ಪಂಚವಾರ್ಷಿಕ ಯೋಜನೆಗಳ ಸೋಲು ಗೆಲುವುಗಳನ್ನು ಈ ಅಧ್ಯಾಯದಲ್ಲಿ ವಿಶ್ಲೇಷಿಸಿದ್ದೇನೆ. ಆರು ದಶಕಗಳ ಯೋಜನೆಗಳಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದ ಅಭಿವೃದ್ಧಿಯ ಸಮೀಕ್ಷೆಯನ್ನು ಅಧ್ಯಾಯನದ ಮೊದಲ ಭಾಗದಲ್ಲಿ ನೀಡಿದ್ದೇನೆ. ಯೋಜನೆಗಳ ಬೃಹತ್ ವಿನಿಯೋಜನೆಗಳ ಹೆಚ್ಚಿನ ಲಾಭ ಪಡೆದವರನ್ನು ಅಧ್ಯಾಯದ ಎರಡನೇ ಭಾಗದಲ್ಲಿ ಗುರುತಿಸಿದ್ದೇನೆ. ಸುಮಾರು ಐದು ದಶಕದಲ್ಲಿ ಯೋಜಿತ ವಿನಿಯೋಜನೆಯಿಂದ ಸಾಕಷ್ಟು ಸಾಧನೆಗಳಾಗಿವೆ. ಐವತ್ತರ ದಶಕದಲ್ಲಿ ಬಿತ್ತನೆಯಾದ ಒಟ್ಟು ಪ್ರದೇಶದ ಶೇ. 7.48 ರಷ್ಟು ನೀರಾವರಿಯಾಗಿತ್ತು. ಕರ್ನಾಟಕದ ಮೂರನೇ ಎರಡರಷ್ಟು ಪ್ರದೇಶದಲ್ಲಿ ಅತೀ ಕಡಿಮೆ ಪ್ರಮಾಣದ (6೦೦ರಿಂದ 7೦೦ ಮಿ.ಮೀ.) ಮಳೆಯಾಗುತ್ತಿದೆ. ಹೆಚ್ಚು ಕಡಿಮೆ ತೊಂಬತ್ತಕ್ಕಿಂತಲೂ ಹೆಚ್ಚಿನ ಪ್ರದೇಶದಲ್ಲಿ ಕೃಷಿಗೆ ಒಂದೋ ಮಳೆ ನೀರನ್ನು ನಂಬಬೇಕಿತ್ತು ಅಥವಾ ಒಣಭೂಮಿ ಕೃಷಿಯನ್ನು ಅವಲಂಭಿಸಬೇಕಿತ್ತು. ಉತ್ತರ ಕರ್ನಾಟಕದ ಬಹುತೇಕ ಪ್ರದೇಶಗಳು ಅತೀ ಕಡಿಮೆ ಮಳೆಯಾಗುವ ಪ್ರದೇಶಗಳು. ಇಂತಹ ಪ್ರದೇಶಗಳಲ್ಲಿ ನೀರಾವರಿ ವ್ಯವಸ್ಥೆ ಇಲ್ಲದಿದ್ದರೆ ದೊಡ್ಡ ಪ್ರಮಾಣ ಕೃಷಿ ಅಸಾಧ್ಯ ಪಂಚವಾರ್ಷಿಕ ಯೋಜನೆಗಳು ನೀರಾವರಿ ವ್ಯವಸ್ಥೆ ಮಾಡಿ ಕರ್ನಾಟಕದ ಕೃಷಿ ಉತ್ಪಾದನೆಯ ಚಿತ್ರಣವನ್ನೇ ಬದಲಾಯಿಸಿದೆ. ಕೃಷ್ಣ, ತುಂಗಭದ್ರ ಮತ್ತು ಕಾವೇರಿ ನದಿಯೋಜನೆಗಳಿಂದ ಉತ್ತರ ಮತ್ತು ದಕ್ಷಿಣ ಕರ್ನಾಟಕದ ಹಲವಾರು ಜಿಲ್ಲೆಗಳಿಗೆ ನೀರಾವರಿ ಒದಗಿಸಲಾಗಿದೆ. ಕೃಷ್ಣ ಮತ್ತು ತುಂಗಾಭದ್ರ ನದಿ ಯೋಜನೆಗಳಿಂದ ಬೆಳಗಾಂ, ಬಿಜಾಪುರ, ಬಳ್ಳಾರಿ, ಶಿವಮೊಗ್ಗ, ಗುಲಬರ್ಗ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ, ನೀರಾವರಿ ಆಗಿದೆ (ಕೋಷ್ಟಕ-9). ಕಾವೇರಿ ನದಿ ಯೋಜನೆಗಳಿಂದ ಬೆಂಗಳೂರು, ಹಾಸನ, ಮೈಸೂರು, ಕೊಡಗು, ತುಮಕೂರು ಜಿಲ್ಲೆಗಳಿಗೆ ನೀರಾವರಿ ವ್ಯವಸ್ಥೆಯಾಗಿದೆ. ಮೇಲಿನ ನದಿಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಜೆಲ್ಲೆಗಳ ಕೆಲವು ತಾಲ್ಲೂಕುಗಳ ನೀರಾವರಿ ಪಡೆದರೆ ಮತ್ತೆ ಕೆಲವು ತಾಲ್ಲೂಕುಗಳು ಮಳೆ ಬೇಸಾಯವನ್ನು ಅಥವಾ ಒಣಬೇಸಾಯವನ್ನು ನಂಬಬೇಕಾಗಿದೆ.

ಕಾವೇರಿ ಮತ್ತು ತುಂಗಭದ್ರ ನದಿ ಯೋಜನೆಗಳ ಕೆಲವು ಯೋಜನೆಗಳು ಸ್ವಾತಂತ್ರ್ಯ ಪೂರ್ವನೇ ಮುಕ್ತಾಯಗೊಂಡಿದ್ದವು. ಕಾಲುವೆ ಮಾಡುವ ಮತ್ತು ಹೆಚ್ಚುವರಿ ಭೂಪ್ರದೇಶಗಳಿಗೆ ನೀರಾವರಿ ಒದಗಿಸಲು ಸಣ್ಣಪುಟ್ಟ ಕಟ್ಟೆಗಳ ನಿರ್ಮಾಣ ಪಂಚವಾರ್ಷಿಕ ಯೋಜನೆಗಳಲ್ಲಿ ನಡೆದಿದೆ. ಐದು ದಶಕಗಳ ಕಾಲ ಪ್ರತಿ ಪಂಚವಾರ್ಷಿಕ ಯೋಜನೆಗಳಲ್ಲಿ ಸಾಕಷ್ಟು ದೊಡ್ಡ ಮೊತ್ತವನ್ನು ನೀರಾವರಿ ಸುಧಾರಣೆಗಾಗಿ ವಿನಿಯೋಜಿಸಲಾಗಿದೆ. ಇದರ ಫಲವಾಗಿ 2೦೦1ರ ವೇಳೆಗೆ ರಾಜ್ಯದ ಒಟ್ಟು ಬಿತ್ತನೆಯಾಗುವ ಪ್ರದೇಶದ ಶೇ.24.8೦ ರಷ್ಟು ಪ್ರದೇಶ ನೀರಾವರಿ ಹೊಂದಿದೆ (ಕೋಷ್ಟಕ-9). ಐದು ದಶಕಗಳ ವಿನಿಯೋಜನೆಯಿಂದಾಗಿ ಶೇ. 17ರಷ್ಟು ನೀರಾವರಿ ಪ್ರದೇಶದಲ್ಲಿ ಹೆಚ್ಚಳ ಸಾಧ್ಯವಾಗಿದೆ. ಈ ಹೆಚ್ಚಳ ರಾಜ್ಯದ ಎಲ್ಲ ಪ್ರದೇಶಗಳಲ್ಲಿ ಏಕಪ್ರಕಾರವಾಗಿಲ್ಲ. ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಪಂಚವಾರ್ಷಿಕ ಯೋಜನೆಗಳು ಆರಂಭವಾದ ಸಂದರ್ಭದಲ್ಲೇ ಶೇ. 16.5೦ರಷ್ಟು ಬಿತ್ತನೆ ಪ್ರದೇಶ ನೀರಾವರಿ ವ್ಯವಸ್ಥೆ ಹೊಂದಿತ್ತು. ಇದೇ ಅವಧಿಯಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಅಲ್ಪಪ್ರಮಾಣ (ಶೇ.3.2೦) ನೀರಾವರಿ ವ್ಯವಸ್ಥೆ ಇತ್ತು. ಪಂಚವಾರ್ಷಿಕ ಯೋಜನೆಗಳ ವಿನಿಯೋಜನೆಯಿಂದ ದಕ್ಷಿಣ ಕರ್ನಾಟಕದಲ್ಲಿ ನೀರಾವರಿ ಹೊಂದಿದ ಬಿತ್ತನೆ ಪ್ರದೇಶ ಶೇ. 25.6ಕ್ಕೆ ಏರಿದರೆ ಉತ್ತರ ಕರ್ನಾಟಕದಲ್ಲಿ ಶೇ. 24.8ಕ್ಕೆ ಏರಿದೆ. ಪಂಚವಾರ್ಷಿಕ ಯೋಜನೆಗಳಲ್ಲಿ ನೀರಾವರಿ ಮೇಲೆ ಮಾಡಿದ ವಿನಿಯೋಜನೆಗಳ ಹೆಚ್ಚಿನ ಲಾಭವನ್ನು ಉತ್ತರ ಕರ್ನಾಟಕದ ಪಡೆದಂತ ಕಾಣುತ್ತದೆ. ಉತ್ತರ ಕರ್ನಾಟಕದ ಬೆಳಗಾಂ, ಬಿಜಾಪುರ, ಧಾರವಾಡ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಐವತ್ತರ ದಶಕಗಳಲ್ಲಿ ನೀರಾವರಿಯಾದ ಪ್ರದೇಶ ಬಿತ್ತನೆ ಪ್ರದೇಶದ ಶೇಕಡಾ ಐದರಷ್ಟೂ ಇರಲಿಲ್ಲ. ಆದರೆ 2೦೦1ರ ವೇಳೆಗೆ ಈ ಐದು ಜಿಲ್ಲೆಗಳು ಈ ಕೆಳಗಿನ ಪ್ರಮಾಣದಲ್ಲಿ ನೀರಾವರಿ ವ್ಯವಸ್ಥೆ ಪಡೆದಿವೆ-ಬೆಳಗಾಂ ಶೇ. 4೦.7, ಬಿಜಾಪುರ ಶೇ. 26.4, ಧಾರವಾಡ ಶೇ. 17.3, ಬಳ್ಳಾರಿ ಶೇ. 32.9 ಮತ್ತು ರಾಯಚೂರು ಶೇ. 29.5 (ಕೋಷ್ಟಕ-9). ಸರಾಸರಿ ಶೇ. 2೦ ರಿಂದ ಶೇ. 3೦ರಷ್ಟು ಪ್ರಮಾಣದಲ್ಲಿ ನೀರಾವರಿ ಪ್ರದೇಶಗಳ ಹೆಚ್ಚಳವನ್ನು ಈ ಅಂಕಿಅಂಶಗಳು ತೋರಿಸುತ್ತವೆ.

