ಕನ್ನಡ : ಒಳ-ಹೊರಗೆ :

ನಮ್ಮ ಹಾಗೆಯೇ ತಮಿಳುನಾಡು, ಕೇರಳ ಮತ್ತು ಆಂಧ್ರ ಪ್ರದೇಶಗಳಲ್ಲಿ ತಮ್ಮ ತಮ್ಮ ಭಾಷಾ ಸಂಸ್ಕೃತಿಯ ಬಗ್ಗೆ ಆತಂಕ ಇದೆಯೆ ಎಂಬುದನ್ನು ಪರಿಶೀಲಿಸಸೋಣ. ಜೊತೆಯಲ್ಲಿಯೆ ಈ ಭಯ ಆಂತರಿಕವಾದುದೊ ಅಥವಾ ಹೊರಗಿನದೊ ಎಂಬುದನ್ನೂ ತಿಳಿಯುವುದು ಒಳಿತು. ಕರ್ನಾಟಕಕ್ಕೆ ಇರುವ ಗಡಿ ಸಮಸ್ಯೆ ಇತರ ದಕ್ಷಿಣ ಭಾರತದ ರಾಜ್ಯಗಳಿಗೆ ಇಲ್ಲ ಎಂಬುದು ಸ್ಪಷ್ಟ. ಅನ್ಯ ಭಾಷಿಯರ ಆಕ್ರಮಣದ ಬಗ್ಗೆ ಕೇರಳ, ತಮಿಳುನಾಡು ಮತ್ತು ಆಂಧ್ರಗಳಲ್ಲಿ ಗಲಾಟೆಗಳು ಮತ್ತು ಚಳುವಳಿಗಳು ಇದ್ದಂತಿಲ್ಲ. ಬೆಂಗಳೂರು ಮತ್ತು ಬಾಂಬೆಯಲ್ಲಿ ಆಯಾ ಸಂಸ್ಥಾನದ ಭಾಷಾಸಂಸ್ಕೃತಿಗೆ ಆಪತ್ತು ಇದೆ ಎಂಬ ಮಾತು ಆಗಾಗ ಕೇಳಿಬರುತ್ತದೆ. ಈ ಅಭಿಪ್ರಾಯವನ್ನು ಸಮರ್ಥಿಸುಂತೆ ಬೆಂಗಳೂರು ಮತ್ತು ಬಾಂಬೆಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕೆಂಬ ಹೇಳಿಕೆಗಳು ಕೇಳಿಬರುತ್ತಿವೆ.

ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ಇವುಗಳ ಭಾಷಾ ಸಂಸ್ಕೃತಿಗೆ ಹೊರಗಿನ ಬೆದರಿಕೆ ಇಲ್ಲವೆಂದಾದರೆ ಇವರು ಆಂತರಿಕವಾಗಿ ಸುಸಂಘಟಿತರಾಗಿದ್ದಾರೆ ಎಂದೆ ತಿಳಿಯಬೇಕು: ಇಲ್ಲವೆ ಭಾರತದ ಹಿಂದಿ ಸಾಮ್ರಾಜ್ಯಶಾಹಿಯಿಂದ ಕರ್ನಾಟಕ ಹೆಚ್ಚು ಹೆದರಿದೆ ಎಂದು ಭಾವಿಸಬೇಕು. ದೆಹಲಿ ಈಗ ನಮಗೆ ಭಯ ಅಲ್ಲ: ಈಗ ದೆಹಲಿಯೆ ಹೆದರಿದೆ. ಜಾಗತೀಕರಣ ಎಂಬ ಖಾಸಗೀ ಒಡೆಯರ ವ್ಯಾಪಾರೀಕರಣ ಬಡವರ ಭಾಷೆ, ಸಂಸ್ಕೃತಿ ಮತ್ತು ಆಸ್ಥಿತ್ವವನ್ನು ಕೆಣಕಿದೆ. ಅಮೆರಿಕ ಮತ್ತು ದೆಹಲಿಯನ್ನು ಕೇಂದ್ರ ಎಂದು ಒಪ್ಪಿಕೊಂಡಾಕ್ಷಣದಿಂದ ಆ ಪ್ರಭುತ್ವದ ಹೊರೆಯನ್ನು ಹೊರಲು ಅಧೀನ ಸಂಸ್ಕೃತಿಗಳು ಅನ್ಯಮಾರ್ಗವಿಲ್ಲದೆ ತಯಾರಾಗಲೇಬೇಕು. ಆದರೆ ಈ ಬಗೆಯ ಹೊರೆ ಸಹ್ಯವೇನೂ ಆಗಬೇಕಿಲ್ಲ. ಸುಸಂಘಟಿತವಾದ ಯಾವುದೇ ಸಂಸ್ಕೃತಿ ಈ ಬಗೆಯ ಹೇರಿಕೆಯನ್ನು ಸಮರ್ಥವಾಗಿ ಎದುರಿಸಬೇಕು. ಈ ಕೆಲಸವನ್ನು ತಮಿಳುನಾಡು, ಕೇರಳ ಮತ್ತು ಆಂಧ್ರ ಪ್ರದೇಶಗಳು ಮಾಡಿದ್ದರೆ ಅಲ್ಲಿಯ ಜನ ಮತ್ತು ನಾಯಕತ್ವ ಸುಸಂಘಟಿತ ಮತ್ತು ಸಾಂಸ್ಕೃತಿಕ ನೆಲೆಯ ಗಟ್ಟಿತನಕ್ಕೆ ಬದ್ಧರಾಗಿದ್ದಾರೆ ಎಂದು ತಿಳಿಯಬಹುದು. ದೆಹಲಿ ದುರ್ಬಲವಾಗಿ ಅಮೆರಿಕ ಎಲ್ಲವೂ ಆಗಿರುವುದರಿಂದ ಈಗ ಅವುಗಳದೂ ನಮ್ಮದೆ ಕಥೆ ಆಗಿದೆ.

ಇಂಥ ಮಾತು ಬಂದಾಗ ಸ್ವಸಂಸ್ಕೃತಿಯ ಸಂಘಟನಾತ್ಮಕ ಅಭಿವೃದ್ಧಿಯ ಬಗ್ಗೆ ತಿಳುವಳಿಕೆ ಇಲ್ಲದವರು ಇದು ಪ್ರತ್ಯೇಕತಾವಾದ ಎಂದು ಹೇಳುತ್ತಾರೆ. ಚಿಂತನೆ ಇಲ್ಲದ ಪ್ರಜೆ ಮತ್ತು ಬುರುಗು ನಾಯಕತ್ವ ಇರುವ ಕಡೆ ಈ ಬಗೆಯ ಪ್ರತಿಕ್ರಿಯೆಗಳು ಸಾಮಾನ್ಯ. ಹಾಗೆಯೆ ಸ್ವಸಂಸ್ಕೃತಿಯ ಸಂಘಟನೆಯನ್ನು ಸ್ವಹಿತಕ್ಕೆ ಬಳಸಿಕೊಳ್ಳುವ ಅವಿವೇಕಿಗಳೂ ಇದ್ದಾರೆ. ಸ್ವಂತ ಬಂಡವಾಳ ಅಭಿವೃದ್ಧಿಗಾಗಿ ವಿಚಾರವನ್ನು ಬಳಸಿಕೊಳ್ಳುವ ಮಂದಿ ಭಾರತದಲ್ಲಿ ಮೊದಲಿನಿಂದಲೂ ವಾಸ್ತವ್ಯ ಹೂಡಿರುವುದು ನಿಜ. ಅಂದ ಮಾತ್ರಕ್ಕೆ ಉಳಿದವರು ದಾರಿತಪ್ಪಬೇಕಿಲ್ಲ.

