ಭಾರತದ ಸಾಂಸ್ಕೃತಿಕ ಪರಂಪರೆ ಬಹು ಪ್ರಾಚೀನವಾದದ್ದು, ಪ್ರಭಾವಿಯಾದುದು ಮತ್ತು ಎಲ್ಲದಕ್ಕಿಂತ ಮಿಗಿಲಾಗಿ ಸಂಕೀರ್ಣವಾದದೂ ಆಗಿದೆ, ಭಾರತೀಯ ಸಂಸ್ಕೃತಿಯ ಆಳ ಎತ್ತರಗಳನ್ನು ಮತ್ತು ಉದ್ದಗಳನ್ನು ಪರಿವೀಕ್ಷಿಸುವುದು ಸುಲಭವೇನು ಅಲ್ಲ. ಭಾರತದ ಸಂಸ್ಕೃತಿಯಲ್ಲಿ ಅದರ ಪ್ರಾಚೀನತೆಯೊಂದಿಗೆ ಹಲವಾರು ಸಮೂಹಗಳ, ಪಂಥಗಳ, ಪಂಗಡಗಳ ಮತ ಸಮೂಹಗಳ ಜೀವನ ಕ್ರಮಗಳು ಸಮಾವೇಶಗೊಂಡಿರುವದನ್ನು ಕಾಣಬಹುದು.

