ಬುಡಕಟ್ಟು ಸಮುದಾಯಗಳು ಪ್ರಸ್ತುತ ಆಧುನೀಕರಣ, ಜಾಗತೀಕರಣದಿಂದ ಬದಲಾಗುತ್ತಿವೆ. ನಗರೀಕರಣ ಪ್ರಕ್ರಿಯೆಯು ಆಧುನಿಕತೆಯ ಒಳಗಡೆಯೇ ಇರುವ ಕಾರ್ಯ, ಲಾಭದಾಯಕತೆ ಜನವಿರೋಧಿ ಧೋರಣೆಯ ವಿರುದ್ಧ ತನ್ನ ಸಂಸ್ಕೃತಿಯ ಬೇರುಗಳನ್ನು ನಾಶಪಡಿಸಿಕೊಳ್ಳುವತ್ತ ಸಾಗಿವೆ. ಸರ್ಕಾರ ಅನೇಕ ಸೌಲಭ್ಯ ಸಹಕಾರವನ್ನು ಒದಗಿಸುವುದರ ಮೂಲಕ ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿದೆ. ಇವೆಲ್ಲವುಗಳ ಹಿನ್ನಲೆಯಲ್ಲಿ ಅವರ ಬದುಕು ಕಂಡ ರೂಪಾಂತರಗಳನ್ನು ಈ ಪ್ರಬಂಧದಲ್ಲಿ ಗುರುತಿಸುವ ಪ್ರಯತ್ನ ಮಾಡಲಾಗಿದೆ. ಶೋಧನೆಗೆ ಮೊದಲು ಬುಡಕಟ್ಟು ಎಂದರೇನು? ಬುಡಕಟ್ಟಿನಲ್ಲಿ ಕಂಡುಬರುವ ಬದಲಾವಣೆಗಳನ್ನು ಗ್ರಹಿಸುವುದು ಅವಶ್ಯವೆಂದು ನಂಬಿದ್ದೇನೆ. ಬುಡಕಟ್ಟು ಜನಾಂಗವೆಂದರೆ ಯಾರು? ಇದು ಸರಳ ಪ್ರಶ್ನೆಯಲ್ಲ. ಭಾರತದಲ್ಲಿ ಬುಡಕಟ್ಟುಗಳೇ ಇಲ್ಲ ಎಂಬ ವಾದದಿಂದ ಹಿಡಿದು ಬುಡಕಟ್ಟುಗಳ ವಾಸಸ್ಥಾನ ಭಾರತ ಎನ್ನುವವರೆಗೆ ಬುಡಕಟ್ಟು ಜನಾಂಗದ ನಿರ್ವಚನದ ವ್ಯಾಪ್ತಿ ಹೊಂದಿದೆ. ಬುಡಕಟ್ಟು ಎಂಬುದರ ಪದದ ಅರ್ಥ ಬುಡ ಎಂದರೆ ಮೂಲ ಕಟ್ಟು ಎಂದರೆ ಕಟ್ಟು ಕಟ್ಟಳೆ ಆಚರಣೆ ಹಿಡಿದಿಡುವ ಪ್ರಯತ್ನ ಎಂಬ ಅರ್ಥವಿದೆ. ಒಟ್ಟಿನಲ್ಲಿ ಒಂದೇ ಮೂಲಕ್ಕೆ ಸೇರಿದ ಸಂಪ್ರದಾಯವನ್ನು ಪಾಲಿಸುವವರು ಎಂದು ಅರ್ಥೈಸಬಹುದು. ಸಾಮಾನ್ಯವಾಗಿ ಒಂದು ದೇಶದ, ಮೂಲ ನಿವಾಸಿಗಳನ್ನು ಆದಿವಾಸಿಗಳೆಂದು ಕರೆಯುತ್ತಾರೆ. ಇವರನ್ನು ಸಂಚಾರಿ ಜನಾಂಗ ಅರಣ್ಯವಾಸಿಗಳೆಂದು, ಅನಾಗರಿಕರೆಂದು, ಬುಡಕಟ್ಟು ಜನಾಂಗವೆಂದು, ಗಿರಿಜನರೆಂದು, ಕಾಡುವಾಸಿಗಳೆಂದು, ಸರ್ವಚೇತನಗಳೆಂದು ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಸ್ವಾತಂತ್ರ್ಯ ನಂತರ ಭಾರತ ಸರ್ಕಾರ ಪರಿಶಿಷ್ಟ ಜನಾಂಗ ಎಂದು ಕಾನೂನಿನ ಬೆಂಬಲ ನೀಡಿದೆ.

