ಭಾರತೀಯ ಸಂಸ್ಕೃತಿಯಲ್ಲಿ ದೇವಾಲಯಗಳಿಗೆ ಮಹತ್ವದ ಸ್ಥಾನವಿದೆ. ಈ ದೇವಾಲಯಗಳು ಗ್ರಾಮದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿ, ಧಾರ್ಮಿಕ ಮೊದಲಾದ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದವು. ದೇವರ ಪೂಜೆ ಪುನಷ್ಕಾರಗಳಲ್ಲೂ ಅಂಗ ಭೋಗ ಮತ್ತು ರಂಗಭೋಗ ಎಂಬ ವಿಧಗಳಿದ್ದವು. ಅದರಲ್ಲಿ ,ದೇವರ ಮೂರ್ತಿಯ ಮುಂದೆ ಸುಂದರಿ ಪ್ರದರ್ಶಿಸಲ್ಪಡುವ ಪವಿತ್ರಶ್ರೇಷ್ಠವಾದ ನಾಟ್ಯಕಲೆ, ರಂಗಭೋಗವಾದರೆ ದೇವತೆಗಳಿಗೆ ಗಂಧ ಹಚ್ಚುವುದು. ಮಜ್ಜನ ಮಾಡಿಸುವುದು ಅಂಗಭೋಗ ಕಲಾನಂತರದಲ್ಲಿ ನಾಟ್ಯವೇ ಕಾಯಕವಾದ ಸ್ತ್ರೀಯರನ್ನು ದೇವದಾಸಿಯರೆಂದು ಪ್ರತ್ಯೇಕವಾಗಿ ಗುರುತಿಸತೊಡಗಿದರು. ನಂತರದಲ್ಲಿ ಅಧಿಕಾರ, ಆರ್ಥಿಕ ಬಲ, ಹೊಂದಿದವರ ಕೈಗೆ ಸಿಕ್ಕ ಈ ದೇವದಾಸಿಯರು ರಂಗಭೋಗದ ಜೊತೆಗೆ ಅಂಗಭೋಗ ಎಂಬ ಶಬ್ದ ತನ್ನ ಅರ್ಥ ಕಳೆದುಕೊಂಡು ಹೆಣ್ಣಿನ ಅಂಗವನ್ನು ಭೋಗಕ್ಕೆ ಬಳಸಲ್ಪಡುತ್ತಿರುವುದು ದುರಂತ. ಹೀಗೆ ಧರ್ಮದ ಪ್ರತೀಕವಾದ ಈ ದೇವದಾಸಿ ಪದ್ಧತಿಯು ರಾಜಕೀಯ ಸ್ಥಾನಕ್ಕೆ ಒಳಗಾಗಿ ದೇವದಾಸಿಯರು ಎಂದರೆ ಕೇವಲ ಕಾಮ ತೃಷೆಗಾಗಿ ಇರುವ ಭೋಗದ ವಸ್ತುವಾಗಿ ಮಾರ್ಪಟ್ಟಿದೆ. ಇದು ನಮ್ಮ ಸಾಂಸ್ಕೃತಿಕ ದುರಂತಕ್ಕೆ ಸಾಕ್ಷಿ ಎಂಬುದೇ ನನ್ನ ಭಾವನೆ.

ದೇವದಾಸಿ ಪದ ಅರ್ಥವ್ಯಾಪ್ತಿ

ದೇವದಾಸಿ ಪದವು ಸಂಸ್ಕೃತ ಮೂಲದಿಂದ ಬಂದಿದೆ. ದೇವರು ದಾಸಿ-ಸೇವಕಿ ದೇವದಾಸಿ ಅಂದರೆ ದೇವರಿಗೆ ಅರ್ಪಣೆ ಆಗುವುದು. ಅರ್ಪಿಸುವುದೂ ಆಗಿದೆ. ದೇವರಿಗೆ ಅರ್ಪಣೆಗೊಂಡವರನ್ನು ಜೋಗತಿ, ಬಸವಿ, ಸೂಳೆ, ದಾಸಿ ಪಾತ್ರದವರು. ದೇವದಾಸಿಯರು ಎಂಬ ಹೆಸರಿನಿಂದ ಗುರುತಿಸಲಾಗುತ್ತಿದೆ. ಈ ಪದಗಳು ಮೇಲ್ಕಂಡ ಅರ್ಥಗಳನ್ನು ಸೂಚಿಸುವುದಲ್ಲದೇ ಅದರೊಳಗೆ ವಿಭಿನ್ನತೆಯನ್ನು ಸೂಚಿಸುತ್ತದೆ. ದೇವದಾಸಿಯು ದೇವರೊಂದಿಗೆ ಮದುವೆಯಾಗುವುದರಿಂದ ಇವರು ಯಾವ ಗಂಡಸನು ಮದುವೆಯಾಗುವಂತಿಲ್ಲ. ದೇವಾಲಯದ ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ ಇವರು ನಿರ್ದಿಷ್ಟ ಪಡಿಸಿದ ದೇವಾಲಯಕ್ಕೆ ಸೀಮಿತವಾಗಿರುತ್ತಿದ್ದರು. ದೇವಾಲಯದ ಸೇವೆ ಸಲ್ಲಿಸುವ ಅಧಿಕಾರವನ್ನು ಪಾರಂಪರಿಕವಾಗಿ ಹೊಂದಿರುತ್ತಿದ್ದರು. ಮದುವೆಯಾಗದೆ. ಇಟ್ಟುಕೊಂಡವನ ಜೊತೆಗೆ ವ್ಯವಸ್ಥಿತವಾದ ಬದುಕನ್ನು ರೂಪಿಸಿಕೊಂಡವರಾಗಿದ್ದರು. ಇಂಥ ದೇವದಾಸಿಯರನ್ನು ಸೂಳೆಯರೆಂದು ಪರ್ಯಾಯವಾಗಿ ಕಂಡಿರುವ ಶೋಚನೀಯ ಪರಿಸ್ಥಿತಿ ಸದ್ಯಕ್ಕಿದೆ.

ದೇವದಾಸಿ ಪದ್ಧತಿಗೆ ಕಾರಣಗಳು

ಆದಿ ಮಾನವನ ಕಾಲದಿಂದಲೂ ಮನುಷ್ಯ ಪ್ರಕೃತಿ ವಿಕೋಪಗಳಿಂದ ಸಂರಕ್ಷಣೆ ಪಡೆಯಲು ದೇವರ ಪರಿಕಲ್ಪನೆಯನ್ನು ಮಾಡಿಕೊಂಡು ಆರಾಧಿಸತೊಡಗಿದೆ. ಇನ್ನೊಂದೆಡೆ ಜೀವ ಸೃಷ್ಟಿಯ ಪ್ರಕ್ರಿಯೆಯಲ್ಲಿ ಸಂತಾನೋತ್ಪತ್ತಿಯೂ ಒಂದು ಇದು ಮಾನವ ವಿಕಾಸದ ಇತಿಹಾಸದಿಂದ ಅರಿಯಬಹುದು. ಈ ವಿಕಾಸದ ಹಂತಗಳಲ್ಲಿ ಭೂಮಿಯನ್ನು ಉತ್ತು ಬಿತ್ತು ಕೃಷಿಯನ್ನು ಕಲಿತ ಒಳ್ಳೆಯ ಫಲವತ್ತತೆಗಾಗಿ ದೇವರಿಗೆ (ಅಗ್ನಿ, ಭೂತಾಯಿ) ಈ ಉತ್ಪಾದನೆಯ ಕೆಲಭಾಗಗಳು ದೇವರಿಗೆ ಅರ್ಪಿಸುವ ಮನೋಭಾವ ಬೆಳೆಸಿಕೊಂಡ. ಅದರಂತೆಯೇ, ಸಂತಾನೋತ್ಪತ್ತಿಯಲ್ಲಿಯು ಇದೇ ರೀತಿಯಿಂದ ಅರ್ಪಣಾ ಭಾವನೆಯನ್ನು ಬೆಳೆಸಿಕೊಂಡ. ದೇವರ ದೇವಸ್ಥಾನಗಳ ಸೇವೆಯಲ್ಲಿ ನಿರತವಾದ ಹೆಣ್ಣುಗಳ ಲೈಂಗಿಕ ಬಳಕೆ ಪ್ರಾರಂಭವಾಯಿತು. ಕಾಲದ ಆರ್ಥಿಕ ಸ್ಥಿತಿಗಳಿಗೆ ಪೂರಕವಾಗಿ ಗುರುತಿಸುತ್ತ ಇಂದು ದೇವದಾಸಿ ಪದ್ಧತಿಯೆಂದರೆ ‘ವೇಶ್ಯಾವೃತ್ತಿ’ ಎಂಬ ವ್ಯಾಖ್ಯೆಯನ್ನು ಹೊಂದಿದೆ. ಈ ದೇವದಾಸಿ ಪದ್ಧತಿಗೆ ಬಲಿಯಾಗುವವರು ಬಡವರು, ನಿರಕ್ಷರಸ್ಥರು ಹಾಗೂ ಮೂಢನಂಬಿಕೆಗಳನ್ನು ರೂಢಿಸಿಕೊಂಡ ಸಮಾಜದ ನಿಕೃಷ್ಟ ಸ್ಥಾನದಲ್ಲಿದ್ದವರಾಗಿದ್ದಾರೆ.

ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಪ್ರತಿವರ್ಷ ಸಾವಿರಾರು ಮುಗ್ಧ ದಲಿತ ಹೆಣ್ಣು ಮಕ್ಕಳನ್ನು ದೇವದಾಸಿಯನ್ನಾಗಿ ಅರ್ಪಣೆ ಮಾಡುವಂತ, ಅಥಣಿ ತಾಲೂಕಿನ ಕೊಕಟನೂರು ಗ್ರಾಮದ ಯಲ್ಲಮ್ಮನ ದೇವಿಗೂ ಈ ಭಾಗದ ದಲಿತ ಹೆಣ್ಣು ಮಕ್ಕಳೂ ಪ್ರತಿವರ್ಷ ದೇವದಾಸಿ ಸಂಪ್ರದಾಯಕ್ಕೆ ಅರ್ಪಣೆಯಾಗಿ ಮಹಾರಾಷ್ಟ್ರದ ವೇಶ್ಯಾ, ಗ್ರಹಗಳನ್ನು ತುಂಬುವ ಕೆಲಸ ನಿರಾತಂಕವಾಗಿ ಸಾಗಿಬರುತ್ತಿದೆ. ಸ್ವಾತಂತ್ರ್ಯ ನಂತರ ಈ ಪ್ರವೃತ್ತಿಗೆ ಕಡಿವಾಣ ಬೀಳತೊಡಗಿದಂತೆ ಕಾನೂನುಗಳು ರೂಪಗೊಂಡ ಮೇಲೆ ಕಾಲಕ್ಕೆ ತಕ್ಕಂತೆ ಸೂಕ್ತ ಬೇರೆ ವ್ಯವಸ್ಥೆ ರೂಪಗೊಂಡು ಹಳ್ಳಿ ಹಳ್ಳಿಗೂ ಯಲ್ಲಮ್ಮಾ ದೇವಸ್ಥಾನಗಳು ಸ್ಥಾಪನೆಯಾಗತೊಡಗಿದವು. ಇಂತಹದೊಂದು ವ್ಯವಸ್ಥೆ ಇಲ್ಲಿ ರೂಪಗೊಳ್ಳಬೇಕಾದರೆ ಇಲ್ಲಿನ ಭೌಗೋಳಿಕ ಸ್ಥಿತಿಗತಿ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿ ಹೇಗಿದ್ದಿರಬಹುದು?

ಉತ್ತರ ಕರ್ನಾಟಕದಲ್ಲಿ ದಕ್ಷಿಣ ಮಹಾರಾಷ್ಟ್ರ ಭಾಗದ ಬೇರೆ ಬೇರೆ ದೇವತೆಗಳಿಗೆ ಬಾಲಕಿಯನ್ನು ಅರ್ಪಿಸುವ ಪದ್ಧತಿ ಹಿಂದಿನಿಂದಲೂ ರೂಢಿಗತವಾಗಿ ಬಂದಿದೆ. ಇಲ್ಲಿ ಬಸವಣ್ಣ (ವೃಷಭ) ದೇವರು, ಖಂಡೋಬಾ, ಯಲ್ಲಮ್ಮಾ ಮುಂತಾದ ದೇವರುಗಳಿಗೆ ಬಾಲಕಿಯರನ್ನು ಅರ್ಪಿಸುವುದು ಬಹುತೇಕ ಪರಿಶಿಷ್ಟ ಜಾತಿಯ ಜನರಲ್ಲಿದೆ. ಡಾ. ಜೋಗನ್ ಶಂಕರ ಪ್ರಕಾರ ಅಥಣಿ ತಾಲೂಕಿನ ಪರಿಶಿಷ್ಟ ಜಾತಿಗಳಲ್ಲಿನ ಹೊಲೆಯ ಮತ್ತು ಮಾದಿಗರ ಪಂಗಡಗಳಲ್ಲಿ ಕ್ರಮವಾಗಿ ಶೇ. ೯೫ ಹಾಗೂ ಶೇ. ೮೦ರಷ್ಟು ಇದೆ. (ದೇವದಾಸಿ ಸಂಪ್ರದಾಯ ೧೧೪ ಡಾ. ಜೋಗನ್ ಶಂಕರ) ಅಥಣಿ ತಾಲೂಕಿನ ಒಂದರಲ್ಲಿ ಸುಮಾರು ೫೦೦೦ ದೇವದಾಸಿ ಮಹಿಳೆಯರಿರಲು ಸಾಧ್ಯ. ಆದರೆ, ಇಡೀ ಬೆಳಗಾವಿ ಜಿಲ್ಲೆಯಲ್ಲಿ ಸುಮಾರು ೨೮೫೨ ದೇವದಾಸಿಯರೆಂದು ಸರ್ಕಾರಿ ಸಮೀಕ್ಷೆ ಹೇಳುತ್ತದೆ. (ಅಥಣಿ ಸಮಗ್ರ ದರ್ಶನ ೧೩೨ ದೇವದಾಸಿ ಪದ್ಧತಿ, ವಿ.ಎಸ್. ಮನವಾಡೆ)

