ನಾಗರಿಕತೆ ಕೊನೆಯ ತುದಿಯಲ್ಲಿ ನಿಂತಿರುವ ನಾವು ನಮ್ಮ ನಿಕಟಪೂರ್ವ ಬದುಕಿನ ಕಡೆಗೆ ಹಿನ್ನೋಟ ಬೀರಬೇಕಾದ ಸಂದರ್ಭ ಇಂದು ಒದಗಿದೆ. ಮನುಕುಲದ ಚರಿತ್ರೆಯ ಗರ್ಭವನ್ನು ಬಗೆದಾಗ ಅಲ್ಲಿ ಅನೇಕ ಆತಂಕ, ತಲ್ಲಣ ನೋವು-ನಲಿವುಗಳು ವಿಸಂಗತಿಗಳು ಮುಖಾಮುಖಿಯಾಗುತ್ತವೆ. ಈ ನಿಟ್ಟಿನಲ್ಲಿ ಬುಡಕಟ್ಟು ಸಮುದಾಯಗಳ ಜೀವನ ಶೈಲಿ, ನಂಬಿಕೆಗಳು ಪದ್ದತಿ, ಆಚರಣೆಗಳು ಪುನರವಲೋನ ಮಾಡಬೇಕಾಗಿದೆ. ಬುಡಕಟ್ಟು ಸಮುದಾಯವನ್ನು ಆಧುನಿಕ ನಾಗರಿಕತೆ ಸಮೀಕರಿಸಬೇಕು ಮತ್ತು ಸಮೀಕರಿಸಬಾರದೆಂಬ ಬಿರುಸಾದ ವಾದ ವಿವಾದಗಳು ಅಕಾಡೆಮಿಕ್ ನೆಲೆಯಲ್ಲಿ ನಡೆಯುತ್ತಿವೆ. ಇದರೊಟ್ಟಿಗೆ ಸರಕಾರವು ಹಲವು ಉದ್ದೇಶ ಮತ್ತು ದುರುದ್ದೇಶಗಳೊಂದಿಗೆ ಮಾನವ ಶಾಸ್ತ್ರಜ್ಞರು ಸಂಸ್ಕೃತಿ ಚಿಂತಕರ ದಿಕ್ಕಿನಲ್ಲಿ ನಡೆಯುತ್ತಿವೆ. ಮೊದಲನೆಯದು ಹಣ ಕೇಂದ್ರಿತ ನೆಲೆಯಿಂದ ಗುರುತಿಸಲ್ಪಡುವ ಸಮೀಚಿನ ಮಾನವ ಅಭಿವೃದ್ದಿ ಈ ಎರಡು ಪ್ರಕ್ರಿಯೆಗಳು ಮತ್ತು ನಂಬಿಕೆಗಳು ಅನ್ವಯಿಕ ನೆಲೆಯಲ್ಲಿ ನಮ್ಮ ಸಂದರ್ಭದಲ್ಲಿ ಗುರಿತಿಸುವ ಪ್ರಯತ್ನ ಇಲ್ಲಿವೆ.

