ಕರ್ನಾಟಕದ ಪಂಚವಾರ್ಷಿಕ ಯೋಜನೆಗಳ ಆದ್ಯತೆಗಳನ್ನು ರಾಷ್ಟ್ರೀಯ ಅಭಿವೃದ್ಧಿ ಮಾದರಿ ಮತ್ತು ಯೋಜನೆಗಳು ರೂಪಿಸಿದ ಕಥನವನ್ನು ಹಿಂದಿನ ಅಧ್ಯಾಯದಲ್ಲಿ ನೋಡಿದ್ದೇವೆ. ರಾಜ್ಯದ ಯೋಜನೆಗಳ ಆದ್ಯತೆಗಳು ಮತ್ತು ಸ್ಥಳೀಯ ಬಲಾಢ್ಯರ ಆಸಕ್ತಿಗಳ ನಡುವಿನ ಸಂಬಂಧವನ್ನು ಈ ಅಧ್ಯಾಯದಲ್ಲಿ ಅರ್ಥಮಾಡಿ ಕೊಳ್ಳಲು ಪ್ರಯತ್ನಿಸಲಾಗಿದೆ. ಪ್ರತ್ಯೇಕ ಚರಿತ್ರೆ, ಸಂಸ್ಕೃತಿ, ಭಾಷೆ ಇತ್ಯಾದಿಗಳ ನೆಲೆಯಲ್ಲಿ ಪ್ರತ್ಯೇಕ ರಾಜ್ಯವನ್ನು ಪಡೆಯಲಾಗಿದೆ. ಪ್ರತ್ಯೇಕ ರಾಜ್ಯದೊಂದಿಗೆ ಪ್ರತ್ಯೇಕ ಭವಿಷ್ಯದ ಬದುಕಿನ ಹಲವಾರು ಸಾಧ್ಯತೆಗಳು ಜೋತುಕೊಂಡಿವೆ. ನಮ್ಮ ಜನರ ಆಶೋತ್ತರಗಲಿಗೆ ಅನುಗುಣವಾಗಿ ನಮ್ಮ ಬದುಕನ್ನು ನಾವು ಕಟ್ಟಿಕೊಳ್ಳಬಹುದು. ನಮ್ಮ ಜನರ ಬೇಕುಬೇಡಗಳಿಗನುಸಾರ ನಮ್ಮ ಅರ್ಥ, ರಾಜಕೀಯ, ಸಾಮಾಜಿಕ ವ್ಯವಸ್ಥೆಗಳನ್ನು ರೂಪಿಸಿಕೊಳ್ಳಬಹುದು. ಕನ್ನಡ ಮಾತನಾಡುವವರೆಲ್ಲ ಒಂದೇ ಆಗಿರುವುದರಿಂದ ಅವರೊಳಗಿನ ತಾರತಮ್ಯಗಳನ್ನು ಕಡಿಮೆ ಮಾಡುವ ರೀತಿಯಲ್ಲಿ ನಮ್ಮ ಅರ್ಥ ಮತ್ತು ರಾಜಕೀಯ ವ್ಯವಸ್ಥೆಗಳನ್ನು ಸಂಘಟಿಸಿಕೊಳ್ಳಬಹುದು ಇತ್ಯಾದಿಗಳು ಪ್ರತ್ಯೇಕ ರಾಜ್ಯದೊಂದಿಗೆ ಸೇರಿಕೊಂಡಿರುವ ಆಶಯಗಳನ್ನು ಕಾಪಾಡುವ ರೀತಿಯಲ್ಲಿ ಕರ್ನಾಟಕದ ಪಂಚ ವಾರ್ಷಿಕ ಯೋಜನೆಗಳನ್ನು ರೂಪಿಸಿಕೊಂಡಿಲ್ಲ ಎಂದು ಒಂದನೇ ಅಧ್ಯಾಯದಲ್ಲಿ ವಾದಿಸಿದ್ದೇನೆ. ಯಾಕೆ ಕರ್ನಾಟಕ ತನ್ನ ಪ್ರತ್ಯೇಕತೆಯನ್ನು ಕಾಪಾಡಿಕೊಳ್ಳುವ ರೀತಿಯಲ್ಲಿ ತನ್ನ ಅರ್ಥ ವ್ಯವಸ್ಥೆಯನ್ನು ಕಟ್ಟಿಕೊಳ್ಳಲಿಲ್ಲ ಎನ್ನುವ ಪ್ರಶ್ನೆಗೆ ಈ ಅಧ್ಯಾಯನದಲ್ಲಿದ್ದುದು, ಆ ಪಕ್ಷದ ನಾಯಕತ್ವ ಭೂಮಾಲಿಕ / ಬಂಡವಾಳಿಗ ವರ್ಗದ ಹಿಡಿತದಲ್ಲಿ ಇದ್ದುದು, ಪ್ರಗತಿಪರ ಚಳವಳಿಗಳ ಇತಿಹಾಸದ ಕೊರತೆ, ಪ್ರತ್ಯೇಕತೆಯನ್ನು ಸಾಂಸ್ಕೃತಿಕವಾಗಿ ಕಟ್ಟಿಕೊಂಡಿರುವುದು ಇತ್ಯಾದಿಗಳು ಪ್ರತ್ಯೇಕ ಯೋಜನೆಗಳನ್ನು ರೂಪಿಸಿಕೊಳ್ಳಲು ಪಡೆಯಾದವು. ಇವೆಲ್ಲವೂ ಸ್ಥಳೀಯ ಬಲಾಢ್ಯರು ತಮ್ಮ ಆಸಕ್ತಿಗಳಿಗನುಗುಣವಾಗಿ ಯೋಜನೆಗಳ ಆದ್ಯತೆಗಳನ್ನು ರೂಪಿಸಿಕೊಳ್ಳಲು ಬಳಕೆಯಾದ ಕಥನಗಳ ಸಂಪನ್ಮೂಲಗಳು. ಅಧ್ಯಾಯದ ಮೊದಲ ಭಾಗದಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಕಾರುಬಾರು ಮಾಡುತ್ತಿದ್ದ ರಾಜಕೀಯ ಪಕ್ಷ ಮತ್ತು ಅದರ ನಾಯಕರುಗಳ ಸಾಮಾಜಿಕ ಹಿನ್ನೆಲೆಗಳ ವಿವರಗಳನ್ನು ನೀಡಲಾಗಿದೆ. ಕರ್ನಾಟಕದಲ್ಲಿ ನಡೆದ ಪ್ರಗತಿಪರ ಚಳವಳಿಗಳ ಇತಿಮಿತಿಗಳನ್ನು ಅಧ್ಯಾಯದ ಕೊನೆ ಭಾಗದಲ್ಲಿ ಚರ್ಚಿಸಲಾಗಿದೆ.

ಕಾಂಗ್ರೇಸ್ ಪಕ್ಷ ಸ್ವಾತಂತ್ರ ನಂತರ ಸುಮಾರು ಮೂರು ದಶಕಗಳ ಕಾಲ ಕೇಂದ್ರ ಹಾಗು ರಾಜ್ಯದಲ್ಲಿ ಕಾರುಬಾರು ಮಾಡಿದೆ. ಕಾಂಗ್ರೇಸ್ ಪಕ್ಷವನ್ನು ಮಧ್ಯಮ ವರ್ಗ ಮತ್ತು ಭೋಮಾಲಿಕ ವರ್ಗದ ಪಕ್ಷವೆಂದೇ ಗುರುತಿಸಲಾಗಿದೆ. ಹಾಗೆಂದ ಮಾತ್ರಕ್ಕೆ ಆ ಪಕ್ಷದೊಳಗೆ ಪ್ರಗತಿಪರರ ಕೊರತೆ ಇತ್ತೆನ್ನಲಾಗುವುದಿಲ್ಲ. ಭೊಮಾಲಿಕರನ್ನು ದೊಡ್ಡ ಸಂಖ್ಯೆಯಲ್ಲಿ ತುಂಬಿಕೊಂಡಿದ್ದ ಕಾಂಗ್ರೇಸ್ ಪಕ್ಷದೊಳಗಿನ ಪ್ರಗತಿಪರರು ಭೂಸಧಾರಣೆಯ ಪ್ರಶ್ನೆಯನ್ನು ಜೀವಂತ ಇರಿಸಿದ್ದರು. ಪಕ್ಷದೊಳಗಿನ ಪ್ರಗತಿಪರರ ಒತ್ತಡಕ್ಕೆ ಮಣಿದು ಭೂಮಿ ಸಂಬಂಧವನ್ನು ಪರಿವರ್ತಿಸುವ ಠರಾವುಗಳು ಪಾಸಾಗುತಿದ್ದವು ಜಯಪುರ ಕಾಂಗ್ರೇಸ್ ಅಧಿವೇಶನದಲ್ಲಿ ಸ್ವತಂತ್ರ ನಂತರ ಪಕ್ಷ ಅನುಸರಿಸಲಿಚ್ಚಿಸುವ ಭೂಸುಧಾರಣೆ ಕುರಿತಂತೆ ಪಕ್ಷದ ಧೋರಣೆಯನ್ನು ಸ್ಪಷ್ಟಪಡಿಸಲಾಯಿತು. ಮಧ್ಯವರ್ತಿಗಳನ್ನು ರದ್ದುಗೊಳಿಸುವುದು, ಹಿಡುವಳಿಯ ಮೇಲೆ ಮಿತಿಯೇರುವುದು ಹಾಗೂ ಸಹಕಾರಿ ಬೇಸಾಯವನ್ನು ಅನುಸರಿಸುವುದು ಇತ್ಯಾದಿ ಕ್ರಮಗಳ ಮೂಲಕ ಕೃಷಿಯನ್ನು ಪುನರ್ವ್ಯವಸ್ಥೆಗೊಳಿಸುವುದು. ಕಾಂಗ್ರೇಸ್ ಪಕ್ಷದ ಧೋರಣೆಯಾಗಿತ್ತು. ಹೆಚ್ಚುಕಡಿಮೆ ಇದೆ ನಿಲುವನ್ನು ದೇಶದ ಮೊದಲನೆ ಪಂಚವಾರ್ಷಿಕ ಯೋಜನೆಯಲ್ಲಿ ನೋಡಬಹುದು. ಹಿಂದಿನಿಂದ ಬಂದ ಕೃಷಿ ವ್ಯವಸ್ಥೆಯಿಂದ ಹುಟ್ಟಿಬಂದ ತೊಡಕುಗಳನ್ನು ನಿವಾರಿಸುವುದರ ಮೂಲಕ ಕೃಷಿ ಉತ್ಪಾದನೆಯಲ್ಲಿ ಹೆಚ್ಚಳ ಸಾದಿಸುವುದು ಮತ್ತು ಕೃಷಿ ವ್ಯವಸ್ಥೆಯಲ್ಲಿ ಅಡಕವಾಗಿದ್ದ ಶೋಷಣೆ ಹಾಗೂ ಸಾಮಾಜಿಕ ಅನ್ಯಾಯಗಳನ್ನು ತೊಡೆದು ಹಾಕುವುದು. ಈ ಉದ್ದೇಶಗಳನ್ನು ಕಾರ್ಯರೂಪಕ್ಕೆ ತರಲು ಈ ಕೆಳಗಿನ ಕಾರ್ಯಕ್ರಮಗಳನ್ನು ಯೋಜನೆ ಸೂಚಿಸಿದೆ. ಗೇಣಿದಾರರಿಗೆ ಗೇಣಿಭದ್ರತೆ, ನ್ಯಾಯಸಮ್ಮತ ಗುತ್ತಿಗೆಗಳ ನಿಗದಿ ಹಾಗೂ ಗೇಣಿದಾರರಿಗೆ ಭೂಮಿಯನ್ನು ಖರೀದಿಸುವ ಹಕ್ಕು ಇವುಗಳನ್ನು ಒಳಗೊಂಡ ಗೇಣಿದಾರಿಕೆ ಸುಧಾರಣೆಗಳು ಮತ್ತು ಕೃಷಿ ಕಾರ್ಮಿಕರ ಪರಿಸ್ಥಿತಿಯ ಸುಧಾರಣ ಕ್ರಮಗಳು ಸೇರಿದ್ದವು. ಈ ಎಲ್ಲ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಭೂಸುಧಾರಣ ಕಾಯಿದೆಗಳನ್ನು ರೂಪಿಸಲಾಯಿತು. ಈ ಭೂಸುಧಾರಣ ಕಾಯಿದೆಗಳನ್ನು ರೂಪಿಸುವ ಮತ್ತು ಅನುಷ್ಠಾನಕ್ಕೆ ತರುವ ಜವಾಬ್ದಾರಿ ರಾಜ್ಯ ಸರಕಾರದ್ದು. ಆದರೆ ಕಾಂಗ್ರೇಸ್ ಆಳ್ವಿಕೆ ನಡೆಸುತ್ತಿದ್ದ ರಾಜ್ಯ ಸರಕಾರಗಳು ಭೂಸುಧಾರಣೆ ಕಾಯಿದೆಗಳನ್ನು ಭೂಸಂಬಂಧಗಳನ್ನು ಮೂಲಭೂತವಾಗಿ ಪರಿವರ್ತಿಸುವ ರೀತಿಯಲ್ಲಿ ಕಾಯಿದೆಗಳನ್ನು ರೂಪಿಸಲಿಲ್ಲ ಮತ್ತು ಜಾರಿಗೆ ತರಲಿಲ್ಲ.