ಕನ್ನಡ ಜನ : ಕನ್ನಡ ಸಂಸ್ಕೃತಿ :

ಒಂದು ಭಾಷಿಕ ಸಂಸ್ಕೃತಿಯ ಸ್ವಸಂಘಟನೆ ಎಂದರೆ ಆ ಜನರ ಸುಸಂಘಟನೆ. ಅವರ ಜೀವನದ ಬಗ್ಗೆ ಮತ್ತು ಮುಂದಿನ ಭವಿಷ್ಯದ ಬಗ್ಗೆ ಅರಿವು ಮೂಡಿಸುವ ಕೆಲಸ. ಕರ್ನಾಟಕದ ನೆಲ, ಜಲ,ಕಾಡು, ಖನಿಜ ಎಲ್ಲ ಜನರ ಒಟ್ಟು ಆಸ್ತಿಹೇಗೋ ಹಾಗೆ, ಈ ಜನರ ಚರಿತ್ರೆ ಸಂಸ್ಕೃತಿ ಅಭಿವೃದ್ಧಿ ಹೊಂದಿದ ಸಂಪತ್ತು, ವಿದ್ಯೆ, ಉದ್ಯೋಗ ಇವುಗಳು ಕೂಡ. ಇದನ್ನು ಜನ ಸರ್ಕಾರದ ಆಸ್ತಿ ಎಂದು ತಿಳಿದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರದ್ದೆಂಬ ಆಸ್ತಿ ಇರುವುದಿಲ್ಲ; ಅದು ಪ್ರಜೆಗಳದ್ ಮಾತ್ರ. ತಪ್ಪು ತಿಳುವಳಿಕೆಯಿಂದಾಗಿ ನಮ್ಮ ಜನ ಎಲ್ಲ ಸಂಪತ್ತಿನ ವಹಿವಾಟನ್ನು ಸರ್ಕಾರಕ್ಕೆ ಇಲ್ಲವೆ ಖಾಸಗಿ ಒಡೆಯನಿಗೆ ಬಿಟ್ಟುಕೊಟ್ಟು ಸುಮ್ಮನಿರುತ್ತಾರೆ. ಸಹಜವಾಗಿಯೆ ಸ್ವಹಿತಕರು ತಮ್ಮ ಹಿತಕ್ಕಾಗಿ ಕನ್ನಡದ ಆಸ್ತಿ, ನೆಲ, ಜಲ ಮತ್ತು ಉದ್ಯೋಗಗಳನ್ನು ಅನ್ಯರಿಗೆ ಮಾರಿಕೊಳ್ಳುತ್ತಾರೆ. ಸಂಪತ್ತಿನ ಬಹುಮಂದಿ ಯಜಮಾನರುಗಳು ಯಾವಾಗಲೂ ಯಾವುದೇ ಸಂಸ್ಕೃತಿಯ ವಕ್ತಾರರಲ್ಲ, ಹಿತಚಿಂತಕರೂ ಅಲ್ಲ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು.

ಜನವೆ ಸರ್ಕಾರ, ಸಂಪತ್ತು, ಸಂಸ್ಕೃತಿ  ಮತ್ತು ಭಾಷೆಯ ವಾರಸುದಾರರಾದಾಗ ಆಯಾ ಜನರ ಭಾಷಾ ಸಂಸ್ಕೃತಿ ಸಮೃದ್ಧವಾಗಿಯೂ, ಸಮಕಾಲೀನವಾಗಿಯೂ ಬೆಳೆಯುತ್ತದೆ.ಒಂದು ಕಡೆಯಿಂದ ಇದಕ್ಕೆ ಸರ್ಕಾರದ ಬೆಂಬಲಬೇಕು. ಆದರೆ ಮೂಲ ಪ್ರಚೋದನಾ ಕೇಂದ್ರ ಸರ್ಕಾರದ ಹೊರಗೆ, ಜನರಲ್ಲಿ ಇರಬೇಕು. ತಾವು ತುಳಿತಕ್ಕೆ ಒಳಗಾಗಿ ಸಂಪತ್ತು, ಸಂಸ್ಕೃತಿ ಮತ್ತು ಭಾಷೆಗಳು ಬೇರೆಯವರಲ್ಲಿ ಸಂಗ್ರಹವಾಗಿರುವುದನ್ನು ಕಂಡಿರುವ ಜನ ಸರ್ಕಾರದ ಹೊರಗಿನ ಪ್ರೇರಣಾಕೇಂದ್ರವನ್ನು ಒಪ್ಪುವುದಿಲ್ಲ. ಯಾಕೆಂದರೆ ಪ್ರಾತಿನಿಧಿಕವಲ್ಲದ ಎಲ್ಲ  ಸಂಸ್ತೆಗಳ ಬಗೆಗೂ ಅವರು ನಂಬಿಕೆಯನ್ನು ಕಳಕೊಂಡಿದ್ದಾರೆ. ಉದಾಹರಣೆಗೆ  ನಮ್ಮ ಆಕಾಶವಾಣಿ ಮತ್ತು ದೂರದರ್ಶನಗಳು. ಇವು ಜನಗಳಿಗೆ ಕರ್ಷಕವಾಗಿ ಕಾಣುವುದೇನೊ ನಿಜ, ಆದರೆ ಅವು ನಮ್ಮವು ಎಂದು ಬಹುತೇಕ ಜನ ತಿಳಿದಿಲ್ಲ. ಅವುಗಳ ಭಾಷೆ, ಸಂಸ್ಕೃತಿ ಮತ್ತು ವಿಚಾರ ಇಂದಿಗೂ ಜನಪರವಾಗಿಲ್ಲ, ಹಿಂದೂ ಸಂಸ್ಕೃತಿಯ ಅಧಿಕೃತತೆಯಲ್ಲಿಯೆ ಅವು ನರಳುತ್ತಿವೆ. ಈ ಕಾರಣದಿಂದ  ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಕಟ್ಟುವ ಯಾವುದೇ ಸರ್ಕಾರದ ಹೊರಗಿನ ಸಂಸ್ಥೆ  ಕರ್ನಾಟಕದ ಎಲ್ಲ ಜನರ ಭಾವ ಭಾಷೆಗಳಿಗೆ ಸ್ಪಂದಿಸುವಂತಿರಬೇಕು ಇದು ಕನ್ನಡ ವಿಶ್ವವಿದ್ಯಾನಿಲಯಕ್ಕೆ ಸಾಧ್ಯವಾದರೆ ಅದೊಂದು ಮಹತ್ವದ ಸಾಧನೆಯಾದೀತು.

ಈಗ ಭಾಷಾ ಸಂಸ್ಕೃತಿ ಎಂಬುದು ಆಯಾ ಭಾಷೆಯನ್ನು ಬಲ್ಲವರ ಉದ್ಯೋಗ ಎಂದು ತಿಳಿಯಲಾಗಿದೆ. ನೌಗರವರ್ಗಧಲ್ಲಿ ಇದು ಇಂಗ್ಲಿಷ್, ಹಿಂದಿ ಮತ್ತು ವಿಜ್ಞಾನ ವಿರೋಧಿ ಎಂಬ ತಪ್ಪು ತಿಳುವಳಿಕೆ ಇದೆ.ಇದು ಸಾಮಾನ್ಯರು ಬಂದು ಹಂಚಿಕೊಳ್ಳಬಹುದು ಎಂಬ ಭಯ ಇರುವ ವರ್ಗದ ಅಭಿಪ್ರಾಯ ಎಂಬುದು ನಿಜ. ನಿಜವಾದ ಭಾಷಾಸಂಸ್ಕೃತಿ ಬಡವರ ಸ್ವತ್ತು. ಯಾಕೆಂದರೆ ಅಭಿವೃದ್ಧಿ ಆರಂಭವಾಗಬೇಕಾದುದು ಅಲ್ಲಿಂದ ತಾನೆ? ಬಡವರ ಆಕಾಶಕ್ಕೆ ಹಾರಿ ಹೋಗಲಾರ ಅಮೆರಿಕವನ್ನು ತನ್ನ ಮನೆಗೆ ತಂದು ಇಟ್ಟುಕೊಳ್ಳಲಾರ, ಅವನು ಅವನ ಭಾಷಾ ಸಂಸ್ಕೃತಿಯಿಂದ ವಿದ್ಯೆ, ಉದ್ಯೋಗ ಮತ್ತು ಸಂಪತ್ತನ್ನು ಪಡೆಯಬೇಕಿದೆ. ಅದೊಂದೆ ಅವನಿಗಿರುವ ಬದುಕುವ ಮಾರ್ಗ. ಶ್ರೀಮಂತನಂತೆ ಆತ ಏಕಪಕ್ಷೀಯವಾಗಿ ಅಂತರರಾಷ್ಟ್ರೀಯ ಆಗಲಾರ. ಹಾಗೆಂದರೆ ಬಡವ ಕೂಪ ಮಂಡೂಕದ ಹಾಗೆ ಇರುವಲ್ಲಿಯೆ ಇದ್ದು ಬಿಡಬೇಕು ಎಂದು ಇದರ ಅರ್ಥವಲ್ಲ. ಆತ ತಾನಿದ್ದಲ್ಲಿಂದ ಜಗತ್ತನ್ನು ಎಟುಕಿಸಿಕೊಳ್ಳಲು ಹೊರಡಬೇಕು. ತಾನೆ ಭದ್ರವಿಲ್ಲದವನು ಬೇರೆಯವರನ್ನು ಎಟುಕಿಸಿಕೊಳ್ಳುವುದು ಹೇಗೆ? ಬೇರುಗಳು ಭದ್ರವಾಗಿದ್ದರೆ ತಾನೆ ಮರ ಅ ಕಡೆ, ಈಕಡೆಗೆ ಕೈಚೆಲ್ಲಿ ಬೆಳೆಯುವುದು, ಮೊದಲು ಕನ್ನಡಿಗನಾಗಬೇಕಾದುದು ಹೀಗೆ. ಇದು ನಿರ್ಧಾರಾತ್ಮಕ ಗುಣವನ್ನು ಪಡೆಯುವ ರೀತಿ. ಈ ಗುಣ ಇಲ್ಲದವನು ಏನನ್ನೂ ಕಟ್ಟಲಾರ, ಯಾವುದನ್ನೂ ಮುಟ್ಟಲಾರ, ಯಾವುದನ್ನೂ ಮುಟ್ಟಲಾರ; ಈಗಿನ ನಮ್ಮ ಕನ್ನಡಿಗನ ಸ್ಥಿತಿಯ ಹಾಗೆ.

