ಬುಡಕಟ್ಟು ಎಂಬ ಪದಕ್ಕೆ ಅರ್ಥ ವಿವರಣೆ ಕೊಡುವುದು ಅಷ್ಟು ಸುಲಭದ ಮಾತಲ್ಲ. ಪದವನ್ನು ಜೀವ ವಿಜ್ಞಾನಿಗಳು ಮಾನವ ಶಾಸ್ತ್ರಜ್ಞರು ಹಾಗೂ ಇತಿಹಾಸಕಾರರು ನಾನಾ ಅರ್ಥದಲ್ಲಿ ಬಳಸಿದ್ದಾರೆ. ನಾಗರಿಕತೆ, ಸಂಸ್ಕೃತಿ, ಜನಾಂಗ ಭಾಷೆ ಧರ್ಮ, ಬುಡಕಟ್ಟು ಎಂಬ ಪದಗಳನ್ನು ಹವ್ಯಾತವಾಗಿ ಒಂದೇ ಅರ್ಥದಲ್ಲಿ ಬಳಸಲಾಗಿದೆ. ಆದರೆ ಸಮಾಜ ಶಾಸ್ತ್ರಜ್ಞರ ದೃಷ್ಟಿಯಲ್ಲಿ ಈ ಪದಗಳಿಗೆ ಬೇರೆ ಬೇರೆ ಅರ್ಥಗಳಿವೆ. ಕಿಟೆಲ್ಲರು ತಮ್ಮ ಅರ್ಥಕೋಶದಲ್ಲಿ ಬುಡಕಟ್ಟು ಎಂಬ ಶಬ್ದಕ್ಕೆ ಕುಟುಂಬ ಹಾಗೂ ಕುಲ ಎಂಬ ಅರ್ಥವನ್ನು ನೀಡುತ್ತಾರೆ. ಬುಡಕಟ್ಟು ಎಂಬ ಪದವ ಆಂಗ್ಲ ಭಾಷೆಯ ಟ್ರೈಬ್ ಎಂಬ ಪದಕ್ಕೆ ಸಮಾನಾರ್ಥಕ ಪದವೆಂದು ಬಳಸಲಾಗುತ್ತಿದೆ. ಇದು ಲ್ಯಾಟಿನ್ ಭಾಷೆಯ ಟ್ರೈಬಸ್ ಎಂಬ ಪದದಿಂದ ಉಗಮಗೊಂಡಿದೆ. ಸಮಾಜ ರಚನೆಯ ಮೂಲಕ್ಕೆ ಕುಟುಂಬ ಹಾಗೂ ರಕ್ತ ಸಂಬಂಧಿಯ ಕುಲಗಳು ಆಧಾರಸ್ಥಂಬಳಾಗುತ್ತವೆ. ಕುಟುಂಬ ಹಾಗೂ ರಕ್ತಸಂಬಂಧ ಹೊಂದಿದ ಕುಲಗಳ ಕೂಟಕ್ಕೆ ಸಮೂಹಕ್ಕೆ ಕನ್ನಡದಲ್ಲಿ ಬುಡಕಟ್ಟು ಎಂಬ ಪದ ಬಳಕೆಯಲ್ಲಿ ಬಂದಿರುವಂತಿದೆ. ಈ ಬುಡಕಟ್ಟುಗಳಿಗೆ ಆದಿವಾಸಿ ಮೂಲ ನಿವಾಸಿ, ಗಿರಿಜನ, ವನ್ಯಜಾತಿ, ಎಂಬ ಹೆಸರುಗಳಿಂದ ಕರೆಯಲಾಗಿದೆ. ಒಂದು ನಿರ್ಧಿಷ್ಟ ಪ್ರದೇಶದಲ್ಲಿ ವಾಸಿಸುವ ಅಥವಾ ಸಾಮಾಜಿಕವಾಗಿ ಹೊಂದಿಕೊಂಡಿರುವ ಮತ್ತು ಸ್ವಯಂ ಆಡಳಿತವುಳ್ಳ ಗುಂಪು ಬುಡಕಟ್ಟು ಆಗುತ್ತದೆ ಎಂದು ಲಂಡನ್ನಿನ ರಾಯೇ ಆಂಥ್ರೋಪಾಲಜಿಕಲ್ ಇನ್ನೈಟ್ಯೂಟ್ ವ್ಯಾಖ್ಯಾನ. ಅಲ್ಲದೇ ಯಾವ ಜನ ನಿಸರ್ಗದ ಮಡಿಲ್ಲಿ ಸುಖವಾಗಿ ಬದುಕಲು ಬಯಸುವುದೋ ಪ್ರಕೃತಿ ಜನ್ಯ ಉತ್ಪನ್ನಗಳನ್ನು ಭಕ್ಷಿಸಲು ಯತ್ನಿಸುವುದೋ, ತನ್ನದೇ ಆದ ಒಂದು ವಿಶಿಷ್ಟ ರೀತಿಯ ಜೀವನ ವಿಧಾನದಿಂದ ಜೀವಿಸುವ ಆಶಯವನ್ನು ಹೊಂದಿ ಆ ರೀತಿಯಲ್ಲಿಯೆ ಜೀವನ ನಡೆಸುವುದೋ ಆ ಜನಕ್ಕೆ ಆದಿವಾಸಿ ಅಥವಾ ಬುಡಕಟ್ಟು ಜನ ಎಂದು ಕರೆಯಬಹುದು. ನಾವುಗಳು ಬೆಟ್ಟಗಳ ಭವ್ಯತೆ ಮತ್ತು ಸ್ವಾತಂತ್ರ್ಯಗಳ ಮಧ್ಯ ಬಹುಸಂಖ್ಯೆಯ ಬುಡಕಟ್ಟಿನವರನ್ನು ಅವರ ಪಾಡಿಗೆ ಅವರನ್ನು ಬಿಟ್ಟು ಬಿಟ್ಟರೆ ಅಥವಾ ಕೊನೆಯ ಪಕ್ಷ ಅವರನ್ನು ಒಂದು ಮಿತಿಯಲ್ಲಾದರೂ ಅವರಷ್ಟಕ್ಕೆ ಅವರನ್ನು ಬಿಟ್ಟು ಬಿಟ್ಟಿದ್ದರೆ, ಅವರು ಸಂತೋಷದಿಂದ ಇರುತ್ತಿದ್ದರು ಎನ್ನಿಸುತ್ತದೆ. ಅವರಿಗೆ ಒಂದೆಡೆ ಬದುಕಿನ ಸೌಲಭ್ಯಗಳ ಕೊರತೆ ಮತ್ತೊಂದೆಡೆ ಮುಕ್ತವಾಗಿ ಯಾರು ಮಧ್ಯ ಪ್ರದೇಶಿಸದಂತೆ ಸ್ವತಂತ್ರ್ಯವಾಗಿ ಬದುಕುವ ಯೋಗ್ಯತೆಯೂ ಇದೆ. ದಟ್ಟ ಅರಣ್ಯಗಳ ಭಾಗಗಳಿಂದ ಸುತ್ತುವರೆ ಪ್ರದೇಶಗಳಲ್ಲಿ ಆಡಳಿತ ನಿರ್ವಹರಣೆಯು ಕಷ್ಟಕರವಾದದ್ದು ಮತ್ತು ಫಲಕಾರಿಯಲ್ಲದ್ದು ಎಂಬ ಕಾರಣಕ್ಕಾಗಿಯೂ ಮತ್ತು ರಾಜಕೀಯ ಉದ್ದೇಶದಿಂದ ಸ್ವಲ್ಪಮಟ್ಟಿಗೆ ಮತ್ತು ಭಾಗಶಃ ಬುಡಕಟ್ಟು ಜನರ ಅವರ ಪಾಡಿಗೆ ಅವರು ಉತ್ತಮವಾಗಿಯೂ ಸಂತೋಷದಿಂದಲೂ ಇರುತ್ತಾರೆಂಬ ವಿನಮ್ರ ದೃಷ್ಟಿಕೋನದಿಂದಲೂ ಬ್ರಿಟೀಷ್ ಸರಕಾರವು ಇಡೀ ಬುಡಕಟ್ಟು ಜನಾಂಗವನ್ನು ಅವರ ಪಾಡಿಗೆ ಅವರನ್ನು ಬಿಡುವ ನೀತಿಯ ಕಡೆಗೆ ಒಲವು ತೋರಿಸಿತ್ತು. ಆದರೆ ಭಾರತ ಸರ್ಕಾರವು ಆದಿವಾಸಿಗಳನ್ನು ಅವರಷ್ಟಕ್ಕೆ ಬಿಡಬೇಕು ಅಥವಾ ಅವರ ಜೀವನ ರೀತಿಯಲ್ಲಿ ಕೈ ಹಾಕಬಾರದು ಎಂಬ ನಿಲುವನ್ನು ಅಸಂದಿಗ್ಧವಾಗಿ ತಿರಸ್ಕರಿಸಿದೆ.

