ಮಾನ್ಯ ಕುಲಪತಿಗಳಾದ ಆರೀ ಎಸ್. ಎಸ್. ಒಡೆಯರ ಅವರೆ, ಸಮ್ಮೇಳನಾಧ್ಯಕ್ಷರಾದ ಡಾ. ಎಲ್. ಆರ್. ಹೆಗಡೆ ಅವರೆ, ಸ್ವಾಗತಾಧ್ಯಕ್ಷರಾದ ಡಾ. ದಿನಕರ ದೇಸಾಯಿ ಅವರೆ, ಜನಪದ ಕಲಾವಿದರಾದ ಶ್ರೀ ಶಂಭು ಹೆಗಡೆ ಹಾಗೂ ಶ್ರೀ ಅಪ್ಪಾಲಾಲ್ ನದಾಫ ಅವರೆ, ಕಾರ್ಯಾಧ್ಯಕ್ಷರಾದ ಪ್ರಿ. ಕೆ. ಜಿ. ನಾಯಕ ಅವರೆ, ವಿವಿಧ ಗೋಷ್ಠಿಗಳ ಅಧ್ಯಕ್ಷರೆ, ಉಪನ್ಯಾಸಕರೆ, ಜಾನಪದ ಕಲಾಪ್ರೇಮಿಗಳೆ, ಅಂಕೋಲೆಯ ಕಲಾಭಿಮಾನಿಗಳೇ,

ಕನ್ನಡ ಅಧ್ಯಯನ ಪೀಠದ ಪರವಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಪರವಾಗಿ ತಮ್ಮೆಲ್ಲರಿಗೂ ಹೃತ್ಪೂರ್ವಕ ಸ್ವಾಗತ ಕೋರುತ್ತೇನೆ.

ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠವು ಪ್ರತಿವರ್ಷ ಜಾನಪದ ಸಮ್ಮೇಳನವನ್ನು ಕಳೆದ ಎಂಟು ವರ್ಷಗಳಿಂದ ನಡೆಸಿಕೊಂಡು ಬರುತ್ತಲಿದೆ. ಮೊದಮೊದಲು ದಟ್ಟ ಹೆಜ್ಜೆಯನ್ನಿಟ್ಟ ಈ ಸಮ್ಮೇಳನವು ಬರುಬರುತ್ತ ದಿಟ್ಟ ಹೆಜ್ಜೆಗಳನ್ನು ಹಾಕುತ್ತ ನಾಡಿನ ನಾನಾ ಭಾಗಗಳಲ್ಲಿ ಸಂಚರಿಸಿ ಇಂದು ಅಂಕೋಲೆಗೆ ಸಾಗಿ ಬಂದಿದೆ. ಮೊಟ್ಟ ಮೊದಲು ನಡೆದ ನಾಲ್ಕು ಸಮ್ಮೇಳನಗಳು ಕರ್ನಾಟಕದ ವಿಶ್ವವಿದ್ಯಾಲಯದ ಆವರಣದಲ್ಲಿಯೇ ನಡೆದು ಜನಮನವನ್ನು ಸೂರೆಗೊಂಡವು. ಪಂಡಿತರಿಗೆ ವಿಚಾರ ಸಂಕಿರಣಗಳು ಹಿಡಿಸಿದವು. ರಸಿಕರಿಗೆ ರಂಗದರ್ಶನಗಳು ರಸದೂಟ ಉಣಿಸಿದವು. ಕೇಳಿದವರು, ಕಂಡವರು ಈ ಜಾನಪದ ಸಮ್ಮೇಳನಗಳು ನಮ್ಮ ವಿಶ್ವವಿದ್ಯಾಲಯದ ವೈಶಿಷ್ಟ್ಯವೆಂದು ಹೊಗಳಿದರು. ಹಿಂದಿನ ಹಾಗೂ ಇಂದಿನ ಕುಲಪತಿಗಳ ಆಸಕ್ತಿ, ಇಚ್ಚಾಶಕ್ತಿ, ಸಹಾಯ ಸಂಪದ ನಮ್ಮನ್ನಿಲ್ಲಿಗೆ ತಂದು ನಿಲ್ಲಿಸಿದೆ. ಮಾನ್ಯ ಕುಲಪತಿಗಳಾದ ಶ್ರೀ ಎಸ್. ಎಸ್, ಒಡೆಯರ ಅವರು ಕಲಾಭಿಮಾನಿಗಳು, ಜಾನಪದ ಸಂಸ್ಕೃತಿಯ ತಳಬೇರು ಬಲ್ಲವರು, ಕಲಾಭಿವೃದ್ದಿಗೆ, ಸಂಸ್ಕೃತಿಕ ಚಟುವಟಿಕೆಗಳಿಗೆ ಸಹಾಯ ಮಾಡುವಲ್ಲಿ ಅವರು ಎತ್ತಿದ ಕೈ. ವಿಶ್ವವಿದ್ಯಾಲಯದಿಂದ ಆಗ ಬೇಕಾದ ಎಲ್ಲ ಸಹಾಯವನ್ನು ಈ ಸಮ್ಮೇಳನಗಳಿಗೆ ನೀಡುತ್ತ ಬಂದಿದ್ದಾರೆ. ಇಂದಿನ ಸಮ್ಮೇಳನವನ್ನು ಉದ್ಘಾಟಿಸಲು ಸಂತೋಷದಿಂದ ಆಗಮಿಸಿದ್ದಾರೆ. ಅವರನ್ನು ಇಲ್ಲಿ ನೆನೆಯದೆ ಇರಲಾರೆವು.

