ಅಸ್ತಿತ್ವ ಮತ್ತು ತನ್ನನ್ನು ತಾನು ಗುರುತಿಸಿಕೊಳ್ಳುವಿಕೆಯ ಸಮಸ್ಯೆಯಲ್ಲಿ ಸಮಾಜದ ವಿವಿಧ ಸ್ತರಗಳಲ್ಲಿ ಅನೇಕ ಮಹಿಳೆಯರು ಇದ್ದಾರೆ. ಅಂತಹ ಮಹಿಳೆಯರಲ್ಲಿ ಬುಡಕಟ್ಟು ಮಹಿಳೆಯರು ಸಹ ಸೇರಿದ್ದಾರೆ. ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಬುಡಕಟ್ಟನ್ನು ಹೊರತುಪಡಿಸಿ ಇತರೆ ಶ್ರೇಣಿ, ವರ್ಗದ ಮಹಿಳೆಯರೇ ಸಾಮಾಜಿಕ ರಾಜಕೀಯ, ಆರ್ಥಿಕ, ಶೈಕ್ಷಣಿಕವಾದ ಮುಖ್ಯ ವಾಹಿನಿಯಿಂದ ಇನ್ನೂ ದೂರವೇ ಉಳಿದಿದ್ದಾರೆ. ಮಹಿಳೆಯರು ಜಾತಿ, ವರ್ಗದಂತಹ ಐಡೆಂಟಿಟಿಗಳನ್ನು ಮೀರಿ ಒಂದು ಶಕ್ತಿಶಾಲಿ ಗುಂಪಾಗಿ ಹೊರ ಹೊಮ್ಮಲು ಸಾಧ್ಯತೆಗಳನ್ನು ಕಂಡುಕೊಳ್ಳಬೇಕಾಗಿದೆ. ಹೀಗಿರುವಾಗ ಕರ್ನಾಟಕದ ಒಟ್ಟು ಬುಡಕಟ್ಟುಗಳ ಮಹಿಳೆಯರು ಒಂದು ಶಕ್ತಿಶಾಲಿ ಗುಂಪಾಗಿ ಬೆಳೆದು ರಾಜಕೀಯಾರ್ಥಿಕವಾದ ಮುಖ್ಯವಾಹಿನಿಯ ಒಳಗೆ ಸೇರಲು ಸಾಧ್ಯವಿಲ್ಲ ಎಂದು ಹೇಳಲಾಗದು. ಕಾಲಾವಧಿಬೇಕಾಗುತ್ತದೆ. ಮಹಿಳಾವಾದ, ಮಹಿಳಾ ಸಮಾನತೆ ಪದಗಳು ಬುಡಕಟ್ಟು ಮಹಿಳೆಯರನ್ನು ತನ್ನ ತೆಕ್ಕೆಯೊಳಗೆ ಸೆಳೆದಿವೆಯೋ ಇಲ್ಲವೋ ಎಂಬ ಅನುಮಾನವೂ ಕಾಡುತ್ತದೆ. ಇಂದು ಕನ್ನಡ ಟಿ.ವಿ. ವಾಹಿನಿಗಳ ರಿಯಾಲಿಟಿ ಷೋಗಳಲ್ಲಿ ಬುಡಕಟ್ಟಿನ ಪುರುಷರನ್ನು ಸೆಲೆಬ್ರಿಟಿಗಳನ್ನಾಗಿ ಬಳಸಿಕೊಳ್ಳು ತ್ತಿರುವುದನ್ನು ಕಾಣುತ್ತಿದ್ದೇವೆ. ಬುಡಕಟ್ಟು ಮಹಿಳೆಯರ ಜೀವನ-ಬದುಕನ್ನು ಒಳಗೊಂಡ ಚಲನಚಿತ್ರಗಳೂ ಅತ್ಯಂತ ಕಡಿಮೆ. ಇನ್ನೂ ಮಾಡೆಲ್‌ಗಳ ಲೋಕದಲ್ಲಿ, ಜಾಹೀರಾತಿನ ಜಗತ್ತಿನಲ್ಲಿ ಹುಡುಕಿದರೂ ಬುಡಕಟ್ಟು ಮಹಿಳೆಯರು ಕಾಣಸಿಗುವುದು ವಿರಳ ಎನ್ನಬಹುದು. ಬುಡಕಟ್ಟು ಮಹಿಳೆಯರನ್ನು ಸರ್ಕಾರದ ಯೋಜನೆಗಳಾಗಲಿ, ಅಭಿವೃದ್ಧಿಯ ಕಾರ್ಯಕ್ರಮಗಳಾಗಲಿ ತಲುಪದಿರಲು ಕಾರಣಗಳನ್ನು ಹುಡುಕಬೇಕಾಗಿದೆ.

