ಪ್ರಸ್ತಾವನೆ

ಮಾನವ ತನ್ನ ಐತಿಹಾಸಿಕವಾದ ಮಹಾನ್ ನಡಿಗೆಯಲ್ಲಿ ದಾಪುಗಾಲಿರಿಸುತ್ತಾ ಇದೀಗ ನಾಗರೀಕತೆಯ ಅತ್ಯುಚ್ಛ ಮಟ್ಟಕ್ಕೆ ಬಂದು ತಲುಪಿದ್ದಾನೆ. ಹಾಗೆಂದ ಮಾತ್ರಕ್ಕೆ ಇಡೀ ಜಗತ್ತಿನ ಎಲ್ಲೆಡೆಯಲ್ಲಿಯೂ ಕಾಣಬರುವ ಮಾನವ ಸಮೂಹ-ಸಮುದಾಯಗಳು ನಾಗರಿಕತೆಯ ಈ ಘಟಕ್ಕೆ ಬಂದು ತಲುಪಿವೆ ಎನ್ನುವಂತಿಲ್ಲ. ನಾಗರಿಕತೆಯ ಗಂಧಗಾಳಿಯನ್ನೇ ಅರಿಯದೆ ಇನ್ನೂ ನರಮಾಂಸ ಭಕ್ಷಕ ಸ್ಥಿತಿಯಲ್ಲಿರುವ ನ್ಯೂಗಿನಿಯ ಮುಡುಂಗು ಮುರರ್ ಸಮುದಾಯದಿಂದ ಹಿಡಿದು ಮಂಗಳ ಗ್ರಹದತ್ತ ಉಡ್ಯಾಣ ನಡೆಸಲು ಸನ್ನಾಹ ನಡೆಸುತ್ತಿದ್ದ ನಾಗರಿಕತೆಯ ಅತ್ಯುಚ್ಛ ಶಿಖರದಲ್ಲಿರುವ ಅಮೇರಿಕದ ಜನಸಮೂಹದವರೆಗೆ ಜೀವನ ನಡಿಗೆಯ ಅನನ್ಯ ಹಂತಗಳಲ್ಲಿರುವ ಜನ ಸಮೂಹಗಳ ಎಲ್ಲಾ ಕಡೆ  ಪಸರಿಸಿವೆ. ಇಂತಹ ಸಮೂಹಗಳಲ್ಲಿ ನಾಗರಿಕತೆಯಿಂದ ಬಹು ದೂರವಿರುವ ಹಾಗೂ ಇನ್ನೂ ಅಕ್ಷರ ಪೂರ್ವ ಸ್ಥಿತಿಯಲ್ಲಿರುವ ಸಮೂಹಗಳಲ್ಲಿ ಸಂಖ್ಯೆಯೂ ಕಡಿಮೆಯೇನಿಲ್ಲ. ಮೂಲ ನಿವಾಸಿಗಳೆಂದು, ಆದಿವಾಸಿಗಳೆಂದು ದೇಶೀಯ ಜನವರ್ಗವೆಂದು, ಆದಿ ಪ್ರಜೆಗಳೆಂದು ಬುಡಗಟ್ಟು ಜನಾಂಗಗಳೆಂದು ಕರೆಯಲಾಗುತ್ತಿರುವ ಇಂತಹ ಸಮೂಹಗಳು ಇಲ್ಲದ ದೇಶವೇ ಇಲ್ಲ ಎನ್ನಬಹುದು. ಜನಸಂಖ್ಯೆಯ ದೃಷ್ಟಿಯಿಂದ ಬಹಳ ಅಲ್ಪ ಸಂಖ್ಯಾತರಾದ ಈ ಜನ ಸಮೂದಾಯಗಳ ಜೀವನ ತೀರಾ ಭಿನ್ನ ರೀತಿಯದು. ವಿಶಿಷ್ಟತಮವಾದದ್ದು. ಈ ಸಮುದಾಯಗಳ ಜೀವನ ಕ್ರಮವನ್ನು ಸಾಮಾಜ ಶಾಸ್ತ್ರೀಯ ಅಥವಾ ಮಾನವ ಶಾಸ್ತ್ರೀಯ ಹಿನ್ನೆಲೆಯಲ್ಲಿ ಅಧ್ಯಯನ ಮಾಡುವುದೆಂದರೆ ಅದೊಂದು ಕುತೂಹಲದ ವಿಷಯ, ಹಾಗೇಯೆ ಸವಾಲಿನ ಪ್ರಶ್ನೆ ಕೂಡ.

ಎಸ್.ಸಿ.ದುಬೆ ಅವರು ಅಭಿಪ್ರಯ ಪಟ್ಟಿರುವಂತೆ ಭಾರತದ ಸಾಮಾಜಿಕ ವ್ಯವಸ್ಥೆಯ ಚೌಕಟ್ಟಿನಲ್ಲಿ (ಆದಿವಾದಿ Tribe) ‘ಟ್ರೈಬ್’ ಎಂಬ ಶಬ್ಧವನ್ನು ಗೊತ್ತುಗುರಿಯಿಲ್ಲದಂತೆ ಬಳಸಲಾಗಿದೆ. ರಿಸ್ಲೆ ಮತ್ತು ಎಲ್ಟಿನ್ ಇವರುಗಳು ಆದಿವಾಸಿಗಳನ್ನು ಎಬ್ರೆಬೊರಿಜಿನಲ್ಸ್ಎಂದು ಕರೆದಿದ್ದರು. ಸರ್ ಬೈನ್ಸ್ ಎಂಬ ಜನಗಣತಿಯ ಅಧಿಕಾರಿಯು ಈ ಸಮೂಹಗಳನ್ನು ಹಿಲ್ ಟ್ರೈಬ್ಸ್ಎಂದು ಕರೆದಿದ್ದರು. ಸರ್ ಬೈನ್ಸ್ ಎಂಬ ಜನಗಣತಿಯ ಅಧಿಕಾರಿಯು ಈ ಸಮೂಹಗಳನ್ನು ಹಿಲ್ ಟ್ರೈಬ್ಸ್’  ಎಂದು ಕರೆದರು. ಡಾ.ಘುರ್ಯೆ ಪ್ರಕಾರ ಅವರುಗಳು ಹಿಂದುಳಿದ ಹಿಂದುಗಳುಡಾ.ದಾಸ್ ಮತ್ತು ದಾಸ್ ಪ್ರಕಾರ ಈ ಸಮುದಾಯವು ಒಂದು ಬಗೆಯ ಮುಳುಗಿದ ಜನವರ್ಗಎಂದು ಕರೆದಿದ್ದಾರೆ. ಮಹಾತ್ಮ ಗಾಂಧೀಜಿಯವರು ಈ ಸಮೂಹವನ್ನು ಗಿರಿಜನರುಎಂದು ಕರೆದಿದ್ದು ಈ ಶಬ್ಧವು ಇಂದು ಹೆಚ್ಚು ಪ್ರಚಲಿತದಲ್ಲಿದೆ. ಭಾರತದ ಸಂವಿಧಾನದ ೩೪೨ನೇ ಕಲಂನಲ್ಲಿ ಆದಿವಾಸಿಗಳನ್ನು ಪರಿಶಿಷ್ಟ ಜನಾಂಗಗಳುಅಥವಾ ಬುಡಗಟ್ಟುಗಳುಎಂದು ಉಲ್ಲೇಖಿಸಲಾಗಿದ್ದು ಈಗ ಕೂಡ ನಮ್ಮ ಸಮಾಜ ಶಾಸ್ತ್ರೀಯ ಸಾಹಿತ್ಯದಲ್ಲಿ  ಜನಪ್ರೀಯವಾಗಿದೆ.

ಬುಡಕಟ್ಟು ಸಮುದಾಯಗಳ ವ್ಯಾಖ್ಯೆಗಳು

ಆದಿವಾಸಿಗಳು ಅಥವಾ ಬುಡಕಟ್ಟು ಸಮುದಾಯ  ಎಂಬುದರ ಬಗ್ಗೆ ಮಾನವಶಾಸ್ತ್ರಜ್ಞರು ಮತ್ತು ಸಮಾಜಶಾಸ್ತ್ರಜ್ಞರು ನಿಕರವಾದ ಸಂಖ್ಯೆಯೊಂದನ್ನು ನೀಡುವುದರಲ್ಲಿ ವಿಫಲರಾಗಿದ್ದಾರೆ. ಪ್ರತಿಯೊಬ್ಬರೂ ತಮ್ಮದೇ ಆದ ವ್ಯಾಖ್ಯೆ ಹಾಗೂ ವ್ಯಾಖ್ಯಾನ ನೀಡುವ ಪ್ರಯತ್ನ ನಡೆಸಿದ್ದಾರೆ.