. ಆಹಾರ ಪದ್ದತಿ

ಈ ಹೊತ್ತಿನ ನಮ್ಮ ಬದುಕು ಬುಡಕಟ್ಟು ಜನರ ಬದುಕಿನಿಂದ ತುಂಬಾದೂರದಲ್ಲಿ ನಿಂತಿಲ್ಲವೆಂದು ನನ್ನ ಗ್ರಹಿಕೆ. ಆದಿವಾಸಿಗಳು ಮೊದಲು ಗಿರಿ-ಕಂದರಗಳಲ್ಲಿ ಅರಣ್ಯ ಗಿರಿ ಕಂದರಗಳಲ್ಲಿ ವಾಸಿಸುತ್ತ ಹಸಿಮಾಂಸವನ್ನು ಭಕ್ಷಿಸುತ್ತಿದ್ದರು. ನಾಗರಿಕತೆ ಮೊದಲ ಹೆಜ್ಜೆಗಳ ಸ್ಪರ್ಶದಿಂದ ಬೇಯಿಸಿದ ಆಹಾರವನ್ನು ತಿನ್ನವ ಪ್ರಕ್ರಿಯೆ ಆರಂಭವಾಯಿತು. ಅಲ್ಲಿದಂದ ಮುಂದೆ ಶಾಖಾಹಾರ ಪದ್ದತಿ ಕ್ರಮೇಣ ರೂಢಿಯಾಯಿತು. ನೆಲದ ಮೇಲೆ ಮತ್ತು ನೆಲದ ಒಳಗೆ ಪ್ರಕೃತಿಯ ಆಡಗಿಸಿ ಇಟ್ಟುಕೊಂಡ ಆಹಾರ ವಸ್ತುಗಳ ಶೋಧ ಮತ್ತು ಅವುಗಳ ಬಳಕೆ ಮೊದಲಾಯಿತು. ಗೆಡ್ಡೆ, ಗೆಣಸುಗಳ ಹಣ್ಣು, ಹಂಪಲುಗಳು ಅಂದಿನವರ ಆಹಾರ ಪದಾರ್ಥಗಳಾದವು. ಆ ಕಾಲಕ್ರಮಣ ತಿನ್ನಬಹುದಾದವು, ತಿನ್ನಬಾರದವು ಎಂಬ ವರ್ಗಿಕರಣ ಪ್ರಾರಂಭವಾಗಿ ಒಂದರ್ಥದಲ್ಲಿ ಆಹಾರ ಪದಾರ್ಥಗಳ ಪರಿಶೋಧನೆ ಮತ್ತು ಆನ್ವರಿಕತೆಗಳು ನಡೆಯತೊಡಗಿದವು. ಆಹಾರಕ್ಕಾಗಿ ಕಾಡಿನ ಪ್ರಾಣಿಗಳಾದ ಜಿಂಕೆ, ಮೊಲ, ಹಲವು ತೆರನ ಪಕ್ಷಿಗಳನ್ನು ಬೇಟೆಯಾಡುತ್ತಿದ್ದ ಬುಡಕಟ್ಟು ಜನರು ಕ್ರಮೇಣ ಕೃಷಿ ಸಂಸ್ಕೃತಿಯ ಸ್ಪರ್ಶಕ್ಕೆ ಒಳಗಾದರು. ಪರಿಣಾಮವಾಗಿ ಭೂಮಿಯನ್ನು ಉಳುವುದರ ಮೂಲಕ ಕೃಷಿ ಸಂಬಂಧಿ ಸಸ್ಯ ಧಾನ್ಯಗಳ ಬಳಕೆ ಪ್ರಾರಂಭವಾಯಿತು. ಹೈನುಗಾರಿಕೆ, ಮೀನುಗಾರಿಕೆ, ಜೇನು ಸಾಕಾಣಿ ಮುಂತಾದ ಕಸುಬುಗಳೊಂದಿಗೆ ತಮ್ಮ ಆಹಾರ ಪದ್ದತಿಯನ್ನು ಜೊತೆಗೂಡಿಸಿಕೊಂಡರು. ಬರಗಾಲ ಸಂದರ್ಭದಲ್ಲಿ ಇಂದು ನಾವು ತಿನ್ನಲು ಅಸಹ್ಯ ಪಟ್ಟುಕೊಳ್ಳುತ್ತಿರುವ ಇಲಿ, ಹಾವು, ಮುಂಗಸಿ, ಮುಂತಾದ ಪ್ರಾಣಿಗಳನ್ನು, ಕೊಂದು ಸುಟ್ಟು ತಿನ್ನುವ ಪರಿಕ್ರಮ ಅನಿವಾರ್ಯತೆ ಅವರಿಗೆ ಒದಗಿತು. ಪ್ರಾಯಶಃ ಇಂತಹ ನಿಷೇಧಿತ ಪ್ರಾಣಿಗಳ ಮಾಂಸಕ್ಕೆ ಮನಸೋತ ಕೆಲವು ಬುಡಕಟ್ಟಿನವರು ಇಂದಿಗೂ ಈ ತೆರನ ಪ್ರಕ್ರಿಯೆಯಲ್ಲಿ ತೊಡಗಿರುವುದನ್ನು ಕಾಣುತ್ತೇವೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಬುಡಕಟ್ಟು ಜನ ಆಧುನಿಕ ಸಂದರ್ಭದ ಆಹಾರ ಪದ್ದತಿಗಳಿಗೆ ಮನಸೋಲುತ್ತಿದ್ದಾರೆ.