ನೀರಾವರಿಯಷ್ಟೇ ಆದ್ಯತೆಯನ್ನು ಪಡೆದ ಮತ್ತೊಂದು ಕ್ಷೇತ್ರ ವಿದ್ಯುತ್ ಕರ್ನಾಟಕದಲ್ಲಿ ಮುಖ್ಯವಾಗಿ ಎರಡು ಮೂಲಗಳಿಂದ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಶೇ. 37ರಷ್ಟನ್ನು ನೀರಿನಿಂದ ಉತ್ಪಾದಿಸಿದರೆ ಉಷ್ಣಸ್ಥಾವರಗಳಿಂದ ಶೇ. 67ರಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದೆ. ಈ ಸಾಂಪ್ರದಾಯಿಕ ಮೂಲಗಳ ಜತೆಗೆ ಗಾಳಿ, ಬಿಸಿಲು ಮುಂತಾದ ವಿದ್ಯುತ್ ಉತ್ಪಾದನೆಯ ಬದಲೀ ಮೂಲಗಳನ್ನು ಬೆಳೆಸಲು ಸರಕಾರ ಪ್ರಯತ್ನಿಸುತ್ತಿದೆ. 2೦೦1ರ ವೇಳೆಗೆ ರಾಜ್ಯದ ಒಟ್ಟು ವಿದ್ಯುತ್ ಉತ್ಪಾದನೆಯ ಶೇ. 1೦ರಷ್ಟು ವಿದ್ಯುತ್ತನ್ನು ಬದಲೀ ಮೂಲಗಳಿಂದ ಪಡೆಯಲಾಗುತ್ತಿದೆ. ಇಂದು ಕೂಡ ರಾಜ್ಯದ ಶೇ. 9೦ರಷ್ಟು ವಿದ್ಯುತ್ ಸಾಂಪ್ರದಾಯಿಕ ಮೂಲಗಳಿಂದ ಉತ್ಪಾದನೆಯಾಗುತ್ತಿದೆ. ಏಕೀಕರಣ ಮುನ್ನ ಹಳೇ ಮೈಸೂರು ಪ್ರಾಂತದಲ್ಲಿ ತಲಾ 64 ಯುನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಏಕೀಕರಣ ನಂತರ 1956 ವೇಳೆಗೆ ಕರ್ನಾಟಕದ ತಲಾ ವಿದ್ಯುತ್ ಉತ್ಪಾದನೆ ಮತ್ತು ಅನುಭೋಗ 35 ಯುನಿಟ್ಗೆ ಇಳಿಯಿತು. ಐದು ಪಂಚವಾರ್ಷಿಕ ಯೋಜನೆಗಳಿಂದ ಸತತ ಹರಿದು ಬಂದ ವಿನಿಯೋಜನೆಗಳಿಂದ ವಿದ್ಯುತ್ ಉತ್ಪಾದನೆ ಮತ್ತು ಅನುಭೋಗ ಗಣನೀಯವಾಗಿ ಏರಿದೆ. 2೦೦1ರ ವೇಳೆಗೆ ರಾಜ್ಯದ ಒಟ್ಟು ವಿದ್ಯುತ್ ಉತ್ಪಾದನೆ 21943 ಮಿಲಿಯನ್ ಯುನಿಟ್ ಗಳಿಗೆ ಏರಿದೆ. ರಾಜ್ಯದ ತಲಾ ವಿದ್ಯುತ್ ಅನುಭೋಗ 389 ಯುನಿಟ್ ಗಳಿಗೆ ಏರಿದೆ. ಸರಕಾರಿ ದಾಖಲೆ ಪ್ರಕಾರ ರಾಜ್ಯದ ಬಹುತೇಕ ಹಳ್ಳಿಗಳಿಗೆ (26751) ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಕೇವಲ 315 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬಾಕಿ ಇದೆ. ಕೈಗಾರಿಕೆಗಳು ವಿದ್ಯುತ್ ಬಳಕೆದಾರರಲ್ಲಿ ಪ್ರಮುಖರು. ಎಪ್ಪತ್ತರ ದಶಕದಲ್ಲಿ ಉತ್ಪಾದಿತ ವಿದ್ಯುತ್ತಿನ ಶೇ. 76ರಷ್ಟನ್ನು ಕೈಗಾರಿಕೆಗಳು ಬಳಸುತ್ತಿದ್ದವು. ಕಾಲಕ್ರಮೇಣ ಕೃಷಿಕರ ವಿದ್ಯುತ್ ಬಳಕೆ ಕೂಡ ವೃದ್ಧಿಯಾಗುತ್ತಾ ಬಂತು. ಎಪ್ಪತ್ತರ ದಶಕದಲ್ಲಿ ಉತ್ಪಾದಿತ ವಿದ್ಯುತ್ತಿನ ಅತ್ಯಲ್ಪ ಪ್ರಮಾಣ (ಶೇ.6ರಷ್ಟು) ರೈತರ ಪಂಪ್ ಸೆಟ್ಟುಗಳಿಗೆ ಬಳಕೆಯಾಗುತ್ತಿತ್ತು. ಆದರೆ ತೊಂಬತ್ತರ ವೇಳೆ ಕೃಷಿ ನೀರಾವರಿಗೆ ಬಳಕೆಯಾಗುವ ವಿದ್ಯುತ್ ಪ್ರಮಾಣ ಉತ್ಪಾದಿತ ವಿದ್ಯುತ್ತಿನ ಶೇ. 3೦ಕ್ಕೆ ಏರಿದೆ (ಕೋಷ್ಟಕ-11). ವಿದ್ಯುತ್ತಿನ ಗೃಹಬಳಕೆ ಕೂಡ ಎಪ್ಪತ್ತು ಮತ್ತು ತೊಂಬತ್ತರ ದಶಕದಲ್ಲಿ ಗಣನೀಯವಾಗಿ ಸುಧಾರಿಸಿದೆ. ಬಳಕೆದಾರರು ಮತ್ತು ಬಳಸುವ ವಿದ್ಯುತ್ ಪ್ರಮಾಣ ಹೆಚ್ಚಾದಂತೆ ಕೈಗಾರಿಕೆಗಳು ಬಳಸುವ ವಿದ್ಯುತ್ ಕಡಿಮೆಯಾಗುತ್ತಿದೆ ಅಥವಾ ಬೇಡಿಕೆ ಮತ್ತು ಪೂರೈಕೆ ನಡುವೆ ಹೊಂದಾಣಿಗೆ ಕಡಿಮೆಯಾಗುತ್ತಿದೆ. ವರ್ತಮಾನದಲ್ಲಿ ಕರ್ನಾಟಕದ ವಿದ್ಯುತ್ ಕೊರತೆಯನ್ನು ಅನುಭವಿಸುತ್ತಿದೆ.

ನೆರೆಹೊರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ವಿಸ್ತಾರವಾದ ಕೃಷಿ ಭೂಮಿಯನ್ನು ಹೊಂದಿದೆ. ರಾಜ್ಯದ ಒಟ್ಟು ವಿಸ್ತೀರ್ಣದ ಶೇ. 63ರಷ್ಟು (12೦ಲಕ್ಷ ಹೆಕ್ಟೇರುಗಳಲ್ಲಿ) ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತಿವೆ. ನೀರಾವರಿ ಕೂಡ ವರ್ಷದಿಂದ ವರ್ಷಕ್ಕೆ ಸುಧಾರಿಸುತ್ತಿದೆ. ಏಕೀಕರಣದ ಸಂದರ್ಭದಲ್ಲಿ ಬಿತ್ತನೆಯಾಗುವ ಪ್ರದೇಶದ ಶೇಕಡಾ ಏಳೆಂಟಷ್ಟಕ್ಕೆ ಸೀಮಿತವಾಗಿದ್ದ ನೀರಾವರಿ ವ್ಯವಸ್ಥೆ ಇಂದು ಶೇ. 24ಕ್ಕೆ ಏರಿದೆ. ಆಹಾರ ಮತ್ತು ವಾಣಿಜ್ಯ ಬೆಳೆಗಳ ಪ್ರಮಾಣ ಕೂಡ ವೃದ್ದಿಸುತ್ತಿದೆ. ಅರವತ್ತರ ದಶಕದಲ್ಲಿ ಮೂವತ್ತೊಂಬತ್ತು ಲಕ್ಷ ಟನ್ನುಗಳಷ್ಟಿದ್ದ ಆಹಾರ ಉತ್ಪಾದನೆ ತೊಂಬತ್ತರ ವೇಳೆಗೆ ಎಪ್ಪತ್ತುನಾಲ್ಕು ಟನ್ನುಗಳಿಗೆ ಏರಿದೆ. ಅರವತ್ತರ ದಶಕದಲ್ಲಿ 89 ಲಕ್ಷ ಟನ್ನುಗಳಿಷ್ಟಿದ್ದ ವಾಣಿಜ್ಯ ಬೆಳೆಗಳು ತೊಂಬತ್ತರ ವೇಳೆಗೆ 344 ಲಕ್ಷ ಟನ್ನುಗಳಿಗೆ ಏರಿದೆ (ಕೋಷ್ಟಕ-1೦) ಎಪ್ಪತ್ತು ಎಂಬತ್ತರ ದಶಕದವರೆಗೂ ಇವತ್ತು ಅಭಿವೃದ್ಧಿ ಹೊಂದಿದ ಜಿಲ್ಲೆಗಳೆಂದು ಹಣೆಪಟ್ಟಿ ಕಟ್ಟಿಕೊಂಡಿರುವ ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಮಲೆನಾಡು ಪ್ರದೇಶದ ಜಿಲ್ಲೆಗಳಲ್ಲಿ ಕೂಡ ಬಹುತೇಕ ಪ್ರದೇಶಗಳಲ್ಲಿ ಬಹುತೇಕ ಜನರಿಗೆ ಮೂರು ಹೊತ್ತಿನ ಊಟ ಸಮಸ್ಯೆಯಲ್ಲ ಎನ್ನಬಹುದು. ಅಷ್ಟರಮಟ್ಟಿಗೆ ಆಹಾರ ಉತ್ಪಾದನೆ ಹೆಚ್ಚಿದೆ ಮತ್ತು ಅವುಗಳ ವಿತರಣೆಯೂ ನಡೆಯುತ್ತಿದೆ. ಆದಾಗ್ಯೂ ರಾಜ್ಯದ ಎಲ್ಲರ ಆಹಾರ ಸಮಸ್ಯೆ ಸಂಪೂರ್ಣ ಪರಿಹಾರವಾಗಿದೆ ಎನ್ನುವ ಸ್ಥಿತಿ ನಿರ್ಮಾಣವಾಗಿಲ್ಲ. ಇಂದು ಕೂಡ ರಾಜ್ಯದಲ್ಲಿ ಬಡತನ ರೇಖೆಗಿಂತ ಕಡಿಮೆ ಆದಾಯವುಳ್ಳವರ ಸಂಖ್ಯೆ ಶೇ. 35ಕ್ಕಿಂತ ಹೆಚ್ಚಿದೆ. ಬಡತನ ರೇಖೆಗಿಂತ ಕಡಿಮೆ ಆದಾಯವುಳ್ಳವರು ಖಂಡಿತವಾಗಿಯೂ ಮೂರು ಹೊತ್ತಿನ ಊಟದ ಸಮಸ್ಯೆ ಎದುರಿಸುತ್ತಿದ್ದಾರೆ. ರಾಜ್ಯದ ಎಲ್ಲರಿಗೂ ಉಣಬಡಿಸುವಷ್ಟು ಆಹಾರ ಉತ್ಪಾದನೆ ಇಲ್ಲದಿರುವುದು ಇವರ ಊಟದ ಸಮಸ್ಯೆಗೆ ಕಾರಣವಲ್ಲ. ಎಲ್ಲರು ಹೊಟ್ಟೆ ತುಂಬಾ ಉಣ್ಣುವಷ್ಟು ಇಂದು ನಮ್ಮ ರಾಜ್ಯ ಬೆಳೆಯುತ್ತಿದೆ. ಆದರೆ ಆಹಾರದ ವಿತರಣೆಯನ್ನು ಬಡತನ ಅಥವಾ ಆಹಾರದ ಅವಶ್ಯಕತೆ ನಿರ್ಧರಿಸುತ್ತಿಲ್ಲ. ಬದಲಿಗೆ ಖರೀದಿಸುವ ಶಕ್ತಿ ನಿರ್ಧರಿಸುತ್ತಿದೆ. ಕಡು ಬಡವರು ಕೂಡ ಸರಕಾರ ಕೊಡುವ ಪಡಿತರ ಪ್ರಮಾಣಕ್ಕಿಂತ ಹೆಚ್ಚಿನ ತಮ್ಮ ಆಹಾರದ ಅವಶ್ಯಕತೆಗಳನ್ನು ಮಾರುಕಟ್ಟೆಯಿಂದ ಖರೀದಿಸಬೇಕಾಗಿದೆ. ಇದರಿಂದಾಗಿ ಹೆಚ್ಚುವರಿ ದವಸಧಾನ್ಯಗಳು ಗೋದಾಮುಗಳಲ್ಲಿ ಕೊಳೆಯುತ್ತಿರುವಾಗಲೇ ಲಕ್ಷಾಂತರ ಕುಟುಂಬಗಳು ಊಟಕ್ಕಿಲ್ಲದೆ ನರಳುವ ಸ್ಥಿತಿ ನಿರ್ಮಾಣವಾಗಿದೆ.

ಏಕೀಕರಣ ಸಂದರ್ಭದಲ್ಲಿ ತುಂಬಾ ನಿಕೃಷ್ಟ ಸ್ಥಿತಿಯಲ್ಲಿದ್ದ ಸಾಮಾಜಿಕ ಹಾಗೂ ಆರ್ಥಿಕ ಮೂಲ ಸೌಕರ್ಯಗಳು ಇಂದು ಗಣನೀಯವಾಗಿ ಅಭಿವೃದ್ಧಿ ಹೊಂದಿವೆ. ಅರುವತ್ತರ ದಶಕದಲ್ಲಿ ರಾಜ್ಯದಲ್ಲಿ ಒಟ್ಟು 34೦49 ಶಿಕ್ಷಣ (ಪ್ರಾಥಮಿಕ ಮತ್ತು ಪ್ರೌಢಶಾಲೆಗಳು) ಸಂಸ್ಥೆಗಳಿದ್ದವು. ಐದು ದಶಕಗಳ ನಂತರ ಶಿಕ್ಷಣ ಸಂಸ್ಥೆಗಳ ಸಂಖ್ಯೆ ದ್ವಿಗುಣಗೊಂಡಿದೆ. 2೦೦3-೦4ರಲ್ಲಿ ರಾಜ್ಯದಲ್ಲಿ ಒಟ್ಟು 6೦916 ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿವೆ (ಕೋಷ್ಟಕ-7). ಶಿಕ್ಷಣ ಸಂಸ್ಥೆಗಳ ಸಂಖ್ಯೆ ದ್ವಿಗುಣಗೊಂಡಂತೆ ಶಿಕ್ಷಿತರ ಪ್ರಮಾಣ ಕೂಡ ದ್ವಿಗುಣಗೊಂಡಿದೆ. ಅರವತ್ತರ ದಶಕದಲ್ಲಿ ರಾಜ್ಯದ ಒಟ್ಟು ಜನಸಂಖ್ಯೆಯ ಶೇ. 3೦ರಷ್ಟು ಮಂದಿ ಮಾತ್ರ ಓದು ಬರಹ ಕಲಿಯುತ್ತಿದ್ದರು ಅಥವಾ ಸಾಕ್ಷರತೆ ಹೊಂದಿದ್ದರು. ನಾಲ್ಕು ದಶಕಗಳಲ್ಲಿ ಅಂದರೆ 2೦೦1ಕ್ಕೆ ರಾಜ್ಯದ ಸಾಕ್ಷರತ ಪ್ರಮಾಣ ಶೇ. 67ಕ್ಕೆ ಏರಿದೆ. ಹೆಚ್ಚು ಕಡಿಮೆ ನೂರುಪಟ್ಟಿಗಿಂತಲೂ ಹೆಚ್ಚು ಸುಧಾರಣೆಗೊಂಡಿದೆ. ಇದೇ ಪ್ರಮಾಣದಲ್ಲಿ ಮಹಿಳೆಯರ, ದಲಿತರ ಮತ್ತು ಬುಡಕಟ್ಟು ಜನರ ಶಿಕ್ಷಣದಲ್ಲೂ ಸಾಕಷ್ಟು ಸುಧಾರಣೆಯನ್ನು ರಾಜ್ಯ ಕಂಡಿದೆ. ಆದರೆ ಶೈಕ್ಷಣಿಕ ಸಂಸ್ಥೆಗಳ ಮತ್ತು ಶಿಕ್ಷಿತರ ಪ್ರಮಾಣದಲ್ಲಿನ ವೃದ್ಧಿ ರಾಜ್ಯದ ಎಲ್ಲ ಪ್ರದೇಶಗಳಲ್ಲಿ ಒಂದೇ ಬಗೆಯಲ್ಲಿ ನಡೆದಿಲ್ಲ. ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಶೈಕ್ಷಣಿಕ ಸಂಸ್ಥೆಗಳು ಮತ್ತು ಶಿಕ್ಷಿತರ ಪ್ರಮಾಣ ಕಡಿಮೆ ಇದೆ. ಅಷ್ಟು ಮಾತ್ರವಲ್ಲ ಮಹಿಳೆಯರ ಮತ್ತು ಸಮಾಜದ ತಳಸ್ತರದ ಜನರ ಶಿಕ್ಷಣ ಮಟ್ಟದಲ್ಲೂ ಈ ಎರಡು ಪ್ರದೇಶಗಳ ನಡುವೆ ಅಂತರವಿದೆ. ಈ ಬಗೆಯ ಅಂತರ ಕೇವಲ ದಕ್ಷಿಣ ಮತ್ತು ಉತ್ತರ ಕರ್ನಾಟಕದ ನಡುವೆ ಮಾತ್ರ ಇರುವುದಲ್ಲ. ಅಭಿವೃದ್ಧಿ ಹೊಂದಿದ ಜಿಲ್ಲೆಯೊಳಗೆ ಒಂದು ತಾಲ್ಲೂಕು ಮತ್ತು ಮತ್ತೊಂದು ತಾಲ್ಲೂಕು ನಡುವೆ ಇದೇ ಕ್ರಮದ ಅಂತರವನ್ನು ಕಾಣಬಹುದು. ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಉನ್ನತ ಶಿಕ್ಷಣಕ್ಕು ಮಹತ್ವ ನೀಡುತ್ತಿದೆ. ಕರ್ನಾಟಕದ ಕೆಲವು ಜಿಲ್ಲೆಯಲ್ಲೊಂದು ವಿಶ್ವವಿದ್ಯಾಲಯ ತೆರೆಯುವ ಇರಾದೆ ಸರಕಾರಕ್ಕಿದೆ.

