ಭಾರತದಲ್ಲಿ ಕಾಡನ್ನು ಅವಲಂಬಿಸಿ ಬದುಕು ಸಾಗಿಸುವ ಹಲವಾರು ಪಂಗಡಗಳಿವೆ. ಬ್ರಿಟೀಷರ ಆಗಮನದ ನಂತರ ಕಂಡು ಬಂದ ಕೆಲವು ಸುಧಾರಣೆಯ ಪರಿಣಾಮವಾಗಿ ಕಾಡಿನ ಮೇಲಿನ ಅವಲಂಬನೆಗಿಂತ ನಗರಜೀವನಕ್ಕೆ ಕೆಲವು ಪಂಗಡಗಳು ಹೊಂದಿಕೊಂಡರೂ ಈಗಲೂ ಕಾಡನ್ನು ಬಹಳವಾಗಿ ನಂಬಿಕೊಂಡ ಪಂಗಡಗಳಿವೆ. ಕಾಡನ್ನು ಸರ್ಕಾರಗಳು ಕಾನೂನಿನ ಪ್ರಕಾರ ಒಂದು ಸಂಪತ್ತು ಎಂದು ಪರಿಗಣಿಸಿ ಅದರ ಮೇಲಿನ ಅಧಿಕಾರವನ್ನು ಸ್ಪಷ್ಟಪಡಿಸಿದಾಗ ಕಾಡನ್ನು ಅವಲಂಬಿಸಿದ ಪಂಗಡಗಳಿಗೆ ಹೆಚ್ಚಿನ ತೊಂದರೆ ಉಂಟಾಗದಂತೆ. ಆ ಪಂಗಡಗಳ ಸುಧಾರಣೆಗೆ ಹೆಚ್ಚಿನ ಒತ್ತು ನೀಡಲಾಯಿತು. ಆದರೆ, ಸುಧಾರಣಾ ಕ್ರಮಗಳು ತಲುಪಬೇಕಾದವರಿಗೆ ತಲುಪಿ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆಯಾಗದೆ ಇನ್ನೂ ಹಲವಾರು ಪಂಗಡಗಳು ಕಾಡಿನ ಮೇಲೆ ಅವಲಂಬನೆ ಹಾಗೂ ಕಾನೂನಿನ ಕ್ರಮಗಳ ನಡುವೆ ಒದ್ದಾಡುತ್ತಲೇ ಬದುಕುತ್ತಿದ್ದಾರೆ. ಬ್ರಿಟೀಷ್ ಸರ್ಕಾರವು ೧೮೭೧ರಲ್ಲಿ ಜಾರಿಗೆ ತಂದ ಅಪರಾಧ ಕಾನೂನಿನ ಫಲವಾಗಿ ಹಲವಾರು ಪಂಗಡಗಳು ಅಪರಾಧ ಹಿನ್ನೆಲೆಯ ಪಂಗಡಗಳಾಗಿ ಪರಿಗಣಿಸಲ್ಪಟ್ಟವು. ಲಂಬಾಣಿ ಪಂಗಡವ್ನೂ ಈ ಪಟ್ಟಿಗೆ ಸೇರಿಸಲಾಗಿತ್ತು. (ಹಳಬರ್ ೧೯೮೬, ಸಣ್ಣರಾಮು ೧೯೯೯). ಲಂಬಾಣಿ ಜನಾಂಗದ ಇತಿಹಾಸದ ಬಗ್ಗೆ ನಡೆದ ಅಧ್ಯಯನಗಳು ಈ ಜನಾಂಗವು ಬಹಳ ಹಿಂದಿನಿಂದ ಕೆಲವು ಅಪರೂಪದ ವಸ್ತುಗಳನ್ನು ಹಾಗೂ ಕಾಡಿನ ಉತ್ಪನ್ನಗಳನ್ನು ಮಾರಾಟ ಮಾಡಿಕೊಂಡು ಜೀವಿಸುತ್ತಿತ್ತು ಎಂದು ತಿಳಿದು ಬಂದಿದೆ. ಈ ಜನಗಳಿಗೆ ಇರುವ ಬಂಜಾರಎಂಬ ಹೆಸರು ವಣಜಿಗ” ‘ವಣಜಾರ ಎಂಬ ವ್ಯಾಪಾರಿ ಎಂಬ ಅರ್ಥ ಬರುವ ಪದಗಳ ಬದಲಾವಣೆ ರೂಪವಾಗಿದೆ. ಲಂಬಾಣಿ ಎಂಬ ಹೆಸರು ಇವರು ಹೆಚ್ಚಾಗಿ ಮಾರುತ್ತಿದ್ದ ಉಪಿಗೆ ಲವಣ ಎಂಬ ಹೆಸರು ಇದ್ದ ಕಾರಣ ಬಂದಿದೆ ಎಂಬ ಅಭಿಪ್ರಾಯವೂ ಇದೆ. ಈ ಜನಾಂಗದ ಜನರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಗುಂಪಾಗಿ ಕುಟುಂಬ ಸಮೇತ ಸಂಚರಿಸುವಾಗ ತಮ್ಮ ರಕ್ಷಣೆಗಾಗಿ ಆಯುಧಗಳನ್ನು ಹೊಂದಿರುತ್ತಿದ್ದರು. ಈ ಆಯುಧಗಳನ್ನು ಬಹಿರಂಗವಾಗಿ ಪ್ರದರ್ಶಿಸುತ್ತಿದ್ದ ಕಾರಣ ಉಳಿದ ಜನರಲ್ಲಿ ಭೀತಿಯನ್ನು ಹುಟ್ಟಿಸುತ್ತಿದ್ದರು. ಹೀಗಾಗಿ ಹೋರಾಟದ ಸ್ವಭಾವದವರು ಎಂಬ ಅಭಿಪ್ರಾಯ ಮೂಡಿಸಿದ್ದರು. ಬಹುಶಃ ಇದು ಇವರನ್ನು ಅಪರಾಧಿ ಪಂಗಡವೆಂದು ಬ್ರಿಟೀಷರು ಪರಿಗಣಿಸಲು ಕಾರಣವಾಗಿರಬಹುದು.

ಈ ಜನಾಂಗದಲ್ಲಿ ಹೆಣ್ಣುಗಳು ಕ್ರೀಯಾಶೀಲಯಾಗಿ ಕುಟುಂಬದ ಆದಾಯಕ್ಕೆ ಸಹಕರಿಸುವಾಗ, ತಾವು ನೆಲೆನಿಂತ ಜಾಗದಿಂದ ಕಾಡು ಹಾಗೂ ಊರುಗಳಲ್ಲಿ ಪ್ರವೇಶ ಮಾಡಿ ವ್ಯಾಪಾರ ವ್ಯವಹಾರಗಳಲ್ಲಿ ಭಾಗವಹಿಸುವ ಸಂದರ್ಭಗಳು ಇರುತ್ತಿದ್ದವು. ಅಂತಹ ಸಂದರ್ಭಗಳಲ್ಲಿ ತಮ್ಮ ಪಂಗಡದ ಹೆಣ್ಣುಗಳನ್ನು ಸುಲಭವಾಗಿ ಗುರುತಿಸಿ ಹಾಗೂ ಗಮನಿಸಿದ ಆ ಹೆಣ್ಣುಗಳಿಗೆ ವಿಶಿಷ್ಟ ಒಡವೆ ಹಾಗೂ ವಸ್ತ್ರ ವಿನ್ಯಾಸ ನಿಗದಿಪಡಿಸಲಾಗಿತ್ತು. ಇಂತಹ ವಿಶಿಷ್ಟ ಅಲಂಕಾರ ವಸ್ತ್ರವಿನ್ಯಾಸ ಈ ಪಂಗಡದ ಹೆಣ್ಣುಗಳು ಇನ್ನಿತರ ನಾಗರೀಕರಲ್ಲಿ ಸುಲಭವಾಗಿ ಬೆರೆತು ಹೋಗದಂತೆ ಮಾಡಿ, ಈ ಹೆಣ್ಣುಗಳನ್ನು ಸುಲಭವಾಗಿ ಗುರುತಿಸುವಂತೆ ಸಂಪ್ರದಾಯವಿತ್ತು. ಬಹುಶಃ ಇಂಥಹ ಹಾಗೂ ಇನ್ನಿತರ ಕಾರಣಗಳಿಂದಾಗಿ ಈಗಲೂ ಈ ವಿಶಿಷ್ಟ ಅಲಂಕಾರ ಹಾಗೂ ವಸ್ತ್ರವಿನ್ಯಾಸ ಗಣನೀಯವಾಗಿ ಉಳಿದು ಬಂದಿದೆ. ಹಚ್ಚೆಗಳಿಂದ ಕೂಡಿದ ಮೈ, ಎದ್ದುಕಾಣುವಂತೆ ಬೆಳ್ಳಿ ಆಭರಣಗಳಿಂದ ಹಾಗೂ ಕೆಂಪು ಬಣ್ಣದ ನಡುವೆ ಹಲವು ವಿನ್ಯಾಸಗಳಿಂದ ಕೂಡಿದ ಬಟ್ಟೆಗಳಿಂದಾಗಿ ಲಂಬಾಣಿ ಹೆಣ್ಣುಗಳನ್ನು ಗುರುತಿಸುವುದು ಸುಲಭ.

