭಿನ್ನವಾಗಿ ರೂಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲವೋ ಅದೇ ರೀತಿ ರಾಷ್ಟ್ರವೊಂದು ತನ್ನ ಅರ್ಥ ವ್ಯವಸ್ಥೆಯನ್ನು ಅಂತರಾಷ್ಟ್ರೀಯ ಅರ್ಥ ವ್ಯವಸ್ಥೆಗಿಂತ ಸಂಪೂರ್ಣ ಭಿನ್ನವಾಗಿ ರೂಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ವಾದವನ್ನು ಮುಂಚೂಣಿಗೆ ತಂದವರಲ್ಲಿ ಅವಲಂಬನಾ ಸಿದ್ಧಾಂತಿಗಳು ಪ್ರಮುಖರು. ಈ ವಾದ ಪ್ರಶ್ನಾತೀತವಲ್ಲ. ಈ ವಾದವನ್ನು ಯಥಾರೂಪದಲ್ಲಿ ಒಪ್ಪಿಕೊಂಡರೆ ಪ್ರತಿ ಅರ್ಥ ವ್ಯವಸ್ಥೆಯನ್ನು ಅಂತರಾಷ್ಟೀಯ ವ್ಯವಸ್ಥೆಯ ಪಡಿಯಚ್ಚು ರೂಪದಲ್ಲಿ ನೋಡಬೇಕಾಗುತ್ತದೆ. ಆದರೆ ವಾಸ್ತವ ಜಗತ್ತು ಆ ರೀತಿ ಇಲ್ಲ. ಪ್ರಪಂಚದ ಬೇರೆ ಬೇರೆ ರಾಷ್ಟ್ರಗಳಲ್ಲಿ ವಿಭಿನ್ನ ರೂಪದ ಅರ್ಥ ವ್ಯವಸ್ಥೆಗಳಿವೆ. ಅವುಗಳು ಅಂತರಾಷ್ಟ್ರೀಯ ವ್ಯವಸ್ಥೆಯ ಕೆಲವು ಗುಣಗಳನ್ನು ಹೊಂದಿರುವ ಸಂದರ್ಭದಲ್ಲೇ ಚಾರಿತ್ರಿಕವಾಗಿ ರೂಪುಗೊಂಡ ತಮ್ಮ ತಮ್ಮ ಸಮಾಜದ ಸ್ವಂತಿಕೆಯನ್ನೂ ಒಳಗೊಂಡಿವೆ. ಪ್ರತಿ ಸಮಾಜದ ಬಲಾಢ್ಯರು ಅರ್ಥ ವ್ಯವಸ್ಥೆಗಳನ್ನು ತಮ್ಮ ಆಸಕ್ತಿಗಳಿಗೆ ಧಕ್ಕೆಯಾಗುವಂತೆ ರೂಪಿಸಿಕೊಳ್ಳುತ್ತಾರೆ. ಇದರಿಂದಾಗಿ ರಾಜ್ಯ ಅಥವಾ ರಾಷ್ಟ್ರವೊಂದರ ಅರ್ಥ ವ್ಯವಸ್ಥೆ ಮೇಲ್ನೋಟಕ್ಕೆ ಅಂತರಾಷ್ಟ್ರೀಯ ಅರ್ಥ ವ್ಯವಸ್ಥೆಯ ಗುಣಗಳನ್ನು ಪ್ರತಿಬಿಂಬಿಸಿದಂತೆ ಕಂಡರೂ ಆಳದಲ್ಲಿ ಅದು ಆಯಾಯ ಸಮಾಜಗಳ ಬಲಾಢ್ಯರ ಆಸಕ್ತಿಗಳನ್ನು ರಕ್ಷಿಸಲು ಪೂರಕವಾಗುವ ರೀತಿಯಲ್ಲಿ ರೂಪುಗೊಳ್ಳುತ್ತವೆ. ಕರ್ನಾಟಕದ ಪಂಚವಾರ್ಷಿಕ ಯೋಜನೆಗಳ ಆದ್ಯತೆಗಳನ್ನು ಇದೇ ದೃಷ್ಟಿಕೋನದಿಂದ ನೋಡಲಾಗುವುದು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಬಲಗಳು ಯೋಜನೆಗಳ ಆದ್ಯತೆಗಳ ಮೇಲೆ ಬೇರಿದ ಪ್ರಭಾವವನ್ನು ಈ ಅಧ್ಯಾಯದ ಮೊದಲು ಭಾಗದಲ್ಲಿ ಪರಿಚಯಿಸಿದ್ದೇನೆ. ಕರ್ನಾಟಕದ ಪಂಚವಾರ್ಷಿಕ ಯೋಜನೆಗಳ ಆಧ್ಯತೆಗಳ ವಿವರಗಳನ್ನು ಎರಡನೇ ಭಾಗದಲ್ಲಿ ಕೊಟ್ಟಿದ್ದೇನೆ.

ಎರಡನೇ ಮಹಾಯುದ್ಧದ ನಂತರ ಎರಡು ಅಭಿವೃದ್ಧಿ ಮಾದರಿಗಳು ಪೈಪೋಟಿ ನಡೆಸುತ್ತಿದ್ದವು. ಅವುಗಳನ್ನು ಎರಡು ಅಭಿವೃದ್ಧಿ ಮಾದರಿಗಳೆಂದು ಹೆಸರಿಸುವ ಬದಲು ಎರಡು ಅಂತರಾಷ್ಟ್ರೀಯ ಶಕ್ತಿಗಳು ವಿಶ್ವವಿಡೀ ವ್ಯಾಪ್ತಿಕೊಳ್ಳಲು ಪ್ರಯತ್ನಿಸುತ್ತಿದ್ದವು ಎನ್ನಬಹುದು. ಒಂದು ಮುಕ್ತ ಮಾರುಕಟ್ಟೆಯನ್ನು ಪ್ರತಿಪಾದಿಸಿದರೆ ಮತ್ತೊಂದು ಯೋಜಿತ ಅಭಿವೃದ್ಧಿಯನ್ನು ಪ್ರತಿಪಾದಿಸುತ್ತಿತ್ತು. ಮುಕ್ತ ಮಾರುಕಟ್ಟೆಯನ್ನು ಅಮೇರಿಕಾ ಪ್ರತಿಪಾದಿಸಿದರೆ ಯೋಜಿತ ಅಭಿವೃದ್ಧಿಯನ್ನು ರಶ್ಯಾ ಪ್ರತಿಪಾದಿಸುತ್ತಿತ್ತು. ರಾಷ್ಟ್ರ ಪ್ರಭುತ್ವ ಸಾರ್ವಜನಿಕ ಆಸಕ್ತಿ, ಮಾರುಕಟ್ಟೆ ಇತ್ಯಾದಿಗಳನ್ನು ಈ ಎರಡು ಮಾದರಿಗಳು ವಿಭಿನ್ನ ದೃಷ್ಟಿಯಿಂದ ನೋಡುತ್ತಿದ್ದವು. ಮುಕ್ತ ಮಾರುಕಟ್ಟೆಯನ್ನು ಪ್ರತಿಪಾದಿಸುವವರ ಪ್ರಕಾರ ರಾಷ್ಟ್ರವೊಂದು ಕಲ್ಪಿತ ಸಮುದಾಯ. ಇಂತಹ ಕಲ್ಪಿತ ಸಮುದಾಯದೊಳಗೆ ಹಲವಾರು ಆಸಕ್ತಿಗಳು ಇರುತ್ತವೆ. ಈ ಆಸಕ್ತಿಗಳನ್ನು ಮಾರುಕಟ್ಟೆ ಅರ್ಥ ಮಾಡಿಕೊಳ್ಳಬಹುದು ಮತ್ತು ತೃಪ್ತಿಪಡಿಸಬಹುದು. ಪ್ರಭುತ್ವ ಒಂದು ಬೃಹತ್ ಸಾರ್ವಜನಿಕ ಸಂಸ್ಥೆ. ವಿವಿಧ ಆಸಕ್ತಿಗಳು ವ್ಯವಹರಿಸಲು ನೀತಿ ನಿಯಮಗಳನ್ನು ರೂಪಿಸುವುದು ಮತ್ತು ಎಲ್ಲರೂ ನೀತಿ ನಿಯಮನುಸಾರ ನಡೆದುಕೊಳ್ಳುವಂತೆ ನೋಡಿಕೊಳ್ಳುವುದು ಪ್ರಭುತ್ವದ ಕೆಲಸ ಭೌತಿಕ ಮತ್ತು ಸಾಂಸ್ಕೃತಿಕ ಸಂಪನ್ಮೂಲಗಳ ಪೂರೈಕೆ ಅವುಗಳ ಬೇಡಿಕೆಗಿಂತ ಕಡಿಮೆ ಪ್ರಮಾಣದಲ್ಲಿರುತ್ತದೆ. ಇಂತಹ ಕೊರತೆ ಸನ್ನಿವೇಶದಲ್ಲಿ ಈ ಸಂಪನ್ಮೂಲಗಳನ್ನು ಹೊಂದಲು ವ್ಯಕ್ತಿಗಳ ನಡುವೆ ಸ್ಪರ್ಧೆ ಅನಿವಾರ್ಯ. ಈ ಸ್ಪರ್ಧೆಯನ್ನು ಹದ್ದುಬಸ್ತಿನಲ್ಲಿಡದಿದ್ದರೆ ಒಂದು ಬಗೆಯ ಜಂಗಲ್ ರಾಜ್ಯ ಸೃಷ್ಟಿಯಾಗಬಹುದು. ಈ ಸ್ಪರ್ಧೆಯನ್ನು ಹದ್ದುಬಸ್ತಿನಲ್ಲಿಡುವ ಕೆಲಸವನ್ನು ಪ್ರಭುತ್ವ ಮಾಡುತ್ತದೆ. ಮುಕ್ತ ಮಾರುಕಟ್ಟೆ ಪ್ರತಿಪಾದಕರ ಪ್ರಕಾರ ಪ್ರಭುತ್ವ ಒಂದು ವಿಧದ ನ್ಯೂಟ್ರಲ್ ಅಂಪೈರ್ ಕೆಲಸವನ್ನು ನಿರ್ವಹಿಸುತ್ತದೆ. ಯೋಜಿತ ಅಭಿವೃದ್ಧಿಯ ಹರಿಕಾರರ ಪ್ರಕಾರ ಪ್ರಭುತ್ವ ನ್ಯೂಟ್ರೆಲ್ ಅಂಪೈರ್ ಅಲ್ಲ, ವರ್ಗಾಸಕ್ತಿಯನ್ನು ಪ್ರತಿನಿಧಿಸುತ್ತದೆ ಮತ್ತು ಬಲಾಢ್ಯರು ಪ್ರಭುತ್ವವನ್ನು ಸದಾ ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಏಣಿಶ್ರೇಣಿಗಳು ಎಲ್ಲ ಸಮಾಜದ ಮೂಲ ಲಕ್ಷಣ, ಏಣಿಶ್ರೇಣಿಗಳನ್ನು ಗುರುತಿಸುವ ಹೆಸರುಗಳು ಮತ್ತು ಪ್ರತಿಪಾದಿಸುವ ಲಾಜಿಕ್‌ಗಳು ಸಮಾಜದಿಂದ ಸಮಾಜಕ್ಕೆ ಭಿನ್ನ ಇರಬಹುದು. ಏಣಿಶ್ರೇಣಿಗಳು ಕೇವಲ ಸಂಕಥನದ ಉತ್ಪನ್ನಗಳಲ್ಲಿ. ಸಂಕಥನಗಳು ಮೂಲಕ ಕಟ್ಟಿಕೊಳ್ಳುವ ಏಣಿಶ್ರೇಣಿಗಳು ನಿಜಜೀವನದಲ್ಲಿ ಆಚರಣೆಗೆ ಬರಬೇಕಾದರೆ ಭೌತಿಕ ಹಾಗೂ ಸಾಂಸ್ಕೃತಿಕ ಸಂಪನ್ಮೂಲಗಳ ಮೇಲೆ ಹತೋಟಿ ಬೇಕು. ಭೂಮಿ, ಬಂಡವಾಳ, ಮಶಿನರಿ, ಕಚ್ಚಾವಸ್ತು ಇತ್ಯಾದಿ ಉತ್ಪಾದನ ಪರಿಕರಗಳನ್ನು ಭೌತಿಕ ಸಂಪನ್ಮೂಲ ಎನ್ನಬಹುದು. ಏಣಿಶ್ರೇಣಿಗಳನ್ನು ಸಮರ್ಥಿಸುವ ಸಂಕಥನ, ಇವುಗಳನ್ನು ಉತ್ಪಾದಿಸುವ ಪರಿಣಿತಿ, ಈ ಪರಿಣಿತಿಗಳನ್ನು ಪಡೆಯುವ ತರಬೇತಿ ಇತ್ಯಾದಿಗಳನ್ನು ಸಾಂಸ್ಕೃತಿಕ ಸಂಪನ್ಮೂಲ ಎನ್ನಬಹುದು. ಈ ಎಲ್ಲ ಸಂಪನ್ಮೂಲಗಳ ಸಮಾಜದ ವಿವಿಧ ವರ್ಗಗಳಲ್ಲಿ ವಿವಿಧ ಪ್ರಮಾಣದಲ್ಲಿ ಹಂಚಲ್ಪಟ್ಟಿವೆ. ಇವುಗಳ ಮೇಲೆ ಹತೋಟಿ ಇರುವವರು ಪ್ರಭುತ್ವವನ್ನು ತಮ್ಮ ಆಸಕ್ತಿಗಳನ್ನು ಪ್ರತಿನಿಧಿಸಲು ಪೂರಕವಾಗಿ ರೂಪಿಸಿಕೊಳ್ಳುತ್ತಾರೆ. ಯೋಜಿತ ಅಭಿವೃದ್ಧಿ ಮಾದರಿಯನ್ನು ಮುಂದೂಡುವವರ ಪ್ರಕಾರ ಎಲ್ಲರು ಸಮನಾಗಿ ಅಭಿವೃದ್ಧಿಗೊಳ್ಳಬೇಕಾದರೆ ಭೌತಿಕ ಹಾಗೂ ಸಾಂಸ್ಕೃತಿಕ ಸಂಪನ್ಮೂಲವನ್ನು ಸಂಪೂರ್ಣವಾಗಿ ಪ್ರಭುತ್ವ ತನ್ನ ಸ್ವಾಧೀನ ತೆಗೆದುಕೊಳ್ಳಬೇಕು.

