ಸಮ್ಮೇಳನದ ಅಧ್ಯಕ್ಷರಾದ ಡಾ. ಎಲ್. ಆರ್ ಹೆಗಡೆಯವರೇ,
ಸ್ವಾಗತಾಧ್ಯಕ್ಷರಾದ ಡಾ. ದಿನಕರ ದೇಸಾಯಿಯವರೇ,
ಸಮ್ಮೇಳನದ ನಿರ್ದೇಶಕರಾದ ಡಾ. ಎಂ. ಎಸ್. ಸುಂಕಾಪುರ ಅವರೇ,
ಪ್ರಿ. ಕೆ. ಜಿ. ನಾಯಕ ಅವರೇ,
ಜಾನಪದ ತಜ್ಞರೇ ಹಾಗೂ ಕಲಾವಿದರೇ,

ಇತ್ತೀಚಿನ ದಿನಗಳಲ್ಲಿ ಭಾರತದ ಹಳ್ಳಿಯ ಜೀವನ ಮೈಕೊಡವಿಕೊಂಡು ತನ್ನ ಪ್ರಗತಿಗಾಗಿ ಬುದ್ಧಿಜೀವಿಗಳನ್ನು ಬಡಿದೆಬ್ಬಿಸತೊಡಗಿದೆ. ಹಳ್ಳಿಗಳ ಬದುಕು ಶ್ರೀಮಂತವಾದಂತೆ ಭಾರತಕ್ಕೊಂದು ಒಳ್ಳೆಯ ಭವಿಷ್ಯ. ಹಳ್ಳಿಗಳತ್ತ ಕೇಂದ್ರೀಕರಿಸಬಹುದಾದ ಹಲವಾರು ಮುಖಗಳಲ್ಲಿ ಸಾರಸ್ವತ ಪ್ರಪಂಚಕ್ಕೆ ಪ್ರಥಮ ಪ್ರಾಶಸ್ತ್ಯವಾದ ಸ್ಥಾನವಿದೆ. ಆಳವಾದ, ಸುಸಂಗತವಾದ ಅಧ್ಯಯನದಿಂದ ಸಂಸ್ಕೃತಿಯ ತಿಳಿವಿಗೆ, ಹೊಸ ಹೊಳವಿಗೆ ಕಾರಣವಾಗುವಂತೆ ಜನಸಾಮಾನ್ಯರೊಂದಿಗೆ ನಡೆಯುವಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚು ಸಾರ್ಥಕ್ಯವನ್ನು ಪಡೆಯುತ್ತವೆ. ಈ ದೃಷ್ಟಿಯಿಂದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಅನನ್ಯವಾದ ಮಹತ್ವವಿದೆ. ಹಳ್ಳಿಯ ಬದುಕನ್ನೇ ಅಧ್ಯಯನಕ್ಕೆತ್ತಿಕೊಂಡು, ವಿದ್ವಾಂಸರ ಗಮನವನ್ನು ಹೆಚ್ಚು ಹೆಚ್ಚು ಅತ್ತ ಸೆಳೆಯುತ್ತಿರುವದು ಅದರ ಮಹತ್ಸಾಧನೆಗಳಲ್ಲಿ ಒಂದು. ಏಳು ವರ್ಷಗಳಿಂದ ತಪ್ಪದೆ ಬೇರೆ ಬೇರೆ ಪ್ರದೇಶದಲ್ಲಿ ಜಾನಪದ ಸಮ್ಮೇಳನಗಳನ್ನು ನಡೆಯಿಸುತ್ತ ಬಂದಿರುವ ಕನ್ನಡ ಅಧ್ಯಯನ ಪೀಠವು ವಿಶ್ವ ವಿದ್ಯಾಲಯದ ಹಲವು ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಪ್ರಶಂಸನೀಯವಾದ ಕಾರ್ಯ ಮಾಡುತ್ತ ಬಂದಿದೆ. ಆ ಮೂಲಕ ಹಳ್ಳಿಯ ಜೀವನದೊಂದಿಗೆ ಸ್ಪಂದಿಸುತ್ತಿರುವದು ಗಮನಾರ್ಹವಾದ ಸಂಗತಿಯಾಗಿದೆ. ನಾಡಿನ ವಿವಿಧ ಎಡೆಯ ನುರಿತ ವಿದ್ವಾಂಸರ ಪ್ರಬುದ್ಧವಾದ ಪ್ರಬಂಧಗಳ ಮಂಡನೆ, ಹೊಸ ಹೊಸ ವಿಷಯಗಳನ್ನು ಬೆಳಕಿಗೆ ತರುವ ಚರ್ಚೆಗಳೊಂದಿಗೆ ಮುಖ್ಯವಾಗಿ ಜನಪದ ಕಲಾವಿದರನ್ನು ಗುರುತಿಸಿ, ರಂಗಕ್ಕೆ ತಂದು ಪ್ರೋತ್ಸಾಹಿಸುತ್ತಿರುವದು ಹೆಮ್ಮೆಯ ವಿಷಯ.ಒಂದೆಡೆ ಇಳಿದು ಹೋಗುತ್ತಿರುವ ಜಾನಪದವನ್ನು ಹಿಡಿದಿಡುವ ಪ್ರಯತ್ನ ಇದಾದರೆ, ಇನ್ನೊಂದೆಡೆ ಮರೆಯಾಗುತ್ತಿರುವ ಹಳ್ಳಿಯ ಕಲಾವಿದರನ್ನು ಗೌರವಿಸಿ, ಪೋಷಿಸಬೇಕಾದ ಗುರುತರ ಜವಾಬ್ದಾರಿಯೆಡೆಗೆ ಗಮನ ಸೆಳೆಯುವ ಕಾರ್ಯವಿಧವಾಗಿದೆ.

“ಅಖಿಲ ಕರ್ನಾಟಕ” ವೆಂಬ ವಿಶೇಷಣಕ್ಕೆ ತಕ್ಕಂತೆ ಬೇರೆ ಬೇರೆ ಕಡೆಗಳಲ್ಲಿ ಜಾನಪದ ಸಮ್ಮೇಳನಗಳನ್ನು ನಡೆಯಿಸುತ್ತ ಬಂದಿರುವ ಕರ್ನಾಟಕ ವಿಶ್ವವಿದ್ಯಾಲಯವು ಎಂಟನೆಯ ಸಮ್ಮೇಳನಕ್ಕೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯನ್ನು ಆಯ್ಕೆ ಮಾಡಿದುದು ವೈಶಿಷ್ಟ್ಯ ಪೂರ್ಣವಾಗಿದೆ. ಅನತಿದೂರದಲ್ಲಿ ಭೋರ್ಗರೆಯುತ್ತಿರುವ ಅರಬಿಸಮುದ್ರದ ವಿಶಾಲ ಜಲರಾಶಿ. ನಾಡಿನ ಉದ್ದಕ್ಕೂ ವ್ಯಾಪಿಸಿಕೊಂಡಿರುವ ಕಡಿದಾದ ಪಶ್ಚಿಮ ಘಟ್ಟಗಳ ಸಾಲುಗಳ ನಡುವಿನ ಈ ಪ್ರದೇಶವು ಶ್ರೀಮಂತವಾದ ಜಾನಪದ ಬದುಕನ್ನು ರೂಪಿಸಿಕೊಳ್ಳಲು ಕಾರಣವಾಗಿದೆ. ಜಾನಪಸ ವಿದ್ವಾಂಸರನ್ನು ಅಧ್ಯಯನಕ್ಕಾಗಿ ಹೆಚ್ಚು ಹೆಚ್ಚು ಆಕರ್ಷಿಸುತ್ತಿದೆ. ಕವಿರಾಜಮಾರ್ಗಕಾರನು, ಸ್ವಾಭಿಮಾನಿಗಳ್, ಗಭೀರ ಚಿತ್ತರ್, ಅತ್ಯುಗ್ರರ್ ಆ ನಾಡವರ್ಗಳ್ ಎಂದು ನಾಡವರ ಸಂಸ್ಕೃತಿಯನ್ನು  ಬಣ್ಣಿಸಿದ್ದಾನೆ. ಇಲ್ಲಿನ “ನಾಡವರ” ಜೀವನದಲ್ಲಿ ಇಂದಿಗೂ ಕವಿರಾಜ ಮಾರ್ಗಕಾರನು  ಹೆಸರಿಸಿದ ಗುಣಗಳನ್ನು ಕಾಣಬಹುದಾಗಿದೆ. ಸ್ವಾತಂತ್ರೈ ಹೋರಾಟದಲ್ಲಿ ಈ ಜನದ ಶೌರ್ಯದ ಅಮೋಘ ಕಾಣಿಕೆ ಎಂದಿಗೂ ನೆನಪಿಡುವಂಥದು. ನಾಡವರ ಈ ವೀರಬದುಕಿನೊಂದಿಗೆ ಮೇಳಗೊಂಡಿದೆ ಹಾಲಕ್ಕಿಗಳ ಕಲಾಮಯ ಬದುಕು. ಗುಮಟೆಯ ಪದಗಳು, ಹೋಳೀ ಹುಣ್ಣಿಮೆಯಲ್ಲಿ ಊರೂರಿಗೆ ಹೋಗಿ ಪ್ರದರ್ಶಿಸುವ ಸುಗ್ಗಿಯ ಕುಣಿತಗಳು ಯಾರ  ಮನವನ್ನೂ ಸೂರೆಗೊಳ್ಳುವಂಥವು. ನಾಮಧಾರಿಗಳು, ಸೊನಗಾರು, ಕೊಮಾರಪಂಥರು, ಗೌಡಸಾರಸ್ವತರು, ಹಳ್ಳಿಯವರು, ಅಗೇರು, ಮುಕ್ರೇರು, ಹರಕಂತರು, ಅಂಬಿಗರು – ಹೀಗೆ ಅನೇಕ ಜನಾಂಗಗಳ ವೈವಿಧ್ಯಪೂರ್ಣವಾದ ಬದುಕು ಇಲ್ಲಿನದು. ಇಲ್ಲಿನ ಭಾಷೆಯದೇ ಒಂದು ಸೊಗಸು. ಮಾತನಾಡುವುದು ಕನ್ನಡವೇ ಆದರೂ ಹಲವಂದದ ಕನ್ನಡದ ರುಚಿ ಈ ನಾಡಿನದು. ಒಂದೊಂದು ಜನವೂ ತಮ್ಮದೇ ಆದ ಗತ್ತು, ಗಮ್ಮತ್ತಿನಲ್ಲಿ ಮಾತನಾಡುವರು.

ಯಕ್ಷಗಾನ ಕುರಿತಾಗಿ ಈ ನಾಡನ್ನು ವಿಶೇಷವಾಗಿ ಎಣಿಸಬೇಕಗುತ್ತದೆ. ಯಕ್ಷಗಾನದ ಬಡಗುತಿಟ್ಟಿನ ಶೈಲಿಯ ಕೊನೆಯ ಸೀಮೆಯೇ ಇದು. ಬೆಳೆದವರು ಯಕ್ಷಗಾನವನ್ನು ಕೈಗೆತ್ತಿಕೊಂಡು ಹೊಸತಾಗಿಸಿದರೂ, ಅದರ ಜನಪದದ ಸ್ವರೂಪ ಕಣ್ಮರೆಯಾಗಿದೆ. ಹಳ್ಳಿಹಳ್ಳಿಗಳಲ್ಲಿ ಹಾಗೆಯೇ ಉಳಿದುಕೊಂಡಿದೆ. ಬೇಸಿಗೆ ಬಂತೆಂದರೆ ಎಲ್ಲೆಡೆ ಯಕ್ಷಗಾನಗಳದ್ದೇ ಸುಗ್ಗಿ. ಹೀಗಾಗಿ ಯಕ್ಷಗಾನದ ಇತಿಹಾಸದಲ್ಲಿ ಅಂಕೋಲೆಯ ಉತ್ತರ ಕನ್ನಡ ಪ್ರದೇಶವನ್ನು ಬಹುಮುಖ್ಯವಾಗಿ ಗಣಿಸಬೇಕಾಗುತ್ತದೆ.

