ಮನುಷ್ಯನು ಹಸಿವು ನಿವಾರಿಸಿಕೊಳ್ಳಲು ಆಹಾರ ಸೇವಿಸುತ್ತಾನೆ. ಒಂದು ಕಾಲಕ್ಕೆ ಕೇವಲ ಹಸಿಯಾದ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದನು. ಬೆಂಕಿಯ ಆವಿಷ್ಕಾರವಾದ ಮೇಲೆ ರುಚಿಯ ಬೆನ್ನು ಹತ್ತಿ ಬಗೆ ಬಗೆಯ ಅಡುಗೆ ಮಾಡಿಕೊಳ್ಳುತ್ತಾ ಹಲವಾರು ರೀತಿಯ ಅಡುಗೆ ಪದಾರ್ಥಗಳನ್ನು ಕಂಡು ಹಿಡಿದು ಬೇಯಿಸಿಕೊಂಡು ತಿನ್ನುವುದನ್ನು ಕಲಿತ. ಹೀಗೆ ಅಡುಗೆಯ ಅಭಿರುಚಿ ವ್ಯಕ್ತಿಯಿಂದ ವ್ಯಕ್ತಿಗೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗುತ್ತ ವೈವಿದ್ಯಮಯ ಆಹಾರ ಪದಾರ್ಥಗಳು ಬಳಕೆಗೆ ಬಂದಿವೆ.

ಅದರಲ್ಲೂ ಕರ್ನಾಟಕಕ್ಕಷ್ಟೇ ಸಂಬಂಧಿಸಿದಂತೆ ಆಹಾರ ಮತ್ತು ಪಾನಿಯಾಗಳು ಪ್ರಾದೇಶಿಕತೆಯ ಕಾರಣವಾಗಿ ಬೇರೆ ಬೇರೆಯಾಗಿವೆ. ಈ ವಿಷಯದಲ್ಲಿ ದಕ್ಷಿಣ ಕರ್ನಾಟಕ ಕರಾವಳಿ, ಉತ್ತರಕರ್ನಾಟಕ ಕೊಡುಗು ಎಂದು ನಾಲ್ಕು ವಿಭಾಗಗಳನ್ನು ತಜ್ಞರುಗಳು ಗುರುತಿಸುತ್ತಾರೆ. ಈ ಒಂದೊಂದು ಪ್ರದೇಶದ ಅಡುಗೆಗಳನ್ನು ನಿತ್ಯದ ಅಡುಗೆ, ವಿಶೇಷ ಸಂದರ್ಭದ ಅಡುಗೆ ಎಂದು ಮುಖ್ಯವಾಗಿ ಎರಡು ವಿಭಾಗಗಳಾಗಿ ನೋಡಬಹುದು, ಮಾಂಸದ ಅಡುಗೆ ಮತ್ತು ನೆಂಚಿಕೆಗಳನ್ನು ಈ ಎರಡರಲ್ಲೂ ಸಮೀಕರಿಸಬಹುದು. ಪಾನಿಯಾಗಳನ್ನು ಪ್ರತ್ಯೇಕವಾಗಿ ನೋಡಬಹುದು.

ಒಟ್ಟು ಕರ್ನಾಟಕದೊಳಗೆ ರೊಟ್ಟಿಯು. ಅಂದರೆ ಜೋಳದ ರೊಟ್ಟಿ, ಸಜ್ಜೆಯ ರೊಟ್ಟಿ, ಅಕ್ಕಿರೊಟ್ಟಿ ಎಂದು ಹಾಗೆಯೇ ಜೋಳದ ಮುದ್ದೆ, ರಾಗಿಯ ಮುದ್ದೆ, ಅಕ್ಕಿಯ ಅನ್ನ, ಜೋಳದ ಅನ್ನ, ನವಣೆ ಅಕ್ಕಿ ಅನ್ನ ಎಂದು ಗೋದಿಯಿಂದ ತಯಾರಿಸುವ ಚಪಾತಿ, ಪೂರಿ ಎಂದು ವಿವಿಧ ರೀತಿಯ ಅಡುಗೆಗಳನ್ನು ಇವಕ್ಕೆ ಜೋಡಿಯಾಗಿ ಹಲವಾರು ರೀತಿಯ ತರಕಾರಿ ಪಲ್ಯೆಗಳು, ದವಸಧಾನ್ಯಗಳು ಸೊಪ್ಪು, ಸದೆ, ಇತ್ಯಾದಿಯಾಗಿ ಬಳಸುತ್ತಾ ಬಂದಿದ್ದಾರೆ ಇವರಲ್ಲಿ ನಾನು ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಅಥಣಿ ಪರಿಸರದ ವಾಲ್ಮೀಕಿ ಸಮುದಾಯದವರ ಆಹಾರ ಪದ್ಧತಿ ಪ್ರಸ್ತುತ ಸಂದರ್ಭದಲ್ಲಿ ಹೇಗಿದೆ ಎನ್ನುವುದನ್ನು ನೋಡಿದ್ದೇನೆ.

ಉತ್ತರಕರ್ನಾಟಕದ ಜನರು ಜೋಳವನ್ನು ಮತ್ತು ಹಲವಾರು ರೀತಿಯ ಕಾಳುಗಳನ್ನು ಬೆಳೆಯುವುದರಿಂದ ಈ ಪ್ರದೇಶದಲ್ಲಿ ಸಾಕಷ್ಟು ಬಗೆಯ ಅಡುಗೆ ಪದಾರ್ಥಗಳನ್ನು ಕಾಣಬಹುದು. ಜೋಳದ ರೊಟ್ಟಿ, ಗೋಧಿಯ ಚಪಾತಿ ಈ ಜನರ ನಿತ್ಯದ ಆಹಾರದಲ್ಲಿ ಪ್ರಮುಖವಾಗುತ್ತವೆ ಹೀಗೆ ಇವರ ಆಹಾರ ಪದ್ಧತಿಯಲ್ಲಿ ಮೂರು ವಿಧಗಳಾಗಿ ನೋಡಬಹುದು.

೧. ನಿತ್ಯದ ಅಡುಗೆ

೨. ಹಬ್ಬ ಜಾತ್ರೆ ಮದುವೆ ವಿಶೇಷ ಸಂದರ್ಭದ ಅಡುಗೆ

೩. ಪಾನಿಯಾಗಳು.

. ನಿತ್ಯದ ಅಡುಗೆಗಳು

ನಿತ್ಯದ ಅಡುಗೆಯಲ್ಲಿ ಇವರಿಗೆ ಬಹಳಷ್ಟು ಪ್ರೀತಿ ಜೋಳದ ರೊಟ್ಟಿ. ದಕ್ಷಿಣ ಕನ್ನಡದವರು ರಾಗಿಯ ರೊಟ್ಟಿ ಮಾಡುವುದಕ್ಕೂ ಉತ್ತರ ಕರ್ನಾಟಕದವರು ಜೋಳದ ರೊಟ್ಟಿ ಮಾಡುವುದಕ್ಕೂ ಬಹಳಷ್ಟು ವ್ಯತ್ಯಾಸವೇನು ಇಲ್ಲ. ಆದರೆ ಅರ್ಥಣಿ ಪರಿಸರದಲ್ಲಿ ವಾಲ್ಮೀಕಿ ಸಮುದಾಯದವರು ರೊಟ್ಟಿಯನ್ನು ತಯಾರಿಸುವುದು ಸ್ವಲ್ಪ ಭಿನ್ನ, ಜೋಳದ ಹಿಟ್ಟನ್ನು ಕೊಣಬಿಗೆ ಹಾಕಿಕೊಂಡು ಅದಕ್ಕೆ ಹೆಸರು ಬಂದ ನೀರನ್ನು ಸುರುವಿಕೊಂಡು ಹದವಾಗಿ ನಾದಿ ಸಣ್ಣ ಸಣ್ಣ ಹಿಡಿಯಷ್ಟಿರುವ ಹುಂಡಿಗಳನ್ನು ಅಂದರೆ ನಾದಿಕೊಂಡ ಹಿಟ್ಟನ್ನು ತೆಗೆದುಕೊಂಡು ಕೊಣಬಿಗೆಯಲ್ಲಿ ತಟ್ಟುತ್ತಾರೆ. ಇದರಲ್ಲಿ ವಿಶೇಷವೇನೂ ಇಲ್ಲ. ನಾಡಿನಾದ್ಯಂತ ಎಲ್ಲರೂ ಹೀಗೆಯೇ ರೊಟ್ಟಿ ತಟ್ಟುತ್ತಾರೆ. ಆದರೆ ಬೇಯಿಸುವುದರಲ್ಲಿ ಭಿನ್ನತೆಯಿದೆ ದುಂಡವಾಗಿ ತಟ್ಟಿದ ರೊಟ್ಟಿಯನ್ನು ಹಂಚು ಅಥವಾ ಕಾಯಿಸಿದ ತೆವಿಗೆ ಹಾಕಿ ಬೇಯಿಸುವುದೂ ಸಾಮಾನ್ಯ ಆದರೆ ಈ ಭಾಗದ ಬಹಳ ಸಮುದಾಯಗಳು ಅದರಲ್ಲೂ ವಾಲ್ಮೀಕಿ ಸಮುದಾಯದವರು ಹಂಚು ಅಥವಾ ತೆವಿಯಲ್ಲಿ ಸ್ವಲ್ಪ ಬೇಯಿಸಿ ನಂತರ ಅದನ್ನು ಕಟ್ಟಿನಲ್ಲಿ ಅಂದರೆ ಕೆಂಡದ ಮೇಲೆ ಹಾಕಿ ಸುಡುತ್ತಿರುವುದನ್ನು ನಾವು ನೋಡಬಹುದು. ಒಲೆಯಿಂದ ಕೆಂಡವನ್ನು ಹೊರಗೆ ತೆಗೆದು ಸುಡುವಾಗ ಹತ್ತಿರದಲ್ಲಿಯೆ ಕುಳಿತಿರುವ ಇವರಿಗೆ ಬೆಂಕಿಯ ಶಾಖವು ಬಳಷ್ಟು ತಟ್ಟುತ್ತದೆ. ಏಕೆಂದರೆ ಗಂಟೆಗಟ್ಟಲೇ ಬಹಳ ರೊಟ್ಟಿ ಸುಡುಬೇಕಾಗಿರುವುದರಿಂದ ಆ ಕಾರಣಕ್ಕಾಗಿಯೇ ಇರಬೇಕು.