ಲಂಬಾಣಿ ಜನಾಂಗದವರು ಊರಿನ ಹೊರಗೆ ನೆಲೆನಿಂತು ಊರಿನ ಒಳಗೆ ಬಂದು ಹೋಗಿ ವ್ಯವಹರಿಸುತ್ತಿದ್ದರು. ಇವರು ಬಂದು ಹೋಗದಂತೆ ಪ್ರತಿ ಬಂಧಗಳೇನೂ ಇರದಿದ್ದರೂ, ಊರುಗಳ ನಡುವೆ ಇವರು ತಮ್ಮ ವಾಸಸ್ಥಳಕ್ಕೆ ಅನುವು ಮಾಡಿಕೊಳ್ಳದೆ ಊರಿನಿಂದ ಸ್ವಲ್ಪ ದೂರದಲ್ಲೇ ನೆಲೆಸುತ್ತಿದ್ದರು. ಇವರು ನೆಲೆನಿಂತ ಸ್ಥಳಗಳನ್ನು ತಾಂಡಾಗಳೆಂದು ಗುರುತಿಸುತ್ತಾರೆ. ಅಲೆಮಾರಿ ಜೀವನವನ್ನು ನಿಲ್ಲಿಸಿ ಕ್ರಮೇಣ ಕೃಷಿಗೆ ತೊಡಗಿಸಿಕೊಂಡರೂ ಈ ಜನಗಳು ಒಟ್ಟಾಗಿ ವಾಸಮಾಡುವ ಜಾಗಗಳನ್ನು ತಾಂಡಗಳೆಂದು ಗುರುತಿಸುವುದು ಸಾಮಾನ್ಯವಾಗಿದೆ. ಕಾಡಿನ ಮೇಲೆ ಅವಲಂಬನೆ ಹಾಗೂ ನಾಗರೀಕರಿಗೆ ಕಾಡಿನ ಉತ್ಪನ್ನಗಳನ್ನು ತಲುಪಿಸುವ ಪ್ರವೃತ್ತಿ ಇನ್ನೂ ಬಿಡದ ಹಲವು ಜನರು ಈಗಲೂ ಅದನ್ನೇ ಮುಂದುವರೆಸಿಕೊಂಡು ಬರುತ್ತಿರುವುದನ್ನು ಕಾಣಬಹುದಾಗಿದೆ. ಯಾವುದೇ ಪಂಗಡವನ್ನು ಒಮ್ಮೇಲೆ ಸಂಪೂರ್ಣವಾಗಿ ಅದರ ಮೂಲ ಸ್ವರೂಪ ಬದಲಾಯಿಸಿ ಅದನ್ನು ಸುಧಾರಣೆ ಎನಿಸಿಕೊಂಡ ಸಮುದಾಯಕ್ಕೆ ಹಲವಾರು ಅಡೆತಡೆಗಳಿರುತ್ತವೆ. ಪಂಗಡದಲ್ಲಿ ಹೆಚ್ಚು ಹೆಚ್ಚು ವಿಶಿಷ್ಟ ಆಚರಣೆಗಳಿದ್ದಾಗ ಈ ಅಡೆತಡೆಗಳು ಬಹಳ, ಇನ್ನಿತರ ಕಾಡು ಅವಲಂಬಿತ ಪಂಗಡಗಳಿಗಿಂತ ಭಿನ್ನವಾಗಿ ಲಂಬಾಣಿ ಕಾಡು ಹಾಗೂ ನಾಡು ಎರಡರ ನಡುವೆ ಕೊಂಡಿಗಳಾಗಿದಲ್ಲದೆ, ವಾಸದ ಸ್ಥಳವನ್ನು ಸಹ ನಾಡಿನ ಹಾಗೂ ಕಾಡಿನ ಅಂಚಿನಲ್ಲಿ ಹೊಂದಲು ಆದ್ಯತೆ ನೀಡುತ್ತಿದ್ದರು. ನಾಗರೀಕರು ಇರುವ ಜಾಗಗಳಲ್ಲಿ ತಮ್ಮ ವ್ಯವಹಾರಕ್ಕೆ ಎಷ್ಟುಬೇಕೋ ಅಷ್ಟು ಮಾತ್ರ ವ್ಯವಹರಿಸಿ ಮತ್ತೆ ಮರಳಿ ತಮ್ಮ ವಾಸದ ಸ್ಥಳದಲ್ಲಿ ತಮ್ಮದೇ ಆದ ನೀತಿ ನಿಯಮಗಳಿಗೆ ಅನುಸಾರವಾಗಿ ಬದುಕುವುದನ್ನು ಪಾಲಿಸಿಕೊಂಡು ಬಂದ ಆ ಲಂಬಾಣಿಗಳಿಗೆ ತಮ್ಮ ಆಚಾರ ವಿಚಾರಗಳ ಮೇಲೆ ವಿಶ್ವಾಸ ಹೆಚ್ಚು. ಇದನ್ನು ಅವರುಗಳ ವಿಶಿಷ್ಟ ಭಾಷೆ, ಉಡುಗೆ ತೊಡುಗೆ, ಆಚಾರ ವಿಚಾರಗಳಲ್ಲಿ ಕಾಣಬಹುದಾಗಿದೆ. ಆರ್ಯ ಮೂಲದ ಕಾರಣ ಹಾಗೂ ಕಡ್ಡಾಯವಾಗಿ ಪಾಲಿಸಿಕೊಂಡು ಬಂದ ಸಂಪ್ರದಾಯಗಳ ಕಾರಣದಿಂದಾಗಿ ಬಹಳಷ್ಟು ಲಂಬಾಣಿ ಜನರ ಚರ್ಮದಲ್ಲಿ, ಬಣ್ಣದಲ್ಲಿ ಹೆಚ್ಚಿನ ವ್ಯತ್ಯಾಸಗಳಾಗಿಲ್ಲ, ಹೀಗಾಗಿ ಅವರನ್ನು ಅವರ ವಿಶಿಷ್ಟ ಬಾಹ್ಯ ಲಕ್ಷಣಗಳಿಂದಲೂ ಗುರುತಿಸಬಹುದಾಗಿದೆ. ಕಾಲಾಂತರದಲ್ಲಿ ಅನ್ಯ ಪಂಗಡದವರೊಂದಿಗೆ ಬೆರೆತವರನ್ನು ಪಂಗಡದಿಂದ ಹೊರಗೆ ಹಾಕಿದರೂ ಕ್ರಮೇಣ ಇವರು ಪಂಗಡದೊಂದಿಗೆ ಬೆರೆತು ಹೋಗಿರುವ ಕಾರಣ ಅಲ್ಲಲ್ಲಿ ಈ ಹೋರನೋಟಕ್ಕೆ ಕಾಣುವ ಲಕ್ಷಣಗಳಲ್ಲಿ ವ್ಯತ್ಯಾಸಗಳನ್ನು ಗುರುತಿಸಬಹುದಾಗಿದೆ.

ಕಾಡಿನ ಸಂಪತ್ತುಗಳ ವ್ಯವಹಾರ, ಅಪರೂಪದ ವಸ್ತುಗಳ ವ್ಯವಹಾರ, ನಾಗರೀಕ ಜಗತ್ತಿನೊಂದಿಗೆ ಹೆಣ್ಣು ಮಕ್ಕಳು ಮಾಡುತ್ತಿದ್ದರೆ ಗಂಡಗಳು ಅವರಿಗೆ ಎಷ್ಟು ನೆರವಾಗಬೇಕೋ ಅಷ್ಟು ನೆರವಾಗಿ ಬಹಳ ಕಾಲ ತಮ್ಮ ಕಾಲವನ್ನು ಬೇಟೆ ಹಾಗೂ ಮೋಜುಗಳಲ್ಲಿ ಕಳೆಯುವ ಇತಿಹಾಸದ ಈ ಜನಾಂಗದಲ್ಲಿದೆ. ಹೀಗಾಗಿ ಮದ್ಯ ತಯಾರಿಕೆ, ಹಾಡು ಕುಣಿತಗಳ ವಿಚಾರದಲ್ಲೂ ಈ ಜನಾಂಗ ಉಳಿದವರ ವಿಶಿಷ್ಟ ಗಮನ ಸೆಳೆದಿದೆ. ಕರ್ನಾಟಕ ರಾಜ್ಯದಲ್ಲಿ ಈ ಜನರನ್ನು ಲಂಬಾಣಿಗಳು ಸುಕಾಲಿಗಳೂ ಎಂದು ಗುರುತಿಸುತ್ತಾರೆ. ನಾಗರೀಕ ಜಗತ್ತು ವಿಸ್ತಾರವಾಗುತ್ತಾ ಬಂದಂತೆ ಹಲವಾರು ಜಾತಿ ಪಂಗಡಗಳು ತಮ್ಮ ತಮ್ಮ ಮೂಲ ಸ್ವರೂಪಗಳಲ್ಲಿ ಬದಲಾವಣೆ ಮಾಡಿಕೊಳ್ಳುವ ಒತ್ತಡಕ್ಕೆ ಸಿಲುಕಿದವು. ಅದೇ ಕಾಲಕ್ಕೆ ತಮ್ಮ ಅಸ್ತಿತ್ವ ಕಾಪಾಡಿಕೊಳ್ಳಲು ಏನು ಉಳಿಸಿಕೊಳ್ಳಬಹುದೋ ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದವು. ಇಂದು ಲಂಬಾಣಿ ಮಹಿಳೆಯರು ಹೊಲಗದ್ದೆಗಳಲ್ಲಿ ಕಟ್ಟಡದ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದನ್ನು ಕಾಣಬಹುದಾಗಿದೆ. ಆದರೆ, ತಮ್ಮ ಸಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಬಳಸುತ್ತಲೇ ಇಂತಹ ಕಡೆ ಕೆಲಸ ಮಾಡುತ್ತಿರುವುದನ್ನು ನೋಡಿದಾಗ ಪಂಗಡಗಳು ತಮ್ಮ ಅಸ್ತಿತ್ವ ಕಾಪಾಡಿಕೊಳ್ಳುವ ದಾರಿಗಳನ್ನು ಅಷ್ಟು ಸುಲಭವಾಗಿ ಬಿಡಲಾರವು ಎಂದು ತಿಳಿದುಬರುತ್ತದೆ. ಸಂಪ್ರದಾಯದ ವಿಚಾರದಲ್ಲಿ ಇಷ್ಟೊಂದು ಅಂಟಿಕೊಳ್ಳುವ ಸ್ವಭಾವ ಇರುವ ಲಂಬಾಣಿ ಹೆಣ್ಣು ಮಕ್ಕಳಲ್ಲಿ ಪರಂಪರಾಗತ ರೂಢಿ ಆಚಾರಣೆಗಳು ಎಷ್ಟರ ಮಟ್ಟಿಗೆ ಬೇರೂರಿರ ಬಹುದು ಎಂಬ ವಿಚಾರ ಸಹಜವಾಗಿ ಬರುತ್ತದೆ. ಕಾಡಿಗೆ ಹತ್ತಿರವಾಗಿ ಬದುಕುತ್ತಿದ್ದ ಇವರುಗಳಲ್ಲಿ ಸಣ್ಣ-ಪುಟ್ಟ ದೈಹಿಕ ತೊಂದರೆಗಳಿಗೆ ಪರಂಪರೆಯಿಂದ ಬಂದ ತೊಂದರೆಗಳಿಗೆ ಪರಂಪರೆಯಿಂದ ಬಂದ ಕೆಲವು ಆಚರಣೆಗಳು ಇದ್ದರೆ ಅವೂ ಸಹ ಇಂದಿಗೂ ಆಚರಣೆಯಲ್ಲಿರಬೇಕು ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ. ವಸ್ತ್ರವಿನ್ಯಾಸ ಉಡುಗೆ ತೊಡುಗೆಗಳಲ್ಲಿ ಇಷ್ಟೊಂದು ಸಂಪ್ರದಾಯಿಕವಾಗಿರುವ ಜನಾಂಗ ಆರೋಗ್ಯ ರಕ್ಷಣಾ ವಿಧಾನಗಳಲ್ಲಿಯೂ ಸಂಪ್ರದಾಯಿಕವಾಗಿರುವ ಸಾಧ್ಯತೆಗಳಿರುತ್ತವೆ.

