ಪೀಠಿಕೆ

ಹಿಕ್ಕಿಪಿಕ್ಕಿ ಎಂಬ ಹೆಸರು ಇವರ ಸಾಂಪ್ರದಾಯಿಕ ಕಸುಬು ಹಕ್ಕಿಗಳನ್ನು ಹಿಡಿಯುವುದರಿಂದ ಬಂದಿರುವುದು. ಹಕ್ಕಿಪಿಕ್ಕಿ ಕನ್ನಡದ ಜೋಡಿನುಡಿ. ಹಕ್ಕಿ ಎಂದರೆ ಪಕ್ಷಿ ಎಂದರ್ಥ. ಪಿಕ್ಕಿ ಅದರ ಪ್ರತಿಧ್ವನಿ ರೂಪ. ಕಿಟಲ್ ನಿಘಂಟಿನಲಿ ಹಕ್ಕಿಯನ್ನು ಹೆಕ್ಕ ಎಂಬ ಅರ್ಥದಿಂದ (ಹಿಕ್ಕು=ಹಿಡಿ, ಹಿಕ್ಕು=ಪಿಕ್ಕು) ನಿಷ್ಪನ್ನವಾಗಿದೆ. ಇವರು ರಾಜಸ್ಥಾನ, ಗುಜರಾತ ಮೂಲದಿಂದ ಆಂಧ್ರಪ್ರದೇಶ ಮಾರ್ಗವಾಗಿ ಕರ್ನಾಟಕಕ್ಕೆ ವಲಸೆ ಬಂದು ನೆಲೆನಿಂತಿರುವರು. ಹಕ್ಕಿಪಿಕ್ಕಿಯರನ್ನು ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಶಿಕಾರಿಗಳು ಎಂದು ಕರೆಯಲಾಗುವುದು. ಈ ಹೆಸರು ಇವರ ಸಾಂಪ್ರದಾಯಿಕ ಕಸುಬು, ಹಕ್ಕಿಗಳನ್ನು ಹಿಡಿಯುವುದಿಂದ ಬಂದಿರುವಂತಹದ್ದು.

ಪದ ನಿಷ್ಪತ್ತಿ : ಹಕ್ಕಿಯನ್ನು ಹೆಕ್ಕಿ ತಿನ್ನುವ ಸಮುದಾಯವನ್ನು ಹಕ್ಕಿಪಿಕ್ಕಿ ಎಂದು ಕರೆಯುತ್ತಾರೆ ಅದೇ ರೀತಿ ಚಿಗರೆಯನ್ನು ಬೇಟೆಯಾಡುವುದರಿಂದ ಹರಣ ಶಿಕಾರಿ, ಹರಣ್ ಎಂದರೆ ಕನ್ನಡದಲ್ಲಿ ಚಿಗರಿ. ಆದ್ದರಿಂದ ಹರಣಶಿಕಾರಿ ಎಂದು ಕರೆಯುತ್ತಾರೆ. ಹಗ್ಗದಿಂದ ಪಾಶಿಮಾಡಿ ಪ್ರಾಣಿ ಅಥವಾ ಪಕ್ಷಿಗಳನ್ನು ಬೇಟೆಯಾಡುವುದರಿಂದ ಪಾಶಿ ಪಾರ‍್ಧಿ ಎಂದು ಕರೆಯುತ್ತಾರೆ ಕಾಡಿನಲ್ಲಿ ಜೀವನ ಮಾಡುವುದರಿಂದ ಅಡವಿ ಛೇಂಚರ ಎಂದು ಕರೆಯುತ್ತಾರೆ. ಬೇಟೆ ಆಡುವುದನ್ನು ಕಂಡು ಬೇಟೆಗಾರರು ಶಿಕಾರಿ ಜನ ಎಂದು ಕರೆಯುತ್ತಾರೆ ಹೀಗೆ ಜಾತಿಯ ಪದ ಹುಟ್ಟಿರುವುದು ಕಂಡುಬರುತ್ತದೆ.

ಹೆಸರಿನ ನಿಷ್ಪತ್ತಿ ಮತ್ತು ಮೂಲ : ಕರ್ನಾಟಕದಲ್ಲಿ ವಾಸಮಾಡುವ ಹಕ್ಕಿಶಿಕಾರಿಗಳಿಗೆ ಮೇಲುಶಿಕಾರಿಗಳೆಂದೇ ಕರೆಯುವುದು ವಾಡಿಕೆ. ಆದರೆ ಒಂದೆಡೆ ನೆಲೆನಿಲ್ಲದೆ ಆಹಾರಕ್ಕಾಗಿ ಊರಿಂದೂರಿಗೆ, ಕಾಡು ಮೇಡುಗಳನ್ನು ಅಲೆದಾಡುತ್ತ ಯಾವ ಜನಗಣತಿಗೂ ಸಿಗಲಾರದಷ್ಟು ಅಲೆಮಾರಿಗಳಾದ ಇವರನ್ನು ಹಕ್ಕಿಪಿಕ್ಕಿಗಳಿಗೆ ಹೋಲಿಸುತ್ತಲೂ ಹಕ್ಕಿಯನ್ನು ಹಿಡಿದು ಪಿಕ್ಕು ಶಬ್ಧ ನಿಷ್ಪನ್ನವಾಗಿ ಕೊನೆಗೆ ಹಕ್ಕಿ ಪಿಕ್ಕಿ ಎಂದು ಸರಕಾರದಿಂದ ಗುರ್ತ್ತಿಸಲ್ಪಟ್ಟರು.

ಮೂಲ ಹಕ್ಕಿಪಿಕ್ಕಿ ಬುಡಕಟ್ಟು : ಒಂದೊಂದು ಪಂಗಡದವರೂ ಒಂದೊಂದು ಮೂಲದಿಂದ ಬಂದವರಾಗಿದ್ದಾರೆ. ಕರ್ನಾಟಕದಲ್ಲಿನ ಹಕ್ಕಿಪಿಕ್ಕಿಯವರು ತಾವು ಗುಜರಾತಿನಿಂದ ವಲಸೆ ಬಂದುದಾಗಿ ಹೇಳುತ್ತಾರೆ. ಇದು ಸಮಂಜಸವೂ ಆಗಿದೆ. ಈ ಜನರು ಮಾತನಾಡುವ ಭಾಷೆಗೆ ವಾಗರಿಬೋಲಿ ಎಂದು ಇತ್ತೀಚೆಗೆ ಗುರ್ತಿಸಲಾಗಿದೆ ಬರುಬರುತ್ತಾ ಗೊಂಡರೂ ಬಹುಪಾಲು ಗುಜರಾತೀ ಭಾಷೆಯ ಅರ್ಥವನ್ನೇ ಉಲಿಸಿ ಕೊಂಡಿರುವುದನ್ನು ಗಮಿನಿಸಬಹುದು.

ಸಮುದಾಯದವರು ಸಮುದಾಯಕ್ಕೆ ಕರೆಯುವ ಪದಗಳು ಮತ್ತು ಗುರ್ತಿಸುವಿಕೆ

ಪರಸ್ಪರ ಸಮುದಾಯವನ್ನು ವಾಗ್ರಿಗಳೆಂದೇ ದೇಶಾದ್ಯಂತ ಗುರ್ತಿಸಿಕೊಳ್ಳುತ್ತಾರೆ. ಪರಿಚಯದ ನಂತರದಲ್ಲಿ ತಾವುಗಳು ಯಾವು ಗೋತ್ರದಲ್ಲಿ ಬರುವರೆಂಬುದರ ಹುಡುಕಾಟದಲ್ಲಿ ತೊಡಗುತ್ತಾರೆ. ಉದಾಹರಣೆ ಕೇಳುವ ವ್ಯಕ್ತಿವಾಗ್ರಿಯಾಗಿದ್ದು ಬೋಕ್ಡಾವಾಳೋ ಆಗಿದ್ದರೆ, ಎದುರಿಗಿರುವ ಅಪರಿಚಿತ ವಾಗ್ರಿ ಕೇಳುವ ವಾಗ್ರಿಯೊಂದಿಗೆ ತಮ್ಮ ವೈಯಕ್ತಿಕ ಸಂಬಂಧವನ್ನು ಪ್ರಧಾನ ಗೋತ್ರಗಳಡಿಯಲ್ಲಿ ಗುರ್ತಿಸಿಕೊಳ್ಳಲು ಪ್ರಯತ್ನಿಸುವುದನ್ನು ಕಾಣಬಹುದಾಗಿದೆ.

ಸಾಮಾಜಿಕ ಸಂರಚನೆ : ಹಕ್ಕಿಪಿಕ್ಕಿಯವರ ಸಮಾಜವೆಂದರೆ, ಪರಸ್ಪರ ವಿವಿಧ ಬಗೆಯ ಕುಟುಂಬ ಕುಲ ಸಂಬಂಧವುಳ್ಳ ಜನತೆಯ ಒಂದು ಆಂತರಿಕ ವ್ಯವಸ್ಥೆ. ಇದು ಆದಿಮ ಕಾಲದಿಂದಲೂ ಬೆಳೆದು ಬಂದಿದೆ. ಯಾವುದೇ ಇತರ ಸಮುದಾಯಗಳ ಪ್ರಭಾವಕ್ಕೆ ಒಳಗಾಗದೇ ತಮ್ಮ ಸಂಪ್ರದಾಯದಂತೆ ಜೀವನ ನಿರ್ವಹಿಸುವ ಬುಡಕಟ್ಟು ಇದಾಗಿದೆ. ಇಂತಹ ಸಂಘಟನೆಯ ಆದಿಮಕಾಲದಿಂದ ಮಾನವನ ದಿನನಿತ್ಯದ ಆಹಾರಕ್ಕಾಗಿ ಕಾಡು ಮೇಡು, ಗುಡ್ಡಗಳನ್ನು ಸುತ್ತಾಡಿ ಪ್ರಾಣಿ, ಪಕ್ಷಿ, ಗೆಡ್ಡೆ ಗೆಣಸುಗಳನ್ನು ತಿನ್ನುತ್ತಾ ಜೀವನ ಸಾಗಿಸುವ ಹಂತದಿಂದ ನಡೆದುಬಂದಿದ್ದಾನೆ. ಬೇಟೆ ಮತ್ತು ಆಹಾರ ಸಂಗ್ರಹಣೆಯ ಮೂಲಕ ವ್ಯವಸ್ಥಿತವಾಗಿ ಸಂಘಟಿತವಾಗುತ್ತಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗುತ್ತಾ ಜೀವನ ರೂಪಿಸಿಕೊಂಡು ಬರತೊಡಗಿದ ಸಮಯದಲ್ಲಿ ಅವರು ಶುದ್ಧ ಅಲೆಮಾರಿಗಳಾಗಿದ್ದರು. ಬೇಟೆಯಿಂದ ವ್ಯವಸಾಯಕ್ಕೆ ಮಾರ್ಪಾಡಾದ ನಂತರ ನೆಲೆನಿಂತು ಒಟ್ಟಾಗಿ ಬಾಳುವುದರೊಂದಿಗೆ ಮೂಲಭೂತವಾದ ಅವಶ್ಯಕತೆಗಳನ್ನು ಪೂರೈಕೆ ಮಾಡಿಕೊಳ್ಳುವುದರಿಂದ ತಮ್ಮದೇ ಆದ ಸಾಮಾಜಿಕ ವ್ಯವಸ್ಥೆಯನ್ನು ಕಾಲಾಂತರದಲ್ಲಿ ರುಪಿಸಿಕೊಂಡರು ಅವಿಭಕ್ತ ಕುಟುಂಬಗಳು ಕಾಲಾಂತರದಲ್ಲಿ ವಿಭಕ್ತ ಕುಟುಂಬಗಳಾಗಿ ಮಾರ್ಪಡುತ್ತಿವೆ.

