ಪ್ರಪಂಚದಲ್ಲಿರುವ ಯಾವುದೇ ಒಂದು ಸಮುದಾಯ ಹಾಗೂ ವ್ಯಕ್ತಿಯ ಸ್ಥಾನಮಾನಗಳು ನಿರ್ಧಾರವಾಗುವುದು. ಆ ಸಮುದಾಯ ಇಲ್ಲವೆ ಆ ವ್ಯಕ್ತಿ ಸಮಾಜದಲ್ಲಿ ಯಾವ ರೀತಿಯಲ್ಲಿ ಆರ್ಥಿಕ ಸಂಪತ್ತನ್ನು ಹೊಂದಿದ್ದಾನೆ ಎಂಬುದರ ಮೇಲೆಯೇ ಅವಲಂಬಿಸಿರುತ್ತದೆ. ಈ ಹಿನ್ನೆಲೆಯಲ್ಲಿ ನಾವು ಭಾರತೀಯ ಸಮಾಜವನ್ನು ನೋಡುವುದಾದರೆ ಭಾರತೀಯ ಸಮಾಜ ಪ್ರಾಚೀನ ಕಾಲದಲ್ಲಿ ಒಂದು ರೀತಿಯಲ್ಲಿ ಬುಡಕಟ್ಟುಗಳಂತೆ ಪ್ರಾರಂಭವಾಗಿದೆ ಎಂಬುದು ನಿಜ ಸಂಗತಿಯಾದರು, ಬ್ರಿಟಿಷರು ಬರುವುದಕ್ಕಿಂತ ಪೂರ್ವದಲ್ಲಿ ನಾವು ನೋಡುವಂತೆ ಭಾರತದ ಅನೇಕ ಬುಡಕಟ್ಟು ಸಮುದಾಯಗಳು ಒಂದಲ್ಲಾ ಒಂದು ರೀತಿಯಲ್ಲಿ ಆರ್ಥಿಕತೆಯಿಂದ ವಂಚಿತರಾಗಿ ಬೇರೆಯವರ ಅಧೀನದಲ್ಲಿ ಇರುವುದಷ್ಟೇ ಅಲ್ಲ, ಭಾರತದಲ್ಲಿ ಮೇಲಸ್ತರವರು ನಮ್ಮ ಬುಡಕಟ್ಟು ಸಮುದಾಯಗಳ ಭೂಮಿಯನ್ನು ಆಕ್ರಮಿಸಿಕೊಂಡು ಅವರ ಭೂಮಿಯಲ್ಲಿಯೇ ಬುಡಕಟ್ಟುಗಳನ್ನು ಜೀತದಾಳುಗಳಾಗಿ ದುಡಿಸಿಕೊಳ್ಳುತ್ತಾ ಬಂದಿದ್ದ ಘಟನೆಗಳನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು.

ಭಾರತೀಯ ಸಮಾಜದಲ್ಲಿ ಮೇಲು ಕೀಳು ಎಂಬ ಸಾಮಾಜಿಕ ಏಣಿ ಶ್ರೇಣಿಯಿಂದಲ್ಲಿರುವಂತೆ ಆರ್ಥಿಕತೆಯಲ್ಲಿಯು ಶ್ರೀಮಂತ-ಬಡವ ಎಂಬ ಏಣಿಶ್ರೇಣಿಯಿರುವುದು ಸಹಜ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಬಂಡವಾಳ ಯಾವ ರೀತಿ ಕ್ರೋಢೀಕರಣವಾಗಿರುತ್ತದೆ ಎಂಬುದರ ಬಗ್ಗೆ ಯಾವುದನ್ನು ಮಾತಾಡದೆ ಕಣ್ಣು ಮುಂದೆ ಇರುವ ವ್ಯವಸ್ಥೆಯನ್ನು ಸಾರ್ವತ್ರಿಕವಾಗಿ ಒಪ್ಪಿಕೊಳ್ಳುತ್ತಾ ಬಂದಿದೆ. ಭಾರತೀಯ ಸಮಾಜ ಯಾವುದೇ ಒಂದು ನಿಶ್ಚಿತವಾದ ಭೂ ಪ್ರದೇಶವನ್ನು ತನ್ನದು ಅಥವಾ ನಮ್ಮದು ಎಂದುಕೊಂಡು ಒಂದು ಕಡೆ ನೆಲೆ ನಿಂತು ತನ್ನದೇ ಆದ ಆರ್ಥಿಕತೆಯನ್ನು ರೂಢಿಸಿಕೊಂಡು ಅನೇಕ ಬುಡಕಟ್ಟುಗಳೂ ಜೀವನವನ್ನು ಸಾಗಿಸುತ್ತಿದ್ದಾರೆ. ಇನ್ನೊಂದು ಕಡೆ ಒಂದು ಸ್ಥಳದಲ್ಲಿ ನೆಲೆ ನಿಲ್ಲದೆ ಅಲೆಮಾರಿಗಳಾಗಿ ಊರಿಂದ ವಲಸೆ ಹೋಗುತ್ತಾ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಿಕೊಳ್ಳದೆ ಅತ್ಯಂತ ಹೀನ ಸ್ಥಿತಿಯಲ್ಲಿ ಬದುಕುತ್ತಿರುವ ಬುಡಕಟ್ಟುಗಳನ್ನು ನೋಡಬಹುದು. ಕುಡುಬಿ ಸಮುದಾಯವು ಆರ್ಥಿಕ ಸಮಸ್ಯೆಯಾಗಿ ಯಾವಾಗ ಗೋವಾದಿಂದ ವಲಸೆ ಬಂದಿದ್ದಾರೋ ಆಗಿನಿಂದಲೇ ಬದುಕಿನಲ್ಲಿ ಆರ್ಥಿಕ ಸ್ಥಿತ್ಯಾಂತರಕ್ಕೆ ಒಳಗಾಗಿದ್ದಾರೆ. ಪೋರ್ಚ್‌ಗೀಸ್ ಮತಾಂತರದ ಒತ್ತಾಯಕ್ಕೆ ಸಿಲುಕಿದ ಕುಡುಬಿಗಳು ಕರ್ನಾಟಕಕ್ಕೆ ವಲಸೆ ಬಂದು ಬ್ರಾಹ್ಮಣರ ಮನೆಗಳಲ್ಲಿ ಹಾಗೂ ಅವರ ತೋಟದಲ್ಲಿ ಕೆಲಸದಾಳುಗಳಾಗಿ ಸೇರಿಸಿಕೊಂಡು ದಿನದ ಹೊಟ್ಟೆಪಾಡನ್ನು ನೀಗಿಸಿಕೊಳ್ಳುತ್ತಿದ್ದರು ನಂತರ ಕುಡುಬಿ ಹೆಸರಿಗೆ ತಕ್ಕಂತೆ ಕೃಷಿಯ ಅನುಭವವಿದ್ದುದರಿಂದ ಕಾಡಿನಲ್ಲಿ ಸೇರಿ ಬೆಟ್ಟದ ತುಟ್ಟತುದಿಯಿಂದ ನೀರು ಧುಮುಕುವಂತ ಸ್ಥಳಗಳ ಕೆಳಗೆ ಗಿಡವನ್ನು ಕಡಿದು ಕೃಷಿಯನ್ನು ಮಾಡಲು ಪ್ರಾರಂಭಿಸಿರುವುದನ್ನು ಗಮನಿಸಬಹುದು. ವಕ್ತ್ರಪ್ರಕಾರ ಪ್ರಾರಂಭದಲ್ಲಿ ಮೊದಲು ೪೦ ಕುಂಟೆಗೆ ಕೇವಲ ೪ ಚೀಲ ಭತ್ತವಾಗುತ್ತಿತ್ತು ಹಾಗೆ ಹೆಚ್ಚಾಗಿ ಕಾಡಿನಲ್ಲಿ ಸಿಗುವ ಹಣ್ಣು, ಹತ್ತಿ ಉದರಿದ ಎಲೆಯನ್ನು ಒಂದು ಕಡೆ ಕಲೆಹಾಕಿ ಅನಂತರ ಗದ್ದೆಯಲ್ಲಿ ಹಾಕಿ ಕೊಳೆಕಟ್ಟಿ ನಂತರ ಸಸಿಯನ್ನು ನೆಡುತ್ತಿದ್ದರು. ಆದರೂ ಇಳುವರಿ ಬರುತ್ತಿರಲಿಲ್ಲ ಎಂದು ತಮ್ಮ ಆರ್ಥಿಕ ಸ್ಥಿತಿಗತಿಯನ್ನು ಕುಡುಬಿ ಸಮುದಾಯದವರು ಹೇಳುತ್ತಾರೆ. ಕುಡುಬಿಯರು ಕಾರ್ಗಲ್‌ನ ಹತ್ತಿರ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣದ ಸಮಯದಲ್ಲಿ ಮತ್ತೆ ಮೇಘಾನೆ ಮತ್ತು ಬಚ್ಚೋಡಿ ಎಂಬ ಅರಣ್ಯವನ್ನು ಸೇರಿ ಹೊಸದಾಗಿ ಊರನ್ನು ನಿರ್ಮಿಸಿಕೊಂಡರು. ಈ ಹಿನ್ನೆಲೆಯಿಂದ ಕುಡುಬಿಯರು ಗದ್ದೆಯನ್ನು ಉಳಿಮೆ ಮಾಡುತ್ತಿದ್ದರು. ಸಹ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಎನ್ನುವ ದುಃಖ ಒಂದು ಕಡೆಯಾದರೆ, ಇನ್ನೊಂದು ಕಡೆ ಉಳುಮೆ ಮಾಡುವ ಗದ್ದೆಗಳ ಪಟ್ಟ ಸ್ವಂತ ಹೊಲ ಅಥವಾ ಗದ್ದೆಯ ಹಕ್ಕು ಪತ್ರ ದೊರೆಯುತ್ತಿಲ್ಲ ಎಂಬ ದುಃಖದ ನಡುವೆ ಕುಡುಬಿಯರು ಆರ್ಥಿಕವಾಗಿ ಅಭದ್ರತೆಯನ್ನು ಹೊಂದಿದ್ದಾರೆ.

