ಸಪ್ಪರತಿ (ಅಥವಾ ಸಪ್ಪಿನರತಿ)

ಅನೇಕ ಕಡೆಗಳಲ್ಲಿ ಸಪ್ಪರತಿ ದೇವತೆಯ ಶಿಲಾರೂಪವಿರುತ್ತದೆ. ಆ ದಾರಿಯಲ್ಲಿ ಹೋಗುವವರು ಅದಕ್ಕೆ ಗಿಡದೆಲೆಗಳನ್ನು ಹರಿದು ಹಾಕಿ ಹೋಗಬೇಕು. ಮತ್ತು ಕಲ್ಲುಗಳನ್ನು ಪಗೆದು ಕೈಮುಗಿವ ಪದ್ಧತಿಯಿತ್ತಂತೆ.

ಇದರ ಕಾರಣ ಕೇಳಿದರೆ, ನಮ್ಮ ಹಿರಿಯರಿಗೆ ಗೊತ್ತಿರಲಿಲ್ಲ. ಇದಕ್ಕೆ ನನ್ನ ಊಹೆ ಹೀಗಿದೆ. ಯಾವದೋ ಹಿಂದಿನ ಕಾಲದಲ್ಲಿ ತಾನು ಚೌಡಿ, ಭೂತ ಎಂದು ಎಂದು ಭ್ರಮಿಸಿ, ಉಡಿಗೆ – ತೊಡಿಗೆಗಳನ್ನು ಕಳೆದು, ಆವೇಶದಿಂದ ಕುಣಿವ ಹೆಂಗಸು ಮಹಿಮಾವಂತಳೆಂದು ಖ್ಯಾತಿ ಪಡೆದುದು ಆಶ್ಚರ್ಯವಲ್ಲ. ಅವಳು ಮಡಿದ ಮೇಲೆ, ಅವಳ ನೆನಪಿನಿಂದ ಶಿಲೆಯನ್ನು ಸ್ಥಾಪಿಸಿ, ಅವಳು ಮಾನಮುಚ್ಚಿಕೊಳ್ಳಲೆಂದು ಸೊಪ್ಪನ್ನು ಹರಿದು ಒಗೆಯುವ ಕ್ರಮ ಬಂದಿದ್ದಿರಬಹುದು.

ಅಥವಾ, ಚಂದ್ರಗುತ್ತಿ ಅಮ್ಮನವರ ದೇವಾಲಯಕ್ಕೆ ಸೊಪ್ಪಿನ ಉಡಿಗೆ ಉಟ್ಟು ಹೋಗುವ ಹರಕೆ ಹೊತ್ತು ಹೋಗಿ ಮಡಿದವಳ ಸ್ಮರಣಾರ್ಥ ಈ ರೀತಿ ಶಿಲೆಯನ್ನು ಸ್ಥಾಪಿಸಿ, ಈ ಆಚರಣೆ ರೂಢವಾಗಿದ್ದೀತು. (ಕಲ್ಲು ಹೊಡೆವ ಪದ್ಧತಿಯ ಮೇಲಿಂಧ, ಯಾವನೋ ದುಷ್ಟನು ಒಬ್ಬಳ ಉಡಿಗೆಯನ್ನು ಬಿಚ್ಚಿ ಅವಳ ಮಾನಭಂಗ ಮಾಡಿದಾಗ ಅವಳು ಆತ್ಮಹತ್ಯೆ ಮಾಡಿಕೊಂಡು ಸತ್ತಿರಬೇಕು. ಕಲ್ಲು ಅವನಿಗೆ ತಿರಸ್ಕಾರದಿಂದ ಹೊಡೆವುದು)

ಉಡುಗಣಿಯಲ್ಲಿರುವ ಬಳ್ಳಿಯಮ್ಮನ ವಿಷಯವನ್ನು ಶ್ರೀ ಎಚ್. ಆರ್. ರಘುನಾಥ ಅವರು ನನ್ನ ಹತ್ತಿರ ಮೊಟ್ಟ ಮೊದಲು ಪ್ರಸ್ತಾಪ ಮಾಡಿ, ಅವಳ ಹೆಸರು ಶಾಸನದಲ್ಲಿ ಈ ರೀತಿ ” ಭಗವತಿ ……………. ಬಳ್ಳಿಯಮ್ಮ” ಎಂದು ಉಕ್ತವಾಗಿರುವುದನ್ನೂ ನನ್ನ ಗಮನಕ್ಕೆ ತಂದು ಈ ದೇವತೆಯ ಪೂಜೆ ಜಿಲ್ಲೆಯಲ್ಲಿ ಮತ್ತೆಲ್ಲಿಯಾದರೂ ನಡೆಯುವುದೋ ಏನೆಂದು ನನ್ನೊಡನೆ ಕೇಳಿದರು.

ನಾನು ಮೊದಲು ಈ ದೇವತೆಯ ಮೂತಿಯನ್ನು ಬತ್ತಲೆಯಾಗಿಯೇ ರೂಪಿಸಿದ್ದಿರಬೇಕೆಂದೂ ಲಜ್ಜಾಭಾವದ ಕಲ್ಪನೆಯ ವೃದ್ಧಿಯಾದ ಮೇಲೆ ಬಳ್ಳಿಗಳಿಂದ ಈ ಮೂರ್ತಿಯ ದೇಹವನ್ನು ಮುಚ್ಚುವ ಪದ್ಧತಿ ಬಂದಿದ್ದಿರಬೇಕೆಂದೂ ಪ್ರಾಚೀನ ಕಾಲದ ವಿವಿಧ ದೇಶಗಳ ದೇವತೆಗಳ ಮೂರ್ತಿಗಳನ್ನು ಬತ್ತಲೆಯ ರೂಪದಲ್ಲಿಯೇ ಪೂಜಿಸುತ್ತಿದ್ದರೆಂದೂ ಹೇಳಿದೆನು ಮತ್ತು ಕೆಲವು ದೇವಾಲಯಗಳಿಗೆ ಸೊಪ್ಪಿನ ಉಡಿಗೆಯನ್ನು ಹಾಕಿಕೊಂಡು (ಬಟ್ಟೆ ಧರಿಸದೆ) ಹರಕೆ ತೀರಿಸುವ ಹೆಂಗಸರ ವಿಷಯವನ್ನು ಹೇಳಿದೆನು.

ತೀರ ಪ್ರಾಚೀನ ಕಾಲದಲ್ಲಿ ಮಾನವ ಜನನೇಂದ್ರಿಯಗಳಲ್ಲಿ ಮಾಟದ ಶಕ್ತಿಯನ್ನು ಆರೋಪಿಸಿ ಅವನ್ನು ಪೂಜಿಸುತ್ತಿದ್ದರೆಂದು ಹೇಳಿದೆನು. ಶ್ರೀ ರಘುನಾಥ ಭಟ್ಟರು ಆ ದೇವಿಯ ಬತ್ತಲೆ ರೂಪದ ಮೂರ್ತಿಯ ಫೋಟೋವನ್ನು ಸಹ ನನಗೆ ತೋರಿಸಿದರು. ಆ ಫೋಟೋ ಅದು “ಲಜ್ಜಾ ಗೌರಿ” ಎಂದು ಕರೆಯಲಾಗುವ ಮೂರ್ತಿಗಳಲ್ಲಿ ಒಂದಾಗಿರುವುದನ್ನು ಸೂಚಿಸುತ್ತಿತ್ತು.

ಅವರ ಸೌಭಾಗ್ಯವತಿಯವರಾದ “ಶ್ರೀಮತಿ ಶಾಲಿನಿ ಅವರು ಶಾಸನದಲ್ಲಿ ಭಗವತಿ ಎಂದು ಉಕ್ತವಾಗಿರುವುದರಿಂದ ಹೀಗೆ ಹೇಳುವಿರೋ? ಎಂದು ನನ್ನನ್ನು ಪ್ರಶ್ನಿಸಿದರು. (ಅವರಿಬ್ಬರೂ ನನ್ನ ವಿವರಣೆಯನ್ನು ಸಮಂಜಸವೆಂದು ಒಪ್ಪಿದರು. ಭಗವತಿ ಎಂಬ ಶಬ್ದವನ್ನು ಕೇಳದಿದ್ದರೂ ದೇವತೆಗಳ ಕಲ್ಪನೆಯ ವಿಕಾಸದ ಚರಿತ್ರೆಯ ಪರಿಚಯವಿರುವ ನನು ಬಳ್ಳಿಯಮ್ಮ ಎಂಬ ಹೆಸರಿಗೆ ಇದೇ ವಿವರಣೆಯನ್ನು ಕೊಡುತ್ತಿದ್ದೆನು. ಶಾಸನದಲ್ಲಿ ಬಂದ ಉಕ್ತಿ ಕೇವಲ ಆಕಸ್ಮಿಕವಾಗಿ ಬಂದು ನನ್ನ ವಿವರಣೆಗೆ ಪುಷ್ಟಿಯನ್ನು ಒದಗಿಸಿತ್ತು.) ಬಳ್ಳಿಯಮ್ಮನಿಂದಲೇ ಬಳ್ಳಿಗಾವಿಗೆ ಆ ಹೆಸರು ಬಂದಂತೆ ಕಾಣುತ್ತದೆ. (ಬಳ್ಳಿ + ಕಾವಿ)