ಸುತ್ತಲ ಸಮುದಾಯಗಳ ಒಡನಾಟದಿಂದ ಇವರ ಸಂಪ್ರದಾಯ ಧಾರ್ಮಿಕತೆ, ಭಾಷೆ ಆಚರಣೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅಲೆಮಾರಿಗಳಾಗಿದ್ದಾಗ ಡೇರೆಗಳನ್ನು ಗುಡಿಸಲುಗಳಲ್ಲಿ ವಾಸ ಸ್ಥಳಗಳನ್ನಾಗಿ ಮಾಡಿಕೊಂಡಿದ್ದ ಇವರುಗಳೂ ನೆಲೆಯೂರಿದ ಮೇಲೆ ಅನಿವಾರ್ಯವಾಗಿ ಮನೆಗಳನ್ನು ಕಟ್ಟಿಕೊಂಡು ನಿರ್ದಿಷ್ಟ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇನ್ನು ಇವರ ಕಾಲೋನಿಯಲ್ಲಿ ಗುಡಿಸಲು ಹಂಚಿನ ಮನೆಗಳೇ ಹೆಚ್ಚು. ಮಾಳಿಗೆ ಮನೆಗಳು ಕಡಿಮೆ ಎನ್ನಬಹುದು. ಇಂದು ಹಕ್ಕಿಪಿಕ್ಕಿಯವರ ಸಂಪ್ರದಾಯಗಳೂ ಬಹುವಾಗಿ ಕಣ್ಮರೆಯಾಗುತ್ತಾ ಹೋಗುತ್ತಿವೆ. ಸಂಪ್ರದಾಯಗಳು ನ್ಯಾಯತೀರ್ಮಾನ ಹಬ್ಬಗಳೂ ಆಚರಣೆಗಳು ಸಾಕಷ್ಟು ಮಹತ್ವವನ್ನು ಕಳೆದುಕೊಂಡಿವೆ. ಆದರೂ, ಹಿರಿಯರು ಬಹಳಷ್ಟು ಮಂದಿ ಇನ್ನು ತಮ್ಮ ತಲೆಯ ಮುಡಿಯ ಕೂದಲನ್ನೆತ್ತಿ ತುರುಬು ಕಟ್ಟುವುದನ್ನು ಬಿಡದೆ ಉಳಿಸಿಕೊಂಡು ಬಂದಿರುವುದು ವಿಶೇಷವಾಗಿದೆ. ವಲಸೆ ಮತ್ತು ಚರಿತ್ರೆ ಕುರಿತ ನಂಬಿಕೆಗಳು ಹಾಗೂ ಕಾರಣಗಳು

. ಅಕ್ಬರ್ ಮತ್ತು ರಾಣಾ ಪ್ರತಾಪಸಿಂಗನ ಕಾಳಗದಿಂದಾಗಿ ಧೀರರಾದ ಜಮುಲ್ ಫತ್ತು ಮರಣದ ನಂತರ ಸೋತು ರಾಣಾ ಪ್ರತಾಪ ಸಿಂಗನ ಅನುಯಾಯಿಗಳು, ಆತನ ಸೈನ್ಯದಲ್ಲಿದ್ದು ಕೊನೆಯವರೆಗೂ ಹೋರಾಡಿದೆನ್ನಲಾದ ಹಕ್ಕಿಪಿಕ್ಕಿ ಪಂಗಡದವರು, ಮುಸಲ್ಮಾ ನರಿಂದುಂಟಾಗಬಹುದಾದ ದಬ್ಬಾಳಿಕೆಯಿಂದ ತಪ್ಪಿಸಿಕೊಳ್ಳಲು ಕಾಡುಪಾಲಾದರು, ಊರಿಂದೂರಿಗೆ ತಿರುಗಿ ಅಲೆಮಾರಿಗಳಾದರು. ಇವರಲ್ಲಿ ಬವರಿಯಾ ಸಮುದಾಯವೂ ಸೇರಿರುವುದು. ಇವರು ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ಜಮ್ಮುಕಾಶ್ಮೀರದಲ್ಲಿದ್ದಾರೆ.

೨. ಜೀವನ ನಿರ್ವಹಣೆಗಾಗಿ ಅಲೆದಾಡುತ್ತ ತಮ್ಮ ಮೂಲಪುರಷ ಗುಜರಾತ್‌ನಿಂದ ಮೇವಾಡದಿಂದ ಬಂದುದಾಗಿ ಹೇಳುತ್ತಾ ಗುಜರಾತ್ಯೋ, ಮೇವಾಡೋ ಆದರು ಪವರ್ ಗಡದಿಂದ ಹಾಗೂ  ಆಂಧ್ರದ ಡಿಂಬರ‍್ಯಾವಾಡದಿಂದ ಬಂದವರು ಪವಾರ್ ಮತ್ತು ಕಾಳಿವಾಳೊಗಳಾದರು ಎನ್ನುತ್ತಾರೆ.

ಸಾಮಾಜಿಕ ಹಿನ್ನೆಲೆ : ಹಕ್ಕಿಪಿಕ್ಕಿಯರು ತಮ್ಮ ಸಮುದಾಯದವರು ಎಲ್ಲೇ ಇದ್ದರೂ ಪರಸ್ಪರ ವಾಗ್ರಗಳೆಂದೂ ವಾಗ್ರವೇಲ್‌ಗಳೆಂದೂ ಗುರ್ತಿಸಿಕೊಳ್ಳುತ್ತಾರೆ. ೧ ಮತ್ತು ೨ ಡಿಸೆಂಬರ್ ೨೦೦೭ ರಂದು ದೆಹಲಿಯಲ್ಲಿ ಲಕ್ಷ್ಮಣಭಾಯಿ ಪಟ್ನಿ ಅವರ ನೇತೃತ್ವದಲ್ಲಿ ನಡೆಸಿದಂಥ ಸಮಾದೇಶದಲ್ಲಿ ಪಾರ್ಧಿಯವರು ಅವರ ಹಸರಿನಲ್ಲೇ ಗುರುತಿಸಿಕೊಳ್ಳುವುದಾಗಿ ನಿರ್ಣಯಿಸಲಾಗಿ ಕೊನೆಯದಾಗಿ ರಾಷ್ಟ್ರೀಯ ದೇವಿಧರ್ಮಿ ಸಮಾಜ ವಾಗ್ರಿ ಪಾರ‍್ಧಿ ಬಾವರಿಯಾ ಎಂದು ಕರೆಯಲು ತೀರ್ಮಾನಿಸಲಾಯಿತು. (ಕುಮುದಾ ಬಿ.ಎಸ್.)

ಕುಲಕಸುಬುಗಳು : ಹಕ್ಕಿಪಿಕ್ಕಿಯರಲ್ಲಿ ಯಾವುದೇ ಗೋತ್ರ ಉಪಗೋತ್ರಗಳನ್ನು ತೆಗೆದುಕೊಂಡರೂ ವ್ಯತ್ಯಾಸವಿಲ್ಲ. ಹಿಂದೆಲ್ಲ ಶಿಕಾರಿಯಿಂದಲೇ ಜೀವನ ನಡೆಸುತ್ತಿದ್ದರು. ಎಲ್ಲರ ಕಸುಬು ಶಿಕಾರಿಯೇ ಆಗಿರುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಸರಕಾರ ರೂಪಿಸಿದ ಅರಣ್ಯಕಾಯ್ದೆಯಿಂದ ಶಿಕಾರಿ ಮಾಡುವುದು ಸಾಧ್ಯವಿಲ್ಲ ಹಾಗಾಗಿ ವಿವಿಧ ಕೈಕಸುಬಿನಡೆ ಮನವಾಲಿಸಿದ್ದಾರೆ ಉದಾ: ಗೊಂಬೆಗಳ ತಯಾರಿಕೆ, ರುದ್ರಾಕ್ಷಿ, ಬಟ್ಟೆಯ ಹೂ ಪ್ಪಾಸ್ಟಿಕ್ ಮಣಿಸರಗಳು, ಉಂಗುರದ ಹರಳುಗಳ ವ್ಯಾಪಾರ ಮನೋಭಾವದ ಸಲುವಾಗಿ ವಿವಿಧೆಡೆ ಸಂಚರಿಸಿ, ಆಯಾ ಪ್ರಾಂತ್ಯದ ಭಾಷೆಯನ್ನು ಕರಗತ ಮಾಡಿಕೊಂಡು ಲೀಲಾಜಾಲವಾಗಿ ಮಾತನಾಡುತ್ತಾರೆ.

