ಏಕೀಕರಣ ಸಂದರ್ಭದ ಭೂರಹಿತರು (ದಲಿತರು, ಬುಡಕಟ್ಟು ಜನರು ಮತ್ತು ಇತರ ಭೂರಹಿತರು) ಪಡೆದ ಭೂಮಿ ವಿವರಗಳು ವಿತರಣೆಯಾದ ಹೆಚ್ಚುವರಿ ಭೂಮಿಗೆ ಸಂಬಂಧಿಸಿದ ಅಂಕಿಅಂಶಗಳಿಂದ ಸ್ಪಷ್ಟವಾಗುತ್ತದೆ. ಎಷ್ಟು ಅಲ್ಪಪ್ರಮಾಣದ ಹೆಚ್ಚುವರಿ ಭೂಮಿ ಘೋಷಿತವಾಗಿದೆ. ಸ್ವಾಧೀನ ಪಡಿಸಿಕೊಳ್ಳಲಾಗಿದೆ ಮತ್ತು ವಿತರಣೆಯಾಗಿದೆ ಎನ್ನುವುದನ್ನು ಅಂಕಿಅಂಶಗಳೇ ಸಾರಿ ಸಾರಿ ಹೇಳುತ್ತವೆ. ಅಲ್ಪ ಪ್ರಮಾಣದ ಭೂಮಿ ಹೆಚ್ಚುವರಿಯೆಂದು ಘೋಷಿತವಾಗಿದೆ, ಘೋಷಿತವಾದುದರಲ್ಲಿ ಬಹುಭಾಗವನ್ನು ಸರಕಾರ ಸ್ವಾಧೀನ ಪಡಿಸಿಕೊಂಡಿಲ್ಲ ಮತ್ತು ಸ್ವಾಧೀನ ಪಡಿಸಿಕೊಂಡದ್ದನ್ನೂ ಕೂಡ ಭೂರಹಿತರಿಗೆ ಸಂಪೂರ್ಣವಾಗಿ ವಿತರಿಸಲಿಲ್ಲ. 1974ರ ಕಾಯಿದೆಯ ಅನುಷ್ಠಾನದಿಂದಲೂ ಏಕೀಕರಣ ಸಂದರ್ಭದ ಭೂಸಂಬಂಧಗಳು ಮೂಲಭೂತವಾಗಿ ಬದಲಾಗಿಲ್ಲ ಎನ್ನುವುದನ್ನು ಈ ಎಲ್ಲ ಅಂಕಿಅಂಶಗಳು ಸ್ಪಷ್ಟ ಪಡಿಸುತ್ತವೆ. ಈ ಎಲ್ಲದರ ಹಿನ್ನೆಲೆಯಲ್ಲಿ ಈ ಕೆಳಗಿನ ತೀರ್ಮಾನಕ್ಕೆ ಬರಬಹುದು. ಒಂದು, ಏಕೀಕರಣ ಸಂದರ್ಭದ ಭೂಮಾಲಿಕರು ಇಂದು ಕೂಡ ಇತರ ಸಮುದಾಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ಪ್ರಮಾಣದಲ್ಲಿ ಭೂಮಿ ಹೊಂದಿದ್ದಾರೆ. ಎರಡು, 1974ರ ಕಾಯಿದೆ ಅನುಷ್ಠಾನದಿಂದ ಹಿಂದುಳಿದ ವರ್ಗಗಳು ಕೆಲವು ಕುಟುಂಬಗಳು ಸಣ್ಣ ಪ್ರಮಾಣ ಭೂಮಿ ಹೊಂದಿರಬಹುದು. ಮೂರು, ದಲಿತ ಮತ್ತು ಬುಡಕಟ್ಟು ಸಮುದಾಯಗಳ ಭೂಹಿಡುವಳಿಯಲ್ಲಿ 1974ರ ಕಾಯಿದೆಯ ಅನುಷ್ಠಾನದ ನಂತರವು ದೊಡ್ಡಮಟ್ಟಿನ ಬದಲಾವಣೆ ಕಾಣಲಿಲ್ಲ. ಈ ತೀರ್ಮಾನಗಳನ್ನು ಭೂಹಿಡುವಳಿ ಮೇಲಿನ ಇತ್ತೀಚಿನ ದಾಖಲೆಗಳು ಕೂಡ ಸಮರ್ಥಿಸುತ್ತಿವೆ.

2೦೦5-೦6ರ ಕರ್ನಾಟಕದ ಅಗ್ರಿಲಕ್ಚರಲ್ ಸೆನ್ಸಸ್ ಭೂಹಿಡುವಳಿಯ ಹೆಚ್ಚು ನಿಖರವಾದ ಮಾಹಿತಿಯನ್ನು ನೀಡುತ್ತದೆ. ಈ ಸೆನ್ಸ್ ಸ್ ಪ್ರಕಾರ 2೦೦5-೦6ರ ವೇಳೆಗೆ 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಹಿಡುವಳಿದಾರರ ಸಂಖ್ಯೆ ಶೇ. 75ಕ್ಕೆ ಏರಿದೆ. ಅದೇ ರೀತಿ 25ಎಕರೆಗಿಂತ ಹೆಚ್ಚುಭೂಮಿ ಇರುವ ಹಿಡುವಳಿದಾರರ ಸಂಖ್ಯೆ ಶೇ. ೦1ಕ್ಕೆ ಇಳಿದಿದೆ. ಸಂಖ್ಯೆಯ ದೃಷ್ಟಿಯಿಂದ ಇದು ದೊಡ್ಡ ಪರಿವರ್ತನೆಯೇ ಸರಿ. ಸುಮಾರು ನಾಲ್ಕು ದಶಕಗಳಲ್ಲಿ ಸಣ್ಣ ಹಿಡುವಳಿದಾರರ ಸಂಖ್ಯೆ ಶೇ. 21ರ (197೦-71ರಲ್ಲಿ ಶೇ. 54 ಇತ್ತು 2೦೦5-೦6ರಲ್ಲಿ ಶೇ. 75 ಇದೆ) ಬೆಳವಣಿಗೆ ಕಂಡಿದೆ ಮತ್ತು ಇದೇ ಅವಧಿಯಲ್ಲಿ ದೊಡ್ಡ ಹಿಡುವಳಿದಾರರ ಸಂಖ್ಯೆ ಶೇ. 5ರ ಇಳಿಕೆ ಕಂಡಿದೆ (197೦-71ರಲ್ಲಿ ಶೇ. 6 ಇತ್ತು 2೦೦5-೦6ರಲ್ಲಿ ಶೇ.೦1 ಇದೆ). ಸಣ್ಣ ಹಿಡುವಳಿದಾರರ ಸಂಖ್ಯೆಯಲ್ಲಿ ದೊಡ್ಡ ಏರಿಕೆ ಇದೆ. ಆದರೆ ಈ ಸಣ್ಣ ಹಿಡುವಳಿದಾರರು ಹೊಂದಿರುವ ಭೂಮಿಯ ಪ್ರಮಾಣದಲ್ಲಿ ಇದೇ ಏರಿಕೆ ಇದೆಯೇ? 197೦-71ರಲ್ಲಿ ಶೇ. 54ರಷ್ಟಿದ್ದ ಸಣ್ಣ ಹಿಡುವಳಿದಾರರ ಸ್ವಾಧೀನ ಶೇ. 16ರಷ್ಟು ಭೂಮಿ ಇತ್ತು. ಇದೇ ಅವಧಿಯಲ್ಲಿ ದೊಡ್ಡ ಹಿಡುವಳಿದಾರರ ಸ್ವಾಧೀನ ಶೇ. 31ರಷ್ಟು ಭೂಮಿ ಇತ್ತು. 2೦೦5-೦6ರ ವೇಳೆಗೆ ಶೇ. 75ರಷ್ಟು ಸಣ್ಣ ಹಿಡುವಳಿದಾರರ ಸ್ವಾಧೀನ ಶೇ. 36 ಭೂಮಿ ಇದೆ. ಹೆಚ್ಚು ಕಡಿಮೆ ಶೇ. 2೦ರಷ್ಟು ಭೂಮಿ ಹೆಚ್ಚಾಗಿದೆ. ಇದೇ ಅವಧಿಯಲ್ಲಿ ದೊಡ್ಡ ಹಿಡುವಳಿದಾರರ ಸ್ವಾಧೀನ ಶೇ. 9 ಭೂಮಿ ಇದೆ. ಅಂದರೆ ದೊಡ್ಡ ಹಿಡುವಳಿದಾರರು 197೦-2೦೦5ರ ನಡುವೆ ಶೇ. 22ರಷ್ಟು ಭೂಮಿ ಕಳೆದುಕೊಂಡಿದ್ದಾರೆ. ಈ ಅಂಕಿಅಂಶಗಳನ್ನು ಮತ್ತೊಂದು ವಿಧದಲ್ಲಿ ಕೂಡ ನೋಡಬಹುದು. ಶೇ. 76ರಷ್ಟಿರುವ ಸಣ್ಣ (ಶೇ. 75) ಮತ್ತು ದೊಡ್ಡ (ಶೇ.1) ಹಿಡುವಳಿದಾರರಲ್ಲಿ ಶೇ.45 ಭೂಮಿ ಇದೆ. ಅಂದರೆ ಶೇ. 24ರಷ್ಟಿರುವ ಮಧ್ಯಮ ಮತ್ತು ಅರೆ ಮಧ್ಯಮ ಹಿಡುವಳಿದಾರರಲ್ಲಿ ಶೇ. 55ರಷ್ಟು ಭೂಮಿ ಇದೆಯೆಂದಾಯಿತು. ಕರ್ನಾಟಕದ ಭೂಸುಧಾರಣೆಯಿಂದ ದೊಡ್ಡ ಹಿಡುವಳಿದಾರರು ಭೂಮಿ ಕಳೆದುಕೊಂಡಿದ್ದಾರೆ. ಆದರೆ ಅವರು ಕಳೆದುಕೊಂಡ ಭೂಮಿ ಭೂರಹಿತರಿಗೆ ಅಥವಾ ಸಣ್ಣ ಹಿಡುವಳಿದಾರರಿಗೆ ವರ್ಗಾವಣೆ ಆಗಿಲ್ಲ. ಭೂರಹಿತರಿಗೆ ಅಥವಾ ಸಣ್ಣ ಹಿಡುವಳಿದಾರರಿಗೆ ವರ್ಗಾವಣೆಯಾಗುವ ಬದಲು ಅದು ಮಧ್ಯಮ ಮತ್ತೆ ಅರೆ ಮಧ್ಯಮ ಹಿಡುವಳಿದಾರರಿಗೆ ವರ್ಗಾವಣೆ ಆಗಿದೆ. ಈ ಅಂಶ ಶೇ.1 ರಷ್ಟಿರುವ ದೊಡ್ಡ ಹಿಡುವಳಿದಾರರನ್ನು ಶೇ.24ರಷ್ಟಿರುವ ಮಧ್ಯಮ ಹಿಡುವಳಿದಾರರೊಂದಿಗೆ ಸೇರಿಸಿ ನೋಡಿದರೆ ಸ್ಪಷ್ಟವಾಗುತ್ತದೆ. ಕರ್ನಾಟಕದಲ್ಲಿ ಇಂದು ಕೂಡ ಶೇ.25ರಷ್ಟು (ಶೇ.24 ಮಧ್ಯಮ ಮತ್ತು ಶೇ.1 ದೊಡ್ಡ) ಹಿಡುವಳಿದಾರರಲ್ಲಿ ಶೇ. 64ರಷ್ಟು ಭೂಮಿ ಇದೆ. ಶೇ.75ರಷ್ಟಿರುವ ಸಣ್ಣ ಮತ್ತು ಅತೀ ಸಣ್ಣ ಹಿಡುವಳಿದಾರರು ಒಟ್ಟು ಭೂಮಿಯ ಶೇ. 36ನ್ನು ಮಾತ್ರ ಹೊಂದಿದ್ದಾರೆ.

