ಪೀಠಿಕೆ

ಕರ್ನಾಟಕ ರಾಜ್ಯವು ಸಂಪದ್ಪರಿತ ಸಸ್ಯಗಳನ್ನು ಮತ್ತು ಪ್ರಾಣಿಗಳನ್ನು ಹೊಂದಿರುವ ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದಾಗಿದೆ. ಉತ್ತರ ಕನ್ನಡ, ಚಿಕ್ಕಮಂಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ದಟ್ಟವಾದ ಅರಣ್ಯ ಪ್ರದೇಶಗಳನ್ನು ಹೊಂದಿರುತ್ತದೆ. ೫೫೨೦ ಚ.ಕಿ.ಮೀ. ದೂರ ವ್ಯಾಪ್ತಿಯ ಹೊಂದಿದ ನೀಲಗಿರಿ ಜೈವಿಕ ಪ್ರದೇಶದಲ್ಲಿ ಕರ್ನಾಟಕದ ಅರಣ್ಯ ಪ್ರದೇಶವು ಸೇರಿಕೊಂಡಿದೆ. ೧ನೇ ನವೆಂಬರ್, ೧೯೮೬ರಲ್ಲಿ ಯುನೆಸ್ಕೋ ಸಂಸ್ಥೆಯು ಪ್ರಾರಂಭಿಸಿದ ಮಾನವ ಮತ್ತು ಜೈವಿಕ ಪ್ರದೇಶ ರಕ್ಷಣಾ ಕಾರ್ಯಕ್ರಮದಲ್ಲಿ ಕರ್ನಾಟಕ ಅರಣ್ಯ ಪ್ರದೇಶಗಳನ್ನು ಸೇರಿಸಿಕೊಳ್ಳಲಾಗಿದೆ. ನಮ್ಮ ದೇಶದ ಅತ್ಯಮೂಲ್ಯವಾದ ಪರಿಸರಗಳಲ್ಲಿ ಈ ಪ್ರದೇಶವು ಒಂದಾಗಿದೆ. ನೀಲಗಿರಿ ಜೈವಿಕ ಪ್ರದೇಶವನ್ನು ಸ್ಥಾಪಿಸಿದ ಉದ್ದೇಶಗಳು ಈ ಕೆಳಗಿನಂತಿವೆ.

೧. ವಿವಿಧ ಜಾತಿಗಳ ತಳಿ ಪ್ರಭೇದಗಳನ್ನು ಸಂರಕ್ಷಿಸುವುದು.

೨. ಈವರೆಗೆ ಅಧಃಪತನಗೊಂಡ ಪರಿಸರ ಪ್ರದೇಶಗಳನ್ನು ಅವುಗಳ ಮೂಲ ಪ್ರಾಕೃತಿಕ ಹಂತಕ್ಕೆ ತರುವುದು ಮತ್ತು

೩. ಪರಿಸರಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಶಿಕ್ಷಣಕ್ಕಾಗಿ ಪ್ರಾಥಮಿಕ ಮಾಹಿತಿಗಳನ್ನು  ಒದಗಿಸುವುದು.