ಸಾಮಾಜಿಕ ಮೂಲಸೌಕರ್ಯಗಳಲ್ಲಿ ಬರುವ ಎಲ್ಲ ಸವಲತ್ತುಗಳು ಆರೋಗ್ಯ ಕುಡಿಯುವ ನೀರು, ವಸತಿ, ನಗರಾಭಿವೃದ್ಧಿ ಇತ್ಯಾದಿಗಳು ಶಿಕ್ಷಣದಷ್ಟೇ ಮಹತ್ವವನ್ನು ಪಡೆಯಬೇಕಿತ್ತು. ಸಾಮಾಜಿಕ ಮೂಲಸೌಕರ್ಯಗಳಲ್ಲಿ ಶಿಕ್ಷಣ ಪಡೆದಷ್ಟು ಮಹತ್ವವನ್ನು ಉಳಿದ ಸವಲತ್ತುಗಳು ಪಡೆದಿಲ್ಲ. ಆಸ್ಪತ್ರೆಗಳಲ್ಲಿರುವ ಬೆಡ್ ಗಳ ಸಂಖ್ಯೆ ವೈದ್ಯರುಗಳ ಸಂಖ್ಯೆ ಮತ್ತು ಆರೋಗ್ಯ ಸಂಸ್ಥೆಗಳ ಸಂಖ್ಯೆ ಆರೋಗ್ಯದ ಮೂಲಸೌಕರ್ಯಗಳನ್ನು ಮಾಪನ ಮಾಡುವ ಸಾಮಾನ್ಯ ಸೂಚ್ಯಾಂಕಗಳು. ವರ್ತಮಾನದ ಕರ್ನಾಟಕದ ಆರೋಗ್ಯ ವ್ಯವಸ್ಥೆಯನ್ನು ನಡೆಸಿಕೊಂಡು ಹೋಗಲು ಕನಿಷ್ಠ 35೦೦೦ ಡಾಕ್ಟರುಗಳು, ಟೆಕ್ನಿಶಿಯನ್ಸ್ ಮತ್ತು ಪಾರಾಮೆಡಿಕಲ್ ಸ್ಟಾಪ್‌ಗಳ ಅಗತ್ಯವಿದೆ. ಒಟ್ಟು ಅವಶ್ಯಕತೆಯ ಶೇ. 72ರಷ್ಟು (255೦೦) ಆರೋಗ್ಯ ಸಿಬ್ಬಂದಿಗಳನ್ನು ಸರಕಾರ ನೇಮಕ ಮಾಡಿದೆ. ಅರವತ್ತರ ದಶಕದಲ್ಲಿ ಇಡೀ ರಾಜ್ಯದಲ್ಲಿ ಒಟ್ಟು 1248 ಆರೋಗ್ಯ ಸಂಸ್ಥೆಗಳಿದ್ದವು. ಸರಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಎ.ಎನ್.ಎಮ್. ಸೆಂಟರ‍್ಗಳು ಆರೋಗ್ಯ ಸಂಸ್ಥೆಯೊಳಗೆ ಸೇರಿವೆ. ಮೈಸೂರು ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ನೂರಕ್ಕಿಂತಲೂ ಹೆಚ್ಚಿನ ಆರೋಗ್ಯ ಸಂಸ್ಥೆಗಳಿದ್ದರೆ ಉತ್ತರ ಕರ್ನಾಟಕದ ಗುಲ್ಬರ್ಗ, ರಾಯಚೂರು, ಬೀದರ್ ಮುಂತಾದ ಜಿಲ್ಲೆಗಳಲ್ಲಿ ಇಪ್ಪತ್ತರಿಂದ ಮೂವತ್ತು ಆರೋಗ್ಯ ಸಂಸ್ಥೆಗಳಿದ್ದವು. (ಕೋಷ್ಟಕ-7). ಐದು ದಶಕಗಳಲ್ಲಿ ಆರೋಗ್ಯ ಸಂಸ್ಥೆಗಳ ಸಂಖ್ಯೆ 2965ಕ್ಕೆ ಏರಿದೆ. ಅರವತ್ತರ ದಶಕದಲ್ಲಿ ಇಡೀ ರಾಜ್ಯದಲ್ಲಿ ಒಟ್ಟು 13786 ಆಸ್ಪತ್ರೆ ಬೆಡ್‌ಗಳಿದ್ದವು. ಬೆಡ್‌ಗಳ ಸಂಖ್ಯೆಯ ದೃಷ್ಟಿಯಿಂದ ನೋಡಿದರೆ ಬೆಂಗಳೂರು, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳು ಉತ್ತಮ ಆರೋಗ್ಯ ಮೂಲಸೌಕರ್ಯವನ್ನು ಹೊಂದಿದ್ದವು. ಈ ಎಲ್ಲ ಜೆಲ್ಲೆಗಳಲ್ಲಿ ಸಾವಿರಕ್ಕಿಂತ ಹೆಚ್ಚು ಬೆಡ್ ಗಳಿದ್ದವು. ಕಾಲಕ್ರಮೇಣ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಆಸ್ಪತ್ರೆ ಬೆಡ್‌ಗಳ ಸಂಖ್ಯೆ ಗಣನೀಯವಾಗಿ ಸುಧಾರಿಸಿದೆ. 2೦೦3-೦4ರ ವೇಳೆಗೆ ಆಸ್ಪತ್ರೆ ಬೆಡ್‌ಗಳ ಸಂಖ್ಯೆ 48511ಕ್ಕೆ ಏರಿದೆ (ಕೋಷ್ಟಕ-8). ರಾಷ್ಟ್ರೀಯ ಆರೋಗ್ಯ ನೀತಿಯ ಮಾನದಂಡ ಪ್ರಕಾರ ಒಂದು ಲಕ್ಷ ಜನರಿಗೆ ಕನಿಷ್ಠ 1೦೦ ಆಸ್ಪತ್ರೆ ಬೆಡ್‌ಗಳು ಅಥವಾ ಸಾವಿರ ಮಂದಿಗೆ ಒಂದು ಆಸ್ಪತ್ರೆ ಬೆಡ್ ಬೇಕು. ರಾಜ್ಯದ ಎಲ್ಲ ಜಿಲ್ಲೆಗಳು ಯೋಜಿತ ಅಭಿವೃದ್ಧಿಯ ಐದು ದಶಕಗಳ ನಂತರವೂ ಈ ಮಾನದಂಡವನ್ನು ತೃಪ್ತಿಪಡಿಸುವುದಿಲ್ಲ. ಬೆಂಗಳೂರು, ಚಿಕ್ಕಮಗಳೂರು, ಧಾರವಾಡ, ಹಾಸನ, ಕೊಡಗು, ಮೈಸೂರು ಮತ್ತು ಉತ್ತರಕನ್ನಡ ಜಿಲ್ಲೆಗಳು ಮಾತ್ರ ನೂರಕ್ಕಿಂತ ಹೆಚ್ಚು ಬೆಡ್‌ಗಳನ್ನು ಹೊಂದಿವೆ. ಉಳಿದ ಜಿಲ್ಲೆಗಳಲ್ಲಿ ಬೆಡ್‌ಗಳ ಸಂಖ್ಯೆ ನೂರಕ್ಕಿಂತ ಕಡಿಮೆ ಇವೆ.

