ಚರಿತ್ರೆ, ಸಂಸ್ಕೃತಿ, ಭಾಷೆ ಇತ್ಯಾದಿಗಳ ನೆಲೆಯಲ್ಲಿ ಕರ್ನಾಟಕ ಪ್ರತ್ಯೇಕ ರಾಜ್ಯವಾಗಿದೆ. ಪ್ರತ್ಯೇಕತೆಯೊಂದಿಗೆ ಹಲವು ಆಶಯಗಳು ಜೋತುಕೊಂಡಿವೆ. ಹಿಂದಿನಿಂದಲೇ ಬೆಳೆದು ಬಂದ ತಾರತಮ್ಯಗಳನ್ನು ಕಡಿಮೆ ಮಾಡುವುದು, ಸಮಷ್ಠಿಯ ಸಂಪನ್ಮೂಲದಲ್ಲಿ ಸರ್ವರಿಗೂ ಸಮಪಾಲು ಇರುವುದು, ಜನರ ಬೇಕುಬೇಡಗಳಿಗೆ ಅನುಸಾರ ಮುಂದಿನ ಬದುಕನ್ನು ಕಟ್ಟಿಕೊಳ್ಳುವುದು ಇತ್ಯಾದಿಗಳು ಪ್ರತ್ಯೇಕ ರಾಜ್ಯದೊಂದಿಗೆ ಜೋತುಕೊಂಡ ಆಶಯಗಳು. ಈ ಎಲ್ಲ ಆಶಯಗಳನ್ನು ಈಡೇರಿಸುವ ರೀತಿಯಲ್ಲಿ ಕರ್ನಾಟಕದ ಅರ್ಥ ವ್ಯವಸ್ಥೆಯನ್ನು ಕಟ್ಟಿಕೊಳ್ಳಲಾಗಿದೆಯೇ? ಕಟ್ಟಿಕೊಳ್ಳದಿದ್ದರೆ ಯಾಕೆ ಕಟ್ಟಿಕೊಂಡಿಲ್ಲ? ಮತ್ತು ಪ್ರತ್ಯೇಕವಾಗಿ ಕಟ್ಟಿಕೊಳ್ಳದಿರುವುದರಿಂದ ಆಗಿರುವ ಲಾಭನಷ್ಟಗಳೇನು? ಇತ್ಯಾದಿ ಪ್ರಶ್ನೆಗಳಿಗೆ ಹಿಂದಿನ ಅಧ್ಯಾಯಗಳಲ್ಲಿ ಉತ್ತರಿಸಲಾಗಿದೆ. ಎಲ್ಲ ವಿಚಾರಗಳಲ್ಲೂ ಕನ್ನಡ ಮಾತಾಡುವ ಜನರು ಭಾರತದ ಇತರರಿಗಿಂತ ಭಿನ್ನ ಎಂದು ವಾದಿಸಿದವರು ಅರ್ಥವ್ಯವಸ್ಥೆಯನ್ನು ಕಟ್ಟಿಕೊಳ್ಳುವಾಗ ಇತರರಿಗೆ ಏನು ಸಲ್ಲುತ್ತದೋ ಅದು ತಮಗೂ ಸಲ್ಲುತ್ತದೆ ಎನ್ನುವ ನಿಲುವು ತಾಳುತ್ತಾರೆ. ಪ್ರತ್ಯೇಕ ಕರ್ನಾಟಕಕ್ಕೆ ಪ್ರತ್ಯೇಕ ಅಭಿವೃದ್ಧಿ ಮಾದರಿಯನ್ನು ಕಲ್ಪಿಸಿಕೊಳ್ಳಲು ಮಾಡಿದ ಪ್ರಯತ್ನದ ಒಂದು ಸಣ್ಣ ಸುಳಿವು ಕೂಡ ನಮಗೆ ಸಿಗುವುದಿಲ್ಲ. ಯಾಕೆ ಹೀಗಾಯಿತೆಂದು ಕಾರಣ ಹುಡುಕುತ್ತಾ ಹೋದರೆ ಎರಡು ವಿಚಾರಗಳು ಗೋಚರವಾಗುತ್ತವೆ. ಒಂದು, ಮೇಲ್ ಸ್ತರದ (ರಾಷ್ಟ್ರ ಮಟ್ಟದ) ಬಲಾಢ್ಯರು ಮುಂದಿಟ್ಟು ಯೋಜಿತ ಅಭಿವೃದ್ಧಿಯ ಸಕರಾತ್ಮಕ ಗುಣಗಳು. ಎರಡು ಸ್ಥಳೀಯ ಬಲಾಢ್ಯರ ಆದ್ಯತೆಗಳು. ಮೇಲ್ ಸ್ತರದ ಬಲಾಢ್ಯರು ಯೋಜಿತ ಅಭಿವೃದ್ಧಿಯ ಈ ಕೆಳಗಿನ ಸಕರಾತ್ಮಕ ಗುಣಗಳನ್ನು ಮುಂದಿಟ್ಟಿದ್ದರು.