ಕಟ್ಟುವುದು ಋಷಿಬಾಳ
ಬೀಸುವುದು ಬಿಗಿಬಾಳ
ರೊಟ್ಟಿ ಸುಡುವುದು ಜಳಬಾಳ

ಎನ್ನುವ ಹಾಡು ಇವರ ಬಾಯಿಂದ ಬರುತ್ತದೆ. ಇಂತಹ ರೊಟ್ಟಿಗೆ ಜೊತೆಯಾಗಿ, ಆಸರೆಯಾಗಿ ಕಾಳಿನ ಪಲ್ಲೆ, ತರಕಾರಿ ಪಲ್ಲೆಗಳು ಇರುತ್ತವೆ. ಕಾಳಿನ ಪಲ್ಲೆಗಳಲ್ಲಿ ಹೆಸರು ಮೂಕಣಿ ಮಡಿಕೆಕಾಳು, ಕಡಲೆ, ಬಟಾಣಿ, ಅಲಸಂದಿ ಮೊದಲಾದವುಗಳನ್ನು ಬಳಸುತ್ತಾರೆ. ಮುಕಣಿ ಕಾಲು ಇತರೆ ಕೆಲಕಾಳುಗಳನ್ನು ಮೊಳಕೆ ಮಾಡಿಯೆ ಮತ್ತು ಸಾರು ಮಾಡುವುದು ರೂಢಿ, ಅಲ್ಲದೆ ಇವರಿಗೆ ಅತ್ಯಂತ ಪ್ರೀತಿಯೆಂದರೆ ಖಾರಬೆಳೆ ಪಲ್ಲೆ ಇದು ತೊಗರಿಬೆಳೆ ಅಥವಾ ಕಡಲೆಬೇಳೆ ಆಗಬಹುದು. ಇದನ್ನು ರಾತ್ರಿ ನೆನಯುವುದಕ್ಕೆ ಬಿಟ್ಟು, ಮರುದಿನ ಇದಕ್ಕೆ ಒಗ್ಗರಣೆ ಹಾಕುತ್ತಾರೆ. ಬಹು ಬೇಗ ಕೆಡುವ ಪದಾರ್ಥ ಇದಲ್ಲ, ದೂರದ ಪ್ರದೇಶಕ್ಕೆ ಹೋಗುವಾಗ ಇದು ಇದ್ದೇ ಇರುತ್ತದೆ. ಅಲ್ಲದೇ ಕಡಲೆ ಬೇಳೆ ಹಿಟ್ಟಿನ ಪಲ್ಲೆ ಜನಕ ಎಂದು ತಯಾರಿಸುತ್ತಾರೆ. ಇದು ನಮ್ಮ ಆಧುನಿಕ ಸಿಹಿತಿಂಡಿ ಕರದಂಟು ಇದ್ದಹಾಗೆ ಇರುತ್ತದೆ. ಆದರೆ ಖಾರ ಪದಾರ್ಥ ಚಪಾತಿ-ರೊಟ್ಟಿಯ ಜೊತೆ ಇದನ್ನು ಬಳಸುತ್ತಾರೆ ಇದು ಕೂಡ ಬೇಗ ಕೆಡುವ ಪದಾರ್ಥವಲ್ಲ. ಬೇರೆ ಮತ್ತು ಕಾಳಿನ ಪಲ್ಲೆಗಳನ್ನು ಒಂದೊಂದು ದಿನ ಮಾಡುವಾಗ ಬೆಳೆ ಕಾಳು ಬೇಯಿಸಿದ ನೀರನ್ನೇ ಬಸಿದು ಕೊಂಡು ಉಪ್ಪು, ಖಾರ ಹುಳಿ ಬೆರೆಸಿ ಅದಕ್ಕೆ ಒಗ್ಗರಣೆ ಹಾಕಿ ಸಾರು ತಯಾರಿಸುತ್ತಾರೆ. ಬಹುತೇಕ ಈ ಭಾಗದಲ್ಲಿ ನೀರು ಸಾರು ಬಳಕೆಯಲ್ಲಿದೆ. ಇದು ಅನ್ನಕ್ಕೂ ನುಚ್ಚಿನ ಅನ್ನಕ್ಕೂ ಜೋಡಿಯಾಗಿರುತ್ತದೆ. ನುಚ್ಚಿನ ಅನ್ನ ಎಂದರೆ ಜೋಳವನ್ನು ದಪ್ಪವಾಗಿ ಒಡೆಸಿ ನುಚ್ಚು ಮಾಡಿರುತ್ತಾರೆ.  ಹಿಟ್ಟಿಗಿಂತಲೂ ದಪ್ಪವಾಗಿರುವ ಈ ನುಚ್ಚನ್ನು ನೀರಿನಲ್ಲಿ ಕುದಿಸಿ ನುಚ್ಚಿನ ಅನ್ನ ತಯಾರಿಸುತ್ತಾರೆ ಇದರ ಜೊತೆಗೆ ಮಜ್ಜಿಗೆಸಾರು ಉಳಿಸಾರು ಮಾಡುವುದುಂಟು.

