ರಾಮನಡಿಮಿಟ್ಟ ನೆಲ ಭೀಮನುಸಿರಿದ ಗಾಳಿ ||
ವ್ಯೋಮದ ಭಗೀಥನು ತಂದ ಸುರತಟನಿ ||
ಸೋಮನು ಹೆತ್ತ ಕಡಲಿ ಪುರಾತನಗಳಿರೆ ||
ನಾವೇಂತು ಹೊಸಬರೆಲೋ ಮಂಕುತಿಮ್ಮ ||

ಇದು ರಾಮನು ಅಡಿಗಳನ್ನಿಟ್ಟ ನೆಲವಾಗಿದೆ. ಭೀಮನು ಉಸುರಿದ ಗಾಳಿಯಾಗಿದೆ. ಭಗೀರಥ ತಂದ ದೇವ ಗಂಗೆಯಾಗಿದೆ. ಚಂದ್ರನನ್ನು ಪಡೆದ ಸಾಗರವಾಗಿದೆ. ಈ ಪುರಾತನಗಳಿರೆ ನಾವೇಂತು ಹೊಸಬರೆಲೋ| ಎಂದು ಮಂಕುತಿಮ್ಮ ಹೇಳುತ್ತಾರೆ. ನಾವು ಹೊಸಬರಾಗಲು ಸಾಧ್ಯವಿಲ್ಲ. ಆದರೆ, ಹಳೆಯದನ್ನೇ ಇಟ್ಟುಕೊಂಡು ಜೀವನ ಸಾಗಿಸಲು ಸಾಧ್ಯವಿಲ್ಲ. ಸಂಸ್ಕೃತಿ ವಿಕಸನದಲ್ಲಿ ನಾವು ವಿವಿಧ ಹಂತಗಳನ್ನು ಗುರುತಿಸಿದರೂ ಹೊಸಜೀವನಕ್ಕೆ ಕಾಲಿರಿಸಿದಾಕ್ಷಣ ಹಳೆಯ ಜೀವನ ಕ್ರಮವೂ ಸಂಪೂರ್ಣ ಮುಗಿದುಹೋಗುತ್ತದೆ ಎಂದು ಹೇಳುವಹಾಗಿಲ್ಲ ಕಾರಣ.

ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು |
ಹೊಸ ಯಕ್ತಿ ಹಳೆ ತತ್ವ ದೊಡೆಗುಡೆ ಧರ್ಮ ||
ಋಷಿ ವಾಕ್ಯದೊಡನೆ ವಿಜ್ಞಾನ ಕಲೆ ಮೇಳೈಸೆ |
ಜಸವು ಜನ ಜೀವನಕೆಮಂಕುತಿಮ್ಮ ||

ಹಳೆಯ ಬೇರಿನಿಂದ ಕೂಡಿದ ಮರ ಹೊಸ ಚಿಗುರಿನಿಂದ ಕೂಡಿದಾಗ ನೋಡಲು ಸುಂದರವಾಗಿರುವುದು. ಹಳೆಯ ತತ್ವಗಳಿಂದ ಕೂಡಿದ ಧರ್ಮ ಹೊಸ ಯುಕ್ತಿಗಳಿಂದ ಕೂಡಿದರೆ ಚಿನ್ನ. ಪ್ರಾಚೀನ ಋಷಿಮಣಿಯೊಡನೆ ವಿಜ್ಞಾನಕಲೆ ಕೂಡಿದರೆ ಜನ ಜೀವನ ಹುಲು ಸಾಗುತ್ತದೆ. ಸಂಸ್ಕೃತಿ ಎಂದರೆ ಅಗ್ರಹಾರಗಳಲ್ಲಿ ವಾಸಿಸುವ ಜನರ ಉತ್ಪತ್ತಿ ಮಾತ್ರ ಎಂಬ ಕಾಲವೊಂದಿತ್ತು. ಬಹಳಕಾಲದವರೆಗೆ ಹಳ್ಳಿಗಳಲ್ಲಿ ಸ್ಥಿರವಾಗಿ ನೆಲೆನಿಂತ ಸಾಮಾಜಿಕವಾಗಿ, ಆರ್ಥಿಕವಾಗಿ ರಾಜಕೀಯವಾಗಿ ಕೆಳವರ್ಗ ಉಪವರ್ಗಗಳೆನಿಸಿಕೊಂಡ ಸಾಂಸ್ಕೃತಿಕ ಉತ್ಪತ್ತಿಯನ್ನು ಕಡೆಗಣಿಸಲಾಗಿತ್ತು. ಜಾತಿಯಲ್ಲಿ ಶ್ರೇಷ್ಠ ಎನಿಸಿಕೊಂಡವರು ಮಾತ್ರ ಸುಸಂಸ್ಕೃತರೆನಿಸಿಕೊಳ್ಳುತ್ತಿರುವುದನ್ನು ಇಂದಿಗೂ ಕಾಣಬಹುದುದಾಗಿದೆ. ಇತ್ತೀಚಿನ ದಿನಗಳವರೆಗೂ ದುಡಿಯುವ ವರ್ಗದ ಬದುಕು ಬವಣೆಗಳೂ ಸಂಸ್ಕೃತಿ ಅನ್ನಿಸಿಕೊಳ್ಳಲೇ ಇಲ್ಲ. ಬಹಳ ಜನ ವರ್ಗಗಳ ಸಂಸ್ಕೃತಿಗಳಿಂದ ಸ್ವೀಕರಿಸಿದ್ದು, ಪ್ರಭಾವಕ್ಕೊಳಗಾದದ್ದು ಏರಿದ್ದು ಎಂದೇ ಕೆಲವರಿಗಾದರೂ ಅರ್ಥವಾದಾಗ ತಮ್ಮ ಪ್ರದೇಶದ ಮೂಲ ಸಂಸ್ಕೃತಿಯ ಹುಡುಕಾಟ ಪ್ರಾರಂಭವಾಯಿತು. ಆ ಬಗೆಯ ಹುಡುಕಾಟದ ಫಲವೇ ಬುಡಕಟ್ಟು ವರ್ಗಗಳ ಅಧ್ಯಯನ.

