ಇಂದಿನ ಆಧುನಿಕ ಯುಗದಲ್ಲಿ ಎಷ್ಟೋ ಬುಡಕಟ್ಟುಗಳು ಆರ್ಥಿಕವಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ತಮ್ಮನ್ನು ಮುನ್ನೆಡೆಗೆ ತಂದುಕೊಳ್ಳಲು ಪರದಾಡುತ್ತಿವೆ. ಬುಡಕಟ್ಟುಗಳ ವೇಷಭೂಷಣ, ವ್ಯವಸಾಯ ಉಪಕರಣ, ಮನೆ ಆಚರಣೆಗಳು, ಆಹಾರಪದ್ದತಿಗಳಲ್ಲಿ ಮದುವೆ ಸಂಪ್ರದಾಯಗಳಲ್ಲಿ ಹಲವಾರು ಬದಲಾವಣೆಗಳು ನಡೆಯುತ್ತಾ ಬಂದಿವೆ, ಬುಡಕಟ್ಟುಗಳು ವಾಸಿಸುವ ಓಣಿಗಳಲ್ಲಿ ಕೇರಿಗಳಲ್ಲಿ, ಗುಡ್ಡಗಾಡುಗಳಲ್ಲಿ, ಬದಲಾವಣೆಯ ಗಾಳಿಬೀಸಿ ಅಂತರಂಗದಲ್ಲಿ, ಆಲೋಚನೆಗಳಲ್ಲಿ ನೀತಿ ಪ್ರಜ್ಞೆಯಲ್ಲಿ ಬದಲಾವಣೆಗಳು ಆಗುತ್ತಿವೆ. ಈ ಬದಲಾವಣೆಗಳಿಗೆ ಬಹುಮುಖ್ಯ ಕಾರಣ ಆಧುನಿಕತೆ ಮತ್ತು ಅದರಿಂದ ಪ್ರಸರಣಗೊಂಡ ನಗರೀಕರಣ.  ನಗರೀಕರಣವು  ಪ್ರಪಂಚದ ಯಾವುದೇ ಭಾಗದಲ್ಲಿ ಆಗುತ್ತಿದ್ದರೂ ಅದು ಅಲ್ಲಿನ ಸಾಮಾಜಿಕ ರಾಜಕೀಯ ಆರ್ಥಿಕ, ಭೌಗೋಳಿಕ ಮತ್ತು ಧಾರ್ಮಿಕ ಅಂಗಗಳಿಂದ ಪ್ರೇರಣೆಗೊಂಡಿರುತ್ತದೆ. ನಗರೀಕರಣದಲ್ಲಿ ಅಸ್ತವ್ಯೆಸ್ತತೆಗಳು ಅಸಮಾತೋಲನಗಳು, ಸಹಜವಾಗಿದ್ದರೂ ನಮಗೆ ಗಾಬರಿಯನ್ನು ಹುಟ್ಟಿಸುತ್ತದೆ ಅತೀರೇಕದ ನಗರೀಕರಣ ಅಂದರೆ ಸಾಕಷ್ಟು, ಪೌರ ಸೌಲಭ್ಯಗಳಿಲ್ಲದೇ ಒಂದೇ ಸಮನೇ ಜನಸಂಖ್ಯೆ ಬೆಳೆಯುವುದು ಮತ್ತು ಆರೆನಗರೀಕರಣ ಅಂದರೆ ಸುತ್ತಲಿನ ಪ್ರದೇಶಗಳಲ್ಲಿ ಭೂಮಿಯನ್ನು ಕೃಷಿಯೇತರ ಕಾರಣಗಳಿಗೆ ಬಳಸುವುದು ಎಂದೇ ಅರ್ಥ.