ಕೃಷಿ, ಕೈಗಾರಿಕೆ, ಆರ್ಥಿಕ ಹಾಗೂ ಸಾಮಾಜಿಕ ಮೂಲಸೌಕರ್ಯಗಳ ಮೇಲೆ ವಿನಿಯೋಜಿಸುವಷ್ಟು ಖಾಸಗಿ ಬಂಡವಾಳ ಬಲಗೊಂಡಿಲ್ಲ. ಈ ಕ್ಷೇತ್ರಗಳು ಬಲಗೊಳ್ಳದಿದ್ದರೆ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ. ಆದುದರಿಂದ ಈ ಎಲ್ಲ ಕ್ಷೇತ್ರಗಳಲ್ಲಿ ಸಾರ್ವಜನಿಕ ಸಂಪನ್ಮೂಲಗಳನ್ನು ಪ್ರಭುತ್ವ ಧಾರಾಳವಾಗಿ ವಿನಿಯೋಜಿಸಬೇಕು. ಈ ಕ್ಷೇತ್ರಗಳು ಬಲಗೊಳ್ಳುವುದರಿಂದ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರ ಕಡಿಮೆಯಾಗುತ್ತದೆ. ಭೂಮಿ, ಬಂಡವಾಳ ಇದ್ದವರು ತಮ್ಮ ಆಸ್ತಿಪಾಸ್ತಿಗಳನ್ನು ಬಳಸಿಕೊಂಡು ಇನ್ನೂ ಹೆಚ್ಚಿನ ಆದಾಯ ಗಳಿಸಬಹುದು. ಈ ಎರಡೂ ಇಲ್ಲದವರಿಗೆ ಉತ್ತಮ ಶಿಕ್ಷಣ, ಆರೋಗ್ಯ, ವಸತಿ ಇತ್ಯಾದಿಗಳನ್ನು ಪ್ರಭುತ್ವ ಕೊಟ್ಟು ಸಶಕ್ತರನ್ನಾಗಿಸ ಬಹುದು. ಈ ಬಗೆಯಲ್ಲಿ ಸಶಕ್ತರಾದ ಇವರು ತಮ್ಮ ದುಡಿಮೆಯಿಂದ ಆದಾಯ ಗಳಿಸಬಹುದು. ಅಥವಾ ತಾವು ಗಳಿಸಿದ ಪರಿಣತಿಯನ್ನು (ಸ್ಕಿಲ್ ನ್ನು) ವಿನಿಮಯ ಮಾಡಿಕೊಂಡು ಆದಾಯ ಗಳಿಸಬಹುದು ಈ ಎರಡು ವರ್ಗಗಳನ್ನು ಹೊರತುಪಡಿಸಿ ಇನ್ನೂ ಹಲವಾರು ಜನರಿದ್ದಾರೆ. ಅವರಿಗೆ ಚಾರಿತ್ರಿಕ ಕಾರಣಕ್ಕಾಗಿ ಅಥವಾ ವಯಸ್ಸಿನ ಕಾರಣಕ್ಕಾಗಿ ಹೊಸ ಅರ್ಥ ವ್ಯವಸ್ಥೆ ಸೃಷ್ಟಿಸುವ ಅವಕಾಶಗಳನ್ನು ಬಳಸಿಕೊಳ್ಳಲಾಗುವುದಿಲ್ಲ. ದುಡಿಯಲು ಅಸಮರ್ಥರಾದ ವಯಸ್ಸಿನವರು (ಹಿರಿಯರು ಮತ್ತು ಮಕ್ಕಳು), ಬೇಡಿಕೆಯಿಲ್ಲದ ಸ್ಕಿಲ್ ಹೊಂದಿದವರು, ಆಧುನಿಕ ಅರ್ಥ ವ್ಯವಸ್ಥೆಯಲ್ಲಿ ವಿನಿಮಯ ಮಾಡಿ ಆದಾಯ ಗಳಿಸುವ ಯಾವುದೇ ಸಂಪನ್ಮೂಲವನ್ನು ಹೊಂದಿಲ್ಲದವರು, ಭೂಮಿ, ಬಂಡವಾಳ, ಆಧುನಿಕ ಸ್ಕಿಲ್ ಇಲ್ಲದವರು ಮುಂತಾದವರು ಈ ಸಾಲಿನಲ್ಲಿ ಬರುತ್ತಾರೆ. ಇಂತವರ ಬದುಕನ್ನು ಸುಧಾರಿಸಲು ಅಗತ್ಯವಿರುವ ಸಂಪನ್ಮೂಲಗಳನ್ನು ಪ್ರಭುತ್ವವೇ ವಿನಿಯೋಜಿಸುತ್ತದೆ. ಈ ಎಲ್ಲ ಉದ್ದೇಶಗಳ ಸಾಧನೆ ಯೋಜಿತ ಅಭಿವೃದ್ಧಿಯಿಂದ ಮಾತ್ರ ಸಾಧ್ಯ ಎಂದು ಮೇಲ್ ಸ್ತರದ ಬಲಾಢ್ಯರು ನಂಬಿದ್ದರು ಮತ್ತು ಉಳಿದವರನ್ನೂ ನಂಬಿಸಿದರು. ಯೋಜಿತ ಅಭಿವೃದ್ಧಿಯ ಪಟ್ಟಿ ಮಾಡಿದ ಸಕರಾತ್ಮಕ ಗುಣಗಳು ಸಾಕಾರಗೊಳ್ಳುತ್ತಿದ್ದರೆ ಸಮಸ್ಯೆ ಇರಲಿಲ್ಲ. ಆದರೆ ಆ ರೀತಿ ಆಗಲಿಲ್ಲ. ಯೋಜಿತ ಅಭಿವೃದ್ಧಿಯ ಕೆಲವೇ ಕೆಲವು ಉದ್ದೇಶಗಳು ಈಡೇರಿದರೆ ಅರ್ಧಕರ್ಧ ಉದ್ದೇಶಗಳು ಈಡೇರಲಿಲ್ಲ.

ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳ ಉತ್ಪಾದನೆ ಹೆಚ್ಚಿಸುವ ದೃಷ್ಟಿಯಿಂದ ನೀರಾವರಿ, ವಿದ್ಯುತ್, ಆರ್ಥಿಕ ಹಾಗೂ ಸಾಮಾಜಿಕ ಮುಲಸೌಕರ್ಯಗಳ ಮೇಲೆ ರಾಜ್ಯದ ಸಂಪನ್ಮೂಲಗಳ ಶೇಕಡಾ ಎಂಬತ್ತಕ್ಕಿಂತಲೂ ಹೆಚ್ಚನ್ನು ವಿನಿಯೋಜಿಸಲಾಗಿದೆ. ಆಗಾಧ ಪ್ರಮಾಣದ ಸಂಪನ್ಮೂಲಗಳ ವಿನಿಯೋಜನೆಯ ನಂತರವೂ ಒಟ್ಟು ಬಿತ್ತನೆಯಾಗುವ ಪ್ರದೇಶದ ನಾಲ್ಕನೇ ಮೂರರಷ್ಟು ಭಾಗಕ್ಕೆ ನೀರಾವರಿ ವ್ಯವಸ್ಥೆ ಇಲ್ಲ. ಅಂದರೆ ಐದಾರು ದಶಕಗಳಲ್ಲಿ ಪ್ರತಿ ಯೋಜನೆಯಲ್ಲೂ ನೀರಾವರಿ ಮೇಲೆ ಸುರಿದ ಕೋಟಿಗಟ್ಟಲೆ ಹಣ ರಾಜ್ಯದ ಕೇವಲ ಕಾಲಂಶ ಕೃಷಿಕರ ನೀರಿನ ಸಮಸ್ಯೆಯನ್ನು ಪರಿಹರಿಸಿದೆ. ಉಳಿದ ಕೃಷಿಕರು (ಮುಕ್ಕಾಲು ಭಾಗ) ಇಂದು ಕೂಡ ತಮ್ಮ ಕೃಷಿಗೆ ಪ್ರಕೃತಿಯನ್ನೇ ನಂಬಬೇಕಾಗಿದೆ. ಈ ಕಾಲಂಶ ಭಾಗಕ್ಕೆ ಆಗಿರುವ ನೀರಾವರಿಯ ಲಾಭವನ್ನು ಪಡೆಯಬೇಕಾದರೆ ಭೂಮಿ ಬೇಕು. ನೀರಾವರಿ ಪ್ರದೇಶದಲ್ಲಿ ಎಲ್ಲದರಲ್ಲೂ ಸಮ ಪ್ರಮಾಣದ ಭೂಮಿ ಇದ್ದರೆ ನೀರಾವರಿ ಲಾಭ ಎಲ್ಲರಿಗೂ ಸಮ ಪ್ರಮಾಣದಲ್ಲಿ ದೊರೆಯುತ್ತದೆ. ಆದರೆ ರಾಜ್ಯದ ಭೂ ಒಡೆತನ ಇಂದು ಕೂಡ ಅಸಮಾನವಾಗಿದೆ. ಮೂರು ಭೂಸುಧಾರಣೆಗಳ ನಂತರವೂ ಶೇ. 25ರಷ್ಟಿರುವ ಮಧ್ಯಮ ಮತ್ತು ದೊಡ್ಡ ಭೂಮಾಲಿಕರ ಸ್ವಾಧೀನ ರಾಜ್ಯದ ಒಟ್ಟು ಕೃಷಿ ಭೂಮಿಯ ಮೂರನೇ ಎರಡರಷ್ಟು (ಶೇ.64) ಭೂಮಿ ಇದೆ. ಶೇಕಡಾ 33ರಷ್ಟು ಕುಟುಂಬಗಳಲ್ಲಿ ಏನೇನೂ ಭೂಮಿ ಇಲ್ಲ. ಶೇ. 48ರಷ್ಟು ಕುಟುಂಬಗಳು ಒಂದು ಎಕರೆಯ ಅಸುಪಾಸಿನಲ್ಲಿ ಭೂಮಿ ಹೊಂದಿವೆ. ಈ ಎಲ್ಲ ಅಂಕಿಅಂಶಗಳ ಆಧಾರದಲ್ಲಿ ತೀರ್ಮಾನಿಸುವುದಾದರೆ ನೀರಾವರಿ ಮೇಲೆ ಸುರಿದ ಕೋಟಿಗಟ್ಟಲೆ ಹಣದ ಲಾಭವನ್ನು ರಾಜ್ಯದ ಕೆಲವೇ ಕೆಲವು ಮಧ್ಯಮ ಮತ್ತು ದೊಡ್ಡ ಭೂಮಾಲಿಕರು ಪಡೆಯುತ್ತಿದ್ದಾರೆ. ಉಳಿದವರು ಹೆಚ್ಚೆಂದರೆ ಈ ಭೂಮಾಲೀಕರಲ್ಲಿ ದುಡಿದು ದಿನಕೂಲಿ ಗಳಿಸಬಹುದು. ಆದರೆ ರಾಜ್ಯದ ಬಹುತೇಕ ಭಾಗಗಳಲ್ಲಿ ಕೃಷಿ ಕೂಲಿ ಇನ್ನೂ ಕೂಡ ನೂರು ರುಪಾಯಿ ದಾಟಿಲ್ಲ. ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಇಂದು ಕೂಡ ಕೃಷಿ ಕೂಲಿ ನಲ್ವತ್ತು ರುಪಾಯಿಗಳ ಅನುಪಾಸಿನಲ್ಲಿದೆ. ಈ ಅಲ್ಪಪ್ರಮಾಣದ ಕೂಲಿ ಕೂಡ ಪುರುಷ ಮತ್ತು ಮಹಿಳೆಯರಿಗೆ ಸಮ ಪ್ರಮಾಣದಲ್ಲಿ ಸಿಗುವುದಿಲ್ಲ. ಮಹಿಳೆಯರು ಎಲ್ಲ ಕಡೆ ಪುರುಷರಿಗಿಂತ ಕಡಿಮೆ ಮೊತ್ತವನ್ನು ಪಡೆಯಬೇಕಾಗಿದೆ.