ಪ್ರಾಚೀನ ಕಾಲದಲ್ಲಿ ಭಾರತಕ್ಕೆ ಗಂಗಾ ನದಿ ಮೂಲಕ ಹೊಸತಾಗಿ ಬಂದ ಜನರು ದಕ್ಷಿಣ ಕಡೆಗೆ ಸಾಗುತ್ತ ಅಲ್ಲಿದ್ದ ಮೂಲ ನಿವಾಸಿಗಳನ್ನು ಸೆದೆ ಬಡೆದು ಅನೇಕ ತಂಡಗಳನ್ನು ಹೇಳ ಹೆಸರಿನಲ್ಲದಂತೆ ನಾಶಪಡಿಸುತ್ತ ಬಂದರು. ಇಂಥ ಪರಿಸ್ಥಿತಿಯಲ್ಲಿ ಅಳಿದುಳಿದ ಆದಿವಾಸಿಗಳು ದಟ್ಟ ಅಡವಿಯಲ್ಲಿ ತಲೆ ಮರೆಯಿಸಿಕೊಂಡು ಉಳಿದು ಬೆಳೆದು ಬಂದವು. ಇಂಥ ಮೂಲ ನಿವಾಸಿಗಳನ್ನು ಬುಡಕಟ್ಟು ಜನರು, ಗಿರಿಜನರು, ಅರಣ್ಯವಾಸಿಗಳು, ಗುಡ್ಡಗಾಡು ಜನರು ಎಂದು ಕರೆಯಿಸಿಕೊಂಡರು.

ಕುರುಬ ಹುಟ್ಟುವ ಮುನ್ನ
ಕುಲವಿಲ್ಲ ಗೋತ್ರವಿಲ್ಲ
ಕುರುಬನ ಫಲ ಕಾಣಾ ಬಸವಣ್ಣ || ಅಲ್ಲಮರ ವಚನ

ಎಂಬ ಪದದಲ್ಲಿ ಕುರುಬ ಎಂಬ ಪದವು ಜ್ಞಾನಿ ಎಂಬ ಅರ್ಥವನ್ನೇ ಧ್ವನಿಸುತ್ತದೆ. ಕುರುಬ ಹುಟ್ಟವ ಮುನ್ನ ಕುಲಗೋತ್ರಗಳು ಹುಟ್ಟಿಲ್ಲ. ಕುರುಬನ ಪ್ರತಿಫಲಗಳೇ ಕುಲಗೋತ್ರಗಳು ಎಂಬುದರಲ್ಲಿ ಅರ್ಥವಿದೆ. ಬೆಳಗಾಗುತ್ತಲೇ ಕುರುಬನ ಮುಖ ಕಂಡರೆ ಶುಭ ಎಂಬ ನಂಬಿಕೆ ಎಂದಿನಿಂದಲೂ ಬೆಳೆದು ಬಂದಿದೆ. ಇವರ ಹುಟ್ಟಿನ ಬಗ್ಗೆ ಕೆಲವೊಂದು ದಂತಕಥೆಗಳು ಇವೆ. ಕುರಿ ಲಕ್ಷ್ಮಿಯ ಸಂಕೇತ ಪರಮಾತ್ಮನು ಸೃಷ್ಟಿಕಾರ್ಯದಲ್ಲಿ ಪ್ರಥಮವಾಗಿ ಜನ್ಮ ತಳೆದವರೇ ತಾವೆಂದು ಆದ್ದರಿಂದಾಗಿ ನಿಸರ್ಗದ ಎಲ್ಲ ಗುಟ್ಟು ಮೊದಲು ತಮಗೆ ಗೊತ್ತಿದೆ ಎಂಬುದು ಅವರ ಅಭಿಪ್ರಾಯ. ಅದು ಕೆಲವರಮಟ್ಟಿಗೆ ಸತ್ಯವೂ ಕೂಡ ಹೌದು. ನಿಸರ್ಗದ ಮಡಿಲಲ್ಲಿ ಜೀವನ ಸಾಗಿಸುವ ಅವರ ಧೈರ್ಯ ಸ್ಥೈರ್ಯವನ್ನು ನಾವು ಮೆಚ್ಚಲೇಬೇಕಾದದ್ದು. ಮಳೆ, ಗಾಳಿ, ಬಿಸಿಲು, ಬೆಂಕಿ, ಚಳಿ ಎನ್ನದೇ ತಮ್ಮ ವನ್ಯಜೀವಿ ಸಂಪತ್ತಿನೊಂದಿಗೆ ವಾಸಮಾಡುವ ಇವರಿಗೆ ಸರಳ ಜೀವಿಗಳು ಮುಗ್ಧರು ಪ್ರಪಂಚಕ್ಕೆ ಮೋಸ ಮಾಡದವರು ನಿಸರ್ಗದಲ್ಲಿಯೇ ಎಲ್ಲ ವಸ್ತುಗಳನ್ನು ಬಳಸಿಕೊಂಡು ಬದುಕು ಸಾಗಿಸಿದವರು. ವಿಶ್ವದ ಮೂಲ ನಿವಾಸಿಗಳು ಭವ್ಯ ಸಂಸ್ಕೃತಿಯನ್ನು ಹೊಂದಿದವರು ಎಂತಲೇ ಕರ್ನಾಟಕ ರಾಜ್ಯವನ್ನು ಆಳಿದವರು, ಪಾಳೆಯಗಾರರಾಗಿ ಮೆರೆದವರು, ಅಷ್ಟೇ ಅಲ್ಲ ಸಾಹಿತ್ಯ ರಚನಾಕಾರರಾದವರು, ಇವತ್ತಿಗೂ ನಿಯತ್ತಿನಿಂದ ದೇಸಾಯಿ ಮನೆತನಕ್ಕೋ ಅಥವಾ ಅರಸು ಮನೆತನಕ್ಕೋ ಬೆಂಗಾವಲಾಗಿ ನಿಂತವರು. ನಮ್ಮ ದೇಶ ಸಂಸ್ಕೃತಿಯನ್ನು ಉಳಿಸಿದವರು, ಬೆಳೆಸಿದವರು, ಇಂದಿಗೂ ನಮ್ಮ ಅಥಣಿ ಗ್ರಾಮದಲ್ಲಿ ದೇಶಾಯಿಯವರನ್ನು ಹಳಬರೆಂದೇ ಪ್ರಸಿದ್ಧರಾಗಿದ್ದಾರೆ.