ಕರ್ನಾಟಕದಲ್ಲಿ ಸುಮಾರು ೫೦ಕ್ಕೂ ಹೆಚ್ಚು ಬುಡಕಟ್ಟು ಸಮುದಾಯಗಳನ್ನು ಗುರುತಿಸಲಾಗಿದೆ. ಬುಡಕಟ್ಟು ಸಮುದಾಯಗಳು ತಮ್ಮದೇ ಆದ ಆಚರಣೆ, ನಿಷೇಧ, ಸಂಪ್ರದಾಯ ವೇಷಭೂಷಣ, ಆಹಾರ ಪದ್ಧತಿ, ಭಾಷೆಗಳಿಂದ ವಿಶಿಷ್ಟ ಸಾಂಸ್ಕೃತಿಕ ಚಹರೆ ಹೊಂದಿದ್ದಾರೆ. ಬುಡಕಟ್ಟು ಸಮುದಾಯಗಳನ್ನು ಸಾಮಾಜಿಕ ರಾಜಕೀಯಾಡಳಿತ ಚೌಕಟ್ಟಿನೊಳಗೆ ತರಲು ಅನುಸೂಚಿತ ಜಾತಿ ಪಂಗಡಗಳ ಪಟ್ಟಿಯೊಳಗೆ ಸರ್ಕಾರವು ಸೇರ್ಪಡೆ ಮಾಡಿತು. ಆ ಮೂಲಕ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವ ಸಾಧ್ಯತೆ ದೊರೆಯಿತು. ಈ ಮೂಲಕ ಬುಡಕಟ್ಟು ಸಮುದಾಯಗಳು ಸಂವಿಧಾನಿಕ ಚೌಕಟ್ಟಿನೊಳಗೆ ಸ್ಥಾನಪಡೆದು, ಸಂವಿಧಾನಿಕ ಹಕ್ಕು ಸೌಲಭ್ಯಗಳನ್ನು ಪಡೆದಿದೆ, ಪೌರತ್ವ ಹೊಂದಿದೆ.

ಹಾಲೊಕ್ಕಲಿಗರು, ಇರುಳಿಗ, ಯರವ, ಹಕ್ಕಿ-ಪಿಕ್ಕಿಯವರು, ಸೋಲಿಗರು, ಕುಡುಬಿಯರು, ಧನಗರ್, ಲಂಬಾಣಿ, ಹೊಲೆಮಾದಿಗರು, ಹಕ್ಕಿಪಿಕ್ಕಿ, ಕುರುಮಾಮರು, ಬೇಡರು, ಕುರುಬರು, ಕಾಡುಗೊಲ್ಲರು, ಕೊರಚ, ಜೇನುಕುರುಬರು, ಬುಡ್ಗ ಜಂಗಮ, ಡುಂಗ್ರಿ ಗರಾಸಿಯ, ಸಿಂಧೊಳ್ಳು, ಹಸಲರು, ಮರಾಠಿ, ಚೆಂಚು, ರಾಜಗೊಂಡರು, ಗೋಸಂಗಿ, ದೊಂಬರು, ಸಿಕ್ಲಿಗರು, ಫಿಸಾಡಿ, ಟೋಕ್ರೆಕೋಳಿ ಬುಡಕಟ್ಟು, ಹಂಡಿ ಜೋಗಿ ಹೀಗೆ ಅನೇಕ ಬುಡಕಟ್ಟುಗಳ ಸಮುದಾಯಗಳು ಕರ್ನಾಟಕದಲ್ಲಿವೆ. ಭಾರತದಲ್ಲಿ ಅತೀ ಹೆಚ್ಚು ಬುಡಕಟ್ಟು ಸಮುದಾಯಗಳಿವೆ.