ವಸತಿ, ಕುಡಿಯುವ ನೀರಿನ ಪೂರೈಕೆ ಮತ್ತು ಇತರ ಸಾಮಾಜಿಕ ಮೂಲ ಸೌಕರ್ಯಗಳು ಕೂಡ ಇತರ ಕ್ಷೇತ್ರಗಳಂತೆ ಸಾಕಷ್ಟು ವೃದ್ಧಿಯನ್ನು ಕಂಡಿವೆ. ಅರವತ್ತರ ದಶಕದಲ್ಲಿ 4.2 ಮಿಲೊಯ ಇದ್ದ ವಸತಿಗಳ ಸಂಖ್ಯೆ ತೊಂಬತ್ತರ ವೇಳೆಗೆ 7.9 ಮಿಲಿಯದಷ್ಟು ವೃದ್ಧಿಯಾಗಿದೆ. ತೊಂಬತ್ತರ ವೇಳೆಗೆ ಗ್ರಾಮೀಣ ಪ್ರದೇಶದಲ್ಲಿ ಶೇಕಡಾ ಏಳರಷ್ಟು ಮತ್ತು ನಗರ ಪ್ರದೇಶದಲ್ಲಿ ಶೇಕಡಾ ಹನ್ನೆರಡರಷ್ಟು ವಸತಿ ಕೊರತೆ ಇತ್ತು. ಕಚ್ಚಾ ಮನೆಗಳ ಸಂಖ್ಯೆಯನ್ನು ಕೊರತೆಯೊಂದಿಗೆ ಸೇರಿಸಿದರೆ ಕೊರತೆಯ ಪ್ರಮಾಣ ಗ್ರಾಮೀಣ ಪ್ರದೇಶದಲ್ಲಿ ಶೇಕಡಾ ಇಪ್ಪತ್ತೇಳಕ್ಕೆ ಏರುತ್ತದೆ ಮತ್ತು ನಗರ ಪ್ರದೇಶಗಳಲ್ಲಿ ಶೇಕಡಾ ಹದಿನೇಳಕ್ಕೆ ಏರುತ್ತದೆ. ತೊಂಬತ್ತರ ವೇಳೆಗೆ ರಾಜ್ಯದ ಗ್ರಾಮೀಣ ಪ್ರದೇಶದ ಶೇ. 67, ನಗರ ಪ್ರದೇಶಗಳ ಶೇ.81 ಮನೆಗಳಿಗೆ ಮತ್ತು ರಾಜ್ಯದ ಶೇ.71ರಷ್ಟು ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಆಗಿದೆ. ಆರ್ಥಿಕ ಮೂಲಸೌಕರ್ಯಗಳಲ್ಲಿ ರಸ್ತೆಗಳು ಪ್ರಮುಖ ರಾಜ್ಯದಲ್ಲಿ 2೦೦1ರ ವೇಳೆಗೆ ಒಟ್ಟು 131815 ಕಿ.ಮೀ ರಸ್ತೆ ನಿರ್ಮಾಣ ಆಗಿದೆ. ಇದರಲ್ಲಿ ರಾಷ್ಟ್ರೀಯ ಹೆದ್ದಾರಿ (3524 ಕಿ.ಮೀ. ರಸ್ತೆ ಹೆದ್ದಾರಿ (1೦೦21 ಕಿ.ಮೀ) ಪ್ರಮಾಣ ಕಡಿಮೆ ಇದೆ. ಗ್ರಾಮೀಣ ರಸ್ತೆಗಳು (45೦೦9 ಕಿ.ಮೀ), ಜಿಲ್ಲಾ ಮುಖ್ಯ ರಸ್ತೆಗಳು (28247 ಕಿ.ಮೀ.) ಮತ್ತು ಟಿಡಿಬಿ ರಸ್ತೆಗಳ (31381 ಕಿ.ಮೀ.) ಪ್ರಮಾಣ ಹೆಚ್ಚಿದೆ (ಕೋಷ್ಟಕ-12). ಎಪ್ಪತರ ದಶಕದಲ್ಲಿ 1857 ಇದ್ದ ವಾಣಿಜ್ಯ ಬ್ಯಾಂಕ್ ಬ್ರಾಂಚ್‌ಗಳ ಸಂಖ್ಯೆ ತೊಂಬತ್ತರ ಅಂತ್ಯದ ಅಂತರಕ್ಕೆ 2388ಕ್ಕೆ ಏರಿದೆ. ಇದೇ ಅವಧಿಯಲ್ಲಿ ನಗರ ಪ್ರದೇಶಗಳಲ್ಲಿ ಕ್ರಮವಾಗಿ 1೦56 ಮತ್ತು 2೦74 ಬ್ಯಾಂಕ್ ಬ್ರ್ಯಾಂಚ್ ಗಳಿದ್ದವು. 1996 ಮತ್ತು 2೦೦೦ದ ನಡುವೆ ಬ್ಯಾಂಕ್ ಬ್ರಾಂಚ್‌ಗಳ ಸಂಖ್ಯೆ ಗಣನೀಯವಾಗಿ ವೃದ್ಧಿಯಾಗಿದೆ. 1996 ರಲ್ಲಿ 447೦ ಬ್ಯಾಂಕ್ ಬ್ರಾಂಚ್‌ಗಳ ಸಂಖ್ಯೆ 2೦೦೦ದ ವೇಳೆಗೆ 4684ಕ್ಕೆ ಏರಿದೆ. ಎಲ್ಲ ಪಂಚವಾರ್ಷಿಕ ಯೋಜನೆಗಳಲ್ಲಿ ವಿವಿಧ ಪ್ರಮಾಣದ ಮೊತ್ತವನ್ನು ವಿವಿಧ ಕ್ಷೇತ್ರಗಳ ಅಭಿವೃದ್ಧಿಗಾಗಿ ವಿನಿಯೋಜಿಸಲಾಗಿದೆ. ವಿನಿಯೋಜನೆಗನುಗುಣವಾಗಿ ಆಯಾಯ ಕ್ಷೇತ್ರಗಳಲ್ಲಿ ಅಭಿವೃದ್ಧಿ ಗೊಂಡಿವೆ. ಕೃಷಿ, ನೀರಾವರಿ, ವಿದ್ಯುತ್ ಕ್ಷೇತ್ರಗಳ ಮೇಲೆ ದೊಡ್ಡ ಪ್ರಮಾಣದ ವಿನಿಯೋಜನೆ ನಡೆದಿದೆ. ವಿನಿಯೋಜಿತ ಮೊತ್ತದ ದೃಷ್ಟಿಯಿಂದ ಈ ಮೂರು ಕ್ಷೇತ್ರಗಳ ನಂತರ ಆದ್ಯತೆ ಪಡೆದ ಕ್ಷೇತ್ರ ಸಾಮಾಜಿಕ ಮೂಲಸೌಕರ್ಯಗಳು. ಈ ಎಲ್ಲ ಕ್ಷೇತ್ರಗಳ ಮೇಲಿನ ವಿನಿಯೋಜನೆಗಳಿಗೆ ಹೋಲಿಸಿದರೆ ಬಡವರು, ದೀನ ದಲಿತರ ಉದ್ದಾರಕ್ಕಾಗಿ ವಿನಿಯೋಜಿಸಿದ ಮೊತ್ತ ಅತ್ಯಲ್ಟ.

ಒಟ್ಟಾರೆ ಅರ್ಥ ವ್ಯವಸ್ಥೆ ಬೆಳೆದರೆ ಸಮಾಜದ ತಳಸ್ತರದ ಜನರಿಗೂ ಈ ಬೆಳವಣೆಗೆಯ ಲಾಭ ತೊಟ್ಟಿಕ್ಕುತ್ತದೆ ಎನ್ನುವ ಗ್ರಹಿಕೆ ಈ ಬಗೆಯ ವಿನಿಯೋಜನೆಯ ಹಿಂದೆ ಕೆಲಸ ಮಾಡಿದೆ. ರಾಜ್ಯದ ಒಟ್ಟು ಆಹಾರ, ವಾಣಿಜ್ಯ, ಬೆಳೆಗಳು, ಕೈಗಾರಿಕ ಉತ್ಪಾದನೆಗಳು ಮತ್ತು ಮೂಲಸೌಕರ್ಯಗಳು ಹೆಚ್ಚಳಗೊಂಡರೆ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ನಂಬಲಾಗಿದೆ. ಸರಕು ಮತ್ತು ಸೇವೆಗಳ ಉತ್ಪಾದನೆ ಹೆಚ್ಚಾದಷ್ಟು ಬಡತನ ನಿವಾರಣೆಯಾಗುತ್ತದೆ ಎಂದು ನಂಬಿಸಲಾಗಿದೆ. ಉತ್ಪಾದನೆಯ ಹೆಚ್ಚಳ ಅದರಷ್ಟಕ್ಕೆ ಅದು ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರವಾಗುತ್ತದೆ ಎಂದು ತಿಳಿಯಲಾಗಿದೆ. ಈ ಎಲ್ಲ ಗ್ರಹಿಕೆಗಳು ಎಷ್ಟರ ಮಟ್ಟಿಗೆ ನಿಜವಾಗಿವೆ? ಉತ್ಪಾದನೆಯ ಹೆಚ್ಚಳ ವಿತರಣೆಯ ಸಮಸ್ಯೆಯನ್ನು ಪರಿಹರಿಸಿದೆಯೇ? ಈ ಬಗೆಯ ಹೆಚ್ಚಳದಲ್ಲಿ ಸಮಾಜದ ವಿವಿಧ ವರ್ಗಗಳ ಪಾಲೇನು? ಇಷ್ಟೊಂದು ಅಗಾಧ ಪ್ರಮಾಣದ ಸಾರ್ವಜನಿಕ ಸಂಪನ್ಮೂಲಗಳ ವಿನಿಯೋಜನೆಯ ಲಾಭ ಸಮಾಜದ ಎಲ್ಲ ವರ್ಗಗಳಿಗೂ ಹರಿದು ಬಂದಿದೆಯೇ? ಅಥವಾ ಕೆಲವೇ ವರ್ಗಗಳಲ್ಲಿ ಕ್ರೋಢಿಕರಣಗೊಂಡಿದೆಯೇ? ಎನ್ನುವ ಪ್ರಶ್ನೆಗೆ ಮೇಲಿನ ವಿವರಗಳಲ್ಲಿ ಉತ್ತರ ಇಲ್ಲ. ಈ ಎಲ್ಲ ಪ್ರಶ್ನೆಗಳಿಗೆ ಅಧ್ಯಾಯದ ಈ ಭಾಗದಲ್ಲಿ ಉತ್ತರಿಸಿದ್ದೇನೆ. ಭಾರತದ ಸಂವಿಧಾನ ಪ್ರಕಾರ ಅರ್ಥ ವ್ಯವಸ್ಥೆಯ ಸಂಘಟನೆ ಸಮಾನತೆಯನ್ನು ಸೃಷ್ಟಿಸುವ ರೀತಿಯಲ್ಲಿ ಇರಬೇಕು. ಸಮುದಾಯದ ಸಂಪನ್ಮೂಲಗಳ ಒಡೆತನ ಹಾಗೂ ಸಂಘಟನೆ ಸಮಾಜದ ಪ್ರತಿಯೊಬ್ಬರ ಆಸಕ್ತಿಗಳನ್ನು ಸಮಾನವಾಗಿ ಈಡೇರಿಸುವಂತಿರಬೇಕೆಂದು ಸಂವಿಧಾನ ಸೂಚಿಸಿದೆ. ಸಂಪತ್ತು ಹಾಗೂ ಉತ್ಪಾದನ ಪರಿಕರಗಳು ಎಲ್ಲರಿಗೂ ಸಮಾನವಾಗಿ ಹಂಚುವಿಕೆಯಾಗುವ ಕ್ರಮದಲ್ಲಿ ಅರ್ಥ ವ್ಯವಸ್ಥೆಯನ್ನು ಸಂಘಟಿಸಬೇಕು. ಅರ್ಥ ವ್ಯವಸ್ಥೆಯ ಸಂಘಟನೆ ಕೇವಲ ವ್ಯಕ್ತಿಗಳ ಕೈಯಲ್ಲಿ ಸಂಪತ್ತು ಹಾಗೂ ಉತ್ಪಾದನ ಪರಿಕರಗಳು ಕೇಂದ್ರೀಕೃತವಾಗುವ ಹಾಗೆ ಇರಬಾರದು. ಬದುಕಿನ ಪರಿಕರಗಳು ಭಾರತದ ಪ್ರತಿಯೊಬ್ಬ ಪುರುಷ ಮತ್ತು ಮಹಿಳೆ ಪ್ರಜೆಗೂ ಸಮಾನವಾಗಿ ಮತ್ತು ಸಾಕಷ್ಟು ಪ್ರಮಾಣದಲ್ಲಿ ದೊರಕಬೇಕು. ಹೆಚ್ಚು ಕಡಿಮೆ ಇದೇ ನಿಲುವನ್ನು ಪಂಚವಾರ್ಷಿಕ ಯೋಜನೆಗಳಲ್ಲೂ ನೋಡಬಹುದು. ಸಂವಿಧಾನ ಮತ್ತು ಯೋಜನೆಗಳ ಆದರ್ಶಗಳು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬಂದಿವೆ ಎಂದು ನೋಡುವ.