ಬುಡಕಟ್ಟು ಜನರ ನಂಬಿಕೆಗಳು

ಮಾನವ ಬದುಕು ನಂಬಿಕೆಯ ಮೇಲೆ ನಿಂತಿದೆ. ಅದಕ್ಕೆ ಕಿಂಚಿತ್ತಾದರೂ ನಮ್ಮ ವ್ಯವಸ್ಥೆ ಕಂಪಿಸುತ್ತದೆ, ಬುಡಕಟ್ಟು ಜನರ ನಂಬಿಕೆ ಸಂಪ್ರದಾಯಗಳನ್ನು ಶುದ್ದ ಅಕಾಡೆಮಿಕ್ ಮತ್ತು ಜನಪದ ವಲಯ ಅತ್ಯಂತ ಕುತೂಹಲದಿಂದ ಗಮನಿಸುತ್ತದೆ. ರೋಮಾಂಚನಗೊಳ್ಳುತ್ತದೆ ಕುತೂಹಲ ಮತ್ತು ರೋಮಾಂಚನಗಳೇ ಚಿಂತನೆಯ ಮೂಲದ್ರವ್ಯವಾಗಬಾರದು. ಅವುಗಳನ್ನು ಮಾನವೀಕರಣದ ನೆಲೆಯಲ್ಲಿ ನೋಡಬೇಕೆಂಬ ಆಶಯ ಪ್ರಧಾನವಾಗಬೇಕು. ನಮ್ಮ ಬುಡಕಟ್ಟು ನಂಬಿಕೆಗಳು ಪ್ರಕೃತ ಸಂದರ್ಭದಲ್ಲಿ ಎಷ್ಟು ದೂರದಲ್ಲಿ ಇಲ್ಲವೆ ಹತ್ತಿರದಲ್ಲಿವೆ ಎಂಬ ಚಿಂತನೆಯ ನೆಲೆಗಟ್ಟಿನಲ್ಲಿ ಇಲ್ಲಿ ಚರ್ಚಿಸಿಕೊಳ್ಳಲಾಗಿದೆ. ಮನುಷ್ಯ ಜೀವನದ ಅತಿಮುಖ್ಯ ಘಟ್ಟಗಳಾದ ಬಾಲ್ಯ ಯೌವನ, ವೃದ್ದಾಪ್ಯ ಮರಣಗಳಿಗೆ ಸಂಬಂಧಿಸಿದಂತೆ ನಂಬಿಕೆಗಳು ಬಲವಾಗಿ ರೂಪಗೊಂಡಿವೆ. ಇವುಗಳೊಟ್ಟಿಗೆ ಪ್ರಕೃತಿಯ ಬುಡಕಟ್ಟು ಜನರ ಮೇಲೆ ಅಪಾರವಾದ ತನ್ನ ಗಾಢವಾದ ಪ್ರಭಾವ ಬೇರಿದೆ. ಸೂರ್ಯ ಚಂದ್ರರ ಉದಯಾಸ್ತಮಾನಗಳು ಗುಡುಗು, ಮಿಂಚು, ಮಳೆ, ಚಳಿ, ಗಾಳಿ, ಬೇಸಿಗೆಗಳು ಬುಡಕಟ್ಟು ಜನರ ನಂಬಿಕೆಗಳಿಗೆ ತಾಯಿಯಂತೆ ವರ್ತಿಸಿವೆ. ಸಂಶೋಧನೆಗೆಂದು ನಗರಿಕ ವ್ಯಕ್ತಿಯೊಬ್ಬ ಬುಡಕಟ್ಟು ಸಮುದಾಯದ ಕಾಡಿನೊಳಗೆ ಪ್ರವೇಶ ಮಾಡುತ್ತಾನೆ. ಆ ಸಮಯದಲ್ಲಿ ಸೂರ್ಯ ಗ್ರಹಣದಿಂದ ಕತ್ತಲು ಆವರಿಸಿರುತ್ತದೆ. ಭಯ ಬೀತರಾದ ಕಾಡು ಜನರು ಈತನನ್ನು ಬಳ್ಳಿಗಳಿಂದ ಬಂಧಿಸಿರುತ್ತಾರೆ. ಕೆಲವು ಗಂಟೆಗಳ ನಂತರ ಗ್ರಹಣ ವಿಮೋಚನೆಯಾಗುತ್ತದೆ. ಅದಕ್ಕೆ ಈತನೇ ಕಾರಣವೆಂದು ತಿಳಿದು ಅವನನ್ನು ದೈವಸ್ವರೂಪಿಯಾಗಿ ಕಾಣುತ್ತಾರೆ. ಗರ್ಭದಾನದ ವಿಚಾರವಾಗಿ ಕೆಲವು ಬುಡಕಟ್ಟು ಜನರು ತಮ್ಮದೇ ನಂಬಿಕೆ ಹೊಂದಿದ್ದಾರೆ. ಗರ್ಭದಾನವು ಕೇವಲ ಲೌಕಿಕ ವ್ಯವಹಾರವಲ್ಲ ಅದೊಂದು ಮತಸಂಸ್ಕಾರ. ಆಕಾಲದಲ್ಲಿ ಪಿತೃಗಳನ್ನು ಆಹ್ವಾನಿಸಬೇಕು. ಗಂಡನಲ್ಲಿ ಆವಿಭೂತವಾದ ಪ್ರೇತವು ಹೆಂಡತಿಯ ಗರ್ಭವನ್ನು ಸೇರಬೇಕು ಎಂಬ ನಂಬಿಕೆಯಿದೆ. ಗರ್ಭಿಣಿಯಾದವಳು ಮೀನನ್ನು ತಿಂದರೆ ಪಿಂಡವು ಮೀನಿನಂತೆ ಬಳುಕುತ್ತದೆ. ಮೊಲವನ್ನು ತಿಂದರೆ ಮಗುವಿನ ಕಾಲುಗಳು ಮೊಲದ ಕಾಲುಗಳಂತಾಗಿ ಅದು ನಡೆಯದಿರಬಹುದು. ಬೋರ‍್ನಿಯಾದ ಕೆಲವು ಬುಡಕಟ್ಟು ಜನರಲ್ಲಿ ಹೆರಿಗೆಯ ಸಮಯದಲ್ಲಿ ಮಂತ್ರವಾದಿಯೊಬ್ಬ ಹೊಟ್ಟೆಯ ಮೇಲೆ ಕಲ್ಲು ಗುಂಡನ್ನು ಇಟ್ಟುಕೊಳ್ಳುತ್ತಾನೆ.