ದೇವದಾಸಿ ಪುನರ್ವಸತಿ

ದೇಶದಲ್ಲಿಯೇ ಮೊಟ್ಟ ಮೊದಲಿಗೆ ಮದ್ರಾಸ ಪ್ರಾಂತ್ಯದಲ್ಲಿ ದೇವದಾಸಿ ಪದ್ಧತಿ ನಿಲುಗಡೆಗೆ ಕಾಯ್ದೆ ಜಾರಿಗೆ ಬಂದಿತು. ನಂತರ ೧೯೨೭ರಲ್ಲಿ ಮೈಸೂರು ಅರಸರು ನಂದಿ ಬೆಟ್ಟದ ಭೋಗದ ನಂದೀಶ್ವರನಿಗೆ ದೇವದಾಸಿ ಅರ್ಪಣೆಯ ನಿಲುಗಡೆಗೆ ಆದೇಶ ಹೊರಡಿಸಿದರು. ಚಿಕ್ಕೋಡಿ ಭಾಗದಲ್ಲಿ ಶ್ರೀದೇವರಾಯ ಇಂಗಳೆ ಅಸ್ಪ್ರಸ್ಯತಾ ಮತ್ತು ದೇವದಾಸಿ ನಿರ್ಮೂಲನಾ ಚಳುವಳಿಯನ್ನು ಅತ್ಯಂತ ಉಗ್ರವಾಗಿ ನಡೆಸಿಕೊಂಡು ಬಂದರು.

ದೇವದಾಸಿ ಪದ್ಧತಿಯನ್ನು ನಿಯಂತ್ರಿಸಲು ಸಂಸತ್ತು ಹಾಗೂ ಅನೇಕ ರಾಜ್ಯಗಳು ಕಾನೂನುಗಳನ್ನು ಜಾರಿಗೆ ತಂದಿದ್ದರು ಅವುಗಳ ಲೋಪ-ದೋಷಗಳಿಂದ ಈ ಪದ್ಧತಿ ಮುಂದುವರೆದುಕೊಂಡು ಹುಟ್ಟು ಪಡೆದುಕೊಂಡು ಬರುತ್ತಿರುವುದನ್ನು ಕಾಣಬಹುದು.

ಕರ್ನಾಟಕ ಸರ್ಕಾರವು ೧೯೮೨ರಲ್ಲಿ ದೇವದಾಸಿ ಅರ್ಪಣೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದು, ದೇವದಾಸಿ ಪದ್ಧತಿಗೆ ತಿಲಾಂಜಲಿ ನೀಡಲು ಪ್ರಯತ್ನಿಸಿತು. ಸಂಯುಕ್ತ ಮಹಿಳಾ ವೇದಿಕೆ ಎಂಬ ಬೆಂಗಳೂರಿನ ಸ್ವಯಂ ಸೇವಾ ಸಂಸ್ಥೆಯು ದೇವದಾಸಿಯರ ಸ್ಥಿತಿಗತಿ ಕುರಿತು ಬೆಳಗಾವಿ, ಬಿಜಾಪುರ ಜಿಲ್ಲೆಗಳಲ್ಲಿ ಕೈಗೊಂಡ ಸಮೀಕ್ಷೆ ಸರ್ಕಾರಕ್ಕೆ ನೀಡಿದ ವರದಿ ಮತ್ತು ಸಲಹೆಗಳೇ ಇದಕ್ಕೆ ಕಾರಣ. ಸದರಿ ಕಾಯ್ದೆ ೧೯೮೪ರಲ್ಲಿ ಜಾರಿಗೆ ಬಂದಿತು.

ನೂರಾರು ವರ್ಷಗಳಿಂದ ಅನಕ್ಷರತೆ, ಅಂಧಶ್ರದ್ಧೆ, ಮೂಢನಂಬಿಕೆ ಪರಸ್ಪರ ಶೋಷಣೆ ದೌರ್ಜನ್ಯಗಳಿಂದ ಬಳಲಿದ ಗ್ರಾಮೀಣ ಸಮಾಜವನ್ನು ಕಂಡು ಅದಕ್ಕೆ ಪರಿಹಾರ ಹುಡುಕಲು ಹೊರಟ ಸಾವಿರಾರು ಬುದ್ಧಿಜೀವಿಗಳು. ಸಮಾಜ ಸೇವಕರು, ಸಂಘಟನೆಗಳು, ಅಧಿಕಾರಗಳ ಪರಿಶ್ರಮದ ಫಲವಾಗಿ ಇಂದು ಬದಲಾವಣೆಯ ಗಾಳಿ ಬೀಸುತ್ತಿದೆ. ಹಿಂದುಳಿದ ಪ್ರದೇಶಗಳಾದ ಕೊಪ್ಪಳ, ರಾಯಚೂರು, ಬಳ್ಳಾರಿ ಮುಂತಾದ ಜಿಲ್ಲೆಗಳಲ್ಲಿ ದೇವದಾಸಿ ಪದ್ಧತಿಯು ಕಡಿಮೆಯಾಗುತ್ತಿರುವುದರ ಜೊತೆಗೆ ಮಹಿಳೆಯರು ಜಾಗೃತರಾಗಿದ್ದಾರೆ. ಸಮಾಜ ಸೇವಕರು, ಸರಕಾರೇತರ ಸಂಘ, ಸಂಸ್ಥೆಗಳು ಸಹಕಾರದಿಂದಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ದೇವದಾಸಿ ಪುನರ್ವಸತಿ ಯೋಜನೆ ಹತ್ತು ಹಲವಾರು ಯೋಜನೆಯ ಮತ್ತು ಕಾರ್ಯಕ್ರಮಗಳನ್ನು ತಂದಿದೆ. ಅವುಗಳಲ್ಲಿ ಕೆಲವು ಈ ರೀತಿ (ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ದೇವದಾಸಿ, ಪುನರ್ವಸತಿ ಯೋಜನೆ ಬೆಂಗಳೂರು)ಯಲ್ಲಿವೆ.

೧. ಮಹಿಳೆಯರು ಆದಾಯ, ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿ ಸ್ವನಿಯಂ ಉದ್ಯೋಗಿಗಳಾಗಳು ಬ್ಯಾಂಕನಿರತ ಸಾಲ ಯೋಜನೆ.

೨. ನಿಗಮವು ಗುರುತಿಸಿರುವ ೧೦೧ ಚಟುವಟಿಕೆಗಳ ಪೈಕಿ ಯಾವುದೇ ಆಯ್ಕೆ ಮಾಡಿದ ಒಂದು ಚಟುವಟಿಕೆ ಅಥವಾ ಇನ್ನಾವುದೇ ಲಾಭದಾಯಕ ಚಟುವಟಿಕೆಗಳ ಸಾಲ ಮತ್ತು ಸಹಾಯಧನ ನೀಡಲಾಗುವುದು.