ನಿಜವಾದ ಸಮಸ್ಯೆಯೆಂದರೆ ಸಮಾಜವನ್ನು ಭಂಗಗೊಳಿಸಿ ಸಮಸ್ಯೆಗಳನ್ನು ಸೃಷ್ಟಿ ಮಾಡದೆ ಅಭಿವೃದ್ಧಿಯನ್ನು ಬಲಪಡಿಸುವುದು ಹೇಗೆ ಎಂಬವುದು ಸಾಂಸ್ಕೃತಿಕವಾಗಿ ಬೇಟೆಯಾಡುವ ಯುಗದ ಜನರನ್ನು ಯಾವ ಆಥಿಕ ವ್ಯವಸ್ಥೆಯಲ್ಲಿ ಎದುರು ಬದುರಾಗಿ ನಿಲ್ಲಿಸಲು ಸಾಧ್ಯವೋ ಇವು ಬುಡಕಟ್ಟು ಜನರ ಸಮಸ್ಯೆ ಮತ್ತು ಸವಾಲು. ಬುಡಕಟ್ಟುಗಳಿಗಾಗಿ ಸಂಘಟಿತವಾದ ಬಹಳಷ್ಟು ಸಮಾಜ ಸೇವೆಗಳು ಮತ್ತು ಕಲ್ಯಾಣ ಸೇವೆಗಳು ಮೂಲಭೂತವಾಗಿ ಪ್ರಯತ್ನಿಸಬೇಕಾದದ್ದು ಇದನ್ನು ಕುರಿತೆ ಇಂದು ಅಭಿವೃದ್ಧಿ ಎಂಬ ಪರಿಕಲ್ಪನೆಯನ್ನು ಸಂಕುಚಿತ ಅರ್ಥದಿಂದ ನೋಡಲಾಗುತ್ತದೆ. ಅರ್ಥಶಾಸ್ತ್ರಜ್ಞರ ಪ್ರಕಾರ ಹಣವೇ ಅಭಿವೃದ್ಧಿ. ಅದು ಯಾರ ಬಳಿ ಅಥವಾ ಯಾವ ವ್ಯವಸ್ಥೆಯ ಬಳಿಯೇ ಇರಲಿ ಅದನ್ನು ತಂದು ಎಲ್ಲಾ ಕಡೆಗೂ ಹಂಚುವ ಮೂಲಕ ಹಣದ ಉಪಯೋಗ ಎಲ್ಲರಿಗೂ ಆಗುವಂತೆ ಮಾಡುವುದು ಅಭಿವೃದ್ಧಿ ಎನ್ನಿಸುತ್ತದೆ. ಇಂತಹ ಅಭಿವೃದ್ಧಿಯನ್ನು ಬುಡಕಟ್ಟಿನವರ ಆರ್ಥಿಕತೆಯನ್ನು ವರ್ತಕರು, ಲೇವಾದೇವಿಗಾರರು, ಜಮೀನ್ದಾರರು ಮತ್ತು ಮದ್ಯ ಮಾರಾಟಗಾರರು ಹಾಳುಗೆಡವಿದರು. ಧರ್ಮ ಪ್ರಚಾರಕರು ಅವರ ಕಲೆ, ನೃತ್ಯ, ನೇಯ್ಗೆ ಅಲ್ಲದೆ ಅವರ ಇಡೀ ಸಂಸ್ಕೃತಿಯನ್ನು ನಾಶಗೊಳಿಸಿದರು. ಅಲ್ಲದೆ ಸರ್ಕಾರದ ಹಲವಾರು ಯೋಜನೆಗಳ ಮುಂಖಾಂತರ ದೊಡ್ಡ ದೊಡ್ಡ ಅಣೆಕಟ್ಟುಗಳ ನಿರ್ಮಾಣ, ವಿದೇಶಿ ಸ್ವರೂಪದ ರಸ್ತೆಯ ನಿರ್ಮಾಣ ಗಗನ ಚುಂಬಕ ಕಟ್ಟಡಗಳು ನಮ್ಮ ಅಭಿವೃದ್ಧಿಯ ಧ್ಯೋತಕಗಳಾಗಿ ಇಂದು ಕಾಡುತ್ತವೆ. ಇಂತಹ ದೊಡ್ಡ ಯೋಜನೆಗಳಿಗೆ ಆಗಿ ಉಳಿದ ಒಂದಿಷ್ಟು ಹಣವನ್ನು ಧನಸಹಾಯದ ಸ್ವರೂಪದಲ್ಲಿ ಬಡವರಿಗೆ, ಹಿಂದುಳಿದವರಿಗೆ, ದಲಿತರಿಗೆ ಹಾಗೂ ಬುಡಕಟ್ಟಿನವರಿಗೆ ಹಂಚುವ ಮೂಲಕ ಸಾಮಾಜಿಕ ನ್ಯಾಯವನ್ನು ನೀಡುವ ಸಾಂಪ್ರದಾಯಿಕ ಅಭಿವೃದ್ಧಿ ಚಿಂತನೆಯೂ ನೆಹರು ಕಾಲಿಂದ ಇಂದಿನತನಕ ನಡೆದುಕೊಂಡು ಬಂದಿದೆ. ಆದಿವಾಸಿಗಳ ಅಭಿವೃದ್ಧಿಯ ಕುರಿತು ನೆಹರೂರವರು ಮಾನವಶಾಸ್ತ್ರಜ್ಞರಂತೆ ಕಂಡುಬಂದರು. ಆದಿವಾಸಿಗಳನ್ನು ಅಭಿವೃದ್ಧಿಪಡಿಸಲೆಂದು ನಾವು ಒತ್ತಾಯದಿಂದ ಅವರ ಮೇಲೆ ಏನನ್ನು ಹೇರಕೂಡದು ಮತ್ತು ಸಂಗ್ರಹಾಲಯಗಳ ಸ್ಟೆಮನ್‌ಗಳ ರೀತಿಯಲ್ಲಿ ಅವರನ್ನು ಅವರಷ್ಟಕ್ಕೆ ಬಿಟ್ಟು ಬಿಡಬಾರದು ಅವರ ಅಭಿವೃದ್ಧಿಗೆ ಒಂದು ಸುವರ್ಣ ಮಾಧ್ಯಮ ಸೂತ್ರವನ್ನು ಕಂಡುಕೊಳ್ಳಬೇಕಿದೆ ಅಥವಾ ಕಲ್ಪಿಸಬೇಕಿದ ಎಂದು ಹಲವಾರಿ ಬಾರಿ ತಮ್ಮ ಭಾಷೆಣಗಳಲ್ಲಿ ಹೇಳಿದ್ದಾರೆ. ಬುಡಕಟ್ಟುಗಳ ಅಭಿವೃದ್ಧಿ ನೀತಿಯನ್ನು ರೂಪಿಸಲು ಅನೇಕ ಒಳನೋಟಗಳನ್ನು ನೀಡುತ್ತಾರಾದರೂ ಅಭಿವೃದ್ಧಿಯ ಜೊತೆಯಲ್ಲಿ ಬರುವ ಆಧುನಿಕತೆಯನ್ನು ನೆಹರೂ ನಿರಾಕರಿಸುತ್ತಾರೆ.