ಇನ್ನೊಂದು ವಿಶೇಷವೆಂದರೆ ದುಂಡುಗಡಲೆಯ ಸೊಪ್ಪನ್ನು ಯಾವುದಾದರೂ ನೆನಸಿದ ಬೆಳೆಯ ಜೊತೆಗೆ ಒಗ್ಗರಣೆ ಹಾಕಿ ಪಲ್ಲೆಯನ್ನು ತಯಾರಿಸುತ್ತಾರೆ. ಹಾಗೆಯೇ ಅವರಿಗೆ ಬದನೆಕಾಯಿ ಪಲ್ಲೆಯು ದಿನಾಲೂ ಇರಬೇಕು.

ಅಲ್ಲದೆ ಈ ಸಮುದಾಯದವರು ಗುಡ್ಡ-ಗಾಡುಗಳಲ್ಲಿ ಕಾಡುಗಳಲ್ಲಿ ವಾಸಿಸುತ್ತಿದ್ದ ಸಮಯದಲ್ಲಿ ಹೇಗೆ ಹಸಿಸೊಪ್ಪು ಗೆಡ್ಡೆ ಗೆಣಸುಗಳನ್ನು ತಿನ್ನುತ್ತಿದ್ದರೋ ಹಾಗೆಯೇ ಈವತ್ತಿನ ತನಕ ಊಟದ ಸಮಯದಲ್ಲಿ ಮೆಂತೆಪಲ್ಲೆ, ಉಳ್ಳಗಡ್ಡಿಪಲ್ಲೆ, ಸೌತೆಕಾಯಿ ಗಜ್ಜರಿ, ಟೊಮೇಟೋ ಉಳ್ಳಾಗಡ್ಡಿ. ಆಕರಿಕೆಪಲ್ಲೆ ಮುಂತಾದವುಗಳನ್ನು ಹಸಿಯದಾಗಿಯೇ ತಿನ್ನವುದನ್ನು ಕಾಣಬಹುದು. ಊಟದ ತಾಟು ತಯಾರಿಸುವುದನ್ನು ನೋಡಬೇಕು. ಪ್ರಾಣಿಗಳಿಗೆ ಮೇಯಲು ಕತ್ತರಿಸಿಟ್ಟ ಮೇವಿನ ರೀತಿ ತಟ್ಟಿಯಲ್ಲಿ ಈ ಪದಾರ್ಥಗಳು ತಟ್ಟೆಯ ತುಂಬ ತುಂಬಿರುತ್ತವೆ. ಊಟದ ಜೊತೆಗೆ ಉರಿದ ಶೇಂಗಾ ಬೀಜವು ಇರುತ್ತದೆ. ಇತ್ಯಾದಿ ಅಡುಗೆಯಲ್ಲಿ ಯಾವಾಗಲಾದರೊಮ್ಮೆ ಮಾಂಸದ ಅಡುಗೆಯು ಇವರಿಗೆ ಬೇಕು.