ಭಾರತದಲ್ಲಿ ಬ್ರಾಹ್ಮಣ, ಕ್ಷತ್ರೀಯ, ವೈಶ್ಯ, ಶೂದ್ರ ಎಂಬ ನಾಲ್ಕು ಜಾತಿಗಳು ಮಾತ್ರವಲ್ಲದೆ ಹರಿಜನರಿಂದ ಕೂಡಿದ ಐದನೇ ಜಾತಿಯು ಇದೆ. ಈ ಜಾತಿಗಳನ್ನು ಬಿಟ್ಟು ಉಳಿದ ಹಿಂದೂ ಸಾಮಾಜಿಕ ವರ್ಗಗಳನೆಲ್ಲ ಭಾರತದಲ್ಲಿ ಬುಡಕಟ್ಟುಗಳೆಂದು ಕರೆಯಬಹುದು ಎಂದು ತೀ.ನಂ. ಶಂಕರ ನಾರಾಯಣ ಅಭಿಪ್ರಾಯಪಡುತ್ತಾರೆ. ಬುಡಕಟ್ಟುತನವನ್ನು ಆಧುನಿಕ ಪೂರ್ವಸ್ಥಿತಿ, ಬುಡಕಟ್ಟುಗಳು ತಮ್ಮ ಆಧುನಿಕ ಪೂರ್ವಸ್ಥಿತಿಯಿಂದ ಆಧುನಿಕ ಸ್ಥಿತಿಗೆ ಬದಲಾವಣೆ ಹೊಂದಲೇ ಬೇಕಾಗುತ್ತದೆ. ಇದನ್ನು ವಿಕಾಸ ಹಿನ್ನಲೆಯಲ್ಲಿ ಪರಿಭಾವಿಸಿಕೊಳ್ಳಬಹುದಾಗಿದೆ. ಇಲ್ಲಿ ಬುಡಕಟ್ಟುತನವೆನ್ನುವುದು ವಿಕಾಸದಲ್ಲಿಯ ಒಂದು ಹಂತವೆಂದು ಗ್ರಹಿಸಬಹುದು. ಬುಡಕಟ್ಟುಗಳ ಅಧ್ಯಯನದ ಮೊದಲ ಹಂತ ಪ್ರಾರಂಭವಾದದ್ದು ಪಾಶ್ಚಾತ್ಯ ವಿದ್ವಾಂಸರಿಂದ ಅದು ಕ್ರೈಸ್ತ ಮಿಷನರಿಗಳಾಗಿರಬಹದು, ಅಧಿಕಾರಿಗಳಾಗಿರಬಹುದು ಅವರು ತಮ್ಮ ದಿನಚರಿ ಪ್ರವಾಸ ಕಥನಗಳಲ್ಲಿ ಉಲ್ಲೇಖಿಸಿದ ಹಲವು ಬುಡಕಟ್ಟು ಜನಾಂಗದ ಸಂಗತಿಗಳು ಇಂದಿಗೂ ಅಮೂಲ್ಯವಾಗಿದೆ. ಆಸಕ್ತ ವಿದ್ವಾಂಸರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಅಂಥ ಜನಾಂಗಗಳ ಕುರಿತು ಗಂಭೀರ ಅಧ್ಯಯನವನ್ನು ನಡೆಸಿದ್ದಾರೆ. ಅಂಥವರಲ್ಲಿ ವೆರಿಯನ್ ಎಲ್ಟಿನ್, ಲಿಮಸ್ಟರ್. ಕರ್ನಾಟಕದ ಎಚ್. ವಿ. ನಂಜುಂಡಯ್ಯ ಮತ್ತು ಎಲ್.ಕೆ. ಅನಂತ ಕೃಷ್ಣಯ್ಯರ್ ಪ್ರಮುಖರಾಗಿದ್ದಾರೆ.

ಬುಡಕಟ್ಟುಗಳು ತಮ್ಮ ಜಾಣತನದಿಂದ ಸಂಪ್ರದಾಯಗಳನ್ನು ಕಾಪಾಡಿಕೊಂಡು ಬರುವಲ್ಲಿ ಪ್ರಯತ್ನಿಸಿವೆ. ಇತಿಹಾಸವನ್ನು ತೆರೆದು ನೋಡಿದಾಗ ತಮ್ಮ ಹುಟ್ಟುವಿಕೆಯಿಂದ ಹಿಡಿದು ಪ್ರಸ್ತುತ ಕಾಲದವರೆಗೂ ಒಂದಲ್ಲ ಒಂದು ರೀತಿಯಲ್ಲಿ ಬದಲಾವಣೆಗೆ ಒಳಗಾಗಿವೆ. ಅನೇಕ ನಿಯಮಗಳು(ಕಾನೂನು) ರೂಪಿತವಾಗಿರುವುದು ಧರ್ಮ ಶಾಸ್ತ್ರದ ಮುಖಾಂತರವೇ ಈ ಬುಡಕಟ್ಟು ರೂಡಿ. ಸಂಪ್ರದಾಯ ನಂಬಿಕೆಗಳು ಅದರ ಪ್ರಭಾವಕ್ಕೆ ಒಳಗಾಗಿವೆ. ಬುಡಕಟ್ಟುಗಳು ತಮ್ಮ ಆಧುನಿಕ ಪೂರ್ವ ಸ್ಥಿತಿಯಿಂದ ಪ್ರಸ್ತುತತೆಗೆ ಸ್ಪಂದಿಸುವ ರೀತಿಯನ್ನು ನಾವು ಬದಲಾವಣೆ ಎಂದು ಗ್ರಹಿಸಬಹುದು. ಈ ಬದಲಾವಣೆಗೆ ಆಧುನಿಕ ಸೌಲಭ್ಯಗಳು, ಮನೋಧರ್ಮಗಳ ಬದಲಾವಣೆ, ನಗರೀಕರಣದ ಆಕರ್ಷಕ ಜೀವನ ಪ್ರಮುಖ ಕಾರಣವಾಗಿದೆ. ಈ ಎಲ್ಲಾ ಅಂಶಗಳು ಅಥಣಿ ತಾಲೂಕಿನ ಬೇಡರ ಹಟ್ಟಿ ಗ್ರಾಮದ ಬೇಡ ಸಮುದಾಯದ ಮೇಲೆ ಯಾವ ರೀತಿ ಪ್ರಭಾವ ಬೀರಿದೆ ಎಂದು ತಿಳಿಯಲು ಅಲ್ಲಿ ಸಾಂಸ್ಕೃತಿಕ ಅನನ್ಯತೆ, ಭಿನ್ನತೆ, ವೈಶಿಷ್ಠತೆಗಳು ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳನ್ನು ವಿಶೇಷ ಕ್ಷೇತ್ರಾಧ್ಯಯನದ ಮೂಲಕ ಗ್ರಹಿಸಿ ಮಾಹಿತಿದಾರರನ್ನು ಸಂದರ್ಶಿಸಿ ಮಾಹಿತಿ ಸಂಗ್ರಹಿಸಿ ಪರಾಮರ್ಶಿಸಲಾಗಿದೆ.

