ಕರ್ನಾಟಕ ರಾಜ್ಯದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ಸೋಲಿಗರನ್ನು ಕಾಣಬಹುದು. ಇವರ ಒಟ್ಟು ಜನಸಂಖ್ಯೆ ೨೯, ೧೯೮ (೨೦೦೧ ಇಸವಿ) ಜನಗಣತಿಯ ಪ್ರಕಾರ ಇವರು ವಿವಿಧ ತಾಲೂಕುಗಳಲ್ಲಿರುವುದನ್ನು ಕಾಣಬಹುದು. ಸೋಲಿಗರು ಪರಿಶಿಷ್ಟ ವರ್ಗಕ್ಕೆ ಸೇರಿದ್ದಾರೆ. ಇವರು ಮುಖ್ಯವಾಗಿ ಬಿ.ಆರ್. ಹಿಲ್ಸ್ ಅಭಯಾರಣ್ಯ ಪ್ರದೇಶದಲ್ಲಿ ಹೆಚ್ಚು ಸೋಲಿಗರನ್ನು ಕಾಣಬಹುದು. ಇವರು ಪುರಾತನ ಕಾಲದಿಂದಲೂ ಈ ಬಿಳಿಗಿರಿ ರಂಗನಾಥಸ್ವಾಮಿಯ ಏಳುಮಲೈ ಬೆಟ್ಟ ಪ್ರದೇಶದಲ್ಲಿ ವಾಸಿಸುತ್ತಿರುವುದಾಗಿ ಹೇಳುತ್ತಾರೆ. ಇವರು ಈ “ನೀಲಗಿರಿ”-ಜೀವಗೋಲದಲ್ಲಿ ಬಹುವಾಗಿ ಪುಟ್ಟ ಪೋಡುಗಳಲ್ಲಿ ವಾಸಿಸುತ್ತಾರೆ. ಒಂದು ಪೋಡಿನಲ್ಲಿ ಸುಮಾರು ೧೦ ರಿಂದ ೨೦ ಮನೆಗಳನ್ನು ಹೊಂದಿದ್ದಾರೆ. ಸೋಲಿಗರು ಎಂದರೆ ಬಿದುರಿನಿಂದ ಬಂದವರು ಎಂದು ಸಹ ಹೇಳುತ್ತಾರೆ ತಮಿಳು ಭಾಷೆಯಲ್ಲಿ ಸೊಲೈ ಎಂದರೆ ದಟ್ಟ ಅರಣ್ಯ ಅಥವಾ ಕಾಡು ಎಂದರ್ಥ. ಇದು ಕಾಡಿನ ಮತ್ತು ಈ ಜನರ ನಡುವಿನ ಸಂಬಂಧವನ್ನು ಸೂಚಿಸುತ್ತದೆ.

ಸೋಲಿಗರ ಲಕ್ಷಣಗಳು : ನೋಡಲು ಕಪ್ಪು ಬಣ್ಣ, ದಪ್ಪವಾದ ಮೂಗು, ನೇರವಾದ ಹಣೆ, ಸ್ವಲ್ಪ ಕಿರಿದಾಗ ಗಾತ್ರದ ಹಣೆಯನ್ನು ಹೊಂದಿದ್ದಾರೆ. ತಲೆಯಲ್ಲಿ ಗುಂಗುರು ಕೂದಲು ಹೊಂದಿದ್ದಾರೆ. ಕೆಲವರು ಉದ್ದ ಜಡೆಯನ್ನು ಸಹ ಬಿಟ್ಟರುತ್ತಾರೆ.

ಕುಲಪದ್ಧತಿ ಮತ್ತು ಸಾಮಾಜಿಕ ಜೀವನ ಶೈಲಿ  

ಸೋಲಿಗರಲ್ಲಿ ಅನೇಕ ವಿಧಗಳನ್ನು ಕಾಣಬಹುದು. ಅಂದರೆ ಸಾಮಾಜಿಕವಾಗಿ ಐದು ಕುಲ ಮತ್ತು ಏಳುಕುಲದ ಸೋಲಿಗರೆಂದು ಕರೆಯುತ್ತಾರೆ. ಚಾಮರಾಜನಗರ ಮತ್ತು ಕರ್ನಾಟಕ ಗಡಿ ಪ್ರದೇಶದಲ್ಲಿ ಐದು ಕುಲದವರನ್ನು ಕಾಣಬಹುದು. ಐದು ಕುಲ ಸೋಲಿಗರಲ್ಲಿ ವಿವಿಧ ಉಪಕುಲಗಳಿವೆ, ಅವುಗಳೆಂದರೆ ಬೆಳ್ಳೆರು, ಸೂರ್ಯರು, ತೇನಿರ‍್ನ, ಸೆಳಕರು, ಹಾಲೇರು ಪ್ರಮುಖ್ಯವಾದವು. ಈ ಐದು ಕುಲದ ಸೋಲಿಗರು ಬೇರೆಯ ಉಪಕುಲಗಳಿಗೆ ಹೋಲಿಸಿದರೆ ನಾವೇ ಹೆಚ್ಚು ಪವಿತ್ರರು ಎಂದು ಹೇಳುತ್ತಾರೆ. ಜಾತಿಯ ಕುಲ ಪಂಚಾಯಿತಿಗೆ ಪಟ್ಟೇಗಾದ, ಕೊಲ್ಕಾರ ಮತ್ತು ಛಲವಾದಿಗಳನ್ನು ಮುಖ್ಯವಾಗಿ ತೆನೇರು ಬಿಳ್ಳಿ ಮತ್ತು ಸೂರ್ಯರು ಕುಲದಿಂದ ಮಾತ್ರ ಆಯ್ಕೆ ಮಾಡುತ್ತಾರೆ. ಅದನ್ನು ವಂಶಪಾರಂಪರ್ಯವಾಗಿ ಆಚರಿಕೊಂಡು ಬಂದಿದ್ದಾರೆ. ಏಳುಕುಲದ ಸೋಲಿಗರು ಮಾತ್ರ ಬಿಳಿಗಿರಿ ಬೆಟ್ಟದ ತಪ್ಪಲಲ್ಲಿ ಮತ್ತು ದೇವಾಲಯ ಆಸುಪಾಸಿನಲ್ಲಿ ವಾಸಿಸುತ್ತಾರೆ. ಇವರಲ್ಲಿ ಒಂದೇ ಕುಲಕ್ಕೆ ಸೇರಿದವರೊಂದಿಗೆ ಮದುವೆ ಸಂಬಂಧ ನಿಷೇಧ ಇವರ ಭೌಗೋಳಿಕ ಹಿನ್ನೆಲೆಯ ಪ್ರಕಾರ ಅವರುಗಳನ್ನು ಅನೇಕ ಹೆಸರಿನಿಂದ ಕರೆಯುತ್ತಾರೆ.

