ಕರ್ನಾಟಕದ ಒಟ್ಟು ೫೦ ಪರಿಶಿಷ್ಟ ವರ್ಗಗಳಲ್ಲಿ ಬೆಟ್ಟ ಕುರುಬ ಸಮುದಾಯವು ಒಂದು. ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ಹುಣಸೂರು ಮತ್ತು ಹೆಚ್.ಡಿ. ಕೋಟೆ ತಾಲೂಕು ಮಡಿಕೇರಿ ಜಿಲ್ಲೆ, ವಿರಾಜಪೇಟೆ ತಾಲೂಕಿನ ಅನೇಕ ಹಾಡಿಗಳಲ್ಲಿ ಮತ್ತು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕುಗಳಲ್ಲಿ ಈ ಬುಡಕಟ್ಟು ಜನಾಂಗದವರನ್ನು ಕಾಣಬಹುದು. ೧೯೭೧ನೇ ಇಸವಿ ಜನಗಣತಿ ಪ್ರಕಾರ ಇವರ ಜನಸಂಖ್ಯೆ ೩೪,೭೩೫ ಮತ್ತು ೧೯೮೧ರ ಜನಗಣತಿಯಲ್ಲಿ ೨ ಲಕ್ಷಕ್ಕೆ ಮೀರಿದೆ. ಇದಕ್ಕೆ ಪ್ರಮುಖ ಕಾರಣ ಬೇರೆ ಸಮುದಾಯಗಳು ಬೆಟ್ಟ ಕುರುಬರ ಹೆಸರಿನಲ್ಲಿ ನೊಂದಾಯಿಸಿದ್ದರಿಂದ ಈ ರೀತಿಯ ಏರು-ಪೇರು ಕಾಣಬಹುದಾಗಿದೆ. ಸರ್ಕಾರದ ಸವಲತ್ತುಗಳಿಗಾಗಿ ಈ ರೀತಿಯಲ್ಲಿ ಒಂದೇ ಸಮನೆ ಜನಸಂಖ್ಯೆ ಹೆಚ್ಚುತ್ತಾ ಹೋಗಿದೆ.  ಇವರ ಭಾಷೆ ಕನ್ನಡಕ್ಕಿಂತ ಭಿನ್ನವಾಗಿದ್ದು, ಆ ಜನಾಂಗದವರಿಗೆ ಮಾತ್ರ ಅರ್ಥವಾಗುತ್ತದೆ. ಬೇರೆಯವರೊಂದಿಗೆ ಕನ್ನಡದಲ್ಲಿ ಮಾತನಾಡುತ್ತಾರೆ. ಬೆಟ್ಟ ಕುರುಬರ ಮತ್ತು ಜೇನು ಕುರುಬರಲ್ಲಿ ಅಷ್ಟೇನು ಮಹತ್ವದ ವ್ಯತ್ಯಾಸವನ್ನು ಕಾಣುವುದಿಲ್ಲ. ಆದರೂ ಕುಲ ಕಸುಬು, ಜೀವನ ಶೈಲಿ, ಉಡುಗೆ ತೊಡಿಗೆಯಲ್ಲಿ ವ್ಯತ್ಯಾಸವನ್ನು ಕಾಣಬಹುದು. ಬೆಟ್ಟ ಕುರುಬ ಮತ್ತು ಜೇನುಕುರುಬರ ಬಹುತೇಕ ಕುಟುಂಬಗಳು ನಾಗರಹೊಳೆ ಅಭಯಾರಣ್ಯದ ಪ್ರದೇಶದಲ್ಲಿ ಇಂದಿಗೂ ಅನೇಕ ಹಾಡಿಗಳಲ್ಲಿ ಕಾಣಬಹುದು. ಮಾಲದ ಹಾಡಿ ಎ. ಕಾಲೋನಿ, ಶೆಟ್ಟಿಹಳ್ಳಿ ಕಾರಾಪುರ, ಜಂಗಲ್ ಲಾಡ್ಜ್ ಸುತ್ತಮುತ್ತಲ ಪ್ರದೇಶ, ಗದ್ದೆಹಾಡಿ, ಗೋಣಿಗದ್ದೆ, ಕುಟ್ಟ, ನಾಗಾಪುರ ಪುನರ್‌ವಸತಿ ಪ್ರದೇಶಗಳಲ್ಲಿ ಗುಂಪುಗುಂಪಾಗಿ ಬೆಟ್ಟ ಕುರುಬರು ವಾಸಿಸುತ್ತಿದ್ದಾರೆ. ಇವರ ವಾಸ ಸ್ಥಳಗಳು ಗುಡಿಸಲುಗಳಾಗಿದ್ದು ಆ ಗುಡಿಸಲುಗಳನ್ನು ಅಲಲ್ಲಿ ಕಟ್ಟಿಕೊಂಡಿರುತ್ತಾರೆ. ಮನೆಗಳೆಂದರೆ ಬಿದಿರಿನ ನೆರಕೆಯಿಂದ ತಯಾರಿಸಿದ ಗೋಡೆಗಳು, ಹುಲ್ಲಿನ ಹೊದಿಕೆಯಿಂದ ಹಾಕಲಾಗಿದೆ. ಒಂದು ಹಾಡಿಯ ಮಧ್ಯಭಾಗದಲ್ಲಿ ಒಂದು ಸ್ಥಳವನ್ನು ಪೂಜಾ ವಿಧಿವಿಧಾನಗಳಿಗಾಗಿ ಕಟ್ಟಿರುವ ಅಂಬಾಲವನ್ನು ನೋಡಬಹುದು. ಈ ಅಂಬಾಲದಲ್ಲಿ ಎಲ್ಲಾ ಶುಭ ಸಮಾರಂಭಗಳನ್ನು ಮದುವೆ ನಿಶ್ಚಯ, ಶ್ರೀಮಂತ, ತಲೆ ಕೂದಲು ತೆಗೆಯುವ ಶಾಸ್ತ್ರಗಳನ್ನು ಈ ಪವಿತ್ರ ಸ್ಥಳದಲ್ಲೇ ಮಾಡುತ್ತಾರೆ. ಯಜಮಾನನ ತೀರ್ಮಾನ, ನ್ಯಾಯ ಪಂಚಾಯಿತಿಯಂತಹ ಎಲ್ಲಾ ಕಾರ್ಯಕ್ರಮವನ್ನು ಇಲ್ಲಿಯೇ ಮಾಡುವುದು.

ಉಡುಗೆ ತೊಡುಗೆ

ನೋಡಲು ಕಪ್ಪು ಬಣ್ಣ, ಗುಂಗುರ ಕೂದಲು, ದಪ್ಪ ತುಟಿ, ಒಣಗಿದ ಚರ್ಮ, ತುಸುದಷ್ಟು ಪುಷ್ಠಿಯಾಗಿ ಕಾಣುವ ಬೆಟ್ಟ ಕುರುಬರು, ಪಂಚೆ ಮತ್ತು ಅಂಗಿಯನ್ನು ಧರಿಸುತ್ತಾರೆ. ಹೆಂಗಸರು ಸೀರೆ ಮತ್ತು ರವಿಕೆಯನ್ನು ಹಾಕುತ್ತಾರೆ. ವಯಸ್ಸು ೫೦ಕ್ಕೆ ಮೇಲ್ಪಟ್ಟ ಹೆಂಗಸರು ರವಿಕೆಯನ್ನು ಹಾಕುವುದಿಲ್ಲ. ಮಧ್ಯವಯಸ್ಸಿನ ಹೆಂಗಸರನ್ನು ಬಹುತೇಕ ‘ನೈಟಿ’ಯಲ್ಲಿ ನೋಡಬಹುದು. ದಿನನಿತ್ಯದ ಕಾರ್ಯದಿಂದ ಹಿಡಿದು ಕೂಲಿಯ ಕೆಲಸದವರೆಗೆ ನೈಟಿಯನ್ನೇ ಧರಿಸುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಇವರು ಕಾಲಿಗೆ ಚಪ್ಪಲಿಯನ್ನು ಹಾಕುವುದಿಲ್ಲ. ಬೀಡಿ, ಸಿಗರೇಟು, ಮಧ್ಯಪಾನ ಬಹುಹೆಚ್ಚಿನ ಮಂದಿಯಲ್ಲಿ ಕಾಣಬಹದು.