೩. ಗರಿಷ್ಠ ಯೋಜನಾ ಅಂದಾಜು ವೆಚ್ಚ ರೂ. ೧೦.೦೦ ಲಕ್ಷ.

೪. ಬ್ಯಾಂಕ್‌ಗಳು ಮತ್ತು ಇತರೇ ಆರ್ಥಿಕ ಸಂಸ್ಥೆಗಳು ಸಾಲವನ್ನು ಒದಗಿಸುವವು.

೫. ಕುಟುಂಬದ ವಾರ್ಷಿಕ ಆದಾಯ ೪೦ ಸಾವಿರ ಮೀರದ ೧೮ ರಿಂದ ೪೫ ವರ್ಷದೊಳಗಿನ ಮಹಿಳೆಯರು ಈ ಯೋಜನೆಯ ಸೌಲಭ್ಯಕ್ಕೆ ಅರ್ಹರು.

೬. ವಿಶೇಷ ವರ್ಗದ ಮಹಿಳೆಯರಿಗೆ (ಪ.ಜಾತಿ/ಪ.ವರ್ಗ ವಿಧವೆಯರು ಮತ್ತು ಅಂಗವಿಕಲೆಯರು) ಯೋಜನಾ ವೆಚ್ಚದ ಶೇ. ೩೦ರಷ್ಟು (ಗರಿಷ್ಠ ೧,೦೦,೦೦೦) ಹಾಗೂ ಇತರೆ ಮಹಿಳೆಯರಿಗೆ ಯೋಜನಾ ವೆಚ್ಚದ ಶೇ. ೨೦ ರಷ್ಟು (ಗರಿಷ್ಠ ೭೫೦೦ ರೂ.) ಸಹಾಯಧನವನ್ನು ನಿಗಮವು ಆಯಾಯ ಜಿಲ್ಲೆಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮವು ಉಪನಿರ್ದೇಶಕರ ಮೂಲಕ ನೀಡುವುದು.)

೭. ವಿಧವೆ, ಸಂಕಷ್ಟಕ್ಕೊಳಗಾದ ಮಹಿಳೆ ಮತ್ತು ಅಂಗವಿಕಲ ಮಹಿಳೆಯರಿಗೆ ಆದಾಯದ ಮಿತಿ ಇರುವುದಿಲ್ಲ.

೮. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕರ/ಉಪನಿರ್ದೇಶಕರ ಮೂಲಕ ಈ ಯೋಜನೆ ಅನುಷ್ಠಾನ.

೯. ಸಾಲ ಮಂಜೂರಾದ ನಂತರ ಸಾಲ ಬಿಡುಗಡೆಯ ಮೊದಲು ಈ ಯೋಜನೆಯ ಫಲಾನುಭವಿಗಳಿಗೆ ೩ ದಿನಗಳ ಉದ್ಯಮಶೀಲತೆ ತರಬೇತಿ ಕಡ್ಡಾಯವಾಗಿ ನೀಡಲಾಗುವುದು.

೧೦. ಮಹಿಳೆಯರು ಆದಾಯ ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಖಾಸಗಿ ಆರ್ಥಿಕವಾಗಿ ಸಂಸ್ಥೆಗಳಿಂದ ಪಡೆಯುವ ಸಾಲಕ್ಕೆ ಹೆಚ್ಚಿನ ಬಡ್ಡಿ ತರುವುದನ್ನು ತಪ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.

೧೧. ೨೦೦೬-೦೭ನೇ ಸಾಲಿನಲ್ಲಿ ೫೦.೦೨ ಲಕ್ಷ ರೂ. ಆರ್ಥಿಕ ಗುರಿ ಮತ್ತು ೬೬೦ ಭೌತಿಕ ಗುರಿ ನಿಗದಿಪಡಿಸಲಾಗಿದೆ.

೧೨. ಯೋಜನೆಯಡಿ ಮಹಿಳಾ ಸ್ವ-ಉದ್ಯೋಗ ಸಲಹಾ ಕೇಂದ್ರ, ಲಿಂಗ-ತಾರತಮ್ಯ ಕಾರ್ಯಾಗಾರ ಬೀದಿ ನಾಟಕ, ಯೋಜನೆಗಳ ಬಗ್ಗೆ ಪ್ರಚಾರ, ಮಹಿಳಾ ಅಭಿವೃದ್ಧಿಗೆ ಸಂಬಂಧಿಸಿದ ಪುಸ್ತಕಗಳ ಖರೀದಿ ಮತ್ತು ಡಾಟ್ ಬ್ಯಾಂಕ್ ನಿರ್ವಹಣೆ ಕೈಗೊಳ್ಳಲಾಗುತ್ತದೆ.

೧೩. ನಿಗಮದ ಕೇಂದ್ರ ಕಚೇರಿಯಲ್ಲಿ ಬೆಳಗಾವಿ, ಮಂಗಳೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಬಳ್ಳಾರಿ, ಬೆಂಗಳೂರು, ಗುಲ್ಬರ್ಗಾ, ಮೈಸೂರು, ತುಮಕೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸ್ವಯಂ ಸಂಸ್ಥೆಗಳ ಮೂಲಕ ಮಹಿಳಾ ಸ್ವ-ಉದ್ಯೋಗ ಸಲಹಾ ಕೇಂದ್ರಗಳ ನಿರ್ವಹಣೆ.

೧೪. ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳಿಗೆ, ಕಾಲೇಜು ವಿದ್ಯಾರ್ಥಿನಿಯರಿಗೆ ಮತ್ತು ಜನಪ್ರತಿನಿಧಿಗಳಿಗೆ ಲಿಂಗ ತಾರತಮ್ಯದ ಬಗ್ಗೆ ಕಾರ್ಯಾಗಾರ ಏರ್ಪಡಿಸುವುದು.

೧೫. ಲಿಂಗ ತಾರತಮ್ಯ ಮತ್ತು ಸ್ತ್ರೀ-ಸಮಾನತೆ ಬಗ್ಗೆ ಅರಿವು ಮೂಡಿಸುವುದು.

೧೬. ಅರ್ಹ ಮಹಿಳೆಯರಿಗೆ ಆರ್ಥಿಕ ಪ್ರಗತಿಯನ್ನು ಸಾಧಿಸುವಂತಹ ಹಾಗೂ ಸಾಮಾಜಿಕ ಬದಲಾವಣೆಗೆ ಸೂಕ್ತ ವಾತಾವರಣವನ್ನು ಮೂಡಿಸುವಂತಹ ಪ್ರಕ್ರಿಯೆಯನ್ನು ಬಲಪಡಿಸುವುದು.

೧೭. ಈ ಮಹಿಳೆಯಲ್ಲಿ ಸ್ವಾವಲಂಬನೆ, ಸಂಪನ್ಮೂಲಗಳ ಮೇಲೆ ಹತೋಟಿ ಹಾಗೂ ಸಾಮೀಪ್ಯವನ್ನು ಸಾಧಿಸುವುದರ ಜೊತೆಗೆ ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದು.

೧೮. ಪ್ರತಿ ಸ್ವ-ಸಹಾಯ ಗುಂಪಿಗೆ ೫೦೦೦ ರೂ.ರಂತೆ ಸುತ್ತು ನಿಧಿಯನ್ನು ಈ ೪,೦೦೦ ಗುಂಪುಗಳಿಗೆ ನೀಡಲಾಗಿದೆ.