ಬಂಧುತ್ವ ಮತ್ತು ವಿವಾಹ

ಹಕ್ಕಿಪಿಕ್ಕಿಯರು ಹೆಣ್ಣಿಗೆ ಸರಿಸಮಾನವಾದ ಸ್ಥಾನಮಾನವನ್ನು ಕೊಟ್ಟಿರುವರು. ಹಾಗೆಯೇ ಹೆಣ್ಣು ಹುಟ್ಟಿದಾಗ, ಸತ್ತಾಗ ಯಾವುದೇ ತರಹದ ಲೋಪ ಮಾಡುವುದಿಲ್ಲ. ಹೆಣ್ಣು ಹುಟ್ಟಿದರೆ ಗಂಡು ಹುಟ್ಟಿದಷ್ಟೇ ಸಂತೋಷನ್ನು ಪಡುತ್ತಾರೆ ಹೆಣ್ಣನ್ನು ಕೀಳಾಗಿ ಯಾರು ನೋಡುವುದಿಲ್ಲ. ಹೆಣ್ಣಿನ ಸ್ವಗೋತ್ರವನ್ನು ಬಿಟ್ಟು ಇತರೆ ಬೆಸ ಬೆಡಗಿನವರ ಜೊತೆ ಸಂಬಂಧವನ್ನು ಬೆಳೆಸುತ್ತಾರೆ. ಮೊದಲು ಗಂಡಿನವರು ಹೆಣ್ಣನ್ನು ಕೇಳಿದರೆ ಅವರ ಗೋತ್ರ ಅಥವಾ ಬಳ್ಳಿ ಗೊತ್ತು ಮಾಡಿಕೊಂಡು ಹುಡುಗನ ಬಗ್ಗೆ ತಿಳಿದುಕೊಂಡು ಅವರ ಮನೆಯಲ್ಲಿ  ಹಣ್ಣು ಮಗು ಇದ್ದರೆ, ಆ ಹೆಣ್ಣನ್ನು ತಮ್ಮ ಮನೆಗೆ ಕೊಡಲು ಕೇಳುವರು. ಅವರು ಒಪ್ಪಿ ಹೆಣ್ಣನ್ನು ಎದುರಬದರಾಗಿ ಅಂದರೆ ಇವರ ಹೆಣ್ಣು ಅವರಿಗೆ ಅವರ ಹೆಣ್ಣು ಇವರ ಮನೆಗೆ ಕೊಡಲು ಮತ್ತು ತೆಗೆದುಕೊಳ್ಳಲು ನಿಶ್ಚಯಿಸುತ್ತಾರೆ. ಇದನ್ನು ಆಟಾಖ್ಹಾಟಿಎನ್ನುತ್ತಾರೆ. ಅವರ ಮನೆಯಲ್ಲಿ ಹೆಣ್ಣು ಇಲ್ಲದಿದ್ದರೆ ಹೆಣ್ಣಿನ ತೆರ ೬೦ ರೂ.ಗಳನ್ನು ಹೆಣ್ಣು ಹೆತ್ತವರಿಗೆ ಕೊಡತಕ್ಕದು.  ಈ ತೆರ ಇತ್ತೀಚಿಗೆ ಬೇರೆ ಕಡೆ ೬೦ ರೂ.ಗಳಿಂದ ೧೦.೦೦೦ಗಳವರೆಗೆ ಹೆಣ್ಣಿನ ತೆರ ರೂಪದಲ್ಲಿ ನೀಡಲಾಗುತ್ತದೆ. ಈ ತೆರವನ್ನು ತೆಗೆದುಕೊಂಡು ನಂತರ ಗಂಡಿನ ಮನೆಯ ಮುಂದೆ ದೇವರ ಕಾರ್ಯಗಳ ಎಲ್ಲಾ ಜವಾಬ್ದಾರಿಯನ್ನು ಗಂಡಿನವರೇ ವಹಿಸಿಕೊಂಡು ಮದುವೆ ನಡೆಸಿಕೊಡಬೇಕು.

ತಮ್ಮ ಬೆಡಗಿಗಿಂತ ಭಿನ್ನವಾದ ಬೆಡಗಿನ ಹೆಣ್ಣುಗಳನ್ನು ಮಾತ್ರ ಮದುವೆಯ ಹೆಣ್ಣುಗಳನ್ನಾಗಿ ಆರಿಸಿಕೊಳ್ಳುತ್ತಾರೆ. ಕಡ್ಡಾಯವಾಗಿ ಸ್ವ-ಗೋತ್ ವಿವಾಹಗಳು ಇವರಲ್ಲಿ ನಿಷಿದ್ಧ. ಅನ್ಯ ಬೆಡಗುಗಳೊಳಗಿನ ವಿವಾಹಗಳನ್ನು ಇವರು ಸ್ವಾಗತಿಸುತ್ತಾರೆ. ವಿವಾಹವಾಗುವುದು ಇಂತಹ ಒಂದು ಘಟಕಗಳಲ್ಲಿ ಮಾತ್ರ ತನ್ನದಲ್ಲದ ಮಹಿಳೆಯೊಬ್ಬಳು ತನ್ನ ಸಮೂಹಕ್ಕೆ ಪ್ರವೇಶ ಪಡೆಯುತ್ತಾಳಲ್ಲ ಎಂಬ ಆತಂಕದಿಂದ ಇವರು ಅಂತರ್ ಜಾತಿಯ ವಿವಾಹಗಳನ್ನು ವಿರೋಧಿಸುತ್ತಾರೆ. ಹೀಗಾಗಿ ಯಾವುದೇ ಒಂದು ಬುಡಕಟ್ಟು ಸಮುದಾಯದಲ್ಲಿ ಮೊದಲಿಗೆ ಜಾತಿ ನಂತರ ಅವರ ಬೆಡಗು.

ಗೋತ್ರ ಅಥವಾ ಬೆಡಗುಗಳು
೧. ಕಾಳಿವಾಳೋ
೨. ಗುಜರಾತೀಯೋ
೩. ಮೇವಾಡೋ
೪. ಪವಾರ್

ಬೇರೆಯವರು ಸಮುದಾಯಕ್ಕೆ ಕರೆಯುವ ಪದಗಳು
೧. ಹಕ್ಕಿಪಿಕ್ಕಿ
೨. ಚೆಂಚರು
೩. ಶಿಕಾರಿ
೪. ಹರಣಿ ಶಿಕಾರಿ
೫. ಚಿಗರಿಕಾರರು
೬. ನರಿಶಿಕಾರಿ
೭. ಅಡವಿ ಛೇಂಚರು
೮. ವ್ಹಾಗ್ರಿ
೯. ಬೇಲ್ ಪಾರ‍್ಧಿ
೧೦. ಪಾಶಿಹಕ್ಕಿಪಿಕ್ಕಿ
೧೧. ಬೇಟೆಗಾರರು
೧೨. ನೀರ್ ಶಿಕಾರಿ
೧೩. ನರಿಕೊರವ
೧೪. ಕುರುವಿಕಾರನ್
೧೫. ಮೇಲ್ ಶಿಕಾರಿ
೧೬. ಪಿಂಡಂಡೆ
೧೭.ವಾಗ್ ಘೀಖ್ಹಣ್ಯು

ಸಮುದಾಯದವರು ಸಮುದಾಯಕ್ಕೆ ಕರೆಯುವ ಪದಗಳು
೧. ಬಾವುರ್ರಿ
೨. ವ್ಹಾಗ್ರೀ
೩. ಪಾರ್ಧಿ

ವಾಸದ ರೀತಿ: ಹಕ್ಕಿಪಿಕ್ಕಿ ಸಮುದಾಯದವರು ತಾವು ವಾಸಿಸುವ ಸ್ಥಳದಲ್ಲಿ ಮನೆಕಟ್ಟಲು ಯಾವುದೇ ವಾಸ್ತು ನೋಡುವುದಿಲ್ಲ. ಯಾವುದೇ ಒಂದು ಮೂಲೆಯಲ್ಲಿ ಆಯಾ ಬರುವಂತೆ ಸ್ಥಳ ನಿಯೋಜಿತವಾದರೆ ಸಾಕು. ಮನೆ ಕಟ್ಟುತ್ತಾರೆ ಕುಲದೇವರಲ್ಲಿ ಕಣಿಕೇಳಿ, ಹಬ್ಬ ಬಂದರೆ ಆಚರಿಸುತ್ತಾರಲ್ಲದೆ, ವೃಥಾ ಅನ್ಯರ ಹಬ್ಬಗಳಾಗಲೀ ಪೂಜೆಗಳಲ್ಲಾಗಲೀ ನಂಬಿಕೆಯಿಡುವುದಿಲ್ಲ.

ಹಿಂದಿನ ಕಾಲದಲ್ಲಿ ಮತ್ತು ಈಗಲೂ ಕೆಲವು ಹಕ್ಕಿಪಿಕ್ಕಿಯರು ಅಲೆಮಾರಿಗಳಾಗಿ ಇರುವುದರಿಂದ ಅವರಿಗೆ ಖಾಯಂ ಆದ ವಸತಿಗಳಿರುವುದು ಕಡಿಮೆಯೇ. ಆದರೆ  ಬರಬರುತ್ತಾ ಈ ಪದ್ಧತಿ ಸಡಿಲಗೊಳ್ಳುತಿದ್ದು ಖಾಯಂ  ಆಗಿ ಮಣ್ಣು, ಇಟ್ಟಿಗೆಗಳಿಂದ ನಿರ್ಮಿಸಿದ ಗೋಡೆಗಳ ಮೇಲೆ ಚಾವಣಿಗೆ ಹೆಂಚು ಇಲ್ಲವೇ ತಗಡಿನ ಇಲ್ಲವೆ ತೆಂಗಿನ ಗರಿಗಳನ್ನು ಬಳಸಿ ಚಿಕ್ಕ ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದರು. ಇದು ಅವರುಗಳು ಖಾಯಂ ಆಗಿ ನೆಲೆನಿಂತ ಊರಿನಲ್ಲಿ ಕಾಣುವ ಅಂಶವಾದರೂ, ಊರಿಂದ ಊರಿಗೆ ಅಲೆಯುವಾಗ ಅವರು ತಮ್ಮ ಮಾಮೂಲು ಗುಡ್ಡಲು ಅಥವಾ ಗುಡಾರಗಳಲ್ಲಿಯೇ ವಾಸಿಸುತ್ತಿದ್ದಾರೆ. ಮೊದಮೊದಲಿಗೆ ಗುಡ್ಡಲುಗಳು ನಿರ್ಮಾಣಕ್ಕೆ ಹಳ್ಳಿಗಳಲ್ಲಿ ಸಿಗುತ್ತಿದ್ದ ಆಪಿನ ಕಡ್ಡಿಗಳನ್ನು ಕೊಯ್ದು ಆಯ್ದು ತಂದು ಅವನ್ನು ಚೆನ್ನಾಗಿ ಒಣಗಿಸಿ, ಒಂದಕ್ಕೊಂದು ಸೇರಿಸಿ ದಬ್ಬಣದಿಂದ ಹೊಲೆದು ಉದ್ದನೆಯ ಚಾಪೆಯ ರೀತಿ ತಟ್ಟಿಗೆ ತಯಾರಿಸಿ ನೆಟ್ಟಗಿರುವ ಗೂಟಗಳಿಗೆ ಅಡ್ಡಲಾಗಿ ಹಾಕಿದ ಬಿದಿರುಗಳ ಮೇಲೆ ಬಿಚ್ಚಿ ಹರಡಿದರೆ ಅದು ಒಂದು ತಾತ್ಕಾಲಿಕ ಟೆಂಟು ಆಗುವಂತೆ  ವ್ಯವಸ್ಥೇ ಮಾಡಿಕೊಳ್ಳುತ್ತಿದ್ದರು. ಈ ತಟ್ಟಿಗೆಗೆ ಸುತ್ತುವ ಅಥವಾ ಮಡಿಚಿ ಅಡಕ ಮಾಡಿಕೊಳ್ಳಲು ಅನುಕೂಲವಿರುವಂತೆ ಇರುತ್ತದೆ.

