ಕರ್ನಾಟಕದಲ್ಲಿರುವ ಹಲವಾರು ಬುಡಕಟ್ಟು ಜನಾಂಗಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿನ ನೆಲೆಯೂರಿರುವ ಹಕ್ಕಿ-ಪಿಕ್ಕಿ ಬುಡಕಟ್ಟು ಜನಾಂಗ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ತೀರಾ ಇತ್ತೀಚಿನವರೆಗೆ ಈ ಬುಡಕಟ್ಟು ಜನಾಂಗ ಅಲೆಮಾರಿಯಾಗಿದ್ದುಕೊಂಡು ಕಾಡು ಮೇಡುಗಳಲ್ಲಿ ಸಂಚರಿಸುತ್ತಾ ಹೆಚ್ಚು ಕಡಿಮೆ ಯಾರ ಗಮನಕ್ಕೂ ಬಾರದಂತೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಈ ಬುಡಕಟ್ಟು ಜನಾಂಗ ತನ್ನದೇ ಆದ ವಿಶಿಷ್ಟ ಆಚರಣೆಗಳಿಂದ ಜನರ ಗಮನ ಸೆಳೆದಿದೆ. ಅದರಲ್ಲೂ ವಿಶೇಷವಾಗಿ ಆರೋಗ್ಯ ಸಂರಕ್ಷಣೆಗೆ ಸ್ಥಳೀಯವಾಗಿ ಸಿಗುವ ಔಷಧಿಯ ಗುಣಗಳುಳ್ಳ ಗಿಡ, ಬಳ್ಳಿ, ಬೇರುಗಳನ್ನು ಮತ್ತು ಎಲೆಗಳನ್ನು ಉಪಯೋಗಿಸಿ ಕಾಯಿಲೆ ವಾಸಿಯಾಗುವಂತೆ ಮಾಡುತ್ತಿರುವುದು ಜನರ ಗಮನವನ್ನು ತಮ್ಮೆಡೆಗೆ ಸೆಳೆವಂತೆ ಮಾಡಿದೆ. ಕಾಡಿನಲ್ಲಿ ನಿರಂತರ ಓಡಾಟ, ಔಷಧೀಯ ಸಸ್ಯಗಳ ಹುಡುಕಾಟ ಮತ್ತು ನಿರ್ಧಿಷ್ಟ ರೋಗಕ್ಕೆ ಬಳಸಬಹುದಾದ ನಿಖರವಾದ ಗಿಡಮೂಲಿಕೆಗಳ ಬಗ್ಗೆ ತಮ್ಮ ಗಮನ ಕೇಂದ್ರೀಕರಿಸುವುದು ಇವರ ಅವ್ಯಾಹತ ಹವ್ಯಾಸಗಳಿಂದಾಗಿದೆ. ಹಾಗಾಗಿ ಇವರಿಗೆ ಕಾಡು ಕಾಡಾಗಿ ಉಳಿಯದೆ ನಾಡಾಗಿ ಬೃಹದಾಕಾರವಾಗಿ ಬೆಳೆದಿದೆ. ಕಾಡಿನಲ್ಲಿ ಈ ಜನಾಂಗ ಗುರುತಿಸಿಕೊಂಡಿರುವ ವೈದ್ಯಕೀಯ ಸಸ್ಯಗಳು, ಈ ಜನಾಂಗದ ಹಣೆಬರಹವನ್ನೇ ಬದಲಾಯಿಸಿವೆ. ಒಂದು ಕಾಲದಲ್ಲಿ ಹಕ್ಕಿ-ಪಿಕ್ಕಿಗಳನ್ನು ನಂಬಿಕೊಂಡು ಅವುಗಳನ್ನು ತಮ್ಮ ಚಾಣಾಕ್ಷ ಬುದ್ಧಿಯಿಂದ ಅವ್ಯಾಹಗತವಾಗಿ ಹಿಡಿಯುತ್ತಾ ಮತ್ತು ಅವುಗಳನ್ನು ಸ್ಥಳೀಯವಾಗಿ ಮಾರಿ ತಮ್ಮ ದೈನಂದಿನ ಜೀವನ ನಡೆಸುತ್ತಿದ್ದ ಈ ಜನಾಂಗ ಕಾಲಾಂತರದಲ್ಲಿ ತಮ್ಮ ವಂಶಪಾರಂಪರಿಕ ವೃತ್ತಿಯಿಂದ ಬಹಳಷ್ಟು ದೂರ ಹೋಗಿ ಸ್ಥಳೀಯವಾಗಿ ಸಿಗುವ ಔಷಧ ಗುಣಗಳುಳ್ಳ ಸಸ್ಯಗಳಿಂದ ಜನರಿಗೆ ಕಾಡುತ್ತಿರುವ ಹಲವಾರು ರೋಗ ರುಜಿನಗಳನ್ನು ದೂರಮಾಡುತ್ತಾ, ಇಂದು ಹಕ್ಕಿ-ಪಿಕ್ಕಿ ಜನಾಂಗ ಎಂದೊಡನೆ ಜನರು ವಿಶೇಷವಾಗಿ ಸ್ಥಳೀಯ ಔಷಧದ ಪರಿಣಿತರು ಎಂಬಂತೆ ಬೆಳೆದಿರುವುದು ಆಶ್ಚರ್ಯ ಮೂಡಿಸುತ್ತದೆ. ದೇಶದ ಉದ್ದಗಲಕ್ಕೂ ಸಂಚರಿಸುತ್ತಾ ಕಾಡುಮೇಡುಗಳನ್ನು ನೋಡುತ್ತಾ ಅತೀ ಅಪರೂಪವಾಗಿ ಸಿಗುವ ಸಸ್ಯಗಳನ್ನು ಶೇಖರಿಸುತ್ತಾ ಅವುಗಳಿಂದ ಔಷಧಿಗಳನ್ನು ತಯಾರಿಸುತ್ತಾ ತಮಗೋದಗಿಬಂದ ಅನಾರೋಗ್ಯಗಳನ್ನು ಗುಣಮುಖ ಮಾಡುತ್ತಾ ಜೀವನ ನಡೆಸಲಾರಂಭಿಸಿದರು. ಈ ರೀತಿಯ ಔಷಧೋಪಚಾರದಿಂದ ಬಹಳಷ್ಟು ಬೇಗ ಆರ್ಥಿಕವಾಗಿ ಸದೃಢರಾಗಿ ತಮ್ಮನ್ನು ಗುರುತಿಸಿಕೊಳ್ಳಲಾರಂಭಿಸಿದರು. ಅಷ್ಟೇ ಅಲ್ಲಾ ಇತರರಿಗಿಂತ ಇವರು ತೀರಾ ವಿಭಿನ್ನ ಎನ್ನುವ ರೀತಿಯಲ್ಲಿ ಬೆಳೆದರು. ಆದರೆ ಕಾಲಾಂತರದಲ್ಲಿ ಒಂದೆಡೆ ಕಾಡಿನ ನಾಶ, ಪ್ರಾಣಿ ಮತ್ತು ಪಕ್ಷಿಕುಲದ ವಿನಾಶವಾಗಿ ಬದುಕು ದುಸ್ತರವಾಗಿ ಕಂಡು ಬಂದೊಡನೆ ತಮ್ಮ ವಂಶಪಾರಂಪರಿಕ ಉದ್ಯೋಗದಿಂದ ತಮ್ಮನ್ನು ಬೇರೆ ಉದ್ಯೋಗದ ಕಡೆಗೆ ತೊಡಗಿಸಿಕೊಂಡರು.