ಮುಕ್ತ ಮಾರುಕಟ್ಟೆಯನ್ನು ಪ್ರತಿಪಾದಿಸುವವರ ಪ್ರಕಾರ ಆರ್ಥಿಕ ಏಣಿಶ್ರೇಣಿಗಳು ಚಾರಿತ್ರಿಕವಾಗಿ ರೂಪುಗೊಂಡವು. ಅವುಗಳನ್ನು ಪ್ರಭುತ್ವ ತನ್ನ ಸ್ವಾಧೀನ ತೆಗೆದು ಕೊಳ್ಳುವುದರಿಂದ ಅಸಮಾನತೆ ನಿವಾರಣೆಯಾಗುವುದಿಲ್ಲ. ಅದರ ಬದಲು ಆರ್ಥಿಕ ಅಸಮಾನತೆಯನ್ನು ರಾಜಕೀಯ ಸಮಾನತೆಯ ಮೂಲಕ ನಿವಾರಿಸಿಕೊಳ್ಳಬಹುದು. ಮುಕ್ತ ಮಾರುಕಟ್ಟೆ ಹಾಗೂ ಪ್ರಜಾಪ್ರಭುತ್ವ ಮಾದರಿ ಪ್ರಭುತ್ವ ಅಸಮಾನತೆಯನ್ನು ನಿವಾರಿಸಬಹುದೆಂದು ಮುಕ್ತ ಮಾರುಕಟ್ಟೆಯ ಹರಿಕಾರರ ಪ್ರತಿಪಾದಿಸುತ್ತಾರೆ. ಆರ್ಥಿಕ ಕ್ಷೇತ್ರದಲ್ಲಿ ದುಡ್ಡಿದ್ದವರು ಹೆಚ್ಚು ಖರೀದಿಸಬಹುದು. ಅಂದರೆ ಹೆಚ್ಚು ಸಂಪತ್ತು ಎಂದರೆ ಹೆಚ್ಚು ಖರೀದಿಸುವ ಶಕ್ತಿ. ಆದರೆ ರಾಜಕೀಯ ಸಮಾನತೆ ಇರುವ ವ್ಯವಸ್ಥೆಯಲ್ಲಿ ಕೋಟಿಯಾಧೀಶನಿಗೂ ಭಿಕ್ಷಾಧಿಪತಿಗೂ ಒಂದೇ ಓಟು. ಬಹುತೇಕ ಸಮಾಜದಲ್ಲಿ ಬಡವರು ಹೆಚ್ಚಿದ್ದು ಶ್ರೀಮಂತರು ಕಡಿಮೆ ಇರುತ್ತಾರೆ. ದುಡ್ಡಿಲ್ಲವರು ತಮ್ಮ ರಾಜಕೀಯ ಸಮಾನತೆಯನ್ನು ಬಳಸಿಕೊಂಡು ತಮ್ಮ ಆಸಕ್ತಿಯನ್ನು ಪ್ರತಿನಿಧಿಸುವ ಪಕ್ಷವನ್ನು ಅಧಿಕಾರಕ್ಕೆ ತರಬಹುದು. ಈ ಬಗೆಯಲ್ಲಿ ಅಧಿಕಾರಕ್ಕೆ ಬಂದ ಪಕ್ಷ ತನ್ನ ಮತದಾರರ ಆಸಕ್ತಿಯನ್ನು ರಕ್ಷಿಸುವುದು ಅನಿವಾರ್ಯ ಎಂದು ಮುಕ್ತ ಮಾರುಕಟ್ಟೆಯ ಪ್ರತಿಪಾದಕರು ಅಭಿಪ್ರಾಯ ಪಡುತ್ತಾರೆ. ರಾಜಕೀಯ ಸಮಾನತೆಯ ಮೂಲಕ ಆರ್ಥಿಕ ಸಮಾನತೆ ವಾಸ್ತವಿಕ ಜಗತ್ತಿನಲ್ಲಿ ಜಾರಿಗೆ ಬರಬೇಕಾದರೆ ಹಲವಾರು ಸಂಗತಿಗಳಿರಬೇಕಾಗುತ್ತದೆ. ಬಡವ ಶ್ರೀಮಂತರ ನಡುವಿನ ಅಂತರ ದೊಡ್ಡದಿರಬಾರದು, ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಭಾಗವಹಿಸುವ ಬಹುತೇಕರಿಗೆ ಅದು ಕಾರ್ಯನಿರ್ವಹಿಸುವ ಬಗ್ಗೆ ಕನಿಷ್ಠ ತಿಳುವಳಿಕೆ ಇರಬೇಕು, ದಿನನಿತ್ಯದ ಬದುಕಿನಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳು ಆಚರಣೆಯಲ್ಲಿರಬೇಕು ಇತ್ಯಾದಿ ಸಂಗತಿಗಳು ಅಸ್ತಿತ್ವದಲ್ಲಿದ್ದರೆ ಆರ್ಥಿಕ ಅಸಮಾನತೆಯನ್ನು ರಾಜಕೀಯ ಸಮಾನತೆಯ ಮೂಲಕ ಸಾಧಿಸಬಹುದು. ಆದರೆ ಬಹುತೇಕ ಬಡದೇಶಗಳಲ್ಲಿ ಈ ಬಗೆಯ ಗುಣಗಳಿಗೆ ವಿರುದ್ಧವಾದ ಗುಣಗಳೇ ಹೆಚ್ಚಿವೆ. ಇಂತಹ ಪರಿಸರದಲ್ಲಿ ಆರ್ಥಿಕ ಅಸಮಾನತೆಯನ್ನು ರಾಜಕೀಯ ಸಮಾನತೆಯ ಕಡಿಮೆಗೊಳಿಸುವ ಕನಸು ಬಿಟ್ಟು ನೇರ ಕ್ರಮಗಳ ಮೂಲಕ ಆರ್ಥಿಕ ಅಸಮಾನತೆಗಳ ಪರಿಹಾರಕ್ಕೆ ಪ್ರಯತ್ನಿಸಬೇಕೆನ್ನುವ ದೃಷ್ಟಿಕೋನ ಭಾರತದ ಯೋಜಿತ ಅಭಿವೃದ್ಧಿ ಹಿಂದಿದೆ.

ಮೇಲಿನ ವಿಚಾರಗಳ ಜತೆಗೆ ಯೋಜಿತ ಅಭಿವೃದ್ಧಿ ಮಾದರಿಯನ್ನು ಕೈಗತ್ತಿಕೊಳ್ಳುವ ಸಂದರ್ಭದಲ್ಲಿ ಇತರ ಹಲವಾರು ಸಂಗತಿಗಳು ಚರ್ಚೆಯಲ್ಲಿದ್ದವು. ಕೇಂದ್ರೀಕೃತ ವರ್ಸಸ್ ವಿಕೇಂದ್ರೀಕೃತ ಅಭಿವೃದ್ಧಿ, ಬೃಹತ್ ವರ್ಸಸ್ ಸಣ್ಣ ಉದ್ದಿಮೆಗಳು, ನಗರಾಭಿವೃದ್ಧಿ ವರ್ಸಸ್ ಗ್ರಾಮೀಣಾಭಿವೃದ್ಧಿ, ಬಂಡವಾಳ ಆಧರಿತ ಅಭಿವೃದ್ಧಿ ವರ್ಸಸ್ ಶ್ರಮ ಆಧರಿತ ಅಭಿವೃದ್ಧಿ ಇತ್ಯಾದಿ ವಿಚಾರಗಳು ಕೂಡ ಚರ್ಚೆಯಲ್ಲಿದ್ದವು. ಮೇಲಿನ ದೃಷ್ಟಿಕೋನಗಳಲ್ಲಿ ಮೊದಲಿನದ್ದನ್ನು ನೆಹರೂ ಪ್ರತಿನಿಧಿಸಿದರೆ ಎರಡನೆಯದನ್ನು ಗಾಂಧಿ ಪ್ರತಿನಿಧಿಸಿದ್ದರು. ಆದಿಯಿಂದಲೇ ಗಾಂಧೀಜೀಯವರಿಗೆ ಭಾರತದ ಗ್ರಾಮೀಣ ಜೀವನದ ಬಗ್ಗೆ ಅತಿಯಾದ ಮೋಹ. “ಸತ್ಯ ಮತ್ತು ಅಹಿಂಸೆ ನಮ್ಮ ಬದುಕಿನ ಭಾಗವಾಗಬೇಕು. ಇಲ್ಲದಿದ್ದರೆ ಮಾನವ ಸುಖದಿಂದ ಬಾಳಲು ಸಾಧ್ಯವೇ ಇಲ್ಲ. ಸತ್ಯ ಮತ್ತು ಅಹಿಂಸೆಯನ್ನು ಗ್ರಾಮೀಣ ಸರಳ ಜೀವನದಲ್ಲಿ ಮಾತ್ರ ರೂಢಿಸಿಕೊಳ್ಳಲು ಸಾಧ್ಯ” ಎಂದು ಗಾಂಧೀಜಿಯವರು ಬಲವಾಗಿ ನಂಬಿದ್ದರು. ಭಾರತವು ಗ್ರಾಮ ಪ್ರಧಾನವಾದ ರಾಷ್ಟ್ರವಾದ್ದರಿಂದ ಗಾಂಧೀಜಿಯ ಪ್ರಕಾರ ಗ್ರಾಮೀಣ ಬದುಕಿಗೆ ಮಹತ್ವ ನೀಡುವ ಅಭಿವೃದ್ಧಿ ಮಾತ್ರ ಭಾರತಕ್ಕೆ ಹೆಚ್ಚು ಉಪಯುಕ್ತ. ಗಾಂಧೀಜಿಯ ಕನಸಿನ ಭಾರತದಲ್ಲಿ ಎಲ್ಲವನ್ನು ನಿರ್ದೇಶಿಸುವ ಬಲವಾದ ಒಂದು ಕೇಂದ್ರದ ಬದಲು ಹಲವಾರು ಆಸಕ್ತಿಗಳನ್ನು ಪ್ರತಿನಿಧಿಸುವ ತಳಮಟ್ಟದ ವಿಕೇಂದ್ರೀಕೃತ ಮಾದರಿಗೆ ಹೆಚ್ಚಿನ ಮಹತ್ವ. ಭಾರತ ಹಲವಾರು ಜಾತಿ, ಧರ್ಮ, ಭಾಷೆ, ಸಂಸ್ಕೃತಿಗಳಿಂದ ತುಂಬಿದ ರಾಷ್ಟ್ರ. ಇಂತಹ ವಿವಿಧತೆಯನ್ನು ದೂರದಲ್ಲಿರುವ ಒಂದು ಕೇಂದ್ರ ಪ್ರತಿನಿಧೀಕರಿಸಲು ಸಾಧ್ಯವಿಲ್ಲ. ಗ್ರಾಮೀಣ ಜನರು ಸೇರಿ ತಮ್ಮ ಸಮಸ್ಯೆಗಳಿಗೆ ತಾವೇ ಪರಿಹಾರ ಕಂಡುಕೊಳ್ಳುವ ಮಾದರಿಯನ್ನು ಗಾಂಧೀಜಿಯವರು ಬಯಸಿದ್ದರು. ನೇರವಾಗಿ ಹೇಳುವುದಾದರೆ ವಿಕೇಂದ್ರೀಕೃತ ಅಭಿವೃದ್ಧಿ ಮಾದರಿಗೆ ಮಹತ್ವ ನೀಡಬೇಕೆಂದು ಗಾಂಧೀಜಿಯವರು ಒತ್ತಾಯಿಸಿದರು. ಭಾರತದ ಭವಿಷ್ಯವನ್ನು ನಿರ್ಧರಿಸುವ ಸಂವಿಧಾನದಲ್ಲಿ ಗ್ರಾಮೀಣ ಬದುಕು ಕೇಂದ್ರ ಬಿಂದು ಆಗಬೇಕೆನ್ನುವ ಕನಸು ಗಾಂಧೀಜಿಯವರದ್ದು. ಆದರೆ ನವಭಾರತದ ಮತ್ತೊಬ್ಬ ಹರಿಕಾರನಾಗಿದ್ದ ನೆಹರೂರವರಿಗೆ ಗ್ರಾಮೀಣಾಭಿವೃದ್ಧಿಯ ಮೂಲಕ ಭಾರತದ ಅಭಿವೃದ್ಧಿಯನ್ನು ಉಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಷ್ಟು ಮಾತ್ರವಲ್ಲ ಸಂವಿಧಾನದ ನಿರ್ಮಾಪಕರಲ್ಲಿ ಮುಖ್ಯರೆಂದು ಗುರುತಿಸಲ್ಪಟ್ಟಿರುವ ಅಂಬೇಡ್ಕರ್ ಕೂಡ ಭಾರತದ ಹಳ್ಳಿಗಳನ್ನು ಕೇಂದ್ರವಾಗಿಟ್ಟುಕೊಂಡು ಆಧುನಿಕ ಭಾರತ ನಿರ್ಮಿಸುವ ಸಲಹೆಯನ್ನು ಬಲವಾಗಿ ವಿರೋಧಿಸಿದರು. ಕಾರಣ ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ತಾಂಡವಾಡುತ್ತಿದ್ದ ಅಸಮಾನತೆ. ಗ್ರಾಮೀಣ ಬದುಕು ಜಮೀನ್ದಾರರು ಮತ್ತು ಸ್ಥಳೀಯ ಮೇಲ್ವರ್ಗದವರ ಸುಪರ್ದಿಯಲ್ಲಿತ್ತು. ಅಂತಹ ಪರಿಸರದಲ್ಲಿ ಗ್ರಾಮ ಸ್ವರಾಜ್ಯವನ್ನು ಜಾರಿಗೆ ತಂದರೆ ಸಮಾಜದ ಮೇಲ್ ವರ್ಗಗಳು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಗ್ರಾಮದಲ್ಲಿನ ದುರ್ಬಲರು, ಕೆಳಜಾತಿಗಳು ಇನ್ನೂ ಶೋಷಣೆಗೆ ಒಳಗಾಗುತ್ತಾರೆ ಎಂದು ಅಂಬೇಡ್ಕರ್ ಗ್ರಹಿಸಿದ್ದರು. ಭಾರತದ ಭವಿಷ್ಯವನ್ನು ರೂಪಿಸಿದ ಮೂವರು ಮಹಾನ್ ವ್ಯಕ್ತಿಗಳ ನಡುವೆ ಗ್ರಾಮೀಣ ಬದುಕು ಬಗ್ಗೆ ಇದ್ದ ಅಭಿಪ್ರಾಯಗಳು ಮಾತ್ರ ಯೋಜಿತ ಅಭಿವೃದ್ಧಿಯನ್ನು ಪ್ರಭಾವಿಸಿದೆ ಎನ್ನುವುದು ಸರಿಯಲ್ಲ. ಆ ಸಂದರ್ಭದಲ್ಲಿದ್ದ ರಾಜಕೀಯ ಹಾಗೂ ಸಮಾಜಿಕ ಸ್ಥಿತಿ ಕೂಡ ಬಲವಾದ ಕೇಂದ್ರ ನಿರ್ದೇಶಿತ ಅಭಿವೃದ್ಧಿ ಕಲ್ಪನೆಗೆ ಒತ್ತು ನೀಡಿವೆ. ಈ ಎಲ್ಲ ಬೆಳವಣಿಗೆಗಳು ಗಾಂಧೀಜಿ ಅವರು ಸೂಚಿಸಿದ ಗ್ರಾಮ ಕೇಂದ್ರಿತ ರಾಷ್ಟ್ರ ನಿರ್ಮಾಣ ಕಲ್ಪನೆಗೆ ವಿರುದ್ಧವಾಗಿದ್ದವು.