ಕನ್ನಡ ಸಂಸ್ಕೃತಿ : ಕನ್ನಡ ಚಳುವಳಿಗಳು:

ಗೋಕಾಕ್ ವರದಿ ಜಾರಿಗಾಗಿ ನಡೆದ ಹೋರಾಟ ಮತ್ತು ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ಒಂದು ಕಾಲ ಘಟ್ಟದ ನಾಡ ಪ್ರಜ್ಞೆಯನ್ನು ಬಿಟ್ಟರೆ ಉಳಿದ ಕನ್ನಡ ಚಳುವಳಿಗಳಿಗೆ ಆಳದ ನೆಲೆ ಇದ್ದಂತದಿಲ್ಲ. ನಗರದ ಕೆಲವರ್ಗದ ಜನರನ್ನು ಬಿಟ್ಟರೆ ಉಳಿದವರಿಗೆ ಈಗಲೂ ಈ ಚಳುವಳಿಗಳ ಬಿಸಿ ಮುಟ್ಟುವುದಿಲ್ಲ, ಕಾವೇರಿ ಜಲ ವಿವಾದದ ಬಪಗ್ಗೆ ದಕ್ಷಿಣ ಕರ್ನಾಟಕದ ವಿವಿಧ ಜನವರ್ಗಗಳು ಸ್ಪಂದಿಸಿದ ರೀತಿಯನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಇದೇ ಬಗೆಯ ಚಲನೆ ಕನ್ನಡ ಸಂಸ್ಕೃತಿಗೆ ಸಂಬಂಧ ಪಟ್ಟ ವಿಷಯದಲ್ಲಿ ಆಗುತ್ತಿಲ್ಲ. ಇದರ ಅರ್ಥ ಏನು? ಕನ್ನಡ ಚಳುವಳಿಗಳಲ್ಲಿ ಕನ್ನಡತನವಿಲ್ಲವೊ ಅಥವಾ ಕನ್ನಡಿಗರಲ್ಲಿಯೇ ಕನನಡತನವಿಲ್ಲವೊ? ಕನ್ನಡಿಗರ ಮೇಲೆ ತಪ್ಪು ಹೊರಿಸುವುದು ಸುಲಭ. ಆ ತಪ್ಪುಗಳನ್ನು ಕನ್ನಡ ಪರ ಚಿಂತಕರು ತಮ್ಮ ಕಡೆಗೆ ತೆಗೆದುಕೊಳ್ಳುವುದು ಆರೋಗ್ಯಕರ. ಲಕ್ಷೋಪಲಕ್ಷ ಜನ ಇದ್ದಲ್ಲಿಯೆ ಇದ್ದರೂ, ಕನ್ನಡಪರ ಚಳುವಳಿಗಳನ್ನು ಕಣ್ಣುಮುಂದೆ ಕಾಣುತ್ತಿದ್ದರೂ ಅವರು ಏನೂ ನಡೆಯುತ್ತಿಲ್ಲವೆಂಬಂತೆ ಇರುತ್ತಾರೆ. ಇದು ನಮ್ಮ ಚಿಂತನೆ ಹಾಗೂ ಕನ್ನಡ ಚಳುವಳಿಗಳ ಮನೋವಿಕಾರಕ್ಕೆ ಹಿಡಿದ ಕನ್ನಡಿಯಲ್ಲವೆ?

ನಾನು ಎರಡು ವರ್ಷ ಕೇರಳದಲ್ಲಿದ್ದೆ. ಒಮ್ಮೆಯೂ ಮಲಯಾಳಂ ಉಳಿಸಿ ಎಂಬ ಚಳುವಳಿಯನ್ನು ನೋಡಲಿಲ್ಲ. ಬಹಳ ನೋಡಿದ್ದು ದುಡಿಯುವ ಜನರ ಚಳುವಳಿಗಳನ್ನು, ಮಲಯಾಳಿಗಳು ತಮ್ಮ ರಾಜ್ಯದಲ್ಲಿ ಮಲಯಾಳಂ ಭಾಷೆಯನ್ನು ಉಳಿಸುವ ಅಗತ್ಯವಿಲ್ಲ ಅವರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಭಾರತ ಹಾಗೂ ಪ್ರಪಂಚದ ಉದ್ದಗಲಕ್ಕೂ ಹರಡಿದ್ದಾರೆ. ತಮ್ಮ ನಾಡಿಗೆ ಪ್ರಪಂಚದ ಎಲ್ಲ ಕಡೆಯಿಂದ ಸಂಪತ್ತನ್ನು ತಂದು ಹಾಕುತ್ತಾರೆ. ಕರ್ನಾಟಕದವರ ಹಾಗೆ ನಮ್ಮದು ಹೋಯಿತು ಎಂದು ಬಡಕೊಳ್ಳುವ ಸ್ಥಿತಿ ಅವರಿಗೆ ಬಂದಿಲ್ಲ.  ಇನ್ನು ಕೆಲವು ದಿನಗಳಲ್ಲಿ ಕೊಡಗನ್ನು ಕೇರಳದ ಭಾಗ ಎಂದು ಘೋಷಿಸಿ ಎಂದು ಅವರು ಕೇಳಬಹುದು. ತಮಿಳರು ಕೂಡ ಕೇವಲ ತಮ್ಮ ನಾಡಿನ ಅಗಲಕ್ಕೆ ಮಾತ್ರ ಗುರುತಿಸಿಕೊಂಡಿಲ್ಲ. ಅವರು ಒಂದು ನಿರ್ದಿಷ್ಟ ಹಾಗೂ ಬಲಿಷ್ಠವಾದ ದ್ರಾವಿಡ ಸಂಸ್ಕೃತಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಆದ್ದರಿಂದಲೇ ದೆಹಲಿಯ ಕೇಂದ್ರ ಆಡಳಿತ, ಉತ್ತರ ಭಾರತದ ಜನ ದಕ್ಷಿಣ ಭಾರತದವರೆಂದರೆ ಮದ್ರಾಸಿಗಳು ಎಂದೆ ನಿರ್ಧರಿಸಿದ್ದಾರೆ ಇದೆಲ್ಲ ಸಾಧ್ಯವಾಗುವುದು ತಮ್ಮದೇ ಆದ ಭಾಷಾ ಸಂಸ್ಕೃತಿಯಜೊತೆಗೆ ನಿಷ್ಠೆಯಿಂದ ಬದುಕುವುದರಿಂದ. ಇದು ಧಾರ್ಮಿಕ ನಿಷ್ಠೆಯಂತೆ ರಿಜಿಡ್ ಅಲ್ಲ, ಪೂರ್ಣವಾಗಿಯೂ ಇದು ಜನ ನಾಡು ನುಡಿಯ ನಿಷ್ಠೆ. ಇದರ ತೀವ್ರ ಕೊರತೆ ಇರುವುದರಿಂದಲೇ, ನಮ್ಮಲ್ಲಿನಾಡನ್ನು ಕುರಿತು ಬೇಕು-ಬೇಡವಾದಷ್ಟು ಸಾಹಿತ್ಯ ಹುಟ್ಟಿರುವುದು.