ನಮ್ಮ ದೇಶದ ಬುಡಕಟ್ಟುಗಳ ಅಭಿವೃದ್ಧಿಯಾಗಬೇಕಾದರೆ ಅಥವಾ ನಮ್ಮ ದೇಶ ಅಭಿವೃದ್ಧಿಯಾಗಬೇಕಾದರೆ ಯುರೋಪ್ ಮಾದರಿಯ ನೀತಿ ಬೇಕು. ಇಂತಹ ನೀತಿಯ ಜೊತೆಗೆ ಬರುವ ಆಧುನಿಕತೆಯಿಂದ ಭಾರತದ ವೈವಿಧ್ಯತೆಯು ನಾಶವಾಗಬಾರದು. ಆಧುನಿಕತೆಯಿಂದ ಅತಿಯಾದ ವ್ಯಮೋಹವಿದ್ದ ನೆಹರೂ ಬುಡಕಟ್ಟುಗಳ ಮುಖ್ಯಕ್ಕೆ ಬೆಣ್ಣೆ ಸವರುವ ಕೆಲಸವನ್ನು ಮಾಡಿದರೇನೋ ಎನ್ನಿಸುತ್ತದೆ. ಬುಡಕಟ್ಟುಗಳಿಗೆ ನಿಮ್ಮ ಹಾಡು, ನೃತ್ಯ, ಸಂಸ್ಕೃತಿಯನ್ನು ಉಳಿಸಿಕೊಳ್ಳುಬೇಕು. ನಗರದಲ್ಲಿರುವ ನಾಗರೀಕತೆಯಿಂದ ವಿಕಾರಗೊಂಡಿರುವ ಸಮುದಾಯಗಳಂತೆ ಆದಿವಾಸಿಗಳು ರೂಪಾಂತರಗೊಳ್ಳಬಾರದು. ಆಧುನಿಕತೆಯು ಆದಿವಾಸಿಗಳ ಜೀವನ ಕ್ರಮದ ಮೇಲೆ ಅನೇಕ ಕೆಟ್ಟ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ಹೇಳಿ ಆದಿವಾಸಿಗಳು ಅಭಿವೃದ್ಧಿ ಹೊಂದಬೇಕು. ಆದರೆ ಅವರ ಸಂಸ್ಕೃತಿ ಮತ್ತು ಪಾರಂಪರಿಕ ಮೌಲ್ಯಗಳು ಉಳಿಯಬೇಕು. ಆಗಲೇ ಉರುಳಿ ಬೀಳುವುದು ಎಂದು ಹೇಳುವ ಮೂಲಕ ಬೇವಿನ ಮರಕ್ಕೆ ನೇಣು ಹಾಕಿಕೊಂಡರೆ ಉರುಳು ಬೀಳಬಹುದು ಎನ್ನುವ ಸತ್ಯವನ್ನು ತಿಳಯದೆ ಬಹುದೊಡ್ಡ ವಿರೋಧಾಭಾಸವನ್ನು ವ್ಯಕ್ತಪಡಿಸುತ್ತಾರೆ.

ಆದಿವಾಸಿಗಳು ತಮ್ಮ ಸಂಸ್ಕೃತಿ, ನೃತ್ಯ ಮತ್ತು ಇತ್ಯಾದಿ ಕಲೆಗಳನ್ನು ಉಳಿಸಿಕೊಳ್ಳಬೇಕಾದರೆ ತಮ್ಮ ಪಾರಂಪರಿಕ ಉತ್ಪದನಾ ವ್ಯವಸ್ಥೆ ಮತ್ತು ಸಮುದಾಯಿಕ ಬದುಕನ್ನು ಹಾಗೆಯೇ ಉಳಿಸಿಕೊಂಡು ಹೋಗಬೇಕು. ಹಾಗೆಯೇ ಹಲವಾರು ಕಡೆ ನಾನು ಬುಡಕಟ್ಟು ನೆಲೆಗಳ ಗುಂಪುಗಳಲ್ಲಿ ಸಂಚರಿಸಿದ್ದೇನೆ. ವಿವಿಧ ರೀತಿಯ ನೃತ್ಯ, ಹಾಡು ಕುಣಿತ, ಕಲೆಯನ್ನು ನೋಡಿ ಸಂತೋಷ ಪಟ್ಟಿದ್ದೇನೆ. ಇದು ಹಾಳಾಗದಂತೆ ಹಾಗೆಯೇ ನೋಡಿಕೊಂಡು ಹೋಗಿ ಎಂದು ಹೇಳುತ್ತಾ, ಆದಿವಾಸಿಗಳ ಸಂಸ್ಕೃತಿಯನ್ನು ಕಾಪಾಡುವ ಪಾರಂಪರಿಕ ಉತ್ಪಾದನೆಗಳನ್ನು ಉತ್ಪಾದನಾ ಮೂಲಗಳನ್ನು ಗೌರವಿಸುವ, ಯಾವ ಆಧುನಿಕ ಆಯಾಮಗಳು ಇವರ ಮೇಲೆ ಅಡ್ಡ ಪರಿಣಾಮಗಳನ್ನು ಬೀರದಿರುವಂತೆ ಎಚ್ಚರವಹಿಸುವ ಒಂದು ರೀತಿಯ ರಕ್ಷಣಾತ್ಮಕ ಮನೋಭಾವ ಇವರ ಮಾತುಗಳಲ್ಲಿ ಅಡಗಿತ್ತೆನ್ನಿಸುತ್ತದೆ. ನೆಹರೂ ಅತ್ಯಂತ ಮಮಕಾರ, ಅನುಕಂಪದಿಂದ ಬುಡಕಟ್ಟು ಕುರಿತು ಮಾತಾಡಿದ್ದಾರೆ. ಆದರೆ ಬುಡಕಟ್ಟುಗಳಿಗೆ ಅದು ಬೇಕಾಗಿಯೂ ಇರಲಿಲ್ಲ. ಅವರ ಸಹಜ ಹಕ್ಕು ಬಾಧ್ಯತೆಗಳ ಕುರಿತು ಚಿಂತನೆ ದೂರವಾಗಿಯೇ ಇತ್ತು. ಬುಡಕಟ್ಟುಗಳ ಬದುಕಿನಲ್ಲಿ ಯಾವ ಮೂಲಭೂತ ಬದಲಾವಣೆಗಳನ್ನು ತರದೆ, ಅವರು ಅಖಂಡ ಭಾರತದ ಭಾಗವಾಗಿ ಬದುಕಬೇಕೆಂಬ ನೆಹರು ಅವರ ಆಶಯವೇ ಅಪ್ಪಟ ಊಳಿಗಮಾನ್ಯ ಪದ್ಧತಿ ಎನಿಸುತ್ತದೆ. ದುಡಿಯುವ ವರ್ಗಗಳ ಹಕ್ಕು ಬಾದ್ಯತೆಗಳನ್ನು ಕುರಿತು ಭಾರತದ ಆಡಳಿತ ವ್ಯವಸ್ಥೆ ಯಾವತ್ತೂ ಕುರುಡಾಗಿ ನೋಡುತ್ತಾ ಬಂದಿದೆ. ಒಂದು ಗಣರಾಜ್ಯವಾಗಿ ಜಾತ್ಯಾತೀತ ನೆಲೆಗಟ್ಟಿನಲ್ಲಿ ಹಕ್ಕುಗಳನ್ನು ರಕ್ಷಿಸುವ ಮತ್ತು ದುರ್ಬಲ ಸಮುದಾಯಗಳಿಗೆ ರಾಜಕೀಯಾರ್ಥಿಕ ಅವಕಾಶಗಳನ್ನು ಕಲ್ಪಿಸುವ ಆಶಯದಿಂದ ರೂಪುಗೊಂಡಿರುವ ಸಂವಿಧಾನಕ್ಕೆ ವ್ಯತಿರಿಕ್ತವಾಗಿ ಭಾರತದ ಶಕ್ತಿ ರಾಜಕಾರಣ ನಡೆದುಕೊಂಡು ಬಂದಿದೆ.

