ಒಂದಾನೊಂದು ಕಾಲದಲ್ಲಿ, ಒಂದು ಊರಿನ ಅನೇಕ ಜನರು ತಿರುಪತಿ ಯಾತ್ರೆಗೆ ಹೊರಟಿದ್ದರು. ಅವರಲ್ಲಿ ನನ್ನಂಥ (ಅಂದರೆ, ನನ್ನ ವಯಸ್ಸಿನ) ಒಬ್ಬ ಮುದುಕಿಯೂ ಇದ್ದಳು. ಅವರೆಲ್ಲರೂ ದಾರಿಯ ಮೇಲೆಲ್ಲಾ ಆಗಾಗ “ಗೋವಿಂದಾ, ಗೋವಿಂದಾ” ಎಂದು ಕೂಗುತ್ತ ಹೋಗುತ್ತಿದ್ದರು. ಆದರೆ ಈ ಮುದುಕಿಯ ಗಂಡನ ಹೆಸರು “ಗೋವಿಂದ” ಎಂಬುದಾಗಿತ್ತು. ಅವಳಿಗೆ ಗಂಡನ ಹೆಸರನ್ನು ಹೇಳಿದಂತಾಗುವುದೆಂದು ಗೋವಿಂದಾ ಎಂದು ಹೇಳಿ ಕೂಗಲು ಉಪಾಯವಿರಲಿಲ್ಲ. ಅದರಿಂದ ಅವಳು “ನಂದೂ ಹಾಗೇಯ”  “ನಂದೂ ಹಾಗೇಯ” ಎಂದು ಅವರು “ಗೋವಿಂದಾ, ಗೋವಿಂದಾ” ಎಂದು ಹೇಳಿದ ಹಾಗೆಲ್ಲಾ ತಾನೂ ಕೂಗುತ್ತಿದ್ದಳು.

ಹಾಗೆಯೇ ಸ್ವಾಗತಾಧ್ಯಕ್ಷರಾದ ಪ್ರಿ. ಕೆ. ಜಿ. ನಾಯಕರು ಅನೇಕ ಮಹನೀಯರನ್ನು ಸಂಬೋಧಿಸಿ ತಮ್ಮ ಭಾಷಣ ಪ್ರಾರಂಭ ಮಾಡಿ, ಆಮೇಲೆ ಜಾನಪದ ಅಂದರೇನೆಂದು ವಿವರಿಸಿದರು – ಉಪಕುಲಪತಿಗಳು ಸಮಾರಂಭದ ಉದ್ಘಾಟನೆ ಮಾಡುವಾಗ ಡಾ. ದಿನಕರ ದೇಸಾಯಿಯವರು ಜನತಾ ಕವಿಯಂದು ಹೊಗಳಿದರು. ಇವಕ್ಕೆಲ್ಲಾ ನಾನೂ ” ನಂದೂ ಹಾಗೇಯ” ಎಂದು ಹೇಳಿ, ಪುನಃ ಇವನ್ನೆಲ್ಲ ಪ್ರಸ್ತಾಪಿಸದೆ, ಈ ವಿಷಯಗಳನ್ನು ಚುಟುಕಾಗಿ ಮುಗಿಸಿ ಮುಂದಿನ ವಿಷಯವನ್ನು ಮಾತಾಡಲು ಎತ್ತಿಕೊಳ್ಳುತ್ತೇನೆ.

ಇಂದು ಇಡೀ ದಕ್ಷಿಣಭಾರತದಲ್ಲಿ ಕರ್ನಾಟಕವು ಜಾನಪದ ಸಂಗ್ರಹ ಮತ್ತು ಅಧ್ಯಯನದಲ್ಲಿ ಅಗ್ರಸ್ಥಾನದಲ್ಲಿದೆ. ತೆಲುಗಿನಲ್ಲಿ ಕನ್ನಡದಲ್ಲಾಗುತ್ತಿರುವ ಕೆಲಸದಲ್ಲಿ ಹತ್ತರಲ್ಲಿ ಒಂದು ಅಂಶವೂ ಆಗುತ್ತಿಲ್ಲವೆಂದು ತೆಲುಗಿನ ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಜಾನಪದ ವಿಷಯವನ್ನು ತೆಗೆದುಕೊಂಡು ತೆಲುಗಿನಲ್ಲಿ ಪ್ರಥಮ ಪಿಎಚ್ ಡಿ  ಪದವಿಯನ್ನು ಪಡೆದ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ತೆಲುಗು ಪೀಠದ ಮುಖ್ಯಸ್ಥರಾದ ಡಾ. ಬಿ. ರಾಮರಾಜು ಅವರು ಇತ್ತೀಚಿಗೆ ತೆಲುಗು ನಾಡಿನಲ್ಲಿ ಮದುವೆಯ ಜನಪದ ಗೀತಗಳನ್ನು ಹಾಡುವವರೂ ಕಡಿಮೆಯಾಗಿರುವರೆಂದು ನನ್ನೊಡನೆ ಹೇಳಿದ್ದುಂಟು. ಇದನ್ನು ಗಮನಿಸಿದರೆ ಕರ್ನಾಟಕದ ಜನಪದ ಚಟುವಟಿಕೆಗಳು ಆಶ್ಚರ್ಯವನ್ನುಂಟು ಮಾಡುತ್ತವೆ. ಈ ಚಟುವಟಿಕೆಗಳ ಒಂದು ಹೊಸ ಶಾಖೆ ಗ್ರಾಮ ದೇವತೆಗಳ ಅಧ್ಯಯನ.

ಈ ಸಮ್ಮೇಳನದ ಮೂರು ಗೋಷ್ಠಿಗಳೂ “ಗ್ರಾಮ ಸ್ತ್ರೀ ದೇವತೆಗಳು” ಎಂಬ ವಿಷಯದ ವಿವಿಧ ದೇವತೆಗಳ ಕುರಿತಾಗಿ ನಾಳೆ ವಿವಿಧ ವಿದ್ವಾಂಸರಿಂದ ನಡೆಯುವುದಿದೆ.

ಇದಕ್ಕೆ ಹಿನ್ನೆಲೆಯಾಗಿ ನಾನು ಉತ್ತರ ಕನ್ನಡ ಜಿಲ್ಲೆಯ ಗ್ರಾಮ ದೇವತೆಗಳ ಕುರಿತು ಮುಖ್ಯವಾಗಿ ವಿಚಾರ ಮಾಡುತ್ತೇನೆ.

ಗ್ರಾಮ ದೇವತೆಗಳು

ಲಕ್ಷಾಂತರ ವರ್ಷಗಳಿಂದ ಪ್ರಾಣಿ ಜೀವನದಿಂದ ಮಾನವ ಜೀವನದ ಹಾದಿಯಲ್ಲಿ ಸಾವಕಾಶವಾಗಿ ವಿಕಾಸ ಹೊಂದುತ್ತಿದ್ದ ಮಾನವನು ನಿಸರ್ಗದ ಅನೇಕ ವ್ಯಾಪಾರಗಳಲ್ಲಿ  ಪ್ರತಿಕೂಲ ಮತ್ತು ಅನುಕೂಲ ಈ ಎರಡೂ ತರದ ಪರಿಸ್ಥಿತಿಗಳಲ್ಲಿ  ಬಾಳಬೇಕಾಗಿತ್ತು.

ಆ ಶಕ್ತಿಗಳನ್ನು ತನ್ನ ಹಾಗೂ ತನ್ನಂತಿರುವ ಇತರ ಮಾನವರ ಜೀವನದ ರೀತಿ ನೀತಿಗಳ ಜೊತೆಗೆ ಹೋಲಿಸಿ ಅವನ್ನು ಅರಿತುಕೊಳ್ಳುವ ಪ್ರಯತ್ನ ಮಾಡುತ್ತಿದ್ದನು. ಇದರಿಂದ ಅತೀ ಪ್ರಾಚೀನ ಕಾಲದಲ್ಲಿ ಅವನ್ನು ನಿಯಂತ್ರಿಸಲು ಮಾನವನು ಮಾಟದ ಕ್ರಮವನ್ನು ಅಳವಡಿಸಿಕೊಂಡನು.

ಪ್ರಾಣಿ ಸತ್ತಮೇಲೆ ಅದರ ಜೀವನದ ಅಂತ್ಯವಾಗುವದಿಲ್ಲ. ಅದರ ಚೈತನ್ಯ ಅದೃಶ್ಯವಾಗಿ ಗಾಳಿಯ ರೂಪದಲ್ಲಿರುತ್ತದೆ ಎಂದು ಪ್ರಾಚೀನ ಮಾನವನು ಎಂದು ವಿಚಾರ ಮಾಡಲು ಪ್ರಾರಂಭಿಸಿದನೆಂದು ತಿಳಿಯುವುದು ಕಷ್ಟ. ಆದರೆ, ಜೀವಿಯ ಶರೀರದ ಸ್ಥಿತ್ಯಂತರದಲ್ಲಿ ಸಾವಿನ ಲಕ್ಷಣವೆಂದರೆ, ಉಸಿರುನಿಂತು ಹೋಗುವುದು.ಇದರಿಂದ ಜೀವವು ಉಸಿರು, “ಗಾಳಿ” “Spirit” ಎಂದು ಪ್ರಾಚೀನ ಮಾನವನು ತಿಳಿದನು. ಸತ್ತವರ ಜೀವಗಳು ಗಾಳಿಯ ರೂಪದಲ್ಲಿ ತಿರುಗುತ್ತವೆ ಎಂದು ಭಾವಿಸಿದನು. ಇದನ್ನೇ ಆಫ್ರಿಕದ ಕಾಡು ಜನರು “ಮನ” (Mana) ಎಂದು ಹೇಳುವುದು.

ಈ ಉಸಿರಿನ ಚೈತನ್ಯ ಅದೃಶ್ಯ ಶಕ್ತಿಯ ಸಂಕೇತವಾಗುತ್ತದೆ.ಉಸಿರಿಲ್ಲದ ವಸ್ತುಗಳಲ್ಲಿಯೂ ಇರುವ ಶಕ್ತಿಯ ದ್ಯೋತಕವಾಗುತ್ತದೆ ಈ ಮನ. ಒಂದು ಕಲ್ಲಿನಲ್ಲಿ ಸತ್ತ ಪ್ರಾಣಿಯ ಅಥವಾ ಮನುಷ್ಯನ ಚೈತನ್ಯವು ಅಡಗಿರಲು ಸಾಧ್ಯ ಎಂಬ ಭಾವನೆ ತೀರ ಪ್ರಾಚೀನ ಕಾಲದ ದೈವತ್ವ ಕಲ್ಪನೆಯ ಮೂಲಾಧಾರವಾಗಿರಲು ಸಾಕು.