ಯಾವುದೇ ಒಂದು ಜನಾಂಗದ ಇತಿಹಾಸದಲ್ಲಿ ಬದಲಾಣೆಯ ಸಂದರ್ಭಗಳೂ ಹಾಗೂ ಅದಕ್ಕೆ ಪ್ರತಿರೋಧಗಳು ಸಹಜವಾಗಿ ಬರುತ್ತವೆ. ಕೆಲವು ಕಾಲಘಟ್ಟಗಳಲ್ಲಿ ಮಾತ್ರ ಆ ಜನಾಂಗದ ಕೆಲವು ವಿಚಾರ ಅರಿಯುವ ಅವಕಾಶ ಲಭ್ಯವಾಗುತ್ತದೆ. ಆ ಲಭ್ಯ ಅವಕಾಶ ಬಿಟ್ಟು ಬಿಟ್ಟರೆ ಮುಂದೆ ಎಂದಿಗೂ ಅಂಥಹ ಅವಕಾಶ ಲಭ್ಯವಾಗದಿರುವ ಸಾಧ್ಯತೆಗಳಿರುತ್ತದೆ. ಆಧುನಿಕ ಜಗತ್ತಿನ ಬದಲಾವಣೆಯ ಸಾಧ್ಯತೆಗಳು ಹೆಚ್ಚುತ್ತಿರುವ ಕಾಲದಲ್ಲಿ ಲಂಬಾಣಿ ಮಹಿಳೆಯರಲ್ಲಿ ರೂಢಿಯಲ್ಲಿರುವ ಸಂಪ್ರದಾಯಿಕ ಆರೋಗ್ಯ ರಕ್ಷಣಾ ವಿಧಾನಗಳನ್ನು ಅವುಗಳು ಮರೆಯಾಗಿ ಬಿಡುವ ಮೊದಲು ಗಮನಿಸುವ ಅಗತ್ಯವಿದೆ. ಒಂದು ಜನಾಂಗ ತನ್ನ ಅಸ್ತಿತ್ವಕ್ಕೆ ಸಹಕರಿಸುವ ಯಾವುದನ್ನು ಉಳಿಸಿಕೊಳ್ಳುತ್ತದೆ. ಯಾವುದನ್ನು ಬಿಡುತ್ತದೆ ಎಂಬ ವಿಚಾರ ಅರಿಯುವುದು ಸಾಮಾಜಿಕ ಮಾನವಶಾಸ್ತ್ರದ ಪ್ರಮುಖ ಅಂಶವಾಗಿದೆ. ಈ ವಿಚಾರಗಳನ್ನು ಸಕಾಲದಲ್ಲಿ ಅರಿಯಲು ಪ್ರಯತ್ನಿಸುವುದೂ ಸಹ ಮುಖ್ಯ ವಿಚಾರವಾಗಿದೆ. ಒಂದು ಜನಾಂಗಕ್ಕೆ ಅದು ಯಾವುದನ್ನು ಉಳಿಸಿಕೊಂಡಿದೆ. ಯಾವುದನ್ನು ಬಿಟ್ಟಿದೆ ಎಂಬುದು ಮುಖ್ಯವಾಗದಿರಬಹುದು. ಆದರೆ ಇಂತಹ ವಿಚಾರಗಳ ಅಧ್ಯಯನದಿಂದ ಜನಾಂಗಗಳ ಬದಲಾವಣೆಯ ರೂಪುರೇಷಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕದಲ್ಲಿ ಲಂಬಾಣಿ ಮಹಿಳೆಯರಲ್ಲಿರುವ ಸಾಂಪ್ರದಾಯಿಕ ಆರೋಗ್ಯ ರಕ್ಷಣಾ ವಿಧಿ ವಿಧಾನಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಕರ್ನಾಟಕದಲ್ಲಿ ಲಂಬಾಣಿ ಜನಾಂಗದ ಬಗ್ಗೆ ಬಹಳ ಕಾಲದಿಂದ ಅರಿವು ಇರುವುದು ತಿಳಿದುಬರುತ್ತದೆ. ಭಾರತದಲ್ಲಿ ಬೇರೆ ಬೇರೆ ಭಾಗಗಳಿಂದ ಕರ್ನಾಟಕದ ಬೇರೆ ಬೇರೆ ಭಾಗಗಳಿಗೆ ಲಂಬಾಣಿಗಳು ಎಂದು ನೆಲೆಸಿದ್ದನ್ನು ಒಪ್ಪಲೇಬೇಕಾಗುತ್ತದೆ. ಹೀಗಾಗಿ ವಿಭಿನ್ನ ಹಿನ್ನೆಲೆಯ ಸಾಂಪ್ರದಾಯಿಕ ರೂಢಿಗಳನ್ನು ಗಮನಿಸುವ ಅವಕಾಶ ಕರ್ನಾಟಕದಲ್ಲಿ ಲಭ್ಯವಾಗುತ್ತದೆ. ಭಾರತದಲ್ಲಿ ಹಲವಾರು ಪಂಗಡಗಳ ಸಂಪ್ರದಾಯಿಕ ಔಷಧೀಯ ವಿಧಾನಗಳ ಬಗ್ಗೆ ಅಧ್ಯಯನಗಳು ಆಗಿದ್ದರೂ ಕರ್ನಾಟಕದಲ್ಲಿ ಲಂಬಾಣಿ ಜನಾಂಗದವರಲ್ಲಿರುವ ಔಷಧೀಯ ಆಚರಣೆ ರೂಢಿಗಳ ಬಗ್ಗೆ ವಿಶಿಷ್ಟ ಅಧ್ಯಯನಗಳು ಆಗಿಲ್ಲ. (ಸಣ್ಣರಾಮು ೧೯೯೯). ಅಲೆಮಾರಿ ಜನಾಂಗದ ಹೆಣ್ಣುಗಳಲ್ಲಿ ಆರೋಗ್ಯದ ಮಟ್ಟ ಉಳಿದ ಜನಾಂಗಗಳಿಗಿಂತ ಕಡಿಮೆ ಇರುವುದು ಕಂಡು ಬಂದಿದೆ. (ಬಸು ೧೯೯೩) ಅಲೆದಾಟ ನಿರಂತರ ಬದುಕಿಗಾಗಿ ಸಂಪನ್ಮೂಲ ಸಂಗ್ರಹಣೆ, ಇವುಗಳನ್ನು ಆಧುನಿಕ ಜಗತ್ತಿನ ಅಡೆತಡೆಗಳ ನಡುವೆ ನಿರ್ವಹಿಸುವಾಗ ಆರೋಗ್ಯದ ಮಟ್ಟ ಕುಸಿಯುವ ಸಾಧ್ಯತೆಗಳು ಹೆಚ್ಚಿರುತ್ತದೆ. ಪರಿಸರ ಮಾಲಿನ್ಯದ ತೊಂದರೆಗಳು ಅಲೆಮಾರಿ ಜನಾಂಗದವರನ್ನು ಬಿಡದೆ ಕಾಡುವ ಸಾಧ್ಯತೆಗಳಿವೆ. ಬಹುಶಃ ಇಂತಹ ಕಾರಣಗಳು ಹಾಗೂ ಆಧುನಿಕ ಜಗತ್ತಿನ ರೋಗ ರುಜಿನಗಳ ಬಗ್ಗೆ ಮುಂಜಾಗ್ರತೆ ಕ್ರಮ ಅನುಸರಿಸದೇ ಇರುವ ಕಾರಣಗಳಿಂದ ಅಲೆಮಾರಿ ಜನಾಂಗದ ಹೆಣ್ಣುಗಳಲ್ಲಿ ಆರೋಗ್ಯ ಮಟ್ಟ ಕುಸಿದಿರುವ ಸಾಧ್ಯತೆಗಳಿವೆ. ಆದರೆ, ಸಣ್ಣಪುಟ್ಟ ಕಾಯಿಲೆಗಳನ್ನು ತಮ್ಮ ಪರಂಪರೆಯಿಂದ ಬಂದ ವಿಧಿ ವಿಧಾನಗಳಿಂದ ನಿವಾರಿಸಿಕೊಳ್ಳುವ ಪದ್ಧತಿಗಳಂತೂ ಇನ್ನೂ ಉಳಿದಿರುವುದನ್ನು ಹಲವು ಪಂಗಡಗಳಲ್ಲಿ ಕಾಣಬಹುದಾಗಿದೆ.