ಮತ್ತೊಂದು ಕಡೆ ನೆಹರೂ ರವರು ಬುಡಕಟ್ಟುಗಳ ಸಮುದಾಯದಲ್ಲಿ ನನ್ನ ಗಳೆಯರಿದ್ದಾರೆ. ನಾನು ಬಹಳಷ್ಟು ಬುಡಕಟ್ಟು ಸಮುದಾಯವಿರುವ ಕಡೆ ಹೋಗಿ ಬಂದಿದ್ದೇನೆ ಎಂದು ತಮ್ಮ ಉಪನ್ಯಾಸದಲ್ಲಿ ಹೇಳುತ್ತಾ ಅವರ ಸರ್ವೋತೋಮುಖ ಅಭಿವೃದ್ಧಿಯಾಗಬೇಕು ಎಂದು ಹೇಳುವ ಕಡೆ ತಮಗೆ ಅರಿವಿಲ್ಲದಂತೆ ಅಥವಾ ಇದ್ದೋ ಅವರನ್ನು ನಯನಾಜೂಕಾಗಿ ಅಲ್ಲಿಯೆ ಇರುವಂತೆ ನೋಡಿಕೊಳ್ಳುವುದು ಅವರ ಮಾತುಗಳಲ್ಲಿ ಕಂಡು ಬರುತ್ತದೆ. ಅದೆಂದರೆ ನಾನು ಇಂದು ಈ ಏಣಿ-ಶ್ರೇಣೀಕರಣವನ್ನು ಹೊಡೆದು ಹಾಕಬೇಕಿದೆ ಎನ್ನುತ್ತಾ, ನೀವು ವಾಸಿಸುತ್ತಿರುವ ಈ ಪ್ರದೇಶಗಳು ಸುಂದರವಾಗಿವೆ. ನೀವು ಎಲ್ಲೇ ವಾಸಿಸುತ್ತಿರಿ ನಿಮ್ಮದೇ ಆದ ರೀತಿಯಲ್ಲಿ ಬದುಕಿರಿ ನೀವು ಹೇಗೆ ಬದುಕಬೇಕೆಂಬುದನ್ನು ನೀವೇ ತೀರ್ಮಾನಿಸಿಕೊಳ್ಳಿರಿ. ಆದರೆ ನಿಮ್ಮ ಹಳೆಯ ಸಂಪ್ರದಾಯಗಳು ಚೆನ್ನಾಗಿವೆ ಅವು ಉಳಿಯಬೇಕೆನ್ನುವುದೇ ನಮ್ಮ ಆಶಯ ಎಂದು ಹೇಳಿ ಅವರು ಅಲ್ಲಿಯೇ ಇರುವಂತೆ ಆದೇಶಿಸಿದಂತಿತ್ತು. ಮೇಲ್ನೋಟಕ್ಕೆ ನೀವು ಶಿಕ್ಷಣ ಕಲಿಯಬೇಕು. ಮುಂದೆ ಬರಬೇಕು ಅಭಿವೃದ್ದಿಯಾಗಬೇಕು ಎಂದು ಸಾಂತ್ವಾನದ ಮಾತು ಬೇರೆ. ಹೀಗೆ ಬುಡಕಟ್ಟು ಜನರು ಅಭಿವೃದ್ದಿಯಾಗಬೇಕಾದರೆ ಅವರು ಸಮಾಜದ  ಮುಖ್ಯವಾಹಿನಿಗೆ ಬರಬೇಕು ಎನ್ನುವುದು ಒಂದು ಮಾತು. ಅವರು ಮೂಲ ನಿವಾಸದಲ್ಲೇ ಇದ್ದು ಅವರಿಗೆ ಬೇಕಾದ ರೀತಿಯ ಬದುಕನ್ನು ಅವರೇ ರೂಪಿಸಿಕೊಳ್ಳಬೇಕು ಎಂಬುದು ಮತ್ತೊಂದು ಮಾತು. ಈ ರೀತಿಯ ಮಾತುಗಳು ಬುಡಕಟ್ಟು ಜನರ ಬದುಕು ಹೇಗಿರಬೇಕು ಎಂಬುದುನ್ನು ಹೊರಗೆ ನಿಂತು ನಾವು ಹೇಗೆ ನೋಡುತ್ತೇವೆ ಎನ್ನುವುದೇ ಆಗಿದೆಯೇ ಹೊರತು ಅವರ ಬದುಕನ್ನು, ಅವರ ಮುಂದಿನ ಭವಿಷ್ಯವನ್ನು ಅವರು ಹೇಗೆ ರೂಪಿಸಿಕೊಳ್ಳಲು ಬಯಸುತ್ತಿದ್ದಾರೆ ಎಂದು ನೋಡುವ ವ್ಯವದಾನ, ದೃಷ್ಟಿಕೋನ ನಮ್ಮಲಿಲ್ಲ.