ಜತೆಗೆ ಬಹುತೇಕ ಕಾಂಗ್ರೇಸಿಗರಿಗೆ ಗಾಂಧೀಜಿಯವರ ತತ್ವಗಳ ಬಗ್ಗೆ- ಆಧುನಿಕ ನಾಗರಿಕತೆಗೆ ಬದಲಾಗಿ ಗ್ರಾಮೀಣ ಮೌಲ್ಯ ಆಧಾರಿತ ಬದುಕು, ಎಲ್ಲ ವಿಧದ ಶ್ರಮಗಳನ್ನು ಸಮಾನವಾಗಿ ಗೌರವಿಸುವ ಮತ್ತು ಸಮಾನದ ಪ್ರತಿಫಲ ನೀಡುವ, ಮೂಲಭೂತ ಆರ್ಥಿಕ ಹಾಗೂ ರಾಜಕೀಯ ವಿಕೇಂದ್ರೀಕರಣಗಳ ಮೂಲಕ ಸ್ವತಂತ್ರ ಹಳ್ಳಿಗಳ ನಿರ್ಮಾಣ, ಇತ್ಯಾದಿ ಮೌಲ್ಯಗಳ ಬಗ್ಗೆ ನಿಜವಾದ ಕಾಳಜಿ ಇತ್ತೆನ್ನಲು ಸಾಧ್ಯವಿಲ್ಲ. ಈ ಎಲ್ಲ ಕಾರಣಗಳಿಂದ ಭಾರತದ ಸಂವಿಧಾನದಲ್ಲಿ ವಿಕೇಂದ್ರೀಕೃತ ವ್ಯವಸ್ಥೆಗೆ ಸಿಗಬೇಕಾದ ಸ್ಥಾನ ಸಿಗಲೇ ಇಲ್ಲ. ಸಂವಿಧಾನ ರಚನೆಗೆ ಸಂಬಂಧಿಸಿದ ಚರ್ಚೆ ಸುಮಾರು 18 ತಿಂಗಳುಗಳ ಕಾಲ ನಡಿಯಿತು. ಆದಾಗ್ಯು “ಪಂಚಾಯಿತಿ” ಎನ್ನುವ ಪದ ಸಂವಿಧಾನದ ಕರಡು ಪ್ರತಿಯಲ್ಲಿ ಒಂದು ಬಾರಿಯೂ ಬರಲಿಲ್ಲ. ಗಾಂಧೀಜಿ ಮತ್ತು ಅವರ ಬೆಂಬಲಿಗರು ಸಂವಿಧಾನದಲ್ಲಿ ಗಾಂಧೀಜಿ ಮತ್ತು ಅವರ ಕಟ್ಟಾ ಬೆಂಬಲಿಗರ ಮನಸ್ಸನ್ನು ನೋಯಿಸಬಾರದೆನ್ನುವ ದೃಷ್ಟಿಯಿಂದ ಪಂಚಾಯತನ್ನು ಡೈರೆಕ್ಟಿವ್ ಪ್ರಿನ್ಸಿಪಲ್ಸ್ ಆಫ್ ಸ್ಟೇಟ್ ಪಾಲಿಸಿಯಲ್ಲಿ ಸೇರಿಸಲಾಯಿತು. ಇದರ ಪ್ರಕಾರ ವಿಕೇಂದ್ರೀಕೃತ ವ್ಯವಸ್ಥೆಗಳನ್ನು ಸಂಘಟಿಸುವ ಮತ್ತು ಅವುಗಳಿಗೆ ಅಗತ್ಯವಿರುವ ಆರ್ಥಿಕ ಹಾಗೂ ಆಡಳಿತಾತ್ಮಕ ಅಧಿಕಾರಗಳನ್ನು ನೀಡುವ ಜವಾಬ್ದಾರಿ ರಾಜ್ಯ ಸರಕಾರಗಳದ್ದಾಯಿತು. ಭಾರತದ ಸಂವಿಧಾನದಲ್ಲಿ ವಿಕೇಂದ್ರೀಕೃತ ವ್ಯವಸ್ಥೆ ಬಗ್ಗೆ ದಾಖಲೆ ಇಲ್ಲದಿರುವುದು ಸರಿಯಾದ ಬೆಳವಣಿಗೆಯಲ್ಲ ಎಂದು ಗಾಂಧೀಜಿಯವರು ನೊಂದು ನುಡಿದಿದ್ದಾರೆ. ಆದಷ್ಟು ಬೇಗ ನಾವು ಇದನ್ನು ತಿದ್ದಿಕೊಳ್ಳಬೇಕು. ವಿಕೇಂದ್ರೀಕೃತ ಅಭಿವೃದ್ಧಿ ಮಾದರಿ ಜಾರಿಗೆ ಬಂದರೆ ಮಾತ್ರ ಗ್ರಾಮೀಣ ಜನರಿಗೆ ಒಳಿತಾಗುತ್ತದೆ ಎಂದು ಗಾಂಧೀಜಿಯವರು ಅಭಿಪ್ರಾಯಪಟ್ಟರು. ಹೀಗೆ ತಳಮಟ್ಟದ ಅರ್ಥ, ರಾಜಕೀಯ ಪ್ರಕ್ರಿಯೆಗಳಿಗೆ ಅವಕಾಶ ಕೊಡಬೇಕೆನ್ನುವ ಗಾಂಧೀಜಿಯವರ ಆಶಯಕ್ಕೆ ಸ್ವಾತಂತ್ರ್ಯ ನಂತರವೂ ವಿಶೇಷ ಮಹತ್ವ ಸಿಗಲಿಲ್ಲ. ಕೆಲವರ ಪ್ರಕಾರ ಸ್ವತಂತ್ರ್ಯ ಪೂರ್ವದಲ್ಲೂ ಗಾಂಧೀಜಿಯವರ ವಾದಕ್ಕೆ ವಿಶೇಷ ಮಹತ್ವವಿರಲಿಲ್ಲ. ಕೆಳವರ್ಗದ ಜನರನ್ನು ಸ್ವತಂತ್ರ್ಯ ಹೋರಾಟದಲ್ಲಿ ಪಾಲುಗೊಳ್ಳುವಂತೆ ಮಾಡಲು ಗಾಂಧೀಜಿಯವರನ್ನು ಉಪಯೋಗಿಸಲಾಗಿತ್ತು. ಹೊಸ ರಾಷ್ಟ್ರ ನಿರ್ಮಾಣದಲ್ಲಿ ಅದರಲ್ಲೂ ಆರ್ಥಿಕ ನೀತಿಗಳಿಗೆ ಸಂಬಂಧಿಸಿದ ಗಾಂಧೀಜಿಯವರ ವಿಚಾರಗಳನ್ನು ಉಳಿದ ನಾಯಕರು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಆದುದರಿಂದ ಸ್ವಾತಂತ್ರ್ಯ ನಂತರ ಗಾಂಧೀಜಿಯವರ ಅಭಿಪ್ರಾಯಗಳಿಗೆ ಮನ್ನಣೆ ಸಿಗಲಿಲ್ಲವೆಂದು ದುಃಖ ಪಡುವ ಅಗತ್ಯವಿಲ್ಲ ಎನ್ನುವ ವಾದಗಳು ಇವೆ. ಅದೇನೆ ಇರಲಿ ಗಾಂಧೀಜಿ ಬಯಸಿದ ಗ್ರಾಮ ರಾಜ್ಯವಂತೂ ನಿರ್ಮಾಣವಾಗಲಿಲ್ಲ.

ಗಾಂಧೀಜಿಯವರ ಗ್ರಾಮ ಕೇಂದ್ರಿತ ಭಾರತದ ಬದಲು ನೆಹರೂರವರ ಬಲವಾದ ಒಂದು ಕೇಂದ್ರದ ನೇತೃತ್ವದಲ್ಲಿ ಆಧುನಿಕ ಭಾರತದ ನಿರ್ಮಾಣಕ್ಕೆ ಸಿದ್ಧತೆಗಳು ನಡೆದವು ಅವುಗಳು ಕಾರ್ಯರೂಪಕ್ಕೆ ಬರುವಾಗ ತಾಂತ್ರಿಕ ಆಧುನೀಕರಣದ ಮೂಲ ಮಂತ್ರಗಳಾದವು. ಅದರಲ್ಲಿ ಆಧುನಿಕ ತಂತ್ರ ಜ್ಞಾನ ಮತ್ತು ಸಾಂಘಿಕ ರಚನೆಗಳಿಗೆ ಮಹತ್ವ ಅವುಗಳನ್ನು ನಮ್ಮ ವ್ಯವಸ್ಥೆಯಲ್ಲಿ ಅಳವಡಿಸುವ ಮೂಲಕ ಸಾಮಾಜಿಕ ಪರಿವರ್ತನೆ ಸಾಧ್ಯ ಎನ್ನುವ ಗ್ರಹಿಕೆ ತಾಂತ್ರಿಕ ಆಧುನೀಕರಣದ ತಳಹದಿ. ಆದುದರಿಂದ ಸ್ಥಳೀಯವಾದ ಯಾವುದೂ ಕೂಡ ಭವಿಷ್ಯದ ಸಮಾಜ ನಿರ್ಮಾಣದಲ್ಲಿ ವಿಶೇಷ ಉಪಯೋಗವಿಲ್ಲ ಎನ್ನುವ ಧೋರಣೆಗಳು ಆರಂಭದ ದಿನದಲ್ಲಿ ಎದ್ದು ಕಾಣುತ್ತಿದ್ದವು. ಅದಕ್ಕೆ ಕಾರಣವು ಇತ್ತು. ನಮ್ಮ ಸಾಂಪ್ರದಾಯಿಕ ಗುರುತುಗಳು ಸಮಾನತೆ ಸಾಧ್ಯತೆಯುಳ್ಳ ಸಮಾಜದ ನಿರ್ಮಾಣಕ್ಕೆ ಪೂರಕವಾಗಿರಲಿಲ್ಲ. ಪಶ್ಚಿಮದ ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಸಾಧ್ಯವಾಗುವ ಉತ್ಪಾದನೆಯ ಒಂದಂಶವೂ ನಮ್ಮ ಸ್ಥಳೀಯ ಜ್ಞಾನದಿಂದ ಸಾಧ್ಯವಾಗಿರಲಿಲ್ಲ. ತಳ ಮಟ್ಟದ ರಾಜಕೀಯ ಪ್ರಕ್ರಿಯೆಯಂತೂ ಗಾಂಧೀಜಿಯವರ ಆದರ್ಶಗಳಿಂದ ಗಾವುದ ದೂರ ಇದ್ದವು. ಇಂತಹ ಪರಿಸರದಲ್ಲಿ ಸಮಾಜದ ಮೂಲಭೂತ ಪರಿವರ್ತನೆಗೆ ಸ್ಥಳೀಯ ಪರಿಕರಗಳ ಬಳಕೆಯ ಆಯ್ಕೆ ತುಂಬಾ ಸೀಮಿತವಾಗಿತ್ತು. ಅಂದಿನ ಅಂತಾರಾಷ್ಟ್ರೀಯ ರಾಜಕೀಯ ವಾತಾವರಣ ಕೂಡ ಪಶ್ಚಿಮದ ವಿಜ್ಞಾನ ತಂತ್ರಜ್ಞಾನ ಆಧಾರಿತ ಅಭಿವೃದ್ಧಿ ಮಾದರಿ ಆಯ್ಕೆಗೆ ಸ್ವಲ್ಪ ಮಟ್ಟಿಗೆ ಕಾರಣವಾಗಿರಬಹುದು. ಕೃಷಿ ನಮ್ಮ ಅರ್ಥ ವ್ಯವಸ್ಥೆಯ ಬೆನ್ನೆಲುಬೆಂದು ಬಗೆದು ಅದರ ಸುಧಾರಣೆಗೆ ಬೃಹತ್ ನೀರಾವರಿ ವ್ಯವಸ್ಥೆ ರೂಪುಗೊಂಡಿತು. ಆಹಾರದ ಉತ್ಪಾದನೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಆಧುನಿಕ ತಂತ್ರಜ್ಞಾನಗಳನ್ನು ಧಾರಾಳವಾಗಿ ಬಳಸಲು ತೀರ್ಮಾನಿಸಲಾಯಿತು. ಆಹಾರ ದಾಸ್ತಾನಿನ ಸ್ಥಿತಿಯನ್ನು ಕೊರತೆಯಿಂದ ಮಿತತೆಗೆ ಏರಿಸುವ ಉದ್ದೇಶದಿಂದ ದೊಡ್ಡ ಕೃಷಿಕರನು ಹೆಚ್ಚು ಹೆಚ್ಚು ಬೆಂಬಲಿಸಬೇಕೆಂದಾಯಿತು. ಕಬ್ಬಿಣ, ಉಕ್ಕು, ಸಿಮೆಂಟ್, ವಿದ್ಯುತ್ ಇತ್ಯಾದಿ ಮೂಲಭೂತ ಕಾರ್ಖಾನೆಗಳು ವೃದ್ಧಿಯಾಗದಿದ್ದರೆ ಅರ್ಥ ವ್ಯವಸ್ಥೆ ಸುಧಾರಿಸಲು ಸಾಧ್ಯವೇ ಇಲ್ಲವೆಂದಾಯಿತು. ಸಾರಿಗೆ, ಸಂಪರ್ಕ, ವಾಣಿಜ್ಯ, ವ್ಯಾಪಾರ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಭಾರತ ತಕ್ಕಮಟ್ಟಿನ ಸಾಧನೆ ಮಾಡಬೇಕಾದರೆ ಬಂಡವಾಳ ಕೇಂದ್ರಿತ ಆಧುನಿಕ ಉತ್ಪಾದನೆ ಮಾತ್ರ ಸರಿಯಾದ ದಾರಿಯೆಂದು ತೀರ್ಮಾನಿಸಲಾಯಿತು.