೧೯. ಅವರಲ್ಲಿ ಸ್ವಾವಲಂಬನೆ ಮೂಡಿಸಿ ಸಂಪನ್ಮೂಲಗಳ ಮೇಲೆ ಹತೋಟಿ ಸಣ್ಣ ವ್ಯಾಪಾರದಲ್ಲಿ ಮಹಿಳೆಯರನ್ನು ತೊಡಗಿಸುವುದರ ಮೂಲಕ ಅವರ ಆದಾಯವನ್ನು ಹೆಚ್ಚಿಸಿ ಅವರಲ್ಲಿ ಆರ್ಥಿಕ ಸ್ಥಿರತೆಯನ್ನು ಮೂಡಿಸುವುದು.

೨೦. ನಗರ ಸ್ತ್ರೀ-ಶಕ್ತಿ ಯೋಜನೆಯ ಅನುಷ್ಠಾನಕ್ಕಾಗಿ ೨೦೦೬-೦೭ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ೧೯೪.೭೮ ಲಕ್ಷ ರೂ.ಗಳ ಆಯುವ್ಯಯವನ್ನು ಒದಗಿಸಿದೆ.

ಕರ್ನಾಟಕ ದೇವದಾಸಿ (ಸಮರ್ಪಣೆ ನಿಷೇಧ ಕಾಯ್ದೆ ಇತ್ತೀಚಿನ ವರ್ಷಗಳಲ್ಲಿ ಇಂದು ಎಲ್ಲಾ ಜಿಲ್ಲೆಗಳಲ್ಲಿ ದೇವದಾಸಿ ಪದ್ಧತಿಯನ್ನು ತಡೆಗಟ್ಟಿ ದೇವದಾಸಿಯರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿ ನಿಗಮವು ವಿಶೇಷ ಯೋಜನೆ ರೂಪಿಸಲು ಆದೇಶ ನೀಡಿತು. ಇದೇ ಅವಧಿಯಲ್ಲಿ ಏಪ್ರಿಲ್. ೧೯೮೫ರಲ್ಲಿ ವಿಮೋಚನಾ ದೇವದಾದಿ ಪುನರ್ವಸತಿ ಸಂಘ ಎಂಬ ನಾಮಾಂಕಿತದಲ್ಲಿ ಸಂಸ್ಥೆಯು ದೇವದಾಸಿ ಪದ್ಧತಿ ಕುರಿತು ವಿಚಾರವಾಗಿ ಸಂಕಿರಣ ಹಮ್ಮಿಕೊಳ್ಳುವ ಮೂಲಕ ಜನಜಾಗೃತಿಗೆ ಮುಂದಾಯಿತು. ಈ ಸಂಸ್ಥೆಯ ಸಂಸ್ಥಾಪನೆಗೆ ಪ್ರೇರಕ ಡಾ. ಜೋಗನ್ ಶಂಕರ ನ್ಯಾಯಾವಾದಿ ಶ್ರೀ ಬಿ.ಎಲ್. ಪಾಟೀಲ್ ಅವರೇ ಸಂಸ್ಥಾಪಕ ಅಧ್ಯಕ್ಷರು. “ಇಂದು ಅಥಣಿ ತಾಲೂಕಿನಲ್ಲಿ ಶೇ. ೯೫ರಷ್ಟು ದೇವದಾಸಿ ಪದ್ಧತಿಯ ನಿರ್ಮೂಲನೆಯನ್ನು ಮಾಡಲಾಗಿದೆ. ಮೂಲ ಭೂತವಾದಿಗಳ ಮತ್ತು ಪಟ್ಟಭದ್ರ ಹಿತಾಸಕ್ತಿಗೂ ಇನ್ನೂ ಕ್ರಿಯಾಶೀಲರಾಗಿದ್ದು, ಅಲ್ಲಲ್ಲಿ ಕೆಲವೊಂದು ದೇವದಾಸಿಯ ಅರ್ಪಣೆಯ ಪ್ರಕರಣಗಳು ಪತ್ರಿಕೆಗಳಲ್ಲಿ ವರದಿಯಾಗುತ್ತಿದೆ. ಇದೇ ಅಥಣಿ ತಾಲೂಕಿನ ದೇವದಾಸಿಯರಲ್ಲಿ ಆಯ್ದ ೭೫೦ ಕುಟುಂಬಗಳಿಂದ ಒಂದು ಪ್ರಕರಣ ವರದಿ ಆಗದಿರುವುದು, ಅಲ್ಲದೇ ಸರಿ ಸುಮಾರು ೨೫೦ಕ್ಕೂ ಹೆಚ್ಚಿನ ಸಂಖ್ಯೆಯ ಹೆಣ್ಣುಮಕ್ಕಳಿಗೆ ಮದುವೆ ಮಾಡಿಕೊಟ್ಟು ಗೌರವಯುತ ಬಾಳಿಗೆ ಅಣಿಗೊಳಿಸಿದ್ದು, ಹಾಗೂ ವಿಮೋಚನಾ ದೇವದಾಸಿ ಪುನರ್ವಸತಿ ಸಂಘದ ಹೆಸರಿನಲ್ಲಿಯ ದೇವದಾಸಿ ಪುನರ್ವಸತಿ ಎಂಬ ಶಬ್ಧಗಳನ್ನು ದಾಖಲೆಗಳಿಂದ ತೆಗೆಸಲು ಸ್ವತಃ ದೇವದಾಸಿ ಮಹಿಳೆಯರಿಗೆ ಪ್ರೇರಣೆ ನೀಡಿತು. (ಪ್ರ. ೧೩೫ ಅಥಣಿ ತಾಲೂಕಿ ದರ್ಶನ ದೇವದಾಸಿ ವಿ.ಎಸ್. ಮಾನವಾಡೆ) ನಮ್ಮನ್ನು ದೇವದಾಸಿಯರೆಂದು ಕರೆಯಬೇಡಿರೆಂದು ಆಗ್ರಹಿಸಿದ್ದು ಬದುಕಿನ ಆರ್ಥಿಕ ಮೂಲವನ್ನು ಪರಿವರ್ತಿಸಿಕೊಂಡು ಗೌರವಯುತ ಸ್ವಯಂ ಉದ್ಯೋಗ, ವಸತಿ ಸೌಕರ್ಯ, ಸಾಕ್ಷರತೆಯಲ್ಲಿ ಗಮನಾರ್ಹ ಹೆಚ್ಚಳವನ್ನು ಸಾಧಿಸಿದ್ದು, ಇದಕ್ಕಾಗಿ ಅಥಣಿಯ ವಿಮೋಚನಾ ಸಂಸ್ಥೆಯ ವಿಮೋಚನಾ ವಸತಿ ಶಾಲೆ (ಮಲಾಬಾದ ಗ್ರಾಮದಲ್ಲಿ) ಪ್ರೌಢ ಶಾಲೆ, ಪದವಿ ಪೂರ್ವ ಮಹಾವಿದ್ಯಾಲಯ ಅಥಣಿಯ ವಿಮೋಚನಾ ನರ್ಸಿಂಗ್ ಶಾಲೆ, ವಿಮೋಚನಾ ಸ್ವಯಂ ಉದ್ಯೋಗ ತರಬೇತಿ ಕೇಂದ್ರ, ವಿಮೋಚನಾ ವಿವಿಧೋದ್ಧಶಗಳ ಸಹಕಾರಿ ಸಂಘ, ವಿವಿಧ ಗ್ರಾಮಗಳಲ್ಲಿ ಕೃಷಿ ಅಭಿವೃದ್ಧಿ, ವೈದ್ಯಕೀಯ ಸೌಲಭ್ಯ, ಹೈನುಗಾರಿಕೆ ಕಾರ್ಯಕ್ರಮಗಳು, ಅಂತಾರಾಷ್ಟ್ರೀಯ ಮಕ್ಕಳ ಅಭಿವೃದ್ಧಿ ಸಂಸ್ಥೆ-ಸಿ.ಸಿ.ಎಫ್. ಅಮೆರಿಕಾ, ಜರ್ಮಿನಿಯ ಕ್ಯಾಸೆಲ್ ಸಂಸ್ಥೆ ಅಲ್ಲದೇ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ವೈಯಕ್ತಿಕ ದಾನಿಗಳು, ಸ್ವಲ್ಪ ಪ್ರಮಾಣದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಾಯಕ ಸಹಕಾರ ಹಾಗೂ ಸಹಯೋಗದಿಂದ ಹಮ್ಮಿಕೊಳ್ಳುವುದರ ಮೂಲಕ ಫಲಾನುಭವಿಗಳಿಗೆ ಯಶಸ್ವಿಯಾಗಿ ತಲುಪಿಸುವ ಕಾರ್ಯ ಮಾಡಲಾಯಿತು. ಈ ಎಲ್ಲಾ ಕಾರ್ಯಸಾಧನೆಗಾಗಿ ಸಂಸ್ಥೆಗೆ ಹಲವು ಪ್ರಶಸ್ತಿ ಬಂದಿವೆ.

