ಅನೇಕ ಶತಮಾನಗಳಿಂದ ಬೆಟ್ಟ-ಗುಡ್ಡ, ಮರುಳುಗಾಡು ಹಿಮಪ್ರದೇಶ ದ್ವೀಪಗಳಲ್ಲಿ ವಾಸಿಸುತ್ತಾ. ಬಹುಕಾಲದವರೆಗೆ ತಮ್ಮದೇ ಆದ ವಿಶಿಷ್ಟ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವ ಸಮುದಾಯಗಳೆಂದರೆ ಬುಡಕಟ್ಟು ಸಮುದಾಯಗಳು ಬುಡಕಟ್ಟು ಸಮುದಾಯಗಳ ಅಂದಿಗೂ, ಇಂದಿಗೂ  ಸಮಾನತವಾದಿ ಮತ್ತು  ಬಹುತೇಕ ಮಾತೃಪ್ರಧಾನ ಸಮಾಜಗಳಾಗಿಯೇ ಮುಂದುವರೆದಿವೆ. ಒಂದು ಪ್ರದೇಶದಲ್ಲಿ ವಾಸಿಸುವ ಜನ ಗುಂಪು, ಒಂದೇ ನಮೂನೆಯ ಉದ್ಯೋಗ ಅಥವಾ ಕಸುಬು ಮಾಡುವ ಸಮಾನಾಯವಾಗಿ ಒಂದೇ ಭಾಷೆಯಲ್ಲಿ ವ್ಯವಹರಿಸುವ ಸಮುದಾಯಗಳಾಗಿರುತ್ತವೆ ಇವರಲ್ಲಿ ಬಹುಪಾಲು ಬುಡಕಟ್ಟು ಸಮುದಾಯಗಳ ಒಂದೆಡೆ ನಿಂತು ಜೀವನ ನಿರ್ವಹಿಸುವವರಿಲ್ಲ. ಕೆಲ ಸಮುದಾಯಗಳು ಒಂದೆಡೆ ನೆಲೆಸಿರುವ ಗ್ರಾಮೀಣವಾಸಿ ಗಳಾದರೂ ಆವರು ಅಲೆಮರಿ ಪ್ರವೃತ್ತಿಯಿಂದ ಯಾವಾಗಬೇಕಾದರೂ ತಮ್ಮ ವಾಸದ ನೆಲೆಗಳನ್ನು ಬದಲಾಯಿಸುವವರಾಗಿದ್ದಾರೆ. ಬುಡಕಟ್ಟು ಸಮುದಾಯಗಳು  ಪಾರಂಪರಿಕವಾಗಿ ಕಾಡುಮೇಡುಗಳಲ್ಲಿ ಸ್ವಚ್ಚಂದವಾಗಿ ಸಂಚರಿಸುತ್ತಾ ಅಲ್ಲಿ ದೊರೆಯುವ ಗೆಡ್ಡೆ, ಗೆಣಸು, ಹಣ್ಣು ಹಂಪಲು, ಸೊಪ್ಪು-ಸದೆ ಜೇನು ಮುಂತಾದ ಸಹಜೋತ್ಪನ್ನಗಳನ್ನು ಸೇವಿಸುತ್ತಾ, ಅಗತ್ಯಕ್ಕೆ ತಕ್ಕಂತೆ ಕಾಡಿಗೆ ಪ್ರಾಣಿಗಳನ್ನು ಬೇಡೆಯಾಡುತ್ತಾ, ಜೀವನ ನಡೆಸುವವರು ಬಹುಮಟ್ಟಗೆ ಭವಿಷ್ಯದ ಕನಸ್ಸನ್ನು ಕಾಣದೆ, ಆದಕ್ಕಾಗಿ ಸಂಪತ್ತನ್ನು ಕೊಡಿಹಾಕದೆ ವರ್ತಮಾನದ ಜೀವನಕ್ಕಾಗಿ ಹೆಚ್ಚು ಶ್ರಮವಹಿಸುವ ಅಲ್ಪತೃಪ್ತ ಜನರಿವರು. ತಮ್ಮ ದೈವಗಳನ್ನು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಆರಾಧಿಸುತ್ತಾ ಹಬ್ಬ- ಹರಿದಿನಗಳನ್ನು ಆಚರಿಸುತ್ತಾ ಹಾಡಿ ಕುಣಿದು, ಕುಣಿಯುತ್ತ ತಮ್ಮ ಗುಂಪಿನ ನಾಯಕನ ಆದೇಶಗಳನ್ನು ಪ್ರಶ್ನಿಸದೇ ಪಾಲಿಸುತ್ತಾ, ವಿಶಿಷ್ಟವಾದ ಅಗತ್ಯ ಉಡುಪು, ಅಲಂಕಾರ ಕಲೆ, ಸಾಹಿತ್ಯಗಳನ್ನು ಸೃಷ್ಟಿಸುತ್ತಾ ಇತರೆ ಬುಡಕಟ್ಟು ಸಮುದಾಯಗಳೊಂದಿಗೆ  ಸೌಹಾರ್ದತೆ ಅನ್ಯೂನ್ಯತೆಯಿಂದ ಬದುಕುತ್ತಾ ತಮ್ಮದೇ ಆದ ನ್ಯಾಯವ್ಯವಸ್ಥೆಯನ್ನು ಹೊಂದಿ ನಿಸರ್ಗ ಸಹಜವಾಗಿ ಬಾಳುವ ಮುಗ್ದ ಅನಕ್ಷರಸ್ಥ  ಅಮಾಯಕ ಸಮುದಾಯಗಳೆಂದರೆ ಈ ಬುಡಕಟ್ಟು ಸಮುದಾಯಗಳು.