ಅಖಿಲ ಕರ್ನಾಟಕ ಜಾನಪದ ಸಮ್ಮೇಳನವು ಇತ್ತಿತ್ತಲಾಗಿ ಹೊರಗಡೆಯಲ್ಲಿ ನಡೆಯ ತೊಡಗಿದೆ. ಕರೆದವರ ಮನೆಗೆ ನಾವು ನಡೆದು ಬರಲು ಸಿದ್ಧರಿದ್ದೇವೆ.ಆದರೆ ಕರೆಯುವ ಬುದ್ಧಿ ಇದ್ದವರು ಎಷ್ಟು ಜನ? ನಮಗೆ ಮಾತ್ರ ಆ ಕೊರತೆ ಅನಿಸಿಲ್ಲ. ಈಗಾಗಲೇ ಕಲಬುರ್ಗಿ, ಇಲಕಲ್ಲ, ಗದಗ ಈ ನಗರಗಳ ಕಾಲೇಜ ಪ್ರಾಧ್ಯಾಪಕರು, ಅಲ್ಲಿದ್ದ ಮಹಾಸ್ವಾಮಿಗಳು, ಪ್ರತಿಷ್ಠಿತ ಮಹನೀಯರು ನಮ್ಮ ಜಾನಪದ ಸಮ್ಮೇಳನಗಳಿಗೆ ಪ್ರೋತ್ಸಾಹವಿತ್ತು ನಡೆಯಿಸಿಕೊಟ್ಟಿದ್ದಾರೆ. ಅವರು ಮಾಡಿದ ವ್ಯವಸ್ಥೆ, ನೀಡಿದ ಪ್ರಸಾದ, ರೂಢಿಸಿದ ಆತ್ಮೀಯತೆಗಳನ್ನು ನಾವು ಮರೆಯಲಾರೆವು. ಅವು ಮರೆತರೂ ಮರೆಯಲಾರದ ಸವಿನೆನಪುಗಳು.

ಹಿಂದಿನ ಸಮ್ಮೆಳನಗಳಿಗೆ ಡಾ. ಶಿವರಾಮ ಕಾರಂತ, ಡಾ. ದೇ. ಜವರೇಗೌಡ, ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ, ಡಾ. ಜಯದೇವಿತಾಯಿ ಲಿಗಾಡೆ, ಶ್ರೀ ಜೋಳದರಾಶಿ ದೊಡ್ಡನಗೌಡ, ಶ್ರೀ  ಸಿಂಪಿ ಲಿಂಗಣ್ಣ, ಶ್ರೀ ಎಚ್. ಎಲ್. ನಾಗೇಗೌಡ – ಈ  ಜಾನಪದ ಘನ ವಿದ್ವಾಂಸರು ಅಧ್ಯಕ್ಷರಾಗಿ ಸಮ್ಮೇಳನದ ಅಭಿವೃದ್ಧಿಗೆ ಪಾಂಡಿತ್ಯ ಪೂರ್ಣ ಅಧ್ಯಕ್ಷೀಯ ಭಾಷಣಗಳನ್ನು ನೀಡಿ, ನಮ್ಮನ್ನು ಕೃತಾರ್ಥರನ್ನಾಗಿ ಮಾಡಿದ್ದಾರೆ. ಅವರು ತೋರಿದ ದಾರಿ ನಮಗಿಂದು ರಾಜಮಾರ್ಗ.