ಮೇಲೆ ತಿಳಿಸಿರುವ ಬುಡಕಟ್ಟು ಮಹಿಳೆಯರು ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಾಮಾನ್ಯ ಮಹಿಳೆಯರಿಗಿಂತಲೂ ಹಿಂದುಳಿದಿದ್ದಾರೆ. ಸರ್ಕಾರವು ಸಾಮಾನ್ಯ ಮಹಿಳೆಯರು ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದೆ. ಹಾಗೆಯೇ ಬುಡಕಟ್ಟು ಮಹಿಳೆಯರಿಗಾಗಿ ಸರ್ಕಾರವು ಯೋಜನೆಗಳನ್ನು ರೂಪಿಸುವ ಅಗತ್ಯ ಇದೆ. ಹಾಗೆಯೇ ಕರ್ನಾಟಕದ ಬುಡಕಟ್ಟಿನ ಮಹಿಳೆಯರೂ ಸಹ ಸರ್ವತೋಮುಖ ಅಭಿವೃದ್ಧಿಯಿಂದ ದೂರವೇ ಉಳಿದಿದ್ದಾರೆ.

ಈಗಾಗಲೇ ತಿಳಿಸಿರುವ ಬುಡಕಟ್ಟು ಸಮುದಾಯಗಳಲ್ಲಿ ಕೆಲವು ಬುಡಕಟ್ಟು ಸಮುದಾಯಗಳ ಮಹಿಳೆಯರು ತಳಮಟ್ಟದ ರಾಜಕೀಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಉದಾ: ಬೇಡರು, ಕುರುಬರು, ಲಂಬಾಣಿ, ಕೊರಚರು, ಗೊಲ್ಲರು, ಕ್ಷೇತ್ರ ಕಾರ್ಯದಲ್ಲಿ ದೊರೆತ ಮಾಹಿತಿಯಿಂದ ಬೆರಳೆಣಿಕೆಯ ಬುಡಕಟ್ಟು ಸಮುದಾಯದ ಮಹಿಳೆಯರು (ಉದಾಹರಿಸಿದಂತೆ) ಗ್ರಾಮ ಪಂಚಾಯಿತಿಯ ರಾಜಕೀಯದಲ್ಲಿ ಭಾಗವಹಿಸುತ್ತಿರುವುದು ಗೋಚರಿಸುತ್ತದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ, ಸಂಡೂರಿನ ಒಟ್ಟು ೪೪ ಗ್ರಾಮ ಪಂಚಾಯಿತಿಗಳಲ್ಲಿ ೬೭೭ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ೨೮೯ ಮಹಿಳೆಯರು ಚುನಾವಣೆಯ ಮೂಲಕ ಆಯ್ಕೆಯಾಗಿದ್ದಾರೆ. ಈ ಸಂಖ್ಯೆಯಲ್ಲಿ ೧೨೬ ಮಹಿಳೆಯರು ಬುಡಕಟ್ಟು ಸಮುದಾಯಗಳಲ್ಲಿ ಗುರುತಿಸಲ್ಪಡುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿದ್ದಾರೆ. ಈ ೧೨೬ ಚುನಾಯಿತ ಮಹಿಳೆಯರಲ್ಲಿ ೭ ಚುನಾಯಿತ ಮಹಿಳೆಯರು ಗ್ರಾಮ ಪಂಚಾಯಿತಿಯ ಅಧ್ಯಕ್ಷೆಯರಾಗಿ ಆಯ್ಕೆಯಾಗಿದ್ದಾರೆ.