ಬೇಡರ ಹಟ್ಟಿ ಗ್ರಾಮ: ಒಟ್ಟು ನೋಟ

ಕರ್ನಾಟಕ ರಾಜ್ಯದಲ್ಲಿ ಬುಡಕಟ್ಟು ಪಂಗಡಗಳೆಂದು ಗುರುತಿಸುವ ಮಾನದಂಡಗಳಲ್ಲಿ ಹಲವಾರು ಗೊಂದಲಗಳಿವೆ. ಈ ಗೊಂದಲಕ್ಕೆ ಮುಖ್ಯಕಾರಣ ಹಲವಾರು ಪಂಗಡಗಳು ಬುಡಕಟ್ಟು ಗುಂಪಿಗೆ ಸೇರುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿವೆ. ಈ ಪಂಗಡಗಳ ಕುರಿತು ಹಂಪಿ ವಿಶ್ವವಿದ್ಯಾಲಯ ಈಗಾಗಲೇ ಸಾಕಷ್ಟು ಕೆಲಸ ಮಾಡಿದೆ. ಕರ್ನಾಟಕದಲ್ಲಿ ೫೦ ಪರಿಶಿಷ್ಟ ಪಂಗಡಗಳನ್ನು ಗುರುತಿಸಲಾಗಿದೆ. ಅಥಣಿ ತಾಲೂಕಿನ ಬೇಡರಹಟ್ಟಿ ಗ್ರಾಮದಲ್ಲಿ ನಾಯಕ, ತಳವಾರ, ವಾಲ್ಮೀಕಿ, ಬೇಡರ ಇವೆ ಮೊದಲಾದ ಹೆಸರುಗಳಿಂದ ಗುರುತಿಸಲ್ಪಡುವ ಬೇಡರ ಬುಡಕಟ್ಟು ಪ್ರಮುಖವಾಗಿದೆ. ಬೇಡರಹಟ್ಟಿ ಗ್ರಾಮವು ಬಳ್ಳಿಗೇರಿ ಗ್ರಾಮ ಪಂಚಾಯಿತಿ ಅನಂತಪುರ ಹೋಬಳಿಯಲ್ಲಿ ಅಥಣಿಯಿಂದ ೨೧ಕಿ.ಮೀ. ದೂರದಲ್ಲಿದೆ. ಚಮಕೇರಿ, ಸಿಂಧೂರಮ ಅಡಳ್ಳಟ್ಟಿ, ಗುಂಡೆವಾಡಿ ಗ್ರಾಮಗಳ ಮಧ್ಯೆ ಗುಡ್ಡಗಳ ಇಳಿಜಾರು ಪ್ರದೇಶದಲ್ಲಿ ಹಬ್ಬಿಕೊಂಡಿದೆ. ಬೇಡರ ಹಟ್ಟಿ ಎಂಬ ಹೆಸರಿನಲ್ಲಿ ಎರಡು ಪದಗಳಿವೆ. ‘ಬೇಡರ’ ಎನ್ನುವುದು ಸಮುದಾಯ ಸೂಚಕ ಶಬ್ದವಾದರೆ ‘ಹಟ್ಟಿ’ ಎನ್ನುವುದು ಒಂದು ಗುಂಪಿನವರು ವಾಸಿಸುವ ಸ್ಥಳ, ಮನೆ. ಚಿಕ್ಕಹಳ್ಳಿ ಎಂದು ಅರ್ಥೈಸಿಕೊಳ್ಳಲಾಗುತ್ತದೆ. ಆದರೆ ಈ ಗ್ರಾಮದಲ್ಲಿ ೨೦೦೧ರ ಜನಗಣತಿ ಪ್ರಕಾರ ಪ್ರತಿಶತ ೨೯ರಷ್ಟು ಮಾತ್ರ ಬೇರೆ ಸಮುದಾಯದ ಜನರಿದ್ದಾರೆ. ಅಂದರೆ ಬಹುಸಂಖ್ಯಾತರು ಲಿಂಗಾಯಿತರೇ ಇದ್ದಾರೆ. ಇತರೆ ಹಿಂದುಳಿದ ಪಂಗಡಗಳು ಇಲ್ಲ ಇದಕ್ಕೆ ಮುಖ್ಯಕಾರಣ ಮೂಲಭೂತ ಸೌಲಭ್ಯಗಳ ಕೊರತೆಯಾಗಿದೆ. ಈ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ, ನ್ಯಾಯಬೆಲೆ ಅಂಗಡಿ, ಪ್ರೌಢಶಾಲೆ, ಸೌಲಭ್ಯಗಳಿಲ್ಲ. ಸ್ವ-ಸಹಾಯ ಸಂಘಗಳು ರಚನೆಗೊಂಡಿಲ್ಲ. ವಾಚನಾಲಯವಿಲ್ಲ. ಅಂಚೆ ಕಛೇರಿ ಹೀಗೆ ಅನೇಕ ಸೌಲಭ್ಯಗಳ ಕೊರತೆ ಇಂದಿಗೂ ಇದೆ. ಬುಡಕಟ್ಟು ನೆಲೆ ಸಾಮಾನ್ಯ ಲಕ್ಷಣಗಳ ಹಿನ್ನಲೆಯಲ್ಲಿ ಕಾಲಗತಿಯಲ್ಲಿ ಈ ಗ್ರಾಮದ ಬೇಡರ ಸಮುದಾಯ ಯಾವ ರೀತಿ ಬದಲಾವಣೆಗೊಂಡಿದೆ ಅದರ ಮುಂದಿನ ಸವಾಲುಗಳಾವುವು ಎನ್ನುವುದನ್ನು ಗುರುತಿಸಲು ಈ ಸಂಶೋಧನಾ ಪ್ರಬಂಧದಲ್ಲಿ ಪ್ರಯತ್ನಿಸಲಾಗಿದೆ.

