ಕರ್ನಾಟಕ ಮಹಾರಾಷ್ಟ್ರ ಗಡಿಯ ಅಥಣಿಯಲ್ಲಿ ಎರಡು ದಿನಗಳ ಕಾಲ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕದಲ್ಲಿರುವ ನಾನಾ ಬುಡಕಟ್ಟುಗಳ ಪುನವರ್ಸತಿ, ಆಹಾರ ಪದ್ಧತಿ ಔಷದೋಪಚಾರಗಳು, ಮಹಿಳೆಯರ ಆರೋಗ್ಯ ಸುಧಾರಣೆಗಳು ಕೆಲ ಸಮುದಾಯಗಳ ಸ್ಥಿತ್ಯಂತರಗಳು, ಬುಡಕಟ್ಟುಗಳ ಅಭಿವೃದ್ಧಿ ಮತ್ತು ಮೂಲಭೂತ ಹಕ್ಕುಗಳು, ಬುಡಕಟ್ಟುಗಳ ಪುನರ್ ವ್ಯಾಖ್ಯಾನ, ನಂಬಿಕೆಗಳು, ಸಾಂಸ್ಕೃತಿಕ ಆಚರಣೆಗಳು, ಕಲ್ಯಾಣ ಕಾರ್ಯಕ್ರಮಗಳು ಸಾಮಾಜಿಕ ಸ್ಥಿತಿಗತಿಗಳು, ಕರಕುಶಲಕಲೆಗಳು, ಅವರ ಪರಿವರ್ತನೆಯ ಹಾದಿ, ಕಾಡುಕುರುಬರ ಜೀವನ ಕ್ರಮ, ಬುಡಕಟ್ಟುಗಳ ವೈವಾಹಿಕ ಪದ್ಧತಿ, ಆಧುನಿಕತೆಯ ಜೀವನ ಶೈಲಿಯಿಂದ ಬುಡಕಟ್ಟು ಸಂಸ್ಕೃತಿ ನಾಶ, ಬುಡಕಟ್ಟು ಮಕ್ಕಳ ಆರೋಗ್ಯ ಶಿಕ್ಷಣ, ಸೋಲಿಗರ ಆರೋಗ್ಯ ಪದ್ಧತಿಯಲ್ಲಿ ಆಗುತ್ತಿರುವ ಇತ್ತೀಚಿನ ಬದಲಾವಣೆಗಳು-ಒಟ್ಟಾರೆಯಾಗಿ ಬುಡಕಟ್ಟುಗಳ ಸಂಸ್ಕೃತಿ, ಆಚಾರ, ವಿಚಾರ, ಸಂಪ್ರದಾಯ ಅವರ ಕಷ್ಟ ಸುಖ-ದುಃಖ ದುಮ್ಮಾನಗಳನ್ನು ಇಂದಿನ ಸಮಾಜಕ್ಕೆ, ಸರಕಾರಕ್ಕೆ ಮನವರಿಕೆ ಮಾಡಿಕೊಡುವ ಒಂದು ದಿಟ್ಟ ಪ್ರಯತ್ನ ಇದಾಗಿದೆ.