ಕರ್ನಾಟಕದ ಬೆಟ್ಟ ಕುರುಬರ ಸಂಪ್ರದಾಯದಲ್ಲಿ ಯಾವ ಗರ್ಭಣಿಯೇ ಆಗಲಿ ಅವಳು ಹೆರಿಗೆಯ ಸಮಯದಲ್ಲಿ ಮನೆಬಿಟ್ಟು ಬೇರೊಂದು ಗುಡಿಸಲಿನಲ್ಲಿ ವಾಸಿಸಬೇಕು. ಕೆಲವು ಬುಡಕಟ್ಟುಗಳಲ್ಲಿ ಅವಳಿ ಮಕ್ಕಳು ಜನನವಾದರೆ ಸಮಾಜಕ್ಕೆ ವಿಪತ್ತು ಉಂಟಾಗುತ್ತದೆಯೆಂಬ ಶಂಕೆಯಿಂದ  ಮಕ್ಕಳನ್ನಾಗಲಿ ತಾಯಿಯನ್ನಾಗಲಿ ಕೊಲ್ಲುವ ಸಂಪ್ರದಾಯವುಂಟು. ಅದರ ಸಫಲೆ ಇರಬಾರದೆಂದು ಹೆರಿಗೆಯಾದ ಮನೆಯನ್ನು ಸುಡುತ್ತಿದ್ದರು. ಇನ್ನು ಕೆಲವು ಬುಡಕಟ್ಟುಗಳಲ್ಲಿ ತಾಯಿ ಮಕ್ಕಳನ್ನು ದ್ವೀಪಾಂತರಕ್ಕೆ ರವಾನೆ ಮಾಡಲಾಗುತ್ತದೆ. ಕೇರಳದ ಕಾಡಾರ ಜನಾಂಗದಲ್ಲಿ ಹುಡುಗ-ಹುಡುಗಿಯರು ಪ್ರಾಢಾವಸ್ಥೆಗೆ ಬಂದಾಗ ಪಲ್ಲಿಕೊಟ್ಟ ಕಲ್ಯಾಣಂಎಂಬ ಸಂಸ್ಕಾರ ನಡೆಸುತ್ತಾರೆ. ಈವಿಧಿಯಲ್ಲಿ ಹುಡುಗ ಹುಡುಗಿಯರ ಮುಂದಿನ ನಾಲ್ಕು ಹಲ್ಲುಗಳನ್ನು ಉಳಿಯಿಂದ ಚೂಪಾಗಿ ತ್ರಿಕೋನಾಕಾರವಾಗಿ ಸಾಣೆ ಹಿಡಿಯುತ್ತಾರೆ. ಲೈಂಗಿಕ ಮಿಲನದಿಂದ ಭೂಮಿಯ ಫಲವತ್ತತೆ ಹೆಚ್ಚಿಸಬಹುದು ಎಂಬ ನಂಬಿಕೆಯೊಂದಿಗೆ ಜಾವಾದ ಕೆಲವು ಭಾಗಗಳಲ್ಲಿ ಗೆದ್ದೆಯಲ್ಲಿ ಬೆಳೆಯನ್ನು ಹೆಚ್ಚಿಸಲು ರೈತರು ಮಡದಿಯೊಡನೆ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದರು. ಪೆರು ದೇಶದಲ್ಲಿ ಕೋಯ್ಲಿನ ಕಾಲದಲ್ಲಿ ಆಚರಿಸುವ ಹಬ್ಬದಲ್ಲಿ ಸ್ತ್ರೀ ಹಾಗೂ ಪುರುಷರು ನಗ್ನರಾಗಿ ಇಚ್ಚೆ ಬಂದವರೊಡನೆ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದರು.

ಪೆರು ಬುಡಕಟ್ಟಿನವರು ಕೃಷಿಗೆ ತೀರ ಅವಶ್ಯವಾದ ಮಳೆಯನ್ನು ತರಿಸುವ ಮಾಂತ್ರಿಕ ವಿಧಿಯನ್ನು ಸ್ತ್ರೀಯೆ ಆಚರಿಸ ಬೇಕೆಂದು ನಂಬಿದ್ದಾರೆ. ಸರ್ವಿಯಾದಲ್ಲಿ ಕ್ಷಾಮದ ಕಾಲದಲ್ಲಿ ಸ್ತ್ರೀಯೊಬ್ಬಳನ್ನು ನಗ್ನಗೊಳಿಸಿ ಆಕೆಯನ್ನು ಹೂವಿನಿಂದ ಅಲಂಕರಿಸಿತ್ತಿದ್ದರು. ಮತ್ತೆ ಅರೆ ನಗ್ನ ಸ್ಥಿತಿಯಲ್ಲಿ ಪ್ರತಿಯೊಂದು ಮನೆಯ ಮುಂದೆ ನರ್ತನೆ ಮಾಡುತ್ತಿರುವ ಸಂದರ್ಭದಲ್ಲಿ ಆ ಮನೆಯವರು ಹೊರಬಂದು ಆಕೆಯ ತಲೆಯ ಮೇಲೆ ಒಂದು ತಂಬಿಗೆ ನೀರನ್ನು ಸುರಿಯುವ ಸಂಪ್ರದಾಯವಿದೆ. ನಮ್ಮ ಸಂದರ್ಭದಲ್ಲಿ  ಮಳೆ ಬಾರದಿದ್ದಾಗ ಕತ್ತೆ ಮೆರವಣಿಗೆಯನ್ನು ನಡೆಸುವುದನ್ನು ನೋಡುತ್ತೇವೆ.