. ಹಬ್ಬಜಾತ್ರೆ ಮದುವೆ ವಿಶೇಷ ಸಂದರ್ಭದ ಅಡುಗೆ

ಮದುವೆ ಹಬ್ಬ ಜಾತ್ರೆಯಂತಹ ಸಂದರ್ಭದಲ್ಲಿ ಹೋಳಿಗೆ ಕಡುಬು, ಸಜ್ಜಕ, ಹುಗ್ಗಿ, ಶಿರಾ, ಪಲಾವು, ಬೊಂದೆ ಹಾಲುಹುಗ್ಗಿ ಮುಂತಾದ ಸಿಹಿ ಪದಾರ್ಥಗಳನ್ನು ಮಾಡುತ್ತಾರೆ.. ಮೊದಲಿಗೆ ಈ ಹೋಳಿಗೆಯನ್ನು ಕಡಲೆ ಬೇಳೆ ಅತವಾ ತೊಗರಿಬೇಳೆ ಕುದಿಸಿ ಬಸಿದುಕೊಂಡು, ಅದಕ್ಕೆ ಬೆಲ್ಲ ಹಾಕಿ ಮತ್ತಷ್ಟು ಬಿಸಿಮಾಡಿ ಆರಿದ ನಂತರ ಊರಣವನ್ನು ಮಾಡಿಕೊಂಡು ತರುವಾಯ ಹೋಳಿಗೆಯನ್ನೋ, ಕಡುಬನ್ನೋ ಮಾಡುತ್ತಾರೆ ವಿಶೇಷವೆಂದರೆ ಕರ್ನಾಟಕದ ಬಹುತೇಕ ಭಾಗದಲ್ಲಿ ಮೈದಾಹಿಟ್ಟಿನ ಕಣಕವನ್ನು ಹೋಳಿಗೆ ಮಾಡಲು ಬಳಸುತ್ತಾರೆ. ಆದರೆ ಅಥಣಿ ಪರಿಸರದ ವಾಲ್ಮೀಕಿ ಸಮುದಾಯದವರು ಗೋದಿಯ ಹಿಟ್ಟಿನ ಕಣಕವನ್ನು ಮಾಡಿ  ಅದರೊಳಗೆ ಹೊರಣ ತುಂಬಿ ಹೊಳಿಗೆ ಮಣೆಯ ಮೇಲೆ ತೀಡುತ್ತಾರೆ. ನಂತರ ಅಂಚಿನ ಮೇಲೆ ಹಾಕಿ ಬೇಯಿಸುತ್ತಾರೆ. ಇನ್ನು ಕಡುಬಿಗೂ ಹೂರಣ ಗೋದಿಹಿಟ್ಟಿನ ಕಣಕ ಬೇಕು. ಇದನ್ನು ಕೆಲವರು ಎಣ್ಣೆಯಲ್ಲಿ ಕರಿಯುತ್ತಾರೆ. ಕೆಲವರು ನೀರಿನಲ್ಲಿ ಕುದಿಸುತ್ತಾರೆ. ಹೋಳಿಗೆ ಅಥವಾ ಕಡುಬನ್ನು ನಾಡಿನ ಬಹಳಷ್ಟು ಕಡೆ ಮಾಡಿಕೊಂಡು ಹಾಲು ತುಪ್ಪದ ಜೊತೆ ಉಟ ಮಾಡುವುದನ್ನು ನೀರಿನ ಜೊತೆ ಅದ್ದಿಕೊಂಡು ತಿನ್ನುವುದನ್ನು ನಾವು ಕಾಣಬಹುದು. ಹೋಳಿಗೆಯ ತರುವಾಯ ಉಣ್ಣುವ ಅನ್ನಕ್ಕೆ ಹೋಳಿಗೆಗೆ ಬೇಯಿಸಿ ಕೊಂಡು ಬೇಳೆಯ ನೀರಿನಿಂದಲೇ ತಯಾರಿಸಿದ ಕಟ್ಟಿನ ಸಾರು ಇರುತ್ತದೆ ಸಜ್ಜಕವೆನ್ನುವುದು ಗೋಧಿಯ ಪದಾರ್ಥ. ಗೋದಿಯನ್ನು ಒಡೆಸಿ ನುಚ್ಚು ತಯಾರಿಸಿಕೊಂಡು ಅದನ್ನು ನೀರಿನಲ್ಲಿ ಬೆಲ್ಲದೊಂದಿಗೆ ಕುದಿಸಿ ಮಾಡುತ್ತಾರೆ. ಇದು ಬಾಣಂತಿಯರಿಗೂ ಯೋಗ್ಯ ಆಹಾರವಂತೆ. ಹುಗ್ಗಿಯೂ ಕೂಡ ಗೋದಿಕಾಳನ್ನು ರಾತ್ರಿಯಿಡಿ ನೆನಸಿ ಬಿಲ್ಲದೊಂದಿಗೆ ನೀರಿನಲ್ಲಿ ಕುದಿಸಿ ಮಾಡುತ್ತಾರೆ. ಎಳ್ಳ ಅಮಾವಾಸ್ಯೆ, ಸಂಕ್ರಮಣದ ಸಂದರ್ಭದಲ್ಲಿ ಸಜ್ಜೆರೊಟ್ಟಿ, ಕಡಲೆ ಹೋಳಿಗೆ ರವದ ಹುಂಡಿ ಮುಂತಾದವುಗಳನ್ನು ಮಾಡುತ್ತಾರೆ.