೧. ೧೯೯೦ ಕರ್ನಾಟಕ ಸರ್ಕಾರದ ಮಹಿಳಾ ಅಭಿವೃದ್ಧಿ ಇಲಾಖೆಯ ರಾಜ್ಯ ಪ್ರಶಸ್ತಿ.
೨. ೧೯೯೭ ಕೇಂದ್ರ ಸರ್ಕಾರದ ರಾಷ್ಟ್ರ ಪ್ರಶಸ್ತಿ.
೩. ೧೯೯೮ ಮಂಗಳೂರಿನ ಸಂದೇಶ ಪ್ರತಿಷ್ಠಾನದ ಪ್ರಶಸ್ತಿ.
೪. ೨೦೦೧ ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿ.

೨೦೦೭-೦೮ರಲ್ಲಿ ಕರ್ನಾಟಕ ಸರ್ಕಾರ ೧.೫೦ ಕೋಟಿ ವಿಶೇಷ ಅನುದಾನ ಘೋಷಣೆಯಾಗಿದೆ.

ಅನೇಕ ಶತಮಾನಗಳಿಂದ ಅನಕ್ಷರತೆ ಮೂಢನಂಬಿಕೆ, ಪರಸ್ಪರ ಶೋಷಣೆ, ದೌರ್ಜನ್ಯಗಳಿಂದ ಬಳಲಿದ ಸಮಾಜವು ೨೧ನೇ ಶತಮಾನದಲ್ಲಿಯಾದರೂ ಶಾಂತಿ, ನೆಮ್ಮದಿ ಪರಸ್ಪರ ಸೌಹಾರ್ದತೆಯಿಂದ ಬಾಳುವಂತಾಗಲಿ ಎಂದು ಪ್ರಯತ್ನಿಸೋಣ. ಹಲವು ಮೂಢನಂಬಿಕೆ ಸ್ವಾರ್ಥದಿಂದ ಮಹಿಳೆಯರು ಮತ್ತು ಮಕ್ಕಳ ಮೇಲಾಗುತ್ತಿರುವ ಶೋಷಣೆ ದೌರ್ಜನ್ಯಗಳನ್ನು ತಡೆಗಟ್ಟಲು ಸಾಮಾಜಿಕ ಜಾಗೃತಿಯ ತರೋಣ, ದೇವದಾಸಿ ಪದ್ಧತಿಯಂತಹ ಅಂಧ ಆಚರಣೆಗಳು ಜನ ಜೀವನದ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕಾದದ್ದು ಅನಿವಾರ್ಯವಾಗಿದೆ.