ವಿದ್ಯುತ್, ಆರ್ಥಿಕ ಹಾಗೂ ಸಾಮಾಜಿಕ ಮೂಲಸೌಕರ್ಯಗಳನ್ನು ಕೃಷಿಯೇತರ ಚಟುವಟಿಕೆಗಳನ್ನು (ಕೈಗಾರಿಕೆ ಮತ್ತು ಸೇವಾ ವಲಯಗಳನ್ನು) ಹೆಚ್ಚಿಸುವ ದೃಷ್ಟಿಯಿಂದ ಅಭಿವೃದ್ಧಿ ಪಡಿಸಲಾಗುತ್ತಿದೆ. ನೀರಾವರಿ ನಂತರ ಅಗಾಧ ಪ್ರಮಾಣದ ಸಾರ್ವಜನಿಕ ಸಂಪನ್ಮೂಲಗಳನ್ನು ಈ ಮೂರು ಕ್ಷೇತ್ರಗಳ ಮೇಲೆ ಮಾಡಲಾಗಿದೆ. ನೀರಾವರಿ ಮೇಲೆ ಮಾಡಿದ ವಿನಿಯೋಜನೆಯ ಲಾಭ ಪಡೆಯಬೇಕಾದರೆ ಭೂಮಿ ಹೇಗೆ ಬೇಕೋ ಅದೇ ರೀತಿಯಲ್ಲಿ ಕೃಷಿಯೇತರ ಚಟುವಟಿಕೆಗಳ ಅಭಿವೃದ್ಧಿಗೆ ಮಾಡಿದ ವಿನಿಯೋಜನೆಯ ಲಾಭ ಪಡೆಯಬೇಕಾದರೆ ಬಂಡವಾಳ ಬೇಕು. ಎರಡು ಮೂಲಗಳಿಂದ ನಮ್ಮಲ್ಲಿ ಬಂಡವಾಳ ಸಂಗ್ರಹವಾಗುತ್ತಿದೆ ವ್ಯಾಪಾರ ಮತ್ತು ಕೃಷಿ ಮೂಲಗಳಿಂದ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ವ್ಯಾಪಾರಿ ಸಮುದಾಯಗಳು ಬಂಡವಾಳ ಹೂಡಿದ್ದಾರೆ. ದೊಡ್ಡ ಮತ್ತು ಮಧ್ಯಮ ಕೃಷಿಕರು ತಮ್ಮ ಕೃಷಿಯಿಂದ ದೊರೆತ ಮಿಗತೆ ಮೊತ್ತವನ್ನು ಸರಕು ಮತ್ತು ಸೇವೆಗಳ ಚಿಲ್ಲರೆ ಮತ್ತು ಸಗಟು ವ್ಯಾಪಾರಗಳಲ್ಲಿ ವಿನಿಯೋಜಿಸಿದ್ದಾರೆ. ಸಣ್ಣ ಮಧ್ಯಮ ಮತ್ತು ದೊಡ್ಡ ಉದ್ದಿಮೆಗಳಲ್ಲಿ ವಿನಿಯೋಜಿಸಿದ್ದಾರೆ. ಬಂಡವಾಳ ಹೂಡಿದರೆ ದೊಡ್ಡ ಕೃಷಿಕರು ಸಣ್ಣ ಪ್ರಮಾಣದಲ್ಲಿ ಬಂಡವಾಳ ಹೂಡಿದ್ದಾರೆ. ಐಟಿ, ಬಿಟಿ ಉದ್ದಿಮೆಗಳು ಬಂದ ನಂತರ ಸಾಂಪ್ರದಾಯಿಕ ಬಂಡವಾಳ ಮೂಲಗಳನ್ನು ಹೊರತುಪಡಿಸಿದ ಮೂಲಗಳಿಂದಲೂ ಉದ್ದಿಮೆಗಳು ಹುಟ್ಟಿಕೊಂಡಿವೆ. ಕೃಷಿಯೇತರ ವಲಯ ಎರಡು ಬಗೆಯ ಉದ್ಯೋಗಗಳನ್ನು ಸೃಷಿ ಮಾಡುತ್ತದೆ. ಒಂದು ಸಂಘಟಿತ ವಲಯದ ಮತ್ತೊಂದು ಅಸಂಘಟಿತ ವಲಯದ ಅಯೋಗ ಶೇಕಡಾ ತೊಂಬತ್ತಕ್ಕಿಂತಲೂ ಹೆಚ್ಚಿನ ಉದ್ಯೋಗಗಳು ಅಸಂಘಟಿತ ವಲಯದಲ್ಲಿದೆ. ಸಂಘಟಿತ ವಲಯದ ಉದ್ಯೋಗಗಳಲ್ಲಿ ಆರೋಗ್ಯ, ಶಿಕ್ಷಣ, ಸಾರಿಗೆ, ವಸತಿ ಇತ್ಯಾದಿಗಳನ್ನು ಬಂಡವಾಳಿಗರೇ ಒದಗಿಸುತ್ತಾರೆ ಅಥವಾ ಉದ್ಯೋಗಿಗಳೇ ಖರೀದಿಸುವಷ್ಟು ಹೆಚ್ಚಿನ ಸಂಬಳ ಕೊಡುತ್ತಾರೆ. ಅಸಂಘಟಿತ ವಲಯಗಳಲ್ಲಿ ಮೇಲಿನ ಸವಲತ್ತುಗಳನ್ನು ಉದ್ದಿಮೆದಾರರು ಒದಗಿಸುವುದಿಲ್ಲ ಹಾಗೆಂದು ಉದ್ಯೋಗಿಗಳು ಖರೀದಿಸುವಷ್ಟು ಸಂಬಳ ಕೂಡ ಕೊಡುವುದಿಲ್ಲ. ಅಂದರೆ ಅಸಂಘಟಿತ ವಲಯದ ಉದ್ಯೋಗಿಗಳು ಮೂರು ಹಿತ್ತಿನ ಊಟಕ್ಕೆ ಬೇಕಾಗುವಷ್ಟು ಕೂಲಿ ಪಡೆಯುತ್ತಾರೆ. ವಸತಿ, ಶಿಕ್ಷಣ, ಆರೋಗ್ಯ ಸಾರಿಗೆ ಇತ್ಯಾದಿಗಳನ್ನೆಲ್ಲ ಅವರು ತಮ್ಮ ಕನಿಷ್ಠ ಕೂಲಿಯಿಂದ ಭರಿಸಿಕೊಳ್ಳಬೇಕು. ಇವರಿಗೆ ಕೃಷಿ ಕಾರ್ಮಿಕರಿಂದ ಸ್ವಲ್ಪ ಹೆಚ್ಚು ಕೂಲಿ ದೊರಕಬಹುದು. ಆದರೆ ಇವರ ಜೀವನದ ಗುಣಮಟ್ಟವಂತೂ ಊಹಿಸಲಾರದಷ್ಟು ನಿಕೃಷ್ಟವಾಗಿದೆ. ಕೊಳಗೇರಿಯಲ್ಲಿ ವಸತಿ, ಸರಕಾರಿ ಶಾಲೆ ಮತ್ತು ಆಸ್ಪತ್ರೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ. ಸರಕಾರಿ ಬಸ್ಸಲ್ಲಿ ಪ್ರಯಾಣ ಅಂದರೆ ಇಲ್ಲೂ ಕೃಷಿ ಕ್ಷೇತ್ರದಂತೆ ಬಂಡವಾಳ ಇದ್ದವರು ಮತ್ತು ಆಧುನಿಕ ಸ್ಕಿಲ್ ಇದ್ದವರು ಯೋಜನೆಗಳ ಹೆಚ್ಚಿನ ಲಾಭ ಪಡೆದಿದ್ದಾರೆ.