ಸುಮಾರು ೧೯೫೫ರ ಮೊದಲ ನಾಗರಹೊಳೆಯು ಒಂದು ರಕ್ಷಿತಾರಣ್ಯವಾಗಿತ್ತು. ೧೯೫೫ರಲ್ಲಿ ಕೊಡಗು ಜಿಲ್ಲೆ ೨೮೪ ಚ.ಕಿ.ಮೀ. ಪ್ರದೇಶವನ್ನು ರಾಷ್ಟ್ರೀಯ ಪ್ರಾಣಿಧಾಮವೆಂದು ಘೋಷಿಸಲಾಯಿತು. ೧೯೭೫ರಲ್ಲಿ ಮೈಸೂರು ಜಿಲ್ಲೆಯ ೫೭೧ ಚ.ಕಿ.ಮೀ. ಅರಣ್ಯವನ್ನು ಅದರಲ್ಲಿ ಸೇರಿಸಲಾಯಿತು. ೧೯೮೩ರಲ್ಲಿ ಈ ಎರಡು ಜಿಲ್ಲೆಗಳ ಒಟ್ಟು ೮೫೫ ಚ.ಕಿ.ಮೀ. ಅರಣ್ಯ ಪ್ರದೇಶವನ್ನು ರಾಷ್ಟ್ರೀಯ ಪ್ರಾಣಿಧಾಮವೆಂದು ಘೋಷಿಸಲಾಯಿತು. ಅಲ್ಲದೆ ೧೯೯೨ರಲ್ಲಿ ಇದಕ್ಕೆ ರಾಜೀವ್‌ಗಾಂಧಿಯವರ ಹೆಸರನ್ನಿಟ್ಟು ಮರು ನಾಮಕರಣ ಮಾಡಲಾಯಿತು. ನಮ್ಮ ದೇಶದ ಅರಣ್ಯ ಜೀವಿ ಸಂರಕ್ಷಣಾ ಕಾಯಿದೆಯಂತೆ ಯಾವುದೇ ಉತ್ಪನ್ನಗಳನ್ನು ಸಂಗ್ರಹಿಸುವುದನ್ನು ನಿಷೇಧಿಸಲಾಗಿದೆ.  ಈ ಪ್ರದೇಶದಲ್ಲಿ ಯಾರು ವಾಸಿಸುವಂತಿಲ್ಲ. ಜಾನುವಾರುಗಳನ್ನು ಈ ಪ್ರದೇಶದಲ್ಲಿ ಮೇಯಿಸುವುದನ್ನು ನಿಷೇಧಿಸಲಾಗಿದೆ. ನಾಗರಹೊಳೆ ಸಂರಕ್ಷಿತ ಅರಣ್ಯ ಪ್ರದೇಶದ ಗಡಿಯ ಸುತ್ತ ಸುಮಾರು ೫.ಕಿ.ಮೀ. ವ್ಯಾಸದೊಳಗೆ ೯೬ ಗ್ರಾಮಗಳಿವೆ. ಈ ಗ್ರಾಮಗಳಲ್ಲಿ ಒಕ್ಕಲಿಗ, ಲಿಂಗಾಯಿತ, ಕೊಡವ ಜಾತಿಗಳಿಗೆ ಸೇರಿದ ಹಿಂದುಗಳು ಕ್ರಿಶ್ಚಿಯನ್ನರು ಮತ್ತು ಮುಸಲ್ಮಾನರು ವಾಸಿಸುತ್ತಿದ್ದಾರೆ. ಆದರೆ ಈ ಭಾಗದಲ್ಲಿ ಕೆಲವೇ ಆದಿವಾಸಿ ಕುಟುಂಬಗಳು ವಾಸಿಸುತ್ತಿವೆ. ೧೯೯೯ರಲ್ಲಿ ಕರ್ನಾಟಕ ಸರ್ಕಾರವು ಜಾಗತಿಕ ಬ್ಯಾಂಕ್‌ನ ಸಹಾಯದಿಂದ ನಡೆಸಿದ ಸರ್ವೇಕ್ಷಣ ಸಂದರ್ಭದಲ್ಲಿ ನಾಗರಹೊಳೆ ಸಂರಕ್ಷಿತಾ ಅರಣ್ಯದೊಳಗೆ ೧೫೫೦ ಆದಿವಾಸಿ ಕುಟುಂಬಗಳಿಗೆ ಸೇರಿದ ಸುಮಾರು ೧೭೦೦೦ ಜನರು ೫೪ ಹಾಡಿಗಳಲ್ಲಿ ವಾಸಿಸುತ್ತಿದ್ದರು. ಆದಿವಾಸಿಗಳು ನೆಲೆಸಿದ ಗ್ರಾಮಗಳನ್ನು ಹಾಡಿಗಳೆಂದು ಆದಿವಾಸಿಗಳು ಹಾಗೂ ಹೊರಗಿನವರೆಂದು ಕರೆಯುತ್ತಾರೆ. ಇಲ್ಲಿ ಮುಖ್ಯವಾಗಿ ಮೂರು ಆದಿವಾಸಿ ಸಮುದಾಯಗಳು (ಯರವ, ಬೆಟ್ಟಕುರುಬ ಮತ್ತು ಜೇನುಕುರುಬ) ವಾಸಿಸುತ್ತಿವೆ.  ಈ ಆದಿವಾಸಿಗಳಲ್ಲಿ ಸುಮಾರು ಶೇ, ೮೦ರಷ್ಟು ಜನರು ಜೇನುಕುರುಬರಿದ್ದಾರೆ. ಕೊಡಗು ಜಿಲ್ಲೆಯಲ್ಲಿ ೨೯ ಹಾಡಿಗಳು ಹಾಗೂ ಮೈಸೂರು ಜಿಲ್ಲೆಯಲ್ಲಿ ೨೫ ಹಾಡಿಗಳು ಸಂರಕ್ಷಿತಾ ಅರಣ್ಯ ಪ್ರದೇಶದಲ್ಲಿ ಕಂಡುಬರುತ್ತವೆ. ಕೊಡಗು ಜಿಲ್ಲೆಯಲ್ಲಿ ಸುಮಾರು ೯೫೦ ಕುಟುಂಬಗಳಿವೆ. ಹಾಗೂ ಮೈಸೂರು ಜಿಲ್ಲೆಯಲ್ಲಿ ಸುಮಾರು ೬೦೦ ಕುಟುಂಬಗಳು ಈ ಸಂರಕ್ಷಿತಾ ಅರಣ್ಯ ವ್ಯಾಪ್ತಿಯಲ್ಲಿವೆ.