ಮಾನವನು ತನ್ನ ಐತಿಹಾಸಿಕವಾದ ಮಹಾನ್ ನಡಿಗೆಯಲ್ಲಿ ದಾಪುಗಾಲಿರಿಸುತ್ತ ಇದೀಗ ನಾಗರಿಕತೆಯ ಅತ್ಯುಚ್ಚ ಮಟ್ಟಕ್ಕೆ ಬಂದು ತಲುಪಿದ್ದಾನೆ. ಹಾಗೆಂದ ಮಾತ್ರಕ್ಕೆ ಇಡೀ ಜಗತ್ತಿನ ಎಲ್ಲಡೆಯಲ್ಲೂ ಕಾಣಬರುವ ಎಲ್ಲಾ ಮಾನವ ಸಮೂಹ- ಸಮುದಾಯಗಳು ನಾಗರಿಕತೆಯ ಈ ಘಟಕ್ಕೆ ಬಂದು ತಲುಪಿವೆ ಎನ್ನುವಂತಿಲ್ಲ. ನಾಗರಿಕತೆಯ ಗಂಧಗಾಳಿಯನ್ನೇ ಅರಿಯದ ಹಾಗೂ ಇನ್ನು ನರಮಾಂಶ ಭಕ್ಷಕ ಸ್ಥಿತಿಯಲ್ಲಿರುವ ನ್ಯೂಗಿನೀಯಯ ಮುಂಡುಗುಮರ್ ಸಮುದಾಯದಿಂದ ಹಿಡಿದು ಮಂಗಳಗ್ರಹದ ಉಡ್ಯಾಣ ನಡೆಸಲು ಸನ್ನಾಹ  ನಡೆಸುತ್ತಿದ್ದು ನಾಗರಿಕತೆಯ ಅತ್ಯುಚ್ಚ ಶಿಖರದಲ್ಲಿರುವ ಅಮೇರಿಕಾದ  ಜನಸಮುದಾಯದವರೆಗೆ ಮಾನವ ಜೀವನ ನಡಿಗೆಯ ಅನ್ಯಾನ್ಯ ಹಂತಗಳಲ್ಲಿರುವ ಜನ ಸಮೂಹಗಳು ಎಲ್ಲಾ ಕಡೆ ಪರಿಸರಿಸಿವೆ, ಇಂತಹ ಸಮೂಹಗಳಲ್ಲಿ ನಾಗರಿಕತೆಯಿಂದ ಬಹುದೂರವಿರುವ ಹಾಗೂ ಇನ್ನೂ ಅಕ್ಷರ ಪೂರ್ವಸ್ಥಿತಿಯಲ್ಲಿರುವ ಸಮುದಾಯಗಳ ಸಂಖ್ಯೆಯೂ ಕಡಿಮೆಯೇನಿಲ್ಲ. ಮೂಲನಿವಾಸಿಗಳೆಂದು, ಆದಿವಾಸಿಗಳೆಂದು ದೇಶಿಯ ಜನವರ್ಗವೆಂದು, ಆದಿಪ್ರಜೆಗಳೆಂದು, ಬುಡಕಟ್ಟು ಜನಾಂಗವೆಂದು ಕರೆಯಲ್ಪಡುತ್ತಿರುವ ಇಂತಹ ಸಮೂಹಗಳು ಇಲ್ಲದ ದೇಶವೇ ಇಲ್ಲ ಎನ್ನಬಹುದು. ಜನಸಂಖ್ಯೆಯ ದೃಷ್ಟಿಯಿಂದ ಬಹಳ ಅಲ್ಪಸಂಖ್ಯಾಂತರಾದ ಈ ಜನಸಮುದಾಯಗಳ ಜೀವನ ತೀರಾ ವಿಭಿನ್ನ ರೀತಿಯದು. ವಿಶಿಷ್ಟತಮವಾದುದು ಮತ್ತು ಚೋದ್ಯಮಯವಾಗಿದೆ. ಪ್ರತಿಯೊಂದು ಸಮುದಾಯವು ತನ್ನದೆ ಆದ ಜೀವನ ವಿಧಾನವನ್ನು ಹೊಂದಿರುತ್ತದೆ. ಈ ಜೀವನ ವಿಧಾನಕ್ಕನುಗುಣವಾಗಿ ಸಂಸ್ಕೃತಿಯೂ ರೂಪಗೊಂಡಿರುತ್ತದೆ. ಹಾಗೆಯೇ ಬುಡಕಟ್ಟು ಸಮುದಾಯವು ತನ್ನದೇ ಆದ ವಿಶಷ್ಟ ಸಂಸ್ಕೃತಿಯನ್ನು ಹೊಂದಿರುತ್ತದೆ. ಈ ಸಂಸ್ಕೃತಿಯನ್ನು ವಂಶ ಪಾರಂಪರ್ಯವಾಗಿ ಉಳಿಸಿಕೊಂಡು ಕಾಲಕ್ಕೆ ತಕ್ಕಂತೆ ಬೆಳೆಸಿಕೊಂಡುಬರುತ್ತದೆ. ಬುಡಕಟ್ಟು ಸಮುದಾಯಕ್ಕೆ ಸೇರಿದ ಜನ ಇವರು ಯಾವುದೇ ಒಂದು ಪ್ರದೇಶದ ಮೂಲನಿವಾಸಿಗಳಾಗಿರುತ್ತಾರೆ. ಅನೇಕ ಶತಮಾನಗಳಿಂದಲೂ ಬೆಟ್ಟ ಗುಡ್ಡ, ಮರಳುಗಾಡು, ಹಿಮಪ್ರದೇಶ, ಅಥವಾ ದ್ವೀಪಗಳಲ್ಲಿ ವಾಸವಾಗಿರುತ್ತ ಬಹುಕಾಲದವರೆಗೂ ನಗರ ಮತ್ತು ಗ್ರಾಮೀಣ ಸಂಸ್ಕೃತಿಗಳ ಪ್ರಭಾವಕ್ಕೆ ಸಿಗದೇ ತಮ್ಮ ಸಂಸ್ಕೃತಿಯನ್ನು ಪ್ರತ್ಯೇಕವಾಗಿಯೇ ಉಳಿಸಿಕೊಂಡು ಬರುವುದುಂಟು. ಅಂದರೆ ಇತರರಿಗಿಂತ ಭಿನ್ನವಾದ ಪ್ರತ್ಯೇಕವಾದ ಜೀವನಚಕ್ರವನ್ನು ರೂಢಿಸಿಕೊಂಡು ಬದುಕುತ್ತ ತಮ್ಮ ಅನನ್ಯ ಸಾಂಸ್ಕೃತಿಕ ಮೌಲ್ಯಗಳನ್ನು ಇಂದಿನವರೆಗೂ ಜೀವಂತವಾಗಿ ಉಳಿಸಿಕೊಂಡು ಬಂದಿರುವ ಒಂದು ಗುಂಪಿನ ಅಥವಾ ಸಮುದಾಯದ ಜನರನ್ನು ಬುಡಕಟ್ಟುಗಳು ಎಂದು ಸಾಮಾನ್ಯವಾಗಿ ಗುರುತಿಸಲಾಗಿದೆ. ಸಾವಿರಾರು ವರ್ಷಗಳಿಂದ ನಗರ ಸಂಸ್ಕೃತಿಯ ಅಕ್ರಮಣ ಶೀಲ ಪ್ರಭಾವದಿಂದ ಉದ್ದೇಶ ಪೂರ್ವಕವಾಗಿ ತಪ್ಪಿಸಿಕೊಂಡು ದಟ್ಟ ಅರಣ್ಯದಲ್ಲಿ ಗುಡ್ಡ-ಗಾಡು ಪ್ರದೇಶಗಳಲ್ಲಿ ಅನ್ಯ ಸಂಪರ್ಕ ದೂರವಾದ ನೆಲೆಗಳಲ್ಲಿ ವಾಸಿಸುತ್ತ ತಮ್ಮದೆಯಾದ ಭಾಷೆ, ಆಚಾರ, ದೈವ ಮೂಲಪುರುಷ, ಸಂಪ್ರದಾಯಿ ನಂಬಿಕೆ ಉಡುಪು-ತೊಡುಪು ಹಾಡು ಪಾಡು ಆಟ-ಪಾಠ ವಿಧಿ-ನಿಷೇಧ ಮಂತ್ರ-ಮಾಟ ಕರಕುಶಲತೆಗಳು ಆಹಾರ ಪಾನಿಯಗಳನ್ನು ಮತ್ತು ಸಾಮಾಜಿಕ ಕಟ್ಟುಪಾಡುಗಳನ್ನು ಹೊಂದಿ ನಾಗರಿಕರ ಕಣ್ಣಿಗೆ ವಿಚಿತ್ರವೆಂಬಂತೆ ಬದುಕುತ್ತಿರುವ ಸಮುದಾಯಗಳಿವು. ಕರ್ನಾಟಕದ ಬಹುಪಾಲು ಬುಡಕಟ್ಟು ಸಮುದಾಯಗಳು ಅರಣ್ಯವಾಸಿಗಳು. ವ್ಯವಸ್ಥಿತವಾಗಿ ಒಂದೆಡೆ ನಿಂತು ಜೀವನ ನಿರ್ವಹಿಸುವವರಲ್ಲ. ಗ್ರಾಮ ಪ್ರದೇಶಗಳಲ್ಲಿ ವಾಸಿಸುವವರು ಶಾಶ್ವತ ನೆಲೆಗಳನ್ನು ಹೊಂದಿದ್ದರೂ ಸಹ ಅಲೇಮಾರಿ ಪ್ರವೃತ್ತಿಯವರಾಗಿರುತ್ತಾರೆ. ಬಹುಪಾಲು ಜನರು ಕಾಡುಮೇಡುಗಳಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತ ಅಲ್ಲಿ ದೊರೆಯುವ ಗೆಡ್ಡೆ, ಗೆಣಸು, ಹಣ್ಣು ಹಂಪಲು, ಸೊಪ್ಪುಸದೆ, ಜೇನು ಮುಂತಾದ ಸಹಜೋತ್ಪನ್ನಗಳನ್ನು ಸೇವಿಸುತ್ತ ಅಗತ್ಯಕ್ಕೆ ತಕ್ಕಂತೆ ಕಾಡಿನ ಪ್ರಾಣಿಗಳನ್ನು ಬೇಟೆಯಾಡುತ್ತ ಬದುಕುವರು. ಬೇಸಾಯಿ ಮಾಡಿದರೂ ಬೇಸಾಯವನ್ನು ಸ್ಥಳದಿಂದ ಸ್ಥಳಕ್ಕೆ ಬದಲಾಯಿಸುವವರು. ಬಹುಮಟ್ಟಿಗೆ ಭವಿಷ್ಯದ ಕನಸನ್ನು ಕಾಣದೆ ಅದಕ್ಕಾಗಿ ಸಂಪತ್ತನ್ನೂ ಕೂಡಿಹಾಕದೆ ವರ್ತಮಾನದ ಜೀವನಕ್ಕಾಗಿ ಹೆಚ್ಚು ಶ್ರಮವಹಿಸುವ ಅಲ್ಪ  ತೃಪ್ತ ಜನರಿವರು. ತಮ್ಮದೇ ದೈವಗಳನ್ನು ತಮ್ಮದೇ ರೀತಿಯಲ್ಲಿ ಆರಾಧಿಸುತ್ತ ಹಬ್ಬ ಹರಿದಿನಗಳನ್ನು ಆಚರಿಸುತ್ತ ಹಾಡಿ ಕುಣಿದು ಕುಣಿಯುತ್ತ ತಮ್ಮ ಸಮೂಹದ ನಾಯಕನ ಆದೇಶಗಳನ್ನು ಪಾಲಿಸುತ್ತ ವಿಶಿಷ್ಟವಾದ ಅಗತ್ಯ ಉಡುಪು ಆಲಂಕಾರಗಳನ್ನು ತೊಡುತ್ತ ಸಹಜ ಕೌಟುಂಬಿಕ ಜೀವನವನ್ನು ಅನುಭವಿಸುತ್ತಾ ತಮ್ಮದೇ ಸಾಹಿತ್ಯ ಕರುಕುಶಲ ಕಲೆಗಳನ್ನು ಸೃಷ್ಟಿಸುತ್ತ ತಮ್ಮ ಸಮೂಹದ ಬೇರೆ ಬೇರೆ ಕುಟುಂಬಗಳೊಡನೆ ಪರಸ್ಪರ ಸಹಕಾರ ಸೌಹಾರ್ದಗಳಿಂದ ಅನ್ಯೋನ್ಯವಾಗಿ ಬದುಕುತ್ತ, ತಮ್ಮದೇ ಆದ ನ್ಯಾಯ ವ್ಯವಸ್ಥೆಯನ್ನು ಹೊಂದಿ ನಿಸರ್ಗ ಸಹಜವಾಗಿ ಬಾಳುವ ಮುಗ್ಧ ಅನಕ್ಷರಸ್ಥ  ಅಮಾಯಕ ಸಮುದಾಯವಿದ್ದು. ಸಾಮಾನ್ಯವಾಗಿ ಬುಡಕಟ್ಟು ಸಮುದಾಯದವರು ಆಹಾರ ಸಂಗ್ರಹಣೆ (ಗೆಡ್ಡೆ-ಗೆಣಸು, ಸೊಪ್ಪು ಸದೆ ಇತ್ಯಾದಿ) ಬೇಟೆಗಾರಿಕೆ ಪಶುಸಂಗೋಪನೆ ಕೃಷಿ ಕೂಲಿ ಹುಲ್ಲುಮಾರುವುದು ಕುದುರೆಗಳನ್ನು ಸಿಂಗರಿಸುವುದು, ಕಟ್ಟೆಗೆ ಒಡೆಯುವುದು, ಜೇನು ಸಂಗ್ರಹಣೆ, ಅಪರೂಪದ ವಸ್ತುಗಳಾದ ಸೂಜಿ, ದಬ್ಬಣ, ಪೆನ್ನು ಕಸ್ತೂರಿ ಗೋರಂಜಿಮ, ಕರಿಮಣಿ, ಹಾಲಮಣಿ, ನವಿಲು ತುಪ್ಪ, ಉಡದ ತುಪ್ಪ, ರುದ್ರಾಕ್ಷಿ, ಹುಲಿಯ ಉರುಗು, ಚೌಲಿ, ಪೀಪಿ ಮೊದಲಾದವುಗಳನ್ನು ಮಾರಾಟ ಬಿರಿದು ಮತ್ತು ಈಚಲಿನಿಂದ ಬುಟ್ಟಿ, ಕುಕ್ಕೆ, ಚಾಪೆ, ತೊಟ್ಟಿಲು, ಮೀನು ಹಿಡಿಯುವ ಕುಳಿ, ಮೊರ, ರೊಟ್ಟಿ ಬುಟ್ಟಿ ಬೀಸಣಿಕೆ ಹಾವಾಡಿಗರ ಕಲಾತ್ಮಕ ವಸ್ತುಗಳು ಕುರ್ಚಿ ಸೋಪಾ ದಿವಾನ ಚಾಪೆ, ಏಣಿ ಬುಕ್ಕಾ ಬೀಜ ಬಿತ್ತುವ ಸಾದನ ಮೊದಲಾದ ವಸ್ತುಗಳ ತಯಾರಿಕೆ ನಾರಿನಿಂದ ಹಗ್ಗ ಮಿಣಿ ಇತ್ಯಾದಿ ತಯಾರಿಕೆ ಹಾವಾಡಿಸುವುದು ಕರಡಿಯಾಡಿಸುವುದು, ಕೋತಿಯಾಡಿಸುವುದು, ಕೋತಿ, ಬಸವನಾಟ, ದೊಂಬರಾಟ, ಹೀಗೆ ಹಲವಾರು ಕರಕುಶಲ ಕಲೆಗಳನ್ನು ಜೀವನೋಪಾಯದ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಇಂಥ ಕರ್ನಾಟಕದಲ್ಲಿರುವ ಬುಡಕಟ್ಟು ಸಮುದಾಯಗಳ ಕರಕುಶಲ ಕಲೆಗಳನ್ನು ಪರಿಚಯಿಸುವುದು ಪ್ರಸ್ತುತ ಪ್ರಬಂಧದ ಉದ್ದೇಶವಾಗಿದೆ. ಈ ಕರಕುಶಲ ಕಲೆಗಳ ಪರಂಪರೆ ಮತ್ತು ಇತಿಹಾಸವನ್ನು ಅವಲೋಕಿಸಿದಾಗ ಈ ಕೆಳಗಿನ ವಿಷಯಗಳು ಕಂಡುಬರುತ್ತದೆ. ರಸಾನುಭವವನ್ನು ಉಂಟು ಮಾಡಬಹುದಾದ ಯಾವುದೇ ರಚನೆ ಅಥವಾ ಸೃಷ್ಠಿಯನ್ನು ನಾವು ಕಲೆಯೆಂದು ಗುರುತಿಸುತ್ತೇವೆ. ಕಲೆಗಳ ಮಾತು ಬಂದಾಗ ನಮ್ಮೆದುರು ಬಂದು ನಿಲ್ಲುವುದು ಚಿತ್ರ ೬೪ ಕಲೆಗಳು ಮಾನವನ ಜೀವನದ ಹಂತದಲ್ಲಿಯ ಒಂದಿಲ್ಲೊಂದು ರೂಪದಲ್ಲಿ ಪ್ರಕಟಗೊಳ್ಳುವ ಕಲೆಗಳೇ ಆಗಿವೆ. ಅದು ಹಾಸಿಗೆ ಹಾಸುವುದನ್ನು ಮೊದಲುಗೊಂಡು ರಸಾನಂದವನ್ನು ನೀಡುವ ಚಿತ್ರ ಶಿಲ್ಪ ನೃತ್ಯಾದಿ ಕಲೆಗಳೆಲ್ಲವನ್ನು ಒಳಗೊಳ್ಳುತ್ತವೆ.