ನೆಹರೂ ಮತ್ತು ಗಾಂಧೀಜಿಯವರು ಮುಂದಿಟ್ಟ ಎರಡು ಮಾದರಿಗಳಲ್ಲೂ ಮುಂಚೂಣಿಗೆ ಬಾರದ ಹಲವಾರು ಸಂಗತಿಗಳಿವೆ. ಖಾಸಗಿ ಆಸ್ತಿ, ಶ್ರಮ ಬಳಕೆ ಅಥವಾ ಶ್ರಮಿಕರ ಸ್ಥಾನಮಾನ, ಉತ್ಪಾದನ ಪರಿಕರಗಳ ವಿತರಣೆ ಇತ್ಯಾದಿ ಪ್ರಶ್ನೆಗಳು ಎರಡೂ ದೃಷ್ಟಿಕೋನಗಳಲ್ಲೂ ವಿಶೇಷ ಸ್ಥಾನಮಾನ ಪಡೆಯಲಿಲ್ಲ. ಗಾಂಧೀಜಿಯವರು ಆಧುನಿಕ ವ್ಯವಸ್ಥೆಯ ದೋಷವನ್ನು ಆಧುನಿಕ ತಂತ್ರಜ್ಞಾನಕ್ಕೆ ಸೀಮಿತಗೊಂಡಂತೆ ನೋಡಿದರು. ತಂತ್ರಜ್ಞಾನದ ಜೊತೆಗೆ ಉತ್ಪಾದನ ಸಂಬಂಧಗಳು ಸೃಷ್ಟಿಸಬಹುದಾದ ವಿಕೃತಿಯನ್ನು ಗಾಂಧೀಜಿಯವರು ವಿಶೇಷವಾಗಿ ಪರಿಗಣಿಸಲಿಲ್ಲ. ನೆಹರೂರವರು ಉತ್ಪಾದನ ಪರಿಕರಗಳ ಮಾಲಿಕತ್ವದ ಬಗ್ಗೆ ಗಮನ ಹರಿಸಿದ್ದಾರೆ. ಯೋಜನೆ ಇಲಾಖೆಯ ಮೂಲಕ ಭಾರತದಲ್ಲಿ ಇರುವ ಹೆಚ್ಚುವರಿ ಭೂಮಿ ಮತ್ತು ಅವುಗಳನ್ನು ಭೂರಹಿತರಿಗೆ ಹಂಚುವುದರ ಬಗ್ಗೆ ಆಲೋಚನೆ ನಡೆದಿತ್ತು. ಪರಿಪೂರ್ಣವಾದ ಭೂಸಾಧಾರಣೆ ತಂದು ಜಮೀನ್ದಾರರ ಸ್ವಾಧೀನ ಇರುವ ಭೂಮಿ ಪ್ರಮಾಣವನ್ನು ಕಡಿಮೆ ಮಾಡುವ ಇರಾದೆ ವ್ಯಕ್ತ ಪಡಿಸಿದ್ದಾರೆ. ಆದರೆ ಈ ಎಲ್ಲವನ್ನು ಕಾರ್ಯರೂಪಕ್ಕೆ ತರುವ ರಾಜಕೀಯ ಇಚ್ಚಾಶಕ್ತಿ ಮತ್ತು ರಾಜಕೀಯ ಶಕ್ತಿ ಎರಡೂ ಇರಲಿಲ್ಲ. ಕಾಂಗ್ರೆಸ್ ಪಕ್ಷದ ಮೇಲಿನ ಭೂಮಾಲಿಕರ ಹಿಡಿತ ಬಲಾಢ್ಯರ ಆಸಕ್ತಿಗಳನ್ನು ಕಡೆಗಣಿಸಲು ಬಿಡಲಿಲ್ಲ. ಆದುದರಿಂದ ದೇಶವಿಡೀ ಭೂಸುಧಾರಣೆ ತಂದು ಸ್ವಾತಂತ್ರ್ಯ ಪೂರ್ವದ ಭೂಸಂಬಂಧಗಳನ್ನು ಪರಿವರ್ತಿಸುವ ಮಾತುಗಳು ಕೃತಿಗಳಾಗಿ ಹೊರಬರಲಿಲ್ಲ. ಖಾಸಗಿ ಬಂಡವಾಳ ಶೈಶವಾಸ್ಥೆಯಲ್ಲಿತ್ತು. ಬಾಂಬೆ ಪ್ಲಾನ್‌ನ ಹೆಸರಲ್ಲಿ ಖಾಸಗಿ ಬಂಡವಾಳ ಸರಕಾರದ ನೇತೃತ್ವದಲ್ಲಿ ಅಭಿವೃದ್ಧಿ ನಡೆಯಲಿ ಎಂದು ತನ್ನ ಆಶಯವನ್ನು ತೋಡಿಕೊಂಡಿದೆ. ಆದುದರಿಂದ ಬಂಡವಾಳವನ್ನು ನಿಯಂತ್ರಿಸುವ ಪ್ರಶ್ನೆಗಿಂತ ಎಲ್ಲ ಬಗೆಯ ನೆರವನ್ನು ನೀಡಿ ಬಂಡವಾಳ ವೃದ್ಧಿಸುವುದರ ಕಡೆಗೆ ಗಮನ ಹರಿಯಿತು.

ಅಂದಿನ ಅಂತರಾಷ್ಟ್ರೀಯ ಅಧಿಕಾರ ಸಂಬಂಧಗಳ ಹಿನ್ನೆಲೆಯಲ್ಲಿ ನೋಡಿದರೆ ನಮ್ಮ ಯೋಜನೆಗಳಲ್ಲಿ ರಶ್ಯಾದ ಯೋಜಿತ ಅಭಿವೃದ್ಧಿ ಮಾದರಿಯ ಪ್ರಭಾವವನ್ನು ಓದುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಭಾರತ ಅನುಸರಿಸಿದ ಪಂಚವಾರ್ಷಿಕ ಯೋಜನೆಗಳು ಖಂಡಿತವಾಗಿಯೂ ಕಮ್ಯುನಿಷ್ಟರು ಮುಂಚೂಣಿಗೆ ತಂದ ಯೋಜಿತ ಅಭಿವೃದ್ಧಿ ಮಾದರಿಯಲ್ಲ. ಉತ್ಪಾದನ ಪರಿಕರಗಳನ್ನು ಸ್ವಾಧೀನ ತೆಗೆದುಕೊಳ್ಳುವುದು ಬಿಡಿ ಅರ್ಥ ವ್ಯವಸ್ಥೆಯ ಶೇಕಡಾ ಹತ್ತರಷ್ಟು ಕೂಡ ಪ್ರಭುತ್ವದ ಸ್ವಾಮ್ಯತೆಯಲ್ಲಿದ್ದವು. ಕೆಲವೊಂದು ಆರ್ಥಿಕ ಚಟುವಟಿಕೆಗಳ ಮೇಲೆ ನಿಯಂತ್ರಣ ಇತ್ತು ಇಂತಹ ಸಣ್ಣಪುಟ್ಟ ಯೋಜಿತ ಅಭಿವೃದ್ಧಿಯ ಲಕ್ಷಣಗಳನ್ನು ಬಿಟ್ಟರೆ ಇನ್ಯಾವುದೇ ಲಕ್ಷಣಗಳನ್ನು ನಮ್ಮ ಪಂಚವಾರ್ಷಿಕ ಯೋಜನೆಗಳು ಹೊಂದಿರಲಿಲ್ಲ. ಅರ್ಥ ವ್ಯವಸ್ಥೆಯ ಬೆನ್ನೆಲುಬಾಗಿದ್ದ ಮತ್ತು ಬಹುತೇಕರ ಜೀವನಾಧಾರವಾಗಿದ್ದ ಕೃಷಿ ಸಂಪೂರ್ಣವಾಗಿ ಖಾಸಗಿ ಒಡೆತನದಲ್ಲಿತ್ತು. ರಾಷ್ಟ್ರೀಯ ಸಂಪನ್ಮೂಲಗಳೆಂದು ವಿಂಗಡಿಸಲ್ಪಟ್ಟ ತೈಲ, ಕಬ್ಬಿಣ, ಚಿನ್ನ, ಮ್ಯಾಂಗನೀಸ್ ಇತ್ಯಾದಿಗಳನ್ನು ಬೆಟ್ಟರೆ ಇತರ ಎಲ್ಲ ಉದ್ದಿಮೆಗಳನ್ನು ಖಾಸಗಿ ಬಂಡವಾಳ ಹೊಂದಬಹುದಿತ್ತು. ಇಡೀ ಯೋಜಿತ ಅಭಿವೃದ್ಧಿ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಕೃಷಿ, ಕೈಗಾರಿಕೆ ಮತ್ತು ಸೇವಾವಲಯಗಳಲ್ಲಿ ಧಾರಾಳವಾಗಿ ತೊಡಗಿಸಿಕೊಳ್ಳುವುದಕ್ಕೆ ಆದ್ಯತೆ ನೀಡಿದೆ. ಇಂತಹ ಉತ್ಪಾದನ ಪ್ರಕ್ರಿಯೆಗೆ ಅಗತ್ಯವಿರುವ ಮಾನವ ಸಂಪನ್ಮೂಲವನ್ನು ತರಬೇತುಗೊಳಿಸಲು ಅನುಕೂಲವಾಗುವ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿಕೊಳ್ಳಲಾಗಿದೆ. ಕಾನೂನು ವ್ಯವಸ್ಥೆಯನ್ನು ಕೂಡ ಬಂಡವಾಳ ಕೇಂದ್ರಿತ ಉತ್ಪಾದನೆ ಮತ್ತು ಅನುಭೋಗಗಳಿಗೆ ನೆರವಾಗುವಂತೆ ರಚಿಸಿಕೊಳ್ಳಲಾಗಿದೆ. ಸಾರಿಗೆ ಸಂಪರ್ಕ, ಹಣಕಾಸು, ಮಾರುಕಟ್ಟೆ, ವಿಮೆ ಇತ್ಯಾದಿಗಳನ್ನು ಕೂಡ ಬಂಡವಾಳ ಕೇಂದ್ರಿತ ಆಧುನಿಕ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗುವಂತೆ ರೂಪಿಸಿಕೊಳ್ಳಲಾಗಿದೆ. ಸರಕು ಮತ್ತು ಸೇವೆಗಳ ಉತ್ಪಾದನ ಪ್ರಮಾಣವನ್ನು ಹೆಚ್ಚಿಸುವುದು ಇಡೀ ಯೋಜನೆಯ ಮೂಲ ಮಂತ್ರವಾಗಿದೆ. ಇಂತಹ ಯೋಜಿತ ಅಭಿವೃದ್ಧಿಯ ಲಾಭ ಪಡೆಯಬೇಕಾದರೆ ಒಂದೋ ಭೂಮಿ ಬೇಕು ಅಥವಾ ಬಂಡವಾಳ ಬೇಕು ಅಥವಾ ಆಧುನಿಕ ಸ್ಕಿಲ್ ಬೇಕು. ಈ ಮೂರರಲ್ಲಿ ಯಾವುದಾದರು ಒಂದೂ ಇಲ್ಲದಿದ್ದರೆ ಈ ಯೋಜಿತ ಅಭಿವೃದ್ಧಿ ಲಾಭ ಪಡೆಯುವುದು ಕಷ್ಟ. ಇಂತಹ ಪಂಚವಾರ್ಷಿಕ ಮಾದರಿಯನ್ನು ಕರ್ನಾಟಕ ಯಥಾರೂಪದಲ್ಲಿ ಅಳವಡಿಸಿಕೊಂಡಿದೆ.