ಬುಡಕಟ್ಟು ಸಂಸ್ಕೃತಿಯ ಅನನ್ಯತೆ: ಭಿನ್ನತೆ

ಪ್ರತ್ಯೇಕ ಸಂಸ್ಕೃತಿಯನ್ನು ಹೊಂದಿರುವುದು ಬುಡಕಟ್ಟು ಸಮುದಾಯಗಳ ಪ್ರಧಾನ ಲಕ್ಷಣಗಳಲ್ಲಿ ಒಂದು. ಸಮುದಾಯದ ಉಗಮದಿಂದ ಮುಂದುವರೆದು ಕಾಲಗತಿಯಲ್ಲಿ ಅನಿವಾರ್ಯತೆಯಿಂದ ಅನೇಕ ಬದಲಾವಣೆಗಳು ಕಂಡಿವೆ. ಬೇಡರ ಸಮುದಾಯಗಳಲ್ಲಿ ಜನನ ಸಂಬಂಧಿ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಅದರಲ್ಲಿ ಜನನದ ಬಗ್ಗೆ ಮಡಿಮೈಲಿಗೆ ಒಂದು. ಹೆರಿಗೆಯಾದ ದಿನದಿಂದ ಮೂರು, ಐದು, ಏಳು ದಿನಗಳಲ್ಲಿ ‘ಮುಟ್ಟು ಹೊರಡಿಸುವ’ ಆಚರಣೆ ಮಾಡುತ್ತಾರೆ. ಬೇವಿನಸೊಪ್ಪು, ಗೋಮೂತ್ರ(ಗಂಜಲ)ದ ಮೂಲಕ ಬಾಣಂತಿಯನ್ನು ಮತ್ತು ಮನೆಯನ್ನು ಶುದ್ಧೀಕರಿಸುತ್ತಾರೆ. ಆನನಕ್ಕೆ ಸೂತಕವಿದ್ದರೆ ಹೊಸಮರ(ಸುಪ್ಲಿ)ದಲ್ಲಿ ಹೊಸ ಬಟ್ಟೆಯನ್ನು ದಾನಮಾಡುತ್ತಾರೆ. ಮೊದಲು ಸಮುದಾಯ ದಾನ ಮಾಡುವ ಪದ್ಧತಿ ಇತ್ತು. ಆದರೆ ಈಗ ಸ್ವಾಮಿ(ಜಂಗಮ)ಗಳಿಗೆ ಕೊಡುತ್ತಾರೆ. ನಾಮಕರಣ ಮಾಡುವಾಗ ಸೋದರತ್ತೆ ಐದು ತರಹದ ಬೇರೆ ಬೇರೆ ಧಾನ್ಯಗಳ ಗುಗ್ಗರೆ ಹೊತ್ತು ಹೆಸರನ್ನು ಕರೆಯುತ್ತಾರೆ. ಹಿರಿಯರ ಹೆಸರುಗಳನ್ನು ಇಡುವ ಕ್ರಮವಿತ್ತು. ಇತ್ತೀಚೆಗೆ ತಮಗೆ ಇಷ್ಟವಾದ ಹೆಸರುಗಳನ್ನು ಕರೆಯುತ್ತಿದ್ದಾರೆ. ಮಡಿ ವಿಚಾರಗಳಲ್ಲಿಯೂ ಶಿಥಿಲತೆ ಕಂಡುಬರುತ್ತಿದೆ. ವೈಜ್ಞಾನಿಕತೆಯ ಅರಿವಿನಿಂದ ಮೂಡನಂಬಿಕೆ ಪ್ರಮಾಣ ಕಡಿಮೆಯಾಗುತ್ತಿದೆ.

ಪುಷ್ಪವತಿ (ಋತುಮತಿ) ಅಥವಾ ಮೈನೆರೆಯುವುದು

ಮೈನೆರೆದ ಹೆಣ್ಣು ತಕ್ಷಣವೇ ಬೇರೆಕಡೆ ಪ್ರತ್ಯೇಕ ಗುಡಿಸಲುಗಳಲ್ಲಿ ಇರಿಸುತ್ತಿದ್ದರು. ಈಗ ಮನೆಯಲ್ಲಿಯೇ ಒಂದು ಬೇರೆ ಕಡೆ(ಕೋಣೆ)ಯಲ್ಲಿ ಇರಿಸುತ್ತಾರೆ. ಮಧುವೆಯಾದವಳಾದರೆ ಅವಳನ್ನು ಕೂಡ್ರಿಸುವುದು ಎಂದು ಕರೆಯುವ ಕ್ರಮವಿತ್ತು. ಕೂಡಿಸಿದಾಗ ನಂಟರಿಷ್ಟರು ರುಚಿರುಚಿಯಾದ ತಿಂಡಿ ತಿನಿಸುಗಳನ್ನು ಆಕೆಗೆ ಕೊಡುವ ಕ್ರಮವಿದೆ. ಅದನ್ನು ‘ಎಡೆ’ ಎಂದು ಕರೆಯುತ್ತಿದ್ದರು. ಈ ಆಚರಣೆಗಳು ಕೆಲ ಸಮುದಾಯಗಳಲ್ಲಿ ಇರುವುದನ್ನು ಕಾಣುತ್ತೇವೆ. ಆದರೆ ಇಲ್ಲಿ ಅಲ್ಪ ಬದಲಾವಣೆಗಳನ್ನು ಗುರುತಿಸಬಹುದು.

