ನಮ್ಮ ಇವತ್ತಿನ ಪರಿಸ್ಥಿತಿ ಬೇಕು-ಬೇಡಗಳ ಸ್ಥಿತಿಯಲ್ಲಿ ಇಲ್ಲ. ಭಾರತ ಬೇಡ ಎನ್ನಬಹುದು, ಅಮೇರಿಕ ಬೇಡ ಎನ್ನುವಂತಿಲ್ಲ. ಅದು ಇವತ್ತಿನ ಸೂಪರ್ ಪವರ್ ಹಿಂದಿ ಬೇಡ ಎನ್ನಬಹುದು. ಇಂಗ್ಲಿಷ್ ಬೇಡ ಎನ್ನುವಂತಿಲ್ಲ ಅದು ಜಗತ್ತಿಗೆ ಇರುವ ಕಿಟಕಿ. ಆದರೆ ನಾವು ಯಾವತ್ತೂ ಕರ್ನಾಟಕ ಬೇಡ ಎಂದು ಹೇಳುವಂತೆಯೇ ಇಲ್ಲ ನಮ್ಮ ಜಗತ್ತು ಕರ್ನಾಟಕ. ಅದರ ಮೂಲಕ ಹೊರ ಜಗತ್ತನ್ನು ನೋಡಬೇಕು. ಜಾಗತೀಕರಣವನ್ನು ನಾವು ತಿರಸ್ಕರಿಸುವಂತಿಲ್ಲ ಅದು ನಮ್ಮ ತಿರಸ್ಕಾರವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ನಮ್ಮ ಜೀವನ ವಿಧಾನವನ್ನು ಅದು ಪ್ರವೇಶಿಸಿ ಬಿಟ್ಟಿದೆ. ನಮಗಿರುವ ಮಾರ್ಗ ಈ ನವ ಅಥವಾ ಆಪ್ರತ್ಯಕ್ಷ ವಸಾಹತುಶಾಹಿಯನ್ನು ಎದುರಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದು. ನಮ್ಮ ಅನೇಕ ಸಂಸ್ಕೃತಿ ಷಂಡರು ಇದಕ್ಕೇನೂ ಮಾರ್ಗೋಪಾಯ ಇಲ್ಲ ಬಂದವನನ್ನು ಆಹ್ವಾನಿಸುವುದಷ್ಟೆ ನಮ್ಮ ಕೆಲಸ ಎಂದು ಕೈ ಎತ್ತಿದ್ದಾರೆ. ನಾಡು ನುಡಿ, ನಮನ ಏನೂ ಗೊತ್ತಿಲ್ಲದ ಇವರನ್ನು ಒಂದು ಕಡೆ ಸರಿಸಿ ಬಿಡೋಣ. ಸಂಸ್ಕೃತಿ ಸಂಪನ್ನನಿಗೆ ತನ್ನ ಸಂಸ್ಕೃತಿಯೊಳಗಿಂದ ಚಾರಿತ್ರಿಕ ತುರ್ತನ್ನು ಅನುಸರಿಸಿ ಮತ್ತೆ ಮತ್ತೆ ಹುಟ್ಟಿ ಬರುವುದಕ್ಕೆ ಅವಕಾಶವಿದೆ. ಭಗವದ್ಗೀತೆಯ ಕೃಷ್ಣ ಧರ್ಮ ಹಾಗೂ ವರ್ಣಗಳನ್ನು ಉಳಿಸಿಕೊಳ್ಳುವ ಕಾರಣಕ್ಕೆ ಮತ್ತೆ ಮತ್ತೆ ಹುಟ್ಟಿ ಬರುತ್ತೇನೆ ಎಂದು ಹೇಳಿದುದು ನಮಗೆ ನೆನಪಿದೆ. ನಮ್ಮೊಳಗೆ ಸಂಸ್ಕೃತಿ ಪುನರ್ ಚಿಂತಕ ಹುಟ್ಟುವುದು ಅಸಾಧ್ಯವೇನಲ್ಲ, ಸಂಸ್ಕೃತಿ ನಮ್ಮ ನಡೆ, ನುಡಿ, ವಿಚಾರ, ಆಚಾರಗಳ ಮೊತ್ತದ ಪ್ರಕ್ರಿಯೆ. ಇಲ್ಲಿಯ ವಿಚಾರವೆಂದರೆ ನಮ್ಮದೇ ಆದ ಆರ್ಥಿಕ ಸಾಮಾಜಿಕ ಸಿದ್ಧಾಂತಗಳು. ಸಂಸ್ಕೃತಿ ಎಂಬುದು ಕೇವಲ ನಡವಳಿಕೆಗಳ ಮೊತ್ತವಲ್ಲ ನಮ್ಮ ಆರ್ಥಿಕ ಸಾಮಾಜಿಕ ನಡಾವಳಿಗಳ ಮಾರ್ಗದರ್ಶಿ ಕೂಡ. ಇದು ಅಮೆರಿಕ ಅಥವಾ ಇನ್ಯಾವುದೇ ಸಂಸ್ಕೃತಿಗೆ ಸಮ. ಅಮೆರಿಕ ತನ್ನ ಸಂಸ್ಕೃತಿಯನ್ನು ಇಪ್ಪತ್ತೊಂದನೆಯ ಶತಮಾನಕ್ಕೂ ಬೆಳೆಸಿಕೊಂಡಿದೆ. ನಾವು ಹದಿನೆಂಟನೆಯ ಶತಮಾನದ ಸಂಸ್ಕೃತಿಯೊಳಗೇ ಬದುಕುತ್ತಿದ್ದೇವೆ. ಯಾಕೆಂದರೆ ಇಂಗ್ಲೆಂಡಿನ ಹತ್ತೊಂಬತ್ತನೆ ಶತಮಾನದ ಕೈಗಾರಿಕಾ ಸಂಸ್ಕೃತಿ ಕೂಡ ನಮ್ಮಲ್ಲಿ ಇಲ್ಲ. ನಮ್ಮ ಸಂಸ್ಕೃತಿಯನ್ನು ನಾವು ಈ ಶತಮಾನಕ್ಕೆ ಬೇಕಾದಂತೆ ಬೆಳೆಸಿಕೊಳ್ಳುವುದೆ ನಾವು ಏಕಕಾಲದಲ್ಲಿ ಭಾರತ ಹಾಗೂ ಅಮೆರಿಕವನ್ನು ಎಟುಕಿಸಿಕೊಳ್ಳುವ ಮಾರ್ಗ. ಅಂದರೆ ಅಮೆರಿಕ, ಇಂಗ್ಲೆಂಡನಲ್ಲಿರುವ ಕೈಗಾರಿಕಾ ಸಾಮಗ್ರಿಗಳನ್ನು ಆಮದು ಮಾಡಿಕೊಂಡು ಗುಡ್ಡೆಹಾಕಿಕೊಳ್ಳುವುದು ಎಂದು ಅದರರ್ಥವಲ್ಲ. ನಮ್ಮ ಸಂಸ್ಕೃತಿಯನ್ನು ಇನ್ನಾವುದೆ ಅಭಿವೃದ್ಧಿಶೀಲ ಸಂಸ್ಕೃತಿಗೆ ಸಮಾನವಾಗಿ ಬೆಳೆಸಿ ನಿಲ್ಲಿಸುವುದು. ಅಂಥ ಸಂಸ್ಕೃತಿಗೆ ಪರ‍್ಯಾಯ ಚಿಂತನೆಯೆ ಕರ್ನಾಟಕಕ್ಕೆ ಬೇಕಾದ ನೆಲೆ.

ಈ ಪರ್ಯಾಯ ಅಥವಾ ಸಮ ಸಂಸ್ಕೃತಿಯನ್ನು ಕಟ್ಟುವುದು ಹೇಗೆ ಮತ್ತು ಯಾರು? ನಮ್ಮ ರಾಜಕೀಯ ಧೀಮಂತರು ಈ ಕೆಲಸ ಮಾಡಬೇಕು. ಆದರೆ ಈಗ ಅವರು ಹೇಟಿಗಳಾಗಿದ್ದಾರೆ. ಉಂಡರೆ ಉಬ್ಬಸ, ಎದ್ದರೆ ಸಂಕಟ ಎನ್ನುವ ಸ್ಥಿತಿಯಲ್ಲಿದ್ದಾರೆ. ಕುಂತರೆ ಏಳಿಸಬೇಕು, ಎದ್ದರೆ ಕೂರಿಸಬೇಕು – ಹಾಗಿರುವವರನ್ನು ಕಟ್ಟಿಕೊಂಡು ಏನು ಮಾಡುವುದು? ಕನ್ನಡ ವಿಶ್ವವಿದ್ಯಾನಿಲಯವನ್ನು ಕರ್ನಾಟಕ ಸಂಸ್ಕೃತಿಯನ್ನು ಕಟ್ಟಿ ಬೆಳಸುವ ಶಕ್ತಿ ಕೇಂದ್ರವಾಗಿ ರೂಪಿಸುವುದೆ ನಮಗಿರುವ ಮಾರ್ಗ. ಅದು ಸರ್ಕಾರದ ನೆರವಿನಿಂದ ನಡೆಯುತ್ತಿದೆ. ಆದರೆ ಅದರ ಕಾರ್ಯಕ್ರಮಗಳು ಕೂಡ ಸರ್ಕಾರದ ಕಾರ್ಯಕ್ರಮಗಳಾಗಬೇಕಿಲ್ಲ ಕನ್ನಡ ವಿಶ್ವವಿದ್ಯಾಲಯಕ್ಕೆ ಕರ್ನಾಟಕದ ಜನ ಕೇಳಿದಷ್ಟು ನೆರವನ್ನು ನೀಡುವುದು ಮಾತ್ರ ಸರ್ಕಾರದ ಕೆಲಸವಾಗಬೇಕು. ಖಾಸಗಿಯಾಗಿ ಈಗಿನ ನಮ್ಮ ಜಾತಿಯ ಮಠಗಳ ರೀತಿಯಲ್ಲಿ ದೊಡ್ಡ ದೊಡ್ಡ ಸಂಸ್ಥೆ ಹಾಗೂ ಸಂಪನ್ಮೂಲಗಳಿಂದ ಹಣ ಪಡೆಯಬೇಕು. ಆ ಕಾರಣಕ್ಕೆ ಹಣ ನೀಡಿದ ಸಂಸ್ಥೆಗಳಿಗೆ ದಾಸರಾಗಿರಬೇಕಿಲ್ಲ. ಯಾರೇ ಕನ್ನಡ ವಿಶ್ವವಿದ್ಯಾಲಯಕ್ಕೆ ಕಾಣಿಕೆ ನೀಡಿದರೂ ಅದು ಅವರು ಕರ್ನಾಟಕ ಮಾತೆಗೆ ನೀಡಿದ ಗೌರವ ಮಾತ್ರವಾಗಿರತಕ್ಕದ್ದು.