ಕರ್ನಾಟಕ ಕೂಡ ಕೃಷಿ ಕ್ಷೇತ್ರದ ಬೆಳವಣಿಗೆಯನ್ನು ತನ್ನ ಅರ್ಥ ವ್ಯವಸ್ಥೆಯ ಆಧಾರಸ್ತಂಭವೆಂದು ಪರಿಗಣಿಸಿದೆ. ಕೃಷಿಯ ಅಭಿವೃದ್ಧಿಗೆ ನೀರಾವರಿ ಅನಿವಾರ್ಯ. ಅದೇ ರೀತಿಯಲ್ಲಿ ಕೈಗಾರಿಕ ಕ್ಷೇತ್ರದ ಅಭಿವೃದ್ಧಿಗೆ ವಿದ್ಯುತ್ ಅನಿವಾರ್ಯ. ಹಾಗಾಗಿ ಕರ್ನಾಟಕದ ಯೋಜನೆಗಳಲ್ಲಿ ನೀರಾವರಿ ಮತ್ತು ವಿದ್ಯುತ್ ಕ್ಷೇತ್ರಗಳು ಕೃಷಿಗಿಂತಲೂ ಹೆಚ್ಚಿನ ಮಹತ್ವ ಪಡೆದಿವೆ. ಕೃಷಿ ಮತ್ತು ಕೈಗಾರಿಕೆಗಳು ಅಭಿವೃದ್ಧಿಗೊಳ್ಳಬೇಕಾದರೆ ನೀರಾವರಿ ಮತ್ತು ವಿದ್ಯುತ್ ಜತೆಗೆ ಇನ್ನಿತರ ಮೂಲಸೌಕರ್ಯಗಳು ಕೂಡ ಬೇಕು. ಕೃಷಿ / ಕೈಗಾರಿಕೆಗಳ ಉತ್ಪನ್ನಗಳನ್ನು ಕೃಷಿ / ಕೈಗಾರಿಕೆಗಳ ಉತ್ಪಾದನ ಪರಿಕರಗಳನ್ನು ಸ್ಥಳದಿಂದ ಸ್ಥಳಕ್ಕೆ ಸಾಗಾಟ ಮಾಡಲು ರಸ್ತೆ ವಾಹನ ಸೌಕರ್ಯ, ಬಂದರು, ರೈಲ್ವೆ ಇತ್ಯಾದಿಗಳು ಬೇಕು. ಉತ್ಪಾದನೆ ಹಾಗೂ ವಿತರಣೆಗಳ ನಿರ್ವಹಣೆಗೆ ತ್ವರಿತ ನಿರ್ಧಾರಗಳು ಅನಿವಾರ್ಯ. ನಿರ್ಧಾರಗಳನ್ನು ತಳೆಯಲು ಮಾಹಿತಿ ಬೇಕಾಗುತ್ತದೆ. ಮಾಹಿತಿಗಳ ಚಲನೆಗೆ ಸಂಪರ್ಕ ವ್ಯವಸ್ಥೆ ಬೇಕು. ಈ ಎಲ್ಲವನ್ನು ಆರ್ಥಿಕ ಮೂಲಸೌಕರ್ಯಗಳೆಂದು ಪರಿಗಣಿಸಲಾಗಿದೆ. ಇವುಗಳ ಅಭಿವೃದ್ಧಿ ಯೋಜನೆಗಳಲ್ಲಿ ದೊಡ್ಡ ಪ್ರಮಾಣದ ಬಂಡವಾಳ ವಿನಿಯೋಜಿಸಲಾಗಿದೆ. ಕೃಷಿ ಮತ್ತು ಕೈಗಾರಿಕ ಕ್ಷೇತ್ರಗಳ ಬೆಳವಣಿಗೆಗೆ ಆರ್ಥಿಕ ಮೂಲಸೌಕರ್ಯದ ಜತೆಗೆ ಮಾನವ ಸಂಪನ್ಮೂಲಗಳು ಬೇಕು. ಆಧುನಿಕ ಕೃಷಿ ಬಗ್ಗೆ ತಿಳುವಳಿಕೆ ನೀಡಲು, ಕೃಷಿ ಬಗ್ಗೆ ಸಂಶೋಧನೆ ನಡೆಸಲು, ಆಧುನಿಕ ಕೃಷಿ ಯಂತ್ರಗಳನ್ನು ನಿರ್ಮಿಸಲು, ರಿಪೇರಿ ಮಾಡಲು, ರಸಾಯನಿಕ ಗೊಬ್ಬರ ಉತ್ಪಾದಿಸಲು, ಕ್ರಿಮಿನಾಶಕಗಳನ್ನು ಸಿದ್ದಪಡಿಸಲು ಹೀಗೆ ಆಧುನಿಕ ಕೃಷಿಯ ಎಲ್ಲ ಆಯಾಮಗಳನ್ನು ಅರಿತ, ನುರಿತ ತಜ್ಞರು ಬೇಕಾಗುತ್ತಾರೆ, ಕೈಗಾರಿಕ ಕ್ಷೇತ್ರದ ಉತ್ಪಾದನೆಗೂ ಆಧುನಿಕ ತಂತ್ರಜ್ಞಾನದ ತಿಳುವಳಿಕೆಯುಳ್ಳವರು ಬೇಕು. ಇಂತಹ ಮಾನವ ಸಂಪನ್ಮೂಲಗಳನ್ನು ತರಬೇತುಗೊಳಿಸಲು ಶಾಲೆ, ಕಾಲೇಜುಗಳ ಜತೆಗೆ ಎಂಜೀನಿಯರ್, ಮೆಡಿಕಲ್, ಕೃಷಿ ವಿಶ್ವವಿದ್ಯಾಲಯ ಇತ್ಯಾದಿಗಳನ್ನು ಅಭಿವೃದ್ಧಿ ಪಡಿಸಬೇಕು. ಈ ಎಲ್ಲದರ ಮೇಲೆ ಮಾಡುವ ವಿನಿಯೋಜನೆಯನ್ನು ಸಾಮಾಜಿಕ ಮೂಲ ಸೌಕರ್ಯಗಳ ವಿನಿಯೋಜನೆಯೆಂದು ಪರಿಗಣಿಸಲಾಗಿದೆ. ಕುಡಿಯುವ ನೀರು, ವಸತಿ, ನಗರಾಭಿವೃದ್ಧಿ ಇತ್ಯಾದಿಗಳು ಕೂಡ ಸಾಮಾಜಿಕ ಮೂಲ ಸೌಕರ್ಯದ ವ್ಯಾಪ್ತಿಯಲ್ಲಿ ಸೇರಿವೆ. ಯೋಜನೆ ಕೇವಲ ಸರಕು ಮತ್ತು ಸೇವೆಗಳ ಉತ್ಪಾದನೆಗೆ ಮಾತ್ರ ಮಹತ್ವ ನೀಡುತ್ತದೆಯೆಂದು ತಿಳಿಯಬೇಕಿಲ್ಲ. ಆಧುನಿಕ ಉತ್ಪಾದನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅಸಮರ್ಥರಾದ ಸಾಕಷ್ಟು ಮಂದಿ ಇದ್ದಾರೆ. ಇವರು ಊಟಕ್ಕಿಲ್ಲದೆ ಸತ್ತರು ಎನ್ನುವ ಸುದ್ಧಿ ನಾಗರೀಕ ಸಮಾಜದ ಮೇಲೆ ಕರಿಮಸಿ ಬಳಿದಂತೆ. ಇಂತಹ ಅವಮಾನವನ್ನು ತಪ್ಪಿಸಲು ಬಡವರು, ದೀನ ದಲಿತರ ಕಲ್ಯಾಣದ ಹೆಸರಿನಲ್ಲಿ ಅಲ್ಲ ಪ್ರಮಾಣ ವಿನಿಯೋಜನೆಯನ್ನು ಮಾಡಲಾಗುತ್ತಿದೆ.

ವಿವಿಧ ಕ್ಷೇತ್ರಗಳ ವ್ಯಾಪ್ತಿಯನ್ನು ಕರ್ನಾಟಕ ತನ್ನ ಆಧ್ಯತೆಗನುಸಾರ ವ್ಯಾಖ್ಯಾನಿಸಿ ಕೊಂಡಿವೆ. ಕೃಷಿ ಕ್ಷೇತ್ರದ ವ್ಯಾಪ್ತಿಯನ್ನು ಈ ಕೆಳಗಿನವುಗಳನ್ನು ಸೇರಿಸಿಕೊಳ್ಳಲಾಗಿದೆ. ಎಲ್ಲ ಬಗೆಯ ಕೃಷಿಗಳು. ತೋಟಗಾರಿಕೆ, ಫಲಪುಷ್ಪಗಳು, ಪಶುಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ, ವನ್ಯಜೀವಿಗಳು, ಅರಣ್ಯ ಮಣ್ಣಿನ ಸಂರಕ್ಷಣೆ, ಶೈತ್ಯಾಗಾರ ಕೃಷಿ ಸಂಶೋಧನೆ ಮತ್ತು ಶಿಕ್ಷಣ, ಪರಿಸರ ವಿಜ್ಞಾನ ಮತ್ತು ಸಂಶೋಧನೆ, ಕೃಷಿ ಹಣಕಾಸು ಸಂಸ್ಥೆಗಳು, ಕೃಷಿ ಮಾರುಕಟ್ಟೆ, ಗೋದಾಮುಗಳು ಮತ್ತು ಸಂಬಂಧಿತ ಇತರ ಚಟುವಟಿಕೆಗಳು. ನೀರಾವರಿ ಮತ್ತು ವಿದ್ಯುತ್ ವಲಯದಲ್ಲಿ ಸಣ್ಣ ಮಧ್ಯಮ ಮತ್ತು ದೊಡ್ಡ ನೀರಾವರಿ ಯೋಜನೆಗಳು, ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ, ನೆರೆ ನಿಯಂತ್ರಣ ಮತ್ತು ಪರಿಹಾರ ಕಾರ್ಯಕ್ರಮಗಳು, ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಇಂಧನಗಳ ಅಭಿವೃದ್ಧಿ ಸೇರಿವೆ. ಗುಡಿಕೈಗಾರಿಕೆ, ಸಣ್ಣ, ಕೈಗಾರಿಕೆಗಳು, ಮಧ್ಯಮ ಮತ್ತು ದೊಡ್ಡ ಗಾತ್ರದ ಕೈಗಾರಿಕೆಗಳು, ಖನಿಜ ಸಂಪನ್ಮೂಲಗಳ ಅಭಿವೃದ್ಧಿ ಇತ್ಯಾದಿಗಳನ್ನು ಸಣ್ಣ, ಮಧ್ಯಮ, ಬೃಹತ್ ಉದ್ದಿಮೆಗಳು ಮತ್ತು ಖನಿಜಗಳ ಅಭಿವೃದ್ಧಿ ಕಾರ್ಯಕ್ರಮಗಳೆಂದು ವಿಂಗಡಿಸಿಕೊಳ್ಳಲಾಗಿದೆ. ಕೃಷಿ ಮತ್ತು ಕೈಗಾರಿಕೆಗಳ ಅಭಿವೃದ್ಧಿಗೆ ಸಹಕರಿಸಲು ಮೂಲ ಸೌಕರ್ಯಗಳನ್ನು ಬೆಳಸಲಾಗಿದೆ. ಎರಡು ವಿಧದ ಮೂಲಸೌಕರ್ಯಗಳನ್ನು ಗುರುತಿಸಬಹುದು. ಒಂದು, ಆರ್ಥಿಕ ಮೂಲ ಸೌಕರ್ಯ ಮತ್ತು ಎರಡು, ಸಾಮಾಜಿಕ ಮೂಲಸೌಕರ್ಯ, ಆರ್ಥಿಕ ಮೂಲಸೌಕರ್ಯದ ವ್ಯಾಪ್ತಿಯಲ್ಲಿ ರಸ್ತೆ ಮತ್ತು ಸೇತುವೆಗಳು, ಬಂದರುಗಳು, ವಿಮಾನ ನಿಲ್ದಾಣಗಳು, ರಸ್ತೆ ಸಾರಿಗೆ, ಪ್ರವಾಸೋಧ್ಯಮ ಇತ್ಯಾದಿ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಕಲೆ ಮತ್ತು ಸಂಸ್ಕೃತಿ, ಕುಡಿಯುವ ನೀರು ಪೂರೈಕೆ, ಸ್ವಚ್ಚತೆ, ವಸತಿ, ನಗರಾಭಿವೃದ್ಧಿ, ಕೊಳಗೇರಿ ಅಭಿವೃದ್ಧಿ. ಸ್ಟೋರ್ಟ್ಸ್ ಆಂಡ್ ಯೂತ್ ಸರ್ವೀಸ್ ಇತ್ಯಾದಿಗಳು ಸೇರಿವೆ.