ಭೂಸುಧಾರಣೆಯ ಈ ದುರಾವಸ್ಥೆ ಸೋಶಿಯಲಿಸ್ಟ್ ಸಮಾಜ ಕಟ್ಟಲು ಹೊರಟಿರುವ (ಕಾಂಗ್ರೇಸ್ ಪಕ್ಷದ) ಕೇಂದ್ರ ಸರಕಾರಕ್ಕೆ ನುಂಗಲಾರದ ತುತ್ತಾಯಿತು ಯಾಕೆಂದರೆ ಇಂತಹ ನಾಮಕಾವಸ್ಥೆ ಭೂಸುಧಾರಣೆ ಕಾನೂನುಗಳನ್ನು ಜಾರಿಗೆ ತಂದ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೇಸ್ ಪಕ್ಷ ಆಳ್ವಿಕೆ ನಡೆಸುತ್ತಿತ್ತು. ಕರ್ನಾಟಕದಲ್ಲೂ ಕಾಂಗ್ರೇಸ್ ಪಕ್ಷವೇ 1961ರ ಭೂಸುಧಾರಣೆ ಮಸೂದೆಯನ್ನು ಜಾರಿಗೆ ತಂದಿದೆ. ವಸಾಹತು ಸರಕಾರದ ವಿರುದ್ಧ ಹೋರಾಟ ನಡೆಸುವ ಸಂದರ್ಭದಿಂದಲೇ ಕಾಂಗ್ರೇಸ್ ಪಕ್ಷ ಭೂಸುಧಾರಣೆ ಬಗ್ಗೆ ಘೋಷಣೆ ಕೂಗುತ್ತಲೇ ಬಂದಿದೆ. ಕಾಂಗ್ರೇಸ್ ಪಕ್ಷದ ಸಮಾವೇಶಗಳಲ್ಲಿ ಭೂಸುಧಾರಣೆ ಮೇಲೆ ಹಲವು ಠರಾವುಗಳು ಪಾಸಾಗಿವೆ. ಇಷ್ಟೆಲ್ಲ ಆದ ಮೇಲೆ ಅದೇ ಪಕ್ಷ ಅಧಿಕಾರಕ್ಕೆ ಬಂದಾಗ ಇಂತಹ ಕಟ್ಟ ರೀತಿಯಲ್ಲಿ ಭೂಸುಧಾರಣೆ ನಡೆಯುವುದು ಆ ಪಕ್ಷದೊಳಗಿನ ಪ್ರಗತಿಪರರಿಗೆ ಜೀರ್ಣಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದುದರಿಂದ 1972ರಲ್ಲಿ ಅಖಿಲ ಭಾರತ ಕಾಂಗ್ರೇಸ್ ಸಮಿತಿ ಈಗಾಗಲೇ ನಡೆದ ಭೂಸುಧಾರಣೆಗಳ ವಿಮರ್ಶೆಗೆ ಒಂದು ಉನ್ನತ ಮಟ್ಟದ ಸಮಿತಿಯನ್ನು ನೇಮಕ ಮಾಡಿತು. ಉನ್ನತ ಮಟ್ಟದ. ಸಮಿತಿಯ ವರದಿಯನ್ನು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಚರ್ಚಿಸಿ ಭೂಸುಧಾರಣೆ ಮಸೂದೆಯಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಗಳ ಬಗ್ಗೆ ತೀರ್ಮಾನಿಸಲಾಯಿತು. ಈ ಸಭೆಯ ತೀರ್ಮಾನಗಳು ರಾಜ್ಯ ಸರಕಾರಗಳು ತಮ್ಮ ಭೂಮಸೂದೆಗಳನ್ನು ತಿದ್ದುಪಡಿ ಮಾಡಿಕೊಳ್ಳುವಾಗ ಗಮನಿಸಬೇಕಾದ ಮಾರ್ಗ ಸೂಚಿಯಾಯಿತು. ನಂತರದ ಪಂಚವಾರ್ಷಿಕ ಯೋಜನೆಗಳಲ್ಲೂ ಭೂಸುಧಾರಣೆ ಬಗ್ಗೆ ಪ್ರಸ್ತಾವಗಳಿದ್ದವು. ಆದರೆ ಬರುಬರುತ್ತಾ ಯೋಜನೆಗಳು ಕೈಗಾರಿಕೆ ಹಾಗೂ ಸೇವಾವಲಯದ ಅಭಿವೃದ್ಧಿಯನ್ನು ಮುಖ್ಯ ಗುರಿಯನ್ನಾಗಿಸಿಕೊಂಡಂತೆ ಭೂಮಿ ಮತ್ತು ಭೂಸುಧಾರಣ ಪ್ರಶ್ನೆಗಳು ತೆರೆಮರೆಗೆ ಸರಿದವು.

ಕಾರ್ನಾಟಕದಲ್ಲೂ ಕಾಂಗ್ರೇಸ್ ಪಕ್ಷ ಎಂಬತ್ತರ ದಶಕದವರೆಗೆ ಆಡಳಿತ ನಡೆಸಿದ್ದು ಮಾತ್ರವಲ್ಲ ಸುಮಾರು ಎಪ್ಪತ್ತರ ದಶಕದವರೆಗೆ ರಾಜ್ಯದ ಅಧಿಕಾರ ಭೂಮಾಲಿಕ ವರ್ಗದ ಹಿಡಿತದಲ್ಲಿತ್ತು ಎನ್ನುವ ವಾದ ಇದೆ. ಇದು ಸ್ವತಂತ್ರ ನಂತರದ ಬೆಳವಣೆಗೆಯಲ್ಲಿ ಸ್ವತಂತ್ರ ಪೂರ್ವ ಬೆಳವಣಿಗೆಗಳ ಮುಂದುವರಿಕೆಯೇ ಆಗಿದೆ. ವಸಾಹತು ಆಡಳಿತ ಮತ್ತು ಅದರ ವಿರುದ್ಧ ಬಿಡುಗಡೆಗಾಗಿ ನಡೆಸಿದೆ ಹೋರಾಟ ನಮ್ಮ ರಾಜಕೀಯವನ್ನು ಭಾಷೆ, ಪ್ರದೇಶ ಜಾತಿ / ಧರ್ಮಗಳಿಗೆ ನೀಮಿತಗೊಳಿಸುವುದರಲ್ಲಿ ಪ್ರಮುಖ ಪಾತ್ರವಹಿಸಿದೆ. ವಸಾಹತು ಆಡಳಿತ 1857ರಿಂದ ಸ್ಥಳೀಯ ಆಡಳಿತಕ್ಕೆ ಅನುಕೂಲವಾಗುವ ಸಂಸ್ಥೆಗಳನ್ನು ಗ್ರಾಮ ಮತ್ತು ನಗರ ಪ್ರದೇಶದಲ್ಲಿ ಜಾರಿಗೆ ತಂದಿದೆ. ಈ ಸಂಸ್ಥೆಗಳ ಬಹುತೇಕ ಸದಸ್ಯರನ್ನು ಚುನಾವಣೆ ಮೂಲಕ ಆಯ್ಕೆ ಮಾಡಲು ಅವಕಾಶ ಸೃಷ್ಟಿಸಲಾಗಿತ್ತು. ಒಂದು ನಿರ್ಧಿಷ್ಟ ಮೊತ್ತದ ಭೂಕಂದಾಯ ಕಟ್ಟುವವರಿಗೆ ಮಾತ್ರ ಚುನಾವಣೆಗೆ ಸ್ವಾಧೀಸಲು ಮತ್ತು ಮತಚಲಾಯಿತು ಅವಕಾಶ ನೀಡಲಾಗಿತ್ತು. ಇದರಿಂದ ಆಯಾಯ ಪ್ರದೇಶದ ಭೂಮಾಲಿಕರು ಮಾತ್ರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಧೀಸಲು ಮತ್ತು ಮತಚಲಾಯಿಸಲು ಸಾಧ್ಯವಾಯಿತು. ಗೇಣಿದಾರರು. ಭೂರಹಿತರು, ಕಾರ್ಮಿಕರು, ಮಹಿಳೆಯರು, ಸಾಂಪ್ರದಾಯಿಕ ಕಸುಬುಗಳಲ್ಲಿ ತೊಡಗಿಸಿಕೊಂಡವರು ಮುಂತಾದವರು ವಸಾಹತು ಕೊಡಮಾಡಿದ ರಾಜಕೀಯ ಪ್ರಕ್ರಿಯೆಯಲ್ಲಿ ಪಾಲುಗೊಳ್ಳಲು ಸಾಧ್ಯವಾಗಲಿಲ್ಲ. ಇದೇ ಸಂದರ್ಭದಲ್ಲಿ ವಸಾಹತು ಸರಕಾರ ಜಾರಿಗೆ ತಂದ ಆಧುನೀಕರಣ ಪ್ರಕ್ರಿಯೆಯನ್ನೂ (ಮುಖ್ಯವಾಗಿ ಶಿಕ್ಷಣ ಮತ್ತು ಸರಕಾರಿ ಉದ್ಯೋಗ) ಕೂಡ ಸ್ಥಳೀಯ ಸಮಾಜದ ಮೇಲ್ವರ್ಗಗಳು ಜೀರ್ಣಿಸಿಕೊಳ್ಳಲು ಸಾಧ್ಯವಾಯಿತು. ಭೂಮಾಲಿಕತ್ವ ಸ್ಥಳೀಯ ಸಂಸ್ಥೆಗಳ ನಾಯಕತ್ವ ರಾಜಕೀಯ ತರಬೇತಿ, ಮತ / ಜಾತಿ ಸಂಘಟನೆಗಳು, ಮಠಮಂದಿರಗಳು ಇತ್ಯಾದಿಗಳು ಸ್ಥಳೀಯ ಮೇಲ್ವರ್ಗಕ್ಕೆ ವಸಾಹತು ಆಡಳಿತ ಜಾರಿಗೆ ತಂದ ಶೈಕ್ಷಣಿಕ ಹಾಗೂ ಔದ್ಯೋಗಿಕ ಲಾಭಗಳನ್ನು ಪಡೆಯಲು ಸಹಾಯಕಾರಿಯಾದವು.

ಕೆಲವೊಂದು ಸಮುದಾಯಗಳ ಬಲಿಷ್ಠರು ತಮ್ಮ ತಮ್ಮ ಸಮುದಾಯದ ಯುವಕರ ಶಿಕ್ಷಣಕ್ಕಾಗಿ ನಗರ ಪ್ರದೇಶಗಳಲ್ಲಿ ಹಾಸ್ಟೇಲುಗಳನ್ನು ಸ್ಥಾಪಿಸಿದರು. ತಾಲ್ಲೂಕು ಮಟ್ಟದಲ್ಲಿ ತಮ್ಮ ಸಮುದಾಯದ ಜನರ ಶಿಕ್ಷಣಕ್ಕಾಗಿ ಶಾಲೆ ಕಾಲೇಜುಗಳನ್ನು ಸ್ಥಾಪಿಸಿದರು. ಕೆಲವು ಪ್ರದೇಶಗಳಲ್ಲಿ ಸಮುದಾಯದ ಆರ್ಥಿಕ ಚಟುವಟಿಕೆಗಳನ್ನು ಬೆಂಬಲಿಸಲು ಬ್ಯಾಂಕ್ಗಳನ್ನು ಸ್ಥಾಪಿಸಿದರು. ಹೀಗೆ ರಾಜ್ಯ ಹಾಗೂ ಪ್ರಾದೇಶಿಕ ಮಟ್ಟದಲ್ಲಿ ದೊಡ್ಡ ಭೂಮಾಲಿಕ ವರ್ಗ, ದೊಡ್ಡ ವ್ಯಾಪಾರಸ್ಥ ವರ್ಗ ವಸಾಹತು ಆಡಳಿತದ ಲಾಭಗಳನ್ನು ಪಡೆದು ಇನ್ನಷ್ಟು ಬಲಿಷ್ಠಗೊಂಡವು. ಈ ವರ್ಗಗಳಿಗೆ ತಮ್ಮ ಬೆಂಬಲಿಗರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶವಿತ್ತು. ಈ ಉದ್ದೇಶ ಸಾಧನೆಗಾಗಿ ತಮ್ಮಲ್ಲೇ ಸಾರ್ವಜನಿಕ ಸೇವಾ ಕಾರ್ಯಗಳನ್ನು ತಮ್ಮ ಸಮುದಾಯಗಳ ಹಿತಾಸಕ್ತಿಗಳ ರಕ್ಷಣೆಯ ಹೆಸರಿನಲ್ಲಿ ಮಾಡುತ್ತಿದ್ದವು. ವಾಸ್ತವದಲ್ಲಿ ಇಂತಹ ಕೆಲಸ ಕಾರ್ಯಗಳಿಂದ ನಿರ್ಧಿಷ್ಟ ಸಮುದಾಯಗಳ ಕೆಲವೇ ಕೆಲವು ಜನ ಬಲಾಢ್ಯರು ಹೆಚ್ಚಿನ ಲಾಭ ಪಡೆಯುತ್ತಿದ್ದರು. ಆದರೂ ಹೊರಜಗತ್ತಿಗೆ ಇಡೀ ಸಮುದಾಯವೇ ಬಲಯುತಗೊಂಡ ಇಮೇಜ್ ಸೃಷ್ಟಿಯಾಯಿತು. ಈ ರೀತಿಯಲ್ಲಿ ಬಲಗೊಂಡ ಶಕ್ತಿಗಳು ವಸಾಹತು. ಆಡಳಿತ ವಿರೋಧಿ ಚಳವಳಿಗಳ ಮುಂಚೂಣಿಯಲ್ಲಿದ್ದವು. ವಸಾಹತು ಆಡಳಿತದಿಂದ ಬಿಡುಗಡೆಗೊಂಡು ಹೊಸತಾಗಿ ರೂಪುಗೊಳ್ಳುವ ರಾಷ್ಟ್ರದಲ್ಲಿ ಸೇರಿಕೊಳ್ಳುವ ಪ್ರದೇಶಗಳನ್ನು ಭಾಷಾ ನೆಲೆಯಲ್ಲಿ ವಿಂಗಡಿಸಿಕೊಳ್ಳಬೇಕೆಂಬ ವಾದವನ್ನು ಮುಂದಿಟ್ಟವು. ಒಂದೇ ಭಾಷೆ ಮಾತನಾಡುವವರನ್ನೆಲ್ಲ ಒಟ್ಟು ಹಾಕಿ ರಾಜ್ಯಗಳನ್ನು ರೂಪಿಸಿದರೆ ಪ್ರತಿ ರಾಜ್ಯದ ಆಡಳಿತ ಹಾಗು ಅಭಿವೃದ್ಧಿ ಸುಲಭವಾಗುವುದೆಂಬ ವಾದಗಳು ಮುಂಚೂಣಿಗೆ ಬಂದವು. ಕರ್ನಾಟಕದ ಏಕೀಕರಣ ಹೋರಾಟ ಕೂಡ ಇದೇ ಮಾದರಿಯಲ್ಲಿ ನಡೆದಿದೆ.