ಸಪ್ಪರತಿ ಎಂಬ ಕೇವಲ ಶಿಲಾರೂಪದ ದೇವತೆಗೂ ಈ ಬಳ್ಳಿಯಮ್ಮನಿಗೂ ಸೊಪ್ಪು (ಎಲೆ, ಬಳ್ಳಿ) ಹರಿದು ಹಾಕುವ ಮೂಲಕ ಕೆಲವು ಮಟ್ಟಿನ ಸ್ವಾಮ್ಯವನ್ನು ಕಾಣಬಹುದಾಗಿದೆ. ಶ್ರೀ ಕ. ವೆಂ, ರಾಜಗೋಪಾಲ ಅವರು ಈ ವಿಷಯವನ್ನು ಪ್ರಸ್ತಾಪಿಸಿದಾಗ, ಸಪ್ಪು + ಆರತಿ (ಸೊಪ್ಪು ಪ್ರೀತಿಯಿರುವವಳು ಎಂದು ಒಂದು ವಿವರಣೆಯನ್ನು ಹೇಳಿದರು.)

ಹೆಗಡೆಯ ವೃದ್ಧೆ ಪರಮೇಶ್ವರಿ ಗಣಪಯ್ಯ ನಾಯ್ಕ ಅವರು ಸಪ್ಪರತಿ ಒಂದು ದೆವ್ವ ಎಂದಿರುತ್ತಾರೆ.

ಚೌಡಿಶ್ರೀ ಕಾಳೇಗೌಡ ನಾಗವಾರ ಅವರ ” ಬೇಕಾದ ಸಂಗಾತಿ” ಎಂಬ ಸಂಕಲನದಲ್ಲಿ ಚೌಡಿಯ ಕುರಿತ ತ್ರಿಪದಿಯಲ್ಲಿ ಅವಳ ಮುಂದೆ ಉದ್ದವಾದ ವರ್ಣನೆಯಿದೆ.

ತಾಯಿ ಚೌಡೆವ್ವ ಮಂಡೆಲ್ಲಿ ಅಳುದಾಳು
ಮಾಯಸಂದ್ರದ ಮಧುರೆಯ | ಕಲ್ಲಿನ ಪಾವು
ಹೂ ಕಂಡಿ ಜಡೆಯ ಅಳುದಾಳೇ ||

ಆದರೆ, ಚಾಮುಂಡಿ ಎಂಬ ಶಬ್ದದಿಂದ ಚೌಡಿ ಎಂಬ ಶಬ್ದ ಉತ್ಪನ್ನವಾಗಿದೆಯೆಂದು ಕೆಲವು ವಿದ್ವಾಂಸರ ಮತವಿದೆ.

ಆದರೆ, ಚೌಡಿ ಎಂಬ ದೇವತೆಯ ರೀತಿಯನ್ನು ನೋಡಿದರೆ, ಆ ದೇವತೆ ಜಗದಂಬೆಯ ಅವತಾರವೆನ್ನುವದಕ್ಕಿಂತ ಅವಳು ದೆವ್ವ, ಭೂತ, ಪಿಶಾಚಿಗಳಂತಹ ಕೆಳವರ್ಗದ ದೇವತೆಯಾಗಿದ್ದಿರಬೇಕೆಂದು ಕಾಣುತ್ತದೆ. ಚೌಡಿಯ ತಲೆಕೂದಲು ಹರಡಿರುವಿಕೆ ಎದ್ದು ಕಾಣುತ್ತದೆ. ತಲೆಕೂದಲನ್ನು ಬಿಚ್ಚಿಕೊಂಡಿರುವವಳಿಗೆ ” ಹಕ್ಕಲ ಚೌಡಿ” ಎಂದೆನ್ನಲೂ ಇದೇ ಕಾರಣ.

ಚೂಡ ಅಂದರೆ ಸಿಕ್ಕುಸಿಕ್ಕಾದ ತಲೆಕೂದಲು, ಚೂಡ ಜೂಟ ಎಂಬ ಶಬ್ದದ ತದ್ಭವ ಎಂದು ಕಿಟೆಲ್ ಕೋಶದಲ್ಲಿದೆ.

ಮಲಬಾರನಲ್ಲಿ ಕುಟ್ಟಿಚ್ಚಾಟನ್ ಎಂಬ ಗಣಡು ದೆವ್ವವಿದೆ. ಅದು ಯಾರದಾದರೂ ಮನೆಯ ಅನ್ನದ  ಪಾತ್ರೆಯಲ್ಲಿ ಅಮೇಧ್ಯ ತಂದುಹಾಕುವುದು, ಮನೆಗೆ ಕಲ್ಲು ಹೊಡೆಯುವದು, ಬಟ್ಟೆಗಳಿಗೆ ಬೆಂಕಿ ಹಚ್ಚುವದು ಮುಂತಾದ ರೀತಿಗಳಿಂದ ತೊಂದರೆ ಕೊಡುತ್ತದೆಯಂತೆ.

ನಮ್ಮ ಹಳ್ಳಿಗರ ನಂಬಿಕೆಯಂತೆ ಚೌಡಿಯ ಮೇಲೆ ಹೇಳಿದ ಉಪದ್ರವಗಳನ್ನಲ್ಲದೆ ಸಣ್ಣ ಮಕ್ಕಳನ್ನೂ ವಸ್ತುಗಳನ್ನೂ ಒಂದೆಡೆಯಿಂದ ಬೇರೆಡೆ ಸಾಗಿಸುತ್ತದೆ.

ಚೌಡಿಯ ಉಪದ್ರವವಾದಾಗ ಮಾಂತ್ರಿಕರನ್ನು ಕರೆಸಿ, ಚೌಡಿಯ ಪ್ರತಿಷ್ಠೆ ಮಾಡಿಸಿ, ಪೂಜೆ ನಡೆವಂತೆ ವ್ಯವಸ್ಥೆ ಮಾಡುತ್ತಾರೆ.

ಹುಲಿದೇವರು : ಸತ್ತ ಮನುಷ್ಯರನ್ನು ದೇವರೆಂದು ತಿಳಿದಂತೆಯೇ ಸತ್ತ ಅಥವಾ ಕೊಲ್ಲಿಸಿಕೊಂಡ ಪ್ರಾಣಿಗಳನ್ನೂ ದೇವರೆಂದು ಪೂಜಿಸುತ್ತಾರೆ. ಸಿದ್ಧಿಜನರ, ಬೇಟೆಯಾಡಿ ಪ್ರಾಣಿಯನ್ನು ಕೊಂದ ಮೇಲೆ ಅದನ್ನು ದೇವರೆಂದು ಪೂಜಿಸಿ, ತಮ್ಮ ತಪ್ಪನ್ನು ಕ್ಷಮಿಸೆಂದು ಕೇಳಿಕೊಳ್ಳುತ್ತಾರೆ ಮತ್ತು ಆ ಪ್ರಾಣಿಯ ಮಾಂಸದ ಐದನೆಯ ಒಂದು ಭಾಗವನ್ನು ಬೇಟೆ ದೇವರಿಗೆ ಅರ್ಪಿಸಿ, ಅದನ್ನು ಮರದ ಟೊಂಗೆಗೆ ಕಟ್ಟುತ್ತಾರೆ. ಹಾಗೆಯೇ ಅದು ಹುಲಿ ಅಮ್ಮನವರ ವಾಹನವೆಂದೂ ಪೂಜಾರ್ಹವಾಗಿದೆಯೇನೋ ತಿಳಿಯದು. ಶಿಲೆಯ ಅಥವಾ ಮಣ್ಣಿನ ಹುಲಿದೇವರನ್ನು ಅಮ್ಮನವರ ದೇವಾಲಯ ಸಮೀಪದಲ್ಲಿ ಸ್ಥಾಪಿಸಿರುವುದು ಬಹುಶಃ ಎಲ್ಲ ಕಡೆ ಕಂಡು ಬರುತ್ತದೆ. ಇದಕ್ಕೆ ದನಕರುಗಳ ರೋಗರುಜಿನ ಬಂದಾಗ ಹರಕೆ ಹೇಳಿಕೊಳ್ಳುತ್ತಾರೆ.