೧. ಊರು ಸೋಲಿಗರು, ೨. ಮಲೆ ಸೋಲಿಗರು, ೩. ಕಾಡು ಸೋಲಿಗರು, ೪. ದೇವ ಸೋಲಿಗರೆಂದು ಸಹ ಕರೆಯುವುದುಂಟು.

ಭಾಷೆ: ಇವರು ತಮ್ಮದೇ ಆದ ಆಡುಭಾಷೆಅಥವಾ ಸೋಲಿಗರ ಭಾಷೆಯಲ್ಲಿ ಮಾತನಾಡುತ್ತಾರೆ. ಈಗ ಈ ಭಾಷೆ ಕ್ಷಿಣಿಸುತ್ತಿದೆ.

ಹಬ್ಬ ಮತ್ತು ಹರಿದಿನಗಳು : ಇವರು ಬಿಳಿಗಿರಿ ರಂಗನಾಥ ಸ್ವಾಮಿಯ ಭಕ್ತರು, ಕ್ಯತೆ ದೇವರು, ಜಡೇಸ್ವಾಮಿ, ದೊಡ್ಡ ಸಂಪಿಗೆ ಮತ್ತು ಚಿಕ್ಕಸಂಪಿಗೆ ಸೋಲಿಗರಿಗೆ ಅತ್ಯಂತ ಪ್ರಮುಖ ಪೂಜಾ ಸ್ಥಳಗಳು. ಈ ಕಾಡನ್ನು ಚಂಪಕಾರಣ್ಯವೆಂದು ಸಹ ಕರೆಯುತ್ತಾರೆ.

ಆರ್ಥಿಕ ಜೀವನ : ಇವರು ಸಂಪ್ರದಾಯಕವಾಗಿ ಕಾಡು ಮತ್ತು ಕಾಡಿನ ಕಿರು ಅರಣ್ಯ ಉತ್ಪತ್ತಿಗಳನ್ನು ಆಯ್ದು ಅದನ್ನು ತಮ್ಮ ದಿನ ನಿತ್ಯದ ಬಳಕೆಗೆ ಉಪಯೋಗಕ್ಕೆ ಉಪಯೋಗಿಸುತ್ತಾರೆ. ಬಹುಮುಖ್ಯವಾಗಿ ಇವರು ವಲಸೆ ವ್ಯವಸಾಯ ಪದ್ಧತಿಯು ರೂಢಿಯಲ್ಲಿತ್ತು. ಇದನ್ನು ಅನೇಕ ಶತಮಾನಗಳವರೆಗೆ ಮುಂದುವರಿಸಿಕೊಂಡು ಬಂದಿದ್ದರು. ಇವರ ಮುಖ್ಯ ಉದ್ದೇಶ ಫಲವತ್ತಾದ ಕಾಡು ಪ್ರದೇಶವನ್ನು ಸ್ವಚ್ಛಗೊಳಿಸಿ ಅದನ್ನು ಬೆಂಕಿಯಲ್ಲಿ ಸುಟ್ಟು ಫಲವತ್ತತೆ ಇರುವವರೆಗೆ ವ್ಯವಸಾಯ ಮಾಡಿ ಅನೇಕ ವರ್ಷಗಳ ನಂತರ ಮತ್ತೆ ಮುಂದಿನ ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಿದ್ದರು. ಈ ಪದ್ಧತಿಯು ಈಗ ಸಂಪೂರ್ಣವಾಗಿ ನಿಂತು ಹೋಗಿದೆ. ಕಾಡಿನ ಕಿರು ಅರಣ್ಯ ಉತ್ಪತ್ತಿಗಳಾದ ನಲ್ಲಿಕಾಯಿ, ಬೆಲ್ಲದ ಕಾಯಿ, ಆಂಟುವಾಳದ ಕಾಯಿ, ಸೀಗೆಕಾಯಿ, ಮರಗೆಣಸುಗಳು, ನೇವೆಗೆಣಸು, ನೊರೆಗೆಣಸು, ಬಳ್ಳಾರೆಗೆಣಸು, ಅನೇಕ ಬಗೆಯ ಪಾಚಿಗಳನ್ನು ವಿವಿಧ ಸಮೂಹಗಳಲ್ಲಿ ಅರಿಸಿ ತಂದು ಲ್ಯಾಂಪ್ಸ್ ಸೊಸೈಟಿಗಳೆ ಮಾರಿ ಜೀವನ ನಡೆಸುತ್ತಿದ್ದರು ಮತ್ತು ಕೆಲವು ಈ ಕಿರು ಉತ್ಪನ್ನಗಳನ್ನು ದಲ್ಲಾಳಿಗಳಿಗೆ ಮಾರಿ ತಮಗೆ ಬೇಕಾದ ದಿನ ನಿತ್ಯದ ಬಳಕೆಯ ವಸ್ತುಗಳನ್ನು ಖರೀದಿಸುತ್ತಾರೆ. ಈಗ ಬಹುತೇಕ ಸೋಲಿಗರು ಅರಣ್ಯ ಇಲಾಖೆಯಲ್ಲಿ ಅನೇಕ ವೃತ್ತಿಯಲ್ಲಿ ಮುಂದುವರಿದಿದ್ದಾರೆ. ಗಿಡಮರ ಬೆಳೆಸುವುದು ಬೆಂಕಿ ಆರಿಸುವುದು ಹೀಗೆ ಹಲವು ಹತ್ತು ಬಗೆಯ ಉದ್ಯೋಗಗಳನ್ನು ಮಾಡುತ್ತಾರೆ. ಕೆಲು ಸೋಲಿಗರು ಅಕ್ಕಪಕ್ಕದ ರೈತರ ದನಕರುಗಳನ್ನು ತಮ್ಮೊಂದಿಗೆ ಇಟ್ಟುಕೊಂಡು ವರ್ಷಕ್ಕೆ ಒಂದಿಷ್ಟು ಹಣದಲ್ಲಿ ದನಕರುಗಳನ್ನು ಸಾಕುತ್ತಾರೆ. ಕುರಿಗಳನ್ನಾದರೆ ವರ್ಷಕ್ಕೆ ಒಂದು ಕುರಿ ಮರಿಯನ್ನು ಪಡೆದು ವರ್ಷವಿಡಿ ಕುರಿಯ ಆರೈಕೆ ಮಾಡುತ್ತಾರೆ.

ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ ಸ್ಥಳ ಮದ್ದೂರು ಕಾಲೋನಿ

ಸ್ಥಳ ಪರಿಚಯ : ಮದ್ದೂರು ಕಾಲೋನಿಯು ಗುಂಡ್ಲುಪೇಟೆಯಿಂದ ಸುಮಾರು ೧೫ ಕಿ.ಮೀ. ದೂರದಲ್ಲಿ ಕೇರಳದ ಕಲ್ಲುಪೆಟ್ಟಾಗೆ ಹೋಗುವ ದಾರಿಯಿಂದ ಸುಮಾರು ೩ ಕಿ.ಮೀ. ಒಳದಾರಿಯಿಂದ ಸಂಚರಿಸಿದರೆ ಸಿಗುವ ಪುಟ್ಟ ಗ್ರಾಮವೇ ಮದ್ದೂರು ಕಾಲೋನಿ, ಸುಮಾರು ೩೦-೩೫ ವರ್ಷಗಳ ಹಿಂದೆ ಅಭಯಾರಣ್ಯಗಳಲ್ಲಿ ವಾಸವಾಗಿದ್ದ ಸೋಲಿಗರು. ಬೆಟ್ಟ ಕುರುಬರು ಮತ್ತು ಜೇನು ಕುರುಬರನ್ನು ಕಾಡಿನಿಂದ ಸ್ಥಳಾಂತರ ಮಾಡಿದ ಕಾಲೋನಿ ಇದಾಗಿದೆ. ಈ ಕಾಲೋನಿಯಲ್ಲಿ ಪ್ರಮುಖವಾಗಿ ಸೋಲಿಗರು ೩೩ ಕುಟುಂಬಗಳು, ಕಾಡು ಕುರುಬರ ಸಂಖ್ಯೆ ೨೨ ಮತ್ತು ಜೇನುಕುರುಬರ ಸಂಖ್ಯೆ ೨೬ ಕುಟುಂಬಗಳು, ಪ್ರಮುಖ ರಸ್ತೆ ಎರಡು ಬದಿಗಳಲ್ಲಿ ಸೋಲಿಗರು ವಾಸವಾಗಿದ್ದಾರೆ. ಹಾಡಿಯ ಬಲಭಾಗದ ಶಾಲೆಯ ಹಿಂಬದಿಯ ಗೋಡೆಯ ಹಿಂದೆ ಜೇನು ಕುರುಬರ ಮನೆಗಳನ್ನು ಕಾಣಬಹುದು. ಬೆಟ್ಟ ಕುರುಬರು ಜೇನು ಕುರುಬರ ಮತ್ತು ಸೋಲಿಗರ ಗುಂಪಿನಿಂದ ಸ್ವಲ್ಪ ದೂರಗಳಲ್ಲಿ ಗುಂಪಾಗಿ ವಾಸಿಸುತ್ತಿದ್ದಾರೆ. ಇಲ್ಲಿ ಸರ್ಕಾರದ ವತಿಯಿಂದ ಮನೆಗಳನ್ನು ಕಟ್ಟಿಕೊಡಲಾಗಿದೆ. ಕುಡಿಯಲು ನೀರು, ಶಾಲೆಗಳನ್ನು ಕಟ್ಟಿಕೊಡಲಾಗಿದೆ.