ಇನ್ನು ಕರ್ನಾಟಕ ಸಂಸ್ಕೃತಿಯನ್ನು ಪುನರ್ ಸೃಷ್ಟಿಸುವುದು ಯಾವ ಕಡೆಯಿಂದ ಮಾರ್ಗದರ್ಶನವನ್ನು ಅಮೆರಿಕ ಕಡೆಯಿಂದಲೇ ಪಡೆಯೋಣ. ಶತ್ರು ಪಕ್ಷದೊಳಗೆ ನಮ್ಮ ಮಿತ್ರ ಪಕ್ಷವನ್ನು ಸೃಷ್ಟಿಸುವುದು ನಮ್ಮ ಹಠ. ಒಂದು ಅತ್ಯುನ್ನತ ಸಂಸ್ಕೃತಿಯ ದೌರ್ಬಲ್ಯದೊಳಗೆ ಮತ್ತೊಂದು ಜೀವಂತ ಸಂಸ್ಕೃತಿ ಸೃಷ್ಟಿಯ ಮಾರ್ಗ ಸೂಚಿಗಳು ಇರುತ್ತವೆ ಎಂಬುದನ್ನು ಮರೆಯಬಾರದು. ರೋಮ್‌ನಂಥ  ಮಹಾ ಸಾಮ್ರಾಜ್ಯ ಪತನವಾದುದು ಕೂಡ ಅದು ಪೂರೈಸಲಾಗದ, ಬೇರೊಂದು ಕಡೆ ಪೂರೈಸಬೇಕಾಗಿದ್ದ ಅಪೇಕ್ಷೆಗಾಗಿಯೆ. ಆ ಸ್ಥಿತಿಯಲ್ಲಿ ಈಗ ಅಮೆರಿಕದ ಸಂಸ್ಕೃತಿ ಇದೆ.

ಅಮೆರಿಕ ಆಧುನಿಕತೆಯನ್ನು ಉನ್ಮಾದವಾಗಿಸಿದೆ ನಿಜ, ಅಂಥದೊಂದು ಭೌತಿಕ ಜಗತ್ತು ರೋಮಾಂಚನವೂ ಹೌದು. ವಾಸ್ತವವೂ ಹೌದು; ಅದು ಅನೇಕ ಶತಮಾನಗಳ ಧಾರ್ಮಿಕ ಜಗತ್ತನ್ನು ಮಕಾಡೆ ಕೆಡವಿಕೊಂಡು ಮೇಲೆ ಕೂತಿರುವುದು ನಮ್ಮಲ್ಲಿ ಆಶ್ಚರ್ಯವನ್ನು ಉಂಟುಮಾಡುತ್ತಿಲ್ಲವೆ? ಈ ಸಂಗತಿ ಅಸಂಘಟಿತರು, ಅವಕಾಶ ವಂಚಿತರು ಮತ್ತು ದೂರ ಇರಿಸಿದವರಿಗೆ ಏನು ಸಂದೇಶವನ್ನು ಕೊಟ್ಟಿದೆ ಎಂಬುದನ್ನು ತಿಳಿಯದಿದ್ದರೆ ನಮ್ಮ ಚಿಂತನೆ ಸಮಗ್ರವಾಗುವುದಿಲ್ಲ. ಒಮ್ಮೆ ಇಂಗ್ಲಿಷ್ ಪ್ರೊಫೆಸರ್ ಒಬ್ಬರು ಹೇಳಿದರು; ದಲಿತರು ಉದ್ಧಾರವಾಗಬೇಕಾದರೆ ಇಂಗ್ಲಿಷ್ ಕಲಿಯಬೇಕು ಅಂತ. ಈ ಮನುಷ್ಯನಿಗೆ ಹುಚ್ಚು ಹಿಡಿದಿರಬೇಕು ಎಂದು ಕೆಲವು ಚಿಂತಕರು ಅಂದದ್ದುಂಟು. ಅದು ಹುಚ್ಚೇ ಹೌದು. ಆದರೆ ಅಪರಾಧವಾಗಿರಲಿಲ್ಲ. ಭಾರತದ ಸಂದರ್ಭಕ್ಕೆ ಹೋಲಿಸಿದರೆ ಜಾತ್ಯಾತೀತ. ಜಗತ್ತಿನ ಒಟ್ಟು ಸಂದರ್ಭಕ್ಕೆ ಹೋಲಿಸಿದರೆ ಒಂದು ಸದೃಢ, ಸುಸಂಘಟಿತ ಧರ್ಮ ನಿರಪೇಕ್ಷ ರಾಜ್ಯ ಯಾವತ್ತೂ ಇರಲು ಸಾಧ್ಯ ಎಂಬುದನ್ನು ಅಮೆರಿಕದ ಆಡಳಿತ ಸೂಚಿಸುತ್ತದೆಯಲ್ಲವೆ? ಈ ಚಲನೆಯನ್ನು ಯು.ಎಸ್.ಎಸ್.ಆರ್. ತನ್ನ ಕಡೆಯದನ್ನಾಗಿಸಿಕೊಂಡದ್ದು ಸಾಂದರ್ಭಿಕವಾಗಿ ನಿಜ. ಅಮೆರಿಕ ಈಗ ಅಂಥ ಸಂಯುಕ್ತ ರಷ್ಯದ ಕಾರ್ಯಕ್ರಮವನ್ನು ತನ್ನೊಳಗೆ ಸೇರಿಸಿಕೊಂಡು ಬಿಟ್ಟಿದೆ. ಈಗ ಒಂದು ಕಡೆಯಿಂದ ಸ್ವರ್ಗಾಪೇಕ್ಷಿಯಾದ ಜನರಿಗೂ, ಮತ್ತೊಂದು ಕಡೆಯಿಂದ ಸಾಮಗ್ರಿ ಅಪೇಕ್ಷಿಸಿ ಚಲಿಸ ಹೊರಟ ಜನರಿಗೂ ಅಮೆರಿಕ ಹೊಸ ಜೀವನ ಮಾದರಿಯಾಗಿ ಮಾರ್ಪಟ್ಟಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.