ಸಾವಿರಾರು ವರ್ಷಗಳಿಂದ ಜೇನುಕುರುಬ, ಯರವ ಮತ್ತು ಬೆಟ್ಟ ಕುರುಬ ಆದಿವಾಸಿಗಳ ಜನರು ಈ ಪ್ರದೇಶದಲ್ಲಿ ವಾಸವಾಗಿದ್ದಾರೆ. ಇತ್ತೀಚಿನ ಭಾರತ ಸರ್ಕಾರದ ಮಾನವ ಶಾಸ್ತ್ರೀಯ ಸರ್ವೇಕ್ಷಣ ಇಲಾಖೆ ಸಂಸ್ಥೆ ವಿಜ್ಞಾನಿಗಳ ನಡೆಸಿದ ತಳಿ ಶಾಸ್ತ್ರೀಯ ಸಂಶೋಧನೆಗಳಿಂದ ಈ ಆದಿವಾಸಿಗಳು ಈ ಪ್ರದೇಶದ ಮೂಲನಿವಾಸಿಗಳೆಂದು ತಿಳಿದುಬಂದಿದೆ. ನಾಗರಹೊಳೆ ಸಂರಕ್ಷಿತ ಅರಣ್ಯ ಪ್ರದೇಶ ಗಡಿಯನ್ನು ಗುರುತಿಸುವಾಗ ಈ ಆದಿವಾಸಿಗಳ ಅಭಿಪ್ರಾಯವನ್ನು ಸರ್ಕಾರವು ಪಡೆಯುವುದು ಸರಿಯಲ್ಲ. ಈ ಭಾಗಕ್ಕೆ ಇತ್ತೀಚೆಗೆ ವಲಸೆಗಾರನಾಗಿ ಬಂದ ಓಡಿಗ, ಮಾಪಿಳ್ಳೆ, ಮತ್ತು ಕೆಲವು ಕ್ರಿಶ್ಚಿಯನ್ ಸಮುದಾಯಗಳ ಶ್ರೀಮಂತ ಕುಟುಂಬಗಳ ಜನರು ಈ ಗಡಿ ಗುರುತಿಸುವಿಕೆಯಲ್ಲಿ ಪ್ರಭಾವ ಬೀರಿರುವುದು ಕಂಡುಬರುತ್ತದೆ. ಈ ವಲಸೆಗಾರರ ಜಮೀನು ಸಂರಕ್ಷಿತ ಅರಣ್ಯ ಪ್ರದೇಶದೊಳಗೆ ಬಾರದಂತೆ ನೋಡಿಕೊಂಡಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಬಡ ಮತ್ತು ಆದಿವಾಸಿಗಳ ಹಿತವನ್ನು ಕಾಪಾಡುವಲ್ಲಿ ಸರಕಾರಿ ಅಧಿಕಾರಿಗಳು ವಿಫಲರಾಗಿದ್ದಾರೆ. ೧೯೮೩ರಿಂದಲೂ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನಗಳು ನಡೆದಿವೆ. ಆದಿವಾಸಿಗಳ ಪುನರ್ವಸತಿಗೆ ಸಂಬಂಧಿಸಿದ ಪರಿಹಾರ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರವು ೧೯೯೯ರಲ್ಲಿ ಜಾರಿಗೊಳಿಸಿತು. ಈ ಪರಿಹಾರ ಕಾರ್ಯಕ್ರಮವನ್ನು ಫಲಾನುಭವಿ ಕೇಂದ್ರಿತ ಆದಿವಾಸಿಗಳ ಪುನರ್ವಸತಿ ಕಾರ್ಯಕ್ರಮವೆಂದು ಕರೆಯಲಾಗಿದೆ. ಜಾಗತಿಕ ಬ್ಯಾಂಕಿನ ಧನ ಸಹಾಯದಿಂದ ಕೈಗೊಂಡ ಭಾರತ ಪರಿಸರ ಅಭಿವೃದ್ಧಿ ಯೋಜನೆಯು ಈ ಪ್ರದೇಶದಲ್ಲಿ ಆದಿವಾಸಿಗಳ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿದ ವರದಿಗಳ ಆಧಾರದ ಮೇಲೆ ಮೇಲಿನ ಪರಿಹಾರ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಪುನರ್ವಸತಿಗೆ ಸಂಬಂಧಿಸಿದಂತೆ ಮತ್ತು ನಾಗರಹೊಳೆ ಪರಿಸರದ ಬಗ್ಗೆ ಸುಮಾರು ನೂರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಅನೇಕ ಅಧ್ಯಯನಗಳನ್ನು ೧೯೯೦ರ ದಶಕದಲ್ಲಿ ನಡೆಸಲಾಗಿದೆ.

ಆದಿವಾಸಿಗಳ ಪುನರ್ವಸತಿಗೆ ಸಂಬಂಧಿಸಿದ ಪರಿಹಾರ ಕಾರ್ಯಕ್ರಮದ ಮುಖ್ಯ ಅಂಶಗಳು ಕೆಳಗಿನಂತಿವೆ.