ನಗರ ಜೀವನವು ತನ್ನೆಲ್ಲಾ ಸ್ವಾರಸ್ಯವನ್ನು ಕಳೆದುಕೊಳ್ಳುತ್ತದೆ ಅದು ನಕ್ಷತ್ರಗಳೇ ಇಲ್ಲದ ಆಕಾಶದಂತೆ ವಾಸ್ತುವೇ ಇಲ್ಲದ ಕಟ್ಟಡದಂತೆ, ರುಚಿಯಿಲ್ಲದ ಅಡುಗೆಯಂತೆ, ಸಂತೋಷವೇ ಇಲ್ಲದ ಸಂತೋಷಕೂಟದಂತೆ ಆಗುತ್ತದೆ. ನಗರಗಳ ಸ್ವರೂಪದಲ್ಲಾಗುವ ಬದಲಾವಣೆ ಜನಸಂಖ್ಯೆಯ ಒತ್ತಡ, ಬಡತನ, ನಿರುದ್ಯೋಗ, ಪರಿಸರ ಮಾಲಿನ್ಯ ಇವೇ ಮುಂತಾದ ಕಾರಣಗಳಿಂದಾಗಿ ಅಂಗವೈಕಲ್ಯ ಗೊಂಡ ಸಮಾಜದ ಸೃಷ್ಟಿಯಾಗುತ್ತದೆ. ಇತಿಹಾಸದಲ್ಲಿ ನಗರಗಳ ಬಗ್ಗೆ ನಾವು ಅಧ್ಯಯನ ಮಾಡುವಾಗ ನಗರೀಕರಣ ನಗರತ್ವ, ಔದ್ಯೋಗಿಕರಣ, ನಗರ ಸಮಾಜ, ನಗರಸಂಸ್ಕೃತಿ, ನಗರಾಡಳಿತ, ನಗರ ಯೋಜನೆ, ಕಾರ್ಮಿಕ ಸಮಸ್ಯೆಗಳು ಮುಂತಾದ ಅನೇಕ ವಿಷಯಗಳ ಬಗ್ಗೆ ಚರ್ಚಿಸ ಬೇಕಾಗುತ್ತದಷ್ಟೇ. ವಿಶ್ವ ವಿದ್ಯಾಲಯಗಳು, ನಗರ ಯೋಜನಾ ಪ್ರಾಧಿಕಾರಗಳು ನಗರಗಳ ಬಗ್ಗೆ ಸಂಶೋಧನಾತ್ಮಕ ಸಮೀಕ್ಷೆಗಳನ್ನು ಕೈಗೊಂಡು ನಗರಗಳ ಸಮಸ್ಯೆಗಳನ್ನು ಪರಿಹರಿಸದಿದ್ದರ ಶಾಂತಿಸುಭದ್ರತೆ, ನಿಶ್ಚಿತತೆಯ ಅನಿಸಿಕೆ, ಸುವ್ಯವಸ್ಥೆ ನೆಲೆಗೊಳ್ಳಲಾರದು. ನಗರಗಳಲ್ಲಿ ಸಂಘಟನೆ, ವಿಘಟನೆ, ಸಂಘರ್ಷ ಮತ್ತು ಹೊಂದಾಣಿಕೆಗಳು ಸರ್ವೇಸಾಮಾನ್ಯವಾಗಿದ್ದರೂ ಇವು ನಗರಗಳ ಸ್ವರೂಪವನ್ನೇ ಬದಲಾಯಿಸಬಲ್ಲವು. ನಗರಗಳು ನಿತ್ಯ ಪರಿವರ್ತನೆಗೆ ಒಳಗಾಗುವುದರಿಂದ ನಗರ ಜೀವನದಲ್ಲಿ ಮಹತ್ತರವಾದ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಆದರೆ ನಗರಗಳನ್ನು ತನ್ನ ಪಾಡಿಗೆ ತಾನು ಬೆಳೆಯಲು ಬಿಟ್ಟರೆ ಅದು ಅಸ್ತವ್ಯಸ್ತ ರೀತಿಯಲ್ಲಿ ಬೆಳೆಯಬಹುದು. ಇದಕ್ಕೆ ಬಹಳದೂರದ ಉದಾಹರಣೆಯನ್ನು ಹೇಳಬೇಕಾಗಿಲ್ಲ. ಭಾರತದ, ಮುಂಬಯಿ, ಬೆಂಗಳೂರು, ಕಲ್ಕತ್ತ, ದೆಹಲಿಗಳು ಅಮೇರಿಕಾದ ಸ್ಯಾನ್ ಪ್ರಾನ್ಸಿಸ್ಕೋ, ರಷ್ಯದ ಲೇನಿನ್ಗ್ರಾಡ್ ಇಂಥವೇ ಹಲವಾರು ನಗರಗಳು ಉದಾಹರಣೆಗಳಾಗಿ ನಮ್ಮ ಮುಂದಿವೆ. ನಗರಗಳನ್ನು ಅಪೇಕ್ಷಿತ ರೀತಿಯಲ್ಲಿ ಯೋಜನಾಬದ್ದವಾಗಿ ನಿಯಂತ್ರಿಸುವ  ಅವಶ್ಯಕತೆ ಇದೆ. ನಗರದ ದೀರ್ಘ ಕಾಲಿನ ಬೆಳವಣಿಗೆಯನ್ನು ಗಮನದಲ್ಲಿರಿಸಿಕೊಂಡು ದೂರದೃಷ್ಟಿಯ ಆಲೋಚನೆಯಿಂದ ಕೂಡಿದ ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ಈ ಹೊತ್ತು ಇದು ಅನಿವಾರ್ಯ ಮಾತ್ರವಲ್ಲ ಅಗತ್ಯ ಕೂಡಾ.