ಪ್ರಪಂಚದ ಅತಿ ವಿಶಿಷ್ಟ ಉತ್ಪತ್ತಿ ಮಾದರಿಗಳು. ಹಂಚಿಕೆಯ ವಿಧಾನಗಳು ಮತ್ತು ಅನುಭೋಗದ ವೈವಿಧ್ಯಗಳೆಂಬುವು ಅಮೆರಿಕೆಯಲ್ಲಿವೆ. ಒಂದು ಸೂಪರ್ ಕಲ್ಚರ್ ಹೊಂದಬಹುದಾದ ಎಲ್ಲ ಸೌಲಭ್ಯಗಳನ್ನು ಅದು ಹೊಂದಿದೆ. ಆ ಸೂಪರ್ ಕಲ್ಚರ್ ಶುದ್ಧವಾಗಿ ಶ್ರೇಷ್ಠತೆಯಾಗಿ ಅಮೆರಿಕದ ಸಂಸ್ಕೃತಿಯೆ. ಅಲ್ಲಿಗೆ ಯಾವ ದೇಶ, ಭಾಷೆ, ಸಂಸ್ಕೃತಿಯವನೆ ಹೋಗಲಿ ತನ್ನ ಪ್ರವೇಶದಿಂದ ಆರಂಭಗೊಂಡು ನೆಲೆ ನಿಲ್ಲುವವರೆಗೆ ಅವನು ಅಮೇರಿಕನ್ನನಾಗಿರಬೇಕು. ಅವನು ಅಲ್ಲಿ ತನ್ನದೇ ದ್ವೀಪ ಮಾಡಿಕೊಂಡು ಪರಕೀಯನಾಗಿ ಬದುಕಲು ಸಾಧ್ಯವಿಲ್ಲ. ಅಮೆರಿಕ ಸರ್ಕಾರ ಅದನ್ನು ಒತ್ತಾಯಿಸಬೇಕಿಲ್ಲ. ಒಟ್ಟು ಅಮೆರಿಕದ ಪರಿಸರವೆ ಅದನ್ನು ನಿರ್ಣಯಿಸುತ್ತದೆ. ರೋಮ್‌ನಲ್ಲಿ ಇರುವಾಗ ರೋಮನ್ನನಾಗಿರು ಎಂಬ ಹಳೆ ಜಗತ್ತಿನ ವ್ಯಾಖ್ಯೆಯೊಂದಿತ್ತು ಈಗ ಅಮೆರಿಕದಲ್ಲಿರುವಾಗ ಅಮೆರಿಕದವನಾಗಿರು ಎಂಬ ಹೊಸ ಜಗತ್ತಿನ ವ್ಯಾಖ್ಯೆ ರೂಢಿಗೆ ಬಂದಿದೆ. ಇದರಿಂದ ಜಗತ್ತಿನ ನಿಯಾಮಕ ಹಾಗೂ ನಿರ್ದೇಶಕ ಸ್ಥಾನವನ್ನು ಅಮೆರಿಕ ವಹಿಸಿಕೊಂಡಿದೆ. ನಾವು ಕರ್ನಾಟಕದವರು ನಮ್ಮದೆ ಸ್ಥಾನವನ್ನು ವಹಿಸಿಕೊಳ್ಳದಿದ್ದರೆ ಹೇಗೆ?

ಮೂರನೆ ಜಗತ್ತಿನಲ್ಲಿ ಹುಟ್ಟುವ ಮಕ್ಕಳೆಲ್ಲ ಅಮೆರಿಕದ ಕಡೆಗೆ ಮುಖಮಾಡಿ ನಮ್ಮ ಕಡೆಗೆ ಇನ್ನೊಂದು ನೀಡಿ ಹುಟ್ಟುತ್ತಿವೆ. ‘ಅಮೆರಿಕದ ಮಾಸ್ಟರ್ ವಾಯ್ಸ್’ ನಮ್ಮ ಮಹಿಳೆಯರ ಗರ್ಭದೊಳಗೆ ನುಸುಳಿ ಬಿಟ್ಟಿದೆ. ಯಾವುದೇ ವ್ಯಕ್ತಿ ಮಾಸ್ಟರ್ ವಾಯ್ಸ್ ಕಡೆಗೆ ಚಲಿಸುವುದು ಅಪರಾಧವಲ್ಲ; ಅದು ಪ್ರಗತಿಯ ಮಾರ್ಗದರ್ಶನವಾಗಿದ್ದಾಗ. ಅಮೆರಿಕ ಪ್ರಿಯನೂ, ವಿರೋಧಿಯೂ ಮಾರ್ಗದರ್ಶನ ಪಡೆಯುತ್ತಿರುವುದು ಅಮೆರಿಕದ ಮಾಸ್ಟರ್ ವಾಯ್ಸ್ ಮೂಲಕವೆ. ಪ್ರಪಂಚ ಒಂದು ನಿರ್ದಿಷ್ಟ ಕೇಂದ್ರದಿಂದ ಗುರುತಿಸಿಕೊಂಡ ಎಲ್ಲ ಸಂದರ್ಭಗಳ ಸ್ಥಿತಿಯೂ ಇದಕ್ಕೆ ಭಿನ್ನವಲ್ಲ. ಆದ್ದರಿಂದಲೆ ಹೊಸತಲೆಮಾರಿನ ಜನ ಅಮೆರಿಕ ಆಗಲು ಬಯಸಿದೆ. ಅಮೆರಿಕದಲ್ಲಿ ಹೊಸ ಜೀವನ ಮಾದರಿಗಳಿವೆ. ಶತಮಾನಗಳು ಹೊರಳಿದಂತೆಲ್ಲ ಹೊಸ ಜೀವನ ಮಾದರಿಗಳನ್ನು ಕೊಡುವುದು ಯಾವುದೇ ಸಮಾಜದ ತುರ್ತು ಜವಾಬ್ದಾರಿ ಬಂದಿಸಿಟ್ಟ ಮಾದರಿಗಳಿಂದ ಜನರನ್ನು ಎಲ್ಲ ಶತಮಾನಗಳಿಗೂ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಚಾರಿತ್ರಿಕ ಜ್ಞಾನ ಇರುವ ಯಾರೂ ಜೀವನ ವಿಕಾಸದ ಮಾದರಿಗಳಿಗೆ ವಿರೋಧಿಯಾಗಿ ಜನರನ್ನು ನಡೆಸಿಕೊಂಡು ಹೋಗಲಾರ. ಅಂಥ ಸಂಘಟನೆಯ ಪ್ರಯತ್ನ ಮಾಡುವ ಯಾರೇ ಆದರೂ ಆತ ಹುಂಬ ಇಲ್ಲವೆ ಸಮಾಜ ಘಾತುಕ.

ಕರ್ನಾಟಕವೂ ಅಮೆರಿಕ ಆಗಬಹುದು. ಆಗಬೇಕೆಂಬ ಹಠ ಇರಬೇಕು. ನಾವು ಅಮೆರಿಕ ಆಗುವುದೆಂದರೆ ಅಮೆರಿಕದ ಮೇಲೆ ಮಗುಚಿಕೊಳ್ಳುವುದಲ್ಲ. ಹಂದಿ ಗೂಡುಗಳ ಥರದ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆದು ಅದರೊಳಗಿಂದ ಅಮೆರಿಕದ ಪ್ರಜೆಗಳನ್ನು ಬಿಡುಗಡೆ ಮಾಡುತ್ತಿರುವ ಮುಟ್ಕಾಳರು ಯೋಚಿಸುತ್ತಿರುವುದು ಹೀಗೆ ಬದುಕಿನಲ್ಲಿ ಮಾತ್ರ ನಾವು ಅಮೆರಿಕದವರಾಗಲು ಸಾಧ್ಯ; ಭೌತಿಕವಾಗಿ ಅಲ್ಲ, ನಾವು ಅಮೆರಿಕದವರಾಗುವುದು ಎರಡು ರೀತಿಯಿಂದ ಸಾಧ್ಯ, ಒಂದು, ಅಮೆರಿಕಕ್ಕೆ ತೊಲಗಿ ಬಿಡುವುದು, ಎರಡು ಅಮೆರಿಕದ ಚೈತನ್ಯ, ಅನನ್ಯತೆಯ ನೆಲೆಯಲ್ಲಿ ಕರ್ನಾಟಕವನ್ನು ಪುನರ್ ಸೃಷ್ಟಿಸುವುದು, ಕರ್ನಾಟಕದಲ್ಲಿ ಒಂದು ವಿಜಯನಗರ ಇತ್ತೆಂಬುದು ನಿಜವಾದರೆ ಸಮಕಾಲೀನ ಸಂದರ್ಭಕ್ಕೆ ಸೂಕ್ತವಾದ ಕರ್ನಾಟಕ ನಗರವನ್ನು ಏಕೆ ಸೃಷ್ಟಿಮಾಡಲಾಗುವುದಿಲ್ಲ. ಕನಿಷ್ಠಪಕ್ಷ ಅಂಥ ಪ್ರಯತ್ನವಾದರೂ ಏಕೆ ಆಗಬಾರದು? ಇದು ಹಿರೋಯಿಕ್ ದೃಷ್ಟಿಕೋನ ಅಲ್ಲ, ನಮ್ಮ ಅಕೆಡೆಮಿಕ್ ಚಿಂತನೆ ಜನರ ಮಧ್ಯೆ ಕ್ರಿಯಾ ಶೀಲವಾದರೆ ಎಲ್ಲ ಸಾಧ್ಯ ಎಂಬುದು ನನ್ನ ನಂಬುಗೆ. ಹಾಗಾದರೆ ಅಲ್ಲಿದೆ ನಮ್ಮನೆ ಇಲ್ಲಿ ಹುಟ್ಟಿದೆ ಸುಮ್ಮನೆ ಎಂಬ ನಿಷ್ಪ್ರಯೋಜಕ ಸಂತತಿ ಆದಷ್ಟು ಕಡಿಮೆಯಾಗುತ್ತದೆ. ಅಷ್ಟಾದರೆ ಒಳ್ಳೆಯ ಆರ್ಥಿಕ ಅಭಿವೃದ್ಧಿಗೆ ದಾರಿ ಆದಂತೆಯೆ.

