ಒಂದು ನಿಶ್ಚಿತವಾದ ಎತ್ತರದ ಪ್ರಾಕೃತಿಕ ಪರಿಸರಗಳಲ್ಲಿ ಹವಾಮಾನ ಹಾಗೂ ಇನ್ನಿತರ ಲಕ್ಷಣಗಳು ಹೆಚ್ಚು ಕಡಿಮೆ ಒಂದೇ ರೀತಿಯವಾಗಿರುತ್ತವೆ. ವಾತಾವರಣದಲ್ಲಿನ ನಿರ್ಮಲತೆ, ಶಿಖರಗಳ ಭವ್ಯತೆ, ಮನಸ್ಸನ್ನು ಪ್ರಸನ್ನಗೊಳಿಸುವ ಪರಿಸರ, ಮೌನ, ಗಾಂಭೀರ್ಯ ಇತ್ಯಾದಿ ಲಕ್ಷಣಗಳು ಸಮಾನವಾಗಿ ಕಂಡುಬರುತ್ತವೆ. ಆದರೆ ಕೆಳಗಿನ ಸ್ತರದಲ್ಲಿನ ಏರಿಳಿತಗಳೂ, ವೈಪರೀತ್ಯಗಳೂ, ತುಮುಲಗಳೂ ಅನೇಕ ರೀತಿಯವಾಗಿರುತ್ತವೆ. ಅದರಂತೆಯೇ ಪ್ರಾಯೋಜನಿಕ ಪ್ರಪಂಚದ ಜಟಿಲ ಕುಟಿಲಮಯ ತುಮುಲ ವಲಯಗಳನ್ನು ಮೀರಿ ಮೇಲೇರಿದ ವ್ಯಕ್ತಿಗಳು ಜಗತ್ತಿನ ಯಾವುದೇ ದೇಶದ ಯಾವುದೇ ಕಾಲಗಳಲ್ಲಿಯೂ ಪಡೆಯುವ ಅನುಭವಗಳೂ, ಮಾಡುವ ಆಲೋಚನೆಗಳೂ, ಹೆಚ್ಚು ಕಡಿಮೆ ಸಮಾನವಾದ ಅಂಶಗಳನ್ನು ಒಳಗೊಂಡಿರುತ್ತವೆ. ಆ ಅನುಭವಗಳನ್ನು ಕುರಿತು ಅವರು ಬಳಸುವ ಭಾಷೆ, ಪರಿಭಾಷೆಗಳಲ್ಲಿ ವ್ಯತ್ಯಾಸಗಳಿದ್ದರೂ, ಆವರ ಅನುಭವಗಳು ವಿಶ್ವಸಾಮಾನ್ಯವೂ, ಜಗತ್ತಿನ ಬಗ್ಗೆ ಅಪಾರವಾದ ಅನುಕಂಪೆಯಿಂದ ಕೂಡಿದವುಗಳೂ ಅಗಿರುತ್ತವೆ.  ಇಂತಹ ಒಂದು ಎತ್ತರದ ನೆಲೆಗೆ ಏರಿದವರನ್ನು ನಾವು ಮಹಾವ್ಯಕ್ತಿಗಳೆಂದೋ, ಸಂತರೆಂದೋ. ಅನುಭಾವಿಗಳೆಂದೋ ಗುರುತಿಸುತ್ತೇವೆ. ಆಧುನಿಕ ಯುಗದ ಸಂತಶ್ರೇಷ್ಠರೂ. ಸರ್ವಧರ್ಮ ಸಮನ್ವಯಾಚಾರ್ಯರೂ, ಯುಗ ಪ್ರವರ್ತಕರೂ ಎಂಬ ಪ್ರಶಂಸೆ ಗೌರವಗಳಿಗೆ ಪಾತ್ರರಾಗಿರುವ ಶ್ರೀ ರಾಮಕೃಷ್ಣ ಪರಮಹಂಸರು ಈ ಬಗೆಯ ಎತ್ತರಕ್ಕೆ ಏರಿದ ಮಹಾ ಅನುಭಾವಿಗಳು.

ಶ್ರೀ ರಾಮಕೃಷ್ಣರ ಬದುಕು ಹಾಗೂ ಬೋಧನೆಗಳನ್ನು ಗಮನಿಸಿದರೆ, ಅವರ ಅನುಭವ ಹಾಗೂ ವಿಚಾರಗಳು ಜಗತ್ತಿನ ಎಲ್ಲ ದೇಶದ, ಎಲ್ಲ ಕಾಲದ ಇದೇ ಬಗೆಯ ವ್ಯಕ್ತಿಗಳ ಅನುಭವ ಮತ್ತು ವಿಚಾರಗಳೊಂದಿಗೆ ಸಂವಾದಿಯಾಗುವುದನ್ನು ಗುರುತಿಸಬಹುದು. ಇದರಿಂದ ನಿಷ್ಟನ್ನವಾಗುವ ಸಂಗತಿಯೇನೆಂದರೆ, ರಾಮಕೃಷ್ಣರ ಮೂಲಕ ಈ ಅನುಭಾವಿಕ ಪರಂಪರೆ ಮುಂದುವರಿದುಕೊಂಡು ಬಂದಿದೆ ಅನ್ನುವುದು ಮಾತ್ರವಲ್ಲ, ಶ್ರೀ ರಾಮಕೃಷ್ಣರ ವ್ಯಕ್ತಿನಿಷ್ಠ ಆಧ್ಯಾತ್ಮಿಕ ಪ್ರಯೋಗಾಲಯದ ಮೂಲಕ ಪ್ರಮಾಣೀಕರಿಸಲ್ಪಟ್ಟು ಪುನರ್ ವ್ಯಾಖ್ಯಾನವನ್ನು ಪಡೆದುಕೊಂಡು ಅನನ್ಯವಾಗಿದೆ. ಈ ಕಾರಣದಿಂದ ಜಗತ್ತಿನ ಇದೇ ಬಗೆಯ ಸಾಧಕವರೇಣ್ಯರ ಅನುಭವಗಳ ಮೂಲಕ ಶ್ರೀ ರಾಮಕೃಷ್ಣರನ್ನೂ, ಶ್ರೀ ರಾಮಕೃಷ್ಣರ ಮೂಲಕ ಇದೇ ಬಗೆಯ ಇತರರ ಅನುಭವಗಳನ್ನೂ ನೋಡುವುದು ಅತ್ಯಂತ ಅಗತ್ಯವೂ, ಮೌಲಿಕವೂ ಆದ ಸಂಗತಿಯಾಗಿದೆ.

ನಿದರ್ಶನಕ್ಕೆ ಕರ್ನಾಟಕದ ಹನ್ನೆರಡನೆಯ ಶತಮಾನದ ಶಿವಶರಣರ ಅಥವಾ ವಚನಕಾರರ ಅನುಭವ ಹಾಗೂ ವಿಚಾರಗಳನ್ನು ನೋಡೋಣ: ಶಿವಶರಣರು ಎಂಬ ಈ ಮಾತನ್ನು ಬಸವಣ್ಣನವರ ವ್ಯಕ್ತಿ ಕೇಂದ್ರದಲ್ಲಿ ನಡೆದ ಸಾಮಾಜಿಕ- ಧಾರ್ಮಿಕ ಆಂದೋಳನವೊಂದರಲ್ಲಿ ಪಾಲುಗೊಂಡ ಜನ ಸಮೂಹವನ್ನು ಕುರಿತು ಬಳಸಲಾಗಿದೆ. ಈ ಶಿವಶರಣರು ತಮ್ಮ ಅಂತರಂಗದ ಅನುಭವಗಳನ್ನು ಅಚ್ಚಗನ್ನಡದ ಗದ್ಯ- ಪದ್ಯ ರೂಪದ ಅಭಿವ್ಯಕ್ತಿಯೊಂದರಲ್ಲಿ ತೋಡಿಕೊಂಡದ್ದರಿಂದ ಈ ರೂಪಗಳನ್ನು ‘ವಚನ’ಗಳೆಂದು ಕರೆಯಲಾಗಿದೆ. ಪ್ರತಿಯೊಬ್ಬರೂ ಹೀಗೆ ವಚನಗಳನ್ನು ಬರೆದದ್ದರಿಂದ ಅವರನ್ನು ‘ವಚನಕಾರ’ರೆಂದೂ ಕರೆಯಲಾಗುತ್ತಿದೆ. ಅಂದಿನ ಸಮಾಜದ ವಿವಿಧ ಸ್ತರಗಳಿಂದ ಬಂದ ಈ ವಚನಕಾರರು ವೈದಿಕ ಸಂಪ್ರದಾಯದ ವರ್ಣ ವ್ಯವಸ್ಥೆಯ ಜೀವ ವಿರೋಧೀ ಹಾಗೂ ಜೀವನ ವಿರೋಧೀ ಧೋರಣೆಗಳನ್ನು ಪ್ರಶ್ನಿಸುತ್ತ. ಪ್ರತಿಭಟಿಸುತ್ತ. ಶಿವಭಕ್ತಿಯ ಮೂಲಮಾನದಲ್ಲಿ ಸಮಾನತಾ ಸಮಾಜವೊಂದನ್ನು ನೆಲೆಗೊಳಿಸುವ ‘ವೀರಶೈವ’ವೆಂಬ ಧರ್ಮವನ್ನು ಪ್ರವರ್ತನಗೊಳಿಸಿದರು. ಗಂಡೆನ್ನದೆ. ಹೆಣ್ಣೆನ್ನದೆ. ಮೇಲೆನ್ನದೆ, ಕೀಳೆನ್ನದೆ ಎಲ್ಲರನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಧಾರ್ಮಿಕ ನೆಲೆಯೊಂದನ್ನು ಆ ಕಾಲಕ್ಕಾದರೂ ನಿರ್ಮಿಸುವ ಸಾಹಸದಲ್ಲಿ ತೊಡಗಿದವರು. ಈ ಶಿವಶರಣರು ಅಥವಾ ವಚನಕಾರರು ಏಕಕಾಲಕ್ಕೆ ಆಧ್ಯಾತ್ಮಿಕ ಸಾಧಕರೂ, ಸಮಾಜ ಸುಧಾರಕರೂ ಆಗಿದ್ದಾರೆ. ತಮ್ಮ ಆಧ್ಯಾತ್ಮಿಕ ಅನುಭವಕ್ಕೆ ಅವರು ಕೊಟ್ಟ ಹೆಸರು ‘ಅನುಭಾವ’ ಅನ್ನುವುದು. ಈಗ ಇಂಗ್ಲಿಷಿನಲ್ಲಿ ಇರುವ ‘ಮಿಸ್ಟಿಸಿಸಂ’ ಎಂಬ ಪದಕ್ಕೆ, ಸರಿಯಾದ ಕನ್ನಡ ಪದವೆಂದರೆ, ‘ಅನುಭಾವ’. ‘ಅನುಭಾವ’ ದೈವೀ ಅನುಭವವನ್ನು ಕುರಿತು ಹೇಳುವ ಮಾತು. ಜೀವ ದೈವತ್ವಕ್ಕೆ ಹಂಬಲಿಸುವುದು. ಆ ಅನುಭವವನ್ನು ಪಡೆಯುವುದು ಮತ್ತು ತಾನೇ ಅದಾಗುವುದು- ಈ ಅನುಭಾವದ ಲಕ್ಷಣ. ‘ಅನುಭಾವ’ ಎಂಬ ಈ ಪದವನ್ನು ಭಾರತೀಯ ತತ್ವಶಾಸ್ತ್ರದ ಭಂಡಾರಕ್ಕೆ ಹನ್ನೆರಡನೆಯ ಶತಮಾನದಷ್ಟು ಹಿಂದೆ ಕೊಟ್ಟವರು ಈ ಶಿವಶರಣರು. ಈ ಶರಣರ ‘ಅನುಭಾವ’ ಸಾಧನೆಯಲ್ಲಿಯ ಎಷ್ಟೋ ವಿಚಾರಗಳು ಶ್ರೀ ರಾಮಕೃಷ್ಣರ ಅನುಭಾವಿಕ ವಿಚಾರಗಳನ್ನು ನೆನಪಿಗೆ ತರುವಷ್ಟು ಸಮೃದ್ಧವಾಗಿವೆ ಅನ್ನುವುದು ಸ್ವಾರಸ್ಯದ ಸಂಗತಿಯಾಗಿದೆ.