ನಮ್ಮ ನಾಡು ವೈವಿದ್ಯಮಯವಾದ, ಬಹು ಸಂಸ್ಕೃತಿಯಿಂದ ಕೂಡಿದ ವಿಶಿಷ್ಟ ನಾಡಾಗಿದೆ. ಇಲ್ಲಿ ಹಲವಾರು ಬುಡಕಟ್ಟುಗಳು, ಜಾತಿ, ಉಪಜಾತಿಗಳು ಕಂಡು ಬರುತ್ತಿವೆ. ಈ ನಾಡಿನಲ್ಲಿ ಜಾತಿಯ ಬೇರುಗಳು ಆಳವಾಗಿ ಊರಲ್ಪಟ್ಟಿವೆ. ಅಲ್ಲದೇ ಈ ಜಾತಿ ಪದ್ದತಿಯು ಶ್ರೇಣಿ ವ್ಯವಸ್ಥೆಯಲ್ಲಿ ಕಂಡು ಬರುತ್ತಿದೆ. ಇದು ಹಲವಾರು ಬುಡಕಟ್ಟುಗಳ ಊಟೋಪಚಾರಗಳ ಮೇಲೆ, ವೃತ್ತಿಗಳ ಮೇಲೆ ವಿವಾಹದ ಮೇಲೆ ಉಡುಗೆಯ ಮೇಲೆ ಹಲವಾರು ಸಂದರ್ಭಗಳನ್ನು ರೂಪಿಸಿಕೊಂಡು ಅಥವಾ ಹೇರಿಕೊಂಡು ಬಂದಿವೆ. ಇಂತಹ ಜಾತಿಗಳೊಂದಿಗೆ ಅಚಿಟಿ ಕೊಂಡುಬಂದಿರುವ ಮೇಲು-ಕೀಳು, ಶ್ರೇಷ್ಠ-ಕನಿಷ್ಠ ಕಪ್ಪು-ಬಳಿ ಉಚ್ಚ ನೀಚ, ಮೇಲ್ವರ್ಗ ಕೆಳವರ್ಗ ಹೀಗೆ ತಾರತಮ್ಯಗಳು ಸೇರಿ ಕೊಂಡು ಸಾಗುತ್ತಿವೆ. ಪ್ರಾರಂಭದಲ್ಲಿ ಕೆಲ ಬುಡಕಟ್ಟುಗಳು ಗುಡ್ಡ-ಗಾಡು ಪ್ರದೇಶಗಳಲ್ಲಿ ವಾಸವಾಗಿದ್ದು, ಗೆಡ್ಡೆ-ಗೆಣಸುಗಳನ್ನು ತಿಂದುಕೊಂಡು ಜೀವನ ಸಾಗಿಸುತ್ತಿದ್ದರೆಂಬುದರಲ್ಲಿ ಎರಡು ಮಾತಿಲ್ಲ. ಉದಾ:- ಬೇಡ ಸಮುದಾಯವು ಈ ನಾಡಿನ ಪ್ರಾಚೀನ ಸಮುದಾಯಗಳಲ್ಲಿ ಪ್ರಮುಖವಾದ ಪುರಾತನ ಸಮುದಾಯವಾಗಿದೆ. ಇದರ ಮೂಲವೃತ್ತಿಯು ಕೋಟೆಗಳನ್ನು ಕಟ್ಟುವುದು. ಪಶುಪಾಲನೆ ಮತ್ತು ಬೇಟೆಯಾಡುವುದು ಆಗಿದ್ದಿತು. ಅಲ್ಲದೇ ಪಾಳೆಗಾರಿಕೆಯಂತಹ ಸಂದರ್ಭದಲ್ಲಿ ರಾಜ ಮಹಾರಾಜರುಗಳ ಕೈಯಲ್ಲಿ ಸೇವಕರಾಗಿ ಸೈನಿಕರಾಗಿ ಅವರುಗಳ ರಕ್ಷಣೆಗೆಂದು ತಮ್ಮ ಪ್ರಾಣವನ್ನು ಲೆಕ್ಕಿಸದೇ ಹೋರಾಡುವಂತಹ ಸಂದರ್ಭಗಳು ಬಂದು ಹೋಗಿದೆ. ಇವರುಗಳು, ರಾಜರುಗಳು ಕೊಡುವಂತಹ ಅಷ್ಟು ಇಷ್ಟು ಸವಲತ್ತನೇ ಮಹಾಪ್ರಸಾದವೆಂದು ತಿಳಿದು  ತೃಪ್ತರಾಗಿದ್ದರು ಎನಿಸುತ್ತದೆ. ಒಂದು ಕಡೆ ಬೇಟೆಯಾಡಿಕೊಂಡು ಕಾಡು ಮೇಡು ಅಲೆದಾಡುತ್ತಾ ತಮ್ಮ ಉಪಜೀವನವನ್ನು ನಡೆಸುತ್ತಾ ಮತ್ತೊಂದೆಡೆ ರಾಜರುಗಳ ಆಳುಗಳಾಗಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಇವರುಗಳಿಗೆ ಅವರದೇ ಆದಂತಹ ಭೂಒಡೆತನವಾಗಲಿ, ಸಂಪತ್ತಾಗಲಿ ಇರಲಿಲ್ಲ. ಇಂತಹ ಅನೇಕ ಕರ್ನಾಟಕದ ಬುಡಕಟ್ಟು ಸಮುದಾಯಗಳು ಆಧುನಿಕ ಜಗತ್ತಿನ ಇಂಥ ಸಂದರ್ಭದಲ್ಲಿ ತಮ್ಮ ಮೂಲಸಂಸ್ಕೃತಿಯನ್ನು ಕಾಪಾಡಿಕೊಂಡು ಆಧುನಿಕ ಜೀವನವನ್ನು ತಮ್ಮ ಮೇಲೆ ರೂಢಿಸಿಕೊಳ್ಳಬೇಕಾದ ಅನಿವಾರ್ಯತೆ ಅವರ ಸಂಚಕಾರಕ್ಕೆ ಕಾರಣವಾಗಿದೆ.