. ಡಾ. ಡಿ. ರನ್.. ಮಜುಮದಾರ ರವರ ಪ್ರಕಾರ : ಒಂದೇ ನಾಮದೇಯವನ್ನು ಹೊಂದಿರುವ, ಒಂದೇ ಭೂನೆಲೆಯಲ್ಲಿ ವಾಸಿಸುವ ಒಂದೇ ಭಾಷೆಯನ್ನಾಡುವ ಮತ್ತು ವಿವಾಹ-ಉದ್ಯೋಗಗಳಿಗೆ  ಸಂಬಂಧಿಸಿದಂತೆ ಒಂದೇ ಬಗೆಯ ವಿಧಿ- ನಿಷೇದಗಳಿಗೆ ಬುದ್ಧವಾದ ಕುಟುಂಬಗಳ ಸಮೂಹವನ್ನು ಆದಿವಾಸಿ ಸಮೂಹ ಎಂದು ಕರೆಯಬಹುದು ಎಂದು ಹೇಳಿದ್ದಾರೆ.

. ಡಬ್ಲ್ಯೂ ಜೆ. ಪೆರ್ರಿ : ಒಂದು ಸ್ಥಳದಲ್ಲಿ ನೆಲೆಸಿಕೊಂಡು ಒಂದೇ ಭಾಷೆಯನ್ನಾಡುವ ಜನಸಮೂಹವನ್ನು ಆದಿವಾಸಿ ಸಮೂಹ ಎಂದು ಕರೆಯಬಹುದು.

ವಿವಾಹ

ನಿಸರ್ಗದ ನಿಯಮದಂತೆ ಗಂಡು – ಹೆಣ್ಣುಗಳ ಸಮ್ಮಿಲನದಿಂದ ಸಂತತಿ ಪ್ರಾಪ್ತವಾಗುವುದರಿಂದ ಸಮಾಜ ಆಸ್ತಿತ್ವದ ಮತ್ತು ಬೆಳವಣಿಗೆಗೆ ಮೂಲ ಕಾರಣವಾಗಿದೆ. ವಿವಾಹ ಮತ್ತು ಕುಟುಂಬ ಸಮಾಜ ಎರಡು ಕೇಂದ್ರ ಬಿಂದುಗಳಾಗಿವೆ. ವಿವಾಹ ಆದಿ ಅನಾದಿ ಕಾಲದಿಂದಲೂ ಪೃಥ್ವಿಯ ಮೇಲೆ ನಡೆದು ಬಂದ ಪದ್ಧತಿ

‘Marriage’ ಈ ಪದವು ಲ್ಯಾಟಿನ್ ಭಾಷೆಯ Marris or Mos ಎನ್ನುವ ಪದದಿಂದ ಉತ್ಪತ್ತಿಯಾಗಿ Marris or Mos ಅಂದರೆ ಜೋಡಿಯಾಗು ಆದ್ದರಿಂದ ಈ ಪದ್ದಕ್ಕೆ ’ಹೆಣ್ಣಿಗೆ ಗಂಡನ್ನು ಜೋಡಿಸುವುದು’ ಎಂಬ ಅರ್ಥವು ಹೊರಡುತ್ತದೆ.

೧. ಎಡ್ವರ್ಡ ವೆಸ್ಟರ್ ಮಾರ್ಕ : ಪ್ರಜೋತ್ಪಾದನೆಯಾದ ಶಿಶುವಿನ ಜನನದವರೆಗೆ ಮಾತ್ರವಷ್ಟೇ ಉಳಿಯದೆ ಆಮೇಲೆಯೂ ಸಾಮಾನ್ಯವಾಗಿ ಹೆಚ್ಚು ಕಾಲ ಮುಂದುವರೆಯುವ ಸ್ತ್ರೀ ಪುರುಷರ್ ನಡುವಿನ ಸಂಬಂಧವೇ ವಿವಾಹ ಎಂದು ವ್ಯಾಖ್ಯಾನಿಸಿದ್ದಾರೆ.”

೨. ಲೂಯಿಸ್ : ಅವರು ‘ಅನುಮತಿ ಪಡೆದ ಸಂಗಾತಿಗಳ ನಡುವೆ ವಿಶೇಷವಾದ ಶಾಶ್ವತ ಬಂಧನವೇ ವಿವಾಹ ಎಂದು ವ್ಯಾಖ್ಯಾನಿಸಿದ್ದಾರೆ.

ಬುಡಕಟ್ಟು ಜನಾಂಗದ ವೈವಾಹಿಕ ಜೀವನ

ಆದಿವಾಸಿಗಳು ವೈವಾಹಿಕ ಜೀವನಕ್ಕೆ ಸಾಕಷ್ಟು ಪ್ರಾಮುಖ್ಯತೆ ನೀಡಿರುವುದರಿಂದ ವಿವಾಹವು ಅವರಲ್ಲಿ ಸಾರ್ವತ್ರಿಕವಾಗಿದೆ ವಿವಾಹದ ವಯಸ್ಸು, ಸಂಗಾತಿಗಳ ಆಯ್ಕೆಗಳ ಕ್ರಮ, ವಿವಾಹದ ಸಮಾರಂಭದ ಸ್ವರೂಪ, ವಿವಾಹ ವಿಚ್ಛೇದನ, ಲೈಂಗಿಕ ನಿಮಯಗಳು ಇವುಗಳ ಬಗ್ಗೆ ಆದಿವಾಸಿಗಳು ತಮ್ಮದೇ ಆದ ನಿಯಮಗಳನ್ನು ಹೊಂದಿರುತ್ತಾರೆ. ವಿವಾಹದ ವಯಸ್ಸಿನ ದೃಷ್ಠಿಯಿಂದ ಹೇಳುವುದಾದರೆ ಬಹುತೇಕ ಆದಿವಾಸಿಗಳು ತಮ್ಮ ಮಕ್ಕಳು ಪ್ರೌಢಾವಸ್ಥೆಯನ್ನು ತಲುಪಿದ ಮೇಲೆಯೇ ಅವರ ವಿವಾಹದ ವ್ಯವಸ್ಥೆ ಮಾಡುವರು. ಇದಕ್ಕೆ ಅಪವಾದವೆಂಬಂತೆ ಕೆಲವು ಸಮೂಹಗಳಲ್ಲಿ (ಉದಾ: ಸಂತಾಲ, ಮುಂಡಾ & ಓರನ್) ಹೆಣ್ಣುಮಕ್ಕಳಿಗೆ ೯-೧೦ ವರ್ಷ ಮತ್ತು ಗಂಡು ಮಕ್ಕಳಿಗೆ ೧೨-೧೩ ವರ್ಷ ವಯಸ್ಸಾಗುವುದರೊಳಗೆ ವಿವಾಹ ಮಾಡುವುದುಂಟು.

ಜೀವನ ಸಂಗಾತಿಗಳ ಆಯ್ಕೆಯಲ್ಲಿನ ವೈಶಿಷ್ಯ್ಟತೆಗಳು

. ಕನ್ಯಾ ವಿಕ್ರಯ

ವದು ದಕ್ಷಿಣೆ ಅಥವಾ ತೇರಅಥವಾ ಕನ್ಯಾಶುಲ್ಕ ಆದಿವಾಸಿಗಳಲಿ ಹೆಚ್ಚು ವ್ಯಾಪಕವಾಗಿದೆ. ಸಂತಾಲರು, ಹೋಓರಿಯನ್, ಖರಿಯಾ, ಗೊಂಡಾ, ನಾಗಾ, ಕುಶಿ ಮೊದಲಾದವರಲ್ಲಿ ಇದು ಪ್ರಚಲಿತವಿದೆ.

. ಶ್ವಶೂರ ಸೇವಾ ವಿವಾಹ

ಸೇವೆಯನ್ನು ಆಧರಿಸಿದ ‘ಸೇವಾ ವಿವಾಹ’ವು ರಖೋಲ್, ಶುಕಿ, ಐವೋಲ್ ಮತ್ತು ಚುರು ಸಮೂಹಗಳಲ್ಲಿ ಆಚರಿಣೆಯಲ್ಲಿದೆ. ವಿವಾಹಸಕ್ತ ಯುವಕನು ತನ್ನ ಭಾವಿ ಮಾವನ ಮನೆಯಲ್ಲಿ ವಿವಾಹಕ್ಕೂ ಮುಂಚೆ ಕನಿಷ್ಠ ೩ ವರ್ಷ ಸೇವೆ ಸಲ್ಲಿಸಿ ಆತನ ಕೃಪೆಗೆ ಪಾತ್ರನಾಗಿ ಮಗಳನ್ನು ವಿವಾಹವಾಗುವ ಕ್ರಮ ಶ್ವಶೂರ ವಿವಾಹ.