ಕರ್ನಾಟಕದಲ್ಲಿ ವಾಸವಾಗಿರುವ ಬುಡಕಟ್ಟು ಸಮುದಾಯಗಳು ಪಾರಂಪರಿಕ ಕುಲಕಸುಬು ಹೊಂದಿದ್ದಾರೆ. ಬುಡಕಟ್ಟು ಸಮುದಾಯ ಆಹಾರ  ಸಂಗ್ರಹಣೆ (ಗೆಡ್ಡೆ ಗೆಣಸು, ಸೊಪ್ಪು ಸದೆ ಇತ್ಯಾದಿ) ಬೇಟೆಗಾರಿಕೆ (ಪ್ರಾಣಿ, ಪಕ್ಷಿ, ಜಲಚರ ಇತ್ಯಾದಿ) ಪಶು ಸಂಶೋಧನೆ, ಕೃಷಿ, ಕೂಲಿ ಹುಲ್ಲುಮಾರುವುದು, ಕುದುರೆ ಸಿಂಗಾರ, ಕಟ್ಟಿಗೆ ಕಡಿಯುವುದು, ಜೇನು ಸಂಗ್ರಹಣೆ, ಗಿಡಮೂಲಕೆಗಳ ಸಂಗ್ರಹ, ಅಪರೂಪದ ವಸ್ತುಗಳ ಮಾರಾಟ (ಸೂಜಿ, ದಬ್ಬಣ, ಪಿನ್ನು, ಕಸ್ತೂರಿ, ಗೋರಂಜನ, ಕರಿಮಣಿ, ಹಾಲುಮಣಿ, ನವಿಲು ತುಪ್ಪ, ಉಡದ ತುಪ್ಪ, ರುದ್ರಾಕ್ಷಿ, ಹುಲಿಯ ಉಗುರು, ಪೀಪಿ ಇತ್ಯಾದಿ) ಬಿದಿರು ಈ  ಚಲಿನಿಂದ ಬುಟ್ಟಿ, ಬೀಸಣಿಕೆ ಇತ್ಯಾದಿಗಳ ತಯಾರಿಕೆ, ಊರಿನಿಂದ ಹಗ್ಗ, ಮಣಿ ಇತ್ಯಾದಿ ತಯಾರಿಕೆ ಹೀಗೆ ಹತ್ತು ಹಲವಾರು ಪರಂಪರಾಗತ ಕಸುಬುಗಳನ್ನು ನಿರ್ವಹಿಸುತ್ತಿದ್ದ ಈ ಸಮುದಾಯಗಳು ಬದಲಾಗುತ್ತಿರುವ ಆಧುನಿಕ ವಿಜ್ಞಾನ, ತಂತ್ರಜ್ಞಾನ ಭರಾಟೆಯಲ್ಲಿ ದಿಕ್ಕು ಕಾಣದೆ ಕಂಗಾಲಾಗುತ್ತಿರುವುದು ಕಂಡುಬರುತ್ತದೆ.

ಆಧುನಿಕ ಕೈಗಾರಿಕೆಗಳು ಮುಖ್ಯವಾಗಿ ಭಾರತದ ಬುಡಕಟ್ಟು ಸಮುದಾಯಗಳ ಮೂಲ ಕಸುಬಿನ ಮೇಲೆ ಬೇರೆ ಬೇರೆ ಪರಿಣಾಮಗಳನ್ನು ಬೀರಿದೆ. ಬೃಹತ್ ಕೈಗಾರಿಕೆಗಳ ಆರ್ಥಿಕ ಪ್ರಗತಿಗೆ ಕಾರಣವಾಗಿರುವಂತೆ  ಬುಡಕಟ್ಟು ಸಮುದಾಯಗಳ ಹಿಂದುಳಿದಿರುವಿಕೆಗೂ ಕಾರಣವಾಗಿದೆ. ಆಧುನಿಕ ಬೃಹತ್ ಕೈಗಾರಿಕೆಗಳಿಗೆ ಉತ್ಪಾದನೆ, ವಿನಿಮಯ ವಿತರಣೆಗಳಲ್ಲಿ ಲಾಭನಷ್ಟವೇ ಪ್ರಮುಖವಾದುದು. ಬುಡಕಟ್ಟು ಸಮುದಾಯಗಳಿಗೆ ವ್ಯವಹಾರದ ಹೊರತಾಗಿಯೂ ಸಂಸ್ಕೃತಿಕ ಬದುಕು ಮುಖ್ಯವಾಗಿರುತ್ತದೆ. ಈ ದೇಶದಲ್ಲಿ ಬುದ್ದಶಕ್ತಿಗೆ ಮಾತ್ರ ಪ್ರಾಮುಖ್ಯತೆಯನ್ನು ನೀಡಿದರೇ ಹೊರತು ದೈಹಿಕ ಶಕ್ತಿಗೆ ನೀಡಲಿಲ್ಲ. ಇಲ್ಲಿಯ ಸಾಮಾಜಿಕ ಚರಿತ್ರೆಯನ್ನು ಗಮನಿಸಿದರೆ ನಮಗೆ ಗೊತ್ತಾಗುವುದೇನೆಂದರೆ ಯಾವ ವ್ಯಕ್ತಿ ಯಾವ ಕಸುಬನ್ನು ಮಾಡುತ್ತಾನೆ ಆ ಕಸಬಿಗೆ ಸಮಾಜದಲ್ಲಿ ಯಾವ ಮಾನ್ಯತೆ ಇದೆ. ಎಂಬುದರ ಮೇಲೆಯೇ ಸಮಾಜಿಕ ಮನ್ನಣೆಗಳು ದೊರೆಯುತ್ತವೆ.