ಈಗಲೂ ಕುಡುಬಿ ಸಮುದಾಯ ಕೃಷಿಯನ್ನೆ ತನ್ನ ಜೀವನದ ವೃತ್ತಿಯಾಗಿ ಮಾಡಿಕೊಂಡಿದೆ. ಇದರಿಂದಾಗಿ ಇವರ ಆರ್ಥಿಕತೆಗನ್ನು ನಿರ್ಧರಿಸುವ ಮಾನದಂತೆ ಕೃಷಿ ಬಿಟ್ಟರೆ ಬೇರೆ ಯಾವುದೇ ವೃತ್ತಿಯನ್ನು ಅವಲಂಬಿಸದೆ, ತಮ್ಮ ಪರಂಪರಗತವಾಗಿ ಬಂದ ಕೃಷಿಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದನ್ನು ನಾವು ಇಂದಿಗೂ ನೋಡಬಹುದಾಗಿದೆ. ಕುಡುಬಿ ಸಮುದಾಯ ಆದಿವಾಸಿ ಬುಡಕಟ್ಟಾಗಿದ್ದು, ಇತರೆ ಬುಡಕಟ್ಟುಗಳಿಗೆ ಹೋಲಿಸಿಕೊಂಡರೆ ಈ ಸಮುದಾಯದ ಜನರು ಆರ್ಥಿಕವಾಗಿ ಬೇರೆಯವರನ್ನು ಆಶ್ರಯಿಸದೆ ಸ್ವಂತಿಕೆಯಿಂದ ಜೀವನವನ್ನು ಸಾಗಿಸುತ್ತಿದ್ದಾರೆ. ಹಾಗೂ ಯಾವುದೇ ಮಳೆ, ಚಳಿ, ಬಿರುಗಾಳಿ, ಬಿಸಿಲಿಗೆ ಭಯಪಡೆದ ಕಾಡಿನ ಪ್ರಾಣಿಗಳನ್ನು ಸ್ನೇಹಿತರೆಂದು ಹೇಳುತ್ತಾ ಮೇಘಾನೆಯಿಂದ ೭ ಕಿ.ಮೀ. ಬೆಟ್ಟವನ್ನು ಹತ್ತಿ ಇಳಿಯುತ್ತಾರೆ. ನಿಜವಾಗಿಯು ಕಾಡು ಎಂದ ಕೂಡಲೇ ಎಂತವರಿಗೂ ಭಯವನ್ನು ಉಂಟು ಮಾಡುತ್ತದೆ. ಇಂತಹ ವಾತವಾರಣದಲ್ಲಿ ಮೇಘಾನೆ ಮತ್ತು ಬಚ್ಚೋಡಿಯಲ್ಲಿರುವ ಕುಡುಬಿಯರು ಪ್ರಸ್ತುತ ವ್ಯವಸ್ಥೆಯಲ್ಲಿ ಆರ್ಥಿಕತೆಯಿಂದ ಸುಧಾರಣೆಯ ಹಾದಿಯಲ್ಲಿದ್ದಾರೆ. ಬಚ್ಚೋಡಿಯಲ್ಲಿರುವವರು ಮಳೆಗಾಲದಲ್ಲಿ ಇದುವರೆಗೂ ಒಂದು ದೊಡ್ಡ ಹಳ್ಳವನ್ನು ದಾಟಬೇಕು. ಆ ಹಳ್ಳವನ್ನು ದಾಟಲು ಒಂದು ಸೇತುವೆಯನ್ನು ಕಾಡಿನಲ್ಲಿ ಸಿಗುವ ಬಿದರಿನ ಬೊಂಬುಗಳಿಂದ ದಬ್ಬೆಗಳನ್ನು ತಯಾರಿಸಿಕೊಂಡು ನಡೆದಾಡಲಿಕ್ಕೆ ಒಂದು ನೈಸರ್ಗಿಕ ಸೇತುವೆಯನ್ನು ಒಂದು ದಡದ ಮರದಿಂದ ಇನ್ನೊಂದು ದಡದ ಮರಕ್ಕೆ ಸೇರಿಸಿಕೊಂಡು ನಿರ್ಮಿಸಿಕೊಂಡಿದ್ದಾರೆ. ಮನೆಗಳಿಗೆ ಮತ್ತು ಕೃಷಿಗಾಗಿ ಬೇಕಾಗಿರುವ ಗೊಬ್ಬರ, ಬೀಜ ಮುಂತಾದವುಗಳನ್ನು ಈ ಸೇತುವೆಯ ಮೇಲೆ ತೆಗೆದುಕೊಂಡು ಹೋಗುತ್ತಾರೆ. ಈ ರೀತಿಯಾಗಿ ಜೀವನ ಮಾಡುವುದು ಅವರಿಗೆ ಶೋಚನೀಯವಾದ ಬದುಕಾಗಿದೆ. ಆದರೆ ಇವರಿಗೆ ಸೇತುವೆಯನ್ನು ಕಟ್ಟಿಕೊಡಬೇಕೆಂಬ ಆಸೆಯನ್ನು ಸರ್ಕಾರ ಹೊಂದಿಲ್ಲದೆ ಇರುವುದನ್ನು ಗಮನಿಸಬಹುದು. ಈ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರ ಬಂದರು ಚುನಾವಣೆಯಲ್ಲಿ ಹಣವನ್ನು ಕೊಟ್ಟು ಇಲ್ಲವೆ ಮನವೊಲಿಸಿ ಅವರಿಗೆ ಕುಡಿತದ ಆಮಿಷವನ್ನು ತೋರಿಸಿ (ಪಿತೃ ಪ್ರಧಾನ ವ್ಯವಸ್ಥೆಯಾದ್ದರಿಂದ ಪುರುಷರು ಹೇಳಿದಂತೆ ಸ್ತ್ರೀಯರು ಸಹ ನಡೆದುಕೊಳ್ಳುತ್ತಾರೆ) ಮತಗಳನ್ನು ಹಾಕಿಸಿಕೊಂಡು ಇಡೀ ಹಾಡಿಯ ಹಿರಿಯನಿಗೆ ಅನೇಕ ಆಶ್ವಾಸನೆಗಳನ್ನು ಕೊಟ್ಟು ಹೋದ ರಾಜಕಾರಣಿಗಳು ಮತ್ತೆ ಬರುವುದು ಚುನಾವಣೆಯ ಸಂದರ್ಭದಲ್ಲಿ ಮಾತ್ರ. ಇದರಿಂದಾಗಿ ಕುಡುಬಿಯರ ಯಾವುದೇ ಆಧುನಿಕ ಸೌಕರ್ಯಗಳಿಲ್ಲದೇ ಒಂದು ರೀತಿಯ ಪ್ರಾಣಿಗಳಂತೆ ಜೀವನವನ್ನು ಸಾಗಿಸಿಕೊಂಡು ಬರುತ್ತಿರುವುದನ್ನು ಕಾಣಬಹುದು. ಇದರಿಂದಾಗಿ ಕುಡುಬಿಯರು ಆರ್ಥಿಕವಾಗಿ ಅಭಿವೃದ್ಧಿಯಾಗುತ್ತಿಲ್ಲ ಎಂದು ಹೇಳಿದರೆ ಯಾವುದೇ ಅನುಮಾನವಿರಲಾರದು.

ಕೃಷಿ ಮತ್ತು ಕಸುಬು

ಕುಡುಬಿಯರು ಗೋವಾದಿಂದ ವಲಸೆ ಬಂದಾಗ ಕುಮ್ರಿ ಬೇಸಾಯವನ್ನು ಕಾಡಿನಲ್ಲಿ ಪ್ರಾರಂಭ ಮಾಡಿದ್ದರಿಂದ ಅವರಿಗೆ ಕೃಷಿಯ ಬಗ್ಗೆ ಹೆಚ್ಚು ತರಬೇತಿಯನ್ನು ಪಡೆದವರಂತೆ ತಿಳಿಯುತ್ತದೆ. ಕುಡುಬಿಯರು ಮೊದಲು ಒಂದು ಸ್ಥಳದಲ್ಲಿ ಗಿಡ ಕಡಿದು ಬೇಸಾಯವನ್ನು ಮಾಡಿ ಅನಂತರ ಆ ಸ್ಥಳವನ್ನು ಬಿಟ್ಟು ಬೇರೆಂದು ಸ್ಥಳಕ್ಕೆ ಹೋಗಿ ಮತ್ತೆ ಗಿಡ ಕಡಿದು ವ್ಯವಸಾಯವನ್ನು ಮಾಡುತ್ತಿದ್ದು. ಇದಕ್ಕೆ ಸ್ಥಳಾಂತರ ಬೇಸಾಯ ಎಂದು ಕರೆಯುತ್ತಿದ್ದು. ಈ ರೀತಿಯ ವ್ಯವಸಾಯವನ್ನು ಗುದ್ದಲಿಗಳು ಹಾಗು ಮರದಿಂದ ಮಾಡಿದ ಸಲಕರಣೆಗಳನ್ನು ಬಳಸಿಕೊಂಡು ಮಾಡುತ್ತಿದ್ದರು ಇದಕ್ಕೆ ಕುಮ್ರಿ ಬೇಸಾಯ ಪದ್ದತಿ ಎಂದು ಕರೆಯುತ್ತಿದ್ದು. ಕುಮ್ರಿಯರು ಬೆಟ್ಟದ ತಪ್ಪಲಿನಲ್ಲಿ ಅಥವಾ ಜರಿಗಳಲ್ಲಿ ಬೆಟ್ಟದ ತುದಿಯಿಂದ ನೀರು ಕೆಳಗೆ ಬೀಳುವ ಸ್ಥಳವನ್ನು ಗುರುತಿಸಿಕೊಂಡು ನೈಸರ್ಗಿಕವಾಗಿ ತಮ್ಮ ಪಾಡಿಗೆ ತಾವು ಹರಿಯುವ ನೀರಿಗೆ ಅನುಗುಣವಾಗಿ ವ್ಯವಸಾಯದ ಭೂಮಿಯನ್ನು ಗುರುತಿಸಿಕೊಳ್ಳುವ ಪದ್ದತಿ ಇವರಲ್ಲಿ ಇದೆ. ಇದರಿಂದಾಗಿ ಕುಡುಬಿಯರ ಭೂಮಿಯಲ್ಲಿ ಯಾವುದೇ ಬೆಳೆಯನ್ನು ನೆಟ್ಟರು ಆ ಬೆಳೆ ಸಲೀಸಾಗಿ ಬೆಳೆಯುತ್ತದೆ. ಆದರೆ ನಿರೀಕ್ಷಿಸಿದಷ್ಟು ಆದಾಯ ಸಿಗುವುದು ಕಡಿಮೆ. ಈ ರೀತಿಯ ವ್ಯವಸಾಯದಲ್ಲಿ ತರಕಾರಿಗಳು ಹಾಗೂ ಅಡಿಕೆ, ಹಣ್ಣಿನ ಸಸಿಗಳು ಚೆನ್ನಾಗಿ ಬೆಳೆಯುತ್ತವೆ.