ನಮ್ಮ ನಿತ್ಯದ ಬದುಕಿನಲ್ಲಿ ಹಾಸು ಹೊಕ್ಕಾಗಿ ಹೆಣೆದುಕೊಂಡಿರುವ ಈ ಕಲೆಗಳಲ್ಲಿ ಕೆಲವನ್ನು ಕುಶಲ ಕಲೆಗಳು ಅಥವಾ ಉಪಯುಕ್ತ ಕಲೆಗಳು ಎಂದು ಬೇರ್ಪಡಿಸುವುದುಂಟು. ಅದರಂತೆ ಉಪಯುಕ್ತತೆ ಗೌಣವೆನಿಸಿದ ಶುದ್ಧ ಆನಂದವನ್ನು ಕೊಡುವ ಚಿತ್ರ ಶಿಲ್ಪಾದಿ ಕಲೆಗಳನ್ನು ಪ್ರತ್ಯೇಕಿಸಿ ಅವನ್ನು ಲಲಿತಕಲೆಗಳೆಂದು ಗುರುತಿಸುತ್ತೇವೆ. ಅಂದರೆ ಆನಂದ ಮೂಲವಾದ ಕಲೆಗಳನ್ನು  ಲಲಿತಕಲೆ (ಪೈನ ಆರ್ಟ್ಸ್) ಎಂದೂ ಉಪಯುಕ್ತತೆ ಮೂಲವಾದುದನ್ನು ಕುಶಲ ಕಲೆ (ಕ್ರಾಪ್ಟ್) ಎಂದು ಗುರುತಿಸುತ್ತೇವೆ. ಈ ಉಪಯುಕ್ತ ಕಲೆಗಳನ್ನು ಈಚೆಗೆ ಕರಕುಶಲ ಕಲೆಗಳೆಂದು  ಗುರುತಿಸುತ್ತಿದ್ದೇವೆ. ಅಂದರೆ ಇವು ಯಂತ್ರ ನಿರ್ಮಿತ ವಸ್ತುಗಳಿಗಿಂತ ಭಿನ್ನವಾದವುಗಳು ಮತ್ತು ದೇಶಿಯ ರಚನೆಗಳು ಎಂಬುದನ್ನು ಸೂಚಿಸಲು ಈ ಪದ ರೂಢಿಯಲ್ಲಿ ಬಂದಿದೆ. ಭಾರತದಲ್ಲಿ ಈ ಹಿಂದೆ ಇಂಥ ಸಂದರ್ಭ ಇರಲಿಲ್ಲವಾದ ಕಾರಣ ಅವುಗಳನ್ನು ಒಟ್ಟಾಗಿ ಆರವತ್ತಾನಾಲ್ಕು ಕಲೆಗಳು ಎಂದು ಕರೆದಿದೆ. ಈ ಚೆಗೆ ಯಾಂತ್ರಿಕರಣ ವಿಫಲವಾಗಿ ಯಂತ್ರ ನಿರ್ಮಿತಗಳಿಗಿಂತ ಭುನ್ನವಾಗಿ ಮಾನವ ನಿರ್ಮಿತ ಕಲಾವಸ್ತ್ರಗಳನ್ನು ಕರಕುಶಲ ಕಲೆಗಳು ಎಂದು ಹೇಳಲಾಗಿದೆ. ಕರಕುಶಲ ಕಲೆಗಳ ಉಗಮವನ್ನು ಕುರಿತು ನಿರ್ಧಾರವಾಗಿ ಹೇಳುವುದು ಕಷ್ಟಸಾಧ್ಯವಾದ ಸಂಗತಿಯಾಗಿದೆ. ಈ ಕುರಿತಂತೆ ಸಾಂಪ್ರದಾಯಿಕ ದೃಷ್ಟಿ ಒಂದು ಬಗೆಯದು ಅದು ಕರಕುಶಲ ಕಲೆಗಳ ದೈವ ಮೂಲವಾದುದು ಎನ್ನುತ್ತದೆ. ಅಂದರೆ ಕಲೆಗಳು ತ್ರಿಮೂರ್ತಿಗಳಿಂದ ಋಷಿಗಳಿಗೆ. ಋಷಿಗಳಿಂದ ದೇವ ಮಾನವ ಶಿಲ್ಪಿಗಳಿಗೆ ಭೋಧಿತವಾಗಿ ಲೋಕದ ತುಂಬಾ ವಿಕಸನ ಹೊಂದಿದ್ದು, ಈ ಹಿನ್ನಲೆಯಲ್ಲಿ ವೇದ ಶಾಸ್ತ್ರ ಪುರಾಣಗಳು ವಿಶ್ವಕರ್ಮವನ್ನು ವಿಶ್ವರಚನಾಕಾರ ದೇವಶಿಲ್ಪ ಸರ್ವಕಲೆ ಕರಕುಶಲ ಕಲಾಗುರು ಸ್ಥಾಪತ್ಯ ಕಲಾಪ್ರವೀಣ ಅಲ್ಲದೇ ದೇವತೆಗಳ ವಾಸ-ಆಯುಧ-ಆಭರಣ ನಿರ್ಮಾಣಕಾರ ಎಂದು ಮುಂತಾಗಿ ವರ್ಣಿಸಿ ಅವನನ್ನು ಸಕಲ ಕಲಾ ಜನಕ, ಸಕಲ ಕಲಾ ಅಧಿಷ್ಟಾನ ದೇವತೆ ಎಂದು ಕಾಣಲಾಗಿದೆ.

ಜೀವನವಿರುವ ಎಲ್ಲಾ ಸೃಷ್ಟಿ ವರ್ಗವನ್ನು ನಾವು ಒಟ್ಟಾಗಿ ಜೀವಿಗಳು ಅಥವಾ ಪ್ರಾಣಿಗಳು ಎನ್ನುತ್ತೇವೆ. ಆದರೆ ತೀವ್ರ ವಿಕಾಸ ಸೃರೂಪಿಯಾದ ಮಾನವನಲ್ಲಿ ಚಲಿಸುವುದಕ್ಕೆ ಕಾಲಿನಂತೆಯೇ ಬಳಕೆಗೊಳ್ಳುತ್ತಿದ್ದ ಕರ ಅಥವಾ ಕೈ ಎಂದು ಅಂಗವೆಂದು ರೂಪಗೋಡದ್ದು ವಿಸ್ಮಯಕಾರಿ ಸಂಭವವಾಗಿದೆ. ಮಾನವನ ವಿಕಾಸದ ಹಂತದಲ್ಲಿ ಹೆಬ್ಬೆರಳು ಪ್ರತ್ಯೇಕಗೊಂಡು ಈ ಅಂಗದಲ್ಲಿ ಅನಂತರ ಒಂದೊಂದಾಗಿ ಬಿಡಿಸಿಕೊಂಡು ಐದು ಬೆರಳಾದುದು ರೋಚಕವೆನಿಸುತ್ತದೆ. ಬಹುಶಃ ಹೀಗೆ ರೂಪಗೊಳ್ಳಲು ಸಾವಿರಾರು ವರ್ಷಗಳು ಕಳೆದಿರಬೇಕು ಅಲ್ಲದೇ ಮಾನವನ ಅಂದಿನ ಅನಿವಾರ್ಯತೆಗಳು ಇಂಥ ವಿಕಾಸಕ್ಕೆ ಕಾರಣವಾಗಿರಬೇಕು. ಹೇಗೆ ಮಾನವನ ಕರ ಅಥವಾ ಕೈಗಳು ಎಂಥ ಕೌಶಲ್ಯವನ್ನು ಕೂಡ ಸಮರ್ಥವಾಗಿ ಸಾಧಿಸಬಲ್ಲ ಈಗಿನ ಆಕಾರವನ್ನು ಯಾವುದೆ ಒಂದು ಹಂತದಲ್ಲಿ  ಪಡೆಯಲು ಸಾಧ್ಯವಾಗಿರಬಹುದು.

ಇಂಥ ಕರ ಎಂದರೆ ಕೈ ಕೈಗಳು ಯಾವುದೇ ಒಂದು ಕಚ್ಚಾ ಸಾಮಾಗ್ರಿಯನ್ನು ಅದು ಅದರಲ್ಲೂ ಮಣ್ಣು ಮಣ್ಣು ಚರ್ಮ ಯಾವುದೇ ಆಗಿರಬಹುದು ಅದನ್ನು ನಿರ್ದಿಷ್ಟ ಉದ್ದೇಶದ ಹಿನ್ನೆಲೆಯಲ್ಲಿ ಆಕರ್ಷಕವೂ ಉಪಯುಕ್ತವೂ ಆಗುವಂತೆ ಇಂದು ವಸ್ತುವಾಗಿ ರೂಪಿಸುವ ಕುಶಲತೆಯನ್ನು ಕರ ಕುಶಲಕಲೆ ಎನ್ನುತ್ತೇವೆ. ಮಾನವನ ಇಂಥ ಕುಶಲತೆ ಶಾರೀರಕ ವಿಕಾಶ ಹಾಗೂ ಅದರ ಉಪಯೋಗದೊಂದುಗೆ ಬೆಳೆದು ಬಂದ ಮಾನಸಿಕ ಕ್ರಿಯೆಗಳಾದ ಭಾವಿಸುವ ಕಲ್ಪಿಸುವ ಹಾಗೂ ಆಲೋಚಿಸುವ ಶಕ್ತಿಗಳಿಂದ ಸಾಧ್ಯವಾದುದಾಗಿದೆ. ಬುದ್ಧಿ ಸೃಜನ ಶೀಲತೆಗಳು ಮಾನವನ ಜನ್ಮಜಾತ ವ್ಯವಸ್ಥೆಗಳಾಗಿದೆ. ಅವನ ಬದುಕಿನ ಪ್ರತಿಯೊಂದು ಚಟುವಟಿಕೆಗಳು ಹಿಂದೆಯೂ ಈ ಜನ್ಮ ಜಾತ ವ್ಯವಸ್ಥೆಯ ಕ್ರಿಯಾಶೀಲ ತೊಡಗುವಿಕೆ ಇರುತ್ತದೆ ಹೀಗಾಗಿ ಮಾನವನ ವಿಕಾಸದ ಪ್ರತಿಹಂತದಲ್ಲಿಯೂ ಅವನ ಬದುಕಿನ ಅವಿಭಾಸ್ಯ ಅಂಶವಾಗಿಯೇ ಬೆಳೆಯುತ್ತ ಬಂದಿರುವ ಕಲೆ ಕರಕುಶಲತೆಗಳು ಕೂಡಾ ಈ  ವ್ಯವಸ್ಥೆಯ ಪರಿಣಾಮಗಳೇ ಆಗುತ್ತವೆ.