ನಾವು ಕರ್ನಾಟಕದವರು ಭಾರತೀಯರಾಗಿರುವ ವಿಷಯದಲ್ಲಿ ಸಣ್ಣ ತಕರಾರೂ ಇರಕೂಡದು. ಜಯಹೇ ಕರ್ನಾಟಕ ಮಾತೆ. ಭಾರತ ಜನನಿಯ ತನುಜಾತೆ’ ಎಂಬ ಭಾವನಾತ್ಮಕ ಪ್ರೀತಿಯ ಕಾರಣಕ್ಕೆ ಅಲ್ಲ, ರಕ್ಷಣೆ ಮತ್ತು ಜಾಗತಿಕ ವ್ಯವಹಾರಗಳ ದೃಷ್ಟಿಯಿಂದ ನಾವು ಭಾರತೀಯರಾಗಿರುವುದೇ ಅನುಕೂಲ. ನಾವು ಭಾರತೀಯರಾಗಿಯೆ ಇರುವುದಕ್ಕೆ ಮತ್ತು ಅನೇಕ ಚಾರಿತ್ರಿಕ ಕಾರಣಗಳೂ ಇವೆ. ಅವು ಮತ್ತೆ ಮತ್ತೆ ನಮ್ಮನ್ನು ಭಾರತೀಯರನ್ನಾಗಿ ಮಾಡಿವೆ. ಅದಕ್ಕೆ ನಾವು ಸಂತೋಷಪಡೋಣ. ಸಂಸ್ಕೃತ ಸಂಸ್ಕೃತಿಯವರು ತಮ್ಮ ಸ್ವಂತಕ್ಕಾಗಿ ಭಾರತದ ಒಂದು ಏಕತೆಯನ್ನು ಮೂಡಿಸಿದರು. ಬ್ರಿಟಿಷರು ಮಾಡಿದ ಕೆಲಸವೂ ಇದೆ. ಆದರೆ ಅವರ ಸ್ವಾರ್ಥ ನಮ್ಮ ಅನುಖುಲವಾಗಿ ರೂಪಾಂತರಗೊಂಡಿದೆ. ಶತ್ರು ಕೂಡ ನಮಗೆ ಒಳ್ಳೆಯದು ಮಾಡಬಲ್ಲ ಎಂಬುದಕ್ಕೆ ಇದಕ್ಕಿಂತ ದೊಡ್ಡ  ಉದಾಹರಣೆ ನಮ್ಮಲ್ಲಿ ದೊರೆಯದು. ಈ ನಮ್ಮ ಮುಂದಿರುವ ಸವಾಲು ಸ್ವತಂತ್ರ ಭಾರತದಲ್ಲಿ ಸಮೃದ್ಧ ಕರ್ನಾಟಕವನ್ನು ಕಟ್ಟುವುದು ಹೇಗೆ ಎಂಬುದು. ಇದಕ್ಕಾಗಿ ಎರಡು ಕೇಂದ್ರ ನೆಲೆಗಳನ್ನು ನಾಮ ಗುರುತಿಸ ಬಯಸುತ್ತೇನೆ. ಒಂದು ಆ ಸಮೃದ್ಧ ಕರ್ನಾಟಕಕ್ಕೆ ಬೇಕಾದ ಪರ‍್ಯಾಯ ಚಿಂತನೆಯನ್ನು ಒದಗಿಸುವ ಅಧ್ಯಯನ ಕೇಂದ್ರ. ಮತ್ತೊಂದು ಈ ಜೀವನ ಮಾದರಿಯನ್ನು ಜಾರಿಗೆ ತರುವ ರಾಜಕೀಯ ಶಕ್ತಿ ಮೊದಲನೆಯದು ಚೆನ್ನಾಗಿ ಕೆಲಸ ಮಾಡಿದರೆ ಎರಡನೆಯದು ಹುಡುಕಿಕೊಂಡು ಬರುತ್ತದೆ. ಬಡವರ ಕನಸಿನ ಕಣ್ಣೊಳಗಿಂದಲೇ ನರಸಿಂಹ ಹುಟ್ಟಿ ಬರಬಹುದು. ಆ ಜ್ಞಾನಕೇಂದ್ರ ಮಾತ್ರ ಅಗತ್ಯ ಬೇಕು. ಅದು ಕನ್ನಡ ವಿಶ್ವವಿದ್ಯಾಲಯವಾಗುವುದು ನಮ್ಮ ಇಂದಿನ ಅನಿವಾರ್ಯತೆಯಾಗಿದೆ.

ಈಗ ಜಗತ್ತಿನ ಪರಿಕಲ್ಪನೆ ಬಹುರಾಷ್ಟ್ರೀಯತೆಯಲ್ಲಿ ಏಕರಾಷ್ಟ್ರೀಯತೆ ಎಂಬುದಾಗಿದೆ. ಒಂದು ಕಡೆಯಿಂದ ಜಾಗತೀಕರಣವೆಂಬ ಪ್ರಕ್ರಿಯೆ ಜಗತ್ತನ್ನೆ ಮಾರುಕಟ್ಟೆ ಮಾಡ ಹೊರಟಿದೆ. ಮಾರುಕಟ್ಟೆಯ ಮೂಲಕ ಜನರನ್ನು ಗ್ರಹಿಸುತ್ತಿವೆ. ಇದು ಬೃಹತ್ ಕೈಗಾರಿಕಾ ರಾಷ್ಟ್ರಗಳ ಹುನ್ನಾರು. ತಮ್ಮ ಉತ್ಪಾದಿತ ವಸ್ತುಗಳಿಗೆ ಲಾಭದಾಯಕ ಮಾರುಕಟ್ಟೆಯನ್ನು ಹುಡುಕುವುದು ಅವುಗಳ ಗುರಿ. ಈ ಚಿಂತನೆ ಪರ‍್ಯಾಯವೆಂಬಂತೆ ಏಕೀಕೃತ ರಾಷ್ಟ್ರದಲ್ಲಿ ಬಹುಸಂಸ್ಕೃತಿಗಳ ರಾಷ್ಟ್ರೀಯತೆ ಎಂಬ ಧೋರಣೆ ಮತ್ತೊಂದು ಕಡೆಯಿಂದ ಪ್ರಬಲವಾಗುತ್ತಿದೆ. ಒಂದು ದೇಶವನ್ನು ಆಡಳಿತಾತ್ಮಕ ಕೇಂದ್ರದಿಂದ ಗ್ರಹಿಸಿಕೊಳ್ಳುವುದು ಅಷ್ಟು ಸಮಂಜಸವಲ್ಲ. ಆ ಕೇಂದ್ರದೊಳಗೆ ಇರುವ ಭಿನ್ನ ಸಂಸ್ಕೃತಿಗಳ ಆಸ್ತಿತ್ವವನ್ನು ಗೌರವಿಸುವ ಹಾಗೂ ಬೆಳೆಸುವ ಮೂಲಕ ರಾಷ್ಟ್ರೀಯತೆಯನ್ನು ಕಲ್ಪಿಸಿಕೊಳ್ಳಬೇಕು. ಆಗ ಮಾತ್ರ ನಿಜವಾದ ಅಭಿವೃದ್ಧಿಯನ್ನು ಕಾಣಲು ಸಾಧ್ಯ. ಇಲ್ಲವಾದರೆ ಆಡಳಿತ ಕೇಂದ್ರಕ್ಕೆ ಹತ್ತಿರವಿರುವ ಪ್ರದೇಶಗಳು ಮಾತ್ರ ಅಭಿವೃದ್ಧಿ ಹೊಂದಿ ದೂರವಿರುವ ಪ್ರದೇಶಗಳು ಅವಗಣನೆಗೆ ಒಳಗಾಗುತ್ತವೆ. ಯುಜಿಸಿಯಿಂದ ಉತ್ತರ ಭಾರತದ ವಿಶ್ವವಿದ್ಯಾನಿಲಯಗಳು ಪಡೆಯುತ್ತಿರುವ ಅನುದಾನ ಹಾಗೂ ದಕ್ಷಿಣ ಭಾರತದ ವಿಶ್ವವಿದ್ಯಾನಿಲಯಗಳು ಪಡೆಯುತ್ತಿರುವ ಅನುದಾನವನ್ನು ಗಮನಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ.

ಕರ್ನಾಟಕ ರಾಷ್ಟ್ರೀಯತೆಯನ್ನು ಕಟ್ಟಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಇದರೊಳಗೆ ಕನ್ನಡ ಭಾಷೆ ಎಲ್ಲರ ಭಾಷೆ ಆಗುತ್ತದೆ. ಕನ್ನಡದ ಗುರುತು ಇಲ್ಲದ ಕರ್ನಾಟಕದ ಮನುಷ್ಯನ ಅಸ್ತಿತ್ವ ಇಲ್ಲ ಎಂಬ ವಾತಾವರಣ ನಿರ್ಮಾಣವಾಗುತ್ತದೆ. ಕರ್ನಾಟಕದ ರಾಷ್ಟ್ರೀಯತೆ ಎಂದರೆ ಕನ್ನಡ ರಾಷ್ಟ್ರೀಯತೆಯೆ. ಈ ಸಂದರ್ಭದಲ್ಲಿ ಉಳಿದ ಭಾಷಿಕರು ತಮ್ಮ ತಮ್ಮ ಭಾಷೆಗಳನ್ನು ತಮ್ಮ ಸಂಸ್ಕೃತಿ ಭಾಷೆಯಾಗಿ ಉಳಿಸಿಕೊಳ್ಳುತ್ತಾರೆ. ರಾಷ್ಟ್ರೀಯತೆಯಾಗುವ ಮಟ್ಟಕ್ಕೆ ಆ ಭಾಷೆಗಳು ಬೆಳೆದಿಲ್ಲದಿರುವುದರಿಂದ ಅವುಗಳನ್ನು ಸಂಸ್ಕೃತಿ ಭಾಷೆಗಳೆಂದು ಗೌರವಿಸಲಾಗಿದೆಯೆ ಹೊರತು ಬೇರೆ ಅಲ್ಲ; ಈ ಪ್ರತ್ಯೇಕತೆಯನ್ನು ನಾವು ಮಾಡಿದ್ದಲ್ಲ ಈ ದೇಶದ ಚರಿತ್ರೆಯ ಸಾಮಾಜಿಕ ಸ್ಥಿತ್ಯಂತರಗಳು ಆ ನೆಲೆಯನ್ನು ಕಲ್ಪಿಸಿದೆ. ಚರಿತ್ರೆಯ ಸಾಮಾಜಿಕ ನೈಸರ್ಗಿಕ ನಿಯಮವನ್ನು ನಾವು ಬದಲಾಯಿಸಲಾರೆವು. ಸಾಮಾಜಿಕ ನೈಸರ್ಗಿಕ ನಿಯಮದ ಕಾರಣವಾಗಿ ಈ ಮಾತು ಹೇಳಬೇಕಾಗಿದೆಯೆ ಹೊರತು ತಾರತಮ್ಯ ಕಾರಣಕ್ಕೆ ಅಲ್ಲ ಎಂಬುದನ್ನು ಮನಗಾಣಬೇಕು.