ಈ ಸಮ್ಮೇಳನಗಳ ಅಂಗವಾಗಿ ಅವ್ಯಾಹತವಾಗಿ ನಡೆಯಲಿರುವ ವಿಚಾರಸಂಕಿರಣಗಳು ಸಾಕಷ್ಟು ಯಶಸ್ವಿಯಾಗಿವೆ. ಅದಕ್ಕೆ ಮುಖ್ಯ ಕಾರಣರು ನಮ್ಮ ಜಾನಪದ ವಿದ್ವಾಂಸರು. ಅವರು ಕಷ್ಟಪಟ್ಟು ವಿಷಯ ಸಂಗ್ರಹಿಸಿ, ಶಾಸ್ತ್ರೋಸ್ತ್ರ ಸಂಶೋಧನೆ ನಡೆಸಿ, ಪ್ರಬಂಧಗಳನ್ನು ಮಂಡಿಸುತ್ತಾರೆ. ತಮ್ಮ ವಿಷಯಗಳನ್ನು ಕುರಿತು ಪ್ರಬಂಧ ಬರೆದು ಕೊಡುತ್ತಾರೆ. ಪ್ರತಿಯೊಂದು ಸಮ್ಮೇಳನದ ವಿಚಾರ ಸಂಕಿರಣ ಭಾಷಣಗಳನ್ನೂ ಅಧ್ಯಕ್ಷೀಯ ಭಾಷಣಗಳನ್ನೂ ಒಟ್ಟುಗೂಡಿಸಿ ” ಜಾನಪದ ಸಾಹಿತ್ಯ ದರ್ಶನ” ಎಂಬ ಹೆಸರಿನಲ್ಲಿ ವಿಶ್ವವಿದ್ಯಾಲಯವು ಗ್ರಂಥ ರೂಪದಲ್ಲಿ ಪ್ರಕಟಿಸುತ್ತ ಬರುತ್ತದೆ. ಆ ಕೃತಿ ಮುಂದಿನ ಸಮ್ಮೇಳನದಲ್ಲಿ ವಿದ್ವಾಂಸರೊಬ್ಬರಿಂದ ಉದ್ಘಾಟನೆ ಹೊಂದುತ್ತದೆ. ನಮ್ಮ ಪ್ರಯತ್ನವನ್ನು ಮೀರಿ ಗದಗಿನ ಸಮ್ಮೇಳನದ ದರ್ಶನ ಅಂಚಿನಲ್ಲಿದೆ. ಈ ಜಾನಪದ ಸಾಹಿತ್ಯ ದರ್ಶನ ಕೃತಿಗಳು ಜನಮೆಚ್ಚುಗೆ ಪಡೆದುದು ನಮ್ಮ ಭಾಗ್ಯವೆಂದೇ ಭಾವಿಸಿದ್ದೇವೆ. ಇದೆಲ್ಲ ನಮ್ಮ ಸಾಹಸದ ಗತವೈಭವ.

ಇಂದು ಅಂಕೋಲೆಯಲ್ಲಿ ಎಂಟನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ವಿಜೃಂಭಣೆಯಿಂದ ಜರುಗುತ್ತಲಿದೆ. ಗೋಖಲೆ ಸೆಂಟೆನರಿ ಕಾಲೇಜು ನಮ್ಮನ್ನು ಆದರದಿಂದ ಆಮಂತ್ರಿಸಿದೆ. ಈ ಕಾಲೇಜಿನ, ಪ್ರಿನ್ಸಿಪಾಲ್ ಕೆ. ಜಿ. ನಾಯಕ ಅವರು ತಮ್ಮ ಕಾಲೇಜ ಸಿಬ್ಬಂದಿಯೊಂದಿಗೆ ಅಂಕೋಲೆಯ ಮಹಾಜನರ ಉದಾರ ಸಹಾಯದೊಂದಿಗೆ ಸಮ್ಮಿಲಿತರಾಗಿ ಒಂದೇ ಸವನೆ ದುಡಿಯುತ್ತಿದ್ದಾರೆ. ಪ್ರಿ. ನಾಯಕ ಅವರು ಶಿಸ್ತಿಗೆ  ಹೆಸರಾದವರು, ಆದರಾತಿಥ್ಯಕ್ಕೆ ಮಿಗಿಲಾದವರು. ಅವರ ಅವಿರತ ಶ್ರಮಕ್ಕೆ ನಾವು ಋಣಿಯೆಂದರೆ ಸಾಲದು.

ಕೆನರಾ ವೆಲ್‌ಫೇರ್ ಟ್ರಸ್ಟಿನ ಅಧ್ಯಕ್ಷರೂ ಇಂದಿನ ಸಮ್ಮೇಳನದ ಸ್ವಾಗತಾಧ್ಯಕ್ಷರೂ ಆದ ಡಾ. ದಿನಕರ ದೇಸಾಯಿ ಅವರು ಈ ಸಮ್ಮೇಳನದ ಬೆನ್ನೆಲುಬಾಗಿ ನಿಂತು ಕಾರ್ಯ ನಿರ್ವಹಿಸುತ್ತಿರುವದು ನಮಗೆ ಸಂತೋಷದ ವಿಷಯ. ಡಾ. ದಿನಕರ ದೇಸಾಯಿ ಅವರು ಇಲ್ಲಿ ನೆರೆದ ಜನಸಮೂಹಕ್ಕೆ ತೀರ ಹತ್ತಿದವರು. ನನಗಿಂತಲೂ ಅವರು ನಿಮಗೇ ಹೆಚ್ಚು ಪರಿಚಿತರು. ಪ್ರತಿಭಾವಂತ ವಿದ್ಯಾರ್ಥಿಯಾಗಿ, ಹೆಸರಾಂತ ಸಾಹಿತಿಯಾಗಿ, ಪತ್ರಿಕೋದ್ಯಮಿಯಾಗಿ, ಶಿಕ್ಷಣ ಪ್ರೇಮಿಯಾಗಿ, ಸಮಾಜ ಸೇವಕರಾಗಿ ಅವರು ಮಾಡಿದ ನಾಡಿನ ಸೇವೆ ಅಗಣಿತವಾಗಿದೆ. ಅವರ ಮುತ್ತಿನಂತಹ ಹತ್ತು ಸಾಹಿತ್ಯ ಕೃತಿಗಳು ಅಮರವೆನಿಸಿವೆ. ಉತ್ತರ ಕನ್ನಡ ಜಿಲ್ಲೆಯ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅವರಾಡಿದ ಪಾತ್ರ ಹಿರಿದು.ಇಂದು ಈ ಭಾಗದಲ್ಲಿ, ತಲೆಯೆತ್ತಿ ನಿಂತಿರುವ ಹಾಯಸ್ಕೂಲುಗಳು, ಕಾಲೇಜುಗಳು, ವಿದ್ಯಾರ್ಥಿನಿಲಯಗಳು ಅವರ ಹೆಸರು ಹೇಳಿ ದೀಪ ಹಚ್ಚುತ್ತಲಿವೆ. ಅವರ ನಿಷ್ಕಾಮ ಸೇವೆಯನ್ನು ಮನದಂದು ಕರ್ನಾಟಕ ವಿಶ್ವವಿದ್ಯಾಲಯವು ಅವರಿಗೆ ಡಾಕ್ಟರೇಟ ಪದವಿಯನ್ನಿತ್ತು ಗೌರವಿಸುವದು ಯಥಾಯೋಗ್ಯವಾಗಿದೆ. ಇಂತಹ ಮಹನೀಯರು ಇಂದು “ಜಾನಪದ ಸಾಹಿತ್ಯ ದರ್ಶನ – ೬” ಈ ಕೃತಿಯನ್ನು ಉದ್ಘಾಟಿಸುವುದಲ್ಲದ, ಜನಪದ ಬಯಲಾಟದ ಮುಕುಟಮಣಿಯಂತಿರುವ ಶ್ರೀ ಶಂಭು ಹೆಗಡೆ ಹಾಗೂ ಅಪ್ಪಾಲಾಲ್ ನದಾಫ ಅವರನ್ನು ಸನ್ಮಾನಿಸಲಿರುವದು ತುಂಬಾ ಸಂತೋಷದ ವಿಷಯ.