ಮದುವೆ ಸಂಪ್ರದಾಯಗಳು : ಮದುವೆ ಸಂಪ್ರದಾಯಗಳು ಬುಡಕಟ್ಟು ಸಮುದಾಯ ಎನ್ನುವ ಅನನ್ಯತೆಯನ್ನು ಇಂದಿಗೂ ಪ್ರತಿಪಾದಿಸುತ್ತವೆ. ಮುಖ್ಯವಾಗಿ ಇಲ್ಲಿ ಹೆಣ್ಣಿಗೆ ಪ್ರಾಧಾನ್ಯತೆ ಹೆಣ್ಣಿನ ಆಯ್ಕೆಯಲ್ಲಿ ರಕ್ತಪಾವಿತ್ರ್ಯತೆಯನ್ನು ನೋಡುವುದು ಕಡ್ಡಾಯ. ಹೆಣ್ಣಿನ ಮನೆಗೆ ಗಂಡಿನವರು ಔಪಚಾರಿಕವಾಗಿ ಅಥವಾ ಅನೌಪಚಾರಿಕವಾಗಿ ಹೆಣ್ಣು ಕೇಳುವ ಕ್ರಮವಿದೆ. ಮೊದಲು ವಧುದಕ್ಷಣೆ ಜಾರಿಯಲ್ಲಿತ್ತು. ಇವತ್ತು ವರದಕ್ಷಣೆ ಪದ್ದತಿ ರೂಡಿಗೆ ಬರುತ್ತಿದೆ. ವಧು ದಕ್ಷಣೆಯನ್ನು ದಾನ್ಯದ ರೂಪದಲ್ಲಿ ಹಿರಿಯರ ಸಮ್ಮುಖದಲ್ಲಿ ನೀಡುತ್ತಿದ್ದರು. ‘ಮಂಜಿ’ ಎನ್ನುವ ಉಪನಯನ ಸಂಸ್ಕಾರ ಮದುವೆ ಸಂದರ್ಭದಲ್ಲಿ ಮಾಡುತ್ತಿದ್ದರು. ಅದಕ್ಕೆ ‘ಚಿಗರೆ’ ಚರ್ಮ ಬಳಕೆಯಲ್ಲಿತ್ತು ಎಂದು ಹಿರಿಯರು ಮಾಹಿತಿ ನೀಡಿದರು. ಅದರ ಕ್ರಮ ಈಗ ಇಲ್ಲ. ಮದುವೆಯ ಮೊದಲ ಶಾಸ್ತ್ರವಾಗಿ ಮುನ್ನ ದಿನ ರಾತ್ರಿ ಅರಿಶಿಣ ನೀರು ಹಾಕಿಕೊಂಡು ದೇವರ ಜಗಲಿಗೆ ನಮಸ್ಕರಿಸುತ್ತಾರೆ. ಹಂದರಬುತ್ತಿ ಎಂದು ಜನರು ತಿಂಡಿಗಳನ್ನು ತಂದು ಕೊಡುತ್ತಾರೆ. ಮದುವೆ ಮನೆಯವರು ತಮ್ಮ ಸಮುದಾಯದ ಕುಟುಂಬಗಳಿಗೆ ಅವುಗಳನ್ನು ಹಂಚುತ್ತಾರೆ. ಬುಡಕಟ್ಟು ಸಮುದಾಯದಲ್ಲಿಯ ಇನ್ನೊಂದು ವಿಶಿಷ್ಟ ಲಕ್ಷಣವೆಂದರೆ ಮದುಮಗ ಕೈಯಲ್ಲಿ ಕತ್ತಿ ಹಿಡಿದು ಐದು ಹೆಜ್ಜೆ ಹಾಕುತ್ತಾನೆ. ಇದು ಎಲ್ಲರಲ್ಲೂ ಇಲ್ಲ. ಕೆಲವು ವಂಶಸ್ಥರಲ್ಲಿ ಮಾತ್ರ ಕಂಡುಬರುತ್ತದೆ. ಉದಾ: ಈರಪ್ಪ(ಬೀರಪ್ಪ) ದೇವರ ಭಕ್ತರಲ್ಲಿ ಮಾತ್ರ ವೀಳ್ಯೆದ ಎಲೆ ಮಹತ್ವದ ಸ್ಥಾನ ಪಡೆದಿದೆ. ಮದುವೆ ಸಂಪ್ರದಾಯಗಳಲ್ಲಿ ಅನೇಕ ಬದಲಾವಣೆಗಳಾಗಿವೆ. ಒಂದೇ ದಿನದಲ್ಲಿ ಹೆಣ್ಣು ನೋಡುವ ಕಾರ್ಯಮಾಡಿ ಅದೇ ದಿನ ಮದುವೆಯನ್ನು ಮಾಡುತ್ತಾರೆ ಅದನ್ನು ಯಾದಿ ಮೇ ಶಾದಿ ಎಂದು ಕರೆಯುತ್ತಾರೆ. ಈ ಮದುವೆ ದುಂದುವೆಚ್ಚಕ್ಕೆ ತಡೆ ಹಾಗೂ ಬಡವರಿಗೆ ಕಾಯಕಲ್ಪವಾಗಿದೆ. ಇದು ಎಲ್ಲ ಸಮುದಾಯಗಳಲ್ಲಿ ಕಂಡುಬರುತ್ತಿದೆ.

ಹಬ್ಬಗಳು

ಇವರು ತಮ್ಮದೇಯಾದ ಯಾವುದೇ ವಿಶಿಷ್ಟ ಹಬ್ಬವನ್ನು ಉಳಿಸಿಕೊಂಡಿಲ್ಲ. ಈಗ ಪ್ರಚಲಿತವಿರುವ ಜನಪ್ರಿಯ ಹಬ್ಬಗಳನ್ನು ಕೆಲವೊಂದು ವಿಶಿಷ್ಠವಾದ ಆಚರಣೆಗಳನ್ನು ರೂಡಿಸಿಕೊಂಡಿದ್ದಾರೆ. ಅವು ಬುಡಕಟ್ಟು ಲಕ್ಷಣಗಳನ್ನು ಒಳಗೊಂಡಿವೆ. “ಯುಗಾದಿ”ಯ ಚಂದ್ರನನ್ನು ದರ್ಶಿಸಿ ಅರ್ಧಚಂದ್ರನ ಮೂಲಕ ವರ್ಷದ ಧನದಾನ್ಯ ಸೌಲಭ್ಯಗಳನ್ನು ತಿಳಿಯುವ ಪದ್ಧತಿ ಇದೆ. ಅದರಲ್ಲಿ ದಕ್ಷಿಣ ದಿಕ್ಕಿನ ತುದಿ ಹಣವನ್ನು ಉತ್ತರದಿಕ್ಕಿನ ತುದಿ ಧಾನ್ಯವನ್ನು ಪ್ರತಿನಿಧಿಸುತ್ತದೆ ಎಂದು ನಂಬಿದ್ದಾರೆ. ಬೇವು ಬೆಲ್ಲವನ್ನು ಬೆರೆಸಿ ತಿನ್ನುವುದು ಈಗಿನ ಪದ್ಧತಿ. ಆದರೆ ಅದರ ರಸತೆಗೆದು ಅದರ ಜೊತೆ ಹುಣಸೆ ರಸ ಕುಡಿಸಿ ಕುಡಿಯುವುದು ಪೂರ್ವಿಕ ಪದ್ಧತಿ ಇತ್ತು. ಆದರೆ ಈಗ ಕಾಣುವುದಿಲ್ಲ.