೧. ಸಂರಕ್ಷಿತ ಅರಣ್ಯದೊಳಗೆ ವಾಸಿಸುತ್ತಿರುವ ಆದಿವಾಸಿಗಳನ್ನು ಸ್ಥಳಾಂತರ ಮಾಡಿ ಅವರಿಗೆ ಪುನರ್ವಸತಿಯನ್ನು ಅರಣ್ಯದ ಹೊರಗೆ ಒದಗಿಸುವುದು.

೨. ಆದಿವಾಸಿಗಳ ಸಾಮಾಜಿಕ-ಆರ್ಥಿಕ ಮಟ್ಟವನ್ನು ಸುಧಾರಿಸುವುದು.

೩. ಆದಿವಾಸಿಗಳು ಸ್ವತಂತ್ರ್ಯವಾಗಿ ತಮ್ಮ ಸಾಮರ್ಥ್ಯದ ಮೇಲೆ ಜೀವನ ನಿರ್ವಹಣೆ ಮಾಡುವಂತೆ ಅವರನ್ನು ಪ್ರೇರೇಪಿಸುವುದು ಮತ್ತು.

೪. ಕೃಷಿ ಆಧಾರಿತ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅವರಿಗೆ ತಾಂತ್ರಿಕ ಮತ್ತು ಆರ್ಥಿಕ ಸಹಾಯವನ್ನು ಒದಗಿಸುವುದು.

ಪರಿಹಾರ ಕಾರ್ಯಕ್ರಮದಡಿಯಲ್ಲಿ ಕೊಡಬೇಕಾದ ಸವಲತ್ತುಗಳ ವಿವರಗಳು ಇಂತಿವೆ.

ಸುಮಾರು ೧೯೯೯ನೇ ಇಸವಿಯಲ್ಲಿ ಮೇಲಿನ ಕಾರ್ಯಕ್ರಮವನ್ನು ಜಾರಿಗೆ ತರಲಾಯಿತು. ಸ್ವಯಂ ಪ್ರೇರಣೆಯಿಂದ ಪುನರ್ವಸತಿಗೆ ಸಮ್ಮತಿಸಿದವರನ್ನು ಮಾತ್ರ ಪುನರ್ವಸತಿ ಕೇಂದ್ರಕ್ಕೆ ವರ್ಗಾಯಿಸಲಾಗುವುದೆಂದು ಅರಣ್ಯ ಅಧಿಕಾರಿಗಳು ಹೇಳಿದ್ದರು. ಆದರೆ, ಆದಿವಾಸಿಗಳ ಮೇಲೆ ನಿರಂತರವಾಗಿ ಒತ್ತಡವನ್ನು ಹೇರಿ ಅವರನ್ನು ಪುನರ್ವಸತಿ ಕೇಂದ್ರಕ್ಕೆ ವರ್ಗಾಯಿಸಲಾಯಿತು. ಹುಣಸೂರು ಪಟ್ಟಣದಿಂದ ೧೫ ಕಿ.ಮೀ. ದೂರವಿರುವ (ನಾಗರಹೊಳೆ ರಸ್ತೆಯಲ್ಲಿ ನಾಗಾಪುರ ಎಂಬ ಪ್ರದೇಶದಲ್ಲಿ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಲಾಯಿತು. ಇದು ಕಾಡು ಪ್ರಾಣಿಗಳ ಉಪಟಳವು ಇಲ್ಲಿ ಬಹಳವಾಗಿದೆ.