ಬೆಟ್ಟ ಕುರುಬರ ಆಹಾರ ಪದ್ಧತಿ

ದಿನ ನಿತ್ಯದ ಆಹಾರ ಮತ್ತು ವಿಶೇಷ ಆಹಾರ ಪದ್ದತಿಯಲ್ಲಿ ಬೆಟ್ಟ ಕುರುಬರನ್ನು ಮಾಂಸಹಾರಿಗಳೆಂದು ನಿರ್ಧರಿಸಬಹುದು. ಇವರು ಕುರಿ, ಕೋಳಿ, ಮೇಕೆ ಮಾಂಸವನ್ನು ತಿನ್ನುತ್ತಾರೆ. ಮೊಲದ ಮಾಂಸ, ಜಿಂಕೆ, ಅಳಿಲು, ಕಡವೆ, ಕಾಡೆಮ್ಮೆ ಮಾಂಸವನ್ನು ಬೇಟೆಯಾಡಿ ತಿನ್ನುತ್ತಿದ್ದರು. ಈಗ ಅರಣ್ಯದಲ್ಲಿ ಬೇಟೆ ನಿಷಿದ್ದವಾದ್ದರಿಂದ ಈ ಕಾಡು ಪ್ರಾಣಿಗಳು ಮತ್ತು ಪಕ್ಷಿಗಳನ್ನು ತಿನ್ನಲು ಸಿಗುತ್ತಿಲ್ಲ. ಸಣ್ಣಪುಟ್ಟ ಎಲ್ಲಾ ಪಕ್ಷಿಗಳನ್ನು ಪುಟ್ಟದಾದ ಬಿಲ್ಲು ಮತ್ತು ಮಣ್ಣಿನ ಹುಂಡೆಯಿಂದ ಮಾಡಿದ ಗೋಲಿಗಳಿಂದ ಬೇಟೆ ಮಾಡಿ ಆಹಾರಕ್ಕಾಗಿ ಕಾಡಿನಲ್ಲಿ ಕೋಳಿ, ಮೈನಾ, ಪುರಲಕ್ಕಿ, ಪುನಗಿನ ಬೆಕ್ಕು, ನವಿಲು, ಗುಬ್ಬಚ್ಚಿಯನ್ನು ಸಹ ಬೇಟೆಯಾಡಿ ತಿನ್ನುತ್ತಾರೆ. ಬೇಟೆಯಾಡಲು ಪ್ರಮುಖವಾದ ಆಯುಧವೆಂದರೆ ಬಿಲ್ಲು. ಅದು ಬಿದಿರಿನಿಂದ ಮಾಡಲಾಗಿದೆ. ಇದನ್ನು ಆನೆಗಳ ಕಾಟವನ್ನು ತಡೆಯಲು ಸಹ ಉಪಯೋಗಿಸುತ್ತಾರೆ. ಕಾಡಿನಲ್ಲಿ ಬೇಟೆಯಾಡಿದ ಪ್ರಾಣಿಗಳನ್ನು ಅಲ್ಲಿಯೇ ಬೆಂಕಿಯಲ್ಲಿ ಸುಟ್ಟು, ಬೊಂಬಿನ ಗೂಟದಲ್ಲಿ ಅನ್ನ ಬೇಯಿಸಿ ಊಟ ಮಾಡುತ್ತಿದ್ದರು. ಈಗ ಸಣ್ಣ ಪುಟ್ಟ ಪಕ್ಷಿಗಳನ್ನು ಬೇಟೆಯಾಡಿದರೆ ಮನೆಗೆ ತಂದು ಅಡುಗೆ ಮಾಡಿ ಊಟ ಮಾಡುತ್ತಾರೆ. ಗುಂಪಾಗಿ ಬೇಟೆಯಾಡಿದರೆ ಅದನ್ನು ಸಮಪಾಲು ಭಾಗ ಮಾಡಿ ಇಡೀ ಹಾಡಿಯವರೆಲ್ಲ ಹಂಚಿ ತಿನ್ನುತ್ತಾರೆ. ಮನೆಯಂಗಳದಲ್ಲಿ ಬೆಳೆದ ಸಾಂಬಾರ ಪದಾರ್ಥಗಳನ್ನು ಕಲ್ಲಿನ ಮೇಲೆ ರುಬ್ಬಿ ಮಸಾಲೆ ತಯಾರಿಸಿ ಗಮ್ಮತ್ತು ಊಟವನ್ನು ಮಾಡುತ್ತಾರೆ. ಈ ಸಂದರ್ಭದಲ್ಲಿ ಮಧ್ಯ ಸೇವನೆ ಇರುತ್ತದೆ. ಇದರಲ್ಲಿ ಎಲ್ಲರೂ ಸೇಇ ಕುಡಿದು ಆಹಾರ ಸೇವಿಸುತ್ತಾರೆ. ರಾತ್ರಿಯ ಊಟವಾದರೆ ಅಂಗಳದಲ್ಲಿ ಬೆಂಕಿ ಹಾಕಿಕೊಂಡು ಸುತ್ತಲೂ ಎಲ್ಲರೂ ಸೇರಿ ಆಹಾರ ಸೇವಿಸಿ ಅಲ್ಲಿಯೇ ಬೆಂಕಿಯ ಸುತ್ತಾ ಮಲಗುವುದುಂಟು.

ಜೇನು ತುಪ್ಪ ಇದು ವರ್ಷದಲ್ಲಿ ಕೆಲವೊಮ್ಮೆ ಮಾತ್ರ ದೊರೆಯುತ್ತದೆ. ಆಹಾರದಲ್ಲೂ ಉಪಯೋಗಿಸುತ್ತಾರೆ. ಇದರೊಂದಿಗೆ ಕಾಡಿನಲ್ಲಿ ಅರಣ್ಯ ಉತ್ಪನ್ನ ಸಂಗ್ರಹಿಸಲು ಹೊರಟಾಗ ಹಸಿವಿಗೆ ಜೇನುತುಪ್ಪ ಸಂಗ್ರಹಿಸಿ ಅದರೊಂದಿಗೆ ಹುಟ್ಟಿನ ಭಾಗ ಮತ್ತು ಕಾಡಿನಲ್ಲಿ ಸಿಗುವ ಸಿಹಿಗೆಣಸು, ಸೊರೆಗೆಣಸು, ಮರಗೆಣಸು, ಕಿತ್ತು ಬೆಂಕಿಯಲ್ಲಿ ಸುಟ್ಟು ಜೇನುತುಪ್ಪದೊಂದಿಗೆ ಆಹಾರವಾಗಿ ಬಳಸುತ್ತಾರೆ. ವರ್ಷದಲ್ಲಿ ಸುಮಾರು ೫ ರಿಂದ ೬ತಿಂಗಳ ಕಾಲ ಅನೇಕ ದಿನಗಳಲ್ಲಿ ಈ ಗೆಣಸು ಮತ್ತು ಜೇನು ತುಪ್ಪವನ್ನು ಸೇವಿಸಬೇಕು. ಇದು ಅವರು ಆರೋಗ್ಯದ ರೀತಿಯಲ್ಲಿ ಇವರಿಗೂ ಕಚ್ಚದ ಹಾಗೆ ವಿಶೇಶವಾದ ಸೊಪ್ಪಿನ ಹೊಗೆಯಿಂದ ನೊಣಗಳನ್ನು ಬೆದರಿಸಿ ಜೇನುತುಪ್ಪ ಸಂಗ್ರಹಿಸುತ್ತಾರೆ. ಹೆಚ್ಚಾಗಿ ಸಂಗ್ರಹಿಸಿದ ತುಪ್ಪ ಮಳೆಗಾಲದ ಸಮಯಕ್ಕೆ ಔಷಧಿ ಮಾಡಲು ಉಪಯೋಗಿಸುತ್ತಾರೆ. ಅಳಲೇಕಾಯಿಯೊಂದಿಗೆ ಬೆರೆಸಿ ಕೆಮ್ಮಿಗೆ ಉಪಯೋಗಿಸುತ್ತಾರೆ.