ಕನ್ನಡ ಮಾತಾಡುವವರನ್ನೆಲ್ಲ ಸೇರಿಸಿ ಕರ್ನಾಟಕ ರಾಜ್ಯವನ್ನು ರೂಪಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ವಾದಿಸಲಾಯಿತು. ಹೊಸರಾಜ್ಯದ ಆಡಳಿತ ಭಾಷೆ ಯಾವುದಾಗಬೇಕು. ಹೊಸರಾಜ್ಯದಲ್ಲಿ ಸೇರಬೇಕಾದ ಪ್ರದೇಶಗಳು, ಪ್ರದೇಶವೊಂದನ್ನು ಹೊಸರಾಜ್ಯದಲ್ಲಿ ಸೇರಿಸಲು ಅನುಸರಿಸಬೇಕಾದ ಮಾನದಂಡಗಳು, ಹೊಸ ರಾಜ್ಯದ ಹೆಸರೇನಾಗಬೇಕು, ಹೊಸ ರಾಜ್ಯದ ರಾಜ್ಯಧಾನಿ ಯಾವುದಾಗಬೇಕು ಇತ್ಯಾದಿ ಚರ್ಚೆಗಳು ಏಕೀಕರಣ ಚಳವಳಿ ಸಂದರ್ಭದಲ್ಲಿ ಮುಂಚೂಣಿಗೆ ಬಂದವು. ಸಮಾನತೆ, ಸ್ವಾತಂತ್ರ್ಯ ಸ್ವಾಯತ್ತತೆ, ಹೊಸರಾಜ್ಯದ ವ್ಯಾಪ್ತಿಗೆ ಸೇರುವ ಭೂಮಿಯಲ್ಲಿ ವಿವಿಧ ಕುಟುಂಬಗಳ ಪಾಲು, ದುಡಿಯುವ ಕನ್ನಡಿಗೆ ಮತ್ತು ದುಡಿಸುವ ಕನ್ನಡಿಗರ ನಡುವಿನ ಸಂಬಂಧ ವಿವಿಧ ಸಮುದಾಯಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳು. ಹೊಸರಾಜ್ಯದಲ್ಲಿ ಅವುಗಳ ಸ್ಥಾನಮಾನ ಇತ್ಯಾದಿಗಳ ಕುರಿತು ಚರ್ಚೆಯೇ ನಡೆಯಲಿಲ್ಲ. ಆಧುನೀಕರಣದೊಂದಿಗೆ ಸಮಷ್ಠಿಯ ಸಂಪನ್ಮೂಲ ವಿತರಣೆ ತೀರ್ಮಾನ ಆಧುನಿಕ ಸಂಸ್ಥೆಗಳಿಗೆ (ಸೊಸೈಟಿ, ಪಂಚಾಯತ್, ವಿಧಾನ ಸಭೆ, ಲೋಕ ಇತ್ಯಾದಿಗಳಿಗೆ) ವರ್ಗಾಯಿಸಲ್ಪಟ್ಟಿತು. ಈ ಆಧುನಿಕ ಸಂಸ್ಥೆಗಳ ಸದಸ್ಯತ್ವ ಹುಟ್ಟಿನಿಂದ ಬರುವುದಿಲ್ಲ. ಓಟಿನಿಂದ ಬರುವಂತಾಯಿತು. ಅತೀ ಹೆಚ್ಚು ಓಟು ಪಡೆದ ಯಾರೂ ಕೂಡ ಈ ಆಧುನಿಕ ಸಂಸ್ಥೆಗಳ ಸದಸ್ಯರಾಗಬಹುದು. ವಸಾಹತು ಸಂದರ್ಭದಲ್ಲೇ ಸಂಘಟನೆ, ಶಿಕ್ಷಣ, ಆಧುನಿಕ ಉದ್ಯೋಗ, ಮಠಮಂದಿರ ಇತ್ಯಾದಿಗಳನ್ನು ಬಳಸಿಕೊಂಡು ಬಲಿಷ್ಠಾರಾದ ಶಕ್ತಿಗಳು ತಮ್ಮ ತಮ್ಮ ಸಮುದಾಯಗಳ ಬೆಂಬಲದಿಂದ ಆಧುನೀಕರಣದ ಆರಂಭದ ದಿನಗಳಲ್ಲಿ ಮೇಲಿನ ಆಧುನಿಕ ಸಂಸ್ಥೆಗಳ ಮೇಲೆ ಹತೋಟಿ ಸಾಧಿಸಿದವು. ಕಾಲಕ್ರಮೇಣ ಮಧ್ಯಮ ಮತ್ತು ಕೆಳಜಾತಿಗಳ ಬಲಾಢ್ಯರು ಮೇಲ್ವರ್ಗದ ಬಲಾಢ್ಯರು ತುಳಿದ ಮಾರ್ಗವನ್ನೇ ತುಳಿದರು. ತಮ್ಮ ತಮ್ಮ ಜಾತಿ ಸಂಘಟನೆಗಳನ್ನು ಮಾಡಿಕೊಂಡರು, ಮಠಮಂದಿರಗಳನ್ನು ಸ್ಥಾಪಿಸಿದರು ಮತ್ತು ಶಾಲೆ ಕಾಲೇಜುಗಳನ್ನು ಆರಂಭಿಸಿದರು. ತಮ್ಮ ತಮ್ಮ ಸಮುದಾಯಗಳ ನೆಲೆಯಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸಿದರು. ಕೆಳಜಾತಿ ಜನರು ಸಂಖ್ಯೆಯಲ್ಲಿ ಹೆಚ್ಚು ಇದ್ದುದರಿಂದ ಸಹಜವಾಗಿಯೇ ಅವರು ಹೆಚ್ಚು ಓಟು ಪಡೆಯುವುದು ಸುಲಭವಾಯಿತು. ಇದರಿಂದಾಗಿ ಹೆಚ್ಚು ಹೆಚ್ಚು ಕೆಳಜಾತಿ ಜನರು ಮೇಲಿನ ಸಂಸ್ಥೆಗಳಲ್ಲಿ (ಸೊಸೈಟಿ, ಪಂಚಾಯತ್, ವಿಧಾನ ಸಭೆ, ಲೋಕಸಭೆ ಇತ್ಯಾದಿಗಳಲ್ಲಿ) ಸದಸ್ಯರಾಗಲು ಸಾಧ್ಯವಾಯಿತು. ಈ ಬೆಳವಣಿಗೆಯಿಂದಾಗಿ ಸಮಸ್ಠಿಯ ಸಂಪನ್ಮೂಲಗಳ ವಿತರಣೆ ಮೇಲೆ ಮೇಲ್ವರ್ಗದ ಹಿಡಿತ ಕಡಿಮೆ ಆಗಿ ತಳವರ್ಗದ ಹಿಡಿತ ಬಲಗೊಂಡ ಚಿತ್ರಣ ಮೂಡಿತು. ಆದರೆ ವಾಸ್ತವದಲ್ಲಿ ಮೇಲ್ವರ್ಗ ಸಮುದಾಯಗಳಲ್ಲಿ ಆದಂತೆ ತಳ ಸಮುದಾಯಗಳಲ್ಲೂ ಆಗಿದೆ. ಅಂದರೆ ಮೇಲ್ ಸಮುದಾಯಗಳ ಭೂಮಾಲಿಕರು / ಬಂಡವಾಳಿಗರು / ಆಧುನಿಕ ಸ್ಕಿಲ್ ಇದ್ದವರು ತಮ್ಮ ತಮ್ಮ ಸಮುದಾಯಗಳ ಹೆಸರಿನಲ್ಲಿ ಹೆಚ್ಚಿನ ಲಾಭ ಪಡೆದಂತೆ ತಳವರ್ಗದ ಭೂಮಾಲಿಕರು ಬಂಡವಾಳಿಗರು / ಆಧುನಿಕ ಸ್ಕಿಲ್ ಇದ್ದವರು ಹೆಚ್ಚಿನ ಲಾಭ ಪಡೆದರು.

ಹೀಗೆ ಹಿಂದಿನ ಶತಮಾನದ ಎಪ್ಪತ್ತು ಎಂಬತ್ತು ದಶಕಗಳವರೆಗೂ ಕರ್ನಾಟಕದ ರಾಜಕೀಯ ಅಧಿಕಾರ ಭೂಮಾಲಿಕ / ಬಂಡವಾಳಿಗರ ಹಿಡಿತದಲ್ಲಿತ್ತು. ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದ ಭೂಮಾಲಿಕ / ಬಂಡವಾಳಿಗರಲ್ಲಿ ಬಹುತೇಕರು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳಿಂದ ಬಂದಿದ್ದರು. ಈ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಬಹುತೇಕ ಸಂಶೋಧಕರು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳನ್ನೇ ಬಲಾಢ್ಯ ಸಮುದಾಯಗಳೆಂದು ವಿಂಗಡಿಸಲು ಆರಂಭಿಸಿದರು. ಇಂತಹ ಚಿತ್ರಣ ಆಯಾಯ ಸಮುದಾಯದ ಬಲಾಢ್ಯರಿಗೆ ಇನ್ನೂ ಅನುಕೂಲವಾಯಿತು. ಯಾಕೆಂದರೆ ವಾಸ್ತವದಲ್ಲಿ ಆಯಾಯ ಸಮುದಾಯಗಳ ಬಲಾಢ್ಯರು ತಮ್ಮ ತಮ್ಮ ಆಸಕ್ತಿಗಳ ಬೆಳವಣಿಗೆಗಾಗಿ ತಮ್ಮ ತಮ್ಮ ಸಮುದಾಯಗಳನ್ನು ಉಪಯೋಗಿಸಿಕೊಳ್ಳುತ್ತಿದ್ದರು. ಸಮುದಾಯಗಳ ಹೆಸರಿನಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಅಥವಾ ಸಾರ್ವಜನಿಕ ಸಂಪನ್ಮೂಲಗಳನ್ನು ಸಮುದಾಯದ ಏಳಿಗೆಗೆ ಬಳಸಿ ಅಥವಾ ಜಾತಿ ಸಂಘಟನೆಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಇಡೀ ಸಮುದಾಯವನ್ನೇ ಉದ್ದಾರ ಮಾಡುವ ಪೋಸ್ ಕೊಡುತ್ತಿದ್ದರು. ಇವರ ಇಂತಹ ಕೆಲಸಗಳು ಬಹುತೇಕ ಸಂದರ್ಭಗಳಲ್ಲಿ ಸಮುದಾಯದ ಬೆಂಬಲ ಪಡೆಯಲು ಸಾಕಾಗುತ್ತಿತ್ತು. ಸಮುದಾಯದ ಬೆಂಬಲದೊಂದಿಗೆ ಇತರರ ಬೆಂಬಲ ಪಡೆದು ರಾಜಕೀಯ ಅಧಿಕಾರ ದಕ್ಕಿಸಿ ಸೇರಿಕೊಳ್ಳುತ್ತಿದ್ದರು. ಈ ಬಗೆಯಲ್ಲಿ ದಕ್ಕಿದ ಅಧಿಕಾರವನ್ನು ತಮ್ಮ ವರ್ಗಾಸಕ್ತಿಗಳನ್ನು ಉಳಿಸಿಕೊಳ್ಳಲು ಬಳಸುತ್ತಿದ್ದರು. ಸಮುದಾಯದ ಬಹುತೇಕರ ಬೆಂಬಲದಿಂದ ಗಳಿಸಿದ ಅಧಿಕಾರವನ್ನು ಸಮುದಾಯದ ಎಲ್ಲರ ಉದ್ದಾರಕ್ಕೆ ಇವರು ಬಳಸುವುದಿಲ್ಲ ಅಥವಾ ಬಳಸಲು ಸಾಧ್ಯವಾಗುವುದಿಲ್ಲ. ಅಧಿಕಾರವನ್ನು ಸಮುದಾಯದ ಎಲ್ಲರ ಉದ್ದಾರಕ್ಕೆ ಬಳಸಲು ಒಂದೋ ಅವರ ವರ್ಗಾಸಕ್ತಿ ಅಡ್ಡ ಬರುತ್ತದೆ ಅಥವಾ ಅವರು ಪ್ರತಿನಿಧಿಸುವ ರಾಜಕೀಯ ಪಕ್ಷದ ಆರ್ಥಿಕ ಧೋರಣೆ ಅಡ್ಡಿಯಾಗುತ್ತದೆ.