ಇವತ್ತು ಬುಡಕಟ್ಟು ಸಮುದಾಯದವರಿಗೆ ನಾವು ಆಮಿಷಗಳನ್ನು ಒಡ್ಡಿ ಗುಡ್ಡ, ಗಾಡು ಪ್ರದೇಶಗಳಲ್ಲಿ ವಾಸ ಮಾಡುವ ಇವರಿಗೆ ನೀವು ಕಾಡಲ್ಲಿಯೇ ಇರುತ್ತೀರಾ ಅಥವಾ ಹೊರಗೆ ಬಂದು ನಾವು ಕಟ್ಟಿಕೊಡುವ ಮನೆಗಳಲ್ಲಿ ಬದುಕುತ್ತೀರಾ ಎಂದು ಕೇಳಿದರೆ ಅವರು ಹೇಳುವುದು ನಾವು ಹೊರಗೆ ಬರುತ್ತೇವೆ ಎಂದು. ಏಕೆಂದರೆ ಆಧುನಿಕತೆಯ ವ್ಯಾಮೋಹದಿಂದ ಮನುಷ್ಯ ಗುಡ್ಡಗಾಡು ಜನಾಂಗಗಳ ಮತ್ತು ವನ್ಯಜೀವಿಗಳ ಭೂಮಿಯನ್ನು ಅಕ್ರಮಿಸಲು ಆರಂಭಿಸಲು, ಅದನ್ನು ತೀವ್ರ ಇಕ್ಕಟ್ಟಿನ ಪ್ರದೇಶಕ್ಕೆ ಸೀಮಿತಗೊಳಿಸಲು ಆರಂಭಿಸಿದ. ಶೇ. ೮೦ಕ್ಕೂ ಹೆಚ್ಚು ಇದ್ದ ಅರಣ್ಯ ಪ್ರದೇಶ ಶೇ. ೨೦ಕ್ಕೂ ಕೆಳಗೆ ಇಳಿದಿದೆ. ಹಿಂದೆ ಶೇ. ೮೦ರಷ್ಟಿದ್ದ ಕಾಡು ಪ್ರದೇಶಗಳಲ್ಲಿ ವಾಸಿಸಿಕೊಂಡಿದ್ದ ಬುಡಕಟ್ಟು ಮತ್ತು ವನ್ಯಜೀವಿಗಳು ಇಂದು ಶೇ. ೨೦ರಷ್ಟಿರುವ ತಮ್ಮ ವಾರಸುದಾರಿಕೆಯ ಕಾಡು ಪ್ರದೇಶ ಇಕ್ಕಟಿನಲ್ಲಿ ಬದುಕುವಂತಾಗಿದೆ. ಅಂತೆಯೇ ಕಾಡಿನಲ್ಲಿ ವಾಸ ಮಾಡುವ ಮೂಲಭೂತ ಹಕ್ಕುಗಳನ್ನು ಸರ್ಕಾರವು ಇಂದು ಕಸಿದುಕೊಂಡಿದೆ. ಮೊದಲಿನಂತೆ ಅವರು ಪ್ರಾಣಿಗಳನ್ನು ಬೇಟೆಯಾಡಬಹುದು. ಸರ್ಕಾರದ ಕೈವಾಡದಿಂದಲೇ ಬೇಕಾದರೆ ಒಂದು ವ್ಯವಸ್ಥೆ ಜಿಂಕೆ ಬೇಟೆಯಾಡಬಹುದು. ಆನೆಯ ದಂತ ಮತ್ತು ಶ್ರೀಗಂಧವನ್ನು ಮಾರಾಟ ಮಾಡಬಹುದು. ಆದರೆ, ಬುಡಕಟ್ಟಿನವರು ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸುವಂತಿಲ್ಲ. ಇವರು ಕಾಡಿನಲ್ಲಿ ಏನು ಮಾಡಿದರು ಶಿಕ್ಷಾರ್ಹ ಅಪರಾಧ. ಆದರೆ, ಅದೇ ಹಣ್ಣು-ಹಂಪಲು ಜೇನು, ಕಾಡಿನಲ್ಲಿ ವಾಸಿಸುವ ಹೆಣ್ಣುಗಳಿಗೆ ಮನಸೋತವರು ನಮ್ಮ ಊರಿನವರು. ಇದು ಶಿಕ್ಷಾರ್ಹ ಅಪರಾಧವಲ್ಲ. ಏಕೆಂದರೆ ಉಳ್ಳವರ ರೀತಿಯೇ ಹೀಗೆ.

ಇಂದು ಕಾಡಿನ ಎಲ್ಲಾ ಹಕ್ಕುಗಳನ್ನು ಸರ್ಕಾರ ಕಿತ್ತುಕೊಂಡು ಕಾಡಿನಲ್ಲಿ ಬದುಕುವುದು ಬಿಡುವುದು, ನಿಮ್ಮ ಅಭಿಪ್ರಾಯಕ್ಕೆ ಬಿಟ್ಟಿದ್ದು, ಎಂದು ಹೇಳಿದರೆ ‘ಕತ್ತುಹಿಸುಕಿ ಉಸಿರಾಡು’ ಎಂದಂತ್ತಾಗುತ್ತದೆಯಲ್ಲವೆ? ನಮ್ಮ ಸರ್ಕಾರದ ಅರಣ್ಯ ಕಾಯ್ದೆಗಳು ಬಂಡವಾಳ ನೀತಿಯ ಕರಾಳ ಮುಖದಂತೆ ಕಂಡುಬರುತ್ತವೆ. ಬಲತ್ಕಾರವಾಗಿ ನವ್ಯಜೀವಿ ಸಂರಕ್ಷಣೆಯ ಈ ಕಾಯ್ದೆಯ ನೆಪದಲ್ಲಿ ಕಾಡಿನಿಂದ ಅವರನ್ನು ನಾಡಿನ ಕಡೆಗೆ ಓಡಿಸಿ ನಾಡಿನಲ್ಲಿ ವಾಸಿಸದೇ ಪುನಃ ಕಾಡಿಗೂ ಮರಳದೇ ಅತಂತ್ರ ಸ್ಥಿತಿಯನ್ನು ಇಂದು ನಮ್ಮ ಅದೆಷ್ಟೋ ಬುಡಕಟ್ಟು ಸಮುದಾಯಗಳು ಅನುಭವಿಸುತ್ತಿವೆ. ಮತ್ತೊಂದ ಕಡೆ ನಮ್ಮ ನಗರ ವ್ಯವಸ್ಥೆಯು ಸಂಶೋಧನಾ ಕಾರ್ಯಕ್ರಮಗಳಿಗೆ ಪ್ರವಾಸೋದ್ಯಮ ಅಭಿವೃದ್ಧಿಯ ನೆಪದಲ್ಲಿ ಮಾರುಕಟ್ಟೆ ಶಕ್ತಿಗಳಿಗೆ ಕಾಡನ್ನು ತೆರೆದಿಟ್ಟು ಸೂರೆ ಮಾಡುವ ಹುನ್ನಾರ ಇದು. ಹಾಗಾಗಿ ಕಾಯ್ದೆಗಳಿಂದ ಅರಣ್ಯ ರಕ್ಷಣೆ ಸಾಧ್ಯವಿಲ್ಲ ಗುಡ್ಡ-ಗಾಡು ಜನಾಂಗದವರೇ ಕಾಡಿನ ನಿಜ ಕಾವಲುಗಾರರು. ಅವರು ಹಿಂದಕ್ಕೂ ಕಾಡನ್ನು ರಕ್ಷಿಸಿ, ಪೋಷಣೆ ಮಾಡುತ್ತಾ ಬಂದವರು. ಅವರ ಕೈಗೆ ಅರಣ್ಯ ರಕ್ಷಣೆಯ ಕೆಲಸವನ್ನು ಬಿಟ್ಟುಕೊಡಿ ಆಗೆನೋ, ಊರಿನವರ ಗತಿಯನ್ನು ಈ ಹಿನ್ನೆಲೆಯಲ್ಲಿ ಅವರ ಅಭಿವೃದ್ಧಿ ಅವರಿಂದಲೇ ಸಾಧ್ಯ ನಾವು ಮಾಡುತ್ತೇವೆ ಎಂದರಾಗುವುದಿಲ್ಲ.