ಬುಡಕಟ್ಟು ಕಲ್ಯಾಣ ಕಾರ್ಯಕ್ರಮಗಳು

ಬುಡಕಟ್ಟು ಸಂಸ್ಕೃತಿ ಬಹಳ ಶ್ರೀಮಂತವಾಗಿದ್ದರೂ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗಳಲ್ಲಿ ಬುಡಕಟ್ಟು ಅತ್ಯಂತ ಹಿಂದುಳಿದಿವೆ. ಭಾರತದಲ್ಲಿ ಬುಡಕಟ್ಟು ಜನರು ಎದುರಿಸುತ್ತಿರುವ ಮುಖ್ಯ ಸಮಸ್ಯೆಗಳೆಂದರೆ ಭೂಮಿ, ಬಡತನ, ಋಣಭಾರ, ಅನಕ್ಷರತೆ, ಆರೋಗ್ಯ, ನಿರುದ್ಯೋಗ, ವಸತಿ, ಸಂಪರ್ಕ, ಶೋಷಣೆ ಅಮಾನವೀಯ ಪದ್ದತಿಗಳು, ಸೇರುವಿಕೆಯ ಸಮಸ್ಯೆ ಮೊದಲಾದವು ಇವರ ಬಡತನಕ್ಕೆ ಅವರ ಅನಕ್ಷರತೆಯ ಮುಖ್ಯಕಾರಣದಿಂದ ಭಾರತದಲ್ಲಿ %೮೫ ಕ್ಕಿಂತಲೂ ಹೆಚ್ಚು ಬುಡಕಟ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. (ಡಾ.ಎಂ. ಗುರುಲಿಂಗಯ್ಯಾ ಬುಡಕಟ್ಟು ಅಧ್ಯಯನ ಸಂ.೩ ಸಂಚಿಕೆ ೧.ಕ.ವಿ.ವಿ. ಹಂಪಿ) ಕರ್ನಾಟಕ ಮಟ್ಟಿಗೆ ಹೇಳುವುದಾದರೆ ಸಮಾಜಕಲ್ಯಾಣ ಇಲಾಖೆಯು ನಡೆಸಿದ ಸಾಮಾಜಿಕ, ಆರ್ಥಿಕ ಸಮೀಕ್ಷೆಯ ಪ್ರಕಾರ %೯೧ ಗ್ರಾಮೀಣ ಬುಡಕಟ್ಟುಗಳ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿವೆ. ಭಾರತದ ಬುಡಕಟ್ಟು ಜನರ ಅನಕ್ಷರತೆಯ ಪ್ರಮಾಣ ಅಧಿಕವಾಗಿದೆ. ೨೦೦೧ ರ ಜನಗಣತಿ ಪ್ರಕಾರ ಬುಡಕಟ್ಟು ಸಾಕ್ಷರತೆ ೨೯.೩೦ರಟ್ಟಿದ್ದು ಒಟ್ಟಾರೆ ದೇಶದ ಸಾಕ್ಷರತೆಯ ಪ್ರಮಾಣ ೬೭.೧ ರಷ್ಟಿದೆ. ಇತ್ತೀಚಿಗೆ  ಬುಡಕಟ್ಟು ಜನರಲ್ಲಿ ಅಲ್ಲೊಬ್ಬ ಇಲ್ಲೊಬ್ಬ ಶಾಲೆಗೆ ಹೋಗುತ್ತಿದ್ದಾರೆ. ಒಂದು ವೇಳೆ ಹೋದರು ಮಧ್ಯದಲ್ಲಿಯೇ ಶಾಲೆ ಬಿಡುವವರ ಸಂಖ್ಯೆ ಹೆಚ್ಚು. ಉನ್ನತ ಶಿಕ್ಷಣ ಅವರಿಗೆ ಕನಸಿನ ಮಾತಾಗಿದೆ. ಆದರೂ ಬುಡಕಟ್ಟು ಜನರಿಗೆ ಶೈಕ್ಷಣಿಕ ಸೌಲಭ್ಯಗಳು ಬೆಳಗಾವಿ ಜಿಲ್ಲೆಯ ಸಮಾಜಕಲ್ಯಾಣ ಇಲಾಖೆಯವರು ಈ ಬುಡಕಟ್ಟು ಜನರಿಗೆ ಮೂಲಭೂತವಾಗಿ ನೀಡಬೇಕಾದ ಸೌಲಭ್ಯ ಹಾಗೂ ರಕ್ಷಣೆ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ದಿ ಶೈಕ್ಷಣಿಕ ಸೌಲಭ್ಯಗಳನ್ನು ವ್ಯವಸ್ಥಿತ  ರೀತಿಯಲ್ಲಿ ನೀಡಲು ಸಂವಿಧಾನದ ಅನುಚ್ಛೇಧ ೩೪೧ ಮತ್ತು ೩೪೨ ರಲ್ಲಿ ಅಳವಡಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ವರ್ಗದ ಜನರ ಸರ್ವತೋಮುಖ ಅಭಿವೃದ್ದಿ ರಕ್ಷಣೆ ಮತ್ತು ತೀವ್ರ ರೀತಿಯ ಯೋಜನೆಗಳ ಅನುಷ್ಠಾನ ಸರಿಮಾನ ಮೀಸಲಾತಿ ಸರಕಾರಿ ನೀತಿ ನಿಯಮದಲ್ಲಿ ಭಾಗವಹಿಸಲು ಸಂವಿಧಾನದ ಸ್ಪಷ್ಟಗುರಿ ಮತ್ತು ನಿರ್ದೇಶನವನ್ನು ಹೊಂದಿರುತ್ತದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬುಡಕಟ್ಟು ಜನರ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ದಿಯಲ್ಲಿ ಹೆಚ್ಚಿನ ಗಮನ ಹರಿಸಿ ಸಾಮಾಜಿಕ ನ್ಯಾಯ ಮತ್ತು ಇತರೆ ದೌರ್ಜನ್ಯಗಳಿಂದ ಪೂರ್ಣ ಮತ್ತು ನಿರ್ದಿಷ್ಟ ರಕ್ಷಣೆ ನೀಡಲು ಸಮಾಜಕಲ್ಯಾಣ ಇಲಾಖೆಯಿಂದ ಹಲವಾರು ಯೋಜನೆಗಳನ್ನು ಅನುಷ್ಠಾನ ಗೊಳಿಸಲಾಗುತ್ತಿದೆ.