ನಾಗಪುರದಲ್ಲಿ ಒಟ್ಟು ಬ್ಲಾಕ್‌ಗಳಲ್ಲಿ ೨೫೦ ಕುಟುಂಬಗಳಿಗೆ (ಪ್ರತಿ ಬ್ಲಾಕ್‌ನಲ್ಲಿ ೫೦ ಕುಟುಂಬಗಳಂತೆ ಪುನರ್ವಸತಿಯ ಎಲ್ಲಾ ಸೌಕರ್ಯಗಳನ್ನು  ಒದಗಿಸಲಾಯಿತು. ೧೯೯೯ರಲ್ಲಿ ೫೦ ಆದಿವಾಸಿ ಕುಟುಂಬಗಳನ್ನು ೧ನೇ ಬ್ಲಾಕಿಗೆ ಸ್ಥಳಾಂತರಿಸಲಾಯಿತು. ನಂತರ ಹಂತ ಹಂತವಾಗಿ ೨೦೦ ಕುಟುಂಬಗಳನ್ನು ೨೦೦೩ರ ಹೊತ್ತಿಗೆ ಸ್ಥಳಾಂತರಿಸಲಾಯಿತು. ಮೊದಲ ಹಂತದಲ್ಲಿ ನೆಲೆಸಿದ ಕೆಲವು ಆದಿವಾಸಿಗಳನ್ನು ಅರಣ್ಯ ಇಲಾಖೆಯಲ್ಲಿ ಕೂಲಿಗಳಾಗಿ, ಮಾವುತರಾಗಿ ಮತ್ತು ಸೇವಕರಾಗಿ ನೇಮಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಪರಿಸರ ಪ್ರವಾಸವು ಅತಿಯಾಗಿ ಬೇಡಿಕೆಯಿರುವ ಹಾಗೂ ಒಂದು ಉದ್ಯಮವಾಗಿದೆ. ಇದು ಇತ್ತೀಚಿನ ದಿನಗಳಲ್ಲಿ ಇತರ ಮಾದರಿಯ ಪ್ರವಾಸಗಳಿಗೆ ಹೋಲಿಸಿದರೆ ಪ್ರಪಂಚದ ವಿವಿಧ ಬಗೆಯ ಜನಾಂಗದ ಪಾತ್ರವಾಗಿದ್ದು ಹೆಚ್ಚು ಬೇಡಿಕೆಯಿರುವ ಉದ್ಯಮವಾಗಿದೆ. ಅದು ಅಲ್ಲದೇ ಮುಖ್ಯವಾಗಿ ಪರಿಸರವನ್ನು ಕಾಪಾಡುವ ಹಾಗೂ ಅಭಿವೃದ್ಧಿ ಪಡಿಸುವ ಮುಖ್ಯ ಉದ್ದೇಶದಿಂದ ಕೂಡಿದ್ದು ಪರಿಸರದ ಮೇಲಿನ ಜಾಗೃತಿಯನ್ನು ಜನರಲ್ಲಿ ಹುಟ್ಟಿಸುವ ಪರಿಸರದ ರಕ್ಷಣೆಯನ್ನು ಮಾಡಲಾಗುತ್ತಿದೆ. ಪರಿಸರ ರಕ್ಷಣೆಯ ಜೊತೆಗೆ ಪರಿಸರದಲ್ಲಿ ವಾಸವಾಗಿರುವ ಜನರ ಆರ್ಥಿಕ ಹಾಗೂ ಮುಖ್ಯವಾಗಿ ಅದರಲ್ಲೂ ಪರಿಸರದ ರಕ್ಷಣೆಯ ಬಗ್ಗೆ ತಿಳುವಳಿಕೆ ನೀಡಿ ಕಾಪಾಡುವ ಉದ್ದೇಶವಾಗಿದೆ. ಹಾಗೂ ಕಾರ್ಯಗತಕ್ಕೆ ತರಲಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಒಂದು ನೀರಿನ ಮೀಸಲು ಜೀವ ಮಂಡಲ ಮೀಸಲು ಒಂದು ಅತಿಮುಖ್ಯವಾದ ಹಾಗೂ ಪ್ರಪಂಚದ ಮೂಲೆ ಮೂಲೆಯಿಂದ ಆರ್ಕಷಿಸುತ್ತಿರುವ ಒಂದು ತಾಣವಾಗಿದ್ದು, ಅದರಲ್ಲೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಒಂದಾಗಿದೆ. ಈ ರಾಷ್ಟ್ರೀಯ ಉದ್ಯಾನವನದ ಅಡಿಯಲ್ಲಿ ಕಾರಪುರದ ಜಂಗಲ್ ಲಾಡ್ಡ್ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಎಂಬ ಎರಡು ಪರಿಸರ ಪ್ರವಾಸಿ ತಾಣಗಳಾಗಿದ್ದು, ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಬೇಡಿಕೆ ಹಾಗೂ ಒಲವು ಹೆಚ್ಚಾಗುತ್ತಿರುವುದು ಇದಕ್ಕೆ ನಿದರ್ಶನವಾಗಿದೆ.