ಈ ಸಮ್ಮೇಳನಕ್ಕೆ ಹಿರಿಯ ಅಧ್ಯಕ್ಷರಾಗಿ ಆಯ್ಕೆ ಹೊಂದಿದವರು ನನ್ನ ಸ್ನೇಹಿತರಾದ ಡಾ. ಎಲ್. ಆರ್. ಹೆಗಡೆ ಅವರು. ಕನ್ನಡ ಪ್ರಾಧ್ಯಾಪಕರಾಗಿ, ಸಾಹಿತಿಗಳಾಗಿ, ವಿಮರ್ಶಕರಾಗಿ ಅವರು ಮಾಡಿದ ಸಾಹಿತ್ಯ ಸೇವೆ ಘನನೀಯವಾದುದು. ಕಾವ್ಯ ವ್ಯಾಸಂಗ, ಜೈನ ಮಹಾಭಾರತ, ಕುಮಾರ ವ್ಯಾಸನ ಪಾತ್ರಸೃಷ್ಟಿ ಮುಂತಾದ ಕೃತಿಗಳು  ಜನಮೆಚ್ಚುಗೆಗೆ ಪಾತ್ರವಾಗಿವೆ. ಅವರು ಬರೆದ “ಕುಮಾರ ವ್ಯಾಸನ ಪಾತ್ರ ಸೃಷ್ಟಿ” ಮಹಾಪ್ರಬಂಧವನ್ನು ಮೆಚ್ಚಿಕೊಂಡು ಕರ್ನಾಟಕ ವಿಶ್ವವಿದ್ಯಾಲಯವು ಅವರಿಗೆ ಪಿಎಚ್‌ಡಿ ಪದವಿ ನೀಡಿದೆ.