ನಾಗರೀಕ ಸರಕಾರಗಳ ಧೋರಣೆಯಿಂದ ಅತ್ತಾ ಕಾಡೂ ಇಲ್ಲದೇ ಇತ್ತ ನಾಡಾಡಿಗಳೊಂದಿಗೆ ಅನನ್ಯತೆಯಿಲ್ಲವೆಂಬಂತೆ ಬುಡಕಟ್ಟು ಸಮುದಾಯಗಳು ತೀವ್ರ ಸಂಕಷ್ಟಕ್ಕೆ ಒಳಗಾದವು ಅದೆಷ್ಟೋ ಬುಡಕಟ್ಟು ಸಮುದಾಯಗಳು ತಮ್ಮ ಮೂಲ ಪಾರಂಪರಿಕ ಕಸಬುಗಳನ್ನು ಕಳೆದುಕೊಂಡವು. ಅರಣ್ಯದಿಂದ ಅರಣ್ಯ ಉತ್ಪಾದನೆಗಳನ್ನು ಸಂಗ್ರಹಿಸಲು ತಡೆಯನ್ನಂಟುಮಾಡಲಾಯಿತು. ದಟ್ಟ ಅರಣ್ಯ ಪ್ರದೇಶಗಳು ಬೃಹತ್ ಕೈಗಾರಿಕೆ, ಆನೆಕಟ್ಟುಗಳಿಂದಾಗಿ ಮಾಯವಾದವು. ಬೇಟೆಗಾರಿಕೆಯನ್ನು ಕಾನೂನು ಮೂಲಕ ನಿಯಂತ್ರಿಸಲಾಯಿತು. ಪಶುಸಂಗೋಪನೆಗೆ ಅವಕಾಶವಿದ್ದರೂ ಸಹ ಪಶುಗಳಿಗೆ ಬೇಕಾಗುವ ಹುಲ್ಲು ಮೇಯಿಸಲು ಕಾದಿಟ್ಟ ಅರಣ್ಯದಲ್ಲಿ ಅವಕಾಶ ನೀಡಲಿಲ್ಲ. ಕೃಷಿ ಕೂಲಿಯಾಗಿ ಸಹ ಇವರ ಪಾಲಿಗೆ ಆಧುನಿಕ ಪರಿಕಣಗಳಿಂದಾಗಿ ಮರೀಚಿಕೆಯಾಗಿದೆ. ಇಡೀ ಕೃಷಿಯೇ ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿ ಅವಾಸನದ ಅಂಚಿಗೆ ಹೋಗಿರುವುದೂ ಒಂದು ಕಾರಣವಾಗಿದೆ. ಇದರಿಂದ ಕೃಷಿ ಅವಲಂಬಿತರು ತಮ್ಮ ಭೂಮಿಗಳನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಾಟಮಾಡಿ ನಗರ ಪ್ರದೇಶಗಳಿಗೆ ವಲಸೆ ಹೋಗಿರುವುದನ್ನು ಕಾಣಬಹುದಾಗಿದೆ.

ಬುಡಕಟ್ಟು ಸಮುದಾಯಗಳ ಗಿಡಮೂಲಿಕೆಗಳು ಇಂಗ್ಲೀಷ್ ಔಷಧಿಗಳಿಂದಾಗಿ ಮೂಲೆಗುಂಪಾಗಿವೆ.  ಬುಟ್ಟೆ, ಕುಕ್ಕೆ ಚಾಪೆ, ಇತ್ಯಾದಿಗಳ ಜಾಗದಲ್ಲಿ ಪ್ಲಾಸ್ಟಿಕ್ ವಸ್ತುಗಳು ಬಂದಿವೆ.  ಕಲಾತ್ಮಕವಸ್ತುಗಳ ಬದಲಿಯಾಗಿ ಕಾರ್ಖಾನೆಗಳ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ. ಇವತ್ತಿಗೂ ಕೆಲವರು ಬುಡಕಟ್ಟು ಸಮುದಾಯಗಳ ಕಲಾತ್ಮಕ ವಸ್ತುಗಳಿಗೆ ಬೇಡಿಕೆ ಇದ್ದರೂ ಇವುಗಳ ಲಾಭವೆಲ್ಲಾ ದಲ್ಲಾಳಿಗಳ ಪಾಲಾಗುತ್ತದೆ ನಾರಿನಿಂದ ತಯಾರಿಸುವ ಹಗ್ಗ, ಮಣಿಗಳಿಗೆ ಬೇಡಿಕೆ ಇಳಿದಿದೆ. ಕಾರ್ಖಾನೆಗಳು ತಯಾರಿಸುವ ಲೈಲಾನ್ ವಯರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಕೋತಿ, ಬಸವ, ಕರಡಿ, ಆಡಿಸುವವರನ್ನು ಇವತ್ತು ಯಾರು ನೋಡುವ ಸ್ಥಿತಿಯಲಿಲ್ಲ. ನೋಡಬೇಕೆನಿಸಿದರೂ ಅವುಗಳನ್ನು ಸಾಕದಂತೆ ನಿರ್ಬಂಧ ವಿಧಿಸಲಾಗಿದೆ. ನಮ್ಮ ದೊಂಬರಾಟವನ್ನು ಇಂದಿನ ಆಧುನಿಕ ಸರ್ಕಸ್ ಕಂಪನಿಗಳು ಮೂಲೆಗುಂಪಾಗಿಸಿವೆ.

ಮೇಲಿನ ವೈಪರೀತ್ಯಗಳ ಹಿನ್ನೆಲೆಯಲ್ಲಿ ಬುಡಕಟ್ಟು ಸಮುದಾಯಗಳ ಸಮಗ್ರ ಅಭಿವೃದ್ದಿಗೆ ಸರಕಾರಗಳು ಮಾಡಬಹುದಾದ ಕ್ರಮಗಳೆಂದರೆ.