ಕನ್ನಡ ನಿಷ್ಠೆ

ಜನ ಸಾಮಾನ್ಯನಿಂದ ಹಿಡಿದು ನಮ್ಮ ರಾಜಕಾರಣಿಗಳವರೆಗೆ ಕನ್ನಡ ನಿಷ್ಠೆ ಕಡಿಮೆ. ಅನೇಕರಿಗೆ ಕನ್ನಡ ಎಂದರೇನು ಎಂಬುದೆ ತಿಳಿಯದು. ಜನಸಾಮಾನ್ಯರಿಗೆ ತಾವು ಸದಾ ಸವೆಸುತ್ತಿರುವ ಜಾಡು ಎಂಬ ನಿರ್ಲಿಪ್ತ ಮನೋಭಾವ. ನೌಕರ ವರ್ಗದವರಿಗೆ ಕನ್ನಡ ಎಂದರೆ ಏನನ್ನೂ ಕೊಡದ ಗೊಡ್ಡು ಹಸು. ಉಳಿದವರಿಗೆ ಅದೊಂದು ಉದ್ರೇಕ. ರಾಜಕಾರಣಿಗಳಿಗೆ ಜನರನ್ನು ಸಮ್ಮೋಹನಗೊಳಿಸುವ ಸುಲಭ ಮಂತ್ರ ವಿದ್ಯೆ. ಆದ್ದರಿಂದ ಈ ಯಾರೂ ಕನ್ನಡವೊಂದು ನಿರುತ್ಪಾದಕ ಸಂಗತಿ ಎಂದೇ ತಿಳಿದಿದ್ದಾರೆ. ಯಾಕೆಂದರೆ ಭಾರತದಲ್ಲಿ ಮೊದಲಿನಿಂದಲೂ ಜಾತಿಯೆ ಉತ್ಪಾದನೆ ಮತ್ತು ಅನುಭೋಗದ ಕೇಂದ್ರ. ಅದಕ್ಕೇ ಎಲ್ಲರ ಪ್ರಥಮ ನಿಷ್ಠೆ ಮತ್ತು ಪೂಜೆ. ಆಗ ಜಾತಿಶ್ರೇಷ್ಠರು ಮತ್ತು ಬಹು ಸಂಖ್ಯಾತರು ದೇಶ, ಭಾಷಾಸಂಸ್ಕೃತಿಯನ್ನು ತಮ್ಮ ಅಳತೆಗೆ ಬೇಕಾದಂತೆ ಕತ್ತರಿಸಿ ಇಟ್ಟುಕೊಳ್ಳುತ್ತಿದ್ದರು. ತಮ್ಮ ನಿರ್ದೇಶನದಂತೆ ಇತರ ಜಾತಿಗಳವರು ಬದುಕಬೇಕೆಂದು ನೀತಿ ನಿರ್ಣಯಗಳನ್ನು ಮಾಡಿದ್ದರು. ಕೆಳಗಿನ ಜಾತಿಗಳವರು ಎಂದೂ ತಮ್ಮ ಹಕ್ಕುದಾರಿಕೆಯನ್ನು ಪ್ರತಿಪಾದಿಸುವಂತಿರಲಿಲ್ಲ. ಆದ್ದರಿಂದಲೇ ಭಾಷೆ, ಸಂಸ್ಕೃತಿಗಳು ಮೇಲಿನವರ ಆಸ್ತಿ ಮತ್ತು ಅವರ ಆಡಳಿತದ ಕಾನೂನುಗಳಾಗಿದ್ದವು.

ಈಗ ಆ ಪರಿಸ್ಥಿತಿ ಇಲ್ಲ. ಮಠ ಮಂದಿರಗಳಿಗೆ ಕಲ್ಲು, ಇಟ್ಟಿಗೆ ಹೊರುವ ಕೂಲಿ ನಿಷ್ಠೆಯಿಂದ ಜನ ಬಿಡುಗಡೆ ಪಡೆಯುತ್ತಿದ್ದಾರೆ. ಇವರಿಗೆ ಕನ್ನಡ-ಸಂಸ್ಕೃತಿಯ ನಿಷ್ಠೆಯ ಅಗತ್ಯವಿದೆ. ಎಂದರೆ ಕನ್ನಡ ನೆಲ-ಜಲ-ಉತ್ಪತ್ತಿಗೆ ಪಾಲುದಾರರು, ಕನ್ನಡ ಸಂಸ್ಕೃತಿಯ ನಿರ್ವಹಣೆಯ ಹಕ್ಕುದಾರರಾಗುವುದು. ಈ ಕನ್ನಡ ನಿಷ್ಠೆಯಿಂದ ಏನು ಬರುತ್ತದೆ, ಏನೇನು ಸಿಗುತ್ತದೆ ಎಂದು ಕೇಳಬಹುದು. ರೇಷನ್ ಕಾರ್ಡ್ ಸಿಗುವುದಿಲ್ಲ ಎಂದು ಖಂಡಿತ ಹೇಳಬಹುದು. ಕನ್ನಡ ನಿಷ್ಠೆಯಿಂದ ವ್ಯಕ್ತಿಯ ಹಕ್ಕು, ನೆಲದ ಹಕ್ಕು, ಜಲದಹಕ್ಕು, ವಿದ್ಯಾಭ್ಯಾಸದ ಹಕ್ಕು, ಉದ್ಯೋಗದ ಹಕ್ಕು, ಉತ್ಪತ್ತಿಯ ಹಕ್ಕು ಮತ್ತು ಬದುಕುವ ಹಕ್ಕುಗಳು ಖಂಡಿತ ಸಿಗುತ್ತವೆ. ಇದೇನು ಭಾರತ ಸಂವಿದಾನವನ್ನು ಮತ್ತೆ ಹೇಳುತ್ತಿದ್ದೀರಿ ಎಂದು ನಿರಾಸೆಗೊಳ್ಳಬಹುದು. ಕನ್ನಡ ನಿಷ್ಠೆ ಎಂಬುದು ಕನ್ನಡ ನೆಲದಲ್ಲಿ ಪಡೆಯುವ ಹಕ್ಕುದಾರಿಕೆ ಎಂದರೆ, ಈಗ ಈ ಸಂಬಂಧವಾದ ಯಾವ ಸೌಲಭ್ಯಗಳೂ ಇಲ್ಲದವರು. ತ್ರಿಶಂಕು ಸ್ಥಿತಿಯಲ್ಲಿ ಇರುವವರು ಎಲ್ಲರಂತೆ ಎಲ್ಲವನ್ನೂ ಪಡೆಯುವುದು. ಇಂಗ್ಲಿಷ್ ನಿಷ್ಠೆ, ಜಾತಿನಿಷ್ಠೆ, ಸಂಪತ್ತಿನ ನಿಷ್ಠೆ ಇರುವವರು ಎಲ್ಲಿಬೇಕಾದರೂ ಬದುಕುವ ಅನುಕೂಲವನ್ನು ಪಡೆಯುತ್ತಾರೆ. ಕರ್ನಾಟಕದ ನೆಲ ಮತ್ತು ಭಾಷೆಯೊಂದಿಗೆ ಇರುವವನಿಗೆ ಕನ್ನಡ ನಿಷ್ಠೆ ಮತ್ತು ಕನ್ನಡ ಸಂಸ್ಕೃತಿಯನ್ನು ಪಟ್ಟಾಗಿ, ಗಕಟ್ಟಿಯಾಗಿ ಬೆಳೆಸಿ ಉಳಿಸಿಕೊಳ್ಳುವುದೊಂದೆ ಸದ್ಯಕ್ಕೆ ಇರುವ ಬದುಕುವ ಮಾರ್ಗ.

ಈ ಕನ್ನಡ ನಿಷ್ಠೆಯನ್ನು ಪಡೆಯುವುದು ಹೇಗೆ? ಕನ್ನಡ ಸಂಸ್ಕೃತಿಯ ಪ್ರತಿಪಾದನೆ ನಮ್ಮ ಜೀವನ ನಡೆ ಆಗಬೇಕು. ಕನ್ನಡ ಸಂಸ್ಕೃತಿ ಮೂರು ಹಂತದಲ್ಲಿ ತನ್ನ ಸ್ವಂತಿಕೆ ಮತ್ತು ಅನನ್ಯತೆಯನ್ನು ಮರೆಯುತ್ತದೆ.

೧. ಕನ್ನಡ ಜನ ಮತ್ತು ಕನ್ನಡ ಭಾಷೆಯೊಂದಿಗೆ ತನ್ನದೆ ಆದ ಪ್ರದೇಶವನ್ನು ಪ್ರತಿಪಾದಿಸುವುದರೊಂದಿಗೆ.