ಸರ್ಕಾರವು ತಳಮಟ್ಟದ ರಾಜಕಾರಣದಲ್ಲಿ ತಂದಿರುವ ಶೇ. ೩೩ರಷ್ಟು ಮೀಸಲಾತಿಯು ಬುಡಕಟ್ಟು ಮಹಿಳೆಯರಿಗೆ ಅನುಕೂಲವಾಗಿದೆ. ಈ ರೀತಿ ಮೀಸಲಾತಿಯನ್ನು ಮೊಟ್ಟ ಮೊದಲು ಅನುಷ್ಠಾನಗೊಳಿಸಿದ ಹೆಮ್ಮೆ ಕರ್ನಾಟಕ ರಾಜ್ಯಕ್ಕಿದೆ. ಒಟ್ಟು ೬೭೭ ಗ್ರಾಮ ಪಂಚಾಯಿತಿಯ ಸ್ಥಾನಗಳಲ್ಲಿ ಬೇರೆ ಬೇರೆ ವರ್ಗ, ಜಾತಿಯಿಂದ ೨೮೯ ಮಹಿಳೆಯರು ಆಯ್ಕೆಯಾಗಿದ್ದು ಬುಡಕಟ್ಟು ಸಮುದಾಯದ ೧೨೬ ಮಹಿಳೆಯರು ಆಯ್ಕೆಯಾಗಿರುವುದು ಉತ್ತಮ ಅನಿಸಿದರೂ ಒಟ್ಟು ಸಂಖ್ಯೆಯ ಅರ್ಧಕ್ಕಿಂತಲೂ ಕಡಿಮೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿರುವುದು ಕಂಡುಬರುತ್ತದೆ. ೧೨೬ರಲ್ಲಿ ಬೇಡ ಬುಡಕಟ್ಟಿನ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿರುವುದು ಗೋಚರವಾಗುತ್ತದೆ. ೧೨೬ರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಹಿಳೆಯರು ಅನಕ್ಷರಸ್ಥರಾಗಿದ್ದು, ಕೆಲವರು ೧ನೇ ತರಗತಿ ಮಾತ್ರ ಓದಿದ್ದಾರೆ. ಕೆಲವು ಹೆಸರು ಬರೆದು, ಸಹಿ ಮಾಡಲು ಮಾತ್ರ ಕಲಿತಿದ್ದಾರೆ. ಇವರಲ್ಲಿ ಹೆಚ್ಚು ಮಹಿಳೆಯರು ದಿನಗೂಲಿಯಿಂದ ಜೀವನ ಸಾಗಿಸುತ್ತಿದ್ದಾರೆ. ಕೌಟುಂಬಿಕ ಹೊಣೆಗಾರಿಕೆಯೊಂದಿಗೆ ಈಗಿನ ಆಧುನಿಕ ಕಾಲದಲ್ಲೂ ನೀರು ಮತ್ತು ಉರುವಲು ಸಂಗ್ರಹಕ್ಕಾಗಿ ಚುನಾಯಿತ ಮಹಿಳೆಯರು ತಮ್ಮ ಹೆಚ್ಚಿನ ಸಮಯ ನೀಡಬೇಕಾಗಿದೆ. ಕೆಲ ಸದಸ್ಯೆಯರು ಗುಡಿಸಲುಗಳಲ್ಲಿ ವಾಸವಾಗಿದ್ದಾರೆ. ವಿದ್ಯುಚ್ಛಕ್ತಿಯ ವ್ಯವಸ್ಥೆ ಇಲ್ಲ. ಶೌಚಾಲಯದ ಸೌಲಭ್ಯವೂ ಇಲ್ಲ. ಇವರು ಬಡತನದ ರೇಖೆಗಿಂತ ಕೆಳಗಿನ ಜೀವನ ಸಾಗಿಸುತ್ತಿದ್ದಾರೆ. ಪೌಷ್ಠಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ. ಇವರ ಬಹುಪಾಲು ಸಮಯ ಅಗತ್ಯಗಳನ್ನು ಪೂರೈಸಿಕೊಳ್ಳಲೇ ವ್ಯಯವಾಗುತ್ತದೆ. ಈ ಮಹಿಳೆಯರ ರಾಜಕೀಯ ಭಾಗವಹಿಸುವಿಕೆಯು ಉತ್ತಮವಾಗಿರಲು ಹೇಗೆ ಸಾಧ್ಯವಾಗುತ್ತದೆ ಎಂಬ ಪ್ರಶ್ನೆ ಸಹಜವಾಗಿದೆ.