. ಶೌರ್ಯ ವಿವಾಹ

ಕೆಲವು ಆದಿವಾಸಿಗಳಲ್ಲಿ ತಮ್ಮ ಶೌರ್ಯ ಸಾಹಸಗಳನ್ನು ಕನ್ಯೆಯರ ಎದುರು ಪ್ರದರ್ಶಿಸಿ ಅವರನ್ನು ಸಂಪ್ರೀತಿಗೊಳಿಸಿ ಅವರಲ್ಲಿ ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳುವ ಕ್ರಮವಿದೆ.

. ಕನ್ಯಾಪಹರಣ

ಇನ್ನು ಕೆಲವು ಕಡೆ ಅಪಹರಣದ ವಿವಾಹ ಆಚರಣೆಯಲ್ಲಿದೆ. ಉದಾ: ಹೊ, ಸಂತಾಲ, ಮುಂಡ, ಬೂಮಿಜ್ ಮತ್ತಿತ್ತರ ಕೆಲವು ಸಮೂಹಗಳಲ್ಲಿ ಇದು ಪ್ರಚಲಿತವಿದೆ. ಎಷ್ಟೋ ಬಾರಿ ಇದಕ್ಕೆ ತಂದೆ- ತಾಯಿಯರ ಗುಪ್ತ ಸಮ್ಮತಿಯೂ ಇರುತ್ತದೆ. ತಾನು ಪ್ರೀತಿಸುವ ಕನ್ಯೆಯನ್ನು ಎಲ್ಲರ ಒಪ್ಪಿಗೆ ಪಡೆದು ವಿವಾಹವಾಗಲು ಸಾಧ್ಯವಾಗದ ವಾತಾವರಣವಿದ್ದಾಗ ಯುವಕನು ಯುವತಿಯನ್ನು ಬಲಾತ್ಕಾರವಾಗಿ ಅಪಹರಿಸಿಕೊಂಡು ಹೋಗಿ ಬೇರೆ ಹಳ್ಳಿಯಲ್ಲಿ ಕೆಲ ಸಮಯವಿರುತ್ತಾನೆ. ನಂತರ ಯುವಕ ಯುವತಿಯರ ಮಾತಾ-ಪಿತೃಗಳು ಪರಸ್ಪರ ಮಾತಾಡಿಕೊಂಡು ಇತರ ಹಿರಿಯರನ್ನು ಒಪ್ಪಿಸಿ ಎಲ್ಲರ ಸಮಾಕ್ಷಮ ಅವರ ವಿವಾಹ ಮಾಡುತ್ತಾರೆ.

. ಪ್ರೇಮಿಯೊಡನೆ ಪಲಾಯನ ವಿವಾಹ

ಈ ಕ್ರಮವು ಕೆಲವು ಬುಡಕಟ್ಟುಗಳಲ್ಲಿದೆ. ತಮ್ಮಿಬ್ಬರ ವಿವಾಹಕ್ಕೆ ತಂದೆ-ತಾಯಿ ಹಾಗೂ ಇತರ ಬಂಧುಗಳ ಅನುಮತಿಯಿಲ್ಲವೆಂದು ತಿಳಿದಾಗ ಪ್ರೇಮಿಗಳು ಪರಸ್ಪರ ಸಮ್ಮತಿಯೊಂದಿಗೆ ತಮ್ಮ ಬಂಧುವರ್ಗವನ್ನು ಬಿಟ್ಟು ಓಡಿಹೋಗುವರು, ಕೆಲವು ತಿಂಗಳುಗಳ ನಂತರ ಅವರು ಮರಳಿ ಬಂದಾಗ ಅವರನ್ನು ಗಂಡ-ಹೆಂಡತಿಯರೆಂದು ಎಲ್ಲರೂ ಒಪ್ಪಿಕೊಂಡು ಮಾನ್ಯತೆ ನೀಡುತ್ತಾರೆ.

. ಕನ್ಯೆಯರ ವಿನಿಮಯ ವಿವಾಹ

ಈ ಕ್ರಮವು ಕೆಲವು ಆದಿವಾಸಿಗಳಲ್ಲಿದೆ. ವದುದಕ್ಷಿಣೆಯು ವಿಪರೀತವಾಗಿದ್ದು ಅದನ್ನು ಕೊಡಲಾರದ ಸ್ಥಿತಿಯಿರುವಾಗ ಎರಡು ಕುಟುಂಬಗಳು ತಮ್ಮ ಕನ್ಯೆಯರನ್ನು ವಿವಾಹದ ಮೂಲಕ ವಿನಿಮಯ ಮಾಡಿಕೊಳ್ಳುವುದುಂಟು. ಒಂದು ಕುಟುಂಬದ ಸೋದರ ಸೋದರಿಯರು ಇನ್ನೊಂದು ಕುಟುಂಬದ ಸೋದರ, ಸೋದರಿಯೊಂದಿಗೆ ವಿನಿಮಯ ಕ್ರಮದಂತೆ ವಿವಾಹವಾಗುವ ಈ ಪದ್ಧತಿಯು ಸಂತಾಲ, ಹೋ, ಖರಿಯಾ ನಾಗಾ ಮುಂತಾದ ಸಮೂಹಗಳಲ್ಲಿದೆ.

. ಪರೀಕ್ಷಾರ್ಥಕ ವಿವಾಹ

ಕೆಲವು ಆದಿವಾಸಿಗಳಲ್ಲಿ ಆಚರಿಣೆಯಲ್ಲಿದೆ. ಉದಾ: ಕುಕಿ, ಈ ಕ್ರಮದಂತೆ ವಿವಾಹಸಕ್ತನಾದ ಯುವಕನು ತನಗಿಷ್ಟವಾದ ಯುವತಿಯ ಮನೆಯಲ್ಲಿ ಅನುಮತಿಯ ಮೇರೆ ಕೆಲವು ವಾರಗಳ ಕಾಲ ವಾಸಿಸುತ್ತಾನೆ. ಈ ಅವಧಿಯಲ್ಲಿ ಯುವಕ ಯುವತಿಯರು ಪರಸ್ಪರ ತಮ್ಮನ್ನು ಅವಲೋಕನ ತಮ್ಮಲ್ಲಿ ಹೊಂದಾಣಿಕೆಯಾಗುವುದೆಂದು ಕಂಡು ಬಂದಲ್ಲಿ ವಿವಾಹವಾಗುತ್ತಾರೆ.

. ಬಲವಂತ ಮಾಘಸ್ನಾನ (ಅಕ್ರಮ ಪ್ರವೇಶ ವಿವಾಹ)

ಇಂತಹ ವಿಚಿತ್ರ ರೀತಿಯ ಕ್ರಮವೂ ಹೋ & ಭಿರ್ ಹಾರ್ ಮುಂತಾದ ಸಮೂಹಗಳಲ್ಲಿ ಆಚರಣೆಯಲ್ಲಿದೆ. ಯುವಕನೋರ್ವನು ಕನ್ಯೆಯೊಬ್ಬಳನ್ನು ವಿವಾಹವಾಗುವೆನೆಂದು ನಂಬಿಸಿ ಮೋಸಗೊಳಿಸಿದರೆ, ಅಥವಾ ಯುವಕನೋರ್ವನ ಮೇಲೆ ಕನ್ಯೆಯೋರ್ವಳು ತುಂಬಾ ಮೋಹಗೊಂಡಿದ್ದರೆ ಆಕೆಯೇ ಧೈರ್ಯವಹಿಸಿ ಹೂಡಿ ಕುಳಿತು ಬಿಡುತ್ತಾಳೆ. ಕೊನೆಗೆ ನೆರೆಹೊರೆಯವರು ಒಟ್ಟುಗೂಡಿ ಆತನೊಡನೆ ಆಕೆಯ ವಿವಾಹ ಮಾಡುತ್ತಾರೆ.