೨. ಕನ್ನಡ ಸಂಸ್ಕೃತಿ ಭಾರತದಲ್ಲಿ ಒಂದು ವಿಶಿಷ್ಟ ಅನನ್ಯತೆಯಾಗಿ ಎದ್ದು ಕಾಣುವುದರೊಂದಿಗೆ.

೩. ಕನ್ನಡ ಸಂಸ್ಕೃತಿ ಬೆಳೆಯಲು ತನ್ನ ದೇಶಿಯ ಅಭಿವೃದ್ಧಿಯೊಂದಿಗೆ ಪ್ರಾಪಂಚಿಕ ಪ್ರಗತಿಯ ಜೊತೆಗೆ ರಚನಾತ್ಮಕವಾಗಿ ಸೇರಿಕೊಂಡು ಮುನ್ನಡೆಯುವುದರೊಂದಿಗೆ.

ಕನ್ನಡ : ಕನ್ನಡೀಕರಣ :

ಕರ್ನಾಟಕದಲ್ಲಿ ಕನ್ನಡವನ್ನು ಕೆಲವು ಜನರ ಭಾಷೆ ಎಂಬಂತೆ ನೋಡುವವರಿದ್ದಾರೆ. ಧರ್ಮ ಮತ್ತು ಭಾಷೆಯ ಜೊತೆಗೆ ಸಂಕುಚಿತ ಸಂಬಂಧ ಹೊಂದಿರುವ ಜನರ ಅಭಿಪ್ರಾಯವಿದು. ಕನ್ನಡ ಎಂದೂ ಒಂದು ಜಾತಿ, ವರ್ಗ ಅಥವಾ ಧರ್ಮದ ಭಾಷೆಯಾಗಿಲ್ಲ. ಅದೊಂದು ಚಾರಿತ್ರಿಕವಾದ ಸಂಸ್ಕೃತಿಯ ಅಭಿವ್ಯಕ್ತಿ. ಧರ್ಮ ಮತ್ತು ಜಾತಿಗಳನ್ನು ಈಗಲೂ ನಗದು ಮಾಡಿಕೊಳ್ಳುವ ಅವಕಾಶವಿರುವುದರಿಂದ ಸೆಕೂಲ್ಯರ್ ಆದ ಭಾಷೆ ಮತ್ತು ಸಂಸ್ಥಾನ ಸಂಸ್ಕೃತಿಗಳನ್ನು ಒಪ್ಪಿಕೊಳ್ಳಲು ಇಷ್ಟಪಡದ ಜನ ಇರುವುದು ನಮ್ಮ ಸ್ವಾತಂತ್ರ್ಯದ ಅಣಕ ಮತ್ತು ವಿರೋಧ ಎಂದೆ ಹೇಳಬೇಕಾಗಿದೆ. ಈಗ ಆಗಬೇಕಾಗಿರುವ ಪ್ರಗತಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಜೊತೆಗೆ ಮಾತ್ರ. ಯಾಕೆಂದರೆ ಧರ್ಮಾತೀತ ಒಂದು ಸಮಗ್ರ ಅಸ್ತಿತ್ವದ ಮೊದಲ ಘಟಕ ಭಾಷೆ. ಇದರ ಕೆಳಗೆ ಇರುವ ಪ್ರಾಕೃತ ಘಟಕಗಳಿಗೆ ಪ್ರಗತಿಯ ಆಯುಧವನ್ನು ಕೊಡುವುದು ತರವಲ್ಲ. ಹಾಗೆ ಕೊಟ್ಟರೆ ಅದೊಂದು ಮುಸ್ಲಿಂ ರಾಜ್ಯವೊ, ಕ್ರಿಶ್ಚಿಯನ್ ರಾಜ್ಯವೊ ಇನ್ನೇನೊ ಆಗಬಹುದು.ಆದ ಕಾರಣ ಜಾತ್ಯಾತೀತ ಪ್ರಗತಿಗಾಗಿ ಕರ್ನಾಟಕದಲ್ಲಿಯ ಯಾರೇ ಆಗಲಿ ಮೊದಲು ಕನ್ನಡೀಕರಣಕ್ಕೆ ಒಳಗಾಗಲೇ ಬೇಕು. ಇದು ಬೇರೆ ಭಾಷಾ ರಾಜ್ಯದಲ್ಲಿರುವ ಕನ್ನಡಿಗರಿಗೂ ಅನ್ವಯಿಸುವ ಮಾತು.

ಬೆಂಗಳೂರಿನ ‘ತಿರುವಳ್ಳವರ್ ಪ್ರತಿಮೆಯ ಸ್ಥಾಪನೆಯ’ ಸಮಸ್ಯೆಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಒಬ್ಬ ಚಿಂತಕ, ದಾರ್ಶನಿಕನಾಗಿ ತಿರುವಳ್ಳವರ್ ಜಗತ್ತಿಗೇ ಬೇಕಾದ ವ್ಯಕ್ತಿ. ಅವನ ವ್ಯಕ್ತಿತ್ವ ಮತ್ತು ಚಿಂತನೆಗಳು ಕನ್ನಡ ಸಂಸ್ಕೃತಿಗೆ ಅಗತ್ಯಬೇಕು. ಆ ಚಿಂತನೆಗಳು ಕನ್ನಡೀಕರಣಗೊಂಡು, ಅಂದರೆ ಸ್ವೀಕಾರಗೊಂಡು ಬರಬೇಕು. ಇದನ್ನು ಚಾರಿತ್ರಿಕ ಅನಿವಾರ್ಯತೆ ಎಂದು ನಾವು ಕರೆಯುತ್ತೇವೆ. ದಕ್ಷಿಣ ಆಫ್ರಿಕಾದ ಮಂಡೇಲ ಕನ್ನಡ ಕಾವ್ಯದಲ್ಲಿ ಅವತರಿಸಿರುವುದು ಹಾಗೆ. ಹೃದಯವಂತನಾದ ಯಾರೇ ಆದರೂ ಈ ಮಂಡೇಲ ನಮ್ಮವನಲ್ಲ ಎನ್ನಲು ಸಾಧ್ಯವಾದೀತೆ? ಅವನ ಬಿಡುಗಡೆಯನ್ನು ಭಾರತ ತನ್ನ ಬಿಡುಗಡೆ ಎಂಬಂತೆ ತವಕಿಸಲಿಲ್ಲವೇ? ತಿರುವಳ್ಳುವರ್ ಕೂಡ ನಮಗೆ ಇದೇ ಮಾರ್ಗದಲ್ಲಿ ಬರಬೇಕು. ಒಬ್ಬ ತಮಿಳ ಎನಿಸಿದೆ ಎಲ್ಲದೇಶ, ಕಾಲ ಮತ್ತು ಜನಾಂಗಗಳ ಚಿಂತನೆಯ ಸಂಪನ್ಮೂಲಗಳಲ್ಲಿ ಒಂದು ಎಂಬಂತೆಬರಬೇಕು. ಇದರಿಂದ ಮಾನವ ಸಂಸ್ಕೃತಿ ವಿಸ್ತಾರಗೊಳ್ಳುತ್ತದೆ. ಅದು ಬಿಟ್ಟು ತಮಿಳುನಾಡಿನ ತಮಿಳರ ಕೇರಿಯಿಂದ ಬೆಂಗಳೂರಿನ ತಮಿಳರ ಕೇರಿಗೆ ಬಂದರೆ ಹೇಗೆ! ಇದು ಅಸಹ್ಯ ಮತ್ತು ಅಪರಾಧ. ವಸಾಹತುಶಾಹಿಯ ಒತ್ತಡ ಹೇರುವ ಮನೋ ಧರ್ಮ ಇದು. ಸ್ವಾತಂತ್ರ್ಯಾ ನಂತರ ಬ್ರಿಟಿಷ್ ಅಧಿಕಾರಿಗಳ ಪ್ರತಿಮೆಗಳು ಏನಾಗಿವೆ ಈಗ? ಅವುಗಳ ಹಿಂದೆ ಜೀವನ ಚಿಂತನೆ ಇದೆಯೆ? ಅದು ನಮ್ಮ ಬದುಕನ್ನು ಪ್ರಚೋದಿಸುತ್ತಿದೆಯೆ?  ಚಿಲ್ಲರೆ ರಾಜಕೀಯ ಮತ್ತು ಜನಾಂಗವಾದದ ಮೂಲಕ ತಿರುವಳ್ಳುವರ್ ಕನ್ನಡಕ್ಕೆ ಬಾರದಿದ್ದರೆ ಅದು ಆತನ ಪುಣ್ಯ.