ಈ ಚುನಾಯಿತ ಬುಡಕಟ್ಟು ಮಹಿಳೆಯರಿಗೆ ರಾಜಕೀಯ ಸಶಕ್ತೀಕರಣ, ಸಬಲೀಕರಣ ಗ್ರಹಿಕೆಗೆ ಬಾರದ ಪದಗಳಾಗಿರುವುದರಲ್ಲಿ ಅಚ್ಚರಿ ಇಲ್ಲ. ಸಂವಿಧಾನವು ಎಷ್ಟೇ ಸ್ಥಾನಮಾನ ನೀಡಿದರೂ, ಹಕ್ಕು ಸೌಲಭ್ಯಗಳನ್ನು ಕಲ್ಪಿಸಿದರೂ ಇವುಗಳ ಉಪಯೋಗ, ಪಡೆಯುವ ಧಾರಣಶಕ್ತಿಯು ಬುಡಕಟ್ಟು ಸಮುದಾಯದ ಈ ಮಹಿಳೆಯರಿಗಿಲ್ಲ. ಈ ಹಿನ್ನೆಲೆಯಲ್ಲಿ ಸಾಮಾನ್ಯ ಹಾಗೂ ಗ್ರಾಮೀಣ ಮಹಿಳೆಯರಿಗೂ, ಬುಡಕಟ್ಟು ಮಹಿಳೆಯರಿಗೂ ಮಹತ್ವದ ವ್ಯತಾಸ್ಯಗಳು ಗೋಚರಿಸುವುದಿಲ್ಲ. ಮುಖ್ಯವಾಗಿ ಬುಡಕಟ್ಟು ಸಮುದಾಯಗಳ ಮಹಿಳೆಯರಿಗೆ ಆರ್ಥಿಕ ಸ್ಥಿರತೆಬೇಕಾಗಿದೆ. ರಾಜಕೀಯ ಭಾಗವಹಿಸುವಿಕೆಯನ್ನು ಅರ್ಥ ಮಾಡಿಕೊಳ್ಳಲು ಶಿಕ್ಷಣ ಅಗತ್ಯವಾಗಿದೆ. ಬುಡಕಟ್ಟು ಸಮುದಾಯಗಳು ಮಹಿಳೆಯರ ಶಿಕ್ಷಣದ ಕುರಿತು ಗಮನ ಹರಿಸಬೇಕಾಗಿದೆ. ಬುಡಕಟ್ಟು ಸಮುದಾಯಗಳ ಆರ್ಥಿಕ ಸ್ಥಿತಿಗೂ ಶಿಕ್ಷಣಕ್ಕೂ ಆ ಮೂಲಕ ರಾಜಕೀಯ ಅರಿವಿನ ಅಭಿವೃದ್ಧಿಗೂ, ನೇರವಾದ ಸಂಬಂಧವಿದೆ. ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್‌ರು ಧಾರಣಶಕ್ತಿಯ ದುಃಸ್ಥಿತಿಯೇ ಬಡತನ ಎಂದು ಹೇಳಿದ್ದಾರೆ. ಪ್ರವಾಹದೋಪಾದಿಯಲ್ಲಿ ಹರಿಯುತ್ತಿರುವ ಪ್ರಯೋಜನ ಹಾಗೂ ಅನುಕೂಲಗಳನ್ನು ಮೈಗೂಡಿಸಿಕೊಳ್ಳಬಲ್ಲ ಸಾಮರ್ಥ್ಯವನ್ನೇ ಧಾರಣಶಕ್ತಿ ಎಂದು ಕರೆಯಬಹುದಾಗಿದೆ. ಸರ್ಕಾರ ಒದಗಿಸುವ ಸವಲತ್ತುಗಳು, ಸಂವಿಧಾನಿಕ ಸೌಲಭ್ಯಗಳನ್ನು ಬುಡಕಟ್ಟು ಮಹಿಳೆಯರು ಮೈಗೂಡಿಸಿಕೊಳ್ಳುವ ಸಾಮರ್ಥ್ಯ ಹೊಂದಬೇಕಾಗಿದೆ. ಧಾರಣಶಕ್ತಿಯು ಶಿಕ್ಷಣದಿಂದ ಪ್ರಾಪ್ತವಾಗುತ್ತದೆ. ಧಾರಣಶಕ್ತಿಯನ್ನು ನಿರ್ಧರಿಸುವ ಅನೇಕ ಸಂಗತಿಗಳಲ್ಲಿ ಶಿಕ್ಷಣವೂ ಒಂದು. ಬುಡಕಟ್ಟು ಮಹಿಳೆಯರ ರಾಜಕೀಯ ಧಾರಣಾಶಕ್ತಿಯ ಕುಸಿತಕ್ಕೆ ಸಾಕ್ಷರತೆಯ ಕೊರತೆಯೂ ಕಾರಣ ಎಂದು ಗುರುತಿಸಬೇಕಾಗಿದೆ.