ನಾಗರಹೊಳೆಯು ಬೆಂಗಳೂರಿನಿಂದ ೨೨೫ ಕಿ.ಮೀ. ಹಾಗೂ ಮೈಸೂರಿನಿಂದ ಹುಣಸೂರು ಮಾರ್ಗವಾಗಿ ೧೦೨ ಕಿ.ಮೀ. ದೂರದಲ್ಲಿ ಕರ್ನಾಟಕ ಸರ್ಕಾರ ಬಸ್ಸುಗಳ ಸೌಕರ್ಯವನ್ನು ಒದಗಿಸಲಾಗಿದೆ. ಪ್ರಾಣಿಗಳ ದರ್ಶನಕ್ಕೆ ಅರಣ್ಯ ಇಲಾಖೆಯಿಂದ ಪುಟ್ಟ ಬಸ್ಸಿನ ವ್ಯವಸ್ಥೆಯಿದ್ದು, ಬೆಳಿಗ್ಗೆ ೬ರಿಂದ ೯ರವರೆಗೆ ಹಾಗೂ ಮಧ್ಯಾಹ್ನ ೩೩೦ರಿಂದ ೬ರವರೆಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ. ದೊಡ್ಡವರಿಗೆ ೭೫ ರೂ.ಗಳಾಗಿದ್ದು, ಮಕ್ಕಳಿಗೆ ೫೦ ರೂ.ಗಳಾಗಿವೆ. ಇಲ್ಲಿ ಮುಖ್ಯವಾಗಿ ದೊಡ್ಡ ತೇಗದ ಮರ, ನಾಗರಾಜ ಟನಲ್ ಇಪು, ಜಲಪಾತ, ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಮುಖ್ಯವಾಗಿ ಸ್ಥಳೀಯರಾಗಿ ಮೂಲನಿವಾಸಿಗಳಾಗಿ ವಾಸವಾಗಿರುವುದು. ಜೇನು ಕುರುಬ, ಬುಡಕಟ್ಟು ಜನಾಂಗ ಈ ಉದ್ಯಾನವನದಲ್ಲಿ ೪೫ ಅಡಿಗಳಷ್ಟು ಸುಮಾರು ೭೦೦೦ ಜೇನು ಕುರುಬರು ವಾಸವಾಗಿದ್ದಾರೆ. ಇದು ಮೂಲತಃ ಜೇನು ಕುರುಬರ ಜಮ್ಮು ಪ್ರದೇಶವಾಗಿದ್ದು, ಹಲವು ಜಮ್ಮುಗಳನ್ನು ಈಗಲೂ ಹೆಸರಿಸಿರುತ್ತಾರೆ. ಈ ಕಾಡು ಅವರಿಗೆ ಕೇವಲ ವಾಸಿಸುವ ಸ್ಥಳವಾಗಿದೆ. ಸಾವಿರಾರು ವರ್ಷಗಳಿಂದ ಜೀವನ ನಡೆಸಿಕೊಂಡು ಬಂದಿರುವ ಕೆಲವು ಆಹಾರ ಒದಗಿಸುವ ಗುಡಿಸಲಿಗೆ ಬೇಕಾದ ವಸ್ತುಗಳನ್ನು ನೀಡುವ ಬದುಕಲು ಬೇಕಾಗುವ ಎಲ್ಲಾ ಸೌಕರ್ಯಗಳನ್ನು ನೀಡಲಾಗಿದೆ. ತಮ್ಮ ದೇವರುಗಳು ಹಾಗೂ ಯಾವುದಕ್ಕೂ ದಕ್ಕೆ ಬರದಹಾಗೆ ಕಾಪಾಡುತ್ತಿರುವ ಜಾಗವಾಗಿದೆ. ಇವರುಗಳು ಎಂದೂ ಮುಂದಿನದನ್ನು ಯೋಚಿಸದವರಲ್ಲ. ಏಕೆಂದರೆ ಕೂಲಿ ಸಿಗದಿದ್ದರೆ ಕಾಡಿನಲ್ಲಿ ದೊರೆಯುವ ಗಡ್ಡೆ-ಗೆಣಸುಗಳನ್ನು ಜೇನನ್ನು ತಿಂದು ಜೀವನ ನಡೆಸುತ್ತಾರೆ. ಕಾಡು ಅವರಿಗೆ ಎಂದೂ ಯಾವುದಕ್ಕೂ ಕಡಿಮೆ ಮಾಡಿಲ್ಲ ಹಾಗೂ ತೊಂದರೆ ಮಾಡಿಲ್ಲ. ಇಂತಹ ಸಂಬಂಧವನ್ನು ಜೇನು ಕುರುಬರು ಕಾಡಿನೊಂದಿಗೆ ಹೊಂದಿದ್ದಾರೆ.