ವಾಸ್ತವದಲ್ಲಿ ಇಂತಹ ಬಾಲಾಢ್ಯರು ಪ್ರತಿನಿಧಿಸುವ ಸಮುದಾಯಗಳಲ್ಲೂ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಭೂರಹಿತರಿದ್ದಾರೆ, ಸಣ್ಣ ಮತ್ತು ಅತೀ ಸಣ್ಣ ರೈತರಿದ್ದಾರೆ, ಕೃಷಿ ಕಾರ್ಮಿಕರಿದ್ದಾರೆ. ಬಲಾಢ್ಯ ಸಮುದಾಯಕ್ಕೆ ಸೇರಿದವರೆನ್ನುವ ಹಣೆಪಟ್ಟಿ, ಇಂತವರ ಬದುಕನ್ನು ಇನ್ನೂ ದುಸ್ಥಿರಗೊಳಿಸಿವೆ. ಸಮಾಜದ ತಳಸ್ತರಕ್ಕೆ ಸೇರಿದವರಿಗೆ ಸಲ್ಲುವ ಅನುಕಂಪವಾಗಲೀ ಕಲ್ಯಾಣ ಸವಲತ್ತುಗಳಾಗಲಿ ಇವರಿಗೆ ದಕ್ಕುವುದಿಲ್ಲ, ಬಲಾಢ್ಯ ಸಮುದಾಯದವರು ಎನ್ನುವ ಹಣೆಪಟ್ಟಿ ಬಿಟ್ಟರೆ ಇನ್ನೇನೂ ವಿಶೇಷ ಲಾಭವಿಲ್ಲದೆ ಇವರು ಅತ್ತ ತಮ್ಮದೇ ವರ್ಗದ (ತಳವರ್ಗದ) ಜನರೊಂದಿಗೆ ಸೇರಲಾರದೆ ಇತ್ತ ತಮ್ಮ ಸಮುದಾಯದ ಬಲಾಢ್ಯರೊಂದಿಗೆ ಗುರುತಿಸಿಕೊಳ್ಳಲಾರದೆ ನರಳುವ ಸ್ಥಿತಿ ನಿರ್ಮಾಣವಾಗಿದೆ. ತಳಸ್ತರದ ಸಮುದಾಯಗಳ ಬಲಾಢ್ಯರು ಈಗಾಗಲೇ ಅಧಿಕಾರದಲ್ಲಿರುವ ಇತರ ಸಮುದಾಯಗಳ ಬಲಾಢ್ಯರ ದಾರಿಯನ್ನೇ ತುಳಿದಿದ್ದಾರೆ. ಬಲಾಢ್ಯ ನಾಯಕರನ್ನು ಹೊರತುಪಡಿಸಿದ ತಳಸ್ತರದ ಜನರು ಮೂರು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ಬದಲಾಗಿಲ್ಲ. ಇಷ್ಟೊಂದು ವಿಪರ್ಯಾಸಗಳ ನಡುವೆಯೂ ಎಲ್ಲ ಜಾತಿಗಳು ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಪ್ರಾತಿನಿಧ್ಯ ಪಡೆದ ಚಿತ್ರಣವನ್ನು ಈ ಎಲ್ಲ ಬೆಳವಣಿಗೆಗಳು ನೀಡುತ್ತಿವೆ. ಆದರೆ ವಾಸ್ತವದಲ್ಲಿ ಪ್ರತಿ ಸಮುದಾಯದ ಅನಾನುಕೂಲಸ್ಥರು ಕೇವಲ ಮತದಾರರಾಗಿ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಆಯಾಯ ಸಮುದಾಯಗಳ ಅನುಕೂಲಸ್ಥರು ಮಾತ್ರ ಮುಖ್ಯವಾಹಿನಿಯ ರಾಜಕೀಯದ ಹೆಚ್ಚಿನ ಲಾಭಪಡೆಯಲು ಸಾಧ್ಯವಾಗುತ್ತಿದೆ. ಅಂದರೆ ಎಂ.ಎಲ್.ಎ ಅಥವಾ ಎಂಪಿಯಾಗಲು ಸಾಧ್ಯವಾಗಿದೆ. ಇನ್ನೂ ನಿಖರವಾಗಿ ಹೇಳುವುದಾದರೆ ಗ್ರಾಮ ಪಂಚಾಯತ್ ಸದಸ್ಯತ್ವವೊಂದನ್ನು ಬೆಟ್ಟು ಮಿಕ್ಕ ಯಾವುದೇ ರಾಜಕೀಯ ಅಧಿಕಾರ ಸ್ಥಾನಕ್ಕೆ ಸ್ಪರ್ಧಿಸಲು ಅಗಾಧ ಸಂಪತ್ತಿನ ಅಗತ್ಯವಿದೆ. ಈ ನಿಯಮದಲ್ಲಿ ಜಾತಿ ಬೇಧವಿಲ್ಲ. ಕೇವಲ ದುಡ್ಡು ಇರುವ ಮತ್ತು ಇಲ್ಲದಿರುವವರ ವರ್ಗ ಭೇದ ಮಾತ್ರ ಕೆಲಸ ಮಾಡುತ್ತದೆ. ಆದುದರಿಂದ ಯಾವುದೇ ಸಮುದಾಯದ (ಮೇಲ್ ಅಥವಾ ತಳ ಸಮುದಾಯಗಳ) ಬಡವರು ಎಮ್ ಎಲ್ ಎ / ಎಂಪಿ / ಜಿಲ್ಲಾ / ತಾಲ್ಲೂಕು ಪಂಚಾಯತಿ ಸದಸ್ಯರಾಗುವ ಕನಸು ಕಾಣಲು ಸಾಧ್ಯವೇ ಇಲ್ಲ. ಹೀಗೆ ಜಾತಿ / ಧರ್ಮದ ಹೆಸರಿನಲ್ಲಿ ನಡೆಯುವ ರಾಜಕೀಯ ವಾಸ್ತವವಾಗಿ ನಮ್ಮ ಸಮಾಜದ ಮೇಲ್ವರ್ಗಗಳು ತಮ್ಮ ಆಸಕ್ತಿಗಳನ್ನು ಮುಂದುವರಿಸಲು ನಡೆಸುತ್ತಿರುವ ತಂತ್ರಗಾರಿಕೆ.

ಮತ್ತೊಂದು ಕಾರಣದಿಂದಲೂ ಪ್ರತಿ ಸಮುದಾಯದಿಂದಲೂ ಆಯಾಯ ಸಮುದಾಯದ ಆಯಾಯ ಸಮುದಾಯದ ಅನುಕೂಲಸ್ಥರು ಮಾತ್ರ ಚುನಾವಣೆಗೆ ಸ್ಪರ್ಧಿಸಲು ಟಿಕೇಟು ಪಡೆಯುತ್ತಾರೆ. ಮೇಲಿಂದ ಕೆಳಗೆ ಇಳಿಯುವ ಅಭಿವೃದ್ಧಿ ಮಾದರಿಗಳು ತಳಮಟ್ಟದ ರಾಜಕೀಯ ಪ್ರಕ್ರಿಯೆಗೆ ವಿಶೇಷ ಅವಕಾಶ ನೀಡುತ್ತಿಲ್ಲ. ಮೂಲಭೂತ ಆರ್ಥಿಕ ಪರಿವರ್ತನೆಯ ಪ್ರಶ್ನೆಗಳು ಚುನಾವಣೆಗಳಲ್ಲಿ ಮುಂಚೂಣಿಗಳಲ್ಲಿ ಬರುವುದೇ ಇಲ್ಲ. ಜಾತಿ / ಧರ್ಮದ ನೆಲೆಯಲ್ಲಿ ಚುನಾವಣೆಗಳು ನಡೆಯುತ್ತವೆ. ಜತೆಗೆ ಮುಖ್ಯವಾಹಿನಿಯ ಪಕ್ಷಗಳ ನಡುವೆ ಆರ್ಥಿಕ ಅಥವಾ ಅಭಿವೃದ್ಧಿ ನೀತಿ ಕುರಿತಂತೆ ಯಾವುದೇ ಮೂಲಭೂತ ಭಿನ್ನತೆ ಇರುವುದಿಲ್ಲ. ಹಾಗಾಗಿ ದುಡ್ಡು, ಸರಾಯಿ, ಟಿವಿ ಇತ್ಯಾದಿ ಆಮೀಷಗಳನ್ನೊಡ್ಡಿ ಮತಯಾಚನೆ ನಡೆಸಬೇಕಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಅತೀ ಹೆಚ್ಚು ದುಡ್ಡು ಖರ್ಚು ಮಾಡಿ ಚುನಾವಣೆ ಗೆಲ್ಲಬಲ್ಲ ಅಭ್ಯರ್ಥಿಗಳನ್ನು ಮಾತ್ರ ಚುನಾವಣ ಕಣಕ್ಕಿಳಿಸಲು ಎಲ್ಲ ಪಕ್ಷಗಳು ಬಯಸುತ್ತವೆ. ಬಡತನ, ಅನಕ್ಷರತೆ, ನಿರುದ್ಯೋಗ, ಬಲವಾದ ಜಾತಿ / ಧರ್ಮ ಪ್ರಜ್ಞೆ, ವರ್ಗ ಪ್ರಜ್ನೆಯ ಕೊರತೆ ಇತ್ಯಾದಿಗಳು ಜನರನ್ನು ತಮ್ಮ ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡುವ ಪಕ್ಷ ಯಾವುದೆಂದು ಗುರುತಿಸುವಲ್ಲಿ ದೊಡ್ಡ ತೊಡಕಾಗಿವೆ. ಹೀಗೆ ಜಾತಿ / ಧರ್ಮಗಳ ಹೆಸರಲ್ಲಿ ಪ್ರತಿ ಸಮುದಾಯದ ಮೇಲ್ವರ್ಗಗಳು ಅಧಿಕಾರ ಪಡೆಯುತ್ತವೆ. ಈ ಬಗೆಯಲ್ಲಿ ಅಧಿಕಾರ ಪಡೆದವರು ಬಲಾಢ್ಯರ ಆಸಕ್ತಿಗಳನ್ನು ಮುಂದುವರೆಸಲು ಪೂರಕವಾಗುವ ಅಭಿವೃದ್ಧಿ ಮಾದರಿಗಳನ್ನು ಯೋಜನೆಗಳನ್ನು ಮುಂಚೂಣಿಗೆ ತರುತ್ತಾರೆ. ಭೂಮಿ / ಬಂಡವಾಳ / ಆಧುನಿಕ ಸ್ಕಿಲ್ ಇಲ್ಲದವರ ಬದುಕನ್ನು ಸುಧಾರಿಸಲು ಪೂರಕವಾಗುವ ಕಾರ್ಯಕ್ರಮಗಳು ಯೋಜನೆಗಳ ಆದ್ಯತೆಗಳಾಗುವುದಿಲ್ಲ. ಈ ಎಲ್ಲದರ ಫಲವಾಗಿ ಎಲ್ಲ ಸಮುದಾಯಗಳ ಬಲಾಢ್ಯರು ರಾಜಕೀಯ ಅಧಿಕಾರ ಹೊಂದಿರುವ ಸಂದರ್ಭದಲ್ಲಿ ಪ್ರತಿ ಸಮುದಾಯಗಳ ಬಡವರು ವಿವಿಧ ಪ್ರಮಾಣದಲ್ಲಿ ಬಡತನವನ್ನು ಅನುಭವಿಸಬೇಕಾಗುತ್ತದೆ. ತಳಸ್ತರದ ಸಮುದಾಯಗಳ ಬಡವರು ಎಲ್ಲ ಬಗೆಯ ಕೊರತೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅನುಭವಿಸುತ್ತಾರೆ. ಬಲಾಢ್ಯ ಸಮುದಾಯದವರೆನ್ನುವ ಹಣೆಪಟ್ಟಿ ಹೊಂದಿರುವ ತಳಸ್ತರದ ಜನರು ಹುಸಿ ಸಾಮಾಜಿಕ ಸ್ಥಾನಮಾನದ ಕಲ್ಪನೆಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಬಡತನದೊಂದಿಗೆ ಇಬ್ಬಂದಿನತವನ್ನೂ ಬೆಳಸಿಕೊಳ್ಳಬೇಕಾಗುತ್ತೆ. ಇಂತಹ ತ್ರಿಶಂಕು ಸ್ಥಿತಿಯಿಂದ ಬಿಡುಗಡೆ ಪಡೆಯಬೇಕಾದರೆ ವರ್ಗ ರಾಜಕೀಯಕ್ಕೆ ಬೆಂಬಲ ನೀಡಬೇಕು. ಅಂದರೆ ಆರ್ಥಿಕವಾಗಿ ತಮ್ಮದೇ ಸ್ಥಾನಮಾನ ಹೊಂದಿರುವ ಇತರ ಸಮುದಾಯಗಳ ಜನರೊಂದಿಗೆ ಸೇರಿಕೊಳ್ಳಬೇಕು. ಇದು ಸಾಧ್ಯವಾಗಬೇಕಾದರೆ ಪ್ರಗತಿ ಪರ ಚಳವಳಿಗಳ ದೊಡ್ಡ ಇತಿಹಾಸ ಬೇಕು. ಅಥವಾ ದೊಡ್ಡ ಪ್ರಮಾಣದಲ್ಲಿ ಪ್ರಗತಿಪರ ಚಳವಳಿಗಳು ನಡೆಯುತ್ತಿರಬೇಕು.

ಪ್ರಗತಿಪರ ಚಳವಳಿಗಳು

ಪ್ರಗತಿಪರ ಚಳವಳಿಯ ದೊಡ್ಡ ಇತಿಹಾಸವನ್ನು ಕರ್ನಾಟಕವನ್ನು ಹೊಂದಿದೆಯೇ ಎಂದು ಪ್ರಶ್ನಿಸಿದರೆ ಉತ್ತರಿಸುವುದು ಕಷ್ಟ. ಹೌದೆಂದರೆ ಹಲವಾರು ಶತಮಾನಗಳ ಹಿಂದೆ ನಡೆದ ಬಸವ ಚಳವಳಿಯ ನಂತರ ನಡೆದ ದೊಡ್ಡ ಸಾಮಾಜಿಕ ಚಳವಳಿಗಳು ಯಾವುವು? ಎನ್ನುವ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಹಾಗೆಂದು ಬಸವ ಚಳವಳಿಯ ಮಹತ್ವವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಜಾತಿ, ಲಿಂಗ, ಮತ ಬೇಧಗಳನ್ನು ಅಲ್ಲಗಳೆದು ಸಮಾನತೆಯನ್ನು ಸಾಧಿಸಲು ಹೊರಟ ಚಳವಳಿ ಅದು. ಚಿದಾನಂದ ಮೂರ್ತಿಯವರ ಪ್ರಕಾರ ವಚನಕಾರರು ಜಾತಿಗಿಂತ ಜಾತಿಗಳ ನಡುವಿನ ಅಸಮಾನತೆಗಳನ್ನು ಹೆಚ್ಚು ವಿರೋಧಿಸಿದರು. ಸಮಾನತೆಯನ್ನು ಪ್ರತಿಪಾದಿಸುವ ಒಂದು ಮಾರ್ಗ ಅವರಿಗೆ ಕಾಣಿಸಿದ್ದು ಜಾತಿಗಳಲ್ಲಿ ಉತ್ತಮವೆಂದು ಭಾವಿತವಾಗಿದ್ದನ್ನು ಅಪಮೌಲ್ಯಿಕರಣಗೊಳಿಸುವುದು. ಒಂದು ವ್ಯವಸ್ಥೆಯನ್ನು ಭಂಗಗೊಳಿಸಲು ಇರುವ ನೇರ ಸುಲಭ ಮಾರ್ಗವೆಂದರೆ ಅದರ ಸಂಕೇತಗಳನ್ನು ಭಂಗಗೊಳಿಸುವುದು. ಜಾತಿಗಳ ನಡುವೆ ಇರುವ ಭೇದ ಊಟಕ್ಕಿಂತ ಮದುವೆಯಲ್ಲಿ ಎದ್ದು ಕಾಣುತ್ತದೆ. ಸ್ಪೃಶ್ಯ ಅಸ್ಪೃಶ್ಯರೆಲ್ಲ ಭಕ್ತರಾಗಿ ಎಲ್ಲರೂ ತಾತ್ವಿಕವಾಗಿ ಸಮ ಎಂದು ಒಪ್ಪಿಕೊಂಡರು ಭಿನ್ನ ಜಾತಿಗಳಿಂದ ಬಂದ ಜನ ರಕ್ತ ಸಂಬಂಧ ಬೆಳಸಲು ಹಿಂಜರಿದರು. ಕೆಲವರ ಪ್ರಕಾರ ಉಂಬುವುದು ಶಿವಾಚಾರ. ಕೊಂಬುವುದು ಕೊಡುವುದು ಕುಲಾಚಾರ. ಶಿವಾಚಾರ ಮತದ ನಿಯಮಗಳ ಆಚರಣೆ. ಕುಲಾಚಾರ ಜಾತಿ ನಿಯಮಗಳ ಆಚರಣೆ. ಚನ್ನಬಸವಣ್ಣ ಭಕ್ತರ ಈ ಆಚರಣೆಯನ್ನು ಟೀಕಿಸಿ ಬ್ರಾಹ್ಮಣರೇ ಅಗಲಿ ಅಸ್ಪೃಶ್ಯರೇ ಆಗಲಿ ಶಿವಭಕ್ತರಾದ ಮೇಲೆ ಪರಸ್ಪರ ರಕ್ತ ಸಂಬಂಧ ಬೆಳೆಸುವುದೊಂದೇ ಸದಾಚಾರ ಉಳಿದುದೆಲ್ಲ ಅನಾಚಾರ ಎಂದಿದ್ದಾರೆ. ಜಾತಿ ಜಾತಿಗಳ ನಡುವೆ ಮಾನವ ಸಂಬಂಧಗಳಿಗೆ ಧಕ್ಕೆಯುಂಟು ಮಾಡುವ ಅಂಶವಿದ್ದರೆ ಆ ಜಾತಿಗಳನ್ನೇ ನಿರ್ದಯವಾಗಿ ಕಿತ್ತುಹಾಕಬೇಕೆಂದು ಹರಳಯ್ಯ ಹೇಳುತ್ತಾನೆ. ಜಾತಿ, ಲಿಂಗ ಭೇದಗಳನ್ನು ಅಲ್ಲಗಳೆಯುವ ದೃಷ್ಟಿಯಿಂದ ಬಸವ ಚಳವಳಿಯ ದೊಡ್ಡ ಕೊಡುಗೆ ಇದೆ. ಆದರೆ ಬಸವನ ಅನುಯಾಯಿಗಳು ಬಸವ ತತ್ವವನ್ನು ಮುಂದುವರಿಸಿರೇ? ಎಂದು ಕೇಳಿದರೆ ಉತ್ತರಿಸುವುದು ಕಷ್ಟ. ಒಂದು ಪಂಗಡ ಬಸವಣ್ಣ ಯಾವುದನ್ನು ತಿರಸ್ಕರಿಸಿದ್ದಾರೋ ಅದನ್ನೇ ಅವರ ಮೇಲೆ ಆರೋಪಿಸಿದರೆ ಮತ್ತೊಂದು ಪಂಗಡ ಬಸವಣ್ಣನವರ ಜಾತಿ / ಲಿಂಗ ನಿರಾಕರಣೆಗಳನ್ನು ತಕ್ಕಮಟ್ಟಿಗೆ ಆಚರಿಸಿದೆ. ಆದರೆ ಕಾಲಕ್ರಮೇಣ ಎರಡನೇ ಪಂಗಡವೂ ಸಾಂಸ್ಥೀಕರಣಗೊಳ್ಳುವುದರಿಂದ ತತ್ತ್ವಕ್ಕಿಂತ ಮಠಮಂದಿರಗಳು ಮುಖ್ಯವಾದವು.

ಬಸವ ಚಳವಳಿಯ ನಂತರ ಹೇಳಿಕೊಳ್ಳಬಹುದಾದ ಸಾಮಾಜಿಕ ಚಳವಳಿಗಳು ಕರ್ನಾಟಕದಲ್ಲಿ ನಡೆದಿಲ್ಲ ಎನ್ನುವ ವಾದ ಇದೆ. ಈ ವಾದವನ್ನು ಬಾಂಬೆ ಕರ್ನಾಟಕ ಭಾಗದಲ್ಲಿ ಮತ್ತು ಮೈಸೂರು ಕರ್ನಾಟಕದಲ್ಲಿ ನಡೆದ ಬ್ರಾಹ್ಮಣೇತರ ಚಳವಳಿಗಳ ಉದಾಹರಣೆಗಳನ್ನು ಕೊಟ್ಟು ಅಥವಾ ಕರಾವಳಿ ತಿರಸ್ಕರಿಸಬಹುದು. ಬಾಂಬೆ ಕರ್ನಾಟಕದ ನಾರಾಯಣ ಗುರುಸ್ವಾಮಿ ಉದಾಹರಣೆ ಕೊಟ್ಟು ತಿರಸ್ಕತಿಸಬಹುದು. ಬಾಂಬೆ ಕರ್ನಾಟಕದ ಬ್ರಾಹ್ಮಣೇತರ ಚಳವಳಿಗೆ ಪುಲೆಯ ಪ್ರಭಾವ ಇದ್ದರೆ ಮೈಸೂರು ಪ್ರಾಂತದ ಬ್ರಾಹ್ಮಣೇತರ ಚಳವಳಿಗೆ ಪರಿಯಾರ್ ಪ್ರಭಾವ ಇತ್ತು. ಈ ಇಬ್ಬರು ಮಹನೀಯರು ತಮ್ಮ ತಮ್ಮ ನಾಡಿನಲ್ಲಿ ಹಿಂದೂ ಧರ್ಮದ ಸಾಂಸ್ಥಿಕ ಅಸಮಾನತೆಗಳನ್ನು ಮತ್ತು ಲಿಂಗ ಭೇದವನ್ನು ಬಲವಾಗಿ ವಿರೋಧಿಸಿದ್ದಾರೆ. ತಳಸ್ತರದ ಜನರಲ್ಲಿ ಅವರ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಬದುಕಿನ ಬಗ್ಗೆ ಆತ್ಮಸಮ್ಮಾನ ಹೆಚ್ಚಿಸಿಕೊಳ್ಳುವಂತೆ ಮಾಡಿದ್ದಾರೆ. ಪುಲೆ ಈ ಕೆಲಸವನ್ನು ಮಹಾರಾಷ್ಟ್ರದಲ್ಲಿ ಮಾಡಿದರೆ ಪರಿಯಾರ್ ಇದೇ ಕೆಲಸವನ್ನು ತಮಿಳುನಾಡಿನಲ್ಲಿ ಮಾಡಿದ್ದಾರೆ. ಇವರುಗಳ ಚಳವಳಿಗಳಿಂದ ಪ್ರಭಾವಿತರಾಗಿ ಕರ್ನಾಟಕದ ಎರಡು ಭಾಗದಲ್ಲಿ ಕರ್ನಾಟಕದ ಏಕೀಕರಣ ಸಂದರ್ಭದಲ್ಲಿ ಬ್ರಾಹ್ಮಣೇತರ ಚಳುವಳಿಗಳು ಹುಟ್ಟಿಕೊಂಡವು. ಬಾಂಬೆ ಕರ್ನಾಟಕದಲ್ಲಿ ಬ್ರಾಹ್ಮಣೇತರ ಚಳವಳಿಯ ನಾಯಕತ್ವವನ್ನು ಲಿಂಗಾಯತ ಸಮುದಾಯ ಬಲಾಢ್ಯರು ವಹಿಸಿಕೊಂಡರೆ ಮೈಸೂರು ಪ್ರಾಂತದಲ್ಲಿ ಒಕ್ಕಲಿಗ ಸಮುದಾಯದ ಬಲಾಢ್ಯರ ಬ್ರಾಹ್ಮಣೇತರ ಚಳವಳಿಯ ನಾಯಕತ್ವ ವಹಿಸಿದರು. ದುರಾದೃಷ್ಟವೆಂದರೆ ಕರ್ನಾಟಕದಲ್ಲಿ ನಡೆದ ಈ ಎರಡೂ ಚಳವಳಿಗಳು ಹಿಂದೂ ಧರ್ಮದ ಸಾಂಸ್ಥಿಕ ಅಸಮಾನತೆಯನ್ನು ಮತ್ತು ಲಿಂಗ ಭೇಧವನ್ನು ಪ್ರಶ್ನಿಸುವುದಕ್ಕೆ ವಿಶೇಷ ಒತ್ತು ನೀಡಲಿಲ್ಲ. ಸ್ಥಳೀಯ ಸರಕಾರ, ಉದ್ಯೋಗ ಹಾಗೂ ಶಿಕ್ಷಣಗಳಲ್ಲಿ ಮೀಸಲಾತಿ ಪಡೆಯುವುದಕ್ಕೆ ಈ ಚಳವಳಿಗಳು ತಮ್ಮ ಹೋರಾಟವನ್ನು ಸೀಮಿತಗೊಳಿಸಿದವು.