ಈ ಎಲ್ಲ ಪ್ರಾಕೃತಿಕ ಬೆಡಗಿನ ಹಿನ್ನೆಲೆಯಲ್ಲಿ, ಗ್ರಾಮದೇವತೆಗಳನ್ನು ಕುರಿತು ವಿಚಾರಸಂಕಿರಣ ಅಂಕೋಲೆಯಲ್ಲಿ ಇಟ್ಟುಕೊಂಡುದಕ್ಕೆ ಅದರದೇ ಆದ ವಿಶೇಷತೆಯಿದೆ. ಉತ್ತರ ಕನ್ನಡ ಜಿಲ್ಲೆ ಬಂಡೀಹಬ್ಬದ ಹೆಸರಿನಲ್ಲಿ ಉಳಿಸಿಕೊಂಡು ಬಂದಿರುವ ಅಮ್ಮನವರ ಉತ್ಸವಗಳ ಬಹು ಹಿಂದಿನ ಪರಂಪರೆಯ ಸಂಪೂರ್ಣ ದರ್ಶನವಾಗುವದು ಅಂಕೋಲೆಯಲ್ಲೇ. ಹನ್ನೆರಡು ದಿನಗಳು ಅವ್ಯಾಹತವಾಗಿ ನಡೆಯುವ ಅಮ್ಮನವರ ಉತ್ಸವ ಜಾನಪದ ಅಧ್ಯಯನದ ದೃಷ್ಟಿಯಿಂದ ಬಹಳ ಮಹತ್ವದ್ದು ಎಂದು ಬೇರೆ ಹೇಳಬೇಕಿಲ್ಲ. ಅಂಕೋಲೆಯ ಈ ಅಮ್ಮನವರು ಭೂದೇವಿಯ ಪ್ರತೀಕವೆಂಬುದು ಇನ್ನೂ ರೋಚಕವಾದ ವಿಷುವಾಗಿದ್ದು, ಗ್ರಾಮದೇವತೆಗಳ ಪಟ್ಟಿಯಲ್ಲಿ ಹೆಚ್ಚು ಪುರಾತನವಾದುದಾಗಿದೆ ಎನ್ನಬಹುದು.

ಜಾನಪದ ಅಧ್ಯಯನ ಇತ್ತೀಚಿನ ದಶಕಗಳಲ್ಲಿ ಒಳ್ಳೇ ತೀವ್ರಗತಿಯಿಂದ ಮುಂದುವರೆದಿದೆ. ಹಾಗಿದ್ದರೂ ಸಾಹಿತ್ಯ ಪ್ರಕಾರವನ್ನು ಕುರಿತಾಗಿಯೇ ಮುಕ್ಕಾಲು ಪಾಲು ಕೆಲಸ ನಡೆಯಲಿದೆ. ಕನ್ನಡ ಅಧ್ಯಯನ ಸಂಸ್ಥೆಗಳಂಥವು ಇಂಥದೊಂದು ಹೊಸದಾದ ಗುರುತರ ಜವಾಬ್ದಾರಿಯನ್ನು ಎತ್ತಿಕೊಂಡುದು ಸಹಜವೇ ಆಗಿದೆ. ಈ ಜನಪದದ ಸಮಗ್ರ ಬದುಕನ್ನು ಅಭ್ಯಸಿಸುವತ್ತ ವಿಶೇಷ ಗಮನ ಹರಿಯತೊಡಗಿದೆ. ಮಾನವಶಾಸ್ತ್ರ, ಸಮಾಜಶಾಸ್ತ್ರ, ಮುಂತಾದ ಹಲವಾರು ಶಾಸ್ತ್ರಗಳ ಹಿನ್ನೆಲೆಯಲ್ಲಿ ತನ್ನ ದೃಷ್ಟಿಕೋನವನ್ನು ಸ್ಫಷ್ಟವಾಗಿಸುತ್ತಿದೆ. ಈ ದಿಶೆಯಲ್ಲಿ ಇಂದಿನ ಸಮ್ಮೇಳನ ಒಂದು ಮಹತ್ವದ ಹೆಜ್ಜೆ. ಗ್ರಾಮದೇವತೆಗಳ ಕುರಿತಾದ ವಿಶೇಷವಾದ ಅಧ್ಯಯನದ ಬಳುವಳಿ ಇಂದಿನ ಸಮ್ಮೇಳನದ್ದಿದ್ದು, ಭಾರತೀಯ ಸಂಸ್ಕೃತಿಯ ಮೇಲೆ ಹೊಸ ಬೆಳಕು ಚೆಲ್ಲಲು ಇದರಿಂದ ಸಾಧ್ಯವಾಗುತ್ತದೆಂದು ಬೇರೆ ಹೇಳಬೇಕಿಲ್ಲ.