ಭಾರತದಲ್ಲಿಯೇ ಅತ್ಯಂತ ಪುರಾತನವಾದ ಮತ್ತು ಅಷ್ಟೇ ವೈವಿಧ್ಯಮಯವಾದ ಈ ಹಕ್ಕಿ-ಪಿಕ್ಕಿ ಜನಾಂಗದ ಬಗ್ಗೆ ತೀರಾ ಇತ್ತೀಚಿನ ದಿನಗಳವರೆಗೆ ನಿಖರವಾದ ಅಧ್ಯಯನ ನಡೆದಿರಲಿಲ್ಲ. ಪ್ರಾಯಶಃ ಪ್ರೊ. ಮಾನ್ ಇವರ ಬಗ್ಗೆ ಅಧ್ಯಯನ ಮಾಡಿದ ಮೊದಲ ಮಾನವಶಾಸ್ತ್ರಜ್ಞ ಎಂದು ಹೇಳಿದರೆ ತಪ್ಪಗಲಾರದು. ನಂತರದಲ್ಲಿ ಅಲ್ಲೊಂದು ಅಧ್ಯಯನ ನಡೆದಿರುವುದು ಬಿಟ್ಟರೆ ಈ ಜನಾಂಗದ ಒಟ್ಟಾರೆ ಜನಜೀವನದ ಮೇಲೆ ಬೆಳಕು ಚೆಲ್ಲುವಂತ ಅಧ್ಯಯನ ಬರದೆ ಇದ್ದುದಕ್ಕೆ, ಈ ಜನಾಂಗದ ಅಲೆಮಾರಿ ಜೀವನವೇ ಮುಖ್ಯ ಕಾರಣವೆನಿಸುತ್ತದೆ. ಗಣತೀಕಾರರ, ಯೋಜನಾಕಾರರ ಗಮನಕ್ಕೆ ಬಾರದಿದ್ದುದು ಬದುಕಿನ ವಿವಿಧ ಮಜಲುಗಳ ಅಭಿವೃದ್ಧಿಗೆ ತೊಡಕಾಯಿತು ಎಂದು ಭಾವಿಸಬಹುದಾಗಿದೆ. ಅದಾಗ್ಯೂ ಸಹ ಹಲವಾರು ಕಾರಣಗಳಿಂದ ಈ ಜನಾಂಗದ ಅಭಿವೃದ್ಧಿಗೆ ಕುಂಟಿತವಾಗಿದ್ದೇನೋ ನಿಜ. ಆದರೆ, ಎಲ್ಲಾ ವೈರುದ್ಯಗಳನ್ನು ಮೈಗೂಡಿಸಿಕೊಂಡೇ ಬದಲಾದ ಪರಿಸ್ಥಿತಿಗೆ ಮೈವೊಡ್ಡಿ ಜೀವನ ನಡೆಸಿದ್ದು ಈ ಹಕ್ಕಿ-ಪಿಕ್ಕಿ ಜನಾಂಗದ ಛಲವನ್ನು ಎತ್ತಿ ತೋರಿಸುತ್ತದೆ.

ಶಿವಮೊಗ್ಗ ಜಿಲ್ಲೆಯಲ್ಲಿ ನೆಲೆವೂರಿರುವ ಈ ಜನಾಂಗ ಜನಸಂಖ್ಯೆಯ ದೃಷ್ಟಿಯಿಂದ ಅಷ್ಟೇನು ಗಣನೀಯ ಸ್ಥಿತಿಯಲ್ಲಿಲ್ಲದಿದ್ದರೂ ಸಾರಾಸಗಟಾಗಿ ಈ ಸಮುದಾಯವನ್ನು ಅಲ್ಲಗಳೆಯುವಂತಿಲ್ಲ. ಇವರು ಈ ಜಿಲ್ಲೆಯ ಚನ್ನಗಿರಿಗೋಪನಾಳ್, ನಲ್ಲೂರು ಸಮೀಪವಿರುವ ಜಂತಿನಗರದಲ್ಲಿ ವಾಸಿಸುತ್ತಿದ್ದಾರೆ. ೨೦೦೯ರ ಜನವರಿಯಲ್ಲಿ ನಡೆಸಿದ ಜನಗಣತಿಯ ಪ್ರಕಾರ ಇವರ ಒಟ್ಟು ಜನಸಂಖ್ಯೆ ,೬೩೬ ಅದರಲ್ಲಿ ,೨೧೮ ಗಂಡು, ಮತ್ತು ,೪೧೮ ಹೆಣ್ಣು ಇವರಲ್ಲಿ ಶೇ. ೪೦ಕ್ಕಿಂತಲೂ ಅಧಿಕ ವಯೋವೃದ್ಧರಿದ್ದಾರೆ. ಈ ವಯೋವೃದ್ಧರೇ ಇಂದಿನ ಔಷಧೋಪಚಾರದ ಎಲ್ಲಾ ಜವಾಬ್ದಾರಿಯನ್ನು ಹೊತ್ತಿದ್ದಾರೆ. ತಮ್ಮ ಹದಿಹರೆಯ ವಯಸ್ಸಿನಲ್ಲಿ ದೇಶದಾದ್ಯಂತ ಓಡಾಡಿದ ಅನುಭವ ಹೊಂದಿರುವ ಇವರು ಸ್ಥಳೀಯವಾಗಿ ಸಿಗುವ ಔಷಧಿಯುಕ್ತ ಸಸ್ಯಗಳನ್ನು ಗುರುರಿಸುವಲ್ಲಿ ಸಿದ್ಧಹಸ್ತರು. ತಮ್ಮದೇ ಆದ ಯುವ ಪಡೆಯನ್ನು ಹೊಂದಿರುವ ಇವರು ಹಲವಾರು ನಮೂನೆಯ ಕಾಯಿಲೆಗಳಿಗೆ ಬೇಕಾಗುವ ಔಷಧೀಯ ಸಸ್ಯಗಳನ್ನು ವರ್ಗೀಕರಿಸಿ, ಅವುಗಳನ್ನು ಶೇಖರಿಸಿ ಯಾವಾಗಬೇಕೋ ಆವಾಗ, ಅವುಗಳ ಉಪಯೋಗವನ್ನು ಪಡೆದು ಔಷಧೋಪಚಾರದಲ್ಲಿ ತೊಡಗಿಸಿಕೊಳ್ಳುತ್ತಾರೆ. ಸ್ಥಳೀಯರೂ ಸಹ ಇವರ ಔಷಧೋಪಚಾರದ ಬಗ್ಗೆ ಅತೀವ ನಂಬಿಕೆ ಇಟ್ಟಿರುವುದು ಇವರ ಔಷಧದ ಪರಿಣಾಮವನ್ನು ತೋರಿಸುತ್ತದೆ. ವಾರದಲ್ಲಿ ಕೇವಲ ೨ ದಿನ (ಗುರುವಾರ ಮತ್ತು ಭಾನುವಾರ) ಮಾತ್ರ ಇವರು ಇತರರಿಗೆ ಔಷಧೋಪಚಾರ ಮಾಡುತ್ತಾರೆ. ಔಷಧೋಪಚಾರದ ನಂತರ ರೋಗಿಗಗಳಿಗೆ ಅವರವರ ರೋಗಕ್ಕೆ ತಕ್ಕಂತೆ ಏನೇನು ಸೇವಿಸಬೇಕು, ಸೇವಿಸಬಾರದು ಎಂದು ತಿಳಿಸಿ ಅವರನ್ನೂ ಶೀಘ್ರ ಗುಣಮುಖರಾಗುವಂತೆ ಹಾರೈಸಿ ಕಳುಹಿಸುತ್ತಿದ್ದರು.

ಈ ಹಿಂದೆ ಈ ರೀತಿಯ ಔಷಧೋಪಚಾರಕ್ಕೆ ಹಣವನ್ನಾಗಲೀ ಅಥವಾ ಇತರ ವಸ್ತುವನ್ನಾಗಲೀ ಸ್ವೀಕರಿಸುತ್ತಿರಲಿಲ್ಲ. ಒಂದು ವೇಳೆ ಈ ರೀತಿ ಸ್ವೀಕರಿಸಿದ್ದೇ ಆದರೆ ಅವರು ರೋಗಿಗೆ ಕೊಟ್ಟಂತಹ ಔಷಧದ ಪರಿಣಾಮ ಆಗುವುದಿಲ್ಲವೆಂಬ ಬಲವಾದ ನಂಬಿಕೆ ಇತ್ತು. ಆದರೆ, ಕಾಲಚಕ್ರ ಉರುಳಿದಂತೆ, ಆರ್ಥಿಕ ಪರಿಸ್ಥಿತಿಯಲ್ಲಿನ ಏರುಪೇರು ಇವರುಗಳಿಗೆ, ರೋಗಿಗಳಿಗೆ ಹಣಕೇಳುವಂತಹ, ಪೀಡಿಸುವಂತಹ ಪರಿಸ್ಥಿತಿ ಎದುರಾಯಿತು. ಸದ್ಯಕ್ಕೆ ಇವರ ಸ್ಥಿತಿ ಅಷ್ಟೊಂದು ಸರಿಯಿಲ್ಲದ ಪ್ರಯುಕ್ತ ಪ್ರತಿಯೊಬ್ಬರಿಗೂ ತಾವು ನೀಡಿದ ಔಷಧಕ್ಕೆ ಹಣ ಕೇಳುವುದ ವಾಡಿಕೆಯಾಗಿ ಬಿಟ್ಟಿದೆ. ಇಷ್ಟಾದರೂ ಸಹ ಸ್ಥಳೀಯರು ಇವರು ಕೊಡುವ ಔಷಧವನ್ನು ಅತೀ ವಿಶ್ವಾಸದಿಂದ ಸ್ವೀಕರಿಸಿ ರೋಗ ಮುಕ್ತರಾಗುತ್ತಾರೆ. ಹಣದ ಜೊತೆಗೆ ಕೆಲವು ಹಳೆಯ ಬಟ್ಟೆಗಳನ್ನು ಸಹ ಕೊಡುವ ರೂಢಿ ಇಂದಿಗೂ ಆರ್ಥಿಕವಾಗಿ ಮುಂದುವರೆದಿರುವ ಸ್ಥಳೀಯರಲ್ಲಿ ಇದೆ. ಹಕ್ಕಿ-ಪಿಕ್ಕಿಗಳಿಗೆ ನೀಡುವ ಔಷಧಕ್ಕೆ ಯಾವ ಕಾರಣಕ್ಕೂ ಹಣಪಡೆದಿರುವುದಿಲ್ಲ. ಬದಲಾಗಿ ಅವರಾಗಿಯೇ ಪ್ರೀತಿಯಿಂದ ಏನಾದರೂ ಹೆಂಡ, ಅಥವಾ ಸರಾಯಿಯನ್ನು ನೀಡಿದರೆ ಸೇವಿಸುತ್ತಾರೆ. ಹಕ್ಕಿ-ಪಿಕ್ಕಿಗಳು ಹೆಚ್ಚು ಕಡಿಮೆ ಎಲ್ಲಾ ರೋಗಿಗಳಿಗೆ ಔಷಧಿಯನ್ನು ನೀಡುತ್ತಾರೆ ಯಾರಾದರೂ ಈ ಕೆಳಕಂಡ ರೋಗಗಳಿಗೆ ವಿಶೇಷವಾಗಿ ಗಮನಹರಿಸಿ ಔಷಧೋಪಚಾರ ಮಾಡುತ್ತಾರೆ. ತಲೆನೋವು, ಶೀತ, ನೆಗಡಿ, ಕೆಮ್ಮು, ಹೊಟ್ಟೆಮುರಿತ, ಹಲ್ಲುನೋವು, ಚರ್ಮವ್ಯಾಧಿ, ನಾಯಿ ಕಚ್ಚುವುದು, ಬಿಳಿಸೆರಗು, ಮೂರ್ಚೆರೋಗ, ಆಮಶಂಕೆ, ಭೇದಿ, ಗರ್ಭಪಾತ-ಇತ್ಯಾದಿ. ಇಷ್ಟೇ ಅಲ್ಲದೇ ವಿಶೇಷವಾಗಿ ಮಕ್ಕಳಿಗೆ ತಗಲುವಂತಹ ಬಾಲಗ್ರಹ, ಕೆಟ್ಟಕಣ್ಣು ಬೀಳುವಿಕೆ, ಗರ್ಭಿಣಿ ಹೆಂಗಸಿನ ನೆರಳು ಬೀಳುವಿಕೆ ಮತ್ತು ಮೊದಲ ಬಾರಿಗೆ ಹಲ್ಲು ಮೂಡುವಲ್ಲಿ ಎದುರಾಗುವ ತೊಂದರೆ ಇತ್ಯಾದಿ ಮತ್ತು ಹೆಣ್ಣು ಮಕ್ಕಳಿಗೆ ಸಾಮಾನ್ಯವಾಗಿ ಬರುವಂತಹ ತೊಂದರೆಗಳಾದ ಬಂಜೆತನ, ಆಗಾಗ್ಗೆ ಸಂಭವಿಸುವ ಗರ್ಭಪಾತ, ಬಿಳಿ ಸೆರಗು ಇತ್ಯಾದಿಗಳನ್ನು ಯಾವ ಅಡ್ಡ ಪರಿಣಾಮವಿಲ್ಲದೇ ತಾವೇ ಸಿದ್ಧಪಡಿಸಿದ ಔಷಧಗಳನ್ನು ಉಪಯೋಗಿಸಿ ಗುಣ ಮುಖರನ್ನಾಗಿಸುತ್ತಾರೆ. ಇಂಥ ವಿಶಿಷ್ಟವಾದ ಆಚರಣೆ ನಂಬಿಕೆ, ಗಿಡಮೂಲಿಕೆಗಳ ಬಗ್ಗೆ ಅಪಾರವಾದ ಜ್ಞಾನ ಹಕ್ಕಿ-ಪಿಕ್ಕಿ ಜನಾಂಗದಲ್ಲಿ ಕಂಡುಬರುತ್ತದೆ.

* * *