ವಸತಿಗಳ ವಿನ್ಯಾಸದಲ್ಲಿ ಪ್ರಾದೇಶಿಕ ಭಿನ್ನತೆಗಳು : ಕ್ರಮೇಣ ಜೊಂಡಿನ ಗುಡಾರ ಆಪಿನ ಕಡ್ಡಿ ಟೆಂಟು, ಗುಡಿಸಲುಗಳಿಂದ ಸರ್ಕಾರ ನಿರ್ಮಿಸಿಕೊಟ್ಟ ಹಂಚಿನ ಮನೆಗಳಲ್ಲಿ ವಾಸಿಸುತ್ತ ತಮ್ಮದೇ ಆದ ಟೋಳ್ ತಾಂಡಾಗಳಲ್ಲಿ ವಾಸಿಸುತ್ತಿದ್ದವರು ಇತ್ತೀಚಿಗೆ ನಾಗರಿಕತೆಯ ಬಿರುಗಾಳಿಯಿಂದ ಕೆಲವರು ಆರ್.ಸಿ.ಸಿ ಮನೆಗಳನ್ನು ನಿರ್ಮಿಸಿ ವಾಸಿಸುತ್ತಿರುವ ಸಮೂಹ ವಾಸಿಗಳನ್ನು  ಕಾಣಬಹುದಾಗಿದೆ.

ಕುಲ ಮತ್ತು ಕುಲ ನಡುವಿನ ಸ್ಥಾನಮಾನದ ಹಿನ್ನೆಲೆಯಲ್ಲಿ ವಾಸದ ಸ್ವರೂಪ : ಹಕ್ಕಿಪಿಕ್ಕಿಯರ ಗುಡಾರ ಟೆಂಟು, ಗುಡಿಸಲುಗಳೂ ಒಂದೇ ಸಾಲಿನಲ್ಲಿ ಅಥವಾ ಎದಿರು ಬದಿರಾಗಿ ನಿರ್ಮಿತಗೊಳ್ಳುತ್ತವೆ. ಎದಿರು ವಾಸಿಸುವವರಿಗೆ ಕಾಲು ಬರುವಂತೆ ಮಲಗುವಂತಿಲ್ಲ ಇದರಿಂದ ಎದುರಿನವರಿಗೆ ಕೀಳರಿಮೆ. ಅಪಮಾನವುಂಟಾಗಿ ಪಂಚಾಯ್ತಿ ಸೇರಿಸುತ್ತಾರೆ ಉತ್ತರದೆಡೆ ತಲೆಹಾಕಿ ಮಲಗುವುದಿಲ್ಲ.

ನೆರೆಹೊರೆಯ ಸಮುದಾಯಗಳ ವಾಸದ ಅಥವಾ ಕೇರಿಗಳ ವಿವರ : ಹಕ್ಕಿಪಿಕ್ಕಿಯರ ತಾಂಡಾದ ಬಳಿಯಲ್ಲಿ ಲಂಬಾಣಿ ತಾಂಡಾಗಳು ಅಥವಾ ಜೋಗಿ ತಾಂಡ ಇರುವುದು ಸರ್ವೇಸಾಮಾನ್ಯ. ಲಂಬಾಣಿ ತಾಂಡಾದವರು ಆಚರಿಸೋ ಹಬ್ಬ, ಆಚರಣೆ, ಮತ್ತು ಭಾಷೆಯಲ್ಲಿ ಸಾಮ್ಯತೆಯಿರುವುದು ಗಮವಾರ್ಹವಾಗಿದೆ. ಇತ್ತೀಚಿನವರ ಕೇರಿಗಳು, ವಾಸದ ಮನೆಗಳು ಜನ ಸಾಮಾನ್ಯರಲ್ಲಿರುವಂತೆ ಕಂಡುಬರುತ್ತವೆ.

ಧಾರ್ಮಿಕ ವಿಧಿವಿಧಾನಗಳು ದೇವರು, ಧಾರ್ಮಿಕ ಕೇಂದ್ರಗಳು : ಹಕ್ಕಿಪಿಕ್ಕಿಯರು ಒಂದು ವರ್ಷದ ಅವಧಿಯಲ್ಲಿ ‘ಭರ‍್ನು’ ಎಂಬ ಹಬ್ಬವನ್ನು ಮಾಡುತ್ತಾರೆ ಈ ಭರ್ನು ಹಬ್ಬದಲ್ಲಿಯೂ ಆಡು, ಕುರಿ, ಕೋಳಿ ಮತ್ತು ಕೋಣಗಳನ್ನು ಬಲಿಕೊಡುವ ಸಂಪ್ರದಾಯವಿದೆ. ಪ್ರತಿ ವರ್ಷ ಎಲ್ಲರೂ ಮಾಡಿದಂತೆಯೇ ಇದೇ ಹಬ್ಬವನ್ನು ಬೇರೆ ಬೇರೆ ಊರುಗಳಲಿರುವವರೆಲ್ಲಾ ಸೇರಿ ಹನ್ನೆರಡು ವರ್ಷಗಳಿಗೊಮ್ಮೆ ದೊಡ್ಡ ಹಬ್ಬವನ್ನು ಮಾಡುವ ಸಂಪ್ರದಾಯವೂ ಇವರಲ್ಲಿದೆ.

ದೇವ್ ನೋ ಬುಲಾವೋದೇವರನ್ನು ಕರೆಯುವುದು :- ಹಕ್ಕಿಪಿಕ್ಕಿಯರಲ್ಲಿ ಇದು ಒಂದು ವಿಶೇಷ ಧಾರ್ಮಿಕ ಆಚರಣೆಯಾಗಿದೆ. ದೇವರು ಕಟ್ಟೆಯ ಎದುರು ಮೂರು ಕಲ್ಲುಗಳನ್ನು ಹೂಡಿ ಖವಾಳಿಯನ್ನು ಮಾಡುತ್ತಾರೆ ‘ದೇವಾಯು’ ದೇವರು ಮೈಮೇಲೆ ಬಂದವನು ಸುಡುವ ಕಡಾಯಿಯಿಂದ ೯ ಖವಾಳಿ (ಸಿಹಿ ಕಜ್ಜಾಯ)ಗಳನ್ನು ಬಲಗೈಯಿಂದಲೇ ತೆಗೆಯುತ್ತಾನೆ ಇದು ರಾತ್ರಿ ನಡೆಯುವ ಆಚರಣೆ ದೇವರ ಕಟ್ಟೆ ಅಥವಾ ಗದ್ದಿಗೆಯಿಂದ ಹೊರಕ್ಕೆ ತೆಗೆಯುತ್ತಾರೆ. ಇದು ರಾತ್ರಿ ನಡೆಯುವ ಆಚರಣೆ. ಅಲ್ಲಿ ಅಮ್ಮ ಚಾಮುಂಡಿಯನ್ನು ಪೂಜಿಸಿಟ್ಟಿರುತ್ತಾರೆ ಒಬ್ಬರು ಹಾಡು ಹೇಳುತ್ತಾ ದೇವರನ್ನು ಕರೆಯುತ್ತಾರೆ. ಗುಲಗಂಜಿಯಿಂದ ನೋಡುವ ಶಾಸ್ತ್ರಕ್ಕೆ ‘ವಧಾಹೊ ಮಾಂಡವಾನು’ ಗುಲಗಂಜಿ ನೋಡುವ ಶಾಸ್ತ್ರ ಎಂದರ್ಥ. ಇದರ ಲೆಖ್ಖದಂತೆ ಒಂದು ಹಿಡಿಗೆ ೧೫ ವಜೂರ್ ಗುಂಪಿಗೆ ಸರಿಯಾಗಿ ಐದೈದು ಬರಬೇಕು ಅಲ್ಲಿಯವರೆಗೂ ಹಿಡಿಹಿಡಿದು ಇಡುವ ಕಾರ್ಯ ಮಾಡುತ್ತಲೇ ಇರುತ್ತಾರೆ.

ಗುರುಪಾಥ್ಯೋ ಪೂಜೆ : ಹಕ್ಕಿಪಿಕ್ಕಿಯರ ನಾಲ್ಕು ಪಂಗಡಗಳಲ್ಲೂ ಆಯಾ ಪಂಗಡಕ್ಕೆ ಸಂಬಂಧ ಪಟ್ಟ ಗುರುಗಳನ್ನು ಆಯ್ದುಕೊಳ್ಳುತ್ತಾರೆ. ಯಾರಿಂದ ತಮ್ಮ ವಂಶಬೆಳೆಯಿತು. ಯಾರಿಂದ ಉದ್ಧಾರವಾದೇವು ಎಂಬುದನ್ನು ಗಮನಿಸಿ ಗುರುಗಳನ್ನು ಆಯ್ದುಕೊಳ್ಳುತ್ತಾರೆ.