ಭೂಮಿ, ಬಂಡವಾಳ ಇಲ್ಲದವರಿಗೂ ಯೋಜಿತ ಅಭಿವೃದ್ಧಿ ಉತ್ತಮ ಬದುಕು ನೀಡಬಹುದಿತ್ತು. ಹಾಗೆ ನೋಡಿದರೆ ಇದು ಭೂಮಿ ಅಥವಾ ಬಂಡವಾಳವನ್ನು ಮರುವಿತರಣೆ ಮಾಡುವಷ್ಟು ಕಷ್ಟದ ಕೆಲಸವಲ್ಲ. ತುಂಬಾ ಸುಲಭದ ಕೆಲಸ. ಭೌತಿಕ (ನೀರಾವರಿ, ವಿದ್ಯುತ್, ರಸ್ತೆ ಬಂದರು, ವಿಮಾನ ನಿಲ್ದಾಣ ಇತ್ಯಾದಿ) ಸವಲತ್ತುಗಳನ್ನು ಸುಧಾರಿಸಲು ಮಾಡಿದಷ್ಟೇ ವಿನಿಯೋಜನೆಯನ್ನು ಸಾಮಾಜಿಕ ಮೂಲಸೌಕರ್ಯಗಳನ್ನು ಸುಧಾರಿಸಲು ಮಾಡಬೇಕಿತ್ತು. ಶಾಲೆ, ಕಾಲೇಜು, ತಾಂತ್ರಿಕ ಶಿಕ್ಷಣ ಸಂಸ್ಥೆ, ಮೆಡಿಕಲ್ ಶಿಕ್ಷಣ ಸಂಸ್ಥೆ, ಆಸ್ಪತ್ರೆ, ವಸತಿ, ಸೌಕರ್ಯ, ಕುಡಿಯುವ ನೀರು, ಶುಚಿತ್ವ ಇತ್ಯಾದಿಗಳನ್ನು ಅಭಿವೃದ್ಧಿ ಪಡಿಸಲು ದೊಡ್ಡ ಪ್ರಮಾಣದ ಸಾರ್ವಜನಿಕ ಸಂಪನ್ಮೂಲ ವಿನಿಯೋಜಿಸಬೇಕಿತ್ತು. ಸಮಾಜದ ಎಲ್ಲ ವರ್ಗದ ಜನರಿಗೆ ಅವರವರ ಆಸಕ್ತಿ ಹಾಗೂ ಅಭಿರುಚಿಗಳನ್ನು ಗಣನೆಗೆ ತೆಗೆದುಕೊಂಡು ಒಂದೇ ಗುಣಮಟ್ಟದ ಶಿಕ್ಷಣವನ್ನು ಯೋಜಿತ ಅಭಿವೃದ್ಧಿ ಕೊಡಬೇಕಿತ್ತು. ಸಮಾಜದ ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೌಕರ್ಯ ಉಚಿತವಾಗಿ ಅಥವಾ ಕೈಗೆಟಕುವ ಬೆಲೆಯಲ್ಲಿ ಸಿಗಬೇಕಿತ್ತು. ವಸತಿ, ಕುಡಿಯುವ ನೀರು, ಶುಚಿತ್ವ ಇತ್ಯಾದಿಗಳು ಆರೋಗ್ಯ ಅಥವಾ ಶಿಕ್ಷದಷ್ಟೇ ಮಹತ್ವವೆಂದು ಪರಿಗಣಿಸಬೇಕಿತ್ತು. ಸಾಮಾಜಿಕ ಮೂಲಸೌಕರ್ಯಗಳು ಈ ಬಗೆಯಲ್ಲಿ ಕಟ್ಟಿಕೊಳ್ಳುತ್ತಿದ್ದರೆ ಭೂಮಿ ಅಥವಾ ಬಂಡವಾಳ ಇಲ್ಲದವರು ಕೂಡ ಡಾಕ್ಟರು, ಎಂಜೀನಿಯರ್, ಮೆನೇಜರ್ ಆಗುತ್ತಿದ್ದರು. ಭೂಮಿ ಮತ್ತು ಬಂಡವಾಳಗಳು ಸೃಷ್ಟಿಸುವ ಉದ್ಯೋಗಗಳನ್ನು ಪಡೆಯುತ್ತಿದ್ದರು. ಸಾಮಾಜಿಕ ಮೂಲಸೌಕರ್ಯಗಳು ಕೈಗೆಟುಕುವ ಬೆಲೆಯಲ್ಲಿ ಪೂರೈಕೆಯಾದರೆ ಸಂಘಟಿತ ಮತ್ತು ಅಸಂಘಟಿತ ವಲಯಗಳ ವ್ಯತ್ಯಾಸಗಳು ಬದುಕಿನ ಗುಣಮಟ್ಟದ ಮೇಲೆ ವಿಶೇಷ ಪ್ರಭಾವ ಬೀರುವುದಿಲ್ಲ. ಆದರೆ ಯೋಜಿತ ಅಭಿವೃದ್ಧಿಯಲ್ಲಿ ಭೌತಿಕ ಸವಲತ್ತುಗಳನ್ನು ಸೃಷ್ಟಿಸಲು ನೀಡಿದ ಆದ್ಯತೆಯ ಒಂದಂಶವನ್ನು ಕೂಡ ಸಾಮಾಜಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ನೀಡಲಿಲ್ಲ. ಸಾಮಾಜಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವ ಜವಾಬ್ದಾರಿಯನ್ನು ಖಾಸಗಿ ಬಂಡವಾಳಕ್ಕೆ, ಮಠಮಂದಿರಗಳಿಗೆ ಬಿಡಲಾಯಿತು. ಇದರಿಂದ ದುಡ್ಡಿದವರು ಮಾತ್ರ ಉತ್ತಮ ಆರೋಗ್ಯ ಶಿಕ್ಷಣ, ವಸತಿ, ಶುಚಿತ್ವ ಇತ್ಯಾದಿಗಳನ್ನು ಪಡೆಯುವಂತಾಯಿತು. ಅನಾನುಕೂಲಸ್ಥರು ಗುಣಮಟ್ಟದ ಶಿಕ್ಷಣ, ಆರೋಗ್ಯ ವಸತಿ ಸವಲತ್ತುಗಳಿಂದ ವಂಚಿತರಾದರು. ಅಂದರೆ ಯೋಜಿತ ಅಭಿವೃದ್ಧಿ ಲಾಭವನ್ನು ಭೂಮಿ, ಬಂಡವಾಳ ಇದ್ದವರು ಜತೆಗೆ ಆಧುನಿಕ ಸ್ಕಿಲ್ ಇದ್ದವರು ಕೂಡ ಪಡೆದರು. ಆದರೆ ಈ ಮೂರರಲ್ಲಿ ಯಾವುದಾದರೂ ಒಂದನ್ನೂ ಹೊಂದಿದ್ದವರು ಯೋಜಿತ ಅಭಿವೃದ್ಧಿಯಿಂದ ಏನೇನೂ? ಲಾಭ ಪಡೆಯಲಿಲ್ಲ.