ನಾಗದೇವತೆ : ನಾಗದೇವತೆಯೂ ಭಯದಿಂದ ಭಕ್ತಿ ಮಾಡಿ ಪೂಜಿಸಲ್ಪಡುವ ದೈವವೇ. ನಾಗದೇವತೆಯ ಕೋಪದಿಂದ ಬೊಕ್ಕೆ, ಕಜ್ಜಿ ಮುಂತಾದ ಉಪದ್ರವಗಳಾಗುವವೆಂಬ ನಂಬಿಕೆಗೆ ಜನಮೇಜಯ ಸರ್ಪಯಾಗ ಮಾಡಿ ಕುಷ್ಠರೋಗ ಪೀಡಿತನಾದ ಹಿನ್ನೆಲೆಯಿದ್ದಿರಬಹುದು. ೧೨ನೆಯ ಶತಕದ ಧರ್ಮಾಮೃತದಲ್ಲಿ ನಾಗಾಲಯಕ್ಕೆ ಚರುವನ್ನು ತೆಗೆದುಕೊಂಡು ಹೋದ ಉಲ್ಲೇಖವಿದೆ. ಬಸವಣ್ಣನವರ “ಕಲ್ಲನಾಗರ ಕಂಡರೆ ………………….” ವಚನ ಸುಪ್ರಸಿದ್ಧವಾಗಿದೆ.

ಮಾನವದೇವ ಸಂಬಂಧ

ಮಾನವ ಸ್ತ್ರೀಯರನ್ನು ದೇವತೆಗಳು ಮೋಹಿನಿ ಪ್ರಣಯ ಮಾಡುವ ಚಿತ್ರಣಗಳು ತೀರ ಪ್ರಾಚೀನ ಕಾಲದ ಪುರಾಣ ಕಥೆಗಳಲ್ಲಿಯೂ ಜಾನಪದ ಕಥೆಗಳಲ್ಲಿಯೂ ಕಂಡು ಬರುತ್ತವೆ.

ಇವುಗಳಲ್ಲಿ ಬೇರೆ ಬೇರೆ ಕಥೆಗಳಿಗೆ ಬೇರೆ ಬೇರೆ ಅರ್ಥ ಮತ್ತು ಉದ್ದೇಶಗಳಿವೆ. ಕುರುಬರ ಮಾಳವ್ವ ಮತ್ತು ಭೈರವರ ಕಥೆಯು ಜಾನಪದ ಗೀತಗಳಲ್ಲಿನ ಇಂಥ ಒಂದು ಕಥೆ.

[1] ಇದನ್ನು ಕುರಿತು ಡಾ. ಶಿವರಾಮ ಕಾರಂತರು ಮಾಳವ್ವ ಮೊದಲು ಊರಿನ ದೇವತೆಯಾಗಿರಬಹುದು. ಅನಂತರ ಭೈರವನ ಗುಡಿ ನಿರ್ಮಾಣವಾಗಿರಬೇಕು ಅವರಲ್ಲಿ ಮೇಳವನ್ನು ಕಲ್ಪಿಸುವ ಅನಿವಾರ್ಯ ಬಂದು, ಈ ಕತೆ ಹುಟ್ಟಿಕೊಂಡಿರಬಹುದು ಎನ್ನುತ್ತಾರೆ. ಅಲ್ಲದೆ ದೇವರ ಪೂಜಾರಿಗಳ ಪ್ರಣಯವನ್ನು ಕಾಲಕ್ರಮದಲ್ಲಿ ದೇವರೇ ಈ ಪ್ರಣಯ ಮಾಡಿದರೆಂದು ಪ್ರಚಾರದಲ್ಲಿ ತಂದಿರಬಹುದು. ಪೂಜಾರಿಗಳು ದೇವರ ಪ್ರತಿನಿಧಿಗಳಲ್ಲವೇ? ಎನ್ನುವದು ಹೆಚ್ಚು ಗ್ರಾಹ್ಯವಾಗಿದೆ.

ಉಚ್ಚದರ್ಜೆಯ ಮಾನವರನ್ನೇ ದೇವತೆಗಳೆಂದು ತಿಳಿದು, ಕೆಳವರ್ಗದ ಸ್ತ್ರೀಯರ ಅಥವಾ ಪುರುಷರ ಸಂಪರ್ಕ ಮಾಡಿದ ಕಥೆಗಳನ್ನು ಕಟ್ಟಿರಬಹುದು.

ಪುರಾಣ ಪ್ರಸಿದ್ಧವಾದ ಶಿವ ಮತ್ತು ಗಂಗೆಯರ ಪ್ರಣಯವನ್ನು ನಮ್ಮ ಜನರು ಮೇಲುಜಾತಿ – ಕೀಳುಜಾತಿಯವರಲ್ಲಿನ ಅಂತರದ ವರ್ಣನೆಯ ವಿವರಗಳೊಂದಿಗೆ ಚಿತ್ರಿಸಿದ್ದಾರೆ. ಗಂಗೆ ಮೀನ ಬುಟ್ಟಿ ಹೊತ್ತುಕೊಂಡೇ ಬರುತ್ತಾಳೇ. ಶಿವನೊಡನೆ ತಮ್ಮ ಮತ್ತು ಮೇಲ್ಜಾತಿಯವರ ಅಂತರವನ್ನು ಹೇಳಿ ತಾನು ಕೀಳುಕುಲದವಳು, ಈ ಸಂಬಂಧ ಬೇಡ ಅಂದುದೂ ಉಂಟು. ತನ್ನನ್ನು ಮದುವೆಯಾದರೆ ಮೀನ ಬುಟ್ಟಿ ಹೊರಬೇಕಾದಿತು ಎಂದೂ ಹೇಳುತ್ತಾಳೆ. ತಮ್ಮಂಥ ಕೀಳುಜಾತಿಯ ಹೆಣ್ಣನ್ನು ಪರಮಾತ್ಮ ಮದುವೆಯಾದನೆಂದು ಅಂಬಿಗರಿಗೆ ಅದೊಂದು ತರದ ಹೆಮ್ಮೆಯಿದೆ. ಗಂಗಾಷ್ಟಮಿಯ ದಿನ ಗಂಗೋಳಿಯ ಗಂಗಮ್ಮನ ದೇವಾಲಯಕ್ಕೆ ಶಿವನ ಸಲುವಾಗಿ ಹೋಗಿ ಹೆಣ್ಣು ಕೇಳುವ ಶಾಸ್ತ್ರ ನಡೆಯುತ್ತದೆ. ದೀಪಾವಳಿ ಸಮಯದಲ್ಲಿ ಬ್ರಾಹ್ಮಣ ಪುರೋಹಿತರು ಗೋಕರ್ಣ ಸಮುದ್ರ ತೀರಕ್ಕೆ ಶವನ ಮೂರ್ತಿಯ ಮೆರವಣಿಗೆಯನ್ನು ತೆಗೆದುಕೊಂಡು ಹೋಗಿ, ಅಲ್ಲಿ ಶಿವ ಮತ್ತು ಗಂಗೆಯರ ಮದುವೆಯಾದಂತೆ ಶಾಸ್ತ್ರ ನಡೆಯಿಸುತ್ತಾರೆ.

ವರನಂದಿಯು ಮೇಲುಕೋಟೆ ಚೆಲುವ ರಾಮಸ್ವಾಮಿಯನ್ನು ಪ್ರೀತಿಸಿದ ಕಥೆಯಲ್ಲಿ ವರನಂದಿ ದಿಲ್ಲಿಯ ರಾಜನ ಮಗಳು; ಆಕೆ ಸುಲ್ತಾನನ ಹಿಂದೂ ಮಡದಿಯಲ್ಲಿ ಹುಟ್ಟಿ ಬೆಳೆದು ಚೆಲುವರಾಯನ ಭಕ್ತೆಯಾಗಿ, ಧರ್ಮಶ್ರದ್ಧೆ ತೋರಿಸಿದುದನ್ನು ಗೌರವಿಸಲು ಅಂಥ ಕಥೆ ಹುಟ್ಟರಬಹುದು ಎಂದು ಡಾ. ಕಾರಂತರು ಊಹಿಸಿರುವರು. ವರನಂದಿ ಎಂಬ ಹಿಂದೂ ಹೆಸರು ಅವರ ಊಹೆಗೆ ಸಮರ್ಥನ ಮಾಡುವಂತೆ ತೋರುತ್ತದೆ.

ಬಹುತರವಾದ ಗ್ರಾಮದೇವತೆಗಳಿಗೆ ಜನಸಾಮಾನ್ಯರಲ್ಲಿನ ಜನಗಳೇ ಪೂಜಾರಿಗಳಾಗಿರುತ್ತಾರೆ. ಆ ಪೂಜಾರಿಗಳಿಗೆ ಗುನಗರೆಂದು ನಮ್ಮ ಜಿಲ್ಲೆಯಲ್ಲಿ ಕರೆಯುತ್ತಾರೆ. ದೇವರ ಹೆಸರುಗಳನ್ನು ಗುನು(ಣು) ಗುನಿಸುವುದರಿಂದ ಹಾಗೆ ಕರೆಯುವುದಾಗಿದ್ದಿರಬೇಕು. ಕುಮ್ರಿ, ಮರಾಟಿಗರು, ಮುಕ್ರಿ ಹರಿಜನರು, ಗಾಮೊಕ್ಕಲು, ನಾಮಧಾರಿಗಳು, ಕುಂಬಾರರು, ಗೊಂಡರು, ಬಡಿಗರು, ಜೈನ ಬೋಗಾರರು ಮುಂತಾದ ಬ್ರಾಹ್ಮಣೇತರರು ಬಹುಸಂಖ್ಯೆಯ ಗ್ರಾಮದೇವತೆಗಳ ಪೂಜಾರಿಗಳಾಗಿರುತ್ತಾರೆ.

ಹೂವು, ಗಂಧ, ಕುಂಕುಮ, ಕಡ್ಡಿ, – ಕರ್ಪೂರ, ಹಣತೆ ದೀಪ, ಅರಿಸಿಣ, ಇವು ಇವರ ಪೂಜೆಯ ಪರಿಕರಗಳಾಗಿರುತ್ತವೆ. ಗಂಟೆ ತೂಗಿ, ಹೂ ಏರಿಸಿ, ಗಂದ ಹಚ್ಚಿ ತೆಂಗಿನ ಕಾಯಿ ಒಡೆದು, ಬಾಳೆಹಣ್ಣು ಸುಲಿದಿಟ್ಟು ಆರತಿ ಮಾಡಿ ಸರಳವಾದ ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ, ನಮಸ್ಕಾರ ಮಾಡುತ್ತಾರೆ. ಕೆಲವು ಸಂದರ್ಭಗಳಲ್ಲಿ ಪೂಜೆ ಮಾಡಿ, ಆರತಿ ಮಾಡುತ್ತಿದ್ದಂತೆ ಪಾತ್ರಿಗಳಿಗೆ ದೇವರ ಆವೇಶ (ಮೈಮೇಲೆ) ಬರುತ್ತದೆ. (ಮೈಮೇಲೆ ಬಂದಾಗ ಕೆಂಡಗಳನ್ನು ನುಂಗುವ ಪಾತ್ರಿಗಳೂ ಉಂಟು.) ಕಣಿ ಹೇಳುತ್ತಾರೆ. ಭಕ್ತರ ಸೇವೆಯ ಕುಂದುಕೊರತೆಗಳನ್ನು ಎತ್ತಿ ಹೇಳುತ್ತಾರೆ. ಸಲ್ಲಿಸಬೇಕಾದ ಸೇವೆಯ ಅವಶ್ಯಕತೆಯನ್ನು ಬಿತ್ತರಿಸುತ್ತಾರೆ.

ಭಕ್ತರು ಹರಕೆ ಹೇಳಿಕೊಳ್ಳುತ್ತಾರೆ. ಹೇಳಿಕೊಂಡಿದ್ದ ಹರಕೆಯನ್ನು ಸಲ್ಲಿಸುತ್ತಾರೆ.

ಬಂಡಿ ಹಬ್ಬದಲ್ಲಿ ದೆವರ ಕಲಶ ಹೊತ್ತವರು ಭಕ್ತಿಯ ಆವೇಶದಿಂದ ನಿಶ್ಯಂಕೆಯಿಂದ ಕೆಂಡ ಹಾಯುತ್ತಾರೆ. (ಗಾಳಿ ಬೀಸಿ ಬೂದಿಯನ್ನು ಹಾರಿಸುತ್ತಾ ಇದ್ದಲ್ಲಿ ಕಾಲು ಸುಡುವುದಿಲ್ಲ) ಮೊಳಕಾಲೆತ್ತರದಷ್ಟು ದಪ್ಪವಾದ ಕೆಂಡದ ರಾಶಿಯನ್ನು ಪೂಜಾರಿಗಳೂ ಭಕ್ತರೂ ನಿಶ್ಯಂಕೆಯಿಂದ ಬರಿಗಾಲಿನಿಂದ ಹಾಯ್ದು ಬರುವುದನ್ನು ನೋಡಿದ ಹಳ್ಳಿಯ ಮುಗ್ಧ ಜನರು ದೇವತೆಗಳ ಮಹಿಮೆಯನ್ನು ಕೊಂಡಾಡುತ್ತಾರೆ.

ಜನಸಾಮಾನ್ಯರಿಗೂ ಕಲಿತ ದೈವಭಕ್ತರಿಗೂ ದೇವರು ಬರಿ ಕಲ್ಲಲ್ಲ; ಮೂರ್ತಿಯಲ್ಲ. ಅವರು ತಮ್ಮ ಮಾನವೀಯ ರೀತಿಯ  ಸಂಬಂಧವನ್ನು ದೇವರಲ್ಲಿ ದೆವ್ವಗಳಲ್ಲಿ ಸಹಾ ಕಂಡುಕೊಳ್ಳುತ್ತಾರೆ. ಅಮ್ಮನವರು ಎಲ್ಲಮ್ಮನಾಗಲಿ, ಮಾರಿಯಮ್ಮನಾಗಲಿ, ಮಂಕಾಳಮ್ಮನಾಗಲಿ ಯಾರೇ ಆಗಲಿ ಹೆಸರಿಗೆ ಅಷ್ಟು ಮಹತ್ವವಿಲ್ಲ. ಆ ಅಮ್ಮ, ತಾಯಿ, ಮಹಾತಾಯಿ, ಜಗತ್ತಿನ ಜನರಿಗೆ ಮಾತೃದೇವತೆ. ತಪ್ಪು ಮಾಡಿದ ಮಗು ತನ್ನ ತಾಯಿಯ ಹತ್ತಿರ  ಬೇಡಿ ಕಾಡುವ ಹಾಗೆ, ಮುಗ್ಧ ಗ್ರಾಮಪುತ್ರನು ಈ ಮಹಾತಾಯಿಯ ಹತ್ತಿರ ಬೇಡಿ ಕಾಡುವ ಹಾಗೆ, ಮುಗ್ಧ ಗ್ರಾಮಪುತ್ರನು ಈ ಮಹಾತಾಯಿಯ ಹತ್ತಿರ ತನ್ನ ಕಷ್ಟಗಳನ್ನು ತೋಡಿಕೊಳ್ಳುತ್ತಾನೆ; ಕಣ್ಣೀರು ಸುರಿಸುತ್ತಾನೆ.

ತಾಯಿಯ ಗರ್ಭಶಯ್ಯೆಯಲ್ಲಿ ಒಂಭತ್ತು ತಿಂಗಳು ಯಾವ ಚಿಂತೆ, ಯೋಚನೆಯಿಲ್ಲದೆ ಕಳೆದ ಭ್ರೂಣಾವಸ್ಥೆಯ ಸುಖವನ್ನು ತನ್ನ ಅಜ್ಞಾತ ಮನಸ್ಸಿನ ಸ್ತರಗಳಲ್ಲಿ ಹುದುಗಿಸಿಕೊಂಡ ಮಾನವನು ಪುನಃ ಅಂಥ ಸುಖವನ್ನು ಪಡೆಯಲು ಹಾರೈಸಿ, ಮೋಕ್ಷ ಸುಖದ ಕಲ್ಪನೆಯನ್ನು ಮಾಡಿದನೆಂದು ಮನಃಶಾಸ್ತ್ರಜ್ಞರು ಹೇಳುವರೆಂದು ಶ್ರೀ ನಾ. ಕಸ್ತೂರಿಯವರು ನನ್ನೊಡನೆ ಹೇಳಿದುಂಟು.

ತಮ್ಮೆಲ್ಲ ಯೋಚನೆ, ಚಿಂತೆ, ಬೇನೆ, ಬೇಸರಿಕೆ, ತಾಪತ್ರಯಗಳನ್ನು ತಾಯಿಯ ಅಡಿದಾವರೆಗಳ ಆಶ್ರಯವನ್ನು ಬೇಡಿ ಒಡನುಡಿದು, ಜನಸಾಮಾನ್ಯರು ತಮ್ಮ ಮನಸ್ಸಿನ ಹೊರೆಯನ್ನು ಕಡಿಮೆ ಮಾಡಿಕೊಳ್ಳುತ್ತಾರೆ.