೧. ಗುಜರಾತ್ಯೋ ಪಂಗಡದಲ್ಲಿ – ಗುರು ಪಾಥ್ಯೋ
೨. ಮೆವಾಡೊ ಪಂಗಡದಲ್ಲಿ – ಗುರು ಹಾಜೊ
೩. ಕಾಳಿವಾಳೋರಲ್ಲಿ ಪಂಗಡದಲ್ಲಿ – ಗುರುಢಾಡರ್
೪. ಪವಾರ ಪಂಗಡದಲ್ಲಿ  – ಗುರು ಉಬಾರ್ಯೋ

ಯಾವುದೇ ಒಳ್ಳೆಯ ಕಾರ್ಯ, ಹಬ್ಬಗಳನ್ನು ಮಾಡುವಾಗ ಹಿರಿಯರಾಗಿ ಆಯಾ ಪಂಗಡದವರು ಗುರುವನ್ನು ನೆನೆಸುತ್ತಾರೆ. ಬೇರೆ ಸಮುದಾಯದವರು ಹಿರಿಯರ ಪೂಜೆಯನ್ನು ಮಾಡಿದ ಹಾಗೆ ಹಕ್ಕಿಪಿಕ್ಕಿಯರು ಗುರುಪೂಜೆಯನ್ನು ಮಾಡುತ್ತಾರೆ. ಇಲ್ಲಿ ಗುರು ಮತ್ತು ‘ವಡೋಎಂಬ ಶಬ್ದದ ಅರ್ಥ ಹಿರಿಯ ಎಂದಾಗುತ್ತದೆ. ಆದರೂ ಗುರುವಿನ ಅರ್ಥ  ವಿಶೇಷತೆಯಿಂದ ಕೂಡಿದೆ.

೧. ಗುರು ಆದವನು ತನ್ನ ಸಮುದಾಯದವರಿಗಾಗಿ ಶ್ರಮಿಸಿರಬೇಕು. ಬದುಕೆಂಬ ಹೋರಾಟದಲ್ಲಿ ಕೇವಲ ತಮ್ಮಗಳ ಉಳಿವಿಗಾಗಿ ತಮ್ಮನ್ನು ತಾವೇ ಬಲಿಕೊಟ್ಟವರೆನಿತೋ ಮಂದಿಯಿದ್ದಾರೆ. ಅವರೆಲ್ಲ ಹುತಾತ್ಮರು ಎನಿಸಿಕೊಳ್ಳುವ ಸಾಲಿನಲ್ಲಿ ಗುರುಎಂಬ ಹೆಸರನ್ನು ಪಡೆಯುತ್ತಾರೆ.

೨. ಗುರುವಾದವನು ತಾನು ಮಾಡಿದ ಘನಕಾರ್ಯಗಳಿಗೆ ಮಾರುಸೋತ ತನ್ನ ಮಕ್ಕಳಿಂದ ಮೆಮ್ಮಕ್ಕಳಿಂದ ಪೂಜಿತನಾಗುವನು.

೩. ಸದಾ ಒಳ್ಳೆಯ ನಡತೆಯಿಂದ ಕೂಡಿದವನಾಗಿ, ಕೆಡಕು  ಅಪ್ಪಿತಪ್ಪಿಯೂ ಮನಸ್ಸಲ್ಲಿ ಎಣಿಸಿರಬಾರದು, ಎಲ್ಲರಿಂದಲೂ ಮನ್ನಣೆ ಪಡೆದವನಾಗಿರಬೇಕು.

೪. ಮಗ ಅಥವಾ ಮಕ್ಕಳು ಮೊಮ್ಮಗನಿಂದ ತನ್ನ ಮೂರ್ತಿ ಪ್ರತಿಷ್ಠಾಪಿಸಿಕೊಂಡು ದೇವಿಯ ಪಿಟಾರಿ (ತ್ರಾಂಗಡೂ) ಯಲ್ಲಿ ಇಡಲ್ಪಡುವನು. ಹಬ್ಬಗಳಲ್ಲಿ ಮಾತ್ರ ಹೊರತೆಗೆಯಲ್ಪಡುವ ಮೂರ್ತಿ, ಬೇರೆ ಕಾರ್ಯಗಳಲ್ಲಿ ಬರೀ ಹೆಸರನ್ನು ಹೇಳಿ ಕರೆಯುವುದರ ಮೂಲಕ ಪೂಜಿಸಲ್ಪಡುವನು.

ಇದೆಲ್ಲ ಕಾರ್ಯಗಳು ಆತನ ಜೀವಿತದಲ್ಲಿ ಸಾಧ್ಯವಿಲ್ಲ. ಆತನ ಮರಣಾನಂತರ ವಂಶಜರು ಮಗ ಮೊಮ್ಮಗ ತಂದೆಯ ನೆನೆಪಿನ ಗುರತಾಗಿ ಮೂರ್ತಿ (ಖಪ್ಪರ್) ಘಡಾವಾನು (ನಿರ್ಮಾಣಿಸು) ಮಾಡುತ್ತಾನೆ. ಇತ್ತೀಚಿನವರು ತನ್ನ ವಂಶಕ್ಕೆ ಕಾರಣನಾದವನ್ನು ಪೂಜಿಸುವುದರ ಬದಲು (ಹತ್ತು-ಹದಿನೈದು) ಎಷ್ಟೋ ತಲೆಮಾರಿನಿಂದಾಚೆಯನ್ನು ಯಾಕೇ ಪೂಜಿಸಬೇಕೆಂಬ ತಗಾದೆ ತೆಗೆದರೂ ಸಹ, ಹಿಂದಿನಿಂದಲೂ ಸಂಪ್ರದಾಯದಂತೆ ಆಚರಿಸುತ್ತ ಬಂದಿರುವುದನ್ನು ಅಳಿಸಿ ಹಾಕಲು ಸುತರಾಂ ಒಪ್ಪುವುದಿಲ್ಲ ಈಗಿನ ಹಿರಿಯರು. ಆದರೂ ಅವರಿಗೊಪ್ಪುವ ಮನೆತನದ ಹಿರಿಯನನ್ನು ಗುರುವಾಗಿ ಆಚರಿಸಿದರೂ ಮೂಲ ಗುರುವನ್ನು ಮರೆವಂತಿಲ್ಲ. ಈ ಪದ್ಧತಿಯನ್ನು ಗುರುನೋ ಗೋಟ್ ಮೂಲಕ ಆಚರಿಸುತ್ತಾರೆ.

ಒಳಾಡಳಿತ ವ್ಯವಸ್ಥೆ

ಹಕ್ಕಿಪಿಕ್ಕಿ ಬುಡಕಟ್ಟುಗಳ ಜೀವನ ವಿಧಾನ ಮತ್ತು ಸಾಮಾಜಿಕ ವ್ಯವಸ್ಥೆಯು ಲೋಕರೂಢಿಗಳೂ, ಸಂಪ್ರದಾಯಗಳು ಪರಸ್ಪರ ಸಹಕಾರ, ವಿವಿಧ ನಿಯಮಗಳು, ವರ್ಗಗಳು, ಉಡಿಗೆ-ತೊಡಿಗೆ, ಆಹಾರ, ವಸತಿ, ವೃತ್ತಿ, ಬೆಡಗುಗಳು ವಿವಾಹ, ಕುಟುಂಬ, ನ್ಯಾಯ ಪದ್ಧತಿ ಹಾಗೂ ಸಾಮಾಜಿಕ ನಿಯಂತ್ರಣವನ್ನೊಳಗೊಂಡ ಕ್ರಮಬದ್ಧವಾದ ವ್ಯವಸ್ಥೆಯಾಗಿದೆ. ಈ ಸಾಮಾಜಿಕ ವ್ಯವಸ್ಥೆಯಲ್ಲಿ ಇತರ ಹಲವಾರು ಉಪ ವ್ಯವಸ್ಥೆಗಳಿದ್ದು, ಇವೆಲ್ಲವೂ ತನ್ನದೇ ಆದ ವಿಶಿಷ್ಟ ಕಾರ್ಯಗಳನ್ನು ನಿರ್ವಹಿಸಲ್ಪಡುತ್ತವೆ. ಈ ಕಾರ್ಯ ನಿರ್ವಹಣೆಯಲ್ಲಿ ಕ್ರಮಬದ್ಧತೆ ಇರುತ್ತದೆ.

ಸಮುದಾಯದಲ್ಲಿ ತಲೆದೋರುವ ಸಮಸ್ಯೆಗಳಿಗೆ ನ್ಯಾವ್ (ಪಂಚಾತ್) ಮಾಡಿ ಬಗೆಹರಿಸಿಕೊಳ್ಳುತ್ತಾರೆ. ಇದರಲ್ಲಿ ನ್ಯಾವೋ, ಘಟಗೀರ್ ರೈಟಿರ್ ಎಂಬುವರೇ ಪ್ರಮುಖರು ನ್ಯಾವೋ ಸಂಪ್ರದಾಯದಲ್ಲಿ ಹಿರಿಯನಾಗಿದ್ದು ಮಾತುಗಾರಿಕೆಯಲ್ಲಿ ತಲೆಮಾರು ಹೇಳುವಲ್ಲಿ ಬೇಟೆಯಲ್ಲಿ  ಆತನ ಯೌವನದಿಂದ ಹೆಚ್ಚು ಬೇಟೆ ತರುವಲ್ಲಿ ಉತ್ತಮ ಚತುರತೆ ಹೊಂದಿದವನಾಗಿರುತ್ತಿದ್ದ. ಅವರಿವರೆಂದೆನಲ್ಲಾ ಎಷ್ಟು ಜನಬೇಕಾದರೂ ಇರಬಹುದು. ಬೆಳಗ್ಗಿನ ಜಾವವೇ ಒಂದು ನಿರ್ದಿಷ್ಟ ಜಾಗದಲ್ಲಿ ಸುತ್ತಲೂ ಕುಳಿತು ತೀರ್ಮಾನಿಸುತ್ತಾರೆ ಒಬ್ಬರಿಗೊಬ್ಬರಿಗೆ ತೀರ್ಮಾನ ಸರಿಬರದಿದ್ದರೂ ಅದೊಂದು ಹಂತ ತಲುಪುವವರೆಗೂ ಪರಿಹಾರ ಕಂಡುಕೊಂಡ ನಂತರವೇ ಏಳುತ್ತಾರೆ. ಇದ ಎರಡರಿಂದ ಮೂರು ದಿನವೋ ಆಗಬಹುದು, ಹೋಟೆಲ್‌ನಲ್ಲಿ ತಿಂಡಿತಿನಿಸುವ ಖರ್ಚು. ಘಟಗೀರ್ ಅಥವಾ ರೈಟರ್ ಈತನ ಕೆಲಸ. ಪಂಚಾಯ್ತಿಯಲ್ಲಿ ಹಿರಿಯರನ್ನು ಸೇರಿಸುವುದು, ಜಗಳವಾಗದಂತೆ ನೋಡಿಕೊಳ್ಳಲು ಕೈಯಲ್ಲಿ ಬಾರು ಕೋಲನ್ನು ಝಳಪಿಸುತ್ತಾ ಪಂಚಾಯ್ತಿಯನ್ನು ಸುತ್ತುತ್ತಿರುಗುತ್ತಾರೆ ಹೆಂಗಸರಿಗೆ ಪ್ರವೇಶವಿಲ್ಲ. ದೂರದಲ್ಲಿ ಕುಳಿತು ತೀರ್ಮಾನ ನೋಡ ಬೇಕಾಗುತ್ತದೆ