ಕರ್ನಾಟಕ ಬುಡಕಟ್ಟು ಜನಾಂಗದ ವೈವಾಹಿಕ ಪದ್ದತಿಗಳು

) ಸೋಲಿಗರ ಸಮುದಾಯದಲ್ಲಿ ವಿವಾಹ ಪದ್ದತಿ

ಪಾರ್ವತಿ ಪರಮೇಶ್ವರದಿಂದ ನೀಲಯ್ಯ ಮತ್ತು ನಿಜಗೆಂಪೆಯರ ಜನನವಾಗಿ ಮಹದೇಶ್ವರರ ದಯೆಯಿಂದ ಕಾರಯ್ಯ ಮತ್ತು ಬಿಲ್ಲಯ್ಯರು ಹುಟ್ಟಿದರು. ಇವರ ಕಾಲಾನಂತರ ಅವರಿಂದ ವಂಶಾಭಿವೃದ್ದಿಯಾದ ಮೇಲೆ ಈ ಗುಂಪಿನ ಜನರಲ್ಲಿ ಒಬ್ಬ ರಾಜನಿದ್ದ, ಒಮ್ಮೆ ಶತ್ರು ರಾಜನ ವಿರುದ್ದ ಯುದ್ಧ ಮಾಡಬೇಕಾಗಿ ಬಂದು ಪರಾಜಿತನಾಗಿ ಜೀವರಕ್ಷಣೆಗಾಗಿ ಸೋತಿದ್ದರಿಂದ, ಸೋಲು ರಾಜನೆಂದು ಅವರಿಗೆ ಹೆಸರಾಯಿತು. ಅವನ ವಂಶಜರಿಗೆ ಸೋಲಿಗರೆಂದು ಹೆಸರಾಯಿತು ಎಂದು The Mysore Tribes and Castes Vol-IV ದಲ್ಲಿ ಎಲ್.ಕೆ ಅನಂತಕೃಷ್ಣ ಐಯ್ಯರ್ ಅವರು ದಾಖಲಿಸಿದ್ದಾರೆ. ಸೋಲಿಗರು ಹೆಚ್ಚಾಗಿ ಮೈಸೂರು ಜಿಲ್ಲೆಯ ಕೊಳ್ಳೆಗಾಲ ಚಾಮರಾಜನಗರ, ಬಿಳಿಗಿರಿ ರಂಗನಬೆಟ್ಟ, ಮಹದೇಶ್ವರ ಬೆಟ್ಟ, ಯಳಂದೂರು ಹೆಗ್ಗಡ ದೇವನಕೋಟೆ, ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಕಂಡುಬರುತ್ತಾರೆಂದು ವರದಿ ಮಾಡಲಾಯಿತು.

ಸೋಲಿಗರ ವಿವಾಹ ತುಂಬ ಸರಳ ಇತ್ತೀಚಿನ ದಿನಗಳಲ್ಲಿ ಬದಲಾಗಿದೆ. ಕಲ್ಯಾಣ ಮಂಟಪ ಅಥವಾ ಮನೆ ಮುಂದೆ ಗುಡಿಗ(ಕುಲಸ್ಥ)ನಿಗೆ ಕಾಣಿಕೆ ಕೊಟ್ಟು ಮದುವೆ ಮಾಡಿಕೊಡುತ್ತಾರೆ. ಹಿಂದೆ ಅಪಹರಣ ಮದುವೆ ಪದ್ಧತಿ ಇತ್ತು. ಇತ್ತೀಚಿಗೆ ನಾಗರಿಕತೆ ಬದಲಾದಂತೆ ಎಲ್ಲವೂ ಬದಲಾಗಿದೆ. ಹೆಣ್ಣಿಗೆ ಸೋದರಮಾವ ಕಾಲುಂಗರ ತೊಡಿಸಿ ಮಂಟಪಕ್ಕೆ ಕರೆದುಕೊಂಡು ಬರುತ್ತಾರೆ. ಗಂಡ ಸತ್ತ ನಂತರ ಅಥವಾ ಗಂಡ ಬಿಟ್ಟ ನಂತರ ಕುಲಸ್ಥರನ್ನು ಕರೆಯಿಸಿ ಎಲ್ಲರ ಸಮ್ಮುಖದಲ್ಲಿ ರೂಪಾಯಿ ೧.೨೫ ಕಾಣಿಕೆ ಕೊಟ್ಟು ಇಲೆವಳಿ(ಕಟ್ಟು ಬಡಿ) ಮದುವೆ ಮಾಡಿಕೊಡುತ್ತಾರೆ. ನಂತರ ಎಲ್ಲರೂ ಸೇರಿ ಔತಣಕೂಟದೊಂದಿಗೆ ಸಂತೋಷ ಪಡುತ್ತಾರೆ. ಸೋಲಿಗರ ಕುಲದಲ್ಲಿ ಹೆಣ್ಣು ಮೈನೆರೆದರೆ ಸೋದರಮಾವ ನೇರೆಳೆ ಅಥವಾ ಹೊಂಗೆಯ ಕಡ್ಡಿಗಳನ್ನು ತೆಗೆದುಕೊಂಡು ಹೋಗಿ ಚಪ್ಪರ ಹಾಕಿ, ೧೨ ದಿವಸಗಳ ಹೊರಗಡೆ ಬರದ ಹಾಗೆ ಅವಳಿಗೆ ಪ್ರತ್ಯೇಕ ತಟ್ಟೆ ಇತ್ಯಾದಿ (ಗುಡಿಸಲಿನ ಒಳಗಡೆಯೇ) ನಂತರ ಆಕೆಯನ್ನು ಕುಲದ ಮುತ್ತೈದೆಯವರು ಸ್ನಾನ ಮಾಡುವಾಗ ಕಾಡಿನಲ್ಲಿ ಸಿಗುವ ಎಲೆಗಳು, ಅರಿಶಿಣ ಇತ್ಯಾದಿಗಳ ಮೂಲಕ ಮಂಗಳ ಸ್ನಾನ ಮಾಡಿಸಿ ಮನೆ ಒಳಗಡೆ ಶಾಸ್ತ್ರೋಕ್ತವಾಗಿ ಸೇರಿಸಿಕೊಳ್ಳುತ್ತಾರೆ. ಆಗ ಊರಿನ ನಾಯಕರು ಕುಲದ ನಾಯಕರು ಸಂತೋಷದಿಂದ ಭೋಜನ ಸೇವಿಸುತ್ತಾರೆ. ಈಗಾಗಲೇ ಹಾಕಿದ ಚಪ್ಪರವನ್ನು ಸೋದರಮಾವ ಕಿತ್ತು ಹೊರಹಾಕಿ ಬೆಂಕಿ ಇಡುತ್ತಾರೆ. ಹಿಂದೆ ಕಾಡಿನ ಸಂಪ್ರದಾಯದಂತೆ ಮದುವೆ ನಡೆಯುತ್ತಿತ್ತು. ಇತ್ತೀಚಿನ ದಿನಗಳಲ್ಲಿ ನಾಗರಿಕತೆಯಿಂದ ಬದಲಾದರೂ ಸಂಪ್ರದಾಯಿಕವಾಗಿಯೇ ಮದುವೆ ನಡೆಯುತ್ತದೆ. ಈಗಲೂ ಸೋಲಿಗರು ಕುಲದ ಕಟ್ಟುಪಾಡುಗಳಿಗೆ ಗೌರವಿತವಾಗಿ ಕಟ್ಟುನಿಟ್ಟಾಗಿ ನಡೆದುಕೊಳ್ಳುತ್ತಾರೆ. (ಸೋಲಿಗರು ಪೊಲೀಸ್ ಸ್ಟೇಷನ್ ಆಸ್ಪತ್ರೆ, ಚಪ್ಪಲಿಯಿಂದ ಹೊಡೆದರು. ಅವಾಚ್ಯಶಬ್ದಗಳಿಂದ ಬೈದರೆ, ಸಂಪ್ರದಾಯದ ಕಟ್ಟುಪಾಡುಗಳಲ್ಲಿಯೇ ತೀರ್ಮಾನಿಸಿ ಒಳ ಸೇರಿಸುತ್ತಾರೆ.) ಯಾವುದೇ ಒಂದು ಮನೆಯಲ್ಲಿ ಇಬ್ಬರು ಅಣ್ಣ ತಂಗಿಯರಿದ್ದರೆ, ಅವರವರು ತಂಗಿಯನ್ನು ಪರಸ್ಪರ ಬೇರೆ ಕಡೆ ವಿನಿಮಯ ಮಾಡಿಕೊಡು ಖರ್ಚಿಲ್ಲದಂತೆ ಮದುವೆಯಾಗುತ್ತಿದ್ದರು. ಸೋಲಿಗರ ವಿವಾಹದ ಬೆಗೆಗಳಲ್ಲಿ ಏಕಪತ್ನಿತ್ವ, ಬಹುಪತ್ನಿತ್ವ, ವಿವಾಹಪೂರ್ವ ಲೈಂಗಿಕ ಸಂಪರ್ಕ, ಕನ್ಯಾ ಶಲ್ಕ, ವಿವಾಹ ವಿಚ್ಛೇದನೆ, ವಿಧವಾ ವಿವಾಹ, ವಿವಾಹಾಚರಣೆ, ವಿಧವೆಯ ಮಕ್ಕಳು, ಕುಲಪಂಚಾಯಿ, ಶಿಕ್ಷೆಗಳು ಇತ್ಯಾದಿ ಎಲ್ಲಾ ಅಂಗಗಳನ್ನು ಗಮನಿಸಬಹುದಾಗಿದೆ.