ಕರ್ನಾಟಕ ರಾಷ್ಟ್ರೀಯತೆ ಎಂದರೇನು? ಕರ್ನಾಟಕ ಏಕೀಕರಣದ ರೀತಿಯ ಒಂದು ಸಮಾರ್ಗ ಆರ್ಥಿಕ ಸಾಮಾಜಿಕ ಅಭಿವೃದ್ಧಿ ಮೀಮಾಂಸೆಯನ್ನು ಹೊಂದುವುದು. ಆ ಮೂಲಕ ಕರ್ನಾಟಕ  ಸಂಸ್ಕೃತಿಯ ಶೋಧನೆ ಮಾಡುವುದು ಮತ್ತು ಸಮಕಾಲೀನವಾಗಿ ನಮಗೆಲ್ಲ ಅಗತ್ಯವಾಗುವಂತೆ ಕಟ್ಟಿಕೊಳ್ಳುವುದು. ಮಾರ್ಗದರ್ಶನಕ್ಕಾಗಿ ನಾವು ದೂರ ಹೋಗಬೇಕಿಲ್ಲ. ಕರ್ನಾಟಕದ ಬಸವ ಚಳುವಳಿ, ನಂತರ ಮುಂದುವರಿದ ಭಕ್ತಿಪಂಥಗಳು ನಮಗೆ ಆದರ್ಶವಾಗಿವೆ. ಅವು ಆ ಕಾಲದ ಆರ್ಥಿಕ ಸಾಮಾಜಿಕ ಯಜಮಾನ್ಯವನ್ನು ಮುರಿದು ಕನ್ನಡ ಜನರ ರಾಜ್ಯವೊಂದನ್ನು ಕಟ್ಟಲು ದಿಕ್ಸೂಚಿಯಾಗಿವೆ. ನಮ್ಮೊಳಗೆ ಇರುವ ಕೇಂದ್ರ ರಾಷ್ಟ್ರೀಯತೆ ಹಾಗೂ ಜಾಗತೀ ಕರಣದ ಆಕ್ರಮಣವನ್ನು ತಡೆಯಲು ವಚನ ಚಳುವಳಿಯ ‘ದುಡಿಮೆ ಗೌರವ’ ಮತ್ತು ‘ಸ್ವಂತದ ಗುರುತು’ ಗಳು ಪ್ರಗತಿಯ ಮಾನದಂಡಗಳು ನೆರವಾಗಿವೆ. ಅವರ ಎಲ್ಲರಿಗೂ ಎಲ್ಲದರಲ್ಲೂ ಪಾಲು ಮತ್ತು ಸಮಾನ ಸಮಾಜ ಜೀವನ ಚಿಂತನೆ ನಮ್ಮ ಮುಂದಿದೆ. ವೀರಶೈವ ಚಳುವಳಿಯಲ್ಲಿ ಭಾಗವಹಿಸಿದ ಬಹುಸಂಖ್ಯಾತರು ನಮ್ಮ ನಾಡಿನ ಕುಶಲ ಕರ್ಮಿಗಳು ಎಂಬುದನ್ನು ಗಮನಿಸಿ; ಅವರ ಕಾರ್ಯ ಸಿದ್ಧಾಂತ ಹಾಗೂ ಸಮಾನ ಗೌರವ ಮುಂದುವರಿದಿದ್ದರೆ ಎಂಥ ದೊಡ್ಡ ತಂತ್ರಜ್ಞಾನವನ್ನು ನಾವು ಕಟ್ಟಿಕೊಳ್ಳಬಹುದಿತ್ತು! ಬ್ರಿಟಿಷ್ ಎನ್ನುವ ಶೋಷಕ ಶಕ್ತಿಗಳ ಕಾರಣದಿಂದ ನಮ್ಮ ಸಾವಯವ ತಂತ್ರಜ್ಞಾನ ಪದ್ಧತಿಯ ಕುಸಿದು ಬಿತ್ತು ಮತ್ತೆ ಅದನ್ನು ಚೇತರಿಸುವ ಕೆಲಸ ಆಗಲೆ ಇಲ್ಲ. ಸ್ವತಂತ್ರ ಭಾರತದಲ್ಲಿ ಸ್ವಾವಲಂಬಿ ಕರ್ನಾಟಕವನ್ನು ಕಟ್ಟುವ ಪ್ರಯತ್ನ ಮತ್ತೆ ನಮ್ಮ ತಂತ್ರಜ್ಞಾನವನ್ನು ಆಧುನಿಕಗೊಳಿಸುವ, ಉತ್ಪಾದನೆಯ ಬಹು ಸಂಪತ್ತನ್ನು ನಮ್ಮಲ್ಲಿಯೆ ಉಳಿಸಿಕೊಳ್ಳುವ ಪ್ರಯತ್ನವೆ ಆಗಿದೆ. ಈ ಪ್ರಯತ್ನ ನಮ್ಮ ಪಕ್ಕದ ಭಾಷಾ ರಾಷ್ಟ್ರೀಯತೆಗಳ ಬೆಳವಣಿಗೆಗೆ ಮಾರ್ಗದರ್ಶನಾವಾಗುತ್ತದೆ. ಒಟ್ಟಾಗಿ ಪ್ರಬಲ ಭಾರತವನ್ನು ಕಾಣುವ ನಮ್ಮ ಕನಸು ನನಸಾಗುತ್ತದೆ.

ಈ ಕಾರಣಕ್ಕಾಗಿ ಕನ್ನಡ ವಿಶ್ವವಿದ್ಯಾಲಯ ಕರ್ನಾಟಕ ಕನ್ನಡ ಜ್ಞಾನದ ಶೋಧನೆ ಮತ್ತು ಪ್ರಸರಣ ಕೇಂದ್ರವಾಗಬೇಕಾಗಿದೆ. ಈಗಾಗಲೆ ಕನ್ನಡ ವಿಶ್ವವಿದ್ಯಾಲಯ ‘ಕನ್ನಡ ಸಂಸ್ಕೃತಿಯ ಶೋಧ, ದೇಶೀ ಸತ್ಯಗಳ ಶೋಧ ಹಾಗೂ ಸ್ವದೇಶೀ ಚಳುವಳಿಗೆ ನೆಲೆಯನ್ನು ಒದಗಿಸಬೇಕೆಂದು ಉದ್ದೇಶಿಸಿದೆ. ಸ್ವತಂತ್ರ ಹಾಗೂ ಸ್ವಾವಲಂಬಿ ಕರ್ನಾಟಕವನ್ನು ರೂಪಿಸುವಲ್ಲಿ ಅದು ಸಮರ್ಥ ನೇತೃತ್ವ ವಹಿಸಬೇಕು. ಕರ್ನಾಟಕವನ್ನು ಒಂದು ಸಮಗ್ರ ಅಭಿವೃದ್ಧಿಶೀಲ ರಾಷ್ಟ್ರದ ಮಟ್ಟಕ್ಕೆ ತರಲು ಪ್ರಯತ್ನಿಸಬೇಕು. ಸರ್ಕಾರಗಳು ಹಾಗೂ ಇತರ ಸಂಸ್ಥೆಗಳಿಂದ ಅದು ನೆರವನ್ನು ಪಡೆಯುತ್ತಿದೆ ಹೌದು. ಆ ನೆರವು ಅವಲಂಬನೆ ಹಾಗೂ ಗುಲಾಮತನವನ್ನು ರೂಢಿಸುವುದಕ್ಕೆ ಅಲ್ಲ; ಕನ್ನಡ ಸಂಸ್ಕೃತಿಯ ಪುನರ್ ಚಿಂತನೆಗೆ. ಕರ್ನಾಟಕದ ಜನ ತಿರುಪತಿಗೆ ಕಾಣಿಕೆ ಒಪ್ಪಿಸುವ ರೀತಿಯಲ್ಲಿ ಅದರ ಒಂದಂಶದಷ್ಟನ್ನಾದರೂ ಕನ್ನಡ ವಿಶ್ವವಿದ್ಯಾಲಯಕ್ಕೆ ಕೊಡಬೇಕು. ಅನ್ನಿಸುವಂತಿರಬೇಕು. ಇದಕ್ಕಾಗಿ ಕನ್ನಡ ವಿಶ್ವವಿದ್ಯಾಲಯ ತಯಾರಾಗಬೇಕು ಅದು ಹೇಗೆ?