ಶವವನ್ನು ಹೂಳಿ ಆ ಜಾದದಲ್ಲಿ ಹುಗಿದ ಹುರುತಿಗೆಂದು ಕಲ್ಲು ಹುಗಿದಿಡುವ ಪದ್ಧತಿ ಪ್ರಚಾರದಲ್ಲಿ ಬಂತು. ಆ ಕಲ್ಲು ಸತ್ತ ಮಾನವನ (ಳ) ಪ್ರತೀಕವಾಗಿ ಕಾಣಬಂದಿತು. ಸತ್ತವರ ಚೈತನ್ಯ ಅಥವಾ ಶಕ್ತಿ ಸತ್ತ ಕೂಡಲೆ ನಷ್ಟವಾಗುವದಿಲ್ಲ. ಅದು ಜೀವಿಗಳ ಆಗು ಹೋಗುಗಳ ಮೇಲೆ ಪರಿಣಾಮ ಮಾಡುತ್ತದೆ ಎಂಬ ನಂಬಿಕೆಯಿಂದ ಅ ಶಕ್ತಿಯನ್ನು ಒಲಿಸಿಕೊಳ್ಳಲು ಪೂಜೆ, ಬಲಿ ಕೊಡುವದು ಪ್ರಾರಂಭವಾಗಿರಬೇಕು. ಸತ್ತವರನ್ನು ಸ್ವಪ್ನದಲ್ಲಿ ಕೂಡುವುದರಿಂದಲೂ ಸತ್ತವರು ಅಸ್ತಿತ್ವದಲ್ಲಿರುವರೆಂದು ಭಾವಿಸಿ ಅವರಿಗೆ ಆಹಾರವನ್ನು ನೀಡುವದು ಬಳಕೆಯಲ್ಲಿ ಬಂದಿರಬಹುದು.

ಮಾತೃ ದೇವತೆ : ಬಹುಶಃ ಈ ಸಾಮಾನ್ಯ ಕಲ್ಪನೆಯಲ್ಲಿ ಗಂಡು ದೇವತೆಯ ಆರಾಧನೆಗಿಂತ ಮೊದಲೇ ಹೆಣ್ಣು ದೇವತೆಯ ಆರಾಧನೆ ಪ್ರಾರಂಭವಾಗಿದ್ದಿರಬೇಕು. ಸಾವು ಮತ್ತು ಹುಟ್ಟುಗಳಲ್ಲಿ ಹುಟ್ಟಿಗೆ ಕಾರಣವಾದ ಶಕ್ತಿ ಸ್ತ್ರೀಯಲ್ಲಿದೆ ಎಂಬ ಕಲ್ಪನೆ ಮೂಡಿದ್ದಿರಬೇಕು ಪ್ರಾಣಿಗಳ ಅಥವಾ ಮಾನವರ ಜನನ ವಿಷಯದಲ್ಲಿ ಗಂಡಿನ ಪಾತ್ರವನ್ನು ಮೊದಮೊದಲಿಗೆ ಮನುಷ್ಯರು ಅರಿತಿರಲಿಲ್ಲವೆಂದು ಭಾವಿಸಲಾಗಿದೆ. ಅದೇ ಕಾರಣದಿಂದ ಆದಿ ಮಾನವ ಸಮಾಜದಲ್ಲಿ ಹೆಣ್ಣಿಗೆ ಹೆಚ್ಚಿನ ಮಹತ್ವವಿದ್ದಿತು.

ಮನುಷ್ಯ ವಿಕಾಸದ ತೀರ ಪ್ರಾಚೀನ ಹಂತದಲ್ಲಿಯೇ ಮಾತೃದೇವತೆಯ ಆರಾಧನೆ ಪ್ರಾರಂಭವಾಗಿದ್ದಿರಬೇಕು. ಅಂತೆಯೇ ಭೂಮಿಯಿಂದ ಪಡೆವ ಹಣ್ಣು ಹಂಪಲ, ಗಡ್ಡೆ ಗೆಣಸು, ಮತ್ತು ತಾಯಿಯಿಂದ ಪಡೆಯುವ ಸ್ತನ್ಯಗಳಿಗೆ ಹೋಲಿಕೆಯನ್ನು ಕಂಡು, ತಾಯಿಯ ಕಲ್ಪನೆಯಿಂದ ಭೂಮಿಯನ್ನು ಪೂಜಿಸಲು ಪ್ರಾಚೀನ ಮಾನವರು ಪ್ರಾರಂಭಿಸಿರಬೇಕು.

ಭೂಕಂಪ, ಜ್ವಾಲಾಮುಖಿ, ಕಾಡ್ಗಿಚ್ಚು, ಬಿರುಗಾಳಿ, ಪ್ರಪಾತಗಳು, ಪ್ರವಾಹಗಳು ನಿಸರ್ಗ ಪ್ರಕೋಪದ ವಿಷಯಗಳಾಗಿ ಕಂಡವು. ಕಾಪಾಡುವ ಮಾತೆ ಆಗ ಕರಾಳಿಯಾಗಿಯೂ ಕಾಣುವಂತಾಯಿತು. ತನ್ನ ಮರಿಗಳು ಹುಟ್ಟಿದ ಕೂಡಲೆ ತಿನ್ನುವ ಹುಲಿಗಳಂತೆ, ತನ್ನ ಹಸಿವನ್ನು ತೀರಿಸಿಕೊಳ್ಳಲು ಉಗ್ರಮಾತೆ ತನ್ನ ಮಕ್ಕಳನ್ನೇ ತಿಂದು, ಅವರ ತಲೆಬುರುಡೆಗಳನ್ನು ಧರಿಸುವಳೆಂದು ತಿಳಿಯ ಹತ್ತಿದರು.

ಭೂಮಿ ದೇವತೆಯ ಪೂಜೆಯ ಅನಂತರ ಧರ್ಮವಿಕಾಸದಲ್ಲಿ ಆಕಾಶದೇವತೆಯ ಕಲ್ಪನೆ ರೂಢವಾಯಿತು. ನಿಸರ್ಗದ ಶಕ್ತಿಯ ಆರಾಧಕರಾದ ಆರ್ಯರ ತೀರ ಮೊದಲಿನ ದೇವತೆಗಳಲ್ಲಿ  ದ್ಯೌ: ಮತ್ತು ಪೃಥಿವೀ ಕಂಡು ಬರುತ್ತಾರೆ.

ನ್ಯೂಜಿಲ್ಯಾಂಡಿದ ಮಾವೋರಿ ಎಂಬ ಮೂಲ ನಿವಾಸಿಗಳಲ್ಲಿ ಆಕಾಶ ಮತ್ತು ಭೂಮಿ ಒಂದಕ್ಕೊಂದು ತೀರ ಹತ್ತಿರದಲ್ಲಿದ್ದವು. ಬೆನ್ನು ಸೆಟೆದು ನಿಲ್ಲಲೂ ಮಧ್ಯೆ ಸ್ಥಳವಿರಲಿಲ್ಲ. ಬೆಳಗಿನಲ್ಲಿ ಕಸಗೂಡಿಸುವ ಬಗ್ಗಿದ ಬೆನ್ನಿನ ನೋವನ್ನು ತಡೆಯಲು ಸಾಧ್ಯವಾಗಲಿಲ್ಲ. ಆಗ ಅವಳು ಕಸಬರಿಗೆಯಿಂದ ಬಡಿದು ಆಕಾಶ ಮೇಲಕ್ಕೆ ಹೋಗುವಂತೆ ಮಾಡಿದಳೆಂದು ಕಥೆಯಿದೆ.

ಪೊಲಿನೀಶಿಯನ್ನರ ಕಥೆಯ ಪ್ರಕಾರ ಈ ಮುದಿ ಗಂಡ – ಹೆಂಡಿರು ತಬ್ಬಿಕೊಂಡಿರುವುದರಿಂದ ಸೂರ್ಯನ ಬೆಳಕೇ ಇರಲಿಲ್ಲವಂತೆ. ಆದ್ದರಿಂದ ಅವರ ಮಕ್ಕಳೂ ತಂದೆ – ತಾಯಿಗಳನ್ನು ಬೇರ್ಪಡಿಸಿದರು.

ಸೂರ್ಯ, ಚಂದ್ರ, ನಕ್ಷತ್ರಗಳು, ಗಾಳಿ ಮುಂತಾದ ನೈಸರ್ಗಿಕ ಶಕ್ತಿಗಳ ಚೈತನ್ಯಗಳನ್ನು ದೇವರೆಂದು ಕಲ್ಪಿಸಿದ ಮಾನವನು ಅವುಗಳಲ್ಲಿಯೂ ಲಿಂಗಭೇಧವನ್ನು ಕಲ್ಪಿಸಿದನು. ಕೆಲವು ಜನಾಂಗಗಳಲ್ಲಿ ಚಂದ್ರ ಗಂಡು. ಇನ್ನು ಕೆಲವು ಜನಾಂಗಗಳವರು ಚಂದ್ರ ಹೆಣ್ಣು ಎಂದು ತಿಳಿದಿದ್ದಾರೆ.ಅಂಡಮಾನ ದ್ವೀಪ ಮತ್ತು ಇತರ ಕೆಲವು ಕಡೆ ಶುಕ್ಲಪಕ್ಷದ ವೃದ್ಧಿ ಚಂದ್ರ ಗಂಡು, ಕೃಷ್ಣಪಕ್ಷದ ಕ್ಷಯಚಂದ್ರ ಹೆಣ್ಣು.

ದಿನದಿನವೂ ಮೂಡಿ ಬರುವ ಸೂರ್ಯ ಹೊಸ ಹೊಸ ಸೂರ್ಯ ಎಂದು ಒಬ್ಬ ಗ್ರೀಕ ಪಂಡಿತನು ತಿಳಿದಿದ್ದನಂತೆ. ಅದರಂತೆಯೇ ಈ ಜನರೂ ಹೊಸ ಹೊಸ ಚಂದ್ರರ ಕಲ್ಪನೆ ಮಾಡಿ ಹೀಗೆ ತಿಳಿದದ್ದು.

ಒಂದು ರೀತಿಯಿಂದ, ನಮ್ಮ ಆರ್ಯರಲ್ಲಿ ಅದಿತಿಯ ಮಗನಾದ ಇಂದ್ರನು ಮೂಡಿಬರುವ ಸೂರ್ಯನೇ. ಪೂರ್ವದಿಕ್ಕು ಇಂದ್ರನ ವಾಸಸ್ಥಾನ. ಅದಿತಿಯು ಪೂರ್ವ ದಿಕ್ಕು. ಅವಳಿಂದ ದೇವತೆಗಳು ಜನಿಸಿದರು.

ಕಶ್ಯಪನ ಇನ್ನೊಬ್ಬ ಹೆಂಡತಿ ದಿತಿ, ಭೂಮಿ. ಅವಳ ಪುತ್ರರು ದೈತ್ಯರು. ಗ್ರೀಕ ಪುರಾಣದ ಟೈಟನ್‌ರೂ ಭೂಮಿಯ ಪುತ್ರರೇ.