ಡಾ. ಎಲ್. ಆರ್. ಹೆಗಡೆ ಅವರು ಶಿಷ್ಟ ಸಾಹಿತ್ಯಕ್ಕಿಂತಲೂ ಹೆಚ್ಚಾಗಿ ಅವರು ಸಂಗ್ರಹಿಸಿ, ಸಂಶೋಧಿಸಿ, ಸಂಪಾದಿಸಿದ ಕೃತಿಗಳು ೨೫ ಕ್ಕೂ ಹೆಚ್ಚು. ಉತ್ತರ ಕನ್ನಡ ಜಿಲ್ಲೆಯ ಜನಪದ ಕಥೆ, ಗೀತ, ಲಾವಣಿ, ಹಾಡು ಮುಂತಾದವುಗಳನ್ನು ಸಂಗ್ರಹಿಸಿದ್ದಲ್ಲದೆ ಆಯಾ ಕೃತಿಗಳಿಗೆ ಸುದೀರ್ಘವಾದ, ಪಾಂಡಿತ್ಯ ಪೂರ್ಣವಾದ ಮುನ್ನುಡಿ, ಹಿನ್ನುಡಿ, ವಿಮರ್ಶಾತ್ಮಕ ವಿವೇಚನೆ ನೀಡಿರುವದು ಗಮನಾರ್ಹವಾಗಿದೆ. ಜಾನಪದ ಅವರ ಜೀವನದ ಉಸಿರಾಗಿದೆ, ಬಾಳಿನ ಬೆಳಕಾಗಿದೆ; ಮೇಲಾಗಿ, ಕರಾವಳಿ ಪ್ರದೇಶದ ಸಂಸ್ಕೃತಿಯ ಹೆಗ್ಗುರುತಾಗಿದೆ. ಉತ್ತರ ಕನ್ನಡ ಜಾನಪದ ಕಥೆಗಳು, ಜಾನಪದ ಕಥಗಳು, ನಮ್ಮ ಜಾನಪದ ಕಥೆಗಳು, ಸಿದ್ದಿಯರ ಕಥೆಗಳು. ಡಾ. ಹೆಗಡೆಯವರ ಕಥಾ ಪ್ರಪಂಚದ ಮಾದರಿಗಳೆನ್ನಬಹುದು. ಕರ್ನಾಟಕ ಕರಾವಳಿಯ ಜಾನಪದ ಗೀತಗಳು, ಕೆಲವು ಲಾವಣಿಗಳು, ಗುಮಟೆಯ ಪದಗಳು, ಗುಮ್ಮನ ಪದಗಳು, ಗೊಂಡರ ಪದಗಳು, ತಿಮ್ಮಕ್ಕನ ಪದಗಳು, ಹಾಡುಂಟೆ ನನ್ನ ಮನದಲ್ಲಿ, ಮೊದಲಾದ ಗೀತ ಸಂಗ್ರಹಗಳು ಕರಾವಳಿ ಪ್ರದೇಶದ ಸೊಲ್ಲು – ಪ್ರತಿ ಸೊಲ್ಲುಗಳನ್ನು ನಿದರ್ಶನಕ್ಕೆ ತಂದಿವೆ. ಈ ಸಂಗ್ರಹ ರಾಶಿಯೊಡನೆ ಕನ್ನಡ ಜನಪದ ಸಾಹಿತ್ಯ, ಜನಪದ ಜೀವನ ಮತ್ತು ಕಲೆ, ಜನಪದ ಸಾಹಿತ್ಯ ಮೂಢನಂಬಿಕೆಗಳು ಮುಂತಾದವು ಸೇರಿರುವದು ಯೋಚನೆ, ವಿವೇಚನೆ, ವಿಮರ್ಶೆಗಳಿಗೆ ಕಳೆ ತಂದಿವೆ. ಇವುಗಳಲ್ಲಿ ಕೆವು ಕೃತಿಗಳನ್ನು ನಮ್ಮ ನಾಡಿನ ಮೂರೂ ವಿಶ್ವವಿದ್ಯಾಲಯಗಳು, ಸಾಹಿತ್ಯ ಪರಿಷತ್ತು ಪ್ರಕಟಿಸಿ ತಂತಮ್ಮ ಕೃತಿ ಬಲವನ್ನು ಹೆಚ್ಚಿಸಿಕೊಂಡಿವೆ. ಡಾ. ಹೆಗಡೆಯವರ ಜಾನಪದ ಸೇವೆಯನ್ನು  ಮನಗಂಡು ಕರ್ನಾಟಕ ಜಾನಪದ ಅಕಾಡಮಿ ತನ್ನ ಸದಸ್ಯನನ್ನಾಗಿ ಆರಿಸಿಕೊಂಡಿದೆ. ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ನಮ್ಮವರೇ ಆದ ಡಾ.ಎಲ್. ಆರ್. ಹೆಗಡೆ ಅವರು ನಮ್ಮ ಕಣ್ಣಲ್ಲಿ ಎದ್ದು ಕಾಣದಿರಬಹುದು, ಅದು ದೃಷ್ಟಿದೋಷವೆಂದೇ ಹೇಳಬೇಕು. ಗುಣಕ್ಕೆ ಮತ್ಸರವುಂಟೆ ? ಜಾನಪದ ಘನ ವಿದ್ವಾಂಸರಾದ ಡಾ. ಎಲ್. ಆರ್. ಹೆಗಡೆ ಅವರು ಈ ಎಂಟನೆಯ ಜಾನಪಸ ಸಮ್ಮೇಳನದ ಅಧ್ಯಕ್ಷರಾಗಿ ದೊರೆತುದು ನಮ್ಮ ಭಾಗ್ಯವೆಂದೇ ನನ್ನ ಭಾವನೆ.