ಬಾಷೆ, ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮ. ತಾನು ವಾಸಿಸುವ ನಾಡಿನ ಬಗ್ಗೆ ಆಡುವ ಭಾಷೆಯ ಬಗ್ಗೆ ಅಪಾರ ಪ್ರೀತಿ ಅಭಿಮಾನ ಮೂಡುತ್ತದೆ. ನನ್ನ ಮಾತೃಭೂಮಿ, ಮಾತೃಭಾಷೆಯ ಬಗ್ಗೆ ಎಷ್ಟೇ ಅಭಿಮಾನ ಹೊಂದಿದ್ದರೂ ಬೇರೆಯವರ ಭಾಷೆ ಆಚಾರ ಪರರ ಸಂಸ್ಕೃತಿಯನ್ನು ಅರ್ಥಮಾಡಿಕೊಂಡು ಅವರೊಡನೆ ಸುಮಧುರವಾದ ಬಾಂಧವ್ಯವನ್ನು ಹೊಂದಬೇಕಾದ ಅವಶ್ಯಕತೆ ಇಂದು ಹೆಚ್ಚಾಗಿದೆ.

ಬೇಡ ಸಮುದಾಯಗಳಲ್ಲಿ ಹಲವಾರು ನಂಬಿಕೆ, ವಿಧಿ-ನಿಷೇಧಗಳು ಮತ್ತು ನ್ಯಾಯ ಪದ್ದತಿಗಳು ಅಸ್ತಿತ್ವದಲ್ಲಿದ್ದವು. ಈಗ ಬಹುತೇಕ ಪದ್ದತಿ ನಂಬಿಕೆಗಳು ಈ ಆಧುನಿಕತೆಯ ಜಾಗತೀಕರಣದ ಪ್ರಭಾವಕ್ಕೆ ಸಿಕ್ಕಿ ಕಣ್ಮರೆಯಾಗುತ್ತಿವೆ. ಗ್ರಾಮಗಳ ಸಾಮರಸ್ಯ ಮಾನವೀಯತೆ ಅತಃಕರಣ ಮತ್ತು ಸಮಾನತೆಯ ಮೌಲ್ಯಗಳು ಇಲ್ಲವಾಗುತ್ತಾ ದಿನನಿತ್ಯದ ಬದುಕಿನಲ್ಲಿ ಆತಂಕ ತಲ್ಲಣಗಳನ್ನು ತಂದೊಡ್ಡಿವೆ. ಹಿರಿಯರು ನೀಡಿದ ಸಲಹೆ ಹಿತನುಡಿಗಳಿಗೆ ಆಧುನಿಕ ಯುವಕರು ಮೂಗು ಮುರಿಯುತ್ತಿದ್ದಾರೆ. ಕುಡಿತ ಮಟ್ಕಾಗಳಿಂದ ಹಳ್ಳಿಗಳು ನಾಶದ ಅಂಚಿನಲ್ಲಿ ಸಾಗುತ್ತಿವೆ ಇಂಥ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಜಾನಪದ ನೆಲೆಯಲ್ಲಿ ಕಂಡುಬರುವ ಕ್ರೀಡೆ ಸಂಸ್ಕೃತಿ ನಂಬಿಕೆ, ನಿಯಮ ವಿಧಿ ನಿಷೇಧಿಗಳಿಗೆ ತಮ್ಮನ್ನು ತೆರೆದುಕೊಂಡು ಪುನರ್ ಜೀವನಗೊಳಿಸಬೇಕಾಗಿದೆ. ಹಳ್ಳಿಗಳಲ್ಲಿ ಇಲ್ಲದಿದ್ದರೆ ಸಮಸ್ಯೆಗಳು ಸರಮಾಲೆಗೆ ಎದುರಾಗಿ ಬದುಕು ದುಸ್ತರವಾಗುತ್ತದೆ. ಜನಪದ ಆಟಗಳು ಕೇವಲ ಮನರಂಜನೆಗೆ ಸೀಮಿತವಾಗದೆ ಸಮಾಜದೊಳಗಿನ ಏರುಪೇರುಗಳನ್ನು ಸರಿಪಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಹಬ್ಬ ಹರಿದಿನ ಜಾತ್ರೆ ಉತ್ಸವಗಳು ಕೂಡ ಬುಡಕಟ್ಟು ಜನರ ಪಾಲಿಗೆ ಹರ್ಷದಾಯಕವಾಗಿವೆ. ನಗರಮಟ್ಟದ ಜನರ ಪಾಲಿಗೆ ಕೇವಲ ನಾಮಕಾವಸ್ತೆಯಾಗಿದ್ದರೂ ಬುಡಕಟ್ಟು ಜನರು ಇಂದಿಗೂ ಅವುಗಳನ್ನು ಶ್ರದ್ದೆಯಿಂದ, ಭಯ ಭಕ್ತಿಯಿಂದ ಆಚರಿಸಿಕೊಳ್ಳುತ್ತಾ ಬರುತ್ತಿರುವುದನ್ನು ಕಾಣಬಹುದಾಗಿದೆ. ಪ್ರೀತಿಸುವವರು ಜಾತ್ರೆಯಲ್ಲಿ ತಿಂಡಿ ತಿನಿಸುಗಳನ್ನು ಖರೀದಿಸಿ ತಮ್ಮ ಪ್ರಿಯತಮೆಗೆ ತಿಳಿಸುವುದರ ಕುರಿತು ಸೊಗಸಾದ ಒಂದು ತ್ರಿಪದಿ ಹೀಗಿದೆ.

ಹುಡುಗೀಯ ಕರಕೊಂಡು ಹುಡುಗ ಜಾತ್ರೆಗೆ ಹೋದ |
ಹುರುಗಡಲೆ ಬೆಲ್ಲ ಮಡಲಲ್ಲಿ ಕಟ್ಕೊಂಡ |
ಹುಡುಗೀಯ ಕೈಗೆ ಬಳೆಯಿಟ್ಟ |

ಎನ್ನುವ ಈ ಸೋಗಸಾದ ತ್ರಿಪದಿಗಳು ಜಾನಪದ ಜಗತ್ತಿನಲ್ಲಿ ಬದುಕಿಗೆ ಒಂದು ಅರ್ಥವನ್ನು ಕಲ್ಪಿಸಿವೆ. ಇಂದು ಜೀವನವೇ ಒಂದು ಅರ್ಥವನ್ನು ಕಳೆದುಕೊಳ್ಳುವ ಮಟ್ಟಕ್ಕೆ ಬಂದು ನಿಂತಿದೆ. ಆಧುನೀಕರಣ ಗ್ರಾಮಗಳನ್ನು ಪ್ರವೇಶಿಸುವುದು ಮೇಲು ನೋಟಕ್ಕೆ ಕಾಣುವಂತಹದ್ದು ಆದರೂ ಅಲ್ಲಿ ಗುಪ್ತವಾಗಿ ಗಟ್ಟಿಯಾಗಿ ಪ್ರಾಚೀನ ಪರಂಪರೆ ಹುಡುಗಿದೆ. ಪಟ್ಟಣದಷ್ಟು ಬೇಗ ಗ್ರಾಮಗಳು ಪ್ರಾಚೀನ ಪರಂಪರೆಯನ್ನು ಬಿಟ್ಟು ಕೊಡಲಾರವು.” ಎನ್ನುವ ಡಾ.ಎಂ. ಚಿದಾನಂದ ಮೂರ್ತಿಯವರ ಹೇಳಿಕೆಯಂತೆ ನಮ್ಮ ಕರ್ನಾಟಕದ ಬುಡಕಟ್ಟುಗಳು ಸಹಬಾಹ್ಯವಾಗಿ ಎಷ್ಟೇ ಬದಲಾವಣೆಗಳನ್ನು ಹೊಂದಿದರೂ ಆಂತರಿಕವಾಗಿ ತಮ್ಮ ಪರಂಪರೆಯನ್ನು ಉಳಿಸಿಕೊಂಡು ಬಂದಿವೆ.