(ಇಂಗ್ಲಂಡಿನ ಕೆಲ್ಟಿಕ್ ಜನಾಂಗದವರಲ್ಲಿ ಡ್ರುಯಿಡ (Druid)  ರೆಂಬ ಕ್ರೂರ ಪೂಜಾರಿಗಳು ವೃಕ್ಷಪೂಜಕರಾಗಿದ್ದರು. ಮನುಷ್ಯರನ್ನು ಕೊಂದು ಈ ವೃಕ್ಷಪಿಶಾಚಿ (ಭೂತ)ಗಳಿಗೆ ಬಲಿ ಕೊಡುತ್ತಿದ್ದರು)

ಜಾನಪದ ಮಾತೃದೇವತೆಗಳ ಅಧ್ಯಯನದಲ್ಲಿ ಎದ್ದು ಕಾಣುವುದೆಂದರೆ ಶಕ್ತಿ ದೇವತೆಗಳ ಮಹಿಸಾಸುರಮರ್ದಿನಿಯ ರೂಪವನ್ನೇ ಬಹುಸಂಖ್ಯ ದೇವಿ ದೇವಾಲಯಗಳಲ್ಲಿ ವಿಗ್ರಹಗಳ ರೂಪದಲ್ಲಿ ಕಡೆದಿರುವರು.

ಈ ಕಥೆ ಕೋಣನ ಮುಖವಾಡ ಹಾಕಿಕೊಳ್ಳುತಿದ್ದ ಕಾಡು ಮನುಷ್ಯರ ಮುಖ್ಯಸ್ಥರನ್ನು ಕೊಂದ ಕಥೆಯಾಗಿದ್ದಿರಬಹುದು.

ಮೇಲು ಜಾತಿಯನ್ನು ತಾನೆಂದು ಹೇಳಿ, ತನ್ನನ್ನು ಮೋಸಗೊಳಿಸಿ, ಮದುವೆಯಾದ ಹೊಲೆಯರವನು ತನ್ನ ಗಂಡನಾಗಿದ್ದರೂ ಅವನನ್ನು ಮಾರಿ ದೇವಿಯು ಕೊಂದ ಐತಿಹ್ಯದ ಮೂಲಕ ಅವಳನ್ನು ಮಹಿಸಾಸುರಮರ್ದಿನಿಯೆಂದು ಅಭೇದದಿಂದ ಹೇಳಲು ಸುಲಭವಾಯಿತು. ಅಮ್ಮನವರು ಎಂಬುದು ಸಾಮಾನ್ಯವಾಗಿ ಈ ಸ್ತ್ರೀ – ದೇವತೆಗಳಿಗೆ ಹೇಳುವ ಕ್ರಮವಿದೆ. ಅಮ್ಮ ಅಂದರೆ ತಾಯಿ ಎಂದಿದ್ದರೂ ಅಮ್ಮ ಅಂದರೆ ವಿಧವೆ ಎಂಬ ಅರ್ಥ ಬರಲು ಗಂಡನನ್ನು ಕೊಂದು, ವಿಧವೆಯಾದ ಈ ಅಮ್ಮನ ಕಥೆಯೇ ಪ್ರೇರಕವಾಗಿದೆಯೆಂಬುದರಲ್ಲಿ ಸಂದೇಹಕ್ಕೆ ಎಡೆಯಿಲ್ಲ.

ಮಾರಿಯಮ್ಮ

ಸಿರ್ಸಿಯ ಮಾರಿಯಮ್ಮನನ್ನು ಕುರಿತು ನಮ್ಮ ಮಿತ್ರರಾದ ಡಾ.ಎನ್.ಆರ್. ನಾಯ್ಕರು ಪ್ರಬಂಧವನ್ನು ಮಂಡಿಸಲಿರುವುದರಿಂದ ನಾನು ಆ ಕುರಿತು ಹೆಚ್ಚು ಹೇಳದೆ. ಸ್ವಲ್ಪದರಲ್ಲಿಯೇ ಕೆಲವು ಮಾತುಗಳನ್ನು ಹೇಳುತ್ತೇನೆ.

ಬ್ರಾಹ್ಮಣ ಜಾತಿಯ ಸ್ತ್ರೀಯು ಅರಿವಿಲ್ಲದೆ, ಹೊಲೆಯರ ತರುಣನನ್ನು ಮದುವೆಯಾಗಿ, ಅದು ತಿಳಿದ ಮೇಲೆ ಅವನನ್ನು ಕೊಂದು, ಕೊಂಡದಲ್ಲಿ ಬಿದ್ದು ಮಹಾಸತಿಯಾಗಿ ಅಮ್ಮನವರಾಗಿ ಪೂಜೆ ಪಡೆಯುತ್ತಾಳೆ.

ಇಂಥ ಕಥೆಗಳು ಹಲವು ಕಡೆಗಳ ದೇವಾಲಯಗಳಲ್ಲಿ ಹಬ್ಬ ಮಾಡುವ ವಿಧಿಕ್ರಮಗಳಲ್ಲಿಯೂ ಕಾಣುತ್ತೇವೆ.

ಎಲ್ಲಿಯೋ ಒಂದು ಕಡೆ ಈ ಘಟನೆ ನಡೆದಿದ್ದಿರಬಹುದು. ಆದರೆ, ಅಮ್ಮನವರ ಭಕ್ತರು ತಮ್ಮ ದೇವಿಯ ದೇವಾಲಯಗಳು ಎಲ್ಲ ಭಾಗಗಳಲ್ಲಿಯೂ ಪಸರಿಸಲೆಂದು ದೇವಿಯ ಮೂರ್ತಿಯನ್ನು ಮಾಡಿಸಿ ಹಲವೆಡೆಗಳಲ್ಲಿ ಅವಳ ದೇವಾಲಯ ಸ್ಥಾಪನೆಯಾಗುವಂತೆ ಪ್ರಯತ್ನ ಮಾಡಿದ್ದಿರಬೇಕು.

ಸಿರ್ಸಿಯ ಮಾರಿಯಮ್ಮನ ಮೂರ್ತಿಯಿದ್ದ ಪೆಟ್ಟಿಗೆಯನ್ನು ಹಾನಗಲ್ಲಿನಿಂದ ಯಾರೋ ತಂದು ದೇವೀ ಕೆರೆಯಲ್ಲಿ ಹುಗಿದಿದ್ದರೆಂದೂ ಆ ಪೆಟ್ಟಿಗೆ ದೊರೆತ ಮೇಲೆ ಅದರಲ್ಲಿದ್ದ ಮೂರ್ತಿಯನ್ನು ಸ್ಥಾಪಿಸಿ, ಸಿರ್ಸಿಯಲ್ಲಿ ದೇವಾಲಯವನ್ನು ಮಾಡಿ, ಹಬ್ಬವನ್ನು ಮಾಡಲು ಪ್ರಾರಂಭ ಮಾಡಿರಬೇಕೆಂದೂ ಹೇಳಿಕೆಯಿದೆ. ಅದರಿಂದಲೇ ಆ  ಕೆರೆಗೆ ದೇವಿ ಕೆರೆ ಎಂದು ಹೆಸರು ಬಂತು. ಪುರಾಣ ಕಥೆಯ ಪುನರಾವರ್ತನೆಯ ವಿಧಿ ಕ್ರಮವನ್ನು ಮಾಡುವ ರೂಢಿಯನ್ನು ಮಾರ್ಸಿಯಾ ಎಲಿಸಾದ್ ಎಂಬ ಫ್ರೆಂಚ್ ವಿದ್ವಾಂಸರು ಸಿದ್ಧ ಮಾಡಿದ್ದುಂಟು.

ಅದು ಈ ದೇವಿಯ ಹಬ್ಬದಲ್ಲಿಯೂ ಕಾಣುತ್ತದೆ. ಪುರಾಣ ದೇವತೆಗಳ ಸಮನ್ವಯ ಸಿದ್ಧಾಂತ ಹಲವು ದೇವತೆಗಳ ಚರಿತ್ರೆಯಲ್ಲಿ ಕಾಣುತ್ತದೆ. ಇಲ್ಲಿ ಮಹಿಷಾಸುರ ಮರ್ದಿನಿಯೂ ಈ ದೇವಿಯೂ ಒಬ್ಬಳೇ ಎಂಬ ತಿಳಿವಳಿಕೆಯು ಬಂದು, ಕೋಣವನ್ನು ದೇವಿ ಕೊಲ್ಲುವದು ಅವಳ ಗಂಡನೇ ಕೋಣದ ರೂಪು ಧರಿಸಿದಾಗ ಎಂದು ಕಥೆಯ ತಿರುವನ್ನು ಪಡೆಯುತ್ತದೆ. ಅವಳು ಪಾರ್ವತಿಯ ಅವತಾರವಾದುದರಿಂದ ಭಕ್ತೆಯರು ಹಾಡಿನಲ್ಲಿ ಅವಳನ್ನು ಶಿವಮ್ಮ ಎಂದೂ ಕರೆದಿದ್ದಾರೆ. ಪಾರ್ವತಿಯು ಜಗದಂಬೆ, ಎಲ್ಲರ ತಾಯಿ. ಭೂಮಿತಾಯಿಯೂ ಅವಳೇ ಎಂಬ ಭಾವನೆ ಬಂದು ಬಿಡುತ್ತದೆ. ಅವಳನ್ನೇ ದುರ್ಗಮ್ಮನೆಂದೂ ಒಂದು ಗೀತದಲ್ಲಿ ಕರೆದಿದ್ದಾರೆ.

ಮಾರಿ ಜಾತ್ರೆಯಲ್ಲಿ ಬೈಲುಸೀಮೆಯ ಕಡೆಯಿಂದ ಅನಾದಿ ಹೆಂಗಸರು ಬಂದು ಮಾರಿಯ ಕಥೆಯನ್ನು ಹಾಡಿನಲ್ಲಿ ಹೇಳುತ್ತಾರೆ. ಗಂಡನನ್ನು ಕೊಂದುದಕ್ಕೆ ಸ್ಥಳಿಕ ಚಮಗಾರ ಹೆಂಗಸರೂ ಹೊಲೆಯರೂ ಅವಳನ್ನು ಜರೆವ ಹಾಡು ಹೇಳುತ್ತಾರೆ. ಆದರೂ ಇವಳು ತಮ್ಮವನನ್ನು ಮದುವೆಯಾದುದರಿಂದ ಇವಳು ತಮ್ಮವಳೇ ಎಂಬ ಭಾವನೆ ಅವರಲ್ಲಿದೆ. ಒಲಿದರೆ ನಾರಿ, ಮುನಿದರೆ ಮಾರಿ ಎಂಬ ಗಾದೆ ಇವಳಿಂದಲೇ ಬಂದಿದೆ.

ಸಿರಸಿಯ ಸೇವಮ್ಮ ಹೆಸರೀಗೆ ಮಾ ದೊಡ್ಡವಳೇ ……
ನಾ ಬರು ದಾರೀಯ ದೊರು ಮೆಟ್ಟು ಕುಂಕುಮ ಚೆಲ್ಲೀ
ರಾಗುಟೀ ಬಿದ್ದಿದಿಯೇ ರಣದಲ್ಲೀ ||  ಶಿರಸೀಯ
ಭೂಮಲು ದೇವತೆಯ ತಳದಲ್ಲಿ ||

ದೇವಿ ಎಂಬುದು ಈ ಬ್ರಾಹ್ಮಣ ಹೆಂಗಸಿನ ಹೆಸರಾಗಿತ್ತು ಎಂದು ಕಾಣುತ್ತದೆ. ದೇವಮ್ಮ, ದೇವಕ್ಕ, ದ್ಯಾಮವ್ವ ಮುಂತಾಗಿಯೂ ಇವಳ ಹೆಸರಿನ ರೂಪಗಳು ಕಾಣುತ್ತವೆ.