ಬುಡಕಟ್ಟುಗಳಲ್ಲಿರುವ ಅನನ್ಯವಾದ ಸಂಸ್ಕೃತಿ ಜೀವನಕ್ರಮವನ್ನು ಇಂದಿನ ನಾಗರಿಕ ಪ್ರಪಂಚಕ್ಕೆ ಪರಿಚಯಿಸಿ ಅದರಲ್ಲೂ ಆತ್ಮಾಭಿಮಾನದ ಬದುಕನ್ನು ಸಾಗಿಸುವ ಬುಡಕಟ್ಟುಗಳಿಗೆ ಧೈರ್ಯ ತುಂಬುವ ಕೆಲಸ ಇದಾಗಿದೆ. ಅದರಲ್ಲೂ ಅಥಣಿಯಂತ ಗಡಿಭಾಗದಲ್ಲಿ ಚದುರಿ ಹೋಗಿರುವ ಬುಡಕಟ್ಟುಗಳ ಬಗೆಗೆ ಕನ್ನಡ ವಿಶ್ವವಿದ್ಯಾಲಯದ ವಿದ್ವಾಂಸರಿಂದ ಅದರಲ್ಲೂ ಮುಖ್ಯವಾಗಿ ಸ್ಥಳೀಯ ವಿದ್ವಾಂಸರುಗಳಿಂದ ಮಾಹಿತಿ ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸುವ ಈ ಕೆಲಸ ನಿಜಕ್ಕೂ ಸಮಾಜ ಮುಖಿಯಾದ ಕಾರ್ಯವಾಗಿದೆ.

ಬುಡಕಟ್ಟುಗಳಲ್ಲಿ ತಾವು ವಾಸಿಸುವ ಪರಿಸರದ ಬಗ್ಗೆ, ಆಡುವ ಭಾಷೆಯ ಬಗೆಗೆ, ಸಂಪ್ರದಾಯ ನಂಬಿಕೆಗಳ ಬೆಗೆಗೆ, ಅಪಾರ ಪ್ರೀತಿ, ಅದರಲ್ಲೂ ಅವರು ವಾಸಿಸುವ ಭೂಮಿ ಮಾತೃಭೂಮಿ, ಪರಿಸರ ಅವರಲ್ಲಿ ಪೂಜ್ಯತೆಗೆ ಸಮಾನ. ಅವರಲ್ಲಿ ತಮ್ಮ ಭಾಷೆಯ ಬಗ್ಗೆ ಎಷ್ಟೇ ಅಭಿಮಾನ ಹೊಂದಿದ್ದರೂ ಬೇರೆಯವರ ಭಾಷೆ, ಆಚಾರ, ವಿಚಾರ, ಸಂಸ್ಕೃತಿಯನ್ನು ಅರ್ಥಮಾಡಿಕೊಂಡು ತಮ್ಮ ಬದಕನ್ನು ಸಾಗಿಸುತ್ತಿದ್ದಾರೆ. ಸುಮ ಧುರವಾದ ಬಾಂಧವ್ಯ, ಗುಂಪುಜೀವನ ಅವರಲ್ಲಿ ಕಾಣಬಹುದಾಗಿದೆ.

ಈ ಹಿನ್ನಲೆಯಲ್ಲಿಯೇ ಗಡಿನಾಡು ಅಥಣಿ ಪರಿಸರದ ಬುಡಕಟ್ಟುಗಳ ಜೀವನವು ಮಹಾರಾಷ್ಟ್ರ ಜನರ ಜೀವನದೊಡನೆ ಬೆರೆತು ಒಂದಾಗಿದೆ. ಅಥಣಿಯ ಅನೇಕ ಮಹಿಳೆಯರು ಮಹಾರಾಷ್ಟ್ರದ ಸೊಸೆಯರಾಗಿ ಹಾಗೂ ಮಹಾರಾಷ್ಟ್ರದ ಹೆಣ್ಣು ಮಕ್ಕಳು ಕನ್ನಡ ನಾಡಿನ ಮಗಳಾಗಿ ಜೀವನ ಸಾಗಿಸುವುದರ ಮೂಲಕ ತಮ್ಮ ಸಂಸ್ಕೃತಿ ಪರಂಪರೆಯ ಏಕತೆಗೆ ಸಾಕ್ಷಿಯಾಗಿದ್ದಾರೆ. ಜಯದೇವಿ ತಾಯಿ ಲಿಗಾಡೆಯವರು ಮನೆಯ ಭಾಷೆಯು ಮರಾಠಿಯಾದರೂ, ಅವರ ಕನ್ನಡ ಪ್ರೇಮ ನಮ್ಮೇಲ್ಲರಿಗೂ ಮಾದರಿಯಾಗಿದೆ. ಈ ಸಂದರ್ಭದಲ್ಲಿ ಇದನ್ನು ಪ್ರಸ್ತಾಪಿಸಲು ಕಾರಣವೇನೆಂದರೆ, ಅಥಣಿಯಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಕರ್ನಾಟಕದ ನಾನಾ ಭಾಗಗಳ ಬುಡಕಟ್ಟುಗಳ ಜೊತೆಗೆ ಅಥಣಿ ಪರಿಸರದ ಬುಡಕಟ್ಟುಗಳ ಸಮುದಾಯಗಳ ಬಗೆಗೂ ಅಧ್ಯಯನ ಮಾಡಲಾಗಿದೆ. ಪ್ರಸ್ತುತ ವಿಚಾರ ಸಂಕಿರಣದಲ್ಲಿ ೩೦(ಮೂವತ್ತು) ಲೇಖನಗಳನ್ನು ಮಂಡಿಸಲಾಯಿತು. ಮೊದಲ ಹನ್ನೆರಡು ಲೇಖನಗಳು ಬೇಡ ಬುಡಕಟ್ಟುಗಳ ಬಗೆಗೆ, ಹಕ್ಕಿ-ಪಕ್ಕಿ ಸಮುದಾಯಗಳ ಬಗ್ಗೆ, ಲಂಬಾಣಿ, ಕಾಡುಕುರುಬ, ಕೊರವ, ಬುಡಕಟ್ಟು ಮಹಿಳೆಯರ ಬಗ್ಗೆ, ಸೋಲಿಗರ ಬಗ್ಗೆ, ಅವರ ನಂಬಿಕೆ, ಜನಪದ ಸಂಸ್ಕೃತಿ, ಅಚಾರ-ವಿಚಾರ, ಔಷದೋಪಚಾರ, ಕರಕುಶಲಕಲೆಗಳ ಬಗ್ಗೆ, ಆಹಾರ ಪದ್ಧತಿ, ಶಿಕ್ಷಣ, ಬುಡಕಟ್ಟು ಮಕ್ಕಳ ಆರೋಗ್ಯ ಬುಡಕಟ್ಟುಗಳ ಮತ್ತು ಆರೋಗ್ಯ ಜಗತ್ತು, ಬುಡಕಟ್ಟುಗಳ ಆರೋಗ್ಯ ಪದ್ಧತಿಯಲ್ಲಿನ ಇತ್ತೀಚಿನ ಬದಲಾವಣೆಗಳು, ಬುಡಕಟ್ಟುಗಳ ಇತ್ತೀಚಿನ ಸ್ಥಿತಿ-ಗತಿಗಳು, ಬುಡಕಟ್ಟುಗಳ ವೈವಾಹಿಕ ಪದ್ಧತಿ ಸಮಾಜಿಕ ಸ್ಥಿತಿ-ಗತಿಗಳು, ಸಾಂಸ್ಕೃತಿಕ ಆಚರಣೆಗಳು. ಬುಡಕಟ್ಟುಗಳ ಮೂಲಭೂತ ಹಕ್ಕುಗಳು, ಬುಡಕಟ್ಟುಗಳ ಅಭಿವೃದ್ಧಿ, ಬುಡಕಟ್ಟುಗಳಲ್ಲಾಗುತ್ತಿರುವ ಸ್ಥಿತ್ಯಂತರಗಳು, ಬುಡಕಟ್ಟುಗಳ ಪುನರ್ವಸತಿ, ಬುಡಕಟ್ಟುಗಳ ಸಾಂಸ್ಕೃತಿಕ ಅನನ್ಯತೆಯ ಬಗ್ಗೆ ಗುರುತಿಸುವ ಪ್ರಯತ್ನವನ್ನು ಮಾಡಲಾಗಿದೆ. ಬುಡಕಟ್ಟುಗಳಲ್ಲಿರುವ ವಿವಿಧ ಸಮುದಾಯಗಳ ಸಾಮರಸ್ಯ ಭಾಂದವ್ಯ ಮತ್ತು ಒಡನಾಟದ ಅಂಶಗಳನ್ನು ಈ ವಿಚಾರ ಸಂಕಿರಣದ ಮೂಲಕ ಒಂದು ಚೌಕಟ್ಟಿನೊಳಗೆ ಹಿಡಿದಿಡುವ ಪ್ರಯತ್ನವನ್ನು ಮಾಡಲಾಗಿದೆ.