ಮಾನವ ತನ್ನ ಎಲ್ಲ ಅಂಗಗಳಲ್ಲಿ ವಿಶೇಷವಾಗಿ ಕಣ್ಣು ಮತ್ತು ಕೈಗಳನ್ನು ತನ್ನ ಬಾವನೆ ಕಲ್ಪನೆಗಳ ಅಭಿವ್ಯಕ್ತಿಗಾಗಿ ಬಳಸಿಕೊಳ್ಳತೊಡಗಿದ್ದು ಒಂದು ಮಹತ್ವದ ಹಂತವಾಗಿದೆ. ಏಕೆಂದರೆ ಮಾನವನು ತನ್ನ ಪ್ರಾಣಿ ಸಹಜ ಇರುವಿಕೆಯಿಂದ ಪಡೆಯುತ್ತಿದ್ದು ಸೌಖ್ಯೆ ಹಾಗೂ ತೃಪ್ತಿಯ ಜಡತ್ವವವನ್ನು ಬಿಟ್ಟು ಅದನ್ನು ಮೀರಿದ ಸುಖ ತೃಪ್ತಿಗಳನ್ನು ಪಡೆಯಬಯಸಿದನು ಇಂಥ ಹಂಬಲವೇ ಕುಶಲತೆ ಎಂಬ ಸಹಜ ಅಭಿವ್ಯಕ್ತಿಯಗಳಿಕೆಯಾಗಿದೆ. ಬಹುಶಃ ಇದು ತನ್ನ ಮೂಲ ಅಗತ್ಯಗಳಾದ ಅನ್ನ ಅರಿವೆ ವಾಸದ ಸಮಸ್ಯೆಗಳನ್ನು ಸ್ವಲ್ಪ ನಿರಾಯಸವಾಗಿ ಪಡೆದುಕೊಳ್ಳಲು ಸಮರ್ಥವಾದ ಹಂತದಲ್ಲಿ ಸಾಧ್ಯವಾಗಿರಬೇಕು. ಈ ಹಿನ್ನೆಲೆಯಲ್ಲಿ ಕಲೆ, ಕರಕುಶಲ ಕಲೆಗಳು ಶಕ್ತಿ ಉಳಿಕೆಯ ಫಲಗಳಾಗುತ್ತವೆ.

ಮಾನವನ ವಿಕಾಸದಲ್ಲಿ ಈ ಶಕ್ತಿಯುಳಿಕೆಯ ಗಳಿಕೆಯು ಅತ್ಯಂತ ಮಹತ್ವದ ಸಂದರ್ಭವಾಗಿದೆ. ಈ ಸಂದರ್ಭವೆ ಅವನನ್ನು ಭಾವಿಸಲು ಕಲ್ಪಿಸಲು ಆಲೋಚಿಸಲು ಪ್ರೇರಿಸಿದ ಅವಧಿಯಾಗಿದೆ ಇದೆ ಅವನಲ್ಲಿಯ ಸೃಜನ ಶೀಲತೆಗೆ ಅವಕಾಶ ಕೊಟ್ಟದ್ದಾಗಿದೆ. ತಾನು ನೋಡಿದ ಆಡಿದ ಬೇಟೆ, ಬೇಟೆಯಾಡಿದ ರೀತಿ ಬಳಸಿಕೊಂಡು ಆಯುಧ ಬೇಟೆವಿಧಾನದಲ್ಲಿ ಮಾಡಿದ  ತಪ್ಪು ಬಳಸಿಕೊಂಡು ಆಯುಧದಲ್ಲಿನ ಕೊರತೆಗಳು ತಾನು ಉಣ್ಣುವ ರೀತಿ ಅದಕ್ಕಾಗಿ ಬಳಸಿಕೊಳ್ಳುವ ಪಾತ್ರೆ ತಾಟು ಇತ್ಯಾದಿಗಳು ಉಡುವ ವಸ್ತ್ರ ತೋಡುವ ಆಭರಣ ಇವೆಲ್ಲವುಗಳನ್ನು ಇನ್ನೂ ಸಮರ್ಪಕವಾಗಿ ಸಿದ್ದಿಪಡಿಸಿಕೊಳ್ಳಲು ನಡೆಸಿದ ಪ್ರಯತ್ನಗಳ ಫಲವೇ ಕರಕುಶಲ ಕಲೆಗಳ ಉಗಮದ ಸಂದರ್ಭವಾಗಿರಬಹುದು. ಅಂದರೆ  ಮಾನವನು ಕಾಡು ಪ್ರಾಣಿಗಳಂತೆ ತಿರುಗಿತ್ತದ್ದ ಹಂತ ಒಂದಿತ್ತು. ಆಗ ಅವನು ಕೈಗೆ ಎಟುಕಿದ ಕಲ್ಲುಗುಂಡು, ಮರದ ಕೊಂಬೆ ಎಸೆದು ಅಥವಾ ಬೀಸಿ ತನ್ನನ್ನು ಇತರ ಪ್ರಾಣಿಗಳ ಅಕ್ರಮಣದಿಂದ ರಕ್ಷಿಸಿಕೊಳ್ಳುತ್ತಿದ್ದನು. ಅದನ್ನೇ ತನ್ನ ಅಗತ್ಯಕ್ಕನುಗುಣವಾಗಿ ವಿವಿಧ ಆಯುಧಗಳ ರಚನೆಗೆ ತೊಡಗಿರಬಹುದು. ನೀರಡಿಕೆಯಾದಾಗ ಹರಿಯುವ ನೀರಿಗೆ ಬಾಯಿ ಹಾಕುತ್ತಿದ್ದನು. ದೊನ್ನೆಯಾಕಾರದ ಎಲೆಗಳಲ್ಲಿ ಕರಟ ಬುರುಡೆಗಳಲ್ಲಿ ನಿಂತ ನೀರು ಕುಡಿದು ಅದೇ ಆಕಾರದ ಮಣ್ಣಿನ ಪಾತ್ರೆಗಳ ರಚನೆಗೆ ತೊಡಗಿರಬಹುದು. ಚಳಿಯಾದಾಗ ಹೊದ್ದುಕೊಳ್ಳುತ್ತಿದ್ದ ಗಿಡದ ತೋಗಟೆ ಪ್ರಾಣಿಯ ಎಲಬುಗಳ ಬೆನ್ನುಮೂಳೆ ಮಣಿಗಳು ಪ್ರಾಣಿಗಳ ಕೋಡು ಕೊರೆಗಳು ಅಲಂಕಾರ ಆಭರಣ ಆಯುಧ-ಆಟಿಕೆ ಸಾಮಾನುಗಳ ಕರಕುಶಲ ಕಲೆಗಳ ಉಗಮಕ್ಕೆ ಕಾರಣವಾಗಿರಬೇಕು. ಇಂತಹ ಕುಶಲ ಕಲೆಗಳ ಉಗಮದ ಅವಧಿಯನ್ನು ನಿರ್ಧಿಷ್ಟವಾಗಿ ಹೇಳುವುದು ಅಸಾಧ್ಯ ಕಾರಣ ಅವುಗಳಲ್ಲಿ ಅಂದಂದಿನ ಅಗತ್ಯಗಳನ್ನು ಪೂರೈಸಿಕೊಳ್ಳವ ಹಿನ್ನೆಲೆಯಲ್ಲಿ ಉಗಮಗೊಂಡು ವಿಕಾಸಗೊಳ್ಳುತ್ತಾ ಬಂದವುಗಳಾಗಿವೆ. ಕರಕುಶಲ ಕಲೆ ಎಂದರೆ ಕೈ ಹಾಗು ಬೆರಳುಗಳನ್ನು (ಅಗತ್ಯವಿದ್ದಲ್ಲಿ ಬೇರೆ ಅಂಗಾಂಗಗಳನ್ನು) ಬಳಸಿಕೊಂಡು ಸೂಕ್ತ ಸಾಮಗ್ರಿಗೆ ಉಪಯುಕ್ತ ಹಾಗೂ ಆಕರ್ಷಕ ರೂಪವನ್ನು ಕೊಡುವದೆ ಆಗಿದೆ, ಇದು ಯಾವುದೆ ವಸ್ತುವೊಂದನ್ನು ನಿರ್ಮಿಸಲು ಎಂಥದ್ದೇ ಒಂದು ಮೂಲ ಸಾಮಗ್ರಿಯನ್ನು ಬಳಸಿಕೊಳ್ಳುವ ನೈಪುಣ್ಯವಷ್ಟೇ ಅಲ್ಲ ಇವು ಮಾನವನ ಬುದ್ದಿ, ಭಾವ ಮತ್ತು ದೇಹಗಳ ಸಹಸ್ಪಂದನ ಪರಿಣಾಮವಾಗಿ ಬೆಳೆದುಬಂದಿರುತ್ತದೆ. ಇಂತಹದ ಸ್ಪಂದನದ ಹಿಂದೆ ಜೀವನಾಗತ್ಯದ ಒತ್ತಡ ಇರುತ್ತದೆಂಬುದನ್ನು ಮರೆಯಲಾಗದು. ಒಂದರ್ಥದಲ್ಲಿ ಕರಕುಶಲ ಕಲೆಗಳ ಉಗಮವು ಅಗತ್ಯಗಳ ಅನ್ವೇಷಣೆಯಾದರೆ ಅವುಗಳ ವಿಕಾಸವು ಮಾನವನ ಬುದ್ಧಿ, ಸೃಜಶೀಲತೆಗಳು ಪರಿಸರ ಪರಿಕರಣಗಳನ್ನು ಬಳಸಿಕೊಂಡು ಬೆಳೆದ ರೀತಿ ಎನ್ನಬಹುದು. ಕರಕುಶಲ ಕಲೆಗಳ ವಿಕಾಸಕ್ಕೂ ಮಾನವನ ಬುದ್ಧಿ, ಭಾವಗಳ ಬೆಳವಣಿಗೆಗೂ ನೇರ ಸಂಬಂಧವಿದೆ. ಪ್ರತಿ ಹಂತದ ಸಂದರ್ಭ ಸನ್ನಿವೇಶಗಳೆಲ್ಲವೂ ಮಾನವನಿಂದ ರೂಪಗೊಳ್ಳುತ್ತಾ ಬಂದ ಕಲೆ ಕುಶಲ ಕಲೆಗಳ ಮೇಲೆ ದಟ್ಟವಾದ ಪರಿಣಾಮ ಪ್ರಭಾವ ಬೀರಿದೆ. ಕರಕುಶಲತೆಗಳೂ ಕೂಡ ಮಾನವನ ಈ ಬೆಳವಣಿಗೆಯೊಂದಿಗೆ ವಿಕಾಸಗೊಳ್ಳುತ್ತ ಬಂದಿದೆ.