ಕುಡುಬಿಯರು ತಮ್ಮ ಕೃಷಿಯಲ್ಲಿ ಬೆಳೆಯುವ ಬೆಳೆಗಳು

ಭತ್ತ, ರಾಗಿ, ಅಡಿಕೆ, ಗೋಡಂಬಿ, ಅನಾನಸ್, ವೀಳ್ಯೆದೆಲೆ, ಮೆಣಸು, ಪಪ್ಪಾಯಿ, ಸಪೋಟ, ಲಾವಂಚಿ, ಬದನೆಕಾಯಿ, ಟಮೋಟೋ, ಗೆಣಸು, ಕೋಸು, ಮೆಣಸಿನಕಾಯಿ, ಈರುಳ್ಳಿ, ಸೊಪ್ಪು, ದಂಟಿನ ಸೊಪ್ಪು, ಸಬ್ಬಸಿಗೆ ಸೊಪ್ಪು, ನುಗ್ಗೆಕಾಯಿ, ಹಾಗಲಕಾಯಿ, ಕುಂಬಳಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ಕುಡುಬಿ ಸಮುದಾಯ ಈ ಮೇಲೆ ತಿಳಿಸಿದಂತೆ ಅನೇಕ ಬೆಳೆಗಳನ್ನು ಬೆಳೆಯುತ್ತದೆ. ಆದರೆ ಈ ಸಮುದಾಯದ ಮುಖ್ಯವಾದ ಹಣದ ಬೆಳೆಯಾದ ಲಾವಂಚಿಯ ಬೆಳೆ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಆದ್ದರಿಂದ ಲಾವಂಚಿಯ ಎಣ್ಣೆಯನ್ನು ಯಾವ ರೀತಿ ತಯಾರಿಸುತ್ತಾರೆ ಹಾಗೂ ಲಾವಂಚಿ ಬೆಳೆಯನ್ನು ಯಾವ ರೀತಿಯಾಗಿ ಬೆಳೆಯುತ್ತಾರೆ ಎಂಬುದನ್ನು ಈ ಅಧ್ಯಾಯದಲ್ಲಿ ನೋಡಲಾಗಿದೆ. ಕುಡುಬಿ ಸಮುದಾಯದವರು ಲಾವಂಚಿ ಎಣ್ಣೆಯನ್ನು ತಯಾರಿಸುವ ರೀತಿ ನೋಡಿದರೆ ಒಂದು ರೀತಿಯಲ್ಲಿ ಯಾವುದೇ ಬುಡಕಟ್ಟಿನ ಸಮುದಾಯಗಳು ಈ ರೀತಿಯ ಎಣ್ಣೆಯನ್ನು ತಯಾರಿಸುವುದಿಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಇವರ ಎಣ್ಣೆಯನ್ನು ತಯಾರಿಸುವ ರೀತಿಯನ್ನು ಕ್ಷೇತ್ರ ಕಾರ್ಯದ ಸಮಯದಲ್ಲಿ ತಿಳಿಯಲಾಗಿದೆ. ಕುಡುಬಿಯರು ಲಾವಂಚಿಯ ಎಣ್ಣೆಯನ್ನು ಸಾಮಾನ್ಯವಾಗಿ ವರ್ಷದ ಜೂನ್ ತಿಂಗಳಿನಲ್ಲಿ ಭತ್ತದ ಸಸಿಯನ್ನು ಒಂದು ರೀತಿಯ ವಿಶಿಷ್ಟತೆಯಿಂದ ಕೂಡಿದ ಹುಲ್ಲಿನ ಬೇರನ್ನು ನೆಡುತ್ತಾರೆ.ನಂತರ ಬೆಳೆಗೆ ಸರ್ಕಾರಿ ಗೊಬ್ಬರ ತಂದು ಹಾಕುತ್ತಾರೆ. ಹುಲುಸಾಗಿ ಬೆಳೆದ ಹುಲ್ಲನ್ನು ಜನವರಿ ತಿಂಗಳಿನಲ್ಲಿ ನೆಲಕ್ಕೆ ಸಮನಾಗಿ ಹುಲ್ಲನ್ನು ಕೊಯ್ಯುತ್ತಾರೆ. ನಂತರ ಆ ಹುಲ್ಲನ್ನು ಮನೆಗಳಿಗೆ ಮುಚ್ಚಲು ಬಳಸುತ್ತಾರೆ. ಹುಲ್ಲನ್ನು ಕುಯ್ದಿ ನಂತರ ಭೂಮಿಯ ಒಳಗಡೆ ಬೇರನ್ನು ಅಗೆದು ಕೀಳುತ್ತಾರೆ. ಬೇರನ್ನು ಒಂದು ದೊಡ್ಡ ಡಬ್ಬಿಯಲ್ಲಿ ಹಾಕಿ ಬೇಯಿಸುತ್ತಾರೆ. ಬೆಂದ ಮೇಲೆ ಭಟ್ಟಿ ಇಳಿಸಿದಾಗ ಒಂದು ಕಡೆ ಎಣ್ಣೆ ಬರುತ್ತದೆ ಮತ್ತೊಂದು ಕಡೆ ನೀರು ಬರುತ್ತಿರುತ್ತದೆ. ಆದರೆ ಈ ಎಣ್ಣೆಯನ್ನು ತಯಾರಿಸಲು ಅದರಲ್ಲೂ ಎರಡು ಕೆಜಿ ಎಣ್ಣೆಯನ್ನು ತಯಾರಿಸಲು ಒಂದು ಟನ್ ಕಟ್ಟಿಗೆ ಬೇಕು. ಹಾಗೂ ೭೨ ಗಂಟೆಗಳ ಕಾಲ ಸತತವಾಗಿ ಒಂದೇ ಪ್ರಮಾಣದಲ್ಲಿ ಬೆಂಕಿಯು ಉರಿಯುತ್ತಿರಬೇಕು. ಹಾಗಾದಾಗ ಮಾತ್ರ ಎಣ್ಣೆಯನ್ನು ಪಡೆಯಲು ಸಾಧ್ಯ. ಈ ರೀತಿಯಾಗಿ ಎಣ್ಣೆಯನ್ನು ಪಡೆದ ಮೇಲೆ ಎಣ್ಣೆಯನ್ನು ಮಾರಾಟ ಮಾಡುತ್ತಾರೆ. ಆದರೆ ೪ ವರ್ಷಗಳ ಹಿಂದೆ ಬೇರೆಯವರು ಬಂದು ಕಡಿಮೆ ಬೆಲೆಗೆ ತೆಗೆದುಕೊಂಡು ಹೋಗಿ ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಎಂದು ವಾಕೃವಿನ ಅಭಿಪ್ರಾಯಗಳಿಂದ ತಿಳಿಯಲಾಗಿದೆ. ಅಲ್ಲದೆ ಕುಡುಬಿಯರು ಈ ಮಾರಾಟಗಾರರಿಂದ ಶೋಷಣೆಗೀಡಾಗಿದ್ದರು. ಈ ಹಿನ್ನೆಲೆಯನ್ನು ತಿಳಿದ ಮೇಘಾನೆಯ ಕುಡುಬಿಯರಲ್ಲಿ ಎರಡು ಜನ ಯುವಕರು ಜಾಗರೂಕರಾದರು. ಅಲ್ಲದೆ ಮೇಘಾನೆ ಮತ್ತು ಬಚ್ಚೋಡಿಯಲ್ಲಿ ಸಿಗುವ ಎಲ್ಲಾ ಎಣ್ಣೆಯನ್ನು ಸಂಗ್ರಹಿಸಿಕೊಂಡು ೩ ಸಾವಿರ ರೂಗಳಿಂದ ೩ ಸಾವಿರದ ಇನ್ನೂರು ರೂ.ಗಳವರೆಗೆ ಭಟ್ಕಳಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಪ್ರಾರಂಭಿಸಿದರು. ಈಗಲೂ ಅದೇ ರೀತಿಯ ಪದ್ದತಿ ಮುಂದುವರೆದಿದೆ. ಈ ರೀತಿಯಾಗಿ ತಯಾರಿಸಿದ ಲಾವಂಚಿ ಎಣ್ಣೆಯನ್ನು ಆಯುರ್ವೇದಕ್ಕೆ ಬಳಸಲಾಗುತ್ತದೆ. ಆದ್ದರಿಂದ ಕುಡುಬಿಯರು ಬದುಕನ್ನು ವೀಕ್ಷಿಸಿದಾಗ ಅವರಿಗೆ ಅರಿವೇ ಇಲ್ಲದಂತೆ ದೇಶಕ್ಕೆ ಸಮಾಜಕ್ಕೆ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಆದರೆ ಆಧುನಿಕರು, ಶಿಕ್ಷಣವಂತರು ಹಾಗೂ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ಬದುಕುವ ಜನರಿಗೆ ನಮ್ಮ ಆದಿವಾಸಿ ಹಾಗೂ ಅಲೆಮಾರಿ ಬದುಕು ಶ್ರೇಷ್ಟವಾದುದಾಗಿದೆ.