ಕರ್ನಾಟಕದ ವಿವಿಧ ಭಾಗಗಳಲ್ಲಿ ನೆಲೆಸಿರುವ ಬುಡಕಟ್ಟು ಸಮುದಾಯಗಳು ತಮ್ಮದೇ ಆದ ಬುಡಕಟ್ಟು ಶಿಕ್ಷಣಗಳನ್ನು ಹಒಂದಿರುವ ಸಮುದಾಯಗಳಾಗಿ ಆಧುನಿಕತೆಯನ್ನು ಅಷ್ಟಾಗಿ ಒಗ್ಗಿಸಿಕೊಳ್ಳದೇ ಮೂಲ ಬುಡಕಟ್ಟು ಸಂಸ್ಕೃತಿಯನ್ನು ಮೈಗೂಡಿಸಿ ಕೊಂಡು ಬಂದಿರುವ ಆಚಾರ-ವಿಚಾರಗಳಲ್ಲಿ ಬದಲಾವಣೆ, ಆಧುನಿಕತೆಯನ್ನು ಒಗ್ಗಿಸಿ ಕೊಳ್ಳದೇ ಅದರಿಂದ ದೂರವಿರುವ ಪ್ರಯತ್ನವನ್ನು ಮಾಡಿರುವ ಬುಡಕಟ್ಟುಗಳು ಹಲವಾರು ಇವೆ ಎಂಬುದನ್ನು ಈ ವಿಚಾರ ಸಂಕಿರಣದ ಮೂಲಕ ಕಂಡುಕೊಳ್ಳಲಾಗಿದೆ. ಬುಡಕಟ್ಟುಗಳ ಪುನರ್ವಸತಿ ಮತ್ತು ಅವರನ್ನು ಒಕ್ಕಲೆಬ್ಬಿಸುವ ಪ್ರಯತ್ನಗಳು ನಡೆದರೂ ಕೂಡ ಆ ಪ್ರಯತ್ನಕ್ಕೆ ಓ ಗೊಡದೇ ದಿಟ್ಟತನ ದಿಂದ ತಮ್ಮ ಸಂಸ್ಕೃತಿಗೆ ಧಕ್ಕೆ ಬರದಂತೆ ಕಾಪಾಡಿಕೊಂಡು ಬಂದಿರುವ ಬುಡಕಟ್ಟುಗಳ ಬಗೆಗೂ ಕೂಡ ಈ ಸಂದರ್ಭದಲ್ಲಿ ಚರ್ಚಿಸಲಾಗಿದೆ.