ಕರಕುಶಲ ಕಲೆಗಳೆಲ್ಲವೂ ಏಕ ಕಾಲಕ್ಕೆ ಅಸ್ತಿತ್ವಕ್ಕೆ ಬಂದಿರಲಾರವು  ಮಾನವನ ಬೆಳವಣಿಗೆಯಲ್ಲಿ ಮೊದಲು ಬೇಟೆ ಅನಂತರ ಬೇಸಾಯ ಪ್ರಧಾನವಾಗಿದೆ. ಅದಕ್ಕಾಗಿ ಅವನು ತನ್ನ ಸುತ್ತಲೂ ದೊರಕುತ್ತಿದ್ದ ಸಾಮಗ್ರಿಯ ಪರಿಮಿತಿಯಲ್ಲಿ ಕೆಲವೇ ಆಯುಧ, ಪಾತ್ರ ಹೊದಿಕೆ ವ್ಯವಸಾಯದ ಸಾಧನೆಗಳು ಮುಂತಾದವುಗಳ ರಚನಾ ಚಟುವಟಿಕೆಗಳಲ್ಲಿ  ತೊಡಗಿರಬಹುದು. ಮುಂದೆ ಅವೇ ಕರಕುಶಲ ಕಲೆಗಳಾಗಿ ಮಾರ್ಪಟ್ಟಿವೆನ್ನಿಸುತ್ತದೆ.

ಬೇಟೆ ಬೇಸಾಯ ಹಾಗೂ ನಿತ್ಯ ಜೀವನದ ಅಗತ್ಯಕ್ಕೆ ಬಳಸಿಕೊಳ್ಳಬಹುದಾದ ಮೂಲಸಾಮಗ್ರಿಗಳಲ್ಲಿ ಮಣ್ಣು, ಕಲ್ಲು, ಕಟ್ಟಿಗೆ ತೊಗಟೆ, ಚರ್ಮ ಪ್ರಮುಖವಾದವುಗಳು. ಲೋಹಗಳ ಬಳಕೆ ಅನಂತರದೇ ಆಗಿದೆ. ಈ ಎಲ್ಲ ಸಾಮಗ್ರಿಗಳನ್ನು ಕುಶಲತೆಯಿಂದ ಬಳಸಿಕೊಳ್ಳುತ್ತಾ ಬಂದ ಹಿನ್ನೆಲೆಯಲ್ಲಿ ಕರಕುಶಲ ಕಲೆಗಳ ವ್ಯಾಪಾಕವಾದ ವೈವಿದ್ಯತೆ ಹಾಗೂ ವಿಕಾಸಕ್ಕೆ ಕಾರಣವಾಗಿರಬೇಕು.

ಪ್ರಪ್ರಥಮಕಲೆ: ಗುಹೆ ವರ್ಣ ಚಿತ್ರಗಳನ್ನು ಕಳೆದು ಶತಮಾನದಿಂದ ಪುರಾತತ್ವ ಶೋಧಕರಿಂದ ವಿಶ್ವದ ಹಲವೆಡೆ ಪತ್ತೆಯಾಗುತ್ತಿವೆ. ಸುಮಾರು ೩೦.೦೦೦ ವರ್ಷಗಳ ಹಿಂದೆಯೇ ಮಾನವ ಜೀವ ಕಂಡು ಕೊಂಡ ಪರಿಸರದ ದೃಶ್ಯಗಳನ್ನು ಗುಹೆಗಳಲ್ಲಿ ತನ್ನ ಬಿಡುವಿನ ಸಮಯದಲ್ಲಿ ಬರೆಯುತ್ತಿದ್ದರು. ಇಲ್ಲವೇ ಕೆತ್ತುತ್ತಿದ್ದರು. ಮುಖ್ಯವಾಗಿ ಅವರು ಬೇಟೆಯ ಚಿತ್ರಗಳಾದ ಜಿಂಕೆ, ಕೋಣ, ಕುರಿ, ಹೋರಿ, ಮೊದಲಾದವುಗಳನ್ನು ಬಿಡಿಸುತ್ತಿದ್ದರು.

ಆರಂಭಿಕ ಕುಶಲ ಕಲೆಗಳು: ಕರಕುಶಲತೆಯು ಪಶುಪಾಲನೆ ಮತ್ತು ಉಳಮೆ ಬೆಳೆದಂತೆ ಬೆಳೆಯತೊಡಗಿತು. ಕೈಗಳ ಸಹಾಯದಿಂದ ಕಲಾತ್ಮಕವಾಗಿ ತಯಾರಿಸುವ ವಸ್ತುಗಳ ಕಲೆ ಕರಕುಶಲ ಕಲೆ ಎಂದು ಕರೆಯುವರು. ಸುಮಾರು ೭ ಸಾವಿರ ವರ್ಷಗಳ ಹಿಂದೆಯೇ ಜನರು ಕಲ್ಲುಗಳಲ್ಲಿ ಕಲಾತ್ಮಕವಾದ ಸಾಧನಗಳನ್ನು ತಯಾರಿಸಲು ಕಲಿತರು. ಗಿಡದ ಗರಿಗಳಿಂದ ಟೊಂಗೆಗಳಿಂದ ಬುಟ್ಟಿಗಳನ್ನು ಹೆಣೆಯುವದರೊಂದಿಗೆ ಉಣ್ಣೆ ಮತ್ತು ನಾರಿನಿಂದ ಬಟ್ಟೆಗಳನ್ನು ನೆಯಲು ಕಲಿತರು. ಬುಡಕಟ್ಟುಗಳ ಕರಕುಶಲ ಪರಂಪರೆಯನ್ನು ಹೀಗೆ ಸಂಗ್ರಹಿಸಬಹುದು, ಮಾನವನ ಒಂದು ಹಂತದಲ್ಲಿ ಅಲೆಮಾರಿಯಾಗಿದ್ದನು ಅರೆ ಅಲೆಮಾರಿಯಾಗಿ ನಂತರ ಒಂದು ಕಡೆ ನೆಲೆಗೊಂಡು ಸುಖ ಸೌಕರ್ಯಗಳನ್ನೊಳಗೊಂಡು ಜೀವಿಸ ತೊಡಗಿದ್ದಾನೆ. ಪ್ರತಿ ಹಂತದ ಸಂದರ್ಭ ಸನ್ನಿವೇಶಗಳೆಲ್ಲವೂ ಅವನಿಂದ ರೂಪಗೊಳ್ಳುತ್ತಾ ಬಂದ ಕಲೆ. ಕರಕುಶಲ ಕಲೆಗಳ ಮೇಲೆ ದಟ್ಟವಾದ ಪರಿಣಾಮ, ಪ್ರಭಾವ ಬೀರಿದೆ. ಕರಕುಶಲ  ಕಲೆಗಳು ಕೂಡ ಮಾನವನ  ಈ ಬೆಳವಣಿಗೆಯೊಂದಿಗೆ ವಿಕಾಸಗೊಳ್ಳುತ್ತಾ ಬಂದಿವೆ ಈ ಮಾತು ಕರಕುಶಲ ಕಲೆಗಳು ಬೆಳೆದುಬಂದ ರೀತಿಯನ್ನು ಹೇಳುತ್ತದೆ. ಮಾನವನು ಅಲೆಮಾರಿ ಸ್ಥಿತಿಯಲ್ಲಿಯೇ ಕಾಣುತ್ತೇವೆ. ಮಾನವನ ಒಂದೆಡೆ ನೆಲೆ ನಿಂತು ಜೀವನ ಸಾಗಿಸಲು ಆರಂಭಿಸಿದರು. ಬುಡಕಟ್ಟು ಸಮುದಾಯಗಳು ಕರ್ನಾಟಕದ ತುಂಬಾ ಅಲ್ಲಲ್ಲಿ ಇರುವದನ್ನು ಕಾಣಬಹುದಾಗಿದೆ. ಕರ್ನಾಟಕಕ್ಕೆ ಸೀಮಿತಗೊಳಿಸಿ ಹೇಳುವುದಾದರೆ ಸುಡುಗಾಡು ಸಿದ್ದರು ಕರಕರ ಮುಂಡೆಯರು ದುರಮುರಗಿಯರು, ಪೋತುರಾಜರು, ಬುಡಬುಡಕೆಯವರು, ಕಿನ್ನರಿ ಜೋಗಿಗಳು, ಕಿಳ್ಳೆಕ್ಯಾತರು, ಹಾವಾಡಿಗ, ಗೋರವ, ಕೊರವ ಕುಡಿಯ ಮೇದರು ಸೋಲಿಗ ಹೀಗೆ ಮುಂತಾದ ಅಲೆಮಾರಿ ಬುಡಕಟ್ಟು ಪಂಗಡಗಳು ಕಂಡು ಬರುತ್ತವೆ. ಈ ಯವುದೇ ಒಂದು ಬುಡಕಟ್ಟು ಪಂಗಡವನ್ನು ಒಂದು ನಿರ್ಧಿಷ್ಟ ಪ್ರದೇಶಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ ಕಾರಣ ಇವರು ಅಲೆಮಾರಿಯಾಗಿ ನಿಯಮಿತವಾಗಿ ಸ್ಥಳ ಬದಲಾಯಿಸುವ ಕಾರಣದಿಂದ ಇವರು ಎಲ್ಲ ಪ್ರದೇಶಗಳಲ್ಲಿ ಕಮಡು ಬರುವರು. ಇವರ ಅಲೆಮಾರಿಗಳಾಗಿ ಒಂದುಕಡೆಯಿಂದ ಮತ್ತೊಂದುಕಡೆ ಅಲೆಯುವದರಿಂದ ಅವರ ಅನುಭವದ ವ್ಯಾಪ್ತಿಯೂ ಹಿಡಿದು  ಕರಕುಶಲ ಕಲೆಯ ಹೆಸರೇ ಹೇಳುವಂತೆ ಕರದಿಂದ ಮಾಡಿದ ಕೌಶಲ್ಯವನ್ನು ಅವರ ಪ್ರತಿಭೆಯನ್ನು ತೋರಿಸುವಂತದ್ದಾಗಿದೆ. ಇದು ಸೌಂದರ್ಯ ಪ್ರಜ್ಞೆ, ಸಾಮಗ್ರಿಗಳ ಉಪಲಬ್ದ ಮುಂತಾದ ಪೂರಕ ಅಂಶಗಳನ್ನು ಅವಲಂಬಿಸಿದೆ. ಕರಕುಶಲ ಕಲೆ ಎಂಬುದನ್ನು ಶಿಲ್ಪ ಹಾಗೂ ಚಿತ್ರಗಳಿಗೆ ಸೀಮಿತಗೊಳಿಸಿಕೊಳ್ಳಬಹುದು. ಶಿಲ್ಪವೆಂದರೆ ಮೂರು ಆಯಾಮವುಳ್ಳ ಯಾವುದೇ ವಸ್ತು ಆಗಿರಬಹುದು. ಯಾವುದೇ ವಸ್ತುವಾಗಬಹುದು. ಮೊಳೆ-ಸುತ್ತಿಗೆಯಿಂದ ಸೇತುವೆವರೆಗೆ ಸೌಂದರ್ಯವನ್ನು ಹೊರಹೊಮ್ಮಿಸಿದರೆ ಅದು ಕರಕುಶಲ ಕಲೆಯಾಗಬಲ್ಲದು.