ಕುಡುಬಿ ಸಮುದಾಯದವರು ವ್ಯವಸಾಯಕ್ಕೆ ಸಾಮಾನ್ಯವಾಗಿ ಕೋಣಗಳನ್ನು ಬಳಸುತ್ತಾರೆ. ಹಾಗೂ ಭತ್ತದ ಸಸಿಗಳನ್ನು ನೆಡೆಸುವುದಕ್ಕಿಂತ ಮೊಸಲು ಹೆಚ್ಚಾಗಿ ಕೊಟ್ಟಿಗೆ ಗೊಬ್ಬರವನ್ನು ಹಾಕುತ್ತಾರೆ. ನಂತರ ಸರ್ಕಾರಿ ಗೊಬ್ಬರವನ್ನು ಹಾಕುತ್ತಾರೆ. ಸಾಮಾನ್ಯವಾಗಿ ಭತ್ತವು ಬಂದ ಮೇಲೆ ಕಟಾವು ಮಾಡಿ ಸಿವುಡು ಕಟ್ಟಿ ತಮ್ಮ ಮನೆಯ ಮುಂದೆ ಇರುವ ಕಣದ ಪಕ್ಕದಲ್ಲಿ, ಕಾಳಿನ ಜೊತೆಯಲ್ಲಿ ಬಣವೆಯನ್ನು ಹಾಕುತ್ತಾರೆ. ವ್ಯವಸಾಯದ ಎಲ್ಲಾ ಕೆಲಸವೂ ಮುಗಿದ ಮೇಲೆ ಕೋಣಗಳನ್ನು ಕಟ್ಟಿಕೊಂಡು ತುಳಿದು ಕಾಳುಗಳನ್ನು ಉದುರಿಸುತ್ತಾರೆ. ಕುಡುಬಿಯರು ಕಬ್ಬನ್ನು ಬೆಳೆಯುತ್ತಾರೆ. ಹಾಗೂ ಆ ಕಬ್ಬನ್ನು ಕಡಿದು ಸಾಧ್ಯವಾದಷ್ಟು ಬೆಟ್ಟದ ಕೆಳಗೆ ತಂದು ಪೇಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ. ಅಡಿಕೆ ಮತ್ತು ಲಾವಂಚಿಯನ್ನು ಬೆಳೆದಂತೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವುದಿಲ್ಲ. ರಾಗಿ ಇದು ಕಡುಬಿಯರ ಬೆಳೆಯಾದರೂ ಹೆಚ್ಚಿನ ಪ್ರಮಾಣದಲ್ಲಿ ಊಟಕ್ಕೆ ಬಳಸದೇ ಇರುವುದನ್ನು ಗಮನಿಸಬಹುದು. ಆದರೆ ಕುಡುಬಿಯರು ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿಯನ್ನು ಊಟಕ್ಕೆ ಬಳಸುವುದನ್ನು ಕ್ಷೇತ್ರ ಕಾರ್ಯದ ಸಮಯದಲ್ಲಿ ವೀಕ್ಷಿಸಲಾಗಿದೆ. ಇವರ ಊಟದ ಮುಖ್ಯವಾದ ಬೆಳೆ ಭತ್ತವಾಗಿದೆ.

ಅಡಿಗೆ, ಗೋಡಂಬಿ : ಕುಡುಬಿಯರು ಬೆಳೆಯುವ ಬೆಳೆಗಳಲ್ಲಿ ವಾಣಿಜ್ಯ ಬೆಳೆಯಾಗಿ ಸಮುದಾಯವನ್ನು ಉತ್ತಮವಾದ ಸ್ಥಿತಿಗೆ ತೆಗೆದುಕೊಂಡು ಹೋಗುವ ಅಥವಾ ಬಂಗಾರದಂತಹ ಜೀವನಕ್ಕೆ ಆಪದ್ಭಾಂದವವಾಗಿದೆ. ಎಂದರೆ ಯಾವುದೇ ರೀತಿಯ ತಕರಾರು ಇರಲಾರದು. ಇದರಿಂದಾಗಿ ಅಡಿಕೆ, ಗೋಡಂಬಿ, ಅನಾನಸ್ ಮುಂತಾದ ಬೆಳೆಗಳನ್ನು ಬೆಳೆದು ಅವುಗಳನ್ನು ಶೇಖರಿಸಿಕೊಂಡು ಬಟ್ಕಳಕ್ಕೆ ಹೋಗಿ ಮಾರಾಟ ಮಾಡಿ ಬರುತ್ತಾರೆ. ಹಾಗೂ ಇವರ ಬದುಕನ್ನು ಸಾಗಿಸಿಕೊಳ್ಳುತ್ತಾರೆ. ಕುಡುಬಿಯರು ಬೆಳೆಯುವ ವೀಳ್ಯೆದೆಲೆ, ಮೆಣಸು, ತರಕಾರಿಗಳ ಬೆಳೆಯನ್ನು ಮಾರಾಟ ಮಾಡದೆ ಮನೆಯ ಬಳಕೆಗಾಗಿ ಬಳಸುವುದನ್ನು ಗಮನಿಸಬಹುದು. ಈ ರೀತಿಯಾಗಿ ಈ ಸಮುದಾಯದವರು ತಮ್ಮ ಬದುಕಿನ ದೋಣಿಯನ್ನು ಯಾವುದೇ ಬಿರುಗಾಳಿ, ಮಳೆ, ಪ್ರವಾಹಗಳು ಬಂದರೆ ಬಿಡದೆ ದೋಣಿ ದಡ ಮುಟ್ಟುವವರೆಗೆ ಯಾವುದೇ ತೊಂದರೆಯಿಲ್ಲದೆ ಅಂಬಿಗ ನಡೆಸುವಂತೆ ನಡೆಸಿಕೊಂಡು ಹೋಗುತ್ತಿರುವುದನ್ನು ಕಾಣಬಹುದು.

ಕುಡುಬಿಯರ ಕಸುಬು 

ಕುಡುಬಿಯರ ಬದುಕು ಮತ್ತು ಅವರ ವೃತ್ತಿ ಪರಸ್ಪರ ಒಂದನ್ನೊಂದು ಸಂಬಂಧವನ್ನು ಹೊಂದಿವೆ. ಆದ್ದರಿಂದ ಈ ಸಮುದಾಯದವರು ಕೃಷಿಯನ್ನು ಜೀವನದ ವೃತ್ತಿಯನ್ನಾಗಿ ಮಾಡಿಕೊಂಡು ಕೃಷಿಗೆ ಹೊಂದಾಣಿಕೆಯಾಗುವಂತೆ ಅನೇಕ ಕಸುಬುಗಳನ್ನು ದಿನ ನಿತ್ಯದ ಬದುಕಿನಲ್ಲಿ ಮಾಡುತ್ತಾ ಬಂದಿದ್ದಾರೆ. ಇದರಿಂದಾಗಿ ಈ ಸಮುದಾಯದವರು ಮಾಡುತ್ತಾ ಬಂದಿರುವ ಕಸುಬುಗಳೆಂದರೆ;

. ಕೈ ತೋಟ : ಕುಡುಬಿಯರು ತಮ್ಮ ಮನೆಗಳ ಸುತ್ತಮುತ್ತ ಹಾಗೂ ನೀರು ಹರಿದಾಡುವ ಸ್ಥಳಗಳಲ್ಲಿ ಕೈತೋಟವನ್ನು ಮಾಡಿಕೊಂಡಿರುತ್ತಾರೆ. ಈ ತೋಟದಲ್ಲಿ ಈರುಳ್ಳಿ, ಸಬ್ಬಸಿಗೆ ಸೊಪ್ಪು, ಪಾಲಾಕು ಸೊಪ್ಪು, ಬದನೆಕಾಯಿ, ಟಮೋಟೋ ಮುಂತಾದ ತರಕಾರಿಗಳನ್ನು ಬೆಳೆಯುವುದರ ಮೂಲಕ ತಮ್ಮ ಮೂಲ ಕಸುಬುನ್ನಾಗಿ ರೂಡಿಸಿಕೊಂಡಿದ್ದಾರೆ.

. ಕೃಷಿಯ ಕೂಲಿ : ಕುಡುಬಿಯರಲ್ಲಿ ಕೆಲವರು ಭೂಮಿ ಇಲ್ಲದೆ ಈಗಲೂ ಬೇರೆಯವರ ಗದ್ದೆಗಳಲ್ಲಿ ಕೃಷಿ ಕೂಲಿಗಾಗಿ ದಿನನಿತ್ಯ ಹೋಗುತ್ತಾರೆ. ಇದರಿಂದಾಗಿ ತಿಳಿಯುವುದೇನೆಂದರೆ ಕುಡುಬಿಯರಿಗೆ ಎಲ್ಲರಿಗೂ ಭೂಮಿ ಇಲ್ಲವೆಂದು ಇದರ ಪರಿಣಾಮವಾಗಿ ಬೇರೆಯವರ ಹೊಲದಲ್ಲಿ ಅಥವಾ ಗದ್ದೆಗಳಲ್ಲಿ ಅದರಲ್ಲೂ ಬಂಡವಾಳವನ್ನು ಕ್ರೂಡಿಕರಿಸಿಕೊಂಡಿರುವವರ ಗದ್ದೆಗಳಲ್ಲಿ ಕೃಷಿ ಕೂಲಿಯಾಳಾಗಿ ದುಡಿಯುತ್ತಿರುವುದನ್ನು ನೋಡಬಹುದು. ಈ ರೀತಿಯಾಗಿ ಕೆಲವರು ಕೂಲಿಯನ್ನು ತಮ್ಮ ಕಸುಬನ್ನಾಗಿ ಮಾಡಿಕೊಂಡು ಜೀವನವನ್ನು ನಡೆಸುತ್ತಿದ್ದಾರೆ.

. ಪಶುಸಂಗೋಪನೆ : ಕುಡುಬಿಯರು ಕೃಷಿಯನ್ನು ಅವಲಂಬಿಸಿಕೊಂಡು ಜೀವನ ಮಾಡುವವರಾಗಿದ್ದರಿಂದ ಒಂದೊಂದು ಮನೆಯಲ್ಲಿ ಎರಡು, ಐದು ಎಮ್ಮೆಗಳನ್ನು ಸಾಕಿರುವುದನ್ನು ನೋಡಬಹುದು. ಅಲ್ಲದೇ ಕೆಲವೊಂದು ಮನೆಯಲ್ಲಿ ಹಸುಗಳಿವೆ. ಆದರೆ, ಕೃಷಿಯನ್ನು ಮಾಡುವಂತಹ ಎಲ್ಲಾ ಮನೆಯಲ್ಲಿಯೂ ಎರಡೇರಡು ಕೋಣಗಳಿರುವುದನ್ನು ಇಲ್ಲಿ ವಿಶೇಷವಾಗಿ ಸೂಚಿಸಲು ಇಷ್ಟಪಡುತ್ತೇನೆ. ಇದರಿಂದಾಗಿ ಕುಡುಬಿಯ ಸಮುದಾಯ ಎಮ್ಮೆಗಳನ್ನು ಮೊಸರು ಮಾಡಿ ಮಜ್ಜಿಗೆ ಕಡೆದು ತುಪ್ಪವನ್ನು ಮಾಡುತ್ತಾರೆ. ಈ ಸಮುದಾಯದವರು ಬೇರೆಯವರಿಗೆ ಹಣಕ್ಕೆ ಹಾಲನ್ನು, ಮೊಸರನ್ನು, ತುಪ್ಪವನ್ನು ಮಾರಾಟ ಮಾಡದೇ ಎಲ್ಲವನ್ನು ಊಟಕ್ಕೆ ಬಳಸುತ್ತಾರೆ. ಈ ಹಿನ್ನೆಲೆಯಲ್ಲಿ (ನಮ್ಮ) ಕುಡುಬಿಯರು ದಷ್ಟಪುಷ್ಟರಾಗಿದ್ದಾರೆ. ಪುರುಷರಷ್ಟೇ ಅಲ್ಲ ಸ್ತ್ರೀಯರು ಕೂಡ ಗಟ್ಟಿಮುಟ್ಟಾಗಿದ್ದಾರೆ. ಈ ರೀತಿಯಾಗಿ ಪಶುಸಂಗೋಪನೆಯಲ್ಲಿ ಕೃಷಿಯನ್ನು ಹಾಗೂ ಕೃಷಿಯಲ್ಲಿ ಪಶುಸಂಗೋಪನೆಯನ್ನು ರೂಢಿಸಿಕೊಂಡು ಒಂದು ಉರಪಸುಬಾಗಿ ಮಾಡಿಕೊಂಡು ಜೀವನವನ್ನೆ ಸಾಗಿಸುತ್ತ ಬಂದಿರುವುದನ್ನು ಇಲ್ಲಿ ಹೆಸರಿಸಲು ಸೂಕ್ತವೆನಿಸುತ್ತದೆ.

. ಗೃಹ ಕೈಗಾರಿಕೆ : ಗೃಹ ಕೈಗಾರಿಕೆಯನ್ನು ಪ್ರಾಚೀನ ಕಾಲದಿಂದಲು ಪರಂಪರಗತವಾಗಿ ನಮ್ಮ ಬುಡಕಟ್ಟುಗಳು ರೂಢಿಸಿಕೊಂಡು ಬಂದಿರುವ ವೃತ್ತಿಯಾಗಿದೆ. ಉದಾ. ಕಮ್ಮಾರರು, ಚಮ್ಮಾರರು, ಕುಂಬಾರರು, ಮೇದಾರರು, ಗೊಲ್ಲರು, ಕೊರಚರು, ಮುಂತಾದ ಸಮುದಾಯಗಳು ಗೃಹ ಕೈಗಾರಿಕೆಯನ್ನು ರೂಢಿಸಿಕೊಂಡು ಬಂದಂತೆ ಕುಡುಬಿ ಸಮುದಾಯದವರು ಸಹ ಗೃಹ ಕೈಗಾರಿಕೆಯನ್ನು ರೂಢಿಸಿಕೊಂಡು ಬಂದಿದ್ದಾರೆ. ಆದರೆ ಗೃಹ ಕೈಗಾರಿಕೆಯು ಜೋವನಕ್ಕೆ ಅವಶ್ಯಕತೆಯಿರುವಷ್ಟಕ್ಕೆ ಮಾತ್ರ ಸೀಮಿತವಾಗಿದೆ. ವಿನಿಹಃ ಗೃಹ ಕೈಗಾರಿಕೆಯಿಂದ ಉತ್ಪಾದಿಸಿದ ವಸ್ತುಗಳನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡುವುದಿಲ್ಲ. ಮೇಘಾನೆ ಮತ್ತು ಬಜ್ಜೋಡಿ ಕುಡುಬಿಯರು ಕಾಡಿನಲ್ಲಿ ಸಿಗುವ ಬಿದಿರು ಬೊಂಬುಗಳನ್ನು ತಂದು ಆ ಬೊಂಬುಗಳನ್ನು ಸೀಳಿ ಅವುಗಳಿಂದ ಬೆತ್ತಗಳನ್ನು ಮಾಡಿಕೊಳ್ಳುತ್ತಾರೆ ಹಾಗೂ ಬುಟ್ಟಿ, ಕಣಜ, ಬಿಸಣಿಗೆ ಮುಂತಾದ ಗೃಹ ಬಳಕೆಯ ವಸ್ತುಗಳನ್ನು ಹೆಣೆದುಕೊಳ್ಳುತ್ತಾರೆ ಮತ್ತು ಕೆಲವೊಂದು ಹುಲ್ಲಿನ ಮನೆಗಳಿಗೂ ಚಾಪೆಯನ್ನು ಹಾಕುತ್ತಾರೆ. ಈ ಸಮುದಾಯದವರು ಕಾಡಿನಲ್ಲಿ ಸಿಗುವ ಕಾಡು ಜೇನು ಸಂಗ್ರಹಿಸುತ್ತಾರೆ.  ಆದರೆ ಇವರು ಮಾಡುವ ಗೃಹ ಕೈಗಾರಿಕೆಯ ವಸ್ತುಗಳನ್ನು ಮಾರಾಟ ಮಾಡದೇ ಮನೆಯ ಉಪಯೋಗಕ್ಕೆ ಬಳಸುವುದನ್ನು ಗಮನಿಸಬಹುದು.