ಕನ್ನಡ : ಆದ್ಯತೆ

ಜನರಲ್ಲಿ (ಜಾತಿ, ಅಲ್ಲ) ಸಂಘಟಿತಾತ್ಮಕತೆ ಬರಲು ನಾಡಭಾಷೆ ಮತ್ತು ಸಂಸ್ಕೃತಿಯಾಧಾರಿತ ಜೀವನ ವಿಧಾನ ಬೆಳೆಯಬೇಕು. ಅದಕ್ಕಾಗಿ ಕರ್ನಾಟಕದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಬಲಗೊಳ್ಳಬೇಕು. ಅವನವನಿಗೆ ಅವನನ್ನು ಬಿಡದೆ, ಎಲ್ಲರೂ ಎಲ್ಲರಿಗಾಗಿ ಎಂಬ ಮನೋಧರ್ಮವನ್ನು ಬೆಲಸುವುದೇ ನಾಡ ಭಾಷೆ ಮತ್ತು ಸಂಸ್ಕೃತಿಯ ಕೆಲಸ, ಅದನ್ನು ಕನ್ನಡ ವಿಶ್ವವಿದ್ಯಾಲಯ ಮಾಡಬೇಕು.

ಕನ್ನಡ ಭಾಷೆ ಮತ್ತು ಕನ್ನಡ ಸಂಸ್ಕೃತಿಯ ಪರಿಕಲ್ಪನೆ ಮಾತೃಕಾ (Archytyapal) ಪ್ರಧಾನ ಚಿಂತನೆಯಲ್ಲ. ಅದು ನಿರಂತರ ಬೆಳೆಯುವ ಚಿಂತನೆ.ಆದ್ದರಿಂದಲೇ ಬೆಳೆಯುತ್ತಿರುವ ವಿಜ್ಞಾನ, ಸಮಾಜ ಹಾಗೂ ಆರ್ಥಿಖ ಪರಿಸ್ಥಿತಿಗೆ ಅನುಗುಣವಾಗಿ ಕನ್ನಡ  ಸಂಸ್ಕೃತಿಯನ್ನು ಬೆಳೆಯಲು ಬಿಡಬೇಕು, ಕನ್ನಡಿಗನಾಗಿರುತ್ತ, ಕನ್ನಡ ಸಂಸ್ಕೃತಿಯ ವಿಶೇಷವಾಗಿರುತ್ತ ಕನ್ನಡಿಗ ವಿಶ್ವ ಮಟ್ಟದಲ್ಲಿ ಬೆಳೆದು ನಿಲ್ಲಬೇಕು. ಇದರ ಅರ್ಥ ಒಳಗಿನಿಂದ ಹೊರಕ್ಕೆ ಬೆಳೆ, ಹೊರಗಿನಿಂದ ಒಳಕ್ಕೆ ಬೆಳೆಯುವ ಅನಾರೋಗ್ಯಕರ ಲಕ್ಷಣಗಳನ್ನು ತೋರಬೇಡ ಎಂಬುದೇ ಆಗಿದೆ.

ಕರ್ನಾಟಕದ ಒಳಗೆ ಸೇವಕ, ಜೊತೆಗಾರ ಕೂಲಿ, ಕೆಳಗಿನವ, ಅಶುದ್ಧ, ಅಸ್ಪೃಶ್ಯ, ದೂರ ಇಟ್ಟವ ಎಂಬ ನಾಮ ನಿರ್ದೇಶನದೊಡನೆ ಯಾವ ವ್ಯಕ್ತಿಯೂ ಬೆಳೆಯಬಾರದು. ಕನ್ನಡ ಸಂಸ್ಕೃತಿ ಸಮಕಾಲೀನವಾಗಿ ಮಾಡಬೇಕಾದ ಕೆಲಸ ಇದು. ನಾವೆಲ್ಲ ಒಂದು ಭಾಷಿಕ ಸಂಸ್ಕೃತಿಯ ಜನ ಎಂಬ ಮನೋಭಾವದ ಮೂಲ ನೆಲೆ ಇದು. ಈ ಕೆಲಸ ಕನ್ನಡ ವಿಶ್ವವಿದ್ಯಾಲಯದಿಂದ ಸಾಧ್ಯವಾದರೆ!  ಮಕ್ಕಳಿಂದ ಮುದುಕರವರೆಗೆ ಕನ್ನಡ ವಿಶ್ವವಿದ್ಯಾಲಯವೆಂದರೆ ನಮ್ಮ ಜೀವನ ಚಿಂತನೆಯ ರಾಜಧಾನಿ ಎದಾಗುತ್ತದೆ. ಬೇರೆ ಸಂಸ್ಥಾನಗಳಲ್ಲಿ ಇರುವ ಭಾಷಾ ವಿಶ್ವವಿದ್ಯಾನಿಲಯಗಳು ಈ ಬಗೆಯ ಕೆಲಸ ಮಾಡುತ್ತಿಲ್ಲ ಎಂಬುದು ನಿಜ. ಹಾಗೆ ಮಾಡದಿದ್ದರೆ ಯಾವುದೇ ಭಾಷಾ ವಿಶ್ವವಿದ್ಯಾಲಯ ಓಲೆಗರಿ ಕಟ್ಟಿನೊಳಗೆ ಸೇರಿಹೊಗುತ್ತದೆ ಎಂಬುದು ನನ್ನ ಅಭಿಪ್ರಾಯ. ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಿಂದ ಹಿಡಿದು ಜನಪರ ಜೀವನ ಚಿಂತನೆ ಇರುವ ಮಹತ್ವದ ವಿದ್ವಾಂಸರು ಇರುವುದರಿಂದ ಅದರದೆ ಒಂದು ದಾರಿ ಸೃಷ್ಟಿಯಾಗಲಿ ಎಂದು ನಾನು ಬಯಸುತ್ತೇನೆ.

ಕನ್ನಡ ವಿ.ವಿ.ಗೆ ಕೆಲವು ಕಾರ್ಯಕ್ರಮಗಳು

ಹುಟ್ಟಿದ ಆರಂಭದಿಂದಲೂ ಕನ್ನಡ ವಿಶ್ವವಿದ್ಯಾಲಯ ಕನ್ನಡ ಜ್ಞಾನದ ಅಭಿವೃದ್ಧಿಯಲ್ಲಿತೊಡಗಿದೆ. ಕರ್ನಾಟಕವನ್ನು ಭಾಷಿಕವಾಗಿ, ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ, ರಾಜಕೀಯವಾಗಿ, ಹಾಗೂ ವೈಜ್ಞಾನಿಕವಾಗಿ ಪರಿಕಲ್ಪಿಸಿಕೊಳ್ಳಬೇಕಾದ ನೆಲೆಯನ್ನು ಸೃಷ್ಟಿಸುತ್ತಿದೆ. ಆಸಂಬಂಧದ ಜ್ಞಾನವನ್ನು ಎಲ್ಲ ಕಡೆಯಿಂದ ತರುತ್ತಿದೆ. ಕನ್ನಡ ಸಂಸ್ಕೃತಿಗೆ ಅದನ್ನು ಹೇಗೆ ಅನ್ವಯಿಸಿಕೊಳ್ಳಬೇಕು ಎಂಬುದನ್ನು ಹೇಳುತ್ತಿದೆ. ಇದು ಹೊಸ ಜ್ಞಾನ ಭಂಡಾರದ ಸೃಷ್ಟಿಯ ಕೆಲಸವಾಯಿತು. ಈ ಹೊಸ ಜ್ಞಾನ ಭಂಡಾರವನ್ನು ಚಲಿಸುವಂತೆ ಮಾಡುವುದು ಮುಂದಿನ ಹೆಜ್ಜೆ.