ಒಬ್ಬ ಮುದುಕ ಒಕ್ಕಲಿಗನು ಒಂದು ಮಧ್ಯಾಹ್ನದಲ್ಲಿ ಜಟ್ಟಿಗಗಳ ತಾಣದಲ್ಲಿ ಮುಂದೆ ನಿಂತು ಕೈಮುಗಿದುಕೊಂಡು, ತನ್ನ ಕಷ್ಟಗಳನ್ನು ಒಂದು ತಾಸಿನವರೆಗೆ ತೋಡಿಕೊಳ್ಳುತ್ತಿದ್ದನು. ಅವನಿಗೆ ತನ್ನ ಮುಂದೆ ನಿಂತಿರುವದು ಕಲ್ಲಲ್ಲ; ಮಿತ್ರನಿಗಿಂತ ಮಿತ್ರ, ಬಂಧುವಿಗಿಂತಲೂ ಪ್ರೀತಿಯುಳ್ಳ ಬಂಧು; ತಂದೆಗಿಂತ ವಾತ್ಸಲ್ಯವುಳ್ಳ ತಂದೆಯ ಮುಂದೆ ಅವನು ತನ್ನ ಅಹವಾಲನ್ನು ಹೇಳಿಕೊಳ್ಳುತ್ತಿದ್ದನು. ಯಾರ ಹತ್ತಿರ ಗೋಗರೆದರೂ ತಮ್ಮ ಬಯಕೆಯನ್ನು ಈಡೇರಿಸದಿದ್ದಾಗ, “ನಿನ್ನ ಮುಂದೆ ಹೇಳುವುದರ ಬದಲಿಗೆ ಕಲ್ಲಿನ ಹತ್ತಿರ ಬೇಡಿಕೊಂಡಿದ್ದರೆ, ಅರೆ ಕಲ್ಲಾದರೂ ವರ ಕೊಡುತ್ತಿತ್ತು” ಎಂಬ ವಾಕ್ಯದ ಅರ್ಥ ನನಗೆ ಆ ದಿವಸ ಮನಸ್ಸಿಗೆ ನಾಟಿತು.

ಮಹಾವಿಷ್ಣು, ಈಶ್ವರ, ಕೃಷ್ಣ ಮುಂತಾದ ದೇವತೆಗಳಿಗಿಂತ ತಮ್ಮವರೇ ಪೂಜಿಸುವ, ತಮ್ಮ ಊರಿನವರೇ ಆದ ಈ ಗ್ರಾಮದೇವತೆಗಳು ಜನರಿಗೆ ಹತ್ತಿರದವರಾಗಿದ್ದಾರೆ. ನಮ್ಮ ಹಳ್ಳಿಗರಿಗೆ, ಈ ಬೀರದೇವತೆಗಳು ಹಿಂದೆ ತಮ್ಮ ಹಾಗೆಯೇ ಮನುಷ್ಯರಾಗಿದ್ದು, (ಮುಖ್ಯವಾಗಿ) ಯುದ್ಧಮಾಡಿ ತೀರಿಕೊಂಡು ದೇವತೆಗಳಾಗಿರುವದು ಹಳಬರಿಗಿಂತಲೂ ಗೊತ್ತಿರುವ ವಿಷಯ. ರಣಗೊಲೆ, ಕಲಿಬೀರ, ರಣಬಂಟ, ಕೋಡಿಬೀರ, ರಣಶೂರ, ರಣಬೀರ, ರಣ ಈರಬದ್ರ ಈ ಹೆಸರುಗಳು ಜನರಿಗೆ ಹಿಂದಣ ಯುದ್ಧಗಳ ನೆನಪನ್ನು ಸೂಚಿಸುತ್ತವೆ.

ನಮ್ಮ ಹೆಗಡೆ ಊರಿನ ಭೂತೋಚ್ಚಾಟನೆ ಮಾಡುವವ (ನೋಟಗಾರ) ಹರಿಜನರ ಹಾಗೂ ಮುಕ್ರಿ ಎಂಬ ವೃದ್ಧರು “ಯುದ್ಧಮಾಡಿ ಸತ್ತೇ ಜಟ್ಗಾದದ್ದು” ಎಂದು ಸ್ಪಷ್ಟವಾಗಿ ನನ್ನೊಡನೆ ಹೇಳಿದುದುಂಟು.

ಕೆಂಡದ ಮಾಸ್ತಿ, ಕೊಡವ ಮಾಸ್ತಿ, ಮಳ್ಳ ಮಾಸ್ತಿ, (ಗಂಡ ಸತ್ತು ಹುಚ್ಚು ಹಿಡಿದು ಕೊಂಡಕ್ಕೆ ಬಿದ್ದವಳೋ ಮೊದಲೇ ಹುಚ್ಚಿಯಾಗಿದ್ದವಳೋ) ಹೊಂಡದ ಮಾಸ್ತಿ, ಜಟ್ಟ ಮಾಸ್ತಿ (ಶಿರಾಲಿಯಲ್ಲಿದೆ) ಮುಂತಾದ ಮಹಾಸತಿಯರೂ ಆತ್ಮ ಬಲಿದಾನದಿಂದ ದೈವತ್ವ ಪಡೆದವರೆಂದು ಜನರು ಬಲ್ಲರು.

ಕ್ರಿಯಾ ಸಂಸ್ಕಾರವಿಲ್ಲದೆ ಸತ್ತವರು ದೆವ್ವಗಳಾಗುವದಲ್ಲದೆ, ಕೊಲೆಯಾದವರೂ ದೆವ್ವಗಳಾಗುವದನ್ನು ಒಕ್ಕಲಿಗರೆಲ್ಲರೂ ನಂಬುತ್ತಾರೆ. ಸನ್ನೇಸಿ ಕೊಲೆ ಅಂದರೆ ಕೊಲೆಯಾಗಿ ಸತ್ತ ಸನ್ಯಾಸಿ; ಹೆಣ್ಣ ಗೊಲೆ ಶಬ್ದವೇ ಅರ್ಥ ಹೇಳುತ್ತದೆ.

ಪ್ರತಿ ಮನೆಗೂ ಸಹಾಯದ ದೆವ್ವಗಳು ಇರುತ್ತವೆಯೆಂದು ನಂಬುತ್ತಾರೆ. ತಮ್ಮ ವೈರಿಗಳು ಅವುಗಳ ಸಹಾಯಕ್ಕೆ ತಡೆ ಹಾಕಿದಾಗ ತಮಗೆ ಎಡರುತೊಡರು ಬರುವುದೆಂದು ಅದನ್ನು ಬಿಡಿಸಲು ನೋಟ ನೋಡಿಸುವದು ಮುಂತಾದ ಕ್ರಮಗಳನ್ನು ಮಾಡುತ್ತಾರೆ. ಬೇರೆ ದೆವ್ವ, ಕೀಳು ದೆವ್ವಗಳನ್ನು ತಮಗೆ ಉಪದ್ರವ ಕೊಡಲು ವೈರಿಗಳು ತಮ್ಮ ಮೇಲೆ ಎಬ್ಬಿಸಿ ಹಾಕಿದರೆಂದೂ ನೋಟ ಇತ್ಯಾದಿ ಪರಿಹಾರ ಕ್ರಮಗಳನ್ನು ಮಾಡುತ್ತಾರೆ.

ಈ ದೆವ್ವಗಳ ಪರಿಹಾರಗಳಿಲ್ಲದೆ, ಬ್ರಹ್ಮರಾಕ್ಷಸ (ಬರ್ಮ) ಚಾಳಿ (ಚಾಳ್ – ರಾಹು), ಮುರ್ಚು (ಮೃತ್ಯು), ಆನೆಭೂತ ಮುಂತಾದ ಭೂತಗಳಿವೆ.

ಈ ದೇವತೆಗಳಲ್ಲಿ, ದೆವ್ವಗಳಲ್ಲಿ ಶಾಕಾಹಾರಿಗಳು ಕೆಲವು ಮಾತ್ರ. (ಪೂಜಾರಿಗಳು ಶಾಕಾಹಾರಿಗಳಾದರೆ ಮಾತ್ರ ಇವು ಶಾಕಾಹಾರಿಗಳು ಜಟ್ಟಿಗ ಕೆಲವು ಕಡೆ ಶಾಕಾಹಾರಿ. ಗೋಕರ್ಣ ಭದ್ರಕಾಳಿ ಅಮ್ಮನವರ ದೇವಾಲಯದ ಹೊರಗಿನ ಜಟ್ಟಿಗನಿಗೆ ಕೋಳಿ ಬಲಿ ಬೇಕಂತೆ) ಬಹುತರ ಗ್ರಾಮದೇವತೆಗಳು ಮಾಂಸಾಹಾರ ಪ್ರಿಯರು.