ಇತ್ತೀಚಿನ ಕೆಲವು ಅವಲಂಬಿತ ವೃತ್ತಿಗಳು

ಭಾರತದಲ್ಲಿರುವ ಯಾವುದೇ ಸಮುದಾಯ ಒಂದಲ್ಲಾ ಒಂದು ರೀತಿಯಲ್ಲಿ ತನ್ನ ಮೂಲ ವೃತ್ತಿಯಿಂದ ರೂಪಾಂತರಗೊಳ್ಳತ್ತಿರುವುದನ್ನು ನೋಡಬಹುದು. ಈ ಹಿನ್ನೆಲೆಯಲ್ಲಿ ನಮ್ಮ ಬುಡಕಟ್ಟು ಸಮುದಾಯವಾದ ಕುಡುಬಿಯರು ಮೂಲ ವೃತ್ತಿಯಾದ ಕೃಷಿಯನ್ನೇ ಮುಂದುವರಿಸಿಕೊಂಡು ಕೃಷಿಯಲ್ಲಿ ಸಂಪ್ರದಾಯದ ಸಾಧನಗಳ ಜೊತೆಗೆ ಕೆಲವು ಕಬ್ಬಿಣದಿಂದ ಮಾಡಿದ ಸಾಧನೆಗಳನ್ನು ಬಳಸಿಕೊಂಡು ಮಾಡಲಾಗಿದೆ. ಇದರಿಂದಾಗಿ ಕುಡುಬಿಯರು ಹೊಸ ರೀತಿಯ ವೃತ್ತಿಗಳನ್ನು ಬಯಸುತ್ತಾ ಇದ್ದಾರೆ ಎಂಬುದು ತಿಳಿದುಬರುತ್ತದೆ. ಕುಡುಬಿಯರು ಇಂದು ಸ್ವೌತಗಾರ್, ದೇವಿಗಿರಿ, ನಾಗುವಳ್ಳಿಯಲ್ಲಿ ಕೆಲವರು ಅರಣ್ಯ ಇಲಾಖೆಯಲ್ಲಿ ದಿನಗೂಲಿಗಳಾಗಿ ಕೆಲಸವನ್ನು ಮಾಡುತ್ತಾ ಇದ್ದಾರೆ. ಕುಡುಬಿಯರಲ್ಲಿ ಒಬ್ಬ ವ್ಯಕ್ತಿ ಕೃಷ್ಣಪ್ಪ ಎಂಬ ಯುವಕ ಸರ್ಕಾರದಿಂದ ರಿಯಾಯಿತಿಯ ದರದಲ್ಲಿ ಒಂದು ಜೀಪನ್ನು ತಂದುಕೊಂಡು ಮೇಘಾನೆಯಿಂದ ನಾಗುವಳಿಗೆ ಜನರನ್ನು ಹಾಗೂ ಗೊಬ್ಬರ್ ಮುಂತಾದ ಸರಕುಗಳನ್ನು ಹಾಗೂ ಒಬ್ಬ ವ್ಯಕ್ತಿಗೆ ೭,೦೦ ರೂ.ಗಳಂತೆ, ಸರಕುಗಳಿಗೆ ಕ್ವಿಂಟಲ್ ಲೆಕ್ಕದಲ್ಲಿ ಇಷ್ಟು ರೂಪಾಯಿ ಎಂದು ದರ ನಿಗದಿ ಮಾಡಿ ಅವರ ಸಮುದಾಯಕ್ಕೆ ಸಹಕಾರದ ರೀತಿಯಲ್ಲಿ ತನ್ನ ವೃತ್ತಿಯಲ್ಲಿ ಬದಲಾವಣೆ ಮಾಡಿಕೊಂಡಿರುವುದನ್ನು ಗಮನಿಸಲಾಗಿದೆ.

ಕುಡುಬಿಯರು ಇತ್ತೀಚೆಗೆ ಲಾವಂಚಿಯ ಎಣ್ಣೆಯನ್ನು ಭಟ್ಕಳಕ್ಕೆ ತಾವೇ ತೆಗೆದುಕೊಂಡು ಹೋಗಿ ಮಾರಾಟ ಮಾಡುವುದನ್ನು ಪ್ರಾರಂಭಿಸುತ್ತಿದ್ದಾರೆ. ಜೀವನದಲ್ಲಿ ಬದಲಾವಣೆಯನ್ನು ಬಯಸುತ್ತಾರೆ. ಆದರೆ, ಅವರ ಬಗ್ಗೆ ಕಾಳಜಿವಹಿಸುವವರ ಕೊರತೆಯಿಂದಾಗಿ ಅವರು ಇನ್ನೂ ಹಿಂದೆ ಹಿಂದೆಯೇ ಹೋಗುತಲಿದ್ದಾರೆ.

ಮೂಲ ಸೌಲಭ್ಯಗಳಾದ:

೧. ಸಾರಿಗೆ ವ್ಯವಸ್ಥೆ
೨. ವೈದ್ಯಕೀಯ ವ್ಯವಸ್ಥೆ
೩. ವಿದ್ಯುತ್ ವ್ಯವಸ್ಥೆ
೪. ದೂರದರ್ಶನದ ವ್ಯವಸ್ಥೆ
೫. ಶೈಕ್ಷಣಿಕ ವ್ಯವಸ್ಥೆ
೬. ಮೀಸಲಾತಿ ವ್ಯವಸ್ಥೆಯನ್ನು ಸರಕಾರ ಕೈಗೊಳ್ಳಬೇಕು.

ಈ ರೀತಿಯಾಗಿ ವ್ಯವಸ್ಥೆಗಳಿಲ್ಲದ ಮೇಘಾನೆಯ ಕುಡುಬಿಯರು ಅನೇಕ ಸಮಸ್ಯೆಗಳಿಂದ ಕೂಡಿದ್ದರಿಂದ ತಮ್ಮ ಮೂಲ ವೃತ್ತಿಯಲ್ಲಿ ಬದಲಾವಣೆ ಕಾಣಿಸುವುದಿಲ್ಲ. ಕುಡುಬಿಯರು ತಮ್ಮ ಮನೆಗಳನ್ನು ಕಟ್ಟಿಕೊಳ್ಳುವ ತರಗಾರಿಕೆಯ ಕೆಲಸವನ್ನು ಕಲಿತಿದ್ದಾರೆ. ಮೇಘಾನೆಯಲ್ಲಿ ಒಂದು ಅಂಗಡಿಯಿದೆ ಇದರಲ್ಲಿ ಬೀಡಿ ಮತ್ತು ಸಣ್ಣಪುಟ್ಟ ದಿನಸುಗಳನ್ನು ಇಟ್ಟು ಮಾರಾಟ ಮಾಡುವುದು ಅನಿವಾರ್ಯವಾಗಿದೆ. ಕುಡುಬಿಯರು ಮೂಲ ವೃತ್ತಿ ಕೃಷಿ ಅದರ ಜೊತೆಗೆ ಬೇಟೆಯನ್ನು ಆಡುತ್ತಾರೆ. ಆದರೆ, ಯಾವುದೇ ಆಕರ್ಷಕ ವ್ಯವಹಾರಕ್ಕೆ ಯಾರು ಹೋಗಿಲ್ಲ. ಕುಡುಬಿಯರಿಗೆ ನಾಗರಿಕ ಜನರಂತೆ ನವೀನ ವಿಷಯಗಳನ್ನು ತಿಳಿಯಬೇಕು ಹಾಗೂ ವಿವಿಧ ವ್ಯವಹಾರವನ್ನು ಮಾಡಬೇಕು ಎಂಬ ಆಸೆ ಎಲ್ಲಾರಲ್ಲೂ ಇದೆ. ಹೀಗಿರುವಾಗ ಅವರಿಗೆ ಅವಕಾಶಗಳು ಸಿಗುತ್ತಿಲ್ಲ. ಏಕೆಂದರೆ ಮುಗ್ಧ ಜನರು ಇವರಾಗಿರುವುದರಿಂದ ಹಾಗೂ ಗುಡ್ಡ-ಗಾಡು ಪ್ರದೇಶದಲ್ಲಿ ವಾಸಿಸುವುದರಿಂದ ಅವರಿಗೆ ಸರಿಯಾದ ವ್ಯವಸ್ಥೆ ಮಾಡಿಕೊಡಲು ಸಾಧ್ಯವಾಗಿಲ್ಲ.

ಶಿಕ್ಷಣ ವ್ಯವಸ್ಥೆ

ಪ್ರಪಂಚದ ಬುಡಕಟ್ಟುಗಳನ್ನು ಶೈಕ್ಷಣಿಕವಗಿ ಗಮನಿಸಿದಾಗ ಕಂಪ್ಯೂಟರ್ ಯುಗದಲ್ಲಿ ಅವರಿಗೆ ಜೀವನದ ಅತಿಮುಖ್ಯ ಘಟ್ಟವಾದ ಶಿಕ್ಷಣ ಸಿಗುತ್ತಿಲ್ಲ. ಅಂದರೆ ಇತ್ತೀಚಿನ ಸರ್ಕಾರಗಳು ಬಹುಕಟ್ಟುಗಳ ಬಗ್ಗೆ ಎಷ್ಟರ ಮಟ್ಟಿಗೆ ಕಾಳಜಿವಹಿಸಿವೆ ಎಂಬುದನ್ನು ಗಮನಿಸಬಹುದು. ಪ್ರಾಚೀನ ಕಾಲದಿಂದ ತಮ್ಮ ಪಾಡಿಗೆ ತಾವು ಅಂಶ ಪರಂಪರೆಯಾಗಿ ರೂಢಿಸಿಕೊಂಡು ಬಂದಿರುವ ತಮ್ಮದೆಯಾದ ಅನೌಪಚಾರಿಕ ಸಾಂಸ್ಕೃತಿಕ ಶಿಕ್ಷಣವನ್ನು ಮುಂದುವರೆಸಿಕೊಂಡು ಬಂದಿರುವುದನ್ನು ನೋಡಬಹುದು. ಯಾವುದೇ ಒಂದು ರಾಷ್ಟ್ರದ ಅಭಿವೃದ್ಧಿಯನ್ನು ಇತರ ರಾಷ್ಟ್ರಗಳು ಅಳೆಯುವುದು ಮೊದಲು ಶಿಕ್ಷಣದಿಂದ ಎಂಬುದನ್ನು ಮರೆಯಬಾರದು. ಆದರೆ, ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ ಕಂಪ್ಯೂಟರ್ ಶಿಕ್ಷಣದ ಪ್ರಭಾವಿದ್ದರೂ ಎಷ್ಟರ ಮಟ್ಟಿಗೆ ಭಾರತದಲ್ಲಿ ವಾಸಿಸುವ ಬುಡಕಟ್ಟು ಸಮುದಾಯಗಳನ್ನು ಮುಟ್ಟಿದೆ? ಎಂಬುದು ಬಹಳ ಮುಖ್ಯ. ಈ ಹಿನ್ನೆಲೆಯಲ್ಲಿ ಇಂದಿನ ಸಾಮಾಜಿಕ ವ್ಯವಸ್ಥೆಗೆ ಶಿಕ್ಷಣ ಎಷ್ಟು ಮುಖ್ಯವೋ ಬುಡಕಟ್ಟು ಸಮುದಾಯಗಳಿಗೂ ಶಿಕ್ಷಣ ಅಷ್ಟೇ ಮುಖ್ಯಾನಿಸಿದ್ದಾರೆ. “ಆತ್ಮ ಸಾಕ್ಷಾತ್ಕಾರವೇ ಶಿಕ್ಷಣ” ವ್ಯಕ್ತಿಯ ಶರೀರ ಮನಸ್ಸು ಮತ್ತು ಚೈತನ್ಯಗಳ ಬೆಳವಣಿಗೆಯೇ ಶಿಕ್ಷಣ “ವ್ಯಕ್ತಿಯ ಅಂತರಾಳದಲ್ಲಿರುವುದನ್ನು ಹೊರಗೆಳೆದು ತರುವುದೇ ಶಿಕ್ಷಣ” ಎಂಬುದಾಗಿ ಅನೇಕ ಬುದ್ಧಜೀವಿಗಳು ಶಿಕ್ಷಣದ ಮಹತ್ವವನ್ನು ಕುರಿತು ಹೇಳಿದ ವಾಕ್ಯಗಳನ್ನು ಗಮನಿಸಬಹುದು. ಈ ಹಿನ್ನೆಲೆಯಲ್ಲಿ ನಮ್ಮ ಬುಡಕಟ್ಟುಗಳಿಗೆ ಪ್ರಪಂಚದಲ್ಲಿ ಇತರರಿಗೆ ಸಿಗುವಷ್ಟೇ ದಿನ ನಿತ್ಯದ ಅವಶ್ಯಕತೆಗಳು ಹಾಗೂ ಜೀವನಕ್ಕೆ ಅತಿಮುಖ್ಯವಾಗಿ ಬೇಕಾಗಿರುವ ಶಿಕ್ಷಣ ಎಷ್ಟರ ಮಟ್ಟಿಗೆ ತಲುಪಿದೆ ಎಂಬುದು ಬಹಳ ಮುಖ್ಯವಾಗಿರುತ್ತದೆ. ಶಿಕ್ಷಣ ಎಷ್ಟು ಮುಖ್ಯ? ಹಾಗೂ ಕೊಡುವಂತ ಶಿಕ್ಷಣ ಯಾವ ರೀತಿಯಾಗಿರಬೇಕು? ಎಂಬುವುದನ್ನು ಕುರಿತು ಹೇಳುವುದಾದರೆ ಶಿಕ್ಷಣ ದಾರಿಯ ದೀಪವಾಗಬಹುದು. ಆದರೆ “ದೀಪ ಚಲ್ಲುವ ಬೆಳಕಿನಲ್ಲಿ ನಡೆದು ಗುರಿ ಮುಟ್ಟಬೇಕಾದದ್ದು ಮಾತ್ರ ಪ್ರಮಾಣಿಕನ ಕೆಲಸ, ದೀಪವೇ ನಡೆಯಬಾರದು” ಎಂದಿದ್ದರೂ ದೀಪಬೇಕು, “ಹೆದ್ದಾರಿಯಲ್ಲಿ ದಿಕ್ಕು ತೋರಿಸುವ ಕೈಗಂಬ ಇರುವಂತೆ ಇರಬೇಕು.”