ಸಾಮಾನ್ಯವಾಗಿ ಮಹಿಳೆಯರಲ್ಲಿ ಆರೋಗ್ಯದ ಸಮಸ್ಯೆಗಳು ಪುರುಷರಿಗಿಂತ ಹೆಚ್ಚು. ದೇಹದ ಚಟುವಟಿಕೆಗಳು ಪ್ರಕೃತಿಯಲ್ಲಿ ಮಗುವನ್ನು ಗರ್ಭದಲ್ಲಿ ಹೊತ್ತು ಹೆರಿಗೆ ನಂತರ ಹಾಲುಣಿಸುವ ಕ್ರಮಕ್ಕೆ ಅನುಗುಣವಾಗಿ ರೂಪಿತಗೊಂಡಿದೆ. ದೇಹದ ಚಟುವಟಿಕೆ ನಿಯಂತ್ರಿಸುವ ರಾಸಾಯನಿಕಗಳು ಹಲವಾರು ಕಾರಣಗಳಿಂದ ಏರುಪೇರು ಅನುಭವಿಸುತ್ತಲೇ ಇರುತ್ತದೆ. ಮಹಿಳೆ ಇಷ್ಟಪಡಲಿ, ಪಡದೇ ಇರಲಿ ಕೆಲವು ಚಟುವಟಿಕೆಗಳು ಅನಿಯಂತ್ರಿತವಾಗಿ ನಡೆಯುತ್ತಲೇ ಇರುತ್ತವೆ. ಹೀಗಾಗಿ ಮಹಿಳೆಯರಲ್ಲಿ ಪರಂಪರಾಗತ ಆರೋಗ್ಯ ರಕ್ಷಣಾ ವಿಧಾನಗಳ ಇರುವಿಕೆ ಹಾಗೂ ರೂಢಿ ನಂಬಿಕೆಗಳ ಆಚರಣೆಗಳ ಇರುವಿಕೆ ಇರುತ್ತದೆ. ವೈಜ್ಞಾನಿಕ ತಿಳುವಳಿಕೆ ಅಭಾವವಿರುವ ಅಲೆಮಾರಿ ಪಂಗಡಗಳು ಬುಡಕಟ್ಟುಗಳಲ್ಲಿ ಹೆಣ್ಣುಮಕ್ಕಳಿಗೆ ಹಿರಿಯ ಹೆಣ್ಣುಗಳಿಂದ ಸೂಚಿತವಾಗುವ ವಿಧಿ ವಿಧಾನಗಳೇ ತಿಳುವಳಿಕೆಯ ಮೂಲಗಳಾಗಿರುತ್ತವೆ. ಲಂಬಾಣಿ ಹೆಣ್ಣುಗಳಲ್ಲಿ ಆರೋಗ್ಯ ರಕ್ಷಣೆಯ ವಿಧಾನಗಳ ಬಗ್ಗೆ ಅದರಲ್ಲೂ ಕರ್ನಾಟಕದಲ್ಲಿ ಈ ವಿಚಾರವಾಗಿ ಮಾಹಿತಿ ಸಂಗ್ರಹಿಸುವ ಅಗತ್ಯವನ್ನು ಮನಗಂಡು ಪ್ರಸ್ತುತ ಅಧ್ಯಯನವನ್ನು ಕೈಗೊಳ್ಳಲಾಯಿತು.

ಧಾರವಾಡ ಹಾಗೂ ಹಾವೇರಿ ಜಿಲ್ಲೆಯ ಹದಿನಾರು ಲಂಬಾಣಿ ಜನರು ವಾಸ ಮಾಡುವ ತಾಂಡಗಳಿಂದ ೨೪೦ ಮನೆಗಳನ್ನು ಸಂಪರ್ಕಿಸಿ, ವಿವರಗಳನ್ನು ಸಂಗ್ರಹಿಸಲಾಗಿದೆ. ವೈದ್ಯ ಪದ್ಧತಿಯಲ್ಲಿ ನುರಿತ ಕುಲದ ವ್ಯಕ್ತಿಗಳು ನೀಡುವ ಚಿಕಿತ್ಸೆ ಹಾಗೂ ಆರೋಗ್ಯ ಕೇಂದ್ರಗಳು ನೀಡುವ ಚಿಕಿತ್ಸೆಗಳನ್ನು ಪಾಲಿಸುವುದನ್ನು ಬಿಟ್ಟು ಮನೆಯಲ್ಲೇ ಮನೆಯವರಿಂದ ತಿಳಿದು ಪಾಲಿಸುವ, ಸಾಮಾನ್ಯವಾಗಿ ಎಲ್ಲರೂ ಗುರುತಿಸುವ ತಿಳಿದಿರುವ ವಸ್ತುಗಳನ್ನು ಒಳಗೊಂಡ ಪದ್ಧತಿಗಳನ್ನು ಅಧ್ಯಯನದಲ್ಲಿ ವಿಶೇಷ ಗಮನ ನೀಡಿ ಸಂಗ್ರಹಿಸಿ ಅವುಗಳನ್ನು ವಿಶ್ಲೇಷಣೆ ಮಾಡುವ ಪ್ರಯತ್ನ ಮಾಡಲಾಗಿದೆ. ಮನೆಯ ಇತರ ಸದಸ್ಯರನ್ನು ಪ್ರಶ್ನೆಗಳ ಮೂಲಕ ಕೇಳಿ ಖಚಿತಪಡಿಸಿಕೊಂಡು ವಿಧಿ ವಿಧಾನಗಳನ್ನು ಆ ಮನೆಯಲ್ಲಿ ಪಾಲಿಸುವ ವಿಧಿ ವಿಧಾನವೆಂದು ಪರಿಗಣಿಸಿ ಅಧ್ಯಯನ ಮುಂದುವರೆಸಲಾಗಿದೆ. ಪಾಲಿಸುತ್ತಿರುವ ವಿಧಿ ವಿಧಾನದ ಬಗ್ಗೆ ಮನೆಯ ಹಾಗೂ ಕಿರಿಯರ (ಗಂಡು ಹೆಣ್ಣು ಸದಸ್ಯರ) ಅಭಿಪ್ರಾಯಗಳನ್ನು ಸಹ ಅಧ್ಯಯನಕ್ಕಾಗಿ ಸಂಗ್ರಹಿಸಲಾಗಿದೆ.

ಆರೋಗ್ಯ ರಕ್ಷಣಾ ವಿಧಾನಗಳು

ಅಧ್ಯಯನ ನಡೆಸಿದ ಎಲ್ಲ ಮನೆಗಳಲ್ಲಿ ಆರೋಗ್ಯ ರಕ್ಷಣೆಗಾಗಿ ಆಸ್ಪತ್ರೆಗಳಿಗೆ ಭೇಟಿ ಕೊಡುವ ವಿಚಾರ ಕಂಡು ಬಂದರೂ ಕೆಲವು ಮಹಿಳೆಯರು ಎಂದಿಗೂ ಆಸ್ಪತ್ರೆಗೆ ಹೋಗದೇ ಇರುವುದನ್ನು ಗಮನಿಸಲಾಗಿದೆ. ವಯಸ್ಸಿನಲ್ಲಿ ಹಿರಿಯರಾದ ಈ ಮಹಿಳೆಯರ ಸಂಖ್ಯೆ ಕೇವಲ ೪ (ಅರವತ್ತ ವಯಸ್ಸಿನ ನಂತರದ ೨೮ ಮಹಿಳೆಯರಲ್ಲಿ) ಮಕ್ಕಳು ಎಲ್ಲ ಸಂಸಾರಗಳಲ್ಲಿ ನಿಗಧಿಪಡಿಸಿದ ಪ್ರತಿಬಂಧಕ ಚುಚ್ಚುಮದ್ದುಗಳನ್ನು ಪಡೆದಿರುವುದು ಕಂಡುಬಂದಿದೆ. ಆಸ್ಪತ್ರೆಗಳ ಇರುವಿಕೆ ಹಾಗೂ ಸೌಲಭ್ಯಗಳ ಅರಿವು ಇದ್ದರೂ ಕೆಲವು ಸಂದರ್ಭಗಳಲ್ಲಿ ಮನೆ ಮದ್ದು ಪಾಲಿಸಲು ಮುಂದಾಗುವುದನ್ನು ಹಲವಾರು ಕುಟುಂಬಗಳು ಸ್ಪಷ್ಟಪಡಿಸಿವೆ. ಸಣ್ಣಪುಟ್ಟ ತೊಂದರೆಗಳಿಗೆ ಆಸ್ಪತ್ರೆಗೆ ಹೋಗಿ ಬರುವುದು ಕಾಲಹರಣ ಮಾಡಿದಂತೆ ಎಂಬ ಭಾವನೆ ಕುಟುಂಬದ ಹಿರಿಯ ಗಂಡು-ಹೆಣ್ಣು ಸದಸ್ಯರ ಅಭಿಪ್ರಾಯಕ್ಕೆ ಉಳಿದ ಕಿರಿಯರ ಸಹಮತಿ ಇರುವುದನ್ನು ಅಧ್ಯಯನದಲ್ಲಿ ಗಮನಿಸಲಾಗಿದೆ. ಆಸ್ಪತ್ರೆಯ ಉಪಚಾರದ ಬಗ್ಗೆ ಅಪನಂಬಿಕೆಗಿಂತ ಹಿರಿಯರು ಹೇಳಿದ್ದನ್ನು ಮಾಡಿ ನೋಡುವುದ ಸರಿ ಎಂಬ ವಿಚಾರ ಮನೆ ಮದ್ದುಗಳ ಬಳಕೆಗೆ ಸಹಕರಿಸುವ ಅಂಶವಾಗಿದೆ.