ಸಾಂಸ್ಥಿಕ ಅಸಮಾನತೆಗಳನ್ನು ಪ್ರಶ್ನಿಸುವುದರ ಬದಲು ಗ್ರಾಮೀಣ ಪ್ರದೇಶಗಳಲ್ಲಿ ಜಾತಿ ಪದ್ಧತಿಯನ್ನು ಜೀವಂತ ಇರಿಸವಲ್ಲಿ ಇವರು (ಬ್ರಾಹ್ಮಣೇತರ ಚಳವಳಿಯಲ್ಲಿ ಭಾಗವಹಿಸಿದ ಬಲಾಢ್ಯರು) ಮಹತ್ವದ ಪಾತ್ರ ವಹಿಸಿದರು. ಉತ್ತರ ಕರ್ನಾಟಕದಲ್ಲಿ ಬ್ರಾಹ್ಮಣೇತರ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಬಲಾಢ್ಯರನ್ನು ಏಕೀಕರಣ ಹಾಗೂ ರಾಷ್ಟ್ರೀಯ ಚಳವಳಿಗಳ ಮುಂಚೂಣಿಗೆ ತರಲಾಯಿತು. ಮುಂಬಯಿ ಪ್ರಾಂತ್ಯದಲ್ಲಿ ಏಕೀಕರಣ ಚಳವಳಿ ಹುಟ್ಟಿದೆ. ಅಲ್ಲಿ ಅದು ಕನ್ನಡ ವರ್ಸಸ್ ಮರಾಠಿ ಭಾಷೆಗಳ ನಡುವಿನ ಹೋರಾಟದ ರೂಪದಲ್ಲಿ ಪ್ರಚಾರಗೊಂಡಿದೆ. ಆದರೆ ಯಾವತ್ತು ಕೂಡ ಅದು ಕನ್ನಡ ಮಾತಾಡುವ ಕೃಷಿಕರರು (ಲಿಂಗಾಯತರು) ಮತ್ತು ಮರಾಠಿ ಮಾತಾಡುವ ಭೂಮಾಲಿಕರು (ದೇಸಾಯಿ, ಕುಲಕರ್ಣಿ) ನಡುವಿನ ಹೋರಾಟವೆಂದು ಬಿಂಬಿತವಾಗಿಲ್ಲ. ಬ್ರಾಹ್ಮಣ ಸಮುದಾಯದ ಬಲಾಢ್ಯರು ಮುಂಚೂಣಿಯಲ್ಲಿದ್ದ ಭಾರತದ ರಾಷ್ಟ್ರೀಯ ಹೋರಾಟದಲ್ಲಾಗಲಿ ಅಥವಾ ಕನ್ನಡ ರಾಷ್ಟ್ರೀಯತೆಯ ಹೋರಾಟದಲ್ಲಾಗಲಿ ಲಿಂಗಾಯತರ ಬಲಾಢ್ಯರು ಆರಂಭದಲ್ಲಿ ಪಾಲುಗೊಳ್ಳಲಿಲ್ಲ. ಯಾಕೆಂದರೆ ಲಿಂಗಾಯತರು ಒಂದೆಡೆ ದಿನನಿತ್ಯದ ಬದುಕಿನಲ್ಲಿ ಬ್ರಾಹ್ಮಣ ಭೂಮಾಲಿಕರೊಂದಿಗೆ ಭೂಮಿ ಸಂಬಂಧವಾಗಿ ಏಗಬೇಕಿತ್ತು. ಮತ್ತೊಂದೆಡೆ ಸಾಂಸ್ಕೃತಿಕವಾಗಿಯೂ ಬ್ರಾಹ್ಮಣರೊಂದಿಗೆ ಏಗಬೇಕಿತ್ತು. ಆದುದರಿಂದಲೇ ಲಿಂಗಾಯತ ಮುಂದಾಳುಗಳಿಗೆ ಬ್ರಾಹ್ಮಣೇತರ ಚಳವಳಿ ಮುಖ್ಯವಾಯಿತು. ಎರಡೂ ಹೋರಾಟಗಳಿಗೂ (ಏಕೀಕರಣ ಮತ್ತು ರಾಷ್ಟ್ರೀಯ ಹೋರಾಟಕ್ಕು) ಸಾಂಖ್ಯಾಬಲ ಬೇಕಿತ್ತು. ಅದು ಬ್ರಾಹ್ಮಣರಲ್ಲಿ ಇರಲಿಲ್ಲ. ಲಿಂಗಾಯತರಲ್ಲಿ ಇತ್ತು. ಆದುದರಿಂದ ಹೇಗಾದರೂ ಮಾಡಿ ಎರಡೂ ಹೋರಾಟಗಳ ಮುಂಚೂಣಿಗೆ ಲಿಂಗಾಯತರ ಬಲಾಢ್ಯರನ್ನು ತರುವುದು ಅನಿವಾರ್ಯವಾಗಿತ್ತು. ಹೀಗೆ ಕನ್ನಡ ರಾಷ್ಟ್ರೀಯತೆಯ ಪ್ರಶ್ನೆ ಒಂದು ವಿಧದಲ್ಲಿ ಸಮುದಾಯವೊಂದರ ಬಲಾಢ್ಯರ ಭೂಮಿ ಪ್ರಶ್ನೆ ಕೂಡ ಆಗಿತ್ತು. ಆದರೆ ಇಡೀ ಏಕೀಕರಣ ಚಳವಳಿಯನ್ನು ಒಂದು ನಿರ್ದಿಷ್ಟ ಸಾಂಸ್ಕೃತಿಕ ಚಳವಳಿಯ ರೂಪದಲ್ಲಿ ನೋಡಿರುವುದರಿಂದ ಚಳವಳಿಯ ಒಳ ಪ್ರವಾಹವಾಗಿದ್ದ ಆರ್ಥಿಕ ಆಸಕ್ತಿಗಳು ಮುಂಚೂಣಿಗೆ ಬರಲೇ ಇಲ್ಲ. ದುರಂತವೆಂದರೆ ಏಕೀಕರಣ ಚಳವಳಿಯನ್ನು ಕಟ್ಟಿಕೊಳ್ಳಲು ಬಳಸಿದ ಸಾಂಸ್ಕೃತಿಕ ಸರಕುಗಳಲ್ಲಿ ಬಹುಪಾಲು ಬಸವ ಚಳವಳಿ ಮುಂಚೂಣಿಗೆ ತಂದ ಮೌಲ್ಯಗಳಿಗೆ (ಸಮಾನತೆಯ ಮೌಲ್ಯಗಳಿಗೆ) ವಿರುದ್ಧವಾಗಿದ್ದವು. ಈ ಸೂಕ್ಷ್ಮವನ್ನು ಲಿಂಗಾಯತ ಸಮುದಾಯದ ಬಲಾಢ್ಯರು ಮನಗಾಣಲಿಲ್ಲ. ಅಥವಾ ಏಕೀಕರಣ ಹಾಗೂ ರಾಷ್ಟ್ರೀಯ ಚಳವಳಿಗಳ ನಾಯಕತ್ವ ಮತ್ತು ಅವುಗಳಿಂದ ಮುಂದೆ ದಕ್ಕಬಹುದಾದ ಅಧಿಕಾರ ತಮ್ಮದೇ ಸಮುದಾಯದ ಸಾಂಸ್ಕೃತಿಕ ಮೌಲ್ಯಗಳ ಅಂಚಿಗೆ ಸರಿದಿರುವುದನ್ನು ಗಂಭೀರವಾಗಿ ಪರಿಗಣಿಸದಂತೆ ಮಾಡಿರಬಹುದು.

ನಾರಾಯಣ ಗುರುಗಳು ಕೂಡ ಹಿಂದೂ ಧರ್ಮ ಸಾಂಸ್ಥಿಕ ಅಸಮಾನತೆಗಳನ್ನು ಸುಧಾರಿಸಲು ಮತ್ತು ಜಾತಿ ಭೇದಗಳನ್ನು ನಿವಾರಿಸಲು ಪ್ರಯತ್ನಿಸಿದ್ದಾರೆ. ಶಂಕರಾಚಾರ್ಯರು ಕೇರಳದಲ್ಲಿ ಅದ್ವೈತ ಸಿದ್ಧಾಂತದ ಪ್ರಚಾರ ಮಾಡುವ ಆಚಾರ್ಯರು ಕೂಡ ಜಾತಿ ಪದ್ಧತಿಯನ್ನು ಮೀರಿ ಬದುಕಲು ಸಾಧ್ಯವಾಗಲಿಲ್ಲ. ಸಿದ್ಧಾಂತ ಮತ್ತು ದಿನನಿತ್ಯದ ಬದುಕಿನ ನಡುವೆ ಈ ಬಗೆಯ ಕಂದರವನ್ನು ಸೃಷ್ಟಿಸಿಕೊಂಡಿರುವುದನ್ನು ನಾರಾಯಣ ಗುರುಗಳು ಖಂಡಿಸುತ್ತಾರೆ. ಆತ್ಮ ಮತ್ತು ಪರಮಾತ್ಮರ ನಡುವೆ ವ್ಯತ್ಯಾಸವೇ ಇಲ್ಲ ಎಂದಾದರೆ ಈ ಜಾತಿ ಪದ್ಧತಿ ಯಾಕೆ? ಆತ್ಮಪರಮಾತ್ಮ ಒಂದೇ ಆಗಿರುವುದರಿಂದ ಎಲ್ಲರಲ್ಲೂ (ಜಾತಿ ಭೇದವಿಲ್ಲದೆ) ದೇವರ ಅಂಶ ಇರಬೇಕಲ್ಲವೇ? ಹೀಗಿರುವಾಗ ಶೂದ್ರರನ್ನು ದೇವಸ್ಥಾನದ ಹೊರಗಿಡುವುದು ಎಷ್ಟು ಸರಿ? ಇತ್ಯಾದಿ ಪ್ರಶ್ನೆಗಳು ನಾರಾಯಣ ಗುರುಗಳನ್ನು ಕಾಡುತ್ತವೆ. ಶೂದ್ರರಿಗೆ ಪ್ರವೇಶ ನಿರಾಕರಿಸುವ ದೇವಾಲಯಗಳನ್ನು ಶೂದ್ರರು ನಿರಾಕರಿಸಿ ತಮ್ಮ ದೇವಾಲಯಗಳನ್ನ ತಾವೇ ನಿರ್ಮಿಸಿಕೊಳ್ಳಬೇಕೆಂದು ನಾರಾಯಣ ಗುರುಗಳು ವಾದಿಸುತ್ತಾರೆ. “ನನಗೆ ಪ್ರವೇಶವಿಲ್ಲವಾದರೆ ನಾನು ನನ್ನದೇ ದೇವಸ್ಥಾನ ಮಾಡಿಕೊಳ್ಳುತ್ತೇನೆಂದು” ನಾರಾಯಣ ಗುರುಗಳು ತಮ್ಮ ಶಿವ ದೇವಾಲಯವನ್ನು ನಿರ್ಮಿಸಿಕೊಳ್ಳುತ್ತಾರೆ. ಗುರುಗಳ ಶಿವಾಲಯದಲ್ಲಿ ಜಾತಿ ಭೇದವಿಲ್ಲದ ಎಲ್ಲರಿಗೂ ಪ್ರವೇಶ ಇರಬೇಕೆಂದು ತೀರ್ಮಾನಿಸುತ್ತಾರೆ. ಜಾತಿ, ಮತ, ಲಿಂಗ ಭೇದಗಳನ್ನು ತಿರಸ್ಕರಿಸುವ ದೃಷ್ಟಿಯಿಂದ ನಾರಾಯಣ ಗುರು, ಬಸವಣ್ಣ, ಪುಲೆ, ಪೆರಿಯಾರ್ ಇವರೆಲ್ಲ ಒಂದೇ ಸಾಲಿನಲ್ಲಿ ಬರುತ್ತಾರೆ. ದುರಂತವೆಂದರೆ ಇವರ ಸಿದ್ಧಾಂತಗಳನ್ನು ಬಳಸಿಕೊಂಡು ಹುಟ್ಟಿದ ಚಳವಳಿಗಳು ಅವುಗಳ (ಸಿದ್ಧಾಂತಗಳ) ಮೂಲ ಆಶಯಕ್ಕೆ ವ್ಯತಿರಿಕ್ತವಾಗಿ ಬಳಕೆಯಾದವು. ಬಸವ, ಪೆರಿಯಾರ್, ಪುಲೆ ಸಿದ್ಧಾಂತಗಳು ಹೇಗೆ ತಿರುಚಿಕೊಂಡು ಕಾರ್ಯರೂಪಕ್ಕೆ ಬಂದವೆಂದು ಮೇಲಿನ ಪುಟಗಳಲ್ಲಿ ನೋಡಿದ್ದೇವೆ. ಜಾತಿ ವಿನಾಶವನ್ನು ಆಶಯವಾಗಿಟ್ಟುಕೊಂಡು ಕೇರಳದಲ್ಲಿ ಹುಟ್ಟಿದ ನಾರಾಯಣ ಗುರು ಚಳವಳಿ ಕರ್ನಾಟಕದ ಕರಾವಳಿ ಪ್ರದೇಶಕ್ಕೂ ಹಬ್ಬಿತು. ಆದರೆ ಕರಾವಳಿ ಕರ್ನಾಟಕದಲ್ಲಿ ಅದು ಕೇವಲ ಒಂದು ಜಾತಿಯ (ಬಿಲ್ಲವರ) ಅಸಮಾನತೆಯನ್ನು ಹೋಗಲಾಡಿಸಲು ಸೀಮಿತವಾಯಿತು.