ಸಣ್ಣ ಹಿಡುವಳಿದಾರರಲ್ಲಿ ಅತೀ ಸಣ್ಣ ಹಿಡುವಳಿದಾರರು ಕೂಡ ಸೇರಿದ್ದಾರೆ. ಸೆನ್ಸಸ್ ಲೆಕ್ಕಚಾರ ಪ್ರಕಾರ ೦-2.5 ಎಕರೆಗಿಂತ ಕಡಿಮೆ ಭೂಮಿ ಹೊಂದಿದವರು ಅತೀ ಸಣ್ಣ ಹಿಡುವಳಿದಾರರು. ಅಂದರೆ ಕೆಲವು ಅಡಿ ಭೂಮಿ ಇದ್ದವರು ಮತ್ತು ಎರಡೂವರೆ ಎಕರೆ ಭೂಮಿ ಇದ್ದವರು ಅತೀ ಸಣ್ಣ ಹಿಡುವಳಿದಾರರಾಗುತ್ತಾರೆ. ಕರ್ನಾಟಕದಲ್ಲಿರುವ ಒಟ್ಟು ಕೃಷಿಕರಲ್ಲಿ ಹೆಚ್ಚು ಕಡಿಮೆ ಅರ್ಧದಷ್ಟು (ಶೇ. 48) ಮಂದಿ ಅತೀ ಸಣ್ಣ ರೈತರು. ಅಂದರೆ ಸರಕಾರಿ ಲೆಕ್ಕಚಾರ ಪ್ರಕಾರ 2.5 ಎಕರೆಗಿಂತ ಕಡಿಮೆ ಭೂಮಿ ಹೊಂದಿದವರು. ಮಳೆಬೆಳೆ ಚೆನ್ನಾಗಿ ಆಗುವ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಅತೀ ಸಣ್ಣ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶೇ. 7೦ಕ್ಕಿಂತಲೂ ಹೆಚ್ಚಿದ್ದರೆ ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಶೇ.67 ಮತ್ತು ಶೇ. 56ರಷ್ಟಿದ್ದಾರೆ. ಒಣ ಭೂಪ್ರದೇಶ ಹೆಚ್ಚಿರುವ ಉತ್ತರ ಕರ್ನಾಟಕ ಪ್ರದೇಶದಲ್ಲಿ ಅತೀ ಸಣ್ಣ ರೈತರು ಕಡಿಮೆ ಇದ್ದಾರೆ. ದಕ್ಷಿಣ ಕರ್ನಾಟಕದ ಅರೆ ನೀರಾವರಿ ಪ್ರದೇಶದ ಬಹುತೇಕ ಜಿಲ್ಲೆಗಳಲ್ಲಿ ಶೇ. 6೦ರ ರೇಂಜಲ್ಲಿ ಅತೀ ಸಣ್ಣ ರೈತರಿದ್ದಾರೆ. ಮಂಡ್ಯದಲ್ಲಿ ಮಾತ್ರ ಶೇ. 81ರಷ್ಟು ಅತೀ ಸಣ್ಣ ರೈತರಿದ್ದಾರೆ. ಇವರ ಸಂಖ್ಯೆ ಜತೆಗೆ ಪರಿಗಣಿಸಬೇಕಾದ ಪ್ರಮುಖ ಅಂಶವೆಂದರೆ ಇವರು ಹೊಂದಿರುವ ಭೂಮಿಯ ಪ್ರಮಾಣ. ನೀರಾವರಿ ಪ್ರದೇಶದಲ್ಲಿ ಒಂದು ಎಕರೆಯಷ್ಟು ಭೂಮಿಯನ್ನು ಅತೀ ಸಣ್ಣ ರೈತರು ಹೊಂದಿಲ್ಲ. ಒಣ ಭೂಪ್ರದೇಶದಲ್ಲಿ ಒಂದೂವರೆ ಎಕರೆಯಷ್ಟು ಭೂಮಿ ಹೊಂದಿದ್ದಾರೆ. ಅರೆ ನೀರಾವರಿ ಪ್ರದೇಶಗಳಲ್ಲಿ ಒಂದು ಮತ್ತು ಒಂದೂವರೆ ಎಕರೆ ನಡುವೆ ಭೂಮಿ ಹೊಂದಿದ್ದಾರೆ. ಇಷ್ಟೊಂದು ಕಡಿಮೆ ಪ್ರಮಾಣದ ಭೂಮಿ ಮೇಲೆ ಯಾವ ಕೃಷಿ ಮಾಡಬಹುದು. ಇವರನ್ನು ಹೊಲಗದ್ದೆ ಹೊಂದಿದವರೆಂದು ವರ್ಗೀಕರಿಸುವ ಬದಲು ಮನೆ ಮತ್ತು ಮನೆ ಸುತ್ತ ಮುತ್ತ ಸಣ್ಣ ಭೂಮಿ ಇರುವವರೆಂದು ವರ್ಗೀಕರಿಸುವ ಹೆಚ್ಚು ಸೂಕ್ತ. ಇಂತಹ ಸಣ್ಣ ಪ್ರಮಾಣ ಭೂಮಿಯಲ್ಲಿ ತರಕಾರಿ, ಸಣ್ಣಪುಟ್ಟ ತೋಟಗಾರಿಕೆ ಬೆಳೆ ಇತ್ಯಾದಿ ಬೆಳೆಗಳನ್ನು ಮಾತ್ರ ಬೆಳೆಯಬಹುದು. ಈ ರೈತರು ತಮ್ಮ ಮೂರು ಹೊತ್ತಿನ ಊಟಕ್ಕೆ ಭೂರಹಿತರಂತೆ ಹತ್ತಿರದ ಪೇಟೆ ಪಟ್ಟಣಗಳಿಗೆ ಅಥವಾ ಊರಲ್ಲೇ ಇರುವ ದೊಡ್ಡ ಕೃಷಿಕರ ಹೊಲಕ್ಕೆ ಕೂಲಿಗೆ ಹೋಗುವುದು ಅನಿವಾರ್ಯ. ಆದುದರಿಂದ ಇವರನ್ನು ಭೂಮಿ ಹೊಂದಿದವರೆಂದು ವರ್ಗೀಕರಿಸದೇ ಭೂರಹಿತರೊಂದಿಗೆ ಹೋಲಿಸಿ ನೋಡುವುದು ಹೆಚ್ಚು ಸೂಕ್ತ. ಇವರನ್ನು ಹೊರತುಪಡಿಸಿ ಇಡೀ ರಾಜ್ಯದಲ್ಲಿ ಏನೇನೂ ಭೂಮಿ ಇಲ್ಲದವರು ಶೇ.33ರಷ್ಟಿದ್ದಾರೆ. ಹೆಚ್ಚು ಕಡಿಮೆ ಶೇ.8೦ರಷ್ಟು ಕುಟುಂಬಗಳು ಕೃಷಿ ಮತ್ತು ನೀರಾವರಿ ಮೇಲೆ ನಡೆದ ದೊಡ್ಡ ಪ್ರಮಾಣದ ವಿನಿಯೋಜನೆಯ ಕನಿಷ್ಠ ಲಾಭನೂ ಪಡೆಯಲಿಲ್ಲ. ಹೆಚ್ಚೆಂದರೆ ಇವರಿಗೆ ಕೃಷಿ ಕೂಲಿ ಸಿಕ್ಕಿರಬಹುದು. ಆದರೆ ಅದು ಕೂಡ ತೊಂಬತ್ತರ ದಶಕದಲ್ಲಿ ಇಪ್ಪತ್ತರಿಂದ ಮೂವತ್ತು ರುಪಾಯಿಗಳ ಅನುಪಾಸಿನಲ್ಲಿತ್ತು. ಪುರುಷ ಮತ್ತು ಮಹಿಳೆಯರ ಕೂಲಿಯಲ್ಲೂ ದೊಡ್ಡ ಅಂತರವಿತ್ತು. ದಕ್ಷಿಣ ಕನ್ನಡ, ಮಂಡ್ಯ, ಬೆಂಗಳೂರು ಮುಂತಾದ ಕಡೆಗಳಲ್ಲಿ ಮೂವತ್ತು ರುಪಾಯಿ ಕೃಷಿ ಕೂಲಿಯಿದ್ದರೆ ಹಲವಾರು ಜಿಲ್ಲೆಗಳಲ್ಲಿ ಕೃಷಿ ಕೂಲಿ ಇಪ್ಪತ್ತರ ಗಡಿ ದಾಟಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಿಗೆ ಸಮೀಪ ಇರುವ ಕಡೆಗಳಲ್ಲಿ ಕೃಷಿಕೂಲಿ ನೂರರ ಗಡಿ ದಾಟಿದೆ. ಆದರೆ ಇಂದು ಕೂಡ ಮಹಿಳೆ ಮತ್ತು ಪುರುಷರ ಕೃಷಿ ಕೂಲಿ ನಡುವೆ ದೊಡ್ಡ ಅಂತರವಿದೆ. ಅಷ್ಟು ಮಾತ್ರವಲ್ಲ ನೀರಾವರಿ ಇಲ್ಲದ ಉತ್ತರ ಕರ್ನಾಟಕದ ಕೆಲವು ಕಡೆಗಳಲ್ಲೂ ಇಂದು ಕೂಡ ಕೃಷಿ ಕೂಲಿ ಮೂವತ್ತು ನಲ್ವತ್ತು ರುಪಾಯಿಗಳ ಅಸುಪಾಸಿನಲ್ಲಿದೆ.