ಕರ್ನಾಟಕದವರಿಗೆ ಕನ್ನಡದ ಗುರುತು : ಪ್ರಬಲ ರಾಷ್ಟ್ರಗಳಾದ ಅಮೆರಿಕ, ಫ್ರಾನ್ಸ್, ಜರ್ಮನಿ, ಇಂಗ್ಲೆಂಡ, ಸ್ವಿಜರ್‌ಲೆಂಡ್, ಜಪಾನ್ ಮುಂತಾದ ದೇಶಗಳ ಪ್ರಜೆಗಳಿಗೆ ಆ ರಾಷ್ಟ್ರದ ಗುರುತು ಇದೆ. ಆ ರಾಷ್ಟ್ರದ ಪ್ರಜೆ ಎನ್ನುವ ಮೂಲಕವೇ ಅವರು ತಮ್ಮನ್ನು ಗುರುತಿಸಿಕೊಳ್ಳುತ್ತಾರೆ ಹಾಗೂ ಪರಿಚಯಿಸಿಕೊಳ್ಳುತ್ತಾರೆ. ದೇಶ ಎಂದ ಹೊರಗೆ ಹೋದ ಭಾರತೀಯ ಅಥವ ಕನ್ನಡಿಗ ತನ್ನನ್ನು ತನ್ನ ದೇಶ ಸಂಸ್ಕೃತಿಯ ಮೂಲಕ ಗುರುತಿಸಿಕೊಳ್ಳುವುದಿಲ್ಲ. ಅನ್ಯ ಸಂಸ್ಕೃತಿಯಲ್ಲಿ ಕರಗಿ ಹೋಗುತ್ತಾನೆ. ಇಲ್ಲವೆ ತನ್ನದೆಂಬುದು ಹೇಳಿಕೊಳ್ಳಲು ಏನಿದೆ ಎಂದು ಅನುಮಾನಕ್ಕೆ ಒಳಗಾಗುತ್ತಾನೆ. ಒಂದು ರೀತಿಯಲ್ಲಿ ಇದು ನಿಜ. ಭದ್ರ ನೆಲೆಯಿಲ್ಲದ ದೇಶಕ್ಕೆ ಬೆಲೆ ಇರುವುದಿಲ್ಲ ಅಂಥವನ ಎಲ್ಲ ಐಡೆಂಟಿಟಿಗಳೂ ಅಪಮೌಲ್ಯಗಳಾಗುತ್ತವೆ. ತಾನೂ ಅಪಮೌಲ್ಯವಾಗದ ಕಾರಣಕ್ಕೆ ಆತ ಮೌಲ್ಯ ಮತ್ತು ಸಿದ್ಧಮಾಪನ ಇರುವ ಸಂಸ್ಕೃತಿಯೊಂದಿಗೆ ಸೇರಿ ಹೋಗುತ್ತಾನೆ.

ಕನ್ನಡಿಗರ ಸ್ಥಿತಿ ಇನ್ನೂ ಕಳಪೆ ಇದೆ. ‘ಕನ್ನಡ’ ಎಂದರೆ ಕರ್ನಾಟಕದವರೆ ‘ಎನ್ನಡ’ ಎಂದು ತಮಾಷೆ ಮಾಡುವುದುಂಟು. ತಮಿಳರಿಗೆ ಹಾಗೂ ತಮಿಳು ನಾಡಿಗೆ ಇರುವ ಐಡೆಂಟಿಟಿ ಕರ್ನಾಟಕಕ್ಕೆ. ಕನ್ನಡದವರಿಗೆ ಇಲ್ಲ ಐಡೆಂಟಿಟಿ ಇಲ್ಲದ ಜನ, ರಾಜ್ಯ ಇತರರಿಗೆ ಅಂಜುತ್ತದೆ. ಸೋಲುತ್ತದೆ ಹಾಗೂ ತಲೆಮರೆಸಿಕೊಂಡಂತೆ ಜೀವನಯಾಪನೆ ಮಾಡುತ್ತದೆ. ಬೆಂಗಳೂರಿನ ತಮಿಳರಿಗೆ ಕನ್ನಡದವರು ಹೆದರಿಕೊಂಡು ಬದುಕುತ್ತಿರುವುದು ಇದೇ ಕಾರಣಕ್ಕೆ. ತಮಿಳರಿಗೆ ತಮಿಳು ಭಾಷೆ ಇದೆ. ತಮಿಳು ಪಕ್ಷ ಇದೆ, ತಮಿಳು ರಾಜ್ಯ ಇದೆ. ತಮಿಳು ನಾಯಕರು ಇದ್ದಾರೆ. ಕರ್ನಾಟಕದ ಅನೇಕ ಕಡೆ ರಾಷ್ಟ್ರೀಯ ಚುನಾವಣೆಯ ಅಸೆಂಬ್ಲಿ ಸ್ಥಾನಗಳಿಗೆ ಡಿ.ಎಂ.ಕೆ. ಅಥವಾ ಎ.ಡಿ.ಎಂ.ಕೆ. ಸ್ಪರ್ಧಿಸುತ್ತದೆ. ಈ ದಮ್ಮು ಕನ್ನಡಿಗರಿಗೆ ಇದೆಯೆ? ತಮಿಳರೊಂದಿಗೆ ಕನ್ನಡಿಗರು ಹೊಡೆದಾಡಬೇಕಾದುದೇನೂ ಇಲ್ಲ ಹಾಗೆ ಮಾಡುವುದು ಪ್ರಾಕೃತ ಸ್ಥಿತಿ. ಅದರಿಂದ ಏನೂ ಪ್ರಯೋಜನವಿಲ್ಲ. ಕನ್ನಡ-ಕರ್ನಾಟಕ ರಾಷ್ಟ್ರೀಯತೆಯನ್ನು ಬೆಳೆಸಿಕೊಳ್ಳುವುದೇ ಇದಕ್ಕೆ ಇರುವ ಮದ್ದು.

ಕನ್ನಡಿಗರು ಕನ್ನಡದ ಗುರುತಿನಿಂದ ಹೆಮ್ಮೆ ಪಡಬಹುದಾದ ಸ್ಥಿತಿಯನ್ನು ಸೃಷ್ಟಿಸಬೇಕು. ಮೊದಲ ಕೆಲಸ ಕರ್ನಾಟಕದ ಜನರಿಗೆ ಕನ್ನಡ ಕಲಿಸುವುದು, ಅನಕ್ಷರಸ್ಥರಿಗೆ ‘ಕನ್ನಡ’ ಎಂಬ ಮೂರಕ್ಷರದ ಪದವಿ ಕೊಡುವುದು. ಈಗ ನಡೆಯುತ್ತಿರುವ ಸರ್ಕಾರಿ ಸಾಕ್ಷರಾಂದೋಲನದ ಜೊತೆಗೆ ಕನ್ನಡ ನಿರುದ್ಯೋಗಿಗಳು ಹಳ್ಳಿಹಳ್ಳಿಗಳಲ್ಲಿ ಕಾಯಕ ಸೇವೆ ಎಂಬಂತೆ ಅನಕ್ಷರಸ್ಥರಿಗೆ ಅಕ್ಷರ ಕಲಿಸುವಂತೆ ಪ್ರೇರಣೆ ಮಾಡಬೇಕು. ತಯಾರಿ ಕೊಡಬೇಕು, ಕನ್ನಡ ಪ್ರೇಮವನ್ನು ತುಂಬಬೇಕು. ಶ್ರೀ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಸೂರು ಇಲ್ಲದವನಿಗೆ ಒಂದು ಸೂರು ಒದಗಿಸಿಕೊಟ್ಟರು. ಕನ್ನಡದವನು ಕನ್ನಡಬಾರದವನಿಗೆ ಕನ್ನಡ ಕಲಿಸಿಕೊಟ್ಟರೆ ಅಂಥದೆ ಸೇವೆ ಆಗುತ್ತದೆ. ‘ಕನ್ನಡ’ ಬರೆಯಲು, ಕನ್ನಡದಲ್ಲಿ ತನ್ನ ಸಹಿ ಮಾಡಲು ಕಲಿತವನು ಶತಮಾನದ ಪುಳಕವನ್ನು ಅನುಭವಿಸುತ್ತಾನೆ. ಇಷ್ಟು ವರ್ಷಗಳ ನಂತರವಾದರೂ ನಾನು ಕನ್ನಡಿಗ ಅದೆನಲ್ಲ ಅಂತ.