ಗೋಕಾಕದ ದ್ಯಾಮವ್ವನ ಜಾತ್ರೆಯಲ್ಲಿ ದೇವಿಯ ಮೆರವಣಿಗೆಯಲ್ಲಿ ಐವತ್ತರವತ್ತು ಮಂದಿ ಪಂಜನ್ನು ಹಿಡಿದು, ಸಣ್ಣ ಕಟ್ಟಿಗೆಯ ಮೂರ್ತಿಗೆ ಪಂಜಿನಿಂದ ಇರಿಯುತ್ತ ಹೋಗುವ ಕ್ರಮವಿದೆಯೆಂದೂ ಆ ಮೂರ್ತಿ ದೇವಿಯನ್ನು ಮದುವೆಯಾದ ಹೊಲೆಯನ ಪ್ರತೀಕವೆಂದೂ ಮಿತ್ರ ಶ್ರೀ ಡಾ. ಎಂ. ಬಿ. ಕೊಟ್ರಶೆಟ್ಟಿಯವರು ಹೇಳಿದರು.

ಅವರು ಹೇಳಿದ ನಂತರ ವಿಚಾರ ಮಾಡುತ್ತಿದ್ದಾಗ ಈ ದೇವಿಯ ಸಂಪ್ರದಾಯವೇ ಜಾತಿ ವೈಷಮ್ಯದ ತಳಹದಿಯಲ್ಲಿ  ರೂಪುಗೊಂಡಿರುವದಾದರೂ ಪಂಜಿನ ದೀಪದ ಮೂಲಕ ಸುಡುವ ಕಾರ್ಯಕ್ರಮವು ಉದ್ರೇಕಕಾರಿಯೂ ಅಮಾನುಷವೂ ಎಂದು ನನಗೆ ತೋರಿತು.

ಹರಿಜನರ ವಿರುದ್ಧ ಅನೇಕ ಕಡೆಗಳಲ್ಲಿ  ನಡೆಯುತ್ತಿರುವ ಅತ್ಯಾಚಾರಗಳ ಹಿನ್ನೆಲೆಯಲ್ಲಿ ಇಂಥ ವಿಧಿಗಳನ್ನು ದೇವತೆಯ ಹೆಸರಿನಲ್ಲಿ ನಡೆಸುವದು ಜಾತಿ ವೈಷಮ್ಯಕ್ಕೆ ಹೆಚ್ಚಿನ ಪ್ರಚೋದನೆಯನ್ನು ನೀಡುವುದಾದುದರಿಂದ ಈ ಕ್ರಮವನ್ನು ಸಂಬಂಧಪಟ್ಟಿರುವ ಜನರ ಒಪ್ಪಿಗೆಯಿಂದಲೇ ನಿಲ್ಲಿಸುವದು ಸೂಕ್ತವೆಂದು ತೋರುತ್ತದೆ.

ಮಾರಿ ಕೋಣವನ್ನು ಬೆಳೆಯಿಸಿ ಅದನ್ನು ಕೊಲ್ಲುವುದನ್ನು ಮಹಾತ್ಮರ ಅನುಯಾಯಿಗಳು ಪ್ರಯತ್ನ ಮಾಡಿ ನಿಲ್ಲಿಸಿರುತ್ತಾರೆ. ಅದರಂತೆಯೇ ಈ ರೀತಿ ಪಂಜಿನಿಂದ ಸುಡುವುದು ದೈಹಿಕವಲ್ಲದಿದ್ದರೂ ಮಾನಸಿಕವಾಗಿ ಹಿಂಸಾಭಾವ ಪ್ರಚೋದಕವಾದುದರಿಂದ ಸಮಾಜದಲ್ಲಿ ಪ್ರೀತಿ ವಿಶ್ವಾಸ  ಬೆಳೆಯಬೇಕೆಂಬ ದೃಷ್ಟಿಯಿಂದ ಇದನ್ನು ನಿಲ್ಲಿಸಲೇಬೇಕು. (ಮಾರಿ ಕೋಣನ ರಕ್ತವನ್ನು ಸಿರಿಂಜಿನಿಂದ ತೆಗೆದು, ಅದನ್ನು ಮಾರಿಯಮ್ಮನ ಹಣೆಗೆ ಹಚ್ಚುವ ಕ್ರಮ ಸಿರ್ಸಿ, ಬೀಳಗಿ ಮುಂತಾದ ದೇವಾಲಯಗಳ ಮಾರಿ ಜಾತ್ರೆಯಲ್ಲಿ ರೂಢಿಯಾಗಿದೆಯಂತೆ.)

ವೀರದೇವರು

ಸತ್ತವರನ್ನು ದೇವರೆಂದು ಪೂಜಿಸುವ ಪಿತೃಪೂಜೆ

[Ancestor Worships]  ಒಂದು ಭಾಗವಾಗಿ ಸತ್ತವರನ್ನೂ ಅದರಲ್ಲಿಯೂ ವಿಶೇಷ ತ್ಯಾಗ – ಬಲಿದಾನದಿಂದ ಸತ್ತವರನ್ನೂ, ಯುದ್ಧದಲ್ಲಿ ವೀರತ್ವದಿಂದ ಕಾದಾಡಿದ ಹೆಂಗಸರನ್ನೂ ಪೂಜಿಸುವ ಕ್ರಮವು ಬಳಕೆಯಲ್ಲಿ ಬಂದಿತು.

ಯುದ್ಧದಲ್ಲಿ ಸತ್ತ ವೀರರನ್ನು ಬೀರ, ಬೀರು, ಜಟ್ಟಿಗ ಮೊದಲಾದ ಹೆಸರುಗಳಿಂದ ಪೂಜಿಸುವದು ನಮ್ಮ ಜಿಲ್ಲೆಯಲ್ಲಿ ಕಂಡುಬರುತ್ತದೆ.

ನೂರಾರು ಬೀರ ದೇವರ ದೇವಾಲಯಗಳನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಣಬಹುದು. ಅವುಗಳಲ್ಲಿ ಕುದುರೆಯೇರಿ, ಖಡ್ಗ – ಬಿಲ್ಲು – ಬಾಣ ಹಿಡಿದ ಮೂರ್ತಿಗಳೂ ಸಹಜವಾಗಿ ನಿಂತು, ಖಡ್ಗ ಇತ್ಯಾದಿ ಆಯುಧ ಹಿಡಿದ ಮೂರ್ತಿಗಳೂ ಸಾಮಾನ್ಯವಾಗಿ ಕಂಡುಬರುತ್ತದವೆ. ಕುದುರೆಯ ಮೇಲೆ ಕೂತಂತಿರುವ ಜಟ್ಟಿಗಳನ್ನು ಕುದುರೆ ಬೀರಪ್ಪ ಎಂದು ಕರೆಯುತ್ತಾರೆ.

ಇನ್ನು ಎಷ್ಟೋ ಗುಪ್ತ (ಸ್ತಾನ) ಗಳಲ್ಲಿ ಬರಿಯ ಶಿಲೆಯನ್ನು ಒಮ್ಮೊಮ್ಮೆ ಉದ್ದವಾದ ಕರಿ ಅಥವಾ ಕೆಂಪು ಕಲ್ಲನ್ನು ಸ್ಥಾಪಿಸಿರುತ್ತಾರೆ.

ಸತ್ತ ವೀರನೇ ಜಟ್ಟಿಗನಾಗಿ ಪೂಜೆ ಪಡೆವನೆಂಬುದಕ್ಕೆ ನನ್ನ  ಸಂಗ್ರಹದ ಒಂದು ಅಪ್ರಕಟಿತ ಗೀತದ ಉಲ್ಲೇಖ ಮಾಡಬಹುದು. ಆ ಗೀತ ” ಗ್ರಾಮದೊಡೆಯ ಜಟ್ಟಿಗ ದೇವ್ರು” ಎಂದು ಪ್ರಾರಂಭವಾಗುತ್ತದೆ. ಜಟ್ಟಿಗದೇವನು ಊರೂರು ತಿರುಗಿ ಮೂವರು ಹೆಂಡಿರನ್ನು ಮದುವೆಯಾದನು. ಆಮೇಲೆ ಅವನಿಗೆ ದಂಡಿನ ಓಲೆ ಬರುತ್ತದೆ. ಅವನು ದಂಡಿನ ಕಾಳಗಕ್ಕೆ ಹೋಗಿ, ಶೂರತನದಿಂದ ಹೋರಾಡಿ ಮಡಿಯುತ್ತಾನೆ.

ಅವನ ಮೂವರು ಮಡದಿಯರೂ ಅವನ ಹೆಣದ ಸಂಗಡ ಕೊಂಡಕ್ಕೆ ಬಿದ್ದು, ಒಬ್ಬಳು ಕೆಂಡದ ಮಾಸ್ತಿಯಾದಳು. ಒಬ್ಬಳು ಕೊಂಡದ ಮಾಸ್ತಿ, ಮೂರನೆಯವಳು ಕೋಳಿ ಮಾಸ್ತಿ ಎಂದೆನಿಸಿಕೊಂಡಳು. ಜಟ್ಟಿಗದೇವನು ಕುದುರೆ ಬೀರಪ್ಪ ಎಂಬ ಹೆಸರಿನಿಂದ ಇಂದಿಗೂ ಕಾರ್ನಿ ಎಂಬ ಊರಿನಲ್ಲಿ ಪೂಜಿತನಾಗಿದ್ದಾನೆ.

ಬೀರು ಜಟ್ಟಿಗ ಎಂಬ ಹೆಸರಿನ ಜಟ್ಟಿಗವು ಗುಡೇ ಅಂಗಡಿಯ ಬೀರುಗೋಳಿ (ವೀರರ ರಂಗ) ದಲ್ಲಿದೆ.

ಕುಮಾರವ್ಯಾಸನು “ಜಗಜಟ್ಟಿ ಕೌರವರಾಯ” ಎಂಬಲ್ಲಿ ಜಟ್ಟಿ ಎಂಬ ಶಬ್ದವನ್ನು ವೀರ ಎಂಬ ಅರ್ಥದಲ್ಲೇ ಉಪಯೋಗಿಸಿದ್ದಾನೆ. ಜಟ್ಟಿ ಕಾಳಗದಲ್ಲಿ ಮಡಿದವನು ಜಟ್ಟಿಗನಾಗುವುದಿಲ್ಲ. ಯಾಕೆಂದರೆ ಜಟ್ಟಿ ಕಾಳಗದಲ್ಲಿ ಜಟ್ಟಿಗಳು ಸಾಮಾನ್ಯವಾಗಿ ಸೋಲುತ್ತಾರೆ ಸಾಯುವುದಿಲ್ಲ. ಮತ್ತು ಜಟ್ಟಿ ಕಾಳಗದ ಪರಂಪರೆ ನಮ್ಮ ಜಿಲ್ಲೆಯಲ್ಲಿ ಇದ್ದಂತಿಲ್ಲ. ಜಟ್ಟಿಗ ಮೂರ್ತಿಗಳು ಊರುರುಗಳಲ್ಲಿಯೂ ಹಲವು ದೊರೆಯುತ್ತವೆ.