ಹಿಂದಕ್ಕೆ ಬುಡಕಟ್ಟು ಸಮುದಾಯದಲ್ಲಿ ಹುಟ್ಟಿದ ಬೇಡನ ಮಗ ಏಕಲವ್ಯ ನಾಡಿನವರ ಕಿರುಕುಳವನ್ನು ಅನುಭವಿಸುತ್ತಲೇ ಕಾಡನ್ನು ಕಾಡಿನಲ್ಲಿಯ ವನ್ಯಜೀವಿಗಳನ್ನು ಕಾಡು ಜನರನ್ನು ರಕ್ಷಣೆ ಮಾಡುವ ಕೆಲಸವನ್ನು ಬಹು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ. ಆದರೆ, ಒಂದು ವ್ಯವಸ್ಥೆ ವ್ಯಾಪಾರಸ್ಥ ಶೆಟ್ಟಿಗಳಿಗೆ ಕಾಡನ್ನು ಮಾರಿಕೊಂಡಿರುವ ಸಂಗತಿ. ಶೆಟ್ಟಿಯು ಕಾಡನ್ನು ಕಡಿಸುತ್ತಿರುವಾಗ ಏಕಲವ್ಯವನು ತಡೆಯುತ್ತಾನೆ. ಆಗ ಊರಿನ ರಾಜರು ಕಾಡನ್ನು ನಮಗೆ ಮಾರಾಟ ಮಾಡಿದ್ದಾರೆ. ಇದರಿಂದ ಅವರ ಬೊಕ್ಕಸ ತುಂಬುತ್ತದೆ ನನಗೂ ಒಳ್ಳೆಯ ಲಾಭವಾಗುತ್ತದೆ ಎಂದು ಹೇಳುವ ಮಾತು ನೋಡಿದಾಗ ಅಂದಿನಿಂದ ಇಂದಿನ ತನಕವೂ ಒಂದು ವ್ಯವಸ್ಥೆ ತಮ್ಮ ಬೊಕ್ಕಸವನ್ನು ತುಂಬಿಸಿಕೊಳ್ಳುತ್ತಲೇ ಬಂದು ಬುಡಕಟ್ಟು ಸಮುದಾಯಕ್ಕೆ ನೆಲೆ ಇಲ್ಲದಂತೆ ಮಾಡಿ ಇಂದು ಬುಡಕಟ್ಟುಗಳ ಅಭಿವೃದ್ಧಿ ಎನ್ನುವ ನಾಟಕವಾಡುತ್ತಾರೆ. ಬುಡಕಟ್ಟನ್ನು ಅಭಿವೃದ್ಧಿಗೊಳಿಸಬೇಕೆನ್ನುವ ಆಲೋಚನೆಗಳು ತೆಗೆದುಕೊಳ್ಳುವುದು ಕೂಡ ಬುಡಕಟ್ಟನ್ನು ಸಾಂಸ್ಕೃತಿಕ ಹಿಂಬೀಳುವಿಕೆ ಹಾಗೂ ಸಾಂಸ್ಕೃತಿಕ ಕೀಳರಿಮೆ ಎಂದು ಗ್ರಹಿಸುವುದರ ಮೂಲಕ ಈ ರೀತಿ ರೂಪಗೊಂಡ ಮಾರ್ಗಗಳು ಬುಡಕಟ್ಟನ್ನು ಅನುಕಂಪ ಹಾಗೂ ಋಣಭಾರದ ದೃಷ್ಟಿಕೋನದಿಂದ ನೋಡಿದಂತಾಗಿ ಅವರ ಆತ್ಮವಿಶ್ವಾಸ ಮತ್ತು ಧಾರ್ಮಿಕ ಜಗತ್ತಿನ ದೈವದ ಬಂಧುತ್ವದೊಳಗೆ ಅಲೌಕಿಕ ಜ್ಞಾನಿಯ ನೆಲೆಗಳನ್ನು ಧ್ಯಾನಿಸಿ ಸೃಷ್ಠಿಸಿಕೊಂಡರೆ ಬುಡಕಟ್ಟು ಜಗತ್ತು ಕಾಡಿನ ನೈಸರ್ಗಿಕ ಜೀವಕೋಶಗಳು ಹಾಗೂ ಪರಂಪರೆಯ ಸ್ಮೃತಿ ಬಂಧಗಳ ಬಾಯ್ದೆರೆ ಕೃಷಿಯ ಮೂಲಕ ಚಲನಶೀಲವಾಗಿ ಸೃಷ್ಟಿಗೊಂಡಿರುತ್ತದೆ. ಆಗ ಯಾವುದೇ ಮಾನದಂಡಗಳು ಕೂಡ ಹೇಗಿರಬೇಕು ಎನ್ನುವುದು ಅವಶ್ಯಕವಾಗುತ್ತದೆ. ಕಾಡು-ಮೇಡುಗಳ ನಡುವೆ ಬಹು ಆಸಕ್ತಿಯಿಂದ ಸ್ವಚ್ಚಂದವಾಗಿ ಬದುಕುತ್ತಿದ್ದ ಇವರ ಅಸ್ತಿತ್ವಕ್ಕೆ ವಸಾಹತು ಶಾಹಿ ಆರಂಭವಾದಾಗಿನಿಂದ ಇಂದಿನವರೆಗೂ ಸಂಚಕಾರ ಬರುತ್ತಿದೆ. ಕಾಡಿನ ನಾಶ ಬುಡಕಟ್ಟುಗಳನ್ನು ತಲ್ಲಣಗೊಳಿಸಿದೆ. ಕಾಡನ್ನೇ ನಂಬಿ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಮೈಗೂಡಿಸಿಕೊಂಡು ಅಲೆಮಾರಿಗಳಾಗಿ ಬದುಕುತ್ತಿದ್ದ ಬುಡಕಟ್ಟುಗಳು ಇಂದು ನಿರ್ಗತಿಕರು, ನಿರ್ವಸತಿಗಾರರು ಆಗುತ್ತಿರುವುದು ದುರದೃಷ್ಟಕರ ಸಂಗತಿ. ಅಂದಾಕ್ಷಣ ಪ್ರಗತಿ ಅಥವಾ ಅಭಿವೃದ್ಧಿಯೇ ಬೇಡವೆಂದಲ್ಲ, ಆದರೆ, ಕಾಡನ್ನೇ ನಂಬಿ ಬದುಕುತ್ತಿದ್ದ ಬುಡಕಟ್ಟುಗಳು ಇಂದು ಉದರ ಪೋಷಣೆ ಅನಿವಾರ್ಯವಾಗಿ ನಾಗರಿಕ ಸಂಪರ್ಕದಲ್ಲಿ ಬರಬೇಕಾಗಿದೆ. ನಾಗರೀಕ ಸಂಪರ್ಕದ ಹೊಡೆತದಿಂದ ಬುಡಕಟ್ಟು ಕುಟುಂಬಗಳು ತತ್ತರಿಸುತ್ತಿವೆ. ಕುಲಕಸುಬು ಸಂಪ್ರದಾಯಗಳ ಬಗ್ಗೆ ಅಚಲವಾದ ವಿಶ್ವಾಸವಿಟ್ಟಿದ್ದ ಬುಡಕಟ್ಟುಗಳು ಔಪಚಾರಿಕ ಶಿಕ್ಷಣದ ಅರೆ ಪ್ರಜ್ಞೆಯ ಅಟ್ಟಹಾಸದಿಂದ ನೌಕರಿ ಇತ್ಯಾದಿ ಆಸೆ ಆಮಿಷಗಳಿಗೆ ಬಲಿಯಾಗಿ ತಮ್ಮ ಸಂಪ್ರದಾಯಕ ಬದುಕಿಗೆ ತಿಲಾಂಜಲಿಯನ್ನು ಇಟ್ಟಿದೆ. ಇವರು ತಮ್ಮ ಮೂಲದ ಸಂಸ್ಕೃತಿಯನ್ನು ಬಿಟ್ಟು ತಮ್ಮದಲ್ಲದ ಬೇರೆಯವರ ಸಂಸ್ಕೃತಿಯಿಂದ ಬಂದ ಕೆಲವು ಒಂದು ಉನ್ನತಸ್ಥಾನವನ್ನು ಪಡೆದ ತಕ್ಷಣ ಸತ್ಯನಾರಾಯಣ ಪೂಜೆ, ರಾಘವೇಂದ್ರ ಸ್ವಾಮಿ ಪೂಜೆ, ನಾಗರೀಕ ದುಬಾರಿ ದೇವರುಗಳಿಗೆ ಹರಕೆ ಹೊರುವುದು, ಮುಡಿ ಕೊಡುವುದು, ಜೊತೆಗೆ ನಾವು ಬುಡಕಟ್ಟು ಸಮುದಾಯದವರು ಎಂದು ಹೇಳಿದರೆ ನಮಗೆಲ್ಲಿ ಕುಂದು ಉಂಟಾಗುತ್ತದೆಯೋ ಎಂದು ತಮ್ಮನ್ನು ತಾವು ಬುಡಕಟ್ಟಿಗೆ ಸೇರಿದವರು ಎಂದು ಗುರುತಿಸಿಕೊಳ್ಳದೇ ಮೇಲ್‌ಸ್ಥರದವರ ಜೊತೆಗೆ ಅವರಂತೆಯೇ ಆಚರಣೆ, ಸಂಪ್ರದಾಯಗಳನ್ನು ರೂಢಿಸಿಕೊಳ್ಳಲು ಮುಂದಾಗುತ್ತಿದ್ದಾರೆ.

ನಾನು ಹೇಳಲು ಹೊರಟಿರುವುದು ಇಷ್ಟೇ ಬುಡಕಟ್ಟು ಸಮುದಾಯಗಳಿಗೆ ಸೇರಿದವರು ಯಾರೇ ಆಗಲೀ ಅರ್ಥಿಕವಾಗಿ ಶೈಕ್ಷಣಿಕವಾಗಿ ಅಭಿವೃದ್ಧಿಯನ್ನು ಪಡೆದಿದ್ದಾರೋ ಅವರು ನಾಗರಿಕ ಪ್ರತಿಷ್ಠೆಗಳಿಗೆ ಒಳಗಾಗದೆ ಆ ಸಮುದಾಯದ ಇತರರಿಗಾಗಿ ಶಾಲೆಗಳನ್ನೋ ವಸತಿ ನಿಲಯಗಳನ್ನೋ, ಗಂಜಿ ಕೇಂದ್ರಗಳನ್ನೋ ಅಥವಾ ಇಂತಿಷ್ಟು ವಿದ್ಯಾರ್ಥಿಗಳಿಗೆಂದು ಶಿಕ್ಷಣದ ವ್ಯವಸ್ಥೆಯನ್ನು ಕಲ್ಪಿಸುತ್ತಾ ಹೋದರೆ ಬುಡಕಟ್ಟು ಸಮುದಾಯವು ಇನ್ನಷ್ಟು ಅಭಿವೃದ್ಧಿ ಹೊಂದಲು ಸಾಧ್ಯ. ನಮ್ಮ ದೇಶ ಬುಡಕಟ್ಟು ಸಮುದಾಯಗಳನ್ನು ನಾವು ದುಡಿಯುವವರು ಕೂಲಿಕಾರರು ಎಂದು ಪರಿಗಣಿಸಿದ್ದೇವೆಯೇ ವಿನಃ ಅವರು ಕೂಡ ಉತ್ಪಾದಕರು ಎಂದು ನೋಡಲೇ ಇಲ್ಲ. ಅವರ ಉತ್ಪಾದನಾ ಚಟುವಟಿಕೆಗಳು ನಿರ್ಲಕ್ಷಿಸಿದಲ್ಲದೇ ಆಧುನಿಕ ಅಭಿವೃದ್ಧಿ ಪರಂಪರೆಯಲ್ಲಿ ಅವರು ಒಂದು ರೀತಿಯ ಭಾರ ಎಂದು ತಿಳಿಯುವುದು ಸರಿಯಲ್ಲ. ನಮ್ಮ ಸ್ವಾತಂತ್ರ್ಯೋತ್ತರ ಆಡಳಿತವು ಒಂದು ಉತ್ಪಾದನಾ ಕ್ಷೇತ್ರ ಎಂದು ಪರಿಗಣಿಸಿತ್ತು. ಆದರೆ, ಅದನ್ನು ಸಾವಿರಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಅದರೊಳಗಿನ ಬುಡಕಟ್ಟು ಸಮುದಾಯಗಳನ್ನು ಅರಣ್ಯಕ್ಕೆ ಮಾರಕ ಎಂದು ತಿಳಿದು ಅವರನ್ನು ಅರಣ್ಯದಿಂದ ಓಡಿಸುವ ಪ್ರಯತ್ನ ಎಲ್ಲೆಲ್ಲೂ ನಡೆಯಿತು. ಸರ್ಕಾರಿ ಒಡೆತನದ ಅರಣ್ಯ ಇಲಾಖೆ ಅದರೊಳಗೆ ನೌಕರ ಶಾಹಿಯನ್ನು ಹುಟ್ಟುಹಾಕಿತು. ಈ ನೌಕರಿಶಾಹಿ ಭೂ ಮಾಲೀಕರು ಬಂಡವಾಳ ಶಾಹಿಗಳ ಪರವಾಗಿದ್ದ ಕಾರಣ, ಕಳೆದ ಸುಮಾರು ವರ್ಷಗಳಿಂದ ಅರ್ಧದಷ್ಟು ಅರಣ್ಯವನ್ನು ನಾವು ಕಳೆದುಕೊಂಡೆವು. ಅರಣ್ಯದ ಪಾಲಕರು ಅದರ ಉತ್ಪಾದಕರೂ ಆಗಿದ್ದ ಗಿರಿಜನರನ್ನು ಕಡೆಗಣಿಸಿದ್ದೇ ಅರಣ್ಯ ನಾಶಕ್ಕೆ ಕಾರಣವಾಯ್ತು. ಇಂತಹ ಅಧಿಕಾರಶಾಹಿ ನೀತಿಗಳಿಂದ ನಾವು ಕಳೆದುಕೊಂಡಿದ್ದು, ಕೇವಲ ಅರಣ್ಯವನ್ನಲ್ಲ. ಆ ಅರಣ್ಯವನ್ನು ಕುರಿತಾದ ಒಂದು ಜ್ಞಾನ ಪರಂಪರೆಯನ್ನು.