ಆದಿವಾಸಿ ಬುಡಕಟ್ಟುಗಳು ಅನೌಪಾಚಾರಿಕ ಶಿಕ್ಷಣವನ್ನು ರಚಿಸಿಕೊಂಡು ತಮ್ಮ ಪಾಡಿಗೆ ತಾವು ಕಾಡುಗಳಲ್ಲಿ ಅವಿದ್ಯಾವಂತರಾದರು ನಿರುದ್ಯೋಗಿಗಾಳಾಗದೆ ಜೀವನಕ್ಕೆ ಭಯಪಡದೆ ಬದುಕುತ್ತಿರುವ ಸಮುದಾಯಗಳಿಗೆ ಶಿಕ್ಷಣ ಕೊಡುವುದು ಎಷ್ಟರ ಮಟ್ಟಿಗೆ ಸರಿ ಹಾಗೂ ನಮ್ಮ ಬುಡಕಟ್ಟುಗಳಿಗೆ ಯಾವ ಬಗೆಯ ಶಿಕ್ಷಣ ಕೊಡಬೇಕು ಅಲ್ಲದೆ ಬುಡಕಟ್ಟುಗಳಿಗೆ ಶಿಕ್ಷಣ ಅಗತ್ಯತೇ ಇದೆಯೇ ಎಂಬ ಮೊದಲಾದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ಒಂದು ಕಡೆ ನಿಂತು ತಮ್ಮ ನೆಲೆಯಾಗಿ ಗುರುತಿಸಿಕೊಂಡು ತಮ್ಮದೇ ಆದ ಕೃಷಿಯನ್ನು ಮೈಗೂಡಿಸಿಕೊಂಡಿರುವ ಕುಡುಬಿ ಸಮುದಾಯವು ತನ್ನ ಅಗತ್ಯಗಳನ್ನು ರೂಪಿಸಿಕೊಂಡು ಮಾನಸಿಕವಾಗಿ ನೆಮ್ಮದಿಯಿಂದ ಬದುಕುತ್ತಿದೆ. ಇಂತಹ ಸಮುದಾಯದ ಸರ್ವಾಂಗಿಣ ಅಭಿವೃದ್ಧಿಗೆ ಶಿಕ್ಷಣವೇ ಯಾಕೆ. ಒಂದು ರೀತಿಯಲ್ಲೇ ಶಿಕ್ಷಣ ಇಡಿ ಸಮುದಾಯದ ಅಗತ್ಯಗಳನ್ನು ಪೂರೈಸುತ್ತದೆಂದು ನಂಬುವುದಾದರೆ ಆ ಶಿಕ್ಷಣದ ಸ್ವರೂಪ ಮಹತ್ವವೆಂತಹದು ಗಾಂಧೀಜಿ ಹೇಳುವಂತೆ ಮೂಲ ಶಿಕ್ಷಣವೇ? ಬ್ರಿಟಿಷರು ಹಾಗೂ ಇತ್ತೀಚಿನ ಭಾರತ ಸರ್ಕಾರದವರು ತಂದ ಶಿಕ್ಷಣವೇ ಅಥವಾ ಕಂಪ್ಯೂಟರ್ ಮಾಹಿತಿ ತಂತ್ರಜ್ಞಾನ ಶಿಕ್ಷಣವೇ? ಈ ರೀತಿಯಾಗಿ ಬುಡಕಟ್ಟುಗಳಿಗೆ ಶಿಕ್ಷಣ ಕೊಡುವುದರಲ್ಲಿ ಅನೇಕ ರೀತಿಯ ತೊಡಕುಗಳಿರುವುದನ್ನು ಆಲೋಚಿಸಿದರೂ ಬುಡಕಟ್ಟುಗಳಿಗೆ ಶಿಕ್ಷಣವನ್ನು ಕೊಡಬೇಕಾದರೆ ಮಾಧ್ಯಮ ಯಾವುದಾಗಿರಬೇಕು? ಎಂದು ಆಲೋಚಿಸುವುದು ಸೂಕ್ತವೆನಿಸುತ್ತದೆ. ಈ ಹಿನ್ನೆಲೆಯಲ್ಲಿ ಬುಡಕಟ್ಟು ಸಮುದಾಯಗಳಿಗೆ ನಾವು ಕೊಡುತ್ತಿರುವ ಶಿಕ್ಷಣ ಎಷ್ಟರ ಮಟ್ಟಿಗೆ ತಲುಪುತ್ತದೆ ಎಂಬುದು ಗಮನದಲ್ಲಿರಿಸಿಕೊಳ್ಳಬೇಕು. ಕುಡುಬಿಯರು ತಮ್ಮ ನೆಲಯನ್ನು ಹೆಚ್ಚಾಗಿ ಮಲೆನಾಡಿನಲ್ಲಿ ಗುರುತಿಸಿಕೊಂಡು ಅದರಲ್ಲೂ ಬೆಟ್ಟಗಳ ಇಳಿಜಾರಿನಲ್ಲಿ ವಾಸಸ್ಥಾನವನ್ನು ಮಾಡಿಕೊಂಡು ಅದಕ್ಕೊಂದು ಊರು ಎಂದು ಹೆಸರಿಟ್ಟುಕೊಂಡಿದೆ. ಇದರಿಂದಾಗಿ ಯಾವುದೇ ಸೌಲಭ್ಯವಿಲ್ಲದೇ ಜೀವನವನ್ನು ಸಾಗಿಸುವ ಒಂದು ಬುಡಕಟ್ಟು ಸಮುದಾಯವಾಗಿದೆ. ನನ್ನ ವಿಷಯಕ್ಕೆ ಸಂಬಂಧಿಸಿದಂತೆ ಕುಡುಬಿಯರು ಶಿಕ್ಷಣದಿಂದ ವಂಚಿತರಾಗಿದ್ದಾರೆಂದರೆ ಯಾವುದೇ ರೀತಿಯ ತಕಾರಾರು ಇರಲಾರದು ಏಕೆಂದರೆ, ಕುಡುಬಿಯರು ವಾಸಿಸುವ ಮೇಘಾನೆ ಮತ್ತು ಬಚ್ಚೋಡಿಗಳೆರೆಡು ಹಾಗೂ ದೇವಗಾರ್, ಸೌವುತ್‌ಕೇರಿ ಎನ್ನೆ ಮುಂತಾದ ಸ್ಥಳಗಳನ್ನು ಕ್ಷೇತ್ರ ಕಾರ್ಯದ ಸಮಯದಲ್ಲಿ ಗಮನಿಸಿದಂತೆ ಇತ್ತೀಚಿಗೆ ೭ ವರ್ಷಗಳಿಂದಿಚೆಗೇ ಮಕ್ಕಳನ್ನು ಶಾಲೆಗೆ ಕಳಿಸಿರುವುದನ್ನು ಕಾಣಬಹುದು. ಅಲ್ಲದೇ ಹೀಗೆ ಮಕ್ಕಳಿಗೆ ಕನ್ನಡದಲ್ಲಿ ಪಾಠ ಹೇಳುವುದು ಬಹಳ ಕಷ್ಟವೆಂದು ಶಿಕ್ಷಕರ ಮಾತಿನಿಂದ ತಿಳಿದಿದೆ. ಇದರಿಂದಾಗಿ ನಾವು ಮೇಲೆ ಚರ್ಚಿಸಿದಂತೆ ಆದಿವಾಸಿ ಸಮುದಾಯಗಳಿಗೆ ಯಾವ ರೀತಿಯ ಶಿಕ್ಷಣಕೊಡಬೇಕು ಎಂಬುವುದನ್ನು ಆಲೋಚಿಸಬೇಕಾದ ಸಂಗತಿಯಿದೆ.