ಇಪ್ಪತ್ತನೆಯ ಶತಮಾನದ ಸಂತಶ್ರೇಷ್ಠರಾದ ಶ್ರೀ ರಾಮಕೃಷ್ಣರ ಹಾಗೂ ಇಂದಿಗೆ ಎಂಟು ಶತಮಾನಗಳ ಹಿಂದಿನ ಶಿವಶರಣರ ವಿಚಾರಗಳನ್ನು ಹೀಗೆ ಹೋಲಿಸಿ ನೋಡುವಾಗ ಅವರವರು ಬದುಕಿದ ಕಾಲ, ದೇಶ. ಪರಿಸರ ಮತ್ತು ಉದ್ದೇಶಗಳನ್ನು ನಿರ್ಲಕ್ಷಿಸಬಾರದು. ಶಿವಶರಣರ ಕೇಂದ್ರ ವ್ಯಕ್ತಿಯಾದ ಬಸವಣ್ಣನವರು ಶ್ರೀ ರಾಮಕೃಷ್ಣರಂತೆಯೇ ವೈದಿಕ ಸಂಪ್ರದಾಯಸ್ಥರ ಮನೆಯಲ್ಲಿ ಹುಟ್ಟಿದವರು ಮತ್ತು ಆ ವೈದಿಕ ಸಂಪ್ರದಾಯದ ತರ-ತಮ ಧೋರಣೆಗಳನ್ನು ಧಿಕ್ಕರಿಸಿದವರು. ‘ಸಕಲ ಜೀವಾತ್ಮರಿಗೆ ಲೇಸನೆ ಬಯಸುವ’ ಉದ್ದೇಶದವರು. ಬಸವಣ್ಣನವರ ಜತೆಗೆ ಬಂದು ಹೊಸ ಧಾರ್ಮಿಕ ಆಂದೋಳನಕ್ಕೆ ಸೇರಿಕೊಂಡವರಲ್ಲಿ. ಅಲ್ಲಮಪ್ರಭು. ಅಕ್ಕಮಹಾದೇವಿ. ಸಿದ್ಧರಾಮ ಇಂತಹ ಅನುಭಾವಿಗಳು ಮಾತ್ರವಲ್ಲ. ಅಂದಿನ ಸಮಾಜದ ವಿವಿಧ ಹಂತಗಳಿಂದ ಬಂದ ಶ್ರೀಸಾಮಾನ್ಯರೂ ಇದ್ದರು. ಹಾಗೆಯೇ ಶ್ರೀ ರಾಮಕೃಷ್ಣರ ವ್ಯಕ್ತಿತ್ವದಿಂದ ಆಕರ್ಷಿತರಾಗಿ ಅವರ ಬಳಿಗೆ ಬಂದವರೂ ಅಂದಿನ ಸಮಾಜದ ವಿವಿಧ ಸ್ತರಗಳನ್ನೂ, ಧಾರ್ಮಿಕ ಪಂಥಗಳನ್ನೂ ಪ್ರತಿನಿಧಿಸುವವರಾಗಿದ್ದಾರೆ. ಆದರೆ ಮುಖ್ಯವಾದ ವ್ಯತ್ಯಾಸವೆಂದರೆ ಶಿವಶರಣರು ಪುರೋಹಿತಶಾಹೀ ಪ್ರವೃತ್ತಿಯ ಕೇಂದ್ರಸ್ಥಾನಗಳಾಗಿದ್ದ ದೇವಸ್ಥಾನಗಳನ್ನು ಅತ್ಯಂತ ಉಗ್ರವಾಗಿ ನಿರಾಕರಿಸಿ. ದೈವತ್ವದ ಕಲ್ಪನೆಯನ್ನು ಮನುಷ್ಯನ ಶರೀರಕ್ಕೆ ಹಾಗೂ ಆತ ಧರಿಸಬೇಕಾದ ಇಷ್ಟಲಿಂಗದ ಕಡೆಗೆ ಸ್ಥಳಾಂತರಿಸಿದರು. ಆದರೆ ಶ್ರೀ ರಾಮಕೃಷ್ಣರು ದಕ್ಷಿಣೇಶ್ವರದ ಕಾಳಿಯ ದೇವಸ್ಥಾನದಲ್ಲಿ ಇದ್ದುಕೊಂಡು, ಜಗನ್ಮಾತೆಯಾದ ಕಾಳಿಯ ಉಪಾಸನೆಯ ಮೂಲಕವೇ ತಮ್ಮ ಅಧ್ಯಾತ್ಮ ಸಿದ್ಧಿಯನ್ನು ಪಡೆದವರು. ಒಂದು ಮಾತಿನಲ್ಲಿ ಹೇಳುವುದಾದರೆ. ಶ್ರೀ ರಾಮಕೃಷ್ಣರು ದೇವಸ್ಥಾನದಲ್ಲಿ ಇದ್ದುಕೊಂಡೇ ದೇವಸ್ಥಾನವನ್ನು ಮೀರಿದವರು. ಆದರೆ ಶಿವಶರಣರು ದೇವಸ್ಥಾನಗಳನ್ನು ನಿರಾಕರಿಸಿ, ಇಷ್ಟಲಿಂಗ ನಿಷ್ಠೆಯ ಮೂಲಕ ವೀರಶೈವವೆಂಬ ಧರ್ಮವನ್ನು ನೆಲೆಗೊಳಿಸಿದವರು. ಶ್ರೀ ರಾಮಕೃಷ್ಣರು ದೇವಸ್ಥಾನವನ್ನೂ, ತಮ್ಮ ಇಷ್ಟ ದೈವವಾದ ಕಾಳಿಯನ್ನೂ ಮೀರಿದ್ದು ಮಾತ್ರವಲ್ಲ, ಜಗತ್ತಿನ ಸಮಸ್ತ ಧರ್ಮಗಳನ್ನೂ ತಮ್ಮ ಅದ್ಭುತವಾದ ಸಾಧನೆಯ ಮೂಲಕ ಸಾಕ್ಷಾತ್ಕರಿಸಿಕೊಂಡು ಎಲ್ಲ ಧರ್ಮದ ತಿರುಳೂ ಒಂದೇ ಎಂದು ಸಾರಿದ ಅತ್ಯಪೂರ್ವ ಮಹಾಸಂತರು; ಶಿವಶರಣರು ಅನುಭಾವದ ಗಮ್ಯವೆಂದು ವರ್ಣಿಸುವ ‘ಐಕ್ಯಸ್ಥಲ’ವನ್ನು ತಲುಪಿಯೂ ಅಲ್ಲಿಂದ ಕೆಳಕ್ಕೆ ಇಳಿದು ಬರುವ ಹಾಗೂ ಏರಿ ಹೋಗುವ ‘ನಿತ್ಯ’ಮತ್ತು ‘ಲೀಲೆ’ಯ ಶ್ರೇಣಿಗಳಲ್ಲಿ ನಿರಂತರ ಸಂಚಾರಿಯಾದವರು ಶ್ರೀ ರಾಮಕೃಷ್ಣರು.

ಭಗವತ್ ಪರವಾದ ಒಂದು ವ್ಯಾಕುಲತೆ ಎಲ್ಲ ಅನುಭಾವ ಸಾಧಕರ ಸಮಾನ ಲಕ್ಷಣವಾಗಿದೆ. ಶ್ರೀ ರಾಮಕೃಷ್ಣರು ಹಗಲೂ ಇರುಳೂ ಜಗನ್ಮಾತೆಯ ದೇವಸ್ಥಾನದಲ್ಲಿ ಅವಳ ಸಾಕ್ಷಾತ್ಕಾರಕ್ಕೆ ಹಂಬಲಿಸಿದವರು. ದೇವರಿಗಾಗಿ ನಿರಂತರವಾದ ವ್ಯಾಕುಲತೆಯಿದ್ದರೆ ಸಾಕು. ಆದರೆ ಈ ಲೋಕದಲ್ಲಿ “ಹೆಂಡತಿ ಮಕ್ಕಳಿಗಾಗಿ ಜನ ಬಿಂದಿಗೆ ತುಂಬ ಕಣ್ಣೀರು ಸುರಿಸುತ್ತಾರೆ. ಕಣ್ಣೀರು ಸಾಗರದಲ್ಲೆ ತೇಲಾಡಿಬಿಡುತ್ತಾರೆ ಹಣಕ್ಕಾಗಿ. ಆದರೆ ಭಗವಂತ ಬೇಕೆಂದು ಯಾರು ತಾನೇ ಕಣ್ಣೀರಿಡುತ್ತಾರೆ?” (ವ. ವೇ. ಪು. ೧೩ ಪೂ). ಎನ್ನುತ್ತಾರೆ ರಾಮಕೃಷ್ಣರು ಮಾಸ್ಟರ್ ಮಹಾಶಯನನ್ನು ಕುರಿತು. ಅಲ್ಲಮಪ್ರಭು ಇದಕ್ಕೆ ಸಂವಾದಿಯಾಗಿ “ಆಸೆಗೆ ಸತ್ತುದು ಕೋಟಿ. ಆಮಿಷಕ್ಕೆ ಸತ್ತುದು ಕೋಟಿ. ಹೊನ್ನು ಹೆಣ್ಣು ಮಣ್ಣಿಂಗೆ ಸತ್ತುದು ಕೋಟಿ. ಗುಹೇಶ್ವರ, ನಿಮಗಾಗಿ ಸತ್ತವರನಾರನೂ ಕಾಣೆ” (ವ. ೯೧) ಎನ್ನುತ್ತಾರೆ. ಶ್ರೀ ರಾಮಕೃಷ್ಣರು ಈ ಬಗೆಯ ವ್ಯಾಕುಲ್‌ದಿಂದ ತೊಡಗಿದ ಸಾಧನೆಯನ್ನೂ, ಅದರ ವೈವಿಧ್ಯವನ್ನೂ, ಅದರ ರಮ್ಯಾದ್ಭುತಗಳನ್ನೂ ತಮ್ಮ ಭಕ್ತರಿಗೆ ಅನನ್ಯವಾದ ರೀತಿಯಲ್ಲಿ ವರ್ಣಿಸಿದರೆ, ಶಿವಶರಣರೂ ತಮ್ಮ ವಚನಗಳಲ್ಲಿ, ಭಕ್ತಸ್ಥಲದ ಪಾಡುಗಳನ್ನು ವೈವಿಧ್ಯಮಯವಾಗಿ ತೋಡಿಕೊಂಡಿದ್ದಾರೆ. ಚೆನ್ನಮಲ್ಲಿಕಾರ್ಜುನನಿಗೆ ಒಲಿದ ಅಕ್ಕಮಹಾದೇವಿ:

ಹಗಲು ನಾಲ್ಕು ಜಾವ ನಿಮ್ಮ ಕಳವಳದಲ್ಲಿಪ್ಪೆನು
ಇರುಳು ನಾಲ್ಕು ಜಾವ ಲಿಂಗದ ವಿಕಳಾವಸ್ಥೆಯಲ್ಲಿಪ್ಪೆನು
ಹಗಲಿರುಳು ನಿಮ್ಮ ಹಂಬಲದಲ್ಲಿ ಮೈಮರೆದೊರಗಿಪ್ಪೆನು
ಚೆನ್ನಮಲ್ಲಿಕಾರ್ಜುನಯ್ಯಾ
ನಿಮ್ಮ ಒಲುಮೆ ನೆಟ್ಟು ಹಸಿವು ತೃಷೆ ನಿದ್ರೆಯ ತೊರೆದೆನಯ್ಯಾ. (ವ. ೨೭೧)
ಎಂದು ತನ್ನ ಅವಸ್ಥೆಯನ್ನು ಹೇಳಿಕೊಂಡರೆ, ಬಸವಣ್ಣನವರು-
ವಾರವೆಂದರಿಯೆ. ದಿನವೆಂದರಿಯೆ
ಏನೆಂದರಿಯೆನಯ್ಯಾ!
ಇರುಳೆಂದರಿಯೆ ಹಗಲೆಂದರಿಯೆ
ಏನೆಂದರಿಯೆನಯ್ಯಾ!
ನಿಮ್ಮುವ ಪೂಜಿಸಿ ಎನ್ನುವ ಮರೆದೆ.
ಕೂಡಲ ಸಂಗಮದೇವಾ.       (ವ. ೪೮೭)

ಎನ್ನುತ್ತಾರೆ. ಶ್ರೀ ರಾಮಕೃಷ್ಣರು ಕಾಳಿಯ ದೇವಸ್ಥಾನದಲ್ಲಿ ನಡೆಸಿದ ಕಠೋರ ಸಾಧನೆಯ ದಿನಗಳ ತೊಳಲಾಟವೂ ಇದೇ ರೀತಿಯದು. ಶ್ರೀ ರಾಮಕೃಷ್ಣರು ಈ ಲೋಕವನ್ನು ಕುರಿತು ಹೇಳುವಾಗ ಮತ್ತೆ ಮತ್ತೆ ಬಳಸುವ ಮಾತೆಂದರೆ ‘ಕಾಮಿನೀ- ಕಾಂಚನ’. ಮನುಷ್ಯ ಇವುಗಳ ಸೆಳೆತಕ್ಕೆ ವಶನಾಗಿ ದೈವತ್ವವನ್ನು ಮರೆಯುವುದಕ್ಕೆ ‘ಮಾಯೆ’ ಎಂದು ಹೇಳಲಾಗಿದೆ. ಬಸವಣ್ಣನವರು ತಮ್ಮ ಅನೇಕ ವಚನಗಳಲ್ಲಿ ಈ ‘ಕಾಂಚನ’ದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕಾಂಚನವೆಂಬ ನಾಯ ನೆಚ್ಚಿ ನಿಮ್ಮ ನಾನು ಮರೆದೆನಯ್ಯಾ; ಕಾಂಚನಕ್ಕೆ ವೇಳೆಯಲ್ಲದೆ ಲಿಂಗಕ್ಕೆ ವೇಳೆಯಿಲ್ಲ” (ನ.೩೧೩) “ಹೊನ್ನೆನ್ನದು. ಹೆಣ್ಣೆನ್ನದು. ಮಣ್ಣೆನ್ನದು” ಎಂದು ಮರುಳಾದೆ (ವ. ೩೦೯) ಎಂದು ತಮ್ಮ ತೊಳಲಾಟವನ್ನು ಕೂಡಲಸಂಗನಿಗೆ ತೋಡಿಕೊಂಡಿದ್ದಾರೆ. ಈ ಕಾಮಿನೀ- ಕಾಂಚನಗಳು ಒಂದು ನೆಲೆಯಲ್ಲಿ ಮಾಯೆಯಂತೆ ತೋರಿದರೂ ವಾಸ್ತವವಾಗಿ ಅವು ತಮಗೆ ತಾವೇ ಮಾಯೆಯಲ್ಲ. “ಇದು ನನಗೆ ಸೇರಿದ್ದು. ಇದು ನನಗೆ ಸೇರಿದ್ದು ಎಂಬುದಾಗಿ ಈ ವಸ್ತುಗಳನ್ನು ಪ್ರೀತಿಸುವುದಕ್ಕೆ ಮಾಯೆ ಅಂತ ಹೆಸರು” (ವ.ವೇ. ಪು. ೭೩೨ ಪೂ). ಎಂದು ರಾಮಕೃಷ್ಣರು ಹೇಳುವುದರ ಮೂಲಕ ಆ ವಸ್ತುಗಳ ಬಗ್ಗೆ ನಾವು ಇರಿಸಿಕೊಳ್ಳುವ ಆಸಕ್ತಿಯನ್ನೆ ಮಾಯೆ ಎಂದು ವ್ಯಾಖ್ಯಾನಿಸುತ್ತಾರೆ. ಅಲ್ಲಮಪ್ರಭು ಇದೇ ಅಭಿಪ್ರಾಯವನ್ನು ಇನ್ನೂ ಚೆನ್ನಾಗಿ ಹೇಳಿದ್ದಾರೆ: “ಹೊನ್ನು ಮಾಯೆಯೆಂಬರು, ಹೊನ್ನು ಮಾಯೆಯಲ್ಲ. ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ, ಮಣ್ಣು ಮಾಯೆಯೆಂಬರು, ಮಣ್ಣು ಮಾಯೆಯಲ್ಲ. ಮನದ ಮುಂದಣ ಆಸೆಯೆ ಮಾಯೆ ಕಾಣಾ ಗುಹೇಶ್ವರಾ!” (ವ.೭೨) ಒಟ್ಟಿನಲ್ಲಿ ಈ ಜಗತ್ತಿನ ವಸ್ತುಗಳ ವಿಚಾರದಲ್ಲಿ ನಮಗಿರುವ ಆಸಕ್ತಿಯೇ ಮಾಯೆ. ಇದಕ್ಕೆ ಇನ್ನೊಂದು ಹೆಸರು ‘ಸಂಸಾರ’. ಶ್ರೀ ರಾಮಕೃಷ್ಣರು ಈ ಸಂಸಾರವನ್ನು, ಅದು ಮಾಯೆ ಎಂಬ ಕಾರಣದಿಂದ ನಿರಾಕರಿಸಬೇಕು ಎಂದೇನೂ ಹೇಳುವುದಿಲ್ಲ. ಯಾಕೆಂದರೆ ಸಂಸಾರ ಕೂಡ ಭಗವಂತನ ಸೃಷ್ಟಿಯೇ. “ಭಗವಂತನೇ ಒಂದು ರೂಪದಲ್ಲಿ ಮಹಾಮಾಯೆಯಾಗಿದ್ದಾನೆ” (ವ. ವೇ. ಪು. ೭೮ ಪೂ). ಎನ್ನುತ್ತಾರೆ ಶ್ರೀ ರಾಮಕೃಷ್ಣರು. “ಜಗವ ಸುತ್ತಿಪ್ಪುದು ನಿನ್ನ ಮಾಯೆಯಯ್ಯಾ” (ವ. ೯೦೩) ಎನ್ನುತ್ತಾರೆ ಬಸವಣ್ಣನವರು.

ಸಂಸಾರದ ಸ್ವರೂಪವೇ ‘ಮಾಯೆ’. ಮತ್ತೆ ಮತ್ತೆ ಬಂದು ಅವರಿಸಿಕೊಳ್ಳುವುದೇ ಮಾಯೆ. ರಾಮಕೃಷ್ಣರು ತಮ್ಮ ಅನುಭಾವಿ ಕಾಣ್ಕೆ (vision)ಯೊಂದನ್ನು ಹೀಗೆ ವರ್ಣಿಸುತ್ತಾರೆ: “ಆತ (ಭಗವಂತ) ಪಾಚಿ ಕಟ್ಟಿಕೊಂಡಿದ್ದ ದೊಡ್ಡ ಸರೋವರವೊಂದನ್ನು ತೋರಿಸಿದ. ಗಾಳಿ ಅದರ ಪಾಚಿಯನ್ನು ಸರಿಸಿತು. ಒಡನೆಯೇ ನೀರು ಕಾಣಿಸಿಕೊಂಡಿತು. ರೆಪ್ಪೆ ಹೊಡೆಯುವುದರ ಒಳಗೆ ಪಾಚಿ ಎಲ್ಲಾ ಕಡೆಗಳಿಂದಲೂ ಕುಣಿಯುತ್ತ ಕುಣಿಯುತ್ತ ಮತ್ತೆ ಕಟ್ಟಿಕೊಂಡು ಬಿಟ್ಟಿತು. ಆತ ತೋರಿಸಿದ. ನೀರೇ ಸಚ್ಚಿದಾನಂದ. ಪಾಚಿಯೇ ಮಾಯೆ ಅಂತ. ಮಾಯೆಯ ದೆಸೆಯಿಂದ ಸಚ್ಚಿದಾನಂದನನ್ನು ನೋಡಲಾಗುತ್ತಿಲ್ಲ” (ವ.ವೇ. ೫೯೧-೫೯೨ ಉತ್ತ) ರಾಮಕೃಷ್ಣರ ಈ ಕಾಣ್ಕೆಗೆ ಸಂವಾದಿಯಾಗಿದೆ ಚೆನ್ನಬಸವಣ್ಣನವರ ಈ ಒಂದು ವಚನ; “ಜ್ಞಾನಾಮೃತ ಜಲನಿಧಿಯ ಮೇಲೆ ಸಂಸಾರವೆಂಬ ಹಾವಸೆ ಮುಸುಕಿಹುದು. ನೀರಮೊಗೆವವರು ಬಂದು ನೂಂಕಿದಲ್ಲದೆ ತೆರಳದು. ಮರಳಿಮುಸುಕುವುದ ಮಾಣಿಸಯ್ಯ.” (ಚೆ.ಬ.ವ.೧೨೭೫)