ತೆಹರಿ ಗರ್ವಾಲದ ಆದಿವಾಸಿಗಳು ಒಬ್ಬ ವ್ಯಕ್ತಿಯನ್ನು ಹಿಡಿತಂದು ಅವನಿಗೆ ನಾನಾ ರೀತಿಯ ಚಿತ್ರಹಿಂಸೆಗಳನ್ನು ಕೊಡುತ್ತಾರೆ. ಅವನ ಕಣ್ಣೀರು ಹಾಗೂ ರಕ್ತ ಹರಿದಂತೆ ಮಳೆ ಬರಲಿ ಎಂಬುವದು ಅವರ ನಂಬಿಕೆ. ಬುಡಕಟ್ಟು ಜನರ ನಂಬಿಕೆಗಳು ಇಂದು ನಮಗೆ ಅವೈಜ್ಞಾನಿಕವಾಗಿ ಮೂಢನಂಬಿಕೆಗಳಂತೆ ತೋರುವುದರಲ್ಲಿ ಆಶ್ಚಯವಿಲ್ಲ ಆದರೂ ಅವುಗಳಲ್ಲಿರುವ ಸತ್ಯಾಸತ್ಯತೆಗಳನ್ನು ಶೋಧಿಸಿ ಜೀವನದಲ್ಲಿ ಅವಳವಡಿಸಿಕೊಳ್ಳಬಹುದಾಗಿದೆ. ಸತ್ತವರ ದೇಹಗಳನ್ನು  ಬುಡಕಟ್ಟುಗಳು ಪ್ರಾಣಿ ಪಕ್ಷಿಗಳಿಗೆ ತಿನ್ನಲು ಬಿಟ್ಟುಬುಡುತ್ತಿದ್ದರು. ನಾಗರಿಕ ಮನುಷ್ಯ ಶವಸಂಸ್ಕಾರ ಪದ್ದತಿಯನ್ನು ಪ್ರಾಣಿ ಪಕ್ಷಿಗಳಿಂದ ಕಲಿತ ಎಂಬ ಸಂಗತಿಯನ್ನು ಗಮನಿಸಿದ್ದೇವೆ. ಕಾಡುಕುರುಬರಲ್ಲಿ ಶವವನ್ನು ಗುಂಡಿಯ ಪಕ್ಕದಲ್ಲಿ ಇರಿಸಿ, ಹಾಡಿಯ ಯಜಮಾನ ಹೀಗೆ ಹೇಳುತ್ತಾನೆ. ‘ನಾನು ಜೀವಿಸಿದ್ದಾಗ ನಿನ್ನ ಮಕ್ಕಳು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಈಗ ಅವರು ನಿನ್ನನ್ನು ಪ್ರೀತಿಯಿಂದ ಸ್ವರ್ಗಕ್ಕೆ ಕಳುಹಿಸಿದ್ದಾರೆ. ಪ್ರೀತಿಯ ಕಾಣಿಕೆಗಾಗಿ ನಿನ್ನ ಬಾಯಿಗೆ  ಹಣ ಇಡುತ್ತಾರೆ ಬಾಯಿ ಬಿಡು’ ಎನ್ನುತ್ತಾನೆ. ಹಣವನ್ನು ಸತ್ತ ಹೆಣದ ಬಾಯಿಲ್ಲಿ ಇಡುವುದನ್ನು ಈ ಹಿಂದಿನ ಕೆಲವು ವರ್ಷಗಳಲ್ಲಿ ನಾನೇ ನೋಡಿದ್ದೇನೆ.