ಮಾರೀಜಾತ್ರೆ, ಬಂಡಿಹಬ್ಬ, ಗಡಿಹಬ್ಬ ಮೊದಲಾದ ಗ್ರಾಮದೇವತೆಗಳ ಹಬ್ಬಗಳಲ್ಲಿನ ಆಚರಣೆಗಳನ್ನು ವಿವರವಾಗಿ ಚರ್ಚಿಸಲು ಇಲ್ಲಿ ಅವಕಾಶವಿಲ್ಲ. ಈ ದೇವತೆಗಳ ಕುರಿತು ಜನರ ಭಯಭಕ್ತಿಗಳಿಗೆ ಇಲ್ಲಿ ಚಾಲನೆ ದೊರೆಯುತ್ತದೆ. ಜಾನಪದ, ಧರ್ಮ, ನಂಬಿಕೆಗಳು ಆಚರಣೆಗಳನ್ನು ತಿಳಿಯಲು ಇವು ವಿಶೇಷ ಪ್ರಯೋಜನಕಾರಿಯಾಗಿರುತ್ತವೆ. ಇವುಗಳಲ್ಲಿ ಕೆಲವು, ಅಭ್ಯಾಸಿಗಳನ್ನು ಪ್ರಾಗೈತಿಹಾಸಿಕ ಯುಗದ ಜೀವನದ ಪ್ರಾಚೀನತೆಯತ್ತ ಕೊಂಡೊಯ್ಯುತ್ತದೆ.

ನಮ್ಮ ಜನರ ಬಲೀಂದ್ರನ ಪೂಜೆಯ ವೇದದ ವಾಮನ (ಸೂರ್ಯ ವಿಷ್ಣು) ಮತ್ತು ಬಲಿ (ಕತ್ತಲೆ) ಗಳ ಕಥೆಯನ್ನು ಮಾತ್ರ ಹೇಳುವುದಿಲ್ಲ.[2] ಜಾನಪದದ ಬಲೀಂದ್ರ. ಕೃಷಿದೇವತೆ (Agricultural Dlety)  ತೆಂಗು, ಅಡಿಕೆ, ಮೊಗೆಕಾಯಿ ಮುಂತಾದ ಕಾಯಿಪಲ್ಲೆಗಳನ್ನು [ಫಸಲನ್ನು] ಬಲೀಂದ್ರನ ಹೆಸರಿನಲ್ಲಿ ಜನರು ಪೂಜಿಸುತ್ತಾರೆ.ಯುಳುವಾಲ ಬಲಿಯಂದ್ರೆ ಎಂಬ (ಶ್ರೀ ಅಮೃತ ಸೋಮೇಶ್ವರ ಅವರು ಸಂಗ್ರಹಿಸಿದ) ಪಾಡ್ಡನದ ಪ್ರಕಾರ ಬಲೀಂದ್ರ ಭೂಮಿಪುತ್ರ. ನರಕಾಸುರನ ಹಾಗೆ. ಶ್ರೀ ಕೃಷ್ಣ ಕೃಷಿಕ [ ಕೃಷ್ಣ ಎಳೆ ಎಂಬ ಧಾತುವಿನಿಂದ ಕೃಷ್ಣ ಎಂಬ ಶಬ್ದ ಬಂದಿದೆ] ಅವನು ನರಕಾಸುರನ ಸಾವಿರ ತೋಳುಗಳನ್ನು ಕತ್ತರಿಸುವದು ಹೊಲದಲ್ಲಿ ಬೆಳೆದು ನಿಂತ ಪೈರನ್ನು ” ಕಟಾವ್” ಮಾಡಿದ ಹಾಗೆ. ಬಾಣಾಸುರನ ಸಾವಿರ ತೋಳುಗಳ ನೆನಪೂ ಇಲ್ಲಿ ಆಗುತ್ತದೆ. ಬಲೀಂದ್ರನ ನೈವೇದ್ಯವನ್ನು ಹೆಣ್ಣು ಮಕ್ಕಳೇ ಉಣ್ಣಬೇಕು. ಹೆಣ್ಣು ಸಂತಾನ ಸಮೃದ್ಧಿಯ ಭಾಜನ, ಫಲವತ್ತತೆ (Fertility)  ಯ ಸಂಕೇತ.

ಗದ್ದೆಯಲ್ಲಿ ಬೆಳೆಯನ್ನು ಕಾಯಲು ಇಡುತ್ತಿದ್ದ ಮಣ್ಣಿನ ಮೂರ್ತಿಯಿಂದ ಗಣಪತಿಯ ವಿಕಸನವಾಯಿತೆಂದು ವಿದ್ವಾಂಸರ ಅಭಿಪ್ರಾಯ. (ವಿವರಗಳಿಗೆ ಅವಕಾಶ ಇಲ್ಲಿಲ್ಲ)

ಪಾಂಡವರ ಪೂಜೆ ಕೃಷಿದೇವತೆಗಳ ಪೂಜೆಯೇ.[3] ಬತ್ತದ ತೆನೆಗಳನ್ನು ತೂಗ ಹಾಕಿ ಮಾಡುವ (Corn Spirits)  ಅವರು ಧಾನ್ಯದೇವತೆಗಳೆಂದೆನ್ನಬಹುದು ಸಿ ಡಿ ಮುಂತಾದ ಕೆಲವು ಅಮಾನುಷ ಚಿತ್ರಹಿಂಸೆಯ ವಿಷಯಗಳನ್ನೂ ಅಪಾಯಕಾರಿ ಮೂಢನಂಬಿಕೆಗಳನ್ನೂ ಬಿಟ್ಟರೆ ಈ ಪೂಜೆ – ಹಬ್ಬಗಳು ಜೀವನದಲ್ಲಿ ವೈವಿಧ್ಯವನ್ನೂ ಮನೋಲ್ಲಾಸವನ್ನೂ ತರುತ್ತವೆ.[4]

ನಮ್ಮ ಹೆಗಡೆ ಗ್ರಾಮದ ಅಮ್ಮನ ಗದ್ದಿಗೆಯಲ್ಲಿ ಶುಕ್ರವಾರ ಅದರ ಮುಕ್ರಿ ಹರಿಜನ ಪೂಜಾರಿಗೆ ಮೈಮೇಲೆ ದೇವರ “ಭಾರ” ಬರುತ್ತದೆ. ಆಗ, ಭಕ್ತರ ಅನೇಕ ಸಮಸ್ಯೆಗಳಿಗೆ ಪರಿಹಾರ ಹೇಳಬೇಕಾಗುತ್ತದೆ. ಈ ವಿಷಯದ ಮಹಿಮೆಯ ಕೀರ್ತಿ ದೂರದ ಊರುಗಳಿಗೂ ಹಬ್ಬಿ, ಘಟ್ಟದ ಮೇಲಿನ ಮುಂದುವರಿದ ಜಾತಿಗಳವರೂ ಇಲ್ಲಿ ದೇವರನ್ನು ಕೇಳಲು ಬರುತ್ತಾರೆ; ಕಾಣಿಕೆ ಸಲ್ಲಿಸುತ್ತಾರೆ.

ಸಿರ್ಸಿ ತಾಲೂಕಿನ ಅಮ್ಮನವರ ಒಂದು ದೇವಸ್ಥಾನದಲ್ಲಿ ಭಾರ ಬಂದಾಗ, ನಿಗಿನಿಗಿಯಾದ ಕೆಂಡಗಳನ್ನು ಮೋದಕಗಳಂತೆ “ಭಾರ” ಬಂದವರು ತಿಂದು ನುಂಗುತ್ತಾರಂತೆ.

ದೇವತೆಗಳಿಗೂ ಉತ್ಕರ್ಷ – ಅಪಕರ್ಷಗಳಿರುತ್ತವೆ. ಅದು ಅವರ ಹಣೆಬರಹ. ಹಿಂದೆ ಪೂಜಿಸುತ್ತಿದ್ದ ಅನೇಕ ದೇವತೆಗಳನ್ನು ಇಂದು ಪೂಜಿಸುತ್ತಿಲ್ಲ.

ಜಾನಪದ ಅಕಾಡೆಮಿ

ಈ ವರ್ಷ ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿಯ ಸ್ಥಾಪನೆಯಾಗಿದೆ. ಯಕ್ಷಗಾನ ಜಾನಪದದಲ್ಲಿಯೇ ಸೇರ್ಪಡೆಯಾಗಿರುವುದರಿಂದ ಯಕ್ಷಗಾನದ ಹೆಸರನ್ನು ಪ್ರತ್ಯೇಕವಾಗಿ ಸೇರಿಸುವ ಅಗತ್ಯವಿಲ್ಲವೆಂದು ಕೆಲವರ ಅಭಿಪ್ರಾಯ.

ಯಕ್ಷಗಾನವು ಪ್ರೌಢವಾದ ಕಲೆಯಾದುದರಿಂದ, ಯಕ್ಷಗಾನ ಜಾನಪದ ಕಲೆಯೇ ಅಲ್ಲ, ಎಂದು ವಾದಿಸುವವರೂ ಉಂಟು.