ಕರ್ನಾಟಕ ಮೂಲನಿವಾಸಿಗಳಲ್ಲಿ ಕುರುಬ ಮೊದಲಿಗರು. ಇವರು ಬಹಳ ಪರಾಕ್ರಮಶಾಲಿಗಳು. ಬಹಳ ವರ್ಷಗಳವರೆಗೂ ಭಾರತವನ್ನಾಳಿದ ದೊರೆಗಳಾದವರು ನಂತರ ಕಾಡಿಗೆ ಹೋಗಿ ತಲೆಮರೆಸಿಕೊಂಡು ಕಾಲಕ್ರಮೇಣ ಯಾವುದೇ ಜನ ಸಂಪರ್ಕವಿಲ್ಲದೆ ತಮ್ಮದೇ ಆದ ಸಾಮಾಜ್ಯವನ್ನು ಕಟ್ಟಿಕೊಂಡು ಬೆಳೆದರು. ಸಂಸ್ಕೃತಿಯನ್ನು ಕಾಲ ಕ್ರಮೇಣ ಮರೆತವರು. ಕುರುಬ ಪದಕ್ಕೆ ಬೆಟ್ಟ ಎಂಬ ಅರ್ಥವೂ ಇದೆ. ಇವರಲ್ಲಿ ಹಾಲುಬಕ್ಕೆ, ಅಂಡೇಜಾಡಿ ಅಥವಾ ಕಂಬಳಿ ಕುರುಬರೆಂಬ ಗುಂಪುಗಳಿವೆ.

ಕರ್ನಾಟಕದಲ್ಲಿ ಕುರುಬ, ಗೊಂಡೆ, ರಾಜಗೊಂಡ್, ಕಾಡುಕುರುಬ, ಜೇನುಕುರುಬ, ದನಗಾರ ಎಂಬ ಈ ಎಲ್ಲಾ ಪದಗಳು ಈ ಕುರುಬ ಬುಡಕಟ್ಟಿಗೆ ಬಳಸುವ ಸಮಾನಾಂತರ ಪದಗಳು. ಈ ಅಥಣಿ ಗ್ರಾಮದಲ್ಲಿ ಹಾಲು ಕುರುಬರಲ್ಲಿ ಹತ್ತಿ ಕಂಕಣ, ಉಣ್ಣಿ ಕಂಕಣ ಎಂಬ ಎರಡು ಪಂಥಗಳು ಕಂಡುಬರುತ್ತವೆ. ಇವರಲ್ಲಿ ಪಿತೃ ಪ್ರಧಾನಕ್ಕಿಂತ ಮಾತೃ ಪ್ರಧಾನ ಹೆಚ್ಚಾಗಿ ಕಂಡುಬರುತ್ತದೆ. ಕಾರಣ ಇವರ ಮೂಲ ಉದ್ಯೋಗ ಕುರಿ ಸಾಕುವುದು. ಕುರಿಗಳನ್ನು ಆತ ತನ್ನೊಂದಿಗೆ ಕರೆದುಕೊಂಡು ಸಂಚಾರಿಸುವುದು ಆಗಿದೆ.

ಕುರುಬರಪ್ಪ ಕುರುಬ ನಾವು ಕುರಿ ಕಾಯುವ ಕುರುಬರುಎಂದು ಹೇಳಿಕೊಂಡಿದ್ದಾರೆ. ಕುರಿಗಳನ್ನು ವರ್ಷಕ್ಕೆ ೨ ಬಾರಿ ಅದರ ಉಣ್ಣೆಯನ್ನು ಕತ್ತರಿಸುತ್ತಾರೆ. ಆ ಉಣ್ಣಿಯಿಂದ ಕಂಬಳಿಯನ್ನು ನೇಯುತ್ತಾರೆ. ಈ ಹಾಲುಮತ, ಅತ್ತಿ ಕಂಕಣ ಹುಟ್ಟಿಗೆ ಒಂದು ದಂತಕಥೆಯಿದೆ. ಕಂಬಳಿಯನ್ನು ನೇಯುವಾಗ ಅದರ ವಾಸನೆಯಿಂದ ಆಗದ ಅಜ್ಜಿಯೊಬ್ಬಳು ಆ ಹಟ್ಟಿಯಿಂದ ತನ್ನ ಸಂಸಾರ ಸಮ್ಮೇತವಾಗಿ ಬ್ರಾಹ್ಮಣರ ಅಗ್ರಹಾರಕ್ಕೆ ಬಂದು ನೆಲೆಸಿದಳಷ್ಟೇ ಅಲ್ಲ. ಹಟ್ಟಿಯಿಂದ ಸಂಬಂಧವನ್ನು ಕೂಡ ನಿರಕಾರಿಸಿದಳು. ಆದ್ದರಿಂದ ಈಗಲೂ ಹಾಲುಮತ ಅತ್ತಿ ಕಂಕಣದವರು ಈ ಉಣ್ಣಿ ಕಂಕಣದವರು ಜೊತೆ ವೈವಾಹಿಕ ಸಂಬಂಧ ಬಳಸುವುದಿಲ್ಲ. ಬದಲಾಗುತ್ತಿರುವ ಸಂಸ್ಕೃತಿಯನ್ನು ಮೊಟ್ಟ ಮೊದಲು ಬದಲಾವಣೆಯಾದದ್ದು ಇವರ ಮದುವೆಯಲ್ಲಿ ಇವರ ಮದುವೆ ಪದ್ಧತಿಯನ್ನು ಅರಿಶಿಣ ಹಚ್ಚುವುದು ಒಂದು ಸಂಭ್ರಮ. ಅರಿಶಿಣ ಹಚ್ಚುವುದು ಕೂಡ ಬಂಧು ಬಾಂಧವರ ಹೆಸರಿನಲ್ಲಿ ಬರುತ್ತಿತ್ತು. ಅಷ್ಟೇ ಅಲ್ಲ, ಒಮ್ಮೊಮ್ಮೆ ಬೇರೆಯಾವರ ಓಣಿಯಲ್ಲಿ ಬರುತ್ತಿತ್ತು. ಅವರು ಕೂಡ ಖರ್ಚು ಮಾಡು ವಧು-ವರರಿಗೆ ಅರಿಶಿಣ ಹಚ್ಚುತ್ತಿದ್ದರು. ದಿನ ಕಳೆದಂತೆ ಆ ಸಂಸ್ಕೃತಿ ಮಾಯವಾಗಿ ಈಗ ಯಾರ ಮನೆಯಲ್ಲಿ ಮದುವೆಯಾಗುತ್ತದೆಯೋ ಅದೇ ಮನೆಯಲ್ಲಿ ಅರಿಶಿಣ ಹಚ್ಚುವ ಕಾರ್ಯಕ್ರಮ ನಡೆಯುತ್ತಿದೆ. ಇನ್ನು ವರನಿಗೆ ತರುವುದು ಕುಂಬಾರನು ಮನೆಯಿಂದ ಸುಮಂಗಲೆಯರು ಊದಿಸುತ್ತಾ ಬಾರಿಸುತ್ತಾ ಅದನ್ನು ತರುತ್ತಿದ್ದರು. ತಂದ ಸುಮಂಗಲೆಯರ ಉಡಿಯಲ್ಲಿ ಹೋಳಿಗೆ ಹಾಕುವುದು ವಾಡಿಕೆ ಅಷ್ಟೇ ಅಲ್ಲ. ಆಲಗಂಬವನ್ನು ತರುವುದು ಎಂದರೆ ಆಲದ ಮರದ ಟೊಂಗೆ, ಬನ್ನಿ ಮರದ ಟೊಂಗೆಯನ್ನು ಕೂಡ ಊದಿಸುತ್ತಾ, ಬಾರಿಸುತ್ತಾ ತರುವುದು ಪದ್ಧತಿ. ನಂತರ ನೂಲು ಸುತ್ತುವುದು ಸುರಗಿಯಲ್ಲಿ ಐದು ಜನ ಕೂಡುವುದು ಸುರಿಗೆಯ ನಂತರ ಅಕ್ಷತೆ, ಇವರು ಯಾರನ್ನು ಗುರು ಮಾಡಿಕೊಂಡಿರುತ್ತಾರೋ ಅವರನ್ನು ಕರೆಯುತ್ತಾರೆ. ಸ್ವಾಮಿಗಳಿಗಿಂತ ಬ್ರಾಹ್ಮಣರನ್ನು ತಮ್ಮ ಗುರುವನ್ನಾಗಿ ಮಾಡಿಕೊಂಡಿರುತ್ತಾರೆ.

ಆದರೆ ಈಗ ಇವರೂ ಕೂಡ ಯಾದಿ ಮ್ಯಾಲ ಶ್ಯಾದಿಪದ್ಧತಿಗೆ ಮಾರುಹೋಗಿ ಒಂದೇ ದಿನದ ಮದುವೆಗೆ ಮಾರುಹೋಗಿದ್ದಾರೆ. ಮೊದಮೊದಲು ತೊಟ್ಟಿಲಿಗೆ ಭಾಸಿಂಗ ಕಟ್ಟುತ್ತಿದ್ದರು. ಅಂದರೆ ಹುಟ್ಟದ ಮಗುವಿಗೆ ಮದುವೆಯನ್ನು ಮಾಡಿಸುತ್ತಿದ್ದರು. ಈಗ ಈ ತೊಟ್ಟಿಲಿಗೆ ಭಾಸಿಂಗವನ್ನು ಕಟ್ಟುವ ಪದ್ಧತಿಯನ್ನು ಪೂರ್ತಿಯಾಗಿ ನಿಲ್ಲಿಸಿದ್ದಾರೆ. ಕಾರಣ ಇವರು ಕೂಡ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುತ್ತಿದ್ದಾರೆ. ತೊಟ್ಟಿಲಿಗೆ ಭಾಸಿಂಗ ಕಟ್ಟುವುದರ ಜೊತೆಗೆ ಇವರಲ್ಲಿ ಉಡಿಕೆ ಎಂದರೆ ಮರು ವಿವಾಹ ಪದ್ಧತಿ ಅಂದರೆ ವಿಧವಾವಿವಾಹ ಪದ್ಧತಿಯನ್ನು ಜಾರಿಗೆ ತರುವುದಕ್ಕಿಂತ ಮೊದಲೇ ವಿಧವಾ ವಿವಾಹ ಪದ್ಧತಿ ಜಾರಿಯಲ್ಲಿತ್ತು. ಬಾಲ್ಯ ವಿವಾಹವೂ ಗೊತ್ತು. ಅದರಿಂದಾಗುವ ಸಾಧಕ-ಭಾದಕದ ಅರಿವು ಇತ್ತು. ಆದ್ದರಿಂದಲೇ ಅವರು ಕೆಲವೊಂದು ಬದಲಾವಣೆಗಳನ್ನು ತಮ್ಮಲ್ಲಿ  ಮಾಡಿಕೊಂಡಿದ್ದಾರೆ. ಅದನ್ನು ನಾವು ಸುಧಾರಣೆ ಎನ್ನುತ್ತೇವೆ. ಈಗ ಇವರು ಕೂಡ ಹುಡುಗಿಗೆ ತಿಳುವಳಿ ಬಂದ ನಂತರ ಮದುವೆ ಮಾಡುತ್ತಾರೆ. ಸಂಬಂಧಿಕರಲ್ಲಿಯೇ ವಿವಾಹ ಸಂಬಂಧ ಬೆಳೆಸುತ್ತಾರೆ. ಇವರ ಸಂಬಂಧ ಎಲ್ಲಿಂದ ಎಲ್ಲಿಯವರೆಗೆ ಇದೇ ಎನ್ನುವುದಕ್ಕೆ ’ಬಾದಾಮಿ ಬನವಾಸಿ ಮುಧೋಳ ನಗರಿ ಕುಪ್ಪತಗುಡ್ಡಕ್ಕ ಹತ್ಯಾವೋ ಕುರಿಮರಿ’ ಎಂದು ಪದ್ಯ ಸಾಕ್ಷ್ಯಿಯಾಗಿ ಬರುತ್ತದೆ. ವಿವಾಹದ ನಂತರ ವಧು ಪತಿಯ ಹೆಸರನ್ನು ಹೇಳುವುದು, ಪತಿಯಾದವ ಪತ್ನಿಯ ಹೆಸರು ಹೇಳುವುದು ವಾಡಿಕೆ. ಅದರ ಸವಿ ಸಾಹಿತ್ಯ ಅನುಭವಿಸಿದವರಿಗೆ ಗೊತ್ತು. ಒಂದು ಉದಾಹರಣೆ:

ಅಪ್ಪ ಕೊಟ್ಟ ಸಿರಿ ಎಷ್ಟು | ಉಟ್ಟು ಹರಿವಲ್ತು ||
ನೀರಾಗ ಹಾಕಿದರ ನೆನಿವಲ್ತು | ಜೋಡೆತ್ತಿಗೆ ಜಗ್ಗವಲ್ತು ||
ನತ್ತ ಹಾಕ್ಯಾರ ನಗಲ್ಹೆಂಗ | ದಾಬಾ ಹಾರ್ಯಾರಿ ಡೋಗ್ಗಲ್ಹೆಂಗ ||
ಹತ್ತ ಮಂದ್ಯಾಗ ಕುಂತಾರ ಕರೀಲ್ಹಾಂಗ ||

ಈ ಒಡಪಿನಲ್ಲಿಯ ಪ್ರಾಸ ಯಾವ ಕವಿಗೆ ಸಾಟಿ. ತವರಿನ ಅಭಿಮಾನಕ ಅಳೆದಿಲ್ಲ. ಗಂಡನ ಸಂಪತ್ತನ್ನು ತಲೆಗೆ ಏರಿಸಿಕೊಂಡಿಲ್ಲ ತಾಯಿ-ಮನೆ, ಅತ್ತೀಮನೆ ಎರಡನ್ನೂ ಸಮಭಾವದಿಂದ ಕಂಡ ಸ್ತ್ರೀಯನ್ನು ಕಾಣುತ್ತೇವೆ. ಇಂದಿನ ಒಡಪನ್ನು ಮಹಿಳೆ ಬದಲಾವಣೆ ಮಾಡಿದ್ದಾಳೆ. ಜಗತ್ತಿನ ಜೊತೆಗೆ ಸ್ಪಂದಿಸುತ್ತಿದ್ದಾಳೆ.

ಕಾಲಾಗ ಕಪ್ಪುರ ಬೂಟ | ಕೈಯಾ ಹತ್ತರ ನೋಟ ಎಟ್ಟೋತ್ತಿದ್ರು ಒಟ್ಟಿಗೆ ಬರತಾರ| ಎಂದು ಹೇಳುವಲ್ಲಿ ತನ್ನ ಗಂಡನ ವೇಷ ಭೂಷಣದ ಬದಲಾವಣೆಯ ಜೊತೆಗೆ ಜೀವನ ಕ್ರಮ ಬದಲಾವಣೆಯನ್ನು ಹೇಳುತ್ತಾಳೆ.

ಹೌದು, ಇಂದು ಜೀವನ ಶೈಲಿ ಬದಲಾಗಿದೆ. ವೇಷಭೂಣದಲ್ಲಿ ಮಾತ್ರವಲ್ಲ. ಸಾಮಾಜಿಕ ರಂಗದಲ್ಲಿ, ರಾಜಕೀಯದಲ್ಲಿ, ಶಿಕ್ಷಣರಂಗದಲ್ಲಿ ಸಮಗ್ರವಾದ ಬದಲಾವಣೆಯನ್ನು ನಾವು ಕಾಣುತ್ತೇವೆ.

ಶಿಕ್ಷಣ : ‘ಹಲಗೆ ಹಿಡಿದಿಲ್ಲ | ಬಳಪ ಬರೆದಿಲ್ಲ. ಶ್ರೀಗುರು ನಮಗೆ ಕಲಿಸಿಲ್ಲ’. ಎಂದು ಹೆಮ್ಮೆಯಿಂದ ಹೇಳಿಕೊಂಡವರು ಆದರೆ ಯಾವುದರಲ್ಲಿಯೂ ಕೂಡ ಕಡಿಮೆ ಇಲ್ಲದಂತೆ ಬಾಳಿದವರು. ಕಾಡಿನಲ್ಲಿಯೇ ಬದುಕು ಸಾಗಿಸಿದ ಇವರಿಗೆ ಕಾಡಿನಲ್ಲಿದ್ದ ವನಸ್ಪತಿಗಳ ಪರಿಚಯ ಯಾವ ರೋಗಕ್ಕೆ ಯಾವ ಮದ್ದು ಎಂಬುದನ್ನು ತಿಳಿದು ಪರಿಚಿತ ಸಣ್ಣ-ಪುಟ್ಟ ರೋಗಗಳಿಗೆ ಪರಿಹಾರ ಅವರಿಗೆ ಗೊತ್ತು. ಎಂತಲೇ ಅವರು ನಾಟಿ ವೈದ್ಯರು ನಾಡ ವೈದ್ಯರಿಗೆ ಮನಸೋಪ್ಪಲದವರು. ಆದರೆ ಒಂದು ಶಿಕ್ಷಣದಲ್ಲಿ ಪರಿವರ್ತನೆ ಶಾಲಾ-ಕಾಲೇಜುಗಳ ಮೆಟ್ಟಿಲು ಹತ್ತಿದವರು ಇದರಿಂದ ಇವರಿಗೆ ವನಸ್ಪತಿ ಔಷಧಗಳು ಇದರಿಂದ ಮರೆಯಾಗಿವೆ. ಇದರಿಂದ ಸಣ್ಣ ಪುಟ್ಟ ರೋಗಗಳಿಗೂ ಅವರು ಪಟ್ಟಣದ ವೈದ್ಯರನ್ನು ಅವಲಂಬಿಸುತ್ತಿದ್ದಾರೆ. ಇಂದು ಬದಲಾಗುತ್ತಿರುವ ನಾಡಿನಲ್ಲಿ ಕುರುಬರು ಕೂಡ ಬದಲಾಗುತ್ತಿದ್ದಾರೆ. ಶಿಕ್ಷಣ ರಂಗದಲ್ಲಿ ಎಲ್ಲ ತರಹದ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಎಂಜಿನಿಯರಿಂಗ್, ವೈದ್ಯಕೀಯ ಕ್ಷೇತ್ರದಲ್ಲೂ, ರಾಜಕೀಯ ಕ್ಷೇತ್ರದಲ್ಲೂ ಕಾಣುತ್ತೇವೆ. ಇನ್ನು ಸಾಹಿತ್ಯ ಕ್ಷೇತ್ರದಲ್ಲಿಯಂತೂ ಅವರ ಕೊಡುಗೆ ಇಡೀ ಅಪಾರ. ಸಾಹಿತ್ಯ ಕ್ಷೇತ್ರಕ್ಕೂ ಕಿರೀಟಪ್ರಾಯವಿದ್ದಂತೆ.