ಮಹಾಸತಿಯು ಗಂಡನ ಹೆಣದೊಡನೆ (ಸಹಗಮನ ಮಾಡಿ) ಮಡಿದಳು ಅಥವಾ ಗಂಡ ಸತ್ತ ಮೇಲೆ ಹೆಣ ಸಿಗದಿದ್ದರೂ ಕೊಂಡದಲ್ಲಿ ಬಿದ್ದು (ಅನುಗಮನ ಮಾಡಿ) ಸತ್ತವಳಾದುದರಿಂದ ಮಹಾಸತಿಯ ಸ್ಥಾನದಲ್ಲಿ ಜಟ್ಟಿಗದೇವ (ವೀರದೇವ) ನ ಮೂರ್ತಿಯೂ ಇರುವದು ನಿಯಮವಾಗಿದೆ. ಆದರೆ, ಜಟ್ಟಿಗಮೂರ್ತಿ ಇರುವಲ್ಲೆಲ್ಲ ಮಾಸ್ತಿಯಿರಬೇಕೆಂಬ ಕಾರಣವಿಲ್ಲ. ಹೋರಾಡಿ ಮಡಿದವನಿಗೆ  ಹೆಂಡತಿಯಿಲ್ಲದಿದ್ದಿರಬಹುದು ಅಥವಾ ಅವಳು ಸಹಗಮನ ಮಾಡಿದ್ದಿರಲಿಕಿಲ್ಲ.

ಭಟಕಳದಾಚೆ ಸಮುದ್ರದಲ್ಲಿರುವ ನೇತ್ರಾಣಿ ದ್ವೀಪದಲ್ಲಿ ಜತ್ರಾಣಿ ಜಟ್ಟಿಗ ಮತ್ತು ವಿಲ್ಲಿಮಾಸ್ತಿ ಮತ್ತು ಮಾಸ್ತಿಯರ ಕಟ್ಟಿಗೆಯ ಮುರ್ತಿಗಳಿವೆ. ಅವನ ಕೈಯಲ್ಲಿ ದೊಣ್ಣೆಯಿದೆ.

ಮಾಡಗೇರಿಯ ನಾಮಧಾರಿ ಜಾತಿಯ ರಾಮನಾಥನೆಂಬ ವೀರರು ಪರಜಾತಿಯ ಅಂದರೆ ಬಹುಶಃ ಗಾಮೊಕ್ಕಲ ಜಾತಿಯ ಹೊನ್ನಮ್ಮ ಎಂಬ ಹೆಂಗಸಿನೊಡನೆ ಪ್ರೇಮ ಸಂಬಂಧವನ್ನು ಬೆಳೆಸಿದನು.ಕೆಕ್ಕಾರಿನ ಶ್ರೀ ಮಂಜುನಾಥ ಗುನಗರ ಹೇಳಿಕೆಯಂತೆ ಗುಡಿಗಾರ ಬಂದ. ಮಾಸ್ತಿಯ ಹಬ್ಬದಲ್ಲಿ ವೇಷ ಮಾಡುವುದರಿಂದ ಆಕೆ ಗುಡಿಗಾರ ಹೆಂಗಸು. ಅವರು ” ಕೊಣಿಸುಕೆ ಕೊಂಕಣತಿ, ಕೊಂಡ ಬೀಳುಕೆ ಮಾಸ್ತಿ” ಎಂಬ ಗಾದೆಯನ್ನು ಹೇಳಿದರು. ಇಲ್ಲಿ ಕುಣಿಸುವದು ಎಂದರೆ, ಆ ವೀರನನ್ನು ಪ್ರೀತಿಸೆಂದು ಹುರಿದುಂಬಿಸಿ ಕುಂಟಲಗಿತ್ತಿಯಾದವಳು ಕೊಂಕಣತಿ. ಈ ಗಾದೆಯ ಪ್ರಕಾರ ಪ್ರೀತಿಸಿದವಳ ಹೆಸರು ಮಾಸ್ತಿ.

ಜನರು ಹೀನಾಯವಾಗಿ ಜರೆದುದರಿಂದ ಅವಳು, ನಾಚಿಕೆಯಾಗಿ  ಕೊಂಡ ಮಾಡಿಕೊಂಡು ಅದರಲ್ಲಿ ಬಿದ್ದು ಸತ್ತಳಂತೆ. ಕುಮಾರರಾಮನು ಅವಳ ಎಲಬನ್ನೆಲ್ಲಾ ಹೆಕ್ಕಿ ಕೂಡಿಸಿ, ತನ್ನ ಶಕ್ತಿಯಿಂದ ಅವಳಿಗೆ ಜೀವ ಬರುವಂತೆ ಮಾಡಿ ಅವಳನ್ನು ಕರೆ ತಂದನು ಎಂದಿದ್ದಾರೆ. ಆದರೆ ವಸ್ತುಸ್ಥಿತಿ ಹೀಗಿದ್ದರಲಾರದು.

ಕುಮಾರರಾಮನು ಚಂದಾವರದಲ್ಲಿ ಆಳುತ್ತಿದ್ದ ಮುಸಲ್ಮಾನ ರಾಜನೊಡನೆ ಯುದ್ಧ ಮಾಡಿ, ಸೋತು ಮರಣ ಹೊಂದಿರಬಹುದು. ಅವನನ್ನು ವೀರದೇವನೆಂದು ಕೆಕ್ಕಾರಿನಲ್ಲಿಯೂ  ಚಂದಾವರದಲ್ಲಿಯೂ ಮೂರ್ತಿಯನ್ನು ಮಾಡಿ ಪ್ರತಿಷ್ಠಾಪಿಸಿ ಪೂಜಿಸುತ್ತ ಬಂದಿರಬೇಕು. ಅವನ ಪ್ರೇಯಸಿ ಕೊಂಡದಲ್ಲಿ ಬಿದ್ದು ಮಾಸ್ತಿಯಾಗಿ, ಚಂದಾವರದಲ್ಲಿ ಮಾಸ್ತಿ ವಿಗ್ರಹ ಸ್ಥಾಪಿತವಾಯಿತು.

ಮಾಸ್ತಿ ಹಬ್ಬಕ್ಕೆ ಚೋಮ (ಅಥವಾ ಮುಖವಾಡ) ಧರಿಸಲು ಮೂಡಗೇರಿಯಲ್ಲಿ ಒಬ್ಬ ಬರುತ್ತಿದ್ದನು. ಅವರಿವರಲ್ಲಿ ತಂಟೆಯಾಗಿ ಮೂಡಗೇರಿಯಲ್ಲಿ  ಕುಮಾರ ರಾಮನ ದೇವಾಲಯವನ್ನು ಬೇರೆ ಬೇರೆ ಮೂರ್ತಿಗಳನ್ನು ಮಾಸ್ತಿ ವಿಗ್ರಹಗಳನ್ನೂ ಸ್ಥಾಪಿಸಿದ್ದಿರಬೇಕು.

ಮೂಡಗೇರಿ ರಾಮನಾಥ ದೇವಸ್ಥಾನದಲ್ಲಿ ಕೆಂಡದ ಮಾಸ್ತಿಯ ಗುಡಿ ರಾಮನಾಥ ದೇವಾಲಯದ ತೀರ ಸನಿಹದಲ್ಲಿದೆ. ದೇವಾಲಯದ ಮುಂದುಗಡೆ ಹೊನ್ನಮ್ಮ ಮಾಸ್ತಿಯ ಗುಡಿಯಿದೆ. ಅಲ್ಲಿ ಗಾಮೊಕ್ಕಲ ಜಾತಿಯ ಪೂಜಾರಿ ಪೂಜೆ ಸಲ್ಲಿಸುತ್ತಾರೆ.

ರಾಮನಾಥಮೂರ್ತಿಯ ಎಡಗಡೆಗೆ ನಾರಾಯಣದೇವಿಯ ವಿಗ್ರಹ, ಶಿಶುವನ್ನು ಹಿಡಿದದ್ದು ಉಂಟು. ಇವಳು ರಾಮನಾಥನ ಪತ್ನಿ.

ಹಲವರು ಮಡಿದಿದ್ದಿರಬಹುದಾದ ಯುದ್ಧದಲ್ಲಿ ಕೆಲವರ ಹೆಸರುಗಳನ್ನು ಇಲ್ಲಿಯ ಮುಖವಾಡಗಳ ಹೆಸರುಗಳಲ್ಲಿ ಗುರ್ತಿಸಬಹುದು.

ಮೂಲಕಾರ ವೈದ್ಯ ಮತ್ತು ವೈದ್ಯ ಇವರು ದಂಡಿನ ವೈದ್ಯರಾಗಿದ್ದು ಮಡಿದವರು. ಮೂರನೆಯದು ಬರ್ಗಿರಣದ ಚೋಮ. ನಾಲ್ಕುನೆಯದು ಅವನ ತಮ್ಮನ ಮುಖವಾಡ.

ಕುದುರೆಯೇರಿದ ಮನುಷ್ಯನ ಕಟ್ಟಿಗೆಯ ವಿಗ್ರಹದ ಹೆಸರು ಹಚ್ಚಾಲಿ ಕುದುರೆ ಆನೆಯೇರಿದ ಮನುಷ್ಯ ಗೋವೆಗಣಪ. (ಮುಖವಾಡದವನು) ಈ ಚೋಮಗಳನ್ನು ಹೊತ್ತವರೆಲ್ಲ ಕೆಂಡ ಹಾಯುತ್ತಾರೆ. ಮುಖ್ಯವಾದ ಹಿರಿಚೋಮ ಕುಮಾರರಾಮನಾಥನ ಮುಖವಾಡವಂತೆ.

ಅಮ್ಮನವರ ದೇವಾಲಯಗಳಿಗೆ ಸಂಬಂಧಪಟ್ಟು ಬಂಡಿಹಬ್ಬ ಎಂದು ಮಾಡುತ್ತಾರೆ. ನಾಲ್ಕು ಗಾಲಿಗಳುಳ್ಳ ಕಡಿಮೆ ಎತ್ತರವಿರುವ ಬಂಡಿಯಲ್ಲಿ ದೇವರ ಮೂರ್ತಿಯನ್ನಿಟ್ಟು ಎಳೆಯುವದರಿಂದ ಇದಕ್ಕೆ ಬಂಡಿಹಬ್ಬವೆಂದು ಹೆಸರು ಬಂದಿದೆ. ಆಮೇಲೆ ಕೆಲವು ದೇವಾಲಯಗಳಲ್ಲಿ ಬಂಡಿಗೆ ಬದಲಾಗಿ ರಥವನ್ನು ಮಾಡಿರುತ್ತಾರೆ. ಬಂಡಿ ಹಬ್ಬದಲ್ಲಿ ಕೆಂಡ ಹಾಯುವದು ಕೊಂಡದಲ್ಲಿ ಬಿದ್ದು  ಮಾಸ್ತಿಯಾದ ಅಮ್ಮನವರ ಸೂಚಕವಾಗಿದೆ. ” ಆಟ ಆಡಿ ಕೊಳ್ಳಿ ಬೀರಾಯಿತು” ಎಂಬ ಗಾದೆಯಲ್ಲಿರುವಂತೆ, ಇಂಥ ತೇರು ಜಾತ್ರೆಯಾಗುವಲ್ಲಿಯೂ ಮೊದಲಿನ ಕೆಂಡ ಬೀರುವುದನ್ನು ತೇರಿನ ಮರುದಿನ ನಡೆಸುತ್ತಾರೆ. ಹೆಗಡೆ, ಗುಡೇ ಅಂಗಡಿ, ಬರ್ಗಿ ಮುಂತಾದ ಕಡೆ ಇರುವ ಅಮ್ಮನವರೂ ಕೊಂಡದಲ್ಲಿ ಬಿದ್ದು ಮಾಸ್ತಿಯಾದ ಹೆಂಗಸರ ದೈವತ್ವಗಳೇ.