ಸಂಸಾರವನ್ನು ಕುರಿತು ಸಾಮಾನ್ಯವಾಗಿ ಎರಡು ನಿಲುವುಗಳಿವೆ. ಒಂದು, ಲೋಕ ಶಿಕ್ಷಣದಲ್ಲಿ ತೊಡಗುವವರು ಸಂಪೂರ್ಣವಾಗಿ ಸಂಸಾರವನ್ನು ತ್ಯಾಗ ಮಾಡಬೇಕು. ಇನ್ನುಳಿದವರು ಸಂಸಾರದೊಳಗೆ ಇದ್ದೂ ಅನಾಸಕ್ತರಾಗಿ ಬದುಕಿ ಸಾಧನೆ ಮಾಡಬೇಕು. ಈ ಮಾತನ್ನು ಮತ್ತೆ ಮತ್ತೆ ರಾಮಕೃಷ್ಣರು ಹೇಳುತ್ತಾರೆ. “ಮೊದಲು ಕೈಗೆ ಎಣ್ಣೆ ಸವರಿಕೊಂಡು ಬಳಿಕ ಹಲಸಿನ ಹಣ್ಣು ಬಿಡಿಸಬೇಕು. ಇಲ್ಲದಿದ್ದರೆ ಕೈಗೆ ಅಂಟು ಹತ್ತಿಕೊಳ್ಳುತ್ತದೆ. ಭಗವದ್ ಭಕ್ತಿ ಎಂಬ ಎಣ್ಣೆಯನ್ನು ಮೊದಲು ಹವಣಿಸಿಕೊಂಡು ಬಳಿಕ ಸಾಂಸಾರಿಕ ಕಾರ್ಯಗಳಲ್ಲಿ ಕೈ ಇಡಬೇಕು” (ವ.ವೇ. ಪು.೧೧ ಪೂ). ಸಂಸಾರದೊಳಗೇ ಇದ್ದುಕೊಂಡು ಸಾಧನೆ ಮಾಡುವವರು’ “ಕೋಟೆಯೊಳಗೆ ನಿಂತು ಯುದ್ಧ ಮಾಡಿದ ಹಾಗೆ” (ವ.ವೇ. ಪು. ೩೧೯ ಪೂ). ಮೂಲತಃ ಇದೊಂದು ಯುದ್ಧ ಹಾಗೂ ಸವಾಲು. ಶಿವಶರಣರ ನಿಲುವು ಕೂಡಾ ಸಂಸಾರವನ್ನು ಕುರಿತು ಇದೇ ರೀತಿಯದು. ಬಸವಣ್ಣನವರ ಮಾತಿನಲ್ಲಿ ಹೇಳುವುದಾದರೆ “ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ” (ವ. ೧೫೫) ಊ ಲೋಕ. ಸೃಷ್ಟಿಕರ್ತನ ಟಂಕಸಾಲೆ. ಇದರಲ್ಲಿ ತಯಾರಾದ ನಾಣ್ಯ ಇಲ್ಲಿಯೂ ಸಲ್ಲುತ್ತದೆ. ಅಲ್ಲಿಯೂ ಸಲ್ಲುತ್ತದೆ. ಈ ಸಲ್ಲುವ ಗುಣವನ್ನು ಜೀವ ಇಲ್ಲಿ ಪಡೆದುಕೊಳ್ಳಬೇಕು. ಅಲ್ಲಮಪ್ರಭು ಹೇಳುವಂತೆ ಈ ಸಂಸಾರ ಒಂದು ‘ಕೊಟ್ಟ ಕುದುರೆ’. ‘ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವರು ವೀರರೂ ಅಲ್ಲ. ಧೀರರೂ ಅಲ್ಲ” (ವ. ೧೨೭). ಆದ ಕಾರಣ ದೈವದತ್ತವಾದ ಈ ಬದುಕನ್ನು ಹತ್ತಿ ಸವಾರಿ ಮಾಡಿ ಪಳಗಿಸಬೇಕು. ರಾಮಕೃಷ್ಣರು ಹೇಳುವಂತೆ “ದೋಣಿ ನೀರಿನ ಮೇಲೆ ನಿಲ್ಲಬೇಕು. ನೀರು ದೋಣಿಯೊಳಗೆ ನಿಲ್ಲಬಾರದು”. ಸಂಸಾರ ಭಯಂಕರವಾದದ್ದು ನಿಜ. ಅದಕ್ಕೂ ನಮಗೂ ಇರುವ ಸಂಬಂಧ ಬಸವಣ್ಣನವರ ಮಾತಿನಲ್ಲಿ ಹೇಳಬೇಕಾದರೆ “ಹಾವು ಹಾವಾಡಿಗನ ಸ್ನೇಹದಂತೆ”. (ವ.೧೨); ಅದು ಯಾವಾಗ ಹೇಗೆ ಕಚ್ಚುವುದು ತಿಳಿಯದು. ಆದ್ದರಿಂದ ಅಕ್ಕಮಹಾದೇವಿ ಹೇಳುವಂತೆ “ಹಾವಿನ ಬಾಯ ಹಲ್ಲ ಕಳೆದು ಹಾವನಾಡಿಸಬಲ್ಲಡೆ ಹಾವಿನ ಸಂಗವೇ ಲೇಸು ಕಂಡಯ್ಯ” (ವ.೧೦೦) ಸಂಸಾರವೆಂಬ ಹಾವಿನ, ಕಾಮ- ಕ್ರೋಧಾದಿಗಳ ವಿಷದ ಹಲ್ಲನ್ನು ಕಿತ್ತು ಅದರ ಸಹವಾಸದಲ್ಲಿರುವುದಾದರೆ, ಹಾಗೇ ಮಾಡಬಹುದು. ಈ ಒಂದು ಎಚ್ಚರವನ್ನು ಶ್ರೀ ರಾಮಕೃಷ್ಣರು ತಮ್ಮ ಅಂತರಂಗದ ಶಿಷ್ಯರಿಗೂ ಗೃಹಸ್ಥ ಭಕ್ತರಿಗೂ ಬೇರೆ ಬೇರೆಯ ಮಾತುಗಳಲ್ಲಿ ಹೇಳಿದ್ದಾರೆ. ಸಂಸಾರದೊಳಗಿರುವ ಬದ್ಧ ಜೀವರು ತಾನೇ  ನೇಯ್ದ ನೂಲಿನ ಗೂಡಿನಲ್ಲಿ ಸಿಕ್ಕಿಬಿದ್ದ ರೇಷ್ಮೆ ಹುಳುವಿನ ಹಾಗೆ. “ಅವರನ್ನು (ಸಂಸಾರಿಗಳನ್ನು) ರೇಷ್ಮೆ ಹುಳುವಿಗೆ ಹೋಲಿಸಬಹುದು. ಅದು ಇಚ್ಛೆಪಟ್ಟರೆ ತನ್ನ ಗೂಡನ್ನು ಕತ್ತರಿಸಿ ಹೊರಕ್ಕೆ ಬರಬಲ್ಲುದು. ಆದರೆ ಬಹಳ ಪ್ರಯಾಸಪಟ್ಟು ತಾನೇ ಗೂಡನ್ನು ಕಟ್ಟಿರುವುದರಿಂದ ಅದು ಹಾಗೆ ಮಾಡಲಿಚ್ಛಿಸದು. ಅದು ಅಲ್ಲೇ ಸಾಯುತ್ತದೆ” (ವ. ವೇ.ಪು. ೧೫೧: ೨೪೯: ೪೭೭ ಪೂ). ಶ್ರೀ ರಾಮಕೃಷ್ಣರ ಈ ದೃಷ್ಟಾಂತ ಅಕ್ಕಮಹಾದೇವಿಗೂ ಪ್ರಿಯವಾದದ್ದು. “ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ. ತನ್ನ ನೂಲು ತನ್ನನೆ ಸುತ್ತಿ ಸಾಯುವಂತೆ ಮನಬಂದುದ ಬಯಸಿ ಬೇವುತಿದ್ದೇನೆ ಅಯ್ಯಾ” (ವ. ೩೨) ಎಂದು ತನ್ನ ಸ್ಥಿತಿಯನ್ನು ಸಂಸಾರಿಗಳೆಲ್ಲರ ಪರವಾಗಿ ವರ್ಣಿಸಿಕೊಳ್ಳುತ್ತಾಳೆ. ಈ ಆಸೆಯ ಬಲೆಯಿಂದ ಪಾರಾಗಿ ಹೋಗಬೇಕಾದರೆ ಇರುವುದು ಎರಡೇ ದಾರಿ: ಸಂಪೂರ್ಣ ಸಂಸಾರ ತ್ಯಾಗ ಅಥವಾ ಮಾನಸಿಕವಾಗಿ ಸಂಸಾರ ತ್ಯಾಗ ಮಾಡುತ್ತ ಅನಾಸಕ್ತವಾಗಿ ಬದುಕುವುದು. ಈ ಸ್ಥಿತಿಯಿಂದ ಬ್ರಹ್ಮ ಸಾಕ್ಷಾತ್ಕಾರವಾಯಿತು ಅಂದ ಮೇಲೆ ಈ ಲೋಕ ಮಾಯೆಯೂ ಅಲ್ಲ. ಮಿಥ್ಯೆಯೂ ಅಲ್ಲ. ಈ ಜೀವ ಜಗತ್ತಿಗೂ ಭಗವಂತನಿಗೂ ಇರುವ ಸಂಬಂಧ ಮಹಾಸಮುದ್ರಕ್ಕೂ ಅದರಲ್ಲಿ ಉದ್ಭವಿಸುವ ಗುಳ್ಳೆಗಳಿಗೂ ಇರುವ ಸಂಬಂಧದಂತೆ ಎನ್ನುತ್ತಾರೆ ರಾಮಕೃಷ್ಣರು: “ಭಗವಂತನನ್ನು ಒಂದು ಮಹಾಸಮುದ್ರಕ್ಕೂ ಜೀವಗಳನ್ನು ಅದರಲ್ಲಿ ತೇಲೋ ಗುಳ್ಳೆಗಳಿಗೂ ಹೋಲಿಸಬಹುದು. ಅವು ಆತನಲ್ಲಿಯೆ ಉದ್ಭವಿಸಿ ಆತನಲ್ಲಿಯೇ ಲಯವಾಗುತ್ತವೆ’ (ವ. ವೇ. ಪು ೪೯೮ ಉತ್ತ). ವಚನಕಾರ ಚಂದಿಮರಸನಿಗೆ ಸ್ಫುರಿಸುವುದು ಇದೇ ದೃಷ್ಟಾಂತವೇ’ ಘನ ಗಂಭೀರ ಮಹಾವಾರಿಧಿಯಲ್ಲಿ ‘ಘನ ತರಂಗ ಬುದ್ಭುದಂಗಳಾದುವಲ್ಲದೆ, ಬೇರಾಗಬಲ್ಲುದೆ? ಆತ್ಮನೆಂಬ ಅಂಬುಧಿಯಲ್ಲಿ ಸಕಲ ಬ್ರಹ್ಮಾಂಡ ಕೋಟಿಗಳಾದುವಲ್ಲದೆ ಬೇರಾಗಬಲ್ಲುವೆ? (ವ. ೯೦೩. ಸಂಕೀರ್ಣ ವಚನಗಳು)

ರಾಮಕೃಷ್ಣರು ಹೇಳುತ್ತಾರೆ: “ಜಗತ್ತು ಮಿಥ್ಯೆಯೇಕಾದೀತು?… ಭಗವಂತನ ದರ್ಶನವಾದ ನಂತರ ಬೋಧೆಯಾಗುತ್ತದೆ. ಆತನೇ ಜೀವ ಜಗತ್ತು ಆಗಿರುವುದಾಗಿ” (ವ.ವೇ. ಪು. ೫೧೬ ಪೂ). ಮತ್ತು ಈ ಹಂತದಲ್ಲಿ “ಯಾವ ಹೆಂಗಸನ್ನು ಕಂಡರೆ ಬಹಳ ಎಚ್ಚರಿಕೆಯಿಂದಿರಬೇಕೋ. ಭಗವಂತನ ದರ್ಶನಾನಂತರ ಅದೇ ಹೆಂಗಸು ಸಾಕ್ಷಾತ್ ಭಗವತಿಯೆ ಎಂಬ ಬೋಧೆಯಾಗುತ್ತದೆ” (ವ.ವೇ. ಪು. ೧೦೦ಉತ್ತ). ಶಿವಶರಣ  ಸಿದ್ಧರಾಮನೂ ಈ ಮಾತನ್ನು ಹೇಳುತ್ತಾನೆ “ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧ ಮಲ್ಲಿಕಾರ್ಜುನ ನೋಡಾ” (ವ. ೧೨೪೨). ಕೈಹಿಡಿದ ಹೆಂಡತಿಯನ್ನೂ ಶ್ರೀ ರಾಮಕೃಷ್ಣರು ಸಾಕ್ಷಾತ್ ಭಗವತಿಯೆ ಎಂದು ಕಂಡದ್ದು ಈ ಒಂದು ನಿಲುವಿನಲ್ಲಿಯೇ.

ಸಾಧನೆ ಅನ್ನುವುದು ತನ್ನೊಳಗಿರುವ ದೈವತ್ವದ ಸಾಕ್ಷಾತ್ಕಾರದ ಪ್ರಯತ್ನ. ತನ್ನಲ್ಲಿ ದೈವತ್ವ ಇದೆ ಎಂದು ತಿಳಿದಿರುವುದು ಬೇರೆ; ಅದನ್ನು ಕುರಿತು ವಿಚಾರ ಮಾಡುವುದು ಬೇರೆ; ಅದನ್ನು ಸ್ವಯಂ ಅನುಭವಕ್ಕೆ ತಂದುಕೊಳ್ಳುವುದೇ ಬೇರೆ. ರಾಮಕೃಷ್ಣರು ಹೇಳುತ್ತಾರೆ. “ನಿನ್ನ ಆಂತರ್ಯದಲ್ಲಿ ಚಿನ್ನದ ಗಟ್ಟಿ ಇದೆ. ನಿನಗೆ ಗೊತ್ತಾಗಿಲ್ಲ. ಅದರ ಮೇಲೆ ಮಣ್ಣು ಮುಚ್ಚಿಕೊಂಡಿದೆ” (ವ.ವೇ.ಪು. ೬೩ ಪೂ). ಇದೇ ಮಾತನ್ನು ಅಲ್ಲಮಪ್ರಭುಗಳು, ಆ ಪರತತ್ವ “ನೆಲದ ಮರೆಯ ನಿಧಾನದಂತೆ (ವ.೪).” ಅಂದರೆ ನೆಲದಲ್ಲಿ ಹೂತಿಟ್ಟಿರುವ ನಿಧಿಯಂತೆ ಅನ್ನುತ್ತಾರೆ. “ಕಟ್ಟಿಗೆಯಲ್ಲಿ ಬೆಂಕಿ ನಿಶ್ಚಯವಾಗಿ ಇದೆ ಎಂಬ ನಂಬಿಕೆ ಒಂದು: ಕಟ್ಟಿಗೆಯಿಂದ ಬೆಂಕಿ ಉತ್ಪನ್ನ ಮಾಡಿ ಊಟ ಮಾಡಿ ಶಾಂತಿ ಅಥವಾ ತೃಪ್ತಿಯನ್ನು ಪಡೆಯೋದು ಇನ್ನೊಂದು; ಇವೆರಡಕ್ಕೂ ಅಜಗಜಾಂತರ ವ್ಯತ್ಯಾಸ” (ವ.ವೇ. ಪು. ೧೪೪ ಉತ್ತ). ವಚನಕಾರರು ಇದೇ ಮಾತನ್ನು ಮತ್ತೆ ಮತ್ತೆ ಹೇಳುತ್ತಾರೆ. “ಮರದೊಳಗಣ ಮಂದಾಗ್ನಿಯ ಉರಿಯದಂತಿರಿಸಿದೆ”

(ವ. ೯೦೬) ಎಂದು ಜೇಡರ ದಾಸಿಮಯ್ಯ ಹೇಳುವ ಮಾತಿನಲ್ಲಿ. ಮರದೊಳಗೆ ಬೆಂಕಿ ಇದೆ. ನಿಜ, ಅದರೆ ಅದನ್ನು ಮಂಥನ ಕ್ರಿಯೆಯಿಂದ ಕಂಡುಕೊಳ್ಳಬೇಕು. ಅಂತರಂಗದಲ್ಲೇ ಇರುವ ಈ ಅನುಭವ ಕಿರುವನೆಯೊಳಗೆ ರತ್ನವನ್ನಿರಿಸಿ ಬೀಗಹಾಕಿದ ಹಾಗೆ. “ಕಿರುಮನೆಯೊಳಗಿರೋ ರತ್ನ ನೋಡಬೇಕಾದರೆ, ಬೀಗದ ಕೈ ವಿಚಾರಿಸಿ ತಂದು ಬಾಗಿಲು ತೆರೆಯಬೇಕಾಗುತ್ತದೆ” (ವ.ವೇ. ಪು. ೯೯ ಪೂ) ಎಂದು ಹೇಳುತ್ತಾರೆ ರಾಮಕೃಷ್ಣರು. ಶಿವಶರಣರಲ್ಲಿ ಒಬ್ಬನಾದ ಬೊಕ್ಕಸದ ಚಿಕ್ಕಣ್ಣ- ಅವನ ಹೆಸರೇ ಸೂಚಿಸುವಂತೆ ಬೊಕ್ಕಸದ (ರಾಜನ ಭಂಡಾರದ) ಉಸ್ತುವಾರಿಯಲ್ಲಿದ್ದಾತ, ಹೇಳುತ್ತಾನೆ. “ಅಂಗದ ಬೊಕ್ಕಸ ಮಂದಿರಕ್ಕೆ ಚಿದ್ಘನಲಿಂಗ- ವೆಂಬುದೊಂದು ಬೀಗ… ಎಸಳ ತೆಗೆವುದಕ್ಕೆ ಬೀಗದ ಕೈಯ್ಯ ಕಾಣೆ” (ವ. ೧) ಎನ್ನುವ ವಚನ. ಆ ದೈವೀ ಅನುಭವ ಬೊಕ್ಕಸದೊಳಗಣ ಸಂಪತ್ತಿನಂತೆ; ಅದರೆ ಹೇಗೋ ಮಾಡಿ ಅದರ ಬೀಗದ ಕೈಯನ್ನು ಪಡೆದುಕೊಳ್ಳಬೇಕು ಅನ್ನುವುದನ್ನು ತಿಳಿಸುತ್ತದೆ.