ತಲೆ ನೋವು ಸಾಮಾನ್ಯವಾಗಿ ಕಂಡು ಬರುವ ತೊಂದರೆಯಾಗಿದೆ. ತಲೆನೋವು ಬಂದಾಗ ಕಿವಿಗಳ ಮೇಲೆ ತಲೆಯ ಸುತ್ತ ಬಿಗಿಯಾಗಿ ಬಟ್ಟೆ ಕಟ್ಟಿಕೊಳ್ಳುವುದು ಅಥವಾ ಬಿಗಿಯಾಗಿ ದಾರದಿಂದ ಸುತ್ತಿಕೊಳ್ಳುವುದು, ತಲೆ ನೋವು ನಿಯಂತ್ರಿಸುವುದಾಗಿ ತಿಳಿಸಿರುತ್ತಾರೆ. ಇದೇ ತೊಂದರೆಗಳಿಗೆ ನಿಂಬೆ ಹಣ್ಣನ್ನು ಮೂಗಿನ ಬಳಿ ಹಿಡಿದು ಆಗಾಗ ಮೂಸುವುದು ಮತ್ತೊಂದು ಪರಿಹಾರ ವಿಧಾನವಾಗಿದೆ. ನೆಗಡಿಯಿಂದ ಬರುವ ತಲೆನೋವಿಗೆ ಕೋಳಿಸಾರಿನ ತಿಳಿಯನ್ನು ಕುಡಿದು ದಪ್ಪನೆಯ ಹೊದಿಕೆ ಹೊದ್ದು ಮಲಗುವುದು ಸಾಮಾನ್ಯವಾಗಿ ಇರುವ ಆರಂಭಿಕ ಚಿಕಿತ್ಸೆಯಾಗಿದೆ. ನೆಗಡಿಯಿಂದಾದ ತೊಂದರೆಗಳಿಗೆ ಮದ್ಯಸೇವನೆ ಸುಲಭ ಪರಿಹಾರ ಎಂಬ ನಂಬಿಕೆ ಇದ್ದು, ಬಹಳ ಜನರು ಮದ್ಯ ಸೇವನೆ ನೆಗಡಿಗೆ ಔಷಧಿ ಎಂದು ತಿಳಿದಿದ್ದಾರೆ. ಮದ್ಯಸೇವನೆಯ ಪರಿಣಾಮದಿಂದ ಉಪಟಳದ ಬಗೆಗಿನ ಗಮನ ಕಡಿಮೆಯಾಗಿ ಮಬ್ಬು ಬರುವುದು ಬಹುಶಃ ಈ ಕ್ರಮದ ಜನಪ್ರಿಯತೆಗೆ ಕಾರಣವಾಗಿರಬಹುದು. ಕೆಲವು ಸಾರಿ ಸಣ್ಣಸಣ್ಣ ಮಕ್ಕಳಿಗೂ ಅಲ್ಪ ಸ್ವಲ್ಪ ಮದ್ಯವನ್ನು ಕುಡಿಸುವ ಪದ್ಧತಿ ಇರುತ್ತದೆ. ಮದ್ಯಸೇವನೆ ನಿರಾಕರಿಸುವ ಅಥವಾ ಅದರಿಂದ ದೂರ ಇರುವವರಲ್ಲಿ ನೀಲಗಿರಿ ಎಲೆಗಳನ್ನು ನೀರಿನಲ್ಲಿ ಕುದಿಸಿ ಆ ಸೇವನೆಯಿಂದ ಹೊರಬರುವ ಹಬೆಯನ್ನು ಉಸಿರಿನೊಂದಿಗೆ ಎಳೆದುಕೊಳ್ಳುವ ಪದ್ಧತಿ ಸಾಮಾನ್ಯವಾಗಿದೆ. ನೆಗಡಿ ಬಹಳ ತೊಂದರೆಕೊಡುತ್ತಿದ್ದಾಗ ನೀಲಗಿರಿ ಎಲೆಗಳನ್ನು ಜಜ್ಜಿ ಅದರ ಚಟ್ನಿಯನ್ನು ಹಣೆಗೆ, ಎದೆಗೆ ಬಳಿದುಕೊಂಡು ಮಲಗುವುದು ಕಫವನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಲಾಗಿದೆ.

ಕೇವಲ ಕೆಮ್ಮು ಇದ್ದು ಮೂಗಿನಿಂದ ನೀರು ಹಾಗೂ ಸಿಂಬಳ ಸುರಿಯುತ್ತಿದ್ದರೆ ನೆಗಡಿಗೆ ಹಿರಿಯರು ಉರಿಯುವ ಕೆಂಡದ ಮೇಲೆ ಅರಿಶಿಣ ಅಥವಾ ರಾಗಿಹಿಟ್ಟು ಚಿಮುಕಿಸಿ ಆಗ ಏಳುವ ಹೊಗೆಯನ್ನು ಮೂಗಿನಲ್ಲಿ ಎಳೆದುಕೊಳ್ಳುತ್ತಾರೆ. ಮಕ್ಕಳಿಗೆ ಈ ವಿಧಾನ ಸೂಚಿಸುವುದಿಲ್ಲ. ಶುಂಠಿಯ ಪುಡಿಯೊಂದಿಗೆ ಕೊತ್ತಂಬರಿ ಬೀಜ ಹಾಗೂ ಕಾಳುಮೆಣಸಿನ ಪುಡಿಗಳನ್ನು ಬೆರೆಸಿ ತಯಾರಿಸಿದ ಕಷಾಯವನ್ನು ಕುಡಿಯುವುದು ನೆಗಡಿಯಲ್ಲಿ ಪಾಲಿಸುವ ಸಾಮಾನ್ಯ ಕ್ರಮವಾಗಿದೆ. ಬಿಸಿಯಾಗಿದ್ದಾಗಲೇ ಕುಡಿಯಲು ಹೆಚ್ಚಿನ ಒತ್ತು ಕೊಡಲಾಗುತ್ತದೆ. ನೆಗಡಿಗೆ ಹಲವು ಕ್ರಮಗಳನ್ನು ಮನೆಯವರು ತಿಳಿದಿರುತ್ತಾರೆ. ಸಾಮಾನ್ಯವಾಗಿ ಅಂಗಡಿಗಳಲ್ಲಿ ಸಿಗುವ ವೈದ್ಯರ ಚೀಟಿ ಅಗತ್ಯವಿಲ್ಲದ ಮಾತ್ರೆಗಳನ್ನು ಹಾಗೂ ಲೇಪನಗಳನ್ನು ಬಳಸುವುದನ್ನು ಮಾಡುತ್ತಲೇ ಮನೆಮದ್ದುಗಳನ್ನು ಮಾಡಿ ನೆಗಡಿ ನಿಯಂತ್ರಿಸಲು ಪ್ರಯತ್ನಿಸುವುದು ತಿಳಿದು ಬಂದಿದೆ. ಬಾಹ್ಯ ಲೇಪನಕ್ಕೆ ಇರುವ ನೆಗಡಿಯ ಔಷಧಿಗಳನ್ನು ಎಲೆ ಅಡಿಕೆಯೊಂದಿಗೆ ಸೇರಿಸಿ ಸೇವಿಸುವ ಬಗ್ಗೆ ಕೆಲವು ಜನರು ಅದು ಪರಿಣಾಮಕಾರಿ ಎಂದು ತಿಳಿಸಿರುತ್ತಾರೆ. ಕೆಲವರು ಕಾಫಿ ಅಥವಾ ಚಹಾದಲ್ಲಿ ಈ ಬಾಹ್ಯ ಲೇಪನದ ಔಷಧಿಗಳನ್ನು ಹಾಕಿಕೊಂಡು ಕುಡಿಯುವುದರಿಂದ ನೆಗಡಿ, ಕೆಮ್ಮು ನಿಯಂತ್ರಿಸುವ ಬಗ್ಗೆ ತಿಳಿಸಿರುತ್ತಾರೆ. ಈ ರೀತಿ ಕೈಗೆ ಸಿಗುವ ಔಷಧಿಗಳನ್ನು ಸಹಜವಾಗಿ ಉಪಯೋಗಿಸುವುದಕ್ಕಿಂತ ಭಿನ್ನವಾಗಿ ಬಳಸುವ ಪ್ರಯೋಗಶೀಲ ಮನೋಭಾವನೆ ಹೊಂದಿದವರೆಂದು ಸೂಚಿಸುತ್ತವೆ. ಆದರೆ ಸರಿಯಾದ ತಿಳುವಳಿಕೆ ಇಲ್ಲದೆ ಇಂತಹ ಪ್ರಯೋಗಗಳನ್ನು ಮಾಡಿದಾಗ ಅಡ್ಡ ಪರಿಣಾಮಗಳಾಗುವ ಸಾಧ್ಯತೆಗಳಿರುತ್ತವೆ. ಬಾಹ್ಯ ಲೇಪನಕ್ಕೆ ತಯಾರಿಸಿದ ಔಷಧಿಗಳನ್ನು ದೇಹದ ಒಳಗೆ ಸೇವಿಸುವ ಮಟ್ಟದಲ್ಲಿ ತಯಾರಿಸುವುದಿಲ್ಲ. ಇಂತಹ ಪ್ರಯೋಗಗಳಿಂದ ದೂರವಿರಬೇಕಾಗುತ್ತದೆ. ಆದರೆ, ಇಂತಹ ಪ್ರಯೋಗಗಳು ಮಾಡಲು ಈ ಜನರಲ್ಲಿ ಹಿಂದಿನಿಂದ ತಮಗೆ ಸಿಕ್ಕ ಕಾಡಿನ ಗಿಡಮೂಲಿಕೆಗಳ ವಿಚಾರದಲ್ಲಿ ತೋರಿಸಿದಂತೆ ಪ್ರಯೋಗ ಮಾಡುವ ಗುಣ ಉಳಿದಿರುವುದೇ ಕಾರಣವಾಗಿರಬಹುದು.