ಕುರುಬ ಎಂದರೆ ಒಟ್ಟಿನಲ್ಲಿ ಜಾಣ ಎಂಬ ಅರ್ಥ. ಆದರೆ, ಅಲೆಮಾರಿಯಾಗಿ ಕುರಿಯನ್ನು ಕಾಯುತ್ತಾ ಹೋಗುತ್ತಿದ್ದ ಅವನ ಹಿಂದೆ ಅವನ ಹೆಂಡತಿ ಹೋಗುತ್ತಿದ್ದಳು. ಅಲ್ಲಿಯೇ ಕುರಿಯ ಹಿಂಡುಗಳ ಅವನ ಸಂಸಾರ ಸಾಗುತ್ತಿತ್ತು. ಹೀಗಾಗಿ ಅವನ ಮಕ್ಕಳು ಶಾಲೆಯನ್ನು ಕಲಿಯದೇ ನಿರಕ್ಷರಿಗಳಾಗುತ್ತಿದ್ದರು. ಆದರೆ, ಕಾಲ ಬದಲಾದಂತೆ ಅವನ ಕುಟುಂಬವು ಒಂದೆಡೆ ಸ್ಥಿರವಾಗಿ ನಿಂತು ತಾಯಿಯೇ ತನ್ನ ಮಕ್ಕಳಿಗೆ ಶಿಕ್ಷಣ ಕಲಿಸಲು ಪ್ರಾರಂಭಿಸಿದಳು. ಬರಿ ಶ್ರೀಮಂತರು ಮಾತ್ರ ಶಿಕ್ಷಣ ಪ್ರಿಯರಾಗಿದ್ದರು. ನಾವು ರಾಯಭಾಗ ಕ್ಷೇತ್ರದಲ್ಲಿ ಪ್ರತಿಭಾ ಪಾಟೀಲ, ವಿವೇಕರಾವ ಪಾಟೀಲ ಮಾತ್ರ ವಿದೇಶಕ್ಕೆ ಹೋಗಿ ಶಿಕ್ಷಣ ಕಲಿತಿದ್ದರು. ಆದರೆ ಈಗ ಪ್ರತಿಯೊಂದು ಕುಟುಂಬವೂ ಹೆಣ್ಣು-ಗಂಡು ಎಂಬ ಬೇಧ ತೋರದೇ ಇಬ್ಬರಿಗೂ ಸರಿ ಸಮಾನವಾದ ಶಿಕ್ಷಣ ಕೊಡುತ್ತಿದ್ದಾರೆ. ಮೊದಲು ವೇಷಭೂಷಣಗಳಿಂದ ಅವರನ್ನು ಗುರುತಿಸಲು ಸಾಧ್ಯವಾಗುತ್ತಿತ್ತು. ಭಂಡಾರವೆಂದರೆ ಅಗ್ನಿಗೆ ಸಮಾನವೆಂದು ಬಂಡಾರವನ್ನು ಹಣೆ ತುಂಬ ಹಚ್ಚಿಕೊಳ್ಳುತ್ತಿದ್ದರು.

