ಎಂಟನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷ ಡಾ||  ಎಲ್. ಆರ್. ಹೆಗಡೆ ಅವರೆ, ಸಮ್ಮೇಳನದ ಉದ್ಘಾಟಕರು, ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳು ಆದ ಸನ್ಮಾನ್ಯ ಶ್ರೀ ಸದಾಶಿವ ಒಡೆಯರ ಅವರೆ, ಶ್ರೀಮತಿ ಸರ್ವಮಂಗಳಾದೇವಿ ಒಡೆಯರ ಅವರೆ, ಸಮ್ಮೇಳನದ ಸ್ವಾಗತಾಧ್ಯಕ್ಷರೂ, ಪೂಜ್ಯರೂ, ಆದ ಡಾ||  ದಿನಕರ ದೇಸಾಯಿ ಅವರೇ, ನಮ್ಮ ಕಾಲೇಜ ಕಮಿಟಿಯ ಅಧ್ಯಕ್ಷರೂ ಹಿರಿಯ ಸ್ವಾತಂತ್ರೈ ಯೋಧರೂ ಆದ ಶ್ರೀ ಹರಿ ಅನಂತ ಪೈ ಅವರೆ, ಸಮ್ಮೇಳನದ ನಿರ್ದೇಶಕರಾದ ಡಾ|| ಸುಂಕಾಪುರ ಅವರೇ, ಕನ್ನಡ ಅಧ್ಯಯನ ಪೀಠದ  ಎಲ್ಲ ಪ್ರಾಧ್ಯಾಪಕ ಮಿತ್ರರೆ, ಸ್ವಾಗತ ಸಮಿತಿಯ ಎಲ್ಲ ಸದಸ್ಯರುಗಳೇ, ನಮ್ಮ ಆಮಂತ್ರಣವನ್ನು ಮನ್ನಿಸಿ ಬಂದು ನೆರೆದ ಎಲ್ಲ ಮಹನೀಯರೆ ಮತ್ತು ಮಹಿಳೆಯರೆ.

ತಮ್ಮೆಲ್ಲರನ್ನೂ ಈ ಸಮ್ಮೇಳನಕ್ಕೆ ತುಂಬು ಹೃದಯದಿಂದ ಸ್ವಾಗತಿಸಲು ನನಗೆ ಅತೀವ ಸಂತೋಷ, ಹೆಮ್ಮೆ ಅನಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಉದ್ದಗಲಕ್ಕೂ ಪ್ರಾಮುಖ್ಯವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ  – ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ, ಅದೇ ರೀತಿ ಜಿಲ್ಲೆಯಲ್ಲಿ ರೈತ ಸಂಘಟನೆ ಕೈಗೊಂಡು, ಜಿಲ್ಲೆಯ ಜನಪದದ ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕ ಪ್ರಗತಿಗಾಗಿ ನಾಲ್ಕೂ ದಶಕಗಳಿಗೂ ಮಿಕ್ಕಿ ಶ್ರಮಿಸಿದ ಹಾಗೂ ತಮ್ಮ ಚಟುವಟಿಕೆಗಳು, ಕವನಗಳು ಮತ್ತು “ಜನಸೇವಕ” ಪತ್ರಿಕೆಯ ಮೂಲಕ, ಈ ಭಾಗದ ಜನಪದ ಜಾಗೃತಿಯನ್ನು ಕೈಕೊಂಡ, ಸರ್ವೆಂಟ್ಸ ಆಫ್ ಇಂಡಿಯಾ ಸೊಸೈಟಿಯ ಅಜೀವ ಸದಸ್ಯರಾದ ಮಾನ್ಯ ಡಾ|| ದಿನಕರ ದೇಸಾಯಿಯವರು ಕಟ್ಟಿ ಬೆಳೆಸಿದ ಈ ಕಾಲೇಜಿನ ಆಶ್ರಯದಲ್ಲಿ ಈ ಜನಪದ ಸಮ್ಮೇಳನ ನಡೆಯುತ್ತಿರುವುದು ತುಂಬ ಔಚಿತ್ಯ ಪೂರ್ಣವಾಗಿದೆ ಹಾಗೂ ನಮಗೆಲ್ಲ ಅಭಿಮಾನದ ಸಂಗತಿಯಾಗಿದೆ.