ಕನ್ನಡ ಪ್ರಜ್ಞೆ : ಅಕ್ಷರ ಕಲಿತ ಮಾತ್ರಕ್ಕೆ ಕನ್ನಡ ಪ್ರಜ್ಞೆ ಬರುವುದಿಲ್ಲ. ಕನ್ನಡ ಅಕ್ಷರದ ಜೊತೆಗಿನ ಕನ್ನಡ ಸಂಸ್ಕೃತಿಯ ಅರಿವೂ ಅವನಿಗೆ ಬರಬೇಕು. ಮರಾಠಿ, ಉರ್ದು, ತೆಲುಗು ಭಾಷೆ ಕಲಿತವನಿಗೆ ಆತನ ಭಾಷಾಪ್ರಜ್ಞೆ ಬರಬಹುದು. ಕರ್ನಾಟಕದೊಳಗಿದ್ದು ಕನ್ನಡ ಪ್ರಜ್ಞೆ ಬರಬೇಕಾದರೆ ಕನ್ನಡ ಸಂಸ್ಕೃತಿಯ ಪರಿಚಯ ಇರಲೇಬೇಕು. ಕನ್ನಡ ಪ್ರಜ್ಞೆಯನ್ನು ತರುವ ಕೆಲಸ ಕನ್ನಡ ವಿಶ್ವವಿದ್ಯಾಲಯದ್ದು. ಕನ್ನಡ ಕಲಿತ ಪ್ರತಿಯೊಬ್ಬ ವ್ಯಕ್ತಿಯೂ ಕನ್ನಡ ವಿಶ್ವವಿದ್ಯಾಲಯದ ಅಜೀವ ಸದಸ್ಯನಾಗಬೇಕು ಎಂದರೆ ಚಂದಾಕೊಟ್ಟು ಅಲ್ಲ, ಮನಸ್ಸಿನೊಂದಿಗೆ. ಈ ಕನ್ನಡ ಮನಸ್ಸೆ ಕನ್ನಡ ವಿಶ್ವವಿದ್ಯಾಲಯದ ಆಸ್ತಿ ಹಾಗೂ ಕರ್ನಾಟಕದ ಭದ್ರತೆ, ‘ಜೈ ಕರ್ನಾಟಕ ಮಾತೆ’ ಎನ್ನದಿದ್ದರೆ ಪರವಾಯಿಲ್ಲ; ಆ ಮಾತು ಕೇಳಿದಾಗ ಹೆದರದಿದ್ದರೆ, ದೂರ ಸರಿದು ಮರೆಯಾಗದಿದ್ದರೆ ಸಾಕು. ಹೌ ಆರ್ ಯು ಎಂದಾಗ ಖುಷಿ ಪಡುವ ಮನಸ್ಸು ನನ್ನ ಕನ್ನಡಿಗನೆ ಎಂದಾಗ ಕೂಡ ಖುಷಿ ಪಡಬೇಕು. ಇಲ್ಲದಿದ್ದರೆ ಇಲ್ಲಿ ಯಾಕೆ ಹುಟ್ಟಬೇಕು, ನರಕದಲ್ಲಿ ಇರುತ್ತಿದ್ದರೆ ಲೇಸು.

ಕನ್ನಡ ಪ್ರಜ್ಞೆ ಕನ್ನಡ ಮನಸ್ಸಿನ ತರಂಗ. ಅದು ನಮ್ಮಲ್ಲಿ ಅಲೆಯಾಡುತ್ತಿರುತ್ತದೆ. ಅದು ಮುಂದೆ ಕನ್ನಡತನಕ್ಕೆ ನೆಲೆ ತೋರಿಸುತ್ತದೆ, ಕನ್ನಡದವರಿಗೆ ಅವರು ಅನೇಕ ಭಾಷೆ, ಸಂಸ್ಕೃತಿಗಳನ್ನು ಕಲಿತಾಗಲೂ ಇರುತ್ತದೆ. ಶ್ರೀಮಂತರು, ರಾಜಕಾರಣಿಗಳು, ಅರೆಪ್ರಜ್ಞೆಯ ನೌಕರವರ್ಗದವರು ಮತ್ತು ಹೊರದೇಶಗಳಲ್ಲಿ ಜೀವವಿಟ್ಟು ದೇಹ ಮಾತ್ರದಿಂದ ಇಲ್ಲಿ ಇರುವವರಿಂದ ಕನ್ನಡ ಮನಸ್ಸನ್ನು ನಿರೀಕ್ಷಿಸಲಾಗದು. ಇವರಿಗೆ ಸಂಗ್ರಹಿತ ಆಸ್ತಿಯ ಬಗ್ಗೆ ಪ್ರಜ್ಞೆ ಇರುತ್ತದೆ. ಜೊತೆಗಿರುವ ಕರ್ನಾಟಕದ ನೆಲ, ಜಲ, ಕಾಡು, ಹಕ್ಕಿ ಪಕ್ಷಿ ಜನಗಳ ಬಗ್ಗೆ ಪ್ರಜ್ಞೆ ಇರುವುದಿಲ್ಲ, ಯಾಕೆಂದರೆ ಅವರು ಮನುಷ್ಯರ ಬದುಕನ್ನು ಬದುಕುತ್ತಿರುವುದಿಲ್ಲ ಹಾಗೂ ಮನುಷ್ಯರ ಭಾಷೆಯನ್ನು ಆಡುತ್ತಿರುವುದಿಲ್ಲ. ಅವರ ಬದುಕು, ಭಾಷೆ, ನಡವಳಿಕೆ ಬೇರೆ; ಇವರೆಲ್ಲರನ್ನು ಕರ್ನಾಟಕದ ಆಸಲಿ ಜೀವನ ವಿಧಾನಕ್ಕೆ ಎಳೆತರಬೇಕು. ಅಂದರೆ, ಕರ್ನಾಟಕದ ನೆಲ-ಜಲ, ಭಾಷೆ, ಬದುಕು ಬಳಕೆಗೆ ಇರುವ ಕಚ್ಚಾವಸ್ತು ಅಲ್ಲ, ಅದರಲ್ಲಿ ಕನ್ನಡಿಗರ ಜೀವ ಇದೆ ಎಂಬುದನ್ನು ಅರಿವಿಗೆ ತರಬೇಕು. ಹೀಗೆ ಮಾಡಬೇಕೆಂದರೆ ಕನ್ನಡ ವಿಶ್ವವಿದ್ಯಾಲಯ ಕರ್ನಾಟಕದ ಕೇಂದ್ರ ಪ್ರಜ್ಞೆಗೆ ಬರಬೇಕು.

ಕನ್ನಡತನ : ಕನ್ನಡತನ ಎನ್ನುವುದು ಕನ್ನಡದ ವ್ಯಕ್ತಿತ್ವ. ಮತ್ತೊಂದು ಮಾತಿನಲ್ಲಿ ಹೇಳುವುದಾದರೆ ಕನ್ನಡ ಸಂಸ್ಕೃತಿಯ ವ್ಯಕ್ತಿತ್ವ. ವ್ಯಕ್ತಿತ್ವ  ಇಲ್ಲದವನು ಕೇವಲ ವ್ಯಕ್ತಿ. ಅಂಥವನು ಲೆಕ್ಕಕ್ಕೆ ಮಾತ್ರ ಬದುಕಿದ್ದಂತೆ. ನಮ್ಮ ರಾಜಕಾರಣಿಗಳು ತಮಗೆ ಓಟು ಹಾಕಲೆಂದೇ ಕೆಲವರನ್ನು ಇಟ್ಟುಕೊಂಡಿರುತ್ತಾರಲ್ಲ, ಹಾಗೆ. ನಾವು ಅನ್ಯಭಾಷಿಗರು ಕನ್ನಡ ಕಲಿಯುತ್ತಿಲ್ಲ. ಕರ್ನಾಟಕದಪ್ರಗತಿಗೆ ಕಂಟಕಪ್ರಾಯರಾಗಿದ್ದಾರೆ  ಎಂದು ಹೇಳುತ್ತೇವಲ್ಲ ಅವರೆಲ್ಲ ಈ ಗುಂಪಿಗೆ ಸೇರಿದವರು. ಬೆಂಗಳೂರು ರಾಜಧಾನಿಯಲ್ಲೇ ಇವರ ಸಂಖ್ಯೆ ಹೆಚ್ಚು, ಮೇಲು ನೋಟಕ್ಕೇ ಇವರು ನಮ್ಮ ಶತ್ರುಗಳಲ್ಲ ಎಂಬುದು ಗೊತ್ತಾಗುತ್ತದೆ. ನಿಜವಾದ ನಮ್ಮ ಶತ್ರು ಅವರನ್ನು ತಂದು ಇತರರ ಜೊತೆ ಬೆರೆಯದಂತೆ, ಕನ್ನಡ-ಕನ್ನಡತನ ಕಲಿಯದಂತೆ ಸೆರೆಯಲ್ಲಿಟ್ಟುಕೊಂಡಿರುತ್ತಾನಲ್ಲ ಅವನು ಕನ್ನಡ, ಕರ್ನಾಟಕದ ಶತ್ರು, ನಾವು ಇಂಥ ಶತ್ರುಗಳನ್ನು ಬಗಲಲ್ಲಿ ಇಟ್ಟುಕೊಂಡು ದುಷ್ಮನ್ ಎಲ್ಲಿ ಎಂದು ಹುಡುಕುತ್ತೇವೆ. ಇದು ನಮ್ಮ ಪ್ರಾರಬ್ಧ. ನಮ್ಮ ಅರಿವಿನ ಬರ.