ಬುಡಕಟ್ಟು ಮಹಿಳೆಯರಿಗೆ ರಾಜಕೀಯ ತರಬೇತಿಯು ದೊರೆಯಬೇಕು. ಇದರಿಂದ ಅವರಲ್ಲಿ ರಾಜಕೀಯ ಪ್ರಜ್ಞೆ ಬೆಳೆಯಲು ಸಾಧ್ಯವಾಗಬಹುದು. ಪ್ರಜಾಪ್ರಭುತ್ವದ ತಿಳುವಳಿಕೆ ರಾಜಕೀಯವಾಗಿ ಭಾಗವಹಿಸುವುದು, ನಿರ್ಧಾರಗಳನ್ನು ಕೈಗೊಳ್ಳುವಿಕೆಯಲ್ಲಿ ಪಾತ್ರವಹಿಸುವುದು, ಮತ ಚಲಾಯಿಸುವುದರ ಪ್ರಾಮುಖ್ಯತೆಗಳನ್ನು ಗ್ರಹಿಸುವುದರ ಮೂಲಕ ರಾಜಕೀಯವಾಗಿ ಬುಡಕಟ್ಟು ಮಹಿಳೆಯರು ಸಶಕ್ತರಾಗಲು ಪ್ರಯತ್ನಿಸಬಹುದಾಗಿದೆ.

ಬುಡಕಟ್ಟು ಮಹಿಳೆಯರನ್ನು ನಂಬಿಕೆಗಳು, ವಿಧಿ-ನಿಷೇಧಗಳು, ಆಚರಣೆ, ಆಚಾರ ಪದ್ಧತಿಗಳು, ವಿವಾಹ ವೇಷಭೂಷಣ, ಸಂಸ್ಕಾರಗಳ ಮೂಲಕ ಸಾಂಸ್ಕೃತಿಕವಾಗಿ ಹೆಚ್ಚು ಅಧ್ಯಯನ ಮಾಡಲಾಗುತ್ತಿದೆ. ಬುಡಕಟ್ಟು ಮಹಿಳೆಯರನ್ನು ರಾಜಕೀಯ ಶಿಸ್ತಿನಲ್ಲಿ ಅಧ್ಯಯನ ಮಾಡುವುದು ಇಂದಿನ ಜರೂರಾಗಿದೆ. ಬುಡಕಟ್ಟು ಮಹಿಳೆಯರನ್ನು ರಾಜಕೀಯವಾಗಿ ಸಶಕ್ತೀರಣಗೊಳಿಸಲು ಪ್ರಯತ್ನಿಸಿದರೆ ರಾಜಕೀಯ ಬಡತನದ ತೆರೆ ಸರಿಸಬಹುದಾಗಿದೆ.