ಕರಕುಶಲ ಕಲೆಯನ್ನು ಐದು ಬಗೆಯಲ್ಲಿ ವಿಂಗಡಿಸಲಾಗಿದೆ.

೧. ಉಡುಗೆ-ಕರಕುಶಲ ಕಲೆಗಳು.
೨. ದೇವಾಲಯಗಳ ನಿರ್ಮಾಣ, ಕೆತ್ತನೆ ಪೂಜಾ ಸಾಮಗ್ರಿ ಮುಂತಾದವು ಆರಾಧನೆ ಸಂಬಂಧಿ ಕರಕುಶಲ ಕಲೆಗಳು.
೩. ಪೀಠೋಪಕರಣ ಅಡುಗೆ ಮನೆಯ ಪರಿಕರಗಳು. ಪೆಟ್ಟಿಗೆ, ಕೈ ಚೀಲ ಮುಂತಾದವು ಗೃಹೋಪಯೋಗಿ ಕರಕುಶಲ ಕಲೆಗಳು.
೪. ರಂಗಭೂಮಿ ವಾದ್ಯ ಪರಿಕರ ಬೊಂಬೆ ಮೊದಲಾದವು  ಮನರಂಜನಾ ಸಂಬಂಧಿ ಕರಕುಶಲ ಕಲೆಗಳು.
೫. ಧಾನ್ಯ ಸಂಗ್ರಹಣ ಕಣಜ ಕಮ್ಮಾರಿಕೆಯಂಥ ವೃತ್ತಿಗಳು ಅಳತೆ ಮಾಪನ ಮುಂತಾದವು ವ್ಯವಸಾಯಿ ಸಂಬಂಧಿ ಕರಕುಶಲ ಕಲೆಗಳು.

ಬುಡಕಟ್ಟು ಸಮುದಾಯಗಳಲ್ಲಿ ಮುಖ್ಯವಾಗಿ ಅಲಂಕರಣ ಸಂಬಂಧ ಹಾಗೂ ಮನರಂಜನಾ ಸಂಬಂಧಿ ಕರಕುಶಲ ಕಲೆಗಳನ್ನು ಮುಖ್ಯವಾಗಿ ಕಾಣಬಹುದು. ಕರ್ನಾಟಕದಲ್ಲಿರುವ ಬುಡಕಟ್ಟುಗಳಲ್ಲಿ ಗುಲಗಂಜಿ ಮಣಿಗಳು ಹಾರ ನಾಗರಾಕೃತಿಯ ತೋಳಬಂದಿ, ಉಕ್ಕಿನ ಕಡಗ ರಾಯಕ ಮುಂತಾದವನ್ನು ಧರಿಸುತ್ತಾರೆ. ಇವುಗಳ ಕಲಾತ್ಮಕ ವಿಶಿಷ್ಟವಾದದ್ದು, ಚಿಂಚರು, ಬುಡಗಾ, ನಕ್ಷತ್ರ ಮೂಗುತಿ ಇಂಟೀ (ಉಗುರು) ಕಾಂಬೂಲ ಬೆಂಡಾಲ್ಯಾ ಮುಂತಾದವರು ಧರಿಸುತ್ತಾರೆ. ಹಕ್ಕಿಪಕ್ಕಿಗಳು ಬವಾಳಿ ಬೀಜವನ್ನು ಬೇಯಿಸಿ ನಡುವೆ ತೂತು ಮಾಡಿ ತಾಮ್ರದ ತಂತಿ ಸೇರಿಸಿ ಸರ ಮಾಡುವರು. ಈ ಹಕ್ಕಿ ಪಿಕ್ಕಿ ಹೆಣ್ಣುಮಕ್ಕಳ ವೃತ್ತಗಳೆಂದು ಹೆಚ್ಚೆ ಹಾಕುವುದು. ಮತ್ತು ಕಸೂತಿ ಹಾಕುವುದು. ಹಚ್ಚೆಯ ವೈವಿದ್ಯತೆ ಗಮನಾರ್ಹವಾದುದು ಕಸೂತಿ ಹಲವಾರು ಜನಪದ ಚಿತ್ರಗಳನ್ನು ಸಂಕೇತಗಳನ್ನು ಪಕ್ಷಿಗಳನ್ನು ಹಾಕುತ್ತಾರೆ. ಇವರ ಈ ಕಲೆ ಬಹು ವಿಶಿಷ್ಟ ಪೂರ್ಣವಾಗಿರುವಂತದ್ದು ಗೊಂದಲಿಗರು ಕಿವಿಯ ಬುಗಡಿನತ್ತು ಮುಂತಾದವುಗಳನ್ನು ಧರಿಸುತ್ತಾರೆ. ಇದೇ ರೀತಿ ಒಂದೊಂದು ಬುಡಕಟ್ಟು ಅಲೆಮಾರಿಗಳಾದ ಕಿಳ್ಳೇಕ್ಯಾತರು ತೊಗಲು ಗೊಂಬೆಗಳ ತಯಾರಿಕೆಯಲ್ಲಿ ಸಿದ್ದ ಹಸ್ತರು. ತೊಗಲಬೊಂಬೆಯಾಟದಲ್ಲಿ ಮೃದಂಗ ಮುಖ ವೀಣೆ ತಾಳ ಬುರಿ ಗಂಗಾಳ ವಾದ್ಯ ಮುಖ್ಯವಾದವು. ಇವುಗಳನ್ನು ಅವರು ತಯಾರಿಸಿಕೊಳ್ಳುತ್ತಾರೆ. ಗೊಂಬೆಗಳಿಗೆ ಬೇಕಾದ ಹಸಿ ತೋಗಲನ್ನು ಕೆಲವು ಗಿಡಮೂಲಿಕೆಗಳ ಬೇರುಗಳೊಂದಿಗೆ ನೆನೆಸಿ ಹದಗೊಳಿಸಿ ಚರ್ಮದ ಮೇಲೆ ಕೂದಲನ್ನು ಹೆರೆದು ಪಾರದರ್ಶಕವಾಗಿ ಮಾಡುತ್ತಾರೆ. ಚಿತ್ರದ ಆಕಾರಕ್ಕೆ ಚರ್ಮವನ್ನು ಕತ್ತರಿ ಅದರ ಮೇಲೆ ಮೊಳೆಯಿಂದ ಚಿತ್ರದ ಆಕೃತಿಗಳನ್ನು ರಚಿಸುತ್ತಾರೆ. ಆಭರಣ ಬಿಡಿಸುವ ಕಡೆ ಚೂಪು ಮೊಳೆಯಿಂದ ರಂಧ್ರ ಮಾಡುತ್ತಾರೆ. ಕೆಂಪು ಹಳದಿ ಕಪ್ಪು ಹಸಿರು ಬಣ್ಣಗಳನ್ನು ಉಳಿದೆಡೆ ಬಳಿಯುತ್ತಾರೆ. ಅನವಶ್ಯಕ ಭಾಗಗಳನ್ನು ಕತ್ತರಿಸುವರು. ಈಚಲು ಹಾಗೂ ಬಿದಿರು ಕಡ್ಡಿಗಳನ್ನು ಗೊಂಬೆಗಳ ಮಧ್ಯದಲ್ಲಿ ಸೇರಿಸುತ್ತಾರೆ. ಬೊಂಬೆಗಳು ಎರಡರಿಂದ ಆರು ಅಡಿಗಳವರೆಗೂ ಇರಬಹುದು. ತಾವು ರೂಪಿಸಿಕೊಂಡ ಇಂಥ ಗೊಂಬೆಗಳಿಂದ ಅವರು ಪ್ರದರ್ಶನ ನೀಡುತ್ತಾರೆ.