ಜಾನಪದ ಸಾಹಿತ್ಯ, ಕಲೆ, ವಿಜ್ಞಾನ ಬೆಳೆಯಬೇಕಾದರೆ ಸಾಹಿತಿಗಳಿಗೆ, ಕಲಾಕಾರರಿಗೆ ಸನ್ಮಾನ ಮಾಡಿ, ಅವರನ್ನು ಹುರುದುಂಬಿಸುವದು ಸಮ್ಮೇಳನದ ಕಾರ್ಯಗಳಲ್ಲಿ ಪ್ರಾಮುಖ್ಯವಾದ ಒಂದು ಅಂಶ. ಇದನ್ನರಿತ ಹಿರಿಯರು ಈ ಸಲ ಇಬ್ಬರು ಖ್ಯಾತ ಕಲಾಕಾರರಿಗೆ ಸನ್ಮಾನದ ಏರ್ಪಾಡು ಮಾಡಿದ್ದಾರೆ. ಇಷ್ಟರಲ್ಲಿಯೇ  ಶ್ರೀ ಶಂಭು ಮತ್ತು ಸಪ್ಪಾಲಾಲ ನದಾಫರ ಸನ್ಮಾನ ಜರುಗಲಿದೆ. ಇವರೀರ್ವರ ಕಲಾಸೇವೆಯನ್ನು ಎಷ್ಟು ಹೊಗಳಿದರೂ ಕಡಿಮೆಯೆ ಸರಿ.

ಶ್ರೀ ಶಂಭು ಹೆಗಡೆ ಕೆರೆಮನೆ ಅವರು ಉನ್ನತ ಪದವಿದರರಲ್ಲ; ಎಸ್. ಎಸ್. ಎಲ್. ಸಿ ಯವರೆಗೆ ಓದಿ ಒಂದು ವರ್ಷ ಶಾಲಾಶಿಕ್ಷಕರಾಗಿ ಕೆಲಸ ಮಾಡಿದವರು. ಬಾಲ್ಯದಿಂದಲೂ ಅವರಿಗೆ ರಂಗಭೂಮಿಯಲ್ಲಿ ಆಸಕ್ತಿ. ಪಾತ್ರಧರಿಸುವದು ಅವರ ಚಟ. ಅವರ ಅರ್ಥ‌ಭಿನಯ, ಹಾವಭಾವ, ಕುಣಿತ, ಮಾತುಗಾರಿಕೆ ಪ್ರೇಕ್ಷಕರನ್ನು ಬೆರಗು ಗೊಳಿಸುತ್ತ ಬಂದಿವೆ. ಕ್ರಿ. ಶ. ೧೯೫೯ ರಲ್ಲಯೇ ಅವರ ಬಣ್ಣ್ದ ಬದುಕು ರೂಪಗೊಂಡಿತು. ಮೊಟ್ಟಮೊದಲು ಸಾಲಿಗ್ರಾಮ ಮೇಳ ಅವರನ್ನು ಬರಮಾಡಿಕೊಂಡಿತು. ವೇಷಕಟ್ಟಿ ಕುಣಿದದ್ದೂ ಆಯಿತು. ನಂತರ ೧೯೭೩ ರ ಸುಮಾರಿಗೆ ಅವರು ಇಡಗುಂಜಿ ಮಹಾಗಣಪತಿ  ಯಕ್ಷಗಾನ ಮಂಡಳಿಗೆ ಪುನರ್ಜನ್ಮವಿತ್ತು ಅದನ್ನು ಅಚ್ಚುಕಟ್ಟಾಗಿ ನಡೆಯಿಸಿಕೊಂಡು ಬಂದಿದ್ದಾರೆ. ಯಕ್ಷಗಾನ ರಂಗಭೂಮಿಗೆ ಅರ್ಧಚಂದ್ರಾಕೃತಿಯ ರಂಗಸಜ್ಜಿಕೆಯನ್ನು ಜೋಡಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಹಿಂದೊಮ್ಮೆ ಇವರು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಕಲಾ ಸೇವೆಯನ್ನು ಮೆಚ್ಚಿಕೊಂಡು ಅಕಾಡೆಮಿಯವರು ಮಾಸಾಶನ ನೀಡಿ ಗೌರವಿಸಿದ್ದಾರೆ. ಅನೇಕ ಸಮಾರಂಭಗಳಲ್ಲಿ ಅವರ ನಟನೆಯನ್ನು ಮೆಚ್ಚಿ ಸನ್ಮಾನ ಸಲ್ಲಿಸಿದುಂಟು. ಇಮದು ಕರ್ನಾಟಕ ವಿಶ್ವವಿದ್ಯಾಲಯವು ಈ ಕಲಾವಿದನಿಗೆ ತನ್ನ ಅಭೂತ ಪೂರ್ವ ಸನ್ಮಾನ ನೀಡಲಿದೆ.