ಪರಿವರ್ತನೆಯ ಹಾದಿಯಲ್ಲಿ ಸೋಲಿಗರು

ಸೋಲಿಗರಲ್ಲಿ ಇರುವ ಒಂದು ವಿಶೇಷವಾದ ಹೆರಿಗೆ ಕ್ರಮವೆಂದರೆ ಗಾಲಿನಲ್ಲಿ ಕುಳಿತುಕೊಂಡು ಹೆರಿಗೆ ಮಾಡಿಸುವುದು, ಇದರಿಂದ ಬಹುಬೇಗ ಹೆರಿಗೆ ಆಗುವುದು ಮತ್ತು ಸಿಸೆರಿಯನ್ ಸಂಖ್ಯೆಯು ಕಡಿಮೆ. ಈ ಪದ್ಧತಿ ಇಂದಿಗೂ ರೂಢಿಯಲ್ಲಿದೆ. ಇಂದಿಗೂ ವಿ.ಜೆ.ಕೆ.ಕೆ.ಯಲ್ಲಿ ಈ ರೀತಿಯ ಹೆರಿಗೆ ಪದ್ಧತಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಸೋಲಿಗರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಹಳ ಹಿಂದುಳಿದವರಾಗಿದ್ದಾರೆ. ಕಾಡಿನಲ್ಲಿ ವಾಸವಾಗಿದ್ದು, ಇವರನ್ನು ಬಂಡೀಪುರದ ಅಭಯಾರಣ್ಯ ವ್ಯಾಪ್ತಿಯಲ್ಲಿರುವ ಎಲ್ಲಾ ಬುಡಕಟ್ಟು ಜನರನ್ನು ಸ್ಥಳಾಂತರ ಮಾಡಲಾಯಿತು. ಮದ್ದೂರು ಕಾಲೋನಿಗೆ ಬರುವುದಕ್ಕಿಂತ ಮುಂಚೆ ಇವರ ಜೀವನ ಶೈಲಿ, ಆಹಾರ ಪದ್ಧತಿ, ಕುಟುಂಬ, ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿದರೆ. ಪರಿವರ್ತನೆಯ ಹಾದಿಯಲ್ಲಿ ಅನೇಕ ಏಳುಬೀಳುಗಳನ್ನು ಕಂಡುಕೊಂಡಿದ್ದಾರೆ. ಕಾಡಿನ ಕಿರು ಉತ್ಪನ್ನಗಳನ್ನ ಅರಿಸಿ ತಂದು ಜೀವನ ಸಾಗಿಸುತ್ತಿದ್ದ ಇವರು ಕಾಲ ಕ್ರಮೇಣ ಅವುಗಳನ್ನು ಅರಿಸಿ ತಂದು ಲ್ಯಾಂಪ್ಸ್ ಸೊಸೈಟಿಗೆ ಮಾರಾಟ ಮಾಡಿ ಜೀವನಕ್ಕೆ ಆಧಾರವನ್ನು ಮಾಡಿಕೊಂಡಿದ್ದಾರೆ. ಇಲ್ಲಿಯ ಸೋಲಿಗರು ಕಾಡಂಚಿನಲ್ಲಿರುವುದರಿಂದ ಹೇರಳವಾಗಿ ಸೌದೆ ಸಿಗುತ್ತದೆ. ಇದನ್ನು ತಂದು ಅಕ್ಕಪಕ್ಕ ಊರುಗಳಿಗೆ ಹೋಗಿ ಒಂದು ಹೊರೆ ಸೌದೆಗೆ ೫೦ರಿಂದ ೧೦೦ ರೂ.ಗೆ ಮಾರಿ ಜೀವನ ಸಾಗಿಸುವ ಅನೇಕ ಯುವಕರನ್ನು ಕಾಣಬಹುದು. ಶೇ. ೧೪.೦೦ ರಷ್ಟು ಜನರು ಈ ವೃತ್ತಿಯನ್ನೇ ಅವಲಂಬಿಸಿದ್ದಾರೆ. ಸರ್ಕಾರವು ಕಿರು ಉತ್ಪನ್ನಗಳನ್ನು ಸಂಗ್ರಹಿಸುವುದನ್ನು ನಿಷೇಧಿಸಲಾಗಿದೆ. ಆದರೂ ಇವರು ಅಕ್ರಮವಾಗಿ ಸಂಗ್ರಹಿಸುವ ಸೀಗೆಕಾಯಿ, ಆಂಟುವಾಳ, ತಾರೆ, ಅರಳೆಕಾಯಿ, ಚಾಲ, ಮಾಕಳಿಬೇರು, ಪಾಚಿಯನ್ನು ಸಂಗ್ರಹಿಸುತ್ತಾರೆ. ಈಗಲೂ ಮಳೆಗಾಲದಲ್ಲಿ ಗುಂಪು-ಗುಂಪಾಗಿ ಐದು ಆರು ಜನರು ಕಾಡಿನಲ್ಲಿ ಎರಡು-ಮೂರು ದಿನಗಳ ಕಾಲ ಸುತ್ತಿ ಪಾಚಿಯನ್ನು ಸಂಗ್ರಹಿಸಿ ಗುಂಡ್ಲುಪೇಟೆಯಲ್ಲಿ ಮಾರಾಟ ಮಾಡುತ್ತಾರೆ. ನೆಲ್ಲಿಕಾಯಿಯನ್ನು ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಸಂಗ್ರಹಿಸುತ್ತಾರೆ ಅದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಲ್ಯಾಂಪ್ಸ್ ಸೊಸೈಟಿಯವರು ಕೆ.ಜಿ.ಗೆ ೩.೫೦ ರಿಂದ ೫.೫೦ ರಂತೆ ಕೊಳ್ಳುತ್ತಿದ್ದಾರೆ ಲ್ಯಾಂಪ್ಸ್‌ಸೊಸೈಟಿಯು ೧೦ ವರ್ಷಗಳಲ್ಲಿ ಸಂಗ್ರಹಿಸಿದ ನಲ್ಲಿಕಾಯಿ ದಾಖಲೆಗಳು.

ಕಳೆದ ನಾಲ್ಕು ವರ್ಷಗಳಿಂದ ದಾಖಲೆಗಳಿಲ್ಲ. ಕಾರಣ ಸಂಗ್ರಹಣೆಗೆ ಪ್ರೋತ್ಸಾಹವಿಲ್ಲ. ಅಕ್ರಮವಾಗಿ ಸಂಗ್ರಹಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ.

ಪಾಚಿ : ಉದ್ದಿಮೆಗಳು ರಾಸಾಯನಿಕ ತಯಾರಿಕೆಗೆ ಉಪಯೋಗಿಸುತ್ತಾರೆ. ಇದು ಕೆಜಿ.ಗೆ ೭೦ರಿಂದ ೮೦ ರೂ.ಗೆ ಮಾರಾಟ ಮಾಡುಲಾಗುತ್ತೆ.

ಜೇನು  

ಹಿಂದಿನಿಂದಲೂ ಜೇನುತುಪ್ಪ ಸಂಗ್ರಹಣೆ ಸೋಲಿಗರಿಗೆ ಒಂದು ಮುಖ್ಯವಾದ ಕಸುಬಾಗಿತ್ತು. ಬಿಳಿಗಿರಿರಂಗಯ್ಯನ ಬೆಟ್ಟದ ದಟ್ಟವಾದ ಕಾಡಿನಲ್ಲಿ, ಬೆಟ್ಟದ ಕಲ್ಲು ಬಂಡೆಗಳಲ್ಲಿ ಜೇನುತುಪ್ಪವನ್ನು ಸಂಪ್ರಾದಾಯಿಕ ರೀತಿಯಲ್ಲಿ ಕಿತ್ತು ಮಡಿಕೆಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಮಳೆಗಾಲದಲ್ಲಿ ಆಹಾರದ ಕೊರತೆ ಕಂಡಾಗ ಜೇನುತುಪ್ಪವನ್ನು ಆಹಾರವಾಗಿ ಬಳಸುತ್ತಿದ್ದರು. ಈಗ ಸರ್ಕಾರದ ವತಿಯಿಂದ ಆಧುನಿಕ ಸಾಮಾಗ್ರಿಗಳನ್ನು ನೀಡಿ ಅದರಿಂದ ಜೇನುತುಪ್ಪ ಸಂಗ್ರಹಣೆಯನ್ನು ಮಾಡುವ ವಿಧಾನವನ್ನು ತರಬೇತಿ ನೀಡಿ, ಜೇನು ನೊಣದ ಕಡಿತವನ್ನು ತಡೆಯಲು ಮುಖವಾಡ ಕೈ ಚೀಲ, ಸಂಪೂರ್ಣವಾದ ಮೈಗೆ ಕವಚ ದೊಡ್ಡ ದೊಡ್ಡ ಮರವನ್ನೇರಲು ಹಗ್ಗದ ಏಣಿ, ಜೇನು ಸಂಗ್ರಹಣೆಗೆ ಡಬ್ಬಗಳನ್ನು ನೀಡಿದ್ದಾರೆ. ಈ ಗ್ರಾಮದಲ್ಲಿ ಒಟ್ಟು ಹತ್ತು ಕುಟುಂಬದ ಸದಸ್ಯರು ಈ ತರಬೇತಿಯನ್ನು ಮತ್ತು ಆಧುನಿಕ ಉಪಕರಣಗಳನ್ನು ಹೊಂದಿದ್ದಾರೆ. ಈ ಆಧುನಿಕ ಉಪಕರಣದಿಂದ ಜೇನು ನೊಣವನ್ನು ಓಡಿಸಲು ಬೆಂಕಿಯಿಟ್ಟು ಸುಡುವುದರಿಂದ ಜೇನು ಉತ್ಪನ್ನ ಕಡಿಮೆಯಾಗುತ್ತಿತ್ತು. ಇಲ್ಲಿ ಬಹುವಾಗಿ ೪ ವಿಧವಾದ ಜೇನುಗಳನ್ನು ಕಾಣಬಹುದು.

. ಹೆಜ್ಜೇನು
. ತುಡುವೆ ಜೇನು
. ಕಡ್ಡಿ ಜೇನು
. ನುಸರಿ ಜೇನು

ಇಳುವರಿಯನ್ನು ನೋಡಿದರೆ ಆಧುನಿಕ ತಂತ್ರಜ್ಞಾನದಿಂದ ಉತ್ತಮ ಇಳುವರಿಯನ್ನು ಕಾಣಬಹುದು. ಇವರು ಬಹುಮುಖ್ಯವಾಗಿ ಆಹಾರಕ್ಕಾಗಿ ಮತ್ತು ಔಷಧಿಗಾಗಿ ಜೇನನ್ನು ಉಪಯೋಗವಾಗುತ್ತಾರೆ. ಜೇನುತುಪ್ಪ ಕೆಜಿಗೆ ೧೦೦ರಂತೆ ಮಾರಾಟ ಮಾಡುತ್ತಾರೆ.

ಅಂಟುವಾಳ : ಲ್ಯಾಂಪ್ಸ್ ಸೊಸೈಟಿಯು ಕೆ.ಜಿ. ೪.೯೦ರಂತೆ ನಿಗದಿ ಮಾಡಲಾಗಿತ್ತು. ನಂತರ ೨೦೦೩ರಲ್ಲಿ ೭.೮೦ ರೂ, ನಿಗದಿ ಮಾಡಲಾಗಿದೆ. ಇದನ್ನು ಬಹುತೇಕ ಎಲ್ಲರೂ ಈ ಹಾಡಿನಲ್ಲಿ ಸಂಗ್ರಹಿಡುತ್ತಾರೆ. ಕಾರಣ ಇದಕ್ಕೆ ಇವರು ಬಹುವಾಗಿ ಸ್ನಾನಕ್ಕೆ ಬಟ್ಟೆ ತೊಳೆಯಲು ಚಿನ್ನ ಬೆಳ್ಳಿ ತೊಳೆಯಲು ಅಂಟುವಾಳವನ್ನು ಬಳಸುತ್ತಾರೆ.

ಕೃಷಿ : ಸಂಪ್ರಾದಾಯಕ ರೀತಿಯಲ್ಲಿ ಮಾಡುತ್ತಿದ್ದ ಕೃಷಿ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದರಿಂದ ಇವರು ಒಂದೆಡೆ ಸ್ಥಿರವಾಗಿ ನೆಲೆಯಾಗಿ ವ್ಯವಸಾಯ ಪದ್ಧತಿಯನ್ನು ರೂಢಿಸಿಕೊಂಡರು. ಕಾಡಿನಿಂದ ಹೊರಬಂದ ನಂತರ ಭೂಮಿಯೇ ಇಲ್ಲವಾಗಿದ್ದ ಈ ಮದ್ದೂರು ಕಾಲೋನಿಯ ಸೋಲಿಗರಿಗೆ ೧೯೮೦ರಲ್ಲಿ ಸರ್ಕಾರಿ ಭೂಮಿಯನ್ನು ಹಂಚಲಾಗಿದೆ. ಈ ಭೂಮಿಯ ಹಂಚಿಕೆಯಲ್ಲಿ ಸರ್ಕಾರವು ಮದ್ದೂರಿನ ಎಲ್ಲಾ ಸೋಲಿಗರಿಗೂ, ಜೇನು ಕುರುಬರಿಗೂ ಮತ್ತು ಬೆಟ್ಟ ಕುರುಬರಿಗೆ ತಲಾ ಎರಡರಿಂದ ಐದು ಎಕರೆ ಭೂಮಿಯನ್ನು ಹಂಚಿದ್ದಾರೆ. ಅದು ಎರಡು ಅಥವಾ ಐದು ಎಕರೆ ಭೂಮಿಯನ್ನು ಒಬ್ಬರಿಗೆ ಹಂಚಿಲ್ಲ. ಪ್ರಾಣಿ ಮತ್ತು ಪಟ್ಟವನ್ನು ಎರಡು ಜನರ ಹೆಸರಿಗೆ ಬರೆಯಲಾಗಿದೆ. ಕಾರಣ ವಿನಾಃ ಕಾರಣ ಮಾರಾಟ ಮಾಡುತ್ತಾರೆಂದು ಈ ರೀತಿ ಮಾಡಲಾಗಿದೆ ಎನ್ನುತ್ತಾರೆ ಸೋಲಿಗರು.