ಮದುವೆಯ ಸಂದರ್ಭದಲ್ಲಿ ಈ ಪರಿಸರದ ವಾಲ್ಮೀಕಿ ಸಮುದಾಯದಲ್ಲಿ ವಿಶೇಷವಾಗಿ ಹಾಲು ಹುಗ್ಗಿ ಮಾಡುತ್ತಾರೆ. ಗೋದಿಯನ್ನು ಒಡೆಸಿ ನುಚ್ಚು ಮಾಡಿಕೊಂಡು ಅದನ್ನು ಬೆಲ್ಲದೊಂದಿಗೆ ನೀರಿನಲ್ಲಿ ಕುದಿಸಿ, ಅದಕ್ಕೆ ಕಾರಿಕದ ತುಂಡುಗಳು, ಬಾದಾಮಿ,. ಗೋಡಂಬಿ , ಏಲಕ್ಕಿ, ಜೊತೆಗೆ ಶೇಂಗಾಬೀಜ ಅರೆದು ಪುಡಿಮಾಡಿ ಹಾಕಿ ಚಿನ್ನಾಗಿ ಕುದಿಸಿ ತಯಾರಿಸುತ್ತಾರೆ. ಇನ್ನೇನು ಊಟ ಪ್ರಾರಂಭವಾಗುವುದಕ್ಕೂ ಮುಂಚೆ ಕೊಡಗಟ್ಟಲೆ ಹಾಲು ಹಾಕಿ ಚೆನ್ನಾಗಿ ಕಲೆಸಿ ಬಿಸಿಮಾಡಿ ಉಣಬಡಿಸುತ್ತಾರೆ. ಇದು ಬಹಳ ರುಚಿಯಾದ ಸಿಹಿ ಅಡುಗೆ. ಇನ್ನು ಶೀರಾ ಬೊಂದೆ ವಿಶೇಷ ಸಂದರ್ಭದಲ್ಲಿ ಇದ್ದೇ ಇರುತ್ತವೆ. ಇವೆಲ್ಲದರ ನಡುವೆ ಊಟಕ್ಕೆ ಮೊದಲು ಉಪ್ಪಿನಕಾಯಿ ಎನ್ನುವ ಹಾಗೆ ಈ ಸಮುದಾಯದವರು ಅನೇಕ ರೀತಿಯ ಉಪ್ಪಿನ ಕಾಯಿ, ನೆಂಚಿಕೆಗಳನ್ನು ಮಾಡಿಟ್ಟುಕೊಂಡಿರುತ್ತಾರೆ. ಮಾವಿನ ಕಾಯಿ, ನೆಲ್ಲಿಯ ಕಾಯಿ, ನಿಂಬೆಹಣ್ಣು, ದೊಡ್ಲಿಕಾಯಿ, ಮೆಕ್ಕಿಕಾಯಿ ಮುಂತಾದವುಗಳಿಂದ ಉಪ್ಪಿನ ಕಾಯಿ ತಯಾರಿಸುತ್ತಾರೆ. ಹಾಗೇಯೆ ಹಪ್ಪಳ ಶೆಂಡಿಗೆಗಳನ್ನು ವರ್ಷಕ್ಕೆ ಆಗುವಷ್ಟು ತಯಾರಿಸಿಟ್ಟುಕೊಂಡಿರುತ್ತಾರೆ. ಹಾಗೆಯೇ ಅಗಸಿ ಇಂಡಿ, ಶೇಂಗಾಹಿಂಡಿ ಮುಂತಾದವುಗಳನ್ನು ಇರುತ್ತವೆ.

ಈ ಭಾಗದ ವಾಲ್ಮೀಕಿ ಸಮುದಾಯದವರು ಖಾರದ ಪುಡಿ ತಯಾರಿಸಿಟ್ಟು ಕೊಳ್ಳುವುದು ಒಂದು ವಿಶೇಷ. ಒಣಗಿದ ಕೆಂಪು ಮೆಣಸಿನಕಾಯಿಯ ಜೊತೆಗೆ ಕೊಬ್ಬರಿ, ಈರುಳ್ಳಿ, ಬೆಳ್ಳುಳ್ಳಿ, ವಿವಿಧ ರೀತಿಯ ಸಾಂಬಾರ ಪದಾರ್ಥಗಳು ದಾಲ್ಚಿನ್ನಿ ಲವಂಗ ಮೇಣಸು ಚಕ್ಕಿ, ಎಲೆ ಸಾಸಿವೆ ಜೀರಿಗೆ ಮೊಗ್ಗೂ ಮುಂತಾದವುಗಳನ್ನು ಸೇರಿಸಿ ಪುಡಿ ಮಾಡಿಸಿಟ್ಟುಕೊಂಡಿರುತ್ತಾರೆ. ಇದನ್ನು ಗಾಣದ ಎಣ್ಣೆಯ ಜೊತೆಗೆ ಅಥವಾ ತುಪ್ಪದ ಜೊತೆಗೆ, ಕಲೆಸಿಕೊಂಡು ರೊಟ್ಟಿ ಅಥವಾ ಚಪಾತಿಯ ಜೊತೆ ತಿನ್ನಲು ಬಹಳ ರುಚಿಯಾಗಿರುತ್ತದೆ.

ಅಲ್ಲದೇ ಈ ಸಮುದಾಯದವರು ಅಥಣಿ ಪರಿಸರದಲ್ಲಿ ಸುಮಾರು ೮೯ ಹಳ್ಳಿಗಳಲ್ಲಿ ೧೮-೧೯ ಹಳ್ಳಿಗಳಲ್ಲಿ ಕಂಡುಬರುತ್ತಾರೆ. ಇವರೆಲ್ಲರೂ ಬಹುತೇಕ ಮಾಂಸಹಾರಿಗಳು. ಆದರೆ ಯಾರಿಗೂ ನಿತ್ಯದ ಅಡುಗೆ ಇದಲ್ಲ. ಇದನ್ನು ಅಪರೂಪಕ್ಕೆ ಯಾವಾಗಲೋ, ರವಿವಾರಕ್ಕೊಮ್ಮೆ, ಇಲ್ಲವೆ ನೆಂಟರು ಬಂದಾಗ ಹಬ್ಬದ ತರುವಾಯ ಮಾಂಸದ ಪದಾರ್ಥಗಳನ್ನು ಅಡುಗೆಗಾಗಿ ತಯಾರಿಸುತ್ತಾರೆ. ಅದರಲ್ಲಿ ಆಡು, ಕುರಿ, ಕೋಳಿ, ಕಾಡುಹಂದಿ, ಕೆಲವರು ದಿನಮಾಂಸವನ್ನು ಮೀನು, ಮೊಲ, ಹೀಗೆ ಈ ಎಲ್ಲ ಪ್ರಾಣಿಗಳ ಮಾಂಸವನ್ನು ತಿನ್ನುತ್ತಾರೆ. ಹಬ್ಬಗಳ ನಂತರ ಬೇಟೆಗೆ ಹೋಗುವ ಪದ್ದತಿಯೂ ಇನ್ನು ಜಾರಿಯಲ್ಲಿದೆ. ಅಥವಾ ಪರಾಣಿಗಳನ್ನು ದೇವರಿಗೆ ಬಲಿಕೊಡುವ ಪದ್ದತಿ ಅಡಿಯಲ್ಲಿ ಮಾಂಸದ ಆಹಾರವನ್ನು ಭಕ್ತಿಯ ಸಂಕೇತವಾಗಿಯೂ ಬಳಸುತ್ತಾರೆ.