ಮೂಲದಲ್ಲಿ ಬುಡಕಟ್ಟುಗಳು ತಮ್ಮ ಆಹಾರಕ್ಕಾಗಿ ರಾಗಿಮುದ್ದೆ, ಜೋಳದ ರೊಟ್ಟಿ, ಜೋಳದ ರೊಟ್ಟಿ, ಜೋಳದ ಮುದ್ದೆ, ಗುರಾಳುಚೆಟ್ನಿ, ಹುಂಚಿಕಾಯಿಚೆಟ್ನಿ, ಸುಟ್ಟ ಬದನೆಕಾಯಿ ತಂಬ್ಳಿ, ನವಣಕ್ಕಿ ಅನ್ನ ಮೊಸರು, ಮಜ್ಜಿಗೆ ಇತ್ಯಾದಿಗಳನ್ನು ಊಟ ಮಾಡುತ್ತಿದ್ದರು. ಆದರೆ ಇಂದು ಈ ಆಹಾರ ಪದ್ದತಿಯಲ್ಲಿ ಸಂಪೂರ್ಣವಾಗಿ ಬದಲಾವಣೆಯನ್ನು ಕಾಣಬಹುದಾಗಿದೆ. ಮುದ್ದೆ ತೊಟ್ಟು, ರೊಟ್ಟಿ, ಹಲಗೆ ಶ್ಯಾವಿಗೆ ಮಣಿ ಇವೆಲ್ಲ ಬಳಕೆಯಿಲ್ಲದೆ ಮೂಲೆಗುಂಪಾಗಿವೆ. ಹಿಂದೆ ಬುಡಕಟ್ಟುಗಳ ಮನೆಗಳಲ್ಲಿ ಮಣ್ಣಿನ ಮಡಿಕೆ, ಕುಡಿಕೆ, ಪಡುಗ, ಹಿತ್ತಾಳೆ, ರಾಗಿ ಅಥವಾ ತಾಮ್ರದ ಕೊಡ, ಹಂಡೇವುಗಳ ಬಳಕೆ ಹೆಚ್ಚಾಗಿದ್ದಿತು. ಆದರೆ ಇಂದು ನೀರಿಗಾಗಿ ಮಣ್ಣಿನ ಪಡುಗದ ಬದಲಾಗಿ ಪ್ಲಾಸ್ಟಿಕ್ ಕೊಡಗಳ ವಸ್ತುಗಳ ಬಳಕೆ ಹೆಚ್ಚಾಗುತ್ತಿವೆ. ಇತ್ತೀಚೆಗೆ ಆಧುನಿಕತೆಯಿಂದಾಗಿ ಅಡುಗೆ ಮನೆಯಲ್ಲಿಯ ಪಾತ್ರೆಗಳಲ್ಲೂ ಕೂಡ ಬದಲಾವಣೆಗಳಾಗಿವೆ. ಕೆಲ ಬುಡಕಟ್ಟುಗಳು ತಮ್ಮ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಪಾತ್ರೆಗಳನ್ನು ಬಳಸುತ್ತಿದ್ದಾರೆ. ಆದರೆ ಕಡಿಮೆ ಹಣದಲ್ಲಿ ದೊರೆಯುವ ಈ ಪ್ಲಾಸ್ಟಿಕ್ ಸಾಮಾನ್ಯವಾಗಿ ಕಂಡು ಬರುತ್ತಿವೆ. ಪ್ಲಾಸ್ಟಿಕ್ ಬಳಕೆ ಆರೋಗ್ಯಕ್ಕೆ ಹಿತಕರವಲ್ಲವೆಂಬುದು ಪ್ರಜ್ಞಾವಂತರನೇಕರಿಗೆ ಗೊತ್ತಿದ್ದರೂ ಅನಿವಾರ್ಯ ವೆಂಬಂತೆ ಬುಡಕಟ್ಟುಗಳಲ್ಲಿ ಪ್ಲಾಸ್ಟಿಕ್ ವಸ್ತುಗಳು ಬಳಕೆಯಾಗುತ್ತಿವೆ.