ಕೃಷಿಯಷ್ಟೇ ಮಹತ್ವ ಪಡೆದ ಮತ್ತೊಂದು ವಲಯ ಕೈಗಾರಿಕೆಗಳು ಅಥವಾ ನಗರೀಕರಣ. ಇವುಗಳ ಅಭಿವೃದ್ಧಿಗೆ ಮಾಡಿದ ನೇರ ವಿನಿಯೋಜನೆ ಕೃಷಿ, ನೀರಾವರಿಯಷ್ಟು ದೊಡ್ಡ ಪ್ರಮಾಣದಲ್ಲಿ ಕಾಣುವುದಿಲ್ಲ. ಆದರೆ ಆರ್ಥಿಕ ಮತ್ತು ಸಾಮಾಜಿಕ ಮೂಲಸೌಕರ್ಯಗಳ ಮೇಲಿನ ವಿನಿಯೋಜನೆಯನ್ನು ಕೈಗಾರಿಕೆಗಳ ಮತ್ತು ವಿದ್ಯುತ್‌ಗಳ ವಿನಿಯೋಜನೆ ಜತೆಗೆ ಸೇರಿಸಿದರೆ ಈ ವಲಯದ ಮಹತ್ವ ಅರಿವಾಗಬಹುದು. ಆರ್ಥಿಕ ಹಾಗೂ ಸಾಮಾಜಿಕ ಮೂಲಸೌಕರ್ಯಗಳನ್ನು ಕೈಗಾರಿಕೆ ವಲಯದ ಅಥವಾ ನಗರೀಕರಣವನ್ನು ದೃಷ್ಟಿಯಲ್ಲಿಟ್ಟುಕೊಂಡೆ ಬೆಳೆಸಲಾಗುತ್ತಿದೆ. ಕೃಷಿ / ನೀರಾವರಿ ಮೇಲಿನ ಪಂಚವಾರ್ಷಿಕ ಯೋಜನೆಗಳ ಲಾಭ ಪಡೆಯಲು ಭೂಮಿ ಎಷ್ಟು ಅವಶ್ಯವೋ ಕೃಷಿಯೇತರ ಚಟುವಟಿಕೆಗಳ ಮೇಲಿನ ವಿನಿಯೋಜನೆಯ ಲಾಭ ಪಡೆಯಬೇಕಾದರೆ ಬಂಡವಾಳ ಅಷ್ಟೇ ಅವಶ್ಯ ಉದ್ದಿಮೆಗಳನ್ನು ಆರಂಭಿಸಬೇಕಾದರೆ ಭೂಮಿ ಬೇಕು, ಕಚ್ಚಾಸಾಮಗ್ರಿಗಳು, ಮೆಶಿನರಿ ಬೇಕು ಮತ್ತು ದುಡಿಯಲು ಪರಿಣಿತರು ಬೇಕು. ಈ ಎಲ್ಲದರ ಮೇಲೆ ವಿನಿಯೋಜಿಸಲು ಬಂಡವಾಳ ಬೇಕು. ಪಶ್ಚಿಮದ ಸಮಾಜಗಳಲ್ಲೂ ಉದ್ದಿಮೆಗಳ ಆರಂಭದ ದಿನಗಳಲ್ಲಿ ಬಂಡವಾಳ, ಮೆಶಿನರಿ, ಕಚ್ಚಾ ಸಾಮಗ್ರಿ ಇತ್ಯಾದಿಗಳು ಅಡೆತಡೆ ಇಲ್ಲದೆ ಪೂರೈಕೆಯಾಗಲು ಶುರುವಾದಾಗ ಬಂಡವಾಳ ಇಲ್ಲದವರು ಕೂಡ ಉದ್ದಿಮೆಗಳನ್ನು ಆರಂಭಿಸಲು ಶುರು ಮಾಡಿದರು. ಇಂತಹ ಸಂದರ್ಭದಲ್ಲಿ ಹುಟ್ಟಿದ ಉದ್ದಿಮೆಶೀಲತೆ ಮೇಲಿನ ಸಿದ್ಧಾಂತಗಳು ಉದ್ದಿಮೆದಾರರನ್ನು ಬಂಡವಾಳಿಗರಿಗಿಂತ ಭಿನ್ನವಾಗಿ ನಿರ್ವಚಿಸಿ ಕೊಂಡಿವೆ. ಸಾಧಿಸುವ ಛಲ ಇದ್ದವರು, ಸೃಜನಶೀಲತೆ ಇದ್ದವರು, ಚಾರಿತ್ರಿಕವಾಗಿ ತಮಗಿದ್ದ ಸ್ಥಾನಮಾನಗಳನ್ನು ಕಳೆದು ಕೊಂಡವರು ಮುಂತಾದವರು ಉದ್ದಿಮೆಶೀಲತೆ ಹೊಂದಿದ್ದಾರೆ ಎಂದು ಈ ಸಿದ್ಧಾಂತಗಳು ವಾದಿಸದವು. ಎಲ್ಲ ಬಗೆಯ ಕೊರತೆಗಳನ್ನು ಎದುರಿಸುತ್ತಿರುವ ನಮ್ಮಂತಹ ಸಾಮಾಜಿಕ ವ್ಯವಸ್ಥೆಯಲ್ಲಿ ಉದ್ಯಮಶೀಲತೆಯ ಸಿದ್ಧಾಂತಗಳು ಹೇಳುವ ಉದ್ದಿಮೆದಾರರನ್ನು ಊಹಿಸುವುದು ಕಷ್ಟ. ಇಲ್ಲಿ ಬಂಡವಾಳಿಗರೇ ಉದ್ದಿಮೆದಾರರು.

