ಜಾನಪದ ಅಧ್ಯಯನವು ಇತ್ತೀಚಿಗೆ ಸರ್ವತೋಮುಖವಾಗಿ ಬೆಳೆಯುತ್ತಲಿದ್ದು, ಅದು ಅನೇಕ ವಿಜ್ಞಾನ ಕ್ಷೇತ್ರಗಳ ಒಂದು ಸಂಕಿರಣವಾಗಿದೆ. ಎಲ್ಲ ಸಾಮಾಜಿಕ ಶಾಸ್ತ್ರಗಳಿಗೂ ಮೂಲ ಆಕರವಾಗಿರುವ ಜಾನಪದ ಅಧ್ಯಯನವು ಸ್ನಾತಕೋತ್ತರ ಮಟ್ಟದಲ್ಲಿ ಅಧ್ಯಯನದ ವಿಷಯವಾಗಿರುವದು ಅದಕ್ಕಿರುವ ಇತ್ತೀಚಿನ ಮಹತ್ವವನ್ನು ತೋರಿಸುತ್ತದೆ. ಕರ್ನಾಟಕ ವಿಶ್ವವಿದ್ಯಾಲಯವು ಜನಪದ ಸಾಹಿತ್ಯದಲ್ಲಿ ಸ್ನಾತಕೋತ್ತರ ಎಂ. ಎ. ತರಗತಿಗಳನ್ನು ನಡೆಸುವುದರೊಂದಿಗೆ ೧೯೭೩ ರಿಂದ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಅಖಿಲ ಕರ್ನಾಟಕ ಜಾನಪದ ಸಮ್ಮೇಳನಗಳನ್ನು ನಡೆಸುತ್ತ ಬಂದಿರುವದು ಗಮನಾರ್ಹ ಸಂಗತಿಯಾಗಿದೆ. ಜಾನಪದ ಕ್ಷೇತ್ರದ ವಿವಿಧ ವಿಷಯ – ವಸ್ತುವಿನ ಆಯ್ಕೆಮಾಡಿ – ಸಮ್ಮೇಳನ ಅಂಗವಾಗಿ ನಡೆಸುವ ವಿಚಾರ ಗೋಷ್ಠಿಗಳು ಆ ಮೂಲಕ ವಿದ್ವಾಂಸರ ಪ್ರಬಂಧಗಳೊಡನೆ ಪ್ರಕಟಗೊಳ್ಳುತ್ತಿರುವ “ಜಾನಪದ ಸಾಹಿತ್ಯ ದರ್ಶನ” ಎಂಬ ಸ್ಮರಣೆ ಗ್ರಂಥಗಳು – ಜಾನಪದ ಅಭ್ಯಾಸಿಗಳಿಗೆ ಬೆಲೆಯುಳ್ಳ ಆಕರಗಳಾಗಿವೆ. ರಂಗದರ್ಶನವೂ  ಸಮ್ಮೇಳನದ ಒಂದು ಆಕರ್ಷಣೆಯಾಗಿದೆ.ಈ ಸಾರೆಯ ಈ ಎರಡನೆಯ ಸಮ್ಮೇಳನವು ಅಂಕೋಲೆಯ ಜಿ. ಸಿ. ಕಾಲೇಜಿನ ಸಹಯೋಗದೊಂದಿಗೆ ನಡೆಯಿತು. ಆ ಸಮ್ಮೇಳನದ ಗೋಷ್ಠಿಗಳ ಮುಖ್ಯ ವಿಷಯ “ಕರ್ನಾಟಕದ ಸ್ತ್ರೀ – ಗ್ರಾಮದೇವತೆಗಳು” ಅನೇಕ ವಿದ್ವಾಂಸರು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ತಮ್ಮ ಪ್ರಬಂಧಗಳನ್ನು ಮಂಡಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಿದ್ದಾರೆ. ಅವರೆಲ್ಲರಿಗೂ ಕನ್ನಡ ಅಧ್ಯಯನ ಪೀಠದ ಪರವಾಗಿ ಕೃತಜ್ಞತೆಗಳು .