ದೈವಕಲ್ಪನೆ : ಸಮುದಾಯದ ಹಿರಿಯರನ್ನೇ ದೇವರೆಂದು ಭಾವಿಸುವ ಪದ್ಧತಿ ಇದೆ. ಇವರನ್ನು ದೈವವಾಗಿ ಪೂಜಿಸುವ ಸಂದರ್ಭದಲ್ಲಿ ಅವರು ಬಳಿಕೆ ಮಾಡಿದ ವಸ್ತುಗಳನ್ನು ಪೂಜಿಸುವ ಕ್ರಮವಿದೆ. ಹಿರಿಯರನ್ನು ಪೂಜಿಸುವಾಗ ಅವರ ಭಾವಚಿತ್ರ ಬಳಸದೇ ಒಂದು ಕಲ್ಲು ಅಥವಾ ಹಿತ್ತಾಳೆ ಚೆಂಬು ಪೂಜಿಸುತ್ತಾರೆ. ಇದನ್ನು ಇವತ್ತಿಗೂ ಕಾಣುತ್ತೇವೆ. ಪರಿಸರದ ಪ್ರಭಾವದಿಂದ ಬೇರೆ ಬೇರೆ ದೇವತೆಗಳನ್ನು ಕೂಡ ಪೂಜಿಸುತ್ತಿದ್ದಾರೆ. ಉದಾ: ಪಾಂಡವಪುರ ವಿಠಲ ಬಬಲಾದಿ ಸದಾಶಿವ, ಮುಂತಾದವು ಮಾತೃದೇವತೆಯ ಆರಾಧಕರು, ಲಕ್ಷ್ಮಿ ಸಾಮಾನ್ಯವಾಗಿ ಎಲ್ಲರಿಂದ ಪೂಜಿಸಲ್ಪಡುವ ದೇವತೆ ಅಷ್ಟೇ ಅಲ್ಲದೆ ತಮ್ಮ ತಮ್ಮ ಮನೆಗಳಿಗೆ ತಮ್ಮದೇಯಾದ ದೇವರುಗಳನ್ನು ಗುರುತಿಸಿಕೊಂಡಿದ್ದಾರೆ. ಉದಾ: ಬೆಳಗಾಂ ಬಸವಣ್ಣ, ಕೊಕಟನೂರು ಎಲ್ಲಮ್ಮ, ಹೀಗೆ ಇವರ ದೇವರ ನಂಬಿಕೆಯಲ್ಲಿ ದ್ರಾವಿಡರ ಲಕ್ಷಣಗಳನ್ನು ಕಾಣುತ್ತೇವೆ.

ಸಾವಿನ ಆಚರಣೆಗಳು : ಸತ್ತ ವ್ಯಕ್ತಿಯೂ ಕಾಗೆಯ ರೂಪದಲ್ಲಿ ಮೂರನೇ ದಿನ ತನ್ನ ಸಮಾಧಿಯ ಸ್ಥಳದಲ್ಲಿ ಬರುವನೆಂದು ನಂಬಿಕೆ ಇದೆ. ವ್ಯಕ್ತಿಗೆ ಇಷ್ಟವಾದ ಅಡುಗೆಯನ್ನು ಮಾಡಿ ಇಡುತ್ತಾರೆ ಇದಕ್ಕೆ “ಮೂರು ಕೂಳು” ಎಂದು ಹೆಸರು ಇದೆ. ಸತ್ತ ಮೂರನೇ ದಿನ ಕಾರ್ಯ ಮಾಡುತ್ತಾರೆ. ನೆಂಟರು ರಕ್ತ ಸಂಬಂಧಿಗಳು ಕೂಡಿ ಸತ್ತ ವ್ಯಕ್ತಿಗೆ ಇಷ್ಟವಾದ ಪದಾರ್ಥಗಳನ್ನು ಮಾಡಿ ಸತ್ತ ವ್ಯಕ್ತಿಯ ವಯಸ್ಸಿನವರು ಅವರ ಲಕ್ಷಣ ಹೋಲುವವರನ್ನು ಕರೆಯಿಸಿ ಊಟಕ್ಕೆ ಹಾಕುತ್ತಾರೆ.

ಬೆಡಗು : ಬೇಡರ ಸಮುದಾಯದಲ್ಲಿ ‘ಬೆಡಗು’ಎಂಬ ವಿಶಿಷ್ಟ ಕಲ್ಪನೆ ಇದೆ. ಇದರನ್ನು ರಕ್ತಸಂಬಂಧವನ್ನು ಗುರುತಿಸಲು ಉಪಯೋಗಿಸುತ್ತಾರೆ. ಬೆಡಗು ಎಂದರೆ ಇಲ್ಲಿ ಕಳ್ಳುಬಳ್ಳಿ ಸಂಬಂಧ ಎಂದು ಅರ್ಥೈಸಲಾಗಿದೆ. ಒಂದೇ ಬೆಡಗಿನವರ ಮಧ್ಯೆ ವಧು-ವರ ಕೊಡು ಕೊಳ್ಳುವಿಕೆ ನಡೆಯುವುದಿಲ್ಲ. ಬೆಡಗುಗಳನ್ನು ‘ಸೂರ್ಯವಂಶ’ ಚಂದ್ರವಂಶ ಎಂದು ಡಾ. ಎಸ್.ಎಂ. ಮುತ್ತಯ್ಯರವರು ಹೇಳುವ ಎರಡು ವಿಭಾಗ ಕ್ರಮ ಬೇಡರ ಹಟ್ಟಿ ಗ್ರಾಮದಲ್ಲಿ ನನ್ನ ಗಮನಕ್ಕೆ ಬಂದಿಲ್ಲ. ಇಲ್ಲಿ ಮಲ್ಲನೋರು, ಗುಜಲದವರು ಬಾಚನಕನವರ ಗಾಡಲವರ ಎಂಬ ಬೆಡಗುಗಳಿವೆ. ಬದಲಾವಣೆಯ ಗಾಳಿ ಬೀಸಿದರು. ‘ಬೆಡಗಿನ’ ಕಲ್ಪನೆಯಲ್ಲಿ ಬದಲಾವಣೆ ಕಂಡುಬರುವುದಿಲ್ಲ. ಮದುವೆ ಸಂದರ್ಭದಲ್ಲಿ ಕಡ್ಡಾಯವಾಗಿ ಇದನ್ನು ಅನುಲಕ್ಷಿಸಿ ಮದುವೆ ಮಾಡುತ್ತಾರೆ.