ಕಳೆದ ನವೆಂಬರ್ ತಿಂಗಳ ಕೊನೆಯಲ್ಲಿ ಡಾ!! ವೃಷಭೇಂದ್ರಸಾಮಿ ಅವರು ನಮಗೊಂದು ಪತ್ರ ಬರೆದು, ಈ ಸಮ್ಮೇಳನ ಅಂಕೋಲೆಯಲ್ಲಿ ನಡೆಯಬೇಕೆಂಮ ತಮ್ಮೆಲ್ಲರ ಇಚ್ಛೆ, ಮಾನ್ಯ ಕುಲಪತಿಯವರು ಕೂಡ ಇದೆ ರೀತಿ ಬಯಸಿದ್ದಾರೆ ಎಂದು ತಿಳಿಸಿದಾಗ, ಇಂಥ ಒಂದು ದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಧೈರ್ಯ ಸಾಲದ್ದರಿಂದ, ಈ ವಿಚಾರ ಪುನರ್ವಿಮರ್ಶಿಸಬೇಕು  ಎಂದು ನಾನು ಮಾನ್ಯ ಕುಲಪತಿಯವರನ್ನು ಕೇಳಿಕೊಂಡೆ. ಆದರೆ ಅವರು ಒಂದೇ ಮಾತಿನಲ್ಲಿ, ” ಈ ಸಮ್ಮೇಳನ ನಿಮ್ಮ ಕಾಲೇಜಿನ ಆಶ್ರಯದಲ್ಲಿಯೇ ನಡೆಯಬೇಕು. ಡಾ|| ದೇಸಾಯಿಯವರನ್ನು ಕರೆಯಿಸಿಕೊಳ್ಳಬೇಕು” – ಎಂದಾಗ ನಾವು ಅನಿವಾರ್ಯವಾಗಿ ಒಪ್ಪಿಕೊಳ್ಳಲೇಬೇಕಾಯಿತು.

ಈ ಮೊದಲು ಪ್ರಥಮ ನಾಲ್ಕು ಸಮ್ಮೇಳನಗಳನ್ನು ವಿಶ್ವವಿದ್ಯಾಲಯವು ತನ್ನ ಕನ್ನಡ ಅಧ್ಯಯನ ಪೀಠದ ಆಶ್ರಯದಲ್ಲಿ ಧಾರವಾಡದಲ್ಲೇ ನಡೆಸಿತು. ಐದನೆಯ ಸಮ್ಮೇಳನಗಳನ್ನು ಗುಲಬರ್ಗಾದಲ್ಲಿಯ ಸ್ನಾತಕೋತ್ತರ ಕೇಂದ್ರದ ಆಶ್ರಯದಲ್ಲಿ, ಆರನೆಯ ಸಮ್ಮೇಳನವನ್ನು ಇಳಕಲ್ಲ ಕಾಲೇಜದ ಆಶ್ರಯದಲ್ಲಿ ಹಾಗೂ ಏಳನೆಯ ಸಮ್ಮೇಳನವನ್ನು ಕಳೆದ ವರ್ಷ ಗದಗಿನ ಜೆ. ಟಿ. ಕಾಲೇಜಿನ ಆಶ್ರಯದಲ್ಲಿ ಏರ್ಪಡಿಸಿತ್ತು. ಎಂಟನೆಯ ಸಮ್ಮೇಳನ ಇಂದು ನಮ್ಮಲ್ಲಿ ನಡೆಯುತ್ತಿರುವದು ನಮಗೆಲ್ಲರಿಗೂ ಹರ್ಷವನ್ನು ತಂದಿದೆ.