ಈ ರೀತಿಯಿಂದ ಈ ಬಡ ಸೋಲಿಗರಿಗೂ, ಜೇನು ಕುರುಬರಿಗೂ ಬೆಟ್ಟ ಕುರುಬರಿಗೂ ಬ್ಯಾಂಕ್ ಮತ್ತು ಇತರೆ ಸೊಸೈಟಿಗಳಲ್ಲಿ ಸಾಲ ಸಿಗುವುದಿಲ್ಲ. ಒಬ್ಬ ವ್ಯಕ್ತಿಗೆ ಸಾಲ ಬೇಕಿದ್ದಲ್ಲಿ ಇನ್ನೊಬ್ಬನ ಒಪ್ಪಿಗೆ ಇರುವುದಿಲ್ಲ. ಕೇವಲ ತಮ್ಮ ಜಮೀನನ್ನ ನೆಚ್ಚಿ ಬದುಕು ಸಾಗಿಸುವುದಿಲ್ಲ. ಆದ್ದರಿಂದ ಇತರರ ಹೊಲಗಳಲ್ಲಿ ಕೂಲಿ ಮಾಡಿ ದಿನಕ್ಕೆ ೮೦ರಿಂದ ೧೦೦ ರೂ.ಗಳಿಸುತ್ತಾರೆ. ಹಳೇ ಪದ್ಧತಿಯಾದ ಬೆಳೆಯನ್ನು ತರಕಾರಿಗಳನ್ನು ಬೆಳೆಯುತ್ತಿಲ್ಲ. ಹೊಸ ಹೊಸ ತಳಿಗಳನ್ನು ರಸಗೊಬ್ಬರಗಳನ್ನು ಕ್ರಿಮಿನಾಶಕಗಳನ್ನು ಬಳಸುತ್ತಾರೆ. ಉಳುಮೆಗೆ ದನಗಳನ್ನು ಬಳಸುತ್ತಾರೆ. ಬಹುತೇಕ ಅಂದರೆ ಶೇ. ೮೫ ಕುಟುಂಬದ ಸದಸ್ಯರು ಭೂಮಿಯನ್ನು ಹೊಂದಿದ್ದಾರೆ. ಮದುವೆಯಾಗಿ ನಂತರ ಹೊಸ ಸಂಸಾರಗಳನ್ನು ಮಾಡಿಕೊಂಡಿರುವ ವ್ಯಕ್ತಿಗಳಿಗೆ ಹೊಸದಾಗಿ ಭೂಮಿ ದೊರೆತ್ತಿಲ್ಲ. ಹೆಂಗಸರು ಹೊಲ ಗದ್ದೆಗಳಲ್ಲಿ ಕೂಲಿ ಕೆಲಸ ಮಾಡಿ ಪ್ರತಿನಿತ್ಯ ೮೦ರಿಂದ ೯೦ ರೂ. ಸಂಪಾದಿಸುತ್ತಿದ್ದಾರೆ. ಸುಮಾರು ೮ ಮಂದಿ ಸೋಲಿಗರು ಕೊಳವೆ ಬಾವಿಯನ್ನು ಹೊಂದಿದ್ದು ಇದರಿಂದ ತರಕಾರಿ ಮತ್ತು ಹಣ್ಣುಗಳನ್ನು ಬೆಳೆಯುತ್ತಿದ್ದಾರೆ.

ಆಹಾರ ಪದ್ಧತಿಯಲ್ಲಿ ಬದಲಾವಣೆ : ಬಹುತೇಕ ಸೋಲಿಗರು ಕಾಡಿನಲ್ಲಿ ಸಿಗುತ್ತಿದ್ದ ಗೆಡ್ಡೆ ಗೆಣಸು ಹಣ್ಣು ಹಂಪಲವನ್ನು ಉಪಯೋಗಿಸುತ್ತಿದ್ದರು ಮತ್ತು ಕಾಡಿನಲ್ಲಿ ಬೆಳೆಯುತ್ತಿದ್ದರಾಗಿಯೇ ಮುಖ್ಯ ಆಹಾರವಾಗಿತ್ತು. ಈ ಬಡವರಿಗೆಂದು ನೀಡುವ “ರೇಷನ್ ಕಾರ್ಡ್ಇವರ ಆಹಾರ ಕ್ರಮವನ್ನೇ ಬದಲಾಯಿಸಿದೆ. ಅಕ್ಕಿ, ಗೋಧಿಯನ್ನು, ಸಕ್ಕರೆಯನ್ನು ಬಳಸಲು ಪ್ರಾರಂಭಿಸಿದ್ದಾರೆ. ಬಹುತೇಕ ಹುರಳಿಕಾಳು, ಹೆಸರುಕಾಳು, ತೊಗರಿ ಕಾಳನ್ನು ಉಪಯೋಗಿಸುತ್ತಿದ್ದ ಇವರು ಬೆಳೆ-ಕಾಳುಗಳನ್ನು ಹೆಚ್ಚಾಗಿ ಬಳಸಲು ಪ್ರಾರಂಭಿಸುತ್ತಿದ್ದಾರೆ. ಕಾಡಿನಲ್ಲಿ ಸಿಗುತ್ತಿದ್ದ ಕೆಲವು ಗೆಡ್ಡೆ, ಗೆಣಸುಗಳು ಅನೇಕ ರೋಗ, ರುಜಿನಗಳನ್ನು ವಾಸಿ ಮಾಡುತ್ತಿತ್ತು. ಇದರ ಬೆಳೆ ಕಡಿಮೆಯಾಗಿದೆ. ದನ ಕರುಗಳನ್ನು ಸಾಕಲು ಆಗದ ಅನೇಕ ಕುಟುಂಬಗಳು ಹಾಲು ಮೊಸರನ್ನು ಉಪಯೋಗಿಸುವುದು ಕಡಿಮೆಯಾಗಿದೆ. ಕಾಫೀ, ಟೀ ಹಾಲಿನಿಂದ ತಯಾರಿಸಿ ಬಳಸಲು ಪ್ರಾರಂಭಿಸಿದ್ದಾರೆ. ಬಹುತೇಕ ಜನರು ಪಕ್ಕದ ಗುಂಡ್ಲುಪೇಟೆಗೆ ಕೆಲಸಕ್ಕೆ ಹೋಗುವುದರಿಂದ ಹೋಟೆಲ್ ಊಟಕ್ಕೆ ಒಗ್ಗಿ ಹೋಗಿದ್ದಾರೆ. ಪಟ್ಟಣಕ್ಕೆ ಕೆಲಸ ಅರಸಿ ಹೋಗುವ ಜನರಿಗೆ ಹೋಟೆಲ್ ಆಹಾರ ಹೊಂದಿಕೊಳ್ಳುವಂತೆ ಮಾಡಿದೆ.

ಉಡುಗೆ ತೊಡುಗೆ : ಕಾಡಿನಲ್ಲಿ ವಾಸವಾಗಿದ್ದ ಇವರಿಗೆ ಬಹುತೇಕ ಕಡಿಮೆ ಬಟ್ಟೆ ಇದ್ದರೆ ಸಾಕು ಮತ್ತು ಹೆಂಗಸರು ಒಂದು ರೀತಿಯಲ್ಲಿ ಸೀರೆಯನ್ನು ಎದೆಯ ಮೇಲಿಂದ ಮುಸುಕು ಹಾಕಿಕೊಂಡು ಅದರ ತುದಿಯನ್ನು ಇನ್ನೊಂದು ತುದಿಯಿಂದ ಗಂಟು ಹಾಕಿ ಸೀರೆಯನ್ನು ಉಡುತ್ತಿದ್ದರು. ಈಗ ನೈಟಿಯ ಪ್ರಭಾವದಿಂದ ಬಹುತೇಕ ಮಹಿಳೆಯರ ಉಡುಪು ಸದಾ ಎಲ್ಲಾ ಕಾಲದಲ್ಲೂ “ನೈಟಿ”ಯೇ ಇವರ ಪ್ರಮುಖ ಉಡುಗೆಯಾಗಿದೆ. ಕಿವಿ, ಮೂಗು, ಕೈಗೆ ಹೊಸ ರೀತಿಯ ಅಂಗಡಿಯಿಂದ ತಂದ ಬೆಳ್ಳಿ, ಬಂಗಾರ, ಹಿತ್ತಾಳೆ ಸಾಮಾಗ್ರಿಗಳು ಅವರಿಸಿವೆ. ಗಂಡಸರ ಪಂಚೆ ಮತ್ತು ಅಂಗಿಯ ಬದಲು ಪ್ಯಾಂಟ್ ಮತ್ತು ಟೀ ಶರ್ಟ್‌ಗಳು, ಕಾಲಿಗೆ ಹೊಸ ಚಪ್ಪಲಿಗಳು ಬಂದು ಹೊಸತನ ಕಾಣುತ್ತಿದ್ದೇವೆ. ಕೈಯಲ್ಲಿ ವಾಚ್ ಮತ್ತು ಮೊಬೈಲ್‌ಗಳನ್ನು ನೋಡಬಹುದು. ಬಣ್ಣ, ಬಣ್ಣದ ಅಂಗಿಗಳನ್ನು ಕಾಣಬಹುದು. ಈ ರೀತಿಯಾಗಿ ಆಧುನಿಕ ಅವರಲ್ಲಿ ಪ್ರವೇಶ ಮಾಡಿದೆ.

ವಸತಿ ಮತ್ತು ಗೃಹೋಪಯೋಗಿ ಸಾಮಾಗ್ರಿಗಳು

ನೆರೆಕೆಯಿಂದ ಮಾಡಿದ ಹುಲ್ಲು ಗುಡಿಸಲುಗಳನ್ನು ಬಿಟ್ಟು ಇಲ್ಲಿಗೆ ಬಂದ ನಂತರ ಹೆಂಚಿನ ಮನೆ, ಇಟ್ಟಿಗೆ ಗೋಡೆಗಳ ಮನೆಯನ್ನು ನೋಡಬಹುದು. ಸಿಮೆಂಟ್ ನೆಲದ ಮನೆಯನ್ನು ನೋಡಬಹುದು. ಇದರಲ್ಲಿ ಕೇವಲ ೧೩ ಮನೆಗಳು ಮಾತ್ರ ಸಿಮೆಂಟ್ ನೆಲ ಇಲ್ಲದಾಗಿದೆ. ವಿದ್ಯುತ್ ಸೌಕರ್ಯ ಒದಗಿಸಲಾಗಿದೆ. ಕೇವಲ ೮ ಮನೆಯಲ್ಲಿ ಮಾತ್ರ ವಿದ್ಯುತ್ ನಿಲುಗಡೆಯಿಂದ ವಿದ್ಯುತ್ ಸಂಪರ್ಕವಿಲ್ಲ, ಎಂಟು ಕುಟುಂಬಗಳು ಟಿ.ವಿ.ಯನ್ನು ಹೊಂದಿದ್ದಾರೆ. ರೇಡಿಯೋ ಬಹುತೇಕ ಮನೆಯಲ್ಲಿ ನೋಡಬಹುದು ಸದಾ ಮನೆಯಲ್ಲಿ ರೇಡಿಯೋ ಹಾಡುಗಳು ಕೇಳಿ ಬರುತ್ತಿರುತ್ತದೆ. ನಾಲ್ಕು ಮನೆಯಲ್ಲಿ ಮಿಕ್ಸಿ ಬಳಕೆ ಇದೆ. ಪ್ಲಾಸ್ಟಿಕ್ ಚೇರು, ಮರದ ಮಂಚಗಳನ್ನು ನೋಡಬಹುದಾಗಿದೆ. ಮಡಿಕೆಯಿಂದ, ಇತ್ತಾಳೆ, ಅಲ್ಯೋಮಿನಿಯಂ ಪಾತ್ರೆಗಳ ಬಳಕೆ ಹೆಚ್ಚಾಗಿದೆ. ನೀರು ಸಂಗ್ರಹಣೆ ಮತ್ತು ತರಲು ಪ್ಲಾಸ್ಟಿಕ್ ಕೊಡಗಳ ಬಳಕೆಯಾಗುತ್ತಿದೆ. ದಿನನಿತ್ಯ ಬಳಕೆಗೆ ಕೊಳವೆ ಬಾವಿಯ ನೀರು ಮತ್ತು ಟ್ಯಾಂಕ್ ನೀರು ಬಳಕೆಯಾಗುತ್ತಿದೆ.