ಶ್ರೀ ಅಪ್ಪಾಲಾಲ ನದಾಫರು ಜಮಖಂಡಿ ಭಾಗದವರು, ಚಿಕ್ಕಂದಿನಲ್ಲಿಯೇ ಶ್ರಿ ಕೃಷ್ಣ ಪಾರಿಜಾತದತ್ತ ಇವರ ಒಲವು. ಈ ಬಯಲಾಟದ ಯಾವ ಪಾತ್ರವನ್ನಾದರೂ ಇವರು ನಿರ್ವಹಿಸ ಬಲ್ಲರು. ಶ್ರೀ ಕೃಷ್ಣನ ಪಾತ್ರವೆಂದರೆ ಇವರಿಗೆ ಅಚ್ಚುಮೆಚ್ಚು. ಕೊರವಂಜಿ ಪಾತ್ರ ಧರಿಸಲು ಹೆಚ್ಚಿನ ಹುಚ್ಚು. ಈ ಪಾತ್ರ ಧರಿಸಿ ರಂಗಕ್ಕೇರಿದ ನದಾಫರು ಪ್ರೇಕ್ಷಕರನ್ನೆ ಹುಚ್ಚರನ್ನಾಗಿ ಮಾಡಿದ ಸಂದಂರ್ಭಗಳಿವೆ. ಅಂತಹ ಅಗಾಧವಾದ ನೈಪುಣ್ಯ ಇವರ ಹಾಡುಗಾರಿಕೆಯಲ್ಲಿದೆ. ಶ್ರೀ ಕೃಷ್ಣ ಪಾರಿಜಾತವೆಂದರೆ ಅವರೋಹಣ, ಆರೋಹಣಗಳನ್ನು ಆಧರಿಸಿ ಸ್ವರವೆತ್ತಿ ಹಾಡುವದು. ಈ ಸಾಧನೆಯನ್ನು ಸಿದ್ಧಿಗೆ ತಂದ ಆರೀ ಅಪ್ಪಾಲಾಲ ಅವರು ತಮ್ಮ ಮಧುರಕಂಠದಿಂದ, ಹಾಡಿ “ಪಾರಿಜಾತ ಕೋಗಿಲೆ” ಎನಿಸಿಕೊಂಡಿದ್ದಾರೆ. ಮೈಸೂರು, ಬೆಂಗಳೂರುಗಳಲ್ಲಿ ಸಹ ಇವರ ಆಟಗಳು ನಡೆದು ರಸಿಕರ ಮೆಚ್ಚುಗೆ ಪಡೆದಿವೆ. ಅಕಾಡಮಿ ಅವರು ಇವರಿಗೆ ಮಾಸಾಶನ ನೀಡಿದ್ದಲ್ಲದೆ ಮೊನ್ನೆ ಮೊನ್ನೆ ಇವರನ್ನು ಅದಕ್ಕೆ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಾರೆ. ಇಂದು ನಮ್ಮ ಕರ್ನಾಟಕ ಜಾನಪದ ಸಮ್ಮೇಳನದ ಸನ್ಮಾನಕ್ಕೆ ಆದರದ ಓಗೊಟ್ಟು ಇಲ್ಲಿಗೆ ಬಂದಿದ್ದಾರೆ.

ಈ ಸಮ್ಮೇಳನದಲ್ಲಿ ಕರ್ನಾಟಕದ ಗ್ರಾಮ ದೇವತೆಗಳನ್ನು ಕುರಿತು ಮೂರು ವಿಚಾರಸಂಕಿರಣ ಜರುಗಲಿವೆ. ರಾತ್ರಿಯಲ್ಲಿ ವಿವಿಧ ರಂಗದರ್ಶನಗಳು ಪ್ರದರ್ಶನಗೊಳ್ಳಲಿವೆ. ತಾವೆಲ್ಲ ಸಹಕರಿಸುವ ಭರವಸೆ ನಮಗಿದೆ.

ತಮ್ಮೆಲ್ಲರಿಗೂ ವಂದನಾಪರ ಸ್ವಾಗತ !

ಜೈ ಜಾನಪದ !!