ಯಾಕೆ ಹೀಗಾಯಿತು? ಎನ್ನುವ ಪ್ರಶ್ನೆಗೆ ಎರಡನೇ ಅಧ್ಯಾಯದಲ್ಲಿ ಉತ್ತರಿಸಿದ್ದೇನೆ. ಬದಲೀ ಆರ್ಥಿಕ ವ್ಯವಸ್ಥೆಯನ್ನು ಮುಂದಿಟ್ಟು ಏಕೀಕರಣ ಚಳವಳಿ ನಡೆದಿಲ್ಲ. ಪ್ರತ್ಯೇಕ ಚರಿತ್ರೆ, ಸಂಸ್ಕೃತಿ. ಭಾಷೆ, ಆಚಾರವಿಚಾರ, ಉಡುಗೆತೊಡುಗೆ ಮುಂತಾದವುಗಳನ್ನು ಮುಂದಿಟ್ಟುಕೊಂಡು ಏಕೀಕರಣ ಚಳವಳಿ ನಡೆದಿದೆ. ಏಕೀಕೃತ ಕರ್ನಾಟಕದೊಳಗೆ ಸೇರಬೇಕಾದ ಪ್ರದೇಶಗಳ ಬಗ್ಗೆ ಚರ್ಚೆ ನಡಿದಿದೆ. ಆದರೆ ಏಕೀಕೃತ ಕರ್ನಾಟಕದೊಳಗೆ ಸೇರುವ ಭೂಮಿಯನ್ನು ಕನ್ನಡಿಗರು ಹೇಗೆ ಹಂಚಿಕೊಳ್ಳಬೇಕೆಂದು ಚರ್ಚೆ ನಡೆದಿಲ್ಲ. ಭೂಮಾಲಿಕ ಕನ್ನಡಿಗ ಮತ್ತು ಗೇಣಿದಾರ ಕನ್ನಡಿಗನ ಸಂಬಂಧ ಹೇಗಿರಬೇಕೆಂದು ಚರ್ಚೆ ನಡೆದಿಲ್ಲ. ಎರಡು ಹೊತ್ತಿನ ಊಟಕ್ಕಾಗಿ ಮುಂಜಾನೆಯಿಂದ ಸಂಜೆ ತನಕ ದುಡಿಯುವ ಕನ್ನಡಿಗ ಮತ್ತು ದುಡಿಸುವ ಕನ್ನಡಿಗನ ನಡುವಿನ ಸಂಬಂಧ ಹೇಗಿರಬೇಕೆಂದು ದೊಡ್ಡ ಮಟ್ಟಿನ ಚರ್ಚೆ ನಡೆದಿಲ್ಲ. ಏಕೀಕೃತ ಕರ್ನಾಟಕದಲ್ಲಿ ಬಂದು ಹೋದ ಭೂಸುಧಾರಣ ಮಸೂದೆಗಳು ಕರ್ನಾಟಕವನ್ನು ಕಟ್ಟಿಕೊಳ್ಳುವಾಗ ಹುಟ್ಟಿದ ಕೂಸಲ್ಲ. ಕರ್ನಾಟಕ ಮತ್ತು ದೇಶದ ಇತರ ಪ್ರದೇಶಗಳಲ್ಲಿ ನಡೆದ ಭೂಸುಧಾರಣೆಗಳು ದೇಶ ಕಟ್ಟಿಕೊಳ್ಳುವಾಗ ಹುಟ್ಟಿದ ಕೂಸು. ಹೀಗೆ ಹೇಳಿದ ಕೂಡಲೇ ದಿನಕರ ದೇಸಾಯಿಯವರ ನೇತೃತ್ವದಲ್ಲಿ (ಉತ್ತರ ಕನ್ನಡ ಜಿಲ್ಲೆಯಲ್ಲಿ) ನಡೆದ ಭೂಹೋರಾಟದ ಉದಾಹರಣೆಯನ್ನು ನೀಡಬಹುದು. ಕಾಗೋಡು ಚಳವಳಿಯ ಹುಟ್ಟು ಕೂಡ ಏಕೀಕರಣ ಪೂರ್ವದಲ್ಲೇ ಇದೆ ಎಂದು ವಾದಿಸಬಹುದು. ನೆರೆಯ ಕೇರಳದ ಎಡಪಂಥೀಯ ಚಳವಳಿಗಳಿಂದ ಪ್ರಭಾವಿತರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಗೇಣಿದಾರರು ನಡೆಸಿದ ಪ್ರತಿಭಟನೆಗಳ ಉದಾಹರಣೆ ಕೊಡಬಹುದು. ಆದರೆ ಈ ಎಲ್ಲ ಪ್ರದೇಶಗಳಲ್ಲಿ ಸಾವಿರಾರು ಎಕರೆ ಭೂಮಿಯನ್ನು ಹೊಂದಿದ್ದ ಜಾಗೀರುದಾರರಾಗಲಿ, ಜೋಡಿದಾರರಾಗಲಿ, ಇನಾಂದಾರರಾಗಲಿ ಅಥವಾ ಜಮೀನುದಾರು ಇರಲಿಲ್ಲ. ಇಲ್ಲೆಲ್ಲ ಸಣ್ಣಪುಟ್ಟ ರೈತರು ಮತ್ತು ನೂರು ಇನ್ನೂರು ಎಕರೆ ಭೂಮಿ ಇದ್ದ ಜಮೀನುದಾರರು ಇದ್ದರು. ಸಾವಿರಾರು ಎಕರೆ ಭೂಮಿ ಇದ್ದ ಜಾಗೀರುದಾರರು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಇದ್ದರು. ಆದರೆ ಅಲ್ಲೆಲ್ಲ ದೊಡ್ಡಮಟ್ಟಿನ ಗೇಣಿದಾರರ ಹೋರಾಟ ನಡೆಯಲಿಲ್ಲ. ಬಾಂಬೆ ಕರ್ನಾಟಕ ಪ್ರಾಂತದಲ್ಲೂ ಸಾವಿರಾರು ಎಕರೆ ಭೂಮಿ ಹೊಂದಿದ್ದ ಸಂಸ್ಥಾನಗಳು ಇದ್ದವು, ಇನಾಂದಾರರು / ಜಮೀನುದಾರರು ಇದ್ದರು. ಬಾಂಬೆ ಪ್ರಾಂತದ ಸಂಸ್ಥಾನಗಳಲ್ಲಿ ಮತ್ತು ಇನಾಂ ಭೂಮಿ ಕೃಷಿ ಮಾಡುತ್ತಿದ ಗೇಣಿದಾರರು ತಮ್ಮನ್ನು ಶೋಷಿಸುತ್ತಿದ್ದ ಭೂಮಾಲಿಕರ ವಿರುದ್ಧ ಪ್ರತಿಭಟಿಸಿದ್ದಾರೆ. ಆದರೆ ಹಲವು ಬಾರಿ ಈ ಪ್ರತಿಭಟನೆಗಳು ಒಂದೋ ಸ್ವತಂತ್ರ ಅಥವಾ ಏಕೀಕರಣ ಹೋರಾಟ ಹೆಸರಿನೊಂದಿಗೆ ಅಥವಾ ಬ್ರಾಹ್ಮಣೇತರ ಚಳುವಳಿಯ ಹೆಸರಿನೊಂದಿಗೆ ತಳಕು ಹಾಕಿಕೊಂಡಿದ್ದವು. ಇದರಿಂದಾಗಿ ಅವುಗಳ ಗೇಣಿದಾರರ ಪ್ರತ್ಯೇಕ ಹೋರಾಟಗಳಾಗಿ ಮುಂಚೂಣಿಗೆ ಬರಲಿಲ್ಲ. ಅಷ್ಟೇ ಅಲ್ಲ ಅವುಗಳು ಏಕೀಕರಣ ಚಳವಳಿಯ ಅಜಂಡಾಗಳನ್ನು ರೂಪಿಸಲಿಲ್ಲ. ಏಕೀಕೃತ ಕರ್ನಾಟಕದಲ್ಲಿನ ಭೂಮಿ ಪ್ರಶ್ನೆಯನ್ನು ಹೇಗೆ ನಿಭಾಯಿಸಬೇಕನ್ನುವ ಕನಿಷ್ಠ ಸೂಚನೆಯನ್ನು ಕೂಡ ಅವುಗಳು ನೀಡಲಿಲ್ಲ.