ನಮ್ಮಂತಹ ಅರ್ಥ ವ್ಯವಸ್ಥೆಗಳಲ್ಲಿ ಬಂಡವಾಳದ ಮೂಲಗಳೇನು? ಮುಖ್ಯವಾಗಿ ಎರಡು ಮೂಲಗಳನ್ನು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಗುರುತಿಸಲಾಗುತ್ತಿದೆ. ಒಂದು, ವ್ಯಾಪಾರಿಗಳು ತಮ್ಮ ವ್ಯಾಪಾರದ ಲಾಭವನ್ನು ಕೈಗಾರಿಕೆಗಳು ತೊಡಗಿಸುವುದು ಮತ್ತೊಂದು ದೊಡ್ಡ ಕೃಷಿಕರು ಕೃಷಿಯಿಂದ ಲಭ್ಯವಾದ ಮಿಗತೆ ಮೊತ್ತವನ್ನು ಕೈಗಾರಿಕೆಗಳಲ್ಲಿ ಹೂಡುವುದು. ಉದ್ದಿಮೆದಾರರ ಹಿನ್ನೆಲೆಯನ್ನು ಪರೀಕ್ಷಿಸುವ ಬಹುತೇಕ ಅಧ್ಯಯನಗಳು ಇದೇ ತೀರ್ಮಾನವನ್ನು ನೀಡುತ್ತಿವೆ. ಅಂದರೆ ಸಾಂಪ್ರದಾಯಿಕ ವ್ಯಾಪಾರಸ್ಥರು ಹೆಚ್ಚಿನ ಪ್ರಮಾಣದಲ್ಲಿ ಸಣ್ಣ ಮಧ್ಯಮ ಮತ್ತು ದೊಡ್ಡ ಉದ್ದಿಮೆಗಳಲ್ಲಿ ವಿನಿಯೋಜನೆ ಮಾಡಿದ್ದಾರೆ. ಆಯಾಯ ಪ್ರದೇಶದ ದೊಡ್ಡ ಕೃಷಿಕರು ಕೃಷಿಯಿಂದ ಲಭ್ಯವಾದ ಮಿಗತೆ ಮೊತ್ತವನ್ನು ಕೈಗಾರಿಕೆಗಳಲ್ಲಿ ಹೂಡಿದ್ದಾರೆ. ಕೃಷಿಕರು ಕೂಡ ವ್ಯಾಪಾರಸ್ಥರಂತೆ ಮೊದಲು ಕೈಗಾರಿಕ ಸರಕುಗಳ ವ್ಯಾಪಾರ ಆರಂಭಿಸಿ ನಂತರ ತಾವು ಮಾರಾಟ ಮಾಡುವ ಸರಕುಗಳ ಉತ್ಪಾದನೆಗೆ ಕೈಹಾಕುತ್ತಿದ್ದರು. ಕರಾವಳಿ ಕರ್ನಾಟಕವನ್ನು ಹೊರತುಪಡಿಸಿ ರಾಜ್ಯದ ಪ್ರತಿ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳ ಕೆಲವೊಂದು ಸರಕುಗಳ ವ್ಯಾಪಾರ ಉತ್ತರ ಭಾರತದ ವ್ಯಾಪಾರಿ ಸಮುದಾಯಗಳ ಹಿಡಿತದಲ್ಲಿದೆ. ಇವರ ಜತೆ ಮಾರುಕಟ್ಟೆಯಲ್ಲಿ ವ್ಯವಹರಿಸುವ ಮಧ್ಯಮ ಮತ್ತು ದೊಡ್ಡ ಕೃಷಿಕರು ತಾಲ್ಲೂಕು ಕೇಂದ್ರಗಳಲ್ಲಿ ಕೈಗಾರಿಕ ಸರಕುಗಳ ವ್ಯಾಪಾರದಲ್ಲಿ ಸಣ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲಾ ಹಾಗೂ ರಾಜ್ಯ ಕೇಂದ್ರಗಳಲ್ಲಿರುವ ಸಣ್ಣ. ಮಧ್ಯಮ ಮತ್ತು ದೊಡ್ಡ ಉದ್ದಿಮೆಗಳಲ್ಲಿ ಬಹುಪಾಲು ವ್ಯಾಪಾರಿ ಸಮುದಾಯಗಳ ಹಿಡಿತದಲ್ಲಿವೆ. ಇತ್ತೀಚಿನ ದಿನಗಳಲ್ಲಿ ಹುಟ್ಟಿಕೊಂಡ ಮಾಹಿತಿ ತಂತ್ರಜ್ಞಾನ ಉದ್ದಿಮೆಗಳನ್ನು ವಿಶೇಷ ಬಂಡವಾಳ ಇಲ್ಲದವರು ಕೂಡ ಆರಂಭಿಸಿದ್ದಾರೆ. ಒಟ್ಟು ಸೇವಾ ಹಾಗೂ ಕೈಗಾರಿಕ ವಲಯಗಳ ವಿನಿಯೋಜನೆಯನ್ನು ಗಮನಿಸಿದರೆ ಬಂಡವಾಳ ಇಲ್ಲದವರು ಆರಂಭಿಸಿದ ಉದ್ದಿಮೆಗಳು ಅತ್ಯಲ್ಲ. ಹೀಗೆ ಪಂಚವಾರ್ಷಿಕ ಯೋಜನೆಗಳಲ್ಲಿ ಕೃಷಿ ಮತ್ತು ನೀರಾವರಿ ಮೇಲೆ ಮಾಡಿದ ವಿನಿಯೋಜನೆಯ ಅತೀ ಹೆಚ್ಚಿನ ಲಾಭವನ್ನು ಭೂಮಾಲಿಕರು ಹೇಗೆ ಪಡೆದಿದ್ದರೋ ಅದೇ ರೀತಿಯಲ್ಲಿ ಕೈಗಾರಿಕೆ, ಆರ್ಥಿಕ ಮತ್ತು ಸಾಮಾಜಿಕ ಮೂಲಸೌಕರ್ಯಗಳ ಮೇಲೆ ಮಾಡಿದ ವಿನಿಯೋಜನೆಯ ಹೆಚ್ಚಿನ ಲಾಭವನ್ನು ಬಂಡವಾಳಿಗರು ಪಡೆದಿದ್ದಾರೆ. ಬಂಡವಾಳ ಇಲ್ಲದವರು ಈ ಕ್ಷೇತ್ರ ಸೃಷ್ಟಿಸಿದ ಉದ್ಯೋಗಗಳಿಂದ ತೃಪ್ತಿಪಡಬೇಕು. ಈ ಕ್ಷೇತ್ರ ಎಂತಹ ಉದ್ಯೋಗಗಳನ್ನು ಸೃಷ್ಟಿಸುತ್ತಿವೆಯೆಂದು ನೋಡುವ.

ಸೇವಾ ವಲಯ ಹಾಗೂ ಕೈಗಾರಿಕೆಗಳು ಸೃಷ್ಟಿಸುವ ಉದ್ಯೋಗದ ಗುಣಮಟ್ಟವಂತು ಊಹಿಸಲು ಅಸಾಧ್ಯ. ಇವುಗಳು ಸೃಷ್ಟಿಸುವ ಬಹುಪಾಲು (ಶೇ.9೦ರಷ್ಟು) ಉದ್ಯೋಗಗಳು ಅಸಂಘಟಿತ ಉದ್ಯೋಗಗಳು. ಅಂದರೆ ಸರಕಾರಿ ನಿಯಮಾನುಸಾರ ಕೊಡಬೇಕಾಗಿರುವ ಸಂಬಳ, ರಜೆ, ಶಿಕ್ಷಣ, ಆರೋಗ್ಯ, ವಸತಿ ಇತ್ಯಾದಿ ಯಾವತ್ತು ಸವಲತ್ತುಗಳಿಲ್ಲದ ಉದ್ಯೋಗಗಳು. ಉದ್ದಿಮೆದಾರರು ನೇಮಕ ಮಾಡಿಕೊಂಡು ವ್ಯಾಪಾರ ಕಡಿಮೆ ಇರುವ ಸಂದರ್ಭದಲ್ಲಿ ಮನೆಗೆ ಕಳುಹಿಸುವ ಉದ್ಯೋಗಗಳು ಇವು. ಕೆಲಸದ ಸಂದರ್ಭದಲ್ಲಿ ಒಂದು ವೇಳೆ ಅಪಘಾತವಾಗಿ ಕೆಲಸಗಾರರು ಕೈಕಾಲು ಕಳೆದು ಕೊಂಡರೆ ಮಾಲಿಕರು ನೋಡಿಕೊಳ್ಳುವುದಿಲ್ಲ; ಸಣ್ಣಪುಟ್ಟ ಆಸ್ಪತ್ರೆ ಖರ್ಚುಗಳನ್ನು ಭರಿಸಿ ಮಾಲಿಕರು ತಮ್ಮ ಜವಾಬ್ದಾರಿ ಕಳಚಿಕೊಳ್ಳುತ್ತಾರೆ. ಕೆಲಸಗಾರರು ಗುಣಮುಖವಾಗುವವರೆಗೆ ಅವರ ಮನೆಯವರೇ ನೋಡಿಕೊಳ್ಳಬೇಕು. ಒಂದು ವೇಳೆ ಕೆಲಸಗಾರರು ದುಡಿಯುವ ಸಾಮರ್ಥ್ಯವನ್ನೇ ಕಳೆದುಕೊಂಡರೆ ಜೀವನಪರ್ಯಂತ ಕುಟುಂಬದವರೇ ನೋಡಿಕೊಳ್ಳಬೇಕು. ಇವನ್ನೆಲ್ಲ ಹೇಳಿದ ಕೂಡಲೇ ಅವರಿಗೆ ಆ ಇನ್ಸೂರೆನ್ಸ್ ಇದೆ. ಈ ಸವಲತ್ತಿದೆ, ಆ ಸವಲತ್ತಿದೆಯೆಂದು ಕಾರ್ಯಕ್ರಮಗಳ ದೊಡ್ಡ ಪಟ್ಟಿಯನ್ನು ನೀಡುವ ಅಭಿವೃದ್ಧಿ ಸಿದ್ಧಾಂತಿಗಳಿದ್ದಾರೆ. ಆದರೆ ಈ ಎಲ್ಲ ಸವಲತ್ತುಗಳು ಎಷ್ಟು ಅಸಂಘಟಿತ ವಲಯದ ಕಾರ್ಮಿಕರನ್ನು ತಲುಪಿದೆ ಎಂದು ನೋಡಿದರೆ ದೊಡ್ಡ ಸಾಧನೆ ಕಾಣುವುದಿಲ್ಲ. ಅಂಗಡಿಗಳು, ಹೊಟೇಲ್ಗಳು, ಟೆಲಿಪೋನ್ ಬೂತ್ಗಳು, ಗ್ಯಾರೇಜ್ಗಳು, ಎಲ್ಲ ವಾಹನಗಳ ಚಾಲಕರು, ಕಂಡಕ್ಟರ್ಗಳು, ಕ್ಲೀನರ್ಗಳು, ಆಯಾಗಳು, ಮನೆಕೆಲಸದವರು ಇವರೆಲ್ಲ ಸೇವಾ ವಲಯಗಳಲ್ಲಿ ದುಡಿಯುವವರು. ಇವರುಗಳಲ್ಲಿ ಬಹುತೇಕರ ತಿಂಗಳ ಸಂಬಳ ಎರಡರಿಂದ ಮೂರು ಸಾವಿರದ ದಾಟಿದರೆ ಪುಣ್ಯ ಇವರುಗಳು ಬೆಳಿಗ್ಗೆ ಎಂಟು ಗಂಟೆಗೆ ಬಂದರೆ ಸಂಜೆ ಎಂಟು ಗಂಟೆ ತನಕ ದುಡಿಯಬೇಕು. ಎಂಟರಿಂದ ಹನ್ನೆರಡು ಗಂಟೆಗಳ ದಿನದ ದುಡಿತದ ನಡುವೆ ಒಂದು ಟೀ ಸಿಕ್ಕಿದರೆ ಇವರ ಪುಣ್ಯ ಶಾಲೆಗೆ ಹೋಗದವರು, ಪ್ರಾಥಮಿಕ ಅಥವಾ ಪ್ರೌಢಶಾಲೆ ಆಗಿ ಬಿಟ್ಟವರು ಇನ್ನು ಕೆಲವರು ಜನರಲ್ ಡಿಗ್ರಿ ಓದಿದವರು ಈ ಕ್ಷೇತ್ರದಲ್ಲಿ ಹೆಚ್ಚು ಸಂಖ್ಯೆಯಲ್ಲಿದ್ದಾರೆ.