ಅಥಣಿ ತಾಲೂಕಿನಲ್ಲಿ ೨೦೦೧ರ ಜನಗಣತಿಯ ಪ್ರಕಾರ ೬೦೦೮ ಗಂಡು ೫೬೫೨ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ೨೦೦೮-೦೯ನೇ ಸಾಲಿನಲ್ಲಿ ಕೇಂದ್ರದಿಂದ ೧೩.೭೫ ಲಕ್ಷ ರೂಪಾಯಿ ಹಾಗೂ ರಾಜ್ಯದಿಂದ ೬.೫೩ ಲಕ್ಷ ರೂಪಾಯಿಗಳ ಅನುದಾನವನ್ನು ಪರಿಶಿಷ್ಟ ವರ್ಗದ ಜನರಿಗೆ ವಿತರಿಸಲಾಗಿದೆ. ಬುಡಕಟ್ಟು ಜನರ ಕಲ್ಯಾಣ ಸಾಧಿಸಲು ಭಾರತದ ಸಂವಿಧಾನ ಕಲಂ೨೪೨ (೧) ಪ್ರಕಾರ ರಾಷ್ಟ್ರಪತಿಯವರು ಅನುಸೂಚಿತ ಬುಡಕಟ್ಟುಗಳ ಪಟ್ಟಿಗೆ ಸೇರಿದ ಸಮುದಾಯಗಳು ವಿಶೇಷ ಸೌಲಭ್ಯಗಳನ್ನು ಪಡೆಯಬಹುದು ಆಯಾ ರಾಜ್ಯಗಳು ಸಹ ಅನುಸೂಚಿತ ಬುಡಕಟ್ಟುಗಳಿಗೆ ಸಂವಿಧಾನ ಬದ್ದವಾದ ಸೌಲಭ್ಯಗಳನ್ನು ಮತ್ತು ಮೀಸಲಾತಿಯ ಹಕ್ಕುಗಳನ್ನು ರಕ್ಷಿಸುವುದು ಎಂದು ಹೇಳುತ್ತದೆ. ಕಲಂ ೨೪೪ರ ಪ್ರಕಾರ ರಾಷ್ಟ್ರಪತಿಯವರು ಹೆಚ್ಚಿನ ಸಂಖ್ಯೆಯಲ್ಲಿ  ಬುಡಕಟ್ಟು ಜನರಿರುವ ಪ್ರದೇಶವನ್ನು ಅನುಸೂಚಿತ ಪ್ರದೇಶಗಳೆಂದು ಘೋಷಿಸಬಹುದಾಗಿದೆ. ಅನುಚ್ಛೇದ ೩೯೯ರ ಪ್ರಕಾರ ಕೇಂದ್ರ ಸರ್ಕಾರ ನಿರ್ದೇಶನದಂತೆ ರಾಜ್ಯ ಸಕಾರಗಳು ರಾಜ್ಯದ ಅನುಸೂಚಿತ ಬುಡಕಟ್ಟುಗಳ ಕಲ್ಯಾಣಕ್ಕೆ ಅಗತ್ಯವಾದ ನಿರ್ದಿಷ್ಟ ಯೋಜನೆಗಳನ್ನು ಕಾರ್ಯಗತಗೊಳಿಸುವಂತೆ ತಿಳಿಸುತ್ತದೆ. ಸಂವಿಧಾನ ೨೭೫ನೇ ಅನುಚ್ಛೇದವು ಸಂವಿಧಾನದ ಸವಲತ್ತುಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರಗಳಿಗೆ ಸಹಾಯವನ್ನು ನೀಡುವ ಅವಕಾಶ ಮಾಡಿಕೊಟ್ಟಿದೆ. ಸಂವಿಧಾನದ ೩೩೦, ಮತ್ತು ೩೩೨ ಮತ್ತು ೩೩೪ರ ಕಲಂಗಳು ಅನುಸೂಚಿತ ಬುಡಕಟ್ಟುಗಳಿಗೆ ನಾಗರಿಕ ಸೇವೆಗಳಲ್ಲಿ ಮೀಸಲಾತಿ ಒದಗಿಸಿಕೊಡುವ ಅವಕಾಶವನ್ನು ಒದಗಿಸಿದೆ. ಸಂವಿಧಾನದ ೧೫.೧೬,ಮತ್ತು ೧೯ನೇ ಅನುಚ್ಛೇದಗಳು ಬುಡಕಟ್ಟುಗಳ ಹಿತಾಶಕ್ತಿಯನ್ನು ಮತ್ತು  ಜೀವನವನ್ನು ಕಾಪಾಡುವ   ಉದ್ದೇಶವನ್ನು ಹೊಂದಿದೆ. ಸಂವಿಧಾನದ ೫ನೇ ಪಟ್ಟಿ ಭಾಗ-ಬಿ ಪ್ಯಾರಾ ೪ರ ಭಾಗವು ಬುಡಕಟ್ಟು ಸಲಹಾ ಸಮಿತಿ ರಚಿಸಿಕೊಳ್ಳುವ ಅವಕಾಶ ಕಲ್ಪಿಸಿದೆ. ಇದು ರಾಜ್ಯದಲ್ಲಿ ಬುಡಕಟ್ಟುಗಳ ಕಲ್ಯಾಣ ಮತ್ತು ಉನ್ನತಿಗೆ ಸಂಬಂಧಿಸಿದಂತೆ ಸಲಹೆ ಕಂಡುವುದಾಗಿರುತ್ತವೆ. ಸಂವಿಧಾನದ ಅನುಚ್ಛೇದದ ೩೩೮ ರ ಪ್ರಕಾರ ಸಂವಿಧಾನದ ಮುಖ್ಯವಾದ ಸವಲತ್ತುಗಳಲ್ಲಿ ಒಂದಾದ ಬುಡಕಟ್ಟುಗಳ ಅಭಿವೃದ್ದಿಗೆ ಮತ್ತು ಹಿತಾಶಕ್ತಿಗಳಿಗೆ ಆಯುಕ್ತರನ್ನು ನೇಮಿಸುವುದು ಮುಖ್ಯವಾದುದಾಗಿದೆ. ಕೇಂದ್ರ ಸರಕಾರ ಈ ಅನುಚ್ಛೇದದ ಪ್ರಕಾರ ವಿಶೇಷ ಅಧಿಕಾರಗಳನ್ನು ನೇಮಿಸುತ್ತದೆ. ಈ ಅಧಿಕಾರಿಯು ಬುಡಕಟ್ಟುಗಳ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದರಲ್ಲಿ ಮುಖ್ಯ ಪಾತ್ರ ವಹಿಸಲಾಗುತ್ತದೆ.

೧೯೮೦ರಲ್ಲಿ ಬುಡಕಟ್ಟುಗಳ ಅಭಿವೃದ್ದಿಗೆ ಬುಡಕಟ್ಟು ರೂಪಿಸಲಾಯಿತು. ಈ ಯೋಜನೆಯ ಅಡಿಯಲ್ಲಿ ಶಿಕ್ಷಣ, ಆರೋಗ್ಯ ಮತ್ತು ವಸತಿ ಒದಗಿಸುವವರ ಜೊತೆಗೆ ಕುಟುಂಬ ಆಧಾರಿತ ವರಮಾನದ ಯೋಜನೆಗಳಾದ ಕೃಷಿ, ಹೈನುಗಾರಿಕೆಗೆ ಸಹಕಾರ, ಬುಡಕಟ್ಟುಗಳ ಕುಶಲಕಲೆಗೆ ಮತ್ತು ಇತರ ಪರಿಣತಿಗೆ ಹೆಚ್ಚು ಒತ್ತು ಕೊಡಲಾಯಿತು. ಇದರಿಂದ ಶೇ ೯೫ರಷ್ಟು ಬುಡಕಟ್ಟು ನೆಲೆಗಳು ಶಾಲೆಗಳು ಹೊಂದಲು ಸಾಧ್ಯವಾಯಿತು. ೧೯೯೬ ರಲ್ಲಿ ಕೇಂದ್ರ ಸರಕಾರ ೨ನೇ ಅನುಸೂಚಿತ ಪ್ರದೇಶ ಮತ್ತು ಬುಡಕಟ್ಟುಗಳ ಆಯೋಗ ರಚಿಸಿದ್ದ ಇದರಲ್ಲಿ ಬುಡಕಟ್ಟುಗಳ ಅಭಿವೃದ್ದಿಗೆ ಮತ್ತು ಕಲ್ಯಾಣಕ್ಕೆ ೪೦ ವರ್ಷಗಳ ಒಂದು ಯೋಜನೆಯನ್ನು ರೂಪಿಸಿದೆ. ಈ ಯೋಜನೆಯ ಮುಖ್ಯ ಉದ್ದೇಶ ಭೂಮಿ, ನೀರು ಮತ್ತು ಅರಣ್ಯಕ್ಕೆ ಸಂಬಂಧಿಸಿದಂತೆ ಬುಡಕಟ್ಟು ಜನರ ಹಕ್ಕುಗಳ ರಕ್ಷಣೆ, ಶಿಕ್ಷಣ ಆರೋಗ್ಯ ಉದ್ಯೋಗ ಮತ್ತು ಇತರೆ ಆರ್ಥಿಕ ಸ್ಥಿತಿಗತಿಗಳನ್ನು ಉತ್ತಮ ಪಡಿಸುವುದಾಗಿದೆ. ಸದ್ಯ ಕರ್ನಾಟಕದಲ್ಲಿ ಯಾವುದೇ ಬುಡಕಟ್ಟುಗಳು ಇರುವ ಪ್ರದೇಶವನ್ನು ಅನುಸೂಚಿತ ಪ್ರದೇಶಗಳೆಂದು ಘೋಷಿಸಲಾಗಿಲ್ಲ ಆದರೂ ಕೂಡ ದೇವದಾಸಿ ಪದ್ದತಿ ನಿರ್ಮೂಲನೆಯಾದಾಗ ಮಾತ್ರ ಸಮಾಜವನ್ನು ಹೊಂದಲು ಸಾಧ್ಯ ಮತ್ತು ಉತ್ತಮ ನಾಗರೀಕತೆಯನ್ನು ಪಡೆಯಲು ಸಾಧ್ಯ.

* * *