ಏಕೀಕರಣ ಪೂರ್ವ ಭೂಸಂಬಂಧಗಳನ್ನು ಯಥಾರೂಪದಲ್ಲಿಟ್ಟುಕೊಂಡು ಯೋಜಿತ ಅಭಿವೃದ್ಧಿಯ ಆದ್ಯತೆಯನ್ನು ನಿರ್ಧರಿಸಲಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರದಲ್ಲಿ ಇತ್ತು ಸ್ಥಳೀಯ ಭೂಮಾಲಿಕರು ಮತ್ತು ಬಂಡವಾಳಿಗರು ಕರ್ನಾಟಕದ ಕಾಂಗ್ರೇಸ್ ಪಕ್ಷದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದರು. ಪಕ್ಷ ರಾಜಕೀಯಕ್ಕಾಗಿ ತಮ್ಮ ಸಮುದಾಯಗಳನ್ನು ಇವರು ಧಾರಾಳವಾಗಿ ಉಪಯೋಗಿಸಿಕೊಳ್ಳುತ್ತಿದ್ದರು. ಸಮುದಾಯ ಸಂಘಟನೆಗಳನ್ನು ಮಾಡಿಕೊಳ್ಳುವುದು. ಸಮುದಾಯದ ಯುವಕರಿಗೆ ಶಿಕ್ಷಣ ಸಂಸ್ಥೆಗಳನ್ನು ತೆರೆಯುವುದು, ಬ್ಯಾಂಕ್ ಗಳನ್ನು ಸ್ಥಾಪಿಸುವುದು, ಸಾರ್ವಜನಿಕ ಸಂಪನ್ಮೂಲಗಳನ್ನು ಸಮುದಾಯದ ಏಳಿಗೆಗೆ ಬಳಸುವುದು ಇತ್ಯಾದಿ ಕೆಲಸಗಳ ಮೂಲಕ ಇವರು ತಮ್ಮ ಸಮುದಾಯದ ಬೆಂಬಲ ಪಡೆಯುತ್ತಿದ್ದರು. ಮೇಲ್ ಸ್ತರದ ಸಮುದಾಯಗಳ ಬಲಾಢ್ಯರು ತಮ್ಮ ರಾಜಕೀಯ ಬಲವರ್ಧನೆಗೆ ಬಳಸಿದ ಮಾರ್ಗವನ್ನೇ ತಳಸ್ತರದ ಸಮುದಾಯಗಳ ಬಲಾಢ್ಯರು ಅನುಸರಿಸಿದರು. ಇಂತಹ ರಾಜಕೀಯ ಎರಡು ಬಗೆಯ ಬೆಳವಣಿಗೆಗಳಿಗೆ ಎಡೆಮಾಡಿದ. ಒಂದು ಜಾತಿ / ಧರ್ಮಗಳು ರಾಜಕೀಯ ಪ್ರಕ್ರಿಯೆ ಮೂಲ ದ್ರವ್ಯಗಳೆನ್ನುವ ಚಿತ್ರಣ ಮೂಡಿಸಿದೆ. ಎರಡು, ಜಾತಿ / ಧರ್ಮದ ನೆಲೆಯಲ್ಲಿ ರಾಜಕೀಯದ ಮೂಲಕ ಆಯಾಯ ಸಮುದಾಯದ ಬಲಾಢ್ಯರು ಮಾತ್ರ ತಮ್ಮ ಆರ್ಥಿಕ ಆಸಕ್ತಿಗಳನ್ನು ಉಳಿಸಿಕೊಳ್ಳುತ್ತಿದ್ದಾರೆ. ಎಲ್ಲ ಸಮುದಾಯಗಳ ತಳಸ್ತರದ ಜನರು ಭೂಮಿ, ಬಂಡವಾಳ ಮತ್ತು ಆಧುನಿಕ ಸ್ಕಿಲ್ ಇಲ್ಲದೆ ನರಕಸದೃಶ್ಯ ಜೀವನ ಸಾಗಿಸುತ್ತಿದ್ದಾರೆ. ಎಲ್ಲ ಸಮುದಾಯಗಳ ಮೇಲ್ ವರ್ಗಗಳು ಒಂದಾಗಿ ಹೇಗೆ ತಮ್ಮ ಆಸಕ್ತಿಗೆ ಪೂರಕವಾದ ಅರ್ಥ ವ್ಯವಸ್ಥೆಯನ್ನು ಕಟ್ಟಿಕೊಳ್ಳುತ್ತಿದ್ದಾರೋ ಅದೇ ರೀತಿಯಲ್ಲಿ ಎಲ್ಲ ಸಮುದಾಯಗಳ ತಳಸ್ತರದ ಜನರು ಒಂದಾಗಿ ತಮ್ಮ ಆಸಕ್ತಿಗಳನ್ನು ರಕ್ಷಿಸುವ ರಾಜಕೀಯ ಮಾಡಲು ಸಾಧ್ಯವಾಗುತ್ತಿಲ್ಲ.