ಬರ್ಗಿಯಲ್ಲಿ ಮಂಕಾಳಮ್ಮ ಮತ್ತು ಗಟ್ಟಿಬೀರ ದೇವರ ಗುಡಿಗಳುಂಟು. ಬರ್ಗಿ ಘಟ್ಟದಲ್ಲಿನ ಒಂದು ಯುದ್ಧದಲ್ಲಿ ಒಬ್ಬ ಮಡಿದವನು ಮಹಾಪರಾಕ್ರಮಿ ಗಟ್ಟಿಬೀರನೆಂಬ ವೀರದೇವತೆಯಾದಳು. ಮಂಕಾಳಿ ಎಂಬ ಹೆಸರಿನವಳು. ಬಹುಶಃ ಅವನ ಪತ್ನಿ ಮಹಾಸತಿಯಾದಳು. ಈ ದೇವಾಲಯದ ಬಂಡಿಹಬ್ಬದಲ್ಲಿ ಗಟ್ಟಿಬೀರ ಕಲಶ ಹೊರುತ್ತಾರೆ. (ಜನಪದ ಗೀತೆಯಲ್ಲಿ ಗಟಬೀರ ಅವಳ ತಮ್ಮ ಎಂದು ಬಣ್ಣಿಸಿದುದು ಸರಿಯಲ್ಲವೆಂದೆನಿಸುತ್ತದೆ).

ಮಂಕಾಳಮ್ಮನನ್ನು ಕುರಿತ ಒಮದು ಗುಮಟೆ ಪದದಲ್ಲಿ ಬೇರೆಯೇ ಕಥೆಯಿದೆ. ಸಿರ್ಸಿ ಅಮ್ಮ್ನವರ ಏಳು ಅಕ್ಕ – ತಂಗಿಯರಲ್ಲಿ ಏಳು ಜನರ ಬಂಡಿಗಳು ಮೆರವಣಿಗೆಯಲ್ಲಿ ಬಂದಾಗ ಗಟ್ಟಬೀರ ತಡೆದನೆಂದೂ ಮುರ್ಕಂಡಿಹೊನ್ನ ಅವನೊಡನೆ ಮಾತಾಡಿ, ಮಂಕಾಳಮ್ಮ ಬರ್ಗಿಯಲ್ಲಿ ನೆಲೆಸುವಂತೆ ಮಾಡಿದನೆಂದೂ ಇದ್ದುದು ಸರಿಯೆನಿಸುವುದಿಲ್ಲ. ಮುರ್ಕಂಡಿಹೊನ್ನನ ದೇವಾಲಯ ಹನೆಹಳ್ಳಿಯಲ್ಲಿದ್ದು ಅವನೂ ಒಬ್ಬ ಬೀರ ದೇವನೇ.

ಕುಮಟಾದ ಊರಕೇರಿ ಊರಿನ ನೂರೊಂದು ಜಟ್ಟಿಗಳ ಸ್ಥಾನದಲ್ಲಿ ಮುಖ್ಯವಾಗಿ ಕುದುರೆ ಬೀರಪ್ಪ ಮತ್ತು ಮಾಳಮ್ಮ ದೇವತೆಗಳಿವೆ. ಇಲ್ಲಿ ಮುಕರಿ ಹರಿಜನರು ಮೊದಲು ಪೂಜಿಸುತ್ತಿದ್ದ ಈ ಸ್ಥಾನದ ಕುರಿತು ಜಗಳ ಹೊಡೆದಾಟ ಮಾಡಿ, ಇತ್ತೀಚೆಗೆ ನಾಮಧಾರಿಗಳು ಪೂಜೆ ಮಾಡುತ್ತಾರೆ. ಮುಕರಿ ಜಾತಿಯ ಮಾಳಮ್ಮ ಮತ್ತು ನಾಮಧಾರಿಯರ ಒಬ್ಬ ಯುವಕ ಬಹುಶಃ ಅವನನ್ನು ಜಾತಿಯಿಂದ ಹೊರಗೆ ಹಾಕಿದರು. ಈ ಜಾತಿಗಳವರಲ್ಲಿ ಹೋರಾಟ ನಡೆಯಿತು. ಈ ಹೋರಾಟದಲ್ಲಿ ಮಾಳಮ್ಮನೂ ಕುದುರೆಯೇರಿ ಕಠಾರಿ ಹಿಡಿದು ಯುದ್ದಮಾಡಿ ಮಡಿದಳು. ಅವಳ ಪ್ರಣಯಿಯೂ ಮಡಿದನು. ಹಳೆಯ ಮಾಳಮ್ಮನ ಮೂರ್ತಿ  ಕುದುರೆಯ ಮೇಲೆ ಕೂತುದು ಒಡೆದದ್ದು. ಅದೂ ಅಲ್ಲದೆ, ಹೊಸದಾಗಿ ಮಾಡಿದ ಶಿಲಾಮೂರ್ತಿ ಸಹಾ ಕಠಾರಿಯನ್ನು ಹಿಡಿದಿದ್ದೆ. ಮಾಳಮ್ಮ ಇಲ್ಲಿ ಕೊಂಡದಲ್ಲಿ ಬಿದ್ದು ಮಾಸ್ತಿಯಾದವಳಲ್ಲ. ಯುದ್ಧದಲ್ಲಿ ವೀರತನದಿಂದ ಹೋರಾಡಿ ಮಡಿದಳು. ಮಾಳಮ್ಮ ಎಂಬ ಹೆಸರು ಮುಕರಿ ಹೆಂಗಸರಲ್ಲಿ ವಿಶೇಷವಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಹಿರೇಗಂಜ ಎಂಬ ಹಳ್ಳಿಯ “ಬಳಲಿಕವ್ವ” ಗ್ರಾಮ ದೇವತೆಯ ಕತೆಯಲ್ಲಿ ಕಲಿಬೀರ. ಹುಲಿಬೀರ ಎಂಬ ತನ್ನ ಸತ್ತ ಮಕ್ಕಳಿಬ್ಬರ ತಲೆಗಳನ್ನು ಮಡಿಲಲ್ಲಿ ಕಟ್ಟಿಕೊಂಡು ದುಃಖಪಟ್ಟ ತಾಯಿಯೊಬ್ಬಳು ಅಗ್ನಿಪ್ರವೇಶ ಮಾಡಿದುದುಂಟು.

ಉಪಕಾರ ಮಾಡಿ ಸತ್ತು ದೇವತೆಯಾದುದು :

ಒಳ್ಳೆಯ ಕೆಲಸಕ್ಕಾಗಿ ಹವಣಿಸಿ, ಅಪಘಾತದಿಂದ ಮಡಿದರೂ ಸಹ ದೇವರೆಂದು ಪೂಜಿತರಾಗುವುದಕ್ಕೆ ಎರಡು ಕಥೆಗಳು ದೊರೆತಿವೆ.

ಒಂದು ಗೊಂಡರ ಮಂಡಲದ ಪದಗಳಲ್ಲಿ ಬಂದುದು.[1]  ಹೊನ್ನಮ್ಮನೆಂಬ ಹೆಸರಿನ ಹುಡುಗಿ ಬಹುಶಃ ಗೊಂಡರವಳು. ಅವಳಿಗೆ ಮುಡಿಯಲು ಸಂಪಿಗೆ ಹೂಬೇಕಾಗಿತ್ತು – ಇಟ್ಲ ಹೆಗಡೆಯೆಂಬವನು (ಬಹುಶಃ ಬ್ರಾಹ್ಮಣ) ಮರಹತ್ತಿ ಹೂ ಕೊಯ್ಯುವಾಗ, ಟೊಂಗೆ ಮುರಿದು ಬಿದ್ದು ಸತ್ತನು. ಅವನು ತನ್ನ ಸಲುವಾಗಿ ಮಡಿದನೆಂದು ಕನ್ಯೆ ಹೊನ್ನಮ್ಮನು ಅವನ ಹೆಣದೊಡನೆ ಚಿತೆಯನ್ನೇರಿ ಮಡಿದಳು. ಬಂಗ್ಲೋಡಿಯಲ್ಲಿ ಅವಳ ಮಾಸ್ತಿ ಗುಡಿಯಲ್ಲಿ ಇಟ್ಟ ಹೆಗಡೆಯ (ಜಟ್ಟಿಗ) ಮೂರ್ತಿಯೂ ಉಂಟು. ಮಹಾಸತಿಯಾದ ಹೊನ್ನಮ್ಮನಿಗೇ ಇಲ್ಲಿ ಹೆಚ್ಚಿನ ಮಹತ್ವವಿದೆ.

ಉಂಚಗಿ (ಕುಮಟಾ ತಾಲೂಕು) ಯಲ್ಲಿ ನಡೆದ ಕಥೆ ಇದೇ ಬಗೆಯದು. ಇಲ್ಲಿ ಬಾಗಿ ಎಂಬ ಮುಕರಿ ಹುಡುಗಿಗೆ ಬೇಕಾದ ಸಂಪಿಗೆ ಹೂಗಳನ್ನು ಕೊಯ್ಯಲು ಹತ್ತಿದ ಒಬ್ಬ ಹವ್ಯಕಭಟ್ಟನು ಬಿದ್ದು ಸತ್ತನು. ಬಾಗಿ ಅವನ ಹೆಂಡತಿಯಲ್ಲದಿದ್ದರೂ ಅವನ ಚಿತೆಯಲ್ಲಿ ಬಿದ್ದು ಸತ್ತಳು. ಆ ಮುಕುರಿ (ಹರಿಜನ) ಹುಡುಗಿಯ ಹಾಗೂ ಆ ಭಟ್ಟರ ಮೂರ್ತಿಗಳನ್ನು ಒಂದೇ ಶಿಲೆಯಲ್ಲಿ ಕೆತ್ತಿ ಸ್ಥಾಪಿಸಿದರು. ಈ ಮುಕುರಿ ಹುಡುಗಿಯೂ ತನ್ನ ಅಪೂರ್ವ ಬಲಿದಾನದಿಂದ ದೇವತೆಯಾಗಿ, ಜಾತಿಭೇದವನ್ನು ಮೀರಿ, ಬ್ರಾಹ್ಮಣ ಯುವಕನ ಮೂರ್ತಿಯೊಂದಿಗೆ ಪೂಜೆ ಪಡೆವಂಥವಳಾದಳು. ಇಲ್ಲಿ ಹವ್ಯಕ ಪೂಜಾರಿ ಪೂಜಿಸುತ್ತಿದ್ದರೂ, ವರ್ಷದಲ್ಲಿ ಎರಡು ದಿನ, ಮಕರ ಸಂಕ್ರಾಂತಿ ಮತ್ತು ಗಡಿಹಬ್ಬದಲ್ಲಿ ಮುಕುರಿ ಪೂಜಾರಿಗೆ ಪೂಜೆಯನ್ನು ಬಿಟ್ಟುಕೊಡುತ್ತಾರೆ. ಗಡಿಹಬ್ಬದಲ್ಲಿ ಮುಕುರಿ ಪೂಜಾರಿಗೆ ಪೂಜೆಯನ್ನು ಬಿಟ್ಟುಕೊಡುತ್ತಾರೆ. ಗಡಿಹಬ್ಬದಲ್ಲಿ ಕೋಳಿ ಬಲಿ ಕೊಡುತ್ತಾರೆ.