ಕರ್ನಾಟಕಕ್ಕೆ ದೊಡ್ಡ ಮಟ್ಟಿನ ಸಾಂಸ್ಕೃತಿಕ ಚಳವಳಿಗಳ ಇತಿಹಾಸ ಇಲ್ಲದಿರಬಹುದು ಆದರೆ ರಾಜಕೀಯ ಚಳವಳಿಗಳ ಕೊರತೆ ಇರಲಿಲ್ಲ ಎನ್ನುವ ವಾದ ಇದೆ. ಈ ವಾದಕ್ಕೆ ಸಾಕ್ಷಿಯಾಗಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ನಡೆದ ರೈತ ಚಳವಳಿಗಳ ಉದಾಹರಣೆಗಳನ್ನು ನೀಡಬಹುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆರೆ ರಾಜ್ಯ ಕೇರಳ ಎಡಪಂಧೀಯ ಚಳವಳಿಯ ಪ್ರಭಾವ ಇದ್ದರೆ, ಉತ್ತರ ಕನ್ನಡದಲ್ಲಿ ದಿನಕರ ದೇಸಾಯಿಯವರ ಹುಟ್ಟು ಹಾಕಿದ ಪ್ರಜಾ ಸೋಶಿಯಲಿಸ್ಟ್ ಪಕ್ಷದ ಪ್ರಭಾವ ಇತ್ತು. ಶಿವಮೊಗ್ಗಕ್ಕೆ ಕಾಗೋಡು ಚಳವಳಿಯ ಇತಿಹಾಸವಿದೆ. ದಿನಕರ ದೇಸಾಯಿಯವರ ನೇತೃತ್ವದಲ್ಲಿ 194೦ರಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ರೈತ ಚಳವಳಿಗಳು ಆರಂಭವಾಗಿದ್ದವು. ಅಂಕೋಲ ತಾಲ್ಲೂಕು ರೈತ ಸಂಘ 194೦ರಲ್ಲಿ ಹುಟ್ಟಿಕೊಂಡಿದೆ. ಗೇಣಿ ಪ್ರಮಾಣವನ್ನು ಕಡಿತಗೊಳಿಸುವುದು, ಬಾಂಬೆ ಅಗ್ರಿಕಲ್ಚರಲ್ ಡೆಟ್ ರಿಲೀಫ್ ಅಯಕ್ಟ್, 1939ನ್ನು ಜಾರಿಗೊಳಿಸುವುದು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ರೈತ ಸಂಘ ಚಳವಳಿ ನಡೆಸಿದೆ. ಎಡಪಂಥೀಯ ತತ್ವೈಸಿದ್ಧಾಂತಗಳ ಬುನಾದಿಯಲ್ಲಿ ಕೆನರಾ ಡಿಸ್ಟ್ರಿಕ್ಟ್ ಕಿಸಾನ್ ಸಂಘ 1945ರಲ್ಲಿ ಕಾರವಾರದಲ್ಲಿ ಆರಂಭವಾಯಿತು. ಗೇಣಿದಾರರ ಸಮಸ್ಯೆ ಪರಿಹಾರಕ್ಕೆ ಈ ಸಂಘಟನೆಯೂ ಹೋರಾಟ ನಡೆಸಿದೆ. ಎರಡೂ ಸಂಘಟನೆಗಳು ಸ್ಥಳೀಯ ಕಾಂಗ್ರೇಸ್ ಶಾಸಕರು ಗೇಣಿದಾರರ ಸಮಸ್ಯೆಯನ್ನು ಅಸೆಂಬ್ಲಿಯಲ್ಲಿ ಚರ್ಚಿಸುವಂತೆ ಒತ್ತಡ ಹೇರುತ್ತಿದ್ದವು. ಬಾಂಬೆ ಅಯಕ್ಟ್ ಆಂಡ್ ಅಗ್ರಿಕಲ್ಚರಲ್ ಲ್ಯಾಂಡ್ ಅಯಕ್ಟ್ ನಲ್ಲಿ ಬಾಂಬೆ ಕರ್ನಾಟಕ ಪ್ರವೇಶದ ರೈತರು ನೀಡಬೇಕಾದ ಗುತ್ತಿಗೆಯನ್ನು ಆರನೇ ಒಂದಕ್ಕೆ ಇಳಿಸಿರುವುದರಲ್ಲಿ ಉತ್ತರ ಕನ್ನಡದ ರೈತ ಚಳವಳಿಗಳ ಪಾತ್ರ ಇದೆ. ಬಾಂಬೆ ಆಕ್ಟಲ್ಲಿ ಸ್ವಂತ ಕೃಷಿಯ ಕಾರಣ ನೀಡಿ ಗೇಣಿಗೆ ನೀಡಿದ ಭೂಮಿಯನ್ನು ಮಾಲಿಕರು ಪುನರ್ ಸ್ವಾಧೀನ ಪಡಿಸಿಕೊಳ್ಳಲು ಅವಕಾಶವಿತ್ತು. ಈ ಅಪಾಯವನ್ನು ಮನಗಂಡು ರೈತ ಸಂಘಟನೆಗಳು ವಕ್ಕಲೆಬ್ಬಿಸುವ ಭೂಮಾಲಿಕರ ಭೂಮಿಯನ್ನು ರೈತರು ಗೇಣಿಗೆ ಉಳುಮೆ ಮಾಡಬಾರದು. ಕೃಷಿ ಕಾರ್ಮಿಕರು ಅಂತಹ ಭೂಮಾಲಿಕರ ಹೊಲಕ್ಕೆ ದುಡಿಯಲು ಹೋಗಬಾರದು. ಕರೆ ನೀಡಿದರು. ರೈತ ಸಂಘದ ಕರೆಯನ್ನು ರೈತರ ಮತ್ತು ಕೃಷಿಕಾರ್ಮಿಕರು ಗಂಭೀರವಾಗಿ ಪರಿಗಣಿಸಿದ್ದಾರೆ. ಇದರಿಂದಾಗಿ ಗೇಣಿ ನೀಡಿದ ಭೂಮಿಯನ್ನು ಹಿಂದಕ್ಕೆ ಪಡೆಯುವುದು ಕಡಿಮೆಯಾಯಿತು. ಅಂಕೋಲಾ ಕಾರಾವಾರಗಳಲ್ಲಿ ಹುಟ್ಟಿದ ರೈತ ಚಳವಳಿ ನಿಧಾನವಾಗಿ ಜಿಲ್ಲೆಯ ಇತರ ಭಾಗಗಳಿಗೂ ವಿರುದ್ಧ ಸಂಘಟನೆಗಳಿಗೆ ಹೆದರಿ ಭೂಮಾಲಿಕರು ಗೇಣಿಗೆ ನೀಡಿದ ಭೂಮಿಯನ್ನು ಪುನರ್ ಸ್ವಾಧೀನಪಡಿಸಿಕೊಳ್ಳಲು ಒಪ್ಪಿಗೆ ನೀಡುತ್ತಿರಲಿಲ್ಲ. ಇದರಿಂದ ಕಂಗೆಟ್ಟ ಭೂಮಾಲಿಕರು ರೈತ ಸಂಘಟನೆಗಳ ಶಕ್ತಿಯ ವಿರುದ್ಧ ಹೋರಾಡಲು ಸಿದ್ಧಾಪುರ ತಾಲ್ಲೂಕು ಭೂಮಾಲಿಕರ ಸಂಘವನ್ನು 1948ರಲ್ಲಿ ಆರಂಭಿಸಿದರು.

ಏಕೀಕೃತ ಕರ್ನಾಟಕ ಜಾರಿಗೆ ತಂದ 1961ರ ಭೂಸುಧಾರಣ ಮಸೂದೆ ಉತ್ತರ ಕನ್ನಡ ಜಿಲ್ಲೆಯ ರೈತರ ದೃಷ್ಟಿಯಿಂದ ವಸಾಹತು ಕಾಲದ ಮಸೂದೆಗಳಿಗಿಂತ ಭಿನ್ನವಾಗಲಿಲ್ಲ. ಅದರಲ್ಲೂ ಹೊಸ ಕಾಯಿದೆ ನಿಗದಿಗೊಳಿಸಿದ ಉತ್ಪನ್ನದ ನಾಲ್ಕನೇ ಒಂದಂಶ ಗೇಣಿ ಉತ್ತರ ಕನ್ನಡ ಜಿಲ್ಲೆಯ ರೈತರನ್ನು ರೊಚ್ಚಿಗೆಬ್ಬಿಸಿತು. ಯಾಕೆಂದರೆ ಹಿಂದಿನ ಅವರ ಗೇಣಿಗೆ ಹೋಲಿಸಿದರೆ ಹೊಸ ಕಾಯಿದೆ ಶೇ.9ರಷ್ಟು ಹೆಚ್ಚಿನ ಗುತ್ತಿಗೆ ನಿಗದಿಗೊಳಿಸಿದೆ. ಹೊಸ ಕಾಯಿದೆಯಿಂದ ಕಳೆಗುಂದಿದ್ದ ರೈತ ಸಂಘಟನೆಗಳು ಪುನರ್ ಜೀವ ಪಡೆದವು. ಪ್ರಜಾ ಸೋಸಿಯಲಿಸ್ಟ್ ಪಾರ್ಟಿಯಡಿಯಲ್ಲಿ ಪಿ.ಎಸ್.ಪಿ ರೈತ ಸಂಘಟನೆಗಳು ಒಂದಾದವು. 1967ರ ಚುನಾವಣೆಯಲ್ಲಿ ಪಿ.ಎಸ್.ಪಿ ಕಾಂಗ್ರೇಸ್ ವಿರುದ್ಧ ಚುನಾವಣೆಗೆ ಸ್ವರ್ಧಿಸಿತು. ಭೂಮಾಲಿಕರ ಆಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು 1961ರ ಕಾಯಿದೆಯನ್ನು ಕಾಂಗ್ರೇಸ್ ಪಕ್ಷ ತಂದಿದೆ. ಈ ಕಾಯಿದೆಯಿಂದ ಗೇಣಿದಾರರಿಗೆ ಏನೇನು ಲಾಭವಾಗಲು ಸಾಧ್ಯವಿಲ್ಲ. ಕಾಂಗ್ರೇಸ್ ಜತೆ ಹೋದರೆ ಗೇಣಿದಾರರ ಆಸಕ್ತಿಗಳು ರಕ್ಷಣೆಯಾಗುವುದಿಲ್ಲ. ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಬೇಕಾದರೆ ಗೇಣಿದಾರರು ಪಿ.ಎಸ್.ಪಿ.ಗೆ ಮತ ನೀಡಬೇಕೆಂದು ಪ್ರಚಾರ ಮಾಡಿದರು. ಆ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ಮೂರು ಮಂದಿ ಪಿ.ಎಸ್.ಪಿ ಯಿಂದ ವಿಧಾನಸಭೆಗೆ ಆಯ್ಕೆಯಾದರು. ದಿನಕರ ದೇಸಾಯಿಯವರು ರೈತರ ಬೆಂಬಲದಿಂದ ಲೋಕಸಭೆಗೆ ಪ್ರವೇಶ ಪಡೆದರು. 1961ರ ಕಾಯಿದೆ ನಿಗದಿ ಪಡಿಸಿದ ಹುತ್ತಿಗೆಯನ್ನು ಅಲಕ್ಷಿಸಿ ಗೇಣಿದಾರರು ಪ್ರತಿ ಎಕರೆ ಭೂಮಿಗೆ ರೂ.2೦ ಗುತ್ತಿಗೆ ನೀಡಿದರೆ ಸಾಕೆಂದು 1967ರಲ್ಲಿ ಪಿ.ಎಸ್.ಪಿ ಕರೆ ನೀಡಿತ್ತು. ಗುತ್ತಿಗೆಯನ್ನು ಹಿಂದಿನ ಆರನೇ ಒಂದಂಶಕ್ಕೆ ಇಳಿಸದಿದ್ದರೆ ಗುತ್ತಿಗೆಯೇ ಕೊಡದಿರುವ ಚಳವಳಿಯನ್ನು ಉತ್ತರ ಕನ್ನಡದಲ್ಲಿ ಆರಂಭಿಸಲಾಗುವುದೆಂದು ವಿಧಾನಸಭೆಯಲ್ಲಿ ಪಿ.ಎಸ್.ಪಿ. ಸದಸ್ಯರು ಎಚ್ಚರಿಸಿದರು. ಆದರೆ ಪಿ.ಎಸ್.ಪಿ ಸೂಚಿಸಿದಂತೆ 1961ರ ಕಾಯಿದೆ ತಿದ್ದುಪಡಿಯಾಗಿ ಗುತ್ತಿಗೆ ಕಡಿಮೆಯಾಗಲಿಲ್ಲ. ಹಾಗೆಂದು ನೋ ರೆಂಟ್ ಚಳವಳಿ ಕೂಡ ನಡೆಯಲಿಲ್ಲ. ಹೀಗೆ ಕಾಲಕ್ರಮೇಣ ರೈತ ಚಳವಳಿ ಮತ್ತು ಅದರಿಂದ ಬೆಂಬಲ ಪಡೆದ ಪಕ್ಷ ಎರಡೂ ಕಾವು ಕಳೆದುಕೊಂಡವು. ಆದಾಗ್ಯೂ ಈ ಚಳವಳಿಗಳು ರೈತರಲ್ಲಿ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿದೆ. 1974ರ ಕಾಯಿದೆ ಹೆಚ್ಚು ಪರಿಣಾಮಕಾರಿಯಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿದ್ದರೆ ಅದರಲ್ಲಿ ರೈತ ಚಳವಳಿಯ ಪಾತ್ರವನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಗೇಣಿ ಮಾಪನ ಮಾಡುವ ಅಳತೆಗೆ ಸಂಬಂಧಿಸಿದಂತೆ ಕಾಗೋಡಿನ ರೈತರು ಮತ್ತು ಭೂಮಾಲಿಕರ ಮಧ್ಯ ತಕರಾರು ಎದ್ದಿದೆ. ಸಾಮಾನ್ಯವಾಗಿ ಮಾಪನ ಮಾಡುವ ಪಾತ್ರ ಕೊಳಗದಲ್ಲಿ ಮೂರು ಸೇರು ತುಂಬುತ್ತದೆ. ಆದರೆ ಭೂಮಾಲಿಕರು ತಮ್ಮದೇ ಕೊಳಗ ಸಿದ್ಧಪಡಿಸಿಕೊಳ್ಳುತ್ತಾರೆ. ಆ ಕೊಳಗದಲ್ಲಿ ಮೂರುವರೆಯಿಂದ ನಾಲ್ಕು ಸೇರು ಕೂಡ ತುಂಬುವಂತಿತ್ತು. ಗೇಣಿ ಮಾಪನ ಮಾಡುವ ಪಾತ್ರದ ಗಾತ್ರವನ್ನು ಹಿಗ್ಗಿಸಿಕೊಂಡು ಭೂಮಾಲಿಕರು ಲೆಕ್ಕಕ್ಕಿಂತ ಹೆಚ್ಚಿನ ಗೇಣಿಯನ್ನು ವಸೂಲಿ ಮಾಡುತ್ತಿದ್ದರು. ಈ ಕ್ರಮವನ್ನು ಕಾಗೋಡಿನ ರೈತರು ವಿರೋಧಿಸಿದರು. ಭೂಮಾಲಿಕರಿಂದ ನಡೆಯುತ್ತಿದ್ದ ಶೋಷಣೆಯನ್ನು ಪ್ರತಿಭಟಿಸುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ 1948ರಲ್ಲಿ ಸಾಗರ ತಾಲ್ಲೂಕು ರೈತ ಸಂಘ ಆರಂಭವಾಯಿತು. ಗೇಣಿದಾರರು ಹಿತರಕ್ಷಣೆ ಕಾನೂನನ್ನು ಜಾರಿಗೆ ತರಬೇಕು. ಸರಕಾರ ಟೆನೆನ್ಸಿಬೆಲ್ ಜಾರಿಗೆ ತರುವವರೆಗೆ ಪರಸ್ಪರ ಒಪ್ಪಿಗೆ ಇಲ್ಲದೆ ಗೇಣಿದಾರರಿಂದ ಜಮೀನು ಬಿಡಿಸಬಾರದು, ಹಣದ ಗೇಣಿಯನ್ನು ಭತ್ತದ ಗೇಣಿಗೆ ಬದಲಾಯಿಸಿದ್ದರಿಂದ ರೈತರಿಗಾದ ನಷ್ಟವನ್ನು ಸರಿಪಡಿಸಬೇಕು, ತೆಗೆದುಕೊಂಡ ಗೇಣಿಗೆ ಮಾಲಿಕರು ರಸೀದಿಗಳನ್ನು ನೀಡಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತ ಸಂಘ ಚಳವಳಿ ಆರಂಭಿಸಿತು. ರೈತರ ಚಳವಳಿಯನ್ನು ಹತ್ತಿಕ್ಕಲು ಭೂಮಾಲಿಕರು ಪ್ರಯತ್ನಿಸಿದರು. ರೈತ ಸಂಘದ ಚಳವಳಿಗಳಲ್ಲಿ ಭಾಗವಹಿಸುವ ರೈತರನ್ನು ಹೆದರಿಸಿ ಬೆದರಿಸಿ ದೂರ ಇಡಲು ಪ್ರಯತ್ನಿಸಿದರು. ರೈತರನ್ನು ಗೇಣಿಗೆ ನೀಡಿದ ಭೂಮಿಗೆ ಪ್ರವೇಶಿಸದಂತೆ ತಡೆದರು. ಭೂಮಾಲಿಕರ ಈ ದಬ್ಬಾಳಿಕೆಗೆ ಮಣಿಯದೆ ರೈತರು ಪ್ರತಿನಿಧಿ ನೇಗಿಲು ನೋಗಗಳೊಂದಿಗೆ ತಮ್ಮ ಹೊಲಗಳಿಗೆ ಪ್ರವೇಶಿಸುತ್ತಿದ್ದರು. ಪ್ರತಿಭಟಿಸುವ ರೈತರನ್ನು ನೇಗಿಲು ನೊಗ ಸಮೇತ ಬಂಧಿಸುತ್ತಿದ್ದರು. ಮುಖ್ಯ ರೈತ ನಾಯಕರ ಬಂಧನವಾಗುವುದರೊಂದಿಗೆ ಚಳವಳಿ ತಣ್ಣಗಾಗುವ ಲಕ್ಷಣಗಳು ಕಂಡುಬಂದವು. ಆ ಸಂದರ್ಭದಲ್ಲಿ ರಾಜ್ಯ ಸೋಷಿಯಲಿಸ್ಟ್ ಪಕ್ಷ ಚಳವಳಿಯ ಸೂತ್ರ ಹಿಡಿಯಿತು. ಗೋಪಾಲಗೌಡರ ಪ್ರವೇಶದಿಂದ ರೈತ ಚಳವಳಿ ಸಮಾಜವಾದಿ ಚಳವಳಿಯಾಗಿ ಮಾರ್ಪಟ್ಟಿತ್ತು. ರೈತ ಆಂದೋಲನ ಬಲಗೊಂಡಿತು. ಗೇಣಿ ಅಳತೆಯ ತಕರಾರಿನ ಹೋರಾಟ ಉಳುವವನೇ ಹೊಲದ ಒಡೆಯನಾಗಬೇಕೆನ್ನುವ ಮಟ್ಟಿಗೆ ಬೆಳೆಯಿತು. 1851ರಲ್ಲಿ ರಾಮಮನೋಹರ ಲೋಹಿಯಾ ಬಂಧಿತ ರೈತರನ್ನು ಜೈಲಿನಲ್ಲಿ ಭೇಟಿಯಾಗಿ ಧೈರ್ಯ ತುಂಬಿದರು. ಸಾಗರದ ಗಾಂಧಿ ಮೈದಾನದಲ್ಲಿ ಸೇರಿದ ರೈತ ಸಮೂಹವನ್ನುದ್ದೇಶಿಸಿ ಭಾಷಣ ಮಾಡಿದರು. ಸರಕಾರ ಮತ್ತು ಜಮಿನ್ದಾರರ ನಿಲುವನ್ನು ಲೋಹಿಯಾ ಖಂಡಿಸಿದರು. ರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಸಿದರು. ಕಾಗೋಡಿಗೆ ಸಹಸ್ರಾರು ರೈತರೊಂದಿಗೆ ಹೋಗಿ ಸರಕಾರದ ತಡೆಯನ್ನು ಮುರಿದು ಭೂಮಿಯಲ್ಲಿ ಪ್ರವೇಶ ಮಾಡಿದರು. ಸಾಗರ ರೈತರ ಹೋರಾಟ ಸುತ್ತಮುತ್ತಲಿನ ಪ್ರದೇಶಗಳಲ್ಲೂ ರೈತರಲ್ಲಿ ಸಂಚಲನ ಮೂಡಿಸಿತು. ಸೊರಬ ತಾಲ್ಲೂಕಿನ ರೈತರು ಸಾಗರಕ್ಕೆ ಬಂದು ಕಾಗೋಡು ಚಳವಳಿಗೆ ಬೆಂಬಲ ನೀಡಿದರು. ಈ ಎಲ್ಲ ಚಳವಳಿಗಳು ಶಿವಮೊಗ್ಗ ಜಿಲ್ಲೆಯ ರೈತ ಸಮುದಾಯವನ್ನು ತಮ್ಮದೇ ರೂಪದಲ್ಲಿ ಪ್ರಭಾವಿಸಿವೆ.