. ದಕ್ಕಲಿಗ ಸಮುದಾಯದಲ್ಲಿ ವೈವಾಹಿತ ಪದ್ಧತಿಗಳು :

ದಕ್ಕಲಿಗ ಸಮುದಾಯದ ಬೆಡಗು ಅಥವಾ ಗೋತ್ರಗಳು

೧) ಗಣಚಾರಿ (ರೇಣುಕುಂಟೋಳು ೨) ಕನೊಳು, ೩) ಪೆಟ್ಯಾಟೋಳು, ೪) ಕಾಮಂಚೋಳು, ೫) ಚ್ಯಾರಗೊಂಡೋಳು, ೬) ನಲ್ಲಪೋಗುಲೋಳು.

ಈ ಮೇಲ್ಕಂಡ ಆರು (೬) ಬೆಡಗಿನವರು ಸಹೋದರರಾಗುತ್ತಾರೆ. ೭) ಪೆದ್ದೆರೇಡ್ಡೇಳು, ೮) ಚಿನ್ನ ರೆಡ್ಡೇಳು, ೯) ಡಾಕೊರೋಳು, ೧೦) ಇಂಗೋಳು, ೧೧) ಬಾಣಲೋಳು.

ಈ ೭ ರಿಂದ ೧೧ ಸಂಖ್ಯೆಯವರಿಗೂ ಇವರು ಬೆಡಗಿನವರು ಸಹೋದರರಾಗುತ್ತಾರೆ. ಮೇಲ್ಭಾಗದಲ್ಲಿರುವ ೧ ರಿಂದ ೬ ಸಂಖ್ಯೆಯ ಬೆಡಗಿನವರಿಗೂ ಮತ್ತು ೭ರಿಂದ ೧೧ನೇ ಸಂಖ್ಯೆಯ ಬೆಡಗಿನವರು ಕೆಳಗೆ ಇರುವ ೭ರಿಂದ೧೧ ಸಂಖ್ಯೆವರೆಗೂ ವಧುಗಳನ್ನಾಗಲಿ ಅಥವಾ ವರರನನ್ನಾಗಲಿ ಲಗ್ನ ಮಾಡಬಹುದು. ಯಾವುದೇ ಕಾರಣಕ್ಕೂ ಸಹೋದರರಾಗುವ ಬೆಡಗುಗಳಲ್ಲಿ ವಧು, ವರರನ್ನು ಲಗ್ನ ಮಾಡುವಂತಿಲ್ಲ. ಒಂದು ವೇಳೆ ಆಕಸ್ಮಿಕವಾಗಿ ಸಹೋದರ ಸಹೋದರಿಯರ ವಿವಾಹವಾದರೆ ಅಂಥವರು ಸಮುದಾಯದಿಂದ ಬಹಿಷ್ಕಾರ ಕ್ಕೊಳಗಾಗುವರು.

ವಿವಾಹ

ವಿವಾಹದ ವಿವಾರವೆಂದರೆ ಮೊಟ್ಟಮೊದಲನೆ ಬಾರಿಗೆ ಹುಡುಗನ ತಂದೆ ತಾಯಿ ಅಥವಾ ಸಹೋದರ ಸಹೋದರಿಯ ವಧುವನ್ನು ನೋಡಿಕೊಂಡು ಬರುತ್ತಾರೆ. ನಂತರ ವಿವಾಹ ಮಾಡುತ್ತಾರೆ. ಹಿಂದೆ ಮದುವೆ ಆಗುವವರನ್ನು ಹೇಳದೇ ಕೇಳದೇ ಶೆ.೯೯ ರಷ್ಟು ಬಾಲ್ಯ ವಿವಾಹ ಮಾಡುತ್ತಿದ್ದರು. ಪ್ರೌಢಾವಸ್ಥೆಗೆ ಬಂದ ನಂತರ ಗಂಡನ ಮನೆಗೆ ಕಳುಹಿಸುತ್ತಿದ್ದರು. ಈಗೀಗ ಶೇ೮೦  ರಷ್ಟು ವಿವಾಹಗಳು ಪ್ರೌಢಾವಸ್ಥೆಗೆ ಬಂದ ನಂತರ ಜರುಗುತ್ತಿವೆ. ಇಂದಿಗೂ ಯಾವುದೇ ರೀತಿಯ ವರದಕ್ಷಿಣೆ ಪಿಡುಗು ಇರುವುದಿಲ್ಲ.

ವಿವಾಹದ ರೀತಿ ನೀತಿಗಳು

ಹನ್ನೆಡರು ಕಂಬ, ಹನ್ನೆಡರು ಕುಂಭ, ಹನ್ನೆಡರು ಪಂಜು, ಹನುಮ ಗರುಡ, ಭಗವನಿ ಶಾನಿಯಂ ಇಡಿಸಿ,ಕರಿ ಕಂಬಳಿ ಗದ್ದಿಗೆ, ಕೆಂಪು ವಸ್ತ್ರ, ನಾಲ್ಕು ಮೂಲೆಗೆ ತೊಂಡಲ, ಬಾಸಿಂಗ ಮಲ್ಲಿಗೆ ಹೂವಿನ ಹಾರ, ಜೋಡಿಕಳಶ, ಜೋಡಿಕನ್ನಡಿ, ವೀರ ಕಂಕಣ, ದೇವತಾ ಮುದ್ರಿಕೆಗಳು, ಪಟಾವಳಿ, ಭತ್ತಿ ಆಯುಧ, ನಗಾರಿ ಸಾಬತ್ತು, ಕೆಂಪುಛತ್ರಿ, ಮತ್ತೈದೆಯರಿಂದ ಸೋಬಾನ ಪದಗಳು, ವಾದ್ಯಗಳಿಂದ ನೃತ್ಯಗೀತೆಗಳು, ಮಾವಿನ ಎಲೆ, ಅಷ್ಟ ತೋರಣಗಳು ಇರುತ್ತವೆ. ಮೊದಲೇ ದಿನ ಮದುಮಕ್ಕಳಾಗುವ ದಿನ ವಧು ಮತ್ತು ವರರಿಗೆ ಬೇರೆ ಬೇರೆ ಜಾಗದಲ್ಲಿ ಕುಳ್ಳಿರಿಸಿ, ಮುತ್ತೈದೆಯರಿಂದ ಗಂಡು ಮಕ್ಕಳಾಗಲಿ, ಹೆಣ್ಣುಮಕ್ಕಳಾಗಲಿ ಎಂದು ಅರಿಶಿಣ ಹಚ್ಚುತ್ತಾರೆ. ಹೆಚ್ಚಿದ ನಂತರ ಸೋಬಾನ ಪದಗಳನ್ನು ಹಾಡಿ ಹಾಗೆ ಬೇರೆ ಬೇರೆ ಜಾಗದಲ್ಲಿ ಮಲಗಿಸುತ್ತಾರೆ. ಮೂರನೇ ದಿನ ಚಪ್ಪರದ ಕೆಳಭಾಗದಲ್ಲಿ ಜಂಗಮಯ್ಯರ ಸಮ್ಮುಖದಲ್ಲಿ ನಾಲ್ಕು ಕುಂಭಗಳಿದ್ದು, ಆ ಕುಭಗಳಿಗೆ ಸುರಿಗೆ ದಾರ ಸುತ್ತಿ ಅವುಗಳ ಮಧ್ಯೆ ಭಾಗದಲ್ಲಿ  ಒನಕೆಗಳನ್ನಿಟ್ಟು ಅದರ ಮೇಲ್ಭಾಗದಲ್ಲಿ ವಧುವರರನ್ನು ಕುರಿಸಿ ಮುತ್ತೈದೆಯರಿಂದ ಅರಶೀನ ಹಚ್ಚಿ ಸ್ನಾನ ಮಾಡಿಸಿ ಹೊಸ ಉಡುಪುಗಳು ಮತ್ತು ಹೊಸ ಆಭರಣಗಳನ್ನು ಹಾಕಿ ಸಮಾಜದ ಸಮ್ಮುಖದಲ್ಲಿ ಮೂಹೂರ್ತದ ಸಮಯದಲ್ಲಿ ವರನು ಹೆಣ್ಣಿನ ಕೊರಳಿಗೆ ಹೂವಿನ ಮಾಲೆಯನ್ನು ಹಾಕಿಸಿ ಅದೇ ರೀತಿ ಹೆಣ್ಣಿನ ಕೈಯಿಂದ ವರನ ಕೊರಳಿಗೆ ಮಾಲೆಯನ್ನು ಹಾಕಿಸಿ ಹಾಲು, ತುಪ್ಪದಲ್ಲಿ ಅವರ ಕೈಗಳನ್ನು ತೊಳೆದು ವರನ ಕೈಯಿಂದ ವಧುವಿನ ಕೊರಳಿಗೆ ತಾಳಿಯನ್ನು ಮೂರು ಗಂಟ್ಟು ಕಟ್ಟಿಸುತ್ತಾರೆ. ಇದಾದನಂತರ ವಧು ಮತ್ತು ವರನ ವಸ್ತ್ರಗಳಿಗೆ ೩ ಗಂಟ್ಟುಗಳನ್ನು ಹಾಕುತ್ತಾರೆ. ಇದಕ್ಕೆ ಬ್ರಹ್ಮಗಂಟು ಎನ್ನುತ್ತಾರೆ. ಇದಾದನಂತರ ಭೋಜನವು ಸಿಹಿ ಇರಬಹುದು ಅಥವಾ ಖಾರನು ಇರಬಹುದು, ಭೋಜನ ಮುಗಿದ ನಂತರ ಮರುದಿನ ನಾಗವಲಿ (ಮಾಮನೆ ಅಥವಾ ಆರಕ್ಷತೆ) ವರನ ಮನೆಯಲ್ಲಿ ಮುಗಿದ ನಂತರ ಹನ್ನೆಡರು ಕುಂಬಗಳು (ಹರಿವಾಣಗಳು) ಇದರ ಜೊತೆಗೆ ಕೊಬ್ಬರಿ, ಉತ್ತತ್ತಿ, ಬೆಲ್ಲ, ಎಲೆ ಅಡಿಕೆ, ಹಣ್ಣುಗಳು ಹನ್ನೆರಡು ಬೆಡಗಿನವರಿಗೂ ವರನ (ಮದುಮಗ) ಕೈಯಿಂದ ಹಂಚಬೇಕು. ನಾಗವಲಿ ಶಾಸ್ತ್ರ ಮುಗಿದ ನಂತರ ವಧುವಿನ ಮನೆಗೆ ಹೋಗುತ್ತಾರೆ. ನಂತರ ವರನು ಮರಳಿ ತನ್ನ ಮನೆಗೆ ಬರುತ್ತಾನೆ. ವಧುವಿನ ತಂದೆ ತಾಯಿಗಳು ಒಳ್ಳೆ ದಿನ ನೋಡಿ ವಧುವನ್ನು ವರನ ಮನೆಗೆ ಕಳುಹಿಸುತ್ತಾರೆ.