ಇವರ ಮುಖ್ಯ ಕುಲಕಸಬು ಜೇನು ತಯಾರಿಸುದಾಗಿದೆ. ಜೇನುಕುರುಬರ ಮಾತೃಭಾಷೆ ಜೇನು ನುಡಿಯಾಗಿದ್ದು, ಕನ್ನಡ, ತಮಿಳು ಹಾಗೂ ಮಲೆಯಾಳಿ ಪದಗಳ ಬೆರೆಕೆಯಿಂದ ಕೂಡಿದ್ದಾಗಿದೆ. ೧೯೭೧ರ ಸೆಕ್ಸನ್ ಪ್ರಕಾರ ಜೇನು ಕುರುಬರ ಜನಸಂಖ್ಯೆ ೬೬೨೩ ಆಗಿದ್ದು, ೧೯೮೧ರಲ್ಲಿ ೩೪, ೭೪೭ಕ್ಕೆ (೧೭.೮೬೭ ಗಂಡಸರು) ಏರಿದ್ದು, ೧೯೮೧ರಲ್ಲಿ ಕ್ಷೇತ್ರ ನಿರ್ಬಂಧವನ್ನು ತೆಗೆದು ಹಾಕಿರುವ ಕಾರಣವಾಗಿದೆ. ಜೇನುಕುರುಬರನ್ನು ಅದಿಮ/ಪುರಾತನ ಬುಡಕಟ್ಟುಗಳ ಗುಂಪಿಗೆ ಸೇರಿಸಿದ್ದು, ಕರ್ನಾಟಕ ರಾಜ್ಯದಲ್ಲಿರುವ ಎರಡರಲ್ಲಿ ಇದೊಂದಾಗಿದೆ. ಅವರು ವಾಸಿಸುವ ಜಾಗವನ್ನು ಹಾಡಿಯೆಂದು ಕರೆಯುತ್ತಾರೆ. ರಾಷ್ಟ್ರೀಯ ಉದ್ಯಾನವಾದ್ದರಿಂದ ಇವರುಗಳಿಗೆ ಮನೆಗಳ ಸೌಲಭ್ಯವಿಲ್ಲವಾಗಿದ್ದು, ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದಾರೆ. ಮರದ ಮೇಲೆ ಸಣ್ಣ ಗುಡಿಸಲನ್ನು ಕಟ್ಟಿ ರಾತ್ರಿಯ ವೇಳೆ ತಾವು ಬೆಳೆದ ಬೆಳೆಗಳನ್ನು ತಿನ್ನಲು ಬರುವ ಕಾಡು ಪ್ರಾಣಿಗಳನ್ನು ಓಡಿಸಲು ಮಂಡಿಗೆ ಎಂದು ಕರೆಯುವ ಗುಡಿಸಲನ್ನು ಕಾಯುತ್ತಾರೆ. ಬಿದಿರುನೊಂದಿಗೆ ಬೆಂಕಿಯನ್ನು ಹಚ್ಚಿಕೊಂಡು ಹಾಗೂ ಇಲಿ ಡಬ್ಬಗಳಿಂದ ಜಫರಾಗಿ ಶಬ್ಧ ಮಾಡಿ ಕಾಡು ಪ್ರಾಣಿಗಳನ್ನು ಓಡಿಸುತ್ತಾರೆ. ಹಾಡಿಯಲ್ಲಿ ಒಂದು ಕೊಳವೆ ಬಾವಿ ಇದ್ದು ಅದರಿಂದ ನೀರನ್ನು ಶೇಖರಿಸುತ್ತಾರೆ. ಇವರಿಗೆ ದೆವ್ವ, ಭೂತಗಳ ಮೇಲೆ ನಂಬಿಕೆಯಿದ್ದು, ತಮ್ಮ ಹಿರಿಯರ ಆತ್ಮಗಳು ಹಾಡಿಯಲ್ಲಿ ಒಂದು ಕೊಳವೆ ಬಾವಿ ಇದ್ದು ತಮ್ಮನ್ನು ಕಾಪಾಡುತ್ತಾರೆ ಎಂಬ ನಂಬಿಕೆ ಗಾಢವಾಗಿದೆ. ಮುಖ್ಯ ಆಹಾರವಾಗಿ ರಾಗಿಯನ್ನು ಉಪಯೋಗಿಸುತ್ತಾರೆ. ಹಾಗೂ ಕಾಡಿನಲ್ಲಿ ಸಿಗುವ ಸೊಪ್ಪಿನ ಅಣಬೆಯ ಗೆಡ್ಡೆ ಗೆಣಸುಗಳ ಹಣ್ಣು ಹಂಪಲುಗಳ ಬಳಕೆ ಇದೆ. ಇಂದಿನ ದಿನಗಳಲ್ಲಿ ರೇಷನ್‌ನಲ್ಲಿ ದೊರೆಯುವ ಅಕ್ಕಿಯ ಬಳಕೆಯು ಇದೆ.