ಪಂಚವಾರ್ಷಿಕ ಯೋಜನೆಗಳಲ್ಲಿ ವಿನಿಯೋಜಿತ ಮೊತ್ತದ ಸಿಂಹಪಾಲನ್ನು ಕೃಷಿ, ನೀರಾವರಿ ಮತ್ತು ವಿದ್ಯುತ್ ಉತ್ಪಾದನೆಗಳು ಪಡೆದಿವೆ. ಒಂದರಿಂದ ಎಂಟನೇ ಪಂಚವಾರ್ಷಿಕ ಯೋಜನೆ ತನಕ ಯೋಜನೆಗಳ ಒಟ್ಟು ಮೊತ್ತದ ಶೇಕಡಾ ಅರುವತ್ತರಿಂದ ಎಪ್ಪತ್ತರಷ್ಟು ಮೊತ್ತವನ್ನು ಈ ಮೂರು ಕ್ಷೇತ್ರಗಳ ಮೇಲೆ ವಿನಿಯೋಜಿಸಲಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದ ವಿನಿಯೋಜನೆಯ ಲಾಭ ಪಡೆಯಬೇಕಾದರೆ ಮಧ್ಯಮ ಅಥವಾ ಅರೆ ಮಧ್ಯಮ ಅಥವಾ ದೊಡ್ಡ ಪ್ರಮಾಣದ ಭೂಮಿ ಬೇಕು ಅಥವಾ ಸಣ್ಣ / ಮಧ್ಯಮ / ದೊಡ್ಡ ಕೈಗಾರಿಕೆಗಳಲ್ಲಿ ವಿನಿಯೋಜಿಸುವಷ್ಟು ಬಂಡವಾಳ ಬೇಕು. ಭೂಮಿ ಮತ್ತು ಬಂಡವಾಳ ಇಲ್ಲದಿದ್ದರೆ ಈ ಕ್ಷೇತ್ರಗಳು ಸೃಷ್ಟಿಸುವ ಉದ್ಯೋಗ ಪಡೆಯುವಷ್ಟು ವಿದ್ಯೆ ಬೇಕು. ಈ ಮೂರರಲ್ಲಿ ಯಾವುದಾದರೂ ಒಂದೂ ಇಲ್ಲದಿದ್ದರೆ ಇಷ್ಟೊಂದು ಬೃಹತ್ ಪ್ರಮಾಣದ ವಿನಿಯೋಜನೆಯ ಸಣ್ಣಪುಟ್ಟ ಲಾಭನೂ ದಕ್ಕುವುದಿಲ್ಲ. ಕೃಷಿ ಮತ್ತು ನೀರಾವರಿ ಮೇಲೆ ವಿನಿಯೋಜನೆಗಳ ಲಾಭ ಪಡೆಯಬೇಕಾದರೆ ಭೂಮಿ ಬೇಕೇ ಬೇಕು. ಭೂಮಿ ಇಲ್ಲದಿದ್ದರೆ ಕೃಷಿ ಕೂಲಿ ಮಾಡಬೇಕು ಅಥವಾ ಗುತ್ತಿಗೆಗೆ ಕೃಷಿ ಮಾಡಬೇಕು. ಕರ್ನಾಟಕದಲ್ಲಿ 1957ರಲ್ಲಿ 18,13,154 ಗೇಣಿದಾರರಿದ್ದರು. ಗೇಣಿದಾರರ ಸ್ಥಿತಿಯನ್ನು ಸುಧಾರಿಸುವ ದೃಷ್ಟಿಯಿಂದ 1965ರಲ್ಲಿ ಕರ್ನಾಟಕ ಸರಕಾರ ಭೂಸುಧಾರಣ ಮಸೂದೆಯೊಂದನ್ನು ಜಾರಿಗೆ ತಂದಿದೆ. ಭೂಮಾಲಿಕರು ಹೊಂದಬಹುದಾದ ಭೂಮಿಯ ಗರಿಷ್ಠಮಿತಿಯನ್ನು ನಿಗದಿಗೊಳಿಸುವುದು, ಗೇಣಿಯ ಪ್ರಮಾಣವನ್ನು ನಿಗದಿಗೊಳಿಸುವುದು, ಗೇಣಿಗೆ ನೀಡಿದ ಭೂಮಿಯನ್ನು ಪುನರ್ ಸ್ವಾಧೀನ ಪಡಿಸುವುದರ ಮೇಲೆ ನಿರ್ಬಂಧ ಹೇರುವುದು ಇತ್ಯಾದಿ ಉದ್ದೇಶಗಳನ್ನು 1961ರ ಭೂಸುಧಾರಣ ಕಾಯಿದೆ ಹೊಂದಿತ್ತು. ವಿಪರ್ಯಾಸವೆಂದರೆ ಈ ಕಾಯಿದೆ ಅನುಷ್ಠಾನಗೊಂಡ ನಂತರ ಗೇಣಿದಾರರ ಸಂಖ್ಯೆ ಹೆಚ್ಚಾಗುವುದರ ಬದಲು ಕಡಿಮೆಯಾಯಿತು. ಕರ್ನಾಟಕದ ಅಗ್ರಿಕಲ್ಚರಲ್ ಸೆನ್ಸಸ್ ಪ್ರಕಾರ 1957ರಲ್ಲಿ ಹದಿನೆಂಟು ಲಕ್ಷಕ್ಕಿಂತಲೂ ಹೆಚ್ಚಿಗೆ ಇದ್ದ ಗೇಣಿದಾರರ ಸಂಖ್ಯೆ 1971ರಲ್ಲಿ 3,97,4೦2ಕ್ಕೆ ಇಳಿದಿತ್ತು. ನೀರಾವರಿ ಪ್ರದೇಶಗಳಲ್ಲಿ (ಕರಾವಳಿ ಕರ್ನಾಟಕ, ಮಲೆನಾಡು ಪ್ರದೇಶಗಳಲ್ಲಿ) ದೊಡ್ಡ ಪ್ರಮಾಣದಲ್ಲಿ ಗೇಣಿದಾರರಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4,9೦,571 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 1,81,239 ಗೇಣಿದಾರರು ಇದ್ದರು (ಕೋಷ್ಟಕ-15). ಉತ್ತರ ಕನ್ನಡ ಜಿಲ್ಲೆಯಲ್ಲಿ 1,81,239 ಗೇಣಿದಾರರು ಇದ್ದರು (ಕೋಷ್ಟಕ-15). ಮಲೆನಾಡು ಪ್ರದೇಶದ ಜಿಲ್ಲೆಗಳಲ್ಲಿ ಶಿವಮೊಗ್ಗದಲ್ಲಿ 1.11,78೦ ಗೇಣಿದಾರರು ಇದ್ದರೆ ಉಳಿದ ಜಿಲ್ಲೆಗಳಲ್ಲಿ ಇಪ್ಪತ್ತರಿಂದ ಮೂವತೈದು ಸಾವಿರ ಗೇಣಿದಾರರಿದ್ದರು (ಕೋಷ್ಟಕ-15). ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬೆಳಗಾಂ, ಬಿಜಾಪುರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಒಂದು ಲಕ್ಷಕ್ಕಿಂತ ಮೇಲೆ ಗೇಣಿದಾರರಿದ್ದರೆ ಇನ್ನುಳಿದ ಜಿಲ್ಲೆಗಳಲ್ಲಿ ಮೂವತ್ತರಿಂದ ಎಂಬತ್ತು ಸಾವಿರದಷ್ಟು ಗೇಣಿದಾರರಿದ್ದರು. ದಕ್ಷಿಣ ಕರ್ನಾಟಕದ ಮೈಸೂರು ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಆರುವತ್ತರಿಂದ ಎಪ್ಪತೈದು ಸಾವಿರದಷ್ಟು ಗೇಣಿದಾರರಿದ್ದರೆ ಉಳಿದ ಜಿಲ್ಲೆಗಳಲ್ಲಿ ಐವತ್ತು ಸಾವಿರದೊಳಗೆ ಇದ್ದರು. 1961ರ ಭೂಸುಧಾರಣೆಯಿಂದ ಗೇಣೆದಾರರ ಸಂಖ್ಯೆಯಲ್ಲಿ ದೊಡ್ಡ ಪ್ರಮಾಣದ ಕುಸಿತವನ್ನು ಇವೇ ಪ್ರದೇಶಗಳಲ್ಲಿ ಕಾಣಬಹುದು. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕ್ರಮವಾಗಿ 1971ರಲ್ಲಿ 7೦,591 ಮತ್ತು 72,456 ಗೇಣಿದಾರರಿದ್ದರು. ಇದೇ ರೀತಿಯ ಕುಸಿತವನ್ನು ಶಿವಮೊಗ್ಗ ಬೆಳಗಾಂ, ಬಿಜಾಪುರ, ಧಾರವಾಡ, ಜಿಲ್ಲೆಗಳಲ್ಲೂ ಕಾಣಬಹುದು. 1961ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿದ್ದ 1,11,78೦ ಗೇಣಿದಾರರ ಸಂಖ್ಯೆ 1971ರಲ್ಲಿ 31,688ಕ್ಕೆ ಇಳಿದಿದೆ. 1961ರಲ್ಲಿ ಬೆಳಗಾಂನಲ್ಲಿ 2,27,845 ಇದ್ದ ಗೇಣಿದಾರರ ಸಂಖ್ಯೆ 1971ರಲ್ಲಿ 47,511ಕ್ಕೆ ಇಳಿದಿದೆ. 1961ರಲ್ಲಿ ಬೆಂಗಳೂರು ಮತ್ತು ಮೈಸೂರು ಕ್ರಮವಾಗಿ 69,3೦2 ಮತ್ತು 75,646 ಗೇಣಿದಾರರಿದ್ದರು. 1971ರಲ್ಲಿ ಈ ಸಂಖ್ಯೆ ಕ್ರಮವಾಗಿ 12,184 ಮತ್ತು 9,72೦ಕ್ಕೆ ಇಳಿದಿದೆ. ಇಡೀ ರಾಜ್ಯದಲ್ಲಿ 1961ರಲ್ಲಿದ್ದ 18,13,154 ಗೇಣಿದಾರರ ಸಂಖ್ಯೆ 1971ರ ವೇಳೆಗೆ 3,97,4೦2ಕ್ಕೆ ಇಳಿದಿದೆ (ಕೋಷ್ಟಕ-15).