ಪ್ರದರ್ಶನ ಕಲೆಗಳು: ಹಬ್ಬ ಹರಿದಿನಗಳಲ್ಲಿ ಮದುವೆಯಾದ ನಂತರ ದೇವರ ಕಾರ್ಯ ಮುಗಿದ ನಮತರ ಸಂತೋಷದ ದಿನಗಳಲ್ಲಿ ಗಂಡು ಹೆಣ್ಣು ಭೇದವಿಲ್ಲದೆ ಚಿಕ್ಕವರು ದೊಡ್ಡವರು ಎನ್ನದೆ ಎಲ್ಲಾರು ಸೇರಿ ವೃತ್ತಾಕಾರದಲ್ಲಿ ಪ್ರಾಣಿಗಳ ಚರ್ಮದಿಂದ ಮಾಡಿದ ತಮಟೆ, ತಪ್ಪಡಿ  ಢೋಲ್ ಢೋಳ್ಳು ಕಂಚ್ ನೀಥಾಳಿ ಕಂಚಿನ ಗಂಗಾಳ ಖ್ಹಂಖ್ಹಾಳಿ ಕಂಸಾಳೆ ಇವುಗಳನ್ನು ಹಾಕಿ ಕುಣಿದು ಕುಣಿದು ಸಂತೋಷ ಪಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ಕಲೆಗಳು ಅಥವಾ ಹೆಜ್ಜೆಗಳೂ ಅಳವಿನ ಅಂಚಿನಲ್ಲಿ ಇರುವುದರಿಂದ ಇದನ್ನೇ ಕಲೆಯಾಗಿ ಉಳಿಸಿಕೊಳ್ಳಲು ಬಳ್ಳಾರಿ ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆ ಒಂದು ಕಲಾ ತಂಡವನ್ನು ರಚಿಸಿಕೊಳ್ಳಲು ಹೇಳಿ ಆ ತಂಡಕ್ಕೆ ಸರ್ಕಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುಕೂಲ ಮಾಡಿಟ್ಟಿದೆ. ಹೀಗಾಗಿ ಉದಯ ತಾಷ ರಾಮಡೊಲು ಮತ್ತು ಗಂಗಾಭವಾನಿ ತಾಷಾ ರಾಮಡೊಲು ಇಂತಹ ತಂಡಗಳು ಇತ್ತೀಚಿಗೆ ತಮ್ಮ ಕಲಾವಂತಿಕೆಯ ಪ್ರದರ್ಶನಗಳನ್ನು ನೀಡುತ್ತಿವೆ.

ಸಮಸ್ಯೆ ಸಂಘಟನೆ ಪರಿಹಾರ : ಆಧುನಿಕ ಜಗತ್ತಿನ ಲೌಕಿಕ ಸವಲತ್ತುಗಳಿಂದ ವಂಚಿಸಲ್ಪಟ್ಟಿದ್ದರೂ ಸಹ ಬಹಳಷ್ಟು ಕಾಳಜಿಯಿಂದ ತಮ್ಮ ಅನನ್ಯತೆಯನ್ನು ಕಾಯ್ದುಕೊಳ್ಳಲು ಪ್ರಯತ್ತಿಸುತ್ತಿರುವ ಅನೇಕ ಸೋತ ಸಮುದಾಯಗಳಲ್ಲಿ ಹಕ್ಕಿಪಿಕ್ಕಿಯೂ ಒಂದಾಗಿದೆ. ಹೀಗೆ ಇನ್ನೂ ಅನೇಕ ಬುಡಕಟ್ಟುಗಳು ಪ್ರಯತ್ನಸುತ್ತಲೆ ಇವೆ. ಈ ಬುಡಕಟ್ಟುಗಳೂ ಅನೇಕ ಬೌದ್ಧಿಕ ಹಾಗೂ ದೈಹಿಕ ಚಮತ್ಕಾರಗಳನ್ನು ಕಟ್ಟಿಕೊಂಡಿವೆ. ಕೆಲವೇ ಕೆಲವು ಸಮುದಾಯಗಳ ಹಿತಾಸಕ್ತಿಗೆ ಇಂಡಿಯಾದ ಸಮಾಜದಲ್ಲಿ ಅನೇಕ ವಿಷಮ ಸ್ಥಿತಿಗಳು ರೂಪಗೊಂಡವು. ಸಾಮಾಜಿಕ ಸ್ಥಾನಮಾನಗಳಿಗೆ ಅನುಗುಣವಾಗಿ ಆರ್ಥಿಕ ಮತ್ತು ಶೈಕ್ಷಣಿಕ ಸವಲತ್ತುಗಳು ಲಭ್ಯವಾದವು ಶ್ರೇಣಿಕರಣದ ಕೆಳಗಿನ ಅಂಚಿನ ಸಮುದಾಯಗಳಿಗೆ  ಎಲ್ಲ ಬಗೆಲೌಕಿಕ ಅಧಿಕಾರಗಳು ಕೈಗೆ ಏಟುಕದಾದವು. ಸಾಮಾಜಿಕ ಕಾನೂನುಗಳು ವಿಧಿಸಿದ ತ್ಯಂತ ಕಠಿಣ ಮತ್ತು ಹೇಯ ದುಡಿಮೆಗಳಲ್ಲಿ ಈ ಸಮಯದಾಯಗಳು ಅನಿವಾರ್ಯವಾಗಿ ನಿರತವಾಗಲೇ ಬೇಕಾಯಿತು.

ಆರ್ಥಿಕ ಸ್ಥಿತಿಗತಿ : ಆರ್ಥಿಕವಾಗಿ ತುಂಭಾ ಹಿಂದುಳಿದ ಹಕ್ಕಿಪಿಕ್ಕಿ ಸಮುದಾಯದವರು ಇಂದಿಗೂ ಸಣ್ಣ ಪ್ರಮಾಣದ ಕೃಷಿ ಭೂಮಿಹೊಂದಿವೆ. ಆದರೆ ಆ ಕೃಷಿಭೂಮಿಗಳು ಹೆಚ್ಚು ಬಂಜರು ಭೂಮಿಗಳಾಗಿವೆ. ಸಮುದಾಯದ ಹೆಚ್ಚಿನ ಜನರು ಕೂಲಿಗಳನ್ನೇ ಅವಲಂಬಿಸಿದ್ದಾರೆ. ಬೇಟೆಯನ್ನೇ ಅವಲಂಬಿಸಿದ್ದ ಹಕ್ಕಿಪಿಕ್ಕಿ ಕುಟುಂಬಗಳು ಇತ್ತೀಚಿಗೆ ನೆಲೆ ನಿಲಲ್ಲು ತೊಡಗಿದ ನಂತರ ತಮ್ಮ ಆರ್ಥಿಕ ಜೀವನವನ್ನು ಸುಧಾರಿಸಿಕೊಳ್ಳಲು ಎಮ್ಮೆ, ಮೇಕೆ, ಕುರಿ, ಕೋಳಿಗಳನ್ನು ಸಾಕುತ್ತಾರೆ. ಕೆಲವೆ ಕೆಲವು ಕೃಷಿ ಕುಟುಂಬಗಳು ಆಕಳುಗಳನ್ನು ಸಾಕಿರುವುದನ್ನು ಕಾಣಬವುದು. ಆಕಳು ಮತ್ತು ಎಮ್ಮೆಗಳಿಂದ ಬರುವ ಹೈನುತ್ಪಾದನೆಯಿಂದ ತಮ್ಮ ಆರ್ಥಿಕತೆಯನ್ನು ಅಲ್ಪ ಪ್ರಮಾಣದಲ್ಲಿ ಸುಧಾರಿಸಿಕೊಂಡಿದ್ದಾರೆ. ಕೆಲವು ಕುಟುಂಬಗಳು ಬೇಟೆಗಾಗಿ ನಾಯಿ ಮತ್ತು ಕೌಜುಗಳನ್ನು ಸಾಕುತ್ತಿದ್ದಾರೆ.