ವಿದ್ಯಾಭ್ಯಾಸ : ಬಹುತೇಕ ವಯೋವೃದ್ಧರು ಅಂದರೆ ೬೦ಕ್ಕಿಂತ ಮೇಲ್ಪಟ್ಟ ಎಲ್ಲಾ ಸೋಲಿಗರು ಶೆ. ೯೯ರಷ್ಟು ಅನಕ್ಷರಸ್ಥರು. ಈಗ ಈ ಊರಿನಲ್ಲಿ ಒಂದು ಹೈಯರ್ ಪ್ರೈಮರಿ ಶಾಲೆ, ಅಂಗನವಾಡಿ, ಆಶ್ರಮ ಶಾಲೆ ಇದೆ. ಮಕ್ಕಳ ಶಾಲಾ ದಾಖಲಾತಿ ಉತ್ತಮಗೊಂಡಿದೆ. ಶೇ. ೯೨.೧೬ರಷ್ಟು ಮಕ್ಕಳು ಆಶ್ರಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಲ್ಲಾ ಮಕ್ಕಳು ೩ ರಿಂದ ೫ ರೊಳಗಿನವು. ಅಂಗನವಾಡಿಯಲ್ಲಿ ಕಲೆಯುತ್ತಿದ್ದಾರೆ. ಸರ್ಕಾರದ ಎಲ್ಲಾ ಸವಲತ್ತುಗಳನ್ನು ಮಕ್ಕಳು ಪಡೆಯುತ್ತಿರುವುದು ಒಂದು ವಿಶೇಷ. ಪ್ರೌಢಶಾಲೆಗೆ ೬ ಗಂಡು ೩ ಹೆಣ್ಣು ಮಕ್ಕಳು ಗುಂಡ್ಲುಪೇಟೆಗೆ ಕಲಿಯಲು ಹೋಗುತ್ತಿದ್ದಾರೆ. ಕಾಲೇಜಿಗೆ ಎರಡು ಹುಡುಗರು ಗುಂಡ್ಲುಪೇಟೆ ಹಾಸ್ಟಲ್‌ನಲ್ಲಿದ್ದಾರೆ.

ಸಂಪ್ರದಾಯಗಳಲ್ಲಿ ಅನೇಕ ಬದಲಾವಣೆಗಳನ್ನು ಕಾಣಬಹುದು. ಮದುವೆ ಕಾರ್ಯಕ್ರಮಗಳು ಅಕ್ಕಪಕ್ಕದ ಜನಾಂಗಗಳಂತೆ ನವ್ಯ ರೀತಿಯಲ್ಲಿ ಶಾಸ್ತ್ರಗಳನ್ನು ಮಾಡುತ್ತಿರುವುದು ಒಂದು ವಿಶೇಷ. ಊಟ ಉಪಚಾರಗಳಲ್ಲಿ ಉಡುಗೆ ತೊಡುಗೆ, ಪೂಜೆ, ಪುನಸ್ಕಾರಗಳಲ್ಲಿ ಬಹುತೇಕ ಬದಲಾವಣೆಯನ್ನು ಕಾಣಬಹುದು, ಜಡೆ ಸ್ವಾಮಿ ಜಾತ್ರೆಯಲ್ಲಿ ಅನೇಕ ನೆರೆ ಹೊರೆಯವರು ಬಾಗಿಯಾಗುವುದು. ಊಟದಲ್ಲಿ ಹಂಚಿ ತಿನ್ನುವುದು ಕಾಣಬಹುದು. ಈ ಊರಿನಲ್ಲಿ ರೊಟ್ಟಿ ಹಬ್ಬವನ್ನು ಆಚರಿಸುತ್ತರೆ. ಮದುವೆ ಕಾರ್ಯಕ್ಕೆ ಶಾಮಿಯಾನ ಕುರ್ಚಿಗಳು ಊರಿಗೆ ತರುತ್ತಾರೆ. ಸ್ಥಳಾಂತರಗೊಂಡ ನಂತರ ಅವರ ಮಹದೇಶ್ವರ ಬೆಟ್ಟದ ಅದಿದೇವತೆಯ ಹೆಸರಿನ ದೇವಸ್ಥಾನವನ್ನು ಸಹ ಇಲ್ಲಿ ಕಟ್ಟಲಾಗಿದೆ. ಪೂಜಾರಿ ಮಾತ್ರ ಲಿಂಗಾಯಿತರು ಅವರು ಪಕ್ಕದ ಊರಿಂದ ಬರುತ್ತಾರೆ. ಊರಿಗೆ ಅನೇಕ ವಸ್ತುಗಳನ್ನು ಎಣ್ಣೆ, ಸಾಬೂನು, ಮಕ್ಕಳಿಗೆ ತಿಂಡಿ ತಿನಿಸುಗಳು, ಮೀನು, ಮಾಂಸದ ಕೋಳಿ ಮಾರಾಟ ಮಾಡಲು ಬರುತ್ತಾರೆ. ವಯೋವೃದ್ಧರಿಗಿಂತ ಯುವಪೀಳಿಗೆಯಲ್ಲಿ ಹೆಚ್ಚಿನ ಬದಲಾವಣೆಯನ್ನು, ಪರಿವರ್ತನೆಯನ್ನು ಕಾಣಬಹುದು. ಈ ವೇಗ ನೋಡಿದರೆ ಪರಿವರ್ತನೆಯ ಹಾದಿಯಲ್ಲಿ ಸೋಲಿಗರ ಸಂಸ್ಕೃತಿ ಸಂಪ್ರದಾಯ ನಿಧಾನವಾಗಿ ಮಾಯವಾಗುತ್ತಿದೆ.

* * *