ಕೆಲ ಬುಡಕಟ್ಟುಗಳು ಕಾಡಿನಲ್ಲಿ ವಾಸಿಸುತ್ತಿದ್ದರೂ ನಾಡಿನ ಪ್ರಭಾವಕ್ಕೆ ಒಳಗಾಗದೆ ಗುಂಪುಜೀವನ ನಡೆಸಿರುವ ಉದಾಹರಣೆಗಳನ್ನು ಕೂಡ ಈ ವಿಚಾರ ಸಂಕಿರಣದಲ್ಲಿ ಅಧ್ಯಯನ ಮಾಡಲಾಗಿದೆ. ಕೆಲವು ಬುಡಕಟ್ಟುಗಳು ಇತರೆ ಸಮುದಾಯಗಳ ಸಾಂಸ್ಕೃತಿಕ ವಾಹಿನಿಯಲ್ಲಿ ಬೆರತರೂ ತಮ್ಮದೇ ಆದ ಸಂಸ್ಕಥಿಯ ನೆನಪುಗಳನ್ನು ಯಥಾ ಪ್ರಕಾರ ಆಚರಣೆಗಳಲ್ಲಿ ಉಳಿಸಿಕೊಂಡು ಬಂದಿರುವ ಬಗ್ಗೆ ಅಧ್ಯಯನ ಮಾಡಲಾಗಿದೆ. ಕೆಲವು ಬುಡಕಟ್ಟುಗಳು ತಮ್ಮ ಹೊಟ್ಟೆಯನ್ನು ಹೊರೆಯುವುದಕ್ಕಾಗಿ ನಾಗರೀಕ ಜಗತ್ತಿನೊಂದಿಗೆ ತಮ್ಮನ್ನು ಗುರುತಿಸಿಕೊಂಡರೂ ಅವರ ಸಂಸ್ಕೃತಿಯ ಮೂಲ ಬೇರುಗಳು ಆಳವಾಗಿ ಬೇರು ಬಿಟ್ಟಿರುವುದನ್ನು ಈ ಮೂಲಕ ಕಂಡುಕೊಳ್ಳಲಾಗಿದೆ. ನಾನಾ ಬುಡಕಟ್ಟುಗಳನ್ನು ಸಾಂಸ್ಕೃತಿಕ ಆಚರಣೆಗಳನ್ನು ಹಬ್ಬ-ಹರಿದಿನ, ಜಾತ್ರೆಗಳನ್ನು ನೋಡಲಾಗಿ ಈ ಎಲ್ಲಾ ಬುಡಕಟ್ಟುಗಳ ಒಗ್ಗೂಡಿಸಿ ಪುನರಾವಲೋಕನ ಮಾಡಬೇಕಾದ ಅಗತ್ಯತೆ ಮತ್ತು ಅನಿವಾರ್ಯತೆ ಪ್ರಸ್ತುತ ಸಂದರ್ಭದಲ್ಲಿದೆ.

ಇಂದಿನ ಆಧುನಿಕ ದಿನಮಾನದಲ್ಲಿ ಬುಡಕಟ್ಟು ಸಮುದಾಯಗಳು ತಮ್ಮ ಬದುಕನ್ನು ಕಟ್ಟಿಕೊಳ್ಳುವುದರ ಮೂಲಕ ತಮ್ಮ ಭವ್ಯ ಪರಂಪರೆಯ ಶ್ರೀಮಂತ ಸಂಸ್ಕಥಿಯನ್ನು  ತಮ್ಮ ನಾಡಿನ ಹೆಸರಿಗೆ ತಕ್ಕದಾದ ಕೊಡುಗೆಯನ್ನೇ ನೀಡಿದೆ. ಮುಂದೆಯೂ ಕೂಡ ಇಂತಹ ಉದಾತ್ತವಾದ ಮೌಲ್ಯಯುತವಾದ ಸಾಂಸ್ಕೃತಿಕ ಅನನ್ಯತೆಯನ್ನು ಕೂಡ ಉಳಿಸಿಕೊಂಡು ಹೋಗುವ ಬಹುದೊಡ್ಡ ಜವಾಬ್ದಾರಿ ಕರ್ನಾಟಕದ ಬುಡಕಟ್ಟುಗಳ ಮೇಲಿದೆ.