ಈ ನಿರಂತರ ಪ್ರಯತ್ನ ಅಥವಾ ಸಾಧನೆಯ ಮೊದಲ ಉದ್ದೇಶ. ಭಗವತ್ಪರವಾದ ಅನುರಾಗವನ್ನು ಸ್ಥಾಯಿಯನ್ನಾಗಿ ಮಾಡಿಕೊಳ್ಳುವುದೇ  ಅಗಿದೆ. ಅದಕ್ಕಾಗಿಯ ನಿರಂತರ ಜಪ-ತಪ-ಪೂಜೆ ಪ್ರಾರ್ಥನಾದಿ ಕರ್ಮಗಳೆಲ್ಲಾ. ತತ್ಪರಿಣಾಮವಾಗಿ ಯಾವಾಗ ಭಕ್ತನ ಹೃದಯದಲ್ಲಿ, ಭಗವತ್ಪರವಾದ ಅನುರಾಗ ನೆಲೆ ನಿಲ್ಲುವಂತಾಗುವುದೋ ಆಗ ಈ ಕರ್ಮಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಶ್ರೀ ರಾಮಕೃಷ್ಣರು ಹೇಳುತ್ತಾರೆ: “ಗಾಳಿ ಬೀಸದವರೆಗೆ ಮಾತ್ರವೇ ಬೀಸಣಿಗೆಯ ಅವಶ್ಯಕತೆ, ತೆಂಕಣ ಗಾಳಿ ಬೀಸತೊಡಗಿತೆಂದರೆ ಬೀಸಣಿಗೆಯನ್ನು ಕೆಳಕ್ಕೆ ಇಟ್ಟುಬಿಡಬಹುದು. ಬಳಿಕ ಬೀಸಣಿಗೆಯ ಆವಶ್ಯಕತೆ ಏನಿದೆ?” (ವ. ವೇ. ಪು. ೬೨ ಪೂ). ಇದೇ ಮಾತನ್ನು ವಚನಕಾರ ಚಂದಿಮರಸ ಹೇಳುವುದು ಹೀಗೆ: “ಗಾಳಿ  ಬೀಸುವಲ್ಲಿ ಕೇಳೆಲವೊ, ಬೀಸಣಿಗೆಯ ಉಸಿರೆಂತು ಮರೆವುದು ಹೇಳಾ ಮರಳೆ?” (ವ. ೫೯೮: ಸಂಕೀರ್ಣ ವಚನಗಳು). ವಚನಕಾರರ ಹಾಗೂ ರಾಮಕೃಷ್ಣರ ಈ ವಿಚಾರ ಸಾಮ್ಯ ಗಮನಿಸತಕ್ಕದ್ದಾಗಿದೆ.

ದೈವೀ ಅನುಭವ ಕೇವಲ ವಿಚಾರಕ್ಕೆ ಹೇಗೆ ದಕ್ಕುವುದಿಲ್ಲವೋ ಹಾಗೆಯೇ ಅದು ಪುಸ್ತಕ ಪಾಂಡಿತ್ಯ ಮತ್ತು ಶಾಸ್ತ್ರ ಜ್ಞಾನಗಳಿಗೆ ಅತೀತವಾದದ್ದು ಎನ್ನುವ ಸಂಗತಿ ಶಿವಶರಣರಿಗೂ ರಾಮಕೃಷ್ಣರಿಗೂ ಸಮಾನವಾದ ಅಂಶವಾಗಿದೆ. ರಾಮಕೃಷ್ಣರು ನಿರರ್ಗಳವಾಗಿ ಭಗವದ್  ವಿಷಯಕವಾದ ಮಾತುಗಳನ್ನಾಡುವುದನ್ನು ಮೊದಲಿಗೆ ಕಂಡ ಮಾಸ್ಟರ್ ಮಹಾಶಯ, ಅವರು ಬಹಳವಾಗಿ ಪುಸ್ತಕ- ಗಿಸ್ತಕ ಓದಿಕೊಂಡಿರಬಹುದೆಂದು ತರ್ಕಿಸುತ್ತಾನೆ. ಆದರೆ ಅವನ ತರ್ಕ ಸುಳ್ಳೆಂದು ಅನಂತರ ಗೊತ್ತಾಗುತ್ತದೆ. ಹಾಗೆ ನೋಡಿದರೆ ರಾಮಕೃಷ್ಣರು ಒಂದರ್ಥದಲ್ಲಿ ಪುಸ್ತಕ ಜ್ಞಾನದ ವಿದ್ಯೆಗೆ ದೂರವಾದವರು. ಒಂದು ಹಂತದಲ್ಲಿ ಅವರು ಅದನ್ನು ನಿರಾಕರಿಸುತ್ತಾರೆ ಕೂಡಾ. ಆದರೆ, ಯಾವುದನ್ನು ಅರಿತರೆ ಎಲ್ಲವನ್ನೂ ಅರಿತಂತಾಗುತ್ತದೆಯೋ. ಆ ನಿಜವಾದ ನಿಧಿಯನ್ನೇ ನಿರಂತರವಾದ ಸಾಧನೆಯಿಂದ ಪಡೆದುಕೊಂಡವರು ಅವರು. ಅವರು ಮತ್ತೆ ಮತ್ತೆ ಹೇಳುತ್ತಾರೆ. “ಪಾಂಡಿತ್ಯದಿಂದ ಭಗವಂತನನ್ನು ಪಡೆಯಲಾಗುವುದಿಲ್ಲ. ಆತ ವೇದ ಪುರಾಣ ತಂತ್ರ ಈ ಎಲ್ಲ ಶಾಸ್ತ್ರಗಳಿಗೂ ಅತೀತ”- (ವ.ವೇ ಪು. ೭೦೦ ಉತ್ತ). ಆತನನ್ನು ಅರಿತುಕೊಳ್ಳ್ಳುವ ಬದಲು ಈ ಶುಷ್ಕ ಪಾಂಡಿತ್ಯ ಸಂಪಾದನೆಗಾಗಿ ಇರುವ ಕಾಲವನ್ನು ವ್ಯರ್ಥಮಾಡಬಾರದು. “ನಾನು ತೋಟಕ್ಕೆ ಬಂದಿರುವುದು ಮಾವಿನಹಣ್ಣು ತಿನ್ನುವುದಕ್ಕೆ. ಮರಗಳೆಷ್ಟಿವೆ, ಕೊಂಬೆಗಳೆಷ್ಟಿವೆ, ಎಷ್ಟೊಂದು ಕೋಟಿ ಎಲೆಗಳಿವೆ ಇವುಗಳ ಲೆಕ್ಕಾಚಾರ ನನಗೇಕೆ?” (ವ. ವೇ. ಪು. ೧೬೩ ಪೂ: ಪು ೨೫೧ ಉತ್ತ) ಎನ್ನುವುದು ರಾಮಕೃಷ್ಣರ ನಿಲುವು. ಶಿವಶರಣರೆಲ್ಲರೂ ಒಕ್ಕೊರಲಿನಿಂದ ಇದೇ ಅಭಿಪ್ರಾಯವನ್ನು ಹೇಳಿದ್ದಾರೆ. “ವೇದಂಗಳ ಹಿಂದೆ ಹರಿಯದಿರು ಹರಿಯದಿರು, ಶಾಸ್ತ್ರಂಗಳ ಹಿಂದೆ ಸುಳಿಯದಿರು ಸುಳಿಯದಿರು, ಪುರಾಣಂಗಳ ಹಿಂದೆ ಬಳಸದಿರು ಬಳಸದಿರು ಬಳಸದಿರು…” (ವ. ೨೦೭) ಎಂದು. ಆದಯ್ಯನೆಂಬ ವಚನಕಾರನು ಹೇಳಿದರೆ, “ವೇದಶಾಸ್ತ್ರ ಪುರಾಣ ಆಗಮಂಗಳೆಂಬ ಕೊಟ್ಟಿಣವ ಕುಟ್ಟುತ್ತ ನುಚ್ಚು ತೌಡು ಕಾಣಿರೋ” (ವ. ೨೪೨) ಎಂದು ಅಕ್ಕಮಹಾದೇವಿ ಹೇಳುತ್ತಾಳೆ. ಬಸವಣ್ಣನವರ ಪ್ರಕಾರ “ವೇದವನೋದಿದರೇನು. ಶಾಸ್ತ್ರವ ಕೇಳಿದರೇನು?” (ವ. ೫೮೯). ಅದರಿಂದೇನೂ ಪ್ರಯೋಜನವಿಲ್ಲ. ಯಾಕೆಂದರೆ.

‘ವೇದ ವೇಧಿಸಲರಿಯದೆ ಅಭೇದ್ಯ ಲಿಂಗವೆಂದು ನಡನಡುಗಿತ್ತು
ಶಾಸ್ತ್ರ ಸಾಧಿಸಲರಿಯದೆ ಅಸಾಧ್ಯ ಲಿಂಗವೆಂದು ಸಾರುತೈದಾವೆ
ತರ್ಕ ತರ್ಕಿಸಲರಿಯದೆ ಅತರ್ಕ್ಯಲಿಂಗವೆಂದು ಮನಂಗೊಳ್ಳವು
ಆಗಮ ಅಗಮ್ಯ ಲಿಂಗವೆಂದು ಗಮನಿಸಲರಿಯದೆ ಹೋದವು.
(ಬ.ವ. ೯೫೨)