“ಸಾಮೂಹಿಕ ಸೃಷ್ಟಿಯಾಗಿ, ಕಂಠಪಾಠ ಸಂಪ್ರದಾಯದಲ್ಲಿ ತಲೆಮಾರಿನಿಂದ ತಲೆಮಾರಿಗೆ ಕೊಡುಗೆಯಾಗಿ ಬರುವ ಕಥೆ, ಗೀತೆ, ಒಗಟು, ಗಾದೆ, ಐತಿಹ್ಯ, ಪುರಾಣ, ನಂಬಿಕೆ, ಮೂಢನಂಬಿಕೆ, ಆಚಾರ, ಹಬ್ಬ, ಮಂತ್ರವಿದ್ಯೆ, ಕುಶಲ ಕೈಗಾರಿಕೆ, ವೈದ್ಯ – ಇತ್ಯಾದಿಗಳು ಜಾನಪದ (Folklore)  ಎನಿಸಿಕೊಳ್ಳುವವು” – ಎಂದು “ಕನ್ನಡ ವಿಶ್ವಕೋಶ” ದ ಎಂಟನೆಯ ಸಂಪುಟದಲ್ಲಿ “ಜಾನಪದ” ದ ವ್ಯಾಖ್ಯೆ ಕೊಟ್ಟಿದೆ. ಅರೇಲಿಯೊ ಎಂ. ಎಸ್ಪಿನೋಸ್ ಎಂಬ ವಿದ್ವಾಂಸ ಜಾನಪದವನ್ನು “ಜನಪ್ರಿಯ ಜ್ಞಾನ” ಎಂದು ಸರಳವಾಗಿ, ಅರ್ಥಪೂರ್ಣವಾಗಿ ಹೆಸರಿಸಿದ್ದಾನೆ.

ಅನಕ್ಷರಸ್ಥ ಸಮಾಜದಲ್ಲಿ, ಕಂಠಪಾಠ ಸಂಪ್ರದಾಯದ ಮೂಲಕ ಊಳಿದು ಬಂದ ಸಾಹಿತ್ಯಿಕ, ಭೌತಿಕ ವರ್ಗಗಳು, ತಮ್ಮ ಜಾನಪದದ ಅಂಶಗಳಿಂದಾಗಿ ನಾಗರಿಕ ಸಮಾಜದವಕ್ಕಿಂತ ಹೆಚ್ಚು ಶ್ರೀಮಂತವಾಗಿವೆ – ಎಂಬುದು ಪ್ರಾಜ್ಞರ ಅಭಿಪ್ರಾಯ. ಜಾನಪದ ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ದಟ್ಟ ನಾಗರಿಕತೆಯ ನಡುವಿನಲ್ಲೇ ವ್ಯಕ್ತಿ ಬೆಳೆದರೂ, ಆತ ತನ್ನ ಸುತ್ತಲ ಬದುಕಿನಿಂದ – ಜಾನಪದದಿಂದ – ಸಂಪೂರ್ಣವಾಗಿ ತಪ್ಪಿಸಿಕೊಂಡಿರಲು ಸಾಧ್ಯವಿಲ್ಲ.