ಹಲವಾರು ಬುಡಕಟ್ಟುಗಳಲ್ಲಿ ನಂಬಿಕೆ ವಿಧಿ ನಿಷೇಧಗಳು ಮತ್ತು ನ್ಯಾಯ ಪದ್ದತಿಗಳು ಅಸ್ತಿತ್ವದಲ್ಲಿವೆ. ಈಗ ಬಹುತೇಕ ಪದ್ಧತಿ. ನಂಬಿಕೆ, ಸಂಪ್ರದಾಯಗಳು ಆಧುನಿಕತೆಯ ಜಾಗತೀಕರಣದ ಪ್ರಭಾವಕ್ಕೆ ಸಿಕ್ಕಿ ಕಣ್ಮರೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ಪ್ರತಿಯೊಂದು ಹಳ್ಳಿ, ಗ್ರಾಮಗಳಲ್ಲಿ ಸಾಮರಸ್ಯ, ಮಾನವೀಯತೆ, ಅಂತಃಕರಣ ಮತ್ತು ಸಮಾನತೆಯ ಮೌಲ್ಯಗಳು ಇಲ್ಲವಾಗುತ್ತಾ ದಿನನಿತ್ಯದ ಬದುಕಿನ ಜಂಜಾಟದಲ್ಲಿ ಆತಂಕ ತಲ್ಲಣಗಳನ್ನು ತಂದೊಡ್ಡಬಹುದಾದ ಸಾಧ್ಯತೆಗಳಿವೆ. ಆಧುನಿಕತೆಯ ಭರಾಟೆಯಲ್ಲಿ ಕೆಲ ಬುಡಕಟ್ಟುಗಳಲ್ಲಿ ಗುಟ್ಕಾ-ಮಟ್ಕಾ, ಗಾಂಜಾ, ಮಧ್ಯಪಾನ, ಧೂಮಪಾನ, ಮನೆ ಮಾಡತೊಡಗಿವೆ. ಇಂಥ ಸಂದರ್ಭದಲ್ಲಿ ಬುಡಕಟ್ಟುಗಳಲ್ಲಿ ಕಂಡುಬರುವ ಕ್ರೀಡೆ, ಸಂಸ್ಕೃತಿ, ನಂಬಿಕೆ, ನಿಯಮ ವಿಧಿ ನಿಷೇಧಗಳಿಗೆ ತಮ್ಮನ್ನು ತೆರೆದುಕೊಂಡು ಪುನರುಜೀವನಗೊಳಿಸುವ ಪ್ರಯತ್ನವನ್ನು ಮಾಡಬೇಕಾಗಿದೆ. ಬಹುತೇಕ ಬುಡಕಟ್ಟುಗಳಲ್ಲಿ ಗುಂಪು ಜೀವನವನ್ನು ಕಾಣುತ್ತಿದ್ದೇವೆ. ಈ ಗುಂಪು ಜೀವನ ಇಲ್ಲದಿದ್ದರೆ ಸಮಸ್ಯೆಗಳ ಸರಮಾಲೆ ಎದುರಾಗಿ ಅವರ ಬದುಕು ದುಸ್ತರದ ಹಂಚಿಗೆ ತಲುಪುವ ಸಾಧ್ಯತೆ ಎದುರಾಗಲಿದೆ.