ಕಿರಿಯರಿಗೆ ಕಮ್ಮಟ

ಸೆಮಿನಾರುಗಳು ವಿದ್ವಾಂಸರ ಮಟ್ಟಕೆ ಸಾಕು. ಸೆಮಿನಾರುಗಳಿಂದ ಕೆಳಗಿನದು ನಾವು ಜನಗಳನ್ನು ತಲುಪುತ್ತಿಲ್ಲ. ಸೆಮಿನಾರುಗಳಿಗೆ ಜನ ಬರುತ್ತಿಲ್ಲಎಂದು ನೊಂದುಕೊಳ್ಳುತ್ತೇವೆ. ನಾವು ವಿದ್ವಾಂಸರು ಕರ್ನಾಟಕದ ಬಗ್ಗೆಯೆ ಸರಿಯಾಗಿ ಗೊತ್ತಿಲ್ಲದೆ ಜಗತ್ತಿನ ಬಗ್ಗೆ ಎಲ್ಲ ಮಾತಾಡುತ್ತೇವೆ. ಅದು ಸಾಕು. ‘ಅದಕ್ಕೆ ತಾಳ ಇಲ್ಲ, ತಳಮಟ್ಟದ ವಿದ್ಯೆಯನ್ನು ಕನ್ನಡ ವಿಶ್ವವಿದ್ಯಾಲಯಕೊಡಬೇಕು, ಅದು ನಮ್ಮ ಶಾಲೆ ಶಿಕ್ಷಣ ಹಾಗೂ ಜೀವನ ಶಿಕ್ಷಣದ ಮಧ್ಯೆ ಇರಬೇಕು. ಪ್ರೌಢ ಶಿಕ್ಷಣ ಮುಗಿಸಿದ ಅಥವಾ ಕಿರಿಯ ಕಾಲೇಜು ಮುಗಿಸಿದ ಹಳ್ಳಿಯ ಕಡೆಯಲ್ಲಿ ಕೆಲಸದ ಮೇಲೆ ಉಳಿದಿರುವವರನ್ನು ಗಮನಿಸಬೇಕು. ಪ್ರತಿಯೊಂದು ಪಂಗಡ, ಜಾತಿ ವರ್ಗ ಹಾಗೂ ಪ್ರದೇಶವನ್ನು ಗಮನದಲ್ಲಿಟ್ಟುಕೊಂಡು ಇಪ್ಪತ್ತೈದರ ಲೆಕ್ಕದ ತಂಡಗಳಲ್ಲಿ ವಿಶ್ವವಿದ್ಯಾಲಯಕ್ಕೆ ಕರೆಸಿ ಹತ್ತು ಹದಿನೈದು ದಿನಗಳ ಕಮ್ಮಟ ನಡೆಸಬೇಕು. ಈ ಸಂದರ್ಭದಲ್ಲಿ ಅವರನ್ನು ಕರ್ನಾಟಕ ಸಂಸ್ಕೃತಿಯ ಪ್ರಜೆ ಪ್ರತಿನಿಧಿಗಳನ್ನಾಗಿ ರೂಪಿಸಬೇಕು. ಅದಕ್ಕೆ ವಿಶೇಷ ಪಠ್ಯ ವಿನ್ಯಾಸ ಮಾಡಬೇಕು.ಆಗ ಕನ್ನಡ ಪರವಾಗಿ ಕೂಗಲು ಲಾರಿಯಲ್ಲಿ ಕನ್ನಡಿಗರನ್ನು ಹೇರಿಕೊಂಡು ಬರಬೇಕಾಗುವುದಿಲ್ಲ ಕನ್ನಡದ ಕೆಲಸವನ್ನು ಕನ್ನಡಿಗರೆ ಮಾಡಿಕೊಳ್ಳುತ್ತಾರೆ.

ಎಷ್ಟರ ಮಟ್ಟಿಗೆ ಇವರನ್ನು ರೂಪಿಸಬಹುದೆಂದರೆ, ಸ್ಕೂಲುಗಳ ಓದು ಉದ್ಯೋಗಕ್ಕೆ, ಕನ್ನಡ ಓದು ಬದುಕುವುದಕ್ಕೆ ಎನ್ನುವ ವಾತಾವರಣ ಉಂಟುಮಾಡುವಷ್ಟರವರೆಗೆ. ಹಾಗಾದರೆ ನಾಯಿ ಕೊಡೆಗಳಂತೆ ಹುಟ್ಟಿದ ಕನ್ನಡ ಹೋರಾಟಗಾರರು ಕಡಿಮೆಯಾಗುತ್ತಾರೆ. ಕನ್ನಡದ ಕೆಲಸ ಕೇವಲ ಕನ್ನಡ ಭಾಷೆಯ ಕೆಲಸ ಅಲ್ಲ, ಅದೊಂದು ಶಿಸ್ತು ಮತ್ತು ಒಂದು ವಿಶಿಷ್ಟ ಜೀವನ ಕ್ರಮ ಎಂದಾಗುತ್ತದೆ.

ಕನ್ನಡ ಚಳುವಳಿಗಳ ಬೆನ್ನೆಲುಬು

ಕನ್ನಡ ಚಳುವಳಿ ಎಂದರೆ ಕನ್ನಡ ಭಾಷೆಯ ಬಗ್ಗೆ ಕೂಗಾಡುವುದು ಎಂದು ತಿಳಿದವರೆ ಹೆಚ್ಚು ಮಂದಿ. ಕೆಲಮಟ್ಟಿನ ವಿರೋಧ ಹುಟ್ಟಿರುವುದೂ ಇದೇ ಕಾರಣಕ್ಕೆ ಕನ್ನಡ ಚಳುವಳಿ ಎಂದರೆ ಕರ್ನಾಟಕದ ಅಭಿವೃದ್ಧಿಗಾಗಿ ಚಳುವಳಿ ಆಗಬೇಕು. ಆಗ ಟೊಳ್ಳು ಹೋರಾಟಗಾರರು ಹಾಗೂ ಅಂಧ ವಿರೋಧಿಗಳು ತಮಗೆ ತಾವೆ ಹಿಂದೆ ಸರಿಯುತ್ತಾರೆ. ಬಸವ ಚಳವಳಿ ಹೇಗೆ ಕರ್ನಾಟಕದ ಚಳುವಳಿಯೊ, ಕನ್ನಡ ಚಳುವಳಿಗಳೂ ಕರ್ನಾಟಕದ ಅಭಿವೃದ್ಧಿ ಚಳುವಳಿಗಳು.ಈ ಚಳುವಳಿಗಳನ್ನು ಇತರ ಜನರ ಜೊತೆಗೆ ಅಭಿಮುಖ ಮಾಡುವ ಚರ್ಚೆ, ಕಮ್ಮಟ ಹಾಗೂ ಸಂವಾದ ಶಿಬಿರಗಳನ್ನು ಕನ್ನಡ ವಿಶ್ವವಿದ್ಯಾನಿಲಯ ಹಮ್ಮಿಕೊಳ್ಳಬೇಕು. ಇವರನ್ನು ಬಲಪಡಿಸಿದರೆ ಇವರು ಕನ್ನಡ ವಿಶ್ವವಿದ್ಯಾಲಯವನ್ನು, ಕರ್ನಾಟಕವನ್ನು ಬಲಪಡಿಸುತ್ತಾರೆ.

ಹಿತಕರ ರಾಜಕೀಯ ವಾತಾವರಣ

ಕೆಳಹಂತದಲ್ಲಿ ರಾಜಕೀಯ ಮಾಡುತ್ತಿರುವ ಯುವ ಜನರನ್ನು ಕನ್ನಡ ವಿಶ್ವವಿದ್ಯಾಲಯ ಆಕರ್ಷಿಸಬೇಕು. ಸೃಜನಾತ್ಮಕ ರಾಜಕೀಯ ಪಾಠ, ಸಂವಾದ, ಚರ್ಚೆಗಳನ್ನು ಏರ್ಪಡಿಸಬೇಕು. ಹೇಗೆಂದರೆ ಮುಂದೊಂದು ದಿನ ಹಿಂದಿನ ರಾಜಕಾರಣಿಗಳು ನಾನು ಕೇಂಬ್ರಿಡ್ಜ ವಿಶ್ವವಿದ್ಯಾನಿಲಯದ ಪ್ರಾಡೆಕ್ಟ್ ಎಂದು ಕೊಳ್ಳುತ್ತಿದ್ದಂತೆ ಈ ಹೊಸ, ಯುವ ರಾಜಕಾರಣಿಗಳು ನಾವು ಕನ್ನಡ ವಿಶ್ವವಿದ್ಯಾಲಯದ ಉತ್ಪನ್ನಗಳು ಎಂದು ಬೀಗುವಂತಿರಬೇಕು. ತತ್ವರಹಿತವಾಗಿ ಹೋಗಿರುವ ಕರ್ನಾಟಕದ ರಾಜಕೀಯಕ್ಕೆ ಹೊಸ ನೆಲೆಯನ್ನು ತರಲು ಇದರಿಂದ ಸಾಧ್ಯವಾಗುತ್ತದೆ.