ಈ ಎಂಟನೆಯ ಅಖಿಲ ಕರ್ನಾಟಕ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಲು ಒಪ್ಪಿ ತಮ್ಮ ಅಭ್ಯಾಸಪೂರ್ಣ  ಅಧ್ಯಕ್ಷ ಭಾಷಣವನ್ನಿತ್ತ ಡಾ. ಎಲ್. ಆರ್. ಹೆಗಡೆ ಅವರಿಗೆ ತಮ್ಮ ಹೃತ್ಪೂರ್ವಕ ಕೃತಜ್ಞತೆಗಳು. ಕೆನರಾ ವೆಲ್‌ಫೇರ್ ಟ್ರಸ್ಟಿನ ಅಧ್ಯಕ್ಷರೂ, ಸ್ವಾತಂತ್ರ ಯೋಧರೂ ಮತ್ತು ಖ್ಯಾತ ಸಾಹಿತಿಗಳೂ, ಈ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರೂ ಆದ ಡಾ. ದಿನಕರ ದೇಸಾಯಿ ಅವರು ಈ ಸಮ್ಮೇಳನದ ಘನತೆ ಗೌರವಗಳನ್ನು ಹೆಚ್ಚಿಸಿದ್ದಾರೆ. ಅವರಿಗೂ, ಕೇಂದ್ರಶಕ್ತಿಯಾದ ಪ್ರಿ. ಕೆ. ಜಿ. ನಾಯಕ ಅವರಿಗೂ ಮತ್ತು ಸಮ್ಮೇಳನದ ಯಶಸ್ಸಿಗೆ ಕಾರಣವಾದ ಅಂಕೋಲೆಯ ಯಾವತ್ತು ನಾಗರಿಕರಿಗೂ, ಪ್ರತಿಷ್ಠಿತರಿಗೂ ಕನ್ನಡ ಅಧ್ಯಯನ ಪೀಠ ಹಾಗೂ ವಿಶ್ವವಿದ್ಯಾಲಯದ ಪರವಾಗಿ ಹಾರ್ದಿಕ ಕೃತಜ್ಞತೆಗಳು.

ಕನ್ನಡ ಅಧ್ಯಯನ ಪೀಠವು ಅವ್ಯಾಹತವಾಗಿ ನಡೆಸುತ್ತ ಬಂದಿರುವ ಜಾನಪದ ಸಮ್ಮೇಳನಗಳಿಗೆ ಉದಾರವಾಗಿ ಹಣದ ಸಹಾಯವನ್ನಿತ್ತು ಪ್ರೋತ್ಸಾಹಿಸುತ್ತಿರುವ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಶ್ರೀ ಎಸ್. ಎಸ್. ಒಡೆಯರ ಅವರಿಗೂ, ಜಾನಪದ ಸಾಹಿತ್ಯ ದರ್ಶನ ಗ್ರಂಥ ಪ್ರಕಟನೆಗಳಿಗೆ ಸದಾ ಆದ್ಯತೆಯನ್ನಿತ್ತಿರುವ ಪ್ರಸಾರಾಂಗ ನಿರ್ದೇಶಕರಾದ ಶ್ರೀ ಎಸ್.ಬಿ. ನಾಯಕ ಅವರಿಗೂ, ಅವರ ಸಿಬ್ಬಂದಿಗೂ ಮತ್ತು ಗದುಗಿನ ಫ. ಶಿ. ಭಾಂಡಗೆಯವರ ತ್ವರಿತ ಮುದ್ರಣದ ಸಂಚಾಲಕ ಶ್ರೀ ಅಶೋಕ ಅವರಿಗೂ ನಾವು ಋಣಿಯಾಗಿದ್ದೇವೆ.

ಡಾ. ಸೋಮಶೇಖರ ಇಮ್ರಾಪೂರ
(ಸಂಪಾದಕರ ಪರವಾಗಿ)
ಕನ್ನಡ ಅಧ್ಯಯನ ಪೀಠ
ಕ. ವಿ. ವಿ ಧಾರವಾಡ