ಬುಡಕಟ್ಟು ಜನರಲ್ಲಿ ಗಂಡನನ್ನು ಹೆಂಡತಿ ಹೆಸರು ಹಿಡಿದು ಕರೆಯುವುದಿಲ್ಲ ನಮ್ಮವರು ನಮ್ಮ ಯಜಮಾನರು ಎಂದೇ ಹೇಳಿಕೊಳ್ಳಬೇಕು. ಗಂಡನ ಹೆಸರು ಹಿಡಿದು ಕದರೆ ಆಯಸ್ಸು ಕಡಿಮೆಯಾಗುತ್ತದೆಂದು ನಂಬುತ್ತಾರೆ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಈ ನಂಬಿಕೆ ಇನ್ನು ಜೀವಂತವಿದೆ. ಒಂದೇ ರಕ್ತ ಸಂಬಂಧದಲ್ಲಿ ವಿವಾಹವಾಗುವುದನ್ನು ಕೆಲವು ತಿರಸ್ಕರಿಸಿದರೆ ಇನ್ನು ಕೆಲವರು ಪುರಸ್ಕರಿಸುತ್ತಾರೆ. ರಕ್ತ ಸಂಬಂಧಿಗಳನ್ನು ವಿವಾಹವಾದರೆ ಅದರಿಂದ ಕೇಡು ಖಂಡಿತವೆಂದು ನಂಬಿ ಅದನ್ನು ನಿರಾಕರಿಸುತ್ತಾರೆ. ದಕ್ಷಿಣ ಆಫ್ರಿಕಾದ ಕಫೀರರೂ ಯಗಾಂಢದ ಬಸೋಗರು, ಇಂಥ ಸಂಬಂಧದಿಂದ ಹುಟ್ಟಿದ ಮಕ್ಕಳು ಮೂಗರು, ಕಿವುಡರು, ಬುದ್ದಿಮಾಂದ್ಯರೂ ಆಗುತ್ತಾರೆಂದು ನಂಬುತ್ತಾರೆ. ಈ ನಂಬಿಕೆ ಈಗಲೂ ಅತ್ಯಂತ ಬಲವಾಗಿರುವುದನ್ನು ಕಾಣುತ್ತೇವೆ. ಕುಲಶುದ್ದತೆಗಾಗಿ ಬುಡಕಟ್ಟು ಜನಪದದವರು ಅನ್ಯ ರಕ್ತಸಂಬಂಧಿಗಳೊಟ್ಟಿಗೆ ವಿವಾಹವನ್ನು ನಿರಾಕರಿಸುವ ಸಂದರ್ಭಗಳನ್ನು  ಕಾಣುತ್ತೇವೆ. ಕೆಲವು ಬುಡಕಟ್ಟುಗಳಲ್ಲಿ ಅತ್ತೆ-ಅಳಿಯನನ್ನು ನೋಡುವುದಿಲ್ಲ ಜಾವಾದ್ವೀಪದ ಒಂದು ಸಂಪ್ರದಾಯದಂತೆ ಎಂತಹ ಯೋಧನಾದರೂ ಅತ್ತೆಯನ್ನು ಕಂಡ ಕೂಡಲೇ ಮುಖ ತೋರಿಸದೆ ಪೊದೆಯೊಳಗೆ ಅಡಿಗಿಕೊಳ್ಳುತ್ತಾನಂತೆ ಆರುಂಟು ಸಂಪ್ರದಾಯದ ಜನರು ಅತ್ತೆ, ಅಳಿಯನ ಗುಡಿಸಲಿನ ಹತ್ತಿರ ಬಂದರೆ ಅವಳು ಬಹಿಷ್ಕಾರಕ್ಕೆ ಒಳಗಾಗಬೇಕಾಗುತ್ತದೆ. ಮಲೆನಾಡು ಕಾಡು ಜನರಲ್ಲಿ ಇದೇ ಸಂಪ್ರದಾಯವಿದೆ. ಈ ಹೊತ್ತಿನ ಕೆಲವು ಜನರಲ್ಲೂ ಈ ಸಂಪ್ರದಾಯ ಹೊಸರೂಪ ಪಡೆದಿದೆ.

* * *