ಭಾರತದಲ್ಲಿ ಇಂದಿಗೂ ಸ್ತ್ರೀದೇವತೆಗಳೇ ಪ್ರಧಾನವಾಗಿರುವದನ್ನೂ, ಆರ್ಯ ಪೂರ್ವ ಜನಾಂಗ ಸಂಸ್ಕೃತಿಯ ಗಾಢವಾದ ಹಿನ್ನೆಲೆಯಿರುವುದನ್ನು ಹೇಳುತ್ತದೆ. ರೋಗ – ರುಜಿನ, ಮಳೆ ಬೆಳೆ, ಬದುಕಿನ ಎಲ್ಲ ಬೇಕು ಬೇಡಗಳನ್ನು ಪರಿಹರಿಸಿಕೊಳ್ಳಲು ಹೆಣ್ಣು ದೇವತೆಗಳನ್ನೇ ಜನಪದರು ರೂಪಿಸಿಕೊಂಡಿರುವದನ್ನು ಇಂದಿಗೂ ಯಥೇಷ್ಟವಾಗಿ ನೋಡಬಹುದು. ದ್ಯಾಮವ್ವ, ದುರಗವ್ವಗಳಂಥ ದೇವತೆಗಳು ಗ್ರಾಮದೇವತೆಗಳಾಗಿ ಹಳ್ಳಿಯ ದೇವರ ಬಳಗಕ್ಕೆಲ್ಲ ಪ್ರಮುಖವಾಗಿ ನಿಲ್ಲುವಂತೆ,ಎಲ್ಲಮ್ಮ, ಮಾರಮ್ಮ, ಮುಂತದ ದೇವತೆಗಳು ಎಲ್ಲ ಜನರ ಹೃದಯದಲ್ಲಿ ಸ್ಥಾನಪಡೆದಿವೆ. ನಾಡಿನ ತುಂಬೆಲ್ಲ ಹಬ್ಬಿ ಹರಡಿರುವ ಈ ದೇವತೆಗಳ ವಿವರವಾದ ಅಧ್ಯಯನದಿಂದ ಭಾರತದ ಸಂಸ್ಕೃತಿಯನ್ನು ರೂಪಿಸಿದ ಜನಾಂಗದ ಬಗೆಗೆ ಹೆಚ್ಚು ಹೆಚ್ಚು ತಿಳಿಯಲು ಸಾಧ್ಯವಾಗುತ್ತದೆ. ಶೈವ, ವೈಷ್ಣವ ಸಂಪ್ರದಾಯಗಳಂತೆ ಶಾಕ್ತ ಸಂಪ್ರದಾಯವೂ ಭಾರತ ಸಂಸ್ಕೃತಿಯ ಜೀವನಾಡಿಯಾಗಿ ಹರಿದು ಬಂದಿದೆ. ಈ ದೃಷ್ಟಿಯಲ್ಲಿ ಉತ್ತರ ಭಾರತಕ್ಕಿಂತ ದಕ್ಷಿಣ ಭಾರತ ವಿಶೇಷವಾದುದನ್ನು ಹೊರಗೆಡಹಬೇಕಿದ್ದು, ಆ ದಿಶೆಯಲ್ಲಿ ಇಂಥದೊಂದು ಜಿಜ್ಞಾಸೆ ಚೇತೋಹಾರಿಯಾದುದು.

ಜನಪದ ಸಮ್ಮೇಳನದ ಇನ್ನೊಂದು ಮುಖ ಎರಡು ದಿನಗಳು ನಡೆಯಲಿರುವ ರಂಗದರ್ಶನದ್ದು. ನಾಗರಿಕ ಕಲೆಯ ದೊಡ್ಡ ಪ್ರವಾಹದೆದುರು ತಮ್ಮದಲ್ಲವೆಂದು ಹಿಂದೆ ಸರಿಯುತ್ತಿರುವ ಜನಪದ ಪ್ರತಿಭಾವಂತಿಕೆಗೆ ರಂಗದರ್ಶನದಂಥ ಕಾರ್ಯಕ್ರಮ ವಿಶೇಷವಾದ ಪ್ರಾಶಸ್ತ್ಯ ಕೊಟ್ಟು, ಅದರಲ್ಲಿರುವ ಅಳಿಸಲಾಗದ ವೈಶಿಷ್ಟ್ಯವನ್ನು ಬೊಟ್ಟು ಮಾಡಿ ತೋರಿಸುತ್ತಿದೆ. ಬೇರೆ ಬೇರೆ ಕಡೆಗಳಲ್ಲಿನ ವಿಭಿನ್ನ ಸಂಪ್ರದಾಯ ವಿಚಾರಗಳ ಸಂಗಮ ಇಲ್ಲಿ ಆಗುವುದರಿಂದ, ಇದೊಂದು ರಸಪೂರ್ಣವಾದ ಪಾಕವಾಗುವುದರೊಂದಿಗೆ, ಹೊಸ ಪ್ರಭಾವಗಳಿಗೆ, ಪರಸ್ಪರ ಕೊಡುಕೊಳುವಿಕೆಗೆ ಸಹಾಯವಾಗುತ್ತದೆ ಎಂದೂ ಆಶಿಸಬಹುದು.