ಉಡುಗಲಜ್ಜಿ[2] ಊರಿನ ಹಳೆಯ ಮೊರ, ಗೆರಸಿ, ಹಚ್ಚಿಗೆ, ಕಸಬರಿಗೆ ಮುಂತಾದ್ದನ್ನು ಕೂಡಿಸಿ ತೆಗೆದುಕೊಂಡು ಹೋಗಿ ಕಟ್ಟೆಯ ಮೇಲೆ ರಾತ್ರಿ ರಾಗಿ ಹಾಕುತ್ತಾರೆ. ಜತೆಗೆ ಎರಡು ಮರದ ಹೆಣ್ಣು ಗೊಂಬೆಗಳನ್ನು ಇಡುತ್ತಾರೆ. (ಕೈತೋಳು ಅರ್ಧ ಮಾತ್ರ ಇರುವುದು ವಾಡಿಕೆ) ಇದು ಊರನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮವೆಂಬಂತೆ ತೋರುತ್ತದೆ. ಆದರೆ ಹೀಗೆ ಅವುಗಳನ್ನು ಹೊರಗೆ ಸಾಗಿಸದಿದ್ದರೆ ಮಾರಿಕಾ, ಮೈಲಿಬೇನೆ ಮುಂತಾದ ಪಿಡುಗುಗಳು ಬರುವವೆಂದು ಜನರ ನಂಬಿಕೆಯಿದೆ. ಕಸಗಿಸ ಉಡುಗಿ (ಸ್ವಚ್ಛಮಾಡಲು) ಕಸಗೂಡಿಸಿ ತೆಗೆದುಕೊಂಡು ಹೋಗುವುದರಿಂದ ಇದಕ್ಕೆ ಉಡುಗಲಜ್ಜಿ (ಒಕ್ಕಲಿಗರ ಮಾತಿನಲ್ಲಿ ವಡುಲಗಜ್ಜಿ) ಎಂದು ಹೇಳುತ್ತಿದ್ದಿರಬೇಕು. ದಾರಿಯಲ್ಲಿ ಹೋಗುವ ಒಕ್ಕಲಿಗರು (ಬ್ರಾಹ್ಮಣೇತರರು) ಇದಕ್ಕೆ ಕುಂಕುಮ, ಕಪ್ಪು ಬಳೆಗಳನ್ನು ಹಾಕಿ ಹೋಗುತ್ತಾರೆ.

ಈ ಉಡುಲಗಜ್ಜಿ ಪಿಡುಗಿನ ದೇವತೆಯೂ ಆದುದರಿಂದ ಇವಳು ಪಿಡುಗಲಜ್ಜಿಯೂ ಆಗಿರುತ್ತಾಳೆ.(ಹಾಗೆ ಕರಗುವುದಿಲ್ಲ) ಈ ಉಡುಲಗಜ್ಜಿಯನ್ನು ಊರಿಂದೂರಿಗೆ ಸಾಗಿಸಿ, ಕಡೆಗಡ ಅಘನಾಗಿನ ಉರಿನ ಹತ್ತಿರ ನದಿಯಲ್ಲಿ ಬಿಡುವರಂತೆ. ಊರಿನಿಂದ ಇದನ್ನು ಸಾಗಿಸುವದಕ್ಕೆ ಮನೆಮನೆಗಳಿಂದ ಒಂದೊಂದು ತೆಂಗಿನಕಾಯಿ ವಸೂಲ್ಮಾಡುತ್ತಾರೆ.

ಸಂಸ್ಕೃತದಲ್ಲಿ ಇವಳಿಗೆ ಶೂರ್ಪಾರಕಾ ಎಂಬ ಲಕ್ಷಣವಾದ ಹೆಸರಿದೆ. ಇದರ ಅರ್ಥ ಗೆರಸಿ ಎಂದೇ ಆಗುತ್ತದೆ. (ಈ ವಿಷಯವನ್ನು ಗೋಕರ್ಣದ ಶ್ರೀ ಸಾಂಬ ಉಪಾಧ್ಯಾಯ ಎಂಬ ಸಂಸ್ಕೃತ ವಿದ್ವಾಂಸರು ಹೇಳಿರುತ್ತಾರೆ.)

ಬಂಗಾಲ ಮಹಾರಾಷ್ಟ್ರಗಳಲ್ಲಿ ಮೈಲಿ – ಗೋಣಿದಡಾರ ಮುಂತಾದವುಗಳನ್ನು ಹಬ್ಬಿಸುವ ಶೀತಲಾದೇವಿಯುಂಟು. ಶೀತಾಳ ಶಿಡುಬು ಎಂಬ ಶಬ್ದ ಕನ್ನಡದಲ್ಲಯೂ ಇದೆಯಾದ್ದರಿಂದ ಇವಳು ಕರ್ನಾಟಕದಲ್ಲೂ ಹಾವಳಿ ಮಾಡಿದ್ದವಳೇ. ಇವಳು ಬ್ರಹ್ಮನ ಮಗಳಂತೆ.

ಡಾ. ಶಿವರಾಮ ಕಾರಂತರು ಸಿಡುಬನ್ನು ಹಬ್ಬಿಸುವವಳು ಕೋಟಲ ದೇವಿಯೆಂದೂ ಬಲೂಚಿಸ್ಥಾನ, ಗುಜರಾತ  ಮತ್ತು ಪಶ್ವಿಮ ತೀರದವರೆಗೂ ಇವಳ ಪ್ರಭಾವವಿದೆಯೆಂದೂ ಬರೆದಿದ್ದಾರೆ. ನೀರುಕೋಟಲೆ ಎಂಬ ಕಾಹಿಲೆ ಇವಳದೇ ಪ್ರಸಾದ. ಕೋಟಲೆ ಅಂದರೆ ಕಾಹಿಲೆ ಎಂಬ ಅರ್ಥವಿದೆ.

ಶೆಟವಿ :  ಮಹಾರಾಷ್ಟ್ರದಲ್ಲಿಯೂ ಧಾರವಾಡ, ಬೆಳಗಾವಿಗಳಲ್ಲಿಯೂ ಶಿಶು ಹುಟ್ಟಿದ ಐದನೆಯ ದಿನ ಅದನ್ನು ಎತ್ತಿಕೊಂಡು ಹೋಗಲು ಶೆಟವಿ ಎಂಬವಳು ಬರುವಳಂತೆ. ಧನುರ್ವಾತದ ಸೋಂಕಿನಿಂದ ಸಾವ ಶಿಶುವಿನ ಸಂದರ್ಭಕ್ಕೆ ಈ ಶೇಟವಿ ಶೆಟವಿ (ಸೆಟೆವುದು) ಕಾರಣ ಎಂದು ನಂಬಿರಬೇಕು. ಜೇನಿನಲ್ಲಿ ಉಂಗುರ ಹಾಕಿ ಶಿಶುವಿಗೆ ಜೇನನ್ನು ತಿನ್ನಿಸುತ್ತಾರೆ. ಈ ಭೂತಕ್ಕೆ ಬೆದರಿಕೆಯಾಗಲು ತಲೆಕೆಳಗೆ ಮಾಡಿದ ಮನುಷ್ಯ ಕೃತಿಗಳನ್ನು ಬಿಡಿಸಿ ಶಿಶುವಿನ ಬಳಿ ಇಡುತ್ತಾರೆ. ಜೀವತಿ ದೇವಿಯ ಪೂಜೆ ಮಾಡುತ್ತಾರೆ.

ವಮ್ಮಲತಿ : ದಿ. ಡಾ. ಪಿ. ಗುರುರಾಜ ಭಟ್ಟ ಅವರ “Studies in Tuluva History and culture”  ಎಂಬ ಗ್ರಂಥದಲ್ಲಿ ಉಮ್ಮಲತಿ ಎಂಬ  ದೇವತೆಯ ಕುರಿತು, ವಿಚಿತ್ರವಾದ ವಿಶಿಷ್ಟವಾದ ಹೆಣ್ಣು ರೂಪ a peculiar female figure” ಎಂದು ಹೇಳಲಾಗಿದೆ. ನಮ್ಮ ಕಡೆ ಒಮ್ಮಲತಿ ಎಮದು ಕರೆವ ದೆವ್ವವೇ ಇದು. ಒಮ್ಮಲತಿ ದೆವ್ವಕ್ಕೆ ಆ ಹೆಸರು ಬರಲು ಅವಳಿಗೆ ಒಂದೇ ಮೊಲೆ ಇರುವುದೇ ಕಾರಣವೆಂದು ಹೇಳುತ್ತಾರೆ.

ರಾತ್ರಿ ಹೊತ್ತಿನಲ್ಲಿ ಒಬ್ಬೊಬ್ಬರೆ ಗಂಡಸರು ಹೋಗುತ್ತಿರುವಾಗ ಹಿಂದೆ ಬಂದು “ಸುಣ್ಣಾ ಕೊಡು, ಸುಣ್ಣಾ ಕೊಡು ಎಂದು ಅವಳು ಹೇಳುತ್ತಾಳೆ.ಆಗ ಹಿಂದೆ ತಿರುಗಿ ನೋಡದೆ ಸುಮ್ಮನೆ ಮುಂದುವರಿಯಬೇಕು.ಆಗ ಸುಣ್ಣಾ ಕೊಟ್ಟರೆ ನೆಲಕ್ಕೆ ಒಗೆಯುತ್ತಾಳೆ.ಹೆಕ್ಕಲು ಬಗ್ಗಿದಾಗ ಅವಳು ತನ್ನ ಆ ಒಂದು ದೊಡ್ಡ ಮೊಲೆಯಿಂದ ಬಡಿದು ಕೊಲ್ಲುತ್ತಾಳೆ ಎಂದು ಹೇಳುತ್ತಾರೆ.

ಇಂಥಿಂಥ ಜಾಗದಲ್ಲಿ ವಮ್ಮಲತಿ ನಡೆಯುತ್ತಾಳೆ. ಆ ಜಾಗ (“ನಡೆ”) ಬಿಟ್ಟು ಮುಂದೆ ಬರುವುದಿಲ್ಲವೆಂದು ಹೇಳುತ್ತಾರೆ.