. ಶಿಕ್ಷಣದ ಸೌಲಭ್ಯ

ಬುಡಕಟ್ಟು ಸಮುದಾಯಗಳ ನೆಲೆಸಿರುವ ಪ್ರದೇಶಗಳಲ್ಲಿ ಉಚಿತ ಹಾಗೂ ಸಾರ್ವತ್ರಿಕ ಶಿಕ್ಷಣವನ್ನು ಜಾರಿಗೊಳಿಸಬೇಕು. ಈ ಸಮುದಾಯಗಳ ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು. ಸರಕಾರಗಳ ಈವರೆಗಿನ ಪ್ರಯತ್ನ ಯಾವುದಕ್ಕೂ ಸಾಲದು. ಇದರಿಂದ ಈ ಸಮುದಾಯಗಳು ಶಿಕ್ಷಣದಿಂದ ದೂರವೇ ಉಳಿದಿದ್ದು ನಾನಾ ಅವಕಾಶಗಳಿಂದ ವಂಚಿತರಾಗಿರುವುದು ಕಂಡು ಬರುತ್ತದೆ. ಇವರಿಗೆ ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತದವರೆಗಿನ ಶಿಕ್ಷಣವನ್ನು ಬುಡಕಟ್ಟು ಸಮುದಾಯಗಳ ಮಾತೃಭಾಷೆಯಲ್ಲಿಯೇ ನೀಡುಬಂತಾಗಬೇಕು. ಹೀಗೆ ಮಾಡುವುದರಿಂದ ಅವರ ಭಾವನೆಗಳನ್ನು ಆರ್ಥಮಾಡಿಕೊಳ್ಳುವ ಅನುಕೂಲವಾಗುತ್ತದೆ ಏಕೆಂದರೆ ಭಾಷೆ ಮಾನವನ ಅಲೋಚನಾ ವಿಧಾನವನ್ನು ವ್ಯವಸ್ಥಿತವಾಗಿ ರೂಪಿಸುತ್ತದೆ. ಭಾಷೆಗೂ ಭಾವನೆಗೂ ಅವಿನಾ ಭಾವ ಸಂಬಂಧವಿದೆ. ಒಂದನ್ನು ಬಿಟ್ಟು ಮತ್ತೊಂದು ಇರಲಾರದು. ಅವರ ಭಾಷೆಯಲ್ಲಿಯೇ ಶಿಕ್ಷಣ ನೀಡುವುದರಿಂದ ಅವರ ಸಾಂಸ್ಕೃತಿಕ ಚಹರೆಯನ್ನು ಗುರುತಿಸಿಕೊಳ್ಳಲು ಸಹಕಾರಿಯಾಗುತ್ತದೆ ಸಾಂಸ್ಕೃತಿಕ ಚಹರೆ ತಿಳಿಯಲು ರಕ್ತ ಸಂಬಂಧ, ಜಾತಿ, ಧರ್ಮಗಳಿಗಿಂತಲೂ ಭಾಷೆ ಪ್ರಮುಖವಾದದ್ದು. ಹೆರಿಗೆ ಆಸ್ಪತ್ರೆಗಳನ್ನು ಸ್ಥಾಪಿಸುವ ಅವಶ್ಯಕತೆ ಇದೆ. ಅವರಿಗೆ ಶುದ್ದವಾದ ಕುಡಿಯುವ ನೀರಿನ ಪೂರೈಕೆಯ ಸೌಲಭ್ಯ ಒದಗಿಸಬೇಕು. ಬುಡಕಟ್ಟು ಜನತೆಯ ತೀರಾ ಸಾಮಾನ್ಯವಾದ ರೋಗ ರುಜೀನಗಳನ್ನು ನಿಯಂತ್ರಿಸಲು ನಿವಾರಕ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಬುಡಕಟ್ಟು ಸಮುದಾಯದ ಜನ ರಾಜಕೀಯವಾಗಿ ಅತ್ಯಂತ ಹಿಂದುಳಿದವರಾಗಿದ್ದಾರೆ. ವ್ಯವಹಾರಿಕವಾಗಿ ದೇಶದ ರಾಜಕೀಯ ಜೀವನದಲ್ಲಿ ಅವರು ನಿಜವಾಗಿ ಪಾಲುಗೊಳ್ಳುತ್ತಿಲ್ಲ. ಆ ಜನರು ರಾಷ್ಟ್ರದ ರಾಜಕೀಯ ಜೀವನದಲ್ಲಿ ಸಕ್ರಿಯ ಪಾತ್ರವನ್ನು ನಿರ್ವಹಿಸುವಂತೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. ತಮ್ಮ ಹಕ್ಕುಗಳ ಬಗ್ಗೆ ತಿಳಿವಳಿಕೆ ಮೂಡುವಂತಾಗಲು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಬುಡಕಟ್ಟು ಸಮುದಾಯದಲ್ಲಿ ಕೆಲವರು ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಹಾಗೂ ಹಿಂದುಳಿದವರೆಂದು ಗುರುತಿಸಿ ಅವರಿಗೆ ಪ್ರತ್ಯೇಕ ಮೀಸಲು ನೀತಿ ಜಾರಿಗೊಳಿಸಿದ್ದರೂ ಈ ಮೀಸಲಾತಿ ಕೆಲವೇ ಕೆಲವರ ಪಾಲಾಗಿದೆ. ಇದು ಎಲ್ಲರಿಗೂ ಸಮಾನವಾಗಿ ಸಿಗುವಂತೆ ಯೋಜನೆ ರೂಪಿಸಲು ಅವಶ್ಯಕತೆ ಇದೆ. ಬುಡಕಟ್ಟು ಸಮುದಾಯದ ಜನರಲ್ಲಿಯ ವಂಶಪಾರಂಪರಿಕವಾಗಿ ಪಡೆದಿರುವಂತಹ ಸ್ವಭಾವಗಳನ್ನು ವಿಕಾಸಗೊಳಿಸಬೇಕು. ಈ ಜನರಲ್ಲಿಯ ಕಲೆ ಸಂಗೀತದ ಉತ್ಸಾಹವನ್ನು ಇಮ್ಮಡಿಗೊಳಿಸಬೇಕು. ಅದಕ್ಕಾಗಿ ಸೂಕ್ತ ಪ್ರೋತ್ಸಾಹ ಒದಗಿಸಬೇಕು. ಅವರಲ್ಲಿರುವ ದೈರ್ಯ ಸಾಹಸದ ಗುಣಗಳನ್ನು ರಚನಾತ್ಮಕ ಉದ್ದೇಶಗಳಿಗೆ ಉಳಿಸುವಂತಾಗಬೇಕು. ಬುಡಕಟ್ಟು ಸಮುದಾಯದ ಸರ್ವತೋಮುಖ ಅಭಿವೃದ್ದಿಗಾಗಿ ಬಹುಮುಖಿ ಪ್ರಯತ್ನ ಆಗಬೇಕು ಎಂದು ಖ್ಯಾತ ಸಮಾಜ ಶಾಸ್ತ್ರಜ್ಞರಾದ ಡಿ. ಎನ್.ಮಜುಂದಾರ್ ಅಭಿಪ್ರಾಯ ಪಟ್ಟಿದ್ದಾರೆ.