ದೈವಾರಾಧನೆ : ಕುರುಬರ ಮೂಲತಃ ಶೈವರು ಇವರು. “ಮೈಲಾರ, ಬಿರಪ್ಪ, ಬುಂಜಪ್ಪ, ಮಾಲಿಂಗರಾಯ, ರೇವಣಸಿದ್ದ ಎಲ್ಲಮ್ಮ, ಕಾಳಿ, ದುರ್ಗಿ, ಮರಗವ್ವ” ಮೊದಲಾದ ದೇವತೆಗಳನ್ನು ಪೂಜಿಸುತ್ತಾರೆ. ಸೃಷ್ಠಕರ್ತ ಬ್ರಹ್ಮನನ್ನು ಭರಮಪ್ಪ ಎಂತಲೂ ಶಿವನನ್ನು ಸಿದ್ದಪ್ಪನೆಂತಲೂ, ಲಕ್ಷ್ಮಿಯನ್ನು ಲಕ್ಕವನೆಂತಲೂ ಪೂಜಿಸುತ್ತಾರೆ. ನಂಬಿಕೆಯನ್ನು ಆಧಾರವಾಗಿಟ್ಟುಕೊಂಡು ಜೀವನ ಸಾಗಿಸುವ ಇವರು ಹೇಳುವ ಕಥೆಗಳು ರೋಚಕವಾಗಿವೆ. ಹುಲಿಂಜತಿ ಮಾನಿಂಗರಾಯನ ತೆಲೆಗೆ ಶಿವನು ಬಂದು ಈಗಲೂ ಪೇಟ ಸುತ್ತುತ್ತಾನೆ ಅದನ್ನು ಯಾರು ನೋಡಬಾರದೆಂದು. ಪೂಜಾರಪ್ಪ ಬಾಗಿಲು ಹಾಕುತ್ತಾನೆ. ಒಂದು ಸಲ ಒಬ್ಬ ಪೋಲಿಸನು ರಾತ್ರಿವೇಳೆ ಯಾರು ಇಲ್ಲದ ಸಮಯದಲ್ಲಿ ಬಾಗಿಲು ತೆರೆದು ನೋಡಿದಾಗ ಅವನ ಕಣ್ಣು ಹೋಯಿತಂತೆ ಮೂರು ಬಟ್ಟಿನ ಕೆಂಪು ರೇಶ್ಮೆಯ ಪಟಕವನ್ನು ಸುತ್ತಿರುತ್ತಾನೆ. ನಂಬಿಕೆಯೇ ಮೂಲಾಧಾರ. ಅದನ್ನು ಪರೀಕ್ಷಿಸಲು ಯಾರು ಹೋಗುವುದಿಲ್ಲ. ಅದೇ ತೆರನಾಗಿ ನಿಸರ್ಗದ ಮುಗು ಎಂದರೆ ಕುರುಬ ಎಂದೇ ಹೇಳಬಹುದು. ಆತನಿಗೆ ನಿಸರ್ಗವೇ ಉಡುಗೊರೆ ಆತನಿಗೆ ಮಳೆಯ ಧ್ವನಿ ಆಲಿಸುವ ಕಲೆ ಗೊತ್ತಿತ್ತು ಎನ್ನಲು ಇನ್ನೊಂದು ಕಥೆಯನ್ನು ಹೇಳುತ್ತಾರೆ ಒಂದು ಸಲ ಶಿವ ಪಾರ್ವತಿಯರು ಭೂಲೋಕದ ಆಗು ಹೋಗುಗಳ ವೀಕ್ಷಣೆಗೆಂದು ಸಂಚಾರ ಕೈಗೊಂಡಿದ್ದರು. ಆಗ ಕುರುಬ ತನ್ನ ದೊಡ್ಡಿಯನ್ನು ಬಿಟ್ಟು ಬೇರೆ ಕಡೆ ಎತ್ತರದ ಕಡೆ ಹಾಕುತ್ತಿದ್ದ ಪಾರ್ವತಿ ಶಿವನಿಗೆ ಕೇಳುತ್ತಾಳೆ ಈಗ ಯಾವ ಮಳೆಯ ಲಕ್ಷಣಗಳು ಕಾಣುತ್ತಿಲ್ಲ. ಆದರೂ  ಏಕೆ ಈತ ದೊಡ್ಡಿಯನ್ನು ಬೇರೆ ಕಡೆಗೆ ಹಾಕುತ್ತಿದ್ದಾನೆ ಎಂದಾಗ ಶಿವನು ಕೆಳಗಿಳಿದು ಬಂದು ಅತನಿಗೆ ಪ್ರತ್ಯಕ್ಷನಾಗಿ ಕೇಳಿದಾಗ ಅತ ಇನ್ನು ಎರಡುದಿನಗಳಲ್ಲಿ ಮಳೆಯಾಗುತ್ತದೆ ಕಾರಣ ನಾನು ನನ್ನ ಕುಗಳ ದೊಡ್ಡಿಯನ್ನು ಬದಲಾಯಿಸುತ್ತಿದ್ದೇನೆ ಎಂದು ಶಿವ ಇನ್ನೂ ಮೋಡಗಳು ಪ್ರಕ್ರಿಯ ಪ್ರಾರಂಭವಾಗಿಲ್ಲ ನೋಡೋಣ ಎಂದು ಮತ್ತೆ ಎರಡು ದಿನ ಬಿಟ್ಟು ಬಂದಾಗ ಕುರುಬ ತನ್ನ ಮೊದಲನೆಯ ಸ್ಥಳದಲ್ಲಿ ಹಾಕುತ್ತಿದ್ದ ನಿಜವಾಗಿಯೂ ಮಳೆಯಾಗುತ್ತಿತ್ತು. ಇಲ್ಲಿ ನಂಬಿಕೆಯೋ, ಕಾರಣವೋ ಒಟ್ಟಿನಲ್ಲಿ ಕುರುಬ ಎಂಬ ಪದಕ್ಕೆ ಜ್ಞಾನಿ ಎಂದು ಹೇಳಿದ ಶಬ್ದ ಸಾರ್ಥಕತೆಯನ್ನು ಪಡೆದಿದೆ. ಕುರುಬರು ಹೆಮ್ಮೆಯಿಂದ ಹೇಳುತ್ತಾರೆ ನಾವು ಕುರಿ ಕಾಯುವವರೇ ಹೊರತು ಕುರಿಯನ್ನು ತಿನ್ನವವರಲ್ಲ

“ಸತ್ತ ಕುರಿಯನ್ನು ಹೊತ್ತು ಮಾರುವರೇ ಹೊರತು ಬೇಯಿಸಿ ತಿನ್ನುವವರಲ್ಲ’ ಆದರೆ ಹಲ್ಲು ಸವಿಯಿದ್ದವರು ಕುರಿಯ ಮಾಂಸವೇನು ಕುದುರೆಯ ಮಾಂಸವನ್ನೂ ತಿನ್ನುವರು ಎಂದು ಹೇಳತ್ತಾರೆ. ಅಡವಿಯಲ್ಲಿಯೇ ಜೀವನ ಸಾಗಿಸುವುದರಿಂದ ಇವರಿಗೆ ಕಳ್ಳಭಟ್ಟಿಯನ್ನು ಮಾಡಿ ತಾವೇ ಕುಡಿಯುತ್ತಿದ್ದರು. ಆದರೆ ಕಾಲ ಬದಲಾವಣೆ ಆದಂತೆ ಅವರು ಆ ಕಸಬನ್ನು ಬಿಟ್ಟು ಬಿಟ್ಟಿದ್ದಾರೆ. ಅವರಲ್ಲಿರುವ ದಾರ್ಶನಿಕರು. ತಮ್ಮ ಜನರಿಗೆ ತಿಳುವಳಿಕೆ ಹೇಳುತ್ತಾ ನಿಜ ಧರ್ಮವನ್ನು ಧರ್ಮದ ತಿರುಳನ್ನು ಹೇಳುತ್ತಾರೆ. ದೇವರು ಬಂದಾರ ಬನ್ನಿರೋ ನಿಮ್ಮ ಬೀರಪ್ಪ ದ್ಯಾವರ ಬಂದಾನೆ ಬನ್ನಿರೊ| ಎಂದು ಹೇಳುತ್ತಾ ಎಲ್ಲಮ್ಮ ಎಕಲಾತಿ ಚರ್ರಮ್ಮ ಚಕಲಾತಿಗಳಬನುಗು ದೇವರ ಗೂಡನೇ ಬೇಡಿರೋ ಎಂದು ಹೇಳುತ್ತ ಬೇವಿನ ಉಡುಗೆ ಉಡುವದು ಪ್ರಾಣಿ ಬಲಿಕೊಡುವುದು ಹೆಂಡ ಕುಡಿಯುವುದು ಇತ್ಯಾದಿ ವಿಚಾರಗಳನ್ನು ನಿಷೇಧ ಮಾಡಿದರು.