ಪಂಚವಾರ್ಷಿಕ ಯೋಜನೆಗಳಲ್ಲಿ ಕೃಷಿ ಮತ್ತು ಕೃಷಿಯೇತರ ಆರ್ಥಿಕ ಚಟುವಟಿಕೆಗಳ ಮೇಲೆ ಮಾಡಿದ ವಿನಿಯೋಜನೆಯ ಹೆಚ್ಚಿನ ಲಾಭವನ್ನು ಭೂಮಾಲಿಕರು ಮತ್ತು ಬಂಡವಾಳಿಗರು ಪಡೆದರು. ಪಂಚವಾರ್ಷಿಕ ಯೋಜನೆಗಳ ಜತೆಗೆ ಪರಿಣಾಮಕಾರಿ ಭೂಸುಧಾರಣೆಯೂ ನಡೆಯುತ್ತಿದ್ದರೆ ಸಮಾಜದ ಬಹುತೇಕ ಲಾಭ ಪಡೆಯ ಬಹುದಿತ್ತು. ಆದರೆ ಕರ್ನಾಟಕದಲ್ಲಿ ನಡೆದ ಭೂಸುಧಾರಣೆ ಏಕೀಕರಣ ಸಂದರ್ಭದ ಭೂಸಂಬಂಧಗಳನ್ನು ಪರಿವರ್ತಿಸಲು ವಿಫಲವಾಯಿತು. ಭೂಸುಧಾರಣೆ ಮಾಡಿ ಭೂಸಂಬಂಧವನ್ನು ಪರಿವರ್ತಿಸುವುದು ಕಷ್ಟದ ಕೆಲಸ. ಸಮಾಜದ ಬಹುತೇಕರಿಗೆ ಉತ್ತಮ ಶಿಕ್ಷಣ ಮತ್ತು ಆರೋಗ್ಯ ನೀಡುವುದು ಕಷ್ಟದ ಕೆಲಸವಲ್ಲ. ಸಾಮಾಜಿಕ ಮೂಲಸೌಕರ್ಯಗಳ ಮೇಲೆ ವಿನಿಯೋಜಿಸುವುದರ ಜತೆಗೆ ಶಿಕ್ಷಣ ಮತ್ತು ಆರೋಗ್ಯ ನೀತಿಯನ್ನು ಸಮಾನತೆಯುಳ್ಳ ಸಮಾಜ ಕಟ್ಟುವ ದೃಷ್ಟಿಯಿಂದ ರೂಪಿಸಿಕೊಳ್ಳಬೇಕಿತ್ತು. ಅಂದರೆ ಸಮಾಜದ ಎಲ್ಲರಿಗೂ ಒಂದೇ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸಿಗುವಂತೆ ಅರ್ಥ ವ್ಯವಸ್ಥೆಯನ್ನು ಸಂಘಟಿಸಬಹುದಿತ್ತು. ಉತ್ತಮ ಶಿಕ್ಷಣ ಮತ್ತು ಆರೋಗ್ಯ ಮಾನವ ಸಂಪನ್ಮೂಲ ಗುಣಮಟ್ಟವನ್ನು ಸುಧಾರಿಸುತ್ತದೆ. ಸುಧಾರಿತ ಮಾನವಸಂಪನ್ಮೂಲ ಯೋಜನೆಗಳಿಂದ ಸೃಷ್ಟಿಯಾದ ಉದ್ಯೋಗ ಅವಕಾಶವನ್ನು ಬಳಸಿಕೊಳ್ಳುತ್ತದೆ. ಈ ಪ್ರಕ್ರಿಯೆಯಿಂದ ಸಂಪತ್ತಿನ ಮರುವಿತರಣೆ ಸಾಧ್ಯ ಆದರೆ ನಮ್ಮ ಶಿಕ್ಷಣ ಮತ್ತು ಆರೋಗ್ಯ ನೀತಿ ಕೂಡ ಆರ್ಥಿಕ ನೀತಿಯಂತೆ ಉಳ್ಳವರು ಇನ್ನೂ ಗಳಿಸಲು ಅವಕಾಶ ಮಾಡಿಕೊಡುವ ರೂಪದ್ದು. ಹಲವಾರು ವಿಧದ ಶಿಕ್ಷಣಗಳು ನಮ್ಮಲ್ಲಿ ಲಭ್ಯ. ತಳಸ್ತರದಲ್ಲಿ ರಾಜ್ಯ ಭಾಷೆ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಶಿಕ್ಷಣ ಇದೆ. ಅದೇ ರೀತಿಯಲ್ಲಿ ಗ್ರಾಮೀಣ ಜನರಿಗೆ ಮತ್ತು ಪೇಟೆ ಪಟ್ಟಣಗಳ ಜನರಿಗೆ ಬೇರೆ ಬೇರೆ ಶಿಕ್ಷಣ ಇದೆ. ಇನ್ನು ಕೇಂದ್ರ ಮತ್ತು ರಾಜ್ಯ ಪಠ್ಯ ಎನ್ನುವ ಮತ್ತೊಂದು ಬ್ರಾಂಡ್ ಕೂಡ ಇದೆ. ಅವರವರ (ಹಣಕಾಸಿನ) ಯೋಗ್ಯತೆಗನುಸಾರ ಜನರು ತಮಗೆ ಬೇಕಾದ ಶಿಕ್ಷಣವನ್ನು ಆರಿಸಿಕೊಳ್ಳಬಹುದು. ಈ ದೃಷ್ಟಿಯಿಂದ (ಶಿಕ್ಷಣ ಆಯ್ಕೆಯ ದೃಷ್ಟಿಯಿಂದ) ಭಾರತ ಶ್ರೀಮಂತ ದೇಶಗಳನ್ನು ಮೀರಿಸಿದೆ ಎನ್ನಬಹುದು. ಆದರೆ ಈ ಭಿನ್ನತೆಗಳು ಕೇವಲ ಪಠ್ಯ ಅಥವಾ ಭಾಷೆಯ ಭಿನ್ನತೆಗಳು ಮತ್ತು ಆಯ್ಕೆಗಳ ಪ್ರಶ್ನೆಗಳು ಮಾತ್ರವಲ್ಲ. ಇವುಗಳು ಭಾಷೆ ಅಥವಾ ಪಠ್ಯ ಆಯ್ಕೆಗಳಿಗಿಂತಲೂ ಹೆಚ್ಚಾಗಿ ವರ್ಗ ಭಿನ್ನತೆಯನ್ನು ಬೆಳೆಸುತ್ತಿದೆ. ಮೇಲಿನ ಕನ್ನಡ / ಇಂಗ್ಲೀಷ್, ಗ್ರಾಮೀಣ / ಪೇಟೆ, ರಾಜ್ಯ / ಕೇಂದ್ರ, ಸರಕಾರಿ / ಖಾಸಗಿ ಇತ್ಯಾದಿಗಳಲ್ಲಿ ಮೊದಲಿನದ್ದು (ಕನ್ನಡ, ಗ್ರಾಮೀಣ, ಸರಕಾರಿ ಇತ್ಯಾದಿಗಳು) ಬಡವರ ಅನಾನುಕೂಲಸ್ಥರ ಶಿಕ್ಷಣವಾದರೆ ಎರಡನೆಯದ್ದು (ಇಂಗ್ಲೀಷ್, ಖಾಸಗಿ, ಪೇಟೆ ಇತ್ಯಾದಿಗಳು) ಉಳ್ಳವರ ಸ್ವತ್ತಾಗಿದೆ. ಇದೆ ಬಗೆಯ ವರ್ಗ ಪ್ರಶ್ನೆಯನ್ನು ಜೀವಂತ ಇಡುವ ಮತ್ತು ಬೆಳೆಸುವ ಶಿಕ್ಷಣ ಕ್ರಮ ಉನ್ನತ ಶಿಕ್ಷಣದಲ್ಲೂ ಇದೆ. ಮೂರು ಬಗೆಯ ವಿಶ್ವವಿದ್ಯಾಲಯಗಳು ಮತ್ತು ಹಲವಾರು ಬಗೆಯ ಸಂಶೋಧನ ಸಂಸ್ಥೆಗಳು ನಮ್ಮಲ್ಲಿ ಕೆಲಸ ಮಾಡುತ್ತಿವೆ. ಕೇಂದ್ರೀಯ ವಿಶ್ವವಿದ್ಯಾಲಯಗಳು, ರಾಜ್ಯ ವಿಶ್ವವಿದ್ಯಾಲಯಗಳು, ಖಾಸಗಿ ವಿಶ್ವವಿದ್ಯಾಲಯಗಳು (ಪರದೇಶಿ ವಿಶ್ವವಿದ್ಯಾಲಯಗಳು ಇನ್ನು ಬರಬೇಕಿದೆ) ಎನ್ನುವ ಮೂರು ವಿಶ್ವವಿದ್ಯಾಲಯಗಳು ಉನ್ನತ ಶಿಕ್ಷಣವನ್ನು ಕೊಡುತ್ತಿವೆ. ಈ ಮೂರರಲ್ಲಿ ಸಂಪೂರ್ಣ ವಿಭಿನ್ನ ಗುಣಮಟ್ಟದ ಶಿಕ್ಷಣ ಲಭ್ಯ.