ಬುಡಕಟ್ಟುಗಳಲ್ಲಿ ಕಂಡು ಬರುವ ಜನಪದ ಆಟಗಳು, ಕರಕುಶಲ ಕಲೆಗಳು ಕೇವಲ ಮನರಂಜನೆಗೆ ಸೀಮಿತವಾಗದೇ ಅವರು ಕಟ್ಟಿಕೊಂಡಿರುವ ಸಮಾಜದೊಳಗಿನ ಏರುಪೇರುಗಳನ್ನು, ಸರಿಪಡಿಸುವ ಪ್ರಮುಖಪಾತ್ರ ನಿರ್ವಹಿಸಲಿವೆ. ಬುಡಕಟ್ಟುಗಳಲ್ಲಿನ ಆಟಗಳು ಮನುಷ್ಯನ ಮಾನಸಿಕ ಬೆಳವಣಿಗೆ, ಆಂತರಿಕ ವಿಕಾಸಕ್ಕೆ ಕಾರಣವಾಗುತ್ತವೆ ಎಂಬುವುದರಲ್ಲಿ ಎರಡುಮಾತಿಲ್ಲ, ಬುಡಕಟ್ಟು ಸಮುದಾಯಗಳಲ್ಲಿ ಕಂಡುಬರುವ ಜೀವನ ನಿರ್ವಹಣೆ, ದುಸ್ತಿತಿಯಲ್ಲಿದೆ. ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ತೀರ ಹಿಂದುಳಿದಿರುವ ಬುಡಕಟ್ಟುಗಳು ಸಾಕಷ್ಟು ಇವೆ. ಈ ಸಮುದಾಯಗಳ ವಾಸ್ತವಿಕ ಸಮಸ್ಯೆಗಳನ್ನು ಅರಿತು ಚರ್ಚೆಗೆ ಒಳಪಡಿಸಿ, ಸರಕಾರದಿಂದ ಪರಿಹಾರ ಸಿಗಬಹುದಾದ ವಿವಿಧ ಯೋಜನೆಗಳ ಬಗೆಗೆ ಅವರಿಗೆ ತಿಳುವಳಿಕೆ ಅರಿವು ಮೂಡಿಸುವ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಹತೆ ಈ ವಿಚಾರ ಸಂಕಿರಣದ ಮೂಲಕ ಕಂಡುಕೊಳ್ಳಲಾಗಿದೆ. ಈ ಬುಡಕಟ್ಟು ಸಮುದಾಯಗಳಲ್ಲಿ ವಿಶೇಷವಾಗಿ ಬಡತನ, ಹಸಿವು, ರೋಗ ರುಜೀನ, ನಿರ್ವಸತೀಕರಣ, ಶೈಕ್ಷಣಿಕ ಹಿಂದುಳಿಯುವಿಕೆ, ನಿರುದ್ಯೋಗ, ರಾಜಕೀಯ ಜ್ಞಾನದ ಕೊರತೆ, ಹೋರಾಟದ ಮನೋಭಾವನೆಯ ಕೊರತೆ ಅಜ್ಞಾನ, ಅಂಧಕಾರ ಭಾದಿಸುತ್ತಿದೆ.

ಇವೆಲ್ಲವುಗಳಿಂದ ಹೊರಬರುವ ಪ್ರಯತ್ನವನ್ನೂ ಮಾಡಬೇಕಾಗಿದೆ. ಅವರಲ್ಲಿ ಸಂಘಟನಾತ್ಮಕ ಹೋರಾಟ ಅಗತ್ಯವಾಗಿ ಬೇಕಾಗಿದೆ. ಸಂವಿಧಾನಬದ್ಧವಾಗಿರುವ ಹಕ್ಕೋತ್ತಾಯಕ್ಕಾಗಿ ಪರಿಣಾಮಕಾರಿಯಾಗಿ ಹೋರಾಟ ಮಾಡಲು ಅವರಿಗೆ ಸಾಧ್ಯವಾಗುತ್ತಿಲ್ಲವೆಂಬುದನ್ನು ಕಂಡುಕೊಳ್ಳಲಾಗಿದೆ. ಆಧುನಿಕ ಸಂಸ್ಕೃತಿಯ ಇಂದಿನ ದಿನಮಾನಗಳಲ್ಲಿ ಬುಡಕಟ್ಟು ಸಮುದಾಯಗಳ ಬದುಕನ್ನು ಸಂರಕ್ಷಿಸಬೇಕಾದ ಜವಬ್ದಾರಿ ಸರಕಾರ ಸ್ಥಳೀಯ ಸಂಘ, ಸಂಸ್ಥೆಗಳ ಮೇಲಿದೆ. ಪ್ರಸ್ತುತ ಸಂದರ್ಭದಲ್ಲಿ ಸಮಾಜದಲ್ಲಿಯಾಗಲೀ, ಸರಕಾರದ ಮಟ್ಟದಲ್ಲಿಯಾಗಲಿ ಬುಡಕಟ್ಟು ಸಮುದಾಯಗಳ ಒಂಟಿ ಧ್ವನಿಯನ್ನು ಆಲಿಸುವವರೇ ಇಲ್ಲ ಎನ್ನುವಂತ ಪರಿಸ್ಥಿತಿ ಬಂದೊದಗಿದೆ. ಕಾರಣವಿಷ್ಟೇ, ಅವರಲ್ಲಿ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲು ಪ್ರಭಾವಶಾಲಿಯಾದ ಪರಿಣಾಮಕಾರಿಯಾದ ಸಂಘಟನೆ ಶಕ್ತಿಯೇ ಇಲ್ಲವಾಗಿದೆ. ಈ ಕಾರಣಕ್ಕಾಗಿಯೇ ಯಾವ ಪ್ರಭಾವ ರಾಜಕೀಯ ವ್ಯಕ್ತಿಗಳು ಕೂಡ ಬುಡಕಟ್ಟು ಸಮುದಾಯಗಳ ಬಗ್ಗೆ ಗಮನ ಹರಿಸದಿರುವುದು ಮೇಲುನೋಟಕ್ಕೆ ಕಂಡುಬರುತ್ತಿದೆ.

ಕರ್ನಾಟಕದಲ್ಲಿನ ಬಹುತೇಕ ಬುಡಕಟ್ಟು ಸಮುದಾಯಗಳ ಕೂಗು ಅರಣ್ಯರೋಧನವಾಗಿದೆ. ಸಂಘಟನಾ ಶಕ್ತಿಯ ಕೊರತೆ, ರಾಜಕೀಯ ಪ್ರಜ್ಞೆಯ ಕೊರತೆ, ನಾಯಕತ್ವದ ಕೊರತೆಯಿಂದಾಗಿ ಸರಕಾರದಿಂದ ಸಿಗಬೇಕಾದ ಎಷ್ಟೋ ಯೋಜನೆಗಳು ಅವರ ಕೈ ತಪ್ಪುವ ಸಾಧ್ಯತೆಗಳು ಕಂಡುಬಂದಿವೆ. ಕರ್ನಾಟಕದಲ್ಲಿನ ಬುಡಕಟ್ಟು ಸಮುದಾಯಗಳು ಗ್ರಾಮೀಣ ಪ್ರದೇಶದಲ್ಲಿ, ಅರಣ್ಯದಲ್ಲಿ ವಾಸಿಸುವ ಮೂಲಕ ಅಶಿಕ್ಷಿತರಾಗಿ, ಬಡತನ ಹಸಿವಿನ ಬದುಕನ್ನು ಸಾಗಿಸುತ್ತಿರುವ ಈ ಸಮುದಾಯಗಳಿಗೆ ಸರ್ಕಾರವು ಕೈಗೊಂಡಿರುವ ಬಹುತೇಕ ಯೋಜನೆಗಳಾದರೂ ಪ್ರಾಮಾಣಿಕವಾಗಿ ದೊರಕಿಸಿಕೊಳ್ಳಲು, ಯೋಜನೆಗಳ ಸದುಪಯೋಗ ಪಡೆಯಲು ಈ ಸಮುದಾಯಗಳನ್ನು ಜಾಗೃತಗೊಳಿಸಲು ಇಂಥ ವಿಚಾರ ಸಂಕಿರಣಗಳು ಎಂದೆಂದಿಗಿಂತಲೂ ಇಂದು ಅಗತ್ಯವಾಗಿ ಬೇಕಾಗಿವೆ ಎಂಬುವುದು ನನ್ನ ಅಭಿಪ್ರಾಯವಾಗಿದೆ.

ಡಾ. ತಾರಿಹಳ್ಳಿ ಹನುಮಂತಪ್ಪ