ಯಕ್ಷಗಾನ, ಕೃಷ್ಣ ಪಾರಿಜಾತ, ದೊಡ್ಡಾಟ ಮುಂತಾದ ಆಟಗಳು ನಮ್ಮ ಹಳ್ಳಿಗರ ಮನರಂಜನೆಯ ಸಲುವಾಗಿ ರೂಪಿತವಾಗಿ ವಿಕಾಸವನ್ನು ಹೊಂದಿ ಬಂದ ಕಲಾಮಾಧ್ಯಮಗಳಾಗಿದ್ದು, ಅವುಗಳಿಗೆ ತಮ್ಮದೇ ಆದ ವಿಶಿಷ್ಟ ಗಾನ, ನರ್ತನ, ಮಾತುಕತೆ ಮತ್ತು ಅಭಿನಯದ ಪರಂಪರೆಯಿರುತ್ತದೆ.

ಯಕ್ಷಗಾನದಲ್ಲಿ ರಾಜನೂ, ಋಷಿಗಳೂ ಎಲ್ಲರೂ ಕುಣಿಯುತ್ತಾರೆ. ಆಟ ಎಂದರೆ ನರ್ತನ ಎನ್ನುವಷ್ಟು ನರ್ತನ ಇದರಲ್ಲಿ ಸರ್ವವ್ಯಾಪಿಯಾಗಿದೆ. ಈ ರೀತಿ ಇರುವುದನ್ನು ಕೆಲವು ನಾಗರಿಕರು ಕಂಡು ಮೂಗು ಮುರಿದುದುಂಟು.

ಹಳ್ಳಿ ಹಳ್ಳಿಗಳಲ್ಲಿ ಅಶಿಕ್ಷಿತರು ಇದನ್ನು ಕಲಿತು ಆಗಾಗ ಆಟವಾಡಿ, ತಮ್ಮ ಸುತ್ತಲಿನ ಒಕ್ಕಲಿಗರಿಗೂ ಮುಖ್ಯವಾಗಿ ಮನರಂಜನೆಯನ್ನು ಒದಗಿಸುತ್ತಲಿರುತ್ತಾರೆ.

ಹಲವು ಯಕ್ಷಗಾನದ ಶ್ರೇಷ್ಠನಟರು ಹೆಚ್ಚು ಕಲಿತವರೇನಲ್ಲ ರಾಷ್ಟ್ರಪ್ರಶಸ್ತಿಯನ್ನು ಪಡೆದ ಶ್ರೇಷ್ಠ ನಟ ಶ್ರೀ ಕೆರೆಮನೆ ಶಿವರಾಮ ಹೆಗಡೆಯವರು ಕಲಿತಿದ್ದು ಕನ್ನಡ ನಾಲ್ಕನೆಯ ಇಯತ್ತೆ ಮಾತ್ರ. ಇನ್ನೊಬ್ಬ ಶ್ರೇಷ್ಠ ನಟ ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಸಹ ಹೆಚ್ಚು ಕಲಿತವರಲ್ಲ. ಹಾಗೆಯೇ ಮೂರುರು ದೇವರು ಹೆಗಡೆಯವರು ಒಂದು ಯಕ್ಷಗಾನ ಪ್ರಸಂಗವನ್ನು ಸಹ ಬರೆದಿರುವರಾದರೂ ಅವರು ಸಹ ಹೆಚ್ಚು ಕಲಿತವರಲ್ಲ. ಶ್ರೀ ಪಿ. ವಿ. ಹಾಸ್ಯಗಾರರಂತೆ ವಿಶ್ವವಿದ್ಯಾಲಯದ ಪದವಿ ಪಡೆದ ನಟರು ಕೇವಲ ಬೆರಳಣಿಕೆಯಲ್ಲಿ ಸಿಗುತ್ತಾರೆ.

ತಮ್ಮ ಪ್ರತಿಭೆಯಿಂದ ಅದ್ಭುತ ಅಭಿನಯ ಮಾಡಿ, ಸ್ವಾರಸ್ಯವಾದ ಮಾತುಕತೆಯಿಂದ ಜನರನ್ನು ಅಚ್ಚರಿಗೊಳಿಸುವ ಶ್ರೇಷ್ಠ ನಟರೂ ಕೂಡ ಯಕ್ಷಗಾನದ ಸಾಂಪ್ರದಾಯಿಕವಾದ ಕಲಾಮಾಧ್ಯಮದ ಚೌಕಟ್ಟಿನಲ್ಲಿಯೇ ಅಭಿನಯಿಸುತ್ತಿರುವವರೆಗೆ ಇವರ ಯಕ್ಷಗಾನ ಸಹಾ ಜಾನಪದವೇ ಆಗಿದೆ.

ಜಾನಪದ ಅಕಾಡೆಮಿಯನ್ನು ಸ್ಥಾಪಿಸಿ ನಮ್ಮ ಸರಕಾರದವರು ಒಳ್ಳೆಯ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿ  ಶ್ರೀ ಗುಂಡೂರಾಯರು ಜಾನಪಸ ಅಕಾಡಮಿ ಜಾನಪದ ಅಭಿವೃದ್ಧಿಯ ಕಡೆ ಲಕ್ಷ್ಯವಿಟ್ಟು ಕೆಲಸ ಮಾಡಬೇಕೆಂದು ಎಚ್ಚರಿಕೆಯ ಮಾತುಗಳನ್ನು  ಹೇಳಿದ್ದಾರೆ. ಆದರೆ, ಅಭಿವೃದ್ಧಿಗಾಗಿ ರೂಪಿಸಿದ ಹಲವು ಯೋಜನೆಗಳನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಲು ಸಾಕಷ್ಟು ಹಣವನ್ನು ಒದಗಿಸುವುದು ಅತ್ಯವಶ್ಯವಾಗಿದೆ. ಅಂದರೆ ಮಾತ್ರ ಜಾನಪದ ಅಭಿವೃದ್ಧಿಗೆ ಯೋಗ್ಯ ವಾತಾವರಣ ಉಂಟಾಗುತ್ತದೆ.

ಹಲವು ದಶಕಗಳವರೆಗೆ ರಂಗದಲ್ಲಿ ದುಡಿದು ವೃದ್ಧರಾದ, ವಿವಿಧ ರಂಗಗಳಲ್ಲಿ ಹಿರಿಮೆಯನ್ನು ಮೆರೆಸಿದ, ಕಲಾವಿದರಿಗೆ ವೃದ್ಧಾಪ್ಯದಲ್ಲಿ ಉಪವಾಸ ಬೀಳದಂಥ ರೀತಿಯಲ್ಲಿ ಮಾಸಾಶನ ಸಕಾಲದಲ್ಲಿ ದೊರೆಯಲು ಸೂಕ್ತವಾದ ಏರ್ಪಾಟು ಆಗುವುದು ಅವಶ್ಯವೆಂದು ಕೆಲವು ಉದಾಹರಣೆಗೆಗಳಿಂದ ನನಗೆ ಮನವರಿಕೆಯಾಗಿದೆ.

ರಾಷ್ಟ್ರಪ್ರಶಸ್ತಿ ಪಡೆದ ಶ್ರೀ ಕೆರೆಮನೆ ಶಿವರಾಮ ಹೆಗಡೆಯವರು ಹೇಳಿದ ಮೇರೆಗೆ ಅಧಿಕಾರಿಗಳ ಮಟ್ಟದಲ್ಲಿ, ಯಾವ ಕಾರಣದಿಂದಲೋ, ಮಾಸಾಶನ ಮಂಜೂರಾಗಲು  ತೀರಾ ತಡವಾಗಿ ಕಲಾವಿದರು ಮರಣ ಪಡೆದರೂ ಅವರ ಮಾಸಾಶನ ಅರ್ಜಿಗಳು ಇತ್ಯರ್ಥವಾಗದಿರುವದುಂಟು. ಊಟಕ್ಕೆ ಗತಿಯಿಲ್ಲದೆ, ಚಿಕಿತ್ಸೆಗೆ ಹಣವಿಲ್ಲದೆ ಪರಿತಾಪ ಪಡುತ್ತಿದ್ದ ಒಬ್ಬ ಕಲಾವಿದರಿಗೆ ಮಂಜೂರಾದ ಹಣಬರುವಷ್ಟರಲ್ಲಿ ಅವರು ಇಹಲೋಕವನ್ನೇ ತೆರೆದಿದ್ದರಂತೆ.

ತೀರಾ ಕಷ್ಟ ಪರಿಸ್ಥಿತಿಯಲ್ಲಿರುವ ಉತ್ತಮ ಕಲಾವಿದರಿಗಾದರೂ ಬೇಗನೆ ಹಣ ಸಹಾಯ ಮಾಡಲು ಜಾನಪದ ಅಕಾಡೆಮಿಯೇ ತೀರ್ಮಾನ ಕೈಕೊಂಡು, ಕ್ಷಿಪ್ರದಲ್ಲಿ ಅವರಿಗೆ ಹಣ ಸಿಗುವಂತೆ ವ್ಯವಸ್ಥೆಯಾಗಬೇಕು.