ಈ ಮೊದಲು ಪಶುಪಾಲನೆ ಬುಡಕಟ್ಟುಗಳಾದ ಬೇಡ, ಜೇನುಕುರುಬ, ಕಾಡು ಕುರುಬ, ಗೊಲ್ಲ, ಹಾಲಕ್ಕಿ, ಒಕ್ಕಲಿಗರು ಹಕ್ಕಿಪಿಕ್ಕಿ ಜನಾಂಗಗಳಲ್ಲಿ ಹೆಚ್ಚಾಗಿತ್ತು. ಯತೇಚ್ಚವಾಗಿ ಮೊಸರು, ನಜ್ಜಿಗೆ, ಬೆಣ್ಣೆ, ತುಪ್ಪ ಅವರಲ್ಲಿ ಸಿಗುತ್ತಿತ್ತು. ಆದರೆ ಇಂದು ಹೈನುಗಾರಿಕೆಯೇ ಸಂಪೂರ್ಣವಾಗಿ ನಿಲ್ಲುವ ಸ್ಥಿತಿಗೆ ಬಂದು ನಿಂತಿದೆ. ಮಜ್ಜಿಗೆ ಕಡಗೋಲು. ಮಜ್ಜಿಗೆ ಪಡುಗದಂತಹ ವಸ್ತುಗಳು ಮೂಲೆಗುಂಪಾಗಿವೆ. ಜವಾರಿ ಕೋಳಿ ಸಾಕಾಣಿಕೆ ಕೂಡ ಇವರಿಗೆ ಒಂದು ಉದ್ಯೋಗವಾಗಿತ್ತು. ಆದರೆ ಅದು ಕೂಡ ಇಂದು ನಿಂತು ಹೋಗಿದೆ. ಬುಡಕಟ್ಟುಗಳಲ್ಲಿ ಬೆರಳೆಣಿಕೆಯ ಸ್ಥಿತಿವಂತರು ಮಾತ್ರ ಸ್ನಾನದ ಕೋಣೆ ಹಾಗೂ ಪಾಯಿಖಾನೆ ಕೋಣೆಗಳನ್ನು ಕಟ್ಟಿಸಿಕೊಂಡಿದ್ದಾರೆ. ಬಡತನದ ರೇಖೆಯಲ್ಲಿರುವ ಅನೇಕ ಬಡವರು ತಟ್ಟೆಗಳಿಂದ ಮರೆಮಾಡಿಕೊಂಡು ಸ್ನಾನವನ್ನು ಮಾಡುವ ಸ್ಥಿತಿಗೆ ಬಂದು ನಿಂತಿದ್ದಾರೆ. ೨೧ನೇ ಶತಮಾನಕ್ಕೆ ಕಾಲಿಟ್ಟರೂ ಕೂಡ ಪ್ರತಿಶತ ಸುಮಾರು ಶೇ.೭೦ ಜನರಿಗೆ ಪಾಯಿಖಾನೆ ವ್ಯವಸ್ಥೆ ಇಲ್ಲ. ಇನ್ನು ಉದಾ: ಹೇಳುವುದಾದರೆ, ಹೊಸಪೇಟೆಯಲ್ಲಿ ವಾಸಿಸಿರುವ ಬೇಡ ಬುಡಕಟ್ಟುಗಳ ಕೇರಿಗಳ ಮೂಲಕ ಹಾದು ಹೋಗುವ ಮೈನ್ಸ್ ಲಾರಿಗಳಿಂದ ಪ್ರತಿಯೊಂದು ಮನೆಗಳು ಮೈನ್ಸ್ ಧೂಳಿನಿಂದ ಕೆಂಪು ಆಕಾರಕ್ಕೆ ತಿರುಗಿವೆ.

ಈ ಮೈನ್ಸ್ ಧೂಳಿನಿಂದ ಪ್ರತಿಶತ ಸುಮಾರು ೧೦೦ ಜನರಲ್ಲಿ ೪೦ ಜನರು ಅಸ್ತಮಾ, ಕ್ಯಾನ್ಸ್‌ರ್ ಟಿ.ಬಿ. ಇತ್ಯಾದಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಒಂದು ರೀತಿಯಲ್ಲಿ ಈ ಬುಡಕಟ್ಟುಗಳಿಗೆ ಇದು ಶಾಪವಾಗಿ ಪರಿಣಮಿಸಿದೆ. ಇಲ್ಲಿಯವರೆಗೆ ಸಂಘ ಸಂಸ್ಥೆಗಳು ಇದರ ಬಗ್ಗೆ ಗಂಭೀರವಾಗಿ ಯೋಚಿಸಿಯೇ ಇಲ್ಲ. ಇನ್ನು ಈ ಹಿಂದೆ ಜೋಳ, ರಾಗಿ, ಭತ್ತವನ್ನು ಬೀಸುವಾಗ ಹಾಡುತ್ತಿದ್ದ ಬೀಸುವ ಹಾಡುಗಳು ಕಣ್ಮರೆಯಾಗಿವೆ. ಬೀಸುವ ಕಲ್ಲುಗಳಂತೂ ಬಳಕೆಯಿಲ್ಲದೆ ಮೂಲೆಗುಂಪಾಗಿವೆ. ಹಲವಾರು ಬುಡಕಟ್ಟುಗಳ ಮೂಲ ವೃತ್ತಿಯೇ ಕೃಷಿ. ಭತ್ತವನ್ನು ಕೋಯ್ದು ರಾಶಿಮಾಡುವಾಗ ರಾಶಿಪೂಜೆ ಎಂದು ಮಾಡುತ್ತಿದ್ದರು. ಅನ್ನಸಾರು, ಮೊಸರು, ಹೋಳಿಗೆಯನ್ನು ಕಲೆಸಿ ಚರುಗವೆಂದು ಗದ್ದೆಯ ಸುತ್ತಲೂ ಉಗ್ಗುತ್ತಿದ್ದರು. ಈ ರೀತಿಯ ಚರುಗ ಉಗ್ಗುವಾಗ ಯಾರು ಮಾತನಾಡುವಂತಿಲ್ಲ. ಗದ್ದೆ ತುಂಬಾ ಚರುಗವನ್ನು ಉಗ್ಗಿದರೆ ಭೂಮಿ ತಾಯಿ ಪೈರುಗಳನ್ನು ಚೆನ್ನಾಗಿ ಕೊಡುತ್ತಾಳೆ ಎಂಬ ನಂಬಿಕೆ ಬುಡಕಟ್ಟುಗಳಲ್ಲಿತ್ತು. ಆದರೆ ಇಂದು ಆಧುನಿಕತೆಯ ಸಂಸ್ಕೃತಿಯಿಂದ ಈ ಪದ್ದತಿ ನಿಂತು ಹೋಗಿದೆ. ರಾಶಿ ಪೂಜೆ ಸಂಸ್ಕೃತಿ ಸಂಪೂರ್ಣವಾಗಿ ನಶಿಸಿ ಹೋಗುತ್ತಿದೆ. ಭತ್ತವನ್ನು ಶೇಖರಿಸಲು ‘ಕ್ಯರಸಿ’ ಕಟ್ಟುವ ಪದ್ದತಿಯನ್ನು ಬುಡಕಟ್ಟುಗಳ ಅನುಸರಿಸುತ್ತಿದ್ದರು. (ಕ್ಯಾರಸಿ-ಬಿದಿರಿನ ಚಾಪೆಗೆ ಸೆಗಣಿ ಸಾರಿಸಿ ಆ ಚಾಪೆಯನ್ನು ದುಂಡಗೆ ಸುತ್ತಿ. ಅದರಲ್ಲಿ ಕಾಳು ಹಾಕುವ ಒಂದು ವ್ಯವಸ್ಥೆ. ಇದವರೊಳಗೆ ೩೦ರಿಂದ ೪೦ ಚೀಲಗಳವರೆಗೆ ಧಾನ್ಯಗಳನ್ನು ಸಂಗ್ರಹಿಸಿಡಬಹುದು.) ಇದು ಕೂಡ ನಶಿಸಿ ಹೋಗುವ ಹಂತವನ್ನು ತಲುಪಿದೆ. ಅವಿಭಕ್ತಿ ಕುಟುಂಬಗಳು ಕೂಡ ಮಾಯವಾಗಿ ವಿಭಕ್ತ ಕುಟುಂಬಗಳು ಬುಡಕಟ್ಟು ಸಮುದಾಯಗಳಲ್ಲಿ ಕಂಡುಬರುತ್ತಿವೆ. ಅವಿಭಕ್ತ ಕುಟುಂಬದಿಂದಾಗಿ ಜವಾಬ್ದಾರಿ ಹಂಚಿ ಹೋಗುವುದರಿಂದ ಎಲ್ಲರೂ ಸುಖಿಗಳಾಗಿದ್ದರು. ಅಂತೆಯೇ ಅಂದಿನ ನಡೆ-ನುಡಿ ಇರುವ ಪದ್ದತಿ ಊಟ ಉಪಚಾರ ಎಲ್ಲವೂ ವೈಶಿಷ್ಟ್ಯಮಯವಾಗಿದ್ದವು. ಆದರೆ ಆಧುನಿಕತೆಯಿಂದಾಗಿ ಬುಡಕಟ್ಟು ಸಮುದಾಯಗಳಲ್ಲಿ ಇಂದು ಬದಲಾವಣೆ ಕಂಡು ಬರುತ್ತಿದೆ. ಪಂಚಾಯ್ತಿ ವ್ಯವಸ್ಥೆ, ಯಜಮಾನ, ಅಥವಾ ಮನೆಯ ಮುಖಂಡರಿಗೂ ಕೂಡ ಗೌರವ  ಕೊಡುವ ಪದ್ದತಿ ಕಳೆಯನ್ನು ಕಳೆದು ಕೊಂಡಿದೆ. ಒಟ್ಟಾರೆಯಾಗಿ ಆಧುನಿಕ ಜೀವನ ಜನಪದ ಕಲೆಗಳನ್ನು ಜನಪದರನ್ನು ಬುಡಕಟ್ಟು ಸಂಸ್ಕೃತಿಯನ್ನು ಹೊಸಕಿ ಹಾಕಿದೆ ಎಂದು ಹೇಳಿದರೆ ತಪ್ಪಾಗಲಾರದು.

* * *