ಅಂಚೆ ಕಚೇರಿಗಳು, ದೂರವಾಣಿಗಳು. ರಸ್ತೆ, ರೈಲ್ವೆ, ವಾಹನಗಳು, ಸಹಕಾರಿ ಸಂಘಗಳು, ವಿದ್ಯುತ್ ಸಂಪರ್ಕ, ಮಾರುಕಟ್ಟೆಗಳು, ಹಣಕಾಸು ಸಂಸ್ಥೆಗಳು ಇತ್ಯಾದಿಗಳು ಆರ್ಥಿಕ ಮೂಲಸೌಕರ್ಯದ ಬೆಳವಣಿಗೆಯನ್ನು ಮಾಪನ ಮಾಡುವ ಮಾನದಂಡಗಳು ವೈದ್ಯರು ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಮೇಸ್ಟ್ರುಗಳು, ಕುಡಿಯುವ ನೀರು, ವಸತಿ, ನಗರಗಳ ಸಂಖ್ಯೆ ಇತ್ಯಾದಿಗಳು ಸಾಮಾಜಿಕ ಮೂಲ ಸೌಕರ್ಯಗಳನ್ನು ಮಾಪನ ಮಾಡುವ ಮಾನದಂಡಗಳು. ಕಮ್ಯುನಿಟಿ ಡೆವಲಪ್ ಮೆಂಟ್ ಕಾರ್ಯಕ್ರಮಗಳು, ಪಂಚಾಯಿತಿ ರಾಜ್, ಗ್ರಾಮೀಣ ಉದ್ಯೋಗ ಯೋಜನೆಗಳು, ಗ್ರಾಮೀಣ ಕೃಷಿಯೇತರ ಚಟುವಟಿಕೆಗಳು, ಬರ ಪ್ರದೇಶಗಳ ಅಭಿವೃದ್ಧಿ ಕಾರ್ಯಕ್ರಮಗಳು, ಮರುಭೂಮಿ ಅಭಿವೃದ್ಧಿ ಕಾರ್ಯಕ್ರಮಗಳು, ಗ್ರಾಮೀಣ ಇಂಧನ ಕಾರ್ಯಕ್ರಮಗಳು, ವೇಸ್ಟ್ ಲಾಂಡ್ ಅಭಿವೃದ್ಧಿ ಕಾರ್ಯಕ್ರಮಗಳು ಇತ್ಯಾದಿಗಳು ಗ್ರಾಮೀಣಭಿವೃದ್ಧಿ ಕಾರ್ಯಕ್ರಮಗಳ ವ್ಯಾಪ್ತಿಯಲ್ಲಿ ಬರುತ್ತವೆ. ಪ್ರಾದೇಶಿಕ ಅಸಮಾನತೆ ನಿವಾರಣೆಗಾಗಿ ಸ್ಪೆಷಲ್ ಏರಿಯಾ ಡೆವಲಪ್ ಮೆಂಟ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗುಡ್ಡಗಾಡು ಅಭಿವೃದ್ಧಿ ಕಾರ್ಯಕ್ರಮಗಳು, ಗಡಿಪ್ರದೇಶಗಳ ಅಭಿವೃದ್ಧಿ ಕಾರ್ಯಕ್ರಮಗಳು, ಮಲೆನಾಡು ಅಭಿವೃದ್ಧಿ ಬೋರ್ಡ್, ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಬೋರ್ಡ್, ಬಯಲುಸೀಮೆ ಪ್ರದೇಶಗಳ ಅಭಿವೃದ್ಧಿ ಬೋರ್ಡ್ ಇತ್ಯಾದಿಗಳು ಸೇರಿವೆ. ಭೂಮಿ ಅಥವಾ ಬಂಡವಾಳ ಇಲ್ಲದವರ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಯೋಜನೆ ಸಣ್ಣ ಪ್ರಮಾಣದ ಅವಕಾಶ ಕಲ್ಪಿಸಿದೆ. ಸಮಾಜದ ಅಂಚಿನಲ್ಲಿರುವ ಎಲ್ಲರನ್ನು ಒಂದು ಕಡೆ ಸೇರಿಸಿ ಇವರ ಕಲ್ಯಾಣ (ವೆಲ್ ಫೇರ್) ಕಾರ್ಯಕ್ರಮಗಳ ಮೇಲೆ ಅಲ್ಪ ಪ್ರಮಾಣದ ವಿನಿಯೋಜನೆ ನಡೆಸುವುದು ಆರಂಭದಿಂದಲೇ ನಡೆದುಕೊಂಡು ಬಂದಿದೆ. ಈ ವಿನಿಯೋಜನೆಯಡಿಯಲ್ಲಿ ಸಾಮಾನ್ಯವಾಗಿ ಕಂಡು ಬರುವ ಕಾರ್ಯಕ್ರಮಗಳು ಇಂತಿವೆ. ದಲಿತ, ಬುಡಕಟ್ಟು ಮತ್ತು ಹಿಂದುಳಿದ ಜಾತಿಗಳ ಕಲ್ಯಾಣ, ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಶಿಶು ಕಲ್ಯಾಣ, ಬಾಲವಾಡಿ, ಪೊಷಕಾಂಶ ಕಾರ್ಯಕ್ರಮ, ಅನ್ನಪೂರ್ಣ, ಅಂಗವಿಕಲರ ಕಲ್ಯಾಣ, ಬಡವರಿಗೆ ವಿಮೆ, ಕಾರ್ಮಿಕ ಕಲ್ಯಾಣ-ಸೋಶಿಯಲ್ ಸೆಕ್ಯುರಿಟಿ, ಕಾರ್ಮಿಕ ಶಿಕ್ಷಣ ಇತ್ಯಾದಿಗಳು ಸೇರಿವೆ. ಯೋಜನೆಯ ಅಂಕಿಅಂಶಗಳು, ಸಂಶೋಧನೆ, ಪ್ರಕಾರ ಇತ್ಯಾದಿಗಳು, ಪ್ರಿಂಟಿಂಗ್ ಆಂಡ್ ಸ್ಟೇಷನರಿ, ಆಡಳಿತ ಸೇವೆಗಳು, ತರಬೇತಿ, ಆಡಳಿತ ಸುಧಾರಣೆ, ಮಾನವ ಸಂಪನ್ಮೂಲ ಅಭಿವೃದ್ಧಿ ತೂಕ ಮತ್ತು ಆಡಳಿತ, ಜಿಲ್ಲಾ ಯೋಜನೆ ಮತ್ತು ಯೋಜನೆ ಸಮಿತಿಗಳು, ಆಡಳಿತ ಆಧುನೀಕರಣ, ಟೆಕ್ನಿಕಲ್ ಸಪೋರ್ಟ್ ಇತ್ಯಾದಿಗಳಿಗೆ ಕೂಡ ಯೋಜನೆಯಲ್ಲಿ ಹಣ ತೆಗೆದಿರಿಸಲಾಗುವುದು.

ಏಕೀಕೃತ ಕರ್ನಾಟಕದ ಪಂಚವಾರ್ಷಿಕ ಯೋಜನೆಗಳ ವಿವರಗಳನ್ನು ಕೋಷ್ಟಕ 1 ಮತ್ತು 2ರಲ್ಲಿ ನೀಡಲಾಗಿದೆ. ಕರ್ನಾಟಕದ ಪಂಚವಾರ್ಷಿಕ ಯೋಜನೆಗಳ ವಿವರಗಳನ್ನು ನೀಡುವಾಗ ಮೊದಲನೇ ಪಂಚವಾರ್ಷಿಕ ಯೋಜನೆಗಳ ವಿವರಗಳನ್ನು ಕೋಷ್ಟಕದಲ್ಲಿ ನೀಡಿಲ್ಲ. ಯಾಕೆಂದರೆ ಎರಡನೇ ಪಂಚವಾರ್ಷಿಕ ಯೋಜನೆ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಗೊಂಡಿದೆ. ಅದಕ್ಕಿಂತ ಮುನ್ನ ಮೈಸೂರು ಪ್ರಾಂತಕ್ಕೆ ಸೀಮಿತವಾಗಿದ್ದ ಕರ್ನಾಟಕ (ಮೈಸೂರು) ಕೇಂದ್ರ ಸರಕಾರದ ಯೋಜನಾ ಇಲಾಖೆಯ ನಿರ್ದೇಶನದ ಅನುಸಾರ ಪ್ರಥಮ ಪಂಚವಾರ್ಷಿಕ ಯೋಜನೆಯನ್ನು 1951-52ರಲ್ಲಿ ಸಿದ್ದಪಡಿಸಿದೆ. ಈ ಯೋಜನೆಯಲ್ಲಿ ಕೃಷಿ, ನೀರಾವರಿ ಮತ್ತು ವಿದ್ಯುತ್ ಉತ್ಪಾದನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಯೋಜನೆಯ ಒಟ್ಟು ವಿನಿಯೋಜನೆ 36.6೦ ಕೋಟಿ ರುಪಾಯಿಗಳು. ಅಕ್ಟೋಬರ್ 1953ರಲ್ಲಿ ಬಳ್ಳಾರಿ ಜಿಲ್ಲೆಯ ಏಳು ತಾಲ್ಲೂಕುಗಳನ್ನು ಕರ್ನಾಟಕಕ್ಕೆ ಸೇರಿಸಲಾಯಿತು. ಆ ಸಂದರ್ಭದಲ್ಲಿ ಹೊಸತಾಗಿ ಸೇರ್ಪಡೆಗೊಂಡ ಏಳು ತಾಲ್ಲೂಕುಗಳ ಅಭಿವೃದ್ಧಿಗಾಗಿ ರೂ. 5.54 ಕೋಟಿ ಮತ್ತು ಭದ್ರ ಮತ್ತು ನುಗ್ಗು ಜಲಾಶಯಗಳ ಅಭಿವೃದ್ಧಿ ಮೊತ್ತ ರು. 5.5೦ ಕೋಟಿಗಳ ಹೆಚ್ಚಿನ ಮೊತ್ತವನ್ನು ತೆಗೆದಿರಿಸಿ ಕರ್ನಾಟಕದ ಪ್ರಥಮ ಪಂಚವಾರ್ಷಿಕ ಯೋಜನೆಯ ಮೊತ್ತವನ್ನು ರೂ. 48.49 ಕೋಟಿಗಳಿಗೆ ಪುನರ್ ನಿಗದಿಗೊಳಿಸಲಾಯಿತು. ಕೋಷ್ಟಕ 1 ಮತ್ತು 2ರಲ್ಲಿ ಎರಡನೇ ಯೋಜನೆಯಿಂದ ಹತ್ತನೇ ಯೋಜನೆ ತನಕ ಕರ್ನಾಟಕದ ವಿವಿಧ ವಲಯಗಳ ಮೇಲೆ ಮಾಡಿದ ವಿನಿಯೋಜನೆಗಳ ವಿವರಗಳಿವೆ. ಯೋಜನೆಗಳ ಅಂಕಿಅಂಶಗಳು ದೊಡ್ಡ ಪ್ರಮಾಣದ ಬೆಳವಣಿಗೆಯನ್ನು ತೋರಿಸುತ್ತವೆ. ಕರ್ನಾಟಕದ ಪ್ರಥಮ ಪಂಚವಾರ್ಷಿಕ ಯೋಜನೆಯ ಒಟ್ಟು ಮೊತ್ತ ಕೇವಲ ರೂ. 48 ಕೋಟಿ ಇದ್ದುದು ಹತ್ತನೇ ಪಂಚವಾರ್ಷಿಕ ಯೋಜನೆಯ ವೇಳೆಗೆ ಒಟ್ಟು ವಿನಿಯೋಜನೆಯ ರೂ. 5೦85೦ ಕೋಟಿಗೆ ತಲುಪಿದೆ. ಇದು ಒಮ್ಮಿಂದೊಮ್ಮೆಗೆ ಸಾಧಿಸಿದ ಬೆಳವಣಿಗೆಯಲ್ಲ. ಹಾಗೇ ನೋಡಿದರೆ ನಾಲ್ಕನೇ ಪಂಚವಾರ್ಷಿಕ ಯೋಜನೆ ತನಕ ಯೋಜನೆಯ ಒಟ್ಟು ವಿನಿಯೋಜನೆ ಸಾವಿರ ಕೋಟಿ ರೂಗಳನ್ನು ದಾಟಿರಲಿಲ್ಲ. ಐದನೇ ಪಂಚವಾರ್ಷಿಕ ಯೋಜನೆಯಲ್ಲಿ ಒಟ್ಟು ವಿನಿಯೋಜನೆ ಸಾವಿರ (ರೂ. 135೦) ಕೋಟಿ ದಾಟಿದೆ. ಆದರೆ ಏಳನೇ ಯೋಜನೆ ತನಕ ಹತ್ತು ಸಾವಿರ ಕೋಟಿ ರೂಗಳನ್ನು ದಾಟಲಿಲ್ಲ. ಎಂಟನೇ ಯೋಜನೆ ನಂತರ ವಿನಿಯೋಜನೆ ಹತ್ತು ಕೋಟಿಗಳ ಗಡಿಯನ್ನು ದಾಟಿ ಗಣನೀಯವಾಗಿ ಏರಿದೆ.

ಪ್ರಥಮ ಯೋಜನೆಯಿಂದಲೇ ಕೃಷಿ, ನೀರಾವರಿ ಮತ್ತು ವಿದ್ಯುತ್ ವಲಯಗಳ ಮೇಲೆ ಆದ್ಯತೆಯ ನೆಲೆಯಲ್ಲಿ ವಿನಿಯೋಜನೆ ಮಾಡಲಾಗಿದೆ. ಎರಡನೇ ಪಂಚವಾರ್ಷಿಕ ಯೋಜನೆಯ ಶೇ. 53 ರಷ್ಟು, ಮೂರನೇ ಯೋಜನೆಯ ಶೇ. 6೦ ರಷ್ಟು ಮತ್ತು ನಾಲ್ಕನೇ ಯೋಜನೆಯ ಶೇ. 72 ರಷ್ಟು ಸಂಪನ್ಮೂಲವನ್ನು ಈ ಮೂರು ಕ್ಷೇತ್ರಗಳ ಮೇಲೆ ವಿನಿಯೋಜಿಸಲಾಗಿದೆ (ಕೋಷ್ಟಕ-1). ಆದರೆ ನಂತರದ ಯೋಜನೆಗಳಲ್ಲಿ ಈ ಮೂರು ಕ್ಷೇತ್ರಗಳ ಮೇಲೆ ಮಾಡಿದ ವಿನಿಯೋಜನೆ ಕಡಿಮೆಯಾಗುತ್ತಾ ಬಂತು. ಆದಾಗ್ಯೂ ಇತರ ಕ್ಷೇತ್ರಗಳಿಗೆ ಹೋಲಿಸಿದರೆ ಈ ಮೂರು ಕ್ಷೇತ್ರಗಳು ಹೆಚ್ಚಿನ ವಿನಿಯೋಜನೆಯನ್ನು ಪಡೆದಿವೆ. ಯೋಜನೆಯಲ್ಲಿ ಈ ಕ್ಷೇತ್ರಗಳ ಆದ್ಯತೆ ಐದನೇ ಯೋಜನೆಯಿಂದಲೇ ಕಡಿಮೆಯಾಗುತ್ತಾ ಬಂದಿದೆ. ಐದನೇ ಯೋಜನೆಯ ಶೇ.62 ರಷ್ಟು, ಆರನೇ ಯೋಜನೆಯ ಶೇ. 56 ರಷ್ಟು, ಏಳನೇ ಯೋಜನೆಯ ಶೇ.52ರಷ್ಟು, ಎಂಟನೇ ಯೋಜನೆಯಲ್ಲಿ ಶೇ. 51 ರಷ್ಟು, ಒಂಬತ್ತನೇ ಯೋಜನೆಯ ಶೇ. 46 ರಷ್ಟು ಮತ್ತು ಹತ್ತನೇ ಯೋಜನೆಯಲ್ಲಿ ಶೇ. 43ರಷ್ಟನ್ನು ಕೃಷಿ, ನೀರಾವರಿ ಮತ್ತು ವಿದ್ಯುತ್ ಉತ್ಪಾದನೆ ಮೇಲೆ ವಿನಿಯೋಜಿಸಲಾಗಿದೆ (ಕೋಷ್ಟಕ-2). ಇವುಗಳ ನಂತರ ಸ್ವಲ್ಪ ಹೆಚ್ಚಿನ ಪ್ರಮಾಣದ ವಿನಿಯೋಜನೆ ಪಡೆದಿರುವ ಕ್ಷೇತ್ರಗಳೆಂದರೆ ಸಾಮಾಜಿಕ ಹಾಗೂ ಆರ್ಥಿಕ ಮೂಲಸೌಕರ್ಯಗಳು. ಶಿಕ್ಷಣ, ಆರೋಗ್ಯ ವಸತಿ, ಕುಡಿಯುವ ನೀರು, ನಗರಾಭಿವೃದ್ಧಿ ಇತ್ಯಾದಿ ಮೂಲಭೂತ ಸವಲತ್ತುಗಳು ಸಾಮಾಜಿಕ ಮೂಲಸೌಕರ್ಯಗಳ ವ್ಯಾಪ್ತಿಯಲ್ಲಿ ಸೇರಿವೆ. ಇವೆಲ್ಲವು ನಾಗರಿಕ ಸಮಾಜದ ಅವಶ್ಯಕತೆಗಳು. ಆಹಾರದ ನಂತರ ಹೆಚ್ಚಿನ ಆದ್ಯತೆ ಪಡೆಯಬೇಕಾದವು. ಇವುಗಳಿಲ್ಲದೆ ಯಾವುದೇ ಸಮಾಜ ಕೂಡ ಸ್ವಾಸ್ಥ್ಯ ಸಮಾಜವೆಂದೆನ್ನಿಸಿಕೊಳ್ಳಲು ಸಾಧ್ಯವಿಲ್ಲ. ವಿನಿಯೋಜನೆ ದೃಷ್ಟಿ ನೋಡಿದರೆ ಸಮಾಜಿಕ ಮೂಲ ಸೌಕರ್ಯಗಳ ಮಹತ್ವವನ್ನು ಮೊದಲಿನ ಕೆಲವು ಪಂಚವಾರ್ಷಿಕ ಯೋಜನೆಗಳು ಅರ್ಥಮಾಡಿಕೊಂಡಂತೆ ಕಾಣುವುದಿಲ್ಲ. ನಾಲ್ಕನೇ ಪಂಚವಾರ್ಷಿಕ ಯೋಜನೆ ತನಕ ಸಮಾಜಿಕ ಮೂಲಸೌಕರ್ಯದ ಮೇಲಿನ ವಿನಿಯೋಜನೆ ಒಟ್ಟು ಮೊತ್ತದ ಶೇ.2೦ ದಾಟಿರಲಿಲ್ಲ. ಎರಡನೇ ಯೋಜನೆಯಲ್ಲಿ ಶೇ. 19 ರಷ್ಟು ವಿನಿಯೋಜನೆ ನಡೆದರೆ ಮೂರು ಮತ್ತು ನಾಲ್ಕನೇ ಯೋಜನೆಗಳಲ್ಲಿ ಅತ್ಯಲ್ಪ ವಿನಿಯೋಜನೆ (ಶೇ. 17 ಮತ್ತು ಶೇ. 2೦ ರಷ್ಟು) ಸಮಾಜಿಕ ಮೂಲಸೌಕರ್ಯದ ಮೇಲೆ ಆಗಿದೆ (ಕೋಷ್ಟಕ-1). ಪುನಃ ಆರನೇ ಯೋಜನೆಯಲ್ಲೂ ಸಾಮಾಜಿಕ ಮೂಲ ಸೌಕರ್ಯವನ್ನು ಕಡೆಗಣಿಸಲಾಗಿದೆ. ಆದರೆ ನಂತರದ ಎಲ್ಲ ಯೋಜನೆಗಳಲ್ಲಿ ಒಟ್ಟು ಮೊತ್ತದ ಶೇ. 2೦ ಕ್ಕಿಂತ ಹೆಚ್ಚಿನ ಮೊತ್ತವನ್ನು ಸಾಮಾಜಿಕ ಮೂಲಸೌಕರ್ಯಗಳ ಮೇಲೆ ವಿನಿಯೋಜಿಸಲಾಗಿದೆ. ಒಂಬತ್ತು ಮತ್ತು ಹತ್ತನೇ ಯೋಜನೆಗಳಲ್ಲೂ ಸಾಮಾಜಿಕ ಮೂಲ ಸೌಕರ್ಯಗಳ ಮೇಲೆ ಯೋಜನೆಯ ಒಟ್ಟು ಮೊತ್ತದ ಶೇ. 32 ರಷ್ಟನ್ನು ವಿನಿಯೋಜಿಸಲಾಗಿದೆ (ಕೋಷ್ಟಕ-2).

ಆರ್ಥಿಕ ಮೂಲಸೌಕರ್ಯ (ಭೂಮಿ / ಜಲ / ವಾಯು ಸಾರಿಗೆ, ಸಂಪರ್ಕ ಇತ್ಯಾದಿ) ಸಾಮಾಜಿಕ ಮೂಲಸೌಕರ್ಯದಷ್ಟು ದೊಡ್ಡ ಪ್ರಮಾಣದ ವಿನಿಯೋಜನೆಯನ್ನು ಕಂಡಿಲ್ಲ. ಆದಾಗ್ಯೂ ಒಂದೆರಡು ಯೋಜನೆಗಳನ್ನು ಹೊರತುಪಡಿಸಿ (ನಾಲ್ಕು ಮತ್ತು ಎಂಟನೇ ಯೋಜನೆಗಳನ್ನು) ಎಲ್ಲ ಯೋಜನೆಗಳಲ್ಲೂ ಆರ್ಥಿಕ ಮೂಲಸೌಕರ್ಯದ ಮೇಲೆ ಯೋಜನೆಯ ಒಟ್ಟು ಮೊತ್ತದ ಶೇ. 5ಕ್ಕಿಂತ ಹೆಚ್ಚಿನ ಮೊತ್ತವನ್ನು ವಿನಿಯೋಜಿಸಲಾಗಿದೆ. ಒಂಬತ್ತು ಮತ್ತು ಹತ್ತನೇ ಯೋಜನೆಗಳಲ್ಲಿ ಆರ್ಥಿಕ ಮೂಲಸೌಕರ್ಯಗಳ ಮೇಲೆ ಕ್ರಮವಾಗಿ ಯೋಜನೆಯ ಒಟ್ಟು ಮೊತ್ತದ ಶೇ.8 ಮತ್ತು ಶೇ. 11ರಷ್ಟು ವಿನಿಯೋಜಿಸಲಾಗಿದೆ (ಕೋಷ್ಟಕ-2). ಮೂಲಸೌಕರ್ಯಗಳೊಂದಿಗೆ ಸೇರಿಸಬಹುದಾದ ಮತ್ತೊಂದು ವಿನಿಯೋಜನೆ ಸಹಕಾರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ಗಳ ಮೇಲೆ ಮಾಡಿದ ವಿನಿಯೋಜನೆ. ಈ ಎಲ್ಲ ಕಾರ್ಯಕ್ರಮಗಳು ಗ್ರಾಮೀಣಾಭಿವೃದ್ಧಿಗೆ ನೇರ ಸಂಬಂಧಿಸಿವೆ. ಇವುಗಳನ್ನು ಈ ಪುಸ್ತಕದ ಕೆಲವು ಆಡಳಿತ ಮೂಲಸೌಕರ್ಯಗಳೆಂದು ಹೆಸರಿಸಿದ್ದೇನೆ. ಪಂಚಾಯತ್ ರಾಜ್, ಕಮ್ಯುನಿಟಿ ಡೆವಲಪ್ ಮೆಂಟ್ ಕಾರ್ಯಕ್ರಮ ಇತ್ಯಾದಿಗಳು ಅಭಿವೃದ್ಧಿ ಆಡಳಿತದ ಸುಧಾರಣೆಯ ದೃಷ್ಟಿಯಿಂದ ಜಾರಿಗೆ ಬಂದಿವೆ. ಇವುಗಳೊಂದಿಗೆ ಗ್ರಾಮೀಣ ಪ್ರದೇಶಗಳ ಉತ್ಪಾದನೆ ಮತ್ತು ಅನುಭೋಗಗಳನ್ನು ಸಾಂಸ್ಥೀಕರಣಗೊಳಿಸುವ ನಿಟ್ಟಿನಲ್ಲಿ ಸಹಕಾರ ಚಳವಳಿ ಐವತ್ತರ ದಶಕದಿಂದಲೇ ಆರಂಭಗೊಂಡಿದೆ. ಎಲ್ಲ ಕ್ಷೇತ್ರಗಳಲ್ಲೂ ಸಹಕಾರ ಸಾಧ್ಯ ಇದ್ದರೂ ನಮ್ಮಲ್ಲಿ ಗ್ರಾಮೀಣ ಜನರ ಹಣಕಾಸು ಅಗತ್ಯಗಳನ್ನು ಪೂರೈಸುವ ದೃಷ್ಟಿಯಿಂದ ಹುಟ್ಟಿಕೊಂಡ ಸಹಕಾರಿ ಸಂಸ್ಥೆಗಳು ಹೆಚ್ಚು ಮಹತ್ವ ಪಡೆದಿವೆ. ಈ ಎಲ್ಲವನ್ನು ಸೇರಿಸಿ ಅಭಿವೃದ್ಧಿ ಆಡಳಿತ ಮೂಲಸೌಕರ್ಯವೆಂದು ಹೆಸರಿಸಲಾಗಿದೆ. ಅಭಿವೃದ್ಧಿ ಆಡಳಿತ ಮೂಲಸೌಕರ್ಯದ ಮೇಲೆ ಯೋಜಿತ ಅಭಿವೃದ್ಧಿ ಆರಂಭದ ದಿನಗಳಲ್ಲಿ ಹೆಚ್ಚಿನ ವಿನಿಯೋಜನೆ ನಡೆಸಲಾಗಿದೆ. ಆದರೆ ಬರಬರುತ್ತಾ ಅಭಿವೃದ್ಧಿ ಆಡಳಿತ ಮೂಲಸೌಕರ್ಯ ತನ್ನ ಹಿಂದಿನ ಆಕರ್ಷಣೆಯನ್ನು ಉಳಿಸಿಕೊಳ್ಳಲಿಲ್ಲ. ಕಮ್ಯುನಿಟಿ ಡೆವಲಪ್ ಮೆಂಟ್ ಕಾರ್ಯಕ್ರಮಗಳು ತೆರೆಮರೆಗೆ ಸರಿದವು, ಸಹಕಾರಿ ಚಳವಳಿ ಆಕರ್ಷಣೆ ಕಳೆದುಕೊಂಡಿತು ಮತ್ತು ಗ್ರಾಮೀಣಾಭಿವೃಧಿ ಹೊಸ ಹೊಸ ಯೋಜನೆಗಳು ಬರಲಾರಂಭಿಸಿದವು. ಈ ಎಲ್ಲ ಬೆಳವಣಿಗೆಗಳನ್ನು ಯೋಜನೆಗಳು ಈ ಕ್ಷೇತ್ರದ ಮೇಲೆ ಮಾಡಿದ ವಿನಿಯೋಜನೆಯಿಂದ ಅರ್ಥಮಾಡಿಕೊಳ್ಳಬಹುದು. ಎರಡು ಮತ್ತು ಮೂರನೇ ಯೋಜನೆಗಳಲ್ಲಿ ಕ್ರಮವಾಗಿ ಶೇ. 9 ಮತ್ತು ಶೇ. 8ರಷ್ಟರಲ್ಲಿ ವಿನಿಯೋಜನೆಯನ್ನು ನೋಡಿದ ಕ್ಷೇತ್ರ ನಾಲ್ಕನೇ ಯೋಜನೆಯ ವೇಳೆಗೆ ಕೇವಲ ಶೇ. 3 ರಷ್ಟರಲ್ಲಿ ತೃಪ್ತಿಪಟ್ಟುಕೊಳ್ಳಬೇಕಾಯಿತು. ನಂತರದ ಯೋಜನೆಗಳಲ್ಲೂ ಈ ಕ್ಷೇತ್ರ ದೊಡ್ಡ ಮಟ್ಟಿನ ಆದ್ಯತೆಯನ್ನು ಪಡೆಯಲಿಲ್ಲ. ಐದು ಮತ್ತು ಆರನೇ ಯೋಜನೆಗಳಲ್ಲಿ ಈ ಕ್ಷೇತ್ರದ ಮೇಲೆ ಶೇ. 4ರಷ್ಟು ವಿನಿಯೋಜನೆ ನಡೆದರೆ ಒಂಬತ್ತು ಮತ್ತು ಹತ್ತನೇ ಯೋಜನೆಗಳಲ್ಲಿ ಶೇ.5ರಷ್ಟು ವಿನಿಯೋಜನೆ ನಡೆಯಿತು. ಇನ್ನುಳಿದ ಯೋಜನೆಗಳಲ್ಲಿ ಒಂದರಲ್ಲಿ (ಏಳನೇ ಯೋಜನೆಯಲ್ಲಿ) ಈ ಕ್ಷೇತ್ರದ ಮೇಲೆ ಹೆಚ್ಚಿನ ವಿನಿಯೋಜನೆ (ಶೇ.6) ಮಾಡಿದರೆ ಮತ್ತೊಂದರಲ್ಲಿ (ಎಂಟನೇ ಯೋಜನೆಯಲ್ಲಿ) ಕೇವಲ ಶೇ. 3ರಷ್ಟು ವಿನಿಯೋಜನೆ ಮಾಡಲಾಗಿದೆ (ಕೋಷ್ಟಕ-2).