ಮಕ್ಕಳಲ್ಲಿ ಹಾಗೂ ಹಿರಿಯರಲ್ಲಿ ಚರ್ಮರೋಗಗಳು, ಸಾಮಾನ್ಯ ಬೇವಿನ ಸೊಪ್ಪನ್ನು ಅರಿಶಿಣ ಪುಡಿಯೊಂದಿಗೆ ಆರೆದು ಹಚ್ಚುವುದು ಬಹಳ ಸಾಮಾನ್ಯವಾಗಿ ಚರ್ಮರೋಗಗಳನ್ನು ವಾಸಿ ಮಾಡಲು ಬಳಸವ ವಿಧಾನವಾಗಿದೆ. ಬೇಸಿಗೆಯ ಬೆವರು ಸಾಲೆಗೆ ಗಂಧವನ್ನು ತೇದು ಹಚ್ಚುವ ಪದ್ಧತಿ ಇದೆ. ಮೊಡವೆಗಳನ್ನು ನಿಯಂತ್ರಣ ಮಾಡಲು ಗಂಧವನ್ನು ಅರಿಶಿಣದೊಂದಿಗೆ ತೇದು ಹಚ್ಚುವುದು ರೂಢಿಯಲ್ಲಿದೆ. ಬಿಸಿಯಾದ ಅನ್ನದ ಗಂಟನ್ನು ಕುರುವಿನ ಮೇಲೆ ಪದೇ ಪದೇ ಇಟ್ಟು ಕುರುವನ್ನು ಬಿಸಿ ಮಾಡಿ ಒಡೆಯುವುದರಿಂದ ಕುರುವು ನೋವು ನಿವಾರಿಸಲು ಈ ವಿಧಾನ ಪಾಲಿಸಲಾಗುತ್ತದೆ. ಕೆಲವು ಸಾರಿ ಈ ರೀತಿ ಹಬೆ ಮಿಶ್ರಿತ ಕಾವು ನೀಡಲು ರಾಗಿ ಬಿಸಿ ಮುದ್ದೆಯನ್ನೂ ಬಳಸಲಾಗುತ್ತದೆ. ದೇಹದ ಕಾವಿನಿಂದ ಕುರುವು ಒಡೆಯಲು ಬಹಳ ಹೊತ್ತು ತೆಗೆದುಕೊಳ್ಳುತ್ತದೆ. ಬೇಗ ಕುರುವನ್ನು ಹಣ್ಣು ಮಾಡಲು ಅಂದರೆ ಮೆತ್ತಗೆ ಮಾಡಲು ಈ ಪ್ರಯೋಗಗಳನ್ನು ಪಾಲಿಸುತ್ತಾರೆ. ಉಪಯೋಗಿಸದೆ ಇಟ್ಟ ಯಾವುದೇ ಮಾತ್ರೆಯನ್ನು ಪುಡಿ ಮಾಡಿ ಕೊಬ್ಬರಿ ಎಣ್ಣೆ ಬೆರಸಿ ಗಾಯಗಳಿಗೆ ಹಚ್ಚುವುದು ಬಹಳ ಸಾಮಾನ್ಯವಾಗಿ ಕಂಡುಬರುತ್ತದೆ. ಮಾತ್ರೆಗಳನ್ನು ಬಿಸಾಡದೆ ಗಾಯಕ್ಕೆ ಹಚ್ಚಲು ಬರುತ್ತದೆ ಎಂದು ತೆಗೆದಿಡುವ ಪದ್ಧತಿ ಇದೆ. ಈ ರೀತಿಯಿಂದ ಬಹಳಷ್ಟು ಜನರು ಗಾಯಗಳೂ ವಾಸಿಯಾಗುತ್ತವೆ ಎಂದು ಭಾವಿಸಿದ ಹಾಗೆ ಕಂಡುಬರುತ್ತದೆ. ಹಿಂದಿನ ದಿನಗಳಲ್ಲಿ ಗಾಯಗಳನ್ನು ವಾಸಿ ಮಾಡಲು ಫಿಸ್ನಿಲಿನ್ ಮಾತ್ರೆಗಳನ್ನು ಪುಡಿ ಮಾಡಿ ಕೊಬ್ಬರಿ ಎಣ್ಣೆಯಲ್ಲಿ ಕಲೆಸಿ ಹಚ್ಚುವ ವಿಧಾನ ಬಳಕೆಯಲ್ಲಿತ್ತು. ಈ ಬಳಕೆಯ ವಿಧಾನ ಆ ಮಾತ್ರೆಗೆ ಮಾತ್ರ ಸೀಮಿತವಾಗಿಡದೇ ಎಲ್ಲ ಬಿಳಿಯ ಮಾತ್ರೆಗಳನ್ನು ಗಾಯ ವಾಸಿ ಮಾಡಲು ಬಳಸುವುದು ಅರೆಬರೆ ಜ್ಞಾನ ಹಾಗೂ ವಿವೇಚನಾರಹಿತ ಅನುಕರಣೆಯ ಫಲವಾಗಿದೆ. ಕೆಲವು ಸಾರಿ ದೇಹಕ್ಕೆ ಒಗ್ಗದ ಮಾತ್ರೆಗಳು ಈ ರೀತಿ ಪ್ರಯೋಗದಿಂದ ಕೆಟ್ಟ ಪರಿಣಾಮ ಬೀರಬಹುದಾಗಿದೆ. ಹಿರಿಯರನ್ನು ಅನುಸರಿಸುವ ಇವರ ಗುಣ ಹಾಗೂ ಆಧುನಿಕ ಅವಕಾಶಗಳಲ್ಲಿಯೂ ಈ ಗುಣ ಹೊರಗೆ ಕಾಣಿಸಿಕೊಳ್ಳುವ ಉದಾಹರಣೆಯಾಗಿ ಇಂತಹ ಪ್ರಯೋಗಗಳನ್ನು ಪರಿಗಣಿಸಬಹುದಾಗಿದೆ. ಆಧುನಿಕ ಔಷಧಗಳನ್ನು ಪರಂಪರೆಯ ಔಷಧಗಳಂತೆ ಬಳಸುವ ಬಗ್ಗೆ ತಿಳುವಳಿಕೆ ಇವರಲ್ಲಿ ಮೂಡಿಸುವ ಪರಂಪರೆಯ ಮನೆ ಮದ್ದುಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಒಂದಿಷ್ಟು ಯಾವುದಾದರೂ ಬೇರೆ ವಸ್ತು ಸೇರಿಸಿದರೆ ಆಗುವ ಪರಿಣಾಮಕ್ಕಿಂತ ಆಧುನಿಕ ಔಷಧಗಳನ್ನು ಹೆಚ್ಚು ಕಡಿಮೆ ಬಳಸಿದಾಗ ಕೆಟ್ಟ ಪರಿಣಾಮಗಳಾಗುತ್ತವೆ.

ಪಾದಗಳು ಚಳಿಯಲ್ಲಿ ಒಡೆಯುವುದು ಸಾಮಾನ್ಯ. ಕೆಲವು ಸಾರಿ ಒಡೆದು ಸೀಳಿದ ಪಾದಗಳು ಬಹಳ ಕಾಲ ಉಳಿದು ನಡೆದಾಡಲು ಕಷ್ಟವಾಗುತ್ತದೆ. ಮಾವಿನ ಮರದ ಅಂಟನ್ನು ಅದೇ ತಾನೆ ಮರದಿಂದ ತೆಗೆದು ಮೆತ್ತಗಿರುವಾಗಲೇ ಸೀಳುಗಳಲ್ಲಿ ತುಂಬಿ ಹೀಗೆ ತುಂಬಿಸಿದ ಪಾದವನ್ನು ಕೆಂಡದ ಮೇಲೆ ಕಾಯಿಸುವುದರಿಂದ ಒಡೆದ ಪಾದಗಳು ಸರಿಯಾಗುತ್ತವೆ. ಮಲಗುವ ಮುಂಚೆ ಈ ರೀತಿ ಮಾಡಿದಲ್ಲಿ ಒಳ್ಳೆಯದು. ಇದೇ ರೀತಿ ಒಡೆದ ಪಾದಗಳಿಗೆ ಅರಿಶಿಣವನ್ನು ಉಳ್ಳಾಗಡ್ಡೆ (ಈರುಳ್ಳಿ) ರಸದಲ್ಲಿ ಕಲಸಿ ಹಚ್ಚುವ ಪದ್ಧತಿಯೂ ಲಂಬಾಣಿ ಹೆಣ್ಣುಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಮಹಿಳೆಯರಲ್ಲಿ ಕೆಲವು ವಿಶೇಷ ಆರೋಗ್ಯ ತೊಂದರೆಗಳು ಜೀವನದಲ್ಲಿ ಬರುತ್ತವೆ. ಮಾಸಿಕ ಸ್ರಾವದ ದಿನಗಳಲ್ಲಿನ ತೊಂದರೆಗಳು ನೋವು, ಅಧಿಕ ಸ್ರಾವ, ಅಲ್ಪಸ್ರಾವ, ಜನನೇಂದ್ರಿಯ ಸೊಂಕು, ಇಂತಹ ತೊಂದರೆಗಳು ಇವರನ್ನು ಕಾಡುತ್ತವೆ. ಇವುಗಳಿಗೆ ಬೇರೆ ಬೇರೆ ಹೆಸರುಗಳಿಂದ ಗುರುತಿಸುವುದನ್ನು ಹೆಣ್ಣುಮಕ್ಕಳು ಹಿರಿಯ ಹೆಂಗಸರಿಂದ ಕಲಿಯುತ್ತಾರೆ. ಇವುಗಳಿಗೆ ಪರಿಹಾರವನ್ನು ತಿಳಿದುಕೊಳ್ಳುತ್ತಾರೆ. ಹಿರಿಯ ಹೆಂಗಸರ ಮಾರ್ಗದರ್ಶನ, ಪಂಗಡದ ಹೆಣ್ಣುಮಗಳಿಗೆ ಸಿಗುವುದು ಹೆಣ್ಣುಗಳ ಆರೋಗ್ಯ ಸ್ಥಿತಿಯನ್ನು ನಿರ್ಧರಿಸುವ ಅಂಶವಾಗಿದೆ.