ನಮ್ಮ ಕಾಡಿನಲ್ಲಿಯೇ ಕರಾವಳಿಯನ್ನು ಮೊದಲುಗೊಂಡ ದಟ್ಟವಾಗಿ ಹಬ್ಬಿರುವ ಅರಣ್ಯದಲ್ಲಿ ಅದೆಷ್ಟೋ ಔಷಧಿ ಸಸ್ಯಗಳಿದ್ದವು. ಅದೆಷ್ಟೋ ಬಗೆಯ ಜೀವರಾಶಿಗಳಿದ್ದು, ನಾವು ಸಣ್ಣವರಿದ್ದಾಗ ತಾಳೆ, ಮಾವು-ಬೇವುಗಳ ತೋಪು ಅಲ್ಲಿ ಕಣ್ಣಿಗೆ ಬೀಳುತ್ತಿದ್ದ ಮೊಲ, ನರಿ, ಕಾಡು ಹಂದಿ, ತೋಳ, ಚಿರತೆ, ಹಾವು, ನವಿಲುಗಳು ಹಕ್ಕಿಪಕ್ಷಿಗಳು ನಮ್ಮ ಕಣ್ಣಿಗೆ ಇಂದು ಬೀಳುತ್ತಿಲ್ಲ. ಇಂತಹ ಇಡೀ ಜೀವರಾಶಿಯ ಅರಿವಿದ್ದ ಗಿರಿಜನರನ್ನು ನಾವು ಸಕ್ರಿಯವಾಗಿ ಬಳಸಿಕೊಂಡಿದ್ದರೆ ಅರಣ್ಯವು ಉಳಿದಿರುತ್ತಿತ್ತು. ಆ ಜ್ಞಾನ ಸಂಪತ್ತು ಇರುತ್ತಿತ್ತು. ನಾವು ಇಂದು ಹೆಸರಿಗೆ ಮಾತ್ರ ಬುಡಕಟ್ಟು ಗಿರಿಜನರಿಗೆ ಅದು ಮಾಡಿದ್ದೇವೆ. ಇದು ಮಾಡಿದ್ದೇವೆ ಎಂದು ಹೇಳುತ್ತಾ ಗಿರಿಜನ ಪ್ರದೇಶಗಳಲ್ಲಿ ಆರೋಗ್ಯ ಕೇಂದ್ರಗಳನ್ನು ತೆರೆದಿದ್ದೇವೆ. ಎಷ್ಟೋ ಶಾಲೆಗಳನ್ನು ತೆರೆದಿದ್ದೇವೆ. ಹಾಸ್ಟೆಲ್‌ಗಳನ್ನು ತೆರೆದಿದ್ದೇವೆ ಎಂಬುದರ ಮೇಲೆ ನಮ್ಮ ಅಭಿವೃದ್ಧಿಯ ಕಾರ್ಯದ ಅಡಿ, ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುತ್ತಿದ್ದೇವೆ. ಆದರೆ, ಅವುಗಳು ಎಷ್ಟು ಬುಡಕಟ್ಟು ಜನರಿಗೆ ಉಪಯುಕ್ತವಾಗಿವೆ. ಅವರಿಗೆ ಸೇವೆ ಸಲ್ಲಿಸುತ್ತಿವೆ ಎನ್ನುವುದರ ಕಡೆಗೆ ಗಮನಹರಿಸುವುದಿಲ್ಲ. ವಸಾಹತು ಶಾಹಿ ನೆಲೆಯಲ್ಲಿಯೇ ಕಾರ್ಯನಿರ್ವಹಿಸಿ ಹಿತಾಸಕ್ತಿ ಸಮುದಾಯಗಳಷ್ಟೇ ನೆರವಾಗುತ್ತಿವೆ ಎನ್ನುವುದು ಗಮನಕ್ಕೆ ಬಂದರೂ ಬಾರದಂತೆ ನಮ್ಮ ವ್ಯವಸ್ಥೆ ನೋಡಿಕೊಳ್ಳುತ್ತದೆ. ಅಂದರೆ ನಮ್ಮ ವ್ಯವಸ್ಥೆಯು ಬುಡಕಟ್ಟು ಉಪಯೋಜನೆಯೆಂದೋ ಬುಡಕಟ್ಟು ಸಹಕಾರ ಯೋಜನೆಯೆಂದೋ ಒಂದಿಷ್ಟು ಕಾರ್ಯ ಯೋಜನೆಯನ್ನು ರೂಪಿಸಿ ಇಂತಿಷ್ಟು ಹಣವನ್ನು ಅದಕ್ಕೆ ತೊಡಗಿಸಿ ಕೈತೊಳೆದುಕೊಳ್ಳುತ್ತದೆ. ಅದರ ಪ್ರತಿಫಲ ಏನು? ಯಾರಿಗೆ ಎಷ್ಟು ಅದರ ಫಲ ದೊರೆಯಿತು. ಯಾರ ಕೈ ಸೇರಿತು ಎಂದು ಯೋಚನೆ ಮಾಡದೆ ಇದು ನಮ್ಮ ಸಾಧನೆಯೆಂದು ಬೀಗುತ್ತಿದೆ.

ನೆಹರುರವರಿಂದ ಇಂದಿನ ಸರ್ಕಾರದ ತನಕ ಇದೇ ನಡೆಯುತ್ತಿದೆ ಅಭಿವೃದ್ಧಿಯ ಹೆಸರಿನಲ್ಲಿ ನಾನು ಬುಡಕಟ್ಟುಗಳ ಜೊತೆ ವಾಸವಾಗಿದ್ದೇನೆ. ಅಲ್ಲಿ ನನ್ನ ಗೆಳೆಯರಿದ್ದರು ಎಂದು ನೆಹರು ಹೇಳಿದರೆ ಗ್ರಾಮಾಭಿವೃದ್ಧಿಯ ಹೆಸರಿನಲ್ಲಿ ಗ್ರಾಮವಾಸ್ತವ್ಯದ ನೆಪದಲ್ಲಿ ರಾಜಕಾರಣಿಗಳು ಗ್ರಾಮವಾಸ್ತವ್ಯ ಮಾಡುತ್ತಿದ್ದ ಗ್ರಾಮ, ಆ ಗ್ರಾಮದ ಇವರು ತಂಗುವ ಮನೆ ಮದುವಣಗಿತ್ತಿಯ ತರಹ ಶೃಂಗಾರಗೊಳ್ಳುತ್ತಿದ್ದವು. ಆದರೆ, ಇಂದು ಅದೇ ಹಳ್ಳಿ, ಆ ಮನೆ ರವ-ರವ ಎನಿಸುತ್ತಿವೆ. ಇನ್ನು ಇತರರ ಸರದಿ ನಾನು ರೈತರ ಹೆಸರಿನಲ್ಲಿ ಪ್ರಮಾಣ ವಚನ ಮಾಡಿದ್ದೇನೆ, ರೈತರನ್ನು ವಿದೇಶಕ್ಕೆ ಕಳಿಸುತ್ತೇನೆ ಎಂದರೆ ಅಭಿವೃದ್ಧಿಯಾದಂತಾಗುತ್ತಾದೆಯೇ? ಅಂದಿನಿಂದ ಇಂದಿನ ತನಕವು ಸತತವಾಗಿ ಒಂದಲ್ಲಾ ಒಂದು ರೀತಿಯಲ್ಲಿ ಅಭಿವೃದ್ಧಿ ಎನ್ನುವ ಹೆಸರಿನಲ್ಲಿ ವಸಾಹತು ಶಾಹಿ ಕೆಲಸ ಮಾಡುತ್ತಲೇ ಬಂದಿದೆ.

ಒಟ್ಟಾರೆ ಬುಡಕಟ್ಟು ಅಭಿವೃದ್ಧಿಯನ್ನು ಯಾರು ಮಾಡಬೇಕಿಲ್ಲ. ಅವರ ಪಾಡಿಗೆ ಅವರನ್ನು ಬದುಕಲು ಬಿಟ್ಟರೆ ಅವರು ತಾವಾಗಿಯೇ ಅಭಿವೃದ್ಧಿಯನ್ನು ಹೊಂದುತ್ತಾರೆ. ಅವರಿಗೆ ನಾಗರೀಕರಣದ ವಾಸನೆ ಬಡಿದಿದೆ, ಹೀಗೆ ನಾವು ನಮ್ಮ ಸಂಸ್ಕೃತಿ, ಕಲೆಯನ್ನು ಉಳಿಸಿಕೊಂಡು ಮುಂದುವರಿಯಬೇಕು ಎನ್ನುವುದು ತಿಳಿದಿದೆ. ಹಾಗೆಯೇ ಮಾಡುತ್ತಾರೆ. ಆದರೆ, ನಾವು ಅವರನ್ನು ತುಳಿಯುವ ಪ್ರಯತ್ನ ಮಾಡದಿದ್ದರೆ ಸಾಕು. ಅಭಿವೃದ್ಧಿಯ ಮಂತ್ರವನ್ನು ಪಠಿಸಿ ಮಂತ್ರ ಮುಗ್ಧರನ್ನಾಗಿಸುವ ಚಾಳಿಯನ್ನು ಇನ್ನಾದರೂ ಒಂದು ವ್ಯವಸ್ಥೆ ಮಾಡದೇ ಇದ್ದರೆ ಸಾಕು.

* * *