ಶರಣರು ಹೇಳುವ ಲಿಂಗ ಅಥವಾ ಪರಬ್ರಹ್ಮವು ವೇದ ಶಾಸ್ತ್ರಾದಿಗಳಿಂದ ಸಾಧಿಸಲಸಾಧ್ಯವಾದದ್ದು; ಅದು ಸಾಧ್ಯವಾಗುವುದು ಕೇವಲ ಭಕ್ತಿಗೆ ಮಾತ್ರ. ಶ್ರೀ ರಾಮಕೃಷ್ಣರು ಹೇಳುತ್ತಾರೆ: “ಬ್ರಹ್ಮ ಏನು ಎಂಬುದನ್ನು ಬಾಯಿಂದ ವರ್ಣನೆ ಮಾಡೋಕಾಗೋದಿಲ್ಲ. ಎಲ್ಲವೂ ಉಚ್ಛಿಷ್ಟವಾಗಿ ಹೋಗಿವೆ- ವೇದ. ಪುರಾಣ, ತಂತ್ರ, ಷಡ್ದರ್ಶನ ಎಲ್ಲಾ. ಇವೆಲ್ಲಾ ಬಾಯಿಂದ ಹೊರಹೊಮ್ಮಿರುವುದರಿಂದ ನಾಲಗೆ ಉಚ್ಚರಿಸಿರುವದರಿಂದ ಉಚ್ಚಿಷ್ಟವಾಗಿವೆ ಅಥವಾ ಎಂಜಲಾಗಿವೆ. ಆದರೆ ಕೇವಲ ಒಂದು ವಸ್ತುಮಾತ್ರ ಉಚ್ಛಿಷ್ಟವಾಗಿಲ್ಲ. ಅದೇ ಬ್ರಹ್ಮ. ಬ್ರಹ್ಮ ಅಂದರೆ ಏನು ಅನ್ನುವುದನ್ನು ಯಾರಿಗೂ ಇದುವರೆಗೂ ವರ್ಣನೆ ಮಾಡಲಾಗಿಲ್ಲ.” (ವ. ವೇ. ಪುಟ ೫೦) ಆಶ್ಚರ್ಯದ ಸಂಗತಿ ಎಂದರೆ ಮಹಾ ಅನುಭಾವಿ ಅಲ್ಲಮಪ್ರಭು ಗುಹೇಶ್ವರನೆಂಬ ಲಿಂಗವನ್ನು ಕುರಿತು ಇದೇ ಪರಿಭಾಷೆಯಲ್ಲಿ ಮಾತನಾಡುತ್ತಾರೆ: “ಶಬ್ದವೆಂಬೆನೆ?  ಶ್ರೋತ್ರದೆಂಜಲು; ಸ್ಪರ್ಶವೆಂಬೆನೆ? ತ್ವಕ್ಕಿನೆಂಜಲು; ರೂಪೆಂಬೆನೆ? ನೇತ್ರದೆಂಜಲು; ರುಚಿಯೆಂಬೆನೆ? ಜಿಹ್ವೆಯೆಂಜಲು; ಪರಿಮಳವೆಂಬೆನೆ?  ಘ್ರಾಣದೆಂಜಲು. ನಾನೆಂಬೆನೆ? ಅರಿವಿನೆಂಜಲು. ಎಂಜಲೆಂಬ ಭಿನ್ನವಳಿದ ಬೆಳಗಿನೊಳಗಣ ಬೆಳಗು ಗುಹೇಶ್ವರ ಲಿಂಗವು” (ವ. ೫೬೩). ರಾಮಕೃಷ್ಣರ ಬ್ರಹ್ಮದ ವರ್ಣನೆಗಿಂತ ಈ ಮಾತು ಹೆಚ್ಚು ವ್ಯಾಪಕವಾಗಿದೆ. ರಾಮಕೃಷ್ಣರ ಮಾತು ವೇದಪುರಾಣಾಗಮ ಶಾಸ್ತ್ರಗಳು ಎಂಜಲಾಗಿರುವ ಪರಿಯನ್ನು ಪ್ರಸ್ತಾಪಿಸಿದರೆ, ಅಲ್ಲಮನದು, ಶಬ್ದ ಸ್ಪರ್ಶ ರೂಪದ ಗಂಧಾದಿ ಪಂಚೇಂದ್ರಿಯ ಪ್ರಪಂಚದ ಅನುಭವಗಳೆಲ್ಲವೂ ಗ್ರಹಿಕೆಗೆ ವರ್ಣನೆಗೆ ಸಿಕ್ಕುವುದರಿಂದ ಅವೆಲ್ಲವೂ ಎಂಜಲಾಗಿವೆ, ಈ ಪ್ರಾಪಂಚಿಕವಾದ ಹಾಗೂ ಎಂಜಲಾದ ಅನುಭವಗಳಿಗೆ ಅತೀತವಾದದ್ದು ಬೆಳಗಿನೊಳಗಿನ ಬೆಳಗಾದ ಆ ಗುಹೇಶ್ವರ ಲಿಂಗವೆ -ಎಂಬುದನ್ನು ಮಂಡಿಸುವ ಕ್ರಮವು ವಿಶೇಷ ರೀತಿಯದಾಗಿದೆ. ನಿಜವಾದ ಮೂಲಕ ಸಾಕ್ಷಾತ್ಕರಿಸಿಕೊಂಡ ಈ ದೈವೀ ಅನುಭವವನ್ನು ಮಾತಿನಿಂದ ವರ್ಣಿಸಲು ಸಾಧ್ಯವಿಲ್ಲ. “ಆ ಅವಸ್ಥೆಯಲ್ಲಿ ವಿಚಾರ ಪೂರ್ತಿ ನಿಂತು ಹೋಗುತ್ತದೆ. ಮನುಷ್ಯ ಮೂಕನಾಗಿ ಬಿಡುತ್ತಾನೆ.” (ವ.ವೇ. ಪು ೫೧. ಪೂ) ಎನ್ನುತ್ತಾರೆ ರಾಮಕೃಷ್ಣರು. “ಮಾತಿನ ಹಂಗೇಕೆ ಮನವೇಕಾಂತದಲ್ಲಿ ನಿಂದ ಬಳಿಕ” (ವ. ೧೦೯) ಎನ್ನುತ್ತಾಳೆ ನೀಲಮ್ಮನೆಂಬ ಶಿವಶರಣೆ. ಶಿವಶರಣರು ಈ ಸ್ಥಿತಿಯನ್ನು ಬಯಲು ಅಥವಾ ಬೆಳಗು ಎಂಬ ಪರಿಭಾಷೆಗಳ ಮೂಲಕ ಸೂಚಿಸುತ್ತಾರೆ. ಈ “ಐಕ್ಯ” ಸ್ಥಲದ ಅನುಭವಗಳನ್ನು ಅಲ್ಲಮಪ್ರಭುವಿನ ಹಾಗೂ ಅಕ್ಕಮಹಾದೇವಿಯ ಅನೇಕ ವಚನಗಳು ವರ್ಣಿಸುತ್ತವೆ. ರಾಮಕೃಷ್ಣರು ಹೇಳುತ್ತಾರೆ “ಉಪ್ಪಿನ ಬೊಂಬೆಯೊಂದು ಸಮುದ್ರದ ಆಳ ಕಂಡು ಹಿಡಿಯಲು ಹೋಯಿತು… ಇಳಿಯೋದೇ ತಡ ಕರಗಿ ಹೋಯಿತು. ಸಮುದ್ರದ ಆಳ ಎಷ್ಟು ಎಂಬುದನ್ನು ತಿಳಿಸುವುದಕ್ಕೆ ಉಳಿದುಕೊಂಡಿರೋರು ಯಾರು?”  (ವ.ವೇ. ಪುಟ ೫೨. ಪೂ). ಇದೇ ಶಬ್ದ ಚಿತ್ರವನ್ನು ಅಲ್ಲಮಪ್ರಭುವೂ ಬಳಸುತ್ತಾರೆ “ವಾರಿಕಲ್ಲಪುತ್ಥಳಿ ವಾರಿಧಿಯನಪ್ಪಿಕೊಂಡಂತಾಯಿತ್ತು” (ವ. ೯೧೩). (ಹಿಮದ ಅಥವಾ ನೀರ‍್ಗಲ್ಲಿನ ಬೊಂಬೆ ಸಮುದ್ರವನ್ನು ಅಪ್ಪಿಕೊಂಡ ಹಾಗಾಯಿತು). ಈ ಅನುಭವವನ್ನು ಯಾವ ಹೋಲಿಕೆಯ ಮೂಲಮಾನದಿಂದಲೂ  ವರ್ಣಿಸಲು ಸಾಧ್ಯವಿಲ್ಲ “ಉಪಮೆ ಉಪಮಿಸಲರಿಯದೆ ಉಪಮಾತೀತವೆನುತಿದ್ದಿತು” (ಅಲ್ಲಮ. ವ. ೬೫೨).

ಇದು ಬ್ರಹ್ಮಾನುಭವದ ತುರೀಯಾವಸ್ಥೆ, ವಾಸ್ತ್ರವವಾಗಿ ಅದು ‘ಅರೂಪ’ ಅಥವಾ ‘ನಿರಾಕಾರ’ವಾದದ್ದು. ಆದರೆ ಇದರಂತೆ ಆ ಬ್ರಹ್ಮ ‘ಸಾಕಾರ’ವೆಂಬುದೂ ಅಷ್ಟೇ ಸತ್ಯ. ವಾಸ್ತವವಾಗಿ ಸಾಕಾರ ನಿರಾಕಾರಗಳು ವಿರುದ್ಧ ಸ್ಥಿತಿಗಳು. ಈ ಎರಡೂ ಏಕಕಾಲಕ್ಕೆ ಸತ್ಯವಾಗಿರಲು ಸಾಧ್ಯವೆ ಎಂಬ ಶಂಕೆ ಅನೇಕ ಜಿಜ್ಞಾಸುಗಳಿಗೆ. ರಾಮಕೃಷ್ಣರು ಹೇಳುತ್ತಾರೆ: “ತಿಳಿದುಕೊ- ನಿರಾಕಾರವೂ ಸತ್ಯ, ಸಾಕಾರವೂ ಸತ್ಯ. ಯಾವುದರಲ್ಲಿ ವಿಶ್ವಾಸವೋ ಅದರಲ್ಲಿ ದೃಢ ಬುದ್ಧಿ ಇಡು” (ವ.ವೇ. ಪುಟ ೮. ಪೂ); “ಭಾವಿಸಿಕೊ. ಪರಬ್ರಹ್ಮ ದಡವೇ ಇಲ್ಲದ ಸಚ್ಚಿದಾನಂದಸಾಗರ ಅಂತ. ಭಕ್ತಿಯ ಶೈತ್ಯದ ದೆಸೆಯಿಂದ ಅಲ್ಲಲ್ಲಿ ನೀರು ಗಡ್ಡೆ ಕಟ್ಟುತ್ತದೆ- ಹಿಮಗಡ್ಡೆ ಯಾಗುತ್ತದೆ. ಎಂದರೆ ಭಗವಂತ ತನ್ನ ಭಕ್ತರ ಸಲುವಾಗಿ ವ್ಯಕ್ತನಾಗಿ ಆಗಾಗ ಸಾಕಾರರೂಪ ಧರಿಸುತ್ತಾನೆ. ಜ್ಞಾನ ಸೂರ್ಯ ಉದಯಿಸಿದನೆಂದರೆ ಆ ಹಿಮಗಡ್ಡೆ ಕರಗಿ ಹೋಗುತ್ತದೆ. ಆಗ ಭಗವಂತ ಸಾಕಾರ ಅಂತ ಮನಸ್ಸಿಗೆ ಅನ್ನಿಸುವುದೇ ಇಲ್ಲ.” (ವ.ವೇ. ಪುಟ ೧೩೭, ಪೂ; ಪುಟ ೨೨೪ ಪೂ; ಪುಟ ೨೬೭-೬೮ ಪೂ; ೬೫೨ ಉತ್ತ) ಮಹಾನುಭಾವಿಯಾದ ಶ್ರೀ ರಾಮಕೃಷ್ಣರು ಸಾಕಾರದಿಂದ ನಿರಾಕಾರಕ್ಕೆ ನಿರಾಕಾರದಿಂದ ಸಾಕಾರಕ್ಕೆ ಸಂಚರಿಸಬಲ್ಲವರಾಗಿದ್ದರು. ಅವರ ಪಾಲಿಗೆ ದಕ್ಷಿಣೇಶ್ವರದ ಕಾಳಿಯೇ ಬ್ರಹ್ಮ. ಯಾವುದನ್ನು ವೇದಾಂತಿಗಳು ಬ್ರಹ್ಮ ಅನ್ನುತ್ತಾರೋ ಅದನ್ನೆ ರಾಮಕೃಷ್ಣರು ತಾಯಿ ಎಂದು ಕರೆಯುತ್ತಾರೆ. (ವ. ವೇ. ಪುಟ ೬೧ ಪೂ) ಆಶ್ಚರ್ಯದ ಸಂಗತಿ ಎಂದರೆ ಶಿವಶರಣರದೂ ಭಗವಂತನ ಸ್ವರೂಪವನ್ನು ಕುರಿತು ಇದೇ ಅಭಿಪ್ರಾಯವಾಗಿದೆ. ಅವರು ಸಾಕಾರ ನಿರಾಕಾರ ಎರಡನ್ನೂ ಒಪ್ಪುತ್ತಾರೆ. ಆದರೆ ಅವರ ‘ಸಾಕಾರ’ದ ಕಲ್ಪನೆ ಪುರಾಣೋಕ್ತವಾದ ಮೂರ್ತಿಕಲ್ಪನೆಗೆ ಹೊಂದುವಂಥದಲ್ಲ (ಅಕ್ಕಮಹಾದೇವಿ- ಯೊಬ್ಬಳನ್ನು ಹೊರತು). ಶಿವಶರಣರು ಕಲ್ಪಿಸಿಕೊಂಡ ‘ಇಷ್ಟಲಿಂಗ’ ಅನ್ನುವುದು ವಾಸ್ತವವಾಗಿ ‘ಮೂರ್ತಿ’ ಅಲ್ಲ; ಅದು ನಿರಾಕಾರಕ್ಕೆ ಸಮೀಪವಾದ ಒಂದು ಸಂಕೇತ. ಈ ‘ಸಂಕೇತ ಸಾಕಾರ’ ಎಷ್ಟು ನಿಜವೋ. ಅದರ ಮೂಲಕ ಅವರು ತಲುಪುವ ‘ಬಯಲು’ ಎಂಬ ನಿರಾಕಾರದ ಅನುಭವವೂ ಅಷ್ಟೇ ನಿಜ. ಬಸವಣ್ಣನವರು ಒಂದೆಡೆ “ಬಯಲ ರೂಪ ಮಾಡಬಲ್ಲಾತನೇ ಶರಣನು. ಆ ರೂಪ ಬಯಲ ಮಾಡಬಲ್ಲಾತನೇ ಲಿಂಗಾನುಭಾವಿ” (ವ. ೯೨೨) ಎನ್ನುತ್ತಾರೆ. ಎಂದರೆ ಭಗವಂತನ ‘ನಿರಾಕಾರ’ಕ್ಕೆ ಒಂದು ಆಕಾರವನ್ನು (ರೂಪ) ಕಲ್ಪಿಸುವವನು ಶರಣ ಅಥವಾ ಅನನ್ಯ ಸಮರ್ಪಣ ಭಾವದ ಭಕ್ತ. ಆ ರೂಪವನ್ನು (ಸಾಕಾರವನ್ನು) ಮತ್ತೆ ಬಯಲ ಮಾಡಬಲ್ಲಾತ, ಎಂದರೆ ನಿರಾಕಾರ ಸ್ಥಿತಿಯಲ್ಲಿ ಕಾಣಬಲ್ಲವನು ಲಿಂಗಾನುಭಾವಿ ಅಥವಾ ಜ್ಞಾನಿ. ಅಕ್ಕಮಹಾದೇವಿ ಈ ಬಗ್ಗೆ “ತಿಳಿದುಪ್ಪಕ್ಕೆ ಗಟ್ಟಿದುಪ್ಪಕ್ಕೆ ಭೇದ ಉಂಟೆ?” (ವ. ೧೧೫೫) ಎಂದು ಪ್ರಶ್ನಿಸುತ್ತಾಳೆ. ತುಪ್ಪವು ಬಿಸಿಗೆ ಕರಗಿದಾಗ ಅದು ತಿಳಿಯಾಗಿ ಅಥವಾ ನಿರಾಕಾರವಾಗಿರುತ್ತದೆ; ಅದು ಗಟ್ಟಿಯಾದಾಗ ಒಂದು ಆಕಾರದಲ್ಲಿ ಗೋಚರಿಸುತ್ತದೆ. “ವಾರಿ ಬಲಿದು ವಾರಿಕಲ್ಲಾದಂತೆ ಶೂನ್ಯವೇ ಸ್ವಯಂಭುವಾಯಿತ್ತು” (ವ. ೭೪೬) ಎಂದು ಅಲ್ಲಮಪ್ರಭು ಹೇಳುವ ಮಾತು, ನೀರೇ ಶೈತ್ಯದಿಂದ ಗಟ್ಟಿಯಾಗಿ ಹಿಮಗಡ್ಡೆಯಾಗುವಂತೆ, ಆ ಶೂನ್ಯವೇ ಸ್ವಯಂಭು ಮೂರ್ತಿಯಾಗಿ ಕಾಣುತ್ತದೆ ಎಂಬ ಈ ಉಕ್ತಿ ರಾಮಕೃಷ್ಣರ ಉಕ್ತಿಗೆ ಅತ್ಯಂತ ಸಂವಾದಿಯಾಗುತ್ತದೆ. ಸಿದ್ಧರಾಮ ತನ್ನ ಒಂದು ವಚನದಲ್ಲಿ-