ಇದೇ ರೀತಿಯ ಕನ್ನಡತನವಿಲ್ಲದ ಅನ್ಯಭಾಷಾ ಜನವರ್ಗ ರಾಜಧಾನಿ ಹಾಗೂ ಇತರ ಮುಖ್ಯಕೇಂದ್ರಗಳಲ್ಲಿ ಇರುತ್ತದೆ. ಇವರು ದೊಡ್ಡ ದೊಡ್ಡ ಉದ್ದಿಮೆಗಳಲ್ಲಿ ಕೆಲಸ ಮಾಡಲು ಬಂದವರು. ಕಡಿಮೆ ಕೂಲಿಗೆ ಮತ್ತು ಗಾಂಚಾಲಿ ಮಾಡದೆ ಹೆದರಿ ಮುದುರಿಕೊಂಡು ಕೆಲಸ ಮಾಡಲಿ ಎಂದು ಕನ್ನಡದ ಮಾಲೀಕರೂ ಸೇರಿಕೊಂಡಂತೆ ದೊಡ್ಡ ದೊಡ್ಡ ಬಂಡ್ವಾಳಿಗರು ಇವರನ್ನು ಕರೆತಂದಿರುತ್ತಾರೆ. ತಾಂತ್ರಿಕ ನೈಪುಣ್ಯತೆ ಇದೆ ಎನ್ನುವ ಕಾರಣಕ್ಕೆ ಕರೆತಂದವರ ಸಂಖ್ಯೆ ತೀರಾ ಕಡಿಮೆ. ಕಾರ್ಖಾನೆಗೆ ಒಂದು ನಿರ್ದಿಷ್ಟ ಭಾಷೆ ಮತ್ತು ಸಂಸ್ಕೃತಿ ನಮ್ಮ ದೇಶದಲ್ಲಿ ಇಲ್ಲ. ಯಾಕೆಂದರೆ ಆಯಂತ್ರಗಳೆಲ್ಲ ಅನ್ಯದೇಶೀಯ ಮನಸ್ಸುಗಲು ತಯಾರಿಸಿದವು. ಇನ್ನೂ ನಮ್ಮ ಸಂಸ್ಕೃತಿ, ಭಾಷೆ ಅವುಗಳಿಗೆ ಹೋಗದು. ಆಂತ್ರಗಳ ಪೂರಕ ಭಾಗಗಳಾದ ಯಾವುದೇ ಕೆಲಸಗಾರ ತನ್ನ ಮೂಲ ಸಂಸ್ಕೃತಿ, ಭಾಷೆಯನ್ನು ಮರೆತು ಹೊಟ್ಟೆ ತುಂಬಿಸಿಕೊಳ್ಳುತ್ತಿರುತ್ತಾನೆ. ಅವನ ಮೂಲ ಸಂಸ್ಕೃತಿಯನ್ನು ಮರೆತಿರುತ್ತಾನೆ. ಹೊಸ ನೆಲ, ಜಲ, ಭಾಷೆ ಸಂಸ್ಕೃತಿಯನ್ನು ಕಲಿಯದಷ್ಟು ಮೂರ್ಖನಾಗಿರುತ್ತಾನೆ. ಅನ್ಯ ದೇಶಗಳಲ್ಲಿ ಇಂಥ ಮೂರ್ಖರನ್ನು ತಯಾರಿಸುವುದೇ ವಸಾಹತು ರಾಷ್ಟ್ರಗಳದೇಶಗಳಲ್ಲಿ ಒಂದು. ನಾವು ಇಲ್ಲಿ ವಿರೋಧಿಸಬೇಕಾದುದು ನಮ್ಮದಲ್ಲದ ಯಾಂತ್ರೀಕರಣವನ್ನು ನಮ್ಮದೇ ಕೈಗಾರಿಕಾ ಜ್ಞಾನ ಬೆಳೆಯಬೇಕಾದರೆ ನಾವು ಮೊದಲು ಮಾಡಬೇಕಾದ ಕೆಲಸ ನಮ್ಮನ್ನು ಕೂಲಿಗಳನ್ನಾಗಿ ಮಾಡಿಕೊಂಡಿರುವ ಕೈಗಾರಿಕಾ ಸಂಸ್ಕೃತಿಯನ್ನು ಪ್ರಶ್ನಿಸುವುದು.

ಕನ್ನಡತನವನ್ನು ಕರ್ನಾಟಕದಲ್ಲಿ ವಾಸ ಮಾಡುವವರಿಂದ ಅಪೇಕ್ಷಿಸುವಾಗ ಕನ್ನಡಕ್ಕೆ ಬಂದ ಆಪತ್ತು ಬೇರೆ ಭಾಷಾ ಸಂಸ್ಥಾನಗಳಿಗೂ ಬಂದಿದೆಯೆ ಎಂದು ನೋಡಬೇಕು, ಇಲ್ಲದಿದ್ದಲ್ಲಿ ನಮ್ಮ ಆಲೋಚನೆ ಪೂರ್ವಾಗ್ರಹವಾಗುತ್ತದೆ. ನಮ್ಮ ಆಲೋಚನೆ ಪ್ರಗತಿಪರವಾಗಿದೆಯೆ ಅಥವಾ ವಿಗತಿಪರವೊ ಎಂಬುದನ್ನು ಈ ಸಂದರ್ಭದಲ್ಲಿ ಪರೀಕ್ಷಿಸಿಕೊಳ್ಳಬೇಕು. ಕನ್ನಡ ಭಾಷೆ, ಸಂಸ್ಕೃತಿಯ ಅಭಿಮಾನವನ್ನು ಗತಕಾಲದ ವೈಭವಕ್ಕೆ ತಳುಕುಹಾಕುತ್ತಿದ್ದೇವೆ ಎಂದಾದರೆ ನಮ್ಮನ್ನು ಯಾರೂ ಕ್ಷಮಿಸಲಾರರು. ನಮ್ಮ ಅನೇಕ ಕನ್ನಡ ಹೋರಾಟಗಾರರ ಪ್ರಜ್ಞೆ ಈ ಮೂಲದಿಂದ ಪ್ರೇರಿತವಾಗಿದೆ ಎಂಬುದು ನನ್ನ ಅನಿಸಿಕೆ. ಇದು ನಿಜವಾದರೆ ಕನ್ನಡಿಗರೆ ನಮ್ಮ ಕೈ ಬಿಡುತ್ತಾರೆ. ಕನ್ನಡ ಹೋರಾಟದ ಮೂಲ ನೆಲೆ ಇರುವುದು ಭೂತದ ಕನ್ನಡ ಸಂಸ್ಕೃತಿಯನ್ನು ಯಥಾವತ್ತು ಸಂರಕ್ಷಿಸಿಕೊಳ್ಳುವುದಲ್ಲ; ಭೂತಕಾಲದ ನಮ್ಮ ನಿಜ ವೈಭವವನ್ನು ವರ್ತಮಾನದ ಹೊಸ ಸಾಧ್ಯತೆಗಳೊಂದಿಗೆ ಜೋಡಿಸುವುದು.

ಕರ್ನಾಟಕದಲ್ಲಿದ್ದು ಕನ್ನಡತನಕ್ಕೆ ಹೋರಾಡುವುದು ಒಂದು ದುರಂತ ಪ್ರಹಸನ. ಅಮೆರಿಕೆಯಲ್ಲಿದ್ದು ಕನ್ನಡತನ ಉಳಿಸಿಕೊಳ್ಳಬೇಕು. ಅಂದರೆ ಅಲ್ಲಿ ಕನ್ನಡ ರಾಜ್ಯ ಸ್ಥಾಪಿಸುವುದಲ್ಲ. ಅಮೇರಿಕಾದ ಸಂಸ್ಕೃತಿಯಲ್ಲಿ ಶ್ರೇಷ್ಠವಾದುದನ್ನು ಕನ್ನಡ ಸಂಸ್ಕೃತಿಗೆ  ಕಸಿ ಮಾಡಬೇಕು. ಆದರಿಂದ ಸಿದ್ಧವಾದಹೊಸ ಮಾದರಿಯನ್ನು ಕರ್ನಾಟಕದ ಜನರ ಪ್ರಗತಿಗೆ ಒದಗಿಸಬೇಕು. ಅಮೆರಿಕಕ್ಕೆ ಹೋಗಿ ಪೂರಾ ಅಮೆರಿಕನ್ನನಾಗಿ ಕರ್ನಾಟಕಕ್ಕೆ ಬಂದರೆ ಆತ ಅಮೇರಿಕದ ಎಮ್ಮೆ ಹಾಕಿದ ಸಗಣಿಯಂತೆ, ಅಂಥ ಕೆಮಿಕಲ್ಸ್ ತಿಂದು ಹಾಕಿದ ಸಗಣಿ ನಮ್ಮ ಗೊಬ್ಬರಕ್ಕೂ ಬರದು, ಬೆನಕನ ಮಾಡಲು ಬರದು. ಅದು ತೀರ್ಥ ತರಲು ಹೋದವನು ಮೂತ್ರ ತಂದಂತಾಗುತ್ತದೆ. ನಮ್ಮ ಕನ್ನಡತನ ಇವತ್ತಿನ ಕರ್ನಾಟಕದ ಪ್ರಗತಿಗೆಪ್ರಸ್ತುತವಾಗುವಂತಿರಬೇಕು.