ಸಾವನ್ನು ನಿರಾಕರಿಸಬೇಕಾದ ಕನ್ನಡ ವಿಶ್ವವಿದ್ಯಾಲಯ

ಕನ್ನಡ ವಿಶ್ವವಿದ್ಯಾಲಯ ಸಾವನ್ನು ನಿರಾಕರಿಸಬೇಕು. ಇತರ ವಿಶ್ವವಿದ್ಯಾಲಯಗಳು ಪಾಶ್ಚಾತ್ಯ ಆರ್ಥಿಕ ಸಾಮಾಜಿಕ ಎಂದರೆ, ಯಂತ್ರೋದ್ಯಮ ಸಂಸ್ಕೃತಿಯ ಮೇಲೆ ನೆಲೆನಿಂತಿವೆ. ಈ ಉದ್ಯಮ ಜಾಗತಿಕ ಆಗಿರುವವರೆಗೆ ಅವು ಸಹಜಸ್ಥಿತಿಯಲ್ಲಿ ಇರುತ್ತವೆ. ಜಾಗತಿಕವೆಂಬ ಅರ್ಥ ಚಿಂತನೆ ಕುಸಿಯತೊಡಗಿದಂತೆ ಅವು ಸಾವಿನ ಕಡೆಗೆ ಜಾರುತ್ತವೆ. ಈಗಾಗಲೆ ಪದವಿ ಕಾಲೇಜುಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಮಾಜಿಕ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ತೀರಾ ಅಸಡ್ಡೆತೋರುತ್ತಿದ್ದಾರೆ. ತಮ್ಮ ಜೀವನಕ್ಕೆ ಹತ್ತಿರವಿರುವ ಅಥವಾ ಅತೀ ಲಾಭದಾಯಕ ಎನ್ನುವ ಹುದ್ದೆಗಳನ್ನು ಕೊಡುವ ಕೋರ್ಸ್‌ಗಳ ಕಡೆಗೆ ಹೋಗುತ್ತಿದ್ದಾರೆ. ಸರ್ಕಾರದ ಕಡೆಯಿಂದಾಗಲೀ, ವಿಶ್ವವಿದ್ಯಾಲಯ ಅನುದಾನ ಆಯೋಗದಿಂದಾಗಲೀ, ಕೊನೆಗೆ ಹೊರದೇಶಗಳಿಂದಾಗಲಿ ಕಲೆ, ಸಂಸ್ಕೃತಿ ವಿಷಯಗಳಿಗೆ ಧನ ಸಹಾಯ ಸಿಗುತ್ತಿಲ್ಲ. ನಿಮ್ಮದು ಅರ್ಧ ಖರ್ಚು ನಮ್ಮದು ಅರ್ಧಖರ್ಚು ಎಂದು ಯು.ಜಿ.ಸಿ. ಥರದ ಸಂಸ್ಥೆಗಳು ಹೇಳುತ್ತಿವೆ. ನಮ್ಮ ಅರ್ಧಕ್ಕೆ ನಾವು ಉದ್ಯಮಪತಿಗಳ ಹತ್ತಿರವೆ ಹೋಗಬೇಕು. ಅಂಥ ಸಂದರ್ಭದಲ್ಲಿ ನಮ್ಮ ವಿದ್ಯಾಭ್ಯಾಸ ಪದ್ಧತಿ ಉದ್ಯಮಪತಿಗಳ ಉಸಾಬರಿಯಲ್ಲಿ ಇರಬೇಕಾಗುತ್ತದೆ.

ಕನ್ನಡ ವಿಶ್ವವಿದ್ಯಾಲಯಕ್ಕೆ ಉದ್ಯಮಪತಿಗಳು ನೆರವು ನೀಡುವುದಿಲ್ಲ. ಕನ್ನಡ ವಿಶ್ವವಿದ್ಯಾಲಯ ಕನ್ನಡಿಗರು ಹಾಗೂ ಕರ್ನಾಟಕ ಸರ್ಕಾರವನ್ನೇ ಅವಲಂಬಿಸಬೇಕು. ಮುಂದಿನ ದಿನಗಳಲ್ಲಿ ಕರ್ನಾಟಕ ಸರ್ಕಾರವಿರಲಿ ದೆಹಲಿಯ ಕೇಂದ್ರ ಸರ್ಕಾರ ಕೂಡ ಉದ್ಯಮಪತಿಗಳ ನಿರ್ದೇಶನದಂತೆ ನಡೆಯಬೇಕಾದ ಪರಿಸ್ಥಿತಿ ಬರುತ್ತದೆ. ಅಂಥ ಸರ್ಕಾರ ವ್ಯವಸ್ಥೆಯನ್ನು ಅಮೆರಿಕ ಬೇರೆಲ್ಲ ದೇಶಗಳಿಗೆ ಪ್ರಚೋದಿಸುತ್ತಿದೆ. ಆದ್ದರಿಂದ ಕನ್ನಡ ವಿಶ್ವವಿದ್ಯಾಲಯಕ್ಕೆ ಕನ್ನಡಿಗರೆ ಗತಿ. ಅಂಥ ಕನ್ನಡ ಮಕ್ಕಳನ್ನು, ಕನ್ನಡ ಚಿಂತಕ, ಕನ್ನಡ ರಾಜಕಾರಣಿ, ಕನ್ನಡ ಉದ್ಯಮಿ, ಕನ್ನಡ ವಿಜ್ಞಾನಿ, ಕನ್ನಡ ಅರ್ಥಶಾಸ್ತ್ರಜ್ಞ…. ಕನ್ನಡ ಶ್ರೀ ಸಾಮಾನ್ಯನನ್ನು ಕನ್ನಡ ವಿಶ್ವವಿದ್ಯಾನಿಲಯ ಹುಟ್ಟುಹಾಕಿ ಬೆಳೆಸಬೇಕು. ಅದು ಎಲ್ಲಿಯವರೆಗೆ ಎಂದರೆ ಕನ್ನಡಿಗರಿಗೆ ಕನ್ನಡ ವಿಶ್ವವಿದ್ಯಾಲಯವೇ ಗತಿ ಎನ್ನುವಂತೆ.

ಕನ್ನಡ ಸಾರ‍್ವಭೌಮತ್ವ

ಕನ್ನಡ ವಿಶ್ವವಿದ್ಯಾಲಯಕ್ಕೆ ಕನ್ನಡಿರೆ ಗತಿ : ಕನ್ನಡಿಗರಿಗೆ ಕನ್ನಡ ವಿಶ್ವವಿದ್ಯಾಲಯವೆ ಗತಿ ಎಂಬ ತತ್ವವೆ ಕರ್ನಾಟಕದ ಸಾರ‍್ವಭೌಮತ್ವದ ನೆಲೆ. ಆ ನೆಲೆ ಕರ್ನಾಟಕವನ್ನು ಒಂದು ಇಸ್ರೇಲ್ ಅಥವಾ ಉತ್ತರ ಕೊರಿಯವನ್ನಾಗಿ ಮಾಡಬಹುದು ಇಲ್ಲವೆ ಒಂದು ಹೊಸ ಅಭಿವೃದ್ಧಿ ಚಿಂತನೆಯ ನೆಲೆಯನ್ನಾಗಿ ಮಾಡಬಹುದು. ಮುಂದುವರಿದ ರಾಷ್ಟ್ರಗಳು ಅಭಿವೃದ್ದಿಶೀಲ ರಾಷ್ಟ್ರಗಳ ಸ್ವತಂತ್ರ ಬೆಳವಣಿಗೆಗೆ ಅಡ್ಡಗಾಲು ಹಾಕುತ್ತಿವೆ. ಉದ್ಯಮಶೀಲತೆಗೆ ಹೊರತಾಗಿ ಅಭಿವೃದ್ಧಿ ಪರಿಕಲ್ಪನೆ ಬೆಳೆಯಲು ಬಿಡುತ್ತಿಲ್ಲ. ಇಂಥ ಒತ್ತಡ, ಹಿಂಸೆಯಿಂದ ಪಾರಾಗುವ ದಾರಿಯನ್ನು ಎಲ್ಲಿಂದಲಾದರೂ ಎತ್ತ ಕಡೆಯಿಂದಾದರೂ ಹುಡುಕುವುದು ಸೃಜನಶೀಲ ಸಮಾಜದ ಹೊಣೆ. ಅಂಥ ಹೊಣೆಯನ್ನು ಕರ್ನಾಟಕವೆ ಹೊರಲಿ. ಅದಕ್ಕೆ ಬೇಕಾದ ಒಳ ಸಂರಚನೆ ಕನ್ನಡ ವಿಶ್ವವಿದ್ಯಾಲಯದ ಕಡೆಯಿಂದ ದೊರಕಲಿ.