ಇನ್ನು ಹಬ್ಬ ಹರಿದಿನಗಳ ಬಗ್ಗೆ ಹೇಳಬೇಕೆಂದರೆ ಕುರುಬರು ಕೃಷಿ ಪ್ರಧಾನವಾಗಿರುವುದರಿಂದ ಇತರ ಜನರ ಸಂಪರ್ಕ ಹೊಂದಿರುವದರಿಂದ ಇವರು ದೀಪಾವಳಿ, ದಸರಾ, ಹೋಳಿ, ಶಿವರಾತ್ರಿ, ಯುಗಾದಿಹಬ್ಬಗಳನ್ನು ಆಚರಿಸುವ ಇವರು ದಸರಾಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಉಪವಾಸ ಎಂದರೆ ಹಗಲೆಲ್ಲ ಉಪವಾಸವಿದ್ದು ರಾತ್ರಿ ಊಟ ಮಾಡುವರು. ಇವರಲ್ಲಿ ವಿಶೇಷ ಹಬ್ಬ ದೀಪಾವಳಿ ಕೆಲವರು ನರಕ ಚತುರ್ದಶಿ ದಿನ ಆರತಿ ಬೆಳಸಿಕೊಳ್ಳುವುದು ಇನ್ನು ಕೆಲವರು ಅಂದರೆ ಕುರಿಯನ್ನು ಸಾಕಿದವರು ಮೊದಲು ಕುರಿಗೆ ಆರುತಿ ಮಾಡುವರು. ಹೆಣ್ಣು ಮಕ್ಕಳ ಓಡುತ್ತಿರುವ ಕುರಿಯಲ್ಲಿ ತಾನು ಓಡಿಹೋಗಿ ಕುಡಿಯನ್ನು ಹಿಡಿದರೆ ಕುರಿಯು ಅವಳ ಸ್ವತ್ತಾಗುವುದು. ನಂತರ ಆಕೆ ಕುರಿತು ದೊಡ್ಡೆಯಲ್ಲಿ ಕುರಿಗೆ ಆರುತಿಮಾಡಿ ತನ್ನ ಅಣ್ಣಂದಿರಿಗೆ ಆರುತಿ ಮಾಡುವಳು. ಪಾಂಡವರನ್ನು ಸಗಣಿಯಿಂದ ಹಾಕುವ ಭರಮನ ಸಗಣಿಯಿಂದ ಹಾಕುವ ಪದ್ದತಿಯನ್ನು ಬಹುಶಃ ಬ್ರಾಹ್ಮಣರಿಂದ ಪಡೆದುಕೊಂಡರು. ಹೇಗೋ ಗೊತ್ತಿಲ್ಲ ಒಟ್ಟಿನಲ್ಲಿ ಈ ಹಬ್ಬವನ್ನು ಬಹಳ ವಿಭೃಜಂಣೆಯಿಂದ ಆಚರಿಸುವರು.

ಉಪಸಂಹಾರ : ಸಾಕ್ಷರರು ಕಡಿಮೆಯಾಗಿದ್ದರೂ ಶಿಕ್ಷಣದ ಬಗ್ಗೆ ಧನಾತ್ಮಕಭಿಪ್ರಾಯವನ್ನು ಹೊಂದಿದ್ದಾರೆ. ೧೯೯೨ ರಲ್ಲಿ ಕನಕಗುರು ಪೀಠವೊಂದನ್ನು ಕಾಗಿನೆಲೆಯಲ್ಲಿ ಸ್ಥಾಪಿಸಿ ಸಮುದಾಯವನ್ನು ಸಂಘಟಿಸುತ್ತಿದ್ದಾರೆ. ಹಾಲು ಮತದ ಎಲ್ಲ ಬುಡಕಟ್ಟುಗಳಿಗೂ ಗುರುಪೀಠ ಸ್ಪಂದಿಸಿ ಧನಾತ್ಮಕ ಯೋಜನೆಗಳನ್ನು ಕಾರ್ಯಗಾರಗೊಳಿಸುವುದು ಅಗತ್ಯವಾಗಿದೆ. ಇಂದಿಗೂ ಸಹಸ್ರಾರು ಕುರಿಗಳೊಂದಿಗೆ ಸಹಸ್ರಾರು ಕುಟುಂಬಗಳು ಅಲೆಮಾರಿ ಪಶುಪಾಲನೆಯ ಬದುಕು ನದಿ, ಜಲಾನಯನ ಪ್ರದೇಶಗಳಲ್ಲಿ ಕಾಣಸಿಗುವುದು ಪ್ರಕೃತಿಯೊಂದಿಗೆ ಮತ್ತು ಪಶುಗಳೊಂದಿಗೆ ಪ್ರೀತಿಯಿಂದ ತಮ್ಮ ಜೀವನವನ್ನು ಸವಿಯುವರು. ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಯುಗ ಕೋಳಿ ಫಾರಂಗಳಂತೆ ಕುರಿಗಳ ಫಾರಂಗಳು  ತಲೆ ಎತ್ತುತ್ತಿವೆ. ಬರುವ ದಿನಗಳಲ್ಲಿ ಅಲೆಮಾರಿ  ಕುರುಬರ ಜೀವನ ಚಿಂತಾಜನಕವಾಗಿದೆ. ಇವರಿಗಾಗಿಯೇ ವಿಶಿಷ್ಟ ಯೋಜನೆ ಅವಶ್ಯಕವಾಗಿದೆ. ಅದೇ ರೀತಿ ಕಂಬಳಿನೇಯ್ದು ಮಾರುವ ಒಂದು ಉದ್ಯಮ ಕೂಡ ಕುರುಬರಿಂದ ಕಳಚಿಕೊಳ್ಳುತ್ತಲಿದೆ. ಇಂದು ಹೆಚ್ಚಿನ ಕುರುಬರು ಕೃಷಿ ಮತ್ತು ಕುರಿಯನ್ನು ಅಲಂಬಿಸಿದ್ದಾರೆ. ಹಲವರು ಸರಕರಿ ಉದ್ಯೋಗಗಳಲ್ಲಿ ವ್ಯಾಪಾರ ಜೇನು ಸಂಗ್ರಹಣೆ ಅರಣ್ಯೋತ್ಪಾದನೆಯಲ್ಲಿ ತೊಡಗಿಸಿದ್ದಾರೆ. ಆದ್ದರಿಂದ ಕುರಿಸಾಗಾಣಿಕೆ ಕಾಯಕಲ್ಪಕ್ಕೆ ಸರಕಾರ ಯೋಜನೆಗಳನ್ನು ಸೃಷ್ಠಿಸಬೇಕಾಗಿದೆ ವಿಶೇಷ ಕಾಯಕಲ್ಪದ ಅವಶ್ಯಕತೆ ಕೂಡ ಕುರುಬ ಸಮುದಾಯಕ್ಕೆ ಬೇಕಾಗಿದೆ.

* * *