ಜಾನಪದ ತಲೆಮಾರಿನಿಂದ ತಲೆಮಾರಿಗೆ ಬರುವಾಗ, ಅದರ ಮೂಲ ಕರ್ತೃ ಕಣ್ಮರೆಯಾಗಿ, ಅದು ಒಟ್ಟು ಜನತೆಯ ಸೃಷ್ಟಿಯಾಗಿ, ಸೊತ್ತಾಗಿ ಉಳಿಯುತ್ತ ಬಂದಿದೆ. ಜಾನಪದದಲ್ಲಿ ಒಬ್ಬ ವ್ಯಕ್ತಿಯ ವೈಯಕ್ತಿಕ ಅನಿಸಿಕೆಗಳನ್ನು ಕಾಣುವುದಕ್ಕಿಂತ ಹೆಚ್ಚಾಗಿ, ಅವನ ಸಮಕಾಲೀನ ಜನಾಂಗದ ಅನಿಸಿಕೆಗಳನ್ನು ನಾವು ಕಾಣುತ್ತೇವೆ. ಇದರಿಂದಾಗಿ ಜಾನಪದಕ್ಕೆ ಸಾಂಸ್ಕೃತಿಕ ಮೌಲ್ಯವು ಬರುವದು. ಜನಪದ ಗೀತೆ ಜಾನಪದವಾದರೆ, ಆ ಗೀತೆಗಳಲ್ಲಿ ಹುದುಗಿರುವ ಸಂಸ್ಕೃತಿ ಮಾನವ ಶಾಸ್ತ್ರವಾಗಿರುತ್ತದೆ. ಆದುದರಿಂದಲೇ ಮಾನವ ಸಂಸ್ಕೃತಿಯ ಸಮಗ್ರ ತಿಳುವಳಿಕೆಗೆ ಜಾನಪದದ ಅಧ್ಯಯನವು ಒಂದು ಮಹತ್ತರವಾದ ಅಂಶ – ಎಂಬ ಮಾತು ಇಂದು ವಿಶ್ವ ಮಾನ್ಯವಾಗಿದೆ.

ಈಗ ಜಾನಪದ ಒಂದು ಸ್ವತಂತ್ರ ವಿಷಯವಾಗಿ ವಿಶ್ವದ ಹಲವಾರು ಕಡೆ ವಿದ್ವಾಂಸರು ಅದನ್ನು ಅಭ್ಯಾಸ ಮಾಡುತ್ತಿದ್ದಾರೆ. ಜಾನಪದವು ಒಂದು ಪ್ರತ್ಯೇಕ ಜ್ಞಾನದ ಶಾಖೆ ಎಂದು ಇಂದು ಗೌರವ ಪಡೆದಿದೆ. ಇದನ್ನು ಗಮನಿಸಿ ನಮ್ಮ ವಿಶ್ವ ವಿದ್ಯಾಲಯ ಮಟ್ಟದಲ್ಲಿಯೂ ಸ್ನಾತಕಪೂರ್ವ ಹಾಗೂ ಸ್ನಾತಕೋತ್ತರ – ಈ ಎರಡು ಹಂತಗಳಲ್ಲಿ ಜಾನಪದ ಅಭ್ಯಾಸ ನಡೆದಿದೆ.

ಈ ಜಾನಪದ ಸಾಹಿತ್ಯ ವಿವಿಧ ಜನಾಂಗಗಳ ಜೀವನದ ರೀತಿ ಮತ್ತು ಅವರು ಬಾಳುವ ನೈಸರ್ಗಿಕ ಹಿನ್ನೆಲೆ ಇವುಗಳನ್ನು ಪ್ರತಿಧ್ವನಿಸುವುದರಿಂದ ಅದು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನ ರೂಪ ಹೊಂದಿದೆ. ಉತ್ತರ ಕನ್ನಡ ಜಿಲ್ಲೆಯ ಈ ಕರಾವಳಿ ಪ್ರದೇಶದಲ್ಲಿ ಇಲ್ಲಿಯವೇ ಆದ ವಿಶಿಷ್ಟ ಜನಪದ ಸಾಹಿತ್ಯ ಹಾಗೂ ವಿವಿಧ ಜಾನಪದ ಕಲೆಗಳನ್ನು ಗುರುತಿಸಬಹುದು. ಇವುಗಳಲ್ಲಿಯ ಕೆಲವು ಪ್ರಕಾರಗಳ ಪರಿಚಯ ಈ ಸಮ್ಮೇಳನದ ಗೋಷ್ಠಿಗಳಲ್ಲಿ ಮತ್ತು ರಂಗದರ್ಶನಗಳಲ್ಲಿ ಆಗಲಿರುವದು. ಇಲ್ಲಿಯ ಜಾನಪದ ಸಾಹಿತ್ಯವನ್ನು ಗರತಿಯರ ಹಾಡುಗಳು, ಅಜ್ಜಿಯ ಕಥೆಗಳು, ರೂಪಕಗಳು, ಗಾದೆಗಳು, ಒಗಟುಗಳು, ಗಂಡಸರ ಹಾಡುಗಳು, ಮಕ್ಕಳ ಹಾಡುಗಳು – ಎಂದು ಮುಂತಾಗಿ ವಿಂಗಡಿಸಬಹುದು. ಗ್ರಾಮ ದೇವತೆಗಳು ಇಲ್ಲಿಯ ಜನಪದದ ಜೀವನದಲ್ಲಿ ಅತಿ ಮಹತ್ವದ ಪಾತ್ರವನ್ನು ಆಡಿವೆ. ಶಕ್ತಿ ದೇವತೆಯನ್ನೇ ಅಮ್ಮ, ದೇವಿ, ದುರ್ಗೆ, ಕಾಳಿಕಾ, ಮಾರಿಯಮ್ಮ, ಮಂಕಾಳಮ್ಮ, ಇತ್ಯಾದಿ ವಿವಿಧ ಹೆಸರುಗಳಿಂದ ಬೇರೆ ಬೇರೆ ಸಮಾಜದ ಜನರು ಪೂಜಿಸುತ್ತ ಬಂದಿದ್ದಾರೆ. ಈ ದೇವತೆಗಳಿಗೆ ಸಂಬಂಧಿಸಿ ಆಚರಿಸುವ ಬಂಡಿಹಬ್ಬವು ತುಂಬ ವೈಶಿಷ್ಟ್ಯ ಪೂರ್ಣವಾಗಿವೆ. ಈ ಗ್ರಾಮದೇವತೆಗಳ ಕುರಿತಾದ ಅಭ್ಯಾಸ ಮಾನವಶಾಸ್ತ್ರದ ಅಭ್ಯಾಸಕ್ಕೆ ಹೆಚ್ಚು ನೆರವಾಗಬಹುದೆಂದು ನನಗೆ ಅನಿಸುತ್ತದೆ.

ಡಾ|| ಎಲ್. ಆರ್. ಹೆಗಡೆ  ಹಾಗೂ  ಡಾ|| ಎನ್. ಆರ್. ನಾಯಕ ಇವರು ನಮ್ಮ ಜಿಲ್ಲೆಯ ಜಾನಪದ ಸಾಹಿತ್ಯ ಕಲೆಗಳ ಕುರಿತು ವಿಪುಲವಾಗಿ ಅಭ್ಯಾಸ ಮಾಡಿದ್ದಾರೆ. ಈ ಸಂದರ್ಭದಲ್ಲಿ, ಸುಮಾರು ೪೮ ವರ್ಷಗಳ ಹಿಂದೆ ಅಂದರೆ ೧೯೩೩ ರಲ್ಲಿ ನೂರೈವತ್ತು ಸುಂದರ ತ್ರಿಪದಿಗಳನ್ನೊಳಗೊಂಡ ” ಹಳ್ಳಿಯ ಹಾಡುಗಳು” ಎಂಬ ಸಂಕಲನವನ್ನು ಪ್ರಕಟಿಸಿದ ದಿವಂಗತ ವಿಠೋಬ ವೆಂಕ ನಾಯಕ ತೊರ್ಕೆ ಇವರನ್ನು ಸ್ಮರಿಸುವುದು ಸೂಕ್ತ ಎಂದು ನನಗೆ ಅನಿಸುತ್ತದೆ. ಇಲ್ಲಿಯ ಈ ಜನಪದ ಸಾಹಿತ್ಯಕ್ಷೇತ್ರ ಎಷ್ಟೊಂದು