. ಗೌಳಿಗರ ಸಮುದಾಯದಲ್ಲಿ ವೈವಾಹಿಕ ಪದ್ಧತಿಗಳು

ಗೌಳಿಗರ ವಿವಾಹ ಪದ್ಧತಿ : ಇಬ್ಬರು ಪ್ರೇಮಿಗಳು ಪ್ರೇಮಿಸುವುದು ಕಂಡು ಬಂದರೆ ಅವರನ್ನು ತಮ್ಮ ಸಮಾಜದಲ್ಲಿ ಕರೆದುಕೊಂಡು ಬಂದು ಮದುವೆಗೆ ಒಪ್ಪಿಸಿ ಪ್ರೇಮಿಗಳನ್ನು ‘ಐದು ಸಲ ಬೇವಿನ ಕಡ್ಡಿಯಿಂದ ಹೊಡೆಯುವ’ ನಂಬಿಕೆ ಇದೆ. ಪ್ರೆಮಿಗಳು ತಮ್ಮ ದಾಂಪತ್ಯವನ್ನು ಸಮಾಜವನ್ನು ಬಿಟ್ಟು ಹೊರಗೆ ಇದ್ದರೆ ಅವರಿಗೆ ತಮ್ಮ ಸಮಾಜದಲ್ಲಿ ಸಂಸ್ಕಾರವನ್ನು ನೀಡಿ ಸಮಾಜದಲ್ಲಿ ಬಾಳಲು ಮನ್ನಣೆ ನೀಡುತ್ತಾರೆ.

ಪ್ರೇಮಿಗಳ ದಾಂಪತ್ಯ ಜೀವನವು ಸರಿಯಾಗಿ ಸಾಗದಿದ್ದಲ್ಲಿ ಅವರು ತಮ್ಮ ಸಮಾಜದ ಮುಖಂಡರ ಎದುರಿನಲ್ಲಿ ಗಂಡನಾದವನು ತನ್ನ ರುಮಾಲದ ಸೆರಗನ್ನು ಹರಿಯುತ್ತಾನೆ. ಸ್ತ್ರೀಯಾದವಳು ತನ್ನ ಸೀರೆಯಸೇರಗನ್ನು  ಹರಿದುಕೊಳ್ಳುತ್ತಾಳೆ ಆಗ ವಿವಾಹ ವಿಚ್ಛೇದನವಾದಂತೆ.

ಪ್ರೇಮ ವಿವಾಹಕ್ಕೆ ಈ ಸಮಾಜದವರು ಪ್ರೋತ್ಸಾಹವನ್ನು ನೀಡುವುದಿಲ್ಲ. ಏಕೆಂದರೆ ಅವರ ಜೀವನವು ಸರಿಯಾಗಿ ಸಾಗುವುದಿಲ್ಲ. ಈ ಸಮಾಜ ಉಡಕಿ (ಮದುವೆ) ಯಾದವನು ಬೇರೆ ಲಗ್ನದಲ್ಲಿ ಆರತಿಯನ್ನು ಮಾಡಲು ಬರುವುದಿಲ್ಲ, ಇವರ ವಿವಾಹಗಳನ್ನು ಪ್ರತಿವರ್ಷ ಫೆಬ್ರವರಿಯಿಂದ ಜನವರಿಗೆ ಮಾತ್ರ ಮಾಡುತ್ತಾರೆ. ಉಳಿದ ದಿನಗಳಲ್ಲಿ ಮಾಡುವುದಿಲ್ಲ.

ವಿವಾಹದಲ್ಲಿ ಇವರು ಸ್ತ್ರೀಯರಿಗೆ ಐದು ಸೀರೆಯನ್ನು ಮತ್ತು ದಿನ ಬಳಕೆಯ ವಸ್ತುಗಳಾದ ಕೊಡ, ಗಂಗಾಳ, ತಂಬಿಗೆ, ಪೆಟ್ಟಿಗೆ ಕೊಡುತ್ತಾರೆ. ವಿವಾಹದಲ್ಲಿ ಮದುಮಗನಿಗೆ ಅವನ ಅಕ್ಕ-ತಂಗಿಯರು ಕಣ್ಣಿಗೆ ಕಾಡಿಗೆಯನ್ನು ಹಚ್ಚಿದರೆ ಮದುಮಗನು ಅವರಿಗೆ ಏನಾದರೂ ಬಳುವಳುಯನ್ನು (ಅಕಳು,ಎಮ್ಮೆ) ಕೊಡಬೇಕು. ಮದುವೆ ನಿಶ್ಚಿಯವಾಗಿದ್ದು ಸಂತಸದಿಂದ ಮದುವೆ ನಡೆಯುತ್ತದೆ.

. ಹಲಸರ ಸಮುದಾಯದಲ್ಲಿ ವೈವಾಹಿಕ ಪದ್ಧತಿಗಳು

ಹಸಲರು ಎನ್ನುವುದು ಕನ್ನಡದ “ಹಸುಳೆ” ಎಂದರೆ ಮಗು ಎಂಬ ಪದದಿಂದ ಬಂದಿದೆ. ಹಸಲರ ಮುಗ್ಧತೆಯಿಂದಾಗಿ ಹಾಗೂ ಇವರು ಸೇವಾ ಕಾರ್ಯಗಳಲ್ಲಿ ತೊಡಗಿದುದ್ದರಿಂದ ಇವರಿಗೆ ಹಸುಳೆಗಳೆಂದು ಕರೆಯುತ್ತಿದ್ದರೆ. ಕೊನೆಗೆ ಇವರಿಗೆ ಹಸಲರು ಎಂದು  ಹೆಸರು ಬಂದಿರಬಹುದು. ಹಸಲರು ಮೂಲತಃ ದಕ್ಷಿಣ ಕನ್ನಡ ಮೂಲದವರಾಗಿದ್ದು, ಅವರು ಮೈಸೂರು, ಚಿಕ್ಕಮಂಗಳೂರು, ಉತ್ತರಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಮುಂತಾದ ಭಾಗಗಳಲ್ಲಿ ಬಹು ಸಂಖ್ಯೆಯಲ್ಲಿದ್ದಾರೆ.