ಸಕ್ಕರೆಯು ಆಕಾರ, ರುಚಿಯು ನಿರಾಕಾರ
ಬೆಣ್ಣೆ ಆಕಾರ ಘೃತ ನಿರಾಕಾರ
ಆಕಾರ ಬಿಟ್ಟು ನಿರಾಕಾರವಿಲ್ಲ
ನಿರಾಕಾರ ಬಿಟ್ಟು ಆಕಾರವಿಲ್ಲ    (ವ. ೩೯೩)

ಎನ್ನುತ್ತಾನೆ. ಆಕಾರ ಹಾಗೂ ನಿರಾಕಾರ ಎರಡೂ ಸತ್ಯವಾದ ಮೇಲೆ ಭಕ್ತನಾದವನು ಯಾವುದೇ ಒಂದರಲ್ಲಿ ದೃಢವಾದ ವಿಶ್ವಾಸವನ್ನಿರಿಸಿಕೊಂಡರೆ ಸಾಕು. ರಾಮಕೃಷ್ಣರು ಹೇಳುತ್ತಾರೆ: “ವ್ಯಾಕುಲತೆಯಿಂದ. ಸಾಕಾರವಾದಿಗಳ ಮಾರ್ಗದಲ್ಲಾದರೂ ಹೋಗು. ನಿರಾಕಾರಿಗಳ ಮಾರ್ಗದಲ್ಲಾದರೂ ಹೋಗು. ಕಜ್ಜಾಯವನ್ನು ಉದ್ದುದ್ದವಾಗಿ ಕಡಿದು ತಿಂದರೂ ಸಿಹಿ, ಅಡ್ಡಡ್ಡಲಾಗಿ ತಿಂದರೂ ಸಿಹಿ” (ವ.ವೇ. ಪುಟ ೬೬೯ ಉತ್ತ). ಇದೇ ಮಾತನ್ನು ಪ್ರಭು ಹೇಳುವ “ಬೆಲ್ಲದ ಪುತ್ಥಳಿಯ ಕೈಯಲ್ಲಿ ಹಿಡಿದು ಎಲ್ಲಿ ಚುಂಬಿಸಿದರೂ ಇನಿದಹುದು” (ವ.೫೭೭) ಬೆಲ್ಲದ ಬೊಂಬೆಯನ್ನು ಎಲ್ಲಿ ಮುತ್ತಿಟ್ಟರೂ ಅದು ಸಿಹಿಯಾಗಿಯೇ ಇರುತ್ತದೆ -ಎಂಬ ಮಾತಿನ ಜತೆ ಹೋಲಿಸಿ ನೋಡಬಹುದು. ಭಗವಂತನ ಸಾಕಾರ ಹಾಗೂ ನಿರಾಕಾರ ಕಲ್ಪನೆಗಳನ್ನು ಕುರಿತು ಶಿವಶರಣರಿಗೂ ರಾಮಕೃಷ್ಣರಿಗೂ ಇರುವ ಸಾಮ್ಯ ತುಂಬ ಕುತೂಹಲಕಾರಿಯಾಗಿದೆ.

ಶ್ರೀ ರಾಮಕೃಷ್ಣರು ಭಕ್ತರೆಲ್ಲರೂ ಒಂದೇ ಜಾತಿಗೆ ಸೇರಿದವರು ಎಂದು ಹೇಳುವುದರ ಮೂಲಕ ಜಾತೀಯತೆಯನ್ನು ವಿರೋಧಿಸುತ್ತಾರೆ. “ಜಾತಿಭೇದವನ್ನು ಒಂದು ವಿಧದಿಂದ ತೆಗೆದು ಹಾಕಿಬಿಡಬಹುದು. ಆ ಮಾರ್ಗವೇ ಭಕ್ತಿ. ಭಕ್ತರಿಗೆ ಜಾತಿ ಎಂಬುದೇ ಇಲ್ಲ.” (ವ.ವೇ. ಪುಟ ೧೫೧ ಪೂ) ಅಷ್ಟೇ ಅಲ್ಲ. “ಭಕ್ತರೆಲ್ಲರೂ ಒಂದು ಪ್ರತ್ಯೇಕ ಜಾತಿಗೆ ಸೇರಿದವರು. ಅವರಲ್ಲಿ ಯಾವ ಭೇದ ಭಾವನೆಯೂ ಇರೋದಿಲ್ಲ” (ವ.ವೇ. ಪುಟ ೨೫೮ ಉತ್ತ) ಎನ್ನುತ್ತಾರೆ. ಹನ್ನೆರಡನೆಯ ಶತಮಾನದ ಶಿವಶರಣರು ಹೇಳಿದ್ದೂ ಇದನ್ನೇ. “ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರೆಲ್ಲರನೂ ಒಂದೇ ಎಂಬೆ” (ವ. ೭೧೦) ಎಂಬ ಬಸವಣ್ಣನವರ ಮಾತಿನಲ್ಲಿ ಇದನ್ನು ಗುರುತಿಸಬಹುದು. ಶಿವಶರಣರು ನೆಲೆಗೊಳಿಸಿದ ಧರ್ಮದೊಳಕ್ಕೆ ಅಂದಿನ ಸಮಾಜದ ವಿವಿಧ ಸ್ತರಗಳವರು, ಅಂತ್ಯಜರು ಸಹಿತ ಪ್ರವೇಶ ಪಡೆದು ಒಂದು ದೊಡ್ಡ ಸಾಮಾಜಿಕ- ಧಾರ್ಮಿಕ ಕ್ರಾಂತಿ ನಡೆದದ್ದು ಒಂದು ಅಭೂತಪೂರ್ವ ಪ್ರಸಂಗವೇ ಸರಿ.

ವೇದಶಾಸ್ತ್ರಾದಿ ಪಾಂಡಿತ್ಯದಿಂದ ಬ್ರಹ್ಮಜ್ಞಾನ ಹೇಗೆ ದೊರೆಯದೋ ಹಾಗೆಯೇ ಲೋಕಕಲ್ಯಾಣದ ಹೆಸರಿನಲ್ಲಿ ಮಾಡುವ ನಿಷ್ಕಾಮವಲ್ಲದ ದಾನಧರ್ಮಾದಿ ಪರೋಪಕಾರಗಳಿಂದ ಪುಣ್ಯಸಂಪಾದನೆಗಾಗಿ, ಅರ್ಥ ಕೀರ್ತಿ ಪ್ರತಿಷ್ಠೆಗಳಿಗಾಗಿ ಮಾಡುವ ಕರ್ಮಯೋಗದಿಂದ ಕೂಡಾ ಆ ಬ್ರಹ್ಮತ್ವ ಸಾಧ್ಯವಾಗುವುದಿಲ್ಲ -ಎಂದು ರಾಮಕೃಷ್ಣರು ಹೇಳುತ್ತಾರೆ. ಶಂಭು ಮಲ್ಲಿಕನೆಂಬ ಹಣವಂತ ಭಕ್ತನ ಜತೆ ಅವರು ಮಾತನಾಡುವಾಗ ಈ ವಿಷಯವನ್ನು ಸ್ಪಷ್ಟಪಡಿಸುತ್ತಾರೆ. ಶಂಭುಮಲ್ಲಿಕನಿಗೆ ಡಿಸ್ಪೆನ್ಸರಿ, ಸ್ಕೂಲು, ರಸ್ತೆ, ಕೊಳ ಇತ್ಯಾದಿಗಳನ್ನು ಕಟ್ಟಿಸುವ ಹಂಬಲ. ನಿಜವಾದ ಭಕ್ತನಾದವನು ಇಂಥ ಲೋಕೋಪಯೋಗಿ ಕರ್ಮಗಳಲ್ಲಿ, ಮೊದಮೊದಲು ನಿಷ್ಕಾಮ ಬುದ್ಧಿಯಿಂದಲೆ ತೊಡಗಿದರೂ, ಯಾವಾಗಲೋ ಅದು ‘ಸಕಾಮಕರ್ಮ’ವಾಗಿ ಬಿಡುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ರಾಮಕೃಷ್ಣ ಶಂಭುಮಲ್ಲಿಕನಿಗೆ ಹೇಳುತ್ತಾರೆ: “ಭಾವಿಸಿಕೋ, ಭಗವಂತ ನಿನ್ನ ಸಮ್ಮುಖಕ್ಕೆ ಬಂದಿದ್ದಾನೆ: ಬಂದವನು ನಿನಗೆ ಹೇಳುತ್ತಿದ್ದಾನೆ, ನನ್ನಿಂದ ಒಂದು ವರ ಪಡೆದುಕೊ; ಆಗ ನೀನು ‘ಹೇ ಭಗವಂತ ನನಗೆ ಕೆಲವು ಆಸ್ಪತ್ರೆ ಡಿಸ್ಪೆನ್ಸರಿಗಳನ್ನು ಕಟ್ಟಿಸಿಕೊಡು’ ಎಂದು ಬೇಡುವೆಯಾ, ಅಥವಾ ‘ಹೇ ಭಗವಂತ ನಿನ್ನ ಪಾದಪದ್ಮಗಳಲ್ಲಿರುವ ಶುದ್ಧ ಭಕ್ತಿ ಉಂಟಾಗುವಂತೆ ಕರುಣಿಸು’ ಎಂದು ಬೇಡುವೆಯೊ… ಮೊದಲು ಆತನ ಸಾಕ್ಷಾತ್ಕಾರ ಪಡೆದುಕೊಂಡುಬಿಟ್ಟಿದ್ದೆ ಆದರೆ, ಬಳಿಕ ಆತನಿಗೆ ಇಚ್ಛೆಯಿದ್ದರೆ ಆತ ನಮ್ಮ ಮೂಲಕ ಅನೇಕ ಆಸ್ಪತ್ರೆ ಡಿಸ್ಪೆನ್ಸರಿಗಳನ್ನು ಕಟ್ಟಿಸಿಕೊಳ್ಳಬಲ್ಲ” (ವ.ವೇ. ಪು. ೭೨೬ ಪೂ; ಪು. ೪೮೧ ಉತ್ತ). ಅಂದರೆ ರಾಮಕೃಷ್ಣರು ಈ ಬಗೆಯ ಲೋಕೋಪಯೋಗಿ ಕರ್ಮಗಳಲ್ಲಿ ತೊಡಗಬೇಡಿ ಎಂದೂ, ಇವು ಬೇಕಾಗಿಲ್ಲ ಎಂದು ಹೇಳಿದರೆಂದೂ ಅರ್ಥವಲ್ಲ; ಮೊದಲು ಒಂದು ನಿಷ್ಕಾಮ ಮನೋಧರ್ಮವನ್ನು ಸಾಧನೆಯ ಮೂಲಕ ಗಳಿಸಿಕೊಂಡು, ಅನಂತರ ಇಂತಹ ಕಾರ್ಯಗಳಲ್ಲಿ ತೊಡಗಬೇಕೆಂಬುದು ಅವರ ಮಾತಿನ ಅರ್ಥ. ಹನ್ನೆರಡನೆ ಶತಮಾನದ ಸಿದ್ಧರಾಮ ಒಬ್ಬ ಮಹಾಭಕ್ತ. ಆತ ಇಂದು ಸೊಲ್ಲಾಪುರವೆಂದು ಕರೆಯಲಾಗುವ ಸ್ಥಳದಲ್ಲಿ ಇದ್ದುಕೊಂಡು, ಕೆರೆ ಬಾವಿ ದೇವಾಲಯಗಳನ್ನು ಕಟ್ಟಿಸುವುದು, ಸಾಮೂಹಿಕ ಮದುವೆಗಳನ್ನು ಮಾಡಿಸುವುದು ಇತ್ಯಾದಿ ‘ಕರ್ಮಯೋಗ’ದಲ್ಲಿ ತೊಡಗಿದವನು. ಒಮ್ಮೆ ಅಲ್ಲಮಪ್ರಭು ಆತನನ್ನು ಕಂಡಾಗ ಅಂತಹ ದೊಡ್ಡ ಭಕ್ತ ಹೀಗೆ ಜನೋಪಯೋಗಿಯಾದ ಕರ್ಮಗಳಲ್ಲಿ ತೊಡಗಿ ತನ್ನ ನಿಜವಾದ ಸಾಧನೆಯ ಹಾದಿಯಿಂದ ವಿಮುಕ್ತನಾಗುತ್ತಿದ್ದಾನಲ್ಲ ಅನ್ನಿಸಿ ಆತನಿಗೆ ಒಂದು ಮಾತನ್ನು ಹೇಳುತ್ತಾರೆ:

“ಅನ್ನವನಿಕ್ಕಿ ನನ್ನಿಯ ನುಡಿದು ಅರವಟ್ಟಿಗೆಯನಿಕ್ಕಿ
ಕೆರೆಯ ಕಟ್ಟಿಸಿದರೆ, ಮರಣದಿಂದ ಮೇಲೆ ಸ್ವರ್ಗ ಉಂಟಲ್ಲದೆ
ಶಿವನ ನಿಲುವು ಸಾಧ್ಯವಾಗದು.
ಗುಹೇಶ್ವರನನರಿದ ಶರಣಂಗೆ ಆವ ಫಲವೂ ಇಲ್ಲ.”       (ವ. ೬೩೯)

ಎಂದು. ಯಾವ ಶರಣ ದೈವತ್ವವನ್ನು ಸಾಧಿಸಿಕೊಳ್ಳುತ್ತಾನೋ ಅವನು ಯಾವ ಫಲದ ಆಸೆಗೂ ಕಟ್ಟುಬಿದ್ದವನಲ್ಲ. ಮುಖ್ಯವಾದದ್ದು ಶಿವನ ನಿಲವನ್ನು ಸಾಧ್ಯವಾಗಿಸಿಕೊಳ್ಳುವ ನಿರಂತರ ಸಾಧನೆ.

ಶ್ರೀ ರಾಮಕೃಷ್ಣರಿಗೂ ಶಿವಶರಣರು ಅಥವಾ ವಚನಕಾರರಿಗೂ ಇರುವ ಅಂತರ ಎಂಟುನೂರು ವರ್ಷಗಳಿಗೂ ಮೀರಿದ್ದು. ಶಿವಶರಣರು ಬಾಳಿಬದುಕಿದ್ದು ದಕ್ಷಿಣದ ಕರ್ನಾಟಕದಲ್ಲಿ; ರಾಮಕೃಷ್ಣರು ಇದ್ದುದು ಉತ್ತರದ ಬಂಗಾಲದಲ್ಲಿ. ಆದರೂ ಈ ಅನುಭಾವಿಗಳ, ಅನುಭವ ಸಾಮ್ಯ, ಆಶ್ಚರ್ಯಗೊಳಿಸುವಂಥದ್ದು. ರಾಮಕೃಷ್ಣರು ಮೇಲೆ ನೋಡಲು, ಕೇವಲ ಅನುಭಾವಿಯ ಸ್ತರದಲ್ಲೆ ಇರುವಂತೆ ಕಂಡರೂ, ಅವರ ಲೋಕಾನುಕಂಪೆ, ಅವರ ಸಾಮಾಜಿಕ ಕಳಕಳಿ ಇತ್ಯಾದಿಗಳೆಲ್ಲ ಇಂದು ಅವರ ಶಿಷ್ಯ ಕೋಟಿಯ ಮಹತ್ಕಾರ್ಯಗಳ ಮೂಲಕ ಹಾಗೂ

ಶ್ರೀ ರಾಮಕೃಷ್ಣಾಶ್ರಮವೆಂಬ ಸಂಸ್ಥೆಗಳ ಮೂಲಕ ಜಗತ್ತಿನಾದ್ಯಂತ ಸುಪ್ರಕಟವಾಗಿದೆ. ಪುರೋಹಿತಶಾಹೀ ಪ್ರವೃತ್ತಿಯ ವಿರುದ್ಧವಾಗಿ ಬಂಡೆದ್ದ ವಚನಕಾರರ ಮನೋಧರ್ಮ, ಸಾಮಾಜಿಕ ಅಸಮತೆ ಹಾಗೂ ವಿಷಮತೆಗಳನ್ನು ಕುರಿತು ಅವರು ಮಾಡಿದ ವಿಮರ್ಶೆ ಇತ್ಯಾದಿಗಳು ಮತ್ತೆ ಈ ಯುಗದಲ್ಲಿ ಮೊಳಗಿದ್ದರೆ, ಅದು ರಾಮಕೃಷ್ಣರ ಶಿಷ್ಯೋತ್ತಮ ಸ್ವಾಮಿ ವಿವೇಕಾನಂದ ಮೂಲಕವೇ.

ಶ್ರೀ ರಾಮಕೃಷ್ಣರು ಮತಗಳೆಲ್ಲಾ, ಕೇವಲ ಪಥಗಳು ಎಂದು ಸಾರಿದವರು. “ದೇವನೊಬ್ಬ ನಾಮ ಹಲವು” (ವ. ೬೧೩) “ಹುತ್ತಕ್ಕೆ ಏಸು ಬಾಯಾದರೇನು, ಸರ್ಪನಿಪ್ಪುದು ಒಂದೇ ಸ್ಥಾನ” (ವ. ೯೫೧) -ಎಂದು ಬಸವಣ್ಣನವರು ಹೇಳಿದರೂ, ಅವರ ಮೊದಲ ಗುರಿ ಒಂದು ಹೊಸ ಮತ-ಧರ್ಮವನ್ನು ಕಟ್ಟುವುದಾಗಿತ್ತು. ಹನ್ನೆರಡನೆಯ ಶತಮಾನದಷ್ಟು ಹಿಂದೆ ವೈದಿಕ ಧರ್ಮದ ವರ್ಣವ್ಯವಸ್ಥೆಯನ್ನು ಪ್ರತಿಭಟಿಸಿ, ಮನುಷ್ಯರೆಲ್ಲರನ್ನೂ ಸಮಾನತಾ ಸಾಮಾಜಿಕ ಧಾರ್ಮಿಕ ವ್ಯವಸ್ಥೆಯೊಂದರೊಳಕ್ಕೆ ತರಲು ಅವರು ಪ್ರಯತ್ನಿಸಿದ್ದು ನಿಜವಾಗಿಯೂ ಮಹತ್ವದ ಸಾಧನೆಯಾಗಿದೆ. ಆದರೆ ಶ್ರೀ ರಾಮಕೃಷ್ಣರು ಯಾವುದೇ ಮತ-ಧರ್ಮದ ಸ್ಥಾಪಕರಲ್ಲ; ಅವರು ಸರ್ವಧರ್ಮಗಳನ್ನೂ ಸಾಕ್ಷಾತ್ಕರಿಸಿಕೊಂಡು, ಎಲ್ಲ ಧರ್ಮದ ತಿರುಳೂ ಒಂದೇ ಎಂಬುದನ್ನು ಸ್ಥಾಪಿಸಿದವರು. ಈ ದೃಷ್ಟಿಯಿಂದ ಶ್ರೀ ರಾಮಕೃಷ್ಣರನ್ನು ಕೇವಲ ಹಿಂದೂ ಧರ್ಮದ ಪ್ರತಿನಿಧಿ ಎಂದು ಭಾವಿಸುವುದು ಸರಿಯಾದದ್ದಲ್ಲ. ಹಿಂದೂ ಧರ್ಮದ ನೆಲೆಯಲ್ಲಿ ನಿಂತು, ಜಗತ್ತಿನ ಎಲ್ಲ ಧರ್ಮಗಳನ್ನೂ, ಆಯಾ ಧರ್ಮದ ಸಾಧನ ವಿಧಾನಗಳ ಮೂಲಕವೇ ತಮ್ಮ ಅನುಭವದಲ್ಲಿ ಸಾಕ್ಷಾತ್ಕರಿಸಿಕೊಂಡು, ಎಲ್ಲ ಧರ್ಮಗಳೂ ಆ ವಿಶ್ವಧರ್ಮದ ತರಂಗಗಳು ಎಂಬ ಮಹಾಸತ್ಯವನ್ನು ಕಂಡುಕೊಂಡದ್ದು ಜಗತ್ತಿನ ಧಾರ್ಮಿಕ ಇತಿಹಾಸದಲ್ಲೇ ಅಪೂರ್ವವಾದದ್ದು. ಅವರನ್ನು ಈ ಕಾರಣದಿಂದ ‘ಸರ್ವಧರ್ಮ ಸಮನ್ವಯಾಚಾರ್ಯ’ರೆಂದು ಸ್ತುತಿಸುವುದು ಉತ್ಪ್ರೇಕ್ಷೆಯಲ್ಲ.

ಈ ಲೇಖನದಲ್ಲಿ ಉಲ್ಲೇಖಗಳನ್ನು ಬಳಸಿಕೊಂಡ ಗ್ರಂಥಗಳು

೧.ಶ್ರೀ ರಾಮಕೃಷ್ಣ ವಚನ ವೇದ : (ಪೂರ್ವಾರ್ಧ) ಪ್ರಥಮ ಮುದ್ರಣ ೧೯೫೬, ಪ್ರ: ಶ್ರೀ ರಾಮಕೃಷ್ಣಾಶ್ರಮ, ಮೈಸೂರು.

೨. ಶ್ರೀ ರಾಮಕೃಷ್ಣ ವಚನ ವೇದ : (ಉತ್ತರಾರ್ಧ) ಪ್ರಥಮ ಮುದ್ರಣ ೧೯೫೪, ಪ್ರ: ಶ್ರೀ ರಾಮಕೃಷ್ಣಾಶ್ರಮ, ಮೈಸೂರು.

೩.  ಅಲ್ಲಮನ ವಚನ ಚಂದ್ರಿಕೆ : ಸಂ. ಡಾ. ಎಲ್. ಬಸವರಾಜು, ೧೯೬೦, ಪ್ರ: ನಳಿನೀ ಶಂಕರ ಪ್ರಕಾಶನ, ಮೈಸೂರು.

೪.  ಬಸವಣ್ಣನವರ ಷಟ್‌ಸ್ಥಲದ ವಚನಗಳು : ಸಂ. ಪ್ರೊ. ಶಿ.ಶಿ. ಬಸವನಾಳ, ೧೯೫೪, ಪ್ರ: ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ, ಧಾರವಾಡ.

೫.  ಶಿವಶರಣೆಯರ ವಚನಗಳು : ಸಂ. ಡಾ. ಆರ್.ಸಿ. ಹಿರೇಮಠ, ೧೯೬೮, ಪ್ರ: ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

೬.  ಸಕಲ ಪುರಾತನರ ವಚನಗಳು : ಸಂ. ಡಾ. ಆರ್.ಸಿ. ಹಿರೇಮಠ, ೧೯೭೨, ಪ್ರ: ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

೭.   ಸಿದ್ಧರಾಮೇಶ್ವರ ವಚನಗಳು : ಸಂ. ಡಾ. ಆರ್.ಸಿ. ಹಿರೇಮಠ, ೧೯೬೮, ಪ್ರ: ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.