ತಳ ಸಮುದಾಯಗಳಿಗೆ ಧೀರ್ಘ ಮತ್ತು ಅಲ್ಪಾವಧಿಯ ಬೃಹತ್ ಯೋಜನೆಗಳನ್ನು ರೂಪಿಸಬೇಕು ಪ್ರತ್ಯೇಕ ಆರ್ಥಿಕ ಪದ್ಧತಿಯಲ್ಲಿ ತಳ ಸಮುದಾಯಗಳ ಉತ್ಪಾದನಾ ಸಾಮರ್ಥ್ಯದ ವಿಸ್ತರಣೆಗೆ ಬೇಕಾದ ಸ್ಥಳೀಯ ಮತ್ತು ಜಾಗತೀಕ ಸಾಧ್ಯತೆಗಳನ್ನೆಲ್ಲಾ ಸಾರ್ವತ್ರಿಕವಾಗಿಯೇ ಏರ್ಪಡಿಸಬೇಕು. ಉತ್ಪಾದಕ ಸಮುದಾಯಗಳಾದ ಎಲ್ಲಾ ಕರಕುಶಲರೂ ಜಗತ್ತಿನ ಉದ್ದಕ್ಕೂ ಇದ್ದು ಸಾರ್ವತ್ರಿಕವಾದ ಅನೇಕ ಗುಣಗಳನ್ನು ಸಾಂಸ್ಕೃತಿಕವಾಗಿಯೂ ಅವರ ಆರ್ಥಿಕ ಜೀವನವನ್ನು ಉತ್ತಮಪಡಿಸುವ ಪ್ರಯತ್ನ ಮಾಡಬೇಕು. ಬುಡಕಟ್ಟು ಜನರು ಶಾಶ್ವತವಾಗಿ ಒಂದೆಡೆ ನೆಲೆಸಿ ವ್ಯವಸಾಯದಲ್ಲಿ ಮಗ್ನರಾಗುವಂತೆ ಪ್ರೇರೇಪಿಸಬೇಕು ಕೈಕಸಬುಗಳ ಪರಿಸ್ಥಿತಿಯನ್ನು ಸುಧಾರಿಸಲು ಸರಕಾರವು ಅವರಿಗೆ ತಾಂತ್ರಿಕ ಸಹಾಯ ಮತ್ತು ನೆರವನ್ನು ನೀಡಬೇಕು. ಅವರು ತಯಾರಿಸಿದ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಬೇಕು. ಕಾರ್ಮಿಕ ಕಾನೂನನ್ನು ಬುಡಕಟ್ಟು ಜನಾಂಗದವರ ಮಧ್ಯೆ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.

ಗುಡ್ಡ, ಗಾಡು ನಿವಾಸಿಗಳಾದ ಬುಡಕಟ್ಟು ಜನರ ಆರೋಗ್ಯದ ಮಟ್ಟವು ಅತ್ಯಂತವಾಗಿ ಕುಸಿದಿದ್ದು, ಅವರಿಗೆ ಸೂಕ್ತ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು. ಅವರ ಪ್ರದೇಶಗಳಲ್ಲಿ ಹೆಚ್ಚಿನ ಆಸ್ಪತ್ರೆಗಳನ್ನು ಔಷದಾಲಯಗಳನ್ನು, ಶಿಶುಚಿಕಿತ್ಸಾ ಕೇಂದ್ರಗಳನ್ನು ತೆರೆಯಬೇಕು.

ತಳಸಮುದಾಯಗಳ ಅಭಿವೃದ್ದಿಯನ್ನು ಸರಕಾರದ ನಕಲಿ ಕಾರ್ಯಕ್ರಮಗಳಿಂದ ಸಾಧಿಸಲು ಆದು. ನಿಜವಾಗಿಯೂ ಆಗಬೇಕಾದ ಅಭಿವೃದಿ ಯಾವುದೆಂದರೆ ಸಾಮಾಜಿಕ ವ್ಯವಸ್ಥೆ, ಜಾತಿ ಮತ್ತು ವರ್ಗವಿಲ್ಲದ ಸಮಾಜ ನಿರ್ಮಾಣವಾದರೆ ಅದೇ ಸಹಜ ಅಭಿವೃದ್ದಿ ಎನ್ನಬಹುದಾಗಿದೆ.

ತಳಸಮುದಾಯವಾಗಿರುವ ಬುಡಕಟ್ಟು ಸಮುದಾಯಗಳ ಆರ್ಥಿಕ ವ್ಯವಸ್ಥೆಯೇ ಭದ್ರ ಬುನಾದಿ, ತಳ ಭದ್ರವಿಲ್ಲದೆ ತುದಿಯನ್ನು ಮಾತ್ರವೇ ರಕ್ಷಿಸುವ ಧೋರಣೆ ಅಪಾಯಕಾರಿಯಾದುದು. ಈ ಹಿನ್ನೆಲೆಯಲ್ಲಿ ರಾಜ್ಯಾಧಿಕಾರವು ಸಮಷ್ಠಿ ಪರ್ಯಾಯಗಳನ್ನು ಜಾರಿಗೊಳಿಸಬೇಕು. ತಂತ್ರಜ್ಞಾನ, ವಿಜ್ಞಾನ, ಸಂಸ್ಕೃತಿಗಳ ನಡುವೆ ಅಂತರ್ ಸಂಬಂಧವನ್ನು ಬಲಗೊಳಿಸಬೇಕು. ಬಹುರೂಪಗಳ ನಡುವೆ ಅಡಗಿರುವ ಜಾತಿನಿಷ್ಠೆಯನ್ನು ತೊಲಗಿಸಲು ಇರುವ ಎಲ್ಲಾ ಸಂವಿಧಾನಿಕ ಸಂಹಿತೆಗಳನ್ನು ಮತ್ತಷ್ಟು ಬಲಪಡಿಸಬೇಕು. ಇಂತಹ ಎಚ್ಚರಗಳ ನಡುವೆಯೇ ನಮ್ಮ ದೇಶದ ಎಲ್ಲಾ ಬಗೆಯ ಕರಕುಶಲ ಸಮುದಾಯಗಳನ್ನು ಜಾಗತಿಕ ಮಟ್ಟದ ಉತ್ಪಾದನಾ ರೀತಿಗೆ ಒಳಪಡಿಸಬೇಕು ತಳ ಸಮುದಾಯಗಳ ಶ್ರಮ ಕೂಡ ವಿಶ್ವದ ಯಾವುದೇ ಕೌಶಲ್ಯ ಎದುರು ನಿಲ್ಲಬಲ್ಲದು ನಮ್ಮ ಬುಡಕಟ್ಟು ಸಮುದಾಯಗಳ ಕುಲಕಸಬುಗಳನ್ನು ಜಾಗತೀಕರಣಗೊಳಿಸುತ್ತ ತಮ್ಮ ಅಸ್ಥಿತ್ವವನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸುವಂತೆ ಪ್ರಯತ್ನಿಸುವ ಹೊಣೆಗಾರಿಕೆ ಸರಕಾರದ ಮೇಲಿದೆ.