ವಿವಾಹ ವ್ಯವಸ್ಥೆ

ಹಸಲರಲ್ಲಿ ಸಾಮಾನ್ಯವಾಗಿ ಸರಳ ವಿವಾಹ ಪದ್ದತಿಯನ್ನು ಕಾಣುತ್ತೇವೆ. ವಿವಾ ಪೂರ್ವ ಲೈಂಗಿಕ ಸಂಪರ್ಕ ಪಾಪ ಎಂಬ ನಂಬಿಕೆ ಇದೆ. ಬಾಲ್ಯ ವಿವಾಹ ಪದ್ದತಿ ಆಚರನೆಯಲ್ಲಿ ಇಲ್ಲ, ಹೆಣ್ಣು ಋತುಮತಿ ಆದ ಬಳಿಕ ಅಥವಾ ಅದಕ್ಕೂ ಸ್ವಲ್ಪ ಮೊದಲು ವಿವಾಹ ಮಾಡುವುದುಂಟು. ಹೆಣ್ಣು ಮಕ್ಕಳ ಸಾಮಾನ್ಯ ವಿವಾಹದ ವಯೋಮಿತಿ ೧೪-೧೮ವರ್ಷ ಗಂಡು ಮಕ್ಕಳಿಗೆ ೨೪-೨೮ ವರ್ಷ,  ಹಿರಿಯಕ್ಕನ ಮಗಳನ್ನು ವಿವಾಹವಾಗುವ ಪದ್ದತಿ ಇದೆ. ಇವರು ತಮ್ಮ ಪಂಗಡದ ನೆರೆಯ ಹಳ್ಳಿಗಳೊಂದಿಗೆ ಸಂಬಂಧ ಬೆಳೆಸುತ್ತಾರೆ. ತಾಯಿಯ ಬಳಗದಲ್ಲಿ ವಿವಾಹ ನಡೆಯುವುದಿಲ್ಲ. ಬಹುಪತ್ನಿತ್ವಕ್ಕೆ ಅವಕಾಶವಿಲ್ಲ. ಕೆಲವೊಂದು ಸಲ ಮೊದಲನೆಯ ಹೆಂಡತಿ ಮಕ್ಕಳಾಗದೆ ಇದ್ದರೆ ಎರಡನೇ ವಿವಾಹಕ್ಕೆ ಅವಕಾಶವಿದೆ. ಹಸಲರಲ್ಲಿ ನಿಶ್ಚಿಯಿಸಿದ ವಿವಾಹಗಳಾಗುವವು. ಕೆಲವೊಂದು ಸಲ ಅಪಹರಿಸಿಕೊಂಡು ಹೋಗಿ ಮದುವೆಯಾದ ನಿದರ್ಶನಗಳು ಇವೆ. ಜಾತಕ ಜೋತಿಷ್ಯಗಳಲ್ಲಿ ಹಸಲರಿಗೆ ಅಪಾರ ನಂಬಿಕೆ. ಗಂಡು ಹೆಣ್ಣಿನ ಜಾತಕ ಹೊಂದಾಣಿಕೆ ಇದೆಯೋ ಇಲ್ಲವೋ ಎಂದು ನೋಡುತ್ತಾರೆ.

ಸಾಮಾನ್ಯವಾಗಿ ವಿವಾಹ ಜರುಗುವುದು ಮಾರ್ಚ್, ಏಪ್ರಿಲ್, ಮತ್ತು ಮೇ ತಿಂಗಳುಗಳಲ್ಲಿ ಹಸಲರು ಆದಿತ್ಯವಾರದಂದು(ರವಿವಾರ) ವಿವಾಹ ನೆರೆವೆರಿಸುತ್ತಿರಲಿಲ್ಲ. ಇದಕ್ಕೆ ಕಾರಣ ಒಂದು ದಂತ ಕಥೆ ಇದೆ. ಹಸಲರ ಹಿರಿಯರು ಒಬ್ಬ ಜೋತಿಷ್ಯವನ್ನು ಕೇಳಿ ಶುಭ ಮೂಹೂರ್ತದಂದು ಆದಿತ್ಯವಾರ ವಿವಾಹ ನೆರೆವೇರಿಸಿದರು. ಆದರೆ ಆ ವಿವಾಹ ವಿಫಲವಾಯಿತು. ಆಗ ಅದನ್ನು ಒಂದು ಸವಾಲಾಗಿ ಸ್ವೀಕರಿಸಿ ಆದಿತ್ಯವಾರವೇ ವಿವಾಹ ನೆರೆವೇರಿಸಲು ಪ್ರಾರಂಭಿಸಿದರು.

ಹಸಲರಲ್ಲಿ ಪುನರ್ ವಿವಾಹಕ್ಕೆ ಅವಕಾಶವಿದೆ. ಗಂಡನ ಸಹೋದರರನ್ನು ವಿವಾಹವಾಗುವುದಿಲ್ಲ ಬ್ರಹ್ಮಾಚಾರಿಯೂ (ಮದುವೆಯಾಗದ ಪುರುಷ) ವಿಧವೆಯನ್ನು ವಿವಾಹವಾಗುವುದಿಲ್ಲ. ಆದರೆ ಅವನು ವಿಧವೆಯನ್ನು ಪ್ರೀತಿಸಿ ಮದುವೆಯಾಗುವುದಾದರೆ ಮೊದಲು ಅವನು ವಿವಾಹವನ್ನು ಎಕ್ಕರೆ ಗಿಡದೊಂದಿಗೆ ಮಾಡಿ ನಂತರ ವಿಧವೆಯ ಜೊತೆ ವಿವಾಹ ನೆರವೇರಿಸುವರು. ಹಸಲರಲ್ಲಿ ವಿವಾಹ ವಿಚ್ಛೇದನಕ್ಕೂ ಅವಕಾಶವಿದೆ. ವಿಚ್ಛೇದನ ಪಡೆಯುವ ತನ್ನಜಾತಿಯ ಹಿರಿಯರನ್ನು ಕರೆದು ವಿಚ್ಛೇದನಕ್ಕೆ ಕಾರಣಗಳನ್ನು ಹೇಳಿ ವಿಚ್ಛೇದನ ಮಾಡಿಕೊಳ್ಳಬಹುದು. ಅವಳೇ ವಿಚ್ಛೇದನ ಬಯಸಿದರೆ ವಿವಾಹಕ್ಕೆ ತಗುಲಿದ ವೆಚ್ಚವನ್ನು ಗಂಡನ ತಂದೆ ತಾಯಿಗಳಿಗೆ ನೀಡಬೇಕಾಗುತ್ತದೆ. ಪತಿಯಿಂದ ತಿರಸ್ಕೃತಳಾದ ಮಹಿಳೆಗೆ ಪುನರ್ ವಿವಾಹ ಮಾಡಿಕೊಳ್ಳಲು ಅವಕಾಶವಿದೆ. ಹೆಂಡತಿಯ ಸೀರೆಯ ಸೆರಗನ್ನು ಹರಿದು ಅವಳ ಹೆಸರಲ್ಲಿ ಸಂಸ್ಕಾರದ ವಿಧಿವಿಧಾನಗಳನ್ನು ಜರುಗಿಸುವುದರ ಮೂಲಕ ವಿಚ್ಛೇದನ ಜಾರಿಗೆ ಬರುತ್ತದೆ.