ಈ ದೆವ್ವದ ಕುರಿತು ವಿಚಾರ ಮಾಡಿದಾಗ ನನಗೆ ಹೊಳೆದ ಸಂಗತಿ ಇದು.

ತನ್ನ ಗಂಡನಿಂದ ಕಾಮತೃಪ್ತಿಯಾಗದೆ ಪರಪುರುಷನಿಂದ ಸುಖಪಡುವ ಜಾರಿಣೆಯರ ಅವಯವವನ್ನು ಕತ್ತರಿಸುವ ಶಿಕ್ಷೆ ಕೊಡುತ್ತಿದ್ದರು. “ಪರಮ ಪತಿವ್ರತೆಗೆ ಗಂಡನ್ನೊಬ್ಬ; ಮತ್ತೊಂದಕ್ಕೆರೆಗಿದೊಡೆ ಕಿವಿಮೂಗ ಕೊಯ್ವನು” ಎಂದು ಬಸವಣ್ಣನವರ ವಚನವಿದೆ.

ರಾಮನು ಶೂರ್ಪನಖಿಯನ್ನು ಲಕ್ಷ್ಮಣನ ಹತ್ತರ ಕಳಿಸುವಾಗ, ಶ್ರೀ ರಾಮನು ಅವಳ ಬೆನ್ನಿನ ಮೇಲೆ ಬರೆದು ಕಳಿಸಿದ ಪ್ರಕಾರ ಲಕ್ಷ್ಮಣನು ಅವಳ ಮೂಗನ್ನು ಕೊಯ್ದು ಕಳಿಸಿದನು ಎಂದು ವಾಲ್ಮೀಕಿ ರಾಮಾಯಣದಲ್ಲಿದೆ.

ಕನ್ನಡ ಜನಪದದಲ್ಲಿ ಪ್ರಚಾರದಲ್ಲಿದ್ದ, ಯಕ್ಷಗಾನದಲ್ಲಿ ಕಾಣುವ ರೀತ್ಯಾ ಮೂಗು ಮತ್ತು ಮೊಲೆಗಳನ್ನು ಲಕ್ಷ್ಮಣ ಕೊಯ್ದನು.(ಮೂಗು ಮೊಲೆಯ ಕೊಯ್ದ ಕೋಪಕೆ ತಾನು ಸಾಗಿಬಂದಳು ಲಂಕಾದ್ವೀಪಕೆ)

ಇದನ್ನು ಹಿನ್ನೆಲೆಯಲ್ಲಿಟ್ಟು ನೋಡಿದರೆ, ಜಾರಿಣಿಯ ಒಂದು ಮೊಲೆಯನ್ನು ಕೊಯ್ದು, ಅವಳನ್ನು ಕೊಂದ ಮೇಲೆ ಅವಳನ್ನು ದೆವ್ವವೆಂದು ಕರೆದು, ಭೀತಿಯ ಕಥೆ ಕಟ್ಟಿರುವಂತೆ ಕಾಣುತ್ತದೆ. ಮೂಗು ಮೊಲೆಯ ಎಂಬಲ್ಲಿ ಶೂರ್ಪನಖಿಯ ಒಂದೇ ಮೊಲೆಯನ್ನು ಲಕ್ಷ್ಮಣ ಕೊಯ್ದನೆಂದು ಕಂಡುಬರುವುದರಿಂದ ಶೂರ್ಪನಖಿ ಸತ್ತಮೇಲೆ ವಮ್ಮಲತಿ ದೆವ್ವವಾಗಿರಬೇಕೆಂದು ಕಾಣುತ್ತದೆ.

ಅತೃಪ್ತಳಾಗಿದ್ದ ಹೆಣ್ಣು ಸುಣ್ಣಾ ಕೊಡು ಎಂದು ಒಬ್ಬ ಗಂಡಸಿನ ಹತ್ತಿರ ಕೇಳಿದ್ದರಲ್ಲಿ ಸುಣ್ಣಾ ಕೊಡು ಎಂದುದು ಕಾಮದ ಫಲವನ್ನು ಕೇಳಿದ ಲೆಕ್ಕ.(ಹಾಗೆಯೇ ಗಂಡಸು ಎಲೆಯನ್ನು ಕೊಡು ಎಂದು ಕೇಳಿದರೆ ಮತ್ತೊಂದು ಸಂಕೇತದ ಧ್ವನಿ ಸೂಚಕ.)

ಇಲ್ಲಿ ಹೇಳಿದ ಅರ್ಥವಿದ್ದರೆ ಬಡಪಾಯಿಯನ್ನು ಬಡಿದು ಕೊಲ್ಲುವುದೇಕೆ? ಎಂದು ಯಾರಾದರೂ ಕೇಳಬಹುದು. ಬಹುಶಃ ಇಂಥ ದೆವ್ವದ ಜೊತೆಗೆ ವಿಹಾರ ಮಾಡಲು ಹುಡುಗರು ಹೋಗದಿರಲಿ ಎಂಬ ಕಾರಣದಿಂದ ಹಿರಿಯರು ಸುಳ್ಳಂಬಳ್ಳು ಕಥೆ ಕಟ್ಟಿರಬಹುದು.

ಇನ್ನು ಇಂಥ ಸಂದರ್ಭದಲ್ಲಿ ಯಾರಾರೂ ಸತ್ತುದೇ ಹೌದಾದರೆ, ಈ ಶೂರ್ಪನಖಿ ದೆವ್ವದ ಭೀಕರ ಸ್ವರೂಪವನ್ನು ನೋಡಿ ಭಯಭೀತರಾಗಿ ಹೌಹಾರಿ ಪ್ರಾಣ ಬಿಟ್ಟಿರಬಹುದು.

ಅಚ್ಚಕನ್ಯೆದೇವಕನ್ಯೆ ಎಂಬ ಜಲದೇವತೆಯರ ಸ್ಥಾನಗಳು ನಮ್ಮಲ್ಲಿವೆ. ಫಿನ್ನೊ ಉಗ್ರಿಯನ್ ಕುಲದವರಲ್ಲಿ ನೀರಿನ, ಅಡವಿಯ ದೇವತೆ ವಿರ್ ಆವಾ ಎಂಬ ಹಸರಿನಿಂದ ಉಂಟು. ನದೀ ದೇವತೆಗಳ ಕಲ್ಪನೆ ಬಹಳ ಜನಾಂಗಗಳವರಲ್ಲಿ ಉಂಟು.

ಕಲ್ಲೇಶ್ವರ ಗ್ರಾಮದಲ್ಲಿ ಗಂಗಾವಳಿ ಹೊಳೆಯ ಅಂಚಿನಲ್ಲಿ ಅಚ್ಚಕನ್ಯೆ ದೇವಕನ್ಯೆಯರ ಗುರ್ತು ಉಂಟು. ಇಲ್ಲಿ ಹಳದಿ ಬಣ್ಣದ ಕಲ್ಲುಗಳನ್ನು ಅರಿಸಿನ – ಕುಂಕುಮ ಹಾಕಿ ಪೂಜಿಸುತ್ತಾರೆ. ಸಿದ್ದಿಯರ ನಂಬಿಕೆಯ ಪ್ರಕಾರ ಇವರು ಬೆಳೆಗಳನ್ನು ನೆರೆ ಹಾವಳಿಯಿಂದ ರಕ್ಷಿಸುತ್ತಾರೆ.

ಈ ದೇವರಿಗೆ ವರ್ಷಕ್ಕೊಮ್ಮೆ ಪೂಜೆ ಸಲ್ಲಿಸುತ್ತಾರೆ.

ಆ ದಾರಿಯಲ್ಲಿ ಮದುವೆ ದಿಬ್ಬಣ ಹೋಗುವಾಗ ಕುಡಿಬಾಳೆಯಲ್ಲಿ ಎರಡು ಬಳೆ, ಹಣಿಗೆ, ಕರಿಮಣಿ ಕುಂಕುಮ, ಅಕ್ಕಿ, ತೆಂಗಿನಕಾಯಿ ಮತ್ತು ದುಡ್ಡುಗಳನ್ನಿಟ್ಟು ಹೋಗುತ್ತಾರೆ. ಹಡೆದ ಹೆಂಗಸು ಹೊಸದಾಗಿ ಈ ದಾರಿಯಲ್ಲಿ ಹೋಗುವಾಗಲೂ ಈ ರೀತಿ ಈ ದೇವತೆಗಳ ಮಡಿಲು ತುಂಬಬೇಕು.

ಗಂಗಾ ಹೊಳೆಯಲ್ಲಿ ಕಲ್ಲೇಶ್ವರಕ್ಕೆ ಹೋಗುವಾಗ ಹಗಲು ಹನ್ನೆರಡು ಗಂಟೆಗೆ ಇವರು ಹೊಳೆಯಲ್ಲಿ ಮಿಂದು ನೀರು ಕದಡುವುದೆಂದು ಆ ಬಿಳಿನೀರಿನ ಹೊಳೆಯಲ್ಲಿ ಕಪ್ಪುನೀರು ಕಾಣುವ ತಾಣವನ್ನು ತೋರುತ್ತಾರೆ.

ನಮ್ಮ ಜನಪದ ಕಥೆಯ ಪ್ರಕಾರ ದೇವಾಂಗಗಳನ್ನು ದಂಡೆಯ ಮೇಲಿಟ್ಟು ಸ್ನಾನ ಮಾಡುತ್ತದ್ದಾಗ, ಏಳು ದೇವಕನ್ಯೆಯರಲ್ಲಿ ಕಿರಿಯಳ ದೇವಾಂಗವನ್ನು ಕುರುಬರವನು ಕದ್ದನು. ಅವರು ಒಂದು ಕೇಳಿದರೂ ಕೊಡಲಿಲ್ಲ. ಕಿರಿಯಳು ಅವನ ಮಡದಿಯಾಗಿದ್ದು ಹೇಳಿದ ಕೆಲಸ ಮಾಡಬೇಕಾಯಿತು. ಒಂದು ದಿನ ದೇವಾಂಗವನ್ನು ಕದ್ದುಕೊಂಡು ದೇವಲೋಕಕ್ಕೆ ಮರಳಿದಳು. ಅಕ್ಕಂದಿರು ತಮ್ಮ ನಡುವೆ ಅವಳನ್ನು ಗುರುತಿಸಿದರೆ ಅವಳನ್ನು ಕೊಡುವೆವು ಎಂದರು. ವಜ್ರದುಂಬಿಯ ಸಹಾಯದಿಂದ ಕಂಡುಹಿಡಿದು ಅವಳೊಡನೆ ಮರಳಿದನು.


[1]      ಗೊಂಡರ ಪದಗಳು. ಪೀಠಿಕೆ, ಪುಟ ೪೦-೪೧

[2]      ಡಾ|| ಎನ್. ಆರ್. ನಾಯ್ಕರು ಮಾರಿಯಮ್ಮನೆಂದು, ತಮ್ಮ ಕಡೆ ಈ ಪದ್ಧತಿಯ ದೇವತೆಯನ್ನು ಕರೆವರೆಂದು ಬರೆದಿದ್ದಾರೆ.