ಆಧಾರ ಆಕರ

೧. ಬಳ್ಳಾರಿ ಜಿಲ್ಲೆಯಲ್ಲಿ ಕೈಗಾರೀಕರಣ ಮತ್ತು ಜನಾಂದೋಲನ, ಪ್ರೊ.ಬಿ. ಶೇಷಾದ್ರಿ, ಮಂಟಪಮಾಲೆ, ೧೯೯೮, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೨. ಚಂದ್ರಪೂಜಾರಿ ಎಂ., ೨೦೦೧, ದೇಶೀಯತೆಯ ನೆರಳಲ್ಲಿ ವಿಕೇಂದ್ರೀಕರಣ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೩. ಚಂದ್ರಶೇಖರ ಟಿ.ಆರ್., ೨೦೦೧ ಮಹಿಳೆ: ಆರ್ಥಿಕತೆ ಮತ್ತು ಅಭಿವೃದ್ಧಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೪. ಚಂದ್ರಪೂಜಾರಿ ಎಂ., ೨೦೦೨, ಸಮುದಾಯ ಮತ್ತು ಸಹಭಾಗಿತ್ವ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೫. ಆದಿವಾಸಿ-ಪ್ರೊ. ಮಂಜುನಾಥ್ ಬೇವಿನಕಟ್ಟಿ ೨೦೦೭, ಸಾಹಿತ್ಯ ನಂದನ ಪ್ರಕಾಶನ, ಬೆಂಗಳೂರು.

೬. ಸಾಂಸ್ಕೃತಿಕ ಅನನ್ಯತೆ ಮತ್ತು ಹಲಗಲಿ ಬಂಡಾಯ ಸಂ.ಡಾ. ಮಂಜುನಾಥ್ ಬೇವಿನಕಟ್ಟಿ ೨೦೦೯, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೭. ಗ್ರಾಮ ಪಂಚಾಯಿತಿಯಲ್ಲಿ ಮಹಿಳೆ ಪಾತ್ರ; ಹೊಸಪೇಟೆ ಸಂಡೂರು ತಾಲೂಕಿನ ಗ್ರಾಮ ಪಂಚಾಯಿತಿಗಳ ಒಂದು ತೌಲನಿಕ ಅಧ್ಯಯನ (ಅಪ್ರಕಟಿತ ಪಿಎಚ್‌ಡಿ ಮಹಾಪ್ರಬಂಧ)-೨೦೦೨, ಡಾ.ಡಿ. ಮೀನಾಕ್ಷಿ.

೮. ನಿರ್ಣಯ ಪ್ರಕ್ರಿಯೆಯ೮ಲ್ಲಿ ಚುನಾಯಿತ ಮಹಿಳೆಯರ ಪಾತ್ರ ೨೦೧೦, ಡಾ.ಡಿ. ಮೀನಾಕ್ಷಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೯. ಅಲ್ಪಸಂಖ್ಯಾತರು ಮತ್ತು ಐಡೆಂಟಿಟಿ ರಾಜಕೀಯ: ಸಾಮಾಜಿಕ ಸಮ್ಮಿಶ್ರತೆಯಿಂದ ಡೋಲಾಯಮಾನದೆಡೆಗೆ- ಡಾ. ಮುಜಾಫರ್ ಅಸ್ಸಾದಿ, ಪ್ರಬಂಧದ ಸಾರಲೇಖ

೧೦. ಮಹಿಳಾ ಅಧ್ಯಯನ-ವಿಶೇಷ ಸಂಚಿಕೆ ಸಂ: ಡಾ.ಎಚ್.ಎಸ್. ಶ್ರೀಮತಿ, ೨೦೦೧, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೧೧. ಬುಡಕಟ್ಟು ಮಹಿಳೆ ಮತ್ತು ಅಭಿವೃದ್ಧಿ: ಡಾ. ಸಿದ್ಧಗಂಗಮ್ಮ, ಪ್ರಬಂಧದ ಸಾರಲೇಖ.

* * *