. ಪಾನಿಯಾಗಳು  

ಸಿಹಿಪಾನಕವಾಗಿ ನಿಂಬೆಹಣ್ಣಿನ ಶರಬತ್ತನ್ನು ಇಲ್ಲಿಯ ವಾಲ್ಮೀಕಿ ಸಮುದಾಯದವರು ಮಾಡುತ್ತಾರೆ. ಕುಂಬಾರರು ತಯಾರಿಸಿದ ಮಡಿಕೆಯ ನೀರಿಗೆ ನಿಂಬೆಹಣ್ಣಿನ ಹುಳಿಹಿಂಡಿ, ಅದಕ್ಕೆ ತಕ್ಕ ಪ್ರಮಾಣದ ಸಕ್ಕರೆ ಬೆರೆಸಿ ಸುವಾಸನೆಗೆಂದು ಏಲಕ್ಕಿ ಅರೆದು ಹಾಕಿ ಶರಬತ್ತು ತಯಾರಿಸುತ್ತಾರೆ. ಬೇಸಿಗೆಯ ದಿನದಲ್ಲಿ ಇದು ಹೆಚ್ಚು ಬಳಕೆಯಲ್ಲಿರುತ್ತದೆ. ಮಾದಕ ಪಾನಿಯವಾಗಿ ಸರಾಯಿ ಬಳಸುತ್ತಾರೆ. ಸಾರಾಯಿಗಳನ್ನು ಕೆಲಕಡೆ ಸ್ವತ: ತಾವೇ ತಯಾರಿಸುತ್ತಾರಂತೆ, ಮತ್ತೆ ಕೊಂಡುತರುವುದು ರೂಢಿ. ಈ ಸಾರಾಯಿಯನ್ನು ಬಾಣಂತಿಯರಿಗೂ ಕುಡಿಸುತ್ತಾರೆ. ಕಾರಣ ಅವರು ಬೇಗ ಸದೃಢತರಾಗುತ್ತಾರೆ. ಎನ್ನುವ ನಂಬಿಕೆ ಇದೆ. ದಿನಾಲು ಬಳಕೆಯಲ್ಲಿ ಇಲ್ಲದಿದ್ದರು ಮಾಂಸದ ಊಟ ಜೊತೆಗೆ ಈ ಭಾಗದವರಿಗೆ ಸಾರಾಯಿ ಬೇಕೆಬೇಕು.

ಇನ್ನು ಸಾಕುಪ್ರಾಣಿಗಳ ಉತ್ಪನ್ನಗಳಿಂದ ಅಂದರೆ ಕುರಿ, ಆಕಳು, ಎಮ್ಮೆಯ ಹಾಲನ್ನು ಮೊಸರು ಮಾಡಿ ಕಡೆದ ಮಜ್ಜಿಗೆ ಮಾಡಿ, ಮಜ್ಜಿಗೆಗೆ ಸ್ವಲ್ಪ ಉಪ್ಪು ಬೆರೆಸಿ ಕುಡಿಯುವುದು. ಮತ್ತೇ ಇದೇ ಮಜ್ಜಿಗೆಗೆ ಕೊತ್ತಂಬರಿ, ಬೆಳ್ಳುಳ್ಳಿ, ಜೀರಿಗೆ ಉಪ್ಪು ಅರೆದು ಹಾಕಿ ಬೆರಸಿ ಅದಕ್ಕೆ ಜೀರಿಗೆ ಸಾಸ್ವಿ, ಒಣಮೆಣಸಿನಕಾಯಿ, ಕರಿಬೇವು ಒಗ್ಗರಣೆ ಹಾಕಿ ಮಸಾಲಮಜ್ಜಿಗೆ ಎಂದು ತಯಾರಿಸಿಕೊಂಡು ಕುಡಿಯುತ್ತಾರೆ ಮತ್ತು ಅನ್ನ-ನುಚ್ಚಿನ ಜೊತೆಗೆ ಊಟ ಮಾಡುತ್ತಾರೆ. ಒಟ್ಟಾರೆ ಅಥಣಿ ಪರಿಸರದಲ್ಲಿ ಕಂಡು ಬರುವ ಹಲವಾರು ಹಳ್ಳಿಗಳಲ್ಲಿನ ವಾಲ್ಮೀಕಿ ಸಮುದಾಯದವರು ಇತರೆ ಸಮುದಾಯಕ್ಕಿಂತ ಭಿನ್ನವಾದ ಆಹಾರ ಪದ್ದತಿಯನ್ನು ಅನುಸರಿಸಿಕೊಂಡು ಬಂದಿರುವುದು ಕಂಡುಬರುತ್ತದೆ.

* * *