ಜಾನಪದ ಅಕಾಡೆಮಿಗೆ ತುಂಬಾ ಅನುಕರು ಸಮರ್ಥರೂ ಆಗಿರುವ ಶ್ರೀ ಎಚ್. ಎಲ್. ನಾಗೇಗೌಡ ಅವರು ಅಧ್ಯಕ್ಷರಾಗಿ ನೇಮಕಗೊಂಡಿರುವುದು ಹರ್ಷದ ಸಂಗತಿ. ಇದ್ದರಿಂದ ಸರಕಾರವೇ ಅಷ್ಟು ಧನವನ್ನು ಅಕಾಡೆಮಿಗೆ ಮಂಜೂರು ಮಾಡಿದರೆ, ಯೋಗ್ಯ ರೀತಿಯಲ್ಲಿ ಜಾನಪದ ಅಭಿವೃದ್ದಿ ಯೋಜನೆಗಳು ಕಾರ್ಯಗತವಾಗುವಲ್ಲಿ ಸಂದೇಹವಿರದು.

ಜಾನಪದ ಕಲೆಗಳ ಪ್ರದರ್ಶನಗಳು ಸ್ಪರ್ಧೆ ರೀತಿಯಲ್ಲಿ  ಹಳ್ಳಿ ಹಳ್ಳಿಗಳಲ್ಲಿ ನಡೆದು, ಉತ್ತಮ ಕಲಾವಿದರಿಗೆ ಪ್ರೋತ್ಸಾಹ ದೊರೆಯಬೇಕು. ಇದರಿಂದ ಹೊಸ ಹೊಸ ರೀತಿಯಲ್ಲಿ ಜಾಣಪದ ಕಲೆಗಳು ವಿಕಾಸಗೊಳ್ಳಲು ಚಾಲನೆ ದೊರೆಯಬಹುದು. ಪರಂಪರಾಗತವಾಗಿ ನಡೆದು ಬಂದ ರೀತಿಯಲ್ಲಿನ ಕನ್ನಡ ಪೋಷಿಸುವ ಏರ್ಪಾಡು ಸಹ ನಡೆಯಬೇಕು.

ವೈಜ್ಞಾನಿಕ ಅಭ್ಯಾಸ ವಿಷಯ

ವಿದೇಶಗಳಲ್ಲಿ ಜಾನಪದ ಸಮಾಜಶಾಸ್ತ್ರ, ಜೀವಶಾಸ್ತ್ರ, ಭಾಷಾಶಾಸ್ತ್ರ, ಮನೋವಿಜ್ಞಾನ ಮುಂತಾದ ವಿಜ್ಞಾನ ವಿಷಯಗಳನ್ನು ಅಭ್ಯಸಿಸಲ್ಪಡುತ್ತದೆ ಎಂದು ಡಾ. ಆರ್. ಸಿ. ಹಿರೇಮಠ ಅವರು ಒಮ್ಮೆ ಹೇಳಿದ್ದರು.

ಆದರೆ, ನಮ್ಮ ನಾಡಿನಲ್ಲಿ ಜಾನಪದಕ್ಕೂ ಈವುಗಳ ಅಭ್ಯಾಸಿಗಳು ಜಾನ ಪದವನ್ನು ತಮ್ಮ ಅಭ್ಯಾಸದ ಅಂಗವೆಂದು ನೋಡ.

ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದವರು ನಮ್ಮವರ ಜನಪದ ಜೀವನ ಮತ್ತು ಸಾಹಿತ್ಯ ಕಲೆಗಳ ಅಭ್ಯಾಸವನ್ನು ಮಾಡಿ ಅನೇಕ ವಿಷಯಗಳ  ಮೇಲೆ ಹೊಸ ಬೆಳಕು ಬೀಳಬಹುದಾಗಿದೆ. ನಮ್ಮ ಈ ಶಾಸ್ತ್ರಗಳನ್ನು ಅಭ್ಯಾಸ ಮಾಡಿದರೂ ಕರತಲಾಮಲಕ ಮಾಡಿಕೊಂಡು ಅಲ್ಲದೆ, ಕೆಲವರಿಗೆ “ಶಂಖದಿಂದ ಬಂದದ್ದೇ ತೀರ್ಥ” ಎಂಬ ಭಾವನೆಯೂ.

ತಮಿಳ್ನಾಡು, ಆಂಧ್ರಪ್ರದೇಶ, ಉತ್ತರ ಭಾರತ ಕಡೆಗಳಲ್ಲಿ ಬುಡಕಟ್ಟು ಜನಾಂಗಗಳ ಮತ್ತು ಇತರ ಜನಾಂಗಗಗಳ ಜೀವನಕುರಿತು ಶಾಸ್ತ್ರೀಯ ಅಭ್ಯಾಸ ವಿಶೇಷವಾಗಿ ನಡೆದಿದೆ. ಆದರೆ, ಈ ವಿಷಯ ಕರ್ನಾಟಕದಲ್ಲಿ ಶೈಶವಾವಸ್ಥೆಯಲ್ಲಿದೆ ಎಂದು ವಿದ್ವಾಂಸರು ಅಭಿಪ್ರಾಯ.

ಈ ಶೈಶವಾವಸ್ಥೆ ಕೊನೆಯವರೆಗೂ ಉಳಿಯಬಾರದು. ನಮ್ಮ ನಾಡಿನ ವಿವಿಧ ವರ್ಗಗಳವರ ಜೀವನದ ಶಾಸ್ತ್ರೀಯ ಅಭ್ಯಾಸ ನಡೆಯಬೇಕು. ನಮ್ಮ ಮೂರು ವಿಶ್ವವಿದ್ಯಾಯಗಳ ಸಮಾಜಶಾಸ್ತ್ರ, ಮಾನವಶಾಸ್ತ್ರ ಮುಂತಾದ ವಿಷಯಗಳ ಅಭ್ಯಾಸಿಗಳು ಜ್ಞಾನದ ತೃಪೆಯಿಂದ ಪ್ರೇರಿತವಾಗಿ ಜಾನಪದ ವಿಷಯಗಳ ಸಂಶೋಧನೆಗೆ ತೊಡಗಿ ಗ್ರಂಥಗಳನ್ನು ಬರೆಯಬೇಕು. ಬರಿಯ ಪಠ್ಯಗ್ರಂಥಗಳ ರಚನೆಯಿಂದ ತೃಪ್ತರಾಗಬಾರದು.

ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಮಿತ್ರರೂ ಸನ್ಮಾನ್ಯ ಉಪಕುಲಪತಿ ಒಡೆಯರ್ ಅವರೂ ಡಾ. ದಿನಕರ ದೇಸಾಯಿಯವರೂ ಅಂಕೋಲಾದ ಸ್ವಾಗತ ಸಮಿತಿಯವರೂ ಅದರ ಅಧ್ಯಕ್ಷರಾದ ಪ್ರಿ. ಕೆ. ಜಿ. ನಾಯ್ಕರು ನನ್ನನ್ನು ಸಮ್ಮೇಳನಾಧ್ಯಕ್ಷನೆಂದು ಆಮಂತ್ರಿಸಿದರು. ಅದಕ್ಕಾಗಿ ಅವರಿಗೂ ನನ್ನ ಭಾಷಣವನ್ನು ಕೇಳಿದ ಸಮಸ್ತರಿಗೂ ಕೃತಜ್ಞನಾಗಿದ್ದೇನೆ.

 

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)


[1]      ಈ ಕಥೆಯು ವರನಂದಿಯ ಕಥೆಯ ಹಾಡೂ ಉತ್ತರ ಕನ್ನಡದ್ದಲ್ಲ.

[2]      ಗೊಂಡರ ಪದಗಳು – ಪೀಠಿಕೆ – ಪುಟ ೪೩- ೪೪

[3]      ಸಿದ್ಧಿಯರ ಕಥೆಗಳು – ಪೀಠಿಕೆ – ಪುಟ – ೬

[4]      ಮೂರನೆಯ ಗೋಷ್ಠಿಯ ಅಧ್ಯಕ್ಷರಾದ ಶ್ರೀ ನಾಗೇಶ ಅವರು ಜನರಿಗೆ ಈ ದೇವತೆಗಳಿಂದ ತಮಗೆ ಪ್ರಯೋಜನವಿಲ್ಲವೆಂದಾಗ ಇವರನ್ನು ಮೂಲೆಗೆ ಸರಿಸುವರೆನ್ನುತ್ತಾರೆ. ಆದರೆ, ಇತ್ತೀಚಿನ ಕೆಲವು ಮಾಸ್ತಿ ಮತ್ತು ಅಮ್ಮನವರ ದೇವಾಲಯಗಳ ಮಹತ್ವ ಜನಗಳಲ್ಲಿ ಇನ್ನೂ ಹೆಚ್ಚಾಗುತ್ತಿದೆ.