ಕಾಡು ಕುರುಬರು ಕರ್ನಾಟಕದ ಮೂಲ ನಿವಾಸಿಗಳು ಇವರು ದ್ರಾವಿಡ ಮೂಲದವರು ಇವರು ಅರಣ್ಯದಲ್ಲಿ ಸಿಗುವ ಬಿದಿರು ಮತ್ತು ಬೆತ್ತವನ್ನು ಬಳೆಸಿ ಬುಟ್ಟಿ ಕುಕ್ಕೆ ತೊಟ್ಟಿಲು ಮೀನು ಹಿಡಿಯುವ ಕೋಳಿ ಇತ್ಯಾದಿಗಳನ್ನು ಸಿದ್ದಪಡಿಸುವರದಲ್ಲಿ ಪರಾವಿಣ್ಯತೆಯನ್ನು ಪಡೆದು ಕೊಂಡವರಾಗಿದ್ದಾರೆ. ಕೊರಗ- ಕರ್ನಾಟಕ ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಕೊರಗ ಬುಡಕಟ್ಟು ಕಾಣಸಿಗುವದು. ಕೆಲವರು ಗುಡ್ಡದ ತಪ್ಪಲಿಲ್ಲಿ ಜೀವಿಸುವವರು ಕಾಡುತ್ಪನ್ನಗಳಿಂದ  ಚಾಪೆ,ಬುಟ್ಟಿ,ಕುಕ್ಕೆ ಹಾಗೂ ಹಗ್ಗ ಇವುಗಳನ್ನು ತಯಾರಿಸಿ ಮಾರಟಮಾಡಿ ಹೊಟ್ಟೆ ಹೊರೆಯುವವರಾಗಿದ್ಧಾರೆ. ಇವರು ಶ್ರಮಜೀವಿಗಳು ಮುಖ್ಯವಾಗಿ ಕೊರಗರು ಕಾಡಲ್ಲಿ ಲಭ್ಯವಿರುವ ಕೊಜಂಬೆ ಎಲಿಬೂರು ಇಲ್ಲಬೂರು ಚನ್ನೆ ಬೂರು ಅಡೆಬೂರೂ ಮುಂತಾದ ಬಿದಿರುಗಳಿಂದ ವಿವಿಧ ಗಾತ್ರದ ಬುಟ್ಟಿಗಳನ್ನು ಮೀನು ಹಿಡಿಯುವ ಕುತ್ತರಿ ಭತ್ತ ತುಂಬುವ ಕದಿಕೆ ಪೆಟಾರಿ ತೊಟ್ಟಿಲು ಜಾನವಾರುಗಳ ಮೈ ತೋಳೆಯುವ ಕಪಾಯಿ ಚಾಪೆ ಎಡ್ಡೆ(ಮೊರ) ಕುಂಟಾಯಿ (ಕೋಳಿ ಗುಡಾರ) ಮೊದಲಾದವುಗಳನ್ನು ತಯಾರಿಕೆ ಹಾಗೂ ಇವರ ಪಾರಂಪರಿಕ ಕುಲಕಸಬುಗಳಾಗುವದರ ಜೊತೆಗೆ ಅವರ ಕಲಾತ್ಮಕ ಪ್ರತಿಭೆಯನ್ನು ಎತ್ತಿತೋರಿಸುವ ಕರಕುಶಲ ಕಲೆಗಳಾಗಿವೆ. ಇವರು ಬೆತ್ತದ ನೆಯ್ಗೆಯಲ್ಲಿಯೂ ಕುಶಲಿಗಳಾಗಿದ್ದವರು ಮಾರುಕಟ್ಟೆ ಸಮಸ್ಯೆಯಿಂದಾಗಿ ಇವರು ವೃತ್ತಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ.

ಮಲೆಯ ಬುಡಕಟ್ಟುಗಳು ಕುಡಿಯ ಅಥವಾ ಮೆಲಕುಡಿ ಇವರು ದಟ್ಟವಾದ ಅರಣ್ಯದಲ್ಲಿ ವಾಸಿಸುತ್ತಿದ್ದರಿಂದ ಅಲ್ಲಿ ಸಿಗುವ ಬೆತ್ತದಿಂದ ಮಕರಿ, ತಡಿಕೆ, ಕುಕ್ಕೆ, ಪೆಟ್ಟಿಗೆ ಇತ್ಯಾದಿಗಳನ್ನು ಸುಂದರವಾಗಿ ಕಲಾತ್ಮಕವಾಗಿ ತಯಾರಿಸಿ ಮಾರಾಟಮಾಡುವರು. ಕುರುಬರು ಅವರ ಕಂಬಳಿ ನೇಯ್ಗೆ ಕಾಯಕದಲ್ಲಿಯೇ ಅವರ ಕಲಾತ್ಮಕತೆ ಎದ್ದು ಕಾಣುವುದು. ಮಲೈ ಕುಡಿ ಅಥವಾ ವಲಯ ಕಂಡಿ ಇದು ಈ ಬುಡಕಟ್ಟು ಕಾಸರ ಗೋಡು ಕರ್ನಾಟಕದ ಸಹ್ಯಾದ್ರಿ ಪರ್ವತ ಶ್ರೇಣಿಯ ದಕ್ಷಿಣ ಕನ್ನಡ ಚಿಕ್ಕಮಂಗಳೂರು ಜಿಲ್ಲೆಗಳಲ್ಲಿ ನೆಲೆಸಿದ್ದಾರೆ. ಇವರು ಬಿದಿರಿನ ಬುಟ್ಟೆ ಚಾಪೆ ಹೆಣೆಯುವರಲ್ಲಿ ಸಿದ್ದಹಸ್ತರು.

ಮೇದರು : ಮೇದರು ಬುರುಡ ಮೇದರ್ ಮೇದರಿ ಬುಡರ್ ಎಂಬ ಪದಗಳು ಈ ಜನಾಂಗದವರಿಗೆ ಬಳಕೆಯಲ್ಲಿದೆ.ಇವರು ಕಾನಾಡಾ ಜಿಲ್ಲೆಯಲ್ಲಿ ಘಟ್ಟದ ಎಲ್ಲಾಕಡೆ ಇದ್ದಾರೆ. ಬೀದಿರಿನ ಮೇದದಲ್ಲಿ ಹಲವರು ವಿಶ್ವ ವಿಖಾತ್ಯ ಬಿದ್ರಿ ಕಲೆ ತಯಾರಿಕೆಯಲ್ಲಿ ನುಪುಣರಾಗಿರುವರು. ಇವರು ಪಾರಂಪಾರಿಕವಾಗಿ ಗೃಹಕುಶಲ ಕಲೆಗಾರರು ಹಾಗೂ ಕೃಷಿಕರು. ಇವರು ಬಿದಿರು ಬೆತ್ತದಿಂದ ಕಲಾತ್ಮಕವಾದ ಬಹುಪಯೋಗಿ ಸಾದನಗಳನ್ನು ತಯಾರಿಸುವವರು ಮೊರ,ರೊಟ್ಟಿ,ಬುಟ್ಟಿ, ತೋಟ್ಟಿಲು ಬೀಸಣಿಕೆ, ಹಾವಾಡಿಗ ಬುಟ್ಟಿ ಕಲಾತ್ಮಕ ವಸ್ತುಗಳು ಕುರ್ಚಿ ಸೋಪಾ ದಿವಾನ ಚಾಪೆ ಬುಕ್ಕ(ಬೀಜ ಬಿತ್ತುವ ಸಾಧನ) ಏಣಿ ವೈವಿದ್ಯಮಯವಾದ ಪೆಟ್ಟಿಗೆಗಳನ್ನು ಸಿದ್ದಪಡಿಸುವರು. ಮೇದರ ಹೆಣ್ಣು ಮಕ್ಕಳು ಬಿದಿರು ಮತ್ತು ಬೆತ್ತದ ಗೃಹಕುಶಲ ಕಲೆ ಸಾಧನೆಯಲ್ಲಿ ಪ್ರಾವೀನ್ಯತೆ ಪಡೆದವರಾಗಿದ್ದಾರೆ. ಇವು ಅವರ ಜೀವನೋಪಾಯದ ಕಸಬುಗಳು ಆಗಿವೆ. ಮಲೆನಾಡಿನ ಪ್ರಮುಖ ಬುಡಕಟ್ಟುಗಳಲ್ಲಿ ಹಲಸರು ಒಬ್ಬರು ಹಲವರು ಕಾಡಿನಿಂದ ಹಂದಿ ಬೆತ್ತ ಹಾಲ್ಬೆತ್ತಗಳನ್ನು ಕಡಿದು ತಂದು ಹೆಡಿಗೆ ಬುಟ್ಟಿ ದರ್ತಿ ಗೂಡು ತಯಾರಿಸುವರು.

ಪಳ್ಳಿಯನ್ನು ಇವರು ಮಲೆಗಳ ವಾಸಿಗಳಾಗಿದ್ದ ಇವರು ಕುಶಲಕರ್ಮಿ ಚಾಪೆ, ಮತ್ತು ಬಿದಿರಿನ ಬುಟ್ಟಿಗಳನ್ನು ಕಲಾತ್ಮಕವಾಗಿ ಹೆಣೆಯುವ ಕಲೆಗಳನ್ನು ಹೊಂದಿದ್ದಾರೆ. ಸೋಲಿಗರು ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟ ಪರಿಸರದಲ್ಲಿ ವಾಸಿಸುವ ಇವರು ಕಾಡಿನಲ್ಲಿ ಬಿದಿರು ಹೇರಳವಾಗಿ ಲಭ್ಯವಿರುವದರಿಂದ ಬಿದಿರಿನಿಂದ ಬುಟ್ಟೆ ಕುಕ್ಕೆ ಮರ ರೇಶ್ಮಿಯ ತಟ್ಟೆ ಚಂದ್ರಿಕೆ ಮುಂತಾದ ವಸ್ತುಗಳನ್ನು ತಯಾರಿಸುವರು ತೋಡ ಬುಡಕಟ್ಟಿನವರು ಕೊಳ್ಳೆಗಾಲದ ತೋಡ ಮಹಿಳೆಯರು ಶಾಲುಗಳ ನೇಯ್ಗೆಯಲ್ಲಿ ತಾರಬುಟ್ಟ ಕರಾಪ್ಲಿ ಕಿವಿ ಯಂಚಿನ ಆಭರಣ ಕುಡುಕು ವಿವಿಧಬಗೆಯ ಮೂಗುತಿಗಳು ಹಾಗೂ ವೈವಿದ್ಯಮಯವಾದ ಕೊರಳ ಸರಗಳು ಕರಿಮಣಿ ಸರ ಗರ್ತಿ ಮಣಿ ಸರ ಅಪ್ಪನ ಮನೆ ಕರಿಮಣಿ ಗಂಡನ ಮನೆ ಕರಿಮಣಿ ಸರ ಬಣ್ಣದ ಮಣಿಸರ ದಿಟ್ಟ ಮಣಿ ಬುಕ್ರೀನ ಮಣಿಸರ. ತೋಳಿಗೆ ಹಾಕುವ ತೋಳ ಉಂದಿಗಳು. ಪಟಕ ಬೆಲ್ದ ಮಣಿಸರ ಮುಳ್ಳ ಹಣ್ಣಿನ ಮಣಿಸರ ಜಾಗಲ ಸರ ಹಾಲ್ಮಣಿ ಸರ ಜೇನ್ ಸಕ್ರಿಮಣಿಸರ, ಹವಳದ ಮಣಿಸರ, ಬೀಜದ ಮಣಿಸರ, ಕಾಕಿ ಮಣಿಸರ, ಗುರುಗುಂಜಿ ಸರ ಅಲ್ಲದೆ ವಿವಿಧ ಬಗೆಯ ಲೋಹದ ಬಣಿಸರಗಳನ್ನು ಧರಿಸಿಕೊಳ್ಳುತ್ತಾರೆ. ಇವು ಅವರ ಅಲಂಕಾರಕ್ಕೆ  ಸಂಬಂಧಪಟ್ಟ ಕರಕುಶಲ ಕಲೆಗಳಾಗಿವೆ.