ಹಕ್ಕಿಪಿಕ್ಕಿ ಬುಡಕಟ್ಟು ಪರಿಶಿಷ್ಟ ವರ್ಗದ ಸೌಲಭ್ಯ ಪಡೆಯುವಲ್ಲಿ ವಿಫಲವಾಗಿದೆ ಎಂದು ಹೇಳಬಹುದು. ಇತ್ತೀಚೆಗಷ್ಟೇ ಈ ಸಮುದಾಯ ಒಂದುಕಡೆ ನೆಲೆ ನಿಲ್ಲಲು ಪ್ರಯತ್ನಿಸುತ್ತಿದೆ. ಕೆಲವೊಂದು ಕುಟುಂಬಗಳಿಗೆ ಆಶ್ರಯ, ಅಂಬೇಡ್ಕರ್ ಆವಾಜ್ ಮುಂತಾದ ಯೋಜನೆಗಳಲ್ಲಿ ಲಾಭವಾಗಿದೆ. ಅಲೆಮಾರಿಗಳ ಚಾರಿತ್ರಕ ಬೆಳವಣಿಗೆ ಎಷ್ಟು ಸಂಕೀರ್ಣವೋ, ಅವುಗಳ ಅಭಿವೃದ್ಧಿ ಸಾಧಿಸುವ ಮಾರ್ಗವೂ ಸಹ ಅಷ್ಟೇ ಸಂಕೀರ್ಣವಾಗಿದೆ. ಭಾರತದ ಸಮಾಜದ ಚಾರಿತ್ರಿಕ ವಿಕಾಸದ ಯಾವುದೇ ಹಂತದಲ್ಲಿ ನೆಲೆತಪ್ಪಿ ಹೋದ ಹಕ್ಕಿಪಿಕ್ಕಿಯರ ಸಂಕೀರ್ಣ ಬದುಕು ಅನೇಕ ಜಟಿಲ ಸಮಸ್ಯೆಗಳಿಗೆ ಕಾರಣವಾಗಿದೆ ವರ್ತಮಾನದಲ್ಲಿ ಸರ್ಕಾರಗಳು ರೂಪಿಸುವ ಬಹುತೇಕ ಯೋಜನೆಗಳು ಪ್ರತಿ ಹಂತದಲ್ಲೂ ರಾಜಕೀಯ ಮಧ್ಯಪ್ರವೇಶ ಇಲ್ಲವೆ ಅನುಷ್ಟಾವದಲ್ಲಿರುವ ಲೋಪಗಳಿಂದಾಗಿ ಈ ಬಗೆಯ ಸಮಯದಾಯಗಳಲ್ಲಿ ಅವು ತಲುಪ್ಪುತ್ತಿಲ್ಲ. ಆಧುನಿಕ ಅಹಂ ಮತ್ತು ವಿಕ್ಷಿಸಿ ಆತ್ಮ ಪ್ರತ್ಯಯಗಳ ಮೂಲಕ ಅನುಷ್ಟಾನಗೊಳ್ಳುವ ಯೋಜನೆಗಳಿಗೆ ಹೃದಯವೇ ಇಲ್ಲವೆಂದರೆ ತಪ್ಪಾಗದು. ಈ ಬಗೆಯ ಸಾಂಪ್ರದಾಯಿಕ ಸೊಕ್ಕನ್ನು ಪರಾಂಪರಾಗತವಾಗಿ ವಿರೋಧಿಸುತ್ತಲೆ ಬಂದ ಬುಟಕಟ್ಟುಗಳು ಎಂದೂ ಅಭಿವೃದ್ಧಿ ಯೋಜನೆಗಳಿಗೆ ಸ್ಪಂದಿಸಲಾರವು.

ಆರ್ಥಿಕ ಜೀವನ : ಇವರು ರಾಜ್ಯದ ಕೆಲವು ಕಡೆ ಮೀನುಗಾರಿಕೆ, ಪ್ರಾಣಿ, ಪಕ್ಷಿಗಳ ಬೇಟೆ. ಹಂದಿ, ಕುರಿ, ಮೇಕೆಗಳ ಸಾಕಾಣಿಕೆ, ಗೋರಂಜನೆ, ಕರಿಮಣಿಗಳ ವ್ಯಾಪಾರ, ಶ್ರೀಮಂತ ರೈತರ ಹೊಲಗಳಲ್ಲಿ ಕೂಲಿಕಾರ್ಮಿಕರಾಗಿ ದುಡಿಯುವುದು, ಭಟ್ಟಿಸಾರಾಯಿ ಮಾಡುವುದು ಇವರ ವೃತ್ತಿಗಳು. ಅಬಕಾರಿ ಇಲಾಖೆ ಹಾಗೂ ಸರ್ಕಾರದ ಕಾನೂನುಕ್ರಮಗಳಿಂದ ಅನೇಕ ಕಡೆ ಇಂದು ಭಟ್ಟಿಸರಾಯಿ ನಿಂತುಹೋಗಿದೆ. ಬದಲಾದ ಕಾಲಕ್ಕನುಗುಣವಾಗಿ ಇತ್ತೀಚಿಗೆ ಬೇರೆ ಬೇರೆ ಸಮುದಾಯಗಳಂತೆ ಇವರು ಸಹ ತಮ್ಮ ಮೂಲ ಕಸುಬುಗಳನ್ನು ಬಿಡುತ್ತಾ ಇತರರಂತೆ ಬೇರೆ ಬೇರೆ ಉದ್ಯೋಗಗಳಲ್ಲಿ ಸಹ ತೊಡಗಿಸಿಕೊಂಡಿದ್ದಾರೆ. ಅಪರೂಪವೆನ್ನುವಂತೆ ಅಲ್ಲೊಬ್ಬ ಸರ್ಕಾರದ ಬೇರೆ ಬೇರೆ ಇಲಾಖೆಗಳಲ್ಲಿಯು ಸರ್ಕಾರಿ ನೌಕರರಾಗಿ ಕಾರ್ಯ ಮಾಡುತ್ತಿರುವುದು ಕಂಡುಬರುತ್ತಿದೆ. ಇದೆಲ್ಲದರ ಜೊತೆಗೆ ಇವರ ಗಿಡಮೂಲಿಕೆ ಔಷಧಿಗಳ ಜನಕರೇ ಆಗಿದ್ದಾರೆ. ಕಾಡು ಉತ್ಪನ್ನಗಳಾದ ಗೆಡ್ಡೆಗೆಣಸು ಹಾಗೂ ಜೇನುಗಳನ್ನು ಸಹ ಮಾರಾಟ ಮಾಡಿ ತಮ್ಮ ಆರ್ಥಿಕ ಜೀವನಕ್ಕೆ ನೆರವಾಗುವರು.

ರಾಜಕೀಯ ಸ್ಥಿತಿಗತಿ : ಕರ್ನಾಟಕ ಅತ್ಯಲ್ಪ ಜನಸಂಖೆಯನ್ನು ಹೊಂದಿದ ಇವರಿಗೆ ಕನಿಷ್ಟ ಮಟ್ಟದಲ್ಲಿ ಒಂದು ಗ್ರಾಮಪಂಚಾಯ್ತಿ ಸದಸ್ಯರ ಸ್ಥಾನವೂ ದೊರೆತಿರವುದಿಲ್ಲ.ಈ ಸಮುದಾಯದಲ್ಲಿ ಕನಿಷ್ಟ ಶೇ ೪೭.೦೪ದಷ್ಟು ಜನಮತದಾರರ ಪಟ್ಟಿಯಿಂದಲೇ ಹೊರಗುಳಿದಿದ್ದಾರೆ. ಬಹುಶಃ ಇದಕ್ಕೆ ಕಾರಣ ಇವರ ಅಲೆಮಾರಿತನವೇ ಆಗಿದೆ. ಒಂದೇ ಊರಿನಲ್ಲಿ ನೆಲೆನಿಲ್ಲದ ಈ ಸಮುದಾಯ ಇಂದಿಗೂ ಚುನಾವಣೆಯ ಕುರಿತಾಗಿ ಪೂರ್ಣಪ್ರೆಜ್ಞೆಯನ್ನು ಅಳವಡಿಸಿಕೊಂಡಿಲ್ಲವೆಂದೇ ಹೇಳಬಹುದು.

ಪರಿಹಾರೋಪಾಯಗಳು

. ಸಮಾಜದ ಕುರಿತು ಸೂಕ್ತ ಅಧ್ಯಯನಗಳು ನಡೆಯಬೇಕು : ಸಮುದಾಯವನ್ನು ಕುರಿತು ಇಲ್ಲಿಯವರೆಗೆ ಅಧ್ಯಯನಗಳು ನಡೆಯದೆ ಇರುವುದರಿಂದ ಸಮಗ್ರ ಅಧ್ಯಯನ ನಡೆಯಬೇಕಾಗಿದೆ.

. ನೆಲೆಗಳ ನಿರ್ಮಾಣವಾಗಬೇಕು : ಸಮುದಾಯವು ನಾಗರಿಕ ಸಮಾಜದ ಹೊರಗೆ ಇರಲು ಇಚ್ಛಿಸಿರುವುದರಿಂದ ಮತ್ತು ತನ್ನಲ್ಲಿರುವ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಮತ್ತು ಬೆಳೆಸಿಕೊಳ್ಳಲು ನಾಗರಿಕ ಸಮಾಜದ ಮಧ್ಯದಲ್ಲಿರಲು ಸಾಧ್ಯವಿಲ್ಲದೇ ಇರುವುದರಿಂದ ನಾಗರಿಕ ಸಮಾಜದ ಕನಿಷ್ಠ ಒಂದು ಕಿ.ಮೀ. ಅಂತರದಲ್ಲಿ ಅಥವಾ ಪ್ರತ್ಯೇಕವಾಗಿ ವಸತಿಗಳನ್ನು ನಿರ್ಮಾಣ ಮಾಡುವುದರಿಂದ ಈ ಸಮುದಾಯದ ಆಚಾರ ವಿಚಾರಗಳು ಅಲ್ಪಮಟ್ಟಗೆ ಉಳಿಯಲು ಸಾಧ್ಯವಾಯಿತು. ಇಲ್ಲದೇ ಇದ್ದರೆ ಈ ಮುಗ್ಧ ಸಮಾಜವು ಕೆಲವು ವರ್ಷಗಳಲ್ಲಿ ತನ್ನ ಭಾಷೆಯ ಅಸ್ತಿತ್ವವನ್ನೇ ಕಳೆದುಕೊಂಡರು ಅಚ್ಚರಿ ಪಡುವಂತಿಲ್ಲ.

. ಸೂಕ್ತ ಸರ್ಕಾರಿ ದಾಖಲೆಗಳು ದೊರೆಯಬೇಕು : ಇಂದಿನ ನಾಗರಿಕ ಸಮಾಜದಲ್ಲಿ ಬದುಕಲು ಪ್ರಮುಖವಾಗಿ ಸರ್ಕಾರಿ ದಾಖಲೆಗಳೇ ಇರಬೇಕು. ಆದ್ದರಿಂದ ಸಮಾಜದಲ್ಲಿ ಗುರುತಿನ ಚೀಟಿಗಳ ವಿತರಣೆ ಸಮರ್ಪಕವಾಗಬೇಕು. ಈ ಪ್ರತಿ ಕುಟುಂಬಕ್ಕೆ ಅಂತ್ಯೋದಯ ಪಡಿತರ ಚೀಟಿ ದೊರೆಯಬೇಕು.