ಯೋಜನೆಗಳು ಸೃಷ್ಟಿಸುವ ಅವಕಾಶಗಳನ್ನು ಬಳಸಿಕೊಳ್ಳಬೇಕಾದರೆ ಒಂದೂ ಭೂಮಿ ಬೇಕು ಅಥವಾ ಬಂಡವಾಳ ಬೇಕು ಅಥವಾ ಆಧುನಿಕ ಸ್ಕಿಲ್ ಬೇಕು. ಈ ಸ್ಥಿತಿಗೆ ಮುಖ್ಯ ಕಾರಣ ನಮ್ಮ ಆಧುನೀಕರಣ ಪ್ರಕ್ರಿಯೆ ಅಥವಾ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುವ ಬಂಡವಾಳ ಕೇಂದ್ರಿತ ಅಭಿವೃದ್ಧಿ ಮಾದರಿ. ಅಂದರೆ ಕೃಷಿ ಮತ್ತು ಕೈಗಾರಿಕ ಕ್ಷೇತ್ರಗಳಲ್ಲಿ ಆಧುನಿಕ ತಂತ್ರಜ್ಞಾನಗಳ ಬಳಕೆ. ಸಾಂಪ್ರದಾಯಿಕ ಕೃಷಿ ಮತ್ತು ಕೈಗಾರಿಕ ಪದ್ಧತಿಗಳು ಮೂಲೆಗುಂಪಾದವು. ಸಾಂಪ್ರದಾಯಿಕ ಕಸುಬುಗಾರಿಕೆಯನ್ನು ಮಾತ್ರ ಅರಿತವರು ತಮ್ಮ ನಿಪುಣತೆಗೆ ಬೆಲೆಯಿಲ್ಲದ ಸ್ಥಿತಿ ಎದುರಿಸಬೇಕಾಯಿತು. ಈ ಸಮಸ್ಯೆಯ ಜತೆಗೆ ಉತ್ಪಾದನ ಪರಿಕರಗಳ (ಭೂಮಿ, ಬಂಡವಾಳ, ತಂತ್ರಜ್ಞಾನ ಇತ್ಯಾದಿಗಳ) ಸ್ವಾಧೀನ ಇಲ್ಲದವರ ಸಮಸ್ಯೆನೂ ಸೇರಿಕೊಂಡಿವೆ. ಇವರೆಲ್ಲ ಆಧುನಿಕ ಪ್ರಕ್ರಿಯೆಯಿಂದಾಗಿ ಮತ್ತು ಸಾಂಪ್ರದಾಯಿಕ ಸಮಾಜದ ಆರ್ಥಿಕ ಸಂಬಂಧಗಳಿಂದಾಗಿ ಆಧುನೀಕರಣ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಸಾಧ್ಯವಾಗುವುದಿಲ್ಲ. ಮಕ್ಕಳು, ಗರ್ಭಿಣಿಯರು, ವಯಸ್ಸಾದವರು ಮುಂತಾದವರು ವಯಸ್ಸಿನ ಕಾರಣಕ್ಕಾಗಿ ಉತ್ಪಾದನ ಪ್ರಕ್ರಿಯೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ದಲಿತರ, ಬುಡಕಟ್ಟು ಜನರ, ಹಿಂದುಳಿದ ವರ್ಗಗಳ, ಕಾರ್ಮಿಕರ, ಮಕ್ಕಳ, ಮಹಿಳೆಯರ. ಅಲ್ಪಸಂಖ್ಯಾತರ ಮುಂತಾದವರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಯೋಜನೆಗಳಲ್ಲಿ ಸ್ವಲ್ಪ ಮೊತ್ತವನ್ನು ತೆಗೆದಿರಿಸಲಾಗಿದೆ. ಕಲ್ಯಾಣ ಕಾರ್ಯಕ್ರಮಗಳ ವ್ಯಾಪ್ತಿಯಲ್ಲಿ ಬರುವ ಜನಸಾಗರಕ್ಕೂ ಯೋಜನೆಯಲ್ಲಿ ತೆಗೆದಿರಿಸಿದ ಮೊತ್ತಕ್ಕೂ ಏನೇನೂ ಸಂಬಂಧ ಇಲ್ಲ. ಅತ್ಯಲ್ಪ ಮೊತ್ತವನ್ನು ವಿವಿಧ ಯೋಜನೆಗಳಲ್ಲಿ ಕಲ್ಯಾಣ ಕಾರ್ಯಕ್ರಮಗಳ ಮೇಲೆ ವಿನಿಯೋಜಿಸಲಾಗಿದೆ. ಒಂದೆರಡು ಯೋಜನೆಗಳನ್ನು (ಆರು, ಎಂಟು ಮತ್ತು ಒಂಬತ್ತನೇ ಎಲ್ಲ ಯೋಜನೆಯ ಶೇ. 5ರಷ್ಟನ್ನೂ ವಿನಿಯೋಜನೆ ಮಾಡಿಲ್ಲ. ಬಹುತೇಕ ಎಲ್ಲ ಯೋಜನೆಗಳಲ್ಲಿಯೂ ಶೇ. 2 ರಷ್ಟು ಮೊತ್ತವನ್ನು ಮಾತ್ರ ಕಲ್ಯಾಣ ಕಾರ್ಯಕ್ರಮಗಳ ನೆರವಿನಿಂದಲೇ ಉಸಿರಾಡಬೇಕಾದ ಸ್ಥಿತಿಯಲ್ಲಿ ನಮ್ಮ ಸಮಾಜದ ಶೇಕಡಾ ಮೂವತ್ತರಿಂದ ನಲ್ವತ್ತರಷ್ಟು ಕುಟುಂಬಗಳಿವೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿರುವ ತಳಸ್ತರದ ಜನರ ಕಲ್ಯಾಣವನ್ನು ಇಷ್ಟು ಅಲ್ಪ ಮೊತ್ತ ಮಾಡುವುದನ್ನು ಊಹಿಸಿಕೊಳ್ಳುವುದು ತುಂಬಾ ಕಷ್ಟ.

ಮುಕ್ತ ಮಾರುಕಟ್ಟೆಯನ್ನು ಪ್ರತಿಪಾದಿಸುವ ಅಭಿವೃದ್ಧಿ ಹಾಗೂ ಪ್ರಭುತ್ವ ನೇತೃತ್ವದ ಅಭಿವೃದ್ಧಿ ಮಾದರಿಗಳನ್ನು ಅಂತರಾಷ್ಟ್ರೀಯ ಅರ್ಥವ್ಯವಸ್ಥೆ ಮುಂಚೂಣಿಗೆ ತಂದಿದೆ. ಆಗತಾನೇ ವಸಾಹತು ಹಿಡಿತದಿಂದ ಬಿಡುಗಡೆಗೊಂಡ ಭಾರತ ತನ್ನ ಬೇಕುಬೇಡಗಳನ್ನು ಗಮನದಲ್ಲಿಟ್ಟುಕೊಂಡು ತನ್ನದೇ ಅಭಿವೃದ್ಧಿ ಮಾದರಿಯನ್ನು ಮುಂಚೂಣಿಗೆ ತರುವ ಸ್ಥಿತಿಯಲ್ಲಿರಲಿಲ್ಲ. ಮೇಲಿನ ಎರಡೂ ಮಾದರಿಗಳನ್ನು ಮಿಶ್ರಣಗೊಳಿಸಿ ಭಾರತ ತನ್ನ ಅಭಿವೃದ್ಧಿ ಮಾದರಿಯನ್ನು ಕಟ್ಟಿಕೊಂಡಿದೆ. ಮೇಲ್ನೋಟಕ್ಕೆ ಪ್ರಭುತ್ವ ನೇತೃತ್ವದ ಯೋಜಿತ ಅಭಿವೃದ್ಧಿ ಈ ಮಾದರಿಯಲ್ಲಿ ಹೆಚ್ಚಿನ ಸ್ಥಾನಮಾನ ಪಡೆದಂತೆ ಕಂಡರೂ ಆಳದಲ್ಲಿ ಇದು ಮುಕ್ತ ಮಾರುಕಟ್ಟೆಯ ಗುಣಗಳನ್ನು ದೊಡ್ಡ ಪ್ರಮಾಣದಲ್ಲಿ ಹೊಂದಿತ್ತು. ಭಾರತದೊಳಗಿನ ಬಲಾಬಲಗಳು ಅಭಿವೃದ್ಧಿ ಮಾದರಿ ಆದ್ಯತೆಗಳನ್ನು ತೀರ್ಮಾನಿಸಿದವು. ಈ ಪೈಪೋಟಿಯಲ್ಲಿ ಬಂಡವಾಳ ಕೇಂದ್ರಿತ ಆಧುನಿಕ ಉತ್ಪಾದನೆ ಹಾಗೂ ಅನುಭೋಗಗಳಿಗೆ ಮಹತ್ವ ನೀಡಬೇಕೆಂದು ವಾದಿಸಿದವರು ಗೆದ್ದರು. ಅಸಂಖ್ಯಾತ ಧ್ವನಿಯಿಲ್ಲದ ಗ್ರಾಮೀಣ ಜನರಿಗೆ ಜೀವಕೊಡಬೇಕೆಂದು ವಾದಿಸಿದವರು ಸೋತರು. ಅರ್ಥಾತ್ ಭೂಮಿ, ಬಂಡವಾಳ, ಆಧುನಿಕ, ತಂತ್ರಜ್ಞಾನದ ಒಡೆತನ ಅಥವಾ ತಿಳುವಳಿಕೆ ಅಭಿವೃದ್ಧಿಯ ಅಡಿಪಾಯವಾಯಿತು. ಈ ಮೂರರಲ್ಲಿ ಒಂದೂ ಇಲ್ಲದವರು ಅಂಚಿಗೆ ಸರಿಯ ಬೇಕಾಯಿತು. ಉತ್ಪಾದನೆ ಮತ್ತು ಹೆಚ್ಚು ಹೆಚ್ಚು ಉತ್ಪಾದನೆ ಮಾತ್ರ ಅಭಿವೃದ್ಧಿಯ ಮತ್ತು ಯೋಜನೆಗಳ ಮೂಲ ಮಂತ್ರವಾಯಿತು. ಭೂಮಿ, ಬಂಡವಾಳ, ತಂತ್ರಜ್ಞಾನಗಳ ಒಡೆತನದ ಪ್ರಶ್ನೆ ಅಥವಾ ಉತ್ಪಾದನೆ ಸಂಬಂಧಗಳ ಪ್ರಶ್ನೆ ಮೂಲೆಗುಂಪಾಯಿತು. ಸಮಾಜದ ಒಟ್ಟಾರೆ ಉತ್ಪಾದನೆಯ ಪ್ರಮಾಣ ಹೆಚ್ಚಾದರೆ ಎಲ್ಲರಿಗೂ ಒಳಿತಾಗುತ್ತದೆ ಎಂದು ನಂಬಲಾಯಿತು. ಈ ಎಲ್ಲ ಗುಣಲಕ್ಷಣಗಳನ್ನು ಯಥಾಪ್ರಕಾರ ಪ್ರತಿಬಿಂಬಿಸುವ ಯೋಜನೆಗಳು ಆದ್ಯತೆ ಪಡೆದವು. ಕರ್ನಾಟಕ ಕೂಡ ಇದೇ ಮಾದರಿಯನ್ನು ಯಥಾರೂಪದಲ್ಲಿ ಅನುಕರಿಸಿದೆ. ಪ್ರತ್ಯೇಕತೆಯ ಹಲವಾರು ನೆಲೆಗಳನ್ನು ನೀಡಿ ಪ್ರತ್ಯೇಕ ರಾಜ್ಯ ಪಡೆದ ಕರ್ನಾಟಕ ತನ್ನ ಭವಿಷ್ಯದ ಅರ್ಥ ವ್ಯವಸ್ಥೆಯನ್ನು ಕಟ್ಟಿಕೊಳ್ಳುವಾಗ ಯಾಕೆ ಪ್ರತ್ಯೇಕತೆಯನ್ನು ಬಯಸಲಿಲ್ಲ? ಎನ್ನುವ ಪ್ರಶ್ನೆಗೆ ಮುಂದಿನ ಅಧ್ಯಾಯದಲ್ಲಿ ಉತ್ತರಿಸಿದ್ದೇನೆ.