ಮುಟ್ಟಿನ ದಿನಗಳಲ್ಲಿ ಮಹಿಳೆಗೆ ಹೆಚ್ಚಿನ ಕೆಲಸಗಳಿರುವುದಿಲ್ಲ. ಕೌದಿ, ಕಸೂತಿ, ಹೊಲಿಯ ಬಹುದಾದರೂ ಅಡುಗೆ ಮಾಡುವುದು ನೀರು ತರುವುದು ಮಾಡುಹಾಗಿಲ್ಲ. ಕೆಲವರು ಸಣ್ಣ ಮಕ್ಕಳನ್ನು ಮುಟ್ಟಿಸಿಕೊಂಡರೂ ಹಿರಿಯರನ್ನು ಮುಟ್ಟಿಸಿಕೊಳ್ಳುವುದಿಲ್ಲ. ದೇವರ ಪೂಜೆ, ದೇವರ ಕೋಣೆ ಪ್ರವೇಶ ಮಾಡುವ ಹಾಗಿಲ್ಲ. ಈ ರೀತಿಯ ಪ್ರತಿಬಂಧಗಳು ಹೆಣ್ಣಿಗೆ ವಿಶ್ರಾಂತಿ ಸಿಗುವ ದೃಷ್ಠಿಯಿಂದ ಒಳ್ಳೆಯದೇ ಆದರೂ ಅವುಗಳ ಸುತ್ತ-ಮುತ್ತ ಇರುವ ವಿಚಿತ್ರ ಮೂಢನಂಬಿಕೆಗಳು ಬಲವಾಗುವ ದೃಷ್ಠಿಯಿಂದ ಪ್ರತಿಬಂಧವನ್ನು ವಿರೋಧಿಸುವುದು ಸರಿ ಎನ್ನಿಸುತ್ತದೆ. ಕೆಲವು ಮನೆಗಳಲ್ಲಿ ಈ ರೀತಿಯ ಪ್ರತಿಬಂಧಗಳು ಬಹಳ ಇರದಿದ್ದರೂ ಐದು ದಿನಗಳ ನಂತರ ತಲೆಸ್ನಾನ ಮುಗಿಸಿದ ಮೇಲೆ ದೇವರ ಮನೆಯ ಪ್ರವೇಶ ಮಾಡಬಹುದಾಗಿದೆ. ಮುಟ್ಟಿನ ದಿನಗಳಲ್ಲಿ ಮುಂಚೆ ಹಾಗೂ ನಂತರ ನೋವು ಎಷ್ಟೇ ಆರೋಗ್ಯದಿಂದ ಇರುವವರಿಗೂ ಇರುತ್ತದೆ. ಇದಕ್ಕೆ ಬಾಳೆಯ ಹೂವಿನ ಒಳಗಿನ ಬಿಳಿಯ ಸಣ್ಣ ಎಳೆ, ಬಾಳೆಯ ಪಲ್ಯ ತಿನ್ನುವುದು ಔಷಧಿಯಾಗಿದೆ. ಎಳ್ಳನ್ನು ಸಕ್ಕರೆ ಅಥವಾ ಬೆಲ್ಲದೊಂದಿಗೆ ದಿನಕ್ಕೆ ಎರಡು ಮೂರು ಸಾರಿ ತಿನ್ನುವುದರಿಂದ ಮುಟ್ಟಿನ ನೋವು ನಿವಾರಿಸಬಹುದೆಂದು ಇವರು ನಂಬುತ್ತಾರೆ. ಸೂರಣಗಿ ತಾಂಡದ ಮಹಿಳೆಯೊಬ್ಬರ ಪ್ರಕಾರ ತಲೆದಿಂಬನ್ನು ಕಿಬ್ಬೊಟ್ಟೆಯ ಕೆಳಗೆ ಬರುವಂತೆ ಇಟ್ಟುಕೊಂಡು ಸ್ವಲ್ಪ ಕಾಲ ಮಲಗುವುದರಿಂದ ಮುಟ್ಟಿನ ಸಮಯದ ನೋವು ನಿವಾರಿಸಲು ಸಾಧ್ಯವಿದೆ. ಜನನೇಂದ್ರಿಯಗಳಿಗೆ ಅಸಹಜ ಸ್ರಾವ ಹಾಗೂ ಅಸಹಜ ವಾಸನೆ, ಉರಿ ಕೆರೆತಗಳಿಂದ ಕೂಡಿದ ಸ್ಥಿತಿಗೆ ‘ಬಿಳಿಸೆರಗು’ ಎಂಬ ಹೆಸರಿನಿಂದ ಗುರುತಿಸುತ್ತಾರೆ. ಈ ಸ್ಥಿತಿಯಿಂದಾಗಿ ಮಹಿಳೆಯರು ತಮ್ಮ ಸಂಗಾತಿಗಳ ಆಕರ್ಷಣೆ ಕಳೆದುಕೊಳ್ಳುವ ಭಯ ಹೊಂದಿದ ಕಾರಣ ಈ ಸ್ಥಿತಿಯಿಂದ ಬಿಡುಗಡೆ ಹೊಂದಲು ಹೆಂಗಸರು ಬಹಳ ಗಂಭೀರವಾಗಿ ಪ್ರಯತ್ನಿಸುತ್ತಾರೆ. ವಿಳ್ಯೆದೆಲೆಯಲ್ಲಿ ಬೆಲ್ಲ ಹಾಗೂ ಸುಣ್ಣ ಸ್ವಲ್ಪ ಬೆರಸಿಕೊಂಡು ತಿನ್ನುವುದರಿಂದ ಈ ಸಮಸ್ಯೆಗೆ ಪರಿಹಾರ ಕಾಣುತ್ತಾರೆಂದು ತಿಳಿದುಬಂದಿದೆ. ಕಡೆಲೆಕಾಳಿನಷ್ಟು ಗಾತ್ರದ ಸುಣ್ಣ ಹಾಗೂ ಬೆಲ್ಲ ಎಲೆಯೊಂದಿಗೆ ಬರಿ ಹೊಟ್ಟೆಗೆ ಬೆಳಿಗ್ಗೆ ಮೂರು ದಿನ ತಿನ್ನಬೇಕಾಗುತ್ತದೆ. ಈ ಕಾಲದಲ್ಲಿ ಕೇವಲ ಮೊಸರನ್ನ ತಿನ್ನಬೇಕು. ಮತ್ತೊಂದು ಔಷಧಿ ಎಂದರೆ ಮೂರು ದಿನ ಬೆಳಿಗ್ಗೆ ಬರಿಹೊಟ್ಟೆಗೆ ಎರಡು ಬಿಳಿ ದಾಸವಾಳದ ಹೂವು ತಿನ್ನುವುದು ಹಾಗೂ ಊಟದಲ್ಲಿ ಕೇವಲ ಮೊಸರು ಅನ್ನ ಹೊಂದಿರಬೇಕು. ಕೆಲವು ಸಾರಿ ಮುಳ್ಳು ಅಥವಾ ಹರಳು ಚರ್ಮದ ಮೂಲಕ ಒಳಗೆ ಸೇರಿ ತೊಂದರೆ ನೀಡುತ್ತದೆ. ಒಂದು ವೇಳೆ ಇವುಗಳನ್ನು ಹೊರಗೆ ತರಲು ಕಷ್ಟವಾದರೆ ಮೆಣಸಿನಕಾಯಿ ತುದಿ ಮುರಿದು ಎಣ್ಣೆಯಲ್ಲಿ ಅದ್ದಿ ದೀಪದ ಉರಿಯಲ್ಲಿ ಒಣ ಮೆಣಸಿನಕಾಯಿ ಬೀಜ ಸಿಡಿಯುವಷ್ಟು ಕಾಯಿಸಿ ಬಿಸಿ ಬಿಸಿ ಬಸಿಯುವ ಎಣ್ಣೆ ಮುಳ್ಳು ಅಥವಾ ಹರಳು ಇರುವ ಜಾಗದ ಮೇಲೆ ಬೀಳುವಂತೆ ಆ ಮೆಣಸಿನಕಾಯಿ ಸುಟ್ಟು ಭಾಗವನ್ನು ತಾಗಿಸಲಾಗುತ್ತದೆ. ಹೀಗೆ ಒಂದಿಷ್ಟು ಸಾರಿ ಮಾಡಲಾಗುತ್ತದೆ. ಉರಿ ಹಾಗೂ ನೋವಾದರೂ ತಡೆದುಕೊಂಡು ಈ ಕ್ರಮ ಪಾಲಿಸುತ್ತಾರೆ. ಸಾಮಾನ್ಯವಾಗಿ ಯಾರಾದರೂ ಬೇರೆಯವರು ಇನ್ನೊಬ್ಬರಿಗೆ ಮಾಡುತ್ತಾರೆ. ಕೆಲವು ಸಾರಿ ನರಳುವವರು ತಾವೇ ಮಾಡಿಕೊಳ್ಳುತ್ತಾರೆ. ಬಿಸಿ ಎಣ್ಣೆ ಕಾರಣದಿಂದ ಮುಳ್ಳು-ಹರಳು ಇರುವ ಜಾಗ ಮೆತ್ತಗಾಗಿ ಕೀವು ತುಂಬಿ ಹರಳು-ಮುಳ್ಳು ಸುಲಭವಾಗಿ ಹೊರಗೆ ಬೀಳುತ್ತದೆ. ಕೆಲವು ಸಾರಿ ಪಾದಗಳಲ್ಲಿ ಸೇರಿಕೊಂಡ ಹರಳು ಅಥವಾ ಮುಳ್ಳು ತೆಗೆಯಲಾಗದಿದ್ದಾಗ ಹಾಗೆ ಬಿಟ್ಟರೆ ಅಲ್ಲಿನ ಚರ್ಮ ಗಟ್ಟಿಯಾಗಿ ಬೆಳೆಯುತ್ತಾ ಗಂಟುಗಳಾಗಿ ಒತ್ತಲು ಪ್ರಾರಂಭಿಸುತ್ತದೆ. ಇದನ್ನು ಆಣಿ (ಆಸಿ) ಎಂದು ಕರೆಯುತ್ತಾರೆ ನಿರಂತರ ಬೆಳೆಯುವ ಇವು ಓಡಾಡಲು ತೊಂದರೆ ನೀಡುತ್ತವೆ. ಇವುಗಳನ್ನು ನಿವಾರಿಸಲು ಕೊಯ್ದು ನಿಂಬೆಯ ಹೋಳನ್ನು ಈ ಆಣಿಗಳ ಮೇಲಿಟ್ಟು ೫-೬ ದಿನ ಕಟ್ಟುವುದರಿಂದ ಆ ಆನೆಗಳನ್ನು ನಿವಾರಿಸಬಹುದೆಂದು ತಿಳಿದುಬಂದಿದೆ. ರಾತ್ರಿಯಲ್ಲಾ ನಿಂಬೆಹೋಳಿನ ಕಾರಣ ನೆನದ ಕಾಲಿನ ಆಣಿಯ ಭಾಗವನ್ನು ಬೆಳಗ್ಗೆ ಬಿರುಸಾದ ಕಲ್ಲಿನಿಂದ ತಿಕ್ಕಿ ತೊಳೆಯಬೇಕಾಗುತ್ತದೆ. ಹೀಗೆ ಮತ್ತೆ ಮತ್ತೆ ಮಾಡಿ ಪೂರ್ತಿ ಮರೆಯಾಗುವವರೆಗೆ ಮುಂದುವರೆಸುತ್ತಾರೆ. ಓಡಾಟದ ಬದುಕಿನ ಜನರಿಗೆ ಕಾಲಿನ ತೊಂದರೆಗಳ ಬಗ್ಗೆ ಆದಷ್ಟು ಬೇಗ ಚಿಕಿತ್ಸೆ ಮಾಡುವ ಅಗತ್ಯವಿರುತ್ತದೆ.