ಕುಡುಬಿಯರ ಮಕ್ಕಳಿಗೆ ಕರ್ನಾಟಕ ಸರ್ಕಾರದವರು ಶಿಕ್ಷಣ ಪದ್ಧತಿಗೆ ಹೊಂದಿಕೊಳ್ಳಲು ಆಗುತ್ತಿಲ್ಲ ಎಂಬ ಮಾತು ಮಾತ್ರ ಸತ್ಯ. ಇತ್ತೀಚಿನ ಸರ್ಕಾರ ಮೇಘಾನೆಯಲ್ಲಿ ಒಂದು ಶಾಲೆಯನ್ನು ಪ್ರಾರಂಭಿಸಿದೆ. ಅದು ಒಂದೇ ಕೋಣೆಯನ್ನು ಹೊಂದಿದ್ದು ಇದರಲ್ಲಿ ಒಂದನೇ ತರಗತಿಯಿಂದ ನಾಲ್ಕನೇಯ ತರಗತಿಯವರೆಗೆ ಮಕ್ಕಳು ಒಟ್ಟಿಗೆ ಕುಳಿತುಕೊಳ್ಳುತ್ತಾರೆ. ಈ ಶಾಲೆಯಲ್ಲಿ ೨ ಜನ ಶಿಕ್ಷಕರನ್ನು ಸರ್ಕಾರ ನೇಮಿಸಿದೆ. ಇಲ್ಲಿ ಮಕ್ಕಳು ಹೆಚ್ಚು ಸೌಮ್ಯವಾದಿಗಳಾಗಿದ್ದಾರೆ. ಯಾರಾದರು ಬಂದರೆ ಈಗಲೂ ಈ ಜನಾಂಗದಲ್ಲಿ ಹೆದರಿಕೆ ಇರುವುದನ್ನು ನೋಡಬಹುದು. ಮೇಘಾನೆಯಲ್ಲಿ ಅಂಗನವಾಡಿಯು ಇದೆ. ಇದರಲ್ಲಿ ೧೨ ಮಕ್ಕಳು ಮಾತ್ರ ಇದ್ದಾರೆ. ಇಲ್ಲಿ ಒಬ್ಬ ಅಂಗನವಾಡಿ ಶಿಕ್ಷಕಿ ಹಾಗೂ ಒಬ್ಬರು ಸಹಾಯಕಿ ಇದ್ದಾಳೆ. ಅಂಗನವಾಡಿ ಶಿಕ್ಷಕಿ ಶೆಟ್ಟರು ಜನಾಂಗಕ್ಕೆ ಸೇರಿದವರಾಗಿದ್ದು, ಮಕ್ಕಳ ಬಗ್ಗೆ ಜವಾಬ್ದಾರಿಯನ್ನು ವಹಿಸಿ ಕುಡುಬಿಯರ ಮಕ್ಕಳಲ್ಲಿ ಸ್ವಚ್ಛತೆಯನ್ನು ಕಪಾಡಿಕೊಂಡಿದ್ದಾರೆ. ಇಲ್ಲಿ ಸಹಾಯಕಿಯಾಗಿ ನಮ್ಮ ಕುಡುಬಿಯ ಮಹಿಳೆಯಿದ್ದಾಳೆ. ಕುಡುಬಿಯರಲ್ಲಿ ಐದು ಹುಡುಗಿಯರ ೬ನೇ ತರಗತಿಯಲ್ಲೂ ಒಂದು ಹುಡುಗಿ ೭ನೇ ತರಗತಿಯಲ್ಲೂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮೇಘಾನೆ ಮತ್ತು ಬಚ್ಚೋಡಿಯಲ್ಲಿ ೭ನೇ ತರಗತಿಯಲ್ಲಿ ಓದುತ್ತಿರುವ ಹುಡುಗಿನೇ ಹೆಚ್ಚಿನ ವಿದ್ಯಾಭ್ಯಾಸ ಪಡೆದ ಹುಡುಗಿ. ಹುಡುಗರಲ್ಲಿ ಯಾರು ಹೆಚ್ಚಿನ ಓದದೇ ಇರುವುದನ್ನು ಕಾಣಬಹುದು. ಮೇಘಾನೆ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ೧೦ ವಿದ್ಯಾರ್ಥಿಗಳು. ೨ನೇ ತರಗತಿಯಲ್ಲಿ ೯ ವಿದ್ಯಾರ್ಥಿಗಳು. ೩ನೇ ತರಗತಿಯಲ್ಲಿ ೮ ವಿದ್ಯಾರ್ಥಿಗಳು. ೪ನೇ ತರಗತಿಯಲ್ಲಿ ೭ ವಿದ್ಯಾರ್ಥಿಗಳಿರುವುದನ್ನು ಕಾಣಬಹುದಾಗಿದೆ. ಮೇಘಾನೆಯಲ್ಲಿ ಒಟ್ಟು ೩೪ ವಿದ್ಯಾರ್ಥಿಗಳು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದನ್ನು ನೋಡಬಹುದು. ಉಳಿದ ಐದು ಹುಡುಗಿಯರು ಸಾಗರ ವಸತಿ ಶಾಲೆಯಲ್ಲಿದ್ದಾರೆ. ಒಂದು ಹುಡುಗಿ ೭ನೇ ತರಗತಿಯನ್ನು ಬಚ್ಚೋಡಿ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದೆ. ಅದರೆ ಕ್ಷೇತ್ರ ಕಾರ್ಯದಿಂದ ತಿಳಿದುಬಂದದ್ದು ಶಿಕ್ಷಣ ಕೊಡಿಸಬೇಕು ಎಂಬುದರ ಬಗ್ಗ ಪ್ರಸ್ತುತ ಸಮಾಜದಲ್ಲಿ ಯಾರು ಬಯಸುವುದಿಲ್ಲ. ಆದ್ದರಿಂದಲೇ ಬಚ್ಚೋಡಿಯಲ್ಲಿ ವಿದ್ಯಾಭ್ಯಾಸ ಮಾಡುವವರ ಸಂಖ್ಯೆ ಬಹಳ ಕಡಮೆಯಿದೆ. ಇಲ್ಲಿ ಒಬ್ಬ ಹುಡುಗ ಮಾತ್ರ ೨ನೇ ತರಗತಿಯಲ್ಲಿ ಓದುತ್ತಿರುವುದನ್ನು ನೋಡಬಹುದು. ನಾನು ನೀವು ಏಕೆ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ ಎಂದು ಕೇಳಿದ್ದಕ್ಕೆ ನಾವು ಬಡವರು ನಮ್ಮ ಮಕ್ಕಳು ಓದಿಯಾದರು ಮುಂದೆ ಏನು ಮಾಡುತ್ತಾರೆ. ನೀವೇ ಹೇಳಿ ಎಂದು ಮರು ಪ್ರಶ್ನೆಯಾಕಿ ನನ್ನನ್ನು ಕೇಳಿದರು. ಅಲ್ಲದೇ ಅವರಿಗೆ ಮೊದಲು ಊಟ ಬಟ್ಟೆಯಾ ಅವಶ್ಯಕತೆ ಇರುವುದರಿಂದ ಮಕ್ಕಳನ್ನು ಮನೆಯ ಕೆಲಸಕ್ಕೆ ಅಥವಾ ಗದ್ದೆಯಾ ಕೆಲಸಕ್ಕೆ ಕರೆದುಕೊಂಡು ಹೋಗುವುದನ್ನು ನೋಡಬಹುದಾಗಿದೆ.

ಒಟ್ಟಾರೆಯಾಗಿ ಕುಡುಬಿಯರ ಶಿಕ್ಷಣ ಬಹಳ ಕೆಳಮಟ್ಟಕಿದೆ. ಅಲ್ಲಿ ಸರಕಾರ ಪ್ರಾಥಮಿಕ ಶಾಲೆಗಳನ್ನು ತೆರೆದರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಾರೆ. ಏಕೆಂದರೆ ಇದಕ್ಕೆ ಅನಕ್ಷರತೆಯೇ ಕಾರಣ ಮತ್ತು ತಮ್ಮ ಬದುಕಿನ ನೆಲೆಯತ್ತ ಊಟ, ನಿದ್ದೆ ಮನೆಯಾದರೆ ಸಾಕು ಎಂಬ ಪ್ರವೃತ್ತಿಯನ್ನು ಕುಡುಬಿಯರು ಹೊಂದಿದ್ದಾರೆ. ಅದಕ್ಕಾಗಿ ಇವರಲ್ಲಿ ಅಭಿವೃದ್ಧಿಯ ಸ್ಪೂರ್ತಿ ಮೂಡಿಸುವ ಮುಂದಾಳುಬೇಕು. ಆಗ ಮಾತ್ರ ಈ ಸಮುದಾಯ ಮುಂದು ಬರಲು ಸಾಧ್ಯ ಇಲ್ಲದಿದ್ದರೆ ಇಲ್ಲ ಎಂದು ಹೇಳಬಹುದು.

* * *