ಒಟ್ಟಿನಲ್ಲಿ ಬುಡಕಟ್ಟು ಸಮುದಾಯಗಳಲ್ಲಿ ಕಂಡು ಬರುವ ಕೆಲವು ಸಾಮಾನ್ಯ ವಿಷಯಗಳೆಂದರೆ ನಿಸರ್ಗದ ಅಡಿಯಲ್ಲಿರುವ ಮಣ್ಣು ಕಲ್ಲು ಮರದ ಎಲೆ ತೊಗಟೆ ಬೇರುಗಳು ಪ್ರಾಣಿ ಜನ್ಮ ವಸ್ತುಗಳೇ. ಅವರ ಕರಕೌಶಲ್ಯದ ಮೂಲಸಾಮಾಗ್ರಿಗಳಾಗಿವೆ. ಸಾಮಾನ್ಯವಾಗಿ ಬಿದಿರಿನಿಂದ ತಯಾರಿಸಲ್ಪಟ್ಟ ಚಾಪೆ, ಬುಟ್ಟಿ ತಡಿಕೆ ಎಲ್ಲ ಸಮುದಾಯಗಳಲ್ಲಿ ಕಂಡುಬರುವದೊಂದು ವಿಶೇಷವೆಂದು ಹೇಳಬಹುದು. ಪ್ರಸ್ತುತ ಸಮಾಜದಲ್ಲಿ ಬದಲಾವಣೆ ರಾಜಕೀಯ ಮತ್ತು ಆರ್ಥಿಕ ಕಾರಣಗಳು ಹಾಗೂ ವಿಜ್ಞಾನ-ತಂತ್ರಜ್ಞಾನ ಬೆಳವಣಿಗೆಗಳ ಪರಿಸರದ ಮೇಲೂ ಗಾಢ ಪರಿಣಾಮಗಳು ಉಂಟಾಗಿವೆ. ಆದ್ದುದರಿಂದ ಬುಡಕಟ್ಟು ಸಮುದಾಯಗಳು ಅಪರೂಪವಾಗಿರುವಂತೆಯೇ ನೈಸರ್ಗಿಕವಾದ ಮೂಲಗಳಿಂದ ಅವರು ತಯಾರಿಸುತ್ತಿದ್ದ ಅವರ ಕಲಾ ನೈಪುಣ್ಯವು ಮಾಯವಾಗುತ್ತಿದೆ. ಆದರೆ ಬುಡಕಟ್ಟು ಸಮುದಾಯಗಳ ಕರ ಕೌಶಲ್ಯ ಸಾಮಗ್ರಿಗಳ ಮಾದರಿಗಳು ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಲಾಭಕೋರರಿಗೆ ಹಣ ಗಳಿಸಿಕೊಡುತ್ತಿವೆ. ಇನ್ನೊಂದೆಡೆ ಇತ್ತೀಚಿನ ಜಾಗತೀಕರಣದ ದಾಳಿಗೆ ತತ್ತರಿಸಿ ಕೃಷಿ ಭೂಮಿಯನ್ನು ಮಾರಿ ನಗರದ ಕಡೆಗೆ ಮುಖಮಾಡಿದ್ದಾರೆ. ಇವರ ಕುಶಲ ಕಲೆಗಳು ಮೂಲೆ ಗುಂಪಾಗುತ್ತಿವೆ. ಕಸ್ತೂರಿ, ಹುಲಿಉಗುರು, ನವಿಲು ತುಪ್ಪ,  ಉಡದ ತುಪ್ಪ, ಇತ್ಯಾದಿಗಳನ್ನು ಆಧುನಿಕ ಜಗತ್ತು ಸ್ವೀಕರಿಸುವ ಸ್ಥಿತಿಯಲ್ಲಿ ಇಲ್ಲ. ಬಿದಿರು ಬೆತ್ತದಿಂದ ಈಚಲಿನಿಂದ ತಯಾರಿಸುತ್ತಿದ್ದ ಬುಟ್ಟಿ ಕುಕ್ಕೆ, ಚಾಪೆ ಇತ್ಯಾದಿ ಸ್ಥಾನದಲ್ಲಿ ಇವತ್ತು ಪ್ಲಾಸ್ಟಿಕ್ ವಸ್ತುಗಳು  ಬಂದು ಅವೆಲ್ಲವನ್ನು ನೋಡುವವರೆ ಇಲ್ಲದಂತಾಗಿದೆ. ಇವರ ಕರಕುಶಲ ವಸ್ತುಗಳ ತಯಾರಿಕೆಗೆ ಕಚ್ಚಾ ವಸ್ತುಗಳು ಸಿಗುವುದಿಲ್ಲ. ಒಂದು ಪಕ್ಷ ಸಿಕ್ಕರೂ  ಸಹ ಒಂದು ಕರಕುಶಲ ವಸ್ತುವಿನ ತಯಾರಿಕೆಗೆ ಬೇಕಾದ ಮಟ್ಟದಲ್ಲಿ ನೋಡಿದರೆ ಆ ಕರಕುಶಲ ವಸ್ತುವಿಗೆ ಸರಿಯಾದ ಬೆಲೆ ದೊರೆಯುವುದಿಲ್ಲ.

ಹೀಗೆ ಒಂದೊಂದು ಕರಕುಶಲ ವಸ್ತು ಕಲೆಯ ಮೂಲವಾದ ಆಯಾ ಅಲೆಮಾರಿ ಬುಡಕಟ್ಟನ್ನು ಈ ಸಂದರ್ಭದಲ್ಲಿ ಮರೆಯಾಗುತ್ತಿದೆ. ಲಂಬಾಣಿ ಸಮುದಾಯದ ಆಭರಣ ವಿನ್ಯಾಸಗಳು, ಬಟ್ಟೆ ವಿನ್ಯಾಸಗಳು ಎಲ್ಲ ಸೌಂದರ್ಯ ಸ್ಪರ್ಧೆ ಹಾಗೂ ಸಿನಿಮಾ ಉಡುಪುಗಳಿಗೆ ಮೂಲವಾಗುತ್ತಿರುವುದನ್ನು ಈ ದೃಷ್ಟಿಯಲ್ಲಿ ಗಮನಿಸಬೇಕು. ಬುಡಕಟ್ಟುಗಳ ಕರಕುಶಲ ಕಲೆ ನಾಶವಾಗದಂತೆ ದುರುಪಯೋಗವಾಗದಂತೆ ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಗೊಳ್ಳಬೇಕಾದುದು ಇಂದಿನ ಅಗತ್ಯವಾಗಿದೆ. ಈ ಕರಕುಶಲ ಕಲೆಯನ್ನು ಉಳಿಸಿ ಬೆಳೆಸುವುದಕ್ಕೆ ಸಮಾಜ ಸರಕಾರ ಸಂಘ ಸಂಸ್ಥೆಗಳು ಅಲೋಚನೆಮಾಡಿ ಮುಂದೆ ಬಂದು ಹಲವಾರು ಅಭಿವೃದ್ದಿಪರ ಯೋಜನೆಗಳನ್ನು  ಹಾಕಿ ಆ ಕಲೆಗಳಿಗೆ ಒಂದು ಮಾರುಕಟ್ಟೆಯನ್ನು ನಿರ್ಮಾಣ ಮಾಡಿದರೆ ಮಾತ್ರ ಬುಡಕಟ್ಟು ಸಮುದಾಯ ಕರಕುಶಲ ಕಲೆಗಳನ್ನು ರಕ್ಷಿಸಿ ಬೆಳೆಸುವುದರ ಜೊತೆಗೆ ಅವರ ಬದುಕಿಗೆ ಒಂದು ಆರ್ಥಿಕ ನೆಲೆಯನ್ನು ರೂಪಿಸಿದಂತಾಗುತ್ತಿದೆ. ಸಮಾಜವು ಕೂಡಾ ಇವರ ಕರಕುಶಲ ಕಲೆಗಳಿಗೆ ಸರಿಯಾದ ರೀತಿಯಲ್ಲಿ ಪ್ರೋತ್ಸಾಹಿಸಿ ಸ್ಪಂದಿಸುವಂತಾಗಬೇಕಾಗಿರುವುದು ಅಗತ್ಯವಾಗಿದೆ. ಬಹು ಅವಶ್ಯವಾಗಿದೆ. ಬುಡಕಟ್ಟು ಸಮುದಾಯ ಜನಗಳಲ್ಲಿ ಇರುವ ಕರಕುಶಲ ಪ್ರತಿಭೆಯನ್ನು ಪ್ರೋತ್ಸಾಹಿಸಿ ಪರಂಪಾರಿಕವಾಗಿ ಬೆಳೆದು ಬಂದ ಈ ಕಲೆಯನ್ನು ನಾವು ನೀವುಗಳೆಲ್ಲ ಸಂರಕ್ಷಿಸಿ ಬೆಳೆಸುವ ಆಲೋಚನೆ ಮಾಡಿದಾಗ ಮಾತ್ರ ಬುಡಕಟ್ಟು ಕರಕುಶಲ ಕಲೆಗಳ ಅಭಿವೃದ್ದಿಯ ಜೊತೆಗೆ ಈ ಸಮುದಾಯಗಳು ಸಕಲ ಸಮೃದ್ದಿಯತ್ತ ದಾಪುಗಾಲನ್ನು ಹಾಕಬಹುದು.

* * *