ತೊಂಬತ್ತರ ನಂತರ ಸಾಮಾಜಿಕ ಮೌಲಸೌಕರ್ಯದ ಮೇಲಿನ ವಿನಿಯೋಜನೆ ಹೆಚ್ಚಗಿದೆ. ಆದರೆ ಈ ಹೆಚ್ಚಳದ ಪರಿಣಾಮ ಶಿಕ್ಷಣ ಕ್ಷೇತ್ರದ ಮೇಲೆ ಆಗಿಲ್ಲ. ಇದಕ್ಕೆ ಒಂದು ಕಾರಣ ಖಾಸಗೀಕರಣ ಆರ್ಥಿಕ ನೀತಿ ಅನುಸರಿಸಲು ಆರಂಭಿಸಿದ ನಂತರ ಶುರು ಮಾಡಿದ ಪ್ರಾಥಮಿಕ ಶಿಕ್ಷಣ ವರ್ಸಸ್ ಉನ್ನತ ಶಿಕ್ಷಣ ಎನ್ನುವ ಚರ್ಚೆ. ಅಂದರೆ ಉನ್ನತ ಶಿಕ್ಷಣಕ್ಕೆ ಸರಕಾರ ಅನುದಾನ ನೀಡಿ ಬೆಳೆಸುವ ಅಗತ್ಯವಿಲ್ಲ. ಖಾಸಗಿ ಬಂಡವಾಳದ ಮೂಲಕ ಉನ್ನತ ಶಿಕ್ಷಣಕ್ಷೇತ್ರ ಬೆಳೆಸುವುದು ವಾಸಿ ಎನ್ನುವ ತೀರ್ಮಾನ ಬರಲಾರಂಭಿಸಿತು. ಇದರಿಂದಾಗಿ ಉನ್ನತ ಶಿಕ್ಷಣದ ಮೇಲೆ ಸರಕಾರ ಮಾಡುತ್ತಿದ್ದ ವಿನಿಯೋಜನೆ ಕಡಿಮೆಯಾಗಲು ಶುರುವಾಯಿತು. ಹಾಗೆಂದು ಪ್ರಾಥಮಿಕ ಶಿಕ್ಷಣ (ಪ್ರೌಢಶಿಕ್ಷಣವನ್ನು ಸೇರಿಸಿಕೊಂಡು) ಕ್ಷೇತ್ರ ವಿಶೇಷ ಸುಧಾರಿಸಿಲ್ಲ. ಪ್ರಾಥಮಿಕ ಶಾಲೆಗಳಿಗೆ ಹೋಲಿಸಿದರೆ ಪ್ರೌಢಶಾಲೆಗಳ ಪ್ರಮಾಣ ಅತ್ಯಲ್ಪ. ಖಾಸಗೀಕರಣ ಆರಂಭವಾದ ಒಂದು ದಶಕದ ನಂತರವೂ ಪ್ರಾಥಮಿಕ ಶಾಲೆಗಳ ಶೇ. 17ರಷ್ಟು ಮಾತ್ರ ಪ್ರೌಢಶಾಲೆಗಳಿವೆ. ಏನಿದರ ಅರ್ಥ? ಒಂದೋ ಪ್ರಾಥಮಿಕ ಶಾಲೆಗಳಿಗೆ ಹೋಗುವ ಶೇ.83ರಷ್ಟು ವಿದ್ಯಾರ್ಥಿಗಳು ಪ್ರೌಢಶಾಲೆಗಳಿಗೆ ಹೋಗುವುದಿಲ್ಲ ಅಥವಾ ಶೇ.17ರಷ್ಟಿರುವ ಪ್ರೌಢಶಾಲೆಗಳು ಪ್ರಾಥಮಿಕ ಶಾಲೆಗಳಲ್ಲಿ ತೇರ್ಗಡೆ ಹೊಂದುವ ಎಲ್ಲ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುತ್ತವೆಯೆಂದು ತಿಳಿಯಬೇಕು. ಇದರಲ್ಲಿ ಮೊದಲನೇಯ ಗ್ರಹಿಕೆಯು ಸರಿ. ಪ್ರಾಥಮಿಕ ಶಾಲೆ ಶಿಕ್ಷಣ ಕೊಡುವುದು ಮಾತ್ರ ಸರಕಾರದ ಜವಾಬ್ದಾರಿ. ಅದಕ್ಕಿಂತಲೂ ಹೆಚ್ಚಿನ ಶಿಕ್ಷಣ ಬೇಕಿದ್ದರೆ ಪಾಲಕರು ಸ್ವಂತ ಆದಾಯದಿಂದ ತಮ್ಮ ಮಕ್ಕಳನ್ನು ಓದಿಸಬೇಕು. ಸರಕಾರ ತನ್ನ ಆದ್ಯತೆಯನ್ನು ಪ್ರಾಥಮಿಕ ಶಿಕ್ಷಣಕ್ಕೆ ಸೀಮಿತಗೊಳಿಸಿದೆ ನಂತರವೂ ಶಾಲೆಗಳ ಮೂಲ ಸವಲತ್ತುಗಳ ಸ್ಥಿತಿ ವಿಶೇಷ ಸುಧಾರಿಸಿಲ್ಲ. ಇನ್ನೂ ಕೂಡ ಕೊರತೆ ರೂಪದಲ್ಲೇ ಇವೆ. ಬಹುತೇಕ ಶಾಲೆಗಳಲ್ಲಿ ಅವಶ್ಯವಿರುವಷ್ಟು ಕೊಠಡಿಗಳು ಮತ್ತು ಟೀಚರ್ ಗಳಲ್ಲಿ. ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸಂಪರ್ಕ ಇತ್ಯಾದಿ ಕನಿಷ್ಠ ಸವಲತ್ತುಗಳಿಲ್ಲದ ಶಾಲೆಗಳ ಸಂಖ್ಯೆ ಶೇಕಡಾ ಐವತ್ತಕ್ಕಿಂತಲೂ ಹೆಚ್ಚು ಇದೆ (ಕೋಷ್ಟಕ-16)

ಶಿಕ್ಷಣದ ಕ್ಷೇತ್ರದಷ್ಟೇ ವಿವಿಧತೆಯನ್ನು ಆರೋಗ್ಯ ಕ್ಷೇತ್ರ ಹೊಂದಿದೆ. ಇಲ್ಲೂ ಹಲವಾರು ವೈದ್ಯಕೀಯ ಪದ್ಧತಿಗಳಿವೆ. ಅಲೋಪಥಿ, ಹೋಮಿಯೋಪಥಿ, ಯುನಾನಿ, ಆಯುರ್ವೇದ, ನಾಟಿ ಔಷಧಿ ಇತ್ಯಾದಿ ಹಲವಾರು ವೈದ್ಯಕೀಯ ಪದ್ಧತಿಗಳು ಸಕ್ರಿಯವಾಗಿವೆ. ಸರಕಾರಿ ಕ್ಷೇತ್ರಕ್ಕೆ ಹೋಲಿಸಿದರೆ ಖಾಸಗಿ ಕ್ಷೇತ್ರ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಕಾರುಬಾರು ಮಾಡುತ್ತಿದೆ. ಮೆಡಿಕಲ್ ಕಾಲೇಜುಗಳು, ಕ್ಲಿನಿಕ್ಗಳು, ವೈದ್ಯರುಗಳು ಈ ಎಲ್ಲವೂ ಖಾಸಗಿ ಕ್ಷೇತ್ರದಲ್ಲಿ ಹೆಚ್ಚಿವೆ. ಗ್ರಾಮೀಣ ಪ್ರದೇಶಕ್ಕೆ ಹೋಲಿಸಿದರೆ ಆರೋಗ್ಯದ ಎಲ್ಲ ಸವಲತ್ತುಗಳು ನಗರ ಪ್ರದೇಶಗಳಲ್ಲಿ ಹೆಚ್ಚಿವೆ. ಆಧುನೀಕರಣದೊಂದಿಗೆ ಜನಸಾಮಾನ್ಯರು ತಮ್ಮ ಸಾಂಪ್ರದಾಯಿಕ ಆರೋಗ್ಯ ಪದ್ಧತಿ ಸ್ಥಾನದಲ್ಲಿ ಜನಸಾಮ್ಯಾನ್ಯರಿಗೆ ಇನ್ನೂ ಕೂಡ ಆರೋಗ್ಯದ ಬದಲೀ ವ್ಯವಸ್ಥೆ ಆಗಿಲ್ಲ. ಗುಣಮಟ್ಟದ ಆಲೋಪಥಿ ಟ್ರಿಟ್ಮೆಂಟ್ ಜನಸಾಮಾನ್ಯರ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಿಲ್ಲ. ಕಳಪ ಗುಣಪಟ್ಟದ ಔಷಧಿಗಳನ್ನು ಸೇಮಿಸಿ ರೋಗ ವಾಸಿಯಾಗದಿರುವಾಗ ಜನರು ಒಂದೊಂದೇ ಪದ್ಧತಿಯನ್ನು ಪರೀಕ್ಷಿಸುತ್ತಾ ಹೋಗಬೇಕಾಗಿದೆ. ಆಲೋಪಥಿಯಲ್ಲಿ ಗುಣವಾಗಿಲ್ಲವೆಂದು ಆಯುರ್ವೇದಕ್ಕೆ ಹೋಗುವುದು. ಅಲ್ಲೂ ಗುಣವಾಗಿಲ್ಲವೆಂದು ಹೋಮಿಯೋಪಥಿ ಪ್ರಯತ್ನಿಸುವುದು. ಅದು ಕೈಕೊಟ್ಟರೆ ನಾಟಿ ಔಷಧಿ ಇದ್ದೇ ಇದೆ. ಈ ಎಲ್ಲದರ ಜತೆಗೆ ಅಥವಾ ಪ್ರತ್ಯೇಕವಾಗಿ ಮಾಯ, ಮಂತ್ರ, ತಂತ್ರಗಳೂ ಇರುತ್ತವೆ. ಇಷ್ಟೆಲ್ಲ ಪ್ರಯೋಗ ಮಾಡಿ ಮುಗಿಯುವ ವೇಳೆಗೆ ಜನಸಾಮಾನ್ಯರ ದಿನದ ಕೂಲಿಯ ಕನಿಷ್ಠ ಶೇಕಡಾ ನಲ್ವತ್ತರಿಂದ ಐವತ್ತರಷ್ಟು ಆರೋಗ್ಯಕ್ಕೆ ಕರ್ಚಾಗಿರುತ್ತದೆ. ಇಷ್ಟು ಕರ್ಚು ಮಾಡಿದ ನಂತರವೂ ಅವರು ಹಿಂದಿನಂತೆ ಆಗುತ್ತಾರೆನ್ನುವ ಗ್ಯಾರಂಟಿ ಇಲ್ಲ. ಯಾಕೆಂದರೆ ಇಡೀ ಆರೋಗ್ಯ ಕ್ಷೇತ್ರವನ್ನು ನಿಯಂತ್ರಿಸುವ ಅಂದರೆ ವೈದ್ಯರು ಮತ್ತು ರೋಗಿಗಳ ನಡುವಿನ ವ್ಯವಹಾರವನ್ನು ನಿಯಂತ್ರಿಸುವ ಕಾನೂನು ನಮ್ಮಲ್ಲಿ ಇಲ್ಲ. ವೈದ್ಯನೊಬ್ಬ ಯಾವುದೇ ಪ್ರಯೋಗವನ್ನು ರೋಗಿಯ ಮೇಲೆ ಮಾಡಿ ರೋಗಿ ಬಚಾವಾಗದಿದ್ದರೂ ವೈದ್ಯ ಬಚಾವಾಗುವ ಸ್ಥಿತಿ ಇದೆ. ಇರುವ ಅಲ್ಪಸ್ವಲ್ಪ ಸರಕಾರಿ ಆರೋಗ್ಯ ಸವಲತ್ತುಗಳು ಕೂಡ ಹಲವಾರು ಕೊರತೆಗಳನ್ನು ಅನುಭವಿಸುತ್ತಿವೆ. ವೈದ್ಯರಿಲ್ಲದ, ಲ್ಯಾಬ್ ಟೆಕ್ನಿಷಿಯನ್ ಇಲ್ಲದ, ಫಾರ್ಮಸಿಸ್ಟ್, ಇಲ್ಲದ, ಪಾರಾಮಡಿಕಲ್ ಸ್ಟಾಪ್ ಇಲ್ಲದ, ಸಾಕಷ್ಟು ಕೊಠಡಿಗಳಲ್ಲಿದ, ಆಡಳಿತ ಸಿಬ್ಬಂದಿಗಳಿಲ್ಲದ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಾಕಷ್ಟಿವೆ. (ಕೋಷ್ಟಕ-16). ಇಷ್ಟೊಂದು ಕೆಟ್ಟ ಆರೋಗ್ಯ ಕ್ಷೇತ್ರ ಜನಸಾಮಾನ್ಯರ ಆರೋಗ್ಯವನ್ನು ಸುಧಾರಿಸಲು ಸಾಧ್ಯವೇ? ಆರೋಗ್ಯವೇ ಇಲ್ಲದಿದ್ದರೆ ದುಡಿದು ತಿನ್ನುವುದಾದರೂ ಹೇಗೆ?

ಭೂಮಿ ಇಲ್ಲ, ಬಂಡವಾಳ ಇಲ್ಲ, ಆಧುನಿಕ ಸ್ಕಿಲ್ ನೀಡುವ ಶಿಕ್ಷಣ ಇಲ್ಲ ಮತ್ತು ಕೈಗೆಟಕುವ ಬೆಲೆಗೆ ಆರೋಗ್ಯ ಸವಲತ್ತುಗಳಿಲ್ಲ. ಈ ಎಲ್ಲ ಕೊರತೆಗಳನ್ನು ಕಟ್ಟಿಕೊಂಡು ಚಾರಿತ್ರಿಕವಾಗಿ ತಳಸ್ತರದಲ್ಲಿರುವ ಜನರು ತಲೆ ಎತ್ತುವುದು ಹೇಗೆ? ಪಂಚವಾರ್ಷಿಕ ಯೋಜನೆಗಳ ಲಾಭ ಪಡೆಯುವುದು ಹೇಗೆ? ನಮ್ಮ ಸಮಾಜದ ಅರ್ಧಕ್ಕಿಂತಲೂ ಹೆಚ್ಚಿನ ಜನರು ಈ ಎಲ್ಲ ಕೊರತೆಗಳನ್ನು ವಿವಿಧ ಪ್ರಮಾಣದಲ್ಲಿ ಅನುಭವಿಸುತ್ತಿದ್ದಾರೆ. ಇಂತವರ ಕಲ್ಯಾಣಕ್ಕಾಗಿ ಯೋಜನೆಗಳಲ್ಲಿ ದೊಡ್ಡ ಪ್ರಮಾಣದ ಸಂಪನ್ಮೂಲ ವಿನಿಯೋಜಿಸಬೇಕಿತ್ತು. ಆದರೆ ಎಂಟನೇ ಯೋಜನೆ ತನಕ ಈ ವರ್ಗದ ಕಲ್ಯಾಣಕ್ಕಾಗಿ ವಿನಿಯೋಜಿಸಿದ ಮೊತ್ತ ಯೋಜನೆಯ ಶೇಕಡಾ ಎರಡನ್ನು ದಾಟಿಲ್ಲ. ಒಂಬತ್ತು ಮತ್ತು ಹತ್ತನೇ ಯೋಜನೆಗಳಲ್ಲಿ ಮಾತ್ರ ಕ್ರಮವಾಗಿ ಶೇಕಡಾ ಐದರಷ್ಟು ಮತ್ತು ಶೇಕಡಾ ನಾಲ್ಕರಷ್ಟು ಮೊತ್ತವನ್ನು ಈ ವರ್ಗದ ಕಲ್ಯಾಣಕ್ಕಾಗಿ ವಿನಿಯೋಜಿಸಲಾಗಿದೆ (ಕೋಷ್ಟಕ-2) ಈ ನೇರ ವಿನಿಯೋಜನೆಯನ್ನು ಹಂಚಿಕೊಳ್ಳಬೇಕಾದವರ ಪಟ್ಟಿ ನೋಡಿದರೆ ನಮ್ಮ ಅಧಿಕಾರ ರೂಢರ ಸಣ್ಣತನ ಕಣ್ಣಿಗೆ ರಾಚುತ್ತದೆ. ದಲಿತರು, ಬುಡಕಟ್ಟು ಜನರು, ಹಿಂದುಳಿದ ವರ್ಗದ ಜನರು, ಅಲ್ಪಸಂಖ್ಯಾತರು, ಮಹಿಳೆಯರು, ಅಂಗವಿಕಲರು, ಮಕ್ಕಳು ಹೀಗೆ ಅಲ್ಪಪ್ರಮಾಣದ ಕಲ್ಯಾಣ ಯೋಜನೆಗಳ ಮೇಲಿನ ವಿನಿಯೋಜನೆಯನ್ನು ಪಡೆಯುವವರ ದೊಡ್ಡ ಸಾಲೇ ಇದೆ. ಅಲ್ಪಪ್ರಮಾಣದ ನೇರ ವಿನಿಯೋಜನೆ ಜತೆಗೆ ಇತರ ಕ್ಷೇತ್ರಗಳಿಂದಲೂ ತಳಸ್ತರಾದ ಜನರಿಗೆ ಯೋಜನೆಯ ಲಾಭಗಳು ತೊಟ್ಟಿಕ್ಕುತ್ತವೆ ಎನ್ನುವ ಗ್ರಹಿತ ಇದೆ. ಈ ಗ್ರಹಿತವನ್ನು ವಿಮರ್ಶಸದೆ ಒಪ್ಪಿಕೊಂಡು ಇತರ ಕ್ಷೇತ್ರಗಳ ಕೊಡುಗೆಯನ್ನು ಧಾರಾಳವಾಗಿ ಲೆಕ್ಕಹಾಕಿದರೂ ಸುಮಾರು ಶೇಕಡಾ ಅರುವತ್ತರಿಂದ ಎಪ್ಪತರಷ್ಟಿರುವ ಇವರಿಗೆ ಯೋಜನೆಯ ಶೇಕಡಾ ಇಪ್ಪತ್ತರಷ್ಟು ವಿನಿಯೋಜನೆ ಹರಿದು ಬರುತ್ತಿಲ್ಲ.