ಎಲ್ಲಾ ಬುಡಕಟ್ಟುಗಳಲ್ಲಿ ಸಾಮಾನ್ಯವಾಗಿ ಆಚರಿಸುವ ಆಚರಣೆಗಳೆಂದರೆ ಹಿರಿಯರ ಹಬ್ಬ ಇದನ್ನು ಎಲ್ಲಾ ಬುಡಕಟ್ಟು ಜನಾಂಗದವರು ವಿಶೇಷವಾಗಿ ಆಚರಿಸುತ್ತಾರೆ. ಈ ಹಬ್ಬವನ್ನು ದೀಪಾವಳಿ ಮುಂಚೆ ಮಾಡಿತ್ತಾರೆ. ಇದು ಅಮವಾಸೆಯ ದಿನ ನಡೆಯುತ್ತದೆ. ಹಬ್ಬಗಳನ್ನು ಆಚರಿಸುದರ ಜೊತೆಗೆ ತಮ್ಮದೇ ಆದ ರೀತಿಯಲ್ಲಿ ಮಾಟ, ಮಂತ್ರ, ಪೂಜಾವಿಧಿಗಳನ್ನು ಮಾಡುತ್ತಾರೆ. ಅವುಗಳಿಗೆ ಸಂಬಂಧಿಸಿದಂತೆ ಕಾರ್ಯಗಳನ್ನು ನಡೆಸುತ್ತಾರೆ. ಈ ಸಂದರ್ಭದಲ್ಲಿ ಮಂತ್ರ ಮಾಡಿ ಕೆಲವು ಚಿತ್ರಗಳನ್ನ ಬರೆಯುತ್ತಾನೆ, ಸಮಸ್ಯೆಯನ್ನು ಹೊಂದಿರುವ ವ್ಯಕ್ತಿ ಮಂತ್ರವಾದಿಯ ಹತ್ತಿರ ಹೋಗುತ್ತಾನೆ ಅವರ ಸಮಸ್ಯೆಗಳನ್ನು ಅರಿತ ಮಂತ್ರವಾದಿ ಚಿತ್ರಗಳನ್ನೋ, ಮಣ್ಣಿನ ಗೊಂಬೆಗಳನ್ನೊ ಅಥವಾ ಇನ್ನಾವುದೋ ರೀತಿಯ ರಂಗೋಲಿಳನ್ನು ಬರೆಯುತ್ತಾನೆ. ಈ ಸಂದರ್ಭದಲ್ಲಿ ಕಂಡ ಚಿತ್ರಗಳು ಕಲಾಕೃತಿಗಳು ಬೇರೆ ಬೇರೆ ರೂಪವನ್ನು ಪಡೆದು ಅವನಿಂದ ಅಭಿವ್ಯಕ್ತಿಗೊಳ್ಳವವು ಈ ಮಾಟ, ಮಂತ್ರಗಳು ಗೌಪ್ಯ ಜಾಗಗಳಲ್ಲಿ ಮಾತ್ರ ನಡೆಯುವವು. ಬಾಲ್ಯವಿವಾಹ ಮರಣಗಳಿಗೆ ಸಂಬಂಧಪಟ್ಟ ಕೆಲವು ಆಚರಣೆಗಳಿವೆ. ತೊಟ್ಟಿಲು ಶಾಸ್ತ್ರ (ನಾಮಕರಣ) ದಲ್ಲಿ ಆಯಾ ಬುಡಕಟ್ಟು ಸಮುದಾಯ ಹುಟ್ಟಿದ ಮಗುವಿಗೆ ಬಣ್ಣದೋಕುಳಿ ಮಾಡಿ ದೃಷ್ಟಿ ತೆಗೆಯುವುದು, ಕುಲದೇವರ ಹೆಸರಿನಲ್ಲಿ ಆರತಿ ಮಾಡುವುದು, ಮುತ್ತೈದೆಯರ ಮಡಲಿಗೆ ಮಕ್ಕಳನ್ನು  ಹಾಕುವುದು, ಅದಕ್ಕೆ ಯಾವುದೇ ರೀತಿ ತೊಂದರೆಯಾಗದಂತೆ ಪೂಜೆ ಸಲ್ಲಿಸುವುದು ನಡೆಯುತ್ತದೆ. ಇದರಲ್ಲಿ ಹೆಣ್ಣು ಮಕ್ಕಳು ಹುಟ್ಟಿದರೆ ಅದರ ಜವಾಬ್ದಾರಿಯನ್ನು ಹಡೆದ ತಾಯಿಯ ಸೋದರ ಮಾವಂದಿರು ಜೋಪಾನ ಮಾಡುತ್ತಾರೆ. ಬುಡಕಟ್ಟು ಸಮುದಾಯದ ಹೆಣ್ಣುಮಕ್ಕಳು ಋತುಮತಿಯಾದ ಸಂದರ್ಭದಲ್ಲಿ ಸಾಮಾನ್ಯ ಸಂಪ್ರದಾಯಗಳು ಎಲ್ಲಾ ಕಡೆ ಕಂಡು ಬರುತ್ತವೆ. ಮಡಿ ಮೈಲಿಗೆ ಮುಂತಾದ ಆಚರಣೆಗಳನ್ನ ಇಟ್ಟುಕೊಂಡಿದ್ದು ಇವು ವೈಷ್ಣವಧರ್ಮದ ಪ್ರಭಾವದಿಂದ ಈ ರೀತಿಯ ಪದ್ದತಿ ಇಟ್ಟುಕೊಂಡಿರುವುದು ಕಂಡು ಬರುತ್ತದೆ. ಮೈನೆರೆ ಹೆಣ್ಣುಮಕ್ಕಳನ್ನು ಊರ ಮುತ್ತೈದೆಯರು ಹುಡುಗಿಗೆ ಸ್ನಾನ ಮಾಡಿಸಿ ತುಳಸಿ ಪೂಜೆಯ ನಂತರ ಅವಳನ್ನ ಅಲಂಕರಿಸಿ ದೇವರ ಎದುರು ಕೂಡಿಸುವುದು ಸಂಪ್ರದಾಯ. ಆ ಹೆಣ್ಣು ಧರಿಸುವ ಉಡುಗೆ ತೊಡುಗೆ, ಆಭರಣಗಳನ್ನು ತೊಡಿಸಿ ಅಲಂಕರಿಸುದುರು ಮೂಗಿಗೆ ಮೂಗುತಿ, ಕಿವಿಗೆ ಓಲೆ ಹಾಕುವುದು ಈ ಎಲ್ಲಾ ಸಂಪ್ರದಾಯಗಳು ಬುಡಕಟ್ಟು ಸಮುದಾಯಗಳಲ್ಲಿ ಕಂಡು ಬರುತ್ತವೆ.