ಅತಿಯಾದ ಪ್ರಾವಿತ್ರ್ಯತೆ : ಬೇಡರ ಸಮುದಾಯಗಳಲ್ಲಿ ಪಾವಿತ್ರ್ಯಕ್ಕೆ ಅತಿಯಾದ ಮಹತ್ವವಿದೆ. ಒಬ್ಬರ ಎಂಜಲನ್ನು ಇನ್ನೊಬ್ಬರು ತಿನ್ನುವುದನ್ನು ನಿಷೇಧಿಸಲಾಗಿತ್ತು. ಈಗ ಶಿಥಿಲಗೊಂಡಿದೆ. ಎಲ್ಲಾ ಕಾರ್ಯಕ್ರಮದಲ್ಲಿ ಪಾವಿತ್ತ್ಯತೆ, ರಕ್ತಪಾವಿತ್ತ್ಯತೆಗೆ ಮಹತ್ವ ನೀಡುತ್ತಾರೆ. ಪಾವಿತ್ತ್ಯತೆಯನ್ನು ಕಳೆದುಕೊಂಡು ವ್ಯಕ್ತಿಯನ್ನು ಶುದ್ಧೀಕರಿಸುವ ಮೂಲಕ ಸಮುದಾಯಕ್ಕೆ ಸೇರಿಸಿಕೊಳ್ಳುತ್ತಿದ್ದರು. ಉದಾ: ಶಿಕ್ಷೆಗೊಳಗಾಗಿ ಜೈಲಿಗೆ ಹೋಗಿ ಬಂದು ಮರಳಿ ಸಮುದಾಯವನ್ನು ಸೇರಲು ಬಯಸಿದರೆ ಆತನ ನಾಲಿಗೆಯನ್ನು ಮೂರು ಹತ್ತಿರ ಉದ್ದಿನಕಡ್ಡಿಯಿಂದ ಸುಟ್ಟು ಶುದ್ಧಿಮಾಡುವ ಪದ್ಧತಿ ಇತ್ತು. ಈಗ ಕಾಣುವುದಿಲ್ಲ. ಪಾವಿತ್ತ್ಯತೆಯಲ್ಲಿ ರಾಜಿ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ.

ನ್ಯಾಯ ಪಂಚಾಯಿತಿ : ತಮ್ಮ ಸಮುದಾಯದ ಸಾಮಾಜಿಕ ಸಮಸ್ಯೆಗಳಿಗೆ ಸಮುದಾಯದ ಮುಖಂಡರೆ ತೀರ್ಮಾನ ನೀಡುತ್ತಾರೆ. ಒಪ್ಪಿಗೆ ಆಗದ ತೀರ್ಮಾನಗಳಿಗೆ ಗುರುಪೀಠದವರೆಗೆ ಹೋಗುವ ಪದ್ಧತಿ ಇದೆ. ಸಮುದಾಯದಿಂದ ಹೊರಗೆ ಜರಗುವ ಅಪರಾಧಗಳಿಗೆ ಪೊಲೀಸ್ ಠಾಣೆಗೆ ಹೋದ ಉದಾಹರಣೆಗಳಿವೆ.

ಆಹಾರ ಪದ್ದತಿ : ಪ್ರಸ್ತುತ ಆಹಾರ ಪದ್ಧತಿಯಲ್ಲಿ ಯಾವುದೇ ವಿಶಿಷ್ಟ ಲಕ್ಷಣಗಳು ಕಂಡುಬರುವುದಿಲ್ಲ. ಈ ಭಾಗದಲ್ಲಿ ಬೆಳೆಯುವ ಆಹಾರ ಧಾನ್ಯಗಳಾದ ಜೋಳ-ಗೋಧಿ, ಗೋ-ಜೋಳ ದ್ವಿದಳ ಧಾನ್ಯಗಳಾದ ಮುಕನಿ, ಹೆಸರು, ತೊಗರೆ, ಬೆಳೆಗಳನ್ನು ಹೈನೋತ್ಪಾದನೆಗಳನ್ನು ಬಳಸುತ್ತಾರೆ. ಆದರೆ ಕೆಲವು ಬೆಡಗಿನವರಲ್ಲಿ ಕೆಲವು ಆಹಾರಗಳ ನಿಷೇಧವಿರುವುದು ಕಂಡುಬರುತ್ತದೆ. ಉದಾ: ‘ಲಿಂಗನವರಿಗೆ’ ‘ಈಚಲು’ ಚಾಪೆ ಮತ್ತು ಈಚಲು ಹಣ್ಣು ನಿಷೇದ. ಬೇಟೆಯಾಡಿದಂತ ಮೊಲ, ಚಿಗರೆ, ಉಡ, ಕಾಡುಕೋಳಿ ಪಾರಿವಾಳ, ಕೌಜಗಗಳನ್ನು ತಿನ್ನುತ್ತಾರೆ. ಅಲ್ಲದೇ ಕೋಳಿ, ಕುರಿ, ಆಡು ಇವು ಅವರ ಮಾಂಸಾಹಾರಗಳು. ಆದರೆ ಯಾವುದೇ ನಿರ್ದಿಷ್ಟ ನಿರ್ಬಂಧಗಳು ಎಲ್ಲ ಕುಟುಂಬಗಳಿಗಿಲ್ಲ ಕೆಲವು ಜನರು ಮಾಂಸಾಹಾರ ತ್ಯಜಿಸಿರುವ ಉದಾಹರಣೆಗಳು ಇದೆ.