ಈ ರಾಜಕೀಯ ಚಳವಳಿಗಳು ರಾಜ್ಯದ ಕೆಲವೇ ಪ್ರದೇಶಗಳಿಗೆ ಸೀಮಿತವಾಗಿವೆ. ಇವುಗಳ ಪ್ರಭಾವ ಅವುಗಳು ಹುಟ್ಟಿ ಬೆಳೆದ ಪ್ರದೇಶಗಳಿಂದ ವಿಸ್ತರಿಸಿ ಕರ್ನಾಟಕದ ಇತರ ಪ್ರದೇಶಗಳಿಗೆ ಹರಡಿಕೊಳ್ಳಲಿಲ್ಲ. ಚಳವಳಿಗಳು ಹುಟ್ಟಿದ ಪ್ರದೇಶಗಳ ಭೂಸಂಬಂಧಗಳನ್ನು ಪರಿವರ್ತಿಸಲು ಈ ಚಳವಳಿಗಳು ಸ್ವಲ್ಪ ಮಟ್ಟಿಗೆ ಸಹಕರಿಸಿದವು. ಆದರೆ ಕರ್ನಾಟಕದ ಇತರ ಪ್ರದೇಶಗಳ ಭೂಸಂಬಂಧಗಳ ಮೇಲೆ ಈ ಚಳವಳಿಗಳು ಏನೇನೂ ಪ್ರಭಾವ ಬೀರಲಿಲ್ಲ. ಜತೆಗೆ ರಾಜ್ಯದ ಯೋಜನೆಗಳ ಆದ್ಯತೆಯನ್ನು ಪ್ರಭಾವಿಸಲು ಈ ಚಳವಳಿಗಳು ವಿಫಲವಾದವು. ಈ ಎಲ್ಲ ಚಳವಳಿಗಳ ಇರುವಿಕೆಯನ್ನೇ ಅಲ್ಲ ಗೆಳೆಯುವ ರೀತಿಯಲ್ಲಿ ಕರ್ನಾಟಕದ ಅರ್ಥ ವ್ಯವಸ್ಥೆ ಭೂಮಾಲಿಕರು ಮತ್ತು ಬಂಡವಾಳಿಗರ ಪರ ರೂಪಿಸಲ್ಪಟ್ಟಿದೆ. ಇಂತಹ ಬೆಳವಣಿಗೆಯ ಹಿಂದಿರುವ ಕಾರಣಗಳನ್ನು ಹಿಂದಿನ ಪುಟಗಳಲ್ಲಿ ಚರ್ಚಿಸಿದ್ದೇವೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಕಾಂಗ್ರೇಸ್ ಪಕ್ಷ ಆಡಳಿತದಲ್ಲಿತ್ತು. ಕಾಂಗ್ರೇಸ್ ಪಕ್ಷದಲ್ಲಿ ಭೂಮಾಲಿಕ ಮತ್ತು ಬಂಡವಾಳಿಗರ ಹಿತಾಸಕ್ತಿಗಳನ್ನು ಕಾಪಾಡುವಷ್ಟು ಪ್ರತಿನಿಧಿಗಳು ಆಯಾಯ ವರ್ಗದಿಂದ ಬಂದಿದ್ದರು. ರಾಜ್ಯದಲ್ಲಿ ಭೂಮಾಲಿಕರು ಮತ್ತು ಬಂಡವಾಳಿಗರು ತಮ್ಮ ಸಮುದಾಯಗಳನ್ನು ಪರಿಣಾಮಕಾರಿಯಾಗಿ ತಮ್ಮ ಚುನಾವಣ ರಾಜಕೀಯಕ್ಕೆ ಬಳಸಿಕೊಂಡರು. ಸಮುದಾಯಗಳ ಬೆಂಬಲದಿಂದ ಹಲವಾರು ದಶಕಗಳ ಕಾಲ ಮೇಲ್ವರ್ಗದ ಬಲಾಢ್ಯರು ರಾಜಕೀಯ ಅಧಿಕಾರದ ಹಿಡಿತ ಸಾಧಿಸಿದರು. ನಂತರದ ದಿನಗಳಲ್ಲಿ ತಳ ಸಮುದಾಯಗಳ ಬಲಾಢ್ಯರು ಮೇಲ್ವರ್ಗದ ಬಲಾಢ್ಯರ ದಾರಿಯನ್ನೇ ತುಳಿದು ಅಧಿಕಾರದ ಚುಕ್ಕಾಣಿ ಹಿಡಿದರು. ಮೇಲ್ನೋಟಕ್ಕೆ ಎಲ್ಲ ಸಮುದಾಯಗಳಿಂದ ರಾಜಕೀಯ ಪ್ರತಿನಿಧಿಗಳು ಬಂದಂತೆ ಕಂಡರೂ ಆಳದಲ್ಲಿ ಆಯಾಯ ಸಮುದಾಯದ ಬಲಾಢ್ಯರು ಮಾತ್ರ ಅಧಿಕಾರ ಸೇರಿದವರು. ವಿವಿಧ ಸಮುದಾಯಗಳ ಬಲಾಢ್ಯರು ಆರ್ಥಿಕ ದೃಷ್ಟಿಯಿಂದ ಒಂದೇ ವರ್ಗಕ್ಕೆ ಸೇರಿದವರು. ವಿವಿಧ ಸಮುದಾಯಗಳ ಬಲಾಢ್ಯರ ಆಸಕ್ತಿಗಳು ಮತ್ತು ಅವರು ಪ್ರತಿನಿಧಿಸುತ್ತಾರೆಂದು ತಿಳಿದಿರುವ ಆಯಾಯ ಸಮುದಾಯಗಳ ತಳಸ್ತರದ ಜನರ ಆಸಕ್ತಿಗಳು ಸಂಪೂರ್ಣ ಬೇರೆ ಬೇರೆಯಾಗಿದ್ದವು. ತಮ್ಮದೇ ಸಮುದಾಯದ ತಳಸ್ತರದ ಜನರ ಆಸಕ್ತಿಗಿಂತ ಭಿನ್ನವಾಗಿರುವ ತಮ್ಮ ಆರ್ಥಿಕ ಆಸಕ್ತಿಗಳನ್ನು ಮರೆಮಾಚಲು ಮತ್ತು ಆ ಮೂಲಕ ಚುನಾವಣೆ ರಾಜಕೀಯದ ಲಾಭ ಆಸಕ್ತಿಗಳನ್ನು ಮರೆಮಾಚಲು ಮತ್ತು ಆ ಮೂಲಕ ಚುನಾವಣೆ ರಾಜಕೀಯದ ಲಾಭ ಪಡೆಯಲು ಜಾತಿ / ಧರ್ಮಗಳನ್ನು ಇವರು ಜೀವಂತ ಇರಿಸಿದ್ದಾರೆ. ಇದರಿಂದಾಗಿ ಬಲಾಢ್ಯರ ವರ್ಗಪ್ರಶ್ನೆ ಹಿಂದಕ್ಕೆ ಸರಿದು ಜಾತಿ / ಧರ್ಮಗಳು ಮುಂಚೂಣಿಗೆ ಬಂದಿವೆ. ಆದರೆ ರಾಜ್ಯದ ಅರ್ಥ ವ್ಯವಸ್ಥೆಯನ್ನು ಕಟ್ಟಿಕೊಳ್ಳುವಾಗ ತಮ್ಮ (ಬಲಾಢ್ಯರ) ಆಸಕ್ತಿಗೆ ಪೂರಕವಾದ ಅಂಶಗಳಿಗೆ ಆದ್ಯತೆ ನೀಡಿದ್ದಾರೆ. ಕೇಂದ್ರದ ಪಂಚವಾರ್ಷಿಕ ಯೋಜನೆಗಳ ಆದ್ಯತೆಗಳನ್ನು ಯಥಾರೂಪದಲ್ಲಿ ಕರ್ನಾಟಕದಲ್ಲೂ ಜಾರಿಗೆ ತಂದಿದ್ದಾರೆ. ಅಂದರೆ ಭೂಮಿ ಅಥವಾ ಬಂಡವಾಳ ಅಥವಾ ಆಧುನಿಕ ಸ್ಕಿಲ್ ಇದ್ದವರು ಹೆಚ್ಚಿನ ಉಪಯೋಗ ಪಡೆಯಬಹುದಾದ ಅರ್ಥ ವ್ಯವಸ್ಥೆಯನ್ನು ಮುಂಚೂಣಿಗೆ ತಂದಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಕರ್ನಾಟಕದ ಯೋಜನೆಗಳ ಆದ್ಯತೆಗಳನ್ನು ತೀರ್ಮಾನಿಸುವಲ್ಲಿ ಮಹತ್ವದ ಪಾತ್ರವಹಿಸಿವೆ. ಈ ಬಗೆಯ ಯೋಜನೆಗಳು ಸಮಾಜದ ವಿವಿಧ ವರ್ಗಗಳ ಮೇಲೆ ಮಾಡಿರಬಹುದಾದ ಪರಿಣಾಮವನ್ನು ಮುಂದಿನ ಅಧ್ಯಾಯದಲ್ಲಿ ಚರ್ಚಿಸಿದ್ದೇನೆ.