ಮದುವೆಯ ಸಂದರ್ಭದಲ್ಲಿ ಹಲವು ರೀತಿಯ ಆಚರಣೆಗಳನ್ನು ನೋಡುತ್ತೇವೆ. ಹಸೆಯ ಚಿತ್ತಾರಗಳನ್ನು ವಿಶೇಷವಾಗಿ ಹಸಲರು, ದೀವರು, ಗೊಂಡರು, ಹಾಲಕ್ಕಿ ಒಕ್ಕಲಿಗರು, ಗೌಳಿಗರು, ಸಿದ್ದಿಯರಲ್ಲಿ ಕಾಣಬಹುದು. ಕೆಲವು ಬುಡಕಟ್ಟು  ಜನರು ಗೋಡೆಯ ಮೇಲೆ ಬರೆದರೆ, ಕೆಲವರು ನೆಲದ ಮೇಲೆ ಬರೆಯುವರು. ಸಾಮಾನ್ಯವಾಗಿ ಬುಡಕಟ್ಟು ಸಮುದಾಯದ ಜನ ನೈಸರ್ಗಿಕ ಆರಾದಕರು, ನೀರು, ಮಳೆ, ಬೆಳೆ, ಪ್ರಾಣಿಪಕ್ಷಿ, ಬೆಂಕಿಗೆ ಸಂಬಂಧಪಟ್ಟಪಟ್ಟೇ ಇರುತ್ತವೆ, ನವಿಲು ಕೆಲವರಿಗೆ ಪೂಜ್ಯನೀಯವಾದರೆ, ಕೆಲವರಿಗೆ ವರಾಹ ಪೂಜ್ಯನೀಯ. ಕೆಲವರಿಗೆ ಸಮೂಹದ ಏಳಿಗೆಯ ವ್ಯಕ್ತಿ ಸಾಂಸ್ಕೃತಿಕ ನಾಯಕನಾಗುತ್ತಾನೆ. ಮ್ಯಾಸನಾಯಕರಿಗೆ ಗಾದ್ರಿಪಾಲ ನಾಯಕ, ಕಾಡುಗೊಲ್ಲರಿಗೆ ಜಂಬಪ್ಟ, ಲಂಬಾಣಿಗಳಿಗೆ ಸೇವಾಲಾಲ್ ಪ್ರಮುಖರು. ತೀವ್ರ ಪವಿತ್ರವೆಂದು ನಂಬಿರುವ ಗಿಡಮರಗಳ, ಪ್ರಾಣಿಗಳ ಬಗ್ಗೆ ಅವರಿಗೆ ಗೌರವ ಭಾವನೆಯಿರುತ್ತದೆ. ಅವುಗಳ ವಂಶಾಭಿವೃದ್ದಿಯಾಗುವಂತೆ ನೋಡಿಕೊಳ್ಳುವುದು ಅವರ ಕರ್ತವ್ಯವೆಂಬುದು ಅವರ ಭಾವನೆ.

ಅವರ ಧಾರ್ಮಿಕ ಭಾವನೆಗಳ ಅತಿಮನುಷ್ಯ ಶಕ್ತಿಗಳ ಮೇಲೆ ಅಲಂಬಿಸದೆ. ನಿಸರ್ಗದೊಡನೆ ಮಾನವ ನಡೆಸುವ ಹೋರಾಟದೊಡನೆ ಸಂಬಂಧ ಪಡೆದಿರುತ್ತದೆ. ಬುಡಕಟ್ಟು ಸಮುದಾಯಗಳ ಆರಾಧನೆ ಮತ್ತು ಆಚರಣೆಗಳು ಕಲೆಗಳಾಗಿ ವಿಕಸನಹೊಂದಿ ಪೂರ್ಣಸ್ವರೂಪದ ಕಲೆಗಳಾಗಿರುವುದು. ಒಂದು ಬಗೆಯಾದರೆ, ಧರ್ಮ ಅಥವಾ ಪಂಥ ಪ್ರಸಾರಕ್ಕಾಗಿ ಹುಟ್ಟಿದ ಕಲೆಗಳು ನಂತರ ಧರ್ಮ ಪಂಥದ ಉದ್ದೇಶ ಮೀರಿ ಸಾರ್ವಜನಿಕ ಕಲೆಗಳಾದದ್ದು ಇನ್ನೊಂದು ಬಗೆ. ಭಾರತದ ಬಹುಸಂಖ್ಯಾತ ಜನಪದ ಕಲೆಗಳು ಕೆಳ ಜಾತಿಗಳಲ್ಲಿ ಕಂಡುಬರುತ್ತವೆ. ಪ್ರತಿಯೊಂದು ಸಮುದಾಯಕ್ಕೂ ತನ್ನದೇ ಆದ ಸಾಂಸ್ಕೃತಿಕಾಚರಣೆಗಳು, ನಂಬಿಕೆಗಳು, ನಿಷೇಧಗಳು ಕಲೆಗಳು ಇರುತ್ತವೆ. ಕೆಲವು ಪ್ರದರ್ಶನಗಳು ದೈವಾಚರಣೆಗೆ ಮಾತ್ರ ಸೀಮಿತಗೊಂಡಿರುತ್ತವೆ.

ಗೊರವರ ಕುಣಿತ : ಗೊರವರ ಕುಣಿತವನ್ನು ಮೈಲಾರಲಿಂಗನ ಭಕ್ತರು ಮಾಡುತ್ತಾರೆ ಇದು ಒಂದು ಹರಕೆಯ ಕುಣಿತವೆನ್ನಬಹುದು. ಅನಿಷ್ಠ ನಿವಾರಣೆಗೆ ಅಥವಾ ಕೇಳಿದ ಹರಕೆ ಕೈಗೊಡಿದರೆ ಇಂಥಹ ಹರಕೆಗಳನ್ನು ಮಾಡುತ್ತಾರೆ ಇದೊಂದು ಸಾಂಪ್ರದಾಯಿಕ ಕಲೆಯಾಗಿದ್ದು, ಹಲವು ವಿಶಿಷ್ಠತೆ ಪಡೆದಿವೆ. ಇಲ್ಲಿ ಗೊರಬಿ, ಗೊರವ ಇಬ್ಬರನ್ನು ಕಾಣಬಹುದು. ಒಂದೊಂದು ಭಕ್ತಿ ಪೂರ್ವಸೇವೆ.

ಮೋಹರಂ ಕುಣಿತ : ಅತ್ಯಂತ ಭಯ ಭಕ್ತಿಗಳಿಂದ ಮುಸ್ಲೀಂರೊಂದಿಗೆ, ಮುಸ್ಲೀಂಯೇತರೂ ಈ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ ಹಾಗೆ ನೋಡಿದರೆ ಮುಸ್ಲಿಂರಿಗೆ ಇದು ಶೋಕಾಚರಣೆಯಾಗಿದ್ದು. ಮುಸ್ಲೀಂಯೇತರ ಪ್ರಭಾವದಿಂದಾಗಿ ಇದೊಂದು ಉತ್ಸವವಾಗಿದೆ. ಉತ್ತರ ಕರ್ನಾಟಕದ ಬಹುತೇಕ ಹಳ್ಳಿಗಳಲ್ಲಿ ಮುಸ್ಲೀಂರೊಂದಿಗೆ ವಿಶೇಷವಾಗಿ ತಳಸಮುದಾಯಗಳು ಮೋಹಂ ಆಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವುದು ಕಂಡು ಬರುತ್ತದೆ. ಇದೊಂದು ಕೋಮು ಸೌಹಾರ್ದತೆಯ ಪ್ರತೀಕವಾಗಿದೆ.

ಹೋಳಿ ಕುಣಿತ : ಇದು ಭಾರತಾದ್ಯಂತ ಪ್ರಚಲಿತದಲ್ಲಿರುವ ಹಬ್ಬವಾಗಿ, ಉತ್ತರ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಜಾನಪದ ಕಲೆಯ ರೂಪವಾಗಿ ಒಂದು ಹೊಸ ಆಯೋಗವನ್ನು ಪಡೆದುಕೊಂಡಿದೆ. ಹೋಳಿ ಕುಣಿತವು ಸಾಂಪ್ರದಾಯಿಕ ಕಲೆಯಾಗಿದ್ದು, ಇದರಲ್ಲಿ ಎಲ್ಲಾ ವರ್ಗದ ಜನ ಭಾಗವಹಿಸುತ್ತಾರೆ.

ಕೋಲಾಟ : ಹಲವು ದೈವಾಚರಣೆ ಕಲೆಗಳಲ್ಲಿ ಕೋಲಾಟವು ಒಂದು. ಇದರಲ್ಲಿ ಹತ್ತಾರು ವಿಧಗಳಿವೆ. ಪೌರಾಣಿಕ ಇತಿಹಾಸ ದೈವ, ಸಮಾಜಿಕ ವಿಡಂಬನೆ, ಹೆಣ್ಣು, ಗಂಡಿನ ಪ್ರೇಮ, ಅಕ್ಷರ ಕ್ರಾಂತಿ, ಆರೋಗ್ಯ, ಪರಿಸರ ಜಾಗೃತಿ ಕಾರ್ಯಕ್ರಮ ಪ್ರಸಾರದ ಕೋಲಾಟದ ಹಾಡುಗಳನ್ನು ಕೋಲಾಟದ ಮೂಲಕ ಪ್ರದರ್ಶಿಸಲಾಗುತ್ತದೆ.

ಮೋಡಿ : ಇದು ಬಹುತೇಕ ಕರ್ನಾಟಕದ ಎಲ್ಲಾ ಕಡೆ ಕಂಡುಬರುತ್ತದೆ. ಕಲೆಯಲ್ಲಿ ಭಾಗವಹಿಸುವವರು ಕೆಳವರ್ಗದವರು ಇದರಲ್ಲಿ ಅಪಾರವಾದ ಧೈರ್ಯ, ಅಲೌಕಿಕ ಶಕ್ತಿಗಳನ್ನು ವಶಪಡಿಕೊಳ್ಳುವ ಶಕ್ತಿಯಿದೆ ಎಂದು ಹೇಳಲಾಗಿದೆ.

ಜೋಗತಿಮೇಳ : ಜೋಗತಿಯರು ‘ಜಗ’ ಹೊತ್ತುಕೊಂಡು ಕುಣಿಯುವವರಾಗಿದ್ದಾರೆ. ಜಗವೆಂದರೆ ಯಲ್ಲಮ್ಮ. ಹುಲಿಗೆಮ್ಮ. ಉಚ್ಚಂಗೆಮ್ಮ ಗಾಳೆಮ್ಮ ಮುಂತಾದ ಹೆಣ್ಣಿ ದೇವತೆಗಳ ಮೂರ್ತಿಗಳನ್ನಿಟ್ಟು ತುಂಬಿದ ಕೊಡ ಇಲ್ಲದೇ ಬುಟ್ಟಿಯನ್ನು ಹೊತ್ತ ಮೇಳದವರು ಜೋಗತಿ  ಸಂಪ್ರದಾಯಕ್ಕೆ ಸೇರಿದವರಾಗಿದ್ದಾರೆ. ಪುರುಷರು  ಮತ್ತು ಮಹಿಳೆಯರಿವರು ದೀಕ್ಷೆ ಪಡೆದ ಜೋಗತಿಯರಾಗಿದ್ದಾರೆ. ಮೇಳದಲ್ಲಿ ನಾಲ್ಕು ಐದು ಜನ ಇರುತ್ತಾರೆ. ಒಬ್ಬರು ಕುಣಿಯುತ್ತಿರುತ್ತಾರೆ ಉಳಿದವರು ಚೌಡಿಕೆ ಬಾರಿಸುತ್ತಾ ಹಾಡುತ್ತಿರುತ್ತಾರೆ ಇದು ಕೇವಲ ಮನರಂಜನೆಯಾಗಿರದೆ ಧಾರ್ಮಿಕವಾದ ದೈವಾಚರಣೆಯಾಗಿದೆ ಇದನ್ನು ಕರ್ನಾಟಕದಾದ್ಯಂತ ನೋಡಬಹುದಾಗಿದೆ.

ಒಟ್ಟಾರೆಯಾಗಿ ಬುಡಕಟ್ಟು ಸಮುದಾಯಗಳ ಆಚರಣೆಗಳು ಸಮಗ್ರವಾಗಿ ಪ್ರದರ್ಶನ ಕಲೆಯ ಮೂಲಕ ಅವರ ದೈವಗಳನ್ನು ಸ್ಮರಿಸುತ್ತಾ ಭಕ್ತಿಯನ್ನು ವ್ಯಕ್ತಿಪಡಿಸುತ್ತ ವರಣರಂಜಿತ ಬದುಕು ನಡೆಸುತ್ತಿರುವುದನ್ನು ಕಾಣಬಹುದಾಗಿದೆ.

* * *