. ಮ್ಯಾಸ ಬೇಡರ ಸಮುದಾಯದಲ್ಲಿ ವೈವಾಹಿಕ ಪದ್ದತಿ

ವಿಶೇಷವಾಗಿ ಮ್ಯಾಸ ಬೇಡರಲ್ಲಿ ಪ್ರಚಲಿತವಿರುವ ಮದುವೆ ಸಂಪ್ರದಾಯಗಳು ಸಮುದಾಯದ ಬುಡಕಟ್ಟು ಅನನ್ಯತೆಯನ್ನು ಪ್ರತಿಪಾದಿಸುತ್ತದೆ. ಮುಖ್ಯವಾಗಿ ಇಲ್ಲಿ ಹೆಣ್ಣಿಗೆ ಪ್ರಾಧ್ಯಾನತೆ ಎಂಬುವುದನ್ನು ವಿಶೇಷವಾಗಿ ಗಮನಿಸಬೇಕು. ಹೆಣ್ಣಿನ ಕಡೆಯವರು ಗಂಡಿನ ಮನೆಗೆ ಬಂದು ಮದುವೆ ಮಾಡಿಕೊಳ್ಳುವಂತೆ ಕೇಳುವುದು ಈಗಿರುವ ಕ್ರಮ. ಹಾಗೆಯೇ ಹೆಣ್ಣಿನ ಕಡೆಯವರು ವರದಕ್ಷಣೆ ಕೊಡಬೇಕಾದುದು ಒಂದು ದೊಡ್ಡ ಸಾಮಾಜಿಕ ಸಮಸ್ಯೆಯಾಗಿದೆ. ಆದರೆ ಈಗಲೂ ಬೇಡರ ಕೆಲವು ಗುಂಪುಗಳಲ್ಲಿ ಇದಕ್ಕೆ ತದ್ವಿರುದ್ದ ವಾದ ಸಂಗತಿಗಳಿವೆ. ಹೆಣ್ಣಿದ್ದ ಮನೆಗೆ ಗಂಡಿನ ಕಡೆಯವರು ಔಪಚಾರಿಕವಾಗಿ ಹಾಗೂ ಅನೌಪಚಾರಿಕವಾಗಿ ಮೊದಲು ತೆರಳಿ ಹೆಣ್ಣು ಕೇಳುವ ಕ್ರಮವಿದೆ. ವರದಕ್ಷಣೆ  ಈಗಿಗ ಸ್ವಲ್ಪ ಪ್ರಮಾಣದಲ್ಲಿ ಚಾಲ್ತಿಗೆ ಬಂದಿದ್ದರೂ ವಧುದಕ್ಷಣೆ ಕೊಡುವ ಪದ್ಧತಿ ಕಡ್ಡಾಯವಾಗಿದೆ. ಸುಖಮಂಚಿಎನ್ನುವ ಹೆಸರಿನಲ್ಲಿ ಗಂಡಿನ ಕಡೆಯವರು ಒಂದಿಷ್ಟು ಧಾನ್ಯವನ್ನು ಊರಿನ ಹಿರಿಯ ಸಮ್ಮುಖದಲ್ಲಿ ಹೆಣ್ಣಿನ ಕಡೆಯವರಿಗೆ ಅಳೆದು ಕೊಡುವುದು ಒಂದು ಸಂಪ್ರದಾಯ.

ಮುಂಜಿಮ್ಯಾಸ ಬೇಡರ ಮದುವೆ ಸಂಪ್ರದಾಯಗಳ ಮತ್ತೊಂದು ವಿಶೇಷ ಮುಂಜಿ ಎನ್ನುವ ಈ ಸಂಪ್ರದಾಯವನ್ನು ಥರ್ಸ್ಟನ್ ಮೊದಲಾದ ಆರಂಭಿಕ ಅಧ್ಯಯನಕಾರರು ಮುಸ್ಲಿಂ ಸಮಾಜಗಳಲ್ಲಿ ಪ್ರಚಲಿತವಿರುವ ‘ಮುಂಜಿ ಮಾಡಿಸುವ’ ಪದ್ದತಿಯೊಡನೆ ನಂಟು ಕಲ್ಪಿಸಿದ್ದಾರೆ. ಆದರೆ ಈಗಿರುವ ಕ್ರಮದಲ್ಲಿ ಅಂಥಹ ಯಾವ ಅಂಶವು ಕಂಡು ಬರುವುದಿಲ್ಲ ಮದುವೆಗೆ ಗಂಡನ್ನು ಸಿದ್ದ ಮಾಡುವ ಕ್ರಮ ಇದಾಗಿದೆ. ಮದುವೆಯ ಮೊದಲ ಶಾಸ್ತ್ರದ ಮುನ್ನದಿನ ರಾತ್ರಿ ಮದುವೆಯ ಗಂಡಿಗೆ ದೇವರ ನೀರು ಹಾಕಿಸಿ ಕೊಂಡು ವಿಶಿಷ್ಟ ವೇಷದಲ್ಲಿ (ಬರಿ ಮೈ, ಒಂದು ಚಡ್ಡಿ ಧರಿಸಿ ಮೈಗೆ ಒಂದು ಕಂಬಳಿ ಕೋರಿಹೊದ್ದು ಕೈಯಲ್ಲಿ ಕವೆಕಟ್ಟಿಗೆ ಎಲೆ ಅಡಿಕೆ ಬಿಡಿ,  ಗಂಟು ಕಟ್ಟಿರುತ್ತಾರೆ) ಊರ ಹೊರಗೆ ಹೋಗುತ್ತಾರೆ. ಮರು ದಿನ ಬೆಳಿಗ್ಗೆ ನೆಂಟರಿಸ್ಟರು ವಸುಗೆ ರೂಪದಲ್ಲಿ ತಿಂಡಿ, ತಿನಿಸುಗಳನ್ನು ಒಯ್ದು ಕೊಡುತ್ತಾರೆ. ಹೀಗೆ ಸಂಗ್ರಹವಾದ ತಿನಿಸುಗಳನ್ನು ಬೇರೆ ಯಾರು ತಿನ್ನುವುದಿಲ್ಲ. ದಿನ ಊರಿಂದ ಹೊರಗೆ ಬರುತ್ತಿದ್ದ ಮದುವೆಯ ಗಂಡುಗಳು ಕಾಡಲ್ಲಿ ಬೇಟಿಯಾಡಿ ಮಂಸ ಮತ್ತಿತ್ತರ ವಸ್ತುಗಳನ್ನು ಸಂಪಾದಿಸಿ ತಿನ್ನುತ್ತಿದ್ದರಂತೆ ಅಂದು ಸಯಂಕಾಲ ಸ್ನಾನ ಮಾಡಿ ಶುದ್ಧರಾಗುತ್ತಾರೆ. ಈ ಹಿಂದೆ ಮದುವೆಯ ಋತುಮತಿ ಹೆಣ್ಣುಗಳನ್ನು ಗುಡಿಸಲಿಗೆ ಕೂರಿಸಿ ಒಳಗೆ ಕರೆದುಕೊಳ್ಳುವಾಗ ಮಾಡುವ ಕ್ರಮವನ್ನೇ ಇವರಿಗೂ ಅನುಸರಿಸಿ ಮನೆಯ ಒಳಗೆ ಕರೆದುಕೊಳ್ಳುತ್ತಾರೆ.

ಉಪಸಂಹಾರ

ಬುಡಕಟ್ಟು ಜನಾಂಗಗಳಲ್ಲಿ ವಿವಾಹ ಒಳಪಂಗಡ ಹಾಗೂ ಪಂಗಡ ವಿವಾಹ ನಿಯಮಗಳನ್ನು ಆದಿವಾಸಿಗಳು ಅನುಸರಿಸುವರು. ಸಾಮಾನ್ಯವಾಗಿ ತನ್ನ ಗುಂಪಿನಲ್ಲಿ ವಿವಾಹವಾಗುವುದಾದರೂ ಅದು ರಕ್ತ ಸಂಬಂಧದ ವ್ಯಾಪ್ತಿಯಿಂದ ಹೊರಗಿರುತ್ತದೆ.

ಭಾರತ ಬುಡಕಟ್ಟು ಜನಾಂಗಗಳಲ್ಲಿ ಏಕೆ ಪತ್ನಿತ್ವ ಬಹುಪತ್ನಿತ್ವ ಹಾಗೂ ಬಹುಪತ್ನಿತ್ವಗಳು ಆಚರಣೆಯಲ್ಲಿ ಕಂಡು ಬಂದಿದೆ. ಆಧುನಿಕ ನಾಗರಿಕತೆ ಜನಾಂಗದ ಪ್ರಭಾವದಿಂದ ಅವರ ವೈವಾಹಿಕ ಜೀವನಗಳಲ್ಲಿ ಬದಲಾವಣೆಗಳನ್ನು ನೋಡಬಹುದಾಗಿದೆ. ತಮ್ಮದೆಯಾದ ಆಚಾರ ವಿಚಾರಗಳ ನಡುವೆಯೇ ಆಧುನಿಕತೆ ಪರಿವರ್ತನಾ ಶೀಲತೆ ಕ್ರಮೇಣವಾಗಿ ನಡೆಯುತ್ತಲಿವೆ.

ಆಧುನಿಕರಲ್ಲಿರುವಂತೆ ಅವರಲ್ಲಿಯೂ ವಿವಾಹ ವಿಚ್ಛೇದ, ವಿಧವಾವಿವಾಹ ಮತ್ತು ಪುನರ್ವಿವಾಹಗಳಿಗೆ ಅವಕಾಶವಿರುತ್ತದೆ. ಕೆಲವಡೆ ಅಪ್ರಕಟವಾಗಿ ನಡೆಯುವುದು. ವಿವಾಹವು ಆದಿವಾಸಿಗಳಲ್ಲಿ ಒಂದು ಸ್ಥಾಪಿತ ಸಂಸ್ಥೆಯಾಗಿದ್ದು ವ್ಯಕ್ತಿಗತ ಪ್ರಾಮುಖ್ಯತೆಯೊಂದಿಗೆ ಸಾಮಾಜಿಕ ಮಹತ್ವವನ್ನು ಪಡೆದುಕೊಂಡಿದೆ.

* * *