ಆರೋಗ್ಯ ರಕ್ಷಣಾ ವಿಧಾನಗಳ ಮಹತ್ವಚರ್ಚೆ

ಲಂಬಾಣಿ ಮಹಿಳೆಯರಲ್ಲಿ ಪ್ರಚಲಿತವಿರುವ ಕೆಲವು ವಿಚಾರಗಳನ್ನು ಗಮನಿಸಿದಾಗ ಅವುಗಳಲ್ಲಿ ಕೆಲವು ಸರಳ ಹಾಗೂ ಸುಲಭವಾಗಿರುವುದು ಗಮನಕ್ಕೆ ಬಂದಿದೆ. ಇವುಗಳು ಪರಿಹಾರವನ್ನು ನೀಡುವುದಾಗಿ ತಿಳಿದುಬರುತ್ತದೆ. ಲಂಬಾಣಿ ಜನಾಂಗದಲ್ಲಿ ಮಹಿಳೆಯರು ಒಟ್ಟಾಗಿ ಬದುಕುವ ಪರಿಸರ ಹೊಂದಿದ ಕಾರಣ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಈ ಅನುಭವಗಳಲ್ಲಿ ರೋಗ ಉಪಚಾರದ ಅನುಭವಗಳೂ ಇರುತ್ತವೆ. ಪ್ರಸ್ತುತ ಅಧ್ಯಯನದಲ್ಲಿ ಪರಿಣಿತರು ಬೇಕಾಗಿಲ್ಲ. ಮನೆಯವರೆ ಪಾಲಿಸುವ ವಿಧಾನಗಳ ಬಗ್ಗೆ ಗಮನಹರಿಸಲಾಗಿದೆ. ಲಂಬಾಣಿ ಜನಾಂಗದ ಜನರು ಮದ್ಯವನ್ನು ಔಷಧಿಯಾಗಿ ಬಳಸುವುದನ್ನು ಅದರಲ್ಲೂ ಮಕ್ಕಳಿಗೂ ಕೆಲವು ಸಂದರ್ಭದಲ್ಲಿ ರೋಗ ವಾಸಿ ಮಾಡಲು ನೀಡುವುದು ಗಮನಕ್ಕೆ ಬಂದಿದೆ. ಮದ್ಯ ಬೇಗನೇ ಸ್ವಲ್ಪ ಶಕ್ತಿಯನ್ನು ನೀಡುವ ಸಾಧ್ಯತೆಗಳಿದ್ದು, ರೋಗ ವಾಸಿಯಾದ ಅನುಭವ ನೀಡಬಲ್ಲದು ಎಂಬ ವಿಚಾರವೇ ಈ ರೂಢಿಗೆ ಕಾರಣವಾಗಿರಬಹುದು. ಲಂಬಾಣಿ ಜನಾಂಗ ಇತರ ಇಂಥಹ ಕಾಡು ಅವಲಂಬಿತ ಜನರಂತೆ ಬದಲಾವಣೆಯ ಒತ್ತಡಕ್ಕೆ ಒಳಗಾಗಿದೆ. ಈ ಜನಾಂಗದ ಇನ್ನೂ ಕೆಲವರು ಮಹಿಳೆಯರ ಉಳಿಸಿಕೊಂಡ ಹಾಗೆ ತಮ್ಮ ಪರಂಪರೆಯ ಆರೋಗ್ಯ ರಕ್ಷಣಾ ವಿಧಾನಗಳನ್ನು ಉಳಿಸಿಕೊಂಡಿದ್ದಾರೆ. ವಿಶಿಷ್ಟ ಉಡುಗೆ ತೊಡುಗೆಗಳನ್ನು ಮಾಲಿನ್ಯ ಭರಿತ ನಗರಗಳಲ್ಲಿ ಬಹಳ ಕಾಲ ಧರಿಸಿ ಶ್ರಮದ ಕೆಲಸ ಮಾಡಿದಾಗ ಕೊಳೆ ಸೇರಿಕೊಂಡು ಅವುಗಳಿಂದಲೇ ಚರ್ಮರೋಗಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಪರಂಪರೆಯನ್ನು ಉಳಿಸುವ ಇವರ ಬಯಕೆ ಮಾಲಿನ್ಯ ಸಹಕರಿಸದಿರುವುದು ಕಂಡುಬರುತ್ತದೆ. ಅಲೆಮಾರಿ ಜನಾಂಗಗಳ ಆರೋಗ್ಯ ಯೋಜನೆಗಳು ಆಯಾ ಪಂಗಡದ ಅವಶ್ಯಕತೆ ಅನುಸರಿಸಿ ಇರಬೇಕೆಂದು ಸೂಚಿಸಿರುತ್ತಾರೆ. ಮುಂದುವರಿದು ಅವರು ಮದ್ಯಪಾನವನ್ನು ಹಾಗೂ ಮಾದಕ ವಸ್ತುಗಳ ಸೇವನೆಯನ್ನು ನಿಯಂತ್ರಿಸಬೇಕು ಎನ್ನುತ್ತಾರೆ. ಹಚ್ಚೆಗಳು ಕೆಲವು ರೋಗ ನಿವಾರಿಸುತ್ತವೆ ಎಂಬ ಭಾವನೆ ಲಂಬಾಣಿ ಮಹಿಳೆಯರಲ್ಲಿ ಇದ್ದು ಕೆಲವು ಸಾರಿ ರೋಗ ನಿವಾರಣೆಗೆ ಹಚ್ಚೆ ಹಾಕಿಸಿಕೊಳ್ಳುವ ಪದ್ಧತಿ ಇದೆ. ಇದರ ಬಗ್ಗೆ ನಾಯಕ್ ಮತ್ತು ಗಿರಿಜಿ (೨೦೦೪) ವಿವರಿಸುತ್ತಾ ಹಚ್ಚೆ ರೋಗ ನಿವಾರಣಾ ಪ್ರಭಾವದ ಬಗ್ಗೆ ಹೆಚ್ಚಿನ ಅಧ್ಯಯನ ಅಗತ್ಯವಿದೆ ಎಂದಿದ್ದಾರೆ. ಪ್ರಸ್ತುತ ಅಧ್ಯಯನದಲ್ಲಿ ಹಚ್ಚೆಗಳನ್ನು ಆರೋಗ್ಯ ರಕ್ಷಣೆಗಾಗಿ ಹಾಕಿಸಿಕೊಂಡಿದ್ದು ಕಂಡು ಬಂದಿಲ್ಲ. ಪರಂಪರೆ ಪಾಲಿಸುವ ಉತ್ಸಾಹ ತಾಳ್ಮೆ ಇರುವ ಲಂಬಾಣಿ ಜನಾಂಗದ ಮಹಿಳೆಯರು ಪರಂಪರೆಯಿಂದ ಬಂದ ಆರೋಗ್ಯ ರಕ್ಷಣಾಧಿ ವಿಧಾನಗಳನ್ನು ಶ್ರದ್ಧೆಯಿಂದಲೇ ಪಾಲಿಸುತ್ತಿರುವುದಾಗಿ ತಿಳಿದುಬರುತ್ತದೆ. ಇಂತಹ ಅಧ್ಯಯನಗಳು ನಡೆದು ಹೆಚ್ಚಿನ ವಿವರ ಸಂಗ್ರಹಿಸಿದರೆ ಅವುಗಳು ಮರೆಯಾಗುವ ಮುಂಚೆ ಸಂಗ್ರಹಿಸಿ ಕಾಪಾಡಿದಂತೆ ಆಗುತ್ತದೆ. ಇವುಗಳು ಸರಳ ಸುಲಭ ಹಾಗೂ ಪರಿಣಾಮಕಾರಿಯಾಗಿರುವುದರಿಂದ ಇವುಗಳು ಬೇರೆ ಜನಾಂಗಗಳಿಗೂ ಉಪಯೋಗಕ್ಕೆ ಬರಬಲ್ಲವಾಗಿವೆ.

ಪ್ರಸ್ತುತ ಅಧ್ಯಯನದಲ್ಲಿ ಸುಮಾರು ಶೇ. ೨೩ರಿಂದ ೫೨ರವರೆಗೆ ಮಹಿಳೆಯರು (೧೪ರಿಂದ ೭೩ನೇ ವಯಸ್ಸಿನ ಗುಂಪಿನಲ್ಲಿದ್ದು) ಪರಂಪರೆಯ ಔಷಧಿಗಳನ್ನು ಬಳಸದೇ ತಮ್ಮ ತೊಂದರೆಗಳಿಗೆ ಆಸ್ಪತ್ರೆಗಳಿಗೆ ಹೋಗುವವರಾಗಿದ್ದಾರೆ. ಶೇ. ೨೭ರಿಂದ ೪೦ರವರೆಗೆ ಬೇರೆ ಬೇರೆ ವಯೋಮಾನದವರು ಪರಂಪರೆಯ ಔಷಧಿ ಬಳಸಿ ಗುಣವಾಗದಿದ್ದಾಗ ಆಸ್ಪತ್ರೆಗೆ ಹೋಗುತ್ತಾರೆ. ಈ ವಿವರಗಳು ಲಂಬಾಣಿ ಮಹಿಳೆಯರಲ್ಲಿ ಆರೋಗ್ಯ ರಕ್ಷಣಾ ವಿಧಾನದಲ್ಲಿ ಪರಂಪರೆಯ ಔಷಧಿಗಳನ್ನು ಬಳಸುವ ವಿಚಾರದಲ್ಲಿ ಒಂದೇ ರೀತಿ ಅಭಿಪ್ರಾಯಗಳಿಲ್ಲದಿರುವುದನ್ನು ಸೂಚಿಸುತ್ತವೆ. ಸುಮಾರು ಶೇ. ೪೭ರಷ್ಟು ಮಹಿಳೆಯರು ಪರಂಪರೆಯ ಔಷಧಿಗಳನ್ನು ಆಸ್ಪತ್ರೆಗೆ ಹೋಗಲು ಅವಕಾಶ ಹಾಗೂ ಸಮಯ ಇಲ್ಲದ ಕಾರಣ ಪಾಲಿಸುತ್ತಿರುವುದಾಗಿ ತಿಳಿದುಬಂದಿದೆ. ಆಸ್ಪತ್ರೆಗಳು ಲಭ್ಯವಾಗುವ ಕಾಲ ಸೀಮಿತವಾಗಿದ್ದು, ಜೀವನ ನಿರ್ವಹಣೆಗಾಗಿ ಸಮಯ ಹೊಂದಿಸುವಲ್ಲಿ ಕಷ್ಟಪಡುವ ಈ ಮಹಿಳೆಯರಿಗೆ ಆಸ್ಪತ್ರೆ ಭೇಟಿಗೆ ಸಮಯ ಹೊಂದಿಸಲು ಕಷ್ಟವಾಗುತ್ತಿದೆ. ಪರಂಪರೆಯ ವಿಧಾನ ಪಾಲಿಸುತ್ತಿರುವವರಲ್ಲಿ ಸುಮಾರು ಶೇ. ೫೦ರಷ್ಟು ಮಹಿಳೆಯರಿಗೆ ಈ ವಿಧಾನಗಳ ಬಗ್ಗೆ ನಂಬಿಕೆ ಇದೆ ಜೊತೆಗೆ ಆಸಕ್ತಿಯೂ ಇದೆ ಎಂದು ಅಧ್ಯಯನದಿಂದ ತಿಳಿದುಬರುತ್ತದೆ.

* * *