ಬೇಟೆ : ಬೇಟೆಯಾಡುವುದು ಈ ಜನಾಂಗದ ಪ್ರಮುಖ ರೂಢಿಗಳಲ್ಲಿ ಒಂದು. ಬೇಡರೆಂದರೆ ಬೇಟೆಗಾರರೆಂದು ಕರೆಸಿಕೊಂಡು ಜನ ಇವರ ಬೇಟೆಯಲ್ಲಿ ಎರಡು ವಿಧ. ಒಂದು ನೆಲೆ ಬೇಟೆ, ಜಲ ಬೇಟೆ. ನೆಲ ಬೇಟೆಯಲ್ಲಿ ಪ್ರಾಣಿ ಪಕ್ಷಿಗಳ ಬೇಟೆಯಾಡುತ್ತಾರೆ. ಪ್ರಾಣಿಗಳಲ್ಲಿ ಮುಖ್ಯವಾಗಿ ಮೊಲ ಈ ಪ್ರದೇಶದಲ್ಲಿ ದೊರೆಯುವ ಪ್ರಾಣಿ. ಪಕ್ಷಿಗಳಲ್ಲಿ ಪಾರಿವಾಳ, ಕಾಡುಕೋಳಿಗಳು ದೊರೆಯುತ್ತವೆ. ಜಲಬೇಟೆಯಲ್ಲಿ ಮೀನು, ಏಡಿಗಳನ್ನು ಬೇಟಿಯಾಡುತ್ತಾರೆ. ಅನ್ಯ ಬೇಟೆ ನಿರ್ಧಿಷ್ಟ ಸಮಯದಲ್ಲಿ ಮಳೆಗಾಲದಲ್ಲಿ ಮಾತ್ರ ನಡೆಯುತ್ತದೆ. ನೆಲ ಬೇಟೆ ಪ್ರಚಲಿತವಿರುವುದು ಪ್ರಮುಖ ಹಬ್ಬಗಳ ನಂತರದಲ್ಲಿ ಬರುವ ಕರಿ ಅಥವಾ ಪಾಢ್ಯ ದಿನ ಬೇಟೆಗೆ ಹೋಗುತ್ತಾರೆ. (ಯುಗಾದಿ, ಹೋಳಿ ಹುಣ್ಣಿಮೆ, ಕಾರ ಹುಣ್ಣಿಮೆ) ಇವರ ಬೇಟೆಗೆ ಬಳ್ಳಿಗೇರಿ, ಬಾಡಗಿ, ಗುಡ್ಡಗಾಡ, ಬಸರಾಗಿ, ಸಿಂಧೂರ, ಗುಂಡೇವಾಡಿ, ವಿಜಾಪುರ ಹಾಗೂ ಗೋಕಾಕ್‌ಗಳವರೆಗೆ ಹೋಗಿ ಬೇಟೆಯಾಡುತ್ತಾರೆ. ೨೫ ರಿಂದ ೩೦ ಜನರ ತಂಡಗಳಾಗಿ ಬೇಟೆಗೆ ಹೋಗುತ್ತಾರೆ. ಅತಿ ಹೆಚ್ಚು ಬೇಟೆ ತಂದವರಿಗೆ ಸಮುದಾಯದಲ್ಲಿ ವಿಶಿಷ್ಟವಾದ ಗೌರವವಿದೆ. ಅವರನ್ನು ಮೆರವಣಿಗೆ ಮೂಲಕ ಊರಿಗೆ ಕರೆತರಲಾಗುತ್ತದೆ. ಇವತ್ತು ಇಲ್ಲಿ ೫೦ ಬೇಟೆ ನಾಯಿಗಳಿವೆ. ನಾಯಿಗಳನ್ನು ವಿಜಾಪುರದಿಂದ ಕೊಂಡು ತರುತ್ತಾರೆ. ಆದರೆ ಇಂದು ಅರಣ್ಯ ಕಾಯಿದೆ ಪ್ರಕಾರ ಬೇಟೆ ಪದ್ದತಿ ನಿಂತು ಹೋಗಿರುವುದರಿಂದ ಹೀಗಾಗಿ ಬೇಟೆಗೆ ಹೋಗುವ ಪದ್ದತಿ ಸಂಪೂರ್ಣವಾಗಿ ನಿಲುಗಡೆಯಾಗಿದೆ.

ಉಪಸಂಹಾರ : ಈ ಸಮುದಾಯ ತನ್ನ ಸಂಸ್ಕೃತಿಯ ಬೇರುಗಳನ್ನು ಕಳೆದುಕೊಳ್ಳುತ್ತಾ ಆಧುನೀಕರಣದೊಂದಿಗೆ ದಾಪುಗಾಲು ಹಾಕುತ್ತಿದೆ. ಇತ್ತೀಚೆಗೆ ಮೊಬೈಲ್ ಬಳಿಕೆಯು ಪ್ರಾರಂಭವಾಗಿದೆ. ಕೆಲವು ವಿದ್ಯಾರ್ಥಿಗಳು ಪಿಯುಸಿ ತರಗತಿಗಳಿಗೆ ಪ್ರವೇಶ ಪಡೆದಿದ್ದಾರೆ. ಈ ಸ್ಥಿತ್ಯಾಂತರದಲ್ಲಿಯೂ ಸಂಸ್ಕೃತಿಯ ಬೇರುಗಳು ಜೊತೆಗೆ ಆಧುನಿಕ ಜಗತ್ತಿಗೆ ತನ್ನನ್ನು ತಾನು ಸಜ್ಜುಗೊಳ್ಳಬೇಕಾಗಿದೆ. ತಾವು ಪಡೆದು ಜ್ಞಾನದಿಂದ ಸಂಪ್ರದಾಯ ನಿಷ್ಠರಾಗಿ ಬದುಕುವವರಿಗೆ ಜಾಗತಿಕ ತಾಂತ್ರಿಕ ಜಗತ್ತಿನಲ್ಲಿ ಉದ್ಯೋಗ ದೊರೆಯುವುದು ಕಷ್ಟಕರ. ಆದ್ದರಿಂದ ಸಾಂಸ್ಕೃತಿಕ ಅನನ್ಯತೆ ತೊಳಲಾಟದಿಂದ ಆಗುವ ಪ್ರಯೋಜನವಾದರೂ ಏನು? ಎನ್ನುವ ಪ್ರಶ್ನೆ ಜನಾಂಗದ ಮುಂದಿದೆ. ಸಾಂಪ್ರದಾಯಿಕ ಶಿಕ್ಷಣವನ್ನು ಮೆಚ್ಚಿ ಆ ಪ್ರದೇಶಕ್ಕೆ ಸೀಮಿತವಾಗಿ ಇರದೆ ಪ್ರಸ್ತುತತೆಗೆ ಅವಶ್ಯವಿರುವ ಶಿಕ್ಷಣ ಪಡೆದುಕೊಳ್ಳಬೇಕಾಗಿದೆ. ಮತ್ತು ಸರ್ಕಾರ ಸಂಘ-ಸಂಸ್ಥೆಗಳು ಬುಡಕಟ್ಟು ಜನಾಂಗಕ್ಕೆ ಹಮ್ಮಿಕೊಳ್ಳುವ ಅಭಿವೃದ್ಧಿ ಯೋಜನೆಗಳ ಸಂಪೂರ್ಣ ಫಲವನ್ನು ಈ ಸಮುದಾಯ ಸದುಪಯೋಗ ಪಡೆದುಕೊಳ್ಳುವಂತೆ ನೋಡಿಕೊಂಡು ಈ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾಗಿದೆ. ಸರ್ಕಾರದ ಅನೇಕ ಸಂವಿಧಾನಾತ್ಮಕ ಸೌಲಭ್ಯಗಳ ಅರಿವು ಈ ಜನಾಂಗಕ್ಕೆ ದೊರೆಯಬೇಕಾಗಿದೆ.

* * *