ಜೇನು ಕುರುಬರಿಗೆ ಕಾಡಿನ ಜೀವನ ಒಂದಲ್ಲ ಇನ್ನೊಂದು ರೀತಿಯಾಗಿ ಪೂರ್ವವಾಗಿ ಅವಲಂಬಿರಾಗಿದ್ದಾರೆ. ಅರಣ್ಯ ಇಲಾಖೆ ಜೇನು ಕುರುಬರನ್ನು ಮುಖ್ಯವಾಗಿ ಆನೆ ಮಾಹುತರಾಗಿ, ಪವಡಿಗರಾಗಿ ಕಾಡಿನ ವಾಟರ್‌ಗಳಾಗಿ ಬೆಂಕಿಯನ್ನು ಆರಿಸುವ ಕಾರ್ಯಗಳಿಗೆ ದಿನ ಕೂಲಿ ನೌಕರಿಗಳಾಗಿ ಪೈರ್ ವಾಟರ್‌ಗಳಾಗಿ ಗಾರ್ಡ್‌ಗಳಾಗಿ ವಸತಿಗೃಹಗಳ ಕೆಲಸ ಕಾರ್ಯಗಳ ಸೇವೆಗೆ ಅಳವಡಿಸಿಕೊಂಡಿದ್ದಾರೆ. ಮುಖ್ಯವಾಗಿ ಆನೆಗಳನ್ನು ಕೆಡ್ಡಮಾದರಿಯಲ್ಲಿ ಹಿಡಿದು ಅವನ್ನು ಪಳಗಿಸುವ ಕಾರ್ಯದಲ್ಲಿ ಜೇನು ಕುರುಬರನ್ನು ಬಿಟ್ಟರೆ ಬೇರೆ ಜನಾಂಗದವರಿಗೆ ಆಗದ ಕೆಲಸವಾಗಿದೆ. ಪಳಗಿಸಿದ ನಂತರ ಆ ಆನೆಗಳನ್ನು ಅದೇ ಜೇನು ಕುರುಬ ಮಾಹುತನಾಗಿ ಮುಂದುವರೆಯುತ್ತಾನೆ. ಅದಕ್ಕೆ ಮುಖ್ಯವಾಗಿ ಆಹಾರ ಕೊಡುವುದರಿಂದ ಹಿಡಿದು ಎಲ್ಲಾ ಕೆಲಸಗಳನ್ನು ಇವರೇ ನೋಡಿಕೊಳ್ಳಬೇಕಾಗಿದೆ ಹಾಗಾಗಿ ಮಾಲಿಕನಲ್ಲಿರುವ ಆನೆ ಕ್ಯಾಂಪ್‌ನಲ್ಲಿ ಅವರಿಗೆ ಓದಗಿಸಿರುವ ವಸತಿಗೃಹದಲ್ಲಿ ವಾಸವಾಗಿದ್ದು, ಪೂರ್ಣ ಕಾರ್ಯಗಳನ್ನು ನಿಭಾಯಿಸುತ್ತಿದ್ದಾರೆ. ಪರಿಸರ ಪ್ರವಾಸದಿಂದ ಜೇನು ಕುರುಬರಿಗೆ ಹೆಚ್ಚಾಗಿ ಉಪಯೋಗವಿಲ್ಲದ ಕಾರಣ ಇದು ರಾಷ್ಟ್ರೀಯ ಉದ್ಯಾನವನವಾಗಿದ್ದು, ಇಲ್ಲಿ ಯಾವ ರೀತಿಯ ಮಾರಾಟ ಮಳಿಗೆಯನ್ನಾಗಲಿ ಕಾಡಿನಲ್ಲಿ ದೊರೆಯುವ ಪದಾರ್ಥಗಳನ್ನು ತರುವುದಾಗಲಿ ಅಥವಾ ಮಾರಾಟ ಮಾಡುವುದಾಗಲಿ ನಿಷೇಧಿಸಿದೆ. ಮುಖ್ಯವಾಗಿ ಜೇನು ತುಪ್ಪವನ್ನು ಮಾರಿ ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ಕೆಲವರನ್ನು ಕೆಲಸಕ್ಕೆ ತೆಗೆದುಕೊಂಡಿರುವುದನ್ನು ಬಿಟ್ಟರೆ ಇತರ ಯಾವುದೇ ಉಪಯೋಗಗಳು ಇವರಿಗೆ ಆಗಿಲ್ಲ. ಹಾಗಾಗಿ ನಮ್ಮ ಕಾರ್ಯ ಕ್ಷೇತ್ರದ ಪ್ರಕಾರ ಕೆಲವು ಸಲಹೆಗಳನ್ನು ನೀಡಿರುವೆವು.

೧. ಆನೆ ಸವಾರಿಯನ್ನು ಚಾಲನೆ ಮಾಡಿದರೆ ಪ್ರವಾಸಿಗರಿಗೂ ಅನುಕೂಲ ಹಾಗೂ ಜೇನು ಕುಟುಂಬದವರಿಗೂ ಉಪಯೋಗವಾಗುವುದು.

೨. ಜೇನು ಕುರುಬರಿಗೆ ಗೈಡ್‌ಗಳಾಗಿ ಸೇರಿಸಿಕೊಳ್ಳುವುದು.

೩. ಅರಣ್ಯ ಇಲಾಖೆ ವತಿಯಿಂದ ಕೆಲವು ಮಳಿಗೆಗಳನ್ನು ನಿರ್ಮಿಸಿ ಅವುಗಳನ್ನು ಜೇನುಕುರುಬರಿಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡುವುದು.

೪. ಕಾಡಿನ ಮರ ಗಿಡಗಳ ಬಗ್ಗೆ, ಪ್ರಾಣಿ ಪಕ್ಷಿಗಳ ಬಗ್ಗೆ ಅವರ ಅನುಭವಗಳನ್ನು ಹಂಚಿಕೊಳ್ಳುವ ಅವಕಾಶಗಳನ್ನು ಕಲ್ಪಿಸುವುದು.

ಹೀಗೆ ಪ್ರಸ್ತುತ ಸಂದರ್ಭದಲ್ಲಿ ನಾಗರಹೊಳೆ ಅರಣ್ಯ ಪ್ರದೇಶಗಳಲ್ಲಿ ಬುಡಕಟ್ಟು ಜನರ ಮರುವಸತಿ ಕಾರ್ಯಕ್ರಮ ಕಲ್ಪಿಸಿದಾಗ ಅಲ್ಲಿರುವ ಬುಡಕಟ್ಟುಗಳಿಗೆ ಒಂದು ಜೀವನವನ್ನು ಮತ್ತ ಅವರ ಸಂಸ್ಕೃತಿಯನ್ನು ಉಳಿಸಿದಂತಾಗುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲ.

* * *