1961 ಮತ್ತು 1971ರ ನಡುವೆ ಗೇಣಿದಾರರ ಸಂಖ್ಯೆ ಕಡಿಮೆಯಾಗಿರುವುದನ್ನು ಮತ್ತೊಂದು ವಿಧದಿಂದಲೂ ಅರ್ಥಮಾಡಿಕೊಳ್ಳಬಹುದು. 1961ರ ಸೆನ್ಸಸ್ ಪ್ರಕಾರ ಕರ್ನಾಟಕದಲ್ಲಿ ಒಟ್ಟು 58,೦6,664 ಕೃಷಿಕರಿದ್ದರು. 1961ರ ಕಾಯಿದೆ ಗೇಣಿ ಭದ್ರತೆ ಒದಗಿಸುತ್ತಿದ್ದರೆ 1971ರ ವೇಳೆಗೆ ಕೃಷಿಕರ ಸಂಖ್ಯೆ ಹೆಚ್ಚಾಗಬೇಕಿತ್ತು ಆದರೆ ಆ ರೀತಿ ಆಗಲಿಲ್ಲ ಆ ರೀತಿ ಆಗುವದಕ್ಕಿಂತ ಕೃಷಿಕರ ಸಂಖ್ಯೆ 1971ರಲ್ಲಿ 4೦,72,879ಕ್ಕೆ ಇಳಿದಿದೆ. (ಕೋಷ್ಟಕ- 14) ಹೆಚ್ಚು ಕಡಿಮೆ ಶೇ.3೦ ರಷ್ಟು ಕೃಷಿಕರು ಕಡಿಮೆ ಆಗಿದ್ದಾರೆ. ಈ ರೀತಿ ಭೂಮಿ ಕಳೆದುಕೊಂಡ ಕೃಷಿಕರು ಏನಾದರು ಎನ್ನುವ ಪ್ರಶ್ನೆ ಹುಟ್ಟುವುದು ಸಹಜ. ಎಪ್ಪತರ ದಶಕದಲ್ಲಿ ಕರ್ನಾಟಕದ ಬಹುತೇಕ ಭಾಗದಲ್ಲಿ ಕೃಷಿಯೇ ಜನರಿಗೆ ಮುಖ್ಯ ಕಸುಬು, ಬೆಂಗಳೂರು, ಮೈಸೂರು, ಮಂಗಳೂರು ಮುಂತಾದ ಕಡೆ ಅಲ್ಪಸ್ವಲ್ಪ ಕೃಷಿಯೇತರ ಉದ್ಯೋಗಗಳಿದ್ದವು. ಆದರೆ ಅವು ಕಾಯಿದೆಯ ಅನುಷ್ಠಾನದಿಂದ ಭೂಮಿ ಕಳೆದುಕೊಂಡ ಇಷ್ಟೊಂದು ದೊಡ್ಡ ಸಂಖ್ಯೆಯ ಜನರಿಗೆ ಉದ್ಯೋಗ ಕೊಡುವ ಸ್ಥಿತಿಯಲ್ಲಿ ಇರಲಿಲ್ಲ. ಗೇಣಿದಾರಿಕೆ ಕಳೆದುಕೊಂಡ ಜನರು ಒಂದೋ ಕೃಷಿ ಕಾರ್ಮಿಕರಾಗಬೇಕು. ಅಥವಾ ಗುಡಿಕೈಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಅಥವಾ ದೂರದ ಊರಿಗೆ ವಲಸೆ ಹೋಗಬೇಕು. ಈ ಎಲ್ಲವು ನಡೆದಿದೆ. 1961ರಲ್ಲಿ ರಾಜ್ಯದಲ್ಲಿ ಒಟ್ಟು 17,61,11೦ ಕೃಷಿ ಕಾರ್ಮಿಕರಿದ್ದರು. 1971ರಲ್ಲಿ ಕೃಷಿ ಕಾರ್ಮಿಕರ ಸಂಖ್ಯೆ 27,17,537ಕ್ಕೆ ಏರಿದೆ. ಹೆಚ್ಚು ಕಡಿಮೆ ಕೃಷಿ ಕಾರ್ಮಿಕರ ಸಂಖ್ಯೆ ಶೇ. 55ರ ಏರಿಕೆಯನ್ನು ಕಂಡಿದೆ (ಕೋಷ್ಟಕ-14). ಗೇಣಿದಾರರ ಸಂಖ್ಯೆ ಶೇ. 3೦ರ ಕುಸಿತವನ್ನು ಕಾಣುವಾಗ ಕೃಷಿ ಕಾರ್ಮಿಕರ ಸಂಖ್ಯೆ ಶೇ. 55ರ ಏರಿಕೆ ತೋರಿಸುವುದು ಭೂಮಿ ಕಳೆದುಕೊಂಡ ಬಹುತೇಕ ಗೇಣಿದಾರರು ಕೃಷಿಕಾರ್ಮಿಕರಾಗಿ ಪರಿವರ್ತಿತಗೊಂಡಿದ್ದಾರೆ ಎನ್ನುವ ವಾದವನ್ನು ಗಟ್ಟಿಗೊಳಿಸುತ್ತದೆ. ಈ ತೀರ್ಮಾನವನ್ನು ಜನಸಂಖ್ಯೆಯಲ್ಲಿನ ಏರಿಕೆಯನ್ನು ತೋರಿಸಿ ಪ್ರಶ್ನಿಸಬಹುದು. ಜನಸಂಖ್ಯೆಯಲ್ಲಿನ ಹೆಚ್ಚಳದಿಂದ ಕೃಷಿ ಕಾರ್ಮಿಕರ ಸಂಖ್ಯೆ ಹೆಚ್ಚಾಗಿರಬಹುದೆಂದು ಮೇಲಿನ ತೀರ್ಮಾನವನ್ನು ಅಲ್ಲಗಳೆಯಬಹುದು. ಖಂಡಿತವಾಗಿಯೂ ಜನಸಂಖ್ಯೆ ಹೆಚ್ಚಳ ಕೃಷಿ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಹಾಗೆಂದು 1961 ಮತ್ತು 1971ರ ನಡುವೆ ಹುಟ್ಟಿದ ಎಲ್ಲರೂ ಕೃಷಿಕಾರ್ಮಿಕರೇ ಆಗಿರಲು ಸಾಧ್ಯವೇ? ತಾತ್ಕಾಲಿಕವಾಗಿ ಈ ವಾದವನ್ನು ಒಪ್ಪಿದರೂ ಅಂಕಿಅಂಶಗಳು ಈ ವಾದದೊಂದಿಗೆ ಹೋಗುವುದಿಲ್ಲ. 1961 ಮತ್ತು 1971 ನಡುವೆ ಶೇ. 24ರಷ್ಟು ಏರಿದೆ ಜನಸಂಖ್ಯೆ ಹೆಚ್ಚಳ ಕಂಡಿದೆ. ಆದರೆ ಕೃಷಿ ಕಾರ್ಮಿಕರ ಸಂಖ್ಯೆ ಶೇ. 55ರಷ್ಟು ಏರಿದೆ (ಕೋಷ್ಟಕ- 14). ಅಂದರೆ ನೀರಾವರಿ ಮೇಲೆ ಕೋಟಿಗಟ್ಟಲೆ ವಿನಿಯೋಜಿಸುವ ಸಂದರ್ಭದಲ್ಲೇ ಗೇಣಿದಾರರನ್ನು ಕೃಷಿಕಾರ್ಮಿಕರನ್ನಾಗಿ ಪರಿವರ್ತಿಸಲಾಗುತ್ತಿತ್ತು.