ವಿಶಾಲವಾಗಿದೆಯೆಂದರೆ, ಇನ್ನೂ ನೂರಾರು ಜನ ಇಲ್ಲಿ ಕೃಷಿ ಮಾಡಲು ಅವಕಾಶವಿದೆ. ನಾಗರಿಕತೆಯ ತೆರೆ ಈ ಸಾಹಿತ್ಯ ಕಲೆಗಳನ್ನು ಕೊಚ್ಚಿಕೊಂಡು ಹೋಗುವ ಮೊದಲೆ ಅವುಗಳ ಸಂಗ್ರಹ, ಸಂಪಾದನೆ ಆಗಬೇಕಿದೆ. ಈ ಸಮ್ಮೇಳನ ಇಂಥ ಮಹತ್ವದ ಕೆಲಸಕ್ಕೆ – ಜಾನಪದ ಸಾಹಿತ್ಯ, ಕಲೆಗಳ ಸಂಪಾದನೆಗೆ, ಅವುಗಳ ಅಭ್ಯಾಸಕ್ಕೆ ಪ್ರೇರಣೆ ನೀಡಲಿ. ಹಲವಾರು ಜನ ಈ ಕ್ಷೇತ್ರಗಳಲ್ಲಿ ದುಡಿದು ಇಲ್ಲಿಯ ಜಾನಪದ ಸಾಹಿತ್ಯ, ಕಲೆಗಳ ಮಾಹಿತಿಯನ್ನು ದೇಶದ ಬೇರೆ ಭಾಗದ ಜನರಿಗೂ ಪರಿಚಯಿಸುವಂತಾಗಲಿ, ಇಲ್ಲಿಯ ಜನರ ಜೀವನವು ಇದರಿಂದಾಗಿ ಹೆಚ್ಚು ಸುಂದರವಾಗಲಿ ಎಂದು ಹಾರೈಸುತ್ತೇನೆ.

ಇಂಥ ಒಂದು ಮಹತ್ವದ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಲು ಒಪ್ಪಿ, ಇಲ್ಲಿಗೆ ಬಂದಿರುವ ಡಾ|| ಎಲ್. ಆರ್. ಹೆಗಡೆ ಅವರನ್ನು ಸಮ್ಮೇಳನದ ಸ್ವಾಗತ ಸಮಿತಿಯ ಪರವಾಗಿ ಮತ್ತು ನೆರೆದ ಎಲ್ಲ ಮಹಾಜನರ ಪರವಾಗಿ ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಅದೇ ರೀತಿ, ಈ ಸಮ್ಮೇಳನದ ಮುಖ್ಯ ಪೋಷಕರಾಗಿ, ಪ್ರೇರಕ ಶಕ್ತಿಯಾಗಿ, ಮತ್ತು ಇದು ಇಲ್ಲಿ ಸೇರಲು ಕಾರಣೀಭೂತರಾದ ನಮ್ಮ ನೆಚ್ಚಿನ ಕುಲಪತಿ ಮಾನ್ಯ ಶ್ರೀ ಸದಾಶಿವ ಒಡೆಯರ ಅವರನ್ನೂ, ಅವರ ಜೊತೆಗೆ ಅವರ ಶ್ರೀಮತಿ ಸರ್ವಮಂಗಳಾದೇವಿ ಒಡೆಯರ ಅವರನ್ನೂ ಅತಿ ಸಂತೋಷದಿಂದ ಸ್ವಾಗತಿಸುತ್ತೇನೆ. ಶ್ರೀ ಒಡೆಯರ ಅವರು ಈ ಸಮ್ಮೇಳನವನ್ನು ಉದ್ಘಾಟಿಸುತ್ತಿರುವದು ನಮಗೆಲ್ಲ ತುಂಬ ಅಭಿಮಾನದ ವಿಷಯ. ಇದೇ ಸಮಯದಲ್ಲಿ, ನಾಳೆ ಇಲ್ಲಿ ನಡೆಯಲಿರುವ ಗೋಷ್ಠಿಗಳ ಎಲ್ಲ ಅಧ್ಯಕ್ಷರುಗಳನ್ನು ಹಾಗೂ ಗೋಷ್ಠಿಗಳಲ್ಲಿ ಭಾಗವಹಿಸಲಿರುವ ಎಲ್ಲ ವಿದ್ವಾಂಸರುಗಳನ್ನು ಸ್ವಾಗತ ಸಮಿತಿಯ ವತಿಯಿಂದ, ನೆರೆದ ಎಲ್ಲ ಮಹಾಜನರ ವತಿಯಿಂದ ಸಂತೋಷದಿಂದ ಸ್ವಾಗತಿಸುತ್ತೇನೆ. ಈ ಸಮ್ಮೇಳನದಲ್ಲಿ ಸನ್ಮಾನಿತರಾಗಲಿರುವ ಶ್ರೀ ಅಪ್ಪಾಲಾಲ ನದಾಫ, ಜಮಖಂಡಿ ಹಾಗೂ ಶ್ರೀ ಶಂಭು ಹೆಗಡೆ, ಕೆರೆಮನೆ ಇವರನ್ನು ಸಾದರದಿಂದ ಸ್ವಾಗತಿಸುತ್ತೇನೆ. ಇದೇ ಸಂದರ್ಭದಲ್ಲಿ ಇಂದು ಮತ್ತು ನಾಳೆ ನಡೆಯಲಿರುವ ” ರಂಗದರ್ಶನ” ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಎಲ್ಲ ಕಲಾವಿದರನ್ನೂ ನಾವು ಸಂತೋಷದಿಂದ ಬರಮಾಡಿಕೊಂಡು, ಈ ಎಂಟನೆಯ ಜನಪದ ಸಮ್ಮೇಳನವನ್ನು ನಮ್ಮ ಕಾಲೇಜಿನ ಆಶ್ರಯದಲ್ಲಿ ಸಂಘಟಿಸಿ ನಿರ್ದೇಶಿಸುತ್ತಿರುವ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರನ್ನು ಹಾಗೂ ಅವರ ಜೊತೆಗೂಡಿಬಂದ ಎಲ್ಲ ಪ್ರಾಧ್ಯಾಪಕ ಸ್ನೇಹಿತರನ್ನು, ವಿದ್ಯಾರ್ಥಿ ಮಿತ್ರರನ್ನು ಅತಿ ಆತ್ಮೀಯತೆಯಿಂದ ಇಲ್ಲಿ ಬರಮಾಡಿಕೊಳ್ಳುವೆ. ಈ ಸಮ್ಮೇಳನದ ಮಹತ್ವವನ್ನು ಗಮನಿಸಿ ಬಂದ ಧಾರವಾಡದ ಆಕಾಶವಾಣಿಯ ಅಧಿಕಾರಿಗಳನ್ನು ಹಾಗೂ ಪತ್ರಕರ್ತರನ್ನು ಮತ್ತು ವಾರ್ತಾ ಹಾಗೂ ಪ್ರಚಾರ ಇಲಾಖೆಯ ಅಧಿಕಾರಿಗಳನ್ನು ಸಾದರದಿಂದ ಸ್ವಾಗತಿಸುತ್ತೇನೆ.

ಕೊನೆಯದಾಗಿ, ನಮ್ಮ ಆಮಂತ್ರಣವನ್ನು ಮನ್ನಿಸಿ ಬಂದು ನೆರೆದ ಎಲ್ಲ ಮಹನೀಯರನ್ನು ಮತ್ತು ಮಹಿಳೆಯರನ್ನು ಹೃತ್ಪೂರ್ವಕ ಸ್ವಾಗತಿಸಿ, ಸಮ್ಮೇಳನದ ಮುಂದಿನ ಕಾರ್ಯಕಲಾಪಗಳಿಗೆ ಅನುವು ಮಾಡಿಕೊಡುತ್ತಿದ್ದೇನೆ.