ಸಾಂಸ್ಕೃತಿಕ ಸರಕುಗಳು ಜನರನ್ನು ಒಗ್ಗೂಡಿಸುತ್ತವೆ. ಆದರೆ ಒಗ್ಗೂಡಿದ ಜನರು ಸತತ ಒಂದಾಗಿರಲು ಸಾಂಸ್ಕೃತಿಕ ಸರಕುಗಳು ಸಾಕಾಗುವುದಿಲ್ಲ. ಮೂರು ಹೊತ್ತಿನ ಊಟ, ತಲೆ ಮೇಲೊಂದು ಸೂರು ಶಿಕ್ಷಣ, ಆರೋಗ್ಯ ನಮಗೂ ನಾಳೆ ಒಂದು ಒಳ್ಳೆಯ ಬದುಕಿದೆ ಎಂದು ಕನಸು ಕಾಣಲು ಅವಕಾಶ ಮಾಡಿಕೊಡುವ ವರ್ತಮಾನದ ಬದುಕು ಇತ್ಯಾದಿಗಳೆಲ್ಲ ಒಕ್ಕೂಟ ಮುಂದುವರಿಯಲು ಬೇಕು. ಆದರೆ ಪ್ರತ್ಯೇಕ ಸಂಸ್ಕೃತಿ. ಚರಿತ್ರೆ, ಭಾಷೆ ಇತ್ಯಾದಿಗಳನ್ನು ಬಳಸಿಕೊಂಡು ಕಟ್ಟಿಕೊಂಡ ಪ್ರತ್ಯೇಕ ಈ ಎಲ್ಲವನ್ನು ಕೂಡಲು ವಿಫಲವಾಯಿತು. ಆದುದರಿಂದಲೇ ದೇಶದ ಹಲವೆಡೆ ಪ್ರತ್ಯೇಕ ರಾಜ್ಯದ ಕೂಗುಗಳು ಪುನಃ ಕೇಳಲಾರಂಭಿಸಿದೆ. ಕರ್ನಾಟಕದಲ್ಲೂ ಪ್ರತ್ಯೇಕತೆಯ ಕೂಗು ಆಗೊಮ್ಮೆ ಈಗೊಮ್ಮೆ ಕೇಳಿಬರುತ್ತಿದೆ. ಕುಂಠಿತ ಅಭಿವೃದ್ಧಿಯ ನೆಲೆಯಲ್ಲಿ ಪ್ರತ್ಯೇಕ ರಾಜ್ಯದ ಕೂಗು ಕರ್ನಾಟಕದ ಎರಡು ಭಾಗಗಳಲ್ಲಿ ತುಂಬಾ ಜೋರಾಗಿತ್ತು. ಕರ್ನಾಟಕದ ಭಾಗವಾಗಿದ್ದುಕೊಂಡು ಅಭಿವೃದ್ಧಿ ಸಾಧ್ಯವಿಲ್ಲವೆಂದು ಕೊಡಗು ಮತ್ತು ಉತ್ತರ ಕರ್ನಾಟಕಗಳು ತೊಂಬತ್ತರ ಈ ವರದಿಯಿಂದಾಗಿ ದಶಕದಿಂದಲೇ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಮುಂದಿಟ್ಟಿದವು. ಕರ್ನಾಟಕ ಸರಕಾರ ಹೊರತಂದು ಎರಡು ವರದಿಗಳು ಇವರ ಪ್ರತ್ಯೇಕೆಯ ಬೇಡಿಕೆಯನ್ನು ತಕ್ಷಣಕ್ಕೆ ಕಡಿಮೆಗೊಳಿಸಿವೆ. 1999ರಲ್ಲಿ ಕರ್ನಾಟಕ ಸರಕಾರ ಸಿದ್ಧಪಡಿಸಿದ ಮಾನವ ಅಭಿವೃದ್ಧಿ ವರದಿ ಕೊಡಗಿನ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ತಣ್ಣಗಾಗಿಸಿದೆ. ಆ ವರದಿ ಪ್ರಕಾರ ಕೊಡಗು ಇಡೀ ರಾಜ್ಯದಲ್ಲೇ ಉತ್ತಮ ಮಾನವ ಅಭಿವೃದ್ಧಿಯನ್ನು ಸಾಧಿಸಿದ ಪ್ರದೇಶ. ಕುಂಠಿತ ಅಭಿವೃದ್ಧಿಯ ನೆಪವೊಡ್ಡಿ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಮುಂದಿಡುವ ಸಾಧ್ಯತೆಯೇ ಕೊಡಗರಿಗೆ ಇಲ್ಲದಾಯಿತು. ತೊಂಬತ್ತರ ಮಾನವ ಅಭಿವೃದ್ಧಿ ವರದಿ ಕೊಡಗಿಗೆ ಮಾಡಿದನ್ನೇ 2೦೦2ರಲ್ಲಿ ಹೊರಬಂದ ಪೈಪವರ್ ಕಮಿಟಿ ಫಾರ್ ರಿಡ್ರೆಸಲ್ ಆಫ್ ರೀಜನಲ್ ಇಂಬೇಲನ್ಸಸ್ ವರದಿ ಉತ್ತರ ಕರ್ನಾಟಕಕ್ಕೆ ಮಾಡಿದೆ. ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಹೆಚ್ಚು ಸಂಖ್ಯೆಯ ಹಿಂದುಳಿದ ತಾಲ್ಲೂಕು ಉತ್ತರ ಕರ್ನಾಟಕದಲ್ಲಿಯೇ ಹೊರತು ಉತ್ತರ ಕರ್ನಾಟಕ ಇಡಿಯಾಗಿ ಹಿಂದುಳಿದಿಲ್ಲ ಎಂದು ಈ ವರದಿ ಹೇಳಿದೆ. ಹೀಗಿರುವಾಗ ಇಡೀ ಉತ್ತರ ಕರ್ನಾಟಕವೇ ಹಿಂದುಳಿದಿದೆ ಆದುದರಿಂದ ಪ್ರತ್ಯೇಕ ರಾಜ್ಯ ಕೂಡಿ ಎನ್ನುವ ವಾದವನ್ನು ಯಾರು ಕೇಳುತ್ತಾರೆ. ಈ ವರದಿಗಳು ಕುಂಠಿತ ಅಭಿವೃದ್ಧಿ ಸಮಸ್ಯೆಯನ್ನು ತಾತ್ಕಾಲಿಕವಾಗಿ ಪರಿಹರಿಸಿವೆ. ದೂರಗಾಮಿ ಪರಿಹಾರ ಬೇಕಾದರೆ ಇಂತಹ ಗಿಮಿಕ್‌ಗಳನ್ನು ಬಿಟ್ಟು ರಾಜ್ಯದ ಸಂಪನ್ಮೂಲಗಳಲ್ಲಿ ಪ್ರತಿಯೊಬ್ಬರಿಗೂ ಸಮಪಾಲು ಇರುವಂತ ನಮ್ಮ ಅರ್ಥ ವ್ಯವಸ್ಥೆಯನ್ನು ಪುನರ್ ಸಂಘಟಿಸಿಕೊಳ್ಳಬೇಕಾಗಿದೆ.