. ವಿದ್ಯಾಭ್ಯಾಸ : ಸಮುದಾಯದ ನೆಲೆಗಳಲ್ಲಿ ೫ ವರ್ಷ ಕೆಳಗಿನ ಮಕ್ಕಳಿಗಾಗಿ ಬಾಲವಾಡಿ, ಅಂಗನವಾಡಿ ಕೇಂದ್ರಗಳ ನಿರ್ಮಾಣವಾಗಬೇಕು. ಮತ್ತು ಅದಕ್ಕೆ ಸಹಾಯಕರ ಹುದ್ದೆಗೆ ಯಾವುದೇ ನಿಬಂಧನೆಗಳಿಲ್ಲದ ಸಮುದಾಯದವರನ್ನು ನೇಮಿಸಬೇಕು. ಆಗ ಈ ಕಾರ್ಯಕ್ಕೆ ಒಂದು ಅರ್ಥ ಬರುತ್ತದೆ.

. ಸಮುದಾಯದ ನೆಲೆಗಳಲ್ಲಿ ವಯಸ್ಕರ ಶಕ್ಷಣ ಕೇಂದ್ರಗಳು ಜಾರಿಯಾಗಬೇಕು.

. ಸಮುದಾಯದ ವಿದ್ಯಾರ್ಥಿಗಳಿಗೆ ಯಾವುದೇ ಶಾಲಾ-ಕಾಲೇಜು, ವಸತಿನಿಲಯಗಳಲ್ಲಿ ಮತ್ತು ಉನ್ನತ ಶಿಕ್ಷಣ ದೊರೆಯಬೇಕು. ಹಾಗೆಯೇ ಎಲ್ಲಾ ವಿಧವಾದ ಪ್ರೋತ್ಸಾಹ ದೊರೆಯಬೇಕು.

. ಸಮುದಾಯ ನೆಲೆಗಳಲ್ಲಿ ಗ್ರಂಥಾಲಯಗಳನ್ನು ನಿರ್ಮಾಣ ಮಾಡಬೇಕು ಮತ್ತು ಅದರ ನಿರ್ವಹಣೆಯನ್ನು ಸಮುದಾಯದವರಿಗೆ ನೀಡಬೇಕು.

. ಸಮುದಾಯದ ಭವನ : ಸಮುದಾಯದ  ಅಳಿದುಳಿದ ಸಮಯದಲ್ಲಿ ಸಾಂಸ್ಕೃತಿಕ ಜೀವನವನ್ನು ಮೆಲಕು ಹಾಕಲು ಹಾಗೂ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳನ್ನು ಕೈಗೊಳ್ಳಲು ವ್ಯವಸ್ಥಿತವಾದ ಸಮುದಾಯ ಭವನಗಳನ್ನು ನಿರ್ಮಿಸಬೇಕು.

. ಮೂಲಭೂತ ಸೌಕರ್ಯ : ಸಮುದಾಯದ ನೆಲೆಗಳಲ್ಲಿ ಅಗತ್ಯವಾಗಿರುವ ಎಲ್ಲಾ ವಿಧವಾದ ಅಂದರೆ ನಿವೇಶನಗಳು, ಮನೆಗಳು, ರಸ್ತೆಗಳು, ಚರಂಡಿಗಳು, ಕುಡಿಯುವ ನೀರು, ಸ್ಮಾಶನದಭೂಮಿ, ವಿದ್ಯುತ್ ಸಂಪರ್ಕ, ಇನ್ನಿತರ ಎಲ್ಲಾ ವಿಧವಾದ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಬೇಕು.

. ಭೂಮಿ : ಮನುಷ್ಯನಿಗೆ ಏನೆ ಇದ್ದರೂ ಅವನ ಆರ್ಥಿಕ ಬದುಕು ಭದ್ರವಾಗಿರದೆ ಇದ್ದರೆ ಅವನ ಅಲೆಮಾರಿ ಜೀವನವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಅದ್ದರಿಂದ ಸಮುದಾಯದ ಪ್ರತಿ ಕುಟುಂಬಕ್ಕೆ ಅನುಗುಣವಾಗಿ ಕನಿಷ್ಟ ಒಂದು ಹೆಕ್ಟರ್ ವ್ಯವಸಾಯ ಯೋಗ್ಯ ಭೂಮಿ ಮತ್ತು ಭೂಮಿಗೆ ಸಂಭಂದಿಸಿದ ಭೇಲಿ, ಕೊಳವೆ ಬಾವಿ ಹಾಗೂ ಇನ್ನಿತರ ಮೂಲ ಸೌಕರ್ಯಗಳು ದೊರೆಯಬೇಕು.

. ಅನೂಸೂಚಿತ ಪ್ರದೇಶಗಳಾಗಿ ಘೋಷಣೆ : ಸಮುದಾಯದ ವಾಸವಾಗಿರುವ ನೆಲೆಗಳನ್ನು ಅನುಸೂಚಿತಗಳೆಂದು ಘೋಷಿಸಬೇಕು.

. ಪಂಚಾಯ್ತಿ ಕಾಯ್ದೆ : ಜಾರಿ ಸಮುದಾಯದಲ್ಲಿ ಮೂಲತಃ ಪಂಚಾಯ್ತಿ ವ್ಯವಸ್ಥೆಯು ಈಗಿನ ನ್ಯಾಯಾಲಯ ವ್ಯವಸ್ಥೆಯಂತೆ ಇದೆ. ಬಹುಶಃ ಈ ಸಮುದಾಯದವರಿಂದಲೇ ತಿಳಿದು ನ್ಯಾಯಾಲಯ ವ್ಯವಸ್ಥೆಯನ್ನು ಸೃಷ್ಟಿಸಬಹುದೋ ತಿಳಿಯದು ಹಾಗೂ ಪ್ರಾಚೀನ ಕಾಲದಿಂದಲೂ ಸಮುದಾಯವು ತನ್ನದೇ ಆದ ಪಂಚಾಯ್ತಿ ಕಾಯ್ದೆಗೆ ಸೂಕ್ತ ಸ್ಥಾನ ಮಾನಗಳು ದೊರೆಯಬೇಕು ಹಾಗೂ  ಇದು ಬುಡಕಟ್ಟು ಪಂಚಾಯ್ತಿ ಕಾಯ್ದೆ ಜಾರಿಯಿಂದ ಮಾತ್ರಸಾಧ್ಯ.

೧೦. ಸಣ್ಣ ಕೈಗಾರಿಕೆ ಮತ್ತು ಗುಡಿ ಕೈಗಾರಿಕೆ : ಸಮುದಾಯದಲ್ಲಿ ಅಲೆಮಾರಿ ಬದುಕನ್ನು ಕೊನೆಗಾಣಿಸಬೇಕಾದರೆ ಕೆಳಕಂಡ ಉದ್ಯೋಗಗಳಿಗೆ ಪ್ರೋತ್ಸಾಹ ದೊರೆತಾಗ ಮಾತ್ರ ಸಾಧ್ಯವಾಗುತ್ತದೆ ಅವುಗಳೆಂದರೆ.

೧. ಪ್ಲಾಸ್ಟಿಕ್ ಸಂಬಂಧಿತ ಸಣ್ಣ ಕೈಗಾರಿಕೆಗಳ ನಿರ್ಮಾಣ.
೨. ಹೈನುಗಾರಿಕೆ ಮತ್ತು ಕೋಳಿ ಸಾಕಣಿಗೆ ಪ್ರೋತ್ಸಾಹ ಮತ್ತು ಆಧ್ಯತೆ.
೩. ಪಶುಪಾಲನೆಗೆ ಪ್ರೋತ್ಸಾಹ ಮತ್ತು ಅಧ್ಯತೆ.
೪. ಮೀನುಗಾರಿಕೆ ಅಧಿಕ ಒತ್ತು ಕೊಟ್ಟು ಅಗತ್ಯ ತರಬೇತಿಗಳನ್ನು ನೀಡಿ ಸ್ಥಳೀಯ ಕೆರೆಗಳನ್ನು ಸಮುದಾಯಕ್ಕೆ ಮೀಸಲಿಡುವುದು. ಇಂತಹ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಟ್ಟು ಈ ಜನರ ಉದ್ಯೋಗವನ್ನು ಪ್ರೋತ್ಸಾಹಿಸುವುದು.

೧೧. ದತ್ತು ಗ್ರಾಮಗಳಾಗಿ ಆಯ್ಕೆ ಸಮುದಾಯದ ನೆಲೆಗಳನ್ನು ದತ್ತು ಗ್ರಾಮಗಳಾಗಿ ಆಯ್ಕೆ ಮಾಡಿ ಗ್ರಾಮದ ಸರ್ವಾಂಗೀಣ ಅಭಿವೃದಿಯನ್ನು ಕೈಗೊಳ್ಳಬೇಕು.

೧೨. ಸ್ವಯಂ ಉದ್ಯೋಗ : ಸಮುದಾಯದಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಆಸಕ್ತಿ ಇದ್ದವರಿಗೆ ಅಗತ್ಯ ಪ್ರೋತ್ಸಹ ದೊರೆಯಬೇಕು.

ಹೀಗೆ ಹಕ್ಕಿಪಿಕ್ಕಿ ಸಮುದಾಯವು ತನ್ನ ಕಾಲಮೇಲೆ ತಾನು ನಿಂತು ತನ್ನದೆ ಆದ ಸಂಸ್ಕೃತಿಯನ್ನು ಆಚಾರ ವಿಚಾರಗಳನ್ನು, ಪರಂಪರೆ ನಂಬಿಕೆಗಳನ್ನು ಉಳಿಸಿಕೊಂಡು, ಕಾಪಾಡಿಕೊಂಡು ಹೋಗುವ ಗುರುತರವಾದ ಜವಾಬ್ದಾರಿ, ಆ ಸಮುದಾಯಕ್ಕೆ ಎಂದಿಗಿಂತಲೂ ಇಂದು ಅತ್ಯಗತ್ಯವಾಗಿ ಬೇಕಾಗಿದೆ.

* * *