1961ರ ಭೂಸುಧಾರಣ ಕಾಯಿದೆಯನ್ನು ತಿದ್ದುಪಡಿಗೊಳಿಸಿ 1974ರ ಭೂಸುಧಾರಣೆ ಕಾಯಿದೆ ಬಂದಿದೆ. ಈ ಕಾಯಿದೆ ಕರ್ನಾಟಕದ ಭೂಸಂಬಂಧವನ್ನು ಮೂಲಭೂತವಾಗಿ ಬದಲಿಸಿದೆ ಎನ್ನುವ ಚಿತ್ರಣ ಇದೆ. ಆದರೆ ಕೆಲವು ಅಧ್ಯಯನಗಳು ಇಂತಹ ಸಾಮಾನ್ಯ ಚಿತ್ರಣವನ್ನು ಒಪ್ಪುವುದಿಲ್ಲ. ಅವರ ಪ್ರಕಾರ 1974 ಭೂಸುಧಾರಣೆ ಏಕೀಕೃತ ಕರ್ನಾಟಕದ ಭೂಸಂಬಂಧವನ್ನು ಮೂಲಭೂತವಾಗಿ ಪರಿವರ್ತಿಸಿಲ್ಲ. ಬಹುತೇಕ ಅಧ್ಯಯನಗಳು 1971ರ ಅಗ್ರಿಕಲ್ಚರಲ್ ಸೆನ್ಸಸ್ ನೀಡಿದ ಗೇಣಿದಾರರ ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು 1974ರ ಭೂಸುಧಾರಣ ಕಾಯಿದೆಯ ಪರಿಣಾಮವನ್ನು ವಿಶ್ಲೇಷಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲವೆಂದು ಚಂದ್ರಶೇಖರ್ ದಾಮ್ಲೆ ವಾದಿಸುತ್ತಾರೆ. ಅವರ ಪ್ರಕಾರ 1974ರ ಕಾಯಿದೆಯ ನಿಜವಾದ ಪರಿಣಾಮವನ್ನು ಮಾಪನ ಮಾಡಬೇಕಾದರೆ ಗೇಣಿದಾರರ ಸಂಖ್ಯೆ ಬೇಸ್ ಪಾಯಿಂಟ್ 1971ರ ಅಂಕಿಅಂಶಗಳಲ್ಲಿ; 1957ರ ಅಂಕಿ-ಅಂಶಗಳಾಗಬೇಕು. 1971ರ ಗೇಣಿದಾರರ ಅಂಕಿ ಅಂಶಗಳನ್ನು ಗೇಣಿದಾರರ ಪರ ಇತ್ಯರ್ಥವಾದ ಅಂಕಿಅಂಶಗಳೊಂದಿಗೆ ಹೋಲಿಸಿದರೆ 1974ರ ಕಾಯಿದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡ ಚಿತ್ರಣ ದೊರಕುತ್ತದೆ. ಯಾಕೆಂದರೆ ಸುಮಾರು ಹದಿನೈದು ಲಕ್ಷದಷ್ಟು ಗೇಣಿದಾರರು ಆವಾಗಲೇ ಭೂಮಿ ಕಳೆದುಕೊಂಡು ಗೇಣಿದಾರರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಒಂದು ವೇಳೆ 1957ರಲ್ಲಿದ್ದ ಗೇಣಿದಾರರ ಅಂಕಿಅಂಶಗಳನ್ನು ಗೇಣಿದಾರರ ಪರ ಇತ್ಯರ್ಥವಾದ ಕೇಸುಗಳ ಅಂಕಿ-ಅಂಶಗಳೊಂದಿಗೆ ಹೋಲಿಸಿದರೆ ಸಂಪೂರ್ಣವಾಗಿ ಭಿನ್ನ ಚಿತ್ರಣ ದೊರೆಯುತ್ತದೆ ಎಂದು ದಾಮ್ಲೆ ವಾದಿಸುತ್ತಾರೆ. 1957ರಲ್ಲಿದ್ದ ಸಂಖ್ಯೆಯನ್ನು ಗೇಣಿದಾರರ ಪರ ಇತ್ಯರ್ಥವಾದ ಸಂಖ್ಯೆಯೊಂದಿಗೆ ಹೋಲಿಸಿದರೆ ಇಡೀ ರಾಜ್ಯದಲ್ಲಿ ಶೇ.27ರಷ್ಟು ಗೇಣಿದಾರರು ಮಾತ್ರ ಭೂಮಿ ಪಡೆದಿದ್ದಾರೆ. ಇದರ ಬದಲು 1979ವರೆಗೆ ಡಿಕ್ಲರೇಶನ್ ಸಲ್ಲಿಸಿದ ಗೇಣಿದಾರರ ಸಂಖ್ಯೆಯನ್ನು ಗೇಣಿದಾರರ ಪರ ಇತ್ಯರ್ಥವಾದ ಸಂಖ್ಯೆಯೊಂದಿಗೆ ಹೋಲಿಸಿದರೆ ಶೇ. 6೦ರಷ್ಟು ಗೇಣಿದಾರರು ಭೂಮಿ ಪಡೆದಿದ್ದಾರೆ ಎನ್ನುವ ಚಿತ್ರಣ ದೊರೆಯುತ್ತದೆ (ಕೋಷ್ಟಕ-15). ಆದುದರಿಂದ 1974 ಕಾಯಿದೆ ಕರ್ನಾಟಕದ ಸಾಂಪ್ರದಾಯಿಕ ಭೂಮಾಲಿಕರ ಶಕ್ತಿಗುಂದಿಲ್ಲ. ಅವರಲ್ಲಿ ಬಹುತೇಕರು ತಮ್ಮ ಭೂಮಿಯನ್ನು ತಮ್ಮಲ್ಲೇ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. 1957ರ ಗೇಣಿದಾರರ ಸಂಖ್ಯೆಗೆ ಹೋಲಿಸಿದರೆ ಅತ್ಯಲ್ಟ ಪ್ರಮಾಣದ ಗೇಣಿದಾರರು ಭೂಮಿ ಪಡೆದಿದ್ದಾರೆ ಎಂದು ದಾಮ್ಲೆ ವಾದಿಸುತ್ತಾರೆ.

ರಾಜ್ಯದಲ್ಲಾದ ಭೂಸಂಬಂಧಗಳ ಬದಲಾವಣೆಯನ್ನು ಒಟ್ಟಾರೆಯಾಗಿ ನೋಡಿದರೆ ಈ ಕೆಳಗಿನ ಚಿತ್ರಣ ದೊರೆಯುತ್ತದೆ. 1961ರ ಭೂಸುಧಾರಣೆ ಕಾಯಿದೆ ಗೇಣಿದಾರರಿಗೆ ಭೂಮಿ ಕೊಡಿಸುವ ಬದಲು ಅವರನ್ನು ವಕ್ಕಲೆಬ್ಬಿಸಲು ಹೆಚ್ಚು ಉಪಯೋಗವಾಗಿದೆ ಎನ್ನುವುದನ್ನು ಅಂಕಿಅಂಶಗಳು ಸಾಬೀತು ಪಡಿಸುತ್ತಿವೆ. 1961ರ ಕಾಯಿದೆಯಲ್ಲಿನ ಭೂಮಿಯ ಗರಿಷ್ಟಮಿತಿಯನ್ನು ಅನುಷ್ಠಾನಗೊಳಿಸಿ ಹೆಚ್ಚುವರಿ ಭೂಮಿಯನ್ನು ಸರಕಾರ ಸ್ವಾಧೀನ ಪಡಿಸಿಕೊಂಡ ದಾಖಲೆಗಳಿಲ್ಲ. ಹೆಚ್ಚುವರಿ ಭೂಮಿಯೇ ಇಲ್ಲವಾದರೆ ಅದನ್ನು ಸ್ವಾಧೀನ ಪಡಿಸಿಕೊಳ್ಳುವ ಮತ್ತು ವಿತರಿಸುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. 1961ರ ಕಾಯಿದೆಯಲ್ಲಿನ ಹಲವಾರು ನ್ಯೂನತೆಗಳನ್ನು ತಿದ್ದುಪಡಿಗೊಂಡು 1974ರ ಕಾಯಿದೆ ಬಂದಿದೆ. ಜತೆಗೆ 1974ರ ಕಾಯಿದೆ ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ ಎಂದು ತೋರಿಸುವ ದಾಖಲೆಗಳಿವೆ. 1974ರ ಕಾಯಿದೆಯ ಪರಿಣಾಮಕಾರಿ ಅನುಷ್ಠಾನದ ದಾಖಲೆಗಳನ್ನು ಹಿಂದಿನ ಪುಟಗಳಲ್ಲಿ ವಿಮರ್ಶಿಸಲಾಗಿದೆ. ಮೇಲ್ನೋಟಕ್ಕೆ ಸಾಧನೆ ಎಂದು ಕಾಣುವ ಹಲವಾರು ಸಂಗತಿಗಳು ಕರ್ನಾಟಕದ ಭೂಸಂಬಂಧವನ್ನು ಮೂಲಭೂತವಾಗಿ ಪರಿವರ್ತಿಸುವಲ್ಲಿ ವಿಫಲವಾಗಿರುವುದು ಕಂಡು ಬರುತ್ತದೆ. ಗೇಣಿಪದ್ದತಿಯ ಕ್ರಾಂತಿಕಾರಿ ಕ್ರಮವೇ ಸರಿ. ರಾತ್ರಿ ಕಳೆದು ಬೆಳಕು ಹರಿಯುವಾಗ ಗೇಣಿದಾರ ಹೋಗಿ ಹೊಲದ ಒಡೆಯನಾಗುವುದು ದೊಡ್ಡ ಪರಿವರ್ತನೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಆದರೆ ಏಕೀಕರಣದ ಸಂದರ್ಭದಲ್ಲಿದ್ದ ಶೇ.55ರಷ್ಟು ಗೇಣಿದಾರರು 1974ರ ಕಾಯಿದೆ ಅನುಷ್ಠಾನಕ್ಕೆ ಬರುವ ಸಂದರ್ಭದಲ್ಲಿ ಗೇಣಿದಾರರಾಗಿ ಉಳಿದಿರಲಿಲ್ಲ. ಕಾಯಿದೆ ಅನುಷ್ಠಾನಕ್ಕೆ ಬರುವ ಮುನ್ನವೇ ಅವರನ್ನು ವಕ್ಕಲೆಬ್ಬಿಸಲಾಗಿತ್ತು.