ಯೋಜಿತ ಅಭಿವೃದ್ಧಿ ಭೂಮಾಲಿಕರು ಮತ್ತು ಬಂಡವಾಳಿಗರಿಗೆ ಕೊಡಬೇಕಾದ ಮನ್ನಣೆ ಕೊಡಲಿಲ್ಲ. ಉತ್ಪಾದನೆಯಲ್ಲಿ ಮಹತ್ವದ ಪಾತ್ರ ವಹಿಸುವ ಭೂಮಾಲಿಕರು ಮತ್ತು ಬಂಡವಾಳಿಗರಿಗೆ ಮಣೆ ಹಾಕದೆ ತಳಸ್ತರದ ಜನರನ್ನು ಉದ್ದಾರ ಮಾಡುವ ಕಾಯಕಕ್ಕೆ ಯೋಜಿತ ಅಭಿವೃದ್ಧಿ ಆದ್ಯತೆ ನೀಡಿದೆ. ಆದುದರಿಂದ ಭೂಮಾಲಿಕರು ಮತ್ತು ಬಂಡವಾಳಿಗರು ಉತ್ಪಾದನೆಯಲ್ಲಿ ಸಕ್ರಿಯವಾಗಿ ಪಾಲುಗೊಳ್ಳಲಿಲ್ಲ. ಇದರಿಂದಾಗಿ ನಮ್ಮ ಅಭಿವೃದ್ದಿ ಕುಂಠಿತವಾಯಿತು. ಮುಕ್ತ ಮಾರುಕಟ್ಟೆ ಅಭಿವೃದ್ದಿ ಜಾರಿಗೆ ಬಂದಿದೆ. ಈ ಪುಸ್ತಕದ ಅಧ್ಯಾಯಗಳಲ್ಲಿ ಮಂಡಿಸಿದ ಅಂಕಿ-ಅಂಶಗಳು ಮತ್ತು ವಾದಗಳು ಮೇಲಿನ ತೀರ್ಮಾನಗಳನ್ನು ಪ್ರಶ್ನಿಸುತ್ತಿವೆ. ಯೋಜಿತ ಅಭಿವೃದ್ಧಿಯಲ್ಲಿ ಅತೀ ಹೆಚ್ಚಿನ ಲಾಭ ಪಡೆದವರು ಭೂಮಾಲಿಕರು ಮತ್ತು ಬಂಡವಾಳಿಗರು. ಆರ್ಥಿಕ ಹಾಗೂ ಸಾಮಾಜಿಕ ಮೂಲ ಸೌಕರ್ಯಗಳ ಹೆಚ್ಚಿನ ಬಳಕೆಯನ್ನು ಮಾಡಿದವರು ಕೂಡ ಭೂಮಾಲಿಕರು ಮತ್ತು ಬಂಡವಾಳಿಗರು ಇವರೊಂದಿಗೆ ಆಧುನಿಕ ಸ್ಕಿಲ್ ಪಡೆದವರು ಕೂಡ ಯೋಜನೆಗಳ ಅಲ್ಪಸ್ವಲ್ಪ ಲಾಭ ಪಡೆದಿದ್ದಾರೆ. ಈ ಮೂರರಲ್ಲಿ ಒಂದೂ ಇಲ್ಲದವರು ಏನೇನೂ ಲಾಭ ಪಡೆದಿಲ್ಲ. ವಾಸ್ತವ ಸ್ಥಿತಿ ಹೀಗಿದ್ದರೂ ಬಲಾಢ್ಯರು ತಮಗೇ ಅನ್ಯಾಯವಾಗಿದೆಯೆಂದು ಯೋಜಿತ ಅಭಿವೃದ್ಧಿ ಮಾದರಿಯನ್ನು ಬದಲಾಯಿಸಿಕೊಳ್ಳಲು ಒತ್ತಡ ಹೇರಿದ್ದಾರೆ. ಇಡೀ ಬೆಳವಣಿಗೆ ತಳಸ್ತರದ ಜನರಿಗೆ ಹೋಗುವುದನ್ನು ನಮ್ಮ ಮೇಲ್ವರ್ಗ ಸಹಿಸುವುದಿಲ್ಲ. ಸಾರ್ವಜನಿಕ ಸಂಪನ್ಮೂಲ ಎಲ್ಲರಿಗು ಸೇರಿದ್ದು ತಳಸ್ತರದ ಜನರಿಗೂ ಇದರಲ್ಲಿ ಪಾಲಿದೆ ಎನ್ನುವ ಆಲೋಚನೆಗಳು ಮೇಲ್ವರ್ಗದವರ ಕಲ್ಪನೆಗೆ ಮೀರಿದ್ದು. ಎಲ್ಲವೂ ತಮಗೇ ಸೇರಿದ್ದು. ತಾವು ಮಾತ್ರ ಹಕ್ಕುದಾರರು ಇತ್ಯಾದಿಗಳು ಮಾತ್ರ ಅವರ ದೃಷ್ಟಿಕೋನದ ಭಾಗವಾಗಿದೆ. ಅಲ್ಪಸ್ವಲ್ಪ ತಳಸ್ತರದ ಪರವಾಗಿದ್ದ ಯೋಜಿತ ಅಭಿವೃದ್ಧಿಯನ್ನು ಕಳಚಿ ಹಾಕಿ ಶೋಷಣೆಗೆ ಮತ್ತು ಸಂಪತ್ತಿನ ಶೇಖರಣೆಗೆ ಯಾವುದೇ ಲಂಗು ಲಗಾಮಿಲ್ಲದ ಮುಕ್ತ ಮಾರುಕಟ್ಟೆ ಅಭಿವೃದ್ಧಿ ಮಾದರಿ ಮಾಡಬಹುದಾದ ಮತ್ತು ಮಾಡುತ್ತಿರುವ ಅನಾಹುತಗಳಿಗೆ ಎಲ್ಲರು ಮೂಕಪ್ರೇಕ್ಷಕರಾಗಬೇಕಾಗಿದೆ.

 

 


ಕೋಷ್ಟಕ1

ಕರ್ನಾಟಕದ ಪಂಚವಾರ್ಷಿಕ ಯೋಜನೆಗಳು :  1956-1974 (ಕೋಟಿ ರೂಪಾಯಿಗಳಲ್ಲಿ)

ಕ್ರ.ಸಂ ವಿವರಗಳು ಎರಡನೇ .ವಾ 1956-61 ಮೂರನೇ .ವಾ.
1961-66
ವಾರ್ಷಿಕ ಯೋಜನೆಗಳು ನಾಲ್ಕನೇ .ವಾ.
1969-74
1967 1968 1969
01 ಕೃಷಿ, ಅರಣ್ಯ, ಪಶು, ಹೈನು ಮೀನುಗಾರಿಕೆ ಇತ್ಯಾದಿ 12.49
(08.60)
26.95
(10.94)
07.84
(14.77)
08.15
(13.52)
07.65
(14.90)
47.65
(13.61)
02. ಸಹಕಾರ, ಗ್ರಾಮೀಣಾಭಿವೃದ್ಧಿ ಪಂಚಾಯತ್ ಇತ್ಯಾದಿ 13.61
(09.37)
21.21
(08.61)
03.37
(06.35)
02.74
(04.54)
01.80
(03.50)
11.25
(03.21)
03. ಸಣ್ಣ ಮಧ್ಯಮ, ದೊಡ್ಡ ನೀರಾವರಿ ವಿದ್ಯುತ್ 64.47

(44.42)

120.57

(48.97)

27.66

(52.11)

35.10

(58.25)

29.57

(57.61)

209.50

(59.85)

04.

 

 

ಗುಡಿ, ಸಣ್ಣ, ಮಧ್ಯಮ, ಬೃಹತ್ ಕೈಗಾರಿಕೆ, ಖನಿಜ ಇತ್ಯಾದಿ 11.79

(08.12)

15.74

(06.39)

01.81

(03.41)

03.19

(05.29)

01.64

(03.21)

18.00

(05.14)

05. ಭೂ, ಜಲ, ವಾಯು ಸಾರಿಗೆ ಮತ್ತು ಪ್ರವಾಸೋದ್ಯಮ 10.02

(06.90)

12.89

(05.23)

04.65

(08.76)

03.41

(05.65)

02.45

(04.77)

12.50

(03.57)

06 ಶಿಕ್ಷಣ, ಆರೋಗ್ಯ, ವಸತಿ ನೀರು ಇತ್ಯಾದಿ 28.09

(19.35)

42.56

(17.28)

06.58

(12.39)

06.43

(10.67)

06.79

(13.23)

43.00

(12.28)

07 ದಲಿತ, ಬುಡಕಟ್ಟು, ಹಿಂದುಳಿದ ಕಾರ್ಮಿಕ ಕಲ್ಯಾಣ ಇತ್ಯಾದಿ 04.30

(02.96)

05.72

(02.32)

00.92

(01.73)

00.99

(01.64)

01.16

(02.26)

07.00

(02.00)

08 ಸ್ಟ್ಯಾಟಿಸ್ಟಿಕ್ಸ್ ಪಬ್ಲಿಸಿಟಿ ಇತ್ಯಾದಿಗಳು 00.36 00.56 00.24 00.24 00.25 11.00
ಒಟ್ಟು ಮೊತ್ತ 145.13

(100.00)

246.21

(100.00)

53.07

(100.00)

60.25

(100.00)

51.32

(100.00)

350.00

(100.00)

ಮೂಲ:

೦೧. ಕರ್ನಾಟಕ ಸರಕಾರ, ಪಂಚವಾರ್ಷಿಕ ಯೋಜನೆಗಳು1956-61, ಬೆಂಗಳೂರು:  ಪ್ಲಾನಿಂಗ್ ಡಿಪಾರ್ಟ್ಮೆಂಟ್, 1956.

೦೨. ಕರ್ನಾಟಕ ಸರಕಾರ, ಪಂಚವಾರ್ಷಿಕ ಯೋಜನೆಗಳು-1961-66, ಬೆಂಗಳೂರು:  ಪ್ಲಾನಿಂಗ್ ಡಿಪಾರ್ಟ್ಮೆಂಟ್, 1961.

೦೩. ಕರ್ನಾಟಕ ಸರಕಾರ, ಪಂಚವಾರ್ಷಿಕ ಯೋಜನೆಗಳು-1969-74, ಬೆಂಗಳೂರು:  ಪ್ಲಾನಿಂಗ್ ಡಿಪಾರ್ಟ್ಮೆಂಟ್, 1969.