ಸೊಪ್ಪು : ಕಾಡಿನಲ್ಲಿ ಸಿಗುವ ಪ್ರಮುಖ ಸೊಪ್ಪುಗಳಾಗಿ ಅಣ್ಣೆ ಸೊಪ್ಪು, ದಂಡು ಕಿರೆಕಿರಿ ಸೊಪ್ಪನ್ನು ಮಳೆಗಾಲದ ಸಮಯದಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದು ಇವರ ಮುಖ್ಯ ಆಹಾರವಾಗಿರುತ್ತದೆ.

ಅಣಬೆ : ಮಳೆಗಾಲದಲ್ಲಿ ಸಿಗುವಂತಹ ಬಹುತೇಕ ಅಣಬೆಗಳಲ್ಲಿ ಆಣೆ ಅಣಬೆ, ಕರಿ ಅಣಬೆ, ನಾಗರ ಅಣಬೆಯಂತಹ ಅಣಬೆಯನ್ನು ತಿನ್ನುವುದಿಲ್ಲ. ಮರದ ದಿಮ್ಮಿಗಳ ಮೇಲೆ ಕಾಡಿನಲ್ಲಿ ಹೆಚ್ಚಾಗಿ ಸಿಗುವ ಈ ಅಣಬೆಯನ್ನು ಆಹಾರವಾಗಿ ಬಳಸುತ್ತಾರೆ. ಹೊಲಗಳಲ್ಲಿ ಬೆಳೆಯುವ ರಾಗಿ, ಅವರೆ, ತೊಗರಿ, ಬೇರು ಅಣಬೆ ಕಲ್ಲು ಅಣಬೆ ಸರಗಾಲಿ ಬರೆಕಾಟಿ ಇತ್ಯಾದಿ ಬಳಸುತ್ತಾರೆ.

ಹಣ್ಣುಗಳು : ಹಲಸು, ಮಾವು, ಗೇರು, ಹುಲುಗಾದ ಹಲ್ಲೇ ಗೆಂರ್ಜಿ, ಕಾಡು ಬಾಳೆ, ನೆಲ್ಲಿಕಾಯಿ ಕಾವೆಹಣ್ಣು, ಟೊಟ್ಟೆಹಣ್ಣುಗಳನ್ನು ಇವರು ಆಹಾರಕ್ಕಾಗಿ ಬಳಸುತ್ತಾರೆ. ಅಕ್ಕಿ, ಗೋಧಿ, ಸಕ್ಕರೆ ಮತ್ತು ತಾಳೆ ಎಣ್ಣೆಯನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ. ಈಗ ಅವರು ಎಸ್ಟೇಟ್‌ಗಳಲ್ಲಿ ಕೆಲಸ ಮಾಡುವುದರಿಂದ ಹೆಚ್ಚಾಗಿ ಈ ರೇಷನ್ ವಸ್ತುಗಳನ್ನೇ ಬಳಸುತ್ತಾರೆ. ಪ್ರತಿನಿತ್ಯ ಎಸ್ಟೇಟ್ ಮಾಲೀಕರು ಒಂದು ಸೇರು ಅಕ್ಕಿ, ಕೂಲಿಯೊಂದಿಗೆ ನೀಡುವುದರಿಂದ ಅಕ್ಕಿಯನ್ನೇ ಹೆಚ್ಚಾಗಿ ಬಳಸುತ್ತಾರೆ. ಕಾಡು ದೂರವಿರುವದರಿಂದ ಕಾಡಿನ ಆಹಾರ ಪದಾರ್ಥಗಳು ಸಿಗುತ್ತಿಲ್ಲ. ಬದಲಾಗಿ ಟೋಮಾಟೋ, ಆಲೂಗೆಡ್ಡೆ, ಈರುಳ್ಳಿ, ಕೋಸುಗಡ್ಡೆ, ಕ್ಯಾರೆಟ್ ಬಳಸುತ್ತಾರೆ. ಅಪರೂಪಕ್ಕಾದರೂ ಕಾಡಿನ ಸೊಪ್ಪುಗಳನ್ನು ತಂದು ತಿನ್ನುತ್ತಾರೆ. ಕಾರಣ ಇದು ಅವರ ಅರೋಗ್ಯಕ್ಕೆ ಉಪಕಾರಿ ಎಂದು ಭಾವಿಸುತ್ತಾರೆ. ಮಳೆಗಾಲದಲ್ಲಿ ಬಿದುರಿನ ಎಳೆಯ ಕಲೆಯನ್ನು ಉಪ್ಪಿನಕಾಯಿ, ಪಲ್ಯಕ್ಕೆ ಉಪಯೋಗಿಸುತ್ತಾರೆ. ಇದು ಹೆಚ್ಚಿನ ಪೌಷ್ಠಿಕ ಆಹಾರ ಹೌದು.

ಎಲೆ ಅಡಿಕೆ ಮತ್ತು ಹೊಗೆಸೊಪ್ಪು (ವಯಸ್ಸಾದವರು) : ಕಾಡಿನಲ್ಲಿ ಸಿಗುವ ಅರಿಶಿಣ, ಅಂಟುವಾಳ, ಸೀಗೆಕಾಯಿ, ನೆಲನೆಲ್ಲಿ, ಅಳಲೆ ಕಾಯಿ, ಗುಲಗಂಜಿ ಗಜ್ಜಗ, ತೇಗದಬೀಜ, ಬೇವಿನಬೀಜ, ಹೊಂಗೆ ಬೀಜಗಳನ್ನು ಬಗೆ ಬಗೆಯ ಬೀಜಗಳನ್ನು ಔಷಧಿಯಾಗಿ ಉಪಯೋಗಿಸುತ್ತಾರೆ.

ಆಹಾರ ಪದ್ಧತಿ : ಇದರ ಉಪಯೋಗ ಕಡಿಮೆ, ಬೇಸಿಗೆಯಲ್ಲಿ ಮಜ್ಜಿಗೆಯನ್ನು ಪಕ್ಕದ ರೈತರ ಮನೆಯಿಂದ ಸಂಗ್ರಹಿಸುತ್ತಾರೆ. ಮೊಟ್ಟೆಯನ್ನು ಉಪಯೋಗಿಸುತ್ತಾರೆ. ಬೆಟ್ಟ ಕುರುಬರು ದಿನಕ್ಕೆ ಎರಡು ಬಾರಿ ಊಟ ಮಾಡುತ್ತಾರೆ. ಬೆಳಿಗ್ಗೆ ಏಳರಿಂದ ಎಂಟರೊಳಗೆ ಊಟ ಸೇವಿಸುತ್ತಾರೆ. ರಾಗಿ ಗಂಜಿ ಅಥವಾ ಮುದ್ದೆ ಅಥವಾ ಅನ್ನವನ್ನು ಸಾರಿನೊಂದಿಗೆ ಅಥವಾ ಚಟ್ನಿಯನ್ನು ಮಾಡಿ ಸೇವಿಸುತ್ತಾರೆ. ಎಸ್ಟೇಟ್‌ಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಮಾತ್ರ ಮಧ್ಯಾಹ್ನದ ಊಟವನ್ನು ಸಹ ಮಾಡುತ್ತಾರೆ. ಹೆಣ್ಣುಮಕ್ಕಳು ಋತುಮತಿಯಾದ ಸಮಯದಲ್ಲಿ ಹಣ್ಣು ಹಂಪಲು, ಹಾಲು, ಬೇಳೆಯಕಾಳುಗಳಿಂದ ಮಾಡಿದ ಆಹಾರವನ್ನು ನೀಡುತ್ತಾರೆ. ದ್ರಾಕ್ಷಿ, ಉತ್ಪತ್ತಿಯಂತಹ ಒಣಗಿದ ಹಣ್ಣನ್ನು ತುಪ್ಪದೊಂದಿಗೆ ಬೆರೆಸಿ ನೀಡುತ್ತಾರೆ. ಪ್ರತಿನಿತ್ಯ ಎರಡು ಬಾರಿ ಸ್ನಾನ ಮತ್ತು ಮೂರು ಬಾರಿ ಊಟವನ್ನು ನೀಡುತ್ತಾರೆ. ಬೇಕರಿ ತಿಂಡಿ ತಿನಿಸುಗಳನ್ನು ತಂದು ಕೊಡುತ್ತಾರೆ. ಸೋದರ ಮಾವನ ಕಡೆಯವರು ಮಾಂಸ ಮತ್ತು ಮೊಟ್ಟೆಯನ್ನು ೧೨ನೇ ದಿನದ ಬಳಿಕ ಅಥವಾ ಒಂದು ದಿನದ ಬಳಿಕ ಪ್ರತಿನಿತ್ಯ ನೀಡುತ್ತಾರೆ. ಈ ಸಮಯದಲ್ಲಿ ಮಗಳನ್ನು ಕೆಲಸಕ್ಕೆ ಮತ್ತು ಶಾಲೆಗೆ ಕಳುಹಿಸುವುದಿಲ್ಲ. ಅನೇಕ ಬೆಟ್ಟ ಕುರುಬರು ಋತುಮತಿಯ ನಂತರ ಶಾಲೆಯನ್ನೇ ಬಿಡಿಸುತ್ತಾರೆ. ಕಾರಣ ಅಲ್ಲಿ ಅವರ ಆರೈಕೆ ಮತ್ತು ಶಾಲಾ ಬಟ್ಟೆಗಳು ಮೈ ಮುಚ್ಚಿಕೊಳ್ಳುವುದಿಲ್ಲ ಮತ್ತು ಇನ್ನು ಅನೇಕ ಕಾರಣಗಳನ್ನು ನೀಡುತ್ತಾರೆ. ಹೀಗೆ ಕಾಡು ಮತ್ತು ಬೆಟ್ಟ ಕುರುಬರ ಆಹಾರ ಪದ್ಧತಿ ಮೊದಲಿನಿಂದಲೂ ದೇಶಿಯ ಪರಂಪರೆಯನ್ನು ಹೊಂದಿದ್ದು ವಿಶಿಷ್ಟವಾಗಿರುವಂತಹ ವಿಶೇಷಗುಣಗಳನ್ನು ಹೊಂದಿರುವಂತಹ ಆಹಾರವನ್ನು ಇಂದಿಗೂ ಸೇವಿಸುತ್ತಿರುವುದು ಮತ್ತು ಅದನ್ನು ಬುಡಕಟ್ಟು ಸಂಸ್ಕೃತಿಯಲ್ಲಿ ಕಾಪಾಡಿಕೊಂಡು ಬಂದಿರುವ ಪದ್ಧತಿಯನ್ನು ನೋಡಿದರೆ ಬುಡಕಟ್ಟು ಸಂಸ್ಕೃತಿ ಆಧುನಿಕತೆಯ ಗಾಳಿಯ ಸೋಂಕನ್ನು ನಿರ್ಲಕ್ಷಿಸಿ ನಿಜವಾದ ತಮ್ಮ ಆಹಾರ ಪದ್ಧತಿಯನ್ನು ಕಾಪಾಡಿಕೊಂಡು ಹೋಗಿರುವುದು ಆ ಜನಾಂಗದ ಶ್ರೀಮಂತ ಸಂಸ್ಕೃತಿ ಎಂದೇ ಭಾವಿಸಬೇಕಾಗುತ್ತದೆ.

* * *