ಭೂಮಾಲಿಕರು ಮತ್ತು ಬಂಡವಾಳಿಗರು ತಮ್ಮ ಉತ್ಪಾದನೆ ವೆಚ್ಚದ ಕನಿಷ್ಠ ಶೇಕಡಾ ಹತ್ತರಷ್ಟನ್ನು ಶ್ರಮಿಕರು ಕೂಲಿಗಾಗಿ ವ್ಯಯ ಮಾಡುತ್ತರೆಂದು ಗ್ರಹಿಸಲಾಗಿದೆ. ತೊಂಬತ್ತರ ದಶಕದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಾಲ್ತಿಯಲ್ಲಿದ್ದ ಕೃಷಿ ಕೂಲಿಯ ವಿವರಗಳನ್ನು ಕೋಷ್ಟಕದಲ್ಲಿ ನೀಡಿದ್ದೇನೆ. ಕೆಲವೊಂದು ಜಿಲ್ಲೆಗಳನ್ನು ಬಿಟ್ಟರೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೃಷಿ ಕೂಲಿ ಹದಿನೈದರಿಂದ ಇಪ್ಪತೈದು ರುಪಾಯಿಗಳಿತ್ತು. ಮಹಿಳೆಯರ ಕೃಷಿ ಕೂಲಿ ಇನ್ನೂ ಕಡಿಮೆ ಇತ್ತು. 2೦೦3-೦4ರ ವೇಳೆಗೆ ಕೃಷಿ ಕೂಲಿ ಸ್ವಲ್ಪ ಸುಧಾರಿಸಿದೆ. ಆದಾಗ್ಯೂ ಬಹುತೇಕ ಜಿಲ್ಲೆಗಳಲ್ಲಿ ಕೃಷಿ ಕೂಲಿ ನಲ್ವತ್ತರಿಂದ ಆರುವತ್ತು ರುಪಾಯಿಗಳಿದ್ದವು (ಕೋಷ್ಟಕ-13. ಪೇಟೆ ಪಟ್ಟಣಗಳಿಗೆ ಸಮೀಪ ಇರುವ ಪ್ರದೇಶಗಳಲ್ಲಿ ಮಾತ್ರ ಸ್ವಲ್ಪ ಹೆಚ್ಚಿನ ಮೊತ್ತದ ಕೃಷಿ ಕೂಲಿ ಇತ್ತು. ಸರಕಾರ ಕನಿಷ್ಠ ವೇತನ ಕಾಯಿದೆಯನ್ನು ಜಾರಿಗೆ ತಂದು ಹಲವಾರು ದಶಕಗಳೇ ಕಳೆದವು. ಆದರೆ ಈ ಕಾನೂನು ಪ್ರಕಾರ ಕನಿಷ್ಠ ಕೂಲಿ ಕೊಡುವ ಮಾಲಿಕರು ಸಿಗುವುದು ಕಷ್ಟ. ಇತರ ಕಾನೂನಿನಂತೆ ಕನಿಷ್ಠ ಕೂಲಿ ಕಾಯಿದೆ ಕೂಡ ಪುಸ್ತಕದಲ್ಲೇ ಉಳಿದು ಬಿಟ್ಟಿದೆ. ಸಂಘಟಿತರಾಗಿ ಕೃಷಿ ಕಾರ್ಮಿಕರು ತಮ್ಮ ಕೃಷಿ ಕೂಲಿ ಹೆಚ್ಚಿಸಿಕೊಂಡ ಉದಾಹರಣೆಗಳು ರಾಜ್ಯದಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಇವೆ. ಎಲ್ಲೆಲ್ಲಿ ಕೃಷಿ ಕಾರ್ಮಿಕರು ಸಂಘಟಿತರಾಗಲು ಪ್ರಯತ್ನಿಸಿದ್ದಾರೋ ಅಲ್ಲೆಲ್ಲ ಭೂಮಾಲಿಕರು ಕಾರ್ಮಿಕರು ಕೆಲಸವನ್ನು ಯಂತ್ರಗಳಿಗೆ ವರ್ಗಾಯಿಸಿದ್ದಾರೆ. ಈ ಎಲ್ಲದರ ಹಿನ್ನೆಲೆಯಲ್ಲಿ ಶೇಕಡಾ ಐವತ್ತಕ್ಕಿಂತಲೂ ಹೆಚ್ಚು ವಿನಿಯೋಜನೆಯನ್ನು ಕಂಡ ಕೃಷಿ, ನೀರಾವರಿ, ವಿದ್ಯುತ್ ಮತ್ತು ಕೈಗಾರಿಕ ಕ್ಷೇತ್ರಗಳಿಂದ ಸಮಾಜ ತಳಸ್ತರದ ಜನರಿಗೆ ಶೇಕಡಾ ಹತ್ತರಷ್ಟು ಸಂಪನ್ಮೂಲ ದಕ್ಕಿರಬಹುದೆಂದು ಊಹಿಸಲಾಗಿದೆ. ಕೂಲಿ ಕಡಿಮೆ ಇರುವ ಪ್ರದೇಶದಿಂದ ಕೂಲಿ ಹೆಚ್ಚಿರುವ ಪ್ರದೇಶಕ್ಕೆ ಪ್ರಯಾಣಿಸಲು ಆರ್ಥಿಕ ಮೂಲಸೌಕರ್ಯಗಳು ಸಹಕರಿಸುತ್ತವೆ. ಗ್ರಾಮೀಣಾಭಿವೃದ್ಧಿ ಹಾಗೂ ಹಲವಾರು ಕಲ್ಯಾಣ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಮೂಲಸೌಕರ್ಯಗಳ ಸವಲತ್ತುಗಳನ್ನು ತಳಸ್ತರದವರಿಗೆ ತಲುಪಿಸಲಾಗುತ್ತಿದೆ. ಈ ಎಲ್ಲ ಕಾರ್ಯಗಳ ಹೆಚ್ಚಿನ ಒತ್ತು ಬಡತನದ ತಾತ್ಕಾಲಿಕ ನಿವಾರಣೆ. ಇದೊಂದು ಬಗೆಯಲ್ಲಿ ಹಸಿದವರಿಗೆ ಊಟ ಹಾಕಿದಂತೆ. ಊಟದ ಸಮಸ್ಯೆ ಇರುವವರು ತಮ್ಮ ಊಟವನು ತಾವೇ ಗಳಿಸಲು ಅಗತ್ಯವಿರುವ ಭೂಮಿ ಅಥವಾ ಬಂಡವಾಳ ಈ ಕಾರ್ಯಕ್ರಮಗಳಿಂದ ಹರಿದು ಬರುವುದಿಲ್ಲ. ಹೀಗೆ ಬಡತವರ ಉದ್ದಾರಕ್ಕಾಗಿ ಇರುವ ಬಹುತೇಕ ಕಾರ್ಯಕ್ರಮಗಳು ಬಡತನವನ್ನು ಸೃಷ್ಟಿಸುವ ಪರಿಸರವನ್ನು (ಉತ್ಪಾದನ ಪರಿಕರಗಳ ಸ್ವಾಧೀನ ಇಲ್ಲದಿರುವುದು) ಸುಧಾರಿಸುವ ಕೆಲಸ ಮಾಡಿಲ್ಲ. ಸಾರ್ವಜನಿಕ ಸಂಪನ್ಮೂಲಗಳು ಸಮಾಜದ ಎಲ್ಲರುಗೂ ಏಕಪ್ರಮಾಣದಲ್ಲಿ ದೊರೆಯುವಂತೆ ಮಾಡುವುದು ಪಂಚವಾರ್ಷಿಕ ಯೋಜನೆಗಳ ಮೂಲ ಉದ್ದೇಶ. ಆದರೆ ಏಕೀಕೃತ ಕರ್ನಾಟಕ ತನ್ನ ಅರ್ಥ ವ್ಯವಸ್ಥೆಯನ್ನು ಆ ರೀತಿ ಕಟ್ಟಿಕೊಂಡಿಲ್ಲ. ಯೋಜನೆಗಳ ಮೂಲಕ ಬಲಾಢ್ಯರ ಆಸಕ್ತಿಗಳು ಇನ್ನೂ ಬಲಗೊಳ್ಳುವ ಮಾದರಿಯಲ್ಲಿ ಅರ್ಥ ವ್ಯವಸ್ಥೆಯನ್ನು ಕಟ್ಟಿಕೊಳ್ಳಲಾಗಿದೆ.