ಉತ್ತರ ಕನ್ನಡ ಜಿಲ್ಲೆಯವರೇ ಆದ ಡಾ. ಎಲ್. ಆರ್ . ಹೆಗಡೆಯವರು ಕಳೆದ ಒಂದೆರಡು ದಶಕಗಳ ಅವಧಿಯಲ್ಲಿ ಕರ್ನಾಟಕ ಜಾನಪದ ಕ್ಷೇತ್ರಕ್ಕೆ ಮಹತ್ವದ ಸೇವೆಯನ್ನು ಸಲ್ಲಿಸಿದ್ದಾರೆ. ಇಂಥ ಪ್ರಖ್ಯಾತ ವಿದ್ವಾಂಸರು ಈ ಸಮ್ಮೇಳನದ ಸರ್ವಾಧ್ಯಕ್ಷರಾದುದು ನನಗೆ ಅತ್ಯಂತ ಸಂತೋಷವನ್ನುಂಟು ಮಾಡಿದೆ. ಕೆನರಾ ವೆಲ್‌ಫೇರ್ ಟ್ರಸ್ಟಿನ ಅಧ್ಯಕ್ಷರೂ, ಸ್ವಾತಂತ್ರ  ಯೋಧರೂ ಹಾಗೂ ಸುಪ್ರಸಿದ್ಧ ಸಾಹಿತಿಗಳೂ ಆದ ಡಾ. ದಿನಕರ ದೇಸಾಯಿಯವರು ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಈ ಸಮ್ಮೇಳನದ ಕರ್ಣಧಾರತ್ವವನ್ನು ವಹಿಸಿ ನಾಡಿನ ಸಮಸ್ತ ಜಾನಪದ ವಿದ್ವಾಂಸರ ಹಾಗೂ ಕಲಾವಿದರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕ್ರಿಯಾಶೀಲ ಚೇತನರಾದ ಪ್ರಿ. ಕೆ. ಜೆ. ನಾಯಕ ಹಾಗೂ ಅವರ ಸಹೋದ್ಯೋಗಿಗಳು ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ ಪ್ರಿಯರ ಸಹಕಾರದಿಂದ ಈ ಸಮ್ಮೇಳನ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ. ವಿವಿಧ ವೈಚಾರಿಕ ಗೋಷ್ಠಿಗಳಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸುವ ಪರಿಣತರು ಮಾತೃ ದೇವತೋಪಾಸನೆಯ ಬಗೆಗೆ ಹೊಸ ಕ್ಷಿತಿಜವನ್ನು ತೋರುವರೆಂದು ಹಾರೈಸುತ್ತೆನೆ. ಜಾನಪದ ಕಲಾವಿದರಿಗೂ ಕಲಾಪಟುಗಳಿಗೂ ಇಲ್ಲಿ ವಿಶೇಷ  ಪ್ರಾತಿನಿಧ್ಯ ನೀಡಿ ಅವರ ಕಲಾಭಿವ್ಯಕ್ತಿಗೆ ಸಾಮಾಜಿಕ ಮನ್ನಣೆ ದೊರೆಯುವಂತೆ ಯೋಜಿಸಿರುವದು ಗಮನಾರ್ಹವಾದ ಸಂಗತಿ. ಒಟ್ಟಿನಲ್ಲಿ ಗ್ರಾಮೀಣ ಜನತೆಯಲ್ಲಿ ವಿಶೇಷ ಆಸಕ್ತಿಯನ್ನು ಮೂಡಿಸುವ ಈ ಜಾನಪದ ಸಮ್ಮೇಳನವನ್ನು ಉದ್ಘಾಟಿಸಲು ವಿಶೇಷ ಆನಂದವಾಗುತ್ತಿದೆ. ಸರ್ವ ಶುಭವಾಗಲೆಂದು ಹಾರೈಸುತ್ತೇನೆ